ಶ್ರೀ ಕೂರ್ಮಪುರಾಣ: ಅಧ್ಯಾಯ 99: ಪ್ರಾಕೃತಪ್ರಲಯವರ್ಣನಮ್

 

ಕೂರ್ಮ ಉವಾಚ । ಅತಃ ಪರಂ ಪ್ರವಕ್ಷ್ಯಾಮಿ ಪ್ರತಿಸರ್ಗಮನುತ್ತಮಮ್ । ಪ್ರಾಕೃತಂ ತತ್ಸಮಾಸೇನ ಶೃಣುಧ್ವಂ ಗದತೋ ಮಮ ।। 1 ।। ಗತೇ ಪರಾರ್ಧದ್ವಿತಯೇ ಕಾಲೇ ಲೋಕಪ್ರಕಾಲನಃ । ಕಾಲಾಗ್ನಿರ್ಭಸ್ಮಸಾತ್ಕರ್ತುಂ ಚರತೇ ಚಾಖಿಲಂ ಜಗತ್ ।। 2 ।। ಸ್ವಾತ್ಮನ್ಯಾತ್ಮಾನಮಾವೇಶ್ಯ ಭೂತ್ವಾ ದೇವೋ ಮಹೇಶ್ವರಃ । ದಹೇದಶೇಷಂ ಬ್ರಹ್ಮಾಂಡಂ ಸದೇವಾಸುರಮಾನುಷಮ್ ।। 3 ।। ತಮಾವಿಶ್ಯ ಮಹಾದೇವೋ ಭಗವಾನ್ನೀಲಲೋಹಿತಃ । ಕರೋತಿ ಲೋಕಸಂಹಾರಂ ಭೀಷಣಂ ರೂಪಮಾಶ್ರಿತಃ ।। 4 ।। ಪ್ರವಿಶ್ಯ ಮಂಡಲಂ ಸೌರಂ ಕೃತ್ವಾಽಸೌ ಬಹುಧಾ ಪುನಃ । ನಿರ್ದಹತ್ಯಖಿಲಂ ಲೋಕಂ ಸಪ್ತಸಪ್ತಿಸ್ವರೂಪಧೃಕ್ ।। 5 ।। ಸ ದಗ್ಧ್ವಾ ಸಕಲಂ ವಿಶ್ವಮಸ್ತ್ರಂ ಬ್ರಹ್ಮಶಿರೋ ಮಹತ್ । ದೇವತಾನಾಂ ಶರೀರೇಷು ಕ್ಷಿಪತ್ಯಖಿಲದಾಹಕಮ್ ।। 6 ।। ದಗ್ಧೇಷ್ವಶೇಷದೇವೇಷು ದೇವೀ ಗಿರಿವರಾತ್ಮಜಾ । ಏಷಾ ಸಾ ಸಾಕ್ಷಿಣೀ ಶಂಭೋಸ್ತಿಷ್ಠತೇ ವೈದಿಕೀ ಶ್ರುತಿಃ ।। 7 ।।

ಕೂರ್ಮನು ಹೇಳಿದನು: ಇನ್ನು ಮುಂದೆ ಉತ್ತಮವಾದ ಪ್ರಾಕೃತ ಪ್ರಳಯದ ಕುರಿತು ಸಂಕ್ಷಿಪ್ತವಾಗಿ ಹೇಳುತ್ತೇನೆ. ನಾನು ಹೇಳುವುದನ್ನು ಕೇಳಿ. ಎರಡು ಪರಾರ್ಧಗಳ ಕಾಲವು ಕಳೆಯಲು ಲೋಕವನ್ನು ಸಂಹರಿಸುವ ಕಾಲಾಗ್ನಿಯು ಅಖಿಲ ಜಗತ್ತನ್ನೂ ಭಸ್ಮಗೊಳಿಸ ತೊಡಗುತ್ತಾನೆ. ದೇವ ಮಹೇಶ್ವರನು ತನ್ನ ಆತ್ಮವನ್ನು ಪರಮಾತ್ಮನಲ್ಲಿ ಪ್ರವೇಶಗೊಳಿಸಿ, ದೇವಾಸುರಮಾನುಷರಿಂದ ಕೂಡಿದ ಈ ಸಂಪೂರ್ಣ ಬ್ರಹ್ಮಾಂಡವನ್ನು ಭಸ್ಮಮಾಡುತ್ತಾನೆ. ಭಗವಾನ್ ನೀಲಲೋಹಿತ ಮಹಾದೇವನು ಆ ಕಾಲಾಗ್ನಿ ರೂಪದಲ್ಲಿ ಆವೇಶಹೊಂದಿ ಭೀಷಣ ರೂಪವನ್ನು ತಾಳಿ ಲೋಕಸಂಹಾರವನ್ನು ಮಾಡುತ್ತಾನೆ. ಅವನು ಸೌರಮಂಡಲವನ್ನು ಪ್ರವೇಶಿಸಿ ಮತ್ತೆ ಅದನ್ನು ಬಹುರೂಪವನ್ನಾಗಿ ಮಾಡಿಕೊಂಡು, ಏಳು[1] ಸೂರ್ಯರ ರೂಪವನ್ನು ಧರಿಸಿ ಸಮಸ್ತ ಲೋಕಗಳನ್ನು ದಹಿಸುತ್ತಾನೆ. ಸಕಲ ವಿಶ್ವವನ್ನೂ ದಹಿಸಿ, ಎಲ್ಲವನ್ನೂ ಸುಡಬಲ್ಲ ಮಹತ್ತಾದ ಬ್ರಹ್ಮಶಿರ ಅಸ್ತ್ರವನ್ನು ದೇವತೆಗಳ ಶರೀರಗಳ ಮೇಲೆ ಪ್ರಯೋಗಿಸುತ್ತಾನೆ. ದೇವತೆಗಳು ನಿಃಶೇಷರಾಗಿ ಭಸ್ಮಗೊಳ್ಳಲು ದೇವೀ ಗಿರಿವರಾತ್ಮಜೆಯು ಶಂಭುವಿಗೆ ಸಾಕ್ಷಿಯಾಗಿ ನಿಂತಿರುತ್ತಾಳೆ ಎಂದು ವೇದಗಳಲ್ಲಿ ಕೇಳಿಬರುತ್ತದೆ.

ಶಿರಃ ಕಪಾಲೈರ್ದೇವಾನಾಂ ಕೃತಸ್ರಗ್ವರಭೂಷಣಃ । ಆದಿತ್ಯಚಂದ್ರಾದಿಗಣೈಃ ಪೂರಯನ್ವ್ಯೋಮಮಂಡಲಮ್ ।। 8 ।। ಸಹಸ್ರನಯನೋ ದೇವಃ ಸಹಸ್ರಾಕ್ಷ ಇತೀಶ್ವರಃ । ಸಹಸ್ರಹಸ್ತಚರಣಃ ಸಹಸ್ರಾರ್ಚಿರ್ಮಹಾಭುಜಃ ।। 9 ।। ದಂಷ್ಟ್ರಾಕರಾಲವದನಃ ಪ್ರದೀಪ್ತಾನಲಲೋಚನಃ । ತ್ರಿಶೂಲಕೃತ್ತಿವಸನೋ ಯೋಗಮೈಶ್ವರಮಾಸ್ಥಿತಃ ।। 10 ।। ಪೀತ್ವಾ ತತ್ಪರಮಾನಂದಂ ಪ್ರಭೂತಮಮೃತಂ ಸ್ವಯಮ್ । ಕರೋತಿ ತಾಂಡವಂ ದೇವೀಮಾಲೋಕ್ಯ ಪರಮೇಶ್ವರಃ ।। 11 ।। ಪೀತ್ವಾ ನೃತ್ಯಾಮೃತಂ ದೇವೀ ಭರ್ತುಃ ಪರಮಮಂಗಲಮ್ । ಯೋಗಮಾಸ್ಥಾಯ ದೇವಸ್ಯ ದೇಹಮಾಯಾತಿ ಶೂಲಿನಃ ।। 12 ।। ಸ ಭುಕ್ತ್ವಾ ತಾಂಡವರಸಂ ಸ್ವೇಚ್ಛಯೈವ ಪಿನಾಕಧೃಕ್ । ಜ್ಯೋತಿಃಸ್ವಭಾವಂ ಭಗವಾನ್ದಗ್ಧ್ವಾ ಬ್ರಹ್ಮಾಂಡಮಂಡಲಮ್ ।। 13 ।।

