ತೃತೀಯ ಸ್ಕಂಧಃ, ಅಧ್ಯಾಯ 5: ವಿದುರನ ಪ್ರಶ್ನೆ; ಮೈತ್ರೇಯನು ಸೃಷ್ಟಿಕ್ರಮವನ್ನು ವರ್ಣಿಸಿದುದು

[ತೃತೀಯ ಸ್ಕಂಧದಲ್ಲಿ ಬರುವ ಸೃಷ್ಟಿಕಥನವನ್ನು ಶುಕನು ಪರಿಕ್ಷಿತನಿಗೆ ಹೇಳುತ್ತಾನೆ. ಈ ಸ್ಕಂಧವು ಉದ್ಧವ-ವಿದುರರ ಸಮಾಗಮ-ಸಂಭಾಷಣೆ (ಅಧ್ಯಾಯ 1) ಗಳೊಂದಿಗೆ ಪ್ರಾರಂಭವಾಗುತ್ತದೆ.ಶ್ರೀಕೃಷ್ಣನು ಪರಂಧಾಮವನ್ನು ಸೇರಿದುದನ್ನು ಹೇಳುತ್ತಾ ಉದ್ಧವನು ವಿದುರನಿಗೆ ಭಗವಂತನ ಬಾಲಲೀಲೆಗಳನ್ನು ವರ್ಣಿಸುತ್ತಾನೆ (ಅಧ್ಯಾಯ 2-3). ನಂತರ ಉದ್ಧವನನ್ನು ಬೀಳ್ಕೊಟ್ಟು ವಿದುರನು ಮೈತ್ರೇಯನ ಬಳಿ ಹೋಗುತ್ತಾನೆ (ಅಧ್ಯಾಯ 4). ಅಧ್ಯಾಯ 5ರಿಂದ ವಿದುರನ ಪ್ರಶ್ನೆಗಳಿಗೆ ಉತ್ತಾರಿಸುತ್ತಾ ಮೈತ್ರೇಯನು ಸೃಷ್ಟಿಯ ವಿಷಯವನ್ನು ವರ್ಣಿಸುತ್ತಾನೆ.]

 

ಶ್ರೀಶುಕ ಉವಾಚ । ದ್ವಾರಿ ದ್ಯುನದ್ಯಾ ಋಷಭಃ ಕುರೂಣಾಂ ಮೈತ್ರೇಯಮಾಸೀನಮಗಾಧಬೋಧಮ್ । ಕ್ಷತ್ತೋಪಸೃತ್ಯಾಚ್ಯುತಭಾವಸಿದ್ಧಃ ಪಪ್ರಚ್ಛ ಸೌಶೀಲ್ಯಗುಣಾಭಿತೃಪ್ತಃ ।। 1 ।।

ಶ್ರೀಶುಕನು ಹೇಳಿದನು: “ಶ್ರೀಕೃಷ್ಣನ ಧ್ಯಾನದಿಂದ ನಿರ್ಮಲಚಿತ್ತನಾದ ಕುರುವೃಷಭ ಕ್ಷತ್ತ[1] ವಿದುರನು ಶ್ರೀಹರಿದ್ವಾರದಲ್ಲಿ ಕುಳಿತಿದ್ದ ಅಗಾಧಭೋಧ ಮೈತ್ರೇಯ[2]ನ ಬಳಿ ಹೋಗಿ, ಆ ಮಹಾತ್ಮನ ಸೌಶೀಲ್ಯಾದಿ ಗುಣಗಳಿಂದ ಸಂತೃಪ್ತನಾಗಿ ಅವನನ್ನು ಪ್ರಶ್ನಿಸಿದನು.

ವಿದುರ ಉವಾಚ । ಸುಖಾಯ ಕರ್ಮಾಣಿ ಕರೋತಿ ಲೋಕೋ ನ ತೈಃ ಸುಖಂ ವಾನ್ಯದುಪಾರಮಂ ವಾ । ವಿಂದೇತ ಭೂಯಸ್ತತ ಏವ ದುಃಖಂ ಯದತ್ರ ಯುಕ್ತಂ ಭಗವಾನ್ವದೇನ್ನಃ ।। 2 ।। ಜನಸ್ಯ ಕೃಷ್ಣಾದ್ವಿಮುಖಸ್ಯ ದೈವಾದಧರ್ಮಶೀಲಸ್ಯ ಸುದುಃಖಿತಸ್ಯ । ಅನುಗ್ರಹಾಯೇಹ ಚರಂತಿ ನೂನಂ ಭೂತಾನಿ ಭವ್ಯಾನಿ ಜನಾರ್ದನಸ್ಯ ।। 3 ।। ತತ್ಸಾಧುವರ್ಯಾದಿಶ ವರ್ತ್ಮ ಶಂ ನಃ ಸಂರಾಧಿತೋ ಭಗವಾನ್ಯೇನ ಪುಂಸಾಮ್ । ಹೃದಿ ಸ್ಥಿತೋ ಯಚ್ಛತಿ ಭಕ್ತಿಪೂತೇ ಜ್ಞಾನಂ ಸತತ್ತ್ವಾಧಿಗಮಂ ಪುರಾಣಮ್ ।। 4 ।।

ವಿದುರನು ಹೇಳಿದನು: “ಭಗವನ್! ಲೋಕದಲ್ಲಿ ಎಲ್ಲರೂ ಸುಖಕ್ಕಾಗಿ ಕರ್ಮಮಾಡುತ್ತಾರೆ. ಆದರೆ ಅದರಿಂದ ಅವರಿಗೆ ಸುಖವು ದೊರೆಯುವುದಿಲ್ಲ. ಅಥವಾ ದುಃಖವು ದೂರವಾಗುವುದಿಲ್ಲ. ಅಷ್ಟೇ ಅಲ್ಲ. ಕರ್ಮಗಳಿಂದಾಗಿ ಅವರಿಗೆ ದುಃಖವೇ ಹೆಚ್ಚುತ್ತದೆ! ಇದರ ಕುರಿತು ಜನರು ಏನು ಮಾಡಬೇಕು? ಸುಖವನ್ನೇ ಪಡೆಯುವ ದಾರಿಯಾವುದು? ಇದನ್ನು ನನಗೆ ಹೇಳಿ. ದೈವವಶಾತ್ ಕೃಷ್ಣನಿಂದ ವಿಮುಖರಾಗಿ ಅಧರ್ಮಶೀಲರಾಗಿ ಅತ್ಯಂತ ದುಃಖಿತ ಜನರ ಅನುಗ್ರಹಕ್ಕಾಗಿಯೇ ನಿಮ್ಮಂತಹ ಜನಾರ್ದನನ ಭಕ್ತರು ಲೋಕದಲ್ಲಿ ಸಂಚಾರಮಾಡುತ್ತಿದ್ದಾರೆ. ಸಾಧುವರ್ಯಾ! ಭಗವಂತನನ್ನು ಹೇಗೆ ಆರಾಧಿಸಿದರೆ ಅವನು ಭಕ್ತರ ಭಕ್ತಿಶುದ್ಧ ಹೃದಯದಲ್ಲಿ ಬಂದು ನೆಲೆಸಿ, ತನ್ನ ಸ್ವರೂಪದ ಅಪರೋಕ್ಷ ಅನುಭವನ್ನು ಕೊಡುತ್ತಾನೋ ಅಂತಹ ಶಾಂತಿಪ್ರದವಾದ ಸನಾತನ ಜ್ಞಾನವನ್ನು ನೀವು ನನಗೆ ಉಪದೇಶಿಸಬೇಕು.

ಕರೋತಿ ಕರ್ಮಾಣಿ ಕೃತಾವತಾರೋ ಯಾನ್ಯಾತ್ಮತಂತ್ರೋ ಭಗವಾಂಸ್ತ್ರ್ಯಧೀಶಃ । ಯಥಾ ಸಸರ್ಜಾಗ್ರ ಇದಂ ನಿರೀಹಃ ಸಂಸ್ಥಾಪ್ಯ ವೃತ್ತಿಂ ಜಗತೋ ವಿಧತ್ತೇ ।। 5 ।। ಯಥಾ ಪುನಃ ಸ್ವೇ ಖ ಇದಂ ನಿವೇಶ್ಯ ಶೇತೇ ಗುಹಾಯಾಂ ಸ ನಿವೃತ್ತವೃತ್ತಿಃ । ಯೋಗೇಶ್ವರಾಧೀಶ್ವರ ಏಕ ಏತದನುಪ್ರವಿಷ್ಟೋ ಬಹುಧಾ ಯಥಾಸೀತ್ ।। 6 ।। ಕ್ರೀಡನ್ವಿಧತ್ತೇ ದ್ವಿಜಗೋಸುರಾಣಾಂ ಕ್ಷೇಮಾಯ ಕರ್ಮಾಣ್ಯವತಾರಭೇದೈಃ । ಮನೋ ನ ತೃಪ್ಯತ್ಯಪಿ ಶೃಣ್ವತಾಂ ನಃ ಸುಶ್ಲೋಕಮೌಲೇಶ್ಚರಿತಾಮೃತಾನಿ ।। 7 ।।

