ಶ್ರೀಪದ್ಮಪುರಾಣ: ಆದಿಖಂಡ, ಅಧ್ಯಾಯ 2

 

ಸೂತ ಉವಾಚ । ಆದಿಸರ್ಗಮಹಂ ತಾವತ್ಕಥಯಾಮಿ ದ್ವಿಜೋತ್ತಮಾಃ । ಜ್ಞಾಯತೇ ಯೇನ ಭಗವಾನ್ಪರಮಾತ್ಮಾ ಸನಾತನಃ ।। 1 ।। ಸೃಷ್ಟೇಷು ಪ್ರಲಯಾದೂರ್ಧ್ವಂ ನಾಸೀತ್ಕಿಂಚಿದ್ದ್ವಿಜೋತ್ತಮಾಃ । ಬ್ರಹ್ಮಸಂಜ್ಞಮಭೂದೇಕಂ ಜ್ಯೋತಿರ್ವೈ ಸರ್ವಕಾರಕಮ್ ।। 2 ।। ನಿತ್ಯಂ ನಿರಂಜನಂ ಶಾಂತಂ ನಿರ್ಗುಣಂ ನಿತ್ಯನಿರ್ಮಲಮ್ । ಆನಂದಸ್ಯ ಪುರಂ ಸ್ವಚ್ಚಂ ಯತ್ಕಾಂಕ್ಷಂತಿ ಮುಮುಕ್ಷವಃ ।। 3 ।। ಸರ್ವಜ್ಞಂ ಜ್ಞಾನರೂಪತ್ವಾದನಂತಮಜಮವ್ಯಯಮ್ । ಅವಿನಾಶಿ ಸದಾ ಸ್ವಚ್ಚಮಚ್ಯುತಂ ವ್ಯಾಪಕಂ ಮಹತ್ ।। 4 ।।

ಸೂತನು ಹೇಳಿದನು: “ದ್ವಿಜೋತ್ತಮರೇ! ಸನಾತನ ಪರಮಾತ್ಮನನ್ನು ಯಾವುದರಿಂದ ತಿಳಿದುಕೊಳ್ಳಬಹುದೋ ಆ ಆದಿಸೃಷ್ಟಿಯನ್ನು ಹೇಳುತ್ತೇನೆ. ಪ್ರಳಯವುಂಟಾದ ನಂತರ ಸೃಷ್ಟಿಸಿದ ವಸ್ತುಗಳಲ್ಲಿ ಯಾವುದೂ ಇರಲಿಲ್ಲ. ಸರ್ವಕ್ಕೂ ಕಾರಣವಾದ ಜ್ಯೋತಿಸ್ವರೂಪವಾದ ಬ್ರಹ್ಮವೆಂದು ಕರೆಯಲ್ಪಡುವ ವಸ್ತು ಮಾತ್ರ ಇದ್ದಿತು. ಆ ಬ್ರಹ್ಮವಸ್ತುವು ಮೋಕ್ಷಾರ್ಥಿಗಳಿಗೆ ಆನಂದದ ಪುರವು. ಅದು ಎಲ್ಲ ಕಾಲದಲ್ಲಿಯೂ ಇರುವುದು. ಯಾವುದರ ಲೇಪವೂ ಅದಕ್ಕಿಲ್ಲ. ಶಾಂತವಾಗಿಯೂ, ಸಕಲಗುಣಶೂನ್ಯವಾಗಿಯೂ ಇರುವುದು. ನಿತ್ಯವೂ ನಿರ್ಮಲವಾದುದು. ಜ್ಞಾನಸ್ವರೂಪದಿಂದಾಗಿ ಸರ್ವವನ್ನೂ ತಿಳಿದಿರುವುದು. ಅದಕ್ಕೆ ಉತ್ಪತ್ತಿಯೂ ನಾಶವೂ ಇಲ್ಲ. ಹಾಗೆಯೇ ವೃದ್ಧಿ-ಹ್ರಾಸಗಳೂ ಇಲ್ಲ. ಅದಿಲ್ಲದ ಜಾಗವೇ ಇಲ್ಲ, ಅದು ಎಲ್ಲ ವಸ್ತುಗಳಲ್ಲಿಯೂ ಇರುವುದು. ಮತ್ತು ಅದಕ್ಕಿಂತ ದೊಡ್ಡದಾದ ವಸ್ತುವು ಬೇರೊಂದಿಲ್ಲ.

