ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ
Contents
Toggle೧೯೦
ಮಂಡೂಕ-ವಾಮದೇವ
ಬ್ರಾಹ್ಮಣರ ಮಹಾಭಾಗ್ಯದ ಕುರಿತು ಹೇಳಬೇಕೆಂದು ಯುಧಿಷ್ಠಿರನು ಕೇಳಿಕೊಳ್ಳಲು ಮಾರ್ಕಂಡೇಯನು ವಾಮದೇವನ ಚರಿತ್ರೆಯನ್ನು ಪ್ರಾರಂಭಿಸಿದುದು (೧-೨). ಇಕ್ಷ್ವಾಕು ಕುಲದ ರಾಜ ಪರಿಕ್ಷಿತನು ಬೇಟೆಯಾಡಲು ಹೋದಾಗ ಓರ್ವ ಪರಮ ರೂಪವತಿ ನಾರಿಯನ್ನು ಕಂಡು, ತನಗೆ ಎಂದೂ ನೀರನ್ನು ತೋರಿಸಬಾರದು ಎಂಬ ಅವಳ ನಿಯಮಕ್ಕೆ ಒಪ್ಪಿಕೊಂಡು ಅವಳನ್ನು ವಿವಾಹವಾಗಿ ಅರಮನೆಗೆ ಕರೆತಂದು, ನೀರಿಲ್ಲದ ಉದ್ಯಾನವನದಲ್ಲಿರಿಸಿ ರಮಿಸಿದುದು (೩-೨೪). ಒಮ್ಮೆ ಬಾಯಾರಿ ನೀರಿಗಾಗಿ ಹುಡುಕಾಡುವಾಗ ಹೊಂಡವೊಂದನ್ನು ಕಂಡು ಅದರೊಳಗೆ ಪತ್ನಿಯೊಂದಿಗೆ ಇಳಿಯಲು ಪತ್ನಿಯು ಮೇಲೆ ಬರಲಿಲ್ಲ; ನೀರನ್ನು ಬರಿದು ಮಾಡಿದರೆ ಕಪ್ಪೆಯೊಂದು ಕಂಡಿದುದು; ಕಪ್ಪೆಯ ಮೇಲಿನ ಕ್ರೋಧದಿಂದ ರಾಜನು ಕಪ್ಪೆಗಳನ್ನು ಕೊಂದು ತಂದವರಿಗೆ ಬಹುಮಾನಗಳನ್ನು ಘೋಷಿಸುವುದು (೨೫-೩೦). ಘೋರ ಮಂಡೂಕವಧೆಯು ಎಲ್ಲೆಲ್ಲಿಯೂ ಪ್ರಾರಂಭವಾದುದು; ಮಂಡೂಕರಾಜನು ಪರಿಕ್ಷಿತನಲ್ಲಿ ಬೇಡಿಕೊಂಡಿದುದು; ಮಾಯವಾದವಳು ತನ್ನ ಮಗಳು ಸುಶೋಭನೆಯೇ ಎಂದು ಹೇಳಿ ಅವಳನ್ನು ರಾಜನಿಗೆ ಹಿಂದಿರುಗಿಸಿದುದು; ರಾಜರನ್ನು ಮೋಸಮಾಡಿದುದರಿಂದ ಅವಳಲ್ಲಿ ಹುಟ್ಟುವ ಮಕ್ಕಳು ಅಬ್ರಾಹ್ಮಣರಾಗುತ್ತಾರೆ ಎಂದು ಶಪಿಸುವುದು (೩೧-೪೨). ಪರಿಕ್ಷಿತನ ಮಗ ಶಲನು ತನ್ನ ಸೂತನಿಂದ ವಾಮ್ಯ ಕುದುರೆಗಳ ಕುರಿತು ಕೇಳಿ, ಅವುಗಳನ್ನು ಇಟ್ಟುಕೊಂಡಿದ್ದ ವಾಮದೇವನಿಂದ, ಕಾರ್ಯವಾದ ತಕ್ಷಣವೇ ತಂದು ಕೊಡಲು ಒಪ್ಪಿಕೊಂಡು, ತಪ್ಪಿಸಿಕೊಂಡ ಜಿಂಕೆಯನ್ನು ಹಿಡಿಯಲು ತೆಗೆದುಕೊಂಡು ಹೋಗುವುದು; ಆದರೆ ತಾನೇ ಇಟ್ಟುಕೊಳ್ಳುವುದು (೪೩-೫೪). ಕುದುರೆಗಳನ್ನು ಹಿಂದೆಪಡೆಯಲು ಹೋದ ವಾಮದೇವನಿಗೆ ಕೊಡದಿರಲು ಸಿಟ್ಟಿನಿಂದ ವಾಮದೇವನು ರಾಜ ಶಲನನ್ನು ರಾಕ್ಷಸರ ಮೂಲಕ ಸಂಹರಿಸಿದ್ದುದು; ಇಕ್ಷ್ವಾಕುಗಳು ಶಲನ ತಮ್ಮ ದಲನನ್ನು ಅಭಿಷೇಕಿಸಿದ್ದುದು (೫೫-೬೯). ವಾಮದೇವನು ದಲನಿಗೆ ಗರಹೊಡಿಸಿ, ಅವನ ಮಗನನ್ನು ಸಾಯಿಸಲು, ರಾಜಪತ್ನಿಯು ಕ್ಷಮೆ ಕೇಳಿದ್ದುದು; ವಾಮ್ಯಗಳನ್ನು ಪಡೆದು ವಾಮದೇವನು ಹಿಂದಿರುಗಿದುದು (೭೦-೮೨).
03190001 ವೈಶಂಪಾಯನ ಉವಾಚ|
03190001A ಭೂಯ ಏವ ಬ್ರಾಹ್ಮಣಮಹಾಭಾಗ್ಯಂ ವಕ್ತುಮರ್ಹಸೀತ್ಯಬ್ರವೀತ್ಪಾಂಡವೇಯೋ ಮಾರ್ಕಂಡೇಯಂ|
ವೈಶಂಪಾಯನನು ಹೇಳಿದನು: “ಮತ್ತೊಮ್ಮೆ ಪಾಂಡವನು ಮಾರ್ಕಂಡೇಯನಿಗೆ ಹೇಳಿದನು: “ದಯವಿಟ್ಟು ಬ್ರಾಹ್ಮಣರ ಮಹಾ ಭಾಗ್ಯದ ಕುರಿತು ಹೇಳಬೇಕು!”
03190002A ಅಥಾಚಷ್ಟ ಮಾರ್ಕಂಡೇಯಃ|
ಆಗ ಮಾರ್ಕಂಡೇಯುನು ಹೇಳಿದನು:
03190003A ಅಯೋಧ್ಯಾಯಾಮಿಕ್ಷ್ವಾಕುಕುಲೋತ್ಪನ್ನಃ ಪಾರ್ಥಿವಃ ಪರಿಕ್ಷಿನ್ನಾಮ ಮೃಗಯಾಮಗಮತ್|
“ಅಯೋಧ್ಯೆಯ ಇಕ್ಷ್ವಾಕುಕುಲೋತ್ಪನ್ನನಾದ ಪರಿಕ್ಷಿತ ಎಂಬ ಹೆಸರಿನ ರಾಜನು ಬೇಟೆಗೆ ಹೋದನು.
03190004A ತಮೇಕಾಶ್ವೇನ ಮೃಗಮನುಸರಂತಂ ಮೃಗೋ ದೂರಮಪಾಹರತ್|
ಅವನು ಒಂದು ಕುದುರೆಯ ಮೇಲೆ ಕುಳಿತು ಜಿಂಕೆಯೊಂದನ್ನು ಅರಸಲು ಜಿಂಕೆಯು ಅವನನ್ನು ಬಹುದೂರ ಕೊಂಡೊಯ್ಯಿತು.