ಆಗ ಶಿವನು ದೇವತೆಗಳ ಶಿರಃಕಪಾಲಗಳಿಂದ ಮಾಡಿದ ಮಾಲಾ ಭೂಷಣವನ್ನು ಧರಿಸಿಕೊಂಡು, ಆದಿತ್ಯ-ಚಂದ್ರ ಮೊದಲಾದ ಗಣಪರಿವಾರದೊಂದಿಗೆ ಗಗನಮಂಡಲವನ್ನು ಆಚ್ಛಾದಿಸಿ ಶೋಭಿಸುತ್ತಾನೆ. ಆ ಮಹಾಭುಜ ದೇವ ಈಶ್ವರನು ಆಗ ಸಹಸ್ರನಯನನೂ, ಸಹಸ್ರಾಕ್ಷನೂ, ಸಹಸ್ರಹಸ್ತನೂ, ಸಹಸ್ರಚರಣನೂ, ಸಹಸ್ರ ಜ್ವಾಲಾಯುಕ್ತನೂ ಆಗಿ ಕಾಣುತ್ತಾನೆ. ತನ್ನ ಯೋಗೈಶ್ವರ್ಯಗಳನ್ನು ಆಶ್ರಯಿಸಿ ಅವನು ಕೋರೆದಾಡೆಗಳಿಂದ ವಿಕಾರ ಮುಖವುಳ್ಳವನೂ, ಅಗ್ನಿಯಂತೆ ಪ್ರಜ್ವಲಿಸುತ್ತಿರುವ ಕಣ್ಣುಗಳುಳ್ಳವನೂ, ತ್ರಿಶೂಲ-ಗಜಚರ್ಮಗಳನ್ನು ಧರಿಸಿದವನೂ ಆಗಿ ಕಾಣುತ್ತಾನೆ. ಸ್ವಯಂ ತನ್ನಿಂದಲೇ ಹುಟ್ಟಿದ ಆ ಪರಮಾನಂದವೆಂಬ ಅಮೃತವನ್ನು ಕುಡಿದು ಪರಮೇಶ್ವರನು ಪ್ರೀತಿಯಿಂದ ದೇವಿಯನ್ನು ನೋಡಿ ತಾಂಡವನೃತ್ಯವನ್ನು ಮಾಡುತ್ತಾನೆ. ದೇವಿಯು ಪತಿಯ ಪರಮಮಂಗಲವಾದ ಆ ನೃತ್ಯಾಮೃತವನ್ನು ಕುಡಿದು, ಯೋಗಶಕ್ತಿಯನ್ನು ಧರಿಸಿ, ದೇವ ಶೂಲಪಾಣಿಯ ಶರೀರದಲ್ಲಿ ಸೇರುತ್ತಾಳೆ. ಭಗವಾನ್ ಪಿನಾಕಧಾರಿಯು ಸ್ವೇಚ್ಛೆಯಿಂದಲೇ ಆ ತಾಂಡವರಸಸ್ವಾದವನ್ನು ಅನುಭವಿಸಿ ಜ್ಯೋತಿಃಸ್ವಭಾವದ ಬ್ರಹ್ಮಾಂಡ ಮಂಡಲವನ್ನು ದಹಿಸುತ್ತಾನೆ.

ಸಂಸ್ಥಿತೇಷ್ವಥ ದೇವೇಷು ಬ್ರಹ್ಮಾ ವಿಷ್ಣುಃಪಿನಾಕಧೃಕ್ । ಗುಣೈರಶೇಷೈಃ ಪೃಥಿವೀ ವಿಲಯಂ ಯಾತಿ ವಾರಿಷು ।। 14 ।। ಸ ವಾರಿತತ್ತ್ವಂ ಸಗುಣಂ ಗ್ರಸತೇ ಹವ್ಯವಾಹನಃ । ತೇಜಃ ಸ್ವಗುಣಸಂಯುಕ್ತಂ ವಾಯೌ ಸಂಯಾತಿ ಸಂಕ್ಷಯಮ್ ।। 15 ।। ಆಕಾಶೇ ಸಗುಣೇ ವಾಯುಃ ಪ್ರಲಯಂ ಯಾತಿ ವಿಶ್ವಭೃತ್ । ಭೂತಾದೌ ಚ ತಥಾಕಾಶೋ ಲೀಯತೇ ಗುಣಸಂಯುತಃ ।। 16 ।। ಇಂದ್ರಿಯಾಣಿ ಚ ಸರ್ವಾಣಿ ತೈಜಸೇ ಯಾಂತಿ ಸಂಕ್ಷಯಮ್ । ವೈಕಾರಿಕೋ ದೇವಗಣೈಃ ಪ್ರಲಯಂ ಯಾಂತಿ ಸತ್ತಮಾಃ ।। 17 ।। ತ್ರಿವಿಧೋಽಯಮಹಂಕಾರೋ ಮಹತಿ ಪ್ರಲಯಂ ವ್ರಜೇತ್ । ಮಹಾಂತಮೇಭಿಃ ಸಹಿತಂ ಬ್ರಹ್ಮಾಣಮತಿತೌಜಸಮ್ ।। 18 ।। ಅವ್ಯಕ್ತಂ ಜಗತೋ ಯೋನಿಃ ಸಂಹರೇದೇಕಮವ್ಯಯಮ್ ।। 19 ।। ಏವಂ ಸಂಹೃತ್ಯ ಭೂತಾನಿ ತತ್ತ್ವಾನಿ ಚ ಮಹೇಶ್ವರಃ । ವಿಯೋಜಯತಿ ಚಾನ್ಯೋನ್ಯಂ ಪ್ರಧಾನಂ ಪುರುಷಂ ಪರಮ್ ।। 20 ।। ಪ್ರಧಾನಪುಂಸೋರಜಯೋರೇಷ ಸಂಹಾರ ಈರಿತಃ । ಮಹೇಶ್ವರೇಚ್ಛಾಜನಿತೋ ನ ಸ್ವಯಂ ವಿದ್ಯತೇ ಲಯಃ ।। 21 ।।

