Anushasana Parva: Chapter 136

ಅನುಶಾಸನ ಪರ್ವ: ದಾನಧರ್ಮ ಪರ್ವ

೧೩೬[1]

ಬ್ರಾಹ್ಮಣಪ್ರಶಂಸಾ

13136001 ಯುಧಿಷ್ಠಿರ ಉವಾಚ

13136001a ಕೇ ಪೂಜ್ಯಾಃ ಕೇ ನಮಸ್ಕಾರ್ಯಾಃ ಕಥಂ ವರ್ತೇತ ಕೇಷು ಚ|

13136001c ಕಿಮಾಚಾರಃ ಕೀದೃಶೇಷು ಪಿತಾಮಹ ನ ರಿಷ್ಯತೇ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಯಾರು ಪೂಜ್ಯರು? ನಮಸ್ಕರಿಸಲ್ಪಡಬೇಕಾದವರು ಯಾರು? ಯಾರಲ್ಲಿ ಹೇಗೆ ನಡೆದುಕೊಳ್ಳಬೇಕು? ಯಾರಲ್ಲಿ ಹೇಗೆ ನಡೆದುಕೊಂಡರೆ ಹಾನಿಯಾಗುವುದಿಲ್ಲ?”

13136002 ಭೀಷ್ಮ ಉವಾಚ

13136002a ಬ್ರಾಹ್ಮಣಾನಾಂ ಪರಿಭವಃ ಸಾದಯೇದಪಿ ದೇವತಾಃ|

13136002c ಬ್ರಾಹ್ಮಣಾನಾಂ ನಮಸ್ಕರ್ತಾ ಯುಧಿಷ್ಠಿರ ನ ರಿಷ್ಯತೇ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ಬ್ರಾಹ್ಮಣರ ಅಪಮಾನವು ದೇವತೆಗಳನ್ನೂ ವಿನಾಶಗೊಳಿಸುತ್ತದೆ. ಬ್ರಾಹ್ಮಣರನ್ನು ನಮಸ್ಕರಿಸುವುದರಿಂದ ಹಾನಿಯುಂಟಾಗುವುದಿಲ್ಲ.

13136003a ತೇ ಪೂಜ್ಯಾಸ್ತೇ ನಮಸ್ಕಾರ್ಯಾ ವರ್ತೇಥಾಸ್ತೇಷು ಪುತ್ರವತ್|

13136003c ತೇ ಹಿ ಲೋಕಾನಿಮಾನ್ ಸರ್ವಾನ್ಧಾರಯಂತಿ ಮನೀಷಿಣಃ||

ಅವರು ಪೂಜನೀಯರು. ಅವರು ನಮಸ್ಕರಿಸಲು ಯೋಗ್ಯರು. ಅವರೊಂದಿಗೆ ಮಗನಂತೆ ವರ್ತಿಸಬೇಕು. ವಿಧ್ವಾಂಸರಾದ ಬ್ರಾಹ್ಮಣರೇ ಈ ಸರ್ವ ಲೋಕಗಳನ್ನೂ ಧಾರಣೆಮಾಡಿರುತ್ತಾರೆ.

13136004a ಬ್ರಾಹ್ಮಣಾಃ ಸರ್ವಲೋಕಾನಾಂ ಮಹಾಂತೋ ಧರ್ಮಸೇತವಃ|

13136004c ಧನತ್ಯಾಗಾಭಿರಾಮಾಶ್ಚ ವಾಕ್ಸಂಯಮರತಾಶ್ಚ ಯೇ||

ಧನತ್ಯಾಗದಲ್ಲಿ ಅಭಿರುಚಿಯನ್ನಿಟ್ಟಿರುವ, ಮಾತಿನಲ್ಲಿ ಸಂಯಮಶೀಲರಾಗಿರುವ, ಧರ್ಮಗಳ ಸೇತುವೆಯಂತಿರುವ ಬ್ರಾಹ್ಮಣರೇ ಸರ್ವಲೋಕಗಳಲ್ಲಿ ಅತಿ ದೊಡ್ಡವರು.

