ಹದಿನೆಂಟನೆಯ ದಿನದ ಸಾಯಂಕಾಲ ದುರ್ಯೋಧನನ ವಧೆ
Contents
Toggleಪಾಂಡವರಿಗೆ ದುರ್ಯೋಧನನ ಕುರುಹು
ಮಹಾತ್ಮ ಕ್ಷತ್ರಿಯರ ಪತ್ನಿಯರು ಪಲಾಯನ ಮಾಡಿ ಶಿಬಿರವು ಶೂನ್ಯವಾಗಲು, ವಿಜಯಿ ಪಾಂಡುಪುತ್ರರ ಕೂಗನ್ನು ಕೇಳಿ, ಖಾಲಿಯಾದ ಶಿಬಿರವನ್ನು ನೋಡಿ ಆ ರಾತ್ರಿ ಅಲ್ಲಿ ಉಳಿಯಲು ಇಚ್ಛಿಸದೇ ಮಹಾರಥ ಕೃಪ-ಅಶ್ವತ್ಥಾಮ-ಕೃತವರ್ಮರು ತುಂಬಾ ಉದ್ವಿಗ್ನಗೊಂಡು ರಾಜನನ್ನು ನೋಡಬೇಕೆಂದು ಬಯಸಿ ಸರೋವರಕ್ಕೆ ಆಗಮಿಸಿದರು. ಹೃಷ್ಟನಾಗಿದ್ದ ಯುಧಿಷ್ಠಿರನಾದರೋ ದುರ್ಯೋಧನನನ್ನು ವಧಿಸಲು ಬಯಸಿ ಸಹೋದರರೊಂದಿಗೆ ಅವನನ್ನು ರಣದಲ್ಲಿ ಹುಡುಕಾಡಿದನು. ಸಂಕ್ರುದ್ಧರಾಗಿ ದುರ್ಯೋಧನನನ್ನು ಜಯಿಸಲು ಬಯಸಿದ್ದ ಅವರು ಎಷ್ಟೇ ಪ್ರಯತ್ನಪಟ್ಟು ಹುಡುಕಿದರೂ ಅವನನ್ನು ಕಾಣಲಿಲ್ಲ. ದುರ್ಯೋಧನನಾದರೋ ಗದಾಪಾಣಿಯಾಗಿ ತೀವ್ರ ವೇಗದಿಂದ ಆ ಸರೋವರಕ್ಕೆ ಹೋಗಿ ತನ್ನದೇ ಮಾಯೆಯಿಂದ ನೀರನ್ನು ಸ್ಥಂಭಿಸಿ ಪ್ರವೇಶಿಸಿದ್ದನು. ಅವರ ವಾಹನಗಳೂ ಅತ್ಯಂತ ಬಳಲಿರಲು ಪಾಂಡವರೆಲ್ಲರೂ ಸೈನಿಕರೊಂದಿಗೆ ತಮ್ಮ ಶಿಬಿರಗಳಿಗೆ ಹಿಂದಿರುಗಿದರು.
ಪಾರ್ಥರು ವಿಶ್ರಾಂತಿಪಡೆಯುತ್ತಿರಲಾಗಿ ಕೃಪ, ದ್ರೌಣಿ ಮತ್ತು ಸಾತ್ವತ ಕೃತಮರ್ವರು ಮೆಲ್ಲನೆ ಆ ಸರೋವರದ ಬಳಿ ಬಂದರು. ಜನಾಧಿಪನು ಮಲಗಿದ್ದ ಆ ಸರೋವರವನ್ನು ತಲುಪಿ ಅವರು ನೀರಿನಲ್ಲಿ ಮಲಗಿದ್ದ ದುರ್ಧರ್ಷ ರಾಜನನ್ನು ಸಂಬೋಧಿಸಿ ಹೀಗೆಂದರು: “ರಾಜನ್! ಕೂಡಲೇ ಮೇಲೇಳು! ನಮ್ಮೊಂದಿಗೆ ಸೇರಿ ಯುಧಿಷ್ಠಿರನೊಡನೆ ಯುದ್ಧಮಾಡು! ಗೆದ್ದರೆ ಪೃಥ್ವಿಯನ್ನು ಭೋಗಿಸುವೆ ಅಥವಾ ಹತನಾಗಿ ಸ್ವರ್ಗವನ್ನು ಪಡೆಯುವೆ! ದುರ್ಯೋಧನ! ಅವರ ಸೇನೆಯೆಲ್ಲವನ್ನೂ ನೀನು ಸಂಹರಿಸಿರುವೆ! ಅಳಿದುಳಿದಿರುವ ಸೈನಿಕರು ಕೂಡ ಬಳಲಿ ಬೆಂಡಾಗಿದ್ದಾರೆ. ನಮ್ಮ ರಕ್ಷಣೆಯಿರುವ ನಿನ್ನ ಶಕ್ತಿಯ ವೇಗವನ್ನು ತಡೆದುಕೊಳ್ಳಲು ಅವರು ಶಕ್ಯರಿಲ್ಲ. ಆದುದರಿಂದ ಮೇಲೇಳು!”
ದುರ್ಯೋಧನನು ಹೇಳಿದನು:
“ಒಳ್ಳೆಯದಾಯಿತು ಈ ರೀತಿಯ ಪುರುಷಕ್ಷಯಕಾರೀ ಪಾಂಡವ-ಕೌರವರ ಮಹಾಸಂಗ್ರಾಮದಿಂದ ಜೀವನ್ಮುಕ್ತರಾಗಿರುವ ನಿಮ್ಮನ್ನು ನಾನು ನೋಡುತ್ತಿದ್ದೇನೆ. ವಿಶ್ರಾಂತಿಪಡೆದು ಬಳಲಿಕೆಯನ್ನು ಕಳೆದುಕೊಂಡ ನಂತರ ನಾವೆಲ್ಲರೂ ಅವರನ್ನು ಜಯಿಸೋಣ. ನೀವೂ ಕೂಡ ಬಳಲಿದ್ದೀರಿ. ನಾನೂ ಕೂಡ ತುಂಬಾ ಗಾಯಗೊಂಡಿದ್ದೇನೆ. ಇನ್ನೂ ಅಪಾರ ಸೇನೆಯಿರುವ ಅವರೊಂದಿಗೆ ಈಗ ಯುದ್ಧಮಾಡುವುದು ಸೂಕ್ತವೆಂದು ನನಗನ್ನಿಸುತ್ತಿಲ್ಲ. ಇದು ಮಹಾ ವೀರತನವೆಂದು ನನ್ನ ಮನಸ್ಸಿಗೆ ಅನಿಸುತ್ತಿಲ್ಲ. ನನ್ನ ಮೇಲಿನ ಅಪಾರ ಭಕ್ತಿಯ ಹೊರತಾಗಿ ಇದು ಪರಾಕ್ರಮಕ್ಕೆ ಸಮಯವೆಂದು ಕಾಣುತ್ತಿಲ್ಲ. ಇಂದು ಒಂದು ರಾತ್ರಿ ವಿಶ್ರಮಿಸಿಕೊಂಡ ನಂತರ ನಾಳೆ ನಿಮ್ಮೊಂದಿಗೆ ರಣದಲ್ಲಿ ನಾನು ಶತ್ರುಗಳನ್ನು ಎದುರಿಸಿ ಹೋರಾಡುತ್ತೇನೆ. ಇದರಲ್ಲಿ ಸಂಶಯವೇ ಇಲ್ಲ!”
ಹೀಗೆ ಹೇಳಲು ದ್ರೌಣಿಯು ರಾಜನನ್ನು ಕುರಿತು ಹೇಳಿದನು:
“ರಾಜನ್! ಎದ್ದೇಳು! ನಿನಗೆ ಮಂಗಳವಾಗಲಿ! ರಣದಲ್ಲಿ ಶತ್ರುಗಳನ್ನು ಜಯಿಸೋಣ! ಪೂರೈಸಿರುವ ಇಷ್ಟಿ-ದಾನಗಳ, ಸತ್ಯ-ಜಪಗಳ ಮೇಲೆ ಆಣೆಯಿಟ್ಟು ಹೇಳುತ್ತೇನೆ. ಇಂದು ನಾನು ಸೋಮಕರನ್ನು ನಾಶಗೊಳಿಸುತ್ತೇನೆ! ಈ ರಾತ್ರಿ ಕಳೆಯುವುದರೊಳಗೆ ಒಂದುವೇಳೆ ನಾನು ರಣದಲ್ಲಿ ಶತ್ರುಗಳನ್ನು ಸಂಹರಿಸದೇ ಇದ್ದರೆ ಯಜ್ಞಗಳನ್ನು ಮಾಡಿದ ಸಜ್ಜನರಿಗೆ ಉಚಿತವಾದ ಪ್ರಸನ್ನತೆಯನ್ನು ನಾನು ಹೊಂದದಂತಾಗಲಿ! ಸರ್ವಪಾಂಚಾಲರನ್ನೂ ಸಂಹರಿಸದೇ ನಾನು ಕವಚವನ್ನು ಬಿಚ್ಚುವುದಿಲ್ಲ. ನಿನಗೆ ಹೇಳುತ್ತಿರುವ ಈ ನನ್ನ ಮಾತು ಸತ್ಯ!”
ಅವರು ಹೀಗೆ ಮಾತನಾಡಿಕೊಳ್ಳುತ್ತಿರಲು ಮಾಂಸದ ಭಾರವನ್ನು ಹೊತ್ತು ಪರಿಶ್ರಾಂತರಾಗಿದ್ದ ಕೆಲವು ವ್ಯಾಧರು ನೀರನ್ನು ಕುಡಿಯಲೋಸುಗ ಆ ಪ್ರದೇಶಕ್ಕೆ ಆಗಮಿಸಿದರು. ಆಸೆಬುರುಕರಾದ ಅವರು ನಿತ್ಯವೂ ಪರಮ ಭಕ್ತಿಯಿಂದ ಭೀಮಸೇನನಿಗೆ ಮಾಂಸವನ್ನು ಹೊತ್ತುಕೊಂಡು ಹೋಗಿ ಕೊಡುತ್ತಿದ್ದರು. ಅಲ್ಲಿ ಅವರು ಒಟ್ಟಾಗಿ ಅಡಗಿನಿಂತು ರಹಸ್ಯದಲ್ಲಿ ಅವರಾಡಿದ ಎಲ್ಲ ಮಾತುಗಳನ್ನೂ, ದುರ್ಯೋಧನನ ಮಾತನ್ನೂ ಕೇಳಿಸಿಕೊಂಡರು. ಯುದ್ಧಾಕಾಂಕ್ಷಿಗಳಾಗಿದ್ದ ಆ ಎಲ್ಲ ಮಹೇಷ್ವಾಸರೂ ಯುದ್ಧಮಾಡಲು ಬಯಸಿರದಿದ್ದ ಕೌರವನಿಗೆ ಪರಮ ನಿರ್ಬಂಧಗೆಳನ್ನು ಹಾಕುತ್ತಿದ್ದರು. ಆಗ ಅವರು ಕೌರವರನ್ನೂ, ಯುದ್ಧಮಾಡಲು ಮನಸ್ಸಿಲ್ಲದ ರಾಜನು ನೀರಿನಲ್ಲಿ ಕುಳಿತುಕೊಂಡಿರುವುದನ್ನೂ ನೋಡಿದರು. ಅವರ ಮತ್ತು ನೀರಿನಲ್ಲಿದ್ದುಕೊಂಡು ಮಾತನಾಡುತ್ತಿದ್ದ ರಾಜನ ಸಂಭಾಷಣೆಯನ್ನು ಕೇಳಿ ವ್ಯಾಧರು ಸುಯೋಧನನು ನೀರಿನಲ್ಲಿ ಮುಳುಗಿಕೊಂಡಿದ್ದಾನೆಂದು ತಿಳಿದುಕೊಂಡರು.
ಇದಕ್ಕೆ ಮೊದಲು ದುರ್ಯೋಧನನನ್ನು ಹುಡುಕಿಕೊಂಡು ಬರುತ್ತಿರುವ ಪಾಂಡುಪುತ್ರರಿಗೆ ದಾರಿಯಲ್ಲಿ ಇವರು ಸಿಕ್ಕಿದ್ದರು. ಆ ಮೃಗವ್ಯಾಧರು ಪಾಂಡುಪುತ್ರನು ಆಗ ಆಡಿದ ಮಾತನ್ನು ಸ್ಮರಿಸಿಕೊಂಡು ಅನ್ಯೋನ್ಯರೊಡನೆ ಮೆಲ್ಲನೆ ಹೀಗೆ ಮಾತನಾಡಿಕೊಂಡರು:
“ದುರ್ಯೋಧನನ ಕುರುಹನ್ನು ನೀಡೋಣ! ಪಾಂಡವನು ನಮಗೆ ಧನವನ್ನು ನೀಡುತ್ತಾನೆ. ಸರೋವರದಲ್ಲಿ ನೃಪ ದುರ್ಯೋಧನನಿರುವನೆಂದು ನಮಗೆ ಸ್ಪಷ್ಟವಾಗಿ ತಿಳಿದುಹೋಯಿತು. ಆದುದರಿಂದ ನಾವೆಲ್ಲರೂ ರಾಜಾ ಯುಧಿಷ್ಠಿರನಿರುವಲ್ಲಿಗೆ ಹೋಗಿ ನೀರಿನಲ್ಲಿ ಮಲಗಿರುವ ದುರ್ಯೋಧನನ ಕುರಿತು ಹೇಳೋಣ! ಭೀಮಸೇನನಿಗೆ ಧೃತರಾಷ್ಟ್ರನ ಮಗನು ನೀರಿನಲ್ಲಿ ಮಲಗಿರುವುದೆಲ್ಲವನ್ನೂ ಹೇಳೋಣ! ಸುಪ್ರೀತನಾಗಿ ಅವನು ನಮಗೆ ಹೇಳಿದಂತೆ ಬಹಳ ಧನವನ್ನು ನೀಡುತ್ತಾನೆ. ಕಷ್ಟದಿಂದ ನಮ್ಮನ್ನೇ ಶೋಷಿಸುವ ಈ ಶುಷ್ಕ ಮಾಂಸದಿಂದ ನಮಗೇನಾಗಬೇಕಾಗಿದೆ?”
