Aranyaka Parva: Chapter 230

ಆರಣ್ಯಕ ಪರ್ವ: ಘೋಷಯಾತ್ರಾ ಪರ್ವ

೨೩೦

ದುರ್ಯೋಧನನು ಸೇನೆಯೊಂದಿಗೆ ದ್ವೈತವನವನ್ನು ಬಲವಂತ ಮಾಡಿ ಪ್ರವೇಶಿಸಲು ಗಂಧರ್ವರೊಡನೆ ನಡೆದ ಯುದ್ಧ (೧-೨೦). ಕೋಪಗೊಂಡ ಗಂಧರ್ವರಾಜ ಚಿತ್ರಸೇನನು ಮಾಯಾಯುದ್ಧವನ್ನು ಪ್ರಾರಂಭಿಸಿದುದು; ಕರ್ಣನು ಪಲಾಯನ ಮಾಡಿದುದು (೨೧-೩೧).

03230001 ವೈಶಂಪಾಯನ ಉವಾಚ|

03230001a ತತಸ್ತೇ ಸಹಿತಾಃ ಸರ್ವೇ ದುರ್ಯೋಧನಮುಪಾಗಮನ್|

03230001c ಅಬ್ರುವಂಶ್ಚ ಮಹಾರಾಜ ಯದೂಚುಃ ಕೌರವಂ ಪ್ರತಿ||

ವೈಶಂಪಾಯನನು ಹೇಳಿದನು: “ಮಹಾರಾಜ! ಅವರೆಲ್ಲರೂ ಒಟ್ಟಿಗೆ ದುರ್ಯೋಧನನ ಬಳಿಸಾರಿ ಅವರು ಕೌರವನ ಕುರಿತು ಹೇಳಿದುದನ್ನು ವರದಿಮಾಡಿದರು.

03230002a ಗಂಧರ್ವೈರ್ವಾರಿತೇ ಸೈನ್ಯೇ ಧಾರ್ತರಾಷ್ಟ್ರಃ ಪ್ರತಾಪವಾನ್|

03230002c ಅಮರ್ಷಪೂರ್ಣಃ ಸೈನ್ಯಾನಿ ಪ್ರತ್ಯಭಾಷತ ಭಾರತ||

ಭಾರತ! ಗಂಧರ್ವರಿಂದ ಸೇನೆಯು ತಡೆಯಲ್ಪಟ್ಟಿತು ಎಂದು ಕೇಳಿ ಪ್ರತಾಪಿ ಧಾರ್ತರಾಷ್ಟ್ರನು ಸಿಟ್ಟಿನಿಂದ ಸೇನೆಗೆ ಉತ್ತರಿಸಿದನು:

03230003a ಶಾಸತೈನಾನಧರ್ಮಜ್ಞಾನ್ಮಮ ವಿಪ್ರಿಯಕಾರಿಣಃ|

03230003c ಯದಿ ಪ್ರಕ್ರೀಡಿತೋ ದೇವೈಃ ಸರ್ವೈಃ ಸಹ ಶತಕ್ರತುಃ||

“ಎಲ್ಲ ದೇವತೆಗಳೊಂದಿಗೆ ಶತಕ್ರತುವೇ ಆಡುತ್ತಿದ್ದರೂ ಧರ್ಮವನ್ನು ತಿಳಿಯದೇ ನನಗೆ ಅಪ್ರಿಯವಾದುದನ್ನು ಮಾಡುವ ಅವರನ್ನು ಶಿಕ್ಷಿಸಿ.”

03230004a ದುರ್ಯೋಧನವಚಃ ಶ್ರುತ್ವಾ ಧಾರ್ತರಾಷ್ಟ್ರಾ ಮಹಾಬಲಾಃ|

03230004c ಸರ್ವ ಏವಾಭಿಸಮ್ನದ್ಧಾ ಯೋಧಾಶ್ಚಾಪಿ ಸಹಸ್ರಶಃ||

ದುರ್ಯೋಧನನ ಮಾತನ್ನು ಕೇಳಿ ಎಲ್ಲ ಮಹಾಬಲಶಾಲಿ ಧಾರ್ತರಾಷ್ಟ್ರರೂ ಸಹಸ್ರಾರು ಯೋಧರೂ ಸನ್ನದ್ಧರಾದರು.