ತ್ರಿಲೋಕಗಳಿಗೆ ಒಡೆಯನಾಗಿ, ಪರಮಸ್ವತಂತ್ರನಾಗಿರುವ ಶ್ರೀಹರಿಯು ಅವತಾರಮಾಡಿ ಯಾವ ಯಾವ ಲೀಲೆಗಳನ್ನು ಮಾಡುತ್ತಾನೆ? ಪೂರ್ಣಕಾಮನಾಗಿ, ಕರ್ತೃತ್ವದ ಲೇಪವಿಲ್ಲದ ಆ ಸ್ವಾಮಿಯು ಕಲ್ಪದ ಪ್ರಾರಂಭದಲ್ಲಿ ಈ ಜಗತ್ತನ್ನು ಹೇಗೆ ನಿರ್ಮಿಸಿದನು? ತಾನು ಸೃಷ್ಟಿಸಿದ ಜೀವಿಗಳನ್ನು ನೆಲೆಗೊಳಿಸಿ ಅವುಗಳಿಗೆ ಜೀವನೋಪಾಯವನ್ನು ಹೇಗೆ ಕಲ್ಪಿಸಿದನು? ಮತ್ತೆ ಅವನು ತನ್ನ ಈ ಕಾರ್ಯವನ್ನು ತೊರೆದು ಜಗತ್ತೆಲ್ಲವನ್ನೂ ತನ್ನ ಹೃದಯಾಕಾಶದಲ್ಲಿ ವಿಲೀನಗೊಳಿಸಿಕೊಂಡು, ಯೋಗಮಾಯೆಯನ್ನು ಆಶ್ರಯಿಸಿ, ಹೇಗೆ ಶಯನಿಸುತ್ತಾನೆ? ಆ ಯೋಗೇಶ್ವರ ಪ್ರಭುವು ಒಬ್ಬನೇ ಆಗಿದ್ದರೂ, ಈ ಬ್ರಹ್ಮಾಂಡದಲ್ಲಿ ಅಂತರ್ಯಾಮಿಯಾಗಿ, ಒಳಹೊಕ್ಕು, ಅನೇಕ ರೂಪಗಳಲ್ಲಿ ಹೇಗೆ ಪ್ರಕಟಗೊಳ್ಳುತ್ತಾನೆ? ಬ್ರಾಹ್ಮಣರು-ಗೋವುಗಳು ಮತ್ತು ದೇವತೆಗಳ ಕ್ಷೇಮಕ್ಕಾಗಿ ಅನೇಕ ಅವತಾರಗಳನ್ನೆಸಗಿ ಆಡುತ್ತಾ ಮಾಡುವ ದಿವ್ಯ ಕರ್ಮಗಳ ಕುರಿತು ಹೇಳು. ಪೂಣ್ಯಕೀರ್ತಿಶಾಲಿಗಳ ಚೂಡಾಮಣಿಯಾಗಿರುವ ಶ್ರೀಹರಿಯ ಲೀಲಾಕಥಾಮೃತವನ್ನು ಎಷ್ಟು ಪಾನಮಾಡಿದರೂ ನನ್ನ ಮನಸ್ಸಿಗೆ ತೃಪ್ತಿಯಾಗುತ್ತಿಲ್ಲ.

ಯೈಸ್ತತ್ತ್ವಭೇದೈರಧಿಲೋಕನಾಥೋ ಲೋಕಾನಲೋಕಾನ್ಸಹ ಲೋಕಪಾಲಾನ್ । ಅಚೀಕ್ಲೃಪದ್ಯತ್ರ ಹಿ ಸರ್ವಸತ್ತ್ವನಿಕಾಯಭೇದೋಽಧಿಕೃತಃ ಪ್ರತೀತಃ ।। 8 ।। ಯೇನ ಪ್ರಜಾನಾಮುತ ಆತ್ಮಕರ್ಮರೂಪಾಭಿಧಾನಾಂ ಚ ಭಿದಾಂ ವ್ಯಧತ್ತ । ನಾರಾಯಣೋ ವಿಶ್ವಸೃಗಾತ್ಮಯೋನಿರೇತಚ್ಚ ನೋ ವರ್ಣಯ ವಿಪ್ರವರ್ಯ ।। 9 ।। ಪರಾವರೇಷಾಂ ಭಗವನ್ವ್ರತಾನಿ ಶ್ರುತಾನಿ ಮೇ ವ್ಯಾಸಮುಖಾದಭೀಕ್ಷ್ಣಮ್ । ಅತೃಪ್ನುಮ ಕ್ಷುಲ್ಲಸುಖಾವಹಾನಾಂ ತೇಷಾಮೃತೇ ಕೃಷ್ಣಕಥಾಮೃತೌಘಾತ್ ।। 10 ।। ಕಸ್ತೃಪ್ನುಯಾತ್ತೀರ್ಥಪದೋಽಭಿಧಾನಾತ್ ಸತ್ರೇಷು ವಃ ಸೂರಿಭಿರೀಡ್ಯಮಾನಾತ್ । ಯಃ ಕರ್ಣನಾಡೀಂ ಪುರುಷಸ್ಯ ಯಾತೋ ಭವಪ್ರದಾಂ ಗೇಹರತಿಂ ಛಿನತ್ತಿ ।। 11 ।।

ಲೋಕನಾಥನಾದ ಶ್ರೀ ಹರಿಯು ಈ ಲೋಕಗಳನ್ನೂ, ಲೋಕಪಾಲರನ್ನೂ, ಲೋಕಗಳ ಹೊರಗಿನ ಭಾಗಗಳನ್ನೂ, ಅವುಗಳಲ್ಲಿ ಕಂಡುಬರುವ ಪ್ರಾಣಿಗಳ ಅಧಿಕಾರಾನುಸಾರವಾದ ಭೇದಗಳನ್ನು ಯಾವ ತತ್ತ್ವದಿಂದ ರಚಿಸಿದ್ದಾನೆ? ವಿಪ್ರವರ್ಯ! ಸ್ವಯಂಭುವೂ, ಸರ್ವಕಾರಣನೂ ಆದ ಶ್ರೀಮನ್ನಾರಾಯಣನು ತನ್ನ ಪ್ರಜೆಗಳ ಸ್ವಭಾವ, ಕರ್ಮ, ರೂಪ ಮತ್ತು ನಾಮ ಭೇದಗಳನ್ನು ಹೇಗೆ ರಚಿಸಿದ್ದಾನೆ? ಭಗವನ್! ವ್ಯಾಸಮಹರ್ಷಿಗಳಿಂದ ನಾನು ಎಲ್ಲ ವರ್ಣಾಶ್ರಮ ಧರ್ಮಗಳನ್ನೂ ಹಲವು ಬಾರಿ ಕೇಳಿದ್ದೇನೆ. ಆದರೆ ಈಗ ಶ್ರೀಕೃಷ್ಣ ಕಥಾಮೃತ ಪ್ರವಾಹವನ್ನು ಬಿಟ್ಟು ಕ್ಷಣಿಕ ಸುಖವನ್ನುಂಟು ಮಾಡುವ ಬೇರೆ ಯಾವ ಧರ್ಮಗಳನ್ನು ಕೇಳಿದರೂ ಮನಸ್ಸಿಗೆ ತೃಪ್ತಿಯಾಗುತ್ತಿಲ್ಲ. ಆ ಭಗವತ್ಕಥಾಮೃತವು ಮನುಷ್ಯರ ಕಿವಿಗಳ ರಂಧ್ರಗಳನ್ನು ಪ್ರವೇಶಿಸುತ್ತಲೇ ಸಂಸಾರದ ಬಂಧನಕ್ಕೆ ಕಾರಣವಾದ ವಿಷಯಾಸಕ್ತಿಯನ್ನು ತೊಡೆದು ಹಾಕುತ್ತದೆ. ನಾರದಾದಿ ಮಹಾತ್ಮರೂ ಕೂಡ ನಿಮ್ಮಂತಹ ಸಾಧುಗಳ ಸಮಾಜದಲ್ಲಿ ಕೀರ್ತಿಸುತ್ತಿರುತ್ತಾರೆ. ತೀರ್ಥಪಾದನಾದ ಶ್ರೀಹರಿಯ ಅಂತಹ ಕಥಾಮೃತವನ್ನು ಎಷ್ಟು ಕೇಳಿದರೂ ಸಾಕೆನಿಸುವುದಿಲ್ಲ.

ಮುನಿರ್ವಿವಕ್ಷುರ್ಭಗವದ್ಗುಣಾನಾಂ ಸಖಾಪಿ ತೇ ಭಾರತಮಾಹ ಕೃಷ್ಣಃ । ಯಸ್ಮಿನ್ನೃಣಾಂ ಗ್ರಾಮ್ಯಸುಖಾನುವಾದೈರ್ಮತಿರ್ಗೃಹೀತಾ ನು ಹರೇಃ ಕಥಾಯಾಮ್ ।। 12 ।। ಸಾ ಶ್ರದ್ದಧಾನಸ್ಯ ವಿವರ್ಧಮಾನಾ ವಿರಕ್ತಿಮನ್ಯತ್ರ ಕರೋತಿ ಪುಂಸಃ । ಹರೇಃ ಪದಾನುಸ್ಮೃತಿನಿರ್ವೃತಸ್ಯ ಸಮಸ್ತದುಃಖಾತ್ಯಯಮಾಶು ಧತ್ತೇ ।। 13 ।। ತಾಂಛೋಚ್ಯಶೋಚ್ಯಾನವಿದೋಽನುಶೋಚೇ ಹರೇಃ ಕಥಾಯಾಂ ವಿಮುಖಾನಘೇನ । ಕ್ಷಿಣೋತಿ ದೇವೋಽನಿಮಿಷಸ್ತು ಯೇಷಾಮಾಯುರ್ವೃಥಾವಾದಗತಿಸ್ಮೃತೀನಾಮ್ ।। 14 ।।

