|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
Contents
Toggleಆರಣ್ಯಕ ಪರ್ವ: ಕುಂಡಲಾಹರಣ ಪರ್ವ
೨೮೪
ಸೂರ್ಯನು ಕರ್ಣನ ಸ್ವಪ್ನದಲ್ಲಿ ಕಾಣಿಸಿಕೊಳ್ಳುವುದು
ಕರ್ಣನ ಕುರಿತು ಯುಧಿಷ್ಠಿರನಿಗಿದ್ದ ಭಯವು ಯಾವುದೆಂದು ಜನಮೇಜಯನು ಕೇಳಲು ಶಕ್ರನು ಕರ್ಣನ ಕುಂಡಲಗಳನ್ನು ಅಪಹರಿಸಿದುದನ್ನು ವೈಶಂಪಾಯನನು ಹೇಳುವುದು (೧-೫). ಇಂದ್ರನ ಇಂಗಿತವನ್ನು ತಿಳಿದ ಸೂರ್ಯನು ಬ್ರಾಹ್ಮಣನ ರೂಪದಲ್ಲಿ ಮಗ ಕರ್ಣನ ಸ್ವಪ್ನದಲ್ಲಿ ಬಂದು ಬ್ರಾಹ್ಮಣ ರೂಪದಲ್ಲಿ ಇಂದ್ರನು ಕುಂಡಲಗಳನ್ನು ಕೇಳಿದರೆ ಕೊಡಬೇಡವೆನ್ನುವುದು (೬-೨೦). ಆದರೆ ತನಗೆ ಕೀರ್ತಿಯು ಮೇಲೆಂದು ಕರ್ಣನು ಉತ್ತರಿಸುವುದು (೨೧-೩೯).
03284001 ಜನಮೇಜಯ ಉವಾಚ|
03284001a ಯತ್ತತ್ತದಾ ಮಹಾಬ್ರಹ್ಮಽಲ್ಲೋಮಶೋ ವಾಕ್ಯಮಬ್ರವೀತ್||
03284001c ಇಂದ್ರಸ್ಯ ವಚನಾದೇತ್ಯ ಪಾಂಡುಪುತ್ರಂ ಯುಧಿಷ್ಠಿರಂ|
ಜನಮೇಜಯನು ಹೇಳಿದನು: “ಮಹಾಬ್ರಹ್ಮನ್! ಇಂದ್ರನ ವಚನದಂತೆ ಪಾಂಡುಪುತ್ರ ಯುಧಿಷ್ಠಿರನ ಬಳಿ ಬಂದಾಗ ಲೋಮಶನು ಒಂದು ಮಾತನ್ನಾಡಿದ್ದನು.
03284002a ಯಚ್ಚಾಪಿ ತೇ ಭಯಂ ತೀವ್ರಂ ನ ಚ ಕೀರ್ತಯಸೇ ಕ್ವ ಚಿತ್||
03284002c ತಚ್ಚಾಪ್ಯಪಹರಿಷ್ಯಾಮಿ ಸವ್ಯಸಾಚಾವಿಹಾಗತೇ|
“ಸವ್ಯಸಾಚಿಯು ಹಿಂದುರಿಗಿದ ನಂತರ ಯಾರಿಗೂ ಹೇಳದೇ ಇದ್ದ ನಿನ್ನ ತೀವ್ರ ಭಯವೊಂದನ್ನು ನಿವಾರಿಸುತ್ತೇನೆ!” ಎಂದು ಹೇಳಿದ್ದನು.
03284003a ಕಿಂ ನು ತದ್ವಿದುಷಾಂ ಶ್ರೇಷ್ಠ ಕರ್ಣಂ ಪ್ರತಿ ಮಹದ್ಭಯಂ||
03284003c ಆಸೀನ್ನ ಚ ಸ ಧರ್ಮಾತ್ಮಾ ಕಥಯಾಮಾಸ ಕಸ್ಯ ಚಿತ್|
ವಿದುಷರಲ್ಲಿ ಶ್ರೇಷ್ಠ! ಕರ್ಣನ ಕುರಿತಾಗಿ ಆ ಧರ್ಮಾತ್ಮನಿಗಿದ್ದ ಮತ್ತು ಯಾರಿಗೂ ಹೇಳದೇ ಇದ್ದ ಆ ಮಹಾಭಯವು ಯಾವುದಾಗಿತ್ತು?”
