ಭೀಷ್ಮ ಪರ್ವ: ಭೀಷ್ಮವಧ ಪರ್ವ
Contents
Toggle೫೮
ಸಂಕುಲ ಯುದ್ಧ (೧-೨೮). ಭೀಮಸೇನನು ಮಾಗಧ ಗಜಸೇನೆಯನ್ನು ನಾಶಗೊಳಿಸಿದುದು (೨೯-೬೧).
06058001 ಧೃತರಾಷ್ಟ್ರ ಉವಾಚ|
06058001a ದೈವಮೇವ ಪರಂ ಮನ್ಯೇ ಪೌರುಷಾದಪಿ ಸಂಜಯ|
06058001c ಯತ್ಸೈನ್ಯಂ ಮಮ ಪುತ್ರಸ್ಯ ಪಾಂಡುಸೈನ್ಯೇನ ವಧ್ಯತೇ||
ಧೃತರಾಷ್ಟ್ರನು ಹೇಳಿದನು: “ಸಂಜಯ! ನನ್ನ ಪುತ್ರನ ಸೇನೆಯು ಈ ರೀತಿ ಪಾಂಡುಸೈನ್ಯದಿಂದ ವಧಿಸಲ್ಪಡುತ್ತಿದೆಯೆಂದರೆ ಪುರುಷ ಪ್ರಯತ್ನಕ್ಕಿಂತಲೂ ದೈವವೇ ಹೆಚ್ಚಿನದೆಂದು ನನಗನ್ನಿಸುತ್ತಿದೆ.
06058002a ನಿತ್ಯಂ ಹಿ ಮಾಮಕಾಂಸ್ತಾತ ಹತಾನೇವ ಹಿ ಶಂಸಸಿ|
06058002c ಅವ್ಯಗ್ರಾಂಶ್ಚ ಪ್ರಹೃಷ್ಟಾಂಶ್ಚ ನಿತ್ಯಂ ಶಂಸಸಿ ಪಾಂಡವಾನ್||
ಅಯ್ಯಾ! ಪ್ರತಿದಿನವೂ ನೀನು ನನ್ನವರು ಸತ್ತುದನ್ನೇ ಹೇಳುತ್ತಿರುವೆ. ಪ್ರತಿದಿನವೂ ಪಾಂಡವರು ಅವ್ಯಗ್ರರೂ ಪ್ರಹೃಷ್ಟರೂ ಆಗಿರುವರೆಂದು ಹೇಳುತ್ತಿರುವೆ.
06058003a ಹೀನಾನ್ಪುರುಷಕಾರೇಣ ಮಾಮಕಾನದ್ಯ ಸಂಜಯ|
06058003c ಪತಿತಾನ್ಪಾತ್ಯಮಾನಾಂಶ್ಚ ಹತಾನೇವ ಚ ಶಂಸಸಿ||
ಸಂಜಯ! ಇಂದು ನನ್ನವರು ಪುರುಷಪ್ರಯತ್ನದಲ್ಲಿಯೂ ಹೀನರಾಗಿ ಬಿದ್ದರು, ಕೆಡವಿಸಲ್ಪಟ್ಟರು, ಸಂಹರಿಸಲ್ಪಟ್ಟರು ಎಂದು ಹೇಳುತ್ತಿದ್ದೀಯೆ.
06058004a ಯುಧ್ಯಮಾನಾನ್ಯಥಾಶಕ್ತಿ ಘಟಮಾನಾಂ ಜಯಂ ಪ್ರತಿ|
06058004c ಪಾಂಡವಾ ವಿಜಯಂತ್ಯೇವ ಜೀಯಂತೇ ಚೈವ ಮಾಮಕಾಃ||
ನನ್ನವರು ಜಯಕ್ಕಾಗಿಯೇ ಯಥಾಶಕ್ತಿ ಯುದ್ಧಮಾಡುತ್ತಿದ್ದರೂ ಪಾಂಡವರು ವಿಜಯಿಳಾಗುತ್ತಿದ್ದಾರೆ ಮತ್ತು ನನ್ನವರು ಸೋಲುತ್ತಿದ್ದಾರೆ.
06058005a ಸೋಽಹಂ ತೀವ್ರಾಣಿ ದುಃಖಾನಿ ದುರ್ಯೋಧನಕೃತಾನಿ ಚ|
06058005c ಅಶ್ರೌಷಂ ಸತತಂ ತಾತ ದುಃಸಹಾನಿ ಬಹೂನಿ ಚ||
ಅಯ್ಯಾ! ದುರ್ಯೋಧನನು ಮಾಡಿದುದಕ್ಕಾಗಿ ನಾನು ಈ ರೀತಿಯ ಇನ್ನೂ ಅನೇಕ ತೀವ್ರ ಸಹಿಸಲಸಾಧ್ಯ ದುಃಖಗಳನ್ನು ಕೇಳಬೇಕಾಗಿ ಬರಬಹುದು.
06058006a ತಮುಪಾಯಂ ನ ಪಶ್ಯಾಮಿ ಜೀಯೇರನ್ಯೇನ ಪಾಂಡವಾಃ|
06058006c ಮಾಮಕಾ ವಾ ಜಯಂ ಯುದ್ಧೇ ಪ್ರಾಪ್ನುಯುರ್ಯೇನ ಸಂಜಯ||
ಸಂಜಯ! ನನ್ನವರು ಯುದ್ಧದಲ್ಲಿ ಜಯವನ್ನು ಹೊಂದಲು ಅಥವಾ ಪಾಂಡವರು ಪರಾಜಿತಗೊಳ್ಳಲು ಯಾವ ಉಪಾಯವನ್ನೂ ನಾನು ಕಾಣುತ್ತಿಲ್ಲ.”
06058007 ಸಂಜಯ ಉವಾಚ|
06058007a ಕ್ಷಯಂ ಮನುಷ್ಯದೇಹಾನಾಂ ಗಜವಾಜಿರಥಕ್ಷಯಂ|
06058007c ಶೃಣು ರಾಜನ್ ಸ್ಥಿರೋ ಭೂತ್ವಾ ತವೈವಾಪನಯೋ ಮಹಾನ್||
ಸಂಜಯನು ಹೇಳಿದನು: “ರಾಜನ್! ಮನುಷ್ಯ ದೇಹಗಳ, ಗಜ-ವಾಜಿ-ರಥಗಳ ಮಹಾ ಕ್ಷಯವು ನಡೆದುದನ್ನು ಸ್ಥಿರನಾಗಿದ್ದುಕೊಂಡು ಕೇಳು.
