ಹದಿನೇಳನೇ ದಿನದ ಯುದ್ಧ - ೨: ಶಲ್ಯನು ಕರ್ಣನ ತೇಜೋವಧೆಗೈದುದು
ಆಗ ಗಂಧರ್ವನಗರದಂತೆ ವಿಶಾಲವಾಗಿದ್ದ ಆ ಶ್ರೇಷ್ಠ ರಥವನ್ನು ತನ್ನ ಸ್ವಾಮಿಗಾಗಿ ವಿಧಿವತ್ತಾಗಿ ಸಜ್ಜುಗೊಳಿಸಿ ಸಾರಥಿಯು “ಜಯವಾಗಲಿ!” ಎಂದು ನಿವೇದಿಸಿದನು. ಅದಕ್ಕೆ ಮೊದಲೇ ಬ್ರಹ್ಮವಿದರಿಂದ ಪರಿಶುದ್ಧಗೊಳಿಸಿ ಸಮೃದ್ಧವಾಗಿದ್ದ ಆ ರಥವನ್ನು ಕರ್ಣನು ಯಥಾವಿಧಿಯಾಗಿ ಅರ್ಚಿಸಿದನು. ಪ್ರಯತ್ನಿಸಿ ಭಾಸ್ಕರನನ್ನು ಉಪಾಸಿಸಿ ಪ್ರದಕ್ಷಿಣೆಯನ್ನು ಮಾಡಿ ಸಮೀಪದಲ್ಲಿದ್ದ ಮದ್ರರಾಜನಿಗೆ ಮೊದಲು ರಥವನ್ನೇರುವಂತೆ ಹೇಳಿದನು. ಆಗ ಮಹಾತೇಜಸ್ವಿ ಶಲ್ಯನು ಸಿಂಹವು ಪರ್ವತವನ್ನೇರುವಂತೆ ಕರ್ಣನ ಆ ಅತಿದೊಡ್ಡ ದುರ್ಧರ್ಷ ರಥಪ್ರವರವನ್ನು ಏರಿದನು. ಶಲ್ಯನು ಕುಳಿತಿದ್ದ ತನ್ನ ಉತ್ತಮ ರಥವನ್ನು ಕರ್ಣನು ಮಿಂಚಿನಿಂದ ಕೂಡಿದ ಮೋಡಗಳ ಮೇಲೆ ದಿವಾಕರನು ಏರುವಂತೆ ಏರಿ ಕುಳಿತುಕೊಂಡನು. ಆದಿತ್ಯ-ಅಗ್ನಿಯರಂತೆ ಬೆಳಗುತ್ತಿದ್ದ ಅವರಿಬ್ಬರೂ ಒಂದೇ ರಥವನ್ನು ಏರಿರಲು ಆಕಾಶದಲ್ಲಿ ಮೇಘವನ್ನೇರಿರುವ ಸೂರ್ಯ-ಅಗ್ನಿಯರಂತೆ ಹೊಳೆಯುತ್ತಿದ್ದರು. ಅಧ್ವರದಲ್ಲಿ ಋತ್ವಿಕರು ಸದಸ್ಯರಿಂದ ಇಂದ್ರ-ಅಗ್ನಿಯರನ್ನು ಸ್ತೋತ್ರಿಸುವಂತೆ ದ್ಯುತಿಮತ್ತರಾದ ಆ ಇಬ್ಬರು ವೀರರನ್ನು ಸಂಸ್ತುತಿಸುತ್ತಿದ್ದರು. ಶಲ್ಯನಿಂದ ನಿಯಂತ್ರಿಸಲ್ಪಟ್ಟ ಆ ರಥದಲ್ಲಿ ಕುಳಿತಿದ್ದ ಕರ್ಣನು ಘೋರ ಧನುಸ್ಸನ್ನು ಟೇಂಕರಿಸಿ ಪರಿವೇಷಿತನಾದ ಭಾಸ್ಕರನಂತೆ ಕಾಣುತ್ತಿದ್ದನು. ಆ ಶ್ರೇಷ್ಠ ರಥದಲ್ಲಿ ಕುಳಿತಿದ್ದ ಶರಗಳೇ ಕಿರಣಗಳಾಗಿದ್ದ ಪುರುಷವ್ಯಾಘ್ರ ಕರ್ಣನು ಮಂದರ ಪರ್ವತವನ್ನೇರಿದ ಸೂರ್ಯನಂತೆ ಪ್ರಕಾಶಿಸುತ್ತಿದ್ದನು. ಆ ರಥದಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಆ ಮಹಾವೀರ ಅಮಿತತೇಜಸ್ವಿ ರಾಧೇಯನಿಗೆ ದುರ್ಯೋಧನನು ಈ ಮಾತುಗಳನ್ನಾಡಿದನು:
“ವೀರ! ಆಧಿರಥೇ! ದ್ರೋಣ-ಬೀಷ್ಮ ಇಬ್ಬರೂ ಮಾಡಿರದಂತಹ ದುಷ್ಕರ ಕರ್ಮವನ್ನು ನೀನು ಯುದ್ಧದಲ್ಲಿ ಸರ್ವಧನ್ವಿಗಳೂ ನೋಡುತ್ತಿರುವಂತೆ ಮಾಡು! ಮಹಾರಥರಾದ ಭೀಷ್ಮ-ದ್ರೋಣರು ಅರ್ಜುನ-ಭೀಮಸೇನರನ್ನು ನಿಶ್ಚಯವಾಗಿಯೂ ಸಂಹರಿಸುತ್ತಾರೆಂದು ನನ್ನ ಮನೋಗತವಾಗಿತ್ತು. ಅವರಿಬ್ಬರೂ ಮಾಡಿರದ ವೀರಕರ್ಮವನ್ನು ಮಹಾಯುದ್ಧದಲ್ಲಿ ವಜ್ರಪಾಣಿಯು ಶತ್ರುಗಳೊಂದಿಗೆ ಹೇಗೋ ಹಾಗೆ ಮಾಡು! ಸೆರೆಹಿಡಿ ಅಥವಾ ಧನಂಜಯನನನ್ನಾಗಲೀ, ಭೀಮಸೇನನನ್ನಾಗಲೀ, ಮಾದ್ರೀಪುತ್ರರಾದ ಯಮಳರನ್ನಾಗಲೀ ಸಂಹರಿಸು! ನಿನಗೆ ಜಯವಾಗಲಿ! ಮಂಗಳವಾಗಲಿ! ಹೋಗು! ಪಾಂಡುಪುತ್ರರ ಸೇನೆಗಳೆಲ್ಲವನ್ನೂ ಭಸ್ಮಮಾಡು!”
ಆಗ ಆಕಾಶದಲ್ಲಿ ಮೋಡಗಳು ಗುಡುಗುವಂತೆ ಸಹಸ್ರಾರು ಲಕ್ಷಗಟ್ಟಲೆ ಭೇರಿ-ವಾದ್ಯಗಳು ಮೊಳಗಿದವು. ದುರ್ಯೋಧನನ ಆ ಮಾತನ್ನು ಸ್ವೀಕರಿಸಿ ರಥಸ್ಥನಾಗಿದ್ದ ರಾಧೇಯನು ಶಲ್ಯನಿಗೆ ಹೇಳಿದನು: “ಮಹಾಬಾಹೋ! ಎಲ್ಲಿ ಧನ್ವಿ ಧನಂಜಯ, ಭೀಮಸೇನ, ಯಮಳರಿಬ್ಬರು ಮತ್ತು ರಾಜಾ ಯುಧಿಷ್ಠಿರನಿರುವರೋ ಅಲ್ಲಿಗೆ ಅಶ್ವಗಳನ್ನು ಓಡಿಸು! ಲಕ್ಷಗಟ್ಟಲೆ ಕಂಕಪತ್ರ ಬಾಣಗಳನ್ನು ಬಿಡುವ ನನ್ನ ಬಾಹುವೀರ್ಯವನ್ನು ಇಂದು ಧನಂಜಯನು ನೋಡಲಿ! ಇಂದು ನಾನು ದುರ್ಯೋಧನನ ಜಯಕ್ಕಾಗಿ ಮತ್ತು ಪಾಂಡವರ ವಿನಾಶಕ್ಕಾಗಿ ಪರಮತೇಜಸ್ಸಿನ ಶರಗಳನ್ನು ಪ್ರಯೋಗಿಸುತ್ತೇನೆ!”
ಶಲ್ಯನು ಹೇಳಿದನು: “ಸೂತಪುತ್ರ! ಸರ್ವಾಸ್ತ್ರಗಳನ್ನು ತಿಳಿದಿರುವ, ಮಹೇಷ್ವಾಸರೂ, ಮಹಾರಥರೂ, ಯುದ್ಧದಿಂದ ಪಲಾಯನಮಾಡದವರೂ, ಅಜೇಯರೂ ಮತ್ತು ಸತ್ಯವಿಕ್ರಮಿಗಳೂ ಆದ ಆ ಎಲ್ಲ ಪಾಂಡವರನ್ನು ನೀನು ಹೇಗೆತಾನೇ ಕೀಳಾಗಿ ತಿಳಿಯುವೆ? ಅವರು ಸಾಕ್ಷಾತ್ ಶತಕ್ರತುವಿಗೂ ಭಯವನ್ನುಂಟುಮಾಡಬಲ್ಲರು. ಸಿಡಿಲಿನಂತೆ ಮೊಳಗುವ ಗಾಂಡೀವದ ಘೋಷವನ್ನು ಕೇಳಿದನಂತರ ನೀನು ಈ ರೀತಿ ಮಾತನಾಡುವುದಿಲ್ಲ!”
ಮದ್ರರಾಜನಾಡಿದ ಆ ಮಾತನ್ನು ಅನಾದರಿಸಿ ಕರ್ಣನು ಶಲ್ಯನಿಗೆ “ರಥವನ್ನು ಮುಂದುವರಿಸು!” ಎಂದು ಮಾತ್ರ ಹೇಳಿದನು. ಯುದ್ಧಮಾಡಲು ಉತ್ಸುಕನಾಗಿ ಸಜ್ಜಾಗಿದ್ದ ಮಹೇಷ್ವಾಸ ಕರ್ಣನನ್ನು ನೋಡಿ ಕುರುಗಳೆಲ್ಲರೂ ಹೃಷ್ಟರೂಪರಾಗಿ ಜಯಕಾರ ಮಾಡಿದರು. ಆಗ ದುಂದುಭಿಘೋಷಗಳೊಂದಿಗೆ, ಭೇರಿಗಳ ನಿನಾದದೊಂದಿಗೆ, ಬಾಣಗಳ ಶಬ್ಧಗಳೊಂದಿಗೆ, ಮತ್ತು ತರಸ್ವಿಗಳ ವಿವಿಧ ಗರ್ಜನೆಗಳೊಂದಿಗೆ ಕೌರವರು ಯುದ್ಧಕ್ಕೆ ಹೊರಟರು. ಹಾಗೆ ಮುದಿತರಾದ ಯೋಧರು ಮತ್ತು ಕರ್ಣನು ಹೊರಡಲು ಪೃಥ್ವಿಯು ನಡುಗಿ ವಿಸ್ವರದಲ್ಲಿ ಕೂಗಿತು. ಸೂರ್ಯನಿಂದ ಸಪ್ತಮಹಾಗ್ರಹಗಳು ಹೊರಬರುತ್ತಿರುವುದು ಕಂಡುಬಂದಿತು. ಉಲ್ಕಾಪಾತಗಳಾದವು. ಎಲ್ಲ ದಿಕ್ಕುಗಳಲ್ಲಿಯೂ ಬೆಂಕಿಯು ಬೀಳುತ್ತಿತ್ತು. ಮೋಡಗಳಿಲ್ಲದ ಆಕಾಶದಲ್ಲಿ ಸಿಡಿಲಿನ ಶಬ್ಧವು ಕೇಳಿಬಂದಿತು. ದಾರುಣ ಚಂಡಮಾರುತವು ಬೀಸತೊಡಗಿತು. ಮಹಾಭಯವನ್ನು ಸೂಚಿಸುವಂತೆ ಅನೇಕ ಸಂಖ್ಯೆಗಳಲ್ಲಿ ಮೃಗಪಕ್ಷಿಗಣಗಳು ಕೌರವ ಸೇನೆಯನ್ನು ಅಪ್ರದಕ್ಷಿಣೆಮಾಡಿ ಹೋಗುತ್ತಿದ್ದವು. ಕರ್ಣನು ಹೊರಟಾಗ ಅವನ ಕುದುರೆಗಳು ಮುಕ್ಕರಿಸಿ ನೆಲದಮೇಲೆ ಬಿದ್ದವು. ಅಂತರಿಕ್ಷದಿಂದ ಭಯಾನಕವಾದ ಅಸ್ಥಿವರ್ಷವುಂಟಾಯಿತು. ಶಸ್ತ್ರಗಳು ಉರಿಯುತ್ತಿದ್ದವು. ಧ್ವಜಗಳು ಕಂಪಿಸಿದವು. ವಾಹನಗಳು ಕಣ್ಣೀರು ಸುರಿಸುತ್ತಿದ್ದವು. ಕೌರವರ ವಿನಾಶವನ್ನು ಸೂಚಿಸುವ ಇನ್ನೂ ಇತರ ಅನೇಕ ಉತ್ಪಾತಗಳು ಅಲ್ಲಿ ಕಾಣಿಸಿಕೊಂಡವು. ಆದರೆ ದೈವಮೋಹಿತರಾಗಿದ್ದ ಅವರೆಲ್ಲರೂ ಅದನ್ನು ಗಣನೆಗೆ ತಂದುಕೊಳ್ಳಲಿಲ್ಲ. ಭುವಿಯಲ್ಲಿದ್ದ ನರರು ಹೊರಟಿದ್ದ ಸೂತಪುತ್ರನಿಗೆ “ಜಯವಾಗಲಿ!” ಎಂದು ಘೋಷಿಸಿದರು. ಕೌರವರು ಪಾಂಡವರನ್ನು ಗೆದ್ದರೆಂದೇ ಭಾವಿಸಿದರು.
ಆಗ ರಥಸ್ಥನಾಗಿ ಅಗ್ನಿಯ ತೇಜಸ್ಸಿಗೆ ಸಮಾನ ತೇಜಸ್ಸಿನಿಂದ ಬೆಳಗುತ್ತಿದ್ದ ಪರವೀರಹಂತಕ, ರಥಕುಂಜರ, ವೃಷ ವೈಕರ್ತನನು ಭೀಷ್ಮ-ದ್ರೋಣರ ವೀರ್ಯವು ಅಸ್ತವಾದುದನ್ನು ನಿರೀಕ್ಷಿಸಿದನು. ಪಾರ್ಥನ ಆ ಅಪ್ರತಿಮ ಕರ್ಮಗಳನ್ನು ನೋಡಿ ಅಭಿಮಾನ-ದರ್ಪಗಳಿಂದ ಪ್ರಜ್ವಲಿಸುತ್ತಿದ್ದ ಕರ್ಣನು ಕ್ರೋಧದಿಂದ ಉರಿಯುತ್ತಿರುವನೋ ಎನ್ನುವಂತೆ ಸುದೀರ್ಘವಾಗಿ ನಿಟ್ಟುಸಿರು ಬಿಡುತ್ತಾ ಶಲ್ಯನನ್ನು ಉದ್ದೇಶಿಸಿ ಹೇಳಿದನು: “ಧನುಸ್ಸನ್ನು ಹಿಡಿದು ರಥಸ್ಥನಾಗಿರುವ ನಾನು ಕ್ರುದ್ಧನಾದ ಮಹೇಂದ್ರನಿಗೂ ಹೆದರುವುದಿಲ್ಲ. ಭೀಷ್ಮಪ್ರಮುಖರು ರಣದಲ್ಲಿ ಮಲಗಿರುವುದನ್ನು ನೋಡಿಯೂ ನನ್ನ ಮನಸ್ಸು ಸ್ಥಿರವಾಗಿಯೇ ಇದೆ. ಅನಿಂದಿತರಾದ ಭೀಷ್ಮ-ದ್ರೋಣರು ಮಹೇಂದ್ರ-ವಿಷ್ಣುವಿನಂತಿದ್ದರು. ರಥಾಶ್ವಗಜ ಸಮೂಹಗಳನ್ನು ಪ್ರಮಥಿಸುತ್ತಿದ್ದರು. ಅವಧ್ಯರಂತಿದ್ದ ಅವರು ಶತ್ರುಗಳಿಂದ ಹತರಾಗಿರುವರಾದರೂ ಇಂದು ರಣದಲ್ಲಿ ನನಗೆ ಭಯವುಂಟಾಗಿಲ್ಲ. ಮಹಾಸ್ತ್ರವಿದು ಬ್ರಾಹ್ಮಣಪುಂಗವ ಗುರು ದ್ರೋಣನು ಅತಿಬಲಾನ್ವಿತ ನರಾಧಿಪರು ಮತ್ತು ನರಾಶ್ವಮಾತಂಗರಥಗಳು ಶರಗಳಿಂದ ಹತರಾಗುತ್ತಿರುವುದನ್ನು ನೋಡಿಯೂ ಏಕೆ ಸರ್ವ ಶತ್ರುಗಳನ್ನೂ ವಧಿಸಲಿಲ್ಲ? ಮಹಾಹವದಲ್ಲಿ ಆ ದ್ರೋಣನನ್ನು ಸ್ಮರಿಸಿಕೊಂಡು ಸತ್ಯವನ್ನು ಹೇಳುತ್ತಿದ್ದೇನೆ. ಕುರುಗಳೇ! ಕೇಳಿರಿ! ರಣದಲ್ಲಿ ಮೃತ್ಯುವಿನಂತೆ ಉಗ್ರರೂಪದಲ್ಲಿ ಮುಂದುವರೆಯುತ್ತಿರುವ ಅರ್ಜುನನನ್ನು ನಾನಲ್ಲದೇ ಬೇರೆ ಯಾರೂ ಎದುರಿಸಲಾರರು! ದ್ರೋಣನಲ್ಲಿ ಶಿಕ್ಷಣ, ಪ್ರಸಾದ, ಬಲ, ಧೃತಿ, ಸನ್ನತಿ ಮತ್ತು ಮಹಾಸ್ತ್ರಗಳಿದ್ದವು. ಆದರೂ ಆ ಮಹಾತ್ಮನು ಮೃತ್ಯುವಶನಾದನೆಂದರೆ ಅನ್ಯ ಸರ್ವರೆಲ್ಲರೂ ಇಂದು ಅಸನ್ನಮರಣರಾಗಿರುವರೆಂದೇ ನಾನು ಭಾವಿಸುತ್ತೇನೆ. ನಾವೆಷ್ಟೇ ಚಿಂತಿಸಿದರೂ ಲೋಕದಲ್ಲಿ ಕರ್ಮಗಳು ಅನಿತ್ಯ ಎನ್ನುವುದು ಸತ್ಯ. ಭೀಷ್ಮ-ದ್ರೋಣರೇ ಹತರಾದಮೇಲೆ ನಾಳೆ ಸೂರ್ಯೋದಯವಾಗುವವರೆಗೆ ನಾನು ಜೀವಿಸಿಯೇ ಇರುವೆನೆಂದು ಯಾರು ತಾನೇ ನಿಸ್ಸಂದೇಹವಾಗಿ ಭಾವಿಸಬಲ್ಲನು? ಅಸ್ತ್ರಗಳು, ಬಲ, ಪರಾಕ್ರಮ, ಕ್ರಿಯೆ, ಉತ್ತಮ ನೀತಿ, ಅಥವಾ ಪರಮಾಯುಧಗಳೂ ಮನುಷ್ಯನ ಸುಖಕ್ಕೆ ಸಾಧನಗಳಾಗಲಾರವು. ಈ ಎಲ್ಲ ಗುಣಗಳಿದ್ದ ಗುರು ದ್ರೋಣನೇ ಶತ್ರುಗಳಿಂದ ಯುದ್ಧದಲ್ಲಿ ಹತನಾದನಲ್ಲವೇ? ಹುತಾಶನ ಮತ್ತು ಆದಿತ್ಯರ ಸಮಾನ ತೇಜಸ್ಸಿದ್ದ, ಪರಾಕ್ರಮದಲ್ಲಿ ವಿಷ್ಣು-ಪುರಂದರರಂತಿದ್ದ, ನೀತಿಯಲ್ಲಿ ಸದಾ ಬೃಹಸ್ಪತಿ ಮತ್ತು ಶುಕ್ರರಿಗೆ ಸಮನಾಗಿದ್ದ ದ್ರೋಣನನ್ನು ಅವನಲ್ಲಿದ್ದ ದುಃಸ್ಸಹ ಅಸ್ತ್ರಗಳೂ ರಕ್ಷಿಸಲಿಲ್ಲ! ಸ್ತ್ರೀ-ಕುಮಾರರು ಆರ್ತರಾಗಿ ರೋಧಿಸುತ್ತಿರುವಾಗ ಮತ್ತು ಧಾರ್ತರಾಷ್ಟ್ರನ ಪೌರುಷವು ಪರಾಜಯಗೊಳ್ಳುವಾಗ ಅವರನ್ನು ರಕ್ಷಿಸುವುದು ನನ್ನ ಕರ್ತವ್ಯವೆಂದು ನಾನು ತಿಳಿದುಕೊಂಡಿದ್ದೇನೆ. ಆದುದರಿಂದ ಶಲ್ಯ! ಶತ್ರುಗಳ ಸೇನೆಯಿದ್ದಲ್ಲಿಗೆ ನನ್ನನ್ನು ಕೊಂಡೊಯ್ಯಿ! ಎಲ್ಲಿ ಸತ್ಯಸಂಧ ರಾಜಾ ಪಾಂಡವ, ಭೀಮಸೇನ-ಅರ್ಜುನರು, ವಾಸುದೇವ, ಸೃಂಜಯರು ಮತ್ತು ಸಾತ್ಯಕಿ, ಹಾಗೂ ಯಮಳರಿರುವರೋ ಅಲ್ಲಿಗೆ ನಾನಲ್ಲದೇ ಬೇರೆ ಯಾರು ತಾನೇ ಹೋಗಿ ಅವರನ್ನು ಎದುರಿಸಬಲ್ಲರು? ಆದುದರಿಂದ ಬೇಗನೇ ಕೊಂಡೊಯ್ಯಿ! ರಣದಲ್ಲಿ ನಾನು ಪಾಂಚಾಲ-ಪಾಂಡವ-ಸೃಂಜಯರನ್ನು ಒಟ್ಟಿಗೇ ಸಂಹರಿಸುತ್ತೇನೆ ಅಥವಾ ದ್ರೋಣನು ಹೋದಲ್ಲಿಗೆ ಹೊರಟುಹೋಗುತ್ತೇನೆ. ಆ ಶೂರರ ಮಧ್ಯ ಹೋಗಿ ನಾನು ಯುದ್ಧಮಾಡುವುದಿಲ್ಲವೆಂದು ತಿಳಿಯಬೇಡ! ಮಿತ್ರದ್ರೋಹವನ್ನು ನಾನು ಸಹಿಸಿಕೊಳ್ಳಲಾರೆ. ಪ್ರಾಣವನ್ನಾದರೂ ತೊರೆದು ದ್ರೋಣನನ್ನು ಹಿಂಬಾಲಿಸುತ್ತೇನೆ! ಪ್ರಾಜ್ಞನೇ ಆಗಿರಲಿ ಮೂಢನೇ ಆಗಿರಲಿ ಜೀವನದ ಅಂತ್ಯದಲ್ಲಿ ಪ್ರಾಣಹೋದಾಗ ಅಂತಕ ಯಮನ ಸತ್ಕಾರವನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ! ಇದನ್ನು ತಿಳಿದ ನಾನು ಪಾರ್ಥನನ್ನು ಎದುರಿಸುತ್ತೇನೆ. ಅದೃಷ್ಟವನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ! ದುರ್ಯೋಧನನು ಸತತವೂ ನನಗೆ ಕಲ್ಯಾಣವುಂಟುಮಾಡುವುದರಲ್ಲಿಯೇ ನಿರತನಾಗಿದ್ದಾನೆ. ಅವನ ಉದ್ದೇಶಸಾಧನೆಗಾಗಿ ನಾನು ಪ್ರಿಯವಾದ ಭೋಗಗಳನ್ನೂ, ತ್ಯಜಿಸಲು ಕಷ್ಟಕರವಾದ ಜೀವವನ್ನೂ, ತ್ಯಾಗಮಾಡುತ್ತೇನೆ, ಪರಶುರಾಮನು ನನಗೆ ಈ ವೈಯಾಘ್ರಚರ್ಮದಿಂದ ಅಚ್ಛಾದಿತವಾಗಿರುವ, ಉತ್ತಮಾಶ್ವಗಳಿಂದ ಯುಕ್ತವಾಗಿರುವ, ಸುವರ್ಣಮಯವಾದ ಮೂರು ಕೋಶಗಳುಳ್ಳ, ಬೆಳ್ಳಿಯ ಮೂರು ವೇಣುಗಳಿರುವ, ಈ ಶ್ರೇಷ್ಠ ರಥವನ್ನು ನನಗೆ ದಯಪಾಲಿಸಿದ್ದಾನೆ. ಶಲ್ಯ! ವಿಚಿತ್ರ ಧನುಸ್ಸುಗಳನ್ನೂ, ಧ್ವಜ, ಗದೆ, ಉಗ್ರರೂಪದ ಸಾಯಕಗಳನ್ನೂ, ಖಡ್ಗ, ಉರಿಯುತ್ತಿರುವ ಪರಮಾಯುಧವನ್ನೂ, ಉಗ್ರ ಧ್ವನಿಯನ್ನು ನೀಡುವ ಶುಭ್ರ ಶಂಖವನ್ನೂ ನೋಡು! ಸಿಡಿಲಿನಂತೆ ಶಬ್ಧಗಳನ್ನುಂಟುಮಾಡಬಲ್ಲ ಪತಾಕೆಗಳಿಂದ, ಬಿಳಿಯ ಕುದುರೆಗಳಿಂದ, ಶುಭ ಬತ್ತಳಿಕೆಗಳಿಂದ ಶೋಭಿತವಾದ ಈ ರಥಶ್ರೇಷ್ಠ ರಥವನ್ನು ಏರಿ ನಾನು ಬಲವನ್ನುಪಯೋಗಿಸಿ ರಣದಲ್ಲಿ ಅರ್ಜುನನನ್ನು ಸಂಹರಿಸುತ್ತೇನೆ! ಒಂದುವೇಳೆ ಸಮರದಲ್ಲಿ ಸರ್ವಹರ ಮೃತ್ಯುವೇ ಅಪ್ರಮತ್ತನಾಗಿ ಪಾಂಡುಪುತ್ರನನ್ನು ರಕ್ಷಿಸಿದರೂ ನಾನು ಅವನೊಂದಿಗೆ ಯುದ್ಧಮಾಡಿ ಅವನನ್ನೇ ಸಂಹರಿಸುತ್ತೇನೆ ಅಥವಾ ಭೀಷ್ಮನಂತೆ ಯಮನ ಮುಖದಲ್ಲಿ ಹೋಗುತ್ತೇನೆ! ಮಾತನಾಡಲು ಇನ್ನು ಹೆಚ್ಚೇನಿದೆ? ಇಂದು ತಮ್ಮ ತಮ್ಮ ಗಣಗಳೊಡನೆ ಯಮ, ವರುಣ, ಕುಬೇರ ಅಥವಾ ವಾಸವನೇ ಬಂದರೂ ಮಹಾಹವದಲ್ಲಿ ನಾನು ಪಾಂಡವನನ್ನು ಸಂಹರಿಸುತ್ತೇನೆ!”
