Anushasana Parva: Chapter 137

ಅನುಶಾಸನ ಪರ್ವ: ದಾನಧರ್ಮ ಪರ್ವ

೧೩೭

ಪವನಾರ್ಜುನ ಸಂವಾದ

ದತ್ತಾತ್ರೇಯನಿಂದ ನಾಲ್ಕು ವರಗಳನ್ನು ಪಡೆದು ಗರ್ವಿಷ್ಟನಾದ ಕಾರ್ತವೀರ್ಯಾರ್ಜುನನು ತನಗಿಂತಲೂ ಬ್ರಾಹ್ಮಣರು ಶ್ರೇಷ್ಠ ಎನ್ನುವುದನ್ನು ಆಕಾಶವಾಣಿ ಮತ್ತು ವಾಯುವಿನಿಂದ ಕೇಳಿದುದು (1-26).

13137001 ಯುಧಿಷ್ಠಿರ ಉವಾಚ|

13137001a ಕಾಂ ತು ಬ್ರಾಹ್ಮಣಪೂಜಾಯಾಂ ವ್ಯುಷ್ಟಿಂ ದೃಷ್ಟ್ವಾ ಜನಾಧಿಪ|

13137001c ಕಂ ವಾ ಕರ್ಮೋದಯಂ ಮತ್ವಾ ತಾನರ್ಚಸಿ ಮಹಾಮತೇ||

ಯುಧಿಷ್ಠಿರನು ಹೇಳಿದನು: “ಜನಾಧಿಪ! ಮಹಾಮತೇ! ಬ್ರಾಹ್ಮಣಪೂಜೆಯಲ್ಲಿ ಯಾವ ಪ್ರಯೋಜನವನ್ನು ಕಂಡು ನೀನು ಅವರನ್ನು ಪೂಜಿಸುತ್ತೀಯೆ? ಅಥವಾ ಯಾವ ಕರ್ಮದ ಅಭ್ಯುದಯವಾಗುವುದೆಂದು ಭಾವಿಸಿ ನೀನು ಅವರನ್ನು ಅರ್ಚಿಸುತ್ತೀಯೆ?”

13137002 ಭೀಷ್ಮ ಉವಾಚ|

13137002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

13137002c ಪವನಸ್ಯ ಚ ಸಂವಾದಮರ್ಜುನಸ್ಯ ಚ ಭಾರತ||

ಭೀಷ್ಮನು ಹೇಳಿದನು: “ಭಾರತ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಪವನ ಮತ್ತು ಅರ್ಜುನರ ಸಂವಾದವನ್ನು ಉದಾಹರಿಸುತ್ತಾರೆ.

13137003a ಸಹಸ್ರಭುಜಭೃಚ್ಚ್ರೀಮಾನ್ಕಾರ್ತವೀರ್ಯೋಽಭವತ್ ಪ್ರಭುಃ|

13137003c ಅಸ್ಯ ಲೋಕಸ್ಯ ಸರ್ವಸ್ಯ ಮಾಹಿಷ್ಮತ್ಯಾಂ ಮಹಾಬಲಃ||

ಮಾಹಿಷ್ಮತಿಯಲ್ಲಿ ಸಹಸ್ರಭುಜಿ ಶ್ರೀಮಾನ್ ಮಹಾಬಲ ಕಾರ್ಯವೀರ್ಯನು ಈ ಸಮಸ್ತ ಲೋಕದ ಪ್ರಭುವಾಗಿದ್ದನು.

13137004a ಸ ತು ರತ್ನಾಕರವತೀಂ ಸದ್ವೀಪಾಂ ಸಾಗರಾಂಬರಾಮ್|

13137004c ಶಶಾಸ ಸರ್ವಾಂ ಪೃಥಿವೀಂ ಹೈಹಯಃ ಸತ್ಯವಿಕ್ರಮಃ||

ಆ ಸತ್ಯವಿಕ್ರಮ ಹೈಹಯನು ರತ್ನಾಕರವತಿ ಸಾಗರಾಂಬರೆ ಪೃಥ್ವಿಯನ್ನು ಸಂಪೂರ್ಣವಾಗಿ ಆಳುತ್ತಿದ್ದನು.

