ಹರಿವಂಶ: ಹರಿವಂಶ ಪರ್ವ

ವೈವಸ್ವತೋತ್ಪತ್ತಿಃ

19009001 ವೈಶಂಪಾಯನ ಉವಾಚ|

19009001a ವಿವಸ್ವಾನ್ಕಶ್ಯಪಾಜ್ಜಜ್ಞೇ ದಾಕ್ಷಾಯಣ್ಯಾಮರಿಂದಮ |

19009001c ತಸ್ಯ ಭಾರ್ಯಾಭವತ್ಸಂಜ್ಞಾ ತ್ವಾಷ್ಟ್ರೀ ದೇವೀ ವಿವಸ್ವತಃ ||

ವೈಶಂಪಾಯನನು ಹೇಳಿದನು: “ಅರಿಂದಮ! ದಕ್ಷನ ಪುತ್ರಿಯಲ್ಲಿ ಕಶ್ಯಪನಿಗೆ ವಿವಸ್ವಾನನು ಹುಟ್ಟಿದನು. ತ್ವಷ್ಟನ ಪುತ್ರಿ ದೇವೀ ಸಂಜ್ಞಾ ಅವನ ಭಾರ್ಯೆಯಾದಳು.

19009002a ಸುರೇಣುರಿತಿ ವಿಖ್ಯಾತಾ ತ್ರಿಷು ಲೋಕೇಷು ಭಾಮಿನೀ |

19009002c ಸಾ ವೈ ಭಾರ್ಯಾ ಭಗವತೋ ಮಾರ್ತಂಡಸ್ಯ ಮಹಾತ್ಮನಃ||

ಆ ಮಹಾತ್ಮ ಮಾರ್ತಂಡನ ಭಾರ್ಯೆ ಭಗವತಿ ಭಾಮಿನಿಯು ಸುರೇಣು ಎಂದು ಮೂರು ಲೋಕಗಳಲ್ಲಿಯೂ ವಿಖ್ಯಾತಳಾಗಿದ್ದಳು.

19009003a ಭರ್ತೃರೂಪೇಣ ನಾತುಷ್ಯದ್ರೂಪಯೌವನಶಾಲಿನೀ |

19009003c ಸಂಜ್ಞಾನಾ ಸ್ತ್ರೀ ಸುತಪಸಾ ದೀಪ್ತೇನೇಹ ಸಮನ್ವಿತಾ ||

ರೂಪಯೌವನ ಶಾಲಿನೀ ಸ್ತ್ರೀ ಸಂಜ್ಞೆಯು ತನ್ನ ಪತಿಯ ಮಹಾತಪಸ್ಸಿನಿಂದ ಬೆಳಗುತ್ತಿದ್ದ ರೂಪದಿಂದ ಸಂತುಷ್ಟಳಾಗಿರಲಿಲ್ಲ.

19009004a ಆದಿತ್ಯಸ್ಯ ಹಿ ತದ್ರೂಪಂ ಮಂಡಲಸ್ಯ ಸುತೇಜಸಾ |

19009004c ಗಾತ್ರೇಷು ಪರಿದಗ್ಧಂ ವೈ ನಾತಿಕಾಂತಮಿವಾಭವತ್ ||

ಅತ್ಯಂತ ತೇಜಸ್ಸಿದ್ದ ಆದಿತ್ಯನ ಮಂಡಲದ ರೂಪದಿಂದಾಗಿ ಅವಳ ಶರೀರವು ಸುಡುತ್ತಿದ್ದುದರಿಂದ ಅವಳಿಗೆ ಅವನ ಹತ್ತಿರ ಹೋಗಲೂ ಆಗುತ್ತಿರಲಿಲ್ಲ.

19009005a ನ ಖಲ್ವಯಂ ಮೃತೋಽಂಡಸ್ಥ ಇತಿ ಸ್ನೇಹಾದಭಾಷತ |

19009005c ಅಜ್ಞಾನಾತ್ಕಶ್ಯಪಸ್ತಸ್ಮಾನ್ಮಾರ್ತಂಡ ಇತಿ ಚೋಚ್ಯತೇ ||

ಅದಿತಿಯು ಅಜ್ಞಾನದಲ್ಲಿದ್ದಾಗ ಕಶ್ಯಪನು “ಇವನು ಮೃತನಾಗಿಲ್ಲ. ಅಂಡದಲ್ಲಿಯೇ ಇದ್ದಾನೆ!” ಎಂದು ಸ್ನೇಹದಿಂದ ಹೇಳಿದ ಕಾರಣ ಅವನನ್ನು ಮಾರ್ತಂಡ ಎಂದು ಹೇಳುತ್ತಾರೆ.

19009006a ತೇಜಸ್ತ್ವಭ್ಯಧಿಕಂ ತಾತ ನಿತ್ಯಮೇವ ವಿವಸ್ವತಃ |

19009006c ಯೇನಾತಿತಾಪಯಾಮಾಸ ತ್ರೀನ್ಲೋಕಾನ್ಕಶ್ಯಪಾತ್ಮಜಃ ||

ತಾತ! ವಿವಸ್ವತನ ತೇಜಸ್ಸು ಅತ್ಯಧಿಕ. ಇದರಿಂದಲೇ ಆ ಕಶ್ಯಪಾತ್ಮಜನು ಮೂರೂ ಲೋಕಗಳನ್ನು ಸುಡುತ್ತಿರುತ್ತಾನೆ.

19009007a ತ್ರೀಣ್ಯಪತ್ಯಾನಿ ಕೌರವ್ಯ ಸಂಜ್ಞಾಯಾಂ ತಪತಾಂ ವರಃ |

19009007c ಆದಿತ್ಯೋ ಜನಯಾಮಾಸ ಕನ್ಯಾಂ ದ್ವೌ ಚ ಪ್ರಜಾಪತೀ ||

ಕೌರವ್ಯ! ಸುಡುವವರಲ್ಲಿ ಶ್ರೇಷ್ಠನಾದ ಆದಿತ್ಯನು ಸಂಜ್ಞೆಯಲ್ಲಿ ಇಬ್ಬರು ಪ್ರಜಾಪತಿಗಳನ್ನೂ ಮತ್ತು ಓರ್ವ ಕನ್ಯೆಯನ್ನೂ ಹುಟ್ಟಿಸಿದನು.

19009008a ಮನುರ್ವೈವಸ್ವತಃ ಪೂರ್ವಂ ಶ್ರಾದ್ಧದೇವಃ ಪ್ರಜಾಪತಿಃ |

19009008c ಯಮಶ್ಚ ಯಮುನಾ ಚೈವ ಯಮಜೌ ಸಂಬಭೂವತುಃ ||

ಮೊದಲನೆಯವನು ವೈವಸ್ವತ ಮನು ಮತ್ತು ಎರಡನೆಯವನು ಪ್ರಜಾಪತಿ ಶ್ರಾದ್ಧದೇವ ಅಥವಾ ಯಮ. ಯಮ ಮತ್ತು ಯಮುನೆಯರು ಅವಳೀ ಮಕ್ಕಳಾಗಿ ಜನಿಸಿದ್ದರು.

