ಅನುಶಾಸನ ಪರ್ವ: ದಾನಧರ್ಮ ಪರ್ವ
Contents
Toggle೧೦೯
ಉಪವಾಸವಿಧಿ
ಮಾಸ-ಪಕ್ಷ ಮತ್ತು ತಿಥಿಗಳಿಗೆ ಸಂಬಂಧಿಸಿದ ವಿವಿಧ ಉಪವಾಸವ್ರತಗಳ ಫಲಗಳ ವರ್ಣನೆ (1-69).
13109001 ಯುಧಿಷ್ಠಿರ ಉವಾಚ|
13109001a ಸರ್ವೇಷಾಮೇವ ವರ್ಣಾನಾಂ ಮ್ಲೇಚ್ಚಾನಾಂ ಚ ಪಿತಾಮಹ|
13109001c ಉಪವಾಸೇ ಮತಿರಿಯಂ ಕಾರಣಂ ಚ ನ ವಿದ್ಮಹೇ||
ಯುಧಿಷ್ಠಿರನು ಹೇಳಿದನು: “ಪಿತಾಮಹ! ಸರ್ವವರ್ಣದವರೂ ಮತ್ತು ಮ್ಲೇಚ್ಛರೂ ಕೂಡ ಉಪವಾಸದಲ್ಲಿ ಮನಸ್ಸನ್ನಿಡುತ್ತಾರೆ. ಆದರೆ ಇದಕ್ಕೆ ಕಾರಣವು ನನಗೆ ತಿಳಿದಿಲ್ಲ.
13109002a ಬ್ರಹ್ಮಕ್ಷತ್ರೇಣ ನಿಯಮಾಶ್ಚರ್ತವ್ಯಾ ಇತಿ ನಃ ಶ್ರುತಮ್|
13109002c ಉಪವಾಸೇ ಕಥಂ ತೇಷಾಂ ಕೃತ್ಯಮಸ್ತಿ ಪಿತಾಮಹ||
ಪಿತಾಮಹ! ಬ್ರಾಹ್ಮಣ-ಕ್ಷತ್ರಿಯರು ನಿಯಮಗಳನ್ನು ಪಾಲಿಸಬೇಕೆಂದು ಕೇಳಿದ್ದೇವೆ. ಆದರೆ ಉಪವಾಸವನ್ನು ಮಾಡುವುದರಿಂದ ಅವರಿಗೆ ಹೇಗೆ ಪ್ರಯೋಜನವಾಗುತ್ತದೆ?
13109003a ನಿಯಮಂ ಚೋಪವಾಸಾನಾಂ ಸರ್ವೇಷಾಂ ಬ್ರೂಹಿ ಪಾರ್ಥಿವ|
13109003c ಅವಾಪ್ನೋತಿ ಗತಿಂ ಕಾಂ ಚ ಉಪವಾಸಪರಾಯಣಃ||
ಪಾರ್ಥಿವ! ಉಪವಾಸಗಳ ನಿಯಮಗಳೆಲ್ಲವನ್ನೂ ಹೇಳು. ಉಪವಾಸಪರಾಯಣರು ಯಾವ ಗತಿಯನ್ನು ಪಡೆಯುತ್ತಾರೆ?
13109004a ಉಪವಾಸಃ ಪರಂ ಪುಣ್ಯಮುಪವಾಸಃ ಪರಾಯಣಮ್|
13109004c ಉಪೋಷ್ಯೇಹ ನರಶ್ರೇಷ್ಠ ಕಿಂ ಫಲಂ ಪ್ರತಿಪದ್ಯತೇ||
ನರಶ್ರೇಷ್ಠ! ಉಪವಾಸವೇ ಪರಮ ಪುಣ್ಯದಾಯಕವೆಂದೂ ಉಪವಾಸವೇ ಪರಮಾಶ್ರಯವೆಂದೂ ಹೇಳುತ್ತಾರೆ. ಈ ಲೋಕದಲ್ಲಿ ಉಪವಾಸಮಾಡಿದವನು ಯಾವ ಫಲವನ್ನು ಹೊಂದುತ್ತಾನೆ?
13109005a ಅಧರ್ಮಾನ್ಮುಚ್ಯತೇ ಕೇನ ಧರ್ಮಮಾಪ್ನೋತಿ ವೈ ಕಥಮ್|
13109005c ಸ್ವರ್ಗಂ ಪುಣ್ಯಂ ಚ ಲಭತೇ ಕಥಂ ಭರತಸತ್ತಮ||
ಭರತಸತ್ತಮ! ಯಾವುದರಿಂದ ಪಾಪಮುಕ್ತನಾಗುತ್ತಾನೆ? ಯಾವುದರಿಂದ ಧರ್ಮಪ್ರಾಪ್ತಿಯಾಗುತ್ತದೆ? ಯಾವುದರಿಂದ ಪುಣ್ಯ ಮತ್ತು ಸ್ವರ್ಗಗಳು ಲಭಿಸುತ್ತವೆ?
13109006a ಉಪೋಷ್ಯ ಚಾಪಿ ಕಿಂ ತೇನ ಪ್ರದೇಯಂ ಸ್ಯಾನ್ನರಾಧಿಪ|
13109006c ಧರ್ಮೇಣ ಚ ಸುಖಾನರ್ಥಾಽಲ್ಲಭೇದ್ಯೇನ ಬ್ರವೀಹಿ ತಮ್||
ನರಾಧಿಪ! ಉಪವಾಸ ಮಾಡಿ ಮನುಷ್ಯನು ಏನನ್ನು ದಾನಮಾಡಬೇಕು? ಯಾವ ಧರ್ಮದಿಂದ ಸುಖ ಮತ್ತು ಧನದ ಪ್ರಾಪ್ತಿಯಾಗುತ್ತದೆ? ಅದನ್ನು ನನಗೆ ಹೇಳು.””
13109007 ವೈಶಂಪಾಯನ ಉವಾಚ|
13109007a ಏವಂ ಬ್ರುವಾಣಂ ಕೌಂತೇಯಂ ಧರ್ಮಜ್ಞಂ ಧರ್ಮತತ್ತ್ವವಿತ್|
13109007c ಧರ್ಮಪುತ್ರಮಿದಂ ವಾಕ್ಯಂ ಭೀಷ್ಮಃ ಶಾಂತನವೋಽಬ್ರವೀತ್||
ವೈಶಂಪಾಯನನು ಹೇಳಿದನು: “ಹೀಗೆ ಕೇಳಿದ ಧರ್ಮಜ್ಞ ಕೌಂತೇಯ ಧರ್ಮಪುತ್ರನಿಗೆ ಧರ್ಮತತ್ತ್ವವಿದು ಶಾಂತನವ ಭೀಷ್ಮನು ಹೇಳಿದನು:
13109008a ಇದಂ ಖಲು ಮಹಾರಾಜ ಶ್ರುತಮಾಸೀತ್ ಪುರಾತನಮ್|
13109008c ಉಪವಾಸವಿಧೌ ಶ್ರೇಷ್ಠಾ ಯೇ ಗುಣಾ ಭರತರ್ಷಭ||
“ಮಹಾರಾಜ! ಭರತರ್ಷಭ! ಶ್ರೇಷ್ಠ ಉಪವಾಸವಿಧಿ ಮತ್ತು ಅದರ ಶ್ರೇಷ್ಠ ಗುಣಗಳ ಕುರಿತು ನಾನು ಪುರಾತನವಾದ ಇದನ್ನು ಕೇಳಿದ್ದೇನೆ.
13109009a ಪ್ರಾಜಾಪತ್ಯಂ ಹ್ಯಂಗಿರಸಂ[1] ಪೃಷ್ಟವಾನಸ್ಮಿ ಭಾರತ|
13109009c ಯಥಾ ಮಾಂ ತ್ವಂ ತಥೈವಾಹಂ ಪೃಷ್ಟವಾಂಸ್ತಂ ತಪೋಧನಮ್||
ಭಾರತ! ನೀನು ಕೇಳಿದುದನ್ನೇ ನಾನು ಪ್ರಜಾಪತಿ ತಪೋಧನ ಅಂಗಿರಸನನ್ನು ಕೇಳಿದ್ದೆ.