03230005a ತತಃ ಪ್ರಮಥ್ಯ ಗಂಧರ್ವಾಂಸ್ತದ್ವನಂ ವಿವಿಶುರ್ಬಲಾತ್|

03230005c ಸಿಂಹನಾದೇನ ಮಹತಾ ಪೂರಯಂತೋ ದಿಶೋ ದಶ||

ಅವರು ಗಂಧರ್ವರನ್ನು ಸದೆಬಡಿದು, ಹತ್ತುದಿಕ್ಕುಗಳನ್ನೂ ಮಹಾ ಸಿಂಹನಾದದಿಂದ ತುಂಬಿಸಿ, ಬಲಾತ್ಕಾರವಾಗಿ ಆ ವನವನ್ನು ಪ್ರವೇಶಿಸಿದರು.

03230006a ತತೋಽಪರೈರವಾರ್ಯಂತ ಗಂಧರ್ವೈಃ ಕುರುಸೈನಿಕಾಃ|

03230006c ತೇ ವಾರ್ಯಮಾಣಾ ಗಂಧರ್ವೈಃ ಸಾಮ್ನೈವ ವಸುಧಾಧಿಪ|

03230006e ತಾನನಾದೃತ್ಯ ಗಂಧರ್ವಾಂಸ್ತದ್ವನಂ ವಿವಿಶುರ್ಮಹತ್||

ವಸುಧಾಧಿಪ! ಇತರ ಗಂಧರ್ವರು ಕುರುಸೈನಿಕರನ್ನು ತಡೆಯುತ್ತಿದ್ದರು; ಗಂಧರ್ವರು ಅವರನ್ನು ಸಾಮದಿಂದ ತಡೆಯುತ್ತಿದ್ದರು. ಆದರೆ ಅವರು ಗಂಧರ್ವರನ್ನು ಅನಾದರಿಸಿ ಆ ಮಹಾ ವನವನ್ನು ಪ್ರವೇಶಿಸಿದರು.

03230007a ಯದಾ ವಾಚಾ ನ ತಿಷ್ಠಂತಿ ಧಾರ್ತರಾಷ್ಟ್ರಾಃ ಸರಾಜಕಾಃ|

03230007c ತತಸ್ತೇ ಖೇಚರಾಃ ಸರ್ವೇ ಚಿತ್ರಸೇನೇ ನ್ಯವೇದಯನ್||

ರಾಜರೊಂದಿಗೆ ಧಾರ್ತರಾಷ್ಟ್ರರು ಅವರ ಮಾತಿನಂತೆ ನಿಲ್ಲದಿದ್ದಾಗ ಅವರೆಲ್ಲರೂ ಆಕಾಶಕ್ಕೇರಿ ಚಿತ್ರಸೇನನಿಗೆ ನಿವೇದಿಸಿದರು.

03230008a ಗಂಧರ್ವರಾಜಸ್ತಾನ್ಸರ್ವಾನಬ್ರವೀತ್ಕೌರವಾನ್ ಪ್ರತಿ|

03230008c ಅನಾರ್ಯಾಂ ಶಾಸತೇತ್ಯೇವಂ ಚಿತ್ರಸೇನೋಽತ್ಯಮರ್ಷಣಃ||

ಗಂಧರ್ವರಾಜ ಚಿತ್ರಸೇನನು ಕೋಪದಿಂದ ಕೌರವರ ಕುರಿತು “ಆ ಅನಾರ್ಯರನ್ನು ಶಿಕ್ಷಿಸಿ!” ಎಂದು ಅವರೆಲ್ಲರಿಗೂ ಹೇಳಿದನು.