13136005a ರಮಣೀಯಾಶ್ಚ ಭೂತಾನಾಂ ನಿಧಾನಂ ಚ ಧೃತವ್ರತಾಃ|

13136005c ಪ್ರಣೇತಾರಶ್ಚ ಲೋಕಾನಾಂ ಶಾಸ್ತ್ರಾಣಾಂ ಚ ಯಶಸ್ವಿನಃ||

ಧೃಡವ್ರತರಾದ ಬ್ರಾಹ್ಮಣರು ಇರುವವುಗಳಿಗೆ ರಮಣೀಯರೂ, ಆನಂದವನ್ನುಂಟುಮಾಡುವವರೂ, ಆಶ್ರಯಭೂತರೂ ಅಗಿರುತ್ತಾರೆ. ಯಶಸ್ವೀ ಬ್ರಾಹ್ಮಣರು ಲೋಕಗಳಲ್ಲಿ ಶಾಸ್ತ್ರಗಳ ಪ್ರಣೀತಾರರು ಕೂಡ.

13136006a ತಪೋ ಯೇಷಾಂ ಧನಂ ನಿತ್ಯಂ ವಾಕ್ಚೈವ ವಿಪುಲಂ ಬಲಮ್|

13136006c ಪ್ರಭವಶ್ಚಾಪಿ ಧರ್ಮಾಣಾಂ ಧರ್ಮಜ್ಞಾಃ ಸೂಕ್ಷ್ಮದರ್ಶಿನಃ||

ತಪಸ್ಸೇ ಅವರ ಸಂಪತ್ತು. ಮಾತೇ ಅವರಿಗೆ ಯಾವಾಗಲೂ ಇರುವ ವಿಪುಲ ಬಲ. ಧರ್ಮಜ್ಞರೂ ಸೂಕ್ಷ್ಮದರ್ಶಿಗಳೂ ಆದ ಬ್ರಾಹ್ಮಣರೇ ಧರ್ಮಗಳಿಗೆ ಪ್ರಭುಗಳಾಗಿರುತ್ತಾರೆ.

13136007a ಧರ್ಮಕಾಮಾಃ ಸ್ಥಿತಾ ಧರ್ಮೇ ಸುಕೃತೈರ್ಧರ್ಮಸೇತವಃ|

13136007c ಯಾನುಪಾಶ್ರಿತ್ಯ ಜೀವಂತಿ ಪ್ರಜಾಃ ಸರ್ವಾಶ್ಚತುರ್ವಿಧಾಃ||

ಧರ್ಮವನ್ನೇ ಬಯಸಿ ಸುಕೃತಗಳಿಂದ ಧರ್ಮದಲ್ಲಿಯೇ ನೆಲೆಸಿರುವ ಧರ್ಮಸೇತುವೆಗಳಂತಿರುವ ಬ್ರಾಹ್ಮಣರನ್ನೇ ಆಶ್ರಯಿಸಿ ನಾಲ್ಕು ವಿಧದ ಪ್ರಜೆಗಳೂ ಜೀವಿಸುತ್ತಾರೆ.

13136008a ಪಂಥಾನಃ ಸರ್ವನೇತಾರೋ ಯಜ್ಞವಾಹಾಃ ಸನಾತನಾಃ|

13136008c ಪಿತೃಪೈತಾಮಹೀಂ ಗುರ್ವೀಮುದ್ವಹಂತಿ ಧುರಂ ಸದಾ||

ಬ್ರಾಹ್ಮಣರು ಎಲ್ಲ ಮಾರ್ಗಗಳ ನೇತಾರರೂ, ಸನಾತನ ಯಜ್ಞನಿರ್ವಾಹಕರೂ, ಪಿತೃಪಿತಾಮಹರಿಂದ ಬಂದಿರುವ ಮರ್ಯಾದೆಯ ಮಹಾಭಾರವನ್ನು ಹೊತ್ತಿರುತ್ತಾರೆ.

