Drona Parva: Chapter 24

ದ್ರೋಣ ಪರ್ವ: ಸಂಶಪ್ತಕವಧ ಪರ್ವ

೨೪

ದ್ವಂದ್ವಯುದ್ಧಗಳು (೧-೬೧).

07024001 ಸಂಜಯ ಉವಾಚ|

07024001a ಮಹದ್ಭೈರವಮಾಸೀನ್ನಃ ಸಮ್ನಿವೃತ್ತೇಷು ಪಾಂಡುಷು|

07024001c ದೃಷ್ಟ್ವಾ ದ್ರೋಣಂ ಚಾದ್ಯಮಾನಂ ತೈರ್ಭಾಸ್ಕರಮಿವಾಂಬುದೈಃ||

ಸಂಜಯನು ಹೇಳಿದನು: “ಪಾಂಡವರು ಹಿಂದಿರುಗಿದ ನಂತರ ಮೋಡಗಳಿಂದ ಸೂರ್ಯನು ಹೇಗೋ ಹಾಗೆ ದ್ರೋಣನು ಬಾಣಗಳಿಂದ ಮುಚ್ಚಲ್ಪಡಲು ನಮಗೆ ಮಹಾ ಭಯವುಂಟಾಯಿತು.

07024002a ತೈಶ್ಚೋದ್ಧೂತಂ ರಜಸ್ತೀವ್ರಮವಚಕ್ರೇ ಚಮೂಂ ತವ|

07024002c ತತೋ ಹತಮಮನ್ಯಾಮ ದ್ರೋಣಂ ದೃಷ್ಟಿಪಥೇ ಹತೇ||

ಅವರ ತೀವ್ರ ನಡೆದಾಟದಿಂದ ಎದ್ದ ಧೂಳು ನಿನ್ನ ಸೈನ್ಯವನ್ನು ಸಂಪೂರ್ಣವಾಗಿ ಮುಚ್ಚಿತು. ಅದರಿಂದ ನಮಗೆ ಕಾಣದಂತಾಗಿ, ದ್ರೋಣನು ಹತನಾದನೆಂದೇ ನಾವು ಭಾವಿಸಿದೆವು.

07024003a ತಾಂಸ್ತು ಶೂರಾನ್ಮಹೇಷ್ವಾಸಾನ್ಕ್ರೂರಂ ಕರ್ಮ ಚಿಕೀರ್ಷತಃ|

07024003c ದೃಷ್ಟ್ವಾ ದುರ್ಯೋಧನಸ್ತೂರ್ಣಂ ಸ್ವಸೈನ್ಯಂ ಸಮಚೂಚುದತ್||

ಕ್ರೂರ ಕರ್ಮವನ್ನು ಮಾಡಲು ಬಯಸಿದ್ದ ಆ ಶೂರ ಮಹೇಷ್ವಾಸರನ್ನು ಕಂಡು ತಕ್ಷಣವೇ ದುರ್ಯೋಧನನು ತನ್ನ ಸೈನ್ಯವನ್ನು ಪ್ರಚೋದಿಸಿದನು.

07024004a ಯಥಾಶಕ್ತಿ ಯಥೋತ್ಸಾಹಂ ಯಥಾಸತ್ತ್ವಂ ನರಾಧಿಪಾಃ|

07024004c ವಾರಯಧ್ವಂ ಯಥಾಯೋಗಂ ಪಾಂಡವಾನಾಮನೀಕಿನೀಂ||

“ನರಾಧಿಪರೇ! ಯಥಾಶಕ್ತಿಯಾಗಿ, ಯಥೋತ್ಸಾಹದಿಂದ, ಯಥಾಸತ್ವವನ್ನು ಬಳಸಿ ಯಥಾಯೋಗವಾಗಿ ಪಾಂಡವರ ಸೇನೆಯನ್ನು ತಡೆಯಿರಿ!”

07024005a ತತೋ ದುರ್ಮರ್ಷಣೋ ಭೀಮಮಭ್ಯಗಚ್ಚತ್ಸುತಸ್ತವ|

07024005c ಆರಾದ್ದೃಷ್ಟ್ವಾ ಕಿರನ್ಬಾಣೈರಿಚ್ಚನ್ದ್ರೋಣಸ್ಯ ಜೀವಿತಂ||

ಆಗ ನಿನ್ನ ಮಗ ದುರ್ಮರ್ಷಣನು ಬಾಣಗಳನ್ನು ಎರಚುತ್ತಾ ದ್ರೋಣನ ಜೀವವನ್ನು ಕಳೆಯಲಿಚ್ಛಿಸಿದ ಭೀಮನನ್ನು ಎದುರಿಸಿದನು.

07024006a ತಂ ಬಾಣೈರವತಸ್ತಾರ ಕ್ರುದ್ಧೋ ಮೃತ್ಯುಮಿವಾಹವೇ|

07024006c ತಂ ಚ ಭೀಮೋಽತುದದ್ಬಾಣೈಸ್ತದಾಸೀತ್ತುಮುಲಂ ಮಹತ್||

ಕ್ರುದ್ಧನಾಗಿ ಯುದ್ಧದಲ್ಲಿ ಮೃತ್ಯುಸಮಾನ ಬಾಣಗಳಿಂದ ಅವನನ್ನು ಹೊಡೆಯಲು, ಭೀಮಸೇನನೂ ಕೂಡ ಬಾಣಗಳಿಂದ ಅವನನ್ನು ಗಾಯಗೊಳಿಸಿದನು. ಮಹಾತುಮುಲ ಯುದ್ಧವು ನಡೆಯಿತು.

07024007a ತ ಈಶ್ವರಸಮಾದಿಷ್ಟಾಃ ಪ್ರಾಜ್ಞಾಃ ಶೂರಾಃ ಪ್ರಹಾರಿಣಃ|

07024007c ಬಾಹ್ಯಂ ಮೃತ್ಯುಭಯಂ ಕೃತ್ವಾ ಪ್ರತ್ಯತಿಷ್ಠನ್ಪರಾನ್ಯುಧಿ||

ತಮ್ಮ ಯಜಮಾನದಿಂದ ಆಜ್ಞಾಪಿತರಾದ ಆ ಪ್ರಾಜ್ಞರು, ಶೂರರು, ಪ್ರಹಾರಿಗಳು ಮೃತ್ಯುಭಯವನ್ನು ಮತ್ತು ಅಧಿಕಾರಭಯವನ್ನು ತೊರೆದು ಶತ್ರುಗಳೊಂದಿಗೆ ಯುದ್ಧಮಾಡಿದರು.

