ತೈತ್ತಿರೀಯೋಪನಿಷತ್ ದ್ವಿತೀಯಾಬ್ರಹ್ಮಾನಂದವಲ್ಲೀ ಪ್ರಥಮೋಽನುವಾಕಃ

[ಆಧಾರಗ್ರಂಥಗಳು: (1) ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು, ಶ್ರೀಶಾಂಕರಭಾಷ್ಯಸಮೇತ ತೈತ್ತಿರೀಯೋಪನಿಷತ್ತು, ಅಧ್ಯಾತ್ಮಪ್ರಕಾಶಕಾರ್ಯಾಲಯ, ಹೊಳೆನರಸೀಪುರ, 1998; (2) ಸ್ವಾಮಿ ಸೋಮನಾಥಾನಂದ, ಉಪನಿಷತ್ ಭಾವಧಾರೆ, ಶ್ರೀರಾಮಕೃಷ್ಣ ಆಶ್ರಮ, ಮೈಸೂರು, 2021]

ಎಲ್ಲಾ ಕಷ್ಟಗಳಿಗೂ ಕಾರಣವಾಗಿರುವ ಅಜ್ಞಾನವನ್ನು ತೊಲಗಿಸುವುದಕ್ಕಾಗಿ ಎಲ್ಲ ಉಪಾಧಿವಿಶೇಷಗಳನ್ನೂ ಕೊಡವಿಹಾಕಿರುವ ಆತ್ಮನನ್ನು ಕಂಡುಕೊಳ್ಳುವ ಪ್ರಯೋಜನಕ್ಕಾಗಿ ಈ “ಬ್ರಹ್ಮವಿದಾಪ್ನೋತಿ ಪರಮ್” ಎಂದೇ ಮೊದಲಾಗಿರುವ ಈ ಉಪನಿಷದ್ಭಾವವು ಪ್ರಾರಂಭವಾಗುತ್ತದೆ. ಈ ಬ್ರಹ್ಮವಿದ್ಯೆಯು ಅವಿದ್ಯಾನಿವೃತ್ತಿಗೆ ಮತ್ತು ಅದರಿಂದ ಸಂಪೂರ್ಣ ಸಂಸಾರಾಭಾವವನ್ನು ಕೊಡಲು ಪ್ರಯೋಜನಕಾರಿಯು. ಎಲ್ಲರ ಆತ್ಮನಾಗಿರುವ ಈ ಬ್ರಹ್ಮದ ವಿಷಯವಾದ ವಿಜ್ಞಾನದಿಂದ ಸಂಸಾರವು ಸ್ವಲ್ಪವೂ ಇಲ್ಲವಾಗುತ್ತದೆ ಎಂದ ನಿಶ್ಚಯವಾಗುತ್ತದೆ.

ಓಂ ಬ್ರಹ್ಮವಿದಾಪ್ನೋತಿ ಪರಮ್ ತದೇಷಾಽಭ್ಯುಕ್ತಾ ಸತ್ಯಜ್ಞಾನಮನಂತಂ ಬ್ರಹ್ಮ ಯೋ ವೇದ ನಿಹಿತಂ ಗುಹಾಯಾಂ ಪರಮೇ ವ್ಯೋಮನ್ ಸೋಽಶ್ನುತೇ ಸರ್ವಾನ್ ಕಾಮಾನ್ ಸಬ್ರಹ್ಮಣಾ ವಿಪಶ್ಚಿತೇತಿ ।। 1 ।।[1]

ಬ್ರಹ್ಮವಿದನು ಪರವನ್ನು ಪಡೆದುಕೊಳ್ಳುತ್ತಾನೆ. ಅಲ್ಲಿ ಇದು ಹೇಳಲ್ಪಟ್ಟಿರುತ್ತದೆ. ಸತ್ಯವೂ, ಜ್ಞಾನವೂ, ಅನಂತವೂ ಆದದ್ದು ಬ್ರಹ್ಮವು. ಗುಹೆಯಲ್ಲಿ ಪರಮವ್ಯೋಮದಲ್ಲಿ ಇಡಲ್ಪಟ್ಟಿರುವ ಅದನ್ನು ಯಾರು ಅರಿತುಕೊಳ್ಳುತ್ತಾನೋ ಅವನು ಎಲ್ಲಾ ಕಾಮಗಳನ್ನೂ ಒಮ್ಮೆಗೇ ವಿಪಶ್ಚಿತ್ತಾದ ಬ್ರಹ್ಮವಾಗಿ ಪಡೆದುಕೊಳ್ಳುತ್ತಾನೆ.

ಬ್ರಹ್ಮವನ್ನು ತಿಳಿದವನು ಬ್ರಹ್ಮವನ್ನು ಹೊಂದುತ್ತಾನೆ. ಈ ಋಕ್ಕು ಇದೇ ವಿಷಯದ ಕುರಿತಾಗಿದೆ. ಬ್ರಹ್ಮವು ಸತ್ಯ, ಜ್ಞಾನ ಮತ್ತು ಅನಂತ. ಪರಮವ್ಯೋಮದ ಗುಹೆಯಲ್ಲಿರುವ ಬ್ರಹ್ಮವನ್ನು ಅರಿತುಕೊಳ್ಳುವವನು ಸರ್ವಜ್ಞಸ್ವರೂಪವಾದ ಬ್ರಹ್ಮವಾಗಿ ಎಲ್ಲ ಕಾಮನೆಗಳನ್ನೂ ಒಟ್ಟಿಗೇ ಹೊಂದುತ್ತಾನೆ.

