ಶೂರರು ಹೀಗೆ ಹೇಳಲು ಸೌಬಲ ಶಕುನಿಯು ಸಮರದಲ್ಲಿ ಹಿಂದಿರುಗದ ವೀರರಿಂದ ಸುತ್ತಲೂ ಸಂವೃತನಾಗಿದ್ದ ದುರ್ಯೋಧನನು ಎಲ್ಲಿದ್ದನೋ ಅಲ್ಲಿಗೆ ಹೋದನು. ರಥಾನೀಕದ ಮಧ್ಯದಲ್ಲಿ ವ್ಯವಸ್ಥಿತನಾಗಿದ್ದ ದುರ್ಯೋಧನನನ್ನು ಮತ್ತು ರಥಗಳೊಂದಿಗಿದ್ದ ಅವರೆಲ್ಲರನ್ನೂ ನೋಡಿ ಶಕುನಿಯು ಹರ್ಷಿತನಾದನು. ತಾನು ಕೃತಾರ್ಥನಾದನೆಂದೇ ಭಾವಿಸಿ ಹೃಷ್ಟರೂಪನಾಗಿ ದುರ್ಯೋಧನನಿಗೆ ಮಾತನ್ನಾಡಿದನು: “ರಾಜನ್! ರಥಸೇನೆಯನ್ನು ಸಂಹರಿಸು! ಅಶ್ವಸೇನೆಗಳೆಲ್ಲವನ್ನೂ ನಾನು ಜಯಿಸಿದ್ದೇನೆ. ಪ್ರಾಣಗಳ ಮೇಲಿನ ಹಂಗನ್ನೇ ತೊರೆದು ಯುದ್ಧಮಾಡದಿದ್ದರೆ ಯುಧಿಷ್ಠಿರನನ್ನು ಜಯಿಸಲು ಶಕ್ಯವಿಲ್ಲ. ಪಾಂಡವನಿಂದ ರಕ್ಷಿಸಲ್ಪಟ್ಟಿರುವ ರಥಸೇನೆಯನ್ನು ಸಂಹರಿಸಿದ ನಂತರ ನಾವು ಗಜಸೇನೆಯನ್ನು ಮತ್ತು ಇತರ ಪದಾತಿಗಳನ್ನು ಸಂಹರಿಸೋಣ!”

ಅವನ ಮಾತನ್ನು ಕೇಳಿ ಜಯವನ್ನು ಬಯಸಿದ್ದ ಕೌರವರು ಹೃಷ್ಟರಾಗಿ ವೇಗದಿಂದ ಪಾಂಡವರ ಸೇನೆಯನ್ನು ಆಕ್ರಮಣಿಸಿದರು. ಎಲ್ಲರೂ ಬತ್ತಳಿಕೆಗಳನ್ನು ತೆರೆದು, ಧನುಸ್ಸುಗಳನ್ನು ಹಿಡಿದು, ಧನುಸ್ಸುಗಳನ್ನು ಟೇಂಕರಿಸುತ್ತಾ ಸಿಂಹನಾದಗೈದರು. ಪುನಃ ಅಲ್ಲಿ ಟೇಂಕಾರ ಶಬ್ಧವೂ ಬಾಣಗಳನ್ನು ಪ್ರಯೋಗಿಸುತ್ತಿದ್ದ ಸುದಾರುಣ ಶಬ್ಧವೂ ಕೇಳಿಬಂದವು. ಧನುಸ್ಸುಗಳನ್ನು ಮೇಲೆತ್ತಿ ತನ್ನ ಹತ್ತಿರವೇ ಬರುತ್ತಿದ್ದ ಅವರನ್ನು ನೋಡಿ ಕುಂತೀಪುತ್ರ ಧನಂಜಯನು ದೇವಕೀಪುತ್ರನಿಗೆ ಹೇಳಿದನು:

ಗಾಬರಿಗೊಳ್ಳದೇ ಅಶ್ವಗಳನ್ನು ಓಡಿಸಿ ಸೇನಾಸಾಗರವನ್ನು ಪ್ರವೇಶಿಸು. ಇಂದು ನಿಶಿತ ಶರಗಳಿಂದ ಶತ್ರುಗಳನ್ನು ಹೋಗಲಾಡಿಸಿಬಿಡುತ್ತೇನೆ! ಜನಾರ್ದನ! ಪರಸ್ಪರರನ್ನು ಎದುರಿಸಿ ನಡೆಯುತ್ತಿರುವ ಮಹಾ ಯುದ್ಧದ ಹದಿನೆಂಟನೆಯ ದಿನವಿದು. ಅನಂತವಾಗಿದೆಯೋ ಎಂಬಂತಿದ್ದ ಮಹಾತ್ಮರ ಸೇನೆಯು ಇಂದು ಬಹಳವಾಗಿ ಕ್ಷಯಗೊಂಡಿದೆ. ದೈವದ ರೀತಿಯನ್ನಾದರೂ ನೋಡು! ಸಮುದ್ರದಂತಿದ್ದ ಧಾರ್ತರಾಷ್ಟ್ರನ ಸೇನೆಯು ನಮ್ಮೊಡನೆ ಹೋರಾಡಿ ಈಗ ಗೋಪಾದದಷ್ಟಾಗಿದೆ! ಭೀಷ್ಮನು ಹತನಾದಾಗಲೇ ಸಂಧಿಯನ್ನು ಮಾಡಿಕೊಂಡಿದ್ದರೆ ಮಂಗಳವಾಗುತ್ತಿತ್ತು. ಆದರೆ ಬಾಲಬುದ್ಧಿಯ ಮೂಢ ಧಾರ್ತರಾಷ್ಟ್ರನು ಹಾಗೆ ಮಾಡಲಿಲ್ಲ! ಬುದ್ಧಿಯನ್ನು ಕಳೆದುಕೊಂಡಿದ್ದ ಸುಯೋಧನನು ಹಿತವೂ ಪಥ್ಯವೂ ಆಗಿದ್ದ ಭೀಷ್ಮನಾಡಿದ ಮಾತನಂತೆ ಮಾಡಲಿಲ್ಲ. ರಥದಿಂದ ಚ್ಯುತನಾಗಿ ಭೂಮಿಯ ಮೇಲೆ ಭೀಷ್ಮನು ಬಿದ್ದ ನಂತರವೂ ಯುದ್ಧವು ಏಕೆ ಮುಂದುವರೆಯಿತೆನ್ನುವುದು ಅರ್ಥವಾಗುತ್ತಿಲ್ಲ. ಶಂತನುವಿನ ಮಗನು ಬಿದ್ದನಂತರವೂ ಪುನಃ ಯುದ್ಧವನ್ನು ಮುಂದುವರೆಸಿದ ಧಾರ್ತರಾಷ್ಟ್ರರು ತುಂಬಾ ಬಾಲಿಶರೇ ಸರಿ! ಬ್ರಹ್ಮವಿದರಲ್ಲಿ ಶ್ರೇಷ್ಠ ದ್ರೋಣ, ರಾಧೇಯ ಮತ್ತು ವಿಕರ್ಣರು ಹತರಾದ ನಂತರವೂ ವೈರವು ಶಾಂತವಾಗಲಿಲ್ಲ. ಪುತ್ರನೊಂದಿಗೆ ಸೂತಪುತ್ರನು ಬಿದ್ದಾಗ ಸ್ವಲ್ಪವೇ ಸೇನೆಯು ಉಳಿದುಕೊಂಡಿತ್ತು. ಆಗಲೂ ವೈರವು ಶಾಂತವಾಗಲಿಲ್ಲ. ಶೂರ ಶ್ರುತಾಯುಷಿ, ಜಲಸಂಧ, ಪೌರವ-ಶೃತಾಯುಧ ನೃಪತಿಯರು ಹತರಾದ ನಂತರವೂ ಸಂಹಾರಕಾರ್ಯವು ಉಪಶಮನಗೊಳ್ಳಲಿಲ್ಲ. ಭೂರಿಶ್ರವ, ಶಲ್ಯ, ಶಾಲ್ವ, ಮತ್ತು ಅವಂತಿಯ ವೀರರು ಹತರಾದ ನಂತರವೂ ಸಂಹಾರಕಾರ್ಯವು ನಿಲ್ಲಲಿಲ್ಲ. ಜಯದ್ರಥ, ರಾಕ್ಷಸ ಅಲಾಯುಧ, ಬಾಹ್ಲೀಕ-ಸೋಮದತ್ತರು ಹತರಾದ ನಂತರವೂ ಸಂಹಾರಕಾರ್ಯವು ಪ್ರಶಮನಗೊಳ್ಳಲಿಲ್ಲ. ಶೂರ ಭಗದತ್ತ, ಕಾಂಬೋಜದ ಸುದಕ್ಷಿಣ, ಮತ್ತು ದುಃಶಾಸನರು ಹತರಾದ ನಂತರವೂ ವೈರವು ಪ್ರಶಮನಗೊಳ್ಳಲಿಲ್ಲ. ಬೇರೆ ಬೇರೆ ದೇಶಗಳಿಂದ ಆಗಮಿಸಿದ್ದ ಶೂರ ಬಲಶಾಲೀ ನೃಪರು ರಣದಲ್ಲಿ ಹತರಾದುದನ್ನು ನೋಡಿಯೂ ಸಂಹಾರಕಾರ್ಯವು ನಿಲ್ಲಲಿಲ್ಲ! ಭೀಮಸೇನನಿಂದ ಹತರಾಗಿ ಕೆಳಗುರುಳುತ್ತಿದ್ದ ಅಕ್ಷೌಹಿಣೀಪತಿಗಳನ್ನು ನೋಡಿಯೂ ಮೋಹದಿಂದಲೋ ಅಥವಾ ಲೋಭದಿಂದಲೋ ವೈರವು ಉಪಶಮನಗೊಳ್ಳಲಿಲ್ಲ.

