ಋಗ್ವೇದ ಸಂಹಿತೆ ಮಂಡಲ 10, ಅನುವಾಕ 6, ಸೂಕ್ತ 90
[ಋಗ್ವೇದ ಸಂಹಿತಾ (ಸಾಯಣಭಾಷ್ಯ ಸಮೇತ, ಕರ್ಣಾಟಕ ಭಾಷಾರ್ಥಾನುವಾದವಿವರಣೆಗಳೊಂದಿಗೆ) ಭಾಗ 29 ಎಂಟನೆಯ ಅಷ್ಟಕದ ಅಧ್ಯಾಯಗಳು 3-4 ಹತ್ತನೆಯ ಮಂಡಲದ ಸೂಕ್ತಗಳು 72-94, ಅನುವಾದಕರು ಆಸ್ಥಾನಮಹಾವಿದ್ವಾನ್ ಹೆಚ್. ಪಿ. ವೆಂಕಟರಾವ್, ಶ್ರೀ ಜಯಚಾಮರಾಜೇಂದ್ರ ವೇದರತ್ನಮಾಲಾ, ಸಂಖ್ಯೆ 29, ಶ್ರೀ ವಿನಾಯಕ ಪ್ರಿಂಟಿಂಗ್ ವರ್ಕ್ಸ್, ಮೈಸೂರು, 1954]
[ಸೂಕ್ತದಲ್ಲಿರುವ ಋಕ್ಸಂಖ್ಯೆ 16; ಋಷಿಃ – ನಾರಾಯಣಃ । ದೇವತಾ – ಪುರುಷಃ । ಛಂದಃ – 1-15 ಅನುಷ್ಟುಪ್, 16 ತ್ರಿಷ್ಟುಪ್]
ಸಹಸ್ರ ಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರಪಾತ್ । ಸ ಭೂಮಿಂ ವಿಶ್ವತೋ ವೃತ್ವಾತ್ಯತಿಷ್ಠದ್ದಶಾಂಗುಲಮ್ ।। 1 ।।
ಪುರುಷಃ – ಆದಿ ಪುರುಷನು । ಸಹಸ್ರಶೀರ್ಷಾ – ಅಸಂಖ್ಯಾಕವಾದ ಶಿರಸ್ಸುಗಳಿಂದ ಕೂಡಿದವನು । ಸಹಸ್ರಾಕ್ಷಃ – ಅಸಂಖ್ಯಾಕವಾದ ಚಕ್ಷುಸ್ಸುಗಳುಳ್ಳವನು । ಸಹಸ್ರಪಾತ್ – ಅಸಂಖ್ಯಾಕವಾದ ಪಾದಗಳುಳ್ಳವನು । ಸಃ – ಈ ಪುರುಷನು । ಭೂಮಿಂ – ಬ್ರಹ್ಮಾಂಡಗೋಳರೂಪವಾದ ಭೂಮಿಯನ್ನು (ಸಕಲ ವಿಶ್ವವನ್ನೂ) । ವಿಶ್ವತಃ – ಸುತ್ತಲೂ । ವೃತ್ವಾ – ಸುತ್ತುವರಿದು । ದಶಾಂಗುಲಂ – ಅದಕ್ಕಿಂತಲೂ ಹೆಚ್ಚು ಅಂಗುಲದಷ್ಟು । ಅತ್ಯತಿಷ್ಠತ್ – ಅತಿಕ್ರಮಿಸಿಯೂ ಸ್ಥಾಪಿತನಾಗಿದ್ದಾನೆ.
ಆದಿಪುರುಷನು ಅಸಂಖ್ಯಾಕವಾದ ಶಿರಸ್ಸುಗಳುಳ್ಳವನು. ಅಸಂಖ್ಯಾಕವಾದ ಚಕ್ಷಸ್ಸುಗಳನ್ನೂ, ಪಾದಗಳನ್ನೂ ಹೊಂದಿದವನು. ಈ ವಿರಾಟ್ ಪುರುಷನು ಬ್ರಹ್ಮಾಂಡರೂಪವಾದ ವಿಶ್ವವನ್ನು ಸಕಲ ದಿಕ್ಕುಗಳಿಂದಲೂ ಸುತ್ತುವರಿದು ಅದಕ್ಕಿಂತಲೂ ಹತ್ತು ಅಂಗುಲದಷ್ಟು ಅತಿಕ್ರಮಿಸಿಯೂ ಸ್ಥಾಪಿತನಾಗಿದ್ದಾನೆ.
ಸಹಸ್ರಶೀರ್ಷಾ ಪುರುಷಃ ಇತ್ಯಾದಿ ವಿಶೇಷಣಗಳಿಂದ ಈ ಋಕ್ಕಿನಲ್ಲಿ ಪರಮ ಪುರುಷನನ್ನು ಪ್ರಶಂಸಿಸಿ ವರ್ಣಿಸಿದೆ. ಪುರುಷನು ಸಾವಿರ ತಲೆಗಳುಳ್ಳವನು, ಸಾವಿರ ಕಣ್ಣುಗಳುಳ್ಳವನು ಮತ್ತು ಸಾವಿರಪಾದಗಳುಳ್ಳವನು ಎಂದು ಸ್ತುತಿಸಿದೆ. ಇಲ್ಲಿ ಸಹಸ್ರ ಶಬ್ದಕ್ಕೆ ಕೇವಲ ಸಾವಿರವೆಂದೇ ಅರ್ಥವಲ್ಲ; ಸಹಸ್ರವೆಂದರೆ ಅನಂತಸಂಖ್ಯಾಕವೆಂದರ್ಥ. ಪರಮೇಶ್ವರನು ಸಕಲ ಪ್ರಾಣಿಗಳಲ್ಲಿಯೂ ಅಂತರ್ಯಾಮಿಯಾಗಿದ್ದಾನೆ. ಆದ್ದರಿಂದ ಅನಂತಸಂಖ್ಯೆಯುಳ್ಳ ಪ್ರಾಣಿಗಳ ಶಿರಸ್ಸೆಲ್ಲವೂ ಪರಮೇಶ್ವರನ ಶಿರಸ್ಸೇ ಆದವು. ಶಿರಸ್ಸು, ಅಕ್ಷಿ, ಪಾದ – ಇವು ಈಶ್ವರನ ಸಂಕಲ್ಪ, ದರ್ಶನ ಮತ್ತು ಚಲನರೂಪವಾದ ವ್ಯವಹಾರಗಳನ್ನು ನಿರ್ದೇಶಿಸುತ್ತವೆ. ಪೂಃ ಎಂಬ ಪದಕ್ಕೆ ದೇಹವೆಂದರ್ಥ. ಸಕಲ ದೇವ-ಮಾನವ-ತಿರ್ಯಗಾದಿ ಶರೀರಗಳಲ್ಲಿಯೂ ಸ್ಥಾಪಿತನಾಗಿದ್ದಾನೆಂದು ತಾತ್ಪರ್ಯ. ಈಶ್ವರನ ಪಾಣಿ-ಪಾದಗಳು ಸರ್ವತ್ರ ವಿಸ್ತರಿಸಿವೆ. ಅವನ ಚಕ್ಷುಸ್ಸುಗಳೂ, ಶಿರಸ್ಸೂ ಮತ್ತು ಮುಖಗಳೂ ಎಲ್ಲೆಲ್ಲೂ ವ್ಯಾಪಿಸಿವೆ. ಅವನ ಶ್ರೋತ್ರವೂ ಸರ್ವವ್ಯಾಪಿಯಾಗಿದೆ. ಈ ಈಶ್ವರತ್ವವು ಜಗತ್ತಿನಲ್ಲಿ ಸಕಲವನ್ನೂ ವ್ಯಾಪಿಸಿ ಸ್ಥಿತವಾಗಿದೆ.
ಇಂತಹ ಪರಮ ಪುರುಷನು ಸಕಲ ಜಗತ್ತೆಲ್ಲವನ್ನೂ ವ್ಯಾಪಿಸಿರುವುದಲ್ಲದೇ ಅದನ್ನೂ ಮೀರಿದ್ದಾನೆ. ಅತ್ಯತಿಷ್ಠದ್ದಶಾಂಗುಲಂ ಎಂಬಲ್ಲಿ ದಶಾಂಗುಲ ಮತ್ತು ಅತ್ಯತಿಷ್ಠತ್ ಈ ಪದಗಳ ತಾತ್ಪರ್ಯವನ್ನು ಗಮನಿಸಬೇಕು. ದಶಾಂಗುಲವೆನ್ನುವುದು ಕೇವಲ ಉಪಲಕ್ಷಣ ಬ್ರಹ್ಮಾಂಡಕ್ಕಿಂತಲೂ ಮೀರಿ ಸರ್ವತ್ರ ವ್ಯಾಪಿಸಿ ಸ್ಥಿತನಾಗಿದ್ದಾನೆಂದು ತಾತ್ಪರ್ಯ. ಇದೊಂದು ಕೇವಲ ಔಪಚಾರಿಕ ಪದವಾಗಿದ್ದು, ಅಳತೆ ಮಾಡಲು ಸಾಧ್ಯವಲ್ಲವಾದ್ದರಿಂದ ಈ ಪದಪ್ರಯೋಗವು ಕೇವಲ ಅನಂತ್ಯ ಸೂಚಕವಾದದ್ದು. ಎಲ್ಲಕ್ಕಿಂತಲೂ ಮೀರಿ ಜಗದ್ವ್ಯತಿರಿಕ್ತನಾಗಿ ಸ್ಥಾಪಿತನಾಗಿದ್ದಾನೆಂದು ತಾತ್ಪರ್ಯ. ಅತ್ಯತಿಷ್ಠತ್ ಶಬ್ದಕ್ಕೆ ಅತಿಕ್ರಮಿಸಿ ಸ್ಥಾಪಿತನಾಗುವುದು ಎನ್ನುವುದು ಒಂದರ್ಥವಾದರೆ ಸರ್ವಕ್ಕಿಂತಲೂ ಅಧಿಕನಾಗಿರುವುದರಿಂದ ಎಲ್ಲದರ ಮೇಲೂ ಪ್ರಭುತ್ವವನ್ನು ತೋರಿಸುವುದು ಎನ್ನುವುದು ಇನ್ನೊಂದು ಅರ್ಥ.
ಪುರುಷ ಏವೇದಂ ಸರ್ವಂ ಯದ್ಭೂತಂ ಯಚ್ಚ ಭವ್ಯಮ್ । ಉತಾಮೃತತ್ವಸ್ಯೇಶಾನೋ ಯದನ್ನೇನಾತಿರೋಹತಿ ।। 2 ।।
ಇದಂ ಸರ್ವಂ – ನಮಗೆ ಗೋಚರವಾಗುವ ಈ ಸಕಲ ಜಗತ್ತೂ (ವರ್ತಮಾನಕಾಲದ ಜಗತ್ತೆಲ್ಲ) । ಪುರುಷ ಏವ – ಆ ಆದಿಪುರುಷನೇ (ಅವನ ಅಂಶವೇ ಆಗಿದೆ) । ಯತ್ ಭೂತಂ – ಯಾವುದು ಹಿಂದೆಲ್ಲ ಇದ್ದಿತೋ । ಯಚ್ಚ ಭವ್ಯಂ – ಮುಂದೆ ಯಾವುದು ಸಂಭವಿಸುವುದೋ (ಆ । ಸಕಲ ಜಗತ್ತೂ ಈಶ್ವರಾಂಶವಲ್ಲದೇ ಬೇರೆ ಅಲ್ಲ) । ಉತ - ಮತ್ತು । ಅಮೃತತ್ವಸ್ಯ – ಮರಣರಾಹಿತ್ಯಕ್ಕೆ । ಈಶಾನಃ – ಇವನೇ ಪ್ರಭುವು । ಯತ್ – ಯಾವ ನಿಮಿತ್ತವಾಗಿ । ಅನ್ನೇನ – ಪ್ರಾಣಿಗಳ ಭೋಗಸಾಧನವಾದ ಅನ್ನದಿಂದ । ಅತಿರೋಹತಿ – ಅವನು ಬೆಳೆಯುವನೋ (ಆದ್ದರಿಂದ ಅವನು ಈಗ ಕಾಣಿಸಿಕೊಳ್ಳುವುದಕ್ಕಿಂತಲೂ ಅಧಿಕ ಮಾಹಾತ್ಮ್ಯವುಳ್ಳವನು) ।
ನಮಗೆ ಗೋಚರವಾಗುವ ಸಕಲ ಜಗತ್ತೂ, ಅಂದರೆ ವರ್ತಮಾನಕಾಲದ ಸಕಲ ಜಗತ್ತೂ, ಆ ಆದಿಪುರುಷನ ಅಂಶವೇ ಆಗಿದೆ. ಹಿಂದೆ ಇದ್ದ ಜಗತ್ತೂ ಅವನೇ, ಮುಂದೆ ಸಂಭವಿಸುವ ಜಗತ್ತೂ ಅವನೇ. ಅಂದರೆ ಈಶ್ವರಾಂಶವಲ್ಲದೇ ಬೇರೆಯಲ್ಲ. ಅವನು ಅಮೃತತ್ವಕ್ಕೆ ಒಡೆಯನು. ಪ್ರಾಣಿಗಳಿಗೆ ಭೋಗಸಾಧನವಾದ ಅನ್ನದಿಂದ ಅವನು ಬೆಳೆಯುವಂತೆ ತೋರುತ್ತಾನೆ. ಆದರೆ ಅವನ ಸ್ವರೂಪವು ಗೋಚರಾತೀತವಾದುದು.
ಜಗತ್ತೆಲ್ಲವೂ ಈಶ್ವರಮಯ. ಈಶ್ವರನೇ ಜಗತ್ತಿಗೆಲ್ಲ ಪ್ರಭು. ಭೂತ, ವರ್ತಮಾನ, ಮತ್ತು ಭವಿಷ್ಯತ್ತು ಇತ್ಯಾದಿ ಕಾಲವಿಶೇಷಗಳೆಲ್ಲವೂ ಇವನ ಪ್ರಭಾವವೇ. ಹೀಗೆ ಪರಮಪುರುಷನ ಮಹಿಮೆಯನ್ನು ಈ ಋಕ್ಕಿನಲ್ಲಿ ಪ್ರಶಂಸಿಸಿದೆ. ಸಕಲ ಜಗತ್ತೂ ಪುರುಷನ ಅವಯವ ವಿಶೇಷವೇ ಆಗಿದೆ. ಪುರುಷನಲ್ಲದೇ ಎರಡನೆಯ ಸ್ವತಂತ್ರವಾದ ತತ್ತ್ವವಿಲ್ಲ ಎಂಬ ವಿಷಯವನ್ನು ಪುರುಷ ಏವೇದಗಂ ಸರ್ವಂ ಎಂಬ ವಾಕ್ಯವು ತಿಳಿಸುತ್ತದೆ. ಯದ್ಭೂತಂ ಯಚ್ಚ ಭವ್ಯಂ – ಇದಂ ಸರ್ವಂ – ಯಾವುದು ವರ್ತಮಾನಕಾಲದಲ್ಲಿರುವುದೋ, ಯಾವುದು ಭೂತಕಾಲದಲ್ಲಿತ್ತೋ, ಯಾವುದು ಮುಂದೆ ಸಂಭವಿಸುವುದೋ ಅದೆಲ್ಲವೂ ಪುರುಷನೇ. ಜಗತ್ತೆಲ್ಲವೂ ಕಾಲಾಧೀನವಾದರೆ ಜಗನ್ನಿಯಾಮಕವಾದ ಕಾಲವು ಈಶ್ವರಾಧೀನವಾಗಿರುತ್ತದೆ.
ಹೀಗೆ ಸಕಲ ಜಗತ್ತಿಗೂ ನಿಯಾಮಕವಾದ ಕಾಲಕ್ಕೂ ಅತೀತನಾಗಿ ಅದಕ್ಕೂ ನಿಯಮಕನಾಗಿರುವ ಈಶ್ವರನು ಅಮೃತತ್ವಸ್ಯ ಈಶಾನಃ ಎಂದು ಪ್ರಶಂಸಿತನಾಗುತ್ತಾನೆ. ದೇವತೆಗಳೆಲ್ಲರೂ ಅಮೃತರಾದುದರಿಂದ ಆ ದೇವತೆಗಳಿಗೆ ಒಡೆಯ ಎಂದಾಗಬಹುದು ಅಥವಾ ಅನಾದ್ಯನಂತನಾದುದರಿಂದ ಜನನ-ಮರಣಾತೀತನು. ಆದ್ದರಿಂದಲೇ ಅಮೃತತ್ವಸ್ಯ ಈಶಾನಃ ಎಂಬ ವರ್ಣನೆಯಿದೆ.
ಯದನ್ನೇನಾತಿರೋಹತಿ – ಯಾವ ಕಾರಣದಿಂದ ಅಂದರೆ ಯಾವ ಮಾಹಾತ್ಮ್ಯದಿಂದ ಈಶ್ವರನು ಸಕಲ ಜಗತ್ತಿಗೂ ಪ್ರಭುವಾಗಿರುವನೋ ಅದೇ ಕಾರಣದಿಂದ ತನ್ನಿಂದಲೇ ಸೃಷ್ಟವಾದ ಜಗತ್ತಿನ ರಕ್ಷಣೆಗಾಗಿ ಜಗತ್ತಿಗೆ ಭೋಗ್ಯವಾದ ಅನ್ನ ನಿಮಿತ್ತವಾಗಿ ತನ್ನ ಕಾರಣಾವಸ್ಥೆಯನ್ನು ಮೀರಿ ಕಾರ್ಯಾವಸ್ಥೆಯಲ್ಲಿ ಪರಿಣಾಮಹೊಂದಿ ಜಗದ್ರೂಪದಲ್ಲಿ ಪ್ರಕಾಶಿಸುತ್ತಾನೆ. ಕಾರಣಾವಸ್ಥೆಯು ಇಂದ್ರಿಯಕ್ಕೆ ಗೋಚರವಾಗತಕ್ಕದ್ದಲ್ಲ. ಕಾರ್ಯಾವಸ್ಥೆಯು ಪರಿದೃಶ್ಯಮಾನವಾದುದು ಅಥವಾ ಇಂದ್ರಿಯ ಗೋಚರವಾದುದು. ಇಂದ್ರಿಯ ಪ್ರತ್ಯಕ್ಷಕ್ಕೆ ಗೋಚರವಾಗತಕ್ಕದ್ದೂ ಮತ್ತು ವ್ಯಾವಹಾರಿಕವಾದುದೂ ಆದ ಸ್ಥೂಲ ಪ್ರಪಂಚದ ರೂಪದಿಂದ ಈಶ್ವರನು ಅನ್ನನಿಮಿತ್ತವಾಗಿ ವಿಸ್ತೃತನಾಗಿ ವ್ಯಾಪಿಸುತ್ತಾನೆ ಎಂದರ್ಥ. ಪ್ರಾಣಿಗಳ ಕರ್ಮಭೋಗಕ್ಕಾಗಿ ಜಗದವಸ್ಥೆಯು ಈಶ್ವರನಿಂದ ಸ್ವೀಕೃತವಾಗಿದೆ. ಈ ಅವಸ್ಥೆಯು ಕೇವಲ ನಿಮಿತ್ತ ಮಾತ್ರವೇ ಹೊರತು ವಸ್ತುತಃ ಕಾರಣಾತ್ಮನಾದ ಈಶ್ವರನು ಮಾತ್ರ ಸತ್ಯನು. ಸಕಲ ತತ್ತ್ವವನ್ನೂ ಅನ್ನರೂಪವೆಂದು ವರ್ಣಿಸಿ ಕೊನೆಯಲ್ಲಿ ಅನ್ನವೇ ಬ್ರಹ್ಮನೆಂದು ಹೇಳಿದೆ. ಪರಮೇಶ್ವರನು ತನ್ನ ಸ್ವಕೀಯಾವಸ್ಥೆಯಾದ ಅವ್ಯಕ್ತರೂಪವನ್ನು ತೊರೆದು ಅಥವಾ ಅತಿಕ್ರಮಿಸಿ ಸೃಷ್ಟಿಕಾಲದಲ್ಲಿ ಅನ್ನವೇ ಭೋಗ್ಯವಸ್ತುವಾಗುಳ್ಳ ಪ್ರಾಣಿಗಳ ರೂಪವನ್ನು ಅಥವಾ ಪ್ರಾಣಿಗಳಿಂದ ತುಂಬಿರುವ ಜಗದಾದಿ ರೂಪಗಳನ್ನು ಪಡೆಉಇತ್ತಾನೆ. ಅಂದರೆ ಕಾರಣಾವಸ್ಥೆಯನ್ನು ಅತಿಕ್ರಮಿಸಿ (ತ್ಯಜಿಸಿ) ಕಾರ್ಯಾವಸ್ಥೆಯನ್ನು ಅಂದರೆ ಜಗದಾದಿಗಳ ರೂಪವನ್ನು ಪಡೆಯುತ್ತಾನೆ.