13109010a ಪ್ರಶ್ನಮೇತಂ ಮಯಾ ಪೃಷ್ಟೋ ಭಗವಾನಗ್ನಿಸಂಭವಃ|
13109010c ಉಪವಾಸವಿಧಿಂ ಪುಣ್ಯಮಾಚಷ್ಟ ಭರತರ್ಷಭ||
ಭರತರ್ಷಭ! ಇದೇ ಪ್ರಶ್ನೆಯನ್ನು ನಾನು ಕೇಳಿದಾಗ ಭಗವಾನ್ ಅಗ್ನಿಸಂಭವನು[2] ನನಗೆ ಉಪವಾಸವಿಧಿಯ ಪುಣ್ಯವನ್ನು ಹೀಗೆ ಹೇಳಿದ್ದನು.
13109011 ಅಂಗಿರಾ ಉವಾಚ|
13109011a ಬ್ರಹ್ಮಕ್ಷತ್ರೇ ತ್ರಿರಾತ್ರಂ ತು ವಿಹಿತಂ ಕುರುನಂದನ|
13109011c ದ್ವಿಸ್ತ್ರಿರಾತ್ರಮಥೈವಾತ್ರ ನಿರ್ದಿಷ್ಟಂ ಪುರುಷರ್ಷಭ||
ಅಂಗಿರಸನು ಹೇಳಿದನು: “ಕುರುನಂದನ! ಪುರುಷರ್ಷಭ! ಬ್ರಾಹ್ಮಣ-ಕ್ಷತ್ರಿಯರಿಗೆ ಮೂರು ರಾತ್ರಿ ಉಪವಾಸ ಮಾಡುವುದರ ವಿಧಾನವಿದೆ. ಕೆಲವು ಕಡೆ ಎರಡು ತ್ರಿರಾತ್ರಿಗಳು ಮತ್ತು ಒಂದು ದಿನ ಅಂದರೆ ಒಟ್ಟು ಏಳು ದಿನ ಉಪವಾಸಮಾಡುವ ಸಂಕೇತವೂ ದೊರೆಯುತ್ತದೆ.
13109012a ವೈಶ್ಯಶೂದ್ರೌ ತು ಯೌ ಮೋಹಾದುಪವಾಸಂ ಪ್ರಕುರ್ವತೇ|
13109012c ತ್ರಿರಾತ್ರಂ ದ್ವಿಸ್ತ್ರಿರಾತ್ರಂ ವಾ ತಯೋಃ ಪುಷ್ಟಿರ್ನ ವಿದ್ಯತೇ||
ವೈಶ-ಶೂದ್ರರು ಮೋಹವಶರಾಗಿ ಮೂರುರಾತ್ರಿ ಅಥವಾ ಎರಡು ರಾತ್ರಿ ಉಪವಾಸಮಾಡಿದರೆ ಅವರಿಗೆ ಯಾವ ಪುಷ್ಟಿಯೂ ದೊರಕುವುದಿಲ್ಲ.
13109013a ಚತುರ್ಥಭಕ್ತಕ್ಷಪಣಂ ವೈಶ್ಯಶೂದ್ರೇ ವಿಧೀಯತೇ|
13109013c ತ್ರಿರಾತ್ರಂ ನ ತು ಧರ್ಮಜ್ಞೈರ್ವಿಹಿತಂ ಬ್ರಹ್ಮವಾದಿಭಿಃ||
ವೈಶ್ಯ-ಶೂದ್ರರಿಗೆ ನಾಲ್ಕನೆಯ ಊಟವನ್ನು ಬಿಡಬೇಕೆಂಬ ಶಾಸ್ತ್ರವಿಧಿಯಿದೆ[3]. ಏಕೆಂದರೆ ಬ್ರಹ್ಮವಾದಿ ಧರ್ಮಜ್ಞರು ಅವರಿಗೆ ಮೂರು ರಾತ್ರಿಗಳ ಉಪವಾಸವನ್ನು ವಿಹಿಸಿಲ್ಲ.
13109014a ಪಂಚಮ್ಯಾಂ ಚೈವ ಷಷ್ಠ್ಯಾಂ ಚ ಪೌರ್ಣಮಾಸ್ಯಾಂ ಚ ಭಾರತ|
[4]13109014c ಕ್ಷಮಾವಾನ್ರೂಪಸಂಪನ್ನಃ ಶ್ರುತವಾಂಶ್ಚೈವ ಜಾಯತೇ||
13109015a ನಾನಪತ್ಯೋ ಭವೇತ್ ಪ್ರಾಜ್ಞೋ ದರಿದ್ರೋ ವಾ ಕದಾ ಚನ|
ಭಾರತ! ಪಂಚಮಿ, ಷಷ್ಠಿ, ಹುಣ್ಣಿಮೆ ಮತ್ತು ಅಮವಾಸ್ಯೆಗಳಲ್ಲಿ ಉಪವಾಸಮಾಡುವವನು ಕ್ಷಮಾವಂತನೂ, ರೂಪಸಂಪನ್ನನೂ ಮತ್ತು ವಿದ್ವಾಂಸನೂ ಆಗುತ್ತಾನೆ. ಆ ಪ್ರಾಜ್ಞನು ಎಂದೂ ಸಂತಾನಹೀನ ಅಥವಾ ದರಿದ್ರನಾಗುವುದಿಲ್ಲ.
13109015c ಯಜಿಷ್ಣುಃ ಪಂಚಮೀಂ ಷಷ್ಠೀಂ ಕ್ಷಪೇದ್ಯೋ ಭೋಜಯೇದ್ದ್ವಿಜಾನ್||
13109016a ಅಷ್ಟಮೀಮಥ ಕೌಂತೇಯ ಶುಕ್ಲಪಕ್ಷೇ[5] ಚತುರ್ದಶೀಮ್|
13109016c ಉಪೋಷ್ಯ ವ್ಯಾಧಿರಹಿತೋ ವೀರ್ಯವಾನಭಿಜಾಯತೇ||
ಕೌಂತೇಯ! ಭಗವಂತನನ್ನು ಆರಾಧಿಸುವ ಇಚ್ಛೆಯಿಂದ ಪಂಚಮೀ, ಷಷ್ಠಿ, ಅಷ್ಟಮೀ ಮತ್ತು ಶುಕ್ಲಪಕ್ಷದ ಚತುರ್ದಶಿಗಳಲ್ಲಿ ತನ್ನ ಮನೆಯಲ್ಲಿ ಬ್ರಾಹ್ಮಣರಿಗೆ ಭೋಜನ ಮಾಡಿಸಿ ತಾನು ಉಪವಾಸದಿಂದಿರುವವನು ರೋಗರಹಿತನೂ ವೀರ್ಯವಂತನೂ ಆಗಿ ಹುಟ್ಟುತ್ತಾನೆ.
13109017a ಮಾರ್ಗಶೀರ್ಷಂ ತು ಯೋ ಮಾಸಮೇಕಭಕ್ತೇನ ಸಂಕ್ಷಿಪೇತ್|
13109017c ಭೋಜಯೇಚ್ಚ ದ್ವಿಜಾನ್ಭಕ್ತ್ಯಾ[6] ಸ ಮುಚ್ಯೇದ್ವ್ಯಾಧಿಕಿಲ್ಬಿಷೈಃ||
ಮಾರ್ಗಶೀರ್ಷಮಾಸದಲ್ಲಿ ಒಪ್ಪತ್ತು ಊಟಮಾಡುತ್ತಾ ಭಕ್ತಿಯಿಂದ ದ್ವಿಜರಿಗೆ ಭೋಜನವನ್ನು ಮಾಡಿಸುವವನು ವ್ಯಾಧಿ-ಪಾಪಗಳಿಂದ ಮುಕ್ತನಾಗುತ್ತಾನೆ.
13109018a ಸರ್ವಕಲ್ಯಾಣಸಂಪೂರ್ಣಃ ಸರ್ವೌಷಧಿಸಮನ್ವಿತಃ|
[7]13109018c ಕೃಷಿಭಾಗೀ ಬಹುಧನೋ ಬಹುಪುತ್ರಶ್ಚ ಜಾಯತೇ||
ಅವನು ಸರ್ವಕಲ್ಯಾಣಸಂಪೂರ್ಣನಾಗುತ್ತಾನೆ. ಸರ್ವೌಷಧಿಗಳನ್ನು ಹೊಂದುತ್ತಾನೆ. ಕೃಷಿಭಾಗಿಯಾಗುತ್ತಾನೆ. ಬಹುಧನಿಕನಾಗುತ್ತಾನೆ. ಬಹುಪುತ್ರರನ್ನೂ ಪಡೆದುಕೊಳ್ಳುತ್ತಾನೆ.