ರಾಜಕುಲದಲ್ಲಿ, ಅದರಲ್ಲೂ ವಿಶೇಷವಾಗಿ ಕೌರವಕುಲದಲ್ಲಿ ಹುಟ್ಟಿದ ಸುಯೋಧನನಲ್ಲದೇ ಬೇರೆ ಯಾರುತಾನೇ ನಿರರ್ಥಕವಾದ ಮಹಾ ವೈರವನ್ನು ಕಟ್ಟಿಕೊಂಡಾನು? ಗುಣ-ಬಲ-ಶೌರ್ಯಗಳಲ್ಲಿ ಶತ್ರುಗಳು ತನಗಿಂತಲೂ ಅಧಿಕರಾಗಿರುವರೆನ್ನುವುದನ್ನು ತಿಳಿದೂ ಹಿತಾಹಿತಗಳನ್ನು ತಿಳಿದ ಮೂಢನಲ್ಲದ ಬೇರೆ ಯಾರುತಾನೇ ಯುದ್ಧಮಾಡುತ್ತಾನೆ? ನೀನೇ ಹೇಳಿದ ಹಿತವಚನಗಳನ್ನು ಮನಸ್ಸಿಗೆ ತೆಗೆದುಕೊಳ್ಳದಿದ್ದ ಅವನು ಪಾಂಡವರೊಂದಿಗೆ ಶಾಂತಿಯಿಂದಿರು ಎನ್ನುವ ಬೇರೆ ಯಾರ ಮಾತನ್ನು ಹೇಗೆ ಕೇಳಿಯಾನು? ಶಾಂತಿಗಾಗಿ ಶಾಂತನವ ಭೀಷ್ಮ, ದ್ರೋಣ, ಮತ್ತು ವಿದುರರು ಕೇಳಿಕೊಂಡರೂ ತಿರಸ್ಕರಿಸಿದ ಅವನಿಗೆ ಇಂದು ಔಷಧಿಯೇನಿದೆ? ವೃದ್ಧ ತಂದೆಯೂ ಹೇಳಿದ ಹಾಗೆ ಹಿತೈಷಿಣೀ ತಾಯಿಯ ಹಿತವಚನವನ್ನೂ ಸತ್ಕರಿಸದೇ ಇದ್ದ ಮೂರ್ಖನಿಗೆ ಬೇರೆ ಯಾರ ಮಾತು ಹಿಡಿಸುತ್ತದೆ? ಕುಲವನ್ನು ಅಂತ್ಯಗೊಳಿಸುವುದಕ್ಕಾಗಿಯೇ ಇವನು ಹುಟ್ಟಿದನೆಂದು ವ್ಯಕ್ತವಾಗುತ್ತಿದೆ. ಅದಕ್ಕೆ ಅನುಗುಣವಾಗಿಯೇ ಅವನ ನಡತೆ-ನೀತಿಗಳು ತೋರುತ್ತಿವೆ. ಈಗಲೂ ಇವನು ನಮಗೆ ರಾಜ್ಯವನ್ನು ಕೊಡುವುದಿಲ್ಲ ಎನಿಸುತ್ತದೆ. “ಧಾರ್ತರಾಷ್ಟ್ರನು ಜೀವಂತವಿರುವಾಗ ರಾಜ್ಯದ ಭಾಗವನ್ನು ಕೊಡುವುದಿಲ್ಲ!” ಎಂದು ಮಹಾತ್ಮ ವಿದುರನು ನನಗೆ ಅನೇಕ ಬಾರಿ ಹೇಳಿದ್ದನು. “ಎಂದಿನವರೆಗೆ ಧಾರ್ತರಾಷ್ಟ್ರನ ಪ್ರಾಣವು ಸ್ಥಿರವಾಗಿರುವುದೋ ಅಲ್ಲಿಯವರೆಗೆ ನಿಷ್ಪಾಪಿಗಳಾದ ನಿಮ್ಮೊಡನೆ ಪಾತಕನಾಗಿಯೇ ವ್ಯವಹರಿಸುತ್ತಾನೆ! ಯುದ್ಧದಿಂದಲ್ಲದೇ ಅನ್ಯಥಾ ಇವನನ್ನು ಗೆಲ್ಲಲು ಸಾಧ್ಯವಿಲ್ಲ!” ಹೀಗೆ ಸದಾ ನನಗೆ ಸತ್ಯದರ್ಶನ ವಿದುರನು ಹೇಳುತ್ತಿದ್ದನು. ಮಹಾತ್ಮ ವಿದುರನಾಡಿದ ಮಾತುಗಳಿಂದಲೇ ನಾನು ದುರಾತ್ಮ ದುರ್ಯೋಧನನ ವ್ಯವಸಾಯಗಳೆಲ್ಲವನ್ನೂ ಅರಿತುಕೊಂಡಿದ್ದೇನೆ. ಜಾಮದಗ್ನಿಯು ಇದ್ದಹಾಗೆ ಪಥ್ಯ ಮಾತುಗಳನ್ನು ಹೇಳಿದಾಗಲೂ ಅದನ್ನು ಮನ್ನಿಸದೇ ಇದ್ದ ದುರ್ಬುದ್ಧಿಯು ನಿಜವಾಗಿಯೂ ನಾಶದ ಎದುರೇ ನಿಂತಿದ್ದಾನೆ! ಸುಯೋಧನನು ಹುಟ್ಟಿದಾಗಲೇ ಅನೇಕ ಸಿದ್ಧರು ಹೇಳಿದ್ದರಂತೆ: “ ದುರಾತ್ಮನನ್ನು ಪಡೆದ ಕ್ಷತ್ರಿಯರು ಕ್ಷಯರಾಗುತ್ತಾರೆ!” ಜನಾರ್ದನ! ಅವರ ಮಾತು ಸುಳ್ಳಾಗಲಿಲ್ಲ. ದುರ್ಯೋಧನನ ಕೃತ್ಯದಿಂದಲೇ ರಾಜರ ಭೀಷಣ ಕ್ಷಯವಾಗುತ್ತಿದೆ. ಇಂದು ನಾನು ರಣದಲ್ಲಿ ಸರ್ವ ಯೋಧರನ್ನೂ ಸಂಹರಿಸುತ್ತೇನೆ. ಎಲ್ಲ ಕ್ಷತ್ರಿಯರನ್ನೂ ಸಂಹರಿಸಿ ಅವನ ಶಿಬಿರವನ್ನು ಶೂನ್ಯಗೊಳಿಸುತ್ತೇನೆ. ಆಗ ಅವನು ತನ್ನ ವಧೆಗಾಗಿಯಾದರೂ ನಮ್ಮೊಡನೆ ಯುದ್ಧಮಾಡಲು ಬಯಸುತ್ತಾನೆ. ಆಗಲೇ ವೈರದ ಅಂತ್ಯವಾಗುತ್ತದೆ ಎಂದು ಊಹಿಸುತ್ತೇನೆ. ವಿದುರನ ಮಾತು, ದುರಾತ್ಮ ದುರ್ಯೋಧನನ ಚೇಷ್ಟೆಗಳು ಮತ್ತು ನನ್ನ ಸ್ವಂತ ಬುದ್ಧಿಯ ಯೋಚನೆಯಿಂದ ಇದು ಹೀಗೆಯೇ ಆಗುತ್ತದೆ ಎಂದು ನನಗೆ ತೋರುತ್ತದೆ. ಭಾರತೀ ಸೇನೆಯೊಳಗೆ ಪ್ರವೇಶಿಸು! ಅಲ್ಲಿ ನಾನು ನಿಶಿತ ಬಾಣಗಳಿಂದ ದುರ್ಯೋಧನನನ್ನೂ ಅವನ ಸೇನೆಯನ್ನೂ ಯುದ್ಧದಲ್ಲಿ ಸಂಹರಿಸುತ್ತೇನೆ. ಧಾರ್ತರಾಷ್ಟ್ರನು ನೋಡುತ್ತಿರುವಂತೆಯೇ ಅವನ ದುರ್ಬಲ ಸೈನ್ಯವನ್ನು ಸಂಹರಿಸಿ ಇಂದು ಧರ್ಮರಾಜನಿಗೆ ಕ್ಷೇಮವನ್ನುಂಟುಮಾಡುತ್ತೇನೆ!”

ಸವ್ಯಸಾಚಿಯು ಹೀಗೆ ಹೇಳಲು ಲಗಾಮುಗಳನ್ನು ಕೈಯಲ್ಲಿ ಹಿಡಿದು ದಾಶಾರ್ಹನು ಭೀತಿಯಿಲ್ಲದೇ ರಣದಲ್ಲಿ ಶತ್ರುಸೇನೆಗಳನ್ನು ಪ್ರವೇಶಿಸಿದನು. ಧನುಸ್ಸಿನ ಘೋರ ಟೇಂಕಾರ ಶಬ್ಧಗಳಿಂದ ಕೂಡಿದ್ದ, ಶಕ್ತಿಗಳೇ ಮುಳ್ಳಾಗಿದ್ದ, ಗದೆ-ಪರಿಘಗಳೇ ಮಾರ್ಗಗಳಂತಿದ್ದ, ರಥ-ಆನೆಗಳೇ ಮಹಾವೃಕ್ಷಗಳಂತಿದ್ದ, ಕುದುರೆ-ಪದಾತಿಗಳೇ ಲತೆಗಳಂತಿದ್ದ, ಮಹಾಯಶರಿಂದ ಗಹನವಾಗಿದ್ದ ಸೇನಾರಣ್ಯದಲ್ಲಿ ಗೋವಿಂದನು ಅತಿ ಎತ್ತರದಲ್ಲಿ ಹಾರಾಡುತ್ತಿದ್ದ ಪತಾಕೆಯುಳ್ಳ ರಥದಲ್ಲಿ ಸಂಚರಿಸುತ್ತಿದ್ದನು. ದಾಶಾರ್ಹನು ಓಡಿಸುತ್ತಿದ್ದ ಮತ್ತು ಅರ್ಜುನನನ್ನು ಯುದ್ಧಕ್ಕೆ ಕೊಂಡೊಯ್ಯುತ್ತಿದ್ದ ಬಿಳಿಯ ವರ್ಣದ ಕುದುರೆಗಳು ಎಲ್ಲ ದಿಕ್ಕುಗಳಲ್ಲಿಯೂ ಕಾಣಿಸುತ್ತಿದ್ದವು.

