Drona Parva: Chapter 67

ದ್ರೋಣ ಪರ್ವ: ಜಯದ್ರಥವಧ ಪರ್ವ

೬೭

ಹಿಂಬಾಲಿಸಿ ಬಂದ ದ್ರೋಣನೊಡನೆ ಅರ್ಜುನನ ಯುದ್ಧ (೧-೧೫). ಅರ್ಜುನ-ಕೃತವರ್ಮರ ಯುದ್ಧ (೧೬-೩೪). ವರುಣ ದೇವ ಮತ್ತು ಮಹಾನದೀ ಪರ್ಣಾಶಾಳ ಮಗ ಶ್ರುತಾಯುಧನು ವರುಣನಿತ್ತಿದ್ದ ಗದೆಯನ್ನು ಯುದ್ದಮಾಡದೇ ಇದ್ದಿದ್ದ ಕೃಷ್ಣನ ಮೇಲೆ ಪ್ರಯೋಗಿಸಲು ಅದು ತಿರುಗಿ ಶ್ರುತಾಯುಧನನ್ನೇ ವಧಿಸಿದುದು (೩೫-೫೮).-ಕಾಂಬೋಜ ರಾಜಪುತ್ರ ಸುದಕ್ಷಿಣನನ್ನು ಅರ್ಜುನನು ವಧಿಸಿದುದು (೫೯-೭೧).

07067001 ಸಂಜಯ ಉವಾಚ|

07067001a ಸನ್ನಿರುದ್ಧಸ್ತು ತೈಃ ಪಾರ್ಥೋ ಮಹಾಬಲಪರಾಕ್ರಮಃ|

07067001c ದ್ರುತಂ ಸಮನುಯಾತಶ್ಚ ದ್ರೋಣೇನ ರಥಿನಾಂ ವರಃ||

ಸಂಜಯನು ಹೇಳಿದನು: “ಮಹಾಬಲಪರಾಕ್ರಮಿಯಾದ ಪಾರ್ಥನನ್ನು ನಿನ್ನವರು ತಡೆದು ನಿಲ್ಲಿಸಿದರು. ರಥಿಗಳಲ್ಲಿ ಶ್ರೇಷ್ಠನಾದ ಅವನನ್ನು ದ್ರೋಣನೂ ಅನುಸರಿಸಿ ಬಂದನು.

07067002a ಕಿರನ್ನಿಷುಗಣಾಂಸ್ತಿಕ್ಷ್ಣಾನ್ಸ್ವರಶ್ಮೀನಿವ ಭಾಸ್ಕರಃ|

07067002c ತಾಪಯಾಮಾಸ ತತ್ಸೈನ್ಯಂ ದೇಹಂ ವ್ಯಾಧಿಗಣೋ ಯಥಾ||

ವ್ಯಾಧಿಗಣಗಳು ದೇಹವನ್ನು ಹೇಗೋ ಹಾಗೆ ತನ್ನದೇ ರಶ್ಮಿಗಳಿರುವ ಭಾಸ್ಕರನಂತೆ ಅವನು ತೀಕ್ಷ್ಣವಾದ ಶರಗಣಗಳನ್ನು ಚೆಲ್ಲಿ ಆ ಸೈನ್ಯವನ್ನು ಪರಿತಾಪಗೊಳಿಸಿದನು.

07067003a ಅಶ್ವೋ ವಿದ್ಧೋ ಧ್ವಜಶ್ಚಿನ್ನಃ ಸಾರೋಹಃ ಪತಿತೋ ಗಜಃ|

07067003c ಚತ್ರಾಣಿ ಚಾಪವಿದ್ಧಾನಿ ರಥಾಶ್ಚಕ್ರೈರ್ವಿನಾ ಕೃತಾಃ||

ಅಶ್ವಗಳು ಗಾಯಗೊಂಡವು. ಧ್ವಜಗಳು ತುಂಡಾದವು. ಆರೋಹಿಗಳೊಡನೆ ಆನೆಗಳು ಉರುಳಿದವು. ಚತ್ರಗಳು ಚಾಪಗಳು ತುಂಡಾದವು. ರಥಗಳು ಚಕ್ರಗಳಿಲ್ಲದಂತಾದವು.

07067004a ವಿದ್ರುತಾನಿ ಚ ಸೈನ್ಯಾನಿ ಶರಾರ್ತಾನಿ ಸಮಂತತಃ|

07067004c ಇತ್ಯಾಸೀತ್ತುಮುಲಂ ಯುದ್ಧಂ ನ ಪ್ರಾಜ್ಞಾಯತ ಕಿಂ ಚನ||

ಶರಗಳಿಂದ ಆರ್ತವಾದ ಸೇನೆಗಳು ಎಲ್ಲಕಡೆ ಓಡುತ್ತಿದ್ದವು. ಎಂತಹ ತುಮುಲ ಯುದ್ಧನಡೆಯಿತೆಂದರೆ ಏನೊಂದೂ ತಿಳಿಯುತ್ತಿರಲಿಲ್ಲ.

07067005a ತೇಷಾಮಾಯಚ್ಚತಾಂ ಸಂಖ್ಯೇ ಪರಸ್ಪರಮಜಿಹ್ಮಗೈಃ|

07067005c ಅರ್ಜುನೋ ಧ್ವಜಿನೀಂ ರಾಜನ್ನಭೀಕ್ಷ್ಣಂ ಸಮಕಂಪಯತ್||

ರಾಜನ್! ಅವರು ಪರಸ್ಪರರನ್ನು ಕರೆಯುತ್ತಾ ರಣದಲ್ಲಿ ಅರ್ಜುನನನ್ನು ಜಿಹ್ಮಗಗಳಿಂದ ಒಂದೇ ಸಮನೆ ಹೊಡೆಯುತ್ತಿರಲು ಅವನೂ ಕೂಡ ಅವರನ್ನು ನಡುಗುವಂತೆ ಮಾಡಿದನು.

07067006a ಸತ್ಯಾಂ ಚಿಕೀರ್ಷಮಾಣಸ್ತು ಪ್ರತಿಜ್ಞಾಂ ಸತ್ಯಸಂಗರಃ|

07067006c ಅಭ್ಯದ್ರವದ್ರಥಶ್ರೇಷ್ಠಂ ಶೋಣಾಶ್ವಂ ಶ್ವೇತವಾಹನಃ||

ಆಗ ಪ್ರತಿಜ್ಞೆಯನ್ನು ಸತ್ಯವಾಗಿಸಲು ಬಯಸಿದ ಸತ್ಯಸಂಗರನಾದ ಶ್ವೇತಾಶ್ವನು ರಥಶ್ರೇಷ್ಠ ಶೋಣಾಶ್ವ (ದ್ರೋಣ) ನನ್ನು ಆಕ್ರಮಣಿಸಿದನು.

07067007a ತಂ ದ್ರೋಣಃ ಪಂಚವಿಂಶತ್ಯಾ ಮರ್ಮಭಿದ್ಭಿರಜಿಹ್ಮಗೈಃ|

07067007c ಅಂತೇವಾಸಿನಮಾಚಾರ್ಯೋ ಮಹೇಷ್ವಾಸಂ ಸಮರ್ದಯತ್||

ಆಚಾರ್ಯ ದ್ರೋಣನು ಅಂತೇವಾಸಿ(ಶಿಷ್ಯ)ಯಾಗಿದ್ದ ಆ ಮಹೇಷ್ವಾಸನ ಮರ್ಮಗಳನ್ನು ಇಪ್ಪತ್ತೈದು ಜಿಹ್ಮಗಗಳಿಂದ ಹೊಡೆದನು.