ಹೀಗೆ ಮಾತನಾಡಿಕೊಂಡು ಸಂತೋಷಗೊಂಡ ಆ ಧನಾರ್ಥಿ ವ್ಯಾಧರು ಮಾಂಸದ ಹೊರೆಯನ್ನು ಹೊತ್ತುಕೊಂಡು ಶಿಬಿರದ ಕಡೆ ನಡೆದರು. ಪ್ರಹಾರಿ-ಲಬ್ಧಲಕ್ಷ ಪಾಂಡವರಾದರೋ ಸಮರದಲ್ಲಿ ದುರ್ಯೋಧನನ ಕುರುಹನ್ನು ಕಾಣದೇ ಆ ಪಾಪಿಯ ಮೋಸದಿಂದ ಪಾರಾಗಬೇಕೆಂದು ಬಯಸಿ, ರಣಾಂಗಣದ ಎಲ್ಲ ಕಡೆಗಳಲ್ಲಿ ಚಾರರನ್ನು ಕಳುಹಿಸಿದ್ದರು. ಧರ್ಮರಾಜನ ಸೈನಿಕರೆಲ್ಲರೂ ಒಟ್ಟಾಗಿ ಬಂದು ದುರ್ಯೋಧನನು ಯಾರಿಗೂ ಕಾಣಲಿಲ್ಲವೆಂದು ನಿವೇದಿಸಿದರು. ಚಾರರ ಆ ಮಾತನ್ನು ಕೇಳಿ ಯುಧಿಷ್ಠಿರನು ತೀವ್ರ ಚಿಂತಾಮಗ್ನನಾಗಿ ನಿಟ್ಟುಸಿರು ಬಿಟ್ಟನು. ಹಾಗೆ ಪಾಂಡವರು ದೀನರಾಗಿ ಕುಳಿತುಕೊಂಡಿರುವ ಸ್ಥಳಕ್ಕೆ ಆ ಆಸೆಬುರುಕ ಬೇಟೆಗಾರರು ತ್ವರೆಮಾಡಿ ಆಗಮಿಸಿದರು. ನೃಪ ದುರ್ಯೋಧನನ್ನು ನೋಡಿ ಹರ್ಷಗೊಂಡಿದ್ದ ಅವರು ಶಿಬಿರಕ್ಕೆ ಬಂದು ತಡೆಯಲ್ಪಟ್ಟರೂ ಭೀಮಸೇನನನ್ನು ನೋಡಿ ಒಳನುಗ್ಗಿದರು. ಅವರು ಭೀಮಸೇನನ ಬಳಿಸಾರಿ ಅವನಿಗೆ ಅಲ್ಲಿ ನಡೆದ ಮತ್ತು ಕೇಳಿದುದೆಲ್ಲವನ್ನೂ ವರದಿಮಾಡಿದರು. ಆಗ ವೃಕೋದರನು ಅವರಿಗೆ ಬಹಳ ಧನವನ್ನಿತ್ತು ಅವೆಲ್ಲವನ್ನೂ ಧರ್ಮರಾಜನಿಗೆ ತಿಳಿಸಿದನು.
“ರಾಜನ್! ನನ್ನ ಬೇಟೆಗಾರರು ದುರ್ಯೋಧನ ಕುರುಹನ್ನು ತಿಳಿದಿದ್ದಾರೆ. ಯಾರಿಗಾಗಿ ಪರಿತಪಿಸುತ್ತಿರುವೆಯೋ ಅವನು ಸರೋವರವನ್ನು ಸ್ತಂಭನಗೊಳಿಸಿ ನೀರಿನಲ್ಲಿ ಮಲಗಿದ್ದಾನೆ!”
ಭೀಮಸೇನನ ಆ ಪ್ರಿಯ ಮಾತನ್ನು ಕೇಳಿದ ಯುಧಿಷ್ಠಿರನು ಸಹೋದರರೊಂದಿಗೆ ಹರ್ಷಿತನಾದನು. ಆ ಮಹೇಷ್ವಾಸನು ಸರೋವರದ ನೀರನ್ನು ಪ್ರವೇಶಿಸಿದ್ದಾನೆಂದು ಕೇಳಿ ಅವನು ಕ್ಷಿಪ್ರದಲ್ಲಿಯೇ ಜನಾರ್ದನನನ್ನು ಮುಂದಿರಿಸಿಕೊಂಡು ಅಲ್ಲಿಗೆ ಧಾವಿಸಿದನು. ಆಗ ಪ್ರಹೃಷ್ಟ ಪಾಂಡವ-ಪಾಂಚಾಲರ ಕಿಲಕಿಲಾ ಶಬ್ಧವು ಎಲ್ಲೆಡೆ ಕೇಳಿಬಂದಿತು. ಸಿಂಹನಾದ ಗೈಯುತ್ತಾ ಗರ್ಜಿಸುತ್ತಾ ತ್ವರೆಮಾಡಿ ಆ ಕ್ಷತ್ರಿಯರು ದ್ವೈಪಾಯನ ಸರೋವರಕ್ಕೆ ಹೊರಟರು. “ಪಾಪಿ ಧಾರ್ತರಾಷ್ಟ್ರನ ಕುರುಹು ಸಿಕ್ಕಿಬಿಟ್ಟಿತು! ಅವನನ್ನು ರಣದಲ್ಲಿ ಕಂಡುಬಿಟ್ಟೆವು!” ಎಂದು ಹೃಷ್ಟರೂಪ ಸೋಮಕರು ಎಲ್ಲಕಡೆ ಕೂಗಿಕೊಳ್ಳುತ್ತಿದ್ದರು. ಅಲ್ಲಿ ವೇಗದಿಂದ ಹೋಗುತ್ತಿರುವ ಅವರ ರಥಗಳ ತುಮುಲ ಶಬ್ಧವು ಆಕಾಶವನ್ನೂ ತಲುಪಿತು. ದುರ್ಯೋಧನನನ್ನು ಹುಡುಕುತ್ತಾ, ವಾಹನಗಳು ಬಳಲಿದ್ದರೂ, ಅರ್ಜುನ-ಭೀಮಸೇನ-ಮಾದ್ರೀಪುತ್ರ ಪಾಂಡವರಿಬ್ಬರು- ಪಾಂಚಾಲ್ಯ ಧೃಷ್ಟದ್ಯುಮ್ನ-ಅಪರಾಜಿತ ಶಿಖಂಡೀ-ಉತ್ತಮೌಜ-ಯುಧಾಮನ್ಯು-ಅಪರಾಜಿಜ ಸಾತ್ಯಕಿ-ಉಳಿದ ಪಾಂಚಾಲರು-ದ್ರೌಪದೇಯರು-ಎಲ್ಲ ಕುದುರೆಗಳು-ಆನೆಗಳು ಮತ್ತು ನೂರಾರು ಪದಾತಿಗಳು ತ್ವರೆಮಾಡಿ ರಾಜಾ ಯುಧಿಷ್ಠಿರನನ್ನು ಹಿಂಬಾಲಿಸಿಕೊಂಡು ಹೋದರು. ಅನಂತರ ಧರ್ಮಪುತ್ರ ಯುಧಿಷ್ಠಿರನು ಎಲ್ಲಿ ದುರ್ಯೋಧನನಿರುವನೆಂದು ಹೇಳಿದ್ದರೋ ಆ ದ್ವೈಪಾಯನ ಸರೋವರವನ್ನು ತಲುಪಿದನು.
ಶುದ್ಧ ಶೀತಲ ನೀರಿನಿಂದ ಕೂಡಿದ್ದು ಎರಡನೆಯ ಸಮುದ್ರವೋ ಎಂಬಂತೆ ತೋರುತ್ತಿದ್ದ ಆ ಸರೋವರದಲ್ಲಿ ಮಾಯೆಯಿಂದ ನೀರನ್ನು ಸ್ತಬ್ಧಗೊಳಿಸಿ ದುರ್ಯೋಧನನು ಕುಳಿತಿದ್ದನು. ಅತ್ಯದ್ಭುತ ವಿಧಿಯಲ್ಲಿ, ದೈವಯೋಗದಿಂದ ನೀರಿನಲ್ಲಿ ಅಂತರ್ಗತನಾಗಿ ಮಲಗಿದ್ದ ಆ ಗದಾಪಾಣಿಯು ಯಾವ ಮನುಷ್ಯನಿಗೂ ಕಾಣಿಸುತ್ತಿರಲಿಲ್ಲ. ನೀರಿನಲ್ಲಿ ಅಂತರ್ಗತನಾಗಿ ಮಲಗಿದ್ದ ರಾಜಾ ದುರ್ಯೋಧನನು ಮೇಘಗಳ ಗುಡುಗಿನಂತಹ ತುಮುಲ ಶಬ್ಧವನ್ನು ಕೇಳಿದನು. ಯುಧಿಷ್ಠಿರನಾದರೋ ಸೋದರರೊಂದಿಗೆ ಮಹಾ ಶಂಖನಾದಗಳು ಮತ್ತು ರಥಚಕ್ರದ ಸದ್ದಿನೊಂದಿಗೆ ಮಹಾ ಧೂಳಿನ ರಾಶಿಯನ್ನೆಬ್ಬಿಸಿ ಮೇದಿನಿಯನ್ನು ನಡುಗಿಸುತ್ತಾ ದುರ್ಯೋಧನನ ವಧೆಗಾಗಿ ಆ ಸರೋವರಕ್ಕೆ ಆಗಮಿಸಿದನು. ಯುಧಿಷ್ಠಿರನ ಸೈನ್ಯದ ಶಬ್ಧವನ್ನು ಕೇಳಿದ ಕೃತವರ್ಮ, ಕೃಪ, ದ್ರೌಣಿಯರು ದುರ್ಯೋಧನನಿಗೆ ಹೇಳಿದರು:
“ವಿಜಯೋಲಾಸಿತ ಪಾಂಡವರು ಇಲ್ಲಿಗೇ ಬರುತ್ತಿದ್ದಾರೆ. ನಾವು ಇಲ್ಲಿಂದ ಹೊರಟುಹೋಗುತ್ತೇವೆ. ಅನುಮತಿಯನ್ನು ನೀಡು!”
ಆ ಯಶಸ್ವಿಗಳನ್ನು ಕೇಳಿದ ದುರ್ಯೋಧನನಾದರೋ ಹಾಗೆಯೇ ಆಗಲೆಂದು ಹೇಳಿ ಮಾಯೆಯಿಂದ ಪುನಃ ಸರೋವರವನ್ನು ಸ್ತಂಭಿಸಿದನು. ರಾಜನ ಅನುಜ್ಞೆಯನ್ನು ಪಡೆದು ತುಂಬಾ ಶೋಕಪರಾಯಣರಾಗಿದ್ದ ಕೃಪನೇ ಮೊದಲಾದ ಮಹಾರಥರು ದೂರ ಹೊರಟುಹೋದರು. ದೂರ ಹೋಗಿ ಆಯಾಸಗೊಂಡಿದ್ದ ಅವರು ಅಲ್ಲೊಂದು ಆಲದ ಮರವನ್ನು ನೋಡಿ ಅದರಡಿಯಲ್ಲಿ ನೃಪನ ಕುರಿತೇ ಚಿಂತಿಸುತ್ತಾ ವಿಶ್ರಾಂತಿಪಡೆದರು.
“ಮಹಾಬಲ ಧಾರ್ತರಾಷ್ಟ್ರನು ನೀರನ್ನು ಸ್ತಂಭನಗೊಳಿಸಿ ಮಲಗಿದ್ದಾನೆ. ಯುದ್ಧವನ್ನು ಬಯಸಿರುವ ಪಾಂಡವರಾದರೋ ಆ ಪ್ರದೇಶಕ್ಕೆ ಬಂದುಬಿಟ್ಟಿದ್ದಾರೆ. ಯುದ್ಧವು ಹೇಗೆ ನಡೆದೀತು? ರಾಜನು ಏನಾಗುತ್ತಾನೆ? ಪಾಂಡವ ರಾಜನು ಕೌರವನನ್ನು ಹೇಗೆ ಮೇಲೆಬ್ಬಿಸುತ್ತಾನೆ?”
ಹೀಗೆಯೇ ಚಿಂತಿಸುತ್ತಾ ಕೃಪನೇ ಮೊದಲಾದ ಆ ಮಹಾರಥರು ಕುದುರೆಗಳನ್ನು ರಥಗಳಿಂದ ಬಿಚ್ಚಿ ಅಲ್ಲಿಯೇ ಕುಳಿತು ವಿಶ್ರಾಂತಿ ಪಡೆದರು.