13136009a ಧುರಿ ಯೇ ನಾವಸೀದಂತಿ ವಿಷಮೇ ಸದ್ಗವಾ ಇವ|

13136009c ಪಿತೃದೇವಾತಿಥಿಮುಖಾ ಹವ್ಯಕವ್ಯಾಗ್ರಭೋಜಿನಃ||

ಕಷ್ಟಪರಿಸ್ಥಿತಿಯಲ್ಲಿಯೂ ಎತ್ತುಗಳು ಭಾರವನ್ನು ಹೊರುವಂತೆ ಇವರು ಈ ಭಾರವನ್ನು ಹೊತ್ತು ಕುಸಿಯುವುದಿಲ್ಲ. ಪಿತೃಗಳಿಗೂ, ದೇವತೆಗಳಿಗೂ ಮತ್ತು ಅತಿಥಿಗಳಿಗೂ ಮುಖಗಳಂತಿರುವ ಅವರು ಹವ್ಯ-ಕವ್ಯಗಳಲ್ಲಿ ಮೊದಲ ಭೋಜನಕ್ಕೆ ಅರ್ಹರಾಗಿರುತ್ತಾರೆ.

13136010a ಭೋಜನಾದೇವ ಯೇ ಲೋಕಾಂಸ್ತ್ರಾಯಂತೇ ಮಹತೋ ಭಯಾತ್|

13136010c ದೀಪಾಃ ಸರ್ವಸ್ಯ ಲೋಕಸ್ಯ ಚಕ್ಷುಶ್ಚಕ್ಷುಷ್ಮತಾಮಪಿ||

ಭೋಜನ ಮಾತ್ರದಿಂದಲೇ ಬ್ರಾಹ್ಮಣರು ಲೋಕಗಳನ್ನು ಮಹಾಭಯದಿಂದ ಪಾರುಮಾಡುತ್ತಾರೆ. ಸರ್ವಲೋಕಗಳಿಗೂ ದೀಪವಿದ್ದಂತೆ. ಕಣ್ಣಿದ್ದವರಿಗೂ ಕಣ್ಣಾದವರು ಇವರು.

13136011a ಸರ್ವಶಿಲ್ಪಾದಿನಿಧಯೋ ನಿಪುಣಾಃ ಸೂಕ್ಷ್ಮದರ್ಶಿನಃ[2]|

13136011c ಗತಿಜ್ಞಾಃ ಸರ್ವಭೂತಾನಾಮಧ್ಯಾತ್ಮಗತಿಚಿಂತಕಾಃ||

ಅವರು ಸರ್ವಶಿಲ್ಪಾದಿ ಶಾಸ್ತ್ರಗಳ ನಿಧಿಗಳು. ನಿಪುಣರು ಮತ್ತು ಸೂಕ್ಷ್ಮದರ್ಶಿಗಳು. ಸರ್ವ ಭೂತಗಳ ಗತಿಯಗಳನ್ನು ತಿಳಿದವರು ಮತ್ತು ಆಧ್ಯಾತ್ಮಗತಿಚಿಂತಕರು.

13136012a ಆದಿಮಧ್ಯಾವಸಾನಾನಾಂ ಜ್ಞಾತಾರಶ್ಚಿನ್ನಸಂಶಯಾಃ|

13136012c ಪರಾವರವಿಶೇಷಜ್ಞಾ ಗಂತಾರಃ ಪರಮಾಂ ಗತಿಮ್||

ಅವರು ಆದಿ-ಮಧ್ಯ-ಅಂತ್ಯಗಳನ್ನು ತಿಳಿದವರು. ಸಂಶಯರಹಿತರು. ಪರತತ್ತ್ವ ಪರಮಾತ್ಮ ಮತ್ತು ಇತರ ತತ್ತ್ವಗಳ ವಿಶೇಷಜ್ಞಾನಿಗಳು. ಪರಮ ಗತಿಯನ್ನು ಹೊಂದುವವರು.

