Drona Parva: Chapter 158

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೫೮

ಧೃತರಾಷ್ಟ್ರ-ಸಂಜಯರ ಸಂವಾದ (೧-೧೮). ಕೃಷ್ಣನೊಂದಿಗೆ ದುಃಖಿತನಾಗಿದ್ದ ಯುಧಿಷ್ಠಿರನ ಸಂವಾದ (೧೯-೪೮). ವ್ಯಾಸನು ಯುಧಿಷ್ಠಿರನನ್ನು ಸಮಾಧಾನಗೊಳಿಸಿದುದು (೪೯-೬೨).

07158001 ಧೃತರಾಷ್ಟ್ರ ಉವಾಚ|

07158001a ಕರ್ಣದುರ್ಯೋಧನಾದೀನಾಂ ಶಕುನೇಃ ಸೌಬಲಸ್ಯ ಚ|

07158001c ಅಪನೀತಂ ಮಹತ್ತಾತ ತವ ಚೈವ ವಿಶೇಷತಃ||

ಧೃತರಾಷ್ಟ್ರನು ಹೇಳಿದನು: “ಕರ್ಣ, ದುರ್ಯೋಧನಾದಿಗಳು, ಸೌಬಲ ಶಕುನಿ ಮತ್ತು ವಿಶೇಷವಾಗಿ ನೀನು ಅತಿ ದೊಡ್ಡ ಅನೀತಿಯನ್ನೇ ಅನುಸರಿಸಿದಿರಿ!

07158002a ಯದಾಜಾನೀತ ತಾಂ ಶಕ್ತಿಂ ಏಕಘ್ನೀಂ ಸತತಂ ರಣೇ|

07158002c ಅನಿವಾರ್ಯಾಮಸಹ್ಯಾಂ ಚ ದೇವೈರಪಿ ಸವಾಸವೈಃ||

07158003a ಸಾ ಕಿಮರ್ಥಂ ನ ಕರ್ಣೇನ ಪ್ರವೃತ್ತೇ ಸಮರೇ ಪುರಾ|

07158003c ನ ದೇವಕೀಸುತೇ ಮುಕ್ತಾ ಫಲ್ಗುನೇ ವಾಪಿ ಸಂಜಯ||

ಸಂಜಯ! ಆ ಶಕ್ತಿಯು ರಣದಲ್ಲಿ ಒಬ್ಬನನ್ನೇ ಕೊಲ್ಲಬಹುದೆನ್ನುವುದನ್ನೂ, ಅದನ್ನು ವಾಸವನ ಸಹಾಯವಿರುವ ದೇವತೆಗಳಿಗೂ ತಡೆಯಲು ಸಾಧ್ಯವಿಲ್ಲ ಎನ್ನುವುದನ್ನೂ ಯಾವಾಗಲೂ ತಿಳಿದಿದ್ದ ನೀವು ಯಾವ ಕಾರಣಕ್ಕಾಗಿ ಇದರ ಮೊದಲೇ ಸಮರದಲ್ಲಿ ದೇವಕೀಸುತನ ಮೇಲಾಗಲೀ ಫಲ್ಗುನನ ಮೇಲಾಗಲೀ ಅದನ್ನು ಪ್ರಹರಿಸುವಂತೆ ಕರ್ಣನನ್ನು ಪ್ರಚೋದಿಸಲಿಲ್ಲ?”

07158004 ಸಂಜಯ ಉವಾಚ|

07158004a ಸಂಗ್ರಾಮಾದ್ವಿನಿವೃತ್ತಾನಾಂ ಸರ್ವೇಷಾಂ ನೋ ವಿಶಾಂ ಪತೇ|

07158004c ರಾತ್ರೌ ಕುರುಕುಲಶ್ರೇಷ್ಠ ಮಂತ್ರೋಽಯಂ ಸಮಜಾಯತ||

07158005a ಪ್ರಭಾತಮಾತ್ರೇ ಶ್ವೋಭೂತೇ ಕೇಶವಾಯಾರ್ಜುನಾಯ ವಾ|

07158005c ಶಕ್ತಿರೇಷಾ ವಿಮೋಕ್ತವ್ಯಾ ಕರ್ಣ ಕರ್ಣೇತಿ ನಿತ್ಯಶಃ||

ಸಂಜಯನು ಹೇಳಿದನು: “ವಿಶಾಂಪತೇ! ಕುರುಕುಲಶ್ರೇಷ್ಠ! ಸಂಗ್ರಾಮದಿಂದ ಹಿಂದಿರುಗುತ್ತಲೇ ರಾತ್ರಿಯಲ್ಲಿ ನಾವೆಲ್ಲರೂ ನಿತ್ಯವೂ ಅವನಿಗೆ ಇದೇ ಸಲಹೆಯನ್ನು ನೀಡುತ್ತಿದ್ದೆವು: “ಕರ್ಣ! ಕರ್ಣ! ನಾಳೆ ಬೆಳಗಾಗುತ್ತಲೇ ಕೇಶವನ ಮೇಲಾಗಲೀ ಅರ್ಜುನನ ಮೇಲಾಗಲೀ ಈ ಶಕ್ತಿಯನ್ನು ಪ್ರಯೋಗಿಸು!” ಎಂದು.

07158006a ತತಃ ಪ್ರಭಾತಸಮಯೇ ರಾಜನ್ಕರ್ಣಸ್ಯ ದೈವತೈಃ|

07158006c ಅನ್ಯೇಷಾಂ ಚೈವ ಯೋಧಾನಾಂ ಸಾ ಬುದ್ಧಿರ್ನಶ್ಯತೇ ಪುನಃ||

ರಾಜನ್! ಆದರೆ ಪ್ರಭಾತಸಮಯದಲ್ಲಿ ದೈವಚಿತ್ತವೋ ಎಂಬಂತೆ ಕರ್ಣನ ಮತ್ತು ಅನ್ಯ ಯೋಧರ ಬುದ್ಧಿಯು ಪುನಃ ನಾಶವಾಗಿಹೋಗುತ್ತಿತ್ತು!

07158007a ದೈವಮೇವ ಪರಂ ಮನ್ಯೇ ಯತ್ಕರ್ಣೋ ಹಸ್ತಸಂಸ್ಥಯಾ|

07158007c ನ ಜಘಾನ ರಣೇ ಪಾರ್ಥಂ ಕೃಷ್ಣಂ ವಾ ದೇವಕೀಸುತಂ||

ರಣದಲ್ಲಿ ಕರ್ಣನು ತನ್ನ ಕೈಯಿಂದ ಪಾರ್ಥನನ್ನಾಗಲೀ ದೇವಕೀಸುತ ಕೃಷ್ಣನನ್ನಾಗಲೀ ಕೊಲ್ಲದೇ ಇರುವುದಕ್ಕೆ ದೈವವೇ ಪರಮ ಕಾರಣವೆಂದು ನನಗನ್ನಿಸುತ್ತದೆ.

07158008a ತಸ್ಯ ಹಸ್ತಸ್ಥಿತಾ ಶಕ್ತಿಃ ಕಾಲರಾತ್ರಿರಿವೋದ್ಯತಾ|

07158008c ದೈವೋಪಹತಬುದ್ಧಿತ್ವಾನ್ನ ತಾಂ ಕರ್ಣೋ ವಿಮುಕ್ತವಾನ್||

ಅವನ ಕೈಯಲ್ಲಿ ಆ ಶಕ್ತಿಯು ಕಾಲರಾತ್ರಿಯಂತೆ ಸರ್ವತಾ ಜಾಗ್ರತವಾಗಿಯೇ ಇದ್ದಿತು. ಆದರೆ ದೈವದಿಂದ ಬುದ್ಧಿಯನ್ನು ಕಳೆದುಕೊಂಡ ಕರ್ಣನು ಅದನ್ನು ಪ್ರಯೋಗಿಸಲಿಲ್ಲ.