ಹೀಗೆ ರಣರಭಸನು ಮಾತಿನಲ್ಲಿಯೇ ಕೊಚ್ಚಿಕೊಳ್ಳುವುದನ್ನು ಕೇಳಿದ ಮದ್ರರಾಜನು ಅವೆಲ್ಲವೂ ಪೊಳ್ಳುಮಾತುಗಳೆಂದು ಸೂಚಿಸುವಂತೆ ಜೋರಾಗಿ ನಕ್ಕು ಅವಮಾನಿಸಿ ಮುಂದೆ ಮಾತನಾಡದಂತೆ ತಡೆದನು. ಅವನ ಮಾತುಗಳಿಗೆ ಯಥೋಚಿತವಾದ ಉತ್ತರವನ್ನೂ ಹೇಳತೊಡಗಿದನು.
“ನಿಲ್ಲಿಸು! ಕರ್ಣ! ಈ ರೀತಿ ಕೊಚ್ಚಿಕೊಳ್ಳುವುದನ್ನು ನಿಲ್ಲಿಸು! ನೀನು ಮಾತನಾಡುವುದರಲ್ಲಿ ಅತಿರಭಸನಾಗಿರುವೆ. ನರವರನಾದ ಧನಂಜಯನೆಲ್ಲಿ? ತಿಳಿಯದೇ ಮಾತನಾಡುವ ನೀನೆಲ್ಲಿ? ಅಮರರಾಜನಿಂದ ರಕ್ಷಿತವಾದ ತ್ರಿದಿವದಂತೆ ಉಪೇಂದ್ರ ಕೃಷ್ಣನಿಂದ ಪಾಲಿತವಾದ ಯದುಸದನವನ್ನು ಬಲಪೂರ್ವಕವಾಗಿ ಅಲ್ಲೋಲಕಲ್ಲೋಲಗೊಳಿಸಿ ಪುರುಷಶ್ರೇಷ್ಠ ಕೃಷ್ಣನ ತಂಗಿಯನ್ನು ಅರ್ಜುನನಲ್ಲದೇ ಬೇರೆ ಯಾರು ತಾನೇ ಅಪಹರಿಸುತ್ತಿದ್ದರು? ಸುರಪತಿವೀರ್ಯಸಮನಾದ ಪ್ರಭಾವಂತನಾದ ಅರ್ಜುನನಲ್ಲದೇ ಬೇರೆ ಯಾರು ತಾನೇ ಮೃಗವಧೆಯ ಕಲಹದಲ್ಲಿ ತ್ರಿಭುವನಸೃಷ್ಟ ಈಶ್ವರೇಶ್ವರ ಭವನನ್ನೇ ಯುದ್ಧಕ್ಕೆ ಆಹ್ವಾನಿಸುತ್ತಿದ್ದನು? ಅಗ್ನಿಯ ಮೇಲಿನ ಗೌರವದಿಂದಾಗಿ ಅರ್ಜುನನು ಅಸುರ-ಸುರ-ಮಹೋರಗ-ನರರು, ಗರುಡ-ಪಿಶಾಚ-ಯಕ್ಷ-ರಾಕ್ಷಸರನ್ನೂ ಬಾಣಗಳಿಂದ ಸೋಲಿಸಿ ಅವನಿಗಿಷ್ಟವಾದ ಹವಿಸ್ಸನ್ನಿತ್ತನು. ಧೃತರಾಷ್ಟ್ರಸುತನು ಶತ್ರುಗಳಿಂದ ಅಪಹರಿಸಲ್ಪಟ್ಟಾಗ ಅರ್ಜುನನು ಅವನನ್ನು ಬಿಡುಗಡೆಗೊಳಿಸಿದುದು ನಿನ್ನ ಸ್ಮರಣೆಯಲ್ಲಿಲ್ಲವೇ? ಆಗ ಆ ನರೋತ್ತಮನು ಸೂರ್ಯನ ಕಿರಣಗಳಿಗೆ ಸಮಾನ ಅನೇಕ ಬಾಣಗಳಿಂದ ಶತ್ರುಗಳನ್ನು ಸಂಹರಿಸಿದನು. ಮೊಟ್ಟಮೊದಲನೆಯದಾಗಿ ನೀನೇ ಪಲಾಯನಮಾಡಿರಲು ಪಾಂಡವರು ಗಂಧರ್ವರನ್ನು ಸೋಲಿಸಿ ಕಲಹಪ್ರಿಯ ದುರ್ಯೋಧನನನ್ನು ಬಿಡುಗಡೆಗೊಳಿಸಿದುದು ನಿನಗೆ ನೆನಪಿಲ್ಲವೇ? ಪುನಃ ಗೋಗ್ರಹಣದ ಸಮಯದಲ್ಲಿ ಬಲವಾಹನಗಳಿಂದ ಸಮುದಿತವಾದ ದ್ರೋಣ-ಅಶ್ವತ್ಥಾಮ-ಭೀಷ್ಮರೊಂದಿಗೆ ನಿನ್ನನ್ನೂ ಆ ಪುರುಷವರೇಣ್ಯನು ಜಯಿಸಲಿಲ್ಲವೇ? ಸೂತಜ! ಈಗ ನಿನ್ನ ವಧೆಗಾಗಿಯೇ ಪುನಃ ಮತ್ತೊಂದು ಉತ್ತಮ ಯುದ್ಧವು ಸನ್ನಿಹಿತವಾಗಿದೆ. ನೀನು ಶತ್ರುಭಯದಿಂದ ಪಲಾಯನಮಾಡದೇ ಇದ್ದರೆ ಸಮರಗತನಾದ ನೀನು ಇಂದು ಹತನಾಗುವೆ!”
ಈ ರೀತಿ ಮದ್ರಪತಿಯು ಕೌರವರ ಶತ್ರುವನ್ನು ಹೊಗಳಿ ಅತಿ ಕ್ರೂರ ಮಾತುಗಳನ್ನಾಡಲು ಅತ್ಯಂತ ರೋಷಗೊಂಡ ಕುರುಸೇನಾಪತಿ ಕರ್ಣನು ಮದ್ರರಾಜನಿಗೆ ಹೇಳಿದನು: “ಇರಲಿ! ಇರಲಿ! ಶತ್ರುವನ್ನು ಹೀಗೇಕೆ ಹೊಗಳುತ್ತಿರುವೆ? ನನ್ನ ಮತ್ತು ಅವನ ಯುದ್ಧವು ಪ್ರಾರಂಭವಾಗುತ್ತಿದೆಯಲ್ಲವೇ? ಯುದ್ಧದಲ್ಲಿ ಅವನೇನಾದರೂ ನನ್ನನ್ನು ಜಯಿಸಿದರೆ ನೀನು ಹೇಳಿದುದು ಸುಶ್ಲಾಘನೆಯಾಗುತ್ತದೆ!”
ಹಾಗೆಯೇ ಆಗಲೆಂದು ಹೇಳಿ ಮದ್ರೇಶನು ಮುಂದೆ ಏನೂ ಮಾತನಾಡಲಿಲ್ಲ. ಯುದ್ಧೋತ್ಸುಕನಾಗಿದ್ದ ಕರ್ಣನು “ಮದ್ರೇಶ! ಮುಂದೆ ಹೋಗು!” ಎಂದು ಹೇಳಿದನು. ಆಗ ಶಲ್ಯನ ಸಾರಥ್ಯದಲ್ಲಿದ್ದ ಶ್ವೇತಾಶ್ವಗಳ ಆ ರಥವು ಕತ್ತಲೆಯನ್ನು ಕೊನೆಗೊಳಿಸುವ ಸೂರ್ಯನಂತೆ ಸಮರದಲ್ಲಿ ಶತ್ರುಗಳನ್ನು ಕೊನೆಗೊಳಿಸುತ್ತಾ ಮುಂದುವರೆಯಿತು. ವ್ಯಾಘ್ರಚರ್ಮದಿಂದ ಆಚ್ಛಾದಿತವಾಗಿದ್ದ ಆ ರಥದಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಕರ್ಣನು ಪ್ರೀತನಾಗಿ ಪಾಂಡವರ ಸೇನೆಯನ್ನು ಅವಲೋಕಿಸಿ ತ್ವರೆಯಿಂದ ಧನಂಜಯನೆಲ್ಲಿರುವನೆಂದು ಕೇಳತೊಡಗಿದನು. ಕೌರವ ಸೇನೆಯಲ್ಲಿ ಪ್ರಯಾಣಿಸುತ್ತಿದ್ದ ಕರ್ಣನು ಹರ್ಷನಾಗಿ ಸಮರದಲ್ಲಿ ಒಬ್ಬೊಬ್ಬರನ್ನೂ ನೋಡಿ ಪಾಂಡವ ಅರ್ಜುನನ ಕುರಿತು ಕೇಳುತ್ತಿದ್ದನು. “ಇಂದು ಮಹಾತ್ಮ ಶ್ವೇತವಾಹನನನ್ನು ನನಗೆ ತೋರಿಸಿಕೊಟ್ಟವರಿಗೆ ನಾನು ಅವನ ಮನಸ್ಸು ಇಚ್ಛಿಸುವಷ್ಟು ಧನವನ್ನು ನೀಡುತ್ತೇನೆ! ಅದೂ ಕೂಡ ಕಡಿಮೆಯಾಯಿತೆಂದು ತಿಳಿದರೆ ರತ್ನವು ತುಂಬಿರುವ ಬಂಡಿಯನ್ನೇ ನೀಡುತ್ತೇನೆ. ಅದೂ ಸಾಲದೆಂದಾದರೆ ಸುವರ್ಣಮಯವಾದ ಆನೆಗಳಂತೆ ದಷ್ಟ-ಪುಷ್ಟವಾಗಿರುವ ಆರು ಎತ್ತುಗಳನ್ನೇ ಕೊಡುತ್ತೇನೆ. ಜೊತೆಗೆ ಅಂಥವನಿಗೆ ಶ್ಯಾಮಲವರ್ಣದ ಸುವರ್ಣಮಯ ಕಂಠಾಭರಣಗಳನ್ನು ಧರಿಸಿರುವ ಗೀತ-ವಾದ್ಯವಿದುಷಿಯರಾದ ಆಭರಣಗಳಿಂದ ಸಮಲಂಕೃತರಾದ ನೂರು ಯುವತಿಯರನ್ನೂ ಕೊಡುತ್ತೇನೆ. ಅದೂ ಕೂಡ ಕಡಿಮೆಯೆನಿಸಿದರೆ ಅರ್ಜುನನನ್ನು ತೋರಿಸುವ ಪುರುಷನಿಗೆ ಬೇರೆಯೇ ವರವಾಗಿ ಐದುನೂರು ಶ್ವೇತ ಕುದುರೆಗಳನ್ನು ಕೊಡುತ್ತೇನೆ. ಅದರ ಮೇಲೆ ಇನ್ನೂ ಬಂಗಾರದಹೊದಿಕೆಯನ್ನುಳ್ಳ, ಮುಣಿಕುಂಡಲಗಳನ್ನುಳ್ಳ, ಸುಂದರ ಹಲ್ಲುಗಳುಳ್ಳ ಎಂಟು ನೂರು ಕುದುರೆಗಳನ್ನು ಕೊಡುತ್ತೇನೆ. ಧನಂಜಯನ ಸುಳಿವು ಕೊಟ್ಟವನಿಗೆ ಶುಭ್ರ, ಸುವರ್ಣಮಯ, ಅಲಂಕೃತ, ಕಾಂಬೋಜದ ಕುದುರೆಗಳಿಂದ ಯುಕ್ತವಾದ ರಥವನ್ನು ಕೊಡುತ್ತೇನೆ. ಅದಕ್ಕೂ ಹೊರತಾಗಿ ಅವನಿಗೆ ಕಾಂಚನದ ಅನೇಕ ಹೊದಿಕೆಗಳನ್ನು ಹೊದಿಸಿದ್ದ, ಹೇಮಮಾಲೆಗಳನ್ನು ತೊಡಿಸಿದ್ದ, ಶತ್ರುಗಳ ಮೇಲೆ ಎರಗುವಂತೆ ಮಾವುತರಿಂದ ಪಳಗಿಸಲ್ಪಟ್ಟ ಆರು ನೂರು ಆನೆಗಳನ್ನು ಕೊಡುತ್ತೇನೆ. ಅದರಿಂದಲೂ ತೃಪ್ತನಾಗದಿದ್ದರೆ ಅರ್ಜುನನನ್ನು ತೋರಿಸಿಕೊಟ್ಟವನಿಗೆ ಇಷ್ಟವಾದ ಬೇರೊಂದು ವರವನ್ನು ಕೊಡುತ್ತೇನೆ. ಮಕ್ಕಳು, ಹೆಂಡತಿ, ವಿಹಾರಸ್ಥಾನಗಳು, ಈ ಎಲ್ಲವನ್ನೂ ಮತ್ತು ನನ್ನಲ್ಲಿರುವ ಎಲ್ಲ ಐಶ್ವರ್ಯವನ್ನೂ ಅವನಿಗೆ ಕೊಡುತ್ತೇನೆ. ಕೃಷ್ಣರಿಬ್ಬರನ್ನೂ ಒಟ್ಟಿಗೇ ಸಂಹರಿಸಿ ಅವರ ಸಂಪತ್ತೆಲ್ಲವನ್ನೂ ನಾನು ಇಂದು ಕೇಶವಾರ್ಜುನರು ಎಲ್ಲಿರುವರೆಂದು ಹೇಳುವವನಿಗೆ ಕೊಡುತ್ತೇನೆ!”
ಇಂತಹದೇ ಮಾತುಗಳನ್ನು ರಣರಂಗದಲ್ಲಿ ಬಹಳ ಬಾರಿ ಹೇಳುತ್ತಾ ಕರ್ಣನು ಸಾಗರಸಂಭೂತ, ಸುಸ್ವರವುಳ್ಳ, ಉತ್ತಮ ಶಂಖವನ್ನು ಊದಿದನು. ಸೂತಪುತ್ರನ ಆ ಯುಕ್ತ ಮಾತುಗಳನ್ನು ಕೇಳಿದ ದುರ್ಯೋಧನನು ತನ್ನ ಅನುಯಾಯಿಗಳೊಂದಿಗೆ ಪ್ರಹೃಷ್ಟನಾದನು. ಆಗ ದುಂದುಭಿ-ಮೃದಂಗಗಳ ನಿನಾದವು ಎಲ್ಲೆಡೆ ಮೊಳಗಿದವು. ಅಲ್ಲಿ ಆನೆಗಳ ಘೀಂಕಾರವೂ ಯೋಧರ ಸಿಂಹನಾದವೂ ಕೇಳಿಬಂದಿತು. ಕೌರವ ಸೇನೆಯಲ್ಲಿ ಆಗ ಸಂಪ್ರಹೃಷ್ಟರಾದ ಯೋಧರ ಕೂಗಾಟವು ಕೇಳಿಬಂದಿತು. ಹೀಗೆ ಸಂತೋಷಭರಿತ ಸೈನ್ಯದಲ್ಲಿ ಆತ್ಮಶ್ಲಾಘನೆಯನ್ನು ಮಾಡಿಕೊಳ್ಳುತ್ತಿದ್ದ ರಾಧೇಯನಿಗೆ ಮದ್ರರಾಜನು ನಗುತ್ತಾ ಈ ಮಾತನ್ನಾಡಿದನು: “ಸೂತಪುತ್ರ! ಇಂದು ನೀನು ಅಭಿಮಾನದಿಂದ ಸುವರ್ಣಮಯ ಆನೆಗಳಂತಿರುವ ಆರು ಎತ್ತುಗಳನ್ನು ಯಾರಿಗೂ ಕೊಡಬೇಕಾಗಿಲ್ಲ. ನೀನೇ ಧನಂಜಯನನ್ನು ನೋಡುವೆ! ಬಾಲಕನಂತೆ ನೀನು ಸಂಪತ್ತನ್ನು ವ್ಯವಮಾಡಲು ಹೊರಟಿರುವೆ! ಯಾವ ರೀತಿಯ ಪ್ರಯತ್ನವನ್ನೂ ಪಡೆಯದೇ ನೀನು ಇಂದು ಧನಂಜಯನನ್ನು ನೋಡುವಿಯಂತೆ! ಕಡುಮೂಢನಂತೆ ನೀನು ನಿನ್ನಲ್ಲಿರುವ ಅಪಾರ ಸಂಪತ್ತನ್ನು ಸ್ವಲ್ಪವೋ ಎನ್ನುವಂತೆ ತ್ಯಾಗಮಾಡಲು ಹೊರಟಿರುವೆ! ಮೋಹವಶನಾದ ನೀನು ಅಪಾತ್ರರಿಗೆ ದಾನ ಮಾಡುವುದರಿಂದ ಉಂಟಾಗುವ ದೋಷಗಳನ್ನು ತಿಳಿತುಕೊಂಡಿಲ್ಲ! ನೀನು ಕೊಡಲು ಹೊರಟಿರುವ ಬಹು ಸಂಪತ್ತಿನಿಂದ ಅನೇಕ ವಿಧದ ಯಜ್ಞಗಳನ್ನು ಮಾಡಬಹುದು. ಆ ಸಂಪತ್ತಿನಿಂದ ಯಜ್ಞಗಳನ್ನು ನಡೆಸು! ಮೋಹಪರವಶನಾಗಿ ಕೃಷ್ಣಾರ್ಜುನರನ್ನು ಸಂಹರಿಸುವ ನಿನ್ನ ಈ ಪ್ರಯತ್ನವು ವ್ಯರ್ಥವೇ ಸರಿ! ಹೋರಾಟದಲ್ಲಿ ಒಂದು ಗುಳ್ಳೇನರಿಯು ಎರಡು ಸಿಂಹಗಳನ್ನು ಸಂಹರಿಸಿದುದನ್ನು ಇದೂವರೆಗೂ ಕೇಳಿಲ್ಲ! ಇದೂವರೆಗೆ ಯಾರೂ ಬಯಸದೇ ಇರುವುದನ್ನು ನೀನು ಬಯಸುತ್ತಿರುವೆ! ನಿನಗೆ ಸುಹೃದಯರ್ಯಾರೂ ಇಲ್ಲವೆಂದು ತೋರುತ್ತದೆ! ಏಕೆಂದರೆ ಬೆಂಕಿಯಲ್ಲಿ ಬೀಳಲು ಮುಂದಾಗುತ್ತಿರುವ ನಿನ್ನನ್ನು ಯಾರೂ ತಡೆಯುತ್ತಿಲ್ಲ! ಕಾಲ-ಕಾರ್ಯಗಳನ್ನು ನೀನು ತಿಳಿದಿಲ್ಲ. ನೀನು ಕಾಲಪಕ್ವನಾಗಿರುವೆ ಎನ್ನುವುದರಲ್ಲಿ ಸಂಶಯವಿಲ್ಲ. ಇಲ್ಲದಿದ್ದರೆ ಯಾರುತಾನೇ ಕೇಳಲು ಅಸಾಧ್ಯವಾದ ಈ ಅಬದ್ಧಮಾತುಗಳನ್ನಾಡುತ್ತಾನೆ? ಕುತ್ತಿಗೆಗೆ ಕಲ್ಲನ್ನು ಕಟ್ಟಿಕೊಂಡು ಎರಡು ತೋಳುಗಳಿಂದ ಸಮುದ್ರವನ್ನು ದಾಟಲು ಹೊರಟಿರುವವನಂತೆ ಅಥವಾ ಪರ್ವತದಿಂದ ಕೆಳಗೆ ಧುಮುಕಲು ಹೊರಟಿರುವವನಂತೆ ನೀನು ಮಾಡತೊಡಗಿರುವೆ! ನೀನು ಶ್ರೇಯಸ್ಸನ್ನು ಬಯಸುವವನಾದರೆ ಸರ್ವಯೋಧರೊಂದಿಗೆ, ಸೇನಾವ್ಯೂಹದಿಂದ ಸುರಕ್ಷಿತನಾಗಿದ್ದುಕೊಂಡು ಧನಂಜಯನೊಡನೆ ಯುದ್ಧಮಾಡು. ಧಾರ್ತರಾಷ್ಟ್ರನ ಹಿತಕ್ಕಾಗಿ ಹೀಗೆ ಹೇಳುತ್ತಿದ್ದೇನೆ. ನಿನ್ನನ್ನು ಹಿಂಸಿಸಬೇಕೆಂದಲ್ಲ! ನಿನಗೆ ಜೀವಂತವಾಗಿರುವ ಆಸೆಯಿರುವುದಾದರೆ ನನ್ನ ಮಾತಿನಲ್ಲಿ ವಿಶ್ವಾಸವನ್ನಿಟ್ಟು ಅದರಂತೆ ನಡೆ!”