03190005A ಅಥಾಧ್ವನಿ ಜಾತಶ್ರಮಃ ಕ್ಷುತ್ತೃಷ್ಣಾಭಿಭೂತಶ್ಚ ಕಸ್ಮಿಂಶ್ಚಿದುದ್ದೇಶೇ ನೀಲಂ ವನಷಂಡಮಪಶ್ಯತ್|
03190005B ತಚ್ಚ ವಿವೇಶ|
ಆಗ ದಾರಿಯಲ್ಲಿ ಅವನು ತುಂಬಾ ಆಯಾಸಗೊಂಡು ಹಸಿವು ಬಾಯಾರಿಕೆಗಳಿಂದ ಬಳಲಿ ಮರಗಳಿದ್ದ ಯಾವುದೋ ಒಂದು ದಟ್ಟ ಪ್ರದೇಶವನ್ನು ಕಂಡನು. ಅದನ್ನು ಪ್ರವೇಶಿಸಿದನು.
03190006A ತತಸ್ತಸ್ಯ ವನಷಂಡಸ್ಯ ಮಧ್ಯೇಽತೀವ ರಮಣೀಯಂ ಸರೋ ದೃಷ್ಟ್ವಾ ಸಾಶ್ವ ಏವ ವ್ಯಗಾಹತ|
ಆಗ ಆ ವನಕೂಟದ ಮಧ್ಯೆ ಅತೀವ ರಮಣೀಯವಾದ ಸರೋವರವನ್ನು ನೋಡಿ ಅವನು ಮತ್ತು ಕುದುರೆಗಳು ಅದರಲ್ಲಿ ಮುಳುಗಿದರು.
03190007A ಅಥಾಶ್ವಸ್ತಃ ಸ ಬಿಸಮೃಣಾಲಮಶ್ವಸ್ಯಾಗ್ರೇ ನಿಕ್ಷಿಪ್ಯ ಪುಷ್ಕರಿಣೀತೀರೇ ಸಮಾವಿಶತ್|
ಆಯಾಸ ಕಳೆದು ರಾಜನು ಕಮಲದ ದಂಟುಗಳನ್ನು ಕುದುರೆಯ ಮುಂದಿರಿಸಿ ಆ ಪುಷ್ಕರಿಣೀ ತೀರದಲ್ಲಿ ಸುತ್ತಾಡತೊಡಗಿದನು.
03190008A ತತಃ ಶಯಾನೋ ಮಧುರಂ ಗೀತಶಬ್ದಮಶೃಣೋತ್|
03190009A ಸ ಶ್ರುತ್ವಾಚಿಂತಯತ್|
03190009B ನೇಹ ಮನುಷ್ಯಗತಿಂ ಪಶ್ಯಾಮಿ|
03190009C ಕಸ್ಯ ಖಲ್ವಯಂ ಗೀತಶಬ್ಧ ಇತಿ|
ಅಲ್ಲಿ ಅವನು ಮಲಗಿಕೊಂಡನು ಮತ್ತು ಗೀತಶಬ್ಧವನ್ನು ಕೇಳಿದನು. ಅದನ್ನು ಕೇಳಿ ಯೋಚಿಸಿದನು: “ಇಲ್ಲಿ ಮನುಷ್ಯರ ಕುರುಹನ್ನು ಕಾಣುತ್ತಿಲ್ಲ. ಆದರೆ ಈ ಗೀತಶಬ್ಧವು ಎಲ್ಲಿಂದ?” ಎಂದು.
03190010A ಅಥಾಪಶ್ಯತ್ಕನ್ಯಾಂ ಪರಮರೂಪದರ್ಶನೀಯಾಂ ಪುಷ್ಪಾಣ್ಯವಚಿನ್ವತೀಂ ಗಾಯಂತೀಂ ಚ|
ಆಗ ಅವನು ನೋಡಲು ಪರಮ ರೂಪವತಿಯಾದ, ಪುಷ್ಪಗಳನ್ನು ಕೀಳುತ್ತಾ ಹಾಡುತ್ತಿರುವವಳನ್ನು ಕಂಡನು.
03190011A ಅಥ ಸಾ ರಾಜ್ಞಃ ಸಮೀಪೇ ಪರ್ಯಕ್ರಾಮತ್|
ಆಗ ಅವಳು ರಾಜನ ಸಮೀಪಕ್ಕೆ ಮುಂದುವರೆದು ಬಂದಳು.
03190012A ತಾಮಬ್ರವೀದ್ರಾಜಾ|
03190012B ಕಸ್ಯಾಸಿ ಸುಭಗೇ ತ್ವಮಿತಿ|
ರಾಜನು ಅವಳಿಗೆ “ಸುಭಗೇ! ನೀನು ಯಾರವಳು?” ಎಂದು ಕೇಳಿದನು.
03190013A ಸಾ ಪ್ರತ್ಯುವಾಚ|
03190013B ಕನ್ಯಾಸ್ಮೀತಿ|
“ನಾನು ಕನ್ಯೆ” ಎಂದು ಅವಳು ಉತ್ತರಿಸಿದಳು.
03190014A ತಾಂ ರಾಜೋವಾಚ|
03190014B ಅರ್ಥೀ ತ್ವಯಾಹಮಿತಿ|
ಅವಳಿಗೆ ರಾಜನು “ನಿನ್ನನ್ನು ಬಯಸುತ್ತೇನೆ” ಎಂದು ಹೇಳಿದನು.
03190015A ಅಥೋವಾಚ ಕನ್ಯಾ|
03190015B ಸಮಯೇನಾಹಂ ಶಕ್ಯಾ ತ್ವಯಾ ಲಬ್ಧುಂ|
03190015C ನಾನ್ಯಥೇತಿ|
ಆಗ ಕನ್ಯೆಯು “ಒಂದು ಶರತ್ತಿನಂತೆ ಮಾತ್ರ ನೀನು ನನ್ನನ್ನು ಪಡೆಯಬಲ್ಲೆ. ಅನ್ಯಥಾ ಅಲ್ಲ” ಎಂದು ಹೇಳಿದಳು.
03190016A ತಾಂ ರಾಜಾ ಸಮಯಮಪೃಚ್ಚತ್|
03190017A ತತಃ ಕನ್ಯೇದಮುವಾಚ|
03190017B ಉದಕಂ ಮೇ ನ ದರ್ಶಯಿತವ್ಯಮಿತಿ|
ಶರತ್ತೇನೆಂದು ರಾಜನು ಕೇಳಲು ಕನ್ಯೆಯು “ನನಗೆ ಎಂದೂ ನೀರನ್ನು ತೋರಿಸಬಾರದು!” ಎಂದು ಹೇಳಿದಳು.
03190018A ಸ ರಾಜಾ ಬಾಢಮಿತ್ಯುಕ್ತ್ವಾ ತಾಂ ಸಮಾಗಮ್ಯ ತಯಾಸಹಾಸ್ತೇ|
“ಎಂದೂ ಇಲ್ಲ” ಎಂದು ಹೇಳಿ ರಾಜನು ಅವಳನ್ನು ಸೇರಿ ಬಳಿಯಲ್ಲಿ ಕುಳಿತುಕೊಂಡನು.
