[spacer height="20px"]

ಗಾಂಧಾರೀ ವಿಲಾಪ ಮತ್ತು ಕೃಷ್ಣನಿಗೆ ಶಾಪ

ಗಾಂಧಾರಿಯು ನಿಂತಲ್ಲಿಂದಲೇ ತನ್ನ ದಿವ್ಯ ದೃಷ್ಟಿಯಿಂದ ಕುರುಗಳ ವಿನಾಶಸ್ಥಳವೆಲ್ಲವನ್ನೂ ನೋಡಿದಳು. ಆ ಸಮಾನವ್ರತಚಾರಿಣೀ, ಪ್ರತಿವ್ರತೆ, ಮಹಾಭಾಗೆ ಸತ್ಯವಾದಿನಿಯು ಸತತವೂ ಉಗ್ರ ತಪೋನಿರತಳಾಗಿದ್ದು, ಪುಣ್ಯಕರ್ಮಿ ಮಹರ್ಷಿ ಕೃಷ್ಣನ ವರದಾನದಿಂದ ಪಡೆದ ದಿವ್ಯಜ್ಞಾನದ ಬಲವನ್ನು ಪಡೆದು ವಿವಿಧ ರೀತಿಗಳಲ್ಲಿ ಶೋಕಿಸಿದಳು. ಅಷ್ಟು ದೂರದಿಂದ ಕೂಡ ಬುದ್ಧಿಮತಿಯು ಅತಿ ಹತ್ತಿರದಿಂದಲೋ ಎಂಬಂತೆ ನರವೀರರ ಲೋಮಹರ್ಷಣ ರಣಭೂಮಿಯನ್ನು ನೋಡಿದಳು. ರಣಭೂಮಿಯು ಮೂಳೆಗಳಿಂದಲೂ, ತಲೆಗೂದಲುಗಳಿಂದಲೂ ವ್ಯಾಪ್ತವಾಗಿತ್ತು. ರಕ್ತದಿಂದ ತುಂಬಿಹೋಗಿತ್ತು. ಅನೇಕ ಸಾವಿರ ಶರೀರಗಳು ಎಲ್ಲಕಡೆ ಚದುರಿಹೋಗಿದ್ದವು. ರಕ್ತಸಿಕ್ತವಾಗಿದ್ದ ಆನೆ-ಕುದುರೆ-ರಥ ಮತ್ತು ಯೋಧರ ತಲೆಗಳಿಲ್ಲದ ಶರೀರಗಳಿಂದಲೂ, ಶರೀರಗಳಿಲ್ಲದ ತಲೆಗಳಿಂದಲೂ ರಣಭೂಮಿಯು ಮುಚ್ಚಿಹೋಗಿತ್ತು. ಆನೆ, ಕುದುರೆ ಮತ್ತು ನರವೀರರ ಹೆಣಗಳಿಂದ ತುಂಬಿಹೋಗಿದ್ದ ರಣರಂಗದಲ್ಲಿ ನರಿ-ಬಕಪಕ್ಷಿ-ಕಾಗಿ-ಗೂಬೆ ಮತ್ತು ರಣಹದ್ದುಗಳು ಸಂಚರಿಸುತ್ತಿದ್ದವು. ನರಭಕ್ಷಕ ರಾಕ್ಷಸರು ಅಲ್ಲಿ ವಿನೋದಿಸುತ್ತಿದ್ದರು. ಕಡಲಹದ್ದುಗಳು, ಅಮಂಗಳಕರವಾಗಿ ಕೂಗುತ್ತಿದ್ದ ನರಿಗಳು ಮತ್ತು ರಣಹದ್ದುಗಳಿಂದ ಅದು ತುಂಬಿಹೋಗಿತ್ತು.

ಅನಂತರ ಮಹೀಪತಿ ಧೃತರಾಷ್ಟ್ರನು ವ್ಯಾಸನ ಅನುಜ್ಞೆಯನ್ನು ಪಡೆದನು. ಯುಧಿಷ್ಠಿರನನೇ ಮೊದಲಾದ ಪಾಂಡುಪುತ್ರರೆಲ್ಲರೂ ಬಂಧುಗಳನ್ನು ಕಳೆದುಕೊಂಡ ರಾಜ ಮತ್ತು ವಾಸುದೇವನನ್ನು ಮುಂದೆಮಾಡಿಕೊಂಡು, ಕುರುಸ್ತ್ರೀಯರನ್ನು ಜೊತೆಯಲ್ಲಿ ಕರೆದುಕೊಂಡು, ರಣರಂಗದ ಕಡೆ ಹೊರಟರು. ಕುರುಕ್ಷೇತ್ರವನ್ನು ತಲುಪಿ ಪತಿಗಳನ್ನು ಕಳೆದುಕೊಂಡಿದ್ದ ಆ ಸ್ತ್ರೀಯರು ಅಲ್ಲಿ ಹತರಾಗಿದ್ದ ಪುತ್ರರನ್ನೂ, ಸಹೋದರರನ್ನೂ, ಪಿತೃಗಳನ್ನೂ, ಪತಿಗಳನ್ನೂ ಕಂಡರು. ಮಾಂಸಾಹಾರಿ ನರಿ, ಕಾಗೆ, ಭೂತ, ಪಿಶಾಚಿ, ರಾಕ್ಷಸರೇ ಮೊದಲಾದ ವಿವಿಧ ನಿಶಾಚರರು ಭಕ್ಷಿಸಲ್ಪಡುತ್ತಿದ್ದ, ರುದ್ರನ ಕ್ರೀಡಾಂಗಣದಂತೆ ತೋರುತ್ತಿದ್ದ ರಣಭೂಮಿಯನ್ನು ನೋಡಿ ದುಃಖಿತರಾದ ಸ್ತ್ರೀಯರು ಅತ್ಯಮೂಲ್ಯ ರಥಗಳಿಂದ ಕೂಗುತ್ತಾ ಕೆಳಗೆ ಬಿದ್ದರು. ಹಿಂದೆಂದೂ ಇಂಥದ್ದನ್ನು ನೋಡಿರದ ದುಃಖಾರ್ತ ಭರತಸ್ತ್ರೀಯರು ಅಲ್ಲಿದ್ದ ಶರೀರಗಳ ಮೇಲೆಯೇ ಬಿದ್ದರು. ಅನ್ಯರು ನೆಲದಮೇಲೆ ಬಿದ್ದರು. ಅನಾಥರಾಗಿ ಬಳಲಿದ್ದ ಅವರಲ್ಲಿ ಚೇತನವೇ ಇರಲಿಲ್ಲ. ಪಾಂಚಾಲ-ಕುರುಸ್ತ್ರೀಯರು ಆಗ ಅತ್ಯಂತ ದೀನರಾಗಿದ್ದರು. ದುಃಖದಿಂದ ಬುದ್ಧಿಕಳೆದುಕೊಂಡು ಕೂಗುತ್ತಿರುವವರ ಧ್ವನಿಯು ಸುತ್ತಲೂ ಕೇಳಿಬರುತ್ತಿರಲು, ಅತಿ ಉಗ್ರವಾಗಿದ್ದ ರಣಭೂಮಿಯನ್ನು ನೋಡಿ, ಕುರುಗಳ ಮಹಾಸಂಹಾರವನ್ನು ಕಂಡು ಧರ್ಮಜ್ಞೆ ಸುಬಲಾತ್ಮಜೆಯು ಪುರುಷೋತ್ತಮ ಪುಂಡರೀಕಾಕ್ಷನನ್ನು ಕರೆದು ದುಃಖದಿಂದ ಹೀಗೆ ಹೇಳಿದಳು:

ಪುಂಡರೀಕಾಕ್ಷ! ಮಾಧವ! ಪತಿಗಳನ್ನು ಕಳೆದುಕೊಂಡ ನನ್ನ ಸೊಸೆಯಂದಿರು ತಲೆಗೂದಲುಗಳನ್ನು ಕೆದರಿಕೊಂಡು ಕಡಲಹದ್ದುಗಳಂತೆ ಚೀರುತ್ತಿರುವುದನ್ನು ನೋಡು! ಇವರು ಭರತರ್ಷಭರನ್ನು ಸ್ಮರಿಸಿಕೊಳ್ಳುತ್ತಾ ಅವರ ಪುತ್ರರು, ಸಹೋದರರು, ಪಿತೃಗಳು ಮತ್ತು ಪತಿಗಳನ್ನು ಹುಡುಕುತ್ತಾ ಒಬ್ಬೊಬ್ಬರು ಒಂದೊಂದು ಕಡೆ ಓಡಿಹೋಗುತ್ತಿದ್ದಾರೆ! ಪುತ್ರರನ್ನು ಕಳೆದುಕೊಂಡ ವೀರಮಾತೆಯರಿಂದಲೂ ವೀರಪತಿಯರನ್ನು ಕಳೆದುಕೊಂಡ ವೀರಪತ್ನಿಯರಿಂದಲೂ ರಣಭೂಮಿಯು ತುಂಬಿಹೋಗಿದೆ! ಪ್ರಜ್ವಲಿಸುವ ಪಾವಕರಂತಿರುವ ಭೀಷ್ಮ-ಕರ್ಣ-ಅಭಿಮನ್ಯು-ದ್ರೋಣ-ದ್ರುಪದ-ಶಲ್ಯ ಮೊದಲಾದ ಪುರುಷವ್ಯಾಘ್ರರಿಂದ ಶೋಭಿಸುತ್ತಿದೆ. ಮಹಾತ್ಮರ ಕಾಂಚನ ಕವಚಗಳಿಂದಲೂ, ಮಣಿಗಳ ಹಾರಗಳಿಂದಲೂ, ಅಂಗದ-ಹಸ್ತ ಕೇಯೂರಗಳಿಂದಲೂ, ಮಾಲೆಗಳಿಂದಲೂ ರಣಭೂಮಿಯು ಸಮಲಂಕೃತವಾಗಿದೆ. ವೀರರ ಬಾಹುಗಳಿಂದ ಪ್ರಯೋಗಿಸಲ್ಪಟ್ಟ ಶಕ್ತಿ, ಪರಿಘ, ವಿಮಲ ತೀಕ್ಷ್ಣ ಖಡ್ಗ, ಶರಗಳು ಮತ್ತು ಭತ್ತಳಿಕೆಗಳಿಂದ ರಣಭೂಮಿಯು ತುಂಬಿಹೋಗಿದೆ. ಸಂತೋಷಭರಿತವಾಗಿರುವ ಮಾಂಸಾಶೀ ಪಕ್ಷಿಗಳು ಕೆಲವೆಡೆ ಗುಂಪುಗುಂಪಾಗಿ ನಿಂತುಕೊಂಡಿವೆ, ಕೆಲವಡೆ ಆಟವಾಡುತ್ತಿವೆ, ಮತ್ತೆ ಇನ್ನು ಕೆಲವಡೆ ಮಲಗಿಕೊಂಡಿವೆ! ವಿಧದ ಭಯಂಕರ ರಣಭೂಮಿಯನ್ನು ನೋಡಿ ಶೋಕದಿಂದ ನಾನು ಸುಡುತ್ತಿದ್ದೇನೆ. ಪಂಚಭೂತಗಳು ನಾಶವಾಗದಂತೆ ಪಾಂಚಲ-ಕುರುಗಳು ಹೀಗೆ ನಾಶವಾಗುತ್ತಾರೆಂದು ನಾನು ಯೋಚಿಸಿರಲಿಲ್ಲ. ಆ ಹದ್ದುಗಳು ಮತ್ತು ಇತರ ಪಕ್ಷಿಗಳು ಸಹಸ್ರಾರು ಸಂಖ್ಯೆಗಳಲ್ಲಿ ಕವಚಗಳ ಸಂಧಿನಿಂದ ಕುಕ್ಕಿ ಎಳೆದು ಮಾಂಸವನ್ನು ಭಕ್ಷಿಸುತ್ತಿವೆ! ಜಯದ್ರಥ, ಕರ್ಣ, ದ್ರೋಣ, ಬೀಷ್ಮ ಮತ್ತು ಅಭಿಮನ್ಯುವಿನ ವಿನಾಶವನ್ನು ಯಾರುತಾನೇ ಆಲೋಚಿಸಿದ್ದರು? ನಾವು ಯಾರನ್ನು ಅವಧ್ಯರೆಂದು ತಿಳಿದುಕೊಂಡಿದ್ದೆವೋ ಅವರೇ ಹತರಾಗಿ ಹದ್ದು-ಗಿಡುಗ-ನರಿ-ನಾಯಿ-ತೋಳಗಳಿಗೆ ಆಹಾರವಾಗುತ್ತಿದ್ದುದನ್ನು ನಾನು ನೋಡುತ್ತಿದ್ದೇನೆ! ದುರ್ಯೋಧನನ ವಶದಲ್ಲಿ ಬಂದು ಕೋಪಪರವಶರಾಗಿದ್ದ ಪುರುಷವ್ಯಾಘ್ರರು ಆರಿಹೋದ ಅಗ್ನಿಯಂತೆ ತಣ್ಣಗಾಗಿರುವುದನ್ನು ನೋಡು! ಮೃದುವಾದ ಶುಭ್ರವಾದ ಹಾಸಿಗೆಗಳ ಮೇಲೆ ಮಲಗಲು ಯೋಗ್ಯರಾದ ಎಲ್ಲರೂ ಇಂದು ಹತರಾಗಿ ನೆಲದ ಮೇಲೆ ಮಲಗಿದ್ದಾರೆ! ಹಿಂದೆ ಸತತವೂ ವಂದಿ-ಮಾಗಧರಿಂದ ಸ್ತುತಿಸಲ್ಪಡುತ್ತಿದ್ದ ಅನಿಂದಿತರು ಈಗ ನರಿಗಳ ವಿವಿಧ ಅಮಂಗಳಕರ, ಘೋರ ಶಬ್ಧಗಳನ್ನು ಕೇಳುತ್ತಿದ್ದಾರೆ! ಹಿಂದೆ ಚಂದನ-ಅಗರು ಮುಂತಾದವುಗಳನ್ನು ಲೇಪಿಸಿಕೊಂಡು ಹಾಸಿಗೆಯ ಮೇಲೆ ಮಲಗುತ್ತಿದ್ದ ಯಶಸ್ವೀ ವೀರರು ಇಂದು ಕೆಸರಿನಲ್ಲಿ ಮಲಗಿದ್ದಾರೆ! ಹದ್ದು-ನರಿ-ಕಾಗೆಗಳು ಅವರ ಆಭರಣಗಳನ್ನು ಕಿತ್ತು ಎಸೆಯುತ್ತಾ ಅಶುಭವಾಗಿ ಮತ್ತು ಘೋರವಾಗಿ ಪುನಃ ಪುನಃ ಕೂಗುತ್ತಿವೆ! ಆ ಯುದ್ಧಾಭಿಮಾನಿಗಳು ಪ್ರೀತಿಯಿಂದ ಹಿಡಿದಿರುವ ಬಿಲ್ಲುಗಳು, ಪೀತಲ ನಿಶಿತ ವಿಶಿಖಗಳು, ಮತ್ತು ವಿಮಲ ಗದೆಗಳು ಇನ್ನೂ ಜೀವಂತವಾಗಿಯೆವೋ ಎಂಬಂತೆ ಹೊಳೆಯುತ್ತಿವೆ. ಗೂಳಿಗಳ ಕಣ್ಣುಗಳಂಥಹ ಕಣ್ಣುಗಳಿರುವ, ಸುಂದರ ರೂಪ ವರ್ಣಗಳ ಇನ್ನೂ ಮಾಸಿರದ ಮಾಲೆಗಳನ್ನು ತೊಟ್ಟ ಅನೇಕರನ್ನು ಕ್ರವ್ಯಾದಗಳು ಛಿದ್ರ-ವಿಛಿದ್ರ ಮಾಡುತ್ತಿವೆ. ಪರಿಘದಂಥಹ ಬಾಹುಗಳುಳ್ಳ ಇತರರು ಪ್ರೇಯಸಿಯನ್ನು ತಬ್ಬಿಕೊಂಡಿರುವವರಂತೆ ಗದೆಯನ್ನೇ ತಬ್ಬಿಕೊಂಡು ಅಂಗತ್ತರಾಗಿ ಮಲಗಿದ್ದಾರೆ. ಅನ್ಯರು ವಿಮಲ ಆಯುಧ-ಕವಚಗಳಿಂದ ಹೊಳೆಯುತ್ತಿರುವುದರಿಂದ ಅವರು ಜೀವಂತವಾಗಿರುವರೆಂದು ಭಾವಿಸಿ ಕ್ರವ್ಯಾದಗಳು ಅವರನ್ನು ತಿನ್ನುತ್ತಿಲ್ಲ! ಕ್ರವ್ಯಾದಗಳಿಂದ ಎಳೆಯಲ್ಪಡುತ್ತಿರುವ ಇತರ ಮಹಾತ್ಮರ ಸುವರ್ಣಮಯ ಚಿತ್ರಿತ ಮಾಲೆಗಳು ಚೆಲ್ಲಾಪಿಲ್ಲಿಯಾಗಿ ಸುತ್ತಲೂ ಹರಡಿವೆ. ಹತರಾಗಿರುವ ಯಶಸ್ವಿಗಳ ಕಂಠಗಳಲ್ಲಿರುವ ಹಾರಗಳನ್ನು ಸಹಸ್ರಾರು ಭಯಂಕರ ನರಿಗಳು ಎಳೆದಾಡುತ್ತಿವೆ! ಅಪರರಾತ್ರಿಗಳಲ್ಲಿಯೂ ಯಾರನ್ನು ಪ್ರಶಿಕ್ಷಿತ ಬಂದಿಗಳು ಸ್ತುತಿಗಳಿಂದಲೂ ಉತ್ತಮ ಉಪಚಾರಗಳಿಂದಲೂ ಸೇವಿಸುತ್ತಿದ್ದರೋ ಅವರನ್ನು ಇಂದು ದುಃಖಾರ್ತರಾದ ಪರಮಾಂಗನೆಯರು ಕರುಣಾಜನಕ ವಿಲಾಪಗಳಿಂದ ಸಂಸೇವಿಸುತ್ತಿದ್ದಾರೆ! ಬಾಡಿಹೋಗಿರುವ ಪರಮಸ್ತ್ರೀಯರ ಮುಖಗಳು ಕೆಂಪು ಕಮಲದ ವನಗಳಂತೆ ಬಹಳ ಸುಂದರವಾಗಿ ಕಾಣುತ್ತಿವೆ. ಕೆಲವು ಕುರುಸ್ತ್ರೀಯರು ಅಳುವುದನ್ನು ನಿಲ್ಲಿಸಿ ತಮ್ಮವರು ಎಲ್ಲಿರುವರೆಂದು ಚಿಂತಿಸಿ ಹುಡುಕುತ್ತಾ ಅವರು ಸಿಕ್ಕಿದಾಗ ಪುನಃ ದುಃಖಿತರಾಗುತ್ತಿದ್ದಾರೆ! ಸೂರ್ಯನ ಕಾಂತಿಯನ್ನೂ ಚಿನ್ನದ ಹೊಳಪನ್ನೂ ಹೊಂದಿದ್ದ ಕುರುಸ್ತ್ರೀಯರ ಮುಖಗಳು ರೋಷ-ರೋದನಗಳಿಂದಾಗಿ ಕೆಂಪಾಗಿವೆ! ಇತರೇತರ ಸ್ತ್ರೀಯರ ರೋದನಗಳು ಎಲ್ಲ ಒಂದಾಗಿ ಯಾರು ಹೇಗೆ ರೋದಿಸುತ್ತಿದ್ದಾರೆನ್ನುವುದೂ ತಿಳಿಯದಾಗುತ್ತಿಲ್ಲ! ವೀರಸ್ತ್ರೀಯರು ದೀರ್ಘವಾಗಿ ನಿಟ್ಟುಸಿರು ಬಿಡುತ್ತಾ, ಜೋರಾಗಿ ವಿಲಪಿಸುತ್ತಾ, ದುಃಖದಿಂದ ಚಡಪಡಿಸುತ್ತಾ ಕೊನೆಯಲ್ಲಿ ಜೀವವನ್ನೇ ತೊರೆಯುತ್ತಾರೆ! ಅನೇಕ ಸ್ತ್ರೀಯರು ಶರೀರಗಳನ್ನು ನೋಡಿ ಜೋರಾಗಿ ಕೂಗಿ ವಿಲಪಿಸುತ್ತಿದ್ದರೆ. ಇತರರು ತಮ್ಮ ಮೃದು ಕೈಗಳಿಂದ ತಲೆಯನ್ನು ಹೊಡೆದುಕೊಳ್ಳುತ್ತಿದ್ದಾರೆ. ಬಿದ್ದಿರುವ ಶಿರಗಳಿಂದಲೂ, ಕೈಗಳಿಂದಲೂ, ಗುಂಪು ಗುಂಪಾಗಿ ಬಿದ್ದಿರುವ ಸರ್ವಾಂಗಗಳಿಂದಲೂ ರಣಭೂಮಿಯು ಇತರೇತರರ ಅವಯವಗಳಿಂದ ತುಂಬಿಹೋಗಿರುವಂತೆ ಕಾಣುತ್ತಿದೆ. ಶಿರಗಳಿಲ್ಲದ ಕಾಯಗಳನ್ನೂ ಶರೀರಗಳಿಲ್ಲದ ಶಿರಗಳನ್ನೂ ನೋಡಿ ಘೋರದೃಶ್ಯವನ್ನು ನೋಡಿದವರಂತೆ ನಾರಿಯರು ಮೂರ್ಛೆಹೋಗುತ್ತಿದ್ದಾರೆ. ಶಿರವನ್ನು ಶರೀರಕ್ಕೆ ಜೋಡಿಸಿ ಅದು ಸರಿಯಾಗದೇ ತಕ್ಕ ಶಿರವು ಇಲ್ಲಿ ಕಾಣುತ್ತಿಲ್ಲವೆಂದು ಹೇಳುತ್ತಾ ಬುದ್ಧಿಕಳೆದುಕೊಂಡು ದುಃಖಿಸುತ್ತಿದ್ದಾರೆ. ಕತ್ತರಿಸಲ್ಪಟ್ಟಿರುವ ಬಾಹುಗಳನ್ನೂ, ಕಾಲುಗಳನ್ನೂ ಮತ್ತು ಅನ್ಯ ಅವಯವಗಳನ್ನು ಕಷ್ಟಪಟ್ಟು ಜೋಡಿಸುತ್ತಾ ತಮ್ಮ ವ್ಯರ್ಥಪ್ರಯತ್ನಕ್ಕಾಗಿ ಪುನಃ ಪುನಃ ಮೂರ್ಛೆಹೋಗುತ್ತಿದ್ದಾರೆ. ಶಿರಗಳು ಕತ್ತರಿಸಲ್ಪಟ್ಟಿರುವುದರಿಂದ ಮತ್ತು ಮೃಗ-ಪಕ್ಷಿಗಳು ಕಿತ್ತು ತಿಂದಿರುವುದರಿಂದ ಭರತಸ್ತ್ರೀಯರು ತಮ್ಮ ಪತಿಯಂದಿರು ಯಾರೆಂದೂ ಗುರುತಿಸಲಾಗುತ್ತಿಲ್ಲ! ಅನ್ಯರು ಶತ್ರುಗಳಿಂದ ಹತರಾಗಿರುವ ಸಹೋದರರನ್ನೂ, ತಂದೆಯರನ್ನೂ, ಪುತ್ರರನ್ನೂ, ಪತಿಗಳನ್ನೂ ನೋಡಿ ಕೈಗಳಿಂದ ತಮ್ಮ ತಲೆಗಳನ್ನು ಬಡಿದುಕೊಳ್ಳುತ್ತಿದ್ದಾರೆ! ಖಡ್ಗಗಳನ್ನು ಹಿಡಿದಿರುವ ಬಾಹುಗಳಿಂದಲೂ, ಕುಂಡಲಗಳನ್ನು ಧರಿಸಿದ್ದ ಶಿರಗಳಿಂದಲೂ, ಮಾಂಸ-ರಕ್ತಗಳ ಕೆಸರಿನಿಂದ ತುಂಬಿಹೋಗಿರುವ ರಣಭೂಮಿಯಲ್ಲಿ ಓಡಾಡಲೂ ಕಷ್ಟವಾಗುತ್ತಿದೆ! ಹಿಂದೆಂದೂ ವಿಧವಾದ ದುಃಖವನ್ನು ಅನುಭವಿಸಿರದಿದ್ದ ಅನಿಂದಿತೆಯರು ಸಹೋದರರು, ತಂದೆಯರು ಮತ್ತು ಪುತ್ರರಿಂದ ತುಂಬಿಹೋಗಿರುವ ವಸುಂಧರೆಯನ್ನು ನೋಡಿ ದುಃಖದಲ್ಲಿ ಮುಳುಗಿಹೋಗಿದ್ದಾರೆ! ಸುಂದರ ಕೇಶರಾಶಿಗಳ ಧೃತರಾಷ್ಟ್ರನ ಕಿಶೋರೀ ಸೊಸೆಯರು ಹೆಣ್ಣು ಕುದುರೆ ಮರಿಗಳ ಹಿಂಡಿನಂತೆ ಗೋಳಿಡುತ್ತಿರುವುದನ್ನು ನೋಡು! ಎಲ್ಲ ಸ್ತ್ರೀಯರು ಇಲ್ಲಿಗೆ ಬಂದು ಜೋರಾಗಿ ಕೂಗಿಕೊಳ್ಳುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಇದಕ್ಕಿಂತಲೂ ಹೆಚ್ಚಿನ ದುಃಖವು ನನ್ನ ನೆನಪಿಗೆ ಬರುತ್ತಿಲ್ಲ! ಹತರಾದ ಪುತ್ರರನ್ನೂ, ಪೌತ್ರರನ್ನೂ, ಸಹೋದರರನ್ನೂ ನಾನು ನೋಡುತ್ತಿದ್ದೇನೆಂದರೆ ನನ್ನ ಪೂರ್ವ ಜನ್ಮದಲ್ಲಿ ನಿಶ್ಚಯವಾಗಿಯೂ ನಾನು ಪಾಪವನ್ನೆಸಗಿರಬೇಕು!”