ಏತಾವಾನಸ್ಯ ಮಹಿಮಾತೋ ಜ್ಯಾಯಾಂಶ್ಚ ಪೂರುಷಃ । ಪಾದೋಽಸ್ಯ ವಿಶ್ವಾ ಭೂತಾನಿ ತ್ರಿಪಾದಸ್ಯಾಮೃತಂ ದಿವಿ ।। 3 ।।
ಏತಾವಾನ್ – ಭೂತ, ವರ್ತಮಾನ ಮತ್ತು ಭವಿಷ್ಯದ್ರೂಪಗಳಾದ ಸಕಲ ಜಗತ್ತೂ । ಅಸ್ಯ – ಈ ಆದಿಪುರುಷನ । ಮಹಿಮಾ – ಸಾಮರ್ಥ್ಯವಿಶೇಷವೇ ಆಗಿದೆ । ಚ - ಅಲ್ಲದೇ । ಪುರುಷಃ – ಆದಿಪುರುಷನು । ಅತಃ- ಈ ಸಕಲ ಜಗತ್ತಿಗಿಂತಲೂ । ಜ್ಯಾಯಾನ್ – ಅಧಿಕನು । ವಿಶ್ವಾ ಭೂತಾನಿ – ಸಕಲ ಭೂತಗಳೂ । ಅಸ್ಯ – ಈ ಪುರುಷನ । ಪಾದಃ – ಕಾಲುಭಾಗ ಮಾತ್ರ । ಅಸ್ಯ – ಈ ಮಹಾಪುರುಷನ । ತ್ರಿಪಾತ್ – ಮುಕ್ಕಾಲು ಪಾಲು । ದಿವಿ – ಗೋಚರಾತೀತವಾದ ದ್ಯುಲೋಕದಲ್ಲಿ (ಸ್ವಪ್ರಕಾಸ ರೂಪದಲ್ಲಿ) । ಅಮೃತಂ – ವಿಕೃತಿಯನ್ನು ಹೊಂದದೇ ಇರುತ್ತದೆ (ಯಾವ ಬದಲಾವಣೆಯನ್ನೂ ಹೊಂದದೇ ನಿಜಸ್ಥಿತಿಯಲ್ಲಿರುತ್ತದೆ) ।
ಭೂತ, ವರ್ತಮಾನ ಮತ್ತು ಭವಿಷ್ಯದ್ರೂಪಗಳಾದ ಸಕಲ ಜಗತ್ತೂ ಈ ಆದಿಪುರುಷನ ಸಾಮರ್ಥ್ಯವಿಶೇಷವೇ ಆಗಿದೆ. ಅಲ್ಲದೇ, ಆದಿಪುರುಷನು ಸಕಲ ಜಗತ್ತಿಗಿಂತಲೂ ಅಧಿಕನು. ಸಕಲ ಭೂತಗಳೂ ಈ ಈಶ್ವರನ ಕಾಲುಭಾಗ ಮಾತ್ರ. ಈ ಮಹಾಪುರುಷನ ಮುಕ್ಕಾಲುಪಾಲು ಗೋಚರಾತೀತವಾದುದೂ ಸ್ವಪ್ರಕಾಶರೂಪವಾದುದೂ ಆದ ಲೋಕದಲ್ಲಿ ಯಾವ ಬದಲಾವಣೆಯನ್ನೂ ಹೊಂದದೇ ನಿಜಸ್ಥಿತಿಯಲ್ಲಿ ಇರುತ್ತದೆ.
ಸೃಷ್ಟವಾದ ಜಗತ್ತಿಗಿಂತಲೂ ಮೀರಿರುವ ಪರಮಪುರುಷನ ಮಹತ್ಸ್ವರೂಪವನ್ನು ಈ ಋಕ್ಕು ವರ್ಣಿಸುತ್ತದೆ. ಜಗತ್ತಿನ ಪ್ರಮಾಣವೇನು ಮತ್ತು ಜಗತ್ತನ್ನು ಮೀರಿ ನಿಂತಿರುವ ಪರಮ ಪುರುಷನ ಪ್ರಮಾಣವೇನು, ಹಾಗೂ ಇವುಗಳ ಅಂತರವೇನು ಎನ್ನುವುದನ್ನು ಇಲ್ಲಿ ಸೂಚಿಸಿದೆ.
ಎತಾವಾನ್ ಅಸ್ಯ ಮಹಿಮಾ – ಭೂತ, ಭವಿಷ್ಯತ್ ಮತ್ತು ವರ್ತಮಾನ ಕಾಲಗಳಿಗೆ ಸಂಬಂಧಿಸಿದ ಸಕಲ ಜಗತ್ತೂ ಸಕಲ ಜಗದ್ವ್ಯವಹಾರಗಳೂ ಈ ಪರಮಪುರುಷನ ಮಹಿಮೆಯೇ ಆಗಿದೆ. ಆದರೆ ಅವೆಲ್ಲವೂ ಅವನ ವಸ್ತುಸ್ಥಿತಿಯಲ್ಲ. ಪಾದೋಽಸ್ಯ ವಿಶ್ವಾ ಭೂತಾನಿ ಎಂದರೆ ಸಕಲ ಭೂತಗಳೂ ಈ ಪರಮಪುರುಷನ ನಾಲ್ಕನೆಯ ಒಂದಂಶ ಮಾತ್ರ. ಜಗತ್ತು ಈಶ್ವರನ ಪೂರ್ಣಸ್ವರೂಪವನ್ನು ತೋರಿಸದೆ ಇದ್ದರೂ ಅವನ ಅಂಶವನ್ನಾದರೂ ಪ್ರಕಟಿಸುತ್ತದೆ. ಆದ್ದರಿಂದ ಪ್ರಕಾಶಿತವಾಗಿರುವ ಈ ಈಶ್ವರಾಂಶವನ್ನು ಅಸತ್ಯವೆಂದು ಹೇಳಲಿಕ್ಕಾಗುವುದಿಲ್ಲ. ಉತ್ಪನ್ನವಾದ ಯಾವ ಯಾವ ವಸ್ತುಗಳಿವೆಯೋ ಅವೆಲ್ಲಕ್ಕಿಂತಲೂ ಈಶ್ವರನು ಅತ್ಯಧಿಕನು. ಅತೋ ಜ್ಯಾಯಾಂಶ್ಚ ಪೂರುಷಃ ಎಂಬ ವಾಕ್ಯವು ಒಂದರ ಸತ್ಯತ್ವವನ್ನೂ ಇನ್ನೊಂದರ ಅಸತ್ಯತ್ವವನ್ನೂ ಸೂಚಿಸುವುದಿಲ್ಲ. ಸತ್ಯಾತ್ಮಕವಾದ ಒಂದೇ ವಸ್ತುವಿನ ಅಂಶವಾದ ಜಗತ್ತು ವ್ಯಾಪ್ಯ ಮತ್ತು ಈಶ್ವರನು ವ್ಯಾಪಕ. ಪಾದೋಽಸ್ಯ ವಿಶ್ವಾ ಭೂತಾನಿ – ಇಂತಹ ಪರಮವಸ್ತುವಿನಿಂದ ಸೃಷ್ಟವಾದ ಜಗತ್ತೆಲ್ಲವೂ ಇದರ ಪಾದಮಾತ್ರ ಅಂದರೆ ಕಾಲುಭಾಗಮಾತ್ರ. ಇಲ್ಲಿ ಪಾದ, ತ್ರಿಪಾತ್ ಎಂದು ನಿಷ್ಕೃಷ್ಟವಾಗಿ ಅವ್ಯಾಕೃತಬ್ರಹ್ಮನನ್ನು ಅಳತೆ ಮಾಡಲು ಸಾಧ್ಯವಿಲ್ಲ. ಆದರೂ ಸಕಲ ಜಗತ್ತೂ ಬ್ರಹ್ಮನಿಗಿಂತಲೂ ಬಹಳ ಮಟ್ಟಿಗೆ ಅಲ್ಪವಾದುದರಿಂದ ಸ್ಥೂಲವಾಗಿ ನಾಲ್ಕನೇ ಒಂದು ಭಾಗವೆಂದು ವರ್ಣಿಸಿದೆ. ತ್ರಿಪಾದಸ್ಯಾಮೃತಂ ದಿವಿ – ವಿನಾಶಾತ್ಮಕವಾದ ಜಗತ್ತಿಗಿಂತಲೂ ಭಿನ್ನವಾದುದು ಪುರುಷ, ಸಾಂತವಾದ ಜಗತ್ತಿಗಿಂತಲೂ ಬೇರೆಯಾದ ಅನಂತವಾದುದು ಪುರುಷ. ಪರಪ್ರಕಾಶಿತವಾದ ಜಗತ್ತಿಗಿಂತಲೂ ಬೇರೆಯಾದುದು ಪುರುಷ ಮತ್ತು ಇದೇ ಪುರುಷನು ದೇಶ-ಕಾಲಗಳಿಗಿಂತಲೂ ಅತೀತನು. ಇಂದ್ರಿಯ ಪ್ರತ್ಯಕ್ಷಕ್ಕೆ ಗೋಚರನಲ್ಲದವನು. ಇಲ್ಲಿ ದಿವಿ ಎಂದರೆ ಕೇವಲ ಅಂತರಿಕ್ಷ ಅಥವಾ ಸ್ವರ್ಗವೆಂದಲ್ಲ. ನಮಗೆ ಅಂತರಿಕ್ಷ ಅಥವಾ ಸ್ವರ್ಗವು ಹೇಗೆ ಪ್ರತ್ಯಕ್ಷ ಗೋಚರವಲ್ಲವೋ ಹಾಗೆ ಪ್ರತ್ಯಕ್ಷಗೋಚರವಾಗದಿರುವ ಸ್ಥಾನ ಎಂದರ್ಥ. ಪರಮಾತ್ಮನ ಜಗದಾದಿ ಪರಿವರ್ತನವಲ್ಲದ ಅವ್ಯಕ್ತಸ್ವರೂಪದ ಉಳಿದ ಮೂರುಭಾಗವು ಪ್ರತ್ಯಕ್ಷಗೋಚರವಲ್ಲದ ಅಮೃತವೆಂದು (ನಾಶರಹಿತವೆಂದು) ಹೇಳಲ್ಪಡುವ ಅವ್ಯಕ್ತದ ಸ್ವರೂಪವಾಗಿಯೇ ಉಳಿದಿದೆ. ಅಂದರೆ ಅದು ಯಾವ ವಿಕಾರವನ್ನೂ ಹೊಂದದೇ ಅದೇ ಸ್ಥಿತಿಯಲ್ಲಿ ಉಳಿದಿದೆ. ಅದಕ್ಕೆ ನಾಶವಿಲ್ಲ. ಆದ್ದರಿಂದಲೇ ಅದು ಅಮೃತ, ಮುಕ್ತಿ, ಪರಮಪದ ಮೊದಲಾದ ಹೆಸರುಗಳಿಂದ ಪ್ರಸಿದ್ಧವಾಗಿದೆ. ಸಂಸಾರದಿಂದ ಮುಕ್ತನಾದ ಆತ್ಮನು (ಪುರುಷನು) ಬ್ರಹ್ಮದಲ್ಲಿ ಐಕ್ಯವಾಗಿ ಈ ಅವ್ಯಕ್ತರೂಪದಲ್ಲಿ ಲೀನನಾದರೆ ಅವನಿಗೆ ಪುನರಾವೃತ್ತಿ ಅಂದರೆ ಪುನರ್ಜನ್ಮವಿಲ್ಲ ಎಂದು ಉಪನಿಷತ್ತುಗಳು ಸಾರುತ್ತವೆ.
ತ್ರಿಪಾದೂರ್ಧ್ವ ಉದೈತ್ಪುರುಷಃ ಪಾದೋಽಸ್ಯೇಹಾಭವತ್ಪುನಃ । ತತೋ ವಿಷ್ವ್ಯಙ್ವ್ಯಕ್ರಾಮತ್ಸಾಶನಾನಶನೇ ಅಭಿ ।। 4 ।।
ತ್ರಿಪಾತ್ ಪುರುಷಃ – ಇಂದ್ರಿಯ ಪ್ರತ್ಯಕ್ಷಕ್ಕೆ ಗೋಚರವಲ್ಲದ ತನ್ನ ಮುಕ್ಕಾಲು ಭಾಗವನ್ನು ಸ್ವಪ್ರಕಾಶವಾದ ಲೋಕದಲ್ಲಿ ಸ್ಥಾಪಿಸಿರುವ ಪುರುಷನು । ಊರ್ಧ್ವಂ – ಉತ್ಕೃಷ್ಟವಾದ ದಿವ್ಯಲೋಕದಲ್ಲಿ । ಉದೈತ್ – ಸಂಸಾರಾತೀತನಾಗಿ ಸ್ಥಾಪಿತನಾಗಿದ್ದಾನೆ । ಅಸ್ಯ – ಈ ಆದಿಪುರುಷನ । ಪಾದಃ – ಉಳಿದ ನಾಲ್ಕನೇ ಒಂದು ಭಾಗವು । ಇಹ – ಸಂಸಾರರೂಪದಲ್ಲಿ । ಪುನಃ ಅಭವತ್ – ಪದೇ ಪದೇ ಆವಿರ್ಭೂತವಾಗುತ್ತದೆ । ತತಃ – ವ್ಯಕ್ತರೂಪವನ್ನು ಹೊಂದಿದನಂತರ । ಸಾಶನಾನಶನೇ ಅಭಿ – ಹಸಿವು-ದಾಹಗಳುಳ್ಳ ಪ್ರಾಣಿರೂಪದಲ್ಲಿಯೂ, ಇವಿಲ್ಲದ ಅಚೇತನ ರೂಪದಲ್ಲಿಯೂ । ವಿಷ್ವಙ್ – ನಾನಾ ರೂಪಗಳಲ್ಲಿ । ವ್ಯಕ್ರಾಮತ್ – ಜಗತ್ತನ್ನು ವ್ಯಾಪಿಸಿದನು ।
ಇಂದ್ರಿಯ ಪ್ರತ್ಯಕ್ಷಕ್ಕೆ ಗೋಚರವಲ್ಲದ ಮುಕ್ಕಾಲುಭಾಗವನ್ನು ಸ್ವಪ್ರಕಾಶವಾದ ಲೋಕದಲ್ಲಿ ಸ್ಥಾಪಿಸಿರುವ ಪುರುಷನು ಉತ್ಕೃಷ್ಟವಾದ ದಿವ್ಯ ಲೋಕದಲ್ಲಿ ಸಂಸಾರಾತೀತನಾಗಿ ಸ್ಥಾಪಿತನಾಗಿದ್ದಾನೆ. ಈ ಆದಿಪುರುಷನ ನಾಲ್ಕನೇ ಒಂದು ಭಾಗ ಮಾತ್ರ ಸಂಸಾರರೂಪದಲ್ಲಿ ಪದೇ ಪದೇ ಆವಿರ್ಭೂತವಾಗುತ್ತಿರುತ್ತದೆ. ಈ ಪರಮ ಪುರುಷನು ವ್ಯಕ್ತಿರೂಪವನ್ನು ಹೊಂದಿದ ನಂತರ ಹಸಿವು-ದಾಹಗಳಿರುವ ಪ್ರಾಣಿರೂಪದಲ್ಲಿಯೂ ಇವಿಲ್ಲದ ಅಚೇತನ ರೂಪದಲ್ಲಿಯೂ ನಾನಾರೂಪಗಳಲ್ಲಿ ಜಗತ್ತನ್ನು ವ್ಯಾಪಿಸುತ್ತಾನೆ.
ತ್ರಿಪಾತ್ಸಂಜ್ಞಕನಾದ ಪುರುಷನು ಅಧೋಲೋಕದಲ್ಲಿದ್ದು (ಬ್ರಹ್ಮನ ಅಪರರೂಪವಾದ ಜಗತ್ತಿನಲ್ಲಿದ್ದು) ಜಗತ್ಸಂಸಾರದ ದೋಷಗಳಿಂದ ಲಿಪ್ತನಾಗದೇ ಊರ್ಧ್ವಲೋಕಕ್ಕೆ ಸೇರಿದವನಾಗಿ ಸ್ವಪ್ರಕಾಶಕವಾದ ಪ್ರಭೆಯಿಂದ ಕೂಡಿ ವಿರಾಜಿಸುತ್ತಾನೆ. ಅಜ್ಞಾನ, ಅಹಂಕಾರ ಇತ್ಯಾದಿ ಸಕಲ ದೋಷಗಳಿಂದ ಬಾಹ್ಯನೂ, ತ್ರಿಗುಣಾತೀತನೂ ಆಗಿ ಅತ್ಯುತ್ಕೃಷ್ಟವಾದ ಸ್ಥಿತಿಯಲ್ಲಿದ್ದಾನೆ. ತ್ರಿಪಾತ್ ಎಂದರೆ ಮೂರು ಪಾದಗಳೆಂದರ್ಥ. ಈ ಮೂರುಪಾದಗಳು ಜನ, ಮಹ ಮತ್ತು ಸತ್ಯ ಲೋಕಗಳು. ಈ ಮೂರು ಪಾದಗಳು ಅಂದರೆ ಲೋಕಗಳಿಗಿಂತಲೂ ಊರ್ಧ್ವಸ್ಥಾನದಲ್ಲಿ ಸ್ಥಾಪಿತನಾಗಿದ್ದಾನೆ.
ಈ ಋಕ್ಕು ಸೃಷ್ಟಿಕ್ರಮವನ್ನು ವಿವರಿಸುತ್ತದೆ. ಸೃಷ್ಟಿಗೆ ಪೂರ್ವದಲ್ಲಿದ್ದ ಪರಮಾತ್ಮನ ಅವ್ಯಕ್ತಾವಸ್ಥೆಯೂ ಅನಂತರ ಸೃಷ್ಟಿಕಾಲದಲ್ಲಿ ಅದು ಹೇಗೆ ವ್ಯಕ್ತಾವಸ್ಥೆಯನ್ನು ಹೊಂದಿ ಚರಚರಾತ್ಮಕವಾದ ಜಗದಾದಿ ರೂಪಗಳನ್ನು ಪಡೆಯಿತು ಎನ್ನುವುದರ ವರ್ಣನೆಯು ಈ ಋಕ್ಕಿನಲ್ಲಿದೆ. ತತೋ ವಿಷ್ವಙ್ ವ್ಯಕ್ರಾಮತ್ ಸಾಶನಾನಶನೇ ಅಭಿ ಎಂಬ ವಾಕ್ಯದಲ್ಲಿ ಸೃಷ್ಟಿಯ ಕ್ರಮವನ್ನು ಮುಂದುವರೆಸಿದೆ. ಸೃಷ್ಟಿಯಾದವುಗಳಲ್ಲಿ ಎರಡು ವಿಧ. ಚೇತನಯುಕ್ತವಾದವೂ ಆಹಾರಾದಿಗಳನ್ನು ಸೇವಿಸಿ ವೃದ್ಧಿನಾಶಕಗಳನ್ನು ಹೊಂದುವವೂ ಆದ ಮನುಷ್ಯಾದಿ ಪ್ರಾಣಿಗಳು. ಇವುಗಳನ್ನು ಚರವೆಂದು ಹೇಳುತ್ತಾರೆ. ಏಕೆಂದರೆ ಇವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸಬಲ್ಲವು. ಸಂಚರಿಸುವ ಶಕ್ತಿಯಿಲ್ಲದೇ ಆಹಾರಾದಿಗಳನ್ನು ಸೇವಿಸದೇ ವಿಕಾರಾದಿಗಳನ್ನು ಹೊಂದದೇ ಇರುವ ಪರ್ವತಾದಿಗಳು ಅಚರಗಳು. ಈ ಋಕ್ಕಿನಲ್ಲಿ ಪ್ರಾಣಿವರ್ಗವನ್ನು ಆಹಾರವನ್ನು ಭಕ್ಷಿಸುವ ಸಾಶನ ಎಂದೂ ಪರ್ವತಾದಿಗಳನ್ನು ಆಹಾರ ಭಕ್ಷಿಸದ ಅನಶನ ಎಂದೂ ಕರೆಯಲಾಗಿದೆ.
ಒಂದು ವಸ್ತುವನ್ನು ನಿರ್ಮಿಸಬೇಕಾದರೆ ಮೂರು ವಸ್ತುಗಳಿರಬೇಕು: ಮೂಲವಸ್ತು (raw material), ನಿರ್ಮಾಣ ಮಾಡುವವನು ಮತ್ತು ಯಂತ್ರ ಮೊದಲಾದ ಸಾಧನಸಾಮಗ್ರಿಗಳು. ಒಂದು ಮಡಕೆಯನ್ನು ಮಾಡಬೇಕಾದರೆ ಅದಕ್ಕೆ ಮೂಲವಸ್ತುವೇ ಮಣ್ಣು. ನಿರ್ಮಾಣಮಾಡುವವನು ಕುಂಬಾರನು. ಚಕ್ರ-ಕೋಲು, ನೀರು ಮೊದಲಾದವುಗಳು ಸಾಧನಸಾಮಗ್ರಿಗಳು. ಹಾಗೆಯೇ ಒಂದು ಬಟ್ಟೆಯನ್ನು ನಿರ್ಮಿಸಲು ಹತ್ತಿಯು ಮೂಲವಸ್ತುವು. ನಿರ್ಮಾಪಕನು ನೇಯುವವನು – ನೇಕಾರ. ಚರಕ, ಮಗ್ಗ ಮೊದಲಾದವುಗಳು ಸಾಮಾಗ್ರಿಗಳು. ಆದರೆ ಪರಮಾತ್ಮನು ಜಗತ್ಸೃಷ್ಟಿಮಾಡುವಾಗ ಈ ಮೂರು ವಿಧವಾದ ಉಪಕರಣಗಳೂ ಇರಲಿಲ್ಲ. ನಿರ್ಮಾತೃವಾದ ಪರಮಾತ್ಮನೊಬ್ಬನೇ ಇದ್ದು ಮೂಲವಸ್ತುವಾಗಲೀ, ಸಾಧನ ಸಾಮಗ್ರಿಗಳಾಗಲೀ ಯಾವುದೇ ಇಲ್ಲದೇ ತನ್ನ ಸಂಕಲ್ಪಮಾತ್ರದಿಂದಲೇ ಎಲ್ಲವನ್ನೂ ಸೃಷ್ಟಿಮಾಡಿದನು. ಅವ್ಯಕ್ತಾವಸ್ಥೆಯಲ್ಲಿದ್ದ ಪರಮಾತ್ಮನೇ ಜಗದಾದಿ ರೂಪವಾಗಿ ಪರಿವರ್ತಿತನಾದ್ದರಿಂದ ಮೂಲವಸ್ತುಗಳ ಮತ್ತು ಸಾಧನ ಸಾಮಗ್ರಿಗಳ ಅವಶ್ಯಕತೆಗಳು ಇರಲಿಲ್ಲ. ಮನುಷ್ಯಾದಿಗಳು ಒಂದು ವಸ್ತುವನ್ನು ನಿರ್ಮಿಸಬೇಕಾದರೆ ಅವರಿಗೆ ಮೂಲವಸ್ತು ಮತ್ತು ಸಾಧನ ಸಾಮಗ್ರಿಗಳು ಬೇಕೇಬೇಕು. ಏಕೆಂದರೆ ಮನುಷ್ಯರೇ ಬೇರೆ, ಮೂಲವಸ್ತುವೇ ಬೇರೆ. ಹೀಗೆ ಎರಡು ವಿಧದ ವಸ್ತುಗಳಿದ್ದು ಮೂರನೆಯ ಸಾಧನವೆಂಬ ವಸ್ತುವಿನ ಅವಶ್ಯಕತೆಯೂ ಇದ್ದೇ ಇರುತ್ತದೆ. ಪರಮಾತ್ಮನ ವಿಷಯದಲ್ಲಿ ಮೂಲವಸ್ತುವೂ, ನಿರ್ಮಾಪಕನೂ, ಸಾಧನಸಾಮಗ್ರಿಗಳೂ ಎಲ್ಲವೂ ಆ ಪರಮಾತ್ಮನೇ ಆಗಿರುವುದರಿಂದ ಸೃಷ್ಟಿಕಾರ್ಯದಲ್ಲಿ ಅವನಿಗೆ ಯಾವ ವಿಧದ ಸಹಾಯವೂ ಅವಶ್ಯಕವಿಲ್ಲ. ಅವ್ಯಕ್ತರೂಪದಲ್ಲಿರುವ ಅವನೇ ವ್ಯಕ್ತಸ್ವರೂಪವಾದ ಜಗದಾದಿಗಳಾಗಿ ಪರಿವರ್ತಿತನಾಗುವುದು. ಈ ಪರಿವರ್ತನಕ್ಕೇ ಸೃಷ್ಟಿಯೆಂದು ಹೆಸರು. ಮುಂದಿನ ಋಕ್ಕಿನಲ್ಲಿಯೂ ಈ ಸೃಷ್ಟಿಯ ಪ್ರಸ್ತಾಪವಿರುವುದರಿಂದ ಈ ಸೃಷ್ಟಿಯ ಕ್ರಮವು ಹೇಗೆ ಮುಂದೆವರೆಯಿತು, ನಾಮ-ರೂಪ ರಹಿತವಾದ ಅವ್ಯಕ್ತದಿಂದ ನಾಮರೂಪಗಳಿಂದ ಬೇರೆಯಾಗಿ ಕಾಣುವ ಈ ಚರಾಚರಾತ್ಮಕವಾದ ವ್ಯಕ್ತ ರೂಪವಾದ ಜಗತ್ತು ಹೇಗೆ ಉದ್ಭವಿಸಿತು ಎನ್ನುವುದು ವರ್ಣಿತವಾಗಿದೆ.