07067008a ತಂ ತೂರ್ಣಮಿವ ಬೀಭತ್ಸುಃ ಸರ್ವಶಸ್ತ್ರಭೃತಾಂ ವರಃ|

07067008c ಅಭ್ಯಧಾವದಿಷೂನಸ್ಯನ್ನಿಷುವೇಗವಿಘಾತಕಾನ್||

ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠನಾದ ಬೀಭತ್ಸುವು ಬೇಗನೆ ಅವನ ಬಾಣಗಳ ವೇಗವನ್ನು ನಿರಸನಗೊಳಿಸಲು ಒಂದೇ ಸಮನೆ ಬಾಣಗಳನ್ನು ಪ್ರಯೋಗಿಸಿದನು.

07067009a ತಸ್ಯಾಶು ಕ್ಷಿಪತೋ ಭಲ್ಲಾನ್ಭಲ್ಲೈಃ ಸನ್ನತಪರ್ವಭಿಃ|

07067009c ಪ್ರತ್ಯವಿಧ್ಯದಮೇಯಾತ್ಮಾ ಬ್ರಹ್ಮಾಸ್ತ್ರಂ ಸಮುದೀರಯನ್||

ಅವನು ಎಸೆಯುತ್ತಿದ್ದ ಭಲ್ಲಗಳನ್ನು ಸನ್ನತಪರ್ವ ಭಲ್ಲಗಳಿಂದ ಪ್ರತಿಯಾಗಿ ಹೊಡೆದು ಆ ಅಮೇಯಾತ್ಮನು ಬ್ರಹ್ಮಾಸ್ತ್ರವನ್ನು ಪ್ರಕಟಿಸಿದನು.

07067010a ತದದ್ಭುತಮಪಶ್ಯಾಮ ದ್ರೋಣಸ್ಯಾಚಾರ್ಯಕಂ ಯುಧಿ|

07067010c ಯತಮಾನೋ ಯುವಾ ನೈನಂ ಪ್ರತ್ಯವಿಧ್ಯದ್ಯದರ್ಜುನಃ||

ಯುದ್ಧದಲ್ಲಿ ಆಚಾರ್ಯ ದ್ರೋಣನ ಆ ಅದ್ಭುತವನ್ನು ನೋಡಿದೆವು. ಎಷ್ಟೇ ಪ್ರಯತ್ನಿಸಿದರು ಅರ್ಜುನನಿಗೆ ಅವನನ್ನು ಗಾಯಗೊಳಿಸಲು ಆಗಲಿಲ್ಲ.

07067011a ಕ್ಷರನ್ನಿವ ಮಹಾಮೇಘೋ ವಾರಿಧಾರಾಃ ಸಹಸ್ರಶಃ|

07067011c ದ್ರೋಣಮೇಘಃ ಪಾರ್ಥಶೈಲಂ ವವರ್ಷ ಶರವೃಷ್ಟಿಭಿಃ||

ಮಹಾಮೇಘವು ಸಹಸ್ರಾರು ನೀರ ಧಾರೆಗಳನ್ನು ಸುರಿಸುವಂತೆ ದ್ರೋಣವೆಂಬ ಮೇಘವು ಪಾರ್ಥವೆಂಬ ಪರ್ವತದ ಮೇಲೆ ಶರವೃಷ್ಟಿಗಳನ್ನು ಸುರಿಸಿತು.

07067012a ಅರ್ಜುನಃ ಶರವರ್ಷಂ ತದ್ಬ್ರಹ್ಮಾಸ್ತ್ರೇಣೈವ ಮಾರಿಷ|

07067012c ಪ್ರತಿಜಗ್ರಾಹ ತೇಜಸ್ವೀ ಬಾಣೈರ್ಬಾಣಾನ್ವಿಶಾತಯನ್||

ಮಾರಿಷ! ತೇಜಸ್ವೀ ಅರ್ಜುನನು ಆ ಶರವರ್ಷವನ್ನು ಬ್ರಹ್ಮಾಸ್ತ್ರದಿಂದಲೇ ಎದುರಿಸಿ ಬಾಣಗಳನ್ನು ಬಾಣಗಳಿಂದ ನಿರಸನಗೊಳಿಸಿದನು.

07067013a ದ್ರೋಣಸ್ತು ಪಂಚವಿಂಶತ್ಯಾ ಶ್ವೇತವಾಹನಮಾರ್ದಯತ್|

07067013c ವಾಸುದೇವಂ ಚ ಸಪ್ತತ್ಯಾ ಬಾಹ್ವೋರುರಸಿ ಚಾಶುಗೈಃ||

ದ್ರೋಣನಾದರೋ ಇಪ್ಪತ್ತೈದರಿಂದ ಶ್ವೇತವಾಹನನನ್ನು ಹೊಡೆದನು. ಮತ್ತು ವಾಸುದೇವನನ್ನು ಬಾಹುಗಳು ಮತ್ತು ಎದೆಯಲ್ಲಿ ಏಳು ಆಶುಗಗಳಿಂದ ಹೊಡೆದನು.

07067014a ಪಾರ್ಥಸ್ತು ಪ್ರಹಸನ್ಧೀಮಾನಾಚಾರ್ಯಂ ಸ ಶರೌಘಿಣಂ|

07067014c ವಿಸೃಜಂತಂ ಶಿತಾನ್ಬಾಣಾನವಾರಯತ ತಂ ಯುಧಿ||

ಧೀಮಂತ ಪಾರ್ಥನಾದರೋ ಜೋರಾಗಿ ನಕ್ಕು ಅ ಶರೌಘಗಳನ್ನು ಪ್ರಯೋಗಿಸುತ್ತಿದ್ದ ಆಚಾರ್ಯನ ನಿಶಿತ ಬಾಣಗಳನ್ನು ಯುದ್ಧದಲ್ಲಿ ತಡೆದನು.

07067015a ಅಥ ತೌ ವಧ್ಯಮಾನೌ ತು ದ್ರೋಣೇನ ರಥಸತ್ತಮೌ|

07067015c ಆವರ್ಜಯೇತಾಂ ದುರ್ಧರ್ಷಂ ಯುಗಾಂತಾಗ್ನಿಮಿವೋತ್ಥಿತಂ||

ಆಗ ದ್ರೋಣನಿಂದ ಪ್ರಹರಿಸಲ್ಪಡುತ್ತಿದ್ದ ರಥಸತ್ತಮರಿಬ್ಬರೂ ಯುಗಾಂತದ ಅಗ್ನಿಯಂತೆ ಉರಿಯುತ್ತಿದ್ದ ದುರ್ಧರ್ಷ ದ್ರೋಣನನ್ನು ಅವಲೋಕಿಸಲಿಲ್ಲ.

07067016a ವರ್ಜಯನ್ನಿಶಿತಾನ್ಬಾಣಾನ್ದ್ರೋಣಚಾಪವಿನಿಃಸೃತಾನ್|

07067016c ಕಿರೀಟಮಾಲೀ ಕೌಂತೇಯೋ ಭೋಜಾನೀಕಂ ನ್ಯಪಾತಯತ್||

ದ್ರೋಣನ ಚಾಪದಿಂದ ಬರುತ್ತಿದ್ದ ನಿಶಿತ ಬಾಣಗಳನ್ನು ಅವಲೋಕಿಸದೇ ಕಿರೀಟಮಾಲೀ ಕೌಂತೇಯನು ಭೋಜನ ಸೇನೆಯ ಮೇಲೆ ಆಕ್ರಮಣ ಮಾಡಿದನು.

07067017a ಸೋಽಂತರಾ ಕೃತವರ್ಮಾಣಂ ಕಾಂಬೋಜಂ ಚ ಸುದಕ್ಷಿಣಂ|

07067017c ಅಭ್ಯಯಾದ್ವರ್ಜಯನ್ದ್ರೋಣಂ ಮೈನಾಕಮಿವ ಪರ್ವತಂ||

ಮೈನಾಕ ಪರ್ವತದಂತಿದ್ದ ದ್ರೋಣನನ್ನು ದೂರವಿಟ್ಟು ಅವನು ಕೃತವರ್ಮ ಮತ್ತು ಕಾಂಬೋಜದ ಸುದಕ್ಷಿಣರ ಮಧ್ಯೆ ನಿಂತು ಯುದ್ಧಮಾಡತೊಡಗಿದನು.

