ಶ್ರೀ ಕೂರ್ಮಪುರಾಣ: ಅಧ್ಯಾಯ 5 - ಕಾಲಸಂಖ್ಯಾವಿವರಣಮ್
ಕೂರ್ಮ ಉವಾಚ । ಅನುತ್ಪಾದಾಚ್ಚ ಪೂರ್ವಸ್ಮಾತ್ ಸ್ವಯಂಭುರಿತಿ ಸ ಸ್ಮೃತಃ । ನರಾಣಾಮಯನಂ ಯಸ್ಮಾತ್ತೇನ ನಾರಾಯಣಃ ಸ್ಮೃತಃ ।। 1 ।। ಹರಃ ಸಂಸಾರಹರಣಾದ್ವಿಭತ್ವಾದ್ವಿಷ್ಣುರುಚ್ಯತೇ । ಭಗವಾನ್ ಸರ್ವವಿಜ್ಞಾನಾದವನಾದೋಮಿತಿಸ್ಮೃತಃ ।। 2 ।। ಸರ್ವಜ್ಞಃ ಸರ್ವವಿಜ್ಞಾನಾತ್ ಸರ್ವಃ ಸರ್ವಮಯೋ ಮತಃ । ಸ್ವಯಂಭುವೋ ನಿವೃತ್ತಸ್ಯ ಕಾಲಸಂಖ್ಯಾ ದ್ವಿಜೋತ್ತಮಾಃ ।। 3 ।। ನ ಶಕ್ಯತೇ ಸಮಾಖ್ಯಾತುಂ ಬಹುವರ್ಷೈರಪಿ ಸ್ವಯಮ್ ।
ಕೂರ್ಮನು ಹೇಳಿದನು: “ತನಗಿಂತಲೂ ಮೊದಲಿದ್ದ ಯಾವುದೇ ಕಾರಣವಸ್ತುವಿನಿಂದ ಹುಟ್ಟದೇ ಇರುವುದರಿಂದ ಪರಮೇಶ್ವರನು ಸ್ವಯಂಭು ಎಂದು ಕರೆಯಲ್ಪಡುತ್ತಾನೆ. ಜೀವಭಾವವನ್ನು ಹೊಂದಿದ ವಿವಿಧ ಆತ್ಮರಿಗೆ ಪರಮಗತಿಯಾದ್ದರಿಂದ ನಾರಾಯಣನೆಂದು ಸ್ಮರಿಸಲ್ಪಡುತ್ತಾನೆ. ಸಂಸಾರದುಃಖವನ್ನು ಅಪಹರಿಸುವುದರಿಂದ ಹರನೆಂದೂ, ವಿಭುವಾದ್ದರಿಂದ ವಿಷ್ಣುವೆಂದೂ ಕರೆಯಲ್ಪಡುತ್ತಾನೆ. ಸರ್ವವಸ್ತು ವಿಜ್ಞಾನವಿರುವುದರಿಂದ ಭಗವಂತನೆಂದೂ, ಅವನ ರಕ್ಷಣವ್ಯಾಪಾರದಿಂದ ಓಂಕಾರರೂಪಿಯೆಂದೂ ಸ್ಮರಿಸಲ್ಪಟ್ಟಿದ್ದಾನೆ. ಸರ್ವ ವಿಜ್ಞಾನಕ್ಕೆ ಆಶ್ರಯನಾದ್ದರಿಂದ ಸರ್ವಜ್ಞನೆಂದೂ, ಸರ್ವಾತ್ಮಕನಾದ್ದರಿಂದ ಸರ್ವನೆಂದೂ ನಿರೂಪಿಸಲ್ಪಟ್ಟಿದ್ದಾನೆ. ದ್ವಿಜೋತ್ತಮರೇ! ಹಿಂದೆ ನಿವೃತ್ತಿಹೊಂದಿದ ಸ್ವಯಂಭುವಿನ ಕಾಲಗಣನೆಯು ಗಣನಾತೀತವಾದುದು. ಅನೇಕ ವರ್ಷಗಳ ಕಾಲ ಲೆಕ್ಕಹಾಕಿದರೂ ಆ ಕಾಲ ಸಂಖ್ಯೆಯನ್ನು ಎಣಿಸಿ ಹೇಳಲು ಸಾಧ್ಯವಿಲ್ಲ.