ಹೀಗೆ ಬ್ರಹ್ಮ-ವಿಷ್ಣು-ಮಹೇಶ್ವರರು ಒಂದಾಗಲು, ಪೃಥ್ವಿಯು ತನ್ನ ಸಮಸ್ತ ಗುಣಗಳೊಂದಿಗೆ ಜಲದಲ್ಲಿ ವಿಲಯವನ್ನು ಹೊಂದುತ್ತದೆ. ಆ ವಾರಿತತ್ತ್ವವನ್ನು, ಅದರ ಗುಣಗಳೊಂದಿಗೆ, ಹವ್ಯವಾಹನನು ನುಂಗುತ್ತಾನೆ. ಸ್ವಗುಣಸಂಯುಕ್ತವಾದ ತೇಜಸ್ಸು ವಾಯುವನ್ನು ಪ್ರವೇಶಿಸಿ ಕ್ಷಯವಾಗುತ್ತದೆ. ವಿಶ್ವಭೃತ್ ವಾಯುವು ಅದರ ಗುಣಗಳೊಂದಿಗೆ ಆಕಾಶದಲ್ಲಿ ಲಯವಾಗುತ್ತದೆ. ತನ್ನ ಗುಣದೊಂದಿಗೆ ಆಕಾಶವು ಭೂತಾದಿ ಅಥವಾ ಅಹಂಕಾರ ತತ್ತ್ವದಲ್ಲಿ ಲೀನವಾಗುತ್ತದೆ. ಸತ್ತಮರೇ! ಸರ್ವ ಇಂದ್ರಿಯಗಳೂ ತೇಜಸಾಹಂಕಾರದಲ್ಲಿ ಕ್ಷಯಹೊಂದುತ್ತವೆ. ದೇವಗಣಗಳು ವೈಕಾರಿಕ ಅಹಂಕಾರದಲ್ಲಿ ಲಯಹೊಂದುತ್ತವೆ. ತ್ರಿಗುಣ ಯುಕ್ತವಾದ ಅಹಂಕಾರವು ಮಹತ್ತಿನಲ್ಲಿ ಪ್ರಲಯವಾಗುತ್ತದೆ. ಇವುಗಳ ಸಹಿತ ಮಹತ್ತತ್ತ್ವವು ಅಮಿತೌಜಸ ಅವ್ಯಕ್ತ ಜಗದ್ಯೋನಿ ಏಕ ಅವ್ಯಯ ಬ್ರಹ್ಮತತ್ತ್ವವಾಗುತ್ತದೆ. ಹೀಗೆ ಮಹೇಶ್ವರನು ಎಲ್ಲ ಭೂತಗಳನ್ನೂ ಮತ್ತು ತತ್ತ್ವಗಳನ್ನೂ ಸಂಹರಿಸಿ ನಂತರ ಪ್ರಧಾನವಾದ ಪ್ರಕೃತಿಯನ್ನು ಮತ್ತು ಪರಮ ಪುರುಷನನ್ನು ಪರಸ್ಪರರಿಂದ ಬೇರ್ಪಡಿಸುತ್ತಾನೆ. ಅಜವಾದ (ಹುಟ್ಟಿಲ್ಲದ) ಪ್ರಧಾನ (ಪ್ರಕೃತಿ)-ಪುರುಷರ ಕುರಿತು ಹೇಳಿರುವ ಈ ಸಂಹಾರವು ಮಹೇಶ್ವರನ ಇಚ್ಛೆಯಿಂದ ಆಗುವುದೇ ಹೊರತು ಅವುಗಳಿಗೆ ಸ್ವತಃ ಅನುಭವಿಸುವ ಲಯವಿಲ್ಲ.

ಗುಣಸಾಮ್ಯಂ ತದವ್ಯಕ್ತಂ ಪ್ರಕೃತಿಃ ಪರಿಗೀಯತೇ । ಪ್ರಧಾನಂ ಜಗತೋ ಯೋನಿರ್ಮಾಯಾತತ್ತ್ವಮಚೇತನಮ್ ।। 22 ।। ಕೂಟಸ್ಥಶ್ಚಿನ್ಮಯೋ ಹ್ಯಾತ್ಮಾ ಕೇವಲಃ ಪಂಚವಿಂಶಕಃ । ಗೀಯತೇ ಮುನಿಭಿಃ ಸಾಕ್ಷೀ ಮಹಾನೇಷ ಪಿತಾಮಹಃ ।। 23 ।।

ಜಗತ್ತಿನ ಮೂಲಕಾರಣವೂ, ಅಚೇತನವೂ ಆದ ಸತ್ತ್ವ-ರಜಸ್ಸು-ತಮೋ ಗುಣಗಳ ಸಾಮ್ಯವನ್ನು ಅವ್ಯಕ್ತ, ಪ್ರಕೃತಿ, ಮಾಯಾತತ್ತ್ವ ಮತ್ತು ಪ್ರಧಾನ ಎಂದು ಅನೇಕ ಸಂಕೇತಗಳಿಂದ ಕರೆಯುತ್ತಾರೆ. ಕೂಟದಂತೆ ನಿರ್ವಿಕಾರನೂ, ಚೈತನ್ಯಮಯನೂ, ಆತ್ಮಸ್ವರೂಪನೂ, ಸಾಕ್ಷಿರೂಪನೂ ಆದ ಪುರುಷನನ್ನು ಮುನಿಗಳು ಇಪ್ಪತ್ತೈದನೇ ತತ್ತ್ವವೆಂದು ಪರಿಗಣಿಸಿದ್ದಾರೆ. ಅವನೇ ಈ ಮಹಾನ್ ಪಿತಾಮಹನು.

ಏವಂ ಸಂಹಾರಶಕ್ತಿಶ್ಚ ಶಕ್ತಿರ್ಮಾಹೇಶ್ವರೀ ಧ್ರುವಾ । ಪ್ರಧಾನಾದ್ಯಂ ವಿಶೇಷಾಂತಂ ದೇಹೇ ರುದ್ರ ಇತಿ ಶ್ರುತಿಃ ।। 24 ।। ಯೋಗಿನಾಮಥ ಸರ್ವೇಷಾಂ ಜ್ಞಾನವಿನ್ಯಸ್ತಚೇತಸಾಮ್ । ಆತ್ಯಂತಿಕಂ ಚೈವ ಲಯಂ ವಿದಧಾತೀಹ ಶಂಕರಃ ।। 25 ।।

ಹೀಗೆ ನಡೆಯುವ ಸಂಹಾರದ ಸಾಮರ್ಥ್ಯವು ಶಾಶ್ವತನಾದ ಮಹೇಶ್ವರನಿಗೆ ಅಧೀನವಾದ ಶಕ್ತಿಯು. ಪ್ರಧಾನತತ್ತ್ವದ ಮೊದಲ್ಗೊಂಡು ವಿಕಾರಪರ್ಯಂತವಾದ ಸಂಪೂರ್ಣ ತತ್ತ್ವರಾಶಿಯು ರುದ್ರನ ದೇಹದಲ್ಲಿ ಅಡಗಿದೆಯೆಂದು ಶ್ರುತಿಯಲ್ಲಿದೆ. ನಂತರ ಶಂಕರನು ಜ್ಞಾನನಿಷ್ಠ ಚೇತಸರಾದ ಸರ್ವ ಯೋಗಿಗಳಿಗೆ ಆತ್ಯಂತಿಕ ಲಯವೆಂಬ ಮೋಕ್ಷವನ್ನು ಅನುಗ್ರಹಿಸುತ್ತಾನೆ.

ಇತ್ಯೇಷ ಭಗವಾನ್ ರುದ್ರಃ ಸಂಹಾರಂ ಕುರುತೇ ವಶೀ । ಸ್ವಾಪಿಕಾ ಮೋಹನೀ ಶಕ್ತಿರ್ನಾರಾಯಣ ಇತಿ ಶ್ರುತಿಃ ।। 26 ।। ಹಿರಣ್ಯಗರ್ಭೋ ಭಗವಾನ್ ಜಗತ್ಸದಸದಾತ್ಮಕಮ್ । ಸೃಜೇದಶೇಷಂ ಪ್ರಕೃತೇಸ್ತನ್ಮಯಃ ಪಂಚವಿಂಶಕಃ ।। 27 ।। ಸರ್ವಜ್ಞಾಃ[2] ಸರ್ವಗಾಃ ಶಾಂತಾ ಸ್ವಾತ್ಮನ್ಯೇವ ವ್ಯವಸ್ಥಿತಾಃ । ಶಕ್ತಯೋ ಬ್ರಹ್ಮವಿಷ್ಣ್ವೀಶಾ ಭುಕ್ತಿಮುಕ್ತಿಫಲಪ್ರದಾಃ ।। 28 ।। ಸರ್ವೇಶ್ವರಾಃ ಸರ್ವವಂದ್ಯಾಃ[3] ಶಾಶ್ವತಾನಂತಭೋಗಿನಃ ।। 29 ।। ಏಕಮೇವಾಕ್ಷರಂ ತತ್ತ್ವಂ ಪುಂಪ್ರಧಾನೇಶ್ವರಾತ್ಮಕಮ್ । ಅನ್ಯಾಶ್ಚ ಶಕ್ತಯೋ ದಿವ್ಯಾಸ್ತತ್ರ ಸಂತಿ ಸಹಸ್ರಶಃ ।। 30 ।। ಇಜ್ಯಂತೇ[4] ವಿವಿಧೈರ್ಯಜ್ಞೈಃ ಶಕ್ರಾದಿತ್ಯಾದಯೋಽಮರಾಃ ।। 31 ।। ಏಕೈಕಸ್ಯಾಃ ಸಹಸ್ರಾಣಿ ದೇಹಾನಾಂ ವೈ ಶತಾನಿ ಚ । ಕಥ್ಯಂತೇ ಚೈವ ಮಾಹಾತ್ಮ್ಯಾಚ್ಛಕ್ತಿರೇಕೈವ ನಿರ್ಗುಣಾಃ ।। 32 ।।