03284004 ವೈಶಂಪಾಯನ ಉವಾಚ|
03284004a ಅಹಂ ತೇ ರಾಜಶಾರ್ದೂಲ ಕಥಯಾಮಿ ಕಥಾಮಿಮಾಂ|
03284004c ಪೃಚ್ಚತೇ ಭರತಶ್ರೇಷ್ಠ ಶುಶ್ರೂಷಸ್ವ ಗಿರಂ ಮಮ||
ವೈಶಂಪಾಯನನು ಹೇಳಿದನು: “ರಾಜಶಾರ್ದೂಲ! ಕೇಳುತ್ತಿರುವ ನಿನಗೆ ಆ ಕಥೆಯನ್ನು ಹೇಳುತ್ತೇನೆ. ನನ್ನ ಮಾತುಗಳನ್ನು ಕೇಳುವಂಥವನಾಗು.
03284005a ದ್ವಾದಶೇ ಸಮತಿಕ್ರಾಂತೇ ವರ್ಷೇ ಪ್ರಾಪ್ತೇ ತ್ರಯೋದಶೇ|
03284005c ಪಾಂಡೂನಾಂ ಹಿತಕೃಚ್ಚಕ್ರಃ ಕರ್ಣಂ ಭಿಕ್ಷಿತುಮುದ್ಯತಃ||
ಹನ್ನೆರಡನೆಯ ವರ್ಷವು ಮುಗಿದು ಹದಿಮೂರನೆಯದು ಕಾಲಿಡುತ್ತಿರುವಾಗ ಪಾಂಡವರಿಗೆ ಹಿತವನ್ನುಂಟುಮಾಡಲೋಸುಗ ಶಕ್ರನು ಕರ್ಣನಲ್ಲಿ ಭಿಕ್ಷೆಬೇಡಲು ಹೊರಟನು.
03284006a ಅಭಿಪ್ರಾಯಮಥೋ ಜ್ಞಾತ್ವಾ ಮಹೇಂದ್ರಸ್ಯ ವಿಭಾವಸುಃ|
03284006c ಕುಂಡಲಾರ್ಥೇ ಮಹಾರಾಜ ಸೂರ್ಯಃ ಕರ್ಣಮುಪಾಗಮತ್||
ಮಹಾರಾಜ! ಕುಂಡಲಗಳ ಕುರಿತು ಮಹೇಂದ್ರನ ಅಭಿಪ್ರಾಯವನ್ನು ತಿಳಿದ ವಿಭಾವಸು ಸೂರ್ಯನು ಕರ್ಣನ ಬಳಿಬಂದನು.
03284007a ಮಹಾರ್ಹೇ ಶಯನೇ ವೀರಂ ಸ್ಪರ್ಧ್ಯಾಸ್ತರಣಸಂವೃತೇ|
03284007c ಶಯಾನಮಭಿವಿಶ್ವಸ್ತಂ ಬ್ರಹ್ಮಣ್ಯಂ ಸತ್ಯವಾದಿನಂ||
ಬ್ರಹ್ಮಣ್ಯ, ಸತ್ಯವಾದಿ ವೀರನು ಬೆಲೆಬಾಳುವ, ಸ್ಪರ್ಧಿಸುವ ಮೇಲುಹಾಸಿಗೆಗಳನ್ನು ಹಾಸಿದ ಹಾಸಿಗೆಯ ಮೇಲೆ ವಿಶ್ವಾಸದಿಂದ ಮಲಗಿಕೊಂಡಿದ್ದನು.
03284008a ಸ್ವಪ್ನಾಂತೇ ನಿಶಿ ರಾಜೇಂದ್ರ ದರ್ಶಯಾಮಾಸ ರಶ್ಮಿವಾನ್|
03284008c ಕೃಪಯಾ ಪರಯಾವಿಷ್ಟಃ ಪುತ್ರಸ್ನೇಹಾಚ್ಚ ಭಾರತ||
ರಾಜೇಂದ್ರ! ಭಾರತ! ರಾತ್ರಿಯಲ್ಲಿ ಸ್ವಪ್ನದ ಕೊನೆಯಲ್ಲಿ ರಶ್ಮಿವಂತನು ಪುತ್ರಸ್ನೇಹ ಮತ್ತು ಕೃಪೆಯಿಂದ ಮುಳುಗಿಹೋಗಿ ಅವನಿಗೆ ಕಾಣಿಸಿಕೊಂಡನು.