07024008a ಕೃತವರ್ಮಾ ಶಿನೇಃ ಪುತ್ರಂ ದ್ರೋಣಪ್ರೇಪ್ಸುಂ ವಿಶಾಂ ಪತೇ|

07024008c ಪರ್ಯವಾರಯದಾಯಾಂತಂ ಶೂರಂ ಸಮಿತಿಶೋಭನಂ||

ವಿಶಾಂಪತೇ! ಕೃತವರ್ಮನು ದ್ರೋಣನ ಬಳಿಬರುತ್ತಿದ್ದ ಶಿನಿಯ ಪುತ್ರ, ಸಮಿತಿ ಶೋಭನ, ಶೂರ, ದಾಯಾದಿ (ಸಾತ್ಯಕಿ) ಯನ್ನು ಸುತ್ತುವರೆದನು.

07024009a ತಂ ಶೈನೇಯಃ ಶರವ್ರಾತೈಃ ಕ್ರುದ್ಧಃ ಕ್ರುದ್ಧಮವಾರಯತ್|

07024009c ಕೃತವರ್ಮಾ ಚ ಶೈನೇಯಂ ಮತ್ತೋ ಮತ್ತಮಿವ ದ್ವಿಪಂ||

ಅವನನ್ನು ಶೈನೇಯನೂ ಶೈನೇಯನನ್ನು ಕೃತವರ್ಮನೂ ಮದಿಸಿದ ಆನೆಗಳಂತೆ ಕ್ರುದ್ಧರಾಗಿ ಕ್ರುದ್ಧರನ್ನು ತಡೆದರು.

07024010a ಸೈಂಧವಃ ಕ್ಷತ್ರಧರ್ಮಾಣಮಾಪತಂತಂ ಶರೌಘಿಣಂ|

07024010c ಉಗ್ರಧನ್ವಾ ಮಹೇಷ್ವಾಸಂ ಯತ್ತೋ ದ್ರೋಣಾದವಾರಯತ್||

ಉಗ್ರಧನ್ವಿ ಸೈಂಧವನು ದ್ರೋಣನ ಕಡೆ ಬರುತ್ತಿದ್ದ ಶರಗಳ ಮಳೆಯನ್ನು ಸುರಿಸುತ್ತಿದ್ದ ಮಹೇಷ್ವಾಸ ಕ್ಷತ್ರಧರ್ಮನನ್ನು ತಡೆದನು.

07024011a ಕ್ಷತ್ರಧರ್ಮಾ ಸಿಂಧುಪತೇಶ್ಚಿತ್ತ್ವಾ ಕೇತನಕಾರ್ಮುಕೇ|

07024011c ನಾರಾಚೈರ್ಬಹುಭಿಃ ಕ್ರುದ್ಧಃ ಸರ್ವಮರ್ಮಸ್ವತಾಡಯತ್||

ಕ್ರುದ್ಧನಾದ ಕ್ಷತ್ರಧರ್ಮನು ಸಿಂಧುಪತಿಯ ಕೇತನ-ಕಾರ್ಮುಕಗಳನ್ನು ತುಂಡುಮಾಡಿ ಅನೇಕ ನಾರಾಚಗಳಿಂದ ಅವನ ಸರ್ವ ಮರ್ಮಗಳಿಗೆ ಹೊಡೆದನು.

07024012a ಅಥಾನ್ಯದ್ಧನುರಾದಾಯ ಸೈಂಧವಃ ಕೃತಹಸ್ತವತ್|

07024012c ವಿವ್ಯಾಧ ಕ್ಷತ್ರಧರ್ಮಾಣಂ ರಣೇ ಸರ್ವಾಯಸೈಃ ಶರೈಃ||

ಕೃತಹಸ್ತನಾದ ಸೈಂಧವನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಎಲ್ಲವೂ ಲೋಹಮಯವಾದ ಶರಗಳಿಂದ ರಣದಲ್ಲಿ ಕ್ಷತ್ರಧರ್ಮನನ್ನು ಹೊಡೆದನು.

07024013a ಯುಯುತ್ಸುಂ ಪಾಂಡವಾರ್ಥಾಯ ಯತಮಾನಂ ಮಹಾರಥಂ|

07024013c ಸುಬಾಹುರ್ಭ್ರಾತರಂ ಶೂರಂ ಯತ್ತೋ ದ್ರೋಣಾದವಾರಯತ್||

ಪಾಂಡವರಿಗೋಸ್ಕರವಾಗಿ ಯುದ್ಧಮಾಡುತ್ತಾ ದ್ರೋಣನ ಕಡೆ ಬರುತ್ತಿದ್ದ ಅಣ್ಣ ಶೂರ ಮಹಾರಥ ಯುಯುತ್ಸುವನ್ನು ಸುಬಾಹುವು ಪ್ರಯತ್ನಿಸಿ ತಡೆದನು.

07024014a ಸುಬಾಹೋಃ ಸಧನುರ್ಬಾಣಾವಸ್ಯತಃ ಪರಿಘೋಪಮೌ|

07024014c ಯುಯುತ್ಸುಃ ಶಿತಪೀತಾಭ್ಯಾಂ ಕ್ಷುರಾಭ್ಯಾಮಚ್ಚಿನದ್ಭುಜೌ||

ಅದರಿಂದ ಕ್ರುದ್ಧನಾದ ಯುಯುತ್ಸುವು ಪೀತವರ್ಣದ ಎರಡು ನಿಶಿತ ಕ್ಷುರಗಳಿಂದ ಧನುರ್ಬಾಣಯುಕ್ತವಾಗಿದ್ದ ಪರಿಘಗಳಂತಿದ್ದ ಅವರ ಎರಡು ಭುಜಗಳನ್ನೂ ಕತ್ತರಿಸಿದನು.

07024015a ರಾಜಾನಂ ಪಾಂಡವಶ್ರೇಷ್ಠಂ ಧರ್ಮಾತ್ಮಾನಂ ಯುಧಿಷ್ಠಿರಂ|

07024015c ವೇಲೇವ ಸಾಗರಂ ಕ್ಷುಬ್ಧಂ ಮದ್ರರಾಟ್ಸಮವಾರಯತ್||

ಪ್ರಕ್ಷುಬ್ಧ ಸಾಗರವನ್ನು ದಡವು ತಡೆಯುವಂತೆ ಪಾಂಡವಶ್ರೇಷ್ಠ, ಧರ್ಮಾತ್ಮ, ರಾಜಾ ಯುಧಿಷ್ಠಿರನನ್ನು ಮದ್ರರಾಜನು ತಡೆಹಿಡಿದನು.