ಸುಯೋಧನ-ಯುಧಿಷ್ಠಿರ ಸಂವಾದ
ಆ ಮೂವರು ಮಹಾರಥರೂ ಹೊರಟುಹೋದನಂತರ ದುರ್ಯೋಧನನಿದ್ದ ಆ ಸರೋವರಕ್ಕೆ ಪಾಂಡವರು ತಲುಪಿದರು. ದ್ವೈಪಾಯನ ಸರೋವರವನ್ನು ತಲುಪಿ ಧಾರ್ತರಾಷ್ಟ್ರನು ಆ ಜಲಾರಾಶಿಯನ್ನು ಸ್ತಂಭನಗೊಳಿಸಿರುವುದನ್ನು ಕಂಡು ಯುಧಿಷ್ಠಿರನು ವಾಸುದೇವನಿಗೆ ಈ ಮಾತನ್ನಾಡಿದನು:
“ಧಾರ್ತರಾಷ್ಟ್ರನು ತನ್ನ ಮಾಯೆಯನ್ನು ನೀರಿನ ಮೇಲೆ ಪ್ರಯೋಗಿಸಿದುದನ್ನು ನೋಡು! ನೀರನ್ನು ಗಟ್ಟಿಯಾಗಿಸಿ ಮನುಷ್ಯರ ಭಯವಿಲ್ಲದೇ ಇಲ್ಲಿ ಮಲಗಿದ್ದಾನೆ! ದೈವೀ ಮಾಯೆಯನ್ನುಪಯೋಗಿಸಿ ನೀರಿನೊಳಗಿದ್ದಾನೆ. ಮೋಸಗಳನ್ನು ಚೆನ್ನಾಗಿ ತಿಳಿದುಕೊಂಡಿರುವ ಇವನು ಮೋಸವನ್ನು ಬಳಸಿದರೂ ನನ್ನಿಂದ ಜೀವಂತವಾಗಿ ಉಳಿಯುವುದಿಲ್ಲ! ಮಾಧವ! ಒಂದುವೇಳೆ ಸಮರದಲ್ಲಿ ಸ್ವಯಂ ವಜ್ರಧಾರಿ ಇಂದ್ರನೇ ಇವನ ಸಹಾಯಕ್ಕೆ ಬಂದರೂ ಯುದ್ಧದಲ್ಲಿ ಇವನು ಹತನಾಗುವುದನ್ನು ಲೋಕವು ನೋಡುತ್ತದೆ!”
ಕೃಷ್ಣನು ಹೇಳಿದನು:
“ಭಾರತ! ಮಾಯಾವಿಯಾದ ಇವನ ಮಾಯೆಯನ್ನು ಮಾಯೆಯಿಂದಲೇ ನಾಶಗೊಳಿಸು. ಯುಧಿಷ್ಠಿರ! ಮಾಯಾವಿಯನ್ನು ಮಾಯೆಯಿಂದಲೇ ವಧಿಸಬೇಕು. ಇದು ಸತ್ಯ! ಉಪಾಯಗಳಿಂದ ಮತ್ತು ಕ್ರಿಯೆಗಳಿಂದ ಪಾಪಾತ್ಮ ಸುಯೋಧನನನ್ನು ಸಂಹರಿಸು! ಮಾಯೆಯನ್ನು ಪ್ರಯೋಗಿಸಿರುವ ನಿದರ್ಶನಗಳು ಅನೇಕವಿವೆ. ಉಪಾಯಯುಕ್ತ ಕ್ರಿಯೆಗಳಿಂದಲೇ ಇಂದ್ರನು ದೈತ್ಯ-ದಾನವರನ್ನು ಸಂಹರಿಸಿದನು. ಅನೇಕ ಉಪಾಯಯುಕ್ತ ಕ್ರಿಯೆಗಳಿಂದಲೇ ಮಹಾತ್ಮ ವಾಮನನು ಬಲಿಯನ್ನು ಬಂಧಿಸಿದನು. ಉಪಾಯಯುಕ್ತ ಕ್ರಿಯೆಗಳಿಂದಲೇ ಹಿಂದೆ ಮಹಾಸುರ ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪುಗಳು ವಧಿಸಲ್ಪಟ್ಟರು. ಇಂತಹ ಕ್ರಿಯೆಗಳಿಂದಲೇ ವೃತ್ರನೂ ಹತನಾದನು ಎನ್ನುವುದರಲ್ಲಿ ಸಂಶಯವೇ ಇಲ್ಲ. ಪೌಲಸ್ತ್ಯ ತನಯ ರಾವಣನೆಂಬ ಹೆಸರಿನ ರಾಕ್ಷಸನೂ ಕೂಡ ಬಾಂಧವ-ಅನುಯಾಯಿಗಳೊಂದಿಗೆ ರಾಮನಿಂದ ಹತನಾದನು. ಹಾಗೆಯೇ ನೀನೂ ಕೂಡ ಯೋಗ ಮತ್ತು ಕ್ರಿಯೆಗಳನ್ನು ಉಪಯೋಗಿಸಿ ನಿನ್ನ ವಿಕ್ರಮವನ್ನು ತೋರಿಸು! ಉಪಾಯಯುಕ್ತ ಕ್ರಿಯೆಗಳಿಂದಲೇ ನಾನು ಹಿಂದೆ ಮಹಾದೈತ್ಯ ತಾರಕನನ್ನೂ ವೀರ್ಯವಾನ್ ವಿಪ್ರಚಿತ್ತಿಯನ್ನೂ ಸಂಹರಿಸಿದ್ದೆ. ಹಾಗೆಯೇ ವಾತಾಪಿ-ಇಲ್ವಲರೂ, ತ್ರಿಶಿರನೂ ಮತ್ತು ಅಸುರ ಸುಂದೋಪಸುಂದರೂ ಕ್ರಿಯೆಯಿಂದಲೇ ವಧಿಸಲ್ಪಟ್ಟರು. ಉಪಾಯಯುಕ್ತ ಕ್ರಿಯೆಗಳಿಂದಲೇ ಇಂದ್ರನು ತ್ರಿದಿವವನ್ನು ಭೋಗಿಸುತ್ತಿದ್ದಾನೆ. ಕ್ರಿಯೆಗಿಂತಲೂ ಬಲವಾದುದು ಬೇರೆ ಯಾವುದೂ ಇಲ್ಲ. ದೈತ್ಯ-ದಾನವ-ರಾಕ್ಷಸರೂ ಮತ್ತು ಪಾರ್ಥಿವರೂ ಉಪಾಯಯುಕ್ತಕ್ರಿಯೆಗಳಿಂದಲೇ ಹತರಾದರು. ಆದುದರಿಂದ ನೀನೂ ಕೂಡ ಅಂತಹ ಕ್ರಿಯೆಗಳನ್ನು ಬಳಸು!”
ವಾಸುದೇವನು ಹೀಗೆ ಹೇಳಲು ಯುಧಿಷ್ಠಿರನು ನಗುತ್ತಾ ಜಲಸ್ಥನಾಗಿದ್ದ ಧೃತರಾಷ್ಟ್ರನ ಮಹಾಬಲ ಪುತ್ರನನ್ನು ಉದ್ದೇಶಿಸಿ ಹೇಳಿದನು:
“ಸುಯೋಧನ! ಎಲ್ಲ ಕ್ಷತ್ರಿಯರನ್ನೂ, ನಿನ್ನ ಕುಲವನ್ನೂ ನಾಶಗೊಳಿಸಿ ಈಗ ಯಾವ ಕಾರಣಕ್ಕಾಗಿ ನೀರಿನಲ್ಲಿ ಈ ಅನುಷ್ಟಾನವನ್ನು ಪ್ರಾರಂಭಿಸಿರುವೆ? ಜಲಾಶಯವನ್ನು ಪ್ರವೇಶಿಸಿ ನಿನ್ನ ಜೀವವನ್ನುಳಿಸಿಕೊಳ್ಳಲು ಇಚ್ಛಿಸಿರುವೆಯಾ? ಮೇಲೇಳು! ನಮ್ಮೊಡನೆ ಯುದ್ಧಮಾಡು! ಭೀತನಾಗಿ ಜಲವನ್ನು ಸ್ತಂಭನಗೊಳಿಸಿ ಕುಳಿತುಕೊಂಡಿರುವೆಯಲ್ಲಾ! ನಿನ್ನ ಆ ದರ್ಪ-ಅಭಿಮಾನಗಳು ಎಲ್ಲಿ ಹೋದವು? ಸಭೆಗಳಲ್ಲಿ ಜನರೆಲ್ಲರೂ ನಿನ್ನನ್ನು ಶೂರನೆಂದು ಹೊಗಳುತ್ತಿದ್ದರು. ನೀರಿನಲ್ಲಿ ಮಲಗಿ ನಿನ್ನ ಆ ಶೌರ್ಯವು ವ್ಯರ್ಥವಾಯಿತೆಂದೇ ಭಾವಿಸುತ್ತೇನೆ. ಎದ್ದೇಳು! ಯುದ್ಧಮಾಡು! ಕ್ಷತ್ರಿಯನಾಗಿರುವೆ. ಕುಲೋದ್ಭವನಾಗಿರುವೆ! ವಿಶೇಷವಾಗಿ ಕೌರವೇಯನಾಗಿರುವೆ. ಉತ್ತಮ ಕುಲದಲ್ಲಿ ಜನಿಸಿರುವುದನ್ನು ಸ್ಮರಿಸಿಕೋ! ಕೌರವ ವಂಶದಲ್ಲಿ ಜನ್ಮತಾಳಿದುದಕ್ಕೆ ಪ್ರಶಂಸೆಮಾಡಿಸಿ ಕೊಳ್ಳುತ್ತಿದ್ದ ನೀನು ಹೇಗೆ ತಾನೇ ಈಗ ಯುದ್ಧಕ್ಕೆ ಹೆದರಿ ನೀರನ್ನು ಪ್ರವೇಶಿಸಿ ಕುಳಿತುಕೊಂಡಿರುವೆ? ಯುದ್ಧಮಾಡದಿರುವುದೂ, ಯುದ್ಧದಲ್ಲಿ ನಿಲ್ಲದೇ ಓಡಿಹೋಗುವುದೂ ಸನಾತನ ಧರ್ಮವಲ್ಲ. ರಣದಿಂದ ಪಲಾಯನಗೈಯುವ ಅನಾರ್ಯ ಕಾರ್ಯವು ಸ್ವರ್ಗವನ್ನು ನೀಡಲಾರದು! ಯುದ್ಧವು ಇನ್ನೂ ಮುಗಿಯುವುದರೊಳಗೇ ನೀನು ಹೇಗೆ ತಾನೇ ಜೀವಿಸಲು ಇಚ್ಛಿಸುವೆ? ಪುತ್ರರು-ಸಹೋದರರು-ಪಿತೃಗಳು- ಹಾಗೆಯೇ ಸಂಬಂಧಿಗಳು-ಸ್ನೇಹಿತರು-ಸೋದರ ಮಾವಂದಿರು ಮತ್ತು ಬಾಂಧವರು ಹೀಗೆ ವಧಿಸಲ್ಪಟ್ಟು ಕೆಳಗುರುಳಿರುವಾಗ ನೀನು ಹೇಗೆ ತಾನೇ ಸರೋವರದಲ್ಲಿ ಅಡಗಿಕೊಂಡಿರುವೆ? ಶೂರನೆಂದು ತಿಳಿದುಕೊಂಡಿರುವ ನೀನು ಶೂರನಲ್ಲ! ದುರ್ಬುದ್ಧೇ! ನಾನು ಶೂರನೆಂದು ಸರ್ವಲೋಕಕ್ಕೆ ಸುಳ್ಳುಹೇಳಿಕೊಂಡು ಬಂದಿರುವೆ. ಶೂರರು ಎಂದೂ ಶತ್ರುಗಳನ್ನು ನೋಡಿ ಪಲಾಯನಮಾಡುವುದಿಲ್ಲ.