ಸರ್ಗಕಾಲೇ ತು ಸಂಪ್ರಾಪ್ತೇ ಜ್ಞಾತ್ವಾ ತಂ ಜ್ಞಾನರೂಪಕಮ್ । ಆತ್ಮಲೀನಂ ವಿಕಾರಂ ಚ ತತ್ಸ್ರಷ್ಟುಮುಪಚಕ್ರಮೇ ।। 5 ।। ತಸ್ಮಾತ್ಪ್ರಧಾನಮುದ್ಭೂತಂ ತತಶ್ಚಾಪಿ ಮಹಾನಭೂತ್ । ಸಾತ್ವಿಕೋ ರಾಜಸಶ್ಚೈವ ತಾಮಸಶ್ಚ ತ್ರಿಧಾ ಮಹಾನ್ ।। 6 ।। ಪ್ರಧಾನತತ್ತ್ವೇನ ಸಮಂ ತ್ವಚಾ ಬೀಜಮಿವಾವೃತಮ್ । ವೈಕಾರಿಕಸ್ತೈಜಸಶ್ಚ ಭೂತಾದಿಶ್ಚೈವ ತಾಮಸಃ ।। 7 ।। ತ್ರಿವಿಧೋಽಯಮಹಂಕಾರೋ ಮಹತ್ತತ್ವಾದಜಾಯತ । ಯಥಾ ಪ್ರಧಾನೇನ ಮಹಾನ್ಮಹತಾ ಸ ತಥಾ ವೃತಃ ।। 8 ।।

ಸೃಷ್ಟಿಕಾಲವು ಪ್ರಾಪ್ತವಾದಾಗ ಜ್ಞಾನರೂಪಕವಾದ ತನ್ನಲ್ಲಿಯೇ ಲೀನವಾಗಿದ್ದ ವಿಕಾರಗಳನ್ನೆಲ್ಲಾ ತಿಳಿದು ಸೃಷ್ಟಿಯನ್ನು ಪ್ರಾರಂಭಿಸಿದನು. ಅದರಿಂದ ಪ್ರಧಾನವು ಕಾರ್ಯೋನ್ಮುಖವಾಯಿತು. ಪ್ರಧಾನದಿಂದ ಮಹತ್ತತ್ತ್ವವುಂಟಾಯಿತು. ಆ ಮಹತ್ತತ್ತ್ವವು ಸಾತ್ವಿಕ, ರಾಜಸ, ಮತ್ತು ತಾಮಸವೆಂದು ಮೂರು ವಿಧವಾಗಿರುವುದು. ಸಿಪ್ಪೆಯಲ್ಲಿ ಬೀಜವು ಅಡಗಿರುವಂತೆ ಪ್ರಧಾನತತ್ತ್ವದಲ್ಲಿ ಮಹತ್ತತ್ವವು ಅಡಗಿದೆ. ಮಹತ್ತತ್ವದ ವಿಕಾರವಾದ ಅಹಂಕಾರ ತತ್ತ್ವವು ಸಾತ್ವಿಕ, ರಾಜಸ, ಮತ್ತು ತಾಮಸವೆಂದು ಮೂರು ವಿಧ. ಅಹಂಕಾರ ತತ್ತ್ವವು ಮಹತ್ತತ್ವದಿಂದ ಉತ್ಪನ್ನವಾಯಿತು. ಈ ಅಹಂಕಾರ ತತ್ತ್ವವು, ಪ್ರಧಾನತತ್ತ್ವದಲ್ಲಿ ಮಹತ್ತತ್ತ್ವದಲ್ಲಿ ಅಡಗಿರುವಂತೆ, ಮಹತ್ತತ್ತ್ವದಲ್ಲಿ ಅಡಗಿದೆ.

