ಶ್ರೀಬ್ರಹ್ಮಾಂಡಮಹಾಪುರಾಣ ಅಧ್ಯಾಯ 7: ಲೋಕಜ್ಞಾನವರ್ಣನಂ

 

ಸೂತ ಉವಾಚ । ತುಲ್ಯಂ ಯುಗಸಹಸ್ರಂ ವೈ ನೈಶಂ ಕಾಲಮುಪಾಸ್ಯ ಸಃ । ಶರ್ವರ್ಯಂತೇ ಪ್ರಕುರುತೇ ಬ್ರಹ್ಮತ್ವಂ ಸರ್ಗಕಾರಣಾತ್ ।। 1 ।। ಬ್ರಹ್ಮಾ ತು ಸಲಿಲೇ ತಸ್ಮಿನ್ವಾಯುರ್ಭೂತ್ವಾ ತದಾಚರತ್ । ಅಂಧಕಾರಾರ್ಣವೇ ತಸ್ಮಿನ್ನಷ್ಟೇ ಸ್ಥಾವರಜಂಗಮೇ ।। 2 ।। ಜಲೇನ ಸಮನುಪ್ಲಾವ್ಯ ಸರ್ವತಃ ಪೃಥಿವೀತಲೇ । ಪ್ರವಿಭಾಗೇನ ಭೂತೇಷು ಸತ್ತ್ವಮಾತ್ರೇ ಸ್ಥಿತೇಷು ವಾ ।। 3 ।। ನಿಶಯಾಮಿವ ಖದ್ಯೋತಃ ಪ್ರಾವೃಟ್ಕಾಲೇ ತತಸ್ತದಾ । ತದಾ ಕಾಮೇನ ತರಸಾ ಮನ್ಯಮಾನಃ ಸ್ವಯಂ ಧಿಯಾ ।। 4 ।। ಸೋಽಪ್ಯುಪಾಯಂ ಪ್ರತಿಷ್ಠಾಯಾಂ ಮಾರ್ಗಮಾಣಸ್ತದಾ ಭುವಮ್ । ತತಸ್ತು ಸಲಿಲೇ ತಸ್ಮಿನ್ ಜ್ಞಾತ್ವಾ ತ್ವಂತರ್ಗತೋ ಮಹೀಮ್ ।। 5 ।।

ಸೂತನು ಹೇಳಿದನು: “ಸಹಸ್ರ ಚತುರ್ಯುಗ ಪರ್ಯಂತದ ರಾತ್ರಿಯನ್ನು ಕಳೆದು ಭಗವಂತನು ರಾತ್ರಿಯ ಅಂತ್ಯದಲ್ಲಿ ಸೃಷ್ಟಿಗೋಸ್ಕರ ಬ್ರಹ್ಮತ್ವವನ್ನು ನಿರ್ವಹಿಸಲು ಉಪಕ್ರಮಿಸುತ್ತಾನೆ. ಸ್ಥಾವರ-ಜಂಗಮಗಳು ನಷ್ಟವಾಗಿದ್ದ ಆ ಅಂಧಕಾರಮಯ ಜಲರಾಶಿಯಲ್ಲಿ ಬ್ರಹ್ಮನು ವಾಯುವಾಗಿ ಸಂಚರಿಸಿದನು. ನೀರಿನಲ್ಲಿ ಮುಳುಗಿಹೋಗಿದ್ದ ಆ ಪೃಥ್ವಿಯಲ್ಲಿ ಎಲ್ಲ ಭೂತಗಳೂ ಪ್ರತ್ಯೇಕ ಸಂಸ್ಕಾರ ರೂಪಗಳಲ್ಲಿ ಸತ್ತ್ವ ಸ್ವರೂಪಮಾತ್ರವಾದ ಪರಮಾತ್ಮ ತತ್ತ್ವದಲ್ಲಿ ಅಡಗಿಕೊಂಡಿದ್ದವು. ಆಗ ಬ್ರಹ್ಮನು ಮಳೆಗಾಲದ ರಾತ್ರಿಯಲ್ಲಿ ಮಿಣುಕು ಹುಳುವು ಮಿನುಗುವಂತೆ ಸೃಷ್ಟಿಕಾಮನೆಯ ತನ್ನ ಬುದ್ಧಿಯಿಂದ ಅಭಿಮಾನಹೊಂದಿದನು. ಸೃಷ್ಟಿಯನ್ನು ಪ್ರತಿಷ್ಠೆಗೊಳಿಸುವ ಉಪಾಯವನ್ನು ಯೋಚಿಸಿ ಅವನು ಭೂಮಿಯನ್ನು ಹುಡುಕಿದನು. ಆಗ ಅವನು ಭೂಮಿಯು ನೀರಿನಲ್ಲಿ ಅಂತರ್ಗತವಾಗಿರುವುದನ್ನು ಅರಿತನು.

ಅಂಧಮನ್ಯತಮಂ ಬುದ್ಧ್ವಾ ಭೂಮೇರುದ್ಧರಣಕ್ಷಮಃ । ಚಕಾರ ತಂ ತು ದೇವೋಽಥ ಪೂರ್ವಕಲ್ಪಾದಿಷು ಸ್ಮೃತಃ ।। 6 ।। ಸತ್ಯಂ ರೂಪಂ ವರಾಹಸ್ಯ ಕೃತ್ವಾಂಭೋಽನುಪ್ರವಿಶ್ಯ ಚ । ಅದ್ಭಿಃ ಸಂಛಾದಿತಾಮಿಚ್ಛನ್ ಪೃಥಿವೀಂ ಸ ಪ್ರಜಾಪತಿಃ ।। 7 ।। ಉದ್ಧೃತ್ಯೋರ್ವೀಮಥ ನ್ಯಸ್ತಾ ಸಾಪತ್ಯಾತುಮತಿನ್ಯಸತ್ । ಸಾಮುದ್ರಾಶ್ಚ ಸಮುದ್ರೇಷು ನಾದೇಯಾಶ್ಚ ನದೀಷು ಚ ।। 8 ।। ಪೃಥಕ್ತಾಸ್ತು ಸಮೀಕೃತ್ಯ ಪೃಥಿವ್ಯಾಂ ಸೋಽಚಿನೋದ್ಗಿರೀನ್ । ಪ್ರಾಕ್ಸರ್ಗೇ ದಹ್ಯಮಾನೇ ತು ಪುರಾ ಸಂವರ್ತಕಾಗ್ನಿನಾ ।। 9 ।। ತೇನಾಗ್ನಿನಾ ವಿಲೀನಾಸ್ತೇ ಪರ್ವತಾ ಭುವಿ ಸರ್ವಶಃ । ಶೈಲ್ಯಾದೇಕಾರ್ಣವೇ ತಸ್ಮಿನ್ವಾಯುನಾ ಯೇ ತು ಸಂಹಿತಾಃ ।। 10 ।। ನಿಷಿಕ್ತಾ ಯತ್ರ ಯತ್ರಾಸಂಸ್ತತ್ರ ತತ್ರಾಚಲೋಽಭವತ್ । ಸ್ಕಂಧಾಚಲತ್ವಾದಚಲಾಃ ಪರ್ವಭಿಃ ಪರ್ವತಾಃ ಸ್ಮೃತಾಃ ।। 11 ।। ಗಿರಯೋ ಹಿ ನಿಗೀರ್ಣತ್ವಾದಯನಾತ್ತು ಶಿಲೋಚ್ಚಯಾಃ

ಆಗ ದೇವನು ಹಿಂದಿನ ಕಲ್ಪಾದಿಗಳಲ್ಲಿ ಜಲಾಂತರ್ಗತ ಭೂಮಿಯನ್ನು ಮೇಲಕ್ಕೆತ್ತಲು ಸಾಧನವಾಗಿದ್ದ ವರಾಹ ರೂಪವನ್ನು ನೆನಪಿಸಿಕೊಂಡನು. ನಂತರ ಪ್ರಜಾಪತಿಯು ಸತ್ಯ ವರಾಹರೂಪವನ್ನು ತಾಳಿ ನೀರಿನಿಂದ ಮುಚ್ಚಿಹೋಗಿದ್ದ ಭೂಮಿಯನ್ನು ಮೇಲಕ್ಕೆತ್ತಲು ಬಯಸಿ ನೀರನ್ನು ಪ್ರವೇಶಿಸಿದನು. ಭೂಮಿಯನ್ನು ಮೇಲಕ್ಕೆತ್ತಿ ಇಟ್ಟು, ನದೀ ಮತ್ತು ಸಮುದ್ರಗಳನ್ನು ವಿಂಗಡಿಸಿದನು. ಭೂಮಿಯನ್ನು ಸಮತಟ್ಟನ್ನಾಗಿ ಮಾಡಿ ಹಿಂದಿನ ಸೃಷ್ಟಿಯ ಅವಸಾನದಲ್ಲಿ ಸಂವರ್ತಕಾಗ್ನಿಯಿಂದ ಸುಟ್ಟುಹೋಗಿದ್ದ ಪರ್ವತಗಳನ್ನು ಹುಡುಕಿದನು. ಆ ಅಗ್ನಿಯಿಂದ ಸುಟ್ಟು ಭಸ್ಮವಾಗಿ ನೀರಿನಲ್ಲಿ ಕರಗಿ ಹೋಗಿದ್ದ ಭೂಮಿಯ ಸರ್ವ ಪರ್ವತಗಳನ್ನೂ ವಾಯುವು ಘನರೂಪವಾಗಿ ತಂದು ಅಲ್ಲಲ್ಲಿ ಸೇರಿಸಿದನು. ಅವನು ಎಲ್ಲೆಲ್ಲಿ ಅವುಗಳನ್ನು ಇರಿಸಿದನೋ ಅಲ್ಲಲ್ಲಿ ಒಂದೊಂದು ಅಚಲ ಪರ್ವತವಾಗಿ ಪರಿಣಮಿಸಿತು. ಹೀಗೆ ಉತ್ಪನ್ನವಾದ ಪರ್ವತಗಳು ಚಲನವಿಲ್ಲದೇ ಇದ್ದುದರಿಂದ ಅಚಲ ಎಂದೆನಿಸಿಕೊಂಡವು. ಪರ್ವತಶ್ರೇಣಿಯಲ್ಲಿ ಅನೇಕ ಪರ್ವಗಳು ಇರುವುದರಿಂದ ಪರ್ವತಗಳೆಂದೂ ಪ್ರಸಿದ್ಧಿಹೊಂದಿದವು. ನೀರಿನಿಂದ ನುಂಗಲ್ಪಟ್ಟಿದ್ದರಿಂದ ಗಿರಿ ಎಂದೂ, ಸಂಘಾತರೂಪವಾಗಿ ಸೇರಿದ್ದರಿಂದ ಶಿಲೋಚ್ಚಯವೆಂದೂ ವಿವಿಧ ಅನ್ವರ್ಥ ನಾಮಗಳನ್ನು ಹೊಂದಿದವು.

ತತಸ್ತಾವಾಸಮುದ್ಧೃತ್ಯ ಕ್ಷಿತಿಮಂತರ್ಜಲಾತ್ಪ್ರಭುಃ ।। 12 ।। ಸಪ್ತಸಪ್ತ ತು ವರ್ಷಾಣಿ ತಸ್ಯಾ ದ್ವೀಪೇಷು ಸಪ್ತಸು । ವಿಷಮಾಣಿ ಸಮೀಕೃತ್ಯ ಶಿಲಾಭಿರಭಿತೋ ಗಿರೀನ್ ।। 13 ।। ದ್ವೀಪೇಷು ತೇಷು ವರ್ಷಾಣಿ ಚತ್ವಾರಿಂಶತ್ತಥೈವ ತು । ತಾವಂತಃ ಪರ್ವತಾಶ್ಚೈವ ವರ್ಷಾಂತೇ ಸಮವಸ್ಥಿತಾಃ ।। 14 ।। ಸ್ವರ್ಗಾದೌ ಕಾಂತಿವಿಷ್ಟಾಸ್ತೇ ಸ್ವಭಾವೇನೈವ ನಾನ್ಯಥಾ । ಸಪ್ತದ್ವೀಪಾಂ ಸಮುದ್ರಾಶ್ಚ ಅನ್ಯೋನ್ಯಸ್ಯಾನುಮಂಡಲಮ್ ।। 15 ।। ಸನ್ನಿವಿಷ್ಟಾಃ ಸ್ವಭಾವೇನ ಸಮಾವೃತ್ಯ ಪರಸ್ಪರಮ್ । ಭೂರಾದ್ಯಾಶ್ಚತುರೋ ಲೋಕಾಶ್ಚಂದ್ರಾದಿತ್ಯೌ ಗ್ರಹೈಃ ಸಹ ।। 16 ।।

ನೀರಿನ ಒಳಗಿನಿಂದ ಕ್ಷಿತಿಯನ್ನು ಮೇಲೆತ್ತಿ ಪ್ರಭುವು ಅದನ್ನು ಏಳು ದ್ವೀಪಗಳನ್ನಾಗಿಯೂ ಮತ್ತು ಪ್ರತಿ ದ್ವೀಪಗಳನ್ನು ಏಳು ವರ್ಷಗಳನ್ನಾಗಿಯೂ ವಿಭಜಿಸಿದನು. ವಿಷಮ ಸ್ಥಳಗಳನ್ನು ಸಮತಟ್ಟನ್ನಾಗಿ ಮಾಡಿ ವರ್ಷಗಳ ಎಲ್ಲೆಗಳು ಒಂದಕ್ಕೊಂದು ಕೂಡಿಕೊಳ್ಳದಂತೆ ಪಕ್ಕಗಳಲ್ಲಿ ಗಿರಿಗಳನ್ನು ಸ್ಥಾಪಿಸಿದನು. ಇವೆಲ್ಲವೂ ಒಟ್ಟಾಗಿ ಸೇರಿ ನಲವತ್ತರಷ್ಟು ವರ್ಷಗಳೂ, ಅಷ್ಟೇ ಸಂಖ್ಯೆಯ ಪರ್ವತಗಳೂ ರಚಿತವಾದವು. ಹೀಗೆ ಸಪ್ತ ದ್ವೀಪಗಳೂ ಸಪ್ತ ಸಮುದ್ರಗಳೂ ಒಂದಕ್ಕೊಂದು ತಾಗಿಕೊಂಡು ಮಂಡಲಾಕಾರದಲ್ಲಿ, ಹಿಂದೆ ಇದ್ದ ಸ್ವಭಾವದಲ್ಲಿಯೇ, ಬದಲಾಗದೇ, ನಿರ್ಮಿಸಲ್ಪಟ್ಟವು. ನಂತರ ಬ್ರಹ್ಮನು ಭೂಃ ಮೊದಲಾದ ನಾಲ್ಕು ಲೋಕಗಳನ್ನೂ, ಗ್ರಹಗಳೊಂದಿಗೆ ಚಂದ್ರ-ಆದಿತ್ಯರನ್ನೂ ಸೃಷ್ಟಿಸಿದನು.

ಪೂರ್ವವನ್ನಿರ್ಮಮೇ ಬ್ರಹ್ಮಾ ಸ್ಥಾವರಾಣೀಹ ಸರ್ವಶಃ । ಕಲ್ಪಸ್ಯ ಚಾಸ್ಯ ಬ್ರಹ್ಮಾ ಚಾಸೃಜದ್ಯಃ ಸ್ಥಾನಿನಃ ಸುರಾನ್ ।। 17 ।। ಆಪೋಽಗ್ನಿಂ ಪೃಥಿವೀಂ ವಾಯುಮಂತರಿಕ್ಷಂ ದಿವಂ ತಥಾ । ಸ್ವರ್ಗಂ ದಿಶಃ ಸಮುದ್ರಾಂಶ್ಚ ನದೀಃ ಸರ್ವಾಂಸ್ತು ಪರ್ವತಾನ್ ।। 18 ।। ಓಷಧೀನಾಮಾತ್ಮನಶ್ಚ ಆತ್ಮನೋ ವೃಕ್ಷವೀರುಧಾಮ್ । ಲವಕಾಷ್ಠಾಃ ಕಲಾಶ್ಚೈವ ಮುಹೂರ್ತಾನ್ಸಂಧಿರಾತ್ರ್ಯಹಾನ್ ।। 19 ।। ಅರ್ಧಮಾಸಾಂಶ್ಚ ಮಾಸಾಂಶ್ಚ ಅಯನಾಬ್ದಾನ್ಯುಗಾನಿ ಚ । ಸ್ಥಾನಾಭಿಮಾನಿನಶ್ಚೈವ ಸ್ಥಾನಾನಿ ಚ ಪೃಥಕ್ಪೃಥಕ್ ।। 20 ।। ಸ್ಥಾನಾತ್ಮನಸ್ತು ಸೃಷ್ಟ್ವಾ ಚ ಯುಗಾವಸ್ಥಾ ವಿನಿರ್ಮಮೇ । ಕೃತಂ ತ್ರೇತಾ ದ್ವಾಪರಂ ಚ ತಿಷ್ಯಂ ಚೈವ ತಥಾ ಯುಗಮ್ ।। 21 ।। ಕಲ್ಪಸ್ಯಾದೌ ಕೃತಯುಗೇ ಪ್ರಥಮಂ ಸೋಽಸೃಜತ್ಪ್ರಜಾಃ । ಪ್ರಾಗುಕ್ತಾಶ್ಚ ಮಯಾ ತುಭ್ಯಂ ಪೂರ್ವೇ ಕಲ್ಪೇ ಪ್ರಜಾಸ್ತು ತಾಃ ।। 22 ।।

“ಧಾತಾ ಯಥಾಪೂರ್ವಮಕಲ್ಪಯತ್” ಎಂಬ ಶ್ರುತಿ ಪ್ರಮಾಣಾನುಸಾರವಾಗಿ ಸ್ಥಾವರಾದಿಗಳನ್ನು ಹಿಂದಿನ ಕಲ್ಪದಲ್ಲಿದ್ದಂತೆಯೇ ಸೃಷ್ಟಿಮಾಡಿ, ವರ್ತಮಾನ ಕಲ್ಪದಲ್ಲಿಯೂ ಕೂಡ, ಆಯಾಯಾ ಸ್ಥಾನವಿಶೇಷಾಭಿಮಾನದಿಂದ ಸ್ಥಾನಪತಿಗಳಾದ ದೇವತೆಗಳನ್ನು ನಿರ್ಮಿಸಿದನು. ಜಲ, ಅಗ್ನಿ, ಪೃಥ್ವೀ, ವಾಯು, ಅಂತರಿಕ್ಷ, ದ್ಯುಲೋಕ, ಸ್ವರ್ಗ, ದಿಕ್ಕುಗಳು, ಸಮುದ್ರಗಳು, ನದಿಗಳು ಮತ್ತು ಪರ್ವತಗಳು ಎಲ್ಲವನ್ನೂ ಸೃಷ್ಟಿಸಿದನು. ವಿವಿಧ ಓಷಧಿಗಳು, ವೃಕ್ಷ, ಲತೆಗಳನ್ನೂ, ಲವ-ಕಾಷ್ಠಾ-ಕಲಾ-ಮುಹೂರ್ತ-ಸಂಧ್ಯಾ-ರಾತ್ರಿ-ಹಗಲು, ಪಕ್ಷ, ಮಾಸ, ಅಯನ, ವರ್ಷ, ಯುಗಗಳು ಎಂಬ ಕಾಲ ಪರಿಮಾಣಗಳನ್ನೂ ಸೃಷ್ಟಿಸಿ, ವಿವಿಧ ಸ್ಥಾನಗಳನ್ನೂ, ಸ್ಥಾನಾಭಿಮಾನಿಗಳನ್ನೂ ಸೃಷ್ಟಿಸಿ, ಕೃತ, ತ್ರೇತಾ, ದ್ವಾಪರ ಮತ್ತು ಕಲಿ ಎಂಬ ಯುಗಗಳ ಅವಸ್ಥೆಗಳನ್ನೂ ರಚಿಸಿದನು. ಹಿಂದಿನ ಕಲ್ಪದ ಮೊದಲ ಕೃತಯುಗದಲ್ಲಿ ಅವನು ಹೇಗೆ ಪ್ರಜೆಗಳನ್ನು ಸೃಷ್ಟಿಸಿದನೆಂದು ನಾನು ಹೇಳಿದ್ದೆನೋ ಹಾಗೆಯೇ ಈ ಕಲ್ಪಾದಿಯ ಕೃತಯುಗದಲ್ಲಿಯೂ ಪ್ರಜೆಗಳನ್ನು ಸೃಷ್ಟಿಸಿದನು.

ತಸ್ಮಿನ್ಸಂವರ್ತಮಾನೇ ತು ಕಲ್ಪೇ ದಗ್ಧಾಸ್ತದಗ್ನಿನಾ । ಅಪ್ರಾಪ್ತಾಯಾಸ್ತಪೋಲೋಕಂ ಪೃಥಿವ್ಯಾಂ ಯಾಃ ಸಮಾಸತ ।। 23 ।। ಆವರ್ತಂತೇ ಪುನಃ ಸರ್ಗೇ ವೀಕ್ಷಾರ್ಥಂ ತಾ ಭವಂತಿ ಹಿ । ವೀಕ್ಷ್ಯಾರ್ಥಂ ತಾಃ ಸ್ಥಿತಾಸ್ತತ್ರ ಪುನಃ ಸರ್ಗಸ್ಯ ಕಾರಣಾತ್ ।। 24 ।। ತತಸ್ತಾಃ ಸೃಜ್ಯಮಾನಾಸ್ತು ಸಂತಾನಾರ್ಥಂ ಭವಂತಿ ಹಿ । ಧರ್ಮಾರ್ಥಕಾಮಮೋಕ್ಷಾಣಾಮಿಹ ತಾಃ ಸಾಧಿತಾಃ ಸ್ಮೃತಾಃ ।। 25 ।। ದೇವಾಶ್ಚ ಪಿತರಶ್ಚೈವ ಕ್ರಮಶೋ ಮಾನವಾಸ್ತಥಾ । ತತಸ್ತೇ ತಪಸಾ ಯುಕ್ತಾಃ ಸ್ಥಾನಾನ್ಯಾಪೂರಯನ್ಪುರಾ ।। 26 ।। ಬ್ರಾಹ್ಮಣೋ ಮನವಸ್ತೇ ವೈ ಸಿದ್ಧಾತ್ಮಾನೋ ಭವಂತಿ ಹಿ । ಆಸಂಗದ್ವೇಷಯುಕ್ತೇನ ಕರ್ಮಣಾ ತೇ ದಿವಂ ಗತಾಃ ।। 27 ।। ಆವರ್ತಮಾನಾಸ್ತೇ ದೇಹೇ ಸಂಭವಂತಿ ಯುಗೇ ಯುಗೇ । ಸ್ವಕರ್ಮಫಲಶೇಷೇಣ ಖ್ಯಾತಾಶ್ಚೈವ ತದಾತ್ಮಕಾಃ ।। 28 ।।

ಹಿಂದಿನ ಕಲ್ಪದಲ್ಲಿ ಪ್ರಳಯಾಗ್ನಿಯಿಂದ ಲೋಕಗಳು ಸುಡುತ್ತಿರಲು, ಹಲವಾರು ಪ್ರಜೆಗಳು ಯೋಗಸಿದ್ಧಿಯನ್ನು ಪಡೆಯದೇ ತಪೋಲೋಕವನ್ನು ಸೇರದೇ ಭೂಮಿಯಲ್ಲಿಯೇ ವಾಸವಾಗಿದ್ದರು. ಅದೇ ಜೀವಗಳು ಪುನಃ ಸೃಷ್ಟಿಯಲ್ಲಿ ಪುನರಾವೃತ್ತಿಯನ್ನು ಹೊಂದಿ ಪುನಃ ಸೃಷ್ಟಿಯನ್ನು ವೀಕ್ಷಿಸುತ್ತಾ – ತಮ್ಮ ಸಂತಾನದಿಂದ ಸೃಷ್ಟಿಯನ್ನು ಬೆಳೆಸುವುದು, ಧರ್ಮ-ಅರ್ಥ-ಕಾಮ-ಮೋಕ್ಷಾದಿ ಪುರುಷಾರ್ಥಗಳನ್ನು ಸಾಧಿಸಲು ಪ್ರಯತ್ನಿಸುವುದು ಮೊದಲಾದ ವ್ಯಾಪಾರದಲ್ಲಿ ತೊಡಗಿರುತ್ತಾರೆ. ಹೀಗೆ ಜಗಚ್ಚಕ್ರವು ಶಾಶ್ವತವಾಗಿ ನಡೆಯುತ್ತಿರುತ್ತದೆ. ಹೀಗೆಯೇ ದೇವತೆಗಳು, ಪಿತೃಗಳು ಮತ್ತು ಮಾನವರು ಕ್ರಮವಾಗಿ ತಮ್ಮ ತಮ್ಮ ತಪಸ್ಸಿಗೆ ತಕ್ಕಂತ ಸ್ಥಾನಗಳಲ್ಲಿ ಹಿಂದಿನಂತೆಯೇ ತುಂಬಿಕೊಳ್ಳುತ್ತಾರೆ. ಬ್ರಹ್ಮನಿಂದ ನಿರ್ಮಿತರಾದ ಆ ಪ್ರಜೆಗಳು ಕಳೆದ ಕಲ್ಪದಲ್ಲಿ ಸಂಸ್ಕಾರವಿಶೇಷದಿಂದ ಪವಿತ್ರಾತ್ಮರಾಗಿ ವಿಹಿತ ಕರ್ಮದ ಸಂಗ ಮತ್ತು ನಿಷಿದ್ಧ ಕರ್ಮಗಳಲ್ಲಿ ದ್ವೇಷ ಎಂಬ ಭಾವನಾವಿಶೇಷದಿಂದ ಕರ್ಮಗಳನ್ನು ಆಚರಿಸಿ ಅದರಿಂದಾಗಿ ಸ್ವರ್ಗವನ್ನು ಸೇರಿದ್ದರು. ಇಂತಹ ಮಹಾತ್ಮರು ಪ್ರತಿ ಯುಗದ ಆವೃತ್ತಿಯಲ್ಲಿಯೂ ಸ್ವಕರ್ಮಫಲದ ಶೇಷಾಂಶದಿಂದ ಪುನರಾವೃತ್ತಿಯನ್ನು ಹೊಂದುತ್ತಾ, ಆ ಭಾವನಾಮಯರಾಗಿ ಪ್ರಸಿದ್ಧಿಯನ್ನು ಹೊಂದುತ್ತಿರುತ್ತಾರೆ.