13109019a ಪೌಷಮಾಸಂ ತು ಕೌಂತೇಯ ಭಕ್ತೇನೈಕೇನ ಯಃ ಕ್ಷಪೇತ್[8]|
13109019c ಸುಭಗೋ ದರ್ಶನೀಯಶ್ಚ ಯಶೋಭಾಗೀ ಚ ಜಾಯತೇ||
ಕೌಂತೇಯ! ಪುಷ್ಯಮಾಸದಲ್ಲಿ ಒಪ್ಪತ್ತು ಊಟಮಾಡುವವನು ಜನ್ಮಾಂತರದಲ್ಲಿ ಮಹಾಭಾಗ್ಯಶಾಲಿಯಾಗಿಯೂ, ಸುಂದರನಾಗಿಯೂ ಮತ್ತು ಯಶೋಭಾಗಿಯಾಗಿಯೂ ಹುಟ್ಟುತ್ತಾನೆ.
13109020a ಪಿತೃಭಕ್ತೋ ಮಾಘಮಾಸಮೇಕಭಕ್ತೇನ ಯಃ ಕ್ಷಪೇತ್[9]|
13109020c ಶ್ರೀಮತ್ಕುಲೇ ಜ್ಞಾತಿಮಧ್ಯೇ ಸ ಮಹತ್ತ್ವಂ ಪ್ರಪದ್ಯತೇ||
ಪಿತೃಭಕ್ತನಾಗಿ ಮಾಘಮಾಸದಲ್ಲಿ ಒಪ್ಪತ್ತು ಊಟಮಾಡುವವನು ಜನ್ಮಾಂತರದಲ್ಲಿ ಶ್ರೀಮಂತಕುಲದಲ್ಲಿ ಹುಟ್ಟಿ ಜ್ಞಾತಿಗಳ ಮಧ್ಯೆ ಮಹತ್ವವನ್ನು ಹೊಂದುತ್ತಾನೆ.
13109021a ಭಗದೈವಂ ತು ಯೋ ಮಾಸಮೇಕಭಕ್ತೇನ ಯಃ ಕ್ಷಪೇತ್[10]|
13109021c ಸ್ತ್ರೀಷು ವಲ್ಲಭತಾಂ ಯಾತಿ ವಶ್ಯಾಶ್ಚಾಸ್ಯ ಭವಂತಿ ತಾಃ||
ಸೂರ್ಯದೇವತಾತ್ಮಕವಾದ ಫಾಲ್ಗುಣಮಾಸವನ್ನು ಒಪ್ಪತ್ತುಮಾಡುತ್ತಾ ಕಳೆಯುವವನು ಸ್ತ್ರೀಯರಿಗೆ ಪ್ರಿಯನಾಗುತ್ತಾನೆ ಮತ್ತು ಸ್ತ್ರೀಯರು ಅವನಿಗೆ ವಶರಾಗುತ್ತಾರೆ.
13109022a ಚೈತ್ರಂ ತು ನಿಯತೋ ಮಾಸಮೇಕಭಕ್ತೇನ ಯಃ ಕ್ಷಪೇತ್|
13109022c ಸುವರ್ಣಮಣಿಮುಕ್ತಾಢ್ಯೇ ಕುಲೇ ಮಹತಿ ಜಾಯತೇ||
ಚೈತ್ರಮಾಸವನ್ನು ನಿಯತನಾಗಿ ಒಪ್ಪತ್ತುಮಾಡುತ್ತಾ ಕಳೆಯುವವನು ಸುವರ್ಣಮಣಿಮುತ್ತುಗಳಿಂದ ಸಮೃದ್ಧ ಮಹಾ ಕುಲದಲ್ಲಿ ಹುಟ್ಟುತ್ತಾನೆ.
13109023a ನಿಸ್ತರೇದೇಕಭಕ್ತೇನ ವೈಶಾಖಂ ಯೋ ಜಿತೇಂದ್ರಿಯಃ|
13109023c ನರೋ ವಾ ಯದಿ ವಾ ನಾರೀ ಜ್ಞಾತೀನಾಂ ಶ್ರೇಷ್ಠತಾಂ ವ್ರಜೇತ್||
ಜಿತೇಂದ್ರಿಯರಾಗಿ ವೈಶಾಖ ಮಾಸದಲ್ಲಿ ದಿನಕ್ಕೆ ಒಂದು ಊಟಮಾಡುವ ನರ ಅಥವಾ ನಾರಿಯು ಜ್ಞಾತಿಗಳಲ್ಲಿ ಶ್ರೇಷ್ಠತೆಯನ್ನು ಪಡೆಯುತ್ತಾರೆ.
13109024a ಜ್ಯೇಷ್ಠಾಮೂಲಂ ತು ಯೋ ಮಾಸಮೇಕಭಕ್ತೇನ ಸಂಕ್ಷಪೇತ್|
13109024c ಐಶ್ವರ್ಯಮತುಲಂ ಶ್ರೇಷ್ಠಂ ಪುಮಾನ್ ಸ್ತ್ರೀ ವಾಭಿಜಾಯತೇ||
ಜ್ಯೇಷ್ಠಾಮೂಲ ಮಾಸವನ್ನು ಒಪ್ಪತ್ತು ಊಟಮಾಡುತ್ತಾ ಕಳೆಯುವ ಪುರುಷ ಅಥವಾ ಸ್ತ್ರೀಯು ಶ್ರೇಷ್ಠವಾದ ಅತುಲ ಐಶ್ವರ್ಯವನ್ನು ಹೊಂದುತ್ತಾರೆ.
13109025a ಆಷಾಢಮೇಕಭಕ್ತೇನ ಸ್ಥಿತ್ವಾ ಮಾಸಮತಂದ್ರಿತಃ|
13109025c ಬಹುಧಾನ್ಯೋ ಬಹುಧನೋ ಬಹುಪುತ್ರಶ್ಚ ಜಾಯತೇ||
ಆಷಾಢಮಾಸದಲ್ಲಿ ಆಲಸ್ಯವನ್ನು ತೊರೆದು ಒಪ್ಪತ್ತು ಊಟಮಾಡುವವನು ಬಹುಧಾನ್ಯಯುಕ್ತನೂ ಬಹುಧನಿಕನೂ ಮತ್ತು ಬಹುಪುತ್ರರನ್ನು ಪಡೆಯುವವನಾಗಿ ಹುಟ್ಟುತ್ತಾನೆ.
13109026a ಶ್ರಾವಣಂ ನಿಯತೋ ಮಾಸಮೇಕಭಕ್ತೇನ ಯಃ ಕ್ಷಪೇತ್|
13109026c ಯತ್ರ ತತ್ರಾಭಿಷೇಕೇಣ ಯುಜ್ಯತೇ ಜ್ಞಾತಿವರ್ಧನಃ||
ನಿಯತನಾಗಿ ಶ್ರಾವಣ ಮಾಸವನ್ನು ಅಲ್ಲಲ್ಲಿಯ ತೀರ್ಥಕ್ಷೇತ್ರಗಳಲ್ಲಿ ಸ್ನಾನಮಾಡುತ್ತಾ ಒಪ್ಪತ್ತು ಊಟಮಾಡುತ್ತಾ ಕಳೆಯುವವನು ಕುಟುಂಬದ ಜನರ ಅಭಿವೃದ್ಧಿಗೆ ಕಾರಣನಾಗುತ್ತಾನೆ.
13109027a ಪ್ರೌಷ್ಠಪದಂ ತು ಯೋ ಮಾಸಮೇಕಾಹಾರೋ ಭವೇನ್ನರಃ|
13109027c ಧನಾಢ್ಯಂ ಸ್ಫೀತಮಚಲಮೈಶ್ವರ್ಯಂ ಪ್ರತಿಪದ್ಯತೇ||
ದಿನಕ್ಕೆ ಒಂದು ಹೊತ್ತು ಊಟಮಾಡುತ್ತಾ ಭಾದ್ರಪದ ಮಾಸವನ್ನು ಕಳೆಯುವವನು ಗೋಧನಸಂಪನ್ನನಾಗುತ್ತಾನೆ. ಸ್ಥಿರವಾದ ಸಮೃದ್ಧ ಐಶ್ವರ್ಯವನ್ನು ಹೊಂದುತ್ತಾನೆ.
