Anushasana Parva: Chapter 118

ಅನುಶಾಸನ ಪರ್ವ: ದಾನಧರ್ಮ ಪರ್ವ

೧೧೮

ಕೀಟೋಪಾಽಖ್ಯಾನ

ಮೃತ್ಯುಭಯದಿಂದ ಓಡಿಹೋಗುತ್ತಿದ್ದ ಕೀಟ ಮತ್ತು ವ್ಯಾಸರ ಸಂವಾದ (1-28).

13118001 ಯುಧಿಷ್ಠಿರ ಉವಾಚ|

13118001a ಅಕಾಮಾಶ್ಚ ಸಕಾಮಾಶ್ಚ ಹತಾ ಯೇಽಸ್ಮಿನ್ಮಹಾಹವೇ|

13118001c ಕಾಂ ಯೋನಿಂ[1] ಪ್ರತಿಪನ್ನಾಸ್ತೇ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಯುದ್ಧದಲ್ಲಿ ಬಯಸಿಯೋ ಅಥವಾ ಬಯಸದೆಯೋ ಸಾಯುವವರು ಯಾವ ಯೋನಿಯನ್ನು ಪಡೆದುಕೊಳ್ಳುತ್ತಾರೆ ಎನ್ನುವುದನ್ನು ಹೇಳು.

13118002a ದುಃಖಂ ಪ್ರಾಣಪರಿತ್ಯಾಗಃ ಪುರುಷಾಣಾಂ ಮಹಾಮೃಧೇ|

13118002c ಜಾನಾಮಿ ತತ್ತ್ವಂ ಧರ್ಮಜ್ಞ[2] ಪ್ರಾಣತ್ಯಾಗಂ ಸುದುಷ್ಕರಮ್||

13118003a ಸಮೃದ್ಧೇ ವಾಸಮೃದ್ಧೇ ವಾ ಶುಭೇ ವಾ ಯದಿ ವಾಶುಭೇ|

13118003c ಕಾರಣಂ ತತ್ರ ಮೇ ಬ್ರೂಹಿ ಸರ್ವಜ್ಞೋ ಹ್ಯಸಿ ಮೇ ಮತಃ||

ಮಹಾಯುದ್ಧದಲ್ಲಿ ಪ್ರಾಣವನ್ನು ತ್ಯಜಿಸುವುದು ಪುರುಷರಿಗೆ ದುಃಖಕರವಾದುದು. ಧರ್ಮಜ್ಞ! ಸಮೃದ್ಧನಾಗಿರಲಿ ಅಥವಾ ಅಸಮೃದ್ಧನಾಗಿರಲಿ, ಶುಭನಾಗಿರಲೀ ಅಥವಾ ಅಶುಭನಾಗಿರಲಿ, ಪ್ರಾಣತ್ಯಾಗವು ಸುದುಷ್ಕರವಾದುದೆಂಬ ತತ್ತ್ವವನ್ನು ನಾನು ತಿಳಿದಿದ್ದೇನೆ. ಇದಕ್ಕೆ ಕಾರಣವನ್ನು ನನಗೆ ಹೇಳು. ನೀನು ಸರ್ವಜ್ಞ ಎಂದು ನನ್ನ ಮತ.”