ಸಂಭವಂತಿ ಜನೇ ಲೋಕಾಃ ಕಲ್ಪಾಗಮನಿಬಂಧನಾಃ । ಅಪ್ಸು ಯಃ ಕಾರಣಂ ತೇಷಾಂ ಬೋಧಯನ್ಕರ್ಮಣಾ ತು ಸಃ ।। 29 ।। ಕರ್ಮಭಿಸ್ತೈಸ್ತು ಜಾಯಂತೇ ಜನಲೋಕಾಚ್ಛುಭಾಶುಭೈಃ । ಗೃಹ್ಣಂತಿ ತೇ ಶರೀರಾಣಿ ನಾನಾರೂಪಾಣಿ ಯೋನಿಷು ।। 30 ।। ದೇವಾದ್ಯಾಃ ಸ್ಥಾವರಾಂತಾಸ್ತು ಆಪದ್ಯಂತೇ ಪರಸ್ಪರಮ್ । ತೇಷಾಂ ಮೇಧ್ಯಾನಿ ಕರ್ಮಾಣಿ ಪ್ರಾಯಶಃ ಪ್ರತಿಪೇದಿರೇ ।। 31 ।। ತಸ್ಮಾದ್ಯನ್ನಾಮರೂಪಾಣಿ ತಾನ್ಯೇವ ಪ್ರತಿಪೇದಿರೇ । ಪುನಃ ಪುನಸ್ತೇ ಕಲ್ಪೇಷು ಜಾಯಂತೇ ನಾಮರೂಪಿಣಃ ।। 32 ।।

ಕಲ್ಪದ ಆರಂಭವೆಂಬ ನಿಮಿತ್ತಕ್ಕೆ ಅಧೀನರಾಗಿ ಆ ಸಿದ್ಧರು ಪುನರ್ಜನ್ಮವನ್ನು ತಾಳುತ್ತಾರೆ. ಹೀಗೆ ಅವರು ಜನ್ಮವೆತ್ತಲು ಅವರ ಪೂರ್ವಕೃತ ಕರ್ಮಶೇಷವೆಂಬ ಕರ್ಮಾಶಯವೇ ಕಾರಣವೆಂದು ತಿಳಿಯಬೇಕು. ಸಮಸ್ತ ಜನರೂ ತಾವು ಮಾಡಿದ ಶುಭಾಶುಭ ಕರ್ಮಗಳಿಂದ ಬದ್ಧರಾಗಿ ಅನೇಕ ಯೋನಿಗಳಲ್ಲಿ ಜನ್ಮವೆತ್ತಿ ನಾನಾರೂಪದ ಶರೀರಗಳನ್ನು ಪರಿಗ್ರಹಿಸುತ್ತಾರೆ. ಕರ್ಮವಶರಾಗಿ ಹೊಂದಬೇಕಾದ ಜನ್ಮಗಳು ದೇವಜನ್ಮದಿಂದ ಹಿಡಿದು ಸ್ಥಾವರ ಜನ್ಮಪರ್ಯಂತವಾಗಿ ವಿಚಿತ್ರವಾಗಿವೆ. ಪ್ರಾಯಶಃ ಉತ್ತಮ ಸಂಸ್ಕಾರವಿರುವ ಪ್ರಾಣಿಯು ಪವಿತ್ರ ಕರ್ಮದಲ್ಲಿಯೇ ಅಭಿರುಚಿಯುಳ್ಳದ್ದಾಗಿರುತ್ತದೆ. ಆದ್ದರಿಂದ ಹಿಂದೆ ಆಚರಿಸಿದ ಕರ್ಮಗಳ ಫಲಾನುಭವಗಳ ವಾಸನಾ ಸಂಸ್ಕಾರದಿಂದ ಕೂಡಿ ಪ್ರಾಣಿಯು ಅದೇ ನಾಮ-ರೂಪಗಳನ್ನು ಧರಿಸಿ ಜನ್ಮವೆತ್ತಿ ಅದನ್ನು ಪುನಃ ಆಚರಿಸಿ ಪುನಃ ಸೃಷ್ಟಿಯಲ್ಲಿ ಆ ನಾಮ-ರೂಪ-ಕರ್ಮಗಳ ಸಹಿತ ಹುಟ್ಟುತ್ತಾನೆ. ಹೀಗೆ ಚಕ್ರಾಕಾರವಾಗಿ ಜನ್ಮ-ಮರಣಗಳು ನಡೆಯುತ್ತಿರುತ್ತವೆ.

ತತಃ ಸರ್ಗೋ ಹ್ಯುಪಸೃಷ್ಟಿಂ ಸಿಸೃಕ್ಷೋರ್ಬ್ರಹ್ಮಣಸ್ತು ವೈ । ತಾಃ ಪ್ರಜಾ ಧ್ಯಾಯತಸ್ತಸ್ಯ ಸತ್ಯಾಭಿಧ್ಯಾಯಿನಸ್ತದಾ ।। 33 ।। ಮಿಥುನಾನಾಂ ಸಹಸ್ರಂ ತು ಮುಖಾತ್ಸಮಭವತ್ಕಿಲ । ಜನಾಸ್ತೇ ಹ್ಯುಪಪದ್ಯಂತೇ ಸತ್ತ್ವೋದ್ರಿಕ್ತಾಃ ಸುತೇಜಸಃ ।। 34 ।। ವಕ್ಷಸೋಷೋಽನ್ಯತ್ಸಹಸ್ರಂ ತು ಮಿಥುನಾನಾಂ ಸಸರ್ಜ ಹ । ತೇ ಸರ್ವೇ ರಜಸೋದ್ರಿಕ್ತಾಃ ಶುಷ್ಮಿಣಶ್ಚಾಪ್ಯಮರ್ಷಿಣಃ ।। 35 ।। ಸಹಸ್ರಮನ್ಯದಸೃಜದ್ಬಾಹೂನಾಮಸತಾಂ ಪುನಃ । ರಜಸ್ತಮೋಭ್ಯಾಮುದ್ರಿಕ್ತಾ ಗೃಹಶೀಲಾಸ್ತತಃ ಸ್ಮೃತಾಃ ।। 36 ।। ಆಯುಷೋಂಽತೇ ಪ್ರಸೂಯಂತೇ ಮಿಥುನಾನ್ಯೇವ ವಾಸಕೃತ್ । ಕೂಟಕಾಕೂಟಕಾಶ್ಚೈವ ಉತ್ಪದ್ಯಂತೇ ಮುಮೂರ್ಷುಣಾಮ್ ।। 37 ।। ಕುತೋ ಕುಲಮಥೋತ್ಪಾದ್ಯ ತಾಃ ಶರೀರಾಣಿ ತತ್ಯಜುಃ । ತತಃ ಪ್ರಭೃತಿ ಕಲ್ಪೇಽಸ್ಮಿನ್ಮೈಥುನಾನಾಂ ಚ ಸಂಭವಃ ।। 38 ।।

ಸೃಷ್ಟಿಯನ್ನು ಪ್ರಾರಂಭಿಸಿದ ಬ್ರಹ್ಮನು ಅತ್ಯಧಿಕ ಪ್ರಜಾಸೃಷ್ಟಿಯನ್ನು ಮಾಡಬೇಕೆಂಬ ಸತ್ಯಸಂಕಲ್ಪವುಳ್ಳವನಾದನು. ಅವನಿಗೆ ಸೃಜ್ಯವಸ್ತುವಿನ ನಾಮ-ರೂಪ ಚಿಂತನೆ ಮತ್ತು ಸೃಷ್ಟಿಸಬೇಕೆಂಬ ಈಕ್ಷಣೆ – ಇವೇ ಸೃಷ್ಟಿಯ ಸಾಧನಗಳು. ಆಗ ಅವನ ಮುಖದಿಂದ ಒಂದು ಸಾವಿರ ಮಿಥುನಗಳ ಸೃಷ್ಟಿಯಾಯಿತು. ಆ ಮಿಥುನ ಸೃಷ್ಟಿಯಲ್ಲಿದ್ದವರು ಸತ್ತ್ವಗುಣ ಉದ್ರಿಕ್ತರಾದವರೂ, ಮಹಾ ತೇಜಸ್ಸುಳ್ಳವರೂ ಆಗಿದ್ದರು. ನಂತರ ತನ್ನ ವಕ್ಷಸ್ಸಿನಿಂದ ಒಂದು ಸಾವಿರ ಮಿಥುನಗಳನ್ನು ಸೃಷ್ಟಿಸಿದನು. ರಜೋಗುಣ ಉದ್ರಿಕ್ತರಾದ ಅವರು ವೀರ್ಯಸಂಪನ್ನರೂ, ಅಸಹನಾಯುಕ್ತರೂ ಆದರು. ಪುನಃ ಅವನು ಇನ್ನೂ ಅಧಮರಾದ ಇನ್ನೊಂದು ಸಾವಿರ ಮಿಥುನರನ್ನು ತನ್ನ ಬಾಹುಗಳಿಂದ ಸೃಷ್ಟಿಸಿದನು. ಅವರು ರಜೋಗುಣ-ತಮೋಗುಣಗಳ ಮಿಶ್ರಣದ ಉದ್ರೇಕವುಳ್ಳವರಾಗಿ ಗೃಹಕರ್ಮ ತತ್ಪರರಾದರು. ಆ ಮಿಥುನಗಳು ತಮ್ಮ ಕರ್ಮಶೇಷದಿಂದ ಪ್ರಾಪ್ತವಾದ ಸಕಲ ಆಯುಷ್ಯವನ್ನು ಅನುಭವಿಸಿ, ಅಂತ್ಯದಲ್ಲಿ ಮರಣಹೊಂದಿ, ಮತ್ತೆ ಮಿಥುನರೂಪದಿಂದ ಹುಟ್ಟುತ್ತಾರೆ. ಮರಣಕಾಲದಲ್ಲಿ ಆ ಮುಮೂರ್ಷುಗಳಿಗೆ ಮುಂದೆ ಹೊಂದಬೇಕಾದ ಜನ್ಮಕ್ಕೆ ತಕ್ಕಂತೆ ಸಾಧು-ಅಸಾಧು ಭಾವನೆಗಳು ಉದಯಿಸುತ್ತವೆ. ಹೀಗೆ ಮಿಥುನಗಳು ವಂಶಾವಳಿಯನ್ನು ಬೆಳೆಸಿ ತಮ್ಮ ಶರೀರಗಳನ್ನು ಬಿಟ್ಟರು. ಆ ಮೊದಲ್ಗೊಂಡು ಈ ಕಲ್ಪದಲ್ಲಿ ಮಿಥುನಕ್ಕೆ ಸಂಬಂಧಿಸಿದ ಮೈಥುನ ವ್ಯಾಪಾರಗಳು ಸಂಭವಿಸಿದವು.

ಧ್ಯಾನೇನ ಮನಸಾ ತಾಸಾಂ ಪ್ರಜಾನಾಂ ಜಾಯತೇ ಕೃತೇ । ಶಬ್ದಾದಿವಿಷಯಃ ಶುದ್ಧಃ ಪ್ರತ್ಯೇಕಂ ಪಂಚಲಕ್ಷಣಮ್ ।। 39 ।। ಇತ್ಯೇವಂ ಮಾನಸೈರ್ಭಾವೈಃ ಪ್ರೇಷ್ಠಂ ತಿಷ್ಠಂತಿ ಚಾಪ್ರಜಾಃ । ತಥಾನ್ವಯಾಸ್ತು ಸಂಭೂತಾ ಯೈರಿದಂ ಪೂರಿತಂ ಜಗತ್ ।। 40 ।। ಸರಿತ್ಸರಃಸಮುದ್ರಾಂಶ್ಚ ಸೇವಂತೇ ಪರ್ವತಾನಪಿ । ತದಾ ತಾ ಹ್ಯಲ್ಪಸಂತೋಷಾ ಯುದ್ಧೇ ತಸ್ಮಿಂಶ್ಚರಂತಿ ವೈ ।। 41 ।। ಪೃಥ್ವೀ ರಸವತೀ ನಾಮ ಆಹಾರಂ ವ್ಯಾಹರಂತಿ ಚ । ತಾಃ ಪ್ರಜಾಃ ಕಾಮಚಾರಿಣ್ಯೋ ಮಾನಸೀಂ ಸಿದ್ಧಿಮಿಚ್ಛತಃ ।। 42 ।। ತುಲ್ಯಮಾಯುಃ ಸುಖಂ ರೂಪಂ ತಾಸಾಮಾಸೀತ್ಕೃತೇ ಯುಗೇ । ಧರ್ಮಾಧರ್ಮೌಂ ತದಾ ನ ಸ್ತಃ ಕಲ್ಪಾದೌ ಪ್ರಥಮೇ ಯುಗೇ ।। 43 ।। ಸ್ವೇನ ಸ್ವೇನಾಧಿಕಾರೇಣ ಜಜ್ಞಿರೇ ತು ಯುಗೇ ಯುಗೇ । 

ಕೃತಯುಗದ ಪ್ರಜೆಗಳಿಗೆ ಮನಸಾರೆ ಧ್ಯಾನಮಾತ್ರದಿಂದಲೇ ದುಃಖಸಂಪರ್ಕವಿಲ್ಲದೇ ಶಬ್ದಾದಿವಿಷಯಗಳ ಪ್ರತ್ಯೇಕ ಪವಿತ್ರಭೋಗವು ಪಂಚೇಂದ್ರಿಯಗಳಿಂದ ದೊರೆಯುತ್ತದೆ. ಸಂಕಲ್ಪಮಾತ್ರದಿಂದಲೇ ಅವರು ಉತ್ತಮ ಭೋಗವನ್ನು ಅನುಭವಿಸುವ ಸುಕೃತಾತ್ಮರಾಗಿರುತ್ತಾರೆ. ಇಂತಹ ಮಾನಸ ಭಾವಗಳಿಂದ ಪ್ರಜೆಗಳು ವೃದ್ಧಿಹೊಂದಲು, ಅವರ ಕುಲಗಳಲ್ಲಿ ಹುಟ್ಟಿದವರಿಂದ ಈ ಜಗತ್ತು ತುಂಬಿಹೋಯಿತು. ಅವರು ನದೀ-ಸರೋವರ-ಸಮುದ್ರಗಳಲ್ಲಿ ಮತ್ತು ಪರ್ವತಗಳಲ್ಲಿ ವಿಹರಿಸುತ್ತಾ ಅಲ್ಪದರಲ್ಲಿಯೇ ಸಂತೋಷಪಟ್ಟು ಸಂಚರಿಸುತ್ತಿದ್ದರು. ರಸವತ್ತಾದ ಪೃಥ್ವಿಯು ಬೇಕಾದ ಉತ್ತಮ ಆಹಾರವನ್ನು ಕೊಡುತ್ತಿತ್ತು. ಬೇಕಾದಲ್ಲಿ ಹೋಗುತ್ತಿದ್ದ ಆ ಪ್ರಜೆಗಳು ಮಾನಸ ಸಿದ್ಧಿಯನ್ನು ಹೊಂದಿದರು. ಕೃತಯುಗದಲ್ಲಿ ಆಯುಸ್ಸು, ಸುಖ ಮತ್ತು ರೂಪಗಳು ಎಲ್ಲರಿಗೂ ಸಮನಾಗಿಯೇ ಇರುತ್ತವೆ. ಕಲ್ಪಾದಿಯ ಪ್ರಥಮ ಕೃತಯುಗದಲ್ಲಿ ಆಯುಸ್ಸು ಮೊದಲಾದವುಗಳಲ್ಲಿ ತಾರತಮ್ಯವನ್ನು ಕೊಡುವ ಧರ್ಮ-ಅಧರ್ಮಗಳೆಂದು ಇರಲಿಲ್ಲ. ತಮ್ಮ ಅಧಿಕಾರಗಳಿಂದ ಯುಗ ಯುಗದಲ್ಲಿಯೂ ಪ್ರಜೆಗಳು ಹುಟ್ಟುತ್ತಾರೆ.

ಚತ್ವಾರಿ ತು ಸಹಸ್ರಾಣಿ ವರ್ಷಾಣಾಂ ದಿವ್ಯಸಂಖ್ಯಯಾ ।। 44 ।। ಆದೌ ಕೃತಯುಗಂ ಪ್ರಾಹುಃ ಸಂಧ್ಯಾಂಶೌ ಚ ಚತುಃಶತೌ । ತತಃ ಸಹಸ್ರಶಸ್ತಾಸ್ತು ಪ್ರಜಾಸು ಪ್ರಥಿತಾಸ್ವಿಹ ।। 45 ।। ನ ತಾಸಾಂ ಪ್ರತಿಘಾತೋಽಸ್ತಿ ನ ದ್ವಂದ್ವಂ ನಾಪಿ ಚ ಕ್ರಮಃ । ಪರ್ವತೋದಧಿವಾಸಿನ್ಯೋ ಹ್ಯನಿಕೇತಾಶ್ರಯಾಸ್ತು ತಾಃ ।। 46 ।। ವಿಶೋಕಾಃ ಸತ್ತ್ವಬಹುಲಾ ಏಕಾಂತಸುಖಿನಃ ಪ್ರಜಾಃ । ತಾಃ ಶಶ್ವತ್ಕಾಮಚಾರಿಣ್ಯೋ ನಿತ್ಯಂ ಮುದಿತಮಾನಸಾಃ ।। 47 ।। ಪಶವಃ ಪಕ್ಷಿಣಶ್ಚೈವ ನ ತದಾಸನ್ಸರೀಸೃಪಾಃ । ನೋದ್ದ್ವಿಜಾ ನೋತ್ಕಟಾಶ್ಚೈವ ಧರ್ಮಸ್ಯ ಪ್ರಕ್ರಿಯಾ ತು ಸಾ ।। 48 ।। ಸಮೂಲಫಲಪುಷ್ಪಾಣಿ ವರ್ತನಾಯ ತ್ವಶೇಷತಃ । ಸರ್ವೈಕಾಂತಸುಖಃ ಕಾಲೋ ನಾತ್ಯರ್ಥಂ ಹ್ಯುಷ್ಣಶೀತಲಃ ।। 49 ।। ಮನೋಽಭಿಲಷಿತಃ ಕಾಮಸ್ತಾಸಾಂ ಸರ್ವತ್ರ ಸರ್ವದಾ । ಉತ್ತಿಷ್ಠಂತಿ ಪೃಥಿವ್ಯಾಂ ವೈ ತೇಷಾಂ ಧ್ಯಾನೈ ರಸಾತಲಾತ್ ।। 50 ।।

ದೇವಮಾನದ ಪ್ರಕಾರ ಕೃತಯುಗದ ಪರಿಮಾಣವು 4000 ವರ್ಷಗಳು ಮತ್ತು ಯುಗದ ಆದಿ ಸಂಧ್ಯಾಂಶವು 400 ದೇವವರ್ಷಗಳು ಎಂದು ಹೇಳುತ್ತಾರೆ. ಆ ಯುಗದಲ್ಲಿ ಸಹಸ್ರಾರು ಸಂಖ್ಯೆಯ ಪ್ರಜೆಗಳು ಪ್ರಥಿತರಾಗುತ್ತಾರೆ. ಅವರಿಗೆ ಯಾವುದೇ ಪ್ರತಿಘಾತಗಳಿರುವುದಿಲ್ಲ, ದ್ವಂದ್ವಗಳೂ, ಮತ್ತು ಕ್ರಮವೂ ಇರುವುದಿಲ್ಲ. ಪರ್ವತ-ಸಮುದ್ರಗಳಲ್ಲಿ ವಾಸಿಸುವ ಅವರಿಗೆ ಒಂದೇ ವಾಸಭೂಮಿಯಿರುವುದಿಲ್ಲ. ಶೋಕವಿಲ್ಲದೇ ಆ ಪ್ರಜೆಗಳು ಸತ್ತ್ವಗುಣಾಧಿಕರಾಗಿ, ಏಕಾಂತದಲ್ಲಿಯೇ ಸುಖವನ್ನು ಅನುಭವಿಸುತ್ತಾರೆ. ಸದಾ ಕಾಮಚಾರಿಗಳಾದ ಅವರು ನಿತ್ಯವೂ ಮುದಿತಮಾನಸರಾಗಿರುತ್ತಾರೆ. ಆ ಯುಗದಲ್ಲಿ ಪಶು-ಪಕ್ಷಿಗಳೂ ಸರೀಸೃಪಗಳೂ ಭಯಂಕರವಾಗಿರದೇ ಯಾವುದೇ ಉದ್ವೇಗವನ್ನುಂಟುಮಾಡುವುದಿಲ್ಲ. ಆ ಯುಗವು ಸಂಪೂರ್ಣ ಧರ್ಮಪ್ರರಣದ ಕಾಲವು. ಯಾವುದೇ ಬಾಧೆಯೂ ಇಲ್ಲದೇ ಲೋಕವೆಲ್ಲಾ ಸುಖಮಯವಾಗಿತ್ತು. ಫಲ-ಮೂಲ-ಪುಷ್ಪಗಳಿಂದ ಸಂಪೂರ್ಣ ಸುಖವನ್ನು ಅನುಭವಿಸುತ್ತಿದ್ದ ಆ ಕಾಲದಲ್ಲಿ ಸರ್ವರೂ ಏಕಾಂತಸುಖವನ್ನು ಪಡೆದು, ಉಷ್ಣ-ಶೀತಾದಿ ದ್ವಂದ್ವಗಳ ಬಾಧೆಗಳು ಇರಲಿಲ್ಲ. ಧ್ಯಾನಮಾತ್ರದಿಂದಲೇ ಸರ್ವರಿಗೂ ಸರ್ವದಾ ಅವರ ಮನೋಭಿಲಾಷೆಯಂತೆ, ಬಯಸಿದಂತೆ, ರಸಾತಲದಿಂದ ಭೂಮಿಯಮೇಲೆ ಉದ್ಭವಿಸುತ್ತಿದ್ದವು.

