ಹದಿನಾಲ್ಕನೇ ದಿನದ ಯುದ್ಧ -೩
ಸಂಕುಲಯುದ್ಧ
ವೃಷ್ಣಿ-ಅಂಧಕ-ಮತ್ತು ಕುರು ಉತ್ತಮರನ್ನು ನೋಡಿ ಕೌರವರು ಅವರನ್ನು ಕೊಲ್ಲಲು ನಾಮುಂದು ತಾಮುಂದು ಎಂದು ಮುನ್ನುಗ್ಗಲು ವಿಜಯನೂ ಶತ್ರುಗಳ ಮೇಲೆ ಎರಗಿದನು. ಸುವರ್ಣ ಚಿತ್ರಗಳಿಂದ, ವ್ಯಾಘ್ರಚರ್ಮಗಳಿಂದ ಅಲಂಕೃತಗೊಂಡ, ಉತ್ತಮ ಶಬ್ಧಮಾಡುತ್ತಿರುವ ಮಹಾರಥಗಳಲ್ಲಿ, ಎಲ್ಲ ದಿಕ್ಕುಗಳನ್ನೂ ಪ್ರಜ್ವಲಿಸುತ್ತಿರುವ ಪಾವಕನಂತೆ ಬೆಳಗಿಸುತ್ತಾ, ಬಂಗಾರದ ಹಿಡಿಯನ್ನುಳ್ಳ ಕಾರ್ಮುಕಗಳನ್ನು ಎತ್ತಿ ತೋರಿಸುತ್ತಾ, ಸರಿಸಾಟಿಯಿಲ್ಲದ ಕೂಗುಗಳನ್ನು ಕೂಗುತ್ತಾ, ಕ್ರುದ್ಧರಾದ ಕುದುರೆಗಳಂತೆ ಭೂರಿಶ್ರವ, ಶಲ, ಕರ್ಣ, ವೃಷಸೇನ, ಜಯದ್ರಥ, ಕೃಪ, ಮದ್ರರಾಜ, ಮತ್ತು ದ್ರೌಣಿ ಈ ಎಂಟು ಮಹಾರಥರು ಇಡೀ ಆಕಾಶವನ್ನೇ ಕುಡಿದು ಬಿಡುತ್ತಾರೋ ಎನ್ನುವಂತೆ ವೈಯಾಘ್ರ-ಹೇಮಚಂದ್ರಕಗಳಿಂದ ದಶ-ದಿಶಗಳನ್ನೂ ಬೆಳಗಿಸಿದರು. ತುಂಬಾ ಕುಪಿತರಾಗಿದ್ದ ಆ ಕವಚಧಾರಿಗಳು ಮೋಡಗಳ ಗುಂಪುಗಳಂತೆ ಗುಡುಗುತ್ತಿದ್ದ ರಥಗಳಲ್ಲಿ ಎಲ್ಲ ದಿಕ್ಕುಗಳನ್ನೂ ಪಾರ್ಥನನ್ನೂ ಹರಿತ ವಿಶಿಖಗಳಿಂದ ಮುಚ್ಚಿಬಿಟ್ಟರು. ಆ ಮಹಾರಥರನ್ನು ಕೊಂಡೊಯ್ಯುತ್ತಿದ್ದ ಉತ್ತಮ ಥಳಿಯ ಸುಂದರ ಶೀಘ್ರ ಕುದುರೆಗಳು ಹತ್ತು ದಿಕ್ಕುಗಳನ್ನೂ ಬೆಳಗಿಸುತ್ತಿರುವಂತೆ ಪ್ರಕಾಶಿಸುತ್ತಿದ್ದವು. ಮಹಾವೇಗವುಳ್ಳವುಗಳಾಗಿದ್ದ ಆ ಉತ್ತಮ ಕುದುರೆಗಳು ನಾನಾ ದೇಶಗಳಲ್ಲಿ ಹುಟ್ಟಿದ್ದವು; ಪರ್ವತಗಳಲ್ಲಿ, ನದಿಗಳಲ್ಲಿ ಮತ್ತು ಸಿಂಧುದೇಶಗಳಲ್ಲಿ ಹುಟ್ಟಿದ್ದವು. ದುರ್ಯೋಧನನನ್ನು ರಕ್ಷಿಸುವ ಕುರುಯೋಧ ಶ್ರೇಷ್ಠರು ಶೀಘ್ರದಲ್ಲಿಯೇ ಧನಂಜಯನ ರಥವನ್ನು ಎಲ್ಲ ಕಡೆಗಳಿಂದ ಸುತ್ತುವರೆದರು. ಆ ಪುರುಷಸತ್ತಮರು ಮಹಾ ಶಂಖಗಳನ್ನು ತೆಗೆದುಕೊಂಡು ಸಾಗರಗಳೊಂದಿಗೆ ಪೃಥ್ವಿಯನ್ನೂ ದಿವವನ್ನೂ ತುಂಬುತ್ತಾ ಊದಿದರು. ಹಾಗೆಯೇ ಸರ್ವಭೂತಗಳಲ್ಲಿ ಶ್ರೇಷ್ಠರಾದ ವಾಸುದೇವ ಧನಂಜಯರು ಭುವಿಯಲ್ಲಿರುವ ಎಲ್ಲ ಶಂಖಗಳಲ್ಲಿ ಶ್ರೇಷ್ಠವಾದ ಶಂಖಗಳನ್ನು – ಕೌಂತೇಯನು ದೇವದತ್ತವನ್ನೂ ಕೇಶವನು ಪಾಂಚಜನ್ಯವನ್ನೂ – ಊದಿದರು. ಧನಂಜಯನು ಊದಿದ ದೇವದತ್ತದ ಶಬ್ಧವು ಪೃಥ್ವಿಯನ್ನೂ, ಅಂತರಿಕ್ಷವನ್ನೂ, ಮತ್ತು ದಿಕ್ಕುಗಳನ್ನೂ ತುಂಬಿತು. ಹಾಗೆಯೇ ವಾಸುದೇವನು ಊದಿದ ಪಾಂಚಜನ್ಯವೂ ಕೂಡ ಎಲ್ಲ ಶಬ್ಧಗಳನ್ನೂ ಮೀರಿಸಿ ಭೂಮಿ ಅಂತರಿಕ್ಷಗಳನ್ನು ತುಂಬಿತು. ಹಾಗೆ ದಾರುಣವಾದ ನಾದಸಂಕುಲವು ನಡೆಯುತ್ತಿರಲು - ಭೇರಿಗಳು, ಝರ್ಝರಗಳು, ಅನಕಗಳು, ಮೃದಂಗಗಳು ಮತ್ತು ಅನೇಕ ವಾದ್ಯಗಳು ಬಾರಿಸಲ್ಪಡಲು - ಹೇಡಿಗಳಿಗೆ ಭಯವುಂಟಾಯಿತು ಮತ್ತು ಶೂರರಿಗೆ ಹರ್ಷವು ಹೆಚ್ಚಾಯಿತು. ಅಲ್ಲಿ ಸೇರಿದ್ದ ದುರ್ಯೋಧನನ ಹಿತೈಷಿಣಿಗಳಾದ, ತಮ್ಮ ಸೇನೆಗಳನ್ನೂ ಪರಿರಕ್ಷಿಸುತ್ತಿದ್ದ ನಾನಾ ದೇಶದ ಮಹೀಪಾಲ ಮಹಾರಥ ವೀರರು ಆ ಪರಮಧನ್ವಿಯ ಶಬ್ಧವನ್ನು ಸಹಿಸಲಾರದೇ ಕ್ರುದ್ಧರಾಗಿ ಅಸಹನೆಯಿಂದ ಕೇಶವಾರ್ಜುನರನ್ನು ಮೀರಿಸಬೇಕೆಂದು ತಮ್ಮ ತಮ್ಮ ಶಂಖಗಳನ್ನು ಊದಿದರು. ಶಂಖಶಬ್ಧದಿಂದ ತುಂಬಿಹೋದ ಸೈನ್ಯವು - ರಥ, ಆನೆ, ಕುದುರೆಗಳು ಅಸ್ವಸ್ಥರಾದವರಂತೆ ಉದ್ವಿಗ್ನಗೊಂಡರು. ಶೂರರ ಆ ಶಂಖನಿನಾದವು ಆಕಾಶವೇ ಕೆಳಗೆ ಬಿದ್ದರೆ ಹೇಗೋ ಹಾಗೆ ಶಬ್ಧಗೊಳ್ಳಲು ತುಂಬಾ ಉದ್ವಿಗ್ನತೆಯುಂಟಾಯಿತು. ಆ ಮಹಾ ಶಬ್ಧವು ಯುಗವೇ ಅಂತ್ಯವಾಗುತ್ತಿದೆಯೋ ಎನ್ನುವಂತೆ ಎಲ್ಲ ದಿಕ್ಕುಗಳಲ್ಲಿಯೂ ಮೊಳಗಿ ಆ ಸೈನ್ಯವನ್ನು ಭ್ರಾಂತಗೊಳಿಸಿ ತತ್ತರಿಸುವಂತೆ ಮಾಡಿತು.
ಆಗ ದುರ್ಯೋಧನ ಮತ್ತು ಆ ಎಂಟು ಮಂದಿಗಳು ಜಯದ್ರಥನನ್ನು ರಕ್ಷಿಸಲು ಪಾಂಡವನನ್ನು ಸುತ್ತುವರೆದರು. ಆಗ ದ್ರೌಣಿಯು ಎಪ್ಪತ್ತ್ಮೂರರಿಂದ ವಾಸುದೇವನನ್ನು ಹೊಡೆದನು. ಅರ್ಜುನನನ್ನು ಮೂರು ಭಲ್ಲೆಗಳಿಂದ ಮತ್ತು ಐದರಿಂದ ಅವನ ಧ್ವಜ-ಅಶ್ವಗಳನ್ನು ಹೊಡೆದನು. ಜನಾರ್ದನನಿಗೆ ಹೊಡೆದುದನ್ನು ನೋಡಿ ಸಂಕ್ರುದ್ಧನಾದ ಅರ್ಜುನನು ಅವನನ್ನು ನೂರಾ ಆರು ಬಾಣಗಳಿಂದ ಹೊಡೆದನು. ಕರ್ಣನನ್ನು ಹನ್ನೆರಡರಿಂದ ಮತ್ತು ವೃಷಸೇನನನ್ನು ಮೂರರಿಂದ ಹೊಡೆದು ಆ ವೀರ್ಯವಾನನು ಶಲ್ಯನ ಮುಷ್ಟಿಯಲ್ಲಿದ್ದ ಶರಗಳೊಡನೆ ಚಾಪವನ್ನು ಕತ್ತರಿಸಿದನು. ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಶಲ್ಯನು ಪಾಂಡವನನ್ನು ಹೊಡೆದನು. ಭೂರಿಶ್ರವನು ಮೂರು ಶಿಲಾಶಿತ ಹೇಮಪುಂಖಗಳ ಬಾಣಗಳಿಂದ, ಕರ್ಣನು ಮೂವತ್ತೆರಡರಿಂದ, ವೃಷಸೇನನು ಐದರಿಂದ, ಜಯದ್ರಥನು ಎಪ್ಪತ್ತ್ಮೂರರಿಂದ, ಕೃಪನು ಹತ್ತರಿಂದ ಮತ್ತು ಮದ್ರರಾಜನು ಹತ್ತು ಶರಗಳಿಂದ ಫಲ್ಗುನನನ್ನು ರಣದಲ್ಲಿ ಹೊಡೆದರು. ಆಗ ದ್ರೌಣಿಯು ಅರವತ್ತು ಶರಗಳಿಂದ ಪಾರ್ಥನನ್ನು, ಎಪ್ಪತ್ತರಿಂದ ವಾಸುದೇವನನ್ನೂ, ಪುನಃ ಪಾರ್ಥನನ್ನು ಐದರಿಂದ ಮುಚ್ಚಿದನು. ನರವ್ಯಾಘ್ರ ಶ್ವೇತಾಶ್ವ ಕೃಷ್ಣಸಾರಥಿಯು ಜೋರಾಗಿ ನಕ್ಕು ಅವರೆಲ್ಲರನ್ನು ತಿರುಗಿ ಹೊಡೆದು ತನ್ನ ಹಸ್ತಲಾಘವವನ್ನು ಪ್ರದರ್ಶಿಸಿದನು. ಕರ್ಣನನ್ನು ಹನ್ನೆರಡು ಮತ್ತು ವೃಷಸೇನನನ್ನು ಮೂರು ಶರಗಳಿಂದ ಹೊಡೆದು ಶಲ್ಯನ ಮುಷ್ಟಿದೇಶದಲ್ಲಿ ಅವನ ಚಾಪವನ್ನು ಕತ್ತರಿಸಿದನು. ಸೌಮದತ್ತಿಯನ್ನು ಮೂರರಿಂದ ಮತ್ತು ಶಲ್ಯನನ್ನು ಹತ್ತು ಶರಗಳಿಂದ ಹೊಡೆದು ದ್ರೌಣಿಯನ್ನು ಎಂಟು ಅಗ್ನಿಶಿಖೆಗಳಂತೆ ತೀಕ್ಷ್ಣವಾಗಿರುವ ಎಂಟರಿಂದ ಹೊಡೆದನು. ಗೌತಮನನ್ನು ಇಪ್ಪತ್ತೈದರಿಂದ, ಸೈಂಧವನನ್ನು ನೂರರಿಂದ ಮತ್ತೆ ಪುನಃ ದ್ರೌಣಿಯನ್ನು ಎಪ್ಪತ್ತು ಶರಗಳಿಂದ ಅವನು ಹೊಡೆದನು. ಭೂರಿಶ್ರವನಾದರೋ ಸಂಕ್ರುದ್ಧನಾಗಿ ಹರಿಯ ಬಾರಿಕೋಲನ್ನು ತುಂಡರಿಸಿ ಅರ್ಜುನನನ್ನು ಎಪ್ಪತ್ಮೂರು ಬಾಣಗಳಿಂದ ಹೊಡೆದನು. ಆಗ ಶ್ವೇತವಾಹನನು ಕ್ರುದ್ಧನಾಗಿ ಭಿರುಗಾಳಿಯಿಂದ ಚಲಿಸಲ್ಪಟ್ಟ ಮೋಡಗಳಂತೆ ಶತ್ರುಗಳ ಮೇಲೆ ನೂರಾರು ತೀಕ್ಷ್ಣವಾದ ಶರಗಳನ್ನು ಸುರಿಸಿದನು.
ಧ್ವಜವರ್ಣನೆ
ಆ ರಥಮುಖ್ಯರ ರಥಗಳಲ್ಲಿ ಅಗ್ನಿಗಳಂತೆ ಪ್ರಜ್ವಲಿಸುತ್ತಿದ್ದ ವಿವಿಧ ಧ್ವಜಗಳು ಕಾಣಿಸುತ್ತಿದ್ದವು. ಕಾಂಚನದ ಮಹಾಗಿರಿಯ ಕಾಂಚನ ಶಿಖರಗಳಂತೆ ಅವು ಸುವರ್ಣಮಯವಾಗಿಯೂ, ಸುವರ್ಣಗಳಿಂದ ಅಲಂಕೃತವಾಗಿಯೂ, ಸುವರ್ಣದ ಮಾಲೆಗಳಿಂದ ಭೂಷಿತವಾಗಿದ್ದವು. ಆ ಧ್ವಜಗಳು ಎಲ್ಲಕಡೆಗಳಿಂದ ಸುತ್ತಲೂ ನಾನಾ ಬಣ್ಣಗಳ ಪತಾಕೆಗಳಿಂದ ಸುತ್ತುವರೆಯಲ್ಪಟ್ಟು ಶೋಭಿಸುತ್ತಿದ್ದವು. ಆ ಪತಾಕೆಗಳು ಗಾಳಿಯಿಂದ ಪಟ ಪಟನೆ ಹಾರಾಡುತ್ತಿದ್ದು ರಂಗಮಧ್ಯದಲ್ಲಿ ನರ್ತಿಸುವ ವಿಲಾಸಿನಿಯರಂತೆ ಕಾಣುತ್ತಿದ್ದವು. ಕಾಮನ ಬಿಲ್ಲಿನ ಬಣ್ಣಗಳಿಂದ ಹೊಳೆಯುತ್ತಿದ್ದ ಪತಾಕೆಗಳು ಹಾರಾಡುತ್ತಾ ಮಹಾರಥರ ರಥಗಳನ್ನು ಶೋಭಿಸುತ್ತಿದ್ದವು. ಸಿಂಹದ ಪುಚ್ಛವನ್ನು ಹೊಂದಿದ್ದ, ಉಗ್ರವಾದ ಮುಖವುಳ್ಳ ವಾನರ ಚಿಹ್ನೆಯುಳ್ಳ ಧನಂಜಯನ ಭೈರವ ಧ್ವಜವು ಕಂಡಿತು. ಗಾಂಡೀವಧನ್ವಿನಿಯ ಧ್ವಜದಲ್ಲಿದ್ದ, ಪತಾಕೆಗಳಿಂದ ಅಲಂಕೃತಗೊಂಡಿದ್ದ ಆ ವಾನರವರನು ಆ ಸೈನ್ಯವನ್ನು ಭಯಪಡಿಸುತ್ತಿದ್ದನು. ಹಾಗೆಯೇ ಬಾಲಸೂರ್ಯನ ಪ್ರಭೆಯುಳ್ಳ ದ್ರೋಣಪುತ್ರನ ಸಿಂಹದ ಪುಚ್ಛವುಳ್ಳ ಧ್ವಜವೂ ಅಲ್ಲಿ ಕಂಡಿತು. ಗಾಳಿಯಲ್ಲಿ ತೇಲುವಂತಿದ್ದ, ಪ್ರಭೆಯಲ್ಲಿ ಶಕ್ರಧ್ವಜಕ್ಕೆ ಸಮನಾದ, ದ್ರೌಣಿಯ ಲಕ್ಷಣಯುಕ್ತವಾದ ಬಂಗಾರದ ಧ್ವಜವು ಕೌರವೇಂದ್ರರನ್ನು ಹರ್ಷಗೊಳಿಸುತ್ತಿತ್ತು. ಆಧಿರಥ ಕರ್ಣನ ಧ್ವಜದಲ್ಲಿ ಬಂಗಾರದ ಗಜಶಾಲೆಯಿದ್ದಿತು. ಅದು ರಣರಂಗದಲ್ಲಿ ಆಕಾಶವನ್ನೇ ತುಂಬಿಬಿಡುವಂತಿತ್ತು. ಸಂಯುಗದಲ್ಲಿ ಕರ್ಣನ ಕಾಂಚನ ಮಾಲೆಗಳಿಂದ ಅಲಂಕೃತವಾದ ಪತಾಕೆಯಲ್ಲಿದ್ದ ಧ್ಜಜವು ಗಾಳಿಯಿಂದ ಹಾರಾಡಿ ರಥದ ಮೇಲೆ ನರ್ತಿಸುತ್ತಿರುವಂತೆ ಕಾಣುತ್ತಿತ್ತು. ಪಾಂಡವರ ಆಚಾರ್ಯನೂ ಆಗಿರುವ ಯಶಸ್ವಿ ಬ್ರಾಹ್ಮಣ ಗೌತಮ ಕೃಪನ ಧ್ವಜದಲ್ಲಿ ಸುಪರಿಷ್ಕೃತವಾದ ಎತ್ತಿನ ಹೋರಿಯ ಚಿಹ್ನೆಯಿತ್ತು. ಆ ಎತ್ತಿನ ಹೋರಿಯ ಧ್ವಜದಿಂದ ಆ ಮಹಾರಥನು ರಥದಲ್ಲಿ ಎತ್ತಿನ ಹೋರಿಯ ರಥದಲ್ಲಿ ಕುಳಿತಿದ್ದ ತ್ರಿಪುರಘ್ನ ಶಿವನಂತೆ ವಿರಾಜಿಸುತ್ತಿದ್ದನು. ವೃಷಸೇನನದು ಕಾಂಚನದ, ಮಣಿರತ್ನಗಳಿಂದ ಅಲಂಕೃತವಾದ ಮಯೂರ ಧ್ವಜ. ಸೇನೆಗಳ ಮೇಲೆ ಹಾರಾಡುತ್ತಿದ್ದ ಅದು ಶೋಭಿಸುತ್ತಿತ್ತು. ಸ್ಕಂದನ ಮಯೂರದಂತೆ ಆ ಮಹಾತ್ಮನ ಮಯೂರವು ರಥದ ಮೇಲೆ ವಿರಾಜಿಸುತ್ತಿತ್ತು. ಮದ್ರರಾಜ ಶಲ್ಯನ ಧ್ವಜಾಗ್ರದಲ್ಲಿ ಅಗ್ನಿಶಿಖೆಯಂತೆ ಸುವರ್ಣಮಯದ ಅಪ್ರತಿಮ ಶುಭವಾದ ನೇಗಿಲಿತ್ತು. ಎಲ್ಲ ಬೀಜಗಳನ್ನೇರಿ ಶ್ರೀಯಿಂದ ಆವೃತವಾದ ನೇಗಿಲಿನಂತೆ ಅವನ ರಥದ ಮೇಲೆ ಆ ನೇಗಿಲು ಹೊಳೆಯುತ್ತಿತ್ತು. ಸಿಂಧುರಾಜನ ಧ್ವಜಾಗ್ರದಲ್ಲಿ ಸೂರ್ಯನ ಕೆಂಪಿನ ಹೇಮಜಾಲಗಳಿಂದ ಅಲಂಕೃತವಾದ ರಜತ ವರಾಹವು ವಿರಾಜಿಸುತ್ತಿತ್ತು. ಆ ರಜತ ಕೇತುವಿನಿಂದಾಗಿ ಜಯದ್ರಥನು ಹಿಂದೆ ದೇವಾಸುರರ ಯುದ್ಧದಲ್ಲಿ ಸೂರ್ಯನು ಹೇಗೋ ಹಾಗೆ ಶೋಭಿಸಿದನು. ಯಜ್ಞಶೀಲ, ಧೀಮತ ಸೌಮದತ್ತಿಯ ಸೂರ್ಯನಂತೆ ಪ್ರಕಾಶಿಸುತ್ತಿದ್ದ ಧ್ವಜದಲ್ಲಿ ಯೂಪಸ್ತಂಭದ ಮತ್ತು ಚಂದ್ರನ ಚಿಹ್ನೆಗಳು ಕಾಣುತ್ತಿದ್ದವು. ಸೌಮದತ್ತಿಯ ಕಾಂಚನದ ಯೂಪವು ಮಖಶ್ರೇಷ್ಠವಾದ ರಾಜಸೂಯದಲ್ಲಿ ಎತ್ತರ ಯೂಪವು ಹೇಗೋ ಹಾಗೆ ವಿರಾಜಿಸುತ್ತಿತ್ತು. ಶಲನ ಧ್ವಜದಲ್ಲಿ ದೊಡ್ಡದಾದ ಆನೆಯ ಚಿಹ್ನೆಯಿತ್ತು. ಆ ಕೇತುವು ಬಂಗಾರದ ಚಿತ್ರಾಂಗ ಮಯೂರಗಳಿಂದ ಶೋಭಿಸುತ್ತಿತ್ತು. ಆ ಕೇತುವು ಕೌರವ ಸೇನೆಯನ್ನು ಶೋಭೆಗೊಳಿಸುತ್ತಿತ್ತು. ಬಿಳಿಯ ಮಹಾ ಆನೆಯು ದೇವರಾಜನ ಸೇನೆಯನ್ನು ಹೇಗೋ ಹಾಗಿ ರಾಜನ ಮಣಿಮಯಧ್ವಜದಲ್ಲಿ ಕನಕಸಂವೃತವಾದ ಆನೆಯ ಚಿಹ್ನೆಯಿತ್ತು. ನೂರಾರು ಸಣ್ಣ ಸಣ್ಣ ಗಂಟೆಗಳ ಕಿಲಕಿಲನಿನಾದದಿಂದ ಕೂಡಿದ ಆ ಧ್ವಜವು ದುರ್ಯೋಧನನ ಉತ್ತಮ ರಥದಲ್ಲಿ ಶೋಭಾಯಮಾನವಾಗಿ ಕಾಣುತ್ತಿತ್ತು. ರಣದಲ್ಲಿ ಕುರುವೃಷಭರ ಈ ಒಂಭತ್ತು ಮಹಾ ಪರಮಧ್ವಜಗಳು ಕೌರವ ಸೇನೆಯ ಮೇಲೆ ಎತ್ತರದಲ್ಲಿ ಹಾರಾಡುತ್ತಾ ಯುಗಾಂತದ ಆದಿತ್ಯನ ಪ್ರಕಾಶದಂತೆ ಸೇನೆಗಳನ್ನು ಬೆಳಗಿಸುತ್ತಿದ್ದವು. ಹತ್ತನೆಯದಾದ ಅರ್ಜುನನ ಮಹಾಕಪಿ ಒಬ್ಬನೇ ಅಗ್ನಿಯು ಹಿಮವಂತನನ್ನು ಬೆಳಗಿಸುವಂತೆ ಅರ್ಜುನನನ್ನು ಬೆಳಗಿಸುತ್ತಿದ್ದನು. ಆಗ ತಕ್ಷಣವೇ ಆ ಮಹಾರಥ ಪರಂತಪರು ಅರ್ಜುನನೊಡನೆ ಹೋರಾಡುವುದಕ್ಕಾಗಿ ವಿಚಿತ್ರವಾದ ಶುಭ್ರವಾದ ದೊಡ್ಡ ಕಾರ್ಮುಕಗಳನ್ನು ಕೈಗೆತ್ತಿಕೊಂಡರು. ದಿವ್ಯಕರ್ಮಿ ಶತ್ರುವಿನಾಶಕ ಪಾರ್ಥನು ಗಾಂಡೀವ ಧನುಸ್ಸನ್ನು ಎತ್ತಿಕೊಂಡನು.