ಹೀಗೆ ಭಗವಾನ್ ರುದ್ರನು ಸ್ವತಂತ್ರನಾಗಿ ಸಂಹಾರಕಾರ್ಯವನ್ನು ಮಾಡುತ್ತಾನೆ. ಸರ್ವರಿಗೂ ಸ್ವಪ್ನ-ಮೋಹವನ್ನುಂಟು ಮಾಡುವವನು ನಾರಾಯಣನೆಂದು ಶ್ರುತಿಯಿದೆ. ಇಪ್ಪತ್ತೈದನೇ ತತ್ತ್ವನಾದ ಭಗವಾನ್ ಹಿರಣ್ಯಗರ್ಭನು ಪ್ರಕೃತಿಯ ಸಹಾಯದಿಂದ ಸತ್-ಅಸತ್ ರೂಪವಾದ ಸಕಲ ಜಗತ್ತನ್ನೂ ಸೃಷ್ಟಿಮಾಡುತ್ತಾನೆ.  ತಮ್ಮ ಆತ್ಮನಲ್ಲಿ ವ್ಯವಸ್ಥಿತರಾದ ಸರ್ವಜ್ಞ, ಸರ್ವದರಲ್ಲಿಯೂ ಇರುವ, ಶಾಂತಸ್ವರೂಪರಾದ ಬ್ರಹ್ಮ-ವಿಷ್ಣು-ಈಶ ಶಕ್ತಿಗಳು ಭಕ್ತಿ-ಮುಕ್ತಿ ಫಲವನ್ನು ನೀಡುತ್ತವೆ. ಅವರು ಸರ್ವೇಶ್ವರರು, ಸರ್ವವಂದ್ಯರು, ಶಾಶ್ವತವಾದ ಮತ್ತು ಅನಂತವಾದ ಭೋಗಿಗಳು. ಅಕ್ಷರವಾದ ಮತ್ತು ಅದ್ವಿತೀಯವಾದ ಒಂದೇ ತತ್ತ್ವವೇ ಪುರುಷ-ಪ್ರಧಾನ-ಈಶ್ವರರೆಂಬ ವಿಭಾಗರೂಪವನ್ನು ಹೊಂದಿದೆ. ಅದರಲ್ಲಿಯೇ ಸಹಸ್ರಾರು ಅನ್ಯ ಶಕ್ತಿಗಳೂ ಅಂತರ್ಗತವಾಗಿವೆ. ಹೀಗೆ ಶಕ್ರ, ಆದಿತ್ಯ ಮೊದಲಾದ ಅಮರರ ರೂಪಗಳಲ್ಲಿರುವ ಈ ಶಕ್ತಿಗಳನ್ನು ವಿವಿಧ ಯಜ್ಞಗಳ ಮೂಲಕ ಆರಾಧಿಸುತ್ತಾರೆ. ಈ ಶಕ್ತಿಗಳಲ್ಲಿ ಒಂದೊಂದಕ್ಕೂ ನೂರಾರು ಸಹಸ್ರಾರು ದೇಹಗಳಿರುತ್ತವೆ. ಇವು ಮಾಹಾತ್ಮ್ಯವಿಶೇಷದಿಂದ ವಿಸ್ತಾರಗೊಳ್ಳುವ ವಿಭೂತಿಗಳು. ವಾಸ್ತವಿಕವಾಗಿ ಶಕ್ತಿಯು ಅದ್ವಿತೀಯವೂ ನಿರ್ಗುಣವೂ ಆಗಿರುವುದು.

ತಾಂ ಶಕ್ತಿಂ ಸ್ವಯಮಾಸ್ಥಾಯ ಸ್ವಯಂ ದೇವೋ ಮಹೇಶ್ವರಃ । ಕರೋತಿ ವಿವಿಧಾನ್ದೇಹಾನ್ ಗ್ರಸತೇ[5] ಚೈವ ಲೀಲಯಾ ।। 33 ।। ಇಜ್ಯತೇ ಸರ್ವಯಜ್ಞೇಷು ಬ್ರಾಹ್ಮಣೈರ್ವೇದವಾದಿಭಿಃ । ಸರ್ವಕಾಮಪ್ರದೋ ರುದ್ರ ಇತ್ಯೇಷಾ ವೈದಿಕೀ ಶ್ರುತಿಃ ।। 34 ।। ಸರ್ವಾಸಾಮೇವ ಶಕ್ತೀನಾಂ ಬ್ರಹ್ಮವಿಷ್ಣುಮಹೇಶ್ವರಾಃ । ಪ್ರಾಧಾನ್ಯೇನ ಸ್ಮೃತಾ ದೇವಾಃ ಶಕ್ತಯಃ ಪರಮಾತ್ಮನಃ ।। 35 ।। ಆಭ್ಯಃ ಪರಸ್ತಾದ್ಭಗವಾನ್ ಪರಮಾತ್ಮಾ ಸನಾತನಃ । ಗೀಯತೇ ಸರ್ವಶಕ್ತ್ಯಾತ್ಮಾ[6] ಶೂಲಪಾಣಿರ್ಮಹೇಶ್ವರಃ ।। 36 ।। ಏನಮೇಕೇ ವದಂತ್ಯಗ್ನಿಂ ನಾರಾಯಣಮಥಾಪರೇ । ಇಂದ್ರಮೇಕೇ ಪರೇ ಪ್ರಾಣಂ ಬ್ರಹ್ಮಾಣಮಪರೇ ಜಗುಃ ।। 37 ।। ಬ್ರಹ್ಮವಿಷ್ಣ್ವಗ್ನಿವರುಣಾಃ ಸರ್ವೇ ದೇವಾಸ್ತಥರ್ಷಯಃ । ಏಕಸ್ಯೈವಾಥ ರುದ್ರಸ್ಯ ಭೇದಾಸ್ತೇ ಪರಿಕೀರ್ತಿತಾಃ ।। 38 ।। ಯಂ ಯಂ ಭೇದಂ ಸಮಾಶ್ರಿತ್ಯ ಯಜಂತಿ ಪರಮೇಶ್ವರಮ್ । ತತ್ತದ್ರೂಪಂ ಸಮಾಸ್ಥಾಯ ಪ್ರದದಾತಿ ಫಲಂ ಶಿವಃ ।। 39 ।। ತಸ್ಮಾದೇಕತರಂ ಭೇದಂ ಸಮಾಶ್ರಿತ್ಯಾಪಿ ಶಾಶ್ವತಮ್ । ಆರಾಧಯನ್ಮಹಾದೇವಂ ಯಾತಿ ತತ್ಪರಮಂ ಪದಮ್ ।। 40 ।। ಕಿಂತು ದೇವಂ ಮಹಾದೇವಂ ಸರ್ವಶಕ್ತಿಂ ಸನಾತನಮ್ । ಆರಾಧಯೇಹ ಗಿರಿಶಂ ಸಗುಣಂ ವಾಥ ನಿರ್ಗುಣಮ್ ।। 41 ।।