ತಸ್ಮಾದ್ವಿರಾಳಜಾಯತ ವಿರಾಜೋ ಅಧಿ ಪೂರುಷಃ । ಸ ಜಾತೋ ಅತ್ಯರಿಚ್ಯತ ಪಶ್ಚಾದ್ಭೂಮಿಮಥೋ ಪುರಃ ।। 5 ।।
ತಸ್ಮಾತ್ – ಆದಿಪುರುಷನಿಂದ । ವಿರಾಟ್ – ಅನೇಕ ಪ್ರಕಾರಗಳಲ್ಲಿ ಮೆರೆಯುವ ಬ್ರಹ್ಮಾಂಡವು । ಅಜಾಯತ - ಉತ್ಪನ್ನವಾಯಿತು । ವಿರಾಜಃ ಅಧಿ – ಈ ವಿರಾಡ್ದೇಹವನ್ನೇ ಆಶ್ರಯಿಸಿ । ಪುರುಷಃ – ದೇಹಾಭಿಮಾನಿಯಾದ ಪುರುಷನು ಕಾಣಿಸಿಕೊಂಡನು । ಸ ಜಾತಃ – ಚೇತನಾಚೇತನರೂಪದಲ್ಲಿ ಕಾಣಿಸಿಕೊಂಡ ಪುರುಷನು । ಅತ್ಯರಿಚ್ಯತ – ತನಗಿಂತಲೂ ಬೇರೆಯಾದ ದೇವತಿರ್ಯಙ್ಮನುಷ್ಯಾದಿ ರೂಪಗಳನ್ನು ಧರಿಸಿದನು । ಪಶ್ಚಾತ್ - ಅನಂತರ । ಭೂಮಿಂ – ಭೂಮಿಯನ್ನೂ । ಅಥೋ – ಅನಂತರ । ಪುರಃ – ಪಾಂಚಭೌತಿಕ ಶರೀರಾದಿಗಳನ್ನೂ ನಿರ್ಮಿಸಿದನು ।
ಅನೇಕ ಪ್ರಕಾರಗಳಲ್ಲಿ ಮೆರೆಯುವ ಬ್ರಹ್ಮಾಂಡವು ಅದಿಪುರುಷನಿಂದ ಉತ್ಪನ್ನವಾಯಿತು. ಈ ವಿರಾಡ್ದೇಹವನ್ನೇ ಆಶ್ರಯಿಸಿ ದೇಹಾಭಿಮಾನಿಯಾದ ಪುರುಷನು ಕಾಣಿಸಿಕೊಂಡನು. ಚೇತನಾಚೇತನಾರೂಪದಲ್ಲಿ ಕಾಣಿಸಿಕೊಂಡ ಪುರುಷನು ತನಗಿಂತಲೂ ಬೇರೆಯಾದ ದೇವತಿರ್ಯಙ್ಮನುಷ್ಯಾದಿರೂಪಗಳನ್ನು ಧರಿಸಿದನು. ಅನಂತರ ಭೂಮಿಯನ್ನು ನಿರ್ಮಿಸಿದನು.
ಇಲ್ಲಿ ಪುರುಷ ಮತ್ತು ವಿರಾಟ್ ಇವರ ಪರಸ್ಪರ ಉತ್ಪಾದ್ಯೋತ್ಪಾದಕಭಾವವನ್ನು ತಿಳಿಸಿದೆ. ಈ ಎರಡೂ ಬೇರೆ ಬೇರೆ ತತ್ತ್ವಗಳಲ್ಲ. ಬೇರೆ ಬೇರೆ ಆವಿರ್ಭಾವಗಳು. ಜಗತ್ತಿನ ರೂಪದಲ್ಲಿ ಆವಿರ್ಭಾವವನ್ನು ಪಡೆದ ವಿರಾಟ್ಪುರುಷನು ದೇವತಿರ್ಯಙ್ಮನುಷ್ಯಾದಿ ರೂಪಗಳಲ್ಲಿ ಪರಿಣಾಮ ಹೊಂದಿದನು ಎಂಬ ಅಭಿಪ್ರಾಯವನ್ನು ಸ ಜಾತೋಽತ್ಯರಿಚ್ಯತ ಎಂಬ ವಾಕ್ಯವು ತಿಳಿಸುತ್ತದೆ. ಕಾರಣವೇ ಕಾರ್ಯ ಮತ್ತು ಕಾರ್ಯವೇ ಕಾರಣ ಎನ್ನುವುದು ಪ್ರಕೃತ ಋಕ್ಕಿನಲ್ಲಿ ಸ್ಪಷ್ಟವಾಗಿದೆ. ತಸ್ಮಾದ್ವಿರಾಡಜಾಯತ; ವಿರಾಜೋ ಅಧಿ ಪೂರುಷಃ – ಪುರುಷನು ವಿರಾಟ್ ಎಂಬ ಮೂಲದ್ರವ್ಯವನ್ನು ತನ್ನೊಳಗಿನಿಂದಲೇ ಉತ್ಪನ್ನಮಾಡಿದನು. ಪುನಃ ಪುರುಷನು ಅದೇ ಮೂಲಸಾಮಗ್ರಿಯೊಡನೆ ಐಕ್ಯನಾಗುತ್ತಾನೆ. ಪ್ರಪಂಚರೂಪದಲ್ಲಿ ಉತ್ಪನ್ನನಾಗಿದ್ದಾನೆ. ಆದಿಪುರುಷನಿಂದ ಬ್ರಹ್ಮಾಂಡದೇಹವು ಉತ್ಪನ್ನವಾಯಿತು. ಈ ದೇಹವನ್ನೇ ಅಧಿಕರಣವನ್ನಾಗಿ ಮಾಡಿಕೊಂಡು ಪುರುಷನು ಬ್ರಹ್ಮಾಂಡರೂಪವಾದ ದೇಹವನ್ನು ಸೃಜಿಸಿ ಅದರಲ್ಲಿ ಜೀವರೂಪದಿಂದ ಪ್ರವೇಶಿಸಿ ಚೇತನಾತ್ಮಕನಾದ ಜೀವರೂಪಿಯಾದನು.
ಸ ಜಾತೋ ಅತ್ಯರಿಚ್ಯತ । ಎಂಬ ವಾಕ್ಯದಲ್ಲಿ ಆ ಪರಮಾತ್ಮನು ಜಗದಾದಿಯಾಗಿ ಪರಿವರ್ತಿತನಾದಾಗ ಅವನು ಸಹಜಾವಸ್ಥೆಯಾದ ಅವ್ಯಕ್ತಸ್ವರೂಪಕ್ಕಿಂತಲು ಅತಿರಿಕ್ತವಾದ ಅಂದರೆ ಬೇರೆಯಾದ ಅವಸ್ಥೆಯನು ಹೊಂದಿದನು ಎಂಬ ಅರ್ಥವಿದೆ. ಅಂದರೆ, ಕಣ್ಣಿಗೆ ಕಾಣಿಸದಿರುವ ಅವ್ಯಕ್ತಾವಸ್ಥೆಗಿಂತಲೂ ಬೇರೆಯಾದುದ, ನಾಮರೂಪಸಹಿತವಾದುದೂ, ದೃಷ್ಟಿಗೆ ಗೋಚರವಾದುದೂ ಆದ ಜಗದಾದಿ ರೂಪಗಳನ್ನು ಹೊಂದಿದನು. ಅಂದರೆ, ಒಂದು ಕಣ್ಣಿಗೆ ಕಾಣದೇ ಇರುವ ಅವ್ಯಕ್ತವು ಮತ್ತೊಂದು ಕಣ್ಣಿಗೆ ಕಾಣುವ ವ್ಯಕ್ತರೂಪವು. ಅವ್ಯಕ್ತಸ್ವರೂಪದಲ್ಲಿ ನಾಮ-ರೂಪಗಳಿಲ್ಲದೇ ಎಲ್ಲವೂ ಒಂದೇ ವಿಧವಾಗಿರುತ್ತದೆ. ಸಮುದ್ರದಲ್ಲಿರುವ ನೀರಿನಂತೆ. ವ್ಯಕ್ತರೂಪದಲ್ಲಿ ದೇವತೆಗಳು, ಮನುಷ್ಯರು, ತಿರ್ಯಗ್ಜಂತುಗಳು, ಅಚರಾತ್ಮಕವಾದ ಪರ್ವತಾದಿಗಳು ಹೀಗೆ ಅನೇಕ ವಸ್ತುಗಳಿವೆ. ಸಮುದ್ರದ ನೀರಿನಿಂದಲೇ ಉಂಟಾದ ಗಂಗಾದಿ ನದಿಗಳಂತೆ, ಸಮುದ್ರದ ನೀರು ಗಂಗಾದಿ ನಾನಾ ನದಿಗಳ ರೂಪದಲ್ಲಿರುವಾಗ ಅವು ಬೇರೆ ಬೇರೆ ನದಿಗಳಂತೆಯೂ, ಸರೋವರಗಳಂತೆಯೂ, ಇತರ ಜಲಾಶಯಗಳಂತೆಯೂ ಬೇರೆ ಬೇರೆ ಹೆಸರುಗಳನ್ನೂ ಆಕಾರಗಳನ್ನೂ ಪಡೆದವೆ. ಆದರೆ ಆ ನದಿಗಳೆಲ್ಲವೂ ಸಮುದ್ರವನ್ನು ಸೇರಿದ ನಂತರ ಅವುಗಳ ನೀರೆಲ್ಲವೂ ಸಮುದ್ರದ ನೀರಿನೊಡನೆ ಸೇರಿ ಎಲ್ಲವೂ ಸಮುದ್ರವೆಂಬ ಒಂದೇ ಹೆಸರನ್ನು ಪಡೆಯುತ್ತವೆ. ಆ ಸಮುದ್ರದಲ್ಲಿ ಸೇರಿದ ನೀರಿನಲ್ಲಿ ಗಂಗಾನದಿಯ ನೀರುಯಾವುದು? ಸಿಂಧೂನದಿಯ ನೀರು ಯಾವುದು? ಎಂದು ಪ್ರತ್ಯೇಕವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಅದರಂತೆಯೇ ಅವ್ಯಕ್ತಾವಸ್ಥೆಯಲ್ಲಿ ನಾಮ-ರೂಪಗಳೊಂದೂ ಇರುವುದಿಲ್ಲ. ಒಂದೇ ಒಂದು ಸ್ವರೂಪ ಮಾತ್ರ ಇರುತ್ತದೆ. ವ್ಯಕ್ತಾವಸ್ಥೆಯಲ್ಲಿ ನಾನಾ ರೂಪಗಳಿರುತ್ತವೆ. ಅವುಗಳಿಗೆಲ್ಲಾ ಪ್ರತ್ಯೇಕ ರೂಪಗಳೂ ಹೆಸರುಗಳೂ ಇರುತ್ತವೆ. ಲಯಕಾಲದಲ್ಲ ಅವು ಆತ್ಮನಲ್ಲಿ ಸೇರಿ ಐಕ್ಯವಾದಾಗ ಅವುಗಳು ತಮ್ಮ ಪ್ರತ್ಯೇಕತೆಯನ್ನು ಅಂದರೆ ನಾಮರೂಪಗಳನ್ನು ಕಳೆದುಕೊಂಡು ಅವ್ಯಕ್ತವೆಂಬ ಒಂದೇ ವಸ್ತುವಾಗಿ ಪ್ರಕಾಶಿಸುತ್ತದೆ.
ಪಶ್ಚಾದ್ಭೂಮಿಮಥೋ ಪುರಃ – ದೇವಮನುಷ್ಯಾದಿ ಜೀವರುಗಳನ್ನು ಸೃಷ್ಟಿಸಿ, ಅವರು ವಾಸಿಸುವುದಕ್ಕೆ ಈ ಭೂಮಿಯನ್ನು ಸೃಷ್ಟಿಸಿದನು. ಇಲ್ಲಿ ಭೂಮಿ ಎಂದರೆ ಭೂಲೋಕಮಾತ್ರವಲ್ಲ. ಭೂಮಿ-ಅಂತರಿಕ್ಷ-ಸ್ವರ್ಗ ಎಂಬ ಲೋಕತ್ರಯಗಳು. ಅವುಗಳಲ್ಲಿ ವಾಸಿಸುವ ಜೀವರುಗಳೂ, ಪರ್ವತಾದಿಗಳೂ ಎಂದರ್ಥ. ಈ ಲೋಕಗಳ ಸೃಷ್ಟಿಯಾದ ನಂತರ ದೇವಮನುಷ್ಯಾದಿಗಳ ನಾನಾ ವಿಧದ ಶರೀರಗಳನ್ನೂ ಸೃಷ್ಟಿಸಿದನು. ಇಲ್ಲಿ ಪುರಃ ಎಂಬ ಶಬ್ದಕ್ಕೆ ಪೂರ್ಯಂತೇ ಸಪ್ತಭಿರ್ಧಾತುಭಿರಿತಿ ಪುರಃ ಶರೀರಾಣಿ – ಸಪ್ತಧಾತುಗಳಿಂದ ನಿರ್ಮಿತವಾಗಿರುವುದರಿಂದ ಪುರಃ ಎಂದರೆ ಶರೀರಗಳು ಎಂಬ ಅರ್ಥವಿವರಣೆಯಿದೆ (ಸಾಯಣಭಾಷ್ಯ). ಸೃಷ್ಟಿಮಾಡಿ ಆ ಶರೀರಾದಿಗಳಲ್ಲಿ ಆ ಪರಮಾತ್ಮನು ಚೈತನ್ಯರೂಪದಿಂದ ಪ್ರವೇಶಿಸಿದನು.
ಯತ್ಪುರುಷೇಣ ಹವಿಷಾ ದೇವಾ ಯಜ್ಞಮತನ್ವತ । ವಸಂತೋ ಅಸ್ಯಾಸೀದಾಜ್ಯಂ ಗ್ರೀಷ್ಮ ಇಧ್ಮಃ ಶರದ್ಧವಿಃ ।। 6 ।।
ಯತ್ – ಪಾಂಚಭೌತಿಕ ಶರೀರಾದಿಗಳು ಉತ್ಪನ್ನವಾದ ನಂತರ । ದೇವಾಃ – ಪುರುಷನ ಅಂಶಗಳಾದ ದೇವತೆಗಳು । ಪುರುಷೇಣ – ಪುರುಷಸಂಜ್ಞಕವಾದ । ಹವಿಷಾ - ಹವಿಸ್ಸಿನಿಂದ । ಯಜ್ಞಂ – ಯಜ್ಞವನ್ನು । ಅತನ್ವತ – ನೆರವೇರಿಸಿದರು । ಅಸ್ಯ – ಆ ಯಜ್ಞಕ್ಕೆ । ವಸಂತಃ – ವಸಂತಋತುವು । ಆಜ್ಯಂ – ತುಪ್ಪವಾಗಿ । ಆಸೀತ್ - ಆಯಿತು । ಗ್ರೀಷ್ಮಃ - ಗ್ರೀಷ್ಮಋತುವು । ಇಧ್ಮಃ – ಸಮಿತ್ತುಗಳಾಯಿತು । ಶರತ್ - ಶರದೃತುವು । ಹವಿಃ – ಹವಿಸ್ಸಾಯಿತು.
ಜಗತ್ಸೃಷ್ಟಿಯಾದ ನಂತರ ಪುರುಷನ ಅಂಶಗಳಾದ ದೇವತೆಗಳು ಪುರುಷಸಂಜ್ಞಕವಾದ ಹವಿಸ್ಸಿನ ಯಜ್ಞವನ್ನು ನೆರವೇರಿಸಿದರು. ಈ ಯಜ್ಞಕ್ಕೆ ವಸಂತಋತುವು ತುಪ್ಪವಾಯಿತು. ಗ್ರೀಷ್ಮವು ಸಮಿತ್ತುಗಳಾಗಿಯೂ ಶರದೃತುವು ಹವಿಸ್ಸೂ ಆದವು.
ಪರಮಪುರುಷನು ಜಗತ್ಸೃಷ್ಟಿಗಾಗಿ ಸಂಕಲ್ಪಿಸಿ ಆ ಸಂಕಲ್ಪದ ಪರಿಣಾಮವಾಗಿ ನಾನಾ ಶಕ್ತಿಗಳು ಉತ್ಪನ್ನವಾಗಿ ಅವುಗಳ ಮೂಲಕ ಪುರುಷನು ವಿಧವಿಧವಾಗಿ ಪ್ರಕಾಶಿಸುವುದರಿಂದ ಅವನು ವಿರಾಟ್ಸಂಜ್ಞಕನಾದನು. ಪುರುಷನಿಂದ ವಿರಾಟ್, ವಿರಾಟ್ಟನಿಂದ ಪುರುಷ ಹೀಗೆ ಅವಸ್ಥಾವಿಶೇಷಗಳನ್ನು ಹೊಂದುವ ದಿವ್ಯ ಸ್ವರೂಪವನ್ನು ಹಿಂದಿನ ಋಕ್ಕುಗಳು ವರ್ಣಿಸಿವೆ. ಈಶ್ವರ ಸಂಕಲ್ಪದ ಫಲವಾಗಿ ಉತ್ಪನ್ನವಾದ ಸೃಷ್ಟಿಯಲ್ಲಿ ಎರಡು ಕ್ರಮ: ಒಂದು ಪೂರ್ವಸೃಷ್ಟಿ, ಇನ್ನೊಂದು ಉತ್ತರಸೃಷ್ಟಿ. ಪೃಥಿವ್ಯಾದಿ ಪಂಚ ಮಹಾಭೂತಗಳೂ ದೇವತಿರ್ಯಙ್ಮನುಷಾದಿ ಚೇತಗಳೂ, ಈ ಚೇತನಗಳಿಗೆ ಆಶ್ರಯವನ್ನು ಕೊಡಲು ಜ್ಞಾನೇಂದ್ರಿಯಗಳನ್ನೊಳಗೊಂಡ ಶರೀರಗಳೂ ಪೂರ್ವಸೃಷ್ಟಿಗೆ ಸೇರಿದವು. ಪೂರ್ವಸೃಷ್ಟಿಯ ಕಾಲದಲ್ಲಿ ಪರಮಾತ್ಮನು ಆತ್ಮಯಜ್ಞವನ್ನು ನೆರವೇರಿಸಿ ತನ್ನನ್ನೇ ಆಹುತಿಯನ್ನಾಗಿ ಅರ್ಪಿಸಿದನು. ಅದರ ಫಲವಾಗಿ ಜಗತ್ಸೃಷ್ಟಿ ಎಂಬ ವಿಷಯವನ್ನು ವಿಶ್ವಕರ್ಮಸೂಕ್ತಗಳಲ್ಲಿ (ಮಂಡಲ 10, ಅನುವಾಕ 6, ಸೂಕ್ತಗಳು 81-82) ವರ್ಣಿಸಿದೆ. ಉತ್ತರ ಸೃಷ್ಟಿಯ ಅಂಗವಾಗಿ ದೇವತೆಗಳು ಪುರುಷನನ್ನು ಆಹುತಿಯ ರೂಪದಲ್ಲಿ ಅರ್ಪಿಸಿ ಯಜ್ಞವನ್ನು ನೆರವೇರಿಸಿದರು ಎಂದು ಪ್ರಕೃತ ಋಕ್ಕು ವರ್ಣಿಸುತ್ತದೆ.
ಈ ಯಜ್ಞಕ್ಕೆ ಬೇಕಾದ ಸಾಮಗ್ರಿಗಳು ಪುರುಷನಲ್ಲದೇ ಬೇರೆ ಸಿಗಲಿಲ್ಲ. ಬಾಹ್ಯ ದ್ರವ್ಯಗಳು ಇನ್ನೂ ಉತ್ಪನ್ನವಾಗಿರಲಿಲ್ಲ. ಆದ್ದರಿಂದ ಪುರುಷರೂಪದ ಹವಿಸ್ಸಿನಿಂದ ಮಾನಸಿಕ ಸಂಕಲ್ಪವನ್ನು ಮಾಡಿ, ಮಾನಸಿಕ ಯಜ್ಞವನ್ನು ನೆರವೇರಿಸಿದರು ಎಂದಿರುವ ಈ ಪ್ರಕರಣದಲ್ಲಿ ಮಾನಸಿಕ ಯಜ್ಞದ ಸ್ವರೂಪ ಮತ್ತು ಅದರ ಫಲವಾದ ಉತ್ತರ ಸೃಷ್ಟಿ ಇವು ಮುಖ್ಯವಿಷಯಗಳು.
