ಆರಣ್ಯಕ ಪರ್ವ: ಆರಣೇಯ ಪರ್ವ
Contents
Toggle೨೯೬
ನಾಲ್ವರು ಪಾಂಡವರು ಸರೋವರದಲ್ಲಿ ಹತರಾಗಿ ಬಿದ್ದುದು
ಬಾಯಾರಿಕೆಯಿಂದ ಬಳಲಿ ನೀರನ್ನು ತರಲು ನಕುಲನನ್ನು ಹತ್ತಿರದಲ್ಲಿದ್ದ ಕೊಳಕ್ಕೆ ಕಳುಹಿಸುವುದು (೧-೧೦). ಕೇಳುವ ಪ್ರಶ್ನೆಗಳಿಗೆ ಉತ್ತರಿಸದೇ ನೀರನ್ನು ಕುಡಿಯಬೇಡವೆಂದ ಅಶರೀರವಾಣಿಯನ್ನು ಅನಾದರಿಸಿ ನೀರನ್ನು ಕಡಿಯಲು ಹೋದ ನಕುಲನು ಬಿದ್ದುದು (೧೧-೧೩). ಅವನಂತೆ ನೀರುತರಲು ಹೋದ ಸಹದೇವ, ಅರ್ಜುನ ಮತ್ತು ಭೀಮರು ಹಿಂದಿರುಗದೇ ಇದ್ದುದು (೧೪-೩೮). ಯುಧಿಷ್ಠಿರನೇ ಆ ಸರೋವರದ ಬಳಿ ಬಂದು ನೋಡಿ ವಿಸ್ಮಿತನಾದುದು (೩೯-೪೩).
03296001 ಯುಧಿಷ್ಠಿರ ಉವಾಚ|
03296001a ನಾಪದಾಮಸ್ತಿ ಮರ್ಯಾದಾ ನ ನಿಮಿತ್ತಂ ನ ಕಾರಣಂ|
03296001c ಧರ್ಮಸ್ತು ವಿಭಜತ್ಯತ್ರ ಉಭಯೋಃ ಪುಣ್ಯಪಾಪಯೋಃ||
ಯುಧಿಷ್ಠಿರನು ಹೇಳಿದನು: “ಆಪತ್ತಿಗೆ ಗಡಿಯಿಲ್ಲ, ನಿಮಿತ್ತವೂ ಇಲ್ಲ ಮತ್ತು ಕಾರಣವಿಲ್ಲ. ಪುಣ್ಯ ಮತ್ತು ಪಾಪ ಇವೆರಡರ ಪ್ರಕಾರ ಧರ್ಮವು ಅದನ್ನು ಪಾಲುಮಾಡಿ ಇಲ್ಲಿ ನೀಡುತ್ತದೆ.”
03296002 ಭೀಮ ಉವಾಚ|
03296002a ಪ್ರಾತಿಕಾಮ್ಯನಯತ್ಕೃಷ್ಣಾಂ ಸಭಾಯಾಂ ಪ್ರೇಷ್ಯವತ್ತದಾ|
03296002c ನ ಮಯಾ ನಿಹತಸ್ತತ್ರ ತೇನ ಪ್ರಾಪ್ತಾಃ ಸ್ಮ ಸಂಶಯಂ||
ಭೀಮನು ಹೇಳಿದನು: “ಕೃಷ್ಣೆಯನ್ನು ಸೇವಕಿಯಂತೆ ಸಭೆಗೆ ತಂದ ಆ ಪ್ರತಿಕಾಮಿಯನ್ನು ನಾನು ಅಲ್ಲಿಯೇ ಕೊಲ್ಲಲಿಲ್ಲ. ಆದುದರಿಂದಲೇ ನಾವು ಈ ಸಮಸ್ಯೆಯನ್ನು ಪಡೆದಿದ್ದೇವೆ.”
03296003 ಅರ್ಜುನ ಉವಾಚ|
03296003a ವಾಚಸ್ತೀಕ್ಷ್ಣಾಸ್ಥಿಭೇದಿನ್ಯಃ ಸೂತಪುತ್ರೇಣ ಭಾಷಿತಾಃ|
03296003c ಅತಿತೀಕ್ಷ್ಣಾ ಮಯಾ ಕ್ಷಾಂತಾಸ್ತೇನ ಪ್ರಾಪ್ತಾಃ ಸ್ಮ ಸಂಶಯಂ||
ಅರ್ಜುನನು ಹೇಳಿದನು: “ಎಲುಬುಗಳನ್ನು ಭೇದಿಸುವಂಥಹ ತೀಕ್ಷ್ಣ ಮಾತುಗಳನ್ನಾಡಿದ ಸೂತಪುತ್ರನನ್ನು ಅತಿತೀಕ್ಷ್ಣನಾದ ನಾನು ಸಹಿಸಿಕೊಂಡೆನು. ಆದುದರಿಂದಲೇ ನಾವು ಈ ಸಮಸ್ಯೆಯನ್ನು ಪಡೆದಿದ್ದೇವೆ.”
