[spacer height="20px"]

ಹದಿನಾಲ್ಕನೆಯ ದಿನದ ಯುದ್ಧ – ೬: ಜಯದ್ರಥವಧೆ

ಸಾತ್ಯಕಿಯಿಂದ ಅಲಂಬುಸನ ವಧೆ

ಹಾಗೆ ವೈಕರ್ತನನಿಂದ ಪೀಡಿತನಾಗಿ ನರವೀರರ ಮಧ್ಯೆ ಹೋಗುತ್ತಿರುವ ಪುರುಷಪ್ರವೀರ ಭೀಮನನ್ನು ನೋಡಿ ಶಿನಿಪ್ರವೀರನು ಅವನನ್ನು ರಥದಲ್ಲಿ ಹಿಂಬಾಲಿಸಿದನು. ಬೇಸಗೆಯ ಅಂತ್ಯದಲ್ಲಿ ವಜ್ರಧರನು ಹೇಗೆ ಗುಡುಗುವನೋ, ಮಳೆಗಾಲದ ಅಂತ್ಯದಲ್ಲಿ ಸೂರ್ಯನು ಹೇಗೆ ಸುಡುವನೋ ಹಾಗೆ ದೃಢವಾದ ಧನುಸ್ಸಿನಿಂದ ಶತ್ರುಗಳನ್ನು ವಧಿಸುತ್ತಾ ಅವನು ದುರ್ಯೋಧನನ ಸೇನೆಯನ್ನು ನಡುಗಿಸಿದನು. ಬೆಳ್ಳಿಯ ಪ್ರಕಾಶದ ಕುದುರೆಗಳೊಂದಿಗೆ ಗರ್ಜಿಸುತ್ತಾ ಬರುತ್ತಿದ್ದ, ರಣದಲ್ಲಿ ಸಂಚರಿಸುತ್ತಿದ್ದ ನರವೀರ ಮಾಧವಾಗ್ರನನ್ನು ಕೌರವರ ಕಡೆಯ ಎಲ್ಲ ರಥರಿಗೂ ತಡೆಯಲು ಸಾದ್ಯವಾಗಲಿಲ್ಲ. ಆಗ ರಾಜವರ, ಧನುಸ್ಸನ್ನು ಹಿಡಿದ, ಕಾಂಚನದ ಕವಚವನ್ನು ಧರಿಸಿದ್ದ ಅಲಂಬುಸನು ಸಾತ್ಯಕಿಯನ್ನು ಎದುರಿಸಿ ತಡೆದನು. ಅವರಿಬ್ಬರ ನಡುವೆ ಹಿಂದೆಂದೂ ನಡೆಯದ ಪ್ರಹಾರಗಳು ನಡೆದವು. ಈ ಇಬ್ಬರು ಆಹವಶೋಭರನ್ನು ಕೌರವರು ಮತ್ತು ಪಾಂಡವರು ನೋಡುತ್ತಿದ್ದರು. ರಾಜವರ ಅಲಂಬುಸನು ಜೋರಾಗಿ ನಕ್ಕು ಅವನನ್ನು ಹತ್ತು ಪೃಷತ್ಕರಗಳಿಂದ ಹೊಡೆದನು. ಆದರೆ ಶಿನಿಪುಂಗವನು ಆ ಪೃಷತ್ಕಗಳನ್ನು ಬಂದು ತಲುಪುವುದರೊಳಗೇಬಾಣಗಳಿಂದ ತುಂಡರಿಸಿದನು. ಪುನಃ ಅವನು ಅಗ್ನಿಯಂತಿರುವ ಪುಂಖಗಳಿರುವ ಮೂರು ನಿಶಿತ ಬಾಣಗಳನ್ನು ಆಕರ್ಣಪೂರ್ಣವಾಗಿ ಎಳೆದು ಹೊಡೆಯಲು ಅವು ಸಾತ್ಯಕಿಯ ಕವಚವನ್ನು ಸೀಳಿ ಶರೀರವನ್ನು ಪ್ರವೇಶಿಸಿದವು. ಅನಿಲ-ಅಗ್ನಿಯರ ಪ್ರಭಾವವುಳ್ಳ ಆ ಬಾಣಗಳಿಂದ ಅವನ ದೇಹವನ್ನು ಸೀಳಿ, ಅಲಂಬುಸನು ಉರಿಯುತ್ತಿರುವ ಬಾಣಗಳಿಂದ ಬೆಳ್ಳಿಯ ಪ್ರಕಾಶವುಳ್ಳ ಅವನ ನಾಲ್ಕು ಕುದುರೆಗಳನ್ನೂ ಹೊಡೆದು ಜೋರಾಗಿ ನಕ್ಕನು. ಹಾಗೆ ಅವನಿಂದ ಹೊಡೆಯಲ್ಪಟ್ಟ ಚಕ್ರಧರ ಕೃಷ್ಣನ ಪ್ರಭಾವವುಳ್ಳ ತರಸ್ವೀ ಶಿನಿಯು ಉತ್ತಮ ವೇಗವುಳ್ಳ ಬಾಣಗಳಿಂದ ಅಲಂಬುಸನ ನಾಲ್ಕು ಕುದುರೆಗಳನ್ನು ಸಂಹರಿಸಿದನು. ಆಗ ಅವನ ಸೂತನ ಶಿರವನ್ನು ಕತ್ತರಿಸಿ, ಕಾಲಾಗ್ನಿಯಂತೆ ಬೆಳಗುತ್ತಿದ್ದ ಭಲ್ಲದಿಂದ ಕುಂಡಲಸಹಿತವಾಗಿದ್ದ, ಪೂರ್ಣಚಂದ್ರನಂತೆ ಪ್ರಕಾಶಿಸುತ್ತಿ, ಎಲ್ಲೆಡೆ ಹೊಳೆಯುತ್ತಿದ್ದ ಅವನ ಮುಖವನ್ನು ದೇಹದಿಂದ ಕತ್ತರಿಸಿದನು.

ರಣದಲ್ಲಿ ಆ ರಾಜಪುತ್ರಪೌತ್ರನನ್ನು ಸಂಹರಿಸಿ ಮಧುಗಳ ಋಷಭ ಪ್ರಮಾಥಿ ವೀರನು ಕೌರವ ಸೇನೆಗಳನ್ನು ಹಿಂದೆಸರಿಸಿ ಅರ್ಜುನನ ಬಳಿ ಹೋದನು. ಮುಂದೆಹೋಗುತ್ತಿರುವ ಆ ವೃಷ್ಣಿವರನು ಶತ್ರುಗಳ ಮಧ್ಯೆ ಹೋಗುವಾಗ ಪುನಃ ಪುನಃ ಭಿರುಗಾಳಿಯು ಮೋಡಗಳ ರಾಶಿಯನ್ನು ಚದುರಿಬಿಡುವಂತೆ ಬಾಣಗಳಿಂದ ಕುರುಗಳ ಸೇನೆಯನ್ನು ಸಂಹರಿಸುತ್ತಿದ್ದನು. ಆ ನರಸಿಂಹನು ಎಲ್ಲೆಲ್ಲಿ ಹೋಗಲು ಬಯಸುತ್ತಿದ್ದನೋ ಅಲ್ಲಲ್ಲಿಗೆ ಸಿಂಧುದೇಶದ, ಸಾಧು, ತಾಳ್ಮೆಯುಳ್ಳ, ಗೋವಿನ ಹಾಲು-ಕುಂದ-ಚಂದ್ರ-ಹಿಮಗಳ ಪ್ರಕಾಶವುಳ್ಳ, ಸುವರ್ಣಜಾಲೆಗಳಿಂದ ಅಲಂಕೃತಗೊಂಡ ಅವನ ಕುದುರೆಗಳು ಕೊಂಡೊಯ್ಯುತ್ತಿದ್ದವು. ಆಗ ದುಃಶಾಸನನ್ನು ಯೋಧಮಖ್ಯನನ್ನಾಗಿ ಮಾಡಿಕೊಂಡು ಧೃತರಾಷ್ಟ್ರನ ಮಕ್ಕಳು ಮತ್ತು ಅನ್ಯ ಯೋಧರು ತ್ವರೆಮಾಡಿ ಅವನನ್ನು ಮುತ್ತಿದರು. ಅವರು ಶೈನೇಯನನ್ನು ಎಲ್ಲ ಕಡೆಗಳಿಂದ ಸುತ್ತುವರೆದು ರಣದಲ್ಲಿ ಸೇನೆಗಳ ಸಹಾಯದಿಂದ ಆಕ್ರಮಣಿಸಿದರು. ಸಾತ್ವತರ ಪ್ರವರ ಆ ವೀರನೂ ಕೂಡ ಬಾಣಜಾಲಗಳಿಂದ ಅವರನ್ನು ತಡೆದನು. ಆ ಅಮಿತ್ರಘಾತಿ ಶೈನಿಯು ತಕ್ಷಣವೇ ಅಗ್ನಿಕಲ್ಪ ಪತ್ರಿಯಿಂದ ಅವರನ್ನು ತಡೆದು ಬಿಲ್ಲನ್ನು ಎತ್ತಿ ದುಃಶಾಸನನ ಕುದುರೆಗಳನ್ನು ಸಂಹರಿಸಿದನು.

ಅರ್ಜುನನು ಸಾತ್ಯಕಿಯನ್ನು ನೋಡಿದುದು

ದುಃಶಾಸನನ ರಥದ ಮೇಲೆ ಆಕ್ರಮಣಿಸಲು ಸಿದ್ಧನಾಗಿದ್ದ, ಸೇನಾಸಮುದ್ರವನ್ನು ಧೈರ್ಯದಿಂದ ಪ್ರವೇಸಿದ, ಅವಸರದಲ್ಲಿದ್ದವರಲ್ಲಿಯೇ ಹೆಚ್ಚು ತ್ವರೆಮಾಡುತ್ತಿದ್ದ, ಧನಂಜಯನ ಹಿತೈಷಿಯಾದ ಆ ಮಹಾಬಾಹುವನ್ನು ಸುವರ್ಣವಿಕೃತ ಧ್ವಜರಾದ ಮಹೇಷ್ವಾಸ ತ್ರಿಗರ್ತರು ಸುತ್ತುವರೆದರು. ಕ್ರುದ್ಧರಾದ ಆ ಪರಮಧನ್ವಿಗಳು ರಥಗುಂಪುಗಳಿಂದ ಅವನನ್ನು ಎಲ್ಲಕಡೆಗಳಿಂದ ಸುತ್ತುವರೆದು ಶರವ್ರಾತಗಳಿಂದ ಮುಚ್ಚಿ ತಡೆದರು. ಮಹಾರಣದಲ್ಲಿ ಪ್ರಯತ್ನಿಸುತ್ತಿದ್ದ ಆ ಐನೂರು ಶತ್ರು ರಾಜಪುತ್ರರನ್ನು ಸತ್ಯವಿಕ್ರಮಿ ಸಾತ್ಯಕಿಯೊಬ್ಬನೇ ಸೋಲಿಸಿದನು. ಚಪ್ಪಾಳೆಯ ಘೋಷಗಳಿಂದ ತುಂಬಿಹೋಗಿದ್ದ, ಖಡ್ಗ-ಶಕ್ತಿ-ಗದೆಗಳಿಂದ ತುಂಬಿಹೋಗಿದ್ದ, ನೌಕೆಯೇ ಇಲ್ಲದ ಸಮುದ್ರದಂತಿದ್ದ ಭಾರತೀ ಸೇನೆಯ ಮಧ್ಯದಲ್ಲಿ ಪ್ರವೇಶಿಸಿದ ಶೈನೇಯನು ರಣದಲ್ಲಿ ನಡೆಸಿದ ಅದ್ಭುತವು ಕಂಡುಬಂದಿತು. ಅವನ ಲಾಘವವು ಎಷ್ಟಿತ್ತೆಂದರೆ ಪಶ್ಚಿಮದಲ್ಲಿ ಅವನನ್ನು ನೋಡಿದರೆ ಪೂರ್ವದಲ್ಲಿಯೂ ಅವನು ಕಾಣುತ್ತಿದ್ದನು. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮಗಳಲ್ಲಿ ಮತ್ತು ಇತರ ದಿಕ್ಕುಗಳಲ್ಲಿ ನೂರು ರಥಗಳೂ ಒಂದರಲ್ಲಿಯೇ ಇವೆಯೋ ಎನ್ನುವಂತೆ ಆ ಶೂರನು ಸಂಚರಿಸಿ ಕಾಣಿಸಿಕೊಳ್ಳುತ್ತಿದ್ದನು. ಸಿಂಹದಂತೆ ನಡೆಯುತ್ತಿದ್ದ ಆ ವಿಕ್ರಾಂತನ ಚರಿತವನ್ನು ನೋಡಿ ಸಂತಪ್ತರಾದ ತ್ರಿಗರ್ತರು ತಮ್ಮವರ ಕಡೆ ಪಲಾಯನಮಾಡಿದರು. ಆಗ ಶೂರಸೇನರ ಇತರ ಶೂರರು ರಣದಲ್ಲಿ ಮದಿಸಿದ ಆನೆಯನ್ನು ಅಂಕುಶಗಳಿಂದ ಹೇಗೋ ಹಾಗೆ ಅವನನ್ನು ಶರವ್ರಾತಗಳಿಂದ ತಡೆದರು. ಮುಹೂರ್ತದಲ್ಲಿಯೇ ಅವರನ್ನು ಹಿಂದೆಸರಿಸಿ ಅಚಿಂತ್ಯಬಲವಿಕ್ರಮಿ ಸಾತ್ಯಕಿಯು ಕಲಿಂಗರೊಂದಿಗೆ ಯುದ್ಧಮಾಡಿದನು.

ಸೋಲಿಸಲು ಕಷ್ಟವಾದ ಕಲಿಂಗರ ಆ ಸೇನೆಯನ್ನೂ ಅತಿಕ್ರಮಿಸಿ ಆ ಮಹಾಬಾಹುವು ಪಾರ್ಥ ಧನಂಜಯನ ಬಳಿ ಬಂದನು. ನೀರಿನಲ್ಲಿ ಈಜಿ ಬಳಲಿದ ಈಜುಗಾರನು ದಡವನ್ನು ಸೇರಿದವನಂತೆ ಆ ಪುರುಷವ್ಯಾಘ್ರನನ್ನು ಕಂಡು ಯುಯುಧಾನನು ಆಶ್ವಾಸಿತನಾದನು. ಬರುತ್ತಿರುವ ಅವನನ್ನು ನೋಡಿ ಕೇಶವನು ಅರ್ಜುನನಿಗೆ ಹೇಳಿದನು: “ಪಾರ್ಥ! ಇಗೋ ನಿನ್ನನ್ನೇ ಅನುಸರಿಸಿ ಶೈನೇಯನು ಇಲ್ಲಿಗೆ ಬಂದಿದ್ದಾನೆ. ಇವನು ನಿನ್ನ ಶಿಷ್ಯ. ಸಖನೂ ಕೂಡ. ಈ ಸತ್ಯಪರಾಕ್ರಮೀ ಪುರುಷರ್ಷಭನು ಸರ್ವಯೋಧರನ್ನೂ ತೃಣೀಕರಿಸಿ ಜಯಿಸಿದ್ದಾನೆ. ನಿನ್ನ ಪ್ರಾಣಗಳಿಗಿಂತಲೂ ಹೆಚ್ಚು ಪ್ರಿಯ ಸಾತ್ಯಕಿಯು ಕೌರವಯೋಧರಿಗೆ ಘೋರವಾದ ಉಪದ್ರವವನ್ನು ನೀಡಿ ಇಲ್ಲಿಗೆ ಬಂದಿದ್ದಾನೆ. ಇಗೋ! ಸಾತ್ಯಕಿಯು ದ್ರೋಣ ಮತ್ತು ಭೋಜ ಕೃತವರ್ಮನನ್ನೂ ವಿಶಿಖಗಳಿಂದ ಅಲ್ಲಗಾಣಿಸಿ ಫಲ್ಗುನನ ಬಳಿಗೆಂದು ಬಂದಿದ್ದಾನೆ. ಧರ್ಮರಾಜನಿಗೆ ಪ್ರಿಯವಾದುದನ್ನು ಮಾಡಬಯಸಿ, ಶ್ರೇಷ್ಠರಲ್ಲಿ ಶ್ರೇಷ್ಠ ಯೋಧರನ್ನು ಸಂಹರಿಸಿ ಕೃತಾಸ್ತ್ರ ಸಾತ್ಯಕಿಯು ಫಲ್ಗುನನ ಬಳಿಗೆಂದು ಬಂದಿದ್ದಾನೆ. ಸೇನೆಯ ಮಧ್ಯದಲ್ಲಿ ಸುದುಷ್ಕರ ಕರ್ಮಗಳನ್ನು ಮಾಡಿ ನಿನ್ನ ದರ್ಶನವನ್ನು ಬಯಸಿ ಮಹಾಬಲ ಸಾತ್ಯಕಿಯು ಬಂದಿದ್ದಾನೆ. ಏಕರಥನಾಗಿ ಆಚಾರ್ಯನೇ ಮೊದಲಾದ ಮಹಾರಥರೊಡನೆ ಯುದ್ಧಮಾಡಿ ಸಾತ್ಯಕಿಯು ಇಲ್ಲಿಗೆ ಬಂದಿದ್ದಾನೆ. ಧರ್ಮಪುತ್ರನಿಂದ ಕಳುಹಿಸಲ್ಪಟ್ಟ ಸಾತ್ಯಕಿಯು ಸ್ವಬಾಹುಬಲವನ್ನೇ ಆಶ್ರಯಿಸಿ ಸೇನೆಯನ್ನು ಭೇದಿಸಿ ನಿನ್ನ ಬಳಿ ಬಂದಿದ್ದಾನೆ. ಇಲ್ಲಿಗೆ ಬಂದ ಸತ್ಯವಿಕ್ರಮಿ ಸಾತ್ಯಕಿಯ ಸಮನಾದ ಯೋಧನು ಕೌರವರಲ್ಲಿ ಯಾರೂ ಇಲ್ಲ. ಗೋವುಗಳ ಮಧ್ಯದಿಂದ ಬರುವ ಸಿಂಹದಂತೆ ಸಾತ್ಯಕಿಯು ಬಹಳ ಸೇನೆಗಳನ್ನು ಸಂಹರಿಸಿ ಇಲ್ಲಿಗೆ ಬಂದಿದ್ದಾನೆ. ಕಮಲಗಳಂತಿರುವ ಸಹಸ್ರಾರು ರಾಜರ ಶಿರಗಳನ್ನು ಕತ್ತರಿಸಿ ಭೂಮಿಯ ಮೇಲೆ ಚೆಲ್ಲಿ ಬೇಗನೇ ಸಾತ್ಯಕಿಯು ಇಲ್ಲಿಗೆ ಬಂದಿದ್ದಾನೆ. ಈ ಸಾತ್ಯಕಿಯು ರಣದಲ್ಲಿ ಸಹೋದರರೊಂದಿಗೆ ದುರ್ಯೋಧನನನ್ನು ಸೋಲಿಸಿ, ಜಲಸಂಧನನ್ನೂ ಸಂಹರಿಸಿ ಬೇಗನೆ ಇಲ್ಲಿಗೆ ಬಂದಿದ್ದಾನೆ. ರಕ್ತ-ಮಾಂಸಗಳ ನದಿಯು ರಕ್ತದ ಪ್ರವಾಹದಿಂದ ಹರಿಯುವಂತೆ ಮಾಡಿ, ಕೌರವರನ್ನು ಹುಲ್ಲುಗಳಂತೆ ಮಾಡಿ ಸಾತ್ಯಕಿಯು ಬರುತ್ತಿದ್ದಾನೆ.”

ಆಗ ಅಸಂತೋಷದಿಂದ ಕೌಂತೇಯನು ಕೇಶವನಿಗೆ ಹೇಳಿದನು: “ಮಹಾಬಾಹೋ! ಸಾತ್ಯಕಿಯು ನನ್ನ ಬಳಿ ಬಂದಿರುವುದು ನನಗೆ ಒಳ್ಳೆಯದೆನಿಸುತ್ತಿಲ್ಲ. ಸಾತ್ವತನಿಲ್ಲದೇ ಧರ್ಮರಾಜನು ಜೀವಂತವಾಗಿದ್ದಾನೋ ಅಥವಾ ಇಲ್ಲವೋ ಎಂಬ ವೃತ್ತಾಂತವನ್ನು ನಾನು ಅರಿತಿಲ್ಲ. ಇವನೇ ಪಾರ್ಥಿವನನ್ನು ರಕ್ಷಿಸಬೇಕಾಗಿತ್ತು. ಹಾಗಿರುವಾಗ ಕೃಷ್ಣ! ಅವನನ್ನು ಬಿಟ್ಟು ಇವನು ಏಕೆ ನನ್ನನ್ನು ಅನುಸರಿಸಿ ಬಂದಿದ್ದಾನೆ? ರಾಜನನ್ನು ದ್ರೋಣನಿಗಾಗಿ ಬಿಟ್ಟು ಬಿಟ್ಟಿದ್ದಾನೆ. ಸೈಂಧವನು ಪತನವಿನ್ನೂ ಆಗಿಲ್ಲ. ರಣದಲ್ಲಿ ಭೂರಿಶ್ರವನು ಶೈನೆಯನನ್ನು ಆಕ್ರಮಣಿಸಲು ಮುಂದೆ ಬರುತ್ತಿದ್ದಾನೆ. ಸೈಂಧವನ ಕುರಿತಾದ ಈ ಗುರುತರ ಭಾರವನ್ನು ಹೊತ್ತಿರುವ ನಾನು ರಾಜನ ಕುರಿತೂ ಚಿಂತಿಸಬೇಕು ಮತ್ತು ಸಾತ್ಯಕಿಯನ್ನೂ ರಕ್ಷಿಸಬೇಕಾಗಿದೆ. ದಿವಾಕರನು ಇಳಿಯುತ್ತಿದ್ದಾನೆ. ಜಯದ್ರಥನನ್ನೂ ಕೊಲ್ಲಬೇಕಾಗಿದೆ. ಮಹಾಬಾಹು ಸಾತ್ಯಕಿಯಾದರೋ ಬಳಲಿದ್ದಾನೆ. ಆಯುಧಗಳು ಕಡಿಮೆಯಾಗಿವೆ. ಅವನ ಕುದುರೆಗಳು ಸಾರಥಿಯೂ ಬಳಲಿದ್ದಾರೆ. ಸಹಾಯವುಳ್ಳ ಭೂರಿಶ್ರವನು ಬಳಲಿಲ್ಲ. ಈ ಸಮಾಗಮದಲ್ಲಿ ಅವನು ಸುರಕ್ಷಿತನಾಗಿರಬಲ್ಲನೇ? ಸಾಗರವನ್ನು ಈಜಿಬಂದಿರುವ ಸತ್ಯವಿಕ್ರಮಿ ಸಾತ್ಯಕಿ ಶಿನಿಪುಂಗವನು ಈಗ ಗೋವಿನ ಪಾದದ ಗುಳಿಯನ್ನು ತಲುಪಿ ಎಡವಿ ಬೀಳಬಲ್ಲನೇ? ಕೌರವ ಮುಖ್ಯ ಕೃತಾಸ್ತ್ರ ಮಹಾತ್ಮ ಭೂರಿಶ್ರವನನ್ನು ಎದುರಿಸಿ ಸಾತ್ಯಕಿಯು ಕ್ಷೇಮದಿಂದಿರಬಲ್ಲನೇ? ಆಚಾರ್ಯನ ಭಯವನ್ನು ಕಡೆಗಣಿಸಿ ಸಾತ್ಯಕಿಯನ್ನು ಕಳುಹಿಸಿರುವುದು ಧರ್ಮರಾಜನ ಒಂದು ದೊಡ್ಡ ತಪ್ಪೆಂದು ಭಾವಿಸುತ್ತೇನೆ. ಪಕ್ಷಿ ಗಿಡುಗವು ಮಾಂಸವನ್ನು ಹೇಗೋ ಹಾಗೆ ದ್ರೋಣನು ಧರ್ಮರಾಜನನ್ನು ಹಿಡಿಯಲು ಸದಾ ಬಯಸುತ್ತಿರುತ್ತಾನೆ. ನೃಪನು ಕುಶಲನಾಗಿರುವನೋ ಎನೋ!”

ಅರ್ಜುನನು ಭೂರಿಶ್ರವನ ಬಾಹುಗಳನ್ನು ತುಂಡರಿಸಿದುದು

ಯುದ್ಧದುರ್ಮದ ಸಾತ್ವತನು ಮೇಲೆ ಬೀಳುತ್ತಿರುವುದನ್ನು ನೋಡಿದ ಭೂರಿಶ್ರವನು ಕ್ರೋಧದಿಂದ ಅವನನ್ನು ಒಮ್ಮೆಲೇ ಆಕ್ರಮಣಿಸಿದನು. ಆ ಮಹಾಬಾಹು ಕೌರವ್ಯನು ಶಿನಿಪುಂಗವನಿಗೆ ಹೇಳಿದನು: “ಇಂದು ನಿನ್ನನ್ನು ಪಡೆದೆ! ಒಳ್ಳೆಯದಾಯಿತು ಇಂದು ನೀನು ಕಣ್ಣಿಗೆ ಬಿದ್ದೆ! ಬಹಳ ಸಮಯದಿಂದ ಬಯಸುತ್ತಿದ್ದ ನನಗೆ ಇಂದು ದೊರಕಿದ್ದೀಯೆ! ಇಂದು ರಣವನ್ನು ಬಿಟ್ಟು ಹೋಗದೇ ಇದ್ದರೆ ನೀನು ನನ್ನಿಂದ ಜೀವಂತ ಹೋಗಲಾರೆ. ಶೂರನೆಂದು ನಿತ್ಯವೂ ಅಭಿಮಾನಿಯಾಗಿರುವ ನಿನ್ನನ್ನು ಇಂದು ಸಮರದಲ್ಲಿ ಕೊಂದು ಕುರುರಾಜ ಸುಯೋಧನನನ್ನು ಹರ್ಷಗೊಳಿಸುತ್ತೇನೆ. ಇಂದು ರಣದಲ್ಲಿ ನನ್ನ ಬಾಣಗಳಿಂದ ದಗ್ಧನಾಗಿ ಧರಣೀತಲದಲ್ಲಿ ಬಿದ್ದಿರುವ ನಿನ್ನನ್ನು ವೀರರಾದ ಕೇಶವ-ಅರ್ಜುನರು ಒಟ್ಟಿಗೇ ನೋಡಲಿದ್ದಾರೆ. ಇಂದು ನೀನು ನನ್ನಿಂದ ಹತನಾದೆಯೆಂದು ಕೇಳಿ ಸೇನೆಯನ್ನು ಪ್ರವೇಶಿಸಲು ಹೇಳಿದ ರಾಜಾ ಧರ್ಮಸುತನು ಸದ್ಯದಲ್ಲಿಯೇ ನಾಚಿಗೆಪಡುವವನಿದ್ದಾನೆ. ಇಂದು ನೀನು ರಕ್ತದಲ್ಲಿ ತೋಯ್ದು ಹತನಾಗಿ ಭೂಮಿಯಮೇಲೆ ಮಲಗಿರಲು ಪಾರ್ಥ ಧನಂಜಯನು ನನ್ನ ವಿಕ್ರಮವನ್ನು ತಿಳಿದುಕೊಳ್ಳುತ್ತಾನೆ. ಹಿಂದೆ ದೇವಾಸುರರ ಯುದ್ಧದಲ್ಲಿ ಶಕ್ರನು ಬಲಿಯೊಂದಿಗೆ ಯುದ್ಧಮಾಡಿದಂತೆ ನಿನ್ನೊಡನೆ ಯುದ್ಧಮಾಡಬೇಕೆಂಬ ಬಹುಕಾಲದ ನನ್ನ ಅಭಿಲಾಷೆಯು ಇಂದು ಪೂರೈಸಲಿದೆ. ಸಾತ್ವತ! ಇಂದು ನಿನಗೆ ಮಹಾಘೋರವಾದ ಯುದ್ಧವನ್ನು ನೀಡುತ್ತೇನೆ. ಆಗ ನಿನಗೆ ನನ್ನ ಬಲಪೌರುಷವೇನೆಂದು ತಿಳಿಯುತ್ತದೆ. ರಾಮಾನುಜ ಲಕ್ಷ್ಮಣನಿಂದ ರಾವಣಿಯು ಹೇಗೆ ಯಮಲೋಕಕ್ಕೆ ಕಳುಹಿಸಲ್ಪಟ್ಟನೋ ಹಾಗೆ ಇಂದು ನೀನೂ ಕೂಡ ರಣದಲ್ಲಿ ನನ್ನಿಂದ ಹತನಾಗಿ ಯಮಲೋಕಕ್ಕೆ ಹೋಗುವೆ. ಇಂದು ನೀನು ಹತನಾಗಲು ಕೃಷ್ಣ, ಪಾರ್ಥ ಮತ್ತು ಧರ್ಮರಾಜರು ನಿರುತ್ಸಾಹರಾಗಿ ರಣವನ್ನು ತೊರೆಯುವುದು ಖಂಡಿತ. ನಿಶಿತ ಸಾಯಕಗಳಿಂದ ಇಂದು ನಿನಗೆ ಪೂಜೆಗೈದು ನಿನ್ನಿಂದ ರಣದಲ್ಲಿ ಹತರಾದವರ ಸ್ತ್ರೀಯರಿಗೆ ಆನಂದವನ್ನುಂಟುಮಾಡುತ್ತೇನೆ. ಸಿಂಹದ ಆಹಾರವಾಗಿ ಬಂದ ಕ್ಷುದ್ರಮೃಗವು ಹೇಗೋ ಹಾಗೆ ನನ್ನ ದೃಷ್ಟಿಯ ಪರಿಧಿಯಲ್ಲಿ ಬಂದಿರುವ ನೀನು ಬಿಡುಗಡೆ ಹೊಂದಲಾರೆ.”

