Aranyaka Parva: Chapter 281

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೮೧

ಯಮ-ಸಾವಿತ್ರೀ ಸಂವಾದ

ಕಟ್ಟಿಗೆ ಕಡಿಯುತ್ತಿರುವಾಗ ಆಯಾಸಗೊಂಡ ಸತ್ಯವಾನನು ತನ್ನ ತಲೆಯನ್ನು ಸಾವಿತ್ರಿಯ ತೊಡೆಯಮೇಲಿರಿಸಿ ಮಲಗಿಕೊಳ್ಳಲು ಅಲ್ಲಿಗೆ ಆಗಮಿಸಿದ ಅಮಾನುಷ ಪುರುಷನೋರ್ವನನ್ನು ಕಂಡ ಸಾವಿತ್ರಿಯು ಅವನು ಯಮನಿರಬಹುದೆಂದು ತಿಳಿದು ಮಾತನಾಡಿಸಿದುದು (೧-೧೧). ಸಾವಿತ್ರಿಯು ಪತಿವ್ರತೆ ಮತ್ತು ತಪೋನ್ವಿತೆಯಾಗಿರುವುದರಿಂದ ತಾನು ಅವಳೊಡನೆ ಮಾತನಾಡಬಲ್ಲೆನೆಂದು ಹೇಳಿ ಯಮನು ತನ್ನ ಪರಿಚಯ ಮಾಡಿಕೊಂಡು, ಕ್ಷೀಣಾಯು ಸತ್ಯವಾನನನ್ನು ಬಂಧಿಸಿ ತೆಗೆದುಕೊಂಡು ಹೋಗಲು ಬಂದಿದ್ದೇನೆಂದು ಹೇಳಿದುದು; ಸತ್ಯವತನ ದೇಹದಿಂದ ಅಂಗುಷ್ಠದ ಗಾತ್ರದಲ್ಲಿದ್ದ ಪುರುಷನನ್ನು ಪಾಶಕ್ಕೆ ಕಟ್ಟಿ ಎಳೆದು ಹೊರತೆಗೆದು ಕೊಂಡೊಯ್ದುದು; ಸಾವಿತ್ರಿಯು ಅವನನ್ನು ಹಿಂಬಾಲಿಸಿದುದು (೧೨-೧೬). ಯಮನು ಹಿಂದಿರುಗಿ ಹೋಗೆಂದು ಹೇಳಿದರೂ ಸಾವಿತ್ರಿಯು ಅವನನ್ನು ಹಿಂಬಾಲಿಸಿ, ಮಾರ್ಗದಲ್ಲಿ ಅವನೊಂದಿಗೆ ಮಾತನಾಡುತ್ತಾ ನಾಲ್ಕು ವರಗಳನ್ನು ಪಡೆದುದು (೧೭-೪೫). ಐದನೆಯ ವರವಾಗಿ ಸತ್ಯವಾನನ ಜೀವವನ್ನು ಕೇಳಲು ಯಮನು ಕರುಣಿಸಿದ್ದು (೪೬-೫೯). ಎಚ್ಚೆತ್ತ ಸತ್ಯವಾನನೊಂದಿಗೆ ರಾತ್ರಿಯೇ ಆಶ್ರಮಕ್ಕೆ ಹಿಂದಿರುಗಿ ಬರುವುದು (೬೦-೧೦೮).

03281001 ಮಾರ್ಕಂಡೇಯ ಉವಾಚ|

03281001a ಅಥ ಭಾರ್ಯಾಸಹಾಯಃ ಸ ಫಲಾನ್ಯಾದಾಯ ವೀರ್ಯವಾನ್|

03281001c ಕಠಿನಂ ಪೂರಯಾಮಾಸ ತತಃ ಕಾಷ್ಠಾನ್ಯಪಾಟಯತ್||

ಮಾರ್ಕಂಡೇಯನು ಹೇಳಿದನು: “ಅನಂತರ ಆ ವೀರ್ಯವಂತನು ಪತ್ನಿಯ ಸಹಾಯದಿಂದ ಹಣ್ಣುಗಳನ್ನು ಕಿತ್ತು ಬುಟ್ಟಿಯಲ್ಲಿ ತುಂಬಿಸಿ ಕಟ್ಟಿಗೆಯನ್ನು ಕಡಿಯಲು ಪ್ರಾರಂಭಿಸಿದನು.

03281002a ತಸ್ಯ ಪಾಟಯತಃ ಕಾಷ್ಠಂ ಸ್ವೇದೋ ವೈ ಸಮಜಾಯತ|

03281002c ವ್ಯಾಯಾಮೇನ ಚ ತೇನಾಸ್ಯ ಜಜ್ಞೇ ಶಿರಸಿ ವೇದನಾ||

ಅವನು ಕಟ್ಟಿಗೆಯನ್ನು ಕಡಿಯುತ್ತಿರಲು ಚೆನ್ನಾಗಿ ಬೆವರಿಳಿಯಿತು ಮತ್ತು ಆ ಶ್ರಮದಿಂದ ತಲೆ ನೋವು ಬಂದಿತು.

03281003a ಸೋಽಭಿಗಮ್ಯ ಪ್ರಿಯಾಂ ಭಾರ್ಯಾಮುವಾಚ ಶ್ರಮಪೀಡಿತಃ|

03281003c ವ್ಯಾಯಾಮೇನ ಮಮಾನೇನ ಜಾತಾ ಶಿರಸಿ ವೇದನಾ||

ಆಯಾಸಗೊಂಡ ಅವನು ಪ್ರಿಯ ಭಾರ್ಯೆಯ ಬಳಿಬಂದು ಹೇಳಿದನು: “ನನ್ನ ಈ ಶ್ರಮದಿಂದ ತಲೆ ನೋಯುತ್ತಿದೆ.

03281004a ಅಂಗಾನಿ ಚೈವ ಸಾವಿತ್ರಿ ಹೃದಯಂ ದೂಯತೀವ ಚ|

03281004c ಅಸ್ವಸ್ಥಮಿವ ಚಾತ್ಮಾನಂ ಲಕ್ಷಯೇ ಮಿತಭಾಷಿಣಿ||

ಸಾವಿತ್ರಿ! ಅಂಗಗಳೂ ಹೃದಯವೂ ನೋಯುತ್ತಿವೆ. ಮಿತಭಾಷಿಣಿ! ನಾನು ಅಸ್ವಸ್ಥನಾಗಿದ್ದೇನೆಂದು ತೋರುತ್ತಿದೆ.

03281005a ಶೂಲೈರಿವ ಶಿರೋ ವಿದ್ಧಮಿದಂ ಸಂಲಕ್ಷಯಾಮ್ಯಹಂ|

03281005c ತತ್ ಸ್ವಪ್ತುಮಿಚ್ಚೇ ಕಲ್ಯಾಣಿ ನ ಸ್ಥಾತುಂ ಶಕ್ತಿರಸ್ತಿ ಮೇ||

ಶೂಲಗಳಿಂದ ತಲೆಯು ತಿವಿಯಲ್ಪಡುತ್ತಿವೆಯೋ ಎಂದು ಅನಿಸುತ್ತಿದೆ. ಕಲ್ಯಾಣಿ! ಮಲಗಲು ಬಯಸುತ್ತೇನೆ. ನಿಂತುಕೊಂಡಿರಲು ನನ್ನಲ್ಲಿ ಶಕ್ತಿಯಿಲ್ಲ.”

03281006a ಸಮಾಸಾದ್ಯಾಥ ಸಾವಿತ್ರೀ ಭರ್ತಾರಮುಪಗೂಃಯ ಚ|

03281006c ಉತ್ಸಂಗೇಽಸ್ಯ ಶಿರಃ ಕೃತ್ವಾ ನಿಷಸಾದ ಮಹೀತಲೇ||

ತಕ್ಷಣವೇ ಸಾವಿತ್ರಿಯು ಪತಿಯ ಬಳಿಬಂದು ನೆಲದ ಮೇಲೆ ಕುಳಿತುಕೊಂಡು ಅವನ ತಲೆಯನ್ನು ತನ್ನ ತೊಡೆಯ ಮೇಲಿರಿಸಿಕೊಂಡಳು.

03281007a ತತಃ ಸಾ ನಾರದವಚೋ ವಿಮೃಶಂತೀ ತಪಸ್ವಿನೀ|

03281007c ತಂ ಮುಹೂರ್ತಂ ಕ್ಷಣಂ ವೇಲಾಂ ದಿವಸಂ ಚ ಯುಯೋಜ ಹ||

ಆಗ ಆ ತಪಸ್ವಿನಿಯು ನಾರದನ ಮಾತುಗಳನ್ನು ನೆನಪಿಸಿಕೊಂಡು ಆ ಮುಹೂರ್ತ, ಕ್ಷಣ, ವೇಳೆ. ದಿವಸವು ಕೂಡಿಬಂದಿದೆಯೆಂದು ಅರ್ಥಮಾಡಿಕೊಂಡಳು.

03281008a ಮುಹೂರ್ತಾದಿವ ಚಾಪಶ್ಯತ್ಪುರುಷಂ ಪೀತವಾಸಸಂ|

03281008c ಬದ್ಧಮೌಲಿಂ ವಪುಷ್ಮಂತಮಾದಿತ್ಯಸಮತೇಜಸಂ||

ಮುಹೂರ್ತದಲ್ಲಿಯೇ ಅವಳು ಹಳದಿಬಣ್ಣದ ವಸ್ತ್ರಗಳನ್ನುಟ್ಟಿದ್ದ, ಕಿರೀಟವನ್ನು ಕಟ್ಟಿದ್ದ, ತೇಜಸ್ಸಿನಲ್ಲಿ ಆದಿತ್ಯನಂತಿದ್ದ ಹೊಳೆಯುತ್ತಿದ್ದ ಪುರುಷನೋರ್ವನನ್ನು ಕಂಡಳು.

03281009a ಶ್ಯಾಮಾವದಾತಂ ರಕ್ತಾಕ್ಷಂ ಪಾಶಹಸ್ತಂ ಭಯಾವಹಂ|

03281009c ಸ್ಥಿತಂ ಸತ್ಯವತಃ ಪಾರ್ಶ್ವೇ ನಿರೀಕ್ಷಂತಂ ತಮೇವ ಚ||

ಅವನ ದೇಹವು ಕಪ್ಪಾಗಿ ಹೊಳೆಯುತ್ತಿತ್ತು, ಕಣ್ಣುಗಳು ರಕ್ತದಂತೆ ಕೆಂಪಾಗಿದ್ದವು. ಕೈಯಲ್ಲಿ ಪಾಶವನ್ನು ಹಿಡಿದಿದ್ದನು ಮತ್ತು ಅವನ ಮುಖವು ಭಯವನ್ನುಂಟುಮಾಡುತ್ತಿತ್ತು. ಅವನು ಸತ್ಯವಾನನ ಪಕ್ಕದಲ್ಲಿ ಅವನನ್ನೇ ನೋಡುತ್ತಾ ನಿಂತುಕೊಂಡನು.

03281010a ತಂ ದೃಷ್ಟ್ವಾ ಸಹಸೋತ್ಥಾಯ ಭರ್ತುರ್ನ್ಯ್ಯಸ್ಯ ಶನೈಃ ಶಿರಃ|

03281010c ಕೃತಾಂಜಲಿರುವಾಚಾರ್ತಾ ಹೃದಯೇನ ಪ್ರವೇಪತಾ||

ಅವನನ್ನು ನೋಡಿದ ತಕ್ಷಣವೇ ಪತಿಯ ತಲೆಯನ್ನು ನಿಧಾನವಾಗಿ ನೆಲದ ಮೇಲಿರಿಸಿ ಎದ್ದು ಅಂಜಲೀಬದ್ಧಳಾಗಿ ಹೃದಯದಲ್ಲಿ ಕಂಪಿಸುತ್ತಾ ಆರ್ತಳಾಗಿ ಹೇಳಿದಳು.

03281011a ದೈವತಂ ತ್ವಾಭಿಜಾನಾಮಿ ವಪುರೇತದ್ಧ್ಯಮಾನುಷಂ|

03281011c ಕಾಮಯಾ ಬ್ರೂಹಿ ಮೇ ದೇವ ಕಸ್ತ್ವಂ ಕಿಂ ಚ ಚಿಕೀರ್ಷಸಿ||

“ಅಮಾನುಷ ದೇಹವನ್ನು ಧರಿಸಿದ ನೀನು ದೇವತೆಯೆಂದು ತಿಳಿಯುತ್ತೇನೆ. ದೇವ! ನಿನಗೆ ಇಷ್ಟವಾದರೆ ಹೇಳು. ನೀನು ಯಾರು? ಮತ್ತು ಏನು ಮಾಡಬಯಸುತ್ತಿರುವೆ?”

03281012 ಯಮ ಉವಾಚ|

03281012a ಪತಿವ್ರತಾಸಿ ಸಾವಿತ್ರಿ ತಥೈವ ಚ ತಪೋನ್ವಿತಾ|

03281012c ಅತಸ್ತ್ವಾಮಭಿಭಾಷಾಮಿ ವಿದ್ಧಿ ಮಾಂ ತ್ವಂ ಶುಭೇ ಯಮಂ||

ಯಮನು ಹೇಳಿದನು: “ಸಾವಿತ್ರಿ! ಪತಿವ್ರತೆ ಮತ್ತು ತಪೋನ್ವಿತೆಯಾಗಿರುವೆ. ಆದುದರಿಂದಲೆ ನಾನು ನಿನ್ನೊಡನೆ ಮಾತನಾಡಬಲ್ಲೆ. ಶುಭೇ! ನನ್ನನ್ನು ಯಮನೆಂದು ತಿಳಿ.