ಸವ್ಯಸಾಚಿಯು ಮಳೆಯನ್ನು ಸುರಿಸುವ ಮೋಡದಂತೆ ನೂರಾರು ತೀಕ್ಷ್ಣ ಬಾಣಗಳನ್ನು ಸುರಿಸುತ್ತಾ ವೇಗದಿಂದ ರಥದಲ್ಲಿ ಮುಂದುವರೆದನು. ಸಮರದಲ್ಲಿ ಸವ್ಯಸಾಚಿಯು ಪ್ರಯೋಗಿಸುತ್ತಿದ್ದ ನತಪರ್ವ ಶರಗಳ ಮಹಾ ಶಬ್ಧವು ಕೇಳಿಬರುತ್ತಿತ್ತು. ಗಾಂಡೀವವು ಪ್ರಯೋಗಿಸುತ್ತಿದ್ದ ಇಂದ್ರನ ವಜ್ರಾಯುಧಕ್ಕೆ ಸಮಾನ ಸ್ಪರ್ಶವುಳ್ಳ ಶರಗಳು ಶರೀರಗಳನ್ನು ಹೊಕ್ಕು ಭೂಮಿಯ ಮೇಲೆ ಬೀಳುತ್ತಿದ್ದವು. ಮನುಷ್ಯ-ಆನೆ-ಕುದುರೆಗಳನ್ನು ಸಂಹರಿಸಿ ಬಾಣಗಳು ಪತಂಗಗಳಂತೆ ಶಬ್ಧಮಾಡುತ್ತಾ ರಣದಲ್ಲಿ ಬೀಳುತ್ತಿದ್ದವು. ಗಾಂಡೀವದಿಂದ ಪ್ರಯೋಗಿಸಿದ ಬಾಣಗಳಿಂದ ಎಲ್ಲವೂ ಮುಚ್ಚಿಹೋಯಿತು. ಸಮರದಲ್ಲಿ ದಿಕ್ಕುಗಳಾಗಲೀ ಉಪದಿಕ್ಕುಗಳಾಗಲೀ ತಿಳಿಯುತ್ತಿರಲಿಲ್ಲ. ಜಗತ್ತೆಲ್ಲವೂ ಪಾರ್ಥ-ನಾಮಾಂಕಿತ ರುಕ್ಮಪುಂಖ-ತೈಲಧೌತ-ಕಮ್ಮಾರನಿರ್ಮಿತ ಶರಗಳಿಂದ ತುಂಬಿಹೋಯಿತು. ಕಾಡ್ಗಿಚ್ಚಿನಲ್ಲಿ ಆನೆಗಳು ಹೇಗೋ ಹಾಗೆ ಪಾರ್ಥನ ನಿಶಿತ ಶರಗಳಿಂದ ಕೌರವ್ಯರು ವಧಿಸಲ್ಪಟ್ಟರು. ಶರ-ಚಾಪಗಳನ್ನು ಹಿಡಿದು ಪ್ರಜ್ವಲಿಸುತ್ತಿದ್ದ ಪಾರ್ಥನು ಪ್ರಜ್ವಲಿತ ಅಗ್ನಿಯು ಹುಲ್ಲುಮೆದೆಗಳನ್ನು ಹೇಗೋ ಹಾಗೆ ಸಮರದಲ್ಲಿ ಯೋಧರನ್ನು ಸುಟ್ಟುಹಾಕಿದನು. ವನದಲ್ಲಿ ವನಚರರು ಹುಟ್ಟಿಸಿದ ಸಮೃದ್ಧ ಪ್ರಜ್ವಲಿತ ಪ್ರತಾಪೀ ಅಗ್ನಿಯು ಶಬ್ಧಮಾಡುತ್ತಾ ಕಪ್ಪುಹೊಗೆಯಿಂದ ಕೂಡಿ ಪೊದರು-ವೃಕ್ಷ -ಒಣ ಲತೆಗಳನ್ನು ಸುಟ್ಟುಬಿಡುವಂತೆ ಪ್ರತಾಪೀ ಕುಪಿತ ತರಸ್ವೀ ಅರ್ಜುನನು ಜೋರಾಗಿ ಶಬ್ಧಮಾಡುತ್ತಿದ್ದ ತಿಗ್ಮತೇಜಸ್ಸಿನ ನಾರಾಚಸಮೂಹಗಳಿಂದ ದುರ್ಯೋಧನನ ಸೇನೆಯೆಲ್ಲವನ್ನೂ ದಹಿಸಿಬಿಟ್ಟನು. ಉತ್ತಮವಾಗಿ ಪ್ರಹರಿಸಿದ ರುಕ್ಮಪುಂಖ ಬಾಣಗಳು ಕವಚಗಳನ್ನು ಮಾತ್ರ ಚುಚ್ಚದೇ ಪ್ರಾಣಗಳನ್ನೂ ತೆಗೆದುಕೊಂಡು ಬೀಳುತ್ತಿದ್ದವು. ಅರ್ಜುನನು ಮನುಷ್ಯ-ಕುದುರೆ-ಮಹಾಗಜಗಳ ಮೇಲೆ ಎರಡನೆಯ ಬಾಣವನ್ನು ಪ್ರಯೋಗಿಸುತ್ತಿರಲಿಲ್ಲ. ವಜ್ರಪಾಣಿಯು ದೈತ್ಯರನ್ನು ಹೇಗೋ ಹಾಗೆ ಏಕಾಕಿಯಾಗಿ ಅರ್ಜುನನು ರಥಿಗಳ ವಿಶಾಲಸೇನೆಯನ್ನು ಪ್ರವೇಶಿಸಿ ಅನೇಕ ರೂಪ-ಆಕೃತಿಗಳ ಬಾಣಗಳಿಂದ ನಿನ್ನ ಮಗನ ಸೇನೆಯನ್ನು ಸಂಹರಿಸಿದನು.

ಯುದ್ಧದಿಂದ ಪಲಾಯನ ಮಾಡದೇ ಪ್ರಯತ್ನಪಡುತ್ತಿದ್ದ ಕೌರವ ಶೂರರ ಸಂಕಲ್ಪಗಳನ್ನು ಧನಂಜಯನು ಗಾಂಡೀವದಿಂದ ವ್ಯರ್ಥಗೊಳಿಸಿದನು. ಇಂದ್ರನ ವಜ್ರಸ್ಪರ್ಷಕ್ಕೆ ಸಮನಾದ ಸಹಿಸಲಸಾಧ್ಯ ಬಾಣಗಳನ್ನು ಪ್ರಯೋಗಿಸುತ್ತಿದ್ದ ಮಹೌಜಸ ಅರ್ಜುನನು ಮಳೆಗರೆಯುವ ಮೋಡದಂತೆ ಕಾಣುತ್ತಿದ್ದನು. ಸೇನೆಯನ್ನು ಕಿರೀಟಿಯು ವಧಿಸುತ್ತಿರಲು ದುರ್ಯೋಧನನು ನೋಡುತ್ತಿದ್ದಂತೆಯೇ ಸಂಗ್ರಾಮದಿಂದ ಅದು ಪಲಾಯನಮಾಡಿತು. ಕೆಲವರ ರಥದ ಕುದುರೆಗಳು ಹತವಾಗಿದ್ದವು. ಇತರರ ಸಾರಥಿಗಳು ಹತರಾಗಿದ್ದರು. ಇನ್ನು ಕೆಲವರ ರಥದ ನೊಗಗಳು ಮತ್ತು ಚಕ್ರಗಳು ತುಂಡಾಗಿದ್ದವು. ಅನ್ಯರಲ್ಲಿ ಸಾಯಕಗಳು ಕಡಿಮೆಯಿದ್ದವು. ಅನ್ಯರು ಶರಪೀಡಿತರಾಗಿದ್ದರು. ಕೆಲವರು ಬಾಣಗಳಿಂದ ಗಾಯಗೊಂಡಿರದಿದ್ದರೂ ಭಯಪೀಡಿತರಾಗಿ ಓಡಿಹೋಗುತ್ತಿದ್ದರು. ವಾಹನಗಳನ್ನು ಕಳೆದುಕೊಂಡಿದ್ದ ಕೆಲವರು ಮಕ್ಕಳನ್ನು ಕರೆದುಕೊಂಡು ಪಲಾಯನಮಾಡುತ್ತಿದ್ದರೆ ಇನ್ನು ಕೆಲವರು ತಂದೆಯರನ್ನು ಪುನಃ ಪುನಃ ಕೂಗಿ ಕರೆಯುತ್ತಿದ್ದರು. ಕೆಲವರು ಬಾಂಧವರನ್ನೂ, ಸಂಬಂಧಿಗಳನ್ನೂ ಅಲ್ಲಲ್ಲಿಯೇ ಬಿಟ್ಟು ಓಡಿ ಹೋಗುತ್ತಿದ್ದರು. ಅಲ್ಲಿ ಅನೇಕ ಮಹಾರಥರು ಬಹಳ ಗಾಯಗೊಂಡು ಮೂರ್ಛಿತರಾಗಿದ್ದರು. ಪಾರ್ಥನ ಬಾಣಗಳಿಂದ ಗಾಯಗೊಂಡ ನರರು ನಿಟ್ಟುಸಿರು ಬಿಡುತ್ತಿರುವುದು ಕಂಡುಬಂದಿತು. ಅಂಥವರು ಅನ್ಯರ ರಥವನ್ನೇರಿ ಸಮಾಧಾನಗೊಂಡು ಸ್ವಲ್ಪಕಾಲ ವಿಶ್ರಾಂತಿ ಪಡೆದು ಬಾಯಾರಿಕೆಯನ್ನು ತೀರಿಸಿಕೊಂಡು ಪುನಃ ಯುದ್ಧಕ್ಕೆ ಹಿಂದಿರುಗಿದರು. ಓಡಿ ಹೋದವರಲ್ಲಿ ಕೆಲವು ಯುದ್ಧದುರ್ಮದರು ದುರ್ಯೋಧನನ ಶಾಸನದಂತೆ ಯುದ್ಧೋತ್ಸುಕರಾಗಿ ಪುನಃ ಯುದ್ಧಕ್ಕೆ ಹಿಂದಿರುಗುತ್ತಿದ್ದರು. ಕೆಲವರು ಪಾನೀಯಗಳನ್ನು ಕುಡಿದು, ವಾಹನಗಳನ್ನು ಉಪಚರಿಸಿ, ಕವಚಗಳನ್ನು ಧರಿಸಿ ಬರುತ್ತಿದ್ದರು. ಕೆಲವರು ಸಹೋದರರರನ್ನು, ಕೆಲವರು ಮಕ್ಕಳನ್ನು, ಕೆಲವರು ತಂದೆಯರನ್ನು ಶಿಬಿರಗಳಿಗೆ ಕೊಂಡೊಯ್ದು, ಸಮಾಧಾನಪಡಿಸಿ, ಪುನಃ ಯುದ್ಧಕ್ಕೆ ಮರಳುತ್ತಿದ್ದರು. ಕೆಲವರು ರಥಗಳನ್ನು ಸಜ್ಜುಗೊಳಿಸಿ ಪಾಂಡವ ಸೇನೆಯನ್ನು ಆಕ್ರಮಣಿಸಿ ತಮ್ಮ ತಮ್ಮ ಅಂತಸ್ಥಿಗೆ ಸಮನಾಗಿ ಪುನಃ ಯುದ್ಧದಲ್ಲಿ ತೊಡಗಿದರು. ತ್ರೈಲೋಕ್ಯವಿಜಯದಲ್ಲಿ ನಿರತರಾದ ದೈತ್ಯ-ದಾನವರಂತೆ ಶೂರರು ಕಿಂಕಿಣೀಜಾಲಗಳಿಂದ ಆಚ್ಛಾದಿತರಾಗಿ ಪ್ರಕಾಶಿಸುತ್ತಿದ್ದರು.

