Aranyaka Parva: Chapter 198

ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ

೧೯೮

ಕೌಶಿಕ-ಧರ್ಮವ್ಯಾಧ

ಗೃಹಿಣಿಯು ಹೇಳಿದ್ದರಲ್ಲಿ ಶ್ರದ್ಧೆಯಿಟ್ಟು ಕೌಶಿಕನು ಮಿಥಿಲೆಗೆ ಹೋಗಿ ವ್ಯಾಧನ ಅಂಗಡಿಯ ಮುಂದೆ ನಿಂತುಕೊಳ್ಳುವುದು (೧-೧೩). ಪತಿವ್ರತೆಯು ನಿನ್ನನ್ನು ಕಳುಹಿಸಿದ್ದಾಳೆಂದೂ ಬಂದಿರುವ ಕಾರಣವನ್ನೂ ತಿಳಿದಿದ್ದೇನೆ ಎಂದು ಹೇಳಿ ವ್ಯಾಧನು ಕೌಶಿಕನನ್ನು ತನ್ನ ಮನೆಗೆ ಕರೆದೊಯ್ಯುವುದು (೧೪-೧೭). ಈ ರೀತಿಯ ಘೋರಕೃತ್ಯವನ್ನು ಮಾಡುತ್ತಿರುವ ನಿನ್ನ ಕುರಿತು ಅನುತಾಪವುಂಟಾಗುತ್ತಿದೆ ಎಂದು ಕೌಶಿಕನು ಹೇಳಲು ವ್ಯಾಧನು ಧಾತೃವು ವಿಹಿಸಿದ, ಪಿತೃಗಳು ಮಾಡಿಕೊಂಡು ಬಂದ ಕುಲವೃತ್ತಿಯನ್ನು ಮಾಡುತ್ತಿರುವುದಾಗಿ ಹೇಳುವುದು (೧೮-೨೦). ವೃತ್ತಿಯ ಜೊತೆಗೆ ತಾನು ಪಾಲಿಸುವ ಇತರ ಧರ್ಮಗಳ ಕುರಿತು ವ್ಯಾಧನು ಹೇಳಿದುದು (೨೧-೩೨). ಯಾವುದೇ ಪಾಪಗಳಿಂದ ಬಿಡುಗಡೆ ಹೊಂದಬಹುದಾದ ಶೀಲವೃತ್ತಿಗಳ ಕುರಿತು ವ್ಯಾಧನು ಹೇಳಿದುದು (೩೩-೫೫). ಶಿಷ್ಟಾಚಾರವೇನೆಂದು ಕೇಳಿದ ಕೌಶಿಕನಿಗೆ ವ್ಯಾಧನು ಶಿಷ್ಟಾಚಾರಗಳನ್ನೂ, ಶಿಷ್ಟಾಚಾರಿಗಳ ಲಕ್ಷಣಗಳನ್ನೂ ವಿವರಿಸಿದುದು (೫೬-೯೪).

03198001 ಮಾರ್ಕಂಡೇಯ ಉವಾಚ|

03198001a ಚಿಂತಯಿತ್ವಾ ತದಾಶ್ಚರ್ಯಂ ಸ್ತ್ರಿಯಾ ಪ್ರೋಕ್ತಮಶೇಷತಃ|

03198001c ವಿನಿಂದನ್ಸ ದ್ವಿಜೋಽತ್ಮಾನಮಾಗಸ್ಕೃತ ಇವಾಬಭೌ||

ಮಾರ್ಕಂಡೇಯನು ಹೇಳಿದನು: “ಸ್ತ್ರೀಯು ಹೇಳಿದ ಆಶ್ಚರ್ಯಕರ ವಿಷಯದ ಕುರಿತು ಸಂಪೂರ್ಣವಾಗಿ ಆಲೋಚಿಸಿ ದ್ವಿಜನು ತನ್ನನ್ನು ತಾನೇ ನಿಂದಿಸಿಕೊಂಡು ತಪ್ಪಿತಸ್ಥನಂತಾದನು.

03198002a ಚಿಂತಯಾನಃ ಸ ಧರ್ಮಸ್ಯ ಸೂಕ್ಷ್ಮಾಂ ಗತಿಮಥಾಬ್ರವೀತ್|

03198002c ಶ್ರದ್ದಧಾನೇನ ಭಾವ್ಯಂ ವೈ ಗಚ್ಚಾಮಿ ಮಿಥಿಲಾಮಹಂ||

ಧರ್ಮದ ಸೂಕ್ಷ್ಮಗತಿಯ ಕುರಿತು ಚಿಂತಿಸುತ್ತಾ ಅವನು ತನ್ನಲ್ಲಿಯೇ ಹೇಳಿಕೊಂಡನು: “ಇದರಲ್ಲಿ ಶ್ರದ್ಧೆಯನ್ನಿಡಬೇಕು. ನಾನು ಮಿಥಿಲಿಗೆ ಹೋಗುತ್ತೇನೆ.

03198003a ಕೃತಾತ್ಮಾ ಧರ್ಮವಿತ್ತಸ್ಯಾಂ ವ್ಯಾಧೋ ನಿವಸತೇ ಕಿಲ|

03198003c ತಂ ಗಚ್ಚಾಮ್ಯಹಮದ್ಯೈವ ಧರ್ಮಂ ಪ್ರಷ್ಟುಂ ತಪೋಧನಂ||

ಅಲ್ಲಿ ಕೃತಾತ್ಮ ಧರ್ಮಾತ್ಮ ವ್ಯಾಧನು ವಾಸಿಸುತ್ತಿದ್ದಾನೆಂದು ಅವಳು ಹೇಳಿಲ್ಲವೇ? ಇಂದೇ ನಾನು ಅಲ್ಲಿಗೆ ಹೋಗಿ ಆ ತಪೋಧನನಲ್ಲಿ ಧರ್ಮದ ಕುರಿತು ಕೇಳುತ್ತೇನೆ.”

03198004a ಇತಿ ಸಂಚಿಂತ್ಯ ಮನಸಾ ಶ್ರದ್ದಧಾನಃ ಸ್ತ್ರಿಯಾ ವಚಃ|

03198004c ಬಲಾಕಾಪ್ರತ್ಯಯೇನಾಸೌ ಧರ್ಮ್ಯೈಶ್ಚ ವಚನೈಃ ಶುಭೈಃ||

03198004e ಸಂಪ್ರತಸ್ಥೇ ಸ ಮಿಥಿಲಾಂ ಕೌತೂಹಲಸಮನ್ವಿತಃ||

ಹೀಗೆ ಅವಳು ಬಲಾಕದ ಕುರಿತು ಹೇಳಿದ್ದುದನ್ನೂ ಮತ್ತು ಧರ್ಮಕರ ಶುಭವಚನಗಳನ್ನೂ ಮನಸ್ಸಿನಲ್ಲಿ ಆಲೋಚಿಸಿ ಅವನು ಸ್ತ್ರೀಯ ಮಾತುಗಳಲ್ಲಿ ಶ್ರದ್ಧೆಯನ್ನಿರಿಸಿದನು. ಮತ್ತು ಕುತೂಹಲದಿಂದ ಮಿಥಿಲೆಗೆ ಪ್ರಯಾಣ ಬೆಳೆಸಿದನು.

03198005a ಅತಿಕ್ರಾಮನ್ನರಣ್ಯಾನಿ ಗ್ರಾಮಾಂಶ್ಚ ನಗರಾಣಿ ಚ|

03198005c ತತೋ ಜಗಾಮ ಮಿಥಿಲಾಂ ಜನಕೇನ ಸುರಕ್ಷಿತಾಂ||

ಅರಣ್ಯಗಳನ್ನೂ, ಗ್ರಾಮಗಳನ್ನೂ, ನಗರಗಳನ್ನೂ ದಾಟಿ ಜನಕನಿಂದ ಸುರಕ್ಷಿತವಾಗಿದ್ದ ಮಿಥಿಲೆಗೆ ಹೋದನು.

03198006a ಧರ್ಮಸೇತುಸಮಾಕೀರ್ಣಾಂ ಯಜ್ಞೋತ್ಸವವತೀಂ ಶುಭಾಂ|

03198006c ಗೋಪುರಾಟ್ಟಾಲಕವತೀಂ ಗೃಹಪ್ರಾಕಾರಶೋಭಿತಾಂ||

ಧರ್ಮಕ್ಕನುಗುಣವಾಗಿ ವಿಭಜಿಸಲ್ಪಟ್ಟ ಆ ನಗರಿಯು ಯಜ್ಞ-ಉತ್ಸವಗಳಿಂದ ತುಂಬಿ ಪುಣ್ಯಕರವಾಗಿತ್ತು. ದ್ವಾರ-ಗೋಪುರಗಳಿಂದ ರಕ್ಷಿತವಾಗಿತ್ತು ಮತ್ತು ಗೃಹ-ಪ್ರಾಕಾರಗಳಿಂದ ಶೋಭಿಸುತ್ತಿತ್ತು.

03198007a ಪ್ರವಿಶ್ಯ ಸ ಪುರೀಂ ರಮ್ಯಾಂ ವಿಮಾನೈರ್ಬಹುಭಿರ್ವೃತಾಂ|

03198007c ಪಣ್ಯೈಶ್ಚ ಬಹುಭಿರ್ಯುಕ್ತಾಂ ಸುವಿಭಕ್ತಮಹಾಪಥಾಂ||

03198008a ಅಶ್ವೈ ರಥೈಸ್ತಥಾ ನಾಗೈರ್ಯಾನೈಶ್ಚ ಬಹುಭಿರ್ವೃತಾಂ|

03198008c ಹೃಷ್ಟಪುಷ್ಟಜನಾಕೀರ್ಣಾಂ ನಿತ್ಯೋತ್ಸವಸಮಾಕುಲಾಂ||

ಬಹಳಷ್ಟು ಐಶ್ವರ್ಯಗಳಿಂದ ತುಂಬಿದ್ದ, ಬಹು ವಿಮಾನಗಳಿಂದ ಆವೃತವಾಗಿದ್ದ, ಚೆನ್ನಾಗಿ ರಚಿಸಲ್ಪಟ್ಟ ಹೆದ್ದಾರಿಗಳನ್ನುಳ್ಳ, ಬಹುಸಂಖ್ಯೆಯ ಕುದುರೆ, ರಥ, ಮತ್ತು ಆನೆಗಳೇ ಮೊದಲಾದ ವಾಹನಗಳಿಂದ ತುಂಬಿದ್ದ, ಸಂತೋಷದಿಂದ, ಆರೋಗ್ಯದಿಂದ ಕೂಡಿರುವ ಜನಸಮೂಹಗಳನ್ನು ಹೊಂದಿದ್ದ, ನಿತ್ಯವೂ ಉತ್ಸವವೋ ಎಂಬಂತಿದ್ದ ಆ ರಮ್ಯ ಪುರಿಯನ್ನು ಪ್ರವೇಶಿಸಿದನು.

03198009a ಸೋಽಪಶ್ಯದ್ಬಹುವೃತ್ತಾಂತಾಂ ಬ್ರಾಹ್ಮಣಃ ಸಮತಿಕ್ರಮನ್|

03198009c ಧರ್ಮವ್ಯಾಧಮಪೃಚ್ಚಚ್ಚ ಸ ಚಾಸ್ಯ ಕಥಿತೋ ದ್ವಿಜೈಃ||

ಸಂಚರಿಸುತ್ತಾ ಆ ಬ್ರಾಹ್ಮಣನು ಅಲ್ಲಿ ನಡೆಯುತ್ತಿದ್ದ ಬಹಳಷ್ಟನ್ನು ನೋಡಿದನು; ಧರ್ಮವ್ಯಾಧನ ಕುರಿತು ಕೇಳಲು, ದ್ವಿಜರು ಅವನಿಗೆ ಹೇಳಿದರು.