ನಿಜವಾಗಿ ಹೇಳು. ನೀನು ಏಕೆ ಯುದ್ಧವನ್ನು ತ್ಯಜಿಸಿ ಇಲ್ಲಿಗೆ ಬಂದಿರುವೆ? ನಿನ್ನಲ್ಲಿರುವ ಭಯವನ್ನು ತೊರೆದು ಎದ್ದೇಳು! ಯುದ್ಧಮಾಡು! ಸುಯೋಧನ! ಸರ್ವ ಸೈನ್ಯವನ್ನೂ, ಸೋದರರನ್ನೂ ಸಾಯಗೊಟ್ಟು ಧರ್ಮಾಚರಣೆಯನ್ನು ಬಯಸಿ ಜೀವವನ್ನುಳಿಸಿಕೊಳ್ಳುವ ಬುದ್ಧಿ-ಕಾರ್ಯಗಳನ್ನೆಸಗುವುದು ಕ್ಷತ್ರಧರ್ಮವನ್ನುಸರಿಸಿದ ನಿನ್ನಂಥವನಿಗೆ ಸರಿಯಲ್ಲ! ಕರ್ಣ ಮತ್ತು ಶಕುನಿಯರನ್ನು ಆಶ್ರಯಿಸಿ ಮೋಹಪರವಶನಾಗಿ ನಾನೂ ಕೂಡ ಮರಣಧರ್ಮವಿರುವವನು ಎಂದು ನೀನು ತಿಳಿದುಕೊಂಡಿರಲೇ ಇಲ್ಲ. ಮಹಾಪಾಪವನ್ನು ಮಾಡಿರುವ ನೀನು ಪ್ರತಿಯಾಗಿ ಯುದ್ಧಮಾಡು! ಮೋಹದಿಂದ ಪಲಾಯನಮಾಡುವುದನ್ನು ನಿನ್ನಂಥವನು ಹೇಗೆ ತಾನೇ ಬಯಸುತ್ತಾನೆ? ನಿನ್ನ ಆ ಪೌರುಷವೆಲ್ಲಿ ಹೋಯಿತು? ಮಾನವೆಲ್ಲಿ ಹೋಯಿತು? ಆ ನಿನ್ನ ವಿಕ್ರಾಂತವೆಲ್ಲಿ ಹೋಯಿತು? ನಿನ್ನ ಆ ಮಹಾ ಗರ್ಜನೆಯು ಎಲ್ಲಿ ಅಡಗಿತು? ನಿನ್ನ ಅಸ್ತ್ರವಿದ್ಯೆಯು ಎಲ್ಲಿ ಹೋಯಿತು? ಜಲಾಶಯದಲ್ಲೇಕೆ ಮಲಗಿರುವೆ? ಮೇಲೆದ್ದು ಕ್ಷತ್ರಧರ್ಮದಂತೆ ಯುದ್ಧಮಾಡು! ನೀನು ನಮ್ಮನ್ನು ಪರಾಜಯಗೊಳಿಸಿ ಈ ಪೃಥ್ವಿಯನ್ನು ಆಳು. ಅಥವಾ ನಮ್ಮಿಂದ ಹತನಾಗಿ ನೆಲದ ಮೇಲೆ ಮಲಗು! ಇದೇ ಮಹಾತ್ಮ ಧಾತ್ರನು ಸೃಷ್ಟಿಸಿರುವ ನಿನ್ನ ಪ್ರಥಮ ಧರ್ಮ! ಅದನ್ನು ಹಾಗೆಯೇ ಮಾಡಿ ರಾಜನಾಗು!”
ಆಗ ಸರೋವರದ ಒಳಗಿನಿಂದಲೇ ದುರ್ಯೋಧನನು ಹೇಳಿದನು:
“ಮಹಾರಾಜ! ಪ್ರಾಣಿಗಳನ್ನು ಭಯವು ಆವರಿಸುತ್ತದೆ ಎನ್ನುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ನಾನು ಮಾತ್ರ ಪ್ರಾಣಭಯದಿಂದ ಭೀತನಾಗಿ ಇಲ್ಲಿಗೆ ಬಂದಿಲ್ಲ! ರಥಹೀನನಾಗಿದ್ದೆ. ಬತ್ತಳಿಕೆಯೂ ಇರಲಿಲ್ಲ. ಪಾರ್ಷ್ಣಿಸಾರಥಿಗಳು ಹತರಾಗಿದ್ದರು. ಸೇನೆಗಳಿಲ್ಲದೇ ಏಕಾಂಗಿಯಾಗಿದ್ದೆನು. ಆಗ ಸ್ವಲ್ಪಹೊತ್ತು ವಿಶ್ರಾಂತಿ ಪಡೆಯಲು ರಣದಿಂದ ಇಲ್ಲಿಗೆ ಬಂದಿದ್ದೇನೆ. ಪ್ರಾಣಕ್ಕಾಗಿಯಾಗಲೀ, ಭಯದಿಂದಾಗಲೀ, ವಿಷಾದದಿಂದಾಗಲೀ ನಾನು ಈ ನೀರನ್ನು ಪ್ರವೇಶಿಸಿಲ್ಲ! ಆಯಾಸಪರಿಹಾರಮಾಡಿಕೊಳ್ಳಲು ಇಲ್ಲಿ ಕುಳಿತಿದ್ದೇನೆ. ನೀನು ಕೂಡ ಬಳಲಿರುವೆ ಮತ್ತು ನಿನ್ನ ಅನುಯಾಯಿಗಳೂ ಬಳಲಿದ್ದಾರೆ. ನಾಳೆ ನಾನು ಮೇಲೆ ಎದ್ದು ರಣದಲ್ಲಿ ನಿಮ್ಮೆಲ್ಲರನ್ನೂ ಎದುರಿಸಿ ಯುದ್ಧಮಾಡುತ್ತೇನೆ.”
ಯುಧಿಷ್ಠಿರನು ಹೇಳಿದನು:
“ನಾವೆಲ್ಲಾ ವಿಶ್ರಮಿಸಿಕೊಂಡಿದ್ದೇವೆ. ನಿನ್ನನ್ನು ನಾವು ಬಹಳ ಸಮಯದಿಂದ ಹುಡುಕುತ್ತಿದ್ದೇವೆ. ಆದುದರಿಂದ ಸುಯೋಧನ! ಈಗಲೇ ಮೇಲೆದ್ದು ಯುದ್ಧಮಾಡು. ಸಮರದಲ್ಲಿ ಪಾರ್ಥರನ್ನು ಸಂಹರಿಸಿ ಸಮೃದ್ಧ ರಾಜ್ಯವನ್ನು ಹೊಂದು. ಅಥವಾ ರಣದಲ್ಲಿ ನಮ್ಮಿಂದ ವಧಿಸಲ್ಪಟ್ಟು ವೀರಲೋಕವನ್ನು ಪಡೆ!”
ದುರ್ಯೋಧನನು ಹೇಳಿದನು:
“ಜನೇಶ್ವರ! ಯಾರಿಗಾಗಿ ರಾಜ್ಯವನ್ನು ಇಚ್ಛಿಸಿದ್ದೆನೋ ಆ ಕುರುಭ್ರಾತರರೆಲ್ಲರೂ ಹತರಾಗಿದ್ದಾರೆ! ಸಂಪತ್ತನ್ನು ಕಳೆದುಕೊಂಡು ಮತ್ತು ಕ್ಷತ್ರಿಯ ಪುಂಗವರು ಹತರಾಗಿ ವಿಧವೆಯಂತೆ ಹೀನವಾಗಿರುವ ಈ ಪೃಥ್ವಿಯನ್ನು ಭೋಗಿಸುವಲ್ಲಿ ನನಗೆ ಉತ್ಸಾಹವಿಲ್ಲ! ಆದರೆ ಇಂದು ಕೂಡ ಪಾಂಚಾಲ-ಪಾಂಡವರ ಉತ್ಸಾಹವನ್ನು ಭಗ್ನಗೊಳಿಸಿ ನಿನ್ನನ್ನು ಜಯಿಸುವ ಆಸೆಯನ್ನಿಟ್ಟುಕೊಂಡಿದ್ದೇನೆ! ಆದರೆ ದ್ರೋಣ, ಕರ್ಣ ಮತ್ತು ಪಿತಾಮಹರು ಹತರಾಗಿ ಮಲಗಿರುವ ನಂತರ ಈ ಯುದ್ಧದಿಂದ ಏನಾದರೂ ಪ್ರಯೋಜನವಾಗುತ್ತದೆಯೆಂದು ನನಗನ್ನಿಸುವುದಿಲ್ಲ. ಕೇವಲ ಈ ಪೃಥ್ವಿಯು ಮಾತ್ರ ನಿನ್ನದಾಗುತ್ತದೆ. ಆದರೆ ಯಾವುದೂ ಮತ್ತು ಯಾರೂ ಇಲ್ಲದ ರಾಜ್ಯವನ್ನು ಯಾವ ರಾಜನು ತಾನೇ ಆಳಲು ಬಯಸುತ್ತಾನೆ? ಅಂತಹ ಸುಹೃದರನ್ನೂ, ಪುತ್ರರನ್ನೂ, ಸಹೋದರರನ್ನೂ, ಪಿತೃಗಳನ್ನೂ ವಧೆಗೀಡುಮಾಡಿ, ನಿನ್ನಿಂದ ರಾಜ್ಯವೂ ಅಪಹೃತವಾದನಂತರ ನನ್ನಂಥವನು ಹೇಗೆ ತಾನೇ ಜೀವಿಸಿರುವನು? ನಾನು ಮೃಗಚರ್ಮವನ್ನು ಹೊದ್ದು ವನಕ್ಕೆ ಹೊರಟುಹೋಗುತ್ತೇನೆ. ನನ್ನ ಕಡೆಯವರನ್ನು ಕಳೆದುಕೊಂಡ ನನಗೆ ರಾಜ್ಯದ ಮೇಲಿನ ಪ್ರೀತಿಯೇ ಇಲ್ಲವಾಗಿದೆ. ಅನೇಕ ರಾಜಬಾಂಧವರನ್ನು ಕಳೆದುಕೊಂಡ, ಹತಾಶ್ವ-ಹತಕುಂಜರವಾಗಿರುವ ಈ ಪೃಥ್ವಿಯನ್ನು ಆತಂಕವಿಲ್ಲದೇ ಭೋಗಿಸು! ಮೃಗಚರ್ಮವನ್ನು ಧರಿಸಿ ವನಕ್ಕೇ ಹೋಗುತ್ತೇನೆ. ಸ್ವಜನರಿಂದ ವಿಹೀನರಾಗಿರುವ ನನಗೆ ಇಂದು ಜೀವಿಸಿರುವುದರಲ್ಲಿ ಆಸಕ್ತಿಯೇ ಇಲ್ಲವಾಗಿದೆ. ಹೋಗು! ಈಶ್ವರರನ್ನು ಕಳೆದುಕೊಂಡಿರುವ, ಯೋಧರು ಹತರಾಗಿರುವ, ಸಂಪತ್ತುಗಳು ನಷ್ಟವಾಗಿರುವ, ಕ್ಷೀಣ ಕಾಂತಿಯುಳ್ಳ ಈ ಪೃಥ್ವಿಯನ್ನು ಯಥಾಸುಖವಾಗಿ ಭೋಗಿಸು!”