03284009a ಬ್ರಾಹ್ಮಣೋ ವೇದವಿದ್ಭೂತ್ವಾ ಸೂರ್ಯೋ ಯೋಗಾದ್ಧಿ ರೂಪವಾನ್|
03284009c ಹಿತಾರ್ಥಮಬ್ರವೀತ್ಕರ್ಣಂ ಸಾಂತ್ವಪೂರ್ವಮಿದಂ ವಚಃ||
ಸೂರ್ಯನು ತನ್ನ ಯೋಗದಿಂದ ವೇದವಿದು ರೂಪವಂತ ಬ್ರಾಹ್ಮಣನಾಗಿ ಹಿತಾರ್ಥಕ್ಕಾಗಿ ಸಂತವಿಸುತ್ತಾ ಕರ್ಣನಿಗೆ ಹೇಳಿದನು:
03284010a ಕರ್ಣ ಮದ್ವಚನಂ ತಾತ ಶೃಣು ಸತ್ಯಭೃತಾಂ ವರ|
03284010c ಬ್ರುವತೋಽದ್ಯ ಮಹಾಬಾಹೋ ಸೌಹೃದಾತ್ಪರಮಂ ಹಿತಂ||
“ಕರ್ಣ! ಸತ್ಯಭೃತರಲ್ಲಿ ಶ್ರೇಷ್ಠ! ಮಗೂ! ಮಹಾಬಾಹೋ! ಇಂದು ಸ್ನೇಹಭಾವದಿಂದ ನಾನು ಹೇಳುವ ಈ ಪರಮ ಹಿತದ ಮಾತನ್ನು ಕೇಳು!
03284011a ಉಪಾಯಾಸ್ಯತಿ ಶಕ್ರಸ್ತ್ವಾಂ ಪಾಂಡವಾನಾಂ ಹಿತೇಪ್ಸಯಾ|
03284011c ಬ್ರಾಹ್ಮಣಚ್ಚದ್ಮನಾ ಕರ್ಣ ಕುಂಡಲಾಪಜಿಹೀರ್ಷಯಾ||
ಪಾಂಡವರ ಹಿತವನ್ನು ಬಯಸಿ ಶಕ್ರನು ಬ್ರಾಹ್ಮಣನ ವೇಷವನ್ನು ಧರಿಸಿ ಕುಂಡಲಗಳನ್ನು ಅಪಹರಿಸಲೋಸುಗ ನಿನ್ನ ಬಳಿ ಬರುತ್ತಾನೆ.
03284012a ವಿದಿತಂ ತೇನ ಶೀಲಂ ತೇ ಸರ್ವಸ್ಯ ಜಗತಸ್ತಥಾ|
03284012c ಯಥಾ ತ್ವಂ ಭಿಕ್ಷಿತಃ ಸದ್ಭಿರ್ದದಾಸ್ಯೇವ ನ ಯಾಚಸೇ||
ಭಿಕ್ಷೆಯನ್ನು ಕೇಳಿ ಬಂದವನಿಗೆ ನೀನು ಎಲ್ಲವನ್ನೂ ದಾನಮಾಡುತ್ತೀಯೇ ಹೊರತು ನೀನೇ ಕೇಳುವುದಿಲ್ಲ ಎಂಬ ನಿನ್ನ ಈ ಶೀಲವು ಜಗತ್ತಿನಲ್ಲಿ ಎಲ್ಲರಿಗೂ ತಿಳಿದೇ ಇದೆ.
03284013a ತ್ವಂ ಹಿ ತಾತ ದದಾಸ್ಯೇವ ಬ್ರಾಹ್ಮಣೇಭ್ಯಃ ಪ್ರಯಾಚಿತಃ|
03284013c ವಿತ್ತಂ ಯಚ್ಚಾನ್ಯದಪ್ಯಾಹುರ್ನ ಪ್ರತ್ಯಾಖ್ಯಾಸಿ ಕರ್ಹಿ ಚಿತ್||
ಮಗೂ! ಯಾಕೆಂದರೆ ಬ್ರಾಹ್ಮಣರು ಏನು ಕೇಳಿದರೂ ನೀನು ಕೊಡುತ್ತೀಯೆ. ನಿನ್ನಲ್ಲಿರುವ ಏನನ್ನೇ ಆದರೂ ಕೊಡುತ್ತೀಯೆ. ಇಲ್ಲವೆನ್ನುವುದಿಲ್ಲ.
03284014a ತಂ ತ್ವಾಮೇವಂವಿಧಂ ಜ್ಞಾತ್ವಾ ಸ್ವಯಂ ವೈ ಪಾಕಶಾಸನಃ|
03284014c ಆಗಂತಾ ಕುಂಡಲಾರ್ಥಾಯ ಕವಚಂ ಚೈವ ಭಿಕ್ಷಿತುಂ||
ನಿನ್ನ ಈ ಕ್ರಮವನ್ನು ತಿಳಿದ ಪಾಕಶಾಸನನು ಸ್ವಯಂ ಇಲ್ಲಿಗೆ ಬಂದು ನಿನ್ನಿಂದ ಕುಂಡಲ ಮತ್ತು ಕವಚಗಳನ್ನು ಭಿಕ್ಷೆಯಾಗಿ ಕೇಳುತ್ತಾನೆ.