03198010a ಅಪಶ್ಯತ್ತತ್ರ ಗತ್ವಾ ತಂ ಸೂನಾಮಧ್ಯೇ ವ್ಯವಸ್ಥಿತಂ|

03198010c ಮಾರ್ಗಮಾಹಿಷಮಾಂಸಾನಿ ವಿಕ್ರೀಣಂತಂ ತಪಸ್ವಿನಂ|

03198010e ಆಕುಲತ್ವಾತ್ತು ಕ್ರೇತೄಣಾಮೇಕಾಂತೇ ಸಂಸ್ಥಿತೋ ದ್ವಿಜಃ||

ಅಲ್ಲಿ, ಅಂಗಡಿಗಳ ಮಧ್ಯೆ ನೆಲಸಿದ್ದ, ಮಾರ್ಗ-ಮಾಹಿಷ ಮಾಂಸಗಳನ್ನು ಮಾರುತ್ತಿದ್ದ ತಪಸ್ವಿಯನ್ನು ಕಂಡನು. ಗ್ರಾಹಕರ ಗುಂಪನ್ನು ನೋಡಿ ದ್ವಿಜನು ಒಬ್ಬನೇ ಒಂದು ಸ್ಥಳದಲ್ಲಿ ನಿಂತುಕೊಂಡನು.

03198011a ಸ ತು ಜ್ಞಾತ್ವಾ ದ್ವಿಜಂ ಪ್ರಾಪ್ತಂ ಸಹಸಾ ಸಂಭ್ರಮೋತ್ಥಿತಃ|

03198011c ಆಜಗಾಮ ಯತೋ ವಿಪ್ರಃ ಸ್ಥಿತ ಏಕಾಂತ ಆಸನೇ||

ದ್ವಿಜನು ಬಂದಿದ್ದಾನೆಂದು ತಿಳಿದು ಅವನು ತಕ್ಷಣವೇ ಎದ್ದು ವಿಪ್ರನು ಏಕಾಂತನಾಗಿ ಕುಳಿತಿದ್ದಲ್ಲಿಗೆ ಬಂದನು.

03198012 ವ್ಯಾಧ ಉವಾಚ|

03198012a ಅಭಿವಾದಯೇ ತ್ವಾ ಭಗವನ್ಸ್ವಾಗತಂ ತೇ ದ್ವಿಜೋತ್ತಮ|

03198012c ಅಹಂ ವ್ಯಾಧಸ್ತು ಭದ್ರಂ ತೇ ಕಿಂ ಕರೋಮಿ ಪ್ರಶಾಧಿ ಮಾಂ||

ವ್ಯಾಧನು ಹೇಳಿದನು: “ಭಗವನ್! ನಿನಗೆ ನಮಸ್ಕಾರಗಳು. ದ್ವಿಜೋತ್ತಮ! ನಿನಗೆ ಸ್ವಾಗತ! ನಾನು ವ್ಯಾಧ! ನಿನಗೆ ಮಂಗಳವಾಗಲಿ! ನಾನೇನು ಮಾಡಲಿ? ಚಿತ್ತೈಸು.

03198013a ಏಕಪತ್ನ್ಯಾ ಯದುಕ್ತೋಽಸಿ ಗಚ್ಚ ತ್ವಂ ಮಿಥಿಲಾಮಿತಿ|

03198013c ಜಾನಾಮ್ಯೇತದಹಂ ಸರ್ವಂ ಯದರ್ಥಂ ತ್ವಮಿಹಾಗತಃ||

ಓರ್ವ ಪತಿವ್ರತೆಯು ನಿನಗೆ ಮಿಥಿಲೆಗೆ ಹೋಗೆಂದು ಹೇಳಿದ್ದಾಳೆ. ನೀನು ಇಲ್ಲಿಗೆ ಏಕೆ ಬಂದಿರುವೆಯೆಂಬ ಕಾರಣಗಳೆಲ್ಲವೂ ನನಗೆ ತಿಳಿದಿದೆ.””

03198014 ಮಾರ್ಕಂಡೇಯ ಉವಾಚ|

03198014a ಶ್ರುತ್ವಾ ತು ತಸ್ಯ ತದ್ವಾಕ್ಯಂ ಸ ವಿಪ್ರೋ ಭೃಶಹರ್ಷಿತಃ|

03198014c ದ್ವಿತೀಯಮಿದಮಾಶ್ಚರ್ಯಮಿತ್ಯಚಿಂತಯತ ದ್ವಿಜಃ||

ಮಾರ್ಕಂಡೇಯನು ಹೇಳಿದನು: “ಅವನ ಆ ಮಾತುಗಳನ್ನು ಕೇಳಿದ ವಿಪ್ರನು ತುಂಬಾ ಹರ್ಷಿತನಾದನು. ಇದು ಎರಡನೆಯ ಆಶ್ಚರ್ಯವೆಂದು ದ್ವಿಜನು ಆಲೋಚಿಸಿದನು.

03198015a ಅದೇಶಸ್ಥಂ ಹಿ ತೇ ಸ್ಥಾನಮಿತಿ ವ್ಯಾಧೋಽಬ್ರವೀದ್ದ್ವಿಜಂ|

03198015c ಗೃಹಂ ಗಚ್ಚಾವ ಭಗವನ್ಯದಿ ರೋಚಯಸೇಽನಘ||

“ನೀನು ನಿಲ್ಲಬಾರದ ಸ್ಥಳದಲ್ಲಿ ನಿಂತಿದ್ದೀಯೆ! ಅನಘ! ನಿನಗಿಷ್ಟವಾದರೆ ಭಗವನ್! ಮನೆಗೆ ಹೋಗೋಣ!” ಎಂದು ವ್ಯಾಧನು ದ್ವಿಜನಿಗೆ ಹೇಳಿದನು.

03198016a ಬಾಢಮಿತ್ಯೇವ ಸಂಹೃಷ್ಟೋ ವಿಪ್ರೋ ವಚನಮಬ್ರವೀತ್|

03198016c ಅಗ್ರತಸ್ತು ದ್ವಿಜಂ ಕೃತ್ವಾ ಸ ಜಗಾಮ ಗೃಹಾನ್ಪ್ರತಿ||

ಸಂತೋಷದಿಂದ ವಿಪ್ರನು “ಧಾರಾಳವಾಗಿ!” ಎಂದು ಉತ್ತರಿಸಿದನು. ದ್ವಿಜನನ್ನು ಮುಂದಿರಿಸಿಕೊಂಡು ಅವನ ಮನೆಯ ಕಡೆ ನಡೆದನು.

03198017a ಪ್ರವಿಶ್ಯ ಚ ಗೃಹಂ ರಮ್ಯಮಾಸನೇನಾಭಿಪೂಜಿತಃ|

03198017c ಪಾದ್ಯಮಾಚಮನೀಯಂ ಚ ಪ್ರತಿಗೃಹ್ಯ ದ್ವಿಜೋತ್ತಮಃ||

ಆ ಸುಂದರ ಗೃಹವನ್ನು ಪ್ರವೇಶಿಸಿ. ಆಸನ ಸತ್ಕಾರಗಳನ್ನೂ, ಪಾದ್ಯ ಆಚಮನೀಯಗಳನ್ನು ದ್ವಿಜೋತ್ತಮನು ಸ್ವೀಕರಿಸಿದನು.

03198018a ತತಃ ಸುಖೋಪವಿಷ್ಟಸ್ತಂ ವ್ಯಾಧಂ ವಚನಮಬ್ರವೀತ್|

03198018c ಕರ್ಮೈತದ್ವೈ ನ ಸದೃಶಂ ಭವತಃ ಪ್ರತಿಭಾತಿ ಮೇ|

03198018e ಅನುತಪ್ಯೇ ಭೃಶಂ ತಾತ ತವ ಘೋರೇಣ ಕರ್ಮಣಾ||

ಸುಖವಾಗಿ ಕುಳಿತುಕೊಂಡನಂತರ ವ್ಯಾಧನಿಗೆ ಹೇಳಿದನು: “ನೀನು ಮಾಡುವ ಕೆಲಸವು ನಿನಗೆ ಸರಿಯಾದುದಲ್ಲವೆಂದು ನನಗನ್ನಿಸುತ್ತದೆ. ಮಗೂ! ನೀನು ಈ ರೀತಿಯ ಘೋರ ಕರ್ಮಗಳನ್ನು ಮಾಡುತ್ತಿರುವೆಯೆಂದು ನನಗೆ ಅನುತಾಪವುಂಟಾಗುತ್ತಿದೆ.”

03198019 ವ್ಯಾಧ ಉವಾಚ|

03198019a ಕುಲೋಚಿತಮಿದಂ ಕರ್ಮ ಪಿತೃಪೈತಾಮಹಂ ಮಮ|

03198019c ವರ್ತಮಾನಸ್ಯ ಮೇ ಧರ್ಮೇ ಸ್ವೇ ಮನ್ಯುಂ ಮಾ ಕೃಥಾ ದ್ವಿಜ||

ವ್ಯಾಧನು ಹೇಳಿದನು: “ಇದು ನನ್ನ ಪಿತೃಪಿತಾಮಹರಿಂದ ಬಂದ ಕುಲೋಚಿತವಾದ ಕರ್ಮ. ದ್ವಿಜ! ನಾನು ನನ್ನ ಕೆಲಸವನ್ನು ಮಾಡುತ್ತಿದ್ದೇನೆಂದು ಸಿಟ್ಟಾಗದಿರು.

03198020a ಧಾತ್ರಾ ತು ವಿಹಿತಂ ಪೂರ್ವಂ ಕರ್ಮ ಸ್ವಂ ಪಾಲಯಾಮ್ಯಹಂ|

03198020c ಪ್ರಯತ್ನಾಚ್ಚ ಗುರೂ ವೃದ್ಧೌ ಶುಶ್ರೂಷೇಽಹಂ ದ್ವಿಜೋತ್ತಮ||

ಧಾತ್ರುವು ಮೊದಲೇ ವಿಹಿತಗೊಳಿಸಿದ ಕೆಲಸವನ್ನು ನಾನು ಮಾಡುತ್ತಿದ್ದೇನೆ. ದ್ವಿಜೋತ್ತಮ! ಹಿರಿಯರ ಮತ್ತು ವೃದ್ಧರ ಸೇವೆ ಮಾಡುವ ಪ್ರಯತ್ನವನ್ನೂ ಮಾಡುತ್ತಿದ್ದೇನೆ.

03198021a ಸತ್ಯಂ ವದೇ ನಾಭ್ಯಸೂಯೇ ಯಥಾಶಕ್ತಿ ದದಾಮಿ ಚ|

03198021c ದೇವತಾತಿಥಿಭೃತ್ಯಾನಾಮವಶಿಷ್ಟೇನ ವರ್ತಯೇ||

ಸತ್ಯವನ್ನು ಮಾತನಾಡುತ್ತೇನೆ. ಅಸೂಯೆ ಪಡುವುದಿಲ್ಲ. ಮತ್ತು ಯಥಾಶಕ್ತಿ ದಾನಮಾಡುತ್ತೇನೆ. ದೇವತೆಗಳು, ಅತಿಥಿಗಳು ಮತ್ತು ನನ್ನನ್ನೇ ಅವಲಂಬಿಸಿರುವವರು ಬಿಟ್ಟಿದ್ದುದನ್ನು ತಿಂದು ಬದುಕುತ್ತೇನೆ.