07024016a ತಂ ಧರ್ಮರಾಜೋ ಬಹುಭಿರ್ಮರ್ಮಭಿದ್ಭಿರವಾಕಿರತ್|

07024016c ಮದ್ರೇಶಸ್ತಂ ಚತುಃಷಷ್ಟ್ಯಾ ಶರೈರ್ವಿದ್ಧ್ವಾನದದ್ಭೃಶಂ||

ಅವನ ಮೇಲೆ ಧರ್ಮರಾಜನು ಅನೇಕ ಮರ್ಮಭೇದಿ ಬಾಣಗಳನ್ನು ಎರಚಲು ಮದ್ರೇಶಸ್ತನು ಅರವತ್ನಾಲ್ಕು ಬಾಣಗಳಿಂದ ಅವನನ್ನು ಹೊಡೆದು ಜೋರಾಗಿ ಗರ್ಜಿಸಿದನು.

07024017a ತಸ್ಯ ನಾನದತಃ ಕೇತುಮುಚ್ಚಕರ್ತ ಸಕಾರ್ಮುಕಂ|

07024017c ಕ್ಷುರಾಭ್ಯಾಂ ಪಾಂಡವಶ್ರೇಷ್ಠಸ್ತತ ಉಚ್ಚುಕ್ರುಶುರ್ಜನಾಃ||

ಗರ್ಜಿಸುತ್ತಿದ್ದ ಅವನ ಕೇತು ಮತ್ತು ಕಾರ್ಮುಕಗಳನ್ನು ಪಾಂಡವಶ್ರೇಷ್ಠನು ಎರಡು ಕ್ಷುರಗಳಿಂದ ಕತ್ತರಿಸಲು ಜನರು ಜೋರಾಗಿ ಜಯಕಾರ ಮಾಡಿದರು.

07024018a ತಥೈವ ರಾಜಾ ಬಾಹ್ಲೀಕೋ ರಾಜಾನಂ ದ್ರುಪದಂ ಶರೈಃ|

07024018c ಆದ್ರವಂತಂ ಸಹಾನೀಕಂ ಸಹಾನೀಕೋ ನ್ಯವಾರಯತ್||

ಹಾಗೆಯೇ ರಾಜಾ ಬಾಹ್ಲೀಕನು ತನ್ನ ಸೇನೆಯೊಂದಿಗೆ ಬರುತ್ತಿದ್ದ ರಾಜ ದ್ರುಪದನನ್ನು ಸೇನೆಯನ್ನೊಡಗೂಡಿ ಶರಗಳಿಂದ ತಡೆದನು.

07024019a ತದ್ಯುದ್ಧಮಭವದ್ಘೋರಂ ವೃದ್ಧಯೋಃ ಸಹಸೇನಯೋಃ|

07024019c ಯಥಾ ಮಹಾಯೂಥಪಯೋರ್ದ್ವಿಪಯೋಃ ಸಂಪ್ರಭಿನ್ನಯೋಃ||

ಆಗ ಸೇನೆಗಳೊಡನಿದ್ದ ಆ ಇಬ್ಬರು ವೃದ್ಧರ ನಡುವೆ ಮದೋದಕವನ್ನು ಸುರಿಸುತ್ತಿದ್ದ ಎರಡು ಮಹಾಗಜಗಳ ನಡುವಿನಂತೆ ಘೋರ ಯುದ್ಧವು ನಡೆಯಿತು.

07024020a ವಿಂದಾನುವಿಂದಾವಾವಂತ್ಯೌ ವಿರಾಟಂ ಮತ್ಸ್ಯಮಾರ್ಚ್ಚತಾಂ|

07024020c ಸಹಸೈನ್ಯೌ ಸಹಾನೀಕಂ ಯಥೇಂದ್ರಾಗ್ನೀ ಪುರಾ ಬಲಿಂ||

ಅವಂತಿಯ ವಿಂದಾನುವಿಂದರು ಸೇನೆಗಳೊಡನೆ ಸೇನಾಸಮೇತನಾಗಿದ್ದ ಮತ್ಸ್ಯ ವಿರಾಟನನ್ನು ಹಿಂದೆ ಇಂದ್ರಾಗ್ನಿಗಳಿಬ್ಬರೂ ಬಲಿಯನ್ನು ಆಕ್ರಮಣಿಸಿದಂತೆ ಆಕ್ರಮಣಿಸಿದರು.

07024021a ತದುತ್ಪಿಂಜಲಕಂ ಯುದ್ಧಮಾಸೀದ್ದೇವಾಸುರೋಪಮಂ|

07024021c ಮತ್ಸ್ಯಾನಾಂ ಕೇಕಯೈಃ ಸಾರ್ಧಮಭೀತಾಶ್ವರಥದ್ವಿಪಂ||

ಆಗ ದೇವಾಸುರರ ಯುದ್ದದಂತೆ ಮತ್ಸ್ಯ ಮತ್ತು ಕೇಕಯರ ನಡುವೆ ಭಯವಿಲ್ಲದೇ ಅಶ್ವ-ರಥ-ಗಜಗಳ ಭಯಂಕರ ಯುದ್ಧವು ನಡೆಯಿತು.

07024022a ನಾಕುಲಿಂ ತು ಶತಾನೀಕಂ ಭೂತಕರ್ಮಾ ಸಭಾಪತಿಃ|

07024022c ಅಸ್ಯಂತಮಿಷುಜಾಲಾನಿ ಯಾಂತಂ ದ್ರೋಣಾದವಾರಯತ್||

ನಕುಲನ ಮಗ ಶತಾನೀಕನನ್ನು ಸಭಾಪತಿ ಭೂತಕರ್ಮನು ಬಾಣಗಳ ಜಾಲವನ್ನೇ ಬೀಸುತ್ತಾ ದ್ರೋಣನ ಬಳಿ ಬಾರದಂತೆ ತಡೆದನು.

