ದ್ರೋಣ ಪರ್ವ: ಘಟೋತ್ಕಚವಧ ಪರ್ವ
Contents
Toggle೧೪೫
ದ್ರೋಣ-ಧೃಷ್ಟದ್ಯುಮ್ನರ ಯುದ್ಧ (೧-೧೯). ಧೃಷ್ಟದ್ಯುಮ್ನನಿಂದ ದ್ರುಮಸೇನನ ವಧೆ (೨೦-೨೮). ಸಾತ್ಯಕಿ-ಕರ್ಣರ ಯುದ್ಧ (೨೯-೪೩). ಅರ್ಜುನನನ್ನು ತಡೆದರು ತಾವು ಷಡ್ರಥರು ಹಿಂದೆ ಅಭಿಮನ್ಯುವನ್ನು ಹೇಗೋ ಹಾಗೆ ಇಂದು ಸಾತ್ಯಕಿ-ಧೃಷ್ಟದ್ಯುಮ್ನರನ್ನು ಕೊಲ್ಲಬಹುದೆಂದು ಕರ್ಣನು ದುರ್ಯೋಧನನಿಗೆ ಹೇಳಿದುದು (೪೪-೫೮). ಅರ್ಜುನನನ್ನು ತಡೆಯಲು ದುರ್ಯೋಧನನು ಶಕುನಿಯನ್ನು ಕಳುಹಿಸಿದುದು (೫೯-೬೮).
07145001 ಸಂಜಯ ಉವಾಚ|
07145001a ತಸ್ಮಿನ್ಸುತುಮುಲೇ ಯುದ್ಧೇ ವರ್ತಮಾನೇ ಭಯಾವಹೇ|
07145001c ಧೃಷ್ಟದ್ಯುಮ್ನೋ ಮಹಾರಾಜ ದ್ರೋಣಂ ಏವಾಭ್ಯವರ್ತತ||
ಸಂಜಯನು ಹೇಳಿದನು: “ಮಹಾರಾಜ! ಭಯವನ್ನುಂಟುಮಾಡುವ ಆ ತುಮುಲ ಯುದ್ಧವು ನಡೆಯುತ್ತಿರಲು ಧೃಷ್ಟದ್ಯುಮ್ನನು ದ್ರೋಣನನ್ನು ಆಕ್ರಮಣಿಸಿದನು.
07145002a ಸಮ್ಮೃಜಾನೋ ಧನುಃ ಶ್ರೇಷ್ಠಂ ಜ್ಯಾಂ ವಿಕರ್ಷನ್ಪುನಃ ಪುನಃ|
07145002c ಅಭ್ಯವರ್ತತ ದ್ರೋಣಸ್ಯ ರಥಂ ರುಕ್ಮವಿಭೂಷಿತಂ||
ಶಿಂಜಿನಿಯನ್ನು ಪುನಃ ಪುನಃ ಎಳೆಯುತ್ತ ಶ್ರೇಷ್ಠ ಧನುಸ್ಸನ್ನು ಟೇಂಕರಿಸುತ್ತಾ ಅವನು ಬಂಗಾರದಿಂದ ವಿಭೂಷಿತ ದ್ರೋಣನ ರಥವನ್ನು ಆಕ್ರಮಣಿಸಿದನು.
07145003a ಧೃಷ್ಟದ್ಯುಮ್ನಂ ತದಾಯಾಂತಂ ದ್ರೋಣಸ್ಯಾಂತಚಿಕೀರ್ಷಯಾ|
07145003c ಪರಿವವ್ರುರ್ಮಹಾರಾಜ ಪಾಂಚಾಲಾಃ ಪಾಂಡವೈಃ ಸಹ||
ಮಹಾರಾಜ! ದ್ರೋಣನನ್ನು ಕೊನೆಗಾಣಿಸಲು ಬಯಸಿ ಮುಂದೆ ಬರುತ್ತಿದ್ದ ಧೃಷ್ಟದ್ಯುಮ್ನನನ್ನು ಪಾಂಡವರೊಂದಿಗೆ ಪಾಂಚಾಲರು ಸುತ್ತುವರೆದಿದ್ದರು.
07145004a ತಥಾ ಪರಿವೃತಂ ದೃಷ್ಟ್ವಾ ದ್ರೋಣಮಾಚಾರ್ಯಸತ್ತಮಂ|
07145004c ಪುತ್ರಾಸ್ತೇ ಸರ್ವತೋ ಯತ್ತಾ ರರಕ್ಷುರ್ದ್ರೋಣಮಾಹವೇ||
ಆಚಾರ್ಯಸತ್ತಮ ದ್ರೋಣನು ಹಾಗೆ ಮುತ್ತಿಗೆಹಾಕಲ್ಪಟ್ಟಿದ್ದುದನ್ನು ನೋಡಿ ನಿನ್ನ ಮಕ್ಕಳು ಯುದ್ಧದಲ್ಲಿ ದ್ರೋಣನನ್ನು ರಕ್ಷಿಸಲು ಎಲ್ಲ ಕಡೆಗಳಿಂದ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದರು.
07145005a ಬಲಾರ್ಣವೌ ತತಸ್ತೌ ತು ಸಮೇಯಾತಾಂ ನಿಶಾಮುಖೇ|
07145005c ವಾತೋದ್ಧೂತೌ ಕ್ಷುಬ್ಧಸತ್ತ್ವೌ ಭೈರವೌ ಸಾಗರಾವಿವ||
ನಿಶಾಮುಖದಲ್ಲಿ ಎದುರಾಗುತ್ತಿದ್ದ ಆ ಎರಡು ಸೇನೆಗಳು ಚಂಡಮಾರುತಕ್ಕೆ ಸಿಲುಕಿ ಅಲ್ಲೋಲಕಲ್ಲೋಲಗೊಳ್ಳುವ ಭೈರವ ಸಾಗರಗಳಂತೆ ತೋರುತ್ತಿದ್ದವು.
07145006a ತತೋ ದ್ರೋಣಂ ಮಹಾರಾಜ ಪಾಂಚಾಲ್ಯಃ ಪಂಚಭಿಃ ಶರೈಃ|
07145006c ವಿವ್ಯಾಧ ಹೃದಯೇ ತೂರ್ಣಂ ಸಿಂಹನಾದಂ ನನಾದ ಚ||
ಮಹಾರಾಜ! ಆಗ ಪಾಂಚಾಲ್ಯನು ಐದು ಶರಗಳನ್ನು ದ್ರೋಣನ ಎದೆಗೆ ಗುರಿಯಿಟ್ಟು ಹೊಡೆದು ತಕ್ಷಣವೇ ಸಿಂಹನಾದಗೈದನು.
07145007a ತಂ ದ್ರೋಣಃ ಪಂಚವಿಂಶತ್ಯಾ ವಿದ್ಧ್ವಾ ಭಾರತ ಸಮ್ಯುಗೇ|
07145007c ಚಿಚ್ಚೇದಾನ್ಯೇನ ಭಲ್ಲೇನ ಧನುರಸ್ಯ ಮಹಾಪ್ರಭಂ||
ಭಾರತ! ಸಂಯುಗದಲ್ಲಿ ದ್ರೋಣನು ಅವನನ್ನು ಇಪ್ಪತ್ತೈದು ಬಾಣಗಳಿಂದ ಹೊಡೆದು ಇನ್ನೊಂದು ಭಲ್ಲದಿಂದ ಅವನ ಮಹಾಪ್ರಭೆಯ ಧನುಸ್ಸನ್ನು ತುಂಡರಿಸಿದನು.