ಹೀಗೆ ವಿಲಪಿಸುತ್ತಾ ಆರ್ತಳಾಗಿದ್ದ ಗಾಂಧಾರಿಯು ಹತನಾಗಿದ್ದ ತನ್ನ ಮಗನನ್ನು ನೋಡಿದಳು. ದುರ್ಯೋಧನನನ್ನು ನೋಡಿ ಶೋಕಕರ್ಶಿತಳಾದ ಗಾಂಧಾರಿಯು ವನದಲ್ಲಿ ಕಡಿದುಬಿದ್ದ ಬಾಳೆಯ ಮರದಂತೆ ದೊಪ್ಪನೆ ಭೂಮಿಯ ಮೇಲೆ ಬಿದ್ದಳು. ಪುನಃ ಎಚ್ಚರಗೊಂಡು ರಕ್ತದಿಂದ ತೋಯ್ದುಹೋಗಿ ಮಲಗಿದ್ದ ದುರ್ಯೋಧನನನ್ನು ನೋಡಿ ಪುನಃ ಪುನಃ ಗಟ್ಟಿಯಾಗಿ ಅಳುತ್ತಾ ದೀನ ಗಾಂಧಾರಿಯು ಅವನನ್ನು ಆಲಂಗಿಸಿ ದೈನ್ಯದಿಂದ ಶೋಕಿಸಿದಳು. “ಹಾ ಹಾ ಪುತ್ರ!” ಎಂದು ಕೂಗಿಕೊಳ್ಳುತ್ತಾ ಶೋಕಾರ್ತಳಾಗಿ ಇಂದ್ರಿಯಗಳು ವ್ಯಾಕುಲವಾಗಿದ್ದ ಅವಳು ತನ್ನ ಕಣ್ಣೀರಿನಿಂದ ವಿಶಾಲವೂ ದಷ್ಟಪುಷ್ಟವೂ ಚಿನ್ನದ ಹಾರದಿಂದ ಶುಶೋಭಿತವೂ ಆಗಿದ್ದ ದುರ್ಯೋಧನನ ವಕ್ಷಸ್ಥಳವನ್ನು ನೆನೆಯಿಸುತ್ತಾ ಸಮೀಪದಲ್ಲಿದ್ದ ಹೃಷೀಕೇಶನಿಗೆ ಮಾತನ್ನಾಡಿದಳು:  “ವಾರ್ಷ್ಣೇಯ! ಜ್ಞಾತಿಗಳ ವಿನಾಶಕಾರೀ ಸಂಗ್ರಾಮವು ಸನ್ನಿಹಿತವಾಗಿದ್ದಾಗ ನೃಪಸತ್ತಮನು ಕೈಮುಗಿದುಅಮ್ಮಾ! ಜ್ಞಾತಿಗಳ ನಡುವೆ ನಡೆಯುವ ಯುದ್ಧದಲ್ಲಿ ನನಗೆ ಜಯವಾಗಲೆಂದು ಹೇಳು!” ಎಂದು ನನ್ನಲ್ಲಿ ಕೇಳಿಕೊಂಡಿದ್ದನು! ಮುಂದೆ ನನಗೇ ಬರಲಿರುವ ದುಃಖವನ್ನು ಅರಿತುಕೊಂಡಿದ್ದ ನಾನುಪುರುಷವ್ಯಾಘ್ರ! ಧರ್ಮವಿರುವಲ್ಲಿಯೇ ಜಯವೂ ಇರುತ್ತದೆ!” ಎಂದು ಹೇಳಿದ್ದೆ. “ಮಗನೇ! ಯುದ್ಧಮಾಡುತ್ತಿರುವಾಗ ಯಾವಾಗಲೂ ನೀನು ಮೋಹಗೊಳ್ಳುವುದಿಲ್ಲ. ನಿಶ್ಚಯವಾಗಿಯೂ ನೀನು ಶಸ್ತ್ರಗಳಿಂದ ಅಮರರಂತೆ ಉತ್ತಮ ಲೋಕಗಳನ್ನು ಪಡೆಯುತ್ತೀಯೆ!” ಎಂದು ಆಗಲೇ ನಾನು ಅವನಿಗೆ ಹೇಳಿದ್ದೆ. ಆದುದರಿಂದ ನಾನು ಅಷ್ಟೊಂದು ಶೋಕಿಸುತ್ತಿಲ್ಲ. ಆದರೆ ಹತಬಾಂಧವನಾದ ದೀನನಾದ ಧೃತರಾಷ್ಟ್ರನ ಕುರಿತು ಶೋಕಿಸುತ್ತಿದ್ದೇನೆ. ವೀರ ಶಯನದಲ್ಲಿ ಮಲಗಿರುವ ಅಸಹನಶೀಲ, ಯೋದ್ಧಶ್ರೇಷ್ಠ, ಅಸ್ತ್ರವಿದ್ಯಾಪಾರಂಗತ, ಯುದ್ಧದುರ್ಮದ ನನ್ನ ಮಗನನ್ನು ನೋಡು! ಮೂರ್ಧಾಭಿಷಿಕ್ತ ರಾಜರ ಮುಂದೆ ಮುಂದೆಯೇ ಹೋಗುತ್ತಿದ್ದ ಈ ಪರಂತಪನು ಇಂದು ಕೆಸರಿನಲ್ಲಿ ಮಲಗಿದ್ದಾನೆಂದರೆ ಕಾಲದ ವಿಪರ್ಯಾಸವನ್ನು ನೋಡು! ವೀರರಿಗೆ ತಕ್ಕುದಾದ ಭೂಶಯ್ಯೆಯಲ್ಲಿ ಅಂಗಾತನಾಗಿಯೇ ಮಲಗಿರುವ ದುರ್ಯೋಧನನು ನಿಶ್ಚಯವಾಗಿಯೂ ಪಡೆಯಲು ಸುಲಭವಲ್ಲದ ವೀರಗತಿಯನ್ನೇ ಪಡೆದಿರುತ್ತಾನೆ. ಹಿಂದೆ ಸೋಪಾನದ ಮೇಲೆ ಸ್ತ್ರೀಯರು ರಮಿಸುತ್ತಿದ್ದ ಮಹೀಕ್ಷಿತನು ಹತನಾಗಿ ನೆಲದ ಮೇಲೆ ಮಲಗಿರಲು ಹದ್ದುಗಳು ಅವನ ಸೇವೆ ಮಾಡುತ್ತಿವೆ. ಹಿಂದೆ ಸ್ತ್ರೀಯರು ಉತ್ತಮ ವ್ಯಜನಗಳಿಂದ ಗಾಳಿಬೀಸುತ್ತಿದ್ದ ಅವನಿಗೆ ಇಂದು ಪಕ್ಷಿಗಳು ತಮ್ಮ ರೆಕ್ಕೆಗಳಿಂದ ಗಾಳಿಬೀಸುತ್ತಿವೆ. ಯುದ್ಧದಲ್ಲಿ ಸಿಂಹದಿಂದ ಆನೆಯಂತೆ ಭೀಮಸೇನನಿಂದ ಕೆಳಗುರುಳಿಸಲ್ಪಟ್ಟ ಮಹಾಬಾಹು ಬಲವಾನ್ ಸತ್ಯವಿಕ್ರಮಿಯು ಇಲ್ಲಿ ಮಲಗಿದ್ದಾನೆ. ಕೃಷ್ಣ! ಭೀಮಸೇನನಿಂದ ಹತನಾಗಿ ರಕ್ತಸಿಕ್ತನಾಗಿ ಗದೆಯನ್ನು ಹಿಡಿದು ಮಲಗಿರುವ ದುರ್ಯೋಧನನನ್ನು ನೋಡು! ಹಿಂದೆ ಹನ್ನೊಂದು ಅಕ್ಷೋಹಿಣೀ ಸೇನೆಯನ್ನು ಒಂದುಗೂಡಿಸಿದ್ದ ಅವನು ಯುದ್ಧದಲ್ಲಿ ಅನ್ಯಾಯರೀತಿಯಲ್ಲಿ ನಿಧನಹೊಂದಿದ್ದಾನೆ. ಸಿಂಹದಿಂದ ಕೆಳಗುರುಳಿಸಲ್ಪಟ್ಟ ಶಾರ್ದೂಲದಂತೆ ಭೀಮಸೇನನಿಂದ ಪಾತಿತನಾಗಿ ಇಗೋ ಮಹಾರಥ ಮಹೇಷ್ವಾಸ ದುರ್ಯೋಧನನು ಮಲಗಿದ್ದಾನೆ. ವಿದುರನನ್ನೂ ತನ್ನ ತಂದೆಯನ್ನೂ ಅವಮಾನಿಸಿ ಆ ಮಂದಭಾಗ್ಯ, ಬಾಲಬುದ್ಧಿಯ ಮೂಢನು ವೃದ್ಧರನ್ನು ಅವಮಾನಿಸಿದುದರಿಂದ ಮೃತ್ಯುವಿನ ವಶನಾದನು. ಸ್ಪರ್ಧೆಯೇ ಇಲ್ಲದೇ ಹದಿಮೂರು ವರ್ಷಗಳು ಈ ಭೂಮಂಡಲು ಯಾರ ಅಧೀನದಲ್ಲಿತ್ತೋ ಆ ನನ್ನ ಪುತ್ರ ಪೃಥಿವೀಪತಿಯು ಹತನಾಗಿ ಭೂಮಿಯ ಮೇಲೆ ಮಲಗಿದ್ದಾನೆ! ಈ ಧಾರ್ತರಾಷ್ಟ್ರನ ಅನುಶಾಸನದಲ್ಲಿ ಪೃಥ್ವಿಯು ಆನೆ-ಗೋವು-ಕುದುರೆಗಳಿಂದ ಸಮೃದ್ಧವಾಗಿದ್ದುದನ್ನು ನಾನು ನೋಡಿದ್ದೆನು. ಇಂದು ಅನ್ಯರ ಅನುಶಾಸನದಡಿಯಲ್ಲಿರುವ ಈ ಭೂಮಿಯು ಆನೆ-ಕುದುರೆ-ಗೋವುಗಳಿಂದ ವಿಹೀನವಾಗಿರುವುದನ್ನು ನಾನು ನೋಡುತ್ತಿದ್ದೇನೆ! ನಾನೇಕೆ ಜೀವಿಸಿರಬೇಕು ಮಾಧವ! ನನ್ನ ಪುತ್ರನ ವಧೆಗಿಂತಲೂ ಕಷ್ಟಕರವಾದುದನ್ನು ನೋಡು! ರಣದಲ್ಲಿ ಹತರಾದ ಶೂರರನ್ನು ಸ್ತ್ರೀಯರು ಉಪಾಸಿಸುತ್ತಿದ್ದಾರೆ! ಚಿನ್ನದ ವೇದಿಯಂತೆ ಬೆಳಗುತ್ತಿರುವ ಸುಶ್ರೋಣೀ ಲಕ್ಷ್ಮಣನ ತಾಯಿಯು ಕೂದಲುಗಳನ್ನು ಕೆದರಿಕೊಂಡು ದುರ್ಯೋಧನನ ತೊಡೆಯ ಸಮೀಪದಲ್ಲಿ ಕುಳಿತಿರುವುದನ್ನು ನೋಡು! ಹಿಂದೆ ಆ ಮಹಾಭುಜನು ಜೀವಿಸಿರುವಾಗ ಈ ಮನಸ್ವಿನೀ ಬಾಲೆಯು ಅವನ ಸುಂದರ ಬಾಹುಗಳನ್ನಾಶ್ರಯಿಸಿ ರಮಿಸುತ್ತಿದ್ದಳಲ್ಲವೇ? ರಣದಲ್ಲಿ ಪುತ್ರನೊಂದಿಗೆ ಹತನಾಗಿರುವ ಈ ಪುತ್ರನನ್ನು ನೋಡಿಯೂ ಹೇಗೆ ನನ್ನ ಈ ಹೃದಯವು ನೂರು ಚೂರಾಗಿ ಒಡೆದುಹೋಗುತ್ತಿಲ್ಲ? ಆ ವಾಮೋರುವು ರಕ್ತದಿಂದ ತೋಯ್ದುಹೋಗಿರುವ ಮಗ ಲಕ್ಷ್ಮಣನ ಮುಖವನ್ನು ಆಘ್ರಾಣಿಸುತ್ತಿದ್ದಾಳೆ ಮತ್ತು ದುರ್ಯೋಧನನನ್ನು ಕೈಯಿಂದ ಸವರುತ್ತಿದ್ದಾಳೆ. ಈ ಮನಸ್ವಿನಿಯು ಯಾರಿಗಾಗಿ ಶೋಕಿಸುತ್ತಿದ್ದಾಳೆ? ಪುತ್ರನಿಗಾಗಿಯೋ ಅಥವಾ ಪತಿಗಾಗಿಯೋ? ಅವಳು ಮಗನನ್ನು ನೋಡುತ್ತಿರುವ ರೀತಿಯಿಂದ ಅವಳು ಈ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾಳೆಂದು ನಮಗನ್ನಿಸುತ್ತದೆ. ಆ ಆಯತೇಕ್ಷಣಿಯು ಎರಡೂ ಕೈಗಳಿಂದ ತನ್ನ ತಲೆಯನ್ನು ಚಚ್ಚಿಕೊಳ್ಳುತ್ತಿದ್ದಾಳೆ ಮತ್ತು ವೀರ ಪತಿ ಕುರುರಾಜನ ಎದೆಯಮೇಲೆ ಬೀಳುತ್ತಿದ್ದಾಳೆ! ಕಮಲದ ಪ್ರಭೆಯುಳ್ಳ ಆ ತಪಸ್ವಿನಿಯು ಒಮ್ಮೆ ಮಗನ ಮತ್ತು ಇನ್ನೊಮ್ಮೆ ಪತಿಯ ಮುಖವನ್ನು ಒರೆಸುತ್ತಾ ಕಾಂತಿಹೀನಳಾಗಿ ತೋರುತ್ತಿದ್ದಾಳೆ. ಆಗಮ-ಶ್ರುತಿಗಳು ಸತ್ಯವನ್ನೇ ಪ್ರತಿಪಾದಿಸುವುದಾದರೆ ನಿಶ್ಚಯವಾಗಿ ನೃಪನು ಬಾಹುಬಲದಿಂದ ಆರ್ಜಿಸಿದ ಪುಣ್ಯ ಲೋಕಗಳನ್ನೇ ಸೇರಿರಬಹುದು!