03198022a ನ ಕುತ್ಸಯಾಮ್ಯಹಂ ಕಿಂ ಚಿನ್ನ ಗರ್ಹೇ ಬಲವತ್ತರಂ|

03198022c ಕೃತಮನ್ವೇತಿ ಕರ್ತಾರಂ ಪುರಾ ಕರ್ಮ ದ್ವಿಜೋತ್ತಮ||

ದ್ವಿಜೋತ್ತಮ! ಏನನ್ನೂ ಅಲ್ಲಗಳೆಯುವುದಿಲ್ಲ. ನನಗಿಂತ ಬಲಶಾಲಿಗಳನ್ನು ತಿರಸ್ಕರಿಸುವುದಿಲ್ಲ. ಏಕೆಂದರೆ ಹಿಂದೆ ಮಾಡಿದ ಕರ್ಮಗಳು ಕರ್ತಾರನನ್ನು ಅನುಸರಿಸಿ ಬರುತ್ತವೆ.

03198023a ಕೃಷಿಗೋರಕ್ಷ್ಯವಾಣಿಜ್ಯಮಿಹ ಲೋಕಸ್ಯ ಜೀವನಂ|

03198023c ದಂಡನೀತಿಸ್ತ್ರಯೀ ವಿದ್ಯಾ ತೇನ ಲೋಕಾ ಭವಂತ್ಯುತ||

ಕೃಷಿ, ಗೋರಕ್ಷೆ, ವಾಣಿಜ್ಯ, ರಾಜಕೀಯಗಳು ಈ ಲೋಕದ ಜೀವನ. ಮೂರು ವೇದಗಳಿಂದ ಲೋಕಗಳು ನಡೆಯುತ್ತವೆ.

03198024a ಕರ್ಮ ಶೂದ್ರೇ ಕೃಷಿರ್ವೈಶ್ಯೇ ಸಂಗ್ರಾಮಃ ಕ್ಷತ್ರಿಯೇ ಸ್ಮೃತಃ|

03198024c ಬ್ರಹ್ಮಚರ್ಯಂ ತಪೋ ಮಂತ್ರಾಃ ಸತ್ಯಂ ಚ ಬ್ರಾಹ್ಮಣೇ ಸದಾ||

ಶೂದ್ರರಿಗೆ ಕರ್ಮ, ವೈಶ್ಯರಿಗೆ ಕೃಷಿ ಮತ್ತು ಕ್ಷತ್ರಿಯರಿಗೆ ಸಂಗ್ರಾಮವೆಂದು ಕೇಳಿದ್ದೇವೆ. ಬ್ರಾಹ್ಮಣರಿಗೆ ಸದಾ ಬ್ರಹ್ಮಚರ್ಯೆ, ತಪಸ್ಸು, ಮಂತ್ರ, ಮತ್ತು ಸತ್ಯ.

03198025a ರಾಜಾ ಪ್ರಶಾಸ್ತಿ ಧರ್ಮೇಣ ಸ್ವಕರ್ಮನಿರತಾಃ ಪ್ರಜಾಃ|

03198025c ವಿಕರ್ಮಾಣಶ್ಚ ಯೇ ಕೇ ಚಿತ್ತಾನ್ಯುನಕ್ತಿ ಸ್ವಕರ್ಮಸು||

ಸ್ವಕರ್ಮದಲ್ಲಿ ನಿರತರಾದ ಪ್ರಜೆಗಳನ್ನು ರಾಜನು ಧರ್ಮದಿಂದ ಆಳುತ್ತಾನೆ. ಯಾರಾದರೂ ವಿಕರ್ಮಗಳಲ್ಲಿ ನಿರತರಾದರೆ ಅವರನ್ನು ಸ್ವಕರ್ಮದಲ್ಲಿ ತೊಡಗಿಸುತ್ತಾನೆ.

03198026a ಭೇತವ್ಯಂ ಹಿ ಸದಾ ರಾಜ್ಞಾಂ ಪ್ರಜಾನಾಮಧಿಪಾ ಹಿ ತೇ|

03198026c ಮಾರಯಂತಿ ವಿಕರ್ಮಸ್ಥಂ ಲುಬ್ಧಾ ಮೃಗಮಿವೇಷುಭಿಃ||

ಪ್ರಜೆಗಳ ಅಧಿಪತಿಯಾದ ರಾಜನನ್ನು ಸದಾ ಭಯಪಡಬೇಕು. ವಿಕರ್ಮದಲ್ಲಿ ನಿರತರಾದವರನ್ನು ಅವನು ಮೃಗಗಳನ್ನು ಬಾಣಗಳಿಂದ ಹೊಡೆಯುವಂತೆ ವಧಿಸುತ್ತಾನೆ.

03198027a ಜನಕಸ್ಯೇಹ ವಿಪ್ರರ್ಷೇ ವಿಕರ್ಮಸ್ಥೋ ನ ವಿದ್ಯತೇ|

03198027c ಸ್ವಕರ್ಮನಿರತಾ ವರ್ಣಾಶ್ಚತ್ವಾರೋಽಪಿ ದ್ವಿಜೋತ್ತಮ||

ದ್ವಿಜೋತ್ತಮ! ವಿಪ್ರರ್ಷೇ! ಜನಕನಲ್ಲಿ ಯಾರೂ ವಿಕರ್ಮಿಗಳಿರುವುದು ತಿಳಿದಿಲ್ಲ. ನಾಲ್ಕೂ ವರ್ಣದವರೂ ಅವರವರ ಕರ್ಮಗಳಲ್ಲಿ ನಿರತರಾಗಿದ್ದಾರೆ.

03198028a ಸ ಏಷ ಜನಕೋ ರಾಜಾ ದುರ್ವೃತ್ತಮಪಿ ಚೇತ್ಸುತಂ|

03198028c ದಂಡ್ಯಂ ದಂಡೇ ನಿಕ್ಷಿಪತಿ ತಥಾ ನ ಗ್ಲಾತಿ ಧಾರ್ಮಿಕಂ||

ದುರ್ವೃತ್ತಿಯು ತನ್ನ ಮಗನೇ ಆಗಿದ್ದರೂ ರಾಜ ಜನಕನು ಅವನನ್ನು ದಂಡದಿಂದ ದಂಡಿಸಿ ಬೀಳಿಸುತ್ತಾನೆ. ಆದರೆ ಧಾರ್ಮಿಕನನ್ನು ಬಾಧಿಸುವುದಿಲ್ಲ.

03198029a ಸುಯುಕ್ತಚಾರೋ ನೃಪತಿಃ ಸರ್ವಂ ಧರ್ಮೇಣ ಪಶ್ಯತಿ|

03198029c ಶ್ರೀಶ್ಚ ರಾಜ್ಯಂ ಚ ದಂಡಶ್ಚ ಕ್ಷತ್ರಿಯಾಣಾಂ ದ್ವಿಜೋತ್ತಮ||

ದ್ವಿಜೋತ್ತಮ! ಸುಯುಕ್ತಚಾರರಿಂದ ಕೂಡಿದ ನೃಪತಿಯು ಸರ್ವರನ್ನೂ ಧರ್ಮದಿಂದ ನೋಡುತ್ತಾನೆ. ಸಂಪತ್ತು, ರಾಜ್ಯ ಮತ್ತು ಸೇನೆಯು ಕ್ಷತ್ರಿಯರದ್ದು.

03198030a ರಾಜಾನೋ ಹಿ ಸ್ವಧರ್ಮೇಣ ಶ್ರಿಯಮಿಚ್ಚಂತಿ ಭೂಯಸೀಂ|

03198030c ಸರ್ವೇಷಾಮೇವ ವರ್ಣಾನಾಂ ತ್ರಾತಾ ರಾಜಾ ಭವತ್ಯುತ||

ರಾಜನೂ ಕೂಡ ಸ್ವಧರ್ಮದಿಂದಲೇ ಹೆಚ್ಚಿನ ಸಂಪತ್ತನ್ನು ಬಯಸುತ್ತಾನೆ. ರಾಜನು ಎಲ್ಲ ವರ್ಣದವರ ತ್ರಾತನಾಗಿದ್ದಾನೆ.

03198031a ಪರೇಣ ಹಿ ಹತಾನ್ಬ್ರಹ್ಮನ್ವರಾಹಮಹಿಷಾನಹಂ|

03198031c ನ ಸ್ವಯಂ ಹನ್ಮಿ ವಿಪ್ರರ್ಷೇ ವಿಕ್ರೀಣಾಮಿ ಸದಾ ತ್ವಹಂ||

ಬ್ರಹ್ಮನ್! ವರಾಹ-ಮಹಿಷಗಳನ್ನು ಇತರರು ಕೊಲ್ಲುತ್ತಾರೆ. ಸ್ವಯಂ ನಾನು ಕೊಲ್ಲುವುದಿಲ್ಲ. ಸದಾ ನಾನು ಅವುಗಳನ್ನು ಮಾರುತ್ತೇನೆ ಮಾತ್ರ.

03198032a ನ ಭಕ್ಷಯಾಮಿ ಮಾಂಸಾನಿ ಋತುಗಾಮೀ ತಥಾ ಹ್ಯಹಂ|

03198032c ಸದೋಪವಾಸೀ ಚ ತಥಾ ನಕ್ತಭೋಜೀ ತಥಾ ದ್ವಿಜ||

ದ್ವಿಜ! ಮಾಂಸಗಳನ್ನು ನಾನು ತಿನ್ನುವುದಿಲ್ಲ. ಯಾವಾಗ ಮಾಡಬೇಕೋ ಆವಾಗ ಮಾತ್ರ ನಾನು ನನ್ನ ಪತ್ನಿಯನ್ನು ಕೂಡುತ್ತೇನೆ. ಸದಾ ಉಪವಾಸದಲ್ಲಿದ್ದುಕೊಂಡು, ರಾತ್ರಿ ಮಾತ್ರ ಊಟ ಮಾಡುತ್ತೇನೆ.

03198033a ಅಶೀಲಶ್ಚಾಪಿ ಪುರುಷೋ ಭೂತ್ವಾ ಭವತಿ ಶೀಲವಾನ್|

03198033c ಪ್ರಾಣಿಹಿಂಸಾರತಶ್ಚಾಪಿ ಭವತೇ ಧಾರ್ಮಿಕಃ ಪುನಃ||

ಅಶೀಲನಾಗಿದ್ದರೂ ಕೂಡ ಪುರುಷನು ಶೀಲವಂತನಾಗುತ್ತಾನೆ. ಪುನಃ ಧಾರ್ಮಿಕನೂ ಕೂಡ ಪ್ರಾಣಿಹಿಂಸೆಗಳಲ್ಲಿ ತೊಡಗುತ್ತಾನೆ.

03198034a ವ್ಯಭಿಚಾರಾನ್ನರೇಂದ್ರಾಣಾಂ ಧರ್ಮಃ ಸಂಕೀರ್ಯತೇ ಮಹಾನ್|

03198034c ಅಧರ್ಮೋ ವರ್ಧತೇ ಚಾಪಿ ಸಂಕೀರ್ಯಂತೇ ತಥಾ ಪ್ರಜಾಃ||

ರಾಜರ ವ್ಯಬಿಚಾರದಿಂದ ಧರ್ಮವು ಮಹಾ ಗೊಂದಲಕ್ಕೊಳಗಾಗುತ್ತದೆ. ಅಧರ್ಮವು ಹೆಚ್ಚಾಗುತ್ತದೆ ಮತ್ತು ಪ್ರಜೆಗಳು ಗೊಂದಲಗಳಿಗೊಳಗಾಗುತ್ತಾರೆ.

