ಋಗ್ವೇದ ಸಂಹಿತೆ ಮಂಡಲ 10, ಅನುವಾಕ 11, ಸೂಕ್ತ 129

[ಋಗ್ವೇದ ಸಂಹಿತಾ (ಸಾಯಣಭಾಷ್ಯ ಸಮೇತ, ಕರ್ಣಾಟಕ ಭಾಷಾರ್ಥಾನುವಾದವಿವರಣೆಗಳೊಂದಿಗೆ) ಭಾಗ 30 ಎಂಟನೆಯ ಅಷ್ಟಕದ ಅಧ್ಯಾಯಗಳು 5-8 ಹತ್ತನೆಯ ಮಂಡಲದ ಸೂಕ್ತಗಳು 95-191, ಅನುವಾದಕರು ಆಸ್ಥಾನಮಹಾವಿದ್ವಾನ್ ಹೆಚ್. ಪಿ. ವೆಂಕಟರಾವ್, ಶ್ರೀ ಜಯಚಾಮರಾಜೇಂದ್ರ ವೇದರತ್ನಮಾಲಾ, ಸಂಖ್ಯೆ 30, ಶ್ರೀ ಶಾರದಾ ಪ್ರೆಸ್, ಮೈಸೂರು, 1955]

 [ಸೂಕ್ತದಲ್ಲಿರುವ ಋಕ್ಸಂಖ್ಯೆ 7; ಋಷಿಃ – ಪ್ರಜಾಪತಿಃ ಪರಮೇಷ್ಠೀ । ದೇವತಾ – ಭಾವವೃತ್ತಂ । ಛಂದಃ – ತ್ರಿಷ್ಟುಪ್]

 ನಾಸದಾಸೀನ್ನೋ ಸದಾಸೀತ್ತದಾನೀಂ ನಾಸೀದ್ರಜೋ ನೋ ವ್ಯೋಮಾ ಪರೋ ಯತ್ । ಕಿಮಾವರೀವಃ ಕುಹ ಕಸ್ಯ ಶರ್ಮನ್ನಂಭಃ ಕಿಮಾಸೀದ್ಗಹನಂ ಗಂಭೀರಮ್ ।। 1 ।।

ತದಾನೀಂ – ಪ್ರಲಯವಾಗಿದ್ದಾಗ ಅಂದರೆ ಸೃಷ್ಟಿಯ ಪೂರ್ವದಲ್ಲಿ । ಅಸತ್ – ಜಗದಾದಿಗಳಿಗೆ ಕಾರಣಭೂತವಾದುದೂ ಅವ್ಯಕ್ತರೂಪದಿಂದಿರುವುದೂ ಇಂದ್ರಿಯಗಳಿಗೆ ಅಗ್ರ್ಯಾಹ್ಯವಾದುದೂ ಆದ ಯಾವ ಹೆಸರಿನಿಂದಲೂ ಕರೆಯಲ್ಪಡಲು ಆಗದಿರುವ ಅಸತ್ ಎಂಬುದು । ನ ಆಸೀತ್ - ಇರಲಿಲ್ಲ । ಸತ್ – ವ್ಯಕ್ತರೂಪವುಳ್ಳದ್ದೂ, ಇಂದ್ರಿಯಗಮ್ಯವಾದುದೂ, ಜಗದಾದಿಗಳಿಗೆ ಮೂಲಭೂತವೂ ಆದ ಸತ್ ಎಂಬ ಮೂಲವಸ್ತುವೂ । ನೋ ಆಸೀತ್ - ಇರಲಿಲ್ಲ । ರಜಃ – ಲೋಕಗಳೂ । ನ ಆಸೀತ್ - ಇರಲಿಲ್ಲ । ವ್ಯೋಮ – ಅಂತರಿಕ್ಷವೂ । ನೋ - ಇರಲಿಲ್ಲ । ಪರಃ – ಆ ಅಂತರಿಕ್ಷ ಪ್ರದೇಶದಿಂದ ಆಚೆಗೆ । ಯತ್ – ಯಾವ ಸ್ವರ್ಗಾದಿಲೋಕಗಳಿರುವವೋ ಅವೂ । ನೋ - ಇರಲಿಲ್ಲ (ಹಾಗಾದರೆ) । ಆವರೀವಃ – ಆವರಣಭೂತವಾದ ಎಂದರೆ ಎಲ್ಲವನ್ನೂ ಆವರಿಸಿರುವ । ಕಿಂ – ಯಾವುದಾದರೂ ವಸ್ತುವಿದ್ದಿತೇ (ಇಲ್ಲ) । ಕುಹ – ಯಾವ ಪ್ರದೇಶದಲ್ಲಿ । ಕಸ್ಯ – ಯಾವ ಭೋಕ್ತೃವಿನ । ಶರ್ಮನ್ – ಸುಖಪ್ರದವಸ್ತುಗಳು ಇದ್ದವು? । ಗಹನಂ – ಪ್ರವೇಶಿಸಲಸಾಧ್ಯವಾದುದೂ । ಗಂಭೀರಂ – ಅಗಾಧವಾದುದೂ ಆದ । ಅಂಭಃ - ಉದಕವು । ಕಿಂ ಆಸೀತ್ – ಇದ್ದಿತೇ? (ಯಾವುದೂ ಇರಲಿಲ್ಲ) ।

ಪ್ರಳಯದ ನಂತರ ಅಂದರೆ ಹಿಂದೆ ಸೃಷ್ಟಿಯಾಗಿದ್ದ ಜಗದಾದಿಗಳು ಪರಮಾತ್ಮನಲ್ಲಿ ಲೀನವಾಗಿ ಪುನಃ ಮತ್ತೆ ಸೃಷ್ಟಿಯಾಗುವುದಕ್ಕೆ ಮೊದಲು ಜಗದಾದಿಗಳಿಗೆ ಕಾರಣಭೂತವಾದ, ಅವ್ಯಕ್ತಸ್ವರೂಪದಿಂದಿರುವ, ಇಂದ್ರಿಯಜನ್ಯಜ್ಞಾನಗಳಿಗೆ ಅಗೋಚರವಾದ, ನಾಮರೂಪಾದಿಗಳಿಂದ ನಿರ್ದೇಶಿಸಲಸಾಧ್ಯವಾದ ಅಸತ್ತಾಗಲೀ, ಇಂದ್ರಿಯಗಮ್ಯವಾದ, ವ್ಯಕ್ತಸ್ವರೂಪವಿರುವ, ಜಗದಾದಿಗಳಿಗೆ ಮೂಲಭೂತವಾದ ಸತ್ ಆಗಲೀ ಇರಲಿಲ್ಲ. ಲೋಕಗಳೂ ಇರಲಿಲ್ಲ. ಅಂತರಿಕ್ಷವೂ ಇರಲಿಲ್ಲ. ಅಂತರಿಕ್ಷದಿಂದ ಆಚೆಯಿರುವ ಸ್ವರ್ಗಾದಿ ಲೋಕಗಳೂ ಇರಲಿಲ್ಲ. ಇವೆಲ್ಲವನ್ನೂ ಆವರಿಸಿದ್ದ ಯಾವುದಾದರೂ ವಸ್ತುವಿತ್ತೇ? ಭೋಕ್ತೃವಿನ (ಜೀವರಾಶಿಗಳಿಗೆ) ಸುಖಸಾಧನ ಸಾಮಗ್ರಿಗಳು ಎಲ್ಲಿದ್ದವು? ಅಥವಾ ಪ್ರವೇಶಿಸಲು ಅಸಾಧ್ಯವೂ ಅಗಾಧವೂ ಆದ ಜಲರಾಶಿಯಿತ್ತೇ? ಯಾವುದೂ ಇರಲಿಲ್ಲ.

ಸತ್ ಶಬ್ದವು ಅಸ-ಭುವಿ (to exist) ಎಂಬ ಧಾತುವಿನಿಂದ ನಿಷ್ಪನ್ನವಾಗಿದೆ. ಆದ್ದರಿಂದ ಸತ್ ಶಬ್ದಕ್ಕೆ ಇರುವ ವಸ್ತು, ಕಣ್ಣಿಗೆ ಕಾಣುವ ವಸ್ತು ಎಂದರ್ಥ. ಅಸತ್ ಎಂದರೆ ಸತ್ ಶಬ್ದದ ನಿಷೇದಾರ್ಥವಲ್ಲ. ಇವೆರಡೂ ಬೇರೆ ಬೇರೆ ವಸ್ತುಗಳಾದರೂ ಇವು ಒಂದಕ್ಕೊಂದು ವಿರುದ್ಧವಾದವುಗಳಲ್ಲ. ಇಂದ್ರಿಯಗಮ್ಯವಲ್ಲದ್ದು ಅಸತ್ ಎಂಬ ಅರ್ಥದಲ್ಲಿ ಮಾತ್ರ ಇವುಗಳಿಗೆ ಪರಸ್ಪರ ವಿರುದ್ಧಾರ್ಥಗಳಿವೆ.