ಕರ್ಣನು ಹೇಳಿದನು: “ಸ್ವವೀರ್ಯವನ್ನು ಆಶ್ರಯಿಸಿಯೇ ನಾನು ಅರ್ಜುನನನ್ನು ಯುದ್ಧಕ್ಕೆ ಆಹ್ವಾನಿಸುತ್ತೇನೆ. ನೀನಾದರೋ ಮಿತ್ರನಮುಖವಾಡವನ್ನು ಧರಿಸಿರುವ ನನ್ನ ಶತ್ರುವಾಗಿರುವೆ! ನನ್ನಲ್ಲಿ ಭಯವನ್ನುಂಟುಮಾಡಲು ಬಯಸುತ್ತಿರುವೆ! ಆದರೆ ನನ್ನ ಈ ಅಭಿಪ್ರಾಯದಿಂದ ಯಾರೂ ನನ್ನನ್ನು ತಡೆಯಲಾರರು! ವಜ್ರವನ್ನು ಎತ್ತಿಕೊಂಡು ಇಂದ್ರನೇ ಬಂದರೂ ನಾನು ನನ್ನ ಸಂಕಲ್ಪದಿಂದ ಚ್ಯುತನಾಗುವುದಿಲ್ಲ. ಇನ್ನು ಮರ್ತ್ಯರೇನು ಮಾಡಿಯಾರು?”
ಹೀಗೆ ಕರ್ಣನು ವಾಕ್ಯವನ್ನು ಮುಗಿಸುತ್ತಿದ್ದಂತೆಯೇ ಶಲ್ಯನು ಕರ್ಣನನ್ನು ಅತ್ಯಂತ ಕುಪಿತನನ್ನಾಗಿಸುವ ಉದ್ದೇಶದಿಂದ ಪುನಃ ಉತ್ತರಿಸಿದನು:
“ವೇಗಯುಕ್ತವಾದ ಮೌರ್ವಿಯಿಂದ ಹಸ್ತಕೌಶಲದಿಂದ ಪ್ರಯೋಗಿಸಲ್ಪಟ್ಟ ಫಲ್ಗುನನ ಕಂಕಪತ್ರ ಶಿತಾಗ್ರ ಬಾಣಗಳು ನಿನ್ನ ಶರೀರದಲ್ಲಿ ನಾಟುವಾಗ ನೀನು ಅರ್ಜುನನ ವಿಷಯದಲ್ಲಿ ಈಗ ಆಡುತ್ತಿರುವ ಮಾತಿಗೆ ಪಶ್ಚಾತ್ತಾಪ ಪಡುತ್ತೀಯೆ. ಸೂತಪುತ್ರ! ಯಾವಾಗ ಪಾರ್ಥ ಸವ್ಯಸಾಚಿಯು ದಿವ್ಯ ಧನುಸ್ಸನ್ನೆತ್ತಿಕೊಂಡು ಸೇನೆಗಳನ್ನು ದಿಗ್ಭ್ರಮೆಗೊಳಿಸುತ್ತಾ ನಿನ್ನನ್ನು ನಿಶಿತ ಪೃಷತ್ಕಗಳಿಂದ ನಿನ್ನನ್ನು ಮರ್ದಿಸುತ್ತಾನೋ ಆಗ ನೀನು ಪಶ್ಚಾತ್ತಾಪ ಪಡುತ್ತೀಯೆ. ತಾಯಿಯ ತೊಡೆಯಮೇಲೆ ಮಲಗಿರುವ ಬಾಲಕನು ಚಂದ್ರನನ್ನು ಅಪಹರಿಸಲು ಇಚ್ಛಿಸುವಂತೆ ಮೋಹಪರವಶನಾದ ನೀನು ರಥಸ್ಥನಾಗಿ ಹೋರಾಡುತ್ತಿರುವ ಅರ್ಜುನನನ್ನು ಇಂದು ಜಯಿಸಲು ಇಚ್ಛಿಸುತ್ತಿರುವೆ! ಸುತೀಕ್ಷ್ಣ ಅಲಗುಗಳುಳ್ಳ ತ್ರಿಶೂಲವನ್ನು ಅಪ್ಪಿಕೊಂಡು ನೀನು ಅಂಗಾಂಗಗಳನ್ನು ಚುಚ್ಚಿಕೊಳ್ಳುತ್ತಿರುವೆ. ಆ ಸುತೀಕ್ಷ್ಣ ಅಲಗುಗಳಂತಿರುವ ಅರ್ಜುನನೊಡನೆ ನೀನು ಇಂದು ಯುದ್ಧಮಾಡಬಯಸುತ್ತಿರುವೆ! ಬುದ್ಧಿಯಿಲ್ಲದ, ಆತುರಬುದ್ಧಿಯ ಎಳೆಯ ಕ್ಷುದ್ರಮೃಗವೊಂದು ಕುಪಿತವಾಗಿರುವ ಕೇಸರಯುಕ್ತ ವಿಶಾಲ ಸಿಂಹವನ್ನು ಜಗಳಕ್ಕೆ ಕರೆಯುವಂತೆ ನೀನು ಅರ್ಜುನನನ್ನು ಯುದ್ಧಕ್ಕೆ ಆಹ್ವಾನಿಸುತ್ತಿರುವೆ! ಕೇಸರಿಯಂತಿರುವ ಮಹಾವೀರ್ಯ ರಾಜಪುತ್ರನನ್ನು ಅಹ್ವಾನಿಸಬೇಡ! ವನದಲ್ಲಿ ಹೊಟ್ಟೆತುಂಬಿ ತೃಪ್ತವಾದ ಗುಳ್ಳೇನರಿಯಂತೆ ನೀನು ಪಾರ್ಥನನ್ನು ಎದುರಿಸಿ ನಾಶಹೊಂದಬೇಡ! ಈಷಾದಂಡತಂಥಹ ಕೋರೆದಾಡೆಗಳಿರುವ ಮದೋದಕವನ್ನು ಸುರಿಸುತ್ತಿರುವ ಮಹಾಗಜವನ್ನು ಮೊಲವೊಂದು ಜಗಳಕ್ಕೆ ಕರೆಯುವಂತೆ ನೀನು ಧನಂಜಯನನ್ನು ಯುದ್ಧಕ್ಕೆ ಆಹ್ವಾನಿಸುತ್ತಿರುವೆ! ಬಿಲದಲ್ಲಿರುವ ಮಹಾವಿಷವನ್ನು ತುಂಬಿಕೊಂಡಿರುವ ಕೃಷ್ಣಸರ್ಪವನ್ನು ಮೂರ್ಖನಾಗಿ ಕೋಲಿನಿಂದ ಚುಚ್ಚುವಂತೆ ನೀನು ಪಾರ್ಥನೊಡನೆ ಯುದ್ಧಮಾಡಲು ಬಯಸುತ್ತಿರುವೆ! ಮೂಢತ್ವದಿಂದ ಗುಳ್ಳೆನರಿಯೊಂದು ಕ್ರುದ್ಧವಾದ ಕೇಸರಿಯುಕ್ತ ಸಿಂಹವನ್ನು ಅತಿಕ್ರಮಿಸಿ ಕೂಗುವಂತೆ ನೀನು ನರಸಿಂಹ ಪಾಂಡವನನ್ನು ಕೂಗಿ ಕರೆಯುತ್ತಿರುವೆ! ಸುಪರ್ಣ ಪತಗಶ್ರೇಷ್ಠ ತರಸ್ವಿ ವೈನತೇಯನನ್ನು ತನ್ನ ಮೇಲೆ ಬಂದು ಬೀಳಲು ಆಹ್ವಾನಿಸುತ್ತಿರುವವನಂತೆ ನೀನು ಪಾರ್ಥ ಧನಂಜಯನನ್ನು ಕರೆಯುತ್ತಿರುವೆ! ಜಲಜಂತುಗಳಿಂದ ಸಮೃದ್ಧವಾಗಿ ಚಂದ್ರೋದಯದಲ್ಲಿ ಉಕ್ಕಿಬಂದು ಎತ್ತರ ಅಲೆಗಳಿಂದ ಕೂಡಿದ ಸಮುದ್ರವನ್ನೇ ನೀನು ದೋಣಿಯಿಲ್ಲದೇ ಈಜಿ ದಾಟಲು ಬಯಸುತ್ತಿರುವೆ! ದುಂದುಭಿಯ ನಿನಾದದಂತೆ ಗಂಭೀರ ಕಂಠಧ್ವನಿಯಿರುವ, ಚೂಪಾದ ಕೊಂಬುಗಳಿರುವ, ಆಕ್ರಮಣಿಸಲು ಬರುವ ಋಷಭದಂತಿರುವ ಧನಂಜಯ ಪಾರ್ಥನನ್ನು ನೀನು ಯುದ್ಧಕ್ಕೆ ಆಹ್ವಾನಿಸುತ್ತಿದ್ದೀಯೆ! ಮಹಾಮೇಘದ ಮಹಾ ಗುಡುಗನ್ನು ನೀನು ಪ್ರತಿಧ್ವನಿಸುತ್ತಿರುವೆ! ಬೇಕಾದಷ್ಟು ಬಾಣಗಳ ಮಳೆಸುರಿಸುವ ನರಪರ್ಜನ್ಯ ಅರ್ಜುನನ ಎದುರು ಗರ್ಜಿಸುತ್ತಿರುವೆ! ಮನೆಯಲ್ಲಿಯೇ ಕಟ್ಟಿಹಾಕಿದ ನಾಯಿಯೊಂದು ವನದಲ್ಲಿರುವ ಹುಲಿಯ ಎದುರು ಬೊಗಳುವಂತೆ ನೀನು ನರವ್ಯಾಘ್ರ ಧನಂಜಯನ ಎದುರು ಬೊಗಳುತ್ತಿರುವೆ! ವನದಲ್ಲಿ ಮೊಲಗಳ ಹಿಂಡುಗಳ ಮಧ್ಯೆ ವಾಸಿಸುವ ಗುಳ್ಳೇನರಿಯೂ ಕೂಡ ಸಿಂಹವನ್ನು ಕಾಣುವವರೆಗೆ ತಾನೇ ಸಿಂಹ ಎಂದು ಭಾವಿಸುಕೊಳ್ಳುತ್ತದೆ. ಹಾಗೆ ಶತ್ರುದಮನ ನರವ್ಯಾಘ್ರ ಧನಂಜನನ್ನು ಇನ್ನೂ ನೋಡದಿರುವ ನೀನೂ ಕೂಡ ನೀನೇ ಸಿಂಹ ಎಂಬ ಅಭಿಮಾನದಿಂದಿರುವೆ! ಎಲ್ಲಿಯವರೆಗೆ ನೀನು ಒಂದೇರಥದಲ್ಲಿ ಸೂರ್ಯಚಂದ್ರರಂತೆ ಪ್ರಕಾಶಮಾನರಾಗಿ ಕುಳಿತಿರುವ ಕೃಷ್ಣಾರ್ಜುನರನ್ನು ನೋಡುವುದಿಲ್ಲವೋ ಅಲ್ಲಿಯವರೆಗೆ ನೀನು ನಿನ್ನನ್ನೇ ವ್ಯಾಘ್ರವೆಂದು ತಿಳಿದುಕೊಂಡುಬಿಟ್ಟಿದ್ದೀಯೆ! ಎಲ್ಲಿಯವರೆಗೆ ನೀನು ಮಹಾಯುದ್ಧದಲ್ಲಿ ಗಾಂಡೀವದ ನಿರ್ಘೋಷವನ್ನು ಕೇಳುವುದಿಲ್ಲವೋ ಅಲ್ಲಿಯವರೆಗೆ ನಿನಗಿಷ್ಟಬಂದಂತೆ ಮಾತನಾಡಿಕೊಂಡಿರಬಹುದು! ರಥಶಬ್ಧ ಮತ್ತು ಧನುಸ್ಸಿನ ಟೇಂಕಾರಗಳಿಂದ ಹತ್ತೂ ದಿಕ್ಕುಗಳನ್ನೂ ಮೊಳಗಿಸುತ್ತಾ ಸಿಂಹದಂತೆ ಗರ್ಜಿಸುವ ಅರ್ಜುನನನ್ನು ನೋಡಿ ನೀನು ಗುಳ್ಳೇನರಿಯಾಗಿಬಿಡುವೆಯಂತೆ! ನೀನು ಯಾವಾಗಲೂ ಗುಳ್ಳೇನರಿಯಂತೆಯೇ ಮತ್ತು ಧನಂಜಯನು ಯಾವಾಗಲೂ ಸಿಂಹದಂತೆಯೇ! ವೀರರನ್ನು ದ್ವೇಷಿಸುವ ನೀನು ಯಾವಾಗಲೂ ಗುಳ್ಳೇನರಿಯಂತೆಯೇ ಇರುವೆ! ಬಲಾಬಲಗಳ ತುಲನೆಯಲ್ಲಿ ಅರ್ಜುನನಿಗೂ ಮತ್ತು ನಿನಗೂ ಬೆಕ್ಕು-ಇಲಿಗಳ ಸಾಮ್ಯವಿದೆ. ಹುಲಿ ಮತ್ತು ನಾಯಿಗಳ ಸಾಮ್ಯವಿದೆ. ಸಿಂಹ ಮತ್ತು ಗುಳ್ಳೇನರಿಗಳ ಸಾಮ್ಯವಿದೆ. ಆನೆ ಮತ್ತು ಮೊಲಗಳ ಸಾಮ್ಯವಿದೆ. ಅರ್ಜುನನಿಗಿಂತ ನೀನು ಅತ್ಯಂತ ದುರ್ಬಲನು. ಹಾಗೆಯೇ ನೀನು ಮತ್ತು ಪಾರ್ಥನೂ ಮಾಡಿರುವ ಸತ್ಕರ್ಮಗಳಲ್ಲಿ ಸುಳ್ಳು-ಸತ್ಯಗಳ ಮತ್ತು ವಿಷ-ಅಮೃತಗಳ ನಡುವಿನ ಅಂತರದಷ್ಟೇ ವ್ಯತ್ಯಾಸಗಳುಂಟು!”
ಶಲ್ಯನು ಮಾತುಗಳಿಂದ ಈ ರೀತಿ ಕರ್ಣನನ್ನು ನಿಂದಿಸಲು, ಮಾತಿನ ಬಾಣಗಳನ್ನು ಬಿಡುತ್ತಾನೆಂದೇ ಇವನಿಗೆ ಶಲ್ಯನೆಂಬ ಹೆಸರು ಬಂದಿರಬಹುದೆಂದು ಭಾವಿಸಿ, ಅತ್ಯಂತ ಕ್ರೋಧಿತನಾಗಿ ರಾಧೇಯನು ಹೇಳಿದನು:
“ಶಲ್ಯ! ಗುಣವಂತನಾದವನು ಮಾತ್ರವೇ ಗುಣವಂತರ ಸದ್ಗುಣಗಳನ್ನು ತಿಳಿದುಕೊಳ್ಳುತ್ತಾನೆ. ಗುಣಹೀನನಾದವನು ಖಂಡಿತ ತಿಳಿದುಕೊಂಡಿರಲಾರನು! ನಿನ್ನಂತಹ ಗುಣಹೀನನಿಗೆ ಗುಣಾಗುಣಗಳ ಪರಿಜ್ಞಾನವಾದರೂ ಹೇಗಿರಬೇಕು! ಅರ್ಜುನನ ಮಹಾಸ್ತ್ರಗಳು, ಅವನ ಕ್ರೋಧ, ವೀರ್ಯ, ಧನುಸ್ಸು ಮತ್ತು ಶರಗಳ ಕುರಿತು ನನಗೆ ಗೊತ್ತಿರುವಷ್ಟು ನಿನಗೆ ಗೊತ್ತಿರಲಿಕ್ಕಿಲ್ಲ! ನನ್ನ ಮತ್ತು ಪಾಂಡವನ ವೀರ್ಯಗಳ ಕುರಿತು ನನಗೆ ಚೆನ್ನಾಗಿ ಗೊತ್ತಿರುವುದರಿಂದಲೇ ನಾನು ಅವನನ್ನು ಯುದ್ಧಕ್ಕೆ ಆಹ್ವಾನಿಸುತ್ತಿದ್ದೇನೆ! ಪತಂಗವು ಅಗ್ನಿಯಲ್ಲಿ ಹೋಗಿ ಬೀಳುವಂತಲ್ಲ! ನನ್ನಲ್ಲೊಂದು ಚೆನ್ನಾಗಿ ಶುದ್ಧಗೊಳಿಸಲ್ಪಟ್ಟ, ರಣಹದ್ದಿನ ರೆಕ್ಕೆಗಳಿಂದ ಸುಲಂಕೃತವಾಗಿರುವ ಮತ್ತು ರಕ್ತವೇ ಭೋಜನೆಯಾಗಿರುವ ಒಂದು ಬಾಣವಿದೆ. ಇದನ್ನು ಪ್ರತ್ಯೇಕವಾಗಿ ತೂಣೀರದಲ್ಲಿ ಇಟ್ಟುಕೊಂಡಿದ್ದೇನೆ! ಅನೇಕ ವರ್ಷಗಳಿಂದಲೂ ಚಂದನಲೇಪದಿಂದ ಪೂಜೆಗೊಳ್ಳುತ್ತಿರುವ ನರಾಶ್ವಗಜಸಮೂಹಗಳನ್ನು ಒಂದೇ ಪ್ರಯೋಗದಲ್ಲಿ ಧ್ವಂಸಮಾಡಬಲ್ಲ ಉಗ್ರ ವಿಷವಾನ್ ಬಾಣವು ಗಂಧದ ಪುಡಿಯಲ್ಲಿಯೇ ಮಲಗಿದೆ. ನನ್ನಲ್ಲಿರುವ ಈ ಸರ್ಪಾಸ್ತ್ರವು ಓರ್ವ ವೀರನನ್ನು ಸಂಹರಿಸುವಂಥದ್ದು. ಈ ಮಹಾರೌದ್ರ ಬಾಣವು ಕವಚ-ಅಸ್ಥಿಗಳನ್ನು ಸೀಳಿಕೊಂಡು ಹೋಗಬಲ್ಲದು. ಕ್ರುದ್ಧನಾದರೆ ಇದರಿಂದ ಮಹಾಗಿರಿ ಮೇರುವನ್ನೇ ಭೇದಿಸಬಲ್ಲೆ! ಫಲ್ಗುಣ ಮತ್ತು ದೇವಕೀಪುತ್ರ ಈ ಈರ್ವರು ಕೃಷ್ಣರ ಹೊರತು ಬೇರೆ ಯಾರಮೇಲೂ ಇದನ್ನು ನಾನು ಪ್ರಯೋಗಿಸುವುದಿಲ್ಲ ಎಂಬ ಈ ಸತ್ಯವನ್ನು ನೀನು ಕೇಳಿಕೋ! ಅಂತಹ ಬಾಣವಿದೆ ಎನ್ನುವ ಧೈರ್ಯದಿಂದಲೇ ನಾನು ವಾಸುದೇವ-ಧನಂಜಯರೊಡನೆ ಯುದ್ಧಮಾಡಲು ಹೊರಟಿದ್ದೇನೆ. ಇದು ಪರಮಸಂಕ್ರುದ್ಧನಾದ ನನಗೆ ತಕ್ಕುದಾಗಿಯೇ ಇದೆ. ವಾಸುದೇವರ ಸರ್ವ ಸಂಪತ್ತೂ ಕೃಷ್ಣನಲ್ಲಿ ಪ್ರತಿಷ್ಠಿತವಾಗಿವೆ. ಹಾಗೆಯೇ ಪಾಂಡುಪುತ್ರರು ಎಲ್ಲರ ಜಯವು ಪಾರ್ಥ ಅರ್ಜುನನಲ್ಲಿ ಪ್ರತಿಷ್ಠಿತವಾಗಿದೆ. ಅಂತಹ ಇಬ್ಬರನ್ನೂ ಎದುರಿಸಿ ಯಾರು ತಾನೇ ಹಿಂದಿರುಗಿ ಬರಬಲ್ಲರು? ಅವರಿಬ್ಬರು ಪುರುಷವ್ಯಾಘ್ರರೂ ಒಟ್ಟಿಗೇ ರಥದಲ್ಲಿ ಕುಳಿತು ನನ್ನೊಬ್ಬನೊಡನೆಯೇ ಯುದ್ಧಮಾಡಲು ಬರುತ್ತಾರೆ. ನನ್ನ ಜನ್ಮವು ಎಷ್ಟು ಶ್ರೇಷ್ಠವೆನ್ನುವುದೆಂದು ನೀನೇ ನೋಡು! ಸೋದರಮಾವ ಮತ್ತು ಸೋತರತ್ತೆಯ ಮಕ್ಕಳಾಗಿ ಸಹೋದರರಂತೆ ಮತ್ತು ದಾರದಲ್ಲಿ ಪೋಣಿಸಿದ ಮಣಿಗಳಂತೆ ಒಟ್ಟಿಗೇ ಇರುವ ಅವರಿಬ್ಬರೂ ನನ್ನಿಂದ ಹತರಾಗುವುದನ್ನು ನೋಡುವೆಯಂತೆ! ಹೇಡಿಗಳಿಗೆ ನಡುಗನ್ನು ಹುಟ್ಟಿಸುವ ಅರ್ಜುನನ ಗಾಂಡೀವ, ಕೃಷ್ಣನ ಚಕ್ರ, ಗರುಡ ಮತ್ತು ಕಪಿಧ್ವಜಗಳು ನನಗೆ ಹರ್ಷವನ್ನುಂಟು ಮಾಡುತ್ತವೆ! ನೀನಾದರೋ ದುಷ್ಟಸ್ವಭಾವದವನು. ಮೂಢನು. ಮಹಾಯುದ್ಧಗಳ ಕುರಿತು ತಿಳಿಯದವನು. ಭಯದಿಂದ ತತ್ತರಿಸಿದ್ದೀಯೆ! ಅದರಿಂದಾಗಿ ಬಹಳ ಅಬದ್ಧವಾಗಿ ಮಾತನಾಡುತ್ತಿರುವೆ!
“ಕೆಟ್ಟದೇಶದಲ್ಲಿ ಹುಟ್ಟಿದವನೇ! ನೀನು ಯಾವುದೋ ಸ್ವಾರ್ಥ ಕಾರಣದಿಂದಲೇ ಅವರಿಬ್ಬರನ್ನೂ ಸ್ತುತಿಸುತ್ತಿರುವೆ! ಇಂದು ನಾನು ಸಮರದಲ್ಲಿ ಅವರಿಬ್ಬರನ್ನೂ ಸಂಹರಿಸಿ ಬಾಂಧವರೊಂದಿಗೆ ನಿನ್ನನ್ನೂ ಸಂಹರಿಸುತ್ತೇನೆ! ಪಾಪದೇಶದಲ್ಲಿ ಹುಟ್ಟಿದವನೇ! ದುರ್ಬುದ್ಧೇ! ಕ್ಷುದ್ರ! ಕ್ಷತ್ರಿಯಪಾಂಸನ! ಸುಹೃದಯನಾಗಿದ್ದುಕೊಂಡು ನೀನು ಶತ್ರುಗಳಾದ ಕೃಷ್ಣಾರ್ಜುನರ ಕುರಿತು ನನ್ನನ್ನೇಗೆ ಹೆದರಿಸುತ್ತಿದ್ದೀಯೆ? ಅವರಾದರೋ ಇಂದು ನನ್ನನ್ನು ಸಂಹರಿಸುತ್ತಾರೆ ಅಥವಾ ನಾನಾದರೋ ಅವರಿಬ್ಬರನ್ನೂ ಸಂಹರಿಸುತ್ತೇನೆ. ನನ್ನ ಬಲವನ್ನು ಚೆನ್ನಾಗಿ ತಿಳಿದುಕೊಂಡಿರುವ ನಾನು ಕೃಷ್ಣಾರ್ಜುನರಿಗೆ ಹೆದರುವವನಲ್ಲ! ಸಹಸ್ರ ವಾಸುದೇವರಾಗಲೀ ಅಥವಾ ನೂರು ಫಲ್ಗುನರಾಗಲೀ ಬಂದರೂ ಕೂಡ ನಾನೊಬ್ಬನೇ ಅವರನ್ನು ಸಂಹರಿಸುತ್ತೇನೆ! ನೀನು ಬಾಯಿಮುಚ್ಚಿಕೋ! ಕ್ರೀಡೆಗೆಂದು ಸ್ತ್ರೀ-ಬಾಲಕ-ವೃದ್ಧರು ಮತ್ತು ಶಿಷ್ಯರು ಒಂದು ಹಾಡನ್ನು ಹಾಡುತ್ತಾರೆ! ದುರಾತ್ಮ ಮದ್ರಕರ ಮೇಲಿರುವ ಈ ಹಾಡನ್ನು ಕೇಳು! ಹಿಂದೆ ರಾಜಸನ್ನಿಧಿಗಳಲ್ಲಿ ಬ್ರಾಹ್ಮಣರು ಏನನ್ನು ಹೇಳುತ್ತಿದ್ದರೋ ಅದನ್ನು ಏಕಮನಸ್ಕನಾಗಿ ಕೇಳಿ ಬಾಯಿಮುಚ್ಚು ಅಥವಾ ಅದಕ್ಕೆ ಉತ್ತರವಾಗಿಯಾದರೂ ಮಾತನಾಡು!