03198035a ಉರುಂಡಾ ವಾಮನಾಃ ಕುಬ್ಜಾಃ ಸ್ಥೂಲಶೀರ್ಷಾಸ್ತಥೈವ ಚ|

03198035c ಕ್ಲೀಬಾಶ್ಚಾಂಧಾಶ್ಚ ಜಾಯಂತೇ ಬಧಿರಾ ಲಂಬಚೂಚುಕಾಃ|

03198035e ಪಾರ್ಥಿವಾನಾಮಧರ್ಮತ್ವಾತ್ಪ್ರಜಾನಾಮಭವಃ ಸದಾ||

ಜನರು ಸಣ್ಣವರಾಗಿ, ಕುಳ್ಳರಾಗಿ, ಕುಬ್ಜರಾಗಿ, ದೊಡ್ಡ ತಲೆಯುಳ್ಳವರಾಗಿ, ನಪುಂಸಕರಾಗಿ, ಕುರುಡರಾಗಿ, ಕಿವುಡರಾಗಿ, ಬಗ್ಗಿದವರಾಗಿ ಹುಟ್ಟುತ್ತಾರೆ. ರಾಜರ ಅಧರ್ಮದಿಂದ ಪ್ರಜೆಗಳು ಕಡಿಮೆಯಾಗುತ್ತಾರೆ.

03198036a ಸ ಏಷ ರಾಜಾ ಜನಕಃ ಸರ್ವಂ ಧರ್ಮೇಣ ಪಶ್ಯತಿ|

03198036c ಅನುಗೃಹ್ಣನ್ಪ್ರಜಾಃ ಸರ್ವಾಃ ಸ್ವಧರ್ಮನಿರತಾಃ ಸದಾ||

ನಮ್ಮ ಈ ರಾಜ ಜನಕನು ಎಲ್ಲವನ್ನೂ ಧರ್ಮದಿಂದ ನೋಡುತ್ತಾನೆ. ಸದಾ ಸ್ವಧರ್ಮನಿರತರಾದ ಪ್ರಜೆಗಳಿಗೆ ಅನುಗ್ರಹಿಸುತ್ತಾನೆ.

03198037a ಯೇ ಚೈವ ಮಾಂ ಪ್ರಶಂಸಂತಿ ಯೇ ಚ ನಿಂದಂತಿ ಮಾನವಾಃ|

03198037c ಸರ್ವಾನ್ಸುಪರಿಣೀತೇನ ಕರ್ಮಣಾ ತೋಷಯಾಮ್ಯಹಂ||

ನನ್ನನ್ನು ಪ್ರಶಂಸಿಸುವವರಿರಲಿ ನಿಂದಿಸುವವರಿರಲಿ, ಎಲ್ಲ ಜನರಿಗೂ ನಾನು ನನ್ನ ಸುಪರಿಣಿತ ಕರ್ಮಗಳಿಂದ ತೃಪ್ತಗೊಳಿಸುತ್ತೇನೆ.

03198038a ಯೇ ಜೀವಂತಿ ಸ್ವಧರ್ಮೇಣ ಸಂಭುಂಜಂತೇ ಚ ಪಾರ್ಥಿವಾಃ|

03198038c ನ ಕಿಂ ಚಿದುಪಜೀವಂತಿ ದಕ್ಷಾ ಉತ್ಥಾನಶೀಲಿನಃ||

ಸ್ವಧರ್ಮದಂತೆ ಯಾರು ಜೀವಿಸುತ್ತಾರೋ ಮತ್ತು ಭೋಗಿಸುತ್ತಾರೋ ಹಾಗೂ ಬೇರೆಯವರ ಅಥವಾ ಬೇರೊಂದನ್ನು ಆಧರಿಸಿ ಜೀವಿಸುವುದಿಲ್ಲವೋ ಅಂಥಹ ಪಾರ್ಥಿವರು ಉತ್ಥಾನಶೀಲರಾಗಿರುತ್ತಾರೆ.

03198039a ಶಕ್ತ್ಯಾನ್ನದಾನಂ ಸತತಂ ತಿತಿಕ್ಷಾ ಧರ್ಮನಿತ್ಯತಾ|

03198039c ಯಥಾರ್ಹಂ ಪ್ರತಿಪೂಜಾ ಚ ಸರ್ವಭೂತೇಷು ವೈ ದಯಾ||

03198039e ತ್ಯಾಗಾನ್ನಾನ್ಯತ್ರ ಮರ್ತ್ಯಾನಾಂ ಗುಣಾಸ್ತಿಷ್ಠಂತಿ ಪೂರುಷೇ||

ಶಕ್ತಿಯಿದ್ದಷ್ಟು ಅನ್ನದಾನ ಮಾಡುವುದು, ಸತತ ತಾಳ್ಮೆಯಲ್ಲಿರುವುದು, ನಿತ್ಯವೂ ಧರ್ಮದಲ್ಲಿರುವುದು, ಯಥಾರ್ಹವಾಗಿ ಪ್ರತಿ ಗೌರವಿಸುವುದು, ಮತ್ತು ಸರ್ವಭೂತಗಳಲ್ಲಿ ದಯೆ ಮೊದಲಾದ ಉತ್ತಮ ಮನುಷ್ಯ ಗುಣಗಳು ಪುರುಷನ ತ್ಯಾಗದಿಂದಲ್ಲದೇ ಬೇರೆಯದರಿಂದ ಹುಟ್ಟುವುದಲ್ಲ.

03198040a ಮೃಷಾವಾದಂ ಪರಿಹರೇತ್ಕುರ್ಯಾತ್ಪ್ರಿಯಮಯಾಚಿತಃ|

03198040c ನ ಚ ಕಾಮಾನ್ನ ಸಂರಂಭಾನ್ನ ದ್ವೇಷಾದ್ಧರ್ಮಮುತ್ಸೃಜೇತ್||

ಸುಳ್ಳನ್ನು ದೂರವಿಡಬೇಕು. ಕೇಳದೆಯೇ ಪ್ರಿಯವಾದುದನ್ನು ಮಾಡಬೇಕು. ಮತ್ತು ಕಾಮಕ್ಕಾಗಲೀ, ದುಡುಕಿಯಾಗಲೀ ದ್ವೇಷಕ್ಕಾಗಲೀ ಧರ್ಮವನ್ನು ಬಿಡಬಾರದು.

03198041a ಪ್ರಿಯೇ ನಾತಿಭೃಶಂ ಹೃಷ್ಯೇದಪ್ರಿಯೇ ನ ಚ ಸಂಜ್ವರೇತ್|

03198041c ನ ಮುಹ್ಯೇದರ್ಥಕೃಚ್ಚ್ರೇಷು ನ ಚ ಧರ್ಮಂ ಪರಿತ್ಯಜೇತ್||

ಬೇಕಾದದ್ದು ನಡೆದಾಗ ತುಂಬಾ ಸಂತೋಷಪಡಬಾರದು. ಬೇಡದಿದ್ದದು ನಡೆದಾಗ ಜ್ವರಪೀಡಿತರಾಗಬಾರದು. ಅಥವಾ ಕಷ್ಟಗಳು ಬಂದಾಗ ಧರ್ಮವನ್ನು ಬಿಟ್ಟುಬಿಡುವಷ್ಟು ಮೋಹಿತರಾಗಬಾರದು.

03198042a ಕರ್ಮ ಚೇತ್ಕಿಂ ಚಿದನ್ಯತ್ಸ್ಯಾದಿತರನ್ನ ಸಮಾಚರೇತ್|

03198042c ಯತ್ಕಲ್ಯಾಣಮಭಿಧ್ಯಾಯೇತ್ತತ್ರಾತ್ಮಾನಂ ನಿಯೋಜಯೇತ್||

ಯಾವ ಕರ್ಮವಾದರೂ ಒಂದು ವೇಳೆ ತಪ್ಪಾಗಿದ್ದರೆ ಅದನ್ನು ಪುನಃ ಮಾಡಬಾರದು. ತನಗೆ ಯಾವುದು ಸರಿಯೆನ್ನಿಸುತ್ತದೆಯೋ ಅದರಂತೆ ತನ್ನನ್ನು ತೊಡಗಿಸಿಕೊಳ್ಳಬೇಕು.

03198043a ನ ಪಾಪಂ ಪ್ರತಿ ಪಾಪಃ ಸ್ಯಾತ್ಸಾಧುರೇವ ಸದಾ ಭವೇತ್|

03198043c ಆತ್ಮನೈವ ಹತಃ ಪಾಪೋ ಯಃ ಪಾಪಂ ಕರ್ತುಮಿಚ್ಚತಿ||

ಪಾಪಕ್ಕೆ ಹಿಂದಿರುಗಿ ಪಾಪ ಮಾಡಬಾರದು. ಸದಾ ಸಾಧುವಾಗಿರಬೇಕು. ಪಾಪವನ್ನು ಮಾಡಬಯಸುವ ಪಾಪಿಯು ತನ್ನನ್ನು ತಾನೇ ಕೊಂದುಕೊಳ್ಳುತ್ತಾನೆ.

03198044a ಕರ್ಮ ಚೈತದಸಾಧೂನಾಂ ವೃಜಿನಾನಾಮಸಾಧುವತ್|

03198044c ನ ಧರ್ಮೋಽಸ್ತೀತಿ ಮನ್ವಾನಾಃ ಶುಚೀನವಹಸಂತಿ ಯೇ||

03198044e ಅಶ್ರದ್ದಧಾನಾ ಧರ್ಮಸ್ಯ ತೇ ನಶ್ಯಂತಿ ನ ಸಂಶಯಃ||

ಕೆಟ್ಟ ಮೋಸಗಾರರ ಕರ್ಮಗಳು ಸಾಧುವಲ್ಲ. ಧರ್ಮವೇ ಇಲ್ಲವೆಂದು ಯೋಚಿಸಿ, ಧರ್ಮದಲ್ಲಿ ಶ್ರದ್ಧೆಯನ್ನಿಡದೇ, ಶುಚಿಯಾಗಿದ್ದವರನ್ನು ಯಾರು ಅವಹೇಳನ ಮಾಡುತ್ತಾರೋ ಅವರು ನಾಶ ಹೊಂದುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.

03198045a ಮಹಾದೃತಿರಿವಾಧ್ಮಾತಃ ಪಾಪೋ ಭವತಿ ನಿತ್ಯದಾ|

03198045c ಮೂಢಾನಾಮವಲಿಪ್ತಾನಾಮಸಾರಂ ಭಾಷಿತಂ ಭವೇತ್||

03198045e ದರ್ಶಯತ್ಯಂತರಾತ್ಮಾನಂ ದಿವಾ ರೂಪಮಿವಾಂಶುಮಾನ್||

ಪಾಪಿಷ್ಟನು ನಿತ್ಯವೂ ಗಾಳಿತುಂಬಿದ ಚೀಲದಂತೆ ಉಬ್ಬಿಕೊಂಡಿರುತ್ತಾನೆ. ಮೂಢರ ಮಾತುಗಳಲ್ಲಿ ಸಾರವಿರುವುದಿಲ್ಲ ಮತ್ತು ರವಿಯು ಹೇಗೆ ಎಲ್ಲವನ್ನೂ ತೋರಿಸುತ್ತಾನೋ ಹಾಗೆ ಅದು ಅವರ ಅಂತರಾತ್ಮವನ್ನು ತೋರಿಸುತ್ತದೆ.