13109028a ತಥೈವಾಶ್ವಯುಜಂ ಮಾಸಮೇಕಭಕ್ತೇನ ಯಃ ಕ್ಷಪೇತ್|
13109028c ಪ್ರಜಾವಾನ್ವಾಹನಾಢ್ಯಶ್ಚ ಬಹುಪುತ್ರಶ್ಚ ಜಾಯತೇ||
ಹಾಗೆಯೇ ಆಶ್ವಯುಜ ಮಾಸವನ್ನು ಒಪ್ಪತ್ತು ಮಾಡುತ್ತಾ ಕಳೆಯುವವನು ಪ್ರಜಾವಾನನೂ, ವಾಹನಾಢ್ಯನೂ, ಬಹುಪುತ್ರರುಳ್ಳವನೂ ಆಗಿ ಹುಟ್ಟುತ್ತಾನೆ.
13109029a ಕಾರ್ತ್ತಿಕಂ ತು ನರೋ ಮಾಸಂ ಯಃ ಕುರ್ಯಾದೇಕಭೋಜನಮ್|
13109029c ಶೂರಶ್ಚ ಬಹುಭಾರ್ಯಶ್ಚ ಕೀರ್ತಿಮಾಂಶ್ಚೈವ ಜಾಯತೇ||
ಕಾರ್ತೀಕಮಾಸದಲ್ಲಿ ಏಕಭೋಜನವನ್ನು ಮಾಡುವ ನರನು ಶೂರನಾಗಿಯೂ, ಬಹುಭಾರ್ಯೆಯರಿರುವವನಾಗಿಯೂ ಮತ್ತು ಕೀರ್ತಿವಂತನಾಗಿಯೂ ಜನಿಸುತ್ತಾನೆ.
13109030a ಇತಿ ಮಾಸಾ ನರವ್ಯಾಘ್ರ ಕ್ಷಪತಾಂ ಪರಿಕೀರ್ತಿತಾಃ|
13109030c ತಿಥೀನಾಂ ನಿಯಮಾ ಯೇ ತು ಶೃಣು ತಾನಪಿ ಪಾರ್ಥಿವ||
ನರವ್ಯಾಘ್ರ! ಹೀಗೆ ನಾನು ಪ್ರತಿ ತಿಂಗಳಿನಲ್ಲಿ ಒಪ್ಪತ್ತು ಮಾಡುವುದರ ಫಲಗಳನ್ನು ಹೇಳಿದೆ. ಪಾರ್ಥಿವ! ಈಗ ನಾನು ತಿಥಿಗಳ ನಿಯಮಗಳನ್ನು ಹೇಳುತ್ತೇನೆ. ಅವುಗಳನ್ನೂ ಕೇಳು.
13109031a ಪಕ್ಷೇ ಪಕ್ಷೇ ಗತೇ ಯಸ್ತು ಭಕ್ತಮಶ್ನಾತಿ ಭಾರತ|
13109031c ಗವಾಢ್ಯೋ ಬಹುಪುತ್ರಶ್ಚ ದೀರ್ಘಾಯುಶ್ಚ[11] ಸ ಜಾಯತೇ||
ಭಾರತ! ಪ್ರತಿಪಕ್ಷದಲ್ಲಿಯೂ ಒಂದೇ ಹೊತ್ತು ಊಟಮಾಡುವವನು ಜನ್ಮಾಂತರದಲ್ಲಿ ಗೋಸಮೃದ್ಧಿಯುಳ್ಳವನೂ, ಬಹುಪುತ್ರರ ತಂದೆಯೂ ಮತ್ತು ದೀರ್ಘಾಯುವೂ ಆಗುತ್ತಾನೆ.
13109032a ಮಾಸಿ ಮಾಸಿ ತ್ರಿರಾತ್ರಾಣಿ ಕೃತ್ವಾ ವರ್ಷಾಣಿ ದ್ವಾದಶ|
13109032c ಗಣಾಧಿಪತ್ಯಂ ಪ್ರಾಪ್ನೋತಿ ನಿಃಸಪತ್ನಮನಾವಿಲಮ್||
ಪ್ರತಿಮಾಸದಲ್ಲಿಯೂ ಮೂರು ಮೂರು ರಾತ್ರಿಗಳು ಉಪವಾಸವಿರುತ್ತಾ ಹನ್ನೆರಡು ವರ್ಷಗಳು ಕಳೆದರೆ ನಿಷ್ಕಂಟಕವಾದ ಮತ್ತು ನಿರ್ಮಲವಾದ ಶಿವನ ಗಣಗಳ ಅಧಿಪತ್ಯವನ್ನು ಹೊಂದುತ್ತಾನೆ.
13109033a ಏತೇ ತು ನಿಯಮಾಃ ಸರ್ವೇ ಕರ್ತವ್ಯಾಃ ಶರದೋ ದಶ|
13109033c ದ್ವೇ ಚಾನ್ಯೇ ಭರತಶ್ರೇಷ್ಠ ಪ್ರವೃತ್ತಿಮನುವರ್ತತಾ||
ಭರತಶ್ರೇಷ್ಠ! ಪ್ರವೃತ್ತಿಮಾರ್ಗವನ್ನು ಅನುಸರಿಸುವವನು ಈ ಎಲ್ಲ ನಿಯಮಗಳನ್ನೂ ಹನ್ನೆರಡು ವರ್ಷಗಳ ವರೆಗೆ ಪಾಲಿಸಬೇಕು.
13109034a ಯಸ್ತು ಪ್ರಾತಸ್ತಥಾ ಸಾಯಂ ಭುಂಜಾನೋ ನಾಂತರಾ ಪಿಬೇತ್|
13109034c ಅಹಿಂಸಾನಿರತೋ ನಿತ್ಯಂ ಜುಹ್ವಾನೋ ಜಾತವೇದಸಮ್||
13109035a ಷಡ್ಭಿಃ ಸ ವರ್ಷೈರ್ನೃಪತೇ ಸಿಧ್ಯತೇ ನಾತ್ರ ಸಂಶಯಃ|
13109035c ಅಗ್ನಿಷ್ಟೋಮಸ್ಯ ಯಜ್ಞಸ್ಯ ಫಲಂ ಪ್ರಾಪ್ನೋತಿ ಮಾನವಃ||
ಬೆಳಿಗ್ಗೆ-ಸಾಯಂಕಾಲಗಳಲ್ಲಿ ಮಾತ್ರ ಊಟಮಾಡುತ್ತಾ ಮಧ್ಯೆ ಏನನ್ನೂ ಕುಡಿಯದೇ/ತಿನ್ನದೇ ಅಹಿಂಸಾನಿರತನಾಗಿ ಅಗ್ನಿಹೋತ್ರವನ್ನು ಮಾಡುವವನು ಆರು ವರ್ಷಗಳಲ್ಲಿಯೇ ನಿಃಸ್ಸಂದೇಹವಾಗಿ ಸಿದ್ಧಿಯನ್ನು ಹೊಂದುತ್ತಾನೆ ಮತ್ತು ಅಗ್ನಿಷ್ಟೋಮ ಯಜ್ಞದ ಫಲವನ್ನು ಪಡೆದುಕೊಳ್ಳುತ್ತಾನೆ.
13109036a ಅಧಿವಾಸೇ ಸೋಽಪ್ಸರಸಾಂ ನೃತ್ಯಗೀತವಿನಾದಿತೇ|
[12]13109036c ತಪ್ತಕಾಂಚನವರ್ಣಾಭಂ ವಿಮಾನಮಧಿರೋಹತಿ||
ಅವನು ಅಪ್ಸರೆಯರ ನೃತ್ಯಗೀತವಿನಾದದೊಂದಿಗೆ ತಪ್ತಕಾಂಚನ ವರ್ಣದಿಂದ ಹೊಳೆಯುವ ವಿಮಾನವನ್ನು ಏರುತ್ತಾನೆ.
13109037a ಪೂರ್ಣಂ ವರ್ಷಸಹಸ್ರಂ ತು ಬ್ರಹ್ಮಲೋಕೇ ಮಹೀಯತೇ|
13109037c ತತ್ಕ್ಷಯಾದಿಹ ಚಾಗಮ್ಯ ಮಾಹಾತ್ಮ್ಯಂ ಪ್ರತಿಪದ್ಯತೇ||
ಸಾವಿರವರ್ಷಗಳು ಪೂರ್ಣವಾಗುವವರೆಗೆ ಬ್ರಹ್ಮಲೋಕದಲ್ಲಿ ಮೆರೆಯುತ್ತಾನೆ. ಪುಣ್ಯವೆಲ್ಲವೂ ಕ್ಷಯವಾದ ನಂತರ ಪುನಃ ಈ ಲೋಕಕ್ಕೆ ಬಂದರೂ ಇಲ್ಲಿ ಮಹಾತ್ಮನೆನಿಸಿಕೊಳ್ಳುತ್ತಾನೆ.