“ಮದ್ರದೇಶದವರು ಯಾವಾಗಲೂ ಮಿತ್ರದ್ರೋಹಿಗಳಾಗಿರುತ್ತಾರೆ. ನಿಷ್ಕಾರಣವಾಗಿ ನಮ್ಮನ್ನು ಯಾರಾದರೂ ದ್ವೇಷಿಸಿದರೆ ಅವರು ಹೆಚ್ಚುಭಾಗ ಮದ್ರಕರೇ ಆಗಿರುತ್ತಾರೆ! ಕ್ಷುದ್ರವಾಗಿ ಮಾತನಾಡುವ ನರಾಧಮ ಮದ್ರಕರಲ್ಲಿ ಸೌಹಾರ್ದಭಾವನೆಯು ಇರುವುದೇ ಇಲ್ಲ! ಮದ್ರಕರು ನಿತ್ಯವೂ ದುರಾತ್ಮರು ಮತ್ತು ಸರ್ವದಾ ಕುಟಿಲರೂ ಸುಳ್ಳುಗಾರರೂ ಆಗಿರುತ್ತಾರೆ. ದುರಾತ್ಮತೆಯು ಮದ್ರಕರನ್ನು ಸಾಯುವವರೆಗೂ ಬಿಡುವುದಿಲ್ಲವೆಂದು ನಾವು ಕೇಳಿದ್ದೇವೆ! ಹಿಟ್ಟು-ಮೀನುಗಳನ್ನು ತಿನ್ನುವ, ಶಿಷ್ಟಾಚಾರಹೀನ ಮದ್ರಕರ ಮನೆಗಳಲ್ಲಿ ತಂದೆ-ಮಗ-ತಾಯಿ-ಅತ್ತೆ-ಮಾವ-ಸೋದರಮಾವ-ಅಳಿಯ-ಮಗಳು-ಅಣ್ಣತಮ್ಮಂದಿರು-ಮೊಮ್ಮಗ-ಇತರ ಬಾಂಧವರು-ಸ್ನೇಹಿತರು-ಹೊರಗಿನಿಂದ ಬಂದವರು- ದಾಸದಾಸಿಯರು ಇವರೆಲ್ಲರೂ ತಮಗಿಷ್ಟಬಂದಂತೆ ಯಾವುದೇ ಕಟ್ಟುಪಾಡುಗಳೂ ಇಲ್ಲದೇ ಪರಸ್ಪರರೊಡನೆ ವ್ಯವಹರಿಸುತ್ತಾರೆ. ಪರಿಚಿತರು, ಅಪರಿಚಿತರು ಎಂಬ ಬೇಧಗಳಿಲ್ಲದೇ ಸ್ತ್ರೀಯರು ಪುರುಷರೊಂದಿಗೆ ಸ್ವ ಇಚ್ಛೆಯಿಂದ ಬೆರೆಯುತ್ತಾರೆ; ಮದ್ಯಸೇವಿಸಿ ಗೋಮಾಂಸ ತಿಂದು ಕುಣಿಯುತ್ತಾರೆ ಮತ್ತು ಆನಂದಿಸುತ್ತಾರೆ. ಅನ್ಯೋನ್ಯ ಕಾಮಪ್ರಲಾಪಿಗಳಾದ ಅವರಲ್ಲಿ ಧರ್ಮವು ಹೇಗಿರಬೇಕು? ಮದಿಸಿದ ಮದ್ರಕರು ಅಶುಭಕರ್ಮಗಳಿಗೆ ಪ್ರಖ್ಯಾತರು. ಮದ್ರಕರಲ್ಲಿ ವೈರವನ್ನೂ ಕಟ್ಟಿಕೊಳ್ಳಬಾರದು ಸೌಹಾರ್ದತೆಯನ್ನೂ ಬೆಳೆಸಬಾರದು! ಮದ್ರಕರು ಚಪಲರು. ಮದ್ರಕರೊಂದಿಗೆ ಸಂಬಂಧವನ್ನಿಟ್ಟುಕೊಳ್ಳಬಾರದು. ಮದ್ರಕರಲ್ಲಿ ಮತ್ತು ಗಾಂಧಾರದೇಶದವರಲ್ಲಿ ಶೌಚವೆನ್ನುವುದು ಏನೂ ಇಲ್ಲ. ಅವರನ್ನು ಸ್ಪರ್ಷಿಸಲೂ ಬಾರದು! ರಾಜನೇ ಯಾಜಕನಾಗಿರುವ ಯಾಗದಲ್ಲಿ ನೀಡುವ ದಾನ-ಹವಿಸ್ಸುಗಳು ನಷ್ಟವಾಗುವಂತೆ, ಶೂದ್ರರಿಗೆ ಸಂಸ್ಕಾರಗಳನ್ನು ಮಾಡಿಸುವ ವಿಪ್ರನು ಹೇಗೆ ಪರಾಭವಗೊಳ್ಳುವನೋ ಹಾಗೆ ನಿತ್ಯವೂ ಬ್ರಹ್ಮದ್ವೇಷಿ ಮದ್ರಕರು ಪರಾಭವಹೊಂದುವರು. ಅಥರ್ವ ಮಂತ್ರದಿಂದ ಶಾಂತಿಮಾಡುವವರೆಲ್ಲರೂ “ಮದ್ರಕರಲ್ಲಿ ಸೌಹಾರ್ದಭಾವವು ಸ್ವಲ್ಪವೂ ಇಲ್ಲದಿರುವಂತೆ ಚೇಳಿನಲ್ಲಿಯೂ ವಿಷವಿಲ್ಲ!” ಎಂದು ಚೇಳಿನ ವಿಷವನ್ನು ಹೋಗಲಾಡಿಸುತ್ತಾ ಹೇಳುತ್ತಾರೆ. ತಿಳಿದ ವೈದ್ಯರು ಈ ರೀತಿಯಲ್ಲಿ ಮಾಡಲು ಸತ್ಯವಾಗಿಯೂ ಚೇಳುವಿನ ವಿಷವು ಕಡಿಮೆಯಾಗುವುದು ಸತ್ಯವಾಗಿ ಕಾಣುತ್ತದೆ. ಇವಲ್ಲದೇ ಮದ್ರಕರ ಕುರಿತು ಇನ್ನೂ ಇತರ ವಿಷಯಗಳಿವೆ. ಸಾವಧಾನಚಿತ್ತನಾಗಿ ಕೇಳು.
“ಮದ್ಯಮೋಹಿತ ಮದ್ರಕ ಸ್ತ್ರೀಯರು ವಸ್ತ್ರಗಳನ್ನೂ ಕಳಚಿ ನರ್ತಿಸುತ್ತಾರೆ. ಸಂಭೋಗದಲ್ಲಿ ಕೂಡ ಅವರು ಯಾವುದೇ ಸಂಯಮಗಳಿಲ್ಲದೇ ಬೇಕಾದಂತೆ ವರ್ತಿಸುತ್ತಾರೆ. ಅಂಥಹ ಸ್ತ್ರೀಯರಲ್ಲಿ ಹುಟ್ಟಿದ ಮದ್ರಕ ಪುತ್ರನು ಹೇಗೆ ತಾನೇ ಇತರರಿಗೆ ಧರ್ಮದ ಕುರಿತು ಹೇಳಲು ಅರ್ಹನಾಗುತ್ತಾನೆ? ಮರುಭೂಮಿಯಲ್ಲಿರುವ ಒಂಟೆಗಳಂತೆ ನಿಂತುಕೊಂಡೇ ಮೂತ್ರವಿಸರ್ಜನೆ ಮಾಡುವ ಧರ್ಮಭ್ರಷ್ಟ ನಿರ್ಲಜ್ಜ ಮದ್ರರ ಸ್ತ್ರೀಯಲ್ಲಿ ಹುಟ್ಟಿದ ನೀನು ನನಗೆ ಧರ್ಮೋಪದೇಶಮಾಡಲು ಹೊರಟಿರುವೆ! ಮದ್ರದೇಶದ ಸ್ತ್ರೀಯರಲ್ಲಿ ಯಾರಾದರೂ ಗಂಜಿಯನ್ನು ಕೇಳಿದರೆ ಕೊಡಲು ಇಷ್ಟವಿಲ್ಲದಿದ್ದರೆ ತಮ್ಮ ನಿತಂಬಗಳನ್ನು ಕೆರೆದುಕೊಳ್ಳುತ್ತಾ “ನನ್ನನ್ನು ಯಾವನೂ ಗಂಜಿಯನ್ನು ಕೇಳಬಾರದು ಏಕೆಂದರೆ ಅದು ನನಗೆ ಅತ್ಯಂತ ಪ್ರಿಯವಾದುದು! ಬೇಕಾದರೆ ಮಗನನ್ನಾದರೂ ಪತಿಯನ್ನಾದರೂ ಕೊಟ್ಟುಬಿಡುತ್ತೇನೆ. ಆದರೆ ಎಲ್ಲಕ್ಕಿಂತಲೂ ಪ್ರಿಯವಾದ ಗಂಜಿಯನ್ನು ಮಾತ್ರ ಕೊಡುವುದಿಲ್ಲ!” ಎಂದು ಕಠೋರವಾಗಿ ಮಾತನಾಡುವಳು. ಮದ್ರಕ ಸ್ತ್ರೀಯರು ಬಿಳುಪಾಗಿರುತ್ತಾರೆ, ಸ್ಥೂಲವಾಗಿರುತ್ತಾರೆ, ನಿರ್ಲಜ್ಜರಾಗಿರುತ್ತಾರೆ ಮತ್ತು ಕಂಬಳಿಗಳನ್ನು ಹೊದ್ದಿರುತ್ತಾರೆ. ಆ ಹೊಟ್ಟೆಬಾಕರು ಶೌಚಾಚಾರಗಳನ್ನು ಬಿಟ್ಟಿರುತ್ತಾರೆ ಎಂದು ಕೇಳಿದ್ದೇವೆ! ಕೂದಲಿನಿಂದ ಉಗುರಿನವರೆಗೂ ಮದ್ರದೇಶದ ಸ್ತ್ರೀ-ಪುರುಷರ ಕುರಿತು ನಾವು ಅಥವಾ ಇತರರು ಇನ್ನೂ ಅನೇಕ ವಿಷಯಗಳನ್ನು ಹೇಳಬಹುದು! ಮದ್ರ-ಸಿಂಧು ಮತ್ತು ಸೌವೀರದೇಶಗಳಲ್ಲಿ ಜನರು ಧರ್ಮವೆಂದರೆ ಏನೆನ್ನುವುದನ್ನೇ ತಿಳಿಯರು! ಪಾಪಾದೇಶಗಳಲ್ಲಿ ಹುಟ್ಟಿದ ಆ ಮ್ಲೇಚ್ಛರಿಗೆ ಧರ್ಮವೆಂದರೆ ಏನೆನ್ನುವುದನ್ನೇ ತಿಳಿಯದು!
“ಯುದ್ಧದಲ್ಲಿ ಮಡಿದು ಸತ್ಪುರುಷರಿಂದ ಸುಪೂಜಿತನಾಗಿ ರಣದಲ್ಲಿ ಮಲಗುವುದೇ ಕ್ಷತ್ರಿಯನ ಮುಖ್ಯಧರ್ಮವೆಂದು ನಾವು ತಿಳಿದುಕೊಂಡಿದ್ದೇವೆ. ಆಯುಧಗಳನ್ನು ಪಡೆದು ಪ್ರಯೋಗಿಸುವ ನನಗೆ ಪ್ರಥಮ ಸಂಕಲ್ಪವು ಯುದ್ಧದಲ್ಲಿ ನಿಧನ ಮತ್ತು ಸ್ವರ್ಗ! ದುರ್ಯೋಧನನ ಪ್ರಿಯ ಸಖನಾಗಿದ್ದೇನೆ. ಅವನಿಗಾಗಿಯೇ ನನ್ನ ಈ ಪ್ರಾಣ ಮತ್ತು ಸಂಪತ್ತು ಎನ್ನುವುದನ್ನು ತಿಳಿ! ಪಾಪದೇಶದಲ್ಲಿ ಹುಟ್ಟಿದವನೇ! ನಮ್ಮಲ್ಲಿ ಅಮಿತ್ರತ್ವವನ್ನು ಉಂಟುಮಾಡಲು ಪಾಂಡವರೇ ನಿನ್ನನ್ನು ನಮ್ಮ ಪಕ್ಷದಲ್ಲಿ ಇರಿಸಿರುವರೆಂದು ವ್ಯಕ್ತವಾಗುತ್ತಿದೆ. ಶತ್ರುವಿನಂತೆಯೇ ನೀನು ವರ್ತಿಸುತ್ತಿರುವೆ! ನಾಸ್ತಿಕರಿಂದ ಧರ್ಮಜ್ಞನನ್ನು ಧರ್ಮದಿಂದ ವಿಮುಖನನ್ನಾಗಿ ಮಾಡಲು ಅಸಾಧ್ಯವು ಹೇಗೋ ಹಾಗೆ ನಿನ್ನಂಥಹ ನೂರು ಜನರು ಎಷ್ಟೇ ಬಯಸಿದರೂ ನನ್ನನ್ನು ಸಂಗ್ರಾಮದಿಂದ ವಿಮುಖನನ್ನಾಗಿ ಮಾಡಲು ಸಾಧ್ಯವಿಲ್ಲ! ಬಿಸಿಲಿನ ತಾಪದಿಂದ ಬಳಲಿದ ಜಿಂಕೆಯಂತೆ ನೀನು ಬೇಕಾದಷ್ಟು ವಿಲಪಿಸು. ಕ್ಷತ್ರಿಯ ಧರ್ಮದಲ್ಲಿ ನಿರತನಾಗಿರುವ ನನ್ನನ್ನು ಮಾತ್ರ ನೀನು ಭಯಪಡಿಸಲಾರೆ! ಯುದ್ಧದಿಂದ ಹಿಂದಿರುಗದೇ ದೇಹತ್ಯಾಗಮಾಡುವ ನರಸಿಂಹರಿಗೆ ಯಾವ ಸದ್ಗತಿಯು ದೊರೆಯುತ್ತದೆ ಎನ್ನುವುದನ್ನು ನನ್ನ ಗುರು ಪರಶುರಾಮನು ಹೇಳಿದುದು ನೆನಪಿಗೆ ಬರುತ್ತಿದೆ! ಪುರೂರವನ ಉತ್ತಮ ನಡತೆಯಂತೆ ನನ್ನವರನ್ನು ಉದ್ಧರಿಸಲೂ ಶತ್ರುಗಳನ್ನು ವಧಿಸಲೂ ನಾನು ಸನ್ನದ್ಧನಾಗಿ ನಿಂತಿದ್ದೇನೆ ಎನ್ನುವುದನ್ನು ತಿಳಿದುಕೋ! ನನ್ನ ಈ ಅಭಿಪ್ರಾಯದಿಂದ ಚ್ಯುತಗೊಳಿಸುವ ಯಾವುದೇ ಪ್ರಾಣಿಯನ್ನು ಈ ಮೂರು ಲೋಕಗಳಲ್ಲಿಯೂ ನಾನು ಕಂಡಿಲ್ಲ! ಇದನ್ನು ತಿಳಿದವನಾದರೂ ನೀನು ಏಕೆ ಅಧಿಕವಾಗಿ ಮಾತನಾಡುತ್ತೀಯೆ? ಸುಮ್ಮನೇ ಕುಳಿತುಕೋ! ಇನ್ನೂ ನೀನು ಮಾತನಾಡುವುದನ್ನು ಮುಂದುವರೆಸಿದರೆ ನಿನ್ನನ್ನು ಕೊಂದು ಮಾಂಸಾಶೀ ಪ್ರಾಣಿಗಳಿಗೆ ಕೊಡುತ್ತೇನೆ. ಎಚ್ಚರದಿಂದಿರು! ಧಾರ್ತರಾಷ್ಟ್ರನ ಗೆಲುವಿನ ಮೇಲೆ ನನ್ನ ಮನಸ್ಸನ್ನು ಕೇಂದ್ರೀಕರಿಸಿರುವುದರಿಂದ ಮತ್ತು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲವೆಂಬ ಅಪಮಾನವು ಬರಬಾರದು ಎಂಬ ಭಯದಿಂದ ನಾನು ನಿನ್ನನ್ನು ಕೊಲ್ಲದೇ ಇನ್ನೂ ಜೀವದಿಂದಿರಿಸಿದ್ದೇನೆ! ಪುನಃ ಈ ರೀತಿಯ ಮಾತುಗಳನ್ನು ನೀನು ಆಡಿದರೆ ವಜ್ರಸಮಾನ ಗದೆಯಿಂದ ನಿನ್ನ ಶಿರಸ್ಸನ್ನು ಬೀಳಿಸುತ್ತೇನೆ! ಕೆಟ್ಟದೇಶದಲ್ಲಿ ಹುಟ್ಟಿದವನೇ! ಕರ್ಣನು ಸಾಯುತ್ತಾನೆ ಅಥವಾ ಕರ್ಣನು ಕೃಷ್ಣಾರ್ಜುನರನ್ನು ಸಂಹರಿಸುತ್ತಾನೆ ಎನ್ನುವುದನ್ನು ಇಂದು ಜನರು ಕೇಳುತ್ತಾರೆ ಮತ್ತು ನೋಡುತ್ತಾರೆ!” ಹೀಗೆ ಹೇಳಿ ರಾಧೇಯನು ಆತಂಕಗೊಳ್ಳದೇ ಮದ್ರರಾಜನಿಗೆ ಪುನಃ “ಮುಂದೆ ಹೋಗು! ಬೇಗ ಹೋಗು!” ಎಂದು ಹೇಳಿದನು.
ಯುದ್ಧಾಭಿನಂದಿನ ಆಧಿರಥ ಕರ್ಣನ ಮಾತನ್ನು ಕೇಳಿ ಶಲ್ಯನು ಪುನಃ ಕರ್ಣನಿಗೆ ನಿದರ್ಶನಗಳನ್ನು ಉದಾಹರಿಸುತ್ತಾ ಹೇಳಿದನು: “ಮದ್ಯದ ಮತ್ತಿನಲ್ಲಿರುವಂತೆ ತೋರುತ್ತಿದ್ದೀಯೆ. ಸ್ನೇಹಭಾವದಿಂದ ನಿನ್ನ ಆ ಪ್ರಮಾದವನ್ನು ಕೊನೆಗೊಳಿಸುವಂತೆ ನಿನಗೆ ಚಿಕಿತ್ಸೆಯನ್ನು ಮಾಡುತ್ತೇನೆ. ನೀಚ! ಕರ್ಣ! ನಾನು ಈಗ ಹೇಳಲಿರುವ ಕಾಗೆಯ ದೃಷ್ಟಾಂತವನ್ನು ಚೆನ್ನಾಗಿ ಕೇಳು. ಇದನ್ನು ಕೇಳಿದನಂತರ ನಿನಗಿಷ್ಟಬಂದಂತೆ ಮಾಡು! ನಾನು ನಿನಗೆ ಯಾವುದೇ ರೀತಿಯ ಅಪರಾಧವನ್ನೆಸಗಿದುದೂ ನೆನಪಿಲ್ಲ. ನೀನು ಏಕೆ ಅನಪರಾಧಿಯಾಗಿರುವ ನನ್ನನ್ನು ಕೊಲ್ಲಲು ಬಯಸುತ್ತಿರುವೆ? ರಥದಲ್ಲಿ ಸಾರಥಿಯಾಗಿ ಕುಳಿತಿರುವ ಹಿತೈಷಿಣಿ ರಾಜನಾದ ನಾನು ನಿನಗೆ ಹಿತವಾಗುವಂತೆ ತಿಳಿದುದ್ದನ್ನು ಹೇಳಬೇಕಾದುದು ಅವಶ್ಯಕವಾಗಿದೆ. ಸಮ-ವಿಷಮ ಪ್ರದೇಶಗಳು, ರಥಿಗಳ ಬಲಾಬಲಗಳು, ಸತತವೂ ರಥಿಗಳ ಮತ್ತು ಕುದುರೆಗಳ ಶ್ರಮ-ಖೇದಗಳು, ಆಯುಧದ ಪರಿಜ್ಞಾನ, ಮೃಗಪಕ್ಷಿಗಳ ಸೂಚನೆಗಳ ಅರಿವು, ಭಾರ-ಅತಿಭಾರಗಳು, ಬಾಣಗಳಿಂದುಂಟಾದ ಗಾಯಗಳ ಚಿಕಿತ್ಸೆ, ಅಸ್ತ್ರಪ್ರಯೋಗ, ಯುದ್ಧ ನಿಮಿತ್ತಗಳು ಈ ಎಲ್ಲವನ್ನೂ ಚೆನ್ನಾಗಿ ತಿಳಿದುಕೊಂಡಿರುವ ನಾನು ರಥಕುಟುಂಬಕ್ಕೇ ಸೇರಿದವನು. ಪುನಃ ನಿನಗೆ ನಿದರ್ಶನರೂಪಕವಾಗಿರುವ ಈ ಕಥೆಯನ್ನು ಹೇಳುತ್ತೇನೆ.”