ಕಾಲಸಂಖ್ಯಾ ಸಮಾಸೇನ ಪರಾರ್ಧದ್ದ್ವಯಕಲ್ಪಿತಾ ।। 4 ।। ಸ ಏವ ಸ್ಯಾತ್ಪರಃ ಕಾಲಸ್ತದಂತೇ ಸೃಜ್ಯತೇ ಪುನಃ । ನಿಜೇನ ತಸ್ಯ ಮಾನೇನ ಚಾಯುರ್ವರ್ಷಶತಂ ಸ್ಮೃತಮ್ ।। 5 ।। ತತ್ಪರಾರ್ಧಂ ತದರ್ಧಂ ವಾ ಪರಾರ್ಧಮಭಿದೀಯತೇ ।
ಸಂಕ್ಷಿಪ್ತವಾಗಿ ಕಾಲದ ಗಣನೆಯು ಎರಡು ಪರಾರ್ಧಗಳೆಂದು ಕಲ್ಪಿತವಾಗಿದೆ. ಪರವು ಅತ್ಯಂತ ಮಹತ್ತಾದ ಕಾಲವು ಮತ್ತು ಪರದ ನಂತರ ಪುನಃ ಸೃಷ್ಟಿಯಾಗುತ್ತದೆ. ಪರವು ಬ್ರಹ್ಮನ ನೂರು ವರ್ಷ ಆಯುಷ್ಯ ಎಂದು ಸ್ಮರಿಸಲ್ಪಟ್ಟಿದೆ. ಆ ಪರದ ಅರ್ಧವನ್ನು (50 ವರ್ಷಗಳನ್ನು) ಪರಾರ್ಧವೆಂದು ಕರೆಯುತ್ತಾರೆ.
ಕಾಷ್ಠಾ ಪಂಚದಶ ಖ್ಯಾತಾ ನಿಮೇಷಾ ದ್ವಿಜಸತ್ತಮಾಃ ।। 6 ।। ಕಾಷ್ಠಾ ತ್ರಿಂಶತ್ಕಲಾ ತ್ರಿಂಶತ್ಕಲಾ ಮೌಹೂರ್ತಿಕೀ ಗತಿಃ । ತಾವತ್ಸಂಖ್ಯೈರಹೋರಾತ್ರಂ ಮುಹೂರ್ತೈರ್ಮಾನುಷಂ ಸ್ಮೃತಮ್ ।। 7 ।। ಅಹೋರಾತ್ರಾಣಿ ತಾವಂತಿ ಮಾಸಃ ಪಕ್ಷದ್ವಯಾತ್ಮಕಃ । ತೈಃ ಷಡ್ಭಿರಯನಂ ವರ್ಷಂ ದ್ವೇಽಯನೇ ದಕ್ಷಿಣೋತ್ತರೇ ।। 8 ।।
ದ್ವಿಜಶ್ರೇಷ್ಠರೇ! 15 ನಿಮೇಷಗಳಿಂದ ಒಂದು ಕಾಷ್ಠಾ ಅನಿಸುತ್ತದೆ. 30 ಕಾಷ್ಠಾಗಳಿಂದ ಒಂದು ಕಲಾ ಆಗುತ್ತದೆ. ಅಂತಹ 30 ಕಲೆಗಳಿಂದ ಒಂದು ಮುಹೂರ್ತವೂ, 30 ಮುಹೂರ್ತಗಳಿಂದ ಮನುಷ್ಯಮಾನದ ಹಗಲು-ರಾತ್ರಿಗಳನ್ನೊಳಗೊಂಡ ಒಂದು ದಿನವೂ ಆಗುತ್ತದೆ. ಅಂತಹ 30 ಅಹೋರಾತ್ರಗಳ ದಿನಗಳು ಎರಡು ಪಕ್ಷಗಳಿಂದ ಕೂಡಿದ ಒಂದು ಮಾಸವಾಗುತ್ತದೆ. ಆರು ಮಾಸಗಳಿಗೆ ಒಂದು ಅಯನವೂ, ಮತ್ತು ಅಂತಹ ದಕ್ಷಿಣ-ಉತ್ತರ ಎಂಬ ಎರಡು ಅಯನಗಳಿಂದ ಒಂದು ವರ್ಷವೂ ಆಗುತ್ತದೆ.[1]