07158009a ಕೃಷ್ಣೇ ವಾ ದೇವಕೀಪುತ್ರೇ ಮೋಹಿತೋ ದೇವಮಾಯಯಾ|

07158009c ಪಾರ್ಥೇ ವಾ ಶಕ್ರಕಲ್ಪೇ ವೈ ವಧಾರ್ಥಂ ವಾಸವೀಂ ಪ್ರಭೋ||

ಪ್ರಭೋ! ದೇವಮಾಯೆಯಿಂದ ಮೋಹಿತನಾದ ಅವನು ಶಕ್ರನು ನೀಡಿದ ಆ ವಾಸವೀ ಶಕ್ತಿಯನ್ನು ದೇವಕೀಪುತ್ರ ಕೃಷ್ಣನ ಅಥವಾ ಪಾರ್ಥನ ವಧೆಗಾಗಿ ಬಳಸಲಿಲ್ಲ!”

07158010 ಧೃತರಾಷ್ಟ್ರ ಉವಾಚ|

07158010a ದೈವೇನೈವ ಹತಾ ಯೂಯಂ ಸ್ವಬುದ್ಧ್ಯಾ ಕೇಶವಸ್ಯ ಚ|

07158010c ಗತಾ ಹಿ ವಾಸವೀ ಹತ್ವಾ ತೃಣಭೂತಂ ಘಟೋತ್ಕಚಂ||

ಧೃತರಾಷ್ಟ್ರನು ಹೇಳಿದನು: “ನೀವೆಲ್ಲರೂ ಈಗಲೇ ದೈವದಿಂದ ಹತರಾಗಿದ್ದೀರಿ. ಕೇಶವನ ಬುದ್ಧಿವಂತಿಕೆಯಿಂದಾಗಿ ಇಂದ್ರನ ಆ ಮಹಾಶಕ್ತಿಯು ತೃಣಪ್ರಾಯ ಘಟೋತ್ಕಚನನ್ನು ಸಂಹರಿಸಿ ಹೊರಟುಹೋಯಿತು.

07158011a ಕರ್ಣಶ್ಚ ಮಮ ಪುತ್ರಾಶ್ಚ ಸರ್ವೇ ಚಾನ್ಯೇ ಚ ಪಾರ್ಥಿವಾಃ|

07158011c ಅನೇನ ದುಷ್ಪ್ರಣೀತೇನ ಗತಾ ವೈವಸ್ವತಕ್ಷಯಂ||

ನಿಮ್ಮ ದುರ್ನೀತಿಯಿಂದಾಗಿ ಕರ್ಣನೂ, ನನ್ನ ಎಲ್ಲ ಮಕ್ಕಳೂ, ಮತ್ತು ಅನ್ಯ ರಾಜರೂ ಯಮಾಲಯಕ್ಕೆ ಹೋಗಿಬಿಟ್ಟಿದ್ದಾರೆ!

07158012a ಭೂಯ ಏವ ತು ಮೇ ಶಂಸ ಯಥಾ ಯುದ್ಧಮವರ್ತತ|

07158012c ಕುರೂಣಾಂ ಪಾಂಡವಾನಾಂ ಚ ಹೈಡಿಂಬೇ ನಿಹತೇ ತದಾ||

ಹೈಡಿಂಬಿಯು ಹತನಾದ ನಂತರ ಕುರು-ಪಾಂಡವರ ನಡುವೆ ಹೇಗೆ ಯುದ್ಧ ನಡೆಯಿತು ಎನ್ನುವುದನ್ನು ನನಗೆ ಹೇಳು.

07158013a ಯೇ ಚ ತೇಽಭ್ಯದ್ರವನ್ದ್ರೋಣಂ ವ್ಯೂಢಾನೀಕಾಃ ಪ್ರಹಾರಿಣಃ|

07158013c ಸೃಂಜಯಾಃ ಸಹ ಪಾಂಚಾಲೈಸ್ತೇಽಪ್ಯಕುರ್ವನ್ ಕಥಂ ರಣಂ||

ಪ್ರಹಾರಿ ಸೃಂಜಯ-ಪಾಂಚಾಲರು ವ್ಯೂಹವನ್ನು ರಚಿಸಿ ಹೇಗೆ ರಣದಲ್ಲಿ ದ್ರೋಣನನ್ನು ಆಕ್ರಮಣಿಸಿದರು?

07158014a ಸೌಮದತ್ತೇರ್ವಧಾದ್ದ್ರೋಣಮಾಯಸ್ತಂ ಸೈಂಧವಸ್ಯ ಚ|

07158014c ಅಮರ್ಷಾಜ್ಜೀವಿತಂ ತ್ಯಕ್ತ್ವಾ ಗಾಹಮಾನಂ ವರೂಥಿನೀಂ||

07158015a ಜೃಂಭಮಾಣಮಿವ ವ್ಯಾಘ್ರಂ ವ್ಯಾತ್ತಾನನಮಿವಾಂತಕಂ|

07158015c ಕಥಂ ಪ್ರತ್ಯುದ್ಯಯುರ್ದ್ರೋಣಮಸ್ಯಂತಂ ಪಾಂಡುಸೃಂಜಯಾಃ||

ಸೌಮದತ್ತಿ ಭೂರಿಶ್ರವಸ ಮತ್ತು ಸೈಂಧವರ ವಧೆಯಿಂದಾಗಿ ಮೊದಲೇ ಕುಪಿತನಾಗಿದ್ದ, ಜೀವವನ್ನು ತ್ಯಜಿಸಿ ಸೇನೆಯ ಒಳಹೊಗುತ್ತಿದ್ದ, ಆಕಳಿಸುವ ವ್ಯಾಘ್ರದಂತಿದ್ದ, ಬಾಯಿತೆರೆದ ಅಂತಕನಂತಿದ್ದ ದ್ರೋಣನನ್ನು ಪಾಂಡವ-ಸೃಂಜಯರು ಹೇಗೆ ಎದುರಿಸಿದರು?

07158016a ಆಚಾರ್ಯಂ ಯೇ ಚ ತೇಽರಕ್ಷನ್ದುರ್ಯೋಧನಪುರೋಗಮಾಃ|

07158016c ದ್ರೌಣಿಕರ್ಣಕೃಪಾಸ್ತಾತ ತೇಽಪ್ಯಕುರ್ವನ್ಕಿಮಾಹವೇ||

ಆಚಾರ್ಯನನ್ನು ರಕ್ಷಿಸುತ್ತಿದ್ದ ದುರ್ಯೋಧನನೇ ಮೊದಲಾದ ದ್ರೌಣಿ, ಕೃಪರು ಆ ಸಮಯದಲ್ಲಿ ರಣರಂಗದಲ್ಲಿ ಏನು ಮಾಡುತ್ತಿದ್ದರು?