ಆ ಶಕ್ತಿಯನ್ನು ತಾನು ವಶೀಕರಿಸಿಕೊಂಡು, ಸ್ವಯಂ ದೇವ ಮಹೇಶ್ವರನು, ಲೀಲೆಯಿಂದ ವಿವಿಧ ದೇಹಗಳನ್ನು ಸೃಷ್ಟಿಸುತ್ತಾನೆ ಮತ್ತು ನುಂಗುತ್ತಾನೆ. ವೇದವಾದಿ ಬ್ರಾಹ್ಮಣರು ಸರ್ವಯಜ್ಞಗಳಲ್ಲಿ ರುದ್ರನನ್ನು ಪೂಜಿಸುತ್ತಾರೆ. ರುದ್ರನು ಸರ್ವಕಾಮಪ್ರದನು ಎಂದು ವೇದಗಳಲ್ಲಿ ಕೇಳಿಬರುತ್ತದೆ. ಪರಮಾತ್ಮನ ಸರ್ವ ಶಕ್ತಿಗಳಲ್ಲಿ ದೇವರಾದ ಬ್ರಹ್ಮ-ವಿಷ್ಣು-ಮಹೇಶ್ವರರು ಪ್ರಧಾನ ಶಕ್ತಿಗಳೆಂದು ಸ್ಮರಿಸಲ್ಪಟ್ಟಿವೆ. ಈ ಮೂವರಲ್ಲಿ ಪರಮಾತ್ಮಾ, ಸನಾತನ, ಶೂಲಪಾಣಿ, ಭಗವಾನ್ ಮಹೇಶ್ವರನು ಸರ್ವಶಕ್ತ್ಯಾತ್ಮನು ಎಂದು ಹಾಡಿದ್ದಾರೆ. ಇವನನ್ನೇ ಕೆಲವರು ಅಗ್ನಿಯೆಂದೂ, ಇನ್ನು ಕೆಲವರು ನಾರಾಯಣನೆಂದೂ, ಕೆಲವರು ಇಂದ್ರನೆಂದೂ, ಪ್ರಾಣನೆಂದೂ, ಇನ್ನು ಕೆಲವರು ಬ್ರಹ್ಮನೆಂದೂ ಪೂಜಿಸುತ್ತಾರೆ. ಬ್ರಹ್ಮ, ವಿಷ್ಣು, ಅಗ್ನಿ, ವರುಣ ಮೊದಲಾದ ಸಮಸ್ತ ದೇವತೆಗಳೂ ಮತ್ತು ಋಷಿಗಳೂ ಒಬ್ಬನೇ ಆಗಿರುವ ರುದ್ರನ ಭೇದಗಳೆಂದು ಕೀರ್ತಿಸಲ್ಪಟ್ಟಿವೆ. ಯಾವ ಯಾವ ಭೇದವನ್ನು ಆಶ್ರಯಿಸಿ ಪರಮೇಶ್ವರನನ್ನು ಅರ್ಚಿಸುತ್ತಾನೋ ಆಯಾ ರೂಪವನ್ನೇ ತಾಳಿ ಶಿವನು ಫಲವನ್ನು ಕೊಡುತ್ತಾನೆ. ಆದ್ದರಿಂದ ಮಹಾದೇವನ ಯಾವುದಾದರೊಂದು ಅಂಶವನ್ನಾದರೂ ಆಶ್ರಯಿಸಿ ಆರಾಧಿಸುವುದರಿಂದ ಶಾಶ್ವತವಾದ ಪರಮ ಪದವನ್ನು ಪಡೆಯುತ್ತಾನೆ. ಆದರೆ ಸರ್ವಶಕ್ತಿಯುತನೂ ಸನಾತನನೂ ಆದ ದೇವ ಮಹಾದೇವ ಗಿರೀಶನನ್ನು ಸಗುಣ ಅಥವಾ ನಿರ್ಗುಣನಾಗಿ ಆರಾಧಿಸಬೇಕು.

ಮಯಾ ಪ್ರೋಕ್ತೋ ಹಿ ಭವತಾಂ ಯೋಗಃ ಪ್ರಾಗೇವ ನಿರ್ಗುಣಃ । ಆರುರುಕ್ಷುಸ್ತು ಸಗುಣಂ ಪೂಜಯೇತ್ ಪರಮೇಶ್ವರಮ್ ।। 42 ।। ಪಿನಾಕಿನಂ ತ್ರಿನಯನಂ ಜಟಿಲಂ ಕೃತ್ತಿವಾಸಸಮ್ । ರುಕ್ಮಾಭಂ ವಾ ಸಹಸ್ರಾರ್ಕಾಚ್ಚಿಂತಯೇದ್ವೈದಿಕೀ ಶ್ರುತಿಃ ।। 43 ।। ಏಷ ಯೋಗಃ ಸಮುದ್ದಿಷ್ಟಃ ಸಬೀಜೋ ಮುನಿಪುಂಗವಾಃ । ಅತ್ರಾಪ್ಯಶಕ್ತೋಽಥ ಹರಂ ವಿಷ್ಣುಂ ಬ್ರಹ್ಮಾಣಮರ್ಚಯೇತ್ ।। 44 ।। ಅಥ ಚೇದಸಮರ್ಥಃ ಸ್ಯಾತ್ತತ್ರಾಪಿ ಮುನಿಪುಂಗವಾಃ । ತತೋ ವಾಯ್ವಗ್ನಿಶಕ್ರಾದೀನ್ ಪೂಜಯೇದ್ಭಕ್ತಿಸಂಯುತಃ ।। 45 ।। ತಸ್ಮಾತ್ಸರ್ವಾನ್ ಪರಿತ್ಯಜ್ಯ ದೇವಾನ್ ಬ್ರಹ್ಮಪುರೋಗಮಾನ್ । ಆರಾಧಯೇದ್ವಿರೂಪಾಕ್ಷಮಾದಿಮಧ್ಯಾಂತಸಂಸ್ಥಿತಮ್ ।। 46 ।। ಭಕ್ತಿಯೋಗಸಮಾಯುಕ್ತಃ ಸ್ವಧರ್ಮನಿರತಃ ಶುಚಿಃ । ತಾದೃಶಂ ರೂಪಮಾಸ್ಥಾಯ ಆಸಾದ್ಯಾತ್ಯಂತಿಕಂ ಶಿವಮ್ ।। 47 ।। ಏಷ ಯೋಗಃ ಸಮುದ್ದಿಷ್ಟಃ ಸಬೀಜೋಽತ್ಯಂತಭಾವನಃ । ಯಥಾವಿಧಿ ಪ್ರಕುರ್ವಾಣಃ ಪ್ರಾಪ್ನುಯಾತ್ಪದಮೈಶ್ವರಮ್ ।। 48 ।।