07145008a ಧೃಷ್ಟದ್ಯುಮ್ನಸ್ತು ನಿರ್ವಿದ್ಧೋ ದ್ರೋಣೇನ ಭರತರ್ಷಭ|
07145008c ಉತ್ಸಸರ್ಜ ಧನುಸ್ತೂರ್ಣಂ ಸಂದಶ್ಯ ದಶನಚ್ಚದಂ||
ಭರತರ್ಷಭ! ದ್ರೋಣನಿಂದ ಗಾಯಗೊಂಡ ಧೃಷ್ಟದ್ಯುಮ್ನನಾದರೋ ಹಲ್ಲುಕಚ್ಚುತ್ತಾ ಬೇಗನೇ ಆ ಧನುಸ್ಸನ್ನು ಬಿಸಾಡಿದನು.
07145009a ತತಃ ಕ್ರುದ್ಧೋ ಮಹಾರಾಜ ಧೃಷ್ಟದ್ಯುಮ್ನಃ ಪ್ರತಾಪವಾನ್|
07145009c ಆದದೇಽನ್ಯದ್ಧನುಃ ಶ್ರೇಷ್ಠಂ ದ್ರೋಣಸ್ಯಾಂತಚಿಕೀರ್ಷಯಾ||
ಮಹಾರಾಜ! ಆಗ ಪ್ರತಾಪವಾನ್ ಧೃಷ್ಟದ್ಯುಮ್ನನು ದ್ರೋಣನನ್ನು ಮುಗಿಸಿಬಿಡಲು ಬಯಸಿ ಇನ್ನೊಂದು ಶ್ರೇಷ್ಠ ಧನುಸ್ಸನ್ನು ಎತ್ತಿಕೊಂಡನು.
07145010a ವಿಕೃಷ್ಯ ಚ ಧನುಶ್ಚಿತ್ರಮಾಕರ್ಣಾತ್ಪರವೀರಹಾ|
07145010c ದ್ರೋಣಸ್ಯಾಂತಕರಂ ಘೋರಂ ವ್ಯಸೃಜತ್ಸಾಯಕಂ ತತಃ||
ಪರವೀರಹನು ಆ ಚಿತ್ರಧನುಸ್ಸನ್ನು ಆಕರ್ಣವಾಗಿ ಸೆಳೆದು ದ್ರೋಣನನ್ನು ಅಂತ್ಯಗೊಳಿಸಬಲ್ಲ ಘೋರ ಸಾಯಕವನ್ನು ಪ್ರಯೋಗಿಸಿದನು.
07145011a ಸ ವಿಸೃಷ್ಟೋ ಬಲವತಾ ಶರೋ ಘೋರೋ ಮಹಾಮೃಧೇ|
07145011c ಭಾಸಯಾಮಾಸ ತತ್ಸೈನ್ಯಂ ದಿವಾಕರ ಇವೋದಿತಃ||
ಮಹಾಮೃಧದಲ್ಲಿ ಅವನು ಪ್ರಯೋಗಿಸಿದ ಬಲವುಳ್ಳ ಆ ಘೋರ ಶರವು ಉದಯಿಸುತ್ತಿರುವ ದಿವಾಕರನಂತೆ ಸೇನೆಯನ್ನು ಬೆಳಗಿಸಿತು.
07145012a ತಂ ದೃಷ್ಟ್ವಾ ತು ಶರಂ ಘೋರಂ ದೇವಗಂಧರ್ವಮಾನವಾಃ|
07145012c ಸ್ವಸ್ತ್ಯಸ್ತು ಸಮರೇ ರಾಜನ್ದ್ರೋಣಾಯೇತ್ಯಬ್ರುವನ್ವಚಃ||
ರಾಜನ್! ಸಮರದಲ್ಲಿ ಆ ಘೋರ ಶರವನ್ನು ನೋಡಿ ದೇವ-ಗಂಧರ್ವ-ಮಾನವರು ದ್ರೋಣನಿಗೆ ಮಂಗಳವಾಗಲೆಂದು ಹೇಳಿಕೊಂಡರು.
07145013a ತಂ ತು ಸಾಯಕಮಪ್ರಾಪ್ತಮಾಚಾರ್ಯಸ್ಯ ರಥಂ ಪ್ರತಿ|
07145013c ಕರ್ಣೋ ದ್ವಾದಶಧಾ ರಾಜಂಶ್ಚಿಚ್ಚೇದ ಕೃತಹಸ್ತವತ್||
ರಾಜನ್! ಆ ಸಾಯಕವು ಆಚಾರ್ಯನ ರಥವನ್ನು ತಲುಪುವುದರೊಳಗೇ ಕರ್ಣನು ಕೈಚಳಕದಿಂದ ಅದನ್ನು ಹನ್ನೆರಡು ಭಾಗಗಳನ್ನಾಗಿ ತುಂಡರಿಸಿದನು.
07145014a ಸ ಚಿನ್ನೋ ಬಹುಧಾ ರಾಜನ್ಸೂತಪುತ್ರೇಣ ಮಾರಿಷ|
07145014c ನಿಪಪಾತ ಶರಸ್ತೂರ್ಣಂ ನಿಕೃತ್ತಃ ಕರ್ಣಸಾಯಕೈಃ||
ರಾಜನ್! ಮಾರಿಷ! ಸೂತಪುತ್ರ ಕರ್ಣನ ಸಾಯಕದಿಂದ ತುಂಡರಿಸಲ್ಪಟ್ಟ ಆ ಶರವು ತಕ್ಷಣವೇ ಅನೇಕ ಚೂರುಗಳಾಗಿ ಬಿದ್ದಿತು.
07145015a ಚಿತ್ತ್ವಾ ತು ಸಮರೇ ಬಾಣಂ ಶರೈಃ ಸಮ್ನತಪರ್ವಭಿಃ|
07145015c ಧೃಷ್ಟದ್ಯುಮ್ನಂ ರಣೇ ಕರ್ಣೋ ವಿವ್ಯಾಧ ದಶಭಿಃ ಶರೈಃ||
ಸಮರದಲ್ಲಿ ಸನ್ನತಪರ್ವ ಶರಗಳಿಂದ ಆ ಬಾಣವನ್ನು ಕತ್ತರಿಸಿ ಕರ್ಣನು ರಣದಲ್ಲಿ ಧೃಷ್ಟದ್ಯುಮ್ನನನ್ನು ಹತ್ತು ಶರಗಳಿಂದ ಹೊಡೆದನು.
07145016a ಪಂಚಭಿರ್ದ್ರೋಣಪುತ್ರಸ್ತು ಸ್ವಯಂ ದ್ರೋಣಶ್ಚ ಸಪ್ತಭಿಃ|
07145016c ಶಲ್ಯಶ್ಚ ನವಭಿರ್ಬಾಣೈಸ್ತ್ರಿಭಿದುಃಶಾಸನಸ್ತಥಾ||
07145017a ದುರ್ಯೋಧನಶ್ಚ ವಿಂಶತ್ಯಾ ಶಕುನಿಶ್ಚಾಪಿ ಪಂಚಭಿಃ|
07145017c ಪಾಂಚಾಲ್ಯಂ ತ್ವರಿತಾವಿಧ್ಯನ್ಸರ್ವ ಏವ ಮಹಾರಥಾಃ||
ಆಗ ತ್ವರೆಮಾಡಿ ಎಲ್ಲ ಮಹಾರಥರೂ ಪಾಂಚಾಲ್ಯನನ್ನು ಪ್ರಹರಿಸಿದರು: ದ್ರೋಣಪುತ್ರನು ಐದರಿಂದ, ದ್ರೋಣನು ಏಳರಿಂದ, ಶಲ್ಯನು ಒಂಭತ್ತು ಬಾಣಗಳಿಂದ, ದುಃಶಾಸನನು ಮೂರರಿಂದ, ದುರ್ಯೋಧನನನು ಇಪ್ಪತ್ತರಿಂದ, ಮತ್ತು ಶಕುನಿಯು ಐದರಿಂದ ಹೊಡೆದರು.
