ವೇದ-ಉತ್ತಂಕ

ಅಯೋದ ಧೌಮ್ಯನ ಶಿಷ್ಯ ವೇದ ಮತ್ತು ವೇದನ ಶಿಷ್ಯ ಉತ್ತಂಕನ ಈ ಕಥೆಯು ಆದಿಪರ್ವದ ಪೌಷ್ಯಪರ್ವದ ಅಧ್ಯಾಯ ೩ರಲ್ಲಿ ಬರುತ್ತದೆ (ಶ್ಲೋಕ ೭೯-೧೯೫). ನೈಮಿಷಾರಣ್ಯ ವಾಸೀ ಋಷಿಗಳಿಗೆ ಮಹಾಭಾರತ ಕಥೆಯ ಪ್ರಾರಂಭದಲ್ಲಿ ಸೂತ ಪುರಾಣಿಕ ಉಗ್ರಶ್ರವನು ಈ ಕಥೆಯನ್ನು ಹೇಳುತ್ತಾನೆ. ಈ ಕಥೆಯು ಜನಮೇಜಯನ ಸರ್ಪಸತ್ರಕ್ಕೂ ಜೋಡಿಕೊಂಡಿದೆ.

01003079A ಅಥಾಪರಃ ಶಿಷ್ಯಸ್ತಸ್ಯೈವಾಯೋದಸ್ಯ ಧೌಮ್ಯಸ್ಯ ವೇದೋ

         ನಾಮ||

01003080A ತಮುಪಾಧ್ಯಾಯಃ ಸಂದಿದೇಶ|

01003080B ವತ್ಸ ವೇದ ಇಹಾಸ್ಯತಾಂ|

01003080C ಭವತಾ ಮದ್ಗೃಹೇ ಕಂಚಿತ್ಕಾಲಂ ಶುಶ್ರೂಷಮಾಣೇನ

         ಭವಿತವ್ಯಂ|

01003080D ಶ್ರೇಯಸ್ತೇ ಭವಿಷ್ಯತೀತಿ||

ಅಯೋದ ಧೌಮ್ಯನ ಇನ್ನೊಬ್ಬ ಶಿಷ್ಯನ ಹೆಸರು ವೇದ. ಅವನಿಗೆ ಉಪಾಧ್ಯಾಯನು ಈ ರೀತಿ ಆದೇಶಿಸಿದನು: “ವತ್ಸ! ವೇದ! ಇಲ್ಲಿ ಬಾ. ನೀನು ನನ್ನ ಮನೆಯಲ್ಲಿ ಕೆಲವು ಕಾಲ ಶುಶ್ರೂಷೆ ಮಾಡಬೇಕಾಗುತ್ತದೆ. ನಿನಗೆ ಶ್ರೇಯಸ್ಸಾಗುತ್ತದೆ.”

01003081A ಸ ತಥೇತ್ಯುಕ್ತ್ವಾ ಗುರುಕುಲೇ ದೀರ್ಘಕಾಲಂ

         ಗುರುಶುಶ್ರೂಷಣಪರೋಽವಸತ್|

01003081B ಗೌರಿವ ನಿತ್ಯಂ ಗುರುಷು ಧೂರ್ಷು ನಿಯುಜ್ಯಮಾನಃ                         ಶೀತೋಷ್ಣಕ್ಷುತ್ತೃಷ್ಣಾದುಃಖಸಹಃ ಸರ್ವತ್ರಾಪ್ರತಿಕೂಲಃ||

ಇದನ್ನು ಕೇಳಿದ ಅವನು ದೀರ್ಘಕಾಲ ಗುರುಕುಲದಲ್ಲಿ ಗುರು ಶುಶ್ರೂಷಣೆಯಲ್ಲಿ ನಿರತನಾದನು. ನಿತ್ಯವೂ, ಏನೂ ದೂರಿಲ್ಲದೇ, ಭಾರದ ಹೊರೆಯನ್ನು ಹೊರಲು ಕಟ್ಟಿದ್ದ ಎತ್ತಿನ ಹಾಗೆ ಶೀತ-ಉಷ್ಣ, ಹಸಿವು-ಬಾಯಾರಿಕೆಗಳ ದುಃಖವನ್ನು ಸಹಿಸಿದನು.

01003082A ತಸ್ಯ ಮಹತಾ ಕಾಲೇನ ಗುರುಃ ಪರಿತೋಷಂ ಜಗಾಮ|

01003082B ತತ್ಪರಿತೋಷಾಚ್ಚ ಶ್ರೇಯಃ ಸರ್ವಜ್ಞತಾಂ ಚಾವಾಪ|

01003082C ಏಷಾ ತಸ್ಯಾಪಿ ಪರೀಕ್ಷಾ ವೇದಸ್ಯ||

ಬಹಳ ಕಾಲವು ಕಳೆದನಂತರ ಅವನ ಗುರುವು ಸಂತೃಪ್ತನಾದನು. ಅವನ ತೃಪ್ತಿಯಿಂದಾಗಿ ಶ್ರೇಯಸ್ಸು ಮತ್ತು ಸರ್ವ ಜ್ಞಾನವನ್ನು ಹೊಂದಿದನು. ಇದು ವೇದನ ಪರೀಕ್ಷೆಯಾಗಿತ್ತು.

01003083A ಸ ಉಪಾಧ್ಯಾಯೇನಾನುಜ್ಞಾತಃ ಸಮಾವೃತ್ತಸ್ತಸ್ಮಾದ್

         ಗುರುಕುಲವಾಸಾದ್ಗೃಹಾಶ್ರಮಂ ಪ್ರತ್ಯಪದ್ಯತ|

01003083B ತಸ್ಯಾಪಿ ಸ್ವಗೃಹೇ ವಸತಸ್ತ್ರಯಃ ಶಿಷ್ಯಾ ಬಭೂವುಃ||

ಗುರುಕುಲವಾಸವನ್ನು ಪೂರೈಸಿ ಉಪಾಧ್ಯಾಯನಿಂದ ಅನುಮತಿಯನ್ನು ಪಡೆದು ಅವನು ಗೃಹಸ್ಥಾಶ್ರಮವನ್ನು ಪ್ರವೇಶಿಸಿದನು.

01003084A ಸ ಶಿಷ್ಯಾನ್ನ ಕಿಂಚಿದುವಾಚ|

01003084B ಕರ್ಮ ವಾ ಕ್ರಿಯತಾಂ ಗುರುಶುಶ್ರೂಷಾ ವೇತಿ|

01003084C ದುಃಖಾಭಿಜ್ಞೋ ಹಿ ಗುರುಕುಲವಾಸಸ್ಯ ಶಿಷ್ಯಾನ್ ಪರಿಕ್ಲೇಶೇನ

         ಯೋಜಯಿತುಂ ನೇಯೇಷ||

ಅವನ ಮನೆಯಲ್ಲಿಯೂ ಕೂಡ ಮೂವರು ಶಿಷ್ಯರು ವಾಸಿಸುತ್ತಿದ್ದರು. ಅವನು ಒಮ್ಮೆಯೂ ತನ್ನ ಶಿಷ್ಯರಿಗೆ ಕೆಲಸವನ್ನು ಮಾಡು ಅಥವಾ ಗುರುಶುಶ್ರೂಷೆಯನ್ನು ಮಾಡು ಎಂದು ಹೇಳಲಿಲ್ಲ. ಗುರುಕುಲವಾಸದ ದುಃಖಗಳನ್ನು ತಿಳಿದಿದ್ದ ಅವನು ತನ್ನ ಶಿಷ್ಯರಿಗೆ ಕಷ್ಟ ಕೊಡಲು ಬಯಸುತ್ತಿರಲಿಲ್ಲ. 

01003085A ಅಥ ಕಸ್ಯ ಚಿತ್ಕಾಲಸ್ಯ ವೇದಂ ಬ್ರಾಹ್ಮಣಂ ಜನಮೇಜಯ

         ಪೌಷ್ಯಶ್ಚ ಕ್ಷತ್ರಿಯಾವುಪೇತ್ಯೋಪಾಧ್ಯಾಯಂ  ವರಯಾಂ

         ಚಕ್ರತುಃ||

ಒಮ್ಮೊಮ್ಮೆ ಕ್ಷತ್ರಿಯ ಜನಮೇಜಯ ಮತ್ತು ಪೌಷ್ಯರು ಬಂದು ವೇದನನ್ನು ಉಪಾಧ್ಯಾಯನನ್ನಾಗಿ ನಿಯುಕ್ತಿಸುತ್ತಿದ್ದರು.

01003086A ಸ ಕದಾಚಿದ್ಯಾಜ್ಯಕಾರ್ಯೇಣಾಭಿಪ್ರಸ್ಥಿತ ಉತ್ತಂಕಂ ನಾಮ

         ಶಿಷ್ಯಂ ನಿಯೋಜಯಾಮಾಸ|

01003086B ಭೋ ಉತ್ತಂಕ ಯತ್ಕಿಂಚಿದಸ್ಮದ್ಗೃಹೇ ಪರಿಹೀಯತೇ

                        ತದಿಚ್ಛಾಮ್ಯಹಮಪರಿಹೀಣಂ ಭವತಾ ಕ್ರಿಯಮಾಣಮಿತಿ||

ಒಂದು ದಿನ ಯಜ್ಞಕಾರ್ಯಕ್ಕೆಂದು ಹೊರಡುವಾಗ ಉತ್ತಂಕ ಎಂಬ ಹೆಸರಿನ ಶಿಷ್ಯನನ್ನು ಕರೆದು “ಉತ್ತಂಕ! ನನ್ನ ಮನೆಯಲ್ಲಿ ಏನೆಲ್ಲ ಮಾಡಬೇಕಾದ್ದುದು ಇವೆಯೋ ಅವೆಲ್ಲವನ್ನೂ ನೀನು ಕಡೆಗಣಿಸದೇ ಮಾಡು” ಎಂದು ನಿಯೋಜಿಸಿದನು.

01003087A ಸ ಏವಂ ಪ್ರತಿಸಮಾದಿಶ್ಯೋತ್ತಂಕಂ ವೇದಃ ಪ್ರವಾಸಂ

         ಜಗಾಮ||

ಹೀಗೆ ಉತ್ತಂಕನಿಗೆ ಆದೇಶವನ್ನಿತ್ತು ವೇದನು ಪ್ರವಾಸಕ್ಕೆ ಹೊರಟು ಹೋದನು.

01003088A ಅಥೋತ್ತಂಕೋ

         ಗುರುಶುಶ್ರೂಷುರ್ಗುರುನಿಯೋಗಮನುತಿಷ್ಠಮಾನಸ್ತತ್ರ

         ಗುರುಕುಲೇ ವಸತಿ ಸ್ಮ||

01003089A ಸ ವಸಂಸ್ತತ್ರೋಪಾಧ್ಯಾಯಸ್ತ್ರೀಭಿಃ ಸಹಿತಾಭಿರಾಹೂಯೋಕ್ತಃ|

01003089B ಉಪಾಧ್ಯಾಯಿನೀ ತೇ ಋತುಮತೀ|

01003089C ಉಪಾಧ್ಯಾಯಶ್ಚ ಪ್ರೋಷಿತಃ|

01003089D ಅಸ್ಯಾ ಯಥಾಯಮೃತುರ್ವನ್ಧ್ಯೋ ನ ಭವತಿ ತಥಾ

         ಕ್ರಿಯತಾಂ|

01003089E ಏತದ್ವಿಷೀದತೀತಿ||

ಗುರುಶುಶ್ರೂಷೆ ಮತ್ತು ಗುರುನಿಯೋಗದಲ್ಲಿ ಮನಸ್ಸನ್ನಿಟ್ಟಿದ್ದ ಉತ್ತಂಕನು ಗುರುಕುಲದಲ್ಲಿ ವಾಸಿಸುತ್ತಿದ್ದನು. ಅವನು ಅಲ್ಲಿ ವಾಸಿಸುತ್ತಿರುವಾಗ ಒಂದು ದಿನ ಉಪಾಧ್ಯಾಯನ ಮನೆಯ ಸ್ತ್ರೀಯರು ಬಂದು ಹೇಳಿದರು: “ನಿನ್ನ ಉಪಾಧ್ಯಾಯನಿಯು ಋತುಮತಿಯಾಗಿದ್ದಾಳೆ. ಉಪಾಧ್ಯಾಯನು ಇಲ್ಲ. ಅವಳ ಋತುಕಾಲವು ನಿಷ್ಪ್ರಯೋಜಕವಾಗದ ಹಾಗೆ ಮಾಡು.”

01003090A ಸ ಏವಮುಕ್ತಸ್ತಾಃ ಸ್ತ್ರಿಯಃ ಪ್ರತ್ಯುವಾಚ|

01003090B ನ ಮಯಾ ಸ್ತ್ರೀಣಾಂ ವಚನಾದಿದಮಕಾರ್ಯಂ ಕಾರ್ಯಂ|

01003090C ನ ಹ್ಯಹಮುಪಾಧ್ಯಾಯೇನ ಸಂದಿಷ್ಟಃ|

01003090D ಅಕಾರ್ಯಮಪಿ ತ್ವಯಾ ಕಾರ್ಯಮಿತಿ||

ಹೀಗೆ ಹೇಳಿದ ಸ್ತ್ರೀಯರಿಗೆ ಅವನು ಉತ್ತರಿಸಿದನು: “ಸ್ತ್ರೀಯರ ಮಾತನ್ನು ಕೇಳಿ ಕಾರ್ಯಗೈಯುವುದು ನನಗೆ ಸೂಕ್ತವಲ್ಲ. ಯಾವ ಅಕಾರ್ಯವೂ ನಿನ್ನಿಂದ ನಡೆಯಬಾರದು ಎಂದು ಉಪಾಧ್ಯಾಯನು ನನಗೆ ಸಂದೇಶವನ್ನಿತ್ತಿದ್ದಾನೆ.”