ಅಯನಂ ದಕ್ಷಿಣಂ ರಾತ್ರಿರ್ದೇವಾನಾಮುತ್ತರಂ ದಿನಮ್ । ದಿವ್ಯೈರ್ವರ್ಷಸಹಸ್ತ್ರೈಸ್ತು ಕೃತತ್ರೇತಾದಿಸಂಜ್ಞಿತಮ್ ।। 9 ।। ಚತುರ್ಯುಗಂ ದ್ವಾದಶಭಿಸ್ತದ್ವಿಭಾಗಂ ನಿಬೋಧತ । ಚತ್ವಾರ್ಯಾಹುಃ ಸಹಸ್ತ್ರಾಣಿ ವರ್ಷಾಣಾಂ ತತ್ಕೃತಂ ಯುಗಮ್ ।। 10 ।। ತಸ್ಯ ತಾವಚ್ಛತೀ ಸಂಧ್ಯಾ ಸಂಧ್ಯಾಂಶಶ್ಚ ಕೃತಸ್ಯ ತು । ತ್ರಿಶತೀ ದ್ವಿಶತೀ ಸಂಧ್ಯಾ ತಥಾ ಚೈಕಶತೀ ಕ್ರಮಾತ್ ।। 11 ।। ಅಂಶಕಂ ಷಟ್ಶತಂ ತಸ್ಮಾತ್ಕೃಸಂಧ್ಯಾಂಶಕೈರ್ವಿನಾ । ತ್ರಿದ್ವ್ಯೇಕಧಾ ಚ ಸಾಹಸ್ರಂ ವಿನಾ ಸಂಧ್ಯಾಂಶಕೇನ ತು ।। 12 ।। ತ್ರೇತಾದ್ವಾಪರತಿಷ್ಯಾಣಾಂ ಕಾಲಜ್ಞಾನೇ ಪ್ರಕೀರ್ತಿತಮ್ । ಏತದ್ದ್ವಾದಶಸಾಹಸ್ರಂ ಸಾಧಿಕಂ ಪರಿಕಲ್ಪಿತಮ್ ।। 13 ।।
ದೇವತೆಗಳಿಗೆ ದಕ್ಷಿಣಾಯನವು ರಾತ್ರಿಯೂ, ಉತ್ತರಾಯಣವು ಒಂದು ಹಗಲೂ ಆಗುತ್ತದೆ. ಇಂತಹ ದೇವಮಾನದಿಂದ 12,000 ವರ್ಷಗಳು ಕಳೆದರೆ ಕೃತ, ತ್ರೇತಾ, ದ್ವಾಪರ ಮತ್ತು ಕಲಿ ಎಂಬ ಹೆಸರುಗಳುಳ್ಳ ಒಂದು ಚತುರ್ಯುಗವು ಮುಗಿಯುತ್ತದೆ. ಆ ಯುಗಗಳ ಕಾಲವಿಭಾಗವನ್ನು ತಿಳಿಯಿರಿ.[2] ದೇವತೆಗಳ 4,000 ವರ್ಷಗಳು ಕೃತಯುಗವನ್ನು ಮಾಡುತ್ತವೆ ಎಂದು ಹೇಳುತ್ತಾರೆ. ಕೃತಯುಗಕ್ಕೆ ಅಷ್ಟೇ ನೂರುವರ್ಷಗಳ ಸಂಧ್ಯೆ (400 ವರ್ಷಗಳು) ಮತ್ತು ಸಂಧ್ಯಾಂಶ (400 ವರ್ಷಗಳು) ಗಳು ಇವೆ. ಇದೇ ರೀತಿ ಕ್ರಮವಾಗಿ ತ್ರೇತ, ದ್ವಾಪರ ಮತ್ತು ಕಲಿಯುಗಗಳಲ್ಲಿ 