13136013a ವಿಮುಕ್ತಾ ಧುತಪಾಪ್ಮಾನೋ ನಿರ್ದ್ವಂದ್ವಾ ನಿಷ್ಪರಿಗ್ರಹಾಃ|

13136013c ಮಾನಾರ್ಹಾ ಮಾನಿತಾ ನಿತ್ಯಂ ಜ್ಞಾನವಿದ್ಭಿರ್ಮಹಾತ್ಮಭಿಃ||

ಅವರು ವಿಮುಕ್ತರೂ, ಪಾಪಗಳನ್ನು ತೊಳೆದುಕೊಂಡಿರುವವರೂ, ನಿರ್ದ್ವಂದ್ವರೂ, ನಿಷ್ಪರಿಗ್ರಹರೂ ಆಗಿರುತ್ತಾರೆ. ಮಾನಾರ್ಹರಾದ ಅವರು ಮಹಾತ್ಮ ಜ್ಞಾನಿಗಳಿಂದ ನಿತ್ಯವೂ ಗೌರವಿಸಲ್ಪಡುತ್ತಾರೆ.

13136014a ಚಂದನೇ ಮಲಪಂಕೇ ಚ ಭೋಜನೇಽಭೋಜನೇ ಸಮಾಃ|

13136014c ಸಮಂ ಯೇಷಾಂ ದುಕೂಲಂ ಚ ಶಾಣಕ್ಷೌಮಾಜಿನಾನಿ ಚ||

ಗಂಧ-ಕೆಸರು, ಭೋಜನ-ಉಪವಾಸ ಇವುಗಳನ್ನು ಸಮಾನವಾಗಿ ಕಾಣುತ್ತಾರೆ. ಇವರಿಗೆ ಹತ್ತಿಯ ಬಟ್ಟೆ, ರೇಷ್ಮೆಯ ಬಟ್ಟೆ ಮತ್ತು ಕೃಷ್ಣಾಜಿನಗಳು ಸಮಾನವಾಗಿರುತ್ತವೆ.

13136015a ತಿಷ್ಠೇಯುರಪ್ಯಭುಂಜಾನಾ ಬಹೂನಿ ದಿವಸಾನ್ಯಪಿ|

13136015c ಶೋಷಯೇಯುಶ್ಚ ಗಾತ್ರಾಣಿ ಸ್ವಾಧ್ಯಾಯೈಃ ಸಂಯತೇಂದ್ರಿಯಾಃ||

ಬ್ರಾಹ್ಮಣರು ಅನೇಕ ದಿನಗಳವರೆಗೆ ಊಡಮಾಡದೆಯೇ ಇರಬಲ್ಲರು. ಜಿತೇಂದ್ರಿಯರಾದ ಅವರು ಸ್ವಾಧ್ಯಾಯಗಳ ಮೂಲಕ ತಮ್ಮ ಶರೀರವನ್ನು ಶೋಷಿಸಿಕೊಳ್ಳಬಲ್ಲರು.

13136016a ಅದೈವಂ ದೈವತಂ ಕುರ್ಯುರ್ದೈವತಂ ಚಾಪ್ಯದೈವತಮ್|

13136016c ಲೋಕಾನನ್ಯಾನ್ಸೃಜೇಯುಶ್ಚ ಲೋಕಪಾಲಾಂಶ್ಚ ಕೋಪಿತಾಃ||

ಬ್ರಾಹ್ಮಣರು ದೇವರಲ್ಲದವರನ್ನು ದೇವರನ್ನಾಗಿ ಮಾಡಬಲ್ಲರು. ದೇವರನ್ನು ದೇವತ್ವದಿಂದ ಭ್ರಷ್ಟನನ್ನಾಗಿ ಮಾಡಬಲ್ಲರು. ಕುಪಿತರಾದರೆ ಅನ್ಯ ಲೋಕಗಳನ್ನೂ ಲೋಕಪಾಲರನ್ನೂ ಸೃಷ್ಟಿಸಬಲ್ಲರು.

13136017a ಅಪೇಯಃ ಸಾಗರೋ ಯೇಷಾಮಭಿಶಾಪಾನ್ಮಹಾತ್ಮನಾಮ್|

13136017c ಯೇಷಾಂ ಕೋಪಾಗ್ನಿರದ್ಯಾಪಿ ದಂಡಕೇ ನೋಪಶಾಮ್ಯತಿ||

ಮಹಾತ್ಮ ಬ್ರಾಹ್ಮಣರ ಶಾಪದಿಂದಾಗಿ ಸಾಗರದ ನೀರು ಕುಡಿಯಲಿಕ್ಕಾಗದಂತಾಯಿತು. ಇವರ ಕೋಪಾಗ್ನಿಯಿಂದಾಗಿ ಈಗಲೂ ದಂಡಕಾರಣ್ಯದಲ್ಲಿ ಶಾಂತಿಯಿಲ್ಲದಾಗಿದೆ.