19009009a ಸಾ ವಿವರ್ಣಂ ತು ತದ್ರೂಪಂ ದೃಷ್ಟ್ವಾ ಸಂಜ್ಞಾ ವಿವಸ್ವತಃ |

19009009c ಅಸಹಂತೀ ಚ ಸ್ವಾಂ ಛಾಯಾಂ ಸವರ್ಣಾಂ ನಿರ್ಮಮೇ ತತಃ||

ವಿವಸ್ವತನ ಆ ವಿವರ್ಣ ರೂಪವನ್ನು ನೋಡಿ ಸಹಿಸಲಾಗದ ಸಂಜ್ಞೆಯು ತನ್ನ ಛಾಯೆಗೆ ತನ್ನದೇ ರೂಪವನ್ನಿತ್ತಳು.

19009010a ಮಾಯಾಮಯೀ ತು ಸಾ ಸಂಜ್ಞಾ ತಸ್ಯಾಶ್ಛಾಯಾ ಸಮುತ್ಥಿತಾ|

19009010c ಪ್ರಾಂಜಲಿಃ ಪ್ರಣತಾ ಭೂತ್ವಾ ಛಾಯಾ ಸಂಜ್ಞಾಂ ನರೇಶ್ವರ ||

19009011a ಉವಾಚ ಕಿಂ ಮಯಾ ಕಾರ್ಯಂ ಕಥಯಸ್ವ ಶುಚಿಸ್ಮಿತೇ |

19009011c ಸ್ಥಿತಾಸ್ಮಿ ತವ ನಿರ್ದೇಶೇ ಶಾಧಿ ಮಾಂ ವರವರ್ಣಿನಿ ||

ಆ ಮಾಯಾಮಯಿಯು ಅವಳ ಛಾಯೆಯಿಂದಲೇ ಉತ್ಪನ್ನಳಾಗಿದ್ದಳು. ನರೇಶ್ವರ! ಆ ಛಾಯೆಯು ಸಂಜ್ಞೆಗೆ ಶಿರಬಾಗಿ ಕೈಮುಗಿದು “ಶುಚಿಸ್ಮಿತೇ! ನನ್ನಿಂದ ಏನಾಗಬೇಕೆಂದು ಹೇಳು. ವರವರ್ಣಿನೀ! ನಿನ್ನ ಆದೇಶಕ್ಕೇ ನಿಂತಿದ್ದೇನೆ. ನನಗೆ ಆಜ್ಞೆಮಾಡು!” ಎಂದಳು.

19009012  ಸಂಜ್ಞೋವಾಚ|

19009012a ಅಹಂ ಯಾಸ್ಯಾಮಿ ಭದ್ರಂ ತೇ ಸ್ವಮೇವ ಭವನಂ ಪಿತುಃ |

19009012c ತ್ವಯೇಹ ಭವನೇ ಮಹ್ಯಂ ವಸ್ತವ್ಯಂ ನಿರ್ವಿಕಾರಯಾ ||

ಸಂಜ್ಞೆಯು ಹೇಳಿದಳು: “ನಿನಗೆ ಮಂಗಳವಾಗಲಿ! ನಾನು ನನ್ನ ತಂದೆಯ ಮನಗೆ ಹೋಗುತ್ತಿದ್ದೇನೆ. ನೀನು ಈ ಭವನದಲ್ಲಿ ನಿರ್ವಿಕಾರಳಾಗಿ ವಾಸಿಸು.

19009013a ಇಮೌ ಚ ಬಾಲಕೌ ಮಹ್ಯಂ ಕನ್ಯಾ ಚೇಯಂ ಸುಮಧ್ಯಮಾ |

19009013c ಸಂಭಾವ್ಯಾಸ್ತೇ ನ ಚಾಖ್ಯೇಯಮಿದಂ ಭಗವತೇ ಕ್ವಚಿತ್ ||

ಈ ಇಬ್ಬರು ಬಾಲಕರು ಮತ್ತು ಸುಮಧ್ಯಮೆ ಕನ್ಯೆ ನನ್ನವರು. ಇವರನ್ನು ನೋಡಿಕೋ ಮತ್ತು ಈ ವಿಷಯವನ್ನು ಭಗವಾನ್ ಸೂರ್ಯನಲ್ಲಿ ಎಂದೂ ಹೇಳಬೇಡ!”

19009014 ಛಾಯೋವಾಚ|

19009014a ಆ ಕಚಗ್ರಹಣಾದ್ದೇವಿ ಆ ಶಾಪಾನ್ನೈವ ಕರ್ಹಿಚಿತ್ |

19009014c ಆಖ್ಯಾಸ್ಯಾಮಿ ಮತಂ ತುಭ್ಯಂ ಗಚ್ಛ ದೇವಿ ಯಥಾಸುಖಮ್ ||

ಛಾಯೆಯು ಹೇಳಿದಳು: “ದೇವೀ! ನನ್ನ ಕೂದಲನ್ನು ಹಿಡಿದುಕೊಂಡಾಗ ಮತ್ತು ಶಾಪವು ದೊರೆಯುವ ಪರಿಸ್ಥಿತಿಯಲ್ಲದೇ ಬೇರೆ ಯಾವಾಗಲೂ ಈ ವಿಷಯವನ್ನು ಹೇಳುವುದಿಲ್ಲ. ದೇವೀ! ನೀನು ಯಥಾಸುಖವಾಗಿ ಹೋಗು!””

19009015 ವೈಶಂಪಾಯನ ಉವಾಚ|

19009015a ಸಮಾದಿಶ್ಯ ಸವರ್ಣಾಂ ತಾಂ ತಥೇತ್ಯುಕ್ತಾ ಚ ಸಾ ತಯಾ |

19009015c ತ್ವಷ್ಟುಃ ಸಮೀಪಮಗಮದ್ವ್ರೀಡಿತೇವ ತಪಸ್ವಿನೀ ||

ವೈಶಂಪಾಯನನು ಹೇಳಿದನು: “ತನ್ನದೇ ರೂಪ-ನಾಮಗಳಿರುವ ಅವಳಿಗೆ ಆ ಆದೇಶವನ್ನಿತ್ತ ಅವಳು ಹಾಗೆಯೇ ಮಾಡುತ್ತೇನೆ ಎಂದು ವಚನವನ್ನಿತ್ತ ನಂತರ ತಪಸ್ವಿನೀ ಸಂಜ್ಞೆಯು ನಾಚಿಕೊಂಡೇ ತ್ವಷ್ಟನ ಬಳಿ ಹೋದಳು.

19009016a ಪಿತುಃ ಸಮೀಪಗಾ ಸಾ ತು ಪಿತ್ರಾ ನಿರ್ಭರ್ತ್ಸಿತಾ ತದಾ |

19009016c ಭರ್ತುಃ ಸಮೀಪಂ ಗಚ್ಛೇತಿ ನಿಯುಕ್ತಾ ಚ ಪುನಃ ಪುನಃ ||

ತಂದೆಯ ಸಮೀಪ ಹೋದ ಅವಳನ್ನು ಅವಳ ತಂದೆಯು ಜೋರಾಗಿ ಬೈದನು ಮತ್ತು ಪತಿಯ ಸಮೀಪ ಹೋಗೆಂದು ಪುನಃ ಪುನಃ ಹೇಳಿದನು.