03296004 ಸಹದೇವ ಉವಾಚ|
03296004a ಶಕುನಿಸ್ತ್ವಾಂ ಯದಾಜೈಷೀದಕ್ಷದ್ಯೂತೇನ ಭಾರತ|
03296004c ಸ ಮಯಾ ನ ಹತಸ್ತತ್ರ ತೇನ ಪ್ರಾಪ್ತಾಃ ಸ್ಮ ಸಂಶಯಂ||
ಸಹದೇವನು ಹೇಳಿದನು: “ಭಾರತ! ನಿನ್ನನ್ನು ಅಕ್ಷದ್ಯೂತದಲ್ಲಿ ಸೋಲಿಸಿದಾಗ ಶಕುನಿಯನ್ನು ನಾನು ಕೊಲ್ಲಲ್ಲಿಲ್ಲ. ಆದುದರಿಂದಲೇ ನಾವು ಈ ಸಮಸ್ಯೆಯನ್ನು ಪಡೆದಿದ್ದೇವೆ.””
03296005 ವೈಶಂಪಾಯನ ಉವಾಚ|
03296005a ತತೋ ಯುಧಿಷ್ಠಿರೋ ರಾಜಾ ನಕುಲಂ ವಾಕ್ಯಮಬ್ರವೀತ್|
03296005c ಆರುಹ್ಯ ವೃಕ್ಷಂ ಮಾದ್ರೇಯ ನಿರೀಕ್ಷಸ್ವ ದಿಶೋ ದಶ||
ವೈಶಂಪಾಯನನು ಹೇಳಿದನು: “ಆಗ ರಾಜ ಯುಧಿಷ್ಠಿರನು ನಕುಲನಿಗೆ ಹೇಳಿದನು: “ಮಾದ್ರೇಯ! ಮರವನ್ನು ಹತ್ತಿ ಹತ್ತು ದಿಕ್ಕುಗಳಲ್ಲಿಯೂ ನೋಡು.
03296006a ಪಾನೀಯಮಂತಿಕೇ ಪಶ್ಯ ವೃಕ್ಷಾನ್ವಾಪ್ಯುದಕಾಶ್ರಯಾನ್|
03296006c ಇಮೇ ಹಿ ಭ್ರಾತರಃ ಶ್ರಾಂತಾಸ್ತವ ತಾತ ಪಿಪಾಸಿತಾಃ||
ಮಗೂ! ಹತ್ತಿರದಲ್ಲಿ ನೀರಿದೆಯೋ ಅಥವಾ ನೀರಿನ ಬಳಿ ಬೆಳೆಯುವ ಮರಗಳಿವೆಯೋ ನೋಡು. ಇಲ್ಲಿ ನಿನ್ನ ಸಹೋದರರು ಬಾಯಾರಿಕೆಯಿಂದ ಬಳಲಿದ್ದಾರೆ.”
03296007a ನಕುಲಸ್ತು ತಥೇತ್ಯುಕ್ತ್ವಾ ಶೀಘ್ರಮಾರುಹ್ಯ ಪಾದಪಂ|
03296007c ಅಬ್ರವೀದ್ಭ್ರಾತರಂ ಜ್ಯೇಷ್ಠಮಭಿವೀಕ್ಷ್ಯ ಸಮಂತತಃ||
ಅದನ್ನು ಕೇಳಿ ನಕುಲನು ಶೀಘ್ರವಾಗಿ ಮರವನ್ನು ಹತ್ತಿ ಸುತ್ತಲೂ ನೋಡಿ ಹಿರಿಯಣ್ಣನಿಗೆ ಹೇಳಿದನು:
03296008a ಪಶ್ಯಾಮಿ ಬಹುಲಾನ್ರಾಜನ್ವೃಕ್ಷಾನುದಕಸಂಶ್ರಯಾನ್|
03296008c ಸಾರಸಾನಾಂ ಚ ನಿರ್ಹ್ರಾದಮತ್ರೋದಕಮಸಂಶಯಂ||
“ರಾಜನ್! ನೀರಿನ ಬಳಿ ಬೆಳೆಯುವ ಬಹಳ ವೃಕ್ಷಗಳನ್ನು ನೋಡುತ್ತಿದ್ದೇನೆ. ಸಾರಸಗಳ ಕೂಗುಗಳನ್ನೂ ಕೇಳುತ್ತಿದ್ದೇನೆ. ಅಲ್ಲಿ ನೀರಿದೆಯೆನ್ನುವುದರಲ್ಲಿ ಸಂಶಯವಿಲ್ಲ.”
03296009a ತತೋಽಬ್ರವೀತ್ಸತ್ಯಧೃತಿಃ ಕುಂತೀಪುತ್ರೋ ಯುಧಿಷ್ಠಿರಃ|
03296009c ಗಚ್ಚ ಸೌಮ್ಯ ತತಃ ಶೀಘ್ರಂ ತೂರ್ಣಂ ಪಾನೀಯಮಾನಯ||
ಆಗ ಸತ್ಯಧೃತಿ ಕುಂತೀಪುತ್ರ ಯುಧಿಷ್ಠಿರನು ಅವನಿಗೆ ಹೇಳಿದನು: “ಸೌಮ್ಯ! ಶೀಘ್ರವಾಗಿ ಅಲ್ಲಿಗೆ ಹೋಗಿ ಕುಡಿಯಲು ನೀರನ್ನು ತೆಗೆದುಕೊಂಡು ಬಾ!”