07024023a ತತೋ ನಕುಲದಾಯಾದಸ್ತ್ರಿಭಿರ್ಭಲ್ಲೈಃ ಸುಸಂಶಿತೈಃ|

07024023c ಚಕ್ರೇ ವಿಬಾಹುಶಿರಸಂ ಭೂತಕರ್ಮಾಣಮಾಹವೇ||

ಆಗ ಯುದ್ಧದಲ್ಲಿ ನಕುಲನ ಮಗನು ಮೂರು ತೀಕ್ಷ್ಣ ಭಲ್ಲಗಳಿಂದ ಭೂತಕರ್ಮನ ಬಾಹುಗಳನ್ನೂ ಕತ್ತನ್ನೂ ದೇಹದಿಂದ ಬೇರ್ಪಡಿಸಿದನು.

07024024a ಸುತಸೋಮಂ ತು ವಿಕ್ರಾಂತಮಾಪತಂತಂ ಶರೌಘಿಣಂ|

07024024c ದ್ರೋಣಾಯಾಭಿಮುಖಂ ವೀರಂ ವಿವಿಂಶತಿರವಾರಯತ್||

ಶರಗಳ ಮಳೆಯನ್ನೇ ಪ್ರಯೋಗಿಸುತ್ತಾ ದ್ರೋಣಾಭಿಮುಖನಾಗಿ ಬರುತ್ತಿದ್ದ ವೀರ ವಿಕ್ರಾಂತ ಸುತಸೋಮನನ್ನು ವಿವಿಂಶತಿಯು ತಡೆದನು.

07024025a ಸುತಸೋಮಸ್ತು ಸಂಕ್ರುದ್ಧಃ ಸ್ವಪಿತೃವ್ಯಮಜಿಹ್ಮಗೈಃ|

07024025c ವಿವಿಂಶತಿಂ ಶರೈರ್ವಿದ್ಧ್ವಾ ನಾಭ್ಯವರ್ತತ ದಂಶಿತಃ||

ಕವಚವನ್ನು ಧರಿಸಿದ್ದ ಸಂಕ್ರುದ್ಧ ಸುತಸೋಮನು ಚಿಕ್ಕಪ್ಪ ವಿವಿಂಶತಿಯನ್ನು ಜಿಹ್ಮಗ ಶರಗಳಿಂದ ಹೊಡೆದು ಹಿಮ್ಮೆಟ್ಟಲಿಲ್ಲ.

07024026a ಅಥ ಭೀಮರಥಃ ಶಾಲ್ವಮಾಶುಗೈರಾಯಸೈಃ ಶಿತೈಃ|

07024026c ಷಡ್ಭಿಃ ಸಾಶ್ವನಿಯಂತಾರಮನಯದ್ಯಮಸಾದನಂ||

ಅನಂತರ ಭೀಮರಥನು ಆರು ನಿಶಿತ ಆಯಸಗಳಿಂದ ಶಾಲ್ವನನ್ನು ಕುದುರೆಗಳೊಂದಿಗೆ ಯಮಸಾದನಕ್ಕೆ ಕಳುಹಿಸಿದನು.

07024027a ಶ್ರುತಕರ್ಮಾಣಮಾಯಾಂತಂ ಮಯೂರಸದೃಶೈರ್ಹಯೈಃ|

07024027c ಚೈತ್ರಸೇನಿರ್ಮಹಾರಾಜ ತವ ಪೌತ್ರೋ ನ್ಯವಾರಯತ್||

ಮಹಾರಾಜ! ನವಿಲಿನ ಬಣ್ಣದ ಕುದುರೆಗಳೊಡನೆ ಬರುತ್ತಿದ್ದ ಶ್ರುತಕರ್ಮನನ್ನು ನಿನ್ನ ಮೊಮ್ಮಗ, ಚಿತ್ರಸೇನಿಯ ಮಗನು ತಡೆದನು.

07024028a ತೌ ಪೌತ್ರೌ ತವ ದುರ್ಧರ್ಷೌ ಪರಸ್ಪರವಧೈಷಿಣೌ|

07024028c ಪಿತೄಣಾಮರ್ಥಸಿದ್ಧ್ಯರ್ಥಂ ಚಕ್ರತುರ್ಯುದ್ಧಮುತ್ತಮಂ||

ಪರಸ್ಪರರ ವಧೆಮಾಡಲು ಬಯಸಿದ್ದ ಆ ಇಬ್ಬರು ನಿನ್ನ ದುರ್ಧರ್ಷ ಮೊಮ್ಮೊಕ್ಕಳು ತಂದೆಯರಿಗೆ ಅರ್ಥಸಿದ್ಧಿಯಾಗಲೆಂದು ಉತ್ತಮ ಯುದ್ಧದಲ್ಲಿ ತೊಡಗಿದರು.

07024029a ತಿಷ್ಠಂತಮಗ್ರತೋ ದೃಷ್ಟ್ವಾ ಪ್ರತಿವಿಂಧ್ಯಂ ತಮಾಹವೇ|

07024029c ದ್ರೌಣಿರ್ಮಾನಂ ಪಿತುಃ ಕುರ್ವನ್ಮಾರ್ಗಣೈಃ ಸಮವಾರಯತ್||

ರಣರಂಗದಲ್ಲಿ ಮುಂದೆ ನಿಂತಿರುವ ಪ್ರತಿವಿಂಧ್ಯನನ್ನು ನೋಡಿ ದ್ರೌಣಿಯು, ತಂದೆಗೆ ಮಾನವನ್ನುಂಟು ಮಾಡುತ್ತಾ ಮಾರ್ಗಣಗಳಿಂದ ಅವನನ್ನು ಮುಚ್ಚಿದನು.

07024030a ತಂ ಕ್ರುದ್ಧಃ ಪ್ರತಿವಿವ್ಯಾಧ ಪ್ರತಿವಿಂಧ್ಯಃ ಶಿತೈಃ ಶರೈಃ|

07024030c ಸಿಂಹಲಾಂಗೂಲಲಕ್ಷ್ಮಾಣಂ ಪಿತುರರ್ಥೇ ವ್ಯವಸ್ಥಿತಂ||

ತಂದೆಗೋಸ್ಕರವಾಗಿ ನಿಂತಿದ್ದ ಆ ಸಿಂಹದಬಾಲದ ಚಿಹ್ನೆಯ ಧ್ವಜವುಳ್ಳವನನ್ನು ಕ್ರುದ್ಧನಾದ ಪ್ರತಿವಿಂಧ್ಯನು ನಿಶಿತ ಶರಗಳಿಂದ ಪ್ರತಿಯಾಗಿ ಹೊಡೆದನು.