ನಾನಾ ದಿಕ್ಕುಗಳಿಂದ ಆಹ್ವಾನಿತರಾದ ಬಹಳಷ್ಟು ನರರು ರಥ-ಕುದುರೆ-ಆನೆಗಳೊಂದಿಗೆ ಯುದ್ಧದಲ್ಲಿ ಹತರಾದರು. ಇತರೇತರರ ಮೇಲೆ ಗುರಿಯಿಟ್ಟು ಗರ್ಜಿಸುತ್ತಿರುವ ದುರ್ಯೋಧನ ಪ್ರಮಖರ ಮತ್ತು ಪಾಂಡವ ವೃಷಭನ ಮಧ್ಯೆ ಅತಿ ಘೋರ ಯುದ್ಧವು ನಡೆಯಿತು. ಕೃಷ್ಣಸಾರಥಿ ಕೌಂತೇಯನು ಒಬ್ಬನೇ ಅನೇಕರೊಂದಿಗೆ ಭಯಗೊಳ್ಳದೇ ಹೋರಾಡಿ ಅಲ್ಲಿ ಪರಮ ಅದ್ಭುತವಾದುದನ್ನು ಮಾಡಿದನು. ಆ ನರವ್ಯಾಘ್ರರನ್ನು ಗೆಲ್ಲಲು ಬಯಸಿದ ಜಯದ್ರಥನನ್ನು ಕೊಲ್ಲಲು ಬಯಸಿದ ಆ ಮಹಾಬಾಹುವು ಗಾಂಡೀವ ಧನುಸ್ಸನ್ನು ಸೆಳೆಯುತ್ತಾ ಶೋಭಿಸಿದನು. ಅಲ್ಲಿ ಶತ್ರುತಾಪನ ಅರ್ಜುನನು ಪ್ರಯೋಗಿಸಿದ ಸಹಸ್ರಾರು ಶರಗಳು ಕೌರವ ಯೋಧರೇ ಕಾಣದಂತೆ ಮಾಡಿದವು. ಆಗ ಆ ಮಹಾರಥ ನರವ್ಯಾಘ್ರರೆಲ್ಲರೂ ಕೂಡ ಸಾಯಕಗಳಿಂದ ಎಲ್ಲಕಡೆ ಪಾರ್ಥನನ್ನು ಮುಚ್ಚಿ ಅದೃಶ್ಯನನ್ನಾಗಿಸಿದರು. ಕುರುಗಳ ಋಷಭ ಅರ್ಜುನನನ್ನು ಆ ನರಸಿಂಹರು ಸುತ್ತುವರೆದಿರಲು ಆಗ ಆ ಸೇನೆಯ ಮಧ್ಯದಲ್ಲಿ ದೊಡ್ಡದಾದ ಕೋಲಾಹಲ ಶಬ್ಧವೆದ್ದಿತು.
ದ್ರೋಣ-ಯುಧಿಷ್ಠಿರರ ಯುದ್ಧ
ಸಂಗ್ರಾಮದ ಅಪರಾಹ್ಣದಲ್ಲಿ ದ್ರೋಣನನ್ನೇ ಪಣವಾಗಿದ್ದ ಲೋಮಹರ್ಷಣ ಯುದ್ಧವು ಪಾಂಚಾಲ-ಕುರುಗಳ ಮಧ್ಯೆ ನಡೆಯಿತು. ಹೃಷ್ಟಚೇತಸರಾದ ಪಾಂಚಾಲರು ದ್ರೋಣನನ್ನು ಸಂಹರಿಸಲು ಬಯಸಿ ಗರ್ಜಿಸುತ್ತಾ ಬಾಣಗಳ ಮಳೆಯನ್ನು ಸುರಿಸಿದರು. ಆಗ ಪಾಂಚಾಲರು ಮತ್ತು ಕುರುಗಳ ನಡುವೆ ದೇವಾಸುರರಂತೆ ಘೋರವಾದ ಅದ್ಭುತ ತುಮುಲ ಸಂಗ್ರಾಮವು ನಡೆಯಿತು. ಎಲ್ಲ ಪಾಂಚಾಲರೂ ಪಾಂಡವರೊಂದಿಗೆ ದ್ರೋಣನ ರಥವನ್ನು ಸಮೀಪಿಸಿ ಆ ಸೇನೆಯನ್ನು ಬೆದರಿಸುತ್ತಾ ಮಹಾ ಅಸ್ತ್ರಗಳನ್ನು ಪ್ರದರ್ಶಿಸಿದರು. ದ್ರೋಣನ ರಥದ ವರೆಗೂ ರಥಗಳಲ್ಲಿದ್ದ ರಥಿಗಳು ಮಧ್ಯಮ ವೇಗದಲ್ಲಿ ಭೂಮಿಯನ್ನು ನಡುಗಿಸುತ್ತಾ ಮುಂದುವರೆಯುತ್ತಿದ್ದರು. ಆಗ ಕೇಕಯರ ಮಹಾರಥ ಬೃಹತ್ಕ್ಷತ್ರನು ಮಹೇಂದ್ರನ ವಜ್ರದಂತಿರುವ ನಿಶಿತ ಬಾಣಗಳನ್ನು ಪ್ರಯೋಗಿಸುತ್ತಾ ಆಕ್ರಮಣಿಸಿದನು. ಮಹಾಯಶಸ್ವಿ ಕ್ಷೇಮಧೂರ್ತಿಯು ನೂರಾರು ಸಹಸ್ರಾರು ನಿಶಿತ ಬಾಣಗಳನ್ನು ಬಿಡುತ್ತಾ ಶೀಘ್ರವಾಗಿ ಅವನನ್ನು ಎದುರಿಸಿದನು. ಅತಿಬಲಾನ್ವಿತನಾದ ಚೇದಿಗಳ ಋಷಭ ಧೃಷ್ಟಕೇತುವು ತ್ವರೆಮಾಡಿ ಶಂಬರನನ್ನು ಮಹೇಂದ್ರನಂತೆ ದ್ರೋಣನನ್ನು ಆಕ್ರಮಣಿಸಿದನು. ಒಮ್ಮೆಗೇ ಬಾಯಿಕಳೆದ ಅಂತಕನಂತೆ ಮೇಲೆಬೀಳುತ್ತಿದ್ದ ಅವನನ್ನು ತ್ವರೆಮಾಡಿ ಮಹೇಷ್ವಾಸ ವೀರಧನ್ವನು ಎದುರಿಸಿದನು. ಸೇನೆಗಳೊಂದಿಗೆ ವ್ಯವಸ್ಥಿತನಾದ ಯುಧಿಷ್ಠಿರನನ್ನು ಗೆಲ್ಲಲು ಬಯಸಿ ವೀರ್ಯವಾನ್ ದ್ರೋಣನು ತಡೆದನು. ವಿಕರ್ಣನು ಯುದ್ಧದಲ್ಲಿ ಕುಶಲನಾದ ನಕುಲನನ್ನು ಎದುರಿಸಿ ಯುದ್ಧಮಾಡಿದನು. ಹಾಗೆಯೇ ಮುಂದುವರೆದು ಬರುತ್ತಿದ್ದ ಸಹದೇವನನ್ನು ದುರ್ಮುಖನು ಅನೇಕ ಸಾವಿರ ಆಶುಗ ಶರಗಳಿಂದ ಮುಚ್ಚಿಬಿಟ್ಟನು. ಸಾತ್ಯಕಿಯನ್ನಾದರೋ ವ್ಯಾಘ್ರದತ್ತನು ತೀಕ್ಷ್ಣವಾದ ನಿಶಿತ ಶರಗಳಿಂದ ಪುನಃ ಪುನಃ ಕಂಪಿಸುತ್ತಾ ತಡೆದನು. ಸಂರಬ್ಧರಾದ, ನರವ್ಯಾಘ್ರ ದ್ರೌಪದೇಯರು ಸೌಮದತ್ತಿಯನ್ನು ಎದುರಿಸಿದರು. ಹಾಗೆಯೇ ಕ್ರುದ್ಧನಾಗಿ ಭೀಮರೂಪನಾಗಿ ಭಯಾನಕನಾಗಿ ಕಾಣುತ್ತಾ ಮುಂದೆ ಬರುತ್ತಿದ್ದ ಭೀಮಸೇನನನ್ನು ಮಹಾರಥ ಆರ್ಷ್ಯಶೃಂಗಿಯು ತಡೆದನು. ರಣರಂಗದಲ್ಲಿ ಅವರಿಬ್ಬರು ನರ-ರಾಕ್ಷಸರ ನಡುವೆ, ಹಿಂದೆ ರಾಮ-ರಾವಣರ ನಡುವೆ ನಡೆದಂತೆ, ಯುದ್ಧವು ನಡೆಯಿತು.
ಆಗ ಯುಧಿಷ್ಠಿರನು ತೊಂಭತ್ತು ನತಪರ್ವಗಳಿಂದ ದ್ರೋಣನ ಸರ್ವಮರ್ಮಗಳಿಗೆ ಹೊಡೆದನು. ಯಶಸ್ವಿ ಕೌಂತೇಯನಿಂದ ರೋಷಗೊಂಡ ದ್ರೋಣನು ಅವನನ್ನು ಇಪ್ಪತ್ತೈದು ಬಾಣಗಳಿಂದ ಅವನ ಎದೆಯ ಮಧ್ಯೆ ಹೊಡೆದನು. ಮತ್ತೆ ಇಪ್ಪತ್ತು ಸಾಯಕಗಳನ್ನು ಕಳುಹಿಸಿ ದ್ರೋಣನು ಸರ್ವಧನ್ವಿಗಳೂ ನೋಡುತ್ತಿರುವಂತೆ, ಅವನ ಕುದುರೆ-ಸೂತ-ಧ್ವಜಗಳನ್ನು ತುಂಡರಿಸಿದನು. ದ್ರೋಣನು ಬಿಟ್ಟ ಆ ಶರಗಳನ್ನು ಧರ್ಮಾತ್ಮ ಪಾಂಡವನು ಶರವಷದಿಂದ ತಡೆದು ತನ್ನ ಕೈಚಳಕವನ್ನು ತೋರಿಸಿದನು. ಆಗ ಧರ್ಮರಾಜನ ಮೇಲೆ ತುಂಬಾ ಕ್ರೋಧಿತನಾಗಿ ಧನ್ವೀ ದ್ರೋಣನು ತಕ್ಷಣವೇ ಆ ಮಹಾತ್ಮನ ಧನುಸ್ಸನ್ನು ಕತ್ತರಿಸಿದನು. ಅವನ ಧನುಸ್ಸನ್ನು ಕತ್ತರಿಸಿ ತ್ವರೆಮಾಡಿ ಮಹಾರಥನು ಅವನನ್ನು ಅನೇಕ ಸಹಸ್ರ ಶರಗಳಿಂದ ಸುತ್ತಲೂ ಮುಚ್ಚಿಬಿಟ್ಟನು. ಭಾರದ್ವಾಜನ ಸಾಯಕಗಳಿಂದ ರಾಜನು ಅದೃಶ್ಯನಾದುದನ್ನು ನೋಡಿ ಸರ್ವಭೂತಗಳೂ ಯುಧಿಷ್ಠಿರನು ಹತನಾದನೆಂದೇ ತಿಳಿದುಕೊಂಡರು. ಕೆಲವರು ಅವನು ಪಲಾಯನ ಮಾಡಿದನೆಂದು ಅಂದುಕೊಂಡರು. ಇನ್ನು ಕೆಲವರು “ಯಶಸ್ವಿ ಬ್ರಾಹ್ಮಣನು ರಾಜನನ್ನು ಕೊಂದುಬಿಟ್ಟನು!” ಎಂದು ಕೊಂಡರು. ಆ ಪರಮ ಕಷ್ಟವನ್ನು ಅನುಭವಿಸಿದ ಧರ್ಮರಾಜ ಯುಧಿಷ್ಠಿರನು ಭಾರದ್ವಾಜನಿಂದ ಕತ್ತರಿಸಲ್ಪಟ್ಟ ಆ ಧನುಸ್ಸನು ತ್ಯಜಿಸಿ, ಇನ್ನೊಂದು ದಿವ್ಯವಾದ, ಭಾರವತ್ತಾದ, ವೇಗವತ್ತರವಾದ ಧನುಸ್ಸನ್ನು ಎತ್ತಿಕೊಂಡನು. ಆಗ ದ್ರೋಣನು ಬಿಟ್ಟ ಆ ಎಲ್ಲ ಸಹಸ್ರಾರು ಸಾಯಕಗಳನ್ನೂ ತುಂಡರಿಸಿ ಆ ವೀರನು ಸಮರದಲ್ಲಿ ಅದ್ಭುತವನ್ನೆಸಗಿದನು. ಆ ಶರಗಳನ್ನು ತುಂಡರಿಸಿ ರಾಜನು ಕ್ರೋಧದಿಂದ ರಕ್ತಲೋಚನನಾಗಿ ಗಿರಿಗಳನ್ನೂ ಸೀಳಬಲ್ಲಂತಹ, ಬಂಗಾರದ ದಂಡವುಳ್ಳ, ಮಹಾಘೋರವಾದ, ಭಯವನ್ನುಂಟುಮಾಡುವ, ಎಂಟು ಗಂಟೆಗಳನ್ನುಳ್ಳ ಶಕ್ತಿಯನ್ನು ತೆಗೆದುಕೊಂಡನು. ಅದನ್ನು ಬಿಸುಟು ಆ ಬಲಿಯು ನಾದದಿಂದ ಸರ್ವಭೂತಗಳನ್ನು ಬೆದರಿಸುತ್ತಿರುವನಂತೆ ಸಂತೋಷದಿಂದ ಜೋರಾಗಿ ಕೂಗಿದನು. ಧರ್ಮರಾಜನು ಶಕ್ತಿಯನ್ನು ಹಿಡಿದಿದ್ದುದನ್ನು ಕಂಡ ಸರ್ವಭೂತಗಳೂ ಒಮ್ಮೆಲೇ “ಸ್ವಸ್ತಿ!” ಎಂದು ದ್ರೋಣನಿಗೆ ಹೇಳಿದರು.
ಬಿಡುಗಡೆಗೊಳಿಸಲ್ಪಟ್ಟ ಸರ್ಪದಂತೆ ರಾಜನ ಭುಜದಿಂದ ಹೊರಟ ಆ ಶಕ್ತಿಯು ಗಗನ, ದಿಕ್ಕು, ಉಪದಿಕ್ಕುಗಳನ್ನು ಪ್ರಜ್ವಲಗೊಳಿಸುತ್ತಾ ಉರಿಯುತ್ತಿರುವ ಬಾಯಿಯುಳ್ಳ ಪನ್ನಗಿಯಂತೆ ದ್ರೋಣನ ಬಳಿ ಹೋಯಿತು. ಒಮ್ಮಿಂದೊಮ್ಮೆಲೇ ಬೀಳುತ್ತಿದ್ದ ಅದನ್ನು ನೋಡಿ ಅಸ್ತ್ರವಿದರಲ್ಲಿ ಶ್ರೇಷ್ಠ ದ್ರೋಣನು ಬ್ರಹ್ಮಾಸ್ತ್ರವನ್ಮ್ನು ಪ್ರಕಟಿಸಿದನು. ಆ ಅಸ್ತ್ರವು ಘೋರವಾಗಿ ಕಣುತ್ತಿದ್ದ ಆ ಶಕ್ತಿಯನ್ನು ಭಸ್ಮೀಕರಿಸಿ ಬೇಗನೆ ಯಶಸ್ವಿ ಪಾಂಡವನ ರಥದ ಕಡೆ ಹೋಯಿತು. ಆಗ ಯುಧಿಷ್ಠಿರನು ದ್ರೋಣನ ಆಸ್ತ್ರವನ್ನು ಬ್ರಹ್ಮಾಸ್ತ್ರದಿಂದಲೇ ಶಾಂತಗೊಳಿಸಿದನು. ಅವನು ಐದು ನತಪರ್ವಗಳಿಂದ ದ್ರೋಣನನ್ನು ಹೊಡೆದು, ತೀಕ್ಷ್ಣ ಕ್ಷುರಪ್ರದಿಂದ ಅವನ ಮಹಾಧನುಸ್ಸನ್ನು ಕತ್ತರಿಸಿದನು. ಧನುಸ್ಸು ತುಂಡಾಗಲು ಕ್ಷತ್ರಿಯಮರ್ದನ ದ್ರೋಣನು ತಕ್ಷಣವೇ ಧರ್ಮಪುತ್ರನ ಮೇಲೆ ಗದೆಯನ್ನು ಎಸೆದನು. ಮೇಲೆ ಬೀಳುತ್ತಿರುವ ಆ ಗದೆಯನ್ನು ನೋಡಿ ತಕ್ಷಣವೇ ಕ್ರುದ್ಧನಾಗಿ ಯುಧಿಷ್ಠಿರನು ತಾನೂ ಗದೆಯನ್ನು ತೆಗೆದು ಕೊಂಡು ಬೀಸಿ ಎಸೆದನು. ವೇಗವಾಗಿ ಎಸೆಯಲ್ಪಟ್ಟ ಆ ಎರಡೂ ಗದೆಗಳೂ ಪರಸ್ಪರರನ್ನು ತಾಗಿ, ಸಂಘರ್ಷದಿಂದ ಬೆಂಕಿಯನ್ನು ಬಿಟ್ಟು ನೆಲಕ್ಕೆ ಸೇರಿಕೊಂಡವು. ಆಗ ದ್ರೋಣನು ತುಂಬಾ ಕ್ರುದ್ಧನಾಗಿ ನಾಲ್ಕು ನಿಶಿತ ತೀಕ್ಷ್ಣ ಉತ್ತಮ ಶರಗಳಿಂದ ಧರ್ಮರಾಜನ ಕುದುರೆಗಳನ್ನು ಸಂಹರಿಸಿದನು. ಇಂದ್ರಧ್ವಜೋಪಮವಾದ ಅವನ ಧನುಸ್ಸನ್ನು ಒಂದೇ ಬಾಣದಿಂದ ಕತ್ತರಿಸಿದನು. ಇನ್ನೊಂದರಿಂದ ಕೇತುವನ್ನು ತುಂಡರಿಸಿ ಮೂರರಿಂದ ಪಾಂಡವನನ್ನು ಗಾಯಗೊಳಿಸಿದನು. ಆಗ ಕುದುರೆಗಳನ್ನು ಕಳೆದುಕೊಂಡ ರಥದಿಂದ ತಕ್ಷಣವೇ ಕೆಳಗೆ ಹಾರಿ ರಾಜಾ ಯುಧಿಷ್ಠಿರನು ಭುಜಗಳನ್ನು ಮೇಲೆತ್ತಿ ಆಯುಧಗಳಿಲ್ಲದೇ ನಿಂತುಕೊಂಡನು. ಅವನು ಹೀಗೆ ದ್ರೋಣನು ಅವನನ್ನು ವಿರಥನಾಗಿಸಿದುದನ್ನು, ಅದರಲ್ಲೂ ವಿಶೇಷವಾಗಿ ನಿರಾಯುಧನಾಗಿ ಮಾಡಿದುದನ್ನು ನೋಡಿ ಶತ್ರು ಸೇನೆಗಳೆಲ್ಲವೂ ಮೂರ್ಛೆಗೊಂಡಿತು. ಆಗ ತೀಕ್ಷ್ಣವಾದ ಶರಗುಂಪುಗಳನ್ನು ಪ್ರಯೋಗಿಸುತ್ತಾ ಆ ಲಘುಹಸ್ತ ದೃಢವ್ರತನು ಸಿಂಹವು ಜಿಂಕೆಯ ಮೇಲೆ ಬೀಳುವಂತೆ ರಾಜನ ಮೇಲೆ ಎರಗಿದನು.
ಅಮಿತ್ರಘಾತಿ ದ್ರೋಣನಿಂದ ಅವನು ಆಕ್ರಮಣಿಸಲ್ಪಟ್ಟಿದುದನ್ನು ನೋಡಿ ಒಮ್ಮಿಂದೊಮ್ಮೆಲೇ ಪಾಂಡವರ ಕಡೆ ಹಾಹಾಕಾರದ ಶಬ್ಧವು ಕೇಳಿಬಂದಿತು. “ರಾಜನು ಹತನಾದನು! ಭಾರದ್ವಾಜನಿಂದ ರಾಜನು ಹತನಾದನು!” ಎಂದು ಪಾಂಡವ ಸೇನೆಯ ಎಲ್ಲಕಡೆ ಮಹಾ ಶಬ್ಧವುಂಟಾಯಿತು. ಆಗ ಯುಧಿಷ್ಠಿರನು ಸಹದೇವನ ರಥವನ್ನೇರಿ ವೇಗ ಅಶ್ವಗಳಿಂದ ಪಲಾಯನಗೈದನು.