ಬ್ರಹ್ಮವಿದಾಪ್ನೋತಿ ಪರಮ್: ಬ್ರಹ್ಮಜ್ಞಾನಿಯು ಬ್ರಹ್ಮನನ್ನೇ ಪಡೆದುಕೊಳ್ಳುತ್ತಾನೆ. ಬ್ರಹ್ಮವಿತ್ ಎಂಬಲ್ಲಿ ಬ್ರಹ್ಮ – ಅಂದರೆ ಮುಂದೆ ಹೇಳುವ ಲಕ್ಷಣಗಳುಳ್ಳ ಬ್ರಹ್ಮವನ್ನು ತಿಳಿದುಕೊಂಡಿರುವವನು. ಬೃಹತ್ತಮತ್ವಾತ್ ಬ್ರಹ್ಮ-  ಅತ್ಯಂತ ದೊಡ್ಡದಾಗಿರುವುದರಿಂದ ಅದು ಬ್ರಹ್ಮವೆನಿಸಿಕೊಳ್ಳುತ್ತ. ಅದನ್ನು ತಿಳಿದುಕೊಂಡಿರುವವನು ಪರಂ ಅಂದರೆ ಮಿಗಿಲಿಲ್ಲದ್ದನ್ನು ಪಡೆದುಕೊಳ್ಳುತ್ತಾನೆ. ಇಲ್ಲಿ ಬ್ರಹ್ಮವನ್ನೇ ಪರ ಎಂದು ಕರೆದಿದೆ. ಏಕೆಂದರೆ ಒಂದರ ಜ್ಞಾನದಿಂದ ಇನ್ನೊಂದರ ಪ್ರಾಪ್ತಿಯಾಗಲಾರದು. “ಸ ಯೋ ಹ ವೈ ತತ್ ಪರಮಂ ಬ್ರಹ್ಮವೇದ ಬ್ರಹ್ಮೈವ ಭವತಿ” ಎಂಬ ಮುಂಡುಕೋಪನಿಷತ್ತಿನ ಮಂತ್ರದಂತೆ (3-2-9) ಪರಮ ಬ್ರಹ್ಮವನ್ನು ಅರಿತುಕೊಂಡುವನು ಬ್ರಹ್ಮವೇ ಆಗುತ್ತಾನೆ.

ಬ್ರಹ್ಮನ ವಿಷಯವನ್ನು ಕೇವಲ ಬೌದ್ಧಿಕವಾಗಿ ತಿಳಿದುಕೊಳ್ಳುವುದು ಮುಖ್ಯವಲ್ಲ. ಇಲ್ಲಿ ಅರಿಯುವುದು ಎಂದರೆ ಅನುಭವಿಸುವುದು. ನಾವು ಯಾವಾಗ ಅದನ್ನು ಚೆನ್ನಾಗಿ ತಿಳಿದುಕೊಳ್ಳುತ್ತಾ ಹೋಗುತ್ತೇವೆಯೋ ಹಾಗೆ ಅದರಂತೆಯೇ ಆಗುತ್ತೇವೆ. ಬ್ರಹ್ಮನ ಬಗ್ಗೆ ತಿಳಿದುಕೊಂಡವನು, ತಾನು ಅದೇ ಹಳೆಯ ಮನುಷ್ಯನೇ ಆಗಿ, ದೇಹ-ಇಂದ್ರಿಯ-ಮನಸ್ಸು ಇವುಗಳ ಉಪಾಧಿಗೆ ಸಿಲುಕಿಕೊಂಡು ನರಳುವುದು ಬ್ರಹ್ಮಜ್ಞಾನಿಯ ಲಕ್ಷಣವಲ್ಲ. ಯಾವಾಗ ಬ್ರಹ್ಮಜ್ಞಾನವನ್ನು ಅನುಭವಿಸುತ್ತೇವೋ ಆಗ ಪಾಪ, ಅಜ್ಞಾನ ಎಲ್ಲವೂ ಒಂದೇ ಸಲ ನಾಶವಾಗುತ್ತದೆ. ನದಿಯೊಂದು ಸಾಗರವನ್ನು ಸೇರಿದರೆ ಹೇಗೆ ಅದು ತನ್ನ ಹಿಂದಿನ ನಾಮ-ರೂಪ-ಗುಣಗಳನ್ನು ಕಳೆದುಕೊಂಡು ಸಾಗರದ ಧರ್ಮವನ್ನು ಪಡೆಯುತ್ತದೆಯೋ ಹಾಗೆಯೇ ಬ್ರಹ್ಮವನ್ನು ತಿಳಿದವನು ಬ್ರಹ್ಮನೇ ಆಗುತ್ತಾನೆ.