03190019A ತತ್ರೈವಾಸೀನೇ ರಾಜನಿ ಸೇನಾನ್ವಗಚ್ಚತ್|
03190019B ಪದೇನಾನುಪದಂ ದೃಷ್ಟ್ವಾ ರಾಜಾನಂ ಪರಿವಾರ್ಯಾತಿಷ್ಠತ್|
ರಾಜನು ಕುಳಿತಲ್ಲಿಗೆ, ಅವನ ಹೆಜ್ಜೆಯ ಗುರುತುಗಳನ್ನೇ ನೋಡಿಕೊಳ್ಳುತ್ತಾ ಅವನ ಸೇನೆಯು ಅಲ್ಲಿಗೆ ಬಂದು ಅವನನ್ನು ಸುತ್ತುವರೆದು ನಿಂತಿತು.
03190020A ಪರ್ಯಾಶ್ವಸ್ತಶ್ಚ ರಾಜಾ ತಯೈವ ಸಹ ಶಿಬಿಕಯಾ
ಪ್ರಾಯಾದವಿಘಾಟಿತಯಾ|
03190020B ಸ್ವನಗರಮನುಪ್ರಾಪ್ಯ ರಹಸಿ ತಯಾ ಸಹ ರಮನ್ನಾಸ್ತೇ|
03190020C ನಾನ್ಯತ್ಕಿಂ ಚನಾಪಶ್ಯತ್|
ಸ್ವಲ್ಪ ವಿಶ್ರಮಿಸಿ ರಾಜನು ಅವಳನ್ನು ಒಂದು ಶಿಬಿಕೆಯಲ್ಲಿರಿಸಿಕೊಂಡು ಹೊರಟನು. ತನ್ನ ನಗರವನ್ನು ತಲುಪಿ ಅವಳೊಂದಿಗೆ ರಹಸ್ಯದಲ್ಲಿ, ಬೇರೆ ಏನನ್ನೂ ನೋಡದೇ ರಮಿಸುತ್ತಿದ್ದನು.
03190021A ಅಥ ಪ್ರಧಾನಾಮಾತ್ಯಸ್ತಸ್ಯಾಭ್ಯಾಶಚರಾಃ ಸ್ತ್ರಿಯೋಽಪೃಚ್ಚತ್|
03190021B ಕಿಮತ್ರ ಪ್ರಯೋಜನಂ ವರ್ತತ ಇತಿ|
ಆಗ ಪ್ರಧಾನ ಮಂತ್ರಿಯು ರಾಜನ ಪರಿಚಾರಕ ಸ್ತ್ರೀಯರೊಡನೆ ಪ್ರಶ್ನಿಸಿದನು - ಇದರ ಪ್ರಯೋಜನವೇನು? – ಎಂದು.
03190022A ಅಥಾಬ್ರುವಂಸ್ತಾಃ ಸ್ತ್ರಿಯಃ|
03190022B ಅಪೂರ್ವಮಿವ ಪಶ್ಯಾಮ ಉದಕಂ ನಾತ್ರ ನೀಯತೇತಿ|
ಆಗ ಸ್ತ್ರೀಯರು ಹೇಳಿದರು: “ನಾವು ಒಂದು ವಿಶೇಷವನ್ನು ನೋಡಿದೆವು. ಇಲ್ಲಿಗೆ ನೀರನ್ನು ಮಾತ್ರ ತರುವಂತಿಲ್ಲ!” ಎಂದು.
03190023A ಅಥಾಮಾತ್ಯೋಽನುದಕಂ ವನಂ ಕಾರಯಿತ್ವೋದಾರವೃಕ್ಷಂ
ಬಹುಮೂಲಪುಷ್ಪಫಲಂ ರಹಸ್ಯುಪಗಮ್ಯ ರಾಜಾನಮಬ್ರವೀತ್|
03190023B ವನಮಿದಮುದಾರಮನುದಕಂ|
03190023C ಸಾಧ್ವತ್ರ ರಮ್ಯತಾಮಿತಿ|
ಅದರಂತೆ ಅಮಾತ್ಯನು ನೀರಿಲ್ಲದ, ಬೇಕಾದಷ್ಟು ಮರಗಳುಳ್ಳ, ಬಹಳಷ್ಟು ಗೆಡ್ಡೆ, ಪುಷ್ಪ, ಫಲಗಳನ್ನುಳ್ಳ ಒಂದು ವನವನ್ನು ಮಾಡಿಸಿ, ರಹಸ್ಯದಲ್ಲಿ ರಾಜನಲ್ಲಿಗೆ ಬಂದು ಹೇಳಿದನು: “ಈ ಉದಾರ ವನವು ನೀರಿಲ್ಲದುದು. ಇಲ್ಲಿ ನೀನು ಚೆನ್ನಾಗಿ ರಮಿಸಬಹುದು.”
03190024A ಸ ತಸ್ಯ ವಚನಾತ್ತಯೈವ ಸಹ ದೇವ್ಯಾ ತದ್ವನಂ ಪ್ರಾವಿಶತ್|
03190024B ಸ ಕದಾ ಚಿತ್ತಸ್ಮಿನ್ವನೇ ರಮ್ಯೇ ತಯೈವ ಸಹ ವ್ಯವಹರತ್|
03190024C ಅಥ ಕ್ಷುತ್ತೃಷ್ಣಾರ್ದಿತಃ
ಶ್ರಾಂತೋಽತಿಮಾತ್ರಮತಿಮುಕ್ತಾಗಾರಮಪಶ್ಯತ್|
ಅವನ ವಚನದಂತೆ ಅವನು ದೇವಿಯ ಸಹಿತ ಆ ವನವನ್ನು ಪ್ರವೇಶಿಸಿದನು. ಒಂದು ದಿನ ಅವನು ಅವಳೊಡನೆ ಆ ವನದಲ್ಲಿ ವಿಹರಿಸುತ್ತಿದ್ದನು. ಆಗ ಅವನು ಹಸಿವು ಬಾಯಾರಿಕೆಗಳಿಂದ ಬಳಲಿರಲು ಒಂದು ಅತಿಮುಕ್ತಗಳ ವನವನ್ನು ಕಂಡನು.
03190025A ತತ್ಪ್ರವಿಶ್ಯ ರಾಜಾ ಸಹ ಪ್ರಿಯಯಾ ಸುಧಾತಲಸುಕೃತಾಂ
ವಿಮಲಸಲಿಲಪೂರ್ಣಾಂ ವಾಪೀಮಪಶ್ಯತ್|
ರಾಜನು ಪ್ರಿಯೆಯೊಂದಿಗೆ ಅದನ್ನು ಪ್ರವೇಶಿಸಿ, ಶುದ್ಧವಾದ ನೀರಿನಿಂದ ತುಂಬಿದ ಆದರೆ ಸುಧಾತಲದಿಂದ ಮುಚ್ಚಲ್ಪಟ್ಟ ಹೊಂಡವೊಂದನ್ನು ನೋಡಿದನು.
03190026A ದೃಷ್ಟ್ವೈವ ಚ ತಾಂ ತಸ್ಯಾ ಏವ ತೀರೇ ಸಹೈವ ತಯಾ ದೇವ್ಯಾ ವ್ಯತಿಷ್ಠತ್|
ಅದನ್ನು ನೋಡಿದೊಡನೆಯೇ ತನ್ನ ದೇವಿಯೊಡನೇ ಆ ಹೊಂಡವನ್ನು ಪ್ರವೇಶಿಸಿದನು.
03190027A ಅಥ ತಾಂ ದೇವೀಂ ಸ ರಾಜಾಬ್ರವೀತ್|
03190027B ಸಾಧ್ವವತರ ವಾಪೀಸಲಿಲಮಿತಿ|
ರಾಜನು ದೇವಿಗೆ “ಬಾ! ನೀರಿರುವ ಈ ಹೊಂಡದಲ್ಲಿ ಇಳಿ” ಎಂದು ಕರೆದನು.