ಹಂಸ-ಕಾಕೀಯ ವೃತ್ತಾಂತ
ಶಲ್ಯನು ತನ್ನ ಮಾತನ್ನು ಮುಂದುವರೆಸಿ ಹೇಳಿದನು: “ಸಮುದ್ರತೀರದ ಧರ್ಮಪ್ರಧಾನ ರಾಜನ ರಾಷ್ಟ್ರದಲ್ಲಿ ಧನಧಾನ್ಯವಂತನಾದ, ಯಜ್ಞಗಳನ್ನಾಚರಿಸುವ ದಾನಪತಿ ಶುಚಿಯು ಸ್ವಕರ್ಮಗಳಲ್ಲಿ ನಿರತನಾಗಿದ್ದನು. ಅನೇಕ ಪುತ್ರರನ್ನು ಮತ್ತು ಪ್ರಿಯ ಪತ್ನಿಯನ್ನು ಹೊಂದಿದ್ದ ಆ ಸರ್ವಭೂತಾನುಕಂಪನನು ನಿರ್ಭಯನಾಗಿ ವಾಸಿಸುತ್ತಿದ್ದನು. ಅವನ ಯಶಸ್ವೀ ಬಾಲಕ ಕುಮಾರ ಪುತ್ರರು ತಿಂದು ಮಿಕ್ಕ ಅನ್ನವನ್ನೇ ಸೇವಿಸುತ್ತಾ ಜೀವಿಸುತ್ತಿದ್ದ ಕಾಗೆಯೊಂದು ಅಲ್ಲಿತ್ತು. ಅದಕ್ಕೆ ಸದಾ ವೈಶ್ಯಪುತ್ರ ಕುಮಾರಕರು ಮಾಂಸ, ಅನ್ನ, ಮೊಸರು, ಹಾಲು, ಪಾಯಸ, ಜೇನುತುಪ್ಪ, ತುಪ್ಪ ಇವುಗಳನ್ನು ಕೊಡುತ್ತಿದ್ದರು. ವೈಶ್ಯಪುತ್ರ ಕುಮಾರಕರ ಉಚ್ಚಿಷ್ಟವನ್ನು ತಿಂದು ಕೊಬ್ಬಿಹೋಗಿದ್ದ ಆ ಕಾಗೆಯು ತನಗೆ ಸಮಾನ ಮತ್ತು ತನಗಿಂತಲೂ ಶ್ರೇಷ್ಠ ಪಕ್ಷಿಗಳನ್ನು ತಿರಸ್ಕಾರದಿಂದ ಕಾಣುತ್ತಿತ್ತು. ಒಮ್ಮೆ ಆ ಸಮುದ್ರತೀರಕ್ಕೆ ಗರುಡನಂತೆಯೇ ಹಾರುತ್ತಿದ್ದ ಪ್ರಹೃಷ್ಟ ಹಂಸಗಳು ಹಾರಿ ಬಂದವು. ಆ ಹಂಸಗಳನ್ನು ನೋಡಿದ ಕುಮಾರರು ಕಾಗೆಗೆ “ವಿಹಂಗಮ! ಪಕ್ಷಿಗಳಲ್ಲೆಲ್ಲಾ ನೀನೇ ವಿಶಿಷ್ಟನಾಗಿದ್ದೀಯೆ!” ಎಂದು ಹೇಳಿದರು. ಅಲ್ಪಬುದ್ಧಿಯ ಕುಮಾರ ಈ ರೀತಿಯ ಸುಳ್ಳಿನಿಂದ ವಂಚಿಸಲ್ಪಟ್ಟ ಕಾಗೆಯು ತನ್ನದೇ ಮೂರ್ಖತನ ಮತ್ತು ದರ್ಪದಿಂದ ಅವರ ಮಾತು ಸತ್ಯವೆಂದೇ ಭಾವಿಸಿಬಿಟ್ಟಿತು. ಅವರಲ್ಲಿ ಶ್ರೇಷ್ಠನು ಯಾರೆಂದು ತಿಳಿಯಲೋಸುಗ ಉಚ್ಚಿಷ್ಟದರ್ಪಿತ ಕಾಗೆಯು ಬಹುದೂರ ಹಾರಬಲ್ಲ ಆ ಪಕ್ಷಿಗಳಿದ್ದಲ್ಲಿಗೆ ಬಂದಿತು. ಅವುಗಳಲ್ಲಿ ಯಾವುದನ್ನು ಶ್ರೇಷ್ಠವೆಂದು ಆರಿಸಿಕೊಂಡಿತೋ ಅದರ ಬಳಿಹೋಗಿ ದುರ್ಬುದ್ಧಿ ಕಾಗೆಯು “ನಾವಿಬ್ಬರೂ ಹಾರೋಣ!” ಎಂದು ಹಾರುವ ಸ್ಪರ್ಧೆಗೆ ಕರೆಯಿತು.
“ಬಹಳವಾಗಿ ಮಾತನಾಡುತ್ತಿದ್ದ ಆ ಕಾಗೆಯ ಮಾತನ್ನು ಕೇಳಿ ಅಲ್ಲಿ ಸೇರಿದ್ದ ಬಲಶಾಲಿ ಪಕ್ಷಿಶ್ರೇಷ್ಠ ಹಂಸಗಳೆಲ್ಲವೂ ನಕ್ಕವು. ಆ ಚಕ್ರಾಂಗ ಪಕ್ಷಿಗಳು ಕಾಗೆಗೆ ಈ ರೀತಿ ಹೇಳಿದವು: “ನಾವು ಮಾನಸಸರೋವರದಲ್ಲಿ ವಾಸಿಸುವವ ಹಂಸಗಳು. ಪೃಥ್ವಿಯಲ್ಲಿ ಸಂಚರಿಸುತ್ತಿರುತ್ತೇವೆ. ಬಹಳ ದೂರದವರೆಗೆ ಹಾರಿಹೋಗಬಲ್ಲ ಸಾಮರ್ಥ್ಯವಿರುವುದರಿಂದಲೇ ನಿತ್ಯವೂ ನಮ್ಮನ್ನು ಪಕ್ಷಿಗಳಲ್ಲಿಯೇ ಶ್ರೇಷ್ಠರೆಂಬ ಮಾನ್ಯತೆಯಿದೆ. ದುರ್ಮತಿ ಕಾಗೆಯೇ! ಬಲಿಷ್ಟ ವಜ್ರಾಂಗ ಮತ್ತು ದೂರಹಾರಬಲ್ಲ ಹಂಸದೊಂದಿಗೆ ನೀನು ಹೇಗೆ ಸ್ಪರ್ಧಿಸುವೆ? ಕಾಗೆಯಾಗಿದ್ದುಕೊಂಡು ನಮ್ಮೊಡನೆ ಹಾರುವುದಕ್ಕೆ ಹೇಗೆ ಕರೆಯುತ್ತಿರುವೆ? ನಮ್ಮೊಡನೆ ನೀನು ಹೇಗೆ ಹಾರುವೆಯೆನ್ನುವುದನ್ನಾದರೂ ಮೊದಲು ಹೇಳು.”
“ಹಂಸಗಳ ಆ ಮಾತನ್ನು ಪುನಃ ಪುನಃ ನಿಂದನೆಮಾಡುತ್ತಾ ಮೂಢ ಕಾಗೆಯು ತನ್ನ ಜಾತಿಗತ ಲಘುತ್ವದಿಂದ ತನ್ನ ಬಲದ ವಿಷಯದಲ್ಲಿ ಕೊಚ್ಚಿಕೊಳ್ಳುತ್ತಾ ಹೀಗೆ ಉತ್ತರಿಸಿತು: “ನೂರೊಂದು ಪಾತಗಳಲ್ಲಿ ಹಾರಬಲ್ಲೆ ಎನ್ನುವುದರಲ್ಲಿ ಸಂಶಯವಿಲ್ಲ! ಒಂದೊಂದು ನೂರು ಯೋಜನವನ್ನೂ ವಿವಿಧ ವಿಚಿತ್ರ ಗತಿಯಲ್ಲಿ ಹಾರಬಲ್ಲೆ! ಉಡ್ಡೀನ (ಮೇಲಕ್ಕೆ ಹಾರುವುದು), ಅವಡೀನ (ಕೆಳಕ್ಕೆ ಹಾರುವುದು), ಪ್ರಡೀನ (ನಾಲ್ಕು ದಿಕ್ಕುಗಳಿಗೂ ಹಾರುವುದು), ಡೀನ (ಸಾಧಾರಣವಾಗಿ ಹಾರುವುದು), ನಿಡೀನ (ನಿಧಾನವಾಗಿ ಹಾರುವುದು), ಸಂಡೀನ (ಲಲಿತಗತಿಯಿಂದ ಹಾರುವುದು), ತಿರ್ಯಗ್ಡೀನ (ಅಡ್ಡವಾಗಿ ಹಾರುವುದು), ವಿಡೀನ (ಮತ್ತೊಂದು ಪಕ್ಷಿಯು ಹಾರುತ್ತಿರುವಂತೆಯೇ ಹಾರುವುದು), ಪರಿಡೀನ (ಹತ್ತು ದಿಕ್ಕುಗಳಲ್ಲಿಯೂ ಹಾರುವುದು), ಪರಾಡೀನ (ಹಿಂದಕ್ಕೆ ಹಾರುವುದು), ಸುಡೀನ (ಸ್ವರ್ಗದ ಕಡೆ ಹಾರುವುದು), ಅತಿಡೀನ (ಪ್ರಚಂಡವಾಗಿ ಹಾರುವುದು), ಮಹಾಡೀನ (ಬಹಳ ವೇಗವಾಗಿ ಹಾರುವುದು), ನಿಡೀನ (ರೆಕ್ಕೆಗಳನ್ನು ಅಲ್ಲಾಡಿಸದೆಯೇ ಹಾರುವುದು), ಪರಿಡೀನ, ಗತ (ಯಾವುದೋ ಲಕ್ಷ್ಯವನ್ನು ಗುರಿಯಿಟ್ಟು ಹಾರುವುದು), ಆಗತ (ಲಕ್ಷ್ಯವನ್ನು ತಲುಪಿ ಪುನಃ ಹೊರಟಿದ್ದ ಸ್ಥಳಕ್ಕೇ ಹಿಂದಿರುಗುವುದು), ಪ್ರತಿಗತ (ಹೊರಳಿಕೊಂಡು ಬರುವುದು), ಬಹ್ವಿ ಮತ್ತು ನಿಕೂಡೀನಿಕ ಇವೆಲ್ಲವುಗಳನ್ನೂ ನೀವು ನೋಡುತ್ತಿದ್ದಂತೆಯೇ ಮಾಡಬಲ್ಲೆ! ಇಂದು ನನ್ನ ಬಲವನ್ನು ನೋಡಿವಿರಂತೆ!”
“ಕಾಗೆಯು ಹೀಗೆ ಹೇಳಲು, ಅವುಗಳಲ್ಲಿಯ ಒಂದು ಹಂಸವು ನಗುತ್ತಾ ಹೇಳಿತು: “ಕಾಗೆಯೇ! ನೀನು ನೂರಾಒಂದು ಪತನಕ್ರಮಗಳನ್ನೂ ಬಲ್ಲೆ ಎನ್ನುವುದು ನಿಶ್ಚಯವಾದುದು. ಏಕೆಂದರೆ ಎಲ್ಲ ಪಕ್ಷಿಗಳೂ ಒಂದೇ ಪತನಕ್ರಮವನ್ನು ಅನುಸರಿಸುತ್ತವೆ. ಅದೇ ಪತನಕ್ರಮವನ್ನು ನಾನು ಕೂಡ ಅನುಸರಿಸುತ್ತೇನೆ. ಬೇರೆ ಯಾವುದೂ ನನಗೆ ತಿಳಿದಿಲ್ಲ. ನಿನಗೆ ಇಷ್ಟವಾಗಿರುವ ಯಾವುದಾದರೂ ಪತನಕ್ರಮವನ್ನುಸರಿಸಿ ಹಾರು!” “ಒಂದೇ ಪಾತದಿಂದ ಈ ಹಂಸವು ನೂರುಪಾತನ ಕ್ರಮಗಳನ್ನು ತಿಳಿದಿರುವ ಕಾಗೆಯನ್ನು ಜಯಿಸೀತು!” ಎಂದು ಅಲ್ಲಿ ಸೇರಿದ್ದ ಇತರ ಕಾಗೆಗಳೂ ಅಪಹಾಸ್ಯಮಾಡಿದವು. “ಶೀಘ್ರವಾಗಿ ಹಾರಬಲ್ಲ ಈ ಬಲಿಷ್ಠ ಕಾಗೆಯು ನೂರರಲ್ಲಿ ಒಂದೇ ಪತನಕ್ರಮದಿಂದ ಹಂಸವನ್ನು ಉರುಳಿಸಿಬಿಡುತ್ತದೆ!” ಅನಂತರ ಆ ಹಂಸ-ವಾಯಸಗಳು ಸ್ಪರ್ಧೆಗೆ ಇಳಿದರು: ಚಕ್ರಾಂಗವು ಒಂದೇ ಪತನಕ್ರಮವನ್ನು ಬಳಸಿತು ಮತ್ತು ಕಾಗೆಯು ನೂರು ಪತನಕ್ರಮವನ್ನು ಬಳಸಿತು. ಚಕ್ರಾಂಗ ಹಂಸವು ಹಾರಿತು. ಆಗ ಕಾಗೆಯೂ ಕೂಡ ನೋಡುವವರನ್ನು ವಿಸ್ಮಯಗೊಳಿಸಲು ತನಗೆ ತಿಳಿದಿದ್ದ ಎಲ್ಲ ಪತನ ಕ್ರಮಗಳನ್ನು ತೋರಿಸುತ್ತಾ ಹಾರಿತು. ಕಾಗೆಯ ವಿಚಿತ್ರ ಪತನಕ್ರಮಗಳನ್ನು ನೋಡಿ ಮುದಿತರಾದ ಕಾಗೆಗಳು ಜೋರು ಸ್ವರಮಾಡಿ ಅದನ್ನು ಪ್ರೋತ್ಸಾಹಿಸುತ್ತಿದ್ದವು. ಅಪ್ರಿಯವಾಗಿ ಮಾತನಾಡಿ ಹಂಸವನ್ನು ಅಪಹಾಸ್ಯಮಾಡುತ್ತಿದ್ದವು. ಅಲ್ಲಿಂದಿಲ್ಲಿಗೆ ಹಾರುತ್ತಾ ಹಂಸವು ನಿಧಾನವಾಯಿತೆಂದು ಹೇಳುತ್ತಿದ್ದವು. ಮರಗಳಿಂದ ಕೆಳಕ್ಕೆ ಮತ್ತು ನೆಲದಿಂದ ಮೇಲಕ್ಕೆ ಹಾರುತ್ತಿದ್ದವು ಮತ್ತು ವಿವಿಧವಾಗಿ ಕೂಗುತ್ತಾ ಕಾಗೆಗೆ ಜಯಕಾರಹಾಕುತ್ತಿದ್ದವು. ಹಂಸವಾದರೋ ಮೃದುಗತಿಯೊಂದರಲ್ಲಿಯೇ ಹಾರಲು ತೊಡಗಿತು.
“ಕ್ಷಣಕಾಲ ಕಾಗೆಯೇ ಮುಂದೆಯಿದ್ದಂತೆ ತೋರಿತು! ಹಂಸದ ಹಾರುವಿಕೆಯನ್ನು ಅಪಹಾಸ್ಯಮಾಡುತ್ತ “ಸ್ಪರ್ಧಿಸಲು ಹಾರಿಹೋದ ನಿಮ್ಮ ಈ ಹಂಸವು ಹಿಂದೆಯೇ ಉಳಿದುಕೊಂಡಿದೆ!” ಎಂದು ಕೂಗಿ ಹಂಸಗಳಿಗೆ ಕಾಗೆಗಳು ಹೇಳಿದವು. ಅದನ್ನು ಕೇಳಿದ ಹಂಸವು ವೇಗದಿಂದ ಪಶ್ಚಿಮ ದಿಕ್ಕಿನಲ್ಲಿ ಮೇಲೆ ಮೇಲೆ ಹಾರಿ ವರುಣಾಲಯ ಸಾಗರವನ್ನು ತಲುಪಿ ಅದರ ಮೇಲೆ ಹಾರತೊಡಗಿತು. ಆಗ ಕಾಗೆಯನ್ನು ಭಯವು ಪ್ರವೇಶಿಸಿತು. ಶ್ರಮಾನ್ವಿತ ಕಾಗೆಯು ವಿಚೇತಸನಾಗಿ ಇಳಿಯಲು ಆ ಜಲಾರ್ಣವದಲ್ಲಿ ಯಾವ ದ್ವೀಪ-ಮರಗಳನ್ನೂ ಕಾಣದೇ ವಿಶ್ರಾಂತಿಗೆ ಎಲ್ಲಿ ಇಳಿಯಲಿ ಎಂದು ಯೋಚಿಸತೊಡಗಿತು. ಬಹುಸತ್ತ್ವಗಣಾಲಯವಾಗಿರುವ ಈ ಸಮುದ್ರವನ್ನು ದಾಟಲು ಅಸಾಧ್ಯ. ನೂರಾರು ಮಹಾಪ್ರಾಣಿಗಳು ಈ ನೀರಿನಲ್ಲಿವೆ ಮತ್ತು ಇದು ಆಕಾಶಕ್ಕಿಂತಲೂ ದೊಡ್ಡದಾಗಿ ತೋರುತ್ತಿದೆ! ದಿಕ್ಕುಗಳಲ್ಲೆಲ್ಲಾ ನೀರನ್ನೇ ತುಂಬಿಸಿಕೊಂಡಿರುವ ಸಮುದ್ರದ ವಿಶೇಷ ಗಾಂಬೀರ್ಯವನ್ನು ಸಮುದ್ರದಲ್ಲಿರುವವರಿಗೇ ತಿಳಿದುಕೊಳ್ಳಲು ಅಸಾಧ್ಯ! ಸ್ವಲ್ಪವೇ ದೂರ ಹಾರಿರುವ ಕಾಗೆಗೆ ಹೇಗೆ ತಾನೇ ಅದು ತಿಳಿಯಬೇಕು? ಮುಹೂರ್ತಕಾಲದಲ್ಲಿಯೇ ಕಾಗೆಯನ್ನು ದಾಟಿ ಹೋಗಿದ್ದ ಹಂಸವು ಕಾಗೆಯು ಹಿಂದೆ ಬರುತ್ತಿರುವುದನ್ನು ಕಾಣದೇ ಹೋದಾಗ ಹಿಂದಿರುಗಲು ಕಾಗೆಗೆ ಶಕ್ಯವಾಗಲಾರದು ಎಂದು ತಿಳಿದು ಕಾಗೆಯ ನಿರೀಕ್ಷಣೆಯಲ್ಲಿ ಆಕಾಶದಲ್ಲಿಯೇ ಕಾಯತೊಡಗಿತು. ಕಾಗೆಯು ನಿಃಶಕ್ತನಾಗುತ್ತಿರುವುದನ್ನು ಕಂಡ ಹಂಸವು ಸತ್ಪುರುಷರು ನಡೆದುಕೊಳ್ಳಬೇಕಾದ ರೀತಿಯನ್ನು ಸ್ಮರಿಸಿಕೊಂಡು ಮುಳುಗುತ್ತಿದ್ದ ಕಾಗೆಯನ್ನು ಮೇಲೆತ್ತಬೇಕೆಂದು ನಿಶ್ಚಯಿಸಿ ಹೇಳಿತು: “ಪದೇ ಪದೇ ನೀನು ಅನೇಕ ಪತನಕ್ರಮಗಳ ಬಗ್ಗೆ ಮಾತನಾಡುತ್ತಿದ್ದೆ. ಆದರೆ ಈ ರೀತಿಯ ಪತನಕ್ರಮವನ್ನು ಮಾತ್ರ ರಹಸ್ಯವಾಗಿಟ್ಟುಕೊಂಡು ನಮಗೆ ಹೇಳಲೇ ಇಲ್ಲ! ಕಾಗೆಯೇ! ನೀನು ಈಗ ಕಷ್ಟಪಟ್ಟು ಹಾರುತ್ತಾ ರೆಕ್ಕೆಗಳಿಂದ ಮತ್ತು ಪುನಃ ಪುನಃ ಕೊಕ್ಕೆಯಿಂದ ನೀರನ್ನು ಸ್ಪರ್ಷಿಸುತ್ತಿರುವ ನಿನ್ನ ಈ ಪತನ ಕ್ರಮದ ಹೆಸರೇನು?” ಕಾಗೆಯು ರೆಕ್ಕೆಗಳೆರಡರಿಂದ ಮತ್ತು ಕೊಕ್ಕಿನಿಂದ ಸಮುದ್ರದ ನೀರನ್ನು ಮುಟ್ಟುತ್ತಿತ್ತು. ತುಂಬಾ ಬಳಲಿದ್ದ ಕಾಗೆಯು ಒಮ್ಮೆಲೇ ನೀರಿನೊಳಗೆ ಬಿದ್ದಿತು ಕೂಡ.
“ಹಂಸವು ಹೇಳಿತು: “ಕಾಗೆಯೇ! ನೂರಾ ಒಂದು ಪತನಕ್ರಮಗಳನ್ನು ತಿಳಿದಿದ್ದೆಯೆಂದು ಕೊಚ್ಚಿಕೊಳ್ಳುತ್ತಿದ್ದೆ! ಹಿಂದೆ ನಾನಾವಿಧದಲ್ಲಿ ಮಾತನಾಡಿದುದು ಅನೃತವಾಯಿತೇ?”
“ಕಾಗೆಯು ಹೇಳಿತು: “ಹಂಸ! ಉಚ್ಚಿಷ್ಟವನ್ನು ತಿಂದು ಕೊಬ್ಬಿದ್ದ ನಾನು ನನ್ನನ್ನು ಗರುಡನೆಂದೇ ತಿಳಿದುಕೊಂಡು ಅನೇಕ ಕಾಗೆಗಳನ್ನು ಮತ್ತು ಇತರ ಪಕ್ಷಿಗಳನ್ನು ಅಪಮಾನಿಸಿದ್ದೇನೆ. ಪ್ರಾಣಗಳೊಂದಿಗೆ ನಿನ್ನಲ್ಲಿಗೆ ಶರಣು ಬಂದಿದ್ದೇನೆ. ನನ್ನನ್ನು ದ್ವೀಪದ ತೀರಕ್ಕೆ ತಲುಪಿಸು! ಒಂದುವೇಳೆ ನಾನು ಕ್ಷೇಮವಾಗಿ ಸ್ವದೇಶಕ್ಕೆ ಪುನಃ ತೆರಳಿದರೆ ನಾನು ಇನ್ನು ಮುಂದೆ ಯಾರನ್ನೂ ಅಪಮಾನಿಸುವುದಿಲ್ಲ! ಈ ಆಪತ್ತಿನಿಂದ ನನ್ನನ್ನು ಉದ್ಧರಿಸು!”
“ಹೀಗೆ ಹೇಳಿದ ಮಹಾಸಾಗರದಲ್ಲಿ ಮುಳುಗಿಹೋಗುತ್ತಿದ್ದ ದೀನ, ಶಕ್ತಿಯಿಲ್ಲದೇ ಕಾ ಕಾ ಎಂದು ಕೂಗುತ್ತಾ ಕಾಗೆಯು ನೀರಿನಲ್ಲಿ ನರಳುತ್ತಿರುವುದನ್ನು ಸಹಿಸಿಕೊಳ್ಳಲಾಗದೇ ಹಂಸವು ನಡುಗುತ್ತಿದ್ದ ಕಾಗೆಯನ್ನು ಕಾಲುಗಳಿಂದ ಹಿಡಿದು ಮೇಲೆತ್ತಿ ಮೆಲ್ಲನೆ ತನ್ನ ಬೆನ್ನಮೇಲೆ ಹಾಕಿಕೊಂಡಿತು. ಬಳಲಿ ಮೂರ್ಛೆಹೋಗಿದ್ದ ಆ ಕಾಗೆಯನ್ನು ಬೆನ್ನಿನಮೇಲಿರಿಸಿಕೊಂಡು ಹಂಸವು ಸ್ಪರ್ಧೆಗಾಗಿ ಎಲ್ಲಿಂದ ಹಾರಿದ್ದರೋ ಆ ದ್ವೀಪಕ್ಕೆ ಪುನಃ ಬಂದಿತು. ಕಾಗೆಯನ್ನು ಅಲ್ಲಿಗೆ ತಂದಿರಿಸಿ ಆರೈಕೆಮಾಡಿ ಪಕ್ಷಿ ಹಂಸವು ಮನೋವೇಗದಲ್ಲಿ ತನಗಿಷ್ಟವಾದ ಪ್ರದೇಶಕ್ಕೆ ಹೊರಟುಹೋಯಿತು.