ಸತ್ಯಂ ಜ್ಞಾನಂ ಅನಂತಂ ಬ್ರಹ್ಮ: ಇದು ಬ್ರಹ್ಮನ ಲಕ್ಷಣಕ್ಕಾಗಿ ಕೊಟ್ಟಿರುವ ವಾಕ್ಯವು. ಸತ್ಯಂ ಜ್ಞಾನಂ ಮತ್ತು ಅನಂತಂ ಎಂಬ ಈ ಮೂರು ಪದಗಳು ವಿಶೇಷ್ಯವಾದ ಬ್ರಹ್ಮದ ವಿಶೇಷಣವನ್ನು ತಿಳಿಸುವುದಕ್ಕಾಗಿ ಇವೆ. ಬ್ರಹ್ಮವು ವಿಶೇಷ್ಯ ಅಂದರೆ ಅರಿಯ ಬೇಕಾದ ವಿಷಯ. ಅರಿವಿಗೆ ವಿಷಯ. ಜ್ಞಾನಕ್ಕೆ ವಿಷಯ. ಸತ್ಯಂ ಮೊದಲಾದ ಈ ಮೂರು ಶಬ್ದಗಳು ವಿಶೇಷಣಗಳು ಅಥವಾ ವಿಶೇಷ್ಯದ ಲಕ್ಷಣಗಳನ್ನು ಸೂಚಿಸುವವು. ಸತ್ಯವೇ ಮೊದಲಾದ ಪ್ರತಿಯೊಂದೂ ಬ್ರಹ್ಮದ ಲಕ್ಷಣ. ಇವುಗಳಲ್ಲ ಒಂದಕ್ಕೊಂದರ ಸಂಬಂಧವಿಲ್ಲ. ಆದರೆ ಪ್ರತಿಯೊಂದು ಶಬ್ದವೂ ಇನ್ನೊಂದರ ಅಪೇಕ್ಷೆಯಿಲ್ಲದ ಬ್ರಹ್ಮ ಶಬ್ದದ ಲಕ್ಷಣವನ್ನು ಹೇಳುತ್ತದೆ. ಸತ್ಯವಾದದ್ದು ಬ್ರಹ್ಮ. ಜ್ಞಾನವು ಬ್ರಹ್ಮ. ಅನಂತವಾದದ್ದು ಬ್ರಹ್ಮ. ಹೀಗೆ ಪ್ರತಿಯೊಂದು ವಿಶಷಣ ಮತ್ತು ವಿಶೇಷ್ಯಕ್ಕೆ ಸಂಬಂಧವಿದೆ. ಆದರೆ ವಿಶೇಷಣಗಳಲ್ಲಿಯೇ ಒಂದಕ್ಕೊಂದು ಸಂಬಂಧಿಸಿಲ್ಲ.

ಯಾವುದರ ನಿಶ್ಚಿತ ರೂಪವನ್ನು ತಿಳಿದುಕೊಂಡ ನಂತರ ಅದು ತನ್ನ ಆ ರೂಪವನ್ನು ಬಿಡುವುದಿಲ್ಲವೋ ಅದು ಸತ್ಯ. ಇಂಥ ರೂಪದ್ದೆಂದು ನಿಶ್ಚಿತವಾದ ಬಳಿಕ ಆ ರೂಪವನ್ನು ಮಾರ್ಪಡಿಸಿಕೊಳ್ಳದೇ ಇರುವುದು ಸತ್ಯವಸ್ತು. ಸತ್ಯವೆಂದರೆ ವ್ಯವಹಾರದಲ್ಲಿ ಮಾತ್ರ ಸತ್ಯವಾಗಿರುವುದೆಂದು ತೋರುವುದಲ್ಲ. ಎಂದಿಂದಿಗೂ ಸತ್ಯವೇ ಆಗಿರುವುದು. ಇಂಥದೇ ರೂಪದ್ದು ಎಂದು ತಿಳಿದ ನಂತರ ತನ್ನ ಆ ರೂಪವನ್ನು ಬಿಟ್ಟುಹೋಗುವುದು ಅನೃತವು. ಆದ್ದರಿಂದ ಕಾರ್ಯವಾದದ್ದು ಅಂದರೆ ಮಾಡಲ್ಪಟ್ಟಿದ್ದು ಅನೃತವು. “ವಾಚಾರಂಭಣಂ ವಿಕಾರೋ ನಾಮಧೇಯಂ ಮೃತ್ತಿಕೇತ್ಯೇವ ಸತ್ಯಮ್” ಅರ್ಥಾತ್: ವಿಕಾರವೆನ್ನುವುದು ಒಂದು ಮಾತು. ಹೆಸರು. ಮಣ್ಣು ಎನ್ನುವುದೇ ಸತ್ಯವು. (ಛಾಂದೋಗ್ಯೋಪನಿಷತ್ತು 6-1-4)

ಇಲ್ಲಿ ಬ್ರಹ್ಮವು ಸತ್ಯ ಎಂದರೆ ಬ್ರಹ್ಮವು ಶಾಶ್ವತವಾಗಿರುವುದು. ಎಂದೆಂದಿಗೂ ಇರುವುದು. ಅಂದರೆ ಹಿಂದೆ, ಈಗ, ಮುಂದೆ ಯಾವಾಗಲೂ ಇರುವಂಥಹುದು. ಉಳಿದವುಗಳೆಲ್ಲವೂ ಬದಲಾಗುತ್ತಿರುತ್ತವೆ. ಯಾವಾಗಲೂ ಬದಲಾಗುತ್ತಿರುವ ಈ ಪ್ರಪಂಚಕ್ಕೆ ಬದಲಾಗದೇ ಇರುವ ಒಂದೇ ಒಂದು ವಸ್ತುವೇ ಆಧಾರವು. ಅದೇ ಬ್ರಹ್ಮ. ಅಲೆಗಳು ಬದಲಾಗುತ್ತಿರುತ್ತವೆ. ಆದರೆ ಅದಕ್ಕೆಲ್ಲಾ ಸಾಗರವೇ ಆಧಾರವು. ನದಿ ಯಾವಾಗಲೂ ಹರಿದುಕೊಂಡು ಹೋಗುತ್ತಿರುತ್ತದೆ. ಆದರೆ ಅದಕ್ಕೆ ಚಲಿಸದೇ ಇರುವ ದಡಗಳು ಆಧಾರ. ಬದಲಾಗುವುದು ಇರಬೇಕಾದರೆ ಯಾವುದಾದರೂ ಬದಲಾಗದೇ ಇರುವ ಆಧಾರ ಇದ್ದರೆ ಮಾತ್ರ ಸಾಧ್ಯ. ಬದಲಾವಣೆಗಳಿಂದ ಕೂಡಿರುವ ಮತ್ತು ಅನೇಕ ನಾಮರೂಪಗಳಿಂದ ಕೂಡಿರುವ ಈ ಪ್ರಪಂಚದ ಇರುವುದೊಂದೇ ಸತ್ಯವೆಂದರೆ ಅದು ಬ್ರಹ್ಮ. ಎಲ್ಲ ನಾಶವಾದರೂ ನಾಶವಾಗದೇ ಇರುವುದೇ ಸತ್ಯ.