ಭಗವನ್! ನಿಮ್ಮ ಗೆಳೆಯರಾದ ಮುನಿಶ್ರೇಷ್ಠ ಕೃಷ್ಣದ್ವೈಪಾಯನರು ಶ್ರೀಭಗವಂತನ ಗುಣಗಳನ್ನು ವರ್ಣಿಸುವುದಕ್ಕಾಗಿಯೇ ಮಹಾಭಾರತವನ್ನು ರಚಿಸಿದ್ದಾರೆ. ಅದರಲ್ಲಿ ಅವರು ವಿಷಯ ಸುಖಗಳ ಉಲ್ಲೇಖ ಮಾಡುತ್ತಾ, ಅವುಗಳ ಮೂಲಕ ಮನುಷ್ಯರ ಬುದ್ಧಿಯು ಶ್ರೀಕೃಷ್ಣನಲ್ಲಿ ತೊಡಗುವಂತೆ ಮಾಡಲು ಪ್ರಯತ್ನಿಸಿದ್ದಾರೆ. ಈ ಭಗವತ್ಕಥೆಯ ರುಚಿಯು ಶ್ರದ್ಧೆಯಿರುವ ಮನುಷ್ಯನ ಹೃದಯದಲ್ಲಿ ಬೆಳೆಯತೊಡಗಿದಾಗ ಬೇರೆ ವಿಷಯಗಳಿಂದ ಅವನನ್ನು ವಿರಕ್ತನನ್ನಾಗಿಸುತ್ತದೆ. ಅವನು ಭಗವಚ್ಚರಣಗಳ ನಿರಂತರ ಚಿಂತನೆಯಿಂದ ಆನಂದಮಗ್ನನಾಗಿ, ಅವನ ಎಲ್ಲ ದುಃಖಗಳನ್ನೂ ಕೂಡಲೇ ಕೊನೆಗೊಳಿಸಿಕೊಳ್ಳುತ್ತಾನೆ. ಆದರೆ ತಮ್ಮ ಪೂರ್ವ ಪಾಪಗಳಿಂದ ಶ್ರೀಹರಿಯ ಕಥೆಗೆ ವಿಮುಖರಾಗುವ ಅಜ್ಞಾನಿಗಳ ಕುರಿತು ಕರುಣೆಯೇ ಉಂಟಾಗುತ್ತದೆ. ಅಯ್ಯೋ! ಭಗವತ್ಸ್ವರೂಪೀ ಕಾಲಪುರುಷನು ಅವರ ಅಮೂಲ್ಯ ಜೀವನವನ್ನು ಕತ್ತರಿಸುತ್ತಿದ್ದರೂ, ಅವರು ತಮ್ಮ ಮಾತು-ಮನಸ್ಸು-ದೇಹಗಳನ್ನು ವ್ಯರ್ಥವಾದ ವಾದವಿವಾದ-ಚೇಷ್ಟೆ-ಚಿಂತನೆಗಳಲ್ಲಿ ತೊಡಗಿಸಿರುತ್ತಾರೆ.

ತದಸ್ಯ ಕೌಷಾರವ ಶರ್ಮದಾತುರ್ಹರೇಃ ಕಥಾಮೇವ ಕಥಾಸು ಸಾರಮ್ । ಉದ್ಧೃತ್ಯ ಪುಷ್ಪೇಭ್ಯ ಇವಾರ್ತಬಂಧೋ ಶಿವಾಯ ನಃ ಕೀರ್ತಯ ತೀರ್ಥಕೀರ್ತೇಃ ।। 15 ।। ಸ ವಿಶ್ವಜನ್ಮಸ್ಥಿತಿಸಂಯಮಾರ್ಥೇ ಕೃತಾವತಾರಃ ಪ್ರಗೃಹೀತಶಕ್ತಿಃ । ಚಕಾರ ಕರ್ಮಾಣ್ಯತಿಪೂರುಷಾಣಿ ಯಾನೀಶ್ವರಃ ಕೀರ್ತಯ ತಾನಿ ಮಹ್ಯಮ್ ।। 16 ।।

ಮುನಿವರೇಣ್ಯ! ನೀವು ದೀನಬಂಧು ಮತ್ತು ದಯಾಳು. ದುಂಬಿಯು ನಾನಾ ಪುಷ್ಪಗಳಿಂದ ರಸವನ್ನು ಶೋಧಿಸಿ ತೆಗೆಯುವಂತೆ ನೀವೂ ಕೂಡ ಎಲ್ಲ ಲೌಕಿಕ ಕಥೆಗಳಿಗೆ ಸಾರಭೂತವಾದ ಪರಮ ಪವಿತ್ರ ಮಂಗಳಕರ ವಿಷಯವನ್ನು ಶೋಧಿಸಿ ಹೇಳಿ. ಸರ್ವೇಶ್ವರನಾದ ಭಗವಂತನು ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳಿಗಾಗಿ ತನ್ನ ಮಾಯಾಶಕ್ತಿಯನ್ನು ಸ್ವೀಕರಿಸಿ ರಾಮ-ಕೃಷ್ಣಾದಿ ಅನೇಕ ಅವತಾರಗಳ ಮೂಲಕ ಮಾಡಿದ ಅಲೌಕಿಕ ಲೀಲೆಗಳೆಲ್ಲವನ್ನೂ ನನಗೆ ಹೇಳಿ.””

ಶ್ರೀಶುಕ ಉವಾಚ । ಸ ಏವಂ ಭಗವಾನ್ಪೃಷ್ಟಃ ಕ್ಷತ್ತ್ರಾ ಕೌಷಾರವಿರ್ಮುನಿಃ । ಪುಂಸಾಂ ನಿಃಶ್ರೇಯಸಾರ್ಥೇನ ತಮಾಹ ಬಹುಮಾನಯನ್ ।। 17 ।।

ಶ್ರೀಶುಕನು ಹೇಳಿದನು: “ಮನುಷ್ಯರ ನಿಃಶ್ರೇಯಕ್ಕಾಗಿ ಕ್ಷತ್ತನು ಹೀಗೆ ಪ್ರಶ್ನಿಸಲು ಅವನಿಗೆ ಹೆಚ್ಚು ಗೌರವವನ್ನಿತ್ತು ಭಗವಾನ್ ಮೈತ್ರೇಯನು ಹೇಳಿದನು.

ಮೈತ್ರೇಯ ಉವಾಚ । ಸಾಧು ಪೃಷ್ಟಂ ತ್ವಯಾ ಸಾಧೋ ಲೋಕಾನ್ಸಾಧ್ವನುಗೃಹ್ಣತಾ । ಕೀರ್ತಿಂ ವಿತನ್ವತಾ ಲೋಕೇ ಆತ್ಮನೋಽಧೋಕ್ಷಜಾತ್ಮನಃ ।। 18 ।। ನೈತಚ್ಚಿತ್ರಂ ತ್ವಯಿ ಕ್ಷತ್ತರ್ಬಾದರಾಯಣವೀರ್ಯಜೇ । ಗೃಹೀತೋಽನನ್ಯಭಾವೇನ ಯತ್ತ್ವಯಾ ಹರಿರೀಶ್ವರಃ ।। 19 ।। ಮಾಂಡವ್ಯಶಾಪಾದ್ಭಗವಾನ್ಪ್ರಜಾಸಂಯಮನೋ ಯಮಃ । ಭ್ರಾತುಃ ಕ್ಷೇತ್ರೇ ಭುಜಿಷ್ಯಾಯಾಂ ಜಾತಃ ಸತ್ಯವತೀಸುತಾತ್ ।। 20 ।। ಭವಾನ್ಭಗವತೋ ನಿತ್ಯಂ ಸಮ್ಮತಃ ಸಾನುಗಸ್ಯ ಹ । ಯಸ್ಯ ಜ್ಞಾನೋಪದೇಶಾಯ ಮಾಽಽದಿಶದ್ಭಗವಾನ್ವ್ರಜನ್ ।। 21 ।। ಅಥ ತೇ ಭಗವಲ್ಲೀಲಾ ಯೋಗಮಾಯೋಪಬೃಂಹಿತಾಃ । ವಿಶ್ವಸ್ಥಿತ್ಯುದ್ಭವಾಂತಾರ್ಥಾ ವರ್ಣಯಾಮ್ಯನುಪೂರ್ವಶಃ ।। 22 ।।

ಮೈತ್ರೇಯನು ಹೇಳಿದನು: “ಸಾಧೋ! ಲೋಕಗಳಲ್ಲಿ ಸಜ್ಜನರಿಗೆ ಅನುಗ್ರಹಿಸಲೆಂದೇ ನೀನು ಈ ಸಾಧು ಪ್ರಶ್ನೆಯನ್ನು ಕೇಳಿದ್ದೀಯೆ. ಅಧೋಕ್ಷಜ ಶ್ರೀಕೃಷ್ಣನಲ್ಲಿಯೇ ಮನಸನ್ನಿಟ್ಟಿರುವ ನಿನ್ನ ಕೀರ್ತಿಯು ಲೋಕದಲ್ಲಿ ಹರಡುತ್ತದೆ. ಅನನ್ಯಭಾವದಿಂದ ಸರ್ವೇಶ್ವರ ಶ್ರೀಹರಿಯನ್ನು ಹಿಡಿದಿಟ್ಟುಕೊಂಡಿರುವ ನೀನು ಭಕ್ಷಶ್ರೇಷ್ಠನು. ಬಾದರಾಯಣರ ಔರಸಪುತ್ರನಾದ ನಿನ್ನಲ್ಲಿ ಈ ಮಹಿಮೆಯಿರುವುದು ಆಶ್ಚರ್ಯವೇನಲ್ಲ. ಸತ್ಯವತೀಸುತನಿಂದ ಅವನ ಸಹೋದರನ ಕ್ಷೇತ್ರದಲ್ಲಿ ಹುಟ್ಟಿ, ಮಾಂಡವ್ಯನ ಶಾಪವನ್ನು ಅನುಭವಿಸುತ್ತಿರುವ, ಪ್ರಜೆಗಳನ್ನು ಸಂಯಮದಲ್ಲಿಡುವ ಭಗವಾನ್ ಯಮನೇ ನೀನು. ನೀನು ನಿತ್ಯವೂ ಭಗವಂತನಿಗೂ, ಅವನ ಭಕ್ತರಿಗೂ ಅತ್ಯಂತ ಪ್ರಿಯನಾದವನು. ಅದಕ್ಕಾಗಿ ಭಗವಂತನು ಪರಂಧಾಮಕ್ಕೆ ತೆರಳುವಾಗ ನಿನಗೆ ಜ್ಞಾನೋಪದೇಶ ಮಾಡಬೇಕೆಂದು ನನಗೆ ಅಪ್ಪಣೆ ಮಾಡಿದನು.[3] ಅದರಂತೆ ಈಗ ನಾನು ನಿನಗೆ ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳ ಕಾರ್ಯಕ್ಕಾಗಿ ತನ್ನ ಯೋಗಮಾಯೆಯನ್ನು ಬಳಸಿ ವಿಸ್ತಾರಗೊಂಡ ಭಗವಂತನ ವಿವಿಧ ಲೀಲೆಗಳನ್ನು ಕ್ರಮವಾಗಿ ವರ್ಣಿಸುತ್ತೇನೆ.