“ವೈಶ್ಯಕುಲದವರ ಉಚ್ಛಿಷ್ಟಭೋಜನವನ್ನುಂಡು ಆ ಕಾಗೆಯಂತೆ ನೀನೂ ಕೂಡ ಧಾರ್ತರಾಷ್ಟ್ರರ ಎಂಜಲೂಟವನ್ನು ಉಂಡು ನಿನಗೆ ಸಮನಾದವರ ಮತ್ತು ಶ್ರೇಷ್ಠರಾದವರೆಲ್ಲರನ್ನೂ ಅಪಮಾನಗೊಳಿಸುತ್ತಿರುವೆ! ಅಂದು ವಿರಾಟನಗರದಲ್ಲಿ ದ್ರೋಣ-ದ್ರೌಣಿ-ಕೃಪ-ಭೀಷ್ಮ ಮತ್ತು ಅನ್ಯ ಕೌರವರಿಂದ ರಕ್ಷಿತನಾಗಿದ್ದಾಗಲೂ, ಒಂಟಿಗನಾಗಿದ್ದ ಪಾರ್ಥನನ್ನು ನೀನು ಏಕೆ ಸಂಹರಿಸಲಿಲ್ಲ? ಅಂದು ಕಿರೀಟಿಯು ಸಿಂಹವು ಗುಳ್ಳೇನರಿಯನ್ನು ಭಯಪಡಿಸುವಂತೆ ಏಕಾಂಗಿಯಾಗಿ ನಿಮ್ಮೆಲ್ಲರನ್ನೂ ಪ್ರತ್ಯೇಕವಾಗಿ ಮತ್ತು ಸಾಮೂಹಿಕವಾಗಿ ಚದುರಿಸಿ ಪರಾಜಯಗೊಳಿಸುವಾಗ ನಿನ್ನ ವೀರ್ಯವು ಎಲ್ಲಿಗೆ ಹೋಗಿತ್ತು? ವಿಜಯಿ ಸವ್ಯಸಾಚಿಯು ನಿನ್ನ ಸಹೋದರನನ್ನು ಸಂಹರಿಸಿದುದನ್ನು ನೋಡಿಯೂ ಕೂಡ ಕುರುವೀರರು ನೋಡುತ್ತಿದ್ದಂತೆಯೇ ಮೊದಲು ಪಲಾಯನಮಾಡಿದವನು ನೀನೇ ಅಲ್ಲವೇ? ಹಾಗೆಯೇ ದ್ವೈತವನದಲ್ಲಿ ಗಂಧರ್ವರು ಆಕ್ರಮಿಸಿದಾಗ ಎಲ್ಲ ಕುರುಗಳನ್ನೂ ಬಿಟ್ಟು ಮೊದಲು ಪಲಾಯನಮಾಡಿದವನು ನೀನೇ ಅಲ್ಲವೇ? ರಣದಲ್ಲಿ ಚಿತ್ರಸೇನನೇ ಮುಖ್ಯನಾಗಿದ್ದ ಗಂಧರ್ವಸೇನೆಯನ್ನು ಸಂಹರಿಸಿ ಗೆದ್ದು ಪಾರ್ಥನು ಪತ್ನಿಯೊಡನೆ ದುರ್ಯೋಧನನನ್ನು ಬಿಡುಗಡೆಗೊಳಿಸಿದ್ದನು. ಪುರಾಣಪುರುಷರಾದ ಪಾರ್ಥ-ಕೇಶವರ ಪುನಃ ಪ್ರಭಾವವನ್ನು ರಾಜಸಂಸದಿಯ ಸಭೆಯಲ್ಲಿ ಪರಶುರಾಮನೇ ವರ್ಣಿಸಿದ್ದನು. ಮಹೀಕ್ಷಿತರ ಸನ್ನಿಧಿಯಲ್ಲಿ ದ್ರೋಣ-ಭೀಷ್ಮರೂ ಕೂಡ ಕೃಷ್ಣಾರ್ಜುನರು ಅವಧ್ಯರು ಎಂದು ಸತತವೂ ಹೇಳುತ್ತಿದ್ದುದನ್ನು ನೀನೂ ಕೇಳಿರುವೆ. ಏನೇನನ್ನು ಮಾಡುವುದರಲ್ಲಿ ಧನಂಜಯನು ನಿನಗಿಂತಲೂ ಅತಿರಿಕ್ತ ಎನ್ನುವುದನ್ನು ನಾನು ನಿನಗೆ ಹೇಳುತ್ತಿದ್ದೇನೆ.
“ಸರ್ವಪ್ರಾಣಿಗಳಲ್ಲಿಯೂ ಬ್ರಾಹ್ಮಣನು ಹೇಗೆ ಶ್ರೇಷ್ಠನೋ ಹಾಗೆ ಅರ್ಜುನನು ನಿನಗಿಂತಲೂ ಅಧಿಕನು. ಈಗಲೇ ನೀನು ಪ್ರಧಾನ ರಥದಲ್ಲಿ ಕುಳಿತಿರುವ ವಸುದೇವನ ಪುತ್ರ ಮತ್ತು ಪಾಂಡವ ಧನಂಜಯರನ್ನು ನೋಡುವಿಯಂತೆ! ದೇವಾಸುರ ಮನುಷ್ಯರಲ್ಲಿ ಪ್ರಖ್ಯಾತರಾದ ಈ ನರರ್ಷಭರಿಬ್ಬರೂ ಪ್ರಕಾಶದಲ್ಲಿ ಸೂರ್ಯಚಂದ್ರರಿಗೆ ಸಮಾನರಾದವರೆಂದು ವಿಖ್ಯಾತರಾಗಿದ್ದಾರೆ. ಅವರನ್ನು ಅಪಮಾನಗೊಳಿಸಬೇಡ. ಅಚ್ಯುತ-ಅರ್ಜುನರು ಈ ರೀತಿ ನರಸಿಂಹರೆಂದು ತಿಳಿದು ಅವರನ್ನು ಮಾತುಗಳಿಂದ ಅವಮಾನಿಸಬೇಡ. ಕೊಚ್ಚಿಕೊಳ್ಳುವುದನ್ನು ನಿಲ್ಲಿಸಿ ಸುಮ್ಮನಾಗು!”
ಮದ್ರಾಧಿಪತಿಯ ಅಪ್ರಿಯಮಾತುಗಳನ್ನು ಕೇಳಿದ ಯುದ್ಧದಲ್ಲಿ ಹಿಮ್ಮೆಟ್ಟದಿರುವ ಆಧಿರಥಿಯು ಶಲ್ಯನಿಗೆ ಈ ಮಾತುಗಳನ್ನಾಡಿದನು: “ಅರ್ಜುನ-ವಾಸುದೇವರು ಎಂಥಹರೆನ್ನುವುದು ನನಗೂ ತಿಳಿದಿದೆ. ಅರ್ಜುನನ ರಥದ ಕುದುರೆಗಳನ್ನು ಓಡಿಸುವ ಶೌರಿಯ ಬಲವನ್ನೂ ಪಾಂಡವನಲ್ಲಿರುವ ಮಹಾಸ್ತ್ರಗಳನ್ನೂ ನಾನು ಯಥಾವತ್ತಾಗಿ ತಿಳಿದಿರುತ್ತೇನೆ. ಆದರೆ ಅವುಗಳನ್ನು ನೀನು ಪರೋಕ್ಷವಾಗಿ ಮಾತ್ರ ತಿಳಿದುಕೊಂಡು ನನಗಿಂದು ಹೇಳುತ್ತಿದ್ದೀಯೆ! ಅವರಿಬ್ಬರನ್ನೂ ಪ್ರತ್ಯಕ್ಷವಾಗಿ ತಿಳಿದಿಕೊಂಡಿರುವ ನಾನು ಶಸ್ತ್ರಭೃತರಲ್ಲಿ ವರಿಷ್ಠರಾದ ಅವರೊಂದಿಗೆ ಸ್ವಲ್ಪವೂ ಭೀತಿಯಿಲ್ಲದೇ ಹೋರಾಡುತ್ತೇನೆ. ಆದರೆ ಬ್ರಾಹ್ಮಣಸತ್ತಮ ರಾಮನು ಹೇಳಿದ ಮಾತುಗಳು ನನ್ನನ್ನು ಇಂದು ಅತ್ಯಂತ ಅಧಿಕವಾಗಿ ಪರಿತಾಪಗೊಳಿಸುತ್ತಿವೆ.
“ಹಿಂದೆ ನಾನು ದಿವ್ಯಾಸ್ತ್ರಗಳನ್ನು ಬಯಸಿ ಬ್ರಾಹ್ಮಣನ ವೇಷದಲ್ಲಿ ರಾಮನೊಂದಿಗೆ ವಾಸಿಸುತ್ತಿದ್ದೆನು. ಅಲ್ಲಿಯೂ ಸಹ ಅರ್ಜುನನ ಹಿತಾರ್ಥಿ ದೇವರಾಜನಿಂದ ನನಗೆ ವಿಘ್ನವುಂಟಾಯಿತು. ಅವನು ವಿರೂಪ ಕೀಟವಾಗಿ ನನ್ನ ತೊಡೆಯನ್ನೇರಿ ಕೊರೆದು ದೇಹವನ್ನು ಪ್ರವೇಶಿಸಿದ್ದನು. ಗುರುವಿನ ಭಯದಿಂದಾಗಿ ನಾನು ಆಗ ಸ್ವಲ್ಪವಾದರೂ ಕದಲಲೇ ಇಲ್ಲ. ಅನಂತರ ಎಚ್ಚರಗೊಂಡ ವಿಪ್ರ ರಾಮನು ಆ ದೃಶ್ಯವನ್ನು ಕಂಡನು. ನಾನು ಯಾರೆಂದು ಅವನು ಕೇಳಲು, ಸೂತನೆಂದು ನಾನು ಅವನಿಗೆ ಹೇಳಿದೆನು. ಆಗ ಆ ಮಹರ್ಷಿಯು ನನ್ನನ್ನು ಶಪಿಸಿದನು: “ಸೂತ! ವಂಚನೆಯಿಂದ ಪಡೆದುಕೊಂಡಿರುವ ಈ ಅಸ್ತ್ರವು ಕರ್ಮಕಾಲದಲ್ಲಿ ನಿನಗೆ ಹೊಳೆಯುವುದಿಲ್ಲ! ನಿನ್ನ ಮೃತ್ಯುಕಾಲದಲ್ಲಿಯೂ ನಿನಗಿದು ಸ್ಮರಣೆಗೆ ಬರುವುದಿಲ್ಲ. ಏಕೆಂದರೆ ಅಬ್ರಾಹ್ಮಣರಲ್ಲಿ ಈ ಬ್ರಹ್ಮಾಸ್ತ್ರವು ಶಾಶ್ವತವಾಗಿ ಇರುವುದಿಲ್ಲ.”
“ಇಂದಿನ ಈ ಭಯಂಕರ ತುಮುಲ ಸಂಗ್ರಾಮದಲ್ಲಿ ನನಗೆ ಆ ಶಸ್ತ್ರವು ದೊರಕದೆಯೂ ಇರಬಹುದು. ವರುಣನು ಪ್ರಜೆಗಳನ್ನು ಮುಳುಗಿಸಲು ತನ್ನ ಅಲೆಗಳನ್ನೇ ಪ್ರಕಟಿಸುತ್ತಾನೆ. ಆದರೆ ಆ ಸಮುದ್ರದ ಅಲೆಗಳನ್ನು ಕೂಡ ತೀರವು ತಡೆಯುತ್ತದೆ. ಆಕರ್ಣಾಂತವಾಗಿ ಬಿಲ್ಲನ್ನು ಸೆಳೆದು ಅಮೋಘ ಬಾಣಸಂಘಗಳನ್ನು ಬಿಡುವ ಲೋಕೋತ್ತಮ ಕುಂತೀಪುತ್ರನನ್ನು ಇಂದು ನಾನು ಎದುರಿಸಿ ಪಾರ್ಥನೆಂಬ ಅಲೆಯನ್ನು ಬಾಣಗಳೆಂಬ ತೀರದಿಂದ ತಡೆಯುತ್ತೇನೆ. ಆ ಅರ್ಜುನನನ್ನು ನಾನು ಇಂದಿನ ಸುಘೋರ ಯುದ್ಧದಲ್ಲಿ ಎದುರಿಸಿಸುತ್ತೇನೆ. ನೋಡು! ಅತಿಮಾನಿನಿ ಪಾಂಡವನು ಯುದ್ಧಕಾಮುಕನು. ನನ್ನ ಮೇಲೆ ಅಮಾನುಷ ಮಹಾಸ್ತ್ರಗಳನ್ನು ಪ್ರಯೋಗಿಸುತ್ತಾನೆ. ಯುದ್ಧದಲ್ಲಿ ಅವನ ಅಸ್ತ್ರಗಳನ್ನು ಅಸ್ತ್ರಗಳಿಂದ ನಿರಸನಗೊಳಿಸಿ ಉತ್ತಮ ಶರಗಳಿಂದ ಪಾರ್ಥನನ್ನು ಕೆಡವುತ್ತೇನೆ. ದಿವಾಕರನಂತೆ ಎಲ್ಲ ದಿಕ್ಕುಗಳನ್ನೂ ಬಾಣಗಳೆಂಬ ಕಿರಣಗಳಿಂದ ಪರಿತಾಪ ಗೊಳಿಸುವ ಉಗ್ರ ಧನಂಜಯನನ್ನು ಬಾಣಗಳಿಂದ ಮುಚ್ಚಿಬಿಡುತ್ತೇನೆ! ಪ್ರಜ್ವಲಿಸುವ ಧೂಮಶಿಖ ವೈಶ್ವಾನರನಂತೆ ತೇಜಸ್ಸಿನಿಂದ ಈ ಲೋಕವನ್ನು ಸುಡುತ್ತಿರುವ ಪಾರ್ಥನನ್ನು ಯುದ್ಧದಲ್ಲಿ ಶರವರ್ಷಗಳಿಂದ ಶಾಂತಗೊಳಿಸುತ್ತೇನೆ. ವೃಕ್ಷಗಳನ್ನೇ ಬುಡದೊಂದಿಗೆ ಕಿತ್ತು ಬಿಸಾಕುವ ವೇಗವಾದ ಉಗ್ರ ಚಂಡಮಾರುತವನ್ನು ಹಿಮವತ್ಪರ್ವತವು ಹೇಗೆ ಸಹಿಸಿಕೊಳ್ಳುವುದೋ ಹಾಗೆ ಕ್ರುದ್ಧನಾದ, ಶತ್ರುಸೈನ್ಯಗಳನ್ನು ಮಥಿಸುವ, ಬಲವಂತ ಪ್ರಹಾರಿ, ಮತ್ತು ಅಸಹನಶಾಲಿ ಧನಂಜಯನನ್ನು ನಾನು ಯುದ್ಧದಲ್ಲಿ ಎದುರಿಸುತ್ತೇನೆ. ಖಾಂಡವಪ್ರಸ್ಥದಲ್ಲಿ ದೇವತೆಗಳೂ ಸೇರಿ ಎಲ್ಲ ಪ್ರಾಣಿಗಳನ್ನೂ ಜಯಿಸಿದ ಸವ್ಯಸಾಚಿಯೊಡನೆ ನನ್ನೊಬ್ಬನನ್ನು ಬಿಟ್ಟು ಜೀವವನ್ನು ರಕ್ಷಿಸಿಕೊಳ್ಳುವ ಯಾವ ಮನುಷ್ಯನು ತಾನೇ ಯುದ್ಧಮಾಡಬಲ್ಲನು? ಆ ಪಾಂಡವನ ಪುರುಷವನ್ನು ನಾನೇ ಕ್ಷತ್ರಿಯರ ಸಮಿತಿಗಳಲ್ಲಿ ಹೃಷ್ಟನಾಗಿ ವರ್ಣಿಸಬಲ್ಲೆ. ಮೂರ್ಖ ಮೂಢಚೇತನನಾದ ನೀನು ನನಗೇಕೆ ಅರ್ಜುನನ ಪೌರುಷದ ಕುರಿತು ಹೇಳುತ್ತಿರುವೆ? ಅಪ್ರಿಯನೂ, ನಿಷ್ಠುರನೂ, ಕ್ಷುದ್ರನೂ, ಕ್ಷಮಾಶೂನ್ಯನೂ, ಕ್ಷಮಾವಂತರನ್ನು ನಿಂದಿಸುವನೂ ಆದ ಪುರುಷನನ್ನು ಮತ್ತು ಅವನಂತಿರುವ ನೂರಾರು ಜನರನ್ನು ನಾನು ಸಂಹರಿಸಿಬಿಡುತ್ತೇನೆ. ಆದರೆ ಕಾಲವಶದಿಂದ ನಿನ್ನನ್ನು ನಾನು ಕ್ಷಮಿಸುತ್ತಿದ್ದೇನೆ. ಪಾಪಕರ್ಮಿಯೇ! ಪಾಂಡವನಿಗೋಸ್ಕರವಾಗಿಯೇ ನೀನು ನನ್ನೊಡನೆ ಈ ರೀತಿ ಮಾತನಾಡಿ ನಿನ್ನ ಮೂಢತನವನ್ನು ಪ್ರದರ್ಶಿಸುತ್ತಿರುವೆ! ನನ್ನೊಡನೆ ಸರಳತೆಯಿಂದ ವರ್ತಿಸಬೇಕಾಗಿರುವ ನೀನು ಕುಟಿಲತನದಿಂದ ವರ್ತಿಸುತ್ತಿರುವೆ. ಏಳು ಹೆಜ್ಜೆಗಳು ಜೊತೆಯಲ್ಲಿ ನಡೆದರೆ ಪರಸ್ಪರ ಮೈತ್ರಿಯು ಬೆಳೆಯುವುದೆಂಬುದನ್ನು ಮಿತ್ರದ್ರೋಹಿಯಾದ ನೀನು ಇಂದು ಸುಳ್ಳನ್ನಾಗಿಸಿರುವೆ! ಅತಿದಾರುಣ ಮೃತ್ಯುಮಯ ಕಾಲವು ಬಂದೊದಗಿದೆ. ದುರ್ಯೋಧನನೂ ಯುದ್ಧಭೂಮಿಗೆ ಆಗಮಿಸಿದ್ದಾನೆ. ಅವನ ಅರ್ಥಸಿದ್ಧಿಯಾಗಲೆಂದು ನನ್ನ ಮನೋಕಾಂಕ್ಷೆಯಾದರೆ, ನಿನ್ನ ಮನಸ್ಸು ಬೇರೆ ಯಾವುದರಲ್ಲಿಯೋ ತೊಡಗಿರುವುದಂತೆ ಮಾತನಾಡುತ್ತಿದ್ದೀಯೆ!
“ಮಿದ, ನಂದ, ಪ್ರೀ, ತ್ರಾ, ಮಿ ಅಥವಾ ಮುದ್ ಧಾತುಗಳಿಂದ ನಿಪಾತನದ ಮೂಲಕ ಮಿತ್ರ ಶಬ್ಧದ ಸಿದ್ಧಿಯಾಗುತ್ತದೆ ಎಂದು ಹಿಂದೆ ವಿಪ್ರರು ಹೇಳಿರುತ್ತಾರೆ. ಈ ಶಬ್ಧದ ಸಂಪೂರ್ಣ ಅರ್ಥವು ನನಗೆ ಮತ್ತು ದುರ್ಯೋಧನನಿಗೆ ತಿಳಿದಿವೆ. ಶದ್, ಶಾಸ್, ಶೋ, ಶೃ, ಶ್ರಸ್ ಅಥವ್ವಾ ಷದ್ ಮತ್ತು ನಾನಾಪ್ರಕಾರದ ಉಪಸರ್ಗಗಳಿಂದ ಯುಕ್ತವಾದ ಸೂದ್ ಧಾತುಗಳಿಂದ ಶತ್ರು ಶಬ್ಧದ ಸಿದ್ಧಿಯಾಗುತ್ತದೆ. ನನ್ನ ವಿಷಯದಲ್ಲಿ ಈ ಎಲ್ಲ ಧಾತುಗಳ ತಾತ್ಪರ್ಯವನ್ನೂ ನೀನು ಪ್ರಾಯಶಃ ಉಪಯೋಗಿಸುತ್ತಿರುವೆ. ದುರ್ಯೋಧನನಿಗೆ ಪ್ರಿಯವನ್ನುಂಟುಮಾಡಲು ಮತ್ತು ನಿನಗೆ ಅಪ್ರಿಯವಾದುದನ್ನು ಮಾಡಲು, ನನ್ನ ಯಶಕ್ಕಾಗಿ ಮತ್ತು ಈಶ್ವರನಿಗಾಗಿ ನಾನು ಪಾಂಡವ-ವಾಸುದೇವರನ್ನು ಹೋರಾಡುತ್ತೇನೆ. ನನ್ನ ಯುದ್ಧಕರ್ಮವನ್ನು ಇಂದು ನೀನು ನೋಡು! ಇಂದು ನನ್ನ ಉತ್ತಮ ಬ್ರಹ್ಮಾಸ್ತ್ರಗಳನ್ನೂ, ದಿವ್ಯಾಸ್ತ್ರ ಮಾನುಷ್ಯಾಸ್ತ್ರಗಳನ್ನೂ ನೋಡು! ಮದಿಸಿದ ಆನೆಯು ಇನ್ನೂ ಹೆಚ್ಚು ಮದದಿಂದ ಕೂಡಿದ ಆನೆಯೊಂದಿಗೆ ಸೆಣಸಾಡುವಂತೆ ಉಗ್ರವೀರ್ಯ ಅರ್ಜುನನನೊಡನೆ ಯುದ್ಧಮಾಡುತ್ತೇನೆ. ಅಜೇಯವೂ ಅಪ್ರತಿಮವೂ ಆದ ಬ್ರಹ್ಮಾಸ್ತ್ರವನ್ನು ಮನಸ್ಸಿನಲ್ಲಿಯೇ ಸ್ಮರಿಸಿಜಯಕ್ಕಾಗಿ ಪಾರ್ಥನ ಮೇಲೆ ಪ್ರಯೋಗಿಸುತ್ತೇನೆ. ಇಂದು ಯುದ್ಧದಲ್ಲಿ ನನ್ನ ರಥದ ಚಕ್ರವು ಹಳ್ಳದಲ್ಲಿ ಬೀಳದೆಯೇ ಹೋದರೆ ಅರ್ಜುನನು ಅದರಿಂದ ತಪ್ಪಿಸಿಕೊಳ್ಳಲಾರನು. ದಂಡಪಾಣಿ ವೈವಸ್ವತ ಯಮನಿಗಾಗಲೀ, ಪಾಶವನ್ನು ಹಿಡಿದ ವರುಣನಿಗಾಗಲೇ, ಗದಾಧರ ಧನಪತಿ ಕುಬೇರನಿಗಾಗಲೀ, ವಜ್ರದೊಂದಿಗೆ ವಾಸವನನ್ನಾಗಲೀ ಮತ್ತು ಇತರ ಅನ್ಯ ಶತ್ರುಗಳಿಗಾಗಲೀ ನಾನು ಭಯಪಡುವವನಲ್ಲ. ಇದನ್ನು ಚೆನ್ನಾಗಿ ತಿಳಿದುಕೋ! ಅವರಿಬ್ಬರಲ್ಲಿಯೂ ನನಗೆ ಭಯವಿಲ್ಲ! ಪಾರ್ಥನಿಗಾಗಲೀ ಜನಾರ್ದನಿಗಾಗಲೀ ನಾನು ಹೆದರುವುದಿಲ್ಲ. ಅವರಿಬ್ಬರೊಡನೆ ನನ್ನ ಯುದ್ಧವು ಇಂದು ನಡೆದೇ ನಡೆಯುತ್ತದೆ. “ಸಂಗ್ರಾಮದಲ್ಲಿ ಯುದ್ಧಮಾಡುತ್ತಿರುವಾಗ ಭಯಂಕರ ಪರಿಸ್ಥಿತಿಯು ಬಂದೊದಗಿದಾಗ ನಿನ್ನ ರಥಚಕ್ರವು ಹಳ್ಳದಲ್ಲಿ ಬೀಳಲಿ!” ಎಂದು ನನಗೆ ಓರ್ವ ಬ್ರಾಹ್ಮಣನು ಹೇಳಿದ್ದನು. ಬ್ರಾಹ್ಮಣನ ಆ ಬಲಶಾಲಿ ಪ್ರಹರಕ್ಕೆ ನಾನು ಭಯಪಟ್ಟಿದ್ದೇನೆ. ಚಂದ್ರನನ್ನೇ ರಾಜನನ್ನಾಗಿ ಪಡೆದಿರುವ ಬ್ರಾಹ್ಮಣರು ಶಾಪಾನುಗ್ರಹಗಳಿಂದ ಇತರರ ಸುಖದುಃಖಗಳಿಗೆ ಈಶ್ವರಪ್ರಾಯರಾಗಿರುತ್ತಾರೆ.