ಬಲವರ್ಣಕರೀ ತೇಷಾಂ ಜರಾ ರೋಗಪ್ರಣಾಶಿನೀ । ಅಸಂಸ್ಕಾರ್ಯೈಃ ಶರೀರೈಸ್ತು ಪ್ರಜಾಸ್ತಾಃ ಸ್ಥಿರಯೌವನಾಃ ।। 51 ।। ತಾಸಾಂ ವಿನಾ ತು ಸಂಕಲ್ಪಾಜ್ಜಾಯಂತೇ ಮಿಥುನಾತ್ಪ್ರಜಾಃ । ಸಮಂ ಜನ್ಮ ಚ ರೂಪಂ ಚ ಪ್ರೀಯಂತೇ ಚೈವ ತಾಃ ಸಮಾಃ ।। 52 ।। ತದಾ ಸತ್ಯಮಲೋಭಶ್ಚ ಸಂತುಷ್ಟಿಶ್ಚ ಚ ಸುಖಂ ದಮಃ । ನಿರ್ವಿಶೇಷಾಶ್ಚ ತಾಃ ಸರ್ವಾ ರೂಪಾಯುಃ ಶಿಲ್ಪಚೇಷ್ಟಿತೈಃ ।। 53 ।। ಅಬುದ್ಧಿಪೂರ್ವಿಕಾ ವೃತ್ತಿಃ ಪ್ರಜಾನಾಂ ಭವತಿ ಸ್ವಯಮ್ । ಅಪ್ರವೃತ್ತಿಃ ಕೃತದ್ವಾರೇ ಕರ್ಮಣಃ ಶುಭಪಾಪಯೋಃ ।। 54 ।। ವರ್ಣಾಶ್ರಮವ್ಯವಸ್ಥಾಶ್ಚ ನ ತದಾಸನ್ನ ತತ್ಕರಾಃ । ಅನಿಚ್ಛಾದ್ವೇಷಯುಕ್ತಾಸ್ತಾ ವರ್ತಯಂತಿ ಪರಸ್ಪರಮ್ ।। 55 ।। ತುಲ್ಯರೂಪಾಯುಷಃ ಸರ್ವಾ ಅಧಮೋತ್ತಮವರ್ಜಿತಾಃ । ಸುಖಪ್ರಾಯಾ ವಿಶೋಕಾಶ್ಚ ಉತ್ಪದ್ಯಂತೇ ಕೃತೇ ಯುಗೇ ।। 56 ।। ಲಾಭಾಲಾಭೌ ನ ವಾ ಸ್ಯಾತಾಂ ಮಿತ್ರಾಮಿತ್ರೌ ಪ್ರಿಯಾಪ್ರಿಯೇ । ಮನಸಾ ವಿಷಯಸ್ತಾಸಾಂ ನಿರೀಹಾಣಾಂ ಪ್ರವರ್ತತೇ ।। 57 ।। ನಾತಿಹಿಂಸತಿ ವಾನ್ಯೋನ್ಯಂ ನಾನುಗೃಹ್ಣಂತಿ ವೈ ತದಾ

ಅವರ ಮುಪ್ಪು ಬಲ-ರೂಪಗಳನ್ನು ವೃದ್ಧಿಸುವಂತದ್ದಾಗಿತ್ತು ಮತ್ತು ರೋಗಗಳನ್ನು ನಾಶಪಡಿಸುವಂತದ್ದಾಗಿತ್ತು. ಶರೀರ ಸಂಸ್ಕಾರಗಳಿಲ್ಲದೇ ಆ ಪ್ರಜೆಗಳು ಸ್ಥಿರಯೌವನದಲ್ಲಿ ಇರುತ್ತಿದ್ದರು. ಅವರಿಗೆ ಸಂಕಲ್ಪಮಾಡದೇ ಮಿಥುನ ಧರ್ಮದಿಂದ ಪ್ರಜೆಗಳು ಹುಟ್ಟುತ್ತಿದ್ದರು. ಹುಟ್ಟಿದ ಪ್ರಜೆಗಳ ಜನ್ಮ, ರೂಪ, ಮತ್ತು ಸುಖ ಎಲ್ಲವೂ ಸಮನಾಗಿಯೇ ಇದ್ದವು. ಆಗ ಪ್ರಜೆಗಳಿಗೆ ಸತ್ಯ, ಅಲೋಭ, ಸಂತೋಷ, ಸುಖ, ದಮ ಎಲ್ಲವೂ ಸ್ವಧರ್ಮಗಳೇ ಆಗಿದ್ದವು. ಎಲ್ಲ ಪ್ರಜೆಗಳೂ ರೂಪ, ಆಯುಸ್ಸು, ಶಿಲ್ಪಜ್ಞಾನ, ಮತ್ತು ವ್ಯಾಪಾರಗಳಲ್ಲಿ ಯಾವುದೇ ತಾರತಮ್ಯವಿಲ್ಲದೇ ಇದ್ದರು. ಆ ಸಮಯದಲ್ಲಿ ಪ್ರಜೆಗಳ ವೃತ್ತಿಗಳು ಅಬುದ್ಧಿಪೂರ್ವಿಕವಾಗಿ ತಮಗೆ ತಾವೇ ಉಂಟಾಗುತ್ತಿದ್ದವು. ಆ ಯುಗದಲ್ಲಿ ಶುಭ-ಪಾಪಕರ್ಮಗಳ ಪ್ರವೃತ್ತಿಯೇ ಇರಲಿಲ್ಲ. ಆಗ ವರ್ಣಾಶ್ರಮ ವ್ಯವಸ್ಥೆಗಳೂ, ಅದರಂತೆ ನಡೆದುಕೊಳ್ಳುವವರೂ ಇರಲಿಲ್ಲ. ಪರಸ್ಪರರಲ್ಲಿ ಇಚ್ಛಾ-ದ್ವೇಷಗಳಿಲ್ಲದೇ ನಡೆದುಕೊಳ್ಳುತ್ತಿದ್ದರು. ರೂಪ-ಆಯುಸ್ಸುಗಳಲ್ಲಿ ಎಲ್ಲರೂ ಸಮನಾಗಿದ್ದು, ಅವರಲ್ಲಿ ಅಧಮರು-ಉತ್ತಮರು ಎನ್ನುವ ಕಲ್ಪನೆಯೇ ಇರಲಿಲ್ಲ. ಹೀಗೆ ಕೃತಯಗದಲ್ಲಿ ಶೋಕವಿಲ್ಲದ ಸುಖಮಯ ಪ್ರಜೆಗಳೇ ಹುಟ್ಟುತ್ತಾರೆ. ಅವರ ಮನಸ್ಸಿನಲ್ಲಿ ಲಾಭ-ಅಲಾಭಗಳೆನ್ನುವುದೂ, ಮಿತ್ರ-ಅಮಿತ್ರರು, ಪ್ರಿಯ-ಅಪ್ರಿಯವು ಎಂಬ ವಿಭಾಗಬುದ್ಧಿಯು ಇರಲಿಲ್ಲ. ಯುಗಮಹಿಮೆಯಿಂದ ಅವರ ವಿಷಯ ಸುಖಗಳು ಪ್ರಯತ್ನವಿಲ್ಲದೇ ದೊರೆಯುತ್ತಿದ್ದವು. ಅನ್ಯೋನ್ಯರನ್ನು ಹಿಂಸಿಸುತ್ತಿರಲಿಲ್ಲ. ಅನ್ಯೋನ್ಯರನ್ನು ಅನುಗ್ರಹಿಸುತ್ತಲೂ ಇರಲಿಲ್ಲ.

ಜ್ಞಾನಂ ವರಂ ಕೃತಯುಗೇ ತ್ರೇತಾಯಾಂ ಯಜ್ಞ ಉಚ್ಯತೇ ।। 58 ।। ಪವೃತ್ತಂ ದ್ವಾಪರೇ ಯುದ್ಧಂ ಸ್ತೇಯಮೇವ ಕಲೌ ಯುಗೇ । ಸತ್ತ್ವಂ ಕೃತಂ ರಜಸ್ತ್ರೇತಾ ದ್ವಾಪರಂ ತು ರಜಸ್ತಮಃ ।। 59 ।। ಕಲಿಸ್ತಮಸ್ತು ವಿಜ್ಞೇಯಂ ಗುಣವೃತ್ತಂ ಗುಣೇಷು ತತ್

ಕೃತಯುಗದಲ್ಲಿ ಜ್ಞಾನವೇ ಶ್ರೇಷ್ಠವಾಗಿತ್ತು. ತ್ರೇತಾಯುಗದಲ್ಲಿ ಯಜ್ಞವು ಶ್ರೇಷ್ಠ ಎನ್ನುತ್ತಾರೆ. ದ್ವಾಪರದಲ್ಲಿ ಯುದ್ಧವೂ ಕಲಿಯುಗದಲ್ಲಿ ಕಳ್ಳತನವೂ ಶ್ರೇಷ್ಠವೆಂದಾಗುತ್ತದೆ. ಗುಣಗಳ ಪ್ರಕಾರ ಕೃತಯುಗವು ಸತ್ತ್ವಗುಣ ಪ್ರಧಾನವೂ, ತ್ರೇತಾಯುಗವು ರಜೋಗುಣ ಪ್ರಧಾನವೂ, ದ್ವಾಪರವು ರಜೋಗುಣ-ತಮೋಗುಣಗಳ ಮಿಶ್ರಣ ಪ್ರಧಾನವೂ, ಕಲಿಯುಗವು ತಮೋಗುಣ ಪ್ರಧಾನವೂ ಆಗಿದೆ ಎಂದು ತಿಳಿಯಬೇಕು.

ಕಾಲಃ ಕೃತಯುಗೇ ತ್ವೇಷ ತಸ್ಯ ಸಂಧ್ಯಾಂ ನಿಬೋಧತ ।। 60 ।। ಚತ್ವಾರಿ ತು ಸಹಸ್ರಾಣಿ ವರ್ಷಾಣಾಂ ತತ್ಕೃತಂ ಯುಗಮ್ । ಸಾಧ್ಯಾಂಶೌ ತಸ್ಯ ದಿವ್ಯಾನಿ ಶತಾನ್ಯಷ್ಟೌ ತು ಸಂಖ್ಯಯಾ ।। 61 ।। ಚತ್ವಾರ್ಯೇವ ಸಹಸ್ರಾಣಿ ವರ್ಷಾಣಾಂ ಮಾನುಷಾಣಿ ತು । ತದಾ ತಾಸು ಭವಂತ್ಯಾಶು ನೋತ್ಕ್ರೋಶಾಚ್ಚ ವಿಪರ್ಯಯಾಃ ।। 62 ।।

ಪವಿತ್ರವಾದ ಕೃತಯುಗವೆಂಬ ಕಾಲಪರಿಮಾಣವನ್ನು ಕೇಳಿ. ಕೃತಯುಗವು 4000 ದೇವ ವರ್ಷ ಪರಿಮಾಣವುಳ್ಳದ್ದು. ಅದರ ಸಂಧಿ-ಅಂಶಗಳು 800 ದೇವ ವರ್ಷಗಳು.  ಮನುಷ್ಯ ಪರಿಮಾಣದಲ್ಲಿ ಈ ಸಂಧಿಯು 4000 ವರ್ಷ ಪರ್ಯಂತವಾಗಿರುತ್ತದೆ. ಆಗ ಪ್ರಜೆಗಳಿಗೆ ಕ್ಲೇಶಕಾರಕ ವಿಪರ್ಯಯಗಳು ಯಾವುವೂ ಇರುವುದಿಲ್ಲ.

ತತಃ ಕೃತಯುಗೇ ತಸ್ಮಿನ್ ಸಸಂಧ್ಯಾಂಶೇ ಗತೇ ತದಾ । ಪಾದಾವಶಿಷ್ಟೋ ಭವತಿ ಯುಗಧರ್ಮಸ್ತು ಸರ್ವಶಃ ।। 63 ।। ಸಂಧ್ಯಾಯಾಸ್ತು ವ್ಯತೀತಾಯಾಃ ಸಾಂಧ್ಯಃ ಕಾಲೋ ಯುಗಸ್ಯ ಸಃ । ಪಾದಮಿಶ್ರಾವಶಿಷ್ಟೇನ ಸಂಧ್ಯಾಧರ್ಮೇ ಪುನಃ ಪುನಃ ।। 64 ।। ಏವಂ ಕೃತಯುಗೇ ತಸ್ಮಿನ್ನಿಃಶೇಷೇಂಽತರ್ದಧೇ ತದಾ । ತಸ್ಯಾಂ ಚ ಸಂಧೌ ನಷ್ಟಾಯಾಂ ಮಾನಸೀ ಚಾಭವತ್ಪ್ರಜಾ ।। 65 ।।

ಸಂಧ್ಯ-ಅಂಶಗಳೊಂದಿಗೆ ಆ ಕೃತಯುಗವು ಕಳೆಯಲು ಸರ್ವಶಃ ಯುಗಧರ್ಮವು ಪಾದಮಾತ್ರವೇ ನಷ್ಟವಾಗುತ್ತದೆ. ಆ ಯುಗದ ಸಂಧ್ಯಾಕಾಲವಾದ ಸಂಧ್ಯೆಯು ಕಳೆಯುವುದರೊಳಗೆ ಸಂಧ್ಯಾ ಧರ್ಮಗಳು ಕಾಲುಭಾಗ ಮಾತ್ರ ನಷ್ಟವಾಗುತ್ತವೆ. ಹೀಗೆ ಕೃತಯುಗ ಮತ್ತು ಅದರ ಸಂಧಿ-ಅಂಶಗಳು ನಿಃಶೇಷವಾಗಿ ಅಂತರ್ಧಾನಹೊಂದಿ ನಷ್ಟವಾಗಲು ಮಾನಸೀ ಪ್ರಜೆಗಳ ಉತ್ಪನ್ನವಾಯಿತು.

ಸಿದ್ಧಿರನ್ಯಯುಗೇ ತಸ್ಮಿಂಸ್ತ್ರೇತಾಖ್ಯೇಽನಂತರೇ ಕೃತಾತ್ । ಸರ್ಗಾದೌ ಯಾ ಮಯಾಷ್ಟೌ ತು ಮಾನಸ್ಯೋ ವೈ ಪ್ರಕೀರ್ತಿತಾಃ ।। 66 ।। ಅಷ್ಟೌ ತಾಃ ಕ್ರಮಯೋಗೇನ ಸಿದ್ಧಯೋ ಯಾಂತಿ ಸಂಕ್ಷಯಮ್ । ಕಲ್ಪಾದೌ ಮಾನಸೀ ಹ್ಯೇಕಾ ಸಿದ್ಧಿರ್ಭವತಿ ಸಾ ಕೃತೇ ।। 67 ।। ಮನ್ವಂತರೇಷು ಸರ್ವೇಷು ಚತುರ್ಯುಗ ವಿಭಾಗಶಃ । ವರ್ಣಾಶ್ರಮಾಚಾರಕೃತಃ ಕರ್ಮಸಿದ್ಧ್ಯುದ್ಭವಃ ಕೃತಃ ।। 68 ।। ಸಂಧ್ಯಾ ಕೃತಸ್ಯ ಪಾದೇನ ಸಂಕ್ಷೇಪೇಣ ವಶಾತ್ತತಃ । ಕೃತಸಂಧ್ಯಾಂಶಕಾ ಹ್ಯೇತೇ ತ್ರೀನಾದಾಯ ಪರಸ್ಪರಮ್ ।। 69 ।। ಹೀಯಂತೇ ಯುಗಧರ್ಮಾಸ್ತೇ ತಪಃಶ್ರುತಬಲಾಯುಷಃ । ಕೃತೇ ಕೃತಾಂಶೇಽತೀತೇ ತು ಬಭೂವ ತದನಂತರಮ್ ।। 70 ।। ತ್ರೇತಾಯುಗಸಮುತ್ಪತ್ತಿಃ ಸಾಂಶಾ ಚ ಋಷಿಸತ್ತಮಾಃ । ತಸ್ಮಿನ್ ಕ್ಷೀಣೇ ಕೃತಾಂಶೇ ವೈ ತಾಸು ಶಿಷ್ಟಾಸು ಸಪ್ತಸು ।। 71 ।। ಕಲ್ಪಾದೌ ಸಂಪ್ರವೃತ್ತಾಯಾಃ ತ್ರೇತಾಯಾಃ ಪ್ರಮುಖೇ ತದಾ । ಪ್ರಣಶ್ಯತಿ ತದಾ ಸಿದ್ಧಿಃ ಕಾಲಯೋಗೇನ ನಾನ್ಯಥಾ ।। 72 ।।

ಕೃತಯುಗದ ನಂತರದ ತ್ರೇತಾಯುಗದಲ್ಲಿ ಅನ್ಯ ಸಿದ್ಧಿಯು ಪ್ರಕಾಶಿಸುತ್ತದೆ. ಸರ್ಗಾದಿಯಲ್ಲಿ ಎಂಟು ಮಾನಸ ಸಿದ್ಧಿಗಳು ಇರುವುದಾಗಿ ಹಿಂದೆ ನಾನು ಹೇಳಿದ್ದೆನಲ್ಲವೇ? ಆ ಎಂಟೂ ಸಿದ್ಧಿಗಳೂ ಕ್ರಮೇಣವಾಗಿ ನಾಶಹೊಂದುತ್ತವೆ. ಕಲ್ಪದ ಮೊದಲ ಕೃತಯುಗದಲ್ಲಿ ಮಾನಸೀ ಸಿದ್ಧಿಯೊಂದೇ ಇರುತ್ತದೆ. ಸರ್ವ ಮನ್ವಂತರಗಳಲ್ಲಿಯೂ ಚತುರ್ಯುಗಗಳ ವಿಭಾಗವನ್ನು ಅವಲಂಬಿಸಿ ವರ್ಣಾಶ್ರಮಗಳ ಆಚಾರ ತಾರತಮ್ಯದಿಂದ ಕರ್ಮಸಿದ್ಧಿ ವಿಶೇಷಗಳ ಉತ್ಪತ್ತಿಯ ರಚನೆಯಾಗಿದೆ. ಯುಗಸಂಧಿಕಾಲದ ಪ್ರಾಬಲ್ಯದಿಂದ ಪಾದಾಂಶ ಯುಗಧರ್ಮವು ಸಂಕ್ಷಿಪ್ತವಾಗಿ ಹೋಗುವುದರಿಂದ ಸಂಧ್ಯಾಂಶಗಳು ಧರ್ಮದ ಮೂರುಪಾದಗಳನ್ನು ಕಳೆಯುತ್ತವೆ. ಆಯಾಯಾ ಯುಗಕ್ಕೆ ಅಸಾಧಾರಣವಾಗಿ ಏರ್ಪಟ್ಟಿರುವ ಯುಗಧರ್ಮಗಳೂ, ಅದನ್ನು ಅವಲಂಬಿಸಿರುವ ತಪಸ್ಸು, ಶಾಸ್ತ್ರಾಧ್ಯಯನ, ಶಕ್ತಿ, ಆಯುಸ್ಸು – ಎಲ್ಲವೂ ಹ್ರಾಸವಾಗುತ್ತವೆ. ಋಷಿಸತ್ತಮರೇ! ಅದರಂತೆ ಕೃತಯುಗ ಮತ್ತು ಅದರ ಅಂತಿಮಾಂಶವು ಕಳೆಯಲು ತನ್ನ ಅಂಶದೊಂದಿಗೆ ನಂತರದ ತ್ರೇತಾಯುಗವು ಉಂಟಾಗುತ್ತದೆ. ಕೃತಯುಗದ ಅಂಶವು ಕಳೆಯಲು ಉಳಿದ ಏಳೂ ಸಿದ್ಧಿಗಳೂ ಲಯವಾಗುತ್ತವೆ. ಕಾಲಯೋಗದಿಂದಲೇ ಕಲ್ಪದ ಆದಿಯಲ್ಲಿದ್ದ ಸಿದ್ಧಿಗಳು ತ್ರೇತಾಯುಗವು ಪ್ರಾರಂಭವಾಗುವಾಗ ನಾಶಹೊಂದುತ್ತವೆ. ಬೇರೆ ಯಾವುದರಿಂದಲೂ ಅಲ್ಲ.

ತಸ್ಯಾಂ ಸಿದ್ಧೌ ಪ್ರಣಷ್ಟಾಯಾಮನ್ಯಾ ಸಿದ್ಧಿರಜಾಯತ । ಅಪಾಂಶೌ ತೌ ಪ್ರತಿಗತೌ ತದಾ ಮೇಘಾತ್ಮಾನಾ ತು ವೈ ।। 73 ।। ಮೇಘೇಭ್ಯಃ ಸ್ತನಯಿತೃಭ್ಯಃ ಪ್ರವೃತ್ತಂ ವೃಷ್ಟಿವರ್ಜನಮ್ । ಸಕೃದೇವ ತಯಾ ವೃಷ್ಟ್ಯಾ ಸಂಸಿದ್ಧೇ ಪೃಥಿವೀತಲೇ ।। 74 ।। ಪ್ರಜಾ ಆಸಂಸ್ತತಸ್ತಾಸಾಂ ವೃಕ್ಷಶ್ಚ ಗೃಹಸಂಜ್ಞಿತಾಃ । ಸರ್ವಃ ಪ್ರತ್ಯುಪಭೋಗಸ್ತು ತಾಸಾಂ ತೇಭ್ಯೋ ವ್ಯಜಾಯತ ।। 75 ।। ವರ್ತಯಂತೇ ಸ್ಮ ತೇಭ್ಯಸ್ತಾಸ್ತ್ರೇತಾಯುಗಮುಖೇ ಪ್ರಜಾಃ । ತತಃ ಕಾಲೇನ ಮಹತಾ ತಾಸಾಮೇವ ವಿಪರ್ಯಯಾತ್ ।। 76 ।। ರಾಗಲೋಲಾತ್ಮಕೋ ಭಾವಸ್ತದಾ ಹ್ಯಾಕಸ್ಮಿಕೋಽಭವತ್ ।। 77 ।।

ಕೃತಯುಗದ ಸಿದ್ಧಿಗಳು ನಷ್ಟವಾದಾಗ ಅನ್ಯ ಸಿದ್ಧಿಯು ಹುಟ್ಟುತ್ತದೆ. ಆಗ ತ್ರೇತಾಯುಗದ ಆದಿಯಲ್ಲಿ ನೀರಿನ ಅಂಶಗಳು ಮೇಲೆ ಹೋಗಿ ಮೇಘಗಳ ರೂಪವನ್ನು ಹೊಂದುತ್ತವೆ. ಗುಡುಗಿನಿಂದ ಕೂಡಿದ ಮೇಘಗಳು ಬೇಕಾದಷ್ಟು ಮಳೆಯನ್ನು ಸುರಿಸಲು ಪ್ರಾರಂಭಿಸುತ್ತವೆ. ಆ ಮಳೆಯಿಂದ ನೆನೆದು ಭೂಮಿಯು ಫಲಸಿದ್ಧಿಯನ್ನು ಕೊಡಲು ಪ್ರಾರಂಭಿಸುತ್ತದೆ. ಆಗಿನ ಪ್ರಜೆಗಳಿಗೆ ವೃಕ್ಷಗಳೇ ಮನೆಗಳಾಗಿದ್ದವು. ಅವರಿಗೆ ಸರ್ವ ಉಪಭೋಗಗಳೂ ಅವುಗಳಿಂದ ಹುಟ್ಟತೊಡಗಿದವು. ತ್ರೇತಾಯುಗದ ಆದಿಯಲ್ಲಿ ಪ್ರಜೆಗಳು ಹಾಗೆಯೇ ನಡೆದುಕೊಳ್ಳುತ್ತಿರಲು ಕಾಲದ ಮಹಾ ವಿಪರ್ಯಯದಿಂದ ಅವರಲ್ಲಿ ರಾಗ-ಲೋಭಾತ್ಮಕವಾದ ಭಾವವು ಆಕಸ್ಮಿಕವಾಗಿಯೇ ಉಂಟಾಯಿತು.