03296010a ನಕುಲಸ್ತು ತಥೇತ್ಯುಕ್ತ್ವಾ ಭ್ರಾತುರ್ಜ್ಯೇಷ್ಠಸ್ಯ ಶಾಸನಾತ್|
03296010c ಪ್ರಾದ್ರವದ್ಯತ್ರ ಪಾನೀಯಂ ಶೀಘ್ರಂ ಚೈವಾನ್ವಪದ್ಯತ||
ನಕುಲನು ಒಪ್ಪಿ ಹಿರಿಯಣ್ಣನ ಶಾಸನದಂತೆ ನೀರಿನೆಡೆಗೆ ಧಾವಿಸಿದನು ಮತ್ತು ಅಲ್ಲಿ ತಲುಪಿದನು.
03296011a ಸ ದೃಷ್ಟ್ವಾ ವಿಮಲಂ ತೋಯಂ ಸಾರಸೈಃ ಪರಿವಾರಿತಂ|
03296011c ಪಾತುಕಾಮಸ್ತತೋ ವಾಚಮಂತರಿಕ್ಷಾತ್ಸ ಶುಶ್ರುವೇ||
ಸಾರಸಗಳಿಂದ ಸುತ್ತುವರೆಯಲ್ಪಟ್ಟ ಆ ಶುದ್ಧ ನೀರನ್ನು ನೋಡಿದನು. ಆದರೆ ಅವನು ಕುಡಿಯಲು ತೊಡಗಿದಾಗ ಅಂತರಿಕ್ಷದಿಂದ ಮಾತುಗಳು ಕೇಳಿಬಂದವು:
03296012a ಮಾ ತಾತ ಸಾಹಸಂ ಕಾರ್ಷೀರ್ಮಮ ಪೂರ್ವಪರಿಗ್ರಹಃ|
03296012c ಪ್ರಶ್ನಾನುಕ್ತ್ವಾ ತು ಮಾದ್ರೇಯ ತತಃ ಪಿಬ ಹರಸ್ವ ಚ||
“ಮಗೂ! ಸಾಹಸವನ್ನು ಮಾಡಬೇಡ! ಇದು ನನ್ನ ಪೂರ್ವಪರಿಗ್ರಹ. ಮಾದ್ರೇಯ! ಪ್ರಶ್ನೆಗಳಿಗೆ ಉತ್ತರಿಸಿ ನಂತರ ನೀರನ್ನು ತೆಗೆದು ಕುಡಿ.”
03296013a ಅನಾದೃತ್ಯ ತು ತದ್ವಾಕ್ಯಂ ನಕುಲಃ ಸುಪಿಪಾಸಿತಃ|
03296013c ಅಪಿಬಚ್ಚೀತಲಂ ತೋಯಂ ಪೀತ್ವಾ ಚ ನಿಪಪಾತ ಹ|
ತುಂಬಾ ಬಾಯಾರಿಕೆಗೊಂಡಿದ್ದ ನಕುಲನು ಆ ಮಾತನ್ನು ಅನಾದರಿಸಿ ತಣ್ಣೀರನ್ನು ಕುಡಿದನು. ಕುಡಿದು ಬಿದ್ದನು.
03296014a ಚಿರಾಯಮಾಣೇ ನಕುಲೇ ಕುಂತೀಪುತ್ರೋ ಯುಧಿಷ್ಠಿರಃ|
03296014c ಅಬ್ರವೀದ್ಭ್ರಾತರಂ ವೀರಂ ಸಹದೇವಮರಿಂದಮಂ||
ನಕುಲನು ತಡವಾಗಲು ಕುಂತೀಪುತ್ರ ಯುಧಿಷ್ಠಿರನು ತಮ್ಮ ವೀರ ಅರಿಂದಮ ಸಹದೇವನಿಗೆ ಹೇಳಿದನು:
03296015a ಭ್ರಾತಾ ಚಿರಾಯತೇ ತಾತ ಸಹದೇವ ತವಾಗ್ರಜಃ|
03296015c ತಂ ಚೈವಾನಯ ಸೋದರ್ಯಂ ಪಾನೀಯಂ ಚ ತ್ವಮಾನಯ||
“ಮಗೂ! ಸಹದೇವ! ತಮ್ಮ! ನಿನ್ನ ಅಣ್ಣನು ತಡವಾಗಿದ್ದಾನೆ. ಹೋಗು. ಅವನನ್ನೂ ನೀರನ್ನು ಜೊತೆಯಲ್ಲಿ ತಾ.”