01003091A ತಸ್ಯ ಪುನರುಪಾಧ್ಯಾಯಃ ಕಾಲಾಂತರೇಣ ಗೃಹಾನುಪಜಗಾಮ

         ತಸ್ಮಾತ್ಪ್ರವಾಸಾತ್|

01003091B ಸ ತದ್ವೃತ್ತಂ ತಸ್ಯಾಶೇಷಮುಪಲಭ್ಯ ಪ್ರೀತಿಮಾನಭೂತ್||

ಕಾಲಾನಂತರದಲ್ಲಿ ತನ್ನ ಪ್ರವಾಸದಿಂದ ಅವನ ಉಪಾಧ್ಯಾಯನು ಮನೆಗೆ ಹಿಂದಿರುಗಿದನು. ನಡೆದುದೆಲ್ಲವನ್ನೂ ಕೇಳಿ ಸಂತೋಷಪಟ್ಟನು.

01003092A ಉವಾಚ ಚೈನಂ|

01003092B ವತ್ಸೋತ್ತಂಕ ಕಿಂ ತೇ ಪ್ರಿಯಂ ಕರವಾಣೀತಿ|

01003092C ಧರ್ಮತೋ ಹಿ ಶುಶ್ರೂಷಿತೋಽಸ್ಮಿ ಭವತಾ|

01003092D ತೇನ ಪ್ರೀತಿಃ ಪರಸ್ಪರೇಣ ನೌ ಸಂವೃದ್ಧಾ|

01003092E ತದನುಜಾನೇ ಭವಂತಂ|

01003092F ಸರ್ವಾಮೇವ ಸಿದ್ಧಿಂ ಪ್ರಾಪ್ಸ್ಯಸಿ|

01003092G ಗಮ್ಯತಾಮಿತಿ||

ಅವನು ಹೇಳಿದನು: “ವತ್ಸ ಉತ್ತಂಕ! ನಿನಗೆ ಇಷ್ಟವಾದ ಏನನ್ನು ಮಾಡಲಿ? ನೀನು ನನ್ನನ್ನು ಧರ್ಮದಿಂದ ಶುಶ್ರೂಷೆ ಮಾಡುತ್ತಿರುವೆ. ಇದರಿಂದ ಪರಸ್ಪರರ ಪ್ರೀತಿಯು ಹೆಚ್ಚಾಗಿದೆ. ನಿನಗೆ ಹೋಗಲು ಅನುಮತಿಯಿದೆ. ನಿನಗೆ ಎಲ್ಲವೂ ಸಿದ್ಧಿಯಾಗಲಿ. ಹೋಗು.”

01003093A ಸ ಏವಮುಕ್ತಃ ಪ್ರತ್ಯುವಾಚ|

01003093B ಕಿಂ ತೇ ಪ್ರಿಯಂ ಕರವಾಣೀತಿ|

01003093C ಏವಂ ಹ್ಯಾಹುಃ||

01003094A ಯಶ್ಚಾಧರ್ಮೇಣ ವಿಬ್ರೂಯಾದ್ಯಶ್ಚಾಧರ್ಮೇಣ ಪೃಚ್ಛತಿ||

01003095A ತಯೋರನ್ಯತರಃ ಪ್ರೈತಿ ವಿದ್ವೇಷಂ ಚಾಧಿಗಚ್ಛತಿ|

01003095B ಸೋಽಹಂ ಅನುಜ್ಞಾತೋ ಭವತಾ ಇಚ್ಛಾಮೀಷ್ಟಂ ತೇ

         ಗುರ್ವರ್ಥಮುಪಹರ್ತುಮಿತಿ||

ಇದನ್ನು ಕೇಳಿದ ಅವನು ಉತ್ತರಿಸಿದನು: “ಅಧರ್ಮದಿಂದ ಏನನ್ನು ಕೊಟ್ಟರೂ ಅಥವಾ ಅಧರ್ಮದಿಂದ ಏನನ್ನು ತೆಗೆದುಕೊಂಡರೂ ಅವರೀರ್ವರ ನಡುವೆ ದ್ವೇಷ ಉಂಟಾಗುತ್ಟದೆ ಅಥವಾ ಅವರಲ್ಲಿ ಒಬ್ಬನು ಸಾಯುತ್ತಾನೆ ಎಂಬ ಮಾತಿದೆ. ಆದುದರಿಂದ ನಿನ್ನ ಅನುಜ್ಞೆಯನ್ನು ಪಡೆದು ನಿನಗೆ ಇಷ್ಟವಾದ ಗುರುದಕ್ಷಿಣೆಯನ್ನು ಕೊಡಲು ಬಯಸುತ್ತೇನೆ. ನಿನಗೆ ಇಷ್ಟವಾದ ಏನನ್ನು ಮಾಡಲಿ?”

01003096A ತೇನೈವಮುಕ್ತ ಉಪಾಧ್ಯಾಯಃ ಪ್ರತ್ಯುವಾಚ|

01003096B ವತ್ಸೋತ್ತಂಕ ಉಷ್ಯತಾಂ ತಾವದಿತಿ||

01003097A ಸ ಕದಾಚಿತ್ತಮುಪಾಧ್ಯಾಯಮಾಹೋತ್ತಂಕಃ|

01003097B ಆಜ್ಞಾಪಯತು ಭವಾನ್|

01003097C ಕಿಂ ತೇ ಪ್ರಿಯಮುಪಹರಾಮಿ ಗುರ್ವರ್ಥಮಿತಿ||

ಉಪಾಧ್ಯಾಯನು ಹೇಳಿದನು: “ವತ್ಸ ಉತ್ತಂಕ! ಹಾಗಾದರೆ ಇನ್ನೂ ಸ್ವಲ್ಪ ಸಮಯ ನಿಲ್ಲು.” ಕೆಲವು ಸಮಯದ ನಂತರ ಉತ್ತಂಕನು ಪುನಃ ಕೇಳಿದನು: “ನಿಮ್ಮ ದಕ್ಷಿಣೆಗಾಗಿ ನಿಮಗೆ ಪ್ರಿಯವಾದ ಏನನ್ನು ಮಾಡಲಿ? ಅಜ್ಞಾಪಿಸಿ.”

01003098A ತಮುಪಾಧ್ಯಾಯಃ ಪ್ರತ್ಯುವಾಚ|

01003098B ವತ್ಸೋತ್ತಂಕ ಬಹುಶೋ ಮಾಂ ಚೋದಯಸಿ

         ಗುರ್ವರ್ಥಮುಪಹರೇಯಮಿತಿ|

01003098C ತದ್ಗಚ್ಛ|

01003098D ಏನಾಂ ಪ್ರವಿಶ್ಯೋಪಾಧ್ಯಾಯಿನೀಂ ಪೃಚ್ಛ ಕಿಮುಪಹರಾಮೀತಿ|

ಉಪಾಧ್ಯಾಯನು ಉತ್ತರಿಸಿದನು: “ವತ್ಸ ಉತ್ತಂಕ! ಗುರುದಕ್ಷಿಣೆಯ ಕುರಿತು ನೀನು ಬಹಳಷ್ಟು ಬಾರಿ ನನ್ನಲ್ಲಿ ಕೇಳಿದ್ದೀಯೆ. ಹಾಗಾದರೆ ಹೋಗು. ನಿನ್ನ ಉಪಾಧ್ಯಾಯನಿಯಲ್ಲಿ ಗುರುದಕ್ಷಿಣೆಯಾಗಿ ಏನನ್ನು ಅವಳು ಬಯಸುತ್ತಾಳೆ ಎಂದು ಕೇಳಿ, ಅವಳು ಹೇಳಿದುದನ್ನು ತೆಗೆದುಕೊಂಡು ಬಾ.”

01003098E ಏಷಾ ಯದ್ ಬ್ರವೀತಿ ತದುಪಹರಸ್ವೇತಿ||

01003099A ಸ ಏವಮುಕ್ತ ಉಪಾಧ್ಯಾಯೇನೋಪಾಧ್ಯಾಯಿನೀಮಪೃಚ್ಛತ್|

01003099B ಭವತ್ಯುಪಾಧ್ಯಾಯೇನಾಸ್ಮ್ಯನುಜ್ಞಾತೋ ಗೃಹಂ ಗಂತುಂ|

01003099C ತದಿಚ್ಛಾಮೀಷ್ಟಂ ತೇ ಗುರ್ವರ್ಥಮುಪಹೃತ್ಯಾನೃಣೋ

         ಗಂತುಂ|

01003099D ತದಾಜ್ಞಾಪಯತು ಭವತೀ|

01003099E ಕಿಮುಪಹರಾಮಿ ಗುರ್ವರ್ಥಮಿತಿ||

ಉಪಾಧ್ಯಾಯನ ಈ ಮಾತುಗಳನ್ನು ಕೇಳಿ ಅವನು ಉಪಾಧ್ಯಾನಿಯಲ್ಲಿಗೆ ಹೋಗಿ ಕೇಳಿದನು: “ನನ್ನ ಉಪಾಧ್ಯಾಯರು ಮನೆಗೆ ಹೋಗಿ ನಿಮ್ಮಲ್ಲಿ ಗುರುದಕ್ಷಿಣೆಯಾಗಿ ಏನನ್ನು ಬಯಸುತ್ತೀರೆಂದು ಕೇಳಲು ಕಳುಹಿಸಿದ್ದಾರೆ. ಗುರುದಕ್ಷಿಣೆಯಾಗಿ ಏನನ್ನು ಬಯಸುತ್ತೀರಿ ಹೇಳಿ.”

01003100A ಸೈವಮುಕ್ತೋಪಾಧ್ಯಾಯಿನ್ಯುತ್ತಂಕಂ ಪ್ರತ್ಯುವಾಚ|

01003100B ಗಚ್ಛ ಪೌಷ್ಯಂ ರಾಜಾನಂ|

01003100C ಭಿಕ್ಷಸ್ವ ತಸ್ಯ ಕ್ಷತ್ರಿಯಯಾ ಪಿನದ್ಧೇ ಕುಂಡಲೇ|

01003100D ತೇ ಆನಯಸ್ವ|

01003100E ಇತಶ್ಚತುರ್ಥೇಽಹನಿ ಪುಣ್ಯಕಂ ಭವಿತಾ|

01003100F ತಾಭ್ಯಾಮಾಬದ್ಧಾಭ್ಯಾಂ ಬ್ರಾಹ್ಮಣಾನ್ಪರಿವೇಷ್ಟುಮಿಚ್ಛಾಮಿ|

01003100G ಶೋಭಮಾನಾ ಯಥಾ ತಾಭ್ಯಾಂ ಕುಂಡಲಾಭ್ಯಾಂ ತಸ್ಮಿನ್ನಹನಿ

         ಸಂಪಾದಯಸ್ವ|

01003100H ಶ್ರೇಯೋ ಹಿ ತೇ ಸ್ಯಾತ್ ಕ್ಷಣಂ ಕುರ್ವತ ಇತಿ||

ಇದನ್ನು ಕೇಳಿದ ಉಪಾಧ್ಯಾಯಿನಿಯು ಉತ್ತಂಕನಿಗೆ ಉತ್ತರಿಸಿದಳು: “ಪೌಷ್ಯ[1]ರಾಜನಲ್ಲಿಗೆ ಹೋಗಿ ಅವನ ಕ್ಷಾತ್ರಿಣಿಯ ಕರ್ಣಕುಂಡಲ[2]ಗಳನ್ನು ಕೇಳಿ ಅವುಗಳನ್ನು ತೆಗೆದುಕೊಂಡು ಬಾ. ಇಂದಿನಿಂದ ನಾಲ್ಕನೆಯ ದಿನ ಪುಣ್ಯಕ ವ್ರತದ ದಿನ. ಆದಿನ ನಾನು ಆ ಕುಂಡಲಗಳನ್ನು ಧರಿಸಿ ಬ್ರಾಹ್ಮಣರಿಗೆ ಭೋಜನವನ್ನು ನೀಡಲು ಬಯಸುತ್ತೇನೆ. ನಿನಗೆ ಶ್ರೇಯಸ್ಸಾಗಲಿ. ತ್ವರೆ ಮಾಡು.”

01003101A ಸ ಏವಮುಕ್ತ ಉಪಾಧ್ಯಾಯಿನ್ಯಾ ಪ್ರಾತಿಷ್ಠತೋತ್ತಂಕಃ|

01003101B ಸ ಪಥಿ ಗಚ್ಛನ್ನಪಶ್ಯದೃಷಭಮತಿಪ್ರಮಾಣಂ ತಮಧಿರೂಧಂ

         ಚ ಪುರುಷಮತಿಪ್ರಮಾಣಮೇವ||

01003102A ಸ ಪುರುಷ ಉತ್ತಂಕಮಭ್ಯಭಾಷತ|

01003102B ಉತ್ತಂಕೈತತ್ಪುರೀಷಮಸ್ಯ ಋಷಭಸ್ಯ ಭಕ್ಷಯಸ್ವೇತಿ||

01003103A ಸ ಏವಮುಕ್ತೋ ನೈಚ್ಛತ್||

01003104A ತಮಾಹ ಪುರುಷೋ ಭೂಯಃ|

01003104B ಭಕ್ಷಯಸ್ವೋತ್ತಂಕ|

01003104C ಮಾ ವಿಚಾರಯ|

01003104D ಉಪಾಧ್ಯಾಯೇನಾಪಿ ತೇ ಭಕ್ಷಿತಂ ಪೂರ್ವಮಿತಿ||

ಉಪಾಧ್ಯಾಯನಿಯು ಈ ರೀತಿ ಹೇಳಲು ಉತ್ತಂಕನು ಹೊರಟನು. ದಾರಿಯಲ್ಲಿ ಅವನು ಬೃಹದಾಕರದ ಪುರುಷನೊಬ್ಬನು ಬೃಹದಾಕಾರದ ಹೋರಿಯನ್ನೇರಿ ಹೋಗುತ್ತಿರುವ ದೃಶ್ಯವನ್ನು ಕಂಡನು. ಆ ಪುರುಷನು ಉತ್ತಂಕನಿಗೆ ಹೇಳಿದನು: “ಉತ್ತಂಕ! ಈ ಹೋರಿಯ ಸಗಣಿಯನ್ನು ತಿನ್ನು.” ಅವನು ನಿರಾಕರಿಸಿದಾಗ, ಆ ಪುರುಷನು ಪುನಃ ಹೇಳಿದನು: “ಉತ್ತಂಕ! ಇದನ್ನು ತಿನ್ನು.  ವಿಚಾರ ಮಾಡಬೇಡ. ಈ ಹಿಂದೆ ನಿನ್ನ ಉಪಾಧ್ಯಾಯನೂ ಇದನ್ನು ತಿಂದಿದ್ದಾನೆ.”

