ಶ್ರೀ ಕೂರ್ಮಪುರಾಣ: ಅಧ್ಯಾಯ 9 - ಪದ್ಮೋದ್ಭವಪ್ರಾದುರ್ಭಾವಃ

ಸೂತ ಉವಾಚ । ಏತಚ್ಛ್ರುತ್ವಾ ತು ವಚನಂ ನಾರದಾದ್ಯಾ ಮಹರ್ಷಯಃ । ಪ್ರಣಮ್ಯ ವರದಂ ವಿಷ್ಣುಂ ಪಪ್ರಚ್ಚುಃ ಸಂಶಯಾನ್ವಿತಾಃ ।। 1 ।।

ಸೂತನು ಹೇಳಿದನು: “ಈ ಮಾತನ್ನು ಕೇಳಿ ಸಂಶಯಾನ್ವಿತರಾದ ನಾರದಾದಿ ಮಹರ್ಷಿಗಳು ವರದ ವಿಷ್ಣುವನ್ನು ಸಮಸ್ಕರಿಸಿ ಕೇಳಿದರು.

ಋಷಯ ಊಚುಃ । ಕಥಿತೋ ಭವತಾ ಸರ್ಗೋ ಮುಖ್ಯಾದೀನಾಂ ಜನಾರ್ದನ । ಇದಾನೀಂ ಸಂಶಯಂ ಚೇಮಮಸ್ಮಾಕಂ ಛೇತ್ತುಮರ್ಹಸಿ ।। 2 ।। ಕಥಂ ಸ ಭಗವಾನೀಶಃ ಪೂರ್ವಜೋಽಪಿ ಪಿನಾಕಧೃಕ್ । ಪುತ್ರತ್ವಮಗಚ್ಛಂಭುರ್ಬ್ರಹ್ಮಣೋಽವ್ಯಕ್ತಜನ್ಮನಃ ।। 3 ।। ಕಥಂ ಚ ಭಗವಾಂಜಜ್ಞೇ ಬ್ರಹ್ಮಾ ಲೋಕಪಿತಾಮಹಃ । ಅಂಡಜೋ ಜಗತಾಮೀಶಸ್ತನ್ನೋ ವಕ್ತುಮಿಹಾರ್ಹಸಿ ।। 4 ।।

ಋಷಿಗಳು ಹೇಳಿದರು: “ಜನಾರ್ದನ! ಮುಖ್ಯ ಮೊದಲಾದ ಸೃಷ್ಟಿಯ ಕುರಿತು ಹೇಳಿದ್ದೀಯೆ. ನಮಗಿರುವ ಈ ಸಂಶಯವನ್ನು ಹೋಗಲಾಡಿಸಬೇಕು. ಭಗವಾನ್ ಪಿನಾಕಧಾರಿ ಈಶ ಶಂಭುವು ಮೊದಲೇ ಹುಟ್ಟಿದ್ದರೂ ಆ ಅವ್ಯಕ್ತಜನ್ಮೀ ಬ್ರಹ್ಮನಿಗೆ ಹೇಗೆ ಮಗನಾದನು? ಆ ಜಗತ್ತಿನ ಈಶ, ಭಗವಾನ್ ಲೋಕಪಿತಾಮಹ ಅಂಡಜ ಬ್ರಹ್ಮನು ಹೇಗೆ ಹುಟ್ಟಿದನು ಎನ್ನುವುದನ್ನು ಹೇಳಬೇಕು.”

ಕೂರ್ಮ ಉವಾಚ । ಶೃಣುಧ್ವಮೃಷಯಃ ಸರ್ವೇ ಶಂಕರಸ್ಯಾಮಿತೌಜಸಃ । ಪುತ್ರತ್ವಂ ಬ್ರಹ್ಮಣಸ್ತಸ್ಯ ಪದ್ಮಯೋನಿತ್ವಮೇವ ಚ ।। 5 ।। ಅತೀತಕಲ್ಪಾವಸಾನೇ ತಮೋಭೂತಂ ಜಗತ್ತ್ರಯಮ್ । ಆಸೀದೇಕಾರ್ಣವಂ ಘೋರಂ ನ ದೇವಾದ್ಯಾ ನ ಚರ್ಷಯಃ ।। 6 ।। ತತ್ರ ನಾರಾಯಣೋ ದೇವೋ ನಿರ್ಜನೇ ನಿರುಪಪ್ಲವೇ । ಆಶ್ರಿತ್ಯ ಶೇಷಶಯನಂ ಸುಷ್ವಾಪ ಪುರುಷೋತ್ತಮಃ ।। 7 ।। ಸಹಸ್ತ್ರಶೀರ್ಷಾ ಭೂತ್ವಾ ಸ ಸಹಸ್ತ್ರಾಕ್ಷಃ ಸಹಸ್ತ್ರಪಾತ್ । ಸಹಸ್ತ್ರಬಾಹುಃ ಸರ್ವಜ್ಞಶ್ಚಿಂತ್ಯಮಾನೋ ಮನೀಷಿಭಿಃ ।। 8 ।। ಪೀತವಾಸಾ ವಿಶಾಲಾಕ್ಷೋ ನೀಲಜೀಮೂತಸನ್ನಿಭಃ । ತತೋ ವಿಭೂತಿಯೋಗಾತ್ಮಾ ಯೋಗಿನಾಂ ದಯಾಪರಃ ।। 9 ।।

ಕೂರ್ಮನು ಹೇಳಿದನು: “ಸರ್ವ ಋಷಿಗಳೇ! ಅಮಿತೌಜಸ ಶಂಕರನ ಪುತ್ರತ್ವ ಮತ್ತು ಬ್ರಹ್ಮನ ಪದ್ಮಯೋನಿತ್ವದ ಕುರಿತು ಕೇಳಿ. ಹಿಂದಿನ ಕಲ್ಪದ ಅವಸಾನ ಸಮಯದಲ್ಲಿ ಈ ಮೂರು ಲೋಕಗಳೂ ಘೋರ ಅಂಧಕಾರಮಯವಾಗಿ ಜಲದಿಂದ ತುಂಬಿ ಏಕಾರ್ಣವವಾಯಿತು. ಆಗ ದೇವತೆಗಳೇ ಮೊದಲಾದವರೂ ಋಷಿಗಳೂ ಇರಲಿಲ್ಲ. ನಿರ್ಜನವಾಗಿದ್ದ ಮತ್ತು ಶಾಂತವಾಗಿದ್ದ  ಆ ಏಕಾರ್ಣವದಲ್ಲಿ ಪುರುಷೋತ್ತಮ ದೇವ ನಾರಾಯಣನು ಸಹಸ್ರಶೀರ್ಷನಾಗಿಯೂ, ಸಹಸ್ರಾಕ್ಷನಾಗಿಯೂ, ಸಹಸ್ರಪಾದನಾಗಿಯೂ, ಸಹಸ್ರಬಾಹುವಾಗಿಯೂ ಶೇಷಶಯನದ ಮೇಲೆ ಮಲಗಿದ್ದನು. ಆ ಸರ್ವಜ್ಞನು ಜ್ಞಾನಿಗಳಿಗೆ ಧ್ಯಾನಗಮ್ಯನಾಗಿದ್ದನು. ಪೀತಾಂಬರಧಾರಿ, ವಿಶಾಲಾಕ್ಷ, ನೀಲಮೇಘದ ಶ್ಯಾಮಲವರ್ಣ, ವಿಭೂತಿಯೋಗಾತ್ಮನು ಯೋಗಿಗಳಿಗೆ ದಯಾಪರನಾಗಿದ್ದನು.

ಕದಾಚಿತ್ತಸ್ಯ ಸುಪ್ತಸ್ಯ ಲೀಲಾರ್ಥಂ ದಿವ್ಯಮದ್ಭುತಮ್ । ತ್ರೈಲೋಕ್ಯಸಾರಂ ವಿಮಲಂ ನಾಭ್ಯಾಂ ಪಂಕಜಮುದ್ಭಭೌ ।। 10 ।। ಶತಯೋಜನವಿಸ್ತೀರ್ಣಂ ತರುಣಾದಿತ್ಯಸನ್ನಿಭಮ್ । ದಿವ್ಯಗಂಧಮಯಂ ಪುಣ್ಯಂ ಕರ್ಣಿಕಾಕೇಸರಾನ್ವಿತಮ್ ।। 11 ।। ತಸ್ಯೈವಂ ಸುಚಿರಂ ಕಾಲಂ ವರ್ತಮಾನಸ್ಯ ಶಾರ್ಙ್ಗ್ರಿಣಃ । ಹಿರಣ್ಯಗರ್ಭೋ ಭಗವಾಂಸ್ತಂ ದೇಶಮುಪಚಕ್ರಮೇ ।। 12 ।। ಸ ತಂ ಕರೇಣ ವಿಶ್ವಾತ್ಮಾ ಸಮುತ್ಥಾಪ್ಯ ಸನಾತನಮ್ । ಪ್ರೋವಾಚ ಮಧುರಂ ವಾಕ್ಯಂ ಮಾಯಯಾ ತಸ್ಯ ಮೋಹಿತಃ ।। 13 ।। ಅಸ್ಮಿನ್ನೇಕಾರ್ಣವೇ ಘೋರೇ ನಿರ್ಜನೇ ತಮಸಾವೃತೇ । ಏಕಾಕೀ ಕೋ ಭವಾಂಶ್ಚೇತಿ ಬ್ರೂಹಿ ಮೇ ಪುರುಷರ್ಷಭ ।। 14 ।।