ಯತ್ತದ್ಭವತಿ ನಾರೀಣಾಂ ಜೀವಿತಾಂತೇ ತದಾರ್ತವಮ್ । ತದಾ ತದ್ವೈ ನ ಭವತಿ ಪುನರ್ಯುಗಬಲೇನ ತು ।। 78 ।। ತಾಸಾಂ ಪುನಃ ಪ್ರವೃತ್ತಂ ತನ್ಮಾಸಿ ಮಾಸಿ ತದಾರ್ತವಮ್ । ತತಸ್ತೇನೈವ ಯೋಗೇನ ವರ್ತತೇ ಮೈಥುನಂ ತದಾ ।। 79 ।। ತೇಷಾಂ ತತ್ಕಾಲಭಾವಿತ್ವಾನ್ಮಾಸಿಮಾಸ್ಯುಪಗಚ್ಛತಾಮ್ । ಅಕಾಲೇ ಚಾರ್ತವೋತ್ಪತ್ತ್ಯಾ ಗರ್ಭೋತ್ಪತ್ತಿಸ್ತದಾಽಭವತ್ ।। 80 ।।

ಕೃತಯುಗದ ನಾರಿಯರಿಗೆ ಜೀವನದ ಅಂತ್ಯಸಮಯದಲ್ಲಿಯೇ ಉಂಟಾಗುತ್ತಿದ್ದ ಋತುಕಾಲವು ಯುಗಬಲದಿಂದ ತ್ರೇತಾಯುಗದಲ್ಲಿ ಹಾಗೆ ಆಗುವುದಿಲ್ಲ. ತ್ರೇತಾಯುಗದ ಸ್ತ್ರೀಯರಿಗೆ ಪ್ರತಿ ತಿಂಗಳೂ ಋತುಕಾಲವೊದಗಲು ಪ್ರಾರಂಭವಾಗುತ್ತದೆ. ಆ ಕಾಲಯೋಗದಿಂದ ಮೈಥುನಕ್ರಿಯೆಯೂ ನಡೆಯತೊಡಗಿತು. ಆ ಕಾಲಭಾವನೆಯಿಂದ ಪ್ರತಿ ತಿಂಗಳೂ ಮತ್ತು ಅಕಾಲದಲ್ಲಿಯೂ ಋತುಕಾಲವು ಉಂಟಾಗಿ ಹಾಗೆ ಗರ್ಭೋತ್ಪತ್ತಿಯೂ ಆಗತೊಡಗಿತು.

ವಿಪರ್ಯಯೇಣ ತೇಷಾಂ ತು ತೇನ ತತ್ಕಾಲಭಾವಿತಾಃ । ಪ್ರಣಶ್ಯಂತಿ ತತಃ ಸರ್ವೇ ವೃಕ್ಷಾಸ್ತೇ ಗೃಹಸಂಜ್ಞಿತಾಃ ।। 81 ।। ತತಸ್ತೇಷು ಪ್ರಣಷ್ಟೇಷು ವಿಭ್ರಾಂತಾ ವ್ಯಾಕುಲೇಂದ್ರಿಯಾಃ । ಅಭಿಧ್ಯಾಯಂತಿ ತಾಃ ಸಿದ್ಧಿಂ ಸತ್ಯಾಭಿಧ್ಯಾಯಿನಸ್ತದಾ ।। 82 ।। ಪ್ರಾದುರ್ಬಭೂವುಸ್ತೇಷಾಂ ತು ವೃಕ್ಷಾಸ್ತೇ ಗೃಹಸಂಜ್ಞಿತಾಃ । ವಸ್ತ್ರಾಣಿ ಚ ಪ್ರಸೂಯಂತೇ ಫಲಾನ್ಯಾಭರಣಾನಿ ಚ ।। 83 ।। ತಥೈವ ಜಾಯತೇ ತೇಷಾಂ ಗಂಧರ್ವಾಣಾಂ ರಸಾನ್ವಿತಮ್ । ಆನ್ವೀಷಿಕಂ ಮಹಾವೀರ್ಯಂ ಪುಟಕೇ ಪುಟಕೇ ಮಧು ।। 84 ।। ತೇನ ತಾ ವರ್ತಯಂತಿ ಸ್ಮ ಮುಖೇ ತ್ರೇತಾಯುಗಸ್ಯ ವೈ । ಹೃಷ್ಟಪುಷ್ಟಾಸ್ತಯಾ ಸಿದ್ಧ್ಯಾ ಪ್ರಜಾಸ್ತಾ ವಿಗತಜ್ವರಾಃ ।। 85 ।।

ಆ ಕಾಲದ ಪರಿವರ್ತನೆಯಿಂದ ಉಂಟಾದ ಭಾವದಿಂದ ಮನೆಗಳಂತಿದ್ದ ವೃಕ್ಷಗಳೆಲ್ಲವೂ ನಾಶಹೊಂದುತ್ತವೆ. ಅವು ನಷ್ಟವಾದುದರಿಂದ ವಿಭ್ರಾಂತರೂ ವ್ಯಾಕುಲರೂ ಆದ ಜನರು ಸತ್ಯ-ಸಂಕಲ್ಪ-ಧ್ಯಾನತತ್ಪರರಾಗಿ ತಮ್ಮ ಸಿದ್ಧಿಯನ್ನು ನೆನೆಸಿಕೊಂಡರು. ಆ ಸಿದ್ಧಿಯಿಂದ ಮತ್ತೆ ಗೃಹಸಂಜ್ಞೆಯ ವೃಕ್ಷಗಳು ಹುಟ್ಟಿ ಪ್ರಜೆಗಳಿಗೆ ಫಲ-ವಸ್ತ್ರ-ಆಭರಣಗಳನ್ನು ಉಂಟುಮಾಡಿದವು. ಆ ವೃಕ್ಷಗಳಿಂದ ಗಂಧ-ರೂಪ-ರಸಾನ್ವಿತವಾದ ಸಕಲ ಸುಖಾನುಭವೂ ಉಂಟಾಯಿತು ಮತ್ತು ಅವುಗಳ ಎಲೆ ಎಲೆಯಲ್ಲಿಯೂ ಮಹಾವೀರ್ಯವನ್ನು ಕೊಡುವ ಮಧುವು ದೊರೆಯುತ್ತಿತ್ತು. ಅಂತಹ ವೃಕ್ಷಗಳ ಸಿದ್ಧಿಯಿಂದಾಗಿ ತ್ರೇಯಾಯುಗದ ಆದಿಯಲ್ಲಿ ಪ್ರಜೆಗಳು ಹೃಷ್ಟ-ಪುಷ್ಟರಾಗಿಯೂ ಸಂತಾಪ ರಹಿತರಾಗಿಯೂ ಇದ್ದರು.

ತತಃ ಕಾಲಾಂತರೇಽಪ್ಯೇವಂ ಪುನರ್ಲೋಭಾವೃತಾಃ ಪ್ರಜಾಃ । ವೃಕ್ಷಾಂಸ್ತಾಃ ಪರ್ಯಗೃಹ್ಣಂತ ಮಧು ವಾ ಮಾಕ್ಷಿಕಂ ಬಲಾತ್ ।। 86 ।। ತಾಸಾಂ ತೇನಾಪಚಾರೇಣ ಪುನರ್ಲೋಭಕೃತೇನ ವೈ । ಪ್ರಣಷ್ಟಾ ಮಧುನಾ ಸಾರ್ಧಂ ಕಲ್ಪವೃಕ್ಷಾಃ ಕ್ವಚಿತ್ಕ್ವಚಿತ್ ।। 87 ।। ತಸ್ಯಾಮೇವಾಲ್ಪಶಿಷ್ಟಾಯಾಂ ಸಿದ್ಧ್ಯಾಂ ಕಾಲವಶಾತ್ತದಾ । ವರ್ತಂತೇ ಚಾನಯಾ ತಾಸಾಂ ದ್ವಂದ್ವಾನ್ಯತ್ಯುತ್ಥಿತಾನಿ ತು ।। 88 ।। ಶೀತವಾತಾತಪಾಸ್ತೀವ್ರಾಸ್ತತಸ್ತಾ ದುಃಖಿತಾ ಭೃಶಮ್ । ದ್ವಂದ್ವೈಸ್ತೈಃ ಪೀಡ್ಯಮಾನಾಸ್ತು ಚುಕ್ರುರುರಾವಣಾನಿ ತು ।। 89 ।। ಕೃತ್ವಾ ದ್ವಂದ್ವಪ್ರತೀಘಾತಂ ನಿಕೇತಾನಿ ವಿಚೇತಸಃ । ಪೂರ್ವಂ ನಿಕಾಮಚಾರಾಸ್ತೇ ಹ್ಯನಿಕೇತಾ ಯಥಾಽಭವನ್ ।। 90 ।। ಯಥಾಯೋಗಂ ಯಥಾಪ್ರೀತಿ ನಿಕೇತೇಷ್ವವಸನ್ಪುರಾ । ಮಧು ಧುನ್ವತ್ಸು ವೃಕ್ಷೇಷು ಪರ್ವತೇಷು ನದೀಷು ಚ ।। 91 ।। ಸಂಶ್ರಯಂತಿ ಚ ದುರ್ಗಾಣಿ ಧನ್ವ ಪಾರ್ವತಮೌದಕಮ್ । ಯಥಾಜೋಷಂ ಯಥಾಕಾಮಂ ಸಮೇಷು ವಿಷಮೇಷು ಚ ।। 92 ।। ಆರಬ್ಧಾಸ್ತಾನ್ನಿಕೇತಾನ್ವೈ ಕರ್ತುಂ ಶೀತೋಷ್ಣವಾರಣಾನ್ । ತತಸ್ತಾನ್ನಿರ್ಮಯಾಮಾಸುಃ ಖೇಟಾನಿ ಚ ಪುರಾಣಿ ಚ ।। 93 ।। ಗ್ರಾಮಾಂಶ್ಚೈವ ಯಥಾಭಾಗಂ ತಥೈವ ನಗರಾಣಿ ಚ । ತೇಷಾಮಾಯಾಮವಿಷ್ಕಂಭಾಃ ಸನ್ನಿವೇಶಾಂತರಾಣಿ ಚ ।। 94 ।।

ನಂತರ ಕಾಲಾಂತರದಲ್ಲಿ ಪುನಃ ಲೋಭಾವೃತರಾದ ಪ್ರಜೆಗಳು ಆ ವೃಕ್ಷಗಳಿಂದ ಬಲಾತ್ಕಾರವಾಗಿ ಜೇನಿನ ಮಧುವನ್ನು ಸೇವಿಸತೊಡಗಿದರು. ಹೀಗೆ ಲೋಭದಿಂದ ಅವರು ಮಾಡಿದ ಈ ಅಪಚಾರದಿಂದ ಪುನಃ ಅಲ್ಲಲ್ಲಿ ಮಧುವೊಂದಿಗೆ ಆ ಕಲ್ಪವೃಕ್ಷಗಳು ನಷ್ಟವಾಗ ತೊಡಗಿದವು. ಕಾಲವಶದಿಂದ ಸಿದ್ಧಿಯು ಕ್ಷೀಣವಾಗಿ ಅಲ್ಪಮಾತ್ರ ಅವಶೇಷವಾಗಿರುವಾಗ ಅದರ ಜೊತೆಗೆ ದ್ವಂದ್ವಗಳೂ ಹುಟ್ಟಿಕೊಂಡವು. ಸಹಿಸಲಾಗದಷ್ಟು ಛಳಿ-ಗಾಳಿ-ಬಿಸಿಲುಗಳು ಉಂಟಾಗಿ ಜನರು ಆ ದ್ವಂದ್ವಗಳಿಂದ ಪೀಡಿತರಾಗಿ ವಾಸಕ್ಕೆ ಆವರಣಗಳನ್ನು ಮಾಡಿಕೊಂಡರು. ಮೊದಲು ಬೇಕಾದಲ್ಲಿ ಹೋಗುತ್ತಿದ್ದ ಮತ್ತು ಮನೆಗಳೇ ಇಲ್ಲದಿದ್ದ ಪ್ರಜೆಗಳು ಶೀತವಾತಾದಿ ದ್ವಂದ್ವಗಳನ್ನು ನಿವಾರಿಸುವ ಆವರಣ ರೂಪದ ಮನೆಗಳನ್ನು ನಿರ್ಮಿಸಿಕೊಂಡರು. ಹಿಂದೆ ಅವರು ಯೋಗವಿದ್ದಂತೆ ಮತ್ತು ಬಯಸಿದಂತೆ ಪರ್ವತ-ನದೀ ಪ್ರದೇಶಗಳಲ್ಲಿ ಮನೆಗಳನ್ನು ಮಾಡಿಕೊಂಡು ವೃಕ್ಷಗಳಲ್ಲಿನ ಮಧುವನ್ನು ಸಂಗ್ರಹಿಸಿ ಸೇವಿಸುತ್ತಿದ್ದರು. ಮರುಭೂಮಿ-ಪರ್ವತ-ಜಲಪ್ರದೇಶಗಳಲ್ಲಿ ದುರ್ಗಗಳನ್ನು ಆಶ್ರಯಿಸಿ ಸಮ-ವಿಷಮ ಪ್ರದೇಶಗಳಲ್ಲಿ ಮನಬಂದಂತೆ ಇಷ್ಟವಾದಂತೆ ಸಂಚರಿಸುತ್ತಿದ್ದರು. ಶೀತೋಷ್ಣಗಳನ್ನು ತಡೆದುಕೊಳ್ಳಲು ಮನೆಗಳನ್ನು ಕಟ್ಟಿಕೊಳ್ಳಲು ಪ್ರಾರಂಭಿಸಿದ ಅವರು ಕ್ರಮೇಣ ಖೇಟ (ಪಟ್ಟಣ) ಗಳನ್ನೂ ಪುರ (ನಗರ) ಗಳನ್ನೂ ನಿರ್ಮಿಸಿಕೊಂಡರು. ಹಾಗೆಯೇ ಗ್ರಾಮ ಮತ್ತು ನಗರಗಳನ್ನು ಯಾವ ವಿಧದ ಬಾಧೆಯೂ ಉಂಟಾಗದಂತೆ ಇರಬೇಕಾದ ನಿಯಮದಂತೆ ನಿರ್ಮಿಸಿ, ಅವುಗಳ ಆಯಾಮ-ವಿಸ್ತಾರಗಳ ಪರಿಮಾಣಗಳನ್ನು ಸನ್ನಿವೇಶವನ್ನೂ ರಚಿಸಿಕೊಂಡರು.

[1]ಚಕ್ರುಸ್ತದಾ ಯಥಾಪ್ರಜ್ಞಂ ಮೀತ್ವಾ ಮೀತ್ವಾಽತ್ಮನೋಂಗುಲೈಃ । ಮಾನಾರ್ಥಾನಿ ಪ್ರಮಾಣಾನಿ ತದಾ ಪ್ರಭೃತಿ ಚಕ್ರಿರೇ ।। 95 ।। ಯವಾಂಗುಲಪ್ರದೇಶಾಂಸ್ತ್ರೀನ್ ಹಸ್ತಕಿಷ್ಕುಧನೂಂಷಿ ಚ । ದಶ ತ್ವಂಗುಲಪರ್ವಾಣಿ ಪ್ರಾದೇಶ ಇತಿ ಸಂಜ್ಞಿತಃ ।। 96 ।। ಅಂಗುಷ್ಠಸ್ಯ ಪ್ರದೇಶಿನ್ಯಾ ವ್ಯಾಸಃ ಪ್ರಾದೇಶ ಉಚ್ಯತೇ । ತಾಲಃ ಸ್ಮೃತೋ ಮಧ್ಯಮಯಾ ಗೋಕರ್ಣಶ್ಚಾಪ್ಯನಾಮಯಾ ।। 97 ।। ಕನಿಷ್ಠಯಾ ವಿತಸ್ತಿಸ್ತು ದ್ವಾದಶಾಂಗುಲ ಉಚ್ಯತೇ । ರತ್ನಿರಂಗುಲಪರ್ವಾಣಿ ಸಂಖ್ಯಯಾ ತ್ವೇಕವಿಂಶತಿಃ ।। 98 ।। ಚತ್ವಾರಿ ವಿಂಶತಿಶ್ಚೈವ ಹಸ್ತಃ ಸ್ಯಾದಂಗುಲಾನಿ ತು । ಕಿಷ್ಕುಃ ಸ್ಮೃತೋ ದ್ವಿರತ್ನಿಸ್ತು ದ್ವಿಚತ್ವಾರಿಂಶದಂಗುಲಃ ।। 99 ।। ಚತುರ್ಹಸ್ತೋ ಧನುರ್ದಂಡೋ ನಾಲಿಕಾ ಯುಗಮೇವ ಚ । ಧನುಃಸಹಸ್ರೇ ದ್ವೇ ತತ್ರ ಗವ್ಯೂತಿಸ್ತೈಃ ಕೃತಾ ತದಾ ।। 100 ।। ಅಷ್ಟೌ ಧನುಃಸಹಸ್ರಾಣಿ ಯೋಜನಂ ತೈರ್ವಿಭಾವಿತಮ್ । ಏತೇನ ಯೋಜನೇನೇಹ ಸನ್ನಿವೇಶಾಸ್ತತಃ ಕೃತಾಃ ।। 101 ।।

ಆಗ ಅವರು ತಮ್ಮ ಜ್ಞಾನಶಕ್ತಿಯನ್ನನುಸರಿಸಿ ತಮ್ಮ ಅಂಗುಲಗಳಿಂದ ಭೂಮಿಯನ್ನು ಅಳೆದರು. ಅಂದಿನಿಂದ ಯವ (ಗೋಧಿಕಾಳಿನ ಉದ್ದ), ಅಂಗುಲ, ಪ್ರದೇಶ, ಹಸ್ತ, ಕಿಷ್ಕು, ಮತ್ತು ಧನು ಮೊದಲಾದ ಅಳತೆಯ ಪ್ರಮಾಣಗಳ ಸಂಪ್ರದಾಯವನ್ನು ಮಾಡಿದರು. ಹತ್ತು ಅಂಗುಲ ಪರಿಮಾಣಕ್ಕೆ ಪ್ರಾದೇಶ ಎಂದು ಹೆಸರು. ಅಂಗುಷ್ಠವನ್ನೂ ಪ್ರದೇಶಿನೀ[2] ಬೆರಳನ್ನೂ ನೆಲದ ಮೇಲೆ ಹರಡಿಟ್ಟರೆ ಅವುಗಳ ಅಂತರವು ಪ್ರಾದೇಶ ಎಂದೆನಿಸುತ್ತದೆ. ಹಾಗೆಯೇ ಅಂಗುಷ್ಠ-ಮಧ್ಯಮ ಬೆರಳುಗಳ ವಿಸ್ತಾರ ಪರಿಮಾಣವು ತಾಲ ಎಂದೂ, ಅಂಗುಷ್ಠ-ಅನಾಮಿಕಾ ಬೆರಳುಗಳ ಪರಿಮಾಣವು ಗೋಕರ್ಣವೆಂದೂ ಕರೆಯಲ್ಪಟ್ಟಿದೆ. ಅಂಗುಷ್ಠ ಮತ್ತು ಕನಿಷ್ಠಿಕಾ ಬೆರಳಗಳ ವಿಸ್ತಾರ ಪರಿಮಾಣವು ವಿತಸ್ತಿಯೆಂದು ಕರೆಯಲ್ಪಟ್ಟಿದೆ. ಅದು ಹನ್ನೆರಡು ಅಂಗುಲ ಪ್ರಮಾಣವುಳ್ಳದ್ದು. ಇಪ್ಪತ್ತೊಂದು ಅಂಗುಲ ಪ್ರಮಾಣವನ್ನು ರತ್ನಿ ಎಂದು ಹೇಳುತ್ತಾರೆ. ಇಪ್ಪತ್ನಾಲ್ಕು ಅಂಗುಲ ಪ್ರಮಾಣವನ್ನು ಹಸ್ತವೆಂದೂ, ಹಿಂದೆ ಹೇಳಿದ ಎರಡು ರತ್ನಿಗಳ ಪ್ರಮಾಣವನ್ನು ಕಿಷ್ಕು ಎಂದೂ ಕರೆಯುತ್ತಾರೆ. ನಾಲ್ಕು ಹಸ್ತಗಳಿಗೆ ಒಂದು ಧನುರ್ದಂಡವೂ, ಎರಡು ಧನುರ್ದಂಡಗಳಿಗೆ ಒಂದು ನಾಲಿಕವೂ ಆಗುತ್ತದೆ. ಎರಡು ಸಾವಿರ ಧನುರ್ದಂಡಗಳಿಗೆ ಒಂದು ಗವ್ಯೂತಿಯಾಗುತ್ತದೆ. ಎಂಟು ಸಾವಿರ ಧನುರ್ದಂಡಗಳು ಒಂದು ಯೋಜನವಾಗುತ್ತದೆ. ಈ ವಿಧದ ಪರಿಮಾಣ ಸಂಬಂಧದಿಂದ ನಾನಾ ವಿಧದ ಸನ್ನಿವೇಶಗಳು ರಚಿಸಲ್ಪಟ್ಟಿವೆ.

[3]ಚತುರ್ಣಾಮಥ ದುರ್ಗಾಣಾಂ ಸ್ವಯಮುತ್ಥಾನಿ ತ್ರೀಣಿ ಚ । ಚತುರ್ಥಂ ಕೃತಿಮಂ ದುರ್ಗಂ ತಸ್ಯ ವಕ್ಷ್ಯಾಮಿ ನಿರ್ಣಯಮ್ ।। 102 ।। ಸೋತ್ಸೇಧರಂಧ್ರಪ್ರಾಕಾರಂ ಸರ್ವತಃ ಖಾತಕಾವೃತಮ್ । ರುಚಕಃ ಪ್ರತಿಕದ್ವಾರಂ ಕುಮಾರೀಪುರಮೇವ ಚ ।। 103 ।। ದ್ವಿಹಸ್ತಃ ಸ್ರೋತಸಾಂ ಶ್ರೇಷ್ಠಂ ಕುಮಾರೀಪುರಮಂಚತಾನ್ । ಹಸ್ತಸ್ರೋತೋ ದಶಶ್ರೇಷ್ಠೋ ನವಹಸ್ತೋಽಷ್ಟ ಏವ ಚ ।। 104 ।। ಖೇಟಾನಾಂ ಚ ಪುರಾಣಾಂ ಚ ಗ್ರಾಮಾಣಾಂ ಚೈವ ಸರ್ವಶಃ । ತ್ರಿವಿಧಾನಾಂ ಚ ದುರ್ಗಾಣಾಂ ಪರ್ವತೋದಕಧನ್ವಿನಾಮ್ ।। 105 ।। ಕೃತ್ರಿಮಾಣಾಂ ಚ ದುರ್ಗಾಣಾಂ ವಿಷ್ಕಂಭಾಯಾಮಮೇವ ಚ । ಯೋಜನಾದರ್ಧವಿಷ್ಕಂಭಮಷ್ಟಭಾಗಾಧಿಕಾಯತಮ್ ।। 106 ।। ಪರಮರ್ಧಾರ್ಧಮಾಯಾಮ ಪ್ರಾಗುದಕ್ಪ್ಲವನಂ ಪುರಮ್ । ಛಿನ್ನಕರ್ಣವಿಕರ್ಣಂ ಚ ವ್ಯಜನಾಕೃತಿಸಂಸ್ಥಿತಮ್ ।। 107 ।। ವೃತ್ತಂ ವಜ್ರಂ ಚ ದೀರ್ಘಂ ಚ ನಗರಂ ನ ಪ್ರಶಸ್ಯತೇ । ಚತುರಸ್ರಯುತಂ ದಿವ್ಯಂ ಪ್ರಶಸ್ತಂ ತೈಃ ಪುರಂ ಕೃತಮ್ ।। 108 ।।

ನಾಲ್ಕು ಪ್ರಕಾರದ ದುರ್ಗಗಳಿವೆ. ಅವುಗಳಲ್ಲಿ ಮೂರು ತಮ್ಮಷ್ಟಕ್ಕೇ ತಾವೇ ಅಂದರೆ ಸ್ವಾಭಾವಿಕವಾಗಿಯೇ ಉಂಟಾಗಿರುವವು. ನಾಲ್ಕನೆಯದು ಕೃತ್ರಿಮವಾದ ದುರ್ಗವು. ಅದರ ಸನ್ನಿವೇಶ ನಿರ್ಣಯವನ್ನು ಹೇಳುತ್ತೇನೆ. ಎತ್ತರದ ಗೋಡೆಗಳು, ರಂಧ್ರಗಳು, ಸುತ್ತುವರಿ ಕೋಟೆ, ಸುತ್ತಲೂ ಕಂದಕ, ಮತ್ತ ಸುಂದರ ಪ್ರತಿದ್ವಾರಗಳು ಕುಮಾರೀಪುರವೆಂಬ ಆದರ್ಶ ಕೃತಕ ದುರ್ಗದ ಲಕ್ಷಣಗಳು. ಅಂತಹ ಕುಮಾರೀಪುರದ ಒಳಗಿನ ಜಲವ್ಯವಸ್ಥೆಯು (ನೀರಿನ ಕಾಲುವೆಗಳು) 2 ಹಸ್ತ ಪ್ರಮಾಣದಲ್ಲಿ ಇದ್ದರೆ ಶ್ರೇಷ್ಠವು. ಅವುಗಳ ಪ್ರಮಾಣಗಳು ಪೇಟೆ (ಖೇಟ) ದಲ್ಲಿ 10 ಹಸ್ತ, ಪುರ (ನಗರ) ಗಳಲ್ಲಿ 9 ಹಸ್ತ, ಮತ್ತು ಗ್ರಾಮಗಳಲ್ಲಿ 8 ಹಸ್ತಗಳ ಪ್ರಮಾಣಗಳಲ್ಲಿದ್ದರೆ ಶ್ರೇಷ್ಠವು. ಮೂರು ವಿಧದ ಸ್ವಾಭಾವಿಕ ದುರ್ಗಗಳು ಪರ್ವತ ದುರ್ಗ, ಉದಕ ದುರ್ಗ (ನೀರಿನಿಂದ ಸುತ್ತುವರಿಯಲ್ಪಟ್ಟಿರುವ ದ್ವೀಪ), ಮತ್ತು ಧನ್ವಿ ದುರ್ಗ (ಮರುಭೂಮಿ). ಕೃತಕ ದುರ್ಗದ ವ್ಯಾಸ (ವಿಷ್ಕಂಭ) ವು ಅರ್ಧ ಯೋಜನವಿರಬೇಕು. ಅದರ ಆಯಾಮ (ಉದ್ದವು) ವ್ಯಾಸಕ್ಕಿಂತ 1/8 ಭಾಗ ಹೆಚ್ಚಾಗಿರಬೇಕು. ಅಂದರೆ ದುರ್ಗವು ಉದ್ದ ಹೆಚ್ಚಾಗಿರುವ ಆಯತಾಕಾರದಲ್ಲಿ ಇರಬೇಕು. ಅಂತಹ ದುರ್ಗದ ಒಳಗಿರುವ ಪುರದ ಉದ್ದ-ಅಗಲಗಳು ಸಮವಾಗಿರಬೇಕು ಅಂದರೆ ಪುರವು ಚೌಕಾಕಾರದಲ್ಲಿ ಇರಬೇಕು. ದುರ್ಗದ ಪೂರ್ವ ಮತ್ತು ಉತ್ತರ ದಿಕ್ಕುಗಳಲ್ಲಿ ವಿಸ್ತಾರವಾಗಿರಬೇಕು. ಕತ್ತರಿಸಿದಂತೆ ಕರ್ಣ-ವಿಕರ್ಣ (ಕೋಣಭಾಗ) ಗಳಿಂದ ಕೂಡಿಯೂ, ಬೀಸಣಿಗೆಯ ಆಕಾರದಲ್ಲಿಯೂ, ವೃತ್ತಾಕಾರದಲ್ಲಿಯೂ, ವಜ್ರದ ಆಕಾರದಲ್ಲಿಯೂ ಮತ್ತು ದೀರ್ಘಾಕಾರದಲ್ಲಿಯೂ ಇರುವ ನಗರವು ಪ್ರಶಸ್ತವಲ್ಲ. ಚೌಕಾಕಾರದಲ್ಲಿ ನಿರ್ಮಿಸಲ್ಪಟ್ಟ ಪುರವು ದಿವ್ಯವೂ ಪ್ರಶಸ್ತವೂ ಆಗಿರುತ್ತದೆ.