07158017a ಭಾರದ್ವಾಜಂ ಜಿಘಾಂಸಂತೌ ಸವ್ಯಸಾಚಿವೃಕೋದರೌ|

07158017c ಸಮಾರ್ಚನ್ಮಾಮಕಾ ಯುದ್ಧೇ ಕಥಂ ಸಂಜಯ ಶಂಸ ಮೇ||

ಸಂಜಯ! ಭಾರದ್ವಾಜನನ್ನು ಸಂಹರಿಸಲು ಬಯಸುತ್ತಿದ್ದ ಸವ್ಯಸಾಚಿ-ವೃಕೋದರರನ್ನು ನನ್ನವರು ಹೇಗೆ ಯುದ್ಧದಲ್ಲಿ ಎದುರಿಸಿದರು ಎನ್ನುವುದನ್ನು ನನಗೆ ಹೇಳು.

07158018a ಸಿಂಧುರಾಜವಧೇನೇಮೇ ಘಟೋತ್ಕಚವಧೇನ ತೇ|

07158018c ಅಮರ್ಷಿತಾಃ ಸುಸಂಕ್ರುದ್ಧಾ ರಣಂ ಚಕ್ರುಃ ಕಥಂ ನಿಶಿ||

ಸಿಂಧುರಾಜನ ವಧೆಯಿಂದ ಕುಪಿತರಾಗಿದ್ದ ನಮ್ಮವರೂ, ಘಟೋತ್ಕಚನ ವಧೆಯಿಂದ ಕುಪಿತರಾಗಿದ್ದ ಅವರೂ ಆ ರಾತ್ರಿ ಯಾವ ರಣನೀತಿಯನ್ನು ನಡೆಸಿದರು?”

07158019 ಸಂಜಯ ಉವಾಚ|

07158019a ಹತೇ ಘಟೋತ್ಕಚೇ ರಾಜನ್ಕರ್ಣೇನ ನಿಶಿ ರಾಕ್ಷಸೇ|

07158019c ಪ್ರಣದತ್ಸು ಚ ಹೃಷ್ಟೇಷು ತಾವಕೇಷು ಯುಯುತ್ಸುಷು||

07158020a ಆಪತತ್ಸು ಚ ವೇಗೇನ ವಧ್ಯಮಾನೇ ಬಲೇಽಪಿ ಚ|

07158020c ವಿಗಾಢಾಯಾಂ ರಜನ್ಯಾಂ ಚ ರಾಜಾ ದೈನ್ಯಂ ಪರಂ ಗತಃ||

ಸಂಜಯನು ಹೇಳಿದನು: “ರಾಜನ್! ರಾತ್ರಿಯಲ್ಲಿ ಕರ್ಣನಿಂದ ರಾಕ್ಷಸ ಘಟೋತ್ಕಚನು ಹತನಾಗಲು, ಪ್ರಹೃಷ್ಟರಾದ ನಿನ್ನವರು ಯುದ್ಧೋತ್ಸಾಹದಿಂದ ಯುದ್ಧಮಾಡುತ್ತಾ ವೇಗದಿಂದ ಸೇನೆಯನ್ನು ವಧಿಸುತ್ತಿರಲು, ಆ ದಟ್ಟ ರಾತ್ರಿಯಲ್ಲಿ ರಾಜಾ ಯುಧಿಷ್ಠಿರನು ಪರಮ ದುಃಖಿತನಾದನು.

07158021a ಅಬ್ರವೀಚ್ಚ ಮಹಾಬಾಹುರ್ಭೀಮಸೇನಂ ಪರಂತಪಃ|

07158021c ಆವಾರಯ ಮಹಾಬಾಹೋ ಧಾರ್ತರಾಷ್ಟ್ರಸ್ಯ ವಾಹಿನೀಂ|

07158021e ಹೈಡಿಂಬಸ್ಯಾಭಿಘಾತೇನ ಮೋಹೋ ಮಾಮಾವಿಶನ್ಮಹಾನ್||

ಆ ಪರಂತಪನು ಮಹಾಬಾಹು ಭೀಮಸೇನನಿಗೆ ಹೇಳಿದನು: “ಮಹಾಬಾಹೋ! ಧಾರ್ತರಾಷ್ಟ್ರನ ಸೇನೆಯನ್ನು ತಡೆ! ಹೈಡಿಂಬನ ವಿಘಾತದಿಂದಾಗಿ ಮಹಾ ಮೋಹವು ನನ್ನನ್ನು ಆವೇಶಗೊಂಡಿದೆ!”

07158022a ಏವಂ ಭೀಮಂ ಸಮಾದಿಶ್ಯ ಸ್ವರಥೇ ಸಮುಪಾವಿಶತ್|

07158022c ಅಶ್ರುಪೂರ್ಣಮುಖೋ ರಾಜಾ ನಿಃಶ್ವಸಂಶ್ಚ ಪುನಃ ಪುನಃ|

07158022e ಕಶ್ಮಲಂ ಪ್ರಾವಿಶದ್ಘೋರಂ ದೃಷ್ಟ್ವಾ ಕರ್ಣಸ್ಯ ವಿಕ್ರಮಂ||

ಭೀಮನಿಗೆ ಹೀಗೆ ಆದೇಶಿಸಿ ಯುಧಿಷ್ಠಿರನು ತನ್ನ ರಥದಲ್ಲಿಯೇ ಕುಳಿತುಕೊಂಡನು. ಮುಖವು ಕಣ್ಣೀರಿನಿಂದ ತುಂಬಿಹೋಗಲು ರಾಜನು ಪುನಃ ಪುನಃ ನಿಟ್ಟುಸಿರು ಬಿಡುತ್ತಿದ್ದನು. ಕರ್ಣನ ವಿಕ್ರಮವನ್ನು ನೋಡಿ ಘೋರ ಚಿಂತೆಯು ಅವನನ್ನು ಆವರಿಸಿತು.

07158023a ತಂ ತಥಾ ವ್ಯಥಿತಂ ದೃಷ್ಟ್ವಾ ಕೃಷ್ಣೋ ವಚನಮಬ್ರವೀತ್|

07158023c ಮಾ ವ್ಯಥಾಂ ಕುರು ಕೌಂತೇಯ ನೈತತ್ತ್ವಯ್ಯುಪಪದ್ಯತೇ|

07158023e ವೈಕ್ಲವ್ಯಂ ಭರತಶ್ರೇಷ್ಠ ಯಥಾ ಪ್ರಾಕೃತಪೂರುಷೇ||

ಅವನು ಹಾಗೆ ವ್ಯಥಿತನಾಗಿರುವುದನ್ನು ನೋಡಿ ಕೃಷ್ಣನು ಈ ಮಾತನ್ನಾಡಿದನು: “ಕೌಂತೇಯ! ದುಃಖಿಸದಿರು! ಸಾಮಾನ್ಯ ಮನುಷ್ಯನಂತೆ ಈ ರೀತಿ ದುಃಖಿಸುವುದು ನಿನಗೆ ಸರಿಯೆನಿಸುವುದಿಲ್ಲ. ಭರತಶ್ರೇಷ್ಠ!

07158024a ಉತ್ತಿಷ್ಠ ರಾಜನ್ಯುಧ್ಯಸ್ವ ವಹ ಗುರ್ವೀಂ ಧುರಂ ವಿಭೋ|

07158024c ತ್ವಯಿ ವೈಕ್ಲವ್ಯಮಾಪನ್ನೇ ಸಂಶಯೋ ವಿಜಯೇ ಭವೇತ್||

ರಾಜನ್! ಎದ್ದೇಳು! ಯುದ್ಧಮಾಡು! ವಿಭೋ! ಈ ಭಾರವನ್ನು ಹೊರು! ನೀನು ಗಾಬರಿಗೊಂಡರೆ ವಿಜಯದಲ್ಲಿ ಸಂಶಯವುಂಟಾಗುತ್ತದೆ.”