06058008a ಧೃಷ್ಟದ್ಯುಮ್ನಸ್ತು ಶಲ್ಯೇನ ಪೀಡಿತೋ ನವಭಿಃ ಶರೈಃ|
06058008c ಪೀಡಯಾಮಾಸ ಸಂಕ್ರುದ್ಧೋ ಮದ್ರಾಧಿಪತಿಮಾಯಸೈಃ||
ಶಲ್ಯನ ಒಂಭತ್ತು ಬಾಣಗಳಿಂದ ಪೀಡಿತನಾದ ಧೃಷ್ಟದ್ಯುಮ್ನನು ಸಂಕ್ರುದ್ಧನಾಗಿ ಮದ್ರಾಧಿಪತಿಯನ್ನು ಆಯಸಗಳಿಂದ ಪೀಡಿಸತೊಡಗಿದನು.
06058009a ತತ್ರಾದ್ಭುತಮಪಶ್ಯಾಮ ಪಾರ್ಷತಸ್ಯ ಪರಾಕ್ರಮಂ|
06058009c ನ್ಯವಾರಯತ ಯತ್ತೂರ್ಣಂ ಶಲ್ಯಂ ಸಮಿತಿಶೋಭನಂ||
ಅಲ್ಲಿ ಸಮಿತಿ ಶೋಭನ ಶಲ್ಯನ ವೇಗವನ್ನು ತಡೆದ ಪಾರ್ಷತನ ಅದ್ಭುತ ಪರಾಕ್ರಮವನ್ನು ನೋಡಿದೆವು.
06058010a ನಾಂತರಂ ದದೃಶೇ ಕಶ್ಚಿತ್ತಯೋಃ ಸಂರಬ್ಧಯೋ ರಣೇ|
06058010c ಮುಹೂರ್ತಮಿವ ತದ್ಯುದ್ಧಂ ತಯೋಃ ಸಮಮಿವಾಭವತ್||
ರಣದಲ್ಲಿ ಸಂರಬ್ಧರಾಗಿದ್ದ ಅವರಿಬ್ಬರ ನಡುವೆ ಯಾವುದೇ ವ್ಯತ್ಯಾಸವು ಕಾಣುತ್ತಿರಲಿಲ್ಲ. ಮುಹೂರ್ತಕಾಲ ಇಬ್ಬರೂ ಒಂದೇ ಸಮನಾಗಿ ಯುದ್ಧಮಾಡಿದರು.
06058011a ತತಃ ಶಲ್ಯೋ ಮಹಾರಾಜ ಧೃಷ್ಟದ್ಯುಮ್ನಸ್ಯ ಸಂಯುಗೇ|
06058011c ಧನುಶ್ಚಿಚ್ಛೇದ ಭಲ್ಲೇನ ಪೀತೇನ ನಿಶಿತೇನ ಚ||
ಆಗ ಮಹಾರಾಜ! ಶಲ್ಯನು ಸಂಯುಗದಲ್ಲಿ ಧೃಷ್ಟದ್ಯುಮ್ನನ ಧನುಸ್ಸನ್ನು ಹಳದೀ ಬಣ್ಣದ ನಿಶಿತ ಭಲ್ಲದಿಂದ ಕತ್ತರಿಸಿದನು.
06058012a ಅಥೈನಂ ಶರವರ್ಷೇಣ ಚಾದಯಾಮಾಸ ಭಾರತ|
06058012c ಗಿರಿಂ ಜಲಾಗಮೇ ಯದ್ವಜ್ಜಲದಾ ಜಲಧಾರಿಣಃ||
ಭಾರತ! ಮಳೆಗಾಲದಲ್ಲಿ ಮೋಡಗಳು ಒಂದೇ ಸಮನೆ ಮಳೆಸುರಿಸಿ ಗಿರಿಯನ್ನು ಮಚ್ಚಿಬಿಡುವಂತೆ ಶರವರ್ಷದಿಂದ ಅವನನ್ನು ಮುಚ್ಚಿಬಿಟ್ಟನು.
06058013a ಅಭಿಮನ್ಯುಸ್ತು ಸಂಕ್ರುದ್ಧೋ ಧೃಷ್ಟದ್ಯುಮ್ನೇ ನಿಪೀಡಿತೇ|
06058013c ಅಭಿದುದ್ರಾವ ವೇಗೇನ ಮದ್ರರಾಜರಥಂ ಪ್ರತಿ||
ಅಭಿಮನ್ಯುವಾದರೋ ಧೃಷ್ಟದ್ಯುಮ್ನನು ಪೀಡಿತನಾದುದನ್ನು ನೋಡಿ ಸಂಕ್ರುದ್ಧನಾಗಿ ವೇಗದಿಂದ ಮದ್ರರಾಜನ ರಥದ ಬಳಿ ಧಾವಿಸಿ ಬಂದನು.
06058014a ತತೋ ಮದ್ರಾಧಿಪರಥಂ ಕಾರ್ಷ್ಣಿಃ ಪ್ರಾಪ್ಯಾತಿಕೋಪನಃ|
06058014c ಆರ್ತಾಯನಿಮಮೇಯಾತ್ಮಾ ವಿವ್ಯಾಧ ವಿಶಿಖೈಸ್ತ್ರಿಭಿಃ||
ಮದ್ರಾದಿಪನ ರಥದ ಸಮೀಪ ಬರುತ್ತಲೇ ಅತಿ ಕೋಪದಿಂದ ಕಾರ್ಷ್ಣಿಯು ಅಮೇಯಾತ್ಮ ಆರ್ತಯನಿ[1]ಯನ್ನು ಮೂರು ವಿಶಿಖಗಳಿಂದ ಹೊಡೆದನು.
06058015a ತತಸ್ತು ತಾವಕಾ ರಾಜನ್ಪರೀಪ್ಸಂತೋಽರ್ಜುನಿಂ ರಣೇ|
06058015c ಮದ್ರರಾಜರಥಂ ತೂರ್ಣಂ ಪರಿವಾರ್ಯಾವತಸ್ಥಿರೇ||
ರಾಜನ್! ಆಗ ಆರ್ಜುನಿಯನ್ನು ರಣದಲ್ಲಿ ಎದುರಿಸಲು ಬಯಸಿ ನಿನ್ನವರು ಕೂಡಲೇ ಮದ್ರರಾಜನ ರಥವನ್ನು ಸುತ್ತುವರೆದು ನಿಂತರು.