07145018a ಸ ವಿದ್ಧಃ ಸಪ್ತಭಿರ್ವೀರೈರ್ದ್ರೋಣತ್ರಾಣಾರ್ಥಮಾಹವೇ|
07145018c ಸರ್ವಾನಸಂಭ್ರಮಾದ್ರಾಜನ್ಪ್ರತ್ಯವಿಧ್ಯತ್ತ್ರಿಭಿಸ್ತ್ರಿಭಿಃ|
07145018e ದ್ರೋಣಂ ದ್ರೌಣಿಂ ಚ ಕರ್ಣಂ ಚ ವಿವ್ಯಾಧ ತವ ಚಾತ್ಮಜಂ||
ರಾಜನ್! ಯುದ್ಧದಲ್ಲಿ ದ್ರೋಣನ ಪ್ರಾಣವನ್ನು ರಕ್ಷಿಸುತ್ತಿದ್ದ ಆ ಏಳು ವೀರರಿಂದ ಪ್ರಹರಿಸಲ್ಪಟ್ಟ ಧೃಷ್ಟದ್ಯುಮ್ನನು ಸ್ವಲ್ಪವೂ ಗಾಬರಿಗೊಳ್ಳದೇ ಅವರೆಲ್ಲರನ್ನೂ ಮೂರು ಮೂರು ಬಾಣಗಳಿಂದ ಪ್ರತಿಯಾಗಿ ಪ್ರಹರಿಸಿದನು. ಅವನು ದ್ರೋಣನನ್ನು, ದ್ರೌಣಿಯನ್ನು, ಕರ್ಣನನ್ನು ಮತ್ತು ನಿನ್ನ ಮಗನನ್ನೂ ಹೊಡೆದನು.
07145019a ತೇ ವಿದ್ಧ್ವಾ ಧನ್ವಿನಾ ತೇನ ಧೃಷ್ಟದ್ಯುಮ್ನಂ ಪುನರ್ಮೃಧೇ|
07145019c ವಿವ್ಯಧುಃ ಪಂಚಭಿಸ್ತೂರ್ಣಂ ಏಕೈಕೋ ರಥಿನಾಂ ವರಃ||
ಯುದ್ಧದಲ್ಲಿ ಧನ್ವಿ ಧೃಷ್ಟದ್ಯುಮ್ನನಿಂದ ಪ್ರಹರಿಸಲ್ಪಟ್ಟ ಆ ಒಬ್ಬೊಬ್ಬ ರಥಶ್ರೇಷ್ಠರೂ ಪುನಃ ಬೇಗನೆ ಧೃಷ್ಟದ್ಯುಮ್ನನನ್ನು ಐದು ಬಾಣಗಳಿಂದ ಹೊಡೆದರು.
07145020a ದ್ರುಮಸೇನಸ್ತು ಸಂಕ್ರುದ್ಧೋ ರಾಜನ್ವಿವ್ಯಾಧ ಪತ್ರಿಣಾ|
07145020c ತ್ರಿಭಿಶ್ಚಾನ್ಯೈಃ ಶರೈಸ್ತೂರ್ಣಂ ತಿಷ್ಠ ತಿಷ್ಠೇತಿ ಚಾಬ್ರವೀತ್||
ರಾಜನ್! ದ್ರುಮಸೇನನಾದರೋ ಸಂಕ್ರುದ್ಧನಾಗಿ ಧೃಷ್ಟದ್ಯುಮ್ನನನ್ನು ಪತ್ರಿಗಳಿಂದ ಹೊಡೆದನು. ತಕ್ಷಣವೇ ಇತರ ಅನ್ಯ ಶರಗಳಿಂದ ಹೊಡೆದು ನಿಲ್ಲು ನಿಲ್ಲೆಂದು ಹೇಳಿದನು.
07145021a ಸ ತು ತಂ ಪ್ರತಿವಿವ್ಯಾಧ ತ್ರಿಭಿಸ್ತೀಕ್ಷ್ಣೈರಜಿಹ್ಮಗೈಃ|
07145021c ಸ್ವರ್ಣಪುಂಖೈಃ ಶಿಲಾಧೌತೈಃ ಪ್ರಾಣಾಂತಕರಣೈರ್ಯುಧಿ||
ಧೃಷ್ಟದ್ಯುಮ್ನನಾದರೋ ಅವನನ್ನು ಯುದ್ಧದಲ್ಲಿ ಪ್ರಾಣಗಳನ್ನು ಅಂತ್ಯಗೊಳಿಸಬಲ್ಲ ಸ್ವರ್ಣಪುಂಖಗಳ ಶಿಲೆಗೆ ಹಚ್ಚಿ ಮೊನಚುಮಾಡಲ್ಪಟ್ಟ ಮೂರು ತೀಕ್ಷ್ಣ ಜಿಹ್ಮಗಗಳಿಂದ ತಿರುಗಿ ಹೊಡೆದನು.
07145022a ಭಲ್ಲೇನಾನ್ಯೇನ ತು ಪುನಃ ಸುವರ್ಣೋಜ್ಜ್ವಲಕುಂಡಲಂ||
07145022c ಉನ್ಮಮಾಥ ಶಿರಃ ಕಾಯಾದ್ದ್ರುಮಸೇನಸ್ಯ ವೀರ್ಯವಾನ್|
ಪುನಃ ಅನ್ಯ ಭಲ್ಲದಿಂದ ವೀರ್ಯವಾನ್ ದ್ರುಮಸೇನನ ಸುವರ್ಣದಂತೆ ಬೆಳಗುತ್ತಿದ್ದ ಕುಂಡಲಗಳನ್ನು ಧರಿಸಿದ್ದ ಶಿರವನ್ನು ಕಾಯದಿಂದ ಕತ್ತರಿಸಿದನು.
07145023a ತಚ್ಚಿರೋ ನ್ಯಪತದ್ಭೂಮೌ ಸಂದಷ್ಟೌಷ್ಠಪುಟಂ ರಣೇ|
07145023c ಮಹಾವಾತಸಮುದ್ಧೂತಂ ಪಕ್ವಂ ತಾಲಫಲಂ ಯಥಾ||
ಭಿರುಗಾಳಿಗೆ ಸಿಲುಕಿದ್ದ ಪಕ್ವ ತಾಳೆಯ ಫಲವು ಹೇಗೋ ಹಾಗೆ ಅವುಡುಗಚ್ಚಿದ್ದ ಆ ನೃಪತಿಯ ಶಿರವು ರಣಭೂಮಿಯ ಮೇಲೆ ಬಿದ್ದಿತು.