ಅವನು ಹಾಗೆ ಮಲಗಿದ್ದಾಗ ಒಮ್ಮೆ ಲೀಲೆಗೆಂದು ದಿವ್ಯವೂ, ಅದ್ಭುತವೂ, ತ್ರಿಲೋಕಗಳ ಸಾರವೂ, ವಿಮಲವೂ ಆದ ಒಂದು ಕಮಲವು ಅವನ ನಾಭಿಯಲ್ಲಿ ಜನಿಸಿತು. ಅದು ನೂರು ಯೋಜನ ವಿಸ್ತೀರ್ಣವಾಗಿ ತರುಣ ಸೂರ್ಯನಂತೆ ಪ್ರಕಾಶಿಸುತ್ತಿತ್ತು. ಆ ದಿವ್ಯಗಂಧಮಯ ಪುಣ್ಯ ಕಮಲವು ಕರ್ಣಿಕಾ-ಕೇಸರಯುಕ್ತ ವಾಗಿತ್ತು[1]. ಬಹಳಹೊತ್ತಿನ ಕಾಲ ಶಾರ್ಙ್ಗಧಾರೀ ವಿಷ್ಣುವು ಹಾಗೆ ಮಲಗಿರಲು ಭಗವಾನ್ ಹಿರಣ್ಯಗರ್ಭ ಬ್ರಹ್ಮನು ಅಲ್ಲಿಗೆ ಆಗಮಿಸಿದನು. ಆ ವಿಶ್ವಾತ್ಮಾ ಬ್ರಹ್ಮನು ಕೈಯಿಂದ ಮುಟ್ಟಿ ಸನಾತನ ವಿಷ್ಣುವನ್ನು ಎಬ್ಬಿಸಿ, ಅವನ ವಿಷ್ಣುಮಾಯೆಯಿಂದ ಮೋಹಿತನಾಗಿ, ಮಧುರ ವಾಣಿಯಲ್ಲಿ ಹೇಳಿದನು: “ಪುರುಷರ್ಷಭ! ಅಂಧಕಾರದಿಂದ ತುಂಬಿರುವ ನಿರ್ಜನವಾದ ಈ ಘೋರ ಏಕಾರ್ಣವದಲ್ಲಿ ಏಕಾಕಿಯಾಗಿರುವ ನೀನು ಯಾರು? ಅದನ್ನು ನನಗೆ ಹೇಳು!”

ತಸ್ಯ ತದ್ವಚನಂ ಶ್ರುತ್ವಾ ವಿಹಸ್ಯ ಗರುಡಧ್ವಜಃ । ಉವಾಚ ದೇವಂ ಬ್ರಹ್ಮಾಣಂ ಮೇಘಗಂಭೀರನಿಃಸ್ವನಃ ।। 15 ।। ಭೋ ಭೋ ನಾರಾಯಣಂ ದೇವಂ ಲೋಕಾನಾಂ ಪ್ರಭವಾಪ್ಯಯಮ್ । ಮಹಾಯೋಗೀಶ್ವರಂ ಮಾಂ ವೈ ಜಾನೀಹಿ ಪುರುಷೋತ್ತಮಮ್ ।। 16 ।। ಮಯಿ ಪಶ್ಯ ಜಗತ್ಕೃತ್ಸ್ನಂ ತ್ವಂ ಚ ಲೋಕಪಿತಾಮಹಃ । ಸಪರ್ವತಮಹಾದ್ವೀಪಂ ಸಮುದ್ರೈಃ ಸಪ್ತಭಿರ್ವೃತಮ್ ।। 17 ।। ಏವಮಾಭಾಷ್ಯ ವಿಶ್ವಾತ್ಮಾ ಪ್ರೋವಾಚ ಪುರುಷಂ ಹರಿಃ । ಜಾನನ್ನಪಿ ಮಹಾಯೋಗೀ ಕೋ ಭವಾನಿತಿ ವೇಧಸಮ್ ।। 18 ।।

ಅವನ ಆ ಮಾತನ್ನು ಕೇಳಿ ಗರುಡಧ್ವಜನು ಜೋರಾಗಿ ನಕ್ಕು, ಗುಡುಗಿನಂತಹ ಗಂಭೀರ ಸ್ವರದಲ್ಲಿ ಬ್ರಹ್ಮದೇವನಿಗೆ ಹೇಳಿದನು: “ಭೋ ಭೋ! ಲೋಕಗಳ ಸೃಷ್ಟಿ-ಸಂಹಾರಗಳಿಗೆ ಕಾರಣನಾದ ಮಹಾಯೋಗೀಶ್ವರ ಪುರುಷೋತ್ತಮ ದೇವನಾರಾಯಣನು ನಾನೆಂದು ತಿಳಿ. ಲೋಕಪಿತಾಮಹ! ಸಪ್ತಸಮುದ್ರಗಳಿಂದ ಸುತ್ತುವರೆಯಲ್ಪಟ್ಟಿರುವ ಪರ್ವತಗಳನ್ನೊಳಗೊಂಡ ಮಹಾದ್ವೀಪವನ್ನು ನೀನು ನನ್ನಲ್ಲಿಯೇ ನೋಡು!” ಹೀಗೆ ಹೇಳಿ ವಿಶ್ವಾತ್ಮಾ ಮಹಾಯೋಗೀ ಹರಿಯು, ತಿಳಿದಿದ್ದರೂ, ಆ ಪುರುಷ ಬ್ರಹ್ಮನಿಗೆ “ನೀನು ಯಾರು?” ಎಂದು ಕೇಳಿದನು.

ತತಃ ಪ್ರಹಸ್ಯ ಭಗವಾನ್ ಬ್ರಹ್ಮಾ ವೇದನಿಧಿಃ ಪ್ರಭುಃ । ಪ್ರತ್ಯುವಾಚಾಂಬುಜಾಭಾಕ್ಷಂ ಸಸ್ಮಿತಂ ಶ್ಲಕ್ಷ್ಣಯಾ ಗಿರಾ ।। 19 ।। ಅಹಂ ಧಾತಾ ವಿಧಾತಾ ಚ ಸ್ವಯಂಭೂಃ ಪ್ರಪಿತಾಮಹಃ । ಮಯ್ಯೇವ ಸಂಸ್ಥಿತಂ ವಿಶ್ವಂ ಬ್ರಹ್ಮಾಹಂ ವಿಶ್ವತೋಮುಖಃ ।। 20 ।। ಶ್ರುತ್ವಾ ವಾಚಂ ಸ ಭಗವಾನ್ವಿಷ್ಣುಃ ಸತ್ಯಪರಾಕ್ರಮಃ । ಅನುಜ್ಞಾಪ್ಯಾಥ ಯೋಗೇನ ಪ್ರವಿಷ್ಟೋ ಬ್ರಹ್ಮಣಸ್ತನುಮ್ ।। 21 ।। ತ್ರೈಲೋಕ್ಯಮೇತತ್ಸಕಲಂ ಸದೇವಾಸುರಮಾನುಷಮ್ । ಉದರೇ ತಸ್ಯ ದೇವಸ್ಯ ದೃಷ್ಟ್ವಾ ವಿಸ್ಮಯಮಾಗತಃ ।। 22 ।। ತದಾಸ್ಯ ವಕ್ತ್ರಾನ್ನಿಷ್ಕ್ರಮ್ಯ ಪನ್ನಗೇಂದ್ರನಿಕೇತನಃ । ಅಥಾಪಿ ಭಗವಾನ್ವಿಷ್ಣುಃ ಪಿತಾಮಹಮಥಾಬ್ರವೀತ್ ।। 23 ।। ಭವಾನಪ್ಯೇವಮೇವಾದ್ಯ ಶಾಶ್ವತಂ ಹಿ ಮಮೋದರಮ್ । ಪ್ರವಿಶ್ಯ ಲೋಕಾನ್ ಪಶ್ಯೈತಾನ್ವಿಚಿತ್ರಾನ್ ಪುರುಷರ್ಷಭ ।। 24 ।।

ಆಗ ವೇದನಿಧಿ ಪ್ರಭು ಭಗವಾನ್ ಬ್ರಹ್ಮನು ನಕ್ಕು ಅಂಬುಜಾಕ್ಷ ವಿಷ್ಣುವಿಗೆ ಮುಗುಳ್ನಗುತ್ತಾ ಮಧುರ ವಾಣಿಯಲ್ಲಿ ಉತ್ತರಿಸಿದನು: “ನಾನು ಸ್ವತಂತ್ರವಾಗಿಯೇ ಆವಿರ್ಭವಿಸಿದ ಧಾತ ಮತ್ತು ವಿಧಾತನು. ಪ್ರಪಿತಾಮಹನು. ವಿಶ್ವವೆಲ್ಲವೂ ನನ್ನಲ್ಲಿಯೇ ನೆಲೆಸಿವೆ. ನಾನು ವಿಶ್ವತೋಮುಖ ಬ್ರಹ್ಮ!” ಅವನ ಮಾತನ್ನು ಕೇಳಿ ಸತ್ಯಪರಾಕ್ರಮಿ ಭಗವಾನ್ ವಿಷ್ಣುವು ಅವನ ಅನುಮತಿಯನ್ನು ಪಡೆದು ಯೋಗಮಹಿಮೆಯಿಂದ ಬ್ರಹ್ಮನ ಶರೀರವನ್ನು ಪ್ರವೇಶಿಸಿದನು. ಆ ದೇವನ ಉದರದಲ್ಲಿ ದೇವ-ಅಸುರ-ಮಾನುಷರಿಂದ ಕೂಡಿದ ಸಕಲ ತ್ರಿಲೋಕಗಳನ್ನೂ ಕಂಡು ವಿಸ್ಮಿತನಾದನು. ನಂತರ ಅವನ ಮುಖದಿಂದ ಹೊರಬಂದು ಗರುಡಧ್ವಜ ಭಗವಾನ್ ವಿಷ್ಣುವು ಪಿತಾಮಹನಿಗೆ ಹೇಳಿದನು: “ಪುರುಷರ್ಷಭ! ನೀನೂ ಕೂಡ ಇಂದು ನನ್ನ ಉದರವನ್ನು ಪ್ರವೇಶಿಸಿ ವಿಚಿತ್ರವಾಗಿರುವ ಶಾಶ್ವತ ಲೋಕಗಳನ್ನು ನೋಡು!”