13109038a ಯಸ್ತು ಸಂವತ್ಸರಂ ಪೂರ್ಣಮೇಕಾಹಾರೋ ಭವೇನ್ನರಃ|
13109038c ಅತಿರಾತ್ರಸ್ಯ ಯಜ್ಞಸ್ಯ ಸ ಫಲಂ ಸಮುಪಾಶ್ನುತೇ||
ಒಂದು ಸಂವತ್ಸರ ಪೂರ್ತಿ ಒಪ್ಪತ್ತು ಮಾಡುವ ನರನು ಅತಿರಾತ್ರಿ ಯಜ್ಞದ ಫಲವನ್ನು ಪಡೆಯುತ್ತಾನೆ.
13109039a ದಶವರ್ಷಸಹಸ್ರಾಣಿ ಸ್ವರ್ಗೇ ಚ ಸ ಮಹೀಯತೇ|
13109039c ತತ್ಕ್ಷಯಾದಿಹ ಚಾಗಮ್ಯ ಮಾಹಾತ್ಮ್ಯಂ ಪ್ರತಿಪದ್ಯತೇ||
ಹತ್ತು ಸಾವಿರ ವರ್ಷಗಳು ಅವನು ಸ್ವರ್ಗದಲ್ಲಿ ಮೆರೆಯುತ್ತಾನೆ. ಪುಣ್ಯವೆಲ್ಲವೂ ಕ್ಷಯವಾದನಂತರ ಪುನಃ ಇಲ್ಲಿಗೆ ಬಂದು ಮಹಾತ್ಮನೆನಿಸಿಕೊಳ್ಳುತ್ತಾನೆ.
13109040a ಯಸ್ತು ಸಂವತ್ಸರಂ ಪೂರ್ಣಂ ಚತುರ್ಥಂ ಭಕ್ತಮಶ್ನುತೇ|
13109040c ಅಹಿಂಸಾನಿರತೋ ನಿತ್ಯಂ ಸತ್ಯವಾಗ್ ನಿಯತೇಂದ್ರಿಯಃ||
13109041a ವಾಜಪೇಯಸ್ಯ ಯಜ್ಞಸ್ಯ ಫಲಂ ವೈ ಸಮುಪಾಶ್ನುತೇ|
13109041c ತ್ರಿಂಶದ್ವರ್ಷಸಹಸ್ರಾಣಿ[13] ಸ್ವರ್ಗೇ ಚ ಸ ಮಹೀಯತೇ||
ಒಂದು ಸಂವತ್ಸರ ಪರ್ಯಂತ ನಾಲ್ಕನೆಯ ಊಟವನ್ನು ಮಾತ್ರ ಮಾಡುವ ಅಹಿಂಸಾನಿರತ ನಿತ್ಯವೂ ಸತ್ಯವನ್ನಾಡುವ ನಿಯತೇಂದ್ರಿಯನು ವಾಜಪೇಯ ಯಜ್ಞದ ಫಲವನ್ನು ಪಡೆಯುತ್ತಾನೆ. ಅವನು ಮೂವತ್ತು ಸಾವಿರ ವರ್ಷಗಳು ಸ್ವರ್ಗದಲ್ಲಿ ಮೆರೆಯುತ್ತಾನೆ.
13109042a ಷಷ್ಠೇ ಕಾಲೇ ತು ಕೌಂತೇಯ ನರಃ ಸಂವತ್ಸರಂ ಕ್ಷಪೇತ್|
13109042c ಅಶ್ವಮೇಧಸ್ಯ ಯಜ್ಞಸ್ಯ ಫಲಂ ಪ್ರಾಪ್ನೋತಿ ಮಾನವಃ||
ಕೌಂತೇಯ! ಆರನೆಯ ಊಟವನ್ನು ಮಾತ್ರ ಮಾಡುತ್ತಾ ಒಂದು ಸಂವತ್ಸರವನ್ನು ಕಳೆದ ಮಾನವನು ಅಶ್ವಮೇಧ ಯಜ್ಞದ ಫಲವನ್ನು ಪಡೆಯುತ್ತಾನೆ.
13109043a ಚಕ್ರವಾಕಪ್ರಯುಕ್ತೇನ ವಿಮಾನೇನ ಸ ಗಚ್ಚತಿ|
13109043c ಚತ್ವಾರಿಂಶತ್ಸಹಸ್ರಾಣಿ ವರ್ಷಾಣಾಂ ದಿವಿ ಮೋದತೇ||
ಚಕ್ರವಾಕಗಳು ಕೊಂಡೊಯ್ಯುವ ವಿಮಾನದಲ್ಲಿ ಅವನು ಹೋಗುತ್ತಾನೆ ಮತ್ತು ನಲವತ್ತು ಸಾವಿರ ವರ್ಷಗಳು ಸ್ವರ್ಗದಲ್ಲಿ ಮೋದಿಸುತ್ತಾನೆ.
13109044a ಅಷ್ಟಮೇನ ತು ಭಕ್ತೇನ ಜೀವನ್ಸಂವತ್ಸರಂ ನೃಪ|
13109044c ಗವಾಮಯಸ್ಯ ಯಜ್ಞಸ್ಯ ಫಲಂ ಪ್ರಾಪ್ನೋತಿ ಮಾನವಃ||
ನೃಪ! ಎಂಟನೆಯ ಊಟವನ್ನು ಮಾತ್ರ ಮಾಡುತ್ತಾ ಒಂದು ಸಂವತ್ಸರ ಜೀವಿಸುವ ಮಾನವನು ಗವಾಮಯ ಯಜ್ಞದ ಫಲವನ್ನು ಪಡೆಯುತ್ತಾನೆ.
13109045a ಹಂಸಸಾರಸಯುಕ್ತೇನ ವಿಮಾನೇನ ಸ ಗಚ್ಚತಿ|
13109045c ಪಂಚಾಶತಂ ಸಹಸ್ರಾಣಿ ವರ್ಷಾಣಾಂ ದಿವಿ ಮೋದತೇ||
ಹಂಸ-ಸಾರಪಕ್ಷಿಗಳು ಕೊಂಡೊಯ್ಯುವ ವಿಮಾನವನ್ನೇರಿ ಹೋಗುತ್ತಾನೆ ಮತ್ತು ಐವತ್ತು ಸಾವಿರ ವರ್ಷಗಳು ದಿವಿಯಲ್ಲಿ ಮೋದಿಸುತ್ತಾನೆ.”
13109046a ಪಕ್ಷೇ ಪಕ್ಷೇ ಗತೇ ರಾಜನ್ಯೋಽಶ್ನೀಯಾದ್ವರ್ಷಮೇವ ತು|
13109046c ಷಣ್ಮಾಸಾನಶನಂ ತಸ್ಯ ಭಗವಾನಂಗಿರಾಬ್ರವೀತ್|
13109046e ಷಷ್ಟಿಂ ವರ್ಷಸಹಸ್ರಾಣಿ ದಿವಮಾವಸತೇ ಚ ಸಃ||
[14]ರಾಜನ್! ಹದಿನೈದು ದಿವಸಗಳಿಗೊಮ್ಮೆ ಒಪ್ಪತ್ತು ಊಟಮಾಡುತ್ತಾ ಒಂದು ವರ್ಷವನ್ನು ಕಳೆಯುವವನಿಗೆ ಆರು ತಿಂಗಳು ನಿರಸನ ಮಾಡಿದ ಫಲವು ಲಭಿಸುವುದೆಂದು ಭಗವಾನ್ ಅಂಗಿರಸನು ಹೇಳಿದನು. ಅವನು ಅರವತ್ತು ಸಾವಿರ ವರ್ಷಗಳು ಸ್ವರ್ಗದಲ್ಲಿ ವಾಸಿಸುತ್ತಾನೆ.