07158025a ಶ್ರುತ್ವಾ ಕೃಷ್ಣಸ್ಯ ವಚನಂ ಧರ್ಮರಾಜೋ ಯುಧಿಷ್ಠಿರಃ|

07158025c ವಿಮೃಜ್ಯ ನೇತ್ರೇ ಪಾಣಿಭ್ಯಾಂ ಕೃಷ್ಣಂ ವಚನಮಬ್ರವೀತ್||

ಕೃಷ್ಣನ ಮಾತನ್ನು ಕೇಳಿ ಧರ್ಮರಾಜ ಯುಧಿಷ್ಠಿರನು ಕೈಗಳಿಂದ ಕಣ್ಣೀರನ್ನು ಒರೆಸಿಕೊಂಡು ಕೃಷ್ಣನಿಗೆ ಈ ಮಾತುಗಳನ್ನಾಡಿದನು:

07158026a ವಿದಿತಾ ತೇ ಮಹಾಬಾಹೋ ಧರ್ಮಾಣಾಂ ಪರಮಾ ಗತಿಃ|

07158026c ಬ್ರಹ್ಮಹತ್ಯಾಫಲಂ ತಸ್ಯ ಯಃ ಕೃತಂ ನಾವಬುಧ್ಯತೇ||

“ಕೃಷ್ಣ! ಮಹಾಬಾಹೋ! ಧರ್ಮಗಳ ಪರಮ ದಾರಿಯು ನಿನಗೆ ತಿಳಿದೇ ಇದೆ. ಪಡೆದುಕೊಂಡ ಉಪಕಾರವನ್ನು ಸ್ಮರಿಸಿಕೊಳ್ಳದಿರುವವನಿಗೆ ಬ್ರಹ್ಮಹತ್ಯೆಯ ಫಲವು ದೊರಕುತ್ತದೆ!

07158027a ಅಸ್ಮಾಕಂ ಹಿ ವನಸ್ಥಾನಾಂ ಹೈಡಿಂಬೇನ ಮಹಾತ್ಮನಾ|

07158027c ಬಾಲೇನಾಪಿ ಸತಾ ತೇನ ಕೃತಂ ಸಾಹ್ಯಂ ಜನಾರ್ದನ||

ಜನಾರ್ದನ! ನಾವು ವನದಲ್ಲಿದ್ದಾಗ ಬಾಲಕನಾಗಿದ್ದರೂ ಮಹಾತ್ಮ ಹೈಡಿಂಬಿಯು ನಿಜವಾಗಿಯೂ ನಮಗೆ ಬಹಳ ಸಹಾಯ ಮಾಡಿದ್ದನು.

07158028a ಅಸ್ತ್ರಹೇತೋರ್ಗತಂ ಜ್ಞಾತ್ವಾ ಪಾಂಡವಂ ಶ್ವೇತವಾಹನಂ|

07158028c ಅಸೌ ಕೃಷ್ಣ ಮಹೇಷ್ವಾಸಃ ಕಾಮ್ಯಕೇ ಮಾಮುಪಸ್ಥಿತಃ|

07158028e ಉಷಿತಶ್ಚ ಸಹಾಸ್ಮಾಭಿರ್ಯಾವನ್ನಾಸೀದ್ಧನಂಜಯಃ||

ಕೃಷ್ಣ! ಶ್ವೇತವಾಹನ ಪಾಂಡವನು ಅಸ್ತ್ರಗಳಿಗಾಗಿ ಹೋಗಿರುವನೆಂದು ತಿಳಿದು ಈ ಮಹೇಷ್ವಾಸನು ಕಾಮ್ಯಕದಲ್ಲಿ ನಮ್ಮೊಡನೆಯೇ ಇದ್ದನು. ಧನಂಜಯನು ಬರುವವರೆಗೆ ಅವನು ನಮ್ಮೊಡನೆಯೇ ಇದ್ದನು.

07158029a ಗಂಧಮಾದನಯಾತ್ರಾಯಾಂ ದುರ್ಗೇಭ್ಯಶ್ಚ ಸ್ಮ ತಾರಿತಾಃ|

07158029c ಪಾಂಚಾಲೀ ಚ ಪರಿಶ್ರಾಂತಾ ಪೃಷ್ಠೇನೋಢಾ ಮಹಾತ್ಮನಾ||

ಗಂಧಮಾದನ ಯಾತ್ರೆಯಲ್ಲಿ ಪಾಂಚಾಲಿಯು ಬಳಲಿದ್ದಾಗ ಈ ಮಹಾತ್ಮನೇ ಅವಳನ್ನು ತನ್ನ ಬೆನ್ನಮೇಲೆ ಹೊತ್ತು ದುರ್ಗಮ ಪ್ರದೇಶಗಳನ್ನು ದಾಟಿಸಿದನು.

07158030a ಆರಂಭಾಚ್ಚೈವ ಯುದ್ಧಾನಾಂ ಯದೇಷ ಕೃತವಾನ್ಪ್ರಭೋ|

07158030c ಮದರ್ಥಂ ದುಷ್ಕರಂ ಕರ್ಮ ಕೃತಂ ತೇನ ಮಹಾತ್ಮನಾ||

ಪ್ರಭೋ! ಈ ಯುದ್ಧಗಳ ಆರಂಭದಲ್ಲಿ ಕೂಡ ಆ ಮಹಾತ್ಮನು ನನಗೋಸ್ಕರವಾಗಿ ದುಷ್ಕರ ಕರ್ಮಗಳನ್ನು ಮಾಡಿದನು.

07158031a ಸ್ವಭಾವಾದ್ಯಾ ಚ ಮೇ ಪ್ರೀತಿಃ ಸಹದೇವೇ ಜನಾರ್ದನ|

07158031c ಸೈವ ಮೇ ದ್ವಿಗುಣಾ ಪ್ರೀತೀ ರಾಕ್ಷಸೇಂದ್ರೇ ಘಟೋತ್ಕಚೇ||

ಜನಾರ್ದನ! ಸ್ವಭಾವತಃ ನನಗೆ ಸಹದೇವನಲ್ಲಿ ಎಷ್ಟು ಪ್ರೀತಿಯಿದೆಯೋ ಅದಕ್ಕಿಂತ ಎರಡು ಪಟ್ಟು ಪ್ರೀತಿಯು ಈ ರಾಕ್ಷಸೇಂದ್ರ ಘಟೋತ್ಕಚನ ಮೇಲೆ ಇದೆ.

07158032a ಭಕ್ತಶ್ಚ ಮೇ ಮಹಾಬಾಹುಃ ಪ್ರಿಯೋಽಸ್ಯಾಹಂ ಪ್ರಿಯಶ್ಚ ಮೇ|

07158032c ಯೇನ ವಿಂದಾಮಿ ವಾರ್ಷ್ಣೇಯ ಕಶ್ಮಲಂ ಶೋಕತಾಪಿತಃ||

ವಾರ್ಷ್ಣೇಯ! ಆ ಮಹಾಬಾಹುವು ನನ್ನ ಭಕ್ತನಾಗಿದ್ದನು. ಅವನಿಗೆ ನಾನು ಎಷ್ಟು ಪ್ರಿಯನಾಗಿದ್ದೆನೋ ಅಷ್ಟೇ ನನಗೂ ಅವನು ಪ್ರಿಯನಾಗಿದ್ದನು. ಅವನ ಅಗಲಿಕೆಯಿಂದ ಶೋಕಸಂತಪ್ತನಾಗಿದ್ದೇನೆ. ಬುದ್ಧಿಗೆಟ್ಟವನಾಗಿದ್ದೇನೆ.