03284015a ತಸ್ಮೈ ಪ್ರಯಾಚಮಾನಾಯ ನ ದೇಯೇ ಕುಂಡಲೇ ತ್ವಯಾ|
03284015c ಅನುನೇಯಃ ಪರಂ ಶಕ್ತ್ಯಾ ಶ್ರೇಯ ಏತದ್ಧಿ ತೇ ಪರಂ||
ಅವನು ಕೇಳುವಾಗ ನೀನು ಕುಂಡಲಗಳನ್ನು ಕೊಡಬಾರದು. ಪರಮ ಶಕ್ತಿಯನ್ನುಪಯೋಗಿಸಿ ಅವನನ್ನು ತೃಪ್ತಿಗೊಳಿಸು. ಇದರಲ್ಲಿಯೇ ನಿನ್ನ ಶ್ರೇಯಸ್ಸಿದೆ.
03284016a ಕುಂಡಲಾರ್ಥೇ ಬ್ರುವಂಸ್ತಾತ ಕಾರಣೈರ್ವಹುಭಿಸ್ತ್ವಯಾ|
03284016c ಅನ್ಯೈರ್ವಹುವಿಧೈರ್ವಿತ್ತೈಃ ಸ ನಿವಾರ್ಯಃ ಪುನಃ ಪುನಃ||
ಮಗೂ! ಅವನು ಕುಂಡಲಗಳನ್ನು ಕೇಳಿದಾಗ ನೀನು ಬಹು ಕಾರಣಗಳಿಂದ - ಅನ್ಯ ಬಹುವಿಧದ ವಿತ್ತಗಳಿಂದ - ಪುನಃ ಪುನಃ ಅವನನ್ನು ತಡೆಯಬೇಕು.
03284017a ರತ್ನೈಃ ಸ್ತ್ರೀಭಿಸ್ತಥಾ ಭೋಗೈರ್ಧನೈರ್ವಹುವಿಧೈರಪಿ|
03284017c ನಿದರ್ಶನೈಶ್ಚ ಬಹುಭಿಃ ಕುಂಡಲೇಪ್ಸುಃ ಪುರಂದರಃ||
ಕುಂಡಲಗಳನ್ನು ಬಯಸುವ ಪುರಂದರನನ್ನು ರತ್ನಗಳಿಂದ, ಸ್ತ್ರೀಯರಿಂದ ಮತ್ತು ಬಹುವಿಧದ ಧನ ಭೋಗಗಳಿಂದ ತೃಪ್ತಿಗೊಳಿಸು.
03284018a ಯದಿ ದಾಸ್ಯಸಿ ಕರ್ಣ ತ್ವಂ ಸಹಜೇ ಕುಂಡಲೇ ಶುಭೇ|
03284018c ಆಯುಷಃ ಪ್ರಕ್ಷಯಂ ಗತ್ವಾ ಮೃತ್ಯೋರ್ವಶಮುಪೇಷ್ಯಸಿ||
ಕರ್ಣ! ಆ ಸಹಜ ಶುಭ ಕುಂಡಲಗಳನ್ನು ನೀನು ಕೊಟ್ಟರೆ ನಿನ್ನ ಆಯುಷ್ಯವನ್ನು ಕಳೆದುಕೊಂಡು ಮೃತ್ಯುವಿನ ವಶವನ್ನು ಹೊಗುತ್ತೀಯೆ.
03284019a ಕವಚೇನ ಚ ಸಂಯುಕ್ತಃ ಕುಂಡಲಾಭ್ಯಾಂ ಚ ಮಾನದ|
03284019c ಅವಧ್ಯಸ್ತ್ವಂ ರಣೇಽರೀಣಾಮಿತಿ ವಿದ್ಧಿ ವಚೋ ಮಮ||
ಮಾನದ! ಕವಚ ಮತ್ತು ಕುಂಡಲಗಳಿಂದ ಸಂಯುಕ್ತನಾದ ನೀನು ರಣದಲ್ಲಿ ಅರಿಗಳಿಂದ ಅವಧ್ಯ ಎಂಬ ನನ್ನ ಈ ಮಾತನ್ನು ತಿಳಿದುಕೋ.