ತತಃ ಪ್ರಹ್ಲಾದನೀಂ ವಾಣೀಂ ಶ್ರುತ್ವಾ ತಸ್ಯಾಭಿನಂದ್ಯ ಚ । ಶ್ರೀಪತೇರುದರಂ ಭೂಯಃ ಪ್ರವಿವೇಶ ಕುಶಧ್ವಜಃ ।। 25 ।। ತಾನೇವ ಲೋಕಾನ್ ಗರ್ಭಸ್ಥಾನಪಶ್ಯತ್ ಸತ್ಯವಿಕ್ರಮಃ । ಪರ್ಯಟತ್ವಾಥ ದೇವಸ್ಯ ದದೃಶೇಽಂತಂ ನ ವೈ ಹರೇಃ ।। 26 ।। ತತೋ ದ್ವಾರಾಣಿ ಸರ್ವಾಣಿ ಪಿಹಿತಾನಿ ಮಹಾತ್ಮನಾ । ಜನಾರ್ದನೇನ ಬ್ರಹ್ಮಾಸೌ ನಾಭ್ಯಾಂ ದ್ವಾರಮವಿಂದತ ।। 27 ।। ತತ್ರ ಯೋಗಬಲೇನಾಸೌ ಪ್ರವಿಶ್ಯ ಕನಕಾಂಡಜಃ । ಉಜ್ಜಹಾರಾತ್ಮನೋ ರೂಪಂ ಪುಷ್ಕರಾಚ್ಚತುರಾನನಃ ।। 28 ।। ವಿರರಾಜಾರವಿಂದಸ್ಥಃ ಪದ್ಮಗರ್ಭಸಮದ್ಯುತಿಃ । ಬ್ರಹ್ಮಾ ಸ್ವಯಂಭೂರ್ಭಗವಾನ್ಜಗದ್ಯೋನಿಃ ಪಿತಾಮಹಃ ।। 29 ।।

ಆಹ್ಲಾದವನ್ನುಂಟುಮಾಡುವ ವಿಷ್ಣುವಿನ ವಾಣಿಯನ್ನು ಕೇಳಿ ಅವನನ್ನು ಅಭಿನಂದಿಸಿ ಕುಶಧ್ವಜ ಬ್ರಹ್ಮನು ಶ್ರೀಪತಿಯ ಉದರವನ್ನು ಪ್ರವೇಶಿಸಿದನು. ಆ ಲೋಕಗಳನ್ನೇ ದೇವನ ಗರ್ಭದಲ್ಲಿರುವುದನ್ನು ಕಂಡು ಸತ್ಯವಿಕ್ರಮನು ಅಲ್ಲಿಯೇ ಅಲೆದಾಡಿದರೂ ಹರಿಯ ಕೊನೆಯನ್ನೇ ಕಾಣಲಿಲ್ಲ. ಆಗ ಮಹಾತ್ಮ ವಿಷ್ಣುವಿನ ಸರ್ವ ದ್ವಾರಗಳು ಮುಚ್ಚಿದ್ದವು. ಬ್ರಹ್ಮನು ಮತ್ತಾವ ದ್ವಾರವನ್ನೂ ಕಾಣದೇ ಜನಾರ್ದನನ ನಾಭಿಯಲ್ಲಿ ದ್ವಾರವಿರುವುದನ್ನು ಕಂಡನು. ಆಗ ಕನಕಾಂಡಜ ಚತುರಾನನನು ಯೋಗಬಲದಿಂದ ಆ ನಾಭಿದ್ವಾರವನ್ನು ಪ್ರವೇಶಿಸಿ ಕಮಲದಿಂದ ತನ್ನನ್ನು ತಾನೇ ಮೇಲಕ್ಕೆತ್ತಿಕೊಂಡನು. ಜಗದ್ಯೋನಿ ಪಿತಾಮಹ ಭಗವಾನ್ ಸ್ವಯಂಭು ಬ್ರಹ್ಮನು ಪದ್ಮದ ಮಧ್ಯಭಾಗದ ಪ್ರಭೆಯುಳ್ಳವನಾಗಿ ಕಮಲದ ಮಧ್ಯೆ ವಿರಾಜಿಸಿದನು.

ಸ ಮನ್ಯಮಾನೋ ವಿಶ್ವೇಶಮಾತ್ಮಾನಂ ಪರಮಂ ಪದಮ್ । ಪ್ರೋವಾಚ ವಿಷ್ಣುಂ ಪುರುಷಂ ಮೇಘಗಂಭೀರಯಾ ಗಿರಾ ।। 30 ।। ಕೃತಂ ಕಿಂ ಭವತೇದಾನೀಮಾತ್ಮನೋ ಜಯಕಾಂಕ್ಷಯಾ । ಏಕೋಽಹಂ ಪ್ರಬಲೋ ನಾನ್ಯೋ ಮಾಂ ವೈ ಕೋಽಭಿಭವಿಷ್ಯತಿ ।। 31 ।। ಶ್ರುತ್ವಾ ನಾರಾಯಣೋ ವಾಕ್ಯಂ ಬ್ರಹ್ಮಣೋಕ್ತಮತಂದ್ರಿತಃ । ಸಾಂತ್ವಪೂರ್ವಮಿದಂ ವಾಕ್ಯಂ ಬಭಾಷೇ ಮಧುರಂ ಹರಿಃ ।। 32 ।। ಭವಾನ್ ಧಾತಾ ವಿಧಾತಾ ಚ ಸ್ವಯಂಭೂಃ ಪ್ರಪಿತಾಮಹಃ । ನ ಮಾತ್ಸರ್ಯಾಭಿಯೋಗೇನ ದ್ವಾರಾಣಿ ಪಿಹಿತಾನಿ ಮೇ ।। 33 ।। ಕಿಂತು ಲೀಲಾರ್ಥಮೇವೈತನ್ನ ತ್ವಾಂ ಬಾಧಿತುಮಿಚ್ಚಯಾ । ಕೋ ಹಿ ಬಾಧಿತುಮನ್ವಿಚ್ಚೇದ್ದೇವದೇವಂ ಪಿತಾಮಹಮ್ ।। 34 ।। ನ ಹಿ ತ್ವಂ ಬಾಧ್ಯಸೇ ಬ್ರಹ್ಮನ್ಮಾನ್ಯೋ ಹಿ ಸರ್ವಥಾ ಭವಾನ್ । ಸರ್ವಮನ್ವಯ ಕಲ್ಯಾಣಂ ಯನ್ಮಯಾಪಹೃತಂ ತವ ।। 35 ।। ಅಸ್ಮಾಚ್ಚ ಕಾರಣಾದ್ಬ್ರಹ್ಮನ್ ಪುತ್ರೋ ಭವತು ಮೇ ಭವಾನ್ । ಪದ್ಮಯೋನಿರಿತಿ ಖ್ಯಾತೋ ಮತ್ಪ್ರಿಯಾರ್ಥಂ ಜಗನ್ಮಯ ।। 36 ।।

