Shanti Parva: Chapter 124

ಶಾಂತಿ ಪರ್ವ: ರಾಜಧರ್ಮ ಪರ್ವ

೧೨೪

ಶೀಲವರ್ಣನ

12124001 ಯುಧಿಷ್ಠಿರ ಉವಾಚ|

12124001a ಇಮೇ ಜನಾ ನರಶ್ರೇಷ್ಠ ಪ್ರಶಂಸಂತಿ ಸದಾ ಭುವಿ|

12124001c ಧರ್ಮಸ್ಯ ಶೀಲಮೇವಾದೌ ತತೋ ಮೇ ಸಂಶಯೋ ಮಹಾನ್||

ಯುಧಿಷ್ಠಿರನು ಹೇಳಿದನು: “ನರಶ್ರೇಷ್ಠ! ಭುವಿಯಲ್ಲಿ ಜನರು ಸದಾ ಮೊದಲು ಧರ್ಮದ ಶೀಲವನ್ನೇ ಪ್ರಶಂಸಿಸುತ್ತಾರೆ. ಇದರ ಕುರಿತು ನನ್ನಲ್ಲಿ ಮಹಾ ಸಂಶಯವಿದೆ.

12124002a ಯದಿ ತಚ್ಚಕ್ಯಮಸ್ಮಾಭಿರ್ಜ್ಞಾತುಂ ಧರ್ಮಭೃತಾಂ ವರ|

12124002c ಶ್ರೋತುಮಿಚ್ಚಾಮಿ ತತ್ಸರ್ವಂ ಯಥೈತದುಪಲಭ್ಯತೇ||

ಧರ್ಮಭೃತರಲ್ಲಿ ಶ್ರೇಷ್ಠ! ನನಗೆ ತಿಳಿದುಕೊಳ್ಳಲು ಶಕ್ಯವಿದ್ದರೆ ಈ ಶೀಲವು ಹೇಗೆ ಉಪಲಬ್ಧವಾಗುತ್ತದೆ ಎನ್ನುವುದನ್ನು ಸಂಪೂರ್ಣವಾಗಿ ಕೇಳಲು ಬಯಸುತ್ತೇನೆ.

12124003a ಕಥಂ ನು ಪ್ರಾಪ್ಯತೇ ಶೀಲಂ ಶ್ರೋತುಮಿಚ್ಚಾಮಿ ಭಾರತ|

12124003c ಕಿಂಲಕ್ಷಣಂ ಚ ತತ್ಪ್ರೋಕ್ತಂ ಬ್ರೂಹಿ ಮೇ ವದತಾಂ ವರ||

ಭಾರತ! ಮಾತನಾಡುವವರಲ್ಲಿ ಶ್ರೇಷ್ಠ! ನಾವು ಹೇಗೆ ಶೀಲವನ್ನು ಪಡೆದುಕೊಳ್ಳಬಹುದು? ಇದನ್ನು ಕೇಳಲು ಇಚ್ಛಿಸುತ್ತೇನೆ. ಆ ಶೀಲದ ಲಕ್ಷಣವು ಏನು? ನನಗೆ ಹೇಳು.”

12124004 ಭೀಷ್ಮ ಉವಾಚ|

12124004a ಪುರಾ ದುರ್ಯೋಧನೇನೇಹ ಧೃತರಾಷ್ಟ್ರಾಯ ಮಾನದ|

12124004c ಆಖ್ಯಾತಂ ತಪ್ಯಮಾನೇನ ಶ್ರಿಯಂ ದೃಷ್ಟ್ವಾ ತಥಾಗತಾಮ್||

12124005a ಇಂದ್ರಪ್ರಸ್ಥೇ ಮಹಾರಾಜ ತವ ಸಭ್ರಾತೃಕಸ್ಯ ಹ|

12124005c ಸಭಾಯಾಂ ಚಾವಹಸನಂ ತತ್ಸರ್ವಂ ಶೃಣು ಭಾರತ||

ಭೀಷ್ಮನು ಹೇಳಿದನು: “ಮಾನದ! ಮಹಾರಾಜ! ಭಾರತ! ಹಿಂದೆ ಇಂದ್ರಪ್ರಸ್ಥದಲ್ಲಿ ಸಹೋದರರಿಂದ ಕೂಡಿದ್ದ ನಿನ್ನ ಸಂಪತ್ತನ್ನು ಮತ್ತು ಸಭೆಯಲ್ಲಿ ನಡೆದ ಅಪಮಾನವನ್ನು ನೋಡಿ ಸಂತಪ್ತನಾದ ದುರ್ಯೋಧನನು ಕೌರವ ಸಭೆಯಲ್ಲಿ ತನ್ನ ಮನಸ್ಸಿನ ಆತಂಕವನ್ನು ವ್ಯಕ್ತಪಡಿಸಿದುದನ್ನು ಎಲ್ಲವನ್ನೂ ಕೇಳು.

12124006a ಭವತಸ್ತಾಂ ಸಭಾಂ ದೃಷ್ಟ್ವಾ ಸಮೃದ್ಧಿಂ ಚಾಪ್ಯನುತ್ತಮಾಮ್|

12124006c ದುರ್ಯೋಧನಸ್ತದಾಸೀನಃ ಸರ್ವಂ ಪಿತ್ರೇ ನ್ಯವೇದಯತ್||

ನಿನ್ನ ಸಭೆಯನ್ನೂ ಅನುತ್ತಮ ಸಮೃದ್ಧಿಯನ್ನೂ ನೋಡಿ ದುರ್ಯೋಧನನು ಎಲ್ಲರೊಡನೆ ಆಸೀನನಾಗಿದ್ದ ತಂದೆಗೆ ನಿವೇದಿಸಿದನು:

12124007a ಶ್ರುತ್ವಾ ಚ ಧೃತರಾಷ್ಟ್ರೋಽಪಿ ದುರ್ಯೋಧನವಚಸ್ತದಾ|

12124007c ಅಬ್ರವೀತ್ಕರ್ಣಸಹಿತಂ ದುರ್ಯೋಧನಮಿದಂ ವಚಃ||

ಧೃತರಾಷ್ಟ್ರನಾದರೋ ದುರ್ಯೋಧನನ ವಚನವನ್ನು ಕೇಳಿ ಕರ್ಣಸಹಿತನಾಗಿದ್ದ ದುರ್ಯೋಧನನಿಗೆ ಈ ಮಾತನ್ನಾಡಿದನು:

12124008a ಕಿಮರ್ಥಂ ತಪ್ಯಸೇ ಪುತ್ರ ಶ್ರೋತುಮಿಚ್ಚಾಮಿ ತತ್ತ್ವತಃ|

12124008c ಶ್ರುತ್ವಾ ತ್ವಾಮನುನೇಷ್ಯಾಮಿ ಯದಿ ಸಮ್ಯಗ್ಭವಿಷ್ಯಸಿ||

“ಪುತ್ರ! ನೀನು ಯಾವ ಕಾರಣಕ್ಕಾಗಿ ಪರಿತಪಿಸುತ್ತಿರುವೆ? ಅದನ್ನು ತತ್ತ್ವತಃ ಕೇಳಲು ಇಚ್ಛಿಸುತ್ತೇನೆ. ಅದನ್ನು ಕೇಳಿ ಉಚಿತವೆನಿಸಿದರೆ ನಿನ್ನನ್ನು ಸಮಾಧಾನಗೊಳಿಸಲು ಪ್ರಯತ್ನಿಸುತ್ತೇನೆ.

12124009a ಯಥಾ ತ್ವಂ ಮಹದೈಶ್ವರ್ಯಂ ಪ್ರಾಪ್ತಃ ಪರಪುರಂಜಯ|

12124009c ಕಿಂಕರಾ ಭ್ರಾತರಃ ಸರ್ವೇ ಮಿತ್ರಾಃ ಸಂಬಂಧಿನಸ್ತಥಾ||

ಪರಪುರಂಜಯ! ಅವರಲ್ಲಿರುವಂತೆ ನಿನ್ನಲ್ಲಿಯೂ ಮಹದೈಶ್ವರ್ಯವಿದೆ. ನಿನ್ನ ಎಲ್ಲ ಸಹೋದರರೂ ಮಿತ್ರರೂ ಮತ್ತು ಸಂಬಂಧಿಗಳೂ ನಿನಗೆ ಕಿಂಕರರಾಗಿದ್ದಾರೆ.