ಈ ಹಿಂದೆಯೇ ನಾನು ನಿಮಗೆ ನಿರ್ಗುಣಯೋಗದ ಕುರಿತು ಹೇಳಿದ್ದೇನೆ. ಚಿತ್ತಶುದ್ಧಿಯ ಮೂಲಕ ನಿರ್ಗುಣ ಉಪಾಸನೆಗೆ ಯೋಗ್ಯತೆಯನ್ನು ಪಡೆದುಕೊಳ್ಳ ಬಯಸುವವರು ಸಗುಣನಾದ ಪರಮೇಶ್ವರನನ್ನು ಪೂಜಿಸಬೇಕು. ಪಿನಾಕವೆಂಬ ಧನುಸ್ಸನ್ನು ಹಿಡಿದಿರುವವನೂ, ತ್ರಿನಯನನೂ, ಜಟಾಧರನೂ, ಗಜಚರ್ಮಾಂಬರಧಾರಿಯೂ, ಸಹಸ್ರ ಸೂರ್ಯಬಿಂಬಗಳಿಂದ ಅಧಿಕ ಜ್ಯೋತಿರ್ಮಯನಾಗಿಯೂ ಇರುವ ಮಹೇಶ್ವರನನ್ನು ಧ್ಯಾನಿಸಬೇಕೆಂದು ವೇದಗಳಲ್ಲಿ ಕೇಳಿಬರುತ್ತದೆ. ಮುನಿಪುಂಗವರೇ! ಹೀಗೆ ಸಬೀಜಯೋಗವೆಂಬ ಸಗುಣ ಮೂರ್ತಿಯ ಉಪಾಸನೆಯ ಕುರಿತು ಹೇಳಿದೆ. ಇಲ್ಲಿಯೂ ಕೂಡ ಅಶಕ್ತನಾದವನು ಹರ-ವಿಷ್ಣು-ಬ್ರಹ್ಮರಲ್ಲಿ ಯಾರೊಬ್ಬನನ್ನಾದರೂ ಅರ್ಚಿಸಬೇಕು. ಮುನಿಪುಂಗವರೇ! ಅದೂ ಕೂಡ ಸಾಧ್ಯವಾಗದೇ ಇದ್ದಲ್ಲಿ ವಾಯು, ಅಗ್ನಿ, ಇಂದ್ರ ಮೊದಲಾದವರನ್ನು ಭಕ್ತಿಯುಕ್ತರಾಗಿ ಪೂಜಿಸಬೇಕು. ಆದ್ದರಿಂದ ಬ್ರಹ್ಮನೇ ಮೊದಲಾದ ಸರ್ವ ದೇವತೆಗಳನ್ನೂ ಪರಿತ್ಯಜಿಸಿ ಆದಿ-ಮಧ್ಯ-ಅಂತ್ಯಗಳಲ್ಲಿರುವ ವಿರೂಪಾಕ್ಷನನ್ನು ಆರಾಧಿಸಬೇಕು. ಭಕ್ತಿಯೋಗ ಸಮಾಯುಕ್ತನಾಗಿ, ಸ್ವಧರ್ಮನಿರತನಾಗಿ, ಶುಚಿಯಾಗಿ ಆದಿಮಧ್ಯಾಂತ ರೂಪನಾದ ಶಿವನನ್ನು ಧ್ಯಾನಿಸಬೇಕು. ಅತ್ಯಂತಭಾವದ ಈ ಸಬೀಜ ಯೋಗವನ್ನು ಯಥಾವಿಧಿಯಾಗಿ ಮಾಡುವವನು ಈಶ್ವರತ್ವವನ್ನು ಪಡೆಯುತ್ತಾನೆ.

ದ್ವೇ ಚಾನ್ಯೇ ಭಾವನೇ ಶುದ್ಧೇ ಪ್ರಾಗುಕ್ತೇ ಭವತಾಮಿಹ । ಅಥಾಪಿ ಕಥಿತೋ ಯೋಗೋ ನಿರ್ಬೀಜಶ್ಚ ಸಬೀಜಕಃ ।। 49 ।। ಜ್ಞಾನಂ ತದುಕ್ತಂ ನಿರ್ಬೀಜಂ ಪೂರ್ವಂ ಹಿ ಭವತಾಂ ಮಯಾ । ವಿಷ್ಣುಂ ರುದ್ರಂ ವಿರಂಚಿಂ ಚ ಸಬೀಜೇ ಸಾಧಯೇದ್ಬುಧಃ ।। 50 ।। ಅಥ ವಾಯ್ವಾದಿಕಾನ್ದೇವಾಂಸ್ತತ್ಪರೋ ನಿಯತಾತ್ಮವಾನ್ । ಪೂಜಯೇತ್ಪುರುಷಂ ವಿಷ್ಣುಂ ಚತುರ್ಮೂರ್ತಿಧರಂ ಹರಿಮ್ ।। 51 ।। ಅನಾದಿನಿಧನಂ ದೇವಂ ವಾಸುದೇವಂ ಸನಾತನಮ್ । ನಾರಾಯಣಂ ಜಗದ್ಯೋನಿಮಾಕಾಶಂ ಪರಮಂ ಪದಮ್ ।। 52 ।। ತಲ್ಲಿಂಗಧಾರೀ ನಿಯತಂ ತದ್ಯುಕ್ತಸ್ತದುಪಾಶ್ರಯಃ । ಏಷ ಏವ ವಿಧಿರ್ವಾ ಸ್ವಭಾವನೇ ಚಾಂತಿಮೇ ಮತಃ ।। 53 ।। ಇತ್ಯೇತತ್ಕಥಿತಂ ಜ್ಞಾನಂ ಭಾವನಾಸಂಶ್ರಯಂ ಪರಮ್ । ಇಂದ್ರದ್ಯುಮ್ನಾಯ ಮುನಯೇ ಕಥಿತಂ ಯನ್ಮಯಾ ಪುರಾ ।। 54 ।। ಅವ್ಯಕ್ತಾತ್ಮಕಮೇವೇದಂ ಚೇತನಾಚೇತನಂ ಜಗತ್ । ತದೀಶ್ವರಃ ಪರಂ ಬ್ರಹ್ಮ ತಸ್ಮಾದ್ಬ್ರಹ್ಮಮಯಂ ಜಗತ್ ।। 55 ।।

ನಾನು ನಿಮಗೆ ಈ ಮೊದಲೇ ಪರಸ್ಪರ ವಿವಿಧ ಭಾವಗಳಿರುವ ನಿರ್ಬೀಜ ಮತ್ತು ಸಬೀಜ ಎನ್ನುವ ಎರಡು ಶುದ್ಧ ಯೋಗಗಳ ಕುರಿತು ಹೇಳಿದ್ದೇನೆ. ನಿರ್ಬೀಜಯೋಗವೆಂದರೆ ಜ್ಞಾನವೆಂದೂ ನಾನು ಈ ಮೊದಲೇ ಹೇಳಿದ್ದೇನೆ. ವಿಷ್ಣು, ರುದ್ರ, ಬ್ರಹ್ಮರ ಉಪಾಸನೆಯು ಸಬೀಜಯೋಗ ಎಂದು ತಿಳಿದವರು ಹೇಳುತ್ತಾರೆ. ಅಥವಾ ತತ್ಪರನಾಗಿ ಮತ್ತು ನಿಯತಾತ್ಮನಾಗಿ ವಾಯ್ವಾದಿ ದೇವತೆಗಳನ್ನು ಪೂಜಿಸಬೇಕು. ಚತುರ್ಮೂರ್ತಿಧರನಾದ ಪುರುಷ ಹರಿ ವಿಷ್ಣು, ಅನಾದಿನಿಧನ,  ದೇವ, ವಾಸುದೇವ, ಸನಾತನ, ಜಗದ್ಯೋನಿ, ಆಕಾಶ, ಪರಮಪದ ನಾರಾಯಣನನ್ನು ಪೂಜಿಸಬೇಕು. ಆಯಾಯಾ ದೇವತೆಗಳನ್ನು ಅರ್ಚಿಸುವವನು ಆಯಾಯಾ ದೇವತೆಗಳ ಲಕ್ಷಣಗಳನ್ನು ಧರಿಸಿದವನೂ, ನಿಯತನಾಗಿಯೂ, ಆ ದೇವತೆಯನ್ನು ಉಪಾಶ್ರಯಿಸಿಯೂ ಆರಾಧಿಸಬೇಕು. ಭಾವನಾರೂಪವಾದ ಕಡೆಯ ಧ್ಯಾನಮಾರ್ಗದಲ್ಲಿ ಈ ವಿಧಿಯು ಸಮ್ಮತವಾಗಿದೆ. ಉಪಾಸನಾ ಮಾರ್ಗವನ್ನು ಅವಲಂಬಿಸಿರುವ ಉತ್ಕೃಷ್ಟವಾದ ಈ ಸಗುಣ ಜ್ಞಾನಮಾರ್ಗವನ್ನು ಹೇಳಿದ್ದೇನೆ. ಮುನಿಗಳೇ! ಇದನ್ನು ನಾನು ಹಿಂದೆ ಇಂದ್ರದ್ಯುಮ್ನನಿಗೆ ಹೇಳಿದ್ದೆನು. ಚೇತನ-ಅಚೇತನ ರೂಪಗಳನ್ನು ಹೊಂದಿರುವ ಈ ಜಗತ್ತು ಅವ್ಯಕ್ತದಲ್ಲಿ ಅಭೇದದಿಂದ ಇರುತ್ತದೆ. ಆ ಅವ್ಯಕ್ತತತ್ತ್ವವೇ ಪರಬ್ರಹ್ಮನು. ಆದ್ದರಿಂದ ಜಗತ್ತು ಬ್ರಹ್ಮಮಯವೆಂದು ಸಿದ್ಧವಾಗುತ್ತದೆ.””