ವಸ್ತುವಿನಲ್ಲಿರುವ (matter) ಪರಮಾಣುವುಗಿಂತಲೂ ಅತಿ ಸೂಕ್ಷ್ಮಕಣಗಳು ವಸ್ತುವಿನ ಗುಣಗಳನ್ನು ಕಳೆದುಕೊಂಡು ಶಕ್ತಿಯಾಗಿ (energey) ಪರಿವರ್ತಿತವಾಗುತ್ತವೆ ಎನ್ನುವುದು ಆಧುನಿಕ ವಿಜ್ಞಾನಕ್ಕೆ ಹೊಸವಿಷಯವಾದರೂ ವಸ್ತುವಿನ ಅತಿಸೂಕ್ಷ್ಮಾವಸ್ಥೆಯೇ ಶಕ್ತಿ ಎನ್ನುವುದು ವೇದಗಳಿಗೆ ಹೊಸತಲ್ಲ. ವಸ್ತುವಿಗೂ ಶಕ್ತಿಗೂ ಭೇದವಿಲ್ಲ. ಅವಸ್ಥೆಮಾರ ಬೇರೆ. ಪ್ರಪಂಚದಲ್ಲಿ ಕಂಡುಬರುವ ವಸ್ತುಗಳಾಗಲೀ ಶಕ್ತಿಗಳಾಗಲೀ ಇವೆಲ್ಲವೇ ಒಂದೇ ಮೂಲವಸ್ತುವಿನಿಂದ ಉತ್ಪನ್ನವಾದವು. ಆ ಮೂಲವಸ್ತುವನ್ನೆ ಇಲ್ಲಿ, ಅಂದರೆ ವೇದಗಳಲ್ಲಿ, ಸತ್ ಎಂಬ ಶಬ್ದದಿಂದ ನಿರ್ದೇಶಿಸಿದ್ದಾರೆ.

ಅಸತ್ ಎಂದರೆ ಇಲ್ಲದಿರುವುದು ಎಂದರ್ಥವಲ್ಲ. ಇಂದ್ರಿಯಗಳಿಗೆ ಗೋಚರವಾಗದಿರುವ ಎಲ್ಲಕ್ಕಿಂತಲೂ ಅತಿಸೂಕ್ಷ್ಮವಾದ ಶಕ್ತಿಯನ್ನೇ ಅಸತ್ ಎಂದು (ಸ್ಥೂಲವಾಗಿ) ಹೇಳಬಹುದು.

ನ ಮೃತ್ಯುರಾಸೀದಮೃತಂ ನ ತರ್ಹಿ ನ ರಾತ್ರ್ಯಾ ಅಗ್ನ ಆಸೀತ್ಪ್ರಕೇತಃ । ಆನೀದವಾತಂ ಸ್ವಧಯಾ ತದೇಕಂ ತಸ್ಮಾದ್ಧಾನ್ಯನ್ನ ಪರಃ ಕಿಂಚ ನಾಸ ।। 2 ।।

(ಸೃಷ್ಟಿಗೆ ಪೂರ್ವದಲ್ಲಿ) ಮೃತ್ಯುಃ - ಮರಣವು । ನ ಆಸೀತ್ - ಇರಲಿಲ್ಲ । ತರ್ಹಿ – ಹಾಗಾದರೆ । ಅಮೃತಂ – ಮರಣವಿಲ್ಲದಿರುವಿಕೆಯೂ । ನ - ಇರಲಿಲ್ಲ (ಮತ್ತು ಆಗ) । ರಾತ್ರ್ಯಾಃ – ರಾತ್ರಿಯ ಮತ್ತು । ಅಹ್ನಃ - ಹಗಲಿನ । ಪ್ರಕೇತಃ – ಪರಿಜ್ಞಾನವು । ನ ಆಸೀತ್ - ಇರಲಿಲ್ಲ । ತತ್ ಏಕಂ – ಸಕಲವೇದಾಂತಪ್ರಸಿದ್ಧವೂ ಅದ್ವಿತೀಯವೂ ಆದ ಆ ಬ್ರಹ್ಮತತ್ತ್ವವು । ಸ್ವಧಯಾ – ತನ್ನ ಮಾಯಾರೂಪವಾದ ಸಾಮರ್ಥ್ಯದಿಂದ । ಅವಾತಂ – ಶ್ವಾಸೋಚ್ಛ್ವಾಸರಹಿತವಾದ ಎಂದರೆ ಜೀವವಿಲ್ಲದ ಜಡ ಶರೀರವನ್ನು । ಆನೀತ್ – ಶ್ವಾಸೋಚ್ಛ್ವಾಸಗಳಿಂದ ಜೀವಯುಕ್ತವನ್ನಾಗಿ ಮಾಡಿತು । ತಸ್ಮಾತ್ – ಆ ಮಾಯಾಸಹಿತವಾದ ಸಾಮರ್ಥ್ಯದಿಂದ ಬ್ರಹ್ಮನನ್ನು ಬಿಟ್ಟು । ಅನ್ಯತ್ ಕಿಂಚನ – ಬೇರೆ ಯಾವ ಭೂತ ಭೌತಿಕ ವಸ್ತುವೂ । ನ ಆಸ - ಇರಲಿಲ್ಲ । ಪರಃ – ಅನಂತರದಲ್ಲಿ ಸೃಷ್ಟವಾದ ಈ ಜಗತ್ತೂ । ನ ಆಸ – ಆಗ ಇರಲಿಲ್ಲ ।

ಸೃಷ್ಟಿಯ ಪೂರ್ವದ ಪ್ರಲಯಾವಸ್ಥೆಯಲ್ಲಿ ಮರಣವೂ, ಮರಣವಿಲ್ಲದಿರುವಿಕೆಯೂ ಇರಲಿಲ್ಲ. ರಾತ್ರಿ ಯಾವುದು ಹಗಲು ಯಾವುದು ಎನ್ನುವುದರ ಪರಿಜ್ಞಾನವಿರಲಿಲ್ಲ. ಸಮಸ್ತ ವೇದಾಂತಪ್ರಸಿದ್ಧವೂ ಅದ್ವಿತೀಯವೂ ಆದ ಬ್ರಹ್ಮತತ್ತ್ವ ಒಂದು ಮಾತ್ರ ಇತ್ತು. ಶ್ವಾಸೋಚ್ಛಾಸರಹಿತವಾದ ಅಂದರೆ ಜೀವವಿಲ್ಲದ ಜಡವಸ್ತುವನ್ನು ತನ್ನ ಮಾಯಾ ಎಂಬ ಸಾಮರ್ಥ್ಯಾತಿಶಯದಿಂದ ಸಚೇತನವನ್ನಾಗಿ ಮಾಡಿತು. ಆ ಸಾಮರ್ಥ್ಯವಿರುವ ಆ ಬ್ರಹ್ಮವಸ್ತುವಿಗಿಂತ ಇತರ ಬೇರೆ ಯಾವ ವಸ್ತುವೂ ಇರಲಿಲ್ಲ. ಅನಂತರ ಸೃಷ್ಟವಾದ ಈ ಜಗತ್ತು ಆಗ ಇರಲಿಲ್ಲ.