01003105A ಸ ಏವಮುಕ್ತೋ ಬಾಢಮಿತ್ಯುಕ್ತ್ವಾ ತದಾ ತದೃಷಭಸ್ಯ

         ಪುರೀಷಂ ಮೂತ್ರಂ ಚ ಭಕ್ಷಯಿತ್ವೋತ್ತಂಕಃ ಪ್ರತಸ್ಥೇ ಯತ್ರ

         ಸ ಕ್ಷತ್ರಿಯಃ ಪೌಷ್ಯಃ||

ಇದನ್ನು ಕೇಳಿದ ಉತ್ತಂಕನು “ಆಯಿತು” ಎಂದು ಆ ಹೋರಿಯ ಸಗಣಿ ಮತ್ತು ಮೂತ್ರವನ್ನು ಸೇವಿಸಿ ಕ್ಷತ್ರಿಯ ಪೌಷ್ಯನಲ್ಲಿಗೆ ಮುಂದುವರೆದನು.

01003106A ತಮುಪೇತ್ಯಾಪಶ್ಯದುತ್ತಂಕ ಆಸೀನಂ|

01003106B ಸ ತಮುಪೇತ್ಯಾಶೀರ್ಭಿರಭಿನಂದ್ಯೋವಾಚ|

01003106C ಅರ್ಥೀ ಭವಂತಮುಪಗತೋಽಸ್ಮೀತಿ||

01003107A ಸ ಏನಮಭಿವಾದ್ಯೋವಾಚ|

01003107B ಭಗವನ್ ಪೌಷ್ಯಃ ಖಲ್ವಹಂ|

01003107C ಕಿಂ ಕರವಾಣೀತಿ||

ಅವನು ಕುಳಿತಿರುವುದನ್ನು ನೋಡಿದ ಉತ್ತಂಕನು ಅವನಿಗೆ ಆಶೀರ್ವಚನಗಳಿಂದ ಅಭಿನಂದಿಸಿ ಹೇಳಿದನು: “ನಿನ್ನಲ್ಲಿ ಏನೋ ಒಂದನ್ನು ಕೇಳಲು ಬಂದಿದ್ದೇನೆ.” ಆಗ ಅವನನ್ನು ಅಭಿನಂದಿಸಿ “ಭಗವನ್! ನಾನು ಪೌಷ್ಯ. ಏನನ್ನು ಮಾಡಲಿ?” ಎಂದು ಕೇಳಿದನು.

01003108A ತಮುವಾಚೋತ್ತಂಕಃ|

01003108B ಗುರ್ವರ್ಥೇ ಕುಂಡಲಾಭ್ಯಾಮರ್ಥ್ಯಾಗತೋಽಸ್ಮೀತಿ ಯೇ ತೇ

         ಕ್ಷತ್ರಿಯಯಾ ಪಿನದ್ಧೇ ಕುಂಡಲೇ ತೇ    ಭವಾನ್ದಾತುಮರ್ಹತೀತಿ||

01003109A ತಂ ಪೌಷ್ಯಃ ಪ್ರತ್ಯುವಾಚ|

01003109B ಪ್ರವಿಶ್ಯಾಂತಃಪುರಂ ಕ್ಷತ್ರಿಯಾ ಯಾಚ್ಯತಾಮಿತಿ||

ಉತ್ತಂಕನು ಹೇಳಿದನು: “ಗುರುದಕ್ಷಿಣೆಯಾಗಿ ಕುಂಡಲಗಳನ್ನು ತೆಗೆದುಕೊಂಡು ಹೋಗಲು ಇಲ್ಲಿಗೆ ಬಂದಿದ್ದೇನೆ. ನೀನು ನಿನ್ನ ಕ್ಷತ್ರಿಣಿಯ ಕರ್ಣಕುಂಡಲಗಳನ್ನು ಕೊಡಬೇಕು.” ಪೌಷ್ಯನು ಅವನಿಗೆ ಉತ್ತರಿಸಿದನು: “ಅಂತಃಪುರವನ್ನು ಪ್ರವೇಶಿಸಿ ನನ್ನ ಕ್ಷತ್ರಿಣಿಯನ್ನು ಕೇಳಿ.”

01003110A ಸ ತೇನೈವಮುಕ್ತಃ ಪ್ರವಿಶ್ಯಾಂತಃಪುರಂ ಕ್ಷತ್ರಿಯಾಂ ನಾಪಶ್ಯತ್||

ಹೀಗೆ ಕೇಳಿದ ಅವನು ಅಂತಃಪುರವನ್ನು ಪ್ರವೇಶಿಸಿದನು. ಆದರೆ ಅಲ್ಲಿ ಅವನಿಗೆ ಕ್ಷತ್ರಾಣಿಯು ಕಾಣಲಿಲ್ಲ.

01003111A ಸ ಪೌಷ್ಯಂ ಪುನರುವಾಚ|

01003111B ನ ಯುಕ್ತಂ ಭವತಾ ವಯಮನೃತೇನೋಪಚರಿತುಂ|

01003111C ನ ಹಿ ತೇ ಕ್ಷತ್ರಿಯಾಂತಃಪುರೇ ಸನ್ನಿಹಿತಾ|

01003111D ನೈನಾಂ ಪಶ್ಯಾಮೀತಿ||

ಅವನು ಪೌಷ್ಯನಿಗೆ ಪುನಃ ಹೇಳಿದನು: “ನೀನು ಈ ರೀತಿ ನನ್ನಲ್ಲಿ ಸುಳ್ಳಾಡುವುದು ಸರಿಯಲ್ಲ. ಅಂತಃಪುರಕ್ಕೆ ಹೋದರೂ ಅಲ್ಲಿ ನಿನ್ನ ಕ್ಷತ್ರಾಣಿಯು ಕಾಣಲಿಲ್ಲ.”

01003112A ಸ ಏವಮುಕ್ತಃ ಪೌಷ್ಯಸ್ತಂ ಪ್ರತ್ಯುವಾಚ|

01003112B ಸಂಪ್ರತಿ ಭವಾನುಚ್ಛಿಷ್ಟಃ|

01003112C ಸ್ಮರ ತಾವತ್|

01003112D ನ ಹಿ ಸಾ ಕ್ಷತ್ರಿಯಾ ಉಚ್ಛಿಷ್ಠೇನಾಶುಚಿನಾ ವಾ ಶಕ್ಯಾ ದ್ರಷ್ಟುಂ|

01003112E ಪತಿವ್ರತಾತ್ವಾದೇಷಾ ನಾಶುಚೇರ್ದರ್ಶನಮುಪೈತೀತಿ||

ಆಗ ಪೌಷ್ಯನು ಉತ್ತರಿಸಿದನು: “ನಿನಗೆ ಮೈಲಿಗೆಯಾಗಿರಬಹುದು. ನೆನಪುಮಾಡಿಕೋ. ಉಚ್ಛಿಷ್ಠರಾದವರು ಅಥವಾ ಅಶುಚಿಯಾದವರು ಆ ಕ್ಷಾತ್ರಣಿಯನ್ನು ನೋಡಲು ಸಾಧ್ಯವಿಲ್ಲ. ಅವಳ ಪಾತಿವ್ರತ್ಯದಿಂದ ಅವಳು ಅಶುಚಿಯಾದವರಿಗೆ ಕಂಡು ಬರುವುದಿಲ್ಲ.”

01003113A ಅಥೈವಮುಕ್ತ ಉತ್ತಂಕಃ ಸ್ಮೃತ್ವೋವಾಚ|

01003113B ಅಸ್ತಿ ಖಲು ಮಯೋಚ್ಛಿಷ್ಟೇನೋಪಸ್ಪೃಷ್ಟಂ ಶೀಘ್ರಂ ಗಚ್ಛತಾ

         ಚೇತಿ||

01003114A ತಂ ಪೌಷ್ಯಃ ಪ್ರತ್ಯುವಾಚ|

01003114B ಏತತ್ತದೇವಂ ಹಿ|

01003114C ನ ಗಚ್ಛತೋಪಸ್ಪೃಷ್ಟಂ ಭವತಿ ನ ಸ್ಥಿತೇನೇತಿ||

ಸ್ವಲ್ಪಹೊತ್ತು ಯೋಚಿಸಿ ಉತ್ತಂಕನು ಹೇಳಿದನು: “ಬರುವ ಅವಸರದಲ್ಲಿ ನಿಂತೇ ಮೂತ್ರ ಮಾಡಿರುವುದರಿಂದ ಉಚ್ಛಿಷ್ಠನಾಗಿರಬಹುದು.” ಅದಕ್ಕೆ ಪೌಷ್ಯನು ಉತ್ತರಿಸಿದನು: “ನಡೆಯುವಾಗ ಅಥವಾ ನಿಂತು ಮೂತ್ರಮಾಡುವುದು ಸರಿಯಲ್ಲ[3].

01003115A ಅಥೋತ್ತಂಕಸ್ತಥೇತ್ಯುಕ್ತ್ವಾ ಪ್ರಾಙ್ಮುಖ ಉಪವಿಶ್ಯ

         ಸುಪ್ರಕ್ಷಾಲಿತಪಾಣಿಪಾದವದನೋಽಶಬ್ದಾಭಿರ್ಹೃದಯಂಗ-

         ಮಾಭಿರದ್ಭಿರುಪಸ್ಪೃಶ್ಯ ತ್ರಿಃ ಪೀತ್ವಾ ದ್ವಿಃ ಪರಿಮೃಜ್ಯ

         ಖಾನ್ಯದ್ಭಿರುಪಸ್ಪೃಶ್ಯಾಂತಃಪುರಂ ಪ್ರವಿಶ್ಯ ತಾಂ

         ಕ್ಷತ್ರಿಯಾಮಪಶ್ಯತ್||

ಆಗ ಉತ್ತಂಕನು ಪೂರ್ವಾಭಿಮುಖವಾಗಿ ಕುಳಿತು, ಕೈಕಾಲು ಮುಖಗಳನ್ನು ಸರಿಯಾಗಿ ತೊಳೆದು ಶಬ್ಧಮಾಡದೇ ಹೃದಯವನ್ನು ತಲುಪುವಷ್ಟು ಮಾತ್ರ ನೀರನ್ನು ಮೂರು ಸಾರಿ ಕುಡಿದು, ಎರಡು ಸಾರಿ ಮುಖ, ಕಣ್ಣು, ಕಿವಿ ಮತ್ತು ಮೂಗುಗಳನ್ನು ನೀರಿನಿಂದ ಮುಟ್ಟಿ, ಅಂತಃಪುರವನ್ನು ಪ್ರವೇಶಿಸಿದನು.

01003116A ಸಾ ಚ ದೃಷ್ಟ್ವೈವೋತ್ತಂಕಮಭ್ಯುತ್ಥಾಯಾಭಿವಾದ್ಯೋವಾಚ|

01003116B ಸ್ವಾಗತಂ ತೇ ಭಗವನ್|

01003116C ಆಜ್ಞಾಪಯ ಕಿಂಕರವಾಣೀತಿ||

ಆಗ ಕ್ಷಾತ್ರಣಿಯು ಕಾಣಿಸಿಕೊಂಡಳು. ಉತ್ತಂಕನನ್ನು ನೋಡಿ ಅವಳು ಎದ್ದುನಿಂತು ನಮಸ್ಕರಿಸಿ “ಭಗವನ್! ನಿನಗೆ ಸ್ವಾಗತ. ನನ್ನಿಂದ ಏನಾಗಬೇಕು ಅಜ್ಞಾಪಿಸು” ಎಂದಳು.

01003117A ಸ ತಾಮುವಾಚ|

01003117B ಏತೇ ಕುಂಡಲೇ ಗುರ್ವರ್ಥಂ ಮೇ ಭಿಕ್ಷಿತೇ

         ದಾತುಮರ್ಹಸೀತಿ||

01003118A ಸಾ ಪ್ರೀತಾ ತೇನ ತಸ್ಯ ಸದ್ಭಾವೇನ

         ಪಾತ್ರಮಯಮನತಿಕ್ರಮಣೀಯಶ್ಚೇತಿ ಮತ್ವಾ ತೇ ಕುಂಡಲೇ

         ಅವಮುಚ್ಯಾಸ್ಮೈ ಪ್ರಾಯಚ್ಛತ್||

01003119A ಆಹ ಚೈನಂ|

01003119B ಏತೇ ಕುಂಡಲೇ ತಕ್ಷಕೋ ನಾಗರಾಜಃ ಪ್ರಾರ್ಥಯತಿ|

01003119C ಅಪ್ರಮತ್ತೋ ನೇತುಮರ್ಹಸೀತಿ||

ಆಗ ಅವನು ಹೇಳಿದನು: “ನಿನ್ನ ಈ ಕುಂಡಲಗಳನ್ನು ಗುರುದಕ್ಷಿಣೆಗಾಗಿ ಬೇಡುತ್ತಿದ್ದೇನೆ. ಕೊಡಬೇಕು.” ಅವನ ಸದ್ಭಾವದಿಂದ ಪ್ರೀತಳಾಗಿ, ಇವನು ಪಾತ್ರನಾಗಿರುವುದರಿಂದ ನಿರಾಕರಿಸಲು ಸಾಧ್ಯವಿಲ್ಲ ಎಂದು ತಿಳಿದು ಕುಂಡಲಗಳನ್ನು ಬಿಚ್ಚಿ ಅವನಿಗೆ ಕೊಟ್ಟ ಅವಳು ಹೇಳಿದಳು: “ಈ ಕುಂಡಲಗಳನ್ನು ನಾಗರಾಜ ತಕ್ಷಕನೂ ಕೂಡ ಕೇಳಿದ್ದಾನೆ[4]. ಅದ್ದರಿಂದ ಇವುಗಳನ್ನು ಜಾಗ್ರತೆಯಲ್ಲಿ ಕೊಂಡೊಯ್ಯಿ.”