ಭಗವಾನೇಕ ಆಸೇದಮಗ್ರ ಆತ್ಮಾಽಽತ್ಮನಾಂ ವಿಭುಃ । ಆತ್ಮೇಚ್ಛಾನುಗತಾವಾತ್ಮಾ ನಾನಾಮತ್ಯುಪಲಕ್ಷಣಃ ।। 23 ।। ಸ ವಾ ಏಷ ತದಾ ದ್ರಷ್ಟಾ ನಾಪಶ್ಯದ್ದೃಶ್ಯಮೇಕರಾಟ್ । ಮೇನೇಽಸಂತಮಿವಾತ್ಮಾನಂ ಸುಪ್ತಶಕ್ತಿರಸುಪ್ತದೃಕ್ ।। 24 ।। ಸಾ ವಾ ಏತಸ್ಯ ಸಂದ್ರಷ್ಟುಃ ಶಕ್ತಿಃ ಸದಸದಾತ್ಮಿಕಾ । ಮಾಯಾ ನಾಮ ಮಹಾಭಾಗ ಯಯೇದಂ ನಿರ್ಮಮೇ ವಿಭುಃ ।। 25 ।। ಕಾಲವೃತ್ತ್ಯಾ ತು ಮಾಯಾಯಾಂ ಗುಣಮಯ್ಯಾಮಧೋಕ್ಷಜಃ । ಪುರುಷೇಣಾತ್ಮಭೂತೇನ ವೀರ್ಯಮಾಧತ್ತ ವೀರ್ಯವಾನ್ ।। 26 ।।

ಈ ಜಗತ್ತಿನ ಸೃಷ್ಟಿಯ ಮೊದಲು ಎಲ್ಲ ಆತ್ಮಗಳಿಗೂ ಆತ್ಮನಾಗಿರುವ ವಿಭು ಭಗವಾನ್ ಪರಮಾತ್ಮನೊಬ್ಬನೇ ಇದ್ದನು. ಅವನು ದೃಷ್ಟನೂ ಆಗಿರಲಿಲ್ಲ. ದೃಶ್ಯನೂ ಆಗಿರಲಿಲ್ಲ. ಸೃಷ್ಟಿಯಲ್ಲಿ ಕಂಡುಬರುವ ಅನೇಕ ಲಕ್ಷಣಗಳೂ, ಅನೇಕತೆಗಳೂ ಅಲ್ಲಿರಲಿಲ್ಲ. ಅವನು ತನ್ನ ಸ್ವ-ಇಚ್ಛೆಯಿಂದಲೇ, ತಾನೊಬ್ಬನೇ, ತಾನೇ ತಾನಾಗಿ ಇದ್ದನು. ಆಗ ಅವನು ದ್ರಷ್ಟನಾಗಿ ನೋಡ ತೊಡಗಲು, ಅವನಿಗೆ ದೃಶ್ಯವ್ಯಾವುದೂ ಕಂಡುಬರಲಿಲ್ಲ. ಏಕೆಂದರೆ ಆಗ ಅವನೇ ಅದ್ವಿತೀಯ ರೂಪದಲ್ಲಿದ್ದನು. ಇಂತಹ ಸ್ಥಿತಿಯಲ್ಲಿ, ತಾನು ಅಪೂರ್ಣನು ಎಂದು ಅವನಿಗನಿಸಿತು. ಆದರೆ ವಾಸ್ತವವಾಗಿ ಅವನು ಅಸತ್ತಾಗಿರಲಿಲ್ಲ. ಏಕೆಂದರೆ ಅವನ ಶಕ್ತಿಗಳು ಸುಪ್ತವಾಗಿದ್ದವು. ಆದರೆ ಅವನ ಜ್ಞಾನವೇನೂ ಲುಪ್ತವಾಗಿರಲಿಲ್ಲ. ಮಹಾಭಾಗ! ಈ ದ್ರಷ್ಟಾ ಮತ್ತು ದೃಶ್ಯದ ಅನುಸಂಧಾನ ಮಾಡುವ ಶಕ್ತಿಯೇ ಕಾರ್ಯ-ಕಾರಣರೂಪೀ ಮಾಯೆಯು. ಈ ಸದಸದಾತ್ಮಿಕ ಅನಿರ್ವಚನೀಯ ಮಾಯೆಯ ಮೂಲಕವೇ ಭಗವಂತನು ಈ ವಿಶ್ವವನ್ನು ಸೃಷ್ಟಿಸಿದನು. ಕಾಲಶಕ್ತಿಯಿಂದ ಈ ತ್ರಿಗುಣಮಯ ಮಾಯೆಯಲ್ಲಿ ಕ್ಷೋಭೆಯುಂಟಾದಾಗ ಆ ಇಂದ್ರಿಯಾತೀತನಾದ ಚಿನ್ಮಯ ಪರಮಾತ್ಮನು ತನ್ನ ಅಂಶ ಪುರುಷರೂಪದಿಂದ ಅದರಲ್ಲಿ ಚಿದಾಭಾಸರೂಪೀ ಬೀಜವನ್ನು ಸ್ಥಾಪಿಸಿದನು.

ತತೋಽಭವನ್ಮಹತ್ತತ್ತ್ವಮವ್ಯಕ್ತಾತ್ಕಾಲಚೋದಿತಾತ್ । ವಿಜ್ಞಾನಾತ್ಮಾಽಽತ್ಮದೇಹಸ್ಥಂ ವಿಶ್ವಂ ವ್ಯಂಜಂಸ್ತಮೋನುದಃ ।। 27 ।। ಸೋಽಪ್ಯಂಶಗುಣಕಾಲಾತ್ಮಾ ಭಗವದ್ದೃಷ್ಟಿಗೋಚರಃ । ಆತ್ಮಾನಂ ವ್ಯಕರೋದಾತ್ಮಾ ವಿಶ್ವಸ್ಯಾಸ್ಯ ಸಿಸೃಕ್ಷಯಾ ।। 28 ।। ಮಹತ್ತತ್ತ್ವಾದ್ವಿಕುರ್ವಾಣಾದಹಂತತ್ತ್ವಂ ವ್ಯಜಾಯತ । ಕಾರ್ಯಕಾರಣಕರ್ತ್ರಾತ್ಮಾ ಭೂತೇಂದ್ರಿಯಮನೋಮಯಃ ।। 29 ।। ವೈಕಾರಿಕಸ್ತೈಜಸಶ್ಚ ತಾಮಸಶ್ಚೇತ್ಯಹಂ ತ್ರಿಧಾ । ಅಹಂತತ್ತ್ವಾದ್ವಿಕುರ್ವಾಣಾನ್ಮನೋ ವೈಕಾರಿಕಾದಭೂತ್ । ವೈಕಾರಿಕಾಶ್ಚ ಯೇ ದೇವಾ ಅರ್ಥಾಭಿವ್ಯಂಜನಂ ಯತಃ ।। 30 ।। ತೈಜಸಾನೀಂದ್ರಿಯಾಣ್ಯೇವ ಜ್ಞಾನಕರ್ಮಮಯಾನಿ ಚ । ತಾಮಸೋ ಭೂತಸೂಕ್ಷ್ಮಾದಿರ್ಯತಃ ಖಂ ಲಿಂಗಮಾತ್ಮನಃ ।। 31 ।।

ಆಗ ಕಾಲದ ಪ್ರೇರಣೆಯಿಂದ ಆ ಅವ್ಯಕ್ತಮಾಯೆಯಿಂದ ಮಹತ್ತತ್ತ್ವವು ಪ್ರಕಟವಾಯಿತು. ತನ್ನಲ್ಲಿ ಸೂಕ್ಷ್ಮವಾಗಿ ಅಡಗಿದ್ದ ಪ್ರಪಂಚವನ್ನು ಪ್ರಕಾಶಗೊಳಿಸುವ ತತ್ತ್ವವೇ ಮಹತ್ತತ್ತ್ವವು. ಅಜ್ಞಾನವನ್ನು ನಾಶಪಡಿಸುವುದರಿಂದ ಅದನ್ನು “ವಿಜ್ಞಾನಾತ್ಮಾ” ಎಂದೂ ಕರೆಯುತ್ತಾರೆ. ನಂತರ ಭಗವಂತನ ಅಂಶ, ಗುಣ ಮತ್ತು ಕಾಲದ ಅಧೀನವಾದ ಆ ಮಹತ್ತತ್ತ್ವವು ಭಗವಂತನ ದೃಷ್ಟಿಗೆ ಬೀಳಲು, ಅದು ವಿಶ್ವವನ್ನು ರಚಿಸುವುದಕ್ಕಾಗಿ ರೂಪಾಂತರಗೊಂಡಿತು. ಮಹತ್ತತ್ತ್ವವು ವಿಕಾರಗೊಂಡಾಗ ಅಹಂಕಾರ ತತ್ತ್ವವು ಉತ್ಪನ್ನವಾಯಿತು. ಅದು ಕಾರ್ಯ (ಆಧಿಭೂತ[4]), ಕಾರಣ (ಅಧ್ಯಾತ್ಮ), ಕರ್ತೃ (ಅಧಿದೈವ) ಎಂಬ ಮೂರು ರೂಪಗಳಿಂದ ಕ್ರಮವಾಗಿ ಭೂತ, ಇಂದ್ರಿಯ ಮತ್ತು ಮನಸ್ಸುಗಳಿಗೆ ಕಾರಣವಾಯಿತು.[5] ಆ ಅಹಂಕಾರವು ವೈಕಾರಿಕ (ಸಾತ್ತ್ವಿಕ), ತೈಜಸ (ರಾಜಸ) ಮತ್ತು ತಾಮಸ ಎಂಬ ಭೇದದಿಂದ ಮೂರು ಪ್ರಕಾರದ್ದಾಗಿದೆ. ಸಾತ್ತ್ವಿಕ ಅಹಂಕಾರದಿಂದ ಮನಸ್ಸು ಮತ್ತು ಯಾವುದರಿಂದ ವಿಷಯಗಳ ಜ್ಞಾನವುಂಟಾಗುತ್ತದೆಯೋ ಆ ಇಂದ್ರಿಯಗಳ ಅಧಿಷ್ಠಾನ ದೇವತೆಗಳು ಉತ್ಪನ್ನರಾದರು. ತೈಜಸ ಅಹಂಕಾರದಿಂದ ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳಾದವು. ತಾಮಸಾಹಂಕಾರದಿಂದ ಸೂಕ್ಷ್ಮಭೂತಗಳ ಕಾರಣ ಶಬ್ದತನ್ಮಾತ್ರೆಯು ಉಂಟಾಯಿತು. ಅದರಿಂದ ಆಕಾಶ ತತ್ತ್ವವು ಹುಟ್ಟಿತು.