[4]ಚತುರ್ವಿಂಶತ್ಪರಂ ಹ್ರಸ್ವಂ ವಾಸ್ತು ವಾಷ್ಟಶತಂ ಪರಮ್ । ಅತ್ರ ಮಧ್ಯಂ ಪ್ರಶಂಸಂತಿ ಹ್ರಸ್ವಂ ಕಾಷ್ಠವಿವರ್ಜಿತಮ್ ।। 109 ।। ಅಥ ಕಿಷ್ಕುಶತಾನ್ಯಷ್ಟೌ ಪ್ರಾಹುರ್ಮುಖ್ಯಂ ನಿವೇಶನಮ್

24 ಕಿಷ್ಕು/ಹಸ್ತಮಾನಕ್ಕಿಂತ ಕಡಿಮೆ ಇದ್ದದ್ದು ಹ್ರಸ್ವ. 100ನ್ನು ಮೀರಿದ ವಾಸ್ತುವು ಅತಿದೀರ್ಘ. ಇಲ್ಲಿ ಮಧ್ಯಮ ಪ್ರಮಾಣವೇ ಶ್ರೇಷ್ಠ. ಅತಿ ಚಿಕ್ಕ ವಾಸ್ತುವು ಮರ/ಸಾಮಗ್ರಿಗೆ ಅಸಮರ್ಪಕ ವಾಗಿರುತ್ತದೆ. 800 ಕಿಷ್ಕು ಪ್ರಮಾಣದ ನಿವೇಶನವನ್ನು ಶಾಸ್ತ್ರಗಳು ಮುಖ್ಯ (ಆದರ್ಶ) ನಿವಾಸ ಎಂದು ಹೇಳುತ್ತವೆ[5].

ನಗರಾದರ್ಧವಿಷ್ಕಂಭಃ ಖೇಟಂ ಪಾನಂ ತದೂರ್ಧ್ವತಃ ।। 110 ।। ನಗರಾದ್ಯೋಜನಂ ಖೇಟಂ ಖೇಟಾದ್ಗ್ರಾಮೋಽರ್ಧಯೋಜನಮ್ । ದ್ವಿಕ್ರೋಶಃ ಪರಮಾ ಸೀಮಾ ಕ್ಷೇತ್ರಸೀಮಾ ಚತುರ್ಧನುಃ ।। 111 ।।

ಖೇಟ ಅಥವಾ ಪಟ್ಟಣವು ನಗರದ ವ್ಯಾಸದ ಅರ್ಧ ಪ್ರಮಾಣದ್ದಾಗಿರಬೇಕು. ಇದು ನಗರ ಮತ್ತು ಗ್ರಾಮಗಳ ಮಧ್ಯಮ ಮಟ್ಟದ ನಿವೇಶನ. ನಗರಕ್ಕೆ ಸಂಬಂಧಿಸಿದ ಪಟ್ಟಣವು ಒಂದು ಯೋಜನವಿದ್ದರೆ ಆ ಪಟ್ಟಣಕ್ಕೆ ಸಂಬಂಧಿಸಿದ ಗ್ರಾಮವು ಅರ್ಧ ಯೋಜನವಿರಬೇಕು. ಗ್ರಾಮದ ಗರಿಷ್ಠ ಸೀಮೆಯು 2 ಕ್ರೋಶವಿದ್ದರೆ ಹೊಲದ ಗಡಿಯು 4 ಧುನುರ್ದಂಡವಾಗಿರಬೇಕು.

ವಿಂಶದ್ಧನೂಂಷಿ ವಿಸ್ತೀರ್ಣೋ ದಿಶಾಂ ಮಾರ್ಗಸ್ತು ತೈಃ ಕೃತಃ । ವಿಂಶದ್ಧನುರ್ಗ್ರಾಮಮಾರ್ಗಃ ಸೀಮಾಮಾರ್ಗೋ ದಶೈವ ತು ।। 112 ।। ಧನೂಂಷಿ ದಶ ವಿಸ್ತೀರ್ಣಃ ಶ್ರೀಮಾನ್ ರಾಜಪಥಃ ಕೃತಃ । ನೃವಾಜಿರಥನಾಗಾನಾಮಸಂಬಾಧಸ್ತು ಸಂಚರಃ ।। 113 ।। ಧನೂಂಷಿ ಚಾಪಿ ಚತ್ವಾರಿ ಶಾಖಾರಥ್ಯಾಶ್ಚ ತೈರ್ಮಿತಾಃ । ತ್ರಿಕಾ ರಥ್ಯೋಪರಥ್ಯಾಃ ಸ್ಯುರ್ದ್ವಿಕಾಶ್ಚಾಪ್ಯುಪರಥ್ಯಕಾಃ ।। 114 ।। ಜಂಘಾಪಥಶ್ಚತುಷ್ಪಾದಸ್ತ್ರಿಪದಂ ಚ ಗೃಹಾಂತರಮ್ । ಧೃತಿಮಾರ್ಗಸ್ತೂರ್ಧ್ವಷಷ್ಠಂ ಕ್ರಮಶಃ ಪದಿಕಃ ಸ್ಮೃತಃ ।। 115 ।। ಅವಸ್ಕಾರಪರೀವಾರಃ ಪಾದಮಾತ್ರಂ ಸಮಂತತಃ । ಕೃತೇಷು ತೇಷು ಸ್ಥಾನೇಷು ಪುನರ್ಗೇಹಗೃಹಾಣಿ ವೈ ।। 116 ।।

ನಗರಗಳನ್ನು ಸೇರುವ ನಾಲ್ಕು ದಿಕ್ಕುಗಳಲ್ಲಿ ಪ್ರಧಾನ ರಸ್ತೆಗಳು 20 ಧನುರ್ದಂಡ ಅಗಲವಾಗಿ ಮಾಡಲ್ಪಟ್ಟಿತು. ಗ್ರಾಮಮಾರ್ಗವು 20 ಧನುರ್ದಂಡ ಅಗಲವಾಗಿಯೂ, ಗಡಿಯ ಮಾರ್ಗವು 10 ಧನುರ್ದಂಡ ಅಗಲವಾಗಿಯೂ ಇತ್ತು. ಮನುಷ್ಯರು, ಕುದುರೆ, ರಥ ಮತ್ತು ಆನೆಗಳು ಯಾವ ಆತಂಕವೂ ಇಲ್ಲದೇ ಸಂಚರಿಸಲು ಸುಂದರವಾದ 10 ಧನುಃ ಅಗಲದ ರಾಜಪಥವನ್ನು ಮಾಡಲಾಯಿತು. ರಾಜಮಾರ್ಗಗಳಿಗೆ ಸಂಬಂಧಿಸಿದ ಶಾಖಾರಸ್ತೆಗಳನ್ನು 4 ಧನುಃ ಪ್ರಮಾಣ ಅಗಲವಾಗಿಯೂ, ಉಪಮಾರ್ಗಗಳನ್ನು ಮೂರು ಮತ್ತು ಅದರ ಉಪಮಾರ್ಗಗಳನ್ನು 2 ಧನುಃ ಪ್ರಮಾಣ ಅಗಲವಾಗಿಯೂ ಮಾಡಿದರು. ಓಣಿಬೀದಿಗಳು 4 ಹೆಜ್ಜೆ ಅಗಲವಾಗಿಯೂ, ಮತ್ತು ಬೀದಿಗಳಿಗೂ ಮನೆಗಳಿಗೂ ಮೂರು ಹೆಜ್ಜೆ ಅಂತರವನ್ನಿಟ್ಟು ನಿರ್ಮಿಸಿದರು. ಬೀದಿಗಳಿಗೆ ಹೊಂದಿಕೊಂಡು ಸ್ವಲ್ಪ ಎತ್ತರದಲ್ಲಿ ಆರು ಹೆಜ್ಜೆ ಅಗಲದ ಧೃತಿಮಾರ್ಗ[6]ವನ್ನೂ ನಿರ್ಮಿಸಿದರು. ಉಳಿದ ಮಾರ್ಗಗಳೆಲ್ಲವೂ ಒಂದು ಹೆಜ್ಜೆಯ ಕಾಲುದಾರಿಗಳಾಗಿದ್ದವು. ಸುತ್ತಲೂ ಕಸಗಳಿಂದ ತುಂಬಿದ ನೀರು ಹರಿಯುವ ಚರಂಡಿಗಳು ಒಂದು ಹೆಜ್ಜೆ ಅಗಲವಾಗಿದ್ದವು. ಹೀಗೆ ಪ್ರಜೆಗಳು ಪುನಃ ವಾಸಯೋಗ್ಯವಾದ ಗೃಹಸ್ಥಾನಗಳನ್ನು ನಿರ್ಮಿಸಿಕೊಂಡರು.

ಯಥಾ ತೇ ಪೂರ್ವಮಾಸಂಶ್ಚ ವೃಕ್ಷಾಸ್ತು ಗೃಹಸಂಸ್ಥಿತಾಃ । ತಥಾ ಕರ್ತುಂ ಸಮಾರಬ್ಧಾಶ್ಚಿಂತಯಿತ್ವಾ ಪುನಃ ಪುನಃ ।। 117 ।। ವೃಕ್ಷಸ್ಯಾರ್ವಾಗ್ಗತಾಃ ಶಾಖಾ ಇತಶ್ಚೈವಾಪರಾ ಗತಾಃ । ಅತ ಊರ್ಧ್ವಂ ಗತಾಶ್ಚಾನ್ಯಾ ಏವಂ ತಿರ್ಯಗ್ಗತಾಃ ಪರಾಃ ।। 118 ।। ಬುದ್ಧ್ಯಾನ್ವಿಷ್ಯ ಯಥಾನ್ಯಾಯಂ ವೃಕ್ಷಶಾಖಾ ಗತಾ ಯಥಾ । ಯಥಾ ಕೃತಾಸ್ತು ತೈಃ ಶಾಖಾಸ್ತಸ್ಮಾಚ್ಛಾಲಾಸ್ತು ತಾಃ ಸ್ಮೃತಾಃ ।। 119 ।। ಏವಂ ಪ್ರಸಿದ್ಧಾಃ ಶಾಖಾಭ್ಯಃ ಶಾಲೋಶ್ಚೈವ ಗೃಹಾಣಿ ಚ । ತಸ್ಮಾತ್ತಾಶ್ಚ ಸ್ಮೃತಾಃ ಶಾಲಾಃ ಶಾಲಾತ್ವಂ ತಾಸು ತತ್ಸ್ಮೃತಮ್ ।। 120 ।। ಪ್ರಸೀದಂತಿ ಯತಸ್ತೇಷು ತತಃ ಪ್ರಾಸಾದಸಂಜ್ಞಿತಃ । ತಸ್ಮಾದ್ಗೃಹಾಣಿ ಶಾಲಾಶ್ಚ ಪ್ರಾಸಾದಾಶ್ಚೈವ ಸಂಜ್ಞಿತಾ ।। 121 ।।

ಹಿಂದೆ ಮನೆಗಳಂತಿದ್ದ ಕೇವಲ ಮರಗಳ ಕೆಳಗೆ ವಾಸಮಾಡುತ್ತಿದ್ದರಿಂದ ಮರಗಳು ಹೇಗೆ ಮನೆಗಳಾಗಿದ್ದವೋ ಹಾಗೆಯೇ ಮತ್ತೆ ಮತ್ತೆ ಯೋಚಿಸಿ, ಮೊದಲು ಮರಗಳಿಂದಲೇ ಮನೆಗಳನ್ನು ಕಟ್ಟಿಕೊಳ್ಳಲು ಪ್ರಾರಂಭಿಸಿದರು. ಹಾಗೆ ಮರದ ಶಾಖೆಗಳಲ್ಲಿ ಕೆಲವನ್ನು ಇಳಿಜಾರಾಗಿಯೂ, ಇನ್ನು ಕೆಲವನ್ನು ಯಥಾ ಸ್ಥಿತವಾಗಿ ಸಮಮಟ್ಟದಲ್ಲಿಯೂ, ಕೆಲವನ್ನು ಮೇಲ್ಮುಖವಾಗಿಯೂ, ಮತ್ತು ಉಳಿದ ಶಾಖೆಗಳನ್ನು ಅಡ್ಡಡ್ಡವಾಗಿಯೂ ಇಟ್ಟು ಮನೆಗಳನ್ನು ನಿರ್ಮಿಸಿದರು. ವಿವೇಕದಿಂದ ಮತ್ತು ಶಾಸ್ತ್ರದ ನಿಯಮಾನುಸಾರವಾಗಿ ಮರದ ಕೊಂಬೆಗಳು ಹೇಗೆ ಮುಖ್ಯ ಕಾಂಡದಿಂದ ವಿಸ್ತರಿಸುತ್ತವೆಯೋ ಅದೇ ರೀತಿಯಲ್ಲಿ ವಿಸ್ತರಿಸಿದ ವಸತಿ ಘಟಕಗಳನ್ನು ನಿರ್ಮಿಸಲಾಯಿತು. ಅಂತಹ ವಿಸ್ತರಿತ ಕಟ್ಟಡ ಸಾಲುಗಳನ್ನೇ ಶಾಲಾ ಎಂದು ಕರೆಯುತ್ತಾರೆ. ಹೀಗೆ ಶಾಖೆಗಳಂತೆ ವಿಸ್ತರಿಸಿದ ವಿನ್ಯಾಸದಿಂದ ಮನೆಗಳೂ, ಮತ್ತು ಅವುಗಳ ಸಾಲುಗಳೂ ಪ್ರಸಿದ್ಧವಾದವು. ಆದ್ದರಿಂದ ಅವೆಲ್ಲವುಗಳನ್ನು ಶಾಲೆಗಳು ಎಂದು ಕರೆಯಲಾಗಿದೆ. ಆ ಕಟ್ಟಡಗಳೇ ಶಾಲಾತ್ವವನ್ನು ಹೊಂದುತ್ತವೆ. ಎಲ್ಲಿ ಪ್ರಸನ್ನತೆ, ಸಮಾಧಾನ, ಸುಖ ಉಂಟಾಗುತ್ತದೆಯೋ ಅದನ್ನು ಪ್ರಾಸಾದ ಎಂದು ಕರೆದರು. ಆದ್ದರಿಂದ ಮನೆಗಳು ಮತ್ತು ಮನೆಗಳ ಸಾಲುಗಳು ಪ್ರಾಸಾದ ಎಂಬ ಹೆಸರನ್ನು ಹೊಂದಿವೆ.

ಕೃತ್ವಾ ದ್ವಂದ್ವಾಭಿಘಾತಾಸ್ತಾಂನ್ವಾರ್ತೋಪಾಯಮಚಿಂತಯನ್ । ನಷ್ಟೇಷು ಮಧುನಾ ಸಾರ್ಧಂ ಕಲ್ಪವೃಕ್ಷೇಷು ವೈ ತದಾ ।। 122 ।। ವಿಷಾದವ್ಯಾಕುಲಾಸ್ತಾ ವೈ ಪ್ರಜಾಃ ಸೃಷ್ಟಾಸ್ತು ದರ್ಶಿತಾಃ । ತತಃ ಪ್ರಾದುರ್ಬಭೌ ತಾಸಾಂ ಸಿದ್ಧಿಸ್ತ್ರೇತಾಯುಗೇ ತದಾ ।। 123 ।। ಸರ್ವಾರ್ಥಸಾಧಕಾ ಹ್ಯನ್ಯಾ ವೃಷ್ಟಿಸ್ತಾಸಾಂ ನಿಕಾಮತಃ । ತಾಸಾಂ ವೃಷ್ಟ್ಯುದಕಾನೀಹ ಯಾನಿ ಮಿಷ್ಟಗತಾನಿ ಚ ।। 124 ।। ಏವಂ ನಯಃ ಪ್ರವೃತ್ತಸ್ತು ದ್ವಿತೀಯೇ ವೃಷ್ಟಿಸರ್ಜನೇ । ಯೇ ಪರಸ್ತಾದಪಾಂ ಸ್ತೋಕಾಃ ಸಂಪಾತಾಃ ಪೃಥಿವೀತಲೇ ।। 125 ।। ಅಪಾಂ ಭೂಮೇಸ್ತು ಸಂಯೋಗಾದೋಷಧ್ಯಸ್ತಾಸ್ತದಾಽಭವನ್ । ಪುಷ್ಪಮೂಲಫಲಿನ್ಯಸ್ತು ಓಷಧ್ಯಸ್ತಾ ಹಿ ಜಜ್ಞಿರೇ ।। 126 ।। ಅಫಾಲಕೃಷ್ಟಾಶ್ಚಾನುಪ್ತಾ ಗ್ರಾಮ್ಯಾರಣ್ಯಾಶ್ಚತುರ್ದಶ । ಋತುಪುಷ್ಪಫಲಾಶ್ಚೈವ ವೃಕ್ಷಾ ಗುಲ್ಮಾಶ್ಚ ಜಜ್ಞಿರೇ ।। 127 ।। ಪ್ರಾದುರ್ಭಾವಾಸ್ತು ತ್ರೇತಾಯಾಮಾದ್ಯಾಯಾಮೌಷಧಸ್ಯ ಚ । ತದೌಷಧೇನ ವರ್ತಂತೇ ಪ್ರಜಾಸ್ತ್ರೇತಾಮುಖೇ ತದಾ ।। 128 ।।

ಹೀಗೆ ಶೀತೋಷ್ಣ ದ್ವಂದ್ವಗಳ ಪೀಡೆಯನ್ನು ನಿವಾರಣೆ ಮಾಡಲು ಮನೆಗಳನ್ನು ಕಟ್ಟಿಕೊಂಡ ನಂತರ, ಮಧುವೊಂದಿಗೆ ಕಲ್ಪವೃಕ್ಷಗಳು ನಾಶವಾಗಲು, ಪ್ರಜೆಗಳು ಜೀವನೋಪಾಯದ ಕುರಿತು ಚಿಂತಿಸಿದರು. ಸೃಷ್ಟಿಸಲ್ಪಟ್ಟ ಆ ಪ್ರಜೆಗಳು ವಿಷಾದ-ವ್ಯಾಕುಲರಾಗಿದ್ದಾಗ ತ್ರೇತಾಯುಗದಲ್ಲಿ ಅವರಿಗೆ ಒಂದು ಸಿದ್ಧಿಯು ಪ್ರಾದುರ್ಭವಿಸಿತು. ಅವರ ಸರ್ವ ಇಷ್ಟಾರ್ಥ ಸಾಧಕವಾಗಿ ಯಥೇಚ್ಛವಾಗಿ ಮಳೆ ಸುರಿಯಿತು. ಮಳೆಯಾಗಿ ಸುರಿದ ನೀರಿನಿಂದ ಅವರಿಗೆ ಮಿಷ್ಟಾನ್ನವು ಒದಗಿತು. ಎರಡನೆಯ ಈ ವೃಷ್ಟಿಸೃಷ್ಟಿಯು ಹೀಗೆ ಪ್ರಾರಂಭವಾಗಲು ಅವರ ಪ್ರವೃತ್ತಿಯು ಬದಲಾಯಿತು. ಮಳೆಯ ಹನಿಗಳು ಭೂಮಿಯ ಮೇಲೆ ಬೀಳಲು ನೀರು ಮತ್ತು ಭೂಮಿಯ ಸಂಯೋಗದಿಂದ ಪುಷ್ಪ-ಮೂಲ-ಫಲಗಳನ್ನೀಯುವ ಓಷಧಿಗಳು ಹುಟ್ಟಿಕೊಂಡವು. ನೇಗಿಲಿನಿಂದ ಹೂಳಿ ಕೃಷಿಮಾಡದೇ ಭೂಮಿಯಲ್ಲಿ ಗ್ರಾಮ್ಯ ಮತ್ತು ಆರಣ್ಯಗಳೆಂಬ 14 ಜಾತಿಯ ಓಷಧಿಗಳು – ಋತುಗಳಿಗೆ ತಕ್ಕಂತೆ ಪುಷ್ಪ-ಫಲಗಳನ್ನೀಯುವ ಮರ-ಗಿಡಗಳು ಹುಟ್ಟಿಕೊಂಡವು. ತ್ರೇತಾಯುಗದ ಆರಂಭದಲ್ಲಿ ಈ ಓಷಧಗಳು ಹುಟ್ಟಿಕೊಳ್ಳಲು ಆ ಓಷಧಗಳಿಂದ ತ್ರೇತಾಯುಗದ ಪ್ರಾರಂಭದ ಪ್ರಜೆಗಳು ಜೀವನ ನಡೆಸಿದರು.