03281013a ಅಯಂ ತೇ ಸತ್ಯವಾನ್ಭರ್ತಾ ಕ್ಷೀಣಾಯುಃ ಪಾರ್ಥಿವಾತ್ಮಜಃ|

03281013c ನೇಷ್ಯಾಮ್ಯೇನಮಹಂ ಬದ್ಧ್ವಾ ವಿದ್ಧ್ಯೇತನ್ಮೇ ಚಿಕೀರ್ಷಿತಂ||

ಈ ನಿನ್ನ ಪತಿ, ರಾಜಕುಮಾರ ಸತ್ಯವಾನನು ಕ್ಷೀಣಾಯುವು. ಇವನನ್ನು ಬಂಧಿಸಿ ನನ್ನೊಡನೆ ಕರೆದುಕೊಂಡು ಹೋಗಲು ಬಯಸಿ ಬಂದಿದ್ದೇನೆ.””

03281014 ಮಾರ್ಕಂಡೇಯ ಉವಾಚ|

03281014a ಇತ್ಯುಕ್ತ್ವಾ ಪಿತೃರಾಜಸ್ತಾಂ ಭಗವಾನ್ಸ್ವಂ ಚಿಕೀರ್ಷಿತಂ|

03281014c ಯಥಾವತ್ಸರ್ವಮಾಖ್ಯಾತುಂ ತತ್ಪ್ರಿಯಾರ್ಥಂ ಪ್ರಚಕ್ರಮೇ||

ಮಾರ್ಕಂಡೇಯನು ಹೇಳಿದನು: “ಹೀಗೆ ಹೇಳಿ ಭಗವಾನ್ ಪಿತೃರಾಜನು ಅವಳಿಗೆ ಸಂತೋಷಗೊಳಿಸಲು ಯಥಾವತ್ತಾಗಿ ಎಲ್ಲವನ್ನೂ ಹೇಳಲು ಪ್ರಾರಂಭಿಸಿದನು.

03281015a ಅಯಂ ಹಿ ಧರ್ಮಸಮ್ಯುಕ್ತೋ ರೂಪವಾನ್ಗುಣಸಾಗರಃ|

03281015c ನಾರ್ಹೋ ಮತ್ಪುರುಷೈರ್ನೇತುಮತೋಽಸ್ಮಿ ಸ್ವಯಮಾಗತಃ||

“ಇವನಾದರೋ ಧರ್ಮಸಂಯುಕ್ತನೂ, ರೂಪವಂತನೂ, ಗುಣಸಾಗರನೂ ಆಗಿದ್ದಾನೆ. ನನ್ನ ಪುರುಷರಿಂದ ಎಳೆದುಕೊಂಡು ಹೋಗಲ್ಪಡಲು ಇವನು ಅರ್ಹನಲ್ಲವಾದುದರಿಂದ ನಾನೇ ಇಲ್ಲಿಗೆ ಬಂದಿದ್ದೇನೆ.”

03281016a ತತಃ ಸತ್ಯವತಃ ಕಾಯಾತ್ಪಾಶಬದ್ಧಂ ವಶಂ ಗತಂ|

03281016c ಅಂಗುಷ್ಠಮಾತ್ರಂ ಪುರುಷಂ ನಿಶ್ಚಕರ್ಷ ಯಮೋ ಬಲಾತ್||

ಆಗ ಯಮನು ಬಲವನ್ನುಪಯೋಗಿಸಿ ಸತ್ಯವತನ ದೇಹದಿಂದ ಅಂಗುಷ್ಠದ ಗಾತ್ರದಲ್ಲಿದ್ದ ಪುರುಷನನ್ನು ಪಾಶಕ್ಕೆ ಕಟ್ಟಿ ಎಳೆದು ಹೊರತೆಗೆದನು.

03281017a ತತಃ ಸಮುದ್ಧೃತಪ್ರಾಣಂ ಗತಶ್ವಾಸಂ ಹತಪ್ರಭಂ|

03281017c ನಿರ್ವಿಚೇಷ್ಟಂ ಶರೀರಂ ತದ್ಬಭೂವಾಪ್ರಿಯದರ್ಶನಂ||

ಪ್ರಾಣವು ಹೊರಟುಹೋಗಲು ಶ್ವಾಸವು ನಿಂತಿತು, ಕಳೆಯು ಕುಂದಿತು ಮತ್ತು ನಿರ್ವಿಚೇಷ್ಟವಾದ ಆ ಶರೀರವು ನೋಡಲು ಅಪ್ರಿಯವಾಗಿ ಕಂಡಿತು.

03281018a ಯಮಸ್ತು ತಂ ತಥಾ ಬದ್ಧ್ವಾ ಪ್ರಯಾತೋ ದಕ್ಷಿಣಾಮುಖಃ|

03281018c ಸಾವಿತ್ರೀ ಚಾಪಿ ದುಃಖಾರ್ತಾ ಯಮಮೇವಾನ್ವಗಚ್ಚತ|

03281018E ನಿಯಮವ್ರತಸಂಸಿದ್ಧಾ ಮಹಾಭಾಗಾ ಪತಿವ್ರತಾ||

ಯಮನು ಅವನನ್ನು ಬಂಧಿಸಿ ದಕ್ಷಿಣಾಭಿಮುಖವಾಗಿ ಹೊರಟನು. ನಿಯಮ ವ್ರತಗಳಿಂದ ಸಂಸಿದ್ಧಳಾಗಿದ್ದ ಆ ಮಹಾಭಾಗೆ ಪ್ರತಿವ್ರತೆ ಸಾವಿತ್ರಿಯೂ ಕೂಡ ದುಃಖಾರ್ತಳಾಗಿ ಯಮನನ್ನು ಹಿಂಬಾಲಿಸಿದಳು.

03281019 ಯಮ ಉವಾಚ|

03281019a ನಿವರ್ತ ಗಚ್ಚ ಸಾವಿತ್ರಿ ಕುರುಷ್ವಾಸ್ಯೌರ್ಧ್ವದೇಹಿಕಂ|

03281019c ಕೃತಂ ಭರ್ತುಸ್ತ್ವಯಾನೃಣ್ಯಂ ಯಾವದ್ಗಮ್ಯಂ ಗತಂ ತ್ವಯಾ||

ಯಮನು ಹೇಳಿದನು: “ಸಾವಿತ್ರಿ! ಹಿಂದಿರುಗಿ ಹೋಗು ಮತ್ತು ಅವನ ಔರ್ಧ್ವದೇಹಿಕ ಕ್ರಿಯೆಗಳನ್ನು ಮಾಡು. ನೀನು ನಿನ್ನ ಗಂಡನ ಋಣವನ್ನು ತೀರಿಸಿದ್ದೀಯೆ. ಎಲ್ಲಿಯವರೆಗೆ ಅವನೊಂದಿಗೆ ಹೋಗಬಹುದಾಗಿತ್ತೋ ಅಲ್ಲಿಯವರೆಗೆ ನೀನು ಬಂದಿದ್ದೀಯೆ.”

03281020 ಸಾವಿತ್ರ್ಯುವಾಚ|

03281020a ಯತ್ರ ಮೇ ನೀಯತೇ ಭರ್ತಾ ಸ್ವಯಂ ವಾ ಯತ್ರ ಗಚ್ಚತಿ|

03281020c ಮಯಾಪಿ ತತ್ರ ಗಂತವ್ಯಮೇಷ ಧರ್ಮಃ ಸನಾತನಃ||

ಸಾವಿತ್ರಿಯು ಹೇಳಿದಳು: “ನನ್ನ ಪತಿಯನ್ನು ಎಲ್ಲಿಗೆ ಕರೆದೊಯ್ಯಲಾಗುತ್ತದೆಯೋ ಅಥವಾ ಸ್ವಯಂ ಅವನೇ ಎಲ್ಲಿಗೆ ಹೋಗುತ್ತಾನೋ ಅಲ್ಲಿಗೆ ನಾನೂ ಹೋಗುಬೇಕೆನ್ನುವುದು ಸನಾತನ ಧರ್ಮ.

03281021a ತಪಸಾ ಗುರುವೃತ್ತ್ಯಾ ಚ ಭರ್ತುಃ ಸ್ನೇಹಾದ್ವ್ರತೇನ ಚ|

03281021c ತವ ಚೈವ ಪ್ರಸಾದೇನ ನ ಮೇ ಪ್ರತಿಹತಾ ಗತಿಃ||

ತಪಸ್ಸು, ಗುರುಭಕ್ತಿ, ಪತಿಯ ಮೇಲಿರುವ ಪ್ರೀತಿ, ಮತ್ತು ನಿನ್ನ ಪ್ರಸಾದದಿಂದ ನನ್ನ ಈ ನಡುಗೆಯನ್ನು ಯಾವುದೂ ತಡೆಯಲಾರದು.

03281022a ಪ್ರಾಹುಃ ಸಪ್ತಪದಂ ಮಿತ್ರಂ ಬುಧಾಸ್ತತ್ತ್ವಾರ್ಥದರ್ಶಿನಃ|

03281022c ಮಿತ್ರತಾಂ ಚ ಪುರಸ್ಕೃತ್ಯ ಕಿಂ ಚಿದ್ವಕ್ಷ್ಯಾಮಿ ತಚ್ಚೃಣು||

ಒಟ್ಟಿಗೇ ಏಳು ಹೆಜ್ಜೆ ನಡೆದರೆ ಮಿತ್ರರಾಗುತ್ತಾರೆ ಎಂದು ತಿಳಿದ ತತ್ವದರ್ಶಿಗಳು ಹೇಳುತ್ತಾರೆ. ಆ ಮಿತ್ರತ್ವವನ್ನು ಗೌರವಿಸಿ ನಿನ್ನಲ್ಲಿ ಏನೋ ಒಂದನ್ನು ಹೇಳಲು ಬಯಸುತ್ತೇನೆ. ಅದನ್ನು ಕೇಳು.

03281023a ನಾನಾತ್ಮವಂತಸ್ತು ವನೇ ಚರಂತಿ|

         ಧರ್ಮಂ ಚ ವಾಸಂ ಚ ಪರಿಶ್ರಮಂ ಚ||

03281023c ವಿಜ್ಞಾನತೋ ಧರ್ಮಮುದಾಹರಂತಿ|

         ತಸ್ಮಾತ್ಸಂತೋ ಧರ್ಮಮಾಹುಃ ಪ್ರಧಾನಂ||

ಆತ್ಮವಂತನಲ್ಲದವನು ವನದಲ್ಲಿ ಧರ್ಮದಂತೆ ನಡೆದುಕೊಳ್ಳಲು, ವಾಸಿಸಲು ಮತ್ತು ಪರಿಶ್ರಮಪಡಲು ಸಾಧ್ಯವಿಲ್ಲ. ವಿಜ್ಞಾನಿಗಳು ಧರ್ಮದಲ್ಲಿಯೇ ಸುಖವಿದೆಯೆಂದು ಹೇಳುತ್ತಾರೆ. ಆದುದರಿಂದಲೇ ಸಂತರು ಧರ್ಮವೇ ಪ್ರಧಾನವೆಂದು ಹೇಳುತ್ತಾರೆ.

03281024a ಏಕಸ್ಯ ಧರ್ಮೇಣ ಸತಾಂ ಮತೇನ|

         ಸರ್ವೇ ಸ್ಮ ತಂ ಮಾರ್ಗಮನುಪ್ರಪನ್ನಾಃ||

03281024c ಮಾ ವೈ ದ್ವಿತೀಯಂ ಮಾ ತೃತೀಯಂ ಚ ವಾಂಚೇ|

         ತಸ್ಮಾತ್ಸಂತೋ ಧರ್ಮಮಾಹುಃ ಪ್ರಧಾನಂ||

ಸಾತ್ವಿಕರ ಮತದಂತೆ ಎಲ್ಲಕ್ಕಿಂತಲೂ ಹೆಚ್ಚಾಗಿ ಓರ್ವನ ಧರ್ಮವೇ ಅವನನ್ನು ಸರಿಯಾದ ಮಾರ್ಗದಲ್ಲಿ ಇರಿಸುತ್ತದೆ. ಎರಡನೆಯದನ್ನು ಅಥವಾ ಮೂರನೆಯದನ್ನು ಇಚ್ಛಿಸಬಾರದು. ಆದುದರಿಂದಲೇ ಸಂತರು ಧರ್ಮವೇ ಪ್ರಧಾನವೆಂದು ಹೇಳುತ್ತಾರೆ.”

03281025 ಯಮ ಉವಾಚ|

03281025a ನಿವರ್ತ ತುಷ್ಟೋಽಸ್ಮಿ ತವಾನಯಾ ಗಿರಾ|

         ಸ್ವರಾಕ್ಷರವ್ಯಂಜನಹೇತುಯುಕ್ತಯಾ|

03281025c ವರಂ ವೃಣೀಷ್ವೇಹ ವಿನಾಸ್ಯ ಜೀವಿತಂ|

         ದದಾನಿ ತೇ ಸರ್ವಮನಿಂದಿತೇ ವರಂ||

ಯಮನು ಹೇಳಿದನು: “ಅನಿಂದಿತೇ! ಹಿಂದಿರುಗು! ಸ್ವರಾಕ್ಷರ ವ್ಯಂಜನಗಳನ್ನು ಸರಿಯಾಗಿ ಜೋಡಿಸಲ್ಪಟ್ಟ ನಿನ್ನ ಈ ಮಾತಿನಿಂದ ತೃಪ್ತನಾಗಿದ್ದೇನೆ. ಇವನ ಜೀವವನ್ನು ಬಿಟ್ಟು ವರವನ್ನು ಕೇಳು. ನಿನ್ನ ಎಲ್ಲ ವರವನ್ನೂ ಕೊಡುತ್ತೇನೆ.”

03281026 ಸಾವಿತ್ರ್ಯುವಾಚ|

03281026a ಚ್ಯುತಃ ಸ್ವರಾಜ್ಯಾದ್ವನವಾಸಮಾಶ್ರಿತೋ|

         ವಿನಷ್ಟಚಕ್ಷುಃ ಶ್ವಶುರೋ ಮಮಾಶ್ರಮೇ|

03281026c ಸ ಲಬ್ಧಚಕ್ಷುರ್ಬಲವಾನ್ಭವೇನ್ನೃಪಸ್|

         ತವ ಪ್ರಸಾದಾಜ್ಜ್ವಲನಾರ್ಕಸಂನಿಭಃ||

ಸಾವಿತ್ರಿಯು ಹೇಳಿದಳು: “ನನ್ನ ಮಾವನು ಕಣ್ಣುಗಳನ್ನು ಮತ್ತು ಸ್ವರಾಜ್ಯವನ್ನು ಕಳೆದುಕೊಂಡು ಆಶ್ರಮದಲ್ಲಿ ವನವಾಸದಲ್ಲಿದ್ದಾನೆ. ನಿನ್ನ ಪ್ರಸಾದದಿಂದ ಆ ನೃಪತಿಯು ಕಣ್ಣುಗಳನ್ನು ಪಡೆದು ಅಗ್ನಿ ಮತ್ತು ಸೂರ್ಯಸನ್ನಿಭನಾಗಿ ಬಲವಂತನಾಗಲಿ.”