03296016a ಸಹದೇವಸ್ತಥೇತ್ಯುಕ್ತ್ವಾ ತಾಂ ದಿಶಂ ಪ್ರತ್ಯಪದ್ಯತ|
03296016c ದದರ್ಶ ಚ ಹತಂ ಭೂಮೌ ಭ್ರಾತರಂ ನಕುಲಂ ತದಾ||
ಹಾಗೆಯೇ ಆಗಲೆಂದು ಹೇಳಿ ಸಹದೇವನು ಅವನು ಹೋದ ದಿಕ್ಕಿನಲ್ಲಿಯೇ ಹೋಗಿ ಅಲ್ಲಿ ನೆಲದಮೇಲೆ ಹತನಾಗಿ ಬಿದ್ದಿದ್ದ ಅಣ್ಣ ನಕುಲನನ್ನು ನೋಡಿದನು.
03296017a ಭ್ರಾತೃಶೋಕಾಭಿಸಂತಪ್ತಸ್ತೃಷಯಾ ಚ ಪ್ರಪೀಡಿತಃ|
03296017c ಅಭಿದುದ್ರಾವ ಪಾನೀಯಂ ತತೋ ವಾಗಭ್ಯಭಾಷತ||
ಭ್ರಾತೃಶೋಕದಿಂದ ಸಂತಪ್ತನಾಗಿ, ಬಾಯಾರಿಕೆಯಿಂದಲೂ ಪೀಡಿತನಾಗಿ ನೀರಿನೆಡೆಗೆ ಓಡಿದನು. ಆಗ ಧ್ವನಿಯು ಹೇಳಿತು:
03296018a ಮಾ ತಾತ ಸಾಹಸಂ ಕಾರ್ಷೀರ್ಮಮ ಪೂರ್ವಪರಿಗ್ರಹಃ|
03296018c ಪ್ರಶ್ನಾನುಕ್ತ್ವಾ ಯಥಾಕಾಮಂ ತತಃ ಪಿಬ ಹರಸ್ವ ಚ||
“ಮಗೂ! ಸಾಹಸವನ್ನು ಮಾಡಬೇಡ! ಇದು ನನ್ನ ಪೂರ್ವಪರಿಗ್ರಹ. ಮಾದ್ರೇಯ! ಪ್ರಶ್ನೆಗಳಿಗೆ ಉತ್ತರಿಸಿ ನಂತರ ನೀರನ್ನು ತೆಗೆದು ಕುಡಿ.”
03296019a ಅನಾದೃತ್ಯ ತು ತದ್ವಾಕ್ಯಂ ಸಹದೇವಃ ಪಿಪಾಸಿತಃ|
03296019c ಅಪಿಬಚ್ಚೀತಲಂ ತೋಯಂ ಪೀತ್ವಾ ಚ ನಿಪಪಾತ ಹ||
ತುಂಬಾ ಬಾಯಾರಿಕೆಗೊಂಡಿದ್ದ ಸಹದೇವನು ಆ ಮಾತನ್ನು ಅನಾದರಿಸಿ ತಣ್ಣೀರನ್ನು ಕುಡಿದನು. ಕುಡಿದು ಬಿದ್ದನು.
03296020a ಅಥಾಬ್ರವೀತ್ಸ ವಿಜಯಂ ಕುಂತೀಪುತ್ರೋ ಯುಧಿಷ್ಠಿರಃ|
03296020c ಭ್ರಾತರೌ ತೇ ಚಿರಗತೌ ಬೀಭತ್ಸೋ ಶತ್ರುಕರ್ಶನ|
ಆಗ ಕುಂತೀಪುತ್ರ ಯುಧಿಷ್ಠಿರನು ವಿಜಯನಿಗೆ ಹೇಳಿದನು: “ಶತ್ರುಕರ್ಶನ! ಬೀಭತ್ಸು! ನಿನ್ನ ತಮ್ಮಂದಿರಿಬ್ಬರೂ ಹೋಗಿ ಬಹಳ ಸಮಯವಾಯಿತು.
03296020e ತೌ ಚೈವಾನಯ ಭದ್ರಂ ತೇ ಪಾನೀಯಂ ಚ ತ್ವಮಾನಯ||
03296021a ಏವಮುಕ್ತೋ ಗುಡಾಕೇಶಃ ಪ್ರಗೃಹ್ಯ ಸಶರಂ ಧನುಃ|
03296021c ಆಮುಕ್ತಖಡ್ಗೋ ಮೇಧಾವೀ ತತ್ಸರಃ ಪ್ರತ್ಯಪದ್ಯತ||
ನಿನಗೆ ಮಂಗಳವಾಗಲಿ! ಅವರಿಬ್ಬರನ್ನೂ ಕರೆದುಕೊಂಡು ಬಾ! ನೀರನ್ನೂ ತೆಗೆದುಕೊಂಡು ಬಾ!” ಹೀಗೆ ಹೇಳಲು ಆ ಮೇಧಾವೀ ಗುಡಾಕೇಶನು ಧನುರ್ಬಾಣಗಳನ್ನು ಹಿಡಿದು ಖಡ್ಗವನ್ನು ಎಳೆದು ಆ ಸರೋವರದ ಕಡೆ ಅವಸರದಿಂದ ಹೋದನು.