01003120A ಸ ಏವಮುಕ್ತಸ್ತಾಂ ಕ್ಷತ್ರಿಯಾಂ ಪ್ರತ್ಯುವಾಚ|

01003120B ಭವತಿ ಸುನಿರ್ವೃತಾ ಭವ|

01003120C ನ ಮಾಂ ಶಕ್ತಸ್ತಕ್ಷಕೋ ನಾಗರಾಜೋ ಧರ್ಷಯಿತುಮಿತಿ||

ಕ್ಷಾತ್ರಣಿಯಿಂದ ಈ ರೀತಿ ಕೇಳಿದ ಅವನು ಉತ್ತರಿಸಿದನು: “ಇದರ ಕುರಿತು ಯೋಚಿಸಬೇಡ. ನಾಗರಾಜ ತಕ್ಷಕನಿಗೆ ನನ್ನನ್ನು ಸೋಲಿಸಲು ಸಾಧ್ಯವಿಲ್ಲ.”

01003121A ಸ ಏವಮುಕ್ತ್ವಾ ತಾಂ ಕ್ಷತ್ರಿಯಾಮಾಮಂತ್ರ್ಯ

         ಪೌಷ್ಯಸಕಾಶಮಾಗಚ್ಛತ್||

01003122A ಸ ತಂ ದೃಷ್ಟ್ವೋವಾಚ|

01003122B ಭೋಃ ಪೌಷ್ಯ ಪ್ರೀತೋಽಸ್ಮೀತಿ||

ಕ್ಷಾತ್ರಿಣಿಗೆ ಹೀಗೆ ಹೇಳಿ, ಅವನು ಪೌಷ್ಯನಲ್ಲಿಗೆ ಬಂದನು. ಅವನನ್ನು ನೋಡಿ ಹೇಳಿದನು: “ಪೌಷ್ಯ! ನಾನು ಪ್ರೀತನಾಗಿದ್ದೇನೆ.”

01003123A ತಂ ಪೌಷ್ಯಃ ಪ್ರತ್ಯುವಾಚ|

01003123B ಭಗವಂಶ್ಚಿರಸ್ಯ ಪಾತ್ರಮಾಸಾದ್ಯತೇ|

01003123C ಭವಾಂಶ್ಚ ಗುಣವಾನತಿಥಿಃ|

01003123D ತತ್ಕರಿಷ್ಯೇ ಶ್ರಾದ್ಧಂ|

01003123E ಕ್ಷಣಃ ಕ್ರಿಯತಾಂ ಇತಿ||

ಪೌಷ್ಯನು ಉತ್ತರಿಸಿದನು: “ನಿನ್ನಂಥಹ ಪಾತ್ರವುಳ್ಳವನಿಗೆ ದಾನ ಕೊಡುವ ಅವಕಾಶವು ದುರ್ಲಭ. ನೀನೊಬ್ಬ ಗುಣವಂತ ಅತಿಥಿ. ಆದ್ದರಿಂದ ಶ್ರಾದ್ಧ[5] ಮಾಡಲು ಬಯಸುತ್ತೇನೆ. ಸ್ವಲ್ಪ ಹೊತ್ತು ನಿಲ್ಲು.”

01003124A ತಮುತ್ತಂಕಃ ಪ್ರತ್ಯುವಾಚ|

01003124B ಕೃತಕ್ಷಣ ಏವಾಸ್ಮಿ|

01003124C ಶೀಘ್ರಮಿಚ್ಛಾಮಿ ಯಥೋಪಪನ್ನಮನ್ನಮುಪಹೃತಂ

         ಭವತೇತಿ||

ಅವನಿಗೆ ಉತ್ತಂಕನು ಉತ್ತರಿಸಿದನು: “ಅವಸರದಲ್ಲಿದ್ದೇನೆ. ಆದ್ದರಿಂದ ಬೇಕಾಗುವ ಅನ್ನ ಮುಂತಾದವುಗಳು ಶೀಘ್ರವಾಗಿ ಬರಲಿ ಎಂದು ಬಯಸುತ್ತೇನೆ.”

01003125A ಸ ತಥೇತ್ಯುಕ್ತ್ವಾ ಯಥೋಪಪನ್ನೇನಾನ್ನೇನೈನಂ

         ಭೋಜಯಾಮಾಸ||

01003126A ಅಥೋತ್ತಂಕಃ ಶೀತಮನ್ನಂ ಸಕೇಶಂ ದೃಷ್ಟ್ವಾ ಅಶುಚ್ಯೇತದಿತಿ

         ಮತ್ವಾ ಪೌಷ್ಯಮುವಾಚ|

ಇದಕ್ಕೆ ಒಪ್ಪಿಕೊಂಡು ಅವನಿಗೆ ಅನುಕೂಲವಾದ ಆಹಾರದಿಂದ ಭೋಜನವನ್ನು ನೀಡಿದನು. ತಂಗಳ ಅನ್ನದಲ್ಲಿ ಕೂದಲನ್ನು ಕಂಡ ಉತ್ತಂಕನು ಅಶುಚಿಯಾದೆನೆಂದು ತಿಳಿದು ಪೌಷ್ಯನಿಗೆ ಹೇಳಿದನು:

01003126B ಯಸ್ಮಾನ್ಮೇ ಅಶುಚ್ಯನ್ನಂ ದದಾಸಿ ತಸ್ಮದನ್ಧೋ

         ಭವಿಷ್ಯಸೀತಿ||

01003127A ತಂ ಪೌಷ್ಯಃ ಪ್ರತ್ಯುವಾಚ|

01003127B ಯಸ್ಮಾತ್ತ್ವಮಪ್ಯದುಷ್ಟಮನ್ನಂ ದೂಷಯಸಿ ತಸ್ಮಾದನಪತ್ಯೋ

         ಭವಿಷ್ಯಸೀತಿ||

“ನನಗೆ ಅಶುಚಿ ಅನ್ನವನ್ನು ಉಣಿಸಿರುವುದರಿಂದ ನೀನು ಭವಿಷ್ಯದಲ್ಲಿ ಅಂಧನಾಗುವೆ.” ಅದಕ್ಕೆ ಪೌಷ್ಯನು ಉತ್ತರಿಸಿದನು: “ಶುದ್ಧ ಅನ್ನವನ್ನು ದೂಷಿಸಿರುವುದರಿಂದ ನಿನಗೆ ಮಕ್ಕಳೇ ಆಗುವುದಿಲ್ಲ.”

01003128A ಸೋಽಥ ಪೌಷ್ಯಸ್ತಸ್ಯಾಶುಚಿಭಾವಮನ್ನಸ್ಯಾಗಮಯಾಮಾಸ||

01003129A ಅಥ ತದನ್ನಂ ಮುಕ್ತಕೇಶ್ಯಾ ಸ್ತ್ರಿಯೋಪಹೃತಂ ಸಕೇಶಮಶುಚಿ-

         ಮತ್ವೋತ್ತಂಕಂ ಪ್ರಸಾದಯಾಮಾಸ|

01003129B ಭಗವನ್ನಜ್ಞಾನಾದೇತದನ್ನಂ ಸಕೇಶಮುಪಹೃತಂ ಶೀತಂ ಚ|

01003129C ತತ್ ಕ್ಷಾಮಯೇ ಭವಂತಂ|

01003129D ನ ಭವೇಯಮಂಧ ಇತಿ||

ನಂತರ ನೀಡಿದ ಅನ್ನವನ್ನು ಪರೀಕ್ಷಿಸಿ ಅದು ನಿಜವಾಗಿಯೂ ತಣ್ಣಗಿದೆ ಮತ್ತು ಆ ಅನ್ನವನ್ನು ಮುಕ್ತಕೇಶ ಸ್ತ್ರೀಯೊಬ್ಬಳು ತಯಾರಿಸಿದುದರಿಂದ ಅದರಲ್ಲಿ ಕೂದಲಿದೆ ಎಂದು ಖಾತ್ರಿಮಾಡಿಕೊಂಡ ಪೌಷ್ಯನು: “ಭಗವನ್! ಅಜ್ಞಾನದಿಂದ ನಿನಗೆ ಕೂದಲಿದ್ದ ತಂಗಳನ್ನವನ್ನು ನೀಡಿದೆ. ಕ್ಷಮಿಸಬೇಕು. ನಾನು ಅಂಧನಾಗದಂತೆ ಮಾಡು.”

01003130A ತಮುತ್ತಂಕಃ ಪ್ರತ್ಯುವಾಚ|

01003130B ನ ಮೃಷಾ ಬ್ರವೀಮಿ|

01003130C ಭೂತ್ವಾ ತ್ವಮಂಧೋ ನಚಿರಾದನಂಧೋ ಭವಿಷ್ಯಸೀತಿ|

01003130D ಮಮಾಪಿ ಶಾಪೋ ನ ಭವೇದ್ಭವತಾ ದತ್ತ ಇತಿ||

ಆಗ ಉತ್ತಂಕನು ಹೇಳಿದನು: “ನಾನು ಹೇಳಿದ್ದುದು ಸುಳ್ಳಾಗುವುದಿಲ್ಲ. ನೀನು ಅಂಧನಾದ ಸ್ವಲ್ಪ ಸಮಯದಲ್ಲಿ ಅನಂಧನಾಗುತ್ತೀಯೆ. ನೀನು ನನಗೆ ಕೊಟ್ಟ ಶಾಪವೂ ನಡೆಯದಂತೆ ಮಾಡು.”

01003131A ತಂ ಪೌಷ್ಯಃ ಪ್ರತ್ಯುವಾಚ|

01003131B ನಾಹಂ ಶಕ್ತಃ ಶಾಪಂ ಪ್ರತ್ಯಾದಾತುಂ|

01003131C ನ ಹಿ ಮೇ ಮನ್ಯುರದ್ಯಾಪ್ಯುಪಶಮಂ ಗಚ್ಛತಿ|

01003131D ಕಿಂಚೈತದ್ಭವತಾ ನ ಜ್ಞಾಯತೇ ಯಥಾ||

ಆಗ ಪೌಷ್ಯನು ಹೇಳಿದನು: “ಶಾಪವನ್ನು ಹಿಂದೆ ತೆಗೆದುಕೊಳ್ಳಲು ನನಗೆ ಸಾಧ್ಯವಿಲ್ಲ. ನನ್ನ ಸಿಟ್ಟು ಇನ್ನೂ ಕಡಿಮೆಯಾಗಲಿಲ್ಲ. ನಿನಗೆ ಇದು ತಿಳಿದಿಲ್ಲವೇ?

01003132a ನಾವನೀತಂ ಹೃದಯಂ ಬ್ರಾಹ್ಮಣಸ್ಯ ವಾಚಿ ಕ್ಷುರೋ

         ನಿಹಿತಸ್ತೀಕ್ಷ್ಣಧಾರಃ|

01003132c ವಿಪರೀತಮೇತದುಭಯಂ ಕ್ಷತ್ರಿಯಸ್ಯ ವಾಘ್ನಾವನೀತೀ

         ಹೃದಯಂ ತೀಕ್ಷ್ಣಧಾರಂ||

01003133A ಇತಿ|

01003133B ತದೇವಂ ಗತೇ ನ ಶಕ್ತೋಽಹಂ ತೀಕ್ಷ್ಣಹೃದಯತ್ವಾತ್ತಂ

         ಶಾಪಮನ್ಯಥಾ ಕರ್ತುಂ|

01003133C ಗಮ್ಯತಾಮಿತಿ||

ಬ್ರಾಹ್ಮಣನ ಹೃದಯವು ಬೆಣ್ಣೆಯಂತೆ ಆದರೆ ಮಾತು ಒಂದು ಹರಿತ ಖಡ್ಗದಂತೆ. ತದ್ವಿರುದ್ಧವಾಗಿ ಒಬ್ಬ ಕ್ಷತ್ರಿಯನ ಮಾತು ಬೆಣ್ಣೆಯ ಹಾಗೆ ಮತ್ತು ಹೃದಯ ತೀಕ್ಷ್ಣ ಖಡ್ಗದ ಹಾಗೆ. ನನ್ನ ಹೃದಯವು ಇನ್ನೂ ಹರಿತಾಗಿರುವುದರಿಂದ ಶಾಪವನ್ನು ಹಿಂದೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀನು ಈಗ ಹೋಗಬಹುದು.”

01003134A ತಮುತ್ತಂಕಃ ಪ್ರತ್ಯುವಾಚ|

01003134B ಭವತಾಹಮನ್ನಸ್ಯಾಶುಚಿಭಾವಮಾಗಮಯ್ಯ ಪ್ರತ್ಯನುನೀತಃ|

01003134C ಪ್ರಾಕ್ ಚ ತೇಽಭಿಹಿತಂ|

01003134D ಯಸ್ಮಾದದುಷ್ಠಮನ್ನಂ ದೂಷಯಸಿ ತಸ್ಮಾದನಪತ್ಯೋ

         ಭವಿಷ್ಯಸೀತಿ|

01003134E ದುಷ್ಟೇ ಚಾನ್ನೇ ನೈಷ ಮಮ ಶಾಪೋ ಭವಿಷ್ಯತೀತಿ||

01003135A ಸಾಧಯಾಮಸ್ತಾವದಿತ್ಯುಕ್ತ್ವಾ ಪ್ರಾತಿಷ್ಠತೋತ್ತಂಕಸ್ತೇ ಕುಂಡಲೇ

         ಗೃಹೀತ್ವಾ||

ಉತ್ತಂಕನು ಹೇಳಿದನು: “ನನಗೆ ನೀಡಿದ್ದ ಅನ್ನವು ಅಶುಚಿಯಾದದ್ದು ಎಂದು ನೀನೇ ನೋಡಿದ್ದೀಯೆ. ಆದುದರಿಂದ ಅದುಷ್ಟ ಅನ್ನವನ್ನು ದೂಷಿಸಿರುವುದರಿಂದ ಅನಪತ್ಯನಾಗುತ್ತೀಯೆ ಎಂದು ನೀನು ನನಗಿತ್ತ ಶಾಪವು ಪರಿಣಾಮಕಾರಿಯಾಗುವುದಿಲ್ಲ.” ಹೀಗೆ ಹೇಳಿ ಉತ್ತಂಕನು ಕುಂಡಲಗಳನ್ನು ತೆಗೆದುಕೊಂಡು ಹೋದನು.