12124010a ಆಚ್ಚಾದಯಸಿ ಪ್ರಾವಾರಾನಾಶ್ನಾಸಿ ಪಿಶಿತೋದನಮ್|

12124010c ಆಜಾನೇಯಾ ವಹಂತಿ ತ್ವಾಂ ಕಸ್ಮಾಚ್ಚೋಚಸಿ ಪುತ್ರಕ||

ಉತ್ತಮ ವಸ್ತ್ರಗಳನ್ನೇ ತೊಡುತ್ತಿರುವೆ. ಮಾಂಸದ ಭೋಜನವನ್ನೇ ಉಣ್ಣುತ್ತಿರುವೆ. ಶ್ರೇಷ್ಟ ತಳಿಯ ಆಜಾನೇಯ ಅಶ್ವಗಳೇ ನಿನ್ನ ರಥವನ್ನು ಎಳೆಯುತ್ತವೆ. ನೀನು ಯಾವುದಕ್ಕಾಗಿ ಶೋಕಿಸುತ್ತಿರುವೆ ಪುತ್ರ?”

12124011 ದುರ್ಯೋಧನ ಉವಾಚ|

12124011a ದಶ ತಾನಿ ಸಹಸ್ರಾಣಿ ಸ್ನಾತಕಾನಾಂ ಮಹಾತ್ಮನಾಮ್|

12124011c ಭುಂಜತೇ ರುಕ್ಮಪಾತ್ರೀಷು ಯುಧಿಷ್ಠಿರನಿವೇಶನೇ||

ದುರ್ಯೋಧನನು ಹೇಳಿದನು: “ಯುಧಿಷ್ಠಿರನ ಮನೆಯಲ್ಲಿ ಹತ್ತು ಸಾವಿರ ಮಹಾತ್ಮಾ ಸ್ನಾತಕರು ಚಿನ್ನದ ಪಾತ್ರೆಗಳಲ್ಲಿ ಭೋಜನಮಾಡುತ್ತಾರೆ.

12124012a ದೃಷ್ಟ್ವಾ ಚ ತಾಂ ಸಭಾಂ ದಿವ್ಯಾಂ ದಿವ್ಯಪುಷ್ಪಫಲಾನ್ವಿತಾಮ್|

12124012c ಅಶ್ವಾಂಸ್ತಿತ್ತಿರಕಲ್ಮಾಷಾನ್ರತ್ನಾನಿ ವಿವಿಧಾನಿ ಚ||

12124013a ದೃಷ್ಟ್ವಾ ತಾಂ ಪಾಂಡವೇಯಾನಾಮೃದ್ಧಿಮಿಂದ್ರೋಪಮಾಂ ಶುಭಾಮ್|

12124013c ಅಮಿತ್ರಾಣಾಂ ಸುಮಹತೀಮನುಶೋಚಾಮಿ ಮಾನದ||

ಮಾನದ! ದಿವ್ಯಪುಷ್ಪಫಲಗಳಿಂದ ಕೂಡಿದ ಆ ದಿವ್ಯ ಸಭೆಯನ್ನು ನೋಡಿ, ತಿತ್ತಿರಪಕ್ಷಿಗಳಂತೆ ಚಿತ್ರವರ್ಣದ ಕಲ್ಮಾಷಜಾತಿಯ ಕುದುರೆಗಳನ್ನೂ, ವಿವಿಧ ರತ್ನಗಳನ್ನೂ, ಅಮಿತ್ರ ಪಾಂಡವೇಯನ ಇಂದ್ರೋಪಮ ಶುಭ ಮಹಾ ಸಂವೃದ್ಧಿಯನ್ನು ನೋಡಿ ಶೋಕಿಸುತ್ತಿದ್ದೇನೆ.”

12124014 ಧೃತರಾಷ್ಟ್ರ ಉವಾಚ|

12124014a ಯದೀಚ್ಚಸಿ ಶ್ರಿಯಂ ತಾತ ಯಾದೃಶೀಂ ತಾಂ ಯುಧಿಷ್ಠಿರೇ|

12124014c ವಿಶಿಷ್ಟಾಂ ವಾ ನರವ್ಯಾಘ್ರ ಶೀಲವಾನ್ಭವ ಪುತ್ರಕ||

ಧೃತರಾಷ್ಟ್ರನು ಹೇಳಿದನು: “ಮಗೂ! ನರವ್ಯಾಘ್ರ! ಪುತ್ರಕ! ಯುಧಿಷ್ಠಿರನಂತಹ ಅಥವಾ ಅದಕ್ಕಿಂತಲೂ ಹೆಚ್ಚಿನ ಸಂಪತ್ತನ್ನು ಇಚ್ಛಿಸುವೆಯಾದರೆ ಶೀಲವಂತನಾಗು.

12124015a ಶೀಲೇನ ಹಿ ತ್ರಯೋ ಲೋಕಾಃ ಶಕ್ಯಾ ಜೇತುಂ ನ ಸಂಶಯಃ|

12124015c ನ ಹಿ ಕಿಂ ಚಿದಸಾಧ್ಯಂ ವೈ ಲೋಕೇ ಶೀಲವತಾಂ ಭವೇತ್||

ಶೀಲದಿಂದಲೇ ಮೂರೂ ಲೋಕಗಳನ್ನೂ ಗೆಲ್ಲಲು ಶಕ್ಯ ಎನ್ನುವುದರಲ್ಲಿ ಸಂಶಯವಿಲ್ಲ. ಶೀಲವಂತರಿಗೆ ಲೋಕದಲ್ಲಿ ಯಾವುದನ್ನೂ ಗೆಲ್ಲಲು ಅಸಾಧ್ಯವೆನಿಸುವುದಿಲ್ಲ.

12124016a ಏಕರಾತ್ರೇಣ ಮಾಂಧಾತಾ ತ್ರ್ಯಹೇಣ ಜನಮೇಜಯಃ|

12124016c ಸಪ್ತರಾತ್ರೇಣ ನಾಭಾಗಃ ಪೃಥಿವೀಂ ಪ್ರತಿಪೇದಿವಾನ್||

ಮಾಂಧಾತನು ಒಂದು ರಾತ್ರಿಯಲ್ಲಿಯೂ, ಜನಮೇಜಯನು ಮೂರು ದಿನಗಳಲ್ಲಿಯೂ, ನಾಭಾಗನು ಏಳು ರಾತ್ರಿಗಳಲ್ಲಿಯೂ ಈ ಪೃಥ್ವಿಯನ್ನು ಪಡೆದುಕೊಂಡರು.

12124017a ಏತೇ ಹಿ ಪಾರ್ಥಿವಾಃ ಸರ್ವೇ ಶೀಲವಂತೋ ದಮಾನ್ವಿತಾಃ|[1]

12124017c ಅತಸ್ತೇಷಾಂ ಗುಣಕ್ರೀತಾ ವಸುಧಾ ಸ್ವಯಮಾಗಮತ್||

ಈ ಪಾರ್ಥಿವರೆಲ್ಲರೂ ಶೀಲವಂತರೂ ದಮಾನ್ವಿತರೂ ಆಗಿದ್ದರು. ಅವರ ಗುಣಮೌಲ್ಯಗಳಿಂದಲೇ ಕ್ರಯಿಸಲ್ಪಟ್ಟ ವಸುಧೆಯು ತಾನಾಗಿಯೇ ಅವರಿಗೆ ಒಲಿದು ಬಂದಳು.

[2]12124018a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12124018c ನಾರದೇನ ಪುರಾ ಪ್ರೋಕ್ತಂ ಶೀಲಮಾಶ್ರಿತ್ಯ ಭಾರತ||

ಭಾರತ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ನಾರದನು ಹಿಂದೆ ಶೀಲದ ಕುರಿತು ಹೇಳಿದುದನ್ನು ಉದಾಹರಿಸುತ್ತಾರೆ.

12124019a ಪ್ರಹ್ರಾದೇನ ಹೃತಂ ರಾಜ್ಯಂ ಮಹೇಂದ್ರಸ್ಯ ಮಹಾತ್ಮನಃ|

12124019c ಶೀಲಮಾಶ್ರಿತ್ಯ ದೈತ್ಯೇನ ತ್ರೈಲೋಕ್ಯಂ ಚ ವಶೀಕೃತಮ್||

ಪ್ರಹ್ರಾದನು ಮಹಾತ್ಮ ಮಹೇಂದ್ರನ ರಾಜ್ಯವನ್ನು ಅಪಹರಿಸಿದನು. ಶೀಲವನ್ನು ಆಶ್ರಯಿಸಿ ಆ ದೈತ್ಯನು ತ್ರೈಲೋಕ್ಯವನ್ನೂ ವಶೀಕರಿಸಿಕೊಂಡನು.