13118004 ಭೀಷ್ಮ ಉವಾಚ|

13118004a ಸಮೃದ್ಧೇ ವಾಸಮೃದ್ಧೇ ವಾ ಶುಭೇ ವಾ ಯದಿ ವಾಶುಭೇ|

13118004c ಸಂಸಾರೇಽಸ್ಮಿನ್ಸಮಾಜಾತಾಃ ಪ್ರಾಣಿನಃ ಪೃಥಿವೀಪತೇ||

13118005a ನಿರತಾ ಯೇನ ಭಾವೇನ ತತ್ರ ಮೇ ಶೃಣು ಕಾರಣಮ್|

13118005c ಸಮ್ಯಕ್ಚಾಯಮನುಪ್ರಶ್ನಸ್ತ್ವಯೋಕ್ತಶ್ಚ ಯುಧಿಷ್ಠಿರ||

ಭೀಷ್ಮನು ಹೇಳಿದನು: “ಪೃಥಿವೀಪತೇ! ಸಮೃದ್ಧನಾಗಿರಲಿ ಅಥವಾ ಅಸಮೃದ್ಧನಾಗಿರಲಿ, ಶುಭವಾಗಿರಲಿ ಅಥವಾ ಅಶುಭವಾಗಿರಲಿ ಈ ಸಂಸಾರದಲ್ಲಿ ಹುಟ್ಟಿದ ಪ್ರಾಣಿಗಳೆಲ್ಲವೂ ಸಮನಾಗಿಯೇ ಇರುತ್ತವೆ. ಎಲ್ಲರಿಗೂ ಒಂದೇ ಭಾವವಿರುತ್ತದೆ. ಅದಕ್ಕೆ ಕಾರಣವನ್ನು ನನ್ನಿಂದ ಕೇಳು. ನೀನು ಕೇಳಿದ ಪ್ರಶ್ನೆಯು ಸರಿಯಾಗಿಯೇ ಇದೆ.

13118006a ಅತ್ರ ತೇ ವರ್ತಯಿಷ್ಯಾಮಿ ಪುರಾವೃತ್ತಮಿದಂ ನೃಪ|

13118006c ದ್ವೈಪಾಯನಸ್ಯ ಸಂವಾದಂ ಕೀಟಸ್ಯ ಚ ಯುಧಿಷ್ಠಿರ||

ನೃಪ! ಯುಧಿಷ್ಠಿರ! ಈ ವಿಷಯದಲ್ಲಿ ಹಿಂದೆ ನಡೆದ ದ್ವೈಪಾಯನ ಮತ್ತು ಕೀಟದ ಸಂವಾದವನ್ನು ಹೇಳುತ್ತೇನೆ.

13118007a ಬ್ರಹ್ಮಭೂತಶ್ಚರನ್ವಿಪ್ರಃ ಕೃಷ್ಣದ್ವೈಪಾಯನಃ ಪುರಾ|

13118007c ದದರ್ಶ ಕೀಟಂ ಧಾವಂತಂ ಶೀಘ್ರಂ ಶಕಟವರ್ತ್ಮನಿ||

ಹಿಂದೆ ಬ್ರಹ್ಮಭೂತ ವಿಪ್ರ ಕೃಷ್ಣದ್ವೈಪಾಯನನು ಸಂಚರಿಸುತ್ತಿರುವಾಗ ಒಂದು ಕೀಟವು ಬಂಡಿಯು ಹೋಗುವ ದಾರಿಯಲ್ಲಿ ಓಡಿ ಹೋಗುತ್ತಿರುವುದನ್ನು ನೋಡಿದನು.

13118008a ಗತಿಜ್ಞಃ ಸರ್ವಭೂತಾನಾಂ ರುತಜ್ಞಶ್ಚ ಶರೀರಿಣಾಮ್|

13118008c ಸರ್ವಜ್ಞಃ ಸರ್ವತೋ ದೃಷ್ಟ್ವಾ ಕೀಟಂ ವಚನಮಬ್ರವೀತ್||

ಸರ್ವಭೂತಗಳ ಗತಿಗಳನ್ನೂ ತಿಳಿದಿದ್ದ, ಶರೀರಿಗಳ ಭಾಷೆಗಳನ್ನೂ ತಿಳಿದಿದ್ದ ಸರ್ವತವೂ ಸರ್ವಜ್ಞನಾಗಿದ್ದ ಅವನು ಕೀಟವನ್ನು ನೋಡಿ ಹೇಳಿದನು:

13118009a ಕೀಟ ಸಂತ್ರಸ್ತರೂಪೋಽಸಿ ತ್ವರಿತಶ್ಚೈವ ಲಕ್ಷ್ಯಸೇ|

13118009c ಕ್ವ ಧಾವಸಿ ತದಾಚಕ್ಷ್ವ ಕುತಸ್ತೇ ಭಯಮಾಗತಮ್||

“ಕೀಟವೇ! ನೀನು ಭಯಗೊಂಡಿರುವಂತೆ ಕಾಣುತ್ತಿರುವೆ. ಆತುರದಲ್ಲಿರುವೆಯೆಂದೂ ತೋರುತ್ತಿರುವೆ. ಎಲ್ಲಿಗೆ ಓಡಿಹೋಗುತ್ತಿರುವೆ? ಯಾವುದರಿಂದ ನಿನಗೆ ಭಯವುಂಟಾಗಿದೆ? ಅದನ್ನು ಹೇಳು.”