07024031a ಪ್ರವಪನ್ನಿವ ಬೀಜಾನಿ ಬೀಜಕಾಲೇ ನರರ್ಷಭ|

07024031c ದ್ರೌಣಾಯನಿರ್ದ್ರೌಪದೇಯಂ ಶರವರ್ಷೈರವಾಕಿರತ್||

ನರರ್ಷಭ! ಬೀಜಬಿತ್ತುವ ಕಾಲದಲ್ಲಿ ಬೀಜಗಳನ್ನು ಸುರಿಸುವಂತೆ ದ್ರೌಣಿಯು ದ್ರೌಪದೇಯನನ್ನು ಶರವರ್ಷಗಳಿಂದ ಮುಚ್ಚಿದನು.

07024032a ಯಸ್ತು ಶೂರತಮೋ ರಾಜನ್ಸೇನಯೋರುಭಯೋರ್ಮತಃ|

07024032c ತಂ ಪಟಚ್ಚರಹಂತಾರಂ ಲಕ್ಷ್ಮಣಃ ಸಮವಾರಯತ್||

ರಾಜನ್! ಯಾರನ್ನು ಎರಡೂ ಸೇನೆಗಳಲ್ಲಿ ಅತ್ಯಂತ ಶೂರನೆಂದು ಅಭಿಪ್ರಾಯಪಡುತ್ತಾರೋ ಆ ಪಟಚ್ಚರಹಂತಾರನನ್ನು ಲಕ್ಷ್ಮಣನು ಎದುರಿಸಿದನು.

07024033a ಸ ಲಕ್ಷ್ಮಣಸ್ಯೇಷ್ವಸನಂ ಚಿತ್ತ್ವಾ ಲಕ್ಷ್ಮ ಚ ಭಾರತ|

07024033c ಲಕ್ಷ್ಮಣೇ ಶರಜಾಲಾನಿ ವಿಸೃಜನ್ಬಹ್ವಶೋಭತ||

ಅವನು ಲಕ್ಷ್ಮಣನ ಧನುಸ್ಸು ಮತ್ತು ಧ್ವಜಗಳನ್ನು ತುಂಡರಿಸಿ ಲಕ್ಷ್ಮಣನ ಮೇಲೆ ಶರಜಾಲಗಳನ್ನು ಪ್ರಯೋಗಿಸಿ ಬಹುವಾಗಿ ಶೋಭಿಸಿದನು.

07024034a ವಿಕರ್ಣಸ್ತು ಮಹಾಪ್ರಾಜ್ಞೋ ಯಾಜ್ಞಸೇನಿಂ ಶಿಖಂಡಿನಂ|

07024034c ಪರ್ಯವಾರಯದಾಯಾಂತಂ ಯುವಾನಂ ಸಮರೇ ಯುವಾ||

ಸಮರದಲ್ಲಿ ಮಹಾಪ್ರಾಜ್ಞ ಯುವಕ ವಿಕರ್ಣನು ಮುಂದುವರೆಯುತ್ತಿದ್ದ ಯುವಕ ಯಾಜ್ಞಸೇನೆ ಶಿಖಂಡಿಯನ್ನು ಸುತ್ತುವರೆದು ತಡೆದನು.

07024035a ತತಸ್ತಮಿಷುಜಾಲೇನ ಯಾಜ್ಞಸೇನಿಃ ಸಮಾವೃಣೋತ್|

07024035c ವಿಧೂಯ ತದ್ಬಾಣಜಾಲಂ ಬಭೌ ತವ ಸುತೋ ಬಲೀ||

ಆಗ ಯಾಜ್ಞಸೇನಿಯು ಅವನನ್ನು ಶರಜಾಲಗಳಿಂದ ಮುಚ್ಚಿದನು. ನಿನ್ನ ಬಲಶಾಲಿ ಮಗನು ಆ ಬಾಣಜಾಲವನ್ನು ತೆಗೆದುಹಾಕಿದನು.

07024036a ಅಂಗದೋಽಭಿಮುಖಃ ಶೂರಮುತ್ತಮೌಜಸಮಾಹವೇ|

07024036c ದ್ರೋಣಾಯಾಭಿಮುಖಂ ಯಾಂತಂ ವತ್ಸದಂತೈರವಾರಯತ್||

ದ್ರೋಣಾಭಿಮುಖನಾಗಿ ಬರುತ್ತಿದ್ದ ಉತ್ತಮೌಜಸನನ್ನು ರಣದಲ್ಲಿ ಅಂಗದನು ಎದುರಿಸಿ ವತ್ಸದಂತಗಳಿಂದ ತಡೆದನು.

07024037a ಸ ಸಂಪ್ರಹಾರಸ್ತುಮುಲಸ್ತಯೋಃ ಪುರುಷಸಿಂಹಯೋಃ|

07024037c ಸೈನಿಕಾನಾಂ ಚ ಸರ್ವೇಷಾಂ ತಯೋಶ್ಚ ಪ್ರೀತಿವರ್ಧನಃ||

ಆ ಇಬ್ಬರು ಪುರುಷಸಿಂಹರು ಪ್ರಹಾರಿಸುತ್ತಾ ತುಮುಲ ಯುದ್ಧವನ್ನು ನಡೆಸಿರಲು ಅವರ ಮೆಲೆ ಎಲ್ಲ ಸೈನಿಕರಿಗೂ ಪ್ರೀತಿಯು ಹೆಚ್ಚಾಯಿತು.

07024038a ದುರ್ಮುಖಸ್ತು ಮಹೇಷ್ವಾಸೋ ವೀರಂ ಪುರುಜಿತಂ ಬಲೀ|

07024038c ದ್ರೋಣಾಯಾಭಿಮುಖಂ ಯಾಂತಂ ಕುಂತಿಭೋಜಮವಾರಯತ್||

ಮಹೇಷ್ವಾಸ ದುರ್ಮುಖನಾದರೋ ದ್ರೋಣನ ಕಡೆ ಬರುತ್ತಿದ್ದ ವೀರ ಪುರಜಿತ ಬಲಶಾಲೀ ಕುಂತಿಭೋಜನನ್ನು ತಡೆದನು.

07024039a ಸ ದುರ್ಮುಖಂ ಭ್ರುವೋರ್ಮಧ್ಯೇ ನಾರಾಚೇನ ವ್ಯತಾಡಯತ್|

07024039c ತಸ್ಯ ತದ್ವಿಬಭೌ ವಕ್ತ್ರಂ ಸನಾಲಮಿವ ಪಂಕಜಂ||

ಅವನು ನಾರಾಚಗಳಿಂದ ದುರ್ಮುಖನ ಹುಬ್ಬುಗಳ ಮಧ್ಯೆ ಹೊಡೆದನು. ಆಗ ಅವನ ಮುಖವು ನಾಳಯುಕ್ತವಾದ ಕಮಲದಂತೆ ಕಂಡಿತು.