ಆ ವಿಶ್ವೇಶನು ತನ್ನ ಪರಮಪದ ರೂಪವನ್ನು ಚಿಂತಿಸುತ್ತಾ ಪುರುಷ ವಿಷ್ಣುವಿಗೆ ಗುಡುಗಿನ ಗಂಭೀರ ಧ್ವನಿಯಲ್ಲಿ ಹೇಳಿದನು: “ಜಯವನ್ನು ಬಯಸಿ ನೀನು ಇದೇನು ಮಾಡಿಬಿಟ್ಟೆ? ನಾನೊಬ್ಬನೇ ಪ್ರಬಲನು. ಅನ್ಯ ಯಾರುತಾನೇ ನನ್ನಂತೆ ಇರಬಲ್ಲನು?” ಜಾಗರೂಕನಾಗಿದ್ದ ಬ್ರಹ್ಮನ ಆ ಮಾತನ್ನು ಕೇಳಿ ನಾರಾಯಣ ಹರಿಯು ಸಾಂತ್ವಪೂರ್ವಕವಾದ ಈ ಮಧುರ ಮಾತನ್ನಾಡಿದನು: “ನೀನು ಧಾತನೂ, ವಿಧಾತನೂ, ಸ್ವಯಂಭುವೂ, ಪ್ರಪಿತಾಮಹನೂ ಆಗಿದ್ದೀಯೆ. ಮಾತ್ಸರ್ಯ ಭಾವದಿಂದ ನಾನು ನನ್ನ ದ್ವಾರಗಳನ್ನು ಮುಚ್ಚಿಕೊಂಡಿಲ್ಲ. ಕೇವಲ ವಿನೋದಕ್ಕಾಗಿ ಈ ದೇಹದ್ವಾರಗಳನ್ನು ಮುಚ್ಚಿಕೊಂಡಿದ್ದೆನೇ ಹೊರತು ನಿನ್ನನ್ನು ಬಾಧಿಸಬೇಕು ಎಂಬ ಇಚ್ಛೆಯಿಂದಲ್ಲ. ದೇವದೇವನೂ ಪಿತಾಮಹನೂ ಆದ ನಿನ್ನನ್ನು ಯಾರು ತಾನೇ ಬಾಧಿಸ ಬಯಸುತ್ತಾನೆ? ಬ್ರಹ್ಮನ್! ನಾನು ನಿನ್ನನ್ನು ಬಾಧಿಸುವುದಿಲ್ಲ. ಅನ್ಯರೂ ಕೂಡ ಸರ್ವಥಾ ನಿನ್ನನ್ನು ಬಾಧಿಸಲಾರರು. ಎಲ್ಲ ರೀತಿಯಿಂದಲೂ ನೀನು ನನಗೆ ಮಾನ್ಯನಾಗಿದ್ದೀಯೆ. ಕಲ್ಯಾಣ! ನನ್ನಿಂದ ಆದ ಅಪರಾಧವನ್ನು ಕ್ಷಮಿಸು! ಈ ಕಾರಣದಿಂದ ಬ್ರಹ್ಮನ್! ನೀನು ನನ್ನ ಪುತ್ರನಾಗು. ಜಗನ್ಮಯ! ನನ್ನ ಪ್ರೀತಿಗಾಗಿ ನೀನು ಪದ್ಮಯೋನಿ ಎಂದು ಖ್ಯಾತಿಯನ್ನು ಹೊಂದು.”

ತತಃ ಸ ಭಗವಾನ್ ದೇವೋ ವರಂ ದತ್ತ್ವಾ ಕಿರೀಟಿನೇ । ಪ್ರಹರ್ಷಮತುಲಂ ಗತ್ವಾ ಪುನರ್ವಿಷ್ಣುಮಭಾಷತ ।। 37 ।। ಭವಾನ್ ಸರ್ವಾತ್ಮಕೋಽನಂತಃ ಸರ್ವೇಷಾಂ ಪರಮೇಶ್ವರಃ । ಸರ್ವಭೂತಾಂತರಾತ್ಮಾ ವೈ ಪರಂ ಬಹ್ಮ ಸನಾತನಮ್ ।। 38 ।। ಅಹಂ ವೈ ಸರ್ವಲೋಕಾನಾಮಾತ್ಮಲೋಕೋ ಮಹೇಶ್ವರಃ । ಮನ್ಮಯಂ ಸರ್ವಮೇವೇದಂ ಬ್ರಹ್ಮಾಹಂ ಪುರುಷಃ ಪರಃ ।। 39 ।। ನಾವಾಭ್ಯಾಂ ವಿದ್ಯತೇ ಹ್ಯನ್ಯೋ ಲೋಕಾನಾಂ ಪರಮೇಶ್ವರಃ । ಏಕಾ ಮೂರ್ತಿರ್ದ್ವಿಧಾ ಭಿನ್ನಾ ನಾರಾಯಣಪಿತಾಮಹೌ ।। 40 ।।

ನಂತರ ಭಗವಾನ್ ಬ್ರಹ್ಮದೇವನು ಕಿರೀಟಿನಿಗೆ ವರವನ್ನಿತ್ತು ಅತುಲ ಹರ್ಷಿತನಾಗಿ ಪುನಃ ವಿಷ್ಣುವಿಗೆ ಹೇಳಿದನು: “ಸರ್ವಾತ್ಮಕನಾದ ನೀನು ಅನಂತನು. ಸರ್ವರ ಪರಮೇಶ್ವರನು. ಸರ್ವಭೂತಾಂತರಾತ್ಮ ಮತ್ತು ಪರಮ ಬ್ರಹ್ಮ ಸನಾತನನು. ನಾನೂ ಕೂಡ ಸರ್ವಲೋಕಗಳ ಆತ್ಮನು ಮತ್ತು ಲೋಕಗಳ ಮಹೇಶ್ವರನು. ಇವೆಲ್ಲವೂ ನನ್ನಿಂದಲೇ ವ್ಯಾಪ್ತಗೊಂಡಿದೆ. ನಾನು ಪರಮ ಪುರುಷ ಬ್ರಹ್ಮನು. ನಮ್ಮಿಬ್ಬರನ್ನು ಬಿಟ್ಟು ಅನ್ಯ ಯಾರೂ ಈ ಲೋಕಗಳ ಪರಮೇಶ್ವರನಿಲ್ಲ. ನಾರಾಯಣ-ಪಿತಾಮಹರಾದ ನಾವಿಬ್ಬರೂ ಒಂದೇ ಮೂರ್ತಿಯು. ರೂಪದಿಂದ ಎರಡಾಗಿ ಭಿನ್ನರಾಗಿದ್ದೇವೆ ಅಷ್ಟೇ.”

ತೇನೈವಮುಕ್ತೋ ಬ್ರಹ್ಮಾಣಂ ವಾಸುದೇವೋಽಬ್ರವೀದಿದಮ್ । ಇಯಂ ಪ್ರತಿಜ್ಞಾ ಭವತೋ ವಿನಾಶಾಯ ಭವಿಷ್ಯತಿ ।। 41 ।। ಕಿಂ ನ ಪಶ್ಯಸಿ ಯೋಗೇನ ಬ್ರಹ್ಮಾಧಿಪತಿಮವ್ಯಯಮ್ । ಪ್ರಧಾನಪುರುಷೇಶಾನಂ ವೇದಾಹಂ ಪರಮೇಶ್ವರಮ್ ।। 42 ।। ಯಂ ನ ಪಶ್ಯಂತಿ ಯೋಗೀಂದ್ರಾಃ ಸಾಂಖ್ಯಾ ಅಪಿ ಮಹೇಶ್ವರಮ್ । ಅನಾದಿನಿಧನಂ ಬ್ರಹ್ಮ ತಮೇವ ಶರಣಂ ವ್ರಜ ।। 43 ।।

ಹೀಗೆ ಹೇಳಲು ವಾಸುದೇವನು ಬ್ರಹ್ಮನಿಗೆ ಇದನ್ನು ಹೇಳಿದನು: “ನಿನ್ನ ಈ ಪ್ರತಿಜ್ಞೆಯು ನಿನ್ನ ವಿನಾಶವಾಗುತ್ತದೆ. ಬ್ರಹ್ಮ! ನೀನು ಯೋಗಬಲದಿಂದ ಅಧಿಪತಿ ಅವ್ಯಯನನ್ನು ಏಕೆ ಕಾಣುತ್ತಿಲ್ಲ? ಪ್ರಧಾನ ಪುರುಷ ಪರಮೇಶ್ವರ ಈಶಾನನನ್ನು ನಾನು ತಿಳಿದಿದ್ದೇನೆ. ತತ್ತ್ವಜ್ಞಾನದಲ್ಲಿ ಲೀನರಾದ ಯೋಗೀಂದ್ರರು ಕೂಡ ಯಾವ ಅನಾದಿನಿಧನ ಮಹೇಶ್ವರನನ್ನು ನೋಡುತ್ತಾರೋ ಅವನನ್ನೇ ಶರಣು ಹೋಗು.”

ತತಃ ಕ್ರುದ್ಧೋಽಂಬುಜಾಭಾಕ್ಷಂ ಬ್ರಹ್ಮಾ ಪ್ರೋವಾಚ ಕೇಶವಮ್ । ಭಗವನ್ನೂನಮಾತ್ಮಾನಂ ವೇದ್ಮಿ ತತ್ಪರಮಾಕ್ಷರಮ್ ।। 44 ।। ಬ್ರಹ್ಮಾಣಂ ಜಗತಾಮೇಕಮಾತ್ಮಾನಂ ಪರಮಂ ಪದಮ್ । ನಾವಾಭ್ಯಾಂ ವಿದ್ಯತೇ ತ್ವನ್ಯೋ ಲೋಕಾನಾಂ ಪರಮೇಶ್ವರಃ ।। 45 ।। ಸಂತ್ಯಜ್ಯ ನಿದ್ರಾಂ ವಿಪುಲಾಂ ಸ್ವಮಾತ್ಮಾನಂ ವಿಲೋಕಯ । ತಸ್ಯ ತತ್ಕ್ರೋಧಜಂ ವಾಕ್ಯಂ ಶ್ರುತ್ವಾಽಪಿ ಸ ತದಾ ಪ್ರಭುಃ ।। 46 ।। ಮಾ ಮೈವಂ ವದ ಕಲ್ಯಾಣ ಪರಿವಾದಂ ಮಹಾತ್ಮನಃ । ನ ಮೇ ಹ್ಯವಿದಿತಂ ಬ್ರಹ್ಮನ್ನಾನ್ಯಥಾಹಂ ವದಾಮಿ ತೇ ।। 47 ।। ಕಿಂತು ಮೋಹಯತಿ ಬ್ರಹ್ಮನ್ ಅನಂತಾ ಪಾರಮೇಶ್ವರೀ । ಮಾಯಾಶೇಷವಿಶೇಷಾಣಾಂ ಹೇತುರಾತ್ಮಸಮುದ್ಭವಾ ।। 48 ।। ಏತಾವದುಕ್ತ್ವಾ ಭಗವಾನ್ವಿಷ್ಣುಸ್ತೂಷ್ಣೀಂ ಬಭೂವ ಹ