19009017a ಅಗಚದ್ವಡವಾ ಭೂತ್ವಾಽಽಚ್ಛಾದ್ಯ ರೂಪಮನಿಂದಿತಾ |

19009017c ಕುರೂನಥೋತ್ತರಾನ್ಗತ್ವಾ ತೃಣಾನ್ಯೇವ ಚಚಾರ ಹ ||

ಆಗ ಆ ಅನಿಂದಿತೆಯು ತನ್ನ ರೂಪವನ್ನು ಬದಲಾಯಿಸಿಕೊಂಡು ಹೆಣ್ಣು ಕುದುರೆಯಾಗಿ ಉತ್ತರಕುರು ಪ್ರದೇಶಕ್ಕೆ ಹೋಗಿ ಅಲ್ಲಿ ಹುಲ್ಲನ್ನು ಮೇಯತೊಡಗಿದಳು.

19009018a ದ್ವಿತೀಯಾಯಾಂ ತು ಸಂಜ್ಞಾಯಾಂ ಸಂಜ್ಞೇಯಮಿತಿ ಚಿಂತಯನ್ |

19009018c ಆದಿತ್ಯೋ ಜನಯಾಮಾಸ ಪುತ್ರಮಾತ್ಮಸಮಂ ತದಾ ||

ಅನಂತರ ಎರಡನೇ ಸಂಜ್ಞೆಯನ್ನು ಸಂಜ್ಞೆಯೆಂದೇ ತಿಳಿದು ಆದಿತ್ಯನು ಅವಳಲ್ಲಿ ಆತ್ಮಸಮ ಪುತ್ರನನ್ನು ಹುಟ್ಟಿಸಿದನು.

19009019a ಪೂರ್ವಜಸ್ಯ ಮನೋಸ್ತಾತ ಸದೃಶೋಽಯಮಿತಿ ಪ್ರಭುಃ |

19009019c ಸವರ್ಣತ್ವಾನ್ಮನೋರ್ಭೂಯಃ ಸಾವರ್ಣ ಇತಿ ಚೋಕ್ತವಾನ್ ||

ತಾತ! ಆ ಪ್ರಭುವು ವರ್ಣ-ಪರಾಕ್ರಮಗಳಲ್ಲಿ ತನ್ನ ಅಣ್ಣ ಮನುವಿನಂತೆಯೇ ಇದ್ದುದರಿಂದ ಸಾವರ್ಣ ಎಂದಾದನು.

19009020a ಮನುರೇವಾಭವನ್ನಾಮ್ನಾ ಸಾವರ್ಣ ಇತಿ ಚೋಚ್ಯತೇ |

19009020c ದ್ವಿತೀಯೋ ಯಃ ಸುತಸ್ತಸ್ಯಾಃ ಸ ವಿಜ್ಞೇಯಃ ಶನೈಶ್ಚರಃ ||

ಅವನೂ ಸಾವರ್ಣ ಎಂಬ ಹೆಸರಿನ ಮನುವಾದನು ಎಂದು ಹೇಳುತ್ತಾರೆ. ಅವಳ ಎರಡನೆಯ ಮಗನು ಶನೈಶ್ಚರನೆಂದು ತಿಳಿಯಬೇಕು.

19009021a ಸಂಜ್ಞಾ ತು ಪಾರ್ಥಿವೀ ತಾತ ಸ್ವಸ್ಯ ಪುತ್ರಸ್ಯ ವೈ ತದಾ |

19009021c ಚಕಾರಾಭ್ಯಧಿಕಂ ಸ್ನೇಹಂ ನ ತಥಾ ಪೂರ್ವಜೇಷು ವೈ ||

ತಾತ! ಪಾರ್ಥಿವೀ[1] ಸಂಜ್ಞೆಯಾದರೋ ತನ್ನ ಪುತ್ರರಲ್ಲಿ ಎಷ್ಟು ಅಧಿಕಸ್ನೇಹವನ್ನಿಟ್ಟುಕೊಂಡಿದ್ದಳೋ ಅಷ್ಟು ಸ್ನೇಹವನ್ನು ಮೊದಲು ಹುಟ್ಟಿದವರಲ್ಲಿ ತೋರಿಸುತ್ತಿರಲಿಲ್ಲ.

19009022a ಮನುಸ್ತಸ್ಯಾಕ್ಷಮತ್ತತ್ತು ಯಮಸ್ತಸ್ಯಾ ನ ಚಕ್ಷಮೇ |

19009022c ತಾಂ ಸ ರೋಷಾಚ್ಚ ಬಾಲ್ಯಾಚ್ಚ ಭಾವಿನೋಽರ್ಥಸ್ಯ ವೈ ಬಲಾತ್ |

19009022e ಯದಾ ಸಂತರ್ಜ್ಜಯಾಮಾಸ ಸಂಜ್ಞಾಂ ವೈವಸ್ವತೋ ಯಮಃ||

ಮನುವಾದರೋ ಇದನ್ನು ಕ್ಷಮಿಸಿದನು. ಆದರೆ ಯಮನಿಗೆ ಅವಳನ್ನು ಕ್ಷಮಿಸಲಾಗಲಿಲ್ಲ. ವೈವಸ್ವತ ಯಮನು ರೋಷ-ಬಾಲ್ಯತನಗಳಿಂದ ಮತ್ತು ಮುಂದೆ ಆಗಬೇಕಾದುದರ ಬಲದಿಂದ, ಸಂಜ್ಞೆಗೆ ಕಾಲು ತೋರಿಸಿ ಅವಳನ್ನು ಬೈದನು.

19009023a ತಂ ಶಶಾಪ ತತಃ ಕ್ರೋಧಾತ್ಸಾವರ್ಣಂ ಜನನೀ ನೃಪ |

19009023c ಚರಣಃ ಪತತಾಮೇವ ತವೇತಿ ಭೃಶದುಃಖಿತಾ ||

ನೃಪ! ಆಗ ಸಾವರ್ಣನ ಜನನಿಯು ತುಂಬಾ ದುಃಖಿತಳಾಗಿ ಕೋಪದಿಂದ “ನಿನ್ನ ಕಾಲು ಬಿದ್ದುಹೋಗಲಿ!” ಎಂದು ಯಮನಿಗೆ ಶಪಿಸಿದಳು.

19009024a ಯಮಸ್ತು ತತ್ಪಿತುಃ ಸರ್ವಂ ಪ್ರಾಂಜಲಿಃ ಪರ್ಯವೇದಯತ್ |

19009024c ಭೃಶಂ ಶಾಪಭಯೋದ್ವಿಗ್ನಃ ಸಂಜ್ಞಾವಾಕ್ಯಪ್ರತೋದಿತಃ ||

ಸಂಜ್ಞೆಯ ಮಾತಿನಿಂದ ತುಂಬಾ ನೋವನ್ನನುಭವಿಸಿದ ಯಮನು ಶಾಪದ ಭಯದಿಂದ ಉದ್ವಿಗ್ನನಾಗಿ ತನ್ನ ತಂದೆಗೆ ಕೈಮುಗಿದು ನಡೆದುದೆಲ್ಲವನ್ನೂ ತಿಳಿಸಿದನು.

19009025a ಶಾಪೋಽಯಂ ವಿನಿವರ್ತೇತ ಪ್ರೋವಾಚ ಪಿತರಂ ತದಾ |

19009025c ಮಾತ್ರಾ ಸ್ನೇಹೇನ ಸರ್ವೇಷು ವರ್ತಿತವ್ಯಂ ಸುತೇಷು ವೈ ||

ಅವನು ತಂದೆಗೆ ಹೇಳಿದನು: “ನನಗೆ ಈ ಶಾಪವು ತಗಲದಿರಲಿ! ಮಾತೆಯಾದವಳು ತನ್ನ ಎಲ್ಲ ಮಕ್ಕಳೊಂಡನೆ ಸ್ನೇಹದಿಂದ ವರ್ತಿಸಬೇಕು!