ಭೂತಾದಿಸ್ತು ವಿಕುರ್ವಾಣಃ ಶಬ್ದಂ ತನ್ಮಾತ್ರಕಂ ತತಃ । ಸಸರ್ಜ ಶಬ್ದತನ್ಮಾತ್ರಾದಾಕಾಶಂ ಶಬ್ದಲಕ್ಷಣಮ್ ।। 9 ।। ಶಬ್ದಮಾತ್ರಂ ತಥಾಕಾಶಂ ಭೂತಾದಿಃ ಸ ಸಮಾವೃಣೋತ್ । ಶಬ್ದಮಾತ್ರಂ ತಥಾಕಾಶಂ ಸ್ಪರ್ಶಮಾತ್ರಂ ಸಸರ್ಜ ಹ ।। 10 ।। ಬಲವಾನಭವದ್ವಾಯುಸ್ತಸ್ಯ ಸ್ಪರ್ಶೋ ಗುಣೋ ಮತಃ । ಆಕಾಶಂ ಶಬ್ದಮಾತ್ರಂ ತು ಸ್ಪರ್ಶಮಾತ್ರಂ ಸಮಾವೃಣೋತ್ ।। 11 ।।

ಆ ತಾಮಸ ಅಹಂಕಾರದಲ್ಲಿ ಉಂಟಾದ ವಿಕಾರವೇ ಶಬ್ದತನ್ಮಾತ್ರವು. ಆ ಶಬ್ದತನ್ಮಾತ್ರದಿಂದ ಶಬ್ದವನ್ನೇ ಲಕ್ಷಣವಾಗುಳ್ಳ ಆಕಾಶದ ಉತ್ಪತ್ತಿಯಾಯಿತು. ತಾಮಸಾಹಂಕಾರದಲ್ಲಿ ಶಬ್ದಮಾತ್ರಾಕಾಶವು ಅಡಗಿದೆ. ಆ ಶಬ್ದಮಾತ್ರಾಕಾಶದಿಂದ ಸ್ಪರ್ಶತನ್ಮಾತ್ರವು ಉಂಟಾಯಿತು. ಆ ಸ್ಪರ್ಶತನ್ಮಾತ್ರದಿಂದ ಬಲವಾನ್ ವಾಯುವುಂಟಾಯಿತು. ಆ ವಾಯುವಿನ ಗುಣವು ಸ್ಪರ್ಶವು. ಶಬ್ದಮಾತ್ರ ಆಕಾಶದಲ್ಲಿ ಸ್ಪರ್ಶತನ್ಮಾತ್ರವು ಅಡಗಿದೆ.

ತತೋ ವಾಯುವಿಕುರ್ವಾಣೋ ರೂಪಮಾತ್ರಂ ಸಸರ್ಜ ಹ । ಜ್ಯೋತಿರುತ್ಪದ್ಯತೇ ವಾಯೋಸ್ತದ್ರೂಪಗುಣಮುಚ್ಯತೇ ।। 12 ।। ಸ್ಪರ್ಶಮಾತ್ರಸ್ತು ವೈ ವಾಯೂ ರೂಪಮಾತ್ರಂ ಸಮಾವೃಣೋತ್ । ಜ್ಯೋತಿಶ್ಚಾಪಿ ವಿಕುರ್ವಾಣಂ ರಸಮಾತ್ರಂ ಸಸರ್ಜ ಹ ।। 13 ।। ಸಂಭವಂತಿ ತತೋಂಭಾಂಸಿ ರಸಮಾತ್ರಾಣಿ ತಾನಿ ತು । ರಸಮಾತ್ರಾಣಿ ಚಾಂಭಾಂಸಿ ರೂಪಮಾತ್ರಂ ಸಮಾವೃಣೋತ್ ।। 14 ।।

ಆ ವಾಯುವಿನ ವಿಕಾರದಿಂದ ರೂಪತನ್ಮಾತ್ರವು ಹುಟ್ಟಿತು. ರೂಪಗುಣವಿರುವ ಜ್ಯೋತಿಯು ವಾಯುವಿನಿಂದ ಉಂಟಾಯಿತೆಂದು ಹೇಳುತ್ತಾರೆ. ಸ್ಪರ್ಶಮಾತ್ರ ವಾಯುವಿನಲ್ಲಿ ರೂಪತನ್ಮಾತ್ರವು ಅಡಗಿದೆ. ಆ ಜ್ಯೋತಿಸ್ಸಿನ ವಿಕಾರದಿಂದ ರಸತನ್ಮಾತ್ರವು ಹುಟ್ಟಿತು. ಆ ರಸತನ್ಮಾತ್ರದಿಂದ ರಸಗುಣವುಳ್ಳ ಜಲದ ಉತ್ಪತ್ತಿಯಾಯಿತು. ಆ ರಸಮಾತ್ರಜಲದಲ್ಲಿಯೇ ರೂಪಮಾತ್ರವು ಅಡಗಿದೆ.