03284020a ಅಮೃತಾದುತ್ಥಿತಂ ಹ್ಯೇತದುಭಯಂ ರತ್ನಸಂಭವಂ|
03284020c ತಸ್ಮಾದ್ರಕ್ಷ್ಯಂ ತ್ವಯಾ ಕರ್ಣ ಜೀವಿತಂ ಚೇತ್ಪ್ರಿಯಂ ತವ|
ಯಾಕೆಂದರೆ ಇವೆರಡು ರತ್ನಗಳೂ ಅಮೃತದಿಂದ ಮೇಲೆದ್ದಿವೆ. ಆದುದರಿಂದ ಕರ್ಣ! ನಿನಗೆ ಜೀವಿಸುವುದು ಪ್ರಿಯವಾದರೆ ಇವನ್ನು ರಕ್ಷಿಸಿಕೊಳ್ಳಬೇಕು.”
03284021 ಕರ್ಣ ಉವಾಚ|
03284021a ಕೋ ಮಾಮೇವಂ ಭವಾನ್ಪ್ರಾಹ ದರ್ಶಯನ್ಸೌಹೃದಂ ಪರಂ|
03284021c ಕಾಮಯಾ ಭಗವನ್ಬ್ರೂಹಿ ಕೋ ಭವಾನ್ದ್ವಿಜವೇಷಧೃಕ್||
ಕರ್ಣನು ಹೇಳಿದನು: “ನನ್ನ ಮೇಲಿನ ಪರಮ ಸೌಹಾರ್ದದಿಂದ ಕಾಣಿಸಿಕೊಂಡ ನೀನು ಯಾರೆಂದು ಹೇಳು. ಭಗವಾನ್! ಬ್ರಾಹ್ಮಣನ ವೇಷದಲ್ಲಿರುವ ನೀನು ಯಾರೆಂದು ಇಷ್ಟವಿದ್ದು ಹೇಳು.”
03284022 ಬ್ರಾಹ್ಮಣ ಉವಾಚ|
03284022a ಅಹಂ ತಾತ ಸಹಸ್ರಾಂಶುಃ ಸೌಹೃದಾತ್ತ್ವಾಂ ನಿದರ್ಶಯೇ|
03284022c ಕುರುಷ್ವೈತದ್ವಚೋ ಮೇ ತ್ವಮೇತಚ್ಚ್ರೇಯಃ ಪರಂ ಹಿ ತೇ||
ಬ್ರಾಹ್ಮಣನು ಹೇಳಿದನು: “ಮಗೂ! ನಾನು ಸಹಸ್ರಾಂಶು. ನಿನ್ನ ಮೇಲಿನ ಸ್ನೇಹಭಾವದಿಂದ ನಿನಗೆ ನಿದರ್ಶಿಸುತ್ತೇನೆ. ನಾನು ಹೇಳಿದಂತೆ ಮಾಡು. ಅದರಲ್ಲಿಯೇ ನಿನ್ನ ಪರಮ ಶ್ರೇಯಸ್ಸಿದೆ.”
03284023 ಕರ್ಣ ಉವಾಚ|
03284023a ಶ್ರೇಯ ಏವ ಮಮಾತ್ಯಂತಂ ಯಸ್ಯ ಮೇ ಗೋಪತಿಃ ಪ್ರಭುಃ|
03284023c ಪ್ರವಕ್ತಾದ್ಯ ಹಿತಾನ್ವೇಷೀ ಶೃಣು ಚೇದಂ ವಚೋ ಮಮ||
ಕರ್ಣನು ಹೇಳಿದನು: “ಪ್ರಭು ಗೋಪತಿಯು ಇಂದು ಹೇಳಿದುದು ನನಗೆ ಅತ್ಯಂತ ಹಿತಕರವಾದುದೇ ಸರಿ. ನನ್ನ ಈ ಮಾತುಗಳನ್ನು ಕೇಳು.
03284024a ಪ್ರಸಾದಯೇ ತ್ವಾಂ ವರದಂ ಪ್ರಣಯಾಚ್ಚ ಬ್ರವೀಮ್ಯಹಂ|
03284024c ನ ನಿವಾರ್ಯೋ ವ್ರತಾದಸ್ಮಾದಹಂ ಯದ್ಯಸ್ಮಿ ತೇ ಪ್ರಿಯಃ||
ವರದ! ನಾನು ನಿನಗೆ ನಮಸ್ಕರಿಸಿ ಪ್ರೀತಿಯಿಂದ ಹೇಳುತ್ತಿದ್ದೇನೆ. ನನ್ನನ್ನು ನಿನ್ನ ಪ್ರಿಯನೆಂದು ತಿಳಿದಿದ್ದೀಯಾದರೆ ನನ್ನ ಈ ವ್ರತದಿಂದ ನನ್ನನ್ನು ತಪ್ಪಿಸಬೇಡ.