07145024a ತಾಂಶ್ಚ ವಿದ್ಧ್ವಾ ಪುನರ್ವೀರಾನ್ವೀರಃ ಸುನಿಶಿತೈಃ ಶರೈಃ|
07145024c ರಾಧೇಯಸ್ಯಾಚ್ಚಿನದ್ಭಲ್ಲೈಃ ಕಾರ್ಮುಕಂ ಚಿತ್ರಯೋಧಿನಃ||
ವೀರ ಧೃಷ್ಟದ್ಯುಮ್ನನು ಆ ವೀರರನ್ನು ಪುನಃ ನಿಶಿತ ಶರಗಳಿಂದ ಹೊಡೆದು ಭಲ್ಲಗಳಿಂದ ಚಿತ್ರಯೋಧಿ ರಾಧೇಯನ ಕಾರ್ಮುಕವನ್ನು ಕತ್ತರಿಸಿದನು.
07145025a ನ ತು ತನ್ಮಮೃಷೇ ಕರ್ಣೋ ಧನುಷಶ್ಚೇದನಂ ತಥಾ|
07145025c ನಿಕರ್ತನಮಿವಾತ್ಯುಗ್ರೋ ಲಾಂಗೂಲಸ್ಯ ಯಥಾ ಹರಿಃ||
ಸಿಂಹವು ತನ್ನ ಬಾಲವು ಕತ್ತರಿಸಿದುದನ್ನು ಸಹಿಸಿಕೊಳ್ಳದಂತೆ ಕರ್ಣನು ತನ್ನ ಧನುಸ್ಸು ತುಂಡಾಗಿದ್ದುದನ್ನು ಸಹಿಸಿಕೊಳ್ಳಲಿಲ್ಲ.
07145026a ಸೋಽನ್ಯದ್ಧನುಃ ಸಮಾದಾಯ ಕ್ರೋಧರಕ್ತೇಕ್ಷಣಃ ಶ್ವಸನ್|
07145026c ಅಭ್ಯವರ್ಷಚ್ಚರೌಘೈಸ್ತಂ ಧೃಷ್ಟದ್ಯುಮ್ನಂ ಮಹಾಬಲಂ||
ಅವನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ದೀರ್ಘ ಉಸಿರುಬಿಡುತ್ತಾ ಮಹಾಬಲ ಧೃಷ್ಟದ್ಯುಮ್ನನ ಮೇಲೆ ಶರಗಳ ಮಳೆಯನ್ನೇ ಸುರಿಸಿದನು.
07145027a ದೃಷ್ಟ್ವಾ ತು ಕರ್ಣಂ ಸಂರಬ್ಧಂ ತೇ ವೀರಾಃ ಷಡ್ರಥರ್ಷಭಾಃ|
07145027c ಪಾಂಚಾಲ್ಯಪುತ್ರಂ ತ್ವರಿತಾಃ ಪರಿವವ್ರುರ್ ಜಿಘಾಂಸಯಾ||
ಕರ್ಣನು ಕುಪಿತನಾಗಿರುವುದನ್ನು ಕಂಡು ಆ ಆರು ವೀರ ರಥರ್ಷಭರು (ದ್ರೋಣ, ಅಶ್ವತ್ಥಾಮ, ದುರ್ಯೋಧನ, ಶಲ್ಯ, ದುಃಶಾಸನ ಮತ್ತು ಶಕುನಿ) ತ್ವರೆಮಾಡಿ ಸಂಹರಿಸಲು ಬಯಸಿ ಪಾಂಚಾಲ್ಯಪುತ್ರನನ್ನು ಸುತ್ತುವರೆದರು.
07145028a ಷಣ್ಣಾಂ ಯೋಧಪ್ರವೀರಾಣಾಂ ತಾವಕಾನಾಂ ಪುರಸ್ಕೃತಂ|
07145028c ಮೃತ್ಯೋರಾಸ್ಯಮನುಪ್ರಾಪ್ತಂ ಧೃಷ್ಟದ್ಯುಮ್ನಮಮಂಸ್ಮಹಿ||
ನಿನ್ನಕಡೆಯ ಆ ಆರು ಯೋಧಪ್ರವೀಣರಿಂದ ಎದುರಿಸಲ್ಪಟ್ಟಿದ್ದ ಧೃಷ್ಟದ್ಯುಮ್ನನು ಮೃತ್ಯುವಿನ ಬಾಗಿಲನ್ನೇ ತಲುಪಿದ್ದಾನೆಂದು ನಮಗನ್ನಿಸಿತ್ತು.
07145029a ಏತಸ್ಮಿನ್ನೇವ ಕಾಲೇ ತು ದಾಶಾರ್ಹೋ ವಿಕಿರಂ ಶರಾನ್|
07145029c ಧೃಷ್ಟದ್ಯುಮ್ನಂ ಪರಾಕ್ರಾಂತಂ ಸಾತ್ಯಕಿಃ ಪ್ರತ್ಯಪದ್ಯತ||
ಇದೇ ಸಮಯದಲ್ಲಿ ಶರಗಳನ್ನು ಚೆಲ್ಲುತ್ತಾ ದಾಶಾರ್ಹ ಸಾತ್ಯಕಿಯು ಪರಾಕ್ರಾಂತ ಧೃಷ್ಟದ್ಯುಮ್ನನನ್ನು ಸಮೀಪಿಸಿದನು.
07145030a ತಮಾಯಾಂತಂ ಮಹೇಷ್ವಾಸಂ ಸಾತ್ಯಕಿಂ ಯುದ್ಧದುರ್ಮದಂ|
07145030c ರಾಧೇಯೋ ದಶಭಿರ್ಬಾಣೈಃ ಪ್ರತ್ಯವಿಧ್ಯದಜಿಹ್ಮಗೈಃ||
ಮುಂದುವರೆಯುತ್ತಿದ್ದ ಯುದ್ಧದುರ್ಮದ ಮಹೇಷ್ವಾಸ ಸಾತ್ಯಕಿಯನ್ನು ರಾಧೇಯನು ಹತ್ತು ಜಿಹ್ಮಗ ಬಾಣಗಳಿಂದ ಹೊಡೆದನು.
07145031a ತಂ ಸಾತ್ಯಕಿರ್ಮಹಾರಾಜ ವಿವ್ಯಾಧ ದಶಭಿಃ ಶರೈಃ
07145031c ಪಶ್ಯತಾಂ ಸರ್ವವೀರಾಣಾಂ ಮಾ ಗಾಸ್ತಿಷ್ಠೇತಿ ಚಾಬ್ರವೀತ್||
ಮಹಾರಾಜ! ಅವನನ್ನು ಸಾತ್ಯಕಿಯು ಹತ್ತು ಶರಗಳಿಂದ ಹೊಡೆದು ಸರ್ವ ವೀರರೂ ನೋಡುತ್ತಿದ್ದಂತೆಯೇ “ಹೋಗಬೇಡ! ನಿಲ್ಲು!” ಎಂದು ಹೇಳಿದನು.
07145032a ಸ ಸಾತ್ಯಕೇಸ್ತು ಬಲಿನಃ ಕರ್ಣಸ್ಯ ಚ ಮಹಾತ್ಮನಃ|
07145032c ಆಸೀತ್ಸಮಾಗಮೋ ಘೋರೋ ಬಲಿವಾಸವಯೋರಿವ||
ಬಲಶಾಲೀ ಸಾತ್ಯಕಿ ಮತ್ತು ಮಹಾತ್ಮ ಕರ್ಣರ ಆ ಸಮಾಗಮವು ಬಲಿ-ವಾಸವರ ಸಮಾಗಮದಂತೆ ಘೋರವಾಗಿತ್ತು.