03198046a ನ ಲೋಕೇ ರಾಜತೇ ಮೂರ್ಖಃ ಕೇವಲಾತ್ಮಪ್ರಶಂಸಯಾ|

03198046c ಅಪಿ ಚೇಹ ಮೃಜಾ ಹೀನಃ ಕೃತವಿದ್ಯಃ ಪ್ರಕಾಶತೇ||

ಕೇವಲ ಆತ್ಮಪ್ರಶಂಸನೆಯಿಂದ ಮೂರ್ಖನು ಲೋಕದಲ್ಲಿ ರಾಜಿಸುವುದಿಲ್ಲ. ಆದರೆ ವಿದ್ಯಾವಂತನು, ಹೀನನಾಗಿದ್ದರೂ ಪ್ರಕಾಶಿಸುತ್ತಾನೆ.

03198047a ಅಬ್ರುವನ್ಕಸ್ಯ ಚಿನ್ನಿಂದಾಮಾತ್ಮಪೂಜಾಮವರ್ಣಯನ್|

03198047c ನ ಕಶ್ಚಿದ್ಗುಣಸಂಪನ್ನಃ ಪ್ರಕಾಶೋ ಭುವಿ ದೃಶ್ಯತೇ||

ಯಾರಿಗೂ ನಿಂದನೆಯನ್ನು ಮಾಡದ, ಆತ್ಮವರ್ಣನೆಯನ್ನು ಮಾಡಿ ಪೂಜಿಸಿಕೊಳ್ಳದವನು ಗುಣಸಂಪನ್ನನಾಗಿ ಭೂಮಿಯಲ್ಲಿ ಪ್ರಕಾಶಿತನಾಗಿ ಕಂಡುಬರುತ್ತಾನೆ.

03198048a ವಿಕರ್ಮಣಾ ತಪ್ಯಮಾನಃ ಪಾಪಾದ್ವಿಪರಿಮುಚ್ಯತೇ|

03198048c ನೈತತ್ಕುರ್ಯಾಂ ಪುನರಿತಿ ದ್ವಿತೀಯಾತ್ಪರಿಮುಚ್ಯತೇ||

ತಪ್ಪುಗಳಿಗೆ ಪರಿತಪಿಸಿದರೆ ಅದರ ಪಾಪದಿಂದ ಮುಕ್ತರಾಗುತ್ತಾರೆ. ಪುನಃ ಇದನ್ನು ಮಾಡುವುದಿಲ್ಲ ಎಂದು ಅದು ಮರುಕಳಿಸುವುದನ್ನು ತಪ್ಪಿಸಬೇಕು.

03198049a ಕರ್ಮಣಾ ಯೇನ ತೇನೇಹ ಪಾಪಾದ್ದ್ವಿಜವರೋತ್ತಮ|

03198049c ಏವಂ ಶ್ರುತಿರಿಯಂ ಬ್ರಹ್ಮನ್ಧರ್ಮೇಷು ಪರಿದೃಶ್ಯತೇ||

ದ್ವಿಜೋತ್ತಮ! ಈ ರೀತಿ ಯಾವುದೇ ಪಾಪದಿಂದ ಬಿಡುಗಡೆ ಹೊಂದಬಹುದು. ಬ್ರಹ್ಮನ್! ಇದು ಧರ್ಮಗಳಲ್ಲಿ ಕಂಡುಬಂದಿರುವುದು ಎಂದು ಕೇಳುತ್ತೇವೆ.

03198050a ಪಾಪಾನ್ಯಬುದ್ಧ್ವೇಹ ಪುರಾ ಕೃತಾನಿ|

         ಪ್ರಾಗ್ಧರ್ಮಶೀಲೋ ವಿನಿಹಂತಿ ಪಶ್ಚಾತ್|

03198050c ಧರ್ಮೋ ಬ್ರಹ್ಮನ್ನುದತೇ ಪೂರುಷಾಣಾಂ|

         ಯತ್ಕುರ್ವತೇ ಪಾಪಮಿಹ ಪ್ರಮಾದಾತ್||

ಹಿಂದೆ ಮಾಡಿದ ಪಾಪಗಳನ್ನು ತಿಳಿಯದೇ, ಧರ್ಮಶೀಲನು ನಂತರದಲ್ಲಿ ಅವುಗಳನ್ನು ನಾಶಪಡಿಸುತ್ತಾನೆ. ಧರ್ಮವು ತಪ್ಪಿತಸ್ಥ ಭಾವನೆಯನ್ನು, ಇಲ್ಲಿ ತಿಳಿಯದೇ ಮಾಡಿದ ಪಾಪವನ್ನು ಹೋಗಲಾಡಿಸುತ್ತದೆ.

03198051a ಪಾಪಂ ಕೃತ್ವಾ ಹಿ ಮನ್ಯೇತ ನಾಹಮಸ್ಮೀತಿ ಪೂರುಷಃ|

03198051c ಚಿಕೀರ್ಷೇದೇವ ಕಲ್ಯಾಣಂ ಶ್ರದ್ದಧಾನೋಽನಸೂಯಕಃ||

ಪಾಪವನ್ನು ಮಾಡಿ, ಇದು ನಾನಲ್ಲ ಎಂದು ತಿಳಿಯಬೇಕು. ಶ್ರದ್ಧೆಯಿಂದ ವಿರೋಧಿಸದೇ ಯಾವುದು ಸರಿಯೋ ಅದನ್ನು ಮಾಡಲು ನೋಡಬೇಕು.

03198052a ವಸನಸ್ಯೇವ ಚಿದ್ರಾಣಿ ಸಾಧೂನಾಂ ವಿವೃಣೋತಿ ಯಃ|

03198052c ಪಾಪಂ ಚೇತ್ಪುರುಷಃ ಕೃತ್ವಾ ಕಲ್ಯಾಣಮಭಿಪದ್ಯತೇ|

03198052e ಮುಚ್ಯತೇ ಸರ್ವಪಾಪೇಭ್ಯೋ ಮಹಾಭ್ರೈರಿವ ಚಂದ್ರಮಾಃ||

ಸಾಧುಗಳ ಬಟ್ಟೆಯ ಹರಕುಗಳನ್ನು ಮುಚ್ಚಿದರೂ ಕೂಡ ಪಾಪಗಳನ್ನು ಕಳೆದುಕೊಂಡು ಪುರುಷನು ಕಲ್ಯಾಣವನ್ನು ಹೊಂದುತ್ತಾನೆ. ಚಂದ್ರನು ಮಹಾಮೋಡಗಳಿಂದ ಹೇಗೋ ಹಾಗೆ ಸರ್ವ ಪಾಪಗಳಿಂದ ಬಿಡುಗಡೆ ಹೊಂದುತ್ತಾನೆ.

03198053a ಯಥಾದಿತ್ಯಃ ಸಮುದ್ಯನ್ವೈ ತಮಃ ಸರ್ವಂ ವ್ಯಪೋಹತಿ|

03198053c ಏವಂ ಕಲ್ಯಾಣಮಾತಿಷ್ಠನ್ಸರ್ವಪಾಪೈಃ ಪ್ರಮುಚ್ಯತೇ||

ಉದಯವಾಗುವ ಸೂರ್ಯನು ಹೇಗೆ ಎಲ್ಲ ಕತ್ತಲೆಯನ್ನೂ ಕಳೆಯುತ್ತಾನೋ ಹಾಗೆ ಕಲ್ಯಾಣ ಕಾರ್ಯಗಳನ್ನು ಮಾಡುವುದರಿಂದ ಸರ್ವಪಾಪಗಳಿಂದ ಬಿಡುಗಡೆಯಾಗುತ್ತದೆ.

03198054a ಪಾಪಾನಾಂ ವಿದ್ಧ್ಯಧಿಷ್ಠಾನಂ ಲೋಭಮೇವ ದ್ವಿಜೋತ್ತಮ|

03198054c ಲುಬ್ಧಾಃ ಪಾಪಂ ವ್ಯವಸ್ಯಂತಿ ನರಾ ನಾತಿಬಹುಶ್ರುತಾಃ|

03198054e ಅಧರ್ಮಾ ಧರ್ಮರೂಪೇಣ ತೃಣೈಃ ಕೂಪಾ ಇವಾವೃತಾಃ||

ದ್ವಿಜೋತ್ತಮ! ಲೋಭವೇ ಪಾಪಗಳ ಕೇಂದ್ರಬಿಂದುವೆಂದು ತಿಳಿ. ದುರಾಸಿ ನರರು, ಬಹಳಷ್ಟು ವಿವೇಕವಿಲ್ಲದೇ, ಪಾಪಕರ್ಮಗಳಲ್ಲಿ ತೊಡಗುತ್ತಾರೆ ಮತ್ತು ಹುಲ್ಲುಗಳಿಂದ ಮುಚ್ಚಲ್ಪಟ್ಟ ಬಾವಿಯಂತೆ ಧರ್ಮದ ರೂಪವನ್ನು ತೊಟ್ಟಿರುವ ಅವರು ಅಧರ್ಮಿಗಳು.

03198055a ತೇಷಾಂ ದಮಃ ಪವಿತ್ರಾಣಿ ಪ್ರಲಾಪಾ ಧರ್ಮಸಂಶ್ರಿತಾಃ|

03198055c ಸರ್ವಂ ಹಿ ವಿದ್ಯತೇ ತೇಷು ಶಿಷ್ಟಾಚಾರಃ ಸುದುರ್ಲಭಃ||

ಅವರಲ್ಲಿ ದಮವಿದೆ. ಪವಿತ್ರ ಮಾತುಗಳನ್ನಾಡುತ್ತಾರೆ. ಧರ್ಮಸಂಶ್ರಿತರಾಗಿರುತ್ತಾರೆ. ಎಲ್ಲವನ್ನು ತಿಳಿದುಕೊಂಡಿರುತ್ತಾರೆ. ಆದರೆ ಅವರಲ್ಲಿ ಶಿಷ್ಟಾಚಾರವು ದುರ್ಲಭವಾಗಿರುತ್ತದೆ.””

03198056 ಮಾರ್ಕಂಡೇಯ ಉವಾಚ|

03198056a ಸ ತು ವಿಪ್ರೋ ಮಹಾಪ್ರಾಜ್ಞೋ ಧರ್ಮವ್ಯಾಧಮಪೃಚ್ಚತ|

03198056c ಶಿಷ್ಟಾಚಾರಂ ಕಥಮಹಂ ವಿದ್ಯಾಮಿತಿ ನರೋತ್ತಮ|

03198056e ಏತನ್ಮಹಾಮತೇ ವ್ಯಾಧ ಪ್ರಬ್ರವೀಹಿ ಯಥಾತಥಂ||

ಮಾರ್ಕಂಡೇಯನು ಹೇಳಿದನು: “ಆಗ ಮಹಾಪ್ರಾಜ್ಞ ವಿಪ್ರನು ಧರ್ಮವ್ಯಾಧನನ್ನು ಕೇಳಿದನು: “ಶಿಷ್ಟಾಚಾರವೆಂದರೆ ಏನೆಂದು ತಿಳಿಸು. ಮಹಾಮತಿ! ನರೋತ್ತಮ! ವ್ಯಾಧ! ಇದರ ಕುರಿತು ಯಥಾವತ್ತಾಗಿ ಹೇಳು.”