300, 200 ಮತ್ತು 100 ಸಂಧ್ಯೆಗಳು – ಸಂಧ್ಯಾಂಶಗಳನ್ನು ಬಿಟ್ಟು ಒಟ್ಟು 600 ವರ್ಷಗಳು ಇರುತ್ತವೆ. ಸಂಧ್ಯೆ-ಸಂಧ್ಯಾಂಶಗಳನ್ನು ಬಿಟ್ಟು ತ್ರೇತಾದಿ ಯುಗಗಳ ಪ್ರಮಾಣವು ಕ್ರಮವಾಗಿ ಮೂರು, ಎರಡು ಮತ್ತು ಒಂದು ಸಾವಿರ ವರ್ಷಗಳಾಗುತ್ತವೆ. ಹೀಗೆ ತ್ರೇತಾ, ದ್ವಾಪರ, ಕಲಿಯುಗಗಳ ಮಾನವನ್ನು ಜ್ಞಾನಶಾಸ್ತ್ರದಲ್ಲಿ ನಿರೂಪಿಸಿದ್ದಾರೆ. ಒಟ್ಟುಸೇರಿ ದೇವತೆಗಳ 12,000 ವರ್ಷಗಳು ಒಂದು ದೇವಯುಗವೆಂದು ಗಣಿಸಲ್ಪಟ್ಟಿದೆ.[3]
ತದೇಕಸಪ್ತತಿಗುಣಂ ಮನೋರಂತರಮುಚ್ಯತೇ । ಬ್ರಹ್ಮಣೋ ದಿವಸೇ ವಿಪ್ರಾ ಮನವಶ್ಚ ಚತುರ್ದಶ ।। 14 ।। ಸ್ವಾಯಂಭುವಾದಯಃ ಸರ್ವೇ ತತಃ ಸಾವರ್ಣಿಕಾದಯಃ । ತೈರಿಯಂ ಪೃಥಿವೀ ಸರ್ವಾ ಸಪ್ತದ್ವೀಪಾ ಸಪರ್ವತಾ ।। 15 ।। ಪೂರ್ಣಂ ಯುಗಸಹಸ್ತ್ರಂ ವೈ ಪರಿಪಾಲ್ಯಾ ನರೇಶ್ವರೈಃ । ಮನ್ವಂತರೇಣ ಚೈಕೇನ ಸರ್ವಾಣ್ಯೇವಾಂತರಾಣಿ ವೈ ।। 16 ।।
ಇಂತಹ 71 ದೇವಯುಗಗಳಿಗೆ ಒಂದು ಮನ್ವಂತರವಾಗುತ್ತದೆ. ವಿಪ್ರರೇ! ಬ್ರಹ್ಮನ ಒಂದು ಹಗಲಿನಲ್ಲಿ ಇಂತಹ 14 ಮನ್ವಂತರಗಳಾಗುತ್ತವೆ. ಸ್ವಾಯಂಭುವ ಮನುವಿನಿಂದ ಮೊದಲ್ಗೊಂಡು ಸಾವರ್ಣಿಕ ಮೊದಲಾದ ಈ 14 ಮನುಗಳು ಸಪ್ತದ್ವೀಪಗಳಿಂದಲೂ, ಪರ್ವತಗಳಿಂದಲೂ ಕೂಡಿದ ಸಮಸ್ತ ಪೃಥ್ವಿಯನ್ನು ಆಳುತ್ತಾರೆ. ಈ ನರೇಶ್ವರರು ಪೂರ್ಣ ಯುಗಸಹಸ್ರ[4] ಪರ್ಯಂತವಾಗಿ ಭೂಮಿಯನ್ನು ಪಾಲಿಸುತ್ತಾರೆ. ಕಾಲಮಾನದ ಪ್ರಕಾರ ಒಂದು ಮನ್ವಂತರಕ್ಕೆ ಸಮಾನವಾಗಿ ಎಲ್ಲ ಮನ್ವಂತರಗಳೂ ಇರುತ್ತವೆ.