13109047a ವೀಣಾನಾಂ ವಲ್ಲಕೀನಾಂ ಚ ವೇಣೂನಾಂ ಚ ವಿಶಾಂ ಪತೇ|
13109047c ಸುಘೋಷೈರ್ಮಧುರೈಃ ಶಬ್ದೈಃ ಸುಪ್ತಃ ಸ ಪ್ರತಿಬೋಧ್ಯತೇ||
ವಿಶಾಂಪತೇ! ಅಲ್ಲಿ ಮಲಗಿದಾಗ ಅವನು ವೀಣೆ-ವಲ್ಲಕೀ-ವೇಣುಗಳ ಮಧುರ ಶಬ್ದಗಳಿಂದ ಮತ್ತು ಸುಘೋಷಗಳಿಂದ ಎಚ್ಚೇಳುತ್ತಾನೆ.
13109048a ಸಂವತ್ಸರಮಿಹೈಕಂ ತು ಮಾಸಿ ಮಾಸಿ ಪಿಬೇತ್ಪಯಃ|
13109048c ಫಲಂ ವಿಶ್ವಜಿತಸ್ತಾತ ಪ್ರಾಪ್ನೋತಿ ಸ ನರೋ ನೃಪ||
ಅಯ್ಯಾ ನೃಪ! ತಿಂಗಳಿಗೊಮ್ಮೆ ನೀರುಕುಡಿಯುತ್ತಾ ಒಂದು ವರ್ಷಗಳನ್ನು ಕಳೆಯುವ ನರನು ವಿಶ್ವಜಿತ್ ಯಜ್ಞದ ಫಲವನ್ನು ಪಡೆಯುತ್ತಾನೆ.
13109049a ಸಿಂಹವ್ಯಾಘ್ರಪ್ರಯುಕ್ತೇನ ವಿಮಾನೇನ ಸ ಗಚ್ಚತಿ|
13109049c ಸಪ್ತತಿಂ ಚ ಸಹಸ್ರಾಣಿ ವರ್ಷಾಣಾಂ ದಿವಿ ಮೋದತೇ||
ಸಿಂಹ-ವ್ಯಾಘ್ರಗಳು ಕೊಂಡೊಯ್ಯುವ ವಿಮಾನದಲ್ಲಿ ಹೋಗುತ್ತಾನೆ ಮತ್ತು ದಿವಿಯಲ್ಲಿ ಎಪ್ಪತ್ತು ಸಾವಿರ ವರ್ಷಗಳು ಮೋದಿಸುತ್ತಾನೆ.
13109050a ಮಾಸಾದೂರ್ಧ್ವಂ ನರವ್ಯಾಘ್ರ ನೋಪವಾಸೋ ವಿಧೀಯತೇ|
13109050c ವಿಧಿಂ ತ್ವನಶನಸ್ಯಾಹುಃ ಪಾರ್ಥ ಧರ್ಮವಿದೋ ಜನಾಃ||
ನರವ್ಯಾಘ್ರ! ಪಾರ್ಥ! ಒಂದು ಮಾಸಕ್ಕಿಂತಲೂ ಹೆಚ್ಚು ಉಪವಾಸಮಾಡುವ ವಿಧಿಯಿಲ್ಲ. ಧರ್ಮವಿದ ಜನರು ಉಪವಾಸದ ವಿಧಿಯನ್ನು ಹೀಗೆ ಹೇಳಿದ್ದಾರೆ.
13109051a ಅನಾರ್ತೋ ವ್ಯಾಧಿರಹಿತೋ ಗಚ್ಚೇದನಶನಂ ತು ಯಃ|
13109051c ಪದೇ ಪದೇ ಯಜ್ಞಫಲಂ ಸ ಪ್ರಾಪ್ನೋತಿ ನ ಸಂಶಯಃ||
ಅನಾರ್ತನಾಗಿ ವ್ಯಾಧಿರಹಿತನಾಗಿ ಉಪವಾಸವನ್ನು ಮಾಡುವವನು ಪದೇ ಪದೇ ಯಜ್ಞಫಲವನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.
13109052a ದಿವಂ ಹಂಸಪ್ರಯುಕ್ತೇನ ವಿಮಾನೇನ ಸ ಗಚ್ಚತಿ|
[15]13109052c ಶತಂ ಚಾಪ್ಸರಸಃ ಕನ್ಯಾ ರಮಯಂತ್ಯಪಿ ತಂ ನರಮ್||
ಅವನು ಹಂಸಗಳು ಕೊಂಡೊಯ್ಯುವ ವಿಮಾನದಲ್ಲಿ ಹೋಗುತ್ತಾನೆ. ಆ ನರನು ಅಲ್ಲಿ ನೂರಾರು ಅಪ್ಸರ ಕನ್ಯೆಯರೊಡನೆ ರಮಿಸುತ್ತಾನೆ.
13109053a ಆರ್ತೋ ವಾ ವ್ಯಾಧಿತೋ ವಾಪಿ ಗಚ್ಚೇದನಶನಂ ತು ಯಃ|
13109053c ಶತಂ ವರ್ಷಸಹಸ್ರಾಣಾಂ ಮೋದತೇ ದಿವಿ ಸ ಪ್ರಭೋ|
13109053e ಕಾಂಚೀನೂಪುರಶಬ್ದೇನ ಸುಪ್ತಶ್ಚೈವ ಪ್ರಬೋಧ್ಯತೇ||
ಪ್ರಭೋ! ಆರ್ತನೂ ವ್ಯಾಧಿತನೂ ಆಗಿದ್ದರೂ ಉಪವಾಸವನ್ನು ಮಾಡುವವನು ಒಂದು ಲಕ್ಷ ವರ್ಷಗಳು ದಿವಿಯಲ್ಲಿ ಮೋದಿಸುತ್ತಾನೆ. ಮಲಗಿ ಒಡ್ಯಾಣ-ನೂಪುರಗಳ ಶಬ್ದಕ್ಕೆ ಎಚ್ಚೇಳುತ್ತಾನೆ.
13109054a ಸಹಸ್ರಹಂಸಸಂಯುಕ್ತೇ ವಿಮಾನೇ ಸೋಮವರ್ಚಸಿ[16]|
13109054c ಸ ಗತ್ವಾ ಸ್ತ್ರೀಶತಾಕೀರ್ಣೇ ರಮತೇ ಭರತರ್ಷಭ||
ಭರತರ್ಷಭ! ಸಹಸ್ರಹಂಸಗಳು ಕೊಂಡೊಯ್ಯುವ ಸೋಮವರ್ಚಸ್ಸಿನ ವಿಮಾನದಲ್ಲಿ ಹೋಗಿ ಅವನು ನೂರಾರು ಸ್ತ್ರೀಯರಿಂದ ತುಂಬಿದ ಸೌಧದಲ್ಲಿ ರಮಿಸುತ್ತಾನೆ.
13109055a ಕ್ಷೀಣಸ್ಯಾಪ್ಯಾಯನಂ ದೃಷ್ಟಂ ಕ್ಷತಸ್ಯ ಕ್ಷತರೋಹಣಮ್|
13109055c ವ್ಯಾಧಿತಸ್ಯೌಷಧಗ್ರಾಮಃ ಕ್ರುದ್ಧಸ್ಯ ಚ ಪ್ರಸಾದನಮ್||
ಉಪವಾಸವ್ರತವನ್ನು ಮಾಡಿ ಕ್ಷೀಣರಾದವರು ದಷ್ಟಪುಷ್ಟರಾಗುವುದನ್ನು ಕಾಣಬಹುದು. ಗಾಯಗೊಂಡವನು ಗಾಯವಿಲ್ಲದವನಾಗಿರುವುದನ್ನು ಕಾಣಬಹುದು. ರೋಗಿಯಾದವನ ಬಳಿ ಔಷಧಗಳ ಸಮೂಹವೇ ಹೋಗುವುದನ್ನು ನೋಡಬಹುದು. ಕೋಪಿಷ್ಟನು ಪ್ರಸನ್ನನಾಗುತ್ತಾನೆ.
13109056a ದುಃಖಿತಸ್ಯಾರ್ಥಮಾನಾಭ್ಯಾಂ ದ್ರವ್ಯಾಣಾಂ ಪ್ರತಿಪಾದನಮ್|
13109056c ನ ಚೈತೇ ಸ್ವರ್ಗಕಾಮಸ್ಯ ರೋಚಂತೇ ಸುಖಮೇಧಸಃ||
ಅರ್ಥ ಮತ್ತು ಮಾನಗಳಿಂದ ದುಃಖಿತನಾಗಿರುವವನಿಗೆ ಅರ್ಥದ ಲಾಭವಾಗಿ ಮರ್ಯಾದೆಯನ್ನೂ ಪಡೆದುಕೊಳ್ಳುತ್ತಾನೆ. ಆದರೆ ಸ್ವರ್ಗದ ಸುಖವನ್ನು ಬಯಸುವವನಿಗೆ ಇವ್ಯಾವುವೂ ರುಚಿಸುವುದಿಲ್ಲ.