03230009a ಅನುಜ್ಞಾತಾಸ್ತು ಗಂಧರ್ವಾಶ್ಚಿತ್ರಸೇನೇನ ಭಾರತ|

03230009c ಪ್ರಗೃಹೀತಾಯುಧಾಃ ಸರ್ವೇ ಧಾರ್ತರಾಷ್ಟ್ರಾನಭಿದ್ರವನ್||

ಭಾರತ! ಚಿತ್ರಸೇನನಿಂದ ಹೀಗೆ ಅನುಜ್ಞೆಗೊಳಲ್ಪಟ್ಟ ಗಂಧರ್ವರು ಎಲ್ಲರೂ ಆಯುಧಗಳನ್ನು ಹಿಡಿದು ಧಾರ್ತರಾಷ್ಟ್ರರ ಮೇಲೆ ಧಾಳಿ ಮಾಡಿದರು.

03230010a ತಾನ್ದೃಷ್ಟ್ವಾ ಪತತಃ ಶೀಘ್ರಾನ್ಗಂಧರ್ವಾನುದ್ಯತಾಯುಧಾನ್|

03230010c ಸರ್ವೇ ತೇ ಪ್ರಾದ್ರವನ್ಸಂಖ್ಯೇ ಧಾರ್ತರಾಷ್ಟ್ರಸ್ಯ ಪಶ್ಯತಃ||

ಆಯುಧಗಳನ್ನು ಹಿಡಿದು ಶೀಘ್ರವಾಗಿ ಮೇಲೆ ಬೀಳುತ್ತಿರುವ ಗಂಧರ್ವರನ್ನು ನೋಡಿ ಸೇನೆಯಲ್ಲಿ ಎಲ್ಲರೂ ಧಾರ್ತರಾಷ್ಟ್ರನು ನೋಡುತ್ತಿದ್ದಂತೆಯೇ ಪಲಾಯನ ಮಾಡಿದರು.

03230011a ತಾನ್ದೃಷ್ಟ್ವಾ ದ್ರವತಃ ಸರ್ವಾನ್ಧಾರ್ತರಾಷ್ಟ್ರಾನ್ಪರಾಙ್ಮುಖಾನ್|

03230011c ವೈಕರ್ತನಸ್ತದಾ ವೀರೋ ನಾಸೀತ್ತತ್ರ ಪರಾಙ್ಮುಖಃ||

ಆ ಎಲ್ಲ ಧಾರ್ತರಾಷ್ಟ್ರರೂ ಪಾರಾಙ್ಮುಖರಾಗಿ ಓಡಿದುದನ್ನು ನೋಡಿದ ವೀರ ವೈಕರ್ತನನು ಪರಾಙ್ಮುಖನಾಗಲಿಲ್ಲ.

03230012a ಆಪತಂತೀಂ ತು ಸಂಪ್ರೇಕ್ಷ್ಯ ಗಂಧರ್ವಾಣಾಂ ಮಹಾಚಮೂಂ|

03230012c ಮಹತಾ ಶರವರ್ಷೇಣ ರಾಧೇಯಃ ಪ್ರತ್ಯವಾರಯತ್||

ಗಂಧರ್ವರ ಆ ಮಹಾಸೇನೆಯು ಕೆಳಗಿಳಿಯುತ್ತಿದ್ದುದನ್ನು ನೋಡಿ ರಾಧೇಯನು ಮಹಾ ಶರವರ್ಷದಿಂದ ಅವರನ್ನು ತಡೆದನು.