ಯುಧಿಷ್ಠಿರನು ಹೇಳಿದನು:
“ಅಯ್ಯಾ! ನೀರಿನಲ್ಲೇ ಕುಳಿತುಕೊಂಡು ಆರ್ತಪ್ರಲಾಪಮಾಡುತ್ತಾ ಮಾತನಾಡಬೇಡ! ಪಕ್ಷಿಯಂತೆ ಚಿಲಿಪಿಲಿಗುಡುತ್ತಿರುವ ನಿನ್ನ ಈ ಮಾತುಗಳು ನನ್ನ ಮೇಲೆ ಯಾವ ಪರಿಣಾಮವನ್ನೂ ಬೀರುತ್ತಿಲ್ಲ! ಒಂದುವೇಳೆ ನೀನು ದಾನಮಾಡಲು ಸಮರ್ಥನಾಗಿರುವೆಯಾದರೂ ನೀನು ದಾನವಾಗಿ ಕೊಡುವ ಈ ಅವನಿಯನ್ನು ಆಳಲು ನನಗೆ ಇಚ್ಛೆಯಿಲ್ಲ. ಅಧರ್ಮದಿಂದ ನೀಡುತ್ತಿರುವ ಈ ಮಹಿಯನ್ನು ನಾನು ಸ್ವೀಕರಿಸುವುದಿಲ್ಲ. ಕ್ಷತ್ರಿಯನು ದಾನವನ್ನು ಸ್ವೀಕರಿಸಬಹುದೆಂದು ಯಾವ ಸ್ಮೃತಿಯಲ್ಲಿಯೂ ಹೇಳಿಲ್ಲ. ನೀನು ದಾನವನ್ನಾಗಿ ನೀಡುವ ಈ ಅಖಿಲ ಪೃಥ್ವಿಯನ್ನೂ ನಾನು ಬಯಸುವುದಿಲ್ಲ. ಆದರೆ ಯುದ್ಧದಲ್ಲಿ ನಿನ್ನನ್ನು ಸೋಲಿಸಿ ಈ ವಸುಧೆಯನ್ನು ಭೋಗಿಸುತ್ತೇನೆ. ಈಶ್ವರನಿಲ್ಲದಿರುವ ಈ ಪೃಥ್ವಿಯನ್ನು ನೀನು ಹೇಗೆ ದಾನವಾಗಿ ಕೊಡಲಿಚ್ಛಿಸುವೆ? ನಿನ್ನದಲ್ಲದಾಗಿರುವ ಈ ಭೂಮಿಯನ್ನು ನೀನು ಹೇಗೆ ದಾನವಾಗಿ ಕೊಡಬಲ್ಲೆ? ಕುಲದಲ್ಲಿ ಶಾಂತಿಯನ್ನಿರಿಸಲೋಸುಗ ಧರ್ಮದಿಂದ ಮಹಾಬಲ ವಾರ್ಷ್ಣೇಯನು ಮೊದಲು ಬಂದು ಕೇಳಿದಾಗ ನೀನೇನು ಪ್ರತ್ಯುತ್ತರವನ್ನಿತ್ತಿದ್ದೆ? ಈಗ ನೀನು ದಾನವಾಗಿ ಕೊಡುತ್ತೇನೆ ಎಂದು ಹೇಳುತ್ತಿರುವೆಯಲ್ಲ! ನಿನಗೇನಾದರೂ ಚಿತ್ತಭ್ರಮೆಯುಂಟಾಗಿದೆಯೇ? ಶತ್ರುಗಳ ಆಕ್ರಮಣಕ್ಕೊಳಗಾಗಿರುವ ರಾಜ್ಯವನ್ನು ಯಾವ ರಾಜನು ತಾನೇ ದಾನವಾಗಿ ಕೊಡಲು ಬಯಸುತ್ತಾನೆ? ಇಂದು ನೀನು ಭೂಮಿಯನ್ನು ದಾನವನ್ನಾಗಿಕೊಡಲು ಈಶನೂ ಆಗಿಲ್ಲ ಅಥವಾ ಬಲವಾಗಿ ಕಸಿದುಕೊಳ್ಳಲೂ ಸಮರ್ಥನಾಗಿಲ್ಲ! ಹೀಗಿರುವಾಗ ಹೇಗೆ ತಾನೇ ದಾನವನ್ನು ಕೊಡಲು ಬಯಸುತ್ತಿರುವೆ? “ನನ್ನನ್ನು ಸಂಗ್ರಾಮದಲ್ಲಿ ಸೋಲಿಸಿಯೇ ನೀನು ಈ ವಸುಂಧರೆಯನ್ನು ಪಾಲಿಸು! ಸೂಜಿಯ ಮೊನೆಯಷ್ಟು ಭೂಮಿಯನ್ನೂ ಕೊಡುವುದಿಲ್ಲ” ಎಂದು ಹೇಳಿ ನೀನು ನನಗೆ ಅಷ್ಟು ಭೂಮಿಯನ್ನೂ ಕೊಡಲು ಇಷ್ಟಪಟ್ಟಿರಲಿಲ್ಲ! ಹಾಗಿರುವಾಗ ಈಗ ಹೇಗೆ ಈ ಪೃಥ್ವಿಯನ್ನು ನನಗೆ ಕೊಡುತ್ತಿರುವೆ? ಹಿಂದೆ ಸೂಜಿಯ ಮೊನೆಯಷ್ಟು ಭೂಮಿಯನ್ನು ಬಿಟ್ಟುಕೊಟ್ಟಿರದವನು ಈಗ ಇಡೀ ಭೂಮಿಯನ್ನೇ ಹೇಗೆ ತ್ಯಜಿಸುತ್ತಿದ್ದೀಯೆ? ಈ ರೀತಿ ಐಶ್ವರ್ಯವನ್ನು ಒಟ್ಟುಗೂಡಿಸಿಕೊಂಡು ಈ ಭೂಮಿಯನ್ನಾಳಿದ ಯಾವ ಮೂಢನು ತಾನೇ ವಸುಂಧರೆಯನ್ನು ಶತ್ರುವಿಗೆ ಕೊಡಲು ಬಯಸುತ್ತಾನೆ? ನಿನಾದರೋ ಕೇವಲ ಮೂರ್ಖತನದಿಂದ ವಿಮೂಢನಾಗಿರುವೆ! ಪೃಥ್ವಿಯನ್ನು ಕೊಡಲು ಬಯಸಿದರೂ ಇಂದು ಜೀವವನ್ನು ತೊರೆಯಬೇಕಾಗುತ್ತದೆ ಎನ್ನುವುದನ್ನು ನೀನು ಅರಿತಿಲ್ಲ! ನಮ್ಮನ್ನು ನೀನು ಪರಾಜಯಗೊಳಿಸಿ ಈ ಪೃಥ್ವಿಯನ್ನು ಆಳು. ಅಥವಾ ನಮ್ಮಿಂದ ಹತನಾಗಿ ಉತ್ತಮ ಲೋಕಗಳಿಗೆ ತೆರಳು! ನಾನು ಮತ್ತು ನೀನು ಇಬ್ಬರೂ ಜೀವಂತವಾಗಿದ್ದರೆ ನಮ್ಮಿಬ್ಬರಲ್ಲಿ ವಿಜಯಿಯಾರೆಂದು ಸರ್ವಭೂತಗಳಲ್ಲಿಯೂ ಸಂಶಯವುಂಟಾಗುತ್ತದೆ. ನಿನ್ನ ಜೀವನವು ನನ್ನ ಕೈಯಲ್ಲಿದೆ! ನಾನು ಬಯಸಿದರೆ ಮಾತ್ರ ನೀನು ಜೀವಂತನಾಗಿರಬಲ್ಲೆ! ನಿನ್ನ ಇಚ್ಚೆಯಿಂದ ಜೀವಿಸಲು ನೀನು ಶಕ್ಯನಿಲ್ಲ! ವಿಶೇಷವಾಗಿ ನೀನು ನಮ್ಮನ್ನು ಮೋಸದಿಂದ ಸುಡಲು ಪ್ರಯತ್ನಿಸಿದೆ. ಹಾವಿನ ವಿಷವನ್ನುಣ್ಣಿಸಿದೆ. ನೀರಿಗೆ ಕೂಡ ತಳ್ಳಿದೆ! ಪಾಪಿಯೇ! ಈ ಎಲ್ಲ ಕಾರಣಗಳಿಂದ ನೀನು ಜೀವದಿಂದುಳಿಯಲು ಸಾಧ್ಯವಿಲ್ಲ. ಮೇಲೇಳು! ಎದ್ದೇಳು! ಯುದ್ಧಮಾಡು! ಅದರಿಂದಲೇ ನಿನಗೆ ಶ್ರೇಯಸ್ಸುಂಟಾಗುತ್ತದೆ!”
ಜಯಯುಕ್ತ ಆ ವೀರರು ಅಲ್ಲಿ ಪುನಃ ಪುನಃ ಈ ರೀತಿಯ ಮಾತುಗಳನ್ನು ಹೇಳುತ್ತಲೇ ಇದ್ದರು. ನೀರಿನಲ್ಲಿದ್ದ ದುರ್ಯೋಧನನನ್ನು ಯುಧಿಷ್ಠಿರನು ಬಹಳವಾಗಿ ಬೆದರಿಸಿದನು. ಕಟುಕು ಮಾತುಗಳನ್ನು ಕೇಳಿ ವಿಷಮ ಪರಿಸ್ಥಿತಿಯಲ್ಲಿ ನೀರಿನಲ್ಲಿದ್ದ ಜನಾಧಿಪನು ಪುನಃ ಪುನಃ ದೀರ್ಘ ಬಿಸಿಯುಸಿರನ್ನು ಬಿಡುತ್ತಿದ್ದನು. ನೀರಿನಲ್ಲಿ ಹುದುಗಿದ್ದ ರಾಜನು ಪುನಃ ಪುನಃ ಕೈಗಳನ್ನು ಕೊಡವುತ್ತಾ ಯುದ್ಧದ ಮನಸ್ಸು ಮಾಡಿ ರಾಜನಿಗೆ ಹೇಳಿದನು:
“ಪಾರ್ಥರೇ! ನೀವೆಲ್ಲರೂ ಸುಹೃದಯರೊಂದಿಗಿದ್ದೀರಿ. ರಥವಾಹನಗಳೊಂದಿಗಿದ್ದೀರಿ. ನಾನಾದರೋ ಏಕಾಂಗಿಯಾಗಿದ್ದೇನೆ. ವಿರಥನಾಗಿದ್ದೇನೆ. ವಾಹನಗಳನ್ನು ಕಳೆದುಕೊಂಡಿದ್ದೇನೆ. ಪದಾತಿಯಾಗಿರುವ, ಶಸ್ತ್ರರಹಿತನಾಗಿರುವ, ಏಕಾಂಗಿಯಾಗಿರುವ ನಾನು ರಥಾರೂಢರಾಗಿರುವ, ಅನೇಕರಿಂದ ಸುತ್ತುವರೆಯಲ್ಪಟ್ಟಿರುವ ನಿಮ್ಮೊಡನೆ ಹೇಗೆ ಯುದ್ಧಮಾಡಲಿ? ಯುಧಿಷ್ಠಿರ! ನೀವು ಒಬ್ಬೊಬ್ಬರೇ ನನ್ನೊಡನೆ ಯುದ್ಧಮಾಡಿ! ಅನೇಕ ವೀರರೊಂದಿಗೆ ಒಬ್ಬನನ್ನೇ ಯುದ್ಧದಲ್ಲಿ ತೊಡಗಿಸುವುದು ನ್ಯಾಯವಲ್ಲ. ವಿಶೇಷವಾಗಿ ನಾನು ಕವಚಗಳಿಲ್ಲದವನಾಗಿದ್ದೇನೆ. ಬಹಳವಾಗಿ ಬಳಲಿದ್ದೇನೆ. ನೀರನ್ನು ಆಶ್ರಯಿಸಿ ಕುಳಿತಿದ್ದೇನೆ. ದೇಹವು ಬಹಳವಾಗಿ ಗಾಯಗೊಂಡಿದೆ. ವಾಹನ-ಸೈನಿಕರು ಹತರಾಗಿದ್ದಾರೆ. ನನಗೆ ನಿನ್ನ ಭಯವಿಲ್ಲ. ವೃಕೋದರನ, ಫಲ್ಗುನ-ವಾಸುದೇವರ ಅಥವಾ ಧೃಷ್ಟದ್ಯುಮ್ನ-ಶಿಖಂಡಿಯರ ಭಯವೂ ನನಗಿಲ್ಲ. ನಕುಲ-ಸಹದೇವರ ಅಥವಾ ಸಾತ್ಯಕಿಯ ಅಥವಾ ನಿನ್ನ ಅನ್ಯ ಸೈನಿಕರ ಭಯವಿಲ್ಲ. ಯುದ್ಧದಲ್ಲಿ ಕ್ರುದ್ಧನಾದ ನಾನೊಬ್ಬನೇ ಅವರನ್ನು ಎದುರಿಸಬಲ್ಲೆನು. ಸತ್ಪುರುಷರ ಕೀರ್ತಿಗೆ ಧರ್ಮವೇ ಮೂಲ. ಧರ್ಮ ಮತ್ತು ಕೀರ್ತಿಯನ್ನು ಪಾಲಿಸುವಂತಹ ಈ ಮಾತುಗಳನ್ನಾಡುತ್ತಿದ್ದೇನೆ. ಸಂವತ್ಸರವು ಎಲ್ಲ ಋತುಗಳನ್ನು ಒಂದಾದ ನಂತರ ಒಂದನ್ನು ಎದುರಿಸುವಂತೆ ಮೇಲೆದ್ದು ನಾನು ಯುದ್ಧದಲ್ಲಿ ಒಬ್ಬೊಬ್ಬರಾಗಿ ನಿಮ್ಮೆಲ್ಲರನ್ನೂ ಎದುರಿಸುತ್ತೇನೆ. ಪಾಂಡವರೇ! ಸ್ಥಿರರಾಗಿರಿ! ನಿಃಶಸ್ತ್ರ ಮತ್ತು ವಿರಥನಾಗಿದ್ದರೂ ನಾನು ಇಂದು ನಿಮ್ಮೆಲ್ಲರನ್ನೂ ರಾತ್ರಿಕಳೆಯುವಾಗ ಸೂರ್ಯನು ಸರ್ವ ನಕ್ಷತ್ರಗಳನ್ನು ಹೇಗೋ ಹಾಗೆ ನನ್ನ ತೇಜಸ್ಸಿನಿಂದ ನಾಶಗೊಳಿಸುತ್ತೇನೆ. ಇಂದು ನಾನು ಯಶಸ್ವಿ ಕ್ಷತ್ರಿಯರ – ಬಾಹ್ಲೀಕ, ದ್ರೋಣ, ಭೀಷ್ಮ, ಮಹಾತ್ಮ ಕರ್ಣ, ಶೂರ ಜಯದ್ರಥ, ಭಗದತ್ತ, ಮದ್ರರಾಜ ಶಲ್ಯ, ಭೂರಿಶ್ರವ, ಸೌಬಲ ಶಕುನಿ ಮತ್ತು ಪುತ್ರರ – ಋಣಮುಕ್ತನಾಗುತ್ತೇನೆ. ಸಹೋದರರೊಂದಿಗೆ ನಿನ್ನನ್ನು ಸಂಹರಿಸಿ ಇಂದು ನಾನು ಮಿತ್ರ-ಸುಹೃದಯ-ಬಾಂಧವರ ಋಣಮುಕ್ತನಾಗುತ್ತೇನೆ!”
ಹೀಗೆ ಹೇಳಿ ದುರ್ಯೋಧನನು ಸುಮ್ಮನಾದನು. ಆಗ ಯುಧಿಷ್ಠಿರನು ಹೇಳಿದನು:
“ಒಳ್ಳೆಯದಾಯಿತು! ಸುಯೋಧನ! ನೀನೂ ಕೂಡ ಕ್ಷತ್ರಧರ್ಮವನ್ನು ತಿಳಿದುಕೊಂಡಿರುವೆ! ಒಳ್ಳೆಯದಾಯಿತು! ನೀನು ಯುದ್ಧಕ್ಕೆ ಮನಸ್ಸು ಮಾಡಿರುವೆ! ಒಳ್ಳೆಯದಾಯಿತು! ನೀನೊಬ್ಬನೇ ನಮ್ಮೆಲ್ಲರೊಡನೆಯೂ ರಣದಲ್ಲಿ ಹೋರಾಡಲು ಬಯಸುತ್ತಿರುವೆ! ಶೂರನಾಗಿರುವೆ. ಯುದ್ಧವನ್ನು ತಿಳಿದುಕೊಂಡಿರುವೆ. ಏಕಾಂಗಿಯಾಗಿ ನಿನಗೆ ಸಮ್ಮತವಾದ ಆಯುಧವನ್ನು ತೆಗೆದುಕೊಂಡು ಒಬ್ಬನೊಂದಿಗೇ ಯುದ್ಧಮಾಡು. ನಾವು ಪ್ರೇಕ್ಷಕರಾಗಿ ನಿಂತಿರುತ್ತೇವೆ. ನಿನಗಿಷ್ಟವಾದ ಈ ಅವಕಾಶವನ್ನು ಪುನಃ ನಾನು ನೀಡುತ್ತಿದ್ದೇನೆ. ಒಬ್ಬನನ್ನು ಸಂಹರಿಸಿದರೂ ರಾಜ್ಯವು ನಿನ್ನದಾಗುವುದು. ಅಥವಾ ನೀನೇ ಹತನಾದರೆ ಸ್ವರ್ಗವನ್ನು ಹೊಂದುತ್ತೀಯೆ!”