07067018a ತತೋ ಭೋಜೋ ನರವ್ಯಾಘ್ರಂ ದುಃಸಹಃ ಕುರುಸತ್ತಮ|

07067018c ಅವಿಧ್ಯತ್ತೂರ್ಣಮವ್ಯಗ್ರೋ ದಶಭಿಃ ಕಂಕಪತ್ರಿಭಿಃ||

ಕುರುಸತ್ತಮ! ಆಗ ಅವ್ಯಗ್ರನಾದ ದುಃಸಹ ಭೋಜನು ಬೇಗನೇ ನರವ್ಯಾಘ್ರನನ್ನು ಹತ್ತು ಕಂಕಪತ್ರಿಗಳಿಂದ ಹೊಡೆದನು.

07067019a ತಮರ್ಜುನಃ ಶಿತೇನಾಜೌ ರಾಜನ್ ವಿವ್ಯಾಧ ಪತ್ರಿಣಾ|

07067019c ಪುನಶ್ಚಾನ್ಯೈಸ್ತ್ರಿಭಿರ್ಬಾಣೈರ್ಮೋಹಯನ್ನಿವ ಸಾತ್ವತಂ||

ರಾಜನ್! ಅವನನ್ನು ಅರ್ಜುನನು ನೂರು ಪತ್ರಿಗಳಿಂದ ಹೊಡೆದನು. ಪುನಃ ಅವನು ಅನ್ಯ ಮೂರುಗಳಿಂದ ಸಾತ್ವತನನ್ನು ಮೂರ್ಛೆಗೊಳಿಸುವಂತೆ ಹೊಡೆದನು.

07067020a ಭೋಜಸ್ತು ಪ್ರಹಸನ್ ಪಾರ್ಥಂ ವಾಸುದೇವಂ ಚ ಮಾಧವಂ|

07067020c ಏಕೈಕಂ ಪಂಚವಿಂಶತ್ಯಾ ಸಾಯಕಾನಾಂ ಸಮಾರ್ಪಯತ್||

ಭೋಜನಾದರೋ ಜೋರಾಗಿ ನಕ್ಕು ಪಾರ್ಥ ಮತ್ತು ವಾಸುದೇವ ಮಾಧವ ಒಬ್ಬೊಬ್ಬರನ್ನೂ ಇಪ್ಪತ್ತೈದು ಸಾಯಕಗಳಿಂದ ಹೊಡೆದನು.

07067021a ತಸ್ಯಾರ್ಜುನೋ ಧನುಶ್ಚಿತ್ತ್ವಾ ವಿವ್ಯಾಧೈನಂ ತ್ರಿಸಪ್ತಭಿಃ|

07067021c ಶರೈರಗ್ನಿಶಿಖಾಕಾರೈಃ ಕ್ರುದ್ಧಾಶೀವಿಷಸನ್ನಿಭೈಃ||

ಅರ್ಜುನನು ಅವನ ಧನುಸ್ಸನ್ನು ಕತ್ತರಿಸಿ ಇಪ್ಪತ್ತೊಂದು ಕ್ರುದ್ಧ ಸರ್ಪದ ವಿಷದಂತಿರುವ ಅಗ್ನಿ ಶಿಖೆಯ ಆಕಾರದ ಶರಗಳಿಂದ ಹೊಡೆದನು.

07067022a ಅಥಾನ್ಯದ್ಧನುರಾದಾಯ ಕೃತವರ್ಮಾ ಮಹಾರಥಃ|

07067022c ಪಂಚಭಿಃ ಸಾಯಕೈಸ್ತೂರ್ಣಂ ವಿವ್ಯಾಧೋರಸಿ ಭಾರತ||

ಭಾರತ! ಆಗ ಮಹಾರಥ ಕೃತವರ್ಮನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಬೇಗನೇ ಐದು ಸಾಯಕಗಳಿಂದ ಅವನ ಎದೆಗೆ ಹೊಡೆದನು.

07067023a ಪುನಶ್ಚ ನಿಶಿತೈರ್ಬಾಣೈಃ ಪಾರ್ಥಂ ವಿವ್ಯಾಧ ಪಂಚಭಿಃ|

07067023c ತಂ ಪಾರ್ಥೋ ನವಭಿರ್ಬಾಣೈರಾಜಘಾನ ಸ್ತನಾಂತರೇ||

ಅವನು ಪುನಃ ಐದು ನಿಶಿತ ಬಾಣಗಳಿಂದ ಪಾರ್ಥನನ್ನು ಹೊಡೆದನು. ಅವನನ್ನು ಪಾರ್ಥನು ಎದೆಗೆ ಗುರಿಯಿಟ್ಟು ಒಂಭತ್ತು ಬಾಣಗಳಿಂದ ಹೊಡೆದನು.

07067024a ವಿಷಕ್ತಂ ದೃಶ್ಯ ಕೌಂತೇಯಂ ಕೃತವರ್ಮರಥಂ ಪ್ರತಿ|

07067024c ಚಿಂತಯಾಮಾಸ ವಾರ್ಷ್ಣೇಯೋ ನ ನಃ ಕಾಲಾತ್ಯಯೋ ಭವೇತ್||

ಕೌಂತೇಯನು ಕೃತವರ್ಮನ ರಥದ ಬಳಿಯಲ್ಲಿಯೇ ತಡೆಯಲ್ಪಟ್ಟಿದ್ದುದನ್ನು ನೋಡಿ ವಾರ್ಷ್ಣೇಯನು ನಾವು ಕಾಲದ ವ್ಯಯಮಾಡಬಾರದಲ್ಲ ಎಂದು ಚಿಂತಿಸಿದನು.

07067025a ತತಃ ಕೃಷ್ಣೋಽಬ್ರವೀತ್ಪಾರ್ಥಂ ಕೃತವರ್ಮಣಿ ಮಾ ದಯಾಂ|

07067025c ಕುರುಸಾಂಬಂಧಿಕಂ ಕೃತ್ವಾ ಪ್ರಮಥ್ಯೈನಂ ವಿಶಾತಯ||

ಆಗ ಕೃಷ್ಣನು ಪಾರ್ಥನಿಗೆ ಹೇಳಿದನು: “ಕೃತವರ್ಮನ ಮೇಲೆ ದಯೆ ಬೇಡ! ಕುರುಗಳ ಸಂಬಂಧಿಯನ್ನಾಗಿ ಮಾಡಿಕೊಂಡು ಅವನನ್ನು ಸದೆಬಡಿ!”

07067026a ತತಃ ಸ ಕೃತವರ್ಮಾಣಂ ಮೋಹಯಿತ್ವಾರ್ಜುನಃ ಶರೈಃ|

07067026c ಅಭ್ಯಗಾಜ್ಜವನೈರಶ್ವೈಃ ಕಾಂಬೋಜಾನಾಮನೀಕಿನೀಂ||

ಆಗ ಅರ್ಜುನನು ಶರಗಳಿಂದ ಕೃತವರ್ಮನನ್ನು ಮೂರ್ಛೆಗೊಳಿಸಿ, ವೇಗಶಾಲೀ ಕುದುರೆಗಳಿಂದ ಕಾಂಬೋಜರ ಸೇನೆಯನ್ನು ಆಕ್ರಮಣಿಸಿದನು.