ವ್ಯಾಖ್ಯಾತಾನಿ ನ ಸಂದೇಹಃ ಕಲ್ಪೇ ಕಲ್ಪೇ ನ ಚೈವ ಹಿ । ಬ್ರಾಹ್ಮಮೇಕಮಹಃ ಕಲ್ಪಸ್ತಾವತೀ ರಾತ್ರಿರಿಷ್ಯತೇ ।। 17 ।। ಚತುರ್ಯುಗಸಹಸ್ತ್ರಂ ತು ಕಲ್ಪಮಾಹುರ್ಮನೀಷಿಣಃ । ತ್ರೀಣಿ ಕಲ್ಪಶತಾನಿ ಸ್ಯುಸ್ತಥಾ ಷಷ್ಟಿರ್ದ್ವಿಜೋತ್ತಮಾಃ ।। 18 ।। ಬ್ರಹ್ಮಣೋ ವತ್ಸರಸ್ತಜ್ಞೈಃ ಕಥಿತೋ ವೈ ದ್ವಿಜೋತ್ತಮಾಃ । ಸ ಚ ಕಾಲಃ ಶತಗುಣಃ ಪರಾರ್ಧಂ ಚೈವ ತದ್ವಿದುಃ ।। 19 ।। ತಸ್ಯಾಂತೇ ಸರ್ವತತ್ತ್ವಾನಾಂ ಸಹೇತೌ ಪ್ರಕೃತೌ ಲಯಃ । ತೇನಾಯಂ ಪ್ರೋಚ್ಯತೇ ಸದ್ಭಿಃ ಪ್ರಾಕೃತಃ ಪ್ರತಿಸಂಚರಃ ।। 20 ।। ಬ್ರಹ್ಮನಾರಾಯಣೇಶಾನಾಂ ತ್ರಯಾಣಾಂ ಪ್ರಕೃತೌ ಲಯಃ । ಪ್ರೋಚ್ಯತೇ ಕಾಲಯೋಗೇನ ಪುನರೇವ ಚ ಸಂಭವಃ ।। 21 ।। ಏವಂ ಬ್ರಹ್ಮಾ ಚ ಭೂತಾನಿ ವಾಸುದೇವೋಽಪಿ ಶಂಕರಃ । ಕಾಲೇನೈವ ತು ಸೃಜ್ಯಂತೇ ಸ ಏವ ಗ್ರಸತೇ ಪುನಃ ।। 22 ।।
ಪ್ರತಿಕಲ್ಪಗಳ ವಿಷಯದಲ್ಲಿ ಯಾವ ಸಂದೇಹವೂ ಇಲ್ಲ. ಬ್ರಹ್ಮನ ಒಂದು ಹಗಲು ಒಂದು ಕಲ್ಪವು. ರಾತ್ರಿಯು ಅಷ್ಟೇ ಪ್ರಮಾಣವುಳ್ಳದ್ದಾಗಿದೆ. ವಿದ್ವಾಂಸರು 1000 ಚತುರ್ಯುಗಗಳನ್ನು ಒಂದು ಕಲ್ಪ ಎಂದು ಹೇಳುತ್ತಾರೆ. ದ್ವಿಜೋತ್ತಮರೇ! ಅಂತರ 360 ಕಲ್ಪಗಳು ಸೇರಿ ಬ್ರಹ್ಮನ ಒಂದು ವರ್ಷವಾಗುತ್ತದೆ. ದ್ವಿಜೋತ್ತಮರೇ! ಅಂತಹ ನೂರು ವರ್ಷಗಳ ಕಾಲವನ್ನು ಬ್ರಹ್ಮನ ಪರಾರ್ಧ[5] ಎಂದು ವಿದ್ವಾಂಸರು