19009026a ಸೇಯಮಸ್ಮಾನಪಾಹಾಯ ಯವೀಯಾಂಸಂ ಬುಭೂಷತಿ |

19009026c ತಸ್ಯಾಂ ಮಯೋದ್ಯತಃ ಪಾದೌ ನ ತು ದೇಹೇ ನಿಪಾತಿತಃ ||

ಇವಳು ನಮ್ಮನ್ನು ಬಿಟ್ಟು ಕಿರಿಯವರೊಂದಿಗೆ ಮಾತ್ರ ಸ್ನೇಹದಿಂದ ವರ್ತಿಸುತ್ತಿದ್ದಾಳೆ. ಆದುದರಿಂದ ನಾನು ನನ್ನ ಕಾಲನ್ನು ಎತ್ತಿದುದು ಹೌದು. ಆದರೆ ಅವಳ ಶರೀರಕ್ಕೆ ಒದೆಯಲಿಲ್ಲ.

19009027a ಬಾಲ್ಯಾದ್ವಾ ಯದಿ ವಾ ಮೋಹಾತ್ತದ್ಭವಾನ್ಕ್ಷಂತುಮರ್ಹತಿ |

19009027c ಯಸ್ಮಾತ್ತೇ ಪೂಜನೀಯಾಹಂ ಲಂಘಿತಾಸ್ಮಿ ತ್ವಯಾ ಸುತ ||

ಬಾಲ್ಯತನದಿಂದಲೋ ಅಥವಾ ಮೋಹಪರವಶನಾಗಿಯೋ ನಾನು ಆ ರೀತಿ ಮಾಡಿದೆ. ಅದನ್ನು ಕ್ಷಮಿಸಬೇಕು. ಆಗ ತಾಯಿಯು ನನಗೆ ಹೇಳಿದಳು: “ಮಗನೇ! ಪೂಜನೀಯಳಾದ ನನ್ನನ್ನು ನೀನು ಉಲ್ಲಂಘಿಸಿದ್ದೀಯೆ!

19009028a ತಸ್ಮಾತ್ತವೈಷ ಚರಣಃ ಪತಿಷ್ಯತಿ ನ ಸಂಶಯಃ |

19009028c ಅಪತ್ಯಂ ದುರಪತ್ಯಂ ಸ್ಯಾನ್ನಾಂಬಾ ಕುಜನನೀ ಭವೇತ್ ||

ಆದುದರಿಂದ ನಿನ್ನ ಈ ಕಾಲು ನಿಸ್ಸಂದೇಹವಾಗಿ ಬೀಳುತ್ತದೆ. ಸಂತಾನವು ಕುಸಂತಾನವಾಗಬಹುದು. ಆದರೆ ಮಾತೆಯು ಎಂದೂ ಕುಮಾತೆಯಾಗುವುದಿಲ್ಲ.”

19009029a ಶಪ್ತೋಽಹಮಸ್ಮಿ ಲೋಕೇಶ ಜನನ್ಯಾ ತಪತಾಂ ವರ |

19009029c ತವ ಪ್ರಸಾದಾಚ್ಚರಣೋ ನ ಪತೇನ್ಮಮ ಗೋಪತೇ ||

ಲೋಕೇಶ! ಸುಡುವವರಲ್ಲಿ ಶ್ರೇಷ್ಠ! ಗೋಪತೇ! ಜನನಿಯಿಂದ ಶಪಿಸಲ್ಪಟ್ಟಿದ್ದೇನೆ. ನಿನ್ನ ಕರುಣೆಯಿಂದ ನನ್ನ ಚರಣವು ಬೀಳದಿರಲಿ!”

19009030 ವಿವಸ್ವಾನುವಾಚ|

19009030a ಅಸಂಶಯಂ ಪುತ್ರ ಮಹದ್ಭವಿಷ್ಯತ್ಯತ್ರ ಕಾರಣಮ್ |

19009030c ಯೇನ ತ್ವಾಮಾವಿಶತ್ಕ್ರೋಧೋ ಧರ್ಮಜ್ಞಂ ಸತ್ಯವಾದಿನಮ್||

ವಿವಸ್ವಾನನು ಹೇಳಿದನು: “ಪುತ್ರ! ನೀನು ಧರ್ಮಜ್ಞ ಮತ್ತು ಸತ್ಯವಾದಿ. ನೀನು ಈ ರೀತಿ ಕ್ರೋಧಾವಿಷ್ಟನಾದೆಯೆಂದರೆ ನಿಸ್ಸಂಶಯವಾಗಿಯೂ ಅದರ ಹಿಂದೆ ಅತಿ ದೊಡ್ಡ ಕಾರಣವಿರಬೇಕು.

19009031a ನ ಶಕ್ಯಮನ್ಯಥಾ ಕರ್ತುಂ ಮಯಾ ಮಾತುರ್ವಚಸ್ತವ |

19009031c ಕೃಮಯೋ ಮಾಂಸಮಾದಾಯ ಯಾಸ್ಯಂತಿ ಧರಣೀತಲಮ್ ||

19009032a ತವ ಪಾದಾನ್ಮಹಾಪ್ರಾಜ್ಞ ತತಸ್ತ್ವಂ ಪ್ರಾಪ್ಸ್ಯಸೇ ಸುಖಮ್ |

19009032c ಕೃತಮೇವಂ ವಚಸ್ತಥ್ಯಂ ಮಾತುಸ್ತವ ಭವಿಷ್ಯತಿ ||

ನಿನ್ನ ಮಾತೆಯ ವಚನವನ್ನು ಅನ್ಯಥಾ ಮಾಡಲು ನಾನು ಶಕ್ಯನಿಲ್ಲ. ಕ್ರಿಮಿಗಳು ನಿನ್ನ ಕಾಲಿನ ಮಾಂಸವನ್ನು ತಿಂದು ಭೂಮಿಯ ಮೇಲೆ ಬೀಳಿಸುತ್ತವೆ. ಮಹಾಪ್ರಾಜ್ಞ! ಇದರಿಂದ ನಿನಗೆ ಸುಖವಾಗುತ್ತದೆ. ಹೀಗೆ ನಿನ್ನ ತಾಯಿಯ ಮಾತಿನಂತೆಯೂ ಮಾಡಿದಂತಾಗುತ್ತದೆ.

19009033a ಶಾಪಸ್ಯ ಪರಿಹಾರೇಣ ತ್ವಂ ಚ ತ್ರಾತೋ ಭವಿಷ್ಯಸಿ |

19009033c ಆದಿತ್ಯೋಽಥಾಬ್ರವೀತ್ಸಂಜ್ಞಾಂ ಕಿಮರ್ಥಂ ತನಯೇಷು ವೈ ||

19009034a ತುಲ್ಯೇಷ್ವಭ್ಯಧಿಕಃ ಸ್ನೇಹಃ ಕ್ರಿಯತೇಽತಿ ಪುನಃ ಪುನಃ |

19009034c ಸಾ ತತ್ಪರಿಹರಂತೀ ತು ನಾಚಚಕ್ಷೇ ವಿವಸ್ವತೇ ||

ಶಾಪದ ಈ ಪರಿಹಾರದಿಂದ ನೀನೂ ಬಿಡುಗಡೆಹೊಂದುತ್ತೀಯೆ!” ಅನಂತರ ಆದಿತ್ಯನು ಸಂಜ್ಞೆಗೆ “ನಿನ್ನ ತನಯರಲ್ಲಿ ಸಮಾನ ಸ್ನೇಹವನ್ನಿಟ್ಟಿರಬೇಕಾಗಿದ್ದ ನೀನು ಕಿರಿಯವರಲ್ಲಿಯೇ ಏಕೆ ಅಧಿಕ ಸ್ನೇಹವನ್ನು ತೋರಿಸುತ್ತಿದ್ದೀಯೆ?” ಎಂದು ಪುನಃ ಪುನಃ ಕೇಳಿದನು. ಆಗ ಅವಳು ನಸುನಗುತ್ತಿದ್ದಳೇ ಹೊರತು ವಿವಸ್ವತನಿಗೆ ಏನನ್ನೂ ಹೇಳಲಿಲ್ಲ.  