01003136A ಸೋಽಪಶ್ಯತ್ಪಥಿ ನಗ್ನಂ ಶ್ರಮಣಮಾಗಚ್ಛಂತಂ

         ಮುಹುರ್ಮುಹುರ್ದೃಶ್ಯಮಾನಮದೃಶ್ಯಮಾನಂ ಚ|

01003136B ಅಥೋತ್ತಂಕಸ್ತೇ ಕುಂಡಲೇ ಭೂಮೌ ನಿಕ್ಷಿಪ್ಯೋದಕಾರ್ಥಂ

         ಪ್ರಚಕ್ರಮೇ||

ದಾರಿಯಲ್ಲಿ ಒಬ್ಬ ನಗ್ನ ಭಿಕ್ಷುಕನು ಅವನ ಕಡೆ ಬರುತ್ತಿರುವುದನ್ನು, ಮತ್ತು ಅವನು ಒಂದು ಕ್ಷಣ ಕಂಡರೆ ಮತ್ತೊಂದು ಕ್ಷಣ ಮರೆಯಾಗುತ್ತಿರುವುದನ್ನು ನೋಡಿದನು. ಆಗ ಉತ್ತಂಕನು ಕುಂಡಲಗಳನ್ನು ಭೂಮಿಯಮೇಲೆ ಇಟ್ಟು ನೀರಿಗೆ ಹೋದನು.

01003137A ಏತಸ್ಮಿನ್ನಂತರೇ ಸ ಶ್ರಮಣಸ್ತ್ವರಮಾಣ ಉಪಸೃತ್ಯ ತೇ

         ಕುಂಡಲೇ ಗೃಹೀತ್ವಾ ಪ್ರಾದ್ರವತ್|

01003137B ತಮುತ್ತಂಕೋಽಭಿಸೃತ್ಯ ಜಗ್ರಾಹ|

01003137C ಸ ತದ್ರೂಪಂ ವಿಹಾಯ ತಕ್ಷಕರೂಪಂ ಕೃತ್ವಾ ಸಹಸಾ

         ಧರಣ್ಯಾಂ ವಿವೃತಂ ಮಹಾಬಿಲಂ ವಿವೇಶ||

01003138A ಪ್ರವಿಶ್ಯ ಚ ನಾಗಲೋಕಂ ಸ್ವಭವನಮಗಚ್ಛತ್|

01003138B ತಮುತ್ತಂಕೋಽನ್ವಾವಿವೇಶ ತೇನೈವ ಬಿಲೇನ|

01003138C ಪ್ರವಿಶ್ಯ ಚ ನಾಗಾನಸ್ತುವದೇಭಿಃ ಶ್ಲೋಕೈಃ||

ಈ ಮಧ್ಯ ಆ ಭಿಕ್ಷುಕನು ಬೇಗ ಬಂದು ಕುಂಡಲಗಳನ್ನು ಎತ್ತಿಕೊಂಡು ಓಡಿಹೋದನು. ಇದನ್ನು ನೋಡಿ ಉತ್ತಂಕನೂ ಕೂಡ ಅವನನ್ನು ಬೆನ್ನಟ್ಟಿ ಓಡಿದನು. ಆಗ ಅವನು ತನ್ನ ರೂಪವನ್ನು ಬಿಟ್ಟು ತಕ್ಷಕನ ರೂಪವನ್ನು ತಾಳಿ ತಕ್ಷಣವೇ ನೆಲದಲ್ಲಿಯ ಒಂದು ದೊಡ್ಡ ಬಿಲವನ್ನು ಹೊಕ್ಕನು. ಬಿಲವನ್ನು ಪ್ರವೇಶಿಸಿ ನಾಗಲೋಕದಲ್ಲಿರುವ ತನ್ನ ಮನೆಗೆ ಹೋದನು. ಉತ್ತಂಕನೂ ಅದೇ ಬಿಲವನ್ನು ಪ್ರವೇಶಿಸಿದನು. ನಾಗಲೋಗವನ್ನು ಪ್ರವೇಶಿಸಿ ಈ ಶ್ಲೋಕಗಳಿಂದ ನಾಗಗಳನ್ನು ಪ್ರಾರ್ಥಿಸತೊಡಗಿದನು.

01003139a ಯ ಐರಾವತರಾಜಾನಃ ಸರ್ಪಾಃ ಸಮಿತಿಶೋಭನಾಃ|

01003139c ವರ್ಷಂತ ಇವ ಜೀಮೂತಾಃ ಸವಿದ್ಯುತ್ಪವನೇರಿತಾಃ||

01003140a ಸುರೂಪಾಶ್ಚ ವಿರೂಪಾಶ್ಚ ತಥಾ ಕಲ್ಮಾಷಕುಂಡಲಾಃ|

01003140c ಆದಿತ್ಯವನ್ನಾಕಪೃಷ್ಠೇ ರೇಜುರೈರಾವತೋದ್ಭವಾಃ||

01003141a ಬಹೂನಿ ನಾಗವರ್ತ್ಮಾನಿ ಗಂಗಾಯಾಸ್ತೀರ ಉತ್ತರೇ|

01003141c ಇಚ್ಛೇತ್ಕೋಽರ್ಕಾಂಶುಸೇನಾಯಾಂ ಚರ್ತುಮೈರಾವತಂ ವಿನಾ||

01003142a ಶತಾನ್ಯಶೀತಿರಷ್ಟೌ ಚ ಸಹಸ್ರಾಣಿ ಚ ವಿಂಶತಿಃ|

01003142c ಸರ್ಪಾಣಾಂ ಪ್ರಗ್ರಹಾ ಯಾಂತಿ ಧೃತರಾಷ್ಟ್ರೋ ಯದೇಜತಿ||

01003143a ಯೇ ಚೈನಮುಪಸರ್ಪಂತಿ ಯೇ ಚ ದೂರಂ ಪರಂ ಗತಾಃ|

01003143c ಅಹಮೈರಾವತಜ್ಯೇಷ್ಠಭ್ರಾತೃಭ್ಯೋಽಕರವಂ ನಮಃ||

01003144a ಯಸ್ಯ ವಾಸಃ ಕುರುಕ್ಷೇತ್ರೇ ಖಾಂಡವೇ ಚಾಭವತ್ಸದಾ|

01003144c ತಂ ಕಾದ್ರವೇಯಮಸ್ತೌಷಂ ಕುಂಡಲಾರ್ಥಾಯ ತಕ್ಷಕಂ||

01003145a ತಕ್ಷಕಶ್ಚಾಶ್ವಸೇನಶ್ಚ ನಿತ್ಯಂ ಸಹಚರಾವುಭೌ|

01003145c ಕುರುಕ್ಷೇತ್ರೇ ನಿವಸತಾಂ ನದೀಮಿಕ್ಷುಮತೀಮನು||

01003146a ಜಘನ್ಯಜಸ್ತಕ್ಷಕಸ್ಯ ಶ್ರುತಸೇನೇತಿ ಯಃ ಶ್ರುತಃ|

01003146c ಅವಸದ್ಯೋ ಮಹದ್ದ್ಯುಮ್ನಿ ಪ್ರಾರ್ಥಯನ್ನಾಗಮುಖ್ಯತಾಂ|

01003146e ಕರವಾಣಿ ಸದಾ ಚಾಹಂ ನಮಸ್ತಸ್ಮೈ ಮಹಾತ್ಮನೇ||

“ಮಿಂಚಿನಿಂದೊಡಗೂಡಿದ ಮೋಡಗಳು ಗಾಳಿಯಿಂದ ತಳ್ಳಲ್ಪಟ್ಟು ಮಳೆಸುರಿಸುವಂತೆ ಯುದ್ಧದಲ್ಲಿ ಶೋಭಿಸುವ ಐರಾವತ ರಾಜನ ಸರ್ಪಗಳೇ! ಸುಂದರ ರೂಪವುಳ್ಳವರೇ! ಬೇರೆ ಬೇರೆ ರೂಪಗಳನ್ನು ಧರಿಸಬಲ್ಲವರೇ! ಬಣ್ಣ ಬಣ್ಣದ ಕುಂಡಲಗಳನ್ನು ಧರಿಸಿದವರೇ! ಆಕಾಶದಲ್ಲಿ ಆದಿತ್ಯನಂತೆ ಹೊಳೆಯುತ್ತಿರುವವರೇ! ಐರಾವತನ ಮಕ್ಕಳೇ! ಗಂಗಾತೀರದ ಉತ್ತರದಲ್ಲಿ ಬಹಳ ಸಾಲುಗಳಲ್ಲಿರುವ ನಾಗಗಳೇ! ಐರಾವತನನ್ನು ಬಿಟ್ಟು ಯಾರು ಸುಡುತ್ತಿರುವ ಸೂರ್ಯನ ಕಿರಣಗಳಡಿಯಲ್ಲಿ ಸಂಚರಿಸಲು ಇಚ್ಛಿಸುವರು? ದೃತರಾಷ್ಟ್ರನು ಹೊರಟರೆ ಅವನ ಹಿಂದೆ ೨೮,೦೦೦ ನಾಗಗಳೂ ಹೋಗುತ್ತವೆ. ಹತ್ತಿರದಲ್ಲಿರಲಿ ಅಥವಾ ದೂರವಿರಲಿ, ಐರಾವತವನ್ನು ತಮ್ಮ ಅಣ್ಣನನ್ನಾಗಿ ಹೊಂದಿರುವ ಎಲ್ಲ ನಾಗಗಳಿಗೂ ನನ್ನ ನಮನಗಳು. ಮೊದಲು ಕುರುಕ್ಷೇತ್ರ ಮತ್ತು ಖಾಂಡವಗಳಲ್ಲಿ ವಾಸಿಸಿದ ನಾಗರಾಜ ತಕ್ಷಕನು ನನಗೆ ನನ್ನ ಕುಂಡಲಗಳನ್ನು ಹಿಂದಿರುಗಿಸಲು ಪ್ರಾರ್ಥಿಸುತ್ತೇನೆ. ತಕ್ಷಕ ಮತ್ತು ಅಶ್ವಸೇನರು ಕುರುಕ್ಷೇತ್ರದಲ್ಲಿ ನದಿ ಇಕ್ಷುಮತಿಯ ತಟದಲ್ಲಿ ವಾಸಿಸುತ್ತಿರುವಾಗ ನಿತ್ಯವೂ ಸಹಚರರಿದ್ದರು. ತಕ್ಷಕನ ಜಘನ್ಯಜ ಶೃತಸೇನನೆಂದು ಕರೆಯಲ್ಪಡುವ, ಮಹಾದ್ಯುಮ್ನಿ ಎಂಬಲ್ಲಿ ನಾಗಮುಖ್ಯನಾಗಲು ಪ್ರಾರ್ಥಿಸುತ್ತ ವಾಸಿಸುತ್ತಿದ್ದ ಆ ಮಹಾತ್ಮನಿಗೂ ನಾನು ನಮಸ್ಕರಿಸುತ್ತಿದ್ದೇನೆ.”

01003147A ಏವಂ ಸ್ತುವನ್ನಪಿ ನಾಗಾನ್ಯದಾ ತೇ

         ಕುಂಡಲೇನಾಲಭದಥಾಪಶ್ಯತ್ಸ್ತ್ರಿಯೌ ತಂತ್ರೇ ಅಧಿರೋಪ್ಯ

         ಪಟಂ ವಯಂತ್ಯೌ||

01003148A ತಸ್ಮಿಂಶ್ಚ ತಂತ್ರೇ ಕೃಷ್ಣಾಃ ಸಿತಾಶ್ಚ ತಂತವಃ|

01003148B ಚಕ್ರಂ ಚಾಪಶ್ಯತ್ಷಢ್ಭಿಃ ಕುಮಾರೈಃ ಪರಿವರ್ತ್ಯಮಾನಂ|

01003148C ಪುರುಷಂ ಚಾಪಶ್ಯದ್ದರ್ಶನೀಯಂ||

ಈ ರೀತಿ ನಾಗಗಳ ಸ್ತುತಿಗೈದರೂ ಕುಂಡಲಗಳು ದೊರೆಯದೇ ಇದ್ದಾಗ ಅವನು ಒಂದು ಮಗ್ಗವನ್ನೇರಿ ವಸ್ತ್ರವೊಂದನ್ನು ನೇಯುತ್ತಿರುವ ಇಬ್ಬರು ಸ್ತ್ರೀಯರನ್ನು ಕಂಡನು. ಅದರ ಮೇಲೆ ಕಪ್ಪು ಮತ್ತು ಬಿಳುಪಿನ ನೂಲುಗಳಿದ್ದವು. ಅಲ್ಲಿ ಅವನು ಆರು ಕುಮಾರರು ಒಂದು ಚಕ್ರವನ್ನು ತಿರುಗಿಸುತ್ತಿರುವುದನ್ನೂ ಮತ್ತು ಕುದುರೆಯನ್ನೇರಿದ ಪುರುಷನೊಬ್ಬನನ್ನೂ ನೋಡಿದನು.