13137005a ಸ್ವವಿತ್ತಂ ತೇನ ದತ್ತಂ ತು ದತ್ತಾತ್ರೇಯಾಯ ಕಾರಣೇ|

13137005c ಕ್ಷತ್ರಧರ್ಮಂ ಪುರಸ್ಕೃತ್ಯ ವಿನಯಂ ಶ್ರುತಮೇವ ಚ||

13137006a ಆರಾಧಯಾಮಾಸ ಚ ತಂ ಕೃತವೀರ್ಯಾತ್ಮಜೋ ಮುನಿಮ್|

13137006c ನ್ಯಮಂತ್ರಯತ ಸಂಹೃಷ್ಟಃ ಸ ದ್ವಿಜಶ್ಚ ವರೈಸ್ತ್ರಿಭಿಃ||

ಕೃತವೀರ್ಯನ ಮಗನು ಕ್ಷತ್ರಧರ್ಮವನ್ನು ಪುರಸ್ಕರಿಸಿ ವಿನಯ ಮತ್ತು ಶಾಸ್ತ್ರವಿಧಿಗಳಿಂದ ಮುನಿ ದತ್ತಾತ್ರೇಯನಿಗೆ ತನ್ನ ವಿತ್ತವೆಲ್ಲವನ್ನೂ ದಾನಮಾಡಿ ಆರಾಧಿಸಿದನು. ಆ ಕಾರಣದಿಂದ ಸಂಹೃಷ್ಟನಾದ ದ್ವಿಜ ದತ್ತಾತ್ರೇಯನು ಅವನಿಗೆ ಮೂರು ವರಗಳನ್ನು ಕೇಳಲು ಆಮಂತ್ರಿಸಿದನು.

13137007a ಸ ವರೈಶ್ಚಂದಿತಸ್ತೇನ ನೃಪೋ ವಚನಮಬ್ರವೀತ್|

13137007c ಸಹಸ್ರಬಾಹುರ್ಭೂಯಾಂ ವೈ ಚಮೂಮಧ್ಯೇ ಗೃಹೇಽನ್ಯಥಾ||

13137008a ಮಮ ಬಾಹುಸಹಸ್ರಂ ತು ಪಶ್ಯಂತಾಂ ಸೈನಿಕಾ ರಣೇ|

13137008c ವಿಕ್ರಮೇಣ ಮಹೀಂ ಕೃತ್ಸ್ನಾಂ ಜಯೇಯಂ ವಿಪುಲವ್ರತ|

13137008e ತಾಂ ಚ ಧರ್ಮೇಣ ಸಂಪ್ರಾಪ್ಯ ಪಾಲಯೇಯಮತಂದ್ರಿತಃ||

ಅವನು ವರವನ್ನು ಕೇಳೆಂದು ಹೇಳಲು ನೃಪನು ಈ ಮಾತನ್ನಾಡಿದನು: “ವಿಪುಲವ್ರತ! ಸೇನಾಮಧ್ಯದಲ್ಲಿ ನಾನು ಸಹಸ್ರಬಾಹುವಾಗಬೇಕು. ಮನೆಯಲ್ಲಿರುವಾಗ ದ್ವಿಬಾಹುವಾಗಿಯೇ ಇರಬೇಕು. ನನ್ನ ಸಹಸ್ರಬಾಹುಗಳನ್ನು ರಣದಲ್ಲಿ ಸೈನಿಕರು ನೋಡುವಂತಾಗಲಿ. ವಿಕ್ರಮದಿಂದ ಇಡೀ ಮಹಿಯನ್ನು ಗೆದ್ದು ಅದನ್ನು ನಾನು ಧರ್ಮದಿಂದ ಆಲಸ್ಯರಹಿತನಾಗಿ ಪಾಲಿಸುವಂತಾಗಲಿ.