ದೇವಾ ಯಜ್ಞಮತನ್ವತ ಎನ್ನುವುದಕ್ಕೆ ಪ್ರಜಾಪತಿಯ ಪ್ರಾಣಗಳು ಮತ್ತು ಇಂದ್ರಿಯಗಳು ಎಂಬ ಅರ್ಥವಿರುವುದರಿಂದ ಪ್ರಜಾಪತಿಯೇ ಈ ರೂಪಗಳಿಂದ ಇದ್ದು ಪುನಃ ಉತ್ತರ ಸೃಷ್ಟಿಗಾಗಿ ಯಜ್ಞವನ್ನಾಚರಿಸಿದನು ಎಂದು ಅರ್ಥೈಸಿಕೊಳ್ಳಬೇಕು. ಅಂದರೆ, ಪೂರ್ವಸೃಷ್ಟಿಗೂ ಯಜ್ಞವೇ ಮೂಲ. ಉತರಸೃಷ್ಟಿಗೂ ಯಜ್ಞವೇ ಮೂಲ. ಅಲ್ಲದೇ ಸೃಷ್ಟಿಕಾರ್ಯವೂ ಯಜ್ಞರೂಪ ಮತ್ತು ಸೃಷ್ಟವಾದ ಸಕಲ ಜಗತ್ತೂ ಯಜ್ಞರೂಪವೇ ಆಗಿದೆ. ಪೂರ್ವಸೃಷ್ಟಿಗೆ ವಿಶ್ವಕರ್ಮನ ಆತ್ಮಯಜ್ಞವು ಮೂಲವಾಗಿರುವಂತೆಯೇ ಉತರ ಸೃಷ್ಟಿಗೆ ದೇವತೆಗಳು ಪರಮ ಪುರುಷನ ರೂಪವಾದ ಹವಿಸ್ಸನ್ನು ಅರ್ಪಿಸಿ ಆದಿಪುರುಷನ ಸೃಷ್ಟಿಕಾರ್ಯವನ್ನು ಮುಂದುವರಿಸುತ್ತಾರೆ ಎನ್ನುವುದೇ ಈ ಋಕ್ಕಿನ ಮುಖ್ಯ ತಾತ್ಪರ್ಯ.
ವಸಂತೋಽಸ್ಯಾಸೀದಾಜ್ಯಂ ಎಂಬ ಉತ್ತರಾರ್ಧದಲ್ಲಿ ಯಜ್ಞಕ್ಕೂ ಸಂವತ್ಸರಕ್ಕೂ ತಾದಾತ್ಮ್ಯವನ್ನು ಹೇಳಿದೆ. ಪುರುಷಾತ್ಮಕವಾದ ಯಜ್ಞದಲ್ಲಿ ಪುರುಷನೇ ಹವಿಸ್ಸು. ಪುರುಷನೇ ಯಜ್ಞವು ಮತ್ತು ಯಜ್ಞವೇ ಸಂವತ್ಸರವು. ಯಜ್ಞಕ್ಕೆ ಹೇಗೆ ಆಜ್ಯ, ಇಧ್ಮ ಮತ್ತು ಹವಿಸ್ಸುಗಳು ಪೋಷಕಗಳೋ ಹಾಗೆ ಸಂವತ್ಸರಕ್ಕೆ ವಸಂತ, ಗ್ರೀಷ್ಮ ಮತ್ತು ಶರತ್ ಈ ಮೂರು ಋತುಗಳೂ ಪೂರಕ-ಪೋಷಕಗಳಾಗಿವೆ.
ಯಜ್ಞಕ್ಕೆ ಅನೇಕ ಸಾಮಗ್ರಿಗಳು ಬೇಕಾಗಿದ್ದರೂ ಅವುಗಳಲ್ಲಿ ಮುಖ್ಯವಾದವುಗಳನ್ನು ಮಾತ್ರ ಇಲ್ಲಿ ಹೇಳಿದೆ. ಆಜ್ಯ (ತುಪ್ಪ), ಇಧ್ಮ (ಸಮಿತ್ತು), ಹವಿಃ (ಪುರೋಡಾಶಾದಿಗಳು), ಬರ್ಹಿಃ (ಕತ್ತರಿಸಿದ ದರ್ಭೆಗಳು), ಪಶು (ಯಜ್ಞದಲ್ಲಿ ಆಹುತಿಯಾಗಿ ಅರ್ಪಿಸಲ್ಪಡುವ ಪಶು), ಪರಿಧಿ (ಅಗ್ನಿಕುಂಡದ ಸುತ್ತಲೂ ರಾಕ್ಷಸರು ಬಂದು ವಿಘ್ನಮಾಡದಂತೆ ಇಡುವ ದರ್ಭೆಗಳು), ಸಮಿಧಃ (ಅಗ್ನಿಯಲ್ಲಿ ಆಹುತಿ ರೂಪದಲ್ಲಿ ಅರ್ಪಿಸುವುದಕ್ಕಾಗಿ ಉಪಯೋಗಿಸುವ ಸಮಿತ್ತುಗಳು ಅಥವಾ ಒಣಗಿದ ಕೆಲವು ವೃಕ್ಷದ ಕಡ್ಡಿಗಳು) ಮೊದಲಾದ ಅನೇಕ ಸಾಮಗ್ರಿಗಳು ಬೇಕಾಗಿದ್ದರೂ ಮುಖ್ಯವಾದ ಈ ಏಳು ಸಾಮಗ್ರಿಗಳನ್ನು ಮಾತ್ರ ಈ ಸೂಕ್ತದಲ್ಲಿ ಹೇಳಿದೆ. ಈ ಏಳರಲ್ಲಿ ಮೊದಲನೆಯ ಮೂರನ್ನು ಪ್ರಕೃತ ಋಕ್ಕಿನಲ್ಲಿಯೂ ಮುಂದಿನ ಎರಡನ್ನು ತಂ ಯಜ್ಞಂ ಬರ್ಹಿಃ (7ನೇ ಋಕ್ಕು) ಎಂಬ ಋಕ್ಕಿನಲ್ಲಿಯೂ ಮುಂದಿನ ಎರಡನ್ನು ಸಪ್ತಾಸ್ಯಾಸನ್ ಎಂಬ 15ನೇ ಋಕ್ಕಿನಲ್ಲಿಯೂ ಹೇಳಲಾಗಿದೆ. ಇಲ್ಲಿ ವಸಂತ ಋತುವು ಮಧುಶ್ಚ ಮಾಧವಶ್ಚ ವಾಸಂತಿಕಾವೃತೂ (ತೈತ್ತರೀಯ ಸಂಹಿತೆ 4-4-11-1) ರಂತೆ ಚೈತ್ರ ಮತ್ತು ವೈಶಾಖ ಮಾಸಗಳೆಂದು ಹೇಳಿದೆ. ಅದರಂತೆ ಶುಕ್ರಶ್ಚ ಶುಚಿಶ್ಚ ಗ್ರೈಷ್ಮಾವೃತೂ (ತೈತ್ತರೀಯ ಸಂಹಿತೆ 4-4-11-1) ರಂತೆ ಜ್ಯೇಷ್ಠ ಆಷಾಢ ಮಾಸಗಳಿಗೆ ಗ್ರೀಷ್ಮಋತುವೆಂದು ಹೆಸರು. ಮತ್ತು ಇಷಶ್ಚೋರ್ಜಶ್ಚ ಶಾರದಾವೃತೂ (ತೈತ್ತರೀಯ ಸಂಹಿತೆ 4-4-11-1) ಕಾರ್ತೀಕ ಮತ್ತು ಮಾರ್ಗಶಿರ ಮಾಸಗಳಿಗೆ ಶರದೃತುವೆಂದು ಹೆಸರು. ಈ ಮೂರು ಋತುಗಳಲ್ಲಿ ವಸಂತಋತುವನ್ನು ಯಜ್ಞದಲ್ಲಿ ಉಪಯೋಗಿಸುವ ಆಜ್ಯವೆಂದೂ, ಗ್ರೀಷ್ಮಋತುವನ್ನು ಇಧ್ಮಃ ಅಂದರೆ ಸಮಿತ್ತುಗಳೆಂದೂ, ಶರದೃತುವನ್ನು ಪುರೋಡಾಶಾದಿರೂಪವಾದ ಹವಿಸ್ಸೆಂದೂ ಮನಸ್ಸಿನಲ್ಲಿ ಭಾವಿಸಿ ದೇವತೆಗಳು ಯಜ್ಞವನ್ನು ಮಾಡಿದರು.
ತಂ ಯಜ್ಞಂ ಬರ್ಹಿಷಿ ಪ್ರೌಕ್ಷನ್ಪುರುಷಂ ಜಾತಮಗ್ರತಃ । ತೇನ ದೇವಾ ಅಯಜಂತ ಸಾಧ್ಯಾ ಋಷಯಶ್ಚ ಯೇ ।। 7 ।।
ಅಗ್ರತಃ – ಜಗತ್ ಸೃಷ್ಟಿಗಿಂತಲೂ ಮೊದಲು । ಜಾತಂ - ಉತ್ಪನ್ನನೂ । ಯಜ್ಞಂ – ಯಜ್ಞಕ್ಕೆ ಸಾಧನಭೂತನೂ ಆದ । ತಂ ಪುರುಷಂ – ಆ ವಿರಾಟ್ಪುರುಷನನ್ನು । ಬರ್ಹಿಷಿ- ದರ್ಭಾಸನದ ಮೇಲೆ ಸ್ಥಾಪಿಸಿ । ಪ್ರೌಕ್ಷನ್ – ಪ್ರೋಕ್ಷಣೆ ಮಾಡಿದರು । ತೇನ – ಪುರುಷರೂಪವಾದ ಪಶುವಿನಿಂದ । ದೇವಾಃ – ದೇವತೆಗಳೂ । ಸಾಧ್ಯಾಃ - ಸಾಧ್ಯರೂ । ಋಷಯಃ – ಋಷಿಗಳೂ ಸೇರಿ । ಯೇ – ಯಜ್ಞಮಾಡಲು ಯಾರು ಯಾರು ಅರ್ಹರೋ ಅವರೆಲ್ಲರೂ ಸೇರಿ । ಅಯಜಂತ – ಯಾಗವನ್ನು ನಿರ್ವಹಿಸಿದರು.
ಜಗತ್ ಸೃಷ್ಟಿಗಿಂತಲೂ ಮೊದಲು ಉತ್ಪನ್ನನೂ, ಯಜ್ಞಕ್ಕೆ ಸಾಧನಭೂತನೂ ಆದ ವಿರಾಟ್ಪುರುಷನನ್ನು ದರ್ಭಾಸನದ ಮೇಲೆ ಸ್ಥಾಪಿಸಿ ಪ್ರೋಕ್ಷಣೆ ಮಾಡಿದರು. ಪುರುಷರೂಪವಾದ ಪಶುವನ್ನು ಆಹುತಿಯಾಗಿ ಅರ್ಪಿಸಿ ದೇವತೆಗಳೂ, ಸಾಧ್ಯರೂ, ಋಷಿಗಳೂ ಸೇರಿ ಎಲ್ಲರೂ ಯಾಗವನ್ನು ನಿರ್ವಹಿಸಿದರು.
ಮನಸ್ಸಂಕಲ್ಪವನ್ನು ನೆರವೇರಿಸುವ ಶಕ್ತಿಯುಳ್ಳ ಪ್ರಾಣಗಳೇ ಸಾಧ್ಯರೆಂದು ಇಲ್ಲಿ ವ್ಯವಹೃತರಾಗಿದ್ದಾರೆ. ಇಂದ್ರಿಯಗಳೇ ಋಷಿ ಶಬ್ದದಿಂದ ವ್ಯವಹೃತರು. ಪ್ರಾಣ ಮತ್ತು ಇಂದ್ರಿಯಗಳು ತಮ್ಮ ಪ್ರಕಾಶರೂಪದ ಸ್ವರೂಪವನ್ನು ಹೊಂದಿರುವುದರಿಂದ ದೇವಾಃ ಎಂಬ ವಿಶೇಷಣದಿಂದ ವರ್ಣಿತರು.
ಯಜ್ಞೇನ ಯಜ್ಞಮಯಜಂತ ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್ । ತೇ ಹ ನಾಕಂ ಮಹಿಮಾನಃ ಸಚಂತ ಯತ್ರ ಪೂರ್ವೇ ಸಾಧ್ಯಾಃ ಸಂತಿ ದೇವಾಃ । । ಎಂಬ 16ನೇ ಋಕ್ಕಿನಂತೆ ದೇವತೆಗಳು ಯಜ್ಞವನ್ನಾಚರಿಸಿ ಯಜ್ಞರೂಪನಾದ ಪರಮ ಪುರುಷನನ್ನು ಆರಾಧಿಸಿದರು. ಲೋಕದಲ್ಲಿ ಯಾರು ಈ ಮಾರ್ಗವನ್ನನುಸರಿಸಿ ಪರಮಾತ್ಮನನ್ನು ಯಜ್ಞಾಚರಣೆಯ ಮೂಲಕ ಆರಾಧಿಸುತ್ತಾರೋ ಅವರು ನಿತ್ಯ ಸುಖವನ್ನು ಕೊಡುವ ಸ್ವರ್ಗವನ್ನು ಸೇರುತ್ತಾರೆ. ಸೃಷ್ಟಿಸಾಧಕರಾದ ಸಾಧ್ಯರೆಂಬ ದೇವತೆಗಳು ಇದೇ ಲೋಕದಲ್ಲಿ ಪರಮಾತ್ಮನನ್ನು ಆರಾಧಿಸುತ್ತಾ ಸೃಷ್ಟಿಗಿಂತಲು ಪೂರ್ವರಾದ ಅವರ ಮಹತ್ವವನ್ನು ಪ್ರಶಂಸಿಸಿದೆ. ಸಾಧ್ಯರು ದ್ಯುಲೋಕಸ್ಥರೆಂದು ನಿರುಕ್ತಿಕಾರರ ಮತವಿದೆ. ದೇವತೆಗಳಿಗೆಲ್ಲ ಇವರೇ ಪ್ರಥಮರು ಮತ್ತು ಅತ್ಯುತ್ತಮ ಲೋಕವನ್ನು ಆಶ್ರಯಿಸಿದ್ದಾರೆ.
ಪ್ರಾಣಗಳೇ ಇಲ್ಲಿ ಋಷಿಸಂಜ್ಞಕಗಳಾಗಿರುತ್ತವೆ. ಪ್ರಪಂಚವು ಭಾವರೂಪವಾಗಿ ಪರಿವರ್ತಿತವಾಗುವುದಕ್ಕೆ ಪೂರ್ವದಲ್ಲಿ ಪ್ರಾಣಗಳೇ ತಮ್ಮ ತಪಸ್ಸಿನಿಂದಲೂ, ಶ್ರಮದಿಂದಲೂ ಕೃಶವಾಗಿದ್ದುದರಿಂದ (ಅರಿಷನ್) ಅವು ಋಷಿ ಸಂಜ್ಞಕಗಳಾದವು. ಋಷಿಗಳೆಂಬ ಹೆಸರಿನಿಂದ ಪ್ರಸಿದ್ಧವಾದ ಪ್ರಾಣಗಳೇ ದೇವಾಃ ಎಂದೂ ವ್ಯವಹರಿಸಲ್ಪಡುತ್ತವೆ.
ಈ ಋಕ್ಕಿನಲ್ಲಿ ದೇವತೆಗಳು ಯಜ್ಞಪಶುವನ್ನು ಪ್ರೋಕ್ಷಣಾದಿಗಳಿಂದ ಸಂಸ್ಕರಿಸಿ ಯಜ್ಞವನ್ನು ನೆರವೇರಿಸಿದರು ಎಂದಿದೆ. ಯಜ್ಞ ಶಬ್ದಕ್ಕೆ ಇಲ್ಲಿ ಯಜ್ಞಮಾಡಲು ಸಾಧನಸಾಮಗ್ರಿಯಾದ ಪಶು ಎಂಬ ಅರ್ಥವಿದೆ. ಆ ಪಶುವು ಯಾವುದೆಂದರೆ – ಪುರುಷಂ – ಪುರುಷರೂಪದಿಂದಿರುವ ಮತ್ತು ಜಾತಮಗ್ರತಃ – ಇತರ ವಸ್ತುಗಳ ಸೃಷ್ಟಿಗಿಂತಲೂ ಮೊದಲೇ ಆವಿರ್ಭೂತನಾಗಿದ್ದ ಪುರುಷರೂಪನಾದ ಪರಮಾತ್ಮನು ಎಂದು ತಿಳಿಯಬೇಕು. ಸೃಷ್ಟಿಕಾರ್ಯವು ಇನ್ನೂ ಪ್ರಾರಂಭದ ದೆಶೆಯಲ್ಲಿದ್ದು ಎಲ್ಲಾ ವಸ್ತುಗಳ ಸೃಷ್ಟಿಯೂ ಮುಗಿದಿರಲಿಲ್ಲವಾದ್ದರಿಂದ ಯಜ್ಞಕ್ಕೆ ಬೇದಾದ ಪಶುವೂ ದೊರೆಯುವಂತಿರಲಿಲ್ಲ. ಆದ್ದರಿಂದ ದೇವತೆಗಳು ಪರಮ ಪುರುಷನನ್ನೇ ಪಶುವೆಂದು ಭಾವಿಸಿ ಮಾನಸಯಜ್ಞವನ್ನು ಮಾಡಿದರು.
ಹಿಂದಿನ ಋಕ್ಕಿನಲ್ಲಿ ಹೇಳಿದಂತೆ ದೇವತೆಗಳು ಮಾಡಿದ ಯಜ್ಞದಲ್ಲಿ ವಸಂತವೇ ಆಜ್ಯವಾಯಿತು. ಗ್ರೀಷ್ಮವೇ ಇಧ್ಮವಾಯಿತು. ಶರದೃತುವೇ ಹವಿಸ್ಸಾಯಿತು. ಎಷ್ಟೇ ಹೋಮದ್ರವ್ಯಗಳಿರಲಿ, ಪಶುವನ್ನು ಸಂಪಾದಿಸದ ಹೊರತು ಯಜ್ಞವು ನಡೆಯುವುದಿಲ್ಲ. ಅಷ್ಟೇ ಅಲ್ಲ, ಪಶುವನ್ನು ಸಿದ್ಧಪಡಿಸಿಕೊಂಡೇ ಅಗ್ನಿಮಥನಾದಿ ಯಜ್ಞಾಂಗ ಕರ್ಮಗಳನ್ನು ಆರಂಭಿಸಬೇಕು ಎಂದು ಯಜುರ್ವೇದವು ಹೇಳುತ್ತವೆ. ಪಶುಸಂಪಾದನೆಯ ನಂತರ ಪಶುಸಂಸ್ಕಾರವೂ ಮುಖ್ಯವಾದುದು. ಇದಕ್ಕಾಗಿ ಯಜ್ಞವೇದಿಯಲ್ಲಿ ಪಶುವನ್ನು ಕಟ್ಟುವ ಯೂಪಸ್ತಂಭವನ್ನು ನೆಡಲಾಗುತ್ತದೆ. ಇದನ್ನು ಆಜ್ಯಾದಿಗಳಿಂದ ಲೇಪಿಸಿ ಸಂಸ್ಕರಿಸುತ್ತಾರೆ. ನಂತರ ಪಶುವನ್ನು ವಿಧ್ಯುಕ್ತಮಂತ್ರ ಪೂರ್ವಕವಾಗಿ ನೀರಿನಿಂದ ಪ್ರೋಕ್ಷಿಸುತ್ತಾರೆ. ಅದನ್ನೇ ಇಲ್ಲಿ ಪ್ರೌಕ್ಷನ್ ಎಂಬ ಶಬ್ದದಿಂದ ನಿರ್ದೇಶಿಸಲಾಗಿದೆ.
ಈ ವಾಕ್ಯದಲ್ಲಿರುವ ಬರ್ಹಿಷಿ ಎಂದರೆ ಯಜ್ಞದಲ್ಲಿ ಆಹ್ವಾನಿಸಲ್ಪಟ್ಟ ದೇವತೆಗಳು ಬಂದು ಕುಳಿತುಕೊಳ್ಳಲು ಅವರ ಆಸನಗಳೆಂದು ಯಜ್ಞವೇದಿಕೆಯಲ್ಲಿ ಒಂದೇ ಸಮನಾದ ಅಳತೆಗೆ ಕತ್ತರಿಸಿದ ದರ್ಭೆಗಳನ್ನು ಒಂದು ಪದರವಾದ ಮೇಲೆ ಮತ್ತೊಂದು ಪದರದಂತೆ ಮೂರು ಪದರಗಳನ್ನಾಗಿ ಮೆತ್ತಗಿರುವಂತೆ ಹರಡಿರುವ ದರ್ಭೆಗಳು. ಇದರ ಮೇಲೆ ದೇವತೆಗಳು ಬಂದು ಕೂಡುವಂತೆ ಆಹ್ವಾನಿಸುತ್ತಾರೆ. ಅಲ್ಲದೇ ಹೋಮಮಾಡುವ ಘೃತ, ಹವಿಸ್ಸು ಮೊದಲಾದ ದ್ರವ್ಯಗಳನ್ನು ನೆಲದ ಮೇಲೆ ಇಡದೇ ಹಾಸಿದ ದರ್ಭೆಗಳ ಮೇಲೆಯೇ ಇಡುತ್ತಾರೆ. ಈ ವಿಧವಾದ ದರ್ಭೆಗೆ ಬರ್ಹಿಃ ಎಂದು ಹೆಸರು.
ತಸ್ಮಾದ್ಯಜ್ಞಾತ್ಸರ್ವಹುತಃ ಸಂಭೃತಂ ಪೃಷದಾಜ್ಯಮ್ । ಪಶೂನಾಂಶ್ಚಕ್ರೇ ವಾಯುವ್ಯಾನಾರಣ್ಯಾನ್ಗ್ರಾಮಾಶ್ಚ ಯೇ ।। 8 ।।
ಸರ್ವಹುತಃ – ಜಗದ್ರೂಪಿಯಾದ ವಿರಾಟ್ಪುರುಷನೇ ಆಹುತಿಯಾಗುಳ್ಳ । ತಸ್ಮಾತ್ ಯಜ್ಞಾತ್ – ಆ ಯಜ್ಞದಿಂದ । ಪೃಷದಾಜ್ಯಂ – ದಧಿಮಿಶ್ರವಾದ ಆಜ್ಯವು (ಮೊಸರು ತುಪ್ಪವು) । ಸಂಭೃತಂ – ಸಂಪಾದಿತವಾಯಿತು । ವಾಯವ್ಯಾನ್ – ವಾಯುದೇವತಾಕವಾದ ಯಾವ ಪಕ್ಷ್ಯಾದಿಗಳಿವೆಯೋ । ತಾನ್ - ಅವನ್ನು । ಚಕ್ರೇ – ನಿರ್ಮಿಸಿದನು । ಆರಣ್ಯಾನ್ – ಅರಣ್ಯವಾಸಿಗಳಾದ ಮೃಗಾದಿಗಳನ್ನೂ । ಯೇ ಚ ಗ್ರಾಮ್ಯಾಃ – ಗವಾಶ್ವಾದಿಗಳೇ ಮೊದಲಾದ ಗ್ರಾಮದಲ್ಲಿ ವಾಸಿಸುವ ಪಶುಗಳನ್ನೂ ಉತ್ಪನ್ನಮಾಡಿದನು.