ಕೇಕಯ ಕ್ಷೇಮಧೂರ್ತಿಯ ವಧೆ
ಮುಂದೆ ಬರುತ್ತಿದ್ದ ದೃಢವಿಕ್ರಮಿ ಕೇಕಯನನ್ನು ಕ್ಷೇಮಧೂರ್ತಿಯು ಎದೆಗೆ ಗುರಿಯಿಟ್ಟು ಮಾರ್ಗಣಗಳಿಂದ ಹೊಡೆದನು. ರಾಜ ಬೃಹತ್ಕ್ಷತ್ರನಾದರೋ ಯುದ್ಧದಲ್ಲಿ ದ್ರೋಣನ ಸೇನೆಯನ್ನು ಭೇದಿಸಲು ಬಯಸಿ ತ್ವರೆಮಾಡಿ ಅವನನ್ನು ತೊಂಭತ್ತು ನತಪರ್ವಗಳಿಂದ ಪ್ರಹರಿಸಿದನು. ಸಂಕ್ರುದ್ಧನಾದ ಕ್ಷೇಮಧೂರ್ತಿಯಾದರೋ ಎಣ್ಣೆಕುಡಿದ ನಿಶಿತ ಭಲ್ಲದಿಂದ ಮಹಾತ್ಮ ಕೇಕಯನ ಧನುಸ್ಸನ್ನು ಕತ್ತರಿಸಿದನು. ಮತ್ತು ತಕ್ಷಣವೇ ಧನುಸ್ಸನ್ನು ಕಳೆದುಕೊಂಡ ಆ ಸರ್ವಧನ್ವಿಗಳಲ್ಲಿ ಶ್ರೇಷ್ಠನಾದ ಅವನ ಎದೆಗೆ ನತಪರ್ವ ಶರದಿಂದ ಹೊಡೆದನು. ಆಗ ಬೃಹತ್ಕ್ಷತ್ರನು ನಸುನಕ್ಕು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಮಹಾರಥ ಕ್ಷೇಮಧೂರ್ತಿಯನ್ನು ಕುದುರೆ, ಸೂತ ಮತ್ತು ಧ್ವಜಗಳಿಂದ ವಿಹೀನನನ್ನಾಗಿ ಮಾಡಿದನು. ಇನ್ನೊಂದು ಎಣ್ಣೆಯನ್ನು ಕುಡಿದ ನಿಶಿತ ಭಲ್ಲದಿಂದ ಆ ನೃಪತಿಯ ಕುಂಡಲಗಳಿಂದ ಪ್ರಕಾಶಿಸುತ್ತಿದ್ದ ಶಿರಸ್ಸನ್ನು ದೇಹದಿಂದ ಕತ್ತರಿಸಿದನು. ಗುಂಗುರುಕೂದಲಿನ ಅವನ ತಲೆಯು ಕಿರೀಟದೊಂದಿಗೆ ಕ್ಷಣದಲ್ಲಿಯೇ ತುಂದಾಗಿ ಅಂಬರದಲ್ಲಿಂದ ನಕ್ಷತ್ರದಂತೆ, ಭೂಮಿಯನ್ನು ಸೇರಿತು. ರಣದಲ್ಲಿ ಅವನನ್ನು ಸಂಹರಿಸಿ ಹೃಷ್ಟನಾದ ಮಹಾರಥ ಬೃಹತ್ಕ್ಷತ್ರನು ಪಾರ್ಥನ ಕಾರಣದಿಂದ ತಕ್ಷಣವೇ ಕೌರವ ಸೇನೆಯ ಮೇಲೆ ಎರಗಿದನು.
ವೀರಧನ್ವನ ವಧೆ
ದ್ರೋಣನ ಸಲುವಾಗಿ ಮುಂದುವರೆಯುತ್ತಿದ್ದ ಪರಾಕ್ರಮೀ ಧೃಷ್ಟಕೇತುವನ್ನು ಮಹೇಷ್ವಾಸ ವೀರಧನ್ವನು ತಡೆದನು. ಪರಸ್ಪರರನ್ನು ಎದುರಿಸಿದ ಅವರಿಬ್ಬರು ಶರದಂಷ್ಟ್ರ ತರಸ್ವಿಗಳು ಅನೇಕ ಸಹಸ್ರ ಶರಗಳಿಂದ ಅನ್ಯೋನ್ಯರನ್ನು ಹೊಡೆದರು. ಅವರಿಬ್ಬರೂ ನರಶರ್ದೂಲರೂ ಮಹಾವನದಲ್ಲಿ ತೀವ್ರವಾದ ಮದವೇರಿದ ಎರಡು ಸಲಗಗಳಂತೆ ಪರಸ್ಪರರೊಡನೆ ಯುದ್ಧಮಾಡಿದರು. ಗಿರಿಗಹ್ವರಗಳನ್ನು ಸೇರಿ ರೋಷಿತರಾಗಿ ಪರಸ್ಪರರನ್ನು ಕೊಲ್ಲಲು ಬಯಸಿದ ಶಾರ್ದೂಲಗಳಂತೆ ಆ ಮಹಾವೀರರು ಹೋರಾಡಿದರು. ಆಗ ಪ್ರೇಕ್ಷಣೀಯವಾದ ತುಮುಲ ಯುದ್ಧವು ನಡೆಯಿತು. ಆ ಅದ್ಭುತ ದರ್ಶನದಿಂದ ಸಿದ್ಧ-ಚಾರಣ ಸಂಘಗಳು ವಿಸ್ಮಯಗೊಂಡವು. ಆಗ ವೀರಧನ್ವನು ಕ್ರುದ್ಧನಾಗಿ, ನಗುತ್ತಿರುವವನಂತೆ ಭಲ್ಲದಿಂದ ಧೃಷ್ಟಕೇತುವಿನ ಧನುಸ್ಸನ್ನು ಎರಡಾಗಿ ತುಂಡರಿಸಿದನು. ತುಂಡಾದ ಆ ಧನುಸ್ಸನ್ನು ಎಸೆದು ಮಹಾರಥ ಚೇದಿರಾಜನು ದಪ್ಪನೆಯ ಉಕ್ಕಿನಿಂದ ಮಾಡಲ್ಪಟ್ಟ, ಬಂಗಾರದ ದಂಡವುಳ್ಳ, ಶಕ್ತಿಯನ್ನು ಹಿಡಿದನು. ಆ ಶಕ್ತಿಯನ್ನು ಎರಡು ಭುಜಗಳಿಂದಲೂ ಮೇಲೆತ್ತಿ ಮಹಾವೀರ್ಯದಿಂದ ಪ್ರಯತ್ನಪಟ್ಟು ತಕ್ಷಣವೇ ವೀರಧನ್ವನ ರಥದ ಮೇಲೆ ಎಸೆದನು. ಆ ವೀರಘಾತಿ ಶಕ್ತಿಯಿಂದ ತುಂಬಾ ಗಾಯಗೊಂಡ ಅವನು ತಕ್ಷಣವೇ ಹೃದಯವು ಒಡೆದು ರಥದಿಂದ ನೆಲಕ್ಕೆ ಬಿದ್ದನು. ಆ ತ್ರಿಗರ್ತರ ಮಹಾರಥ ಶೂರನು ಹತನಾಗಲು ಪಾಂಡವೇಯರು ಕೌರವ ಸೇನೆಯನ್ನು ಎಲ್ಲ ಕಡೆಗಳಿಂದ ಸದೆಬಡಿದರು.
ಸಹದೇವನ ಯುದ್ಧ
ಆಗ ದುರ್ಮುಖನು ಸಹದೇವನ ಮೇಲೆ ಅರವತ್ತು ಸಾಯಕಗಳನ್ನು ಪ್ರಯೋಗಿಸಿ ಪಾಂಡವನನ್ನು ಹೆದರಿಸುತ್ತಾ ರಣದಲ್ಲಿ ಮಹಾನಾದವನ್ನು ಗರ್ಜಿಸಿದನು. ಮದ್ರೇಯನಾದರೋ ಕ್ರುದ್ಧನಾಗಿ ಎದುರಿಸಿ ಬರುತ್ತಿದ್ದ ಭ್ರಾತಾ ದುರ್ಮುಖನನ್ನು ನಸುನಗುತ್ತಿರುವನೋ ಎನ್ನುವಂತೆ ಹತ್ತು ಶರಗಳಿಂದ ಹೊಡೆದನು. ರಣದಲ್ಲಿ ರಭಸನಾಗಿದ್ದ ಆ ಸಹದೇವನನ್ನು ನೋಡಿ ದುರ್ಮುಖನು ಅವನನ್ನು ಒಂಭತ್ತು ಬಾಣಗಳಿಂದ ಹೊಡೆದನು. ಆ ಮಹಾಬಲನು ಭಲ್ಲದಿಂದ ದುರ್ಮುಖನ ಕೇತುವನ್ನು ತುಂಡರಿಸಿ ನಾಲ್ಕು ನಿಶಿತ ಶರಗಳಿಂದ ಅವನ ನಾಲ್ಕು ಕುದುರೆಗಳನ್ನು ಸಂಹರಿಸಿದನು. ಅನಂತರ ಇನ್ನೊಂದು, ಎಣ್ಣೆಕುಡಿದ, ನಿಶಿತ ಭಲ್ಲದಿಂದ ಅವನ ಸಾರಥಿಯ ಹೊಳೆಯುವ ಕುಂಡಲಗಳುಳ್ಳ ಶಿರವನ್ನು ಕಾಯದಿಂದ ಕತ್ತರಿಸಿದನು. ಸಹದೇವನು ತೀಕ್ಷ್ಣವಾದ ಕ್ಷುರಪ್ರದಿಂದ ರಣದಲ್ಲಿ ಕೌರವ್ಯನ ಮಹಾ ಧನುಸ್ಸನ್ನು ಕತ್ತರಿಸಿ ಅವನನ್ನೂ ಐದರಿಂದ ಹೊಡೆದನು. ಅಶ್ವಗಳು ಹತವಾದ ರಥವನ್ನು ತ್ಯಜಿಸಿ ದುರ್ಮುಖನು ವಿಮನಸ್ಕನಾಗಿ ನಿರಮಿತ್ರನ ರಥವನ್ನು ಏರಿದನು.
ಆಗ ಪರವೀರಹ ಸಹದೇವನು ಕ್ರುದ್ಧನಾಗಿ ಸೇನೆಗಳ ಮಧ್ಯದಲ್ಲಿ ನಿರಮಿತ್ರನನ್ನು ಭಲ್ಲದಿಂದ ಹೊಡೆದನು. ಜನೇಶ್ವರ ತ್ರಿಗರ್ತರಾಜನ ಮಗನಾದ ನಿರಮಿತ್ರನು ರಥದ ಆಸನದಿಂದ ಕೆಳಗುರುಳಿದನು. ಅವನನ್ನು ಸಂಹರಿಸಿ ಸಹದೇವನು ಖರನನ್ನು ಸಂಹರಿಸಿ ರಾಮ ದಾಶರಥಿಯು ಹೇಗೋ ಹಾಗೆ ವಿರಾಜಿಸಿದನು. ರಾಜಪುತ್ರ ಮಹಾಬಲ ನಿರಮಿತ್ರನು ಹತನಾದುದನ್ನು ನೋಡಿ ತ್ರಿಗರ್ತರಲ್ಲಿ ಮಹಾ ಹಾಹಾಕಾರವುಂಟಾಯಿತು.
ನಕುಲನು ರಣರಂಗದಲ್ಲಿ ಧೃತರಾಷ್ಟ್ರನ ಮಗ ವಿಕರ್ಣನನ್ನು ಕ್ಷಣಮಾತ್ರದಲ್ಲಿ ಗೆದ್ದನು. ಅದೊಂದು ಅದ್ಭುತವಾಗಿತ್ತು.
ಸಾತ್ಯಕಿಯ ಯುದ್ಧ
ರಣದ ಇನ್ನೊಂದು ಕಡೆ ವ್ಯಾಘ್ರದತ್ತನು ಸನ್ನತಪರ್ವ ಶರಗಳಿಂದ ಸಾತ್ಯಕಿಯನ್ನು ಅವನ ಕುದುರೆಗಳು, ಸಾರಥಿ ಮತ್ತು ಧ್ವಜಗಳೊಂದಿಗೆ ಕಾಣದಂತೆ ಮಾಡಿಬಿಟ್ಟನು. ಆ ಶರಗಳನ್ನು ತಡೆದು ಕೈಚಳಕವುಳ್ಳ ಶೂರ ಶೈನೇಯನು ಬಾಣಗಳಿಂದ ವ್ಯಾಘ್ರದತ್ತನನ್ನು ಅವನ ಕುದುರೆಗಳು, ಸಾರಥಿ ಮತ್ತು ಧ್ವಜಗಳಿಂದ ಉರುಳಿಸಿದನು. ಮಗಧನ ಮಗ ಕುಮಾರನು ಹತನಾಗಲು ಮಾಗಧರು ಪ್ರಯತ್ನಿಸಿ ಯುಯುಧಾನನನ್ನು ಎಲ್ಲಕಡೆಗಳಿಂದ ಆಕ್ರಮಣಿಸಿದರು. ಆ ಶೂರರು ರಣದಲ್ಲಿ ಯುದ್ಧದುರ್ಮದ ಸಾತ್ವತನೊಂದಿಗೆ ಸಹಸ್ರಾರು ಶರ-ತೋಮರ-ಭಿಂಡಿಪಾಲ-ಪ್ರಾಸ-ಮುದ್ಗರ-ಮುಸಲಗಳನ್ನು ಪ್ರಯೋಗಿಸುತ್ತಾ ಯುದ್ಧಮಾಡಿದರು. ಅವರೆಲ್ಲರನ್ನೂ ಸಾತ್ಯಕಿಯು ಸ್ವಲ್ಪವೂ ಕಷ್ಟಪಡದೇ ನಗುತ್ತಲೇ ಪರಾಜಯಗೊಳಿಸಿದನು. ಹತಶೇಷರಾದ ಮಾಗಧರು ಓಡಿ ಹೋಗುತ್ತಿರುವುದನ್ನು ನೋಡಿ ಯುಯುಧಾನನ ಶರಗಳಿಂದ ಪೀಡಿತರಾದ ಕೌರವ ಸೇನೆಯು ಧೃತಿಗೆಟ್ಟಿತು. ಹೀಗೆ ರಣದಲ್ಲಿ ಕೌರವ ಸೈನ್ಯವನ್ನು ನಾಶಗೊಳಿಸುತ್ತಾ ಮಾಧವೋತ್ತಮ ಮಹಾಯಶಸ್ವಿಯು ತನ್ನ ಶ್ರೇಷ್ಠ ಧನುಸ್ಸನ್ನು ಟೇಂಕರಿಸುತ್ತಾ ಪ್ರಕಾಶಿಸಿದನು. ಸಾತ್ವತನಿಂದ ಸದೆಬಡಿಯಲ್ಪಟ್ಟ ಸೇನೆಯು ಆ ದೀರ್ಘಬಾಹುವಿನಿಂದ ಭಯಗೊಂಡು ಯುದ್ಧಕ್ಕೆ ಹಿಂದಿರುಗಿ ಬರಲಿಲ್ಲ.
ಆಗ ದ್ರೋಣನು ತುಂಬಾ ಕುಪಿತನಾಗಿ ಒಮ್ಮೆಲೇ ಅವನ ಮೇಲೆ ಕಣ್ಣುಹಾಯಿಸಿ ಆ ಸಾತ್ಯಕಿ ಸತ್ಯಕರ್ಮಿಯನ್ನು ಸ್ವಯಂ ತಾನೇ ಆಕ್ರಮಣಿಸಿದನು.
ಸೌಮದತ್ತಿ ಶಲನ ವಧೆ
ಮಹಾಯಶಸ್ವಿ ಸೌಮದತ್ತಿ ಶಲನು ದ್ರೌಪದೇಯರು ಒಬ್ಬೊಬ್ಬರನ್ನೂ ಐದೈದು ಬಾಣಗಳಿಂದ ಹೊಡೆದು ಪುನಃ ಏಳರಿಂದ ಗಾಯಗೊಳಿಸಿದನು. ರೌದ್ರನಾದ ಅವನಿಂದ ಒಮ್ಮೆಲೇ ತುಂಬಾ ಪೀಡಿತರಾದ ಅವರು ಯುದ್ಧದಲ್ಲಿ ಏನು ಮಾಡಬೇಕೆಂದು ತಿಳಿಯದೇ ಸ್ವಲ್ಪ ಹೊತ್ತು ವಿಮೂಢರಾದರು. ಶತ್ರುತಾಪನ ನಾಕುಲಿ ಶತಾನೀಕನಾದರೋ ಸೌಮದತ್ತಿಯನ್ನು ಎರಡು ಬಾಣಗಳಿಂದ ಪ್ರಹರಿಸಿ ಹೃಷ್ಟನಾಗಿ ನಾದಗೈದನು. ಆಗ ಇತರರು ಸಮರದಲ್ಲಿ ತಕ್ಷಣವೇ ಮೂರು ಮೂರು ಜಿಹ್ಮಗಗಳಿಂದ ಪ್ರಯತ್ನಪಟ್ಟು ಅಸಹನಶೀಲ ಸೌಮದತ್ತಿಯನ್ನು ಹೊಡೆದರು. ಆ ಮಹಾಯಶನೂ ಕೂಡ ಅವುಗಳಿಗೆ ಪ್ರತಿಯಾಗಿ ಐದು ಸಾಯಕಗಳನ್ನು ಪ್ರಯೋಗಿಸಿ ಒಂದೊಂದರಿಂದ ಒಬ್ಬೊಬ್ಬರ ಹೃದಯವನ್ನೂ ಹೊಡೆದನು. ಆ ಮಹಾತ್ಮನ ಶರಗಳಿಂದ ಗಾಯಗೊಂಡ ಆ ಐವರು ಸಹೋದರರು ರಥಗಳಿಂದ ಆ ವೀರನ ರಥವನ್ನು ಸುತ್ತುವರೆದು ಸಾಯಕಗಳಿಂದ ಬಹುವಾಗಿ ಅವನನ್ನು ಪ್ರಹರಿಸಿದರು. ಆರ್ಜುನಿಯಾದರೋ ಸಂಕ್ರುದ್ಧನಾಗಿ ಅವನ ಕುದುರೆಗಳನ್ನು ನಾಲ್ಕು ನಿಶಿತ ಶರಗಳಿಂದ ಯಮಸದನಕ್ಕೆ ಕಳುಹಿಸಿಕೊಟ್ಟನು. ಭೈಮಸೇನಿಯು ಮಹಾತ್ಮ ಸೌಮದತ್ತಿಯ ಧನುಸ್ಸನ್ನು ಕತ್ತರಿಸಿ ನಿಶಿತ ಶರಗಳಿಂದ ಅವನನ್ನು ಹೊಡೆದು ಜೋರಾಗಿ ಸಿಂಹನಾದಗೈದನು. ಯುಧಿಷ್ಠಿರನ ಮಗನು ಅವನ ಧ್ವಜವನ್ನು ತುಂಡರಿಸಿ ಬೀಳಿಸಿದನು. ನಕುಲನ ಮಗನು ಅವನ ಸಾರಥಿಯನ್ನು ರಥದಿಂದ ಕೆಳಗೆ ಉರುಳಿಸಿದನು. ಸಹದೇವನ ಮಗನಾದರೋ ತನ್ನ ಸಹೋದರರು ಅವನನ್ನು ಪರಾಙ್ಮುಖಗೊಳಿಸಿದ್ದಾರೆಂದು ತಿಳಿದು ಕ್ಷುರಪ್ರದಿಂದ ಅವನ ಶಿರವನ್ನು ಕತ್ತರಿಸಿದನು. ಬಂಗಾರದಿಂದ ವಿಭೂಷಿತವಾಗಿದ್ದ ಆ ನೃಪತಿಯ ಶಿರವು ಬಾಲಸೂರ್ಯನ ಸಮನಾದ ಪ್ರಭೆಯಿಂದ ರಣಭೂಮಿಯನ್ನು ಪ್ರಕಾಶಗೊಳಿಸುತ್ತಾ ಭೂಮಿಯ ಮೇಲೆ ಬಿದ್ದಿತು.
ಕೆಳಗೆಬಿದ್ದ ಸೌಮದತ್ತಿಯ ಶಿರಸ್ಸನ್ನು ನೋಡಿ ಕೌರವರು ಬೆದರಿ ಅನೇಕ ದಾರಿಗಳಲ್ಲಿ ಓಡಿಹೋದರು.