13137009a ಚತುರ್ಥಂ ತು ವರಂ ಯಾಚೇ ತ್ವಾಮಹಂ ದ್ವಿಜಸತ್ತಮ|

13137009c ತಂ ಮಮಾನುಗ್ರಹಕೃತೇ ದಾತುಮರ್ಹಸ್ಯನಿಂದಿತ|

13137009e ಅನುಶಾಸಂತು ಮಾಂ ಸಂತೋ ಮಿಥ್ಯಾವೃತ್ತಂ ತದಾಶ್ರಯಮ್[1]||

ದ್ವಿಜಸತ್ತಮ! ನಾನು ನಿನ್ನಿಂದ ನಾಲ್ಕನೆಯ ಈ ವರವನ್ನೂ ಕೇಳುತ್ತೇನೆ. ಅನಿಂದಿತ! ನನ್ನಮೇಲೆ ಅನುಗ್ರಹ ಮಾಡುವುದಾದರೆ ನನಗೆ ಈ ವರವನ್ನೂ ಕೊಡಬೇಕು. ನಾನೇನಾದರೂ ಮಿಥ್ಯಾಚಾರವನ್ನು ಆಶ್ರಯಿಸಿದರೆ ಸತ್ಪುರುಷರು ನನ್ನನ್ನು ಶಿಕ್ಷಿಸಿ ಸನ್ಮಾರ್ಗಕ್ಕೆ ತರುವಂತಾಗಲಿ.”

13137010a ಇತ್ಯುಕ್ತಃ ಸ ದ್ವಿಜಃ ಪ್ರಾಹ ತಥಾಸ್ತ್ವಿತಿ ನರಾಧಿಪಮ್|

13137010c ಏವಂ ಸಮಭವಂಸ್ತಸ್ಯ ವರಾಸ್ತೇ ದೀಪ್ತತೇಜಸಃ||

ಇದನ್ನು ಹೇಳಿದ ನರಾಧಿಪನಿಗೆ ಆ ದ್ವಿಜನು ಹಾಗೆಯೇ ಆಗಲಿ ಎಂದು ಹೇಳಿದನು. ಹೀಗೆ ಆ ದೀಪ್ತತೇಜಸ್ವಿಗೆ ಈ ವರಗಳು ದೊರಕಿದವು.

13137011a ತತಃ ಸ ರಥಮಾಸ್ಥಾಯ ಜ್ವಲನಾರ್ಕಸಮದ್ಯುತಿಃ|

13137011c ಅಬ್ರವೀದ್ವೀರ್ಯಸಂಮೋಹಾತ್ಕೋ ನ್ವಸ್ತಿ ಸದೃಶೋ ಮಯಾ|

13137011e ವೀರ್ಯಧೈರ್ಯಯಶಃಶೌಚೈರ್ವಿಕ್ರಮೇಣೌಜಸಾಪಿ ವಾ||

ಆಗ ಆ ಜ್ವಲನಾರ್ಕಸಮದ್ಯುತಿಯು ರಥವನ್ನೇರಿ “ವೀರ್ಯ, ಧೈರ್ಯ, ಯಶಸ್ಸು, ಶೌಚ, ವಿಕ್ರಮ ಅಥವಾ ಓಜಸ್ಸಿನಲ್ಲಿ ನನ್ನ ಸಮನಾದವರು ಯಾರಿದ್ದಾರೆ?” ಎಂದು ಉದ್ಘೋಷಿಸಿದನು.

