ಮಾರ್ಕಂಡೇಯ ಪುರಾಣ

ಯದ್ಯೋಗಿಭಿರ್ಭವಭಯಾರ್ತಿವಿನಾಶಯೋಗ್ಯಮಾಸಾದ್ಯ ವಂದಿತಮತೀವ ವಿವಿಕ್ತಚಿತ್ತೈಃ । ತದ್ವಃ ಪುನಾತು ಹರಿಪಾದಸರೋಜಯುಗ್ಮಮಾವಿರ್ಭವತ್ಕ್ರಮವಿಲಂಘಾತಭೂರ್ಭುವಃಸ್ವಃ ।।

[(1) ಮಾರ್ಕಂಡೇಯಪುರಾಣಂ (ಕನ್ನಡ ಅನುವಾದ ಸಹಿತ, 4 ಭಾಗಗಳಲ್ಲಿ), ಅನುವಾದಕ ಪಾಟಣಕರ ಚಂದ್ರಶೇಖರಭಟ್ಟ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 57, ಮೈಸೂರು, ಶ್ರೀಪಂಚಾಚಾರ್ಯ ಎಲೆಕ್ಟ್ರಿಕ್ ಪ್ರೆಸ್, 1953 (2) The Markandeya Purana in the original Sanskrit, edited by K. M. Banerjea, Bibliotheca Indica, The Asiatic Society of Bengal, Calcutta, Bishop’s College Press, 1862 (3) The Markandeya Purana, translated with notes, by F.Eden Pargiter, Bibliotieca Indica, The Asiatic Society of Bengal, Indological Book House, Delhi, 1969]

ಮತ್ಯ್ಸಪುರಾಣದ 53ನೇ ಅಧ್ಯಾಯದ25-26ನೇ ಶ್ಲೋಕಗಳ ಪ್ರಕಾರ ಯತ್ರಾಧಿಕೃತ್ಯ ಶಕುನೀನ್ ಧರ್ಮಾಧರ್ಮವಿಚಾರಣಾ ವ್ಯಾಖ್ಯಾತಾ ವೈ ಮುನಿಪ್ರಶ್ನೇ ಮುನಿಭಿರ್ಧರ್ಮಚಾರಿಭಿಃ ।। ಮಾರ್ಕಂಡೇಯೇನ ಕಥಿತಂ ತತ್ಸರ್ವಂ ವಿಸ್ತರೇಣ ತು ಪುರಾಣಂ ನವಸಾಹಸ್ರಂ ಮಾರ್ಕಂಡೇಯಮಿ-ಹೋಚ್ಯತೇ ।। ಅರ್ಥಾತ್: ಧರ್ಮಚಾರಿ ಮಹರ್ಷಿಯು ಪಕ್ಷಿಗಳ ಕುರಿತು ಪ್ರಶ್ನೋತ್ತರರೂಪವಾಗಿ ಧರ್ಮಾಧರ್ಮಗಳ ವಿಚಾರವನ್ನು ನಡೆಸಿದುದೆಲ್ಲವನ್ನೂ ಮಾರ್ಕಂಡೇಯ ಮುನಿಯು ವಿಸ್ತಾರವಾಗಿ ಮಾರ್ಕಂಡೇಯ ಪುರಾಣದಲ್ಲಿ ಪ್ರತಿಪಾದಿಸಿದ್ದಾನೆ. ಇದರಲ್ಲಿ 9,000 ಶ್ಲೋಕಗಳಿವೆ.

ಈ ಪುರಾಣವನ್ನು ಐದು ಭಾಗಗಳನ್ನಾಗಿ ವಿಂಗಡಿಸಬಹುದು:

(1) ಅಧ್ಯಾಯ 1-9: ಮಾರ್ಕಂಡೇಯನ ಸೂಚನೆಯಂತೆ ಜೈಮಿನಿಯ ನಾಲ್ಕು ಪ್ರಶ್ನೆಗಳಿಗೆ ಜ್ಞಾನಿ ಪಕ್ಷಿಗಳು ಉತ್ತರಿಸಿದುದು. ಮೊದಲ ಮೂರು ಅಧ್ಯಾಯಗಳಲ್ಲಿ ವಪು ಎಂಬ ಅಪ್ಸರೆಯು ಶಾಪಗ್ರಸ್ತಳಾಗಿ ದ್ರೋಣಪತ್ನಿಯಾಗಿ ನಾಲ್ಕು ಮಹಾನುಭಾವರನ್ನು ಪಕ್ಷಿರೂಪದ ಪುತ್ರರನ್ನಾಗಿ ಪಡೆದ ಕಥೆಯಿದೆ. ನಂತರದ ಆರು ಅಧ್ಯಾಯಗಳಲ್ಲಿ ಪಕ್ಷಿಗಳು ಜೈಮಿನಿಗಿದ್ದ ನಾಲ್ಕು ಮಹಾಭಾರತದ ಸಂದೇಹಗಳಿಗೆ ಸಮಾಧಾನನೀಡುತ್ತವೆ. ಜೈಮಿನಿಯ ಈ ನಾಲ್ಕು ಪ್ರಶ್ನೆ/ಸಂದೇಹಗಳು ಈ ರೀತಿಯಿವೆ: (1) ನಿರ್ಗುಣನಾದ ಜನಾರ್ದನನು ಮರ್ತ್ಯಜನ್ಮವನ್ನು ಏಕೆ ಹೊಂದಿದನು? (2) ಪಂಚಪಾಂಡವರಿಗೆ ಏಕಪತ್ನಿತ್ವ ಏಕೆ ಉಂಟಾಯಿತು? (3) ಬಲರಾಮನು ಬ್ರಹ್ಮಹತ್ಯಾಪಾತಕಕ್ಕೆ ಗುರಿಯಾಗಿ ಪ್ರಾಯಶ್ಚಿತ್ತರೂಪವಾಗಿ ಏಕೆ ತೀರ್ಥಯಾತ್ರೆಯನ್ನು ಕೈಗೊಂಡನು? (4) ದ್ರೌಪದಿಯ ಐವರು ಪುತ್ರರೂ ಅಕಾಲಮೃತ್ಯುವಿಗೆ ಏಕೆ ತುತ್ತಾದರು? ನಾಲ್ಕನೆಯ ಪ್ರಶ್ನೆಗೆ ಉತ್ತರಿಸುವಾಗ ಹರಿಶ್ಚಂದ್ರೋಪಾಖ್ಯಾನವು ಬರುತ್ತದೆ.

(2) ಅಧ್ಯಾಯ 10-44: ಜೈಮಿನಿಯ ಇತರ ಪ್ರಶ್ನೆಗಳಿಗೆ ಪಕ್ಷಿಗಳು ಜಡ ಸುಮತಿ ಮತ್ತು ಅವನ ತಂದೆಯ ಸಂವಾದವನ್ನು ಉದಾಹರಿಸಿ ಉತ್ತರಿಸಿದುದು. ಇಲ್ಲಿ ಗರ್ಭೋತ್ಪತ್ತಿ, ನರಕಯಾತನೆಗಳು, ಕರ್ಮಫಲಗಳು, ದತ್ತಾತ್ರೇಯ ರೂಪದಿಂದ ಸತಿ ಅನಸೂಯೆಗೆ ವಿಷ್ಣುವು ಪುತ್ರನಾಗಿ ಜನಿಸಿದ್ದು, ಕಾರ್ತವೀರ್ಯಾರ್ಜುನನಿಗೆ ದತ್ತಾತ್ರೇಯನು ಕರುಣಿಸಿದುದು, ಮದಾಲಸ-ಕುವಲಯಾಶ್ವರ ವೃತ್ತಾಂತ, ಶ್ರಾದ್ಧಕಲ್ಪ, ದತ್ತಾತ್ರೇಯನು ಅಲರ್ಕನಿಗೆ ಅಜ್ಞಾನವೃಕ್ಷವನ್ನು ತೋರಿಸಿ ಆತ್ಮಜ್ಞಾನಮಾರ್ಗವನ್ನು ಸೂಚಿಸುವುದು, ಅಷ್ಟಾಂಗಯೋಗ ನಿರೂಪಣೆ, ಯೋಗಸಿದ್ಧಿಗಳು, ಯೋಗೀಚರ್ಯಾ, ಓಂಕಾರಸ್ವರೂಪ, ಅಲರ್ಕನ ಸರ್ವಸಂಗತ್ಯಾಗ.