01003149A ಸ ತಾನ್ಸರ್ವಾಂಸ್ತುಷ್ಟಾವ ಏಭಿರ್ಮಂತ್ರವಾದಶ್ಲೋಕೈಃ||

01003150a ತ್ರೀಣ್ಯರ್ಪಿತಾನ್ಯತ್ರ ಶತಾನಿ ಮಧ್ಯೇ

         ಷಷ್ಟಿಶ್ಚ ನಿತ್ಯಂ ಚರತಿ ಧ್ರುವೇಽಸ್ಮಿನ್|

01003150c ಚಕ್ರೇ ಚತುರ್ವಿಂಶತಿಪರ್ವಯೋಗೇ

         ಷಢ್ಯತ್ಕುಮಾರಾಃ ಪರಿವರ್ತಯಂತಿ||

01003151a ತಂತ್ರಂ ಚೇದಂ ವಿಶ್ವರೂಪಂ ಯುವತ್ಯೌ

         ವಯತಸ್ತಂತೂನ್ಸತತಂ ವರ್ತಯಂತ್ಯೌ|

01003151c ಕೃಷ್ಣಾನ್ಸಿತಾಂಶ್ಚೈವ ವಿವರ್ತಯಂತ್ಯೌ

         ಭೂತಾನ್ಯಜಸ್ರಂ ಭುವನಾನಿ ಚೈವ||

01003152a ವಜ್ರಸ್ಯ ಭರ್ತಾ ಭುವನಸ್ಯ ಗೋಪ್ತಾ

         ವೃತ್ರಸ್ಯ ಹಂತಾ ನಮುಚೇರ್ನಿಹಂತಾ|

01003152c ಕೃಷ್ಣೇ ವಸಾನೋ ವಸನೇ ಮಹಾತ್ಮಾ

         ಸತ್ಯಾನೃತೇ ಯೋ ವಿವಿನಕ್ತಿ ಲೋಕೇ||

01003153a ಯೋ ವಾಜಿನಂ ಗರ್ಭಮಪಾಂ ಪುರಾಣಂ

         ವೈಶ್ವಾನರಂ ವಾಹನಮಭ್ಯುಪೇತಃ|

01003153c ನಮಃ ಸದಾಸ್ಮೈ ಜಗದೀಶ್ವರಾಯ

         ಲೋಕತ್ರಯೇಶಾಯ ಪುರಂದರಾಯ||

ಆಗ ಅವರೆಲ್ಲರನ್ನೂ ಸಂತುಷ್ಠಿಗೊಳಿಸಲೋಸುಗ ಮಂತ್ರಶ್ಲೋಕಗಳಿಂದ ಈ ರೀತಿ ಸ್ತುತಿಸಿದನು. "ಅವಿರತವಾಗಿ ನಿರ್ದಿಷ್ಠವಾಗಿ ಆರು ಕುಮಾರರಿಂದ ತಿರುಗಿಸಲ್ಪಡುತ್ತಿರುವ ಈ ಚಕ್ರದ ಪರಿಧಿಯು ಪರ್ವಯೋಗಗಳನ್ನು ಸೂಚಿಸುವ ೨೪ ಗುರುತುಗಳನ್ನು ಹೊಂದಿದೆ ಮತ್ತು ಮಧ್ಯದಲ್ಲಿ ೩೦೦ ಹಲ್ಲುಗಳಿಂದ ಕೂಡಿದೆ. ವಿಶ್ವರೂಪಿ ಈ ಯುವತಿಯರೀರ್ವರು ಕಪ್ಪು ಮತ್ತು ಬಿಳುಪಿನ ನೂಲುಗಳಿಂದ ವಸ್ತ್ರವನ್ನು ಸತತವಾಗಿ ನೇಯುವುದರ ಮೂಲಕ ಅಸಂಖ್ಯ ವಿಶ್ವಗಳನ್ನು ಅಸಂಖ್ಯ ಜೀವಿಗಳನ್ನು ಸೃಷ್ಠಿಸುತ್ತಿದ್ದಾರೆ. ವಜ್ರದ ಒಡೆಯ! ಭುವನ ರಕ್ಷಕ! ವೃತ್ರ ಹಂತಕ! ನಮೂಚಿ ಹಂತಕ! ಕಪ್ಪು ವಸ್ತ್ರವನ್ನು ಧರಿಸಿದ ಮಹಾತ್ಮ! ಲೋಕದಲ್ಲಿ ಸತ್ಯ ಮತ್ತು ಅಸತ್ಯಗಳನ್ನು ತೋರಿಸಿಕೊಡುವವನೇ! ಹಿಂದೆ ಸಮುದ್ರದ ಗರ್ಭದಿಂದ ತೆಗೆದ, ವೈಶ್ವಾನರನಂತಿರುವ ಅಶ್ವವನ್ನು ವಾಹನವನ್ನಾಗಿ ಬಳಸಿದ, ಲೋಕತ್ರಯಗಳ ಈಶ! ಪುರಂದರ! ಜಗದೀಶ್ವರ! ನಿನಗೆ ನನ್ನ ನಮನಗಳು."

01003154A ತತಃ ಸ ಏನಂ ಪುರುಷಃ ಪ್ರಾಹ|

01003154B ಪ್ರೀತೋಽಸ್ಮಿ ತೇಽಹಮನೇನ ಸ್ತೋತ್ರೇಣ|

01003154C ಕಿಂ ತೇ ಪ್ರಿಯಂ ಕರವಾಣೀತಿ||

01003155A ಸ ತಮುವಾಚ|

01003155B ನಾಗಾ ಮೇ ವಶಮೀಯುರಿತಿ||

01003156A ಸ ಏನಂ ಪುರುಷಃ ಪುನರುವಾಚ|

01003156B ಏತಮಶ್ವಮಪಾನೇ ಧಮಸ್ವೇತಿ||

ಆಗ ಆ ಪುರುಷನು ಅವನಿಗೆ ಹೇಳಿದನು: “ನಿನ್ನ ಸ್ತೋತ್ರಗಳಿಂದ ನಾನು ಪ್ರೀತನಾಗಿದ್ದೇನೆ. ನಿನಗೆ ಪ್ರಿಯವಾದ ಏನನ್ನು ಮಾಡಲಿ?” ಅವನು ಹೇಳಿದನು: “ನಾಗಗಳು ನನ್ನ ವಶದಲ್ಲಿ ಬರುವಂತಾಗಲಿ.” ಪುರುಷನು ಹೇಳಿದನು: “ಈ ಕುದುರೆಯ ಗುದದ್ವಾರದಲ್ಲಿ ಊದು.”

01003157A ಸ ತಮಶ್ವಮಪಾನೇಽಧಮತ್|

01003157B ಅಥಾಶ್ವಾದ್ಧಮ್ಯಮಾನಾತ್ಸರ್ವಸ್ರೋತೋಭ್ಯಃ

                        ಸಧೂಮಾರ್ಚಿಷೋಽಗ್ನೇರ್ನಿಷ್ಪೇತುಃ||

01003158A ತಾಭಿರ್ನಾಗಲೋಕೋ ಧೂಪಿತಃ||

ಅವನು ಕುದುರೆಯ ಗುದದ್ವಾರದಲ್ಲಿ ಊದಿದನು. ಕುದುರೆಯ ಎಲ್ಲ ರಂಧ್ರಗಳಿಂದಲೂ ಹೊಗೆಯಿಂದೊಡಗೂಡಿದ ಬೆಂಕಿಯ ಜ್ವಾಲೆಗಳು ಹೊರಹೊಮ್ಮಿದವು. ಇಡೀ ನಾಗಲೋಕವೇ ಸುಟ್ಟು ಭಸ್ಮವಾಗುವುದರಲ್ಲಿತ್ತು.

01003159A ಅಥ ಸಸಂಭ್ರಮಸ್ತಕ್ಷಕೋಽಗ್ನಿತೇಜೋಭಯವಿಷಣ್ಣಸ್ತೇ

         ಕುಂಡಲೇ ಗೃಹೀತ್ವಾ ಸಹಸಾ         ಸ್ವಭವನಾನ್ನಿಷ್ಕ್ರಮ್ಯೋತ್ತಂಕಮುವಾಚ|

01003159B ಏತೇ ಕುಂಡಲೇ ಪ್ರತಿಗೃಹ್ಣಾತು ಭವಾನಿತಿ||

ಆಗ ಅಗ್ನಿತೇಜೋಭಯದಿಂದ ಸಂಭ್ರಾಂತಿಹೊಂದಿ ವಿಷಣ್ಣನಾದ ತಕ್ಷಕನು ಅವಸರದಲ್ಲಿ ಕುಂಡಲಗಳನ್ನು ಹಿಡಿದು ಸ್ವಭವನದಿಂದ ಹೊರಬಿದ್ದು ಉತ್ತಂಕನಿಗೆ “ನಿನ್ನ ಈ ಕುಂಡಲಗಳನ್ನು ಪ್ರತಿಗ್ರಹಿಸಬೇಕು” ಎಂದನು. 

01003160A ಸ ತೇ ಪ್ರತಿಜಗ್ರಾಹೋತ್ತಂಕಃ|

01003160B ಕುಂಡಲೇ ಪ್ರತಿಗೃಹ್ಯಾಚಿಂತಯತ್|

01003160C ಅದ್ಯ ತತ್ಪುಣ್ಯಕಮುಪಾಧ್ಯಾಯಿನ್ಯಾಃ|

01003160D ದೂರಂ ಚಾಹಮಭ್ಯಾಗತಃ|

01003160E ಕಥಂ ನು ಖಲು ಸಂಭಾವಯೇಯಮಿತಿ||

ಉತ್ತಂಕನು ಆ ಕುಂಡಲಗಳನ್ನು ಸ್ವೀಕರಿಸಿ ಯೋಚಿಸಿದನು: “ಇಂದು ಉಪಾಧ್ಯಾಯಿನಿಯು ಹೇಳಿದ ಪುಣ್ಯದಿನ. ಆದರೆ ನಾನು ತುಂಬಾ ದೂರ ಬಂದುಬಿಟ್ಟಿದ್ದೇನೆ. ಇವುಗಳನ್ನು ಅವಳಿಗೆ ತೆಗೆದುಕೊಂಡುಹೋಗಲು ಹೇಗೆ ಸಾಧ್ಯ?”

01003161A ತತ ಏನಂ ಚಿಂತಯಾನಮೇವ ಸ ಪುರುಷ ಉವಾಚ|

01003161B ಉತ್ತಂಕ ಏನಮಶ್ವಮಧಿರೋಹ|

01003161C ಏಷ ತ್ವಾಂ ಕ್ಷಣಾದೇವೋಪಾಧ್ಯಾಯಕುಲಂ ಪ್ರಾಪಯಿಷ್ಯತೀತಿ||

ಈ ರೀತಿ ಚಿಂತಿಸುತ್ತಿದ್ದಾಗ ಆ ಪುರುಷನು ಹೇಳಿದನು: “ಉತ್ತಂಕ! ಈ ಅಶ್ವವನ್ನೇರು. ಇದು ನಿನ್ನನ್ನು ಕ್ಷಣಮಾತ್ರದಲ್ಲಿ ಉಪಾಧ್ಯಾಯನ ಮನೆಗೆ ತಲುಪಿಸುತ್ತದೆ.”

01003162A ಸ ತಥೇತ್ಯುಕ್ತ್ವಾ ತಮಶ್ವಮಧಿರುಹ್ಯ

         ಪ್ರತ್ಯಾಜಗಾಮೋಪಾಧ್ಯಾಯಕುಲಂ|

01003162B ಉಪಾಧ್ಯಾಯಿನೀ ಚ ಸ್ನಾತಾ   ಕೇಶಾನಾವಪಯಂತ್ಯುಪವಿಷ್ಠೋತ್ತಂಕೋ ನಾಗಚ್ಛತೀತಿ

         ಶಾಪಾಯಾಸ್ಯ ಮನೋ ದಧೇ||

ಇದನ್ನು ಕೇಳಿ ಅವನು ಆ ಕುದುರೆಯನ್ನೇರಿ ಉಪಾಧ್ಯಾಯನ ಮನೆಯನ್ನು ತಲುಪಿದನು. ಸ್ನಾನ ಮಾಡಿ ತಲೆಗೂದಲನ್ನು ಸಿಂಗರಿಸಿಕೊಳ್ಳುತ್ತಿದ್ದ ಉಪಾಧ್ಯಾಯನಿಯು “ಉತ್ತಂಕನು ಇನ್ನೂ ಬಂದಿಲ್ಲವಲ್ಲ” ಎಂದು ಅವನನ್ನು ಶಪಿಸುವವಳಿದ್ದಳು. 

01003163A ಅಥೋತ್ತಂಕಃ ಪ್ರವಿಶ್ಯ ಉಪಾಧ್ಯಾಯಿನೀಮಭ್ಯವಾದಯತ್|

01003163B ತೇ ಚಾಸ್ಯೈ ಕುಂಡಲೇ ಪ್ರಾಯಚ್ಛತ್||

01003164A ಸಾ ಚೈನಂ ಪ್ರತ್ಯುವಾಚ|

01003164B ಉತ್ತಂಕ ದೇಶೇ ಕಾಲೇಽಭ್ಯಾಗತಃ|

01003164C ಸ್ವಾಗತಂ ತೇ ವತ್ಸ|

01003164D ಮನಾಗಸಿ ಮಯಾ ನ ಶಪ್ತಃ|

01003164E ಶ್ರೇಯಸ್ತವೋಪಸ್ಥಿತಂ|

01003164F ಸಿದ್ಧಿಮಾಪ್ನುಹೀತಿ||

ಅದೇ ವೇಳೆಗೆ ಉತ್ತಂಕನು ಪ್ರವೇಶಿಸಿ ಉಪಾಧ್ಯಾಯಿನಿಯನ್ನು ನಮಸ್ಕರಿಸಿ ಹೇಳಿದನು: “ನೀವು ಕೇಳಿದ ಕುಂಡಲಗಳಿವು.” ಅವಳು ಉತ್ತರಿಸಿದಳು: “ಉತ್ತಂಕ! ನೀನು ಸರಿಯಾದ ಹೊತ್ತಿಗೆ ಇಲ್ಲಿಗೆ ಬಂದಿದ್ದೀಯೆ. ವತ್ಸ! ನಿನಗೆ ಸ್ವಾಗತ. ಒಳ್ಳೆಯದಾಯಿತು ನಾನು ನಿನ್ನನ್ನು ಶಪಿಸಲಿಲ್ಲ. ನಿನಗೆ ಶ್ರೇಯಸ್ಸಾಗುತ್ತದೆ. ನಿನ್ನ ಆಸೆಗಳು ಸಿದ್ಧಿಯಾಗಲಿ.”

01003165A ಅಥೋತ್ತಂಕ ಉಪಾಧ್ಯಾಯಮಭ್ಯವಾದಯತ್|

01003165B ತಮುಪಾಧ್ಯಾಯಃ ಪ್ರತ್ಯುವಾಚ|

01003165C ವತ್ಸೋತ್ತಂಕ ಸ್ವಾಗತಂ ತೇ|

01003165D ಕಿಂ ಚಿರಂ ಕೃತಮಿತಿ||

ತರುವಾಯ ಉತ್ತಂಕನು ಉಪಾಧ್ಯಾಯನಲ್ಲಿಗೆ ಹೋಗಿ ನಮಸ್ಕರಿಸಿದನು. ಉಪಾಧ್ಯಾಯನು ಕೇಳಿದನು: “ವತ್ಸ ಉತ್ತಂಕ! ಸ್ವಾಗತವು ನಿನಗೆ. ನಿನ್ನ ಕೆಲಸವು ಏಕೆ ತಡವಾಯಿತು?”