ಜಗದ್ರೂಪಿಯಾದ ವಿರಾಟ್ ಪುರುಷನೇ ಆಹುತಿಯಾಗುಳ್ಳ ಆ ಯಜ್ಞದಿಂದ ದಧಿಮಿಶ್ರವಾದ ಆಜ್ಯವು ಉತ್ಪನ್ನವಾಯಿತು. ಅನಂತರ ಪಕ್ಷ್ಯಾದಿಗಳನ್ನು ಆರಣ್ಯಕವಾದ ಮೃಗಗಳನ್ನೂ ಗ್ರಾಮವಾಸಿಗಳಾದ ಗವಾಶ್ವಾದಿಗಳನ್ನೂ ಪುರುಷನು ಉತ್ಪನ್ನ ಮಾಡಿದನು.
ಇಲ್ಲಿ ಮೂರು ವಿಷಯಗಳ ಕುರಿತು ಸೂಚಿಸಿದೆ: (1) ಸರ್ವಮೇಧ (2) ಆಜ್ಯದ ಮಹತ್ವ ಮತ್ತು (3) ಪಶ್ವಾದಿಗಳ ಜನ್ಮ.
ಸರ್ವಾತ್ಮಕನಾದ ಪುರುಷನನ್ನೇ ಆಹುತಿಯನ್ನಾಗಿ ಅರ್ಪಿಸಿದ ಯಜ್ಞದಿಂದ ಉತ್ಪನ್ನವಾದ ವಸ್ತುಗಳ ವಿವರಣವು ಸರ್ವಹುತ್ ಎಂದು ವರ್ಣಿತವಾಗಿರುವ ಯಜ್ಞದ ಸರ್ವಮೂಲತ್ವವನ್ನು ತೋರಿಸುತ್ತದೆ. ಯಾವುದು ಸಕಲ ವಿಶ್ವದ ಉತ್ಪತ್ತಿಗೂ ಮೂಲವೋ ಅದೇ ಸಕಲ ವಿಶ್ವವನ್ನೂ ಭಕ್ಷಿಸುತ್ತದೆ. ಇದೇ ಸರ್ವಮೇಧವೆಂದು ಪ್ರಸಿದ್ಧವಾಗಿದೆ. ದಶರಾತ್ರಾತ್ಮಕವಾದ[1] ಯಜ್ಞಕ್ರಿಯೆಯೆಂದಿರುವ ಈ ಸರ್ವಮೇಧದ ವರ್ಣನೆಯು ಶತಪಥ ಬ್ರಾಹ್ಮಣದಲ್ಲಿ ಬರುತ್ತದೆ[2].
ಸರ್ವಾಂತರ್ಯಾಮಿಯಾದ ಪರಮ ಪುರುಷನು ತನ್ನದೇ ಅವಯವವಾದ ಸಕಲ ಜಗತ್ತನ್ನೂ ತನ್ನನ್ನು ಆಹುತಿಯನ್ನಾಗಿ ಅರ್ಪಿಸಿ ಆ ಸರ್ವಾತ್ಮಕವಾದ ಅಹುತಿಯಿಂದ ನೆರವೇರಿಸಿದ ಯಜ್ಞದ ಫಲವಾಗಿ ಜಗತ್ಸೃಷ್ಟಿಯು ಅವಿಚ್ಛಿನ್ನವಾಗಿ ನಡೆಯುತ್ತಿದೆ ಎನ್ನುವುದನ್ನೂ ಸರ್ವಹುತಃ ಎಂಬ ಶಬ್ದದಿಂದ ಸೂಚಿತವಾಗುತ್ತದೆ. ಈ ದೃಷ್ಟಿಯಲ್ಲಿ ವಿಶ್ವದಲ್ಲಿನ ಸಮಸ್ತ ಸೃಷ್ಟಿಗೂ ಯಜ್ಞಾಗ್ನಿಯೇ ಮೂಲವೆಂದು ತಿಳಿಯುತ್ತದೆ. ಸಕಲ ವಿಶ್ವವೂ ಯಜ್ಞಮಯವಾಗಿಯೇ ಇರುತ್ತದೆ ಎಂದೂ, ಪ್ರತಿಯೊಂದು ಯಜ್ಞದ ಫಲವಾಗಿಯೂ ಹೊಸ ಸೃಷ್ಟಿಯ ಸಂಭವಿಸುತ್ತದೆಯೆಂದೂ ಸೃಷ್ಟಿಯ ಯಜ್ಞಮೂಲತ್ವವು ವರ್ಣಿತವಾಗಿದೆ. ಸೃಷ್ಟಿಗೆ ಯಜ್ಞವೇ ಹೇತು. ಪುನಃ ಸೃಷ್ಟವಾದ ಸಕಲ ವಸ್ತುಗಳೂ ಪುನಃ ಯಜ್ಞಕ್ಕೆ ಆಹುತಿಯಾಗಿ ಪುನಃ ಸೃಷ್ಟಿ. ಹೀಗೆ ಈ ಸರ್ವಮೇಧತತ್ತ್ವವು ವಿಶ್ವದ ಐಕ್ಯವನ್ನೂ ಈ ಐಕ್ಯದ ನೆಲೆಯು ಪರಮಾತ್ಮನೆಂಬ ಬೃಹತ್ತತ್ತ್ವವೆಂದೂ ತಿಳಿಸುತ್ತದೆ. ಉಪನಿಷಾದಿಗಳಲ್ಲಿ ಯಾವ ಮೂಲತತ್ತ್ವವನ್ನು ಪರಬ್ರಹ್ಮನೆಂದು ಕರೆದಿವೆಯೋ ಅದನ್ನು ಸಂಹಿತಾ ಬ್ರಾಹ್ಮಣಗಳಲ್ಲಿ ಪ್ರಜಾಪತಿಯೆಂದು ಕರೆದಿವೆ. ಮತ್ತು ಯಜ್ಞಕ್ಕೂ ಪ್ರಜಾಪತಿಗೂ ತಾದಾತ್ಮ್ಯವನ್ನು ಹೇಳಿದೆ. ವಿಶ್ವಸೃಷ್ಟಿಯು ಪ್ರಜಾಪತಿಯ ಸರ್ವಮೇಧದ ರೂಪದ ತಪಸ್ಸಿನ ಫಲವು. ಜಗತ್ಕಾರಣನೂ, ಜಗತ್ಸೃಷ್ಟಿಗೆ ಪೂರ್ವಭಾವಿಯಾಗಿ ಅದ್ವಿತೀಯನೂ ಆಗಿದ್ದ ಪ್ರಜಾಪತಿಯು ಸೃಷ್ಟಿಸಾಧನವಾದ ಯಜ್ಞವನ್ನು ನಿರ್ವಹಿಸಬೇಕಾದರೆ ಅದಕ್ಕೆ ತನ್ನನ್ನೇ, ಅಂದರೆ, ಸಕಲ ವಿಶ್ವವನ್ನೂ ಒಳಗೊಂಡ ತನ್ನ ಪೂರ್ಣರೂಪವನ್ನೇ ಆಹುತಿಯನ್ನಾಗಿ ಅರ್ಪಿಸಬೇಕಾಯಿತು[3].
ಮೇಲೆ ವರ್ಣಿತವಾದ ಸರ್ವಮೇಧದಿಂದ (ಅಥವಾ ಪುರುಷಮೇಧದ ಫಲವಾಗಿ) ಪೃಷದಾಜ್ಯವು ಸಂಪಾದಿತವಾಯಿತೆಂದು ಪ್ರಕೃತ ಋಕ್ಕು ತಿಳಿಸಿದೆ. ಯಜ್ಞಸಂಪಾದನೆಗೆ ಆಜ್ಯವೇ ಮುಖ್ಯ ಸಾಧನ. ಈ ಮುಖ್ಯಸಾಧನವೇ ಯಜ್ಞದಿಂದ ಉತ್ಪನ್ನವಾಗಿತೆಯೆಂದೂ ತಿಳಿಸಿದೆ. ಆಜ್ಯವು ಯಜ್ಞದ ನಿರ್ವಹಣೆಗೆ ಅತ್ಯುತ್ತಮ ಸಾಧನವೆಂದಿದೆ[4]. ದೇವತೆಗಳು ಈ ರಹಸ್ಯವನ್ನು ಅರಿತು ಯಜ್ಞಕ್ಕೆ ಆಜ್ಯದ ಸ್ಥಾನವನ್ನು ಕಲ್ಪಿಸಿದರು ಎಂದಿದೆ[5]. ಪೃಷದಾಜ್ಯಕ್ಕೆ ದಧಿಮಿಶ್ರಿತವಾದ ಆಜ್ಯವೆಂದು ಭಾಷ್ಯಕಾರರು ತಾತ್ಪರ್ಯ ಮಾಡಿದ್ದಾರೆ. ಯಾಗದಲ್ಲಿ ಪೃಥ್ವೀತತ್ತ್ವದ ದಧಿ ಮತ್ತು ಅಂತರಿಕ್ಷದ ತತ್ತ್ವದ ಆಜ್ಯದ ಸ್ಥಾನಗಳ ಕುರಿತು ಮತ್ತು ಇವೆರಡರ ಪ್ರಭಾವಗಳ ಕುರಿತು ಶತಪಥಬ್ರಾಹ್ಮಣದಲ್ಲಿ ಬರುತ್ತದೆ[6]. ಯಜ್ಞದಿಂದ ಪಶ್ವಾದಿಗಳಿಗೆ ಅನ್ನವು ಲಭಿಸಿ ತತ್ಫಲವಾಗಿ ಪೃಷದಾಜ್ಯದ ಉತ್ಪತ್ತಿ. ಪುನಃ ಪೃಷದಾಜ್ಯದ ಅರ್ಪಣೆಯಿಂದ ಯಜ್ಞಾಚರಣೆ. ಹೀಗೆ ವಿಶ್ವದ ಸೃಷ್ಟಿ ಮತ್ತು ಸ್ಥಿತಿಕಾರ್ಯಗಳಿಗೆ ಅತ್ಯುಪಯುಕ್ತವಾದ ಯಜ್ಞ ಮತ್ತು ಘೃತಗಳ ಅನ್ಯೋನ್ಯಾಶ್ರವನ್ನು ತಿಳಿಸಿದ್ದಾರೆ.
ಸರ್ವಾತ್ಮಕವಾದ ಈ ಯಜ್ಞದಿಂದ ವಾಯುದೇವತಾಕವಾದ ಪಶುಗಳನ್ನೂ ಉಳಿದ ಗ್ರಾಮ್ಯ ಮತ್ತು ಆರಣ್ಯಕ ಪಶುಗಳನ್ನೂ ಪ್ರಜಾಪತಿಯು ಉತ್ಪನ್ನಮಾಡಿದನು ಎಂದು ಈ ಮಂತ್ರದ ಉತ್ತರಾರ್ಧವು ತಿಳಿಸುತ್ತದೆ. ಆದಿತ್ಯದೇವತಾಕ ಮತ್ತು ವಾಯುದೇವತಾಕ ಎಂಬ ಯಜ್ಞಪಶುಗಳು ಎರಡು ವಿಧ[7]. ಈ ಪಶುಗಳು ಎರಡು ವಿಧ: ಗ್ರಾಮ್ಯ[8] ಮತ್ತು ಆರಣ್ಯ[9].
ತಸ್ಮಾದ್ಯಜ್ಞಾತ್ಸರ್ವಹುತ ಋಚಃ ಸಾಮಾನಿ ಜಜ್ಞಿರೇ । ಛಂದಾಂಸಿ ಜಜ್ಞಿರೇ ತಸ್ಮಾದ್ಯಜುಸ್ತಸ್ಮಾದಜಾಯತ ।। 9 ।।
ಸರ್ವಹುತಃ – ಸರ್ವಾತ್ಮಕನಾದ ವಿರಾಟ್ಪುರುಷನೇ ಆಹುತಿಯಾಗುಳ್ಳ । ತಸ್ಮಾತ್ ಯಜ್ಞಾತ್ – ಆ ಯಜ್ಞದಿಂದ । ಋಚಃ – ಋಙ್ಮಂತ್ರಗಳೂ । ಸಾಮಾನಿ – ಸಾಮಮಂತ್ರಗಳೂ । ಜಜ್ಞಿರೇ – ಉತ್ಪನ್ನವಾದವು । ತಸ್ಮಾತ್ – ಅದರಿಂದಲೇ । ಛಂದಾಂಸಿ – ಗಾಯತ್ರ್ಯಾದಿ ಛಂದಸ್ಸುಗಳೂ । ಜಜ್ಞಿರೇ- ಉತ್ಪನ್ನವಾದವು । ತಸ್ಮಾತ್ – ಆ ಯಜ್ಞದಿಂದಲೇ । ಯಜುಃ - ಯಜುಸ್ಸೂ । ಅಜಾಯತ - ಉತ್ಪನ್ನವಾಯಿತು ।
ಸರ್ವಾತ್ಮಕನಾದ ವಿರಾಟ್ಪುರುಷನೇ ಆಹುತಿಯಾಗುಳ್ಳ ಆ ಯಜ್ಞದಿಂದಲೇ ಋಙ್ಮಂತ್ರಗಳೂ ಸಾಮಗಳೂ ಉತ್ಪನ್ನವಾದವು. ಅದರಿಂದಲೇ ಗಾಯತ್ರ್ಯಾದಿ ಛಂದಸ್ಸುಗಳೂ ಉತ್ಪನ್ನವಾದವು. ಆ ಯಜ್ಞದಿಂದಲೇ ಯಜುಸ್ಸೂ ಉತ್ಪನ್ನವಾಯಿತು.
ಸರ್ವಹುತಃ ಎಂಬ ವಿಶೇಷಣದಿಂದ ವರ್ಣಿತವಾಗಿರುವ ಈ ಯಜ್ಞದಿಂದ ಋಗಾದಿ ವೇದಗಳೂ, ಗಾಯತ್ರ್ಯಾದಿ ಛಂದಸ್ಸುಗಳೂ ಉತ್ಪನ್ನವಾದವು ಎಂದು ಈ ಋಕ್ಕಿನಲ್ಲಿ ತಿಳಿಸಿದೆ.
ತಸ್ಮಾದಶ್ವಾ ಅಜಾಯಂತ ಯೇ ಕೇ ಚೋಭಯಾದತಃ । ಗಾವೋ ಹ ಜಜ್ಞಿರೇ ತಸ್ಮಾತ್ತಸ್ಮಾಜ್ಜಾತಾ ಅಜಾವಯಃ ।। 10 ।।
ತಸ್ಮಾತ್ – ಆ ವಿಶ್ವಯಜ್ಞದಿಂದ । ಅಶ್ವಾಃ - ಅಶ್ವಗಳು । ಅಜಾಯಂತ – ಉತ್ಪನ್ನವಾದವು । ಚ - ಮತ್ತು । ಉಭಯಾದತಃ – ಎರಡು ಸಾಲು ಹಲ್ಲುಗಳಿರುವ ಇತರ । ಯೇ ಕೇ – ಯಾವ ಯಾವ ಪ್ರಾಣಿಗಳಿವೆಯೋ ಅವೂ ಉತ್ಪನ್ನವಾದವು । ತಸ್ಮಾತ್ – ಆ ಯಜ್ಞದಿಂದಲೇ । ಗಾವೋ ಹ – ಗೋವುಗಳೂ । ಜಜ್ಞಿರೇ – ಹುಟ್ಟಿದವು । ತಸ್ಮಾತ್ – ಅದರಿಂದಲೇ । ಅಜಾವಯಃ – ಆಡು, ಕುರಿ ಮೊದಲಾದವುಗಳು । ಜಾತಾಃ – ಹುಟ್ಟಿದವು ।
ವಿರಾಟ್ಪುರುಷನನ್ನು ಆಹುತಿಯಾಗಿ ಅರ್ಪಿಸಿದ ನಂತರ ಆ ಯಜ್ಞದಿಂದ ಎರಡು ಸಾಲು ಹಲ್ಲುಗಳಿರುವ ಅಶ್ವಗಳೂ, ಅಶ್ವವ್ಯತಿರಿಕ್ತವಾದ ಇತರ ಪ್ರಾಣಿಗಳೂ, ಅದರಿಂದಲೇ ಗೋವುಗಳೂ, ಆಡು, ಕುರಿ ಮತ್ತು ತಜ್ಜಾತೀಯವಾದ ಇತರ ಪ್ರಾಣಿಗಳೂ ಉತ್ಪನ್ನವಾದವು.
ಯಜ್ಞರೂಪನಾದ ಪ್ರಜಾಪತಿಯಿಂದ ತನ್ನ ಆತ್ಮಯಜ್ಞದ ಫಲವಾಗಿ ಉತ್ಪನ್ನವಾದ ಪ್ರಾಣಿಗಳ ಕುರಿತು ಇದು ತಿಳಿಸುತ್ತದೆ. ಪ್ರಥಮತಃ ಅಶ್ವಗಳು ಮತ್ತು ಗರ್ದಭಾದಿಗಳು. ಉಭಯಾದತಃ ಎಂದರೆ ಎರಡು ಕಡೆಯೂ ಕಡಿದು ತಿನ್ನುವ ಎರಡು ಸಾಲು ಹಲ್ಲುಗಳಿರುವ ಪ್ರಾಣಿಗಳೆಂದು ಅರ್ಥ. ಯಜ್ಞಮೂಲನಾದ ಪ್ರಜಾಪತಿ ಅಥವಾ ಅಗ್ನಿರೂಪನಾದ ಪ್ರಜಾಪತಿಯಿಂದಲೇ ಅಶ್ವಾದಿಗಳ ಉತ್ಪತ್ತಿಯೆಂದು ಶತಪಥ ಬ್ರಾಹ್ಮಣದಲ್ಲಿಯೂ ಬರುತ್ತದೆ[10].
ಯತ್ಪುರುಷಂ ವ್ಯದಧುಃ ಕತಿಧಾ ವ್ಯಕಲ್ಪಯನ್ । ಮುಖಂ ಕಿಮಸ್ಯ ಕೌ ಬಾಹೂ ಕಾ ಊರೂ ಪಾದಾ ಉಚ್ಯೇತೇ ।। 11 ।।
ಯತ್ - ಯಾವಾಗ । ಪುರುಷಂ – ವಿರಾಟ್ಪುರುಷನನ್ನು । ವ್ಯದಧುಃ – ಯಜ್ಞಾಹುತಿಯನ್ನಾಗಿ ಸಂಕಲ್ಪಿಸಿದರೋ ಆಗ । ಕತಿಧಾ – ಎಷ್ಟು ಪ್ರಕಾರವಾಗಿ । ವ್ಯಕಲ್ಪಯನ್ – ಅವನನ್ನು ವಿಭಾಗಿಸಿದರು । ಅಸ್ಯ – ಈ ಪುರುಷನ । ಮುಖಂ – ಮುಖವು । ಕಿಂ - ಯಾವುದು । ಅಸ್ಯ - ಇವನ । ಬಾಹೂ – ಬಾಹುಗಳು । ಕಾ – ಯಾವುವು । ಊರೂ – ತೊಡೆಗಳೂ । ಪಾದೌ – ಪಾದಗಳೂ । ಕೌ – ಯಾವುವು ಎಂದು । ಉಚ್ಯೇತೇ – ಹೇಳುತ್ತಾರೆ ।
ಈ ವಿರಾಟ್ಪುರುಷನನ್ನು ಯಜ್ಞಾಹುತಿಯ ರೂಪದಲ್ಲಿ ಅರ್ಪಿಸಲು ಸಂಕಲ್ಪಿಸಿದಾಗ ಅವನನ್ನು ಎಷ್ಟುಪ್ರಕಾರವಾಗಿ ವಿಭಾಗಿಸಿದರು? ಈ ಪುರುಷನ ಮುಖವ್ಯಾವುದು? ಇವನ ಬಾಹುಗಳು ಯಾವುವು? ಇವನ ತೊಡೆಗಳೂ ಮತ್ತು ಪಾದಗಳೂ ಯಾವುವು?
ಈ ಋಕ್ಕಿನಲ್ಲಿ ಮತ್ತು ಮುಂದಿನ ಋಕ್ಕಿನಲ್ಲಿ ಪ್ರಶ್ನೋತ್ತರ ರೂಪದಲ್ಲಿ ಸೃಷ್ಟಿಕ್ರಮವು ವಿವೃತವಾಗಿದೆ. ಈ ಸೂಕ್ತದ ನಾಲ್ಕನೇ ಋಕ್ಕಿನ ಉತ್ತರಾರ್ಧದಲ್ಲಿ ತತೋ ವಿಷ್ವಙ್ ವ್ಯಕ್ರಾಮತ್ – ದೇವತೆಗಳು, ಮನುಷ್ಯರು, ತಿರ್ಯಗ್ಜಂತುಗಳು ಮೊದಲಾದ ಅನೇಕ ವಿಧದ ಪ್ರಾಣಿಗಳ ಉತ್ಪತ್ತಿಯಾಯಿತು. ಅಂದರೆ ಪರಮಾತ್ಮನೇ ನಾನಾವಿಧದ ಶರೀರಗಳಿಂದ ಆವಿರ್ಭೂತನಾದನು ಎಂದು ಹೇಳಿ, ಇದೂವರೆಗೂ ದೇವತೆಗಳು ಮತ್ತು ಪಶುಗಳ ಉತ್ಪತ್ತಿಯನ್ನು ಹೇಳಿದ್ದಾಯಿತು. ಪ್ರಕೃತ ಋಕ್ಕಿನಲ್ಲಿ ಮನುಷ್ಯರ ಉತ್ಪತ್ತಿಯು ಹೇಗಾಯಿತು ಎಂಬ ಪ್ರಶ್ನೆಯು ಸೂಚಿತವಾಗಿ ಅದಕ್ಕೆ ಪ್ರತ್ಯುತ್ತರವಾಗಿ ಮುಂದಿನ ಋಕ್ಕಿನಲ್ಲಿ ಬ್ರಾಹ್ಮಣಾದಿ ವರ್ಣಚತುಷ್ಟಯಗಳ ಉತ್ಪತ್ತಿಕ್ರಮವನ್ನು ವಿವರಿಸಿದೆ.