06058016a ದುರ್ಯೋಧನೋ ವಿಕರ್ಣಶ್ಚ ದುಃಶಾಸನವಿವಿಂಶತೀ|
06058016c ದುರ್ಮರ್ಷಣೋ ದುಃಸ್ಸಹಶ್ಚ ಚಿತ್ರಸೇನಶ್ಚ ದುರ್ಮುಖಃ||
06058017a ಸತ್ಯವ್ರತಶ್ಚ ಭದ್ರಂ ತೇ ಪುರುಮಿತ್ರಶ್ಚ ಭಾರತ|
06058017c ಏತೇ ಮದ್ರಾಧಿಪರಥಂ ಪಾಲಯಂತಃ ಸ್ಥಿತಾ ರಣೇ||
ಭಾರತ! ನಿನಗೆ ಮಂಗಳವಾಗಲಿ! ದುರ್ಯೋಧನ, ವಿಕರ್ಣ, ದುಃಶಾಸನ, ವಿವಿಂಶತಿ, ದುರ್ಮರ್ಷಣ, ದುಃಸ್ಸಹ, ಚಿತ್ರಸೇನ, ದುರ್ಮುಖ, ಸತ್ಯವ್ರತ, ಪುರುಮಿತ್ರ ಇವರು ಮದ್ರಾಧಿಪನ ರಥವನ್ನು ರಕ್ಷಿಸುತ್ತಾ ರಣದಲ್ಲಿ ನಿಂತರು.
06058018a ತಾನ್ಭೀಮಸೇನಃ ಸಂಕ್ರುದ್ಧೋ ಧೃಷ್ಟದ್ಯುಮ್ನಶ್ಚ ಪಾರ್ಷತಃ|
06058018c ದ್ರೌಪದೇಯಾಭಿಮನ್ಯುಶ್ಚ ಮಾದ್ರೀಪುತ್ರೌ ಚ ಪಾಂಡವೌ||
06058019a ನಾನಾರೂಪಾಣಿ ಶಸ್ತ್ರಾಣಿ ವಿಸೃಜಂತೋ ವಿಶಾಂ ಪತೇ|
06058019c ಅಭ್ಯವರ್ತಂತ ಸಂಹೃಷ್ಟಾಃ ಪರಸ್ಪರವಧೈಷಿಣಃ|
06058019e ತೇ ವೈ ಸಮೀಯುಃ ಸಂಗ್ರಾಮೇ ರಾಜನ್ದುರ್ಮಂತ್ರಿತೇ ತವ||
ವಿಶಾಂಪತೇ! ಅವರನ್ನು ಸಂಕ್ರುದ್ಧನಾದ ಭೀಮಸೇನ, ಪಾರ್ಷತ ಧೃಷ್ಟದ್ಯುಮ್ನ, ದ್ರೌಪದೇಯರು, ಅಭಿಮನ್ಯು, ಮಾದ್ರೀಪುತ್ರ ಪಾಂಡವರಿಬ್ಬರು ನಾನಾ ರೂಪದ ಶಸ್ತ್ರಗಳನ್ನು ಪ್ರಯೋಗಿಸುತ್ತಾ ಸಂತೋಷದಿಂದ ಪರಸ್ಪರರನ್ನು ವಧಿಸಲು ಬಯಸಿ ಎದುರಿಸಿದರು. ರಾಜನ್! ನಿನ್ನ ದುರ್ಮಂತ್ರದಿಂದಾಗಿ ಅವರು ಸಂಗ್ರಾಮದಲ್ಲಿ ಸೇರಿದ್ದರು.
06058020a ತಸ್ಮಿನ್ದಾಶರಥೇ ಯುದ್ಧೇ ವರ್ತಮಾನೇ ಭಯಾವಹೇ|
06058020c ತಾವಕಾನಾಂ ಪರೇಷಾಂ ಚ ಪ್ರೇಕ್ಷಕಾ ರಥಿನೋಽಭವನ್||
ಭಯವನ್ನುಂಟು ಮಾಡುತ್ತಿದ್ದ ನಿನ್ನವರ ಮತ್ತು ಶತ್ರುಗಳ ಆ ಹತ್ತು ಹತ್ತು ರಥಿಕರ ನಡುವೆ ಯುದ್ಧವು ನಡೆಯುತ್ತಿರಲು ಇತರ ರಥಿಕರು ಪ್ರೇಕ್ಷಕರಾದರು.
06058021a ಶಸ್ತ್ರಾಣ್ಯನೇಕರೂಪಾಣಿ ವಿಸೃಜಂತೋ ಮಹಾರಥಾಃ|
06058021c ಅನ್ಯೋನ್ಯಮಭಿನರ್ದಂತಃ ಸಂಪ್ರಹಾರಂ ಪ್ರಚಕ್ರಿರೇ||
ಆ ಮಹಾರಥರು ಅನೇಕರೂಪದ ಶಸ್ತ್ರಗಳನ್ನು ಪ್ರಯೋಗಿಸುತ್ತಾ ಅನ್ಯೋನ್ಯರನ್ನು ಹೊಡೆಯುತ್ತಾ ಪ್ರಹರಿಸಲು ತೊಡಗಿದರು.
06058022a ತೇ ಯತ್ತಾ ಜಾತಸಂರಂಭಾಃ ಸರ್ವೇಽನ್ಯೋನ್ಯಂ ಜಿಘಾಂಸವಃ|
06058022c ಮಹಾಸ್ತ್ರಾಣಿ ವಿಮುಂಚಂತಃ ಸಮಾಪೇತುರಮರ್ಷಣಾಃ||
ಎಲ್ಲರೂ ಅನ್ಯೋನ್ಯರನ್ನು ಕೊಲ್ಲಲು ತವಕರಾಗಿದ್ದರು. ಮಹಾಸ್ತ್ರಗಳನ್ನು ಪ್ರಯೋಗಿಸುತ್ತಾ ಸಹನೆಯಿಲ್ಲದೇ ಅವರು ಅನ್ಯೋನ್ಯರ ಮೇಲೆ ಎರಗಿದರು.