03296022a ಯತಃ ಪುರುಷಶಾರ್ದೂಲೌ ಪಾನೀಯಹರಣೇ ಗತೌ|
03296022c ತೌ ದದರ್ಶ ಹತೌ ತತ್ರ ಭ್ರಾತರೌ ಶ್ವೇತವಾಹನಃ||
ನೀರನ್ನು ತರಲು ಹೋಗಿದ್ದ ಆ ಪುರುಷಶಾರ್ದೂಲ ತಮ್ಮಂದಿರಿಬ್ಬರೂ ಅಲ್ಲಿ ಹತರಾಗಿ ಬಿದ್ದಿರುವುದನ್ನು ಶ್ವೇತವಾಹನನು ಕಂಡನು.
03296023a ಪ್ರಸುಪ್ತಾವಿವ ತೌ ದೃಷ್ಟ್ವಾ ನರಸಿಂಹಃ ಸುದುಃಖಿತಃ|
03296023c ಧನುರುದ್ಯಮ್ಯ ಕೌಂತೇಯೋ ವ್ಯಲೋಕಯತ ತದ್ವನಂ||
ಮಲಗಿದ್ದಾರೋ ಎಂಬಂತಿದ್ದ ಅವರಿಬ್ಬರನ್ನು ಕಂಡು ನರಸಿಂಹ ಕೌಂತೇಯನು ಸುದುಃಖಿತನಾಗಿ ಧನುಸ್ಸನ್ನು ಮೇಲೆತ್ತಿ ಆ ವನವನ್ನು ಅವಲೋಕಿಸಿದನು.
03296024a ನಾಪಶ್ಯತ್ತತ್ರ ಕಿಂ ಚಿತ್ಸ ಭೂತಂ ತಸ್ಮಿನ್ಮಹಾವನೇ|
03296024c ಸವ್ಯಸಾಚೀ ತತಃ ಶ್ರಾಂತಃ ಪಾನೀಯಂ ಸೋಽಭ್ಯಧಾವತ||
ಅಲ್ಲಿ ಆ ಮಹಾವನದಲ್ಲಿ ಯಾವ ಜೀವವನ್ನೂ ಕಾಣದೇ ಸವ್ಯಸಾಚಿಯು ಆಯಾಸಗೊಂಡು ನೀರನ್ನು ಕುಡಿಯಲು ಮುಂದಾದನು.
03296025a ಅಭಿಧಾವಂಸ್ತತೋ ವಾಚಮಂತರಿಕ್ಷಾತ್ಸ ಶುಶ್ರುವೇ|
03296025c ಕಿಮಾಸೀದಸಿ ಪಾನೀಯಂ ನೈತಚ್ಚಕ್ಯಂ ಬಲಾತ್ತ್ವಯಾ||
ಅವನು ಮುಂದೆಬರಲು ಅಂತರಿಕ್ಷದಲ್ಲಿ ಮಾತು ಕೇಳಿಬಂದಿತು. “ಇಲ್ಲಿಗೆ ಏಕೆ ಬಂದೆ. ಬಲವನ್ನುಪಯೋಗಿಸಿ ನೀರನ್ನು ಕುಡಿಯಲು ಶಕ್ಯವಿಲ್ಲ.
03296026a ಕೌಂತೇಯ ಯದಿ ವೈ ಪ್ರಶ್ನಾನ್ಮಯೋಕ್ತಾನ್ಪ್ರತಿಪತ್ಸ್ಯಸೇ|
03296026c ತತಃ ಪಾಸ್ಯಸಿ ಪಾನೀಯಂ ಹರಿಷ್ಯಸಿ ಚ ಭಾರತ||
ಕೌಂತೇಯ! ಭಾರತ! ನಾನು ಕೇಳುವ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟ ನಂತರವೇ ನೀನು ನೀರನ್ನು ತೆಗೆದು ಕುಡಿಯಬಲ್ಲೆ.”
03296027a ವಾರಿತಸ್ತ್ವಬ್ರವೀತ್ಪಾರ್ಥೋ ದೃಶ್ಯಮಾನೋ ನಿವಾರಯ|
03296027c ಯಾವದ್ಬಾಣೈರ್ವಿನಿರ್ಭಿನ್ನಃ ಪುನರ್ನೈವಂ ವದಿಷ್ಯಸಿ||
ಹೀಗೆ ತಡೆಯಲ್ಪಟ್ಟ ಪಾರ್ಥನು ಹೇಳಿದನು: “ಕಣ್ಣಿಗೆ ಕಾಣಿಸಿಕೊಂಡು ತಡೆ! ಆಗ ನನ್ನ ಬಾಣಗಳಿಂದ ನಿರ್ಭಿನ್ನನಾಗಿ ಪುನಃ ಎಂದೂ ಮಾತನಾಡುವುದಿಲ್ಲ!”