03198057 ವ್ಯಾಧ ಉವಾಚ|

03198057a ಯಜ್ಞೋ ದಾನಂ ತಪೋ ವೇದಾಃ ಸತ್ಯಂ ಚ ದ್ವಿಜಸತ್ತಮ|

03198057c ಪಂಚೈತಾನಿ ಪವಿತ್ರಾಣಿ ಶಿಷ್ಟಾಚಾರೇಷು ನಿತ್ಯದಾ||

ವ್ಯಾಧನು ಹೇಳಿದನು: “ದ್ವಿಜಸತ್ತಮ! ಯಜ್ಞ, ದಾನ, ತಪಸ್ಸು, ವೇದಗಳು ಮತ್ತು ಸತ್ಯ ಈ ಐದು ನಿತ್ಯವೂ ಪವಿತ್ರವಾಗಿರುವ ಶಿಷ್ಟಾಚಾರಗಳು.

03198058a ಕಾಮಕ್ರೋಧೌ ವಶೇ ಕೃತ್ವಾ ದಂಭಂ ಲೋಭಮನಾರ್ಜವಂ|

03198058c ಧರ್ಮ ಇತ್ಯೇವ ಸಂತುಷ್ಟಾಸ್ತೇ ಶಿಷ್ಟಾಃ ಶಿಷ್ಟಸಮ್ಮತಾಃ||

ಕಾಮ-ಕ್ರೋಧಗಳನ್ನು, ಜಂಬ, ಲೋಭ, ಮತ್ತು ಅಪ್ರಾಮಾಣಿಕತೆಗಳನ್ನು ವಶದಲ್ಲಿಟ್ಟುಕೊಂಡು ಶಿಷ್ಟರು, ಶಿಷ್ಟರಿಂದ ಒಪ್ಪಿಗೆಯನ್ನು ಪಡೆದು, ಧರ್ಮದಲ್ಲಿಯೇ ಸಂತುಷ್ಟರಾಗಿರುತ್ತಾರೆ.

03198059a ನ ತೇಷಾಂ ವಿದ್ಯತೇಽವೃತ್ತಂ ಯಜ್ಞಸ್ವಾಧ್ಯಾಯಶೀಲಿನಾಂ|

03198059c ಆಚಾರಪಾಲನಂ ಚೈವ ದ್ವಿತೀಯಂ ಶಿಷ್ಟಲಕ್ಷಣಂ||

ಯಜ್ಞ ಮತ್ತು ಸ್ವಾಧ್ಯಾಯದಲ್ಲಿ ತೊಡಗಿಸಿಕೊಂಡವರಿಗೆ ವೃತ್ತಿಯಿಲ್ಲದೇ ಇರುವುದಿಲ್ಲ. ಅವರು ಸರಿಯಾದ ಆಚಾರಗಳನ್ನು ಪಾಲಿಸುತ್ತಾರೆ. ಇದು ಶಿಷ್ಟರ ಎರಡನೆಯ ಲಕ್ಷಣ.

03198060a ಗುರುಶುಶ್ರೂಷಣಂ ಸತ್ಯಮಕ್ರೋಧೋ ದಾನಮೇವ ಚ|

03198060c ಏತಚ್ಚತುಷ್ಟಯಂ ಬ್ರಹ್ಮಂ ಶಿಷ್ಟಾಚಾರೇಷು ನಿತ್ಯದಾ||

ಬ್ರಾಹ್ಮಣ! ಗುರುಶುಶ್ರೂಷಣ, ಸತ್ಯ, ಅಕ್ರೋಧ, ಮತ್ತು ದಾನ ಈ ನಾಲ್ಕು ನಿತ್ಯವೂ ಶಿಷ್ಟಾಚಾರಗಳು.

03198061a ಶಿಷ್ಟಾಚಾರೇ ಮನಃ ಕೃತ್ವಾ ಪ್ರತಿಷ್ಠಾಪ್ಯ ಚ ಸರ್ವಶಃ|

03198061c ಯಾಮಯಂ ಲಭತೇ ತುಷ್ಟಿಂ ಸಾ ನ ಶಕ್ಯಾ ಹ್ಯತೋಽನ್ಯಥಾ||

ಶಿಷ್ಟಾಚಾರದಲ್ಲಿ ಮನಸ್ಸು ಮಾಡಿ ಯಾವಾಗಲೂ ಅದರಲ್ಲಿಯೇ ಇರುವವನು ಬೇರೆ ಯಾವುದರಿಂದಲೂ ಪಡೆಯಲಾಗದ ತೃಪ್ತಿಯನ್ನು ಪಡೆಯುತ್ತಾನೆ.

03198062a ವೇದಸ್ಯೋಪನಿಷತ್ಸತ್ಯಂ ಸತ್ಯಸ್ಯೋಪನಿಷದ್ದಮಃ|

03198062c ದಮಸ್ಯೋಪನಿಷತ್ತ್ಯಾಗಃ ಶಿಷ್ಟಾಚಾರೇಷು ನಿತ್ಯದಾ||

ನಿತ್ಯದ ಶಿಷ್ಟಾಚಾರಗಳಲ್ಲಿ ವೇದದ ಗುಟ್ಟು ಸತ್ಯ, ಸತ್ಯದ ಗುಟ್ಟು ದಮ, ಮತ್ತು ದಮದ ಗುಟ್ಟು ತ್ಯಾಗ.

03198063a ಯೇ ತು ಧರ್ಮಮಸೂಯಂತೇ ಬುದ್ಧಿಮೋಹಾನ್ವಿತಾ ನರಾಃ|

03198063c ಅಪಥಾ ಗಚ್ಚತಾಂ ತೇಷಾಮನುಯಾತಾಪಿ ಪೀಡ್ಯತೇ||

ಬುದ್ಧಿಮೋಹಾನ್ವಿತರಾಗಿ ಧರ್ಮವನ್ನು ವಿರೋಧಿಸಿ ಬೇರೆಯೇ ಮಾರ್ಗದಲ್ಲಿ ಹೋಗುವವರನ್ನು ಹಿಂಬಾಲಿಸುವವರೂ ಕೂಡ ಪೀಡೆಗೊಳಗಾಗುತ್ತಾರೆ.

03198064a ಯೇ ತು ಶಿಷ್ಟಾಃ ಸುನಿಯತಾಃ ಶ್ರುತಿತ್ಯಾಗಪರಾಯಣಾಃ|

03198064c ಧರ್ಮ್ಯಂ ಪಂಥಾನಮಾರೂಢಾಃ ಸತ್ಯಧರ್ಮಪರಾಯಣಾಃ||

ಆದರೆ ಸುನಿಯತರಾದ, ಶ್ರುತಿತ್ಯಾಗಪರಾಯಣರಾದ ಶಿಷ್ಟರು ಧರ್ಮದ ದಾರಿಯನ್ನು ಏರಿ, ಸತ್ಯಧರ್ಮಪರಾಯಣರಾಗಿರುತ್ತಾರೆ.

03198065a ನಿಯಚ್ಚಂತಿ ಪರಾಂ ಬುದ್ಧಿಂ ಶಿಷ್ಟಾಚಾರಾನ್ವಿತಾ ನರಾಃ|

03198065c ಉಪಾಧ್ಯಾಯಮತೇ ಯುಕ್ತಾಃ ಸ್ಥಿತ್ಯಾ ಧರ್ಮಾರ್ಥದರ್ಶಿನಃ||

ಶಿಷ್ಟಾಚಾರದಂತೆ ನಡೆದುಕೊಳ್ಳುವ ನರರು ಪರಮ ಬುದ್ಧಿಯನ್ನು ನಿಯಂತ್ರಣದಲ್ಲಿಟ್ಟುಕೊಂಡಿರುತ್ತಾರೆ. ಧರ್ಮಾರ್ಥದರ್ಶಿಗಳಾಗಿದ್ದುಕೊಂಡು ತಮ್ಮ ಉಪಾಧ್ಯಾಯರಿಗೆ ವಿನೀತರಾಗಿರುತ್ತಾರೆ.

03198066a ನಾಸ್ತಿಕಾನ್ಭಿನ್ನಮರ್ಯಾದಾನ್ಕ್ರೂರಾನ್ಪಾಪಮತೌ ಸ್ಥಿತಾನ್|

03198066c ತ್ಯಜ ತಾಂ ಜ್ಞಾನಮಾಶ್ರಿತ್ಯ ಧಾರ್ಮಿಕಾನುಪಸೇವ್ಯ ಚ||

ನಾಸ್ತಿಕರನ್ನು, ಮರ್ಯಾದೆಯನ್ನು ಮೀರುವವರನ್ನು, ಕ್ರೂರರನ್ನು ಮತ್ತು ಪಾಪಮತಿಗಳನ್ನು ತ್ಯಜಿಸು. ಜ್ಞಾನವನ್ನು ಅವಲಂಬಿಸಿ, ಧಾರ್ಮಿಕರನ್ನು ಅನುಸರಿಸು.

03198067a ಕಾಮಲೋಭಗ್ರಹಾಕೀರ್ಣಾಂ ಪಂಚೇಂದ್ರಿಯಜಲಾಂ ನದೀಂ|

03198067c ನಾವಂ ಧೃತಿಮಯೀಂ ಕೃತ್ವಾ ಜನ್ಮದುರ್ಗಾಣಿ ಸಂತರ||

ಧೃತಿಯೆನ್ನುವ ನಾವೆಯನ್ನು ಕಟ್ಟಿ ಕಾಮಲೋಭಗಳೆಂಬ ಮೊಸಳೆಗಳನ್ನುಳ್ಳ, ಪಂಚೇಂದ್ರಿಯಗಳೇ ನೀರಾಗಿ ಹರಿಯುವ ನದಿಯನ್ನು ದಾಟಿ ಜನ್ಮದ ಆಚೆ ಹೋಗು.

03198068a ಕ್ರಮೇಣ ಸಂಚಿತೋ ಧರ್ಮೋ ಬುದ್ಧಿಯೋಗಮಯೋ ಮಹಾನ್|

03198068c ಶಿಷ್ಟಾಚಾರೇ ಭವೇತ್ಸಾಧೂ ರಾಗಃ ಶುಕ್ಲೇವ ವಾಸಸಿ||

ಕ್ರಮೇಣವಾಗಿ ಸಂಚಿತಗೊಳಿಸಿದ, ಬುದ್ಧಿಯೋಗಮಯವಾದ ಧರ್ಮವು ಬೆಳೆದು ಸಾಧುಗಳ ಶಿಷ್ಟಾಚಾರವಾಗಿ ಬಿಳೀ ಬಟ್ಟೆಯ ಮೇಲೆ ಕೆಂಪು ಬಿಂದುವಿನಂತೆ ತೋರುತ್ತದೆ.

03198069a ಅಹಿಂಸಾ ಸತ್ಯವಚನಂ ಸರ್ವಭೂತಹಿತಂ ಪರಂ|

03198069c ಅಹಿಂಸಾ ಪರಮೋ ಧರ್ಮಃ[1] ಸ ಚ ಸತ್ಯೇ ಪ್ರತಿಷ್ಠಿತಃ|

03198069e ಸತ್ಯೇ ಕೃತ್ವಾ ಪ್ರತಿಷ್ಠಾಂ ತು ಪ್ರವರ್ತಂತೇ ಪ್ರವೃತ್ತಯಃ||

ಅಹಿಂಸೆ ಮತ್ತು ಸತ್ಯವಚನಗಳು ಸರ್ವಭೂತಗಳಿಗೂ ಪರಮ ಹಿತವಾದವುಗಳು. ಅಹಿಂಸೆಯು ಪರಮ ಧರ್ಮ ಮತ್ತು ಅದು ಸತ್ಯದಲ್ಲಿ ನೆಲೆಗೊಂಡಿದೆ. ಸತ್ಯದಲ್ಲಿದ್ದುಕೊಂಡು ಮಾಡುವವೆಲ್ಲವೂ ಪ್ರವೃತ್ತಿಯಂತೆ ವೃದ್ಧಿಯಾಗುತ್ತವೆ.