19009035a ಆತ್ಮಾನಂ ಸುಸಮಾಧಾಯ ಯೋಗಾತ್ತಥ್ಯಮಪಶ್ಯತ |

19009035c ತಾಂ ಶಪ್ತುಕಾಮೋ ಭಗವಾನ್ನಾಶಾಯ ಕುರುನಂದನ ||

19009036a ಮೂರ್ಧಜೇಷು ಚ ಜಗ್ರಾಹ ಸಮಯೇಽತಿಗತೇಽಪಿ ಚ |

19009036c ಸಾ ತತ್ಸರ್ವಂ ಯಥಾವೃತ್ತಮಾಚಚಕ್ಷೇ ವಿವಸ್ವತೇ ||

ಕುರುನಂದನ! ಆಗ ಸೂರ್ಯನು ಯೋಗದಿಂದ ತನ್ನ ಆತ್ಮನಲ್ಲಿ ಏಕಾಗ್ರಚಿತ್ತನಾಗಿ ಸತ್ಯವೇನೆಂದು ಕಂಡುಕೊಂಡನು. ಅವಳನ್ನು ಶಪಿಸಿ ನಾಶಪಡಿಸಲು ಬಯಸಿದ ಭಗವಾನನು ಅವಳ ತಲೆಗೂದಲನ್ನು ಹಿಡಿದನು. ಸಂಜ್ಞೆಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದವು ಹೀಗೆ ಮುರಿದುಹೋಗಲು ಛಾಯೆಯು ವಿವಸ್ವತನಿಗೆ ನಡೆದುದೆಲ್ಲವನ್ನೂ ತಿಳಿಸಿದಳು.

19009037a ವಿವಸ್ವಾನಥ ತಚ್ಛ್ರುತ್ವಾ ಕ್ರುದ್ಧಸ್ತ್ವಷ್ಟಾರಮಭ್ಯಗಾತ್ |

19009037c ತ್ವಷ್ಟಾ ತು ತಂ ಯಥಾನ್ಯಾಯಮರ್ಚಯಿತ್ವಾ ವಿಭಾವಸುಮ್ |

19009037e ನಿರ್ದಗ್ಧುಕಾಮಂ ರೋಷೇಣ ಸಾಂತ್ವಯಾಮಾಸ ವೈ ತದಾ ||

ಅದನ್ನು ಕೇಳಿದ ವಿವಸ್ವಾನನು ಕ್ರುದ್ಧನಾಗಿ ತ್ವಷ್ಟನಲ್ಲಿಗೆ ಹೋದನು. ತ್ವಷ್ಟನಾದರೋ ಯಥಾನ್ಯಾಯವಾಗಿ ವಿಭಾವಸುವನ್ನು ಪೂಜಿಸಿ, ರೋಷದಿಂದ ಸುಡಲು ಬಯಸಿದ ಅವನನ್ನು ಸಂತವಿಸತೊಡಗಿದನು.

19009038 ತ್ವಷ್ಟೋವಾಚ|

19009038a ತವಾತಿತೇಜಸಾವಿಷ್ಟಮಿದಂ ರೂಪಂ ನ ಶೋಭತೇ |

19009038c ಅಸಹಂತೀ ಚ ತತ್ಸಂಜ್ಞಾ ವನೇ ಚರತಿ ಶಾಡ್ವಲೇ ||

ತ್ವಷ್ಟನು ಹೇಳಿದನು: “ನಿನ್ನ ಈ ಅತಿತೇಜಸಮಾವಿಷ್ಟ ರೂಪವು ಶೋಭಿಸುವುದಿಲ್ಲ. ಇದನ್ನು ಸಹಿಸಿಕೊಳ್ಳಲಾರದೇ ಸಂಜ್ಞೆಯು ಹಸಿರು ಹುಲ್ಲಿನ ವನಗಳಲ್ಲಿ ಸಂಚರಿಸುತ್ತಿದ್ದಾಳೆ.

19009039a ದ್ರಷ್ಟಾ ಹಿ ತಾಂ ಭವಾನದ್ಯ ಸ್ವಾಂ ಭಾರ್ಯಾಂ ಶುಭಚಾರಿಣೀಮ್ |

19009039c ನಿತ್ಯಂ ತಪಸ್ಯಭಿರತಾಂ ವಡವಾರೂಪಧಾರಿಣೀಮ್ ||

19009040a ಪರ್ಣಾಹಾರಾಂ ಕೃಶಾಂ ದೀನಾಂ ಜಟಿಲಾಂ ಬ್ರಹ್ಮಚಾರಿಣೀಮ್ |

19009040c ಹಸ್ತಿಹಸ್ತಪರಿಕ್ಲಿಷ್ಟಾಂ ವ್ಯಾಕುಲಾಂ ಪದ್ಮಿನೀಮಿವ |

19009040e ಶ್ಲಾಘ್ಯಾಂ ಯೋಗಬಲೋಪೇತಾಂ ಯೋಗಮಾಸ್ಥಾಯ ಗೋಪತೇ||

ಗೋಪತೇ! ಇಂದು ಆ ನಿನ್ನ ಪತ್ನಿ ಶುಭಚಾರಿಣಿಯನ್ನು – ಸಲಗವು ಕೈಹಾಕಿದ ವ್ಯಾಕುಲ ಪದ್ಮಿನಿಯಂತೆ - ಕುದುರೆಯ ರೂಪವನ್ನು ಧರಿಸಿಕೊಂಡು ಪರ್ಣಾಹಾರಿಯಾಗಿ ಕೃಶಳೂ, ದೀನಳೂ, ಜಟಿಲೆಯೂ, ಬ್ರಹ್ಮಚಾರಿಣಿಯೂ ಆಗಿ, ಶ್ಲಾಘನೀಯ ಯೋಗಬಲದಿಂದ ಯೋಗಸ್ಥಳಾಗಿರುವುದನ್ನು ನೀನು ನೋಡುತ್ತೀಯೆ.

19009041a ಅನುಕೂಲಂ ತು ದೇವೇಶ ಯದಿ ಸ್ಯಾನ್ಮಮ ತನ್ಮತಮ್ |

19009041c ರೂಪಂ ನಿರ್ವರ್ತಯಾಮ್ಯದ್ಯ ತವ ಕಾಂತಮರಿಂದಮ ||

ದೇವೇಶ! ಅರಿಂದಮ! ಒಂದು ವೇಳೆ ನಿನಗೆ ನನ್ನ ಮಾತು ಸರಿಯೆನಿಸಿದರೆ, ನಾನು ನಿನ್ನ ರೂಪವನ್ನು ಮನೋಹರವನ್ನಾಗಿ ಮಾಡುತ್ತೇನೆ.”