03230013a ಕ್ಷುರಪ್ರೈರ್ವಿಶಿಖೈರ್ಭಲ್ಲೈರ್ವತ್ಸದಂತೈಸ್ತಥಾಯಸೈಃ|

03230013c ಗಂಧರ್ವಾಂ ಶತಶೋಽಭ್ಯಘ್ನಽಲ್ಲಘುತ್ವಾತ್ಸೂತನಂದನಃ||

ಸೂತನಂದನನು ಅತಿ ಹರಿತವಾದ, ಕರಡಿಯ ಕರುವಿನ ಹಲ್ಲಿನಿಂದ ಮತ್ತು ಉಕ್ಕಿನಿಂದ ತಯಾರಿಸಿದ ಬಾಣಗಳಿಂದ, ತನ್ನ ಲಘುತ್ವದಿಂದ ನೂರಾರು ಗಂಧರ್ವರನ್ನು ಗಾಯಗೊಳಿಸಿದನು.

03230014a ಪಾತಯನ್ನುತ್ತಮಾಂಗಾನಿ ಗಂಧರ್ವಾಣಾಂ ಮಹಾರಥಃ|

03230014c ಕ್ಷಣೇನ ವ್ಯಧಮತ್ಸರ್ವಾಂ ಚಿತ್ರಸೇನಸ್ಯ ವಾಹಿನೀಂ||

ಗಂಧರ್ವರ ಶಿರಗಳನ್ನು ಉರುಳಿಸುತ್ತಾ ಆ ಮಹಾರಥಿಯು ಕ್ಷಣದಲ್ಲಿ ಚಿತ್ರಸೇನನ ಆ ವಾಹಿನಿಯನ್ನು ಚದುರಿಸಿ ಒಡೆದನು.

03230015a ತೇ ವಧ್ಯಮಾನಾ ಗಂಧರ್ವಾಃ ಸೂತಪುತ್ರೇಣ ಧೀಮತಾ|

03230015c ಭೂಯ ಏವಾಭ್ಯವರ್ತಂತ ಶತಶೋಽಥ ಸಹಸ್ರಶಃ||

ಧೀಮಂತ ಸೂತಪುತ್ರನಿಂದ ಹೀಗೆ ಗಂಧರ್ವರು ವಧಿಸಲ್ಪಡಲು, ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಅವರು ಪುನಃ ಧಾವಿಸಿ ಬಂದರು.

03230016a ಗಂಧರ್ವಭೂತಾ ಪೃಥಿವೀ ಕ್ಷಣೇನ ಸಮಪದ್ಯತ|

03230016c ಆಪತದ್ಭಿರ್ಮಹಾವೇಗೈಶ್ಚಿತ್ರಸೇನಸ್ಯ ಸೈನಿಕೈಃ||

ಕ್ಷಣಮಾತ್ರದಲ್ಲಿ ಪೃಥ್ವಿಯು ಮಹಾವೇಗದಿಂದ ಮೇಲೆ ಬೀಳುತ್ತಿರುವ ಚಿತ್ರಸೇನನ ಸೈನಿಕರಿಂದ ಗಂಧರ್ವಭೂತವಾಯಿತು.

03230017a ಅಥ ದುರ್ಯೋಧನೋ ರಾಜಾ ಶಕುನಿಶ್ಚಾಪಿ ಸೌಬಲಃ|

03230017c ದುಃಶಾಸನೋ ವಿಕರ್ಣಶ್ಚ ಯೇ ಚಾನ್ಯೇ ಧೃತರಾಷ್ಟ್ರಜಾಃ|

03230017e ನ್ಯಹನಂಸ್ತತ್ತದಾ ಸೈನ್ಯಂ ರಥೈರ್ಗಗರುಡನಿಸ್ವನೈಃ||

ಅನಂತರ ಗರುಡನಂತೆ ಕಿರುಚಿತ್ತಿರುವ ಆ ಸೇನೆಯ ಮೇಲೆ ರಥಗಳಿಂದ ರಾಜ ದುರ್ಯೋಧನ, ಸೌಬಲ ಶಕುನಿ, ದುಃಶಾಸನ, ವಿಕರ್ಣ ಮತ್ತು ಧೃತರಾಷ್ಟ್ರನ ಇತರ ಮಕ್ಕಳು ಆಕ್ರಮಣ ಮಾಡಿದರು.