03190028A ಸಾ ತದ್ವಚಃ ಶ್ರುತ್ವಾವತೀರ್ಯ ವಾಪೀಂ ನ್ಯಮಜ್ಜತ್|
03190028B ನ ಪುನರುದಮಜ್ಜತ್|
ಅವಳು ಆ ಮಾತನ್ನು ಕೇಳಿ ನೀರಿಗಿಳಿದಳು. ಆದರೆ ಪುನಃ ಮೇಲೆ ಬರಲಿಲ್ಲ.
03190029A ತಾಂ ಮೃಗಯಮಾಣೋ ರಾಜಾ ನಾಪಶ್ಯತ್|
ರಾಜನು ಹುಡುಕಾಡಿದನು; ಆದರೆ ಅವಳನ್ನು ಕಾಣಲಿಲ್ಲ.
03190030A ವಾಪೀಮಪಿ ನಿಃಸ್ರಾವ್ಯ ಮಂಡೂಕಂ ಶ್ವಭ್ರಮುಖೇ ದೃಷ್ಟ್ವಾ ಕ್ರುದ್ಧ ಆಜ್ಞಾಪಯಾಮಾಸ|
03190030B ಸರ್ವಮಂಡೂಕವಧಃ ಕ್ರಿಯತಾಮಿತಿ|
03190030C ಯೋ ಮಯಾರ್ಥೀ ಸ
ಮೃತಕೈರ್ಮಂಡೂಕೈರುಪಾಯನೈರ್ಮಾಮುಪತಿಷ್ಠೇದಿತಿ|
ಅವನು ಆ ಹೊಂಡವನ್ನು ಬರಿದುಮಾಡಿಸಿದನು ಮತ್ತು ನೀರಿನ ಚಿಲುಮೆಯ ಬಾಯಿಯಲ್ಲಿ ಒಂದು ಕಪ್ಪೆಯನ್ನು ಕಂಡನು. ಅವನು ಕ್ರುದ್ಧನಾಗಿ ಆಜ್ಞಾಪಿಸಿದನು: “ಎಲ್ಲ ಕಪ್ಪೆಗಳನ್ನೂ ಕೊಲ್ಲಿ! ನನ್ನಿಂದ ಏನನ್ನಾದರೂ ಬಯಸುವವರು ಸತ್ತ ಕಪ್ಪೆಗಳನ್ನು ನನಗೆ ಕಾಣಿಕೆಯಾಗಿ ತರಬೇಕು.”
03190031A ಅಥ ಮಂಡೂಕವಧೇ ಘೋರೇ ಕ್ರಿಯಮಾಣೇ ದಿಕ್ಷು ಸರ್ವಾಸು ಮಂಡೂಕಾನ್ಭಯಮಾವಿಶತ್|
03190031B ತೇ ಭೀತಾ ಮಂಡೂಕರಾಜ್ಞೇ ಯಥಾವೃತ್ತಂ ನ್ಯವೇದಯನ್|
ಆಗ ಘೋರವಾದ ಮಂಡೂಕವಧ ಕ್ರಿಯೆಯು ದಿಕ್ಕುಗಳಲ್ಲಿ ನಡೆಯಲು ಎಲ್ಲ ಮಂಡೂಕಗಳಿಗೂ ಭಯವು ಆವರಿಸಿತು. ಅವುಗಳು ಮಂಡೂಕರಾಜನಲ್ಲಿಗೆ ಹೋಗಿ ನಡೆದುದನ್ನು ನಿವೇದಿಸಿದವು.
03190032A ತತೋ ಮಂಡೂಕರಾಟ್ತಾಪಸವೇಷಧಾರೀ ರಾಜಾನಮಭ್ಯಗಚ್ಚತ್|
03190033A ಉಪೇತ್ಯ ಚೈನಮುವಾಚ|
03190033B ಮಾ ರಾಜನ್ಕ್ರೋಧವಶಂ ಗಮಃ|
03190033C ಪ್ರಸಾದಂ ಕುರು|
03190033d ನಾರ್ಹಸಿ ಮಂಡೂಕಾನಾಮನಪರಾಧಿನಾಂ ವಧಂ ಕರ್ತುಮಿತಿ|
ಆಗ ಮಂಡೂಕಗಳ ರಾಜನು ತಾಪಸನ ವೇಷವನ್ನು ಧರಿಸಿ ರಾಜನಲ್ಲಿಗೆ ಆಗಮಿಸಿದನು. ಬಳಿಬಂದು ಹೇಳಿದನು: “ರಾಜನ್! ಕ್ರೋಧವಶನಾಗಬೇಡ. ಕರುಣೆ ನೀಡು. ಅನಪರಾಧಿಗಳಾದ ಮಂಡೂಕಗಳನ್ನು ಕೊಲ್ಲುವ ಕೆಲಸವು ಸಲ್ಲದು.”
03190034A ಶ್ಲೋಕೌ ಚಾತ್ರ ಭವತಃ|
03190034a ಮಾ ಮಂಡೂಕಾಂ ಜಿಘಾಂಸ ತ್ವಂ ಕೋಪಂ ಸಂಧಾರಯಾಚ್ಯುತ|
03190034c ಪ್ರಕ್ಷೀಯತೇ ಧನೋದ್ರೇಕೋ ಜನಾನಾಮವಿಜಾನತಾಂ||
ಇದರ ಕುರಿತು ಎರಡು ಶ್ಲೋಕಗಳಿವೆ: ಅಚ್ಯುತ! ಮಂಡೂಕಗಳನ್ನು ಕೊಲ್ಲಬೇಡ! ಕೋಪವನ್ನು ಸಹಿಸಿಕೋ! ಅಜ್ಞಾನಿಗಳಾಗಿಯೇ ಇರುವ ಜನರ ಧನವು ಕ್ಷೀಣವಾಗುತ್ತದೆ.
03190035a ಪ್ರತಿಜಾನೀಹಿ ನೈತಾಂಸ್ತ್ವಂ ಪ್ರಾಪ್ಯ ಕ್ರೋಧಂ ವಿಮೋಕ್ಷ್ಯಸೇ|
03190035c ಅಲಂ ಕೃತ್ವಾ ತವಾಧರ್ಮಂ ಮಂಡೂಕೈಃ ಕಿಂ ಹತೈರ್ಹಿ ತೇ||
ಅವರನ್ನು ನೋಡಿದಾಗಲೆಲ್ಲ ನೀನು ಅವರಮೇಲಿನ ನಿನ್ನ ಕ್ರೋಧವನ್ನು ತೊರೆಯುತ್ತೀಯೆ ಎಂದು ಭರವಸೆಯನ್ನು ನೀಡು. ಶುರುಮಾಡಿದ ಅಧರ್ಮವನ್ನು ನಿಲ್ಲಿಸು! ಸತ್ತ ಮಂಡೂಕಗಳಿಂದ ನಿನಗೇನು ಪ್ರಯೋಜನ?”