19009042a ರೂಪಂ ವಿವಸ್ವತಶ್ಚಾಸೀತ್ತಿರ್ಯಗೂರ್ಧ್ವಸಮಂ ತು ವೈ |

19009042c ತೇನಾಸೌ ಸಂಭೃತೋ ದೇವರೂಪೇಣ ತು ವಿಭಾವಸುಃ ||

ವಿವಸ್ವತನ ರೂಪವು ಎಲ್ಲಕಡೆ ಏರು-ಪೇರಾಗಿತ್ತು. ಆ ದೇವರೂಪದಲ್ಲಿದ್ದುದರಿಂದ ಅವನಿಗೆ ವಿಭಾವಸು ಎಂಬ ಹೆಸರಾಗಿತ್ತು.

19009043a ತಸ್ಮಾತ್ತ್ವಷ್ಟುಃ ಸ ವೈ ವಾಕ್ಯಂ ಬಹು ಮೇನೇ ಪ್ರಜಾಪತಿಃ |

19009043c ಸಮನುಜ್ಞಾತವಾಂಶ್ಚೈವ ತ್ವಷ್ಟಾರಂ ರೂಪಸಿದ್ಧಯೇ ||

ಆದುದರಿಂದ ಪ್ರಜಾಪತಿಯು ತ್ವಷ್ಟನ ಮಾತನ್ನು ಒಪ್ಪಿಕೊಂಡನು ಮತ್ತು ತನ್ನ ರೂಪವನ್ನು ಸರಿಪಡಿಸಲು ತ್ವಷ್ಟನಿಗೆ ಅನುಮತಿಯನ್ನಿತ್ತನು.

19009044a ತತೋಽಭ್ಯುಪಗಮಾತ್ತ್ವಷ್ಟಾ ಮಾರ್ತಂಡಸ್ಯ ವಿವಸ್ವತಃ |

19009044c ಭ್ರಮಿಮಾರೋಪ್ಯ ತತ್ತೇಜಃ ಶಾತಯಾಮಾಸ ಭಾರತ ||

ಭಾರತ! ತ್ವಷ್ಟನು ವಿವಸ್ವತ ಮಾರ್ತಂಡನ ಸಮೀಪ ಹೋಗಿ ಅವನ ಮೇಲೆ ಸಾಣೆಯನ್ನು ಇಟ್ಟು ಅವನ ತೇಜಸ್ಸನ್ನು ಕೊರೆಯತೊಡಗಿದನು.

19009045a ತತೋ ನಿರ್ಭಾಸಿತಂ ರೂಪಂ ತೇಜಸಾ ಸಂಹೃತೇನ ವೈ |

19009045c ಕಾಂತಾತ್ಕಾಂತತರಂ ದ್ರಷ್ಟುಮಧಿಕಂ ಶುಶುಭೇ ತದಾ ||

ತೇಜಸ್ಸನ್ನು ಕೊರೆದುದರಿಂದ ಸೂರ್ಯನ ರೂಪವು ಅರಳಿತು ಮತ್ತು ರೂಪವು ರಮ್ಯಾತಿರಮ್ಯವಾಗಿ ಅವನು ನೋಡಲು ಅಧಿಕವಾಗಿ ಶೋಭಿಸಿದನು.

19009046a ಮುಖೇ ನಿವರ್ತಿತಂ ರೂಪಂ ತಸ್ಯ ದೇವಸ್ಯ ಗೋಪತೇಃ |

19009046c ತತಃ ಪ್ರಭೃತಿ ದೇವಸ್ಯ ಮುಖಮಾಸೀತ್ತು ಲೋಹಿತಮ್ |

19009046e ಮುಖರಾಗಂ ತು ಯತ್ಪೂರ್ವಂ ಮಾರ್ತಂಡಸ್ಯ ಮುಖಚ್ಯುತಮ್ ||

19009047a ಆದಿತ್ಯಾ ದ್ವಾದಶೈವೇಹ ಸಂಭೂತಾ ಮುಖಸಂಭವಾಃ |

19009047c ಧಾತಾರ್ಯಮಾ ಚ ಮಿತ್ರಶ್ಚ ವರುಣೋಽಂಶೋ ಭಗಸ್ತಥಾ ||

19009048a ಇಂದ್ರೋ ವಿವಸ್ವಾನ್ಪೂಷಾ ಚ ಪರ್ಜನ್ಯೋ ದಶಮಸ್ತಥಾ |

19009048c ತತಸ್ತ್ವಷ್ಟಾ ತತೋ ವಿಷ್ಣುರಜಘನ್ಯೋ ಜಘನ್ಯಜಃ ||

ಅಂದಿನಿಂದ ದೇವ ಗೋಪತಿಯ ರೂಪವು ಬದಲಾಯಿತು. ಅವನ ಮುಖವು ರಕ್ತವರ್ಣದ್ದಾಯಿತು. ಹೊರಹೊಮ್ಮಿದ ಮಾರ್ತಂಡನ ಮುಖರಾಗದಿಂದ ದ್ವಾದಶ ಆದಿತ್ಯರು ಉತ್ಪನ್ನರಾದರು. ಅವನ ಮುಖದಿಂದ ಧಾತಾ, ಆರ್ಯಮಾ, ಮಿತ್ರ, ವರುಣ, ಅಂಶ, ಭಗ, ಇಂದ್ರ, ವಿವಸ್ವಾನ್, ಪೂಷಾ, ಹತ್ತನೆಯ ಪರ್ಜನ್ಯ, ತ್ವಷ್ಟಾ, ಮತ್ತು ಹನ್ನೆರಡನೆಯ ವಿಷ್ಣು ಉತ್ಪನ್ನರಾದರು. ಕಿರಿಯವನಾಗಿದ್ದರೂ ವಿಷ್ಣುವು ಎಲ್ಲರಿಗಿಂತಲೂ ಶ್ರೇಷ್ಠನಾಗಿದ್ದನು.

19009049a ಹರ್ಷಂ ಲೇಭೇ ತತೋ ದೇವೋ ದೃಷ್ಟ್ವಾಽಽದಿತ್ಯಾನ್ಸ್ವದೇಹಜಾನ್|

19009049c ಗಂಧೈಃ ಪುಷ್ಪೈರಲಂಕಾರೈರ್ಭಾಸ್ವತಾ ಮುಕುಟೇನ ಚ ||

ಗಂಧ-ಪುಷ್ಪ-ಅಲಂಕಾರಗಳಿಂದ ಮತ್ತು ಹೊಳೆಯುವ ಮುಕುಟಗಳಿಂದ ಶೋಭಿತರಾಗಿ ತನ್ನ ದೇಹದಿಂದ ಹುಟ್ಟಿದ ಆ ಆದಿತ್ಯರನ್ನು ನೋಡಿ ಸೂರ್ಯದೇವನು ಹರ್ಷಿತನಾದನು.