06058023a ದುರ್ಯೋಧನಸ್ತು ಸಂಕ್ರುದ್ಧೋ ಧೃಷ್ಟದ್ಯುಮ್ನಂ ಮಹಾರಣೇ|
06058023c ವಿವ್ಯಾಧ ನಿಶಿತೈರ್ಬಾಣೈಶ್ಚತುರ್ಭಿಸ್ತ್ವರಿತೋ ಭೃಶಂ||
06058024a ದುರ್ಮರ್ಷಣಶ್ಚ ವಿಂಶತ್ಯಾ ಚಿತ್ರಸೇನಶ್ಚ ಪಂಚಭಿಃ|
06058024c ದುರ್ಮುಖೋ ನವಭಿರ್ಬಾಣೈರ್ದುಃಸ್ಸಹಶ್ಚಾಪಿ ಸಪ್ತಭಿಃ||
06058024e ವಿವಿಂಶತಿಃ ಪಂಚಭಿಶ್ಚ ತ್ರಿಭಿರ್ದುಃಶಾಸನಸ್ತಥಾ||
ಮಹಾರಣದಲ್ಲಿ ಸಂಕ್ರುದ್ಧರಾಗಿ ತುಂಬಾ ವೇಗದಿಂದ ಧೃಷ್ಟದ್ಯುಮ್ನನನ್ನು ದುರ್ಯೋಧನು ನಾಲ್ಕು ನಿಶಿತ ಬಾಣಗಳಿಂದಲೂ, ದುರ್ಮರ್ಷಣನು ಇಪ್ಪತ್ತು, ಚಿತ್ರಸೇನನು ಐದು, ದುರ್ಮುಖನು ಒಂಭತ್ತು, ದುಃಸ್ಸಹನು ಏಳರಿಂದ, ವಿವಿಂಶತಿಯು ಐದರಿಂದ ಮತ್ತು ದುಃಶಾಸನನು ಮೂರು ಬಾಣಗಳಿಂದ ಹೊಡೆದರು.
06058025a ತಾನ್ಪ್ರತ್ಯವಿಧ್ಯದ್ರಾಜೇಂದ್ರ ಪಾರ್ಷತಃ ಶತ್ರುತಾಪನಃ|
06058025c ಏಕೈಕಂ ಪಂಚವಿಂಶತ್ಯಾ ದರ್ಶಯನ್ಪಾಣಿಲಾಘವಂ||
ರಾಜೇಂದ್ರ! ಅವರಲ್ಲಿ ಒಬ್ಬೊಬ್ಬರನ್ನೂ ಇಪ್ಪತ್ತೈದು ಬಾಣಗಳಿಂದ ಹೊಡೆದು ಶತ್ರುತಾಪನ ಪಾರ್ಷತನು ತನ್ನ ಹಸ್ತಲಾಘವವನ್ನು ಪ್ರದರ್ಶಿಸಿದನು.
06058026a ಸತ್ಯವ್ರತಂ ತು ಸಮರೇ ಪುರುಮಿತ್ರಂ ಚ ಭಾರತ|
06058026c ಅಭಿಮನ್ಯುರವಿಧ್ಯತ್ತೌ ದಶಭಿರ್ದಶಭಿಃ ಶರೈಃ||
ಭಾರತ! ಸಮರದಲ್ಲಿ ಸತ್ಯವ್ರತ ಮತ್ತು ಪುರುಮಿತ್ರರನ್ನು ಹತ್ತು-ಹತ್ತು ಬಾಣಗಳಿಂದ ಹೊಡೆದನು.
06058027a ಮಾದ್ರೀಪುತ್ರೌ ತು ಸಮರೇ ಮಾತುಲಂ ಮಾತೃನಂದನೌ|
06058027c ಚಾದಯೇತಾಂ ಶರವ್ರಾತೈಸ್ತದದ್ಭುತಮಿವಾಭವತ್||
ಮಾತೃನಂದನರಾದ ಮಾದ್ರೀಪುತ್ರರಿಬ್ಬರೂ ಸಮರದಲ್ಲಿ ಮಾತುಲನನ್ನು ಶರವ್ರಾತಗಳಿಂದ ಪ್ರಹರಿಸಿದುದು ಒಂದು ಅದ್ಭುತವೆನಿಸಿತು.
06058028a ತತಃ ಶಲ್ಯೋ ಮಹಾರಾಜ ಸ್ವಸ್ರೀಯೌ ರಥಿನಾಂ ವರೌ|
06058028c ಶರೈರ್ಬಹುಭಿರಾನರ್ಚತ್ಕೃತಪ್ರತಿಕೃತೈಷಿಣೌ|
06058028e ಚಾದ್ಯಮಾನೌ ತತಸ್ತೌ ತು ಮಾದ್ರೀಪುತ್ರೌ ನ ಚೇಲತುಃ||
ಮಹಾರಾಜ! ಆಗ ಶಲ್ಯನು ರಥಿಗಳಲ್ಲಿ ಶ್ರೇಷ್ಠರಾದ ತನ್ನ ತಂಗಿಯ ಮಕ್ಕಳಾದ ಅವರಿಬ್ಬರನ್ನು ಅನೇಕ ಶರಗಳಿಂದ ಹೊಡೆದನು. ಪ್ರತಿಯಾಗಿ ಮಾಡಲು ಬಯಸಿದ ಮಾದ್ರೀಪುತ್ರರಿಬ್ಬರೂ ವಿಚಲಿತರಾಗಲಿಲ್ಲ.
06058029a ಅಥ ದುರ್ಯೋಧನಂ ದೃಷ್ಟ್ವಾ ಭೀಮಸೇನೋ ಮಹಾಬಲಃ|
06058029c ವಿಧಿತ್ಸುಃ ಕಲಹಸ್ಯಾಂತಂ ಗದಾಂ ಜಗ್ರಾಹ ಪಾಂಡವಃ||
ಅದೇ ಸಮಯದಲ್ಲಿ ಮಹಾಬಲ ಪಾಂಡವ ಭೀಮಸೇನನು ದುರ್ಯೋಧನನನ್ನು ನೋಡಿ ಯುದ್ಧವನ್ನೇ ಮುಗಿಸಲು ನಿಶ್ಚಯಿಸಿ ಗದೆಯನ್ನು ಕೈಗೆ ತೆಗೆದುಕೊಂಡನು.
06058030a ತಮುದ್ಯತಗದಂ ದೃಷ್ಟ್ವಾ ಕೈಲಾಸಮಿವ ಶೃಂಗಿಣಂ|
06058030c ಭೀಮಸೇನಂ ಮಹಾಬಾಹುಂ ಪುತ್ರಾಸ್ತೇ ಪ್ರಾದ್ರವನ್ಭಯಾತ್||
ಅದನ್ನು ಹಿಡಿದು ಶಿಖರದಿಂದ ಕೂಡಿದ ಕೈಲಾಸ ಪರ್ವತದಂತೆ ತೋರುತ್ತಿದ್ದ ಆ ಮಹಾಬಾಹು ಭೀಮಸೇನನನ್ನು ನೋಡಿ ನಿನ್ನ ಪುತ್ರರು ಭಯದಿಂದ ಪಲಾಯನಗೈದರು.