13136018a ದೇವಾನಾಮಪಿ ಯೇ ದೇವಾಃ ಕಾರಣಂ ಕಾರಣಸ್ಯ ಚ|

13136018c ಪ್ರಮಾಣಸ್ಯ ಪ್ರಮಾಣಂ ಚ ಕಸ್ತಾನಭಿಭವೇದ್ ಬುಧಃ||

ದೇವತೆಗಳಿಗೂ ದೇವರಾಗಿರುವ, ಕಾರಣಕ್ಕೂ ಕಾರಣರಾಗಿರುವ, ಮತ್ತು ಪ್ರಮಾಣಕ್ಕೂ ಪ್ರಮಾಣರಾಗಿರುವ ಇವರನ್ನು ಯಾವ ಪಂಡಿತನು ತಾನೇ ಅವಮಾನಿಸುತ್ತಾನೆ?

13136019a ಯೇಷಾಂ ವೃದ್ಧಶ್ಚ ಬಾಲಶ್ಚ ಸರ್ವಃ ಸಂಮಾನಮರ್ಹತಿ|

13136019c ತಪೋವಿದ್ಯಾವಿಶೇಷಾತ್ತು ಮಾನಯಂತಿ ಪರಸ್ಪರಮ್||

ಬ್ರಾಹ್ಮಣರಲ್ಲಿ ವೃದ್ಧನಾಗಿರಲಿ ಬಾಲಕನಾಗಿರಲಿ ಸರ್ವರೂ ಸಂಮಾನಕ್ಕೆ ಅರ್ಹರೇ. ಬ್ರಾಹ್ಮಣರು ಇತರರಲ್ಲಿರುವ ತಪಸ್ಸು-ವಿದ್ಯೆಗಳ ವಿಶೇಷತೆಯನ್ನು ಗಮನಿಸಿ ಪರಸ್ಪರರನ್ನು ಸಮ್ಮಾನಿಸುತ್ತಾರೆ.

13136020a ಅವಿದ್ವಾನ್ಬ್ರಾಹ್ಮಣೋ ದೇವಃ ಪಾತ್ರಂ ವೈ ಪಾವನಂ ಮಹತ್|

13136020c ವಿದ್ವಾನ್ ಭೂಯಸ್ತರೋ ದೇವಃ ಪೂರ್ಣಸಾಗರಸಂನಿಭಃ||

ಬ್ರಾಹ್ಮಣನು ಅವಿದ್ಯಾವಂತನಾಗಿದ್ದರೂ ದೇವಸಮಾನನೇ ಸರಿ. ಪರಮ ಪವಿತ್ರನೂ ದಾನಕ್ಕೆ ಪಾತ್ರನೂ ಆಗುತ್ತಾನೆ. ಹೀಗಿರುವಾಗ ವಿದ್ಯಾವಂತ ಬ್ರಾಹ್ಮಣನ ವಿಷಯದಲ್ಲಿ ಹೆಚ್ಚಾಗಿ ಹೇಳುವುದೇನಿದೆ? ತುಂಬಿದ ಸಮುದ್ರದಂತೆ ವಿದ್ಯಾವಂತ ಬ್ರಾಹ್ಮಣನು ದೇವತೆಗಳಿಗಿಂತಲೂ ಮಿಗಿಲಾದವನು.