07158033a ಪಶ್ಯ ಸೈನ್ಯಾನಿ ವಾರ್ಷ್ಣೇಯ ದ್ರಾವ್ಯಮಾಣಾನಿ ಕೌರವೈಃ|

07158033c ದ್ರೋಣಕರ್ಣೌ ಚ ಸಮ್ಯತ್ತೌ ಪಶ್ಯ ಯುದ್ಧೇ ಮಹಾರಥೌ||

ವಾರ್ಷ್ಣೇಯ! ಕೌರವರಿಂದ ಓಡಿಸಲ್ಪಡುತ್ತಿರುವ ಸೈನ್ಯಗಳನ್ನು ನೋಡು! ಮಹಾರಥ ದ್ರೋಣ-ಕರ್ಣರು ಪ್ರಯತ್ನಪೂರ್ವಕವಾಗಿ ಯುದ್ಧಮಾಡುತ್ತಿರುವುದನ್ನು ನೋಡು!

07158034a ನಿಶೀಥೇ ಪಾಂಡವಂ ಸೈನ್ಯಮಾಭ್ಯಾಂ ಪಶ್ಯ ಪ್ರಮರ್ದಿತಂ|

07158034c ಗಜಾಭ್ಯಾಮಿವ ಮತ್ತಾಭ್ಯಾಂ ಯಥಾ ನಡವನಂ ಮಹತ್||

ಮದಿಸಿದ ಎರಡು ಆನೆಗಳಿಂದ ಜೊಂಡುಹುಲ್ಲಿನ ವನವು ಧ್ವಂಸಗೊಳಿಸಲ್ಪಡುವಂತೆ ಈ ರಾತ್ರಿ ಪಾಂಡವ ಸೇನೆಯು ಧ್ವಂಸವಾಗುತ್ತಿರುವುದನ್ನು ನೋಡು!

07158035a ಅನಾದೃತ್ಯ ಬಲಂ ಬಾಹ್ವೋರ್ಭೀಮಸೇನಸ್ಯ ಮಾಧವ|

07158035c ಚಿತ್ರಾಸ್ತ್ರತಾಂ ಚ ಪಾರ್ಥಸ್ಯ ವಿಕ್ರಮಂತೇ ಸ್ಮ ಕೌರವಾಃ||

ಮಾಧವ! ಭೀಮಸೇನನ ಬಾಹುಬಲವನ್ನೂ ಪಾರ್ಥನ ವಿಚಿತ್ರ ಅಸ್ತ್ರಬಲವನ್ನೂ ಅನಾದರಿಸಿ ಕೌರವರು ವಿಕ್ರಮದಿಂದ ನಮ್ಮ ಸೇನೆಯೊಡನೆ ಯುದ್ಧಮಾಡುತ್ತಿದ್ದಾರೆ!

07158036a ಏಷ ದ್ರೋಣಶ್ಚ ಕರ್ಣಶ್ಚ ರಾಜಾ ಚೈವ ಸುಯೋಧನಃ|

07158036c ನಿಹತ್ಯ ರಾಕ್ಷಸಂ ಯುದ್ಧೇ ಹೃಷ್ಟಾ ನರ್ದಂತಿ ಸಮ್ಯುಗೇ||

ಯುದ್ಧದಲ್ಲಿ ರಾಕ್ಷಸನನ್ನು ಸಂಹರಿಸಿ ದ್ರೋಣ, ಕರ್ಣ ಮತ್ತು ರಾಜಾ ಸುಯೋಧನರು ರಣರಂಗದಲ್ಲಿ ಹೃಷ್ಟರಾಗಿ ಗರ್ಜಿಸುತ್ತಿದ್ದಾರೆ.

07158037a ಕಥಮಸ್ಮಾಸು ಜೀವತ್ಸು ತ್ವಯಿ ಚೈವ ಜನಾರ್ದನ|

07158037c ಹೈಡಿಂಬಃ ಪ್ರಾಪ್ತವಾನ್ಮೃತ್ಯುಂ ಸೂತಪುತ್ರೇಣ ಸಂಗತಃ||

ಜನಾರ್ದನ! ನಾವು ಮತ್ತು ನೀನೂ ಕೂಡ ಜೀವಿಸಿರುವಾಗ ಸೂತಪುತ್ರನನ್ನು ಎದುರಿಸಿ ಹೈಡಿಂಬನು ಹೇಗೆ ಮೃತ್ಯುವನ್ನಪ್ಪಿದನು?

07158038a ಕದರ್ಥೀಕೃತ್ಯ ನಃ ಸರ್ವಾನ್ಪಶ್ಯತಃ ಸವ್ಯಸಾಚಿನಃ|

07158038c ನಿಹತೋ ರಾಕ್ಷಸಃ ಕೃಷ್ಣ ಭೈಮಸೇನಿರ್ಮಹಾಬಲಃ||

ಕೃಷ್ಣ! ನಮ್ಮೆಲ್ಲರನ್ನೂ ತೃಣೀಕರಿಸಿ, ಸವ್ಯಸಾಚಿಯು ನೋಡುತ್ತಿರುವಂತೆಯೇ, ಭೈಮಸೇನಿ ಮಹಾಬಲ ರಾಕ್ಷಸನು ಸಂಹರಿಸಲ್ಪಟ್ಟನು!

07158039a ಯದಾಭಿಮನ್ಯುರ್ನಿಹತೋ ಧಾರ್ತರಾಷ್ಟ್ರೈರ್ದುರಾತ್ಮಭಿಃ|

07158039c ನಾಸೀತ್ತತ್ರ ರಣೇ ಕೃಷ್ಣ ಸವ್ಯಸಾಚೀ ಮಹಾರಥಃ||

ಕೃಷ್ಣ! ದುರಾತ್ಮ ಧಾರ್ತರಾಷ್ಟ್ರರು ಅಭಿಮನ್ಯುವನ್ನು ಕೊಂದಾಗ ಮಹಾರಥ ಸವ್ಯಸಾಚಿಯು ಅಲ್ಲಿ ರಣದಲ್ಲಿರಲಿಲ್ಲ.

07158040a ನಿರುದ್ಧಾಶ್ಚ ವಯಂ ಸರ್ವೇ ಸೈಂಧವೇನ ದುರಾತ್ಮನಾ|

07158040c ನಿಮಿತ್ತಮಭವದ್ದ್ರೋಣಃ ಸಪುತ್ರಸ್ತತ್ರ ಕರ್ಮಣಿ||

ದುರಾತ್ಮ ಸೈಂಧವನು ನಮ್ಮೆಲ್ಲರನ್ನು ತಡೆದಿದ್ದರೂ ಆ ಕೃತ್ಯಕ್ಕೆ ತನ್ನ ಮಗನೊಡನೆ ದ್ರೋಣನು ಕಾರಣನಾಗಿದ್ದನು.