ಯತ್ಪುರುಷಂ ವ್ಯದಧುಃ ಕತಿಧಾ ವ್ಯಕಲ್ಪಯನ್ – ವಿರಾಟ್ಪುರುಷನ ಉತ್ಪತ್ತಿಯಾದ ನಂತರ ಮುಂದೆ ಮನುಷ್ಯವರ್ಗದ ಸೃಷ್ಟಿಯು ಯಾವಪ್ರಕಾರವಾಗಿ ಅಥವಾ ಎಷ್ಟು ವಿಧವಾಗಿ ಆಯಿತು ಎಂಬ ಪ್ರಶ್ನೆಯು ಇಲ್ಲಿ ಉಕ್ತವಾಗಿದೆ. ಇಲ್ಲಿ ಕತಿಧಾ ಎಂದರೆ ಎಷ್ಟು ವಿಧವಾಗಿ ಎಂಬ ಅರ್ಥವು. ಅಂದರೆ ಮನುಷ್ಯರಲ್ಲಿ ಯಾವ ಭೇದಗಳು, ಎಷ್ಟು, ಹೇಗೆ ಉಂಟಾದವು ಎಂಬ ಅಭಿಪ್ರಾಯವು. ಅದನ್ನೇ ಈ ಋಕ್ಕಿನ ಉತ್ತರಾರ್ಧದಲ್ಲಿ ಸ್ಪಲ್ಪ ವಿಶದವಾಗಿ ಪ್ರಶ್ನೆಯರೂಪದಲ್ಲಿ ಕೇಳಲಾಗಿದೆ.
ಮುಖಂ ಕಿಮಸ್ಯ, ಕೌ ಬಾಹೌ, ಕೌ ಊರೂ, ಕೌ ಪಾದೌ – ಈ ಪರಮ ಪುರುಷನ ಮುಖದಿಂದ ಉತ್ಪನ್ನವಾದದ್ದೇನು? ಬಾಹುಗಳಿಂದ ಯಾರು ಉತ್ಪನ್ನರಾದರು? ಊರೂ ಎಂದರೆ ತೊಡೆಗಳಿಂದ ಉತ್ಪನ್ನರಾದವರು ಯಾರು? ಪಾದಗಳಿಂದ ಯಾರು ಉತ್ಪನ್ನರಾದರು ಎಂಬ ಈ ನಾಲ್ಕು ಪ್ರಶ್ನೆಗಳಿಗೂ ಮುಂದಿನ ಋಕ್ಕಿನ ನಾಲ್ಕು ಪಾದಗಳಲ್ಲಿ ಕ್ರಮವಾಗಿ ಉತ್ತರವು ವಿವೃತವಾಗಿದೆ.
ಬ್ರಾಹ್ಮಣೋಽಸ್ಯ ಮುಖಮಾಸೀದ್ಬಾಹೂ ರಾಜನ್ಯಃ ಕೃತಃ । ಊರೂ ತಸಸ್ಯ ಯದ್ವೈಶ್ಯಃ ಪದ್ಭ್ಯಾಂ ಶೂದ್ರೋ ಅಜಾಯತ ।। 12 ।।
ಬ್ರಾಹ್ಮಣಃ – ಬ್ರಾಹ್ಮಣನೇ । ಅಸ್ಯ – ಈ ಪುರುಷನ । ಮುಖಂ – ಮುಖವಾಗಿ । ಆಸೀತ್ - ಆದನು (ಇವನ ಮುಖದಿಂದ ಬ್ರಾಹ್ಮಣನು ಉತ್ಪನ್ನನಾದನು) । ಬಾಹೂ – ಬಾಹುಗಳು । ರಾಜನ್ಯಃ – ಕ್ಷತ್ರಿಯರೂಪವಾಗಿ । ಕೃತಃ – ಮಾಡಲ್ಪಟ್ಟವು (ಬಾಹುಗಳಿಂದ ಕ್ಷತ್ರಿಯರು ಉತ್ಪನ್ನರಾದರು) । ತತ್ - ಆಗ । ಅಸ್ಯ – ಈ ಪುರುಷನ । ಊರೂ – ತೊಡೆಗಳು । ವೈಶ್ಯಃ – ವೈಶ್ಯರೂಪದಲ್ಲಿ ಪರಿಣಮಿಸಿದವು । ಪದ್ಭ್ಯಾಂ – ಪಾದಗಳಿಂದ । ಶೂದ್ರಃ – ಶೂದ್ರನು । ಅಜಾಯತ – ಉತ್ಪನ್ನನಾದನು ।
ಈ ಪುರುಷನ ಮುಖದಿಂದ ಬ್ರಾಹ್ಮಣನೂ, ಬಾಹುಗಳಿಂದ ಕ್ಷತ್ರಿಯರೂ ಉತ್ಪನ್ನರಾದರು. ಇವನ ತೊಡೆಗಳಿಂದ ವೈಶ್ಯರೂ, ಪಾದಗಳಿಂದ ಶೂದ್ರರೂ ಉತ್ಪನ್ನರಾದರು.
ಇದೇ ವಿಷಯವು ತೈತ್ತರೀಯ ಸಂಹಿತೆಯಲ್ಲಿ ಈ ರೀತಿ ತಿಳಿಸುತ್ತದೆ: ಪ್ರಜಾಪತಿರ್ವಾವ ಜ್ಯೇಷ್ಠಸ್ಸ ಹ್ಯೇತೇನಾಗ್ರೇಽಯಜತ ಪ್ರಜಾಪತಿರಕಾಮಯತ ಪ್ರ ಜಾಯೇ ತೇತಿ ಸ ಮುಖತಸ್ತ್ರಿವೃತಂ ನಿರಮಿಮೀತ ತಮಗ್ನಿರ್ದೇವತಾಽನ್ವಸೃಜ್ಯತ ಗಾಯತ್ರೀಚ್ಛಂದೋ ರಥಂತರಗ್ಂ ಸಾಮ ಬ್ರಾಹ್ಮಣೋ ಮನುಷ್ಯಾಣಾಮಜಃ ಪಶೂನಾಂ ತಸ್ಮಾತ್ತೇ ಮುಖ್ಯಾ ಮುಖತೋ ಹೃಸ್ಯಜ್ಯಂತ ।। ಅರ್ಥಾತ್: ಅತ್ಯುತ್ತಮವಾದ ಯಜ್ಞವನ್ನು ನಿರ್ವಹಿಸಿ ಪ್ರಜಾಪತಿಯು ಪ್ರಜಾಕಾಮನಾದನು. ತ್ರಿವೃತ್ಸ್ತೋಮತವನ್ನು ನಿರ್ಮಿಸಿದನು. ನಂತರ ದೇವತೆಗಳಲ್ಲಿ ಅಗ್ನಿಯೂ, ಛಂದಸ್ಸುಗಳಲ್ಲಿ ಗಾಯತ್ರಿಯೂ, ಸಾಮಗಳಲ್ಲಿ ರಥಂತರವೂ, ಮಾನವರಲ್ಲಿ ಬ್ರಾಹ್ಮಣನೂ, ಪಶುಗಳಲ್ಲಿ ಆಡೂ ಸೃಷ್ಟವಾದವು (ತೈತ್ತರೀಯ ಸಂಹಿತೆ, 7-1-1-4). ಮುಖದಿಂದ ಉತ್ಪನ್ನರಾದುದರಿಂದ ಇವುಗಳಿಗೆ ಮುಖ್ಯ ಸ್ಥಾನವಿದೆ.
ಉರಸೋ ಬಾಹುಭ್ಯಾಂ ಪಂಚದಶಂ ನಿರಮಿಮೀತ ತಮಿಂದ್ರೋ ದೇವತಾನ್ವಸೃಜ್ಯತ ತ್ರಿಷ್ಟುಪ್ ಚ್ಛಂದೋ ಬೃಹತ್ಸಾಮ ರಾಜನ್ಯೋ ಮನುಷ್ಯಾಣಾಮವಿಃ ಪಶೂನಾಂ ತಸ್ಮಾತ್ತೇ ವೀರ್ಯಾವಂತೋ ವೀರ್ಯಾದ್ಧ್ಯಸೃಜ್ಯಂತ ।। ಅರ್ಥಾತ್: ಉರಸ್ಸು (ಎದೆ) ಮತ್ತು ಬಾಹುಗಳಿಂದ ಪಂಚದಶಸ್ತೋಮವನ್ನು ನಿರ್ಮಿಸಿದನು. ಅನಂತರ ದೇವತೆಗಳಲ್ಲಿ ಇಂದ್ರನೂ, ಛಂದಸ್ಸುಗಳಲ್ಲಿ ತ್ರಿಷ್ಟುಪ್ಪೂ, ಸಾಮಗಳಲ್ಲಿ ಬೃಹತ್ತೂ, ಮಾನವರಲ್ಲಿ ರಾಜನ್ಯನೂ, ಪಶುಗಳಲ್ಲಿ ಕುರಿಯೂ ಉತ್ಪನ್ನವಾದವು. ವೀರ್ಯದಿಂದ ಉತ್ಪನ್ನರಾದುದರಿಂದ ಅವರೆಲ್ಲರೂ ವೀರ್ಯವಂತರು. (ತೈತ್ತರೀಯ ಸಂಹಿತೆ, 3-1-1-4,5)
ಮಧ್ಯತಸ್ಸಸ್ತದಶಂ ನಿರಮಿಮೀತ ತಂ ವಿಶ್ವೇ ದೇವಾ ದೇವತಾ ಅನ್ವಸೃಜ್ಯಂತ ಜಗತೀಚ್ಛಂದೋ ವೈರೂಪಗ್ಂ ಸಾಮ ವೈಶ್ಯೋ ಮನುಷ್ಯಾಣಾಂ ಗಾವಃ ಪಶೂನಾಂ ತಸ್ಮಾತ್ತ ಆದ್ಯಾ ಅನ್ನಧಾನಾದ್ಧೃಸೂಜ್ಯಂತ ತಸ್ಮಾದ್ಭೂಯಾಗ್ಂಸೋಽನ್ಯೇಭ್ಯೋ ಭೂಯಿಷ್ಠಾ ಹಿ ದೇವತಾ ಅನ್ವಸೃಜ್ಯಂತ ।। ಅರ್ಥಾತ್: ದೇಹದ ಮಧ್ಯಪ್ರದೇಶದಿಂದ (ಉದರ) ಸಪ್ತದಶಸ್ತೋಮವನ್ನು ನಿರ್ಮಿಸಿದನು. ಅನಂತರ ವಿಶ್ವೇದೇವತೆಗಳೂ, ಛಂದಸ್ಸಿನಲ್ಲಿ ಜಗತಿಯೂ, ಸಾಮಗಳಲ್ಲಿ ವೈರೂಪವೂ, ಮಾನವರಲ್ಲಿ ವೈಶ್ಯರೂ, ಪಶುಗಳಲ್ಲಿ ಗೋವುಗಳೂ, ಉತ್ಪನ್ನವಾದವು. ಉದರದಿಂದ ಉತ್ಪನ್ನವಾದ್ದರಿಂದ ಅವೆಲ್ಲವೂ ಅನ್ನಯೋಗ್ಯವಾದವು. ಅನೇಕ ದೇವತೆಗಳನ್ನು ಅವಲಂಬಿಸಿ ಉತ್ಪನ್ನರಾದ್ದರಿಂದ ವೈಶ್ಯಾದಿಗಳು ಇತರರಿಗಿಂತಲೂ ಅಧಿಕ ಸಂಖ್ಯೆಯಲ್ಲಿರುತ್ತಾರೆ. (ತೈತ್ತರೀಯ ಸಂಹಿತೆ, 7-1-1-5)
ಪತ್ತ ಏಕವಿಗ್ಂಶಂ ನಿರಮಿಮೀತ ತಮನುಷ್ಟುಪ್ ಛಂದಃ ಅನ್ವಸೃಜ್ಯತ ವೈರಾಜಗ್ಂ ಸಾಮ ಶೂದ್ರೋ ಮನುಷ್ಯಾಣಾಮಶ್ವಃ ಪಶೂನಾಂ ತಸ್ಮಾತ್ತಾ ಭೂತಸಂಕ್ರಾಮಿಣಾವಶ್ವಶ್ಚ ಶೂದ್ರಶ್ಚ ತಸ್ಮಾಚ್ಛೂದ್ರೋ ಯಜ್ಞೇಽನವಕ್ಲೃಪ್ತಾಃ ನ ಹಿ ದೇವತಾ ಅವಸೃಜ್ಯತ ತಸ್ಮಾತ್ಪಾದಾವುಜೀವತಃ ಪತ್ತೋ ಹ್ಯಸೃಜ್ಯೇತಾಂ ।। ಅರ್ಥಾತ್: ಪಾದಗಳಿಂದ ಏಕವಿಂಶಸ್ತೋಮವನ್ನು ಪ್ರಜಾಪತಿಯು ನಿರ್ಮಿಸಿದನು. ಅನಂತರ ಛಂದಸ್ಸುಗಳಲ್ಲಿ ಅನುಷ್ಟುಪ್ಪೂ, ಸಾಮಗಳಲ್ಲಿ ವೈರಾಜವೂ, ಮನುಷ್ಯರಲ್ಲಿ ಶೂದ್ರರೂ, ಪಶುಗಳಲ್ಲಿ ಅಶ್ವವೂ ಉತ್ಪನ್ನವಾದವು. ಆದುದರಿಂದಲೇ ಶೂದ್ರ ಮತ್ತು ಅಶ್ವಗಳು ಇತರರ ಅಧೀನದಲ್ಲಿರುತ್ತಾರೆ. ಶೂದ್ರನು ದೇವತೆಗಳನ್ನು ಅವಲಂಬಿಸಿ ಉತ್ಪನ್ನನಾಗಲಿಲ್ಲ. ಆದ್ದರಿಂದಲೇ ಅವನಿಗೆ ಯಜ್ಞಾಧಿಕಾರವಿಲ್ಲ. ಪಾದಗಳಿಂದ ಉತ್ಪನ್ನವಾದ್ದರಿಂದ ಅಶ್ವ ಮತ್ತು ಶೂದ್ರರು ತಮ್ಮ ಕಾಲುಗಳನ್ನೇ ಅವಲಂಬಿಸಿ ಜೀವಿಸಬೇಕಾಗುತ್ತದೆ. (ತೈತ್ತರೀಯ ಸಂಹಿತೆ, 7-1-1-5,6)
ಅನೇಕ ಕಡೆಗಳಲ್ಲಿ ಬ್ರಾಹ್ಮಣ್ಯಕ್ಕೆ ಪ್ರಾಶಸ್ತ್ಯವಿದ್ದರೂ ಕೂಡ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಇವರೆಲ್ಲರೂ ಪ್ರಜಾಪತಿಯ ಪುತ್ರರೇ ಆದ್ದರಿಂದ, ಶಾಶ್ವತವಾಗಿ ಇವರೆಲ್ಲರೂ ಸಮಾನವಾದ ದಿವ್ಯತ್ವವನ್ನು ಹೊಂದಿರುತ್ತಾರೆ. ಮತ್ತು ಎಲ್ಲರೂ ಒಂದೇ ವಿಧವಾದ ದೇವತಾನುಗ್ರಹಕ್ಕೂ ಮತ್ತು ಸೌಖ್ಯಕ್ಕೂ ಅರ್ಹರು ಎಂಬ ವಿಷಯವನ್ನು ಸಂಹಿತಾ ಮತ್ತು ಉಪನಿಷಾದಿಗಳಲ್ಲೇ ಅನೇಕ ಕಡೆ ತಿಳಿಸಿದೆ. ಅಲ್ಲದೇ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಮತ್ತು ಶೂದ್ರ – ಈ ವರ್ಣಗಳು ಮನುಷ್ಯರಲ್ಲಿ ಮಾತ್ರವಲ್ಲಿ ದೇವತೆಗಳಲ್ಲಿಯೂ ಈ ವರ್ಣವಿಭಾಗವಿದೆ. ಅವರಲ್ಲಿ ಬ್ರಾಹ್ಮಣರು ಉತ್ತಮರು, ಕ್ಷತ್ರಿಯರು ಅವರಿಗಿಂತಲೂ ಕೆಳಗಿನವರು, ಎಂಬಂತಹ ವ್ಯತ್ಯಾಸವಿರುವುದಿಲ್ಲ.
ಚಂದ್ರಮ ಮನಸೋ ಜಾತಶ್ಚಕ್ಷೋಃ ಸೂರ್ಯೋ ಅಜಾಯತ । ಮುಖಾದಿಂದ್ರಶ್ಚಾಗ್ನಿಶ್ಚ ಪ್ರಾಣಾದ್ವಾಯುರಜಾಯತ ।। 13 ।।
ಮನಸಃ - ಮನಸ್ಸಿನಿಂದ । ಚಂದ್ರಮಾಃ – ಚಂದ್ರಮನು । ಜಾತಃ – ಹುಟ್ಟಿದನು । ಚಕ್ಷೋಃ - ಕಣ್ಣಿನಿಂದ । ಸೂರ್ಯಃ – ಸೂರ್ಯನು । ಅಜಾಯತ – ಹುಟ್ಟಿದನು । ಮುಖಾತ್ – ಮುಖದಿಂದ । ಇಂದ್ರಶ್ಚ ಅಗ್ನಿಶ್ಚ – ಇಂದ್ರ ಮತ್ತು ಅಗ್ನಿಗಳು ಹುಟ್ಟಿದರು । ಪ್ರಾಣಾತ್ – ಪ್ರಾಣದಿಂದ । ವಾಯುಃ - ವಾಯುವು । ಅಜಾಯತ – ಹುಟ್ಟಿದನು ।
ಈ ವಿರಾಟ್ಪುರುಷನ ಮನಸ್ಸಿನಿಂದ ಚಂದ್ರನೂ, ಕಣ್ಣಿನಿಂದ ಸೂರ್ಯನೂ, ಮುಖದಿಂದ ಇಂದ್ರಾಗ್ನಿಗಳೂ, ಪ್ರಾಣದಿಂದ ವಾಯುವೂ ಹುಟ್ಟಿದರು.
ಹಿಂದಿನ ಋಕ್ಕುಗಳಲ್ಲಿ ದಧ್ಯಾಜ್ಯಾದಿದ್ರವ್ಯಗಳು, ಗೋವುಗಳೇ ಮೊದಲಾದ ಪಶುಗಳು, ಋಗಾದಿ ವೇದಗಳು, ಬ್ರಾಹ್ಮಣಾದಿವರ್ಗದ ಮನುಷ್ಯರು ಉತ್ಪನ್ನರಾದಂತೆ ವಿರಾಟ್ಪುರುಷನಿಂದ ಚಂದ್ರಾದಿದೇವತೆಗಳ ಉತ್ಪತ್ತಿಯೂ ಆಯಿತೆಂದು ಈ ಋಕ್ಕಿನಲ್ಲಿ ಹೇಳಿದೆ.
ಚಂದ್ರಮಾ ಮನಸೋ ಜಾತಃ – ಚಂದ್ರ ಶಬ್ದಕ್ಕೆ ಎರಡು ವಿಧದ ರೂಪನಿಷ್ಪತ್ತಿಯಿದೆ: ಚದಿ- ಆಹ್ಲಾದನೇ । ಚಂದತೀತಿ ಚಂದ್ರಃ । ಮನಸ್ಸಿಗೆ ಆಹ್ಲಾದವನ್ನುಂಟುಮಾಡು ಎಂಬ ಅರ್ಥವಿರುವ ಚದಿ ಎಂಬ ಧಾತುವಿನಿಂದ ಚಂದ್ರಶಬ್ದವು ಹುಟ್ಟಿಕೊಂಡಿದೆ. ಇವನನ್ನು ನೋಡುವ ಜನರಿಗೆ ಆಹ್ಲಾದವನ್ನುಂಟುಮಾಡುವವನು ಎಂಬ ಅರ್ಥವು. ಆಹ್ಲಾದವು ಯಾವಾಗಲೂ ಮನಸ್ಸಿನ ಮೇಲೆ ಪರಿಣಾಮ ಬೀರುವುದರಿಂದ ಪರಮಪುರುಷನ ಮನಸ್ಸಿನಿಂದ ಚಂದ್ರನು ಉತ್ಪನ್ನನಾದನು ಎಂದು ಹೇಳಿದೆ. ಚಂದ್ರಶಬ್ದಕ್ಕಿರುವ ಎರಡನೇ ರೂಪನಿಷ್ಪತ್ತಯು: ಪ್ರಕಾಶಮಾನವಾಗಿ ಸಂಚರಿಸುವುದರಿಂದ ಅಥವಾ ಇದರ ಗತಿಯು ಪ್ರಕಾಶವನ್ನು ಬೀರುವುದರಿಂದ ಚಂದ್ರನೆಂದು ಹೆಸರು.
ಚಕ್ಷೋಃ ಸೂರ್ಯಃ ಅಜಾಯತ - ಪರಮ ಪುರುಷನ ಕಣ್ಣಿನಿಂದ ಸೂರ್ಯನು ಉತ್ಪನ್ನನಾದನು. ಕಣ್ಣಿಗೂ ಬೆಳಕಿಗೂ ಸಂಬಂಧವಿದೆ. ಬೆಳಕಿಲ್ಲದಿದ್ದರೆ ಕಣ್ಣಿನ ಉಪಯೋಗವಿಲ್ಲ. ಆದ್ದರಿಂದ ಬೆಳಕನ್ನು ಉಂಟುಮಾಡುವ ಸುರ್ಯನು ಕಣ್ಣಿನಿಂದ ಉತ್ಪನ್ನನಾದನೆಂದು ಹೇಳುವುದು ಸಕಾರಣವಾಗಿದೆ. ಸೂರ್ಯ ಶಬ್ದಕೆಕ ಮೂರು ವಿಧವಾದ ಅರ್ಥವಿವರಣೆಯಿದೆ: (1) ಅಂತರಿಕ್ಷದಲ್ಲಿ ಸಂಚರಿಸುವವನಾದ್ದರಿಂದ ಸೂರ್ಯ (2) ಸಕಲ ಪ್ರಾಣಿಗಳನ್ನೂ ಉತ್ಪತ್ತಿ ಮಾಡುವವನಾದ್ದರಿಂದ ಅಂದರೆ ಉತ್ಪತ್ತಿಗೆ ಕಾರಣನಾದ್ದರಿಂದ ಸೂರ್ಯ (3) ಸರ್ವರನ್ನೂ ಪ್ರೇರಿಸುವನಾದ್ದರಿಂದ ಸೂರ್ಯನೆಂದು ಹೆಸರು.