ತತಃ ಪುನರಭೂತ್ತಾಸಾಂ ರಾಗೋ ಲೋಭಸ್ತು ಸರ್ವದಾ । ಅವಶ್ಯಭಾವಿನಾಽರ್ಥೇನ ತ್ರೇತಾಯುಗವಶೇನ ಚ ।। 129 ।। ತತಸ್ತೇ ಪರ್ಯಗೃಹ್ಣಂಸ್ತು ನದೀಕ್ಷೇತ್ರಾಣಿ ಪರ್ವತಾನ್ । ವೃಕ್ಷಗುಲ್ಮೌಷಧೀಶ್ಚೈವ ಪ್ರಸಹ್ಯ ತು ಯಥಾಬಲಮ್ ।। 130 ।। ಸಿದ್ಧಾತ್ಮಾನಸ್ತು ಯೇ ಪೂರ್ವಂ ವ್ಯಾಖ್ಯಾತಾ ವಃ ಕೃತೇ ಮಯಾ । ಬ್ರಹ್ಮಣೋ ಮಾನಸಾಸ್ತೇ ವೈ ಉತ್ಪನ್ನಾ ಯೇ ಜನಾ ಇಹ ।। 131 ।। ಶಾಂತಾ ಯೇ ಶುಷ್ಮಿಣಶ್ಚೈವ ಕರ್ಮಿಣೋ ದುಃಖಿತಾಸ್ತಥಾ । ತತ ಆವರ್ತಮಾನಾಸ್ತೇ ತ್ರೇತಾಯಾಂ ಜಜ್ಞಿರೇ ಪುನಃ ।। 132 ।। ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾ ದ್ರೋಹಜನಾಸ್ತಥಾ । ಭಾವಿತಾಃ ಪೂರ್ವಜಾತೀಷು ಖ್ಯಾತ್ಯಾ ತೇ ಶುಭಪಾಪಯೋಃ ।। 133 ।।

ನಂತರ ತ್ರೇತಾಯುಗದ ಕಾಲವಶದಿಂದ ಅವಶ್ಯವಾಗಿ ಸರ್ವದಾ ಉಂಟಾಗುವ ರಾಗ-ಲೋಭಗಳು ಪುನಃ ಉಂಟಾದವು. ಆಗ ಅವರು ತಮ್ಮ ಶಕ್ತಿಗನುಸಾರವಾಗಿ ನದಿ-ಕ್ಷೇತ್ರ-ಪರ್ವತಗಳನ್ನೂ ಮರ-ಗಿಡ-ಓಷಧಿಗಳನ್ನೂ ಬಲಾತ್ಕಾರವಾಗಿ ಆಕ್ರಮಿಸಿಕೊಂಡರು. ಆ ಸಮಯದಲ್ಲಿ ಹಿಂದೆ ನಾನು ಹೇಳಿದ ಕೃತಯುಗದ ಬ್ರಹ್ಮನ ಮಾನಸಪುತ್ರರಾದ ಸಿದ್ಧಾತ್ಮರು ಶಾಂತರಾಗಿ, ಉಪಾಸಕರಾಗಿ, ಕರ್ಮಿಗಳಾಗಿ, ದುಃಖಿಗಳಾಗಿ ಪುನಃ ತ್ರೇತಾಯುಗದಲ್ಲಿ ಹುಟ್ಟಿಕೊಂಡರು. ಹಿಂದಿನ ಜನ್ಮಗಳಲ್ಲಿನ ಅವರ ಪುಣ್ಯ ಮತ್ತು ಪಾಪಗಳ ಆಧಿಕ್ಯದಿಂದ ಅವರು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಮತ್ತು ದ್ರೋಹಜನರಾಗಿ ಹುಟ್ಟಿದರು.

ತತಸ್ತೇ ಪ್ರಬಲಾ ಯೇ ತು ಸತ್ಯಶೀಲಾ ಅಹಿಂಸಕಾಃ । ವೀತಲೋಭಾ ಜಿತಾತ್ಮಾನೋ ನಿವಸಂತಿ ಸ್ಮ ತೇಷು ವೈ ।। 134 ।। ಪರಿಗ್ರಹಂ ನ ಕುರ್ವೀತ ವದಂತಸ್ತು ಉಪಸ್ಥಿತಾಃ । ತೇಷಾಂ ಕರ್ಮಾಣಿ ಕುರ್ವಂತಿ ತೇಭ್ಯಶ್ಚೈವಾಬಲಾಶ್ಚ ಯೇ ।। 135 ।। ಪರಿಚರ್ಯಾಸು ವರ್ತಂತೇ ತೇಭ್ಯಶ್ಚಾನ್ಯೇಽಲ್ಪತೇಜಸಃ । ಏವಂ ವಿಪ್ರತಿಪನ್ನೇಷು ಪ್ರಪನ್ನೇಷು ಪರಸ್ಪರಮ್ ।। 136 ।। ತೇನ ದೋಷೇಣ ತೇಷಾಂ ತಾ ಓಷಧ್ಯೋ ಮಿಷತಾಂ ತದಾ । ಪ್ರಣಷ್ಟಾ ಗೃಹ್ಯಮಾಣಾಸ್ತಾ ಮುಷ್ಟಿಭ್ಯಾಂ ಸಿಕತಾ ಯಥಾ ।। 137 ।। ಅಥಾಸ್ಯ ತು ಯುಗಬಲಾದ್ಗ್ರಾಮ್ಯಾರಣ್ಯಾಶ್ಚತುರ್ದ್ದಶ । ಫಲೈರ್ಗೃಹ್ಣಂತಿ ಪುಷ್ಪೈಶ್ಚ ತಥಾ ಮೂಲೈಶ್ಚ ತಾಃ ಪುನಃ ।। 138 ।। ತತಸ್ತಾಸು ಪ್ರಣಷ್ಟಾಸು ವಿಭ್ರಾಂತಾಸ್ತಾಃ ಪ್ರಜಾಸ್ತದಾ । ಕ್ಷುಧಾವಿಷ್ಟಾಸ್ತದಾ ಸರ್ವಾ ಜಗ್ಮುಸ್ತಾ ವೈ ಸ್ವಯಂಭುವಮ್ ।। 139 ।।

ಹೀಗೆ ಹುಟ್ಟಿದ ಪ್ರಜೆಗಳಲ್ಲಿ ಒಂದು ಗುಂಪಿನವರು ಸತ್ಯಶೀಲರೂ, ಅಹಿಂಸಕರೂ, ಲೋಭವಿಲ್ಲದವರೂ, ಜಿತಾತ್ಮರೂ ಆಗಿ ಪ್ರಬಲ ಅಥವಾ ಉತ್ತಮರೆನಿಸಿ ವಾಸಿಸಿದರು. ಇವರು ಯಾವುದನ್ನೂ ತಮ್ಮದೆಂದು ಸ್ವೀಕರಿಸದೇ ಇದ್ದರು. ಅವರಿಗಿಂತಲೂ ದುರ್ಬಲರಾದವರು ಅವರ ಕರ್ಮಗಳನ್ನು ಮಾಡತೊಡಗಿದರು. ಅವರಿಗಿಂದ ಅಲ್ಪ ತೇಜಸ್ವಿಗಳು ಅವರ ಪರಿಚರ್ಯೆಯನ್ನು ಮಾಡತೊಡಗಿದರು. ಹೀಗೆ ಬೇರೆ ಬೇರೆ ಆಚಾರವುಳ್ಳ ಅವರು ಯಾವುದೇ ಬಾಧೆಗಳಿಲ್ಲದೇ ಪರಸ್ಪರ ಹೊಂದಿಕೊಂಡೇ ಇದ್ದರು. ಆದರೆ ರಾಗ-ದ್ವೇಷಗಳ ದೋಷದಿಂದ ಆ ಓಷಧಿಗಳು ಮರಳನ್ನು ಮುಷ್ಟಿಯಿಂದ ಹಿಡಿಯುವಾಗ ಅದು ಕೆಳಗೆ ಜಾರಿ ಬೀಳುವಂತೆ ಎಲ್ಲವೂ ನಾಶಹೊಂದಿದವು. ನಂತರ ಪುನಃ ಯುಗಬಲದಿಂದಾಗಿ 14 ಗ್ರಾಮ್ಯಾರಣ್ಯ ಓಷದಿಗಳು ಫಲ-ಪುಷ್ಪ-ಮೂಲಗಳನ್ನು  ಕೊಡತೊಡಗಿದವು. ಹಾಗೆ ಸಿಗುತ್ತಿದ್ದ ಓಷಧಿಗಳು ನಾಶವಾಗಲು ಹಸಿವೆಯಿಂದ ಬಳಲಿ ವಿಭ್ರಾಂತರಾದ ಪ್ರಜೆಗಳು ಎಲ್ಲರೂ ಸ್ವಯಂಭು ಬ್ರಹ್ಮನ ಬಳಿ ಹೋದರು.

ವೃತ್ತ್ಯರ್ಥಮಭಿಲಿಪ್ಸಂತ್ಯೋ ಹ್ಯಾದೌ ತ್ರೇತಾಯುಗಸ್ಯ ತಾಃ । ಬ್ರಹ್ಮಾ ಸ್ವಯಂಭೂರ್ಭಗವಾನ್ ಜ್ಞಾತ್ವಾ ತಾಸಾಂ ಮನೀಷಿತಮ್ ।। 140 ।। ಪ್ರತ್ಯಕ್ಪ್ರತ್ಯಕ್ಷದೃಷ್ಟೇ ನ ದರ್ಶನೇನ ವಿಚಾರ್ಯ ಸಃ । ಗ್ರಸ್ತಾಃ ಪೃಥಿವ್ಯಾಸ್ತ್ವೋಷಧ್ಯೋ ಜ್ಞಾತ್ವಾ ಪ್ರತ್ಯರುಹತ್ಪುನಃ ।। 141 ।। ಕೃತ್ವಾ ವತ್ಸಂ ಸುಮೇರುಂ ತು ದುದೋಹ ಪೃಥಿವೀಮಿಮಾಮ್ । ದುಗ್ಧೇಯಂ ಗೌಸ್ತದಾ ತೇನ ಬೀಜಾನಿ ವಸುಧಾತಲೇ ।। 142 ।। ಜಜ್ಞಿರೇ ತಾನಿ ಬೀಜಾನಿ ಗ್ರಾಮ್ಯಾರಣ್ಯಾಸ್ತು ತಾಃ ಪ್ರಭುಃ । ಓಷಧ್ಯಃ ಫಲಪಾಕಾಂತಾಃ ಗಣಃ ಸಪ್ತದಶಸ್ತು ತಾಃ ।। 143 ।। ವ್ರೀಹಯಶ್ಚ ಯವಾಶ್ಚೈವ ಗೋಧೂಮಾಶ್ಚಣಕಾಸ್ತಿಲಾಃ । ಪ್ರಿಯಂಗವ ಉದಾರಾಸ್ತೇ ಕೋರದೂಷಾಃ ಸವಾಮಕಾಃ ।। 144 ।। ಮಾಷಾ ಮುದ್ಗಾ ಮಸೂರಾಸ್ತು ನೀವಾರಾಃ ಸಕುಲತ್ಥಕಾಃ । ಹರಿಕಾಶ್ಚರಕಾಶ್ಚೈವ ಗಣಃ ಸಪ್ತದಶ ಸ್ಮೃತಾಃ ।। 145 ।। ಇತ್ಯೇತಾ ಓಷಧೀನಾಂ ತು ಗ್ರಾಮ್ಯಾಣಾಂ ಜಾತಯಃ ಸ್ಮೃತಾಃ । ಶ್ಯಾಮಾಕಾಶ್ಚೈವ ನೀವಾರಾ ಜರ್ತಿಲಾಃ ಸಗವೇಧುಕಾಃ ।। 146 ।। ಕುರುವಿಂದೋ ವೇಣುಯವಾಸ್ತಾಮಾತೀರ್ಕಾಟಕಾಃ ಸ್ಮೃತಾಃ । ಗ್ರಾಮ್ಯಾರಣ್ಯಾಃ ಸ್ಮೃತಾ ಹ್ಯೇತಾ ಓಷಧ್ಯಸ್ತು ಚತುರ್ದಶ ।। 147 ।। ಉತ್ಪನ್ನಾಃ ಪ್ರಥಮಸ್ಯೈತಾ ಆದೌ ತ್ರೇತಾಯುಗಸ್ಯ ಹ । ಅಫಾಲಕೃಷ್ಟಾಸ್ತಾಃ ಸರ್ವಾ ಗ್ರಾಮ್ಯಾರಣ್ಯಶ್ಚತುರ್ದಶ ।। 148 ।। ವೃಕ್ಷಗುಲ್ಮಲತಾವಲ್ಲ್ಯೋ ವೀರುಧಸ್ತೃಣಜಾತಯಃ । ಮೂಲೈಃ ಫಲೈಶ್ಚ ರೋಹೈಶ್ಚಗೃಹ್ಣನ್ಪುಷ್ಟಾಶ್ಚ ಯತ್ಫಲಮ್ ।। 149 ।। ಪೃಥ್ವೀ ದುಗ್ಧಾ ತು ಬೀಜಾನಿ ಯಾನಿ ಪೂರ್ವಂ ಸ್ವಯಂಭುವಾ । ಋತುಪುಷ್ಪಫಲಾಸ್ತಾ ವೈ ಓಷಧ್ಯೋ ಜಜ್ಞಿರೇ ತ್ವಿಹ ।। 150 ।।

ತ್ರೇತಾಯುಗದ ಆದಿಯಲ್ಲಿ ಜೀವನೋಪಾಯವನ್ನು ಬಯಸಿ ಬ್ರಹ್ಮನ ಸಮೀಪ ಹೋಗಲು ಭಗವಾನ್ ಸ್ವಯಂಭುವು ಅವರ ಇಂಗಿತವನ್ನು ತಿಳಿದುಕೊಂಡನು. ಅವರಿಗೆ ಒದಗಿದ್ದ ಜೀವನೋಪಾಯದ ಲೋಪಕ್ಕೆ ಆಗ ಅವರಲ್ಲಿ ಪ್ರತ್ಯಕ್ಷವಾಗಿ ಕಾಣುತ್ತಿದ್ದ ರಾಗ-ಲೋಭಗಳ ಅತಿರೇಕವೇ ಕಾರಣವೆಂದು ವಿಚಾರಮಾಡಿ ತಿಳಿದು ಅವನು ಪೃಥ್ವಿಯಲ್ಲಿ ನಾಶವಾಗಿ ಹೋದ ಓಷಧಿಗಳು ಮತ್ತೆ ಬೆಳೆಯುವಂತೆ ಮಾಡಿದನು. ಪೃಥ್ವಿಯನ್ನು ಗೋವನ್ನಾಗಿಯೂ ಸುಮೇರುಪರ್ವತವನ್ನು ಕರುವನ್ನಾಗಿಯೂ ಮಾಡಿಕೊಂಡು ಭೂಮಿಯನ್ನು ಕರೆಯಲು ಭೂಮಿಯಲ್ಲಿ ನಾನಾವಿಧದ ಬೀಜಗಳು ಕಾಣಿಸಿಕೊಂಡವು. ಪ್ರಭು ಬ್ರಹ್ಮನು ಹುಟ್ಟಿಸಿದ ಆ ಗ್ರಾಮ್ಯಾರಣ್ಯ ಓಷಧಿಗಳ ಬೀಜಗಳು ಬೆಳೆದು ಫಲವನ್ನೀಯ ತೊಡಗಿದವು. ವ್ರೀಹಿ, ಯವ, ಗೋಧೂಮ, ಚಣಕ, ತಿಲ, ಪ್ರಿಯಂಗು, ಉದಾರ, ಕೋರದೂಷ, ವಾಮಕ, ಮಾಷ, ಮುದ್ಗ, ಮಸೂರ, ನೀವಾರ, ಕುಳುತ್ಥ, ಹೀರಕ, ಚರಕ, ಮತ್ತು ಖಲ್ವ – ಈ ಹದಿನೇಳು ಗ್ರಾಮ್ಯ ಬೀಜಗಳ ಹೆಸರುಗಳು. ಶ್ಯಾಮಕ, ನೀವಾರ, ಜರ್ತಿಲ, ಗವೇಧುಕ, ಕುರುವಿಂದ, ವೇಣುಯಮ, ತಾಮಾತೀರ್ಕಾಟಕಾ ಮೊದಲಾದವುಗಳೂ ಸೇರಿ 14 ಗ್ರಾಮ್ಯಾರಣ್ಯ ಓಷಧಿಗಳೆಂದು ಹೇಳಿದ್ದಾರೆ. ಈ ಎಲ್ಲ 14 ಜಾತಿಯ ಗ್ರಾಮ್ಯಾರಣ್ಯ ಓಷಧಿಗಳು ಪ್ರಥಮ ತ್ರೇತಾಯುಗದ ಆದಿಯಲ್ಲಿ ಕೃಷಿಮಾಡದೇ ಹುಟ್ಟಿದವು. ಮರಗಳು, ಗಿಡಗಳು, ಬಳ್ಳಿಗಳು, ಹುಲ್ಲು ಮೊದಲಾದ ಜಾತಿಗಳು ತಮ್ಮ ಸ್ವಭಾವಾನುಗುಣವಾಗಿ ಫಲ-ಮೂಲ-ಅಂಕುರ ಮೊದಲಾದವುಗಳಿಂದ ಪುಷ್ಟಿಯಾಗಿ ಫಲಿಸಿದವು. ಹಿಂದೆ ಸ್ವಯಂಭು ಬ್ರಹ್ಮನಿಂದ ಗೋರೂಪಧಾರಿಣಿ ಪೃಥ್ವಿಯನ್ನು ಕರೆದಾಗ ಉತ್ಪನ್ನವಾದ ಬೀಜಗಳು ಋತುಧರ್ಮಕ್ಕೆ ಅನುಸಾರವಾಗಿ ಕ್ರಮವಾಗಿ ಪುಷ್ಪ-ಫಲಗಳನ್ನು ಕೊಡುವ ಓಷಧಿಗಳಾಗಿ ಜನಿಸಿದವು.

ಯದಾ ಪ್ರಸೃಷ್ಟಾ ಓಷಧ್ಯೋ ನ ಪ್ರಥಂತೀಹ ಯಾಃ ಪುನಃ । ತತಸ್ತಾಸಾಂ ಚ ವೃತ್ತ್ಯರ್ಥೇ ವಾರ್ತೋಪಾಯಂ ಚಕಾರ ಹ ।। 151 ।। ತಾಸಾಂ ಸ್ವಯಂಭೂರ್ಭಗವಾನ್ ಹಸ್ತಸಿದ್ಧಿಂ ಸ್ವಕರ್ಮಜಾಮ್ । ತತಃ ಪ್ರಭೃತಿ ಚೌಷಧ್ಯಃ ಕೃಷ್ಟಪಚ್ಯಾಸ್ತು ಜಜ್ಞಿರೇ ।। 152 ।। ಸಂಸಿದ್ಧಕಾರ್ಯೋ ವಾರ್ತಾಯಾಂ ತತಸ್ತಾಸಾಂ ಪ್ರಜಾಪತಿಃ । ಮರ್ಯಾದಾಂ ಸ್ಥಾಪಯಾಮಾಸ ಯಯಾಽರಕ್ಷತ್ಪರಸ್ಪರಮ್ ।। 153 ।। 

ಬ್ರಹ್ಮನು ಸೃಷ್ಟಿಸಿದ ಓಷಧಿಗಳು ಮತ್ತೆ ಪೂರ್ಣವಾಗಿ ಬೆಳೆಯದೇ ಇದ್ದುದನ್ನು ಕಂಡು ನಿರಾಹಾರರಾದ ಪ್ರಜೆಗಳಿಗೆ ಆಹಾರಕ್ಕೋಸ್ಕರ ವೃತ್ತಿಯ ಉಪಾಯವನ್ನು ನಿರ್ಮಿಸಿದನು. ಆ ಓಷಧಿಗಳನ್ನು ಪ್ರಜೆಗಳು ಸ್ವಪ್ರಯತ್ನದಿಂದ ಬೆಳೆಸುವಂತೆ ಕರ್ಮಮಾಡುವ ಒಂದು ಹಸ್ತ ಸಿದ್ಧಿಯನ್ನು ಅವರಿಗೆ ಅನುಗ್ರಹಿಸಿದನು. ಅಂದಿನಿಂದ ಎಲ್ಲ ಓಷಧಿಗಳು ಕೃಷಿಯಿಂದ ಬೆಳೆದು ಫಲಕೊಡುವಂತಾದವು. ಹೀಗೆ ವೃತ್ತಿ ಉಪಾಯಗಳನ್ನು ನಿರ್ಮಿಸಿ ಬ್ರಹ್ಮನು ಸೃಷ್ಟಿಸಿದ ಪ್ರಜೆಗಳು ಪರಸ್ಪರ ಅವಲಂಬನದಿಂದ ಸುರಕ್ಷಿತರಾಗಿರುವಂತೆ ಒಂದು ವ್ಯವಸ್ಥೆಯನ್ನು ನಿರ್ಮಿಸಿದನು.

ಯೇ ವೈ ಪರಿಗ್ರಹೀತಾರಸ್ತಾಸಾಮಾಸನ್ಬಲೀಯಸಃ । ಇತರೇಷಾಂ ಕೃತತ್ರಾಣಾನ್ ಸ್ಥಾಪಯಾಮಾಸ ಕ್ಷತ್ರಿಯಾನ್ ।। 154 ।। ಉಪತಿಷ್ಠಂತಿ ತಾವಂತೋ ಯಾವಂತೋ ನಿರ್ಮಿತಾಸ್ತಥಾ । ಸತ್ಯಂ ಬ್ರೂತ ಯಥಾಭೂತಂ ಧ್ರುವಂ ವೋ ಬ್ರಹ್ಮಣಾಸ್ತು ತಾಃ ।। 155 ।। ಯೇ ಚಾನ್ಯೇಽಹ್ಯಬಲಾಸ್ತೇಷಾಂ ಸಂರಕ್ಷಾಕರ್ಮಣಿ ಸ್ಥಿತಾಃ । ಕ್ರೀತಾದಿನಾಽಶಯಂತಿ ಸ್ಮ ಪೃಥಿವ್ಯಾಂ ತೇ ವ್ಯವಸ್ಥಿತಾಃ ।। 156 ।। ವೈಶ್ಯಾನಿತ್ಯೇವ ತಾನಾಹುಃ ಕೀನಾಶಾನ್ವೃತ್ತಿಸಾಧಕಾನ್ । ಸೇವಂತಶ್ಚ ದ್ರವಂತಶ್ಚ ಪರಿಚರ್ಯಾಸು ಯೇ ರತಾಃ ।। 157 ।। ನಿಸ್ತೇಜಸೋಽಲ್ಪವೀರ್ಯಾಶ್ಚ ಶೂದ್ರಾಂಸ್ತಾನಬ್ರವೀಚ್ಚ ಸಃ । ತೇಷಾಂ ಕರ್ಮಾಣಿ ಧರ್ಮಾಂಶ್ಚ ಬ್ರಹ್ಮಾ ತು ವ್ಯದಧಾತ್ಪ್ರಭುಃ ।। 158 ।। ಸಂಸ್ಥಿತ್ಯಾಂ ತು ಕೃತಾಯಾಂ ಹಿ ಚಾತುರ್ವರ್ಣ್ಯಸ್ಯ ತೇನ ವೈ

ಯಾರು ಸ್ವಭುಜ ಬಲದಿಂದ ಎಲ್ಲ ಕ್ಷೇತ್ರ ಓಷಧಿಗಳನ್ನು ಸ್ವಾಧೀನಪಡಿಸಿಕೊಂಡು ಉಳಿದ ಪಂಗಡದ ಸಮಸ್ತ ಪ್ರಜೆಗಳನ್ನು ರಕ್ಷಿಸಬಲ್ಲರೋ ಆ ಶಕ್ತಿಸಂಪನ್ನ ಕ್ಷತ್ರಿಯರನ್ನು ಕಲ್ಪಿಸಿದನು. ಪ್ರಜೆಗಳಲ್ಲಿ ತತ್ತ್ವಾರ್ಥವನ್ನು ಅರಿತು ಅದರಂತೆ ಸತ್ಯಮಾರ್ಗವನ್ನು ಬಿಡದೇ ನಿಯಮದಿಂದ ಸತ್ಯವಚನವನ್ನು ಪಾಲಿಸುತ್ತಾ ಇರುವ ಪ್ರಜೆಗಳು ಬ್ರಾಹ್ಮಣರೆಂದು ಕರೆಯಲ್ಪಡುವರು. ಇವರ ಸತ್ಯಮಾರ್ಗವು ಯಾವಾಗಲೂ ಚ್ಯುತವಾಗದೇ ಶಾಶ್ವತವಾಗಿರಬೇಕು. ಈ ಬ್ರಾಹ್ಮಣ ಮತ್ತು ಕ್ಷತ್ರಿಯರಿಗಿಂತ ಅಲ್ಪ ಶಕ್ತಿಯುಳ್ಳವರಾಗಿ ಇವರ ರಕ್ಷಣಾರ್ಥವಾದ ವಾಣಿಜ್ಯಾದಿ ವೃತ್ತಿಯನ್ನು ಅವಲಂಬಿಸಿ ಧಾನ್ಯಾದಿ ಆಹಾರವನ್ನು ಒದಗಿಸುವವರು ಮತ್ತೊಂಡು ಪಂಗಡದವರು ಏರ್ಪಡಿಸಲ್ಪಟ್ಟರು. ಅವರನ್ನು ವೈಶ್ಯರೆಂದು ಕರೆಯುತ್ತಾರೆ. ಈ ಮೂರು ವರ್ಣಗಳ ಶುಶ್ರೂಷೆಯನ್ನು ಮಾಡುವ, ಅವರವರ ವೃತ್ತಿಯನ್ನು ಸಾಗುವಂತೆ ಮಾಡುವ ಮತ್ತು ಅತಿಯಾಗಿ ಮಂದವಾದ ಬುದ್ಧಿಶಕ್ತಿಯಿಂದ ಕೂಡಿದ ಮತ್ತೊಂದು ಪಂಗಡವು ಮೇಲ್ಕಂಡ ಪ್ರಜಾವರ್ಗಕ್ಕೆ ಸೇರಿದೆ. ತೇಜಸ್ಸು-ವೀರ್ಯಗುಣಹೀನರಾಗಿರುವ ಅವರು ಶೂದ್ರರೆಂದು ಕರೆಯಲ್ಪಡುವರು. ಬ್ರಹ್ಮನು ಅವರವರ ವರ್ಣಧರ್ಮಗಳನ್ನೂ ಕರ್ಮವಿಶೇಷಗಳನ್ನೂ ವ್ಯವಸ್ಥೆಮಾಡಿಕೊಟ್ಟನು.