ಅಲಂಬುಸ ವಧೆ
ಅಲಂಬುಸನಾದರೋ ಸಂಕ್ರುದ್ಧನಾಗಿ ಸಮರದಲ್ಲಿ ರಾವಣಿ ಇಂದ್ರಜಿತುವು ಲಕ್ಷ್ಮಣನನ್ನು ಹೇಗೋ ಹಾಗೆ ಮಹಾಬಲ ಭೀಮಸೇನನೊಂದಿಗೆ ಯುದ್ಧಮಾಡತೊಡಗಿದನು. ಆ ಇಬ್ಬರು ನರ-ರಾಕ್ಷಸರೂ ರಣದಲ್ಲಿ ಯುದ್ಧಕ್ಕೆ ತೊಡಗಿರುವುದನ್ನು ನೋಡಿ ಸರ್ವಭೂತಗಳಿಗೆ ವಿಸ್ಮಯವೂ ಹರ್ಷವೂ ಉಂಟಾಯಿತು. ಆಗ ಭೀಮನು ಜೋರಾಗಿ ನಗುತ್ತಾ ಒಂಭತ್ತು ನಿಶಿತ ಶರಗಳಿಂದ ಅಸಹನಶೀಲ ರಾಕ್ಷಸೇಂದ್ರ ಆರ್ಷ್ಯಶೃಂಗಿಯನ್ನು ಹೊಡೆದನು. ಪ್ರಹೃತನಾದ ಆ ರಾಕ್ಷಸನು ಭಯಾನಕವಾಗಿ ಗರ್ಜನೆ ಮಾಡುತ್ತಾ ಭೀಮ ಮತ್ತು ಅವನ ಅನುಯಾಯಿಗಳ ಮೇಲೆ ಎರಗಿದನು. ಭೀಮನನ್ನು ಐದು ಸನ್ನತಪರ್ವ ಶರಗಳಿಂದ ಹೊಡೆದು ಭೀಮನನ್ನು ಅನುಸರಿಸಿ ಬಂದಿದ್ದ ಮುನ್ನೂರು ರಥಿಕರನ್ನು ಸಂಹರಿಸಿದನು. ಪುನಃ ನಾಲ್ಕುನೂರು ಮಂದಿಯನ್ನು ಸಂಹರಿಸಿ ಭೀಮನನ್ನು ಪತ್ತಿಗಳಿಂದ ಹೊಡೆದನು. ಹಾಗೆ ರಾಕ್ಷಸನಿಂದ ಗಯಗೊಂಡ ಭೀಮನು ಒಂದು ಕ್ಷಣ ಮೂರ್ಛೆಹೋಗಿ ರಥದಲ್ಲಿಯೇ ಒರಗಿದನು. ಆಗ ಪುನಃ ಸಂಜ್ಞೆಗಳನ್ನು ಪಡೆದುಕೊಂಡು ಮಾರುತಿಯು ಕ್ರೋಧಮೂರ್ಛಿತನಾಗಿ, ಭಾರವನ್ನು ಹೊರಬಲ್ಲ ಉತ್ತಮ ಘೋರ ಕಾರ್ಮುಕವನ್ನು ಎಳೆದು ತೀಕ್ಷ್ಣ ಶರಗಳಿಂದ ಅಲಂಬುಸನನ್ನು ಎಲ್ಲಕಡೆಗಳಿಂದ ಹೊಡೆಯತೊಡಗಿದನು. ಅಂಜನದ ರಾಶಿಯಂತೆ ನೀಲ ಮೈವರ್ಣದ ಅವನು ಅನೇಕ ಬಾಣಗಳಿಂದ ಗಾಯಗೊಂಡು ಕುಂಶುಕದ ಮರದಲ್ಲಿ ಎಲ್ಲಕಡೆಗಳಲ್ಲಿ ಶೋಭಿಸಿದನು. ಭೀಮಸೇನನ ಚಾಪದಿಂದ ಬಿಡಲ್ಪಟ್ಟ ಶರಗಳಿಂದ ಗಾಯಗೊಂಡ ಅವನು ಪಾಂಡವನಿಂದಾದ ತನ್ನ ಸಹೋದರನ ವಧೆಯನ್ನು ಸ್ಮರಿಸಿಕೊಂಡು, ಘೋರರೂಪವನ್ನು ತಾಳಿ ಭೀಮಸೇನನಿಗೆ ಹೇಳಿದನು: “ಪಾರ್ಥ! ಈ ರಣದಲ್ಲಿ ನಿಲ್ಲು! ಇಂದು ನನ್ನ ಪರಾಕ್ರಮವನ್ನು ನೋಡು! ಸುದುರ್ಬುದ್ಧೇ! ನನ್ನ ಪರೋಕ್ಷದಲ್ಲಿ ನನ್ನ ಸಹೋದರ ಬಕನೆಂಬ ಹೆಸರಿನ ಬಲಶಾಲೀ ರಾಕ್ಷಸಪ್ರವರನನ್ನು ಸಂಹರಿಸಿದ್ದೀಯೆ!”
ಭೀಮನಿಗೆ ಹೀಗೆ ಹೇಳಿ ಅವನು ಅಂತರ್ಧಾನನಾಗಿ ಮಹಾ ಶರವರ್ಷಗಳಿಂದ ಅವನನ್ನು ತುಂಬಾ ಮುಸುಕಿ ಹಾಕಿದನು. ರಾಕ್ಷಸನು ಅದೃಶ್ಯನಾಗಲು ಭೀಮನಾದರೋ ಸನ್ನತಪರ್ವ ಶರಗಳಿಂದ ಆಕಾಶವನ್ನು ತುಂಬಿಬಿಟ್ಟನು. ಭೀಮನಿಂದ ಹೊಡೆಯಲ್ಪಟ್ಟ ಆ ಕ್ಷುದ್ರನು ಆಕಾಶವನ್ನೇರಿದ್ದರೂ ನಿಮಿಷಮಾತ್ರದಲ್ಲಿ ಭೂಮಿಗಿಳಿದು ಒಮ್ಮೆಲೇ ರಥವನ್ನೇರಿದನು. ಪುನಃ ಮೇಲೇರಿ ಅನೇಕ ರೂಪಗಳನ್ನು ಧರಿಸಿ, ಜೋರಾಗಿ ಗರ್ಜಿಸುತ್ತಾ, ಎಲ್ಲಾಕಡೆ ಸಂಚರಿಸುತ್ತಿದ್ದನು. ಅವನ ಸಾಯಕಗಳಿಂದ ಯುದ್ಧದಲ್ಲಿ ಪಾಂಡವಸೇನೆಯ ಅನೇಕ ಆನೆಗಳು, ಕುದುರೆಗಳು ಮತ್ತು ಪದಾತಿಗಳು ಹತವಾದವು; ರಥಗಳಿಂದ ರಥಿಗಳು ಕೆಳಗುರುಳಿದರು. ಆ ರಾಕ್ಷಸನು ರಕ್ತವೇ ನೀರಾದ, ರಥಗಳೇ ಸುಳಿಗಳಾಗಿರುವ, ಆನೆಗಳೇ ಮೊಸಳೆಗಳ ಸಮಾಕುಲಗಳಂತಿರುವ, ಚತ್ರಗಳೇ ಹಂಸಗಳಂತಿರುವ, ಕೆಸರಿರುವ, ಬಾಹುಗಳೇ ಹಾವುಗಳ ಸಂಕುಲಗಳಂತಿರುವ, ಅನೇಕ ಚೇದಿ-ಪಾಂಚಾಲ-ಸೃಂಜಯರು ತೇಲುತ್ತಿರುವ ನದಿಯನ್ನೇ ಹರಿಸಿದನು. ಹೀಗೆ ಸಮರದಲ್ಲಿ ಭೀತಿಯಿಲ್ಲದೇ ಸಂಚರಿಸುತ್ತಿದ್ದ ಅವನ ವಿಕ್ರಮವನ್ನು ಪಾಂಡವರು ತುಂಬಾ ಸಂವಿಗ್ನರಾಗಿ ನೋಡತೊಡಗಿದರು. ಕೌರವರ ಸೇನೆಗಳಲ್ಲಂತೂ ತುಂಬಾ ಹರ್ಷದ ವಾದ್ಯದ ಜೋರಾದ ಧ್ವನಿಯು, ಲೋಮಹರ್ಷಣ ಮಹಾಧ್ವನಿಯು ಹುಟ್ಟಿಕೊಂಡಿತು. ಕೌರವ ಸೇನೆಯ ಆ ಘೋರ ನಿನಾದವನ್ನು ಕೇಳಿ ಚಪ್ಪಾಳೆಯ ಶಬ್ಧವನ್ನು ಆನೆಗಳು ಸಹಿಸಿಕೊಳ್ಳಲಾರದಂತೆ ಪಾಂಡವನು ಸಹಿಸಿಕೊಳ್ಳಲಿಲ್ಲ. ಆಗ ಕ್ರೋಧದಿಂದ ಕಣ್ಣುಗಳು ಕೆಂಪಾದ ಅವನು ಸುಡುತ್ತಿರುವ ಪಾವಕನಂತೆ, ಸ್ವಯಂ ತ್ವಷ್ಟನಂತೆ ತ್ವಾಷ್ಟ್ರ ಅಸ್ತ್ರವನ್ನು ಹೂಡಿದನು. ಆಗ ಸಾವಿರಾರು ಶರಗಳು ಸುತ್ತಲೂ ಹೊರಬಂದು ಹರಡಿಕೊಂಡವು. ಆ ಶರಗಳಿಂದಾಗಿ ಕೌರವ ಸೈನ್ಯವು ಓಡಿಹೋಯಿತು. ಅದೊಂದು ಅತಿ ದೊಡ್ಡದಾಗಿತ್ತು. ಆ ಅಸ್ತ್ರವನ್ನು ಪ್ರಯೋಗಿಸಿ ಭೀಮಸೇನನು ರಾಕ್ಷಸನ ಮಹಾಮಾಯೆಯನ್ನು ನಾಶಗೊಳಿಸಿ ರಾಕ್ಷಸನನ್ನು ಪೀಡಿಸಿದನು. ಭೀಮಸೇನನಿಂದ ಬಹಳವಾಗಿ ವಧಿಸಲ್ಪಟ್ಟ ರಾಕ್ಷಸನು ಸಂಯುಗದಲ್ಲಿ ಭೀಮನನ್ನು ಬಿಟ್ಟು ದ್ರೋಣನ ಸೇನೆಯ ಕಡೆ ಓಡಿ ಹೋದನು.
ಹೀಗೆ ಆ ರಾಕ್ಷಸೇಂದ್ರನನ್ನು ಮಹಾತ್ಮನು ಸೋಲಿಸಲು ಪಾಂಡವರು ಎಲ್ಲ ದಿಕ್ಕುಗಳಲ್ಲಿ ಸಿಂಹನಾದಗೈದರು. ಸಮರದಲ್ಲಿ ಪ್ರಹ್ರಾದನನ್ನು ಗೆದ್ದ ಶಕ್ರನನ್ನು ಮರುದ್ಗಣಗಳು ಹೇಗೋ ಹಾಗೆ ಸಂತೋಷದಿಂದ ಆ ಮಹಾಬಲ ಮಾರುತಿಯನ್ನು ಗೌರವಿಸಿದರು.
ಹೀಗೆ ಅಲಂಬುಸನು ಯುದ್ಧದಲ್ಲಿ ಭೀತಿಯಿಲ್ಲದವನಂತೆ ಸಂಚರಿಸುತ್ತಿರಲು ಹೈಡಿಂಬನು ಬೇಗನೆ ಬಂದು ನಿಶಿತ ಶರಗಳಿಂದ ಹೊಡೆದನು. ಆ ಇಬ್ಬರು ರಾಕ್ಷಸಸಿಂಹರ ನಡುವೆ ಪರಸ್ಪರರಿಗೆ ಭಯವನ್ನುಂಟುಮಾಡುವ ಯುದ್ಧವು ನಡೆಯಿತು. ಶಕ್ರ-ಶಂಬರರಂತೆ ಅವರು ವಿವಿಧ ಮಾಯೆಗಳನ್ನು ನಿರ್ಮಿಸಿದರು. ಅಲಂಬುಸನು ತುಂಬಾ ಕ್ರುದ್ಧನಾಗಿ ಘಟೋತ್ಕಚನನ್ನು ಹೊಡೆದನು. ಘಟೋತ್ಕಚನಾದರೋ ಅಲಂಬುಸನ ಎದೆಗೆ ಇಪ್ಪತ್ತು ನಾರಾಚಗಳಿಂದ ಹೊಡೆದು ಮತ್ತೆ ಮತ್ತೆ ಸಿಂಹನಾದಗೈದನು. ಹಾಗೆಯೇ ಅಲಂಬುಸನು ಹೈಡಿಂಬನನ್ನು ಹೊಡೆದು ಆಕಾಶವನ್ನು ಎಲ್ಲಕಡೆ ತುಂಬುವಂತೆ ಜೋರಾಗಿ ಗರ್ಜಿಸಿದನು. ಹಾಗೆ ತುಂಬಾ ಸಂಕ್ರುದ್ಧರಾಗಿದ್ದ ಆ ಇಬ್ಬರು ಮಹಾಬಲ ರಾಕ್ಷಸೇಂದ್ರರು ಮಾಯಾಯುದ್ಧದಲ್ಲಿ ತೊಡಗಿದರು. ಆದರೆ ಅವರಿಬ್ಬರಲ್ಲಿ ಯಾರೂ ಒಬ್ಬರನ್ನೊಬ್ಬರು ಮೀರಿಸುವಂತಿರಲಿಲ್ಲ. ನೂರಾರು ಮಾಯೆಗಳನ್ನು ಸೃಷ್ಟಿಸಿ ಪರಸ್ಪರರನ್ನು ಮರುಳುಮಾಡಿದರು. ಮಾಯಾಯುದ್ಧದಲ್ಲಿ ಕುಶಲರಾದ ಅವರಿಬ್ಬರೂ ಮಾಯಾಯುದ್ಧವನ್ನಾಡಿದರು. ಘಟೋತ್ಕಚನು ಯುದ್ಧದಲ್ಲಿ ಏನೇನು ಮಾಯೆಗಳನ್ನು ತೋರಿಸುತ್ತಿದ್ದನೋ ಅವುಗಳನ್ನು ಅಲಂಬುಸನು ಮಾಯೆಯಿಂದಲೇ ನಾಶಗೊಳಿಸುತ್ತಿದ್ದನು. ಹಾಗೆ ಯುದ್ಧಮಾಡುತ್ತಿದ್ದ ಆ ಮಾಯಾಯುದ್ಧವಿಶಾರದ ರಾಕ್ಷಸೇಂದ್ರ ಅಲಂಬುಸನನ್ನು ನೋಡಿ ಪಾಂಡವರು ಕ್ರುದ್ಧರಾದರು. ಆಗ ತುಂಬಾ ಸಂಕ್ರುದ್ಧರಾದ ಭೀಮಸೇನಾದಿ ರಥಪ್ರವರರು ಸಂಕ್ರುದ್ಧರಾಗಿ ಧಾವಿಸಿ ಬಂದು ಅವನನ್ನು ಸುತ್ತುವರೆದರು. ಅವನನ್ನು ರಥಸಮೂಹಗಳಿಂದ ಸುತ್ತುವರೆದು ಎಲ್ಲಕಡೆಗಳಿಂದಲೂ ಆನೆಯನ್ನು ಉಲ್ಕೆಗಳಿಂದಲೋ ಎಂಬಂತೆ ಬಾಣಗಳಿಂದ ಮುಚ್ಚಿದರು. ಅವನು ಅವರ ಅಸ್ತ್ರವೇಗವನ್ನು ತನ್ನ ಅಸ್ತ್ರಮಾಯೆಯಿಂದ ನಾಶಗೊಳಿಸಿ ಕಾಡ್ಗಿಚ್ಚಿನಿಂದ ಆನೆಯು ಬಿಡಿಸಿಕೊಳ್ಳುವಂತೆ ಆ ರಥಸಮೂಹಗಳಿಂದ ಮುಕ್ತನಾದನು. ಅವನು ಇಂದ್ರನ ವಜ್ರಾಯುಧದಂತ ಧ್ವನಿಯುಳ್ಳ ಘೋರ ಧನುಸ್ಸನ್ನು ಟೇಂಕರಿಸಿ ಮಾರುತಿಯನ್ನು ಇಪ್ಪತ್ತೈದು, ಭೈಮಸೇನಿಯನ್ನು ಐದು, ಮತ್ತು ಯುಧಿಷ್ಠಿರನನ್ನು ಮೂರರಿಂದ ಹೊಡೆದು, ಸಹದೇವನನ್ನು ಏಳರಿಂದ, ನಕುಲನನ್ನು ಇಪ್ಪತ್ತೊಂದರಿಂದ, ಮತ್ತು ಐವರು ದ್ರೌಪದೇಯರನ್ನು ಐದೈದು ಶರಗಳಿಂದ ಹೊಡೆದು ಘೋರವಾಗಿ ಸಿಂಹನಾದಗೈದನು. ಅದಕ್ಕೆ ಪ್ರತಿಯಾಗಿ ಆ ರಾಕ್ಷಸನನ್ನು ಭೀಮಸೇನನು ಒಂಭತ್ತು, ಸಹದೇವನು ಐದು, ನಕುಲನು ಅರವತ್ನಾಲ್ಕು, ದ್ರೌಪದೇಯರು ತಲಾ ಮೂರು ಮತ್ತು ಯುಧಿಷ್ಠಿರನು ನೂರರಿಂದ ಹೊಡೆದರು.
ಮಹಾಬಲ ಹೈಡಿಂಬನು ರಾಕ್ಷಸನನ್ನು ಐನೂರು ಶರಗಳಿಂದ ಹೊಡೆದು ಪುನಃ ಎಪ್ಪತ್ತರಿಂದ ಹೊಡೆದು ಗರ್ಜಿಸಿದನು. ಎಲ್ಲ ಮಹಾರಥರಿಂದ ಎಲ್ಲಕಡೆಗಳಿಂದ ಹಾಗೆ ಪ್ರಹರಿಸಲ್ಪಟ್ಟ ಆ ಮಹೇಷ್ವಾಸನು ಅವರೆಲ್ಲರನ್ನೂ ಐದೈದು ಶರಗಳಿಂದ ತಿರುಗಿ ಹೊಡೆದನು. ಕ್ರುದ್ಧನಾಗಿರುವ ಆ ರಾಕ್ಷಸನನ್ನು ತಿರುಗಿ ಕ್ರುದ್ಧನಾದ ಹೈಡಿಂಬನು ಏಳು ಶರಗಳಿಂದ ಹೊಡೆದನು. ಅತಿಯಾಗಿ ಗಾಯಗೊಂಡ ಆ ಮಹಾಬಲ ರಾಕ್ಷಸೇಂದ್ರನು ತಕ್ಷಣವೇ ಬಲವನ್ನು ಉಪಯೋಗಿಸಿ ಸ್ವರ್ಣಪುಂಖಗಳ ಶಿಲಾಶಿತ ಬಾಣಗಳನ್ನು ಪ್ರಯೋಗಿಸಿದನು. ಆ ನತಪರ್ವ ಶರಗಳು ರೋಷಗೊಂಡ ಮಹಾಬಲಶಾಲಿ ಉಗ್ರ ಸರ್ಪಗಳು ಗಿರಿಗಳನ್ನು ಹೊಗುವಂತೆ ರಾಕ್ಷಸನನ್ನು ಪ್ರವೇಶಿಸಿದವು. ಆಗ ಆ ಪಾಂಡವರು ಮತ್ತು ಘಟೋತ್ಕಚರು ಉದ್ವಿಗ್ನರಾಗಿ ಎಲ್ಲಕಡೆಗಳಿಂದ ನಿಶಿತ ಶರಗಳನ್ನು ಪ್ರಯೋಗಿಸಿದರು. ಸಮರದಲ್ಲಿ ವಿಜಯಾಕಾಂಕ್ಷಿಗಳಾದ ಪಾಂಡವರಿಂದ ಪ್ರಹರಿಸಲ್ಪಡುತ್ತಿರುವ ಅವನು ಸುಟ್ಟುಹೋದ ಪರ್ವತದ ಶಿಖರದಂತೆ ಮತ್ತು ಒಡೆದುಹೋದ ಕಾಡಿಗೆಯ ರಾಶಿಯಂತೆ ಹೊಳೆಯುತ್ತಿದ್ದನು. ಘಟೋತ್ಕಚನು ಅವನನ್ನು ಎರಡೂ ಬಾಹುಗಳಿಂದ ಮೇಲಕ್ಕೆತ್ತಿ, ಪುನಃ ಪುನಃ ಹೊಡೆದು, ತುಂಬಿದ ಕೊಡವನ್ನು ಕಲ್ಲಮೇಲೆ ಅಪ್ಪಳಿಸಿ ಒಡೆಯುವಂತೆ ಬೇಗನೇ ನೆಲಕ್ಕೆ ಕುಕ್ಕಿದನು. ಬಲ ಮತ್ತು ಲಘುತ್ವಗಳ ಸಂಪನ್ನನಾಗಿದ್ದ, ವಿಕ್ರಮದಿಂದಲೂ ಸಂಪನ್ನನಾದ ಭೈಮಸೇನಿಯು ರಣದಲ್ಲಿ ಕ್ರುದ್ಧನಾಗಿ ಸರ್ವಸೇನೆಗಳನ್ನೂ ಹೆದರಿಸಿದನು. ಸರ್ವಾಂಗಗಳೂ ಒಡೆದುಹೋಗಿರುವ, ಮಾಂಸ-ಎಲುಬುಗಳಿಂದ ವಿಭೂಷಿತನಾಗಿದ್ದ, ಘಟೋತ್ಕಚನಿಂದ ಹತನಾದ ಆ ವೀರನು ಮುರಿದು ಬಿದ್ದ ಸಾಲವೃಕ್ಷದಂತೆ ತೋರಿದನು.
ಆ ನಿಶಾಚರನು ಹತನಾಗಲು ಸುಮನಸ್ಕರಾದ ಪಾರ್ಥರು ಸಿಂಹನಾದ ಮಾಡಿದರು ಮತ್ತು ಉತ್ತರೀಯಗಳನ್ನು ಮೇಲೆ ಹಾರಿಸಿದರು. ಆ ಬೀಮರೂಪ ಮಹಾಬಲ ರಾಕ್ಷಸೇಂದ್ರ ಅಲಂಬುಸನು ಸೀಳಿಹೋದ ಪರ್ವತದಂತೆ ಹತನಾದುದನ್ನು ಕಂಡು ಕೌರವ ಸೇನೆಗಳು ಹಾಹಾಕಾರಗೈದವು. ಕುತೂಹಲವಿದ್ದ ಜನರು ಭೂಮಿಯ ಮೇಲೆ ಅಂಗಾರಕನಂತೆ (ಇದ್ದಿಲಿನಂತೆ) ಬಿದ್ದಿರುವ ಆ ರಕ್ಷಸನನ್ನು ನೋಡಲಿಕ್ಕೇ ಬಂದರು. ಘಟೋತ್ಕಚನಾದರೋ ಆ ರಾಕ್ಷಸನನ್ನು ಕೊಂದು ಬಲನನ್ನು ಸಂಹರಿಸಿದ ವಾಸವನಂತೆ ಬಲವತ್ತಾಗಿ ಕೂಗಿದನು. ಆ ದುಷ್ಕರ ಕರ್ಮವನ್ನೆಸಗಿದ ಘಟೋತ್ಕಚನನ್ನು ಅವನ ಪಿತೃಗಳು ಬಾಂಧವರು ಗೌರವಿಸಿದರು. ಗಳಿತ ಅಲಂಬುಸ ಹಣ್ಣನ್ನು ಹೇಗೋ ಹಾಗೆ ಶತ್ರು ಅಲಂಬುಸನನ್ನು ಸಂಹರಿಸಿದ ಅವನು ಬಹಳವಾಗಿ ಆನಂದಿಸಿದನು. ಆಗ ಮಹಾ ಶಬ್ಧವು - ಶಂಖ ಮತ್ತು ನಾನಾ ವಿಧದ ಬಾಣಗಳ ಘೋಷವು ಉಂಟಾಯಿತು. ಅದನ್ನು ಕೇಳಿ ಕೌರವರು ಪ್ರತಿಯಾಗಿ ಕೂಗಲು, ಅವರ ಧ್ವನಿಯು ಭುವನಗಳನ್ನೂ ಮುಟ್ಟುವಂತಿತ್ತು.