ತಿಳಿದಿದ್ದಾರೆ. ಆ ಪರಾರ್ಧದ ಅಂತ್ಯದಲ್ಲಿ ಸರ್ವಭೂತಗಳಿಗೆ ತಮ್ಮ ಕಾರಣಸಹಿತವಾಗಿ ಲಯವಾಗುತ್ತದೆ. ಆದ್ದರಿಂದ ಸತ್ಪುರುಷರು ಆ ಲಯವನ್ನು ಪ್ರಾಕೃತ ಲಯ ಎಂದು ಕರೆಯುತ್ತಾರೆ. ಆಗ ಬ್ರಹ್ಮ-ನಾರಾಯಣ-ಈಶ ಈ ತ್ರಿಮೂರ್ತಿಗಳಿಗೆ ಪ್ರಕೃತಿಯಲ್ಲಿ ಲಯವಾಗುವುದು ಎಂದು ಪಂಡಿತರು ಹೇಳುತ್ತಾರೆ. ಕಾಲಯೋಗದಿಂದ ಲಯವಾಗಿ ಪುನಃ ಉತ್ಪನ್ನವಾಗುತ್ತದೆ. ಹೀಗೆ ಬ್ರಹ್ಮ-ವಾಸುದೇವ-ಶಂಕರ ಮತ್ತು ಸಕಲ ಭೂತಗಳು ಕಾಲದಿಂದಲೇ ಸೃಷ್ಟಿಸಲ್ಪಡುತ್ತವೆ. ಆ ಕಾಲಾತ್ಮನೇ ಅವರನ್ನು ಪುನಃ ಸಂಹರಿಸುತ್ತಾನೆ.
ಅನಾದಿರೇಷ ಭಗವಾನ್ ಕಾಲೋಽನಂತೋಽಜರೋಽಮರಃ । ಸರ್ವಗತ್ವಾತ್ ಸ್ವತಂತ್ರತ್ವಾತ್ ಸರ್ವಾತ್ಮತ್ವಾನ್ಮಹೇಶ್ವರಃ ।। 23 ।। ಬ್ರಹ್ಮಾಣೋ ಬಹವೋ ರುದ್ರಾ ಹ್ಯನ್ಯೇ ನಾರಾಯಣಾದಯಃ । ಏಕೋ ಹಿ ಭಗವಾನೀಶಃ ಕಾಲಃ ಕವಿರಿತಿ ಶ್ರುತಿ ।। 24 ।।
ಅಂತಹ ಭಗವಾನ್ ಕಾಲಾತ್ಮನು ಅನಾದಿಯೂ, ಅನಂತನೂ, ಜರಾವರ್ಜಿತನೂ, ಮರಣವರ್ಜಿತನೂ ಆಗಿದ್ದಾನೆ. ಮತ್ತು ಸರ್ವವ್ಯಾಪಿ, ಸ್ವತಂತ್ರ ಮತ್ತು ಸರ್ವಾತ್ಮಕನಾಗಿರುವುದರಿಂದ ಮಹೇಶ್ವರ ಎಂದು ಸ್ಮರಿಸಲ್ಪಟ್ಟಿದ್ದಾನೆ. ಹೀಗಿರುವಾಗ, ಬ್ರಹ್ಮ-ನಾರಾಯಣ-ರುದ್ರ ಮೊದಲಾದವರು ಅನೇಕ ಮಂದಿ ಇದ್ದಾರೆ. ಭಗವಂತನೂ, ಸರ್ವಜ್ಞನೂ, ಮತ್ತು ನಿಯಾಮಕನೂ ಆದ ಕಾಲಾತ್ಮನು ಒಬ್ಬನೇ ಎಂದು ಶ್ರುತಿಯು ವರ್ಣಿಸುತ್ತದೆ.