07145033a ತ್ರಾಸಯಂಸ್ತಲಘೋಷೇಣ ಕ್ಷತ್ರಿಯಾನ್ ಕ್ಷತ್ರಿಯರ್ಷಭಃ|
07145033c ರಾಜೀವಲೋಚನಂ ಕರ್ಣಂ ಸಾತ್ಯಕಿಃ ಪ್ರತ್ಯವಿಧ್ಯತ||
ಚಪ್ಪಾಳೆ ಘೋಷದಿಂದ ಕ್ಷತ್ರಿಯರನ್ನು ಬೆದರಿಸುತ್ತಾ ಕ್ಷತ್ರಿಯರ್ಷಭ ಸಾತ್ಯಕಿಯು ರಾಜೀವಲೋಚನ ಕರ್ಣನನ್ನು ತಿರುಗಿ ಹೊಡೆದನು.
07145034a ಕಂಪಯನ್ನಿವ ಘೋಷೇಣ ಧನುಷೋ ವಸುಧಾಂ ಬಲೀ|
07145034c ಸೂತಪುತ್ರೋ ಮಹಾರಾಜ ಸಾತ್ಯಕಿಂ ಪ್ರತ್ಯಯೋಧಯತ್||
ಮಹಾರಾಜ! ಧನುರ್ಘೋಷದಿಂದ ವಸುಧೆಯನ್ನು ನಡುಗಿಸುವಂತೆ ಬಲಶಾಲೀ ಸೂತಪುತ್ರನು ಸಾತ್ಯಕಿಯನ್ನು ತಿರುಗಿ ಹೊಡೆದನು.
07145035a ವಿಪಾಠಕರ್ಣಿನಾರಾಚೈರ್ವತ್ಸದಂತೈಃ ಕ್ಷುರೈರಪಿ|
07145035c ಕರ್ಣಃ ಶರಶತೈಶ್ಚಾಪಿ ಶೈನೇಯಂ ಪ್ರತ್ಯವಿಧ್ಯತ||
ವಿಪಾಠ, ಕರ್ಣಿ, ನಾರಾಚ, ವತ್ಸದಂತ ಮತ್ತು ಕ್ಷುರಗಳೆಂಬ ನೂರಾರು ಶರಗಳಿಂದ ಕರ್ಣನು ಶೈನೇಯನನ್ನು ಪ್ರಹರಿಸಿದನು.
07145036a ತಥೈವ ಯುಯುಧಾನೋಽಪಿ ವೃಷ್ಣೀನಾಂ ಪ್ರವರೋ ರಥಃ|
07145036c ಅಭ್ಯವರ್ಷಚ್ಚರೈಃ ಕರ್ಣಂ ತದ್ಯುದ್ಧಮಭವತ್ಸಮಂ||
ಹಾಗೆಯೇ ವೃಷ್ಣಿಶ್ರೇಷ್ಠ ಮಹಾರಥ ಯುಯುಧಾನನು ಕೂಡ ಶರಗಳನ್ನು ಸುರಿಸಿ ಕರ್ಣನನ್ನು ಮುಚ್ಚಿಬಿಟ್ಟನು. ಆ ಯುದ್ಧವು ಸರಿಸಮನಾಗಿತ್ತು.
07145037a ತಾವಕಾಶ್ಚ ಮಹಾರಾಜ ಕರ್ಣಪುತ್ರಶ್ಚ ದಂಶಿತಃ|
07145037c ಸಾತ್ಯಕಿಂ ವಿವ್ಯಧುಸ್ತೂರ್ಣಂ ಸಮಂತಾನ್ನಿಶಿತೈಃ ಶರೈಃ||
ಮಹಾರಾಜ! ತಕ್ಷಣ ನಿನ್ನವರೂ ಕವಚಧಾರೀ ಕರ್ಣಪುತ್ರನೂ ಎಲ್ಲಕಡೆಗಳಿಂದ ಸಾತ್ಯಕಿಯನ್ನು ನಿಶಿತ ಶರಗಳಿಂದ ಹೊಡೆದರು.
07145038a ಅಸ್ತ್ರೈರಸ್ತ್ರಾಣಿ ಸಂವಾರ್ಯ ತೇಷಾಂ ಕರ್ಣಸ್ಯ ಚಾಭಿಭೋ|
07145038c ಅವಿಧ್ಯತ್ಸಾತ್ಯಕಿಃ ಕ್ರುದ್ಧೋ ವೃಷಸೇನಂ ಸ್ತನಾಂತರೇ||
ವಿಭೋ! ಸಾತ್ಯಕಿಯು ಕರ್ಣನ ಮತ್ತು ಅವರ ಅಸ್ತ್ರಗಳನ್ನು ಅಸ್ತ್ರಗಳಿಂದಲೇ ನಾಶಗೊಳಿಸಿ ಕ್ರುದ್ಧನಾಗಿ ವೃಷಸೇನನ ವಕ್ಷಸ್ಥಳಕ್ಕೆ ಹೊಡೆದನು.
07145039a ತೇನ ಬಾಣೇನ ನಿರ್ವಿದ್ಧೋ ವೃಷಸೇನೋ ವಿಶಾಂ ಪತೇ|
07145039c ನ್ಯಪತತ್ಸ ರಥೇ ಮೂಢೋ ಧನುರುತ್ಸೃಜ್ಯ ವೀರ್ಯವಾನ್||
ವಿಶಾಂಪತೇ! ಅವನ ಬಾಣದಿಂದ ಗಾಯಗೊಂಡ ವೀರ್ಯವಾನ್ ವೃಷಸೇನನು ಮೂರ್ಛಿತನಾಗಿ ಧನುಸ್ಸನ್ನು ಬಿಸುಟು ರಥದಮೇಲೆ ಕುಸಿದುಬಿದ್ದನು.
07145040a ತತಃ ಕರ್ಣೋ ಹತಂ ಮತ್ವಾ ವೃಷಸೇನಂ ಮಹಾರಥಃ|
07145040c ಪುತ್ರಶೋಕಾಭಿಸಂತಪ್ತಃ ಸಾತ್ಯಕಿಂ ಪ್ರತ್ಯಪೀಡಯತ್||
ಆಗ ವೃಷಸೇನನು ಹತನಾದನೆಂದೇ ತಿಳಿದು ಪುತ್ರಶೋಕದಿಂದ ಸಂತಪ್ತನಾದ ಮಹಾರಥ ಕರ್ಣನು ಸಾತ್ಯಕಿಯನ್ನು ತಿರುಗಿ ಪೀಡಿಸಿದನು.
07145041a ಪೀಡ್ಯಮಾನಸ್ತು ಕರ್ಣೇನ ಯುಯುಧಾನೋ ಮಹಾರಥಃ|
07145041c ವಿವ್ಯಾಧ ಬಹುಭಿಃ ಕರ್ಣಂ ತ್ವರಮಾಣಃ ಪುನಃ ಪುನಃ||
ಕರ್ಣನಿಂದ ಪೀಡಿಸಲ್ಪಟ್ಟ ಮಹಾರಥ ಯುಯುಧಾನನು ತ್ವರೆಮಾಡಿ ಕರ್ಣನನ್ನು ಅನೇಕ ಬಾರಿ ಪುನಃ ಪುನಃ ಪ್ರಹರಿಸಿದನು.
07145042a ಸ ಕರ್ಣಂ ದಶಭಿರ್ವಿದ್ಧ್ವಾ ವೃಷಸೇನಂ ಚ ಸಪ್ತಭಿಃ|
07145042c ಸಹಸ್ತಾವಾಪಧನುಷೀ ತಯೋಶ್ಚಿಚ್ಚೇದ ಸಾತ್ವತಃ||
ಸಾತ್ವತನು ಕರ್ಣನನ್ನು ಹತ್ತರಿಂದ ಮತ್ತು ವೃಷಸೇನನನ್ನು ಏಳರಿಂದ ಹೊಡೆದು ಅವರ ಕೈಚೀಲಗಳನ್ನೂ ಧನುಸ್ಸುಗಳನ್ನೂ ಕತ್ತರಿಸಿದನು.