03190036A ತಮೇವಂವಾದಿನಮಿಷ್ಟಜನಶೋಕಪರೀತಾತ್ಮಾ ರಾಜಾ ಪ್ರೋವಾಚ|
03190036B ನ ಹಿ ಕ್ಷಮ್ಯತೇ ತನ್ಮಯಾ|
03190036C ಹನಿಷ್ಯಾಮ್ಯೇತಾನ್|
03190036d ಏತೈರ್ದುರಾತ್ಮಭಿಃ ಪ್ರಿಯಾ ಮೇ ಭಕ್ಷಿತಾ|
03190036e ಸರ್ವಥೈವ ಮೇ ವಧ್ಯಾ ಮಂಡೂಕಾಃ|
03190036F ನಾರ್ಹಸಿ ವಿದ್ವನ್ಮಾಮುಪರೋದ್ಧುಮಿತಿ|
ತನ್ನ ಪ್ರಿಯೆಯ ಕುರಿತು ಶೋಕಪರೀತಾತ್ಮನಾಗಿದ್ದ ರಾಜನು ಅವನಿಗೆ ಹೇಳಿದನು: “ನಾನು ಇದನ್ನು ಕ್ಷಮಿಸಲಾರೆ! ಅವರನ್ನು ಕೊಲ್ಲುತ್ತೇನೆ. ಈ ದುರಾತ್ಮರೇ ನನ್ನ ಪ್ರಿಯೆಯನ್ನು ತಿಂದಿದ್ದಾರೆ. ಮಂಡೂಕಗಳು ಸರ್ವಥಾ ನನ್ನಿಂದ ವಧಿಸಲ್ಪಡುತ್ತವೆ. ವಿದ್ವನ್! ಇದರ ಕುರಿತು ನನ್ನನ್ನು ತಡೆಯುವುದು ಸರಿಯಲ್ಲ.”
03190037A ಸ ತದ್ವಾಕ್ಯಮುಪಲಭ್ಯ ವ್ಯಥಿತೇಂದ್ರಿಯಮನಾಃ ಪ್ರೋವಾಚ|
03190037B ಪ್ರಸೀದ ರಾಜನ್|
03190037C ಅಹಮಾಯುರ್ನಾಮ ಮಂಡೂಕರಾಜಃ|
03190037d ಮಮ ಸಾ ದುಹಿತಾ ಸುಶೋಭನಾ ನಾಮ|
03190037e ತಸ್ಯಾ ದೌಃಶೀಲ್ಯಮೇತತ್|
03190037F ಬಹವೋ ಹಿ ರಾಜಾನಸ್ತಯಾ ವಿಪ್ರಲಬ್ಧಪೂರ್ವಾ ಇತಿ|
ಆ ವಾಕ್ಯಗಳನ್ನು ಕೇಳಿದ ಅವನು ವ್ಯಥಿತೇಂದ್ರಿಯನಾಗಿ ಉತ್ತರಿಸಿದನು: “ಕರುಣೆ ತೋರು ರಾಜನ್! ನಾನು ಆಯು ಎಂಬ ಹೆಸರಿನ ಮಂಡೂಕರಾಜ. ನನ್ನ ಮಗಳು ಸುಶೋಭನ ಎಂಬ ಹೆಸರಿನವಳೇ ಅವಳು. ಅವಳಿಗೆ ಈ ದುಷ್ಟ ನಡವಳಿಕೆಯಿದೆ. ಈ ಹಿಂದೆಯೂ ಕೂಡ ಬಹಳ ರಾಜರನ್ನು ಈ ರೀತಿ ಮೋಸಮಾಡಿದ್ದಾಳೆ.”
03190038A ತಮಬ್ರವೀದ್ರಾಜಾ|
03190038B ತಯಾಸ್ಮ್ಯರ್ಥೀ|
03190038C ಸಾ ಮೇ ದೀಯತಾಮಿತಿ|
ಆಗ ರಾಜನು ಹೇಳಿದನು: “ನನಗೆ ಅವಳು ಬೇಕು. ಅವಳನ್ನು ನನಗೆ ಕೊಡು!”
03190039A ಅಥೈನಾಂ ರಾಜ್ಞೇ ಪಿತಾದಾತ್|
03190039B ಅಬ್ರವೀಚ್ಚೈನಾಂ|
03190039C ಏನಂ ರಾಜಾನಂ ಶುಶ್ರೂಷಸ್ವೇತಿ|
ಆಗ ತಂದೆಯು ಅವಳನ್ನು ರಾಜನಿಗೆ ಕೊಟ್ಟು “ಈ ರಾಜನ ಶುಶ್ರೂಷೆಮಾಡು” ಎಂದು ಹೇಳಿದನು.
03190040A ಸ ಉವಾಚ ದುಹಿತರಂ|
03190040B ಯಸ್ಮಾತ್ತ್ವಯಾ ರಾಜಾನೋ ವಿಪ್ರಲಬ್ಧಾಸ್ತಸ್ಮಾದಬ್ರಹ್ಮಣ್ಯಾನಿ
ತವಾಪತ್ಯಾನಿ ಭವಿಷ್ಯಂತ್ಯನೃತಕತ್ವಾತ್ತವೇತಿ|
ಅವನು ತನ್ನ ಮಗಳಿಗೆ ಹೇಳಿದನು: “ನೀನು ರಾಜರನ್ನು ಮೋಸಗೊಳಿಸಿರುವುದರಿಂದ, ನಿನ್ನ ಈ ದುಷ್ಕೃತದಿಂದ ನಿನ್ನಲ್ಲಿ ಹುಟ್ಟುವ ಮಕ್ಕಳು ಅಬ್ರಾಹ್ಮಣರಾಗುತ್ತಾರೆ.”
03190041A ಸ ಚ ರಾಜಾ ತಾಮುಪಲಭ್ಯ ತಸ್ಯಾಂ ಸುರತಗುಣನಿಬದ್ಧಹೃದಯೋ
ಲೋಕತ್ರಯೈಶ್ವರ್ಯಮಿವೋಪಲಭ್ಯ ಹರ್ಷಬಾಷ್ಪಕಲಯಾ ವಾಚಾ ಪ್ರಣಿಪತ್ಯಾಭಿಪೂಜ್ಯ ಮಂಡೂಕರಾಜಾನಮಬ್ರವೀತ್|
03190041B ಅನುಗೃಹೀತೋಽಸ್ಮೀತಿ|
ಆ ರಾಜನು ಅವಳನ್ನು ಪಡೆದು ಅವಳೊಡನೆ ಸುರತಗುಣನಿಬದ್ಧ ಹೃದಯನಾಗಿ, ಲೋಕತ್ರಯಗಳ ಐಶ್ವರ್ಯವನ್ನೇ ಪಡೆದಷ್ಟು ಹರ್ಷಿತನಾಗಿ, ಗದ್ಗದ ಕಂಠನಾಗಿ, ಕೈಮುಗಿದು, ಪೂಜಿಸಿ, ಮಂಡೂಕರಾಜನಿಗೆ “ಅನುಗೃಹೀತನಾಗಿದ್ದೇನೆ” ಎಂದು ಹೇಳಿದನು.
03190042A ಸ ಚ ಮಂಡೂಕರಾಜೋ ಜಾಮಾತರಮನುಜ್ಞಾಪ್ಯ ಯಥಾಗತಮಗಚ್ಚತ್|
ಮಂಡೂಕರಾಜನು ತನ್ನ ಅಳಿಯನನ್ನು ಬೀಳ್ಕೊಂಡು ಎಲ್ಲಿಂದ ಬಂದಿದ್ದನೋ ಅಲ್ಲಿಗೆ ತೆರಳಿದನು.
03190043A ಅಥ ಕಸ್ಯ ಚಿತ್ಕಾಲಸ್ಯ ತಸ್ಯಾಂ ಕುಮಾರಾಸ್ತ್ರಯಸ್ತಸ್ಯ ರಾಜ್ಞಃ
ಸಂಬಭೂವುಃ ಶಲೋ ದಲೋ ಬಲಶ್ಚೇತಿ|
03190043B ತತಸ್ತೇಷಾಂ ಜ್ಯೇಷ್ಠಂ ಶಲಂ ಸಮಯೇ ಪಿತಾ ರಾಜ್ಯೇಽಭಿಷಿಚ್ಯ ತಪಸಿ ಧೃತಾತ್ಮಾ ವನಂ ಜಗಾಮ|
ಆಗ ಕೆಲವು ಕಾಲದಲ್ಲಿ ಅವಳಲ್ಲಿ ರಾಜನಿಗೆ ಮೂವರು ಕುಮಾರರು ಜನಿಸಿದರು - ಶಲ, ದಲ ಮತ್ತು ಬಲರೆಂದು. ಅವರಲ್ಲಿ ಹಿರಿಯವನಾದ ಶಲನಿಗೆ ಸಮಯದಲ್ಲಿ ರಾಜ್ಯಾಬಿಷೇಕವನ್ನು ಮಾಡಿ ತಂದೆಯು ಧೃತಾತ್ಮನಾಗಿ ವನಕ್ಕೆ ತೆರಳಿದನು.