“ನಿರ್ಜನ ವನದಲ್ಲಿ ತಿರುಗಾಡುತ್ತಿರುವಾಗ ಪ್ರಮತ್ತನಾಗಿ ಬಾಣದಿಂದ ತಪಸ್ಸೇ ನಿಧಿಯಾಗಿದ್ದ ಆ ಬ್ರಾಹ್ಮಣನ ಹೋಮಧೇನುವಿನ ಕರುವನ್ನು ನಾನು ಸಂಹರಿಸಿದ್ದೆ. ಏಳುನೂರು ಆನೆಗಳನ್ನೂ ನೂರಾರು ದಾಸಿ-ದಾಸರನ್ನೂ ಆ ದ್ವಿಜಮುಖ್ಯನಿಗೆ ಕೊಟ್ಟರೂ ಅವನು ನನ್ನ ಮೇಲೆ ಪ್ರಸನ್ನನಾಗಲಿಲ್ಲ. ಬಿಳಿಯ ಕರುಗಳಿದ್ದ ಹದಿನಾಲ್ಕು ಸಾವಿರ ಕಪ್ಪು ಬಣ್ಣದ ಹಸುಗಳನ್ನು ಕೊಟ್ಟರೂ ಆ ದ್ವಿಜಸತ್ತಮನ ಅನುಗ್ರಹವು ದೊರಕಲಿಲ್ಲ. ಸತ್ಕರಿಸಿ ಸರ್ವಕಾಮಗಳಿಂದ ಸಂಪನ್ನವಾಗಿದ್ದ ಮನೆಯನ್ನೂ ನನ್ನಲ್ಲಿದ್ದ ಎಲ್ಲ ಸಂಪತ್ತನ್ನೂ ಕೊಟ್ಟರೂ ಅವನು ಅವುಗಳನ್ನು ಬಯಸಲಿಲ್ಲ. ಪ್ರಯತ್ನಪಟ್ಟು ನನ್ನ ಅಪರಾಧಕ್ಕೆ ಕ್ಷಮೆಯನ್ನು ಬೇಡುತ್ತಿದ್ದ ನನಗೆ “ಸೂತ! ನಾನು ಹೇಳಿದಂತೆಯೇ ನಡೆಯುತ್ತದೆ. ಬೇರೆ ರೀತಿಯಲ್ಲಿ ನಡೆಯುವುದು ಸಾಧ್ಯವೇ ಇಲ್ಲ!” ಎಂದು ಹೇಳಿ ಬಿಟ್ಟನು. “ಅಸತ್ಯವನ್ನಾಡುವುದು ಪ್ರಜೆಗಳನ್ನು ನಾಶಗೊಳಿಸುತ್ತದೆ ಮತ್ತು ಪಾಪವನ್ನೂ ಕೊಡುತ್ತದೆ. ಆದುದರಿಂದ ಧರ್ಮರಕ್ಷಣಾರ್ಥವಾಗಿ ಸುಳ್ಳನ್ನು ಹೇಳಬಾರದು. ಬ್ರಾಹ್ಮಣರಿಗೆ ಪ್ರಾಪ್ತವಾಗಬಲ್ಲ ಉತ್ತಮ ಗತಿಯನ್ನು ಲೋಭಗೊಳಿಸಿ ನಾಶಗೊಳಿಸಬೇಡ. ನೀನು ಪ್ರಾಯಶ್ಚಿತ್ತವನ್ನು ಮಾಡಿಕೊಂಡಾಗಿದೆ. ನನ್ನ ಮಾತನ್ನು ಸುಳ್ಳನ್ನಾಗಿಸಲು ಲೋಕದಲ್ಲಿ ಸಾಧ್ಯವಿಲ್ಲ. ನಾನು ಹೇಳಿದುದನ್ನು ನೀನು ಪಡೆದೇ ಪಡೆಯುತ್ತೀಯೆ.”
“ನೀನು ನನ್ನನ್ನು ನಿಂದಿಸುತ್ತಿರುವೆಯಾದರೂ ನಿನ್ನ ಮೇಲಿನ ಸುಹೃದ್ಭಾವದಿಂದ ನಾನು ನಿನಗೆ ಇದನ್ನು ಹೇಳಿರುವೆನು. ಆದರೂ ನೀನು ನನ್ನನ್ನು ನಿಂದಿಸುತ್ತಲೇ ಇರುವೆ ಎನ್ನುವುದನ್ನೂ ತಿಳಿದುಕೊಂಡಿದ್ದೇನೆ. ನೀನಾಡಿದುದಕ್ಕೆ ಉತ್ತರವನ್ನೂ ಕೊಡುತ್ತೇನೆ. ಕೇಳು.”
ಉತ್ತರವಾಗಿ ಮಾತನಾಡುತ್ತಿದ್ದ ಅರಿಂದಮ ಮದ್ರರಾಜನನ್ನು ತಡೆದು ರಾಧೇಯನು ಪುನಃ ಮಾತನಾಡಿದನು: “ಶಲ್ಯ! ನಿದರ್ಶನಗಳನ್ನಿತ್ತು ಪ್ರಯತ್ನಪಟ್ಟು ನನ್ನನ್ನು ಹಳಿದು ಮಾತನಾಡುತ್ತಿದ್ದೀಯೆ! ನಿನ್ನ ಮಾತಿನಿಂದ ಯುದ್ಧದಲ್ಲಿ ನನ್ನನ್ನು ಹೆದರಿಸಲು ಶಕ್ಯವಿಲ್ಲ. ವಾಸವನೊಡಗೂಡಿ ಸರ್ವ ದೇವತೆಗಳೂ ನನ್ನೊಡನೆ ಯುದ್ಧಮಾಡಿದರೂ ಅದರಲ್ಲಿ ನನಗೆ ಭಯವಿಲ್ಲದಿರುವಾಗ ಇನ್ನು ಕೇಶವನೊಂದಿಗಿರುವ ಪಾರ್ಥನಿಂದ ಎಂಥಹ ಭಯ? ಕೇವಲ ಮಾತಿನಿಂದ ನನ್ನನ್ನು ಹೆದರಿಸಲು ಎಂದೂ ಶಕ್ಯವಾಗಲಾರದು. ಹೀಗೆ ರಣದಲ್ಲಿ ನಿನ್ನಿಂದ ಬೆದರುವವರು ಬೇರೆ ಯಾರಾದರೂ ಇದ್ದರೆ ಅವರ ಬಳಿ ಹೋಗು! ದುರ್ಮತೇ! ಈ ರೀತಿಯ ಕಠೋರ ಮಾತುಗಳು ನೀಚನಿಗೇ ಬಲವನ್ನು ಕೊಡುವಂಥಹುವು. ನನ್ನಲ್ಲಿರುವ ಸದ್ಗುಣಗಳನ್ನು ಪಡೆಯಲು ಅಸಮರ್ಥನಾಗಿರುವ ನೀನು ಬಹಳವಾಗಿ ಮಾತನಾಡುತ್ತಿರುವೆ! ಕರ್ಣನು ಹುಟ್ಟಿರುವುದು ಭಯಪಡುವುದಕ್ಕಲ್ಲ. ನಾನು ಹುಟ್ಟಿರುವುದು ವಿಕ್ರಮ-ಯಶಸ್ಸುಗಳಿಗಾಗಿ!
“ಧೃತರಾಷ್ಟ್ರನ ಸನ್ನಿಧಿಯನ್ನು ಹೇಳಿದುದನ್ನು ಮತ್ತು ನಾನು ಕೇಳಿದುದನ್ನು ಏಕಾಗ್ರಚಿತ್ತನಾಗಿ ಕೇಳು. ಬ್ರಾಹ್ಮಣರು ವಿವಿಧ ವಿಚಿತ್ರ ದೇಶಗಳು ಮತ್ತು ರಾಜರ ಪೂರ್ವವೃತ್ತಾಂತಗಳನ್ನು ಹೇಳುತ್ತಾ ಧೃತರಾಷ್ಟ್ರನನ್ನು ಉಪಾಸಿಸುತ್ತಿದ್ದರು. ಅಲ್ಲಿ ಪುರಾಣ ವೃತ್ತಾಂತಗಳನ್ನು ಹೇಳುತ್ತಿದ್ದ ಓರ್ವ ದ್ವಿಜೋತ್ತಮನು ಬಾಹ್ಲೀಕ ಮತ್ತು ಮದ್ರ ದೇಶಗಳನ್ನು ಹಳಿಯುತ್ತಾ ಈ ಮಾತುಗಳನ್ನಾಡಿದ್ದನು: “ಹಿಮಾಲಯ, ಗಂಗೆ, ಯಮುನಾ, ಸರಸ್ವತಿ ಮತ್ತು ಕುರುಕ್ಷೇತ್ರಗಳ ಗಡಿಗಳ ಹೊರಗಿರುವ ಮತ್ತು ಆರನೆಯದಾದ ಸಿಂಧು ಮತ್ತು ಐದು ನದಿಗಳ ಮಧ್ಯೆ ವಾಸಿಸುತ್ತಿರುವ ಬಾಹ್ಲೀಕರನ್ನು ಧರ್ಮಬಾಹಿರರೆಂದೂ ಅಶುಚಿಗಳೆಂದೂ ವರ್ಜಿಸಬೇಕು. ರಾಜಕುಲದ್ವಾರದಲ್ಲಿದ್ದ ಗೋವರ್ಧನ ಎಂಬ ವಟವೃಕ್ಷವನ್ನೂ ಸುಭಾಂಡ ಎನ್ನುವ ಚೌಕವನ್ನೂ ನಾನು ಬಾಲ್ಯದಿಂದ ಜ್ಞಾಪಕದಲ್ಲಿಟ್ಟುಕೊಂಡಿದ್ದೇನೆ. ಯಾವುದೋ ಗೂಢ ಕಾರ್ಯಕ್ಕಾಗಿ ನಾನು ಬಾಹ್ಲೀಕರಲ್ಲಿ ಉಳಿದುಕೊಂಡಿದ್ದೆನು. ಆಗ ಅಲ್ಲಿ ಅವರೊಂದಿಗೆ ವ್ಯವಹರಿಸುತ್ತಾ ಅವರ ಸಮಾಚಾರಗಳೆಲ್ಲವನ್ನೂ ನಾನು ತಿಳಿದುಕೊಂಡೆನು. ಶಾಕಲವೆಂಬ ಹೆಸರಿನ ನಗರ, ಆಪಗಾ ಎಂಬ ಹೆಸರಿನ ನದಿಯ ಬಳಿಯಿರುವ ಜರ್ತಿಕಾ ಎಂಬ ಹೆಸರಿನ ಬಾಹ್ಲೀಕರ ನಡತೆಗಳು ಅತಿ ನಿಂದನೀಯವಾದವುಗಳು. ಧಾನ್ಯ-ಬೆಲ್ಲಗಳಿಂದ ಮಾಡಿದ ಮದ್ಯವನ್ನು ಕುಡಿಯುತ್ತಾ, ಬೆಳ್ಳುಳ್ಳಿಯೊಂದಿಗೆ ಗೋಮಾಂಸ-ಅಪೂಪ-ಮಾಂಸ-ಯವಾನ್ನಗಳನ್ನು ತಿನ್ನುವ ಅವರು ಶೀಲವರ್ಜಿತರು. ಅಲ್ಲಿಯ ಸ್ತ್ರೀಯರು ನಗರ ದ್ವಾರಗಳಲ್ಲಿ, ಪ್ರಾಕಾರಗಳಲ್ಲಿ ಮಾಲೆ-ಗಂಧಗಳನ್ನು ಧರಿಸದೆಯೇ ಮತ್ತರಾಗಿ ನಗ್ನರಾಗಿ ನಗುತ್ತಾ, ಹಾಡುತ್ತಾ, ಕುಣಿಯುತ್ತಿರುತ್ತಾರೆ. ಅಮಲಿನಲ್ಲಿರುವ ಮದೋತ್ಕಟೆಯರು ಕತ್ತೆ ಮತ್ತು ಒಂಟೆಗಳ ಕಿರುಚಾಟದ ಧ್ವನಿಯಲ್ಲಿ ವಿವಿಧ ಗೀತೆಗಳನ್ನು ಹಾಡುತ್ತಾ ಅನ್ಯೋನ್ಯರನ್ನು ಬಹಿರಂಗವಾಗಿ ಕರೆಯುತ್ತಿರುತ್ತಾರೆ. “ಅಯ್ಯೋ! ಹತಳಾದೆ! ಅಯ್ಯೋ ಹತಳಾದೆ! ಸ್ವಾಮಿ ಅಥವಾ ಗಂಡನಿಂದ ಹತಳಾದೆ!” ಎಂದು ಕೂಗಿಕೊಳ್ಳುತ್ತಾ ಆ ಮಂದೆಯರು ಪರ್ವ-ಉತ್ಸವಗಳಲ್ಲಿ ನರ್ತಿಸುತ್ತಿರುತ್ತಾರೆ. ಕುರುಜಾಂಗಲದಲ್ಲಿ ವಾಸಿಸುತ್ತಿದ್ದ ಯಾವನೋ ಒಬ್ಬ ಬಾಹ್ಲೀಕ ಮುಖ್ಯನು ಅತಿ ಸಂತೋಷವಿಲ್ಲದ ತನಗೆ ನಂಟಿದ್ದ ಸ್ತ್ರೀಯಳ ಕುರಿತು ಹೇಳುತ್ತಿದ್ದನು: “ಆ ಎತ್ತರ ಶರೀರದ ಬಿಳುಪಾಗಿರುವ ಸೂಕ್ಷ್ಮವಸ್ತ್ರವನ್ನು ಧರಿಸಿರುವ ಅವಳು ಕುರುವಾಸಿಯಾಗಿರುವ ಈ ಬಾಹ್ಲೀಕನನ್ನು ನಿಜವಾಗಿಯೂ ಸ್ಮರಿಸಿಕೊಳ್ಳುತ್ತ ಮಲಗಿರಬಹುದು! ಶತದ್ರು-ಇರಾವತೀ ನದಿಗಳನ್ನು ದಾಟಿ ನನ್ನ ದೇಶಕ್ಕೆ ಹೋಗಿ ಸ್ಥೂಲ ಜನನೇಂದ್ರಿಯವುಳ್ಳ ಸುಂದರ ಸ್ತ್ರೀಯನ್ನು ಯಾವಾಗ ನೋಡುತ್ತೇನೆ? ಯಾರ ಅಪಾಂಗಗಳು ಮಣಿಶಿಲಾಲೇಪನದಿಂದ ಉಜ್ವಲವಾಗಿ ಕಾಣುತ್ತವೆಯೋ, ಯಾರ ಎರಡು ಕಣ್ಣುಗಳೂ ಲಲಾಟವು ಅಂಜನದಿಂದ ಸುಶೋಭಿತವಾಗಿವೆಯೋ, ಯಾರು ಕಂಬಲ-ಮೃಗಚರ್ಮಗಳನ್ನು ಧರಿಸಿರುವರೋ ಅಂತಹ ಗೌರಾಂಗ, ಪ್ರಿಯದರ್ಶನೆ ಸುಂದರಿಯರು ಭೇರೀ-ಮೃದಂಗ-ಶಂಖ-ಮರ್ದಲ ವಾದ್ಯಗಳ ಸಹಿತ ನೃತ್ಯಮಾಡುವುದನ್ನು ನಾನು ಯಾವಾಗ ನೋಡುವೆನು? ಮದೋನ್ಮತ್ತರಾದ ನಾವು ಕತ್ತೆ, ಒಂಟೆ ಮತ್ತು ಹೇಸರಗತ್ತೆಗಳ ಮೇಲೆ ಬನ್ನೀಮರ-ಗೋನುಮರ-ಬಿದಿರುಮೆಳೆಗಳ ಅರಣ್ಯಗಳಲ್ಲಿ ಯಾವಾಗ ಸುಖಪ್ರಯಾಣ ಮಾಡುತ್ತೇವೆ? ಮಜ್ಜಿಗೆಯಿಂದ ಕೂಡಿದ ಕಚ್ಚಾಯಗಳನ್ನೂ ಹಿಟ್ಟಿನುಂಡೆಗಳನ್ನೂ ತಿನ್ನುತ್ತಾ ಬಲಿಷ್ಠರಾಗಿ ಹಾದಿಯಲ್ಲಿ ಸಿಕ್ಕುವ ಹಾದಿಗರ ಮೇಲೆ ಬೀಳುತ್ತಾ ಅವರ ಬಟ್ಟೆ-ಬರೆಗಳನ್ನು ದೋಚಿಕೊಂಡು ಅವರಿಗೆ ಯಾವಾಗ ಪೆಟ್ಟುಗಳನ್ನು ಕೊಡುವೆವು?” ಇಂತಹ ಹೀನ ವರ್ತನೆಗಳಿರುವ ದುರಾತ್ಮ ಬಾಹ್ಲೀಕರೊಂದಿಗೆ ಬುದ್ಧಿಯಿರುವ ಯಾವ ಮನುಷ್ಯನು ತಾನೇ ಒಂದು ಮುಹೂರ್ತಕಾಲವಾದರೂ ವಾಸಿಸಿರಬಲ್ಲನು?”
“ನಿರರ್ಥಕ ಆಚಾರ-ವಿಚಾರಗಳುಳ್ಳ ಬಾಹ್ಲೀಕರ ಕುರಿತು ಈ ರೀತಿಯಾಗಿ ಬ್ರಾಹ್ಮಣನು ಹೇಳಿದ್ದನು. ಅವರ ಪಾಪ-ಪುಣ್ಯಗಳ ಆರನೆಯ ಒಂದು ಭಾಗಕ್ಕೆ ಅವರ ರಾಜನಾಗಿರುವ ನೀನು ಅರ್ಹನಾಗಿರುವೆ! ಹೀಗೆ ಹೇಳಿದ ನಂತರವೂ ಆ ಬ್ರಾಹ್ಮಣನು ಉದ್ಧತರಾದ ಬಾಹ್ಲೀಕರ ಕುರಿತು ಇನ್ನೂ ಅನೇಕ ವಿಷಯಗಳನ್ನು ಹೇಳಿದನು. ಅವುಗಳನ್ನು ಹೇಳುತ್ತೇನೆ. ಕೇಳು. “ಅಲ್ಲಿ ಶಾಕಲನಗರದಲ್ಲಿರುವ ರಾಕ್ಷಸಿಯೋರ್ವಳು ಕೃಷ್ಣಪಕ್ಷದ ಚತುರ್ದರ್ಶಿಯ ರಾತ್ರಿ ಸದಾ ದುಂದುಭಿಯನ್ನು ಬಾರಿಸುತ್ತಾ ಹೀಗೆ ಹಾಡುತ್ತಿರುತ್ತಾಳೆ: “ನಾನು ವಸ್ತ್ರಾಲಂಕಾರಭೂಷಿತೆಯಾಗಿ ಗೋಮಾಂಸವನ್ನು ತಿಂದು ಬೆಲ್ಲದಿಂದ ಮಾಡಿದ ಸುರೆಯನ್ನು ಕುಡಿದು ತೃಪ್ತಳಾಗಿ, ಸ್ಥೂಲಕಾಯರಾದ ಹೊಂಬಣ್ಣದ ಸ್ತ್ರೀಯರೊಂದಿಗೆ ಬೊಗಸೆ ಈರುಳ್ಳಿಯೊಡನೆ ಕುರಿಮಾಂಸವನ್ನು ತಿನ್ನುತ್ತಾ ಈ ಶಾಕಲನಗರದಲ್ಲಿ ಬಾಹ್ಲೀಕರ ಗೀತೆಯನ್ನು ಪುನಃ ಎಂದು ಹಾಡುತ್ತೇನೆ?” “ಹಂದಿ, ಕೋಳಿ, ಹಸು, ಕತ್ತೆ, ಒಂಟೆ, ಕುರಿ – ಇವುಗಳ ಮಾಂಸವನ್ನು ತಿನ್ನದಿರುವವರ ಜನ್ಮವು ವ್ಯರ್ಥವೇ ಸರಿ!” ಹೀಗೆ ಶಾಕಲಪುರವಾಸಿ ಅಬಾಲವೃದ್ಧರೂ ನರನಾರಿಯರೂ ಮದಿರೆಯ ಅಮಲಿನಲ್ಲಿ ಕೂಗಿ ಹಾಡುತ್ತಿರುತ್ತಾರೆ. ಅಂಥವರಲ್ಲಿ ಧರ್ಮವು ಹೇಗೆ ತಾನೆ ಇರಬಲ್ಲದು? ಶಲ್ಯ! ಇದನ್ನು ಅರ್ಥಮಾಡಿಕೋ! ಇನ್ನೂ ಇದೆ. ಕುರುಸಂಸದಿಯಲ್ಲಿ ನಮಗೆ ಅನ್ಯ ಬ್ರಾಹ್ಮಣನು ಹೇಳಿದುದನ್ನೂ ನಿನಗೆ ಹೇಳುತ್ತೇನೆ. “ಶತದ್ರು, ವಿಪಾಶಾ, ಇರಾವತೀ, ಚಂದ್ರಭಾಗಾ, ವಿತಸ್ತಾ ಈ ಐದು ನದಿಗಳೂ ಸಿಂಧೂ ನದಿಯೊಡನೆ ಹರಿಯುತ್ತವೆ. ಆ ಅರಟ್ಟ ಎಂಬ ದೇಶದಲ್ಲಿ ಧರ್ಮಗಳು ನಷ್ಟವಾಗಿಹೋಗಿದೆ. ಅವುಗಳನ್ನು ತ್ಯಜಿಸಬೇಕು. ಸಂಸ್ಕಾರಹೀನರಾದ, ಅನೈತಿಕ ಮಾರ್ಗದಿಂದ ಹುಟ್ಟಿದ, ಯಜ್ಞಾದಿಕರ್ಮಗಳನ್ನು ಮಾಡದಿರುವ, ಪ್ರಣಷ್ಟ ಧರ್ಮಕರ್ಮಗಳಿರುವ ಬಾಹ್ಲೀಕರು ನೀಡುವ ಹವ್ಯಕವ್ಯಗಳನ್ನು ಪಿತೃಗಳಾಗಲೀ, ಬ್ರಾಹ್ಮಣರಾಗಲೀ ಸ್ವೀಕರಿಸುವುದಿಲ್ಲವೆಂದು ನಾವು ಕೇಳಿದ್ದೇವೆ.”
ಸಾಧುಸಂಸದಿಯಲ್ಲಿ ಬ್ರಾಹ್ಮಣನೊಬ್ಬನು ಈ ರೀತಿ ಹೇಳಿದ್ದನು: “ದಯಾಹೀನ ಬಾಹ್ಲೀಕರು ಹಿಟ್ಟು-ಮದ್ಯಗಳಿಂದ ದೂಷಿತವಾಗಿರುವ, ನಾಯಿನೆಕ್ಕಿರುವ ಮರದ ಮರಿಗೆಗಳಲ್ಲಿಯೂ ಮಣ್ಣಿನ ಶರಾವೆಗಳಲ್ಲಿಯೂ ಊಟ ಮಾಡುತ್ತಾರೆ. ಕುರಿ, ಒಂಟೆ, ಮತ್ತು ಕತ್ತೆಗಳ ಹಾಲನ್ನು ಕುಡಿಯುತ್ತಾರೆ. ಆ ಹಾಲಿನಿಂದಾದ ಮೊಸರು-ಬೆಣ್ಣೆ-ತುಪ್ಪಗಳನ್ನೂ ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ. ಸಂಕರ ಜಾತಿಯ ಮಕ್ಕಳುಳ್ಳ, ಸಕಲರ ಆಹಾರವನ್ನೂ ತಿನ್ನುವ, ಎಲ್ಲ ಪ್ರಾಣಿಗಳ ಹಾಲನ್ನೂ ಕುಡಿಯುವ ನೀಚ ಅರಟ್ಟ ಎಂಬ ಹೆಸರಿನ ಬಾಹ್ಲೀಕರನ್ನು ವಿಧ್ವಾಂಸನಾದವನು ವರ್ಜಿಸಬೇಕು.” ಶಲ್ಯ! ಇದನ್ನು ಅರ್ಥಮಾಡಿಕೋ! ಇನ್ನೂ ಇದೆ.