07145043a ತಾವನ್ಯೇ ಧನುಷೀ ಸಜ್ಯೇ ಕೃತ್ವಾ ಶತ್ರುಭಯಂಕರೇ|
07145043c ಯುಯುಧಾನಮವಿಧ್ಯೇತಾಂ ಸಮಂತಾನ್ನಿಶಿತೈಃ ಶರೈಃ||
ಅವರು ಶತ್ರುಭಯಂಕರ ಅನ್ಯ ಧನುಸ್ಸುಗಳನ್ನು ಸಜ್ಜುಗೊಳಿಸಿ ಎಲ್ಲಕಡೆಗಳಿಂದ ನಿಶಿತ ಶರಗಳಿಂದ ಯುಯುಧಾನನನ್ನು ಪ್ರಹರಿಸಿದರು.
07145044a ವರ್ತಮಾನೇ ತು ಸಂಗ್ರಾಮೇ ತಸ್ಮಿನ್ವೀರವರಕ್ಷಯೇ|
07145044c ಅತೀವ ಶುಶ್ರುವೇ ರಾಜನ್ಗಾಂಡೀವಸ್ಯ ಮಹಾಸ್ವನಃ||
ರಾಜನ್! ಆ ವೀರವರಕ್ಷಯ ಸಂಗ್ರಾಮವು ನಡೆಯುತ್ತಿರಲು ನಾವು ಗಾಂಡೀವದ ಅತೀವ ಮಹಾಧ್ವನಿಯನ್ನು ಕೇಳಿದೆವು.
07145045a ಶ್ರುತ್ವಾ ತು ರಥನಿರ್ಘೋಷಂ ಗಾಂಡೀವಸ್ಯ ಚ ನಿಸ್ವನಂ|
07145045c ಸೂತಪುತ್ರೋಽಬ್ರವೀದ್ರಾಜನ್ದುರ್ಯೋಧನಮಿದಂ ವಚಃ||
ರಾಜನ್! ರಥನಿರ್ಘೋಷವನ್ನೂ ಗಾಂಡೀವ ನಿಸ್ವನವನ್ನೂ ಕೇಳಿದ ಸೂತಪುತ್ರನು ದುರ್ಯೋಧನನಿಗೆ ಹೇಳಿದನು:
07145046a ಏಷ ಸರ್ವಾಂ ಶಿಬೀನ್ ಹತ್ವಾ ಮುಖ್ಯಶಶ್ಚ ನರರ್ಷಭಾನ್|
07145046c ಪೌರವಾಂಶ್ಚ ಮಹೇಷ್ವಾಸಾನ್ಗಾಂಡೀವನಿನದೋ ಮಹಾನ್||
07145047a ಶ್ರೂಯತೇ ರಥಘೋಷಶ್ಚ ವಾಸವಸ್ಯೇವ ನರ್ದತಃ|
07145047c ಕರೋತಿ ಪಾಂಡವೋ ವ್ಯಕ್ತಂ ಕರ್ಮೌಪಯಿಕಮಾತ್ಮನಃ||
“ಇಗೋ! ಸರ್ವ ಶಿಬಿಗಳನ್ನೂ, ನರರ್ಷಭ ಮುಖ್ಯರನ್ನೂ, ಮಹೇಷ್ವಾಸ ಪೌರವರನ್ನೂ ಸಂಹರಿಸಿ ಅರ್ಜುನನು ಗರ್ಜಿಸುತ್ತಿರುವುದು, ಗಾಂಡೀವವನ್ನು ಟೇಂಕರಿಸುವುದು ಮತ್ತು ಅವನ ರಥಘೋಷವು ಕೇಳಿಬರುತ್ತಿದೆ. ಪಾಂಡವನು ತನಗೆ ಅನುರೂಪ ಕರ್ಮವನ್ನು ಮಾಡಿದ್ದಾನೆಂದು ವ್ಯಕ್ತವಾಗುತ್ತಿದೆ.
07145048a ಏಷಾ ವಿದೀರ್ಯತೇ ರಾಜನ್ಬಹುಧಾ ಭಾರತೀ ಚಮೂಃ|
07145048c ವಿಪ್ರಕೀರ್ಣಾನ್ಯನೀಕಾನಿ ನಾವತಿಷ್ಠಂತಿ ಕರ್ಹಿ ಚಿತ್||
ರಾಜನ್! ಇವನು ಭಾರತೀ ಸೇನೆಯನ್ನು ಅನೇಕ ಭಾಗಗಳಾಗಿ ಸೀಳುತ್ತಿದ್ದಾನೆ. ಚದುರಿಹೋದ ಸೇನೆಗಳು ಎಂದೂ ಯುದ್ಧದಲ್ಲಿ ನಿಲ್ಲುವುದಿಲ್ಲ.
07145049a ವಾತೇನೇವ ಸಮುದ್ಧೂತಮಭ್ರಜಾಲಂ ವಿದೀರ್ಯತೇ|
07145049c ಸವ್ಯಸಾಚಿನಮಾಸಾದ್ಯ ಭಿನ್ನಾ ನೌರಿವ ಸಾಗರೇ||
ಸವ್ಯಸಾಚಿಯ ಧಾಳಿಯಿಂದ ಚಂಡಮಾರುತಕ್ಕೆ ಸಿಲುಕಿದ ಸಾಗರದಂತೆ ಅಲ್ಲೋಲಕಲ್ಲೋಲಗೊಂಡ ಸೇನೆಯು ಸಾಗರದಲ್ಲಿ ತುಂಡಾದ ನೌಕೆಯಂತೆ ಕಾಣುತ್ತಿದೆ.
07145050a ದ್ರವತಾಂ ಯೋಧಮುಖ್ಯಾನಾಂ ಗಾಂಡೀವಪ್ರೇಷಿತೈಃ ಶರೈಃ|
07145050c ವಿದ್ಧಾನಾಂ ಶತಶೋ ರಾಜಂ ಶ್ರೂಯತೇ ನಿನದೋ ಮಹಾನ್|
ರಾಜನ್! ಗಾಂಡೀವದಿಂದ ಹೊರಬಂದ ಶರಗಳಿಂದ ಹೊಡೆಯಲ್ಪಟ್ಟ ಯೋಧಮುಖ್ಯರು ಓಡಿ ಹೋಗುತ್ತಿರುವ ಮಹಾ ನಿನಾದವು ಕೇಳಿಬರುತ್ತಿದೆ.
07145050e ನಿಶೀಥೇ ರಾಜಶಾರ್ದೂಲ ಸ್ತನಯಿತ್ನೋರಿವಾಂಬರೇ||
07145051a ಹಾಹಾಕಾರರವಾಂಶ್ಚೈವ ಸಿಂಹನಾದಾಂಶ್ಚ ಪುಷ್ಕಲಾನ್|
07145051c ಶೃಣು ಶಬ್ದಾನ್ಬಹುವಿಧಾನರ್ಜುನಸ್ಯ ರಥಂ ಪ್ರತಿ||
ರಾಜಶಾರ್ದೂಲ! ಈ ರಾತ್ರಿಯಲ್ಲಿ ಆಕಾಶದಲ್ಲುಂಟಾಗುವ ಮೇಘಗಳ ಗುಡುಗಿನಂತೆ ಅರ್ಜುನನ ರಥದ ಬಳಿ ಕೇಳಿಬರುತ್ತಿರುವ ಹಾಹಾಕಾರ ಕೂಗುಗಳು ಮತ್ತು ಪುಷ್ಕಲ ಸಿಂಹನಾದಗಳನ್ನು ಕೇಳು.