12124020a ತತೋ ಬೃಹಸ್ಪತಿಂ ಶಕ್ರಃ ಪ್ರಾಂಜಲಿಃ ಸಮುಪಸ್ಥಿತಃ|

12124020c ಉವಾಚ ಚ ಮಹಾಪ್ರಾಜ್ಞಃ ಶ್ರೇಯ ಇಚ್ಚಾಮಿ ವೇದಿತುಮ್||

ಆಗ ಶಕ್ರನು ಕೈಮುಗಿದು ಬೃಹಸ್ಪತಿಯ ಬಳಿಸಾರಿ “ಮಹಾಪ್ರಾಜ್ಞ! ಶ್ರೇಯದ ಸಾಧನೆಯನ್ನು ತಿಳಿಯಬಯಸುತ್ತೇನೆ” ಎಂದನು.

12124021a ತತೋ ಬೃಹಸ್ಪತಿಸ್ತಸ್ಮೈ ಜ್ಞಾನಂ ನೈಃಶ್ರೇಯಸಂ ಪರಮ್|

12124021c ಕಥಯಾಮಾಸ ಭಗವಾನ್ ದೇವೇಂದ್ರಾಯ ಕುರೂದ್ವಹ||

ಕುರೂದ್ವಹ! ಆಗ ಬೃಹಸ್ಪತಿಯು ಅವನಿಗೆ ಪರಮ ಶ್ರೇಯಸ್ಸಿನ ಸಾಧನದ ಕುರಿತು ಭಗವಾನ್ ದೇವೇಂದ್ರನಿಗೆ ಹೇಳಿದನು.

12124022a ಏತಾವಚ್ಚ್ರೇಯ ಇತ್ಯೇವ ಬೃಹಸ್ಪತಿರಭಾಷತ|

12124022c ಇಂದ್ರಸ್ತು ಭೂಯಃ ಪಪ್ರಚ್ಚ ಕ್ವ ವಿಶೇಷೋ ಭವೇದಿತಿ||

“ಇದೇ ಶ್ರೇಯಸ್ಸಿನ ಉಪಾಯವು” ಎಂದು ಬೃಹಸ್ಪತಿಯು ಹೇಳಿದನು. ಇಂದ್ರನಾದರೋ ಪುನಃ “ಇದಕ್ಕಿಂತಲೂ ಹೆಚ್ಚಿನ ಶ್ರೇಯಸ್ಸು ಯಾವುದರಿಂದ ಉಂಟಾಗುತ್ತದೆ?” ಎಂದು ಪ್ರಶ್ನಿಸಿದನು.

12124023 ಬೃಹಸ್ಪತಿರುವಾಚ

12124023a ವಿಶೇಷೋಽಸ್ತಿ ಮಹಾಂಸ್ತಾತ ಭಾರ್ಗವಸ್ಯ ಮಹಾತ್ಮನಃ|

12124023c ತತ್ರಾಗಮಯ ಭದ್ರಂ ತೇ ಭೂಯ ಏವ ಪುರಂದರ||

ಬೃಹಸ್ಪತಿಯು ಹೇಳಿದನು: “ಅಯ್ಯಾ! ಪುರಂದರ! ಇದಕ್ಕಿಂತಲೂ ವಿಶೇಷ ಜ್ಞಾನವು ಮಹಾತ್ಮ ಭಾರ್ಗವನಲ್ಲಿದೆ. ಅವನಲ್ಲಿಗೆ ಹೋಗು. ನಿನಗೆ ಮಂಗಳವಾಗಲಿ””

12124024 ಧೃತರಾಷ್ಟ್ರ ಉವಾಚ|

12124024a ಆತ್ಮನಸ್ತು ತತಃ ಶ್ರೇಯೋ ಭಾರ್ಗವಾತ್ಸುಮಹಾಯಶಾಃ|

12124024c ಜ್ಞಾನಮಾಗಮಯತ್ಪ್ರೀತ್ಯಾ ಪುನಃ ಸ ಪರಮದ್ಯುತಿಃ||

ಧೃತರಾಷ್ಟ್ರನು ಹೇಳಿದನು: “ಅನಂತರ ತನಗೆ ಶ್ರೇಯವಾಗುವುದರ ಕುರಿತ ಜ್ಞಾನವನ್ನು ಪಡೆಯಲು ಪರಮದ್ಯುತಿ ಇಂದ್ರನು ಪುನಃ ಭಾರ್ಗವನ ಬಳಿ ಹೋದನು.

12124025a ತೇನಾಪಿ ಸಮನುಜ್ಞಾತೋ ಭಾರ್ಗವೇಣ ಮಹಾತ್ಮನಾ|

12124025c ಶ್ರೇಯೋಽಸ್ತೀತಿ ಪುನರ್ಭೂಯಃ ಶುಕ್ರಮಾಹ ಶತಕ್ರತುಃ||

ಮಹಾತ್ಮ ಭಾರ್ಗವನಿಂದ ಉಪದೇಶವನ್ನು ಪಡೆದ ಶತಕ್ರತುವು ಇನ್ನೂ ಶ್ರೇಯಸ್ಕರವಾದುದನ್ನು ಪುನಃ ಕೇಳಲು ಶುಕ್ರನು ಹೇಳಿದನು.

12124026a ಭಾರ್ಗವಸ್ತ್ವಾಹ ಧರ್ಮಜ್ಞಃ ಪ್ರಹ್ರಾದಸ್ಯ ಮಹಾತ್ಮನಃ|

12124026c ಜ್ಞಾನಮಸ್ತಿ ವಿಶೇಷೇಣ ತತೋ ಹೃಷ್ಟಶ್ಚ ಸೋಽಭವತ್||

ಧರ್ಮಜ್ಞ ಭಾರ್ಗವನಾದರೋ ಹೇಳಿದನು: “ಮಹಾತ್ಮಾ ಪ್ರಹ್ರಾದನಿಗೆ ಶ್ರೇಯಸ್ಸಾಧನ ವಿಷಯದಲ್ಲಿ ನಾನು ಹೇಳಿರುವುದಕ್ಕಿಂತಲೂ ವಿಶೇಷ ಜ್ಞಾನವಿದೆ” ಎಂದನು. ಅದನ್ನು ಕೇಳಿ ಇಂದ್ರನು ಹೃಷ್ಟನಾದನು.

12124027a ಸ ತತೋ ಬ್ರಾಹ್ಮಣೋ ಭೂತ್ವಾ ಪ್ರಹ್ರಾದಂ ಪಾಕಶಾಸನಃ|

12124027c ಸೃತ್ವಾ ಪ್ರೋವಾಚ ಮೇಧಾವೀ ಶ್ರೇಯ ಇಚ್ಚಾಮಿ ವೇದಿತುಮ್||

ಆಗ ಪಾಕಶಾಸನನು ಬ್ರಾಹ್ಮಣನಾಗಿ ಪ್ರಹ್ರಾದನಲ್ಲಿಗೆ ಹೋಗಿ “ಮೇಧವೀ! ಶೇಯವಾದುದನ್ನು ತಿಳಿಯಲು ಇಚ್ಛಿಸುತ್ತೇನೆ” ಎಂದನು.

12124028a ಪ್ರಹ್ರಾದಸ್ತ್ವಬ್ರವೀದ್ವಿಪ್ರಂ ಕ್ಷಣೋ ನಾಸ್ತಿ ದ್ವಿಜರ್ಷಭ|

12124028c ತ್ರೈಲೋಕ್ಯರಾಜ್ಯೇ ಸಕ್ತಸ್ಯ ತತೋ ನೋಪದಿಶಾಮಿ ತೇ||

ಪ್ರಹ್ರಾದನಾದರೋ ವಿಪ್ರನಿಗೆ “ದ್ವಿಜರ್ಷಭ! ತ್ರೈಲೋಕ್ಯದ ರಾಜ್ಯಭಾರದಲ್ಲಿ ಸತ್ಕನಾಗಿರುವ ನನಗೆ ನಿನಗೆ ಉಪದೇಶಿಸಿಸಲು ಒಂದು ಕ್ಷಣವೂ ದೊರೆಯುತ್ತಿಲ್ಲ” ಎಂದು ಹೇಳಿದನು.