ದುರ್ಯೋಧನನು ಹೇಳಿದನು:
“ಒಬ್ಬನೊಡನೆಯೇ ಯುದ್ಧಮಾಡಬಹುದೆಂದಾದರೆ ಆ ಒಬ್ಬನನ್ನು ಆರಿಸಿ ನನಗೆ ಕೊಡು! ನಿನ್ನ ಅನುಮತಿಯಂತೆ ಆಯುಧಗಳಲ್ಲಿ ನಾನು ಗದೆಯನ್ನು ಆರಿಸಿಕೊಂಡಿದ್ದೇನೆ. ನಿನ್ನ ಸಹೋದರರಲ್ಲಿ ನನ್ನೊಡನೆ ಹೋರಾಡಲು ಶಕ್ಯನೆಂದು ತಿಳಿದುಕೊಂಡಿರುವವನು ರಣದಲ್ಲಿ ಪದಾತಿಯಾಗಿ ಗದೆಯನ್ನು ಹಿಡಿದೇ ನನ್ನೊಡನೆ ಯುದ್ಧಮಾಡಲಿ. ವಿಚಿತ್ರ ರಥಯುದ್ಧಗಳು ಪದೇ ಪದೇ ನಡೆಯುತ್ತಲೇ ಇರುತ್ತವೆ. ಮಹತ್ತರ ಅದ್ಭುತವಾದ ಇದೊಂದು ಗದಾಯುದ್ಧವೂ ನಡೆದುಹೋಗಲಿ! ಸಾಮಾನ್ಯವಾಗಿ ಮಾನವರು ಒಂದರ ನಂತರ ಇನ್ನೊಂದು ಅಸ್ತ್ರಗಳನ್ನು ಬಳಸುತ್ತಾರೆ. ನಿನ್ನ ಅನುಮತಿಯಂತೆ ಯುದ್ಧಗಳ ಪರ್ಯಾಯವೂ ನಡೆದುಹೋಗಲಿ! ಗದೆಯಿಂದಲೇ ನಾನು ಅನುಜರೊಂದಿಗೆ ನಿನ್ನನ್ನು, ಹಾಗೆಯೇ ಪಾಂಚಾಲ-ಸೃಂಜಯರನ್ನೂ, ನಿನ್ನ ಇತರ ಸೈನಿಕರನ್ನೂ ಜಯಿಸುತ್ತೇನೆ!”
ಯುಧಿಷ್ಠಿರನು ಹೇಳಿದನು:
“ಗಾಂಧಾರೇ! ಏಳು ಎದ್ದೇಳು! ನನ್ನೊಡನೆ ಯುದ್ಧಮಾಡು. ಬಲಶಾಲಿಯಾದ ನೀನು ನಮ್ಮಲ್ಲಿನ ಒಬ್ಬ ಯೋಧನೊಡನೆಯೇ ಗದೆಯಿಂದ ಯುದ್ಧಮಾಡು. ಪುರುಷನಾಗು! ಸಮಾಹಿತನಾಗಿ ಯುದ್ಧಮಾಡು! ಒಂದುವೇಳೆ ಮನಸ್ಸಿನ ವೇಗವುಳ್ಳವನಾಗಿದ್ದರೂ ಇಂದು ನೀನು ಜೀವಂತವಾಗಿರಲಾರೆ!”
ದುರ್ಯೋಧನನಿಗೆ ಇದನ್ನು ಸಹಿಸಿಕೊಳ್ಳಲಾಗಲಿಲ್ಲ. ನೀರಿನಲ್ಲಿದ್ದ ಅವನು ಬಿಲದಲ್ಲಿದ್ದ ಮಹಾನಾಗದಂತೆ ಭುಸುಗುಟ್ಟುತ್ತಿದ್ದನು. ಶ್ರೇಷ್ಠ ಕುದುರೆಯು ಚಾವಟಿಯನ್ನು ಹೇಗೋ ಹಾಗೆ ಪುನಃ ಪುನಃ ಚುಚ್ಚುತ್ತಿದ್ದ ಅವನ ಆ ಮಾತೆಂಬ ಚಾವಟಿಯೇಟುಗಳನ್ನು ಅವನು ಸಹಿಸಿಕೊಳ್ಳಲಾರದೇ ಹೋದನು. ಆ ವೀರ್ಯವಾನನು ಲೋಹಮಯ-ಬಹುಭಾರ-ಕಾಂಚನಾಂಗದಗಳಿಂದ ವಿಭೂಷಿತವಾಗಿದ್ದ ಗದೆಯನ್ನು ಹಿಡಿದು ನಾಗೇಂದ್ರನಂತೆ ಭುಸುಗುಟ್ಟುತ್ತಾ, ನೀರನ್ನು ಅಲ್ಲೋಲಕಲ್ಲೋಲಗೊಳಿಸುತ್ತಾ ವೇಗದಿಂದ ಸರೋವರದ ತಳದಿಂದ ಮೇಲೆದ್ದನು. ಸ್ತಂಭಿತ ನೀರನ್ನು ಒಡೆದು ಉಕ್ಕಿನ ಗದೆಯನ್ನು ಹೆಗಲಮೇಲಿರಿಸಿಕೊಂಡು ಅವನು ಸೂರ್ಯನಂತೆ ಸುಡುತ್ತಾ ಸರೋವರದಿಂದ ಮೇಲೆ ಬಂದನು. ಆಗ ಮಹಾಬಲ ಧಾರ್ತರಾಷ್ಟ್ರನು ಬಂಗಾರದಿಂದ ಪರಿಷ್ಕೃತಗೊಂಡ ಆ ಲೋಹಮಯ ಭಾರ ಗದೆಯನ್ನು ಕೈಗೆತ್ತಿಕೊಂಡನು. ಶಿಖರವುಳ್ಳ ಪರ್ವತದಂತೆ ಗದೆಯನ್ನು ಹಿಡಿದಿದ್ದ ಅವನು ಪ್ರಜೆಗಳ ಮೇಲೆ ಸಂಕ್ರುದ್ಧನಾಗಿ ನಿಂತಿದ್ದ ಶೂಲಪಾಣಿಯಂತೆ ಕಂಡನು. ಗದೆಯನ್ನು ಹಿಡಿದಿದ್ದ ಭಾರತನು ತಾಪವನ್ನುಂಟುಮಾಡುವ ಭಾಸ್ಕರನಂತೆ ಕಾಣುತ್ತಿದ್ದನು. ಹಾಗೆ ಗದೆಯನ್ನು ಹಿಡಿದು ಮೇಲೆ ಬರುತ್ತಿರುವ ಆ ಮಹಾಬಾಹು ಅರಿಂದಮನನ್ನು ನೋಡಿ ಸರ್ವಭೂತಗಳೂ ದಂಡವನ್ನು ಹಿಡಿದ ಅಂತಕನೇ ಮೇಲೇರಿ ಬರುತ್ತಿದ್ದಾನೋ ಎಂದು ಅಭಿಪ್ರಾಯಪಟ್ಟರು. ಸರ್ವ ಪಾಂಚಾಲರಿಗೆ ಅವನು ವಜ್ರವನ್ನು ಹಿಡಿದ ಶಕ್ರನಂತೆ ಮತ್ತು ಶೂಲವನ್ನು ಹಿಡಿದ ಹರನಂತೆ ಕಂಡನು. ಮೇಲೆದ್ದುಬರುತ್ತಿದ್ದ ಅವನನ್ನು ನೋಡಿ ಎಲ್ಲೆಡೆಯೂ ಹರ್ಷವುಂಟಾಯಿತು. ಪಾಂಚಾಲ-ಪಾಂಡವರು ಅನ್ಯೋನ್ಯರ ಅಂಗೈಗಳಿಗೆ ಹೊಡೆದು ಚಪ್ಪಾಳೆತಟ್ಟಿದರು.
ಅದು ತನಗೆ ಅಪಹಾಸ್ಯವೆಂದು ತಿಳಿದ ದುರ್ಯೋಧನನು ಸಿಟ್ಟಿನಿಂದ ಕಣ್ಣುಗಳನ್ನು ಮೇಲೆಮಾಡಿ ಸುಟ್ಟುಬಿಡುವನೋ ಎಂಬಂತೆ ಪಾಂಡವರನ್ನು ನೋಡಿದನು. ಹುಬ್ಬನ್ನು ಗಂಟಿಕ್ಕಿ ಅವುಡುಗಚ್ಚುತ್ತಾ ಅವನು ಕೇಶವಸಹಿತರಾದ ಪಾಂಡವರಿಗೆ ಹೇಳಿದನು:
“ಪಾಂಡವರೇ! ನೀವು ಮಾಡುವ ಈ ಅಪಹಾಸ್ಯಕ್ಕೆ ಪ್ರತೀಕಾರವನ್ನು ಇಂದೇ ಪಡೆಯುವಿರಿ! ಸದ್ಯದಲ್ಲಿಯೇ ನೀವು ಪಾಂಚಾಲರೊಂದಿಗೆ ಹತರಾಗಿ ಯಮಕ್ಷಯಕ್ಕೆ ಹೋಗುವಿರಿ!”
ರಕ್ತದಿಂದ ತುಂಬಿಕೊಂಡಿದ್ದ ದುರ್ಯೋಧನನು ನೀರಿನಿಂದ ಮೇಲೆದ್ದು ಗದಾಪಾಣಿಯಾಗಿ ನಿಂತನು. ರಕ್ತಮಿಶ್ರಿತ ನೀರಿನ್ನು ಸುರಿಸುತ್ತಿದ್ದ ಅವನ ಶರೀರವು ಲೋಹಮಯ ನದಿಯನ್ನು ಸುರಿಸುತ್ತಿದ್ದ ಪರ್ವತದಂತೆ ತೋರುತ್ತಿತ್ತು. ಅಲ್ಲಿ ಮೇಲೆದ್ದು ನಿಂತಿದ್ದ ಅವನು ಕ್ರುದ್ಧ ವೈವಸ್ವತನಂತೆ ಮತ್ತು ಶೂಲಪಾಣಿ ರುದ್ರನಂತೆ ಪಾಂಡವರಿಗೆ ತೋರಿದನು. ಗೂಳಿಯಂತೆ ಹರ್ಷದಿಂದ ಮೇಘಸ್ವರದಲ್ಲಿ ಕೂಗುತ್ತಾ ಆ ವೀರ್ಯವಾನನು ಗದೆಯಿಂದ ಪಾರ್ಥರನ್ನು ಯುದ್ಧಕ್ಕೆ ಆಹ್ವಾನಿಸಿದನು. ದುರ್ಯೋಧನನು ಹೇಳಿದನು:
“ಯುಧಿಷ್ಠಿರ! ನೀವು ಒಬ್ಬೊಬ್ಬರಾಗಿಯೇ ನನ್ನೊಡನೆ ಯುದ್ಧಮಾಡಿರಿ! ವೀರ! ಯುದ್ಧದಲ್ಲಿ ಅನೇಕರು ಒಬ್ಬನೊಡನೆ, ಅದರಲ್ಲೂ ವಿಶೇಷವಾಗಿ, ಕವಚವನ್ನು ಬಿಚ್ಚಿಟ್ಟಿದ್ದ, ಬಳಲಿರುವ, ನೀರಿನಿಂದ ಮೇಲೆದ್ದುಬಂದಿರುವ, ದೇಹದಲ್ಲಿ ತುಂಬಾಗಾಯಗೊಂಡಿರುವ, ವಾಹನ-ಸೈನಿಕರನ್ನು ಕಳೆದುಕೊಂಡಿರುವವನೊಡನೆ, ಯುದ್ಧಮಾಡುವುದು ನ್ಯಾಯವಲ್ಲ!”