ಬ್ರಹ್ಮವು ಜ್ಞಾನ. ಅದರ ಸ್ವರೂಪವೇ ಜ್ಞಾನ. ಜ್ಞಾನವೆಂದರೆ ಜ್ಞಪ್ತಿ, ಅರಿವು. ಅದು ಜ್ಞಾನವನ್ನು ಪಡೆದುಕೊಳ್ಳಬೇಕಾಗಿಲ್ಲ. ಸೂರ್ಯನು ಹೇಗೆ ತನ್ನ ಕಿರಣಗಳನ್ನು ಸಂಪಾದಿಸಿ ಪಡೆದುಕೊಳ್ಳಬೇಕಾಗಿಲ್ಲವೋ, ಹಾಲು ಹೇಗೆ ತನ್ನ ಸ್ವರೂಪವಾದ ಬಿಳೀ ಬಣ್ಣವನ್ನು ಹೇಗೆ ಬೇರೆಯದರಿಂದ ಪಡೆದುಕೊಳ್ಳಬೇಕಾಗಿಲ್ಲವೋ ಹಾಗೆಯೇ ಬ್ರಹ್ಮನ ಸ್ವರೂಪವೇ ಜ್ಞಾನವಾದ್ದರಿಂದ ಅದು ಮೊದಲು ಇರಲಿಲ್ಲ ನಂತರ ಅದಕ್ಕುಂಟಾಯಿತು ಎನ್ನುವುದಿಲ್ಲ. ಜ್ಞಾನಸ್ವರೂಪವೇ ಬ್ರಹ್ಮನದಾಗಿದೆ. ಅದಕ್ಕೆ ಎಲ್ಲವೂ ತಿಳಿದಿದೆ. ಎಲ್ಲವೂ ಬ್ರಹ್ಮದಲ್ಲಿಯೇ ಕಾಣಿಸಿಕೊಳ್ಳುತ್ತದೆ. ಎಲ್ಲದರ ಹಿನ್ನೆಲೆಯಾಗಿ ಇರುವುದು ಬ್ರಹ್ಮ. ಎಲ್ಲದರ ಹಿಂದೆ ಇರುವುದು ಬ್ರಹ್ಮ. ಎಲ್ಲ ಬಂದಿರುವುದು ಬ್ರಹ್ಮದಿಂದ.

ಬ್ರಹ್ಮವು ಅನಂತ. ಎಲ್ಲ ಕಡೆಯೂ ಇರುವುದು. ಅದಕ್ಕೆ ಆದಿ-ಅಂತ್ಯಗಳಿಲ್ಲ. ಅದಿಲ್ಲದ ಸ್ಥಳವೇ ಇಲ್ಲ. ಈ ಅನಂತವು ಒಂದು ಮಾತ್ರ. ನಾಮ-ರೂಪಗಳಿಂದ ಮಾತ್ರ ಹಲವಾಗಿ ಕಾಣುತ್ತದೆ. ಒಂದಾಗಿದ್ದುದು ಎಂದೂ ಅನೇಕವಾಗಿ ವಿಭಜನೆಗೊಂಡಿಲ್ಲ. ಒಂದಾಗಿದ್ದುದು ಹಾಗೆಯೇ ಒಂದಾಗಿಯೇ ಇದೆ. ಯಾವುದು ಯಾವ ವಿಭಜನೆ ಹೊಂದದೆ ವಿಂಗಡವಾಗದೇ ಇರುತ್ತದೆಯೋ ಅದೇ ಅನಂತವು. ವಿಂಗಡವಾಗಬಲ್ಲದ್ದು ಅನಂತವಾಗಿರುವುದಿಲ್ಲ.

ಇಲ್ಲಿ ಅನಂತ್ಯವೆನ್ನುವುದು ದೇಶ, ಕಾಲ ಮತ್ತು ವಸ್ತು ಎಂಬ ಮೂರುವಿಧ ಎನ್ನಬಹುದು. ಇಷ್ಟೆಂಬ ಅಳತೆಯಿಲ್ಲದೇ ಇರುವುದರಿಂದ ಬ್ರಹ್ಮವು ದೇಶದಿಂದ ಅನಂತವಾಗಿರುತ್ತದೆ. ಬ್ರಹ್ಮವು ಕಾರ್ಯವಲ್ಲದ್ದರಿಂದ ಅದಕ್ಕೆ ಕಾಲದಿಂದಲೂ ಅನಂತ್ಯವಿದೆ. ಅದು ಎಲ್ಲದರೊಡನೆಯೂ ಅನನ್ಯವಾಗಿರುವುದರಿಂದ, ತಾನು ಬೇರೆಯಾಗದೇ ಎಲ್ಲದರಲ್ಲಿಯೂ ಇರುವುದರಿಂದ ವಸ್ತುವಿನಿಂದಲೂ ಅನಂತ್ಯವಾಗಿದೆ. ಬ್ರಹ್ಮವು ಎಲ್ಲಾ ವಸ್ತುಗಳಿಗೂ ಕಾರಣವಾಗಿರುವುದರಿಂದ ಅದು ಕಾಲ, ಆಕಾಶ ಎಲ್ಲವಕ್ಕೂ ಕಾರಣವಾಗಿದೆ.