ಬ್ರಹ್ಮವನ್ನು ಬಿಟ್ಟರೆ ಬೇರೆ ಯಾವ ವಸ್ತುವೂ ಇರಲಿಲ್ಲ ಎಂದಾಗ ಬ್ರಹ್ಮನು ಚಲನವಿಲ್ಲದ ಜಡವಸ್ತುವನ್ನು ಚೇತನಾಯುಕ್ತವನ್ನಾಗಿ ಮಾಡಿದನು ಎನ್ನುವುದು ಅಸಮಂಜಸವೆನಿಸುತ್ತದೆ. ಬ್ರಹ್ಮವೊಂದನ್ನು ಬಿಟ್ಟರೆ ಬೇರೆ ವಸ್ತುವೇ ಇಲ್ಲದಿರುವಾಗ ಜಡವಸ್ತುವೆಲ್ಲಿಂದ ಬಂತು? ಬ್ರಹ್ಮ ಮತ್ತು ಜಡವಸ್ತು ಎಂದು ಎರಡು ವಸ್ತುಗಳಾಗಲಿಲ್ಲವೇ? ಅದನ್ನೇ ತಸ್ಮಾದ್ಧಾನ್ಯನ್ನ ಪರಃ ಕಿಂಚ ನಾಸ ಎಂಬ ವಾಕ್ಯದಲ್ಲಿ ಸ್ಪಷ್ಟಪಡಿಸಿದೆ. ಸೃಷ್ಟಿಯ ಪೂರ್ವದಲ್ಲಿ ಬ್ರಹ್ಮವಸ್ತುವೊಂದೇ ಇತ್ತು. ಅದೂ ಸಹ ಅವ್ಯಕ್ತ (ಅಸತ್) ರೂಪದಲ್ಲಿತ್ತು. ಬೇರೆ ವಸ್ತುವಿರಲಿಲ್ಲ. ಸೃಷ್ಟಿಯ ಸಮಯದಲ್ಲಿ ಈ ಬ್ರಹ್ಮವೇ ತನ್ನ ಮಾಯಾಶಕ್ತಿಯಿಂದ ಜಗದಾದಿಗಳಾಗಿ ಪರಿವರ್ತಿತವಾಯಿತು. ಆದ್ದರಿಂದ ಈ ಪರಿವರ್ತಿತವಾದ ಜಗದಾದಿಗಳೂ ಬ್ರಹ್ಮವಸ್ತುವಲ್ಲದೇ ಬೇರೆಯಲ್ಲ. ಈ ಜಗದಾದಿಗಳು ತಮ್ಮ ವ್ಯವಹಾರಗಳನ್ನು ನಡೆಸಲು ಅವುಗಳಲ್ಲಿ ಬ್ರಹ್ಮನು ಚೈತನ್ಯರೂಪದಿಂದ ಪ್ರವೇಶಿಸಿದನು ಎಂದು ಹೇಳಿದೆ. ಆದ ಮಾತ್ರಕ್ಕೆ ಬ್ರಹ್ಮ ಬೇರೆ, ಜಗದಾದಿಗಳು ಬೇರೆ, ಇವೆರಡೂ ಬೇರೆ ಬೇರೆ ಎರಡು ವಸ್ತುಗಳು ಎಂದು ಹೇಳುವುದು ಸರಿಯಲ್ಲ. ಒಂದೇ ವಸ್ತುವಿನ ಎರಡು ಪ್ರತಿಬಿಂಬಗಳು. ಅನೇಕ ಪಾತ್ರೆಗಳಲ್ಲಿ ತುಂಬಿದ ನೀರುಗಳಲ್ಲಿ ಸೂರ್ಯನ ಪ್ರತಿಬಿಂಬವು ಅನೇಕ ಸೂರ್ಯಗಳಂತೆ ಕಂಡರೂ, ಸೂರ್ಯನು ಒಬ್ಬನೇ ಹೊರತು ಅನೇಕ ಸೂರ್ಯರಿಲ್ಲ. ಹಾಗೆಯೇ, ಜಗದಾದಿಗಳು ವಿಧವಿಧವಾಗಿ ಕಂಡರೂ, ಅವೆಲ್ಲವೂ ಒಬ್ಬನೇ ಆದ ಪರಮಾತ್ಮನ ಸ್ವರೂಪವೇ ಆಗಿರುವುದು. ಆ ಪರಮಾತ್ಮ ಅಥವಾ ಬ್ರಹ್ಮವಸ್ತುವನ್ನು ಬಿಟ್ಟು ಬೇರೆ ಯಾವ ವಸ್ತುವೂ ಇಲ್ಲವೇ ಇಲ್ಲ. ಆದ್ದರಿಂದ ಸೃಷ್ಟಿಯ ಮೊದಲು ಈಗ ಕಾಣುತ್ತಿರುವ ಈ ಜಗದಾದಿಗಳೂ ಇರಲೇ ಇಲ್ಲ ಎಂದು ಈ ವಾಕ್ಯದ ಮುಖ್ಯ ಅಭಿಪ್ರಾಯ.

ತಮ ಆಸೀತ್ತಮಸಾ ಗೂಳ್ಹಮಗ್ರೇಽಪ್ರಕೇತಂ ಸಲಿಲಂ ಸರ್ವಮಾ ಇದಮ್ । ತುಚ್ಛ್ಯೇನಾಭ್ವಪಿಹಿತಂ ಯದಾಸೀತ್ತಪಸಸ್ತನ್ಮಹಿನಾಜಾಯತೈಕಮ್ ।। 3 ।।

ಅಗ್ರೇ – ಸೃಷ್ಟಿಯ ಪೂರ್ವದಲ್ಲಿ ತಮಸಾ – ಅಂಧಕಾರದಿಂದ ಗೂಳ್ಹಂ – ದಟ್ಟವಾಗಿ ಕವಿದಿರುವ ಅಪ್ರಕೇತಂ – ಯಾವುದನ್ನೂ ತಿಳಿಯಲು ಅಸಾಧ್ಯವಾದ ತಮಃ – ಕತ್ತಲೆಯು ಆಸೀತ್ – ಇದ್ದಿತು । ಇದಂ ಸರ್ವಂ – ಈಗ ಕಾಣುವ ಸಮಸ್ತ ಜಗತ್ತೂ (ಆ ಕಾಲದಲ್ಲಿ) । ಸಲಿಲಂ - ಉದಕಮಯವಾಗಿ । ಆಃ - ಇದ್ದಿತು । ಆಭು – ಸುತ್ತಲೂ । ತುಚ್ಛ್ಯೇನ – ಏನೂ ಇಲ್ಲದ ಅಭಾವದಿಂದಲೂ । ಯತ್ - ಯಾವುದು । ಅಪಿಹಿತಂ – ಆಚ್ಛಾದಿತವಾಗಿ । ಆಸೀತ್ - ಇದ್ದಿತೋ । ಏಕಂ – ಕಾರ್ಯಕಾರಣಗಳು ಸೇರಿ ಒಂದಾಗಿದ್ದ ಆ ಅಸದ್ವಸ್ತುವು । ತಪಸಃ – ಸೃಷ್ಟಿಮಾಡಬೇಕೆಂಬ ಧ್ಯಾನರೂಪವಾದ । ಮಹಿಮ್ನಾ - ಮಹಿಮೆಯಿಂದ । ತತ್ – ಕಾರ್ಯರೂಪವಾದ ಜಗತ್ತಾಗಿ । ಅಜಾಯತ-  ಉತ್ಪನ್ನವಾಯಿತು.

ಎಲ್ಲಕ್ಕಿಂತಲೂ ಮೊದಲು ಅಂದರೆ ಸೃಷ್ಟಿಯ ಆರಂಭದಲ್ಲಿ ಏನೊಂದನ್ನೂ ತಿಳಿಯಲು ಸಾಧ್ಯವಾಗದ ಅಂಧಕಾರದಿಂದ ದಟ್ಟವಾಗಿ ಕವಿದಿದ್ದ ಕತ್ತಲೆಯು ಎಲ್ಲೆಲ್ಲಿಯೂ ವ್ಯಾಪಿಸಿತ್ತು. ಈಗ ಕಾಣುವ ಸಮಸ್ತ ಜಗತ್ತೂ ಈಗಿರುವಂತೆ ಇರದೆ ಎಲ್ಲವೂ ಉದಕಮಯವಾಗಿತ್ತು. ಅಥವಾ ಉದಕದಂತೆ ನಿಬಿಡವಾದ ಅಂಧಕಾರದಿಂದ ವ್ಯಾಪಿಸಿತ್ತು. ಯಾವಾ ಆಧಾರವೂ ಆವರಣವೂ ಇಲ್ಲದ ಮತ್ತು ಕಾರ್ಯಕಾರಣಗಳೆಂಬ ಪ್ರತ್ಯೇಕ ವಿಭಾಗಗಳಿಲ್ಲದೇ ಒಂದೇ ಆಗಿದ್ದ ಅವ್ಯಕ್ತಸ್ವರೂಪವು ಸೃಷ್ಟಿಮಾಡಬೇಕೆಂಬ ತನ್ನ ಧ್ಯಾನರೂಪೀ ಮಹಿಮೆಯಿಂದ ಕಾರ್ಯರೂಪವಾದ ಜಗತ್ತಾಗಿ ಪರಿಣಮಿಸಿತು.

ಪೂರ್ವದಲ್ಲಿ ಈ ಜಗತ್ತಿರಲಿಲ್ಲವೆಂದರೆ ಈ ಜಗತ್ತಿನ ಉತ್ಪತ್ತಿಯು ಹೇಗಾಯಿತು? ಒಂದು ವಸ್ತುವನ್ನು ನಿರ್ಮಿಸುವಾಗ ಅದನ್ನು ನಿರ್ಮಿಸುವ ಕರ್ತೃವು ಬೇಕು. ಅದಕ್ಕೆ ಬೇಕಾದ ಮೂಲವಸ್ತುವು ಬೇಕು. ಅದಕ್ಕೆ ಕಾರಣವೂ ಬೇಕು. ಹೇಗೆಂದರೆ, ಒಂದು ಮಡಕೆಯನ್ನು ನಿರ್ಮಿಸಬೇಕಾದರೆ ಅದನ್ನು ನಿರ್ಮಿಸಬಲ್ಲ ಕುಂಬಾರನಿರಬೇಕು. ಅವನೇ ಕರ್ತೃವು. ಅದಕ್ಕೆ ಬೇಕಾದ ಮೂಲವಸ್ತು (raw material) – ಎಂದರೆ ಮಣ್ಣು – ಬೇಕು. ಕಾರಣವು ಬೇಕು. ಜಗನ್ನಿರ್ಮಾಣಕಾರ್ಯಕ್ಕೆ ಕರ್ತೃವು ಅವ್ಯಕ್ತಸ್ವರೂಪನಾದ ಬ್ರಹ್ಮನು. ಪರಬ್ರಹ್ಮವು ಮಾತ್ರವಿದ್ದು ಬೇರೆ ವಸ್ತುವೇ ಇರಲಿಲ್ಲ ಎಂದಿರುವಾಗ ಕರ್ತೃವಾದ ಬ್ರಹ್ಮವು ಯಾವ ಪದಾರ್ಥದ ಸಹಾಯದಿಂದ ಜಗತ್ತನ್ನು ನಿರ್ಮಿಸಿದನು? ಬ್ರಹ್ಮನಿಗೆ ಜಗತ್ತನ್ನು ಸೃಷ್ಟಿಸಲು ಮೂಲವಸ್ತುವಿನ ಅವಶ್ಯಕತೆಯಿಲ್ಲ. ಅವ್ಯಕ್ತಸ್ವರೂಪದಿಂದಿರುವ ಬ್ರಹ್ಮನೇ ಸದ್ರೂಪನಾಗಿ ಎಂದರೆ ಜಗದಾದಿ ವಸ್ತುಗಳಾಗಿ ಪರಿಣಮಿಸುತ್ತಾನೆ. ಬ್ರಹ್ಮನು ಬೇರೆ ಅಲ್ಲ, ಸದ್ರೂಪಗಳಾದ ಜಗದಾದಿಗಳು ಬೇರೆ ಅಲ್ಲ. ಆದ್ದರಿಂದ ಅಸತ್ತಿನ ಸ್ವಲ್ಪಭಾಗವೇ ಸತ್ತಾಗಿ ಪರಿಣಮಿಸಿತು ಎಂದು ತಿಳಿಯಬೇಕು.