ಯುಯುಧಾನನಾದರೋ ಅವನಿಗೆ ನಗುತ್ತಾ ಉತ್ತರಿಸಿದನು: “ಕೌರವೇಯ! ಯುದ್ಧದಲ್ಲಿ ನನಗೆ ಭಯವೆಂಬುದೇ ಗೊತ್ತಿಲ್ಲ. ಸಂಗ್ರಾಮದಲ್ಲಿ ಯಾರು ನನ್ನನ್ನು ನಿರಾಯುಧನನ್ನಾಗಿ ಮಾಡುತ್ತಾರೋ ಅವರೇ ನನ್ನನ್ನು ಸಂಹರಿಸಬಲ್ಲರು. ಬಹಳ ವರ್ಷಗಳ ವರೆಗೆ ನನ್ನನ್ನು ಸಂಹರಿಸದಿದ್ದ ನೀನು ಇಂದು ಕೊಲ್ಲಲಾರೆ. ಸೊಕ್ಕಿನಿಂದ ಹೇಳಿದ ಬಹಳ ಮಾತುಗಳನ್ನು ಕರ್ಮದಲ್ಲಿ ಮಾಡಿತೋರಿಸು. ಶರದೃತುವಿನ ಮೋಡದ ಗುಡುಗಿನಂತೆ ನಿನ್ನ ಈ ಕೂಗಾಟವು ನಿಷ್ಫಲವಾದುದು. ವೀರ! ನಿನ್ನ ಈ ಗರ್ಜನೆಯನ್ನು ಕೇಳಿ ನನಗೆ ನಗು ಬರುತ್ತಿದೆ. ಬಹುಕಾಲದಿಂದ ನೀನು ಬಯಸುತ್ತಿರುವ ಈ ಯುದ್ಧವು ಇಂದು ನಡೆಯಲಿ. ನಿನ್ನೊಡನೆ ಯುದ್ಧಮಾಡಲು ಬಯಸಿದ ನನ್ನ ಮತಿಯು ತ್ವರೆಮಾಡುತ್ತಿದೆ. ನಿನ್ನನ್ನು ಕೊಲ್ಲದೇ ನಾನಿಂದು ಹಿಂದಿರುಗುವುದಿಲ್ಲ.”

ಹೀಗೆ ಅನ್ಯೋನ್ಯರನ್ನು ವಾಗ್ಬಾಣಗಳಿಂದ ಗಾಯಗೊಳಿಸುತ್ತಾ ಆ ನರಪುಂಗವರು ಪರಮ ಕ್ರುದ್ಧರಾಗಿ ಪರಸ್ಪರರ ಪ್ರಾಣಗಳನ್ನು ತೆಗೆಯಲು ಬಯಸಿ ರಣರಂಗದಲ್ಲಿ ಹೋರಾಡಿದರು. ಆ ಇಬ್ಬರು ನರವ್ಯಾಘ್ರ ಯೋಧರು ರಣದಲ್ಲಿ ಸ್ಪರ್ಧಿಸುತ್ತಾ ಹೆಣ್ಣಾನೆಗೆ ಮದೋತ್ಕಟ ಸಲಗಗಳೆರಡು ಸಂಕ್ರುದ್ಧರಾಗಿ ಹೋರಾಡುವಂತೆ ಪರಸ್ಪರರ ಮೇಲೆ ಎರಗಿದರು. ಭೂರಿಶ್ರವ ಮತ್ತು ಸಾತ್ಯಕಿಯರು ಭಯಂಕರ ಮೋಡಗಳಂತೆ ಪರಸ್ಪರರ ಮೇಲೆ ಶರವರ್ಷಗಳನ್ನು ಸುರಿಸಿದರು. ಸೌಮದತ್ತಿಯಾದರೋ ಶೈನೇಯನನ್ನು ಆಶುಗಗಳಿಂದ ಮುಚ್ಚಿ ಸಂಹರಿಸಲು ಬಯಸಿ ನಿಶಿತ ಶರಗಳಿಂದ ಹೊಡೆದನು. ಇನ್ನೂ ಬೇರೆ ಹತ್ತರಿಂದ ಸಾತ್ಯಕಿಯನ್ನು ಹೊಡೆದು, ಆ ಶಿನಿಪುಂಗವನನ್ನು ಕೊಲ್ಲಲು ನಿಶಿತ ಬಾಣಗಳನ್ನು ಬಿಟ್ಟನು. ಆ ತೀಕ್ಷ್ಣ ವಿಶಾಖಗಳು ಬರುವುದರೊಳಗೆ ಅಂತರಿಕ್ಷದಲ್ಲಿಯೇ ಸಾತ್ಯಕಿಯು ಅಸ್ತ್ರಗಳಿಂದ ತುಂಡರಿಸಿದನು. ಕುರು-ವೃಷ್ಣಿಯರ ಯಶಸ್ಕರರಾದ, ಉತ್ತಮ ಕುಲದಲ್ಲಿ ಜನಿಸಿದವರೂ ಆದ ಆ ವೀರರಿಬ್ಬರೂ ಮತ್ತೆ ಪರಸ್ಪರರ ಮೇಲೆ ಶರವರ್ಷಗಳನ್ನು ಸುರಿಸಿದರು. ಎರಡು ಹುಲಿಗಳು ತಮ್ಮ ಉಗುರುಗಳಿಂದ ಮತ್ತು ಮಹಾಗಜಗಳು ತಮ್ಮ ದಂತಗಳಿಂದ ಹೇಗೋ ಹಾಗೆ ಅವರಿಬ್ಬರೂ ರಥಶಕ್ತಿಗಳಿಂದ ಮತ್ತು ವಿಶಿಖಗಳಿಂದ ಅನ್ಯೋನ್ಯರನ್ನು ಗಾಯಗೊಳಿಸಿದರು. ದೇಹಗಳನ್ನು ಜರ್ಝರಿಸುತ್ತಾ, ಗಾಯಗಳಿಂದ ರಕ್ತವನ್ನು ಸುರಿಸುತ್ತಾ ಅವರಿಬ್ಬರೂ ಅನ್ಯೋನ್ಯರ ಪ್ರಾಣಗಳನ್ನು ಪಣವಾಗಿಟ್ಟು ಜೂಜಾಡುತ್ತಿದ್ದರು.

ಹೀಗೆ ಆ ಇಬ್ಬರು ಉತ್ತಮಕರ್ಮಿ ಕುರು-ವೃಷ್ಣಿ ಯಶಸ್ಕರರು ಪರಸ್ಪರರೊಂದಿಗೆ ಆನೆಗಳ ಹಿಂಡಿನ ಸಲಗಗಳಂತೆ ಹೋರಾಡಿದರು. ಪರಮ ಸ್ಥಾನವಾದ ಬ್ರಹ್ಮಲೋಕವನ್ನೇ ಬಯಸಿದ್ದ ಅವರು ಅನ್ಯೋನ್ಯರನ್ನು ಕೊಲ್ಲಲು ಬಯಸಿ ಬಹಳ ಕಾಲ ಯುದ್ಧಮಾಡುತ್ತಿದ್ದರು. ಸಾತ್ಯಕಿ ಸೌಮದತ್ತಿಯರು ಪರಸ್ಪರರನ್ನು ಶರವೃಷ್ಟಿಗಳಿಂದ ಸುರಿಸಿ ಮುಚ್ಚಿಸಿ ನೋಡುತ್ತಿರುವ ಧಾರ್ತರಾಷ್ಟ್ರರ ಸಂತೋಷವನ್ನು ಹೆಚ್ಚಿಸಿದರು. ಹೆಣ್ಣಾನೆಯ ಸಲುವಾಗಿ ಗುಂಪುಗಳ ಒಡೆತನವನ್ನು ಹೊಂದಿರುವ ಎರಡು ಸಲಗಗಳು ಸೆಣೆಸಾಡುವಂತೆ ಪರಸ್ಪರರೊಡನೆ ಸೆಣಸಾಡುತ್ತಿದ್ದ ಸೇನಾಪತಿಗಳನ್ನು ನೋಡುತ್ತಾ ನಿಂತುಬಿಟ್ಟರು. ಪರಸ್ಪರರ ಕುದುರೆಗಳನ್ನು ಸಂಹರಿಸಿ ಧನುಸ್ಸನ್ನು ಕತ್ತರಿಸಿ ಅವರು ವಿರಥರನ್ನಾಗಿಸಿ ಮಹಾರಣದಲ್ಲಿ ಒಟ್ಟಿಗೆ ಹೋರಾಡಿದನು. ಎತ್ತಿನ ಚರ್ಮದಿಂದ ಮಾಡಿದ ಚಿತ್ರಿತವಾದ ವಿಶಾಲವಾದ ಶುಭವಾದ ಗುರಾಣಿಯನ್ನು ಇಬ್ಬರೂ ಹಿಡಿದು ಕತ್ತಿಯನ್ನು ಒರೆಯಿಂದ ತೆಗೆದು ಸಮರದಲ್ಲಿ ಸಂಚರಿಸತೊಡಗಿದರು. ಖಡ್ಗಗಳನ್ನೂ, ಬಣ್ಣದ ಗುರಾಣಿಗಳನ್ನು ಹಿಡಿದು ಬಂಗಾರದ ಅಂಗದಗಳಿಂದ ಭೂಷಿತರಾದ ರಣೋತ್ಕಟರಾದ ಆ ಅರಿಮರ್ದನರಿಬ್ಬರೂ ವಿವಿಧ ಮಾರ್ಗಗಳಲ್ಲಿ, ಮಂಡಲಗಳಲ್ಲಿ ಸಂಚರಿಸುತ್ತಾ ಅನ್ಯೋನ್ಯರನ್ನು ಪ್ರಹರಿಸಿದರು. ಪರಸ್ಪರರೊಡನೆ ಸೆಣೆಸಾಡಿ, ಒಂದು ಕ್ಷಣ ವಿಶ್ರಾಂತಿ ಪಡೆದು ಸರ್ವ ಸೇನೆಗಳು ನೋಡುತ್ತಿದ್ದಂತೆ ಆ ವೀರರು ಪುನಃ ಹೋರಾಡ ತೊಡಗಿದರು. ಆ ಪುರುಷವ್ಯಾಘ್ರರು ಖಡ್ಗಗಳಿಂದ ಗುರಾಣಿಗಳನ್ನು ಕತ್ತರಿಸಿ ವಿಶಾಲ ಖಡ್ಗಗಳನ್ನು ಎಸೆದು ಆ ಪುರುಷವ್ಯಾಘ್ರರು ಬಾಹು ಯುದ್ಧದಲ್ಲಿ ತೊಡಗಿದರು.

ವಿಶಾಲ ಎದೆಯ, ನೀಳವಾದ ಭುಜಗಳ, ಬಾಹುಯುದ್ಧಕುಶಲರಾದ ಅವರಿಬ್ಬರೂ ಕಬ್ಬಿಣದ ಪರಿಘಗಳಂತಿರುವ ಬಾಹುಗಳಿಂದ ಪರಸ್ಪರರನ್ನು ಪ್ರಹರಿಸಿದರು. ಶಿಕ್ಷಾಬಲದಿಂದ ಕೂಡಿದ ಅವರ ಭುಜಾಘಾತ, ನಿಗ್ರಹ-ಪ್ರಗ್ರಹಗಳು ಸರ್ವಯೋಧರಿಗೂ ಹರ್ಷವನ್ನುಂಟುಮಾಡುತ್ತಿದ್ದವು. ಆ ನರಶ್ರೇಷ್ಠರು ಸಮರದಲ್ಲಿ ಯುದ್ಧಮಾಡುತ್ತಿರುವಾಗ ವರ್ಜಾಯುಧಕ್ಕೂ ಪರ್ವತಕ್ಕೂ ತಾಗುವ ಹಾಗೆ ಮಹಾ ಭಯಂಕರ ಶಬ್ಧವುಂಟಾಯಿತು. ಆನೆಗಳು ದಂತಗಳ ತುದಿಯಿಂದ, ಮಹಾ ಹೋರಿಗಳು ಕೋಡಿನ ತುದಿಯಿಂದ ಹೇಗೋ ಹಾಗೆ ಆ ಕುರು-ಸಾತ್ವತ ಪುಂಗವ ಮಹಾತ್ಮರು ಸೆಣಸಾಡಿದರು. ಸಾತ್ವತನು ಆಯುಧಗಳನ್ನು ಕಳೆದುಕೊಂಡು ಯುದ್ಧಮಾಡುತ್ತಿರಲು ವಾಸುದೇವನು ಅರ್ಜುನನಿಗೆ ಹೇಳಿದನು: “ಸರ್ವಧನುರ್ಧರರಲ್ಲಿ ಶ್ರೇಷ್ಠನಾದವನು ರಣದಲ್ಲಿ ವಿರಥನಾಗಿ ಯುದ್ಧಮಾಡುತ್ತಿರುವುದನ್ನು ನೋಡು! ನಿನ್ನ ಹಿಂದೆಯೇ ಭಾರತೀ ಸೇನೆಯನ್ನು ಪ್ರವೇಶಿಸಿ ಇವನು ಮಹಾವೀರ್ಯದಿಂದ ಎಲ್ಲ ಭಾರತರೊಂದಿಗೆ ಯುದ್ಧಮಾಡುತ್ತಿದ್ದಾನೆ. ಆಯಾಸಗೊಂಡಿರುವ ಯೋಧಶ್ರೇಷ್ಠನನ್ನು ಯುದ್ಧಾಕಾಂಕ್ಷಿಯಾದ ಭೂರಿದಕ್ಷಿಣನು ತಡೆದಿರುವನು. ಅರ್ಜುನ! ಇದು ಸಮಾನರ ಯುದ್ಧವಲ್ಲ!”

ಆಗ ಭೂರಿಶ್ರವನು ಕ್ರುದ್ಧನಾಗಿ ಯುದ್ಧದುರ್ಮದ ಸಾತ್ಯಕಿಯನ್ನು ಮದಿಸಿದ ಆನೆಯು ಇನ್ನೊಂದು ಮದಿಸಿದ ಆನೆಯನ್ನು ಹೇಗೋ ಹಾಗೆ ಪ್ರಯತ್ನಪೂರ್ವಕವಾಗಿ ಪ್ರಹರಿಸಿದನು. ಕ್ರುದ್ಧರಾದ ಆ ಯೋಧಮುಖ್ಯರ ಯುದ್ಧವನ್ನು ಸಮರದಲ್ಲಿ ರಥಸ್ಥರಾಗಿ ಕೇಶವಾರ್ಜುನರು ನೋಡುತ್ತಿದ್ದರು. ಆಗ ಮಹಾಬಾಹು ಕೃಷ್ಣನು ಅರ್ಜುನನಿಗೆ ಪುನಃ ಹೇಳಿದನು: “ವೃಷ್ಣಿ-ಅಂಧಕರ ವ್ಯಾಘ್ರನು ಸೌಮದತ್ತಿಯ ವಶನಾಗಿರುವುದನ್ನು ನೋಡು! ದುಷ್ಕರವಾದ ಕರ್ಮಗಳನ್ನು ಮಾಡಿ ಬಳಲಿ ಭೂಮಿಗೆ ಕುಸಿದಿರುವ ನಿನ್ನ ಶೂರ ಶಿಷ್ಯ ಸಾತ್ಯಕಿಯನ್ನು ಪಾಲಿಸು ಅರ್ಜುನ! ನಿನಗಾಗಿ ಹೋರಾಡುತ್ತಿರುವ ಇವನು ಯಜ್ಞಶೀಲನ ವಶನಾಗದಂತೆ ಪ್ರಯತ್ನಿಸು!”

ಆಗ ಸಂತೋಷದಿಂದ ಧನಂಜಯನು ವಾಸುದೇವನಿಗೆ ಹೇಳಿದನು: “ಸಿಂಹರಾಜನು ವನದಲ್ಲಿ ಗಜರಾಜನೊಂದಿಗೆ ಸೆಣಸಾಡುವಂತೆ ವೃಷ್ಣಿಪ್ರವೀರನೊಡನೆ ಆಟವಾಡುತ್ತಿರುವ ಕುರುಪುಂಗವನನ್ನು ನೋಡು!”

ಆ ಮಹಾಬಾಹು ಭೂರಿಶ್ರವನು ಸಾತ್ಯಕಿಯನ್ನು ಕುಕ್ಕಿ ನೆಲಕ್ಕೆ ಕೆಡವಲು ಸೇನೆಗಳಲ್ಲಿ ಮಹಾ ಹಾಹಾಕಾರವುಂಟಾಯಿತು. ಕುರುಶ್ರೇಷ್ಠ ಭೂರಿದಕ್ಷಿಣನು ಸಿಂಹವೊಂದು ಆನೆಯನ್ನು ಹೇಗೋ ಹಾಗೆ ಯುದ್ಧದಲ್ಲಿ ಸಾತ್ವತಪ್ರವರನನ್ನು ಗಿರಗಿರನೆ ತಿರುಗಿಸಿದನು. ಆಗ ರಣದಲ್ಲಿ ಭೂರಿಶ್ರವನು ಒರೆಯಿಂದ ಖಡ್ಗವನ್ನು ಎಳೆದು ತೆಗೆದು, ಅವನ ಮುಡಿಯನ್ನು ಹಿಡಿದು ಕಾಲಿನಿಂದ ಎದೆಗೆ ಒದೆದನು. ಹಾಗೆ ಎಳೆದಾಡಲ್ಪಡುತ್ತಿದ್ದ ಸಾತ್ವತನನ್ನು ನೋಡಿ ವಾಸುದೇವನು ಇನ್ನೊಮ್ಮೆ ಅರ್ಜುನನಿಗೆ ಹೇಳಿದನು: “ಮಹಾಬಾಹೋ! ವೃಷ್ಣಿ-ಅಂಧಕರ ವ್ಯಾಘ್ರ, ಧನುರ್ವಿದ್ಯೆಯಲ್ಲಿ ನಿನಗಿಂಥ ಕಡಿಮೆಯಿಲ್ಲದ ನಿನ್ನ ಶಿಷ್ಯನು ಸೌಮದತ್ತಿಯ ವಶನಾಗಿರುವುದನ್ನು ನೋಡು! ಪಾರ್ಥ! ರಣದಲ್ಲಿ ಭೂರಿಶ್ರವನು ವಾರ್ಷ್ಣೇಯ ಸತ್ಯವಿಕ್ರಮ ಸಾತ್ಯಕಿಯನ್ನು ಮೀರಿಸಿದನೆಂದರೆ ವಿಕ್ರಮವೆಂಬುದೇ ಅಸತ್ಯವಾಗಿಬಿಡುತ್ತದೆ.”

ರಣದಲ್ಲಿ ಮಹಾಬಾಹು ವಾಸುದೇವನು ಹೀಗೆ ಹೇಳಲು ಪಾಂಡವನು ಮನಸ್ಸಿನಲ್ಲಿಯೇ ಭೂರಿಶ್ರವನನ್ನು ಪ್ರಶಂಸಿಸಿದನು. “ಕುರುಗಳ ಕೀರ್ತಿವರ್ಧನನು ಸಾತ್ವತಶ್ರೇಷ್ಠನನ್ನು ಎಳೆದಾಡಿ ರಣಕ್ರೀಡೆಯಾಡುವಂತಿದ್ದಾನೆ. ಅರಣ್ಯದಲ್ಲಿ ಸಿಂಹವು ಮಹಾ ಆನೆಯೊಂದನ್ನು ಹೇಗೋ ಹಾಗೆ ಅವನು ವೃಷ್ಣಿವೀರರಲ್ಲಿ ಶ್ರೇಷ್ಠ ಸಾತ್ಯಕಿಯನ್ನು ಎಳೆದಾಡುತ್ತಿದ್ದಾನೆ. ಅವನನ್ನು ಇನ್ನೂ ಕೊಲ್ಲದೇ ನನ್ನ ಸಂತೋಷವನ್ನು ಹೆಚ್ಚಿಸುತ್ತಿದ್ದಾನೆ!”

ಹೀಗೆ ಮನಸ್ಸಿನಲ್ಲಿಯೇ ಕೌರವನನ್ನು ಗೌರವಿಸಿ ಪಾರ್ಥ ಅರ್ಜುನನು ವಾಸುದೇವನಿಗೆ ಉತ್ತರಿಸಿದನು: “ಸೈಂಧವನಲ್ಲಿಯೇ ಆಸಕ್ತನಾಗಿ ಗುರಿಯಿಟ್ಟಿರುವ ನಾನು ಇವನನ್ನು ನೋಡಲಿಲ್ಲ ಮಾಧವ! ಇದು ಒಳ್ಳೆಯ ಕೆಲಸವಲ್ಲದಿದ್ದರೂ ನಾನು ಇದನ್ನು ಯಾದವನಿಗಾಗಿ ಮಾಡುತ್ತೇನೆ!” ಹೀಗೆ ಹೇಳಿ ವಾಸುದೇವನ ಮಾತಿನಂತೆ ಮಾಡುತ್ತಾ ಪಾಂಡವನು ಪತ್ರಿಯಿಂದ ಖಡ್ಗವನ್ನು ಹಿಡಿದಿರುವ ಯಜ್ಞಶೀಲನ ಬಾಹುವನ್ನು ಕತ್ತರಿಸಿದನು.

ಸಾತ್ಯಕಿಯಿಂದ ಭೂರಿಶ್ರವನ ವಧೆ

ಅಂಗದದಿಂದ ಸುಶೋಭಿತವಾಗಿದ್ದ, ಖಡ್ಗವನ್ನು ಹಿಡಿದಿದ್ದ ಅವನ ಉತ್ತಮ ಬಾಹುವು ಜೀವಲೋಕಗಳಿಗೆ ತುಂಬಾ ದುಃಖವನ್ನು ನೀಡುತ್ತಾ ಭೂಮಿಯ ಮೇಲೆ ಬಿದ್ದಿತು. ಅದೃಶ್ಯನಾಗಿದ್ದ ಕಿರೀಟಿಯಿಂದ ಹೊಡೆಯಲ್ಪಟ್ಟು ಕತ್ತರಿಸಲ್ಪಟ್ಟ ಆ ಬಾಹುವು ಐದು ಹೆಡೆಗಳುಳ್ಳ ಸರ್ಪದಂತೆ ವೇಗದಿಂದ ಭೂಮಿಯ ಮೇಲೆ ಬಿದ್ದಿತು. ತನ್ನ ಕೆಲಸವನ್ನು ಪಾರ್ಥನು ವ್ಯರ್ಥಗೊಳಿಸಿದುದನ್ನು ನೋಡಿ ಕೌರವನು ಸಾತ್ಯಕಿಯನ್ನು ಬಿಟ್ಟು ಕ್ರೋಧದಿಂದ ಪಾಂಡವನನ್ನು ನಿಂದಿಸತೊಡಗಿದನು. “ಕೌಂತೇಯ! ಕಾಣಿಸಿಕೊಳ್ಳದೇ, ನಿನ್ನೊಡನೇ ಯುದ್ಧಮಾಡುತ್ತಿರದ ನನ್ನ ಬಾಹುವನ್ನು ಕತ್ತರಿಸಿ ನೀನು ಈಗ ಅತ್ಯಂತ ಕ್ರೂರಕರ್ಮವನ್ನು ಮಾಡಿರುವೆ! ರಾಜ ಧರ್ಮಪುತ್ರ ಯುಧಿಷ್ಠಿರನಿಗೆ ಏನೆಂದು ಹೇಳುವೆ? ರಣದಲ್ಲಿ ನನ್ನಿಂದಾಗಿ ಭೂರಿಶ್ರವನು ಹತನಾದನು. ಏನು ಮಾಡಲಿ ಎಂದೇ? ಮಹಾತ್ಮ ಸಾಕ್ಷಾತ್ ಇಂದ್ರನು ಇದನ್ನೇ ನಿನಗೆ ಉಪದೇಶಿಸಿದ್ದನೇ? ಪಾರ್ಥ! ರುದ್ರ ಅಥವಾ ದ್ರೋಣ ಅಥವಾ ಕೃಪರು ಈ ಅಸ್ತ್ರವಿದ್ಯೆಯನ್ನೇ ನಿನಗೆ ನೀಡಿದರೇ? ನೀನು ನಿನ್ನದಾದ ಕ್ಷತ್ರಿಯಧರ್ಮವನ್ನು ಲೋಕದಲ್ಲಿ ಇತರರಿಗಿಂತ ಅಧಿಕವಾಗಿ ತಿಳಿದುಕೊಂಡಿದ್ದೀಯೆ. ರಣದಲ್ಲಿ ನಿನ್ನೊಡನೆ ಯುದ್ಧಮಾಡುತ್ತಿರದವನನ್ನು ನೀನು ಹೇಗೆ ಪ್ರಹರಿಸಿದೆ? ಅಜಾಗರೂಕತೆಯಿಂದ ಇರುವವರನ್ನು, ಭೀತರಾದವರನ್ನು, ವಿರಥರಾದವರನ್ನು, ಯಾಚಿಸುತ್ತಿರುವವರನ್ನು, ವ್ಯಸನದಲ್ಲಿರುವವರನ್ನು ಮನಸ್ವಿಗಳು ಪ್ರಹರಿಸುವುದಿಲ್ಲ. ನೀಚರು ಆಚರಿಸುವ, ಅಸತ್ಪುರುಷರು ತಮ್ಮದಾಗಿಸಿಕೊಳ್ಳುವಂತ ಈ ಸುದುಷ್ಕರ್ಮವಾದ ಕರ್ಮವನ್ನು ನೀನು ಹೇಗೆ ಮಾಡಿಬಿಟ್ಟೆ? ಆರ್ಯರಿಗೆ ಒಳ್ಳೆಯದನ್ನು ಮಾಡುವುದು ತುಂಬಾ ಸುಲಭವೆಂದು ಹೇಳುತ್ತಾರೆ. ಅಂತೆಯೇ ಭುವಿಯಲ್ಲಿ ಆರ್ಯರಿಗೆ ಅನಾರ್ಯಕರ್ಮವನ್ನು ಮಾಡುವುದು ಅಷ್ಟೇ ಕಷ್ಟವಾದುದು. ಮನುಷ್ಯನು ಯಾರು ಯಾರೊಡನೆ ಎಲ್ಲೆಲ್ಲಿ ನಡೆದುಕೊಳ್ಳುತ್ತಾನೋ ಅವರ ನಡತೆಗಳನ್ನೇ ತನ್ನದಾಗಿಸಿಕೊಳ್ಳುತ್ತಾನೆ ಎನ್ನುವುದು ನನಗೆ ನಿನ್ನಲ್ಲಿ ಕಾಣುತ್ತಿದೆ. ರಾಜವಂಶದಲ್ಲಿ, ಅದರಲ್ಲೂ ವಿಶೇಷವಾಗಿ, ಕೌರವರಲ್ಲಿ ಜನಿಸಿದ, ಉತ್ತಮವಾಗಿ ನಡೆದುಕೊಂಡು ಬಂದಿರುವ ನೀನು ಹೇಗೆ ತಾನೇ ಕ್ಷತ್ರಧರ್ಮವನ್ನು ಮೀರಿ ವರ್ತಿಸಿದೆ? ವಾರ್ಷ್ಣೇಯನಿಗೋಸ್ಕರವಾಗಿ ನೀನು ಮಾಡಿದ ಈ ಅತಿ ಕ್ಷುದ್ರ ಕಾರ್ಯದಲ್ಲಿ ವಾಸುದೇವನ ಅಭಿಪ್ರಾಯವು ಇದ್ದೇ ಇದೆ. ನೀನಾಗಿಯೇ ಇದನ್ನು ಮಾಡಿರಲಿಕ್ಕಿಲ್ಲ. ಅಜಾಗರುಕನಾಗಿರುವ, ಇನ್ನೊಬ್ಬನೊಡನೆ ಯುದ್ಧಮಾಡುತ್ತಿರುವವನಿಗೆ ಈ ರೀತಿಯ ವ್ಯಸನವನ್ನು ಕೃಷ್ಣಸಖನಲ್ಲದೇ ಬೇರೆ ಯಾರುತಾನೇ ಇಂದು ಕೊಡಬಲ್ಲರು? ಪಾರ್ಥ! ವೃಷ್ಣಿ-ಅಂಧಕರು ಸಂಸ್ಕಾರಹೀನರು. ಹಿಂಸೆಯನ್ನೇ ಮಾಡುವವರು. ಸ್ವಭಾವದಲ್ಲಿ ನಿಂದ್ಯರು. ಅವರನ್ನು ನೀನು ಹೇಗೆ ತಾನೇ ಪ್ರಮಾಣಭೂತರೆಂದು ಮಾಡಿಕೊಂಡೆ?”

ಹೀಗೆ ಹೇಳಿ ಮಹಾಬಾಹು ಮಹಾಯಶಸ್ವಿ ಯೂಪಕೇತುವು ಯುಯುಧಾನನನ್ನು ಬಿಟ್ಟು ರಣದಲ್ಲಿ ಪ್ರಾಯೋಪವೇಶಮಾಡಿದನು. ಆ ಪುಣ್ಯಲಕ್ಷಣನು ತನ್ನ ಎಡಗೈಯಿಂದ ಬಾಣಗಳನ್ನು ಹರಡಿ, ಬ್ರಹ್ಮಲೋಕವನ್ನು ಪಡೆದುಕೊಳ್ಳಬೇಕೆಂಬ ಇಚ್ಛೆಯಿಂದ ಪ್ರಾಣಗಳನ್ನು ಪ್ರಾಣಗಳಲ್ಲಿ ಆಹುತಿಯನ್ನಾಗಿತ್ತನು. ಅವನು ಯೋಗಯುಕ್ತನಾದ ಮುನಿಯಾಗಿ ಸೂರ್ಯನಲ್ಲಿ ದೃಷ್ಟಿಯನ್ನಿರಿಸಿ ಪ್ರಸನ್ನ ಶುಭ್ರ ಮನಸ್ಸಿನಲ್ಲಿ ಮಹಾ ಉಪನಿಷತ್ತನ್ನು ಧ್ಯಾನಿಸತೊಡಗಿದನು. ಆಗ ಆ ಸರ್ವ ಸೇನೆಗಳ ಜನರೂ ಕೃಷ್ಣ-ಧನಂಜಯರನ್ನು ನಿಂದಿಸತೊಡಗಿದರು ಮತ್ತು ಆ ಪುರುಷರ್ಷಭನನ್ನು ಪ್ರಶಂಸಿಸಿದರು. ಹಾಗೆ ನಿಂದಿಸಲ್ಪಟ್ಟರೂ ಕೃಷ್ಣರೀರ್ವರು ಏನೊಂದು ಅಪ್ರಿಯವಾದುದನ್ನೂ ಹೇಳಲಿಲ್ಲ. ಹಾಗೆ ಅವರು ಪ್ರಶಂಸಿಸುತ್ತಿದ್ದರೂ ಯೂಪಕೇತನನು ಹರ್ಷಗೊಳ್ಳಲಿಲ್ಲ. ಕೌರವ ಪುತ್ರರು ಹಾಗೆ ಮಾತನಾಡುತ್ತಿರಲು ಮತ್ತು ಭೂರಿಶ್ರವಸನು ಹಾಗೆ ಮಾತನಾಡಿದುದನ್ನೂ ಧನಂಜಯನು ಮನಸ್ಸಿನಲ್ಲಿ ಸಹಿಸಿಕೊಳ್ಳಲಿಲ್ಲ. ಆದರೆ ಮನಸ್ಸಿನಿಂದ ಕ್ರುದ್ಧನಾಗದೇ, ಹಿಂದಿನ ಮಾತುಗಳನ್ನು ಸ್ಮರಿಸಿಕೊಳ್ಳುತ್ತಿರುವಂತೆ ಫಲ್ಗುನನು ಆಕ್ಷೇಪಿಸುವಂತೆ ಹೇಳಿದನು: “ನನ್ನ ಈ ಮಹಾವ್ರತವು ಎಲ್ಲ ರಾಜರಿಗೂ ತಿಳಿದೇ ಇದೆ. ನನ್ನ ಬಾಣವು ಹೋಗಬಲ್ಲಷ್ಟು ದೂರದವರೆಗೆ ನನ್ನವರನ್ನು ಕೊಲ್ಲಲು ಯಾರಿಗೂ ಶಕ್ಯವಿಲ್ಲ. ಯೂಪಕೇತುವೇ! ಇದನ್ನು ತಿಳಿದುಕೊಂಡೂ ನನ್ನನ್ನು ನೀನು ನಿಂದಿಸಬಾರದು. ಧರ್ಮವನ್ನು ತಿಳಿಯದೆಯೇ ಇತರರನ್ನು ನಿಂದಿಸುವುದು ಯುಕ್ತವಲ್ಲ. ರಣದಲ್ಲಿ ಖಡ್ಗವನ್ನು ಮೇಲೆತ್ತಿ ವೃಷ್ಣಿವೀರನನ್ನು ಕೊಲ್ಲಲು ಬಂದವನ ಬಾಹುಗಳನ್ನು ನಾನು ಕತ್ತರಿಸಿವುದು ನನ್ನ ಧರ್ಮ. ನಿಂದನೀಯವಾದುದಲ್ಲ. ಶಸ್ತ್ರಗಳನ್ನು ಕಳೆದುಕೊಂಡಿದ್ದ, ವಿರಥನಾಗಿದ್ದ, ಕವಚವನ್ನು ಕಳೆದುಕೊಂಡಿದ್ದ ಅಭಿಮನ್ಯುವನ್ನು ವಧಿಸಿದುದು ಯಾವ ಧಾರ್ಮಿಕವಾದುದೆಂದು ಗೌರವಿಸಬೇಕು?”