03284025a ವ್ರತಂ ವೈ ಮಮ ಲೋಕೋಽಯಂ ವೇತ್ತಿ ಕೃತ್ಸ್ನೋ ವಿಭಾವಸೋ|
03284025c ಯಥಾಹಂ ದ್ವಿಜಮುಖ್ಯೇಭ್ಯೋ ದದ್ಯಾಂ ಪ್ರಾಣಾನಪಿ ಧ್ರುವಂ||
ವಿಭಾವಸೋ! ನನ್ನ ಈ ವ್ರತವನ್ನೇ ಇಡೀ ಲೋಕವು ತಿಳಿದಿದೆ. ನಾನು ದ್ವಿಜಮುಖ್ಯರಿಗೆ ಪ್ರಾಣವನ್ನೂ ಕೊಡುತ್ತೇನೆ ಎನ್ನುವುದು ಸಿದ್ಧ.
03284026a ಯದ್ಯಾಗಚ್ಚತಿ ಶಕ್ರೋ ಮಾಂ ಬ್ರಾಹ್ಮಣಚ್ಚದ್ಮನಾವೃತಃ|
03284026c ಹಿತಾರ್ಥಂ ಪಾಂಡುಪುತ್ರಾಣಾಂ ಖೇಚರೋತ್ತಮ ಭಿಕ್ಷಿತುಂ||
03284027a ದಾಸ್ಯಾಮಿ ವಿಬುಧಶ್ರೇಷ್ಠ ಕುಂಡಲೇ ವರ್ಮ ಚೋತ್ತಮಂ|
03284027c ನ ಮೇ ಕೀರ್ತಿಃ ಪ್ರಣಶ್ಯೇತ ತ್ರಿಷು ಲೋಕೇಷು ವಿಶ್ರುತಾ||
ಖೇಚರೋತ್ತಮ! ವಿಬುಧಶ್ರೇಷ್ಠ! ಬ್ರಾಹ್ಮಣನ ವೇಷವನ್ನು ತಳೆದು ಪಾಂಡುಪುತ್ರರ ಹಿತಾರ್ಥವಾಗಿ ಶಕ್ರನು ನನ್ನಲ್ಲಿಗೆ ಭಿಕ್ಷೆಬೇಡಿ ಬಂದರೆ ಮೂರುಲೋಕದಲ್ಲಿ ವಿಶ್ರುತವಾದ ನನ್ನ ಈ ಕೀರ್ತಿಯು ಕುಂದದಿರಲು ಅವನಿಗೆ ಉತ್ತಮ ಕವಚ-ಕುಂಡಲಗಳನ್ನು ಕೊಡುತ್ತೇನೆ.
03284028a ಮದ್ವಿಧಸ್ಯಾಯಶಸ್ಯಂ ಹಿ ನ ಯುಕ್ತಂ ಪ್ರಾಣರಕ್ಷಣಂ|
03284028c ಯುಕ್ತಂ ಹಿ ಯಶಸಾ ಯುಕ್ತಂ ಮರಣಂ ಲೋಕಸಮ್ಮತಂ||
ನನ್ನಂಥವರಿಗೆ ಪ್ರಾಣವನ್ನು ರಕ್ಷಿಸಿಕೊಂಡು ಅಯಶಸ್ಸನ್ನು ತರುವುದು ಯುಕ್ತವಲ್ಲ. ಮರಣವಾದರೂ ಲೋಕಸಮ್ಮತ ಯಶಸ್ಸನ್ನು ನೀಡುವಂಥಹುದೇ ಯುಕ್ತವಾದುದು.
03284029a ಸೋಽಹಮಿಂದ್ರಾಯ ದಾಸ್ಯಾಮಿ ಕುಂಡಲೇ ಸಹ ವರ್ಮಣಾ|
03284029c ಯದಿ ಮಾಂ ಬಲವೃತ್ರಘ್ನೋ ಭಿಕ್ಷಾರ್ಥಮುಪಯಾಸ್ಯತಿ||
03284030a ಹಿತಾರ್ಥಂ ಪಾಂಡುಪುತ್ರಾಣಾಂ ಕುಂಡಲೇ ಮೇ ಪ್ರಯಾಚಿತುಂ|
03284030c ತನ್ಮೇ ಕೀರ್ತಿಕರಂ ಲೋಕೇ ತಸ್ಯಾಕೀರ್ತಿಃರ್ವವಿಷ್ಯತಿ||
ಆ ಇಂದ್ರನಿಗೆ ನನ್ನ ಕವಚದೊಂದಿಗೆ ಕುಂಡಲಗಳನ್ನು ಕೊಡುತ್ತೇನೆ. ಒಂದುವೇಳೆ ಬಲ-ವೃತ್ರಘ್ನನು ಪಾಂಡುಪುತ್ರರ ಹಿತಕ್ಕಾಗಿ ನನ್ನ ಕುಂಡಲಗಳನ್ನು ಭಿಕ್ಷೆಯಾಗಿ ಕೇಳಿಕೊಂಡು ಬಂದರೆ ಅದು ಲೋಕದಲ್ಲಿ ನನಗೆ ಕೀರ್ತಿಕರವಾಗಿ, ಅವನಿಗೆ ಅಕೀರ್ತಿಯನ್ನು ತರುತ್ತದೆ.