ಯೋ ವೇದ ನಿಹಿತಂ ಗುಹಾಯಾಂ ಪರಮೇ ವ್ಯೋಮನ್: ಸತ್ಯವೂ, ಜ್ಞಾನವೂ ಅನಂತವೂ ಆದ ಬ್ರಹ್ಮವನ್ನು ಎಲ್ಲಿ ಅರಿತುಕೊಳ್ಳಬೇಕು? ಪರಮವ್ಯೋಮದಲ್ಲಿರುವ ಗುಹೆಯಲ್ಲಿ ಇದನ್ನು ಅರಿತುಕೊಳ್ಳಬೇಕು. ನನ್ನ ಅಂತರಾಳವೇ ನನ್ನ ವ್ಯಕ್ತಿತ್ವದ ತಳ. ನನ್ನ ವ್ಯಕ್ತಿತ್ವದ ಹಿಂದೆ ಹಿಂದೆ ಹೋದರೆ ಎಲ್ಲರ ವ್ಯಕ್ತಿತ್ವಗಳಿಗೆ ಕಾರಣವಾದ ಬ್ರಹ್ಮದ ಬಳಿ ಹೋಗುತ್ತೇವೆ. ನನ್ನಲೇ ಅವನಿರುವನು. ನಾನೇ ಅವನು. ಅಲೆ ಸಾಗರದಲ್ಲಿದೆ. ಸಾಗರವೇ ಅಲೆಯಾಗಿ ತೋರುತ್ತಿದೆ. ಅದರಂತೆ ಅಲೆಯಾಗಿರುವ ನನ್ನಲ್ಲಿ ಸತ್ಯವಾಗಿರುವುದು ಬ್ರಹ್ಮ ಮಾತ್ರ. ಅಲೆಯನ್ನು ಎಂದಿಗೂ ಸಾಗರದಿಂದ ಬೇರೆ ಮಾಡುವುದಕ್ಕೆ ಆಗುವುದಿಲ್ಲ.

“ಗುಹೂ ಸಂವರಣೇ” ಎಂಬ “ಮುಚ್ಚು” ಎಂಬ ಅರ್ಥದ ಗುಹೂ ಧಾತುವಿನಿಂದ ಗುಹೆ ಎಂಬ ಶಬ್ದವಿದೆ. ಇದರಲ್ಲಿ ಜ್ಞಾನ, ಜ್ಞೇಯ, ಜ್ಞಾತೃ ಎಂಬ ಪದಾರ್ಥಗಳು ಅಡಗಿಕೊಂಡಿವೆ. ಆದ್ದರಿಂದ ಗುಹೆ ಎಂದರೆ ಬುದ್ಧಿ. ವ್ಯೋಮದಲ್ಲಿ ಎಂದರೆ ಅವ್ಯಾಕೃತವೆಂಬ ಆಕಾಶದಲ್ಲಿ ಎಂದರ್ಥ. ಆದರೆ ಇಲ್ಲಿ “ಪರಮವಾದ ವ್ಯೋಮ” ಎನ್ನುವುದು ಹೃದಯದ ಆಕಾಶವೇ ಎನ್ನುವುದು ಯುಕ್ತ. ಆ ಹೃದಯದ ವ್ಯೋಮದಲ್ಲಿರುವ ಬುದ್ಧಿಯೆಂಬ ಗುಹೆಯಲ್ಲಿ ಬ್ರಹ್ಮವು ಇದೆ. ಅದರ ವೃತ್ತಿಯಿಂದ ವಿಂಗಡವಾಗಿ ಕಾಣುತ್ತದೆಯೇ ಹೊರತು ಬ್ರಹ್ಮಕ್ಕೆ ಇಂತಹುದೇ ಎಂಬ ನಿರ್ದಿಷ್ಟ ದೇಶ ಅಥವಾ ಕಾಲದ ಸಂಬಂಧವು ಇಲ್ಲವೇ ಇಲ್ಲ. ಏಕೆಂದರೆ ಅದು ಎಲ್ಲೆಲ್ಲಿಯೂ ಇದೆ ಮತ್ತು ಅದಕ್ಕೆ ಯಾವ ವಿಶೇಷಗಳೂ ಇಲ್ಲ.

ಅಲ್ಲಿರುವ ಬ್ರಹ್ಮವನ್ನು ತಿಳಿದುಕೊಳ್ಳುವುದರ ಫಲವೇನು? ಸೋಽಶ್ನುತೇ ಸರ್ವಾನ್ ಕಾಮಾನ್ ಸ: ಎಲ್ಲ ಕಾಮಗಳನ್ನೂ ಅನುಭವಿಸುತ್ತಾನೆ. ಸಹ ಎಂದರೆ ಒಂದೇ ಕಾಲದಲ್ಲಿ ಒಂದೇ ಕ್ಷಣದಲ್ಲಿ ಇರುವ ಕಾಮಗಳೆಲ್ಲವನ್ನೂ ಒಂದೇ ಅರಿವಿನಿಂದ ಪಡೆದುಕೊಳ್ಳುತ್ತಾನೆ. ಬ್ರಹ್ಮಣಾ ವಿಪಶ್ಚಿತೇತಿ – ಜ್ಞಾನಿಯು ಬ್ರಹ್ಮವಾಗಿ ಬ್ರಹ್ಮಸ್ವರೂಪದಿಂದಲೇ ಎಲ್ಲಾ ಕಾಮನೆಗಳನ್ನೂ ಒಟ್ಟಿಗೇ ಪಡೆದುಕೊಳ್ಳುತ್ತಾನೆ.