13136021a ಅವಿದ್ವಾಂಶ್ಚೈವ ವಿದ್ವಾಂಶ್ಚ ಬ್ರಾಹ್ಮಣೋ ದೈವತಂ ಮಹತ್|

13136021c ಪ್ರಣೀತಶ್ಚಾಪ್ರಣೀತಶ್ಚ ಯಥಾಗ್ನಿರ್ದೈವತಂ ಮಹತ್||

ಅಗ್ನಿಯು ಮಂತ್ರದಿಂದ ಸಂಸ್ಕರಿಸಲ್ಪಟ್ಟಿರಲಿ ಅಥವಾ ಅಸಂಸ್ಕೃತವಾಗಿಯೇ ಇರಲಿ ಮಹಾದೇವತೆಯೆಂದು ಪರಿಗಣಿಸಲ್ಪಡುವಂತೆ ಬ್ರಾಹ್ಮಣನು ವಿದ್ವಾಂಸನಾಗಿರಲಿ ಅಥವಾ ಅವಿದ್ಯಾವಂತನಾಗಿರಲಿ, ಅವನು ಪರಮ ದೇವತೆಯೇ ಸರಿ.

13136022a ಶ್ಮಶಾನೇ ಹ್ಯಪಿ ತೇಜಸ್ವೀ ಪಾವಕೋ ನೈವ ದುಷ್ಯತಿ|

13136022c ಹವಿರ್ಯಜ್ಞೇಷು ಚ ವಹನ್ ಭೂಯ ಏವಾಭಿಶೋಭತೇ||

ತೇಜಸ್ವೀ ಪಾವಕನು ಶ್ಮಶಾನದಲ್ಲಿಯೂ ದೋಷಿತನಲ್ಲ. ಪುನಃ ಯಜ್ಞದಲ್ಲಿ ಹವಿಸ್ಸಿನಿಂದ ಪ್ರಜ್ವಲಿಸಲ್ಪಟ್ಟ ಅಗ್ನಿಯೂ ಕೂಡ ಅಷ್ಟೇ ಶೋಭಿಸುತ್ತಾನೆ.

13136023a ಏವಂ ಯದ್ಯಪ್ಯನಿಷ್ಟೇಷು ವರ್ತತೇ ಸರ್ವಕರ್ಮಸು|

13136023c ಸರ್ವಥಾ ಬ್ರಾಹ್ಮಣೋ ಮಾನ್ಯೋ ದೈವತಂ ವಿದ್ಧಿ ತತ್ಪರಮ್||

ಹೀಗೆ ಸರ್ವಕರ್ಮಗಳಲ್ಲಿ ಅನಿಷ್ಟನಾಗಿ ವರ್ತಿಸಿದರೂ ಬ್ರಾಹ್ಮಣನು ಮಾನ್ಯನೇ ಸರಿ. ಅವನನ್ನು ಪರಮದೇವತೆಯೆಂದೇ ಭಾವಿಸು.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಬ್ರಾಹ್ಮಣಪ್ರಶಂಸಾಯಾಂ ಷಟ್ತ್ರಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಬ್ರಾಹ್ಮಣಪ್ರಶಂಸಾ ಎನ್ನುವ ನೂರಾಮೂವತ್ತಾರನೇ ಅಧ್ಯಾಯವು.

 

[1] ಭಾರತ ದರ್ಶನದಲ್ಲಿ ಈ ಅಧ್ಯಾಯಕ್ಕೆ ಮೊದಲು ೮೧ ಶ್ಲೋಕಗಳ ಇನ್ನೊಂದು ಅಧ್ಯಾಯವಿದೆ. ಜಪಕ್ಕೆ ಯೋಗ್ಯವಾದ ಮಂತ್ರಗಳು, ಬೆಳಿಗ್ಗೆ ಮತ್ತು ಸಂಜೆ ಪ್ರಾರ್ಥಿಸಬೇಕಾದ ದೇವತೆಗಳು, ಋಷಿಗಳು ಮತ್ತು ರಾಜರ ನಾಮಸಂಕೀರ್ತನದ ಮಹಿಮೆ, ಮತ್ತು ಗಾಯತ್ರೀ ಜಪದ ಫಲದ ಕುರಿತಾದ ಈ ಅಧ್ಯಾಯವನ್ನು ಪರಿಶಿಷ್ಠದಲ್ಲಿ ನೀಡಲಾಗಿದೆ.

[2] ಸರ್ವಶಿಕ್ಷಾಃ ಶ್ರುತಿಧನಾ ನಿಪುಣಾ ಮೋಕ್ಷದರ್ಶಿನಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.