13118010 ಕೀಟ ಉವಾಚ|

13118010a ಶಕಟಸ್ಯಾಸ್ಯ ಮಹತೋ ಘೋಷಂ ಶ್ರುತ್ವಾ ಭಯಂ ಮಮ|

13118010c ಆಗತಂ ವೈ ಮಹಾಬುದ್ಧೇ ಸ್ವನ ಏಷ ಹಿ ದಾರುಣಃ|

13118010e ಶ್ರೂಯತೇ ನ ಸ ಮಾಂ ಹನ್ಯಾದಿತಿ ತಸ್ಮಾದಪಾಕ್ರಮೇ||

ಕೀಟವು ಹೇಳಿತು: “ಮಹಾಬುದ್ಧೇ! ಬರುತ್ತಿರುವ ಬಂಡಿಯ ಮಹಾ ಘೋಷವನ್ನು ಕೇಳಿ ನನಗೆ ಭಯವುಂಟಾಗಿದೆ. ಅದರ ಶಬ್ದವು ದಾರುಣವಾಗಿ ಕೇಳುತ್ತಿದೆ. ಅದು ನನ್ನನ್ನು ಕೊಲ್ಲಬಾರದೆಂದು ದಾರಿಬಿಟ್ಟು ಹೋಗುತ್ತಿದ್ದೇನೆ.

13118011a ಶ್ವಸತಾಂ ಚ ಶೃಣೋಮ್ಯೇವಂ ಗೋಪುತ್ರಾಣಾಂ ಪ್ರಚೋದ್ಯತಾಮ್|

13118011c ವಹತಾಂ ಸುಮಹಾಭಾರಂ ಸಂನಿಕರ್ಷೇ ಸ್ವನಂ ಪ್ರಭೋ|

13118011e ನೃಣಾಂ ಚ ಸಂವಾಹಯತಾಂ ಶ್ರೂಯತೇ ವಿವಿಧಃ ಸ್ವನಃ||

ಪ್ರಭೋ! ಚಾಟಿಯ ಏಟಿನಿಂದ ಪ್ರಚೋದಿತಗೊಂಡ ಎತ್ತುಗಳು ನಿಟ್ಟುಸಿರು ಬಿಡುವುದು ಕೇಳಿಸುತ್ತಿದೆ. ಮಹಾಭಾರವನ್ನು ಹೊತ್ತು ಹತ್ತಿರ ಬರುತ್ತಿರುವುದು ಕೇಳುತ್ತಿದೆ. ಗಾಡಿಯಲ್ಲಿರುವ ಮನುಷ್ಯರ ವಿವಿಧ ಧ್ವನಿಗಳೂ ಕೇಳುತ್ತಿವೆ.

13118012a ಸೋಢು[3]ಮಸ್ಮದ್ವಿಧೇನೈಷ ನ ಶಕ್ಯಃ ಕೀಟಯೋನಿನಾ|

13118012c ತಸ್ಮಾದಪಕ್ರಮಾಮ್ಯೇಷ ಭಯಾದಸ್ಮಾತ್ಸುದಾರುಣಾತ್||

ಕೀಟಯೋನಿಯ ನಾನು ಇಂತಹ ಶಬ್ದವನ್ನು ಸಹಿಸಿಕೊಳ್ಳಲು ಶಕ್ಯನಾಗಿಲ್ಲ. ಆದುದರಿಂದ ಈ ಸುದಾರುಣ ಭಯದಿಂದ ಮತ್ತು ಮಾರ್ಗದಿಂದ ಪಾರಾಗುತ್ತಿದ್ದೇನೆ.