07024040a ಕರ್ಣಸ್ತು ಕೇಕಯಾನ್ಭ್ರಾತೄನ್ಪಂಚ ಲೋಹಿತಕಧ್ವಜಾನ್|

07024040c ದ್ರೋಣಾಯಾಭಿಮುಖಂ ಯಾತಾಂ ಶರವರ್ಷೈರವಾರಯತ್||

ಕರ್ಣನಾದರೋ ದ್ರೋಣನ ಅಭಿಮುಖವಾಗಿ ಬರುತ್ತಿದ್ದ ಕೆಂಪು ಧ್ವಜಗಳನ್ನುಳ್ಳ ಕೇಕಯ ಸಹೋದರರನ್ನು ಶರವರ್ಷಗಳಿಂದ ತಡೆದನು.

07024041a ತೇ ಚೈನಂ ಭೃಶಸಂಕ್ರುದ್ಧಾಃ ಶರವ್ರಾತೈರವಾಕಿರನ್|

07024041c ಸ ಚ ತಾಂಶ್ಚಾದಯಾಮಾಸ ಶರಜಾಲೈಃ ಪುನಃ ಪುನಃ||

ತುಂಬಾ ಸಿಟ್ಟಿಗೆದ್ದ ಅವರು ಅವನನ್ನೂ ಬಾಣಗಳ ಮಳೆಯಿಂದ ಮುಚ್ಚಿದರು. ಅವನೂ ಕೂಡ ಅವರನ್ನು ಪುನಃ ಪುನಃ ಶರಜಾಲಗಳಿಂದ ಮುಚ್ಚಿದನು.

07024042a ನೈವ ಕರ್ಣೋ ನ ತೇ ಪಂಚ ದದೃಶುರ್ಬಾಣಸಂವೃತಾಃ|

07024042c ಸಾಶ್ವಸೂತಧ್ವಜರಥಾಃ ಪರಸ್ಪರಶರಾಚಿತಾಃ||

ಪರಸ್ಪರ ಬಾಣಪ್ರಯೋಗಳಿಂದ ಮುಚ್ಚಲ್ಪಟ್ಟ ಕರ್ಣನಾಗಲೀ, ಆ ಐವರಾಗಲೀ ಅವರ ಕುದುರೆ-ಸೂತ-ರಥಗಳ ಸಹಿತ ಕಾಣಲಿಲ್ಲ.

07024043a ಪುತ್ರಸ್ತೇ ದುರ್ಜಯಶ್ಚೈವ ಜಯಶ್ಚ ವಿಜಯಶ್ಚ ಹ|

07024043c ನೀಲಂ ಕಾಶ್ಯಂ ಜಯಂ ಶೂರಾಸ್ತ್ರಯಸ್ತ್ರೀನ್ಪ್ರತ್ಯವಾರಯನ್||

ನಿನ್ನ ಮಕ್ಕಳಾದ ದುರ್ಜಯ, ಜಯ ಮತ್ತು ವಿಜಯರು ನೀಲ, ಕಾಶ್ಯ ಮತ್ತು ಜಯ ಈ ಮೂರು ಶೂರರನ್ನು ತಡೆದರು.

07024044a ತದ್ಯುದ್ಧಮಭವದ್ಘೋರಮೀಕ್ಷಿತೃಪ್ರೀತಿವರ್ಧನಂ|

07024044c ಸಿಂಹವ್ಯಾಘ್ರತರಕ್ಷೂಣಾಂ ಯಥೇಭಮಹಿಷರ್ಷಭೈಃ||

ಆಗ ಕಾಡು ಕೋಣಗಳೊಂದಿಗೆ ಸಿಂಹ-ವ್ಯಾಘ್ರ-ತೋಳಗಳ ಹೊಡೆದಾಟದಂತೆ ನೋಡುವವರಿಗೆ ಸಂತೋಷವನ್ನು ಕೊಡುವ ಘೋರ ಯುದ್ಧವು ಅವರ ನಡುವೆ ನಡೆಯಿತು.

07024045a ಕ್ಷೇಮಧೂರ್ತಿಬೃಹಂತೌ ತೌ ಭ್ರಾತರೌ ಸಾತ್ವತಂ ಯುಧಿ|

07024045c ದ್ರೋಣಾಯಾಭಿಮುಖಂ ಯಾಂತಂ ಶರೈಸ್ತೀಕ್ಷ್ಣೈಸ್ತತಕ್ಷತುಃ||

ಕ್ಷೇಮಧೂರ್ತಿ ಮತ್ತು ಬೃಹಂತ ಈ ಇಬ್ಬರು ಸಹೋದರರೂ ಯುದ್ಧದಲ್ಲಿ ದ್ರೋಣನ ಕಡೆ ಬರುತ್ತಿದ್ದ ಸಾತ್ವತ ಸಾತ್ಯಕಿಯನ್ನು ತೀಕ್ಷ್ಣ ಶರಗಳಿಂದ ಗಾಯಗೊಳಿಸಿದರು.

07024046a ತಯೋಸ್ತಸ್ಯ ಚ ತದ್ಯುದ್ಧಮತ್ಯದ್ಭುತಮಿವಾಭವತ್|

07024046c ಸಿಂಹಸ್ಯ ದ್ವಿಪಮುಖ್ಯಾಭ್ಯಾಂ ಪ್ರಭಿನ್ನಾಭ್ಯಾಂ ಯಥಾ ವನೇ||

ಅವರ ನಡುವೆ ವನದಲ್ಲಿ ಮದೋದಕವನ್ನು ಸುರಿಸುವ ಎರಡು ಆನೆಗಳೊಡನೆ ಸಿಂಹದ ಹೋರಾಟದಂತೆ ಅದ್ಭುತ ಯುದ್ಧವು ನಡೆಯಿತು.