03190044A ಅಥ ಕದಾ ಚಿಚ್ಛಲೋ ಮೃಗಯಾಮಚರತ್|
03190044B ಮೃಗಂ ಚಾಸಾದ್ಯ ರಥೇನಾನ್ವಧಾವತ್|
ಈ ಶಾಲನು ಒಮ್ಮೆ ಬೇಟೆಗೆಂದು ಹೋದನು. ಜಿಂಕೆಯೊಂದನ್ನು ಕಂಡು ಅದನ್ನು ರಥದ ಮೇಲೆ ಕುಳಿತು ಬೆನ್ನತ್ತಿದನು.
03190045A ಸೂತಂ ಚೋವಾಚ|
03190045B ಶೀಘ್ರಂ ಮಾಂ ವಹಸ್ವೇತಿ|
ಅವನು ಸೂತನಿಗೆ ಶೀಘ್ರವಾಗಿ ನನ್ನನ್ನು ತೆಗೆದುಕೊಂಡು ಹೋಗು ಎಂದು ಹೇಳಿದನು.
03190046A ಸ ತಥೋಕ್ತಃ ಸೂತೋ ರಾಜಾನಮಬ್ರವೀತ್|
03190046B ಮಾ ಕ್ರಿಯತಾಮನುಬಂಧಃ|
03190046C ನೈಷ ಶಕ್ಯಸ್ತ್ವಯಾ ಮೃಗೋ ಗ್ರಹೀತುಂ ಯದ್ಯಪಿ ತೇ ರಥೇ ಯುಕ್ತೌ ವಾಮ್ಯೌ ಸ್ಯಾತಾಮಿತಿ|
ಹೀಗೆ ಹೇಳಲು ಸೂತನು ರಾಜನಿಗೆ ಹೇಳಿದನು: “ಒತ್ತಾಯವನ್ನು ಮಾಡಬೇಡ! ನಿನ್ನ ರಥಕ್ಕೆ ವಾಮ್ಯ ಕುದುರೆಗಳನ್ನು ಕಟ್ಟಿದ್ದರೂ ಈ ಜಿಂಕೆಯನ್ನು ಹಿಡಿಯಲು ನಿನ್ನಿಂದ ಆಗುವುದಿಲ್ಲ.”
03190047A ತತೋಽಬ್ರವೀದ್ರಾಜಾ ಸೂತಂ|
03190047B ಆಚಕ್ಷ್ವ ಮೇ ವಾಮ್ಯೌ|
03190047C ಹನ್ಮಿ ವಾ ತ್ವಾಮಿತಿ|
ಆಗ ರಾಜನು ಸೂತನಿಗೆ ಹೇಳಿದನು: “ನನಗೆ ವಾಮ್ಯಗಳ ಕುರಿತು ಹೇಳು. ಇಲ್ಲವಾದರೆ ನಾನು ನಿನ್ನನ್ನು ಕೊಲ್ಲುತ್ತೇನೆ!”
03190048A ಸ ಏವಮುಕ್ತೋ ರಾಜಭಯಭೀತೋ ವಾಮದೇವಶಾಪಭೀತಶ್ಚ ಸನ್ನಾಚಖ್ಯೌ ರಾಜ್ಞೇ|
03190048B ವಾಮದೇವಸ್ಯಾಶ್ವೌ ವಾಮ್ಯೌ ಮನೋಜವಾವಿತಿ|
ಹೀಗೆ ಹೇಳಲು ರಾಜಭಯದಿಂದ ಮತ್ತು ವಾಮದೇವನ ಶಾಪದ ಭಯದಿಂದಲೂ ಅವನು ರಾಜನಿಗೆ “ವಾಮದೇವನ ಕುದುರೆಗಳು ಮನೋವೇಗದ ವಾಮ್ಯಗಳು” ಎಂದು ಹೇಳಿದನು.
03190049A ಅಥೈನಮೇವಂ ಬ್ರುವಾಣಮಬ್ರವೀದ್ರಾಜಾ|
03190049B ವಾಮದೇವಾಶ್ರಮಂ ಯಾಹೀತಿ|
ಆಗ ರಾಜನು ಅವನಿಗೆ ಹೇಳಿದನು: “ವಾಮದೇವನ ಆಶ್ರಮಕ್ಕೆ ಕರೆದೊಯ್ಯಿ!”
03190050A ಸ ಗತ್ವಾ ವಾಮದೇವಾಶ್ರಮಂ ತಮೃಷಿಮಬ್ರವೀತ್|
03190050B ಭಗವನ್ಮೃಗೋ ಮಯಾ ವಿದ್ಧಃ ಪಲಾಯತೇ|
03190050C ತಂ ಸಂಭಾವಯೇಯಂ|
03190050d ಅರ್ಹಸಿ ಮೇ ವಾಮ್ಯೌ ದಾತುಮಿತಿ|
ವಾಮದೇವನ ಆಶ್ರಮಕ್ಕೆ ಹೋಗಿ ಅವನು ಋಷಿಗೆ ಹೇಳಿದನು: “ಭಗವನ್! ನಾನು ಹೊಡೆದ ಜಿಂಕೆಯೊಂದು ಓಡಿಹೋಯಿತು. ನಾನು ಅದನ್ನು ಪಡೆಯಬೇಕು. ದಯವಿಟ್ಟು ನನಗೆ ವಾಮ್ಯಗಳನ್ನು ಕೊಡಬೇಕು.”
03190051A ತಮಬ್ರವೀದೃಷಿಃ|
03190051B ದದಾನಿ ತೇ ವಾಮ್ಯೌ|
03190051C ಕೃತಕಾರ್ಯೇಣ ಭವತಾ ಮಮೈವ ನಿರ್ಯಾತ್ಯೌ ಕ್ಷಿಪ್ರಮಿತಿ|
ಅವನಿಗೆ ಋಷಿಯು ಹೇಳಿದನು: “ನಿನಗೆ ವಾಮ್ಯಗಳನ್ನು ಕೊಡುತ್ತೇನೆ. ನಿನ್ನ ಕಾರ್ಯವಾದ ತಕ್ಷಣವೇ ನನಗೆ ಅವುಗಳನ್ನು ಹಿಂದಿರುಗಿಸು.”