ಪುನಃ ಪ್ರಜಾಸ್ತು ತಾ ಮೋಹಾದ್ಧರ್ಮ್ಮಂ ತಂ ನಾನ್ವಪಾಲಯನ್ ।। 159 ।। ವರ್ಣಧರ್ಮೈಶ್ಚ ಜೀವಂತ್ಯೋ ವ್ಯರುದ್ಧ್ಯಂತ ಪರಸ್ಪರಮ್ । ಬ್ರಹ್ಮಾ ಬುದ್ಧಾ ತು ತತ್ಸರ್ವಂ ಯಾಥಾತಥ್ಯೇನ ಸ ಪ್ರಭುಃ ।। 160 ।। ಕ್ಷತ್ರಿಯಾಣಾಂ ಬಲಂ ದಂಡಂ ಯುದ್ಧಮಾಜೀವ್ಯಮಾದಿಶತ್ । ಯಾಜನಾಧ್ಯಾಪನೇ ಬ್ರಹ್ಮಾ ತಥಾ ದಾನಪ್ರತಿಗ್ರಹಮ್ ।। 161 ।। ಬ್ರಾಹ್ಮಣಾನಾಂ ವಿಭುಸ್ತೇಷಾಂ ಕರ್ಮಾಣ್ಯೇತಾನ್ಯಥಾಽದಿಶತ್ । ಪಾಶುಪಾಲ್ಯಂ ಚ ವಾಣಿಜ್ಯಂ ಕೃಷಿಂ ಚೈವ ವಿಶಾಂ ದದೌ ।। 162 ।। ಶಿಲ್ಪಾಜೀವಭೃತಾಂ ಚೈವ ಶೂದ್ರಾಣಾಂ ವ್ಯದಧಾತ್ಪುನಃ । ಸಾಮಾನ್ಯಾನಿ ಚ ಕರ್ಮಾಣಿ ಬ್ರಹ್ಮಕ್ಷತ್ರವಿಶಾಂ ಪುನಃ ।। 163 ।। ಯಜನಾಧ್ಯಾಪನೇ ದಾನಂ ಸಾಮಾನ್ಯಾನೀತರೇಷು ಚ । ಕರ್ಮಾಜೀವಂ ತು ವೈ ದತ್ತ್ವಾ ತೇಷಾಮಿಹ ಪರಸ್ಪರಮ್ ।। 164 ।।

ಬ್ರಹ್ಮನು ಚಾತುರ್ವಣ್ಯ ಧರ್ಮದ ವ್ಯವಸ್ಥೆಯನ್ನು ರಚಿಸಿಕೊಟ್ಟರೂ ಪ್ರಜೆಗಳು ಪುನಃ ಮೋಹಪರವಶರಾಗಿ ಆ ಧರ್ಮವನ್ನು ಪಾಲಿಸಲಿಲ್ಲ. ವರ್ಣಧರ್ಮದಿಂದ ನಡೆದು ಜೀವನವನ್ನು ನಡೆಸುತ್ತಿದ್ದಾಗ ಪರಸ್ಪರ ವಿರೋಧಿಸುತ್ತಿರುವುದನ್ನು ಎಲ್ಲವನ್ನೂ ಪ್ರಭು ಬ್ರಹ್ಮನು ಯಥಾತಥ್ಯವಾಗಿ ತಿಳಿದುಕೊಂಡನು. ಅದನ್ನು ಸರಿಪಡಿಸಲು ಕ್ಷತ್ರಿಯರಿಗೆ ವಿಕ್ರಮದಿಂದ ಸಾಧಿಸುವ ದಂಡ ಮತ್ತು ಯುದ್ಧ ಎಂಬ ಧರ್ಮವನ್ನು ಆದೇಶಿಸಿದನು. ಇದರಿಂದ ಪ್ರಜೆಗಳ ವಿರೋಧಶಮನೋಪಾಯವನ್ನು ಕಲ್ಪಿಸಿದನು. ಹಾಗೆಯೇ ಯಾಜನ, ಅಧ್ಯಾಪನ, ದಾನ, ಪ್ರತಿಗ್ರಹಗಳನ್ನು ಬ್ರಾಹ್ಮಣ ಧರ್ಮವನ್ನಾಗಿ ಏರ್ಪಡಿಸಿದನು. ವಿಭು ಬ್ರಹ್ಮನು ವೈಶ್ಯರಿಗೆ ಪಶುಪಾಲನ, ವಾಣಿಜ್ಯ, ಕೃಷಿ ಮೊದಲಾದ ಧರ್ಮಗಳನ್ನು ನಿಯಮಿಸಿದನು. ನಾಲ್ಕನೆಯ ಶೂದ್ರ ವರ್ಣದವರಿಗೆ ನಾನಾ ವಿಧದ ಶಿಲ್ಪವೃತ್ತಿಯನ್ನು ವಿಧಿಸಿದನು. ಹೀಗೆ ಆಯಾಯಾ ವರ್ಣಗಳಿಗೆ ವಿಶೇಷ ಧರ್ಮಗಳು ವಿಹಿತವಾಗಿರುವುದಲ್ಲದೇ ಬ್ರಹ್ಮ-ಕ್ಷತ್ರ-ವೈಶ್ಯರಿಗೆ ಸಾಮಾನ್ಯ ಧರ್ಮಗಳೂ ವಿಹಿತವಾಗಿವೆ. ಯಜನ, ಅಧ್ಯಯನ, ದಾನ ಈ ಮೂರು ಧರ್ಮಗಳು ತ್ರೈವರ್ಣಿಕರಿಗೆ ಸಾಮಾನ್ಯ ಧರ್ಮಗಳು. ಹೀಗೆ ಅನ್ಯೋನ್ಯವಾಗಿ ಪ್ರಜೆಗಳಿಗೆ ಕರ್ಮ-ಜೀವನೋಪಾಯಗಳನ್ನು ರಚಿಸಿದನು.

ತೇಷಾಂ ಲೋಕಾಂತರೇ ಮೂರ್ಧ್ನಿ ಸ್ಥಾನಾನಿ ವಿದಧೇ ಪುನಃ । ಪ್ರಾಜಾಪತ್ಯಂ ದ್ವಿಜಾತೀನಾಂ ಸ್ಮೃತಂ ಸ್ಥಾನಂ ಕ್ರಿಯಾವತಾಮ್ ।। 165 ।। ಸ್ಥಾನಮೈಂದ್ರಂ ಕ್ಷತ್ರಿಯಾಣಾಂ ಸಂಗ್ರಾಮೇಷ್ವಪಲಾಯಿನಾಮ್ । ವೈಶ್ಯಾನಾಂ ಮಾರುತಂ ಸ್ಥಾನಂ ಸ್ವಸ್ವಕರ್ಮೋಪಜೀವಿನಾಮ್ ।। 166 ।। ಗಾಂಧರ್ವಂ ಶೂದ್ರಜಾತೀನಾಂ ಪರಿಚರ್ಯೇ ಚ ತಿಷ್ಠತಾಮ್ । ಸ್ಥಾನಾನ್ಯೇತಾನಿ ವರ್ಣಾನಾಂ ಯೋಗ್ಯಾಚಾರವತಾಂ ಸತಾಮ್ ।। 167 ।। ಸಂಸ್ಥಿತ್ಯಾಂ ಸುಕೃತಾಯಾಂ ವೈ ಚಾತುರ್ವರ್ಣ್ಯಸ್ಯ ತಸ್ಯ ತತ್ । ವರ್ಣಾಸ್ತು ದಂಡಭಯತಃ ಸ್ವೇ ಸ್ವೇ ವರ್ಣ್ಯೇ ವ್ಯವಸ್ಥಿತಾಃ । ತತಃ ಸ್ಥಿತೇಷು ವರ್ಣೇಷು ಸ್ಥಾಪಯಾಮಾಸ ಹ್ಯಾಶ್ರಮಾನ್ ।। 168 ।।

ನಂತರ ಬ್ರಹ್ಮನು ಚಾತುರ್ವರ್ಣ್ಯದವರಿಗೆ ಬೇರೆ ಬೇರೆ ಲೋಕಗಳ ಸ್ಥಾನಗಳನ್ನೂ ನೀಡಿದನು. ಕ್ರಿಯಾವಂತ ಬ್ರಾಹ್ಮಣರಿಗೆ ಪ್ರಾಜಾಪತ್ಯ ಸ್ಥಾನವು ದೊರೆಯುತ್ತದೆ. ಸಂಗ್ರಾಮದಿಂದ ಹಿಮ್ಮೆಟ್ಟದ ಕ್ಷತ್ರಿಯರಿಗೆ ಐಂದ್ರ ಸ್ಥಾನವೂ, ತಮ್ಮ ತಮ್ಮ ಕರ್ಮೋಪಜೀವಿತ ವೈಶ್ಯರಿಗೆ ಮಾರುತ ಸ್ಥಾನವನ್ನೂ, ಪರಿಚರ್ಯದಲ್ಲಿ ನಿರತ ಶೂದ್ರಜಾತಿಯವರಿಗೆ ಗಾಂಧರ್ವ ಸ್ಥಾನವನ್ನೂ ನಿಯೋಜಿಸಿದನು. ಹೀಗೆ ಚಾತುರ್ವರ್ಣ ಧರ್ಮಗಳನ್ನು ಯೋಗ್ಯವಾಗಿ ಆಚರಿಸುವ ಸತ್ಪುರುಷರಿಗೆ ಈ ಸ್ಥಾನಗಳನ್ನು ಲೋಕದಲ್ಲಿರಿಸಿದನು. ವರ್ಣಾಶ್ರಮ ಧರ್ಮದ ಮರ್ಯಾದೆಯನ್ನು ನಿರ್ಮಿಸಿದಾಗ ಆಯಾಯ ವರ್ಣದವರು ಕ್ಷತ್ರಿಯನಿಂದಾಗುವ ದಂಡಭೀತಿಯಿಂದ ತಮ್ಮ ತಮ್ಮ ಧರ್ಮಗಳಲ್ಲಿ ನಡೆಯುವವರಾದರು. ಆಗ ಬ್ರಹ್ಮನು ವರ್ಣಗಳಲ್ಲಿ ಆಶ್ರಮಗಳನ್ನು ಸ್ಥಾಪಿಸಿದನು.

ಗೃಹಸ್ಥೋ ಬ್ರಹ್ಮಚಾರೀ ಚ ವಾನಪ್ರಸ್ಥೋ ಯತಿಸ್ತಥಾ । ಆಶ್ರಮಾಂಶ್ಚತುರೋ ಹ್ಯೇತಾನ್ಪೂರ್ವವತ್ಸ್ಥಾಪಯನ್ಪ್ರಭುಃ ।। 169 ।। ವರ್ಣಕರ್ಮಾಣಿ ಯೇ ಕೇಚಿತ್ತೇಷಾಮಿಹ ಚ ಕುರ್ವತೇ । ಕೃತಕರ್ಮಕೃತಾವಾಸಾ ಆಶ್ರಮಾದುಪಭುಂಜತೇ ।। 170 ।। ಬ್ರಹ್ಮಾ ತಾನ್ಸ್ಥಾಪಯಾಮಾಸ ಆಶ್ರಮಾನ್ನಾಮನಾಮತಃ । ನಿರ್ದಿದೇಶ ತತಸ್ತೇಷಾಂ ಬ್ರಹ್ಮಾ ಧರ್ಮಾನ್ಪ್ರಭಾಷತೇ ।। 171 ।। ಪ್ರಸ್ಥಾನಾನಿ ತು ತೇಷಾಂ ಚ ಯಮಾನ್ಸನಿಯಮಾಂಸ್ತಥಾ

ಪೂರ್ವಕಲ್ಪದಲ್ಲಿದ್ದಂತೆ ಪ್ರಭು ಬ್ರಹ್ಮನು ಗೃಹಸ್ಥ, ಬ್ರಹ್ಮಚಾರೀ, ವಾನಪ್ರಸ್ಥಿ ಮತ್ತು ಯತಿ ಎಂಬ ನಾಲ್ಕು ಆಶ್ರಮಗಳನ್ನು ಸ್ಥಾಪಿಸಿದನು. ಯಾರು ಈ ವರ್ಣಧರ್ಮಗಳನ್ನೂ ಆಶ್ರಮ ಧರ್ಮಗಳನ್ನೂ ಅನುಷ್ಠಾನ ಮಾಡುತ್ತಾರೋ ಅವರು ಕರ್ಮಾನುಸಾರ ಲೋಕಾಂತರ ಸ್ಥಾನವನ್ನು ಭೋಗಿಸುತ್ತಾರೆ. ಬ್ರಹ್ಮನು ಆ ಆಶ್ರಮಗಳನ್ನು ಸ್ಥಾಪಿಸಿ, ಅವುಗಳಿಗೆ ಹೆಸರುಗಳನ್ನಿತ್ತು, ಅವುಗಳ ಧರ್ಮಗಳ ಕುರಿತು ಹೇಳಿದನು. ಆ ಎಲ್ಲ ಆಶ್ರಮಗಳ ಗುರಿಯೂ ಮನಸ್ಸನ್ನು ನಿಗ್ರಹಿಸುವ ಯಮ-ನಿಯಮಗಳು.

ಚತುರ್ವರ್ಣಾತ್ಮಕಃ ಪೂರ್ವಂ ಗೃಹಸ್ಥಸ್ಯಾಶ್ರಮಃ ಸ್ಥಿತಃ ।। 172 ।। ತ್ರಯಾಣಾಮಾಶ್ರಮಾಣಾಂ ಚ ಪ್ರತಿಯೋನೀನಿ ಚೈವ ಹಿ । ಯಥಾಕ್ರಮಂ ಚ ವಕ್ಷ್ಯಾಮಿ ವ್ರತೈಶ್ಚ ನಿಯಮೈಸ್ತಥಾ ।। 173 ।।

ಮೊದಲನೆಯ ಗೃಹಸ್ಥಾಶ್ರಮವು ಎಲ್ಲ ವರ್ಣದವರಿಗೂ ಇದೆ. ಮತ್ತು ಉಳಿದ ಮೂರೂ ಆಶ್ರಮಗಳಿಗೂ ಆಧಾರವಾಗಿದೆ. ಪ್ರತಿ ಆಶ್ರಮದಲ್ಲಿರುವ ವ್ರತ-ನಿಯಮಗಳನ್ನು ಯಥಾಕ್ರಮವಾಗಿ ಹೇಳುತ್ತೇನೆ.

ದಾರಾಗ್ನಯಶ್ಚಾತಿಥಯ ಇಷ್ಟಾಃ ಶ್ರಾದ್ಧಕ್ರಿಯಾಃ ಪ್ರಜಾಃ । ಇತ್ಯೇಷ ವೈ ಗೃಹಸ್ಥಸ್ಯ ಸಮಾಸಾದ್ಧರ್ಮಸಂಗ್ರಹಃ ।। 174 ।। ದಂಡೀ ಚ ಮೇಖಲೀ ಚೈವ ಅಧಃಶಾಯೀ ತಥಾಽಜಿನೀ । ಗುರುಶುಶ್ರೂಷಣಂ ಭೈಕ್ಷ್ಯಂ ವಿದ್ಯಾರ್ಥೀ ಬ್ರಹ್ಮಚಾರಿಣಃ ।। 175 ।। ಚೀರಪತ್ರಾಜಿನಾನಿ ಸ್ಯುರ್ವನಮೂಲಫಲೌಷಧೈಃ । ಉಭೇ ಸಂಧ್ಯೇ ವಗಾಹಶ್ಚ ಹೋಮಶ್ಚಾರಣ್ಯವಾಸಿನಾಮ್ ।। 176 ।। ವಿಪನ್ನಮುಸಲೇ ಭೈಕ್ಷ್ಯಮಸ್ತೇಯಂ ಶೌಚಮೇವ ಚ । ಅಪ್ರಮಾದೋ ವ್ಯವಾಯಶ್ಚ ದಯಾ ಭೂತೇಷು ಚ ಕ್ಷಮಾ ।। 177 ।। ಶ್ರವಣಂ ಗುರುಶುಶ್ರೂಷಾ ಸತ್ಯಂ ಚ ದಶಮಂ ಸ್ಮೃತಮ್ । ದಶಲಕ್ಷಣಕೋ ಹ್ಯೇಷ ಧರ್ಮಃ ಪ್ರೋಕ್ತಃ ಸ್ವಯಂಭುವಾ ।। 178 ।। ಭಿಕ್ಷೋರ್ವ್ರತಾನಿ ಪಂಚಾತ್ರ ಭೈಕ್ಷ್ಯವೇದವ್ರತಾನಿ ಚ । ತೇಷಾಂ ಸ್ಥಾನಾನ್ಯಶುಷ್ಮಿಂ ಚ ಸಂಸ್ಥಿತಾನಾಮಚಷ್ಟ ಸಃ ।। 179 ।।

ಪತ್ನಿ, ಅಗ್ನಿ, ಅತಿಥಿ, ಹೋಮ, ಶ್ರಾದ್ಧಕ್ರಿಯೆ ಮತ್ತು ಸಂತಾನ ಇವು ಸಂಕ್ಷಿಪ್ತವಾಗಿ ಹೇಳಿರುವ ಗೃಹಸ್ಥನ ಧರ್ಮಸಂಗ್ರಹವು. ಪಲಾಶ ಮೊದಲಾದ ದಂಡಧಾರಣೆ, ಮೌಂಜೀ ಬಂಧನ, ಕೆಳಗೆ (ನೆಲದ ಮೇಲೆ) ಮಲಗುವುದು, ಕೃಷ್ಣಾಜಿನ ಧಾರಣೆ, ಗುರುಶುಶ್ರೂಷೆ, ಭಿಕ್ಷಾಚರಣೆ ಮತ್ತು ವಿದ್ಯಾಭ್ಯಾಸವು ಬ್ರಹ್ಮಚಾರಿಯ ಧರ್ಮಗಳು. ನಾರು-ಎಲೆ-ಜಿನ ವಸ್ತ್ರಗಳನ್ನು ತೊಡುವುದು, ವನದಲ್ಲಿ ಹುಟ್ಟುವ ಗೆಡ್ಡೆಗಳು, ಫಲಗಳು ಮತ್ತು ಓಷಧಗಳನ್ನು ಸೇವಿಸುವುದು, ಎರಡೂ ಸಂಧ್ಯಾಕಾಲಗಳಲ್ಲಿ ಸ್ನಾನಮಾಡುವುದು, ಮತ್ತು ಹೋಮಮಾಡುವುದು ಅರಣ್ಯವಾಸೀ ವಾನಪ್ರಸ್ಥಿಯ ಧರ್ಮಗಳು. ಅಡುಗೆಯು ಮುಗಿದುದನ್ನು ಅರಿತು ಭಿಕ್ಷೆಯನ್ನು ಬೇಡುವುದು, ಕದಿಯದೇ ಇರುವುದು, ಶುಚಿಯಾಗಿರುವುದು, ಕರ್ತವ್ಯದಲ್ಲಿ ಅನಾಲಸ್ಯ, ಮೈಥುನ ಪರಿತ್ಯಾಗ, ಸರ್ವಪ್ರಾಣಿಗಳಲ್ಲಿಯೂ ದಯೆ ಮತ್ತು ಕ್ಷಮೆ, ಶಾಸ್ತ್ರಾರ್ಥ ಶ್ರವಣ, ಗುರುಶುಶ್ರೂಷೆ, ಮತ್ತು ಹತ್ತನೆಯದಾಗಿ ಸತ್ಯವಚನ – ಈ ಹತ್ತು ಧರ್ಮಗಳನ್ನು ಸ್ವಯಂಭುವು ಸನ್ಯಾಸಿಯ ಧರ್ಮವೆಂದು ಹೇಳಿದ್ದಾನೆ. ಇಲ್ಲಿ ಯತಿಗೆ ಭಿಕ್ಷ ಮತ್ತು ನಾಲ್ಕು ವೇದಗಳ ವ್ರತ – ಈ ಐದು ಮುಖ್ಯವಾದವುಗಳು. ಇವುಗಳನ್ನು ಆಚರಿಸಿದ ಯತಿಗಳಿಗೆ ಉತ್ತಮ ಲೋಕಗಳು ದೊರೆಯುತ್ತವೆ.

ಅಷ್ಟಾಶೀತಿಸಹಸ್ರಾಣಿ ಋಷೀಣಾಮೂರ್ಧ್ವರೇತಸಾಮ್ । ಸ್ಮೃತಂ ತೇಷಾಂ ತು ಯತ್ ಸ್ಥಾನಂ ತದೇವ ಗುರುವಾಸಿನಾಮ್ ।। 180 ।। ಸಪ್ತರ್ಷೀಣಾ ತು ಯತ್ಸ್ಥಾನಂ ಸ್ಮೃತಂ ತದ್ವೈ ವನೌಕಸಾಮ್ । ಪ್ರಾಜಾಪತ್ಯಂ ಗೃಹಸ್ಥಾನಾಂ ನ್ಯಾಸಿನಾಂ ಬ್ರಹ್ಮಣಃ ಕ್ಷಯಾಃ ।। 181 ।। ಯೋಗಿನಾಮಕೃತಂ ಸ್ಥಾನಂ ತಾನಾಜಿತ್ವಾ ನ ವಿದ್ಯತೇ । ಸ್ಥಾನಾನ್ಯಾಶ್ರಮಿಣಸ್ತಾನಿ ಬ್ರಹ್ಮಸ್ಥಾನಸ್ಥಿತಾನಿ ತು ।। 182 ।।

88,000 ಊರ್ಧ್ವರೇತಸ ಮಹರ್ಷಿಗಳಿಗೆ ಇರುವ ಸ್ಥಾನವೇ ಗುರುಕುಲವಾಸ ಮಾಡುವ ಬ್ರಹ್ಮಚಾರಿಗೆ ದೊರೆಯುತ್ತದೆ. ಸಪ್ತರ್ಷಿಗಳ ಸ್ಥಾನವು ವಾನಪ್ರಸ್ಥಿಗಳಿಗೂ, ಗ್ರಹಸ್ಥಧರ್ಮವನ್ನು ಲೋಪವಿಲ್ಲದೇ ಆಚರಿಸಿದವರಿಗೆ ಪ್ರಾಜಾಪತ್ಯ ಸ್ಥಾನವೂ, ಸನ್ಯಾಸಿಗಳಿಗೆ ಬ್ರಹ್ಮಲೋಕವೂ ಲಭಿಸುತ್ತವೆ. ಜ್ಞಾನಯೋಗಿಗಳಿಗೆ ಅಕೃತವಾದ ಬ್ರಹ್ಮಪ್ರಾಪ್ತಿಯೆಂಬ ಮುಕ್ತಿಯು ದೊರಕುತ್ತದೆ. ಹೀಗೆ ಬ್ರಹ್ಮನು ಆಶ್ರಮಿಗಳಿಗೆ ವಿವಿಧ ಸ್ಥಾನಗಳನ್ನು ವಿಹಿಸಿದ್ದಾನೆ.