ಪಾರ್ಥನು ಹೀಗೆ ಹೇಳಲು ಭೂರಿಶ್ರವನು ತನ್ನ ತಲೆಯಿಂದ ಭೂಮಿಯನ್ನು ಸ್ಪರ್ಷಿಸಿ ಬಲಗೈಯನ್ನು ಎಡಗೈಯನ್ನು ಎತ್ತಿಕೊಂಡನು. ಪಾರ್ಥನ ಈ ಮಾತನ್ನು ಕೇಳಿ ಮಹಾದ್ಯುತಿ ಯೂಪಕೇತುವು ಮುಖಕೆಳಗೆ ಮಾಡಿಕೊಂಡು ಸುಮ್ಮನಾದನು.

ಅರ್ಜುನನು ಹೇಳಿದನು: “ಶಲಾಗ್ರಜ! ಧರ್ಮರಾಜ, ಭೀಮ, ಮತ್ತು ನಕುಲ-ಸಹದೇವರಲ್ಲಿ ಎಷ್ಟು ಪ್ರೀತಿಯಿದೆಯೋ ಅಷ್ಟೇ ಪ್ರೀತಿಯು ನನಗೆ ನಿನ್ನ ಮೇಲೂ ಇದೆ. ಮಹಾತ್ಮ ಕೃಷ್ಣನ ಮತ್ತು ನನ್ನ ಅನುಜ್ಞಾತನಾಗಿ ಶಿಬಿ-ಔಶೀನರರು ಹೋಗಿರುವ ಪುಣ್ಯಕೃತರ ಲೋಕಗಳಿಗೆ ಹೋಗು!”

ಆಗ ಸೌಮದತ್ತಿಯಿಂದ ವಿಮುಕ್ತನಾದ ಶೈನೇಯನು ಖಡ್ಗವನ್ನೆಳೆದು ಆ ಮಹಾತ್ಮನ ಶಿರಸ್ಸನ್ನು ಕತ್ತರಿಸಲು ನಿರ್ಧರಿಸಿದನು. ಪಾಂಡುಪುತ್ರನಿಂದ ಹೊಡೆಯಲ್ಪಟ್ಟ, ಪ್ರಮತ್ತನಾಗಿದ್ದ ಭೂರಿದಕ್ಷಿಣ, ಶಲಾಗ್ರಜ ಅಕಲ್ಮಶನನ್ನು ಸಂಹರಿಸಲು ಸಾತ್ಯಕಿಯು ಇಚ್ಛಿಸಿದನು. ಸೊಂಡಿಲುಕತ್ತರಿಸಲ್ಪಟ್ಟ ಆನೆಯಂತೆ ಭುಜವು ತುಂಡಾಗಿ ಕುಳಿತಿದ್ದ, ರಣದಲ್ಲಿ ಪಾರ್ಥನಿಂದ ಬಾಹುವು ಕತ್ತರಿಸಲ್ಪಡಲು ಪ್ರಾಯೋಪವಿಷ್ಟನಾಗಿರುವ ಕೌರವೇಂದ್ರನ ಶಿರವನ್ನು ಸಾತ್ಕಕಿಯು, ಸರ್ವಸೇನೆಗಳೂ ದುರ್ಮನಸ್ಸುಗಳಿಂದ ಕೂಗಿ ನಿಂದಿಸುತ್ತಿರಲು, ಮಹಾತ್ಮ ಕೃಷ್ಣ ಮತ್ತು ಪಾರ್ಥರು ತಡೆಯುತ್ತಿದ್ದರೂ, ಭೀಮ, ಚಕ್ರರಕ್ಷಕರಿಬ್ಬರು, ಅಶ್ವತ್ಥಾಮ, ಕೃಪ, ಕರ್ಣ, ವೃಷಸೇನ, ಸೈಂಧವನೂ ಕೂಡ ಕೂಗಿ ತಡೆಯುತ್ತಿದ್ದರೂ, ಖಡ್ಗದಿಂದ ಕತ್ತರಿಸಿದನು. ಅರ್ಜುನನಿಂದ ಮೊದಲೇ ಹತನಾದ ಕುರೂದ್ವಹನನ್ನು ಕೊಂದ ಸಾತ್ಯಕಿಯ ಆ ಕರ್ಮವನ್ನು ಸೇನೆಗಳು ಗೌರವಿಸಲಿಲ್ಲ. ಅಲ್ಲಿ ಸಿದ್ಧ-ಚಾರಣ-ಮಾನವರು ಯುದ್ಧದಲ್ಲಿ ಪ್ರಾಯಗತನಾಗಿ ಹತನಾದ ಸಹಸ್ರಾಕ್ಷನ ಸಮನಾದ ಭೂರಿಶ್ರವಸನನ್ನು ನೋಡಿ ಪೂಜಿಸಿದರು. ಅವನ ಕರ್ಮಗಳ ಕುರಿತು ದೇವತೆಗಳೂ ವಿಸ್ಮಿತರಾದರು. ಇದರ ಕುರಿತು ಸೈನಿಕರಲ್ಲಿ ಅನೇಕ ಪಕ್ಷವಾದಗಳು ನಡೆದವು. “ಇದು ವಾರ್ಷ್ಣೇಯನ ಅಪರಾಧವಲ್ಲ. ಹೇಗೆ ಆಗಬೇಕಿತ್ತೋ ಹಾಗೆಯೇ ಆಯಿತು. ಆದುದರಿಂದ ಈ ವಿಷಯದಲ್ಲಿ ಯಾರೂ ಕೋಪಗೊಳ್ಳುವ ಕಾರಣವಿಲ್ಲ. ಕ್ರೋಧವು ಮನುಷ್ಯರ ದುಃಖವನ್ನು ಹೆಚ್ಚಿಸುತ್ತದೆ. ವೀರನಾದನು ಹತನಾಗಲೇ ಬೇಕು. ಅದರಲ್ಲಿ ವಿಚಾರ ಮಾಡುವುದೇನಿದೆ? ಧಾತ್ರುವೇ ಇವನ ಮೃತ್ಯುವನ್ನು ಆಹವದಲ್ಲಿ ಸಾತ್ಯಕಿಗೆ ವಹಿಸಿರಬಹುದು.”

ಸಾತ್ಯಕಿಯು ಹೇಳಿದನು: “ಕೊಲ್ಲಬೇಡ! ಕೊಲ್ಲಬೇಡ! ಎಂದು ಯಾರೆಲ್ಲ ಹೇಳುತ್ತಿದ್ದೀರೋ ನೀವು ಅಧರ್ಮಿಷ್ಠರಾಗಿದ್ದುಕೊಂಡು ಧರ್ಮದ ಕುರಿತು ವಾದಮಾಡುವವರು. ಧರ್ಮದ ಸೋಗಿನಲ್ಲಿರುವವರು. ಸುಭದ್ರೆಯ ಮಗ ಬಾಲಕನು ಶಸ್ತ್ರಗಳನ್ನು ಕಳೆದುಕೊಂಡಿರುವಾಗ ಯುದ್ಧದಲ್ಲಿ ನಿಮ್ಮಿಂದ ಹತನಾದನಲ್ಲ! ಆಗ ನಿಮ್ಮ ಧರ್ಮವು ಎಲ್ಲಿ ಹೋಗಿತ್ತು? ನನ್ನನ್ನು ಸಂಗ್ರಾಮದಲ್ಲಿ ಬಹಳವಾಗಿ ಪೀಡಿಸಿ ಜೀವಿಸಿರುವಾಗಲೇ ಕೋಪದಿಂದ ಒದೆಯುವವನನ್ನು ಯಾರೇ ಆಗಿರಲಿ - ಮುನಿಯ ವ್ರತದಲ್ಲಿದ್ದರೂ - ಸಂಹರಿಸುತ್ತೇನೆಂದು ನಾನು ಪ್ರತಿಜ್ಞೆ ಮಾಡಿದ್ದೆ. ಭುಜವನ್ನೆತ್ತಿ ನನ್ನನ್ನು ಸಂಹರಿಸಲು ಅವನು ಬರಲು ನೋಡುತ್ತಿದ್ದರೂ ಕೂಡ ನಾನು ಮೃತನಾದೆನೆಂದೇ ನೀವು ತಿಳಿದುಕೊಂಡಿರಿ. ಇದು ನಿಮ್ಮ ಬುದ್ಧಿಯ ಚಾಕಚಕ್ಯತೆಯಿರಬಹುದು. ಕುರುಪುಂಗವರೇ! ಅವನಿಗೆ ನಾನು ಪ್ರತೀಕಾರವನ್ನು ಮಾಡಿರುವುದು ಯುಕ್ತವೇ ಆಗಿದೆ. ಪಾರ್ಥನು ನನ್ನ ಮೇಲಿನ ಸ್ನೇಹದಿಂದ ತನ್ನ ಪ್ರತಿಜ್ಞೆಯನ್ನು ರಕ್ಷಿಸಿ ಖಡ್ಗವನ್ನು ಹಿಡಿದಿದ್ದ ಅವನ ಬಾಹುವನ್ನು ಕತ್ತರಿಸಿದನು. ಇದರಿಂದ ನಾನು ವಂಚಿತನಾಗಿದ್ದೇನೆ. ಆಗುವಂಥಹುದು ಹಾಗೆಯೇ ಆಗುತ್ತದೆ. ದೈವವೇ ಅದನ್ನು ಹಾಗೆ ಮಾಡಿಸುತ್ತದೆ. ಈ ಸಂಗ್ರಾಮದಲ್ಲಿ ಇವನು ಹತನಾದನು. ಇದರಲ್ಲಿ ಅಧರ್ಮವಾದದ್ದಾದರೂ ಏನಿದೆ? ಹಿಂದೆ ಭುವಿಯಲ್ಲಿ ವಾಲ್ಮೀಕಿಯು ಈ ಗೀತವನ್ನು ಶ್ಲೋಕದಲ್ಲಿ ಹೇಳಿದ್ದನು: ಅಮಿತ್ರರನ್ನು ಪೀಡಿಸುವುದು ಕರ್ತವ್ಯವೇ ಸರಿಯೆಂದು!”

ಹೀಗೆ ಹೇಳಲು ಸರ್ವ ಕೌರವ ಪಾಂಡವರೂ ಏನನ್ನೂ ಹೇಳದೇ ಮನಸ್ಸಿನಲ್ಲಿಯೇ ಅವನನ್ನು ಗೌರವಿಸಿದರು. ಮಹಾ ಯಾಗಗಳಲ್ಲಿ ಮಂತ್ರಗಳಿಂದ ಪೂತನಾಗಿದ್ದ ಆ ಯಶಸ್ವಿ, ಅರಣ್ಯಕ್ಕೆ ಹೋದ ಮುನಿಯಂತೆ ಕುಳಿತಿದ್ದ ಅವನ ವಧೆಯನ್ನು ಅಲ್ಲಿದ್ದ ಯಾರೂ ಅಭಿನಂದಿಸಲಿಲ್ಲ. ಆ ವರದ ಶೂರನ ನೀಲಕೇಶವುಳ್ಳ, ಪಾರಿವಾಳದಂತೆ ಕೆಂಪಾದ ಕಣ್ಣುಳ್ಳ ಶಿರವನ್ನು ಅಶ್ವಮೇಧದ ಕುದುರೆಯ ಶಿರವನ್ನು ಕತ್ತರಿಸಿ ಹವಿರ್ಧಾನನದ ನಡುವೆ ಇಡುವಂತೆ ಇಡಲಾಯಿತು. ಮಹಾಹವದಲ್ಲಿ ಶಸ್ತ್ರದ ತೇಜಸ್ಸಿನಿಂದ ಹತನಾಗಿ ಪೂತನಾದ ಆ ವರದ ವರಾರ್ಹನು ಶ್ರೇಷ್ಠ ದೇಹವನ್ನು ತೊರೆದು ಧರ್ಮದಿಂದ ಪೃಥ್ವಿಯನ್ನೂ ಆಕಾಶವನ್ನೂ ಅತಿಕ್ರಮಿಸಿ ಊರ್ಧ್ವಲೋಕಕ್ಕೆ ಪ್ರಯಾಣಿಸಿದನು.

ಅತ್ರಿಯ ಮಗನು ಸೋಮ. ಸೋಮನ ಮಗ ಬುಧ. ಬುಧನಿಗೆ ಮಹೇಂದ್ರನ ಪ್ರಕಾಶವುಳ್ಳ ಪುರೂರವನೆಂಬ ಒಬ್ಬ ಮಗನಿದ್ದನು. ಪುರೂರವನ ಮಗ ಆಯು. ಆಯುವಿನ ಮಗ ನಹುಷನೆಂದು ಹೇಳುತ್ತಾರೆ. ನಹುಷನಿಗೆ ಯಯಾತಿಯು ಮಗನು. ಯಯಾತಿಗೆ ದೇವಯಾನಿಯಲ್ಲಿ ಯದುವೆಂಬ ಜ್ಯೇಷ್ಠಮಗನಾದನು. ಯದುವಿನ ವಂಶದಲ್ಲಿ ದೇವಮೀಢನೆಂಬ ಪ್ರಸಿದ್ಧನಾದವನು ಹುಟ್ಟಿದನು. ಯಾದವನಾದ ಅವನ ಮಗನೇ ತ್ರೈಲೋಕ್ಯಸಮನಾದ ಶೂರ. ಶೂರನ ಮಗ ಶೌರಿ - ವಾಸುದೇವನೆಂದೂ ಪ್ರಸಿದ್ಧನಾದವನು. ಅವನು ಧನುರ್ವಿದ್ಯೆಯಲ್ಲಿ ಶ್ರೇಷ್ಠನೂ, ಯುದ್ಧದಲ್ಲಿ ಕಾರ್ತವೀರ್ಯಸಮನೂ ಆಗಿದ್ದನು. ಅದೇ ವೀರ್ಯ ಕುಲದಲ್ಲಿ ಶಿನಿಯೆಂಬ ರಾಜನೂ ಹುಟ್ಟಿದನು. ಇದೇ ಸಮಯದಲ್ಲಿ ಮಹಾತ್ಮ ದೇವಕನ ಮಗಳ ಸ್ವಯಂವರಕ್ಕೆ ಸರ್ವ ಕ್ಷತ್ರಿಯರೂ ಬಂದು ಸೇರಿದ್ದರು. ಅಲ್ಲಿ ದೇವಕಿಯನ್ನು ವಸುದೇವನಿಗೋಸ್ಕರವಾಗಿ ಶಿನಿಯು ಸರ್ವ ಪಾರ್ಥಿವರನ್ನೂ ಸೋಲಿಸಿ ತನ್ನ ರಥದ ಮೇಲೆ ಏರಿಸಿಕೊಂಡನು. ಶೌರಿ ಶಿನಿಯ ರಥದಲ್ಲಿ ದೇವಕಿಯನ್ನು ಕಂಡು ನೃಪ ಸೋಮದತ್ತನು ಸಹಿಸಿಕೊಳ್ಳಲಿಲ್ಲ. ಅವರಿಬ್ಬರು ಬಲಶಾಲಿಗಳ ನಡುವೆ ಶಕ್ರ-ಪ್ರಹ್ರಾದರ ನಡುವೆ ಹೇಗೋ ಹಾಗೆ ಅರ್ಧದಿನದ ವಿಚಿತ್ರವೂ ಅದ್ಭುತವೂ ಆದ ಬಾಹುಯುದ್ಧವು ನಡೆಯಿತು. ಶಿನಿಯು ಜೋರಾಗಿ ನಗುತ್ತಾ ಸೋಮದತ್ತನನ್ನು ನೆಲದ ಮೇಲೆ ಕೆಡವಿ ಕೂದಲುಗಳನ್ನು ಹಿಡಿದು ಖಡ್ಗವನ್ನೆತ್ತಿ ಕಾಲಿನಿಂದ ಒದೆದನು. ಸುತ್ತಲೂ ನೆರೆದಿದ್ದ ಸಹಸ್ರಾರು ರಾಜರುಗಳು ನೋಡುತ್ತಿರಲು ಮಧ್ಯದಲ್ಲಿದ್ದ ಅವನನ್ನು ಪುನಃ ಜೀವಿಸು ಎಂದು ಹೇಳಿ ಬಿಟ್ಟುಬಿಟ್ಟನು. ಅವನಿಂದ ಆ ಅವಸ್ಥೆಗೆ ತರಿಸಲ್ಪಟ್ಟ ಸೋಮದತ್ತನು ಕೋಪಾವಿಷ್ಟನಾಗಿ ಮಹಾದೇವನನ್ನು ಒಲಿಸಿದನು. ಆಗ ವರಗಳ ವರದ ಪ್ರಭು ಮಹಾದೇವನು ಅವನ ಮೇಲೆ ತುಷ್ಟನಾಗಿ ವರವನ್ನು ನೀಡಲು ಆ ನೃಪನು ಈ ವರವನ್ನು ಬೇಡಿಕೊಂಡನು: “ಭಗವನ್! ರಾಜಸಹಸ್ರರ ಮಧ್ಯೆ ಶಿನಿಯ ಮಗನನ್ನು ಸಂಯುಗದಲ್ಲಿ ಕಾಲಿನಿಂದ ಒದೆದು ಸಂಹರಿಸುವಂಥಹ ಮಗನನ್ನು ಬಯಸುತ್ತೇನೆ.”

ಸೋಮದತ್ತನ ಆ ಮಾತನ್ನು ಕೇಳಿ “ಹೀಗೆಯೇ ಆಗಲಿ!” ಎಂದು ಹೇಳಿ ದೇವನು ಅಂತರ್ಧಾನನಾದನು. ಅದೇ ವರದಾನದಿಂದ ಅವನು ಭೂರಿದಕ್ಷಿಣನನ್ನು ಪಡೆದನು. ಮತ್ತು ಸಮರದಲ್ಲಿ ಸೌಮದತ್ತಿಯು ಶಿನಿಯ ಮಗನನ್ನು ಕೆಡವಿದನು.

ಅರ್ಜುನನ ಯುದ್ಧ

ಭೂರಿಶ್ರವಸನು ಪರಲೋಕಕ್ಕೆ ಹೊರಟುಹೋಗಲು ಮಹಾಬಾಹು ಅರ್ಜುನನು ವಾಸುದೇವನನ್ನು ಒತ್ತಾಯಿಸಿ ಹೇಳಿದನು: “ಕೃಷ್ಣ! ರಾಜಾ ಜಯದ್ರಥನಿರುವಲ್ಲಿಗೆ ಕುದುರೆಗಳನ್ನು ಓಡಿಸು. ದಿವಾಕರನು ಅಸ್ತನಾಗುತ್ತಿದ್ದಾನೆ. ತ್ವರೆಮಾಡು! ಈ ಮಹಾ ಕಾರ್ಯವನ್ನು ನಾನು ಮಾಡಲೇಬೇಕಾಗಿದೆಯೆಂದು ತಿಳಿ. ಇವನಾದರೋ ಕುರುಸೇನೆಯ ಮಹಾರಥರಿಂದ ರಕ್ಷಿಸಲ್ಪಟ್ಟಿದ್ದಾನೆ. ಸೂರ್ಯನು ಅಸ್ತನಾಗುವುದರೊಳಗೆ ಜಯದ್ರಥನನ್ನು ಕೊಂದು ನನ್ನ ವಚನವನ್ನು ಸತ್ಯವಾಗಿಸುವಂತೆ ಕುದುರೆಗಳನ್ನು ಓಡಿಸು!”

ಆಗ ಹಯಜ್ಞ ಕೃಷ್ಣನು ಬೆಳ್ಳಿಯ ಪುತ್ಥಳಿಗಳಂತಿರುವ ಕುದುರೆಗಳನ್ನು ಜಯದ್ರಥನ ರಥದ ಕಡೆ ಓಡಿಸಿದನು. ಅಮೋಘವಾದ ಆಶುಗಗಳನ್ನು ದಿಕ್ಕು ದಿಕ್ಕುಗಳಲ್ಲಿ ತುಂಬಿಸುತ್ತಾ ವೇಗದಿಂದ ಬರುತ್ತಿದ್ದ ಅವನನ್ನು ಸೇನಮುಖ್ಯರಾದ ದುರ್ಯೋಧನ, ಕರ್ಣ, ವೃಷಸೇನ, ಮದ್ರರಾಜ, ಅಶ್ವತ್ಥಾಮ, ಕೃಪ ಮತ್ತು ಸ್ವಯಂ ಸೈಂಧವನೂ ಕೂಡ ಸುತ್ತುವರೆದರು. ಎದಿರು ನಿಂತಿರುವ ಸೈಂಧವನನ್ನು ಬೀಭತ್ಸುವು ಅವನನ್ನು ಸುಟ್ಟುಬಿಡುವನೋ ಎನ್ನುವಂತೆ ಕ್ರೋಧದಿಂದ ಉರಿಯುತ್ತಿದ್ದ ಕಣ್ಣುಗಳಿಂದ ನೋಡಿದನು. ಅಗ ಜಯದ್ರಥನ ರಥದ ಬಳಿ ಬರುತ್ತಿದ್ದ ಅರ್ಜುನನನ್ನು ವೀಕ್ಷಿಸಿ ದುರ್ಯೋಧನನು ತ್ವರೆಮಾಡಿ ರಾಧೇಯನಿಗೆ ಹೇಳಿದನು: “ವೈಕರ್ತನ! ಇಗೋ ಯುದ್ಧಮಾಡುವ ಸಮಯವು ಬಂದಿದೆ. ನಿನ್ನ ಬಲವನ್ನು ಪ್ರದರ್ಶಿಸು. ರಣದಲ್ಲಿ ಅರ್ಜುನನಿಂದ ಜಯದ್ರಥನು ವಧಿಸಲ್ಪಡದಂತೆ ಮಾಡು! ಸ್ವಲ್ಪವೇ ಹಗಲು ಉಳಿದುಕೊಂಡಿದೆ. ಇಂದು ಶರೌಘಗಳಿಂದ ಶತ್ರುವನ್ನು ಸಂಹರಿಸು! ಹಗಲು ಮುಗಿಯಿತೆಂದರೆ ನಮಗೆ ಖಂಡಿತವಾಗಿಯೂ ಜಯವಾಗುತ್ತದೆ! ಸೂರ್ಯಾಸ್ತವಾಗುವ ವರೆಗೆ ಸೈಂಧವನನ್ನು ರಕ್ಷಿಸಿದೆವೆಂದಾದರೆ ಪ್ರತಿಜ್ಞೆಯನ್ನು ಸುಳ್ಳಾಗಿಸಿದ ಕೌಂತೇಯನು ಅಗ್ನಿಯನ್ನು ಪ್ರವೇಶಿಸುತ್ತಾನೆ. ಭೂಮಿಯಲ್ಲಿ ಅರ್ಜುನನು ಮುಹೂರ್ತಕಾಲವೂ ಇಲ್ಲನೆಂದಾದರೆ ಅವನ ಸಹೋದರರು, ಅನುಯಾಯಿಗಳೊಂದಿಗೆ, ಜೀವಿಸಿರಲು ಬಯಸುವುದಿಲ್ಲ. ಪಾಂಡವೇಯರು ವಿನಷ್ಟರಾಗಲು, ಕಂಟಕರು ಹತರಾಗಿ ಗಿರಿ-ವನ-ಕಾನನಗಳೊಂದಿಗೆ ಈ ವಸುಂಧರೆಯನ್ನು ನಾವು ಭೋಗಿಸಬಲ್ಲೆವು. ಕಾರ್ಯಾಕಾರ್ಯಗಳನ್ನು ತಿಳಿದುಕೊಳ್ಳದೇ ರಣದಲ್ಲಿ ಈ ಪ್ರತಿಜ್ಞೆಯನ್ನು ಪಾರ್ಥನು ಮಾಡಿದ್ದಾನೆಂದರೆ ಈ ವಿಪರೀತವನ್ನು ದೈವವೇ ಅವನಿಗೆ ತಂದೊಡ್ಡಿದಂತಿದೆ. ಕಿರೀಟಿ ಪಾಂಡವನು ತನ್ನ ವಿನಾಶಕ್ಕಾಗಿಯೇ ಜಯದ್ರಥನ ವಧೆಯ ಕುರಿತು ಪ್ರತಿಜ್ಞೆಯನ್ನು ಮಾಡಿರಬೇಕು. ನೀನು ಬದುಕಿರುವಾಗ ಹೇಗೆ ತಾನೇ ಆ ಫಲ್ಗುನನು ಆದಿತ್ಯನು ಅಸ್ತಂಗತನಾಗುವುದರೊಳಗೆ ನೃಪ ಸೈಂಧವನನ್ನು ಕೊಂದಾನು? ರಣಮುಖದಲ್ಲಿ ಮದ್ರರಾಜನಿಂದ ಮತ್ತು ಮಹಾತ್ಮ ಕೃಪನಿಂದ ರಕ್ಷಿತನಾಗಿರುವ ಜಯದ್ರಥನನ್ನು ಧನಂಜಯನು ಹೇಗೆ ಕೊಲ್ಲಬಲ್ಲನು? ದ್ರೌಣಿ, ನಾನು ಮತ್ತು ದುಃಶಾಸನರಿಂದ ರಕ್ಷಿಸಲ್ಪಡುತ್ತಿರುವ ಸೈಂಧವನನ್ನು ಬೀಭತ್ಸುವು ಹೇಗೆ ತಾನೇ ತಲುಪಬಲ್ಲನು? ಅನೇಕ ಶೂರರು ಯುದ್ಧಮಾಡುತ್ತಿದ್ದಾರೆ. ದಿವಾಕರನು ಇಳಿಯುತ್ತಿದ್ದಾನೆ. ಹೀಗಿರುವ ಪಾರ್ಥನು ಜಯದ್ರಥನನ್ನು ತಲುಪುವುದೇ ಶಂಕೆಯಾಗಿಬಿಟ್ಟಿದೆ. ನೀನು ನನ್ನ ಮತ್ತು ಇತರ ಶೂರ ಮಹಾರಥರೊಂದಿಗೆ ಪರಮ ಯತ್ನವನ್ನು ಮಾಡಿ ಪಾರ್ಥನೊಡನೆ ಯುದ್ಧಮಾಡು!”

ದುರ್ಯೋಧನನು ಹೀಗೆ ಹೇಳಲು ರಾಧೇಯನು ಅವನಿಗೆ ಈ ಮಾತನ್ನಾಡಿದನು: “ಗುರಿಯಲ್ಲಿ ದೃಢನಾದ ಶೂರ ಧನ್ವಿ ಭೀಮಸೇನನ ಅನೇಕ ಶರಜಾಲಗಳಿಂದ ರಣದಲ್ಲಿ ನಾನು ತುಂಬಾ ನೋವನ್ನನುಭವಿಸುತ್ತಿದ್ದೇನೆ. ನನ್ನಂಥವನು ರಣದಲ್ಲಿರಬೇಕು ಎಂಬ ಒಂದೇ ಕಾರಣದಿಂದ ನಾನಿನ್ನೂ ಇಲ್ಲಿ ನಿಂತಿದ್ದೇನೆ. ರಣದಲ್ಲಿಯ ಬಾಣಗಳಿಂದ ನನ್ನ ಅಂಗಾಂಗಗಳೆಲ್ಲವೂ ಅತಿ ನೋವನ್ನು ಅನುಭವಿಸುತ್ತಿವೆ. ಆದರೆ ರಾಜನ್! ನಾನು ರಣದಲ್ಲಿ ಪರಮ ಶಕ್ತಿಯನ್ನು ಬಳಸಿ ಪಾಂಡವಮುಖ್ಯನು ಸೈಂಧವನನ್ನು ಕೊಲ್ಲದಂತೆ ಯುದ್ಧಮಾಡುತ್ತೇನೆ. ನಾನು ನಿಶಿತ ಸಾಯಕಗಳನ್ನು ಪ್ರಯೋಗಿಸಿ ಯುದ್ಧಮಾಡುವಾಗ ಧನಂಜಯನು ಸೈಂಧವನನ್ನು ತಲುಪಲಾರನು. ಸತತವೂ ಹಿತಕಾರಿಗಳಾಗಿರುವವರಿಗೆ ಎಷ್ಟು ಮಾಡಬೇಕೋ ಅಷ್ಟನ್ನೂ ಯಥಾಶಕ್ತಿ ಮಾಡುತ್ತೇನೆ. ಜಯವು ದೈವದ ಮೇಲೆ ನಿಂತಿದೆ! ನನ್ನ ಪೌರುಷವನ್ನು ಆಶ್ರಯಿಸಿ ನಿನಗಾಗಿ ಇಂದು ಅರ್ಜುನನೊಡನೆ ಯುದ್ಧಮಾಡುತ್ತೇನೆ. ಆದರೆ ಜಯವು ದೈವಾಧೀನವಾದುದು. ಇಂದು ನನ್ನ ಮತ್ತು ಪಾರ್ಥ ಇಬ್ಬರ ನಡುವಿನ ದಾರುಣ ಲೋಮಹರ್ಷಣ ಯುದ್ಧವನ್ನು ಸರ್ವಭೂತಗಳೂ ನೋಡಲಿ!”