06058031a ದುರ್ಯೋಧನಸ್ತು ಸಂಕ್ರುದ್ಧೋ ಮಾಗಧಂ ಸಮಚೋದಯತ್|
06058031c ಅನೀಕಂ ದಶಸಾಹಸ್ರಂ ಕುಂಜರಾಣಾಂ ತರಸ್ವಿನಾಂ|
06058031e ಮಾಗಧಂ ಪುರತಃ ಕೃತ್ವಾ ಭೀಮಸೇನಂ ಸಮಭ್ಯಯಾತ್||
ಸಂಕ್ರುದ್ಧನಾದ ದುರ್ಯೋಧನನಾದರೋ ವೇಗಶಾಲಿಗಳಾದ ಮಾಗಧರ ಹತ್ತು ಸಾವಿರ ಆನೆಗಳ ಸೇನೆಯನ್ನು ಪ್ರಚೋದಿಸಿ, ಮಾಗಧನನ್ನು ಮುಂದೆ ಮಾಡಿಕೊಂಡು ಭೀಮಸೇನನನ್ನು ಎದುರಿಸಿದನು.
06058032a ಆಪತಂತಂ ಚ ತಂ ದೃಷ್ಟ್ವಾ ಗಜಾನೀಕಂ ವೃಕೋದರಃ|
06058032c ಗದಾಪಾಣಿರವಾರೋಹದ್ರಥಾತ್ಸಿಂಹ ಇವೋನ್ನದನ್||
ತನ್ನ ಮೇಲೆ ಎರಗುತ್ತಿರುವ ಆ ಗಜಸೇನೆಯನ್ನು ನೋಡಿ ವೃಕೋದರನು ಗದೆಯನ್ನು ಹಿಡಿದು ರಥದಿಂದ ಧುಮುಕಿ ಸಿಂಹದಂತೆ ಗರ್ಜಿಸಿದನು.
06058033a ಅದ್ರಿಸಾರಮಯೀಂ ಗುರ್ವೀಂ ಪ್ರಗೃಹ್ಯ ಮಹತೀಂ ಗದಾಂ|
06058033c ಅಭ್ಯಧಾವದ್ಗಜಾನೀಕಂ ವ್ಯಾದಿತಾಸ್ಯ ಇವಾಂತಕಃ||
ಲೋಹಮಯ ಭಾರ ಮಹಾ ಗದೆಯನ್ನು ಹಿಡಿದು ಬಾಯಿ ಕಳೆದು ಬರುತ್ತಿರುವ ಅಂತಕನಂತೆ ಗಜಸೇನೆಯ ಮೇಲೆ ಎರಗಿದನು.
06058034a ಸ ಗಜಾನ್ಗದಯಾ ನಿಘ್ನನ್ವ್ಯಚರತ್ಸಮರೇ ಬಲೀ|
06058034c ಭೀಮಸೇನೋ ಮಹಾಬಾಹುಃ ಸವಜ್ರ ಇವ ವಾಸವಃ||
ವಜ್ರವನ್ನು ಹಿಡಿದ ವಾಸವನಂತೆ ಮಹಾಬಾಹು ಬಲೀ ಭೀಮಸೇನನು ಗದೆಯಿಂದ ಆನೆಗಳನ್ನು ಸಂಹರಿಸುತ್ತಾ ಸಮರದಲ್ಲಿ ಸಂಚರಿಸಿದನು.
06058035a ತಸ್ಯ ನಾದೇನ ಮಹತಾ ಮನೋಹೃದಯಕಂಪಿನಾ|
06058035c ವ್ಯತ್ಯಚೇಷ್ಟಂತ ಸಂಹತ್ಯ ಗಜಾ ಭೀಮಸ್ಯ ನರ್ದತಃ||
ಮನೋಹೃದಯಗಳನ್ನು ಕಂಪಿಸುವಂತೆ ಕೂಗುತ್ತಿದ್ದ ಭೀಮನ ಮಹಾ ಗರ್ಜನೆಯಿಂದಲೇ ಆನೆಗಳು ಒಂದುಕಡೆ ಸೇರಿ ಪ್ರಾಣತೊರೆಯುತ್ತಿದ್ದವು.
06058036a ತತಸ್ತು ದ್ರೌಪದೀಪುತ್ರಾಃ ಸೌಭದ್ರಶ್ಚ ಮಹಾರಥಃ|
06058036c ನಕುಲಃ ಸಹದೇವಶ್ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ||
06058037a ಪೃಷ್ಠಂ ಭೀಮಸ್ಯ ರಕ್ಷಂತಃ ಶರವರ್ಷೇಣ ವಾರಣಾನ್|
06058037c ಅಭ್ಯಧಾವಂತ ವರ್ಷಂತೋ ಮೇಘಾ ಇವ ಗಿರೀನ್ಯಥಾ||
ಆಗ ದ್ರೌಪದೀಪುತ್ರರು, ಮಹಾರಥ ಸೌಭದ್ರ, ನಕುಲ, ಸಹದೇವರು ಮತ್ತು ಪಾರ್ಷತ ಧೃಷ್ಟದ್ಯುಮ್ನರು ಗಿರಿಗಳ ಮೇಲೆ ಮೋಡಗಳು ಮಳೆಸುರಿಸುವಂತೆ ಆನೆಗಳ ಮೇಲೆ ಬಾಣಗಳ ಮಳೆಯನ್ನು ಸುರಿಸುತ್ತಾ ಭೀಮನನ್ನು ಹಿಂದಿನಿಂದ ರಕ್ಷಿಸುತ್ತಿದ್ದರು.
06058038a ಕ್ಷುರೈಃ ಕ್ಷುರಪ್ರೈರ್ಭಲ್ಲೈಶ್ಚ ಪೀತೈರಂಜಲಿಕೈರಪಿ|
06058038c ಪಾತಯಂತೋತ್ತಮಾಂಗಾನಿ ಪಾಂಡವಾ ಗಜಯೋಧಿನಾಂ||
ಕ್ಷುರ, ಕ್ಷುರಪ್ರ, ಭಲ್ಲ, ಪೀತ, ಅಂಜಲಿಕಗಳಿಂದ ಪಾಂಡವರು ಗಜಯೋಧಿಗಳ ಶಿರಗಳನ್ನು ಕತ್ತರಿಸುತ್ತಿದ್ದರು.