“ಮಾಧವ! ಆಯಾಸವೇ ಇಲ್ಲದೇ ಯುದ್ಧಮಾಡುತ್ತಿದ್ದ ನನ್ನ ನೂರು ಮಕ್ಕಳು ರಣದಲ್ಲಿ ಭೀಮಸೇನನ ಗದೆಯಿಂದ ಹತರಾಗಿರುವುದನ್ನು ನೋಡು! ನನ್ನ ಬಾಲ ಸೊಸೆಯರು ಪುತ್ರರನ್ನು ಕಳೆದುಕೊಂಡು ಕೂದಲುಗಳನ್ನು ಕೆದರಿಕೊಂಡು ರಣದಲ್ಲಿ ಓಡಾಡುತ್ತಿರುವುದಕ್ಕಿಂತಲೂ ಹೆಚ್ಚಿನ ದುಃಖವು ಇಂದು ಯಾವುದಿದೆ? ಭೂಷಣಗಳಿಂದ ಅಲಂಕೃತ ಕಾಲ್ನಡುಗೆಯಲ್ಲಿ ಅರಮನೆಯ ನೆಲವನ್ನು ಸ್ಪರ್ಷಿಸುತ್ತಿದ್ದ ಅವರು ರಕ್ತದಿಂದ ನೆನೆದಿರುವ ಭೂಮಿಯನ್ನು ಅದೇ ಕಾಲುಗಳಿಂದ ಸ್ಪರ್ಷಿಸುತ್ತಿದ್ದಾರೆ! ಶೋಕದಿಂದ ಆರ್ತರಾಗಿ ಅವರು ಅಮಲೇರಿದ ಸ್ತ್ರೀಯರಂತೆ ತೂರಾಡುತ್ತಾ ಹದ್ದು-ನರಿ-ಕಾಗೆಗಳನ್ನು ಬಹಳ ಕಷ್ಟದಿಂದ ಓಡಿಸುತ್ತಿದ್ದಾರೆ! ತೆಳು ಸೊಂಟದ ನನ್ನ ಇನ್ನೊಬ್ಬ ಸೊಸೆಯು ಈ ಘೋರ ವಿನಾಶವನ್ನು ನೋಡಿ ಅತ್ಯಂತ ದುಃಖಿತಳಾಗಿ ಇಗೋ ಕೆಳಗೆ ಬೀಳುತ್ತಿದ್ದಾಳೆ! ರಾಜಪುತ್ರಿ, ಲಕ್ಷ್ಮಣನ ತಾಯಿ, ಪಾರ್ಥಿವಸುತೆಯನ್ನು ನೋಡಿ ನನ್ನ ಮನಸ್ಸು ಶಾಂತವಾಗುತ್ತಿಲ್ಲ! ಹತರಾಗಿ ಭೂಮಿಯ ಮೇಲೆ ಬಿದ್ದಿರುವ ಸಹೋದರರನ್ನು, ಇನ್ನು ಕೆಲವರು ಪತಿಗಳನ್ನು ಮತ್ತು ಇನ್ನು ಕೆಲವರು ಪುತ್ರರನ್ನು ನೋಡಿ ತಮ್ಮ ಸುಂದರ ಬಾಹುಗಳನ್ನು ಮೇಲೆತ್ತಿ ಪರಿತಪಿಸುತ್ತಿದ್ದಾರೆ! ಬಂಧುಗಳು ಹತರಾಗಿರುವುದನ್ನು ನೋಡಿ ದಾರುಣವಾಗಿ ಕಷ್ಟದಿಂದ ರೋದಿಸುತ್ತಿರುವ ಮಧ್ಯವಯಸ್ಸಿನ ಮತ್ತು ವೃದ್ಧ ನಾರಿಯರ ಆಕ್ರಂದವನ್ನು ಕೇಳು! ಶ್ರಮದಿಂದ ಬಳಲಿದ ಆ ಸ್ತ್ರೀಯರು ರಥದ ನೊಗಗಳನ್ನೂ, ಸತ್ತುಹೋದ ಆನೆ-ಕುದುರೆಗಳ ದೇಹವನ್ನೂ ಆಶ್ರಯಿಸಿ ನಿಂತಿರುವುದನ್ನು ನೋಡು! ಇನ್ನೊಬ್ಬಳು ಶರೀರದಿಂದ ತುಂಡಾಗಿರುವ ಸುಂದರ ಕುಂಡಲಗಳನ್ನು ಧರಿಸಿದ್ದ ತನ್ನ ಬಂಧುವಿನ ಶಿರವನ್ನು ಹಿಡಿದು ನಿಂತಿರುವುದನ್ನು ನೋಡು! ಹಿಂದಿನ ಜನ್ಮದಲ್ಲಿ ನಾವು ಮಾಡಿದ ಪಾಪಗಳು ಅಲ್ಪವಾಗಿರಲಾರದು. ಆದುದರಿಂದಲೇ ಮಂದಬುದ್ಧಿಯುಳ್ಳ ನಾನು ಇಂತಹ ಕೀಳು ಪರಿಸ್ಥಿತಿಗೆ ಇಳಿದಿದ್ದೇನೆ! ಅದಕ್ಕಾಗಿಯೇ ಧರ್ಮರಾಜನು ನಮಗೆ ಈ ನೋವನ್ನಿತ್ತಿದ್ದಾನೆ! ಶುಭ-ಪಾಪ ಕರ್ಮಗಳು ಎಂದೂ (ಫಲವನ್ನು ಕೊಡದೇ) ನಾಶವಾಗುವುದಿಲ್ಲ! ಇನ್ನೂ ಹೆಚ್ಚು ವಯಸ್ಸಾಗಿರದ, ಸುಂದರ ಮುಖ-ಕುಚಗಳುಳ್ಳ, ಸತ್ಕುಲಪ್ರಸೂತೆಯರಾದ, ಲಜ್ಜಾಶೀಲರಾದ, ಕಪ್ಪು ರೆಪ್ಪೆ-ಕಣ್ಣುಗಳುಳ್ಳ, ಹಂಸಪಕ್ಷಿಗಳಂತೆ ಗದ್ಗದಸ್ವರದಲ್ಲಿ ಕೂಗುತ್ತಿರುವ, ದುಃಖಶೋಕಗಳಿಂದ ಮೂರ್ಛಿತರಾಗಿ ಸಾರಸ ಪಕ್ಷಿಗಳಂತೆ ರೋದಿಸುತ್ತಾ ಬೀಳುತ್ತಿರುವವರನ್ನು ನೋಡು! ಅರಳಿದ ಕಮಲದ ಕಾಂತಿಯಿಂದ ಪ್ರಕಾಶಿಸುತ್ತಿರುವ ಸ್ತ್ರೀಯರ ಸುಂದರ ಮುಖಗಳನ್ನು ಸೂರ್ಯನು ತನ್ನ ಪ್ರಖರ ಕಿರಣಗಳಿಂದ ಸುಡುತ್ತಿದ್ದಾನೆ! ಮತ್ತ ಮಾತಂಗದ ದರ್ಪವುಳ್ಳ ನನ್ನ ಪುತ್ರರು ಅಸೂಯೆಪಟ್ಟು ಬೇರೆ ಯಾರೂ ನೋಡಬಾರದೆನ್ನುತ್ತಿದ್ದರೋ ಅವರ ಪತ್ನಿಯರನ್ನು ಇಂದು ಸಾಮಾನ್ಯ ಜನರೂ ನೋಡುತ್ತಿದ್ದಾರೆ! ನೂರು ಚಂದ್ರರ ಚಿಹ್ನೆಗಳುಳ್ಳ ನನ್ನ ಪುತ್ರರ ಗುರಾಣಿಗಳು, ಆದಿತ್ಯಸನ್ನಿಭ ಧ್ವಜಗಳು, ಚಿನ್ನದ ಕವಚಗಳು ಮತ್ತು ಕಾಂಚನ ಪದಕಗಳು ಮತ್ತು ಕಿರೀಟಗಳು ಭೂಮಿಯ ಮೇಲೆ ಬಿದ್ದು ಉರಿಯುತ್ತಿರುವ ಅಗ್ನಿಯಂತೆ ಬೆಳಗುತ್ತಿರುವುದನ್ನು ನೋಡು! ಶತ್ರುಸೂದನ ಶೂರ ಭೀಮಸೇನನು ಸರ್ವಾಂಗಗಳಿಂದ ಸುರಿಯುತ್ತಿದ್ದ ರಕ್ತವನ್ನು ಕುಡಿದು ಕೆಳಗುರುಳಿಸಿದ ದುಃಶಾಸನನು ಇಲ್ಲಿ ಮಲಗಿದ್ದಾನೆ! ದ್ಯೂತದ ಸಮಯದಲ್ಲಿ ದ್ರೌಪದಿಗೆ ಕೊಟ್ಟ ಕ್ಲೇಶಗಳ ಸ್ಮರಣೆಯಿಂದ ಪ್ರೇರಿತನಾದ ವೀರಘಾತೀ ಭೀಮನ ಗದೆಯಿಂದ ಕೆಳಗುರುಳಿಸಲ್ಪಟ್ಟು ಬಿದ್ದಿರುವ ನನ್ನ ಮಗನನ್ನು ನೋಡು! ಇವನು ತನ್ನ ಅಣ್ಣ ಮತ್ತು ಕರ್ಣನಿಗೆ ಪ್ರಿಯವಾದುದನ್ನು ಮಾಡಲು ಬಯಸಿ ದ್ಯೂತದಲ್ಲಿ ಸೋತ ಪಾಂಚಾಲಿಯೊಡನೆ ಸಭೆಯಲ್ಲಿ ಹೀಗೆ ಹೇಳಿದ್ದನು: “ಪಾಂಚಾಲೀ! ದಾಸರಾದ ಸಹದೇವ-ನಕುಲ-ಅರ್ಜುನರ ಪತ್ನಿಯಾದ ನೀನೂ ಕೂಡ ದಾಸಿಯಂತೆ. ಆದುದರಿಂದ ಬೇಗನೇ ನೀನು ನಮ್ಮ ಮನೆಗಳನ್ನು ಪ್ರವೇಶಿಸು!” ಆಗ ನಾನು ನೃಪ ದುರ್ಯೋಧನನಿಗೆ ಹೀಗೆ ಹೇಳಿದ್ದೆನು: “ಮಗನೇ! ಮೃತ್ಯುಪಾಶದಿಂದ ಬಂಧಿಸಲ್ಪಟ್ಟಿರುವ ಶಕುನಿಯನ್ನು ಪರಿತ್ಯಜಿಸು! ಈ ನಿನ್ನ ಮಾವ ದುರ್ಬುದ್ಧಿಯು ಕಲಹಪ್ರಿಯನೆನ್ನುವುದನ್ನು ತಿಳಿದುಕೋ. ಬೇಗನೇ ಇವನನ್ನು ಪರಿತ್ಯಜಿಸಿ ಪಾಂಡವರೊಂದಿಗೆ ಸಂಧಿಮಾಡಿಕೋ! ಕೋಪಿಷ್ಟ ಭೀಮಸೇನನನ್ನು ನೀನು ಅರಿತಿಲ್ಲ! ಉರಿಯುತ್ತಿರುವ ಕೊಳ್ಳಿಗಳಿಂದ ಆನೆಯನ್ನು ತಿವಿದು ಕೆರಳಿಸುವಂತೆ ನೀನು ಮಾತುಗಳೆಂಬ ತೀಕ್ಷ್ಣ ಬಾಣಗಳಿಂದ ಚುಚ್ಚುತ್ತಿರುವೆ!” ರಭಸದಿಂದಾಡಿದ ಆ ಕ್ರೂರ ಮಾತಿನ ಮುಳ್ಳುಗಳನ್ನು ಸಹಿಸಿಟ್ಟುಕೊಂಡಿದ್ದ ಭೀಮಸೇನನು ಸರ್ಪವು ಗೂಳಿಗಳ ಮೇಲೆ ಹೇಗೋ ಹಾಗೆ ನನ್ನ ಮಕ್ಕಳ ಮೇಲೆ ವಿಷವನ್ನು ಕಾರಿದ್ದಾನೆ! ಸಿಂಹದಿಂದ ಹತವಾದ ಮಹಾಸಲಗದಂತೆ ಭೀಮಸೇನನಿಂದ ಹತನಾದ ದುಃಶಾಸನನು ಇಗೋ ಇಲ್ಲಿ ತನ್ನ ಎರಡು ವಿಪುಲ ಭುಜಗಳನ್ನೂ ಚಾಚಿ ಮಲಗಿದ್ದಾನೆ! ಅತ್ಯಂತ ಅಸಹನಶೀಲನಾದ ಭೀಮಸೇನನು ಕ್ರುದ್ಧನಾಗಿ ರಣದಲ್ಲಿ ದುಃಶಾಸನನ ರಕ್ತವನ್ನು ಕುಡಿದು ರೌದ್ರಕರ್ಮವನ್ನೇ ಎಸಗಿದನು!