ರಣದಲ್ಲಿ ಹೀಗೆ ಕರ್ಣ-ಕೌರವರು ಮಾತನಾಡಿಕೊಳ್ಳುತ್ತಿರಲು ಅರ್ಜುನನು ಕೌರವ ಸೇನೆಯನ್ನು ನಿಶಿತ ಬಾಣಗಳಿಂದ ಹೊಡೆದನು. ಅವನು ತೀಕ್ಷ್ಣ ಅಗ್ರಮುಖಗಳಿಂದ ರಣದಲ್ಲಿ ಪಲಾಯನಮಾಡದಿರುವ ಶೂರರ ಪರಿಘದಂತಿದ್ದ ಆನೆಯ ಸೊಂಡಲಿನಂತಿದ್ದ ಭುಜಗಳನ್ನು ಕತ್ತರಿಸಿದನು. ಆ ಮಹಾಬಾಹುವು ನಿಶಿತ ಶರಗಳಿಂದ ಶಿರಗಳನ್ನು, ಆನೆಗಳ ಸೊಂಡಿಲುಗಳನ್ನು, ಕುದುರೆಗಳ ಕತ್ತುಗಳನ್ನು ಮತ್ತು ರಥಗಳ ಅಚ್ಚುಮಣೆಗಳನ್ನು ಎಲ್ಲೆಡೆ ಕತ್ತರಿಸಿದನು. ಬೀಭತ್ಸುವು ಪ್ರಾಸ-ತೋಮರಗಳನ್ನು ಹಿಡಿದಿದ್ದ, ರಕ್ತದಿಂದ ತೋಯ್ದುಹೋಗಿದ್ದ ಅಶ್ವಾರೋಹಿಗಳು ಒಬ್ಬೊಬ್ಬರನ್ನೂ ಎರಡಾಗಿ ಅಥವಾ ಮೂರಾಗಿ ಕ್ಷುರಗಳಿಂದ ತುಂಡರಿಸಿದನು. ಸಹಸ್ರಾರು ಪ್ರಮುಖ ಆನೆ-ಕುದುರೆಗಳು, ಧ್ವಜ-ಚತ್ರಗಳು, ಚಾಪಗಳು, ಚಾಮರಗಳು ಮತ್ತು ಶಿರಗಳು ಬೀಳುತ್ತಿದ್ದವು. ಬೆಂಕಿಯು ಒಣಹುಲ್ಲನ್ನು ಹೇಗೋ ಹಾಗೆ ಕೌರವ ಸೇನೆಯನ್ನು ಭಸ್ಮಮಾಡಿ ಪಾರ್ಥನು ಕ್ಷಣಮಾತ್ರದಲ್ಲಿ ರಣಭೂಮಿಯನ್ನು ರಕ್ತದಲ್ಲಿ ಮುಳುಗಿಸಿಬಿಟ್ಟನು.

ಆ ಬಲಶಾಲೀ ದುರಾಧರ್ಷ ಸತ್ಯವಿಕ್ರಮಿಯು ಕೌರವ ಸೇನೆಯ ಹೆಚ್ಚುಭಾಗ ಯೋಧರನ್ನು ಸಂಹರಿಸಿ ಸೈಂಧವನ ಬಳಿಬಂದನು. ಭೀಮಸೇನ ಮತ್ತು ಸಾತ್ವತರಿಂದ ರಕ್ಷಿತನಾದ ಬೀಭತ್ಸುವು ಪ್ರಜ್ವಲಿಸುತ್ತಿರುವ ಹುತಾಶನನಂತಿದ್ದನು. ಹಾಗಿರುವ ಫಲ್ಗುನನನ್ನು ನೋಡಿ ವೀರ್ಯಸಮ್ಮತರಾದ ಮಹೇಷ್ವಾಸರಾದ ಕೌರವ ಪುರುಷರ್ಷಭರು ಸಹಿಸಿಕೊಳ್ಳಲಿಲ್ಲ. ದುರ್ಯೋಧನ, ಕರ್ಣ, ವೃಷಸೇನ, ಮದ್ರರಾಜ, ಅಶ್ವತ್ಥಾಮ, ಕೃಪ ಮತ್ತು ಸ್ವಯಂ ಸೈಂಧವ ಇವರು ಸೈಂಧವನಿಗಾಗಿ ಸಂರಬ್ಧರಾಗಿ ರಥಮಾರ್ಗದಲ್ಲಿ ನರ್ತಿಸುವಂತಿದ್ದ, ಜೋರಾಗಿ ಧನುಸ್ಸನ್ನು ಟೇಂಕರಿಸುತ್ತಿದ್ದ ಮತ್ತು ಚಪ್ಪಾಳೆಹಾಕುತ್ತಿದ್ದ ಕಿರೀಟಿಯನ್ನು ಸುತ್ತುವರೆದರು. ಎಲ್ಲ ಯುದ್ಧವಿಶಾರದರೂ ಬಾಯಿಕಳೆದ ಅಂತಕನಂತಿದ್ದ ಸಂಗ್ರಾಮಕೋವಿದ ಪಾರ್ಥನನ್ನು ಸುತ್ತುವರೆದರು. ಭಾಸ್ಕರನು ಕೆಂಪಾಗುತ್ತಿರಲು, ಈಗಲೇ ಸೂರ್ಯಾಸ್ತವಾಗಲೆಂದು ಬಯಸುತ್ತಾ ಅವರು ಸೈಂಧವನನ್ನು ಹಿಂದಿರಿಸಿಕೊಂಡು ಅರ್ಜುನ-ಅಚ್ಯುತರನ್ನು ಆಕ್ರಮಣಿಸಿದರು. ಅವರು ತಮ್ಮ ಸರ್ಪಗಳಂತಿದ್ದ ಬಾಹುಗಳಿಂದ ಧನುಸ್ಸುಗಳನ್ನು ಎಳೆದು ಸೂರ್ಯನ ರಶ್ಮಿಗಳಂತಿದ್ದ ನೂರಾರು ಸಾಯಕಗಳನ್ನು ಫಲ್ಗುನನ ಮೇಲೆ ಪ್ರಯೋಗಿಸಿದರು.

ಯುದ್ಧದುರ್ಮದ ಕಿರೀಟಿಯು ಅವರ ಪ್ರತಿಯೊಂದು ಬಾಣವನ್ನೂ ಎರಡು-ಮೂರಾಗಿ ತುಂಡರಿಸಿ ರಣದಲ್ಲಿ ಅವರನ್ನು ಹೊಡೆದನು. ಸಿಂಹದ ಬಾಲದ ಧ್ವಜವುಳ್ಳ ಶಾರದ್ವತೀಸುತನು ತನ್ನ ಶಕ್ತಿಯನ್ನು ತೋರಿಸುತ್ತಾ ಅರ್ಜುನನನ್ನು ಎದುರಿಸಿ ತಡೆದನು. ಅವನು ಹತ್ತರಿಂದ ಪಾರ್ಥನನ್ನೂ, ಏಳರಿಂದ ವಾಸುದೇವನನ್ನೂ ಹೊಡೆದು ಸೈಂಧವನನ್ನು ಪರಿಪಾಲಿಸುತ್ತಾ ರಥಮಾರ್ಗದಲ್ಲಿ ನಿಂತನು. ಆಗ ಅವರನ್ನು ಕೌರವಶ್ರೇಷ್ಠ ಮಹಾರಥರೆಲ್ಲರೂ ಅತಿದೊಡ್ಡ ರಥಗುಂಪುಗಳೊಡನೆ ಎಲ್ಲ ಕಡೆಗಳಿಂದ ಸುತ್ತುವರೆದರು. ಚಾಪಗಳನ್ನು ಸೆಳೆಯುತ್ತಾ, ಸಾಯಕಗಳನ್ನು ಬಿಡುತ್ತಾ ಅವರು ದುರ್ಯೋಧನನ ಶಾಸನದಂತೆ ಸೈಂಧವನ್ನು ಪರಿರಕ್ಷಿಸುತ್ತಿದ್ದರು. ಪಾರ್ಥನು ದ್ರೌಣಿ ಮತ್ತು ಶಾರದ್ವತರ ಅಸ್ತ್ರಗಳನ್ನು ಅಸ್ತ್ರಗಳಿಂದ ತಡೆದು, ತಲಾ ಒಂಭತ್ತರಂತೆ ಎಲ್ಲರನ್ನೂ ಬಾಣಗಳಿಂದ ಹೊಡೆದನು. ಅವನು ದ್ರೌಣಿಯನ್ನು ಇಪ್ಪತ್ತೈದರಿಂದ, ವೃಷಸೇನನನ್ನು ಏಳರಿಂದ, ದುರ್ಯೋಧನನನ್ನು ಇಪ್ಪತ್ತರಿಂದ ಮತ್ತು ಕರ್ಣ-ಶಲ್ಯರನ್ನು ಮೂರು-ಮೂರರಿಂದ ಹೊಡೆದನು. ಪುನಃ ಪುನಃ ಗರ್ಜಿಸುತ್ತಾ ಹೊಡೆಯುತ್ತಾ ಧನುಸ್ಸುಗಳನ್ನು ಟೇಂಕರಿಸುತ್ತಾ ಅವರು ಅವನನ್ನು ಎಲ್ಲ ಕಡೆಗಳಿಂದ ಮುತ್ತಿಗೆ ಹಾಕಿದರು. ಸೂರ್ಯಾಸ್ತವನ್ನು ಬಯಸುತ್ತಾ ತ್ವರೆಮಾಡುತ್ತಿದ್ದ ಆ ಮಹಾರಥರು ಎಲ್ಲರೂ ಒಬ್ಬರಿಗೊಬ್ಬರು ತಾಗಿಕೊಂಡು ರಥಗಳ ಮಂಡಲವನ್ನು ಮಾಡಿಕೊಂಡು ಯುದ್ಧಮಾಡುತ್ತಿದ್ದರು.

ಅವನನ್ನು ಎದುರಿಸಿ ಗರ್ಜಿಸುತ್ತಾ, ಧನುಸ್ಸುಗಳನ್ನು ಟೇಂಕರಿಸುತ್ತಾ, ಘೋರ ಮಾರ್ಗಣಗಳಿಂದ ಮೋಡಗಳು ಪರ್ವತದ ಮೇಲೆ ಮಳೆನೀರನ್ನು ಸುರಿಸುವಂತೆ ಮುಚ್ಚಿದರು. ಪರಿಘಗಳಂತೆ ಬಾಹುಗಳನ್ನು ಹೊಂದಿದ್ದ ಆ ಶೂರರು ಧನಂಜಯದ ಶರೀರದ ಮೇಲೆ ಮಹಾ ದಿವ್ಯಾಸ್ತ್ರಗಳನ್ನು ಪ್ರಯೋಗಿಸಿದರು. ಆ ಬಲಶಾಲೀ ದುರಾಧರ್ಷ ಸತ್ಯವಿಕ್ರಮಿಯು ಕೌರವ ಸೇನೆಯ ಹೆಚ್ಚುಭಾಗ ಯೋಧರನ್ನು ಸಂಹರಿಸಿ ಸೈಂಧವನ ಬಳಿಬಂದನು. ಆಗ ಕರ್ಣನು ಭೀಮಸೇನ-ಸಾತ್ಯಕಿಯರು ನೋಡುತ್ತಿದ್ದಂತೆಯೇ ಅವನನ್ನು ಆಶುಗಗಳಿಂದ ತಡೆದನು. ಆ ಸೂತಪುತ್ರನನ್ನು ಪಾರ್ಥನು ಎಲ್ಲ ಸೈನ್ಯಗಳೂ ನೋಡುತ್ತಿರುವಂತೆ ಹತ್ತು ಬಾಣಗಳಿಂದ ಹೊಡೆದನು. ಸಾತ್ವತನೂ ಕರ್ಣನನ್ನು ಮೂರು ಬಾಣಗಳಿಂದ, ಭೀಮಸೇನನು ಮೂರರಿಂದ ಮತ್ತು ಪಾರ್ಥನು ಪುನಃ ಏಳರಿಂದ ಹೊಡೆದರು.

ಮಹಾರಥ ಕರ್ಣನು ಅವರನ್ನು ಅರವತ್ತು-ಅರವತ್ತು ಶರಗಳಿಂದ ತಿರುಗಿ ಹೊಡೆದನು. ಆಗ ಅನೇಕರೊಂದಿಗೆ ಕರ್ಣನ ಯುದ್ಧವು ನಡೆಯಿತು. ಸಮರದಲ್ಲಿ ಒಬ್ಬನೇ ಕ್ರುದ್ಧನಾಗಿ ಮೂರು ರಥರನ್ನು ಸುತ್ತುವರೆಯುತ್ತಿದ್ದ ಸೂತಪುತ್ರನ ಅದ್ಭುತವು ಕಾಣದೊರಕಿತು. ಮಹಾಬಾಹು ಫಲ್ಗುನನಾದರೋ ನೂರು ಶರಗಳಿಂದ ವೈಕರ್ತನ ಕರ್ಣನ ಸರ್ವ ಮರ್ಮಗಳಿಗೆ ಹೊಡೆದನು. ಸರ್ವಾಂಗಗಳೂ ರಕ್ತದಿಂದ ತೋಯ್ದ ಪ್ರತಾಪವಾನ್ ವೀರ ಸೂತಪುತ್ರನು ಐನೂರು ಶರಗಳಿಂದ ಫಲ್ಗುನನನ್ನು ತಿರುಗಿ ಹೊಡೆದನು. ರಣದಲ್ಲಿ ಅವನ ಲಾಘವವನ್ನು ಕಂಡು ಅರ್ಜುನನು ಸಹಿಸಿಕೊಳ್ಳಲಿಲ್ಲ. ಆಗ ತ್ವರೆಮಾಡಿ ವೀರ ಧನಂಜಯನು ಅವನ ಧನುಸ್ಸನ್ನು ತುಂಡರಿಸಿ, ಎದೆಯ ಮೇಲೆ ಒಂಭತ್ತು ಸಾಯಕಗಳಿಂದ ಹೊಡೆದನು. ಸಮರದಲ್ಲಿ ಅವನ ವಧೆಗೋಸ್ಕರ ಧನಂಜಯನು ತ್ವರೆಮಾಡಿ ವೇಗವುಳ್ಳ ಸೂರ್ಯವರ್ಚಸ ಸಾಯಕವನ್ನು ಎಸೆದನು. ವೇಗದಿಂದ ಬರುತ್ತಿದ್ದ ಆ ಸಾಯಕವನ್ನು ದ್ರೌಣಿಯು ತೀಕ್ಷ್ಣವಾದ ಅರ್ಧಚಂದ್ರದಿಂದ ಕತ್ತರಿಸಿ ಭೂಮಿಗೆ ಕೆಡವಿದನು. ಆಗ ಸೂತಪುತ್ರ ಕರ್ಣನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಪ್ರತೀಕಾರವನ್ನು ಮಾಡಲು ಬಯಸಿ ಫಲ್ಗುನನನ್ನು ಅನೇಕ ಸಾವಿರ ಸಾಯಕಗಳಿಂದ ಮುಚ್ಚಿಬಿಟ್ಟನು. ಗೂಳಿಗಳಂತೆ ಗುರುಟುಹಾಕುತ್ತಿದ್ದ ಆ ನರಸಿಂಹ ಮಹಾರಥರು ಸಾಯಕಗಳ ಸಮೂಹಗಳಿಂದ ಪರಸ್ಪರರನ್ನು ಮತ್ತು ಜಿಹ್ಮಗಗಳಿಂದ ಆಕಾಶವನ್ನು ಮುಚ್ಚಿ, ಪರಸ್ಪರರನ್ನು ಕೊಲ್ಲಲು ಬಯಸಿ ಶರೌಘಗಳಿಂದ ಅದೃಶ್ಯರನ್ನಾಗಿಸಿದರು. “ನಾನು ಪಾರ್ಥ! ನಿಲ್ಲು!” ಎಂದೂ “ನಾನು ಕರ್ಣ! ನಿಲ್ಲು ಫಲ್ಗುನ!” ಎಂದೂ ಕೂಗಿಕೊಳ್ಳುತ್ತಾ ವಾಕ್ಶಲ್ಯಗಳಿಂದ ಚುಚ್ಚುತ್ತಿರುವುದು ಕೇಳಿಬರುತ್ತಿತ್ತು.

ಸಮರದಲ್ಲಿ ವಿಚಿತ್ರವಾಗಿ, ಲಘುವಾಗಿ ಮತ್ತು ದೃಢವಾಗಿ ಯುದ್ಧಮಾಡುತ್ತಿದ್ದ ಆ ವೀರರು ಸರ್ವಯೋಧರ ಸಮಾಗಮದಲ್ಲಿ ಪ್ರೇಕ್ಷಣೀಯವಾಗಿತ್ತು. ಸಮರದಲ್ಲಿ ಪರಸ್ಪರರನ್ನು ವಧಿಸಲು ಬಯಸಿ ಯುದ್ಧಮಾಡುತ್ತಿದ್ದ ಅವರನ್ನು ಸಿದ್ಧ-ಚಾರಣರು ಪ್ರಶಂಸಿಸಿದರು. ಆಗ ದುರ್ಯೋಧನನು ನಿನ್ನವರಿಗೆ “ರಾಧೇಯನನ್ನು ರಕ್ಷಿಸಿರಿ! ಸಮರದಲ್ಲಿ ಅರ್ಜುನನ್ನು ಸಂಹರಿಸದೇ ಹಿಂದಿರುಗುವುದಿಲ್ಲವೆಂದು ವೃಷನೇ ನನಗೆ ಹೇಳಿದ್ದಾನೆ” ಎಂದು ಹೇಳಿದನು. ಇದರ ನಡುವೆ ಕರ್ಣನ ವಿಕ್ರಮವನ್ನು ನೋಡಿ ಅರ್ಜುನನು ಆಕರ್ಣವಾಗಿ ಸೆಳೆದು ಬಿಟ್ಟ ನಾಲ್ಕು ಉತ್ತಮ ಸಾಯಕಗಳಿಂದ ಕರ್ಣನ ನಾಲ್ಕೂ ಕುದುರೆಗಳನ್ನು ಮೃತ್ಯುಲೋಕಕ್ಕೆ ಕಳುಹಿಸಿಬಿಟ್ಟನು. ಭಲ್ಲದಿಂದ ಅವನ ಸಾರಥಿಯನ್ನು ರಥದ ನೊಗದ ಮೇಲಿಂದ ಬೀಳಿಸಿದನು. ನಿನ್ನ ಮಗನು ನೋಡುತ್ತಿದ್ದಂತೆಯೇ ಶರಗಳಿಂದ ಅವನನ್ನು ಮುಚ್ಚಿಬಿಟ್ಟನು. ಸಮರದಲ್ಲಿ ಹೀಗೆ ಕುದುರೆಗಳು ಮತ್ತು ಸಾರಥಿಯು ಹತರಾಗಲು, ಶರಜಾಲಗಳಿಂದ ಮುಚ್ಚಲ್ಪಟ್ಟು ಮೋಹಿತನಾದ ಅವನಿಗೆ ಏನು ಮಾಡಬೇಕೆಂದು ತೋಚದಾಯಿತು. ಆಗ ಅವನು ವಿರಥನಾದುದನ್ನು ಕಂಡು ಅಶ್ವತ್ಥಾಮನು ಅವನನ್ನು ತನ್ನ ರಥದಲ್ಲಿ ಏರಿಸಿಕೊಂಡು ಮತ್ತೆ ಅರ್ಜುನನೊಂದಿಗೆ ಯುದ್ಧದಲ್ಲಿ ತೊಡಗಿದನು.

ಮದ್ರರಾಜನಾದರೋ ಕೌಂತೇಯನನ್ನು ಮೂವತ್ತು ಬಾಣಗಳಿಂದ ಪ್ರಹರಿಸಿದನು. ಶಾರದ್ವತನಾದರೋ ಇಪ್ಪತ್ತರಿಂದ ವಾಸುದೇವನನ್ನು ಹೊಡೆದು, ಹನ್ನೆರಡು ಶಿಲೀಮುಖಗಳಿಂದ ಹೊಡೆದನು. ಸಿಂಧುರಾಜನು ನಾಲ್ಕರಿಂದ ಮತ್ತು ವೃಷಸೇನನು ಏಳರಿಂದ ಪ್ರತ್ಯೇಕ ಪ್ರತ್ಯೇಕವಾಗಿ ಕೃಷ್ಣ-ಪಾರ್ಥರನ್ನು ಹೊಡೆದರು. ಹಾಗೆಯೇ ಅವರನ್ನು ಧನಂಜಯನು ಪ್ರತಿಯಾಗಿ ಹೊಡೆದನು. ದ್ರೋಣಪುತ್ರನನ್ನು ಅರವತ್ನಾಲ್ಕರಿಂದ, ಮದ್ರರಾಜನನ್ನು ನೂರರಿಂದ, ಸೈಂಧವನನ್ನು ಹತ್ತು ಭಲ್ಲಗಳಿಂದ, ವೃಷಸೇನನನ್ನು ಮೂರು ಶರಗಳಿಂದ, ಶಾರದ್ವತನನ್ನು ಇಪ್ಪತ್ತರಿಂದ ಹೊಡೆದು ಪಾರ್ಥನು ಜೋರಾಗಿ ಗರ್ಜಿಸಿದನು. ಸವ್ಯಸಾಚಿಯ ಪ್ರತಿಜ್ಞೆಯನ್ನು ಪ್ರತೀಘಾತಗೊಳಿಸಲು ಇಚ್ಛಿಸಿ ಕೌರವರೆಲ್ಲರೂ ಒಟ್ಟಿಗೇ ತಕ್ಷಣವೇ ಧನಂಜಯನ ಮೇಲೆ ಎರಗಿದರು.

ಆಗ ಅರ್ಜುನನು ಧಾರ್ತರಾಷ್ಟ್ರರನ್ನು ಭಯಪಡಿಸುತ್ತ ಸರ್ವತ್ರ ವಾರುಣಾಸ್ತ್ರವನ್ನು ಪ್ರಕಟಪಡಿಸಿದನು. ಅದಕ್ಕೆ ಪ್ರತಿಯಾಗಿ ಕುರುಗಳು ಮಹಾಮೂಲ್ಯ ರಥಗಳ ಮೇಲಿಂದ ಪಾಂಡುಪುತ್ರನ ಮೇಲೆ ಶರವರ್ಷಗಳನ್ನು ಸುರಿಸಿದರು. ಭ್ರಾಂತಗೊಳಿಸುವ, ಸುದಾರುಣವಾದ ಆ ತುಮುಲ ಯುದ್ಧವು ಪ್ರಾರಂಭವಾಗಲು ರಾಜಪುತ್ರ ಕಿರೀಟಮಾಲಿಯು ಮಾತ್ರ ಸ್ವಲ್ಪವೂ ಭ್ರಾಂತನಾಗದೇ ಬಾಣಗಳ ಸಮೂಹಗಳನ್ನು ಪ್ರಯೋಗಿಸುತ್ತಲೇ ಇದ್ದನು. ರಾಜ್ಯವನ್ನು ಪಡೆಯಬೇಕೆಂದು ಬಯಸುತ್ತಿದ್ದ ಸವ್ಯಸಾಚಿಯು, ಹನ್ನೆರಡು ವರ್ಷಗಳು ಕುರುಗಳು ನೀಡಿದ ಕ್ಲೇಶಗಳನ್ನು ಸ್ಮರಿಸಿಕೊಳ್ಳುತ್ತಾ ಗಾಂಡೀವದಿಂದ ಹೊರಟ ಬಾಣಗಳಿಂದ ಸರ್ವ ದಿಕ್ಕುಗಳನ್ನೂ ಮುಚ್ಚಿದನು. ಕ್ರುದ್ಧನಾದ ಕಿರೀಟಿಯು ಪಿಂಗಳವರ್ಣದ ಮೌರ್ವಿಯಿಂದ ವೇಗವಾಗಿ ಶತ್ರುಗಳನ್ನು ಕೊಲ್ಲುತ್ತಿರುವಾಗ ಆಕಾಶವು ಉಲ್ಕೆಗಳಿಂದಲೋ ಎಂಬಂತೆ ಪ್ರದೀಪ್ತವಾಗಿತ್ತು. ಕೆಳಗೆ ಬಿದ್ದ ದೇಹಗಳ ಮೇಲೆ ಕಾಗೆಗಳು ಬಂದು ಬೀಳುತ್ತಿದ್ದವು. ಮಹಾಯಶಸ್ವೀ ಸೇನೆಗಳನ್ನು ಗೆಲ್ಲುವ ಕಿರೀಟಮಾಲಿಯು ಮಹಾ ಧನುಸ್ಸಿನಿಂದ ಬಿಟ್ಟ ಬಾಣಗಳಿಂದ ಕುದುರೆಗಳ ಮೇಲೆ ಮತ್ತು ಉತ್ತಮ ಆನೆಗಳ ಮೇಲೆ ಕುಳಿತಿದ್ದ ಕುರುಪ್ರವೀರರನ್ನು ಕೆಡವಿದನು. ನರಾಧಿಪರು ಭಾರವಾದ ಗದೆಗಳನ್ನೂ, ಕಬ್ಬಿಣದ ಪರಿಘಗಳನ್ನೂ, ಖಡ್ಗಗಳನ್ನೂ, ಶಕ್ತಿಗಳನ್ನೂ, ಭೀಮದರ್ಶನ ಮಹಾ ಶಸ್ತ್ರಗಳನ್ನೂ ಹಿಡಿದು ಪಾರ್ಥನ ಮೇಲೆ ಒಮ್ಮೆಲೇ ಆಕ್ರಮಣ ಮಾಡಿದರು. ಯಮರಾಷ್ಟ್ರವರ್ಧಕ ಮಹಾಧನುರ್ಧರ ವೀರನು ನುಗ್ಗಿಬರುತ್ತಿರುವ ರಥ-ಕುದುರೆ-ಆನೆ-ಪದಾತಿಸಂಘಗಳನ್ನು ಆಯುಧರಹಿತರನ್ನಾಗಿಯೂ ಜೀವರಹಿತರನ್ನಾಗಿಯೂ ಮಾಡಿದನು.

ಜಯದ್ರಥವಧೆ

ಆ ಪಾರ್ಥ ಧನಂಜಯನು ರಣದಲ್ಲಿ ವಿಚಿತ್ರ ಅಸ್ತ್ರಗಳನ್ನು ಪ್ರದರ್ಶಿಸುತ್ತಾ ಒಂದೇ ಸಮಯದಲ್ಲಿ ಎಲ್ಲ ದಿಕ್ಕುಗಳಲ್ಲಿ ಕಾಣಿಸಿಕೊಳ್ಳುತ್ತಾ ಸಂಚರಿಸುತ್ತಿದ್ದನು. ಅಂಬರದಲ್ಲಿ ಮಧ್ಯಾಹ್ನವನ್ನು ತಲುಪಿದ ಸೂರ್ಯನಂತೆ ಪ್ರತಾಪಿಸುತ್ತಿರುವ ಪಾಂಡವನನ್ನು ಸರ್ವಭೂತಗಳೂ ಎವೆಯಿಕ್ಕಿ ನೋಡಲು ಶಕ್ಯರಾಗುತ್ತಿರಲಿಲ್ಲ. ಆ ಮಹಾತ್ಮನು ಗಾಂಡೀವದಿಂದ ಹೊರಬಿಡುತ್ತಿದ್ದ ಶರಸಮೂಹಗಳನ್ನು ಅಂಬರದಲ್ಲಿ ಹಂಸಗಳ ಪಂಗ್ತಿಗಳಂತೆ ಕಾಣುತ್ತಿದ್ದವು. ಅವನು ಎಲ್ಲಕಡೆ ವೀರರ ಅಸ್ತ್ರಗಳನ್ನು ಅಸ್ತ್ರಗಳಿಂದ ತಡೆಯುತ್ತಾ ತನ್ನನ್ನು ಉಗ್ರಕರ್ಮದಲ್ಲಿ ತೊಡಗಿಸಿಕೊಂಡು ರೌದ್ರನಾಗಿ ತೋರಿದನು. ಆ ಅರ್ಜುನನು ಜಯದ್ರಥನ ವಧೆಯನ್ನು ಬಯಸಿ ನಾರಾಚಗಳಿಂದ ಮೋಹಗೊಳಿಸುತ್ತಿರುವಂತೆ ಆ ರಥವರರನ್ನು ಅತಿಕ್ರಮಿಸಿದನು. ಅಸಿತಸಾರಥಿ ಧನಂಜಯನು ಎಲ್ಲ ದಿಕ್ಕುಗಳಲ್ಲಿ ಶರಗಳನ್ನು ಪ್ರಯೋಗಿಸುತ್ತಾ ವೇಗವಾಗ ರಣದಲ್ಲಿ ಸಂಚರಿಸುತ್ತಿರುವಂತೆ ತೋರುತ್ತಿದ್ದನು. ಆ ಮಹಾತ್ಮ ಶೂರನ ನೂರಾರು ಸಹಸ್ರಾರು ಶರಸಮೂಹಗಳು ಅಂತರಿಕ್ಷದಲ್ಲಿ ಅಲ್ಲಲ್ಲಿಯೇ ತಿರುಗುತ್ತಿರುವಂತೆ ತೋರುತ್ತಿದ್ದವು. ಆಗ ಪಾಂಡವ ಮಹೇಷ್ವಾಸನು ಬಾಣಗಳನ್ನು ತೆಗೆದುಕೊಳ್ಳುವುದನ್ನಾಗಲಿ, ಹೂಡುವುದನ್ನಾಗಲೀ, ಬಿಡುವುದನ್ನಾಗಲೀ ಯಾರೂ ಕಾಣುತ್ತಿರಲಿಲ್ಲ. ಹಾಗೆ ಸರ್ವ ದಿಕ್ಕುಗಳನ್ನೂ ಸರ್ವ ರಥಿಗಳನ್ನೂ ರಣದಲ್ಲಿ ವಿಮೋಹಿತರನ್ನಾಗಿ ಮಾಡಿ ಕೌಂತೇಯನು ಜಯದ್ರಥನ ಬಳಿ ಬಂದೇಬಿಟ್ಟನು ಮತ್ತು ಅರತ್ನಾಲ್ಕು ನತಪರ್ವಶರಗಳಿಂದ ಅವನನ್ನು ಹೊಡೆದನು. ಗಾಂಡೀವಧನ್ವಿಯ ಶರಗಳಿಂದ ಪೀಡಿತನಾದ ಸೈಂಧವನಾದರೋ ಗಾಯಗೊಂಡು ಕೋಪಗೊಂಡ ಸಲಗದಂತೆ ಸಹಿಸಿಕೊಳ್ಳಲಿಲ್ಲ. ಆ ವರಾಹಧ್ವಜನು ಕೂಡಲೇ ಹದ್ದಿನ ಗರಿಗಳನ್ನುಳ್ಳ ಹಾವಿನ ವಿಷಕ್ಕೆ ಸಮಾನ ಪ್ರಖರವುಳ್ಳ, ಕಮ್ಮಾರನಲ್ಲಿಂದ ಮಾಡಿಸಲ್ಪಟ್ಟ ನಿಶಿತ ಜಿಹ್ಮಗ ಸಾಯಕಗಳನ್ನು ಸವ್ಯಸಾಚಿಯ ಮೇಲೆ ಪ್ರಯೋಗಿಸಿದನು.