ಏಕಮತ್ರ ವ್ಯತೀತಂ ತು ಪರಾರ್ಧಂ ಬ್ರಹ್ಮಣೋ ದ್ವಿಜಾಃ । ಸಾಂಪ್ರತಂ ವರ್ತತೇ ತ್ವರ್ಧಂ ತಸ್ಯ ಕಲ್ಪೋಽಯಮಗ್ರಜಃ ।। 25 ।। ಯೋಽತೀತಃ ಸೋಂಽತಿಮಃ ಕಲ್ಪಃ ಪಾದ್ಮ ಇತ್ಯುಚ್ಯತೇ ಬುಧೈಃ । ವಾರಾಹೋ ವರ್ತತೇ ಕಲ್ಪಸ್ತಸ್ಯ ವಕ್ಷ್ಯಾಮಿ ವಿಸ್ತರಮ್ ।। 26 ।।
ದ್ವಿಜರೇ! ಬ್ರಹ್ಮನ ಒಂದು ಪರಾರ್ಧವು ಈಗ ಕಳೆದಿದೆ. ಈಗ ಮುಂದಿನ ಇನ್ನೊಂದು ಪರಾರ್ಧವು ನಡೆಯುತ್ತಿದೆ. ಅದರಲ್ಲಿಯೂ ಮೊದಲನೆಯ ಕಲ್ಪವು ಈಗ ನಡೆಯುತ್ತಿದೆ. ಹಿಂದೆ ಕಳೆದ ಕೊನೆಯ ಕಲ್ಪವು ಪಾದ್ಮಕಲ್ಪವೆಂದು ತಿಳಿದವರು ಹೇಳಿದ್ದಾರೆ. ಈಗ ವಾರಾಹ ಕಲ್ಪವು ನಡೆಯುತ್ತಿದೆ. ಈ ಕಲ್ಪದ ವಿಸ್ತಾರವನ್ನು ವರ್ಣಿಸುತ್ತೇನೆ.”
ಇತಿ ಶ್ರೀಕೂರ್ಮಪುರಾಣೇ ಪಂಚಮೋಽಧ್ಯಾಯಃ ।।
ಇದು ಶ್ರೀಕೂರ್ಮಪುರಾಣದಲ್ಲಿ ಐದನೇ ಅಧ್ಯಾಯವು.
[1] ಸಂಕ್ಷಿಪ್ತವಾಗಿ ಮನುಷ್ಯರ ಒಂದು ವರ್ಷದ ಕಾಲಗಣನೆಯು ಈ ಕೆಳಗಿನಂತಿದೆ:
| 15 ನಿಮೇಷಗಳು | 1 ಕಾಷ್ಠಾ |
| 30 ಕಾಷ್ಠಾ | 1 ಕಲಾ |
| 30 ಕಲಾ | 1 ಮುಹೂರ್ತ |
| 30 ಮುಹೂರ್ತಗಳು | 1 ದಿನ (ಹಗಲು+ರಾತ್ರಿ) |
| 30 ದಿನಗಳು | 1 ಮಾಸ (ಕೃಷ್ಣಪಕ್ಷ+ಶುಕ್ಲಪಕ್ಷ) |
| 12 ಮಾಸಗಳು | 1 ವರ್ಷ (6 ಮಾಸ ದಕ್ಷಿಣಾಯನ + 6 ಮಾಸ ಉತ್ತರಾಯಣ) |
ಮನುಷ್ಯರ 1 ವರ್ಷವು ದೇವತೆಗಳಿಗೆ 1 ದಿನ (ದಕ್ಷಿಣಾಯನವು ರಾತ್ರಿ + ಉತ್ತರಾಯಣ ಹಗಲು) ವಾಗುತ್ತದೆ.