ದ್ರೋಣ-ಸಾತ್ಯಕಿಯರ ಯುದ್ಧ
ಯುಯುಧಾನನಿಂದ ಸೇನೆಯು ನಾಶಗೊಳ್ಳುತ್ತಿರುವುದನ್ನು ನೋಡಿ ಸ್ವಯಂ ದ್ರೋಣನು ಸತ್ಯವಿಕ್ರಮ ಸಾತ್ಯಕಿಯನ್ನು ಆಕ್ರಮಣಿಸಿದನು. ಒಮ್ಮೆಲೇ ಮೇಲೆ ಬೀಳುತ್ತಿದ್ದ ಭಾರದ್ವಾಜನನ್ನು ಸಾತ್ಯಕಿಯು ಇಪ್ಪತ್ತೈದು ಕ್ಷುದ್ರಕಗಳಿಂದ ಹೊಡೆದನು. ದ್ರೋಣನೂ ಕೂಡ ಕೂಡಲೇ ಯುಯುಧಾನನನ್ನು ಐದು ಹೇಮಪುಂಖ ಶಿಲಾಶಿತಗಳಿಂದ ಹೊಡೆದನು. ಶತ್ರುವಿನ ರಕ್ತವನ್ನು ಕುಡಿಯಬಲ್ಲ ಅವು ಅವನ ಸುದೃಢ ಕವಚವನ್ನು ಭೇದಿಸಿ, ಬುಸುಗುಟ್ಟುವ ಸರ್ಪಗಳಂತೆ ಭೂಮಿಯನ್ನು ಹೊಕ್ಕವು. ಅಂಕುಶದಿಂದ ಪೀಡಿತನಾದ ಸಲಗದಂತೆ ಕ್ರುದ್ಧನಾದ ಆ ದೀರ್ಘಬಾಹುವು ದ್ರೋಣನನ್ನು ಐನೂರು ಅಗ್ನಿಸನ್ನಿಭ ನಾರಾಚಗಳಿಂದ ಹೊಡೆದನು. ರಣದಲ್ಲಿ ಯುಯುಧಾನನಿಂದ ಪ್ರಹರಿಸಲ್ಪಟ್ಟ ಭಾರದ್ವಾಜನು ಪ್ರಯತ್ನಪಟ್ಟು ಸಾತ್ಯಕಿಯನ್ನು ಅನೇಕ ಬಾಣಗಳಿಂದ ಹೊಡೆದನು. ಆಗ ಪುನಃ ಕ್ರುದ್ಧನಾದ ಮಹೇಷ್ವಾಸನು ನೂರಾರು ನತಪರ್ವಗಳಿಂದ ಸಾತ್ವತನನ್ನು ಪೀಡಿಸಿದನು. ಭಾರದ್ವಾಜನಿಂದ ಸಮರದಲ್ಲಿ ಪ್ರಹರಿಸಲ್ಪಡುತ್ತಿದ್ದ ಸಾತ್ಯಕಿಯು ತನ್ನ ಕರ್ತವ್ಯದಿಂದ ಸ್ವಲ್ಪವೂ ಹಿಂಜರಿಯಲಿಲ್ಲ. ರಣದಲ್ಲಿ ನಿಶಿತಶರಗಳನ್ನು ಬಿಡುತ್ತಿರುವ ಭಾರದ್ವಾಜನನ್ನು ನೋಡಿ ಯುಯುಧಾನನು ವಿಷಣ್ಣವದನನಾದನು. ಅವನನ್ನು ಹಾಗೆ ನೋಡಿದ ಕೌರವ ಪುತ್ರರು ಮತ್ತು ಸೈನಿಕರು ಪ್ರಹೃಷ್ಟಮನಸ್ಕರಾಗಿ ಪುನಃ ಪುನಃ ಸಿಂಹನಾದಗೈದರು. ಆ ಘೋರ ನಿನಾದವನ್ನು ಮತ್ತು ಮಾಧವನನ್ನು ಪೀಡಿಸುತ್ತಿರುವುದನ್ನು ಕೇಳಿ ಯುಧಿಷ್ಠಿರನು ತನ್ನ ಸರ್ವ ಸೇನೆಗಳಿಗೆ ಹೇಳಿದನು: “ಇಗೋ! ವೃಷ್ಣಿವರ ವೀರ ಸಾತ್ಯಕಿಯು ಯುದ್ಧದಲ್ಲಿ ರಾಹುವಿನಿಂದ ಸೂರ್ಯನು ಹೇಗೋ ಹಾಗೆ ವೀರನಿಂದ ಕಬಳಿಸಲ್ಪಡುತ್ತಿದ್ದಾನೆ. ಸಾತ್ಯಕಿಯು ಎಲ್ಲಿ ಯುದ್ಧಮಾಡುತ್ತಿದ್ದಾನೋ ಅಲ್ಲಿಗೆ ಧಾವಿಸಿ ಹೋಗಿ.”
ಜನಾಧಿಪನು ಧೃಷ್ಟದ್ಯುಮ್ನನಿಗೆ ಇದನ್ನು ಹೇಳಿದನು: “ಪಾರ್ಷತ! ಇನ್ನೂ ಏಕೆ ನಿಂತಿದ್ದೀಯೆ? ದ್ರೋಣನಿರುವಲ್ಲಿ ಬೇಗ ಹೋಗು! ಬರಲಿರುವ ಘೋರ ಭಯವನ್ನು ದ್ರೋಣನು ಇನ್ನೂ ಕಂಡಿರಲಿಕ್ಕಿಲ್ಲ. ಈ ದ್ರೋಣನು ಯುಯುಧಾನನೊಡನೆ ದಾರಕ್ಕೆ ಕಟ್ಟಿದ ಪಕ್ಷಿಯೊಡನೆ ಬಾಲಕನು ಆಡುವಂತೆ ಆಡುತ್ತಿದ್ದಾನೆ! ಅಲ್ಲಿಗೇ ಭೀಮಸೇನನೇ ಮೊದಲಾದ ಎಲ್ಲ ರಥರೂ, ನಿನ್ನನ್ನೂ ಸೇರಿ, ಯುಯುಧಾನನ ರಥದ ಕಡೆ ಹೋಗಲಿ. ಸೈನಿಕರೊಡನೆ ನಾನು ನಿಮ್ಮನ್ನು ಹಿಂಬಾಲಿಸಿ ಬರುತ್ತೇನೆ. ಯಮನ ದವಡೆಗಳಲ್ಲಿ ಸಿಲುಕಿರುವ ಸಾತ್ಯಕಿಯನ್ನು ಬಿಡಿಸಿ!”
ಹೀಗೆ ಹೇಳಿ ರಾಜಾ ಪಾಂಡವನು ಸರ್ವಸೈನ್ಯಗಳೊಡನೆ ರಣದಲ್ಲಿ ಯುಯುಧಾನನ ಕಾರಣದಿಂದಾಗಿ ದ್ರೋಣನನ್ನು ಆಕ್ರಮಣಿಸಿದನು. ಆಗ ಅಲ್ಲಿ ದ್ರೋಣನೊಬ್ಬನೊಡನೆ ಪಾಂಡವರ ಮತ್ತು ಸೃಂಜಯರೊಡನೆ ಯುದ್ಧವು ನಡೆಯಿತು. ಆ ನರವ್ಯಾಘ್ರರೆಲ್ಲ ಸೇರಿ ಭಾರದ್ವಾಜನ ಮೇಲೆ ತೀಕ್ಷ್ಣವಾದ ಕಂಕ ಮತ್ತು ನವಿಲುಗರಿಗಳಿಂದ ಮಾಡಲ್ಪಟ್ಟ ಶರಗಳನ್ನು ಸುರಿಸಿದರು. ನಸುನಗುತ್ತಾಲೇ ಸ್ವಯಂ ದ್ರೋಣನು ಆ ವೀರರನ್ನು ಬಂದಿರುವ ಅತಿಥಿಗಳನ್ನು ನೀರು-ಆಸನಗಳನ್ನಿತ್ತು ಬರಮಾಡಿಕೊಳ್ಳುವಂತೆ ಬರಮಾಡಿಕೊಂಡನು. ಅತಿಥಿಗೃಹವನ್ನು ಸೇರಿದ ಅತಿಥಿಗಳು ಹೇಗೋ ಹಾಗೆ ಅವರು ಧನ್ವಿ ಭಾರದ್ವಾಜನ ಶರಗಳಿಂದ ತೃಪ್ತರಾದರು. ಮಧ್ಯಾಹ್ನವನ್ನು ತಲುಪಿದ ಸಹಸ್ರಾಂಶು ಸೂರ್ಯನಂತಿರುವ ಆ ಭಾರದ್ವಾಜನನ್ನು ಅವರೆಲ್ಲರೂ ನೋಡಲೂ ಕೂಡ ಶಕ್ಯರಾಗಿರಲಿಲ್ಲ. ಆ ಎಲ್ಲ ಮಹೇಷ್ವಾಸರನ್ನೂ ದ್ರೋಣನು ಸೂರ್ಯನು ತನ್ನ ಕಿರಣಗಳಿಂದ ಭುವನಗಳನ್ನು ಸುಡುವಂತೆ ಶರವ್ರಾತಗಳಿಂದ ಸುಟ್ಟನು. ಹೀಗೆ ರಣದಲ್ಲಿ ವಧಿಸಲ್ಪಡುತ್ತಿದ್ದ ಆ ಪಾಂಡವ-ಸೃಂಜಯರು ಕೆಸರಿನಲ್ಲಿ ಹುಗಿದುಹೋದ ಆನೆಗಳಂತೆ ತ್ರಾತಾರನನ್ನು ಕಾಣದೇ ಹೋದರು. ದ್ರೋಣನಿಂದ ಹರಿದು ಬರುತ್ತಿದ್ದ ಆ ಮಹಾಶರಗಳು ಸೂರ್ಯನ ಕಿರಣಗಳಂತೆ ಎಲ್ಲಕಡೆ ಸುಡುತ್ತಿದ್ದವು. ಅಲ್ಲಿ ದ್ರೋಣನು– ಮಹಾರಥರೆಂದು ಸಮಾಖ್ಯಾತರಾದ ಮತ್ತು ಧೃಷ್ಟದ್ಯುಮ್ನನಿಂದ ಸಮ್ಮತರಾದ ಇಪ್ಪತ್ತೈದು ಪಾಂಚಾಲರನ್ನು ಸಂಹರಿಸಿದನು.
ಪಾಂಡವರ ಮತ್ತು ಪಾಂಚಾಲರ ಎಲ್ಲ ಸೇನೆಗಳಲ್ಲಿ ಶ್ರೇಷ್ಠ ಶ್ರೇಷ್ಠರಾದವರನ್ನು ಶೂರನು ಸಂಹರಿಸುತ್ತಿರುವುದು ಕಾಣುತ್ತಿತ್ತು. ಕೇಕಯರ ನೂರರನ್ನು ಸಂಹಸಿ, ಉಳಿದವರು ಎಲ್ಲಕಡೆ ಓಡಿ ಹೋಗುತ್ತಿರಲು ದ್ರೋಣನು ಅಲ್ಲಿ ಬಾಯಿಕಳೆದ ಅಂತಕನಂತೆ ನಿಂತಿದ್ದನು. ದ್ರೋಣನು ನೂರಾರು ಸಹಸ್ರಾರು ಪಾಂಚಾಲ-ಸೃಂಜಯ-ಮತ್ಸ್ಯ-ಕೇಕಯ-ಪಾಂಡವರನ್ನು ಗೆದ್ದನು. ದ್ರೋಣನ ಸಾಯಕಗಳಿಂದ ವಧಿಸಲ್ಪಡುತ್ತಿದ್ದ ಅವನ ಶಬ್ಧವು ಅರಣ್ಯದಲ್ಲಿ ಬೆಂಕಿಯಿಂದ ಸುಟ್ಟುಹೋಗುತ್ತಿದ್ದ ವನವಾಸಿಗಳದಂತಿತ್ತು. ಅಲ್ಲಿ ಗಂಧರ್ವರು ಮತ್ತು ಪಿತೃಗಳೊಂದಿಗೆ ದೇವತೆಗಳು “ಇದೋ! ಪಾಂಚಾಲರು ಮತ್ತು ಪಾಂಡವರು ಸೈನಿಕರೊಂದಿಗೆ ಓಡಿ ಹೋಗುತ್ತಿದ್ದಾರೆ!” ಎಂದು ಹೇಳಿಕೊಂಡರು. ಹೀಗೆ ಸಮರದಲ್ಲಿ ದ್ರೋಣನು ಸೋಮಕರನ್ನು ಸಂಹರಿಸುತ್ತಿರುವಾಗ ರಣದಲ್ಲಿ ಯಾರೂ ಅವನನ್ನು ಎದುರಿಸಲಿಲ್ಲ ಮತ್ತು ಯಾರೂ ಅವನನ್ನು ಗಾಯಗೊಳಿಸಲಿಲ್ಲ.
ಯುಧಿಷ್ಠಿರನು ಸಾತ್ಯಕಿಯನ್ನು ಅರ್ಜುನನ ಸಹಾಯಕ್ಕೆ ಕಳುಹಿಸಿದುದು
ಹಾಗೆ ರೌದ್ರವಾದ ವೀರಶ್ರೇಷ್ಠರ ವಿನಾಶವು ನಡೆಯುತ್ತಿರಲು ಯುಧಿಷ್ಠಿರನು ಒಮ್ಮೆಲೇ ಪಾಂಚಜನ್ಯದ ಧ್ವನಿಯನ್ನು ಕೇಳಿದನು. ವಾಸುದೇವನಿಂದ ಊದಲ್ಪಟ್ಟ ಆ ಶಂಖರಾಜನ ಧ್ವನಿಯು ಜೋರಾಗಿತ್ತು. ಯುದ್ಧಮಾಡುತ್ತಿದ್ದ ಸೈಂಧವನ ರಕ್ಷಕ ವೀರ ಧಾರ್ತರಾಷ್ಟ್ರರು ಅರ್ಜುನನ ರಥದ ಬಳಿ ಕೂಗಾಡುತ್ತಿದ್ದುದರಿಂದ ಗಾಂಡೀವದ ನಿರ್ಘೋಷವು ಎಲ್ಲಕಡೆ ಕೇಳಿಬರುತ್ತಿರಲಿಲ್ಲ. ಆಗ ರಾಜಾ ಪಾಂಡವನು ಎಚ್ಚರ ತಪ್ಪಿ ಚಿಂತಿತನಾದನು: “ಶಂಖರಾಜನು ಹೇಗೆ ಧ್ವನಿಸುತ್ತಿರುವನೋ ಮತ್ತು ಹೇಗೆ ಕೌರವರು ಮತ್ತೆ ಮತ್ತೆ ಕೂಗಾಡುತ್ತಿದ್ದಾರೆ ಅಂದರೆ ಪಾರ್ಥನಿಗೆ ಏನೋ ಒಳ್ಳೆಯದಾಗಿರಲಿಕ್ಕಿಲ್ಲ!”
ಹೀಗೆ ಚಿಂತಿಸುತ್ತಾ ಒಳಗಿಂದೊಳಗೇ ವ್ಯಾಕುಲನಾಗಿ ಅಜಾತಶತ್ರು ಕೌಂತೇಯನು ಮತ್ತೆ ಮತ್ತೆ ಮೂರ್ಛೆಹೋಗುತ್ತಾ ಕಣ್ಣೀರಿನಿಂದ ಗದ್ಗದ ಕಂಠನಾಗಿ ಮುಂದೆ ಮಾಡಬೇಕಾದನ್ನು ಅಪೇಕ್ಷಿಸುತ್ತಾ ಸಾತ್ಯಕಿಗೆ ಹೇಳಿದನು: “ಶೈನೇಯ! ಹಿಂದೆ ಸದಾಚಾರಿಗಳು ಯಾವುದನ್ನು ಶಾಶ್ವತ ಧರ್ಮವೆಂದು ಕಂಡುಕೊಂಡಿದ್ದರೋ ಆ ಆಪತ್ತಿನಲ್ಲಿರುವ ಸುಹೃದಯರಿಗೆ ಮಾಡಬೇಕಾದ ಕರ್ತವ್ಯದ ಕಾಲವು ಬಂದೊದಗಿದೆ. ಸಾತ್ಯಕೇ! ಎಲ್ಲ ಯೋಧರ ಕುರಿತು ಯೋಚಿಸಿದರೂ ನಿನ್ನಂತಹ ಉತ್ತಮನಾದ ಬೇರೆ ಯಾರನ್ನೂ ನಾನು ತಿಳಿಯೆನು. ಯಾರು ನಿತ್ಯವೂ ಪ್ರೀತಮನಸ್ಕನಾಗಿರುತ್ತಾನೋ, ನಿತ್ಯವೂ ಅನುವ್ರತನಾಗಿರುತ್ತಾನೋ ಅವನಿಗೇ ಆಪತ್ತಿನಲ್ಲಿ ಕಾರ್ಯವನ್ನು ನಿಯೋಜಿಸಬೇಕು ಎಂದು ನನ್ನ ಅಭಿಪ್ರಾಯ. ಕೇಶವನು ಹೇಗೆ ನಿತ್ಯವೂ ಪಾಂಡವರನ್ನೇ ನೆನೆಯುತ್ತಿರುತ್ತಾನೋ ಹಾಗೆ ಪರಾಕ್ರಮದಲ್ಲಿ ಕೃಷ್ಣನ ಸಮನಾದ ನೀನೂ ಕೂಡ. ನಾನು ನಿನ್ನ ಮೇಲೆ ಒಂದು ಭಾರವನ್ನು ಹೊರಿಸುತ್ತಿದ್ದೇನೆ. ಅದನ್ನು ನೀನು ಹೊರಬೇಕು. ಎಂದೂ ಇದನ್ನು ನಿರ್ವಹಿಸದೇ ಇರಬಾರದೆಂದು ನನ್ನ ಅಭಿಪ್ರಾಯ. ಅರ್ಜುನನು ನಿನಗೆ ಸಹೋದರನಂತೆ. ಗೆಳೆಯನಂತೆ. ಮತ್ತು ಗುರುವಿನಂತೆ ಕೂಡ. ಕಷ್ಟದಲ್ಲಿರುವ ಅವನಿಗೆ ನೀನು ಸಹಾಯಮಾಡು. ನೀನು ಸತ್ಯವ್ರತ, ಶೂರ, ಮಿತ್ರರಿಗೆ ಅಭಯವನ್ನುಂಟುಮಾಡುವವನು. ಲೋಕದಲ್ಲಿ ನೀನು ಸತ್ಯ ಕರ್ಮ ಮತ್ತು ಮಾತುಗಳಿಗೆ ವಿಖ್ಯಾತನಾಗಿದ್ದೀಯೆ. ಯಾರು ಮಿತ್ರನಿಗಾಗಿ ಯುದ್ಧಮಾಡುತ್ತಾ ದೇಹವನ್ನು ತ್ಯಜಿಸುತ್ತಾನೋ ಅವನು ದ್ವಿಜಾತಿಯವರಿಗೆ ಭೂಮಿಯನ್ನು ದಾನವನ್ನಾಗಿತ್ತವನಿಗೆ ಸಮ. ನಾವೂ ಕೂಡ ಬಹಳಷ್ಟು ರಾಜರು ಈ ಭೂಮಿಯನ್ನು ಸಂಪೂರ್ಣವಾಗಿ ಯಥಾವಿಧಿಯಾಗಿ ಬ್ರಾಹ್ಮಣರಿಗೆ ಕೊಟ್ಟು ಸ್ವರ್ಗಕ್ಕೆ ಹೋಗಿದುದನ್ನು ಕೇಳಿದ್ದೇವೆ. ಹೀಗೆ ನೀನೂ ಕೂಡ ಭೂದಾನಕ್ಕೆ ಸಮಾನವಾದ ಅಥವಾ ಅದಕ್ಕೂ ಅಧಿಕವಾದ ಫಲವನ್ನು ಪಡೆ ಎಂದು ಕೈಮುಗಿದು ಕೇಳಿಕೊಳ್ಳುತ್ತಿದ್ದೇನೆ. ಒಬ್ಬನಿದ್ದಾನೆ- ರಣದಲ್ಲಿ ಪ್ರಾಣಗಳನ್ನು ತೊರೆದೂ ಸದಾ ಮಿತ್ರರಿಗೆ ಅಭಯವನ್ನುಂಟುಮಾಡುವ ಕೃಷ್ಣ. ಇನ್ನೊಬ್ಬನು ನೀನು ಸಾತ್ಯಕಿ. ಯಶಸ್ಸನ್ನು ಬಯಸುವ ವೀರ ವಿಕ್ರಾಂತನಿಗೆ ಯುದ್ಧದಲ್ಲಿ ಶೂರನು ಮಾತ್ರ ಸಹಾಯಮಾಡಬಲ್ಲ, ಸಾಧಾರಣ ಜನರಲ್ಲ. ನಡೆಯುತ್ತಿರುವ ಈ ಸಂಕಟದಲ್ಲಿ ನೀನು ಮಾತ್ರ ರಣದಲ್ಲಿ ವಿಜಯನನ್ನು ರಕ್ಷಿಸಬಲ್ಲೆ. ಬೇರೆ ಯಾರೂ ಇಲ್ಲ. ನಿನ್ನ ನೂರಾರು ಕರ್ಮಗಳನ್ನು ಹೊಗಳುತ್ತ ಅರ್ಜುನನು ನನಗೆ ನಿನ್ನ ಕುರಿತು ಹರ್ಷದಿಂದ ಕಣ್ಣುಗಳು ತೇವಗೊಂಡಿರಲು ಪುನಃ ಪುನಃ ವರ್ಣಿಸಿದ್ದನು. “ಯುಯುಧಾನನು ಅಸ್ತ್ರಗಳಲ್ಲಿ ಚಾಕಚಕ್ಯತೆಯುಳ್ಳವನು. ಚಿತ್ರಯೋಧೀ. ಹಾಗೆಯೇ ಲಘು ಪರಾಕ್ರಮಿ. ಪ್ರಾಜ್ಞ. ಸರ್ವಾಸ್ತ್ರಗಳನ್ನೂ ತಿಳಿದವನು. ಯುದ್ಧದಲ್ಲಿ ಎಂದೂ ಮರುಳಾಗದವನು. ಅವನು ವಿಶಾಲ ಭುಜವುಳ್ಳವನು. ವಿಶಾಲ ಎದೆಯುಳ್ಳವನು. ಮಹಾಬಾಹು ಮತ್ತು ಮಹಾಧನುಸ್ಸುಳ್ಳವನು. ನನ್ನ ಶಿಷ್ಯ ಮತ್ತು ಸಖನೂ ಕೂಡ. ನಾನು ಅವನಿಗೆ ಪ್ರಿಯನಾಗಿದ್ದೇನೆ. ಅವನು ನನಗೆ ಪ್ರಿಯನಾಗಿದ್ದಾನೆ. ಕೌರವರನ್ನು ಸದೆಬಡಿಯುವುದರಲ್ಲಿ ಅವನು ನನಗೆ ಸಹಾಯ ಮಾಡುತ್ತಾನೆ. ನಮಗಾಗಿ ಒಂದುವೇಳೆ ಕೇಶವ, ರಾಮ, ಅನಿರುದ್ಧ, ಪ್ರದ್ಯುಮ್ನ, ಗದ, ಸಾರಣ, ಸಾಂಬ ಅಥವಾ ಇತರ ವೃಷ್ಣಿಗಳು ಸಹಾಯಕ್ಕೆಂದು ಸಂಗ್ರಾಮದಲ್ಲಿ ಸನ್ನದ್ದರಾಗಿದ್ದರೆ ಆಗಲೂ ಕೂಡ ನಾನು ನರವ್ಯಾಘ್ರ ಶೈನೆಯ ಸತ್ಯವಿಕ್ರಮನನ್ನು ಸಹಾಯಕ್ಕೆಂದು ಆರಿಸಿಕೊಳ್ಳುತ್ತೇನೆ. ಏಕೆಂದರೆ ಅವನ ಸರಿಸಮನಾದವನು ಬೇರೆ ಇಲ್ಲ.”