ಮೂರರಿಂದ ಗಾಂಡೀವವನ್ನು ಹೊಡೆದು, ಆರು ನಾರಾಚಗಳಿಂದ ಅರ್ಜುನನನ್ನೂ, ಎಂಟರಿಂದ ಕುದುರೆಗಳನ್ನೂ, ಮತ್ತು ಒಂದು ಪತ್ರಿಯಿಂದ ಧ್ವಜವನ್ನೂ ಹೊಡೆದನು. ಸೈಂಧವನು ಕಳುಹಿಸಿದ ಆ ತೀಕ್ಷ್ಣ ಶರಗಳನ್ನು ತುಂಡರಿಸಿ ಅರ್ಜುನನು ಎರಡು ಬಾಣಗಳಿಂದ ಸೈಂಧವನ ಸಾರಥಿಯ ಶಿರವನ್ನು ಕಾಯದಿಂದ ಮತ್ತು ಸಮಲಂಕೃತವಾದ ಧ್ವಜವನ್ನು ಕತ್ತರಿಸಿದನು. ಅವನ ಶರದಿಂದ ಹೊಡೆಯಲ್ಪಟ್ಟು ದಂಡವು ತುಂಡಾಗಲು ಸಿಂಧುರಾಜನ ಆ ದೊಡ್ಡ, ಅಗ್ನಿಶಿಖೆಯಂತಿದ್ದ ವರಾಹವು ಕೆಳಗೆ ಬಿದ್ದಿತು.

ಇದೇ ಸಮಯದಲ್ಲಿ ಭಾಸ್ಕರನು ಶೀಘ್ರವಾಗಿ ಹೋಗುತ್ತಿರಲು, ತ್ವರೆಮಾಡಿ ಜನಾರ್ದನನು ಪಾಂಡವನಿಗೆ ಹೇಳಿದನು: “ಧನಂಜಯ! ದುರಾತ್ಮ ಸೈಂಧವನ ಶಿರಸ್ಸನ್ನು ಕತ್ತರಿಸು. ದಿವಾಕರನು ಅಸ್ತಾಚಲವನ್ನು ಸೇರುತ್ತಿದ್ದಾನೆ. ಜಯದ್ರಥನ ವಧೆಯ ಕುರಿತಾದ ನನ್ನ ಈ ಮಾತನ್ನೂ ಕೇಳು! ಜಗತ್ತಿನಲ್ಲಿ ವಿಶ್ರುತನಾಗಿದ್ದ ಸೈಂಧವನ ತಂದೆ ವೃದ್ಧಕ್ಷತ್ರನು ಬಹಳ ಸಮಯದ ನಂತರ ಮಗನನ್ನಾಗಿ ಈ ಜಯದ್ರಥನನ್ನು ಪಡೆದನು. ಆಗ ಮೇಘದುಂಧುಭಿಯಂತೆ ಮೊಳಗುತ್ತಿದ್ದ ಅಶರೀರವಾಣಿಯು ಅವನಿಗೆ ಹೇಳಿತು: “ನಿನ್ನ ಈ ಮಗನು ಮನುಷ್ಯರಲ್ಲಿ ಕುಲ-ಶೀಲ-ದಮಗಳಲ್ಲಿ ಗುಣಶೀಲನಾಗಿ ಎರಡೂ ಕುಲಗಳಿಗೆ ಸದೃಶನಾಗಿರುತ್ತಾನೆ. ಲೋಕದಲ್ಲಿ ಕ್ಷತ್ರಿಯಪ್ರವರನೆಂದೆನಿಸಿಕೊಳ್ಳುತ್ತಾನೆ. ಶೂರರೂ ಇವನನ್ನು ಸದಾ ಸತ್ಕರಿಸುತ್ತಾರೆ. ಆದರೆ ಶತ್ರುವಾಗಿ ಯುದ್ಧಮಾಡುತ್ತಿರುವಾಗ ಸಂಗ್ರಾಮದಲ್ಲಿ ಸಂಕ್ರುದ್ಧನಾಗಿ ಧನ್ವಿಯೋರ್ವನು ಇವನ ಶಿರವನ್ನು ಕತ್ತರಿಸುತ್ತಾನೆ.” ಇದನ್ನು ಕೇಳಿ ತುಂಬಾ ಸಮಯ ಚಿಂತಿಸಿದ ಅರಿಂದಮ ಸಿಂಧುರಾಜನು ಪುತ್ರಸ್ನೇಹದಿಂದ ಪೀಡಿತನಾಗಿ ತನ್ನ ಎಲ್ಲ ದಾಯಾದಿ-ಬಾಂಧವರಿಗೆ ಹೇಳಿದನು: “ಸಂಗ್ರಾಮದಲ್ಲಿ ಮಹಾ ಭಾರವನ್ನು ಹೊತ್ತು ಯುದ್ಧಮಾಡುತ್ತಿದ್ದ ನನ್ನ ಮಗನ ಶಿರವನ್ನು ಯಾರು ಭೂಮಿಯ ಮೇಲೆ ಬೀಳಿಸುತ್ತಾರೋ ಅವನ ಶಿರವೂ ಕೂಡ ನೂರು ಚೂರಾಗುತ್ತದೆ. ಇದು ಖಂಡಿತ!” ಹೀಗೆ ಹೇಳಿ ಜಯದ್ರಥನನ್ನು ರಾಜ್ಯದಲ್ಲಿ ಸ್ಥಾಪಿಸಿ ವೃದ್ಧಕ್ಷತ್ರನು ವನಕ್ಕೆ ತೆರಳಿ ತಪಸ್ಸಿನಲ್ಲಿ ತೊಡಗಿದನು. ಆ ತೇಜಸ್ವಿಯು ಸಮಂತಪಂಚಕದ ಹೊರಗೆ ಘೋರವಾದ ದುರಾಸದ ತಪಸ್ಸನ್ನು ತಪಿಸುತ್ತಿದ್ದಾನೆ. ಆದುದರಿಂದ ನೀನು ಘೋರವೂ ಅದ್ಭುತವೂ ಆದುದನ್ನು ಮಾಡಬಲ್ಲ ದಿವ್ಯಾಸ್ತ್ರದಿಂದ ಜಯದ್ರಥನ ಕುಂಡಲಗಳೊಂದಿಗೆ ಶಿರಸ್ಸನ್ನು ಕತ್ತರಿಸಿ ವೃದ್ಧಕ್ಷತ್ರನ ತೊಡೆಯ ಮೇಲೆ ಕೆಡವು. ಆದರೆ ಈಗ ನೀನು ಅವನ ತಲೆಯನ್ನು ನೆಲದ ಮೇಲೆ ಬೀಳಿಸಿದರೆ ನಿನ್ನ ತಲೆಯೂ ಕೂಡ ನೂರು ಚೂರಾಗಿ ಒಡೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಇದು ರಾಜಾ ಪೃಥಿವೀಪತಿಗೆ ತಿಳಿಯದಂತೆ ದಿವ್ಯ ಅಸ್ತ್ರದ ಆಶ್ರಯದಲ್ಲಿ ಇದನ್ನು ಮಾಡು. ಸಮಸ್ತವಾದ ಈ ಮೂರು ಲೋಕಗಳಲ್ಲಿಯೂ ನಿನಗೆ ಅಸಾಧ್ಯವಾದ ಕಾರ್ಯವೆನ್ನುವುದು ಯಾವುದೂ ಇಲ್ಲ.”

ಈ ಮಾತನ್ನು ಕೇಳಿ ಅರ್ಜುನನು ತಕ್ಷಣವೇ ಕಟವಾಯಿಗಳನ್ನು ಸವರುತ್ತಾ ಇಂದ್ರನ ವಜ್ರಾಯುಧದಂತೆ ಕಠಿನಸ್ಪರ್ಶಿಯಾದ, ದಿವ್ಯಮಂತ್ರಗಳಿಂದ ಅಭಿಮಂತ್ರಿತವಾದ, ಸರ್ವಭಾರಗಳನ್ನೂ ಸಹಿಸಿಕೊಳ್ಳಬಲ್ಲ, ಗಂಧ-ಮಾಲೆಗಳಿಂದ ಅರ್ಚಿತವಾದ ಶರವನ್ನು ಸೈಂಧವನ ವಧೆಗಾಗಿ ಬಿಟ್ಟನು. ಗಾಂಡೀವದಿಂದ ಹೊರಟ ಆ ಶರವು ಮರದ ಮೇಲಿಂದ ಆಹಾರವನ್ನು ಎತ್ತಿಕೊಂಡು ಹೋಗುವ ಗಿಡುಗ ಪಕ್ಷಿಯಂತೆ ಸೈಂಧವನ ಶಿರವನ್ನು ಅಪಹರಿಸಿ ಮೇಲೆ ಹಾರಿತು. ಪುನಃ ಶರಗಳಿಂದ ಅದನ್ನು ಇನ್ನೂ ಮೇಲಕ್ಕೆ ಏರಿಸಿ ಧನಂಜಯನು ದುಹೃದರ ಸಂತೋಷವನ್ನು ಅಪಹರಿಸಿ ಸುಹೃದರಿಗೆ ಹರ್ಷವನ್ನಿತ್ತನು. ಶರಗಳಿಂದ ಸೇತುವೆಯಂತೆ ಮಾಡಿ ಪಾಂಡವನು ಅವನ ಶಿರವನ್ನು  ಸಮಂತಪಂಚಕದ ಹೊರಗೆ ಕಳುಹಿಸಿದನು. ಇದೇ ಸಮಯದಲ್ಲಿ ಧೃತರಾಷ್ಟ್ರನ ಸಂಬಂಧಿ ತೇಜಸ್ವಿ ಮಹೀಪತಿ ವೃದ್ಧಕ್ಷತ್ರನು ಸಂಧ್ಯಾವಂದನೆಯಲ್ಲಿ ತೊಡಗಿದ್ದನು. ಕುಳಿತಿದ್ದ ಅವನ ತೊಡೆಗಳ ಮೇಲೆ ಸಿಂಧುರಾಜನ ಕಪ್ಪು ಕೂದಲಿನ, ಕುಂಡಲಗಳೊಂದಿಗಿನ ರುಂಡವು ಬಿದ್ದಿತು. ತನ್ನ ತೊಡೆಯಮೇಲೆ ಬಿದ್ದಿದ್ದ ಕುಂಡಲಗಳಿಂದ ಸುಂದರವಾಗಿದ್ದ ತಲೆಯನ್ನು ನೃಪತಿ ವೃದ್ಧಕ್ಷತ್ರನು ಗಮನಿಸಲೇ ಇಲ್ಲ. ಜಪವನ್ನು ಮುಗಿಸಿ ಧೀಮತ ವೃದ್ಧಕ್ಷತ್ರನು ಎದ್ದು ನಿಲ್ಲಲು ಒಮ್ಮೆಲೇ ಶಿರವು ನೆಲದಮೇಲೆ ಬಿದ್ದಿತು. ಆಗ ಅವನ ಮಗನ ಶಿರವು ನೆಲವನ್ನು ಮುಟ್ಟಲು ನರೇಂದ್ರನ ತಲೆಯೂ ಕೂಡ ನೂರು ಚೂರುಗಳಾಯಿತು.

ಆಗ ಸರ್ವ ಭೂತಗಳೂ ಉತ್ತಮ ವಿಸ್ಮಿತರಾದರು. ವಾಸುದೇವನು ಮಹಾರಥ ಬೀಭತ್ಸುವನ್ನು ಹೊಗಳಿದನು. ಸಿಂಧುರಾಜ ಜಯದ್ರಥನು ಹತನಾದುದನ್ನು ನೋಡಿ ಧೃತರಾಷ್ಟ್ರ ಪುತ್ರರು ದುಃಖದಿಂದ ಕಣ್ಣೀರು ಸುರಿಸಿದರು. ಭೀಮಸೇನನೂ ಕೂಡ ಸಂಗ್ರಾಮದಲ್ಲಿ ಪಾಂಡವನಿಗೆ ಕೇಳುವಂತೆ ಎದೆ ತುಂಬಿ ಜೋರಾಗಿ ಸಿಂಹನಾದಗೈದನು. ಆ ಮಹಾನಾದವನ್ನು ಕೇಳಿ ಧರ್ಮಪುತ್ರ ಯುಧಿಷ್ಠಿರನು ಫಲ್ಗುನನಿಂದ ಸೈಂಧವನು ಹತನಾದನೆಂದು ತಿಳಿದುಕೊಂಡನು.

ಆಗ ವಾದ್ಯಘೋಷಗಳಿಂದ ತನ್ನವರನ್ನು ಹರ್ಷಗೊಳಿಸುತ್ತಾ ಅರ್ಜುನನು ಯುದ್ಧೇಚ್ಛೆಯಿಂದ ಭಾರದ್ವಾಜನನ್ನು ಆಕ್ರಮಣಿಸಿದನು. ಭಾಸ್ಕರನು ಅಸ್ತಂಗತನಾಗುತ್ತಿರಲು ಸೋಮಕರೊಂದಿಗೆ ದ್ರೋಣನ ಲೋಮಹರ್ಷಣ ಸಂಗ್ರಾಮವು ನಡೆಯಿತು. ಸೈಂಧವನು ಹತನಾದ ನಂತರ ಭಾರದ್ವಾಜನನ್ನು ಸಂಹರಿಸಲು ಬಯಸಿ ಆ ಮಹಾರಥರು ಸರ್ವ ಪ್ರಯತ್ನದಿಂದ ಯುದ್ಧಮಾಡುತ್ತಿದ್ದರು. ಸೈಂಧವನನ್ನು ಸಂಹರಿಸಿ ಜಯವನ್ನು ಪಡೆದ ಪಾಂಡವರಾದರೋ ಜಯೋನ್ಮತ್ತರಾಗಿ ಅಲ್ಲಲ್ಲಿ ದ್ರೋಣನೊಂದಿಗೆ ಯುದ್ಧಮಾಡಿದರು. ನೃಪ ಸೈಂಧವನನ್ನು ಕೊಂದು ಅರ್ಜುನನಾದರೋ ಕೌರವ ರಥಸತ್ತಮ ಯೋಧರೊಂದಿಗೆ ಯುದ್ಧಮಾಡಿದನು. ಹಿಂದೆ ಮಾಡಿದ ಪ್ರತಿಜ್ಞೆಯನ್ನು ಪೂರೈಸಿದ ಆ ವೀರ ಕಿರೀಟಮಾಲಿಯು ದೇವರಾಜನು ದೇವಶತ್ರುಗಳನ್ನು ಹೇಗೋ ಹಾಗೆ ಮತ್ತು ಸೂರ್ಯನು ಉದಯಿಸಿ ಕತ್ತಲೆಯನ್ನು ಹೇಗೆ ಕಳೆಯುವನೋ ಹಾಗೆ ಎಲ್ಲಕಡೆ ವಧಿಸುತ್ತಿದ್ದನು.

ಪಾರ್ಥನಿಂದ ರಣದಲ್ಲಿ ಸೈಂಧವನು ಹತನಾದುದನ್ನು ಕಂಡು ಕೃಪ ಶಾರದ್ವತನು ಕ್ರೋಧವಶನಾದನು. ಅವನು ಮಹಾ ಶರವರ್ಷದಿಂದ ಪಾಂಡವನನ್ನು ಮುಸುಕಿದನು. ದ್ರೌಣಿಯೂ ಕೂಡ ಪಾರ್ಥ ಫಲ್ಗುನನ ರಥವನ್ನು ಆಕ್ರಮಣಿಸಿದನು. ಅವರಿಬ್ಬರು ರಥಿಶ್ರೇಷ್ಠರೂ ಆ ರಥಸತ್ತಮನ ಎರಡೂ ಕಡೆಯಗಳಿಂದ ತೀಕ್ಷ್ಣ ವಿಶಿಖಗಳನ್ನು ಸುರಿಸಿದರು. ಆಗ ರಥಿಗಳಲ್ಲಿ ಶ್ರೇಷ್ಠ ಮಹಾಭುಜನು ಎರಡೂ ಕಡೆಗಳಿಂದ ಬೀಳುತ್ತಿರುವ ಮಹಾ ಶರವರ್ಷಗಳಿಂದ ಪೀಡಿತನಾಗಿ ಸಂಕಟಕ್ಕೊಳಗಾದನು. ಅಲ್ಲಿ ಧನಂಜಯನು ಗುರುವನ್ನಾಗಲೀ ಗುರುಪುತ್ರನನ್ನಾಗಲೀ ಸಂಹರಿಸಲು ಬಯಸದೇ ಕೇವಲ ಚಮತ್ಕಾರಗಳನ್ನು ತೋರಿಸುತ್ತಿದ್ದನು. ದ್ರೌಣಿ ಮತ್ತು ಶಾರದ್ವತರ ಅಸ್ತ್ರಗಳನ್ನು ಅಸ್ತ್ರಗಳಿಂದ ತಡೆಯುತ್ತಾ, ಅವರನ್ನು ಕೊಲ್ಲಬಾರದೆಂದು, ಮಂದವೇಗದಲ್ಲಿ ಬಾಣಗಳನ್ನು ಬಿಡುತ್ತಿದ್ದನು. ಅವನು ತುಂಬಾ ಜೋರಾಗಿ ಬಿಡದಿದ್ದರೂ ಕೂಡ ಜಯನಿಂದ ಬಿಡಲ್ಪಟ್ಟ ವಿಶಿಖ ಬಾಣಗಳು ಅವರಲ್ಲಿ ಬಹಳ ಆಳದವರೆಗೂ ತಾಗಿ ಗಾಯಗಳನ್ನುಂಟುಮಾಡಿದವು. ಆಗ ಕೌಂತೇಯನ ಶರಗಳಿಂದ ಪೀಡಿತನಾಗಿ ಶಾರದ್ವತನು ರಥದಲ್ಲಿ ಮೂರ್ಛೆಹೊಂದಿ ಆಸನದಲ್ಲಿಯೇ ಒರಗಿದನು. ತನ್ನ ಒಡೆಯನು ಶರಪೀಡಿತರಾಗಿ ಮೂರ್ಛೆ ಹೋಗಿದ್ದಾರೆ ಎಂದು ತಿಳಿಯದೇ ಇವನು ಹತನಾದನೆಂದೇ ತಿಳಿದು ಸಾರಥಿಯು ಅಲ್ಲಿಂದ ಪಲಾಯನಗೈದನು.

ಕೃಪ ಶಾರದ್ವತನು ಯುದ್ಧದಲ್ಲಿ ಮೂರ್ಛೆಹೋಗಲು ಅಶ್ವತ್ಥಾಮನು ಪಾಂಡವನನ್ನು ಬಿಟ್ಟು ಬೇರೆಯವರೊಡನೆ ಯುದ್ಧಮಾಡತೊಡಗಿದನು. ಶರಪೀಡಿತನಾದ ಶಾರದ್ವತನು ಮೂರ್ಛಿತನಾದುದನ್ನು ನೋಡಿ ರಥದಲ್ಲಿಯೇ ಅರ್ಜುನನು ಕೃಪಾವಿಷ್ಟನಾಗಿ ವಿಲಪಿಸಿದನು: “ಹೀಗಾಗುವುದೆಂದು ಕಂಡೇ ಮಹಾಪ್ರಜ್ಞ ಕ್ಷತ್ತನು ಕುಲಾಂತಕನಾದ ಪಾಪೀ ಸುಯೋಧನನು ಹುಟ್ಟಿದಾಗಲೇ ರಾಜನಿಗೆ ಹೇಳಿದ್ದನು: “ಈ ಕುಲಪಾಂಸನನನ್ನು ಈಗಲೇ ಪರಲೋಕಕ್ಕೆ ಕಳುಹಿಸಿಬಿಡು! ಇವನ ಬುದ್ಧಿಯಿಂದಾಗಿ ಕುರುಮುಖ್ಯರಿಗೆ ಮಹಾ ಭಯವು ಉಂಟಾಗುತ್ತದೆ!” ಆ ಸತ್ಯವಾದಿಯ ಮಾತೇ ಈಗ ಸತ್ಯವಾದಂತಿದೆ. ಅವನ ಕೃತ್ಯದಿಂದಾಗಿಯೇ ನಾನು ಇಂದು ಬಾಣದಿಂದ ಮಲಗಿರುವ ಕೃಪನನ್ನು ನೋಡುತ್ತಿದ್ದೇನೆ. ಕ್ಷತ್ರಿಯ ಧರ್ಮಕ್ಕೆ ಧಿಕ್ಕಾರ! ಬಲಪೌರುಷಕ್ಕೆ ಧಿಕ್ಕಾರ! ನನ್ನಂಥಹ ಯಾರು ತಾನೇ ಆಚಾರ್ಯ ಬ್ರಾಹ್ಮಣನಿಗೆ ದ್ರೋಹವೆಸಗುತ್ತಾನೆ? ಋಷಿಪುತ್ರ ನನ್ನ ಆಚಾರ್ಯ, ದ್ರೋಣನ ಪ್ರಿಯ ಸಖನಾದ ಇವನು ನನ್ನ ಬಾಣಗಳಿಂದ ಪೀಡಿತನಾಗಿ ರಥದಲ್ಲಿಯೇ ಒರಗಿ ಮಲಗಿದ್ದಾನೆ. ಬಯಸದಿದ್ದರೂ ನಾನು ಅವರನ್ನು ವಿಶಿಖಗಳಿಂದ ತುಂಬಾ ಪೀಡಿಸಿದೆನು. ಅವರು ರಥದಲ್ಲಿಯೇ ಕುಸಿದು ಬಿದ್ದುದು ನನ್ನ ಪಣಗಳನ್ನು ಅತೀವವಾಗಿ ಪೀಡಿಸುತ್ತಿದೆ. ಶರಾರ್ದಿತನಾದ ನಾನು ಆ ಮಹಾದ್ಯುತಿಯನ್ನು ಸುಮ್ಮನೇ ನೋಡುತ್ತಿರಬೇಕಿತ್ತು. ಆದರೆ ನನ್ನ ಅನೇಕ ಬಾಣಗಳಿಂದ ಹೊಡೆಯಲ್ಪಟ್ಟು ಅವನು ಎಲ್ಲ ಜೀವಿಗಳೂ ಹೋಗುವ ದಾರಿಯಲ್ಲಿ ಹೋಗಿದ್ದಾನೆ. ಅವನು ಬಿದ್ದು ನನ್ನ ಮಗನ ವಧೆಗಿಂತಲೂ ಹೆಚ್ಚಿನ ಶೋಕವನ್ನು ಇವನು ನೀಡಿದ್ದಾನೆ. ಕೃಷ್ಣ! ಅವನು ತನ್ನ ರಥದಲ್ಲಿಯೇ ಜೀವತೊರೆದು ಹೋಗುತ್ತಿರುವುದನ್ನು ನೋಡು! ವಿದ್ಯೆಯನ್ನು ನೀಡಿದ ಆಚಾರ್ಯರಿಗೆ ಇಷ್ಟವಾದ ಉಡುಗೊರೆಗಳನ್ನಿತ್ತು ನರರ್ಷಭರು ದೇವತ್ವವನ್ನು ಹೊಂದುತ್ತಾರೆ. ಆದರೆ ವಿದ್ಯೆಯನ್ನು ಪಡೆದು ಗುರುವನ್ನು ಕೊಲ್ಲುವ ಕೆಟ್ಟ ನಡತೆಯುಳ್ಳ ಪುರುಷಾಧಮರು ನರಕಕ್ಕೆ ಹೋಗುತ್ತಾರೆ. ಖಂಡಿತವಾಗಿಯೂ ಇಂದಿನ ನನ್ನ ಈ ಕೆಲಸದಿಂದಾಗಿ ನಾನು ನರಕಕ್ಕೆ ಹೋಗುವವನಿದ್ದೇನೆ. ಆಚಾರ್ಯ ಕೃಪನ ರಥವನ್ನು ಶರವರ್ಷದಿಂದ ಮುಚ್ಚಿಬಿಟ್ಟೆನಲ್ಲ! ಹಿಂದೆ ಅಸ್ತ್ರಗಳನ್ನು ಹೇಳಿಕೊಡುವಾಗ ಕೃಪನು ನನಗೆ “ಕೌರವ್ಯ! ಗುರುವನ್ನು ಎಂದೂ ಹೊಡೆಯಬಾರದು!” ಎಂದು ಹೇಳಿದ್ದನು. ಅವನ ಆ ವಚನದಂತೆ ನಡೆದುಕೊಂಡಿಲ್ಲ! ಇಂದು ನಾನು ಮಹಾತ್ಮ ಆಚಾರ್ಯನ ಮೇಲೆ ನನ್ನ ವಿಶಿಖಗಳನ್ನು ಸುರಿದೆನಲ್ಲ! ಪೂಜ್ಯನಾದ, ಪಲಾಯನಮಾಡದಿರುವ ಗೌತಮನಿಗೆ ನಮಸ್ಕರಿಸುತ್ತೇನೆ. ವಾರ್ಷ್ಣೇಯ! ಅವರ ಮೇಲೆ ಪ್ರಹರಿಸಿದ ನನಗೆ ಧಿಕ್ಕಾರ!”

ಹೀಗೆ ವಿಲಪಿಸುತ್ತಿರುವ ಸವ್ಯಸಾಚಿಯ ಬಳಿ ಸೈಂಧವನು ಹತನಾದುದನ್ನು ನೋಡಿದ ರಾಧೇಯನು ಬಂದು ಆಕ್ರಮಿಸಿದನು. ಹತ್ತಿರಬರುತ್ತಿದ್ದ ರಾಧೇಯನನ್ನು ನೋಡಿ ಪಾರ್ಥನು ನಕ್ಕು, ದೇವಕೀ ಪುತ್ರನಿಗೆ ಈ ಮಾತನ್ನಾಡಿದನು: “ಇಗೋ! ಅಧಿರಥಿಯು ಸಾತ್ಯಕಿಯ ರಥದ ಕಡೆ ಹೋಗುತ್ತಿದ್ದಾನೆ. ಭೂರಿಶ್ರವನು ಹತನಾದುದನ್ನು ಇನ್ನೂ ಸಹಿಸಿಕೊಂಡಿಲ್ಲವೆಂದು ತೋರುತ್ತದೆ. ಜನಾರ್ದನ! ಅವನು ಎಲ್ಲಿ ಹೋಗುತ್ತಿದ್ದಾನೋ ಅಲ್ಲಿಗೆ ಕುದುರೆಗಳನ್ನು ಓಡಿಸು! ವೃಷಸೇನನು ಸಾತ್ಯಕಿಯನ್ನು ಸೋಮದತ್ತನ ಪದವಿಗೆ ಕಳುಹಿಸದೇ ಇರಲಿ!”

ಹೀಗೆ ಹೇಳಲು ಮಹಾಬಾಹು ಮಹಾತೇಜಸ್ವಿ ಕೇಶವನು ಸವ್ಯಸಾಚಿಗೆ ಕಾಲಯುಕ್ತವಾದ ಈ ಮಾತನ್ನಾಡಿದನು:  “ಪಾಂಡವ! ಆ ಮಹಾಬಾಹು ಸಾತ್ವತರ್ಷಭನೊಬ್ಬನೇ ಕರ್ಣನಿಗೆ ಸಾಕು. ದ್ರುಪದನ ಇಬ್ಬರು ಮಕ್ಕಳೊಂದಿರುವಾಗ ಇನ್ನೇನು? ಮಹಾಉಲ್ಕೆಯಂತೆ ಪ್ರಜ್ವಲಿಸುತ್ತಿರುವ ವಾಸವನ ಶಕ್ತಿಯು ಅವನಲ್ಲಿ ಇರುವಾಗ ಕರ್ಣನ ಜೊತೆ ನೀನು ಯುದ್ಧಮಾಡುವುದು ಸರಿಯಲ್ಲ. ಆ ಪರವೀರಹನು ನಿನಗಾಗಿಯೇ ಅದನ್ನು ಪೂಜಿಸಿ ರಕ್ಷಿಸುತ್ತಾ ಬಂದಿದ್ದಾನೆ. ಈಗ ಕರ್ಣನು ಸಾತ್ವತನ ಕಡೆ ಹೇಗೆ ಹೋಗುತ್ತಿದ್ದಾನೋ ಹಾಗೆ ಹೋಗಲಿ. ಕೌರವ್ಯ! ಆ ದುರಾತ್ಮನ ಸಮಯವನ್ನು ನಾನು ತಿಳಿದಿದ್ದೇನೆ.”