ತಸ್ಮಾದ್ವಾ ಏತಸ್ಮಾದಾತ್ಮನ ಆಕಾಶಃ ಸಂಭೂತಃ ಆಕಾಶಾದ್ವಾಯುಃ ವಾಯೋರಗ್ನಿಃ ಅಗ್ನೇರಾಪಃ ದ್ಭ್ಯಃ ಪೃಥಿವೀ ಪೃಥಿವ್ಯಾ ಓಷಧಯಃ ಓಷಧೀಭ್ಯೋನ್ನಮ್ ಅನ್ನಾತ್ಪುರುಷಃ ।। 2 ।।

ಆ ಆತ್ಮನಿಂದಲೇ ಆಕಾಶವು ಉಂಟಾಯಿತು. ಆಕಾಶದಿಂದ ವಾಯು, ವಾಯುವಿನಿಂದ ಅಗ್ನಿ, ಅಗ್ನಿಯಿಂದ ಅಪ್ಸು, ಅಪ್ಪಿನಿಂದ ಪೃಥ್ವಿ, ಪೃಥ್ವಿಯಿಂದ ಓಷಧಿಗಳು, ಓಷಧಿಗಳಿಂದ ಅನ್ನವು, ಅನ್ನದಿಂದ ಪುರುಷನು.

ಇಲ್ಲಿ ಆತ್ಮನಃ ಎಂದರೆ ಆತ್ಮಶಬ್ದಕ್ಕೆ ವಾಚ್ಯವಾಗಿರುವ ಬ್ರಹ್ಮದಿಂದ ಎಂದರ್ಥ. ಏಕೆಂದರೆ ಬ್ರಹ್ಮವೇ ಎಲ್ಲವಕ್ಕೂ ಆತ್ಮವಾಗಿರುತ್ತದೆ. “ತತ್ ಸತ್ಯಂ ಸ ಆತ್ಮಾ” ಎಂಬ ಛಾಂದೋಗ್ಯೋಪನಿಷತ್ತಿನ ವಾಕ್ಯದಂತೆ ಬ್ರಹ್ಮವು ಆತ್ಮವು. ಈ ಆತ್ಮಸ್ವರೂಪವಾದ ಬ್ರಹ್ಮದಿಂದ ಆಕಾಶವು ಹುಟ್ಟಿತು. ಆಕಾಶವೆಂದರೆ ಶಬ್ದವೆಂಬ ಗುಣವಿರುವ ಮೂರ್ತದ್ರವ್ಯಗಳಿಗೆ ಅವಕಾಶವನ್ನುಂಟುಮಾಡುವ ಭೂತವು. ಆ ಆಕಾಶದಿಂದ ತನ್ನ ಸ್ಪರ್ಶಗುಣದಿಂದಲೂ ಹಿಂದಿನ ಆಕಾಶದ ಗುಣವಾದ ಶಬ್ದದಿಂದಲೂ ಕೂಡಿ, ಎರಡು ಗುಣಗಳಿರುವ, ವಾಯುವು ಹುಟ್ಟಿತು. ವಾಯುವಿನಿಂದ ತನ್ನದಾದ ರೂಪವೆಂಬ ಗುಣದಿಂದಲೂ, ಹಿಂದಿನ ಎರಡು ಗುಣಗಳಿಂದಲೂ ಕೂಡಿರುವ, ಅಗ್ನಿಯು ಹುಟ್ಟಿತು. ಅಗ್ನಿಯಿಂದ ತನ್ನದಾದ ರಸೋ ಗುಣವನ್ನೂ, ಹಿಂದಿನ ಮೂರು ಗುಣಗಳನ್ನೂ ಹೊಂದಿರುವ, ಒಟ್ಟು ನಾಲ್ಕು ಗುಣಗಳಿರುವ ಆಪ್ಸು ಹುಟ್ಟಿಕೊಂಡಿತು. ಆಪ್ಸಿನಿಂದ ತನ್ನದಾದ ಗಂಧ ಗುಣದಿಂದಲೂ ಹಿಂದಿನ ನಾಲ್ಕು ಗುಣಗಳು, ಹೀಗೆ ಒಟ್ಟು ಐದು ಗುಣಗಳಿಂದ ಕೂಡಿರುವ ಪೃಥ್ವಿಯು ಹುಟ್ಟಿತು. ಪೃಥ್ವಿಯಿಂದ ಓಷಧಿಗಳು, ಓಷಧಿಗಳಿಂದ ಅನ್ನ, ಅನ್ನದಿಂದ ರೇತಸ್ಸುಂಟಾಗಿ ಅದರಿಂದ ಪುರುಷನು – ಅಂದರೆ ತಲೆ, ಕೈ, ಮೊದಲಾದ ಆಕಾರವುಳ್ಳ ವಿರಾಟ್ಪುರುಷನು ಹುಟ್ಟಿದನು.