13118013a ದುಃಖಂ ಹಿ ಮೃತ್ಯುರ್ಭೂತಾನಾಂ ಜೀವಿತಂ ಚ ಸುದುರ್ಲಭಮ್|

13118013c ಅತೋ ಭೀತಃ ಪಲಾಯಾಮಿ ಗಚ್ಚೇಯಂ ನಾಸುಖಂ ಸುಖಾತ್||

ಪ್ರಾಣಿಗಳಿಗೆ ಮೃತ್ಯುವು ದುಃಖಕರವಾದುದು. ಜೀವಿತವು ಅತ್ಯಂತ ದುರ್ಲಭವು. ಸುಖದಿಂದ ಅಸುಖವನ್ನು ಪಡೆಯಬಾರದೆಂಬ ಭೀತಿಯಿಂದ ಪಲಾಯನಮಾಡುತ್ತಿದ್ದೇನೆ.””

13118014 ಭೀಷ್ಮ ಉವಾಚ|

13118014a ಇತ್ಯುಕ್ತಃ ಸ ತು ತಂ ಪ್ರಾಹ ಕುತಃ ಕೀಟ ಸುಖಂ ತವ|

13118014c ಮರಣಂ ತೇ ಸುಖಂ ಮನ್ಯೇ ತಿರ್ಯಗ್ಯೋನೌ ಹಿ ವರ್ತಸೇ||

ಭೀಷ್ಮನು ಹೇಳಿದನು: “ಇದನ್ನು ಕೇಳಿ ವ್ಯಾಸನು ಹೇಳಿದನು: “ಕೀಟವೆ! ನಿನಗೆ ಸುಖವೆನ್ನುವುದೆಲ್ಲಿದೆ? ತಿರ್ಯಗ್ಯೋನಿಯಲ್ಲಿರುವ ನಿನಗೆ ಮರಣವೇ ಸುಖವೆಂದು ನನಗನ್ನಿಸುತ್ತದೆ.

13118015a ಶಬ್ದಂ ಸ್ಪರ್ಶಂ ರಸಂ ಗಂಧಂ ಭೋಗಾಂಶ್ಚೋಚ್ಚಾವಚಾನ್ಬಹೂನ್|

13118015c ನಾಭಿಜಾನಾಸಿ ಕೀಟ ತ್ವಂ ಶ್ರೇಯೋ ಮರಣಮೇವ ತೇ||

ಕೀಟವೇ! ನೀನು ಶಬ್ದ, ಸ್ಪರ್ಶ, ರಸ, ಗಂಧ, ಅನೇಕ ವಿಧದ ಭೋಗಗಳು ಇವುಗಳ್ಯಾವುದನ್ನೂ ತಿಳಿಯಲಾರೆ. ಆದುದರಿಂದ ನಿನಗೆ ಮರಣವೇ ಶ್ರೇಯಸ್ಕರವು!”

13118016 ಕೀಟ ಉವಾಚ|

13118016a ಸರ್ವತ್ರ ನಿರತೋ ಜೀವ ಇತೀಹಾಪಿ ಸುಖಂ ಮಮ|

13118016c ಚೇತಯಾಮಿ ಮಹಾಪ್ರಾಜ್ಞ ತಸ್ಮಾದಿಚ್ಚಾಮಿ ಜೀವಿತುಮ್||

ಕೀಟವು ಹೇಳಿತು: “ಮಹಾಪ್ರಾಜ್ಞ! ಜೀವವು ಎಲ್ಲ ಯೋನಿಗಳಲ್ಲಿಯೂ ಸುಖವನ್ನು ಅನುಭವಿಸುತ್ತದೆ. ಈ ಕೀಟಜನ್ಮದಲ್ಲಿಯೂ ನನಗೆ ಸುಖವಿದೆ ಎಂದು ನನಗನ್ನಿಸುತ್ತದೆ. ಆದುದರಿಂದ ಜೀವಿಸಿರಲು ಬಯಸುತ್ತೇನೆ.