ಸೃಷ್ಟಿಯ ಪೂರ್ವದಲ್ಲಿ ಜಗದಾದಿಗಳೊಂದೂ ಇರಲಿಲ್ಲ ಎಂದ ಮಾತ್ರಕ್ಕೆ ಅದಕ್ಕೆ ಮೂಲಕಾರಣವಾದ ಸತ್ ಇರಲಿಲ್ಲ ಎಂದರ್ಥವಲ್ಲ. ಅಸತ್ ಸತ್ತಾಗಿ ಪರಿಣಮಿಸಿ ಅದೇ ಜಗದಾದಿಗಳಿಗೆ ಮೂಲಕಾರಣವಾಯಿತು.

ಇದರ ಮೊದಲು ಪ್ರಳಯದಲ್ಲಿ ಎಲ್ಲವೂ ಅಂಧಕಾರಮಯವಾಗಿತ್ತು. ಏನನ್ನೂ ನೋಡಿ ತಿಳಿಯಲು ಸಾಧ್ಯವಾಗುತ್ತಿರಲಿಲ್ಲ. ಸಮುದ್ರದ ನೀರು ಎಲ್ಲೆಲ್ಲಿಯೂ ವ್ಯಾಪಿಸಿರುವಂತೆ ಸರ್ವವೂ ಜಲಮಯವಾಗಿತ್ತು ಅಥವಾ ಜಲದಂತೆ ನಿಬಿಡವಾದ ತಮಸ್ಸಿನಿಂದ ಆವೃತವಾಗಿತ್ತು. ಇಲ್ಲಿ ಆತ್ಮತತ್ತ್ವವೆಂಬ ಪರಬ್ರಹ್ಮಸ್ವರೂಪವನ್ನು ತಿಳಿಯದಂತೆ ಆತ್ಮನನ್ನು ಆವರಿಸಿದ್ದ ಮಾಯಾ ಎನ್ನುವುದೇ ಅಂದರೆ ಅಜ್ಞಾನವೇ ಆವರಣವೆಂದು ಹೇಳಿದ್ದಾರೆ. ಅಜ್ಞಾನವೆಂಬ ಆವರಣವೇ ತಮಸ್ಸು. ಆಚ್ಛಾದಿತವಾದ ಆ ಅಜ್ಞಾನದಿಂದ ಆವಿರ್ಭೂತವಾಗುವ ನಾಮರೂಪಗಳಿಂದ ಕೂಡಿದ ವಸ್ತುವೇ ಜಗದುತ್ಪತ್ತಿಯೆಂದು ಹೇಳಿದೆ. ಕಾರಣಾವಸ್ಥೆಯಲ್ಲಿರುವ ಅಸತ್ತೇ ಕಾರ್ಯರೂಪವನ್ನು ಹೊಂದಿತು. ಈ ಅಸತ್ತು ತಮಸ್ಸಿನಂತೆ ಎಲ್ಲೆಲ್ಲಿಯೂ ವ್ಯಾಪಿಸಿದೆ. ಇದನ್ನು ತಿಳಿಯುವುದಾಗಲೀ, ವಿಮರ್ಶಿಸುವುದಾಗಲೀ, ಇದು ಹೀಗೆಯೇ ಇದೆ ಎಂದು ವರ್ಣಿಸುವುದಾಗಲೀ ಸಾಧ್ಯವಿಲ್ಲ. ಯಾವ ಚಲನೆವಲನೆಯೂ, ಯಾವುದೇ ವಿಧದ ವ್ಯಾಪಾರವೂ ಇಲ್ಲದೇ ನಿದ್ರಾವಸ್ಥೆಯಲ್ಲಿರುವ ಪುರುಷನು ಚಲನರಹಿತನಾಗಿ ನಿದ್ರಿಸುವಂತೆ ಇದು ಇರುತ್ತದೆ. ಇದನ್ನು ವಾಕ್ಯಗಳಿಂದ ವರ್ಣಿಸಲು ಸಾಧ್ಯವಿಲ್ಲ ಎನ್ನುವುದು ಇದರ ಅಭಿಪ್ರಾಯ.

ಕಾಮಸ್ತದಗ್ರೇ ಸಮವರ್ತತಾಧಿ ಮನಸೋ ರೇತಃ ಪ್ರಥಮಂ ಯದಾಸೀತ್ । ಸತೋ ಬಂಧುಮಸತಿ ನಿರವಿಂದನ್ ಹೃದಿ ಪ್ರತೀಷ್ಯಾ ಕವಯೋ ಮನೀಷಾ ।। 4 ।।

ಮನಸಃ - ಮನಸ್ಸಿನ । ರೇತಃ – ಪ್ರಪಂಚಸೃಷ್ಟಿಗೆ ಬೀಜಭೂತವಾದ । ಪ್ರಥಮಂ - ಹಿಂದಿನ ಕಲ್ಪದಲ್ಲಿ ಪ್ರಾಣಿಗಳಿಂದ ಆಚರಿಸಲ್ಪಟ್ಟ ಕರ್ಮವು । ಯತ್ – ಯಾವ ಕಾರಣದಿಂದ । ಆಸೀತ್ - ಇದ್ದಿತೋ । ತತ್ – ಆ ಕಾರಣದಿಂದ । ಅಗ್ರೇ – ಜಗತ್ಸೃಷ್ಟಿಗೆ ಪೂರ್ವದಲ್ಲಿ ಪರಮೇಶ್ವರನ ಮನಸ್ಸಿನಲ್ಲಿ । ಕಾಮಃ – ಸೃಷ್ಟಿಮಾಡಬೇಕೆಂಬ ಅಪೇಕ್ಷೆಯು । ಸಂ ಅಧಿವರ್ತತ - ಉಂಟಾಯಿತು । ಸತಃ – ಸತ್ ವಿಕಾರಭೂತವಾದ ಸಮಸ್ತ ಜಗತ್ತಿಗೆ । ಬಂಧುಂ – ಬಂಧುಭೂತ ಅಥವಾ ಬಂಧಕವಾದ ಪ್ರಾಣಿಗಳ ಕರ್ಮಸಮೂಹವನ್ನು । ಕವಯಃ – ಕ್ರಾಂತದರ್ಶಿಗಳಾದ ಋಷಿಗಳು । ಹೃದಿ – ತಮ್ಮ ಹೃದಯದಲ್ಲಿ । ಮನೀಷಾ - ಬುದ್ಧಿಯಿಂದ । ಪ್ರತೀಷ್ಯ – ವಿಚಾರಮಾಡಿ । ಅಸತಿ – ಅವ್ಯಕ್ತಸ್ವರೂಪದಲ್ಲಿ ಬೀಜಭೂತವಾಗಿರುವುದನ್ನು । ನಿರವಿಂದನ್ – ಕಂಡುಕೊಂಡರು.