12124029a ಬ್ರಾಹ್ಮಣಸ್ತ್ವಬ್ರವೀದ್ವಾಕ್ಯಂ ಕಸ್ಮಿನ್ಕಾಲೇ ಕ್ಷಣೋ ಭವೇತ್|

12124029c ತತೋಪದಿಷ್ಟಮಿಚ್ಚಾಮಿ ಯದ್ಯತ್ಕಾರ್ಯಾಂತರಂ ಭವೇತ್||

ಆಗ ಬ್ರಾಹ್ಮಣನು ಈ ಮಾತನ್ನಾಡಿದನು: “ಯಾವಾಗ ನಿನಗೆ ಉಪದೇಶಿಸಲು ಸಮಯವು ಸಿಗುವುದೋ ಆವಾಗಲೇ ನಿನ್ನಿಂದ ಉಪದೇಶವನ್ನು ಪಡೆಯಲು ಇಚ್ಛಿಸುತ್ತೇನೆ.”

12124030a ತತಃ ಪ್ರೀತೋಽಭವದ್ರಾಜಾ ಪ್ರಹ್ರಾದೋ ಬ್ರಹ್ಮವಾದಿನೇ|

12124030c ತಥೇತ್ಯುಕ್ತ್ವಾ ಶುಭೇ ಕಾಲೇ ಜ್ಞಾನತತ್ತ್ವಂ ದದೌ ತದಾ||

ಬ್ರಾಹ್ಮಣನಾಡಿದುದಕ್ಕೆ ಪ್ರೀತನಾದ ರಾಜಾ ಪ್ರಹ್ರಾದನು ಹಾಗೆಯೇ ಆಗಲೆಂದು ಶುಭ ಕಾಲದಲ್ಲಿ ಅವನಿಗೆ ಜ್ಞಾನತತ್ತ್ವವನ್ನು ನೀಡಿದನು.

12124031a ಬ್ರಾಹ್ಮಣೋಽಪಿ ಯಥಾನ್ಯಾಯಂ ಗುರುವೃತ್ತಿಮನುತ್ತಮಾಮ್|

12124031c ಚಕಾರ ಸರ್ವಭಾವೇನ ಯದ್ವತ್ಸ ಮನಸೇಚ್ಚತಿ||

ಬ್ರಾಹ್ಮಣನಾದರೋ ಪ್ರಹ್ರಾದನ ವಿಷಯದಲ್ಲಿ ಯಥಾನ್ಯಾಯವಾದ ಅನುತ್ತಮ ಗುರುವೃತ್ತಿಯನ್ನೇ ಇಟ್ಟುಕೊಂಡು ಅವನ ಮನಸ್ಸು ಇಚ್ಛಿಸಿದಂತೆ ಸರ್ವಭಾವದಿಂದ ಅವನ ಸೇವೆಯನ್ನು ಮಾಡುತ್ತಿದ್ದನು.

12124032a ಪೃಷ್ಟಶ್ಚ ತೇನ ಬಹುಶಃ ಪ್ರಾಪ್ತಂ ಕಥಮರಿಂದಮ|

12124032c ತ್ರೈಲೋಕ್ಯರಾಜ್ಯಂ ಧರ್ಮಜ್ಞ ಕಾರಣಂ ತದ್ಬ್ರವೀಹಿ ಮೇ||

ಅನೇಕ ಬಾರಿ ಅವನಲ್ಲಿ “ಅರಿಂದಮ! ಧರ್ಮಜ್ಞ! ನಿನಗೆ ತ್ರೈಲೋಕ್ಯರಾಜ್ಯವು ದೊರಕಿದುದರ ಕಾರಣವನ್ನು ನನಗೆ ತಿಳಿಸು” ಎಂದು ಕೇಳುತ್ತಿದ್ದನು.

12124033 ಪ್ರಹ್ರಾದ ಉವಾಚ|

12124033a ನಾಸೂಯಾಮಿ ದ್ವಿಜಶ್ರೇಷ್ಠ[3] ರಾಜಾಸ್ಮೀತಿ ಕದಾ ಚನ|

12124033c ಕವ್ಯಾನಿ[4] ವದತಾಂ ತಾತ ಸಂಯಚ್ಚಾಮಿ ವಹಾಮಿ ಚ||

ಪ್ರಹ್ರಾದನು ಹೇಳಿದನು: “ದ್ವಿಜಶ್ರೇಷ್ಠ! ರಾಜನಾಗಿದ್ದೇನೆಂದು ನಾನು ಎಂದೂ ಅಭಿಮಾನಪಡುವುದಿಲ್ಲ. ಅಯ್ಯಾ! ದ್ವಿಜರು ಹೇಳಿದುದನ್ನು ಸಂಯಮದಿಂದ ಕೇಳುತ್ತೇನೆ ಮತ್ತು ಅದರಂತೆ ಮಾಡುತ್ತೇನೆ.

12124034a ತೇ ವಿಸ್ರಬ್ಧಾಃ ಪ್ರಭಾಷಂತೇ ಸಂಯಚ್ಚಂತಿ ಚ ಮಾಂ ಸದಾ|

12124034c ತೇ ಮಾ ಕವ್ಯಪದೇ ಸಕ್ತಂ ಶುಶ್ರೂಷುಮನಸೂಯಕಮ್||

12124035a ಧರ್ಮಾತ್ಮಾನಂ ಜಿತಕ್ರೋಧಂ ಸಂಯತಂ ಸಂಯತೇಂದ್ರಿಯಮ್|

12124035c ಸಮಾಚಿನ್ವಂತಿ ಶಾಸ್ತಾರಃ ಕ್ಷೌದ್ರಂ ಮಧ್ವಿವ ಮಕ್ಷಿಕಾಃ||

ಬ್ರಾಹ್ಮಣರು ನನ್ನಲ್ಲಿ ವಿಶ್ವಾಸವನ್ನಿಟ್ಟು ಮಾತನಾಡುತ್ತಾರೆ. ನನ್ನನ್ನು ಸದಾ ನಿಯಂತ್ರಿಸುತ್ತಾರೆ. ಶುಕ್ರರು ಹೇಳಿರುವ ನೀತಿಶಾಸ್ತ್ರಾನುಸಾರವಾಗಿ ನಡೆಯುತ್ತಿರುವ, ಬ್ರಾಹ್ಮಣರ ಶುಶ್ರೂಷೆಯಲ್ಲಿಯೇ ನಿರತರಾಗಿರುವ, ಅವರ ಅನುಗ್ರಹದಿಂದಲೇ ದೋಷದೃಷ್ಟಿಯಿಲ್ಲದ, ಧರ್ಮಾತ್ಮನಾದ, ಕ್ರೋಧವನ್ನು ಜಯಿಸಿರುವ, ಮನಸ್ಸನ್ನೂ ಮತ್ತು ಇಂದ್ರಿಯಗಳನ್ನೂ ವಶಪಡಿಸಿಕೊಂಡಿರುವ ನನ್ನನ್ನು ನಿಯಂತೃಗಳಾದ ಬ್ರಾಹ್ಮಣರು – ಜೇನು ಹುಳುಗಳು ಪುಷ್ಪರಸವನ್ನು ತಂದು ಜೇನುಗೂಡಿನಲ್ಲಿ ಸಿಂಪಡಿಸುವಂತೆ – ಶಾಸ್ತ್ರದಿಂದ ಉದ್ಧೃತವಾದ ವಾಕ್ಯಗಳಿಂದ ಸಿಂಪಡಿಸುತ್ತಾರೆ.

12124036a ಸೋಽಹಂ ವಾಗಗ್ರಪಿಷ್ಟಾನಾಂ ರಸಾನಾಮವಲೇಹಿತಾ|

12124036c ಸ್ವಜಾತ್ಯಾನಧಿತಿಷ್ಠಾಮಿ ನಕ್ಷತ್ರಾಣೀವ ಚಂದ್ರಮಾಃ||

ಅವರು ಹೇಳುವ ಶ್ರೇಷ್ಠವಾದ ನೀತಿವಿದ್ಯೆಗಳ ರಸವನ್ನು ನಾನು ಯಾವಾಗಲೂ ಆಸ್ವಾದಿಸುತ್ತಿರುತ್ತೇನೆ. ಅದರ ಫಲವಾಗಿಯೇ ನನಗೆ ಚಂದ್ರನು ನಕ್ಷತ್ರಗಳನ್ನು ಅನುಶಾಸನಮಾಡುವಂತೆ ಸ್ವಜಾತಿಯವರನ್ನು ಅನುಶಾಸನ ಮಾಡುತ್ತೇನೆ.