06058039a ಶಿರೋಭಿಃ ಪ್ರಪತದ್ಭಿಶ್ಚ ಬಾಹುಭಿಶ್ಚ ವಿಭೂಷಿತೈಃ|
06058039c ಅಶ್ಮವೃಷ್ಟಿರಿವಾಭಾತಿ ಪಾಣಿಭಿಶ್ಚ ಸಹಾಂಕುಶೈಃ||
ಕಲ್ಲಿನ ಮಳೆಯಂತೆ ತಲೆಗಳು, ವಿಭೂಷಿತ ಬಾಹುಗಳು, ಅಂಕುಶಗಳನ್ನು ಹಿಡಿದಿದ್ದ ಕೈಗಳು ಬೀಳುತ್ತಿದ್ದವು.
06058040a ಹೃತೋತ್ತಮಾಂಗಾಃ ಸ್ಕಂಧೇಷು ಗಜಾನಾಂ ಗಜಯೋಧಿನಃ|
06058040c ಅದೃಶ್ಯಂತಾಚಲಾಗ್ರೇಷು ದ್ರುಮಾ ಭಗ್ನಶಿಖಾ ಇವ||
ಗಜಯೋಧಿಗಳ ತಲೆಗಳು ಕತ್ತರಿಸಿ ಬಿದ್ದು ಕೇವಲ ಮುಂಡಗಳು ಆನೆಗಳ ಮೇಲಿರಲು ಅವು ಪರ್ವತದ ಮೇಲಿರುವ ರೆಂಬೆಗಳು ತುಂಡಾದ ಬೋಳು ಮರಗಳಂತೆ ತೋರಿದವು.
06058041a ಧೃಷ್ಟದ್ಯುಮ್ನಹತಾನನ್ಯಾನಪಶ್ಯಾಮ ಮಹಾಗಜಾನ್|
06058041c ಪತಿತಾನ್ಪಾತ್ಯಮಾನಾಂಶ್ಚ ಪಾರ್ಷತೇನ ಮಹಾತ್ಮನಾ||
ಮಹಾತ್ಮ ಪಾರ್ಷತ ಧೃಷ್ಟದ್ಯುಮ್ನನಿಂದ ಕೆಳಗುರುಳಿಸಲ್ಪಟ್ಟ, ಬೀಳಿಸಲ್ಪಡುತ್ತಿರುವ ಮಹಾ ಗಜಗಳನ್ನು ನೋಡಿದೆವು.
06058042a ಮಾಗಧೋಽಥ ಮಹೀಪಾಲೋ ಗಜಮೈರಾವತೋಪಮಂ|
06058042c ಪ್ರೇಷಯಾಮಾಸ ಸಮರೇ ಸೌಭದ್ರಸ್ಯ ರಥಂ ಪ್ರತಿ||
ಆಗ ಮಹೀಪಾಲ ಮಾಗಧನು ಐರಾವತದಂತಿರುವ ಆನೆಯೊಂದನ್ನು ಸಮರದಲ್ಲಿ ಸೌಭದ್ರನ ರಥದ ಕಡೆ ಕಳುಹಿಸಿದನು.
06058043a ತಮಾಪತಂತಂ ಸಂಪ್ರೇಕ್ಷ್ಯ ಮಾಗಧಸ್ಯ ಗಜೋತ್ತಮಂ|
06058043c ಜಘಾನೈಕೇಷುಣಾ ವೀರಃ ಸೌಭದ್ರಃ ಪರವೀರಹಾ||
ಮಾಗಧನ ಆ ಉತ್ತಮ ಗಜವು ಮೇಲೆ ಬೀಳುತ್ತಿರುವುದನ್ನು ಕಂಡು ಪರವೀರಹ ವೀರ ಸೌಭದ್ರನು ಅದನ್ನು ಒಂದೇ ಬಾಣದಿಂದ ಸಂಹರಿಸಿದನು.
06058044a ತಸ್ಯಾವರ್ಜಿತನಾಗಸ್ಯ ಕಾರ್ಷ್ಣಿಃ ಪರಪುರಂಜಯಃ|
06058044c ರಾಜ್ಞೋ ರಜತಪುಂಖೇನ ಭಲ್ಲೇನಾಪಹರಚ್ಚಿರಃ||
ಪರಪುರಂಜಯ ಕಾರ್ಷ್ಣಿಯು ತಕ್ಷಣವೇ ರಜತಪುಂಖ ಭಲ್ಲದಿಂದ ಆನೆಯನ್ನು ಕಳೆದುಕೊಂಡ ಆ ರಾಜನ ಶಿರವನ್ನು ತುಂಡರಿಸಿದನು.
06058045a ವಿಗಾಹ್ಯ ತದ್ಗಜಾನೀಕಂ ಭೀಮಸೇನೋಽಪಿ ಪಾಂಡವಃ|
06058045c ವ್ಯಚರತ್ಸಮರೇ ಮೃದ್ನನ್ಗಜಾನಿಂದ್ರೋ ಗಿರೀನಿವ||
ಇಂದ್ರನು ಗಿರಿಗಳ ರೆಕ್ಕೆಗಳನ್ನು ಕತ್ತರಿಸಿದಂತೆ ಪಾಂಡವ ಭೀಮಸೇನನೂ ಕೂಡ ಆ ಗಜಸೇನೆಯನ್ನು ಕತ್ತರಿಸುತ್ತಾ ಹೋದನು.
06058046a ಏಕಪ್ರಹಾರಾಭಿಹತಾನ್ಭೀಮಸೇನೇನ ಕುಂಜರಾನ್|
06058046c ಅಪಶ್ಯಾಮ ರಣೇ ತಸ್ಮಿನ್ಗಿರೀನ್ವಜ್ರಹತಾನಿವ||
ವಜ್ರದ ಹೊಡೆತಕ್ಕೆ ಸಿಕ್ಕ ಗಿರಿಗಳಂತೆ ಭೀಮಸೇನನ ಒಂದೊಂದು ಗದಾ ಪ್ರಹಾರಕ್ಕೆ ಒಂದೊಂದು ಆನೆಯು ಸತ್ತು ಬೀಳುತ್ತಿರುವುದನ್ನು ಕಂಡೆವು.
06058047a ಭಗ್ನದಂತಾನ್ಭಗ್ನಕಟಾನ್ಭಗ್ನಸಕ್ಥಾಂಶ್ಚ ವಾರಣಾನ್|
06058047c ಭಗ್ನಪೃಷ್ಠಾನ್ಭಗ್ನಕುಂಭಾನ್ನಿಹತಾನ್ಪರ್ವತೋಪಮಾನ್||
ಆ ಪರ್ವತೋಪಮ ಗಜಗಳು ದಂತಗಳು ಮುರಿದು, ಸೊಂಡಿಲುಗಳು ತುಂಡಾಗಿ, ತೊಡೆಗಳು ಒಡೆದು ಹೋಗಿ, ಹಿಂಬಾಗಗಳು ಭಗ್ನವಾಗಿ, ಕುಂಭಗಳು ಒಡೆದುಹೋಗಿ ಬಿದ್ದಿದ್ದವು.