ಕಾಲಮಾಯಾಂಶಯೋಗೇನ ಭಗವದ್ವೀಕ್ಷಿತಂ ನಭಃ । ನಭಸೋಽನುಸೃತಂ ಸ್ಪರ್ಶಂ ವಿಕುರ್ವನ್ನಿರ್ಮಮೇಽನಿಲಮ್ ।। 32 ।। ಅನಿಲೋಽಪಿ ವಿಕುರ್ವಾಣೋ ನಭಸೋರುಬಲಾನ್ವಿತಃ । ಸಸರ್ಜ ರೂಪತನ್ಮಾತ್ರಂ ಜ್ಯೋತಿರ್ಲೋಕಸ್ಯ ಲೋಚನಮ್ ।। 33 ।। ಅನಿಲೇನಾನ್ವಿತಂ ಜ್ಯೋತಿರ್ವಿಕುರ್ವತ್ಪರವೀಕ್ಷಿತಮ್ । ಆಧತ್ತಾಂಭೋ ರಸಮಯಂ ಕಾಲಮಾಯಾಂಶಯೋಗತಃ ।। 34 ।। ಜ್ಯೋತಿಷಾಂಭೋಽನುಸಂಸೃಷ್ಟಂ ವಿಕುರ್ವದ್ಬ್ರಹ್ಮವೀಕ್ಷಿತಮ್ । ಮಹೀಂ ಗಂಧಗುಣಾಮಾಧಾತ್ಕಾಲಮಾಯಾಂಶಯೋಗತಃ ।। 35 ।। ಭೂತಾನಾಂ ನಭಆದೀನಾಂ ಯದ್ಯದ್ಭವ್ಯಾವರಾವರಮ್ । ತೇಷಾಂ ಪರಾನುಸಂಸರ್ಗಾದ್ಯಥಾ ಸಂಖ್ಯಂ ಗುಣಾನ್ವಿದುಃ ।। 36 ।। ಏತೇ ದೇವಾಃ ಕಲಾ ವಿಷ್ಣೋಃ ಕಾಲಮಾಯಾಂಶಲಿಂಗಿನಃ । ನಾನಾತ್ವಾತ್ಸ್ವಕ್ರಿಯಾನೀಶಾಃ ಪ್ರೋಚುಃ ಪ್ರಾಂಜಲಯೋ ವಿಭುಮ್ ।। 37 ।।

ಭಗವಂತನ ದೃಷ್ಟಿಯು ಆಕಾಶದ ಮೇಲೆ ಬೀಳಲು ಅದರಿಂದ ಮತ್ತೆ ಕಾಲ-ಮಾಯೆ-ಚಿದಂಶಗಳ ಯೋಗದಿಂದ ಸ್ಪರ್ಶತನ್ಮಾತ್ರೆಯು ಹುಟ್ಟಿಕೊಂಡಿತು. ಅದು ವಿಕಾರಗೊಂಡಾಗ ವಾಯುವು ಉತ್ಪನ್ನವಾಯಿತು. ಮಹಾಬಲಶಾಲಿಯಾದ ವಾಯುವು ಆಕಾಶದೊಡನೆ ವಿಕಾರಗೊಂಡಾಗ ರೂಪತನ್ಮಾತ್ರೆಯು ಹುಟ್ಟಿತು. ಅದರಿಂದ ಜಗತ್ತಿಗೆ ಪ್ರಕಾಶವನ್ನು ನೀಡುವ ತೇಜಸ್ಸು ಉತ್ಪನ್ನವಾಯಿತು. ಮತ್ತೆ ಪರಮಾತ್ಮನ ದೃಷ್ಟಿಗೆ ಪಾತ್ರವಾಗಿ, ವಾಯುಸಹಿತ ತೇಜಸ್ಸು ಕಾಲ-ಮಾಯೆ-ಚಿದಂಶಗಳ ಯೋಗದಿಂದ ವಿಕಾರಗೊಂಡು ರಸತನ್ಮಾತ್ರೆಯ ಕಾರ್ಯವಾದ ಜಲತತ್ತ್ವವನ್ನು ಹುಟ್ಟಿಸಿತು. ನಂತರ ಜಲವು ತೇಜಸ್ಸಿನೊಡನೆ ಸೇರಿ ಭಗವಂತನ ದೃಷ್ಟಿಪಾತದಿಂದ, ಕಾಲ-ಮಾಯೆ-ಚಿದಂಶಗಳ ಯೋಗದಿಂದ ಗಂಧಗುಣವುಳ್ಳ ಪೃಥ್ವಿಯನ್ನು ಹುಟ್ಟಿಸಿತು. ಆಕಾಶವೇ ಮೊದಲಾದ ಪಂಚಭೂತಗಳಲ್ಲಿ ಉತ್ತರೋತ್ತರ ಭೂತಗಳಲ್ಲಿ ಕ್ರಮವಾಗಿ ಅವುಗಳ ಹಿಂದು-ಹಿಂದಿನ ಭೂತಗಳ ಗುಣಗಳೂ ಅನುವರ್ತಿಸುತ್ತವೆಯೆಂದು ತಿಳಿಯಬೇಕು. ಈ ಮಹತ್ತತ್ತ್ವಾದಿಗಳಿಗೆ ಅಭಿಮಾನಿಗಳಾಗಿ, ವಿಕಾರ-ವಿಕ್ಷೇಪ-ಚೇತನಾಂಶ ವಿಶಿಷ್ಟರಾದ ದೇವಗಣಗಳೆಲ್ಲ ಶ್ರೀಭಗವಂತನ ಅಂಶಗಳೇ ಆಗಿದ್ದಾರೆ. ಆದರೆ ಬೇರೆ-ಬೇರೆಯಾಗಿ ಇರುವ ಕಾರಣ ವಿಶ್ವರಚನೆಯೆಂಬ ತಮ್ಮ ಕಾರ್ಯಗಳನ್ನು ಮಾಡಲು ವಿಫಲರಾದಾಗ ಅವರು ಕೈಮುಗಿದು ಭಗವಂತನನ್ನು ಪ್ರಾರ್ಥಿಸಿದರು.

ದೇವಾ ಊಚುಃ । ನಮಾಮ ತೇ ದೇವ ಪದಾರವಿಂದಂ ಪ್ರಪನ್ನ ತಾಪೋಪಶಮಾತಪತ್ರಮ್ । ಯನ್ಮೂಲಕೇತಾ ಯತಯೋಽಂಜಸೋರು ಸಂಸಾರದುಃಖಂ ಬಹಿರುತ್ಕ್ಷಿಪಂತಿ ।। 38 ।। ಧಾತರ್ಯದಸ್ಮಿನ್ಭವ ಈಶ ಜೀವಾಸ್ತಾಪತ್ರಯೇಣಾಭಿಹತಾ ನ ಶರ್ಮ । ಆತ್ಮನ್ಲಭಂತೇ ಭಗವಂಸ್ತವಾಂಘ್ರಿಚ್ಛಾಯಾಂ ಸವಿದ್ಯಾಮತ ಆಶ್ರಯೇಮ ।। 39 ।। ಮಾರ್ಗಂತಿ ಯತ್ತೇ ಮುಖಪದ್ಮನೀಡೈಶ್ಛಂದಃಸುಪರ್ಣೈರೃಷಯೋ ವಿವಿಕ್ತೇ । ಯಸ್ಯಾಘಮರ್ಷೋದಸರಿದ್ವರಾಯಾಃ ಪದಂ ಪದಂ ತೀರ್ಥಪದಃ ಪ್ರಪನ್ನಾಃ ।। 40 ।।

ದೇವತೆಗಳು ಹೇಳಿದರು: “ದೇವದೇವ! ನಿನ್ನ ಪಾದಾರವಿಂದಗಳಿಗೆ ವಂದಿಸುತ್ತೇವೆ. ಅವು ಶರಣುಬಂದ ಜೀವಿಗಳ ತಾಪಗಳನ್ನು ಹೋಗಲಾಡಿಸುವ ಕೊಡೆಗಳಂತಿವೆ. ಅವುಗಳ ಆಸರೆ ಪಡೆದರೆ ಯತಿಗಳು ಅನಂತ ಸಂಸಾರ ದುಃಖವನ್ನು ಸುಲಭವಾಗಿ ದೂರಕ್ಕೆ ಎಸೆದು ಬಿಡುತ್ತಾರೆ. ಸೃಷ್ಟಿಕರ್ತ! ಜಗದೀಶ್ವರ! ಈ ಸಂಸಾರದಲ್ಲಿ ತಾಪತ್ರಯದಿಂದ ದುಃಖಿತರಾಗಿರುವ ಕಾರಣ ಜೀವಿಗಳಿಗೆ ಸ್ವಲ್ಪವೂ ಶಾಂತಿ ಸಿಗುತ್ತಿಲ್ಲ. ಆದ್ದರಿಂದ ನಾವು ನಿನ್ನ ಚರಣಗಳ ಜ್ಞಾನಮಯ ಛಾಯೆಯ ಆಶ್ರಯವನ್ನು ಪಡೆಯುತ್ತೇವೆ. ಮುನಿಗಳು ಏಕಾಂತದಲ್ಲಿ ಕುಳಿತು ನಿನ್ನ ಮುಖಕಮಲದ ಆಶ್ರಯದಲ್ಲಿರುವ ವೇದಮಂತ್ರಗಳೆಂಬ ಪಕ್ಷಿಗಳ ಸಹಾಯದಿಂದ ಯಾವುದನ್ನು ಅರಸುತ್ತಾರೋ, ಮತ್ತು ಯಾವುದು ಸಮಸ್ತ ಪಾಪಗಳನ್ನೂ ನಾಶಗೊಳಿಸುವ ದೇವನದಿ ಗಂಗೆಯ ಉತ್ಪತ್ತಿಸ್ಥಾನವೋ, ಅಂತಹ ನಿನ್ನ ಪರಮಪಾವನ ಪಾದಪದ್ಮಗಳನ್ನು ನಾವು ಆಶ್ರಯಿಸುತ್ತೇವೆ.