ಸ ವಾ ಏಷ ಪುರುಷೋಽನ್ನರಸಮಯಃ ತಸ್ಯೇದಮೇವ ಶಿರಃ ಅಯಂ ದಕ್ಷಿಣಃ ಪಕ್ಷಃ ಅಯಮುತ್ತರಃ ಪಕ್ಷಃ ಅಯಮಾತ್ಮಾ ಇದಂ ಪುಚ್ಛಂ ಪ್ರತಿಷ್ಠಾ ।। 3 ।। ತದಪ್ಯೇಷ ಶ್ಲೋಕೋ ಭವತಿ ।। 4 ।। ಇತಿ ಪ್ರಥಮೋಽನುವಾಕಃ ।। 1 ।।

ಆ ಪುರುಷನು ಅನ್ನರಸಮಯನು. ಅವನಿಗೆ ಇದೇ ತಲೆ. ಇದು ದಕ್ಷಿಣಪಕ್ಷವು. ಇದು ಉತ್ತರಪಕ್ಷವು. ಇದು ಆತ್ಮನು. ಇದು ಪುಚ್ಛವು. ಪ್ರತಿಷ್ಠೆಯು.

ಪುರುಷನು ಅನ್ನರಸಮಯನು ಎಂದರೆ ಅನ್ನರಸದಿಂದ ಉಂಟಾದವನು. “ಸರ್ವೇಭ್ಯೋಽಂಗೇಭ್ಯಸ್ತೇಜಸ್ಸಂಭೂತಂ” ಅರ್ಥಾತ್ ರೇತಸ್ಸಿನ ತೇಜಸ್ಸಿನಿಂದಲೇ ಸರ್ವ ಅಂಗಗಳೂ ಹುಟ್ಟಿಕೊಂಡವು. ರೇತಸ್ಸೆನ್ನುವುದು ಬೀಜವು. ರೇತಸ್ಸಿನಿಂದ ಹುಟ್ಟುವವನೂ ಹಾಗೇ ಪುರುಷಾಕೃತಿಯನ್ನೇ ಹೊಂದಿರುತ್ತಾನೆ. ಏಕೆಂದರೆ ಹುಟ್ಟುವ ಎಲ್ಲ ಪ್ರಾಣಿಯೂ ತಂದೆಯ ಆಕೃತಿಯುಳ್ಳವೇ ಆಗಿರುತ್ತವೆ. ಪುರುಷನು ಶ್ರೇಷ್ಠನು. ಏಕೆಂದರೆ ಫಲವನ್ನು ಬಯಸುವವನೇ ಅವನು. ಅವನಿಗೆ ಯಾವ ನಿಷೇಧಗಳೂ ಇಲ್ಲ. ಅವನೇ ಆರ್ಥಿ. ಅವನೇ ಜ್ಞಾನಿ. ಅವನೇ ಸಮರ್ಥನು. ಆ ಪುರುಷನಲ್ಲಿಯೇ ಆತ್ಮನು ಹೆಚ್ಚಾಗಿ ಪ್ರಕಟವಾಗಿರುತ್ತಾನೆ. ಏಕೆಂದರೆ ಅವನು ಎಲೆಯಿಲ್ಲದಷ್ಟು ಪ್ರಜ್ಞಾನದಿಂದ ಕೂಡಿದ್ದಾನೆ. ಅರಿತು ಮಾತನಾಡುತ್ತಾನೆ. ಅರಿತು ನೋಡುತ್ತಾನೆ. ನಾಳೆಯದನ್ನು ಬಲ್ಲನು. ಲೋಕಾಲೋಕಗಳನ್ನು ಬಲ್ಲವನು. ಮರ್ತ್ಯದಿಂದ ಅಮೃತವನ್ನು ಪಡೆಯಲೆಳೆಸುತ್ತಾನೆ. ಇನ್ನು ಮಿಕ್ಕ ಪಶುಗಳಿಗೆ ಹಸಿವು ಬಾಯಾರಿಕೆಗಳೇ ಅರಿವು[2]. ಅನಾತ್ಮವಾಗಿದ್ದರೂ ಆತ್ಮನೆಂಬ ಭಾವನೆಯಿಂದ ತುಂಬಿರುವ ಅವನನ್ನು ವರ್ಣಿಸಲು ಯಾವುದಾದರೂ ಆಲಂಬನೆಯಿಲ್ಲದೇ[3] ಸಾಧ್ಯವಿಲ್ಲವಾದುದರಿಂದ ಕಾಣುವ ಶರೀರವೆಂಬ ಆತ್ಮನಿಗೆ ಸಾದೃಶ್ಯವನ್ನು ಕಲ್ಪಿಸಿ ಕೊಂಬೆಯ ಚಂದ್ರನನ್ನು ತೋರಿಸುವಂತೆ[4], ಆತ್ಮನ ಕುರಿತು ತಿಳಿಯಪಡಿಸಲು ಇದಮೇವ ಶಿರಃ – ಅವನಿಗೆ ಇದೇ ತಲೆ ಎಂದು ಮುಂತಾಗಿ ಹೇಳುತ್ತದೆ.

ಅನ್ನರಸಮಯನಾದ ಪುರುಷನಿಗೆ ಇದೇ ಅಂದರೆ ಎಲ್ಲರಿಗೂ ಗೊತ್ತಿರುವ ಈ ತಲೆಯೇ ತಲೆ. ದಕ್ಷಿಣ ಪಕ್ಷವು ಬಲತೋಳು. ಉತ್ತರ ಪಕ್ಷವು ಎಡತೋಳು. ನಡುವಿನ ದೇಹಭಾಗವು ಅಂಗಗಳಿಗೆಲ್ಲಾ ಆತ್ಮನು – ಮಧ್ಯಂ ಹ್ಯೇಷಾಮಂಗಾನಾಮಾತ್ಮಾ (ಐತರೇಯ ಅರಣ್ಯಕ 2-3-5). ಹೊಕ್ಕುಳಿನ ಕೆಳಭಾಗದಲ್ಲಿರುವುದು ಪುಚ್ಛವು. ಪ್ರತಿಷ್ಠೆಯು. ಇದರ ಸಹಾಯದಿಂದ ಮನುಷ್ಯನು ನಿಲ್ಲುತ್ತಾನಾದ್ದರಿಂದ ಇದಕ್ಕೆ ಪ್ರತಿಷ್ಠೆ ಎಂದು ಹೆಸರು. ಪುಚ್ಛದಂತೆ ಇರುವುದರಿಂದ ಇದನ್ನು ಪುಚ್ಛ ಎಂದು ಕರೆದಿದೆ. ಎತ್ತಿನ ಬಾಲದಂತೆ ಕೆಳಕ್ಕೆ ಇಳಿಬಿದ್ದಿರುವುದರಿಂದ ಇದು ಪುಚ್ಛವು.