ಚತ್ವಾರ ಏವ ಪಂಥಾನೋ ದೇವಯಾನಾನಿ ನಿರ್ಮಿತಾಃ । ಪಂಥಾನಃ ಪಿತೃಯಾನಾಸ್ತು ಸ್ಮೃತಾಶ್ಚತ್ವಾರ ಏವ ತೇ ।। 183 ।। ಬ್ರಹ್ಮಣಾಂ ಲೋಕತಂತ್ರೇಣ ಆದ್ಯೇ ಮನ್ವಂತರೇ ಪುರಾ । ಪಂಥಾನೋ ದೇವಯಾನಾ ಯೇ ತೇಷಾಂ ದ್ವಾರಂ ರವಿಃ ಸ್ಮೃತಃ ।। 184 ।। ತಥೈವ ಪಿತೃಯಾನಾನಾಂ ಚಂದ್ರಮಾ ದ್ವಾರಮುಚ್ಯತೇ । ಏವಂ ವರ್ಣಾಶ್ರಮಾಣಾಂ ಚ ಪ್ರವಿಭಾಗೇ ಕೃತೇ ತದಾ । ಯದಾ ಪ್ರಜಾ ನಾವರ್ಧಂತ ವರ್ಣಧರ್ಮಸಮಾಸಿಕಾಃ ।। 185 ।। ತತೋಽನ್ಯಾಂ ಮಾನಸೀಂ ಸ್ವಾಂ ವೈ ತ್ರೇತಾಮಧ್ಯೇಽಸೃಜತ್ಪ್ರಜಾಃ । ಆತ್ಮನಸ್ತು ಶರೀರೇಭ್ಯಸ್ತುಲ್ಯಾಶ್ಚೈವಾತ್ಮನಾ ತು ತಾಃ ।। 186 ।। ತಸ್ಮಿಂಸ್ತ್ರೇತಾಯುಗೇ ತ್ವಾದ್ಯೇ ಮಧ್ಯಂ ಪ್ರಾಪ್ತೇ ಕ್ರಮೇಣ ತು । ತತೋಽನ್ಯಾಂ ಮಾನಸೀಂ ಸೋಽಥ ಪ್ರಜಾಃ ಸ್ರಷ್ಟುಂ ಪ್ರಚಕ್ರಮೇ ।। 187 ।।

ಬ್ರಹ್ಮನು ನಾಲ್ಕು ದೇವಯಾನಗಳನ್ನೂ ನಾಲ್ಕು ಪಿತೃಯಾನಗಳನ್ನೂ ನಿರ್ಮಿಸಿದನು. ಹಿಂದೆ ಆದಿ ಮನ್ವಂತರ ಸ್ವಾಯಂಭುವ ಮನ್ವಂತರದಲ್ಲಿ ರಚಿಸಿದ ದೇವಯಾನಗಳಿಗೆ ರವಿಯೇ ದ್ವಾರವೆಂದು ಸ್ಮೃತಿಯಿದೆ. ಹಾಗೆಯೇ ಪಿತೃಯಾನಗಳಿಗೆ ಚಂದ್ರನು ದ್ವಾರವೆಂದು ಹೇಳುತ್ತಾರೆ. ಹೀಗೆ ವರ್ಣಾಶ್ರಮ ಧರ್ಮಗಳು ವಿಭಜನೆಗೊಂಡ ನಂತರ ವರ್ಣಧರ್ಮಗಳ ಸಂಕೋಚವೆಂಬ ಬಂಧನದಿಂದ ಪ್ರಜೆಗಳು ವಿಶೇಷವಾಗಿ ವೃದ್ಧಿ ಹೊಂದಲಿಲ್ಲ. ಆಗ ತ್ರೇತಾಯುಗದ ಮಧ್ಯದಲ್ಲಿ ಬ್ರಹ್ಮನು ತನ್ನ ಶರೀರದಿಂದ ತನಗೆ ಸಮನಾದ ಅನ್ಯ ಮಾನಸ ಪ್ರಜೆಗಳನ್ನು ಸೃಷ್ಟಿಸಿದನು. ಮೊದಲನೆಯ ತ್ರೇತಾಯುಗದ ಮಧ್ಯದಲ್ಲಿ ಬ್ರಹ್ಮನು ಕ್ರಮೇಣವಾಗಿ ಅನ್ಯ ಮಾನಸೀ ಸೃಷ್ಟಿಯನ್ನು ಪ್ರಾರಂಭಿಸಿದನು.

ತತಃ ಸತ್ತ್ವರಜೋದ್ರಿಕ್ತಾಃ ಪ್ರಜಾಃ ಸ ಹ್ಯಸೃಜತ್ಪ್ರಭುಃ । ಧರ್ಮಾರ್ಥಕಾಮಮೋಕ್ಷಾಣಾಂ ವಾರ್ತಾನಾಂ ಸಾಧಕಾಶ್ಚ ಯಾಃ ।। 188 ।। ದೇವಾಶ್ಚ ಪಿತರಶ್ಚೈವ ಋಷಯೋ ಮನವಸ್ತಥಾ । ಯುಗಾನುರೂಪಾ ಧರ್ಮೇಣ ಯೈರಿಮಾ ವರ್ಧಿತಾಃ ಪ್ರಜಾಃ ।। 189 ।। ಉಪಸ್ಥಿತೇ ತದಾ ತಸ್ಮಿನ್ ಸೃಷ್ಟಿವರ್ಗೇ ಸ್ವಯಂಭುವಃ । ಅಭಿಧ್ಯಾಯ ಪ್ರಜಾ ಬ್ರಹ್ಮಾ ನಾನಾವೀರ್ಯಾಃ ಸ್ವಮಾನಸೀಃ ।। 190 ।। ಪೂರ್ವೋಕ್ತಾ ಯಾ ಮಯಾ ತುಭ್ಯಂ ಜನೋಲೋಕಂ ಸಮಾಶ್ರಿತಾಃ । ಕಲ್ಪೇಽತೀತೇ ಪುರಾ ಆಸನ್ ದೇವಾದ್ಯಾಸ್ತು ಪ್ರಜಾ ಇಹ ।। 191 ।। ಧ್ಯಾಯತಸ್ತಸ್ಯ ತಾನೀಹ ಸಂಭೂತ್ಯರ್ಥಮುಪಸ್ಥಿತಾಃ । ಮನ್ವಂತರಕ್ರಮೇಣೇಹ ಕನಿಷ್ಠಾಃ ಪ್ರಥಮೇನ ತಾಃ ।। 192 ।। ಖ್ಯಾತಾಸ್ತು ವಂಶೈರೇತೈಸ್ತು ಪೂರ್ವಂ ಯೈರಿಹ ಭಾವಿತಾಃ । ಕುಶಲಾಕುಶಲೈಃ ಕಂದೈರಕ್ಷೀಣೈಸ್ತೈಸ್ತದಾ ಯುತಾಃ ।। 193 ।। ತತ್ಕರ್ಮಫಲದೋಷೇಣ ಹ್ಯುಪಬಂಧಾಃ ಪ್ರಜಜ್ಞಿರೇ । ದೇವಾಸುರಪಿತೄಂಶ್ಚೈವ ಯಕ್ಷೈರ್ಗಂಧರ್ವಮಾನುಷೈಃ ।। 194 ।। ರಾಕ್ಷಸೈಸ್ತು ಪಿಶಾಚೈಸ್ತೈಃ ಪಶುಪಕ್ಷಿಸರೀಸೃಪೈಃ । ವೃಕ್ಷನಾರಕಕೀಟಾದ್ಯೈಸ್ತೈಸ್ತೈಃ ಸರ್ವೈರುಪಸ್ಥಿತಾಃ । ಆಹಾರಾರ್ಥಂ ಪ್ರಜಾನಾಂ ವೈ ವಿದಾತ್ಮಾನೋ ವಿನಿರ್ಮಮೇ ।। 195 ।।

ಆಗ ಪ್ರಭುವು ಧರ್ಮಾರ್ಥಕಾಮಮೋಕ್ಷಗಳ ಮತ್ತು ಜೀವನೋಪಾಯ ಸಾಧಕರಾದ ಸತ್ತ್ವರಜೋದ್ರಿಕ್ತ ಪ್ರಜೆಗಳನ್ನು ಸೃಷ್ಟಿಸಿದನು. ಈ ದೇವತೆಗಳು, ಪಿತೃಗಳು, ಋಷಿಗಳು ಮತ್ತು ಮಾನವರು ಯುಗಲಕ್ಷಣಕ್ಕನುಗುಣವಾಗಿ ಪ್ರಜೆಗಳನ್ನು ವೃದ್ಧಿಸಿದರು. ಆ ಸೃಷ್ಟಿವರ್ಗದಲ್ಲಿ ಇರುವಾಗ ಸ್ವಯಂಭುವ ಬ್ರಹ್ಮನು ತನ್ನ ಮನಸ್ಸಿನಲ್ಲಿ ನಾನಾ ವೀರ್ಯದ ಪ್ರಜೆಗಳನ್ನು ಧ್ಯಾನಿಸಿದನು. ನಾನು ಮೊದಲೇ ನಿಮಗೆ ಹೇಳಿದ್ದಂತೆ ಹಿಂದಿನ ಕಲ್ಪವು ಅಂತ್ಯವಾದಾಗ ಜನೋಲೋಕವನ್ನು ಆಶ್ರಯಿಸಿದ್ದ ದೇವಾದಿ ಪ್ರಜೆಗಳು, ಬ್ರಹ್ಮನು ಧ್ಯಾನಿಸುತ್ತಿದ್ದಾಗ, ಸ್ವಾಯಂಭುವ ಮನ್ವಂತರದಲ್ಲಿ ಕನಿಷ್ಠರಿಂದ ಹಿಡಿದು ಕ್ರಮೇಣವಾಗಿ ಮೊದಲು ಜನ್ಮವೆತ್ತಿದರು. ಆ ದೇವಾದಿಗಳು ಹಿಂದೆ ಯಾವ ಉತ್ತಮ ವಂಶಸಂಬಂಧದಿಂದ ಭಾವಿಸಲ್ಪಟ್ಟವರಾಗಿ ಖ್ಯಾತರಾಗಿದ್ದರೋ ಆ ಅಕ್ಷಯವಾದ ಕೌಶಲ, ಅಕೌಶಲ ತಾರತಮ್ಯವನ್ನು ಹೊಂದಿದ ವಂಶಾಂಕುರಗಳಲ್ಲಿ ಜನಿಸಿದರು. ಸಂತತಿರೂಪದಲ್ಲಿ ಒದಗಿದ ತಮ್ಮ ಕರ್ಮಫಲದ ಪರಿಣಾಮದಿಂದಾಗಿ ಅವರು ದೇವ, ಅಸುರ, ಪಿತೃ, ಯಕ್ಷ, ಗಂಧರ್ವ, ಮನುಷ್ಯ, ರಾಕ್ಷಸ, ಪಿಶಾಚ, ಪಶು, ಪಕ್ಷಿ, ಸರ್ಪ, ವೃಕ್ಷ, ನರಕಪ್ರಾಣಿ, ಕ್ರಿಮಿ, ಕೀಟ ಮೊದಲಾದ ಅನೇಕ ವಿಧದ ಭೋಗ್ಯ-ಭೋಕ್ತೃರೂಪಗಳಾಗಿ ಜನ್ಮವೆತ್ತಿದರು. ಹೀಗೆ ಬ್ರಹ್ಮನು ಪ್ರಪಂಚದ ಪ್ರತಿಯೊಂದು ವಸ್ತುಜಾಲವನ್ನೂ ಭೋಗ್ಯ ಮತ್ತು ಭೋಕ್ತೃ ಎಂಬ ಎರಡು ವಿಧದ ರೂಪಗಳಲ್ಲಿ ರಚಿಸಿದ್ದಾನೆ.”

ಇತಿ ಶ್ರೀಬ್ರಹ್ಮಾಂಡಪುರಾಣೇ ಲೋಕಜ್ಞಾನವರ್ಣನಂ ನಾಮ ಸಪ್ತಮೋಽಧ್ಯಾಯಃ ।।

ಇದು ಬ್ರಹ್ಮಾಂಡಪುರಾಣದಲ್ಲಿ ಲೋಕಜ್ಞಾನವರ್ಣನೆ ಎಂಬ ಏಳನೇ ಅಧ್ಯಾಯವು.

[1] ಶ್ಲೋಕ 95-101ರಲ್ಲಿ ಮಾನ-ಪ್ರಮಾಣಗಳ ಉತ್ಪತ್ತಿಯನ್ನು ತತ್ತ್ವಾತ್ಮಕವಾಗಿ ಹೇಳಿದೆ. ಜನರು ತಮ್ಮದೇ ಅಂಗುಲಗಳನ್ನು ಅಧಾರವನ್ನಾಗಿಟ್ಟುಕೊಂಡು, ಮತ್ತೆ ಮತ್ತೆ (ಮರು ಮರು) ಅಳೆಯುತ್ತಾ ತಮ್ಮ ವಿವೇಕಕ್ಕೆ ತಕ್ಕಂತೆ ಮಾನ-ಪ್ರಮಾಣಗಳನ್ನು ನಿರ್ಮಿಸಿದರು. ಆ ಕಾಲದಿಂದಲೇ ಅವುಗಳು ಬಳಕೆಗೆ ಬಂದವು. ಯವ (ಗೋಧೀಕಾಳಿನ ಉದ್ದ) ದಿಂದ ಹಿಡಿದು ಅಂಗುಲ, ಪ್ರದೇಶ, ಹಸ್ತ, ಕಿಷ್ಕು, ಧನುರ್ದಂಡಗಳ ವರೆಗೆ ವಿವಿಧ ಅಳತೆಗಳು ನಿರ್ದಿಷ್ಟಗೊಂಡವು. ಹತ್ತು ಅಂಗುಲ ಪರ್ವಗಳ ಪ್ರಮಾಣವೇ “ಪ್ರಾದೇಶ” ಎಂಬ ಹೆಸರು ಪಡೆದಿದೆ. ಅಂಗುಷ್ಠ (ಹೆಬ್ಬೆರಳು) ಮತ್ತು ಪ್ರದೇಶಿನೀ (ತರ್ಜನೀ) ಬೆರಳುಗಳನ್ನು ಹರಡಿದಾಗ ಆಗುವ ವ್ಯಾಸ/ಅಂತರವೇ ಪ್ರಾದೇಶ. ಮಧ್ಯಮಾ (ಮಧ್ಯಬೆರಳು)ದಿಂದ ಅಳೆಯವ ಪ್ರಮಾಣವನ್ನು ತಾಲ ಎನ್ನುತ್ತಾರೆ. ಅನಾಮಿಕಾ (ಉಂಗುರುದ ಬೆರಳು) ದಿಂದ ಅಳೆಯುವ ಪ್ರಮಾಣಕ್ಕೆ ಗೋಕರ್ಣ ಎನ್ನುತ್ತಾರೆ. ಕನಿಷ್ಠಿಕಾ (ಕಿರುಬೆರಳು) ದಿಂದ ಅಳೆಯುವ ವಿತಸ್ತಿಯು 12 ಅಂಗುಲಗಳಿಗೆ ಸಮಾನವು. 21 ಅಂಗುಲ ಪರ್ವಗಳು (ಬೆರಳಿನ ಸಂಧಿಗಳ) ಒಂದು ರತ್ನಿಗೆ ಸಮಾನವು. 24 ಅಂಗುಲಗಳು ಒಂದು ಹಸ್ತಕ್ಕೆ ಸಮಾನವು. 2 ರತ್ನಿ ಅಥವಾ 48 ಅಂಗುಲಗಳಿಗೆ ಒಂದು ಕಿಷ್ಕು. 4 ಹಸ್ತಗಳು=1 ಧನುರ್ದಂಡ. 2 ಧನುರ್ದಂಡಗಳು=1 ನಾಲಿಕಾ. 2000 ಧನುಸ್=1 ಗವ್ಯೂತಿ. 8000 ಧನುಸ್=1 ಯೋಜನೆ. ಈ ಯೋಜನ ಪ್ರಮಾಣದಿಂದಲೇ ಊರು-ನಗರಗಳ ವಿನ್ಯಾಸ (ಸನ್ನಿವೇಶ)ವನ್ನು ಮಾಡಲಾಗುತ್ತಿತ್ತು.

ಪಾರಂಪರಿಕ ಮಾನ ಅಂಗುಲಗಳಲ್ಲಿ ಸೆಂ.ಮೀ (ಸುಮಾರು) ಮೀಟರ್ (ಸುಮಾರು)
ಅಂಗುಲ 1 1.9 cm 0.019 m
ಹಸ್ತ 24 ಅಂಗುಲ 45.6 cm 0.456 m
ರತ್ನಿ 21 ಅಂಗುಲ 39.9 cm 0.399 m
ಕಿಷ್ಕು 48 ಅಂಗುಲ 91.2 cm 0.912 m
ಧನುರ್ದಂಡ 4 ಹಸ್ತ = 96 ಅಂಗುಲ 182.4 cm 1.824 m
ಗವ್ಯೂತಿ 2000 ಧನುಸ್ ~3648 m ~3.65 km
ಯೋಜನ 8000 ಧನುಸ್ ~14,592 m ~14.6 km

 ವಾಸ್ತುಶಾಸ್ತ್ರ/ಶಿಲ್ಪಶಾಸ್ತ್ರದಲ್ಲಿ ಈ ಅಳತೆಯ ಪ್ರಯೋಗಗಳು ಈ ರೀತಿ ಇವೆ: (1) ಅಂಗುಲ – ಹಸ್ತ: ಗರ್ಭಗೃಹ, ವೇದಿಕೆ, ಕಂಬಗಳ ವ್ಯಾಸ ಮೊದಲಾದ ಸೂಕ್ಷ್ಮ ಅಳತೆಗಳಿಗೆ ಮತ್ತು ದೇವಾಲಯ ನಿರ್ಮಾಣದಲ್ಲಿ ಮೂರ್ತಿಯ ಪ್ರಮಾಣ ನಿರ್ಣಯಕ್ಕೆ (2) ರತ್ನಿ – ಕಿಷ್ಕು: ಗೋಡೆಗಳ ದಪ್ಪ, ಪ್ರದಕ್ಷಿಣಾಪಥದ ಅಗಲ, ಮತ್ತು ವಾಸ್ತುಪೀಠದ ವಿಭಾಗಗಳು (3) ಧನುರ್ಧಂಡ: ದೇವಾಲಯದ ಆವರಣ, ಮಠ, ಅರಮನೆಗಳ ಮುಖ್ಯ ಅಳತೆ, ಶಿಲ್ಪಶಾಸ್ತ್ರದಲ್ಲಿ ಮಾನಕ ಉದ್ದ (4) ಗವ್ಯೂತಿ – ಯೋಜನ: ಗ್ರಾಮ–ನಗರ ವಿನ್ಯಾಸ (ಸನ್ನಿವೇಶ), ಅರಣ್ಯ, ಕ್ಷೇತ್ರ, ತೀರ್ಥಗಳ ನಡುವಿನ ದೂರ ನಿರ್ಣಯ, ಪುರಾಣ–ಇತಿಹಾಸ ಗ್ರಂಥಗಳಲ್ಲಿ ಭೌಗೋಳಿಕ ಅಳತೆ. ಈ ಶ್ಲೋಕಗಳ ಮುಖ್ಯ ತತ್ತ್ವಾರ್ಥವನ್ನು ಈ ಕೆಳಗಿನಂತೆ ಕೊಡಬಹುದು: (1) ಮಾನಗಳು ದೇಹಾಧಾರಿತ – ಅಳತೆಗಳು ಯಂತ್ರದಿಂದಲ್ಲ, ಮಾನವ ದೇಹದಿಂದ ಹುಟ್ಟಿದವು. (2) ಪ್ರಾಮಾಣ=ಅನುಭವ+ಪುನರಾವೃತ್ತಿ – “ಮೀತ್ವಾ ಮೀತ್ವಾ” – ಮರುಮರು ಅಳೆಯುವ ಮೂಲಕ ಮಾನಕತೆ. (3) ಸರ್ವಸಾಮಾನ್ಯತೆಯ ಗುರಿ – ಪ್ರತಿಯೊಬ್ಬರ ಅಂಗುಲ ಬೇರೆ ಇದ್ದರೂ, ಪುನರಾವೃತ್ತಿಯಿಂದ ಸರಾಸರ ಪ್ರಮಾಣ ರೂಪಗೊಂಡಿತು. (4) ಶಿಲ್ಪ-ವಾಸ್ತು-ನಗರ ಉಯೋಜನೆಗೆ ಆಧಾರ – ಇದೇ ಮಾನಗಳು ಮುಂದೆ ದೇವಾಲಯ, ಮೂರ್ತಿ, ಗ್ರಾಮ-ನಗರ ವಿನ್ಯಾಸಕ್ಕೆ ಮೂಲ. ಅಂದರೆ ಮಾನವ ದೇಹದಿಂದಲೇ ಜಗತ್ತಿನ ವಿನ್ಯಾಸ.

[2] “ಪ್ರದೇಶಿನೀ” ಎಂದರೆ “ಸೂಚಿಸುವುದು” ಅಥವಾ “ತೋರಿಸುವುದು” ಎಂದರ್ಥ. ಅಂದರೆ ತರ್ಜನೀ ಬೆರಳು. ಸಂಸ್ಕೃತದಲ್ಲಿ ಕೈಯ ಬೆರಳಿಗೆ ಬಳಸುವ ಪದಗಳು ಹೀಗಿವೆ: (1) ಅಂಗುಷ್ಟ — ಅಂಗುಲಿ, ಹೆಬ್ಬೆರಳು (Thumb); (2) ತರ್ಜನಿ / ಪ್ರದೇಶಿನೀ — ಸೂಚಿ ಬೆರಳು (Index finger); (3) ಮಧ್ಯಮಾ — ಮಧ್ಯ ಬೆರಳು (Middle finger); (4) ಅನಾಮಿಕಾ — ಉಂಗುರ ಬೆರಳು (Ring finger); ಮತ್ತು (5) ಕನಿಷ್ಠಿಕಾ — ಚಿಕ್ಕ ಬೆರಳು (Little finger).

[3] ಶ್ಲೋಕ 105-108 ವಾಸ್ತು-ಶಿಲ್ಪಶಾಸ್ತ್ರದಂತೆ ದುರ್ಗ-ಪುರ-ನಗರ ವಿನ್ಯಾಸಗಳನ್ನು ಕ್ರಮಬದ್ಧವಾಗಿ ವಿವರಿಸುತ್ತವೆ. ಪುರಗಳ ರಕ್ಷಣಾವ್ಯವಸ್ಥೆಯು ಗೋಡೆ, ಕಂದಕ ಮತ್ತು ದ್ವಾರಗಳನ್ನು ಹೊಂದಿರಬೇಕು. ಜಲವ್ಯವಸ್ಥೆಯು ಹಸ್ತಾಧಾರಿತ ಪ್ರಮಾಣದಲ್ಲಿರಬೇಕು. ಪೂರ್ವ-ಉತ್ತರ ದಿಕ್ಕುಗಳು ಪ್ರಮುಖವಾದವುಗಳು. ಚೌಕಾಕಾರವೇ ನಗರಗಳಿಗೆ ಶ್ರೇಷ್ಠವು.

[4] ಈ ಮೂರು ಸಾಲುಗಳು ವಾಸ್ತು-ನಿವೇಶನ (ಮನೆ/ವಾಸಸ್ಥಾನ)ದ ಪ್ರಮಾಣ ನಿರ್ಣಯವನ್ನು ಹೇಳುತ್ತವೆ.  

[5] 800 ಕಿಷ್ಕು ಅಥವಾ ಸುಮಾರು 8.2 ಎಕರೆ ವಿಸ್ತೀರ್ಣದಲ್ಲಿರುವ ಮನೆಯು ಸಾಮಾನ್ಯ ಮನೆಯಲ್ಲ. ಇದು ರಾಜಗೃಹ ಅಥವಾ ಆಡಳಿತ ಕೇಂದ್ರ ಅಥವಾ ದುರ್ಗ-ನಗರದ ಪ್ರಮುಖ ನಿವೇಶನದ ಪ್ರಮಾಣವು. ಆದ್ದರಿಂದ “ಮುಖ್ಯಂ ನಿವೇಶನಮ್” ಎಂದು ಶಾಸ್ತ್ರವು ಹೇಳುತ್ತದೆ.

[6] Footpath?

Leave a Reply

Your email address will not be published. Required fields are marked *