07024047a ರಾಜಾನಂ ತು ತಥಾಂಬಷ್ಠಮೇಕಂ ಯುದ್ಧಾಭಿನಂದಿನಂ|

07024047c ಚೇದಿರಾಜಃ ಶರಾನಸ್ಯನ್ಕ್ರುದ್ಧೋ ದ್ರೋಣಾದವಾರಯತ್||

ಚೇದಿರಾಜನು ಕ್ರುದ್ಧನಾಗಿ ಬಾಣಗಳನ್ನು ಪ್ರಯೋಗಿಸಿ ಯುದ್ಧಾಭಿನಂದನ ರಾಜಾ ಅಂಬಷ್ಠನನ್ನು ದ್ರೋಣನ ಬಳಿ ಹೋಗದಂತೆ ತಡೆದನು.

07024048a ತಮಂಬಷ್ಠೋಽಸ್ಥಿಭೇದಿನ್ಯಾ ನಿರವಿಧ್ಯಚ್ಚಲಾಕಯಾ|

07024048c ಸ ತ್ಯಕ್ತ್ವಾ ಸಶರಂ ಚಾಪಂ ರಥಾದ್ಭೂಮಿಮಥಾಪತತ್||

ಅಂಬಷ್ಟನು ಅವನನ್ನು ಅಸ್ಥಿಯನ್ನೂ ಭೇದಿಸುವ ಶಲಾಕಗಳಿಂದ ಹೊಡೆಯಲು, ಅವನು ಬಾಣದೊಂದಿಗೆ ಬಿಲ್ಲನ್ನು ಬಿಟ್ಟು, ರಥದಿಂದ ನೆಲದ ಮೇಲೆ ಬಿದ್ದನು.

07024049a ವಾರ್ಧಕ್ಷೇಮಿಂ ತು ವಾರ್ಷ್ಣೇಯಂ ಕೃಪಃ ಶಾರದ್ವತಃ ಶರೈಃ|

07024049c ಅಕ್ಷುದ್ರಃ ಕ್ಷುದ್ರಕೈರ್ದ್ರೋಣಾತ್ಕ್ರುದ್ಧರೂಪಮವಾರಯತ್||

ಕ್ರೋಧರೂಪಿ ವಾರ್ಷ್ಣೇಯ ವಾರ್ಧಕ್ಷೇಮಿಯನ್ನು ಶಾರದ್ವತ ಕೃಪನು ಸಣ್ಣ ಸಣ್ಣ ಶರಗಳಿಂದ ದ್ರೋಣನ ಬಳಿ ಹೋಗದಂತೆ ತಡೆದನು.

07024050a ಯುಧ್ಯಂತೌ ಕೃಪವಾರ್ಷ್ಣೇಯೌ ಯೇಽಪಶ್ಯಂಶ್ಚಿತ್ರಯೋಧಿನೌ|

07024050c ತೇ ಯುದ್ಧಸಕ್ತಮನಸೋ ನಾನ್ಯಾ ಬುಬುಧಿರೇ ಕ್ರಿಯಾಃ||

ಆ ಇಬ್ಬರು ಚಿತ್ರಯೋಧಿಗಳು - ಕೃಪ ವಾರ್ಷ್ಣೇಯರು - ಯುದ್ಧಮಾಡುತ್ತಿರುವುದನ್ನು ನೋಡುತ್ತಿದ್ದವರು ಆ ಯುದ್ಧದಲ್ಲಿ ಆಸಕ್ತಿ ತೋರಿಸುವುದನ್ನು ಬಿಟ್ಟು ಬೇರೆ ಏನನ್ನು ಮಾಡಲೂ ಮನಸ್ಸುಮಾಡಲಿಲ್ಲ.

07024051a ಸೌಮದತ್ತಿಸ್ತು ರಾಜಾನಂ ಮಣಿಮಂತಮತಂದ್ರಿತಂ|

07024051c ಪರ್ಯವಾರಯದಾಯಾಂತಂ ಯಶೋ ದ್ರೋಣಸ್ಯ ವರ್ಧಯನ್||

ಸೋಮದತ್ತನ ಮಗನಾದರೋ ಬರುತ್ತಿದ್ದ ರಾಜರ ಅತಂದ್ರಿತ ಮಣಿಮಂತನನ್ನು ತಡೆದು ದ್ರೋಣನ ಯಶಸ್ಸನ್ನು ಹೆಚ್ಚಿಸಿದನು.

07024052a ಸ ಸೌಮದತ್ತೇಸ್ತ್ವರಿತಶ್ಚಿತ್ತ್ವೇಷ್ವಸನಕೇತನೇ|

07024052c ಪುನಃ ಪತಾಕಾಂ ಸೂತಂ ಚ ಚತ್ರಂ ಚಾಪಾತಯದ್ರಥಾತ್||

ಅವನು ಸೌಮದತ್ತಿಯ ಧನುಸ್ಸಿನ ಶಿಂಜಿನಿಯನ್ನೂ, ಕೇತನವನ್ನೂ ಮತ್ತೆ ಪುನಃ ಪತಾಕೆ, ಸೂತ ಮತ್ತು ಚತ್ರಗಳನ್ನು ರಥದಿಂದ ಬೀಳಿಸಿದನು.

07024053a ಅಥಾಪ್ಲುತ್ಯ ರಥಾತ್ತೂರ್ಣಂ ಯೂಪಕೇತುರಮಿತ್ರಹಾ|

07024053c ಸಾಶ್ವಸೂತಧ್ವಜರಥಂ ತಂ ಚಕರ್ತ ವರಾಸಿನಾ||

ಆಗ ಯೂಪಕೇತು ಅಮಿತ್ರಹ ಸೌಮದತ್ತಿಯು ತಕ್ಷಣವೇ ರಥದಿಂದ ಹಾರಿ ಶ್ರೇಷ್ಠ ಖಡ್ಗದಿಂದ ಅವನನ್ನು ಕುದುರೆಗಳು, ಸೂತ, ಧ್ವಜ ಮತ್ತು ರಥಗಳೊಂದಿಗೆ ತುಂಡರಿಸಿದನು.

07024054a ರಥಂ ಚ ಸ್ವಂ ಸಮಾಸ್ಥಾಯ ಧನುರಾದಾಯ ಚಾಪರಂ|

07024054c ಸ್ವಯಂ ಯಚ್ಚನ್ ಹಯಾನ್ರಾಜನ್ವ್ಯಧಮತ್ಪಾಂಡವೀಂ ಚಮೂಂ||

ತನ್ನ ರಥವನ್ನು ಏರಿ, ಇನ್ನೊಂದು ಧನ್ನುಸ್ಸನ್ನು ತೆಗೆದುಕೊಂಡು, ಸ್ವಯಂ ತಾನೇ ಕುದುರೆಗಳನ್ನು ನಡೆಸುತ್ತಾ ಪಾಂಡವ ಸೇನೆಯನ್ನು ಸಂಹರಿಸುತ್ತಿದ್ದನು.