13118017a ಇಹಾಪಿ ವಿಷಯಃ ಸರ್ವೋ ಯಥಾದೇಹಂ ಪ್ರವರ್ತಿತಃ|

13118017c ಮಾನುಷಾಸ್ತಿರ್ಯಗಾಶ್ಚೈವ ಪೃಥಗ್ಭೋಗಾ ವಿಶೇಷತಃ||

ಈ ಕೀಟದೇಹದಲ್ಲಿಯೂ ಕೂಡ ಶರೀರದ ರಚನೆಗೆ ಅನುಗುಣವಾಗಿ ಸರ್ವ ವಿಷಯಸುಖಗಳೂ ದೊರೆಯುತ್ತವೆ. ಆದರೆ ಭೋಗದಲ್ಲಿ ಮನುಷ್ಯರಿಗೂ ತಿರ್ಯಗ್ಯೋನಿಗಳಲ್ಲಿರುವವರಿಗೂ ವಿಶೇಷ ವ್ಯತ್ಯಾಸವಿದೆ.

13118018a ಅಹಮಾಸಂ ಮನುಷ್ಯೋ ವೈ ಶೂದ್ರೋ ಬಹುಧನಃ ಪುರಾ|

13118018c ಅಬ್ರಹ್ಮಣ್ಯೋ ನೃಶಂಸಶ್ಚ ಕದರ್ಯೋ ವೃದ್ಧಿಜೀವನಃ||

ಹಿಂದಿನ ಜನ್ಮದಲ್ಲಿ ನಾನು ಧನಿಕ ಶೂದ್ರನಾಗಿದ್ದೆನು. ಬ್ರಾಹ್ಮಣರನ್ನು ಆದರಿಸುತ್ತಿರಲಿಲ್ಲ. ಕ್ರೂರಿಯೂ ಜಿಪುಣನೂ ಆಗಿದ್ದೆನು. ಬಡ್ಡಿಯ ಹಣದಿಂದ ಜೀವಿಸುತ್ತಿದ್ದೆನು.

13118019a ವಾಕ್ತೀಕ್ಷ್ಣೋ ನಿಕೃತಿಪ್ರಜ್ಞೋ ಮೋಷ್ಟಾ[4] ವಿಶ್ವಸ್ಯ ಸರ್ವಶಃ|

13118019c ಮಿಥಃಕೃತೋಽಪನಿಧನಃ ಪರಸ್ವಹರಣೇ ರತಃ||

ನನ್ನ ಮಾತು ತೀಕ್ಷ್ಣವಾಗಿತ್ತು. ವಂಚನಾ ಬುದ್ಧಿಯಿತ್ತು. ವಿಶ್ವದ ಎಲ್ಲವನ್ನೂ ದ್ವೇಷಿಸುತ್ತಿದ್ದೆ. ಧನವನ್ನು ಸಂಗ್ರಹಿಸಲು ಮಿಥ್ಯವಾಗಿ ನಡೆದುಕೊಳ್ಳುತ್ತಿದ್ದೆ. ಇನ್ನೊಬ್ಬರದ್ದನ್ನು ಅಪಹರಿಸುತ್ತಿದ್ದೆ.

13118020a ಭೃತ್ಯಾತಿಥಿಜನಶ್ಚಾಪಿ ಗೃಹೇ ಪರ್ಯುಷಿತೋ ಮಯಾ|

13118020c ಮಾತ್ಸರ್ಯಾತ್ ಸ್ವಾದುಕಾಮೇನ ನೃಶಂಸೇನ ಬುಭೂಷತಾ||

ರುಚಿಯಾದುದನ್ನು ತಿನ್ನುವ ಬಯಕೆಯಿಂದ ಮತ್ತು ಮಾತ್ಸರ್ಯದಿಂದ ಕ್ರೂರಿಯಾಗಿ ನಡೆದುಕೊಳ್ಳುತ್ತಿದ್ದೆ. ನನ್ನ ಮನೆಯಲ್ಲಿ ಸೇವಕರು ಮತ್ತು ಅತಿಥಿಜನರು ನಾನು ತಿಂದು ಉಳಿದುದನ್ನು ಊಟಮಾಡುತ್ತಿದ್ದರು.