06058048a ನದತಃ ಸೀದತಶ್ಚಾನ್ಯಾನ್ವಿಮುಖಾನ್ಸಮರೇ ಗಜಾನ್|
06058048c ವಿಮೂತ್ರಾನ್ಭಗ್ನಸಂವಿಗ್ನಾಂಸ್ತಥಾ ವಿಶಕೃತೋಽಪರಾನ್||
ಕೆಲವು ಕೂಗುತ್ತಿದ್ದವು, ಕೆಲವು ಸಂಕಟಪಡುತ್ತಿದ್ದವು, ಕೆಲವು ಆನೆಗಳು ಸಮರದಿಂದ ಓಡಿ ಹೋಗುತ್ತಿದ್ದವು, ಕೆಲವು ಮಲಮೂತ್ರ ವಿಸರ್ಜನೆ ಮಾಡುತ್ತಿದ್ದವು.
06058049a ಭೀಮಸೇನಸ್ಯ ಮಾರ್ಗೇಷು ಗತಾಸೂನ್ಪರ್ವತೋಪಮಾನ್|
06058049c ಅಪಶ್ಯಾಮ ಹತಾನ್ನಾಗಾನ್ನಿಷ್ಟನಂತಸ್ತಥಾಪರೇ||
ಭೀಮಸೇನನ ಮಾರ್ಗದಲ್ಲಿ ಸತ್ತು ಬಿದ್ದಿದ್ದ ಪರ್ವತೋಪಮ ಆನೆಗಳನ್ನು ನೋಡಿದೆವು. ಕೆಲವು ಮೂರ್ಛೆಹೋಗಿ ಬಾಯಲ್ಲಿ ನೊರೆಯನ್ನು ಸುರಿಸುತ್ತಿದ್ದವು.
06058050a ವಮಂತೋ ರುಧಿರಂ ಚಾನ್ಯೇ ಭಿನ್ನಕುಂಭಾ ಮಹಾಗಜಾಃ|
06058050c ವಿಹ್ವಲಂತೋ ಗತಾ ಭೂಮಿಂ ಶೈಲಾ ಇವ ಧರಾತಲೇ||
ಕೆಲವು ಮಹಾಗಜಗಳು ಕುಂಭವು ಒಡೆದು ರಕ್ತವನ್ನು ಕಾರುತ್ತಿದ್ದವು. ಕೆಲವು ಧರೆಗುರುಳಿದ ಪರ್ವತಗಳಂತೆ ಭೂಮಿಯಮೇಲೆ ಒದ್ದಾಡುತ್ತಿದ್ದವು.
06058051a ಮೇದೋರುಧಿರದಿಗ್ಧಾಂಗೋ ವಸಾಮಜ್ಜಾಸಮುಕ್ಷಿತಃ|
06058051c ವ್ಯಚರತ್ಸಮರೇ ಭೀಮೋ ದಂಡಪಾಣಿರಿವಾಂತಕಃ||
ರಕ್ತ-ಮೇದಸ್ಸಿನಿಂದ ತೋಯ್ದುಹೋದ ಅಂಗಾಗಗಳಿಂದ, ಮಾಂಸಮಜ್ಜೆಗಳು ಮೆತ್ತಿಕೊಂಡಿದ್ದ ಭೀಮನು ಸಮರದಲ್ಲಿ ದಂಡವನ್ನು ಹಿಡಿದ ಅಂತಕನಂತೆ ಸಂಚರಿಸುತ್ತಿದ್ದನು.
06058052a ಗಜಾನಾಂ ರುಧಿರಾಕ್ತಾಂ ತಾಂ ಗದಾಂ ಬಿಭ್ರದ್ವೃಕೋದರಃ|
06058052c ಘೋರಃ ಪ್ರತಿಭಯಶ್ಚಾಸೀತ್ಪಿನಾಕೀವ ಪಿನಾಕಧೃಕ್||
ಆನೆಗಳ ರಕ್ತದಿಂದ ಲೇಪನಗೊಂಡ ಆ ಗದೆಯಿಂದ ವೃಕೋದರನು ಪಿನಾಕವನ್ನು ಹಿಡಿದ ಪಿನಾಕಿಯಂತೆ ಘೋರನೂ ಭಯಂಕರನೂ ಆಗಿ ತೋರುತ್ತಿದ್ದನು.
06058053a ನಿರ್ಮಥ್ಯಮಾನಾಃ ಕ್ರುದ್ಧೇನ ಭೀಮಸೇನೇನ ದಂತಿನಃ|
06058053c ಸಹಸಾ ಪ್ರಾದ್ರವಂ ಶಿಷ್ಟಾ ಮೃದ್ನಂತಸ್ತವ ವಾಹಿನೀಂ||
ಕ್ರುದ್ಧ ಭೀಮಸೇನನನಿಂದ ತಪ್ಪಿಸಿಕೊಳ್ಳುತ್ತಿರುವ ಆ ಆನೆಗಳು ಅವಸರದಲ್ಲಿ ಓಡುತ್ತ ನಿನ್ನದೇ ಸೇನೆಯವರನ್ನು ತುಳಿಯುತ್ತಿದ್ದವು.
06058054a ತಂ ಹಿ ವೀರಂ ಮಹೇಷ್ವಾಸಾಃ ಸೌಭದ್ರಪ್ರಮುಖಾ ರಥಾಃ|
06058054c ಪರ್ಯರಕ್ಷಂತ ಯುಧ್ಯಂತಂ ವಜ್ರಾಯುಧಮಿವಾಮರಾಃ||
ಸೌಭದ್ರ ಪ್ರಮುಖರಾದ ಮಹೇಷ್ವಾಸ ಮಹಾರಥರು ಯುದ್ಧಮಾಡುತ್ತಿರುವ ಆ ವೀರನನ್ನು ದೇವತೆಗಳು ವಜ್ರಾಯುಧವನ್ನು ರಕ್ಷಿಸುವಂತೆ ರಕ್ಷಿಸುತ್ತಿದ್ದರು.