03190052A ಸ ಚ ತಾವಶ್ವೌ ಪ್ರತಿಗೃಃಯಾನುಜ್ಞಾಪ್ಯ ಚರ್ಷಿಂ
ಪ್ರಾಯಾದ್ವಾಮ್ಯಸಮ್ಯುಕ್ತೇನ ರಥೇನ ಮೃಗಂ ಪ್ರತಿ|
03190052C ಗಚ್ಚಂಶ್ಚಾಬ್ರವೀತ್ಸೂತಂ|
03190052d ಅಶ್ವರತ್ನಾವಿಮಾವಯೋಗ್ಯೌ ಬ್ರಾಹ್ಮಣಾನಾಂ|
03190052e ನೈತೌ ಪ್ರತಿದೇಯೌ ವಾಮದೇವಾಯೇತಿ|
ಅವನು ಎರಡೂ ಕುದುರೆಗಳನ್ನೂ ತೆಗೆದುಕೊಂಡು, ಋಷಿಯನ್ನು ಬೀಳ್ಕೊಂಡು, ವ್ಯಾಮ್ಯಗಳನ್ನು ಕಟ್ಟಿದ ತನ್ನ ರಥದ ಮೇಲೆ ಮೃಗವನ್ನು ಹಿಂಬಾಲಿಸಿ ಹೋದನು. ಹೋಗುತ್ತಿರುವಾಗ ತನ್ನ ಸಾರಥಿಗೆ ಹೇಳಿದನು: “ಈ ಕುದುರೆಗಳು ರತ್ನಗಳು! ಇವು ಬ್ರಾಹ್ಮಣನಿಗೆ ಅಯೋಗ್ಯವು. ನಾನು ಇವುಗಳನ್ನು ವಾಮದೇವನಿಗೆ ಹಿಂದಿರುಗಿಸುವುದಿಲ್ಲ.”
03190053A ಏವಮುಕ್ತ್ವಾ ಮೃಗಮವಾಪ್ಯ
ಸ್ವನಗರಮೇತ್ಯಾಶ್ವಾವಂತಃಪುರೇಽಸ್ಥಾಪಯತ್|
03190054A ಅಥರ್ಷಿಶ್ಚಿಂತಯಾಮಾಸ|
03190054B ತರುಣೋ ರಾಜಪುತ್ರಃ ಕಲ್ಯಾಣಂ ಪತ್ರಮಾಸಾದ್ಯ ರಮತೇ|
03190054C ನ ಮೇ ಪ್ರತಿನಿರ್ಯಾತಯತಿ|
03190054d ಅಹೋ ಕಷ್ಟಮಿತಿ|
ಹೀಗೆ ಹೇಳಿ, ಜಿಂಕೆಯನ್ನು ಹಿಡಿದು, ಸ್ವನಗರಕ್ಕೆ ತೆರಳಿ ಅಶ್ವಗಳನ್ನು ಅಂತಃಪುರದಲ್ಲಿ ಇರಿಸಿದನು. ಈಗ ಆ ಮಹರ್ಷಿಯು ಚಿಂತಿಸಿದನು: “ಈ ತರುಣ ರಾಜಪುತ್ರನು ಈ ಸುಂದರ ಕುದುರೆಗಳನ್ನು ಪಡೆದು ಖುಷಿಪಡುತ್ತಿದ್ದಾನೆ. ನನಗೆ ಅವನು ಅವುಗಳನ್ನು ಹಿಂದಿರುಗಿಸುವುದಿಲ್ಲ. ಇದೊಂದು ಕಷ್ಟವಾಯಿತಲ್ಲ!”
03190055A ಮನಸಾ ನಿಶ್ಚಿತ್ಯ ಮಾಸಿ ಪೂರ್ಣೇ ಶಿಷ್ಯಮಬ್ರವೀತ್|
03190055B ಗಚ್ಚಾತ್ರೇಯ|
03190055C ರಾಜಾನಂ ಬ್ರೂಹಿ|
03190055d ಯದಿ ಪರ್ಯಾಪ್ತಂ ನಿರ್ಯಾತಯೋಪಾಧ್ಯಾಯವಾಮ್ಯಾವಿತಿ|
ಮನಸ್ಸಿನಲ್ಲಿ ನಿಶ್ಚಯಿಸಿ ತಿಂಗಳು ಪೂರ್ಣವಾದಾಗ ಶಿಷ್ಯನಿಗೆ ಹೇಳಿದನು: “ಅತ್ರೇಯ! ಹೋಗು! ರಾಜನಿಗೆ ಹೇಳು. ಕಾರ್ಯ ಮುಗಿದಿದೆಯಾದರೆ ವಾಮ್ಯಗಳನ್ನು ಉಪಾಧ್ಯಾಯನಿಗೆ ಹಿಂದಿರುಗಿಸು.”
03190056A ಸ ಗತ್ವೈವಂ ತಂ ರಾಜಾನಮಬ್ರವೀತ್|
ಅವನು ಅಲ್ಲಿಗೆ ಹೋಗಿ ಇದನ್ನು ರಾಜನಿಗೆ ಹೇಳಿದನು.
03190057A ತಂ ರಾಜಾ ಪ್ರತ್ಯುವಾಚ|
03190057B ರಾಜ್ಞಾಮೇತದ್ವಾಹನಂ|
03190057C ಅನರ್ಹಾ ಬ್ರಾಹ್ಮಣಾ ರತ್ನಾನಾಮೇವಂವಿಧಾನಾಂ|
03190057d ಕಿಂ ಚ ಬ್ರಾಹ್ಮಣಾನಾಮಶ್ವೈಃ ಕಾರ್ಯಂ|
03190057e ಸಾಧು ಪ್ರತಿಗಮ್ಯತಾಮಿತಿ|
ಅವನಿಗೆ ರಾಜನು ಉತ್ತರಿಸಿದನು. “ಇದು ರಾಜನ ವಾಹನ. ಈ ರತ್ನವನ್ನು ಇಟ್ಟುಕೊಳ್ಳಲು ಬ್ರಾಹ್ಮಣರು ಅನರ್ಹರು. ನೀನು ಹಿಂದಿರುಗಿದರೆ ಒಳ್ಳೆಯದು.”
03190058A ಸ ಗತ್ವೈವಮುಪಾಧ್ಯಾಯಾಯಾಚಷ್ಟ|
ಅವನು ಹೋಗಿ ಉಪಾಧ್ಯಾಯನಿಗೆ ಎಲ್ಲವನ್ನೂ ಹೇಳಿದನು.
03190059A ತಚ್ಛೃತ್ವಾ ವಚನಮಪ್ರಿಯಂ ವಾಮದೇವಃ ಕ್ರೋಧಪರೀತಾತ್ಮಾ ಸ್ವಯಮೇವ ರಾಜಾನಮಭಿಗಮ್ಯಾಶ್ವಾರ್ಥಮಭ್ಯಚೋದಯತ್|
03190059B ನ ಚಾದಾದ್ರಾಜಾ|
ಆ ಅಪ್ರಿಯ ಮಾತನ್ನು ಕೇಳಿ ವಾಮದೇವನು ಕ್ರೋಧಿತನಾಗಿ ಅಶ್ವಗಳಿಗೋಸ್ಕರ ಸ್ವಯಂ ತಾನೇ ರಾಜನಲ್ಲಿಗೆ ಹೋಗಿ ಕೇಳಿದನು. ರಾಜನು ನಿರಾಕರಿಸಿದನು.
03190060 ವಾಮದೇವ ಉವಾಚ|
03190060a ಪ್ರಯಚ್ಚ ವಾಮ್ಯೌ ಮಮ ಪಾರ್ಥಿವ ತ್ವಂ|
ಕೃತಂ ಹಿ ತೇ ಕಾರ್ಯಮನ್ಯೈರಶಕ್ಯಂ|
03190060c ಮಾ ತ್ವಾ ವಧೀದ್ವರುಣೋ ಘೋರಪಾಶೈರ್|
ಬ್ರಹ್ಮಕ್ಷತ್ರಸ್ಯಾಂತರೇ ವರ್ತಮಾನಃ||
ವಾಮದೇವನು ಹೇಳಿದನು: “ಪಾರ್ಥಿವ! ನನಗೆ ವಾಮ್ಯಗಳನ್ನು ಕೊಡು. ಅನ್ಯರು ಮಾಡದಂಥಹುದನ್ನು ನೀನು ಮಾಡಿದ್ದೀಯೆ. ವರುಣನು ಘೋರ ಪಾಶಗಳಿಂದ ನಿನ್ನನ್ನು ವಧಿಸದಿರಲಿ. ಬ್ರಾಹ್ಮಣ ಮತ್ತು ಕ್ಷತ್ರಿಯರನ್ನು ಒಡೆಯುತ್ತಿದ್ದೀಯೆ.”