ಕೆಲವರು ಸುವರ್ಣವಿಭೂಷಿತ ರಥಗಳಲ್ಲಿ ಬೇಗನೇ ಬಂದು ಪಾಂಡವರ ಸೇನೆಗಳಲ್ಲಿ ಧೃಷ್ಟದ್ಯುಮ್ನನೊಡನೆ ಯುದ್ಧದಲ್ಲಿ ತೊಡಗಿದರು. ರಥಸೇನೆಯನ್ನು ಧೃಷ್ಟದ್ಯುಮ್ನ, ಶಿಖಂಡೀ, ಶತಾನೀಕರು ಎದುರಿಸಿ ಯುದ್ಧಮಾಡಿದರು. ಆಗ ಪಾಂಚಾಲ್ಯನು ಕ್ರುದ್ಧನಾಗಿ ತನ್ನ ಮಹಾಸೇನೆಯಿಂದ ಆವೃತನಾಗಿ ಕೌರವರನ್ನು ಕೂಡಲೇ ಆಕ್ರಮಣಿಸಿ ಸಂಹರಿಸಲು ತೊಡಗಿದನು.

ಆಗ ದುರ್ಯೋಧನನು ತನ್ನ ಸೇನೆಯನ್ನು ಆಕ್ರಮಣಿಸುತ್ತಿದ್ದ ಧೃಷ್ಟದ್ಯುಮ್ನನ ಮೇಲೆ ಅನೇಕ ಬಾಣಸಮೂಹಗಳನ್ನು ಪ್ರಯೋಗಿಸಿದನು. ಅವನು ಕ್ಷಿಪ್ರವಾಗಿ ಧೃಷ್ಟದ್ಯುಮ್ನನನ್ನು ಅನೇಕ ನಾರಾಚಗಳಿಂದ ಅವನ ಬಾಹು-ಎದೆಗಳಿಗೆ ಹೊಡೆದನು. ಅಂಕುಶದಿಂದ ಚುಚ್ಚಲ್ಪಟ್ಟ ಆನೆಯಂತೆ ಅತಿಯಾಗಿ ಗಾಯಗೊಂಡ ಧೃಷ್ಟದ್ಯುಮ್ನನು ಬಾಣಗಳಿಂದ ದುರ್ಯೋಧನನ ನಾಲ್ಕು ಕುದುರೆಗಳನ್ನೂ ಮೃತ್ಯುಲೋಕಗಳಿಗೆ ಕಳುಹಿಸಿದನು. ಮತ್ತು ಭಲ್ಲದಿಂದ ಸಾರಥಿಯ ಶಿರವನ್ನು ಕಾಯದಿಂದ ಅಪಹರಿಸಿದನು. ರಥವನ್ನು ಕಳೆದುಕೊಂಡ ದುರ್ಯೋಧನನು ಕುದುರೆಯನ್ನೇರಿ ರಣರಂಗದಿಂದ ಸ್ವಲ್ಪ ದೂರ ಹೋದನು. ತನ್ನ ಸೇನೆಯ ವಿಕ್ರಮವು ಹತವಾದುದನ್ನು ನೋಡಿದ ಮಹಾಬಲನು ಸೌಬಲನಿದ್ದಲ್ಲಿಗೆ ಹೋದನು.

ರಥಸೇನೆಯು ಭಗ್ನವಾಗಲು ಮೂರುಸಾವಿರ ಮಹಾಗಜಗಳು ಐವರು ಮಹಾರಥ ಪಾಂಡವರನ್ನು ಎಲ್ಲ ಕಡೆಗಳಿಂದ ಸುತ್ತುವರೆದರು. ಸಮರದಲ್ಲಿ ಗಜಸೇನೆಯಿಂದ ಸಮಾವೃತರಾದ ಐವರು ನರವ್ಯಾಘ್ರರು ಮೋಡಗಳು ಮುಚ್ಚಿದ ಗ್ರಹಗಳಂತೆ ಶೋಭಿಸಿದರು. ಆಗ ಅರ್ಜುನನು ತನ್ನ ರಥವನ್ನು ಅಲ್ಲಿಗೇ ಕೊಂಡೊಯ್ದನು. ಪರ್ವತೋಪಮ ಆನೆಗಳಿಂದ ಪರಿವೃತನಾಗಿದ್ದ ಅವನು ವಿಮಲ ತೀಕ್ಷ್ಣ ನಾರಾಚಗಳಿಂದ ಗಜಸೇನೆಯನ್ನು ಧ್ವಂಸಗೊಳಿಸಿದನು. ಅಲ್ಲಿ ಸವ್ಯಸಾಚಿಯ ಒಂದೊಂದು ಬಾಣದಿಂದ ಹತವಾಗಿ ಕೆಳಗೆ ಬಿದ್ದಿದ್ದ, ಬೀಳುತ್ತಿದ್ದ ಮತ್ತು ಭಿನ್ನಶರೀರವುಳ್ಳ ಮಹಾಗಜಗಳು ಕಾಣುತ್ತಿದ್ದವು.

ಆನೆಗಳನ್ನು ನೋಡಿ ಮದಿಸಿದ ಆನೆಯಂತಿದ್ದ ಬಲಶಾಲಿ ಭೀಮಸೇನನು ಕೈಯಲ್ಲಿ ಅತಿದೊಡ್ಡ ಗದೆಯನ್ನು ಹಿಡಿದು ಬೇಗನೆ ರಥದಿಂದ ಧುಮುಕಿ ದಂಡಪಾಣಿ ಅಂತಕನಂತೆ ಮುನ್ನುಗ್ಗಿದನು. ಗದೆಯನ್ನು ಎತ್ತಿಹಿಡಿದ ಪಾಂಡವ ಮಹಾರಥನನ್ನು ನೋಡಿ ಕೌರವ ಸೇನೆಗಳು ನಡುಗಿದವು ಮತ್ತು ಮಲ-ಮೂತ್ರಗಳನ್ನು ವಿಸರ್ಜಿಸಿದವು. ಗದಾಧಾರಿಯಾದ ವೃಕೋದರನನ್ನು ನೋಡಿ ಎಲ್ಲ ಸೇನೆಗಳೂ ಉದ್ವಿಗ್ನಗೊಂಡವು. ಪರ್ವತೋಪಮ ಆನೆಗಳು ಭೀಮಸೇನನ ಗದೆಯಿಂದ ಕುಂಭಗಳೊಡೆದು ಧೂಳುಮುಕ್ಕಿ ಓಡಿಹೋದವು. ಭೀಮಸೇನನ ಗದೆಯಿಂದ ಪ್ರಹರಿತಗೊಂಡ ಆನೆಗಳು ಓಡಿಹೋದವು. ರೆಕ್ಕೆಗಳು ಕತ್ತರಿಸಲ್ಪಟ್ಟ ಪರ್ವತಗಳಂತೆ ಆರ್ತಸ್ವರದಲ್ಲಿ ಚೀರಿಕೊಳ್ಳುತ್ತಾ ಕೆಲವು ಅಲ್ಲಿಯೇ ಬಿದ್ದವು. ಕುಂಭಗಳೊಡೆದು ಹಾಗೆ ಓಡಿಹೋಗುತ್ತಿದ್ದ ಮತ್ತು ಕೆಳಗೆ ಉರುಳುತ್ತಿದ್ದ ಅನೇಕ ಆನೆಗಳನ್ನು ನೋಡಿ ಸೈನಿಕರು ನಡುಗಿದರು. ಸಂಕ್ರುದ್ಧ ಯುಧಿಷ್ಠಿರನೂ, ಮಾದ್ರೀಪುತ್ರ ಪಾಂಡವರೂ ಹದ್ದಿನ ಗರಿಗಳುಳ್ಳ ನಿಶಿತ ಬಾಣಗಳಿಂದ ಗಜಯೋಧಿಗಳನ್ನು ಸಂಹರಿಸುತ್ತಿದ್ದರು. ಧೃಷ್ಟದ್ಯುಮ್ನನಾದರೋ ಸಮರದಲ್ಲಿ ನರಾಧಿಪನನ್ನು ಸೋಲಿಸಿ, ದುರ್ಯೋಧನನು ಕುದುರೆಯ ಮೇಲೆ ಹೊರಟುಹೋಗಲು, ಸುಧಾರಿಸಿಕೊಂಡು, ಪಾಂಡವರೆಲ್ಲರೂ ಆನೆಗಳಿಂದ ಸುತ್ತುವರೆಯಲ್ಪಟ್ಟಿರುವುದನ್ನು ಕಂಡನು. ಆಗ ಧೃಷ್ಟದ್ಯುಮ್ನನು ಸರ್ವ ಪ್ರಭದ್ರಕರೊಡನೆ ಆನೆಗಳನ್ನು ಸಂಹರಿಸಲು ಬಂದನು.