07145052a ಅಯಂ ಮಧ್ಯೇ ಸ್ಥಿತೋಽಸ್ಮಾಕಂ ಸಾತ್ಯಕಿಃ ಸಾತ್ವತಾಧಮಃ|
07145052c ಇಹ ಚೇಲ್ಲಭ್ಯತೇ ಲಕ್ಷ್ಯಂ ಕೃತ್ಸ್ನಾಂ ಜೇಷ್ಯಾಮಹೇ ಪರಾನ್||
ನಮ್ಮ ಮಧ್ಯೆ ಈ ಸಾತ್ವತಾಧಮ ಸಾತ್ಯಕಿಯು ನಿಂತಿದ್ದಾನೆ. ಇವನು ನಮ್ಮ ಲಕ್ಷ್ಯಕ್ಕೆ ಸಿಗುತ್ತಾನಾದರೆ ಶತ್ರುಗಳೆಲ್ಲರನ್ನೂ ನಾವು ಜಯಿಸಬಲ್ಲೆವು.
07145053a ಏಷ ಪಾಂಚಾಲರಾಜಸ್ಯ ಪುತ್ರೋ ದ್ರೋಣೇನ ಸಂಗತಃ|
07145053c ಸರ್ವತಃ ಸಂವೃತೋ ಯೋಧೈ ರಾಜನ್ಪುರುಷಸತ್ತಮೈಃ||
ರಾಜನ್! ಈ ಪಾಂಚಾಲರಾಜನ ಪುತ್ರನು ಸುತ್ತಲೂ ಪುರುಷಸತ್ತಮ ಯೋಧರಿಂದ ಸುತ್ತುವರೆಯಲ್ಪಟ್ಟ ದ್ರೋಣನೊಂದಿಗೆ ಯುದ್ಧಮಾಡುತ್ತಿದ್ದಾನೆ.
07145054a ಸಾತ್ಯಕಿಂ ಯದಿ ಹನ್ಯಾಮೋ ಧೃಷ್ಟದ್ಯುಮ್ನಂ ಚ ಪಾರ್ಷತಂ|
07145054c ಅಸಂಶಯಂ ಮಹಾರಾಜ ಧ್ರುವೋ ನೋ ವಿಜಯೋ ಭವೇತ್||
ಮಹಾರಾಜ! ಒಂದುವೇಳೆ ಸಾತ್ಯಕಿಯನ್ನು ಮತ್ತು ಪಾರ್ಷತ ಧೃಷ್ಟದ್ಯುಮ್ನನನ್ನು ನಾವು ಸಂಹರಿಸಿದರೆ ನಮ್ಮ ವಿಜಯವು ನಿಶ್ಚಯ. ಅದರಲ್ಲಿ ಸಂಶಯವೇ ಇಲ್ಲ.
07145055a ಸೌಭದ್ರವದಿಮೌ ವೀರೌ ಪರಿವಾರ್ಯ ಮಹಾರಥೌ|
07145055c ಪ್ರಯತಾಮೋ ಮಹಾರಾಜ ನಿಹಂತುಂ ವೃಷ್ಣಿಪಾರ್ಷತೌ||
ಮಹಾರಾಜ! ಸೌಭದ್ರನನ್ನು ಹೇಗೋ ಹಾಗೆ ಈ ಇಬ್ಬರು ವೃಷ್ಣಿ-ಪಾರ್ಷತ ಮಹಾರಥರನ್ನೂ ಸುತ್ತುವರೆದು ಕೊಲ್ಲಲು ಪ್ರಯತ್ನಿಸೋಣ.
07145056a ಸವ್ಯಸಾಚೀ ಪುರೋಽಭ್ಯೇತಿ ದ್ರೋಣಾನೀಕಾಯ ಭಾರತ|
07145056c ಸಂಸಕ್ತಂ ಸಾತ್ಯಕಿಂ ಜ್ಞಾತ್ವಾ ಬಹುಭಿಃ ಕುರುಪುಂಗವೈಃ||
ಭಾರತ! ಸಾತ್ಯಕಿಯು ಅನೇಕ ಕುರುಪುಂಗವರಿಂದ ಸುತ್ತುವರೆಯಲ್ಪಟ್ಟಿದ್ದಾನೆ ಎಂದು ತಿಳಿದ ಕೂಡಲೇ ಸವ್ಯಸಾಚಿಯು ದ್ರೋಣನ ಸೇನೆಯ ಬಳಿ ಮುಂದುವರೆದು ಬರುತ್ತಾನೆ.
07145057a ತತ್ರ ಗಚ್ಚಂತು ಬಹವಃ ಪ್ರವರಾ ರಥಸತ್ತಮಾಃ|
07145057c ಯಾವತ್ಪಾರ್ಥೋ ನ ಜಾನಾತಿ ಸಾತ್ಯಕಿಂ ಬಹುಭಿರ್ವೃತಂ||
ಸಾತ್ಯಕಿಯು ಅನೇಕರಿಂದ ಸುತ್ತುವರೆಯಲ್ಪಟ್ಟಿದ್ದಾನೆ ಎಂದು ಪಾರ್ಥನಿಗೆ ತಿಳಿಯದಂತೆ ಅನೇಕ ರಥಸತ್ತಮ ಪ್ರವರರು ಅಲ್ಲಿಗೆ ಹೋಗಲಿ.
07145058a ತೇ ತ್ವರಧ್ವಂ ಯಥಾ ಶೂರಾಃ ಶರಾಣಾಂ ಮೋಕ್ಷಣೇ ಭೃಶಂ|
07145058c ಯಥಾ ತೂರ್ಣಂ ವ್ರಜತ್ಯೇಷ ಪರಲೋಕಾಯ ಮಾಧವಃ||
ಶೂರರು ಬಹಳ ತ್ವರೆಮಾಡಿ ಶರಗಳನ್ನು ಪ್ರಯೋಗಿಸುವಂತೆ ಬೇಗನೆ ಈ ಮಾಧವನನ್ನು ಪರಲೋಕಕ್ಕೆ ಕಳುಹಿಸಿ ಬಿಡೋಣ!”
07145059a ಕರ್ಣಸ್ಯ ಮತಮಾಜ್ಞಾಯ ಪುತ್ರಸ್ತೇ ಪ್ರಾಹ ಸೌಬಲಂ|
07145059c ಯಥೇಂದ್ರಃ ಸಮರೇ ರಾಜನ್ಪ್ರಾಹ ವಿಷ್ಣುಂ ಯಶಸ್ವಿನಂ||
ರಾಜನ್! ಕರ್ಣನ ಅಭಿಪ್ರಾಯವನ್ನು ತಿಳಿದು ನಿನ್ನ ಮಗನು ಸಮರದಲ್ಲಿ ಇಂದ್ರನು ಯಶಸ್ವಿ ವಿಷ್ಣುವಿಗೆ ಹೇಗೋ ಹಾಗೆ ಸೌಬಲನಿಗೆ ಹೇಳಿದನು:
07145060a ವೃತಃ ಸಹಸ್ರೈರ್ದಶಭಿರ್ಗಜಾನಾಮನಿವರ್ತಿನಾಂ|
07145060c ರಥೈಶ್ಚ ದಶಸಾಹಸ್ರೈರ್ವೃತೋ ಯಾಹಿ ಧನಂಜಯಂ||
“ಹತ್ತು ಸಾವಿರ ಆನೆಗಳಿಂದಲೂ, ಹಿಂದಿರುಗದೇ ಇದ್ದ ಹತ್ತು ಸಾವಿರ ರಥಗಳಿಂದಲೂ ಆವೃತನಾಗಿ ಧನಂಜಯನಿದ್ದಲ್ಲಿಗೆ ಹೋಗು.