“ಮಾಧವ! ಪ್ರಾಜ್ಞಸಮ್ಮತನಾಗಿದ್ದ ನನ್ನ ಮಗ ಈ ವಿಕರ್ಣನೂ ಕೂಡ ಭೀಮನಿಂದ ನೂರುಚೂರಾಗಿಸಲ್ಪಟ್ಟು ಇಲ್ಲೆ ನೆಲದ ಮೇಲೆ ಮಲಗಿದ್ದಾನೆ! ಆನೆಗಳ ಮಧ್ಯ ಮಲಗಿರುವ ವಿಕರ್ಣನು ಶರತ್ಕಾಲದಲ್ಲಿ ಕಪ್ಪುಮೋಡಗಳಿಂದ ಮುಚ್ಚಲ್ಪಟ್ಟ ದಿವಾಕರನಂತೆ ತೋರುತ್ತಿದ್ದಾನೆ. ಧನುಸ್ಸನ್ನು ಹಿಡಿಯುತ್ತಿದ್ದುದರಿಂದ ಅವನ ಕೈಯು ಜಡ್ಡುಗಟ್ಟಿಹೋಗಿದೆ. ಕೈಚೀಲವನ್ನು ಧರಿಸಿದ್ದ ಅವನ ಕೈಗಳನ್ನು ತಿನ್ನಲು ಬಯಸಿ ಹದ್ದುಗಳು ಕುಕ್ಕಲು ಪ್ರಯತ್ನಿಸುತ್ತಿವೆ. ಮಾಂಸವನ್ನು ತಿನ್ನಲು ಬಯಸುತ್ತಿರುವ ಹದ್ದುಗಳನ್ನು ಓಡಿಸಲು ಅವನ ಪತ್ನಿ ಬಾಲ ತಪಸ್ವಿನಿಯು ಪ್ರಯತ್ನಿಸುತ್ತಿದ್ದರೂ ಅವಳಿಗೆ ಅದು ಸಾಧ್ಯವಾಗುತ್ತಿಲ್ಲ! ದೇವತೆಗಳಂತೆ ಕಾಂತಿಯುಕ್ತನಾಗಿದ್ದ ಯುವಕ ಶೂರ ವಿಕರ್ಣನು ಸುಖದಿಂದಲೇ ಬೆಳೆದವನು. ಸುಖದಿಂದಿರಲು ಯೋಗ್ಯನಾದ ಅವನು ಕೆಸರಿನಲ್ಲಿ ಮಲಗಿದ್ದಾನೆ! ಕರ್ಣಿ-ನಾಲೀಕ-ನಾರಾಚ ಬಾಣಗಳಿಂದ ಯುದ್ಧದಲ್ಲಿ ಮರ್ಮಸ್ಥಾನಗಳೆಲ್ಲವೂ ಗಾಯಗೊಂಡು ಹತನಾಗಿದ್ದರೂ ಶರೀರಕಾಂತಿಯು ಆ ಭರತಸತ್ತಮನನ್ನು ಇನ್ನೂ ಬಿಟ್ಟುಹೋಗಿಲ್ಲ! ರಣದಲ್ಲಿ ಶತ್ರುಗಣಗಳನ್ನು ಸಂಹರಿಸುತ್ತಿದ್ದ ದುರ್ಮುಖನೂ ಕೂಡ ಪ್ರತಿಜ್ಞೆಯನ್ನು ಪಾಲಿಸಿದ ಸಂಗ್ರಾಮ ಶೂರ ಭೀಮನಿಂದ ಹತನಾಗಿ ಇದೋ ಇಲ್ಲಿ ಅಂಗಾತನಾಗಿ ಮಲಗಿದ್ದಾನೆ! ಕ್ರೂರಮೃಗಗಳಿಂದ ತಿನ್ನಲ್ಪಟ್ಟ ಅವನ ಮುಖವು ಸಪ್ತಮಿಯ ಚಂದ್ರನಂತೆ ಅಧಿಕವಾಗಿ ಬೆಳಗುತ್ತಿದೆ! ರಣದಲ್ಲಿ ಆ ಶೂರನ ಮುಖವು ಈ ರೀತಿ ತೇಜಸ್ಸಿನಿಂದ ಕೂಡಿರುವುದನ್ನು ನೋಡಿದರೆ ಇವನು ಶತ್ರುಗಳಿಂದ ಹೇಗೆ ಹತನಾಗಿರಬಹುದು? ಹೇಗೆ ನನ್ನ ಮಗನು ಕೆಸರಿನಲ್ಲಿ ಸಿಲುಕಿಕೊಂಡಿದ್ದಾನೆ? ಯುದ್ಧದಲ್ಲಿ ಇವನನ್ನು ಎದುರಿಸಿ ಹೋರಾಡುವವರು ಯಾರೂ ಇರಲಿಲ್ಲ. ದೇವಲೋಕವನ್ನೇ ಜಯಿಸಲು ಸಮರ್ಥನಾಗಿದ್ದ ಈ ದುರ್ಮುಖನು ಹೇಗೆ ತಾನೇ ಶತ್ರುಗಳಿಂದ ಹತನಾದನು? ಧನುಷ್ಮತರಿಗೇ ಆದರ್ಶಪ್ರಾಯನಾದ ಧೃತರಾಷ್ಟ್ರನ ಮಗ ಚಿತ್ರಸೇನನು ಹತನಾಗಿ ಭೂಮಿಯ ಮೇಲೆ ಮಲಗಿರುವುದನ್ನು ನೋಡು! ಚಿತ್ರತರ ಮಾಲ್ಯಾಭರಣಗಳನ್ನು ಧರಿಸಿರುವ ಅವನನ್ನು ಶೋಕಕರ್ಶಿತ ಯುವತಿಯರು ಮಾಂಸಾಶಿ ಪ್ರಾಣಿಗಳೊಡನೆ ರೋದಿಸುತ್ತಾ ಸುತ್ತುವರೆದಿದ್ದಾರೆ. ಸ್ತ್ರೀಯರ ರೋದನದ ಶಬ್ಧ ಮತ್ತು ಮಾಂಸಾಶಿ ಪ್ರಾಣಿಗಳ ಗರ್ಜನೆಗಳು ನನಗೆ ನೋಡಲು ಅದ್ಭುತವಾಗಿಯೂ ವಿಚಿತ್ರವಾಗಿಯೂ ಕಾಣುತ್ತಿವೆ! ನಿತ್ಯವೂ ಶ್ರೇಷ್ಠ ಸ್ತ್ರೀಯರಿಂದ ಸೇವಿಸಲ್ಪಡುತ್ತಿದ್ದ, ದೇವಸದೃಶ ಯುವಕ ವಿವಿಂಶತಿಯು ವಿಧ್ವಸ್ತನಾಗಿ ಇಗೋ ಇಲ್ಲ ಧೂಳಿನಲ್ಲಿ ಮಲಗಿಕೊಂಡಿದ್ದಾನೆ!, ಶರಗಳಿಂದ ಕತ್ತರಿಸಲ್ಪಟ್ಟ ಕವಚವುಳ್ಳ, ಯುದ್ಧದಲ್ಲಿ ಹತನಾದ ವೀರ ವಿವಿಂಶತಿಯನ್ನು ಸುತ್ತುವರೆದು ಹದ್ದುಗಳು ಕುಳಿತುಕೊಂಡಿವೆ!  ಆ ವೀರನು ಸಮರದಲ್ಲಿ ಪಾಂಡವರ ಸೇನೆಯನ್ನು ಪ್ರವೇಶಿಸಿ ಪುನಃ ಸತ್ಪುರುಷರಿಗೆ ಉಚಿತವಾದ ವೀರಶಯದಲ್ಲಿ ಮಲಗಿದ್ದಾನೆ! ಮಂದಹಾಸವನ್ನು ಬೀರುತ್ತಿರುವ, ಸುಂದರ ಮುಖ ಮತ್ತು ಹುಬ್ಬುಗಳುಳ್ಳ, ತಾರಾಧಿಪ ಚಂದ್ರನಂತಿರುವ ವಿವಿಂಶತಿಯ ಶುಭ್ರ ವದನವನ್ನು ನೋಡು! ಕ್ರೀಡಿಸುತ್ತಿರುವ ಗಂಧರ್ವನನ್ನು ಸಹಸ್ರಾರು ದೇವಕನ್ಯೆಯರು ಹೇಗೋ ಹಾಗೆ ವಿವಿಂಶತಿಯನ್ನು ಅನೇಕ ಸುಂದರ ಸ್ತ್ರೀಯರು ಸುತ್ತುವರೆದು ಕುಳಿತಿದ್ದಾರೆ! ವೀರಸೇನೆಗಳನ್ನು ಸಂಹರಿಸುತ್ತಿದ್ದ, ಸಮಿತಿ ಶೋಭನ ಶೂರ ದುಃಸಹನನ್ನು ಯಾರುತಾನೇ ಎದುರಿಸಿ ನಿಲ್ಲುತ್ತಿದ್ದರು? ಶರಗಳಿಂದ ಮುಚ್ಚಿಹೋಗಿರುವ ದುಃಸಹನ ಶರೀರವು ಹೂಬಿಟ್ಟಿರುವ ಕರ್ಣಿಕೆ ಗಿಡಗಳಿಂದ ತುಂಬಿಹೋಗಿರುವ ಪರ್ವತದಂತೆ ತೋರುತ್ತಿದೆ! ಶ್ವೇತಪರ್ವತವು ಅಗ್ನಿಯಿಂದ ಶೋಭಾಯಮಾನವಾಗಿ ಕಾಣುವಂತೆ ಪ್ರಾಣಹೋಗಿದ್ದರೂ ದುಃಸಹನು ಚಿನ್ನದ ಹಾರಗಳು ಮತ್ತು ಕವಚದಿಂದ ಹೊಳೆಯುತ್ತಿದ್ದಾನೆ!

“ಮಾಧವ! ಬಲ ಮತ್ತು ಶೌರ್ಯಗಳಲ್ಲಿ ತನ್ನ ತಂದೆ ಮತ್ತು ನಿನಗಿಂತಲೂ ಒಂದೂವರೆಯುಷ್ಟು ಗುಣವುಳ್ಳವನೆಂದು ಹೇಳುವ, ಸಿಂಹದ ಬಲವಿದ್ದ, ದರ್ಪನಾಗಿದ್ದ ಅಭಿಮನ್ಯುವು ನನ್ನ ಮಗನ ದುರಾಸದ ಸೇನೆಯನ್ನು ಭೇದಿಸಿ, ಅನ್ಯರ ಮೃತ್ಯುವಿಗೆ ಕಾರಣನಾಗಿ ತಾನೇ ಮೃತ್ಯುವಶನಾಗಿಹೋದನು! ಅರ್ಜುನನ ಮಗ ಅಮಿತ ತೇಜಸ್ವಿ ಅಭಿಮನ್ಯುವು ಹತನಾಗಿದ್ದರೂ ಅವನ ಪ್ರಭೆಯು ಕುಂದಿರದೇ ಇರುವುದನ್ನು ನಾನು ನೋಡುತ್ತಿದ್ದೇನೆ! ವಿರಾಟನ ಮಗಳು, ಗಾಂಡೀವಧನ್ವಿಯ ಸೊಸೆ ಅನಿಂದಿತೆ ಬಾಲೆಯು ವೀರ ಪತಿಯನ್ನು ನೋಡಿ ಆರ್ತಳಾಗಿ ಶೋಕಿಸುತ್ತಿದ್ದಾಳೆ! ಅವನ ಭಾರ್ಯೆ ವಿರಾಟಸುತೆಯು ತನ್ನ ಪತಿಯ ಬಳಿಸಾರಿ ಕೈಗಳಿಂದ ಅವನನ್ನು ನೇವರಿಸುತ್ತಿದ್ದಾಳೆ! ಅರಳಿದ ಕಮಲದಂತಿರುವ ಶಂಖದಂತೆ ದುಂಡಾಗಿರುವ ಕತ್ತುಳ್ಳ ಸೌಭದ್ರನ ಶಿರವನ್ನು ಕಮನೀಯ ರೂಪವತಿ ಯಶಸ್ವಿನೀ ಭಾಮಿನೀ ಉತ್ತರೆಯು ಆಘ್ರಾಣಿಸಿ ಆಲಂಗಿಸಿಕೊಂಡಿದ್ದಾಳೆ. ಹಿಂದೆ ಅವಳು ಮಧುಪಾನದಿಂದ ಉನ್ಮತ್ತಳಾಗಿ ಲಜ್ಜೆಯಿಂದ ಅಭಿಮನ್ಯುವನ್ನು ಆಲಂಗಿಸುತ್ತಿದ್ದಳು. ರಕ್ತದಿಂದ ಅಂಟಿಕೊಂಡಿದ್ದ ಸುವರ್ಣಮಯ ಕವಚವನ್ನು ಬಿಚ್ಚಿ ಅವಳು ಅವನ ಶರೀರವನ್ನು ವೀಕ್ಷಿಸುತ್ತಿದ್ದಾಳೆ! ಅವನನ್ನು ನೋಡುತ್ತಾ ಆ ಬಾಲೆಯು ನಿನಗೆ ಹೇಳುತ್ತಿದ್ದಾಳೆ: “ಪುಂಡರೀಕಾಕ್ಷ! ನಿನ್ನಂತೆಯೇ ಇದ್ದ ಇವನು ಹತನಾಗಿ ಕೆಳಗುರುಳಿದ್ದಾನೆ! ಬಲ-ವೀರ್ಯ-ತೇಜಸ್ಸು-ರೂಪಗಳಲ್ಲಿ ನಿನ್ನಂತೆಯೇ ಇದ್ದ ಇವನು ಕೆಳಗುರುಳಿಸಲ್ಪಟ್ಟು ಭೂಮಿಯ ಮೇಲೆ ಮಲಗಿದ್ದಾನೆ! ರಂಕುಮೃಗದ ಚರ್ಮದ ಮೇಲೆ ಮಲಗುತ್ತಿದ್ದ ನಿನ್ನ ಈ ಅತ್ಯಂತ ಸುಕುಮಾರ ಶರೀರವು ಇಂದು ಭೂಮಿಯ ಮೇಲೆ ಬಿದ್ದು ಪರಿತಪಿಸುತ್ತಿಲ್ಲವೇ? ಮೌರ್ವಿಯನ್ನು ಸೆಳೆದು ಜಡ್ಡುಗಟ್ಟಿದ ಚರ್ಮಯುಕ್ತವಾದ, ಕಾಂಚನ ಅಂಗದಗಳನ್ನು ಧರಿಸಿರುವ, ಆನೆಯ ಸೊಂಡಿಲಿನಂತಿರುವ ಎರಡೂ ವಿಪುಲ ಭುಜಗಳನ್ನು ಚಾಚಿ ಮಲಗಿರುವೆಯಲ್ಲ! ಬಹಳ ಶ್ರಮದಿಂದ ಯುದ್ಧಮಾಡಿ ಆಯಾಸಕಳೆಯಲೆಂದು ಸುಖವಾಗಿ ನೀನು ಮಲಗಿರುವಂತಿದೆ! ಆದುದರಿಂದಲೇ ನೀನು ಆರ್ತಳಾಗಿ ವಿಲಪಿಸುತ್ತಿರುವ ನನ್ನೊಡನೆ ಮಾತನಾಡುತ್ತಿಲ್ಲ! ಆರ್ಯಳಾದ ಸುಭದ್ರೆಯನ್ನೂ, ದೇವೋಪಮರಾದ ನಿನ್ನ ಪಿತೃಗಳನ್ನೂ ಮತ್ತು ದುಃಖಾರ್ತಳಾಗಿರುವ ನನ್ನನ್ನೂ ತೊರೆದು ನೀನು ಎಲ್ಲಿಗೆ ಹೋಗುವೆ?” ಅಭಿಮನ್ಯುವಿನ ತಲೆಯನ್ನು ತನ್ನ ತೊಡೆಯಮೇಲಿರಿಸಿಕೊಂಡು ಉತ್ತರೆಯು ಅವನ ಮುಖದ ಮೇಲೆ ರಕ್ತದಿಂದ ತೋಯ್ದು ಅಂಟಿಕೊಂಡಿರುವ ತಲೆಗೂದಲುಗಳನ್ನು ಮೆಲ್ಲಗೆ ಬಿಡಿಸುತ್ತ, ಅವನಿನ್ನೂ ಜೀವಂತನಾಗಿರುವನೆಂದೇ ಭಾವಿಸಿ, ಅವನನ್ನು ಪ್ರಶ್ನಿಸುತ್ತಿದ್ದಾಳೆ! “ವಾಸುದೇವನ ಅಳಿಯನೂ ಗಾಂಡೀವಧನ್ವಿಯ ಪುತ್ರನೂ ಆದ ನಿನ್ನನ್ನು ರಣರಂಗದ ಮಧ್ಯದಲ್ಲಿ ಆ ಮಹಾರಥರು ಹೇಗೆ ತಾನೇ ಸಂಹರಿಸಿದರು? ನನ್ನನ್ನು ಹೀಗೆ ವಿಧವೆಯನ್ನಾಗಿ ಮಾಡಿದ ಆ ಕ್ರೂರಕರ್ಮಿ ಕೃಪ-ಕರ್ಣ-ಜಯದ್ರಥ-ದ್ರೋಣ-ದ್ರೌಣಿಗಳಿಗೆ ಧಿಕ್ಕಾರ! ನನಗೆ ದುಃಖವನ್ನುಂಟುಮಾಡುವುದಕಾಗಿಯೇ ಬಾಲಕನಾದ ನೀನೊಬ್ಬನನ್ನೇ ಸುತ್ತುವರೆದಾಗ ಆ ಎಲ್ಲ ರಥರ್ಷಭರ ಮನಸ್ಸು ಹೇಗಿದ್ದೀತು? ಪಾಂಡವರು ಮತ್ತು ಪಾಂಚಾಲರು ನೋಡುತ್ತಿದ್ದಂತೆಯೇ, ರಕ್ಷಕರನ್ನು ಪಡೆದಿದ್ದ ನೀನು ಅನಾಥನಂತೆ, ಹೇಗೆ ನಿಧನ ಹೊಂದಿದೆ? ಆನೇಕರ ಆಕ್ರಮಣಕ್ಕೊಳಪಟ್ಟು ಅನಾಥನಂತೆ ನೀನು ಹತನಾದುದನ್ನು ನೋಡಿ ವೀರ ಪುರುಷಶಾರ್ದೂಲ ಪಾಂಡವ ಅರ್ಜುನನು ಹೇಗೆ ಜೀವಿಸಿರುತ್ತಾನೆ? ನೀನಿಲ್ಲದೇ ವಿಪುಲ ರಾಜ್ಯಲಾಭವಾಗಲೀ ಶತ್ರುಗಳ ಪರಾಭವವಾಗಲೀ ಪಾರ್ಥರಿಗೆ ಸಂತೋಷವನ್ನು ಕೊಡುವುದಿಲ್ಲ! ಶಸ್ತ್ರಗಳಿಂದ ನೀನು ಜಯಿಸಿದ ಲೋಕಗಳನ್ನು ಬೇಗನೇ ನಾನು ಧರ್ಮ-ದಮಗಳಿಂದ ಪಡೆದುಕೊಂಡು ಬರುತ್ತೇನೆ. ಅಲ್ಲಿ ನನ್ನನ್ನು ಪ್ರತಿಪಾಲಿಸು! ಮರಣಕಾಲವು ಸನ್ನಿಹಿತವಾಗದೇ ಯಾರಿಗೂ ಮರಣಹೊಂದಲು ಸಾಧ್ಯವಿಲ್ಲ. ಏಕೆಂದರೆ ರಣದಲ್ಲಿ ಹತನಾಗಿರುವ ನಿನ್ನನ್ನು ನೋಡಿಯೂ ಕೂಡ ದುರ್ಭಾಗ್ಯಳಾದ ನಾನು ಜೀವಿಸಿರುವೆನಲ್ಲಾ! ಇಲ್ಲಿ ನನ್ನನ್ನು ಪ್ರೀತಿಪೂರ್ವಕವಾಗಿ ಮಾತನಾಡಿಸುತ್ತಿದ್ದಂತೆ ಪಿತೃಲೋಕದಲ್ಲಿ ಬೇರೆ ಯಾರನ್ನು ಸುಮಧುರವಾಗಿ ಸ್ಮಿತಪೂರ್ವಕವಾಗಿ ಮಾತನಾಡಿಸುವೆ? ನಿನ್ನ ಪರಮ ರೂಪದಿಂದ ಮತ್ತು ಮುಗುಳ್ನಗೆಯ ಮಾತುಗಳಿಂದ ನೀನು ನಿಜವಾಗಿಯೂ ಸ್ವರ್ಗದಲ್ಲಿ ಅಪ್ಸರೆಯರ ಮನಸ್ಸನ್ನು ಕಲಕಿಬಿಡುತ್ತೀಯೆ! ಪುಣ್ಯಕೃತರ ಲೋಕಗಳನ್ನೂ ಅಪ್ಸರೆಯರನ್ನೂ ಸೇರಿಕೊಂಡು ವಿಹರಿಸುತ್ತಿರುವಾಗ ನೀನು ಖಂಡಿತವಾಗಿಯೂ ನನ್ನ ಸುಕೃತಗಳನ್ನು ಸ್ಮರಿಸಿಕೊಳ್ಳುತ್ತೀಯೆ! ನನ್ನೊಡನೆ ನಿನ್ನ ಸಹವಾಸವು ಕೇವಲ ಆರು ತಿಂಗಳುಗಳು ಮಾತ್ರವೇ ವಿಹಿತವಾಗಿತ್ತು! ಏಳನೆಯ ತಿಂಗಳಿನಲ್ಲಿಯೇ ನೀನು ನಿಧನ ಹೊಂದಿದೆ!” ಹೀಗೆ ಹೇಳಿಕೊಂಡು ವ್ಯರ್ಥಮನೋರಥಳಾಗಿ ಶೋಕಿಸುತ್ತಿರುವ ಉತ್ತರೆಯನ್ನು ಮತ್ಸ್ಯರಾಜಕುಲದ ಸ್ತ್ರೀಯರು ಹಿಂದಕ್ಕೆ ಎಳೆಯುತ್ತಿದ್ದಾರೆ! ಉತ್ತರೆಯನ್ನು ಹಿಂದಕ್ಕೆಳದ ಆ ಸ್ತ್ರೀಯರು ಸ್ವಯಂ ತಾವೇ ಅತ್ಯಂತ ಆರ್ತರಾಗಿದ್ದಾರೆ. ವಿರಾಟನು ಹತನಾದುದನ್ನು ನೋಡಿ ವಿಲಪಿಸುತ್ತಾ ಕೂಗಿಕೊಳ್ಳುತ್ತಿದ್ದಾರೆ! ದ್ರೋಣನ ಅಸ್ತ್ರ-ಶರಗಳಿಂದ ಗಾಯಗೊಂಡು ರಕ್ತದಿಂದ ತೋಯ್ದು ಮಲಗಿರುವ ವಿರಾಟನನ್ನು ಹದ್ದು-ನರಿ-ಕಾಗೆಗಳು ಕಿತ್ತು ತಿನ್ನುತ್ತಿವೆ! ವಿರಾಟನನ್ನು ಕುಕ್ಕುತ್ತಿರುವ ಪಕ್ಷಿಗಳನ್ನು ಕಪ್ಪುಕಣ್ಣಿನ ಆತುರ ವಿವಶ ಸ್ತ್ರೀಯರು ಓಡಿಸಲು ಪ್ರಯತ್ನಿಸಿದರೂ ಅಶಕ್ಯರಾಗಿದ್ದಾರೆ. ಬಿಸಿಲಿನಿಂದಲೂ ಆಯಾಸದಿಂದಲೂ ಪರಿತಪ್ತರಾಗಿರುವ ಸ್ತ್ರೀಯರು ವಿವರ್ಣರಾಗಿ ಅವರ ಸುಂದರ ಮುಖಗಳು ಬಾಡಿಹೋಗಿವೆ! ರಣರಂಗದ ಮಧ್ಯದಲ್ಲಿ ಹತರಾಗಿ ಮಲಗಿರುವ ಬಾಲಕರಾಗಿದ್ದ ಉತ್ತರ, ಅಭಿಮನ್ಯು, ಕಾಂಬೋಜದ ಸುದಕ್ಷಿಣ, ಮತ್ತು ಸುಂದರ ಲಕ್ಷ್ಮಣ ಇವರನ್ನು ನೋಡು!