07067027a ಅಮರ್ಷಿತಸ್ತು ಹಾರ್ದಿಖ್ಯಃ ಪ್ರವಿಷ್ಟೇ ಶ್ವೇತವಾಹನೇ|

07067027c ವಿಧುನ್ವನ್ಸಶರಂ ಚಾಪಂ ಪಾಂಚಾಲ್ಯಾಭ್ಯಾಂ ಸಮಾಗತಃ||

ಶ್ವೇತವಾಹನನು ಸೇನೆಯನ್ನು ಪ್ರವೇಶಿಸಿದುದನ್ನು ನೋಡಿ ಹಾರ್ದಿಖ್ಯನು ಅತ್ಯಂತ ಕುಪಿತನಾದನು. ಶರಗಳೊಂದಿಗೆ ಚಾಪವನ್ನು ಟೇಂಕರಿಸುತ್ತಾ ಅವನು ಇಬ್ಬರು ಪಾಂಚಾಲ್ಯರನ್ನು ಎದುರಿಸಿದನು.

07067028a ಚಕ್ರರಕ್ಷೌ ತು ಪಾಂಚಾಲ್ಯಾವರ್ಜುನಸ್ಯ ಪದಾನುಗೌ|

07067028c ಪರ್ಯವಾರಯದಾಯಾಂತೌ ಕೃತವರ್ಮಾ ರಥೇಷುಭಿಃ||

ಕೃತವರ್ಮನು ತನ್ನ ರಥ ಮತ್ತು ಶರಗಳಿಂದ ಅರ್ಜುನನ ಹಿಂದೆಯೇ ಹೋಗುತ್ತಿದ್ದ ಚಕ್ರರಕ್ಷಕರಾಗಿದ್ದ ಉತ್ತಮೌಜ-ಯುಧಾಮನ್ಯು ಪಾಂಚಾಲರನ್ನು ತಡೆದನು.

07067029a ತಾವವಿಧ್ಯತ್ತತೋ ಭೋಜಃ ಸರ್ವಪಾರಶವೈಃ ಶರೈಃ|

07067029c ತ್ರಿಭಿರೇವ ಯುಧಾಮನ್ಯುಂ ಚತುರ್ಭಿಶ್ಚೋತ್ತಮೌಜಸಂ||

ಭೋಜನು ಯುಧಾಮನ್ಯುವನ್ನು ಮೂರು ನಿಶಿತ ಶರಗಳಿಂದಲೂ ಉತ್ತಮೌಜಸನನ್ನು ನಾಲ್ಕರಿಂದಲೂ ಹೊಡೆದನು.

07067030a ತಾವಪ್ಯೇನಂ ವಿವ್ಯಧತುರ್ದಶಭಿರ್ದಶಭಿಃ ಶರೈಃ|

07067030c ಸಂಚಿಚ್ಚಿದತುರಪ್ಯಸ್ಯ ಧ್ವಜಂ ಕಾರ್ಮುಕಮೇವ ಚ||

ಅವರೂ ಕೂಡ ಅವನನ್ನು ಹತ್ತು ಹತ್ತು ಶರಗಳಿಂದ ಹೊಡೆದರು ಮತ್ತು ಅವನ ಧ್ವಜ-ಧನುಸ್ಸುಗಳನ್ನು ಕತ್ತರಿಸಿದರು.

07067031a ಅಥಾನ್ಯದ್ಧನುರಾದಾಯ ಹಾರ್ದಿಕ್ಯಃ ಕ್ರೋಧಮೂರ್ಚಿತಃ|

07067031c ಕೃತ್ವಾ ವಿಧನುಷೌ ವೀರೌ ಶರವರ್ಷೈರವಾಕಿರತ್||

ಆಗ ಕ್ರೋಧಮೂರ್ಛಿತನಾದ ಹಾರ್ದಿಕ್ಯನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಆ ವೀರರಿಬ್ಬರನ್ನೂ ಧನುಸ್ಸು ಇಲ್ಲದವರಂತೆ ಮಾಡಿ ಶರವರ್ಷಗಳಿಂದ ಮುಚ್ಚಿದನು.

07067032a ತಾವನ್ಯೇ ಧನುಷೀ ಸಜ್ಯೇ ಕೃತ್ವಾ ಭೋಜಂ ವಿಜಘ್ನತುಃ|

07067032c ತೇನಾಂತರೇಣ ಬೀಭತ್ಸುರ್ವಿವೇಶಾಮಿತ್ರವಾಹಿನೀಂ||

ಅವರು ಅನ್ಯ ಧನುಸ್ಸುಗಳನ್ನು ತೆಗೆದುಕೊಂಡು ಭೋಜನನ್ನು ತುಂಬಾ ಹೊಡೆದು ಗಾಯಗೊಳಿಸಿದರು. ಆ ಮಧ್ಯದಲ್ಲಿ ಬೀಭತ್ಸುವು ಶತ್ರುಸೇನೆಯನ್ನು ಪ್ರವೇಶಿಸಿದನು.

07067033a ನ ಲೇಭಾತೇ ತು ತೌ ದ್ವಾರಂ ವಾರಿತೌ ಕೃತವರ್ಮಣಾ|

07067033c ಧಾರ್ತರಾಷ್ಟ್ರೇಷ್ವನೀಕೇಷು ಯತಮಾನೌ ನರರ್ಷಭೌ||

ದ್ವಾರದಲ್ಲಿಯೇ ಕೃತವರ್ಮನಿಂದ ತಡೆಯಲ್ಪಟ್ಟ ಅವರಿಬ್ಬರು ನರರ್ಷಭರಿಗೆ ಎಷ್ಟೇ ಪ್ರಯತ್ನಪಟ್ಟರೂ ಧಾರ್ತರಾಷ್ಟ್ರರ ಸೇನೆಗಳನ್ನು ಪ್ರವೇಶಿಸಲು ಆಗಲಿಲ್ಲ.

07067034a ಅನೀಕಾನ್ಯರ್ದಯನ್ಯುದ್ಧೇ ತ್ವರಿತಃ ಶ್ವೇತವಾಹನಃ|

07067034c ನಾವಧೀತ್ಕೃತವರ್ಮಾಣಂ ಪ್ರಾಪ್ತಮಪ್ಯರಿಸೂದನಃ||

ಶ್ವೇತವಾಹನನು ಯುದ್ಧದಲ್ಲಿ ತ್ವರೆಮಾಡಿ ಸೇನೆಗಳನ್ನು ನಾಶಪಡಿಸುತ್ತಿದ್ದರೂ, ಆ ಅರಿಸೂದನನು ಸಿಕ್ಕಿದ್ದ ಕೃತವರ್ಮನನ್ನು ವಧಿಸಲಿಲ್ಲ.

07067035a ತಂ ದೃಷ್ಟ್ವಾ ತು ತಥಾಯಾಂತಂ ಶೂರೋ ರಾಜಾ ಶ್ರುತಾಯುಧಃ|

07067035c ಅಭ್ಯದ್ರವತ್ಸಂಕ್ರುದ್ಧೋ ವಿಧುನ್ವಾನೋ ಮಹದ್ಧನುಃ||

ಹಾಗೆ ಮುಂದುವರೆದು ಬರುತ್ತಿದ್ದ ಅವನನ್ನು ನೋಡಿ ಶೂರ, ರಾಜಾ ಶ್ರುತಾಯುಧನು ಸಂಕ್ರುದ್ಧನಾಗಿ ಮಹಾಧನುಸ್ಸನ್ನು ಮಿಡಿಯುತ್ತಾ ಆಕ್ರಮಣಿಸಿದನು.