03281027 ಯಮ ಉವಾಚ|

03281027a ದದಾನಿ ತೇ ಸರ್ವಮನಿಂದಿತೇ ವರಂ|

         ಯಥಾ ತ್ವಯೋಕ್ತಂ ಭವಿತಾ ಚ ತತ್ತಥಾ|

03281027c ತವಾಧ್ವನಾ ಗ್ಲಾನಿಮಿವೋಪಲಕ್ಷಯೇ|

         ನಿವರ್ತ ಗಚ್ಚಸ್ವ ನ ತೇ ಶ್ರಮೋ ಭವೇತ್||

ಯಮನು ಹೇಳಿದನು: “ಅನಿಂದಿತೇ! ನಿನಗೆ ಎಲ್ಲ ವರವನ್ನು ಕೊಟ್ಟಿದ್ದೇನೆ. ನೀನು ಹೇಳಿದಂತೆಯೇ ಆಗುತ್ತದೆ. ಬಹುದೂರ ನಡೆದುಬಂದುದರಿಂದ ಬಳಲಿದ್ದೀಯೆಂದು ತೋರುತ್ತಿದೆ. ಹಿಂದಿರುಗಿ ಹೋಗು. ನೀನು ಇನ್ನೂ ಆಯಾಸಗೊಳ್ಳಬೇಡ.”

03281028 ಸಾವಿತ್ರ್ಯುವಾಚ|

03281028a ಕುತಃ ಶ್ರಮೋ ಭರ್ತೃಸಮೀಪತೋ ಹಿ ಮೇ|

         ಯತೋ ಹಿ ಭರ್ತಾ ಮಮ ಸಾ ಗತಿರ್ಧ್ರುವಾ|

03281028c ಯತಃ ಪತಿಂ ನೇಷ್ಯಸಿ ತತ್ರ ಮೇ ಗತಿಃ|

         ಸುರೇಶ ಭೂಯಶ್ಚ ವಚೋ ನಿಬೋಧ ಮೇ||

ಸಾವಿತ್ರಿಯು ಹೇಳಿದಳು: “ಪತಿಯು ಸಮೀಪದಲ್ಲಿರುವಾಗ ನನಗೆ ಎಲ್ಲಿಯ ಆಯಾಸ? ನನ್ನ ಪತಿಯಲ್ಲಿದ್ದಾನೋ ಅದೇ ನನ್ನ ಗತಿ. ಎಲ್ಲಿಗೆ ನನ್ನ ಪತಿಯನ್ನು ಕರೆದುಕೊಂಡು ಹೋಗುತ್ತಿದ್ದೀಯೋ ಅಲ್ಲಿಗೆ ನಾನೂ ಕೂಡ ಹೋಗಬೇಕು. ಸುರೇಶ! ಇನ್ನೊಮ್ಮೆ ನನ್ನ ಈ ಮಾತುಗಳನ್ನು ಕೇಳು.

03281029a ಸತಾಂ ಸಕೃತ್ಸಂಗತಮೀಪ್ಸಿತಂ ಪರಂ|

         ತತಃ ಪರಂ ಮಿತ್ರಮಿತಿ ಪ್ರಚಕ್ಷತೇ|

03281029c ನ ಚಾಫಲಂ ಸತ್ಪುರುಷೇಣ ಸಂಗತಂ|

         ತತಃ ಸತಾಂ ಸಂನಿವಸೇತ್ಸಮಾಗಮೇ||

ಸತ್ಯವಂತರ ಸಂಗವು ಸ್ವಲ್ಪವೇ ಸಮಯದ್ದಾದರೂ ಪರಮ ಪ್ರಿಯಕರವಾದುದು. ಅದಕ್ಕಿಂತಲೂ ಶ್ರೇಷ್ಠವಾದುದು ಅವರನ್ನು ಮಿತ್ರರನ್ನಾಗಿರಿಸಿಕೊಳ್ಳುವುದು ಎಂದು ಹೇಳುತ್ತಾರೆ. ಸತ್ಪುರುಷರ ಸಂಗವು ಎಂದೂ ಫಲವನ್ನು ನೀಡದೇ ಇರುವುದಿಲ್ಲ. ಆದುದರಿಂದ ಸತ್ಯವಂತರ ಸಮಾಗಮದಲ್ಲಿ, ಅವರ ಹತ್ತಿರದಲ್ಲಿ ಇರಬೇಕು.”

03281030 ಯಮ ಉವಾಚ|

03281030a ಮನೋನುಕೂಲಂ ಬುಧಬುದ್ಧಿವರ್ಧನಂ|

         ತ್ವಯಾಹಮುಕ್ತೋ ವಚನಂ ಹಿತಾಶ್ರಯಂ|

03281030c ವಿನಾ ಪುನಃ ಸತ್ಯವತೋಽಸ್ಯ ಜೀವಿತಂ|

         ವರಂ ದ್ವಿತೀಯಂ ವರಯಸ್ವ ಭಾಮಿನಿ||

ಯಮನು ಹೇಳಿದನು: “ಭಾಮಿನೀ! ಮನಸ್ಸಿಗೆ ಅನುಕೂಲವಾದಂಥಹ, ಬುದ್ಧಿವಂತರ ಬುದ್ಧಿಯನ್ನು ಹೆಚ್ಚಿಸುವ, ಹಿತಾಶ್ರಯವಾದ ಮಾತನ್ನು ಆಡಿದ್ದೀಯೆ. ಪುನಃ ಈ ಸತ್ಯವತನ ಜೀವದ ಹೊರತು ಎರಡನೆಯ ವರವನ್ನು ಕೇಳಿಕೋ.”

03281031 ಸಾವಿತ್ರ್ಯುವಾಚ|

03281031a ಹೃತಂ ಪುರಾ ಮೇ ಶ್ವಶುರಸ್ಯ ಧೀಮತಃ|

         ಸ್ವಮೇವ ರಾಜ್ಯಂ ಸ ಲಭೇತ ಪಾರ್ಥಿವಃ|

03281031c ಜಹ್ಯಾತ್ಸ್ವಧರ್ಮಂ ನ ಚ ಮೇ ಗುರುರ್ಯಥಾ|

         ದ್ವಿತೀಯಮೇತಂ ವರಯಾಮಿ ತೇ ವರಂ||

ಸಾವಿತ್ರಿಯು ಹೇಳಿದಳು: “ನನ್ನ ಧೀಮಂತ ಮಾವ ಪಾರ್ಥಿವನು ಹಿಂದೆ ಕಳೆದುಕೊಂಡಿದ್ದ ತನ್ನ ರಾಜ್ಯವನ್ನು ಪಡೆಯಲಿ. ನನ್ನ ಗುರುವಿನಂತಿರುವ ಅವನು ಸ್ವಧರ್ಮವನ್ನು ಎಂದೂ ತ್ಯಜಿಸದಿರಲಿ. ಇದನ್ನೇ ನಿನ್ನಿಂದ ಎರಡನೆಯ ವರವಾಗಿ ಕೇಳುತ್ತೇನೆ.”

03281032 ಯಮ ಉವಾಚ|

03281032a ಸ್ವಮೇವ ರಾಜ್ಯಂ ಪ್ರತಿಪತ್ಸ್ಯತೇಽಚಿರಾನ್|

         ನ ಚ ಸ್ವಧರ್ಮಾತ್ಪರಿಹಾಸ್ಯತೇ ನೃಪಃ|

03281032c ಕೃತೇನ ಕಾಮೇನ ಮಯಾ ನೃಪಾತ್ಮಜೇ|

         ನಿವರ್ತ ಗಚ್ಚಸ್ವ ನ ತೇ ಶ್ರಮೋ ಭವೇತ್||

ಯಮನು ಹೇಳಿದನು: “ಬೇಗನೇ ಸುಲಭವಾಗಿ ನೃಪನು ತನ್ನ ರಾಜ್ಯವನ್ನು ಪಡೆಯುತ್ತಾನೆ ಮತ್ತು ಸ್ವಧರ್ಮದಿಂದ ಚ್ಯುತನಾಗುವುದಿಲ್ಲ. ನೃಪಾತ್ಮಜೇ! ನೀನು ಬಯಸಿದುದನ್ನು ನಾನು ಮಾಡಿದ್ದೇನೆ. ಹಿಂದಿರುಗಿ ಹೋಗು! ನಿನಗೆ ಶ್ರಮವಾಗದಿರಲಿ.”

03281033 ಸಾವಿತ್ರ್ಯುವಾಚ|

03281033a ಪ್ರಜಾಸ್ತ್ವಯೇಮಾ ನಿಯಮೇನ ಸಂಯತಾ|

         ನಿಯಂಯ ಚೈತಾ ನಯಸೇ ನ ಕಾಮಯಾ|

03281033c ಅತೋ ಯಮತ್ವಂ ತವ ದೇವ ವಿಶ್ರುತಂ|

         ನಿಬೋಧ ಚೇಮಾಂ ಗಿರಮೀರಿತಾಂ ಮಯಾ||

ಸಾವಿತ್ರಿಯು ಹೇಳಿದಳು: “ನೀನು ಈ ಪ್ರಜೆಗಳನ್ನು ನಿಯಮದಿಂದ ಮಾತ್ರ ನಿಯಂತ್ರಿಸುತ್ತೀಯೆ. ನಿಯಮದಿಂದಲೇ ಅವರನ್ನು ನೀನು ಕೊಂಡೊಯ್ಯುತ್ತೀಯೆ. ನಿನಗೆ ಬೇಕೆಂದಲ್ಲ. ಆದುದರಿಂದಲೇ ದೇವ! ನೀನು ಯಮನೆಂದು ವಿಶ್ರುತನಾಗಿದ್ದೀಯೆ. ನಾನು ಹೇಳುವ ಈ ಮಾತುಗಳನ್ನು ಕೇಳು.

03281034a ಅದ್ರೋಹಃ ಸರ್ವಭೂತೇಷು ಕರ್ಮಣಾ ಮನಸಾ ಗಿರಾ|

03281034c ಅನುಗ್ರಹಶ್ಚ ದಾನಂ ಚ ಸತಾಂ ಧರ್ಮಃ ಸನಾತನಃ||

ಸರ್ವಭೂತಗಳಿಗೂ, ಕರ್ಮ, ಮನಸ್ಸು ಮತ್ತು ಮಾತುಗಳಿಂದ ದ್ರೋಹವನ್ನು ಬಯಸದೇ ಇರುವುದು, ಅನುಗ್ರಹ ಮತ್ತು ದಾನಗಳು ಸಾತ್ವಿಕರ ಸನಾತನ ದರ್ಮ.

03281035a ಏವಂಪ್ರಾಯಶ್ಚ ಲೋಕೋಽಯಂ ಮನುಷ್ಯಾಃ ಶಕ್ತಿಪೇಶಲಾಃ|

03281035c ಸಂತಸ್ತ್ವೇವಾಪ್ಯಮಿತ್ರೇಷು ದಯಾಂ ಪ್ರಾಪ್ತೇಷು ಕುರ್ವತೇ||

ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟುಮಾತ್ರ ಕರುಣೆತೋರುವುದು ಮನುಷ್ಯ ಲೋಕದಲ್ಲಿ ಸಾಧಾರಣವಾಗಿ ನಡೆಯುತ್ತದೆ. ಆದರೆ ಸಾತ್ವಿಕರು ಅವರ ಶತ್ರುಗಳು ಬಂದರೂ ಅವರಿಗೆ ದಯೆಯನ್ನು ತೋರುತ್ತಾರೆ.”

03281036 ಯಮ ಉವಾಚ|

03281036a ಪಿಪಾಸಿತಸ್ಯೇವ ಯಥಾ ಭವೇತ್ಪಯಸ್|

         ತಥಾ ತ್ವಯಾ ವಾಕ್ಯಮಿದಂ ಸಮೀರಿತಂ|

03281036c ವಿನಾ ಪುನಃ ಸತ್ಯವತೋಽಸ್ಯ ಜೀವಿತಂ|

         ವರಂ ವೃಣೀಷ್ವೇಹ ಶುಭೇ ಯದಿಚ್ಚಸಿ||

ಯಮನು ಹೇಳಿದನು: “ಬಾಯಾರಿಕೆಯಿಂದ ಬಳಲಿದವನಿಗೆ ನೀರು ಹೇಗೋ ಹಾಗೆ ನಿನ್ನ ಈ ಮಾತುಗಳು ತೃಪ್ತಿಕರವಾಗಿವೆ. ಈ ಸತ್ಯವತನ ಜೀವವನ್ನು ಬಿಟ್ಟು ಪುನಃ ನಿನಗಿಷ್ಟವಾದ ವರವನ್ನು ಕೇಳು ಶುಭೇ!”

03281037 ಸಾವಿತ್ರ್ಯುವಾಚ|

03281037a ಮಮಾನಪತ್ಯಃ ಪೃಥಿವೀಪತಿಃ ಪಿತಾ|

         ಭವೇತ್ಪಿತುಃ ಪುತ್ರಶತಂ ಮಮೌರಸಂ|

03281037c ಕುಲಸ್ಯ ಸಂತಾನಕರಂ ಚ ಯದ್ಭವೇತ್|

         ತೃತೀಯಮೇತಂ ವರಯಾಮಿ ತೇ ವರಂ||

ಸಾವಿತ್ರಿಯು ಹೇಳಿದಳು: “ನನ್ನ ತಂದೆ ಪೃಥಿವೀಪತಿಗೆ ಮಕ್ಕಳಿಲ್ಲ. ನನ್ನ ತಂದೆಗೆ, ಕುಲವನ್ನು ಮುಂದುವರಿಸಿಕೊಂಡು ಹೋಗುವ ನೂರು ಔರಸಪುತ್ರರಾಗಲಿ. ನಿನ್ನಿಂದ ಈ ಮೂರನೆಯ ವರವನ್ನು ಕೇಳುತ್ತೇನೆ.”