“ಪಾರ್ಥನ ತೇಜಸ್ಸಿನಿಂದ ಯುದ್ಧದಲ್ಲಿ ಶಾಂತಗೊಂಡ ಪ್ರಜ್ವಲಿಸುತ್ತಿರುವ ಅಗ್ನಿಯಂತಿದ್ದ ಮಹಾರಥ ಮಹೇಷ್ವಾಸ ವೈಕರ್ತನನು ಇಲ್ಲಿ ಮಲಗಿದ್ದಾನೆ! ಅನೇಕ ಅತಿರಥರನ್ನು ಸಂಹರಿಸಿ ಅಂಗಾಂಗಗಳು ರಕ್ತದಿಂದ ತೋಯ್ದುಹೋಗಿ ಭೂಮಿಯ ಮೇಲೆ ಬಿದ್ದು ಮಲಗಿರುವ ವೈಕರ್ತನ ಕರ್ಣನನ್ನು ನೋಡು! ಅಸಹನಶೀಲನೂ, ದೀರ್ಘಕೋಪಿಯೂ ಆಗಿದ್ದ ಆ ಮಹೇಷ್ವಾಸ ಮಹಾರಥಿ ಶೂರನು ಗಾಂಡೀವಧನ್ವಿಯಿಂದ ರಣದಲ್ಲಿ ಹತನಾಗಿ ಮಲಗಿದ್ದಾನೆ! ಪಾಂಡವರಿಗೆ ಭಯಗೊಂಡ ನನ್ನ ಮಹಾರಥ ಪುತ್ರರು ಆನೆಗಳು ಸಲಗವನ್ನು ಮುಂದೆ ಬಿಟ್ಟುಕೊಂಡು ಹೋಗುವಂತೆ ಕರ್ಣನನ್ನು ಮುಂದಿಟ್ಟುಕೊಂಡು ಯುದ್ಧಮಾಡಿದರು. ಸಿಂಹವು ಇನ್ನೊಂದು ಸಿಂಹವನ್ನು ಹೇಗೋ ಹಾಗೆ ಮತ್ತು ಮದಿಸಿದ ಆನೆಯನ್ನು ಇನ್ನೊಂದು ಆನೆಯು ಹೇಗೋ ಹಾಗೆ ಸವ್ಯಸಾಚಿಯು ಸಮರದಲ್ಲಿ ಇವನನ್ನು ಕೆಳಗುರುಳಿಸಿದನು. ತಲೆಗೆದರಿದ ಅವನ ಪತ್ನಿಯರು ಗೋಳಾಡುತ್ತಾ ಯುದ್ಧದಲ್ಲಿ ಹತನಾಗಿರುವ ಆ ಶೂರನನ್ನು ಸುತ್ತುವರೆದು ಕುಳಿತಿದ್ದಾರೆ! ಯಾರ ಪರಾಕ್ರಮದಿಂದ ಉದ್ವಿಗ್ನನಾಗಿ ಧರ್ಮರಾಜ ಯುಧಿಷ್ಠಿರನು ಹದಿಮೂರು ವರ್ಷಗಳು ಚಿಂತೆಯಿಂದ ನಿದ್ರೆಮಾಡಲಿಲ್ಲವೋ, ಇಂದ್ರನಂತೆ ಯಾರು ಶತ್ರುಗಳು ಎದುರಿಸಲು ಅಸಾಧ್ಯನಾಗಿದ್ದನೋ, ಯಾರು ಪ್ರಳಯಕಾಲದ ಅಗ್ನಿಯಂತೆ ತೇಜಸ್ವಿಯೂ ಹಿಮವಂತನಂತೆ ದೃಢನೂ ಆಗಿದ್ದನೋ, ಯಾವ ವೀರನನ್ನು ಧಾರ್ತರಾಷ್ಟ್ರರು ಶರಣುಹೊಂದಿದ್ದರೋ ಆ ಕರ್ಣನು ಭಿರುಗಾಳಿಸಿ ಸಿಲುಕಿದ ಮರದಂತೆ ಹತನಾಗಿ ನೆಲದಮೇಲೆ ಮಲಗಿದ್ದಾನೆ! ಕರ್ಣನ ಪತ್ನಿ ಮತ್ತು ವೃಷಸೇನನ ತಾಯಿಯು ಭೂಮಿಯ ಮೇಲೆ ಬಿದ್ದುಕೊಂಡು ಕಾರುಣ್ಯದಿಂದ ರೋದಿಸುತ್ತಿರುವುದನ್ನು ನೋಡು! “ನಿಶ್ಚಯವಾಗಿಯೂ ಆಚಾರ್ಯನ ಶಾಪವು ನಿನ್ನನ್ನೇ ಅನುಸರಿಸಿ ಬಂದು ನಿನ್ನ ರಥಚಕ್ರವು ಭೂಮಿಯಲ್ಲಿ ಹುಗಿದುಹೋಯಿತು! ಆಗ ಯುದ್ಧದಲ್ಲಿ ಶತ್ರುಗಳ ಮಧ್ಯೆ ಧನಂಜಯನು ಶರದಿಂದ ನಿನ್ನ ಶಿರವನ್ನು ಅಪಹರಿಸಿದನು!” ಅಯ್ಯೋ! ಅಲ್ಲಿ ನೋಡು! ಸುಷೇಣನ ತಾಯಿಯು ಹೀಗೆ ಹೇಳುತ್ತಿರುವಂತೆಯೇ ಸುವರ್ಣಮಯ ಕವಚಧಾರಿ, ಮಹಾಬಾಹು, ಮಹಾಸತ್ವ ಕರ್ಣನನ್ನು ನೋಡಿ ಗಟ್ಟಿಯಾಗಿ ಅಳುತ್ತಾ ಅವಳು ಮೂರ್ಛಿತಳಾಗಿ ಕೆಳಗೆ ಬಿದ್ದಳು! ಯುದ್ಧಕ್ಕೆ ಧಿಕ್ಕಾರ! ಶರೀರಗಳನ್ನು ಭಕ್ಷಿಸುವ ಪ್ರಾಣಿಗಳು ಮಹಾತ್ಮ ಕರ್ಣನ ಶರೀರವನ್ನು ಆತುರವಾಗಿ ಭಕ್ಷಿಸುತ್ತಿದ್ದು ಸ್ವಲ್ಪ ಭಾಗ ಮಾತ್ರವೇ ಉಳಿದುಕೊಂಡಿದೆ! ಕೃಷ್ಣಪಕ್ಷದ ಚತುರ್ದಶಿಯ ಚಂದ್ರನಂತೆ ಬಹುಭಾಗ ನಶಿಸಿಹೋದ ಶರೀರದಿಂದ ಕೂಡಿದ ಕರ್ಣನನ್ನು ನೋಡಲು ನಮಗೆ ಸಾಧ್ಯವೇ ಆಗುತ್ತಿಲ್ಲ! ಭೂಮಿಯ ಮೇಲೆ ಬಿದ್ದು ಸುಷೇಣನ ತಾಯಿಯು ಪುನಃ ಎದ್ದು ಕರ್ಣನ ಮುಖವನ್ನು ಚುಂಬಿಸುತ್ತಾ ಪತ್ರವಧಿಯಿಂದ ಪರಿತಪ್ತಳಾಗಿ ರೋದಿಸುತ್ತಿದ್ದಾಳೆ!

“ಭೀಮಸೇನನು ಕೆಳಗುರುಳಿಸಿದ ಅವಂತಿಯ ಶೂರನನ್ನು, ಅನೇಕ ಬಂಧುಗಳಿದ್ದರೂ ಬಂಧುಗಳ್ಯಾರೂ ಇಲ್ಲವೇನೋ ಎಂಬಂತೆ, ಹದ್ದು-ನರಿಗಳು ತಿನ್ನುತ್ತಿವೆ. ಮಧುಸೂದನ! ಶತ್ರುಗಳೊಡನೆ ಕದನವಾಡಿ ರಕ್ತದಿಂದ ತೋಯ್ದುಹೋಗಿ ವೀರಶಯ್ಯೆಯಲ್ಲಿ ಮಲಗಿರುವ ಅವನನ್ನು ನೋಡು! ಅವನನ್ನು ತೋಳಗಳೂ, ಹದ್ದುಗಳೂ, ಇತರ ಮಾಂಸಾಹಾರೀ ಪ್ರಾಣಿಗಳೂ ಎಳೆದು ತಿನ್ನುತ್ತಿವೆ. ಕಾಲದ ವೈಪರೀತ್ಯವನ್ನಾದರೂ ನೋಡು! ವೀರತನದಿಂದ ಯುದ್ಧಮಾಡಿ ವೀರಶಯನದಲ್ಲಿ ಮಲಗಿರುವ ಅವಂತಿದೇಶದ ರಾಜನನ್ನು ಅವನ ಪತ್ನಿಯರು ರೋದಿಸುತ್ತಾ ಸುತ್ತುವರೆದಿದ್ದಾರೆ. ಪ್ರತೀಪನ ಮಗ ಮಹೇಷ್ವಾಸ ಮನಸ್ವಿ ಬಾಹ್ಲಿಕನು ಭಲ್ಲದಿಂದ ಹತನಾಗಿ ಸಿಂಹದಂತೆ ಮಲಗಿರುವುದನ್ನು ನೋಡು! ಹತನಾಗಿದ್ದರೂ ಇವನ ಮುಖದ ಬಣ್ಣವು ಹುಣ್ಣಿಮೆಯಲ್ಲಿ ಉದಯಿಸುತ್ತಿರುವ ಪೂರ್ಣಚಂದ್ರನಂತೆ ಶೋಭಿಸುತ್ತಿದೆ. ಪುತ್ರಶೋಕದಿಂದ ಸಂತಪ್ತನಾಗಿದ್ದ ಪಾಕಶಾಸನನ ಮಗನು ಪ್ರತಿಜ್ಞೆಯನ್ನು ಪಾಲಿಸುತ್ತಾ ಯುದ್ಧದಲ್ಲಿ ವೃದ್ಧಕ್ಷತ್ರನ ಮಗ ಜಯದ್ರಥನನ್ನು ಕೆಳಗುರುಳಿಸಿದನು. ಪ್ರತಿಜ್ಞೆಯನ್ನು ಸತ್ಯವನ್ನಾಗಿಸಲು ಮಹಾತ್ಮ ಅರ್ಜುನನು ಜಯದ್ರಥನನ್ನು ರಕ್ಷಿಸುತ್ತಿದ್ದ ಹನ್ನೊಂದು ಅಕ್ಷೌಹಿಣೀ ಸೇನೆಗಳನ್ನೂ ಗೆದ್ದು ಅವನನ್ನು ಸಂಹರಿಸಿದುದನ್ನು ನೋಡು! ಸಿಂಧುಸೌವೀರರ ರಾಜ, ದರ್ಪದಿಂದ ತುಂಬಿದ್ದ, ಮನಸ್ವಿ ಜಯದ್ರಥನನ್ನು ಹದ್ದು-ನರಿಗಳು ತಿನ್ನುತ್ತಿವೆ! ಅವನಲ್ಲಿಯೇ ಅನುರಕ್ತರಾದ ಭಾರ್ಯೆಯರು ಅವನನ್ನು ರಕ್ಷಿಸುತ್ತಿದ್ದರೂ ಅವು ಹತ್ತಿರದಲ್ಲಿಯೇ ಅವನ ದೇಹವನ್ನು ಬಹಳ ಆಳದಿಂದಲೇ ಕಿತ್ತು ತಿನ್ನುತ್ತಿವೆ! ಆ ಮಹಾಭುಜನನ್ನು ರಕ್ಷಿಸುತ್ತಾ ಸಿಂಧು-ಸೌವೀರ-ಗಾಂಧಾರ-ಕಾಂಬೋಜ-ಯವನ ಸ್ತ್ರೀಯರು ಸುತ್ತುವರೆದು ಕುಳಿತಿದ್ದಾರೆ. ಕೇಕರಯೊಂದಿಗೆ ದ್ರೌಪದಿಯನ್ನು ಎತ್ತಿಕೊಂಡು ಓಡಿಹೋದಾಗಲೇ ಜಯದ್ರಥನನ್ನು ಪಾಂಡವರು ವಧಿಸಬೇಕಿತ್ತು! ಆಗ ದುಃಶಲೆಯನ್ನು ಗೌರವಿಸುತ್ತಾ ಜಯದ್ರಥನನ್ನು ಬಿಟ್ಟುಬಿಟ್ಟಿದ್ದರು. ಆದರೆ ಈಗ ಏಕೆ ಅವರು ಪುನಃ ಅವಳನ್ನು ಗೌರವಿಸಲಿಲ್ಲ? ನನ್ನ ಮಗಳು ಬಾಲಕಿಯು ತುಂಬಾ ದುಃಖಿತಳಾಗಿ ವಿಲಪಿಸುತ್ತಿದ್ದಾಳೆ. ಪಾಂಡವರನ್ನು ನಿಂದಿಸುತ್ತಾ ತನ್ನ ಎದೆಯನ್ನು ಬಡಿದುಕೊಳ್ಳುತ್ತಿದ್ದಾಳೆ. ನನ್ನ ಮಗಳು ಬಾಲಕಿಯು ವಿಧವೆಯಾಗಿ ಹೋದಳು. ನನ್ನ ಸೊಸೆಯಂದಿರು ಗಂಡಂದಿರನ್ನು ಕಳೆದುಕೊಂಡರು. ನನಗೆ ಇದಕ್ಕಿಂತಲೂ ಹೆಚ್ಚಿನ ದುಃಖವು ಬೇರೆ ಯಾವುದಿದೆ? ಅಯ್ಯೋ ಧಿಕ್ಕಾರವೇ! ನೋಡು! ದುಃಶಲೆಯು ತನ್ನ ಪತಿಯ ಶಿರವನ್ನು ಕಾಣದೇ ಶೋಕ-ಭಯಗಳನ್ನು ತೊರೆದಿರುವಳೋ ಎನ್ನುವಂತೆ ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದಾಳೆ! ಮಗ ಅಭಿಮನ್ಯುವನ್ನು ಅನುಸರಿಸಿಬಂದ ಎಲ್ಲ ಪಾಂಡವರನ್ನೂ ತಡೆದು, ವಿಶಾಲ ಸೇನೆಯನ್ನು ಸಂಹರಿಸಿ ಜಯದ್ರಥನು ಸ್ವಯಂ ಮೃತ್ಯುವಶನಾದನು. ಮದಿಸಿದ ಮಾತಂಗದಂತಿರುವ, ಚಂದ್ರನಂಥಹ ಮುಖವಿದ್ದ ಆ ಪರಮದುರ್ಜಯ ವೀರನನ್ನು ಸ್ತ್ರೀಯರು ಸುತ್ತುವರೆದು ರೋದಿಸುತ್ತಿದ್ದಾರೆ!