12124037a ಏತತ್ಪೃಥಿವ್ಯಾಮಮೃತಮೇತಚ್ಚಕ್ಷುರನುತ್ತಮಮ್|

12124037c ಯದ್ಬ್ರಾಹ್ಮಣಮುಖೇ ಕವ್ಯಮೇತಚ್ಚ್ರುತ್ವಾ ಪ್ರವರ್ತತೇ||

ಬ್ರಾಹ್ಮಣರ ಮುಖದಿಂದ ಹೊರಡುವ ಶುಕ್ರನೀತಿವಾಕ್ಯಗಳೇ ಈ ಭೂಮಂದಲದಲ್ಲಿ ಅಮೃತವಾಗಿವೆ. ಸರ್ವೋತ್ತಮ ನೇತ್ರಗಳಾಗಿವೆ. ಶುಕ್ರನೀತಿಯನ್ನು ಕೇಳಿ ಅದಕ್ಕನುಸಾರವಾಗಿ ವರ್ತಿಸಬೇಕು.””

12124038 ಧೃತರಾಷ್ಟ್ರ ಉವಾಚ|

12124038a ಏತಾವಚ್ಚ್ರೇಯ ಇತ್ಯಾಹ ಪ್ರಹ್ರಾದೋ ಬ್ರಹ್ಮವಾದಿನಮ್|

12124038c ಶುಶ್ರೂಷಿತಸ್ತೇನ ತದಾ ದೈತ್ಯೇಂದ್ರೋ ವಾಕ್ಯಮಬ್ರವೀತ್||

ಧೃತರಾಷ್ಟ್ರನು ಹೇಳಿದನು: “”ಇದೇ ಶ್ರೇಯಸ್ಸಿನ ಮಾರ್ಗ” ಎಂದು ಪ್ರಹ್ರಾದನು ಬ್ರಹ್ಮವಾದಿನಿಗೆ ಹೇಳಿದನು. ಅನಂತರ ತನ್ನ ಶುಶ್ರೂಷೆಯನ್ನು ಮಾಡುತ್ತಿದ್ದವನಿಗೆ ದೈತ್ಯೇಂದ್ರನು ಪುನಃ ಹೇಳಿದನು.

12124039a ಯಥಾವದ್ಗುರುವೃತ್ತ್ಯಾ ತೇ ಪ್ರೀತೋಽಸ್ಮಿ ದ್ವಿಜಸತ್ತಮ|

12124039c ವರಂ ವೃಣೀಷ್ವ ಭದ್ರಂ ತೇ ಪ್ರದಾತಾಸ್ಮಿ ನ ಸಂಶಯಃ||

“ದ್ವಿಜಸತ್ತಮ! ನಿನ್ನ ಗುರುಶುಶ್ರೂಷಾವೃತ್ತಿಯಿಂದ ನಾನು ಪ್ರೀತನಾಗಿದ್ದೇನೆ. ನಿನಗೆ ಮಂಗಳವಾಗಲಿ. ವರವನ್ನು ಕೇಳು. ಕೊಡುತ್ತೇನೆ. ಅದರಲ್ಲಿ ಸಂಶಯವಿಲ್ಲದಿರಲಿ.”

12124040a ಕೃತಮಿತ್ಯೇವ ದೈತ್ಯೇಂದ್ರಮುವಾಚ ಸ ಚ ವೈ ದ್ವಿಜಃ|

12124040c ಪ್ರಹ್ರಾದಸ್ತ್ವಬ್ರವೀತ್ಪ್ರೀತೋ ಗೃಹ್ಯತಾಂ ವರ ಇತ್ಯುತ||

ಆ ದ್ವಿಜನು “ಕೊಟ್ಟಾಯಿತು” ಎಂದು ಮಾತ್ರ ಹೇಳಿದನು. ಪ್ರಹ್ರಾದನಾದರೋ ಪ್ರೀತನಾಗಿ “ವರವನ್ನು ಸ್ವೀಕರಿಸು” ಎಂದು ಹೇಳಿದನು.

12124041 ಬ್ರಾಹ್ಮಣ ಉವಾಚ|

12124041a ಯದಿ ರಾಜನ್ ಪ್ರಸನ್ನಸ್ತ್ವಂ ಮಮ ಚೇಚ್ಚಸಿ ಚೇದ್ಧಿತಮ್|

12124041c ಭವತಃ ಶೀಲಮಿಚ್ಚಾಮಿ ಪ್ರಾಪ್ತುಮೇಷ ವರೋ ಮಮ||

ಬ್ರಾಹ್ಮಣನು ಹೇಳಿದನು: “ರಾಜನ್! ಒಂದು ವೇಳೆ ನೀನು ನನ್ನಮೇಲೆ ಪ್ರಸನ್ನನಾಗಿದ್ದರೆ ಮತ್ತು ನನ್ನ ಹಿತವನ್ನು ಬಯಸುವೆಯಾದರೆ ನಾನು ನಿನ್ನ ಶೀಲವನ್ನು ಪಡೆಯಲು ಇಚ್ಛಿಸುತ್ತೇನೆ. ಅದೇ ನನ್ನ ವರವು.””

12124042 ಧೃತರಾಷ್ಟ್ರ ಉವಾಚ|

12124042a ತತಃ ಪ್ರೀತಶ್ಚ ದೈತ್ಯೇಂದ್ರೋ ಭಯಂ ಚಾಸ್ಯಾಭವನ್ಮಹತ್|

12124042c ವರೇ ಪ್ರದಿಷ್ಟೇ ವಿಪ್ರೇಣ ನಾಲ್ಪತೇಜಾಯಮಿತ್ಯುತ||

ಧೃತರಾಷ್ಟ್ರನು ಹೇಳಿದನು: “ಆಗ ಪ್ರೀತನಾದ ದೈತ್ಯೇಂದ್ರನಿಗೆ ಮಹಾ ಭಯವೂ ಉಂಟಾಯಿತು. ವರವನ್ನು ಕೇಳುತ್ತಿರುವ ವಿಪ್ರನು ಅಲ್ಪತೇಜಸ್ವಿಯಲ್ಲ ಎಂದು ತಿಳಿದು ಹೇಳಿದನು:

12124043a ಏವಮಸ್ತ್ವಿತಿ ತಂ ಪ್ರಾಹ ಪ್ರಹ್ರಾದೋ ವಿಸ್ಮಿತಸ್ತದಾ|

12124043c ಉಪಾಕೃತ್ಯ ತು ವಿಪ್ರಾಯ ವರಂ ದುಃಖಾನ್ವಿತೋಽಭವತ್||

ವಿಸ್ಮಿತನಾದ ಪ್ರಹ್ರಾದನು ಹಾಗೆಯೇ ಆಗಲಿ ಎಂದು ವಿಪ್ರನಿಗೆ ವರವನ್ನಿತ್ತು ದುಃಖಾನ್ವಿತನಾದನು.

12124044a ದತ್ತೇ ವರೇ ಗತೇ ವಿಪ್ರೇ ಚಿಂತಾಸೀನ್ಮಹತೀ ತತಃ|

12124044c ಪ್ರಹ್ರಾದಸ್ಯ ಮಹಾರಾಜ ನಿಶ್ಚಯಂ ನ ಚ ಜಗ್ಮಿವಾನ್||

ವರವನ್ನು ಕೊಟ್ಟನಂತರ ವಿಪ್ರನು ಹೊರಟುಹೋದನು. ಆಗ ಪ್ರಹ್ರಾದನಿಗೆ ಮಹಾ ಚಿಂತೆಯುಂಟಾಯಿತು. ಯೋಚಿಸತೊಡಗಿದನು. ಆದರೆ ಆ ಮಹಾರಾಜನು ಯಾವುದೇ ನಿಶ್ಚಯಕ್ಕೂ ಬರಲು ಸಾಧ್ಯವಾಗಲಿಲ್ಲ.