[2] ಅರಮನೆ ಪ್ರಕಾಶನದ ಕೂರ್ಮಪುರಾಣದಲ್ಲಿ ಶ್ಲೋಕ 9-10 ರ ಅನುವಾದವು ಬೇರೆಯಾಗಿದೆ: ದೇವತೆಗಳಿಗೆ ದಕ್ಷಿಣಾಯನವು ಒಂದು ರಾತ್ರಿಯೂ, ಉತ್ತರಾಯಣವು ಒಂದು ಹಗಲೂ ಆಗುವುದು. ಇಂತಹ ದೇವಮಾನದಿಂದ ಸಹಸ್ರ ವರ್ಷಗಳು ಕಳೆದರೆ ಕೃತ, ತ್ರೇತಾ, ದ್ವಾಪರ ಮತ್ತು ಕಲಿ ಎಂಬ ಸಂಜ್ಞೆಯುಳ್ಳ ಚತುರ್ಯುಗ ಕಾಲವಾಗುತ್ತದೆ. ಈ ಚತುರ್ಯುಗ ರೂಪವಾದ ಕಾಲವು ಹನ್ನೆರಡು ದಿವ್ಯ ವರ್ಷಾತ್ಮಕವಾಗಿ ಕಳೆದರೆ ಒಂದು ದೈವಯುಗವಾಗುವುದು. ಅದರಲ್ಲಿ ಈ ರೀತಿಯಾಗಿ ವಿಭಾಗವಿರುವುದು, ನಾಲ್ಕು ಸಹಸ್ರ ವರ್ಷಗಳು ಕೃತಯುಗರೂಪವಾಗುವುವು.
[3] ಸಂಕ್ಷಿಪ್ತವಾಗಿ ದೇವಮಾನ ವರ್ಷಗಳಲ್ಲಿ ಚತುರ್ಯುಗಗಳ ಪರಿಮಾಣವು ಈ ಕೆಳಗಿನಂತಿವೆ:
| ಯುಗ | ಅವಧಿ | ಸಂಧ್ಯೆ | ಸಂಧ್ಯಾಂಶ | ಒಟ್ಟು |
| ಕೃತ | 4000 | 400 | 400 | 4800 |
| ತ್ರೇತಾ | 3000 | 300 | 300 | 3600 |
| ದ್ವಾಪರ | 2000 | 200 | 200 | 2400 |
| ಕಲಿ | 1000 | 100 | 100 | 1200 |
| ಚತುರ್ಯುಗ | 10,000 | 1000 | 1000 | 12,000 |
ಮನುಷ್ಯರ ಒಂದು ಚತುರ್ಯುಗವು ದೇವತೆಗಳಿಗೆ ಒಂದು ಯುಗವಾಗುತ್ತದೆ.
[4] ಇಲ್ಲಿ 1000 ಚತುರ್ಯುಗಗಳು ಸೇರಿ 14 ಮನ್ವಂತರಗಳ ಒಂದು ಕಲ್ಪವಾಗುತ್ತದೆ ಎನ್ನುವುದನ್ನು ಸೂಚಿಸುತ್ತದೆ.
[5] 100 ವರ್ಷಗಳು ಪರಾರ್ಧವಾಗುತ್ತವೆ ಎಂಬ ಈ ವಾಕ್ಯವು ಹಿಂದೆ ಹೇಳಿದ 50 ವರ್ಷಗಳು ಪರಾರ್ಧವಾಗುತ್ತವೆ ಎನ್ನುವುದಕ್ಕೆ ವಿರುದ್ಧವಾಗಿದೆ. ಇತರ ಪುರಾಣಗಳಲ್ಲಿ ಈ ಪ್ರಮಾಣವನ್ನು ಹೇಗೆ ಹೇಳಿದ್ದಾರೆ ಎನ್ನುವುದನ್ನು ಪರಿಶೀಲಿಸಬೇಕು.