"ಅಯ್ಯಾ! ಸತ್ಯ ಧರ್ಮಜ್ಞ ಧರ್ಮರಾಜನಿಂದ ಯುದ್ಧದಲ್ಲಿ ಹತನಾಗಿ ಇಗೋ ಇಲ್ಲಿ ನಕುಲನ ಸೋದರಮಾವ ಸಾಕ್ಷಾತ್ ಶಲ್ಯನು ಮಲಗಿದ್ದಾನೆ! ಯಾವಾಗಲೂ ಎಲ್ಲಕಡೆ ನಿನ್ನೊಡನೆ ಸ್ಪರ್ಧಿಸುತ್ತಿದ್ದ ಮಹಾರಥ ಮದ್ರರಾಜನು ಹತನಾಗಿ ಇಗೋ ಮಲಗಿದ್ದಾನೆ! ಆಧಿರಥ ಕರ್ಣನ ರಥದ ಕುದುರೆಗಳ ಕಡಿವಾಣಗಳನ್ನು ಹಿಡಿಯುವಾಗ ಇವನು ಪಾಂಡುಪುತ್ರರಿಗೆ ಜಯವಾಗಲೆಂದು ಅವನ ತೇಜೋವಧೆಯನ್ನು ಮಾಡಿದನು. ಅಯ್ಯೋ ಧಿಕ್ಕಾರವೇ! ಪೂರ್ಣಚಂದ್ರನಂತೆ ಸುಂದರವಾಗಿರುವ ಶಲ್ಯನ ಮುಖವನ್ನು ನೋಡು! ಪದ್ಮದಳಗಳಂಥಹ ಕಣ್ಣುಗಳುಳ್ಳ ಅವನ ಮುಖದಲ್ಲಿ ಸ್ವಲ್ಪವಾದರೂ ಗಾಯದ ಚಿಹ್ನೆಗಳೇ ಇಲ್ಲ! ಪುಟಕ್ಕೆ ಹಾಕಿದ ಚಿನ್ನದಂತೆ ಕಾಂತಿಯುಕ್ತವಾದ ಇವನ ನಾಲಗೆಯು ಬಾಯಿಯಿಂದ ಹೊರಬಂದಿದೆ, ಮತ್ತು ಅದನ್ನು ಕಾಗೆಗಳು ಕುಕ್ಕಿ ತಿನ್ನುತ್ತಿವೆ! ಯುಧಿಷ್ಠಿರನಿಂದ ಹತನಾದ ಸಮಿತಿಶೋಭನ ಶಲ್ಯನನ್ನು ಮದ್ರರಾಜ ಕುಲದ ಸ್ತ್ರೀಯರು ಸುತ್ತುವರೆದು ರೋದಿಸುತ್ತಿದ್ದಾರೆ. ಅತ್ಯಂತ ಸೂಕ್ಷ್ಮವಸ್ತ್ರಗಳನ್ನು ಧರಿಸಿದ ಕ್ಷತ್ರಿಯ ಸ್ತ್ರೀಯರು ಕ್ಷತ್ರಿಯರ್ಷಭ ನರರ್ಷಭ ಮದ್ರರಾಜನ ಬಳಿಯಲ್ಲಿ ಸಂಕಟದಿಂದ ಕೂಗಿಕೊಳ್ಳುತ್ತಿದ್ದಾರೆ. ಚೊಚ್ಚಲ ಮರಿಹಾಕಿದ ಹೆಣ್ಣಾನೆಗಳು ಕೆಸರಿನಲ್ಲಿ ಹುಗಿದುಹೋಗಿರುವ ಗಂಡಾನೆಯನ್ನು ಕಾತರದಿಂದ ನೋಡುವಂತೆ ರಣದಲ್ಲಿ ಬಿದ್ದಿರುವ ಶಲ್ಯನನ್ನು ನಾರಿಯರು ಸುತ್ತುವರೆದು ನೋಡುತ್ತಿದ್ದಾರೆ! ಶರಣ್ಯನೂ, ಶೂರನೂ, ರಥಸತ್ತಮನೂ ಆದ ಶಲ್ಯನನ್ನು ನೋಡು! ಅವನು ಶರಗಳಿಂದ ವಿಭಿನ್ನನಾಗಿ ವೀರಶಯ್ಯೆಯಲ್ಲಿ ಮಲಗಿದ್ದಾನೆ! ಇಗೋ ಇಲ್ಲಿ ಪರ್ವತದೇಶಗಳ ರಾಜ, ಆನೆಯ ಅಂಕುಶವನ್ನು ಹಿಡಿದಿರುವ ಶ್ರೇಷ್ಠ ಪ್ರತಾಪವಾನ್ ಭಗದತ್ತನು ಕೆಳಗುರುಳಿ ಭೂಮಿಯ ಮೇಲೆ ಮಲಗಿದ್ದಾನೆ! ಶ್ವಾಪದಗಳಿಂದ ಭಕ್ಷಿಸಲ್ಪಡುತ್ತಿರುವನ ಅವನ ಶರೀರದಲ್ಲಿರುವ ಚಿನ್ನದ ಮಾಲೆಯು ಅವನ ತಲೆಗೂದಲುಗಳನ್ನು ಬೆಳಗಿಸುವಂತೆ ವಿರಾಜಿಸುತ್ತಿದೆ! ಬಲಿ ಮತ್ತು ಶಕ್ರರ ನಡುವೆ ಹೇಗೋ ಹಾಗೆ ಇವನ ಮತ್ತು ಪಾರ್ಥನ ನಡುವೆ ಉಗ್ರವಾದ ಸುದಾರುಣ ಯುದ್ಧವು ನಡೆಯಿತಲ್ಲವೇ? ಈ ಮಹಾಬಾಹುವು ಪಾರ್ಥ ಧನಂಜಯನೊಡನೆ ಯುದ್ಧಮಾಡಿ, ಯಾರು ಗೆಲ್ಲುವರು ಎನ್ನುವ ಸಂಶಯವನ್ನುಂಟುಮಾಡಿ, ಕೊನೆಯಲ್ಲಿ ಕುಂತೀಪುತ್ರನಿಂದ ಕೆಳಗುರುಳಿಸಲ್ಪಟ್ಟನು! ಶೌರ್ಯ ಮತ್ತು ವೀರ್ಯಗಳಲ್ಲಿ ಯಾರ ಸಮನು ಲೋಕಗಳಲ್ಲಿಯೇ ಇಲ್ಲವೋ ಅಂತಹ ಭೀಷ್ಮನು ಭಯಂಕರ ಯುದ್ಧಮಾಡಿ ಇಲ್ಲಿ ಹತನಾಗಿ ಮಲಗಿದ್ದಾನೆ! ಯುಗಾಂತದಲ್ಲಿ ಅಂಬರದಿಂದ ಕಾಲನು ಕೆಳಗುರುಳಿಸಿದ ಸೂರ್ಯನಂತೆ ಮಲಗಿರುವ ಸೂರ್ಯವರ್ಚಸ ಶಾಂತನವನನ್ನು ನೋಡು! ನರಸೂರ್ಯನಂತಿದ್ದ ಭೀಷ್ಮನು ತನ್ನ ಶಸ್ತ್ರಗಳ ತಾಪದಿಂದ ರಣದಲ್ಲಿ ಶತ್ರುಗಳನ್ನು ಸುಟ್ಟು ಸೂರ್ಯನು ಅಸ್ತಂಗತನಾಗುವಂತೆ ಅಸ್ತಂಗತನಾಗಿದ್ದಾನೆ!  ಧರ್ಮದಲ್ಲಿ ದೇವತೆಗಳಿಗೂ ಸಮನಾದ ವೀರನು ಶೂರರು ಬಯಸುವ ಶರತಲ್ಪದ ವೀರಶಯನದಲ್ಲಿ ಮಲಗಿರುವುದನ್ನು ನೋಡು! ಭಗವಾನ್ ಸ್ಕಂದನು ಜೊಂಬುಹುಲ್ಲಿನ ಮೇಲೆ ಮಲಗಿರುವಂತೆ ಕರ್ಣಿ-ನಾಲೀಕ-ನಾರಾಚಗಳನ್ನೇ ಹರಡಿ ಕಲ್ಪಿಸಿರುವ ಶ್ರೇಷ್ಠ ಹಾಸಿಗೆಯ ಮೇಲೆ ಮಲಗಿರುವ ಭೀಷ್ಮನನ್ನು ನೋಡು! ಹತ್ತಿಯಿಂದ ತುಂಬಿದ್ದ ತಲೆದಿಂಬನ್ನು ಇಷ್ಟಪಡದ ಗಾಂಗೇಯನು ಗಾಂಡೀವಧನ್ವಿಯು ಮೂರು ಬಾಣಗಳಿಂದ ಇತ್ತ ಶ್ರೇಷ್ಠ ತಲೆದಿಂಬನ್ನು ಸ್ವೀಕರಿಸಿದನು. ತಂದೆಯನ್ನು ಪರಿಪಾಲಿಸಲು ಶಾಸ್ತ್ರೋಕ್ತವಾಗಿ ಬ್ರಹ್ಮಚಾರಿಯಾಗಿರುವ ಮಹಾಯಶಸ್ವಿ, ಯೋಧರಲ್ಲಿ ಅಪ್ರತಿಮನಾದ ಶಾಂತನವನು ಇಲ್ಲಿ ಮಲಗಿದ್ದಾನೆ! ಅಯ್ಯಾ! ಮನುಷ್ಯನಾಗಿದ್ದರೂ ಅಮರರಂತಿರುವ, ಪರಂಪರೆಗಳನ್ನು ನಿರ್ಣಯಿಸುವ, ಧರ್ಮಾತ್ಮಾ ಧರ್ಮಜ್ಞ ಭೀಷ್ಮನು ತನ್ನ ಪ್ರಾಣಗಳನ್ನು ಧಾರಣೆಮಾಡಿಕೊಂಡಿರುತ್ತಾನೆ. ಶತ್ರುಗಳಿಂದ ಹತನಾಗಿ ಶಾಂತನವ ಭೀಷ್ಮನು ಮಲಗಿದ್ದನೆಂದರೆ ಇನ್ನು ಮುಂದೆ ಯುದ್ಧಕುಶಲಿಯೂ, ಪರಾಕ್ರಮಿಯೂ, ವಿದ್ವಾಂಸನೂ ಇಲ್ಲವೆಂದಾಯಿತು! ಪಾಂಡವರು ಕೇಳಲು ಈ ಶೂರ ಸತ್ಯವಾದಿ ಧರ್ಮಜ್ಞನು ತಾನೇ ಯುದ್ಧದಲ್ಲಿ ಅವನ ಮೃತ್ಯುವು ಹೇಗಾಗಬಹುದೆಂದು ಅವರಿಗೆ ಹೇಳಿದನು. ಕುರುವಂಶವನ್ನು ನಷ್ಟವಾಗುವುದರಿಂದ ಯಾರು ರಕ್ಷಿಸುತ್ತಿದ್ದನೋ ಆ ಮಹಾಬುದ್ಧಿಯೇ ಕುರುಗಳೊಡನೆ ಪರಾಭವವನ್ನು ಹೊಂದಿದನು. ದೇವತುಲ್ಯನಾದ ನರರ್ಷಭ ದೇವವ್ರತನು ಸ್ವರ್ಗಕ್ಕೆ ಹೋದನಂತರ ಧರ್ಮದ ವಿಷಯದಲ್ಲಿ ಕುರುಗಳು ಬೇರೆ ಯಾರನ್ನು ಪ್ರಶ್ನಿಸುತ್ತಾರೆ? ಅರ್ಜುನನ ಶಿಕ್ಷಕನೂ, ಸಾತ್ಯಕಿಯ ಆಚಾರ್ಯನೂ, ಕುರುಗಳ ಗುರುಸತ್ತಮನೂ ಆದ ದ್ರೋಣನು ಕೆಳಗುರುಳಿದುದನ್ನು ನೋಡು! ತ್ರಿದಶೇಶ್ವರ ಇಂದ್ರನಂತೆ ಅಥವಾ ಭಾರ್ಗವ ಪರಶುರಾಮನಂತೆ ಮಹಾವೀರ್ಯ ದ್ರೋಣನೂ ಕೂಡ ನಾಲ್ಕು ವಿಧದ ಅಸ್ತ್ರವಿದ್ಯೆಯನ್ನು ತಿಳಿದವನಾಗಿದ್ದನು. ಯಾರ ಪ್ರಸಾದದಿಂದ ಪಾಂಡವ ಬೀಭತ್ಸುವು ದುಷ್ಕರ ಕರ್ಮಗಳನ್ನೆಸಗಿದನೋ ಆ ದ್ರೋಣನೇ ಇಂದು ಹತನಾಗಿ ಮಲಗಿದ್ದಾನೆ! ಅವನ ಅಸ್ತ್ರಗಳ್ಯಾವುವೂ ಅವನನ್ನು ರಕ್ಷಿಸಲಿಲ್ಲ! ಯಾರನ್ನು ಮುಂದಿಟ್ಟುಕೊಂಡು ಕೌರವರು ಪಾಂಡವರನ್ನು ಯುದ್ಧಕ್ಕೆ ಆಹ್ವಾನಿಸಿದ್ದರೋ ಆ ಶಸ್ತ್ರಧಾರಿಗಳಲ್ಲಿ ಶ್ರೇಷ್ಠ ದ್ರೋಣನೇ ಶಸ್ತ್ರಗಳಿಂದ ಗಾಯಗೊಂಡಿ ಮಲಗಿದ್ದಾನೆ! ಅಗ್ನಿಯಂತೆ ಸಂಚರಿಸಿ ಸೇನೆಗಳನ್ನು ದಹಿಸುತ್ತಿದ್ದ ದ್ರೋಣನೇ ಆರಿಹೋದ ಅಗ್ನಿಯಂತೆ ಹತನಾಗಿ ಭೂಮಿಯ ಮೇಲೆ ಮಲಗಿದ್ದಾನೆ! ದ್ರೋಣನು ಹತನಾಗಿದ್ದರೂ ಅವನು ಧನುಸ್ಸನ್ನು ಹಿಡಿದಿರುವುದನ್ನು ಮತ್ತು ಕೈಚೀಲವನ್ನು ನೋಡಿದರೆ ಇನ್ನೂ ಜೀವಿತನಾಗಿರುವನೋ ಎನ್ನುವಂತೆ ತೋರುತ್ತಿದ್ದಾನೆ! ವೇದಗಳು ಪ್ರಜಾಪತಿಯನ್ನು ಹೇಗೆ ಬಿಟ್ಟಿರಲಾರವೋ ಹಾಗೆ ನಾಲ್ಕೂ ವೇದಗಳೂ, ಸರ್ವ ಅಸ್ತ್ರಗಳೂ ಇವನನ್ನು ಬಿಟ್ಟಿರಲಿಲ್ಲ! ಶಿಷ್ಯರಿಂದ ಅರ್ಚಿತಗೊಳ್ಳುತ್ತಿದ್ದ, ಬಂದಿಗಳು ವಂದಿಸುತ್ತಿದ್ದ, ವಂದನಾರ್ಹವಾದ ಅವನ ಶುಭ ಪಾದಗಳನ್ನು ಇಂದು ಗುಳ್ಳೇ ನರಿಗಳು ಎಳೆದಾಡುತ್ತಿವೆ! ದ್ರುಪದಪುತ್ರನಿಂದ ಹತನಾದ ದ್ರೋಣನ ಬಳಿ ದುಃಖದಿಂದ ಹತಚೇತನಳಾದ ಕೃಪಿಯು ದೀನಳಾಗಿ ಕುಳಿತಿದ್ದಾಳೆ! ಹತನಾಗಿರುವ ಶಸ್ತ್ರಧಾರಿಗಳಲ್ಲಿ ಶ್ರೇಷ್ಠ ದ್ರೋಣನ ಬಳಿ ಕೂದಲು ಕೆದರಿಕೊಂಡು ಮುಖ ಕೆಳಗೆಮಾಡಿಕೊಂಡು ಆರ್ತಳಾಗಿ ರೋದಿಸುತ್ತಿರುವ ಅವಳನ್ನು ನೋಡು! ಧೃಷ್ಟದ್ಯುಮ್ನನ ಬಾಣಗಳಿಂದ ತುಂಡಾಗಿರುವ ಕವಚವನ್ನು ಧರಿಸಿರುವ ದ್ರೋಣನ ಬಳಿ ರಣರಂಗದಲ್ಲಿ ಜಟಾಧಾರಿಯಾಗಿರುವ ಬ್ರಹ್ಮಚಾರಿಣೀ ಕೃಪಿಯು ಕುಳಿತಿದ್ದಾಳೆ! ದೀನಳಾಗಿರುವ, ಆತುರಳಾಗಿರುವ ಸುಕುಮಾರೀ ಯಶಸ್ವಿನೀ ಕೃಪಿಯು ಸಮರದಲ್ಲಿ ಹತನಾಗಿರುವ ಪತಿಯ ಪ್ರೇತಕಾರ್ಯಗಳನ್ನು ಮಾಡಲು ಪ್ರಯತ್ನಿಸುತ್ತಿದ್ದಾಳೆ. ವಿಧಿವತ್ತಾಗಿ ಅಗ್ನಿಯನ್ನು ಆಹ್ವಾನಿಸಿ, ವಿಧಿವತ್ತಾಗಿ ಸುತ್ತಲೂ ಚಿತೆಯನ್ನು ಹೊತ್ತಿಸಿ, ದ್ರೋಣನನ್ನು ಇಟ್ಟು ಸಾಮಗರು ಮೂರು ಸಾಮಗಳನ್ನೂ ಹಾಡುತ್ತಿದ್ದಾರೆ. ಜಟಾಧಾರೀ ಬ್ರಹ್ಮಚಾರೀ ದ್ರೋಣಶಿಷ್ಯರು ಧನುಸ್ಸುಗಳನ್ನೂ, ಶಕ್ತಿಗಳನ್ನೂ, ರಥನೀಡುಗಳನ್ನೂ ಚಿತೆಯ ಮೇಲೆ ಇಡುತ್ತಿದ್ದಾರೆ. ಅನ್ಯ ವಿವಿಧ ಶಸ್ತ್ರಗಳನ್ನೂ ಇಟ್ಟು ಭೂರಿತೇಜಸ ದ್ರೋಣನನ್ನು ದಹಿಸುತ್ತಾ ಅವನನ್ನು ಪ್ರಶಂಸಿಸುತ್ತಿದ್ದಾರೆ ಮತ್ತು ರೋದಿಸುತ್ತಿದ್ದಾರೆ ಕೂಡ! ಇತರರು ಕಡೆಯಲ್ಲಿ ಹೇಳಬೇಕಾದ ಮೂರು ಸಾಮಗಳನ್ನೂ ಹಾಡುತ್ತಿದ್ದಾರೆ. ಚಿತೆಯ ಅಗ್ನಿಯಲ್ಲಿ ದ್ರೋಣನನ್ನು ಹವಿಸ್ಸನ್ನಾಗಿ ಹೋಮಮಾಡಿ, ಕೃಪಿಯನ್ನು ಮುಂದಿಟ್ಟುಕೊಂಡು ಚಿತೆಯನ್ನು ಎಡಭಾಗಕ್ಕೆ ಬಿಟ್ಟುಕೊಂಡು ಪರದಕ್ಷಿಣವಾಗಿ ಸುತ್ತಿಬಂದು ಬ್ರಾಹ್ಮಣ ಶೇಷ್ಠ ದ್ರೋಣ ಶಿಷ್ಯರು ಗಂಗಾನದಿಯ ಕಡೆ ಹೋಗುತ್ತಿದ್ದಾರೆ!