12124045a ತಸ್ಯ ಚಿಂತಯತಸ್ತಾತ ಚಾಯಾಭೂತಂ ಮಹಾದ್ಯುತೇ|

12124045c ತೇಜೋ ವಿಗ್ರಹವತ್ತಾತ ಶರೀರಮಜಹಾತ್ತದಾ||

ಅಯ್ಯಾ! ಮಹಾದ್ಯುತೇ! ಹಾಗೆ ಚಿಂತಿಸುತ್ತಿರುವಾಗ ಅವನ ಶರೀರದಿಂದ ಛಾಯಾರೂಪದಲ್ಲಿದ್ದ ತೇಜಸ್ಸು ಮೂರ್ತಿಮತ್ತಾಗಿ ರೂಪಗೊಂಡು ಹೊರಬಂದಿತು.

12124046a ತಮಪೃಚ್ಚನ್ಮಹಾಕಾಯಂ ಪ್ರಹ್ರಾದಃ ಕೋ ಭವಾನಿತಿ|

12124046c ಪ್ರತ್ಯಾಹ ನನು ಶೀಲೋಽಸ್ಮಿ ತ್ಯಕ್ತೋ ಗಚ್ಚಾಮ್ಯಹಂ ತ್ವಯಾ||

ಆ ಮಹಾಕಾಯನನ್ನು ಪ್ರಹ್ರಾದನು “ನೀನು ಯಾರು?” ಎಂದು ಪ್ರಶ್ನಿಸಿದನು. ಅದು ಉತ್ತರಿಸಿತು: “ನಾನು ಶೀಲ. ನಿನ್ನನ್ನು ತ್ಯಜಿಸಿ ಹೋಗುತ್ತಿದ್ದೇನೆ.

12124047a ತಸ್ಮಿನ್ ದ್ವಿಜವರೇ ರಾಜನ್ವತ್ಸ್ಯಾಮ್ಯಹಮನಿಂದಿತಮ್|

12124047c ಯೋಽಸೌ ಶಿಷ್ಯತ್ವಮಾಗಮ್ಯ ತ್ವಯಿ ನಿತ್ಯಂ ಸಮಾಹಿತಃ|

12124047e ಇತ್ಯುಕ್ತ್ವಾಂತರ್ಹಿತಂ ತದ್ವೈ ಶಕ್ರಂ ಚಾನ್ವವಿಶತ್ಪ್ರಭೋ||

ನಿನ್ನಲ್ಲಿ ಶಿಷ್ಯವೃತ್ತಿಯನ್ನು ಅವಲಂಬಿಸಿ ಏಕಾಗ್ರಚಿತ್ತನಾಗಿ ಅನುದಿನವೂ ನಿನ್ನ ಸೇವೆಗೈಯುತ್ತಿದ್ದ ನಿಷ್ಕಳಂಕ ದ್ವಿಜಶ್ರೇಷ್ಠನ ಶರೀರದಲ್ಲಿ ವಾಸಿಸುತ್ತೇನೆ.” ಹೀಗೆ ಹೇಳಿ ಅವನು ಅಂತರ್ಹಿತನಾಗಿ ಶಕ್ರನನ್ನು ಪ್ರವೇಶಿಸಿದನು.

12124048a ತಸ್ಮಿಂಸ್ತೇಜಸಿ ಯಾತೇ ತು ತಾದೃಗ್ರೂಪಸ್ತತೋಽಪರಃ|

12124048c ಶರೀರಾನ್ನಿಃಸೃತಸ್ತಸ್ಯ ಕೋ ಭವಾನಿತಿ ಚಾಬ್ರವೀತ್||

ಆ ತೇಜಸ್ಸು ಹೊರಟು ಹೋಗಲು ಅಂತಹುದೇ ರೂಪದ ಇನ್ನೊಂದು ತೇಜಸ್ಸು ಅವನ ಶರೀರದಿಂದ ಹೊರಹೊರಟಿತು. “ನೀನು ಯಾರು” ಎಂದು ಅದಕ್ಕೂ ಅವನು ಕೇಳಿದನು.

12124049a ಧರ್ಮಂ ಪ್ರಹ್ರಾದ ಮಾಂ ವಿದ್ಧಿ ಯತ್ರಾಸೌ ದ್ವಿಜಸತ್ತಮಃ|

12124049c ತತ್ರ ಯಾಸ್ಯಾಮಿ ದೈತ್ಯೇಂದ್ರ ಯತಃ ಶೀಲಂ ತತೋ ಹ್ಯಹಮ್||

“ಪ್ರಹ್ರಾದ! ನನ್ನನ್ನು ಧರ್ಮವೆಂದು ತಿಳಿ. ಆ ದ್ವಿಜಸತ್ತಮನು ಎಲ್ಲಿರುವನೋ ಅಲ್ಲಿಗೆ ಹೋಗುತ್ತಿದ್ದೇನೆ. ದೈತ್ಯೇಂದ್ರ! ಎಲ್ಲಿ ಶೀಲವಿರುವುದೋ ಅಲ್ಲಿ ನಾನೂ ಇರುತ್ತೇನೆ.”

12124050a ತತೋಽಪರೋ ಮಹಾರಾಜ ಪ್ರಜ್ವಲನ್ನಿವ ತೇಜಸಾ|

12124050c ಶರೀರಾನ್ನಿಃಸೃತಸ್ತಸ್ಯ ಪ್ರಹ್ರಾದಸ್ಯ ಮಹಾತ್ಮನಃ||

ಮಹಾರಾಜ! ಆಗ ಇನ್ನೊಂದು ಪ್ಜ್ವಲಿಸುತ್ತಿರುವ ತೇಜಸ್ಸು ಮಹಾತ್ಮ ಪ್ರಹ್ರಾದ ಶರೀರದಿಂದ ಹೊರಹೊರಟಿತು.

12124051a ಕೋ ಭವಾನಿತಿ ಪೃಷ್ಟಶ್ಚ ತಮಾಹ ಸ ಮಹಾದ್ಯುತಿಃ|

12124051c ಸತ್ಯಮಸ್ಮ್ಯಸುರೇಂದ್ರಾಗ್ರ್ಯ ಯಾಸ್ಯೇಽಹಂ ಧರ್ಮಮನ್ವಿಹ||

ನೀನು ಯಾರೆಂದು ಕೇಳಲು, ಆ ಮಹಾದ್ಯುತಿಯು ಹೇಳಿದನು: “ಅಸುರೇಂದ್ರ! ನಾನು ಸತ್ಯ. ಧರ್ಮವಿರುವಲ್ಲಿಗೆ ಹೋಗುತ್ತಿದ್ದೇನೆ.”

12124052a ತಸ್ಮಿನ್ನನುಗತೇ ಧರ್ಮಂ ಪುರುಷೇ ಪುರುಷೋಽಪರಃ|

12124052c ನಿಶ್ಚಕ್ರಾಮ ತತಸ್ತಸ್ಮಾತ್ ಪೃಷ್ಟಶ್ಚಾಹ ಮಹಾತ್ಮನಾ|

12124052e ವೃತ್ತಂ ಪ್ರಹ್ರಾದ ಮಾಂ ವಿದ್ಧಿ ಯತಃ ಸತ್ಯಂ ತತೋ ಹ್ಯಹಮ್||

ಅವನು ಧರ್ಮ ಪುರುಷನನ್ನು ಅನುಸರಿಸಿ ಹೋದ ನಂತರ ಇನ್ನೊಬ್ಬ ಪುರುಷನು ಪ್ರಹ್ರಾದನಿಂದ ಹೊರಬಂದನು. ಆ ಮಹಾತ್ಮನನ್ನೂ ಕೇಳಲು ಅವನು “ಪ್ರಹ್ರಾದ! ನನ್ನನ್ನು ಸದಾಚಾರನೆಂದು ತಿಳಿ. ಎಲ್ಲಿ ಸತ್ಯವಿರುತ್ತದೆಯೋ ಅಲ್ಲಿ ನಾನಿರುತ್ತೇನೆ.”