03281038 ಯಮ ಉವಾಚ|

03281038a ಕುಲಸ್ಯ ಸಂತಾನಕರಂ ಸುವರ್ಚಸಂ|

         ಶತಂ ಸುತಾನಾಂ ಪಿತುರಸ್ತು ತೇ ಶುಭೇ|

03281038c ಕೃತೇನ ಕಾಮೇನ ನರಾಧಿಪಾತ್ಮಜೇ|

         ನಿವರ್ತ ದೂರಂ ಹಿ ಪಥಸ್ತ್ವಮಾಗತಾ||

ಯಮನು ಹೇಳಿದನು: “ಶುಭೇ! ಕುಲವನ್ನು ಮುಂದುವರಿಸಿಕೊಂಡು ಹೋಗುವ ಸುವರ್ಚಸರಾದ ನೂರು ಮಕ್ಕಳು ನಿನ್ನ ತಂದೆಗಾಗುವರು. ನರಾಧಿಪಾತ್ಮಜೇ! ನಿನ್ನ ಬಯಕೆಯು ನೆರವೇರಿತು. ಹಿಂದಿರುಗು. ಬಹಳ ದೂರ ಬಂದುಬಿಟ್ಟಿದ್ದೀಯೆ.”

03281039 ಸಾವಿತ್ರ್ಯುವಾಚ|

03281039a ನ ದೂರಮೇತನ್ಮಮ ಭರ್ತೃಸಂನಿಧೌ|

         ಮನೋ ಹಿ ಮೇ ದೂರತರಂ ಪ್ರಧಾವತಿ|

03281039c ತಥಾ ವ್ರಜನ್ನೇವ ಗಿರಂ ಸಮುದ್ಯತಾಂ|

         ಮಯೋಚ್ಯಮಾನಾಂ ಶೃಣು ಭೂಯ ಏವ ಚ||

ಸಾವಿತ್ರಿಯು ಹೇಳಿದಳು: “ನನ್ನ ಪತಿಯ ಸನ್ನಿಧಿಯಲ್ಲಿರುವಾಗ ಇದೇನೂ ದೂರವಲ್ಲ. ಇದಕ್ಕಿಂತಲೂ ದೂರ ನನ್ನ ಮನಸ್ಸು ಓಡುತ್ತಿದೆ. ನಿನ್ನ ಜೊತೆಯಲ್ಲಿಯೇ ಹೊಗುತ್ತಿರುವಾಗ ನಾನು ನಿನಗೆ ಹೇಳುವ ಇನ್ನೊಂದು ಮಾತನ್ನು ಕೇಳು.

03281040a ವಿವಸ್ವತಸ್ತ್ವಂ ತನಯಃ ಪ್ರತಾಪವಾಂಸ್|

         ತತೋ ಹಿ ವೈವಸ್ವತ ಉಚ್ಯಸೇ ಬುಧೈಃ|

03281040c ಶಮೇನ ಧರ್ಮೇಣ ಚ ರಂಜಿತಾಃ ಪ್ರಜಾಸ್|

         ತತಸ್ತವೇಹೇಶ್ವರ ಧರ್ಮರಾಜತಾ||

ನೀನು ವಿವಸ್ವತನ ಪ್ರತಾಪವಂತ ಮಗ. ಆದುದರಿಂದಲೇ ತಿಳಿದವರು ನಿನ್ನನ್ನು ವೈವಸ್ವತನೆಂದು ಕರೆಯುತ್ತಾರೆ. ಪ್ರಜೆಗಳು ನಿನ್ನನ್ನು ಶಮ ಮತ್ತು ಧರ್ಮಗಳಿಂದ ರಂಜಿಸುತ್ತಾರೆ. ಆದುದರಿಂದಲೇ ಈಶ್ವರ! ನೀನು ಧರ್ಮರಾಜನೆಂದು ಕರೆಯಲ್ಪಡುವೆ.

03281041a ಆತ್ಮನ್ಯಪಿ ನ ವಿಶ್ವಾಸಸ್ತಾವಾನ್ಭವತಿ ಸತ್ಸು ಯಃ|

03281041c ತಸ್ಮಾತ್ಸತ್ಸು ವಿಶೇಷೇಣ ಸರ್ವಃ ಪ್ರಣಯಮಿಚ್ಚತಿ||

ಸಾತ್ವಿಕರ ಮೇಲಿದ್ದಷ್ಟು ವಿಶ್ವಾಸವು ಅತ್ಮನ ಮೇಲೂ ಇರುವುದಿಲ್ಲ. ಆದುದರಿಂದ ಎಲ್ಲರೂ ವಿಶೇಷವಾಗಿ ಸಾತ್ವಿಕರನ್ನು ಪ್ರೀತಿಸಲು ಬಯಸುತ್ತಾರೆ.

03281042a ಸೌಹೃದಾತ್ಸರ್ವಭೂತಾನಾಂ ವಿಶ್ವಾಸೋ ನಾಮ ಜಾಯತೇ|

03281042c ತಸ್ಮಾತ್ಸತ್ಸು ವಿಶೇಷೇಣ ವಿಶ್ವಾಸಂ ಕುರುತೇ ಜನಃ||

ಸರ್ವಭೂತಗಳ ಮೇಲಿರುವ ಸೌಹಾರ್ದತೆಯಿಂದ ವಿಶ್ವಾಸ ಎನ್ನುವುದು ಹುಟ್ಟುತ್ತದೆ. ಆದುದರಿಂದ ಜನರು ವಿಶೇಷವಾಗಿ ಸಾತ್ವಿಕರನ್ನು ಪ್ರೀತಿಸುತ್ತಾರೆ.”

03281043 ಯಮ ಉವಾಚ|

03281043a ಉದಾಹೃತಂ ತೇ ವಚನಂ ಯದಂಗನೇ|

         ಶುಭೇ ನ ತಾದೃಕ್ತ್ವದೃತೇ ಮಯಾ ಶ್ರುತಂ|

03281043c ಅನೇನ ತುಷ್ಟೋಽಸ್ಮಿ ವಿನಾಸ್ಯ ಜೀವಿತಂ|

         ವರಂ ಚತುರ್ಥಂ ವರಯಸ್ವ ಗಚ್ಚ ಚ||

ಯಮನು ಹೇಳಿದನು: “ಸುಂದರಿ! ನೀನು ಇಲ್ಲಿ ಮಾತನಾಡಿದ ಶಬ್ಧಗಳಷ್ಟು ಶುಭವಾದುದನ್ನು ನಿನ್ನನ್ನು ಬಿಟ್ಟು ಬೇರೆ ಯಾರಿಂದಲೂ ನಾನು ಕೇಳಲಿಲ್ಲ. ಇದರಿಂದ ನಾನು ತುಷ್ಟನಾಗಿದ್ದೇನೆ. ಇವನ ಜೀವನವನ್ನು ಬಿಟ್ಟು ನಾಲ್ಕನೆಯ ವರವನ್ನು ಕೇಳು ಮತ್ತು ಹೊರಟು ಹೋಗು.”

03281044 ಸಾವಿತ್ರ್ಯುವಾಚ|

03281044a ಮಮಾತ್ಮಜಂ ಸತ್ಯವತಸ್ತಥೌರಸಂ|

         ಭವೇದುಭಾಭ್ಯಾಮಿಹ ಯತ್ಕುಲೋದ್ವಹಂ|

03281044c ಶತಂ ಸುತಾನಾಂ ಬಲವೀರ್ಯಶಾಲಿನಾಂ|

         ಇದಂ ಚತುರ್ಥಂ ವರಯಾಮಿ ತೇ ವರಂ||

ಸಾವಿತ್ರಿಯು ಹೇಳಿದಳು: “ಸತ್ಯವತ ಮತ್ತು ನನ್ನಲ್ಲಿ ನಮ್ಮಿಬ್ಬರ ಕುಲವನ್ನು ಮುಂದುವರಿಸಿಕೊಂಡು ಹೋಗುವ, ನೂರು ಬಲಶಾಲಿ ಮತ್ತು ವೀರ್ಯಶಾಲಿ ಔರಸ ಮಕ್ಕಳಾಗಲಿ. ಇದು ನಾನು ನಿನ್ನಲ್ಲಿ ಕೇಳುವ ನಾಲ್ಕನೆಯ ವರ.”

03281045 ಯಮ ಉವಾಚ|

03281045a ಶತಂ ಸುತಾನಾಂ ಬಲವೀರ್ಯಶಾಲಿನಾಂ|

         ಭವಿಷ್ಯತಿ ಪ್ರೀತಿಕರಂ ತವಾಬಲೇ|

03281045c ಪರಿಶ್ರಮಸ್ತೇ ನ ಭವೇನ್ನೃಪಾತ್ಮಜೇ|

         ನಿವರ್ತ ದೂರಂ ಹಿ ಪಥಸ್ತ್ವಮಾಗತಾ||

ಯಮನು ಹೇಳಿದನು: “ಅಬಲೇ! ಬಲವೀರ್ಯಶಾಲಿಗಳಾದ ಪ್ರೀತಿಕರ ನೂರು ಪುತ್ರರು ನಿನಗೆ ಆಗುತ್ತಾರೆ. ನೃಪಾತ್ಮಜೇ! ಪರಿಶ್ರಮಪಡಬೇಡ. ಹಿಂದಿರುಗು. ಬಹಳಷ್ಟು ದೂರ ಈ ಮಾರ್ಗದಲ್ಲಿ ಬಂದಿದ್ದೀಯೆ.”

03281046 ಸಾವಿತ್ರ್ಯುವಾಚ|

03281046a ಸತಾಂ ಸದಾ ಶಾಶ್ವತೀ ಧರ್ಮವೃತ್ತಿಃ|

         ಸಂತೋ ನ ಸೀದಂತಿ ನ ಚ ವ್ಯಥಂತಿ|

03281046c ಸತಾಂ ಸದ್ಭಿರ್ನಾಫಲಃ ಸಂಗಮೋಽಸ್ತಿ|

         ಸದ್ಭ್ಯೋ ಭಯಂ ನಾನುವರ್ತಂತಿ ಸಂತಃ||

ಸಾವಿತ್ರಿಯು ಹೇಳಿದಳು: “ಸಾತ್ವಿಕರು ಸದಾ ಶಾಶ್ವತೀ ಧರ್ಮದಲ್ಲಿ ನಡೆದುಕೊಳ್ಳುತ್ತಾರೆ. ಸಾತ್ವಿಕರು ಭಯದಿಂದ ನಡುಗುವುದಿಲ್ಲ ಮತ್ತು ವ್ಯಥಿಸುವುದಿಲ್ಲ. ಸಾತ್ವಿಕರೊಂದಿಗೆ ಸಾತ್ವಿಕರ ಸಂಗವು ಫಲವಿಲ್ಲದೆ ಇರುವುದಿಲ್ಲ. ಸಾತ್ವಿಕರಿಂದ ಸಾತ್ವಿಕರಿಗೆ ಯಾವುದೇ ತರಹದ ಭಯವಿರುವುದಿಲ್ಲ.

03281047a ಸಂತೋ ಹಿ ಸತ್ಯೇನ ನಯಂತಿ ಸೂರ್ಯಂ|

         ಸಂತೋ ಭೂಮಿಂ ತಪಸಾ ಧಾರಯಂತಿ|

03281047c ಸಂತೋ ಗತಿರ್ಭೂತಭವ್ಯಸ್ಯ ರಾಜನ್|

         ಸತಾಂ ಮಧ್ಯೇ ನಾವಸೀದಂತಿ ಸಂತಃ||

ರಾಜನ್! ಸಂತರು ಸತ್ಯದಿಂದಲೇ ಸೂರ್ಯನನ್ನು ನಡೆಸುತ್ತಾರೆ, ಸಂತರು ತಪಸ್ಸಿನಿಂದ ಭೂಮಿಯನ್ನು ಎತ್ತಿಹಿಡಿಯುತ್ತಾರೆ, ಸಂತರು ಭೂತ ಮತ್ತು ಭವಿಷ್ಯಗಳ ಗತಿ. ಸಂತರು ಸಂತರ ಮಧ್ಯೆ ಅಳಿಸಿಹೋಗುವುದಿಲ್ಲ.

03281048a ಆರ್ಯಜುಷ್ಟಮಿದಂ ವೃತ್ತಮಿತಿ ವಿಜ್ಞಾಯ ಶಾಶ್ವತಂ|

03281048c ಸಂತಃ ಪರಾರ್ಥಂ ಕುರ್ವಾಣಾ ನಾವೇಕ್ಷಂತೇ ಪ್ರತಿಕ್ರಿಯಾಂ||

ಇದು ಆರ್ಯರು ತಮ್ಮದಾಗಿಸಿಕೊಂಡ ಶಾಶ್ವತ ನಡತೆ ಎಂದು ತಿಳಿದು ಸಂತರು ಪರರಿಗಾಗಿ ಪ್ರತಿಕ್ರಿಯೆಗಳನ್ನೇನನ್ನೂ ಬಯಸದೆ ಮಾಡುತ್ತಾರೆ.

03281049a ನ ಚ ಪ್ರಸಾದಃ ಸತ್ಪುರುಷೇಷು ಮೋಘೋ|

         ನ ಚಾಪ್ಯರ್ಥೋ ನಶ್ಯತಿ ನಾಪಿ ಮಾನಃ|

03281049c ಯಸ್ಮಾದೇತನ್ನಿಯತಂ ಸತ್ಸು ನಿತ್ಯಂ|

         ತಸ್ಮಾತ್ಸಂತೋ ರಕ್ಷಿತಾರೋ ಭವಂತಿ||

ಸತ್ಪುರುಷರ ಯಾವ ಪ್ರಸಾದವೂ ಬಂಜಾಗುವುದಿಲ್ಲ. ಲಾಭವಾಗಲೀ ಮಾನವಾಗಲೀ ಯಾವುದೂ ನಶಿಸಿಹೋಗುವುದಿಲ್ಲ. ಇದು ಸಾತ್ವಿಕರು ನಿತ್ಯವೂ ಅಳವಡಿಸಿಕೊಂಡ ನಿಯಮವಾಗಿರುವುದರಿಂದ ಸಂತರೇ ಇದರ ರಕ್ಷಿತರೂ ಆಗುತ್ತಾರೆ.”