03296028a ಏವಮುಕ್ತ್ವಾ ತತಃ ಪಾರ್ಥಃ ಶರೈರಸ್ತ್ರಾನುಮಂತ್ರಿತೈಃ|
03296028c ವವರ್ಷ ತಾಂ ದಿಶಂ ಕೃತ್ಸ್ನಾಂ ಶಬ್ದವೇಧಂ ಚ ದರ್ಶಯನ್||
ಹೀಗೆ ಹೇಳಿ ಪಾರ್ಥನು ಅಸ್ತ್ರಗಳಿಂದ ಅನುಮಂತ್ರಿಸಿದ ಬಾಣಗಳಿಂದ ಎಲ್ಲ ದಿಕ್ಕುಗಳಲ್ಲಿಯೂ ಬಾಣದ ಮಳೆಗರೆದು ತನ್ನ ಶಬ್ಧವೇದಿ ವಿದ್ಯೆಯನ್ನು ಪ್ರದರ್ಶಿಸಿದನು.
03296029a ಕರ್ಣಿನಾಲೀಕನಾರಾಚಾನುತ್ಸೃಜನ್ಭರತರ್ಷಭ|
03296029c ಅನೇಕೈರಿಷುಸಂಘಾತೈರಂತರಿಕ್ಷಂ ವವರ್ಷ ಹ||
ಭರತರ್ಷಭ! ಕಿವಿಗಳಿದ್ದ ಉಕ್ಕಿನ ಬಾಣಗಳನ್ನು ಬಿಟ್ಟು ಅವನು ಅನೇಕ ಶರಗುಂಪುಗಳಿಂದ ಅಂತರಿಕ್ಷದಲ್ಲಿ ಮಳೆಗರೆಸಿದನು.
03296030 ಯಕ್ಷ ಉವಾಚ|
03296030a ಕಿಂ ವಿಘಾತೇನ ತೇ ಪಾರ್ಥ ಪ್ರಶ್ನಾನುಕ್ತ್ವಾ ತತಃ ಪಿಬ|
03296030c ಅನುಕ್ತ್ವಾ ತು ತತಃ ಪ್ರಶ್ನಾನ್ಪೀತ್ವೈವ ನ ಭವಿಷ್ಯಸಿ||
ಯಕ್ಷನು ಹೇಳಿದನು: “ಈ ವಿಘಾತವೇಕೆ ಪಾರ್ಥ? ಪ್ರಶ್ನೆಗಳನ್ನು ಉತ್ತರಿಸಿ ಕುಡಿ. ಉತ್ತರಿಸದೇ ಇದ್ದರೆ ಕುಡಿದ ತಕ್ಷಣವೇ ಇಲ್ಲವಾಗುತ್ತೀಯೆ.””
03296031 ವೈಶಂಪಾಯನ ಉವಾಚ|
03296031a ಸ ತ್ವಮೋಘಾನಿಷೂನ್ಮುಕ್ತ್ವಾ ತೃಷ್ಣಯಾಭಿಪ್ರಪೀಡಿತಃ|
03296031c ಅವಿಜ್ಞಾಯೈವ ತಾನ್ಪ್ರಶ್ನಾನ್ಪೀತ್ವೈವ ನಿಪಪಾತ ಹ||
ವೈಶಂಪಾಯನನು ಹೇಳಿದನು: “ಆ ಅಮೋಘ ಬಾಣಗಳನ್ನು ಬಿಟ್ಟು ಅವನು ಬಾಯಾರಿಕೆಯಿಂದ ಪೀಡಿತನಾಗಿ ಅವನ ಪ್ರಶ್ನೆಗಳಿಗೆ ಮನಸ್ಸನ್ನು ಕೊಡದೇ ಕುಡಿದು ಬಿದ್ದನು.
03296032a ಅಥಾಬ್ರವೀದ್ಭೀಮಸೇನಂ ಕುಂತೀಪುತ್ರೋ ಯುಧಿಷ್ಠಿರಃ|
03296032c ನಕುಲಃ ಸಹದೇವಶ್ಚ ಬೀಭತ್ಸುಶ್ಚಾಪರಾಜಿತಃ||
03296033a ಚಿರಂ ಗತಾಸ್ತೋಯಹೇತೋರ್ನ ಚಾಗಚ್ಚಂತಿ ಭಾರತ|
03296033c ತಾಂಶ್ಚೈವಾನಯ ಭದ್ರಂ ತೇ ಪಾನೀಯಂ ಚ ತ್ವಮಾನಯ||
ಆಗ ಕುಂತೀಪುತ್ರ ಯುಧಿಷ್ಠಿರನು ಭೀಮಸೇನನಿಗೆ ಹೇಳಿದನು: “ನಕುಲ, ಸಹದೇವ, ಮತ್ತು ಅಪರಾಜಿತ ಬೀಭತ್ಸುವೂ ಹೋಗಿ ಬಹಳ ಸಮಯವಾಯಿತು ಮತ್ತು ಮರಳಿ ಬಂದಿಲ್ಲ. ಭಾರತ! ನಿನಗೆ ಮಂಗಳವಾಗಲಿ! ಹೋಗಿ ಅವರನ್ನು ಕರೆದುಕೊಂಡು ಬಾ ಮತ್ತು ನೀರನ್ನೂ ತೆಗೆದುಕೊಂಡು ಬಾ.”