ವಿಕುರ್ವಾಣಾನಿ ಚಾಂಭಾಂಸಿ ಗಂಧಮಾತ್ರಂ ಸಸರ್ಜಿರೇ । ತಸ್ಮಾಜ್ಜಾತಾ ಮಹೀ ಚೇಯಂ ಸರ್ವಭೂತಗುಣಾಧಿಕಾ ।। 15 ।। ಸಂಘಾದ್ಯಾತೋ ಯತಸ್ತಸ್ಮಾತ್ತಸ್ಯ ಗಂಧೋ ಗುಣೋ ಮತಃ । ತಸ್ಮಿಂಸ್ತಸ್ಮಿಂಸ್ತು ತನ್ಮಾತ್ರಾತ್ತೇನ ತನ್ಮಾತ್ರತಾ ಸ್ಮೃತಾ ।। 16 ।। ತನ್ಮಾತ್ರಾಣ್ಯವಿಶೇಷಾಣಿ ವಿಶೇಷಾ ಕ್ರಮಶೋಽಪರಾಃ । ಭೂತತನ್ಮಾತ್ರಸರ್ಗೋಯಮಹಂಕಾರಾತ್ತು ತಾಮಸಾತ್ ।। 17 ।।

ಜಲದ ವಿಕಾರದಿಂದಾಗಿ ಗಂಧತನ್ಮಾತ್ರವು ಹುಟ್ಟಿತು. ಆ ಗಂಧತನ್ಮಾತ್ರದಿಂದಲೇ ಎಲ್ಲ ಭೂತಗಳ ಗುಣಗಳಿಗಿಂತಲೂ ಅಧಿಕ ಗುಣಗಳುಳ್ಳ ಪೃಥ್ವಿಯು ಉಂಟಾಯಿತು. ಭೂಮಿಯ ಸಂಸರ್ಗದಿಂದ ಗಂಧವು ಹುಟ್ಟಿತು. ಆದ್ದರಿಂದ ಪೃಥ್ವಿಯ ಗುಣವು ಗಂಧವು. ಹಾಗೆ ಯಾವ್ಯಾವುದರ ಸಹವಾಸದಿಂದ ಯಾವ್ಯಾವುದು ಹುಟ್ಟುತ್ತದೆಯೋ ಅದರಂತೆಯೇ ಗುಣವು ಹುಟ್ಟುತ್ತದೆ. ಆ ಗುಣವು ಅದರ ಸಂಬಂಧವಾದುದು. ಈ ಪಂಚತನ್ಮಾತ್ರಗಳನ್ನು ಅವಿಶೇಷ ಎನ್ನುವುದಾಗಿಯೂ ಪಂಚತನ್ಮಾತ್ರಗಳಿಂದ ಉಂಟಾದ ಆಕಾಶಾದಿ ಭೂತಗಳನ್ನು ವಿಶೇಷ ಎನ್ನುವುದಾಗಿಯೂ ಕರೆಯುತ್ತಾರೆ. ಹೀಗೆ ತಮಾಸಾಹಂಕಾರದಿಂದ ಭೂತತನ್ಮಾತ್ರಸೃಷ್ಟಿಯಾಯಿತು.