ರಥಸೇನೆಯಲ್ಲಿ ಅರಿಂದಮ ದುರ್ಯೋಧನನನ್ನು ಕಾಣದೇ ಅಶ್ವತ್ಥಾಮ, ಕೃಪ ಮತ್ತು ಕೃತವರ್ಮರು ಅಲ್ಲಿದ್ದ ಕ್ಷತ್ರಿಯರಲ್ಲಿ ದುರ್ಯೋಧನನು ಎಲ್ಲಿ ಹೋದ ಎಂದು ಪ್ರಶ್ನಿಸಿದರು. ಜನಕ್ಷಯವು ನಡೆಯುತ್ತಿರುವಾಗ ರಾಜನನ್ನು ಕಾಣದೇ ಮಹಾರಥರು ದುರ್ಯೋಧನನು ಅಲ್ಲಿ ಹತನಾದನೆಂದೇ ಭಾವಿಸಿ ವಿಷಣ್ಣವದನರಾಗಿ ಅವನ ಕುರಿತಾಗಿ ಪುನಃ ಪುನಃ ಕೇಳತೊಡಗಿದರು. ಸೂತನು ಹತನಾಗಲು ಅವನು ಸೌಬಲನಿದ್ದಲ್ಲಿಗೆ ಹೋದನೆಂದು ಕೆಲವರು ಹೇಳಿದರೆ ತುಂಬಾ ಗಾಯಗೊಂಡಿರುವ ಇತರ ಕ್ಷತ್ರಿಯರು ಅವರಿಗೆ ಹೀಗೆ ಹೇಳಿದರು: “ದುರ್ಯೋಧನನಿಂದ ಏನು ಕೆಲಸವಾಗಬೇಕಾಗಿದೆ? ಜೀವಂತವಾಗಿದ್ದರೆ ಅವನನ್ನು ನೀವು ಕಾಣುತ್ತಿದ್ದಿರಿ. ನೀವೆಲ್ಲರೂ ಒಟ್ಟಾಗಿ ಯುದ್ಧಮಾಡಿರಿ. ಇದರಲ್ಲಿ ರಾಜನೇನು ಮಾಡಬಲ್ಲನು?”

ಹೆಚ್ಚು ಭಾಗ ವಾಹನಗಳೆಲ್ಲವನ್ನೂ ಕಳೆದುಕೊಂಡಿದ್ದ ಶರೀರಗಳಲ್ಲಿ ಅತ್ಯಂತ ಗಾಯಗೊಂಡಿದ್ದ ಕ್ಷತ್ರಿಯರು ಶರಗಳಿಂದ ಪೀಡಿತರಾಗಿ ಅಸ್ಪಷ್ಟವಾಗಿ ಮಾತುಗಳನ್ನಾಡಿದರು: “ನಮ್ಮನ್ನು ಸುತ್ತುವರೆದಿರುವ ಸೇನೆಗಳೆಲ್ಲವನ್ನೂ ನಾವು ಸಂಹರಿಸುತ್ತೇವೆ. ಆದರೆ ಆನೆಗಳೆಲ್ಲವನ್ನೂ ಸಂಹರಿಸಿ ಪಾಂಡವರು ನಮ್ಮ ಕಡೆಗೇ ಬರುತ್ತಿದ್ದಾರೆ!”

ಅವರ ಮಾತನ್ನು ಕೇಳಿ ಅಶ್ವತ್ಥಾಮ, ಕೃಪ ಮತ್ತು ಕೃತವರ್ಮರು ಪಾಂಚಾಲರಾಜನ ದುರ್ಗಮ ರಥ ಸೇನೆಯನ್ನು ಬಿಟ್ಟು ಸೌಬಲನಿದ್ದಲ್ಲಿಗೆ ತೆರಳಿದರು. ಅವರು ಹಾಗೆ ಹೊರಟುಹೋಗಲು ಧೃಷ್ಟದ್ಯುಮ್ನನ ನಾಯಕತ್ವದಲ್ಲಿ ಪಾಂಡವರು ಕೌರವರರನ್ನು ಸಂಹರಿಸಲು ಮುಂದುವರೆದರು. ತಮ್ಮ ಮೇಲೆ ಎರಗುತ್ತಿದ್ದ ಸಂಪ್ರಹೃಷ್ಟ ಮಹಾರಥರನ್ನು ನೋಡಿ ವೀರರಲ್ಲಿ ಜೀವದ ನಿರಾಶೆಯು ಆವರಿಸಿತು. ಕೌರವ ಸೇನೆಯಲ್ಲಿ ಹೆಚ್ಚುಜನರ ಮುಖಗಳು ವಿವರ್ಣವಾದವು. ಅವರ ಆಯುಧಗಳೆಲ್ಲವೂ ಮುಗಿದುಹೋಗಿರುವುದನ್ನು ನೋಡಿ ಅವರಿಂದ ಪರಿವಾರಿತನಾಗಿ ಸಂಜಯನು ತನ್ನ ಜೀವವನ್ನೇ ತೊರೆದು ಅಶ್ವ-ಗಜ ಸೇನೆಗಳೊಂದಿಗೆ ಎಲ್ಲಿ ಶಾರದ್ವತ ಕೃಪನು ನಿಂತು ಯುದ್ಧಮಾಡಿದ್ದನೋ ಅದೇ ಸ್ಥಳದಲ್ಲಿ ನಿಂತು ಅವನು ಮತ್ತು ಇತರ ಐವರು ಯೋಧರು ಪಾಂಚಾಲ್ಯನ ಸೇನೆಯೊಂದಿಗೆ ಯುದ್ಧಮಾಡಿದರು. ಕಿರೀಟಿಯ ಶರಗಳಿಂದ ಪೀಡಿತರಾಗಿದ್ದ ಐವರು ಧೃಷ್ಟದ್ಯುಮ್ನನ ಮಹಾಸೇನೆಯೊಂದಿಗೆ ಯುದ್ಧಮಾಡಿದರು. ಆದರೆ ಅವನಿಂದ ಸೋತ ಅವರೆಲ್ಲರೂ ಆಗ ರಣದಿಂದ ಹಿಂದೆಸರಿದರು. ಆಗ ಅಲ್ಲಿಗೆ ಬರುತ್ತಿದ್ದ ಮಹಾರಥ ಸಾತ್ಯಕಿಯನ್ನು ಅವರು ನೋಡಿದರು. ವೀರನು ನಾಲ್ಕು ನೂರು ರಥಗಳೊಡನೆ ಅವರನ್ನು ಆಕ್ರಮಣಿಸಿದನು. ಕುದುರೆಗಳು ಬಳಲಿರಲು ಧೃಷ್ಟದ್ಯುಮ್ನನಿಂದ ಹೇಗೋ ತಪ್ಪಿಸಿಕೊಂಡು ಬಂದ ಅವರು ಪಾಪಿಯು ನರಕವನ್ನು ಹೇಗೋ ಹಾಗೆ ಮಾಧವ ಸಾತ್ಯಕಿಯ ಸೇನೆಯಡಿಯಲ್ಲಿ ಬಿದ್ದರು! ಸಾತ್ಯಕಿಯಾದರೋ ಸಂಜಯನ ಕುದುರೆ-ಸಾರಥಿಗಳನ್ನು ಸಂಹರಿಸಿ, ಮೂರ್ಛಿತನಾಗಿ ಭೂಮಿಯ ಮೇಲೆ ಬಿದ್ದ ಅವನನ್ನು ಜೀವಂತ ಸೆರೆಹಿಡಿದನು. ಆಗ ಭೀಮಸೇನನು ಗದೆಯಿಂದಲೂ ಅರ್ಜುನನು ನಾರಾಚಗಳಿಂದಲೂ ಮುಹೂರ್ತಮಾತ್ರದಲ್ಲಿ ಗಜಸೇನೆಯನ್ನು ಸಂಹರಿಸಿದರು. ಎಲ್ಲ ಕಡೆಗಳಲ್ಲಿಯೂ ಪರ್ವತೋಪಮ ಮಹಾಆನೆಗಳ ಮೃತಶರೀರಗಳು ಬಿದ್ದಿರಲು ಪಾಂಡವ ರಥಗಳಿಗೆ ಮುಂದುವರೆಯಲೇ ಸಾಧ್ಯವಾಗಲಿಲ್ಲ. ಆಗ ಮಹಾಬಲ ಭೀಮಸೇನನು ಮಹಾಆನೆಗಳನ್ನು ಎಳೆದು ಸರಿಸಿ ಪಾಂಡವರಿಗೆ ರಥಮಾರ್ಗವನ್ನು ಮಾಡಿಕೊಟ್ಟನು.