01003166A ತಮುತ್ತಂಕ ಉಪಾಧ್ಯಾಯಂ ಪ್ರತ್ಯುವಾಚ|

01003166B ಭೋಸ್ತಕ್ಷಕೇಣ ನಾಗರಾಜೇನ ವಿಘ್ನಃ ಕೃತೋಽಸ್ಮಿನ್ ಕರ್ಮಣಿ|

01003166C ತೇನಾಸ್ಮಿ ನಾಗಲೋಕಂ ನೀತಃ||

01003167A ತತ್ರ ಚ ಮಯಾ ದೃಷ್ಟೇ ಸ್ತ್ರಿಯೌ ತಂತ್ರೇಽಧಿರೋಪ್ಯ ಪಟಂ

         ವಯಂತ್ಯೌ|

01003167B ತಸ್ಮಿಂಶ್ಚ ತಂತ್ರೇ ಕೃಷ್ಣಾಃ ಸಿತಾಶ್ಚ ತಂತವಃ|

01003167C ಕಿಂ ತತ್||

01003168A ತತ್ರ ಚ ಮಯಾ ಚಕ್ರಂ ದೃಷ್ಟಂ ದ್ವಾದಶಾರಂ|

01003168B ಷಟ್ಚೈನಂ ಕುಮಾರಾಃ ಪರಿವರ್ತಯಂತಿ|

01003168C ತದಪಿ ಕಿಂ||

01003169A ಪುರುಷಶ್ಚಾಪಿ ಮಯಾ ದೃಷ್ಟಃ|

01003169B ಸ ಪುನಃ ಕಃ||

01003170A ಅಶ್ವಶ್ಚಾತಿಪ್ರಮಾಣಯುಕ್ತಃ|

01003170B ಸ ಚಾಪಿ ಕಃ||

01003171A ಪಥಿ ಗಚ್ಛತಾ ಮಯಾ ಋಷಭೋ ದೃಷ್ಟಃ|

01003171B ತಂ ಚ ಪುರುಷೋಽಧಿರೂಢಃ|

01003171C ತೇನಾಸ್ಮಿ ಸೋಪಚಾರಮುಕ್ತಃ|

01003171D ಉತ್ತಂಕಾಸ್ಯ ಋಷಭಸ್ಯ ಪುರೀಷಂ ಭಕ್ಷಯ|

01003171E ಉಪಾಧ್ಯಾಯೇನಾಪಿ ತೇ ಭಕ್ಷಿತಮಿತಿ|

01003171F ತತಸ್ತದ್ವಚನಾನ್ಮಯಾ ತದೃಷಭಸ್ಯ ಪುರೀಷಮುಪಯುಕ್ತಂ|

01003171G ತದಿಚ್ಛಾಮಿ ಭವತೋಪದಿಷ್ಠಂ ಕಿಂ ತದಿತಿ||

ಉತ್ತಂಕನು ಉಪಾಧ್ಯಾಯನಿಗೆ ಉತ್ತರಿಸಿದನು: “ಸ್ವಾಮಿ! ನನ್ನ ಕಾರ್ಯದಲ್ಲಿ ವಿಘ್ನವನ್ನು ತಂದೊಡ್ಡಿದ ನಾಗರಾಜ ತಕ್ಷಕನಿಂದ ನಾನು ನಾಗಲೋಕದವರೆಗೆ ಎಳೆದೊಯ್ಯಲ್ಪಟ್ಟೆ. ಅಲ್ಲಿ ನಾನು ಸ್ತ್ರೀಯರೀರ್ವರು ಕಪ್ಪು ಮತ್ತು ಬಿಳಿ ನೂಲುಗಳಿಂದ ಬಟ್ಟೆಯನ್ನು ನೇಯುತ್ತಿರುವುದನ್ನು ನೋಡಿದೆ. ಅವರ್ಯಾರಿದ್ದರು? ಮತ್ತು ಅಲ್ಲಿ ಹನ್ನೆರಡು ಅರಗಳಿರುವ ಚಕ್ರವನ್ನು ಆರು ಕುಮಾರರು ತಿರುಗಿಸುತ್ತಿರುವುದನ್ನೂ ನೋಡಿದೆ. ಅವರು ಯಾರಿದ್ದರು? ಅಶ್ವವನ್ನೇರಿದ್ದ ಪುರುಷನೋರ್ವನನ್ನೂ ನೋಡಿದೆ. ಅವನು ಯಾರಿದ್ದನು? ಕುದುರೆಯು ಬಹಳ ದೊಡ್ಡದಾಗಿತ್ತು. ಅದು ಏನಿತ್ತು? ಹೋಗುವಾಗ ದಾರಿಯಲ್ಲಿ ಒಂದು ಹೋರಿಯನ್ನು ನೋಡಿದೆ. ಅದನ್ನು ಒಬ್ಬ ಪುರುಷನು ಸವಾರಿಮಾಡುತ್ತಿದ್ದನು. ಅವನು ನನಗೆ ಪ್ರೀತಿಯಿಂದ ಉತ್ತಂಕ! ಹೋರಿಯ ಸಗಣಿಯನ್ನು ತಿನ್ನು ಎಂದನು. ಅದೂ ಕೂಡ ಏನೆಂದು ನಿನ್ನಿಂದ ತಿಳಿಯಲು ಬಯಸುತ್ತೇನೆ.”

01003172A ತೇನೈವಮುಕ್ತ ಉಪಾಧ್ಯಾಯಃ ಪ್ರತ್ಯುವಾಚ|

01003172B ಯೇ ತೇ ಸ್ತ್ರಿಯೌ ಧಾತಾ ವಿಧಾತಾ ಚ|

01003172C ಯೇ ಚ ತೇ ಕೃಷ್ಣಾಃ ಸಿತಾಶ್ಚ ತಂತವಸ್ತೇ ರಾತ್ರ್ಯಹನೀ||

01003173A ಯದಪಿ ತಚ್ಚಕ್ರಂ ದ್ವಾದಶಾರಂ ಷಟ್ಕುಮಾರಾಃ

         ಪರಿವರ್ತಯಂತಿ ತೇ ಋತವಃ ಷಟ್ಸಂವತ್ಸರಶ್ಚಕ್ರಂ|

01003173B ಯಃ ಪುರುಷಃ ಸ ಪರ್ಜನ್ಯಃ|

01003173C ಯೋಽಶ್ವಃ ಸೋಽಗ್ನಿಃ||

01003174A ಯ ಋಷಭಸ್ತ್ವಯಾ ಪಥಿ ಗಚ್ಛತಾ ದೃಷ್ಟಃ ಸ ಐರಾವತೋ

         ನಾಗರಾಜಃ|

01003174B ಯಶ್ಚೈನಂ ಅಧಿರೂಢಃ ಸ ಇಂದ್ರಃ|

01003174C ಯದಪಿ ತೇ ಪುರೀಷಂ ಭಕ್ಷಿತಂ ತಸ್ಯ ಋಷಭಸ್ಯ ತದಮೃತಂ||

01003175A ತೇನ ಖಲ್ವಸಿ ನ ವ್ಯಾಪನ್ನಸ್ತಸ್ಮಿನ್ನಾಗಭವನೇ|

01003175B ಸ ಚಾಪಿ ಮಮ ಸಖಾ ಇಂದ್ರಃ||

01003176A ತದನುಗ್ರಹಾತ್ಕುಂಡಲೇ ಗೃಹೀತ್ವಾ ಪುನರಭ್ಯಾಗತೋಽಸಿ|

01003176B ತತ್ಸೌಮ್ಯ ಗಮ್ಯತಾಂ|

01003176C ಅನುಜಾನೇ ಭವಂತಂ|

01003176D ಶ್ರೇಯೋಽವಾಪ್ಸ್ಯಸೀತಿ||

ಉಪಾಧ್ಯಾಯನು ಉತ್ತರಿಸಿದನು: “ಆ ಸ್ತ್ರೀಯರು ಧಾತಾ ಮತ್ತು ವಿಧಾತರು. ಆ ಕಪ್ಪು ಮತ್ತು ಬಿಳಿ ತಂತುಗಳು ರಾತ್ರಿ ಹಗಲುಗಳು. ಆರು ಕುಮಾರರಿಂದ ತಿರುಗಿಸಲ್ಪಡುತ್ತಿದ್ದ ಹನ್ನೆರಡು ಅರಗಳ ಆ ಚಕ್ರವು ವರ್ಷ ಮತ್ತು ಆರು ಋತುಗಳು. ಆ ಪುರುಷನು ಪರ್ಜನ್ಯ ಮತ್ತು ಕುದುರೆಯು ಅಗ್ನಿ. ಹೋಗುವಾಗ ದಾರಿಯಲ್ಲಿ ನೀನು ನೋಡಿದ ಹೋರಿಯು ಆನೆಗಳ ರಾಜ ಐರಾವತ. ಅದರ ಮೇಲೆ ಸವಾರಿಮಾಡುತ್ತಿದ್ದವನು ಇಂದ್ರ. ಮತ್ತು ನೀನು ಭಕ್ಷಿಸಿದ ಆ ಹೋರಿಯ ಸಗಣಿ ಅಮೃತ. ನನ್ನ ಸಖ ಇಂದ್ರನ ಸಹಾಯದಿಂದ ನೀನು ನಾಗಭವನದಲ್ಲಿ ಏನೂ ತೊಂದರೆಯನ್ನು ಅನುಭವಿಸಲಿಲ್ಲ. ಅವನ ಅನುಗ್ರಹದಿಂದಲೇ ನೀನು ಕುಂಡಲಗಳನ್ನು ತೆಗೆದುಕೊಂಡು ಹಿಂದಿರುಗಿರುವೆ. ಇನ್ನು ನೀನು ಹೋಗಬಹುದು. ನಿನಗೆ ನನ್ನ ಅನುಮತಿ ಇದೆ. ನಿನಗೆ ಶ್ರೇಯಸ್ಸಾಗುತ್ತದೆ.”

01003177A ಸ ಉಪಾಧ್ಯಾಯೇನಾನುಜ್ಞಾತ ಉತ್ತಂಕಃ ಕ್ರುದ್ಧಸ್ತಕ್ಷಕಸ್ಯ

         ಪ್ರತಿಚಿಕೀರ್ಷಮಾಣೋ ಹಾಸ್ತಿನಪುರಂ ಪ್ರತಸ್ಥೇ||

01003178a ಸ ಹಾಸ್ತಿನಪುರಂ ಪ್ರಾಪ್ಯ ನಚಿರಾದ್ದ್ವಿಜಸತ್ತಮಃ|

01003178c ಸಮಾಗಚ್ಛತರಾಜಾನಮುತ್ತಂಕೋ ಜನಮೇಜಯಂ||

01003179a ಪುರಾ ತಕ್ಷಶಿಲಾತಸ್ತಂ ನಿವೃತ್ತಮಪರಾಜಿತಂ|

01003179c ಸಮ್ಯಗ್ವಿಜಯಿನಂ ದೃಷ್ಟ್ವಾ ಸಮಂತಾನ್ಮಂತ್ರಿಭಿರ್ವೃತಂ||

01003180a ತಸ್ಮೈ ಜಯಾಶಿಷಃ ಪೂರ್ವಂ ಯಥಾನ್ಯಾಯಂ ಪ್ರಯುಜ್ಯ ಸಃ|

01003180c ಉವಾಚೈನಂ ವಚಃ ಕಾಲೇ ಶಬ್ದಸಂಪನ್ನಯಾ ಗಿರಾ||

ಉಪಾಧ್ಯಾಯನನ್ನು ಬೀಳ್ಕೊಂಡು, ತಕ್ಷಕನ ಮೇಲೆ ಸಿಟ್ಟಿಗೆದ್ದ ಉತ್ತಂಕನು ಅವನ ಮೇಲೆ ಸೇಡು ತೀರಿಸುವ ಉದ್ದೇಶದಿಂದ ಹಸ್ತಿನಾಪುರಕ್ಕೆ ಹೊರಟನು[6]. ಹಸ್ತಿನಾಪುರವನ್ನು ತಲುಪಿದ ತಕ್ಷಣವೇ ಆ ದ್ವಿಜಸತ್ತಮ ಉತ್ತಂಕನು ರಾಜ ಜನಮೇಜಯನ ಬಳಿ ಹೋದನು. ತಕ್ಷಶಿಲೆಯನ್ನು ಗೆದ್ದು ಹಿಂದಿರುಗಿ, ಸಾಮಂತರು ಮತ್ತು ಮಂತ್ರಿಗಳಿಂದ ಸುತ್ತುವರೆದಿದ್ದ ಆ ವಿಜಯಿಯನ್ನು ಕಂಡು ಸರಿಯಾದ ಸಮಯವನ್ನು ನೋಡಿ ಶಬ್ಧ ಸಂಪನ್ನ ವಾಣಿಯಲ್ಲಿ ಹೇಳಿದನು:

01003181a ಅನ್ಯಸ್ಮಿನ್ಕರಣೀಯೇ ತ್ವಂ ಕಾರ್ಯೇ ಪಾರ್ಥಿವಸತ್ತಮ|

01003181c ಬಾಲ್ಯಾದಿವಾನ್ಯದೇವ ತ್ವಂ ಕುರುಷೇ ನೃಪಸತ್ತಮ||

“ಪಾರ್ಥಿವಸತ್ತಮ! ನೃಪಸತ್ತಮ! ಮಾಡಬೇಕಾದ ಮುಖ್ಯ ಕಾರ್ಯವನ್ನು ಬಿಟ್ಟು ಬಾಲಕನಂತೆ ಬೇರೆ ಏನನ್ನೋ ಮಾಡುತ್ತ ಸುಮ್ಮನೆ ಕಾಲಹರಣ ಮಾಡುತ್ತಿರುವೆ.”