07158041a ಉಪದಿಷ್ಟೋ ವಧೋಪಾಯಃ ಕರ್ಣಸ್ಯ ಗುರುಣಾ ಸ್ವಯಂ|

07158041c ವ್ಯಾಯಚ್ಚತಶ್ಚ ಖಡ್ಗೇನ ದ್ವಿಧಾ ಖಡ್ಗಂ ಚಕಾರ ಹ||

ಸ್ವಯಂ ಗುರುವೇ ಕರ್ಣನಿಗೆ ಅಭಿಮನ್ಯುವಿನ ವಧೋಪಾಯವನ್ನು ಉಪದೇಶಿಸಿದನು. ಅಭಿಮನ್ಯುವು ಖಡ್ಗದಿಂದ ಹೋರಾಡುತ್ತಿರುವಾಗ ಅವನ ಖಡ್ಗವನ್ನು ಅವನೇ ಎರಡಾಗಿ ತುಂಡರಿಸಿದನು ಕೂಡ!

07158042a ವ್ಯಸನೇ ವರ್ತಮಾನಸ್ಯ ಕೃತವರ್ಮಾ ನೃಶಂಸವತ್|

07158042c ಅಶ್ವಾಂ ಜಘಾನ ಸಹಸಾ ತಥೋಭೌ ಪಾರ್ಷ್ಣಿಸಾರಥೀ|

07158042e ತಥೇತರೇ ಮಹೇಷ್ವಾಸಾಃ ಸೌಭದ್ರಂ ಯುಧ್ಯಪಾತಯನ್||

ಅಭಿಮನ್ಯುವು ಕಷ್ಟದಲ್ಲಿರುವಾಗ ಸುಳ್ಳುಗಾರನಂತೆ ಕೃತವರ್ಮನು ಅವನ ಕುದುರೆಗಳನ್ನೂ ಪಾರ್ಷ್ಣಿಸಾರಥಿಯನ್ನೂ ಸಂಹರಿಸಿದನು. ಅನಂತರ ಮಹೇಷ್ವಾಸರು ಸೌಭದ್ರನನ್ನು ಕೆಳಗುರುಳಿಸಿದರು.

07158043a ಅಲ್ಪೇ ಚ ಕಾರಣೇ ಕೃಷ್ಣ ಹತೋ ಗಾಂಡೀವಧನ್ವನಾ|

07158043c ಸೈಂಧವೋ ಯಾದವಶ್ರೇಷ್ಠ ತಚ್ಚ ನಾತಿಪ್ರಿಯಂ ಮಮ||

ಕೃಷ್ಣ! ಯಾದವಶ್ರೇಷ್ಠ! ಅಲ್ಪ ಕಾರಣಕ್ಕಾಗಿ ಗಾಂಡೀವಧನ್ವಿಯು ಸೈಂಧವನನ್ನು ಸಂಹರಿಸಿದನು. ಅದು ನನಗೆ ಪ್ರಿಯವಾಗಿರಲಿಲ್ಲ!

07158044a ಯದಿ ಶತ್ರುವಧೇ ನ್ಯಾಯ್ಯೋ ಭವೇತ್ಕರ್ತುಂ ಚ ಪಾಂಡವೈಃ|

07158044c ದ್ರೋಣಕರ್ಣೌ ರಣೇ ಪೂರ್ವಂ ಹಂತವ್ಯಾವಿತಿ ಮೇ ಮತಿಃ||

ಒಂದುವೇಳೆ ಶತ್ರುವಧೆಯಲ್ಲಿ ನ್ಯಾಯವಾಗಬೇಕೆಂದರೆ ರಣದಲ್ಲಿ ಮೊದಲು ಪಾಂಡವರು ದ್ರೋಣ-ಕರ್ಣರನ್ನು ಸಂಹರಿಸಬೇಕೆಂದು ನನಗನ್ನಿಸುತ್ತದೆ.

07158045a ಏತೌ ಮೂಲಂ ಹಿ ದುಃಖಾನಾಮಸ್ಮಾಕಂ ಪುರುಷರ್ಷಭ|

07158045c ಏತೌ ರಣೇ ಸಮಾಸಾದ್ಯ ಪರಾಶ್ವಸ್ತಃ ಸುಯೋಧನಃ||

ಪುರುಷರ್ಷಭ! ಇವರಿಬ್ಬರೂ ನಮ್ಮ ದುಃಖಕ್ಕೆ ಮೂಲ ಕಾರಣರು. ರಣದಲ್ಲಿ ಇವರಿಬ್ಬರನ್ನೂ ಪಡೆದು ಸುಯೋಧನನು ಸಮಾಧಾನದಿಂದಿದ್ದಾನೆ.

07158046a ಯತ್ರ ವಧ್ಯೋ ಭವೇದ್ದ್ರೋಣಃ ಸೂತಪುತ್ರಶ್ಚ ಸಾನುಗಃ|

07158046c ತತ್ರಾವಧೀನ್ಮಹಾಬಾಹುಃ ಸೈಂಧವಂ ದೂರವಾಸಿನಂ||

ಎಲ್ಲಿ ದ್ರೋಣ ಮತ್ತು ಅನುಯಾಯಿಗಳೊಂದಿಗೆ ಸೂತಪುತ್ರನ ವಧೆಯಾಗಬೇಕಿತ್ತೋ ಅಲ್ಲಿ ಮಹಾಬಾಹು ಅರ್ಜುನನು ಅಭಿಮನ್ಯುವಿನಿಂದ ಅತಿ ದೂರದಲ್ಲಿದ್ದ ಸೈಂಧವನನ್ನು ಸಂಹರಿಸಿದನು!

07158047a ಅವಶ್ಯಂ ತು ಮಯಾ ಕಾರ್ಯಃ ಸೂತಪುತ್ರಸ್ಯ ನಿಗ್ರಹಃ|

07158047c ತತೋ ಯಾಸ್ಯಾಮ್ಯಹಂ ವೀರ ಸ್ವಯಂ ಕರ್ಣಜಿಘಾಂಸಯಾ|

07158047e ಭೀಮಸೇನೋ ಮಹಾಬಾಹುರ್ದ್ರೋಣಾನೀಕೇನ ಸಂಗತಃ||

ಸೂತಪುತ್ರನನ್ನು ನಿಗ್ರಹಿಸುವುದು ನನ್ನ ಅವಶ್ಯ ಕಾರ್ಯವಾಗಿದೆ. ಸ್ವಯಂ ನಾನೇ ವೀರ ಕರ್ಣನನ್ನು ಸಂಹರಿಸಲು ಬಯಸಿ ಹೋಗುತ್ತೇನೆ. ಮಹಾಬಾಹು ಭೀಮಸೇನನು ದ್ರೋಣನ ಸೇನೆಯನ್ನು ಎದುರಿಸಲಿ!”

07158048a ಏವಮುಕ್ತ್ವಾ ಯಯೌ ತೂರ್ಣಂ ತ್ವರಮಾಣೋ ಯುಧಿಷ್ಠಿರಃ|

07158048c ಸ ವಿಸ್ಫಾರ್ಯ ಮಹಚ್ಚಾಪಂ ಶಂಖಂ ಪ್ರಧ್ಮಾಪ್ಯ ಭೈರವಂ||

ಹೀಗೆ ಹೇಳಿ ಯುಧಿಷ್ಠಿರನು ಅವಸರದಲ್ಲಿ ಮಹಾಧನುಸ್ಸನ್ನು ಟೇಂಕರಿಸುತ್ತಾ ಭೈರವ ಶಂಖವನ್ನು ಊದುತ್ತಾ ಹೊರಟು ಹೋದನು.