13137012a ತದ್ವಾಕ್ಯಾಂತೇ ಚಾಂತರಿಕ್ಷೇ ವಾಗುವಾಚಾಶರೀರಿಣೀ|

13137012c ನ ತ್ವಂ ಮೂಢ ವಿಜಾನೀಷೇ ಬ್ರಾಹ್ಮಣಂ ಕ್ಷತ್ರಿಯಾದ್ವರಮ್|

13137012e ಸಹಿತೋ ಬ್ರಾಹ್ಮಣೇನೇಹ ಕ್ಷತ್ರಿಯೋ ರಕ್ಷತಿ ಪ್ರಜಾಃ||

ಅವನು ಆ ಮಾತನ್ನು ಮುಗಿಸುವುದರೊಳಗಾಗಿಯೇ ಅಂತರಿಕ್ಷದಲ್ಲಿ ಅಶರೀರವಾಣಿಯು ಹೇಳಿತು: “ಮೂಢ! ಕ್ಷತ್ರಿಯನಿಗಿಂತಲೂ ಬ್ರಾಹ್ಮಣನು ಶ್ರೇಷ್ಠನೆಂಬ ವಿಷಯವು ನಿನಗೆ ತಿಳಿಯದು. ಬ್ರಾಹ್ಮಣನ ಜೊತೆಗೂಡಿಯೇ ಕ್ಷತ್ರಿಯನು ಪ್ರಜೆಗಳನ್ನು ರಕ್ಷಿಸುತ್ತಾನೆ.”

13137013 ಅರ್ಜುನ ಉವಾಚ|

13137013a ಕುರ್ಯಾಂ ಭೂತಾನಿ ತುಷ್ಟೋಽಹಂ ಕ್ರುದ್ಧೋ ನಾಶಂ ತಥಾ ನಯೇ|

13137013c ಕರ್ಮಣಾ ಮನಸಾ ವಾಚಾ ನ ಮತ್ತೋಽಸ್ತಿ ವರೋ ದ್ವಿಜಃ||

ಅರ್ಜುನನು ಹೇಳಿದನು: “ಪ್ರಸನ್ನನಾದರೆ ನಾನು ಭೂತಗಳನ್ನು ಸೃಷ್ಟಿಸಬಲ್ಲೆನು. ಕೃದ್ಧನಾದರೆ ಅವುಗಳನ್ನು ವಿನಾಶಗೊಳಿಸಬಲ್ಲೆನು. ಕರ್ಮ, ಮನಸಾ ಅಥವಾ ವಾಚಾ ಬ್ರಾಹ್ಮಣನು ನನಗಿಂತಲೂ ಶ್ರೇಷ್ಠನಲ್ಲ!

13137014a ಪೂರ್ವೋ ಬ್ರಹ್ಮೋತ್ತರೋ ವಾದೋ ದ್ವಿತೀಯಃ ಕ್ಷತ್ರಿಯೋತ್ತರಃ|

13137014c ತ್ವಯೋಕ್ತೌ ಯೌ ತು ತೌ ಹೇತೂ ವಿಶೇಷಸ್ತ್ವತ್ರ ದೃಶ್ಯತೇ||

ಬ್ರಾಹ್ಮಣನು ಶ್ರೇಷ್ಠನು ಎನ್ನುವುದು ಹಿಂದಿನ ವಾದವಾಯಿತು. ಈಗ ಕ್ಷತ್ರಿಯನೇ ಶ್ರೇಷ್ಠನೆಂಬುದು ಸಿದ್ಧಾಂತವಾಗಿದೆ. ಪ್ರಜಾಪಾಲನೆಯಲ್ಲಿ ಇವರಿಬ್ಬರೂ ಸೇರಿರುವರೆಂದು ಹೇಳುತ್ತೀಯೆ. ಆದರೆ ಇದರಲ್ಲಿ ಒಂದು ವಿಶೇಷವು ಕಾಣುತ್ತದೆ.

13137015a ಬ್ರಾಹ್ಮಣಾಃ ಸಂಶ್ರಿತಾಃ ಕ್ಷತ್ರಂ ನ ಕ್ಷತ್ರಂ ಬ್ರಾಹ್ಮಣಾಶ್ರಿತಮ್|

13137015c ಶ್ರಿತಾನ್ ಬ್ರಹ್ಮೋಪಧಾ ವಿಪ್ರಾಃ ಖಾದಂತಿ ಕ್ಷತ್ರಿಯಾನ್ಭುವಿ||

ಬ್ರಾಹ್ಮಣರು ಕ್ಷತ್ರಿಯನನ್ನು ಆಶ್ರಯಿಸಿರುತ್ತಾರೆಯೇ ಹೊರತು ಕ್ಷತ್ರಿಯನು ಬ್ರಾಹ್ಮಣರನ್ನು ಆಶ್ರಯಿಸಿರುವುದಿಲ್ಲ. ಭುವಿಯಲ್ಲಿ ವೇದಗಳ ಅಧ್ಯಯನ-ಅಧ್ಯಾಪನಗಳನ್ನು ಆಶ್ರಯಿಸಿರುವ ವಿಪ್ರರು ಕ್ಷತ್ರಿಯರ ಅನ್ನವನ್ನೇ ಊಟಮಾಡುತ್ತಾರೆ.