07067036a ಸ ಪಾರ್ಥಂ ತ್ರಿಭಿರಾನರ್ಚತ್ಸಪ್ತತ್ಯಾ ಚ ಜನಾರ್ದನಂ|

07067036c ಕ್ಷುರಪ್ರೇಣ ಸುತೀಕ್ಷ್ಣೇನ ಪಾರ್ಥಕೇತುಮತಾಡಯತ್||

ಅವನು ಪಾರ್ಥನನ್ನು ಮೂರರಿಂದ ಮತ್ತು ಜನಾರ್ದನನನ್ನು ಎಪ್ಪತ್ತರಿಂದ ಹೊಡೆದು, ತೀಕ್ಷ್ಣ ಕ್ಷುರಪ್ರದಿಂದ ಪಾರ್ಥನ ಕೇತುವನ್ನು ಹಾರಿಸಿದನು.

07067037a ತಮರ್ಜುನೋ ನವತ್ಯಾ ತು ಶರಾಣಾಂ ನತಪರ್ವಣಾಂ|

07067037c ಆಜಘಾನ ಭೃಶಂ ಕ್ರುದ್ಧಸ್ತೋತ್ತ್ರೈರಿವ ಮಹಾದ್ವಿಪಂ||

ಆಗ ಅರ್ಜುನನು ಕ್ರುದ್ಧನಾಗಿ ಮಾವಟಿಗನು ಮಹಾ ಆನೆಯನ್ನು ಚುಚ್ಚುವಂತೆ ಅವನನ್ನು ತೊಂಭತ್ತು ನತಪರ್ವ ಶರಗಳಿಂದ ಜೋರಾಗಿ ಹೊಡೆದನು.

07067038a ಸ ತನ್ನ ಮಮೃಷೇ ರಾಜನ್ಪಾಂಡವೇಯಸ್ಯ ವಿಕ್ರಮಂ|

07067038c ಅಥೈನಂ ಸಪ್ತಸಪ್ತತ್ಯಾ ನಾರಾಚಾನಾಂ ಸಮಾರ್ಪಯತ್||

ರಾಜನ್! ಪಾಂಡವೇಯನ ವಿಕ್ರಮವನ್ನು ಅವನಿಗೆ ಸಹಿಸಲಾಗಲಿಲ್ಲ. ಅವನನ್ನು ಎಪ್ಪತ್ತೇಳು ಬಾಣಗಳಿಂದ ಹೊಡೆದನು.

07067039a ತಸ್ಯಾರ್ಜುನೋ ಧನುಶ್ಚಿತ್ತ್ವಾ ಶರಾವಾಪಂ ನಿಕೃತ್ಯ ಚ|

07067039c ಆಜಘಾನೋರಸಿ ಕ್ರುದ್ಧಃ ಸಪ್ತಭಿರ್ನತಪರ್ವಭಿಃ||

ಕ್ರುದ್ಧನಾದ ಅರ್ಜುನನು ಅವನ ಧನುಸ್ಸನ್ನು ಕತ್ತರಿಸಿ, ಬತ್ತಳಿಕೆಯನ್ನೂ ತುಂಡುಮಾಡಿ ಎದೆಗೆ ಗುರಿಯಿಟ್ಟು ಏಳು ನತಪರ್ವಗಳನ್ನು ಪ್ರಯೋಗಿಸಿದನು.

07067040a ಅಥಾನ್ಯದ್ಧನುರಾದಾಯ ಸ ರಾಜಾ ಕ್ರೋಧಮೂರ್ಚಿತಃ|

07067040c ವಾಸವಿಂ ನವಭಿರ್ಬಾಣೈರ್ಬಾಹ್ವೋರುರಸಿ ಚಾರ್ಪಯತ್||

ಆಗ ರಾಜನು ಕ್ರೋಧಮೂರ್ಛಿತನಾಗಿ ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ವಾಸವಿಯ ಬಾಹು-ಎದೆಗಳಿಗೆ ಗುರಿಯಿಟ್ಟು ಒಂಭತ್ತು ಬಾಣಗಳನ್ನು ಬಿಟ್ಟನು.

07067041a ತತೋಽರ್ಜುನಃ ಸ್ಮಯನ್ನೇವ ಶ್ರುತಾಯುಧಮರಿಂದಮಃ|

07067041c ಶರೈರನೇಕಸಾಹಸ್ರೈಃ ಪೀಡಯಾಮಾಸ ಭಾರತ||

ಭಾರತ! ಆಗ ಅರಿಂದಮ ಅರ್ಜುನನು ನಸುನಗುತ್ತಲೇ ಶ್ರುತಾಯುಧನನ್ನು ಅನೇಕ ಸಹಸ್ರ ಶರಗಳಿಂದ ಪೀಡಿಸತೊಡಗಿದನು.

07067042a ಅಶ್ವಾಂಶ್ಚಾಸ್ಯಾವಧೀತ್ತೂರ್ಣಂ ಸಾರಥಿಂ ಚ ಮಹಾರಥಃ|

07067042c ವಿವ್ಯಾಧ ಚೈನಂ ಸಪ್ತತ್ಯಾ ನಾರಾಚಾನಾಂ ಮಹಾಬಲಃ||

ಆ ಮಹಾರಥ ಮಹಾಬಲನು ಅವನ ಕುದುರೆಗಳನ್ನೂ ಸಾರಥಿಯನ್ನೂ ಕೊಂದು ಅವನನ್ನು ಎಪ್ಪತ್ತು ನಾರಾಚಗಳಿಂದ ಹೊಡೆದನು.

07067043a ಹತಾಶ್ವಂ ರಥಮುತ್ಸೃಜ್ಯ ಸ ತು ರಾಜಾ ಶ್ರುತಾಯುಧಃ|

07067043c ಅಭ್ಯದ್ರವದ್ರಣೇ ಪಾರ್ಥಂ ಗದಾಮುದ್ಯಮ್ಯ ವೀರ್ಯವಾನ್||

ವೀರ್ಯವಾನ್ ರಾಜಾ ಶ್ರುತಾಯುಧನು ಕುದುರೆಗಳನ್ನು ಕಳೆದುಕೊಂಡು ರಥದಿಂದ ಹಾರಿ ಗದೆಯನ್ನು ಮೇಲೆತ್ತಿ ಹಿಡಿದು ರಣದಲ್ಲಿ ಪಾರ್ಥನ ಮೇಲೆ ನುಗ್ಗಿದನು.

07067044a ವರುಣಸ್ಯಾತ್ಮಜೋ ವೀರಃ ಸ ತು ರಾಜಾ ಶ್ರುತಾಯುಧಃ|

07067044c ಪರ್ಣಾಶಾ ಜನನೀ ಯಸ್ಯ ಶೀತತೋಯಾ ಮಹಾನದೀ||

ಆ ವೀರ ರಾಜಾ ಶ್ರುತಾಯುಧನಾದರೋ ವರುಣನ ಮಗನಾಗಿದ್ದನು. ಅವನ ಜನನಿಯು ಶೀತಲ ನೀರಿನ ಮಹಾನದೀ ಪರ್ಣಾಶಾ.

07067045a ತಸ್ಯ ಮಾತಾಬ್ರವೀದ್ವಾಕ್ಯಂ ವರುಣಂ ಪುತ್ರಕಾರಣಾತ್|

07067045c ಅವಧ್ಯೋಽಯಂ ಭವೇಲ್ಲೋಕೇ ಶತ್ರೂಣಾಂ ತನಯೋ ಮಮ||

ಪುತ್ರನಿಗೋಸ್ಕರವಾಗಿ ಅವನ ತಾಯಿಯು ವರುಣನಿಗೆ ಈ ಮಾತನ್ನು ಕೇಳಿಕೊಂಡಿದ್ದಳು: “ನನ್ನ ಮಗನು ಲೋಕದಲ್ಲಿ ಶತ್ರುಗಳಿಗೆ ಅವಧ್ಯನಾಗಲಿ!”