ಮುಖಾದಿಂದ್ರಶ್ಚಾಗ್ನಿಶ್ಚ – ಪರಮ ಪುರುಷನ ಮುಖದಿಂದ ಇಂದ್ರ ಮತ್ತು ಅಗ್ನಿದೇವತೆಗಳ ಉತ್ಪನ್ನವಾಯಿತು. ಶರೀರದ ಅವಯವಗಳಲ್ಲಿ ಮುಖ (ಶಿರಸ್ಸು) ಕ್ಕೇ ಹೆಚ್ಚು ಪ್ರಾಧಾನ್ಯವಿದೆ. ಆದ್ದರಿಂದ ಮುಖದಿಂದ ಉತ್ಪನ್ನರಾದ ಇಂದ್ರ ಮತ್ತು ಅಗ್ನಿಗಳಿಗೆ ದೇವತೆಗಳಲ್ಲಿಯೇ ಪ್ರಾಧಾನ್ಯತೆ ಇದೆ. ಈ ವಿಷಯದಲ್ಲಿ – ಅಗ್ನಿರಗ್ರೇ ಪ್ರಥಮೋ ದೇವತಾನಾಂ, ಅಗ್ನಿರ್ಮೂರ್ಧಾ ದಿವಃ, ಅಗ್ನಿರ್ವೈ ದೇವಾನಾಮವಮಃ ಇತ್ಯಾದಿ ಶ್ರುತಿವಾಕ್ಯಗಳು ಅಗ್ನಿಯ ಪ್ರಾಧಾನ್ಯತೆಯನ್ನೂ, ಇಂದ್ರೋ ಯಾತೊಽವಸಿತಸ್ಯ ರಾಜಾ ಇತ್ಯಾದಿ ವಾಕ್ಯಗಳು ಇಂದ್ರನ ಶ್ರೇಷ್ಠತೆಯನ್ನೂ ಪ್ರಶಂಸಿಸುತ್ತವೆ.
ಪ್ರಾಣಾದ್ವಾಯುರಜಾಯತ – ಪರಮ ಪುರುಷನ ಪ್ರಾಣದಿಂದ ವಾಯುವಿನ ಉತ್ಪತ್ತಿಯಾಯಿತು. ಪ್ರಾಣವು ವಾಯುರೂಪದಲ್ಲಿರುವುದನ್ನುವುದು ಪ್ರಸಿದ್ಧಿ. ಶರೀರಾಂತಃಸಂಚಾರ್ಯಸುಸ್ತಸ್ಮಾದ್ವಾತೀತಿ ವಾಯುರ್ಬರಿರ್ವರ್ತೀ ಮಾತರಿಶ್ವಾ । ಅರ್ಥಾತ್: ಶರೀರದಲ್ಲಿ ಸಂಚರಿಸುವ ವಾಯುವಿಗೆ ಪ್ರಾಣವೆಂದೂ ಹೊರಗಡೆ ಬೀಸುತ್ತಿರುವ ವಾಯುವಿಗೆ ವಾಯುವೆಂದೂ ಹೆಸರು. ಗತ್ಯರ್ಥಸೂಚಕವಾದ ವಾ ಧಾತುವಿನಿಂದ ವಾಯುಶಬ್ದವು ನಿಷ್ಪನ್ನವಾಗಿದೆ. ಸದಾ ಸಂಚರಿಸು(ಬೀಸು)ತ್ತಿರುವುದರಿಂದು ಎಂಬ ಅರ್ಥವು. ನಮಸ್ತೇ ವಾಯೋ । ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ । ಪ್ರಾಣೋ ಬ್ರಹ್ಮೇತಿ ವ್ಯಜಾನಾತ್ । ಪ್ರಾಣೇ ಸರ್ವಂ ಪ್ರತಿಷ್ಠಿತಂ । ಮೊದಲಾದ ಶ್ರುತಿವಾಕ್ಯಗಳು ವಾಯುವಿನ ಪ್ರಧಾನತ್ವವನ್ನು ತಿಳಿಸುವುದಲ್ಲದೇ ವಾಯುವಿಗೂ ಪ್ರಾಣಕ್ಕೂ ತಾದಾತ್ಮ್ಯವನ್ನು ಪ್ರಶಂಸಿಸಿದೆ.
ನಾಭ್ಯಾ ಆಸೀದಂತರಿಕ್ಷಂ ಶೀರ್ಷ್ಣೋ ದ್ಯೌಃ ಸಮವರ್ತತ । ಪದ್ಭ್ಯಾಂ ಭೂಮಿರ್ದಿಶಃ ಶ್ರೋತ್ರಾತ್ತಥಾ ಲೋಕಾನ್ ಅಕಲ್ಪಯನ್ ।। 14 ।।
ನಾಭ್ಯಾ – ಪುರುಷನ ಹೊಕ್ಕಳಿನಿಂದ । ಅಂತರಿಕ್ಷಂ – ಅಂತರಿಕ್ಷವು । ಆಸೀತ್ - ಉತ್ಪನ್ನವಾಯಿತು । ಶೀಷ್ಣಃ – ಶಿರಸ್ಸಿನಿಂದ । ದ್ಯೌಃ – ದ್ಯುಲೋಕವು । ಸಮವರ್ತತ – ಪ್ರಾದುರ್ಭೂತವಾಯಿತು । ಪದ್ಭ್ಯಾಂ – ಪಾದಗಳಿಂದ । ಭೂಮಿಃ - ಭೂಮಿಯೂ । ಶ್ರೋತ್ರಾತ್ – ಶ್ರೋತ್ರದಿಂದ (ಕಿವಿಯಿಂದ) । ದಿಶಃ – ದಿಕ್ಕುಗಳೂ ಉತ್ಪನ್ನವಾದವು । ತಥಾ – ಇದೇ ರೀತಿ । ಲೋಕಾನ್ – ಸಕಲ ಲೋಕಗಳನ್ನು । ಅಕಲ್ಪಯನ್ – ದೇವತೆಗಳು (ಪುರುಷನ ದೇಹದಿಂದ) ನಿರ್ಮಿಸಿದರು ।
ಪುರುಷನ ಹೊಕ್ಕಳಿನಿಂದ ಅಂತರಿಕ್ಷ ಉತ್ಪನ್ನವಾಯಿತು. ಶಿರಸ್ಸಿನಿಂದ ದ್ಯುಲೋಕವು ಪ್ರಾದುರ್ಭುತವಾಯಿತು. ಪಾದಗಳಿಂದ ಭೂಮಿಯೂ, ಕಿವಿಯಿಂದ ದಿಕ್ಕುಗಳೂ ಉತ್ಪನ್ನವಾದವು. ಇದೇ ರೀರಿ ಸಕಲ ಲೋಕಗಳನ್ನು ದೇವತೆಗಳು ಪುರುಷನ ದೇಹದಿಂದ ನಿರ್ಮಿಸಿದರು.
ನಾಭ್ಯಾ ಆಸೀದಂತರಿಕ್ಷಂ – ನಹನಮೇವ ನಾಭಿಃ – ಎಲ್ಲ ಅವಯವಗಳನ್ನೂ ಒಟ್ಟಾಗಿ ಸೇರಿಸುವ ಮಧ್ಯಸ್ಥಾನಕ್ಕೆ ನಾಭಿ ಎಂದು ಹೆಸರು. ಗ್ರಂಥಿಗಳೂ ನಾಡಿಗಳೂ ನಾಭಿಯಲ್ಲಿ ಚಕ್ರರೂಪದಲ್ಲಿ ಒಟ್ಟಾಗಿ ಸೇರಿರುತ್ತವೆ. ಆದ್ದರಿಂದ ನಾಭಿ ಶಬ್ದಕ್ಕೆ ಶರೀರದ ಮಧ್ಯ ಪ್ರದೇಶ ಎಂಬ ಅರ್ಥವಿದೆ. ದ್ಯಾವ್ಯಾ-ಪೃಥಿವಿಗಳ ಮಧ್ಯದ ಜಾಗಕ್ಕೆ ಅಂತರಿಕ್ಷವೆಂದು ಹೆಸರು. ಶರೀರದಲ್ಲಿ ನಾಭಿಯು ಹೇಗೆ ಮಧ್ಯ ಪ್ರದೇಶವಾಗಿದೆಯೋ ಹಾಗೆಯೇ ಆ ನಾಭಿಯಿಂದ ಉತ್ಪನ್ನವಾದ ಅಂತರಿಕ್ಷವೂ ದ್ಯಾವಾಪೃಥಿವಿಗಳ ಮಧ್ಯದಲ್ಲಿರುವ ಮಧ್ಯಪ್ರದೇಶವಾಗಿದೆ. ಹಾಗೆಯೇ ಈ ಋಕ್ಕಿನ ಮುಂದಿನ ಪಾದಗಳಲ್ಲಿ ಹೇಳಿರವಂತೆ ಶರೀರದ ಮೇಲ್ಭಾಗದಲ್ಲಿರುವ ಶಿರಸ್ಸಿನಿಂದ ತ್ರೈಲೋಕ್ಯಗಳಲ್ಲಿ ಎಲ್ಲಕ್ಕಿಂತಲೂ ಮೇಲ್ಭಾಗದಲ್ಲಿರ ದ್ಯು (ಸ್ವರ್ಗ) ಲೋಕವ ಉತ್ಪನ್ನವಾಯಿತು. ಮೂರುಲೋಕಗಳಲ್ಲಿ ಕೆಳಭಾಗದಲ್ಲಿರುವ ಭೂಮಿಯ ಶರೀರದ ಕೆಳಭಾಗದಲ್ಲಿರುವ ಪಾದಗಳಿಂದ ಉತ್ಪನ್ನವಾಯಿತು, ಮತ್ತು ಇತರ ಲೋಕಗಳೂ ಉತ್ಪನ್ನಗೊಂಡವು.
ಸಪ್ತಾಸ್ಯಾಸನ್ಪರಿಧಯಸ್ತ್ರಿಃ ಸಪ್ತ ಸಮಿಧಃ ಕೃತಾಃ । ದೇವಾ ಯದ್ಯಜ್ಞಂ ತನ್ವಾನಾ ಅಬಧ್ನನ್ಪುರುಷಂ ಪಶುಮ್ ।। 15 ।।
ಅಸ್ಯ – ಈ ಯಜ್ಞಕ್ಕೆ । ಸಪ್ತ – ಏಳು ಛಂದಸ್ಸುಗಳೂ । ಪರಿಧಯಃ – ಪರಿಧಿಗಳಾಗಿ (ಎಲ್ಲೆಕಟ್ಟುಗಳಾಗಿ) । ಆಸನ್ - ಆದವು । ತ್ರಿಃ ಸಪ್ತ -ಇಪ್ಪತ್ತೊಂದು ತತ್ತ್ವಗಳು । ಸಮಿಧಃ – ಸಮಿತ್ತುಗಳಾಗಿ । ಕೃತಾಃ – ನಿರ್ದಿಷ್ಟವಾದವು । ದೇವಾಃ – ದೇವತೆಗಳು । ಯತ್ – ಯಾವ ಪುರುಷನನ್ನು । ಯಜ್ಞಂ – ಯಜ್ಞಸಾಧನವನ್ನಾಗಿ । ತನ್ವಾನಾಃ – ಮಾಡಲಪೇಕ್ಷಿಸಿದರೋ । ಪುರುಷಂ – ಆ ಪುರುಷನನ್ನೇ । ಪಶುಂ – ಪಶುಸ್ಥಾನದಲ್ಲಿ । ಅಬಧ್ನನ್ – ಬಂಧಿಸಿದರು ।
ಈ ಯಜ್ಞಕ್ಕೆ ಏಳು ಛಂದಸ್ಸುಗಳೂ ಪರಿಧಿಗಳಾದವು. ಇಪ್ಪತ್ತೊಂದು ತತ್ತ್ವಗಳು ಸಮಿತ್ತುಗಳಾಗಿ ನಿರ್ದಿಷ್ಟವಾದವು. ಯಜ್ಞಸಾಧನನಾದ ಈ ಪುರುಷನನ್ನು ದೇವತೆಗಳು ಯೂಪಸ್ತಂಭಕ್ಕೆ ಕಟ್ಟಿದರು.
ದೇವತೆಗಳು ಮಾಡಿದ ಈ ಮಾನಸಯಾಗದಲ್ಲಿ ಪರಿಧಿಗಳು, ಸಮಿತ್ತುಗಳು ಮೊದಲಾದ ಯಜ್ಞಸಾಧನ ದ್ರವ್ಯಗಳು ಯಾವುವು ಎನ್ನುವುದನ್ನು ಈ ಋಕ್ಕು ಸೂಚಿಸುತ್ತದೆ. ಸಪ್ತಾಸ್ಯಾಸನ್ ಪರಿಧಯಃ – ಪರಿಧಿ ಎಂದರೆ ಅಗ್ನಿಕುಂಡದ, ಅಂದರೆ ಅಗ್ನಿಯ ಸುತ್ತಲೂ, ಅಂದರೆ ನಾಲ್ಕೂ ದಿಕ್ಕುಗಳಲ್ಲಿಯೂ ಇಡುವ ಸಮಿತ್ತುಗಳು ಅಥವಾ ದರ್ಭೆಗಳು. ಯಜ್ಞದಲ್ಲಿ ರಾಕ್ಷಸಾದಿಗಳು ಬಂದು ವಿಘ್ನಮಾಡದಿರಲೆಂದು ರಕ್ಷೋಘ್ನಸೂಚಕವಾಗಿ ಈ ವಿಧದ ಪರಿಧಿಗಳನ್ನು ಇಡುತ್ತಾರೆ. ಪರಿ – ಸುತ್ತಲೂ ಧಿ – ಇಡುವುದು ಎಂದು ಪರಿಧಿ ಶಬ್ದದ ಅರ್ಥವು. ದಕ್ಷಿಣ, ಪಶ್ಚಿಮ, ಉತ್ತರ ಎಂಬ ಮೂರು ದಿಕ್ಕುಗಳಲ್ಲಿ ಮಾತ್ರ ಪರಿಧಿಗಳನ್ನು ಇಡುತ್ತಾರೆ. ಪೂರ್ವದಲ್ಲಿ ಉದಯಿಸುವ ಸೂರ್ಯನೇ ರಾಕ್ಷಸಾದಿಗಳನ್ನು ನಾಶಮಾಡುವುದರಿಂದ ಆ ದಿಕ್ಕಿಗೆ ಪರಿಧಿಯು ಅವಶ್ಯಕವಿಲ್ಲವೆಂದು ಹೇಳಿದ್ದಾರೆ. ಗಾಯತ್ರಿಯೇ ಮೊದಲಾದ ಏಳು ಮುಖ್ಯ ಛಂದಸ್ಸುಗಳು[11] ಮತ್ತು ಆದಿತ್ಯ ಇವೇ ಈ ಏಳು ಪರಿಧಿಗಳು.
ತ್ರಿಃಸಪ್ತ ಸಮಿಧಃ ಕೃತಾಃ – ತ್ರಿಃಸಪ್ತ ಅಂದರೆ 3x7=21 ಇಪ್ಪತ್ತೊಂದು ಸಮಿತ್ತುಗಳು. ಸಮಿತ್ತುಗಳೆಂದರೆ ಹೋಮಮಾಡಲು ಉಪಯೋಗಿಸುವ ಕಾಷ್ಠಗಳು. ಅಶ್ವತ್ಥಾದಿ ಕೆಲವು ವೃಕ್ಷಗಳ ಶಾಖೆಗಳ ಕೊನೆಯಲ್ಲಿ ತುದಿ ಸಹಿತವಾಗಿರುವ ಅಗ್ರಭಾಗವು. ಇವು ಚೆನ್ನಾಗಿ ಒಣಗಿರಬೇಕು. ಸಮಿತ್ ಶಬ್ದಕ್ಕೆ ಪ್ರಜ್ವಲಿಸುವುದು ಎಂಬ ಅರ್ಥವಿದೆ. ಈ ಕಾಷ್ಠಗಳನ್ನು ಅಗ್ನಿಯಲ್ಲಿ ಹಾಕಿ ಹೋಮಮಾಡುವುದರಿಂದ ಅಗ್ನಿಯು ಚೆನ್ನಾಗಿ ಪ್ರಜ್ವಲಿಸುತ್ತದೆ. ದೇವತೆಗಳು ಮಾಡಿದ ಆ ಯಾಗದಲ್ಲಿ ಇಂತಹ ಸಮಿತ್ತುಗಳು ಇಪ್ಪತ್ತೊಂದಿದ್ದವು. ದ್ವಾದಶ ಮಾಸಾಃ ಪಂಚರ್ತವಸ್ತ್ರಯ ಇಮೇ ಲೋಕಾ ಅಸಾವಾದಿತ್ಯ ಏಕವಿಂಶಃ । ಅರ್ಥಾತ್: ಹನ್ನೆರಡು ಮಾಸಗಳು (ಚೈತ್ರ, ವೈಶಾಖ ಇತ್ಯಾದಿ), ಐದು ಋತುಗಳು (ವಸಂತ, ಗ್ರೀಷ್ಮ, ವರ್ಷಾಃ, ಶರತ್, ಹೇಮಂತಶಿಶಿರೌ; ಇಲ್ಲಿ ಹೇಮಂತ-ಶಿಶಿರ ಎಂಬ ಎರಡು ಋತುಗಳನ್ನೂ ಒಂದೇ ಋತುವೆಂದು ಪರಿಗಣಿಸಿದ್ದಾರೆ), ಮೂರು ಲೋಕಗಳು (ಪೃಥಿವೀ, ಅಂತರಿಕ್ಷ ಮತ್ತು ದ್ಯೌಃ) ಮತ್ತು ಆದಿತ್ಯ. ಇವೆಲ್ಲವೂ ಸೇರಿ ಇಪ್ಪತ್ತೊಂದ ಸಂಖ್ಯೆಯಾಗುತ್ತದೆ. ಅಥವಾ ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಮನಸ್ಸು, ಪೃಥಿವ್ಯಾದಿ ಪಂಚಮಹಾಭೂತಗಳು, ಪ್ರಾಣಾದಿ ಐದು ವಾಯುಗಳು – ಒಟ್ಟು ಇಪ್ಪತ್ತೊಂದು ಸಮಿತ್ತುಗಳಾಗುವವೆಂದು ಕೆಲವರ ಅಭಿಪ್ರಾಯ.
ದೇವಾ ಯದ್ಯಜ್ಞಂ ತನ್ವಾನಾ ಅಬಧ್ನನ್ ಪುರುಷಂ ಪಶುಂ – ಯಜ್ಞದಲ್ಲಿ ಪಶುವು ಬಹುಮುಖ್ಯವಾದ ಸಾಮಗ್ರಿಯು. ಪಶುವಿಲ್ಲದೇ ಯಜ್ಞವಿಲ್ಲ. ಆದ್ದರಿಂದ ಅಗ್ನಿಮಥನಕ್ಕೆ ಮೊದಲೇ ಯಜ್ಞಪಶುವನ್ನು ತಂದು ವೇದಿಯಲ್ಲಿ ನೆಟ್ಟಿರುವ ಯೂಪಸ್ತಂಭಕ್ಕೆ ಕಟ್ಟಬೇಕೆಂಬ ವಿಧಿಯಿದೆ. ದೇವತೆಗಳು ಈ ಮಾನಸಯಜ್ಞ ಮಾಡಿದಾಗ ವಿರಾಟ್ಪುರುಷನನ್ನೇ ಯಜ್ಞಪಶುವೆಂದು ಭಾವಿಸಿ ಯೂಪಸ್ತಂಭದಲ್ಲಿ ಕಟ್ಟಿದರು ಎಂಬ ಅಭಿಪ್ರಾಯವು.
ಯಜ್ಞೇನ ಯಜ್ಞಮಯಜಂತ ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್ । ತೇ ಹ ನಾಕಂ ಮಹಿಮಾನಃ ಸಚಂತ ಯತ್ರ ಪೂರ್ವೇ ಸಾಧ್ಯಾಃ ಸಂತಿ ದೇವಾಃ ।। 16 ।।
ದೇವಾಃ – ದೇವತೆಗಳು । ಯಜ್ಞೇನ – ಮಾನಸಿಕ ಸಂಕಲ್ಪರೂಪದ ಯಜ್ಞದಿಂದ । ಯಜ್ಞಂ – ಯಜ್ಞರೂಪನಾದ ಪ್ರಜಾಪತಿಯನ್ನು । ಅಯಜಂತ – ಪೂಜಿಸಿದರು । ತಾನಿ – ಆ ಯಜ್ಞ ಪ್ರಕಾರಗಳೇ । ಪ್ರಥಮಾನಿ ಧರ್ಮಾಣಿ – ಮುಖ್ಯ ಧರ್ಮಗಳಾಗಿ । ಆಸನ್ – ಪ್ರಸಿದ್ಧವಾದವು । ಯತ್ರ – ಯಾವ ಸ್ವರ್ಗದಲ್ಲಿ । ಪೂರ್ವೇ – ಪುರಾತನರಾದ । ದೇವಾಃ – ದೇವತೆಗಳು । ಸಾಧ್ಯಾಃ - ಸಾಧ್ಯರೂ । ಸಂತಿ – ಇರುವರೋ । ನಾಕಂ – ಆ ಸ್ವರ್ಗವನ್ನು । ತೇ ಮಹಿಮಾನಃ – ವಿರಾಟ್ಪುರುಷನನ್ನು ಉಪಾಸನೆ ಮಾಡುವ ಮಹಾತ್ಮರು । ಸಚಂತೇ - ಪಡೆಯುತ್ತಾರೆ ।
ದೇವತೆಗಳು ಮಾನಸಿಕ ಸಂಕಲ್ಪರೂಪದ ಯಜ್ಞದಿಂದ ಯಜ್ಞರೂಪನಾದ ಪ್ರಜಾಪತಿಯನ್ನು ಪೂಜಿಸಿದರು. ಆ ಯಜ್ಞಪ್ರಕಾರಗಳೇ ಮುಖ್ಯಧರ್ಮಗಳಾಗಿ ಪ್ರಸಿದ್ಧವಾದವು. ಪುರಾತನರಾದ ದೇವತೆಗಳು, ಸಾಧ್ಯರೂ ವಾಸಮಾಡುವ ಸ್ವರ್ಗವನ್ನು ವಿರಾಟ್ಪುರುಷನನ್ನು ಉಪಾಸನೆಮಾಡುವ ಮಹಾತ್ಮರು ಪಡೆಯುತ್ತಾರೆ.