03281050 ಯಮ ಉವಾಚ|

03281050a ಯಥಾ ಯಥಾ ಭಾಷಸಿ ಧರ್ಮಸಂಹಿತಂ|

         ಮನೋನುಕೂಲಂ ಸುಪದಂ ಮಹಾರ್ಥವತ್|

03281050c ತಥಾ ತಥಾ ಮೇ ತ್ವಯಿ ಭಕ್ತಿರುತ್ತಮಾ|

         ವರಂ ವೃಣೀಷ್ವಾಪ್ರತಿಮಂ ಯತವ್ರತೇ||

ಯಮನು ಹೇಳಿದನು: “ನೀನು ಮಾತನಾಡಿದಾಗಲೆಲ್ಲ ಮನಸ್ಸಿಗೆ ಅನುಕೂಲವಾಗುತ್ತಿದೆ. ಮಹಾ ಅರ್ಥವುಳ್ಳ ಒಳ್ಳೆಯ ಪದಗಳನ್ನು ಬಳಸಿದ ದರ್ಮಸಂಹಿತವಾದುದನ್ನೇ ಮಾತನ್ನಾಡುತ್ತಿದ್ದೀಯೆ. ಯತವ್ರತೇ! ಅಪ್ರತಿಮ ವರವನ್ನು ಕೇಳು.”

03281051 ಸಾವಿತ್ರ್ಯುವಾಚ|

03281051a ನ ತೇಽಪವರ್ಗಃ ಸುಕೃತಾದ್ವಿನಾಕೃತಸ್|

         ತಥಾ ಯಥಾನ್ಯೇಷು ವರೇಷು ಮಾನದ|

03281051c ವರಂ ವೃಣೇ ಜೀವತು ಸತ್ಯವಾನಯಂ|

         ಯಥಾ ಮೃತಾ ಹ್ಯೇವಮಹಂ ವಿನಾ ಪತಿಂ||

ಸಾವಿತ್ರಿಯು ಹೇಳಿದಳು: “ಮಾನದ! ಇತರ ವರಗಳಂತೆ ಈ ವರವು ಕೂಡ ಫಲವನ್ನೀಡಬೇಕು. ಸತ್ಯವಾನನ ಜೀವವನ್ನು ವರವಾಗಿ ಕೇಳುತ್ತೇನೆ. ಪತಿಯಿಲ್ಲದೇ ನಾನು ಮೃತಳಾದ ಹಾಗೆಯೇ.

03281052a ನ ಕಾಮಯೇ ಭರ್ತೃವಿನಾಕೃತಾ ಸುಖಂ|

         ನ ಕಾಮಯೇ ಭರ್ತೃವಿನಾಕೃತಾ ದಿವಂ|

03281052c ನ ಕಾಮಯೇ ಭರ್ತೃವಿನಾಕೃತಾ ಶ್ರಿಯಂ|

         ನ ಭರ್ತೃಹೀನಾ ವ್ಯವಸಾಮಿ ಜೀವಿತುಂ||

ಪತಿಯಿಲ್ಲದೇ ನಾನು ಸುಖವನ್ನು ಬಯಸುವುದಿಲ್ಲ; ಪತಿಯಿಲ್ಲದೇ ನಾನು ಸ್ವರ್ಗವನ್ನು ಬಯಸುವುದಿಲ್ಲ; ಪತಿಯಿಲ್ಲದೇ ನಾನು ಸಂಪತ್ತನ್ನು ಬಯಸುವುದಿಲ್ಲ ಮತ್ತು ಪತಿಯಿಲ್ಲದೇ ಜೀವಂತವಾಗಿರುವುದನ್ನೂ ಬಯಸುವುದಿಲ್ಲ.

03281053a ವರಾತಿಸರ್ಗಃ ಶತಪುತ್ರತಾ ಮಮ|

         ತ್ವಯೈವ ದತ್ತೋ ಹ್ರಿಯತೇ ಚ ಮೇ ಪತಿಃ|

03281053c ವರಂ ವೃಣೇ ಜೀವತು ಸತ್ಯವಾನಯಂ|

         ತವೈವ ಸತ್ಯಂ ವಚನಂ ಭವಿಷ್ಯತಿ||

ನನಗೆ ನೂರು ಪುತ್ರರಾಗುತ್ತಾರೆಂದು ನೀನೇ ವರವನ್ನು ಕೊಟ್ಟಿದ್ದೀಯೆ. ಆದರೂ ನನ್ನ ಪತಿಯನ್ನು ಕೊಂಡೊಯ್ಯುತ್ತಿದ್ದೀಯೆ. ಸತ್ಯವಾನನು ಬದುಕಲಿ ಎಂದು ವರವನ್ನು ಕೇಳುತ್ತೇನೆ. ನಿನ್ನ ಮಾತು ಮಾತ್ರ ಸತ್ಯವಾಗುತ್ತದೆ.””

03281054 ಮಾರ್ಕಂಡೇಯ ಉವಾಚ|

03281054a ತಥೇತ್ಯುಕ್ತ್ವಾ ತು ತಾನ್ಪಾಶಾನ್ಮುಕ್ತ್ವಾ ವೈವಸ್ವತೋ ಯಮಃ|

03281054c ಧರ್ಮರಾಜಃ ಪ್ರಹೃಷ್ಟಾತ್ಮಾ ಸಾವಿತ್ರೀಮಿದಮಬ್ರವೀತ್||

ಮಾರ್ಕಂಡೇಯನು ಹೇಳಿದನು: “”ಹಾಗೆಯೇ ಆಗಲಿ!” ಎಂದು ಹೇಳಿ ವೈವಸ್ವತ ಯಮನು ಆ ಪಾಶಗಳನ್ನು ಬಿಡಿಸಿದನು. ಸಂತೋಷಗೊಂಡ ಧರ್ಮರಾಜನು ಸಾವಿತ್ರಿಗೆ ಹೇಳಿದನು:

03281055a ಏಷ ಭದ್ರೇ ಮಯಾ ಮುಕ್ತೋ ಭರ್ತಾ ತೇ ಕುಲನಂದಿನಿ|

03281055c ಅರೋಗಸ್ತವ ನೇಯಶ್ಚ ಸಿದ್ಧಾರ್ಥಶ್ಚ ಭವಿಷ್ಯತಿ||

“ಭದ್ರೇ! ಕುಲನಂದಿನಿ! ಇಗೋ ನಿನ್ನ ಪತಿಯನ್ನು ನಾನು ಬಿಟ್ಟಿದ್ದೇನೆ. ನಿನ್ನೊಂದಿಗೆ ಕರೆದುಕೊಂಡು ಹೋಗು. ಅವನು ಆರೋಗಿಯೂ, ಬಯಸಿದುದನ್ನು ಸಾಧಿಸುವವನೂ ಆಗಿದ್ದಾನೆ.

03281056a ಚತುರ್ವರ್ಷಶತಂ ಚಾಯುಸ್ತ್ವಯಾ ಸಾರ್ಧಮವಾಪ್ಸ್ಯತಿ|

03281056c ಇಷ್ಟ್ವಾ ಯಜ್ಞೈಶ್ಚ ಧರ್ಮೇಣ ಖ್ಯಾತಿಂ ಲೋಕೇ ಗಮಿಷ್ಯತಿ||

ಇವನು ನಾಲ್ನೂರು ವರ್ಷಗಳ ಪರ್ಯಂತ ನಿನ್ನ ಜೊತೆಗಿರುತ್ತಾನೆ. ಧರ್ಮದಿಂದ ಇಷ್ಟಿ-ಯಜ್ಞಗಳನ್ನು ಮಾಡಿ ಲೋಕದಲ್ಲಿ ಖ್ಯಾತಿಯನ್ನು ಪಡೆಯುತ್ತಾನೆ.

03281057a ತ್ವಯಿ ಪುತ್ರಶತಂ ಚೈವ ಸತ್ಯವಾಂ ಜನಯಿಷ್ಯತಿ|

03281057c ತೇ ಚಾಪಿ ಸರ್ವೇ ರಾಜಾನಃ ಕ್ಷತ್ರಿಯಾಃ ಪುತ್ರಪೌತ್ರಿಣಃ|

03281057e ಖ್ಯಾತಾಸ್ತ್ವನ್ನಾಮಧೇಯಾಶ್ಚ ಭವಿಷ್ಯಂತೀಹ ಶಾಶ್ವತಾಃ||

ಸತ್ಯವಾನನು ನಿನ್ನಲ್ಲಿ ನೂರು ಪುತ್ರರನ್ನು ಪಡೆಯುತ್ತಾನೆ ಮತ್ತು ಅವರೆಲ್ಲರೂ ಕೂಡ ರಾಜರಾಗಿ ಕ್ಷತ್ರಿಯ ಮಕ್ಕಳು ಮೊಮ್ಮಕ್ಕಳನ್ನು ಪಡೆಯುತ್ತಾರೆ. ನಿಮ್ಮ ಹೆಸರುಗಳು ಕೂಡ ಖ್ಯಾತವಾಗಿ ಇಲ್ಲಿ ಶಾಶ್ವತವಾಗಿರುತ್ತವೆ.

03281058a ಪಿತುಶ್ಚ ತೇ ಪುತ್ರಶತಂ ಭವಿತಾ ತವ ಮಾತರಿ|

03281058c ಮಾಲವ್ಯಾಂ ಮಾಲವಾ ನಾಮ ಶಾಶ್ವತಾಃ ಪುತ್ರಪೌತ್ರಿಣಃ|

03281058e ಭ್ರಾತರಸ್ತೇ ಭವಿಷ್ಯಂತಿ ಕ್ಷತ್ರಿಯಾಸ್ತ್ರಿದಶೋಪಮಾಃ||

ನಿನ್ನ ತಂದೆಯೂ ಕೂಡ ನಿನ್ನ ತಾಯಿ ಮಾಲವಿಯಲ್ಲಿ ನೂರು ಪುತ್ರರನ್ನು ಪಡೆಯುತ್ತಾನೆ ಮತ್ತು ಮಾಲವದ ಹೆಸರನ್ನು ಮಕ್ಕಳು ಮೊಮ್ಮಕ್ಕಳು ಶಾಶ್ವತವಾಗಿರಿಸುತ್ತಾರೆ. ಕ್ಷತ್ರಿಯ ನಿನ್ನ ಸಹೋದರರು ದೇವತೆಗಳಂತಿರುತ್ತಾರೆ.”

03281059a ಏವಂ ತಸ್ಯೈ ವರಂ ದತ್ತ್ವಾ ಧರ್ಮರಾಜಃ ಪ್ರತಾಪವಾನ್|

03281059c ನಿವರ್ತಯಿತ್ವಾ ಸಾವಿತ್ರೀಂ ಸ್ವಮೇವ ಭವನಂ ಯಯೌ||

ಈ ರೀತಿ ಅವಳಿಗೆ ವರವನ್ನಿತ್ತು ಪ್ರತಾಪಿ ಧರ್ಮರಾಜನು ಸಾವಿತ್ರಿಯನ್ನು ಹಿಂದಿರುಗಿಸಿ ತನ್ನ ಭವನಕ್ಕೆ ತೆರಳಿದನು.

03281060a ಸಾವಿತ್ರ್ಯಪಿ ಯಮೇ ಯಾತೇ ಭರ್ತಾರಂ ಪ್ರತಿಲಭ್ಯ ಚ|

03281060c ಜಗಾಮ ತತ್ರ ಯತ್ರಾಸ್ಯಾ ಭರ್ತುಃ ಶಾವಂ ಕಲೇವರಂ||

ಯಮನು ಹೋದ ನಂತರ ಸಾವಿತ್ರಿಯು ಪತಿಯನ್ನು ಹಿಂದೆ ಪಡೆದು ಪತಿಯ ಶವವು ಮಲಗಿದ್ದಲ್ಲಿಗೆ ಬಂದಳು.

03281061a ಸಾ ಭೂಮೌ ಪ್ರೇಕ್ಷ್ಯ ಭರ್ತಾರಮುಪಸೃತ್ಯೋಪಗೂಃಯ ಚ|

03281061c ಉತ್ಸಂಗೇ ಶಿರ ಆರೋಪ್ಯ ಭೂಮಾವುಪವಿವೇಶ ಹ||

ಅಲ್ಲಿ ನೆಲದ ಮೇಲೆ ಮಲಗಿದ್ದ ಪತಿಯನ್ನು ನೋಡಿ ಅವನ ಬಳಿ ಹೋಗಿ ಅವನನ್ನು ಆಲಂಗಿಸಿ ಅವನ ತಲೆಯನ್ನು ತನ್ನ ತೊಡೆಯ ಮೇಲಿರಿಸಿಕೊಂಡು ಕುಳಿತುಕೊಂಡಳು.

03281062a ಸಂಜ್ಞಾಂ ಚ ಸತ್ಯವಾಽಲ್ಲಬ್ಧ್ವಾ ಸಾವಿತ್ರೀಮಭ್ಯಭಾಷತ|

03281062c ಪ್ರೋಷ್ಯಾಗತ ಇವ ಪ್ರೇಮ್ಣಾ ಪುನಃ ಪುನರುದೀಕ್ಷ್ಯ ವೈ||

ಸತ್ಯವಾನನು ಎಚ್ಚೆತ್ತು, ಪ್ರಯಾಣದಿಂದ ಹಿಂದಿರುಗಿದವನಂತೆ ಪುನಃ ಪುನಃ ಅವಳನ್ನು ಪ್ರೀತಿಯಿಂದ ನೋಡುತ್ತಾ ಸಾವಿತ್ರಿಗೆ ಹೇಳಿದನು.