ಆಗ ಕ್ರುದ್ಧನಾಗಿ ಭಗವಾನ್ ಬ್ರಹ್ಮನು ಅಂಬುಜಾಕ್ಷ ಕೇಶವನಿಗೆ ಹೇಳಿದನು: “ಭಗವನ್! ಆ ಪರಮ ಅಕ್ಷರನು ನಾನೇ ಎಂದು ತಿಳಿದುಕೊಂಡಿದ್ದೇನೆ. ಸರ್ವಲೋಕಗಳಿಗೆ ಪರಮಪದನೂ ಬ್ರಹ್ಮನೂ ನಾನೇ ಆಗಿದ್ದೇನೆ. ನಮ್ಮಿಬ್ಬರನ್ನು ಬಿಟ್ಟರೆ ಬೇರೆ ಯಾರೂ ಲೋಕಗಳ ಪರಮೇಶ್ವರನಿಲ್ಲ. ಈ ವಿಪುಲ ನಿದ್ರೆಯನ್ನು ಬಿಟ್ಟು ನಿನ್ನನ್ನು ನೀನೇ ಅವಲೋಕಿಸು!” ಅವನ ಆ ಕ್ರೋಧದಿಂದ ಹುಟ್ಟಿದ ಮಾತನ್ನು ಕೇಳಿಯೂ ಕೂಡ ಪ್ರಭುವು – “ಕಲ್ಯಾಣ! ಹೀಗೆ ಹೇಳಬೇಡ. ಮಹಾತ್ಮನ ವಿಷಯದಲ್ಲಿ ಈ ನಿಂದೆಯು ಯುಕ್ತವಲ್ಲ. ನನಗೆ ತಿಳಿಯದೇ ಇರುವುದು ಯಾವುದೂ ಇಲ್ಲ. ಬ್ರಹ್ಮನ್! ತತ್ತ್ವಾಂಶವನ್ನು ಬಿಟ್ಟು ಬೇರೆ ಯಾವುದನ್ನೂ ನಾನು ಹೇಳುವುದಿಲ್ಲ. ಬ್ರಹ್ಮನ್! ಪರಮೇಶ್ವರನ ಸ್ವಸ್ವರೂಪದಿಂದ ಹುಟ್ಟಿರುವ ಪರಮೇಶ್ವರನ ಅಧೀನವಾಗಿರುವ ಮತ್ತು ಅಂತವಿಲ್ಲದ ಮಾಯೆಯು ಸಮಸ್ತ ವಿಕಾರಗಳಿಗೂ ಕಾರಣವಾಗಿ ಸರ್ವ ಪ್ರಾಣಿಗಳನ್ನೂ ಮೋಹಗೊಳಿಸುತ್ತದೆ.” ಹೀಗೆ ಹೇಳಿ ಭಗವಾನ್ ವಿಷ್ಣುವು ಸುಮ್ಮನಾದನು.

ಜ್ಞಾತ್ವಾ ತತ್ಪರಮಂ ತತ್ತ್ವಂ ಸ್ವಮಾತ್ಮಾನಂ ಸುರೇಶ್ವರಃ ।। 49 ।। ಕುತೋ ಹ್ಯಪರಿಮೇಯಾತ್ಮಾ ಭೂತಾನಾಂ ಪರಮೇಶ್ವರಃ । ಪ್ರಸಾದಂ ಬ್ರಹ್ಮಣೇ ಕರ್ತುಂ ಪ್ರಾದುರಾಸೀತ್ತತೋ ಹರಃ ।। 50 ।। ಲಲಾಟನಯನೋ ದೇವೋ ಜಟಾಮಂಡಲಮಂಡಿತಃ । ತ್ರಿಶೂಲಪಾಣಿರ್ಭಗವಾಂಸ್ತೇಜಸಾಂ ಪರಮೋ ನಿಧಿಃ ।। 51 ।। ವಿದ್ಯಾವಿಲಾಸಗ್ರಥಿತಾ ಗ್ರಹೈಃ ಸಾರ್ಕೇಂದುತಾರಕೈಃ । ಮಾಲಾಮತ್ಯದ್ಭುತಾಕಾರಾಂ ಧಾರಯನ್ ಪಾದಲಂಬಿನೀಮ್ ।। 52 ।। ತಂ ದೃಷ್ಟ್ವಾ ದೇವಮೀಶಾನಂ ಬ್ರಹ್ಮಾ ಲೋಕಪಿತಾಮಹಃ । ಮೋಹಿತೋ ಮಾಯಯಾತ್ಯರ್ಥಂ ಪೀತವಾಸಸಮಬ್ರವೀತ್ ।। 53 ।। 

ಆಗ ಸುರೇಶ್ವರ ಬ್ರಹ್ಮನು ತನ್ನ ರೂಪವನ್ನು ಪರಮಾತ್ಮ ತತ್ತ್ವವನ್ನಾಗಿ ಧ್ಯಾನಿಸಿದನು. ಆಗ ಎಲ್ಲಭೂತಗಳ ಅಳತೆಗೂ ನಿಲುಕದ ಪರಮೇಶ್ವರ ಹರನು ಬ್ರಹ್ಮನ ಮೇಲೆ ಅನುಗ್ರಹ ಮಾಡಲು ಪ್ರತ್ಯಕ್ಷನಾದನು. ಆ ಭಗವಾನ್ ದೇವನು ಹಣೆಯಲ್ಲಿ ಮೂರನೇ ಕಣ್ಣುಳ್ಳವನೂ, ಶಿರದಲ್ಲಿ ಜಟೆಗಳ ಸುತ್ತಿನಿಂದ ಅಲಂಕರಿಸಲ್ಪಟ್ಟವನೂ, ಕೈಯಲ್ಲಿ ತ್ರಿಶೂಲವನ್ನು ಹಿಡಿದವನೂ ಆಗಿ ತೇಜಸ್ಸುಗಳ ಪರಮನಿಧಿಯಂತಿದ್ದನು. ವಿದ್ಯಾವಿಲಾಸಿನಿಯು ರಚಿಸಿದ ಸೂರ್ಯ-ಚಂದ್ರ ಮೊದಲಾದ ಗ್ರಹಗಳು ಮತ್ತು ನಕ್ಷತ್ರಗಳಿಂದ ಕೂಡಿದ ಅದ್ಭುತಾಕಾರದ, ಪಾದದ ವರೆಗೂ ಇಳಿದಿದ್ದ ಮಾಲೆಯನ್ನು ಧರಿಸಿದ್ದನು. ಆ ದೇವ ಈಶಾನನನ್ನು ನೋಡಿ ಲೋಕಪಿತಾಮಹ ಬ್ರಹ್ಮನು ಮಾಯೆಯಿಂದ ಮೋಹಿತನಾಗಿ ಪೀತವಾಸಸ ವಿಷ್ಣುವಿಗೆ ಹೇಳಿದನು:

ಕ ಏಷ ಪುರುಷೋ ನೀಲಃ ಶೂಲಪಾಣಿಸ್ತ್ರಿಲೋಚನಃ । ತೇಜೋರಾಶಿರಮೇಯಾತ್ಮಾ ಸಮಾಯಾತಿ ಜನಾರ್ದನ ।। 54 ।। ತಸ್ಯ ತದ್ವಚನಂ ಶ್ರುತ್ವಾ ವಿಷ್ಣುರ್ದಾನವಮರ್ದನಃ । ಅಪಶ್ಯದೀಶ್ವರಂ ದೇವಂ ಜ್ವಲಂತಂ ವಿಮಲೇಽಂಭಸಿ ।। 55 ।। ಜ್ಞಾತ್ವಾ ತಂ ಪರಮಂ ಭಾವಮೈಶ್ವರಂ ಬ್ರಹ್ಮಭಾವನಃ । ಪ್ರೋವಾಚೋತ್ಥಾಯ ಭಗವಾನ್ದೇವದೇವಂ ಪಿತಾಮಹಮ್ ।। 56 ।। ಅಯಂ ದೇವೋ ಮಹಾದೇವಃ ಸ್ವಯಂಜ್ಯೋತಿಃ ಸನಾತನಃ । ಅನಾದಿನಿಧನೋಽಚಿಂತ್ಯೋ ಲೋಕಾನಾಮೀಶ್ವರೋ ಮಹಾನ್ ।। 57 ।। ಶಂಕರಃ ಶಂಭುರೀಶಾನಃ ಸರ್ವಾತ್ಮಾ ಪರಮೇಶ್ವರಃ । ಭೂತಾನಾಮಧಿಪೋ ಯೋಗೀ ಮಹೇಶೋ ವಿಮಲಃ ಶಿವಃ ।। 58 ।। ಏಷ ಧಾತಾ ವಿಧಾತಾ ಚ ಪ್ರಧಾನಃ ಪ್ರಭುರವ್ಯಯಃ । ಯಂ ಪ್ರಪಶ್ಯಂತಿ ಯತಯೋ ಬ್ರಹ್ಮಭಾವೇನ ಭಾವಿತಾಃ ।। 59 ।। ಸೃಜತ್ಯೇಷ ಜಗತ್ಕೃತ್ಸ್ನಂ ಪಾತಿ ಸಂಹರತೇ ತಥಾ । ಕಾಲೋಭೂತ್ವಾ ಮಹಾದೇವಃ ಕೇವಲೋ ನಿಷ್ಕಲಃ ಶಿವಃ ।। 60 ।। ಬ್ರಹ್ಮಾಣಂ ವಿದಧೇ ಪೂರ್ವಂ ಭವಂತಂ ಯಃ ಸನಾತನಃ । ವೇದಾಂಶ್ಚ ಪ್ರದದೌ ತುಭ್ಯಂ ಸೋಽಯಮಾಯಾತಿ ಶಂಕರಃ ।। 61 ।। ಅಸ್ಯೈವ ಚಾಪರಾಂ ಮೂರ್ತಿ ವಿಶ್ವಯೋನಿಂ ಸನಾತನೀಮ್ । ವಾಸುದೇವಾಭಿಧಾನಾಂ ಮಾಮವೇಹಿ ಪ್ರಪಿತಾಮಹ ।। 62 ।। ಕಿಂ ನ ಪಶ್ಯಸಿ ಯೋಗೇಶಂ ಬ್ರಹ್ಮಾಧಿಪತಿಮವ್ಯಯಮ್ । ದಿವ್ಯಂ ಭವತು ತೇ ಚಕ್ಷುರ್ಯೇನ ದ್ರಕ್ಷ್ಯಸಿ ತತ್ಪರಮ್ ।। 63 ।।