13118021a ದೇವಾರ್ಥಂ ಪಿತೃಯಜ್ಞಾರ್ಥಮನ್ನಂ ಶ್ರದ್ಧಾಕೃತಂ[5] ಮಯಾ|

13118021c ನ ದತ್ತಮರ್ಥಕಾಮೇನ ದೇಯಮನ್ನಂ ಪುನಾತಿ ಹ||

ದೇವತೆಗಳಿಗಾಗಿ ಮತ್ತು ಪಿತೃಯಜ್ಞಾರ್ಥವಾಗಿ ಶ್ರದ್ಧೆಯಿಂದ ಮಾಡಿದ ಅನ್ನವನ್ನು ನಾನು ಅವರಿಗೆ ನೀಡುತ್ತಿರಲಿಲ್ಲ. ಧನಲೋಭದಿಂದಾಗಿ ಅನ್ನವನ್ನು ದಾನಮಾಡುತ್ತಿರಲಿಲ್ಲ.

13118022a ಗುಪ್ತಂ ಶರಣಮಾಶ್ರಿತ್ಯ ಭಯೇಷು ಶರಣಾಗತಾಃ|

13118022c ಅಕಸ್ಮಾನ್ನೋ ಭಯಾತ್ತ್ಯಕ್ತಾ ನ ಚ ತ್ರಾತಾಭಯೈಷಿಣಃ||

ಭಯದಿಂದ ಶರಣಾಗತರಾಗಿ ಬಂದವರಿಗೆ ಆಶ್ರಯವನ್ನಿತ್ತು ರಕ್ಷಿಸುತ್ತಿರಲಿಲ್ಲ. ಭಯದಿಂದಿದ್ದವರನ್ನು ನಾನು ಕ್ರೂರಿಯಾಗಿ ಬಿಟ್ಟುಬಿಡುತ್ತಿದ್ದೆನು.

13118023a ಧನಂ ಧಾನ್ಯಂ ಪ್ರಿಯಾನ್ದಾರಾನ್ಯಾನಂ ವಾಸಸ್ತಥಾದ್ಭುತಮ್|

13118023c ಶ್ರಿಯಂ ದೃಷ್ಟ್ವಾ ಮನುಷ್ಯಾಣಾಮಸೂಯಾಮಿ ನಿರರ್ಥಕಮ್||

ಇತರರಲ್ಲಿದ್ದ ಧನ, ಧಾನ್ಯ, ಪ್ರಿಯಪತ್ನಿಯರು, ವಾಹನ, ಅದ್ಭುತ ವಸ್ತ್ರಗಳನ್ನೂ, ಸಂಪತ್ತನ್ನೂ ನೋಡಿ ನಿರರ್ಥಕವಾಗಿ ಅಸೂಯೆಪಡುತ್ತಿದ್ದೆನು.

13118024a ಈರ್ಷ್ಯುಃ ಪರಸುಖಂ ದೃಷ್ಟ್ವಾ ಆತತಾಯ್ಯಬುಭೂಷಕಃ|

13118024c ತ್ರಿವರ್ಗಹಂತಾ ಚಾನ್ಯೇಷಾಮಾತ್ಮಕಾಮಾನುವರ್ತಕಃ||

ಇತರರ ಸುಖವನ್ನು ನೋಡಿ ಹೊಟ್ಟೇಕಿಚ್ಚು ಪಡುತ್ತಿದ್ದೆನು. ಇತರರಿಗೆ ಒಳ್ಳೆಯದನ್ನು ಬಯಸುತ್ತಿರಲಿಲ್ಲ. ಇತರರ ಧರ್ಮಾರ್ಥಕಾಮಗಳನ್ನು ಹಾಳುಮಾಡುತ್ತಿದ್ದೆನು. ನನ್ನ ಇಚ್ಛಾನುಸಾರವಾಗಿ ವ್ಯವಹರಿಸುತ್ತಿದ್ದೆನು.

13118025a ನೃಶಂಸಗುಣಭೂಯಿಷ್ಠಂ ಪುರಾ ಕರ್ಮ ಕೃತಂ ಮಯಾ|

13118025c ಸ್ಮೃತ್ವಾ ತದನುತಪ್ಯೇಽಹಂ ತ್ಯಕ್ತ್ವಾ ಪ್ರಿಯಮಿವಾತ್ಮಜಮ್||

ಹಿಂದಿನ ಜನ್ಮದಲ್ಲಿ ಮಾಡಿದ ನನ್ನ ಕರ್ಮಗಳು ಕ್ರೂರಗುಣಗಳಿಂದ ತುಂಬಿಹೋಗಿದ್ದವು. ಅವುಗಳನ್ನು ಸ್ಮರಿಸಿಕೊಂಡು ಈಗ ನಾನು ಪ್ರಿಯಪುತ್ರನನ್ನು ಕಳೆದುಕೊಂಡವನಂತೆ ಪರಿತಪಿಸುತ್ತಿದ್ದೇನೆ.