07067046a ವರುಣಸ್ತ್ವಬ್ರವೀತ್ಪ್ರೀತೋ ದದಾಮ್ಯಸ್ಮೈ ವರಂ ಹಿತಂ|

07067046c ದಿವ್ಯಮಸ್ತ್ರಂ ಸುತಸ್ತೇಽಯಂ ಯನಾವಧ್ಯೋ ಭವಿಷ್ಯತಿ||

ಆಗ ವರುಣನು ಪ್ರೀತನಾಗಿ ಹೇಳಿದನ್ನು: “ನಿನಗೆ ಹಿತವಾದ ಈ ವರವನ್ನು ಕೊಡುತ್ತೇನೆ. ಈ ದಿವ್ಯ ಅಸ್ತ್ರದಿಂದ ನಿನ್ನ ಈ ಮಗನು ಅವಧ್ಯನಾಗುತ್ತಾನೆ.

07067047a ನಾಸ್ತಿ ಚಾಪ್ಯಮರತ್ವಂ ವೈ ಮನುಷ್ಯಸ್ಯ ಕಥಂ ಚನ|

07067047c ಸರ್ವೇಣಾವಶ್ಯಮರ್ತವ್ಯಂ ಜಾತೇನ ಸರಿತಾಂ ವರೇ||

ನದಿಗಳಲ್ಲಿ ಶ್ರೇಷ್ಠಳೇ! ಮನುಷ್ಯರಿಗೆ ಎಂದೂ ಅಮರತ್ವವೆನ್ನುವುದು ಇಲ್ಲ. ಹುಟ್ಟಿದ ಎಲ್ಲರೂ ಅವಶ್ಯವಾಗಿ ಸಾಯುತ್ತಾರೆ.

07067048a ದುರ್ಧರ್ಷಸ್ತ್ವೇಷ ಶತ್ರೂಣಾಂ ರಣೇಷು ಭವಿತಾ ಸದಾ|

07067048c ಅಸ್ತ್ರಸ್ಯಾಸ್ಯ ಪ್ರಭಾವಾದ್ವೈ ವ್ಯೇತು ತೇ ಮಾನಸೋ ಜ್ವರಃ||

ಈ ಅಸ್ತ್ರದ ಪ್ರಭಾವದಿಂದ ಇವನು ಸದಾ ರಣದಲ್ಲಿ ಶತ್ರುಗಳಿಗೆ ದುರ್ಧರ್ಷನಾಗಿರುತ್ತಾನೆ. ನಿನ್ನ ಮನಸ್ಸಿನ ಜ್ವರವನ್ನು ಕಳೆದುಕೋ!”

07067049a ಇತ್ಯುಕ್ತ್ವಾ ವರುಣಃ ಪ್ರಾದಾದ್ಗದಾಂ ಮಂತ್ರಪುರಸ್ಕೃತಾಂ|

07067049c ಯಾಮಾಸಾದ್ಯ ದುರಾಧರ್ಷಃ ಸರ್ವಲೋಕೇ ಶ್ರುತಾಯುಧಃ||

ಹೀಗೆ ಹೇಳಿ ವರುಣನು ಮಂತ್ರಪುರಸ್ಕೃತವಾದ ಗದೆಯನ್ನು ಕೊಟ್ಟಿದ್ದನು. ಅದನ್ನು ಪಡೆದು ಶ್ರುತಾಯುಧನು ಸರ್ವಲೋಕಗಳಲ್ಲಿ ದುರಾಧರ್ಷನಾಗಿದ್ದನು.

07067050a ಉವಾಚ ಚೈನಂ ಭಗವಾನ್ಪುನರೇವ ಜಲೇಶ್ವರಃ|

07067050c ಅಯುಧ್ಯತಿ ನ ಮೋಕ್ತವ್ಯಾ ಸಾ ತ್ವಯ್ಯೇವ ಪತೇದಿತಿ||

ಭಗವಾನ್ ಜಲೇಶ್ವರನು ಪುನಃ ಇನ್ನೂ ಹೇಳಿದ್ದನು: “ಯುದ್ಧಮಾಡದೇ ಇರುವವನ ಮೇಲೆ ಇದನ್ನು ಪ್ರಯೋಗಿಸಬಾರದು. ಆಗ ಅದು ನಿನ್ನಮೇಲೆಯೇ ಬೀಳುತ್ತದೆ!” ಎಂದು.

07067051a ಸ ತಯಾ ವೀರಘಾತಿನ್ಯಾ ಜನಾರ್ದನಮತಾಡಯತ್|

07067051c ಪ್ರತಿಜಗ್ರಾಹ ತಾಂ ಕೃಷ್ಣಃ ಪೀನೇನಾಂಸೇನ ವೀರ್ಯವಾನ್||

ಅವನು ವೀರರನ್ನು ಘಾತಿಗೊಳಿಸಬಲ್ಲ ಆ ಗದೆಯಿಂದ ಜನಾರ್ದನನನ್ನು ಹೊಡೆದನು. ವೀರ್ಯವಾನ್ ಕೃಷ್ಣನು ಅದನ್ನು ತನ್ನ ದಪ್ಪ ಭುಜದ ಮೇಲೆ ಸ್ವೀಕರಿಸಿದನು.

07067052a ನಾಕಂಪಯತ ಶೌರಿಂ ಸಾ ವಿಂಧ್ಯಂ ಗಿರಿಮಿವಾನಿಲಃ|

07067052c ಪ್ರತ್ಯಭ್ಯಯಾತ್ತಂ ವಿಪ್ರೋಢಾ ಕೃತ್ಯೇವ ದುರಧಿಷ್ಠಿತಾ||

ಗಾಳಿಯು ವಿಂಧ್ಯ ಗಿರಿಯನ್ನು ಹೇಗೆ ನಡುಗಿಸಲಾರದೋ ಹಾಗೆ ಅದು ಶೌರಿಯನ್ನು ನಡುಗಿಸಲೂ ಇಲ್ಲ. ಆದರೆ ಹಿಂದೆ ಹೇಳಿದ್ದಂತೆಯೇ ಅದು ಮಾಡಿತು. ಹಿಂದಿರುಗಿ ಕಟ್ಟುಪಾಡನ್ನು ಆಚರಿಸದೇ ಇರುವವನ ಮೇಲೆ ಎರಗಿತು.

07067053a ಜಘಾನ ಚಾಸ್ಥಿತಂ ವೀರಂ ಶ್ರುತಾಯುಧಮಮರ್ಷಣಂ|

07067053c ಹತ್ವಾ ಶ್ರುತಾಯುಧಂ ವೀರಂ ಜಗತೀಮನ್ವಪದ್ಯತ||

ಅಲ್ಲಿ ನಿಂತಿದ್ದ ವೀರ ಅಮರ್ಷಣ ಶ್ರುತಾಯುಧನನ್ನು ಹೊಡೆಯಿತು. ವೀರ ಶ್ರುತಾಯುಧನನ್ನು ಸಂಹರಿಸಿ ಜಗತ್ತಿನಿಂದ ಕಣ್ಮರೆಯಾಯಿತು.

07067054a ಹಾಹಾಕಾರೋ ಮಹಾಂಸ್ತತ್ರ ಸೈನ್ಯಾನಾಂ ಸಮಜಾಯತ|

07067054c ಸ್ವೇನಾಸ್ತ್ರೇಣ ಹತಂ ದೃಷ್ಟ್ವಾ ಶ್ರುತಾಯುಧಮರಿಂದಮಂ||

ತನ್ನದೇ ಅಸ್ತ್ರದಿಂದ ಅರಿಂದಮ ಶ್ರುತಾಯುಧನು ಹತನಾದುದನ್ನು ನೋಡಿ ಅಲ್ಲಿ ಸೇನೆಗಳಲ್ಲಿ ಮಹಾ ಹಾಹಾಕಾರವುಂಟಾಯಿತು.