07024055a ಮುಸಲೈರ್ಮುದ್ಗರೈಶ್ಚಕ್ರೈರ್ಭಿಂಡಿಪಾಲೈಃ ಪರಶ್ವಧೈಃ|

07024055c ಪಾಂಸುವಾತಾಗ್ನಿಸಲಿಲೈರ್ಭಸ್ಮಲೋಷ್ಠತೃಣದ್ರುಮೈಃ||

07024056a ಆರುಜನ್ಪ್ರರುಜನ್ಭಂಜನ್ನಿಘ್ನನ್ವಿದ್ರಾವಯನ್ ಕ್ಷಿಪನ್|

07024056c ಸೇನಾಂ ವಿಭೀಷಯನ್ನಾಯಾದ್ದ್ರೋಣಪ್ರೇಪ್ಸುರ್ಘಟೋತ್ಕಚಃ||

ಮುಸಲ, ಮುದ್ಗರ, ಚಕ್ರ, ಭಿಂಡಿಪಾಲ, ಪರಶು, ನೀರು, ಗಾಳಿ, ಅಗ್ನಿ, ಕಲ್ಲು, ಭಸ್ಮ, ಹುಲ್ಲು, ಮರಗಳೊಂದಿಗೆ ಏರುತ್ತಾ, ಇಳಿಯುತ್ತಾ, ಒಡೆಯುತ್ತಾ, ಕೊಲ್ಲುತ್ತಾ, ಓಡಿಸುತ್ತಾ, ಎಸೆಯುತ್ತಾ ಸೇನೆಗಳನ್ನು ಬೆದರಿಸುತ್ತಾ ದ್ರೋಣನನ್ನು ತಲುಪಲು ಘಟೋತ್ಕಚನು ಧಾವಿಸಿ ಬಂದನು.

07024057a ತಂ ತು ನಾನಾಪ್ರಹರಣೈರ್ನಾನಾಯುದ್ಧವಿಶೇಷಣೈಃ|

07024057c ರಾಕ್ಷಸಂ ರಾಕ್ಷಸಃ ಕ್ರುದ್ಧಃ ಸಮಾಜಘ್ನೇ ಹ್ಯಲಂಬುಸಃ||

ನಾನಾಪ್ರಹರಣಗಳಿಂದ, ನಾನಾ ಯುದ್ಧ ವಿಶೇಷಗಳಿಂದ ರಾಕ್ಷಸನನ್ನು ರಾಕ್ಷಸ ಅಲಂಬುಸನು ಕ್ರುದ್ಧನಾಗಿ ಎದುರಿಸಿದನು.

07024058a ತಯೋಸ್ತದಭವದ್ಯುದ್ಧಂ ರಕ್ಷೋಗ್ರಾಮಣಿಮುಖ್ಯಯೋಃ|

07024058c ತಾದೃಗ್ಯಾದೃಕ್ಪುರಾ ವೃತ್ತಂ ಶಂಬರಾಮರರಾಜಯೋಃ||

ಹಿಂದೆ ಶಂಬರ ಮತ್ತು ಅಮರರಾಜನೊಡನೆ ನಡೆದ ಯುದ್ಧದಂತೆ ಆ ಇಬ್ಬರು ರಾಕ್ಷಸನರಗದ ಮುಖ್ಯರ ನಡುವೆ ಯುದ್ಧವು ನಡೆಯಿತು.

07024059a ಏವಂ ದ್ವಂದ್ವಶತಾನ್ಯಾಸನ್ರಥವಾರಣವಾಜಿನಾಂ|

07024059c ಪದಾತೀನಾಂ ಚ ಭದ್ರಂ ತೇ ತವ ತೇಷಾಂ ಚ ಸಂಕುಲಂ||

ನಿನಗೆ ಮಂಗಳವಾಗಲಿ! ಹೀಗೆ ನಿನ್ನವರ ಮತ್ತು ಅವರ ರಥ-ಆನೆ-ಕುದುರೆ ಸವಾರರ ಮತ್ತು ಪದಾತಿಗಳ ನಡುವೆ ದ್ವಂದ್ವಯುದ್ಧವು ನಡೆಯಿತು.

07024060a ನೈತಾದೃಶೋ ದೃಷ್ಟಪೂರ್ವಃ ಸಂಗ್ರಾಮೋ ನೈವ ಚ ಶ್ರುತಃ|

07024060c ದ್ರೋಣಸ್ಯಾಭಾವಭಾವೇಷು ಪ್ರಸಕ್ತಾನಾಂ ಯಥಾಭವತ್||

ದ್ರೋಣನ ನಾಶಕ್ಕೆ ಮತ್ತು ರಕ್ಷಣೆಗೆ ತೊಡಗಿದ್ದ ಅವರ ನಡುವೆ ನಡೆದ ಯುದ್ಧದಂತಹ ಯುದ್ಧವನ್ನು ಈ ಮೊದಲು ಯಾರೂ ನೋಡಲೂ ಇರಲಿಲ್ಲ ಮುತ್ತು ಕೇಳಲೂ ಇರಲಿಲ್ಲ.

07024061a ಇದಂ ಘೋರಮಿದಂ ಚಿತ್ರಮಿದಂ ರೌದ್ರಮಿತಿ ಪ್ರಭೋ|

07024061c ತತ್ರ ಯುದ್ಧಾನ್ಯದೃಶ್ಯಂತ ಪ್ರತತಾನಿ ಬಹೂನಿ ಚ||

ಪ್ರಭೋ! ಅಲ್ಲಿ ಕಾಣುತ್ತಿದ್ದ ಅನೇಕ ಯುದ್ಧಗಳಲ್ಲಿ ಇದು ಘೋರವಾದುದು, ಇದು ವಿಚಿತ್ರವಾದುದು ಮತ್ತು ಇದು ರೌದ್ರವಾದುದು ಎಂದು ಹೇಳುತ್ತಿದ್ದರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ದ್ವಂದ್ವಯುದ್ಧೇ ಚತುರ್ವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ದ್ವಂದ್ವಯುದ್ಧ ಎನ್ನುವ ಇಪ್ಪತ್ನಾಲ್ಕನೇ ಅಧ್ಯಾಯವು.

Image result for indian motifs against white background

Comments are closed.