“ಜನಾರ್ದನ! ಶೂಲಪಾಣೀ, ತ್ರಿಲೋಚನ, ತೇಜೋರಾಶಿ, ಅಮೇಯಾತ್ಮಾ ನೀಲವರ್ಣದ ಪುರುಷನು ಬರುತ್ತಿದ್ದಾನೆ. ಇವನು ಯಾರು?” ಅವನ ಆ ಮಾತನ್ನು ಕೇಳಿ ದಾನವಮರ್ದನ ವಿಷ್ಣುವು ವಿಮಲ ನೀರಿನಲ್ಲಿ ಪ್ರಜ್ವಲಿಸಿ ಬರುತ್ತಿದ್ದ ಈಶ್ವರನನ್ನು ನೋಡಿದನು. ಅವನು ಪರಮ ಭಾವ ಈಶ್ವರನೆಂದು ತಿಳಿದು ಬ್ರಹ್ಮಭಾವನ ಭಗವಾನ್ ವಿಷ್ಣುವು ಮೇಲೆದ್ದು ದೇವದೇವ ಪಿತಾಮಹನಿಗೆ ಹೇಳಿದನು: “ಇವನು ದೇವ, ಮಹಾದೇವನು. ಸ್ವಯಂಜ್ಯೋತಿಯು. ಸನಾತನನು. ಅನಾದಿನಿಧನನು. ಅಚಿಂತ್ಯನು. ಲೋಕಗಳ ಮಹಾನ್ ಈಶ್ವರನು. ಶಂಕರ, ಶಂಭು, ಈಶಾನ, ಸರ್ವಾತ್ಮಾ ಪರಮೇಶ್ವರನು. ಇವನು ಭೂತಗಳಿಗೆ ಅಧಿಪತಿ, ಯೋಗೀ, ವಿಮಲ, ಮಹೇಶ, ಶಿವನು. ಇವನು ಧಾತಾ, ವಿಧಾತಾ, ಪ್ರಧಾನ ಮತ್ತು ಅವ್ಯಯ ಪ್ರಭುವು. ಬ್ರಹ್ಮಭಾವದಿಂದ ಧ್ಯಾನಿಸುವ ಯತಿಗಳು ಇವನನ್ನೇ ಕಾಣುತ್ತಾರೆ. ನಿರವಯನೂ ಅದ್ವಿತೀಯನೂ ಆದ ಈ ಮಹಾದೇವ ಶಿವನೇ ಕಾಲರೂಪಿಯಾಗಿ ಸಂಪೂರ್ಣ ಜಗತ್ತನ್ನು ಸೃಷ್ಟಿಸುತ್ತಾನೆ, ಪಾಲಿಸುತ್ತಾನೆ ಮತ್ತು ಹಾಗೆಯೇ ಸಂಹರಿಸುತ್ತಾನೆ. ಯಾವ ಸನಾತನನು ಬ್ರಹ್ಮನೆಂದೆನಿಸಿಕೊಂಡಿರುವ ನಿನ್ನನ್ನು ಸೃಷ್ಟಿಸಿ ವೇದಗಳನ್ನು ನಿನಗಿತ್ತನೋ ಆ ಶಂಕರನೇ ಬರುತ್ತಿದ್ದಾನೆ. ಪ್ರಪಿತಾಮಹ! ವಿಶ್ವಯೋನಿಯೂ ಸನಾತನಿಯೂ ಆದ ಮತ್ತು ವಾಸುದೇವನೆಂಬ ಹೆಸರಿರುವ ನಾನೂ ಕೂಡ ಇವನದ್ದೇ ಇನ್ನೊಂದು ಮೂರ್ತಿ ಎಂದು ತಿಳಿ. ನೀನು ಏಕೆ ಈ ಯೋಗೇಶ, ಬ್ರಹ್ಮಾಧಿಪತಿ, ಅವ್ಯಯನನ್ನು ಗುರುತಿಸುತ್ತಿಲ್ಲ? ದಿವ್ಯದೃಷ್ಟಿಯನ್ನು ಹೊಂದಿ ನೀನು ಆ ಪರಮಾತ್ಮನನ್ನು ನೋಡುವಂತವನಾಗು!”

ಲಬ್ಧ್ವಾ ಚೈವಂ ತದಾ ಚಕ್ಷುರ್ವಿಷ್ಣೋರ್ಲೋಕಪಿತಾಮಹಃ । ಬುಬುಧೇ ಪರಮಂ ಜ್ಞಾನಂ ಪುರತಃ ಸಮವಸ್ಥಿತಮ್ ।। 64 ।। ಸ ಲಬ್ಧ್ವಾ ಪರಮಂ ಜ್ಞಾನಮೈಶ್ವರಂ ಪ್ರಪಿತಾಮಹಃ । ಪ್ರಪೇದೇ ಶರಣಂ ದೇವಂ ತಮೇವ ಪಿತರಂ ಶಿವಮ್ ।। 65 ।। ಓಂಕಾರಂ ಸಮನುಸ್ಮೃತ್ಯ ಸಂಸ್ತಭ್ಯಾತ್ಮಾನಮಾತ್ಮನಾ । ಅಥರ್ವಶಿರಸಾ ದೇವಂ ತುಷ್ಟಾವ ಚ ಕೃತಾಂಜಲಿಃ ।। 66 ।। ಸಂಸ್ತುತಸ್ತೇನ ಭಗವಾನ್ ಬ್ರಹ್ಮಣಾ ಪರಮೇಶ್ವರಃ । ಅವಾಪ ಪರಮಾಂ ಪ್ರೀತಿಂ ವ್ಯಾಜಹಾರ ಸ್ಮಯನ್ನಿವ ।। 67 ।। ಮತ್ಸಮಸ್ತ್ವಂ ನ ಸಂದೇಹೋ ವತ್ಸ ಭಕ್ತಶ್ಚ ಮೇ ಭವಾನ್ । ಮಯೈವೋತ್ಪಾದಿತಃ ಪೂರ್ವಂ ಲೋಕಸೃಷ್ಟ್ಯರ್ಥಮವ್ಯಯಃ ।। 68 ।। ತ್ವಮಾತ್ಮಾ ಹ್ಯಾದಿಪುರುಷೋ ಮಮ ದೇಹಸಮುದ್ಭವಃ । ವರಂ ವರಯ ವಿಶ್ವಾತ್ಮನ್ವರದೋಽಹಂ ತವಾನಘ ।। 69 ।।

ವಿಷ್ಣುವಿನಿಂದ ಆ ದಿವ್ಯದೃಷ್ಟಿಯನ್ನು ಪಡೆದು ಲೋಕಪಿತಾಮಹನು ತನ್ನ ಎದುರಿಗಿದ್ದ ಪರಮೇಶ್ವರನ ಪರಮ ಜ್ಞಾನವನ್ನು ಅರಿತುಕೊಂಡನು. ಈಶ್ವರನ ಪರಮ ಜ್ಞಾನವನ್ನು ಪಡೆದ ಪ್ರಪಿತಾಮಹನು ಲೋಕಪಿತ ದೇವ ಶಿವನನ್ನು ಶರಣುಹೊಂದಿದನು. ಓಂಕಾರವನ್ನು ಸ್ಮರಿಸುತ್ತಾ, ತನ್ನ ಚಿತ್ತವನ್ನು ಪರಮಾತ್ಮನಲ್ಲಿ ನಿಶ್ಚಲವಾಗಿಟ್ಟು, ಕೈಮುಗಿದು ಅಥರ್ವಶೀರ್ಷ ಮಂತ್ರಗಳಿಂದ ಅವನು ದೇವನನ್ನು ಸ್ತುತಿಸಿದನು. ಬ್ರಹ್ಮನಿಂದ ಸ್ತುತನಾದ ಭಗವಾನ್ ಪರಮೇಶ್ವರನು ಪರಮ ಪ್ರೀತನಾಗಿ ಮುಗುಳ್ನಗುತ್ತಾ ಈ ಮಾತನ್ನಾಡಿದನು: “ವತ್ಸ! ನೀನು ನನ್ನ ಸಮ ಎನ್ನುವುದರಲ್ಲಿ ಸಂದೇಹವಿಲ್ಲ. ನನ್ನ ಭಕ್ತನೂ ಆಗಿದ್ದೀಯೆ. ಲೋಕಗಳನ್ನು ಸೃಷ್ಟಿಸುವುದಕ್ಕಾಗಿಯೇ ಅವ್ಯಯನಾದ ನಾನು ನಿನ್ನನ್ನು ಹಿಂದೆ ಹುಟ್ಟಿಸಿದ್ದೆ. ನನ್ನ ದೇಹದಿಂದ ಹುಟ್ಟಿದ ನೀನು ನನ್ನ ಆತ್ಮಸ್ವರೂಪನಾಗಿದ್ದೀಯೆ. ಆದಿಪುರುಷನಾಗಿದ್ದೀಯೆ. ಅನಘ! ವಿಶ್ವಾತ್ಮನ್! ವರವನ್ನು ಕೇಳು! ನಾನು ನಿನಗೆ ವರವನ್ನು ಕೊಡುತ್ತೇನೆ.”