"ಯುಯುಧಾನನಿಂದ ಕೆಳಗುರುಳಿಸಲ್ಪಟ್ಟ ಸೋಮದತ್ತನ ಮಗ ಭೂರಿಶ್ರವನನ್ನು ನೋಡು! ಮಾಧವ! ಅನೇಕ ಪಕ್ಷಿಗಳು ಅವನ ಹತ್ತಿರದಲ್ಲಿಯೇ ಕುಳಿತು ಅವನನ್ನು ಕುಕ್ಕುತ್ತಿವೆ! ಪುತ್ರಶೋಕದಿಂದ ಸಂತಪ್ತನಾಗಿರುವ ಸೋಮದತ್ತನು ಮಹೇಷ್ವಾಸ ಯುಯುಧಾನನನ್ನು ನಿಂದಿಸುತ್ತಿರುವಂತೆ ಕಾಣುತ್ತಿದ್ದಾನೆ. ಶೋಕದಲ್ಲಿ ಮುಳುಗಿಹೋಗಿರುವ ಭೂರಿಶ್ರವನ ಅನಿಂದಿತೆ ತಾಯಿಯು ಪತಿ ಸೋಮದತ್ತನನ್ನು ಹೀಗೆಂದು ಸಮಾಧಾನಗೊಳಿಸುತ್ತಿದ್ದಾಳೆ: “ಮಹಾರಾಜ! ಸೌಭಾಗ್ಯವಶಾತ್ ನೀನು ಈ ದಾರುಣ ಭರತರ ನಾಶವನ್ನೂ, ಕುರುಗಳ ಆಕ್ರಂದನಗಳನ್ನೂ, ಘೋರ ಯುಗಾಂತವನ್ನೂ ನೋಡುತ್ತಿಲ್ಲ! ಸೌಭಾಗ್ಯವಶಾತ್ ನೀನು ಯೂಪಧ್ವಜ, ಸಾವಿರಾರು ಚಿನ್ನದ ನಾಣ್ಯಗಳನ್ನು ದಕ್ಷಿಣೆಯನ್ನಾಗಿ ಕೊಡುತ್ತಿದ್ದ, ಅನೇಕ ಯಾಗಗಳನ್ನು ಮಾಡಿದ ನಿನ್ನ ಆ ವೀರ ಪುತ್ರ ಭೂರಿಶ್ರವನು ಹತನಾದುದನ್ನು ನೋಡುತ್ತಿಲ್ಲ! ಒಳ್ಳೆಯದಾಯಿತು ಕಡಲ ಹದ್ದುಗಳಂತೆ ಘೋರವಾಗಿ ಬಹಳವಾಗಿ ವಿಲಪಿಸುತ್ತಿರುವ ನಿನ್ನ ಸೊಸೆಯಂದಿರ ಆಕ್ರಂದನವನ್ನು ನೀನು ಕೇಳುತ್ತಿಲ್ಲ! ಪತಿಗಳನ್ನು ಕಳೆದುಕೊಂಡು ಹತೇಶ್ವರರಾಗಿರುವ ನಿನ್ನ ಸೊಸೆಯಂದಿರು ಒಂದು ವಸ್ತ್ರವನ್ನೋ ಅಥವಾ ಅರ್ಧ ವಸ್ತ್ರವನ್ನೋ ಉಟ್ಟುಕೊಂಡು ಕಪ್ಪು ಕೂದಲುಗಳನ್ನು ಕೆದರಿಕೊಂಡು ಸುತ್ತುತ್ತಿದ್ದಾರೆ. ಅರ್ಜುನನಿಂದ ಬಾಹುಗಳು ಕತ್ತರಿಸಲ್ಪಟ್ಟು ಬಿದ್ದಿರುವ ನರವ್ಯಾಘ್ರನನ್ನು ಮಾಂಸಾಹಾರಿ ಪ್ರಾಣಿಗಳು ತಿನ್ನುತ್ತಿರುವುದನ್ನು ನೀನು ನೋಡುತ್ತಿಲ್ಲವೆನ್ನುವುದು ಅದೃಷ್ಠವೇ ಸರಿ! ಒಳ್ಳೆಯದಾಯಿತು ನೀನು ಯುದ್ಧದಲ್ಲಿ ಶಲ ಮತ್ತು ಭೂರಿಶ್ರವರು ಹತರಾದುದನ್ನಾಗಲೀ ಮತ್ತು ವಿಧವೆಯರಾದ ಸೊಸೆಯಂದಿರೆಲ್ಲರನ್ನೂ ಇಂದು ನೋಡುತ್ತಿಲ್ಲ. ಒಳ್ಳೆಯದಾಯಿತು ನೀನು ಮಹಾತ್ಮ ಸೌಮದತ್ತಿಯ ರಥಯೂಪದ ಮೇಲೆ ಹಾರಾಡುತ್ತಿದ್ದ ಕಾಂಚನ ಚತ್ರವು ತುಂಡಾಗಿ ಕೆಳಗಿಬಿದ್ದುದನ್ನು ನೀನು ನೋಡುತ್ತಿಲ್ಲ. ಸಾತ್ಯಕಿಯಿಂದ ಹತನಾದ ಬೂರಿಶ್ರವನ ಕಪ್ಪುಕಣ್ಣಿನ ಭಾರ್ಯೆಯರು ಅವನ ಮೃತದೇಹವನ್ನು ಸುತ್ತುವರೆದು ಅಳುತ್ತಿದ್ದಾರೆ!” ಪತಿಶೋಕದಿಂದ ಬಹಳವಾಗಿ ಸೋತುಹೋಗಿರುವ ಇವರು ವಿಲಪಿಸುತ್ತಾ ನೆಲದ ಮೇಲೆ ಬಿದ್ದಿದ್ದಾರೆ. ಯಾಗಗಳನ್ನು ಮಾಡಿದ್ದ ಅವನು ಪ್ರಮತ್ತನಾಗಿದ್ದಾಗ ಆ ಶೂರನ ಬಾಹುವನ್ನು ಕತ್ತರಿಸುವಂಥಹ ಬೀಭತ್ಸಕ್ಕಿಂತಲೂ ಅತಿ ಬೀಭತ್ಸವಾಗಿರುವ ಕೃತ್ಯವನ್ನು ಹೇಗೆ ಮಾಡಿದರು? ಅದಕ್ಕಿಂತಲೂ ಹೆಚ್ಚಿನ ಪಾಪಕರ್ಮವನ್ನು ಸಾತ್ಯಕಿಯು ಪ್ರಾಯೋಪವಿಷ್ಟನಾದ ಆ ಸಂಶಿತಾತ್ಮನ ಶಿರವನ್ನು ಅಪಹರಿಸಿ ಮಾಡಿದನು! “ಯೂಪಧ್ವಜನೇ! ಇಬ್ಬರು ಅಧರ್ಮಪೂರ್ವಕವಾಗಿ ಒಬ್ಬನನ್ನೇ ಕೊಂದುದರಿಂದ ಧಾರ್ಮಿಕನಾದ ನೀನು ಹತನಾಗಿ ಮಲಗಿರುವೆ!” ಎಂದು ಅವನ ಸ್ತ್ರೀಯರು ದುಃಖದಿಂದ ಕೂಗಿಕೊಳ್ಳುತ್ತಿದ್ದಾರೆ. ಮುಷ್ಟಿಮಾತ್ರ ಪರಿಮಿತವಾಗಿರುವ ಸೊಂಟವುಳ್ಳ ಯೂಪಧ್ವಜನ ಪತ್ನಿಯು ಗಂಡನ ಭುಜವನ್ನು ತೊಡೆಯ ಮೇಲಿಟ್ಟುಕೊಂಡು ದೀನಳಾಗಿ ವಿಲಪಿಸುತ್ತಿದ್ದಾಳೆ. “ ಹಸ್ತವು ನಮ್ಮ ಒಡ್ಯಾಣಗಳನ್ನು ಬಿಚ್ಚುತ್ತಿತ್ತು. ಪುಷ್ಟ ಮೊಲೆಗಳನ್ನು ಹಿಸುಕುತ್ತಿತ್ತು. ಹೊಕ್ಕಳು-ತೊಡೆ-ಕಟಿಪ್ರದೇಶಗಳನ್ನು ಮುಟ್ಟುತ್ತಿತ್ತು. ಸೊಂಟದಲ್ಲಿರುವ ಸೀರೆಯ ಗಂಟನ್ನು ಬಿಚ್ಚುತ್ತಿತ್ತು! ಅಂತಹ ಕೈಯನ್ನು ವಾಸುದೇವನ ಸಾನ್ನಿಧ್ಯದಲ್ಲಿ ಅಕ್ಲಿಷ್ಟಕರ್ಮಿ ಪಾರ್ಥನು ಸಮರದಲ್ಲಿ ಬೇರೆಯವರೊಡನೆ ಯುದ್ಧದಲ್ಲಿ ಮಗ್ನನಾಗಿರುವಾಗ ಕತ್ತರಿಸಿಬಿಟ್ಟನಲ್ಲ! ಸಂಸದಿಗಳಲ್ಲಿ ಮಾತನಾಡುವಾಗ ಸ್ವಯಂ ನೀನಾಗಲೀ ಕಿರೀಟಿಯಾಗಲೀ ಅರ್ಜುನನ ಈ ಮಹಾಕಾರ್ಯದ ಕುರಿತು ಹೇಗೆ ಹೇಳುವಿರಿ?” ಹೀಗೆ ನಿಂದಿಸುತ್ತಾ ವರಾಂಗನೆಯು ಸುಮ್ಮನಾದಳು. ಅತ್ತೆಯು ಸೊಸೆಗಾಗಿ ಶೋಕಪಡುವಂತೆ ಅವಳ ಸವತಿಯರೂ ಅವಳಿಗಾಗಿ ಶೋಕಿಸುತ್ತಿದ್ದಾರೆ. ಸೋದರಳಿಯ ಸಹದೇವನಿಂದ ಸೋದರ ಮಾವ ಗಾಂಧಾರರಾಜ, ಬಲವಾನ್, ಸತ್ಯವಿಕ್ರಮ ಶಕುನಿಯು ಹತನಾಗಿದ್ದಾನೆ. ಹೇಮದಂಡವುಳ್ಳ ವ್ಯಜನಗಳಿಂದ ಹಿಂದೆ ಯಾರಿಗೆ ಗಾಳಿಬೀಸಲಾಗುತ್ತಿತ್ತೋ ಅವನಿಗೆ ಈಗ ರಣಭೂಮಿಯಲ್ಲಿ ಮಲಗಿರುವಾಗ ಪಕ್ಷಿಗಳೇ ತಮ್ಮ ರೆಕ್ಕೆಗಳಿಂದ ಗಾಳಿ ಬೀಸುತ್ತಿವೆ! ನೂರಾರು ಸಹಸ್ರಾರು ರೂಪಗಳನ್ನು ಮಾಡುತ್ತಿದ್ದ ಮಾಯವಿಯು ಮಾಯೆಯಿಂದಲೇ ಪಾಂಡವನ ತೇಜಸ್ಸಿನಿಂದ ಸುಟ್ಟು ಭಸ್ಮವಾಗಿದ್ದಾನೆ! ಮೋಸಗಾರನಾಗಿ ಮಾಯೆಯಿಂದ ಸಭೆಯಲ್ಲಿ ಯುಧಿಷ್ಠಿರನ ವಿಪುಲ ರಾಜ್ಯವನ್ನು ಗೆದ್ದ ಅವನೇ ಈಗ ಜೀವವನ್ನು ಪಣವನ್ನಾಗಿಟ್ಟು ಸೋತುಹೋಗಿದ್ದಾನೆ! ನನ್ನ ಪುತ್ರರ ವಿನಾಶಕ್ಕಾಗಿಯೇ ದ್ಯೂತವನ್ನು ಕಲಿತಿದ್ದ ಶಕುನಿಯನ್ನು ಪಕ್ಷಿಗಳು ಮುತ್ತಿಕೊಂಡಿವೆ! ನನ್ನ ಮಕ್ಕಳ ಮತ್ತು ತನ್ನವರೊಂದಿಗೆ ತನ್ನ ವಧೆಗೋಸ್ಕರವಾಗಿಯೇ ಇವನು ನನ್ನ ಮಕ್ಕಳು ಪಾಂಡವರೊಂದಿಗೆ ಮಹಾವೈರವನ್ನು ಕಟ್ಟಿಕೊಳ್ಳುವಂತೆ ಮಾಡಿದನು. ಶಸ್ತ್ರಗಳಿಂದ ನನ್ನ ಪುತ್ರರು ಉತ್ತಮ ಲೋಕಗಳನ್ನು ಪಡೆದಿರುವಂತೆ ದುರ್ಬುದ್ಧಿಯೂ ಕೂಡ ಶಸ್ತ್ರಗಳಿಂದಲೇ ನಿಧನಹೊಂದಿ ಉತ್ತಮ ಲೋಕಗಳನ್ನು ಪಡೆದಿದ್ದಾನೆ. ಸುಳ್ಳನಾಗಿರುವ ಇವನು ಅಲ್ಲಿಕೂಡ ಸತ್ಯಪ್ರಜ್ಞರಾಗಿರುವ ನನ್ನ ಮಕ್ಕಳು ಮತ್ತು ಅವರ ಸಹೋದರ ನಡುವೆ ವಿರೋಧವನ್ನುಂಟುಮಾಡುವನೋ ಹೇಗೆ?