07145061a ದುಃಶಾಸನೋ ದುರ್ವಿಷಹಃ ಸುಬಾಹುರ್ದುಷ್ಪ್ರಧರ್ಷಣಃ|
07145061c ಏತೇ ತ್ವಾಮನುಯಾಸ್ಯಂತಿ ಪತ್ತಿಭಿರ್ಬಹುಭಿರ್ವೃತಾಃ||
ಅನೇಕ ಪದಾತಿಗಳನ್ನು ಕರೆದುಕೊಂಡು ದುಃಶಾಸನ, ದುರ್ವಿಷಹ, ಸುಬಾಹು ಮತ್ತು ದುಷ್ಪ್ರಧರ್ಷಣರು ನಿನ್ನನ್ನು ಹಿಂಬಾಲಿಸಿ ಬರುತ್ತಾರೆ.
07145062a ಜಹಿ ಕೃಷ್ಣೌ ಮಹಾಬಾಹೋ ಧರ್ಮರಾಜಂ ಚ ಮಾತುಲ|
07145062c ನಕುಲಂ ಸಹದೇವಂ ಚ ಭೀಮಸೇನಂ ಚ ಭಾರತ||
ಮಾವ! ಮಾಹಾಬಾಹೋ! ಇಬ್ಬರು ಕೃಷ್ಣರನ್ನೂ, ಭಾರತ ಧರ್ಮರಾಜ, ನಕುಲ, ಸಹದೇವ ಮತ್ತು ಭೀಮಸೇನರನ್ನೂ ಸಂಹರಿಸು!
07145063a ದೇವಾನಾಮಿವ ದೇವೇಂದ್ರೇ ಜಯಾಶಾ ಮೇ ತ್ವಯಿ ಸ್ಥಿತಾ|
07145063c ಜಹಿ ಮಾತುಲ ಕೌಂತೇಯಾನಸುರಾನಿವ ಪಾವಕಿಃ||
ದೇವತೆಗಳೆಲ್ಲರೂ ದೇವೇಂದ್ರನ ಮೇಲೆ ಜಯದ ಭರವಸೆಯನ್ನಿಡುವಂತೆ ನಾನು ನಿನ್ನಮೇಲೆ ಭರವಸೆಯನ್ನಿಟ್ಟಿದ್ದೇನೆ. ಮಾವ! ಪಾವಕಿಯು ಅಸುರರನ್ನು ಹೇಗೋ ಹಾಗೆ ಕೌಂತೇಯರನ್ನು ಸಂಹರಿಸು!”
07145064a ಏವಮುಕ್ತೋ ಯಯೌ ಪಾರ್ಥಾನ್ಪುತ್ರೇಣ ತವ ಸೌಬಲಃ|
07145064c ಮಹತ್ಯಾ ಸೇನಯಾ ಸಾರ್ಧಂ ತವ ಪುತ್ರೈಸ್ತಥಾ ವಿಭೋ||
ವಿಭೋ! ನಿನ್ನ ಮಗನು ಹೀಗೆ ಹೇಳಲು ಸೌಬಲನು ಮಹಾ ಸೇನೆಯೊಡನೆ ಪಾರ್ಥರಿದ್ದಲ್ಲಿಗೆ ತೆರಳಿದನು.
07145065a ಪ್ರಿಯಾರ್ಥಂ ತವ ಪುತ್ರಾಣಾಂ ದಿಧಕ್ಷುಃ ಪಾಂಡುನಂದನಾನ್|
07145065c ತತಃ ಪ್ರವವೃತೇ ಯುದ್ಧಂ ತಾವಕಾನಾಂ ಪರೈಃ ಸಹ||
ನಿನ್ನ ಪುತ್ರರ ಪ್ರೀತಿಗಾಗಿ ಅವನು ಪಾಂಡುನಂದನರನ್ನು ಪೀಡಿಸಿದನು. ಆಗ ನಿನ್ನವರ ಮತ್ತು ಶತ್ರುಗಳ ನಡುವೆ ಯುದ್ಧವು ನಡೆಯಿತು.
07145066a ಪ್ರಯಾತೇ ಸೌಬಲೇ ರಾಜನ್ಪಾಂಡವಾನಾಮನೀಕಿನೀಂ|
07145066c ಬಲೇನ ಮಹತಾ ಯುಕ್ತಃ ಸೂತಪುತ್ರಸ್ತು ಸಾತ್ವತಂ||
07145067a ಅಭ್ಯಯಾತ್ತ್ವರಿತಂ ಯುದ್ಧೇ ಕಿರಂ ಶರಶತಾನ್ಬಹೂನ್|
ರಾಜನ್! ಸೌಬಲನು ಪಾಂಡವರ ಸೇನೆಯ ಕಡೆ ಹೊರಟುಹೋಗಲು ಯುದ್ಧದಲ್ಲಿ ಸೂತಪುತ್ರನು ತ್ವರೆಮಾಡಿ ಮಹಾ ಬಲದೊಂದಿಗೆ ಸಾತ್ವತನನ್ನು ಆಕ್ರಮಣಿಸಿ ಅನೇಕ ನೂರು ಬಾಣಗಳನ್ನು ಎರಚಿದನು.
07145067c ತಥೈವ ಪಾಂಡವಾಃ ಸರ್ವೇ ಸಾತ್ಯಕಿಂ ಪರ್ಯವಾರಯನ್||
07145068a ಮಹದ್ಯುದ್ಧಂ ತದಾಸೀತ್ತು ದ್ರೋಣಸ್ಯ ನಿಶಿ ಭಾರತ|
07145068c ಧೃಷ್ಟದ್ಯುಮ್ನೇನ ಶೂರೇಣ ಪಾಂಚಾಲೈಶ್ಚ ಮಹಾತ್ಮನಃ||
ಹಾಗೆಯೇ ಪಾಂಡವರೆಲ್ಲರೂ ಸಾತ್ಯಕಿಯನ್ನು ಸುತ್ತುವರೆದರು. ಭಾರತ! ದ್ರೋಣನಿಗಾಗಿ ಆ ರಾತ್ರಿ ಮಹಾತ್ಮ ಶೂರ ಪಾಂಚಾಲ ಧೃಷ್ಟದ್ಯುಮ್ನನ ಮಹಾಯುದ್ಧವು ನಡೆಯಿತು.”
ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ಘಟೋತ್ಕಚವಧಪರ್ವಣಿ ರಾತ್ರಿಯುದ್ಧೇ ಸಂಕುಲಯುದ್ಧೇ ಪಂಚಚತ್ವಾರಿಂಶಾಧಿಕಶತತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ಘಟೋತ್ಕಚವಧಪರ್ವದಲ್ಲಿ ರಾತ್ರಿಯುದ್ಧೇ ಸಂಕುಲಯುದ್ಧ ಎನ್ನುವ ನೂರಾನಲ್ವತ್ತೈದನೇ ಅಧ್ಯಾಯವು.
/stickers-fleur-de-lotus-isole-sur-fond-blanc.jpg.jpg)