ಈ ಅನ್ನಮಯಾತ್ಮನನ್ನೇ ಮೂಲವಾಗಿಟ್ಟುಕೊಂಡು ಪ್ರಾಣಮಯನೇ ಮೊದಲಾದವರಿಗೂ ತಲೆಯೇ ಮೊದಲಾದವುಗಳನ್ನು ಕಲ್ಪಿಸಿ ಇದೊಂದು ರೂಪಕವಾಗಿದೆ. ಅಚ್ಚಿನಲ್ಲಿ  ಕರಗಿದ ತಾಮ್ರವನ್ನು ಸುರಿದಾಗ ಹೇಗೆ ಅದು ಪ್ರತಿಮೆಯ ಆಕಾರವನ್ನು ತಳೆಯುವುದೋ ಹಾಗೆ. ಕರಗಿದ ತಾಮ್ರಕ್ಕೆ ಆಕಾರವಿಲ್ಲದಿದ್ದರೂ ಅದು ಅಚ್ಚಿನ ಆಕಾರವನ್ನು ಹೊಂದುವಂತೆ ಪ್ರಾಣಮಯಾದಿಗಳಿಗೆ ತಲೆ ಮೊದಲಾದ ಅವಯವಗಳು ಇಲ್ಲದಿದ್ದರೂ ದೇಹವನ್ನನುಸರಿಸಿ ಅವುಗಳಿಗೂ ಈ ಅಂಗಗಳನ್ನು ಕಲ್ಪಿಸಿದೆ. ಆತ್ಮನು ಅನ್ನಮಯನಿಗಿಂತ ಬೇರೆಯಾಗಿರುವಂತೆ ಪ್ರಾಣಾದಿಮಯಗಳಿಗಿಂತಲೂ ಬೇರೆ ಎನ್ನುವುದೇ ಅಭಿಪ್ರಾಯ.

ಇದೇ ವಿಷಯದಲ್ಲಿ ಈ ಶ್ಲೋಕವಿದೆ.

[1] ಕೆಲವು ಕಡೆ ಮುಂದಿನ ಮಂತ್ರವನ್ನೂ ಸೇರಿಸಿ ಶ್ಲೋಕಸಂಖ್ಯೆ 1 ಎಂದಿದೆ.

[2] ಪುರುಷೇತ್ವೇವಾವಿಸ್ತರಾಮಾತ್ಮಾ ಸ ಹಿ ಪ್ರಜ್ಞಾನೇನ ಸಂಪನ್ನತಮೋ ವಿಜ್ಞಾತಂ ವದತಿ ವಿಜ್ಞಾತಂ ಪಶ್ಯತಿ ವೇದ ಶ್ವಸ್ತನಂ ವೇದ ಲೋಕಾಲೋಕೌ ಮರ್ತ್ಯೇನಾಮೃತಮೀಪ್ಸತೀತ್ಯೇವಂ ಸಂಪನ್ನಃ । ಅಥೇತರೇಷಾಂ ಪಶೂನಾಮಶನಾಪಿಪಾಸೇ ಏವಾಭಿ ವಿಜ್ಞಾನಂ...(ಐತರೇಯ ಆರಣ್ಯಕ 2-3-2)

[3] ಕುಂಟನಿಗೆ ಊರುಗೋಲೆಂಬ ಆಲಂಬನೆಯು ಬೇಕಾಗಿರುವಂತೆ ಸಾಮಾನ್ಯರಿಗೆ ಆತ್ಮನ ಕುರಿತು ತಿಳಿಸಬೇಕಾದರೆ ಶರೀರವೇ ಮೊದಲಾದ ಯಾವುದಾದರೊಂದು ಆಲಂಬನೆ ಬೇಕು. ಆದ್ದರಿಂದ ಅನ್ನಮಯಾದಿಗಳಲ್ಲಿ ಆತ್ಮಬುದ್ಧಿಯನ್ನು ಅಧ್ಯಾರೋಪಿಸಿದೆ ಎಂದು ಭಾವ.

[4] ಕೊಂಬೆಯ ತುದಿಯನ್ನು ತೋರಿಸಿ ಅದರ ಮೂಲಕ ಚಂದ್ರನನ್ನು ತೋರಿಸುವಂತೆ ಅನ್ನಮಯಾದಿ ಕೋಶಗಳ ಮೂಲಕ ಆತ್ಮನನ್ನು ತಿಳಿಸಬೇಕಾಗಿದೆ.ಚಂದ್ರನಿಗೆ ಕೊಂಬೆಯ ಸೋಂಕು ಇಲ್ಲದಂತೆ ಆತ್ಮನಿಗೂ ಕೋಶಗಳೊಡನೆ ಸಂಬಂಧವಿಲ್ಲ.

Leave a Reply

Your email address will not be published. Required fields are marked *