13137016a ಕ್ಷತ್ರಿಯೇಷ್ವಾಶ್ರಿತೋ ಧರ್ಮಃ ಪ್ರಜಾನಾಂ ಪರಿಪಾಲನಮ್|

13137016c ಕ್ಷತ್ರಾದ್ವೃತ್ತಿರ್ಬ್ರಾಹ್ಮಣಾನಾಂ ತೈಃ ಕಥಂ ಬ್ರಾಹ್ಮಣೋ ವರಃ||

ಪ್ರಜೆಗಳ ಪರಿಪಾಲನಾ ಧರ್ಮವು ಕ್ಷತ್ರಿಯರನ್ನೇ ಆಶ್ರಯಿಸಿದೆ. ಕ್ಷತ್ರಿಯರಿಂದಲೇ ಬ್ರಾಹ್ಮಣರ ವೃತ್ತಿಯು ನಡೆಯುತ್ತಿರುವಾಗ ಬ್ರಾಹ್ಮಣನು ಹೇಗೆ ಶ್ರೇಷ್ಠನಾಗುತ್ತಾನೆ?

13137017a ಸರ್ವಭೂತಪ್ರಧಾನಾಂಸ್ತಾನ್ ಭೈಕ್ಷವೃತ್ತೀನಹಂ ಸದಾ|

13137017c ಆತ್ಮಸಂಭಾವಿತಾನ್ವಿಪ್ರಾನ್ ಸ್ಥಾಪಯಾಮ್ಯಾತ್ಮನೋ ವಶೇ||

ಇಂದಿನಿಂದ ನಾನು ಸರ್ವಭೂತಪ್ರಧಾನರೆಂದು ಹೇಳಿಕೊಳ್ಳುವ, ಸದಾ ಭೈಕ್ಷವೃತ್ತಿಯಲ್ಲಿಯೇ ಇರುವ, ತಮ್ಮನ್ನೇ ಸಂಭಾವಿತರೆಂದು ತಿಳಿದಿರುವ ವಿಪ್ರರನ್ನು ನನ್ನ ವಶದಲ್ಲಿ ಇರಿಸಿಕೊಳ್ಳುತ್ತೇನೆ.