ಕೀರ್ತಿತಸ್ತು ಸಮಾಸೇನ ಮುನಿವರ್ಯಾಸ್ತಪೋಧನಾಃ । ತೈಜಸಾನೀಂದ್ರಿಯಾಣ್ಯಾಹುರ್ದೇವಾ ವೈಕಾರಿಕಾ ದಶ ।। 18 ।। ಏಕಾದಶಂ ಮನಶ್ಚಾತ್ರ ಕೀರ್ತಿತಂ ತತ್ತ್ವಚಿಂತಕೈಃ । ಜ್ಞಾನೇಂದ್ರಿಯಾಣಿ ಪಂಚಾತ್ರ ಪಂಚ ಕರ್ಮೇಂದ್ರಿಯಾಣಿ ಚ ।। 19 ।। ತಾನಿ ವಕ್ಷ್ಯಾಮಿ ತೇಷಾಂ ಚ ಕರ್ಮಾಣಿ ಕುಲಪಾವನಾಃ

ತಪೋಧನರೇ! ಮುನಿವರ್ಯರೇ! ಸಂಕ್ಷಿಪ್ತವಾಗಿ ತಾಮಸಾಹಂಕಾರ ಸೃಷ್ಟಿಯ ಕುರಿತು ಹೇಳಿಯಾಯಿತು. ಸಾತ್ವಿಕಾಹಂಕಾರದಿಂದ ಆದ ಹತ್ತು ಇಂದ್ರಿಯಗಳನ್ನು ತೈಜಸೇಂದ್ರಿಯಗಳೆಂದು ದೇವತೆಗಳು ಹೇಳುತ್ತಾರೆ. ಮನಸ್ಸು ಹನ್ನೊಂದನೆಯ ಇಂದ್ರಿಯವೆಂದು ತತ್ತ್ವಚಿಂತಕರು ಹೇಳಿದ್ದಾರೆ. ಈ ಹತ್ತು ಇಂದ್ರಿಯಗಳಲ್ಲಿ ಐದು ಜ್ಞಾನೇಂದ್ರಿಯಗಳು ಮತ್ತು ಐದು ಕರ್ಮೇಂದ್ರಿಯಗಳು. ಕುಲಪಾವನರೇ! ಆ ಐದು ಇಂದ್ರಿಯಗಳನ್ನೂ ಅವುಗಳ ಕಾರ್ಯಗಳನ್ನೂ ಹೇಳುತ್ತೇನೆ.

ಶ್ರವಣಂ ತ್ವಕ್ಚಕ್ಷುರ್ಜಿಹ್ವಾ ನಾಸಿಕಾ ಚೈವ ಪಂಚಮೀ ।। 20 ।। ಶಬ್ದಾದಿಜ್ಞಾನಸಿದ್ಧ್ಯರ್ಥಂ ಬುದ್ಧಿಯುಕ್ತಾನಿ ಪಂಚ ವೈ । ಪಾಯೂಪಸ್ಥಂ ಹಸ್ತಪಾದೌ ಕೀರ್ತಿತಾ ವಾಕ್ಚ ಪಂಚಮೀ ।। 21 ।। ವಿಸರ್ಗಾನಂದಸಿದ್ಧಿಶ್ಚ ಗತ್ಯುಕ್ತೀ ಕರ್ಮತತ್ಸ್ಮೃತಮ್ । ಆಕಾಶವಾಯುತೇಜಾಂಸಿ ಸಲಿಲಂ ಪೃಥಿವೀ ತಥಾ ।। 22 ।। ಶಬ್ದಾದಿಭಿರ್ಗುಣೈರ್ವಿಪ್ರಾಃ ಸಂಯುಕ್ತಾ ಉತ್ತರೋತ್ತರೈಃ । ನಾನಾವೀರ್ಯಾಃ ಪೃಥಗ್ಭೂತಾಸ್ತತಸ್ತೇ ಸಂಹತಿಂ ವಿನಾ ।। 23 ।। ನಾಶಕ್ನುವನ್ಪ್ರಜಾಃ ಸ್ರಷ್ಟುಮಸಮಾಗತ್ಯ ಕೃತ್ಸ್ನಶಃ । ಸಮೇತ್ಯಾನ್ಯೋನ್ಯಸಂಯೋಗಂ ಪರಸ್ಪರಮಥಾಶ್ರಯಾತ್ ।। 24 ।।