03198070a ಸತ್ಯಮೇವ ಗರೀಯಸ್ತು ಶಿಷ್ಟಾಚಾರನಿಷೇವಿತಂ|

03198070c ಆಚಾರಶ್ಚ ಸತಾಂ ಧರ್ಮಃ ಸಂತಶ್ಚಾಚಾರಲಕ್ಷಣಾಃ||

ಶಿಷ್ಟಾಚಾರದಲ್ಲಿರುವವರ ಸತ್ಯವು ಇನ್ನೂ ಹೆಚ್ಚಿನದು. ಸತ್ಯವಂತರ ಆಚಾರವೇ ಧರ್ಮ. ಆಚಾರವೇ ಸತ್ಯವಂತರ ಲಕ್ಷಣ.

03198071a ಯೋ ಯಥಾಪ್ರಕೃತಿರ್ಜಂತುಃ ಸ್ವಾಂ ಸ್ವಾಂ ಪ್ರಕೃತಿಮಶ್ನುತೇ|

03198071c ಪಾಪಾತ್ಮಾ ಕ್ರೋಧಕಾಮಾದೀನ್ದೋಷಾನಾಪ್ನೋತ್ಯನಾತ್ಮವಾನ್||

ಪ್ರತಿಯೊಂದು ಜಂತುವೂ ಅದರ ಪ್ರಕೃತಿಯನ್ನು, ಅದು ಏನೇ ಇರಲಿ, ಅನುಸರಿಸುತ್ತದೆ. ತನ್ನನ್ನು ನಿಯಂತ್ರಣದಲ್ಲಿಟ್ಟುಕೊಂಡಿರದ ಪಾಪಾತ್ಮನು ಕಾಮ-ಕ್ರೋಧಾದಿ ದೋಷಗಳನ್ನು ಹೊಂದುತ್ತಾನೆ.

03198072a ಆರಂಭೋ ನ್ಯಾಯಯುಕ್ತೋ ಯಃ ಸ ಹಿ ಧರ್ಮ ಇತಿ ಸ್ಮೃತಃ|

03198072c ಅನಾಚಾರಸ್ತ್ವಧರ್ಮೇತಿ ಏತಚ್ಚಿಷ್ಟಾನುಶಾಸನಂ||

ನ್ಯಾಯಯುಕ್ತವಾಗಿ ಆರಂಭಿಸಿದುದನ್ನೇ ಧರ್ಮವೆಂದು ಹೇಳುತ್ತಾರೆ. ಅನಾಚಾರವು ಅಧರ್ಮ ಎಂದು ಶಿಷ್ಟಾಚಾರಿಗಳು ಹೇಳುತ್ತಾರೆ.

03198073a ಅಕ್ರುಧ್ಯಂತೋಽನಸೂಯಂತೋ ನಿರಹಂಕಾರಮತ್ಸರಾಃ|

03198073c ಋಜವಃ ಶಮಸಂಪನ್ನಾಃ ಶಿಷ್ಟಾಚಾರಾ ಭವಂತಿ ತೇ||

ಸಿಟ್ಟಾಗದವರು, ಅಸೂಯೆ ಪಡದವರು, ನಿರಹಂಕಾರಿಗಳು, ಮತ್ಸರಕ್ಕೊಳಗಾಗದವರು, ವಿಧೇಯರಾಗಿರುವವರು ಮತ್ತು ಶಾಂತರಾಗಿರುವವರು ಶಿಷ್ಟಾಚಾರಿಗಳು.

03198074a ತ್ರೈವಿದ್ಯವೃದ್ಧಾಃ ಶುಚಯೋ ವೃತ್ತವಂತೋ ಮನಸ್ವಿನಃ|

03198074c ಗುರುಶುಶ್ರೂಷವೋ ದಾಂತಾಃ ಶಿಷ್ಟಾಚಾರಾ ಭವಂತ್ಯುತ||

ಮೂರು ವೇದಗಳಲ್ಲಿ ವೃದ್ಧರಾಗಿರುವವರು, ಶುಚಿಗಳು, ವೃತ್ತಿವಂತರು, ಮನಸ್ವಿಗಳು, ಗುರುಶುಶ್ರೂಷೆ ಮಾಡುವವರು ಮತ್ತು ತಮ್ಮನ್ನು ತಾವು ನಿಯಂತ್ರಣದಲ್ಲಿಟ್ಟುಕೊಂಡಿರುವವರು ಶಿಷ್ಟಾಚಾರಿಗಳು.

03198075a ತೇಷಾಮದೀನಸತ್ತ್ವಾನಾಂ ದುಷ್ಕರಾಚಾರಕರ್ಮಣಾಂ|

03198075c ಸ್ವೈಃ ಕರ್ಮಭಿಃ ಸತ್ಕೃತಾನಾಂ ಘೋರತ್ವಂ ಸಂಪ್ರಣಶ್ಯತಿ||

ದೀನರಲ್ಲದವರು, ಸತ್ವವಿಲ್ಲದವರು, ದುಷ್ಕರ ಆಚಾರಕರ್ಮಿಗಳು, ಮತ್ತು ತಮ್ಮದೇ ಕರ್ಮಗಳಿಂದ ಸತ್ಕೃತರಾದವರಲ್ಲಿ ಘೋರತ್ವವು ನಾಶಗೊಳ್ಳುತ್ತದೆ.

03198076a ತಂ ಸದಾಚಾರಮಾಶ್ಚರ್ಯಂ ಪುರಾಣಂ ಶಾಶ್ವತಂ ಧ್ರುವಂ|

03198076c ಧರ್ಮಂ ಧರ್ಮೇಣ ಪಶ್ಯಂತಃ ಸ್ವರ್ಗಂ ಯಾಂತಿ ಮನೀಷಿಣಃ||

ಈ ಸದಾಚಾರ ಧರ್ಮವನ್ನು ಆಶ್ಚರ್ಯ, ಪುರಾಣ, ಶಾಶ್ವತ, ಧ್ರುವವೆಂದು ಧರ್ಮದಿಂದ ನೋಡುವ ಮನೀಷಿಗಳು ಸ್ವರ್ಗಕ್ಕೆ ಹೋಗುತ್ತಾರೆ.

03198077a ಆಸ್ತಿಕಾ ಮಾನಹೀನಾಶ್ಚ ದ್ವಿಜಾತಿಜನಪೂಜಕಾಃ|

03198077c ಶ್ರುತವೃತ್ತೋಪಸಂಪನ್ನಾಃ ತೇ ಸಂತಃ ಸ್ವರ್ಗಗಾಮಿನಃ||

ಆಸ್ತಿಕರು, ಜಂಬವಿಲ್ಲದವರು, ದ್ವಿಜಾತಿಯವರನ್ನು ಪೂಜಿಸುವವರು, ಮತ್ತು ಶ್ರುತಿಗಳಂತೆ ನಡೆದುಕೊಳ್ಳುವ ಸಂತರು ಸ್ವರ್ಗಗಾಮಿಗಳಾಗುತ್ತಾರೆ.

03198078a ವೇದೋಕ್ತಃ ಪರಮೋ ಧರ್ಮೋ ಧರ್ಮಶಾಸ್ತ್ರೇಷು ಚಾಪರಃ|

03198078c ಶಿಷ್ಟಾಚೀರ್ಣಶ್ಚ ಶಿಷ್ಟಾನಾಂ ತ್ರಿವಿಧಂ ಧರ್ಮಲಕ್ಷಣಂ||

ವೇದಗಳಲ್ಲಿ ಹೇಳಿದುದು ಪರಮ ಧರ್ಮ. ಧರ್ಮಶಾಸ್ತ್ರಗಳಲ್ಲಿರುವವು ಇನ್ನೊಂದು ಧರ್ಮ. ಶಿಷ್ಟರ ಶಿಷ್ಟಾಚಾರಗಳು ಇನ್ನೊಂದು. ಹೀಗೆ ಮೂರು ವಿಧದ ಧರ್ಮ ಲಕ್ಷಣಗಳಿವೆ.

03198079a ಪಾರಣಂ ಚಾಪಿ ವಿದ್ಯಾನಾಂ ತೀರ್ಥಾನಾಮವಗಾಹನಂ|

03198079c ಕ್ಷಮಾ ಸತ್ಯಾರ್ಜವಂ ಶೌಚಂ ಶಿಷ್ಟಾಚಾರನಿದರ್ಶನಂ||

ವೇದಗಳ ಪಾರಾಯಣ, ತೀರ್ಥಗಳಲ್ಲಿ ಸ್ನಾನ, ಕ್ಷಮೆ, ಸತ್ಯ, ವಿಧೇಯತೆ ಮತ್ತು ಶುಚಿ ಇವು ಶಿಷ್ಟಾಚಾರಿಗಳ ನಿದರ್ಶನಗಳು.

03198080a ಸರ್ವಭೂತದಯಾವಂತೋ ಅಹಿಂಸಾನಿರತಾಃ ಸದಾ|

03198080c ಪರುಷಂ ನ ಪ್ರಭಾಷಂತೇ ಸದಾ ಸಂತೋ ದ್ವಿಜಪ್ರಿಯಾಃ||

ಸರ್ವಭೂತಗಳ ಮೇಲೂ ದಯಾವಂತನಾಗಿರುವ, ಸದಾ ಅಹಿಂಸ ನಿರತನಾಗಿರುವ, ದ್ವಿಜಪ್ರಿಯ ಪುರುಷನನ್ನು ಸದಾ ಸಂತನೆಂದು ಕರೆಯುತ್ತಾರೆ.

03198081a ಶುಭಾನಾಮಶುಭಾನಾಂ ಚ ಕರ್ಮಣಾಂ ಫಲಸಂಚಯೇ|

03198081c ವಿಪಾಕಮಭಿಜಾನಂತಿ ತೇ ಶಿಷ್ಟಾಃ ಶಿಷ್ಟಸಮ್ಮತಾಃ||

ಶುಭಾಶುಭ ಕರ್ಮಗಳ ಫಲಸಂಚಯಗಳಿಂದ ಯಾವುದು ತಯಾರಾಗಿದೆ ಎಂದು ತಿಳಿದವರನ್ನು ಶಿಷ್ಟರು ಶಿಷ್ಟರೆಂದು ಒಪ್ಪಿಕೊಳ್ಳುತ್ತಾರೆ.

03198082a ನ್ಯಾಯೋಪೇತಾ ಗುಣೋಪೇತಾಃ ಸರ್ವಲೋಕಹಿತೈಷಿಣಃ|

03198082c ಸಂತಃ ಸ್ವರ್ಗಜಿತಃ ಶುಕ್ಲಾಃ ಸನ್ನಿವಿಷ್ಟಾಶ್ಚ ಸತ್ಪಥೇ||

ನ್ಯಾಯೋಪೇತರಾದ, ಗುಣೋಪೇತರಾದ, ಸರ್ವಲೋಕ ಹಿತೈಷಿಗಳಾದ, ಪರಿಶುದ್ಧ ಸಂತರು ಸ್ವರ್ಗವನ್ನು ಗೆದ್ದು ಸತ್ಪಥದಲ್ಲಿಯೇ ಇರುತ್ತಾರೆ.