ಹಿಂದಿನ ಸೃಷ್ಟಿಯಲ್ಲಿ ಪ್ರಾಣಿಗಳು ಆಚರಿಸಿದ ಪಾಪ ಪುಣ್ಯಾದಿ ಕರ್ಮಗಳು ಈಗಿನ ಸೃಷ್ಟಿಗೆ ಬೀಜಭೂತವಾಗಿದೆ ಎಂಬ ವಿಷಯವು ಪರಮೇಶ್ವರನ ಮನಸ್ಸಿನಲ್ಲಿ ಅಂಕುರಿಸಿದಾಗ ಜಗತ್ಸೃಷ್ಟಿಗೆ ಪೂರ್ವದಲ್ಲಿ ಜಗತ್ತನ್ನು ಸೃಷ್ಟಿಮಾಡಬೇಕೆಂಬ ಇಚ್ಛೆಯು ಪರಮೇಶ್ವರನ ಮನಸ್ಸಿನಲ್ಲಿ ಉಂಟಾಯಿತು. ಸತ್ ವಸ್ತುವಿನ ವಿಕಾರವಾದ ಸಮಸ್ತ ಜಗತ್ತುಗಳಿಗೂ ಬಂಧಕವಾದ ಪ್ರಾಣಿಗಳ ಕರ್ಮಸಮೂಹಗಳು ಅವ್ಯಕ್ತರೂಪದಲ್ಲಿ ಬೀಜಭೂತವಾಗಿ ನೆಲೆಸಿರುವುದು ಎಂಬ ವಿಷಯವನ್ನು ಪ್ರಾಜ್ಞರಾದ ಋಷಿಗಳು ಅಥವಾ ಯೋಗಿಗಳು ತಮ್ಮ ಮನಸ್ಸಿನ ಬುದ್ಧಿಯಿಂದ ವಿಚಾರಮಾಡಿ ತಿಳಿದುಕೊಂಡರು,

ಪರಬ್ರಹ್ಮನ ಮನಸ್ಸಿನಲ್ಲಿ ಸೃಷ್ಟಿಮಾದಬೇಕೆಂಬ ಅಪೇಕ್ಷೆಯೇ ಜಗತ್ಸೃಷ್ಟಿಗೆ ಕಾರಣವೆಂದು ಈ ಋಕ್ಕು ಹೇಳುತ್ತದೆ. ಆದರೆ ಆ ಅಪೇಕ್ಷೆಯು ಏಕೆ ಉಂಟಾಯಿತು? ಪೂರ್ವಕಲ್ಪದಲ್ಲಿ ಜಗತ್ಸೃಷ್ಟಿಯಾಗಿದ್ದಾಗ ಅದರಲ್ಲಿದ್ದ ಪ್ರಾಣಿಗಳು ತಾವು ಮಾಡಿದ ಪಾಪಪುಣ್ಯಾದಿ ಕರ್ಮಗಳನ್ನು ಅಥವಾ ಅವುಗಳ ಫಲವನ್ನು ನಿಶ್ಯೇಷವಾಗಿ ಅನುಭವಿಸಲಾಗದೇ ಅಷ್ಟರಲ್ಲಿಯೇ ಜಗತ್ಸಂಹಾರವಾದ್ದರಿಂದ ಆ ಕರ್ಮಫಲಗಳು ಅನುಭವಿಸಲ್ಪಡದೇ ಹಾಗೆಯೇ ಉಳಿಯಬೇಕಾಯಿತು. ಆದ್ದರಿಂದ ಅವುಗಳನ್ನು ಪ್ರಾಣಿಗಳು ಈ ಸೃಷ್ಟಿಯಲ್ಲಿ ಅನುಭವಿಸಲಿ ಎಂಬ ಉದ್ದೇಶದಿಂದ ಜಗತ್ಸೃಷ್ಟಿಮಾಡಬೇಕೆಂಬ ಅಪೇಕ್ಷೆಯು ಪರಮಾತ್ಮನ ಮನಸ್ಸಿನಲ್ಲಿ ಉಂಟಾಯಿತು ಎಂದು ಇಲ್ಲಿ ಹೇಳಿದೆ. [ಸಂಪುಟ 30, ಪುಟ 796].  

ಪ್ರತಿ ಸೃಷ್ಟಿಯ ಪ್ರಾರಂಭದಲ್ಲಿ ಅದರ ಹಿಂದಿನ ಕಲ್ಪದಲ್ಲಿದ್ದ ಸದಾತ್ಮಕವಾದ ಈ ಸಮಸ್ತ ಜಗತ್ತುಗಳು, ಅವುಗಳಲ್ಲಿರುವ ಪ್ರಾಣಿಗಳು, ಅವುಗಳ ಪಾಪಪುಣ್ಯರೂಪವಾದ ಕರ್ಮಗಳೂ, ಇವೆಲ್ಲವೂ ಅವ್ಯಕ್ತರೂಪವಾದ ಅಸತ್ತಿನಲ್ಲಿ (ಬ್ರಹ್ಮದಲ್ಲಿ) ಬೀಜಭೂತವಾಗಿ (ಕಾರಣರೂಪವಾಗಿ) ಅಡಗಿರುತ್ತದೆ ಎನ್ನುವುದನ್ನು ಅತೀತಾನಾಗತವರ್ತಮಾನ ಕಾಲಗಳ ವಿಷಯಗಳನ್ನು ತಿಳಿಯಬಲ್ಲ ಯೋಗಿಗಳು ತಮ್ಮ ಮನಸ್ಸಿನಲ್ಲಿ ಧ್ಯಾನಪೂರ್ವಕವಾಗಿ ಮತ್ತು ವಿಮರ್ಶೆಯಿಂದಲೂ ಚೆನ್ನಾಗಿ ವಿಚಾರಮಾಡಿ ಅರಿತುಕೊಂಡರು. ಆದ್ದರಿಂದ ಸದಾತ್ಮಕವಾದ ಜಗತ್ತಿಗೂ ಅವ್ಯಕ್ತರೂಪದಿಂದಿರುವ ಅಸತಿಗೂ ಒಂದು ರೀತಿಯ ಬಂಧಕವು ಇದ್ದಂತಾಯಿತು. ಅಸತ್ತಿನಿಂದಲೇ ಸತ್ ನ ಆವಿರ್ಭಾವವಾಗುವುದರಿಂದ ಇವೆರಡಕ್ಕೂ ಪರಸ್ಪರ ಸಂಬಂಧವಿದೆಯೆಂದು ಇಲ್ಲಿ ಸತಃ ಬಂಧುಃ ಅಸತಿ ಎಂಬ ಶಬ್ದಗಳಿಂದ ವಿವರಿಸಿದ್ದಾರೆ.

ತಿರಶ್ಚೀನೋ ವಿತತೋ ರಶ್ಮಿರೇಷಾಮಧಃ ಸ್ವಿದಾಸೀಽದುಪರಿಸ್ವಿದಾಽಸೀತ್ । ರೇತೋಧಾ ಆಸನ್ಮಹಿಮಾನ ಆಸನ್ಸ್ವಧಾ ಅವಸ್ತಾತ್ಪ್ರಯತಿಃ ಪರಸ್ತಾತ್ ।। 5 ।।

ಏಷಾಂ – ಈ ಸೃಷ್ಟಿಕಾರ್ಯಗಳ ನಿರ್ವಹಣೆಗಾಗಿ । ರಶ್ಮಿಃ – ಕಾರ್ಯೋನ್ಮುಖರೂಪವಾದ ರಶ್ಮಿ ಅಥವಾ ಅತಿಶೀಘ್ರವಾಗಿ ವ್ಯಾಪಿಸುವ ಕಾರ್ಯಾರಂಭವು । ತಿರಶ್ಚೀನಃ - ಅಡ್ಡಲಾಗಿಯೂ । ಅಧಃ ಸ್ವಿತ್ – ಕೆಳಭಾಗದಲ್ಲಿಯೂ । ಉಪರಿ ಸ್ವಿತ್ – ಮೇಲ್ಭಾಗದಲ್ಲಿಯೂ । ವಿತತಃ ಆಸೀತ್ – ವಿಸ್ತಾರವಾಗಿ ಹರಡಿತು (ಮತ್ತು) । ರೇತೋಧಾ – ಬೀಜಭೂತವಾದ ಕರ್ಮಗಳ ಕರ್ತೃಗಳೂ ಅವುಗಳ ಫಲಭೋಕ್ತೃವಾದ ಜೀವಗಳೂ । ಆಸನ್ – ಉತ್ಪನ್ನರಾದರು । ಮಹಿಮಾನಃ – ಅತಿ ದೊಡ್ಡದಾದ ಮತ್ತು ಪ್ರಾಣಿಗಳಿಗೆ ಭೋಗ್ಯರೂಪವಾದ ಪ್ರಪಂಚವಸ್ತುಗಳೂ । ಆಸನ್ – ಉತ್ಪನ್ನವಾದವು (ಈ ಭೋಕ್ತೃ-ಭೋಗ್ಯಗಳೆಂಬ ಎರಡು ವಿಧಗಳಲ್ಲಿ) । ಸ್ವಧಾ – ಅನ್ನರೂಪವಾದ ಪ್ರಪಂಚದ ಭೋಗ್ಯವಸ್ತುಗಳು । ಅವಸ್ತಾತ್ – ಅವುಗಳನ್ನು ಭೋಗಿಸುವ ಭೋಕ್ತೃಗಳಿಗಿಂತಲೂ ಕನಿಷ್ಠವಾದವು । ಪ್ರಯತಿಃ - ಭೋಕ್ತೃವು । ಪರಸ್ತಾತ್ – ಭೋಗ್ಯವಸ್ತುವಿಗಿಂತ ಶ್ರೇಷ್ಠನಾದನು.