07158049a ತತೋ ರಥಸಹಸ್ರೇಣ ಗಜಾನಾಂ ಚ ಶತೈಸ್ತ್ರಿಭಿಃ|

07158049c ವಾಜಿಭಿಃ ಪಂಚಸಾಹಸ್ರೈಸ್ತ್ರಿಸಾಹಸ್ರೈಃ ಪ್ರಭದ್ರಕೈಃ|

07158049e ವೃತಃ ಶಿಖಂಡೀ ತ್ವರಿತೋ ರಾಜಾನಂ ಪೃಷ್ಠತೋಽನ್ವಯಾತ್||

ಆಗ ತ್ವರೆಮಾಡಿ ರಾಜನ ಹಿಂದೆಯೇ ಶಿಖಂಡಿಯು ಸಹಸ್ರ ರಥಗಳಿಂದ, ಮುನ್ನೂರು ಆನೆಗಳಿಂದ, ಐದು ಸಾವಿರ ಕುದುರೆಗಳಿಂದ ಮತ್ತು ಮೂರು ಸಾವಿರ ಪ್ರಭದ್ರಕರಿಂದ ಅವೃತನಾಗಿ ಹೋದನು.

07158050a ತತೋ ಭೇರೀಃ ಸಮಾಜಘ್ನುಃ ಶಂಖಾನ್ದಧ್ಮುಶ್ಚ ದಂಶಿತಾಃ||

07158050c ಪಾಂಚಾಲಾಃ ಪಾಂಡವಾಶ್ಚೈವ ಯುಧಿಷ್ಠಿರಪುರೋಗಮಾಃ|

ಯುಧಿಷ್ಠಿರನ ನೇತೃತ್ವದಲ್ಲಿ ಕವಚಧಾರೀ ಪಾಂಚಾಲರು ಮತ್ತು ಪಾಂಡವರು ಭೇರಿಗಳನ್ನು ಬಾರಿಸಿದರು ಮತ್ತು ಶಂಖಗಳನ್ನೂದಿದರು.

07158051a ತತೋಽಬ್ರವೀನ್ಮಹಾಬಾಹುರ್ವಾಸುದೇವೋ ಧನಂಜಯಂ||

07158051c ಏಷ ಪ್ರಯಾತಿ ತ್ವರಿತೋ ಕ್ರೋಧಾವಿಷ್ಟೋ ಯುಧಿಷ್ಠಿರಃ|

07158051e ಜಿಘಾಂಸುಃ ಸೂತಪುತ್ರಸ್ಯ ತಸ್ಯೋಪೇಕ್ಷಾ ನ ಯುಜ್ಯತೇ||

ಆಗ ಮಹಾಬಾಹು ವಾಸುದೇವನು ಧನಂಜಯನಿಗೆ ಹೇಳಿದನು: “ಇಗೋ! ಕ್ರೋಧಾವಿಷ್ಟ ಯುಧಿಷ್ಠಿರನು ತ್ವರೆಮಾಡಿ ಸೂತಪುತ್ರನನ್ನು ಸಂಹರಿಸಲು ಬಯಸಿ ಹೋಗುತ್ತಿದ್ದಾನೆ! ಇದನ್ನು ಉಪೇಕ್ಷಿಸುವುದು ಸರಿಯಲ್ಲ!”

07158052a ಏವಮುಕ್ತ್ವಾ ಹೃಷೀಕೇಶಃ ಶೀಘ್ರಮಶ್ವಾನಚೋದಯತ್|

07158052c ದೂರಂ ಚ ಯಾತಂ ರಾಜಾನಮನ್ವಗಚ್ಚಜ್ಜನಾರ್ದನಃ||

ಹೀಗೆ ಹೇಳಿ ಹೃಷೀಕೇಶನು ಶೀಘ್ರವಾಗಿ ಕುದುರೆಗಳನ್ನು ಓಡಿಸಿದನು. ಜನಾರ್ದನನು ದೂರದಲ್ಲಿ ಹೋಗುತ್ತಿದ್ದ ರಾಜಾ ಯುಧಿಷ್ಠಿರನನ್ನೇ ಅನುಸರಿಸಿದನು.

07158053a ತಂ ದೃಷ್ಟ್ವಾ ಸಹಸಾ ಯಾಂತಂ ಸೂತಪುತ್ರಜಿಘಾಂಸಯಾ|

07158053c ಶೋಕೋಪಹತಸಂಕಲ್ಪಂ ದಹ್ಯಮಾನಮಿವಾಗ್ನಿನಾ|

07158053e ಅಭಿಗಮ್ಯಾಬ್ರವೀದ್ವ್ಯಾಸೋ ಧರ್ಮಪುತ್ರಂ ಯುಧಿಷ್ಠಿರಂ||

ಸೂತಪುತ್ರನನ್ನು ಕೊಲ್ಲಲೋಸುಗ ಅವಸರದಲ್ಲಿ ಹೋಗುತ್ತಿದ್ದ ಶೋಕದಿಂದ ಸಂಕಲ್ಪವನ್ನೇ ಕಳೆದುಕೊಂಡಿದ್ದ, ಅಗ್ನಿಯಂತೆ ದಹಿಸುತ್ತಿದ್ದ ಧರ್ಮಪುತ್ರ ಯುಧಿಷ್ಠಿರನನ್ನು ನೋಡಿ ವ್ಯಾಸನು ಬಂದು ಹೇಳಿದನು:

07158054a ಕರ್ಣಮಾಸಾದ್ಯ ಸಂಗ್ರಾಮೇ ದಿಷ್ಟ್ಯಾ ಜೀವತಿ ಫಲ್ಗುನಃ|

07158054c ಸವ್ಯಸಾಚಿವಧಾಕಾಂಕ್ಷೀ ಶಕ್ತಿಂ ರಕ್ಷಿತವಾನ್ ಹಿ ಸಃ|

“ಅದೃಷ್ಟವಶಾತ್ ಸಂಗ್ರಾಮದಲ್ಲಿ ಕರ್ಣನನ್ನು ಎದುರಿಸಿಯೂ ಫಲ್ಗುನನು ಜೀವದಿಂದಿದ್ದಾನೆ! ಏಕೆಂದರೆ ಕರ್ಣನು ಸವ್ಯಸಾಚಿಯನ್ನು ಕೊಲ್ಲಲು ಬಯಸಿ ಆ ಶಕ್ತಿಯನ್ನು ರಕ್ಷಿಸಿಕೊಂಡಿದ್ದನು.

07158055a ನ ಚಾಗಾದ್ದ್ವೈರಥಂ ಜಿಷ್ಣುರ್ದಿಷ್ಟ್ಯಾ ತಂ ಭರತರ್ಷಭ|

07158055c ಸೃಜೇತಾಂ ಸ್ಪರ್ಧಿನಾವೇತೌ ದಿವ್ಯಾನ್ಯಸ್ತ್ರಾಣಿ ಸರ್ವಶಃ||

ಭರತರ್ಷಭ! ಸೌಭಾಗ್ಯವಶಾತ್ ಜಿಷ್ಣುವು ಕರ್ಣನೊಡನೆ ದ್ವಂದ್ವರಥಯುದ್ಧದಲ್ಲಿ ತೊಡಗಲಿಲ್ಲ. ಹಾಗಾಗಿದ್ದರೆ ಪರಸ್ಪರರೊಡನೆ ಸ್ಪರ್ಧಿಸಿ ಇಬ್ಬರೂ ದಿವ್ಯಾಸ್ತ್ರಗಳನ್ನೂ ಅನ್ಯ ಅಸ್ತ್ರಗಳನ್ನೂ ಎಲ್ಲೆಡೆ ಪ್ರಯೋಗಿಸುತ್ತಿದ್ದರು.