03281063 ಸತ್ಯವಾನುವಾಚ|

03281063a ಸುಚಿರಂ ಬತ ಸುಪ್ತೋಽಸ್ಮಿ ಕಿಮರ್ಥಂ ನಾವಬೋಧಿತಃ|

03281063c ಕ್ವ ಚಾಸೌ ಪುರುಷಃ ಶ್ಯಾಮೋ ಯೋಽಸೌ ಮಾಂ ಸಂಚಕರ್ಷ ಹ||

ಸತ್ಯವಾನನು ಹೇಳಿದನು: “ನಾನು ಬಹಳ ಸಮಯ ಮಲಗಿಬಿಟ್ಟಿದ್ದೆ! ಏಕೆ ನನ್ನನ್ನು ಎಬ್ಬಿಸಲಿಲ್ಲ? ಇಲ್ಲಿಂದ ನನ್ನನ್ನು ಎಳೆದುಕೊಂಡು ಹೋಗುತ್ತಿದ್ದ ಆ ಕಪ್ಪು ಮನುಷ್ಯನು ಎಲ್ಲಿದ್ದಾನೆ?”

03281064 ಸಾವಿತ್ರ್ಯುವಾಚ|

03281064a ಸುಚಿರಂ ಬತ ಸುಪ್ತೋಽಸಿ ಮಮಾಂಕೇ ಪುರುಷರ್ಷಭ|

03281064c ಗತಃ ಸ ಭಗವಾನ್ದೇವಃ ಪ್ರಜಾಸಮ್ಯಮನೋ ಯಮಃ||

ಸಾವಿತ್ರಿಯು ಹೇಳಿದಳು: “ಪುರುಷರ್ಷಭ! ನನ್ನ ತೊಡೆಯ ಮೇಲೆ ನೀನು ಬಹಳ ಹೊತ್ತು ಮಲಗಿಕೊಂಡಿದ್ದೆ. ಪ್ರಜೆಗಳನ್ನು ಸಂಯಮದಲ್ಲಿರಿಸುವ ಆ ಭಗವಾನ್ ದೇವ ಯಮನು ಹೊರಟು ಹೋದ!

03281065a ವಿಶ್ರಾಂತೋಽಸಿ ಮಹಾಭಾಗ ವಿನಿದ್ರಶ್ಚ ನೃಪಾತ್ಮಜ|

03281065c ಯದಿ ಶಕ್ಯಂ ಸಮುತ್ತಿಷ್ಠ ವಿಗಾಢಾಂ ಪಶ್ಯ ಶರ್ವರೀಂ||

ಮಹಾಭಾಗ! ರಾಜಕುಮಾರ! ನೀನು ವಿಶ್ರಾಂತಿಯನ್ನು ಪಡೆದಾಯಿತು, ನಿದ್ದೆಯೂ ಮುಗಿಯಿತು. ಸಾಧ್ಯವಾದರೆ ಎದ್ದೇಳು. ನೋಡು. ರಾತ್ರಿಯಾಗಿದೆ.””

03281066 ಮಾರ್ಕಂಡೇಯ ಉವಾಚ|

03281066a ಉಪಲಭ್ಯ ತತಃ ಸಂಜ್ಞಾಂ ಸುಖಸುಪ್ತ ಇವೋತ್ಥಿತಃ|

03281066c ದಿಶಃ ಸರ್ವಾ ವನಾಂತಾಂಶ್ಚ ನಿರೀಕ್ಷ್ಯೋವಾಚ ಸತ್ಯವಾನ್

ಮಾರ್ಕಂಡೇಯನು ಹೇಳಿದನು: “ಸಂಜ್ಞೆಯನ್ನು ಮರಳಿ ಪಡೆದ ಸತ್ಯವಾನನು ಸುಖವಾದ ನಿದ್ದೆಯಿಂದಲೋ ಎಂಬಂತೆ ಮೇಲೆದ್ದು ವನದ ಕೊನೆಯವರೆಗೂ ಎಲ್ಲ ದಿಕ್ಕುಗಳಿಗೂ ತಿರುಗಿ ನೋಡಿ ಹೇಳಿದನು:

03281067a ಫಲಾಹಾರೋಽಸ್ಮಿ ನಿಷ್ಕ್ರಾಂತಸ್ತ್ವಯಾ ಸಹ ಸುಮಧ್ಯಮೇ|

03281067c ತತಃ ಪಾಟಯತಃ ಕಾಷ್ಠಂ ಶಿರಸೋ ಮೇ ರುಜಾಭವತ್||

“ಸುಮಧ್ಯಮೇ! ಫಲಗಳನ್ನು ತರಲೆಂದು ನಿನ್ನೊಡನೆ ಹೊರಟಿದ್ದೆ. ಆಗ ಕಟ್ಟಿಗೆಯನ್ನು ಕಡಿಯುತ್ತಿದ್ದಾಗ ನನ್ನ ತಲೆಯಲ್ಲಿ ನೋವುಂಟಾಯಿತು.

03281068a ಶಿರೋಭಿತಾಪಸಂತಪ್ತಃ ಸ್ಥಾತುಂ ಚಿರಮಶಕ್ನುವನ್|

03281068c ತವೋತ್ಸಂಗೇ ಪ್ರಸುಪ್ತೋಽಹಮಿತಿ ಸರ್ವಂ ಸ್ಮರೇ ಶುಭೇ||

ತಲೆನೋವಿನಿಂದ ಬಳಲುತ್ತಿದ್ದ ನಾನು ನಿಲ್ಲಲು ಅಶಕ್ತನಾಗಿ ನಿನ್ನ ತೊಡೆಯಮೇಲೆ ಮಲಗಿದ್ದೆ. ಶುಭೇ! ಇವೆಲ್ಲವೂ ನನಗೆ ನೆನಪಿದೆ.

03281069a ತ್ವಯೋಪಗೂಢಸ್ಯ ಚ ಮೇ ನಿದ್ರಯಾಪಹೃತಂ ಮನಃ|

03281069c ತತೋಽಪಶ್ಯಂ ತಮೋ ಘೋರಂ ಪುರುಷಂ ಚ ಮಹೌಜಸಂ||

ನಿನ್ನ ಆಲಿಂಗನದಲ್ಲಿ ಮಲಗಿದ್ದ ನನ್ನನ್ನು ಗಾಢ ನಿದ್ರೆಯು ಆವರಿಸಿತು. ಆಗ ಘೋರ ಕತ್ತಲೆಯಲ್ಲಿ ಆ ಮಹೌಜಸ ಪುರುಷನನ್ನು ನೋಡಿದೆ.

03281070a ತದ್ಯದಿ ತ್ವಂ ವಿಜಾನಾಸಿ ಕಿಂ ತದ್ಬ್ರೂಹಿ ಸುಮಧ್ಯಮೇ|

03281070c ಸ್ವಪ್ನೋ ಮೇ ಯದಿ ವಾ ದೃಷ್ಟೋ ಯದಿ ವಾ ಸತ್ಯಮೇವ ತತ್||

ಸುಮಧ್ಯಮೇ! ಅವನು ಯಾರೆಂದು ನಿನಗೆ ತಿಳಿದಿದ್ದರೆ ಹೇಳು. ನಾನು ನೋಡಿದ್ದುದು ಬರಿಯ ಸ್ವಪ್ನವೋ ಅಥವಾ ಸತ್ಯವಾದುದೋ ಹೇಳು.”

03281071a ತಮುವಾಚಾಥ ಸಾವಿತ್ರೀ ರಜನೀ ವ್ಯವಗಾಹತೇ|

03281071c ಶ್ವಸ್ತೇ ಸರ್ವಂ ಯಥಾವೃತ್ತಮಾಖ್ಯಾಸ್ಯಾಮಿ ನೃಪಾತ್ಮಜ||

ಸಾವಿತ್ರಿಯು ಅವನಿಗೆ ಹೇಳಿದಳು: “ರಾತ್ರಿಯು ಪಸರಿಸುತ್ತಿದೆ. ರಾಜಕುಮಾರ! ನಿನಗೆ ಎಲ್ಲವನ್ನೂ ನಡೆದ ಹಾಗೆ ನಾಳೆ ಹೇಳುತ್ತೇನೆ.

03281072a ಉತ್ತಿಷ್ಠೋತ್ತಿಷ್ಠ ಭದ್ರಂ ತೇ ಪಿತರೌ ಪಶ್ಯ ಸುವ್ರತ|

03281072c ವಿಗಾಢಾ ರಜನೀ ಚೇಯಂ ನಿವೃತ್ತಶ್ಚ ದಿವಾಕರಃ||

ಸುವ್ರತ! ಎದ್ದೇಳು! ನಿನಗೆ ಮಂಗಳವಾಗಲಿ! ನಿನ್ನ ತಂದೆ-ತಾಯಿಯರನ್ನು ನೋಡು. ಸೂರ್ಯನು ಮುಳುಗಿದ್ದಾನೆ ಮತ್ತು ಕತ್ತಲೆಯು ಹರಡುತ್ತಿದೆ.

03281073a ನಕ್ತಂಚರಾಶ್ಚರಂತ್ಯೇತೇ ಹೃಷ್ಟಾಃ ಕ್ರೂರಾಭಿಭಾಷಿಣಃ|

03281073c ಶ್ರೂಯಂತೇ ಪರ್ಣಶಬ್ದಾಶ್ಚ ಮೃಗಾಣಾಂ ಚರತಾಂ ವನೇ||

ರಾತ್ರಿಯಲ್ಲಿ ತಿರುಗಾಡುವ ಪ್ರಾಣಿಗಳು ಕ್ರೂರವಾಗಿ ಕೂಗುತ್ತಾ ಇಲ್ಲಿ ಸ್ವಚ್ಛಂದವಾಗಿ ತಿರುಗಾಡುತ್ತಿವೆ ಮತ್ತು ವನದಲ್ಲಿ ತಿರುಗಾಡುತ್ತಿರುವ ಮೃಗಗಳಿಂದ ಅಲ್ಲಾಡುವ ಎಲೆಗಳ ಶಬ್ಧವು ಕೇಳಿಬರುತ್ತಿದೆ.

03281074a ಏತಾಃ ಶಿವಾ ಘೋರನಾದಾ ದಿಶಂ ದಕ್ಷಿಣಪಶ್ಚಿಮಾಂ|

03281074c ಆಸ್ಥಾಯ ವಿರುವಂತ್ಯುಗ್ರಾಃ ಕಂಪಯಂತ್ಯೋ ಮನೋ ಮಮ||

ನರಿಗಳ ಘೋರನಾದವು ದಕ್ಷಿಣಪಶ್ಚಿಮ ದಿಕ್ಕಿನಿಂದ ಕೇಳಿ ಬರುತ್ತಿದೆ. ಅವುಗಳ ಉಗ್ರಕೂಗನ್ನು ಕೇಳಿ ನನ್ನ ಮನವು ನಡುಗುತ್ತಿದೆ.”

03281075 ಸತ್ಯವಾನುವಾಚ

03281075a ವನಂ ಪ್ರತಿಭಯಾಕಾರಂ ಘನೇನ ತಮಸಾ ವೃತಂ|

03281075c ನ ವಿಜ್ಞಾಸ್ಯಸಿ ಪಂಥಾನಂ ಗಂತುಂ ಚೈವ ನ ಶಕ್ಷ್ಯಸಿ||

ಸತ್ಯವಾನನು ಹೇಳಿದನು: “ದಟ್ಟ ಕತ್ತಲೆಯಿಂದ ಆವೃತವಾದ ಈ ವನವು ಭಯವನ್ನುಂಟುಮಾಡುತ್ತಿದೆ. ನಿನಗೆ ದಾರಿಯು ಗೊತ್ತಾಗುವುದಿಲ್ಲ ಮತ್ತು ನಿನಗೆ ನಡೆಯಲು ಸಾಧ್ಯವಾಗುವುದಿಲ್ಲ.”

03281076 ಸಾವಿತ್ರ್ಯುವಾಚ|

03281076a ಅಸ್ಮಿನ್ನದ್ಯ ವನೇ ದಗ್ಧೇ ಶುಷ್ಕವೃಕ್ಷಃ ಸ್ಥಿತೋ ಜ್ವಲನ್|

03281076c ವಾಯುನಾ ಧಮ್ಯಮಾನೋಽಗ್ನಿರ್ದೃಶ್ಯತೇಽತ್ರ ಕ್ವ ಚಿತ್ಕ್ವ ಚಿತ್||

ಸಾವಿತ್ರಿಯು ಹೇಳಿದಳು: “ಈ ವನದಲ್ಲಿ ಸುಟ್ಟ ಒಣ ಮರದಲ್ಲಿ ಉರಿಯುತ್ತಿರುವ ಬೆಂಕಿಯು ಇನ್ನೂ ಇದೆ. ಗಾಳಿಯಿಂದ ಉರಿಯುತ್ತಿರುವ ಈ ಬೆಂಕಿಯ ಜ್ವಾಲೆಯು ಅತ್ತಿತ್ತ ಓಲಾಡುತ್ತಿದೆ.

03281077a ತತೋಽಗ್ನಿಮಾನಯಿತ್ವೇಹ ಜ್ವಾಲಯಿಷ್ಯಾಮಿ ಸರ್ವತಃ|

03281077c ಕಾಷ್ಠಾನೀಮಾನಿ ಸಂತೀಹ ಜಹಿ ಸಂತಾಪಮಾತ್ಮನಃ||

ಇಲ್ಲಿರುವ ಕಟ್ಟಿಗೆಗಳಿಂದ ಆ ಅಗ್ನಿಯನ್ನು ಬೆಳಗಿಸುತ್ತೇನೆ. ಸಂತಾಪಪಡಬೇಡ.