ಕರ್ಣ-ಸಾತ್ಯಕಿಯರ ಯುದ್ಧ

ವೀರ ಸಾತ್ಯಕಿಯು ಭೂರಿಶ್ರವನಿಂದ ಸೋಲುತ್ತಾನೆಂದು ಮೊದಲೇ ಶ್ರೀಕೃಷ್ಣನಿಗೆ ಮನೋಗತವಾಗಿತ್ತು. ಜನಾರ್ದನನಿಗೆ ಅತೀತವೂ ಅನಾಗತವೂ ತಿಳಿದಿದೆ. ಆದುದರಿಂದಲೇ ಆ ಮಹಾಬಲನು ಸೂತ ದಾರುಕನನ್ನು ಕರೆದು “ನಾಳೆಗೆ ನನ್ನ ರಥವನ್ನು ಸಜ್ಜುಗೊಳಿಸು!” ಎಂಬ ಸಂದೇಶವನ್ನಿತ್ತಿದ್ದನು. ದೇವತೆಗಳಾಗಲೀ, ಗಂಧರ್ವರಾಗಲೀ, ಯಕ್ಷ-ಉರಗ-ರಾಕ್ಷಸರಾಗಲೀ, ಮಾನವರಾಗಲೀ ಈ ಕೃಷ್ಣರನ್ನು ಗೆಲ್ಲುವವರು ಯಾರೂ ಇಲ್ಲ. ಅವರಿಬ್ಬರ ಅತುಲ ಪ್ರಭಾವವನ್ನು ಪಿತಾಮಹನೇ ಮೊದಲಾಗಿ ದೇವತೆಗಳೂ ಸಿದ್ಧರೂ ಬಲ್ಲರು. ಸಾತ್ಯಕಿಯು ವಿರಥನಾದುದನ್ನು ಮತ್ತು ಕರ್ಣನು ಆಯುಧವನ್ನೆತ್ತಿ ಬರುತ್ತಿರುವುದನ್ನು ಕಂಡು ಮಾಧವನು ಮಹಾವೇಗದಿಂದ ಋಷಭ ಸ್ವರದಲ್ಲಿ ಶಂಖವನ್ನು ಊದಿದನು. ಶಂಖದ ಆ ನಾದವನ್ನು ಕೇಳಿ ಸಂದೇಶವನ್ನು ಅರ್ಥಮಾಡಿಕೊಂಡ ದಾರುಕನು ಅವನಿಗಾಗಿ ಗರುಡನು ನೆಲೆಸಿರುವ ಧ್ವಜವುಳ್ಳ ರಥವನ್ನು ತಂದನು. ಆಗ ಶಿನಿಯ ಪೌತ್ರನು ಕೇಶವನ ಅನುಮತಿಯಂತೆ ದಾರುಕ ಸಂಯುಕ್ತವಾದ ಆ ಆದಿತ್ಯನಂತೆ ಪ್ರಜ್ವಲಿಸುತ್ತಿರುವ ರಥವನ್ನು ಏರಿದನು. ಬೇಕಾದಲ್ಲಿಗೆ ಹೋಗಬಲ್ಲ, ಮಹಾವೇಗಶಾಲಿಗಳಾದ, ಹೇಮಭಾಂಡಗಳಿಂದ ವಿಭೂಷಿತವಾದ, ಸೈನ್ಯ-ಸುಗ್ರೀವ-ಮೇಘಪುಷ್ಪ-ಬಲಾಹಕಗಳೆಂಬ ಅಗ್ರ ಅಶ್ವಗಳನ್ನು ಕಟ್ಟಿದ್ದ ವಿಮಾನದಂತಿದ್ದ ರಥವನ್ನು ಏರಿ ಅವನು ಅನೇಕ ಸಾಯಕಗಳನ್ನು ಪ್ರಹರಿಸುತ್ತಾ ರಾಧೇಯನನ್ನು ಆಕ್ರಮಣಿಸಿದನು. ಚಕ್ರರಕ್ಷಕರಾದ ಯುಧಾಮನ್ಯು ಉತ್ತಮೌಜಸರೂ ಕೂಡ ಧನಂಜಯನ ರಥವನ್ನು ತೊರೆದು ರಾಧೇಯನೊಂದಿಗೆ ಯುದ್ಧಕ್ಕೆ ತೊಡಗಿದರು. ರಾಧೇಯನೂ ಕೂಡ ರಣದಲ್ಲಿ ಸಂಕ್ರುದ್ಧನಾಗಿ ಶರವರ್ಷವನ್ನು ಸುರಿಸುತ್ತಾ ಶೈನೇಯನನ್ನು ಆಕ್ರಮಣಿಸಿದನು. ಇದೂವರೆಗೆ ಅಂಥಹ ಯುದ್ಧದ ಕುರಿತು ಭೂಮಿಯಲ್ಲಾಗಲೀ, ದಿವಿಯಲ್ಲಾಗಲೀ, ದೇವ-ಗಂಧರ್ವ-ಅಸುರ-ಉರಗ-ರಾಕ್ಷಸರಲ್ಲಿಯಾಗಲೀ ಕೇಳಿರಲಿಲ್ಲ. ಅವರಿಬ್ಬರ ಯುದ್ಧವನ್ನೂ ನೋಡಿ ಸಮ್ಮೂಢಚೇತನರಾಗಿ ರಥ-ಕುದುರೆ-ಪದಾತಿ-ಆನೆಗಳೊಂದಿಗೆ ಆ ಸೇನೆಯು ಏನೂ ಮಾಡದೇ ನೋಡುತ್ತಾ ನಿಂತುಬಿಟ್ಟಿತು.

ಎಲ್ಲರೂ ಆ ಇಬ್ಬರು ನರವರರ ಅತಿಮಾನುಷ ಯುದ್ಧವನ್ನೂ ದಾರುಕನ ಸಾರಥ್ಯವನ್ನೂ ನೋಡತೊಡಗಿದರು. ಸಾರಥಿ ಕಾಶ್ಯಪನು ರಥವನ್ನು ಮುಂದೆ, ಹಿಂದೆ, ಮಂಡಲಾಕಾರದಲ್ಲಿ ಮತ್ತು ತಿರುಗಿ ತರುವುದನ್ನು ನೋಡಿ ವಿಸ್ಮಿತರಾದರು. ನಭಸ್ತಲದಲ್ಲಿ ಕೂಡ ದೇವ-ಗಂಧರ್ವ-ದಾನವರು ರಣದಲ್ಲಿ ಕರ್ಣ-ಶೈನೇಯರು ಯುದ್ಧಮಾಡುವುದನ್ನು ನೋಡಲು ಸೇರಿದರು. ಮಿತ್ರರಿಗಾಗಿ ಕರ್ಣ ಮತ್ತು ಸಾತ್ಯಕಿಯರು ಪರಾಕ್ರಾಂತರಾಗಿ ಸ್ಪರ್ಧಿಸುತ್ತಾ ಬಲವನ್ನುಪಯೋಗಿಸಿ ಹೋರಾಡಿದರು. ಅವರಿಬ್ಬರೂ ಅನ್ಯೋನ್ಯರನ್ನು ಶರವರ್ಷಗಳಿಂದ ಮುಚ್ಚಿದರು. ಆಗ ಕರ್ಣನು ಶಿನಿಯ ಮೊಮ್ಮಗನನ್ನು ಸಾಯಕಗಳ ಮಳೆಯಿಂದ ಆಕ್ರಮಣಿಸಿದನು. ಕೌರವ್ಯ ಜಲಸಂಧನ ನಿಧನವನ್ನು ಸಹಿಸಿಕೊಳ್ಳಲಾರದೇ ಶೋಕಸಮಾವಿಷ್ಟನಾಗಿ, ಮಹಾನಾಗದಂತೆ ನಿಟ್ಟುಸಿರು ಬಿಡುತ್ತಾ ಕರ್ಣನು, ರಣದಲ್ಲಿ ಕೋಪದಿಂದ ಸುಟ್ಟುಬಿಡುವನೋ ಎಂಬಂತೆ ಶೈನೇಯನನ್ನು ನೋಡುತ್ತಾ ಪುನಃ ಪುನಃ ವೇಗದಿಂದ ಆಕ್ರಮಣಿಸಿದನು. ಅವನು ಸಂಕ್ರುದ್ಧನಾದುದನ್ನು ನೋಡಿ ಸಾತ್ಯಕಿಯು ಆನೆಯನ್ನು ಎದುರಿಸಿದ ಇನ್ನೊಂದು ಆನೆಯು ಹೇಗೋ ಹಾಗೆ ಮಹಾ ಶರವರ್ಷದಿಂದ ತಿರುಗಿ ಆಕ್ರಮಣಿಸಿದನು. ವ್ಯಾಘ್ರಗಳಂತೆ ಕಾತರರಾದ ಆ ಇಬ್ಬರು ನರವ್ಯಾಘ್ರ ಅನುಪಮ ವಿಕ್ರಮರು ಎದುರಿಸಿ ರಣದಲ್ಲಿ ಅನ್ಯೋನ್ಯರನ್ನು ತುಂಬಾ ಗಾಯಗೊಳಿಸಿದರು. ಆಗ ಶಿನಿಯ ಮೊಮ್ಮಗನು ಎಲ್ಲವೂ ಉಕ್ಕಿನಿಂದ ಮಾಡಲ್ಪಟ್ಟ ಶರಗಳಿಂದ ಕರ್ಣನ ಎಲ್ಲ ಅಂಗಾಂಗಗಳಿಗೆ ಚುಚ್ಚುವಂತೆ ಪುನಃ ಪುನಃ ಹೊಡೆದನು. ಭಲ್ಲದಿಂದ ಅವನ ಸಾರಥಿಯನ್ನೂ ರಥದ ನೊಗದ ಮೇಲಿಂದ ಬೀಳಿಸಿದನು. ಮತ್ತು ನಿಶಿತ ಶರಗಳಿಂದ ಅವನ ನಾಲ್ಕು ಶ್ವೇತಾಶ್ವಗಳನ್ನೂ ಸಂಹರಿಸಿದನು.

ನೂರು ಬಾಣಗಳಿಂದ ಅವನ ಧ್ವಜವನ್ನು ನೂರುಚೂರುಗಳನ್ನಾಗಿ ಮಾಡಿ ಆ ಪುರುಷರ್ಷಭನು ಕರ್ಣನನ್ನು ವಿರಥನನ್ನಾಗಿ ಮಾಡಿದನು. ಆಗ ಕೌರವ ಪುರುಷರ್ಷಭರು - ಕರ್ಣಸುತ ವೃಷಸೇನ, ಮದ್ರಾಧಿಪ ಶಲ್ಯ ಮತ್ತು ದ್ರೋಣಪುತ್ರರು -ವಿಮನಸ್ಕರಾಗಿ ಶೈನೇಯನನ್ನು ಎಲ್ಲ ಕಡೆಗಳಿಂದ ಸುತ್ತುವರೆದರು. ಆಗ ಎಲ್ಲ ಗೊಂದಲವುಂಟಾಗಿ ಏನೂ ತಿಳಿಯಲಾಗಲಿಲ್ಲ. ಹೀಗೆ ವೀರ ಸೂತಜನು ಸಾತ್ಯಕಿಯಿಂದ ವಿರಥನಾಗಲು ಸರ್ವ ಸೇನೆಗಳಲ್ಲಿ ಹಾಹಾಕಾರವುಂಟಾಯಿತು. ಕರ್ಣನೂ ಕೂಡ ಸಾತ್ವತನ ಶರಗಳಿಂದ ಪೀಡಿತನಾಗಿ ವಿಹ್ವಲನಾಗಿ ನಿಟ್ಟುಸಿರು ಬಿಡುತ್ತಾ, ಬಾಲ್ಯದಿಂದಲೂ ದುರ್ಯೋಧನನು ತೋರಿದ ಸೌಹಾರ್ದತೆ ಮತ್ತು ಅವನಿಗೆ ರಾಜ್ಯವನ್ನು ಕೊಡಿಸುತ್ತೇನೆ ಎನ್ನುವ ಪರಿಪಾಲಿಸಬೇಕಾದ ಪ್ರತಿಜ್ಞೆಯನ್ನು ಮನ್ನಿಸಿ, ದುರ್ಯೋಧನನ ರಥವನ್ನೇರಿದನು. ಕರ್ಣನನ್ನು ವಿರಥನನ್ನಾಗಿ ಮಾಡಿ ನಿಯಂತ್ರಣದಲ್ಲಿದ್ದ ಸಾತ್ಯಕಿಯು ದುಃಶಾಸನ ನಾಯಕತ್ವದಲ್ಲಿದ್ದ ಧೃತರಾಷ್ಟ್ರನ ಶೂರಪುತ್ರರನ್ನು ಕೊಲ್ಲಲಿಲ್ಲ. ಹಿಂದೆ ಭೀಮಸೇನನು ಮಾಡಿದ್ದ ಪ್ರತಿಜ್ಞೆಯನ್ನು ರಕ್ಷಿಸಲೋಸುಗ ಅವರನ್ನು ವಿರಥರನ್ನಾಗಿಸಿ ವಿಹ್ವಲರನ್ನಾಗಿಸಿ, ಪ್ರಾಣಗಳೊಂದಿಗೆ ಬಿಟ್ಟನು. ಪುನಃ ದ್ಯೂತದಲ್ಲಿ ಕರ್ಣನ ವಧೆಯ ಕುರಿತು ಪಾರ್ಥನಿಂದ ಕೇಳಿದ್ದನು. ಕರ್ಣನ ನಾಯಕತ್ವದಲ್ಲಿ ರಥಿಗಳಲ್ಲಿ ಪ್ರವರ ಸಾತ್ಯಕಿಯನ್ನು ಸಂಹರಿಸಲು ಪ್ರಯತ್ನಿಸಿದರೂ ಅದಕ್ಕೆ ಅವನು ಅಶಕ್ಯರಾದರು. ಒಂದೇ ಒಂದು ಧನುಸ್ಸಿನಿಂದ ಪರಲೋಕವನ್ನೂ ಧರ್ಮರಾಜನಿಗೆ ಪ್ರಿಯವಾದದನ್ನು ಮಾಡಬೇಕೆಂದೂ ಅವನು ದ್ರೌಣಿ, ಕೃತವರ್ಮ, ಮತ್ತು ಇತರ ಅನ್ಯ ನೂರಾರು ಕ್ಷತ್ರಿಯರ್ಷಭ ಮಹಾರಥರನ್ನು ಸೋಲಿಸಿದನು.

ಮಹಾಮತಿ ದಾರುಕನ ತಮ್ಮನು ಕೂಡಲೇ ವಿಧಿವತ್ತಾಗಿ ಸಜ್ಜುಗೊಳಿಸಿದ ಅವನ ಇನ್ನೊಂದು ರಥವನ್ನು ತಂದನು. ಉಕ್ಕಿನಿಂದ ಮಾಡಲ್ಪಟ್ಟ, ಕಾಂಚನದ ಪಟ್ಟಿಯನ್ನು ಕಟ್ಟಿದ್ದ ಮೂಕಿರುವ, ಸಾವಿರ ನಕ್ಷತ್ರಗಳು ಖಚಿತಗೊಂಡಿರುವ ಸಿಂಹಧ್ವಜ ಪತಾಕೆಗಳನ್ನುಳ್ಳ, ಗಾಳಿಯ ವೇಗದ ಕುದುರೆಗಳನ್ನು ಕಟ್ಟಿದ್ದ, ಬಂಗಾರದ ತಗಡಿನಿಂದ ಮುಚ್ಚಿದ್ದ, ಚಂದ್ರನಂತೆ ಬಿಳುಪಾಗಿದ್ದ, ಎಲ್ಲವುಗಳಿಗಿಂತ ದೃಢಶಬ್ಧವುಳ್ಳ, ಚಿತ್ರ-ಕಾಂಚನಗಳಿಂದ ಸನ್ನದ್ಧವಾಗಿದ್ದ ಪ್ರಮುಖ ಕುದುರೆಗಳನ್ನು ಕಟ್ಟಿದ್ದ, ಧ್ವನಿಗೈಯುತ್ತಿದ್ದ ಗಂಟೆಗಳ ಮಾಲೆಗಳಿರುವ, ಶಕ್ತಿ-ತೋಮರಗಳಿಂದ ಕೂಡಿದ್ದ, ಅನೇಕ ವಿವಿಧ ಸಾಮಾಗ್ರಿ, ದ್ರವ್ಯ, ಶಸ್ತ್ರಗಳಿಂದ ತುಂಬಿದ್ದ, ಮೇಘದಂತೆ ಗಂಭೀರ ಧ್ವನಿಯುಳ್ಳ ರಥವನ್ನು ತೆಗೆದುಕೊಂಡು ಬಂದನು. ಅದನ್ನು ಏರಿ ಶೈನೇಯನು ಕೌರವ ಸೇನೆಯನ್ನು ಆಕ್ರಮಣಿಸಿದನು. ದಾರುಕನೂ ಕೂಡ ಬಯಸಿದಂತೆ ಕೇಶವನ ಬಳಿ ಹೋದನು. ಕರ್ಣನಿಗೆ ಕೂಡ ಶಂಖ ಮತ್ತು ಹಸುವಿನ ಹಾಲಿನ ಬಣ್ಣದ, ಚಿತ್ರಕಾಂಚನಗಳಿಂದ ಸಜ್ಜುಪಡೆಸಿದ್ದ, ವೇಗಶಾಲಿಗಳಾದ ಕುದುರೆಗಳನ್ನು ಕಟ್ಟಿದ, ಬಂಗಾರದ ಕೋಣೆ-ಧ್ವಜಗಳನ್ನುಳ್ಳ, ಪತಾಕೆಯನ್ನು ಏರಿಸುವ ಯಂತ್ರವುಳ್ಳ, ಉತ್ತಮ ಸಾರಥಿಯಿರುವ, ಅನೇಕ ಶಸ್ತ್ರಗಳಿಂದ ತುಂಬಿದ ಅಗ್ರ ರಥವನ್ನು ತರಲಾಯಿತು. ಅದರಲ್ಲಿ ಕುಳಿತು ಕರ್ಣನು ಶತ್ರುಗಳೊಂದಿಗೆ ಹೋರಾಡಿದನು.

ವಿರಥನಾದ ಭಿಮಸೇನನು ಕರ್ಣನ ಮಾತಿನ ಈಟಿಯಿಂದ ಪೀಡಿತನಾಗಿ, ಕೋಪಾವಿಷ್ಟನಾಗಿ ಫಲ್ಗುನನಿಗೆ ಈ ಮಾತನಾಡಿದನು: “ಧನಂಜಯ! ನೀನು ನೋಡುತ್ತಿದ್ದಂತೆಯೇ ಕರ್ಣನು ನನಗೆ ಪುನಃ ಪುನಃ “ಗಡ್ಡಮೀಸೆಗಳಿಲ್ಲದವನೇ! ಮೂಢನೇ! ಹೊಟ್ಟೆಬಾಕ!” ಎಂದೂ “ಅಸ್ತ್ರವಿದ್ಯೆಯಲ್ಲಿ ಪರಿಣಿತಿಯಿಲ್ಲದವನೇ! ಬಾಲಕನಂತೆ ಯುದ್ಧಮಾಡುವವನೇ! ಸಂಗ್ರಾಮಭೀರೋ!” ಎಂದೂ ಹೇಳಿದನು. ಹೀಗೆ ನನ್ನನ್ನು ನಿಂದಿಸುವವನನ್ನು ವಧಿಸುತ್ತೇನೆ ಎಂದು ಹೇಳಿದ್ದೆ. ಆ ವ್ರತವನ್ನು ನನ್ನೊಂದಿಗೆ ನೀನೂ ಕೂಡ ಕೈಗೊಂಡಿದ್ದೆ. ಆದುದರಿಂದ ಇದು ನನ್ನ ಕರ್ತವ್ಯದಂತೆ ನಿನ್ನದೂ ಆಗಿದೆ. ಅದರಲ್ಲಿ ಸಂಶಯವಿಲ್ಲ. ಅವನ ವಧೆಯ ಕುರಿತು ನನ್ನ ವಚನವನ್ನು ಸ್ಮರಿಸಿಕೋ. ಧನಂಜಯ! ಅದು ಸತ್ಯವಾಗುವಹಾಗೆ ಮಾಡು!”

ಭೀಮನ ಆ ಮಾತನ್ನು ಕೇಳಿ ಅರ್ಜುನನು ಕರ್ಣನ ಬಳಿ ಹೋಗಿ ಹೇಳಿದನು: “ಕರ್ಣ! ವ್ಯರ್ಥವಾದ ದೃಷ್ಟಿಯುಳ್ಳವನೇ! ಸೂತಪುತ್ರ! ಆತ್ಮಸಂಸ್ತುತನೇ! ಅಧರ್ಮಬುದ್ಧೇ! ನಾನು ಈಗ ಹೇಳುವುದನ್ನು ಕೇಳು! ಯುದ್ಧದಲ್ಲಿ ಶೂರರ ಎರಡು ರೀತಿಯ ಕರ್ಮಗಳು: ಜಯ ಮತ್ತು ಪರಾಜಯ. ಯುದ್ಧಮಾಡುವ ವಾಸವನಿಗೆ ಕೂಡ ಇವೆರಡೂ ಅನಿತ್ಯ. ಯುಯುಧಾನನಿಂದ ವಿರಥನಾಗಿ, ಮೂರ್ಛಿತನಾಗಿ ವಿಸರ್ಜಿಸಲ್ಪಟ್ಟ ನೀನು ಕಷ್ಟಪಟ್ಟು ವಿರಥನನ್ನಾಗಿ ಮಾಡಿದೆ. ಅನಂತರ ನೀನು ಭೀಮನಿಗೆ ಮಾತನಾಡಿದ ರೀತಿಯು ಅಧರ್ಮವಾದುದು. ಯುದ್ಧದರ್ಮವನ್ನು ತಿಳಿದು ಪಲಾಯನ ಮಾಡದೇ ಯುದ್ಧಮಾಡುತ್ತಿರುವ, ಯಥಾಶಕ್ತಿಯಾಗಿ ಯುದ್ಧದಲ್ಲಿ ಹೋರಾಡುತ್ತಾ ಸರ್ವ ಸೇನೆಗಳು, ಕೇಶವ ಮತ್ತು ನಾನು ನೋಡುತ್ತಿರುವಂತೆ ಭೀಮಸೇನನು ನಿನ್ನನ್ನು ರಣದಲ್ಲಿ ಅನೇಕ ಬಾರಿ ವಿರಥನನ್ನಾಗಿ ಮಾಡಿದ್ದಾನೆ. ಆದರೆ ಆ ಪಾಂಡುನಂದನನು ಕಠೋರವಾದ ಏನನ್ನೂ ನಿನಗೆ ಹೇಳಿರಲಿಲ್ಲ. ಆದರೆ ನೀನು ಬಹಳ ಕಠೋರವಾಗಿ ವೃಕೋದರನಿಗೆ ಮಾತನಾಡಿದ್ದೀಯೆ. ಮತ್ತು ನನ್ನ ಪರೋಕ್ಷದಲ್ಲಿ ನೀವು ಸೌಭದ್ರನನ್ನು ಸಂಹರಿಸಿದಿರಲ್ಲವೇ! ಆದುದರಿಂದ ಈ ನಿನ್ನ ಅವಹೇಳನೆಗೆ ಸದ್ಯವೇ ಫಲವನ್ನು ಹೊಂದುತ್ತೀಯೆ. ದುರ್ಮತೇ! ನೀನು ಅವನ ಧನುಸ್ಸನ್ನು ತುಂಡರಿಸಿ ನಿನ್ನದೇ ನಾಶವನ್ನು ನಿಶ್ಚಯಿಸಿರುವೆ. ಆದುದರಿಂದ ಮೂಢ! ನಿನ್ನನ್ನು ನಾನು ಸೇವಕ-ಸೇನೆ-ವಾಹನಗಳೊಂದಿಗೆ ವಧಿಸುತ್ತೇನೆ. ನಿನ್ನ ಎಲ್ಲ ಕೆಲಸಗಳನ್ನೂ ಮಾಡಿಕೋ! ಮಹಾ ಭಯವು ಬರಲಿದೆ. ನೀನು ನೋಡುತ್ತಿರುವಂತೆಯೇ ವೃಷಸೇನನನ್ನು ಸಂಹರಿಸುತ್ತೇನೆ. ಬುದ್ಧಿಮೋಹದಿಂದ ಬೇರೆ ಯಾವನೃಪರು ನನ್ನೊಡನೆ ಯುದ್ಧಮಾಡುತ್ತಾರೋ ಅವರೆಲ್ಲರನ್ನೂ ಸಂಹರಿಸುತ್ತೇನೆ. ಹಿಡಿದಿರುವ ಆಯುಧದ ಮೇಲೆ ಆಣೆಯಿಡುತ್ತೇನೆ. ಕೃತಜ್ಞನಾದ, ಅತಿಮಾನಿನಿಯಾದ ನೀನೂ ಕೂಡ ಯುದ್ಧದಲ್ಲಿ ಬೀಳುವುದನ್ನು ನೋಡಿ ಮಂದ ದುರ್ಯೋಧನನು ತಪಿಸುತ್ತಾನೆ!”

ಅರ್ಜುನನು ಕರ್ಣನ ಮಗನ ವಧೆಯ ಪ್ರತಿಜ್ಞೆಯನ್ನು ಮಾಡಲು ರಥಿಗಳ ಮಹಾ ತುಮುಲ ಶಬ್ಧವು ಉಂಟಾಯಿತು. ಮಹಾಭಯಂಕರವಾದ ಯುದ್ಧವು ಎಲ್ಲಕಡೆ ನಡೆಯುತ್ತಿರಲು, ಮಂದರಶ್ಮಿ ಸಹಸ್ರಾಂಶುವು ಅಸ್ತಾಚಲವನ್ನು ಸೇರಿದನು. ಆಗ ಹೃಷೀಕೇಶನು ಪ್ರತಿಜ್ಞೆಯನ್ನು ಪೂರೈಸಿ ಸಂಗ್ರಾಮದ ಶಿರಸ್ಸಿನ ಭಾಗದಲ್ಲಿ ನಿಂತಿದ್ದ ಬೀಭತ್ಸುವನ್ನು ಬಿಗಿದಪ್ಪಿ ಹೇಳಿದನು: “ಒಳ್ಳೆಯದಾಯಿತು ಜಿಷ್ಣೋ! ನಿನ್ನ ಮಹಾ ಪ್ರತಿಜ್ಞೆಯನ್ನು ಪೂರೈಸಿದೆ! ಒಳ್ಳೆಯದಾಯಿತು ವೃದ್ಧಕ್ಷತ್ರನು ಪಾಪಿ ಮಗನೊಂದಿಗೆ ಹತನಾದನು. ಧಾರ್ತರಾಷ್ಟ್ರನ ಸೇನೆಯನ್ನು ಎದುರಿಸಿ ಸಮರದಲ್ಲಿ ದೇವಸೇನೆಯೂ ಕೂಡ ಕುಸಿಯುತ್ತದೆ. ಅದರಲ್ಲಿ ವಿಚಾರಮಾಡಬೇಕಾಗಿಯೇ ಇಲ್ಲ. ನಾನು ಎಷ್ಟೇ ಯೋಚಿಸಿದರೂ, ನಿನ್ನನ್ನು ಬಿಟ್ಟು ಈ ಸೇನೆಯೊಂದಿಗೆ ಯುದ್ಧಮಾಡಬಲ್ಲ ಬೇರೆ ಯಾವ ಪುರುಷನನ್ನೂ ನಾನು ಕಾಣುತ್ತಿಲ್ಲ. ಮಹಾಪ್ರಭಾವುಳ್ಳ, ನಿನ್ನ ಸಮನಾದ ಅಥವ ಅಧಿಕರಾದ ಪೃಥಿವೀಪಾಲರು ಧಾರ್ತರಾಷ್ಟ್ರನ ಕಾರಣದಿಂದ ಒಂದುಗೂಡಿದ್ದಾರೆ. ಕವಚಧಾರಿಗಳಾದ ಅವರು ರಣದಲ್ಲಿ ಕ್ರುದ್ಧನಾದ ನಿನ್ನನ್ನು ಎದುರಿಸಲಾರರು. ನಿನ್ನ ವೀರ್ಯ ಮತ್ತು ಬಲವು ರುದ್ರ-ಶಕ್ರರ ಸಮನಾಗಿದೆ. ಶತ್ರುತಾಪನನಾದ ನೀನೊಬ್ಬನೇ ಇಂದು ಮಾಡಿ ತೋರಿಸಿದ ಪರಾಕ್ರಮವನ್ನು ರಣದಲ್ಲಿ ಬೇರೆ ಯಾರೂ ತೋರಿಸಲು ಶಕ್ಯರಿಲ್ಲ. ದುರಾತ್ಮ ಕರ್ಣನು ಅವನ ಅನುಯಾಯಿಗಳೊಂದಿಗೆ ಹತನಾದಾಗ ಪುನಃ ಶತ್ರುವನ್ನು ಗೆದ್ದ, ದ್ವೇಷಿಯನ್ನು ಸಂಹರಿಸಿದ ನಿನ್ನನ್ನು ಇನ್ನೂ ಹೊಗಳುತ್ತೇನೆ.”

ಅರ್ಜುನನು ಅವನಿಗೆ ಉತ್ತರಿಸಿದನು: “ಮಾಧವ! ನಿನ್ನ ಪ್ರಸಾದದಿಂದ ದೇವತೆಗಳಿಗೂ ದುಸ್ತರವಾದ ಈ ಪ್ರತಿಜ್ಞೆಯನ್ನು ನಾನು ಪೂರೈಸಿದ್ದೇನೆ. ಯಾರ ನಾಥನು ನೀನೋ ಅವರ ಜಯವು ಆಶ್ಚರ್ಯವಾದುದೇನಲ್ಲ! ನಿನ್ನ ಪ್ರಸಾದದಿಂದ ಯುಧಿಷ್ಠಿರನು ಈ ಸಂಪೂರ್ಣ ಮಹಿಯನ್ನು ಪಡೆಯುತ್ತಾನೆ. ನೀನೇ ಪೊರೆಯುವವನು. ನೀನೇ ವಿಜಯ. ಮಧುಸೂದನ! ನಿನ್ನಿಂದ ನಾವು ವರ್ಧಿಸುತ್ತಿದ್ದೇವೆ. ನಾವು ನಿನ್ನ ಸೇವಕರು!”