07158056a ವಧ್ಯಮಾನೇಷು ಚಾಸ್ತ್ರೇಷು ಪೀಡಿತಃ ಸೂತನಂದನಃ|

07158056c ವಾಸವೀಂ ಸಮರೇ ಶಕ್ತಿಂ ಧ್ರುವಂ ಮುಂಚೇದ್ಯುಧಿಷ್ಠಿರ||

ಯುಧಿಷ್ಠಿರ! ಅವನ ಅಸ್ತ್ರಗಳೆಲ್ಲವೂ ನಾಶವಾಗುತ್ತಿರುವುದನ್ನು ನೋಡಿ ಪೀಡಿತ ಸೂತನಂದನು ನಿಜವಾಗಿಯೂ ಸಮರದಲ್ಲಿ ವಾಸವನಿತ್ತಿದ್ದ ಶಕ್ತಿಯನ್ನು ಪ್ರಯೋಗಿಸುತ್ತಿದ್ದನು!

07158057a ತತೋ ಭವೇತ್ತೇ ವ್ಯಸನಂ ಘೋರಂ ಭರತಸತ್ತಮ|

07158057c ದಿಷ್ಟ್ಯಾ ರಕ್ಷೋ ಹತಂ ಯುದ್ಧೇ ಸೂತಪುತ್ರೇಣ ಮಾನದ||

ಭರತಸತ್ತಮ! ಮಾನದ! ಹಾಗೇನಾದರೂ ಆಗಿದ್ದರೆ ಈಗಿನದಕ್ಕಿಂತಲೂ ಘೋರ ವ್ಯಸನವನ್ನು ನೀನು ಹೊಂದುತ್ತಿದ್ದೆಯಲ್ಲವೇ? ಒಳ್ಳೆಯದಾಯಿತು ಯುದ್ಧದಲ್ಲಿ ಸೂತಪುತ್ರನಿಂದ ರಾಕ್ಷಸನು ಹತನಾದನು!

07158058a ವಾಸವೀಂ ಕಾರಣಂ ಕೃತ್ವಾ ಕಾಲೇನಾಪಹತೋ ಹ್ಯಸೌ|

07158058c ತವೈವ ಕಾರಣಾದ್ರಕ್ಷೋ ನಿಹತಂ ತಾತ ಸಮ್ಯುಗೇ||

ಮಗೂ! ವಾಸವನಿತ್ತ ಶಕ್ತಿಯನ್ನು ಕಾರಣವನ್ನಾಗಿಟ್ಟುಕೊಂಡು ಕಾಲನೇ ಅವನನ್ನು ಅಪಹರಿಸಿದ್ದಾನೆ. ನಿನಗೋಸ್ಕರವೇ ಈ ರಾಕ್ಷಸನು ಯುದ್ಧದಲ್ಲಿ ಹತನಾದನು.

07158059a ಮಾ ಕ್ರುಧೋ ಭರತಶ್ರೇಷ್ಠ ಮಾ ಚ ಶೋಕೇ ಮನಃ ಕೃಥಾಃ|

07158059c ಪ್ರಾಣಿನಾಮಿಹ ಸರ್ವೇಷಾಮೇಷಾ ನಿಷ್ಠಾ ಯುಧಿಷ್ಠಿರ||

ಭರತಶ್ರೇಷ್ಠ! ಯುಧಿಷ್ಠಿರ! ಆದುದರಿಂದ ಕೋಪಗೊಳ್ಳಬೇಡ! ಮನಸ್ಸನ್ನು ಶೋಕದಲ್ಲಿ ತೊಡಗಿಸಬೇಡ! ಇಲ್ಲಿರುವ ಪ್ರಾಣಿಗಳೆಲ್ಲವೂ ಕೊನೆಯಲ್ಲಿ ಇದೇ ಅವಸ್ಥೆಯನ್ನು ಅನುಭವಿಸುತ್ತವೆ!

07158060a ಭ್ರಾತೃಭಿಃ ಸಹಿತಃ ಸರ್ವೈಃ ಪಾರ್ಥಿವೈಶ್ಚ ಮಹಾತ್ಮಭಿಃ|

07158060c ಕೌರವಾನ್ಸಮರೇ ರಾಜನ್ನಭಿಯುಧ್ಯಸ್ವ ಭಾರತ|

07158060e ಪಂಚಮೇ ದಿವಸೇ ಚೈವ ಪೃಥಿವೀ ತೇ ಭವಿಷ್ಯತಿ||

ರಾಜನ್! ಭಾರತ! ಸಹೋದರರೊಂದಿಗೆ ಮತ್ತು ಎಲ್ಲ ಮಹಾತ್ಮ ಪಾರ್ಥಿವರೊಂದಿಗೆ ಸೇರಿ ಸಮರದಲ್ಲಿ ಕೌರವರೊಡನೆ ಯುದ್ಧಮಾಡು. ಇಂದಿನಿಂದ ಐದನೆಯ ದಿವಸದಲ್ಲಿ ಈ ಭೂಮಿಯು ನಿನ್ನದಾಗುತ್ತದೆ!

07158061a ನಿತ್ಯಂ ಚ ಪುರುಷವ್ಯಾಘ್ರ ಧರ್ಮಮೇವ ವಿಚಿಂತಯ|

07158061c ಆನೃಶಂಸ್ಯಂ ತಪೋ ದಾನಂ ಕ್ಷಮಾಂ ಸತ್ಯಂ ಚ ಪಾಂಡವ||

ಪುರುಷವ್ಯಾಘ್ರ! ಪಾಂಡವ! ನಿತ್ಯವೂ ಧರ್ಮ, ದಯೆ, ತಪಸ್ಸು, ದಾನ, ಕ್ಷಮೆ ಮತ್ತು ಸತ್ಯಗಳ ಕುರಿತೇ ಚಿಂತಿಸು.

07158062a ಸೇವೇಥಾಃ ಪರಮಪ್ರೀತೋ ಯತೋ ಧರ್ಮಸ್ತತೋ ಜಯಃ|

07158062c ಇತ್ಯುಕ್ತ್ವಾ ಪಾಂಡವಂ ವ್ಯಾಸಸ್ತತ್ರೈವಾಂತರಧೀಯತ||

ಪರಮಪ್ರೀತನಾಗಿ ಇವುಗಳ ಸೇವೆಯಲ್ಲಿರು. ಧರ್ಮವೆಲ್ಲಿದೆಯೋ ಅಲ್ಲಿ ಜಯವಿದೆ.” ಪಾಂಡವನಿಗೆ ಹೀಗೆ ಹೇಳಿ ವ್ಯಾಸನು ಅಲ್ಲಿಯೇ ಅಂತರ್ಧಾನನಾದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ವ್ಯಾಸವಾಕ್ಯೇ ಅಷ್ಠಪಂಚಾಶದಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ವ್ಯಾಸವಾಕ್ಯ ಎನ್ನುವ ನೂರಾಐವತ್ತೆಂಟನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೬/೧೮, ಉಪಪರ್ವಗಳು-೭೦/೧೦೦, ಅಧ್ಯಾಯಗಳು-೧೧೩೫/೧೯೯೫, ಶ್ಲೋಕಗಳು-೪೦೨೫೭/೭೩೭೮೪

Related image

Comments are closed.