03281078a ಯದಿ ನೋತ್ಸಹಸೇ ಗಂತುಂ ಸರುಜಂ ತ್ವಾಭಿಲಕ್ಷಯೇ|

03281078c ನ ಚ ಜ್ಞಾಸ್ಯಸಿ ಪಂಥಾನಂ ತಮಸಾ ಸಂವೃತೇ ವನೇ||

03281079a ಶ್ವಃ ಪ್ರಭಾತೇ ವನೇ ದೃಶ್ಯೇ ಯಾಸ್ಯಾವೋಽನುಮತೇ ತವ|

03281079c ವಸಾವೇಹ ಕ್ಷಪಾಮೇತಾಂ ರುಚಿತಂ ಯದಿ ತೇಽನಘ||

ಒಂದುವೇಳೆ ನಿನಗೆ ನಡೆಯಲು ಸಾಧ್ಯವಾಗದಿದ್ದರೆ, ತಲೆನೋವು ಇನ್ನೂ ಇದ್ದರೆ, ಕತ್ತಲೆ ತುಂಬಿದ ಈ ವನದಲ್ಲಿ ದಾರಿಯು ತಿಳಿಯದೇ ಇದ್ದರೆ, ನಿನಗೆ ಅನುಮತಿಯಿದ್ದರೆ ನಾಳೆ ಬೆಳಿಗ್ಗೆ ವನವು ಸರಿಯಾಗಿ ಕಾಣುವಾಗ ಹೋಗೋಣ. ಅನಘ! ನಿನಗೆ ಇಷ್ಟವಾದರೆ ಈ ರಾತ್ರಿಯನ್ನು ವನದಲ್ಲಿಯೇ ಕಳೆಯೋಣ.”

03281080 ಸತ್ಯವಾನುವಾಚ|

03281080a ಶಿರೋರುಜಾ ನಿವೃತ್ತಾ ಮೇ ಸ್ವಸ್ಥಾನ್ಯಂಗಾನಿ ಲಕ್ಷಯೇ|

03281080c ಮಾತಾಪಿತೃಭ್ಯಾಮಿಚ್ಚಾಮಿ ಸಂಗಮಂ ತ್ವತ್ಪ್ರಸಾದಜಂ||

ಸತ್ಯವಾನನು ಹೇಳಿದನು: “ನನ್ನ ತಲೆನೋವು ನಿಂತಿದೆ ಮತ್ತು ನನ್ನ ಅಂಗಾಂಗಗಳು ಸ್ವಸ್ಥವಾಗಿವೆ. ನಿನಗೆ ಸರಿಯೆನಿಸಿದರೆ ನನ್ನ ತಂದೆ-ತಾಯಿಯರನ್ನು ಭೇಟಿಯಾಗ ಬಯಸುತ್ತೇನೆ.

03281081a ನ ಕದಾ ಚಿದ್ವಿಕಾಲೇ ಹಿ ಗತಪೂರ್ವೋ ಮಯಾಶ್ರಮಃ|

03281081c ಅನಾಗತಾಯಾಂ ಸಂಧ್ಯಾಯಾಂ ಮಾತಾ ಮೇ ಪ್ರರುಣದ್ಧಿ ಮಾಂ||

ಈ ಮೊದಲು ಎಂದೂ ನಾನು ನನ್ನ ಆಶ್ರಮಕ್ಕೆ ತಡವಾಗಿ ಹೋಗಿಲ್ಲ. ನನ್ನ ತಾಯಿಯು ಸಂಜೆಯ ನಂತರ ಬರುವುದನ್ನು ಒಪ್ಪಿಕೊಳ್ಳುವುದಿಲ್ಲ.

03281082a ದಿವಾಪಿ ಮಯಿ ನಿಷ್ಕ್ರಾಂತೇ ಸಂತಪ್ಯೇತೇ ಗುರೂ ಮಮ|

03281082c ವಿಚಿನೋತಿ ಚ ಮಾಂ ತಾತಃ ಸಹೈವಾಶ್ರಮವಾಸಿಭಿಃ||

ಬೆಳಕಿನಲ್ಲಿ ನಾನು ಹೊರಗೆ ಹೋದರೂ ನನ್ನ ಹಿರಿಯರು ಸಂತಪಿಸುತ್ತಾರೆ ಮತ್ತು ನನ್ನ ತಂದೆಯು ಆಶ್ರಮವಾಸಿಗಳೊಂದಿಗೆ ನನ್ನನ್ನು ಹುಡುಕುತ್ತಾನೆ.

03281083a ಮಾತ್ರಾ ಪಿತ್ರಾ ಚ ಸುಭೃಶಂ ದುಃಖಿತಾಭ್ಯಾಮಹಂ ಪುರಾ|

03281083c ಉಪಾಲಬ್ಧಃ ಸುಬಹುಶಶ್ಚಿರೇಣಾಗಚ್ಚಸೀತಿ ಹ||

ಹಿಂದೆಯೂ ಕೂಡ ನನ್ನ ತಂದೆ-ತಾಯಿಯರು ಬಹಳಸಾರಿ ನಾನು ತಡವಾಗಿ ಬರುತ್ತೇನೆಂದು ದುಃಖಿತರಾಗಿ ಹೇಳಿದ್ದರು.

03281084a ಕಾ ತ್ವವಸ್ಥಾ ತಯೋರದ್ಯ ಮದರ್ಥಮಿತಿ ಚಿಂತಯೇ|

03281084c ತಯೋರದೃಶ್ಯೇ ಮಯಿ ಚ ಮಹದ್ದುಃಖಂ ಭವಿಷ್ಯತಿ||

ನನಗಾಗಿ ಕಾಯುತ್ತಿರುವ ಅವರು ಇಂದು ಯಾವ ಅವಸ್ಥೆಯಲ್ಲಿರಬಹುದು? ನನ್ನನ್ನು ಕಾಣದೇ ಅವರಿಗೆ ಮಹಾ ದುಃಖವುಂಟಾಗಿರಬಹುದು.

03281085a ಪುರಾ ಮಾಂ ಊಚತುಶ್ಚೈವ ರಾತ್ರಾವಸ್ರಾಯಮಾಣಕೌ|

03281085c ಭೃಶಂ ಸುದುಃಖಿತೌ ವೃದ್ಧೌ ಬಹುಶಃ ಪ್ರೀತಿಸಂಯುತೌ||

03281086a ತ್ವಯಾ ಹೀನೌ ನ ಜೀವಾವ ಮುಹೂರ್ತಮಪಿ ಪುತ್ರಕ|

03281086c ಯಾವದ್ಧರಿಷ್ಯಸೇ ಪುತ್ರ ತಾವನ್ನೌ ಜೀವಿತಂ ಧ್ರುವಂ||

ಈ ವೃದ್ಧರು ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಒಮ್ಮೆ ರಾತ್ರಿ ನನ್ನ ಬಗ್ಗೆ ತುಂಬಾ ಚಿಂತೆಗೊಳಗಾದ ಅವರು ಕಣ್ಣೀರಿಡುತ್ತಾ ಹೇಳಿದರು: “ಪುತ್ರಕ! ನೀನಿಲ್ಲದೆ ಒಂದು ಮುಹೂರ್ತವೂ ನಾವು ಜೀವಿತರಾಗಿರುವುದಿಲ್ಲ. ಪುತ್ರ! ನೀನು ಇರುವವರೆಗೆ ನಾವು ಜೀವಿತವಾಗಿರುವೆವು.

03281087a ವೃದ್ಧಯೋರಂಧಯೋರ್ಯಷ್ಟಿಸ್ತ್ವಯಿ ವಂಶಃ ಪ್ರತಿಷ್ಠಿತಃ|

03281087c ತ್ವಯಿ ಪಿಂಡಶ್ಚ ಕೀರ್ತಿಶ್ಚ ಸಂತಾನಂ ಚಾವಯೋರಿತಿ||

ಈ ಕುರುಡು ಮುದುಕರ ಕೋಲು ನೀನು. ನಮ್ಮ ವಂಶವು ನಿನ್ನ ಮೇಲೆ ನಿಂತಿದೆ. ನಮ್ಮ ಪಿಂಡ, ಕೀರ್ತಿ ಮತ್ತು ಸಂತಾನಗಳು ನಿನ್ನ ಮೇಲೆಯೇ ನಿಂತಿವೆ.”

03281088a ಮಾತಾ ವೃದ್ಧಾ ಪಿತಾ ವೃದ್ಧಸ್ತಯೋರ್ಯಷ್ಟಿರಹಂ ಕಿಲ|

03281088c ತೌ ರಾತ್ರೌ ಮಾಮಪಶ್ಯಂತೌ ಕಾಮವಸ್ಥಾಂ ಗಮಿಷ್ಯತಃ||

ಇಂದು ರಾತ್ರಿ ನನ್ನನ್ನು ನೋಡದೇ ಇದ್ದರೆ ನಾನೇ ಅವರ ಕೋಲು ಎಂದು ಹೇಳುವ ಆ ನನ್ನ ವೃದ್ಧ ಮಾತಾಪಿತರು ಯಾವ ಅವಸ್ಥೆಯಲ್ಲಿರಬಹುದು?

03281089a ನಿದ್ರಾಯಾಶ್ಚಾಭ್ಯಸೂಯಾಮಿ ಯಸ್ಯಾ ಹೇತೋಃ ಪಿತಾ ಮಮ|

03281089c ಮಾತಾ ಚ ಸಂಶಯಂ ಪ್ರಾಪ್ತಾ ಮತ್ಕೃತೇಽನಪಕಾರಿ|ಣೀ|

ನನ್ನ ತಂದೆ ಮತ್ತು ತಾಯಿಯರಲ್ಲಿ ನನ್ನ ಕುರಿತು ಸಂಶಯವನ್ನುಂಟುಮಾಡಿದುದಕ್ಕೆ ಈ ನಿದ್ರೆಯನ್ನು ನಾನು ನಿಂದಿಸುತ್ತೇನೆ. ನಾನೇ ನನ್ನನ್ನು ಈ ಆಪತ್ತಿನಲ್ಲಿ ತಂದಿದ್ದೇನೆ.

03281090a ಅಹಂ ಚ ಸಂಶಯಂ ಪ್ರಾಪ್ತಃ ಕೃಚ್ಚ್ರಾಮಾಪದಮಾಸ್ಥಿತಃ|

03281090c ಮಾತಾಪಿತೃಭ್ಯಾಂ ಹಿ ವಿನಾ ನಾಹಂ ಜೀವಿತುಮುತ್ಸಹೇ||

ನಾನೂ ಕೂಡ ಅಪಾಯದಲ್ಲಿದ್ದೇನೆ. ನಾನು ಹಾಳಾಗಿಹೋದೆ! ನಾನೂ ಕೂಡ ನನ್ನ ತಂದೆ-ತಾಯಿಯರಿಲ್ಲದೇ ಬದುಕಿರಲಾರೆ.

03281091a ವ್ಯಕ್ತಮಾಕುಲಯಾ ಬುದ್ಧ್ಯಾ ಪ್ರಜ್ಞಾಚಕ್ಷುಃ ಪಿತಾ ಮಮ|

03281091c ಏಕೈಕಮಸ್ಯಾಂ ವೇಲಾಯಾಂ ಪೃಚ್ಚತ್ಯಾಶ್ರಮವಾಸಿನಂ||

ಪ್ರಜ್ಞೆಯೇ ಕಣ್ಣುಗಳಾಗಿರುವ ನನ್ನ ತಂದೆಯು ಈ ಹೊತ್ತಿನಲ್ಲಿ ಅಶ್ರಮದಲ್ಲಿರುವ ಪ್ರತಿಯೊಬ್ಬನಲ್ಲಿಯೂ ವ್ಯಾಕುಲನಾಗಿ ನನ್ನ ಕುರಿತು ಕೇಳುತ್ತಿದ್ದಾನೆ ಎಂದು ನನಗೆ ತಿಳಿದಿದೆ.

03281092a ನಾತ್ಮಾನಮನುಶೋಚಾಮಿ ಯಥಾಹಂ ಪಿತರಂ ಶುಭೇ|

03281092c ಭರ್ತಾರಂ ಚಾಪ್ಯನುಗತಾಂ ಮಾತರಂ ಪರಿದುರ್ಬಲಾಂ||

ಶುಭೇ! ನನ್ನ ತಂದೆ ಮತ್ತು ಪತಿಯನ್ನು ಅನುಸರಿಸಿ ಹೋಗುವ ತುಂಬಾ ದುರ್ಬಲಳಾದ ನನ್ನ ತಾಯಿಯ ಕುರಿತು ಶೋಕಿಸುವಷ್ಟು ನಾನು ನನ್ನ ಕುರಿತು ಶೋಕಿಸುವುದಿಲ್ಲ.

03281093a ಮತ್ಕೃತೇನ ಹಿ ತಾವದ್ಯ ಸಂತಾಪಂ ಪರಮೇಷ್ಯತಃ|

03281093c ಜೀವಂತಾವನುಜೀವಾಮಿ ಭರ್ತವ್ಯೌ ತೌ ಮಯೇತಿ ಹ|

03281093e ತಯೋಃ ಪ್ರಿಯಂ ಮೇ ಕರ್ತವ್ಯಮಿತಿ ಜೀವಾಮಿ ಚಾಪ್ಯಹಂ||

ಇಂದು ನನ್ನ ಕಾರಣದಿಂದ ಅವರು ಪರಮ ಸಂತಾಪವನ್ನು ಹೊಂದಿರುತ್ತಾರೆ. ಅವರು ಬದುಕಿದ್ದರೆ ನಾನೂ ಬದುಕಿರುತ್ತೇನೆ. ನಾನು ಅವರನ್ನು ಪೊರೆಯಬೇಕು. ಅವರಿಗೆ ಪ್ರಿಯವಾದುದನ್ನು ಮಾಡಬೇಕು, ಅದಕ್ಕಾಗಿಯೇ ನಾನು ಜೀವಿಸಿದ್ದೇನೆ.””