ಶ್ರವಣೇಂದ್ರಿಯ, ತ್ವಗಿಂದ್ರಿಯ, ಚಕ್ಷುರಿಂದ್ರಿಯ, ರಸನೇಂದ್ರಿಯ, ಮತ್ತು ಘ್ರಾಣೇಂದ್ರಿಯ – ಇವು ಐದು ಜ್ಞಾನೇಂದ್ರಿಯಗಳು. ಇವು ಬುದ್ಧಿಯ ಸಹಾಯದಿಂದ ಶಬ್ದಾದಿ ಜ್ಞಾನವನ್ನುಂಟುಮಾಡುತ್ತವೆ. ಪಾಯು, ಉಪಸ್ಥ, ಹಸ್ತ, ಪಾದ, ವಾಕ್ಕು – ಇವು ಐದು ಕರ್ಮೇಂದ್ರಿಯಗಳು. ಈ ಕರ್ಮೇಂದ್ರಿಯಗಳ ಕಾರ್ಯಗಳು – ಹೊರಕ್ಕೆ ಬಿಡುವುದು, ಆನಂದವನ್ನುಂಟುಮಾಡುವುದು, ತೆಗೆದುಕೊಳ್ಳುವುದು, ನಡೆಯುವುದು, ಮತ್ತು ಮಾತನಾಡುವುದು. ಆಕಾಶ, ವಾಯು, ತೇಜಸ್ಸು, ಜಲ, ಮತ್ತು ಪೃಥ್ವೀ – ಇವು ಐದು ಪಂಚಭೂತಗಳು. ವಿಪ್ರರೇ! ಕ್ರಮವಾಗಿ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳಲ್ಲಿ ಒಂದು, ಎರಡು, ಮೂರು, ನಾಲ್ಕು ಮತ್ತು ಐದನ್ನು ಈ ಪಂಚಭೂತಗಳು ಹೊಂದುತ್ತವೆ[1]. ಬೇರೆ ಬೇರೆ ಭೂತಗಳು ಭಿನ್ನ ಭಿನ್ನ ಶಕ್ತಿಯುಳ್ಳವುಗಳು. ಈ ಪಂಚಭೂತಗಳು ಒಂದಾಗದೇ ಪ್ರಜೆಗಳನ್ನು ಸೃಷ್ಟಿಸಲು ಅಸಮರ್ಥರು. ಇವುಗಳ ಒಂದಾಗಿ ಪರಸ್ಪರ ಆಶ್ರಯದಿಂದ ಸೃಷ್ಟಿಯಾಗುತ್ತದೆ.

ಏಕಸಂಘಾ ಸಲಕ್ಷಾಶ್ಚ ಸಂಪ್ರಾಪ್ಯೈಕ್ಯಮಶೇಷತಃ । ಪುರುಷಾಧಿಷ್ಠಿತತ್ವಾಚ್ಚ ಪ್ರಧಾನಾನುಗ್ರಹೇಣ ಚ ।। 25 ।। ಮಹದಾದಯೋ ವಿಶೇಷಾಂತಾದಂಡಮುತ್ಪಾದಯಂತಿ ತೇ । ತತ್ಕ್ರಮೇಣ ವಿವೃದ್ಧಂ ತು ಜಲಬುದ್ಬುದವತ್ಸಲಮ್ ।। 26 ।। ಭೂತೇಭ್ಯೋಂಡಂ ಮಹಾಪ್ರಾಜ್ಞಾ ವೃದ್ಧಂ ತದುದಕೇಶಯಮ್ । ಪ್ರಾಕೃತಂ ಬ್ರಹ್ಮರೂಪಸ್ಯ ವಿಷ್ಣೋಃ ಸ್ಥಾನಮನುತ್ತಮಮ್ ।। 27 ।। ತತ್ರಾವ್ಯಕ್ತಸ್ವರೂಪೋಽಸೌ ವಿಷ್ಣುರ್ವಿಶ್ವೇಶ್ವರಃ ಪ್ರಭುಃ । ಬ್ರಹ್ಮರೂಪಂ ಸಮಾಸ್ಥಾಯ ಸ್ವಯಮೇವ ವ್ಯವಸ್ಥಿತಃ ।। 28 ।। ಸ್ವೇದಜಾಂಡಮಭೂತ್ತಸ್ಯ ಜರಾಯುಶ್ಚ ಮಹೀಧರಾಃ । ಗರ್ಭೋದಕಂ ಸಮುದ್ರಾಶ್ಚ ತಸ್ಯಾಭೂನ್ಮಹದಾತ್ಮನಃ ।। 29 ।। ಸಾದ್ರಿದ್ವೀಪಸಮುದ್ರಾಶ್ಚ ಸಜ್ಯೋತಿರ್ಲೋಕಸಂಗ್ರಹಃ । ತಸ್ಮಿನ್ನಂಡೇಭವತ್ಸರ್ವಂ ಸದೇವಾಸುರಮಾನುಷಮ್ ।। 30 ।।