12124053a ತಸ್ಮಿನ್ಗತೇ ಮಹಾಶ್ವೇತಃ ಶರೀರಾತ್ತಸ್ಯ ನಿರ್ಯಯೌ|

12124053c ಪೃಷ್ಟಶ್ಚಾಹ ಬಲಂ ವಿದ್ಧಿ ಯತೋ ವೃತ್ತಮಹಂ ತತಃ|

12124053e ಇತ್ಯುಕ್ತ್ವಾ ಚ ಯಯೌ ತತ್ರ ಯತೋ ವೃತ್ತಂ ನರಾಧಿಪ||

ನರಾಧಿಪ! ಅವನು ಹೊರಟುಹೋದ ನಂತರ ಪ್ರಹ್ರಾದನ ಶರೀದಿಂದ ಮಹಾಶ್ವೇತನೊಬ್ಬನು ಹೊರಬಂದನು. ಅವನನ್ನು ಕೇಳಲು ಅವನು “ನನ್ನನ್ನು ಬಲವೆಂದು ತಿಳಿ. ಸದಾಚಾರವಿರುವಲ್ಲಿ ಹೋಗುತ್ತಿದ್ದೇನೆ” ಎಂದು ಹೇಳಿ ಅವನು ಸದಾಚಾರವಿರುವಲ್ಲಿಗೆ ಹೊರಟು ಹೋದನು.

12124054a ತತಃ ಪ್ರಭಾಮಯೀ ದೇವೀ ಶರೀರಾತ್ತಸ್ಯ ನಿರ್ಯಯೌ|

12124054c ತಾಮಪೃಚ್ಚತ್ಸ ದೈತ್ಯೇಂದ್ರಃ ಸಾ ಶ್ರೀರಿತ್ಯೇವಮಬ್ರವೀತ್||

ಅನಂತರ ಪ್ರಭಾಮಯಿಯಾದ ದೇವಿಯು ಅವನ ಶರೀರದಿಂದ ಹೊರಹೊರಟಳು. ದೈತ್ಯೇಂದ್ರನು ಅವಳನ್ನು ಕೇಳಲು ಅವಳು ಶ್ರೀಯೆಂದು ಹೇಳಿದಳು.

12124055a ಉಷಿತಾಸ್ಮಿ ಸುಖಂ ವೀರ ತ್ವಯಿ ಸತ್ಯಪರಾಕ್ರಮೇ|

12124055c ತ್ವಯಾ ತ್ಯಕ್ತಾ ಗಮಿಷ್ಯಾಮಿ ಬಲಂ ಯತ್ರ ತತೋ ಹ್ಯಹಮ್||

“ವೀರ! ನಿನ್ನ ಸತ್ಯಪರಾಕ್ರಮಗಳಲ್ಲಿ ನಾನು ವಾಸಿಸಿಕೊಂಡಿದ್ದೆ. ಈಗ ನಾನು ನಿನ್ನನ್ನು ತ್ಯಜಿಸಿ ಹೋಗುತ್ತಿದ್ದೇನೆ. ಬಲವು ಇರುವಲ್ಲಿ ನಾನೂ ಇರುತ್ತೇನೆ.”

12124056a ತತೋ ಭಯಂ ಪ್ರಾದುರಾಸೀತ್ಪ್ರಹ್ರಾದಸ್ಯ ಮಹಾತ್ಮನಃ|

12124056c ಅಪೃಚ್ಚತ ಚ ತಾಂ ಭೂಯಃ ಕ್ವ ಯಾಸಿ ಕಮಲಾಲಯೇ||

12124057a ತ್ವಂ ಹಿ ಸತ್ಯವ್ರತಾ ದೇವೀ ಲೋಕಸ್ಯ ಪರಮೇಶ್ವರೀ|

12124057c ಕಶ್ಚಾಸೌ ಬ್ರಾಹ್ಮಣಶ್ರೇಷ್ಠಸ್ತತ್ತ್ವಮಿಚ್ಚಾಮಿ ವೇದಿತುಮ್||

ಆಗ ಮಹಾತ್ಮ ಪ್ರಹ್ರಾದನಿಗೆ ಭಯವುಂಟಾಯಿತು. ಅವಳನ್ನು ಪುನಃ ಕೇಳಿದನು: “ಕಮಲಾಲಯೇ! ನೀನು ನನ್ನನ್ನು ಬಿಟ್ಟು ಎಲ್ಲಿಗೆ ಹೋಗುತ್ತಿರುವೆ? ನೀನು ಸತ್ಯವ್ರತೆ. ದೇವೀ! ನೀನು ಲೋಕದ ಪರಮೇಶ್ವರಿಯು. ಆ ಬ್ರಾಹ್ಮಣಶ್ರೇಷ್ಠನು ಯಾರು ಎನ್ನುವುದನ್ನು ತತ್ತ್ವವಾಗಿ ಕೇಳಬಯಸುತ್ತೇನೆ.”

12124058 ಶ್ರೀರುವಾಚ|

12124058a ಸ ಶಕ್ರೋ ಬ್ರಹ್ಮಚಾರೀ ಚ ಯಸ್ತ್ವಯಾ ಚೋಪಶಿಕ್ಷಿತಃ|

12124058c ತ್ರೈಲೋಕ್ಯೇ ತೇ ಯದೈಶ್ವರ್ಯಂ ತತ್ತೇನಾಪಹೃತಂ ಪ್ರಭೋ||

ಶ್ರೀಯು ಹೇಳಿದಳು: “ಪ್ರಭೋ! ನೀನು ಉಪದೇಶವನ್ನಿತ್ತ ಆ ಬ್ರಹ್ಮಚಾರಿಯು ಶಕ್ರನು. ತ್ರೈಲೋಕ್ಯಗಳಲ್ಲಿರುವ ಐಶ್ವರ್ಯವನ್ನು ನಿನ್ನಿಂದ ಅಪಹರಿಸಿಕೊಂಡನು.

12124059a ಶೀಲೇನ ಹಿ ತ್ವಯಾ ಲೋಕಾಃ ಸರ್ವೇ ಧರ್ಮಜ್ಞ ನಿರ್ಜಿತಾಃ|

12124059c ತದ್ವಿಜ್ಞಾಯ ಮಹೇಂದ್ರೇಣ ತವ ಶೀಲಂ ಹೃತಂ ಪ್ರಭೋ||

ಧರ್ಮಜ್ಞ! ಶೀಲದಿಂದಲೇ ನೀನು ಲೋಕಗಳೆಲ್ಲವನ್ನೂ ಗೆದ್ದಿದ್ದೆ. ಪ್ರಭೋ! ಅದನ್ನು ತಿಳಿದ ಮಹೇಂದ್ರನು ನಿನ್ನ ಶೀಲವನ್ನು ಅಪಹರಿಸಿದನು.

12124060a ಧರ್ಮಃ ಸತ್ಯಂ ತಥಾ ವೃತ್ತಂ ಬಲಂ ಚೈವ ತಥಾ ಹ್ಯಹಮ್|

12124060c ಶೀಲಮೂಲಾ ಮಹಾಪ್ರಾಜ್ಞ ಸದಾ ನಾಸ್ತ್ಯತ್ರ ಸಂಶಯಃ||

ಮಹಾಪ್ರಾಜ್ಞ! ಧರ್ಮ, ಸತ್ಯ, ಸದಾಚಾರ, ಬಲ ಮತ್ತು ನನಗೆ ಕೂಡ ಶೀಲವೇ ಮೂಲವು. ಅದರಲ್ಲಿ ಸಂಶಯವಿಲ್ಲ.”””

12124061 ಭೀಷ್ಮ ಉವಾಚ|

12124061a ಏವಮುಕ್ತ್ವಾ ಗತಾ ತು ಶ್ರೀಸ್ತೇ ಚ ಸರ್ವೇ ಯುಧಿಷ್ಠಿರ|

12124061c ದುರ್ಯೋಧನಸ್ತು ಪಿತರಂ ಭೂಯ ಏವಾಬ್ರವೀದಿದಮ್||

ಭೀಷ್ಮನು ಹೇಳಿದನು: “ಯುಧಿಷ್ಠಿರ! ಶ್ರೀಯೊಂದಿಗೆ ಎಲ್ಲರೂ ಪ್ರಹ್ರಾದನನ್ನು ಬಿಟ್ಟು ಹೊರಟು ಹೋದರು ಎಂದು ಹೇಳಿದ ತಂದೆಗೆ ದುರ್ಯೋಧನನು ಪುನಃ ಹೇಳಿದನು:

12124062a ಶೀಲಸ್ಯ ತತ್ತ್ವಮಿಚ್ಚಾಮಿ ವೇತ್ತುಂ ಕೌರವನಂದನ|

12124062c ಪ್ರಾಪ್ಯತೇ ಚ ಯಥಾ ಶೀಲಂ ತಮುಪಾಯಂ ವದಸ್ವ ಮೇ||

“ಕೌರವನಂದನ! ಶೀಲದ ತತ್ತ್ವವನ್ನು ತಿಳಿಯಲು ಬಯಸುತ್ತೇನೆ. ಶೀಲವನ್ನು ಪಡೆದುಕೊಳ್ಳುವ ಉಪಾಯವನ್ನು ಹೇಳು.”