03284031a ವೃಣೋಮಿ ಕೀರ್ತಿಂ ಲೋಕೇ ಹಿ ಜೀವಿತೇನಾಪಿ ಭಾನುಮನ್|
03284031c ಕೀರ್ತಿಮಾನಶ್ನುತೇ ಸ್ವರ್ಗಂ ಹೀನಕೀರ್ತಿಸ್ತು ನಶ್ಯತಿ||
ಭಾನುಮನ್! ಜೀವಕ್ಕಿಂತಲೂ ನಾನು ಲೋಕದಲ್ಲಿ ಕೀರ್ತಿಯನ್ನು ಆರಿಸುತ್ತೇನೆ. ಕೀರ್ತಿವಂತನು ಸ್ವರ್ಗವನ್ನು ಪಡೆಯುತ್ತಾನೆ. ಕೀರ್ತಿಯನ್ನು ಕಳೆದುಕೊಂಡವನು ನಶಿಸುತ್ತಾನೆ.
03284032a ಕೀರ್ತಿರ್ಹಿ ಪುರುಷಂ ಲೋಕೇ ಸಂಜೀವಯತಿ ಮಾತೃವತ್|
03284032c ಅಕೀರ್ತಿರ್ಜೀವಿತಂ ಹಂತಿ ಜೀವತೋಽಪಿ ಶರೀರಿಣಃ||
ಯಾಕೆಂದರೆ ಲೋಕದಲ್ಲಿ ಕೀರ್ತಿಯೇ ತಾಯಿಯಂತೆ ಪುರುಷನನ್ನು ಹುಟ್ಟಿಸುತ್ತದೆ. ಅಕೀರ್ತಿಯು ಶರೀರದಲ್ಲಿ ಜೀವಂತನಾಗಿದ್ದರೂ ಅವನ ಜೀವನವನ್ನು ಕೊಲ್ಲುತ್ತದೆ.
03284033a ಅಯಂ ಪುರಾಣಃ ಶ್ಲೋಕೋ ಹಿ ಸ್ವಯಂ ಗೀತೋ ವಿಭಾವಸೋ|
03284033c ಧಾತ್ರಾ ಲೋಕೇಶ್ವರ ಯಥಾ ಕೀರ್ತಿರಾಯುರ್ನರಸ್ಯ ವೈ||
ವಿಭಾವಸೋ! ಲೋಕೇಶ್ವರ! ಕೀರ್ತಿಯು ಹೇಗೆ ನರನ ಆಯುಸ್ಸು ಎನ್ನುವುದರ ಕುರಿತು ಹಿಂದೆ ಸ್ವಯಂ ಧಾತ್ರುವೇ ಈ ಶ್ಲೋಕವನ್ನು ಹಾಡಿದ್ದನು:
03284034a ಪುರುಷಸ್ಯ ಪರೇ ಲೋಕೇ ಕೀರ್ತಿರೇವ ಪರಾಯಣಂ|
03284034c ಇಹ ಲೋಕೇ ವಿಶುದ್ಧಾ ಚ ಕೀರ್ತಿರಾಯುರ್ವಿವರ್ಧನೀ||
ಪರಲೋಕದಲ್ಲಿ ಕೀರ್ತಿಯೇ ಪುರುಷನ ಪರಾಯಣ. ವಿಶುದ್ಧ ಕೀರ್ತಿಯು ಈ ಲೋಕದಲ್ಲಿಯೂ ಅವನ ಆಯಸ್ಸನ್ನು ವರ್ಧಿಸುತ್ತದೆ.
03284035a ಸೋಽಹಂ ಶರೀರಜೇ ದತ್ತ್ವಾ ಕೀರ್ತಿಂ ಪ್ರಾಪ್ಸ್ಯಾಮಿ ಶಾಶ್ವತೀಂ|
03284035c ದತ್ತ್ವಾ ಚ ವಿಧಿವದ್ದಾನಂ ಬ್ರಾಹ್ಮಣೇಭ್ಯೋ ಯಥಾವಿಧಿ||
ಆದುದರಿಂದ ಈ ಶರೀರದೊಂದಿಗೆ ಹುಟ್ಟಿದವುಗಳನ್ನು ಕೊಟ್ಟು, ಬ್ರಾಹ್ಮಣರಿಗೆ ಯಥಾವಿದಿಯಾಗಿ ವಿಧಿವತ್ತಾಗಿ ಕೊಟ್ಟು, ಶಾಶ್ವತ ಕೀರ್ತಿಯನ್ನು ಹೊಂದುತ್ತೇನೆ.