13109057a ಅತಃ ಸ ಕಾಮಸಂಯುಕ್ತೋ ವಿಮಾನೇ ಹೇಮಸಂನಿಭೇ|
13109057c ರಮತೇ ಸ್ತ್ರೀಶತಾಕೀರ್ಣೇ ಪುರುಷೋಽಲಂಕೃತಃ ಶುಭೇ||
ಆದುದರಿಂದ ಅನಶನವ್ರತವನ್ನು ಮಾಡಿದ ಪುರುಷನು ಕಾಮಸಂಯುಕ್ತನಾಗಿ ಹೇಮಸನ್ನಿಭ ವಿಮಾನದಲ್ಲಿ ಅಲಂಕೃತರಾದ ನೂರಾರು ಶುಭ ಸ್ತ್ರೀಯರಿರುವ ಸದನದಲ್ಲಿ ರಮಿಸುತ್ತಾನೆ.
13109058a ಸ್ವಸ್ಥಃ ಸಫಲಸಂಕಲ್ಪಃ ಸುಖೀ ವಿಗತಕಲ್ಮಷಃ|
13109058c ಅನಶ್ನನ್ದೇಹಮುತ್ಸೃಜ್ಯ ಫಲಂ ಪ್ರಾಪ್ನೋತಿ ಮಾನವಃ||
ಉಪವಾಸದಿಂದಿದ್ದು ದೇಹವನ್ನು ತ್ಯಜಿಸಿದ ಮಾನವನು ಸ್ವಸ್ಥನೂ ಸಂಕಲ್ಪಗಳು ಫಲಿಸಿದವನೂ ಆಗಿ ಪಾಪಗಳನ್ನು ಕಳೆದುಕೊಂಡು ಸುಖಿಯಾಗುತ್ತಾನೆ.
13109059a ಬಾಲಸೂರ್ಯಪ್ರತೀಕಾಶೇ ವಿಮಾನೇ ಹೇಮವರ್ಚಸಿ|
13109059c ವೈಡೂರ್ಯಮುಕ್ತಾಖಚಿತೇ ವೀಣಾಮುರಜನಾದಿತೇ||
13109060a ಪತಾಕಾದೀಪಿಕಾಕೀರ್ಣೇ ದಿವ್ಯಘಂಟಾನಿನಾದಿತೇ|
13109060c ಸ್ತ್ರೀಸಹಸ್ರಾನುಚರಿತೇ ಸ ನರಃ ಸುಖಮೇಧತೇ||
ಅಂಥಹ ನರನು ಉದಯಿಸುತ್ತಿರುವ ಸೂರ್ಯನಂತೆ ಪ್ರಕಾಶಿಸುವ, ಹೇಮವರ್ಚಸ, ವೈಡೂರ್ಯ-ಮುಕ್ತಾಮಣಿಗಳಿಂದ ಖಚಿತವಾದ, ವೀಣಾ-ಮೃದಂಗಾದಿ ವಾದ್ಯನಾದಗಳಿಂದ ಕೂಡಿದ, ಪತಾಕೆಗಳಿಂದಲೂ ದೀಪಗಳಿಂದಲೂ ವ್ಯಾಪ್ತವಾದ, ದಿವ್ಯ ಘಂಟಾರವಗಳಿಂದ ಕೂಡಿದ, ಸಾವಿರಾರು ಸ್ತ್ರೀಯರಿಂದ ಕೂಡಿದ ವಿಮಾನದಲ್ಲಿ ಪರಮ ಸುಖವನ್ನು ಪಡೆಯುತ್ತಾನೆ.
13109061a ಯಾವಂತಿ ರೋಮಕೂಪಾಣಿ ತಸ್ಯ ಗಾತ್ರೇಷು ಪಾಂಡವ|
13109061c ತಾವಂತ್ಯೇವ ಸಹಸ್ರಾಣಿ ವರ್ಷಾಣಾಂ ದಿವಿ ಮೋದತೇ||
ಪಾಂಡವ! ಅವನ ಶರೀರದಲ್ಲಿ ಎಷ್ಟು ರೋಮಕೂಪಗಳಿವೆಯೋ ಅಷ್ಟು ಸಹಸ್ರ ವರ್ಷಗಳ ಪರ್ಯಂತ ಅವನು ದಿವಿಯಲ್ಲಿ ಮೋದಿಸುತ್ತಾನೆ.
13109062a ನಾಸ್ತಿ ವೇದಾತ್ಪರಂ ಶಾಸ್ತ್ರಂ ನಾಸ್ತಿ ಮಾತೃಸಮೋ ಗುರುಃ|
13109062c ನ ಧರ್ಮಾತ್ಪರಮೋ ಲಾಭಸ್ತಪೋ ನಾನಶನಾತ್ಪರಮ್||
ವೇದಕ್ಕಿಂತಲೂ ಮಿಗಿಲಾದ ಶಾಸ್ತ್ರವಿಲ್ಲ. ಮಾತೃಸಮ ಗುರುವಿಲ್ಲ. ಧರ್ಮಕ್ಕಿಂತಲೂ ಹೆಚ್ಚಿನ ಲಾಭವಿಲ್ಲ. ಮತ್ತು ಅನಶನಕ್ಕಿಂತಲೂ ಮಿಗಿಲಾದ ತಪಸ್ಸಿಲ್ಲ.
13109063a ಬ್ರಾಹ್ಮಣೇಭ್ಯಃ ಪರಂ ನಾಸ್ತಿ ಪಾವನಂ ದಿವಿ ಚೇಹ ಚ|
13109063c ಉಪವಾಸೈಸ್ತಥಾ ತುಲ್ಯಂ ತಪಃಕರ್ಮ ನ ವಿದ್ಯತೇ||
ಇಲ್ಲಿ ಮತ್ತು ದಿವಿಯಲ್ಲಿ ಬ್ರಾಹ್ಮಣರಿಗಿಂತ ಹೆಚ್ಚು ಪಾವನರಾದವರು ಇಲ್ಲ. ಹಾಗೆಯೇ ಉಪವಾಸಕ್ಕೆ ಸಮನಾದ ತಪಃಕರ್ಮವೂ ಇಲ್ಲವೆಂದು ತಿಳಿಯುತ್ತದೆ.
13109064a ಉಪೋಷ್ಯ ವಿಧಿವದ್ದೇವಾಸ್ತ್ರಿದಿವಂ ಪ್ರತಿಪೇದಿರೇ|
13109064c ಋಷಯಶ್ಚ ಪರಾಂ ಸಿದ್ಧಿಮುಪವಾಸೈರವಾಪ್ನುವನ್||
ವಿಧಿವತ್ತಾಗಿ ಉಪವಾಸವ್ರತವನ್ನು ಮಾಡಿ ದೇವತೆಗಳು ತ್ರಿದಿವವನ್ನು ಪಡೆದುಕೊಂಡರು. ಋಷಿಗಳೂ ಕೂಡ ಉಪವಾಸಗಳಿಂದಲೇ ಪರಮ ಸಿದ್ಧಿಯನ್ನು ಪಡೆದುಕೊಂಡರು.
13109065a ದಿವ್ಯಂ ವರ್ಷಸಹಸ್ರಂ ಹಿ ವಿಶ್ವಾಮಿತ್ರೇಣ ಧೀಮತಾ|
13109065c ಕ್ಷಾಂತಮೇಕೇನ ಭಕ್ತೇನ ತೇನ ವಿಪ್ರತ್ವಮಾಗತಃ||
ಧೀಮಂತ ವಿಶ್ವಾಮಿತ್ರನು ಒಂದು ಸಹಸ್ರ ದಿವ್ಯವರ್ಷಗಳು ಒಪ್ಪತ್ತು ಊಟಮಾಡುತ್ತಾ ಕಷ್ಟವನ್ನು ಸಹಿಸಿಕೊಂಡು ತಪಸ್ಸನ್ನು ಮಾಡಿಯೇ ವಿಪ್ರತ್ವವನ್ನು ಪಡೆದುಕೊಂಡನು.