ಯಚ್ಛ್ರದ್ಧಯಾ ಶ್ರುತವತ್ಯಾ ಚ ಭಕ್ತ್ಯಾ ಸಂಮೃಜ್ಯಮಾನೇ ಹೃದಯೇಽವಧಾಯ । ಜ್ಞಾನೇನ ವೈರಾಗ್ಯಬಲೇನ ಧೀರಾ ವ್ರಜೇಮ ತತ್ತೇಽಂಘ್ರಿಸರೋಜಪೀಠಮ್ ।। 41 ।। ವಿಶ್ವಸ್ಯ ಜನ್ಮಸ್ಥಿತಿಸಂಯಮಾರ್ಥೇ ಕೃತಾವತಾರಸ್ಯ ಪದಾಂಬುಜಂ ತೇ । ವ್ರಜೇಮ ಸರ್ವೇ ಶರಣಂ ಯದೀಶ ಸ್ಮೃತಂ ಪ್ರಯಚ್ಛತ್ಯಭಯಂ ಸ್ವಪುಂಸಾಮ್ ।। 42 ।। ಯತ್ಸಾನುಬಂಧೇಽಸತಿ ದೇಹಗೇಹೇ ಮಮಾಹಮಿತ್ಯೂಢದುರಾಗ್ರಹಾಣಾಮ್ । ಪುಂಸಾಂ ಸುದೂರಂ ವಸತೋಽಪಿ ಪುರ್ಯಾಂ ಭಜೇಮ ತತ್ತೇ ಭಗವನ್ಪದಾಬ್ಜಮ್ ।। 43 ।।

ಧೀರ ಯೋಗೀಶ್ವರರು ಶ್ರದ್ಧೆ ಮತ್ತು ಶ್ರವಣ-ಕೀರ್ತನರೂಪವಾದ ಯಾವುದನ್ನು ಭಕ್ತಿಯಿಂದ ಶುದ್ಧವಾದ ತಮ್ಮ ಅಂತಃಕರಣದಲ್ಲಿ ಧರಿಸಿಕೊಂಡು ಜ್ಞಾನ-ವೈರಾಗ್ಯಗಳ ಬಲದಿಂದ ಮುಕ್ತಿಯನ್ನು ಪಡೆಯುತ್ತಾರೋ ಅಂತಹ ನಿನ್ನ ಪಾದಗಳ ಪೀಠವನ್ನು ನಾವು ಆಶ್ರಯಿಸುತ್ತೇವೆ. ಪ್ರಭೋ! ನೀನು ಪ್ರಪಂಚದ ಸೃಷ್ಟಿ-ಸ್ಥಿತಿ-ಲಯಗಳಿಗಾಗಿಯೇ ಅವತರಿಸುತ್ತೀಯೆ. ಆದ್ದರಿಂದ ನಾವೆಲ್ಲರೂ, ಸ್ಮರಿಸುವ ಭಕ್ತರಿಗೆ ಅಭಯವನ್ನೀಯುವ ನಿನ್ನ ಆ ಅಡಿದಾವರೆಗಳಿಗೆ ಶರಣುಹೋಗುತ್ತೇವೆ. ನೀನು ಸಮಸ್ತ ಮನುಷ್ಯರ ಹೃದಯಗಳಲ್ಲಿ ಅಂತರ್ಯಾಮಿಯಾಗಿ ವಾಸಮಾಡುತ್ತಿದ್ದರೂ, ಯಾರು ಮನೆ-ಮಡದಿ-ಮಕ್ಕಳು-ದೇಹ ಮೊದಲಾದವುಗಳಲ್ಲಿ ಹಾಗೂ ಅವುಗಳೊಂದಿಗೆ ಸಂಬಂಧವಿರಿಸುವ ತುಚ್ಛ ಪದಾರ್ಥಗಳಲ್ಲಿ “ನಾನು-ನನ್ನದು” ಎಂಬ ದುರಾಗ್ರಹವಿರಿಸಿಕೊಂಡವರಿಗೆ, ಅತ್ಯಂತದೂರವಾದ ನಿನ್ನ ಚರಣಾರವಿಂದಗಳನ್ನು ನಾವು ಭಜಿಸುತ್ತೇವೆ.

ತಾನ್ವೈ ಹ್ಯಸದ್ವೃತ್ತಿಭಿರಕ್ಷಿಭಿರ್ಯೇ ಪರಾಹೃತಾಂತರ್ಮನಸಃ ಪರೇಶ । ಅಥೋ ನ ಪಶ್ಯಂತ್ಯುರುಗಾಯ ನೂನಂ ಯೇ ತೇ ಪದನ್ಯಾಸವಿಲಾಸಲಕ್ಷ್ಯಾಃ ।। 44 ।। ಪಾನೇನ ತೇ ದೇವ ಕಥಾಸುಧಾಯಾಃ ಪ್ರವೃದ್ಧಭಕ್ತ್ಯಾ ವಿಶದಾಶಯಾ ಯೇ । ವೈರಾಗ್ಯಸಾರಂ ಪ್ರತಿಲಭ್ಯ ಬೋಧಂ ಯಥಾಂಜಸಾನ್ವೀಯುರಕುಂಠಧಿಷ್ಣ್ಯಮ್ ।। 45 ।। ತಥಾಪರೇ ಚಾತ್ಮಸಮಾಧಿಯೋಗ ಬಲೇನ ಜಿತ್ವಾ ಪ್ರಕೃತಿಂ ಬಲಿಷ್ಠಾಮ್ । ತ್ವಾಮೇವ ಧೀರಾಃ ಪುರುಷಂ ವಿಶಂತಿ ತೇಷಾಂ ಶ್ರಮಃ ಸ್ಯಾನ್ನ ತು ಸೇವಯಾ ತೇ ।। 46 ।।

ಪರೇಶ! ಇಂದ್ರಿಯಗಳ ವಿಷಯಗಳಿಗೆ ಅಭಿರ್ಮುಖವಾಗಿರುವುದರಿಂದ ಯಾರ ಮನಸ್ಸು ಸದಾ ಹೊರಗಡೆಯೇ ಅಲೆಯುತ್ತಿರುತ್ತದೆಯೋ, ಅಂತಹ ಪಾಮರ ಜನರು ನಿನ್ನ ಶ್ರೀಪಾದ ವಿನ್ಯಾಸದ ಕಾಂತಿಯನ್ನು ವಿಶೇಷವಾಗಿ ಅರಿತಿರುವ ಭಕ್ತಜನರ ದರ್ಶನವನ್ನು ಪಡೆಯುವುದಿಲ್ಲ. ಆದ್ದರಿಂದ ಅವರು ನಿನ್ನ ಚರಣಾರವಿಂದಗಳಿಗೆ ದೂರವಾಗಿದ್ದಾರೆ. ದೇವ! ನಿನ್ನ ಕಥಾಮೃತಪಾನದಿಂದ ಉಕ್ಕಿಬರುವ ಭಕ್ತಿಯಿಂದ ಯಾರ ಅಂತಃಕರಣವು ನಿರ್ಮಲವಾಗಿಬಿಟ್ಟಿದೆಯೋ ಅಂಥವರು ವೈರಾಗ್ಯಸಾರವಾದ ಆತ್ಮಜ್ಞಾನವನ್ನು ಪಡೆದು ಆಯಾಸವಿಲ್ಲದೇ ವೈಕುಂಠಧಾಮವನ್ನು ಹೊಂದುತ್ತಾರೆ. ಅಂತೆಯೇ ಕೆಲವು ಧೀರರು ಚಿತ್ತವೃತ್ತಿ ನಿರೋಧರೂಪವಾದ ಸಮಾಧಿಯ ಬಲದಿಂದ ನಿನ್ನ ಪ್ರಬಲ ಮಾಯೆಯನ್ನು ದಾಟಿ ನಿನ್ನಲ್ಲಿ ಲೀನರಾಗುತ್ತಾರೆ. ಅಂದರೆ ಅವರಿಗೆ ತುಂಬಾ ಶ್ರಮವಿರುತ್ತದೆ. ನಿನ್ನ ಭಕ್ತಿಮಾರ್ಗದಲ್ಲಾದರೋ ಯಾವ ಕಷ್ಟವೂ ಇಲ್ಲ.