ಹೀಗೆ ಹೇಳಲು ಕೃಷ್ಣನು ಮುಗುಳ್ನಕ್ಕು, ಕುದುರೆಗಳನ್ನು ಮೆಲ್ಲನೆ ನಡೆಸುತ್ತಾ ಕ್ರೂರವಾದ ಮಹಾ ರಣವನ್ನು ಪಾರ್ಥನಿಗೆ ತೋರಿಸಿದನು. ಶ್ರೀಕೃಷ್ಣನು ಹೇಳಿದನು: “ಯುದ್ಧದಲ್ಲಿ ಜಯವನ್ನು ಬಯಸಿ, ಮಹಾ ಯಶಸ್ಸನ್ನು ಕಾಣಲು ಈ ಶೂರ ಪಾರ್ಥಿವರು ನಿನ್ನ ಶರಗಳಿಂದ ಹತರಾಗಿ ಭೂಮಿಯ ಮೇಲೆ ಮಲಗಿದ್ದಾರೆ. ಶಸ್ತ್ರಾಭರಣಗಳು ಚೆಲ್ಲಿಬಿದ್ದಿವೆ. ಕುದುರೆ-ರಥ-ಆನೆಗಳು ಮುರಿದು ಬಿದ್ದಿವೆ. ಅವರ ಕವಚಗಳು ತುಂಡಾಗಿ ಅಥವಾ ಒಡೆದು ಪರಮ ದುಃಖವನ್ನು ಪಡೆದಿದ್ದಾರೆ. ಕೆಲವರು ಇನ್ನೂ ಜೀವದಿಂದಿದ್ದಾರೆ. ಕೆಲವರು ಜೀವವನ್ನು ಕಳೆದುಕೊಂಡಿದ್ದಾರೆ. ತೀರಿಹೋದ ನರಾಧಿಪರೂ ಕೂಡ ಪರಮ ಪ್ರಭೆಯಿಂದ ಕೂಡಿದವರಾಗಿದ್ದು ಜೀವದಿಂದಿರುವರೋ ಎನ್ನುವಂತೆ ಕಾಣುತ್ತಿದ್ದಾರೆ. ಅವರ ಸ್ವರ್ಣಪುಂಖ ಶರಗಳಿಂದ, ವಿವಿಧ ನಿಶಿತ ಶಸ್ತ್ರಗಳಿಂದ, ವಾಹನ-ಆಯುಧಗಳಿಂದ ಮೇದಿನಿಯು ತುಂಬಿಹೋಗಿರುವುದನ್ನು ನೋಡು! ಕವಚ-ಗುರಾಣಿ-ಹಾರಗಳಿಂದ, ಕುಂಡಲಯುಕ್ತ ಶಿರಗಳಿಂದ, ಶಿರಸ್ತ್ರಾಣ-ಮುಕುಟಗಳಿಂದ, ಮಾಲೆಗಳು-ಚೂಡಾಮಣಿಗಳು-ವಸ್ತ್ರಗಳಿಂದ, ಕಂಠಸೂತ್ರ-ಅಂಗದಗಳಿಂದ, ಪ್ರಭೆಯುಳ್ಳ ನಿಷ್ಕಗಳಿಂದ, ಅನ್ಯ ಬಣ್ಣದ ಆಭರಣಗಳಿಂದ ಮೇದಿನಿಯು ಥಳಥಳಿಸುತ್ತಿದೆ. ಚಾಮರಗಳಿಂದ, ಬಣ್ಣದ ಕೇತುಗಳಿಂದ, ಧ್ವಜಗಳಿಂದ, ಕುದುರೆ-ರಥ-ಆನೆಗಳಿಂದ, ಕುದುರೆಗಳ ವಿವಿಧ ಪರಿಸ್ತೋಮ-ಪ್ರಕೀರ್ಣಕಗಳಿಂದ, ಕುಥಗಳಿಂದ, ಮಹಾಧನಗಳ ವಿಚಿತ್ರ ವರೂಥಗಳಿಂದ ತುಂಬಿರುವ ಈ ವಸುಧೆಯು ಚಿತ್ರಪಟವನ್ನು ಹೊಡೆದಂತೆ ಕಾಣುತ್ತಿದೆ ನೋಡು! ಆನೆಗಳ ಮೇಲಿಂದ, ಅನ್ಯರು ಆನೆಗಳೊಡನೆ ಬಿದ್ದಿರುವವರು ಸಿಡಿಲುಬಡಿದ ಪರ್ವತದಿಂದ ಬಿದ್ದ ಸಿಂಹಗಳಂತೆ ತೋರುತ್ತಿದ್ದಾರೆ. ಸವಾರಿ ಮಾಡುತ್ತಿರುವ ಕುದುರೆಗಳೊಂದಿಗೆ ಧರಣಿಯ ಮೇಲೆ ಬಿದ್ದಿರುವ ಪದಾತಿ-ಅಶ್ವಾರೋಹಿಗಳು ಗಾಯಗೊಂಡು ರಕ್ತದಲ್ಲಿ ತೋಯ್ದುಹೋಗಿರುವುದನ್ನು ನೋಡು!”

ಹೀಗೆ ರಣಭೂಮಿಯನ್ನು ಕಿರೀಟಿಗೆ ತೋರಿಸುತ್ತಾ ಕೃಷ್ಣನು ತನ್ನವರೊಂದಿಗೆ ಮುದಿತನಾಗಿ ಪಾಂಚಜನ್ಯವನ್ನು ಮೊಳಗಿಸಿದನು.

ಯುಧಿಷ್ಠಿರನ ಹರ್ಷ

ಆಗ ರಾಜಾ ಯುಧಿಷ್ಠಿರನು ರಥದಿಂದ ಹಾರಿ ಇಳಿದು ಆನಂದಾಶ್ರುಗಳಿಂದ ತುಂಬಿದವನಾಗಿ ಕೃಷ್ಣರನ್ನು ಅಪ್ಪಿಕೊಂಡನು. ಕಮಲಕ್ಕೆ ಸಮಾನ ಪ್ರಭೆಯುಳ್ಳ ಶುಭ್ರ ಮುಖವನ್ನು ಒರೆಸಿಕೊಂಡು ವಾಸುದೇವ ಮತ್ತು ಪಾಂಡವ ಧನಂಜಯನಿಗೆ ಹೇಳಿದನು: “ಅದೃಷ್ಟವಶಾತ್ ಸಂಗ್ರಾಮದಲ್ಲಿ ಇಬ್ಬರು ಮಹಾರಥರೂ ಪ್ರತಿಜ್ಞೆಯ ಭಾರದಿಂದ ಮುಕ್ತರಾಗಿರುವುದನ್ನು ನೋಡುತ್ತಿದ್ದೇನೆ! ಒಳ್ಳೆಯದಾಯಿತು - ಪುರುಷಾಧಮ ಪಾಪಿ ಸೈಂಧವನು ಹತನಾದನು. ಕೃಷ್ಣ! ಸೌಭಾಗ್ಯವಶಾತ್ ನನ್ನ ಸಂತೋಷವು ತುಂಬಾ ಹೆಚ್ಚಾಗಿದೆ. ಒಳ್ಳೆಯದಾಯಿತು - ಶತ್ರುಗಣಗಳು ಶೋಕಸಾಗರದಲ್ಲಿ ಮುಳುಗಿವೆ. ಸರ್ವಲೋಕಗಳಿಗೆ ಗುರುವಾಗಿರುವ ನೀನು ಯಾರ ನಾಥನೋ ಅವರಿಗೆ ಈ ಮೂರು ಲೋಕಗಳಲ್ಲಿಯು ದುಷ್ಕರವಾದ ಕಾರ್ಯವೆನ್ನುವುದೂ ಯಾವುದೂ ಇಲ್ಲ. ಹಿಂದೆ ನಿನ್ನ ಪ್ರಸಾದದಿಂದ ಪಾಕಶಾಸನನು ದಾನವರನ್ನು ಹೇಗೋ ಹಾಗೆ ಗೋವಿಂದ! ನಿನ್ನ ಪ್ರಸಾದದಿಂದ ನಾವು ಶತ್ರುಗಳನ್ನು ಗೆಲ್ಲುತ್ತೇವೆ. ಯಾರಿಂದ ನೀನು ತೃಪ್ತನಾಗಿದ್ದೀಯೋ ಅವರಿಗೆ ಪೃಥ್ವೀ ವಿಜಯ ಅಥವಾ ತ್ರೈಲೋಕ್ಯಗಳ ವಿಜಯವೂ ನಿಶ್ಚಯವಾದುದೇ! ತ್ರಿದಶೇಶ್ವರನ ನಾಥನಾದ ನೀನು ಯಾರಮೇಲೆ ತುಷ್ಟನಾಗಿರುವೆಯೋ ಅವರಿಗೆ ಸಂಗ್ರಾಮದಲ್ಲಿ ಪ್ಪವೆನ್ನುವುದಾಗಲೀ ಪರಾಜಯವಾಗಲೀ ಇರುವುದಿಲ್ಲ. ನಿನ್ನ ಪ್ರಸಾದದಿಂದ ಶ್ರೀಮಾನ್ ಸುರಗಣೇಶ್ವರ ಶಕ್ರನು ರಣಮೂರ್ಧನಿಯಲ್ಲಿ ತ್ರೈಲೋಕ್ಯವಿಜಯವನ್ನು ಪಡೆದನು. ನಿನ್ನ ಪ್ರಸಾದದಿಂದಲೇ ತ್ರಿದಶರು ಅಮರತ್ವವನ್ನು ಪಡೆದರು ಮತ್ತು ಅಕ್ಷಯ ಲೋಕಗಳನ್ನು ಹೊಂದಿದರು. ನಿನ್ನ ಪ್ರಸಾದದಿಂದ ಮೇಲೆದ್ದ ವಿಕ್ರಮದಿಂದ ಶಕ್ರನು ಸಹಸ್ರಾರು ದೈತ್ಯರನ್ನು ಸಂಹರಿಸಿ ಸುರೇಶತ್ವವನ್ನು ಹೊಂದಿದನು. ನಿನ್ನ ಪ್ರಸಾದದಿಂದ ಸ್ಥಾವರಜಂಗಮಗಳ ಈ ಜಗತ್ತು ತನ್ನ ಮಾರ್ಗದಲ್ಲಿ ಸ್ಥಿರವಾಗಿ ನಿಂತಿದೆ; ಜಪ-ಹೋಮಗಳಲ್ಲಿ ತೊಡಗಿದೆ. ಹಿಂದೆ ಇದು ಒಂದೇ ಸಾಗರವಾಗಿದ್ದು ಎಲ್ಲಕಡೆ ಅತ್ಯಂತ ಕತ್ತಲೆಯು ಆವರಿಸಿತ್ತು. ನರೋತ್ತಮ! ಆಗ ನಿನ್ನ ಪ್ರಸಾದದಿಂದ ಜಗತ್ತು ಪ್ರಕಾಶತ್ವವನ್ನು ಪಡೆಯಿತು. ಸರ್ವಲೋಕಗಳ ಸೃಷ್ಟಾರ, ಪರಮಾತ್ಮ, ಅಚ್ಯುತ, ಹೃಷೀಕೇಶನನ್ನು ಯಾರು ಮೊರೆಹೊಗುತ್ತಾರೋ ಅವರು ಎಂದೂ ಮೋಹಗೊಳ್ಳುವುದಿಲ್ಲ. ಅನಾದಿನಿಧನ, ದೇವ, ಲೋಕಕರ್ತಾರ, ಅವ್ಯಯನಾಗಿರುವ ನಿನ್ನ ಭಕ್ತರು ಕ್ಷಷ್ಟಗಳನ್ನು ದಾಟುತ್ತಾರೆ. ಪರಮ, ಪುರಾಣ, ಪುರಾಣಗಳ ಪುರುಷ, ಪರಮ ಪದವನ್ನು ಯಾರು ಮೊರೆಹೋಗುತ್ತಾರೋ ಅವರು ಪರಮ ಪದವಿಯನ್ನು ಪಡೆಯುತ್ತಾರೆ. ಯಾರನ್ನು ನಾಲ್ಕು ವೇದಗಳೂ ಹಾಡುವವೋ, ಯಾರು ವೇದಗಳಲ್ಲಿ ಹಾಡಲ್ಪಟ್ಟಿರುವನೋ ಆ ಮಹಾತ್ಮನನ್ನು ಶರಣುಹೊಕ್ಕು ಅನುತ್ತಮವಾದ ಗತಿಯನ್ನು ಪಡೆಯುವರು. ಯಾರು ಧನಂಜಯನ ಸಖನಾಗಿರುವನೋ, ಯಾರು ಧನಂಜಯನ ಹಿತೈಷಿಯೋ ಆ ಧನಂಜಯರಕ್ಷಕನನ್ನು ಮೊರೆಹೊಕ್ಕರೆ ಸುಖವು ದೊರೆಯುತ್ತದೆ.”

ಹೀಗೆ ಅವನು ಆ ಮಹಾತ್ಮ ಕೇಶವ-ಪಾಂಡವರಿಗೆ ಹೇಳಲು ಅವರಿಬ್ಬರೂ ಹೃಷ್ಟರಾಗಿ ರಾಜಾ ಪೃಥಿವೀಪತಿಗೆ ಹೇಳಿದರು: “ರಾಜಾ! ನಿನ್ನ ಕೋಪಾಗ್ನಿಯಿಂದ ಪಾಪಿ ಜಯದ್ರಥನು ಸುಟ್ಟುಹೋದನು ಮತ್ತು ರಣದಲ್ಲಿ ಧಾರ್ತರಾಷ್ಟ್ರನ ಅತಿದೊಡ್ಡ ಬಲವು ಪುಡಿಪುಡಿಯಾಯಿತು. ನಿನ್ನ ಕೋಪಾಗ್ನಿಯಿಂದ ಹತರಾದವರು ಹತರಾದರು. ಇನ್ನೂ ಹತರಾಗಲಿದ್ದಾರೆ. ದೃಷ್ಟಿಹಾಯಿಸುವುದರಿಂದ ಮಾತ್ರ ನಾಶಪಡಿಸಬಲ್ಲ ವೀರ ನಿನ್ನನ್ನು ಕೋಪಗೊಳಿಸಿ ದುರ್ಮತಿ ಸುಯೋಧನನು ಸಮರದಲ್ಲಿ ಮಿತ್ರ-ಬಂಧುಗಳೊಡನೆ ಪ್ರಾಣಗಳನ್ನು ಕಳೆದುಕೊಳ್ಳುತ್ತಾನೆ. ಈ ಹಿಂದೆಯೇ ನಿನ್ನ ಕ್ರೋಧದಿಂದ ಹತನಾಗಿ ದೇವತೆಗಳಿಗೂ ಸುದುರ್ಜಯನಾದ ಕುರುಪಿತಾಮಹ ಭೀಷ್ಮನು ಶರತಲ್ಪಗತನಾಗಿದ್ದಾನೆ. ಯಾರ ಮೇಲೆ ನೀನು ಕ್ರುದ್ಧನಾಗಿದ್ದೀಯೋ ಅವರಿಗೆ ಸಂಗ್ರಾಮದಲ್ಲಿ ಜಯವು ದುರ್ಲಭವೇ ಸರಿ. ಅವರು ಈಗಾಗಲೇ ಮೃತ್ಯುವಶರಾಗಿಬಿಟ್ಟಿದ್ದಾರೆ. ಯಾರ ಮೇಲೆ ನೀನು ಕ್ರುದ್ಧನಾಗಿದ್ದೀಯೋ ಅವರ ರಾಜ್ಯ, ಪ್ರಾಣಗಳು, ಪ್ರಿಯರು, ಪುತ್ರರು ಮತ್ತು ವಿವಿಧ ಸುಖಗಳು ಬೇಗನೇ ನಾಶವಾಗುತ್ತವೆ. ನಿತ್ಯವೂ ರಾಜಧರ್ಮದಲ್ಲಿ ನಿರತನಾಗಿರುವ ನೀನು ಕ್ರುದ್ಧನಾಗಿರಲು ಕೌರವರು ಪುತ್ರ-ಪಶು-ಬಾಂಧವರೊಂದಿಗೆ ವಿನಷ್ಟರಾದರೆಂದೇ ತಿಳಿದುಕೋ.”

ಆಗ ಮಾರ್ಗಣಗಳಿಂದ ಕ್ಷತ-ವಿಕ್ಷತರಾಗಿದ್ದ ಮಹಾಬಾಹು ಭೀಮ ಮತ್ತು ಮಹಾರಥ ಸಾತ್ಯಕಿಯರು ಹಿರಿಯ ಜ್ಯೇಷ್ಠನಿಗೆ ವಂದಿಸಿದರು. ಅವರಿಬ್ಬರು ಮಹೇಷ್ವಾಸರೂ ಪಾಂಚಾಲರಿಂದ ಪರಿವೃತರಾಗಿ ಅಲ್ಲಿ ನಿಂತುಕೊಂಡರು. ಕೈಮುಗಿದು ಮುಂದೆ ನಿಂತುಕೊಂಡಿದ್ದ ಆ ಮುದಿತ ವೀರರಾದ ಭೀಮ-ಸಾತ್ಯಕಿಯರನ್ನು ನೋಡಿ ಕೌಂತೇಯನು ಅವರಿಬ್ಬರನ್ನೂ ಅಭಿನಂದಿಸಿದನು: “ಒಳ್ಳೆಯದಾಯಿತು! ದುರಾಧರ್ಷನಾದ ದ್ರೋಣನೆಂಬ ತಿಮಿಂಗಿಲ ಮತ್ತು ಹಾರ್ದಿಕ್ಯನೆಂಬ ಮೊಸಳೆಯಿದ್ದ ಸೈನ್ಯ ಸಾಗರದಿಂದ ಉತ್ತೀರ್ಣರಾಗಿ ಬಂದಿರುವ ನೀವಿಬ್ಬರು ವೀರರನ್ನೂ ಕಾಣುತ್ತಿದ್ದೇನೆ. ಒಳ್ಳೆಯದಾಯಿತು! ರಣದಲ್ಲಿ ಪೃಥ್ವಿಯ ಸರ್ವಪಾರ್ಥಿವರೂ ಸೋತುಹೋದರು. ಒಳ್ಳೆಯದಾಯಿತು! ರಣದಲ್ಲಿ ವಿಜಯವನ್ನು ಗಳಿಸಿಬಂದ ನಿಮ್ಮೀರ್ವರನ್ನೂ ನೋಡುತ್ತಿದ್ದೇನೆ. ಒಳ್ಳೆಯದಾಯಿತು! ಯುದ್ಧದಲ್ಲಿ ದ್ರೋಣ ಮತ್ತು ಮಹಾಬಲ ಹಾರ್ದಿಕ್ಯರು ಗೆಲ್ಲಲ್ಪಟ್ಟರು. ಒಳ್ಳೆಯದಾಯಿತು! ಸೈನ್ಯಸಮುದ್ರವನ್ನು ಚೆನ್ನಾಗಿ ದಾಟಿಬಂದ, ಅನಘ, ಸಮರಶ್ಲಾಘೀ, ವೀರ, ಸಮರದಲ್ಲಿ ಪಲಾಯನ ಮಾಡದೇ ಇರುವ, ನನ್ನ ಪ್ರಾಣಸಮರಾದ ನಿಮ್ಮಿಬ್ಬರನ್ನು ನನ್ನ ಪಕ್ಕದಲ್ಲಿ ಕಾಣುತ್ತಿದ್ದೇನೆ!”

ಹೀಗೆ ಹೇಳಿ ರಾಜಾ ಪಾಂಡವನು ಪುರುಷವ್ಯಾಘ್ರರಾದ ಯುಯುಧಾನ-ವೃಕೋದರರನ್ನು ಬಿಗಿದಪ್ಪಿದನು ಮತ್ತು ಆನಂದಾಶ್ರುಗಳನ್ನು ಸುರಿಸಿದನು. ಆಗ ಪಾಂಡವರ ಜಯವನ್ನು ನೋಡಿ ಎಲ್ಲ ಸೇನೆಗಳೂ ಮುದಿತರಾಗಿ ಯುದ್ಧದ ಮನಸ್ಸು ಮಾಡಿದರು.

ದುರ್ಯೋಧನನ ಅನುತಾಪ

ಸೈಂಧವನು ಹತನಾಗಲು ಸುಯೋಧನನು ಕಣ್ಣೀರುತುಂಬಿ, ಬೇಸರದ ಮುಖದಲ್ಲಿ ದೀನನೂ, ಶತ್ರುಗಳನ್ನು ಜಯಿಸಲು ನಿರುತ್ಸಾಹಿಯೂ ಆದನು. ಅರ್ಜುನನ ಸಮನಾದ ಯೋಧನು ಭುವಿಯಲ್ಲಿಯೇ ಇಲ್ಲ ಮತ್ತು ಕ್ರುದ್ಧನಾದ ಅವನನ್ನು ಎದುರಿಸಿ ನಿಲ್ಲನು ದ್ರೋಣನಾಗಲೀ, ರಾಧೇಯನಾಗಲೀ, ಅಶ್ವತ್ಥಾಮನಾಗಲೀ ಪರ್ಯಾಪ್ತರಲ್ಲ ಎಂದು ಅವನು ಒಪ್ಪಿಕೊಂಡನು. “ನನ್ನ ಸರ್ವ ಮಹಾರಥರನ್ನೂ ರಣದಲ್ಲಿ ಸೋಲಿಸಿ ಅರ್ಜುನನು ಸೈಂಧವನನ್ನು ಸಂಹರಿಸಿದನು. ರಣದಲ್ಲಿ ಯಾರೂ ಅವನನ್ನು ತಡೆಯಲಾಗಲಿಲ್ಲ. ಕೌರವರ ಈ ಮಹಾಸೇನೆಯು ಸರ್ವಥಾ ನಾಶವಾಗಿಹೋಯಿತು. ಸಾಕ್ಷಾತ್ ಪುರಂದರನೇ ಬಂದರೂ ಇದನ್ನು ರಕ್ಷಿಸಲಾರನು! ಯಾರನ್ನು ಉಪಾಶ್ರಯಿಸಿ ನಾನು ಈ ಸಂಗ್ರಾಮಕ್ಕೆ ಶಸ್ತ್ರಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆನೋ ಅದೇ ಕರ್ಣನೇ ರಣದಲ್ಲಿ ಪರಾಜಿತನಾಗಿ ಜಯದ್ರಥನು ಹತನಾದನು! ಸಭಾಮಧ್ಯದಲ್ಲಿ ಪಾಂಡವರಿಗೆ ಕ್ರೂರವಾಗಿ ಮಾತನಾಡಿದ ಆ ಕರ್ಣನೇ ರಣದಲ್ಲಿ ಪರಾಜಿತನಾಗಿ ಜಯದ್ರಥನು ಹತನಾದನು! ಯಾರ ವೀರ್ಯವನ್ನು ಆಶ್ರಯಿಸಿ ಶಾಂತಿಯನ್ನು ಯಾಚಿಸುತ್ತಿದ್ದ ಅಚ್ಯುತನನ್ನು ತೃಣಕ್ಕೆ ಸಮಾನವಾಗಿ ಕಂಡೆನೋ ಆ ಕರ್ಣನೇ ಯುದ್ಧದಲ್ಲಿ ಪರಾಜಿತನಾಗಿದ್ದಾನೆ!”

ಹೀಗೆ ಬೇಸತ್ತ ಮನಸ್ಸಿನಿಂದ ದುರ್ಯೋಧನನು ಸರ್ವಲೋಕವನ್ನೂ ತಿರಸ್ಕರಿಸಿ ದ್ರೋಣನನ್ನು ಕಾಣಲು ಹೋದನು. ಆಗ ಅವನಿಗೆ ಕುರುಗಳ ಮಹಾನಾಶವನ್ನೂ, ಶತ್ರುಗಳ ವಿಜಯವನ್ನೂ, ಧಾರ್ತರಾಷ್ಟ್ರರು ಶೋಕದಲ್ಲಿ ಮುಳುಗಿರುವುದನ್ನೂ ಹೇಳಿದನು: “ಆಚಾರ್ಯ! ನಾಯಕನಾಗಿ ಅಭಿಷೇಕಗೊಂಡು ಕದನವನ್ನಾಡಿದ ನನ್ನ ಪಿತಾಮಹ ಶೂರ ಭೀಷ್ಮನನ್ನು ನೋಡಿರಿ! ಅವನನ್ನು ಕೊಂದು ಪ್ರಲುಬ್ಧನಾದ ಈ ಶಿಖಂಡಿಯು ಸಂಪೂರ್ಣ ಮನಸ್ಕನಾಗಿ ಎಲ್ಲ ಪಾಂಚಾಲರೊಂದಿಗೆ ಎದಿರುನಿಂತು ಸೇನೆಗಳನ್ನು ನಡೆಸುತ್ತಿದ್ದಾನೆ! ಅನಂತರವೂ ಕೂಡ ನಿಮ್ಮ ಶಿಷ್ಯ ದುರ್ಧರ್ಷ ಸವ್ಯಸಾಚಿಯು ಏಳು ಅಕ್ಷೌಹಿಣಿಗಳನ್ನು ಸಂಹರಿಸಿ, ರಾಜಾ ಜಯದ್ರಥನನ್ನು ವಧಿಸಿದನು. ನಮಗೆ ವಿಜಯವನ್ನು ಬಯಸಿ ಯಮಸಾದನಕ್ಕೆ ಹೋದ ಆ ಉಪಕಾರೀ ಸುಹೃದಯರ ಋಣವನ್ನು ಹೇಗೆ ತೀರಿಸಲಿ? ನನಗಾಗಿ ಈ ವಸುಂಧರೆಯನ್ನು ಬಯಸಿದ್ದರೋ ಆ ವಸುಧಾಧಿಪರೇ ಈ ವಸುಧೆಯ ಐಶ್ವರ್ಯವನ್ನು ತೊರೆದು ವಸುಧೆಯ ಮೇಲೆ ಮಲಗಿದ್ದಾರೆ! ಮಿತ್ರರ ಈ ರೀತಿಯ ವಿನಾಶವನ್ನೆಸಗಿ ಹೇಡಿಯಾದ ನಾನು ಸಹಸ್ರ ಅಶ್ವಮೇಧಗಳನ್ನು ಮಾಡಿಯೂ ನನ್ನ ಈ ಪಾಪವನ್ನು ತೊಳೆದು ಪುನೀತನಾಗಲಾರೆನು. ಲುಬ್ಧನಾದ, ಪಾಪಿಯಾದ, ಮತ್ತು ಧರ್ಮನಾಶಕನಾದ ನನಗೆ ವಿಜಯವನ್ನು ಬಯಸಿ ಹೋರಾಡುತ್ತಿದ್ದವರು ಯಮಲೋಕಕ್ಕೆ ಹೊರಟುಹೋದರು. ಪತಿತನಂತೆ ನಡೆದುಕೊಂಡಿರುವ, ಸುಹೃದರಿಗೆ ದ್ರೋಹವನ್ನೆಸಗಿದ ನನಗೆ ಪಾರ್ಥಿವಸಂಸದಿಯಲ್ಲಿ ಈ ಭೂಮಿಯು ಏಕೆ ಸೀಳಿಹೋಗಿ ಅವಕಾಶಮಾಡಿಕೊಡುವುದಿಲ್ಲ? ರಾಜರ ಮಧ್ಯೆ ಯುದ್ಧಮಾಡುತ್ತಾ, ಅವನ ಅಂಗಗಳು ರಕ್ತದಿಂದ ತೋಯುತ್ತಿರಲು ಪಿತಾಮಹ ಭೀಷ್ಮನು ಹತನಾಗಿ ಮಲಗಿದಾಗ ನಾನು ಅವನನ್ನು ರಕ್ಷಿಸಲು ಶಕ್ತನಾಗಲಿಲ್ಲ. ಆ ದುರ್ಧರ್ಷ ಪರಲೋಕವನ್ನು ಜಯಿಸಿರುವವನು ಅನಾರ್ಯಪುರುಷನಾದ, ಮಿತ್ರದ್ರೋಹಿಯಾದ, ಅಧಾರ್ಮಿಕನಾದ ನನಗೆ ಏನು ಹೇಳಿಯಾನು? ನನಗಾಗಿ ಪ್ರಾಣವನ್ನು ತ್ಯಜಿಸಿ ಹೋರಾಡಿದ ಮಹಾರಥ ಶೂರ ಮಹೇಷ್ವಾಸ ಜಲಸಂಧನನ್ನು ಸಾತ್ಯಕಿಯು ಸಂಹರಿಸಿದುದನ್ನು ನೋಡು! ಕಾಂಬೋಜ, ಅಲಂಬುಸ ಮತ್ತು ಇನ್ನೂ ಅನೇಕ ಸುಹೃದಯರು ಹತರಾದುದನ್ನು ನೋಡಿ ಇಂದು ನಾನು ಬದುಕಿರುವುದರ ಅರ್ಥವೇನು? ನನ್ನ ವಿಜಯಕ್ಕಾಗಿ ಹಿತಕ್ಕಾಗಿ ಪರಾಙ್ಮುಖರಾಗದೇ ಪರಮ ಶಕ್ತಿಯಿಂದ ಪ್ರಯತ್ನಮಾಡಿದ ಶೂರರು ಹತರಾದರು. ಇಂದು ನಾನು ಹೊರಟುಹೋಗಿರುವ ಅವರ ಋಣವನ್ನು ಶಕ್ತಿಯಿಂದ ಯಮುನೆಯ ಜಲದಿಂದ ತರ್ಪಣಗಳನ್ನಿತ್ತು ತೀರಿಸಿಕೊಳ್ಳುತ್ತೇನೆ. ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠನೇ! ನಿನಗೆ ಸತ್ಯವಾದುದನ್ನು ಪ್ರತಿಜ್ಞೆಮಾಡಿ ಹೇಳುತ್ತೇನೆ. ನನ್ನ ವೀರ್ಯ ಮತ್ತು ಸುತರ ಮೇಲೆ ಆಣೆಯಿಟ್ಟು ಇಷ್ಟಾಪೂರ್ತಿಯಿಂದ ಶಪಥ ಮಾಡುತ್ತೇನೆ. ರಣದಲ್ಲಿ ಆ ಎಲ್ಲ ಪಾಂಚಾಲರನ್ನೂ ಪಾಂಡವರೊಂದಿಗೆ ಸಂಹರಿಸಿ ಶಾಂತಿಯನ್ನು ಪಡೆಯುತ್ತೇನೆ ಅಥವಾ ಅವರು ಹೋಗಿರುವ ಲೋಕಗಳಿಗೆ ಹೋಗುತ್ತೇನೆ. ನನ್ನನ್ನು ಅನುಸರಿಸಿಬಂದವರು ಈಗ ನನಗೆ ಸಹಾಯವನ್ನು ಮಾಡಲು ಬಯಸುತ್ತಿಲ್ಲ. ಏಕೆಂದರೆ ಈಗ ಅವರು ನಮ್ಮನ್ನಲ್ಲ - ಪಾಂಡವರನ್ನೇ ಶ್ರೇಷ್ಠರೆಂದು ತಿಳಿದಿದ್ದಾರೆ. ಆ ಸತ್ಯಸಂಧ ಭೀಷ್ಮನು ಸಂಯುಗದಲ್ಲಿ ತಾನೇ ತನಗೆ ಮೃತ್ಯುವನ್ನು ತಂದುಕೊಂಡನು. ನೀವು ನಿಮ್ಮ ಪ್ರಿಯ ಶಿಷ್ಯ ಧನಂಜಯನಿಂದಾಗಿ ಉಪೇಕ್ಷೆ ಮಾಡುತ್ತಿದ್ದೀರಿ. ನಮಗೆ ಜಯವನ್ನು ಬಯಸಿದವರೆಲ್ಲರೂ ಈಗ ಹತರಾಗಿಬಿಟ್ಟಿದ್ದಾರೆ. ಆದರೆ ಸದ್ಯದಲ್ಲಿ ಕರ್ಣನಲ್ಲಿ ಮಾತ್ರ ನನಗೆ ಜಯವನ್ನು ತರುವ ಬಯಕೆಯನ್ನು ಕಾಣುತ್ತಿದ್ದೇನೆ. ಯಾವ ಮಂದಬುದ್ಧಿಯು ಮಿತ್ರನು ಹೇಗಿದ್ದಾನದೆಂದು ಸರಿಯಾಗಿ ತಿಳಿದುಕೊಳ್ಳದೇ ಮಿತ್ರರು ಮಾಡುವ ಕೆಲಸವನ್ನು ಅವನಿಗೆ ವಹಿಸಿದರೆ ಅದು ಹಾಳಾಗಿ ಹೋಗುತ್ತದೆ. ಲುಬ್ಧ, ಪಾಪಿ, ಕುಟಿಲ, ಧನಲೋಭಿಯಾದ ನನ್ನ ಕಾರ್ಯಗಳೂ ಸುಹೃದಯರೆಂದು ಹೇಳಿಸಿಕೊಳ್ಳುವವರಿಂದ ಹೀಗೆಯೇ ಹಾಳಾಗಿ ಹೋಯಿತು. ಜಯದ್ರಥ, ವೀರ್ಯವಾನ್ ಸೌಮದತ್ತಿ, ಅಭೀಷಾಹರು, ಶೂರಸೇನರು, ಶಿಬಿಗಳು ಮತ್ತು ವಸಾಹತರು ಹತರಾದರು. ನನಗಾಗಿ ಸಂಗ್ರಾಮದಲ್ಲಿ ಹೋರಾಡುತ್ತಾ ಆ ಪುರುಷರ್ಷಭರು ಕಿರೀಟಿಯಿಂದ ಹತರಾಗಿ ಎಲ್ಲಿಗೆ ಹೋಗಿರುವರೋ ಅಲ್ಲಿಗೆ ನಾನೂ ಕೂಡ ಇಂದು ಹೋಗುತ್ತೇನೆ. ಆ ಪುರುಷರ್ಷಭರು ಇಲ್ಲದೇ ನಾನು ಬದುಕಿರುವುದರಲ್ಲಿ ಅರ್ಥವಿಲ್ಲ. ಪಾಂಡುಪುತ್ರರ ಆಚಾರ್ಯರಾದ ನೀವು ನನಗೆ ಅನುಮತಿಯನ್ನು ನೀಡಬೇಕು.”