03284036a ಹುತ್ವಾ ಶರೀರಂ ಸಂಗ್ರಾಮೇ ಕೃತ್ವಾ ಕರ್ಮ ಸುದುಷ್ಕರಂ|
03284036c ವಿಜಿತ್ಯ ವಾ ಪರಾನಾಜೌ ಯಶಃ ಪ್ರಾಪ್ಸ್ಯಾಮಿ ಕೇವಲಂ||
ಸಂಗ್ರಾಮದಲ್ಲಿ ತುಂಬಾ ದುಷ್ಕರ ಕರ್ಮಗಳನ್ನು ಮಾಡಿ ಶರೀರವನ್ನು ಆಹುತಿಯಾಗಿತ್ತು ಅಥವಾ ರಣದಲ್ಲಿ ಶತ್ರುಗಳನ್ನು ಜಯಿಸಿ ಕೇವಲ ಯಶಸ್ಸನ್ನು ಪಡೆಯುತ್ತೇನೆ.
03284037a ಭೀತಾನಾಮಭಯಂ ದತ್ತ್ವಾ ಸಂಗ್ರಾಮೇ ಜೀವಿತಾರ್ಥಿನಾಂ|
03284037c ವೃದ್ಧಾನ್ಬಾಲಾನ್ದ್ವಿಜಾತೀಂಶ್ಚ ಮೋಕ್ಷಯಿತ್ವಾ ಮಹಾಭಯಾತ್|
03284038a ಪ್ರಾಪ್ಸ್ಯಾಮಿ ಪರಮಂ ಲೋಕೇ ಯಶಃ ಸ್ವರ್ಭಾನುಸೂದನ|
03284038c ಜೀವಿತೇನಾಪಿ ಮೇ ರಕ್ಷ್ಯಾ ಕೀರ್ತಿಸ್ತದ್ವಿದ್ಧಿ ಮೇ ವ್ರತಮ್||
ಭೀತರಾದವರಿಗೆ ಅಭಯವನ್ನಿತ್ತು, ಜೀವಿತಾರ್ಥಿಗಳಾದ ವೃದ್ಧರನ್ನೂ ಬಾಲಕರನ್ನೂ ದ್ವಿಜರನ್ನೂ ಮಹಾಭಯದಿಂದ ಬಿಡುಗಡೆಮಾಡಿ, ಪರಮ ಲೋಕ-ಯಶಸ್ಸುಗಳನ್ನು ಪಡೆಯುತ್ತೇನೆ. ಜೀವವನ್ನು ಕೊಟ್ಟಾದರೂ ನನ್ನ ಕೀರ್ತಿಯನ್ನು ರಕ್ಷಿಸಿಕೊಳ್ಳುವುದು ನನ್ನ ವ್ರತವೆಂದು ತಿಳಿ.
03284039a ಸೋಽಹಂ ದತ್ತ್ವಾ ಮಘವತೇ ಭಿಕ್ಷಾಮೇತಾಮನುತ್ತಮಾಂ|
03284039c ಬ್ರಾಹ್ಮಣಚ್ಚದ್ಮಿನೇ ದೇವ ಲೋಕೇ ಗಂತಾ ಪರಾಂ ಗತಿಂ||
ದೇವ! ಆದುದರಿಂದ ಬ್ರಾಹ್ಮಣವೇಷದಲ್ಲಿ ಬಂದ ಮಘವತನಿಗೆ ಈ ಅನುತ್ತಮ ಭಿಕ್ಷೆಗಳನ್ನಿತ್ತು ಪರಮ ಲೋಕಗಳ ಮಾರ್ಗದಲ್ಲಿ ಹೋಗುತ್ತೇನೆ.”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಕುಂಡಲಾಹರಣ ಪರ್ವಣಿ ಸೂರ್ಯಕರ್ಣಸಂವಾದೇ ಚತುರಶೀತ್ಯಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಕುಂಡಲಾಹರಣ ಪರ್ವದಲ್ಲಿ ಸೂರ್ಯಕರ್ಣಸಂವಾದದಲ್ಲಿ ಇನ್ನೂರಾಎಂಭತ್ನಾಲ್ಕನೆಯ ಅಧ್ಯಾಯವು.