ಈ ಸೃಷ್ಟಿಕಾರಗಳ ನಿರ್ವಹಣೆಗಾಗಿ ಬ್ರಹ್ಮವು ಕಾರ್ಯೋನ್ಮುಖವಾದಾಗ ಆ ಕಾರ್ಯಾರಂಭವು ಸೂರ್ಯರಶ್ಮಿಯಂತೆ ಮಿಂಚಿನ ವೇಗದಲ್ಲಿ ಅಡ್ಡಲಾಗಿಯೂ, ಕೆಳಕ್ಕೂ, ಮೇಲಕ್ಕೂ, ಎಲ್ಲೆಲ್ಲಿಯೂ ಸರ್ವತ್ರ ವಿಸ್ತಾರವಾಗಿ ವ್ಯಾಪಿಸಿತು. ಅಂದರೆ ಸೃಷ್ಟಿ ಕಾರ್ಯಾರಂಭವು ನಾನಕಡೆಗಳಲ್ಲಿ ವಿದ್ಯುದ್ವೇಗದಂತೆ ಏಕಕಾಲದಲ್ಲಿ ಅತಿ ಶೀಘ್ರವಾಗಿ ನಡೆಯಲು ಉಪಕ್ರಮಿಸಿತು. ಈ ರೀತಿ ಸೃಷ್ಟಿಯಾದ ವಸ್ತುಗಳಲ್ಲಿ ಮುಖ್ಯವಾದ ಎರಡು ವಿಭಾಗಗಳಾದವು: ವಿಯದಾದಿ ಪಂಚಭೂತಗಳೂ, ಜಗದಾದಿಗಳೂ, ಮತ್ತು ಅವುಗಳಲ್ಲಿರುವ ನಾನಾ ವಸ್ತುಗಳೂ ಒಂದು ವಿಭಾಗ; ಈ ವಸ್ತುಗಳನ್ನು ಉಪಭೋಗಿಸುವ ಭೋಕ್ತೃವಾದ ಅಂದರೆ ಜೀವವಿರುವ ಮತ್ತು ಸುಖದುಃಖಾದಿಗಳನ್ನು ಅನುಭವಿಸಬಲ್ಲ ಪ್ರಾಣಿ ಮೊದಲಾದವುಗಳು ಇನ್ನೊಂದು ವಿಭಾಗ. ಈ ಎರಡು ವಿಭಾಗಗಳಲ್ಲಿ ಭೋಕ್ತೃವಾದ ಚೈತನ್ಯಯುಕ್ತವಾದ ಪ್ರಾಣಿವರ್ಗವೇ ಶ್ರೇಷ್ಠವು. ಇಲ್ಲಿ ಪ್ರಾಣಿ ಅಂದರೆ ಮನುಷ್ಯಾದಿಗಳೂ, ದೇವತೆಗಳು ಎಲ್ಲರೂ ಸೇರಿದ್ದಾರೆ. ಭೋಗ್ಯವಸ್ತುಗಳಾದ ವಿಯದಾದಿಗಳೂ ಪ್ರಪಂಚದ ಇತರ ವಸ್ತುಗಳೂ ನಿಕೃಷ್ಟವು ಅಂದರೆ ಭೋಕ್ತೃವಿಗಿಂತ ಭೋಗ್ಯವಸ್ತುವು ಕೀಳಾದುದು ಎಂಬ ಅಭಿಪ್ರಾಯ.

ಈ ಋಕ್ಕಿನ ಪೂರ್ವಾರ್ಧದಲ್ಲಿ ಸೃಷ್ಟಿಯು ಹೇಗೆ ಕಾರ್ಯರೂಪಕ್ಕೆ ಬಂದಿತು ಎನ್ನುವುದನ್ನು ವರ್ಣಿಸಿದೆ. ಪರಬ್ರಹ್ಮನಲ್ಲಿ ಸೃಷ್ಟಿಮಾಡಬೇಕೆಂಬ ಅಪೇಕ್ಷೆಯುಂಟಾದ ಕೂಡಲೇ ಅದು ಕಾರ್ಯರೂಪಕ್ಕೆ ಇಳಿಯಿತು. ಆ ಕಾರ್ಯರೂಪವು ಬಹು ಬೇಗನೆ ಎಂದರೆ ಸೂರ್ಯನಿಂದ ಹೊರಟ ಸೂರ್ಯರಶ್ಮಿಯು ಬಹು ಬೇಗನೆ ಸುತ್ತಲೂ ಹರಡುವಂತೆ ಏಕಕಾಲದಲ್ಲಿ ಕೆಳಗೆ, ಮೇಲೆ, ಮಧ್ಯಭಾಗ, ಸುತ್ತಲಿನ ಪ್ರದೇಶ ಎಲ್ಲೆಲ್ಲಿಯೂ ಹರಡಿತು. ಅಂದರೆ ಸೃಷ್ಟಿಕಾರ್ಯವು ನಿಧಾನವಾಗಿ ಎಂದರೆ ಒಂದು ಪ್ರದೇಶದಲ್ಲಿ ಆದನಂತರ ಮತ್ತೊಂದು ಪ್ರದೇಶದಲ್ಲಿ ನಡೆಯಲಿಲ್ಲ. ಎಲ್ಲೆಡೆಯಲ್ಲಿಯೂ ಏಕಕಾಲದಲ್ಲಿ ಅತಿ ಬೇಗನೆ ನಡೆಯಿತು ಎಂಬ ಅಭಿಪ್ರಾಯ.

ಈ ಋಕ್ಕಿನ ಉತ್ತರಾರ್ಧದಲ್ಲಿ ಸೃಷ್ಟಿಯಾದ ವಸ್ತುಗಳಲ್ಲಿ ಭೋಕ್ತೃ-ಭೋಗ್ಯವೆಂದು ಎರಡು ವಿಧವೆಂದೂ ಅವುಗಳಲ್ಲಿ ಭೋಕ್ತೃವು ಭೋಗ್ಯವಸ್ತುಗಳಿಗಿಂತ ಶ್ರೇಷ್ಠವೆಂದೂ ಹೇಳಿದೆ. ರೇತೋಧಾಃ ಎಂಬ ಶಬ್ದಕ್ಕೆ ರೇತಸೋ ಬೀಜಭೂತಸ್ಯ ಕರ್ಮಣೋ ವಿಧಾತಾರಃ ಕರ್ತಾರೋ ಭೋಕ್ತಾರಶ್ಚ ಜೀವಾಃ ಅಂದರೆ ರೇತಃ ಶಬ್ದಕ್ಕೆ ಬೀಜವೆಂದು ಅರ್ಥೈಸಲಾಗಿದೆ. ಬೀಜರೂಪವಾದ ಕರ್ಮವು ಎಂದರ್ಥ. ಕರ್ಮವನ್ನು ಮಾಡುವ ಮತ್ತು ಆ ಕರ್ಮಫಲಗಳನ್ನು ಉಪಭೋಗಿಸುವ ಜೀವಗಳು ಎಂದರ್ಥ. ಜೀವಿಗಳು ಎಂದರೆ ಜೀವವಿರುವ ಸಮಸ್ತ ಪ್ರಾಣಿಗಳು, ಮನುಷ್ಯರು, ದೇವತೆಗಳು ಮತ್ತು ಇನ್ನೂ ಅನ್ಯ ಜೀವಿಗಳು ಎಂದರ್ಥ.

ಮಹಿಮಾನ್ಯಃ ಎಂದರೆ ಮಹಾಂತೋ ವಿಯದಾದಯೋ ಭೋಗ್ಯಾಃ – ಅತಿ ದೊಡ್ಡ ವಸ್ತುಗಳಾದ ವಿಯದಾದಿಗಳು ಅಂದರ ಆಕಾಶಾದಿ ಪಂಚಭೂತಗಳು ಮತ್ತು ಅವುಗಳ ಪರಿಣಾಮದಿಂದ ಉತ್ಪನ್ನವಾದ ಜಗದಾದಿಗಳು ಹಾಗೂ ಅವುಗಳಲ್ಲಿರುವ ಭೋಗ್ಯ ವಸ್ತುಗಳು ಎಂದರ್ಥ. ಹಾಗೆಯೇ ಸ್ವಧಾ ಎಂದರೆ ಅನ್ನವು. ತಿನ್ನಲ್ಪಡಬೇಕಾದ ವಸ್ತುವು – ಆಹಾರವು. ಆಹಾರದಂತೆಯೇ ಇತರ ಭೋಗ್ಯ ವಸ್ತುಗಳು ಕೂಡ. ಹೀಗೆ ಸ್ವಧಾ ಎಂದರೆ ಪ್ರಾಣಿಗಳು ಅನುಭವಿಸುವ ಭೋಗ್ಯ ವಸ್ತುವು. ಪ್ರಯತಿಃ ಎಂದರೆ ಪ್ರಯತಿತಾ ಭೋಕ್ತಾ – ಪ್ರಯತ್ನಪಡುವವನು, ಪ್ರಯತ್ನದಿಂದ ತನ್ನ ಆಹಾರವನ್ನು ದೊರಕಿಸಿಕೊಳ್ಳುವವನು, ಎಂದರೆ ಭೋಗ್ಯವಸ್ತುಗಳನ್ನು ಅನುಭವಿಸುವ ಭೋಕ್ತೃವು ಎಂದರ್ಥ. ಕರ್ಮಮಾಡಿ ಅದರ ಫಲವನ್ನು ಭೋಗಿಸುವವನು ಎಂದರ್ಥ.