ಯುಧಿಷ್ಠಿರನು ಹೇಳಿದನು:
“ಸುಯೋಧನ! ಯುದ್ಧದಲ್ಲಿ ಅಭಿಮನ್ಯುವನ್ನು ಅನೇಕ ಮಹಾರಥರು ಕೊಲ್ಲುವಾಗ ಈ ಪ್ರಜ್ಞೆಯು ನಿನಗೆ ಏಕೆ ಇರಲಿಲ್ಲ? ವೀರ! ಕವಚವನ್ನು ಧರಿಸು! ತಲೆಗೂದಲನ್ನು ಕಟ್ಟಿಕೋ! ಇನ್ನ್ಯಾವುದಾದರೂ ನಿನ್ನಲ್ಲಿ ಇಲ್ಲದಿದ್ದರೆ ಅದನ್ನೂ ನೀನು ಪಡೆದುಕೊಳ್ಳಬಹುದು. ನಾನು ಪುನಃ ನಿನಗೆ ನಿನಗಿಷ್ಟವಾದುದೊಂದನ್ನು ಕೊಡುತ್ತಿದ್ದೇನೆ. ಐವರು ಪಾಂಡವರಲ್ಲಿ ಯಾರೊಡನೆ ಯುದ್ಧಮಾಡಲು ಇಚ್ಛಿಸುವೆಯೋ ಅವನನ್ನು ಸಂಹರಿಸಿ ರಾಜನಾಗು ಅಥವಾ ಹತನಾಗಿ ಸ್ವರ್ಗವನ್ನು ಪಡೆ! ನಿನ್ನನ್ನು ಜೀವಂತ ಬಿಡುವುದರ ಹೊರತಾಗಿ ಯುದ್ಧದಲ್ಲಿ ನಿನಗೆ ಪ್ರಿಯವಾದ ಬೇರೆ ಏನನ್ನು ಮಾಡಬಲ್ಲೆವು?”
ಆಗ ದುರ್ಯೋಧನನು ಕಾಂಚನ ಕವಚ ಮತ್ತು ಕಾಂಚನಪರಿಷ್ಕೃತ ವಿಚಿತ್ರ ಶಿರಸ್ತ್ರಾಣವನ್ನು ಧರಿಸಿದನು. ಶಿರಸ್ತ್ರಾಣವನ್ನು ಕಟ್ಟಿದ, ಶುಭಕಾಂಚನ ಕವಚವನ್ನು ಧರಿಸಿದ ಅವನು ಕಾಂಚನಪರ್ವತದಂತೆ ರಾರಾಜಿಸಿದನು. ಸಂಗ್ರಾಮಮೂರ್ಧನಿಯಲ್ಲಿ ಹಾಗೆ ಗದೆಯನ್ನು ಹಿಡಿದು ಸನ್ನದ್ಧನಾಗಿರುವ ದುರ್ಯೋಧನನು ಪಾಂಡವರೆಲ್ಲರಿಗೆ ಹೇಳಿದನು:
“ಭಾತೃಗಳಾದ ನಿಮ್ಮಲ್ಲಿ ಒಬ್ಬನು ನನ್ನೊಡನೆ ಗದಾಯುದ್ಧಮಾಡಲಿ! ನಾನಾದರೋ ಸಹದೇವನೊಡನೆ ಅಥವಾ ಭೀಮನೊಡನೆ ಅಥವಾ ನಕುಲನೊಂದಿಗೆ ಅಥವಾ ಫಲ್ಗುನನೊಂದಿಗೆ ಅಥವಾ ನಿನ್ನೊಡನೆ ಯುದ್ಧಮಾಡಬಲ್ಲೆ. ರಣರಂಗದಲ್ಲಿ ಯುದ್ಧಮಾಡಿ ನಾನು ವಿಜಯವನ್ನು ಪಡೆಯುತ್ತೇನೆ. ಕಾಂಚನಪಟ್ಟಿಯಿರುವ ಈ ಗದೆಯಿಂದ ನಾನು ಇಂದು ನಮ್ಮ ಈ ಸುದುರ್ಗಮ ವೈರದ ಅಂತ್ಯವನ್ನು ಕಾಣುತ್ತೇನೆ. ಗದಾಯುದ್ಧದಲ್ಲಿ ನನ್ನ ಸಮಾನರು ಯಾರೂ ಇಲ್ಲವೆಂದು ನಾನು ಯೋಚಿಸುತ್ತಾ ಬಂದಿದ್ದೇನೆ. ನನ್ನನ್ನು ಎದುರಿಸುವ ಎಲ್ಲರನ್ನೂ ಗದೆಯಿಂದ ಸಂಹರಿಸುತ್ತೇನೆ. ನನ್ನೊಡನೆ ಇಂದು ಯುದ್ಧಮಾಡುವವನು ಗದೆಯನ್ನೆತ್ತಿಕೊಳ್ಳಲಿ!””
ಹೀಗೆ ಮತ್ತೆ ಮತ್ತೆ ದುರ್ಯೋಧನನು ಗರ್ಜಿಸುತ್ತಿರಲು ಯುಧಿಷ್ಠಿರನ ಮೇಲೆ ಸಂಕ್ರುದ್ಧನಾಗಿ ವಾಸುದೇವನು ಇದನ್ನು ಹೇಳಿದನು:
“ಯುಧಿಷ್ಠಿರ! ಯುದ್ಧದಲ್ಲಿ ಎಂಥಹ ವರವನ್ನು ನೀನು ಕೊಟ್ಟುಬಿಟ್ಟೆ! ಒಂದುವೇಳೆ ಅವನು ಅರ್ಜುನ, ನಕುಲ, ಸಹದೇವ ಅಥವಾ ನಿನ್ನೊಡನೆ ಯುದ್ಧಮಾಡಲು ಬಯಸಿದರೆ ಏನಾಗುತ್ತದೆ? “ನಮ್ಮೈವರಲ್ಲಿ ಒಬ್ಬನನ್ನೇ ಕೊಂದು ನೀನು ರಾಜನಾಗು!” ಎಂದು ಹೇಳಿ ಇದೇನು ಸಾಹಸಮಾಡಿಬಿಟ್ಟೆ? ಭೀಮಸೇನನನ್ನು ಸಂಹರಿಸಲು ಬಯಸಿ ಇವನು ಕಳೆದ ಹದಿಮೂರು ವರ್ಷಗಳು ಭೀಮಸೇನನ ಲೋಹದ ಮೂರ್ತಿಯನ್ನು ಮಾಡಿಕೊಂಡು ಅದರೊಡನೆ ಗದಾಯುದ್ಧದ ಅಭ್ಯಾಸಮಾಡಿಕೊಂಡು ಬಂದಿರುವನು! ಈಗ ನಾವು ನಿನ್ನ ಕಾರ್ಯವನ್ನು ಹೇಗೆ ಪೂರೈಸಿಕೊಡಬಲ್ಲೆವು? ಕೇವಲ ದಯಾಪೂರ್ಣನಾಗಿ ಈ ದುಃಸ್ಸಾಹಸವನ್ನು ನೀನು ಮಾಡಿರುವೆ! ವೃಕೋದರನಲ್ಲದೇ ಇವನೊಂದಿಗೆ ಯುದ್ಧಮಾಡಬಲ್ಲ ಬೇರೆ ಯಾರನ್ನೂ ನಾನು ಕಾಣೆ. ಇವನೂ ಕೂಡ ಚೆನ್ನಾಗಿ ಅಭ್ಯಾಸವನ್ನು ಮಾಡಿಲ್ಲ. ಹಿಂದಿನಂತೆಯೇ ಈಗ ಕೂಡ ಪುನಃ ದ್ಯೂತವನ್ನು ಪ್ರಾರಂಭಿಸಿಬಿಟ್ಟೆಯಲ್ಲ! ಇಂದಿನ ಈ ಜೂಜಾಟವು ಶಕುನಿಯೊಡನಾಡಿನ ಅಂದಿನದಂತೆ ವಿಷಮವಾದುದು. ಭೀಮನು ಬಲಶಾಲಿ ಮತ್ತು ಸಮರ್ಥ. ಸುಯೋಧನನು ಕುಶಲನು. ನೋಡಿದರೆ ಬಲಶಾಲಿ ಮತ್ತು ಕುಶಲಿ ಇಬ್ಬರಲ್ಲಿ ಕುಶಲಿಯೇ ಅಧಿಕನೆನಿಸಿಕೊಳ್ಳುತ್ತಾನೆ. ಅತ್ಯಂತ ವಿಷಮ ಪ್ರದೇಶದಲ್ಲಿ ಕಷ್ಟಪಡುತ್ತಿರುವ ಶತ್ರುವನ್ನು ನೀನು ಸಮಪ್ರದೇಶಕ್ಕೆ ತಂದು ಇಟ್ಟಿರುವೆ. ಸಮಪ್ರದೇಶದಲ್ಲಿದ್ದ ನಮ್ಮನ್ನು ವಿಷಮಪ್ರದೇಶಕ್ಕೆ ಕೊಂಡೊಯ್ದು ಮಹಾ ಕಷ್ಟದಲ್ಲಿ ಸಿಕ್ಕಿಸಿದೆ. ಯಾರುತಾನೇ ಸರ್ವ ಶತ್ರುಗಳನ್ನೂ ಸೋಲಿಸಿ ಒಂಟಿಗನಾಗಿರುವ ವೈರಿಗೆ ಒಂದೇ ಒಂದು ಪಣದಲ್ಲಿ ರಾಜ್ಯವನ್ನು ಕೊಡಲು ಬಯಸುತ್ತಾನೆ? ಯುದ್ಧದಲ್ಲಿ ದುರ್ಯೋಧನನೊಡನೆ, ಅದರಲ್ಲೂ ವಿಶೇಷವಾಗಿ ಅಭ್ಯಾಸಮಾಡಿರುವ ಇವನೊಡನೆ, ಗದಾಪಾಣಿಯಾಗಿ ಯುದ್ಧಮಾಡುವ ನರೋತ್ತಮನನ್ನು ನಾನು ಈ ಲೋಕಗಳಲ್ಲಿ ಯಾರನ್ನೂ ಕಾಣುತ್ತಿಲ್ಲ. ಫಲ್ಗುನನಾಗಲೀ, ನೀನಾಗಲೀ, ಮಾದ್ರೀಪುತ್ರರಾಗಲೀ ಯುದ್ಧದಲ್ಲಿ ಈ ಗದಾಪಾಣಿಯನ್ನು ಎದುರಿಸಲು ಸಮರ್ಥರೆಂದು ನನಗನ್ನಿಸುವುದಿಲ್ಲ. ಹೇಗೆ ತಾನೇ ನೀನು ಶತ್ರುವಿಗೆ “ನಮ್ಮಲ್ಲಿ ಒಬ್ಬನನ್ನು ಸಂಹರಿಸಿ ರಾಜನಾಗು!” ಎಂದು ಹೇಳಿಬಿಟ್ಟೆ? ವೃಕೋದರನೇ ಇವನನ್ನು ಎದುರಿಸಿದರೂ ನ್ಯಾಯರೀತಿಯಲ್ಲಿ ಯುದ್ಧಮಾಡುವ ನಮಗೆ ವಿಜಯದ ಸಂದೇಹವೇ ಇದೆ. ಏಕೆಂದರೆ ಮಹಾಬಲ ದುರ್ಯೋಧನನು ಗದಾಯುದ್ಧದಲ್ಲಿ ಪರಿಣಿತನಾಗಿದ್ದಾನೆ.”
ಭೀಮನು ಹೇಳಿದನು:
“ಮಧುಸೂದನ! ವಿಷಾದಪಡಬೇಡ! ಅತ್ಯಂತ ದುರ್ಗಮ ವೈರದ ದಡವನ್ನು ನಾನು ಇಂದು ಸೇರಿಯೇ ತೀರುತ್ತೇನೆ! ಸುಯೋಧನನನ್ನು ನಾನು ಯುದ್ಧದಲ್ಲಿ ಸಂಹರಿಸುತ್ತೇನೆ ಎನ್ನುವುದರಲ್ಲಿ ಸಂಶಯವೇ ಇಲ್ಲ! ಧರ್ಮರಾಜನ ಕಣ್ಣೆದುರಿಗೆ ವಿಜಯವು ನಿಶ್ಚಯವಾದುದು! ನನ್ನ ಈ ಗದೆಯು ಅವನ ಗದೆಗಿಂತ ಒಂದೂವರೆಯಷ್ಟು ಹೆಚ್ಚು ಭಾರವಾಗಿದೆ. ಧಾರ್ತರಾಷ್ಟ್ರನ ಗದೆಯು ನನ್ನ ಗದೆಗೆ ಸಮಾನವಲ್ಲ. ವ್ಯಥೆಪಡೆಯದಿರು! ಯುದ್ಧದಲ್ಲಿ ನಾನಾ ಶಸ್ತ್ರಗಳನ್ನು ಧರಿಸಿರುವ ಮೂರುಲೋಕಗಳ ಅಮರರೊಂದಿಗೆ ಕೂಡ ನಾನು ಸಂತೋಷದಿಂದ ಯುದ್ಧಮಾಡಬಲ್ಲೆನು. ಇನ್ನು ರಣದಲ್ಲಿ ಸುಯೋಧನನೇನು?”