12124063 ಧೃತರಾಷ್ಟ್ರ ಉವಾಚ|

12124063a ಸೋಪಾಯಂ ಪೂರ್ವಮುದ್ದಿಷ್ಟಂ ಪ್ರಹ್ರಾದೇನ ಮಹಾತ್ಮನಾ|

12124063c ಸಂಕ್ಷೇಪತಸ್ತು ಶೀಲಸ್ಯ ಶೃಣು ಪ್ರಾಪ್ತಿಂ ನರಾಧಿಪ||

ಧೃತರಾಷ್ಟ್ರನು ಹೇಳಿದನು: “ನರಾಧಿಪ! ಇದರ ಉಪಾಯವನ್ನು ಹಿಂದೆಯೇ ಮಹಾತ್ಮ ಪ್ರಹ್ರಾದನು ಹೇಳಿದ್ದನು. ಶೀಲವನ್ನು ಪಡೆದುಕೊಳ್ಳುವ ಉಪಾಯವನ್ನು ಸಂಕ್ಷಿಪ್ತವಾಗಿ ಕೇಳು.

12124064a ಅದ್ರೋಹಃ ಸರ್ವಭೂತೇಷು ಕರ್ಮಣಾ ಮನಸಾ ಗಿರಾ|

12124064c ಅನುಗ್ರಹಶ್ಚ ದಾನಂ ಚ ಶೀಲಮೇತತ್ ಪ್ರಶಸ್ಯತೇ||

ಮನಸ್ಸಿನಿಂದಾಗಲೀ, ಮಾತಿನಿಂದಾಗಲೀ, ಕರ್ಮಗಳಿಂದಾಗಲೀ ಸರ್ವ ಭೂತಗಳಲ್ಲಿ ದ್ರೋಹವನ್ನೆಸಗದೇ ಇರುವುದು, ಸರ್ವಭೂತಗಳಲ್ಲಿಯೂ ದಯಾಪರನಾಗಿರುವುದು, ಮತ್ತು ದಾನ ಇವನ್ನು ಶೀಲವೆಂದು ಪ್ರಶಂಸಿಸುತ್ತಾರೆ.

12124065a ಯದನ್ಯೇಷಾಂ ಹಿತಂ ನ ಸ್ಯಾದಾತ್ಮನಃ ಕರ್ಮ ಪೌರುಷಮ್|

12124065c ಅಪತ್ರಪೇತ ವಾ ಯೇನ ನ ತತ್ಕುರ್ಯಾತ್ಕಥಂ ಚನ||

ಯಾವ ಕರ್ಮ-ಪೌರುಷಗಳು ಇತರರಿಗೆ ಹಿತವನ್ನುಂಟುಮಾಡುವುದಿಲ್ಲವೋ ಮತ್ತು ಯಾವುದನ್ನು ಮಾಡುವುದರಿಂದ ನಾಚಿಕೆಪಟ್ಟುಕೊಳ್ಳಬೇಕಾಗುವುದೋ ಅವುಗಳನ್ನು ಎಂದೂ ಮಾಡಬಾರದು.

12124066a ತತ್ತು ಕರ್ಮ ತಥಾ ಕುರ್ಯಾದ್ಯೇನ ಶ್ಲಾಘೇತ ಸಂಸದಿ|

12124066c ಏತಚ್ಚೀಲಂ ಸಮಾಸೇನ ಕಥಿತಂ ಕುರುಸತ್ತಮ||

ಕುರುಸತ್ತಮ! ಯಾವುದನ್ನು ಮಾಡಿದರೆ ಅದನ್ನು ಸಂಸದಿಯಲ್ಲಿ ಶ್ಲಾಘನೀಯವಾಗುತ್ತದೆಯೋ ಆ ಕರ್ಮವೇ ಶೀಲ. ಇದನ್ನು ಸಂಕ್ಷಿಪ್ತವಾಗಿ ಹೇಳಿದ್ದೇನೆ.

12124067a ಯದ್ಯಪ್ಯಶೀಲಾ ನೃಪತೇ ಪ್ರಾಪ್ನುವಂತಿ ಕ್ವ ಚಿಚ್ಚ್ರಿಯಮ್|

12124067c ನ ಭುಂಜತೇ ಚಿರಂ ತಾತ ಸಮೂಲಾಶ್ಚ ಪತಂತಿ ತೇ||

ದುಃಶೀಲರಾದವರೂ ಕೆಲವೊಮ್ಮೆ ರಾಜ್ಯಶ್ರೀಯನ್ನು ಪಡೆದುಕೊಳ್ಳಬಹುದು. ಆದರೆ ಅವರು ಆ ಸಂಪತ್ತನ್ನು ಹೆಚ್ಚುಕಾಲ ಉಪಭೋಗಿಸುವುದಿಲ್ಲ. ಸಮೂಲವಾಗಿ ನಾಶಹೊಂದುತ್ತಾರೆ.

12124068a ಏತದ್ವಿದಿತ್ವಾ ತತ್ತ್ವೇನ ಶೀಲವಾನ್ ಭವ ಪುತ್ರಕ|

12124068c ಯದೀಚ್ಚಸಿ ಶ್ರಿಯಂ ತಾತ ಸುವಿಶಿಷ್ಟಾಂ ಯುಧಿಷ್ಠಿರಾತ್||

ಪುತ್ರಕ! ಇದನ್ನು ತತ್ತ್ವತಃ ತಿಳಿದುಕೊಂಡು ಶೀಲವಂತನಾಗು. ಆಗ ಮಗೂ ನೀನು ಬಯಸುವ ಯುಧಿಷ್ಠಿರನಕ್ಕಿಂತಲೂ ಹೆಚ್ಚಿನ ಸಂಪತ್ತನ್ನು ಪಡೆದುಕೊಳ್ಳುತ್ತೀಯೆ.””

12124069 ಭೀಷ್ಮ ಉವಾಚ|

12124069a ಏತತ್ಕಥಿತವಾನ್ಪುತ್ರೇ ಧೃತರಾಷ್ಟ್ರೋ ನರಾಧಿಪ|

12124069c ಏತತ್ಕುರುಷ್ವ ಕೌಂತೇಯ ತತಃ ಪ್ರಾಪ್ಸ್ಯಸಿ ತತ್ಫಲಮ್||

ಭೀಷ್ಮನು ಹೇಳಿದನು: “ನರಾಧಿಪ! ಕೌಂತೇಯ! ಹೀಗೆ ಧೃತರಾಷ್ಟ್ರನು ಪುತ್ರನಿಗೆ ಹೇಳಿದನು. ಇದನ್ನು ಮಾಡು. ಅದರ ಫಲವನ್ನು ಪಡೆದುಕೊಳ್ಳುತ್ತೀಯೆ.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಶೀಲವರ್ಣನಂ ನಾಮ ಚತುರ್ವಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಶೀಲವರ್ಣನ ಎನ್ನುವ ನೂರಾಇಪ್ಪತ್ನಾಲ್ಕನೇ ಅಧ್ಯಾಯವು.

Shop for "Two Yellow Flowers on White Background" Poster Print. Get free  delivery On EVERYTHING* at Overstock - Your Online Art Gallery Store! Get  5% in rewards with Club O! - 16897145

[1] ದಯಾನ್ವಿತಾಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಒಂದು ಶ್ಲೋಕವಿದೆ: ದುರ್ಯೋಧನ ಉವಾಚ: ಕಥಂ ತತ್ಪ್ರಾಪ್ಯತೇ ಶೀಲಂ ಶ್ರೋತುಮಿಚ್ಛಾಮಿ ಭಾರತ| ಯೇನ ಶೀಲೇನ ತೈಃ ಪ್ರಾಪ್ತಾ ಕ್ಷಿಪ್ರಮೇವ ವಸುಂಧರಾ|| ಧೃತರಾಷ್ಟ್ರ ಉವಾಚ:

[3] ದ್ವಿಜಾನ್ವಿಪ್ರ ಎಂಬ ಪಾಠಾಂತರವಿದೆ (ಭಾರತ ದರ್ಶನ).

[4] ಕಾವ್ಯಾನಿ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.