ಈ ಭೂತಗಳು ಒಂದು ಗುಂಪಾಗಿ ಪರಸ್ಪರ ಭೇದವನ್ನಡಗಿಸಿಕೊಂಡು ಪುರುಷನ ಅಧಿಷ್ಟಾತೃತ್ವದಲ್ಲಿ ಪ್ರಧಾನನ ಅನುಗ್ರಹದಿಂದ ಸೃಷ್ಟಿಸುತ್ತವೆ. ಮಹತ್ತು ಮತ್ತು ವಿಶೇಷಭೂತಗಳು ಸೇರಿ ಅಂಡವನ್ನು ಉತ್ಪಾದಿಸುತ್ತವೆ. ಈ ಅಂಡವು ವೃದ್ಧಿಯಾಗಿ ನೀರಿನ ಗುಳ್ಳೆಯಂತೆ ಒಂದಾಗಿ ಕಾಣಿಸುತ್ತದೆ. ಮಹಾಪ್ರಾಜ್ಞರೇ! ಭೂತಗಳಿಂದ ಉಂಟಾದ ಈ ಅಂಡವು ನೀರಿನಲ್ಲಿದ್ದು ಬ್ರಹ್ಮರೂಪವನ್ನು ಹೊಂದಿದ ವಿಷ್ಣುವಿಗೆ ಶ್ರೇಷ್ಠವಾದ ಮೊದಲ ಸ್ಥಾನವಾಗುತ್ತದೆ. ಆ ಮೊಟ್ಟೆಯಲ್ಲಿ ಅವ್ಯಕ್ತರೂಪನಾದ ಪ್ರಭು ವಿಶ್ವೇಶ್ವರ ವಿಷ್ಣುವು ಸ್ವಯಂ ತಾನೇ ಬ್ರಹ್ಮರೂಪವನ್ನು ತಾಳಿ ವ್ಯವಸ್ಥಿತನಾಗುತ್ತಾನೆ. ಮಹದ್ರೂಪವನ್ನು ತಾಳಿದ ಆ ವಿಷ್ಣುವಿನ ಸ್ವೇದೋದಕವೇ ಅಂಡವಾಯಿತು. ಗರ್ಭವೇಷ್ಟನ ಚೀಲವೇ ಪರ್ವತಗಳಾದವು. ಗರ್ಭೋದಕವೇ ಸಮುದ್ರವಾಯಿತು. ಆ ಅಂಡದಲ್ಲಿ ಪರ್ವತಗಳೂ, ದ್ವೀಪಗಳೂ, ಸಮುದ್ರಗಳೂ, ಜ್ಯೋತಿರ್ಲೋಕಗಳೂ, ದೇವಾಸುರ ಮನುಶ್ಯರೂ ಮತ್ತು ಎಲ್ಲ ಲೋಕಗಳೂ ಉಂಟಾದವು.

ಅನಾದಿನಿಧನಸ್ಯೈವ ವಿಷ್ಣೋರ್ನಾಭೇಃ ಸಮುತ್ಥಿತಮ್ । ಯತ್ಪದ್ಮಂ ತದ್ಧೈಮಮಂಡಮಭೂಚ್ಛ್ರೀಕೇಶವೇಚ್ಛಯಾ ।। 31 ।। ರಜೋಗುಣಧರೋ ದೇವಃ ಸ್ವಯಮೇವ ಹರಿಃ ಪರಃ । ಬ್ರಹ್ಮರೂಪಂ ಸಮಾಸ್ಥಾಯ ಜಗತ್ಸ್ರಷ್ಟುಂ ಪ್ರವರ್ತತೇ ।। 32 ।। ಸೃಷ್ಟಿಂ ಚ ಯಾತ್ಯನುಗುಣಂ ಯಾವತ್ಕಲ್ಪವಿಕಲ್ಪನಾ । ನಾರಸಿಂಹಾದಿರೂಪೇಣ ರುದ್ರರೂಪೇಣ ಸಂಹರೇತ್ ।। 33 ।। ಸ ಬ್ರಹ್ಮರೂಪಂ ವಿಸೃಜನ್ಮಹಾತ್ಮಾಜಗತ್ಸಮಸ್ತಂ ಪರಿಪಾತುಮಿಚ್ಚನ್ । ರಾಮಾದಿರೂಪಂ ಸ ತು ಗೃಹ್ಯ ಪಾತಿ ಬಭೂವ ರುದ್ರೋ ಜಗದೇತದತ್ತುಮ್ ।। 34 ।।