03230018a ಭೂಯಶ್ಚ ಯೋಧಯಾಮಾಸುಃ ಕೃತ್ವಾ ಕರ್ಣಮಥಾಗ್ರತಃ|

03230018c ಮಹತಾ ರಥಘೋಷೇಣ ಹಯಚಾರೇಣ ಚಾಪ್ಯುತ|

03230018e ವೈಕರ್ತನಂ ಪರೀಪ್ಸಂತೋ ಗಂಧರ್ವಾನ್ಸಮವಾರಯನ್||

ಮತ್ತೊಮ್ಮೆ ಕರ್ಣನನ್ನು ಮುಂದಿರಿಸಿಕೊಂಡು ಯುದ್ಧಮಾಡಿ, ವೈಕರ್ತನನನ್ನು ಬೆಂಬಲಿಸುತ್ತಾ, ಮಹಾ ರಥಘೋಷದಿಂದ ಮತ್ತು ಕುದುರೆಗಳ ತುಳಿತದಿಂದ ಗಂಧರ್ವರನ್ನು ತಡೆದರು.

03230019a ತತಃ ಸಮ್ನ್ಯಪತನ್ಸರ್ವೇ ಗಂಧರ್ವಾಃ ಕೌರವೈಃ ಸಹ|

03230019c ತದಾ ಸುತುಮುಲಂ ಯುದ್ಧಮಭವಲ್ಲೋಮಹರ್ಷಣ||

ಆಗ ಗಂಧರ್ವರೆಲ್ಲರೂ ಕೌರವರ ಮೇಲೆರಗಿದರು ಮತ್ತು ಅಲ್ಲಿ ಮೈನವಿರೇಳಿಸುವ ಮಹಾ ತುಮುಲ ಯುದ್ದವು ನಡೆಯಿತು.

03230020a ತತಸ್ತೇ ಮೃದವೋಽಭೂವನ್ಗಂಧರ್ವಾಃ ಶರಪೀಡಿತಾಃ|

03230020c ಉಚ್ಚುಕ್ರುಶುಶ್ಚ ಕೌರವ್ಯಾ ಗಂಧರ್ವಾನ್ಪ್ರೇಕ್ಷ್ಯ ಪೀಡಿತಾನ್||

ಆಗ ಶರಪೀಡಿತರಾದ ಗಂಧರ್ವರು ಸ್ವಲ್ಪ ಮೃದುವಾಗಲು ಪೀಡಿತರಾದ ಗಂಧರ್ವರನ್ನು ನೋಡಿ ಕೌರವರು ಜೋರಾಗಿ ಕೂಗಿದರು.

03230021a ಗಂಧರ್ವಾಂಸ್ತ್ರಾಸಿತಾನ್ದೃಷ್ಟ್ವಾ ಚಿತ್ರಸೇನೋಽತ್ಯಮರ್ಷಣಃ|

03230021c ಉತ್ಪಪಾತಾಸನಾತ್ಕ್ರುದ್ಧೋ ವಧೇ ತೇಷಾಂ ಸಮಾಹಿತಃ||

ಗಂಧರ್ವರು ಹಿಂಜರಿಯುತ್ತಿದ್ದನ್ನು ನೋಡಿ ರೋಷಗೊಂಡ ಚಿತ್ರಸೇನನು ಕೋಪದಿಂದ ಅವರೆಲ್ಲರನ್ನೂ ಒಟ್ಟಿಗೇ ಸಂಹರಿಸಲು ಆಸನದಿಂದ ಮೇಲೆದ್ದನು.