ಸ ದೇವದೇವವಚನಂ ನಿಶಮ್ಯ ಕಮಲೋದ್ಭವಃ । ನಿರೀಕ್ಷ್ಯ ವಿಷ್ಣುಂ ಪುರುಷಂ ಪ್ರಣಮ್ಯೋವಾಚ ಶಂಕರಮ್ ।। 70 ।। ಭಗವನ್ ಭೂತಭವ್ಯೇಶ ಮಹಾದೇವಾಂಬಿಕಾಪತೇ । ತ್ವಾಮೇವ ಪುತ್ರಮಿಚ್ಛಾಮಿ ತ್ವಯಾ ವಾ ಸದೃಶಂ ಸುತಮ್ ।। 71 ।। ಮೋಹಿತೋಽಸ್ಮಿ ಮಹಾದೇವ ಮಾಯಯಾ ಸೂಕ್ಷ್ಮಯಾ ತ್ವಯಾ । ನ ಜಾನೇ ಪರಮಂ ಭಾವಂ ಯಾಥಾತಥ್ಯೇನ ತೇ ಶಿವ ।। 72 ।। ತ್ವಮೇವ ದೇವ ಭಕ್ತಾನಾಂ ಮಾತಾ ಭ್ರಾತಾ ಪಿತಾ ಸುಹೃತ್ । ಪ್ರಸೀದ ತವ ಪಾದಾಬ್ಜಂ ನಮಾಮಿ ಶರಣಾಗತಃ ।। 73 ।।

ದೇವದೇವನ ಮಾತನ್ನು ಕೇಳಿ ಕಮಲೋದ್ಭವನು ಪುರುಷ ವಿಷ್ಣುವನ್ನು ನೋಡಿ, ಶಂಕರನಿಗೆ ನಮಸ್ಕರಿಸಿ ಹೇಳಿದನು: “ಭಗವನ್! ಭೂತಭವ್ಯ! ಈಶ! ಮಹಾದೇವ! ಅಂಬಿಕಾಪತೇ! ನೀನೇ ನನಗೆ ಪುತ್ರನಾಗಬೇಕೆಂದು ಬಯಸುತ್ತೇನೆ. ಅಥವಾ ನಿನಗೆ ಸಮಾನನಾದ ಪುತ್ರನಾದರೂ ನನಗೆ ಹುಟ್ಟಲಿ! ಮಹಾದೇವ! ನಿನ್ನ ಈ ಸೂಕ್ಷ್ಮ ಮಾಯೆಯಿಂದ ಮೋಹಿತನಾಗಿಬಿಟ್ಟೆ! ಶಿವ! ಆದ್ದರಿಂದ ಯಥಾತಥ್ಯವಾಗಿ ನಿನ್ನ ಪರಮ ಭಾವವನ್ನು ಅರಿಯಲಿಲ್ಲ. ದೇವ! ಭಕ್ತರಿಗೆ ನೀನೇ ತಾಯಿ-ತಂದೆ-ಸಹೋದರ ಮತ್ತು ಸ್ನೇಹಿತ. ನಿನ್ನ ಪಾದಾರವಿಂದಗಳಿಗೆ ನಮಸ್ಕರಿಸುತ್ತೇನೆ. ನಿನಗೆ ಶರಣಾಗತನಾದ ನನ್ನ ಮೇಲೆ ಪ್ರಸನ್ನನಾಗು!”

ಸ ತಸ್ಯ ವಚನಂ ಶ್ರುತ್ವಾ ಜಗನ್ನಾಥೋ ವೃಷಧ್ವಜಃ । ವ್ಯಾಜಹಾರ ತದಾ ಪುತ್ರಂ ಸಮಾಲೋಕ್ಯ ಜನಾರ್ದನಮ್ ।। 74 ।। ಯದರ್ಥಿತಂ ಭಗವತಾ ತತ್ಕರಿಷ್ಯಾಮಿ ಪುತ್ರಕ । ವಿಜ್ಞಾನಮೈಶ್ವರಂ ದಿವ್ಯಮುತ್ಪತ್ಸ್ಯತಿ ತವಾನಘಮ್ ।। 75 ।। ತ್ವಮೇವ ಸರ್ವಭೂತಾನಾಮಾದಿಕರ್ತಾ ನಿಯೋಜಿತಃ । ತಥಾ ಕುರುಷ್ವ ದೇವೇಶ ಮಾಯಾಂ ಲೋಕಪಿತಾಮಹ ।। 76 ।। ಏಷ ನಾರಾಯಣೋ ಮತ್ತೋ ಮಮೈವ ಪರಮಾ ತನುಃ । ಭವಿಷ್ಯತಿ ತವೇಶಾನೋ ಯೋಗಕ್ಷೇಮವಹೋ ಹರಿಃ ।। 77 ।।

ಅವನ ಆ ಮಾತನ್ನು ಕೇಳಿ ಜಗನ್ನಾಥ ವೃಷಧ್ವಜನು ತನ್ನ ಪುತ್ರ ಜನಾರ್ದನನನ್ನು ನೋಡಿ ಹೇಳಿದನು: “ಪುತ್ರಕ! ನೀನು ಬಯಸಿದಂತೆಯೇ ಮಾಡುತ್ತೇನೆ. ಅನಘ! ನಿನಗೆ ಈಶ್ವರನ ದಿವ್ಯ ವಿಜ್ಞಾನವುಂಟಾಗುತ್ತದೆ. ನೀನೇ ಸರ್ವಭೂತಗಳ ಆದಿಕರ್ತನೆಂದು ನಿಯೋಜಿತನಾಗಿದ್ದೀಯೆ. ದೇವ! ಲೋಕಪಿತಾಮಹ! ಹಾಗೆಯೇ ನೀನು ಸರ್ವ ಭೂತಗಳಲ್ಲಿ ಮಾಯೆಯನ್ನುಂಟುಮಾಡು. ಈ ನಾರಾಯಣನು ನನ್ನವನೇ. ನನ್ನದೇ ಪರಮ ಶರೀರದಿಂದ ಹುಟ್ಟಿದವನು. ಈ ಹರಿಯು ನಿನ್ನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾನೆ.”

ಏವಂ ವ್ಯಾಹೃತ್ಯ ಹಸ್ತಾಭ್ಯಾಂ ಪ್ರೀತಃ ಸ ಪರಮೇಶ್ವರಃ । ಸಂಸ್ಪೃಶ್ಯ ದೇವಂ ಬ್ರಹ್ಮಾಣಂ ಹರಿಂ ವಚನಮಬ್ರವೀತ್ ।। 78 ।। ತುಷ್ಟೋಽಸ್ಮಿ ಸರ್ವಥಾಹಂ ತೇ ಭಕ್ತಸ್ತ್ವಂ ಚ ಜಗನ್ಮಯ । ವರಂ ವೃಣೀಷ್ವಂ ನಾವಾಭ್ಯಾಮನ್ಯೋಽಸ್ತಿ ಪರಮಾರ್ಥತಃ ।। 79 ।। ಶ್ರುತ್ವಾಽಥ ದೇವವಚನಂ ವಿಷ್ಣುರ್ವಿಶ್ವಮಯಂ ಜಗತ್ । ಪ್ರಾಹ ಪ್ರಸನ್ನಯಾ ವಾಚಾ ಸಮಾಲೋಕ್ಯ ಚ ತನ್ಮುಖಮ್ ।। 80 ।। ಏಷ ಏವ ವರಃ ಶ್ಲಾಘ್ಯೋ ಯದಹಂ ಪರಮೇಶ್ವರಮ್ । ಪಶ್ಯಾಮಿ ಪರಮಾತ್ಮಾನಂ ಭಕ್ತಿರ್ಭವತು ಮೇ ತ್ವಯಿ ।। 81 ।।

ಹೀಗೆ ನುಡಿದು ಪರಮೇಶ್ವರನು ಪ್ರೀತಿಯಿಂದ ತನ್ನ ಕೈಗಳಿಂದ ಬ್ರಹ್ಮದೇವನನ್ನು ಮುಟ್ಟಿ, ಹರಿಗೆ ಈ ಮಾತನ್ನಾಡಿದನು: “ಜಗನ್ಮಯ! ನಾನು ನಿನ್ನಮೇಲೆ ಸರ್ವಥಾ ಸಂತುಷ್ಟನಾಗಿದ್ದೇನೆ. ನೀನು ನನ್ನ ಭಕ್ತನು. ವರವನ್ನು ಕೇಳಿಕೋ. ನಮ್ಮಿಬ್ಬರಿಗಿಂತ ಪರಮಾರ್ಥವಾದ ಅನ್ಯನು ಇಲ್ಲ.” ಆ ದೇವವಚನವನ್ನು ಕೇಳಿ ವಿಶ್ವಮಯ, ಜಗತ್ಸ್ವರೂಪೀ ವಿಷ್ಣುವು ಅವನ ಮುಖವನ್ನೇ ನೋಡುತ್ತಾ ಪ್ರಸನ್ನ ವಚನಗಳಿಂದ ಹೀಗೆ ಹೇಳಿದನು: “ಪರಮೇಶ್ವರನನ್ನು ಹೀಗೆ ನಾನು ಕಾಣುತ್ತಿದ್ದೇನೆ ಎನ್ನುವುದೇ ಶ್ಲಾಘನೀಯವಾದ ವರವು. ನನಗೆ ನಿನ್ನಲ್ಲಿ ಸ್ಥಿರವಾದ ಭಕ್ತಿಯುಂಟಾಗಲಿ.”