03296034a ಭೀಮಸೇನಸ್ತಥೇತ್ಯುಕ್ತ್ವಾ ತಾಂ ದಿಶಂ ಪ್ರತ್ಯಪದ್ಯತ|
03296034c ಯತ್ರ ತೇ ಪುರುಷವ್ಯಾಘ್ರಾ ಭ್ರಾತರೋಽಸ್ಯ ನಿಪಾತಿತಾಃ||
ಹಾಗೆಯೇ ಆಗಲೆಂದು ಭೀಮಸೇನನು ಅವರು ಹೋದ ಕಡೆಯಲ್ಲಿಯೇ, ತನ್ನ ಪುರುಷವ್ಯಾಘ್ರ ತಮ್ಮಂದಿರು ಬಿದ್ದಿದ್ದಲ್ಲಿಗೆ, ಅವಸರಮಾಡಿ ಹೋದನು.
03296035a ತಾನ್ದೃಷ್ಟ್ವಾ ದುಃಖಿತೋ ಭೀಮಸ್ತೃಷಯಾ ಚ ಪ್ರಪೀಡಿತಃ|
03296035c ಅಮನ್ಯತ ಮಹಾಬಾಹುಃ ಕರ್ಮ ತದ್ಯಕ್ಷರಕ್ಷಸಾಂ|
03296035e ಸ ಚಿಂತಯಾಮಾಸ ತದಾ ಯೋದ್ಧವ್ಯಂ ಧ್ರುವಮದ್ಯ ಮೇ||
ಅವರನ್ನು ನೋಡಿ ದುಃಖಿತನಾಗಿ ಬಾಯಾರಿಕೆಯಿಂದ ಪೀಡಿತನಾಗಿ ಮಹಾಬಾಹು ಭೀಮನು “ಇದು ಯಾರೋ ಯಕ್ಷ ಅಥವಾ ರಾಕ್ಷಸರ ಕಾರ್ಯವಾಗಿರಬಹುದು ಮತ್ತು ಅವರೊಡನೆ ಯುದ್ಧಮಾಡಬೇಕಾಗುವುದು ನನಗೆ ತಪ್ಪಿದ್ದಲ್ಲ” ಎಂದು ಯೋಚಿಸಿದನು.
03296036a ಪಾಸ್ಯಾಮಿ ತಾವತ್ಪಾನೀಯಮಿತಿ ಪಾರ್ಥೋ ವೃಕೋದರಃ|
03296036c ತತೋಽಭ್ಯಧಾವತ್ಪಾನೀಯಂ ಪಿಪಾಸುಃ ಪುರುಷರ್ಷಭಃ||
ಆದರೆ “ಅದಕ್ಕೆ ಮೊದಲು ನೀರನ್ನು ಕುಡಿಯುತ್ತೇನೆ” ಎಂದು ಆ ಪುರುಷರ್ಷಭ ಪಾರ್ಥ ವೃಕೋದರನು ಬಾಯಾರಿಕೆಯಿಂದ ನೀರಿನ ಬಳಿ ಬಂದನು.
03296037 ಯಕ್ಷ ಉವಾಚ|
03296037a ಮಾ ತಾತ ಸಾಹಸಂ ಕಾರ್ಷೀರ್ಮಮ ಪೂರ್ವಪರಿಗ್ರಹಃ|
03296037c ಪ್ರಶ್ನಾನುಕ್ತ್ವಾ ತು ಕೌಂತೇಯ ತತಃ ಪಿಬ ಹರಸ್ವ ಚ||
ಯಕ್ಷನು ಹೇಳಿದನು: “ಮಗೂ! ಸಾಹಸವನ್ನು ಮಾಡಬೇಡ! ಇದು ನನ್ನ ಪೂರ್ವಪರಿಗ್ರಹ. ಕೌಂತೇಯ! ಪ್ರಶ್ನೆಗಳಿಗೆ ಉತ್ತರಿಸಿ ನಂತರ ನೀರನ್ನು ತೆಗೆದು ಕುಡಿ.””
03296038 ವೈಶಂಪಾಯನ ಉವಾಚ|
03296038a ಏವಮುಕ್ತಸ್ತತೋ ಭೀಮೋ ಯಕ್ಷೇಣಾಮಿತತೇಜಸಾ|
03296038c ಅವಿಜ್ಞಾಯೈವ ತಾನ್ಪ್ರಶ್ನಾನ್ಪೀತ್ವೈವ ನಿಪಪಾತ ಹ||
ವೈಶಂಪಾಯನನು ಹೇಳಿದನು: “ಯಕ್ಷನು ಹೀಗೆ ಹೇಳಲು ಅಮಿತತೇಜಸ್ವಿ ಭೀಮನು ಆ ಪ್ರಶ್ನೆಗಳನ್ನು ಕಡೆಗೆಣಿಸಿ ನೀರನ್ನು ಕುಡಿದು ನಂತರ ಬಿದ್ದನು.