13137018a ಕಥಿತಂ ಹ್ಯನಯಾ ಸತ್ಯ[2] ಗಾಯತ್ರ್ಯಾ ಕನ್ಯಯಾ ದಿವಿ|

13137018c ವಿಜೇಷ್ಯಾಮ್ಯವಶಾನ್ಸರ್ವಾನ್ ಬ್ರಾಹ್ಮಣಾಂಶ್ಚರ್ಮವಾಸಸಃ||

13137019a ನ ಚ ಮಾಂ ಚ್ಯಾವಯೇದ್ರಾಷ್ಟ್ರಾತ್ತ್ರಿಷು ಲೋಕೇಷು ಕಶ್ಚನ|

13137019c ದೇವೋ ವಾ ಮಾನುಷೋ ವಾಪಿ ತಸ್ಮಾಜ್ಜ್ಯೇಷ್ಠೋ ದ್ವಿಜಾದಹಮ್||

ದಿವಿಯಲ್ಲಿ ಕನ್ಯೆ ಗಾಯತ್ರಿಯು ಹೇಳುವ ಈ ಮಾತು ಸತ್ಯವಲ್ಲ. ಇದೂವರೆಗೆ ಅವಶರಾಗಿರುವ ಮೃಗಚರ್ಮಧಾರೀ ಬ್ರಾಹ್ಮಣರೆಲ್ಲರನ್ನೂ ನಾನು ಜಯಿಸುತ್ತೇನೆ. ಮೂರು ಲೋಕಗಳಲ್ಲಿ ಯಾರೂ – ಅವರು ದೇವತೆಗಳೇ ಆಗಿರಲಿ ಅಥವಾ ಮನುಷ್ಯರಾಗಿರಲಿ – ನನ್ನನ್ನು ರಾಜ್ಯಭ್ರಷ್ಟನನ್ನಾಗಿ ಮಾಡಲಾರರು. ಆದುದರಿಂದ ಬ್ರಾಹ್ಮಣರಿಗಿಂತ ನಾನೇ ಶ್ರೇಷ್ಠನು.

13137020a ಅದ್ಯ ಬ್ರಹ್ಮೋತ್ತರಂ ಲೋಕಂ ಕರಿಷ್ಯೇ ಕ್ಷತ್ರಿಯೋತ್ತರಮ್|

13137020c ನ ಹಿ ಮೇ ಸಂಯುಗೇ ಕಶ್ಚಿತ್ಸೋಢುಮುತ್ಸಹತೇ ಬಲಮ್||

ಇಂದು ಬ್ರಾಹ್ಮಣನೇ ಶ್ರೇಷ್ಠವೆಂಬ ಲೋಕವನ್ನು ಕ್ಷತ್ರಿಯನೇ ಶ್ರೇಷ್ಠನೆನ್ನುವಂತೆ ಮಾಡುತ್ತೇನೆ. ಯುದ್ಧದಲ್ಲಿ ನನ್ನ ಬಲವನ್ನು ಸಹಿಸಲು ಯಾರಿಗೆ ಉತ್ಸಾಹವಿದೆ?”

13137021a ಅರ್ಜುನಸ್ಯ ವಚಃ ಶ್ರುತ್ವಾ ವಿತ್ರಸ್ತಾಭೂನ್ನಿಶಾಚರೀ|

13137021c ಅಥೈನಮಂತರಿಕ್ಷಸ್ಥಸ್ತತೋ ವಾಯುರಭಾಷತ||

ಅರ್ಜುನನ ಮಾತನ್ನು ಕೇಳಿ ನಿಶಾಚರೀ ಆಕಾಶವಾಣಿಯು ಭಯಗ್ರಸ್ತಳಾದಳು. ಆಗ ಅಂತರಿಕ್ಷದಲ್ಲಿದ್ದ ವಾಯುವು ಮಾತನಾಡಿದನು:

13137022a ತ್ಯಜೈನಂ ಕಲುಷಂ ಭಾವಂ ಬ್ರಾಹ್ಮಣೇಭ್ಯೋ ನಮಸ್ಕುರು|

13137022c ಏತೇಷಾಂ ಕುರ್ವತಃ ಪಾಪಂ ರಾಷ್ಟ್ರಕ್ಷೋಭೋ ಹಿ ತೇ ಭವೇತ್||

“ಈ ಕಲುಷ ಭಾವವನ್ನು ತೊರೆದು ಬ್ರಾಹ್ಮಣರಿಗೆ ನಮಸ್ಕರಿಸು. ಅವರ ಕುರಿತು ಪಾಪವನ್ನೆಸಗುವವನ ರಾಷ್ಟ್ರದಲ್ಲಿ ಕ್ಷೋಭೆಯುಂತಾಗುತ್ತದೆ.