07067055a ಅಯುಧ್ಯಮಾನಾಯ ಹಿ ಸಾ ಕೇಶವಾಯ ನರಾಧಿಪ|

07067055c ಕ್ಷಿಪ್ತಾ ಶ್ರುತಾಯುಧೇನಾಥ ತಸ್ಮಾತ್ತಮವಧೀದ್ಗದಾ||

ನರಾಧಿಪ! ಯುದ್ಧ ಮಾಡದೇ ಇದ್ದ ಕೇಶವನ ಮೇಲೆ ಆ ಗದೆಯನ್ನು ಪ್ರಯೋಗಿಸಿದುದರಿಂದ ಅದೇ ಗದೆಯಿಂದ ಶ್ರುತಾಯುಧನು ಹತನಾದನು.

07067056a ಯಥೋಕ್ತಂ ವರುಣೇನಾಜೌ ತಥಾ ಸ ನಿಧನಂ ಗತಃ|

07067056c ವ್ಯಸುಶ್ಚಾಪ್ಯಪತದ್ಭೂಮೌ ಪ್ರೇಕ್ಷತಾಂ ಸರ್ವಧನ್ವಿನಾಂ||

ವರುಣನು ಹೇಗೆ ಹೇಳಿದ್ದನೋ ಹಾಗೆಯೇ ಅವನು ನಿಧನವನ್ನು ಹೊಂದಿದನು. ಎಲ್ಲ ಧನ್ವಿಗಳು ನೋಡುತ್ತಿದ್ದಂತೆಯೇ ಅವನು ಅಸುನೀಗಿ ಭೂಮಿಯ ಮೇಲೆ ಬಿದ್ದನು.

07067057a ಪತಮಾನಸ್ತು ಸ ಬಭೌ ಪರ್ಣಾಶಾಯಾಃ ಪ್ರಿಯಃ ಸುತಃ|

07067057c ಸಂಭಗ್ನ ಇವ ವಾತೇನ ಬಹುಶಾಖೋ ವನಸ್ಪತಿಃ||

ಪರ್ಣಾಶಳ ಆ ಪ್ರಿಯಸುತನು ಬೀಳುವಾಗ ಭಿರುಗಾಳಿಯಿಂದ ಮುರಿದು ಬಿದ್ದ ಬಹು ಶಾಖೆಗಳನ್ನುಳ್ಳ ವೃಕ್ಷದಂತೆ ತೋರಿದನು.

07067058a ತತಃ ಸರ್ವಾಣಿ ಸೈನ್ಯಾನಿ ಸೇನಾಮುಖ್ಯಾಶ್ಚ ಸರ್ವಶಃ|

07067058c ಪ್ರಾದ್ರವಂತ ಹತಂ ದೃಷ್ಟ್ವಾ ಶ್ರುತಾಯುಧಮರಿಂದಮಂ||

ಆಗ ಅರಿಂದಮ ಶ್ರುತಾಯುಧನು ಹತನಾದುದನ್ನು ನೋಡಿ ಎಲ್ಲ ಸೇನೆಗಳೂ, ಸೇನಾಪ್ರಮುಖರೂ ಓಡತೊಡಗಿದರು.

07067059a ತಥ ಕಾಂಬೋಜರಾಜಸ್ಯ ಪುತ್ರಃ ಶೂರಃ ಸುದಕ್ಷಿಣಃ|

07067059c ಅಭ್ಯಯಾಜ್ಜವನೈರಶ್ವೈಃ ಫಲ್ಗುನಂ ಶತ್ರುಸೂದನಂ||

ಆಗ ಕಾಂಬೋಜರಾಜನ ಶೂರ ಪುತ್ರ ಸುದಕ್ಷಿಣನು ವೇಗ ಕುದುರೆಗಳೊಂದಿಗೆ ಬಂದು ಶತ್ರುಸೂದನ ಫಲ್ಗುನನನ್ನು ಆಕ್ರಮಣಿಸಿದನು.

07067060a ತಸ್ಯ ಪಾರ್ಥಃ ಶರಾನ್ಸಪ್ತ ಪ್ರೇಷಯಾಮಾಸ ಭಾರತ|

07067060c ತೇ ತಂ ಶೂರಂ ವಿನಿರ್ಭಿದ್ಯ ಪ್ರಾವಿಶನ್ಧರಣೀತಲಂ||

ಭಾರತ! ಪಾರ್ಥನು ಅವನ ಮೇಲೆ ಏಳು ಶರಗಳನ್ನು ಪ್ರಯೋಗಿಸಿದನು. ಅವು ಆ ಶೂರನನ್ನು ಭೇದಿಸಿ ಧರಣೀತಲವನ್ನು ಪ್ರವೇಶಿಸಿದವು.

07067061a ಸೋಽತಿವಿದ್ಧಃ ಶರೈಸ್ತೀಕ್ಷ್ಣೈರ್ಗಾಂಡೀವಪ್ರೇಷಿತೈರ್ಮೃಧೇ|

07067061c ಅರ್ಜುನಂ ಪ್ರತಿವಿವ್ಯಾಧ ದಶಭಿಃ ಕಂಕಪತ್ರಿಭಿಃ||

ರಣದಲ್ಲಿ ಗಾಂಡೀವದಿಂದ ಬಿಡಲ್ಪಟ್ಟ ತೀಕ್ಷ್ಣ ಶರಗಳಿಂದ ಅತಿಯಾಗಿ ಗಾಯಗೊಂಡ ಅವನು ಹತ್ತು ಕಂಕಪತ್ರಿಗಳಿಂದ ಅರ್ಜುನನನ್ನು ತಿರುಗಿ ಹೊಡೆದನು.

07067062a ವಾಸುದೇವಂ ತ್ರಿಭಿರ್ವಿದ್ಧ್ವಾ ಪುನಃ ಪಾರ್ಥಂ ಚ ಪಂಚಭಿಃ|

07067062c ತಸ್ಯ ಪಾರ್ಥೋ ಧನುಶ್ಚಿತ್ತ್ವಾ ಕೇತುಂ ಚಿಚ್ಚೇದ ಮಾರಿಷ||

ಅವನು ವಾಸುದೇವನನ್ನು ಮೂರರಿಂದ ಹೊಡೆದು ಪುನಃ ಪಾರ್ಥನನ್ನು ಐದರಿಂದ ಹೊಡೆದನು. ಮಾರಿಷ! ಪಾರ್ಥನು ಅವನ ಧನುಸ್ಸನ್ನು ಕತ್ತರಿಸಿ ಕೇತುವನ್ನು ತುಂಡರಿಸಿದನು.

07067063a ಭಲ್ಲಾಭ್ಯಾಂ ಭೃಶತೀಕ್ಷ್ಣಾಭ್ಯಾಂ ತಂ ಚ ವಿವ್ಯಾಧ ಪಾಂಡವಃ|

07067063c ಸ ತು ಪಾರ್ಥಂ ತ್ರಿಭಿರ್ವಿದ್ಧ್ವಾ ಸಿಂಹನಾದಮಥಾನದತ್||

ಪಾಂಡವನು ಅವನನ್ನು ತುಂಬಾ ತೀಕ್ಷ್ಣವಾದ ಎರಡು ಭಲ್ಲಗಳಿಂದ ಹೊಡೆದನು. ಅವನಾದರೋ ಪಾರ್ಥನನ್ನು ಮೂರರಿಂದ ಹೊಡೆದು ಜೋರಾಗಿ ಸಿಂಹನಾದಗೈದನು.