ಅಶ್ವತ್ಥಾಮ, ಕೃಪ ಮತ್ತು ಕೃತವರ್ಮರು ರಥಸೇನೆಯಲ್ಲಿ ದುರ್ಯೋಧನನನ್ನು ಕಾಣದೇ ಅವನನ್ನು ಹುಡುಕತೊಡಗಿದರು. ಪಾಂಚಾಲರನ್ನು ಬಿಟ್ಟು ಸೌಬಲನಿದ್ದಲ್ಲಿಗೆ ಹೋಗಿ ಜನಕ್ಷಯವು ನಡೆಯುತ್ತಿರುವ ಅಲ್ಲಿಯೂ ರಾಜನನ್ನು ಕಾಣದೇ ಅವರು ಉದ್ವಿಗ್ನರಾದರು.

ಹನ್ನೊಂದು ಧಾರ್ತರಾಷ್ಟ್ರರ ವಧೆ

ಭೀಮಸೇನನಿಂದ ಗಜಸೇನೆಯು ಹತವಾಗಲು ಅವನು ಕ್ರುದ್ಧ ಪ್ರಾಣಹಾರೀ ಅಂತಕನಂತೆ ದಂಡವನ್ನು ಹಿಡಿದು ಸಂಚರಿಸುತ್ತಿದ್ದನು. ದುರ್ಯೋಧನನು ಅದೃಶ್ಯನಾಗಲು ಧೃತರಾಷ್ಟ್ರನ ಅಳಿದುಳಿದ ಮಕ್ಕಳು ಒಟ್ಟಾಗಿ ಸಮರದಲ್ಲಿ ಭೀಮಸೇನನನ್ನು ಆಕ್ರಮಣಿಸಿದರು. ದುರ್ಮರ್ಷಣ, ಚೈತ್ರ, ರವಿ, ಮತ್ತು ಇತರರು ಒಟ್ಟಾಗಿ ಭೀಮಸೇನನನ್ನು ಆಕ್ರಮಣಿಸಿ ಅವನನ್ನು ಎಲ್ಲ ಕಡೆಗಳಿಂದ ತಡೆದರು. ಆಗ ಭೀಮನು ತನ್ನ ರಥವನ್ನು ಪುನಃ ಏರಿ ಅವರ ಮರ್ಮಸ್ಥಾನಗಳಿಗೆ ಗುರಿಯಿಟ್ಟು ನಿಶಿತ ಬಾಣಗಳನ್ನು ಪ್ರಯೋಗಿಸಿದನು. ಭೀಮಸೇನನಿಂದ ಪ್ರಹರಿಸಲ್ಪಟ್ಟ ಧೃತರಾಷ್ಟ್ರನ ಮಕ್ಕಳು ಇಳಿಜಾರಿನ ಪ್ರದೇಶದಿಂದ ಆನೆಯನ್ನು ಮೇಲಕ್ಕೆಳೆಯುವಂತೆ ಭೀಮಸೇನನನ್ನು ಸೆಳೆಯ ತೊಡಗಿದರು. ಆಗ ಕ್ರುದ್ಧ ಭೀಮಸೇನನು ರಣದಲ್ಲಿ ದುರ್ಮರ್ಷಣನ ಶಿರವನ್ನು ಕ್ಷುರಪ್ರದಿಂದ ಹೊಡೆಯಲು ಅವನು ಭೂತಲದ ಮೇಲೆ ಬಿದ್ದನು. ಭೀಮನು ಸರ್ವಾವರಣಗಳನ್ನೂ ಭೇದಿಸಬಲ್ಲ ಇನ್ನೊಂದು ಭಲ್ಲದಿಂದ ಧೃತರಾಷ್ಟ್ರ ಪುತ್ರ ಶ್ರುತಾಂತನನ್ನು ವಧಿಸಿದನು. ಅನಂತರ ಮುಗುಳ್ನಗೆಯೊಂದಿಗೆ ನಾರಾಚದಿಂದ ಜಯತ್ಸೇನನನ್ನು ಹೊಡೆದು ರಥಪೀಠದಿಂದ ಕೆಳಕ್ಕುರುಳಿಸಿದನು. ಕೂಡಲೇ ಅವನು ರಥದಿಂದ ಕೆಳಕ್ಕೆ ಬಿದ್ದು ಅಸುನೀಗಿದನು. ಆಗ ಶ್ರುತರ್ವನು ಕ್ರುದ್ಧನಾಗಿ ಭೀಮನನ್ನು ಹದ್ದಿನಗರಿಗಳುಳ್ಳ ನೂರು ನತಪರ್ವ ಶರಗಳಿಂದ ಹೊಡೆದನು. ಆಗ ಭೀಮನು ಚೈತ್ರ, ಭೂರಿಬಲ ಮತ್ತು ರವಿ ಮೂವರನ್ನು ವಿಷಾಗ್ನಿ-ಸಮ ಮೂರು ಶರಗಳಿಂದ ಪ್ರಹರಿಸಿದನು. ವಸಂತಋತುವಿನಲ್ಲಿ ಕತ್ತರಿಸಿ ಕೆಳಗೆ ಬೀಳುವ ಪುಷ್ಪಭರಿತ ಮುತ್ತುಗದ ಮರಗಳಂತೆ ಮೂವರು ಮಹಾರಥರೂ ಹತರಾಗಿ ತಮ್ಮ ತಮ್ಮ ರಥಗಳಿಂದ ಭೂಮಿಯ ಮೇಲೆ ಬಿದ್ದರು. ಅನಂತರ ಭೀಮನು ಇನ್ನೊಂದು ತೀಕ್ಷ್ಣ ನಾರಾಚದಿಂದ ದುರ್ವಿಮೋಚನನನ್ನು ಹೊಡೆದು ಅವನನ್ನು ಮೃತ್ಯುಲೋಕಕ್ಕೆ ಕಳುಹಿಸಿದನು. ಪರ್ವತ ಶಿಖರದಲ್ಲಿದ್ದ ವೃಕ್ಷವು ಭಿರುಗಾಳಿಯಿಂದ ಭಗ್ನವಾಗಿ ಉರುಳಿ ಬೀಳುವಂತೆ ರಥಿ-ಶ್ರೇಷ್ಠನು ಹತನಾಗಿ ಭೂಮಿಯ ಮೇಲೆ ಬಿದ್ದನು. ಅನಂತರ ಭೀಮಸೇನನು ಧೃತರಾಷ್ಟ್ರನ ಮಕ್ಕಳಾದ ದುಷ್ಪ್ರಧರ್ಷ ಮತ್ತು ಸುಜಾತರನ್ನು ಒಬ್ಬೊಬ್ಬರನ್ನೂ ಎರಡೆರಡು ಬಾಣಗಳಿಂದ ಹೊಡೆದು ಸಂಹರಿಸಿದನು. ಶಿಲೀಮುಖಗಳಿಂದ ಗಾಯಗೊಂಡಿದ್ದ ಇಬ್ಬರು ರಥಸತ್ತಮರೂ ಕೆಳಗೆ ಬಿದ್ದರು. ಆಗ ರಣದಲ್ಲಿ ಪ್ರಯತ್ನಿಸುತ್ತಿದ್ದ ಧೃತರಾಷ್ಟ್ರನ ಇನ್ನೊಬ್ಬ ಮಗ ದುರ್ವಿಷಹನನ್ನು ನೋಡಿ ಭೀಮನು ಅವನನ್ನು ಭಲ್ಲದಿಂದ ಹೊಡೆದನು. ಅವನು ಸರ್ವಧನ್ವಿಗಳೂ ನೋಡುತ್ತಿದ್ದಂತೆ ವಾಹನದಿಂದ ಕೆಳಕ್ಕುರುಳಿ ಬಿದ್ದನು. ಒಬ್ಬನಿಂದಲೇ ತನ್ನ ಅನೇಕ ಸಹೋದರರು ಹತರಾಗಿದ್ದುದನ್ನು ಕಂಡು ಸಹಿಸಿಕೊಳ್ಳಲಾರದೇ ಶ್ರುತರ್ವನು ಸುವರ್ಣವಿಭೂಷಿತ ಮಹಾಚಾಪವನ್ನು ಸೆಳೆಯುತ್ತಾ ವಿಷಾಗ್ನಿಗೆ ಸಮಾನ ಅನೇಕ ಸಾಯಕಗಳನ್ನು ಪ್ರಯೋಗಿಸುತ್ತಾ ಭೀಮನನ್ನು ಆಕ್ರಮಣಿಸಿದನು.