03296039a ತತಃ ಕುಂತೀಸುತೋ ರಾಜಾ ವಿಚಿಂತ್ಯ ಪುರುಷರ್ಷಭಃ|
03296039c ಸಮುತ್ಥಾಯ ಮಹಾಬಾಹುರ್ದಹ್ಯಮಾನೇನ ಚೇತಸಾ||
ಆಗ ಕುಂತೀಸುತ ರಾಜ ಪುರುಷರ್ಷಭ ಮಹಾಬಾಹುವು ಚಿಂತಿಸಿ ಚೇತಸದಿಂದ ದಹಿಸುತ್ತಾ ಮೇಲೆದ್ದನು.
03296040a ಅಪೇತಜನನಿರ್ಘೋಷಂ ಪ್ರವಿವೇಶ ಮಹಾವನಂ|
03296040c ರುರುಭಿಶ್ಚ ವರಾಹೈಶ್ಚ ಪಕ್ಷಿಭಿಶ್ಚ ನಿಷೇವಿತಂ||
03296041a ನೀಲಭಾಸ್ವರವರ್ಣೈಶ್ಚ ಪಾದಪೈರುಪಶೋಭಿತಂ|
03296041c ಭ್ರಮರೈರುಪಗೀತಂ ಚ ಪಕ್ಷಿಭಿಶ್ಚ ಮಹಾಯಶಾಃ||
ಜನರ ಸುಳಿಯೂ ಸದ್ದೂ ಹೊರಟುಹೋಗಿದ್ದ, ರುರು, ವರಾಹ ಮತ್ತು ಪಕ್ಷಿಗಳು ವಾಸಿಸುತ್ತಿದ್ದ, ಕಪ್ಪಾಗಿ ಹೊಳೆಯುತ್ತಿದ್ದ ಮರಗಳಿಂದ ಉಪಶೋಭಿಸುತ್ತಿದ್ದ, ಭ್ರಮರಗಳ ಮತ್ತು ಮಹಾಯಶ ಪಕ್ಷಿಗಳ ಉಪಗೀತೆಗಳಿಂದ ಕೂಡಿದ್ದ ಆ ಮಹಾವನವನ್ನು ಪ್ರವೇಶಿಸಿದನು.
03296042a ಸ ಗಚ್ಚನ್ಕಾನನೇ ತಸ್ಮಿನ್ ಹೇಮಜಾಲಪರಿಷ್ಕೃತಂ|
03296042c ದದರ್ಶ ತತ್ಸರಃ ಶ್ರೀಮಾನ್ವಿಶ್ವಕರ್ಮಕೃತಂ ಯಥಾ||
ಆ ಕಾನನದಲ್ಲಿ ನಡೆದು ಹೇಮಜಾಲಗಳಿಂದ ಪರಿಷ್ಕೃತವಾದ, ಶ್ರೀಮಾನ್ ವಿಶ್ವಕರ್ಮನು ನಿರ್ಮಿಸಿದಂತಿರುವ ಆ ಸರೋವರವನ್ನು ನೋಡಿದನು.
03296043a ಉಪೇತಂ ನಲಿನೀಜಾಲೈಃ ಸಿಂಧುವಾರೈಶ್ಚ ವೇತಸೈಃ|
03296043c ಕೇತಕೈಃ ಕರವೀರೈಶ್ಚ ಪಿಪ್ಪಲೈಶ್ಚೈವ ಸಂವೃತಂ|
03296043e ಶ್ರಮಾರ್ತಸ್ತದುಪಾಗಮ್ಯ ಸರೋ ದೃಷ್ಟ್ವಾಥ ವಿಸ್ಮಿತಃ||
ಶ್ರಮಪಟ್ಟು ಹತ್ತಿರಬಂದು ಆ ನಲಿನೀ ಜಾಲಗಳಿಂದ, ಸಿಂಧುವಾರಗಳಿಂದ ಕೂಡಿದ್ದ, ಕೇತಕಿ, ಕರವೀರ, ಮತ್ತು ಪಿಪ್ಪಲ ವೃಕ್ಷಗಳಿಂದ ಸುತ್ತುವರೆಯಲ್ಪಟ್ಟ ಆ ಸರೋವರವನ್ನು ನೋಡಿ ವಿಸ್ಮಿತವಾದನು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಆರಣೇಯಪರ್ವಣಿ ನಕುಲಾದಿಪತನೇ ಷಣ್ಣಾವತ್ಯಧಿಕದ್ವಿಶತತಮೋಽಧ್ಯಾಯ😐
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಆರಣೇಯಪರ್ವದಲ್ಲಿ ನಕುಲಾದಿಪತನದಲ್ಲಿ ಇನ್ನೂರಾತೊಂಭತ್ತಾರನೆಯ ಅಧ್ಯಾಯವು.