01003182a ಏವಮುಕ್ತಸ್ತು ವಿಪ್ರೇಣ ಸ ರಾಜಾ ಪ್ರತ್ಯುವಾಚ ಹ|

01003182c ಜನಮೇಜಯಃ ಪ್ರಸನ್ನಾತ್ಮಾ ಸಮ್ಯಕ್ ಸಂಪೂಜ್ಯ ತಂ ಮುನಿಂ||

ಆ ವಿಪ್ರನು ಈ ರೀತಿ ಹೇಳಲು ಪ್ರಸನ್ನಾತ್ಮ ರಾಜ ಜನಮೇಜಯನು ಮುನಿಯನ್ನು ಸರಿಯಾದ ರೀತಿಯಲ್ಲಿ ಪೂಜಿಸಿ ಉತ್ತರಿಸಿದನು.

01003183a ಆಸಾಂ ಪ್ರಜಾನಾಂ ಪರಿಪಾಲನೇನ

         ಸ್ವಂ ಕ್ಷತ್ರಧರ್ಮಂ ಪರಿಪಾಲಯಾಮಿ|

01003183c ಪ್ರಬ್ರೂಹಿ ವಾ ಕಿಂ ಕ್ರಿಯತಾಂ ದ್ವಿಜೇಂದ್ರ

         ಶುಶ್ರೂಷುರಸ್ಮ್ಯದ್ಯ ವಚಸ್ತ್ವದೀಯಂ||

“ಪ್ರಜೆಗಳನ್ನು ಪರಿಪಾಲಿಸುವ ನನ್ನ ಕ್ಷಾತ್ರಧರ್ಮವನ್ನು ಪರಿಪಾಲಿಸುತ್ತಿದ್ದೇನೆ. ದ್ವಿಜೇಂದ್ರ! ನೀನು ಯಾವ ಕಾರ್ಯದ ಕುರಿತು ಹೇಳುತ್ತಿರುವೆ ಎನ್ನುವುದನ್ನು ವಿವರಿಸಿ ಹೇಳು”

01003184a ಸ ಏವಮುಕ್ತಸ್ತು ನೃಪೋತ್ತಮೇನ

         ದ್ವಿಜೋತ್ತಮಃ ಪುಣ್ಯಕೃತಾಂ ವರಿಷ್ಟಃ|

01003184c ಉವಾಚ ರಾಜಾನಮದೀನಸತ್ತ್ವಂ

         ಸ್ವಮೇವ ಕಾರ್ಯಂ ನೃಪತೇಶ್ಚ ಯತ್ತತ್||

ನೃಪೋತ್ತಮನ ಈ ಮಾತುಗಳನ್ನು ಕೇಳಿ ಪುಣ್ಯಕೃತರಲ್ಲಿ ವರಿಷ್ಠ ದ್ವಿಜೋತ್ತಮನು ರಾಜನಿಗೆ ಹೇಳಿದನು: “ನೃಪತಿ! ನಿನ್ನದೇ ಆದ ಒಂದು ಕಾರ್ಯವಿದೆ.

01003185a ತಕ್ಷಕೇಣ ನರೇಂದ್ರೇಂದ್ರಯೇನ ತೇ ಹಿಂಸಿತಃ ಪಿತಾ|

01003185c ತಸ್ಮೈ ಪ್ರತಿಕುರುಷ್ವ ತ್ವಂ ಪನ್ನಗಾಯ ದುರಾತ್ಮನೇ||

ನಿನ್ನ ತಂದೆಯು ಯಾವ ನಾಗೇಂದ್ರ ತಕ್ಷಕನಿಂದ ಹಿಂಸೆಗೊಳಗಾಗಿದ್ದನೋ ಆ ದುರಾತ್ಮ ಪನ್ನಗನ ಮೇಲೆ ನೀನು ಪ್ರತೀಕಾರ ಮಾಡಬೇಕು.

01003186a ಕಾರ್ಯಕಾಲಂ ಚ ಮನ್ಯೇಽಹಂ ವಿಧಿದೃಷ್ಠಸ್ಯ ಕರ್ಮಣಃ|

01003186c ತದ್ಗಚ್ಛಾಪಚಿತಿಂ ರಾಜನ್ಪಿತುಸ್ತಸ್ಯ ಮಹಾತ್ಮನಃ||

ನನ್ನ ವಿಚಾರದಲ್ಲಿ ರಾಜನ್! ನಿನ್ನ ಮಹಾತ್ಮ ತಂದೆಯ ಮರಣದ ಸೇಡನ್ನು ತೀರಿಸಿಕೊಳ್ಳುವ ಕಾಲವು ಬಂದಿದೆ.

01003187a ತೇನ ಹ್ಯನಪರಾಧೀ ಸ ದಷ್ಟೋ ದುಷ್ಟಾಂತರಾತ್ಮನಾ|

01003187c ಪಂಚತ್ವಮಗಮದ್ರಾಜಾ ವಜ್ರಾಹತ ಇವ ದ್ರುಮಃ||

ಅನಪರಾಧಿಯಾದ ಆ ರಾಜನು ದುಷ್ಟಾಂತರಾತ್ಮನಿಂದ ಕಡಿಯಲ್ಪಟ್ಟು ಮಿಂಚಿನಿಂದ ಹೊಡೆಯಲ್ಪಟ್ಟ ವೃಕ್ಷದಂತೆ ಪಂಚಭೂತಗಳಲ್ಲಿ ಒಂದಾದನು.

01003188a ಬಲದರ್ಪಸಮುತ್ಸಿಕ್ತಸ್ತಕ್ಷಕಃ ಪನ್ನಗಾಧಮಃ|

01003188c ಅಕಾರ್ಯಂ ಕೃತವಾನ್ಪಾಪೋ ಯೋಽದಶತ್ಪಿತರಂ ತವ||

ತನ್ನ ಬಲದರ್ಪದಿಂದ ಉನ್ಮತ್ತನಾದ ಆ ಪನ್ನಗಾಧಮ ತಕ್ಷಕನು ನಿನ್ನ ತಂದೆಯನ್ನು ಕಚ್ಚುವ ಪಾಪ ಕಾರ್ಯವನ್ನು ಮಾಡಿದ್ದಾನೆ.

01003189a ರಾಜರ್ಷಿವಂಶಗೋಪ್ತಾರಮಮರಪ್ರತಿಮಂ ನೃಪಂ|

01003189c ಜಘಾನ ಕಾಶ್ಯಪಂ ಚೈವ ನ್ಯವರ್ತಯತ ಪಾಪಕೃತ್||

ರಾಜರ್ಷಿಗಳ ವಂಶೋದ್ಧಾರಕ ಅಮರಪ್ರತಿಮ ನೃಪನನ್ನು ರಕ್ಷಿಸಲು ಬರುತ್ತಿದ್ದ ಕಾಶ್ಯಪನನ್ನು ಕೂಡ ಹಿಂದೆ ಕಳುಹಿಸಿದನು.

01003190a ದಗ್ಧುಮರ್ಹಸಿ ತಂ ಪಾಪಂ ಜ್ವಲಿತೇ ಹವ್ಯವಾಹನೇ|

01003190c ಸರ್ಪಸತ್ರೇ ಮಹಾರಾಜ ತ್ವಯಿ ತದ್ಧಿ ವಿಧೀಯತೇ||

ಮಹಾರಾಜ! ನಿನ್ನಿಂದ ನೆರವೇರಿಸಲ್ಪಡುವ ಸರ್ಪಸತ್ರದಲ್ಲಿ ಆ ಪಾಪಿಯನ್ನು ಪ್ರಜ್ವಲಿಸುತ್ತಿರುವ ಅಗ್ನಿಯಲ್ಲಿ ಸುಟ್ಟುಹಾಕಬೇಕು.

01003191a ಏವಂ ಪಿತುಶ್ಚಾಪಚಿತಿಂ ಗತವಾಂಸ್ತ್ವಂ ಭವಿಷ್ಯಸಿ|

01003191c ಮಮ ಪ್ರಿಯಂ ಚ ಸುಮಹತ್ಕೃತಂ ರಾಜನ್ಭವಿಷ್ಯತಿ||

ಇದರಿಂದ ನಿನ್ನ ತಂದೆಯ ಮರಣದ ಸೇಡು ತೀರುತ್ತದೆ ಮತ್ತು ರಾಜನ್! ನನಗೆ ಪ್ರಿಯವಾದ ಒಂದು ದೊಡ್ಡ ಕೆಲಸವನ್ನು ಮಾಡಿಕೊಟ್ಟಹಾಗೂ ಆಗುತ್ತದೆ.

01003192a ಕರ್ಮಣಃ ಪೃಥಿವೀಪಾಲ ಮಮ ಯೇನ ದುರಾತ್ಮನಾ|

01003192c ವಿಘ್ನಃ ಕೃತೋ ಮಹಾರಾಜ ಗುರ್ವರ್ಥಂ ಚರತೋಽನಘ||

ಪೃಥಿವೀಪಾಲಕ! ಮಹಾರಾಜ! ಅನಘ! ಒಮ್ಮೆ ನಾನು ಗುರುದಕ್ಷಿಣೆಯನ್ನು ತರುವಾಗ ಆ ದುರಾತ್ಮನು ವಿಘ್ನವನ್ನು ತಂದೊಡ್ಡಿದ್ದನು.”

01003193a ಏತತ್ ಶ್ರುತ್ವಾ ತು ನೃಪತಿಸ್ತಕ್ಷಕಸ್ಯ ಚುಕೋಪ ಹ|

01003193c ಉತ್ತಂಕವಾಕ್ಯಹವಿಷಾ ದೀಪ್ತೋಽಗ್ನಿರ್ಹವಿಷಾ ಯಥಾ||

ಉತ್ತಂಕನ ಈ ಮಾತುಗಳನ್ನು ಕೇಳಿದ ನೃಪತಿಯು ಅಗ್ನಿಯಲ್ಲಿ ತುಪ್ಪವನ್ನು ಹವಿಸ್ಸನ್ನಾಗಿ ಹಾಕಿದಾಗ ಅದು ಹೇಗೆ ಪ್ರಜ್ವಲಿಸುತ್ತದೆಯೋ ಹಾಗೆ ತಕ್ಷಕನ ಮೇಲೆ ಸಿಟ್ಟಿಗೆದ್ದನು.

01003194a ಅಪೃಚ್ಛಚ್ಚ ತದಾ ರಾಜಾ ಮಂತ್ರಿಣಃ ಸ್ವಾನ್ಸುದುಃಖಿತಃ|

01003194c ಉತ್ತಂಕಸ್ಯೈವ ಸಾನ್ನಿಧ್ಯೇ ಪಿತುಃ ಸ್ವರ್ಗಗತಿಂ ಪ್ರತಿ||

ಬಹು ದುಃಖಿತನಾದ ರಾಜನು ಉತ್ತಂಕನ ಸನ್ನಿಧಿಯಲ್ಲಿಯೇ ತನ್ನ ತಂದೆಯು ಸ್ವರ್ಗಗತಿಯನ್ನು ಪಡೆದುದರ ಕುರಿತು ತನ್ನ ಮಂತ್ರಿಗಳಲ್ಲಿ ಕೇಳಿದನು.

01003195a ತದೈವ ಹಿ ಸ ರಾಜೇಂದ್ರೋ ದುಃಖಶೋಕಾಪ್ಲುತೋಽಭವತ್|

01003195c ಯದೈವ ಪಿತರಂ ವೃತ್ತಮುತ್ತಂಕಾದಶೃಣೋತ್ತದಾ||

ಉತ್ತಂಕನಿಂದ ತನ್ನ ತಂದೆಯ ವೃತ್ತಾಂತವನ್ನು ಕೇಳಿದ ರಾಜೇಂದ್ರನು ದುಃಖಶೋಕದಲ್ಲಿ ಮುಳುಗಿದನು[7].”

 

[1] ಪೌಷ್ಯ ಪರ್ವ ಎಂಬ ಹೆಸರನ್ನು ಈ ಪರ್ವಕ್ಕಿಡಲು ಇದೇ ಕಾರಣ ಎನ್ನಬಹುದು. ಆದರೆ ಈ ಪೌಷ್ಯರಾಜನು ಯಾರು? ಹಿಂದಿನ ಶ್ಲೋಕವೊಂದರಲ್ಲಿ ಜಯಮೇಜಯ ಮತ್ತು ಪೌಷ್ಯರಾಜರು ವೇದನನ್ನು ಪೌರೋಹಿತ್ಯಕ್ಕೆ ಕರೆದೊಯ್ಯುತ್ತಿದ್ಹರು ಎಂದಿದೆ.

[2] ಆ ಕ್ಷಾತ್ರಿಣಿಯ ಕರ್ಣಕುಂಡಲಗಳ ವಿಶೇಷತೆ ಏನಿದ್ದಿರಬಹುದು?

[3] ಈ ಕಟ್ಟುನಿಟ್ಟು ಈಗಲೂ ಕೆಲವು ಬ್ರಾಹ್ಮಣರಲ್ಲಿ ಕಂಡುಬರುತ್ತದೆ.

[4] ತಕ್ಷಕನಿಗೆ ಈ ಕುಂಡಲಗಳ ಅವಶ್ಯಕತೆ ಏನಿದ್ದಿರಬಹುದು?

[5] ಇಲ್ಲಿ ಶ್ರಾದ್ಧದ ಅರ್ಥವೇನು? ಕೇವಲ ಭೋಜನವನ್ನು ನೀಡುವುದೇ?

[6] ಉತ್ತಂಕನ ಕಥೆಯು ಮಹಾಭಾರತದ ಅಶ್ವಮೇಧಿಕ ಪರ್ವದಲ್ಲಿ ಇನ್ನೊಮ್ಮೆ ಬರುತ್ತದೆ. ಅದರಲ್ಲಿ ಉತ್ತಂಕನ ಗುರು ಗೌತಮ. ವನಪರ್ವದ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಮಧು-ಕೈಟಭರ ಮಗ ದುಂಧುವಿನ ಸಂಹಾರದ ಸನ್ನಿವೇಶದಲ್ಲಿ ಕೂಡ ಉತ್ತಂಕನೆಂಬ ಮುನಿಯ ಕಥೆಯು ಬರುತ್ತದೆ.

[7] ನೀಲಕಂಠೀಯದ ಪ್ರಕಾರ ಈ ಉಪಪರ್ವದಲ್ಲಿರುವ ಒಟ್ಟು ಶ್ಲೋಕಗಳ ಸಂಖ್ಯೆ ೧೮೮.

Leave a Reply

Your email address will not be published. Required fields are marked *