ತತ್ತೇ ವಯಂ ಲೋಕಸಿಸೃಕ್ಷಯಾದ್ಯ ತ್ವಯಾನುಸೃಷ್ಟಾಸ್ತ್ರಿಭಿರಾತ್ಮಭಿಃ ಸ್ಮ । ಸರ್ವೇ ವಿಯುಕ್ತಾಃ ಸ್ವವಿಹಾರತಂತ್ರಂ ನ ಶಕ್ನುಮಸ್ತತ್ಪ್ರತಿಹರ್ತವೇ ತೇ ।। 47 ।। ಯಾವದ್ಬಲಿಂ ತೇಽಜ ಹರಾಮ ಕಾಲೇ ಯಥಾ ವಯಂ ಚಾನ್ನಮದಾಮ ಯತ್ರ । ಯಥೋಭಯೇಷಾಂ ತ ಇಮೇ ಹಿ ಲೋಕಾ ಬಲಿಂ ಹರಂತೋಽನ್ನ ಮದಂತ್ಯನೂಹಾಃ ।। 48 ।। ತ್ವಂ ನಃ ಸುರಾಣಾಮಸಿ ಸಾನ್ವಯಾನಾಂ ಕೂಟಸ್ಥ ಆದ್ಯಃ ಪುರುಷಃ ಪುರಾಣಃ । ತ್ವಂ ದೇವ ಶಕ್ತ್ಯಾಂ ಗುಣಕರ್ಮಯೋನೌ ರೇತಸ್ತ್ವಜಾಯಾಂ ಕವಿಮಾದಧೇಽಜಃ ।। 49 ।। ತತೋ ವಯಂ ಮತ್ಪ್ರಮುಖಾ ಯದರ್ಥೇ ಬಭೂವಿಮಾತ್ಮನ್ಕರವಾಮ ಕಿಂ ತೇ । ತ್ವಂ ನಃ ಸ್ವಚಕ್ಷುಃ ಪರಿದೇಹಿ ಶಕ್ತ್ಯಾ ದೇವ ಕ್ರಿಯಾರ್ಥೇ ಯದನುಗ್ರಹಾಣಾಮ್ ।। 50 ।।

ಆದ್ಯ! ಪ್ರಪಂಚದ ಸೃಷ್ಟಿಗಾಗಿ ನೀನು ನಮ್ಮನ್ನು ತ್ರಿಗುಣಮಯರನ್ನಾಗಿ ಸೃಷ್ಟಿಸಿದ್ದೀಯೆ. ಆದರೆ ನಮ್ಮೆಲ್ಲರ ಸ್ವಭಾವವು ಬೇರೆಬೇರೆಯಾದ್ದರಿಂದ ಪರಸ್ಪರ ಸಾಮ್ಯವಿಲ್ಲ. ಆದ್ದರಿಂದ ನಾವು ಒಟ್ಟಿಗೇ ಸೇರಿ ನಿನ್ನ ಕ್ರೀಡೆಗಾಗಿ ಲೋಕಸೃಷ್ಟಿಯನ್ನು ಮಾಡಿ ನಿನಗೆ ಸಮರ್ಪಿಸಲು ಅಸಮರ್ಥರಾಗಿದ್ದೇವೆ. ಆದ್ದರಿಂದ ಜನ್ಮರಹಿತನಾದ ಭಗವಂತ! ಯಾವುದರಿಂದ ನಾವು ಬ್ರಹ್ಮಾಂಡವನ್ನು ರಚಿಸಿ ನಿನಗೆ ಸಮಸ್ತ ಪೂಜೆಗಳನ್ನು ಸಮರ್ಪಿಸಲು ಸಮರ್ಥರಾಗಬಲ್ಲೆವು? ಅನ್ನವನ್ನೂ ಪಡೆದು ಜೀವಿಸಬಲ್ಲೆವು? ಮತ್ತು ಈ ಸಮಸ್ತ ಜೀವಿಗಳೂ ಕೂಡ ಎಲ್ಲ ವಿಘ್ನಗಳಿಂದಲೂ ದೂರವಾಗಿದ್ದು, ನಮಗೂ ಹಾಗೂ ನಿನಗೂ, ಸೇವೆಗಳನ್ನು ಸಮರ್ಪಿಸುತ್ತಾ, ತಮ್ಮ ತಮ್ಮ ಆಹಾರಗಳನ್ನು ಸೇವಿಸಲು ಸಮರ್ಥವಾದಾವು? ಅಂತಹ ಯಾವುದಾದರೂ ಉಪಾಯವನ್ನು ಮಾಡು. ಭಗವಂತ! ವಿಕಾರರಹಿತನಾದ ಪುರಾಣಪುರುಷನಾದ ನೀನೇ ಇತರ ಕಾರ್ಯವರ್ಗಗಳಿಂದೊಡಗೂಡಿದ ದೇವತೆಗಳಾದ ನಮಗೆ ಎಲ್ಲರಿಗೂ ಆದಿಕಾರಣನಾಗಿದ್ದೀಯೆ. ಜನ್ಮರಹಿತನಾದ ನೀನು ಹೀಗೆ ಸತ್ತ್ವಾದಿಗುಣ ಮತ್ತು ಜನ್ಮಾದಿಕರ್ಮಗಳ ಕಾರಣರೂಪೀ ಮಾಯಾಶಕ್ತಿಯಲ್ಲಿ ಚಿದಂಶರೂಪವಾದ ವೀರ್ಯವನ್ನು ಸ್ಥಾಪಿಸಿದ್ದೆ. ಪರಮಾತ್ಮಾ!  ಮಹತ್ತತ್ತ್ವಾದಿ ರೂಪೀ ದೇವಗಣಗಳಿಂದ ನಾವು ಯಾವು ಕಾರ್ಯಕ್ಕಾಗಿ ಸೃಷ್ಟಿಸಲ್ಪಟ್ಟಿದ್ದೀವೋ ಇದರ ಸಂಬಂಧವಾಗಿ ನಾವು ಏನು ಮಾಡಬೇಕು? ದೇವಾ! ನಮ್ಮ ಮೇಲೆ ನೀನೇ ಅನುಗ್ರಹ ಬೀರುವವನು. ಅದಕ್ಕಾಗಿ ಬ್ರಹ್ಮಾಂಡ ರಚನೆಗಾಗಿ ನೀನು ನಮಗೆ ನಿನ್ನ ಅದ್ಭುತವಾದ ಕ್ರಿಯಾಶಕ್ತಿಗಳೊಡನೆ ನಿನ್ನ ದಿವ್ಯವಾದ ಜ್ಞಾನಶಕ್ತಿಯನ್ನು ಕರುಣಿಸು.””  

ತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ತೃತೀಯಸ್ಕಂಧೇ ಪಂಚಮೋಽಧ್ಯಾಯಃ

ಇದು ಶ್ರೀಮಧ್ಬಾಗವತ ಮಹಾಪುರಾಣದಲ್ಲಿ, ಪರಮಹಂಸ ಸಂಹಿತೆಯಲ್ಲಿ ಮೂರನೇ ಸ್ಕಂಧದಲ್ಲಿ ಐದನೇ ಅಧ್ಯಾಯವು.

[1] "ಕ್ಷತ್ತ" ಎಂಬ ಶಬ್ದವು ಸಂಸ್ಕೃತದಲ್ಲಿ ವಿಭಿನ್ನ ಸಂದರ್ಭಗಳಲ್ಲಿ ಬೇರೆ ಬೇರೆ ಅರ್ಥಗಳನ್ನು ಹೊಂದಿದೆ — ಅದನ್ನು ವೇದಿಕ, ಪೌರಾಣಿಕ, ಮತ್ತು ಸಾಮಾನ್ಯ ಅರ್ಥಗಳಲ್ಲಿ ವಿವರಿಸಬಹುದು. (1) ವೇದಿಕ ಅರ್ಥ – ರಾಜಕೀಯ/ಸಾಮಾಜಿಕ ಸ್ಥಾನಮಾನದಲ್ಲಿ – ಕ್ಷತ್ತ ಎಂದರೆ ಕ್ಷತ್ರಿಯ ವರ್ಣದ ಮೂಲ ಪದ. “ಕ್ಷತ್” ಎಂಬ ಧಾತುವಿನಿಂದ ಬಂದಿದೆ. ಅರ್ಥ “ರಕ್ಷಣೆ ಮಾಡುವುದು to protect”. ಆದ್ದರಿಂದ ಕ್ಷತ್ತ ಎಂದರೆ “ರಕ್ಷಣೆಮಾಡುವವ”, “ಆಡಳಿತ ನಡೆಸುವವ” ಅಥವಾ “ರಾಜಕೀಯಾಧಿಕಾರಿ”. ಇದರ ಶಬ್ದರೂಪಗಳು: ಕ್ಷತ್ತ=ಆಡಳಿತ, ರಾಜ್ಯಾಧಿಕಾರ, ಕ್ಷತ್ರ=ಶಕ್ತಿ, ಸಾಮ್ರಾಜ್ಯ, ಕ್ಷತ್ರಿಯ=ರಾಜ್ಯವನ್ನು ರಕ್ಷಿಸುವ ವರ್ಣದವನು. (2) ಪೌರಾಣಿಕ ಅರ್ಥದಲ್ಲಿ – ವೇದ-ಪುರಾಣಗಳಲ್ಲಿ ಕ್ಷತ್ತ ಎನ್ನುವ ಶಬ್ದವು ಕೆಲವೊಮ್ಮೆ ವಿಶೇಷ ವ್ಯಕ್ತಿಯ ಹೆಸರಾಗಿಯೂ ಉಲ್ಲೇಖವಾಗಿವೆ. ಉದಾಹರಣೆಗೆ, ಕ್ಷತ್ತ ಎನ್ನುವುದು ವಿದುರನ (ಮಹಾಭಾರತದಲ್ಲಿ) ಹೆಸರು. ವಿದುರನು ಧೃತರಾಷ್ಟ್ರನ ಸಹೋದರನಾಗಿದ್ದು, “ಕ್ಷತ್ತಾ” ಎಂದು ಕರೆಯಲ್ಪಟ್ಟನು, ಏಕೆಂದರೆ ಅವನು ರಾಜನ (ರಾಜ್ಯ) ಕಾರ್ಯಗಳಲ್ಲಿ ಸಲಹೆ ನೀಡುವ ಮಂತ್ರಿವರ್ಗದ ಸದಸ್ಯನಾಗಿದ್ದನು ಎಂದು ಮಹಾಭಾರತದಲ್ಲಿ ಉಲ್ಲೇಖವಾಗಿದೆ. “ವಿದುರಃ ಕ್ಷತ್ತಾ” – ಅಂದರೆ ರಾಜನ ಸಹಾಯಕ, ಸಲಹೆಗಾರ – ಶ್ರೀಮಹಾಭಾರತದ ಆದಿಪರ್ವದ ಸಂಭವಪರ್ವದ ಅಧ್ಯಾಯ 110 (ಪಾಂಡುಚರಿತ), ಶ್ಲೋಕಸಂಖ್ಯೆ 23. (3) ಸಾಮಾನ್ಯ ಅರ್ಥದಲ್ಲಿ ಕ್ಷತ್ತ ಎಂದರೆ ಗಾಯ, ಹಾನಿ, ನಾಶ. ಇದು ಕ್ಷ್ to destroy or injure ಎಂಬ ಧಾತುವಿನಿಂದ ಬಂದಿದೆ. ಈ ಅರ್ಥದಲ್ಲಿ “ಕ್ಷತ” ಅಥವಾ “ಕ್ಷತ್ತ” ಎರಡೂ ಬಳಕೆಯಾಗುತ್ತದೆ. ಉದಾಹರಣೆಗೆ ಕ್ಷತ್ತಗಾತ್ರಃ=ಗಾಯಗೊಂಡ ದೇಹವುಳ್ಳವನು.