ಭೋಗ್ಯ ವಸ್ತುಗಳು ಪರಿಮಾಣದಲ್ಲಿಯೂ ಸಂಖ್ಯೆಯಲ್ಲಿಯೂ ದೊಡ್ಡದಾಗಿರಬಹುದು. ಭೋಕ್ತೃವು ಬಹಳ ಚಿಕ್ಕದಾಗಿರಬಹುದು. ಆದರೆ ಭೋಕ್ತೃವಿಗೇ ಹೆಚ್ಚು ಪ್ರಾಮುಖ್ಯತೆ ಇದೆ. ಭೋಗ್ಯವಸ್ತುವಿಗೆ ಪ್ರಾಮುಖ್ಯತೆ ಇಲ್ಲ. ಅದು ಭೋಕ್ತೃವಿಗಿಂತ ನಿಕೃಷ್ಟವು.

ಕೋ ಅದ್ಧಾ ವೇದ ಕ ಇಹ ಪ್ರವೋಚತ್ಕುತ ಆಜಾತಾ ಕುತ ಇಯಂ ವಿಸೃಷ್ಟಿಃ । ಅರ್ವಾಗ್ದೇವಾ ಅಸ್ಯ ವಿಸರ್ಜನೇನಾಥಾ ಕೋ ವೇದ ಯತ ಆಬಭುವ ।। 6 ।।

ಕಃ – ಯಾವ ಪುರುಷನು । ಅದ್ಧಾ – ಪಾರಮಾರ್ಥಿಕವಾಗಿ (ನಿಶ್ಚಯವಾಗಿ) । ವೇದ-  ಈ ಸೃಷ್ಟಿಕ್ರಮವನ್ನು ತಿಳಿಯಬಲ್ಲನು? । ಕಃ – ಯಾವ ಪುರುಷನು ತಾನೇ । ಇಹ – ಈ ಲೋಕದಲ್ಲಿ । ಪ್ರವೋಚತ್ – ಇದನ್ನು ಹೇಳಬಲ್ಲನು? । ಇಯಂ – ಈಗ ನಮ್ಮ ಕಣ್ಣಿಗೆ ಕಾಣಿಸುತ್ತಿರುವ । ವಿಸೃಷ್ಟಿಃ – ವಿಧವಿಧವಾದ ಭೂತ ಭೌತಿಕಭೋಕ್ತೃಭೋಗ್ಯಾದಿರೂಪಗಳಿಂದ ಬಹುವಿಧವಾದ ಸೃಷ್ಟಿಯು । ಕುತಃ – ಯಾವುದರಿಂದ (ಯಾವ ವಸ್ತುವಿನಿಂದ) । ಕುತಃ – ಯಾವ ಕರ್ತೃವಿನಿಂದ । ಆ ಜಾತಾ – ಉತ್ಪನ್ನವಾಯಿತು? । ದೇವಾಃ – ದೇವತೆಗಳು । ಅಸ್ಯ – ಈ ಜಗತ್ತಿನ । ವಿಸರ್ಜನೇನ – ವಿಯದಾದಿಭೂತೋತ್ಪತ್ತಿಯ ನಂತರದಲ್ಲಿ । ಅರ್ವಾಕ್ – ಈಚೆಗೆ ಉತ್ಪನ್ನರಾದವರು । ಅಥ – ಆದ್ದರಿಂದ ಎಂದರೆ ವಸ್ತುಸ್ಥಿತಿಯು ಹೀಗಿರುವುದರಿಂದ । ಯತಃ-  ಈ ಜಗತ್ತು  ಯಾರಿಂದ ಅಥವಾ ಯಾವುದರಿಂದ ಹೇಗೆ । ಅಬಭೂವ – ಉತ್ಪನ್ನವಾಯಿತು ಎನ್ನುವುದನ್ನು । ಕಃ – ಯಾವ ಪುರುಷನು ತಾನೇ । ವೇದ – ತಿಳಿಯಬಲ್ಲನು? ।

ಈ ಸೃಷ್ಟಿಕ್ರಮವನ್ನು ಯಾವ ಪುರುಷನು ತಾನೇ ತಿಳಿಯಬಲ್ಲನು? ಈ ಲೋಕದಲ್ಲಿ ಇದನ್ನು ತಿಳಿದು ಹೇಳಬಲ್ಲವನ್ಯಾರು? ಈಗ ನಮ್ಮ ಕಣ್ಣಿಗೆ ಕಾಣುತ್ತಿರುವ ಈ ವಿವಿಧ ವಸುಗಳಿಂದ ಕೂಡಿರುವ ಬಹುವಿಧವಾದ ಸೃಷ್ಟಿಯು ಯಾರಿಂದ ಹೇಗೆ ಉಂಟಾಯಿತು? ಸೃಷ್ಟಿಯು ಪ್ರಾರಂಭವಾಗಿ ವಿಯದಾದಿ ಪಂಚಭೂತಗಳೇ ಮೊದಲಾದ ಕೆಲವು ಸೃಷ್ಟಿಭಾಗವು ಮುಗಿದ ನಂತರವೇ ದೇವತೆಗಳ ಉತ್ಪತ್ತಿಯಾಯಿತು. ಆದ್ದರಿಂದ ದೇವತೆಗಳಿಗೂ ಇದು ತಿಳಿದಿಲ್ಲ. ವಸ್ತುಸ್ಥಿತಿಯು ಹೀಗಿರುವಾಗ ಈ ಜಗತ್ಸೃಷ್ಟಿಯು ಯಾರಿಂದ ಹೇಗೆ ಉತ್ಪನ್ನವಾಯಿತು ಎಂದು ತಿಳಿಯಬಲ್ಲ ಪುರುಷನ್ಯಾರು?

ಸೃಷ್ಟಿಯ ಕ್ರಮವನ್ನು ತಿಳಿದುಕೊಳ್ಳಲು ಬಹಳ ದುಸ್ಸಾಧ್ಯವೆನ್ನುವುದನ್ನು ಈ ಋಕ್ಕಿನಲ್ಲಿಯೂ ಮುಂದಿನ ಋಕ್ಕಿನಲ್ಲಿಯೂ ಋಷಿಯು ಪ್ರಶ್ನೆಯ ರೂಪದಿಂದ ವರ್ಣಿಸಿದ್ದಾನೆ. ಮನುಷ್ಯರಲ್ಲದೇ ದೇವತೆಗಳಿಗೂ ಇದರ ಕುರಿತು ನಿಶ್ಚಯಾತ್ಮಕವಾಗಿ ತಿಳಿದಿದೆ ಎನ್ನುವುದೂ ಇಲ್ಲ. ಏಕೆಂದರೆ ಸೃಷ್ಟಿಯು ಪ್ರಾರಂಭವಾದಾಗ ದೇವತೆಗಳೂ ಇರಲಿಲ್ಲ. ದೇವತೆಗಳ ಸೃಷ್ಟಿಯು ಎಲ್ಲಕ್ಕೂ ಮೊದಲು ಆಗಲಿಲ್ಲ. ಸೃಷ್ಟಿಯ ಮೊದಲ ಹಂತಗಳಾದ ವಿಯದಾದಿ ಪಂಚಮಹಾಭೂತಗಳ ಮತ್ತು ಅವುಗಳಿಂದಾದ ಲೋಕಗಳ ಸೃಷ್ಟಿಯಾದ ನಂತರವೇ ದೇವತೆಗಳ ಸೃಷ್ಟಿಯಾಯಿತು. ಆದ್ದರಿಂದ ಕಾಲಕ್ಕಿಂತಲೂ ಮೊದಲೇ ನಡೆದು ಹೋಗಿದ್ದ ಸೃಷ್ಟಿಯ ವಿಷಯವನ್ನು ಅನಂತರ ಜನಿಸಿದ ದೇವತೆಗಳು ಹೇಗೆ ತಾನೇ ಬಲ್ಲರು? ಅವರೂ ಇದನ್ನು ತಿಳಿಯಲಾರರು ಎಂಬ ಅಭಿಪ್ರಾಯವು.