13137023a ಅಥ ವಾ ತ್ವಾಂ ಮಹೀಪಾಲ ಶಮಯಿಷ್ಯಂತಿ ವೈ ದ್ವಿಜಾಃ|

13137023c ನಿರಸಿಷ್ಯಂತಿ ವಾ ರಾಷ್ಟ್ರಾದ್ಧತೋತ್ಸಾಹಂ ಮಹಾಬಲಾಃ||

ಮಹೀಪಾಲ! ಇಲ್ಲದಿದ್ದರೆ ಬ್ರಾಹ್ಮಣರೇ ನಿನ್ನ ಈ ಗರ್ವವನ್ನು ಉಪಶಮನಗೊಳಿಸುತ್ತಾರೆ. ಮಹಾಬಲಶಾಲಿಗಳು ಹತೋತ್ಸಾಹಿಗಳಾಗಿ ನಿನ್ನ ರಾಷ್ಟ್ರವನ್ನೇ ಬಿಟ್ಟು ಹೋಗುತ್ತಾರೆ.”

13137024a ತಂ ರಾಜಾ ಕಸ್ತ್ವಮಿತ್ಯಾಹ ತತಸ್ತಂ ಪ್ರಾಹ ಮಾರುತಃ|

13137024c ವಾಯುರ್ವೈ ದೇವದೂತೋಽಸ್ಮಿ ಹಿತಂ ತ್ವಾಂ ಪ್ರಬ್ರವೀಮ್ಯಹಮ್||

ನೀನ್ಯಾರೆಂದು ರಾಜನು ಕೇಳಲು ಮಾರುತನು ಹೇಳಿದನು: “ನಾನು ದೇವದೂತ ವಾಯುವು. ನಿನಗೆ ಹಿತವಾದುದನ್ನೇ ಹೇಳುತ್ತಿದ್ದೇನೆ.”

13137025 ಅರ್ಜುನ ಉವಾಚ|

13137025a ಅಹೋ ತ್ವಯಾದ್ಯ ವಿಪ್ರೇಷು ಭಕ್ತಿರಾಗಃ ಪ್ರದರ್ಶಿತಃ|

13137025c ಯಾದೃಶಂ ಪೃಥಿವೀ ಭೂತಂ ತಾದೃಶಂ ಬ್ರೂಹಿ ವೈ ದ್ವಿಜಮ್||

ಅರ್ಜುನನು ಹೇಳಿದನು: “ಅಹೋ! ಇಂದು ನೀನು ವಿಪ್ರರ ಕುರಿತು ಭಕ್ತಿರಾಗವನ್ನು ಪ್ರದರ್ಶಿಸುತ್ತಿದ್ದೀಯೆ. ಭೂಮಿಯಂತಿರುವ ಬ್ರಾಹ್ಮಣನು ಯಾರಾದರೂ ಇದ್ದರೆ ಅವನು ಯಾರೆಂದು ಹೇಳು.

13137026a ವಾಯೋರ್ವಾ ಸದೃಶಂ ಕಿಂ ಚಿದ್ಬ್ರೂಹಿ ತ್ವಂ ಬ್ರಾಹ್ಮಣೋತ್ತಮಮ್|

13137026c ಅಪಾಂ ವೈ ಸದೃಶಂ ಬ್ರೂಹಿ ಸೂರ್ಯಸ್ಯ ನಭಸೋಽಪಿ ವಾ||

ಅಥವಾ ಗುಣದಲ್ಲಿ ವಾಯು, ಜಲ, ಅಗ್ನಿ, ಸೂರ್ಯ, ಆಕಾಶ ಇವುಗಳಿಗೆ ಸಮನಾದ ಬ್ರಾಹ್ಮಣೋತ್ತಮನಿದ್ದರೆ ನನಗೆ ಹೇಳು.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಪವನಾರ್ಜುನಸಂವಾದೇ ಬ್ರಾಹ್ಮಣಮಾಹಾತ್ಮ್ಯೇ ಸಪ್ತತ್ರಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಪವನಾರ್ಜುನಸಂವಾದೇ ಬ್ರಾಹ್ಮಣಮಹಾತ್ಮ್ಯೆ ಎನ್ನುವ ನೂರಾಮೂವತ್ತೇಳನೇ ಅಧ್ಯಾಯವು.

[1] ತ್ವದಾಶ್ರಯಮ್ (ಭಾರತ ದರ್ಶನ).

[2] ತ್ವನಯಾಸತ್ಯಂ (ಭಾರತ ದರ್ಶನ).

Comments are closed.