ಅವನು ಪಾಂಡವನ ಧನುಸ್ಸನ್ನು ತುಂಡರಿಸಿ, ಅವನನ್ನು ಇಪ್ಪತ್ತು ಬಾಣಗಳಿಂದ ಮುಸುಕಿದನು. ಆಗ ಭೀಮಸೇನನು ಅನ್ಯ ಧನುಸ್ಸನ್ನು ಮೇಲೆತ್ತಿಕೊಂಡು ಅವನನ್ನು ಆಕ್ರಮಣಿಸಿ ನಿಲ್ಲು ನಿಲ್ಲೆಂದು ಹೇಳಿದನು. ಹಿಂದೆ ಜಂಭವ-ವಾಸವರ ನಡುವೆ ನಡೆದ ಸಮರದಂತೆ ಅವರಿಬ್ಬರ ಮಹಾ ಯುದ್ಧವು ವಿಚಿತ್ರವೂ ಭಯಾನಕವೂ ಆಗಿತ್ತು. ಅವರಿಬ್ಬರಿಂದ ಮುಕ್ತವಾದ ಯಮದಂಡಗಳಂತೆ ನಿಶಿತ-ಶುಭ ಬಾಣಗಳು ಭೂಮಿ, ಆಕಾಶ, ದಿಕ್ಕು ಮತ್ತು ಉಪದಿಕ್ಕುಗಳನ್ನು ಮುಸುಕಿದವು. ಆಗ ರಣದಲ್ಲಿ ಸಂಕ್ರುದ್ಧನಾದ ಶ್ರುತರ್ವನು ಧನುಸ್ಸನ್ನೆತ್ತಿ ಸಾಯಕಗಳಿಂದ ಭೀಮಸೇನನ ಬಾಹು-ಎದೆಗಳಿಗೆ ಹೊಡೆದನು. ಅವನಿಂದ ಹೀಗೆ ಅತಿಯಾಗಿ ಪ್ರಹರಿಸಲ್ಪಟ್ಟ ಭೀಮನು ಪರ್ವಕಾಲದಲ್ಲಿ ಮಹಾಸಾಗರವು ಕ್ಷೋಭೆಗೊಳ್ಳುವಂತೆ ಕ್ರುದ್ಧನಾಗಿ ಭುಗಿಲೆದ್ದನು. ಆಗ ರೋಷಾವಿಷ್ಟನಾದ ಭೀಮನು ಶ್ರುತರ್ವನ ಸಾರಥಿಯನ್ನೂ, ನಾಲ್ಕು ಅಶ್ವಗಳನ್ನೂ ಬಾಣಗಳಿಂದ ಯಮಕ್ಷಯಕ್ಕೆ ಕಳುಹಿಸಿದನು. ಅವನು ವಿರಥನಾದುದನ್ನು ನೋಡಿ ಅಮೇಯಾತ್ಮ ಭೀಮನು ಕೂದಲನ್ನೂ ಸೀಳಬಲ್ಲಷ್ಟು ಹರಿತವಾದ ವಿಶಿಖಗಳಿಂದ ಅವನನ್ನು ಮುಚ್ಚಿ ತನ್ನ ಹಸ್ತಲಾಘವವನ್ನು ತೋರಿಸಿದನು. ವಿರಥನಾದ ಶ್ರುತರ್ವನು ಖಡ್ಗ-ಗುರಾಣಿಗಳನ್ನು ಎತ್ತಿಕೊಂಡನು. ಅವನು ನೂರು ಚಂದ್ರಗಳಂತೆ ಹೊಳೆಯುತ್ತಿದ್ದ ಖಡ್ಗವನ್ನು ಎತ್ತಿಕೊಳ್ಳಲು ಪಾಂಡವ ಭೀಮನು ಕ್ಷುರಪ್ರದಿಂದ ಅವನ ಶಿರವನ್ನು ಶರೀರದಿಂದ ಬೇರ್ಪಡಿಸಿ ಬೀಳಿಸಿದನು. ಮಹಾತ್ಮನ ಕ್ಷುರಪ್ರದಿಂದ ಶಿರವು ಕತ್ತರಿಸಲ್ಪಡಲು ಅವನ ಕಾಯವು ಶಬ್ಧಮಾಡುತ್ತಾ ರಥದಿಂದ ಭೂಮಿಯ ಮೇಲೆ ಬಿದ್ದಿತು. ವೀರನು ಕೆಳಗೆ ಬೀಳಲು ಭಯಮೋಹಿತರಾದ ಕೌರವರು ಭೀಮಸೇನನೊಡನೆ ಯುದ್ಧಮಾಡುತ್ತಾ ಆಕ್ರಮಣಿಸಿದರು. ತನ್ನ ಮೇಲೆ ಎರಗಿದ ಅಳಿದುಳಿದ ಸೇನೆಯನ್ನು ಕವಚಧಾರೀ ಪ್ರತಾಪವಾನ್ ಭೀಮಸೇನನು ತಡೆದು ಎದುರಿಸಿದನು. ಅವರಿಂದ ಸುತ್ತುವರೆಯಲ್ಪಟ್ಟ ಭೀಮಸೇನನು ನಿಶಿತ ಶರಗಳಿಂದ ಅವರೆಲ್ಲರನ್ನೂ ಸಹಸ್ರಾಕ್ಷ ಇಂದ್ರನು ಅಸುರರನ್ನು ಹೇಗೋ ಹಾಗೆ ಪೀಡಿಸತೊಡಗಿದನು. ಆಗ ಅವನು ಯುದ್ಧದಲ್ಲಿ ಐದು ನೂರು ಆವರಣಗಳಿಂದ ಕೂಡಿದ್ದ ಮಹಾರಥರನ್ನು ಸಂಹರಿಸಿ ಪುನಃ ಏಳು ನೂರು ಗಜಸೇನೆಗಳನ್ನು ಸಂಹರಿಸಿದನು. ಪರಮ ಬಾಣಗಳಿಂದ ಹತ್ತುಸಾವಿರ ಪದಾತಿಗಳನ್ನು ಸಂಹರಿಸಿ ಪಾಂಡವನು ಎಂಟು ನೂರು ಕುದುರೆಗಳನ್ನು ಸಂಹರಿಸಿ ವಿರಾಜಿಸಿದನು. ಧೃತರಾಷ್ಟ್ರನ ಮಕ್ಕಳನ್ನು ಯುದ್ಧದಲ್ಲಿ ಕೊಂದು ಭೀಮಸೇನನು ತನ್ನನ್ನು ತಾನು ಕೃತಾರ್ಥನಾದನೆಂದೂ ಜನ್ಮವು ಸಫಲವಾಯಿತೆಂದೂ ತಿಳಿದುಕೊಂಡನು. ಹಾಗೆ ಯುದ್ಧಮಾಡಿ ಅವರನ್ನು ಸಂಹರಿಸುತ್ತಿದ್ದ ಭೀಮನನ್ನು ನೋಡಲು ಕೌರವ ಸೈನ್ಯದವರು ಯಾರೂ ಉತ್ಸುಕರಾಗಿರಲಿಲ್ಲ. ಕುರುಗಳೆಲ್ಲರನ್ನೂ ಓಡಿಸಿ, ಅವರ ಅನುಯಾಯಿಗಳೆಲ್ಲರನ್ನೂ ಸಂಹರಿಸಿ, ಭೀಮಸೇನನು ತನ್ನ ಎರಡೂ ಭುಜಗಳನ್ನು ತಟ್ಟಿಕೊಳ್ಳುತ್ತಾ ಅದರ ಶಬ್ಢದಿಂದ ಮಹಾಗಜಗಳನ್ನು ಹೆದರಿಸುತ್ತಿದ್ದನು. ಕೌರವ ಸೇನೆಯಲ್ಲಿ ಬಹುಪಾಲು ಯೋಧರು ಹತರಾಗಿ ಹೋಗಿದ್ದರು. ಉಳಿದ ಸ್ವಲ್ಪ ಜನರೂ ದೀನರಾಗಿದ್ದರು.

ತ್ರಿಗರ್ತರ ರಾಜ ಸುಶರ್ಮನ ವಧೆ

ಆಗ ಸೇನಾಮಧ್ಯದಲ್ಲಿ ಧೃತರಾಷ್ಟ್ರನ ಮಕ್ಕಳಲ್ಲಿ ದುರ್ಯೋಧನ ಮತ್ತು ಸುದರ್ಶನ ಇವರಿಬ್ಬರೇ ಹತರಾಗದೇ ಉಳಿದಿದ್ದರು. ಆಗ ಸೇನಾಮಧ್ಯದಲ್ಲಿ ವ್ಯವಸ್ಥಿತನಾಗಿದ್ದ ದುರ್ಯೋಧನನನ್ನು ನೋಡಿ ದೇವಕೀಪುತ್ರನು ಧನಂಜಯನಿಗೆ ಹೇಳಿದನು: “ಶತ್ರುಗಳು ಅಧಿಕಾಂಶವಾಗಿ ಹತರಾಗಿದ್ದಾರೆ. ನಮ್ಮ ಬಂಧುಜನರು ರಕ್ಷಿತರಾಗಿದ್ದಾರೆ. ಸಾತ್ಯಕಿಯು ಸಂಜಯನನ್ನು ಕೂಡ ಸೆರೆಹಿಡಿದು ಹೋಗಿದ್ದಾನೆ. ರಣದಲ್ಲಿ ಧಾರ್ತರಾಷ್ಟ್ರರ ಅನುಯಾಯಿಗಳೊಡನೆ ಯುದ್ಧಮಾಡಿ ನಕುಲ ಸಹದೇವರು ಬಳಲಿದ್ದಾರೆ. ಸುಯೋಧನನನ್ನು ಬಿಟ್ಟು ಕೃಪ, ಕೃತವರ್ಮ ಮತ್ತು ದ್ರೌಣಿ ಮೂವರೂ ಯುದ್ಧದಲ್ಲಿ ನಿಂತಿದ್ದಾರೆ. ದುರ್ಯೋಧನನ ಸೇನೆಯನ್ನು ಸಂಹರಿಸಿ ಸರ್ವ ಪ್ರಭದ್ರಕರೊಡನೆ ಪಾಂಚಾಲ್ಯನು ಇಲ್ಲಿ ಪರಮ ಕಾಂತಿಯಿಂದ ನಿಂತಿದ್ದಾನೆ. ವಾಜಿಮಧ್ಯದಲ್ಲಿ ದುರ್ಯೋಧನನು ಶ್ವೇತಚತ್ರದಡಿಯಲ್ಲಿ ಬಾರಿ ಬಾರಿಗೂ ಇತ್ತಕಡೆ ನೋಡುತ್ತಾ ನಿಂತಿದ್ದಾನೆ. ಸರ್ವ ಸೇನೆಯನ್ನೂ ಇನ್ನೊಮ್ಮೆ ವ್ಯೂಹದಲ್ಲಿ ರಚಿಸಿ ರಣಮಧ್ಯದಲ್ಲಿ ನಿಂತಿರುವ ಅವನನ್ನು ನಿಶಿತಬಾಣಗಳಿಂದ ಸಂಹರಿಸಿದರೆ ನೀನು ಕೃತಕೃತ್ಯನಾಗುತ್ತೀಯೆ. ಗಜಸೇನೆಯು ನಾಶವಾದುದನ್ನು ನೋಡಿ ಮತ್ತು ನೀನು ಇಲ್ಲಿರುವುದನ್ನು ನೋಡಿ ಇವರು ಪಲಾಯಮಾಡುತ್ತಿರುವಾಗ ನೀನು ಸುಯೋಧನನನ್ನು ಸಂಹರಿಸು! ಯಾರಾದರೂ ಬೇಗನೆ ಹೋಗಿ ಪಾಂಚಾಲ್ಯನು ಇಲ್ಲಿಗೆ ಬರುವಂತೆ ಹೇಳಲಿ. ಸೇನೆಯು ಬಳಲಿರುವಾಗ ಪಾಪಿಯು ತಪ್ಪಿಸಿಕೊಂಡು ಹೋಗಬಾರದು! ನಿನ್ನ ಸೇನೆಗಳೆಲ್ಲವನ್ನೂ ಸಂಹರಿಸಿ ಪಾಂಡುಸುತರನ್ನು ಜಯಿಸುತ್ತೇನೆಂದು ತಿಳಿದುಕೊಂಡು ಧೃತರಾಷ್ಟ್ರಜನು ಮಹಾ ರೂಪವನ್ನು ಧರಿಸಿದ್ದಾನೆ. ತನ್ನ ಸೇನೆಯು ನಾಶವಾದುದನ್ನು ಮತ್ತು ಪಾಂಡವರಿಂದ ಪೀಡಿಸಲ್ಪಟ್ಟಿರುವುದನ್ನು ನೋಡಿಯೂ ನೃಪನು ಸಂಗ್ರಾಮದಲ್ಲಿ ತನ್ನ ವಧೆಯನ್ನು ನಿಶ್ಚಯಿಸಿಯೇ ಬರುತ್ತಿದ್ದಾನೆ.”