19009050a ಏವಂ ಸಂಪೂಜಯಾಮಾಸ ತ್ವಷ್ಟಾ ವಾಕ್ಯಮುವಾಚ ಹ |

19009050c ಗಚ್ಚ ದೇವ ನಿಜಾಂ ಭಾರ್ಯಾಂ ಕುರೂಂಶ್ಚರತಿ ಸೋತ್ತರಾನ್||

19009051a ಬಡವಾರೂಪಮಾಸ್ಥಾಯ ವನೇ ಚರತಿ ಶಾದ್ವಲೇ |

ಹೀಗೆ ಸಂಪೂಜಿಸಿ ತ್ವಷ್ಟನು ಅವನಿಗೆ ಹೇಳಿದನು: “ದೇವ! ಹೋಗು! ನಿನ್ನ ಭಾರ್ಯೆಯು ಉತ್ತರ ಕುರುವಿನಲ್ಲಿ ಸಂಚರಿಸುತ್ತಿದ್ದಾಳೆ. ಕುದುರೆಯ ರೂಪವನ್ನು ಧರಿಸಿ ಅವಳು ಹಸಿರು ಹುಲ್ಲಿನ ಬಯಲುಪ್ರದೇಶದಲ್ಲಿ ಸುತ್ತುತ್ತಿದ್ದಾಳೆ.”

19009051c ಸ ತಥಾ ರೂಪಮಾಸ್ಥಾಯ ಸ್ವಭಾರ್ಯಾರೂಪಲೀಲಯಾ ||

19009052a ದದರ್ಶ ಯೋಗಮಾಸ್ಥಾಯ ಸ್ವಾಂ ಭಾರ್ಯಾಂ ಬಡವಾಂ ತತಃ |

19009052c ಅಧೃಷ್ಯಾಂ ಸರ್ವಭೂತಾನಾಂ ತೇಜಸಾ ನಿಯಮೇನ ಚ ||

ಅನಂತರ ತನ್ನ ಭಾರ್ಯೆಯ ರೂಪವನ್ನೇ ಧರಿಸಿಕೊಂಡು ಅವನು ಯೋಗಸ್ಥನಾಗಿ ತನ್ನ ತೇಜಸ್ಸು-ನಿಯಮಗಳಿಂದ ಸರ್ವಭೂತಗಳಿಗೂ ಅದೃಶ್ಯಳಾಗಿ ಕುದುರೆಯ ರೂಪದಲ್ಲಿದ್ದ ತನ್ನ ಪತ್ನಿಯನ್ನು ಕಂಡನು.

19009053a ವಡವಾವಪುಷಾ ರಾಜಂಶ್ಚರಂತೀಮಕುತೋಭಯಾಮ್ |

19009053c ಸೋಽಶ್ವರೂಪೇಣ ಭಗವಾಂಸ್ತಾಂ ಮುಖೇ ಸಮಭಾವಯತ್||

ರಾಜನ್! ಭಗವಾನ್ ಸೂರ್ಯನು ಅಶ್ವರೂಪದಲ್ಲಿ ಯಾವುದೇ ಭಯವಿಲ್ಲದೇ ಕುದುರೆಯ ರೂಪಧರಿಸಿದ್ದ ಅವಳ ಮುಖದ ಎದಿರು ಬಂದನು.

19009054a ಮೈಥುನಾಯ ವಿಚೇಷ್ಟಂತೀ ಪರಪುಂಸೋಪಶಂಕಯಾ |

19009054c ಸಾ ತನ್ನಿರವಮಚ್ಛುಕ್ರಂ ನಾಸಿಕಾಯಾಂ ವಿವಸ್ವತಃ ||

ಪರಪುರುಷನೊಂದಿಗೆ ಮೈಥುನವಾಗಬರದೆಂದು ಶಂಕಿಸಿ ಅವಳು ವಿವಸ್ವತ ವೀರ್ಯವನ್ನು ತನ್ನ ಮೂಗುಗಳಿಂದ ಹೊರಚೆಲ್ಲಿದಳು.

19009055a ದೇವೌ ತಸ್ಯಾಮಜಾಯೇತಾಮಶ್ವಿನೌ ಭಿಷಜಾಂ ವರೌ |

19009055c ನಾಸತ್ಯಶ್ಚೈವ ದಸ್ರಶ್ಚ ಸ್ಮೃತೌ ದ್ವಾವಶ್ವಿನಾವಿತಿ ||

ಅದರಿಂದ ವೈದ್ಯರಲ್ಲಿ ಶ್ರೇಷ್ಠ ಅಶ್ವಿನೀ ದೇವತೆಗಳಿಬ್ಬರು ಹುಟ್ಟಿದರು. ಅವರಿಬ್ಬರು ಅಶ್ವಿನಿಯರೂ ನಾಸತ್ಯ ಮತ್ತು ದಸ್ರ ಎಂದೂ ಕರೆಯಲ್ಪಡುತ್ತಾರೆ.

19009056a ಮಾರ್ತಂಡಸ್ಯಾತ್ಮಜಾವೇತಾವಷ್ಟಮಸ್ಯ ಪ್ರಜಾಪತೇಃ |

19009056c ಸಂಜ್ಞಾಯಾಂ ಜನಯಾಮಾಸ ವಡವಾಯಾಂ ಸ ಭಾರತ |

19009056e ತಾಂ ತು ರೂಪೇಣ ಕಾಂತೇನ ದರ್ಶಯಾಮಾಸ ಭಾಸ್ಕರಃ ||

ಭಾರತ! ಇವರಿಬ್ಬರೂ ಕುದುರೆಯ ರೂಪದಲ್ಲಿದ್ದ ಸಂಜ್ಞೆಯಲ್ಲಿ ಹುಟ್ಟಿದ ಪ್ರಜಾಪತಿ ಮಾರ್ತಂಡನ ಏಳನೆಯ ಸಂತಾನ. ಆಗ ಭಾಸ್ಕರನು ತನ್ನ ಮನೋಹರ ರೂಪವನ್ನು ಅವಳಿಗೆ ತೋರಿಸಿದನು.

19009057a ಸಾ ಚ ದೃಷ್ಟ್ವೈವ ಭರ್ತಾರಂ ತುತೋಷ ಜನಮೇಜಯ |

19009057c ಯಮಸ್ತು ಕರ್ಮಣಾ ತೇನ ಭೃಶಂ ಪೀಡಿತಮಾನಸಃ ||

ಜನಮೇಜಯ! ಸಂಜ್ಞೆಯಾದರೋ ತನ್ನ ಪತಿಯನ್ನು ನೋಡಿ ತುಂಬಾ ಸಂತೋಷಗೊಂಡಳು. ಇತ್ತ ಯಮನಾದರೋ ತನ್ನ ಕರ್ಮದಿಂದ ಮನಸ್ಸಿನಲ್ಲಿಯೇ ಅತ್ಯಂತ ಪೀಡಿತನಾಗಿದ್ದನು.

19009058a ಧರ್ಮೇಣ ರಂಜಯಾಮಾಸ ಧರ್ಮರಾಜ ಇವ ಪ್ರಜಾಃ |

19009058c ಸ ಲೇಭೇ ಕರ್ಮಣಾ ತೇನ ಪರಮೇಣ ಮಹಾದ್ಯುತಿಃ ||

19009059a ಪಿತೄಣಾಮಾಧಿಪತ್ಯಂ ಚ ಲೋಕಪಾಲತ್ವಮೇವ ಚ |

ಅವನು ಧರ್ಮರಾಜನಂತೆ ಧರ್ಮದಿಂದ ಪ್ರಜೆಗಳನ್ನು ರಂಜಿಸತೊಡಗಿದನು. ಆ ಮಹಾದ್ಯುತಿಯ ಪರಮ ಕರ್ಮಗಳಿಂದ ಅವನಿಗೆ ಪಿತೃಗಳ ಅಧಿಪತ್ಯವೂ ಲೋಕಪಾಲತ್ವವೂ ದೊರೆಯಿತು.