13109066a ಚ್ಯವನೋ ಜಮದಗ್ನಿಶ್ಚ ವಸಿಷ್ಠೋ ಗೌತಮೋ ಭೃಗುಃ|
13109066c ಸರ್ವ ಏವ ದಿವಂ ಪ್ರಾಪ್ತಾಃ ಕ್ಷಮಾವಂತೋ ಮಹರ್ಷಯಃ||
ಚ್ಯವನ, ಜಮದಗ್ನಿ, ವಸಿಷ್ಠ, ಗೌತಮ, ಭೃಗು – ಈ ಎಲ್ಲ ಮಹರ್ಷಿಗಳೂ ಉಪವಾಸವ್ರತದಿಂದಲೇ ಸ್ವರ್ಗವನ್ನು ಪಡೆದರು.
13109067a ಇದಮಂಗಿರಸಾ ಪೂರ್ವಂ ಮಹರ್ಷಿಭ್ಯಃ ಪ್ರದರ್ಶಿತಮ್|
13109067c ಯಃ ಪ್ರದರ್ಶಯತೇ ನಿತ್ಯಂ ನ ಸ ದುಃಖಮವಾಪ್ನುತೇ||
ಹಿಂದೆ ಅಂಗಿರಸ ಮಹರ್ಷಿಯು ಇದನ್ನು ನನಗೆ ಪ್ರದರ್ಶಿಸಿದ್ದನು. ಇದನ್ನು ನಿತ್ಯವೂ ಪಾಲಿಸುವವನು ದುಃಖವನ್ನು ಹೊಂದುವುದಿಲ್ಲ.
13109068a ಇಮಂ ತು ಕೌಂತೇಯ ಯಥಾಕ್ರಮಂ ವಿಧಿಂ
ಪ್ರವರ್ತಿತಂ ಹ್ಯಂಗಿರಸಾ ಮಹರ್ಷಿಣಾ|
13109068c ಪಠೇತ ಯೋ ವೈ ಶೃಣುಯಾಚ್ಚ ನಿತ್ಯದಾ
ನ ವಿದ್ಯತೇ ತಸ್ಯ ನರಸ್ಯ ಕಿಲ್ಬಿಷಮ್||
ಕೌಂತೇಯ! ಹೀಗೆ ಮಹರ್ಷಿ ಅಂಗಿರಸನು ಉಪವಾಸದ ಕ್ರಮ ವಿಧಿಗಳನ್ನು ಯಥಾವತ್ತಾಗಿ ಹೇಳಿದನು. ನಿತ್ಯವೂ ಇದನ್ನು ಓದುವ ಅಥವಾ ಕೇಳುವ ನರನಿಗೆ ಯಾವುದೇ ಪಾಪಗಳು ಇರುವುದಿಲ್ಲ.
13109069a ವಿಮುಚ್ಯತೇ ಚಾಪಿ ಸ ಸರ್ವಸಂಕರೈರ್
ನ ಚಾಸ್ಯ ದೋಷೈರಭಿಭೂಯತೇ ಮನಃ|
13109069c ವಿಯೋನಿಜಾನಾಂ ಚ ವಿಜಾನತೇ ರುತಂ
ಧ್ರುವಾಂ ಚ ಕೀರ್ತಿಂ ಲಭತೇ ನರೋತ್ತಮಃ||
ಅಂತಹ ನರೋತ್ತಮನು ಸರ್ವಸಂಕರಗಳಿಂದ ಮುಕ್ತನಾಗುತ್ತಾನೆ. ಅವನ ಮನಸ್ಸಿನಲ್ಲಿ ದೋಷಗಳುಂಟಾಗುವುದಿಲ್ಲ. ಅನ್ಯಯೋನಿಗಳಲ್ಲಿ ಹುಟ್ಟಿರುವ ಪ್ರಾಣಿಗಳ ಮಾತನ್ನೂ ಅರ್ಥಮಾಡಿಕೊಳ್ಳುತ್ತಾನೆ. ಶಾಶ್ವತ ಕೀರ್ತಿಯನ್ನೂ ಹೊಂದುತ್ತಾನೆ.”
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಉಪವಾಸವಿಧೌ ನವಾಧಿಕಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಉಪವಾಸವಿಧಿ ಎನ್ನುವ ನೂರಾಒಂಭತ್ತನೇ ಅಧ್ಯಾಯವು.
[1] ಋಷಿಮಂಗಿರಸಂ ಪೂರ್ವಂ (ಗೀತಾ ಪ್ರೆಸ್).
[2] ಅಂಗಿರಸನು ಅಗ್ನಿಸಂಭವನಾದುದು ಹೇಗೆ ಎನ್ನುವ ಕಥೆಯು ಇದೇ ದಾನಧರ್ಮಪರ್ವದ ಅಧ್ಯಾಯ 85ರಲ್ಲಿ ಬರುತ್ತದೆ.
[3] ಹಗಲು ರಾತ್ರಿ ಮತ್ತು ಹಗಲು ಉಟಮಾಡಿ ಎರಡನೆ ದಿನದ ರಾತ್ರಿಯಲ್ಲಿ ಉಪವಾಸವಿರುವುದು. ಹೀಗೆಯೇ ಪುನಃ ಹಗಲು, ರಾತ್ರಿ, ಹಗಲುಗಳಲ್ಲಿ ಮೂರು ಊಟ ಮಾಡಿ ಎರಡನೆಯ ರಾತ್ರಿ ಉಪವಾಸವಿರುವುದು.
[4] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಉಪೋಷ್ಯ ಏಕಭಕ್ತೇನ ನಿಯತಾತ್ಮಾ ಜಿತೇಂದ್ರಿಯಃ| (ಗೀತಾ ಪ್ರೆಸ್).
[5] ಕೃಷ್ಣಪಕ್ಷೇ (ಭಾರತ ದರ್ಶನ/ಗೀತಾ ಪ್ರೆಸ್).
[6] ಶಕ್ತ್ಯಾ (ಭಾರತ ದರ್ಶನ/ಗೀತಾ ಪ್ರೆಸ್).
[7] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಉಪೋಷ್ಯ ವಾಧಿರಹಿತೋ ವೀರ್ಯವಾನಭಿಜಾಯತೇ| (ಭಾರತ ದರ್ಶನ/ಗೀತಾ ಪ್ರೆಸ್).
[8] ಕ್ಷಿಪೇತ್ (ಗೀತಾ ಪ್ರೆಸ್) ಕ್ಷಿಪತ್ (ಭಾರತ ದರ್ಶನ).
[9] ಮಾಘಂ ತು ನಿಯತೋ ಮಾಸಮೇಕಭಕ್ತೇನ ಯಃ ಕ್ಷಿಪೇತ್| (ಭಾರತ ದರ್ಶನ/ಗೀತಾ ಪ್ರೆಸ್).
[10] ಭಗದೈವತಮಾಸಂ ತು ಏಕಭಕ್ತೇನ ಯಃ ಕ್ಷಿಪೇತ್| (ಗೀತಾ ಪ್ರೆಸ್/ಭಾರತ ದರ್ಶನ).
[11] ಬಹುಭಾರ್ಯಃ ಸ (ಭಾರತ ದರ್ಶನ).
[12] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ರಮತೇ ಸ್ತ್ರೀಸಹಸ್ರಾಢ್ಯೇ ಸುಕೃತೀ ವಿರಜೋ ನರಃ| (ಭಾರತ ದರ್ಶನ).
[13] ದಶವರ್ಷಸಹಸ್ರಾಣಿ (ಭಾರತ ದರ್ಶನ).
[14] ಭಗವಾನ್ ಅಂಗಿರಾಬ್ರವೀತ್ ಎಂದು ಬಂದಿರುವುದರಿಂದ ಈ ಶ್ಲೋಕವನ್ನು ಹಿಂದಿನ ಶ್ಲೋಕಗಳಂತೆ ಅಂಗಿರಸನು ಹೇಳಿದವುಗಳಲ್ಲ. ಭೀಷ್ಮನು ಯುಧಿಷ್ಠಿರನಿಗೆ ಹೇಳಿದುದು ಎಂದು ತಿಳಿಯುತ್ತದೆ.
[15] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಶತಂ ವರ್ಷ ಸಹಸ್ರಾಣಾಂ ಮೋದತೇ ಸ ದಿವಿ ಪ್ರಭೋ| (ಭಾರತ ದರ್ಶನ).
[16] ಸಹಸ್ರಹಂಸಯುಕ್ತೇನ ವಿಮಾನೇನ ತು ಗಚ್ಛತಿ| (ಭಾರತ ದರ್ಶನ).