[2] ಮೈತ್ರೇಯನಿಗೆ ಸೃಷ್ಟಿ ಕಥನವನ್ನು ಪರಾಶರನು ಹೇಳಿದ್ದನು (ಶ್ರೀವಿಷ್ಣುಮಹಾಪುರಾಣ).

[3] ಶ್ರೀಮದ್ಭಾಗವತದ ಪ್ರಕಾರ ಶ್ರೀಕೃಷ್ಣನು ತನ್ನ ಪರಂಧಾಮಕ್ಕೆ ತೆರಳಿದ ನಂತರ ವಿದುರನು ಉದ್ಧವನ ಸೂಚನೆಯಂತೆ ಮೈತ್ರೇಯನಲ್ಲಿಗೆ ಉಪದೇಶಕ್ಕೆ ಬರುತ್ತಾನೆ. ಆದರೆ ಶ್ರೀ ವ್ಯಾಸಪ್ರಣೀತ ಶ್ರೀ ಮಹಾಭಾರತ ಇತಿಹಾಸದಲ್ಲಿ ವಿದುರನು ಸಾಯುಜ್ಯವನ್ನು ಹೊಂದಿದ ಸುಮಾರು 35 ವರ್ಷಗಳ ನಂತರ ಶ್ರೀಕೃಷ್ಣನ ಪರಂಧಾಮಗಮನವು ನಡೆಯಿತು.

[4] “ಆಧಿಭೂತ, ಅಧ್ಯಾತ್ಮ, ಮತ್ತು ಅಧಿದೈವ” — ಈ ಮೂರು ಪದಗಳು ಭಾರತೀಯ ತತ್ತ್ವಶಾಸ್ತ್ರದಲ್ಲಿ, ವಿಶೇಷವಾಗಿ ಉಪನಿಷತ್ತುಗಳು, ಭಗವದ್ಗೀತೆ, ಹಾಗೂ ಸಾಂಖ್ಯ–ಯೋಗ ತತ್ತ್ವಗಳಲ್ಲಿ ಅತ್ಯಂತ ಮಹತ್ವವುಳ್ಳವು. ಇವು ಲೋಕದ (ಜಗತ್ತಿನ) ತ್ರೈಧಾ (ಮೂರು ರೀತಿಯ) ದೃಷ್ಟಿಕೋನಗಳನ್ನು ಸೂಚಿಸುತ್ತವೆ — ಅಂದರೆ, ವಸ್ತುಜಗತ್ತು, ಜೀವನ ಒಳಜಗತ್ತು, ಮತ್ತು ದೈವಿಕ/ಸೂಕ್ಷ್ಮಶಕ್ತಿ ಲೋಕ. (1) ಆಧಿಭೂತ – ಭೌತಿಕ ದೃಶ್ಯ ಪ್ರಪಂಚ. “ಭೂತ” ಎಂದರೆ ಪಂಚಮಹಾಭೂತಗಳು: ಆಕಾಶ, ವಾಯು, ಅಗ್ನಿ, ಆಪ ಮತ್ತು ಪೃಥ್ವಿ. ಆಧಿಭೂತ ಎಂದರೆ ಈ ಸ್ಥೂಲ ಪ್ರಪಂಚದಲ್ಲಿರುವ ಎಲ್ಲ ವಸ್ತುಗಳು, ದೇಹ, ಪ್ರಾಣಿಗಳು, ನಾಶವಂತ ಜಗತ್ತು. ಇದು ಬಾಹ್ಯ ಪ್ರಪಂಚದ ದೃಷ್ಟಿಕೋಣ. ಉದಾಹರಣೆ: ದೇಹ, ಇಂದ್ರಿಯಗಳು, ಪರ್ವತಗಳು, ನದಿಗಳು — ಎಲ್ಲವೂ “ಆಧಿಭೂತ”. (2) ಅಧ್ಯಾತ್ಮ— ಆತ್ಮನಿಷ್ಠ/ಜೀವನ ಒಳಜಗತ್ತು. “ಅಧಿ + ಆತ್ಮ” = ಆತ್ಮದ ಬಗ್ಗೆ, ಅಂದರೆ ಜೀವನ ಒಳಗಿರುವ ಚೇತನತ್ವ. ಇದು ವ್ಯಕ್ತಿಯ ಒಳಗಿನ ಮನಸ್ಸು, ಬುದ್ಧಿ, ಅಹಂಕಾರ, ಚೈತನ್ಯ ಮುಂತಾದ ತತ್ತ್ವಗಳ ಲೋಕ. ಉದಾಹರಣೆ: “ನಾನು ಯಾರು?”, “ನನ್ನ ಮನಸ್ಸು, ಬುದ್ಧಿ, ಅಹಂಕಾರ” — ಇವು ಅಧ್ಯಾತ್ಮಕ್ಕೆ ಸೇರುತ್ತವೆ. ಇದು ಆತ್ಮನ ದೃಷ್ಟಿಯಿಂದಲಾದ ಜಗತ್ತಿನ ಅನುಭವ. (3) ಅಧಿದೈವ — ದೈವಿಕ/ಸೂಕ್ಷ್ಮಶಕ್ತಿ ದೃಷ್ಟಿಕೋನ. “ಅಧಿ + ದೈವ” = ದೈವದ ಬಗ್ಗೆ, ಅಂದರೆ ಇಂದ್ರ, ವರುಣ, ಸೂರ್ಯ ಮುಂತಾದ ದೇವಶಕ್ತಿಗಳು ಅಥವಾ ಪ್ರಕೃತಿಯ ನಿಯಂತ್ರಕ ಸೂಕ್ಷ್ಮಶಕ್ತಿಗಳು. ಇದು ಪ್ರಕೃತಿಯ ಹಿಂದಿರುವ ದೈವಶಕ್ತಿಗಳ ಕಾರ್ಯಪ್ರವೃತ್ತಿ. ಉದಾಹರಣೆ: ಕಣ್ಣುಗಳಿಗೆ “ಸೂರ್ಯ” ಅಧಿದೈವ, ಕಿವಿಗಳಿಗೆ “ದಿಗ್ದೇವತೆ”, ಚರ್ಮಕ್ಕೆ “ವಾಯು”, ನಾಲಿಗೆಗೆ “ವರುಣ”, ನಾಸಿಕೆಗೆ “ಅಶ್ವಿನೀ ದೇವತೆ” ಮುಂತಾದವು. ಈ ಮೂರು ದೃಷ್ಟಿಕೋನಗಳು ಜಗತ್ತಿನ ಏಕತೆಯನ್ನು ತಿಳಿಯಲು ಉಪನಿಷತ್ತುಗಳು ಬಳಸುವ ತತ್ತ್ವಗಳಾಗಿವೆ. ಭಗವದ್ಗೀತೆಯ (ಅಧ್ಯಾಯ 8, ಶ್ಲೋಕ 4–5) ಲ್ಲಿಯೂ ಇದನ್ನು ಕೃಷ್ಣನು ಸ್ಪಷ್ಟವಾಗಿ ಹೇಳುತ್ತಾನೆ: ಅಧಿಭೂತಂ ಕ್ಷರೋ ಭಾವಃ ಪುರುಷಶ್ಚಾಧಿದೈವತಮ್ । ಅಧಿಯಜ್ಞೋಽಹಮೇವಾತ್ರ ದೇಹೇ ದೇಹಭೃತಾಂ ವರ ॥ ಅರ್ಥಾತ್: ಸ್ಥೂಲ ಪ್ರಪಂಚವೇ “ಆಧಿಭೂತ”, ಜೀವನದ ಚೈತನ್ಯವೇ “ಅಧ್ಯಾತ್ಮ”, ಆ ಶಕ್ತಿಯ ಮೂಲ ನಾನು (ಪರಮಾತ್ಮನೇ) “ಅಧಿದೈವ”.

[5] 29ನೇ ಶ್ಲೋಕದ ಅರ್ಥವು ಹೀಗೂ ಇದೆ: ಮಹತ್ತತ್ತ್ವ (ಬುದ್ಧಿ) ಎಂಬ ಮೂಲದಿಂದ ಪರಿವರ್ತನೆಯಾಗಿ ಅಹಂಕಾರ ತತ್ತ್ವ (ಅಹಂ ಭಾವ) ಉಂಟಾಯಿತು. ಈ ಅಹಂಕಾರವು ಮೂರು ವಿಧದ ಗುಣಗಳಲ್ಲಿ ತ್ರಿವಿಧವಾಗಿ ಕಾರ್ಯನಿರ್ವಹಿಸುತ್ತದೆ: (1) ಸಾತ್ತ್ವಿಕ ಅಹಂಕಾರದಿಂದ ಇಂದ್ರಿಯಗಳು ಮತ್ತು ಮನಸ್ಸು, (2) ರಾಜಸ ಅಹಂಕಾರದಿಂದ ಚಲನೆ ಮತ್ತು ಕ್ರಿಯಾಶೀಲತೆ, (3) ತಾಮಸ ಅಹಂಕಾರದಿಂದ ತನ್ಮಾತ್ರಗಳು ಮತ್ತು ಭೂತಗಳು ಉಂಟಾಗುತ್ತವೆ. ಹೀಗಾಗಿ, ಈ ಶ್ಲೋಕವು ಪ್ರಪಂಚದ ಸೃಷ್ಟಿಯಲ್ಲಿ ಮಹತ್ತತ್ತ್ವದಿಂದ ಅಹಂಕಾರ ತತ್ತ್ವದ ಉತ್ಪತ್ತಿ ಮತ್ತು ಅದರ ಕಾರ್ಯಭೂಮಿಯನ್ನು ವಿವರಿಸುತ್ತದೆ.

Leave a Reply

Your email address will not be published. Required fields are marked *