ಇದು ಯಜ್ಞಫಲವನ್ನು ಸ್ತುತಿಸುವ ಮಂತ್ರವು. ಶ್ರೇಷ್ಠವಾದ ಯಜ್ಞಕ್ಕೆ ಉತ್ತಮ ಸ್ವರ್ಗಪ್ರಾಪ್ತಿಯೇ ಫಲವೆಂದು ತೇ ಹ ನಾಕಂ ಮಹಿಮಾನಃ ಸಚಂತ ಎಂದು ಪ್ರಶಂಸಿಸಿದೆ.
ನಾಕಂ – ಸ್ವರ್ಗಲೋಕ – ನಾಸ್ಮಿನ್ನಕಮಸ್ತೀತಿ ನಾಕಃ ಸ್ವರ್ಗಃ – ದುಃಖವಿಲ್ಲದಿರುವುದರಿಂದ ಸ್ವರ್ಗಕ್ಕೆ ನಾಕವೆಂದು ಹೆಸರು.
[1] ಸಕಲ ವಿಧದ ಅನ್ನ ಸಂಪತ್ತಿಗೂ ಸರ್ವಮೇಧರೂಪವಾದ ಯಜ್ಞವೇ ಮೂಲ. ಅನ್ನವು ವಿರಾಟ್ರೂಪದಲ್ಲಿರುತ್ತದೆ. ವಿರಾಟ್ಟು ದಶಾಕ್ಷರವುಳ್ಳದ್ದು. ಇದರ ಅನುಗ್ರಹವು ದಶರಾತ್ರಾತ್ಮಕವಾದ ಸರ್ವಮೇಧದಿಂದ ಸಾಧ್ಯವಾಗುತ್ತದೆ. ಮೊದಲನೇ ದಿನದಿಂದ ಹತ್ತನೇ ದಿನಗಳ ವರೆಗೆ ನಡೆಯುವ ಯಜ್ಞಕ್ರಿಯೆಗಳು ಹೀಗಿವೆ: (1) ಅಗ್ನಿಪ್ರಶಂಸಕವಾದ ಅಗ್ನಿಷ್ಟೋಮ (2) ಇಂದ್ರಪ್ರಶಂಸಕವಾದ ಉಕ್ಥ್ಯ (3) ಸೂರ್ಯನನ್ನು ಪ್ರಶಂಸಿಸುವ ಸೂರ್ಯಸ್ತುದ್ಯುಕ್ಥ್ಯ (4) ವಿಶ್ವೇದೇವತೆಗಳನ್ನು ಪ್ರಶಂಸಿಸುವ ವೈಶ್ವದೇವ (5) ಆಶ್ವಮೇಧಿಕ ಕ್ರಿಯೆಗಳು (6) ಪುರುಷಮೇಧ – ಯಜ್ಞಕ್ಕೆ ವಿಹಿತವಾದ ಪುರುಷರನ್ನು ಸಂಪಾದಿಸಿ ಅವರ ಸಹಾಯದಿಂದ ನೆರವೇರಿದ ಕರ್ಮದಿಂದ ಇಷ್ಟಾರ್ಥವನ್ನು ಪಡೆಯುವುದು (7) ಆಪ್ತೋರ್ಯಾಮ – ಸಕಲವಿಧದ ಚೇತನಾಚೇತನಾತ್ಮಕವಾದ ಆಹುತಿಯನ್ನು ಸಂಪಾದಿಸಿ ಅವುಗಳ ವಪೆಯನ್ನು ವಿಧ್ಯುಕ್ತವಾಗಿ ಅರ್ಪಿಸುವುದು (8) ತ್ರಿಣವಾತ್ಮಕ- ತ್ರಿಣವವೇ ವಜ್ರಾಯುಧವು (9) ತ್ರಯಸ್ತ್ರಿಂಶಸ್ತೋಮ (10) ಹತ್ತನೇ ದಿನವು ಸಕಲ ಪೃಷ್ಠಸ್ತುತಿಗಳನ್ನೊಳಗೊಂಡ ವಿಶ್ವಜಿದತಿರಾತ್ರ ಯಜ್ಞವು. (ಶತಪಥಬ್ರಾಹ್ಮಣ, 13-7-1-(1-14))
[2] ಬ್ರಹ್ಮ ವೈ ಸ್ವಯಂಭು ತಪೋಽತಪ್ಯತ । ತದೈಕ್ಷತ ನ ವೈ ತಮಸ್ಯಾನಂತ್ಯಮಸ್ತಿ ಹಂತಾಹಂ ಭೂತೇಷ್ವಾತ್ಮಾನಂ ಜುಹವಾನಿ ಚಾತ್ಮನೀತಿ ತತ್ಸರ್ವೇಷು ಭೂತೇಷ್ವಾತ್ಮಾನಗ್ಂ ಹುತ್ವಾ ಭೂತಾನಿ ಚಾತ್ಮನಿ ಸರ್ವೇಷಾಂ ಭುತಾನಾಗ್ ಶ್ರೈಷ್ಠ್ಯಗ್ ಸ್ವಾರಾಜ್ಯಮಾಧಿಪತ್ಯಂ ಪರ್ಯೈತ್ತಥೈವೈತದ್ಯಜಮಾನಃ ಸರ್ವಮೇಧೇ ಸರ್ವಾನ್ ಮೇಧಾನ್ ಹುತ್ವಾ ಸರ್ವಾಣಿ ಭೂತಾನಿ ಶ್ರೈಷ್ಠ್ಯಗ್ ಸ್ವಾರಾಜ್ಯಮಾಧಿಪತ್ಯಂ ಪರ್ಯೇತಿ ।। ಅರ್ಥಾತ್: ಸ್ವಯಂಭುವಾದ ಬ್ರಹ್ಮನು ತಪಸ್ಸನ್ನಾಚರಿಸಿದನು. ಕೇವಲ ತಪಸ್ಸಿನಿಂದ ನಿರಂತರವಾದ ಸ್ಥಿತಿಯೂ ಮತ್ತು ಬೆಳವಣಿಗೆಯೂ ಸಾಧ್ಯವಿಲ್ಲ. ಆದ್ದರಿಂದ ಸಕಲ ಭೂತಗಳಲ್ಲಿಯೂ ನನ್ನನ್ನೇ ಆಹುತಿರೂಪದಲ್ಲಿ ಅರ್ಪಿಸುತ್ತೇನೆ ಮತ್ತು ಸಕಲ ಭೂತಗಳನ್ನೂ ನನ್ನಲ್ಲಿಯೇ ಅರ್ಪಿಸಿಕೊಳ್ಳುತ್ತೇನೆ ಎಂದು ಪರಸ್ಪರ ಆಹುತಿರೂಪದ ಯಜ್ಞವನ್ನಾಚರಿಸಲು ಸಂಕಲ್ಪಿಸಿದನು. ಹೀಗೆ ಸಂಕಲ್ಪರೂಪವಾದ ಯಜ್ಞದಿಂದ ಸಕಲ ಲೋಕಗಳ ಸ್ವಾರಾಜ್ಯವನ್ನೂ, ಪ್ರಭುತ್ವವನ್ನೂ ಹೊಂದಿದನು (ಶತಪಥಬ್ರಾಹ್ಮಣ, 13-7-11).
[3] ಸರ್ವಹುತಃ ಶಬ್ದಕ್ಕೆ ಸಾಯಣರು – ಸರ್ವಾತ್ಮಕಃ ಪುರುಷಃ ಯಸ್ಮಿನ್ ಯಜ್ಞೇ ಹೂಯತೇ ಸೋಽಯಂ ಸರ್ವಹುತ್ । ಅರ್ಥಾತ್: ಸರ್ವತ್ಮಕನಾದ ಪರಮಪುರುಷನು ಯಾವ ಯಜ್ಞದಲ್ಲಿ ಆಹ್ವಾನಿಸಲ್ಪಟ್ಟು ಆರಾಧಿಸಲ್ಪಡುವನೋ ಆ ಯಜ್ಞಕ್ಕೆ ಸರ್ವಹುತ್ ಎಂದು ಹೆಸರು – ಎಂದು ಅರ್ಥವಿವರಣೆ ಮಾಡಿದ್ದಾರೆ. ಅಥವ ಸರ್ವವನ್ನೂ ಅಂದರೆ ಚರಾಚರಾತ್ಮಕವಾದ ಈ ಜಗತ್ತನ್ನೆಲ್ಲ ಒಳಗೊಂಡಿರುವ ಪರಮಾತ್ಮನನ್ನೇ ಹೋಮಸಾಧನ ದ್ರವ್ಯವನ್ನಾಗಿ ಭಾವಿಸಿ ದೇವತೆಗಳು ನಡೆಸಿದ ಮಾನಸ ಯಜ್ಞ ಎಂದೂ ಅರ್ಥಮಾಡಿಕೊಳ್ಳಬಹುದು.
[4] ದೇವರಥೋ ವಾ ಏಷ ಯದ್ಯಜ್ಞಸ್ತಸ್ಯೈತಾವಂತೌ ರಶ್ಮೀ ಯದಾಜ್ಯಪ್ರ ಉಗೇ ದದ್ಯದಾಜ್ಯೇನ ಪವಮಾನಮನುಶಂಸಂತಿ ಪ್ರ ಉಗೇಣಾಜ್ಯಮ್ ।। ಅರ್ಥಾತ್: ಯಜ್ಞವೇ ದೇವತೆಗಳ ರಥವು. ಆಜ್ಯ ಮತ್ತು ಪ್ರಉಗವು ಈ ರಥದ ಅಂತರ್ನಿಯಾಮಕವಾದ ಕಡಿವಾಣಗಳು. (ಇತರೇಯ ಬ್ರಾಹ್ಮ್ರಣ 2-37)
[5] ತಸ್ಮಾದಾಜ್ಯಸ್ಯೈವ ಯಜೇದಾಜ್ಯಗ್ಂ ಹ ವಾ ಅನಯೋರ್ಧ್ಯಾವಾಪೃಥಿವ್ಯೋಃ ಪ್ರತ್ಕಕ್ಷಗ್ಂ ರ್ಸ್ತತ್ಪ್ರತ್ಯಕ್ಷಮೇವೈನೇ ಏತತ್ ಸ್ವೇನ ರಸೇನ ಮೇಧೇನ ಪ್ರೀಣಾತಿ ತಸ್ಮಾದಾಜ್ಯಸ್ಯೈವ ಯಜೇತ್ । ಅರ್ಥಾತ್: ಆಜ್ಯವ್ಯೇ ದ್ಯಾವಾಪೃಥಿವಿಗಳೆರಡಕ್ಕೂ ಬಲದಾಯಕವಾದ ಉತ್ತಮ ರಸವು. ಆದ್ದರಿಂದ ಆಜ್ಯಾಹುತಿಯನ್ನು ಅರ್ಪಿಸುವವನು ದ್ಯಾವಾಪೃಥಿವಿಗಳ ತಮ್ಮ ತಮ್ಮ ರಸಗಳನ್ನೇ ಅರ್ಪಿಸುವುದುದರಿಂದ ಅವಕ್ಕೆ ತೃಪ್ತಿಯನ್ನುಂಟುಮಾಡುತ್ತಾನೆ. ಆದ್ದರಿಂದ ಆಜ್ಯವಿಲ್ಲದೇ ಇನ್ನಾವ ಆಹುತಿಯೂ ವಿಹಿತವಲ್ಲ. (ಶತಪಥಬ್ರಾಹ್ಮಣ, 2-4-3-10)
[6] ಕೂರ್ಮಮುಪದಧಾತಿ ।... ತಸ್ಯ ಯದಧರಂ ಕಪಾಲಮ್ । ಅಯಗ್ಂ ಸ ಲೋಕಸ್ತತ್ಪ್ರತಿಷ್ಟಿತಮಿವ ಭವತಿ ಪ್ರತಿಷ್ಠಿತ ಇವ ಹ್ಯಯಂ ಲೋಕೋಽಥ ಯದುತ್ತರಗ್ಂ ಸಾ ದ್ಯೌಸ್ತದ್ವ್ಯವಗೃಹೀತಾಂತಮಿವ ಭವತಿ ವ್ಯವಗೃಹೀತಾಂತೇವ ಹಿ ದ್ಯೌರಥ ಯದಂತರಾ ತದಂತರಿಕ್ಷಗ್ಂ ಸ ಏಷ ಇಮ ಲೋಕಾ ಇಮಾನೇವೈತಲ್ಲೋಕನುಪದಧಾತಿ । ಅರ್ಥಾತ್: ಯಜ್ಞಗರ್ಭರೂಪದಲ್ಲಿ ಪ್ರತಿಷ್ಠಾಪಿತವಾಗುವ ಕೂರ್ಮದ ಅಡಿಯ ಚಿಪ್ಪು ಪೃಥ್ವಿಯನ್ನು ಪ್ರತಿಬಿಂಬಿಸುತ್ತದೆ. ಮೇಲ್ಭಾಗದ ಚಿಪ್ಪು ದ್ಯುಲೋಕವನ್ನು ಪ್ರತಿಬಿಂಬಿಸುತ್ತದೆ. ದ್ಯುಲೋಕದ ಅಂತ್ಯಪ್ರದೇಶಗಳು ಬಾಗಿರುವಂತೆಯೇ ಈ ಚಿಪ್ಪಿನ ಕೊನೆಯ ಪ್ರದೇಶಗಳೂ ಬಾಗಿವೆ. ದ್ಯಾವಾಪೃಥಿವಿಗಳ ಮಧ್ಯಪ್ರದೇಶವೆಲ್ಲವೂ ವಾಯುವಿನಿಂದ ತುಂಬಿರುವಂತೆ ಕೂರ್ಮದ ಈ ಎರಡು ಚಿಪ್ಪುಗಳ ಮಧ್ಯಭಾಗವೂ ವಾಯುವಿನಿಂದ ತುಂಬಿರುತ್ತದೆ. ಇದನ್ನು ಸ್ಥಾಪಿಸುವುದರಿಂದ ದ್ಯಾವಾಪೃಥಿವಿಗಳೆರಡಕ್ಕೂ ಸೇರಿದಂತೆ ಅವುಗಳ ಮಧ್ಯಭಾಗದಲ್ಲಿ ಯಜ್ಞವೇದಿಯನ್ನು ಸ್ಥಾಪಿಸಿದಂತಾಗುತ್ತದೆ. (ಶತಪಥಬ್ರಾಹ್ಮಣ 7-5-1-2) ಅಲ್ಲದೇ -ತಮಭ್ಯನಕ್ತಿ ದಧ್ನಾ ಮಧುನಾ ಘೃತೇನ ದಧಿ ಹೈವಾಸ್ಯ ಲೋಕಸ್ಯ ರಸೋ ಘೃತಮಂತರಿಕ್ಷಸ್ಯ ಮುಧ್ವಮುಷ್ಯ ಸ್ವೇನೈವೈನಮೇತದ್ರೂಪೇಣ ಸಮರ್ಧಯತ್ಯಥೋ ದಧಿ ಹೈವಾಸ್ಯ ಲೋಕಸ್ಯ ರಸೋ ಘೃತಮಂತರಿಕ್ಷಸ್ಯ ಮಧ್ವಮುಷ್ಯ ಸ್ವೇನೈವೈನಮೇತದ್ರಸೇನ ಸಮರ್ಧಯತಿ ।। ಅರ್ಥಾರ್: ಕೂರ್ಮವನ್ನು ಸ್ಥಾಪಿಸಿದ ನಂತರ ಅದಕ್ಕೆ ದಧಿ, ಮಧು ಮತ್ತು ಘೃತ ಇವುಗಳ ಲೇಪವನ್ನು ಮಾಡುತ್ತಾನೆ. ಅವುಗಳಲ್ಲಿ ದಧಿಯು ಪೃಥ್ವೀರೂಪದ್ದಾಗಿದೆ. ಘೃತವು ಅಂತರಿಕ್ಷರೂಪದ್ದಾಗಿಯೂ ಮತ್ತು ಮಧುವು ದ್ಯುಲೋಕದ ರೂಪದ್ದಾಗಿಯೂ ಇದೆ. ಈ ಲೋಕಗಳನ್ನೆಲ್ಲಾ ಪ್ರತಿಬಿಂಬಿಸುವ ಕೂರ್ಮವನ್ನು ಆಯಾ ಲೋಕಗಳ ಪ್ರತಿನಿಧಿಯಿಂದಲೇ ಲೇಪಿಸದಂತಾಗುತ್ತದೆ. (ಶತಪಥಬ್ರಾಹ್ಮಣ 7-5-1-3)
[7] ವಾಯವಸ್ಸ್ಥೇತ್ಯಾಹ । ವಾಯುವಾನ್ ಅಂತರಿಕ್ಷಸ್ಯಾಧ್ಯಕ್ಷಾಃ । ಅಂತರಿಕ್ಷದೇವತ್ಯಾಃ ಖಲು ವೈ ಪಶವಃ। ವಾಯವ ಏವೈನಾನ್ಪರಿ ದದಾತಿ । ಪ್ರ ವಾ ಏನಾನೇತದಾಕರೋತಿ । ಯದಾಹ । ವಾಯವಸ್ಸ್ಥೇತ್ಯುಪಾಯವಸ್ಸ್ಥೇತ್ಯಾಹ । ಯಜಮಾನಾಯೈವ ಪಶೂನುಪಈ ಹ್ವಯತೇ ।। ಅರ್ಥಾತ್: ವಾಯುವೇ ಅಂತರಿಕ್ಷದ ಅಧಿಪತಿಯು. ಅಂತರಿಕ್ಷರಾದ ದೇವತೆಗಳೇ ಪಶುಗಳ ಅಧಿದೇವತೆಗಳು. ಆದ್ದರಿಂದ ವಾಯುವು ಪಶುಗಳನ್ನು ಸ್ವೀಕರಿಸುತ್ತಾನೆ. ಆದ್ದರಿಂದಲೇ ವಾಯುದೇವನಿಗೆ ತೃಪ್ತಿಯನ್ನುಂಟುಮಾಡುವ ಮಂತ್ರಗಳನ್ನು ಪಠಿಸಿ ಆಯಾ ಪಶುಗಳನ್ನು ಯಜ್ಞಕ್ಕೆ ಸಿದ್ಧಪಡಿಸಿಕೊಳ್ಳುತ್ತಾನೆ (ತೈತ್ತರೀಯ ಬ್ರಾಹ್ಮಣ, 3-2 – 3-4) ಎಂದಿದೆ.
[8] ಏ ಗ್ರಾಮ್ಯಾಃ ಪಶವೋ ವಿಶ್ವರೂಪಾಃ । ವಿರೂಪಾಸ್ಸಂತೋಬಹುಧೈಕರೂಪಾಃ । ತೇಷಾಗ್ಂ ಸಪ್ತನಾಮಿಹ ರಂತಿರಸ್ತು ।। (ತೈತ್ತರೀಯ ಆರಣ್ಯಕ, 3-11) ಗೋ, ಅಶ್ವ, ಅಜ, ಆವಿ, ಪುರುಷ, ಗರ್ದಭ, ಉಷ್ಟ್ರ ಎಂಬ ಪ್ರಭೇದಗಳಿದ್ದರೂ ಅವೆಲ್ಲವೂ ಒಂದೇ ವಿಶೇಷಲಕ್ಷಣವುಳ್ಳವು. ಆದ್ದರಿಂದ ಏಕರೂಪಾಃ ಎಂದಿದೆ.
[9] ಯ ಆರಣ್ಯಾಃ ಪಶವೋ ವಿಶ್ವರೂಪಾಃ । ವಿರೂಪಾಸ್ಸಂತೋಬಹುಧೈಕರೂಪಾಃ ।। ತೇಷಾಗ್ಂ ಸಪ್ತಾನಾಮಿಹ ರಂತಿರಸ್ತು ।। (ತೈತ್ತರೀಯ ಆರಣ್ಯಕ, 3-11) ದ್ವಿಖುರ, ಶ್ವಾಪದ, ಪಕ್ಷಿ, ಸರೀಸೃಪ, ಹಸ್ತಿ, ಮರ್ಕಟ ಮತ್ತು ನಾದೇಯ (ನದಿಗೆ ಸಂಬಂಧಿಸಿದುದು) – ಈ ಏಳೂ ಆರಣ್ಯ ಪಶುಗಳು. ಇವುಗಳೂ ಬೇರೆ ಬೇರೆ ರೂಪವನ್ನು ಹೊಂದಿದ್ದರೂ ಎಲ್ಲಕ್ಕೂ ಒಂದೇ ವಿಶೇಷಗುಣವಿದೆ.
[10] ಅಥ ಯದಶ್ರು ಸಂಕ್ಷರಿತಮಾಸೀತ್ಸೋಽಶ್ರುರಭವದಶ್ರುಹನ್ ವೈ ತಮಶ್ವ ಇತ್ಯಾಚಕ್ಷತೇ...ಅಥ ಯದರಸದಿವ ಸ ರಾಸಭೋಽಭವದಥ ಯಃ ಕಪಾಲೇ ರಸೋ ಲಿಪ್ತ ಆಸೀತ್ ಸೋಽಜೋಽಭವತ್ । । ಅರ್ಥಾತ್: ಯಜ್ಞರೂಪನಾದ ಈ ಪ್ರಜಾಪತಿಯ ಗರ್ಭಸಂಬಂಧಿಯಾದ ಅಶ್ರುವೇ ಅಶ್ವವೆಂಬ ಹೆಸರಿನಿಂದ ಪ್ರಸಿದ್ಧವಾಯಿತು. ರಸನಾತ್ಮಕವಾದ (ಶಬ್ದಮಾಡುವ) ರೂಪವೇ ರಾಸಭ (ಗರ್ದಭ)ವೆಂಬ ಹೆಸರಿನಿಂದ ಪ್ರಸಿದ್ಧವಾಯಿತು. ಮತ್ತು ಪ್ರಜಾಪತಿಗರ್ಭದ ಚಿಪ್ಪಿಗೆ ಅಂಟಿಕೊಂಡಿದ್ದ ಲೇಪವು ಅಜವಾಯಿತು. (ಶತಪಥ ಬ್ರಾಹ್ಮಣ, 6-1-1-11)
[11] ಛಂದಸ್ಸುಗಳ ವರ್ಣನೆಗೆ ಅನುಬಂಧ 1.2 ನ್ನು ನೋಡಿ.