ದ್ರೋಣನ ಮಾತು

ಸೈಂಧವನೂ ಭೂರಿಶ್ರವಸನೂ ಹತರಾದುದನ್ನು ಕಂಡು ಕೌರವ ಸೇನೆಗಳಲ್ಲಿ ಮಹಾ ಶೋಕವುಂಟಾಯಿತು. ಯಾರ ಸಲಹೆಯಿಂದ ನೂರಾರು ಕ್ಷತ್ರಿಯರ್ಷಭರು ಹತರಾದರೋ ಆ ದುರ್ಯೋಧನನ ಸಲಹೆಯನ್ನು ಎಲ್ಲರೂ ಅನಾದರಿಸಿದರು. ದ್ರೋಣನಾದರೋ ದುರ್ಯೋಧನನ ಆ ಮಾತನ್ನು ಕೇಳಿ ದುಃಖಿತ ಮನವುಳ್ಳವರಾಗಿ, ಒಂದು ಮುಹೂರ್ತಕಾಲ ಯೋಚಿಸಿ, ತುಂಬಾ ಆರ್ತನಾಗಿ ಹೇಳಿದನು: “ದುರ್ಯೋಧನ! ಮಾತಿನ ಶರಗಳಿಂದ ನನ್ನನ್ನೇಕೆ ತುಂಡು ತುಂಡು ಮಾಡುತ್ತಿರುವೆ? ಸಮರದಲ್ಲಿ ಸವ್ಯಸಾಚಿಯು ಅಜೇಯನೆಂದು ಯಾವಾಗಲೂ ಹೇಳಿಕೊಂಡು ಬಂದಿದ್ದೇನೆ. ಅರ್ಜುನನ ಅತುಲ ಪರಾಕ್ರಮವನ್ನು ತಿಳಿದುಕೊಳ್ಳಲು ಕಿರೀಟಿಯಿಂದ ರಕ್ಷಿಸಲ್ಪಟ್ಟ ಶಿಖಂಡಿಯು ಭೀಷ್ಮನನ್ನು ವಧಿಸಿದುದೊಂದೇ ಸಾಕು. ದೇವಮಾನುಷರಿಂದಲೂ ಅವಧ್ಯನಾಗಿದ್ದ ಅವನು ಹತನಾದುದನ್ನು ನೋಡಿದಾಗಲೇ ಭಾರತೀ ಸೇನೆಯು ಉಳಿಯುವುದಿಲ್ಲವೆಂದು ತಿಳಿದುಕೊಂಡಿದ್ದೆ. ಮೂರುಲೋಕಗಳಲ್ಲಿರುವ ಎಲ್ಲ ಪುರುಷರಲ್ಲಿ ಯಾರನ್ನು ಶೂರನೆಂದು ನಾವು ಪರಿಗಣಿಸಿದ್ದೇವೋ ಆ ಶೂರನೇ ಹತನಾದ ಮೇಲೆ ಬೇರೆ ಯಾರನ್ನು ಶರಣುಹೋಗಬಲ್ಲೆವು? ಮಗೂ! “ಕುರುಸಂಸದಿಯಲ್ಲಿ ಶಕುನಿಯು ಯಾವ ಪಗಡೆಕಾಯಿಗಳನ್ನು ನಡೆಸುತ್ತಿದ್ದನೋ ಅವು ನಿಜವಾದ ಪಗಡೆಕಾಯಿಗಳಲ್ಲ, ಶತ್ರುಗಳನ್ನು ಸುಡುವಂತಹ ಬಾಣಗಳು, ಅಯ್ಯಾ! ಜಯಚೋದಿತರಾದ ಇವು ವಿಶಿಖೆಗಳಾಗಿ ಕೊಲ್ಲುವುದಿಲ್ಲ!” ಎಂದು ಹೇಳಿದ ವಿದುರನನ್ನು ನೀನು ಅಂದು ಅರ್ಥಮಾಡಿಕೊಳ್ಳಲಿಲ್ಲ. ನಿನ್ನ ಕ್ಷೇಮಕ್ಕಾಗಿ ಮಹಾತ್ಮ ವಿದುರನು ವಿಲಪಿಸುತ್ತಿದ್ದರೂ, ಮಂಗಳ ಮಾತನ್ನು ಆಡುತ್ತಿದ್ದರೂ ನೀನು ಅವನ ಮಾತನ್ನು ಕೇಳಲಿಲ್ಲ. ದುರ್ಯೋಧನ! ಅವನ ಆ ಮಾತುಗಳನ್ನು ಅನಾದರಿಸಿದುದರಿಂದ ಬಂದಿರುವ ಮತ್ತು ನಡೆಯುತ್ತಿರುವ ಈ ಘೋರ ಮಹಾ ನಾಶವು ನೀನೇ ಮಾಡಿದ ಕೆಲಸದಿಂದಾಗಿ! ನಾವೆಲ್ಲರೂ ನೋಡುತ್ತಿದ್ದಂತೆಯೇ ಅನರ್ಹಳಾದ, ಉತ್ತಮ ಕುಲದಲ್ಲಿ ಹುಟ್ಟಿದ, ಸರ್ವಧರ್ಮಾನುಚಾರಿಣಿ ಕೃಷ್ಣೆಯನ್ನು ಸಭೆಗೆ ಸೆಳೆದು ತರಿಸಿ ಅಪಮಾನಿಸಿದೆ. ಗಾಂಧಾರೇ! ಆ ಅಧರ್ಮದ ಫಲವನ್ನು ನೀನು ಪಡೆಯುತ್ತಿದ್ದೀಯೆ. ಇಲ್ಲವಾದರೆ ನೀನು ಪರಲೋಕದಲ್ಲಿ ಇದಕ್ಕೂ ಅಧಿಕವಾದ ಫಲವನ್ನು ಅನುಭವಿಸಬೇಕಾಗಿದ್ದಿತು. ಆ ಪಾಂಡವರನ್ನು ದ್ಯೂತದಲ್ಲಿ ಮೋಸದಿಂದ ಗೆದ್ದು ಮೃಗಚರ್ಮಧರರನ್ನಾಗಿ ಮಾಡಿ ಅರಣ್ಯಕ್ಕೆ ಕಳುಹಿಸಿದೆ. ನನಗೆ ಪುತ್ರರಂತಿರುವ, ಸದಾ ಧರ್ಮಾಚರಣೆಯಲ್ಲಿರುವ ಅವರಿಗೆ ನಾನು ದ್ರೋಹವೆಸಗುತ್ತಿದ್ದೇನೆ. ಲೋಕದ ಮನುಷ್ಯರು ನನ್ನಂತಹ ಬೇರೆ ಯಾರನ್ನು ತಾನೇ ಬ್ರಾಹ್ಮಣನೆಂದು ಕರೆಯುತ್ತಾರೆ? ಕುರುಸಂಸದಿಯಲ್ಲಿ ಧೃತರಾಷ್ಟ್ರನ ಸಮ್ಮತಿಯಲ್ಲಿ ಶಕುನಿಯೊಂದಿಗೆ ನೀನೇ ಪಾಂಡವರ ಈ ಕೋಪವನ್ನು ಬರಮಾಡಿಕೊಂಡೆ. ದುಃಶಾಸನ-ಕರ್ಣರ ಸಹಾಯದಿಂದ ಅದನ್ನು ಹೆಚ್ಚಿಸಿದೆ. ಕ್ಷತ್ತನ ವಾಕ್ಯಗಳನ್ನು ಪುನಃ ಪುನಃ ಅನಾದರಿಸಿ ನೀನು ಇದನ್ನು ವೃದ್ಧಿಸಿದೆ. ನೀವೆಲ್ಲರೂ ಒಟ್ಟಾಗಿ, ಸಿಂಧುರಾಜನನ್ನು ಆಶ್ರಯಿಸಿ ಆರ್ಜುನಿಯನ್ನು ಸುತ್ತುವರೆದು ಮಧ್ಯದಲ್ಲಿದ್ದ ಅವನನ್ನು ಹೇಗೆ ಕೊಂದಿರಿ? ಕೌರವ್ಯ! ನೀನು, ಕರ್ಣ, ಕೃಪ, ಶಲ್ಯ ಮತ್ತು ಅಶ್ವತ್ಥಾಮರು ಜೀವಿತರಾಗಿರುವಾಗ ಸೈಂಧವನು ಹೇಗೆ ನಿಧನವನ್ನು ಹೊಂದಿದನು? ಯಾವಾಗ ಎಲ್ಲ ರಾಜರೂ ತಿಗ್ಮ ತೇಜಸ್ಸನ್ನು ಬಳಸಿ ಸಿಂಧುರಾಜನನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಾಗ ಮಧ್ಯದಲ್ಲಿದ್ದ ಅವನು ಹೇಗೆ ಹತನಾದನು? ದುರ್ಯೋಧನ! ಆ ಮಹೀಪತಿಯು ಅರ್ಜುನನಿಂದ ರಕ್ಷಣೆಯನ್ನು ವಿಶೇಷವಾಗಿ ನನ್ನಿಂದ ಮತ್ತು ನಿನ್ನಿಂದ ಆಶಿಸಿದ್ದನು. ಫಲ್ಗುನನಿಂದ ಅವನಿಗೆ ರಕ್ಷಣೆಯನ್ನು ಒದಗಿಸದೇ ಇದ್ದ ನಾನು ನನ್ನ ಜೀವನದ ರಕ್ಷಣೆಯನ್ನೂ ಹೇಗೆ ಮಾಡಿಕೊಳ್ಳುವೆನೋ! ಆ ಶಿಖಂಡಿಯೊಡನೆ ಪಾಂಚಾಲರನ್ನು ಸಂಹರಿಸದೇ ನನ್ನನ್ನು ನಾನು ಧೃಷ್ಟದ್ಯುಮ್ನನೆಂಬ ಕಿಲ್ಬಿಷದಲ್ಲಿ ಮುಳುಗಿ ಹೋಗಿರುವೆನೋ ಎಂದು ನನಗೆ ತೋರುತ್ತಿದೆ. ಸಿಂಧುರಾಜನಿಗೆ ರಕ್ಷಣೆಯನ್ನು ನೀಡಲು ಅಶಕ್ತನಾದ ನೀನು ಏನು ಮಾಡಬೇಕೆಂದು ಪರಿತಪಿಸುತ್ತಿರುವ ನನ್ನನ್ನು ಏಕೆ ಮಾತಿನ ಶರಗಳಿಂದ ಚುಚ್ಚುತ್ತಿರುವೆ? ಯುದ್ಧದಲ್ಲಿ ಸತ್ಯಸಂಧ ಅಕ್ಲಿಷ್ಟಕರ್ಮಿ ಭೀಷ್ಮನ ಸುವರ್ಣಧ್ವಜವನ್ನು ಕಾಣದೇ ನಾವು ಹೇಗೆ ಜಯವನ್ನು ಆಶಿಸಬಲ್ಲೆವು? ಮಹಾರಥರ ಮಧ್ಯದಲ್ಲಿದ್ದ ಸೈಂಧವನು ಹತನಾಗಲು, ಭೂರಿಶ್ರವಸನೂ ಕೂಡ ಹತನಾಗಲು ಯೋಚಿಸಲು ಇನ್ನೇನು ಉಳಿದಿದೆ? ಸಿಂಧುರಾಜನ ಗತಿಯಲ್ಲಿಯೇ ಹೋಗದೇ ಜೀವಿಸಿರುವ ಕೃಪನೇ ದುರ್ಧರ್ಷನೆಂದು ನಾನು ಗೌರವಿಸುತ್ತೇನೆ. ಸಂಗ್ರಾಮದಲ್ಲಿ ವಾಸವನೊಂದಿಗೆ ದೇವತೆಗಳಿಗೂ ಅವಧ್ಯನೆಂದೆನಿಸಿಕೊಂಡಿರುವ, ದುಷ್ಕರ ಕರ್ಮಗಳನ್ನೆಸಗುವ ಭೀಷ್ಮನು ನಿನ್ನ ಅನುಜ ದುಃಶಾಸನನು ನೋಡುತ್ತಿರುವಂತೆಯೇ ಹತನಾದುದನ್ನು ಕಂಡಾಗಲೇ ನಾನು ಈ ವಸುಂಧರೆಯು ನಿನ್ನದಾಗುವುದಿಲ್ಲವೆಂದು ನಾನು ಯೋಚಿಸಿದ್ದೆ. ಈ ಪಾಂಡವರು ಮತ್ತು ಸೃಂಜಯರ ಸೇನೆಗಳು ಒಟ್ಟಾಗಿ ಇಂದು ನನ್ನ ಮೇಲೆ ಬಂದು ಬೀಳಲಿ. ಸರ್ವಪಾಂಚಾಲರನ್ನು ಸಂಹರಿಸದೆಯೇ ನಾನು ಈ ಕವಚವನ್ನು ಬಿಚ್ಚುವುದಿಲ್ಲ. ಸಮರದಲ್ಲಿ ನಿನಗೆ ಹಿತವಾದ ಈ ಕಾರ್ಯವನ್ನು ಮಾಡುತ್ತೇನೆ. ಆಹವದಲ್ಲಿ ನನ್ನ ಮಗ ಅಶ್ವತ್ಥಾಮನಿಗೆ ನೀನು ಇದನ್ನು ಹೇಳಬೇಕು: “ಜೀವವನ್ನು ರಕ್ಷಿಸಿಕೊಳ್ಳುವ ಆಸೆಯಿಂದ ಸೋಮಕರನ್ನು ವಧಿಸದೇ ಬಿಟ್ಟುಬಿಡಬಾರದು! ಹೀಗೆ ತಂದೆಯಿಂದ ಅನುಶಾಸಿತನಾಗಿರುವೆ. ಆ ವಚನವನ್ನು ಪರಿಪಾಲಿಸು. ದಯೆ, ದಮ, ಸತ್ಯ ಮತ್ತು ಆರ್ಜವಗಳಲ್ಲಿ ನೀನು ಸ್ಠಿರನಾಗಿರು. ಧರ್ಮಾರ್ಥಕುಶಲನಾಗಿದ್ದೀಯೆ! ಧರ್ಮಾರ್ಥಗಳನ್ನು ಪೀಡಿಸಬೇಡ! ಧರ್ಮಪ್ರಧಾನವಾದ ಕಾರ್ಯಗಳನ್ನೇ ಪುನಃ ಪುನಃ ಮಾಡುತ್ತಿರು!” ಎಂದು. ನೋಟ ಮತ್ತು ಮನಸ್ಸುಗಳಿಂದ ಶಕ್ತಿಯಿದ್ದಷ್ಟು ವಿಪ್ರರ ಸೇವೆಮಾಡಿ ಸಂತೋಷಗೊಳಿಸಬೇಕು. ಬೆಂಕಿಯ ಜ್ವಾಲೆಗಳಂತಿರುವ ಅವರಿಗೆ ವಿಪ್ರಿಯವಾದ ಕೆಲಸಗಳನ್ನು ಮಾಡಬಾರದು. ಇದೋ! ನಿನ್ನ ಈ ಮಾತಿನ ಈಟಿಯಿಂದ ತುಂಬಾ ಪೀಡಿತನಾಗಿ ನಾನು ರಣದಲ್ಲಿ ಸೇನೆಗಳನ್ನು ಸೇರುತ್ತಿದ್ದೇನೆ. ಸಧ್ಯವಾದರೆ ನೀನೂ ಕೂಡ ಸೇನೆಯನ್ನು ರಕ್ಷಿಸು. ರಾತ್ರಿಯಾದರೂ ಕೂಡ ಸಂರಬ್ಧರಾದ ಕುರು-ಸೃಂಜಯರು ಯುದ್ಧಮಾಡುತ್ತಾರೆ.”

ಹೀಗೆ ಹೇಳಿ ದ್ರೋಣನು ಸೂರ್ಯನು ನಕ್ಷತ್ರಗಳಿಂದ ಹೇಗೋ ಹಾಗೆ ಕ್ಷತ್ರಿಯರ ತೇಜಸ್ಸನ್ನು ಅಪಹರಿಸುತ್ತಾ ಪಾಂಡವ-ಸೃಂಜಯರ ಕಡೆ ತೆರಳಿದನು.

ಹದಿನಾಲ್ಕನೆಯ ದಿನದ ಸಂಜೆ: ಪುನಃ ಯುದ್ಧಾರಂಭ

ಆಗ ದುರ್ಯೋಧನನು ದ್ರೋಣನಿಂದಲೇ ಪ್ರಚೋದಿತನಾಗಿ ಕೋಪಾವಿಷ್ಟನಾಗಿ ಯುದ್ಧದ ಕುರಿತೇ ಮನಸ್ಸು ಮಾಡಿದನು. ಆಗ ದುರ್ಯೋಧನನು ಕರ್ಣನಿಗೆ ಹೇಳಿದನು: “ದೇವತೆಗಳಿಗೂ ದುರ್ಭೇದ್ಯವಾದ ಆಚಾರ್ಯರು ರಚಿಸಿದ ವ್ಯೂಹವನ್ನೂ ಕೂಡ ಪಾಂಡವ ಕಿರೀಟಿಯು ಕೃಷ್ಣನ ಸಹಾಯದಿಂದ ಒಡೆದುದನ್ನು ನೋಡು! ಮಹಾತ್ಮರಾದ ನೀನು ಮತ್ತು ದ್ರೋಣರು ಯುದ್ಧಮಾಡುತ್ತಿರುವಾಗ ಯೋಧಪ್ರಮುಖರು ನೋಡುತ್ತಿರುವಂತೆಯೇ ಸೈಂಧವನನ್ನು ಬೀಳಿಸಿದುದನ್ನು ನೋಡು! ಯುದ್ಧದಲ್ಲಿ ಪೃಥ್ವಿಯ ಪ್ರಮುಖ ರಾಜರು ಪಾರ್ಥನೊಬ್ಬನಿಂದಲೇ ಸಿಂಹದಿಂದ ಇತರ ಮೃಗಗಳಂತೆ ಹತರಾಗಿರುವುದನ್ನು ನೋಡು! ಸಮರದಲ್ಲಿ ನಾನೇ ಯುದ್ಧಮಾಡುತ್ತಿದ್ದರೂ ಈ ಶಕ್ರಾತ್ಮಜನು ನನ್ನ ಸೇನೆಯಲ್ಲಿ ಸ್ವಲ್ಪವೇ ಉಳಿದುಕೊಳ್ಳುವಂತೆ ಮಾಡಿಬಿಟ್ಟಿದ್ದಾನೆ! ಯುದ್ಧದಲ್ಲಿ ದ್ರೋಣರಿಂದ ಬಿಟ್ಟುಕೊಡದೇ ಇದ್ದಿದ್ದರೆ ಫಲ್ಗುನನು ಸಂಯುಗದಲ್ಲಿ ಎಷ್ಟೇ ಪ್ರಯತ್ನಿಸಿದ್ದರೂ ಹೇಗೆ ತಾನೇ ದುರ್ಭೇದ್ಯವಾದ ಈ ವ್ಯೂಹವನ್ನು ಭೇದಿಸುತ್ತಿದ್ದನು? ಮಹಾತ್ಮ ಫಲ್ಗುನನು ಯಾವಾಗಲೂ  ಪ್ರಿಯನಲ್ಲವೇ? ಆದುದರಿಂದಲೇ ಅವರು ಅವನೊಂದಿಗೆ ಯುದ್ಧಮಾಡದೇ ದಾರಿಮಾಡಿಕೊಟ್ಟರು! ಪರಂತಪ ದ್ರೋಣರು ಸೈಂಧವನಿಗೆ ಅಭಯವನ್ನಿತ್ತು ಕಿರೀಟಿಗೆ ದ್ವಾರವನ್ನು ತೆರೆದರು. ನನ್ನ ನಿರ್ಗುಣತೆಯನ್ನು ನೋಡು! ಒಂದುವೇಳೆ ಮೊದಲೇ ಅವರು ಮನೆಗೆ ಹೋಗಲು ಸಿಂಧುರಾಜನಿಗೆ ಅನುಮತಿಯನ್ನಿತ್ತಿದ್ದರೆ ಸಮರದಲ್ಲಿ ಈ ಜನಕ್ಷಯವು ನಡೆಯುತ್ತಿರಲಿಲ್ಲ. ಆದರೆ ನಾನು ಅನಾರ್ಯನಂತೆ ರಣದಲ್ಲಿ ಸಂರುದ್ಧರಾದ ದ್ರೋಣರಿಂದ ಅಭಯವನ್ನು ಪಡೆದು ಜೀವಿತಾರ್ಥನಾದ ಜಯದ್ರಥನನ್ನು ಮನೆಗೆ ಹೋಗದಂತೆ ತಡೆದೆನು. ನಾವೆಲ್ಲ ದುರಾತ್ಮರು ನೋಡುತ್ತಿದ್ದಂತೆಯೇ ಇಂದು ಯುದ್ಧದಲ್ಲಿ ಭೀಮಸೇನನನ್ನು ಎದುರಿಸಿ ಚಿತ್ರಸೇನನೇ ಮೊದಲಾದ ನನ್ನ ತಮ್ಮಂದಿರು ಅಸುನೀಗಿದರು!”

ಕರ್ಣನು ಹೇಳಿದನು: “ಆಚಾರ್ಯನನ್ನು ನಿಂದಿಸದಿರು. ಆ ದ್ವಿಜನು ಪರಮ ಶಕ್ತಿಯಿಂದ ಯುದ್ಧಮಾಡುತ್ತಿದ್ದಾನೆ. ಯುದ್ಧದಲ್ಲಿ ಪಾಂಡವರು ಅಸ್ತ್ರವಿದ ದ್ರೋಣನಿಂದ ಅಜೇಯರೆಂದು ತಿಳಿ. ಹೇಗೆ ಅವನನ್ನು ಅತಿಕ್ರಮಿಸಿ ಶ್ವೇತವಾಹನನು ಪ್ರವೇಶಿಸಿದನೋ ಅದು ದೈವದೃಷ್ಟವೇ ಹೊರತು ಅನ್ಯಥಾ ಅದನ್ನು ತಿಳಿದುಕೊಳ್ಳಬಾರದು. ಬೇರೆ ಏನೂ ಅದರಲ್ಲಿಲ್ಲ. ಸುಯೋಧನ! ಪರಮ ಶಕ್ತಿಯಿಂದ ನಾವು ಯುದ್ಧಮಾಡುತ್ತಿದ್ದರೂ ಸೈಂಧವನು ಹತನಾದನೆಂದರೆ ಅದರಲ್ಲಿ ದೈವವೇ ಮೇಲು ಎನ್ನುವುದನ್ನು ನೆನಪಿಸಿಕೊಳ್ಳಬೇಕು. ರಣಾಂಗಣದಲ್ಲಿ ನಿನ್ನ ಜೊತೆಗೇ ಪರಮ ಯತ್ನವನ್ನು ಮಾಡುತ್ತಿರುವ, ಸತತವೂ ಮೋಸದಿಂದ ಅಥವಾ ವಿಕ್ರಮದಿಂದ ನಡೆದುಕೊಳ್ಳುತ್ತಿರುವ ನಮ್ಮ ಈ ಪೌರುಷವನ್ನು ಕೊಂದು ದೈವವು ಮೇಲುಗೈ ಮಾಡುತ್ತಿದೆ. ದೈವದಿಂದ ಪೀಡಿತನಾದ ಪುರುಷನು ಯಾವುದೇ ಕರ್ಮವನ್ನು ಮಾಡಲು ತೊಡಗಿದರೂ ಅವನ ಒಂದೊಂದು ಕೆಲಸವನ್ನೂ ದೈವವು ಹಾಳುಮಾಡುತ್ತದೆ. ಮನುಷ್ಯನು ಸದಾ ಉದ್ಯೋಗಶೀಲನಾಗಿ ಕಾರ್ಯವು ಸಿದ್ಧಿಯಾಗುವುದೋ ಇಲ್ಲವೋ ಎಂಬ ಶಂಕೆಯಿಲ್ಲದೇ ಕರ್ತವ್ಯವನ್ನು ಮಾಡುತ್ತಿರಬೇಕು. ಅದರ ಸಿದ್ಧಿಯು ದೈವಾಧೀನವಾದುದು. ಪಾರ್ಥರನ್ನು ನಾವು ವಿಷ ಮತ್ತು ಯೋಗಗಳಿಂದ ಮೋಸದಿಂದ ವಂಚಿಸಿದ್ದೇವೆ. ಜತುಗೃಹದಲ್ಲಿ ಸುಟ್ಟೆವು ಮತ್ತು ದ್ಯೂತದಲ್ಲಿ ಸೋಲಿಸಿದೆವು. ರಾಜನೀತಿಯನ್ನು ಆಶ್ರಯಿಸಿ ಅವರನ್ನು ಕಾನನಕ್ಕೆ ಕಳುಹಿಸಿಯೂ ಆಯಿತು. ಪ್ರಯತ್ನಪೂರ್ವಕವಾಗಿ ಮಾಡಿದ ಈ ಎಲ್ಲವನ್ನು ದೈವವು ಮಣ್ಣುಗೂಡಿಸಿತು. ಮೃತ್ಯುವನ್ನು ಹಿಂದೆ ಹಾಕಿ ಪ್ರಯತ್ನಪೂರ್ವಕವಾಗಿ ಯುದ್ಧಮಾಡು. ಪ್ರಯತ್ನಿಸುತ್ತಿರುವ ನಿನ್ನ ಮತ್ತು ಅವರ ಮಾರ್ಗದಲ್ಲಿ ದೈವವು ಹೋಗುತ್ತದೆ. ಅವರು ಬುದ್ಧಿಪೂರ್ವಕವಾಗಿ ಮಾಡಿರಬಹುದಾದ ಸುಕೃತವು ನಮಗೆ ಏನೂ ಕಾಣುವುದಿಲ್ಲ. ಹಾಗೆಯೇ ವೀರ! ಬುದ್ಧಿಹೀನತೆಯಿಂದ ನೀನು ಮಾಡಿರುವ ದುಷ್ಕೃತಗಳೂ ಕಾಣುವುದಿಲ್ಲ. ಸುಕೃತ-ದುಷ್ಕೃತಗಳೆಲ್ಲವಕ್ಕೂ ದೈವವೇ ಪ್ರಮಾಣವಾಗಿರುತ್ತದೆ. ನಿದ್ದೆಮಾಡುತ್ತಿರುವಾಗಲೂ ಜಾಗೃತವಾಗಿದ್ದು ದೈವವು ಅನನ್ಯವಾಗಿ ಇದೇ ಕೆಲಸವನ್ನು ಮಾಡುತ್ತಿರುತ್ತದೆ. ಆಗ ನಿನ್ನಲ್ಲಿ ಸೈನ್ಯಗಳೂ ಬಹಳವಾಗಿದ್ದವು. ಯೋಧರೂ ಬಹಳವಾಗಿದ್ದರು. ಪಾಂಡುಪುತ್ರರದ್ದು ಹಾಗಿರದಿದ್ದರೂ ಯುದ್ಧವು ನಡೆಯಿತು. ಅಲ್ಪರಾಗಿದ್ದ ಅವರಿಂದ ಬಹಳವಾಗಿದ್ದ ನಾವು ಕ್ಷಯಹೊಂದುತ್ತಿದ್ದೇವೆ. ನಮ್ಮ ಪೌರುಷವನ್ನು ನಾಶಮಾಡಿದ ಇದು ದೈವದ ಕೆಲಸವೆಂದು ಶಂಕೆಯಾಗುತ್ತಿದೆ.”

ಹೀಗೆ ಅವರು ಬಹಳವಾಗಿ ಮಾತನಾಡಿಕೊಳ್ಳುತ್ತಿದ್ದಾಗ ಪಾಂಡವರ ಸೇನೆಗಳು ಕಾಣಿಸಿಕೊಂಡವು. ಆಗ ಕೌರವರ ಮತ್ತು ಪರರ ನಡುವೆ ರಥ-ಗಜಗಳ ಸಮ್ಮಿಶ್ರ ಯುದ್ಧವು ಪ್ರಾರಂಭವಾಯಿತು.

Leave a Reply

Your email address will not be published. Required fields are marked *