“ಹೀಗೆ ದ್ವೈತವನದಲ್ಲಿ ಧನಂಜಯನು ನೀನಿಲ್ಲದಿರುವಾಗ ಒಮ್ಮೆ ಆರ್ಯರ ಸಂಸದಿಯಲ್ಲಿ ನಿನ್ನ ಗುಣಗಳನ್ನು ಹೊಗಳುತ್ತಾ ಹೇಳಿದ್ದನು. ಆ ಧನಂಜಯನ ಹಾಗೂ ನನ್ನ ಮತ್ತು ಭೀಮರಿಬ್ಬರ ಸಂಕಲ್ಪಗಳನ್ನು ನೀನು ಹಾಳುಮಾಡಬಾರದು. ತೀರ್ಥಗಳಲ್ಲಿ ತಿರುಗಾಡಿ ದ್ವಾರಕೆಯ ಕಡೆ ಬಂದಿದ್ದಾಗ ಅಲ್ಲಿ ಕೂಡ ಅರ್ಜುನನ ಕುರಿತು ನಿನಗಿರುವ ಭಕ್ತಿಯನ್ನು ನಾನು ನೋಡಿದ್ದೇನೆ. ನಾವು ಉಪಪ್ಲವದಲ್ಲಿ ಇರುವಾಗ ನೀನು ನಮ್ಮನ್ನು ಪ್ರೀತಿಸುವಷ್ಟು ಬೇರೆ ಯಾರನ್ನೂ ನಾನು ಕಂಡಿರಲಿಲ್ಲ. ಉತ್ತಮ ಕುಲದಲ್ಲಿ ಜನ್ಮವಿತ್ತಿದ್ದೀಯೆ. ನಿನ್ನ ಭಕ್ತಿ, ಸಖ್ಯ, ಆಚಾರ್ಯಕತ್ವ, ಸೌಹೃದತ್ವ, ವೀರ್ಯ ಮತ್ತು ಸತ್ಯ-ಅನುಕಂಪಗಳಿಗೆ ಅನುರೂಪವಾದ ಕರ್ಮವನ್ನು ನೀನು ಮಾಡಬೇಕು. ಸುಯೋಧನನು ತ್ವರೆಮಾಡಿ ದ್ರೋಣನಿಂದ ಕವಚವನ್ನು ಕಟ್ಟಿಸಿಕೊಂಡು ಮತ್ತು ಅದಕ್ಕೆ ಮೊದಲೇ ಕೌರವ ಮಹಾರಥರು ಹೋಗಿದ್ದಾರೆ. ವಿಜಯ ಅರ್ಜುನನ ಕಡೆಯಿಂದ ಮಹಾ ನಿನಾದವು ಕೇಳಿ ಬರುತ್ತಿದೆ. ವೇಗದಿಂದ ಅಲ್ಲಿಗೆ ಹೋಗಬೇಕಾಗಿದೆ. ಅವನ ಕಡೆ ನೀನು ಹೋದರೆ ಭೀಮಸೇನ ಮತ್ತು ಸೈನಿಕರೊಂದಿಗೆ ನಾವು ಪ್ರಯತ್ಮಪಟ್ಟು ದ್ರೋಣನನ್ನು ತಡೆಯುತ್ತೇವೆ. ರಣರಂಗದಲ್ಲಿ ಸೈನ್ಯಗಳು ಓಡಿಹೋಗುತ್ತಿರುವುದನ್ನು ನೋಡು! ರಣದಲ್ಲಿ ಮಹಾ ಶಬ್ಧವು ಕೇಳಿಬರುತ್ತಿದೆ. ಭಾರತೀಸೇನೆಯು ಸೀಳಿಹೋದಂತೆ ತೋರುತ್ತಿದೆ. ಪರ್ವದಲ್ಲಿ ಮಹಾ ಚಂಡಮಾರುತದ ವೇಗದಿಂದ ಸಮುದ್ರವು ಹೇಗೋ ಹಾಗೆ ಸವ್ಯಸಾಚಿಯಿಂದ ಧಾರ್ತರಾಷ್ಟ್ರನ ಬಲವು ಅಲ್ಲೋಲಕಲ್ಲೋಲಗೊಂಡಿದೆ. ಅತ್ತಿತ್ತ ರಭಸದಿಂದ ಓಡಾಡುತ್ತಿರುವ ರಥ-ಕುದುರೆ-ಮನುಷ್ಯರಿಂದ ಮೇಲೆದ್ದ ಧೂಳಿನಿಂದ ಸೈನ್ಯವು ಮುಚ್ಚಿಹೋಗಿಬಿಟ್ಟಿದೆ. ಪರವೀರಹ ಫಲ್ಗುನನು ಪ್ರಾಸಗಳಿಂದ ಯುದ್ಧಮಾಡುತ್ತಿರುವ ಸಂಘಟಿತರಾಗಿರುವ ಸಿಂಧು-ಸೌವೀರ ಶೂರರಿಂದ ಸುತ್ತುವರೆಯಲ್ಪಟ್ಟಿದ್ದಾನೆ. ಸೈಂಧವನಿಗಾಗಿ ಜೀವವನ್ನೇ ತೊರೆದು ಇರುವ ಈ ಸೈನ್ಯವನ್ನು ದಾಟದೇ ಜಯದ್ರಥನನ್ನು ಕೊಲ್ಲುವುದು ಅಶಕ್ಯ. ಶರ-ಶಕ್ತಿ-ಧ್ವಜಗಳ ವನದಂತಿರುವ, ಕುದುರೆ-ಆನೆಗಳ ಸಮಾಕುಲಗಳಿಂದ ಕೂಡಿರುವ, ತುಂಬಾ ದುರಾಸದವಾಗಿರುವ ಧಾರ್ತರಾಷ್ಟ್ರರ ಈ ಸೇನೆಯನ್ನಾದರೂ ನೋಡು! ದುಂದುಭಿಗಳ ನಿರ್ಘೋಷವನ್ನೂ, ಪುಷ್ಕಲವಾದ ಶಂಖಶಬ್ಧಗಳನ್ನೂ, ಸಿಂಹನಾದ ಕೂಗುಗಳನ್ನೂ, ರಥಚಕ್ರಗಳ ಧ್ವನಿಗಳನ್ನೂ ಕೇಳು! ಸಹಸ್ರಾರು ಆನೆಗಳ ಮತ್ತು ಪದಾತಿಗಳ ಶಬ್ಧವನ್ನು ಕೇಳು. ಓಡುತ್ತಿರುವ ಅಶ್ವಾರೋಹಿಗಳಿಂದ ಭೂಮಿಯು ಕಂಪಿಸುತ್ತಿರುವುದನ್ನೂ ಕೇಳು. ಮುಂದೆ ಸೈಂಧವನ ಸೇನೆಯಿದೆ. ಹಿಂದೆ ದ್ರೋಣನ ಸೇನೆಯಿದೆ. ಈ ಬಹುಸೇನೆಗಳು ದೇವೇಂದ್ರನನ್ನೂ ಪೀಡಿಸಬಲ್ಲವು ಎಂದು ತಿಳಿ. ಅಪಾರವಾದ ಈ ಸೇನೆಯಲ್ಲಿ ಮುಳುಗಿಹೋದ ಅವನು ಜೀವಿತವನ್ನೂ ತೊರೆಯಬಹುದು. ಯುದ್ಧದಲ್ಲಿ ಅವನು ಹತನಾದರೆ ನನ್ನಂತವನು ಹೇಗೆ ಜೀವಿಸಿಯಾನು? ನೀನು ಬದುಕಿರುವಾಗಲೇ ನಾನು ಸರ್ವಥಾ ಮಹಾ ಸಂಕಟದಲ್ಲಿ ಸಿಲುಕಿಕೊಂಡಿದ್ದೇನೆ. ಶ್ಯಾಮಲವರ್ಣದ ಯುವಕ ಗುಡಾಕೇಶ ಸುಂದರ ಅಸ್ತ್ರಗಳಲ್ಲಿ ಪರಿಣಿತ ಚಿತ್ರಯೋಧೀ ಪಾಂಡವನು ಸೂರ್ಯೋದಯದಲ್ಲಿಯೇ ಭಾರತೀ ಸೇನೆಯನ್ನು ಪ್ರವೇಶಿಸಿದ್ದನು. ದಿವಸವು ಕಳೆಯುತ್ತಾ ಬಂದಿದೆ. ಅವನು ಜೀವಿತನಾಗಿರುವನೋ ಇಲ್ಲವೋ ಎನ್ನುವುದು ನನಗೆ ತಿಳಿದಿಲ್ಲ. ಕುರುಗಳ ಆ ಸೇನೆಯಾದರೋ ಸಾಗರದಂತೆ ವಿಶಾಲವಾಗಿದೆ. ಯುದ್ಧದಲ್ಲಿ ದೇವತೆಗಳಿಂದಲೂ ಎದುರಿಸಲಾಗದ ಭಾರತೀ ಸೇನೆಯನ್ನು ಮಹಾಬಾಹು ಬೀಭತ್ಸುವು ಒಬ್ಬನೇ ಪ್ರವೇಶಿಸಿದ್ದಾನೆ. ನನಗೀಗ ಯುದ್ಧದಲ್ಲಿ ಆಸಕ್ತಿಯೇ ಹೊರಟು ಹೋಗಿದೆ. ದ್ರೋಣರು ರಭಸದಿಂದ ಯುದ್ಧಮಾಡುತ್ತಾ ನನ್ನ ಸೇನೆಯನ್ನು ಪೀಡಿಸುತ್ತಿದ್ದಾರೆ. ಈ ದ್ವಿಜನು ಹೇಗೆ ಸಂಚರಿಸುತ್ತಿದ್ದಾನೆ ಎನ್ನುವುದನ್ನು ನೀನೇ ನೋಡುತ್ತಿರುವೆ. ಹೀಗೆ ಎರಡು ಕಾರ್ಯಗಳೂ ಒಟ್ಟಿಗೇ ಬಂದೊದಗಿದಾಗ ವಿವೇಕಿಯಾದ ನೀನು ಹಗುರವಾದುದನ್ನು ಬಿಟ್ಟು ಮಹಾರ್ಥವಿದ್ದುದನ್ನು ಮಾಡಬೇಕು. ಸರ್ವಕಾರ್ಯಗಳಲ್ಲಿ ಅರ್ಜುನನ ರಕ್ಷಣೆಯು ಸದಾ ಮಹತ್ತರವಾದುದು ಎಂದು ನನಗನ್ನಿಸುತ್ತದೆ. ಯುದ್ಧದಲ್ಲಿ ಅದು ನಿನ್ನ ಕರ್ತವ್ಯವಾಗಿದೆ. ದಾಶಾರ್ಹ, ಜಗತ್ತಿನ ಪ್ರಭು, ರಕ್ಷಕನು ರಣದಲ್ಲಿ ಶಕ್ತನಿಲ್ಲವೆಂದು ನಾನು ಯೋಚಿಸುತ್ತಿಲ್ಲ. ಮೂರುಲೋಕಗಳು ಒಟ್ಟಾಗಿ ಬಂದರೂ ಅವನು ಜಯಿಸಬಲ್ಲ. ಸತ್ಯವನ್ನು ಹೇಳುತ್ತಿದ್ದೇನೆ. ಇನ್ನು ದರ್ಬಲವಾಗಿರುವ ಧಾರ್ತರಾಷ್ಟ್ರನ ಸೇನೆಯು ಯಾವ ಲೆಖ್ಕಕ್ಕೆ? ಅರ್ಜುನನಾದರೋ ಯುದ್ಧದಲ್ಲಿ ಅನೇಕರಿಂದ ಪೀಡಿತನಾಗಿದ್ದಾನೆ. ಹೀಗಿರುವಾಗ ಅವನು ಸಮರದಲ್ಲಿ ಪ್ರಾಣವನ್ನೇ ತ್ಯಜಿಸಬಹುದು. ಇದರಿಂದಾಗಿ ನಾನು ತುಂಬಾ ಅಸ್ವಸ್ಥನಾಗಿದ್ದೇನೆ. ನೀನು ಅವನು ಇರುವಲ್ಲಿಗೆ ಹೋಗು! ಅವನಂತವನು ಕಷ್ಟದಲ್ಲಿರುವಾಗ ನನ್ನಂತವನು ಹೇಳಿದಂತೆ ನಿನ್ನಂತವನು ಮಾಡಬೇಕಾದ ಸಮಯವಿದು. ರಣದಲ್ಲಿ ವೃಷ್ಣಿಪ್ರವೀರರಲ್ಲಿ ಇಬ್ಬರೇ ಅತಿರಥರೆಂದು ಕೇಳಿಕೊಂಡು ಬಂದಿದ್ದೇವೆ. ಮಹಾಬಾಹು ಪ್ರದ್ಯುಮ್ನ ಮತ್ತು ಸಾತ್ವತನಾದ ನೀನು. ಅಸ್ತ್ರಗಳಲ್ಲಿ ನಾರಾಯಣನ ಸಮನಾಗಿರುವೆ. ಬಲದಲ್ಲಿ ಸಂಕರ್ಷಣನ ಸಮನಾಗಿರುವೆ. ವೀರತನದಲ್ಲಿ ನೀನು ಧನಂಜಯನ ಸಮನಾಗಿರುವೆ. ಭೀಷ್ಮ-ದ್ರೋಣರನ್ನು ಬಿಟ್ಟರೆ ಇಂದು ನೀನೇ ಪುರುಷವ್ಯಾಘ್ರ, ಸರ್ವಯುದ್ಧವಿಶಾರದನೆಂದು ಲೋಕದ ಸಂತರು ಹೇಳುತ್ತಾರೆ. ಸಾತ್ಯಕಿಗೆ ಅಸಾಧ್ಯವೆನ್ನುವುದೇ ಇಲ್ಲ ಎಂದು ಲೋಕದಲ್ಲಿ ತಿಳಿದುಕೊಂಡಿದ್ದಾರೆ. ಆದುದರಿಂದ ನಾನು ಕೇಳಿಕೊಂಡಂತೆ ಮಾಡು. ಜನರಿಗೆ ನಿನ್ನ ಮತ್ತು ಪಾರ್ಥ ಇಬ್ಬರ ಮೇಲೂ ಈ ಸದ್ಭಾವನೆಯಿದೆ. ಇದಕ್ಕೆ ಹೊರತಾಗಿ ನೀನು ಮಾಡಬಾರದು. ರಣದಲ್ಲಿ ಪ್ರಿಯ ಪ್ರಾಣಗಳನ್ನು ಪರಿತ್ಯಜಿಸಿ ವೀರನಂತೆ ವಿಚರಿಸು. ದಾಶಾರ್ಹರು ರಣದಲ್ಲಿ ಜೀವವನ್ನು ರಕ್ಷಿಸಿಕೊಳ್ಳುವುದಿಲ್ಲ. ಯುದ್ಧಮಾಡದೇ ಇರುವುದು ಮತ್ತು ಸಂಗ್ರಾಮದಿಂದ ಪಲಾಯನ ಮಾಡುವುದು ಇವು ಹೇಡಿಗಳ ಮತ್ತು ಕೆಟ್ಟವರ ಮಾರ್ಗಗಳು. ದಾಶಾರ್ಹರು ಹೋಗುವವುಗಳಲ್ಲ. ಅರ್ಜುನನು ನಿನ್ನ ಗುರು. ಧೀಮತ ವಾಸುದೇವನು ನಿನ್ನ ಮತ್ತು ಪಾರ್ಥನ ಗುರು. ಈ ಎರಡು ಕಾರಣಗಳಿಂದ ನಿನ್ನನ್ನೇ ನಾನು ಈ ಕೆಲಸಕ್ಕೆ ಹೇಳುತ್ತಿದ್ದೇನೆ. ನನ್ನ ಈ ಮಾತನ್ನು ನಿರಾದರಿಸಬೇಡ. ನಾನು ನಿನ್ನ ಗುರುವಿಗೂ ಗುರು. ವಾಸುದೇವನ ಮತವೇ ನನ್ನ ಮತ್ತು ಅರ್ಜುನನದೂ ಹೌದು. ಸತ್ಯವನ್ನು ಹೇಳುತ್ತಿದ್ದೇನೆ. ಧನಂಜಯನಿರುವಲ್ಲಿಗೆ ಹೋಗು. ನನ್ನ ಈ ಮಾತನ್ನು ತಿಳಿದುಕೊಂಡು ದುರ್ಮತಿ ಧಾರ್ತರಾಷ್ಟ್ರನ ಸೇನೆಯನ್ನು ಪ್ರವೇಶಿಸು. ಸೇನೆಯೊಳಗೆ ಪ್ರವೇಶಿಸಿ ಯಥಾನ್ಯಾಯವಾಗಿ ಮಹಾರಥರೊಡನೆ ಯುದ್ಧಮಾಡಿ ರಣದಲ್ಲಿ ನಿನಗೆ ಅರ್ಹವಾಗಿರುವ ಕರ್ಮಗಳನ್ನು ಮಾಡಿ ತೋರಿಸು!”
ಪ್ರೀತಿಯುಕ್ತವಾದ, ಹೃದಯಂಗಮವಾದ, ಮಧುರ ಅಕ್ಷರಗಳಿಂದ ಕೂಡಿದ, ಕಾಲಕ್ಕೆ ಸರಿಯಾದ, ವಿಚಿತ್ರವಾಗಿ ಮತ್ತು ಸ್ವತಃ ತಾನೇ ಮಾತನಾಡಿದ ಧರ್ಮರಾಜನ ಆ ಮಾತನ್ನು ಕೇಳಿ ಶಿನಿಪುಂಗವ ಸಾತ್ಯಕಿಯು ಯುಧಿಷ್ಠಿರನಿಗೆ ಉತ್ತರಿಸಿದನು: “ಅಚ್ಯುತ! ನೀನು ಹೇಳಿದ ನ್ಯಾಯಯುಕ್ತವಾದ, ವಿಚಿತ್ರವಾದ, ಫಲ್ಗುನನಿಗೆ ಯಶಸ್ಸನ್ನುಂಟುಮಾಡುವಂತಹ ಎಲ್ಲ ಮಾತುಗಳನ್ನೂ ನಾನು ಕೇಳಿದೆ. ಇಂಥಹ ಸಮಯದಲ್ಲಿ ನನ್ನಂಥವನು ಸಮ್ಮತವಾಗಿರುವುದೇನೆಂದು ನೋಡಿ ಹೇಳಬೇಕಾಗುತ್ತದೆ. ಧನಂಜಯನಿಗಾಗಿ ನಾನು ನನ್ನ ಪ್ರಾಣಗಳನ್ನು ಎಂದೂ ರಕ್ಷಿಸಿಕೊಳ್ಳುವುದಿಲ್ಲ. ಹೀಗಿರುವಾಗ ಮಹಾಹವದಲ್ಲಿ ನಾನು ನಿನಗಾಗಿ ಏನನ್ನು ಮಾಡದೇ ಇರಬಲ್ಲೆ? ನಿನಗೋಸ್ಕರವಾಗಿ ದೇವಾಸುರಮಾನುಷ ಈ ಮೂರುಲೋಕಗಳೊಡನೆಯೂ ಯುದ್ಧಮಾಡಬಲ್ಲೆ. ಈ ಸುದುರ್ಬಲರೊಂದಿಗೆ ಇನ್ನೇನು? ಇಂದು ರಣದಲ್ಲಿ ಎಲ್ಲಕಡೆಗಳಿಂದ ಸುಯೋಧನನ ಸೇನೆಯೊಂದಿಗೆ ಯುದ್ಧಮಾಡಿ ಜಯಿಸುತ್ತೇನೆ. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ಕುಶಲಿ ಧನಂಜಯನ ಬಳಿಸಾರಿ ಜಯದ್ರಥನನು ಹತನಾದನಂತರವೇ ಹಿಂದಿರುಗುತ್ತೇನೆ. ಆದರೆ ನಾನು ನಿನಗೆ ವಾಸುದೇವನ ಮತ್ತು ಧೀಮತ ಫಲ್ಗುನನ ಮಾತುಗಳೆಲ್ಲವನ್ನೂ ವಿಜ್ಞಾಪಿಸುವುದು ಅವಶ್ಯವಾಗಿದೆ. ಸರ್ವ ಸೇನೆಗಳ ಮಧ್ಯೆ ವಾಸುದೇವನು ಕೇಳುವಂತೆ ಅರ್ಜುನನು ನನಗೆ ಪುನಃ ಪುನಃ ದೃಢವಾಗಿ ಆದೇಶವನ್ನಿತ್ತಿದ್ದನು: “ಮಾಧವ! ಇಂದು ನಾನು ಜಯದ್ರಥನನ್ನು ಕೊಂದು ಬರುವವರೆಗೂ ರಾಜನನ್ನು ಅಪ್ರಮತ್ತನಾಗಿ ಆರ್ಯನಂತೆ ಯುದ್ಧದಲ್ಲಿ ಬುದ್ಧಿಯನ್ನಿರಿಸಿ ಪರಿಪಾಲಿಸು. ನಿನ್ನಲ್ಲಿ ಅಥವಾ ಮಹಾರಥ ಪ್ರದ್ಯುಮ್ನನ ಬಳಿ ನೃಪನನ್ನಿಟ್ಟು ನಾನು ನಿರಪೇಕ್ಷನಾಗಿ ಜಯದ್ರಥನಿದ್ದಲ್ಲಿಗೆ ಹೋಗಬಹುದು. ರಣದಲ್ಲಿ ಶ್ರೇಷ್ಠಸಮ್ಮತ ದ್ರೋಣರ ರಭಸವನ್ನು ತಿಳಿದಿದ್ದೀಯೆ. ಹಾಗೆಯೇ ನಿತ್ಯವೂ ಅವರು ಮಾಡಿಕೊಂಡು ಬಂದಿರುವ ಪ್ರತಿಜ್ಞೆಯನ್ನೂ ಕೇಳಿದ್ದೀಯೆ. ಭಾರದ್ವಾಜರು ಧರ್ಮರಾಜನನ್ನು ಸೆರೆಹಿಡಿಯಲು ನೋಡುತ್ತಿದ್ದಾರೆ. ರಣದಲ್ಲಿ ಯುಧಿಷ್ಠಿರನನ್ನು ಸೆರೆಹಿಡಿಯಲು ದ್ರೋಣರು ಶಕ್ತರು ಕೂಡ. ಹೀಗಿದ್ದಾಗ ನಾನು ಧರ್ಮರಾಜನನ್ನು ಇಂದು ನಿನಗೆ ಒಪ್ಪಿಸಿ ಸೈಂಧವನ ವಧೆಗಾಗಿ ಹೋಗುತ್ತಿದ್ದೇನೆ. ಒಂದುವೇಳೆ ದ್ರೋಣರು ಧರ್ಮರಾಜನನ್ನು ಬಲಾತ್ಕಾರವಾಗಿ ಸೆರೆಹಿಡಿಯದಿದ್ದರೆ ಖಂಡಿತವಾಗಿಯೂ ನಾನು ಜಯದ್ರಥನನ್ನು ಸಂಹರಿಸಿ ಹಿಂದಿರುಗುತ್ತೇನೆ. ನರಶ್ರೇಷ್ಠನು ಭಾರದ್ವಾಜರಿಂದ ಸೆರೆಹಿಡಿಯಲ್ಪಟ್ಟರೆ ಸೈಂಧವನ ವಧೆಯು ನಡೆಯುವುದಿಲ್ಲ. ನನಗೆ ಒಳ್ಳೆಯದಾಗದಿರುವುದು ನಡೆದುಹೋಗುತ್ತದೆ. ಈ ಸತ್ಯವಾದಿ ಪಾಂಡವನು ಹೊರಟುಹೋದರೆ ನಾವು ಪುನಃ ವನಕ್ಕೆ ಹೋಗಬೇಕಾಗುತ್ತದೆ. ಒಂದುವೇಳೆ ರಣದಲ್ಲಿ ಕ್ರುದ್ಧರಾಗಿ ದ್ರೋಣರು ಯುಧಿಷ್ಠಿರನನ್ನು ಹಿಡಿದಿದ್ದೇ ಆದರೆ ನನ್ನ ವಿಜಯವೂ ಕೂಡ ವ್ಯರ್ಥವೇ ಆಗಿಬಿಡುತ್ತದೆ. ಆದುದರಿಂದ ನನಗೆ ಬೇಕಾಗಿ, ಜಯ ಮತ್ತು ಯಶಸ್ಸಿಗಾಗಿ ರಾಜನನ್ನು ಯುದ್ಧದಲ್ಲಿ ರಕ್ಷಿಸು!”