ಹೀಗೆ ಹೇಳಲು ಫಲ್ಗುನನಾದರೋ ಕೃಷ್ಣನಿಗೆ ಹೇಳಿದನು: “ಮಾನದ! ಧೃತರಾಷ್ಟ್ರನ ಮಕ್ಕಳೆಲ್ಲರೂ ಭೀಮನಿಂದಲೇ ಹತರಾದರು. ಇಂದು ಯುದ್ಧಕ್ಕೆ ನಿಂತಿರುವ ಇವರಿಬ್ಬರೂ ಉಳಿಯಲಾರರು! ಭೀಷ್ಮನು ಹತನಾದನು. ದ್ರೋಣನು ಹತನಾದನು. ವೈಕರ್ತನ ಕರ್ಣನೂ ಹತನಾದನು. ಮದ್ರರಾಜ ಶಲ್ಯನು ಹತನಾದನು. ಜಯದ್ರಥನೂ ಹತನಾದನು. ಶಕುನಿಯ ಐದುನೂರು ಕುದುರೆಗಳು ಉಳಿದುಕೊಂಡಿವೆ. ಇನ್ನೂರು ರಥಗಳು ಉಳಿದುಕೊಂಡಿವೆ. ನೂರು ಆನೆಗಳಿವೆ ಮತ್ತು ಮೂರು ಸಾವಿರ ಪದಾತಿಗಳಿದ್ದಾರೆ. ಅಶ್ವತ್ಥಾಮ, ಕೃಪ, ತ್ರಿಗರ್ತಾಧಿಪತಿ, ಉಲೂಕ, ಶಕುನಿ, ಮತ್ತು ಕೃತವರ್ಮ ಇವರಿಷ್ಟೇ ಧಾರ್ತರಾಷ್ಟ್ರನ ಸೇನೆಯಲ್ಲಿ ಉಳಿದುಕೊಂಡಿದ್ದಾರೆ. ಭುವಿಯಲ್ಲಿ ಯಾರಿಗೂ ಕಾಲದಿಂದ ಮೋಕ್ಷ ಎನ್ನುವುದಿಲ್ಲ. ಸೇನೆಗಳು ಹತವಾದರೂ ಹಾಗೆ ನಿಂತಿರುವ ದುರ್ಯೋಧನನನ್ನು ನೋಡು! ಇಂದು ರಾತ್ರಿಯಾಗುವುದರೊಳಗೆ ಮಹಾರಾಜ ಯುಧಿಷ್ಠಿರನು ಶತ್ರುರಹಿತನಾಗುತ್ತಾನೆ. ಇಂದು ಶತ್ರುಗಳ್ಯಾರೂ ನನ್ನಿಂದ ತಪ್ಪಿಸಿಕೊಂಡು ಹೋಗಲಾರರೆಂದು ಭಾವಿಸುತ್ತೇನೆ. ಒಂದುವೇಳೆ ರಣೋತ್ಕಟರು ಸಮರದಿಂದ ಪಲಾಯನ ಮಾಡದಿದ್ದರೆ, ಅವರು ಸುರ-ಅಮಾನುಷರೇ ಆಗಿರಲಿ, ಎಲ್ಲರನ್ನೂ ನಾನು ಸಂಹರಿಸುತ್ತೇನೆ. ಇಂದು ಯುದ್ಧದಲ್ಲಿ ಕ್ರುದ್ಧನಾಗಿ ನಿಶಿತ ಶರಗಳಿಂದ ಗಾಂಧಾರನನ್ನು ಕೆಳಗುರುಳಿಸಿ ರಾಜ ಯುಧಿಷ್ಠಿರನ ದೀರ್ಘ ನಿದ್ರಾಹೀನತೆಯನ್ನು ಇಲ್ಲವಾಗಿಸುತ್ತೇನೆ. ದುರಾಚಾರಿ ಸೌಬಲನು ಸಭೆಯಲ್ಲಿ ಮೋಸದಿಂದ ದ್ಯೂತದಲ್ಲಿ ಯಾವ ರತ್ನಗಳನ್ನು ಮೋಸದಿಂದ ಅಪಹರಿಸಿದ್ದನೋ ಅವುಗಳನ್ನು ನಾನು ಯುದ್ಧದಲ್ಲಿ ಪುನಃ ಪಡೆಯುತ್ತೇನೆ. ಇಂದು ಹಸ್ತಿನಾಪುರದ ಸ್ತ್ರೀಯರೆಲ್ಲರೂ ಯುದ್ಧದಲ್ಲಿ ತಮ್ಮ ಪತಿ-ಪುತ್ರರು ಪಾಂಡವರಿಂದ ಹತರಾದರೆಂದು ಕೇಳಿ ಗೋಳಿಡಲಿದ್ದಾರೆ. ಇಂದು ನಮ್ಮ ಕರ್ಮಗಳೆಲ್ಲವೂ ಸಮಾಪ್ತಗೊಳ್ಳುತ್ತವೆ. ಇಂದು ದುರ್ಯೋಧನನು ಬೆಳಗುತ್ತಿದ್ದ ಸಂಪತ್ತಿನೊಂದಿಗೆ ಪ್ರಾಣಗಳನ್ನೂ ತ್ಯಜಿಸಲಿದ್ದಾನೆ. ಬಾಲಮತಿ ಧಾರ್ತರಾಷ್ಟ್ರನು ಒಂದು ವೇಳೆ ಭಯಪಟ್ಟು ಸಂಗ್ರಾಮದಿಂದ ಪಲಾಯನ ಮಾಡದಿದ್ದರೆ ಅವನು ನನ್ನಿಂದ ಹತನಾದನೆಂದೇ ತಿಳಿ! ಮುಂದೆ ಹೋಗು! ನನ್ನ ಧನುಸ್ಸಿನ ಟೇಂಕಾರವನ್ನೇ ಸಹಿಸಿಕೊಳ್ಳಲು ಅಶಕ್ತವಾಗಿರುವ ಗಜಸೇನೆಯನ್ನು ನಾನು ಸಂಹರಿಸುತ್ತೇನೆ.”

ಯಶಸ್ವಿ ಪಾಂಡವನು ಹೀಗೆ ಹೇಳಲು ದಾಶಾರ್ಹನು ಕುದುರೆಗಳನ್ನು ದುರ್ಯೋಧನನ ಸೇನೆಯ ಕಡೆ ಓಡಿಸಿದನು. ಸೇನೆಯನ್ನು ನೋಡಿ ದುರ್ಯೋಧನನ್ನು ಸಂಹರಿಸುವ ಇಚ್ಛೆಯಿಂದ ಸಜ್ಜಾಗಿ ಭೀಮಸೇನ, ಅರ್ಜುನ ಮತ್ತು ಸಹದೇವ ಮೂವರು ಮಹಾರಥರು ಸಿಂಹನಾದದೊಂದಿಗೆ ಹೊರಟರು. ಧನುಸ್ಸುಗಳನ್ನು ಮೇಲೆತ್ತಿ ವೇಗದಿಂದ ಒಟ್ಟಿಗೇ ಬರುತ್ತಿದ್ದ ಪಾಂಡವರೆಲ್ಲರನ್ನೂ ನೋಡಿ ಆತತಾಯಿ ಸೌಬಲನು ಯುದ್ಧದಲ್ಲಿ ಅವರನ್ನು ಎದುರಿಸಿದನು.

Leave a Reply

Your email address will not be published. Required fields are marked *