03198083a ದಾತಾರಃ ಸಂವಿಭಕ್ತಾರೋ ದೀನಾನುಗ್ರಹಕಾರಿಣಃ|

03198083c ಸರ್ವಭೂತದಯಾವಂತಸ್ತೇ ಶಿಷ್ಟಾಃ ಶಿಷ್ಟಸಮ್ಮತಾಃ||

ಕೊಡುವವರು, ಹಂಚಿಕೊಳ್ಳುವವರು, ದೀನರಿಗೆ ಅನುಗ್ರಹವನ್ನು ಮಾಡುವವರು, ಸರ್ವಭೂತಗಳಿಗೂ ದಯೆಯನ್ನು ತೋರಿಸುವವರು ಶಿಷ್ಟರಿಂದ ಶಿಷ್ಟರಾಗಿ ಸ್ವೀಕೃತಗೊಳ್ಳುವರು.

03198084a ಸರ್ವಪೂಜ್ಯಾಃ ಶ್ರುತಧನಾಸ್ತಥೈವ ಚ ತಪಸ್ವಿನಃ|

03198084c ದಾನನಿತ್ಯಾಃ ಸುಖಾಽಲ್ಲೋಕಾನಾಪ್ನುವಂತೀಹ ಚ ಶ್ರಿಯಂ||

ಸರ್ವರಿಗೂ ಪೂಜ್ಯರಾಗಿ, ಶ್ರದ್ಧೆ ಮತ್ತು ತಪಸ್ಸುಗಳಿಂದ ಕೂಡಿಕೊಂಡು, ಸದಾ ದಾನವನ್ನು ನೀಡುವವರು ಸುಖ ಲೋಕಗಳನ್ನು ಮತ್ತು ಇಲ್ಲಿ ಸಂಪತ್ತನ್ನೂ ಹೊಂದುತ್ತಾರೆ.

03198085a ಪೀಡಯಾ ಚ ಕಲತ್ರಸ್ಯ ಭೃತ್ಯಾನಾಂ ಚ ಸಮಾಹಿತಾಃ|

03198085c ಅತಿಶಕ್ತ್ಯಾ ಪ್ರಯಚ್ಚಂತಿ ಸಂತಃ ಸದ್ಭಿಃ ಸಮಾಗತಾಃ||

ಸಂತರು ಸಂತರನ್ನು ಕೂಡಿದಾಗ ಪತ್ನಿ ಮತ್ತು ಅವಲಂಬಿಗಳಿಗೆ ಪೀಡೆಯೊದಗಿದರೂ ಶಕ್ತಿಗಿಂತ ಅತಿಯಾದುದನ್ನು ಕೊಡುತ್ತಾರೆ.

03198086a ಲೋಕಯಾತ್ರಾಂ ಚ ಪಶ್ಯಂತೋ ಧರ್ಮಮಾತ್ಮಹಿತಾನಿ ಚ|

03198086c ಏವಂ ಸಂತೋ ವರ್ತಮಾನಾ ಏಧಂತೇ ಶಾಶ್ವತೀಃ ಸಮಾಃ||

ಸಂತರು ಹೀಗೆ ಲೋಕಯಾತ್ರೆ, ಧರ್ಮ ಮತ್ತು ಆತ್ಮಹಿತವನ್ನು ನೋಡಿಕೊಂಡು, ಬಹು ವರ್ಷಗಳು ವೃದ್ಧಿ ಹೊಂದುತ್ತಾರೆ.

03198087a ಅಹಿಂಸಾ ಸತ್ಯವಚನಮಾನೃಶಂಸ್ಯಮಥಾರ್ಜವಂ|

03198087c ಅದ್ರೋಹೋ ನಾತಿಮಾನಶ್ಚ ಹ್ರೀಸ್ತಿತಿಕ್ಷಾ ದಮಃ ಶಮಃ||

03198088a ಧೀಮಂತೋ ಧೃತಿಮಂತಶ್ಚ ಭೂತಾನಾಮನುಕಂಪಕಾಃ|

03198088c ಅಕಾಮದ್ವೇಷಸಮ್ಯುಕ್ತಾಸ್ತೇ ಸಂತೋ ಲೋಕಸತ್ಕೃತಾಃ||

ಅಹಿಂಸೆ, ಸತ್ಯವಚನ, ವೃದುತ್ವ, ವಿಧೇಯತೆಗಳಿರುವ, ಭಯದಿಂದ ದೂರವಿರುವ, ಜಂಬವಿಲ್ಲದಿರುವ, ಅದ್ರೋಹಿ, ವಿನಯ, ಧೀಮಂತ, ಧೃತಿವಂತ, ಭೂತಗಳ ಮೇಲೆ ಅನುಕಂಪವಿರುವ, ಕಾಮ ದ್ವೇಷರಹಿತರಾದ ಸಂತರು ಲೋಕದಲ್ಲಿ ಸತ್ಕೃತರಾಗಿರುತ್ತಾರೆ.

03198089a ತ್ರೀಣ್ಯೇವ ತು ಪದಾನ್ಯಾಹುಃ ಸತಾಂ ವೃತ್ತಮನುತ್ತಮಂ|

03198089c ನ ದ್ರುಹ್ಯೇಚ್ಚೈವ ದದ್ಯಾಚ್ಚ ಸತ್ಯಂ ಚೈವ ಸದಾ ವದೇತ್||

ಈ ಮೂರು ಸಂತರ ಲಕ್ಷಣಗಳು ಮತ್ತು ಅನುತ್ತಮ ನಡತೆಯೆಂದು ಹೇಳುತ್ತಾರೆ: ದ್ರೋಹವೆಸಗದಿಲ್ಲದಿರುವುದು, ದಾನ ಮಾಡುವುದು, ಮತ್ತು ಸದಾ ಸತ್ಯವನ್ನೇ ಮಾತನಾಡುವುದು.

03198090a ಸರ್ವತ್ರ ಚ ದಯಾವಂತಃ ಸಂತಃ ಕರುಣವೇದಿನಃ|

03198090c ಗಚ್ಚಂತೀಹ ಸುಸಂತುಷ್ಟಾ ಧರ್ಮ್ಯಂ ಪಂಥಾನಮುತ್ತಮಂ||

ಎಲ್ಲರ ಮೇಲೂ ದಯಾವಂತರಾದ, ಕರುಣವೇದಿ ಸಂತರು ತುಂಬಾ ಸಂತುಷ್ಟರಾಗಿ, ಉತ್ತಮ ಧರ್ಮಮಾರ್ಗದಲ್ಲಿ ನಡೆಯುತ್ತಾರೆ.

03198090e ಶಿಷ್ಟಾಚಾರಾ ಮಹಾತ್ಮಾನೋ ಯೇಷಾಂ ಧರ್ಮಃ ಸುನಿಶ್ಚಿತಃ||

03198091a ಅನಸೂಯಾ ಕ್ಷಮಾ ಶಾಂತಿಃ ಸಂತೋಷಃ ಪ್ರಿಯವಾದಿತಾ|

03198091c ಕಾಮಕ್ರೋಧಪರಿತ್ಯಾಗಃ ಶಿಷ್ಟಾಚಾರನಿಷೇವಣಂ||

ಮಹಾತ್ಮ ಶಿಷ್ಟಾಚಾರಿಗಳು ಈ ಧರ್ಮವನ್ನು ಸುನಿಶ್ಚಿತ ಮಾಡಿಕೊಂಡು ಅಸೂಯೆ ಪಡೆಯುವುದಿಲ್ಲ. ಕಾಮಕ್ರೋಧವನ್ನು ಪರಿತ್ಯಜಿಸಿ, ಕ್ಷಮಾ, ಶಾಂತಿ, ಸಂತೋಷ, ಪ್ರಿಯವಾದಿ, ಶಿಷ್ಟಾಚಾರವನ್ನು ಪಾಲಿಸುತ್ತಾರೆ.

03198092a ಕರ್ಮಣಾ ಶ್ರುತಸಂಪನ್ನಂ ಸತಾಂ ಮಾರ್ಗಮನುತ್ತಮಂ|

03198092c ಶಿಷ್ಟಾಚಾರಂ ನಿಷೇವಂತೇ ನಿತ್ಯಂ ಧರ್ಮೇಷ್ವತಂದ್ರಿತಾಃ||

ಧರ್ಮದಿಂದ ಆಯಾಸಗೊಳ್ಳದೇ ಇರುವವರು ಶಿಷ್ಟಾಚಾರಗಳಲ್ಲಿ ರುಚಿಯನ್ನಿಟ್ಟುಕೊಂಡಿರುತ್ತಾರೆ; ಮತ್ತು ಈ ಸಂತರ ಶ್ರುತಸಂಪನ್ನವಾದ ಅನುತ್ತಮ ಕರ್ಮ ಮಾರ್ಗವನ್ನು ಅನುಸರಿಸುತ್ತಾರೆ.

03198093a ಪ್ರಜ್ಞಾಪ್ರಾಸಾದಮಾರುಹ್ಯ ಮುಹ್ಯತೋ ಮಹತೋ ಜನಾನ್|

03198093c ಪ್ರೇಕ್ಷಂತೋ ಲೋಕವೃತ್ತಾನಿ ವಿವಿಧಾನಿ ದ್ವಿಜೋತ್ತಮ||

03198093e ಅತಿಪುಣ್ಯಾನಿ ಪಾಪಾನಿ ತಾನಿ ದ್ವಿಜವರೋತ್ತಮ||

ದ್ವಿಜೋತ್ತಮ! ದ್ವಿಜವರೋತ್ತಮ! ಪ್ರಜ್ಞೆಯೆನ್ನುವ ಮಹಡಿಯನ್ನೇರಿ ಮಹಾ ಜನತೆಯು ಗೊಂದಲದಲ್ಲಿದ್ದುಕೊಂಡು ವಿವಿಧ ಲೋಕವೃತ್ತಿಗಳಲ್ಲಿ ತೊಡಗಿರುವುದನ್ನು, ಅತಿಯಾದ ಪುಣ್ಯಗಳನ್ನೂ ಪಾಪಗಳನ್ನೂ ನೋಡುತ್ತಿರುತ್ತಾರೆ.

03198094a ಏತತ್ತೇ ಸರ್ವಮಾಖ್ಯಾತಂ ಯಥಾಪ್ರಜ್ಞಂ ಯಥಾಶ್ರುತಂ|

03198094c ಶಿಷ್ಟಾಚಾರಗುಣಾನ್ ಬ್ರಹ್ಮನ್ ಪುರಸ್ಕೃತ್ಯ ದ್ವಿಜರ್ಷಭ||

ಧ್ವಿಜರ್ಷಭ! ಬ್ರಹ್ಮನ್! ಇವೆಲ್ಲವೂ ಶಿಷ್ಟಾಚಾರರ ಮುಖ್ಯ ಗುಣಗಳೆಂದು ನನಗೆ ತಿಳಿದಷ್ಟನ್ನು, ಕೇಳಿದುದನ್ನು ಹೇಳಿದ್ದೇನೆ.””

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಪತಿವ್ರತೋಪಾಖ್ಯಾನೇ ಬ್ರಾಹ್ಮಣವ್ಯಾಧಸಂವಾದೇ ಅಷ್ಟನವತ್ಯಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಪತಿವ್ರತೋಪಾಖ್ಯಾನದಲ್ಲಿ ಬ್ರಾಹ್ಮಣವ್ಯಾಧಸಂವಾದದಲ್ಲಿ ನೂರಾತೊಂಭತ್ತೆಂಟನೆಯ ಅಧ್ಯಾಯವು.

Related image

[1] “ಅಹಿಂಸಾ ಪರಮೋ ಧರ್ಮಃ” ಎನ್ನುವುದು ಆದಿ ಪರ್ವದ ಅಧ್ಯಾಯ ೧೧ರಲ್ಲಿ ರುರು-ಡುಂಡುಭ ಸಂವಾದದಲ್ಲಿಯೂ ಬಂದಿದೆ.

Comments are closed.