ಅನಾದಿನಿಧನ ಕೇಶವ ವಿಷ್ಣುವಿನ ನಾಭಿಯಿಂದ ಉತ್ಪನ್ನವಾದ ಕಮಲವೇ ಅವನ ಇಚ್ಛೆಯಂತೆ ಚಿನ್ನದ ಮೊಟ್ಟೆಯಾಯಿತು. ಸ್ವಯಂ ಪರಮಾತ್ಮ ದೇವ ಹರಿಯೇ ರಜೋಗುಣವನ್ನಾಶ್ರಯಿಸಿ ಬ್ರಹ್ಮರೂಪವನ್ನು ತಾಳಿ ಜಗತ್ತಿನ ಸೃಷ್ಟಿಯನ್ನು ಪ್ರಾರಂಭಿಸಿದನು. ಪ್ರಳಯ ಪರ್ಯಂತವಾಗಿ ಪ್ರತಿಯುಗದಲ್ಲಿಯೂ ಅವನು ಸೃಷ್ಟಿಮಾಡುತ್ತಿರುತ್ತಾನೆ. ಮತ್ತು ನರಸಿಂಹಾದಿ ರೂಪಗಳಿಂದ ಹಾಗೂ ರುದ್ರರೂಪದಿಂದ ಸಂಹರಿಸುತ್ತಾನೆ. ಮಹಾತ್ಮನಾದ ಆ ವಿಷ್ಣುವೇ ಬ್ರಹ್ಮರೂಪವನ್ನು ಬಿಟ್ಟು ಸಮಸ್ತ ಜಗತ್ತನ್ನೂ ಪಾಲಿಪಾಲಿಸಬೇಕೆಂದು ರಾಪಾದಿ ರೂಪಗಳನ್ನು ತಾಳಿ ಪಾಲಿಸುತ್ತಾನೆ. ಅವನೇ ಜಗತ್ತನ್ನು ಸಂಹರಿಸಲು ರುದ್ರನಾಗುತ್ತಾನೆ.”

ಇತಿ ಶ್ರೀಮಹಾಪುರಾಣೇ ಪಾದ್ಮೇ ಆದಿಖಂಡೇ ದ್ವಿತೀಯೋಽಧ್ಯಾಯಃ ।।

[1] ಮೊದಲು ಉತ್ಪತ್ತಿಯಾದ ಆಕಾಶಕ್ಕೆ ಶಬ್ದವೊಂದೇ ಗುಣವು, ಎರಡನೆಯ ವಾಯುವಿಗೆ ಶಬ್ದ ಮತ್ತು ಸ್ಪರ್ಶಗಳೆಂಬ ಎರಡು ಗುಣಗಳು. ಮೂರನೆಯ ತೇಜಸ್ಸಿಗೆ ಶಬ್ದ, ಸ್ಪರ್ಶ ಮತ್ತು ರೂಪಗಳೆಂಬ ಮೂರು ಗುಣಗಳು. ನಾಲ್ಕನೆಯ ಜಲಕ್ಕೆ ಶಬ್ದ, ಸ್ಪರ್ಶ, ರೂಪ ಮತ್ತು ರಸಗಳೆಂಬ ನಾಲ್ಕು ಗುಣಗಳು. ಐದನೆಯ ಪೃಥ್ವಿಗೆ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳೆಂಬ ಐದೂ ಗುಣಗಳು.

Leave a Reply

Your email address will not be published. Required fields are marked *