ಸೂತ ಉವಾಚ । ಏತಾವದುಕ್ತ್ವಾ ಭಗವಾನ್ವಿರರಾಮ ಜನಾರ್ದನಃ । ತುಷ್ಟುವುರ್ಮುನಯೋ ವಿಷ್ಣುಂ ಶುಕ್ರೇಣ ಸಹ ಮಾಧವಮ್ ।। 56 ।।

ಸೂತನು ಹೇಳಿದನು: ಹೀಗೆ ಹೇಳಿ ಭಗವಾನ್ ಜನಾರ್ದನನು ಸುಮ್ಮನಾದನು. ಶುಕ್ರನೊಂದಿಗೆ ಮುನಿಗಳು ಮಾಧವ ವಿಷ್ಣುವನ್ನು ಸ್ತುತಿಸಿದರು.

ಮುನಯ ಊಚುಃ । ನಮಸ್ತೇ ಕೂರ್ಮರೂಪಾಯ ವಿಷ್ಣವೇ ಪರಮಾತ್ಮನೇ । ನಾರಾಯಣಾಯ ವಿಶ್ವಾಯ ವಾಸುದೇವಾಯ ತೇ ನಮಃ ।। 57 ।। ನಮೋ ನಮಸ್ತೇ ಕೃಷ್ಣಾಯ ಗೋವಿಂದಾಯ ನಮೋ ನಮಃ । ಮಾಧವಾಯ ಚ ತೇ ನಿತ್ಯಂ ನಮೋ ಯಜ್ಞೇಶ್ವರಾಯ ಚ ।। 58 ।। ಸಹಸ್ರಶಿರಸೇ ತುಭ್ಯಂ ಸಹಸ್ರಾಕ್ಷಾಯ ತೇ ನಮಃ । ನಮಃ ಸಹಸ್ರಹಸ್ತಾಯ ಸಹಸ್ರಚರಣಾಯ ಚ ।। 59 ।। ಓಂ ನಮೋ ಜ್ಞಾನರೂಪಾಯ ವಿಷ್ಣವೇ ಪರಮಾತ್ಮನೇ । ಆನಂದಾಯ ನಮಸ್ತುಭ್ಯಂ ಮಾಯಾತೀತಾಯ ತೇ ನಮಃ ।। 60 ।। ನಮೋ ಗೂಢಶರೀರಾಯ ನಿರ್ಗುಣಾಯ ನಮೋಽಸ್ತು ತೇ । ಪುರುಷಾಯ ಪುರಾಣಾಯ ಸತ್ತಾಮಾತ್ರಸ್ವರೂಪಿಣೇ ।। 61 ।। ನಮಃ ಸಾಂಖ್ಯಾಯ ಯೋಗಾಯ ಕೇವಲಾಯ ನಮೋಽಸ್ತು ತೇ । ಧರ್ಮಜ್ಞಾನಾಧಿಗಮ್ಯಾಯ ನಿಷ್ಕಲಾಯ ನಮೋ ನಮಃ ।। 62 ।। ನಮಸ್ತೇ ಯೋಗತತ್ತ್ವಾಯ ಮಹಾಯೋಗೇಶ್ವರಾಯ ಚ । ಪರಾವರಾಣಾಂ ಪ್ರಭವೇ ವೇದವೇದ್ಯಾಯ ತೇ ನಮಃ ।। 63 ।।

ಮುನಿಗಳು ಹೇಳಿದರು: ಕೂರ್ಮರೂಪನೇ! ವಿಷ್ಣವೇ! ಪರಮಾತ್ಮನೇ! ನಿನಗೆ ನಮಸ್ಕಾರ! ವಿಶ್ವ, ನಾರಾಯಣ, ವಾಸುದೇವ! ನಿನಗೆ ನಮಸ್ಕಾರ! ಕೃಷ್ಣನಿಗೆ ನಮೋ ನಮಃ! ಗೋವಿಂದನಿಗೆ ನಮೋ ನಮಃ! ಮಾಧವ! ನಿತ್ಯ! ಯಜ್ಞೇಶ್ವರ! ನಿನಗೆ ನಮಸ್ಕಾರ! ಸಹಸ್ರಶಿರಗಳುಳ್ಳವನೇ! ಸಹಸ್ರಾಕ್ಷನೇ! ನಿನಗೆ ನಮಸ್ಕಾರ! ಸಹಸ್ರಹಸ್ತ! ಸಹಸ್ರಚರಣ! ನಿನಗೆ ನಮಸ್ಕಾರ! ಓಂಕಾರ ಸ್ವರೂಪಿಯಾದ ಜ್ಞಾನರೂಪೀ ವಿಷ್ಣು ಪರಮಾತ್ಮನಿಗೆ ನಮಸ್ಕಾರ! ಆನಂದನಿಗೆ ನಮಸ್ಕಾರ! ಮಾಯಾತೀತನಿಗೆ ನಮಸ್ಕಾರ! ಗೂಢಶರೀರಿಗೆ ನಮಸ್ಕಾರ! ನಿರ್ಗುಣನಿಗೆ ನಮಸ್ಕಾರ! ಪುರಾಣ ಪುರುಷನಿಗೆ ನಮಸ್ಕಾರ! ಸತ್ತಾಮಾತ್ರ ಸ್ವರೂಪಿಣಿಗೆ ನಮಸ್ಕಾರ! ತತ್ತ್ವಜ್ಞಾನನಿಷ್ಠೆಯಿಂದ ವೇದ್ಯನೂ, ಯೋಗಿಗಳಿಗೆ ವೇದ್ಯನೂ ಆದ ಕೇವಲನಿಗೆ ನಮಸ್ಕಾರ! ಧರ್ಮ-ಜ್ಞಾನಗಳಿಂದ ದೊರಕಬಲ್ಲ ನಿಷ್ಕಲನಿಗೆ ನಮೋ ನಮಃ! ಯೋಗತತ್ತ್ವನಿಗೆ ನಮಸ್ಕಾರ! ಮಹಾಯೋಗೇಶ್ವರನಿಗೆ ನಮಸ್ಕಾರ! ಪರಾವರಗಳ ಕಾರಣನೂ ವೇದವೇದ್ಯನೂ ಆದ ನಿನಗೆ ನಮಸ್ಕಾರ!