“ಭಾರದ್ವಾಜನಿಂದ ನಿತ್ಯವೂ ನಿನಗಿರುವ ಭಯವನ್ನು ನೋಡಿಯೇ ಸವ್ಯಸಾಚಿಯು ನಿನ್ನನ್ನು ನ್ಯಾಸರೂಪದಲ್ಲಿ ನನ್ನ ಬಳಿ ಇರಿಸಿದ್ದಾನೆ. ಯುದ್ಧದಲ್ಲಿ ಧೀಮತ ಭಾರದ್ವಾಜನೊಡನೆ ಪ್ರತಿಯಾಗಿ ಯುದ್ಧಮಾಡುವವನು ರೌಕ್ಮಿಣೇಯನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಎಂದು ನನಗೆ ನಿತ್ಯವೂ ಕಾಣುತ್ತಿದೆ. ನಾನು ಆಚಾರ್ಯ ಅರ್ಜುನನ ವಚನದಂತೆ ಮಾಡುವುದು ಲೇಸು. ಮಹೀಪತೇ! ನಿನ್ನನ್ನು ಹಿಂದೆಮಾಡುವ ಅಥವಾ ಬಿಟ್ಟುಹೋಗುವ ಕೆಲಸವನ್ನು ಮಾಡಲು ಬಯಸುವುದಿಲ್ಲ. ಆಚಾರ್ಯನು ಅಭೇದ್ಯ ಕವಚದಿಂದ ಮತ್ತು ಕೈಚಳಕದಿಂದ ನಿನ್ನನ್ನು ಹಿಡಿದು ಬಾಲಕನು ದಾರಕ್ಕೆ ಕಟ್ಟಿದ ಪಕ್ಷಿಯೊಡನೆ ಹೇಗೋ ಹಾಗೆ ಆಡುತ್ತಾನೆ. ಒಂದುವೇಳೆ ಕಾರ್ಷ್ಣಿ ಮಕರಧ್ವಜನು ಇಲ್ಲಿ ಇರುತ್ತಿದ್ದರೆ ನಾನು ನಿನ್ನ ರಕ್ಷಣೆಗೆ ಒಪ್ಪಿಸಿ ಅರ್ಜುನನ ರಕ್ಷಣೆಗೆ ಹೋಗುತ್ತಿದ್ದೆ. ನೀನು ನಿನ್ನನ್ನು ರಕ್ಷಿಸಿಕೊಳ್ಳಬೇಕು. ನಾನು ಪಾಂಡವನ ಕಡೆ ಹೋದರೆ ರಣದಲ್ಲಿ ದ್ರೋಣನನ್ನು ಎದುರಿಸಿ ಯುದ್ಧಮಾಡಿ ನಿನ್ನನ್ನು ರಕ್ಷಿಸುವವರು ಯಾರು? ಅರ್ಜುನನ ಕಾರಣದಿಂದಾಗಿ ನಿನಗೆ ಇಂದು ಯಾವ ಭಯವೂ ಬೇಕಾಗಿಲ್ಲ. ಆ ಮಹಾಬಾಹುವು ಎಂತಹ ಕಷ್ಟದಲ್ಲಿಯೂ ಕುಸಿಯುವುದಿಲ್ಲ. ಈ ಸೌವೀರಕ ಯೋಧರು, ಹಾಗೆಯೇ ಸೈಂಧವ-ಪೌರವರು, ಉತ್ತರದವರು, ದಕ್ಷಿಣದವರು, ಅನ್ಯ ಮಹಾರಥರು, ಕರ್ಣನೇ ಮೊದಲಾದ ರಥೋದಾರರೆಂದು ಹೇಳಿಸಿಕೊಂಡವರು ಕ್ರುದ್ಧನಾದ ಈ ಅರ್ಜುನನ ಹದಿನಾರರಲ್ಲಿ ಒಂದಂಶಕ್ಕೂ ಸಮರಲ್ಲ. ಭೂಮಿಯ ಎಲ್ಲರೂ ಮೇಲೆದ್ದು, ಸುರಾಸುರಮನುಷ್ಯರೊಂದಿಗೆ ರಾಕ್ಷಸಗಣಗಳೂ, ಕಿನ್ನರ ಮಹೋರಗಗಳೂ, ಸ್ಥಾವರ ಜಂಗಮಗಳೂ ಸೇರಿ ಒಟ್ಟಾದರು ಅವರು ಸಂಯುಗದಲ್ಲಿ ಪಾರ್ಥನನ್ನು ಮೀರಿಸಲಾರರು. ಇದನ್ನು ತಿಳಿದು ಧನಂಜಯನಿಗಾಗಿ ನೀನು ಹೆದರಿ ಕಂಪಿಸಬೇಕಾಗಿಲ್ಲ. ಎಲ್ಲಿ ವೀರ ಮಹೇಷ್ವಾಸ ಸತ್ಯಪರಾಕ್ರಮರಾದ ಇಬ್ಬರು ಕೃಷ್ಣರು ಇರುವರೋ ಅಲ್ಲಿ ಎಂದೂ ಆಪತ್ತಿನ ವಿಷಯವು ಬರುವುದಿಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು. ನಿನ್ನ ತಮ್ಮನ ದೈವತ್ವವನ್ನೂ, ಅಸ್ತ್ರಗಳಲ್ಲಿ ಪರಿಣಿತಿಯನ್ನೂ, ಯುದ್ಧದಲ್ಲಿ ಅವನ ಯೋಗತ್ವ ಮತ್ತು ಅಸಹನೆ, ಕೃತಜ್ಞತೆ, ದಯೆಗಳನ್ನು ಜ್ಞಾಪಿಸಿಕೋ! ಒಂದುವೇಳೆ ನಾನು ಅರ್ಜುನನಿದ್ದಲ್ಲಿಗೆ ಹೋದರೆ ದ್ರೋಣನು ರಣದಲ್ಲಿ ಪ್ರಯೋಗಿಸುವ ಚಿತ್ರಾಸ್ತ್ರಗಳ ಕುರಿತು ಯೋಚಿಸು! ಆಚಾರ್ಯನು ನಿನ್ನನ್ನು ಹಿಡಿಯಲು ತುಂಬಾ ಆತುರನಾಗಿದ್ದಾನೆ. ತನ್ನನ್ನು ರಕ್ಷಿಸಿಕೊಂಡು ಪ್ರತಿಜ್ಞೆಯನ್ನು ಸತ್ಯವನ್ನಾಗಿಸಲು ಪ್ರಯತ್ನಿಸುತ್ತಾನೆ. ನಿನ್ನನ್ನು ನೀನು ರಕ್ಷಿತನನ್ನಾಗಿಸಿಕೋ! ನಾನು ಹೋದರೆ ನಿನ್ನನ್ನು ಯಾರು ರಕ್ಷಿಸುತ್ತಾರೆ? ನಿನ್ನನ್ನು ಯಾರಿಗೆ ಒಪ್ಪಿಸಿ ನಾನು ಫಲ್ಗುನನಿದ್ದಲ್ಲಿಗೆ ಹೋಗಲಿ? ಈ ಮಹಾಹವದಲ್ಲಿ ನಿನ್ನನ್ನು ಬೇರೆ ಯಾರಿಗಾದರೂ ಒಪ್ಪಿಸದೇ ನಾನು ಹೋಗುವುದಿಲ್ಲ. ನಾನು ನಿಜವಾದುದನ್ನೇ ನಿನಗೆ ಹೇಳುತ್ತಿದ್ದೇನೆ. ಇವೆಲ್ಲವನ್ನು ಬಹಳಬಾರಿ ಬುದ್ಧಿಯನ್ನುಪಯೋಗಿಸಿ ಯೋಚಿಸು! ಪರಮ ಶ್ರೇಯಸ್ಕರವಾದು ಏನೆಂದು ಬುದ್ಧಿಯಿಂದ ಕಂಡುಕೊಂಡು ನನಗೆ ಆದೇಶವನ್ನು ನೀಡು!”
ಯುಧಿಷ್ಠಿರನು ಹೇಳಿದನು: “ಮಹಾಬಾಹೋ! ನೀನು ಹೇಳಿದುದೆಲ್ಲವೂ ಸರಿಯೇ! ಆದರೆ ಅರ್ಜುನನ ಕುರಿತು ನನ್ನ ಭಾವವು ಅಳುಕದೇ ಇರುವುದಿಲ್ಲ. ನನ್ನ ರಕ್ಷಣೆಯ ಕುರಿತು ಪರಮ ಯತ್ನವನ್ನು ಮಾಡುತ್ತೇನೆ. ನೀನು ಅಪ್ಪಣೆಯಂತೆ ಧನಂಜಯನು ಎಲ್ಲಿ ಯುದ್ಧಮಾಡುತ್ತಿದ್ದಾನೋ ಅಲ್ಲಿಗೆ ಹೋಗು. ರಣದಲ್ಲಿ ನನ್ನ ಆತ್ಮರಕ್ಷಣೆ ಮತ್ತು ಅರ್ಜುನನ ಬಳಿ ಹೋಗುವುದು - ಈ ಎರಡನ್ನೂ ಬುದ್ಧಿಯಿಂದ ವಿಚಾರಿಸಿ, ಅಲ್ಲಿಗೆ ಹೋಗುವುದೇ ಸರಿಯೆಂದು ಬಯಸಿದ್ದೇನೆ. ಧನಂಜಯನು ಎಲ್ಲಿ ಯುದ್ಧಮಾಡುತ್ತಿದ್ದಾನೋ ಅಲ್ಲಿಗೆ ಹೋಗಲು ಸಿದ್ಧನಾಗು. ಭೀಮನು ನನ್ನ ರಕ್ಷಣೆಯನ್ನು ಮಾಡುತ್ತಾನೆ. ಸೋದರರೊಂದಿಗೆ ಪಾರ್ಷತ, ಮಹಾಬಲ ಪಾರ್ಥಿವರು ಮತ್ತು ದ್ರೌಪದೇಯರೂ ನನ್ನನ್ನು ರಕ್ಷಿಸುತ್ತಾರೆ. ಅದರಲ್ಲಿ ಸಂಶಯವಿಲ್ಲ. ಐವರು ಕೇಕಯ ಸಹೋದರರು, ರಾಕ್ಷಸ ಘಟೋತ್ಕಚ, ವಿರಾಟ, ದ್ರುಪದ, ಶಿಖಂಡೀ, ಧೃಷ್ಟಕೇತು, ಕುಂತಿಭೋಜ, ನಕುಲ, ಸಹದೇವ ಮತ್ತು ಪಾಂಚಲ-ಸೃಂಜಯರು ಒಟ್ಟಾಗಿ ನನ್ನನ್ನು ರಕ್ಷಿಸುತ್ತಾರೆ. ಅದರಲ್ಲಿ ಸಂಶಯವಿಲ್ಲ. ಸೈನ್ಯಸಮೇತ ದ್ರೋಣರಾಗಲೀ ಕೃತವರ್ಮನಾಗಲೀ ಸಂಯುಗದಲ್ಲಿ ನನ್ನ ಬಳಿ ಬರಲೂ ಶಕ್ತರಾಗುವುದಿಲ್ಲ. ನನ್ನನ್ನು ಸೋಲಿಸುವುದು ಹೇಗೆ? ಧೃಷ್ಟದ್ಯುಮ್ನನು ಕ್ರುದ್ಧ ದ್ರೋಣನನ್ನು ವಿಕ್ರಮದಿಂದ ತೀರವು ಸಮುದ್ರವನ್ನು ತಡೆಯುವಂತೆ ನಿಲ್ಲಿಸುವನು. ರಣರಂಗದಲ್ಲಿ ಎಲ್ಲಿ ಪರವೀರಹ ಪಾರ್ಷತನು ನಿಲ್ಲುತ್ತಾನೋ ಅಲ್ಲಿ ಎಂದೂ ದ್ರೋಣ ಸೇನೆಯು ಬಲಾತ್ಕಾರವಾಗಿ ಅತಿಕ್ರಮಿಸಲು ಸಾಧ್ಯವಿಲ್ಲ. ಇವನು ದ್ರೋಣನ ವಿನಾಶಕ್ಕಾಗಿಯೇ ಕವಚ, ಧನುರ್ಬಾಣಗಳು, ಖಡ್ಗ ಮತ್ತು ಶ್ರೇಷ್ಠ ಭೂಷಣಗಳನ್ನು ಧರಿಸಿ ಅಗ್ನಿಯಿಂದ ಸಮುತ್ಪನ್ನನಾದವನು. ವಿಶ್ವಾಸದಿಂದ ಹೋಗು. ನಾನಿಲ್ಲದಿದ್ದರೆ ಇಲ್ಲಿ ಏನಾಗುವುದೋ ಎಂದು ಭ್ರಾಂತನಾಗದಿರು. ಕ್ರುದ್ಧನಾದ ಧೃಷ್ಟದ್ಯುಮ್ನನು ರಣದಲ್ಲಿ ದ್ರೋಣರನ್ನು ತಡೆಯುತ್ತಾನೆ.”
ಧರ್ಮರಾಜನ ಆ ಮಾತನ್ನು ಕೇಳಿ ಶಿನಿಪುಂಗವನು ಮಹೀಪತಿಯನ್ನು ಬಿಟ್ಟುಹೋದರೆ ಪಾರ್ಥನು ಏನು ಹೇಳುವನೋ ಎಂದು ಹೆದರಿ ಶಂಕಿಸಿದನು. “ಭೀತಿಯಿಂದ ನಾನು ಫಲ್ಗುನನ್ನು ರಕ್ಷಿಸಲು ಹೋಗಲಿಲ್ಲ ಎಂದು ಜನರು ನನ್ನ ಮೇಲೆ ವಿಶೇಷ ಅಪರಾಧವನ್ನು ಹೊರಿಸದಿರಲಿ” ಎಂದು ಅಂದುಕೊಂಡನು. ಬಹುವಿಧದಲ್ಲಿ ಯೋಚಿಸಿ ನಿರ್ಧರಿಸಿ ಸಾತ್ಯಕಿಯು ಧರ್ಮರಾಜನಿಗೆ ಈ ಮಾತನ್ನಾಡಿದನು: “ವಿಶಾಂಪತೇ! ನಿನ್ನ ರಕ್ಷಣೆಗೆ ವ್ಯವಸ್ಥೆ ಮಾಡಿಯಾಗಿದೆ ಎಂದು ನಿನಗನ್ನಿಸಿದರೆ, ನಿನ್ನ ಮಾತಿನಂತೆ ಮಾಡುತ್ತೇನೆ. ಬೀಭತ್ಸುವನ್ನು ಅನುಸರಿಸಿ ಹೋಗುತ್ತೇನೆ. ನಿನಗೆ ಮಂಗಳವಾಗಲಿ! ಆ ಪಾಂಡವನಿಗಿಂತ ಪ್ರಿಯರಾದವರು ಈ ಮೂರು ಲೋಕಗಳಲ್ಲಿ ಯಾರೂ ಇಲ್ಲ. ನಿಜವನ್ನೇ ನಿನಗೆ ಹೇಳುತ್ತಿದ್ದೇನೆ. ನಿನ್ನ ಸಂದೇಶದಂತೆ ನಾನು ಅವನಿದ್ದಲ್ಲಿಗೆ ಹೋಗುತ್ತೇನೆ. ನೀನು ಏನು ಹೇಳಿದರೂ ಅದನ್ನು ನಾನು ಎಂದೂ ಮಾಡದೇ ಇರುವುದಿಲ್ಲ. ಹಿರಿಯರ ವಾಕ್ಯವು ನನಗೆ ವಿಶಿಷ್ಟವಾದುದು. ಅದರಲ್ಲೂ ನಿನ್ನ ವಚನವು ನನಗೆ ಅತ್ಯಂತ ವಿಶಿಷ್ಟವಾದುದು. ಸಹೋದರರಾದ ಕೃಷ್ಣ-ಪಾಂಡವರು ನಿನ್ನ ಮಾತಿನಂತೆಯೇ ನಡೆದುಕೊಳ್ಳುವವರು. ನಿನಗೆ ಪ್ರಿಯವಾದುದರಲ್ಲಿಯೇ ತೊಡಗಿರುತ್ತಾರೆ. ಅದು ನನಗೆ ತಿಳಿದಿದೆ. ನಿನ್ನ ಆಜ್ಞೆಯನ್ನು ಶಿರಸಾ ಧರಿಸಿ ಪಾಂಡವನಿಗೋಸ್ಕರವಾಗಿ ನಾನು ಈ ದುರ್ಭೇದ್ಯ ಸೇನೆಯನ್ನು ಭೇದಿಸಿ ಹೋಗುತ್ತೇನೆ. ತಿಮಿಂಗಿಲವು ಸಮುದ್ರವನ್ನು ಹೇಗೋ ಹಾಗೆ ಈ ದ್ರೋಣಸೇನೆಯನ್ನು ಪ್ರವೇಶಿಸಿ ಎಲ್ಲಿ ಪಾಂಡವನಿಗೆ ಹೆದರಿ ರಾಜಾ ಜಯದ್ರಥನು ದ್ರೌಣಿ-ಕರ್ಣ-ಕೃಪಾದಿಗಳಿಂದ ರಕ್ಷಿತನಾಗಿ ಸೇನೆಗಳನ್ನು ಆಶ್ರಯಿಸಿ ನಿಂತಿದ್ದಾನೋ ಅಲ್ಲಿಗೆ ಹೋಗುತ್ತೇನೆ. ಜಯದ್ರಥನ ವಧೆಗೆ ಸಿದ್ಧನಾಗಿ ಪಾರ್ಥನು ನಿಂತಿರುವ ಸ್ಥಳವು ಇಲ್ಲಿಂದ ಮೂರು ಯೋಜನೆಗಳಿವೆ ಎಂದು ನನಗನ್ನಿಸುತ್ತದೆ. ಮೂರು ಯೋಜನೆಗಳು ಹೋಗಬೇಕಾದರೂ ನಾನು ಅಂತರಾತ್ಮದಲ್ಲಿ ಸುದೃಢನಾಗಿದ್ದು ಸೈಂಧವನ ವಧೆಯಾಗುವವರೆಗೆ ಅಲ್ಲಿ ಇರುತ್ತೇನೆ. ಹಿರಿಯರ ಆದೇಶವಿಲ್ಲದೇ ಯಾವ ಮನುಷ್ಯನು ಯುದ್ಧಮಾಡುತ್ತಾನೆ? ನಿನ್ನಿಂದ ಆದೇಶವನ್ನು ಪಡೆದು ನನ್ನಂತಹ ಯಾರು ತಾನೇ ಯುದ್ಧಮಾಡುವುದಿಲ್ಲ? ನಾನು ಎಲ್ಲಿಗೆ ಹೋಗುತ್ತಿರುವೆನೋ ಆ ಪ್ರದೇಶವನ್ನು ನಾನು ತಿಳಿದಿದ್ದೇನೆ. ಕೊಡಲಿ, ಶಕ್ತಿ, ಗದೆ, ಪ್ರಾಸ, ಖಡ್ಗ, ಚರ್ಮ, ಋಷ್ಟಿ, ತೋಮರ, ಮತ್ತು ಶ್ರೇಷ್ಠ ಶರಗಳಿಂದ ಈ ಸೇನಾಸಾಗರವನ್ನು ಬಾಧಿಸಿ ಕ್ಷೋಭೆಗೊಳಿಸುತ್ತೇನೆ.