ತಥೇತ್ಯುಕ್ತ್ವಾ ಮಹಾದೇವಃ ಪುನರ್ವಿಷ್ಣುಮಭಾಷತ । ಭವಾನ್ ಸರ್ವಸ್ಯ ಕಾರ್ಯಸ್ಯ ಕರ್ತಾಹಮಧಿದೈವತಮ್ ।। 82 ।। ತ್ವನ್ಮಯಂ ಮನ್ಮಯಂ ಚೈವ ಸರ್ವಮೇತನ್ನ ಸಂಶಯಃ । ಭವಾನ್ಸೋಮಸ್ತ್ವಹಂ ಸೂರ್ಯೋ ಭವಾನ್ರಾತ್ರಿರಹಂ ದಿನಮ್ ।। 83 ।। ಭವಾನ್ ಪ್ರಕೃತಿರವ್ಯಕ್ತಮಹಂ ಪುರುಷ ಏವ ಚ । ಭವಾನ್ ಜ್ಞಾನಮಹಂ ಜ್ಞಾತಾ ಭವಾನ್ಮಾಯಾಹಮೀಶ್ವರಃ ।। 84 ।। ಭವಾನ್ವಿದ್ಯಾತ್ಮಿಕಾ ಶಕ್ತಿಃ ಶಕ್ತಿಮಾನಹಮೀಶ್ವರಃ । ಯೋಽಹಂ ಸ ನಿಷ್ಕಲೋ ದೇವಃ ಸೋಽಸಿ ನಾರಾಯಣಃ ಪ್ರಭುಃ ।। 85 ।। ಏಕೀಭಾವೇನ ಪಶ್ಯಂತಿ ಯೋಗಿನೋ ಬ್ರಹ್ಮವಾದಿನಃ । ತ್ವಾಮನಾಶ್ರಿತ್ಯ ವಿಶ್ವಾತ್ಮನ್ನ ಯೋಗೀ ಮಾಮುಪೈಷ್ಯತಿ । ಪಾಲಯೈತಜ್ಜಗತ್ಕೃತ್ಸ್ನಂ ಸದೇವಾಸುರಮಾನುಷಮ್ ।। 86 ।। ಇತೀದಮುಕ್ತ್ವಾ ಭಗವಾನನಾದಿಃ ಸ್ವಮಾಯಯಾ ಮೋಹಿತಭೂತಭೇದಃ । ಜಗಾಮ ಜನ್ಮರ್ಧಿವಿನಾಶಹೀನಂ ಧಾಮೈಕಮವ್ಯಕ್ತಮನಂತಶಕ್ತಿಃ ।। 87 ।।

ಹಾಗೆಯೇ ಆಗಲೆಂದು ಹೇಳಿ ಮಹಾದೇವನು ಪುನಃ ವಿಷ್ಣುವಿಗೆ ಹೇಳಿದನು: “ನೀನು ಸರ್ವಕಾರ್ಯಗಳ ಕರ್ತನಾಗಿದ್ದೀಯೆ. ನಾನು ಅದರ ಅಧಿದೈವತನು. ಇವೆಲ್ಲವೂ ನನ್ನಿಂದ ಮತ್ತು ನಿನ್ನಿಂದ ತುಂಬಿಕೊಂಡಿದೆ ಎನ್ನುವುದರಲ್ಲಿ ಸಂಶಯವಿಲ್ಲ. ನೀನು ಸೋಮ. ನಾನು ಸೂರ್ಯ. ನೀನು ರಾತ್ರಿ. ನಾನು ಹಗಲು. ನೀನು ಅವ್ಯಕ್ತ ಪ್ರಕೃತಿ. ನಾನು ಪುರುಷ. ನೀನು ಜ್ಞಾನ. ನಾನು ಜ್ಞಾತಾ. ನೀನು ಮಾಯೆ ಮತ್ತು ನಾನು ಈಶ್ವರ. ನೀನು ವಿದ್ಯಾತ್ಮಿಕ ಶಕ್ತಿಯು. ನಾನು ಆ ಶಕ್ತಿವಂತನಾದ ಈಶ್ವರನು. ನಾನು ಹೇಗೆ ನಿಷ್ಕಲನೋ ಹಾಗೆ ಪ್ರಭು ನಾರಾಯಣ ದೇವ ನೀನೂ ಕೂಡ ನಿಷ್ಕಲನಾಗಿದ್ದೀಯೆ. ಬ್ರಹ್ಮವಾದೀ ಯೋಗಿಗಳು ನಮ್ಮಿಬ್ಬರನ್ನೂ ಏಕೀಭಾವದಿಂದ ನೋಡುತ್ತಾರೆ. ವಿಶ್ವಾತ್ಮನ್! ನಿನ್ನನ್ನು ಆಶ್ರಯಿಸದೇ ಯೋಗಿಗಳು ನನ್ನನ್ನು ಹೊಂದಲಾರರು. ದೇವಾಸುರಮಾನುಷರೊಂದಿಗೆ ಈ ಸಂಪೂರ್ಣ ಜಗತ್ತನ್ನೂ ಪಾಲಿಸು!” ಹೀಗೆ ಹೇಳಿ ತನ್ನದೇ ಮಾಯೆಯಿಂದ ಭೂತಭೇದದ ಮೋಹವನ್ನುಂಟುಮಾಡುವ ಅನಾದಿ ಅವ್ಯಕ್ತ ಅನಂತಶಕ್ತಿಯ ಭಗವಂತನು ಜನ್ಮ-ನಾಶ-ವೃದ್ಧಿಹೀನವಾದ ತನ್ನ ಧಾಮವನ್ನು ಸೇರಿದನು.”

ಇತಿ ಶ್ರೀಕೂರ್ಮಪುರಾಣೇ ನವಮೋಽಧ್ಯಾಯಃ ।।

ಇದು ಶ್ರೀಕೂರ್ಮಪುರಾಣದಲ್ಲಿ ಒಂಬತ್ತನೇ ಅಧ್ಯಾಯವು.

[1] ಕರ್ಣಿಕಾ ಎಂದರೆ ಕಮಲದ ಮಧ್ಯಭಾಗದಲ್ಲಿ ಇರುವ ಗುಬ್ಬಿ/ಗುಡ್ಡ —ಅಂದರೆ, ಕಮಲದ ಒಳಗಿನ ಹಳದಿ ಬಣ್ಣದ ಮೂಲ ಕೇಂದ್ರೀಯ ಭಾಗ. ಇದು ಕಮಲದ "ಹೃದಯ"ದ ಹಾಗೆ. ಬ್ರಹ್ಮನು ಉದ್ಭವಿಸುವ ಸ್ಥಳವನ್ನು ಸಾಮಾನ್ಯವಾಗಿ ಈ ಕರ್ಣಿಕಾ ಎಂದು ರೂಪಕವಾಗಿ ಹೇಳುತ್ತಾರೆ. ಸರಳವಾಗಿ: Lotus central pod / central bulb. ಕೇಸರ ಎಂದರೆ ಕಮಲದ ಪುಷ್ಪದೊಳಗಿನ ನಾರುಗಳಂತೆ ಇರುವ ಸಣ್ಣ ಸಣ್ಣ ದಂಟುಗಳು—ಪೊಲ್ಲೆ/ಸ್ತಂಭಗಳಂತೆ ಕಾಣುವ ಪುಷ್ಪಕೇಸರಗಳು. ಇವು ಸಾಮಾನ್ಯವಾಗಿ ಕೆಂಪು ಅಥವಾ ಹಳದಿ ಬಣ್ಣದ್ದಾಗಿರುತ್ತದೆ. ಕಮಲವನ್ನು ತೆರೆದಾಗ ಮಧ್ಯಭಾಗದ ಸುತ್ತಲೂ ಕಾಣುವ ನರಮುನೆಯಂತಿರುವ ಭಾಗವೇ “ಕೇಸರ”. ಸರಳವಾಗಿ: Stamens of the lotus (the filament-like parts around the center).

Leave a Reply

Your email address will not be published. Required fields are marked *