03230022a ತತೋ ಮಾಯಾಸ್ತ್ರಮಾಸ್ಥಾಯ ಯುಯುಧೇ ಚಿತ್ರಮಾರ್ಗವಿತ್|

03230022c ತಯಾಮುಹ್ಯಂತ ಕೌರವ್ಯಾಶ್ಚಿತ್ರಸೇನಸ್ಯ ಮಾಯಯಾ||

ಆಗ ಅವನು ಮಾಯಾಸ್ತ್ರವನ್ನು ಬಳಸಿ ಚಿತ್ರಮಾರ್ಗದಲ್ಲಿ ಯುದ್ಧಮಾಡಿದನು. ಚಿತ್ರಸೇನನ ಮಾಯೆಯು ಕೌರವರನ್ನು ಮೋಸಗೊಳಿಸಿತು.

03230023a ಏಕೈಕೋ ಹಿ ತದಾ ಯೋಧೋ ಧಾರ್ತರಾಷ್ಟ್ರಸ್ಯ ಭಾರತ|

03230023c ಪರ್ಯವರ್ತತ ಗಂಧರ್ವೈರ್ದಶಭಿರ್ದಶಭಿಃ ಸಹ||

ಭಾರತ! ಧಾರ್ತರಾಷ್ಟ್ರನ ಪ್ರತಿಯೊಬ್ಬ ಯೋಧನನ್ನೂ ಹತ್ತು ಹತ್ತು ಮಂದಿ ಗಂಧರ್ವರು ಸುತ್ತುವರೆದು ತಡೆದರು.

03230024a ತತಃ ಸಂಪೀಡ್ಯಮಾನಾಸ್ತೇ ಬಲೇನ ಮಹತಾ ತದಾ|

03230024c ಪ್ರಾದ್ರವಂತ ರಣೇ ಭೀತಾ ಯತ್ರ ರಾಜಾ ಯುಧಿಷ್ಠಿರಃ||

ಆ ಮಹಾಬಲದಿಂದ ಪೀಡಿತರಾದ ಅವರು ರಣದಲ್ಲಿ ಭೀತಿಗೊಂಡು ರಾಜಾ ಯುಧಿಷ್ಠಿರನಿದ್ದಲ್ಲಿಗೆ ಓಡಿಹೋದರು.

03230025a ಭಜ್ಯಮಾನೇಷ್ವನೀಕೇಷು ಧಾರ್ತರಾಷ್ಟ್ರೇಷು ಸರ್ವಶಃ|

03230025c ಕರ್ಣೋ ವೈಕರ್ತನೋ ರಾಜಂಸ್ತಸ್ಥೌ ಗಿರಿರಿವಾಚಲಃ||

ರಾಜನ್! ಧಾರ್ತರಾಷ್ಟ್ರರೆಲ್ಲರೂ ಪೀಡಿತರಾಗಿರಲು ವೈಕರ್ತನ ಕರ್ಣನು ಗಿರಿಯಂತೆ ಅಚಲವಾಗಿದ್ದನು.

03230026a ದುರ್ಯೋಧನಶ್ಚ ಕರ್ಣಶ್ಚ ಶಕುನಿಶ್ಚಾಪಿ ಸೌಬಲಃ|

03230026c ಗಂಧರ್ವಾನ್ಯೋಧಯಾಂ ಚಕ್ರುಃ ಸಮರೇ ಭೃಶವಿಕ್ಷತಾಃ||

ಚೆನ್ನಾಗಿ ಗಾಯಗೊಂಡಿದ್ದರೂ ದುರ್ಯೋಧನ, ಕರ್ಣ ಮತ್ತು ಸೌಬಲ ಶಕುನಿಯರು ಸಮರದಲ್ಲಿ ಗಂಧರ್ವರೊಡನೆ ಹೋರಾಡಿದರು.

03230027a ಸರ್ವ ಏವ ತು ಗಂಧರ್ವಾಃ ಶತಶೋಽಥ ಸಹಸ್ರಶಃ|

03230027c ಜಿಘಾಂಸಮಾನಾಃ ಸಹಿತಾಃ ಕರ್ಣಮಭ್ಯದ್ರವನ್ರಣೇ||

ನೂರಾರು ಸಹಸ್ರಾರು ಗಂಧರ್ವರೆಲ್ಲರೂ ಒಟ್ಟಿಗೇ ಅವನನ್ನು ಕೊಲ್ಲುವ ಉದ್ದೇಶದಿಂದ ರಣದಲ್ಲಿ ಕರ್ಣನ ಮೇಲೆ ಎರಗಿದರು.