ನಮೋ ಬುದ್ಧಾಯ ಶುದ್ಧಾಯ ನಮೋ ಯುಕ್ತಾಯ ಹೇತವೇ । ನಮೋ ನಮೋ ನಮಸ್ತುಭ್ಯಂ ಮಾಯಿನೇ ವೇಧಸೇ ನಮಃ ।। 64 ।। ನಮೋಽಸ್ತು ತೇ ವರಾಹಾಯ ನಾರಸಿಂಹಾಯ ತೇ ನಮಃ । ವಾಮನಾಯ ನಮಸ್ತುಭ್ಯಂ ಹೃಷೀಕೇಶಾಯ ತೇ ನಮಃ ।। 65 ।। ಸ್ವರ್ಗಾಪವರ್ಗದಾನಾಯ ನಮೋಽಪ್ರತಿಹತಾತ್ಮನೇ । ನಮೋ ಯೋಗಾಧಿಗಮ್ಯಾಯ ಯೋಗಿನೇ ಯೋಗದಾಯಿನೇ ।। 66 ।। ದೇವಾನಾಂ ಪತಯೇ ತುಭ್ಯಂ ದೇವಾರ್ತಿಶಮನಾಯ ತೇ ।। 67 ।। ಭಗವಂಸ್ತ್ವತ್ಪ್ರಸಾದೇನ ಸರ್ವಸಂಸಾರನಾಶನಮ್ । ಅಸ್ಮಾಭಿರ್ವಿದಿತಂ ಜ್ಞಾನಂ ಯಜ್ಜ್ಞಾತ್ವಾಮೃತಮಶ್ನುತೇ ।। 68 ।। ಶ್ರುತಾಶ್ಚ ವಿವಿಧಾ ಧರ್ಮಾ ವಂಶಾ ಮನ್ವಂತರಾಣಿ ಚ । ಸರ್ಗಶ್ಚ ಪ್ರತಿಸರ್ಗಶ್ಚ ಬ್ರಹ್ಮಾಣ್ಯಸ್ಯಾಸ್ಯ ವಿಸ್ತರಃ ।। 69 ।। ತ್ವಂ ಹಿ ಸರ್ವಜಗತ್ಸಾಕ್ಷೀ ವಿಶ್ವೋ ನಾರಾಯಣಃ ಪರಃ । ತ್ರಾತುಮರ್ಹಸ್ಯನಂತಾತ್ಮಾ ತ್ವಾಮೇವ ಶರಣಂ ಗತಾಃ ।। 70 ।।

ಬುದ್ಧ-ಶುದ್ಧನಿಗೆ ನಮಸ್ಕಾರ! ಯೋಗಯುಕ್ತನೂ ಕಾರಣರೂಪನೂ ಆದವನಿಗೆ ನಮಸ್ಕಾರ! ಮಾಯಾವಿಯೂ, ವೇಧಸಿಯೂ ಆದ ನಿನಗೆ ನಮೋ ನಮಃ! ವರಾಹರೂಪಿಗೆ ನಮಸ್ಕಾರ! ನಾರಸಿಂಹನಿಗೆ ನಮಸ್ಕಾರ! ವಾಮನನಿಗೆ ನಮಸ್ಕಾರ! ಹೃಷೀಕೇಶನಿಗೆ ನಮಸ್ಕಾರ! ಸ್ವರ್ಗ-ಮೋಕ್ಷಗಳನ್ನು ನೀಡುವ, ಎಲ್ಲಿಯೂ ಅಡತಡೆಯಿಲ್ಲದ ಆತ್ಮನೇ ನಿನಗೆ ನಮಸ್ಕಾರ! ಯೋಗಾಧಿಗಮ್ಯನಿಗೆ, ಯೋಗಿಗೆ ಮತ್ತು ಯೋಗದಾಯಿನಿಗೆ ನಮಸ್ಕಾರ! ದೇವತೆಗಳ ಒಡೆಯನೇ ನಿನಗೆ ನಮಸ್ಕಾರ! ದೇವತೆಗಳ ದುಃಖವನ್ನು ಹೋಗಲಾಡಿಸುವವನೇ! ನಿನಗೆ ನಮಸ್ಕಾರ! ಭಗವನ್! ನಿನ್ನ ಕರುಣೆಯಿಂದ ಸರ್ವಸಂಸಾರ ಬಂಧನವನ್ನೂ ನಾಶಮಾಡುವ ಜ್ಞಾನವನ್ನು ನಾವು ಅರಿತುಕೊಂಡೆವು. ಆ ಜ್ಞಾನವು ಅಮೃತವನ್ನು ಕುಡಿದಂತೆ. ವಿವಿಧ ಧರ್ಮಗಳು, ವಂಶ-ಮನ್ವಂತರಗಳು, ಬ್ರಹ್ಮನ ಸರ್ಗ-ಪ್ರತಿಸರ್ಗಗಳು – ಇವುಗಳ ಕುರಿತು ವಿಸ್ತಾರವಾಗಿ ಕೇಳಿದೆವು. ನೀನೇ ಸರ್ವ ಜಗತ್ತಿನ ಸಾಕ್ಷಿ. ವಿಶ್ವ ಮತ್ತು ಪರಮ ನಾರಾಯಣ! ಅನಂತಾತ್ಮಾ! ನಿನ್ನನ್ನೇ ಶರಣುಬಂದಿರುವ ನಮ್ಮನ್ನು ಕಾಪಾಡಬೇಕು.””

ಸೂತ ಉವಾಚ । ಏತದ್ವಃ ಕಥಿತಂ ವಿಪ್ರಾ ಭೋಗಮೋಕ್ಷಪ್ರದಾಯಕಮ್ । ಕೌರ್ಮಂ ಪುರಾಣಮಖಿಲಂ ಯಜ್ಜಗಾದ ಗದಾಧರಃ ।। 71 ।।

ಸೂತನು ಹೇಳಿದನು: ವಿಪ್ರರೇ! ಹೀಗೆ ಗದಾಧರನು ಹೇಳಿದ ಭೋಗ-ಮೋಕ್ಷ ಪ್ರದಾಯಕವಾದ ಸಂಪೂರ್ಣ ಕೂರ್ಮಪುರಾಣವನ್ನು ನಿಮಗೆ ಹೇಳಿದ್ದೇನೆ.

[ಇದರ ಮುಂದಿನ 80 ಶ್ಲೋಕಗಳಲ್ಲಿ ಶ್ರೀಕೂರ್ಮಪುರಾಣದ ವಸ್ತುವಿಷಯಗಳ ವರ್ಣನೆಯಿದೆ.]

ಇತಿ ಶ್ರೀಕೂರ್ಮಪುರಾಣೇ ಉತ್ತರಾರ್ಧೇ ಏಕೋನಶತತಮೋಽಧ್ಯಾಯಃ ।।

ಇದು ಶ್ರೀಕೂರ್ಮಪುರಾಣದಲ್ಲಿ ಉತ್ತರಾರ್ಧದಲ್ಲಿ ತೊಂಬತ್ತೊಂಬತ್ತನೇ ಅಧ್ಯಾಯವು.

[1] ಅಥವಾ ಸಪ್ತಸಪ್ತ=49?

[2] ಅರಮನೆ ಪ್ರಕಾಶನದಲ್ಲಿ ದುರ್ಬಲಾಃ ಎಂದಿದೆ.

[3] ಅರಮನೆ ಪ್ರಕಾಶನದಲ್ಲಿ ಸರ್ವಬಂಧಾಃ ಎಂದಿದೆ.

[4] ಅರಮನೆ ಪ್ರಕಾಶನದಲ್ಲಿ ಇತ್ಯೇತೇ ಎಂದಿದೆ.

[5] ಅರಮನೆ ಪ್ರಕಾಶನದಲ್ಲಿ ದೃಶ್ಯತೇ ಎಂದಿದೆ.

[6] ಅರಮನೆ ಪ್ರಕಾಶನದಲ್ಲಿ ಸರ್ವಮಾಯಾತ್ಮಾ ಎಂದಿದೆ.

Leave a Reply

Your email address will not be published. Required fields are marked *