19009059c ಮನುಃ ಪ್ರಜಾಪತಿಸ್ತ್ವಾಸೀತ್ಸಾವರ್ಣಃ ಸ ತಪೋಧನಃ ||

19009060a ಭಾವ್ಯಃ ಸೋಽನಾಗತೇ ಕಾಲೇ ಮನುಃ ಸಾವರ್ಣಿಕೇಽಂತರೇ|

19009060c ಮೇರುಪೃಷ್ಠೇ ತಪೋ ಘೋರಮದ್ಯಾಪಿ ಚರತಿ ಪ್ರಭುಃ ||

ಮನುವು ಪ್ರಜಾಪತಿಯಾದನು. ತಪೋಧನ ಸಾವರ್ಣನು ಮುಂದೆ ಬರುವ ಕಾಲದಲ್ಲಿ ಸಾವರ್ಣಿಕ ಮನ್ವಂತರದಲ್ಲಿ ಮನುವಾಗುವನು. ಅವನು ಇಂದಿಗೂ ಮೇರುಪರ್ವತದ ಮೇಲೆ ಘೋರ ತಪಸ್ಸನ್ನು ಆಚರಿಸುತ್ತಿದ್ದಾನೆ.

19009061a ಭ್ರಾತಾ ಶನೈಶ್ಚರಶ್ಚಾಸ್ಯ  ಗ್ರಹತ್ವಮುಪಲಬ್ಧವಾನ್ |

19009061c ನಾಸತ್ಯೌ ಯೌ ಸಮಾಖ್ಯಾತೌ ಸ್ವರ್ವೈದ್ಯೌ ತೌ ಬಭೂವತುಃ ||

ಸಹೋದರ ಶನೈಶ್ಚರನಿಗೆ ಗ್ರಹತ್ವವು ದೊರಕಿತು. ಮತ್ತು ನಾಸತ್ಯರೆಂದು ವಿಖ್ಯಾತರಾದ ಅಶ್ವಿನಿಯರು ದೇವತೆಗಳ ವೈದ್ಯರಾದರು.

19009062a ಸೇವತೋಽಪಿ ತಥಾ ರಾಜನ್ನಶ್ವಾನಾಂ ಶಾಂತಿದೋಽಭವತ್ |

19009062c ತ್ವಷ್ಟಾ ತು ತೇಜಸಾ ತೇನ ವಿಷ್ಣೋಶ್ಚಕ್ರಮಕಲ್ಪಯತ್ ||

19009063a ತದಪ್ರತಿಹತಂ ಯುದ್ಧೇ ದಾನವಾಂತಚಿಕೀರ್ಷಯಾ |

ಅವರು ಕುದುರೆಗಳ ಸೇವೆಮಾಡುವವರಿಗೆ ಶಾಂತಿಯನ್ನು ನೀಡುತ್ತಾರೆ. ತ್ವಷ್ಟನಾದರೋ ಕೊರೆದ ಸೂರ್ಯನ ತೇಜಸ್ಸಿನಿಂದ ದಾನವರ ಸಂಹಾರಕ್ಕಾಗಿ ಯುದ್ಧಗಳಲ್ಲಿ ಎಂದೂ ವ್ಯರ್ಥವಾಗದ ವಿಷ್ಣುವಿನ ಚಕ್ರವನ್ನು ನಿರ್ಮಿಸಿದನು.

19009063c ಯವೀಯಸೀ ತಯೋರ್ಯಾ ತು ಯಮೀ ಕನ್ಯಾ ಯಶಸ್ವಿನೀ ||

19009064a ಅಭವತ್ಸಾ ಸರಿಛ್ರೇಷ್ಠಾ ಯಮುನಾ ಲೋಕಭಾವಿನೀ |

ಅವಳಿಗಳಲ್ಲಿ ಒಬ್ಬಳಾದ ಯಶಸ್ವಿನೀ ಕನ್ಯೆ ಯಮಿಯು ಲೋಕಭಾವಿನೀ ಸರಿತ ಶ್ರೇಷ್ಠೆ ಯಮುನೆಯಾದಳು.

19009064c ಮನುರಿತ್ಯುಚ್ಯತೇ ಲೋಕೇ ಸಾವರ್ಣ ಇತಿ ಚೋಚ್ಯತೇ ||

19009065a ದ್ವಿತೀಯೋ ಯಃ ಸುತಸ್ತಸ್ಯ ಮನೋರ್ಭ್ರಾತಾ ಶನೈಶ್ಚರಃ |

19009065c ಗ್ರಹತ್ವಂ ಸ ಚ ಲೇಭೇ ವೈ ಸರ್ವಲೋಕಾಭಿಪೂಜಿತಮ್ ||

ಮನುವನ್ನು ಲೋಕದಲ್ಲಿ ಮನುವೆಂದೂ ಮತ್ತು ಸಾವರ್ಣನೆಂದೂ ಕರೆಯುತ್ತಾರೆ. ಸೂರ್ಯನ ಎರಡನೆಯ ಮಗ, ಮನುವಿನ ಸಹೋದರ, ಶನೈಶ್ಚರನು ಗ್ರಹತ್ವವನ್ನು ಪಡೆದು ಸರ್ವಲೋಕಗಳಲ್ಲಿ ಪೂಜಿತನಾಗಿದ್ದಾನೆ.

19009066a ಯ ಇದಂ ಜನ್ಮ ದೇವಾನಾಂ ಶೃಣುಯಾದ್ವಾಪಿ ಧಾರಯೇತ್|

19009066c ಆಪದ್ಭ್ಯಃ ಸ ವಿಮುಚ್ಯೇತ ಪ್ರಾಪ್ನುಯಾಚ್ಚ ಮಹದ್ಯಶಃ ||

ದೇವತೆಗಳ ಜನ್ಮಗಳ ಕುರಿತಾದ ಇದನ್ನು ಯಾರು ಕೇಳುತ್ತಾರೋ ಅಥವಾ ಮನಸ್ಸಿನಲ್ಲಿ ಧಾರಣೆಮಾಡಿಕೊಳ್ಳುತ್ತಾರೋ ಅವರು ಆಪತ್ತುಗಳಿಂದ ಮುಕ್ತರಾಗುತ್ತಾರೆ ಮತ್ತು ಮಹಾ ಯಶಸ್ಸನ್ನು ಪಡೆಯುತ್ತಾರೆ.”

ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ವೈವಸ್ವತೋತ್ಪತ್ತೌ ನವಮೋಽಧ್ಯಾಯಃ|

ಇದು ಶ್ರೀಮಹಾಭಾರತದ ಖಿಲಭಾಗ ಹರಿವಂಶದಲ್ಲಿ ಹರಿವಂಶಪರ್ವದಲ್ಲಿ ವೈವಸ್ವತೋತ್ಪತ್ತಿ ಎನ್ನುವ ಒಂಭತ್ತನೆಯ ಅಧ್ಯಾಯವು.Related image

[1] ಸಂಜ್ಞೆಯ ನೆರಳು ಪೃಥ್ವಿಯ ಮೇಲೆ ಬೀಳುತ್ತಿದ್ದ ಕಾರಣ ಅದರಿಂದ ಹುಟ್ಟಿದ ಛಾಯೆಯು ಪೃಥಿವೀ ಎಂದಾದಳು.

Comments are closed.