03230028a ಅಸಿಭಿಃ ಪಟ್ಟಿಶೈಃ ಶೂಲೈರ್ಗದಾಭಿಶ್ಚ ಮಹಾಬಲಾಃ|

03230028c ಸೂತಪುತ್ರಂ ಜಿಘಾಂಸಂತಃ ಸಮಂತಾತ್ಪರ್ಯವಾರಯನ್||

ಎಲ್ಲಕಡೆಯಿಂದಲೂ ಸುತ್ತುವರೆದು ಸೂತಪುತ್ರನನ್ನು ಖಡ್ಗಗಳಿಂದ, ಪಟ್ಟಿಶಗಳಿಂದ, ಶೂಲಗಳಿಂದ ಮತ್ತು ಗದೆಗಳಿಂದ ಆ ಮಹಾಬಲರು ಹೊಡೆದರು.

03230029a ಅನ್ಯೇಽಸ್ಯ ಯುಗಮಚ್ಚಿಂದನ್ಧ್ವಜಮನ್ಯೇ ನ್ಯಪಾತಯನ್|

03230029c ಈಷಾಮನ್ಯೇ ಹಯಾನನ್ಯೇ ಸೂತಮನ್ಯೇ ನ್ಯಪಾತಯನ್||

ಕೆಲವರು ನೊಗವನ್ನು ಮುರಿದರು, ಅನ್ಯರು ಧ್ವಜವನ್ನು ಕೆಳಗಿಳಿಸಿದರು, ಇನ್ನೂ ಕೆಲವರು ಕುದುರೆಗಳನ್ನು ಮತ್ತು ಇತರರು ಸೂತನನ್ನು ಕೆಳಗುರುಳಿಸಿದರು.

03230030a ಅನ್ಯೇ ಚತ್ರಂ ವರೂಥಂ ಚ ಬಂಧುರಂ ಚ ತಥಾಪರೇ|

03230030c ಗಂಧರ್ವಾ ಬಹುಸಾಹಸ್ರಾಃ ಖಂಡಶೋಽಭ್ಯಹನನ್ರಥಂ||

ಕೆಲವರು ಛತ್ರವನ್ನು ಮತ್ತು ವರೂಥವನ್ನು ಇನ್ನು ಕೆಲವರು ಬಂಧುರವನ್ನು ಹೀಗೆ ಬಹಳ ಸಹಸ್ರ ಗಂಧರ್ವರು ಅವನ ರಥವನ್ನು ತುಂಡು ತುಂಡು ಮಾಡಿದರು.

03230031a ತತೋ ರಥಾದವಪ್ಲುತ್ಯ ಸೂತಪುತ್ರೋಽಸಿಚರ್ಮಭೃತ್|

03230031c ವಿಕರ್ಣರಥಮಾಸ್ಥಾಯ ಮೋಕ್ಷಾಯಾಶ್ವಾನಚೋದಯತ್||

ಆಗ ಸೂತಪುತ್ರನು ಖಡ್ಗ ತುಮುರಗಳನ್ನು ಹಿಡಿದು ಹಾರಿ ವಿಕರ್ಣನ ರಥದ ಮೇಲೆ ಕುಳಿತು ತಪ್ಪಿಸಿಕೊಳ್ಳಲು ಕುದುರೆಗಳನ್ನು ಪ್ರಚೋದಿಸಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ಕರ್ಣಪರಾಭವೇ ತ್ರಿಂಶದಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ಕರ್ಣಪರಾಭವದಲ್ಲಿ ಇನ್ನೂರಾಮೂವತ್ತನೆಯ ಅಧ್ಯಾಯವು.

Related image

Comments are closed.