13118026a ಶುಭಾನಾಮಪಿ ಜಾನಾಮಿ ಕೃತಾನಾಂ ಕರ್ಮಣಾಂ ಫಲಮ್|

13118026c ಮಾತಾ ಚ ಪೂಜಿತಾ ವೃದ್ಧಾ ಬ್ರಾಹ್ಮಣಶ್ಚಾರ್ಚಿತೋ ಮಯಾ||

ಆಗ ಮಾಡಿದ್ದ ಶುಭ ಕರ್ಮಗಳ ಫಲವನ್ನೂ ತಿಳಿದಿದ್ದೇನೆ. ವೃದ್ಧ ಮಾತೆಯನ್ನು ನಾನು ಪೂಜಿಸುತ್ತಿದ್ದೆ ಮತ್ತು ಬ್ರಾಹ್ಮಣನೋರ್ವನನ್ನು ನಾನು ಅರ್ಚಿಸಿದ್ದೆ.

13118027a ಸಕೃಜ್ಜಾತಿಗುಣೋಪೇತಃ ಸಂಗತ್ಯಾ ಗೃಹಮಾಗತಃ|

13118027c ಅತಿಥಿಃ ಪೂಜಿತೋ ಬ್ರಹ್ಮಂಸ್ತೇನ ಮಾಂ ನಾಜಹಾತ್ ಸ್ಮೃತಿಃ||

ಯಾರೊಡನೆಯೋ ನನ್ನ ಮನೆಗೆ ಆಗಮಿಸಿದ್ದ ತನ್ನ ಜಾತಿಗುಣಗಳಿಂದ ಯುಕ್ತನಾದ ಬ್ರಾಹ್ಮಣನೋರ್ವನನ್ನು ನಾನು ಪೂಜಿಸಿದ್ದೆ. ಬ್ರಹ್ಮನ್! ಆ ಅತಿಥಿಯ ಪೂಜೆಯಿಂದ ನನ್ನ ಸ್ಮೃತಿಯು ಬಿಟ್ಟುಹೋಗಿಲ್ಲ.

13118028a ಕರ್ಮಣಾ ತೇನ ಚೈವಾಹಂ ಸುಖಾಶಾಮಿಹ ಲಕ್ಷಯೇ|

13118028c ತಚ್ಚ್ರೋತುಮಹಮಿಚ್ಚಾಮಿ ತ್ವತ್ತಃ ಶ್ರೇಯಸ್ತಪೋಧನ||

ತಪೋಧನ! ನಾನು ಯಾವುದಾದರೂ ಕರ್ಮದಿಂದ ಮುಂದೆ ಸುಖವನ್ನು ಹೊಂದಲು ಬಯಸುತ್ತೇನೆ. ಅಂತಹ ಶ್ರೇಯಸ್ಕರ ಕರ್ಮವು ಯಾವುದೆಂದು ನಿನ್ನಿಂದ ಕೇಳಬಯಸುತ್ತೇನೆ.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಕೀಟೋಪಾಖ್ಯಾನೇ ಅಷ್ಟಾದಶಾಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಕೀಟೋಪಾಖ್ಯಾನ ಎನ್ನುವ ನೂರಾಹದಿನೆಂಟನೇ ಅಧ್ಯಾಯವು.

[1] ಗತಿಂ (ಭಾರತ ದರ್ಶನ).

[2] ಜಾನಾಸಿ ತ್ವಂ ಮಹಾಪ್ರಾಜ್ಞ (ಭಾರತ ದರ್ಶನ).

[3] ಶ್ರೋತು (ಭಾರತ ದರ್ಶನ).

[4] ದ್ವೇಷ್ಟಾ (ಭಾರತ ದರ್ಶನ).

[5] ಶ್ರದ್ಧಾಹೃತಂ (ಭಾರತ ದರ್ಶನ).

Comments are closed.