“ಕುರುಸಂಸದಿಯಲ್ಲಿ ನಮಗೆ ಅನ್ಯ ಬ್ರಾಹ್ಮಣನು ಹೇಳಿದುದನ್ನೂ ನಿನಗೆ ಹೇಳುತ್ತೇನೆ. “ಯುಗಂಧರೆಯಲ್ಲಿ ಹಾಲುಕುಡಿದು, ಅಚ್ಯುತಸ್ಠಳದಲ್ಲಿ ಉಳಿದು, ಭೂತಿಲಯದಲ್ಲಿ ಸ್ನಾನಮಾಡಿದವನು ಹೇಗೆ ತಾನೇ ಸ್ವರ್ಗಕ್ಕೆ ಹೋಗುತ್ತಾನೆ? ಪರ್ವತದಿಂದ ಹರಿದುಬರುವ ಐದು ನದಿಗಳು ಎಲ್ಲಿ ಹರಿಯುತ್ತವೆಯೋ ಅಲ್ಲಿ ಅರಟ್ಟ ಎಂಬ ಹೆಸರಿನ ಬಾಹ್ಲೀಕರಿದ್ದಾರೆ. ಆರ್ಯರಾದವರು ಅವರೊಡನೆ ಎರಡು ದಿವಸಗಳು ಸಹ ತಂಗಬಾರದು. ವಿಪಾಶಾ ನದಿಯಲ್ಲಿ ಬಹಿ ಮತ್ತು ಹ್ಲೀಕ ಎಂಬ ಹೆಸರಿನ ಎರಡು ಪಿಶಾಚಿಗಳಿವೆ. ಅವರ ಸಂತಾನವೇ ಬಾಹ್ಲೀಕರು. ಇವರು ಪ್ರಜಾಪತಿಯ ಸೃಷ್ಟಿಗೆ ಸೇರಿದವರಿಲ್ಲ. ಧರ್ಮದೂಷಿತವಾದ ಕಾರಸ್ಕರ, ಮಹಿಷಕ, ಕಲಿಂಗ, ಕೀಕಟಾಟ, ಕರ್ಕೋಟಕ ಮತ್ತು ವೀರಕರನ್ನು ವಿವರ್ಜಿಸಬೇಕು. ದೊಡ್ಡ ಮರದ ಕಾಂಡದಂತಹ ಸೊಂಟದ ರಾಕ್ಷಸಿಯೊಬ್ಬಳು ತೀರ್ಥಯಾತ್ರೆಗೆ ಹೊರಟಿದ್ದವನ ಮನೆಯಲ್ಲಿ ಒಂದು ರಾತ್ರಿ ತಂಗಿದ್ದು ಅವನೊಡನೆ ಈ ಮಾತನ್ನು ಹೇಳಿದ್ದಳು: “ಸಿಂಧು-ಸೌವೀರಗಳ ನಡುವೆ ವಾಸಿಸುವ ಅರಟ್ಟಾ ಹೆಸರಿನ ದೇಶದಲ್ಲಿರುವ ಬಾಹ್ಲೀಕರೆಂಬ ಹೆಸರಿನ ಜನಾಂಗವು ಹೀನವಾದುದು!” ಶಲ್ಯ! ಇದನ್ನು ಅರ್ಥಮಾಡಿಕೋ! ಇನ್ನೂ ಇದೆ. ನಿನಗೆ ಹೇಳುತ್ತೇನೆ. ನಾನು ಹೇಳುವುದನ್ನು ಸಂಪೂರ್ಣವಾಗಿ ಏಕಾಗ್ರಮನಸ್ಕನಾಗಿ ಕೇಳು!
“ಹಿಂದೆ ಓರ್ವ ಬ್ರಾಹ್ಮಣನು ಶಿಲ್ಪಿಯ ಮನೆಗೆ ಅತಿಥಿಯಾಗಿ ಬಂದಿದ್ದನು. ಅಲ್ಲಿಯ ಆಚಾರವನ್ನು ನೋಡಿ ಪ್ರೀತನಾಗಿ ಅವನು ಶಿಲ್ಪಿಗೆ ಹೇಳಿದನು: “ನಾನು ಬಹಳಕಾಲ ಹಿಮಲಯ ಶಿಖರದಲ್ಲಿ ಏಕಾಂಗಿಯಾಗಿ ವಾಸಿಸಿದ್ದೆನು. ಮತ್ತು ಅನೇಕ ದೇಶಗಳನ್ನೂ, ನಾನಾ ಧರ್ಮಗಳನ್ನು ಅನುಸರಿಸುವವರನ್ನೂ ನೋಡಿದ್ದೇನೆ. ಇವುಗಳಲ್ಲಿ ಯಾವುದರಲ್ಲಿಯೂ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಪ್ರಜೆಗಳಿಲ್ಲ. ವೇದಪಾರಗರು ಹೇಳಿರುವ ಧರ್ಮವನ್ನೇ ಅವರೆಲ್ಲರೂ ಅನುಸರಿಸುತ್ತಾರೆ. ನಾನಾ ಧರ್ಮಾಚರಣೆಗಳುಳ್ಳ ದೇಶಗಳಲ್ಲಿ ಸಂಚರಿಸುತ್ತಾ ನಾನು ಬಾಹ್ಲೀಕ ದೇಶಕ್ಕೆ ಬಂದೆನು. ಮಹಾರಾಜ! ಅಲ್ಲಿಯ ಈ ವಿಷಯವನ್ನು ಕೇಳು! ಅಲ್ಲಿ ಮೊದಲು ಬ್ರಾಹ್ಮಣನಾಗಿದ್ದವನು ಅನಂತರ ಕ್ಷತ್ರಿಯನಾಗುತ್ತಾನೆ. ಅನಂತರ ವೈಶ್ಯನಾಗುತ್ತಾನೆ ಮತ್ತು ಶೂದ್ರನೂ ಆಗುತ್ತಾನೆ. ಅನಂತರ ನಾಪಿತನಾಗಿ ಪುನಃ ಬ್ರಾಹ್ಮಣನೂ ಆಗುತ್ತಾನೆ. ಬ್ರಾಹ್ಮಣನಾಗಿದ್ದವನು ಅಲ್ಲಿಯೇ ಪುನಃ ದಾಸನೂ ಆಗುತ್ತಾನೆ. ಒಂದೇ ಕುಲದಲ್ಲಿ ವಿಪ್ರರೂ ಉಳಿದ ಅನ್ಯರು ಕಾಮಚಾರಿಗಳೂ ಆಗಿರಬಹುದು. ಗಾಂಧಾರ, ಮದ್ರಕ ಮತ್ತು ಬಾಹ್ಲೀಕರು ಸಾಮಾನ್ಯವಾಗಿ ಅಲ್ಪಚೇತಸರು. ಆ ದೇಶವೇ ಧರ್ಮಸಂಕರ ಕಾರಕವಾದುದು ಎಂದು ಕೇಳಿದೆನು. ಇಡೀ ಪೃಥ್ವಿಯನ್ನು ತಿರುಗಾಡಿದರೂ ಬಾಹ್ಲೀಕದಲ್ಲಿ ಮಾತ್ರ ಈ ವಿಪರ್ಯಾಸವನ್ನು ಕಾಣಬಹುದು.” ಶಲ್ಯ! ಇದನ್ನು ಅರ್ಥಮಾಡಿಕೋ! ಇನ್ನೂ ಇದೆ.
“ಬಾಹ್ಲೀಕರನ್ನು ಹೀಗಳೆಯುವ ಇನ್ನೊಬ್ಬನು ಹೇಳಿದ ಮಾತನ್ನು ನಿನಗೆ ಹೇಳುತ್ತೇನೆ. “ಹಿಂದೊಮ್ಮೆ ದರೋಡೆಕೋರರು ಅರಟ್ಟ ದೇಶದಿಂದ ಸಾಧ್ವಿಯೊಬ್ಬಳನ್ನು ಅಪಹರಿಸಿಕೊಂಡು ಹೋಗಿ ಅಧರ್ಮತಃ ಅವಳೊಂದಿಗೆ ಕೂಡಿದರು. ಅದರಿಂದ ಕುಪಿತಳಾದ ಅವಳು ಅವರನ್ನು ಶಪಿಸಿದಳು: “ಇನ್ನೂ ಬಾಲಕಿಯಾಗಿರುವ, ಬಂಧು-ಬಾಂಧವರನ್ನು ಹೊಂದಿರುವ ನನ್ನನ್ನು ಅಪಹರಿಸಿ ಅಧರ್ಮದಿಂದ ನನ್ನೊಡನೆ ಸೇರಿದುದಕ್ಕಾಗಿ ಇನ್ನು ಮುಂದೆ ನಿಮ್ಮ ಕುಲದಲ್ಲಿ ಹುಟ್ಟುವ ಸ್ತ್ರೀಯರೆಲ್ಲರೂ ವ್ಯಭಿಚಾರಿಣಿಯರಾಗುತ್ತಾರೆ. ನರಾಧಮರೇ! ಈ ಘೋರ ಪಾಪದಿಂದ ನಿಮಗೆ ಮುಕ್ತಿಯೇ ಇಲ್ಲ!” ಬಹುಷಃ ಬಾಹ್ಲೀಕವನ್ನು ಬಿಟ್ಟು ಬೇರೆ ಎಲ್ಲ ನಾನಾ ದೇಶಗಳಲ್ಲಿಯೂ – ಕುರುಗಳು, ಪಾಂಚಾಲರು, ಶಾಲ್ವರು, ಮತ್ಸ್ಯರು, ನೈಮಿಷರು, ಕೋಸಲರು, ಕಾಶಿದೇಶೀಯರು, ಅಂಗರು, ಕಳಿಂಗರು, ಮಹಧರು, ಚೇದಿದೇಶೀಯರು ಮಹಾಭಾಗರು ಮತ್ತು ಶಾಶ್ವತ ಧರ್ಮವನ್ನು ತಿಳಿದವರು. ಮತ್ಸ್ಯದೇಶದಿಂದ ಹಿಡಿದು ಕುರುಪಾಂಚಾಲ ದೇಶದ ವರೆಗೂ, ನೈಮಿಷಾರಣ್ಯದಿಂದ ಹಿಡಿದು ಚೇದಿ ದೇಶದ ವರೆಗೂ ಇರುವ ದೇಶಗಳಲ್ಲಿ ವಾಸಿಸುವ ಜನರು, - ಮದ್ರದೇಶದವರು ಮತ್ತು ಪಂಚನದ ದೇಶದವರನ್ನು ಬಿಟ್ಟು – ಸಂತರಾಗಿದ್ದು ಪುರಾಣ ಧರ್ಮದಂತೆ ಜೀವನ ನಡೆಸುತ್ತಾರೆ. ನೀನು ಆ ಜನರ ರಕ್ಷಕ ಮತ್ತು ರಾಜನಾಗಿದ್ದುಕೊಂಡು ಅವರ ಶುಭ-ದುಷ್ಕೃತಗಳಲ್ಲಿ ಆರನೆಯ ಒಂದು ಭಾಗಕ್ಕೆ ಅರ್ಹನಾಗಿರುವೆ. ಇದನ್ನು ತಿಳಿದು ಧರ್ಮದ ವಿಷಯದಲ್ಲಿ ಬೇರೆ ಯಾವ ಮಾತನ್ನೂ ಆಡನಾಡದೇ ಜಡನಾಗಿ ಸುಮ್ಮನಿದ್ದುಬಿಡು! ಅಥವಾ ಅವರನ್ನು ರಕ್ಷಿಸದೇ ಇರುವ ನೀನು ಕೇವಲ ಅವರ ದುಷ್ಕೃತಗಳಿಗೆ ಭಾಗಿಯಾಗುವೆ. ಪ್ರಜೆಗಳನ್ನು ರಕ್ಷಿಸುವವನಿಗೆ ಮಾತ್ರ ಅವರ ಪುಣ್ಯಗಳ ಭಾಗವು ದೊರೆಯುತ್ತದೆ. ಆದರೆ ನೀನು ಆ ಪುಣ್ಯಗಳ ಭಾಗಧಾರಿಯಲ್ಲ!
“ಹಿಂದೆ ಸರ್ವದೇಶಗಳಲ್ಲಿ ಶಾಶ್ವತವಾಗಿರುವ ಧರ್ಮವನ್ನು ಗೌರವಿಸುತ್ತಾ ಪಿತಾಮಹನು ಪಾಂಚನದ ದೇಶಗಳ ಧರ್ಮವನ್ನು ನೋಡಿ ಧಿಕ್ಕಾರ ಎಂದಿದ್ದನು. ಅಶುಭ ಕರ್ಮಗಳನ್ನು ಮಾಡುವ ಇವರು ಸಂಸ್ಕಾರ ಹೀನರು ಎಂದು ಪಾಂಚನದರ ಧರ್ಮವನ್ನು ಪಿತಾಮಹನು ಅವಮಾನಿಸಿದ್ದನು. ಇದನ್ನು ಅರ್ಥಮಾಡಿಕೋ. ಇನ್ನೂ ಇದೆ. ನಿನಗೆ ಹೇಳುತ್ತೇನೆ! ಕಲ್ಮಾಷಪಾದನು ರಾಕ್ಷಸನಾಗಿದ್ದಾಗ ಸರೋವರವೊಂದರಲ್ಲಿ ಮುಳುಗಿ ಹೀಗೆ ಹೇಳಿದ್ದನು: “ಕ್ಷತ್ರಿಯನಿಗೆ ಭಿಕ್ಷಾವೃತ್ತಿಯು ಹೊಲಸು. ಬ್ರಾಹ್ಮಣನಿಗೆ ಸುಳ್ಳು ಹೇಳುವುದು ಹೊಲಸು. ಪೃಥ್ವಿಯಲ್ಲಿ ಬಾಹ್ಲೀಕರು ಹೊಲಸು ಜನರು. ಮತ್ತು ಸ್ತ್ರೀಯರಲ್ಲಿ ಮದ್ರ ಸ್ತ್ರೀಯರು ದೋಷಯುಕ್ತರು.” ಮುಳುಗುತ್ತಿದ್ದ ಅವನನ್ನು ಮೇಲಕ್ಕೆತ್ತಿ ಓರ್ವ ನಿಶಾಚರನು ಕೇಳಲು ಅವನು ಹೇಳಿದುದನ್ನು ಕೇಳು: “ಮನುಷ್ಯರಲ್ಲಿ ಮ್ಲೇಚ್ಛರು ಹೊಲಸರು. ಮ್ಲೇಚ್ಛರಲ್ಲಿ ಹೆಂಡವನ್ನು ಮಾರುವವನು ಅಥವಾ ಇಳಿಸುವವನು ಹೊಲಸು. ಹೆಂಡಮಾರುವವರಲ್ಲಿ ನಪುಂಸಕರು ಹೊಲಸು. ನಪುಂಸಕರಲ್ಲಿ ರಾಜಪುರೋಹಿತರು ಹೊಲಸು. ನೀನೇನಾದರೂ ನನ್ನನ್ನು ಉದ್ಧರಿಸದಿದ್ದರೆ ಅಂತಹ ರಾಜಪುರೋಹಿತರಿಗೂ, ಕ್ಷತಿರ್ಯನನ್ನೇ ಪುರೋಹಿತನನ್ನಾಗಿ ಇಟ್ಟುಕೊಂಡವರಿಗೂ, ಮದ್ರಕರಿಗೂ ಇರುವ ಮಹಾದೋಷಗಳು ನಿನ್ನದಾಗುವವು. ರಾಕ್ಷಸರ ಉಪದ್ರವವಿರುವವರಿಗೆ ಮತ್ತು ವಿಷದಿಂದ ವೀರ್ಯವು ಹತವಾಗಿರುವವರಿಗೆ ರಾಕ್ಷಸರ ಉಪದ್ರವವನ್ನು ತಪ್ಪಿಸಿಕೊಳ್ಳಲು ಮತ್ತು ವಿಷದ ಪ್ರಭಾವವನ್ನು ಹೋಗಲಾಡಿಸಲು ರಾಕ್ಷಸಭೈಷಜವೆಂಬ ಈ ಸಿದ್ಧವಚನವಿದೆ: “ಪಾಂಚಾಲರು ಬ್ರಹ್ಮಕರ್ಮ ಮಾಡುವವರು. ಕೌರವೇಯರು ಸ್ವಧರ್ಮನಿರತರು. ಮತ್ಸ್ಯರು ಸತ್ಯವಾದಿಗಳು. ಶೂರಸೇನರು ಯಾಜ್ಞಿಕರು. ಪೂರ್ವದೇಶದವರು ದಾಸರು ಮತ್ತು ದಕ್ಷಿಣದೇಶದವರು ವೃಷಲರು. ಬಾಹ್ಲೀಕ ದೇಶದವರು ಕಳ್ಳರು ಮತ್ತು ಸೌರಾಷ್ಟ್ರದವರು ವರ್ಣಸಂಕರರು. ಕೃತಘ್ನತೆ, ಪರರ ವಿತ್ತವನ್ನು ಅಪಹರಿಸುವುದು, ಸುರಾಪಾನ, ಗುರುಪತ್ನಿಯರೊಡನೆ ಸಮಾಗಮ ಮತ್ತು ಕಠೋರವಾಗಿರುವುದು ಇವುಗಳು ಯಾರ ಧರ್ಮವಾಗಿವೆಯೋ ಅಂತಹ ಪಂಚನದ ದೇಶದ ಅರಟ್ಟಕರಿಗೆ ಅಧರ್ಮವೆಂಬುದೇ ಇಲ್ಲ. ಅವರಿಗೆ ಧಿಕ್ಕಾರವಿರಲಿ! ಪಾಂಚಾಲ, ಕೌರವ, ನೈಮಿಷ, ಮತ್ತು ಮತ್ಸ್ಯದೇಶಗಳ ಜನರು ಧರ್ಮವನ್ನು ತಿಳಿದವರು. ಕಲಿಂಗರು, ಅಂಗರು, ಮತ್ತು ಮಾಗಧರ ವೃದ್ಧರು ಶಿಷ್ಟಾಚಾರ ಧರ್ಮಾಚಾರಗಳಿಂದ ಜೀವನ ನಡೆಸುತ್ತಾರೆ. ಜಾತವೇದನೇ ಮೊದಲಾದ ದೇವತೆಗಳು ಪೂರ್ವದಿಕ್ಕನ್ನು ಆಶ್ರಯಿಸಿದ್ದಾರೆ. ಯಮನಿಂದ ರಕ್ಷಿಸಲ್ಪಟ್ಟಿರುವ ಶುಭಕರ್ಮಿ ಪಿತೃಗಳು ದಕ್ಷಿಣದಿಕ್ಕನ್ನು ಆಶ್ರಯಿಸಿದ್ದಾರೆ. ಅಸುರರನ್ನು ಪಾಲಿಸುತ್ತಾ ಬಲಶಾಲೀ ವರುಣನು ಪಶ್ಚಿಮ ದಿಕ್ಕನ್ನು ಪಾಲಿಸುತ್ತಾನೆ. ಬ್ರಹ್ಮಣ್ಯ ಭಗವಾನ್ ಸೋಮನು ಬ್ರಾಹ್ಮಣರೊಂದಿಗೆ ಉತ್ತರ ದಿಕ್ಕನ್ನು ರಕ್ಷಿಸುತ್ತಾನೆ. ಪಿಶಾಚಿಗಳು ಹಿಮವತ್ಪರ್ವತವನ್ನೂ ಗುಹ್ಯಕರು ಗಂಧಮಾದನಪರ್ವತವನ್ನೂ ರಕ್ಷಿಸುತ್ತಾರೆ. ಲೋಕದಲ್ಲಿರುವ ಸರ್ವ ಭೂತಗಳನ್ನೂ ನಿಶ್ಚಯವಾಗಿ ಜನಾರ್ದನ ವಿಷ್ಣುವು ರಕ್ಷಿಸುತ್ತಾನೆ. ಮಗಧರು ಇಂಗಿತದಿಂದ ಮತ್ತು ಕೋಸಲರು ದೃಷ್ಟಿಮಾತ್ರದಿಂದ ತಿಳಿದುಕೊಳ್ಳಬಲ್ಲರು. ಕುರು-ಪಾಂಚಾಲರು ಅರ್ಧಮಾತಿನಿಂದಲೇ ಸಂಪೂರ್ಣ ವಿಷಯವನ್ನು ಗ್ರಹಿಸಿಕೊಂಡುಬಿಡುತ್ತಾರೆ. ಶಾಲ್ವದೇಶದವರು ವಿಷಯವನ್ನು ಸಂಪೂರ್ಣವಾಗಿ ಹೇಳಿದನಂತರವೇ ಗ್ರಹಿಸಿಕೊಳ್ಳಬಲ್ಲರು. ಆದರೆ ಪರ್ವತದೇಶದವರು ವಿಷಯವನ್ನು ಸಂಪೂರ್ಣವಾಗಿ ಹೇಳಿದಾಗಲೂ ಗ್ರಹಿಸಲಾರರು. ಯವನರು ಸರ್ವಜ್ಞರೂ, ವಿಶೇಷವಾಗಿ ಶೂರರೂ ಆಗಿದ್ದಾರೆ. ಮ್ಲೇಚ್ಛರು ತಮ್ಮದನ್ನು ಚೆನ್ನಾಗಿ ತಿಳಿದುಕೊಂಡವರಾಗಿದ್ದುಕೊಂಡು ಇತರ ಜನರಲ್ಲಿ ಅನುರಕ್ತಿಯನ್ನು ಹೊಂದಿರುವವರಲ್ಲ. ಬಾಹ್ಲೀಕರು ಹೇಳಿದುದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಮತ್ತು ಕೆಲವು ಮದ್ರಕರಿಗೆ ಏನೂ ತಿಳಿಯುವುದಿಲ್ಲ.
ಶಲ್ಯ! ಅಂಥವನಾಗಿರುವ ನೀನು ನನಗೆ ಯಾವ ಉತ್ತರವನ್ನೂ ಕೊಡಬೇಕಾಗಿಲ್ಲ. ಇದನ್ನು ತಿಳಿದುಕೊಂಡು ಪುನಃ ಪ್ರತಿಕೂಲ ಮಾತುಗಳನ್ನು ಆಡಬೇಡ! ನಿನ್ನನ್ನೇ ಮೊದಲು ಸಂಹರಿಸಿ ನಂತರ ಕೇಶವಾರ್ಜುನರನ್ನು ಸಂಹರಿಸುವಂತಾಗದಿರಲಿ!”
ಶಲ್ಯನು ಹೇಳಿದನು: “ಕರ್ಣ! ನೀನು ಅಧಿಪತಿಯಾಗಿರುವ ಅಂಗದೇಶದಲ್ಲಿ ರೋಗಿಗಳನ್ನು ಪರಿತ್ಯಜಿಸುತ್ತಾರೆ ಮತ್ತು ತಮ್ಮ ಪತ್ನಿ-ಮಕ್ಕಳನ್ನು ಮಾರುತ್ತಾರೆ. ರಥಾತಿರಥರನ್ನು ಎಣಿಸುವಾಗ ಭೀಷ್ಮನು ಹೇಳಿದ ನಿನ್ನಲ್ಲಿರುವ ದೋಷಗಳನ್ನು ತಿಳಿದುಕೊಂಡು ಶಾಂತನಾಗು. ಕ್ರೋಧಿಸಬೇಡ. ಎಲ್ಲ ಕಡೆಗಳಲ್ಲಿ ಬ್ರಾಹ್ಮಣರಿರುತ್ತಾರೆ. ಎಲ್ಲಕಡೆ ಕ್ಷತ್ರಿಯರೂ, ಹಾಗೆ ವೈಶ್ಯರು, ಶೂದ್ರರು, ಮತ್ತು ಸಾಧು ಸುವ್ರತ ಸ್ತ್ರೀಯರೂ ಇರುತ್ತಾರೆ. ದೇಶ ದೇಶಗಳಲ್ಲಿಯೂ ಪುರುಷರು ಪುರುಷರೊಂದಿಗೆ ಉಪಹಾಸ್ಯ ಮಾಡುತ್ತಾ, ಕಚ್ಚಾಡುತ್ತಾ, ಸ್ತ್ರೀಯರೊಂದಿಗೆ ರಮಿಸುತ್ತಾರೆ. ಮತ್ತೊಬ್ಬರ ದೋಷಕಥನದಲ್ಲಿ ಎಲ್ಲರೂ ಯಾವಾಗಲೂ ನಿಪುಣರಾಗಿಯೇ ಇರುತ್ತಾರೆ. ತಮ್ಮಲ್ಲಿರುವ ದೋಷಗಳನ್ನು ತಿಳಿದುಕೊಳ್ಳುವುದೇ ಇಲ್ಲ. ಒಂದುವೇಳೆ ತಿಳಿದುಕೊಂಡರೂ ತಿಳಿಯದವರಂತೆಯೇ ನಡೆದುಕೊಳ್ಳುತ್ತಾರೆ.”
ಕರ್ಣನಾದರೋ ಉತ್ತರವನ್ನು ನೀಡಲಿಲ್ಲ. ಶಲ್ಯನೂ ಕೂಡ ಶತ್ರುಗಳನ್ನು ಎದುರಿಸಿ ನಡೆದನು. ರಾಧೇಯನು ನಸುನಗುತ್ತಾ “ಮುಂದೆ ಹೋಗು!” ಎಂದು ಶಲ್ಯನನ್ನು ಪ್ರಚೋದಿಸಿದನು.