03281094 ಮಾರ್ಕಂಡೇಯ ಉವಾಚ|

03281094a ಏವಮುಕ್ತ್ವಾ ಸ ಧರ್ಮಾತ್ಮಾ ಗುರುವರ್ತೀ ಗುರುಪ್ರಿಯಃ|

03281094c ಉಚ್ಚ್ರಿತ್ಯ ಬಾಹೂ ದುಃಖಾರ್ತಃ ಸಸ್ವರಂ ಪ್ರರುರೋದ ಹ||

ಮಾರ್ಕಂಡೇಯನು ಹೇಳಿದನು: “ಹೀಗೆ ಹೇಳಿ ಆ ಧರ್ಮಾತ್ಮ, ಹಿರಿಯರನ್ನು ಅನುಸರಿಸುವ ಮತ್ತು ಹಿರಿಯರನ್ನು ಪ್ರೀತಿಸುವ ಸತ್ಯವಾನನು ದುಃಖಾರ್ತನಾಗಿ ಬಾಹುಗಳನ್ನು ಮೇಲೆತ್ತಿ ಜೋರಾಗಿ ಅಳತೊಡಗಿದನು.

03281095a ತತೋಽಬ್ರವೀತ್ತಥಾ ದೃಷ್ಟ್ವಾ ಭರ್ತಾರಂ ಶೋಕಕರ್ಶಿತಂ|

03281095c ಪ್ರಮೃಜ್ಯಾಶ್ರೂಣಿ ನೇತ್ರಾಭ್ಯಾಂ ಸಾವಿತ್ರೀ ಧರ್ಮಚಾರಿಣೀ||

ಶೋಕಕರ್ಷಿತ ಪತಿಯನ್ನು ಕಂಡು ಧರ್ಮಚಾರಿಣೀ ಸಾವಿತ್ರಿಯು ಅವನ ಎರಡೂ ಕಣ್ಣುಗಳಿಂದ ಕಣ್ಣೀರನ್ನು ಒರೆಸಿ ಹೇಳಿದಳು.

03281096a ಯದಿ ಮೇಽಸ್ತಿ ತಪಸ್ತಪ್ತಂ ಯದಿ ದತ್ತಂ ಹುತಂ ಯದಿ|

03281096c ಶ್ವಶ್ರೂಶ್ವಶುರಭರ್ತೄಣಾಂ ಮಮ ಪುಣ್ಯಾಸ್ತು ಶರ್ವರೀ||

“ನಾನು ತಪಸ್ಸನ್ನು ತಪಿಸಿದ್ದರೆ, ದಾನವನ್ನಿತ್ತರೆ, ಆಹುತಿಯನ್ನಿತ್ತಿದ್ದರೆ ನನ್ನ ಅತ್ತೆ-ಮಾವಂದಿರಿಗೆ ಮತ್ತು ಪತಿಗೆ ಈ ರಾತ್ರಿಯು ಪುಣ್ಯವಾಗಿರುತ್ತದೆ.

03281097a ನ ಸ್ಮರಾಮ್ಯುಕ್ತಪೂರ್ವಾಂ ವೈ ಸ್ವೈರೇಷ್ವಪ್ಯನೃತಾಂ ಗಿರಂ|

03281097c ತೇನ ಸತ್ಯೇನ ತಾವದ್ಯ ಧ್ರಿಯೇತಾಂ ಶ್ವಶುರೌ ಮಮ||

ಈ ಹಿಂದೆ ನಾನು ಸುಳ್ಳನ್ನು ಮಾತನಾಡಿದ್ದುದು ನನಗೆ ನೆನಪಿಲ್ಲ. ಇದು ಸತ್ಯವೇ ಆಗಿದ್ದರೆ ನನ್ನ ಅತ್ತೆ-ಮಾವಂದಿರು ಇಂದು ಬದುಕುಳಿಯುತ್ತಾರೆ.”

03281098 ಸತ್ಯವಾನುವಾಚ|

03281098a ಕಾಮಯೇ ದರ್ಶನಂ ಪಿತ್ರೋರ್ಯಾಹಿ ಸಾವಿತ್ರಿ ಮಾಚಿರಂ|

03281098c ಪುರಾ ಮಾತುಃ ಪಿತುರ್ವಾಪಿ ಯದಿ ಪಶ್ಯಾಮಿ ವಿಪ್ರಿಯಂ|

03281098e ನ ಜೀವಿಷ್ಯೇ ವರಾರೋಹೇ ಸತ್ಯೇನಾತ್ಮಾನಮಾಲಭೇ||

ಸತ್ಯವಾನನು ಹೇಳಿದನು: “ತಂದೆಯನ್ನು ನೋಡಲು ಬಯಸುತ್ತೇನೆ. ಬಾ ಸಾವಿತ್ರಿ. ತಡಮಾಡಬೇಡ. ವರಾರೋಹೇ! ನನ್ನ ತಂದೆ-ತಾಯಿಯರಿಗೆ ಏನಾದರೂ ಅಪ್ರಿಯವು ಆದುದನ್ನು ನೋಡುವುದದರೊಳಗೆ ನಾನು ಬದುಕಿರುವುದಿಲ್ಲ. ನನ್ನ ಮೇಲೆ ಆಣೆಯಿಟ್ಟು ಹೇಳುತ್ತೇನೆ.

03281099a ಯದಿ ಧರ್ಮೇ ಚ ತೇ ಬುದ್ಧಿರ್ಮಾಂ ಚೇಜ್ಜೀವಂತಮಿಚ್ಚಸಿ|

03281099c ಮಮ ಪ್ರಿಯಂ ವಾ ಕರ್ತವ್ಯಂ ಗಚ್ಚಸ್ವಾಶ್ರಮಮಂತಿಕಾತ್||

ನಿನ್ನ ಬುದ್ಧಿಯು ಧರ್ಮದಲ್ಲಿದ್ದರೆ, ಮತ್ತು ನನ್ನನ್ನು ಜೀವಂತವಾಗಿರಲು ಇಚ್ಛಿಸುವೆಯಾದರೆ ಮತ್ತು ನನಗೆ ಪ್ರಿಯವಾದುದನ್ನು ಮಾಡಬೇಕಾದರೆ ತಕ್ಷಣವೇ ಆಶ್ರಮಕ್ಕೆ ಹೋಗೋಣ.””

03281100 ಮಾರ್ಕಂಡೇಯ ಉವಾಚ|

03281100a ಸಾವಿತ್ರೀ ತತ ಉತ್ಥಾಯ ಕೇಶಾನ್ಸಂಯಮ್ಯ ಭಾಮಿನೀ|

03281100c ಪತಿಮುತ್ಥಾಪಯಾಮಾಸ ಬಾಹುಭ್ಯಾಂ ಪರಿಗೃಹ್ಯ ವೈ||

ಮಾರ್ಕಂಡೇಯನು ಹೇಳಿದನು: “ಆಗ ಭಾಮಿನೀ ಸಾವಿತ್ರಿಯು ಮೇಲೆದ್ದು ಕೂದಲನ್ನು ಕಟ್ಟಿ ಅವನ ಬಾಹುಗಳನ್ನು ಹಿಡಿದು ಪತಿಯನ್ನು ಮೇಲಕ್ಕೆತ್ತಿದಳು.

03281101a ಉತ್ಥಾಯ ಸತ್ಯವಾಂಶ್ಚಾಪಿ ಪ್ರಮೃಜ್ಯಾಂಗಾನಿ ಪಾಣಿನಾ|

03281101c ದಿಶಃ ಸರ್ವಾಃ ಸಮಾಲೋಕ್ಯ ಕಠಿನೇ ದೃಷ್ಟಿಮಾದಧೇ||

ಸತ್ಯವಾನನೂ ಕೂಡ ಮೇಲೆದ್ದು ತನ್ನ ಕೈಗಳಿಂದ ದೇಹವನ್ನು ಉಜ್ಜಿಕೊಂಡನು. ಸುತ್ತಲೂ ಕಣ್ಣು ಹಾಯಿಸಿ, ಬುಟ್ಟಿಯನ್ನು ನೋಡಿದನು.

03281102a ತಮುವಾಚಾಥ ಸಾವಿತ್ರೀ ಶ್ವಃ ಫಲಾನೀಹ ನೇಷ್ಯಸಿ|

03281102c ಯೋಗಕ್ಷೇಮಾರ್ಥಮೇತತ್ತೇ ನೇಷ್ಯಾಮಿ ಪರಶುಂ ತ್ವಹಂ||

ಆಗ ಸಾವಿತ್ರಿಯು ಅವನಿಗೆ ಹೇಳಿದಳು: “ನಾಳೆ ಬಂದು ಫಲವನ್ನು ಒಯ್ಯಿ. ಆದರೆ ಯೋಗಕ್ಷೇಮಕ್ಕಾಗಿ ನಿನ್ನ ಈ ಕೊಡಲಿಯನ್ನು ತೆಗೆದುಕೊಳ್ಳುತ್ತೇನೆ.”

03281103a ಕೃತ್ವಾ ಕಠಿನಭಾರಂ ಸಾ ವೃಕ್ಷಶಾಖಾವಲಂಬಿನಂ|

03281103c ಗೃಹೀತ್ವಾ ಪರಶುಂ ಭರ್ತುಃ ಸಕಾಶಂ ಪುನರಾಗಮತ್||

ಅವಳು ತುಂಬಿದ್ದ ಬುಟ್ಟಿಯನ್ನು ಮರದ ರೆಂಬೆಗೆ ಕಟ್ಟಿ ಕೊಡಲಿಯನ್ನು ಹಿಡಿದು ಪತಿಯ ಬಳಿ ಮರಳಿ ಬಂದಳು.

03281104a ವಾಮೇ ಸ್ಕಂಧೇ ತು ವಾಮೋರೂರ್ಭರ್ತುರ್ಬಾಹುಂ ನಿವೇಶ್ಯ ಸಾ|

03281104c ದಕ್ಷಿಣೇನ ಪರಿಷ್ವಜ್ಯ ಜಗಾಮ ಮೃದುಗಾಮಿನೀ||

ಆ ವಾಮೋರುವು ತನ್ನ ಪತಿಯ ತೋಳನ್ನು ತನ್ನ ಎಡ ಭುಜದ ಮೇಲಿರಿಸಿ, ತನ್ನ ಬಲಗೈಯಿಂದ ಅವನ ಸೊಂಟವನ್ನು ಬಳಸಿ, ಮೆಲ್ಲನೆ ನಡೆದಳು.

03281105 ಸತ್ಯವಾನುವಾಚ|

03281105a ಅಭ್ಯಾಸಗಮನಾದ್ಭೀರು ಪಂಥಾನೋ ವಿದಿತಾ ಮಮ|

03281105c ವೃಕ್ಷಾಂತರಾಲೋಕಿತಯಾ ಜ್ಯೋತ್ಸ್ನಯಾ ಚಾಪಿ ಲಕ್ಷಯೇ||

ಸತ್ಯವಾನನು ಹೇಳಿದನು: “ಸುಂದರಿ! ನನಗೆ ಇಲ್ಲಿ ಬರುವ ಅಭ್ಯಾಸವಿದೆ. ಆದುದರಿಂದ ನನಗೆ ದಾರಿಯು ಗೊತ್ತು. ಮರಗಳ ಮಧ್ಯದಿಂದ ಬರುವ ಬೆಳದಿಂಗಳ ಬೆಳಕಿನಲ್ಲಿ ನನಗೆ ಕಾಣುತ್ತಿದೆ.

03281106a ಆಗತೌ ಸ್ವಃ ಪಥಾ ಯೇನ ಫಲಾನ್ಯವಚಿತಾನಿ ಚ|

03281106c ಯಥಾಗತಂ ಶುಭೇ ಗಚ್ಚ ಪಂಥಾನಂ ಮಾ ವಿಚಾರಯ||

ಶುಭೇ! ಏನೂ ವಿಚಾರಮಾಡದೇ ಫಲವನ್ನು ತರಲು ಯಾವ ದಾರಿಯಿಂದ ಬಂದಿದ್ದೆವೋ ಅದೇ ದಾರಿಯನ್ನು ಹಿಡಿದು ಹೋಗು.

03281107a ಪಲಾಶಷಂಡೇ ಚೈತಸ್ಮಿನ್ಪಂಥಾ ವ್ಯಾವರ್ತತೇ ದ್ವಿಧಾ|

03281107c ತಸ್ಯೋತ್ತರೇಣ ಯಃ ಪನ್ಥಾಸ್ತೇನ ಗಚ್ಚ ತ್ವರಸ್ವ ಚ||

03281107E ಸ್ವಸ್ಥೋಽಸ್ಮಿ ಬಲವಾನಸ್ಮಿ ದಿದೃಕ್ಷುಃ ಪಿತರಾವುಭೌ||

ಈ ಪಲಾಶವೃಕ್ಷದ ಬಳಿ ದಾರಿಯು ಕವಲೊಡೆಯುತ್ತದೆ. ಅದರ ಉತ್ತರ ದಿಕ್ಕಿನ ದಾರಿಯಲ್ಲಿ ಬೇಗನೆ ಹೋಗು. ನಾನು ಈಗ ಸರಿಯಾಗಿದ್ದೇನೆ. ಶಕ್ತಿಯು ಬಂದಿದೆ. ತಂದೆ-ತಾಯಂದಿರನ್ನು ನೋಡ ಬಯಸುತ್ತೇನೆ.””

03281108 ಮಾರ್ಕಂಡೇಯ ಉವಾಚ|

03281108a ಬ್ರುವನ್ನೇವಂ ತ್ವರಾಯುಕ್ತಃ ಸ ಪ್ರಾಯಾದಾಶ್ರಮಂ ಪ್ರತಿ|

ಮಾರ್ಕಂಡೇಯನು ಹೇಳಿದನು: “ಹೀಗೆ ಮಾತನಾಡುತ್ತಾ ಅವನು ಆಶ್ರಮದ ಕಡೆ ತ್ವರೆಮಾಡಿ ನಡೆದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ಪತಿವ್ರತಾಮಹಾತ್ಮ್ಯೇ ಸಾವಿತ್ರ್ಯುಪಾಖ್ಯಾನೇ ಏಕಾಶೀತ್ಯಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ಪತಿವ್ರತಾಮಹಾತ್ಮ್ಯೆಯಲ್ಲಿ ಸಾವಿತ್ರ್ಯುಪಾಖ್ಯಾನದಲ್ಲಿ ಇನ್ನೂರಾಎಂಭತ್ತೊಂದನೆಯ ಅಧ್ಯಾಯವು.

Related image

Comments are closed.