(3) ಅಧ್ಯಾಯ 45-81: ಜೈಮಿನಿ ಮತ್ತು ಪಕ್ಷಿಗಳ ಸಂವಾದದಲ್ಲಿಯೇ ಮಾರ್ಕಂಡೇಯ ಮತ್ತು ಕ್ರೌಷ್ಟುಕಿಯರ ಸಂವಾದದಲ್ಲಿ ವ್ಯಕ್ತ-ಅವ್ಯಕ್ತ ತತ್ತ್ವಗಳ ಸೃಷ್ಟಿ, ತ್ರಿಮೂರ್ತಿಗಳ ನಿರೂಪಣೆ, ಕಾಲವಿಭಾಗ, ಪ್ರಾಕೃತ-ವೈಕೃತ ಸೃಷ್ಟಿ, ವರಾಹಾವತಾರ, ಗುಣತ್ರಯವಿಭಾಗ, ದೇವಾಸುರರ ವಿಚಿತ್ರ ಸೃಷ್ಟಿ, ಮಾನುಷ ಸೃಷ್ಟಿ, ದೇವಾದಿ-ಸ್ಥಾವರಾಂತ ಸೃಷ್ಟಿ, ರುದ್ರಸೃಷ್ಟಿ, ಮನ್ವಂತರಗಳು, ಭುವನಕೋಶ – ಜಂಬೂದ್ವೀಪ, ಉಪಖಂಡಗಳು, ಗಂಗೆ, ಮಂದರ, ಭರತಖಂಡ-ಭರತಭೂಮಿಯ ಪ್ರಶಂಸೆ, ಸಪ್ತವರ್ಷಗಳ ವರ್ಣನೆ, ಸ್ವಾರೋಚಿಷಮನ್ವಂತರ, ಔತ್ತಮಮನ್ವಂತರ, ತಾಮಸಮನ್ವಂತರ, ರೈವತಮನ್ವಂತರ, ಚಾಕ್ಷುಷಮನ್ವಂತರ, ವೈವಸ್ವತಮನ್ವಂತರ, ಸಾವರ್ಣಿಕ ಮನ್ವಂತರ

(4) ಅಧ್ಯಾಯ 82-92: ದೇವೀ ಮಹಾತ್ಮ್ಯೆ, ಋಷಿ ಮೇಧಸನು ಹೇಳಿದ್ದುದನ್ನು ಮಾರ್ಕಂಡೇಯನು ಹೇಳಿದುದು. ಇಲ್ಲಿ ಸಾವರ್ಣಿಕ ಮನ್ವಂತರದ ವರ್ಣನೆಯಲ್ಲಿ ಋಷಿ ಮೇಧಸನು ಹೇಳಿದ ದೇವೇಮಹಾತ್ಮೆಯನ್ನು ಮಾರ್ಕಂಡೇಯನು ಕ್ರೌಷ್ಟುಕಿಗೆ ಹೇಳುತ್ತಾನೆ.

(5) ಅಧ್ಯಾಯ 93-136: ಮಾರ್ಕಂಡೇಯ-ಕ್ರೌಷ್ಟುಕಿಯರ ಸಂವಾದವು ಮುಂದುವರೆದುದು. ಇಲ್ಲಿ ದಕ್ಷಸಾವರ್ಣಿ ಮೊದಲಾದ ಐವರು ಮನುರಾಜರ ಮನ್ವಂತರಗಳ ವರ್ಣನೆಗಳಲ್ಲದೇ ಸೂರ್ಯ ವೃತ್ತಾಂತ, ಅಶ್ವಿನೀದೇವತೆಗಳ ಉತ್ಪತ್ತಿ, ಸೂರ್ಯವಂಶ ವಿಸ್ತಾರ, ಪೃಷಧ್ರರಾಜನ ಚರಿತ್ರೆ, ನಾಭಾಗನ ಚರಿತ್ರೆ, ಕ್ಷುಪರಾಜನ ಚರಿತ್ರೆ, ಅವಿಕ್ಷಿತ ಚರಿತ್ರೆ, ಕರಂಧಮನ ಚರಿತ್ರೆ, ಮರುತ್ತರಾಜನ ಚರಿತ್ರೆ, ನರಿಷ್ಯಂತನ ಚರಿತ್ರೆಗಳೂ ಬರುತ್ತವೆ.

ಅಧ್ಯಾಯ 137ರಲ್ಲಿ ಪುರಾಣವು ಮುಕ್ತಾಯಗೊಳ್ಳುತ್ತದೆ.

 

Leave a Reply

Your email address will not be published. Required fields are marked *