ಇಯಂ ವಿಸೃಷ್ಟಿರ್ಯತ ಆ ಬಭೂವ ಯದಿ ವಾ ದಧೇ ಯದಿ ವಾ ನ । ಯೋ ಅಸ್ಯಾಧ್ಯಕ್ಷಃ ಪರಮೇ ವ್ಯೋಮಂಸ್ತ್ಸೋ ಅಂಗ ವೇದ ಯದಿ ವಾ ನ ವೇದ ।। 7 ।।

ಯತಃ – ಯಾವ ಪರಮಾತ್ಮನಿಂದ । ಇಯಂ – ನಮಗೆ ಕಾಣುತ್ತಿರುವ ಈ । ವಿಸೃಷ್ಟಿಃ – ನದೀಪರ್ವತಸಮುದ್ರಾದಿ ನಾನಾರೂಪಗಳಿಂದ ಕೂಡಿದ ವಿಚಿತ್ರ ಸೃಷ್ಟಿಯು । ಆಬಭೂವ – ಉಂಟಾಯಿತೋ (ಆ ಪರಮಾತ್ಮನೇ) ಯದಿ ವಾ ದಧೇ – ಈ ಜಗತ್ತನ್ನು ಧರಿಸಿ ಪೋಷಿಸುತ್ತಾನೆ । ಯದಿ ವಾ ನ – ಅಥವಾ ಅವನು ಇದನ್ನು ಧರಿಸದೇ ಇರಬಹುದು (ಹಾಗಿದ್ದಲ್ಲಿ ಯಾರೂ ಇದನ್ನು ಧರಿಸಿ ಪೋಷಿಸಲಾರರು) । ಅಸ್ಯ – ಈ ಜಗತ್ತಿಗೆ । ಅಧ್ಯಕ್ಷಃ - ಈಶ್ವರನಾದ । ಯಃ – ಯಾವ ಪರಮಾತ್ಮನು । ಪರಮೇ – ಉತ್ಕೃಷ್ಟವಾದ ಅಥವಾ ಸತ್ಯಭೂತವಾದ । ವ್ಯೋಮನ್ – ಆಕಾಶದಂತೆ ನಿರ್ಮಲವಾದ ಸ್ವಪ್ರಕಾಶದಲ್ಲಿ ಬೆಳಗುತ್ತಿರುವನೋ । ಸಃ – ಆ ಪರಮಾತ್ಮನೊಬ್ಬನು ಮಾತ್ರ! ವೇದ – ಇದನ್ನು ತಿಳಿಯಬಲ್ಲನು । ಅಂಗ – ಇದು ಪ್ರಸಿದ್ಧವು । ಯದಿ ವಾ ನ ವೇದ – ಒಂದು ವೇಳೆ ಅವನಿಗೂ ಇದು ತಿಳಿಯದಿದ್ದರೆ ಈ ವಿಷಯವು ಯಾರಿಗೂ ತಿಳಿಯುವುದಿಲ್ಲ ।

ನಮ್ಮ ಕಣ್ಣಿಗೆ ಕಾಣಿಸುತ್ತಿರುವ ನದೀಪರ್ವತಸಮುದ್ರಾದಿ ನಾನಾರೂಪಗಳಿಂದ ಕೂಡಿದ ವಿಚಿತ್ರವಾದ ಈ ಸೃಷ್ಟಿಯು ಯಾವ ಪರಮಾತ್ಮನಿಂದ ಉಂಟಾಗಿದೆಯೋ ಆ ಪರಮಾತ್ಮನೇ ಈ ಜಗತ್ತನ್ನು ಧರಿಸಿ ಪೋಷಿಸುತ್ತಾನೆ. ಅಥವಾ ಅವನು ಇದನ್ನು ಧರಿಸದೇ ಇದ್ದರೆ ಇನ್ನು ಯಾರೂ ಇದನ್ನು ಧರಿಸಿ ಪೋಷಿಸಲಾರರು. ಈ ಜಗತ್ತಿಗೆ ಈಶ್ವರನಾದ ಯಾವ ಪರಮಾತ್ಮನು ಉತ್ಕೃಷ್ಟವಾದ ಮತ್ತು ಸತ್ಯವಾದ ಆಕಾಶದಂತೆ ನಿರ್ಮಲವಾದ ತನ್ನ ಸ್ವಪ್ರಕಾಶದಾಲ್ಲಿ ಬೆಳಗುತ್ತಿರುವನೋ ಆ ಪರಮಾತ್ಮನೊಬ್ಬನೇ ಇದನ್ನು ನಿಶ್ಚಯವಾಗಿ ತಿಳಿಯಬಲ್ಲನು. ಒಂದು ವೇಳೆ ಅವನಿಗೂ ತಿಳಿಯದಿದ್ದರೆ ಮತ್ತ್ಯಾರು ತಿಳಿಯಬಲ್ಲರು? ಯಾರೂ ತಿಳಿಯಲಾರರು.

ಯಾವ ಪರಮಾತ್ಮನಿಂದ ಈ ಜಗತ್ತು ಸೃಷ್ಟಿಯಾಯಿತೋ ಅವನೇ ಈ ಜಗತ್ತನ್ನು ಧರಿಸಿ ಪೋಷಿಸುತ್ತಾನೆ. ಅವನು ಧರಿಸದಿದ್ದರೆ ಬೇರೆ ಯಾರೂ ಆ ಕಾರ್ಯವನ್ನು ಮಾಡಲು ಸಮರ್ಥರಲ್ಲ. ಸೃಷ್ಟಿಮಾಡುವುದು ಮಾತ್ರವೇ ಪರಮಾತ್ಮನ ಕಾರ್ಯವಲ್ಲ. ಅದನ್ನು ಧರಿಸಿ ಪೋಷಿಸುವವನೂ ಅವನೇ ಆಗಿದ್ದಾನೆ. ತತ್ಸೃಷ್ಟ್ವಾ ತದೇವಾನು ಪ್ರಾವಿಶತ್ ಎಂಬ ಶ್ರುತಿವಾಕ್ಯದಂತೆ ತಾನು ಸೃಷ್ಟಿಸಿದ ವಸ್ತುಗಳಲ್ಲಿ ತಾನೇ ಅಂತರಾತ್ಮನಾಗಿ ಪ್ರವೇಶಿಸಿ ಅವುಗಳನ್ನು ಧರಿಸಿ ಪೋಷಿಸುತ್ತಾನೆ.

ಪರಮಾತ್ಮನು ಅವ್ಯಕ್ತಸ್ವರೂಪದಿಂದಿದ್ದಾಗ ಜಗದಾದಿಗಳಿಗೆ ಕಾರಣರೂಪದಲ್ಲಿರುತ್ತಾನೆ. ವ್ಯಕ್ತರೂಪದಿಂದ ತಾನೇ ಕಾರ್ಯರೂಪವಾಗಿ ಪರಿಣಮಿಸಿ ಜಗದಾದಿಗಳಾಗಿಯೂ ಇರುತ್ತಾನೆ. ಆದ್ದರಿಂದ ಜಗದಾದಿಗಳಿಗೆ ಕಾರ್ಯ-ಕಾರಣಗಳೆರಡೂ ಈ ಪರಮಾತ್ಮನೇ ಆಗಿದ್ದಾನೆ. ಭೋಕ್ತೃವೂ ಭೋಗಸಾಧನವೂ ಇವನೇ. ಇವನೇ ಎಲ್ಲಕ್ಕೂ ಕರ್ತೃವು. ಜಗತ್ತನ್ನು ಸೃಷ್ಟಿಸುವವನೂ, ಅದನ್ನು ಧರಿಸಿ ಪೋಷಿಸುವವನೂ, ಮತ್ತು ಅಂತ್ಯದಲಿ ಅದನ್ನು ನಾಶಗೊಳಿಸಿ ತನ್ನಲ್ಲಿಯೇ ಲಯಗೊಳಿಸಿಕೊಳ್ಳಿಸುವವನೂ ಆ ಪರಮಾತ್ಮನೇ.

ಈ ಋಕ್ಕಿನ ಪರಮೇ ವ್ಯೋಮನ್ ಎಂಬ ಶಬ್ದಗಳಿಗೆ ಉತ್ಕೃಷ್ಟವಾದ ಆಕಾಶದಲ್ಲಿ ಅಥವಾ ಆಕಾಶವನ್ನಿರ್ಮಲೇ ಸ್ವಪ್ರಕಾಶೇ – ಆಕಾಶದಂತೆ ನಿರ್ಮಲವಾದ ತನ್ನ ಸ್ವಪ್ರಕಾಶದಲ್ಲಿ ಬೆಳಗುತ್ತಾನೆ ಎಂದು ಅರ್ಥೈಸಿದ್ದಾರೆ. ಈ ವಿಷಯದಲ್ಲಿ ಭಾಷ್ಯಕಾರರು ಛಾಂದೋಗ್ಯೋಪನಿಷತ್ತಿನ ವಾಕ್ಯವನ್ನು ಉದಾಹರಿಸಿದ್ದಾರೆ. ಈ ಉಪನಿಷತ್ತಿನ ಸನತ್ಕುಮಾರ-ನಾರದ ಸಂವಾದದಲ್ಲಿ ನಾರದನು ಸನತ್ಕುಮಾರನನ್ನು ಭಗವಂತನು ಎಲ್ಲಿ ನೆಲೆಸಿದ್ದಾನೆ ಎಂದು ಕೇಳಿದಾಗ ಸನತ್ಕುಮಾರನು ಸ್ವೇ ಮಹಿಮ್ನಿ ಅಂದರೆ ಪರಮಾತ್ಮನು ತನ್ನ ಸ್ವಪ್ರಕಾಶದಲ್ಲಿಯೇ ಬೆಳಗುತ್ತಿದ್ದಾನೆ ಎಂದು ಹೇಳುತ್ತಾನೆ. ಅವನಿಗೆ ಇನ್ನೊಬ್ಬರ ಆಶ್ರಯವಾಗಲೀ, ಆಧಾರವಾಗಲೀ ಬೇಕಾಗಿಲ್ಲ. ಅವನೇ ಸರ್ವರಿಗೂ ಆಧಾರವು. ಅವನಿಂದಲೇ ಸರ್ವವೂ ಬೆಳಗುತ್ತಿರುವುದು.

 

Leave a Reply

Your email address will not be published. Required fields are marked *