07067064a ಸರ್ವಪಾರಶವೀಂ ಚೈವ ಶಕ್ತಿಂ ಶೂರಃ ಸುದಕ್ಷಿಣಃ|

07067064c ಸಘಂಟಾಂ ಪ್ರಾಹಿಣೋದ್ಘೋರಾಂ ಕ್ರುದ್ಧೋ ಗಾಂಡೀವಧನ್ವನೇ||

ಆಗ ಕ್ರುದ್ಧನಾದ ಶೂರ ಸುದಕ್ಷಿಣನು ಘಂಟೆಗಳಿಂದ ಕೂಡಿದ ಲೋಹಮಯವಾದ ಘೋರ ಶಕ್ತಿಯನ್ನು ಗಾಂಡೀವಧನ್ವಿಯ ಮೇಲೆ ಪ್ರಯೋಗಿಸಿದನು.

07067065a ಸಾ ಜ್ವಲಂತೀ ಮಹೋಲ್ಕೇವ ತಮಾಸಾದ್ಯ ಮಹಾರಥಂ|

07067065c ಸವಿಸ್ಫುಲಿಂಗಾ ನಿರ್ಭಿದ್ಯ ನಿಪಪಾತ ಮಹೀತಲೇ||

ಅದು ಮಹಾ ಉಲ್ಕೆಯಂತೆ ಉರಿಯುತ್ತಾ ಬೆಂಕಿಯ ಕಿಡಿಗಳನ್ನು ಕಾರುತ್ತಾ ಆ ಮಹಾರಥನನ್ನು ತಲುಪಿ ಭೇದಿಸಿ ನೆಲದ ಮೇಲೆ ಬಿದ್ದಿತು.

07067066a ತಂ ಚತುರ್ದಶಭಿಃ ಪಾರ್ಥೋ ನಾರಾಚೈಃ ಕಂಕಪತ್ರಿಭಿಃ|

07067066c ಸಾಶ್ವಧ್ವಜಧನುಹ್ಸೂತಂ ವಿವ್ಯಾಧಾಚಿಂತ್ಯವಿಕ್ರಮಃ|

07067066e ರಥಂ ಚಾನ್ಯೈಃ ಸುಬಹುಭಿಶ್ಚಕ್ರೇ ವಿಶಕಲಂ ಶರೈಃ||

ಆಗ ಅಚಿಂತ್ಯವಿಕ್ರಮಿ ಪಾರ್ಥನು ಹದಿನಾಲ್ಕು ಕಂಕಪತ್ರಿ ನಾರಾಚಗಳಿಂದ ಅವನನ್ನು ಕುದುರೆ-ಧ್ವಜ-ಧನುಸ್ಸುಗಳನ್ನೂ ಸೇರಿಸಿ ಹೊಡೆದನು. ಇತರ ಅನೇಕ ಶರಗಳಿಂದ ಅವನ ರಥವನ್ನೂ ನುಚ್ಚುನೂರು ಮಾಡಿದನು.

07067067a ಸುದಕ್ಷಿಣಂ ತು ಕಾಂಬೋಜಂ ಮೋಘಸಂಕಲ್ಪವಿಕ್ರಮಂ|

07067067c ಬಿಭೇದ ಹೃದಿ ಬಾಣೇನ ಪೃಥುಧಾರೇಣ ಪಾಂಡವಃ||

ವಿಕ್ರಮದಿಂದ ಮಾಡಿದ ಸಂಕಲ್ಪದಲ್ಲಿ ಯಶಸ್ವಿಯಾಗದೇ ಇದ್ದ ಕಾಂಬೋಜ ಸುದಕ್ಷಿಣನ ಹೃದಯವನ್ನು ಪಾಂಡವನು ಬಹಳ ಘೋರ ಬಾಣದಿಂದ ಭೇದಿಸಿದನು.

07067068a ಸ ಭಿನ್ನಮರ್ಮಾ ಸ್ರಸ್ತಾಂಗಃ ಪ್ರಭ್ರಷ್ಟಮುಕುಟಾಂಗದಃ|

07067068c ಪಪಾತಾಭಿಮುಖಃ ಶೂರೋ ಯಂತ್ರಮುಕ್ತ ಇವ ಧ್ವಜಃ||

ಆ ಶೂರನು ಕವಚವು ತುಂಡಾಗಿ, ರಕ್ತದಿಂದ ಅಂಗಾಂಗಗಳು ತೋಯ್ದು, ಮುಕುಟ-ಅಂಗದಗಳನ್ನು ಕಳೆದುಕೊಂಡು ಯಂತ್ರದಿಂದ ಬೀಳಿಸಲ್ಪಟ್ಟ ಧ್ವಜದಂತೆ ಅಭಿಮುಖನಾಗಿ ಭೂಮಿಯ ಮೇಲೆ ಬಿದ್ದನು.

07067069a ಗಿರೇಃ ಶಿಖರಜಃ ಶ್ರೀಮಾನ್ಸುಶಾಖಃ ಸುಪ್ರತಿಷ್ಠಿತಃ|

07067069c ನಿರ್ಭಗ್ನ ಇವ ವಾತೇನ ಕರ್ಣಿಕಾರೋ ಹಿಮಾತ್ಯಯೇ|

07067070a ಶೇತೇ ಸ್ಮ ನಿಹತೋ ಭೂಮೌ ಕಾಂಬೋಜಾಸ್ತರಣೋಚಿತಃ||

ಪರ್ವತ ಶಿಖದಲ್ಲಿ ಹುಟ್ಟಿದ್ದ ಚೆನ್ನಾಗಿ ಊರಿಕೊಂಡಿದ್ದ ಬಹುರೆಂಬೆಗಳಿಂದ ಸಮೃದ್ಧವಾಗಿದ ಕರ್ಣಿಕಾರ ವೃಕ್ಷವು ಛಳಿಗಾಲದ ಕೊನೆಯಲ್ಲಿ ಭಿರುಗಾಳಿಯಿಂದ ತುಂಡಾಗಿ ಬೀಳುವ ಹಾಗೆ ಹಂಸತೂಲಿಕಾತಲ್ಪದಲ್ಲಿ ಮಲಗಬೇಕಾಗಿದ್ದ ಕಾಂಬೋಜನು ನಿಹತನಾಗಿ ನೆಲದ ಮೇಲೆ ಮಲಗಿದನು.

07067070c ಸುದರ್ಶನೀಯಸ್ತಾಮ್ರಾಕ್ಷಃ ಕರ್ಣಿನಾ ಸ ಸುದಕ್ಷಿಣಃ|

07067070e ಪುತ್ರಃ ಕಾಂಬೋಜರಾಜಸ್ಯ ಪಾರ್ಥೇನ ವಿನಿಪಾತಿತಃ||

ನೋಡಲು ಸುಂದರನಾಗಿದ್ದ ಕೆಂಪು ಕಣ್ಣುಗಳ ಕಾಂಬೋಜರಾಜನ ಮಗ ಸುದಕ್ಷಿಣನು ಪಾರ್ಥನಿಂದ ಬೀಳಿಸಲ್ಪಟ್ಟನು.

07067071a ತತಃ ಸರ್ವಾಣಿ ಸೈನ್ಯಾನಿ ವ್ಯದ್ರವಂತ ಸುತಸ್ಯ ತೇ|

07067071c ಹತಂ ಶ್ರುತಾಯುಧಂ ದೃಷ್ಟ್ವಾ ಕಾಂಬೋಜಂ ಚ ಸುದಕ್ಷಿಣಂ||

ಹತರಾದ ಶ್ರುತಾಯುಧ ಮತ್ತು ಕಾಂಬೋಜ ಸುದಕ್ಷಿಣರನ್ನು ನೋಡಿ ನಿನ್ನ ಮಗನ ಸೇನೆಗಳೆಲ್ಲವೂ ಓಡತೊಡಗಿದವು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಶೃತಾಯುಧಸುದಕ್ಷಿಣವಧೇ ಸಪ್ತಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಶೃತಾಯುಧಸುದಕ್ಷಿಣವಧ ಎನ್ನುವ ಅರವತ್ತೇಳನೇ ಅಧ್ಯಾಯವು.

Related image

Comments are closed.