ಮಾಧವ! ಕಾಂಬೋಜದ ಮೆತ್ತನೆಯ ಶಯನದಲ್ಲಿ ಮಲಗಲು ಯೋಗ್ಯನಾದ ಋಷಭಸ್ಕಂಧ ದುರ್ಧರ್ಷ ಕಾಂಬೋಜನು ಹತನಾಗಿ ಕೆಸರಿನಲ್ಲಿ ಮಲಗಿರುವುದನ್ನು ನೋಡು! ಕೃಪಣನ ಚಂದನಲೇಪಿತ ಬಾಹುಗಳು ಗಾಯಗೊಂಡು ರಕ್ತದಿಂದ ತೋಯ್ದುಹೋಗಿರುವುದನ್ನು ನೋಡಿ ಅವನ ಭಾರ್ಯೆಯು ದುಃಖಿತಳಾಗಿ ವಿಲಪಿಸುತ್ತಿದ್ದಾಳೆ. “ಶುಭ ಅಂಗೈ-ಬೆರಳುಗಳಿಂದ ಕೂಡಿದ್ದ ಪರಿಘದಂತಿದ್ದ ನಿನ್ನ ಬಾಹುಗಳ ಮಧ್ಯದಲ್ಲಿ ಸೇರಿಕೊಂಡು ಹಿಂದೆ ರಮಿಸುತ್ತಿದ್ದ ನನ್ನನ್ನು ಅನುರಾಗವು ಬಿಟ್ಟುಹೋಗಿರಲಿಲ್ಲ. ನೀನಿಲ್ಲದೇ ನಾನು ಯಾವ ಮಾರ್ಗದಲ್ಲಿ ಹೋಗುವೆನೋ!” ಎಂಬುದಾಗಿ ಬಂಧುಗಳಿಲ್ಲದ ಅನಾಥಳಂತೆ ಅವಳು ಮಧುರಸ್ವರದಲ್ಲಿ ರೋದಿಸುತ್ತಿದ್ದಾಳೆ. ಬಿಸಿಲಿನಲ್ಲಿ ಬಾಡಿಹೋಗಿರುವ ವಿವಿಧ ಹೂವಿನ ಮಾಲೆಗಳಂತೆ ಬಾಡಿಹೋಗಿದ್ದರೂ ನಾರಿಯರ ಸೌಂದರ್ಯವು ಅವರ ದೇಹಗಳನ್ನು ಬಿಟ್ಟುಹೋಗಿಲ್ಲ. ಇಲ್ಲಿಯೇ ಹತ್ತಿರದಲ್ಲಿ ಬೆಳಗುತ್ತಿರುವ ಅಂಗದಗಳನ್ನು ಕಟ್ಟಿಕೊಂಡಿರುವ ಮಹಾಭುಜ ಶೂಲ ಕಾಲಿಂಗನು ಮಲಗಿರುವುದನ್ನು ನೋಡು. ಅಲ್ಲಿ ಮಾಗಧ ಸ್ತ್ರೀಯರು ಮಾಗಧಾಧಿಪನನ್ನು ಸುತ್ತುವರೆದು ರೋದಿಸುತ್ತಿರುವುದನ್ನು ನೋಡು! ವಿಶಾಲನೇತ್ರೆಯರು ಕೇಳಿದವರ ಮನಸ್ಸನ್ನು ಅಪಹರಿಸುವ ಸುಸ್ವರದಲ್ಲಿ ಕೂಗಿಕೊಳ್ಳುತ್ತಿರುವುದನ್ನು ಕೇಳಿ ನನ್ನ ಮನಸ್ಸು ಅತೀವವಾಗಿ ಮೋಹಗೊಳ್ಳುತ್ತಿದೆಸರ್ವಾಭರಣಗಳನ್ನೂ ಕಿತ್ತು ಹರಡಿ ಸುಂದರ ಹಚ್ಚಡವನ್ನು ಹಾಸಿದ ಹಾಸಿಗೆಯ ಮೇಲೆ ಮಲಗಲು ಯೋಗ್ಯರಾಗಿದ್ದ ಮಾಗಧ ನಾರಿಯರು ಶೋಕಕರ್ಶಿತರಾಗಿ ರೋದಿಸುತ್ತಾ ನೆಲದ ಮೇಲೆ ಮಲಗಿದ್ದಾರೆ! ಕೋಸಲರ ಅಧಿಪತಿ ರಾಜಪುತ್ರ ಬೃಹದ್ಬಲನನ್ನು ಅವನ ಪತ್ನಿಯರು ಸುತ್ತುವರೆದು ಪ್ರತ್ಯೇಕ-ಪ್ರತ್ಯೇಕವಾಗಿ ರೋದಿಸುತ್ತಿದ್ದಾರೆ. ಅಭಿಮನ್ಯುವಿನ ಬಲದಿಂದ ಪ್ರಯೋಗಿಸಲ್ಪಟ್ಟು ಅವನ ಶರೀರವನ್ನು ಹೊಕ್ಕಿರುವ ಬಾಣಗಳನ್ನು ಕಷ್ಟದಿಂದ ಕಿತ್ತು ತೆಗೆಯುತ್ತಾ ಅವರು ಪುನಃ ಪುನಃ ಮೂರ್ಛಿತರಾಗುತ್ತಿದ್ದಾರೆ. ಪರಿಶ್ರಮದಿಂದಾಗಿ ಸರ್ವಸುಂದರಿಯರಾದ ಅವರ ಮುಖಗಳು ಬಿಸಿಲಿನಲ್ಲಿ ಬಾಡಿದದ್ ಕಮಲಗಳಂತೆ ಕಾಣುತ್ತಿವೆ. ಸುಂದರ ಅಂಗದಗಳನ್ನು ಧರಿಸಿದ್ದ ಐವರು ಶೂರ ಕೇಕಯ ಸಹೋದರರೆಲ್ಲರೂ ದ್ರೋಣನನ್ನು ಎದುರಿಸಿ ದ್ರೋಣನಿಂದ ಹತರಾಗಿ ಮಲಗಿದ್ದಾರೆ. ಅಪ್ಪಟ ಚಿನ್ನದ ಕವಚಗಳನ್ನು ಧರಿಸಿ ತಾಮ್ರಧ್ವಜ ಸಮೂಹಗಳನ್ನೇ ಹೊಂದಿದ್ದ ಕೇಕಯರು ಪ್ರಜ್ವಲಿಸುವ ಅಗ್ನಿಗಳೋ ಎಂಬಂತೆ ತಮ್ಮ ಕಾಂತಿಯಿಂದ ಭೂಮಿಯನ್ನೇ ಬೆಳಗಿಸುತ್ತಿದ್ದಾರೆ! ಅರಣ್ಯದಲ್ಲಿ ಮಹಾಗಜವೊಂದು ಸಿಂಹದಿಂದ ಹತವಾದಂತೆ ರಣದಲ್ಲಿ ದ್ರೋಣನಿಂದ ಹತನಾಗಿ ಬಿದ್ದಿರುವ ದ್ರುಪದನನ್ನು ನೋಡು! ಪಾಂಚಲರಾಜನ ಶ್ವೇತಚ್ಛತ್ರವು ಶರತ್ಕಾಲದ ಚಂದ್ರನಂತೆ ವಿಪುಲವಾಗಿ ಬೆಳಗುತ್ತಿದೆ. ವೃದ್ಧ ಪಾಂಚಾಲ್ಯ ದ್ರುಪದನನ್ನು ಚಿತೆಯೇರಿಸಿ ದುಃಖಿತರಾದ ಅವನ ಭಾರ್ಯೆಯರು ಮತ್ತು ಸೊಸೆಯಂದಿರು ರಾಜನನ್ನು ಪ್ರದಕ್ಷಿಣೆ ಮಾಡಿ ಹೋಗುತ್ತಿದ್ದಾರೆ! ದ್ರೋಣನಿಂದ ಹತನಾದ ಚೇದಿರಾಜ ಮಹೇಷ್ವಾಸ ಶೂರ ಧೃಷ್ಟಕೇತುವನ್ನು ಅವನ ಪತ್ನಿಯರು ಬುದ್ಧಿಯನ್ನೇ ಕಳೆದುಕೊಂಡವರಾಗಿ ದಹನಕ್ಕೆ ಕೊಂಡೊಯ್ಯುತ್ತಿದ್ದಾರೆ! ದ್ರೋಣನ ಅಸ್ತ್ರಗಳಿಂದ ಪ್ರಹರಿಸಲ್ಪಟ್ಟ ಮಹೇಷ್ವಾಸನು ನದಿಯ ಪ್ರವಾಹದಿಂದ ಕೆಳಗುರುಳಿಸಲ್ಪಟ್ಟ ವೃಕ್ಷದಂತೆ ಹತನಾಗಿ ಮಲಗಿದ್ದಾನೆ. ಚೇದಿಪತಿ ಶೂರ ಮಹಾರಥ ಧೃಷ್ಟಕೇತುವು ಯುದ್ಧದಲ್ಲಿ ಸಹಸ್ರಾರು ಶತ್ರುಗಳನ್ನು ಸಂಹರಿಸಿ ತಾನೇ ಹತನಾಗಿ ಮಲಗಿದ್ದಾನೆ! ಸೇನೆ-ಬಾಂಧವರೊಂದಿಗೆ ಹತನಾಗಿ, ಪಕ್ಷಿಗಳಿಂದ ಕುಕ್ಕಲ್ಪಟ್ಟಿರುವ ಚೇದಿರಾಜನನ್ನು ಅವನ ಭಾರ್ಯೆಯರು ಸುತ್ತುವರೆದು ಕುಳಿತಿದ್ದಾರೆ! ಮಲಗಿರುವ ವೀರ, ಸತ್ಯವಿಕ್ರಮ, ದಾಶಾರ್ಹೀ ಶ್ರುತಶ್ರವಳ ಮೊಮ್ಮಗನನ್ನು ತೊಡೆಯಮೇಲೆ ಇಟ್ಟುಕೊಂಡು ಚೇದಿರಾಜನ ವರಾಂಗನೆಯರು ರೋದಿಸುತ್ತಿದ್ದಾರೆ! ಸುಂದರವದನ, ಸುಂದರ ಕುಂಡಲಗಳನ್ನು ಧರಿಸಿರುವ ಧೃಷ್ಟಕೇತುವಿನ ಮಗನನ್ನು ಸಮರದಲ್ಲಿ ದ್ರೋಣನು ಅನೇಕ ಶರಗಳಿಂದ ಗಾಯಗೊಳಿಸಿರುವುದನ್ನು ನೋಡು! ಶತ್ರುಗಳೊಂದಿಗೆ ಯುದ್ಧಮಾಡುತ್ತಿದ್ದ ತನ್ನ ತಂದೆಯನ್ನು ಬಿಟ್ಟುಹೋಗದ ಇದ್ದ ಈ ವೀರನು ಹತನಾದ ಮೇಲೂ ಅವನ ಜೊತೆಯೇ ಮಲಗಿದ್ದಾನೆ! ಹಾಗೆಯೇ ನನ್ನ ಮಗನ ಮಗ ಪರವೀರಹ ಲಕ್ಷ್ಮಣನು ತಂದೆ ದುರ್ಯೋಧನನನ್ನು ಅಸುಸರಿಸಿಯೇ ಹೋಗುತ್ತಿದ್ದನು. ಹೇಮಂತಋತುವಿನ ಕೊನೆಯಲ್ಲಿ ಪುಷ್ಪಿತ ಶಾಲವೃಕ್ಷಗಳು ಭಿರುಗಾಳಿಯ ಬಡಿತಕ್ಕೆ ಕೆಳಗೆ ಬಿದ್ದಿರುವಂತೆ ಅವಂತಿಯ ವಿಂದಾನುವಿಂದರು ಬಿದ್ದಿರುವುದನ್ನು ನೋಡು! ವೃಷಭದ ಕಣ್ಣುಗಳಂತಹ ಕಣ್ಣುಗಳುಳ್ಳ ಅವರಿಬ್ಬರೂ ಕಾಂಚನದ ಅಂಗದ-ಕವಚಗಳನ್ನು ಧರಿಸಿ, ಬಾಣ-ಖಡ್ಗಗಳನ್ನು ಹಿಡಿದು ಮಲಗಿದ್ದಾರೆ. ನಿನ್ನ ರಕ್ಷಣೆಯಲ್ಲಿರುವ ಪಾಂಡವರೆಲ್ಲರೂ ಅವಧ್ಯರೇ ಸರಿ! ಅವರು ಮಹಾರಥರೂ ಶೂರರೂ ಆದ ದ್ರೋಣ, ಭೀಷ್ಮ, ವೈಕರ್ತನ ಕರ್ಣ, ಕೃಪ, ದುರ್ಯೋಧನ, ದ್ರೋಣಸುತ, ಸೈಂಧವ, ಸೋಮದತ್ತ, ವಿಕರ್ಣ ಮತ್ತು ಕೃತವರ್ಮರಿಂದ ಮುಕ್ತರಾಗಿದ್ದಾರೆ. ಈ ನರಶರ್ಷಭರು ದೇವತೆಗಳ ಶಸ್ತ್ರವೇಗದಿಂದಲೂ ಹತರಾಗುತ್ತಿರಲಿಲ್ಲ. ಇವರೆಲ್ಲರೂ ಯುದ್ಧದಲ್ಲಿ ಹತರಾಗಿದ್ದಾರೆಂದರೆ ಕಾಲದ ಮಹಿಮೆಯನ್ನು ನೋಡು! ದೈವಕ್ಕೆ ಭಾರವಾದುದು ಯಾವುದೂ ಇಲ್ಲವೆನ್ನುವುದು ಸತ್ಯ! ಈ ಶೂರ ಕ್ಷತ್ರಿಯರ್ಷಭರು ಕ್ಷತ್ರಿಯರಿಂದಲೇ ನಿಹತರಾದರು. ಯಾವಾಗ ನೀನು ನಿನ್ನ ಕಾರ್ಯವು ಸಫಲವಾಗದೇ ಪುನಃ ಉಪಪ್ಲವ್ಯಕ್ಕೆ ಹೋದೆಯೋ ಅಂದೇ ನನ್ನ ತರಸ್ವೀ ಪುತ್ರರು ಹತರಾದರು. ಶಂತನು ಪುತ್ರ ಮತ್ತು ಪ್ರಾಜ್ಞ ವಿದುರರು ನಿನ್ನ ಮಕ್ಕಳೊಂದಿಗೆ ಸ್ನೇಹವನ್ನಿಟ್ಟುಕೊಳ್ಳಬೇಡವೆಂದು ಆಗಲೇ ನನಗೆ ಹೇಳಿದ್ದರು. ಅವರು ಕಂಡಿದ್ದುದು ಮಿಥ್ಯವಾಗಲು ಸಾಧ್ಯವಿಲ್ಲ. ಅಲ್ಪಕಾಲದಲ್ಲಿಯೇ ನನ್ನ ಪುತ್ರರು ಭಸ್ಮೀಭೂತರಾದರು!”

ಗಾಂಧಾರಿಯು ಕೃಷ್ಣನಿಗೆ ಶಾಪವನ್ನಿತ್ತಿದುದು

ಹೀಗೆ ಹೇಳಿ ಶೋಕಕರ್ಶಿತ ಗಾಂಧಾರಿಯು ನೆಲದ ಮೇಲೆ ಬಿದ್ದಳು. ದುಃಖದಿಂದ ಅವಳ ವಿಶೇಷ ಜ್ಞಾನವೇ ಹೊರಟುಹೋಗಿತ್ತು. ಧೈರ್ಯವು ತೊಲಗಿಹೋಗಿತ್ತು. ಆಗ ಕೋಪದಿಂದ ಅವಳ ಅಂಗಾಂಗಗಳೂ ಉರಿಯುತ್ತಿರಲು, ಪುತ್ರಶೋಕದಲ್ಲಿ ಮುಳುಗಿಹೋಗಿದ್ದ, ಇಂದ್ರಿಯಗಳು ವ್ಯಥೆಗೊಂಡಿರಲು ಇವಕ್ಕೆಲ್ಲಾ ಶೌರಿಯನ್ನೇ ದೋಷಿತನೆಂದು ಗಾಧಾರಿಯು ತಿಳಿದು ಹೇಳಿದಳು: “ಕೃಷ್ಣ! ಜನಾರ್ದನ! ಪಾಂಡವರು ಮತ್ತು ಧಾರ್ತರಾಷ್ಟ್ರರು ಪರಸ್ಪರರನ್ನು ಸುಟ್ಟುಹಾಕಿದರು. ನೀನೇಕೆ ಅವರ ವಿನಾಶವಾಗಲು ಬಿಟ್ಟೆ? ನಿನ್ನಲ್ಲಿ ಶಕ್ತಿ, ಅನೇಕ ಸೇವಕರು ಮತ್ತು ಅಪಾರ ಸೇನೆಯು ಇತ್ತು. ಎರಡೂ ಪಕ್ಷಗಳಿಗೂ ಹೀಗೆಯೆ ನಡೆದುಕೊಳ್ಳಬೇಕೆಂದು ಆಜ್ಞೆಮಾಡಲೂ ನೀನು ಸಮರ್ಥನಾಗಿದ್ದೆ. ಉದ್ದೇಶಪೂರ್ವಕವಾಗಿಯೇ ನೀನು ಕುರುಗಳ ನಾಶವನ್ನು ಉಪೇಕ್ಷಿಸಿದೆ! ಇದರ ಫಲವನ್ನು ನೀನು ಪಡೆಯುತ್ತೀಯೆ. ಚಕ್ರಗದಾಧರ! ಪತಿಶುಶ್ರೂಷೆಯಿಂದಾಗಿ ನಾನು ಸ್ವಲ್ಪ ತಪಸ್ಸನ್ನು ಸಂಪಾದಿಸಿರುತ್ತೇನೆ. ದುರ್ಲಭವಾಗಿರುವ ತಪಃಫಲದಿಂದ ನಾನು ನಿನ್ನನ್ನು ಶಪಿಸುತ್ತೇನೆ. ನೀನು ತಡೆಯದೆ ಉಪೇಕ್ಷಿಸಿದುದಕ್ಕಾಗಿ ಹೇಗೆ ಕುರುಪಾಂಡವ ದಾಯಾದಿಗಳು ಪರಸ್ಪರರನ್ನು ಸಂಹರಿಸಿದರೋ ಹಾಗೆ ನಿನ್ನ ಬಾಂಧವರನ್ನೂ ನೀನು ವಧಿಸುತ್ತೀಯೆ. ಇಂದಿನಿಂದ ಮೂವತ್ತಾರನೇ ವರ್ಷದಲ್ಲಿ ನಿನ್ನ ಬಾಂಧವ-ಅಮಾತ್ಯ-ಪುತ್ರರನ್ನು ಕಳೆದುಕೊಂಡು ನೀನು ವನದಲ್ಲಿ ಸಂಚರಿಸುತ್ತಿರುವಾಗ ಯಾವುದೋ ಒಂದು ಹೀನರೀತಿಯಲ್ಲಿ ನಿಧನವನ್ನು ಹೊಂದುತ್ತೀಯೆ! ಭರತಸ್ತ್ರೀಯರಂತೆ ನಿನ್ನ ಕುಲದ ಸ್ತ್ರೀಯರೂ ಪುತ್ರರನ್ನೂ, ಜ್ಞಾತಿ-ಬಾಂಧವರನ್ನೂ ಕಳೆದುಕೊಂಡು ಪರಿತಪಿಸುತ್ತಾರೆ!”

ಘೋರ ಮಾತನ್ನು ಕೇಳಿ ಮಹಾಮನಸ್ವಿ ವಾಸುದೇವನು ನಸುನಗುತ್ತಿರುವನೋ ಎನ್ನುವಂತೆ ದೇವೀ ಗಾಂಧಾರಿಗೆ ಇಂತೆಂದನು: “ಕ್ಷತ್ರಿಯೇ! ಶುಭೇ! ವೃಷ್ಣಿಚಕ್ರವನ್ನು ಬೇರೆ ಯಾರೂ ಸಂಹರಿಸಲಾರದೆಂದು ನನಗೆ ತಿಳಿದೇ ಇದೆ. ಇದು ಹೀಗೆಯೇ ಆಗುತ್ತದೆಯೆಂದು ನನಗೆ ತಿಳಿದಿತ್ತು. ಅದನ್ನೇ ನೀನು ಮಾಡಿರುವೆ! ಅನ್ಯ ನರರಿಂದಾಗಲೀ  ಅಥವಾ ದೇವದಾನವರಿಂದಾಗಲೀ ಅವರು ಅವಧ್ಯರು. ಆದುದರಿಂದ ಯಾದವರು ಪರಸ್ಪರರೊಡನೆಯೇ ಕಾದಾಡಿ ನಾಶಹೊಂದುತ್ತಾರೆ!”

ದಾಶಾರ್ಹನು ಹೀಗೆ ಹೇಳಲು ಭಯಭೀತರಾದ ಪಾಂಡವರು ತುಂಬಾ ಉದ್ವೇಗಗೊಂಡು ತಮ್ಮ ಜೀವಿತದಲ್ಲಿಯೇ ನಿರಾಶೆಹೊಂದಿದರು. ಆಗ ವಾಸುದೇವನು ಹೇಳಿದನು: “ಏಳು ಗಾಂಧಾರೀ! ಏಳು! ಮನಸ್ಸನ್ನು ಶೋಕದಲ್ಲಿ ಮುಳುಗಿಸಬೇಡ. ನಿನ್ನ ಅಪರಾಧದಿಂದಲೇ ಕುರುಗಳು ನಿಧನ ಹೊಂದಿದರು. ದುರಾತ್ಮ, ಮಾತ್ಸರ್ಯಿ, ಅತ್ಯಂತ ಅಭಿಮಾನಿ, ನಿಷ್ಠುರನಾಗಿದ್ದ, ಹಿರಿಯರ ಮಾತನ್ನು ಮೀರುತ್ತಿದ್ದ ವೈರಪುರುಷ ನಿನ್ನ ಪುತ್ರ ದುರ್ಯೋಧನನನ್ನು ಮುಂದಿಟ್ಟು ಮಾಡಿರುವ ದುಷ್ಕರ್ಮವನ್ನು ನೀನು ಸತ್ಕರ್ಮವೆಂದು ಭಾವಿಸುತ್ತಿರುವೆ! ನಿನ್ನದೇ ದೋಷವನ್ನು ನನ್ನ ಮೇಲೆ ಏಕೆ ಹಾಕುತ್ತಿರುವೆ? ಮೃತನಾದವರ, ನಷ್ಟವಾದುದರ ಮತ್ತು ಆಗಿಹೋದುದರ ಕುರಿತು ಶೋಕಿಸಿ ದುಃಖಿಸುವುದರಿಂದ ದುಃಖವೇ ದೊರೆಯುತ್ತದೆಯಲ್ಲದೇ ಯಾವ ಪರಿಹಾರವೂ ದೊರಕುವುದಿಲ್ಲ. ಬ್ರಾಹ್ಮಣಿಯು ತಪಸ್ಸು ಮಾಡಲಿಚ್ಛಿಸುವವನ ಸಲುವಾಗಿ, ಹಸುವು ಹೊರೆಯನ್ನು ಹೊರುವ ಎತ್ತಿಗಾಗಿ, ಕುದುರೆಯು ವೇಗವಾಗಿ ಓಡಬಲ್ಲ ಕುದುರೆಯ ಸಲುವಾಗಿ, ಶೂದ್ರಳು ದಾಸನಿಗಾಗಿ, ವೈಶ್ಯಳು ಪಶುಪಾಲನಿಗಾಗಿ, ಮತ್ತು ನಿನ್ನಂಥಹ ರಾಜಪುತ್ರಿಯು ವಧಿಸಲ್ಪಡಲು ಇಚ್ಛಿಸುವವನಿಗಾಗಿಯೇ ಗರ್ಭವನ್ನು ಧರಿಸುತ್ತಾರೆ.”

ವಾಸುದೇವನು ಪುನಃ ಆಡಿದ ಆ ಅಪ್ರಿಯ ವಚನವನ್ನು ಕೇಳಿ ಶೋಕ-ವ್ಯಾಕುಲ ಲೋಚನೆ ಗಾಂಧಾರಿಯು ಸುಮ್ಮನಾದಳು.

Leave a Reply

Your email address will not be published. Required fields are marked *