ಹಾಗೆ ಮಾತನಾಡುತ್ತಿದ್ದ ವೃಕೋಧರನನ್ನು ಸಂತೋಷದಿಂದ ಗೌರವಿಸಿ ವಾಸುದೇವನು ಈ ಮಾತುಗಳನ್ನಾಡಿದನು:
“ಮಹಾಬಾಹೋ! ನಿನ್ನನ್ನೇ ಆಶ್ರಯಿಸಿ ಯುಧಿಷ್ಠಿರನು ಶತ್ರುಗಳನ್ನು ಕಳೆದುಕೊಂಡು ಬೆಳಗುತ್ತಿರುವ ತನ್ನ ಸಂಪತ್ತನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ನಿನ್ನಿಂದಾಗಿ ರಣದಲ್ಲಿ ಧೃತರಾಷ್ಟ್ರನ ಸರ್ವಸುತರೂ, ರಾಜರೂ, ರಾಜಪುತ್ರರೂ, ಆನೆಗಳೂ ಹತರಾಗಿ ಬಿದ್ದಿದ್ದಾರೆ. ಮಹಾಯುದ್ಧದಲ್ಲಿ ನಿನ್ನನ್ನು ಎದುರಿಸಿ ಕಲಿಂಗರು, ಮಾಗಧರು, ಪೂರ್ವದವರು, ಗಾಂಧಾರರು ಮತ್ತು ಕುರವರು ಹತರಾಗಿದ್ದಾರೆ. ದುರ್ಯೋಧನನನ್ನು ಕೂಡ ಸಂಹರಿಸಿ ವಿಷ್ಣುವು ಶಚೀಪತಿಗೆ ಹೇಗೋ ಹಾಗೆ ನೀನು ಧರ್ಮರಾಜನಿಗೆ ಈ ಸಾಗರಮೇಖಲೆ ಭೂಮಿಯನ್ನು ಸಮರ್ಪಿಸು. ರಣದಲ್ಲಿ ನಿನ್ನನ್ನು ಎದುರಿಸಿ ಪಾಪಿ ಧಾರ್ತರಾಷ್ಟ್ರನು ವಿನಾಶಹೊಂದುತ್ತಾನೆ. ಅವನ ಎಡ ತೊಡೆಯನ್ನು ಮುರಿದು ನೀನು ಪ್ರತಿಜ್ಞೆಯನ್ನು ಪೂರೈಸಿಕೊಳ್ಳುವೆ. ಸದಾ ಪ್ರಯತ್ನಪೂರ್ವಕವಾಗಿ ಧೃತರಾಷ್ಟ್ರಜನೊಡನೆ ಯುದ್ಧಮಾಡಬೇಕು. ಏಕೆಂದರೆ ಅವನು ಕುಶಲನು, ಬಲಿಷ್ಠನು ಮತ್ತು ನಿತ್ಯವೂ ಯುದ್ಧಕಲೆಯನ್ನು ಸಂಪೂರ್ಣವಾಗಿ ತಿಳಿದಿರುವನು.”
ಆಗ ಸಾತ್ಯಕಿಯು ಭೀಮಸೇನನನ್ನು ವಿವಿಧ ಮಾತುಗಳಿಂದ ಪ್ರಶಂಸಿಸಿದನು. ಧರ್ಮರಾಜನ ನಾಯಕತ್ವದಲ್ಲಿದ್ದ ಪಾಂಚಾಲರೂ ಪಾಂಡವೇಯರೂ ಎಲ್ಲರೂ ಭೀಮಸೇನನ ಆ ಮಾತನ್ನು ಗೌರವಿಸಿದರು. ಆಗ ಭೀಮಬಲ ಭೀಮನು ಸೃಂಜಯರೊಡನೆ ಸುಡುತ್ತಿರುವ ಭಾಸ್ಕರನಂತೆ ನಿಂತಿರುವ ಯುಧಿಷ್ಠಿರನಿಗೆ ಹೇಳಿದನು:
“ರಣದಲ್ಲಿ ನಾನೇ ಇವನೊಡನೆ ಯುದ್ಧಮಾಡಲು ಬಯಸುತ್ತೇನೆ. ಏಕೆಂದರೆ ಈ ಪುರುಷಾಧಮನು ರಣದಲ್ಲಿ ನನ್ನನ್ನು ಗೆಲ್ಲಲು ಶಕ್ತನಿಲ್ಲ. ಖಾಂಡವದಲ್ಲಿ ಅರ್ಜುನನು ಅಗ್ನಿಯನ್ನು ಸುರಿಸಿದಂತೆ ನನ್ನ ಹೃದಯದಲ್ಲಿ ಚೆನ್ನಾಗಿ ಹುದುಗಿರುವ ಕ್ರೋಧಾಗ್ನಿಯನ್ನು ಇಂದು ನಾನು ಧಾರ್ತರಾಷ್ಟ್ರ ಸುಯೋಧನನ ಮೇಲೆ ಸುರಿಯುತ್ತೇನೆ. ಇಂದು ಈ ಪಾಪಿಯನ್ನು ಗದೆಯಿಂದ ಸಂಹರಿಸಿ ನಿನ್ನ ಹೃದಯದಲ್ಲಿ ನೆಟ್ಟಿಕೊಂಡಿರುವ ಮುಳ್ಳನ್ನು ಕಿತ್ತುಹಾಕುತ್ತೇನೆ. ಸುಖಿಯಾಗಿರು! ಇಂದು ಕೀರ್ತಿಮಯೀ ಮಾಲೆಯನ್ನು ನಿನಗೆ ತೊಡಿಸುತ್ತೇನೆ. ಸುಯೋಧನನನ್ನು ಪ್ರಾಣ-ಸಂಪತ್ತು-ರಾಜ್ಯಗಳಿಂದ ಇಂದು ಮೋಕ್ಷಗೊಳಿಸುತ್ತೇನೆ. ತನ್ನ ಮಗನು ನನ್ನಿಂದ ಹತನಾದುದನ್ನು ಕೇಳಿ ರಾಜಾ ಧೃತರಾಷ್ಟ್ರನೂ ಕೂಡ ಇಂದು ಶಕುನಿಯ ಬುದ್ಧಿಯಿಂದ ಹುಟ್ಟಿದ ಅಶುಭ ಕರ್ಮಗಳನ್ನು ನೆನಪಿಸಿಕೊಳ್ಳುತ್ತಾನೆ!”
ಹೀಗೆ ಹೇಳಿ ಆ ಭರತಶ್ರೇಷ್ಠ ವೀರ್ಯವಾನನು ಗದೆಯನ್ನು ಮೇಲೆತ್ತಿ ಶಕ್ರನು ವೃತ್ರನನ್ನು ಯುದ್ಧಕ್ಕೆ ಆಹ್ವಾನಿಸುವಂತೆ ಮೇಲೆದ್ದುನಿಂತನು. ಹಿಂಡಿನಿಂದ ಬೇರ್ಪಟ್ಟ ಸಲಗದಂತೆ ಒಂಟಿಯಾಗಿದ್ದ ಮಹಾಬಲ ಧಾರ್ತರಾಷ್ಟ್ರನನ್ನು ನೋಡಿ ಪಾಂಡವರೆಲ್ಲರೂ ಹರ್ಷಿತರಾದರು. ಗದೆಯನ್ನು ಎತ್ತಿಹಿಡಿದು ಶಿಖರಯುಕ್ತ ಕೈಲಾಸದಂತೆ ನಿಂತಿರುವ ದುರ್ಯೋಧನನನ್ನು ನೋಡಿ ಭೀಮಸೇನನು ಹೇಳಿದನು:
“ನೀನು ಮತ್ತು ರಾಜಾ ಧೃತರಾಷ್ಟ್ರರು ನಮ್ಮ ಮೇಲೆ ವಾರಣಾವತಲ್ಲಿ ಎಸಗಿದ ದುಷ್ಕೃತಗಳನ್ನು ಸ್ಮರಿಸಿಕೋ! ದುಷ್ಟಾತ್ಮನ್! ಸಭಾಮಧ್ಯದಲ್ಲಿ ರಜಸ್ವಲೆ ದ್ರೌಪದಿಯನ್ನು ಕಾಡಿದುದು ಮತ್ತು ಶಕುನಿಯ ಬುದ್ಧಿನಿಶ್ಚಯದಂತೆ ದ್ಯೂತದಲ್ಲಿ ರಾಜನನ್ನು ಗೆದ್ದುದು – ಇವು ಮತ್ತು ಇನ್ನೂ ಅನೇಕ ಪಾಪಗಳನ್ನೆಸಗಿರುವೆ! ನಿರಪರಾಧಿ ಪಾರ್ಥರ ಮೇಲೆಸಗಿದ ಅವುಗಳ ಮಹಾಫಲವನ್ನು ನೋಡು! ನೀನು ಮಾಡಿದುದರಿಂದಾಗಿ ನಮ್ಮೆಲ್ಲರ ಪಿತಾಮಹ ಗಾಂಗೇಯನು ಹತನಾಗಿ ಶರತಲ್ಪದಲ್ಲಿ ಮಲಗಿದ್ದಾನೆ. ದ್ರೋಣನು ಹತನಾದನು. ಕರ್ಣನೂ ಶಲ್ಯನೂ ಹತರಾದರು. ವೈರದ ಆದಿಕರ್ತ ಶಕುನಿಯೂ ಯುದ್ಧದಲ್ಲಿ ಮಡಿದನು. ನಿನ್ನ ಶೂರ ಭ್ರಾತರರೂ, ಸೈನಿಕರೊಂದಿಗೆ ಪುತ್ರರೂ, ಸಮರದಿಂದ ಹಿಂದಿರುಗದ ಶೂರ ರಾಜರೂ ಹತರಾದರು. ಇವರು ಮತ್ತು ಅನ್ಯ ಅನೇಕ ಕ್ಷತ್ರಿಯರ್ಷಭರೂ ಹತರಾದರು. ದ್ರೌಪದಿಗೆ ಕ್ಲೇಶವನ್ನು ತಂದ ಪಾಪಿ ಪ್ರತಿಕಾಮಿಯೂ ಹತನಾದನು. ನೀನೊಬ್ಬನೇ ಕುಲಘ್ನ ಅಧಮ ಪುರುಷ ಉಳಿದುಕೊಂಡಿದ್ದೀಯೆ. ನಿನ್ನನ್ನು ಇಂದು ಗದೆಯಿಂದ ಕೊಲ್ಲುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ. ಇಂದು ರಣದಲ್ಲಿ ನಿನ್ನ ದರ್ಪವೆಲ್ಲವನ್ನೂ, ರಾಜ್ಯದಮೇಲಿನ ಅತ್ಯಾಶೆಯನ್ನೂ, ಪಾಂಡವರ ಮೇಲೆಸಗಿದ ದುಷ್ಕೃತಗಳನ್ನೂ ನಾಶಗೊಳಿಸುತ್ತೇನೆ!”
ದುರ್ಯೋಧನನು ಹೇಳಿದನು:
“ವೃಕೋದರ! ವೃಥಾ ಕೊಚ್ಚಿಕೊಳ್ಳುವುದರಿಂದ ಏನಾಗಲಿಕ್ಕಿದೆ? ಇಂದು ನನ್ನೊಡನೆ ಯುದ್ಧಮಾಡು! ನಿನ್ನಲ್ಲಿರುವ ಯುದ್ಧಶ್ರದ್ಧೆಯನ್ನು ಇಂದು ನಾನು ನಾಶಗೊಳಿಸುತ್ತೇನೆ! ಪಾಪಿ! ಹಿಮಾಲಯ ಶಿಖರಾಕಾರದ ಮಹಾ ಗದೆಯನ್ನು ಹಿಡಿದು ಗದಾಯುದ್ಧಕ್ಕೆ ನಿಂತಿರುವ ನನ್ನನ್ನು ನೀನು ನೋಡುತ್ತಿಲ್ಲವೇ? ಇಂದು ಗದಾಪಾಣಿಯಾಗಿರುವ ನನ್ನನ್ನು ಯಾವ ಶತ್ರುವು ಗೆಲ್ಲುವ ಉತ್ಸಾಹತಾಳಿರುತ್ತಾನೆ? ನ್ಯಾಯರೀತಿಯಲ್ಲಿ ಯುದ್ಧಮಾಡುವ ದೇವ ಪುರಂದರನೂ ಈ ಉತ್ಸಾಹತೋರಿಸಲಿಕ್ಕಿಲ್ಲ! ಶರತ್ಕಾಲದ ನಿರ್ಜಲ ಮೇಘದಂತೆ ವ್ಯರ್ಥವಾಗಿ ಗರ್ಜಿಸಬೇಡ! ನಿನ್ನಲ್ಲಿ ಎಷ್ಟು ಬಲವಿದೆಯೆಂದು ತಿಳಿದುಕೊಂಡಿರುವೆಯೋ ಅದನ್ನು ಯುದ್ಧದಲ್ಲಿ ಪ್ರದರ್ಶಿಸು!”
ಅವನ ಆ ಮಾತನ್ನು ಕೇಳಿ ವಿಜಯೇಚ್ಛಿ ಸೃಂಜಯರೊಂದಿಗೆ ಪಾಂಚಾಲರೆಲ್ಲರೂ ಆ ಮಾತನ್ನು ಗೌರವಿಸಿದರು. ಚಪ್ಪಾಳೆಶಬ್ಧಗಳಿಂದ ಮಾನವರು ಮದಿಸಿದ ಆನೆಯನ್ನು ಉದ್ರೇಕಗೊಳಿಸುವಂತೆ ರಾಜ ದುರ್ಯೋಧನನನ್ನು ಮತ್ತೆ ಮತ್ತೆ ಅವರು ಹರ್ಷಗೊಳಿಸಿದರು. ಆಗ ಜಯೈಷಿ ಪಾಂಡವರ ಆನೆಗಳು ಘೀಳಿಟ್ಟವು. ಕುದುರೆಗಳು ಕೆನೆದವು, ಮತ್ತು ಶಸ್ತ್ರಗಳು ಪ್ರಜ್ವಲಿಸಿದವು.