06058055a ಶೋಣಿತಾಕ್ತಾಂ ಗದಾಂ ಬಿಭ್ರದುಕ್ಷಿತೋ ಗಜಶೋಣಿತೈಃ|
06058055c ಕೃತಾಂತ ಇವ ರೌದ್ರಾತ್ಮಾ ಭೀಮಸೇನೋ ವ್ಯದೃಶ್ಯತ||
ಆನೆಗಳ ರಕ್ತದಿಂದ ನೆನೆದು ರಕ್ತದಿಂದ ಬಳಿಯಲ್ಪಟ್ಟ ಗದೆಯನ್ನು ತಿರುಗಿಸುತ್ತಿದ್ದ ಭೀಮಸೇನನು ಕೃತಾಂತನಂತೆ ರೌದ್ರಾತ್ಮನಾಗಿ ಕಂಡನು.
06058056a ವ್ಯಾಯಚ್ಛಮಾನಂ ಗದಯಾ ದಿಕ್ಷು ಸರ್ವಾಸು ಭಾರತ|
06058056c ನೃತ್ಯಮಾನಮಪಶ್ಯಾಮ ನೃತ್ಯಂತಮಿವ ಶಂಕರಂ||
ಭಾರತ! ಗದೆಯನ್ನು ಎಲ್ಲ ದಿಕ್ಕುಗಳಲ್ಲಿಯೂ ವ್ಯಾಯಾಮ ಮಾಡುತ್ತಿದ್ದಾನೋ ಎನ್ನುವಂತೆ ತಿರುಗಿಸುತ್ತಿದ್ದ ಅವನು ಪ್ರಳಯಕಾಲದಲ್ಲಿ ಶಂಕರನು ನರ್ತಿಸುವಂತೆ ನರ್ತಿಸುತ್ತಿರುವುದು ಕಂಡುಬಂದಿತು.
06058057a ಯಮದಂಡೋಪಮಾಂ ಗುರ್ವೀಮಿಂದ್ರಾಶನಿಸಮಸ್ವನಾಂ|
06058057c ಅಪಶ್ಯಾಮ ಮಹಾರಾಜ ರೌದ್ರಾಂ ವಿಶಸನೀಂ ಗದಾಂ||
ಮಹಾರಾಜ! ಯಮನ ದಂಡದಂತಿರುವ ಇಂದ್ರನ ವಜ್ರಾಯುಧ ಸಮಾನ ಧ್ವನಿಯಿಂದ ಕೂಡಿದ್ದ ರೌದ್ರ ಭಾರ ಗದೆಯನ್ನು ನೋಡಿದೆವು.
06058058a ವಿಮಿಶ್ರಾಂ ಕೇಶಮಜ್ಜಾಭಿಃ ಪ್ರದಿಗ್ಧಾಂ ರುಧಿರೇಣ ಚ|
06058058c ಪಿನಾಕಮಿವ ರುದ್ರಸ್ಯ ಕ್ರುದ್ಧಸ್ಯಾಭಿಘ್ನತಃ ಪಶೂನ್||
ಕೂದಲು-ಮಜ್ಜೆಗಳಿಂದ ಮಿಶ್ರಿತ ಲೇಪನಗೊಂಡು, ರಕ್ತದಿಂದ ತೋಯ್ದು ಅದು ಪಶುಗಳನ್ನು ಸಂಹರಿಸುವ ಕ್ರುದ್ಧ ರುದ್ರನ ಪಿನಾಕದಂತಿತ್ತು.
06058059a ಯಥಾ ಪಶೂನಾಂ ಸಂಘಾತಂ ಯಷ್ಟ್ಯಾ ಪಾಲಃ ಪ್ರಕಾಲಯೇತ್|
06058059c ತಥಾ ಭೀಮೋ ಗಜಾನೀಕಂ ಗದಯಾ ಪರ್ಯಕಾಲಯತ್||
ಪ್ರಳಯಕಾಲದಲ್ಲಿ ಪಶುಗಳನ್ನು ಹೊಡೆದು ಕೊಲ್ಲುವಂತೆ, ಗೋಪಾಲಕನು ಹೊಡೆದೋಡಿಸುವಂತೆ ಭೀಮನು ಗಜಸೇನೆಯನ್ನು ಬೆನ್ನಟ್ಟಿ ಹೊಡೆಯುತ್ತಿದ್ದನು.
06058060a ಗದಯಾ ವಧ್ಯಮಾನಾಸ್ತೇ ಮಾರ್ಗಣೈಶ್ಚ ಸಮಂತತಃ|
06058060c ಸ್ವಾನ್ಯನೀಕಾನಿ ಮೃದ್ನಂತಃ ಪ್ರಾದ್ರವನ್ ಕುಂಜರಾಸ್ತವ||
ಮಾರ್ಗದಲ್ಲಿ ಎಲ್ಲ ಕಡೆಗಳಿಂದಲೂ ಗದೆಯ ಪ್ರಹಾರಕ್ಕೆ ಸಿಲುಕಿದ ಆನೆಗಳು ನಿನ್ನದೇ ಸೇನೆಗಳನ್ನು ತುಳಿದು ಪಲಾಯನ ಮಾಡುತ್ತಿದ್ದವು.
06058061a ಮಹಾವಾತ ಇವಾಭ್ರಾಣಿ ವಿಧಮಿತ್ವಾ ಸ ವಾರಣಾನ್|
06058061c ಅತಿಷ್ಠತ್ತುಮುಲೇ ಭೀಮಃ ಶ್ಮಶಾನ ಇವ ಶೂಲಭೃತ್||
ಭಿರುಗಾಳಿಯು ಮೋಡಗಳನ್ನು ಚಿಂದಿಮಾಡಿ ಚದುರಿಸುವಂತೆ ಭೀಮನು ಆನೆಗಳನ್ನು ತುಂಡುಮಾಡಿ ಶ್ಮಶಾನದಲ್ಲಿ ಶೂಲಪಾಣಿಯಂತೆ ಯುದ್ಧದಲ್ಲಿ ನಿಂತಿದ್ದನು.”
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಚತುರ್ಥದಿವಸೇ ಭೀಮಯುದ್ಧೇ ಅಷ್ಠಪಂಚಾಶತ್ತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಚತುರ್ಥದಿವಸೇ ಭೀಮಯುದ್ಧ ಎನ್ನುವ ಐವತ್ತೆಂಟನೇ ಅಧ್ಯಾಯವು.

[1] ಋತಾಯನನ ಮಗ ಶಲ್ಯ [ಭಾರತ ದರ್ಶನ, ಸಂಪುಟ ೧೫, ಪುಟ ೧೮೧೦]