“ಇಗೋ ನೀನು ನೋಡುತ್ತಿರುವ ಆ ಸಹಸ್ರ ಆನೆಗಳ ಸೇನೆಯು ವೀರ್ಯಶಾಲಿ ಅಂಜನಕ ಎಂಬ ಹೆಸರಿನ ಕುಲದವು. ನೀರು ಸುರಿಸುವ ಮೋಡಗಳಂತೆ ಮದೋದಕವನ್ನು ಸುರಿಸುವ ಆ ಆನೆಗಳ ಮೇಲೆ ಅನೇಕ ಯುದ್ಧಶೌಂಡ ಪ್ರಹಾರಿ ಮ್ಲೇಚ್ಛರಿದ್ದಾರೆ. ಮಾವುತರಿಂದ ಕಳುಹಿಸಲ್ಪಡದೇ ಇವು ಪಲಾಯನಮಾಡುವುದಿಲ್ಲ. ಇವುಗಳನ್ನು ಕೊಲ್ಲದೆಯೇ ಪರಾಜಯಗೊಳಿಸಲಾಗುವುದಿಲ್ಲ. ಅದೋ ನೀನು ನೋಡುತ್ತಿರುವ ರಥಿಗಳ ಗುಂಪಿದೆಯಲ್ಲ ಅದು ರುಕ್ಮರಥರೆಂಬ ಹೆಸರಿನ ರಾಜಪುತ್ರರು. ಅವರು ರಥಯುದ್ಧದಲ್ಲಿ, ಅಸ್ತ್ರಗಳಲ್ಲಿ ಮತ್ತು ಆನೆಗಳ ಮೇಲಿಂದ ಯುದ್ಧಮಾಡುವುದರಲ್ಲಿ ನಿಪುಣರು; ಧನುರ್ವೇದದಲ್ಲಿ ಪಾರಂಗತರು ಮತ್ತು ಮುಷ್ಟಿಯುದ್ಧದಲ್ಲಿ ಕೋವಿದರು. ಗದಾಯುದ್ಧದಲ್ಲಿ ವಿಶೇಷಜ್ಞರಾದ ಅವರು ಸಮೀಪಯುದ್ಧದಲ್ಲಿಯೂ ಕುಶಲರು. ಖಡ್ಗಪ್ರಹರಣದಲ್ಲಿ ಮತ್ತು ಖಡ್ಗ-ಗುರಾಣಿಗಳ ಪ್ರಹಾರದಲ್ಲಿ ಪರಿಣತರು. ತರಬೇತಿ ಹೊಂದಿದ ಆ ಶೂರರು ಪರಸ್ಪರರೊಡನೆ ಸ್ಪರ್ಧಿಸುತ್ತಾರೆ. ನಿತ್ಯವೂ ಸಮರದಲ್ಲಿ ಮನುಷ್ಯರನ್ನು ಗೆಲ್ಲುತ್ತಾರೆ. ಹಿಂದೆ ಕರ್ಣನಿಂದ ಸೋಲಿಸಲ್ಪಟ್ಟ ಮತ್ತು ಈಗ ದುಃಶಾಸನನನ್ನು ಅನುಸರಿಸುವ ಈ ರಥೋದಾರರನ್ನು ವಾಸುದೇವನೂ ಕೂಡ ಪ್ರಶಂಸಿಸುತ್ತಾನೆ. ಸತತವೂ ಕರ್ಣನ ವಶದಲ್ಲಿದ್ದುಕೊಂಡು ಅವನಿಗೆ ಪ್ರಿಯವಾದುದನ್ನೇ ಬಯಸುವ ಅವರು ಅವನದೇ ಮಾತಿನಂತೆ ಶ್ವೇತವಾಹನನೆಡೆಗೆ ತೆರಳಿದ್ದಾರೆ. ಆಯಾಸಗೊಳ್ಳದ ಮತ್ತು ಗಾಯಗೊಳ್ಳದ ಅವರು ದೃಢ ಕವಚ-ಕಾರ್ಮುಕಧಾರಿಗಳಾಗಿ ಧಾರ್ತರಾಷ್ಟ್ರನ ಶಾಸನದಂತೆ ನನಗಾಗಿಯೇ ಕಾದುಕೊಂಡಿರುವಂತಿದ್ದಾರೆ. ನಿನ್ನ ಪ್ರೀತಿಗಾಗಿ ಇವರನ್ನು ಸಂಗ್ರಾಮದಲ್ಲಿ ಮಥಿಸಿ ನಂತರ ಸವ್ಯಸಾಚಿಯ ಬಳಿಗೆ ಹೋಗುತ್ತೇನೆ. ಅಲ್ಲಿರುವ ಇತರ ಏಳು ನೂರು ಆನೆಗಳನ್ನು ನೋಡು! ಕವಚಧಾರಿಗಳಾದ ಕಿರಾತರು ಅವುಗಳನ್ನು ಏರಿದ್ದಾರೆ. ಅಲಂಕೃತನಾಗಿರುವ ಆ ಕಿರಾತರಾಜನು ಹಿಂದೆ ಸವ್ಯಸಾಚಿಗೆ ಸೇವಕರನ್ನಿತ್ತು ತನ್ನ ಜೀವವನ್ನು ಉಳಿಸಿಕೊಂಡಿದ್ದನು. ಹಿಂದೆ ಇವನು ನಿನ್ನ ದೃಢ ಸೇವಕನಾಗಿದ್ದನು. ಆದರೆ ಇಂದು ನಿನ್ನೊಡನೆ ಯುದ್ಧಮಾಡುತ್ತಿದ್ದಾನೆ. ಕಾಲದ ಪರ್ಯಾಯವನ್ನು ನೋಡು! ಈ ಯುದ್ಧದುರ್ಮದ ಕಿರಾತರು ದೊಡ್ಡ ದೇಹದವರು. ಆನೆಗಳನ್ನು ಪಳಗಿಸುವುದರಲ್ಲಿ ಪರಿಣಿತರು. ಎಲ್ಲರೂ ಅಗ್ನಿಯಂತಹ ಕಣ್ಣುಳ್ಳವರು. ಇವರೆಲ್ಲರೂ ಸಂಗ್ರಾಮದಲ್ಲಿ ಸವ್ಯಸಾಚಿಯಿಂದ ಸೋತು, ದುರ್ಯೋಧನನ ವಶಕ್ಕೆ ಬಂದು ನನಗಾಗಿ ಇಂದು ಸೇರಿ ಕಾಯುತ್ತಿದ್ದಾರೆ. ಈ ಯುದ್ಧದುರ್ಮದ ಕಿರಾತರನ್ನು ಶರಗಳಿಂದ ಭೇದಿಸಿ ಸೈಂಧವನ ವಧೆಯಲ್ಲಿ ತೊಡಗಿರುವ ಪಾಂಡವನ ಬಳಿ ಹೋಗುತ್ತೇನೆ. ಈ ಅಂಜನ ಕುಲದಲ್ಲಿ ಹುಟ್ಟಿದ ಬಾಯಿಯಿಂದ ಮದೋದಕವನ್ನು ಸುರಿಸುತ್ತಿರುವ ಮಹಾ ಆನೆಗಳು ಕರ್ಕಶವಾಗಿವೆ ಮತ್ತು ವಿನೀತವಾದವು ಕೂಡ. ಬಂಗಾರದ ಕವಚಗಳಿಂದ ವಿಭೂಷಿತಗೊಂಡ ಅವೆಲ್ಲವೂ ರಣದಲ್ಲಿ ಐರಾವತದಂತೆ ಗುರಿಯಿಟ್ಟು ಹೋರಾಡುತ್ತವೆ. ಅವು ಉತ್ತರ ಪರ್ವತದೇಶದಿಂದ ಬಂದಿವೆ. ಅವುಗಳನ್ನು ತೀಕ್ಷ್ಣ ಕರ್ಕಶ, ಶ್ರೇಷ್ಠಯೋಧರಾದ ದಸ್ಯುಗಳನ್ನು ಉಕ್ಕಿನ ಕವಚಗಳನ್ನು ಧರಿಸಿ ಏರಿದ್ದಾರೆ. ಅವರಲ್ಲಿ ಗೋವಿನ ಯೋನಿಯಲ್ಲಿ, ವಾನರ ಯೋನಿಯಲ್ಲಿ, ಮತ್ತು ಇನ್ನೂ ಅನೇಕ ಯೋನಿಗಳಲ್ಲಿ ಜನಿಸಿದವರೂ, ಮನುಷ್ಯ ಯೋನಿಯವರೂ ಇದ್ದಾರೆ. ಹಿಮಾಲಯದ ದುರ್ಗಗಳಲ್ಲಿ ವಾಸಿಸುವ ಆ ಪಾಪಕರ್ಮಿಗಳ, ಕೆಟ್ಟವರ ಸೇನೆಯು ದೂರದಿಂದ ಹೊಗೆಯ ಬಣ್ಣವನ್ನು ಹೊಂದಿರುವಂತೆ ಕಾಣಿಸುತ್ತದೆ. ಇವರ ಈ ಸಮಗ್ರ ಗಜಸೇನೆಯನ್ನು ಹೊಂದಿದ ದುರ್ಯೋಧನನು ಪಾಂಡವರನ್ನು ಕೀಳಾಗಿ ಕಾಣುತ್ತಾನೆ. ಕಾಲದಿಂದ ಪ್ರಚೋದಿತನಾಗಿ ತನ್ನನ್ನು ತಾನೇ ಕೃತಾರ್ಥನೆಂದು ತಿಳಿದುಕೊಂಡಿದ್ದಾನೆ. ಇವರೆಲ್ಲರೂ ನನ್ನ ನಾರಾಚಗಳ ದಾರಿಯಲ್ಲಿ ಬರುತ್ತಾರೆ. ಒಂದುವೇಳೆ ಇವರು ಮನೋವೇಗವನ್ನು ಹೊಂದಿದ್ದರೂ ನನ್ನಿಂದ ತಪ್ಪಿಸಿಕೊಳ್ಳಲಾರರು. ನಿತ್ಯವೂ ಇತರರ ವೀರ್ಯವನ್ನವಲಂಬಿಸಿ ಜೀವಿಸುವ ದುರ್ಯೋಧನನು ನನ್ನ ಶರೌಘಗಳಿಂದ ಪೀಡಿತನಾಗಿ ವಿನಾಶಹೊಂದುತ್ತಾನೆ. ಈ ಮೂವರು ಕಾಂಚನಧ್ವಜವುಳ್ಳ ರಥಿಗಳು ಕಾಣುತ್ತಾರಲ್ಲಾ ಅವರು ತಡೆಯಲಸಾದ್ಯರಾದ ಕಾಂಬೋಜರೆಂಬ ಹೆಸರುಳ್ಳವರು. ನೀನು ಇವರ ಕುರಿತು ಕೇಳಿರಬಹುದು. ಅವರು ಶೂರರು, ವಿದ್ಯಾವಂತರು, ಧನುರ್ವೇದದಲ್ಲಿ ನಿಷ್ಠೆಯನ್ನಿಟ್ಟುಕೊಂಡಿರುವವರು. ಅನ್ಯೋನ್ಯರ ಹಿತೈಷಿಗಳಾದ ಇವರು ತುಂಬಾ ಸಂಘಟಿತರಾಗಿದ್ದಾರೆ. ಕುರುವೀರರಿಂದ ರಕ್ಷಿತವಾದ ಧಾರ್ತರಾಷ್ಟ್ರನ ಅಕ್ಷೌಹಿಣಿಯೂ ಕೂಡ ಸಂರಬ್ಧವಾಗಿ ನನಗಾಗಿ ನಿಂತಿದೆ. ನನ್ನ ಮೇಲೆಯೇ ಕಣ್ಣನ್ನಿಟ್ಟು ಜಾಗರೂಕರಾಗಿ ಕಾಯುತ್ತಿದ್ದಾರೆ. ಹುತಾಶನನು ಹುಲ್ಲುಮೆದೆಯನ್ನು ಹೇಗೋ ಹಾಗೆ ನಾನು ಅವರನ್ನು ನಾಶಗೊಳಿಸುತ್ತೇನೆ.
“ರಥವನ್ನು ಸಿದ್ಧಗೊಳಿಸುವವರು ಎಲ್ಲ ಉಪಕರಣಗಳನ್ನೂ, ಆಯುಧಗಳನ್ನೂ ಇರಿಸಿ ರಥವನ್ನು ಸಿದ್ಧಪಡಿಸಲಿ. ಈ ಸಂಗ್ರಾಮದಲ್ಲಿ ವಿವಿಧ ಆಯುಧಗಳನ್ನು ಹಿಡಿದು ಹೋಗಿರಬೇಕು. ಆಚಾರ್ಯರು ಒಂದು ರಥದಲ್ಲಿ ಎಷ್ಟಿರಬೇಕೆಂದು ಉಪದೇಶಿಸುತ್ತಾರೋ ಅದಕ್ಕೂ ಐದು ಪಟ್ಟು ನನ್ನ ರಥದಲ್ಲಿರಿಸಲಿ. ಏಕೆಂದರೆ ಕ್ರುದ್ಧ ಸರ್ಪಗಳ ವಿಷದಂತಿರುವ, ನಾನಾ ಶಸ್ತ್ರಗಳಿಂದ ಕೂಡಿರುವ, ವಿವಿಧ ಆಯುಧಗಳನ್ನು ಹಿಡಿದ ಯೋಧರಿಂದ ಕೂಡಿದ ಕಾಂಬೋಜರನ್ನು ಎದುರಿಸುತ್ತೇನೆ. ದುರ್ಯೋಧನನ ಹಿತೈಷಿಗಳಾದ, ಅವನಿಂದ ಲಾಲಿಸಲ್ಪಟ್ಟ, ವಿಷಸಮಾನ ಪ್ರಹಾರಿಗಳಾದ ಕಿರಾತರನ್ನು ಎದುರಿಸುವವನಿದ್ದೇನೆ. ಪಾವಕನಂತೆ ಉರಿಯುತ್ತಿರುವ, ಅಗ್ನಿಯಂತೆ ದುರಾಧರ್ಷರಾಗಿರುವ, ಶಕ್ರನ ಸಮನಾದ ಪರಾಕ್ರಮವುಳ್ಳ ಶಕರನ್ನು ಕೂಡ ಎದುರಿಸಲಿದ್ದೇನೆ. ರಣದಲ್ಲಿ ಕಾಲನಂತೆ ದುರಾಸದರಾಗಿರುವ ಇನ್ನೂ ಅನ್ಯ ವಿವಿಧ ಯೋಧರೊಂದಿಗೆ ಮತ್ತು ಅನೇಕ ಯುದ್ಧ ದುರ್ಮದರೊಂದಿಗೆ ಹೋರಾಡುವವನಿದ್ದೇನೆ. ಆದುದರಿಂದ ನನ್ನ ರಥಕ್ಕೆ ಪ್ರಮುಖ ಶುಭಲಕ್ಷಣಗಳನ್ನು ಹೊಂದಿದ, ವಿಶ್ರಾಂತಿಹೊಂದಿರುವ, ತಿನಿಸು-ಪಾನೀಯಗಳನ್ನು ತೆಗೆದುಕೊಂಡಿರುವ ಕುದುರೆಗಳನ್ನು ಪುನಃ ಕಟ್ಟಲಿ.”
ಅನಂತರ ರಾಜನು ಅವನ ರಥದಲ್ಲಿ ಸರ್ವ ಉಪಾಸಂಗಗಳನ್ನೂ, ಸರ್ವ ಉಪಕರಣಗಳನ್ನೂ, ಮತ್ತು ವಿವಿಧ ಶಸ್ತ್ರಗಳನ್ನೂ ಇರಿಸಿದನು. ಜನರು ಎಲ್ಲಕಡೆಗಳಿಂದ ಆ ನಾಲ್ಕು ಉತ್ತಮ ಕುದುರೆಗಳನ್ನು ಬಿಚ್ಚಿ, ರಸವತ್ತಾದ ಪಾನೀಯವನ್ನು ಕುಡಿಸಿದರು. ಕುಡಿಸಿದ ನಂತರ ತಿರುಗಾಡಿಸಿ, ಬಾಣಗಳನ್ನು ಕಿತ್ತು, ಸ್ನಾನಮಾಡಿಸಿ ಆ ನಾಲ್ಕೂ ಕುದುರೆಗಳನ್ನು ಬಂಗಾರದ ಮಾಲೆಗಳಿಂದ ಅಲಂಕರಿಸಿದರು. ಆ ಬೆಳ್ಳಿಯಬಣ್ಣದಿಂದ ಹೊಳೆಯುತ್ತಿದ್ದ, ವಿನೀತವದ, ಶೀಘ್ರಗಾಮಿಗಳಾದ, ಸಂಹೃಷ್ಟ ಮನಸ್ಕರಾದ, ಅವ್ಯಗ್ರವಾದ ಆ ಕುದುರೆಗಳನ್ನು ವಿಧಿವತ್ತಾಗಿ ರಥಕ್ಕೆ ಕಟ್ಟಲಾಯಿತು. ರಥವನ್ನು ಸಿಂಹದ ಮಹಾಧ್ವಜದಿಂದ, ಹೇಮಕೇಸರ ಮಾಲೆಗಳಿಂದ, ಬಂಗಾರ-ಮುಣಿ-ವಿದ್ರುಮ-ಚಿತ್ರಗಳಿಂದ ಕೂಡಿದ ಕೇತುಗಳಿಂದ, ಬಿಳಿಯ ಮೋಡಗಳಂತೆ ಪ್ರಕಾಶಿಸುವ ಪತಾಕೆಗಳಿಂದ ಅಲಂಕರಿಸಿದರು. ಬಂಗಾರದ ದಂಡದ ಮೇಲೆ ಚತ್ರವಿದ್ದಿತು. ಬಹುಶಸ್ತ್ರಗಳಿಂದ ತುಂಬಿದ್ದ ಅದಕ್ಕೆ ವಿಧಿವತ್ತಾಗಿ ಬಂಗಾರದ ತಗಡನ್ನು ಮುಚ್ಚಲಾಯಿತು. ವಾಸವನಿಗೆ ಮಾತಲಿಯು ಹೇಗೋ ಹಾಗೆ ದಾರುಕನ ತಮ್ಮ, ಅವನ ಪ್ರಿಯ ಸಖ, ಸೂತನು ರಥವು ಸಿದ್ಧವಾಗಿದೆಯೆಂದು ನಿವೇದಿಸಿದನು.
ಅನಂತರ ಶ್ರೀಮತರಲ್ಲಿ ಶ್ರೇಷ್ಠ ಸಾತ್ಯಕಿಯು ಸ್ನಾನಮಾಡಿ ಶುಚಿರ್ಭೂತನಾಗಿ, ಕೌತುಕಮಂಗಲವನ್ನು ಮಾಡಿಕೊಂಡು, ಸಾವಿರ ಸ್ನಾತಕರಿಗೆ ಬಂಗಾರದ ಮೊಹರುಗಳನ್ನಿತ್ತು ಅವರ ಆಶೀರ್ವಾದಗಳಿಂದ ಆವೃತನಾದನು. ಆಗ ಅವನು ಮಧುಪರ್ಕವನ್ನು ಸೇವಿಸಿ, ಕೈಲಾವತ ಮಧುವನ್ನು ಕುಡಿದು ಮದವಿಹ್ವಲಲೋಚನನಾಗಿ ಲೋಹಿತಾಕ್ಷನಾದನು. ವೀರರು ಮುಟ್ಟಬೇಕಾದ ಕಂಚಿನ ಪಾತ್ರೆಯನ್ನು ಮುಟ್ಟಿ ಹರ್ಷದಿಂದ ಉಬ್ಬಿ ತೇಜಸ್ಸಿನಲ್ಲಿ ದ್ವಿಗುಣಿತನಾಗಿ ಪಾವಕನಂತೆ ಪ್ರಜ್ವಲಿಸಿದನು. ಅನಂತರ ಆ ರಥಿಗಳಲ್ಲಿ ಶ್ರೇಷ್ಠನು ಶರದೊಂದಿಗೆ ಧನುಸ್ಸನ್ನೆತ್ತಿಕೊಂಡನು. ವಿಪ್ರರಿಂದ ಸ್ವಸ್ತಿವಾಚನಗಳನ್ನು ಮಾಡಿಸಿಕೊಂಡು ಕವಚದಿಂದ ಸಮಲಂಕೃತಗೊಂಡು ಕನ್ಯೆಯರಿಂದ ಲಾಜ-ಗಂಧ-ಮಾಲೆಗಳಿಂದ ಅಭಿನಂದಿತನಾದನು. ಯುಧಿಷ್ಠಿರನ ಚರಣಗಳಿಗೆ ಕೈಮುಗಿದು ಅಭಿವಂದಿಸಿ, ಅವನು ನೆತ್ತಿಯನ್ನು ಆಘ್ರಾಣಿಸಲು, ಮಹಾರಥವನ್ನು ಏರಿದನು.
ಆಗ ಅವನ ಹೃಷ್ಟ ಸುಪುಷ್ಟ ಗಾಳಿಯ ವೇಗವುಳ್ಳ ಅಜೇಯ ಸಿಂಧುದೇಶದ ಕುದುರೆಗಳು ಕೆನೆದವು. ಆಗ ಹರ್ಷಪರೀತಾಂಗನಾದ ಸಾತ್ಯಕಿಯು ಭೀಮನಿಗೆ ಹೇಳಿದನು: “ಭೀಮ! ನೀನು ರಾಜನನ್ನು ರಕ್ಷಿಸು. ಈಗ ಇದೇ ನಿನ್ನ ಅತಿಮುಖ್ಯ ಕಾರ್ಯವಾಗಿದೆ. ಸಮಯವು ಮುಗಿದಿರುವ ಈ ಸೇನೆಯನ್ನು ಭೇದಿಸಿ ಪ್ರವೇಶಿಸುತ್ತೇನೆ. ಈಗ ಮತ್ತು ಅನಂತರ ರಾಜನನ್ನು ರಕ್ಷಿಸುವುದು ಶ್ರೇಯಸ್ಕರವಾದುದು. ನನ್ನ ವೀರ್ಯವು ನಿನಗೆ ತಿಳಿದಿದೆ. ನಿನ್ನದು ನನಗೆ ತಿಳಿದಿದೆ. ಆದುದರಿಂದ ಭೀಮ! ನನಗೆ ಪ್ರಿಯವಾದುದನ್ನು ಬಯಸುವೆಯಾದರೆ ಹಿಂದಿರುಗು!”
ಆಗ ಅವನು ಸಾತ್ಯಕಿಗೆ ಹೇಳಿದನು: “ನಿನ್ನ ಕಾರ್ಯಸಿದ್ಧಿಗೆ ಹೊರಡು! ನಾನು ರಾಜನ ರಕ್ಷಣೆಯನ್ನು ಮಾಡುತ್ತೇನೆ.” ಹೀಗೆ ಹೇಳಲು ಮಾಧವನು ಭೀಮಸೇನನಿಗೆ ಉತ್ತರಿಸಿದನು: “ಪಾರ್ಥ! ಇಂದು ನನ್ನ ವಿಜಯವು ನಿಶ್ಚಿತವಾಗಿದೆ. ನನ್ನಲ್ಲೇ ಅನುರಕ್ತನಾದ ನೀನು ಇಂದು ನನ್ನ ವಶದಲ್ಲಿ ಬಂದಿದ್ದೀಯೆ. ಭೀಮ! ನಿಮಿತ್ತಗಳು ಕೂಡ ಧನ್ಯನಾಗುವೆನೆಂದೇ ನನಗೆ ಹೇಳುತ್ತಿವೆ. ಪಾಪಿ ಸೈಂಧವನು ಮಹಾತ್ಮ ಪಾಂಡವನಿಂದ ಹತನಾದನಂತರ ಧರ್ಮಾತ್ಮ ರಾಜನನ್ನು ಅಪ್ಪಿಕೊಳ್ಳುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.”
ಹೀಗೆ ಹೇಳಿ ಭೀಮನನ್ನು ಬೀಳ್ಕೊಂಡು ಆ ಮಹಾಮನನು ಹುಲಿಯೊಂದು ಜಿಂಕೆಗಳ ಹಿಂಡನ್ನು ಎವೆಯಿಕ್ಕದೇ ಕೌರವ ಸೇನೆಯನ್ನು ನೋಡಿದನು. ಅವನು ಹಾಗೆ ಕೌರವ ಸೇನೆಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರಲು ಅದು ಮೂಢವಾಗಿ ಪುನಃ ಏನು ಮಾಡಬೇಕೆಂದು ತೋಚದೇ ಕಂಪಿಸಿತು. ಧರ್ಮರಾಜನ ಶಾಸನದಂತೆ ಅರ್ಜುನನನ್ನು ಕಾಣಲು ಒಮ್ಮೆಲೇ ಸಾತ್ಯಕಿಯು ಕೌರವ ಸೇನೆಯ ಮೇಲೆರಗಿದನು.