03190061 ರಾಜೋವಾಚ|
03190061a ಅನಡ್ವಾಹೌ ಸುವ್ರತೌ ಸಾಧು ದಾಂತಾವ್|
ಏತದ್ವಿಪ್ರಾಣಾಂ ವಾಹನಂ ವಾಮದೇವ|
03190061c ತಾಭ್ಯಾಂ ಯಾಹಿ ತ್ವಂ ಯತ್ರ ಕಾಮೋ ಮಹರ್ಷೇ|
ಚಂದಾಂಸಿ ವೈ ತ್ವಾದೃಶಂ ಸಂವಹಂತಿ||
ರಾಜನು ಹೇಳಿದನು: “ವಾಮದೇವ! ವಿಪ್ರರಿಗೆ ವಾಹನವಾಗಿ ಈ ಎರಡು ತರಬೇತಿಹೊಂದಿದ ಸಾಧು ಎತ್ತುಗಳೇ ಲೇಸು. ಮಹರ್ಷೇ! ಇವೆರಡರಿಂದ ನಿನಗೆಲ್ಲಿಬೇಕೋ ಅಲ್ಲಿ ಹೋಗು. ನನ್ನಂತವರಾದ ಬೇರೆ ಯಾರಲ್ಲಿ ಬೇಕಾದರೂ ಇವು ಕೊಂಡೊಯ್ಯುತ್ತವೆ.”
03190062 ವಾಮದೇವ ಉವಾಚ|
03190062a ಚಂದಾಂಸಿ ವೈ ಮಾದೃಶಂ ಸಂವಹಂತಿ|
ಲೋಕೇಽಮುಷ್ಮಿನ್ಪಾರ್ಥಿವ ಯಾನಿ ಸಂತಿ|
03190062c ಅಸ್ಮಿಂಸ್ತು ಲೋಕೇ ಮಮ ಯಾನಮೇತದ್|
ಅಸ್ಮದ್ವಿಧಾನಾಮಪರೇಷಾಂ ಚ ರಾಜನ್||
ವಾಮದೇವನು ಹೇಳಿದನು: “ನನ್ನಂಥವರನ್ನು ವೇದಗಳು ಕೊಂಡೊಯ್ಯುತ್ತವೆ. ಆದರೆ ಪಾರ್ಥಿವ! ಅವು ಈ ಲೋಕದಿಂದ ಕೊಂಡೊಯ್ಯುತ್ತವೆ. ಈ ಲೋಕದಲ್ಲಿ ಇವೇ ನನ್ನ ವಾಹನಗಳು. ರಾಜನ್! ನನ್ನಂಥ ಅನ್ಯರದ್ದು ಕೂಡ ಇವೇ ವಾಹನಗಳು.”
03190063 ರಾಜೋವಾಚ|
03190063a ಚತ್ವಾರೋ ವಾ ಗರ್ದಭಾಸ್ತ್ವಾಂ ವಹಂತು|
ಶ್ರೇಷ್ಠಾಶ್ವತರ್ಯೋ ಹರಯೋ ವಾ ತುರಂಗಾಃ|
03190063c ತೈಸ್ತ್ವಂ ಯಾಹಿ ಕ್ಷತ್ರಿಯಸ್ಯೈಷ ವಾಹೋ|
ಮಮ ವಾಮ್ಯೌ ನ ತವೈತೌ ಹಿ ವಿದ್ಧಿ||
ರಾಜನು ಹೇಳಿದನು: “ನಿನ್ನನ್ನು ನಾಲ್ಕು ಕತ್ತೆಗಳು, ಅಥವಾ ಶ್ರೇಷ್ಠ ಕುದುರೆಗಳು ಅಥವಾ ಹರಿ ತುರಂಗಗಳು ಕೊಂಡೊಯ್ಯಲಿ. ಅವುಗಳನ್ನು ಹೊಡೆದುಕೊಂಡು ಹೋಗು. ಆದರೆ ಈ ವಾಮ್ಯಗಳು ಕ್ಷತ್ರಿಯನವು. ನೋಡು. ನನ್ನಂತೆ ಅವುಗಳು ನಿನ್ನದಾಗಲಾರವು.”
03190064 ವಾಮದೇವ ಉವಾಚ|
03190064a ಘೋರಂ ವ್ರತಂ ಬ್ರಾಹ್ಮಣಸ್ಯೈತದಾಹುರ್|
ಏತದ್ರಾಜನ್ಯದಿಹಾಜೀವಮಾನಃ|
03190064c ಅಯಸ್ಮಯಾ ಘೋರರೂಪಾ ಮಹಾಂತೋ|
ವಹಂತು ತ್ವಾಂ ಶಿತಶೂಲಾಶ್ಚತುರ್ಧಾ||
ವಾಮದೇವನು ಹೇಳಿದನು: “ಬ್ರಾಹ್ಮಣನ ವ್ರತವು ಘೋರವೆಂದು ಹೇಳುತ್ತಾರೆ. ರಾಜನ್! ನಾನು ಇಲ್ಲಿ ಈ ವ್ರತದಲ್ಲಿ ಜೀವಿಸಿರುವೆನಾದರೆ, ಈಗಲೇ ಘೋರರೂಪರೂ ಮಹಾಕಾಯರೂ ಆದವರು ನಿನ್ನ ಮೇಲೆ ನಾಲ್ಕೂ ಕಡೆಗಳಿಂದ ಹರಿತ ಶೂಲಗಳನ್ನು ಪ್ರಹಾರಮಾಡುತ್ತಾರೆ.”
03190065 ರಾಜೋವಾಚ|
03190065a ಯೇ ತ್ವಾ ವಿದುರ್ಬ್ರಾಹ್ಮಣಂ ವಾಮದೇವ|
ವಾಚಾ ಹಂತುಂ ಮನಸಾ ಕರ್ಮಣಾ ವಾ|
03190065c ತೇ ತ್ವಾಂ ಸಶಿಷ್ಯಮಿಹ ಪಾತಯಂತು|
ಮದ್ವಾಕ್ಷನುನ್ನಾಃ ಶಿತಶೂಲಾಸಿಹಸ್ತಾಃ||
ರಾಜನು ಹೇಳಿದನು: “ಬ್ರಾಹ್ಮಣ ವಾಮದೇವ! ನೀನು ಮಾತಿನಿಂದ, ಮನಸ್ಸಿನಿಂದ, ಅಥವಾ ಕಾರ್ಯದಿಂದ ಕೊಲ್ಲುವೆಯೆಂದಾದರೆ, ನನ್ನ ಆಜ್ಞೆಯಂತೆ ಅವರು ನಿನ್ನನ್ನೂ ನಿನ್ನ ಶಿಷ್ಯರನ್ನೂ ಹರಿತ ಶೂಲಗಳಿಂದ ಇರಿಯಲಿ.”
03190066 ವಾಮದೇವ ಉವಾಚ|
03190066a ನಾನುಯೋಗಾ ಬ್ರಾಹ್ಮಣಾನಾಂ ಭವಂತಿ|
ವಾಚಾ ರಾಜನ್ಮನಸಾ ಕರ್ಮಣಾ ವಾ|
03190066c ಯಸ್ತ್ವೇವಂ ಬ್ರಹ್ಮ ತಪಸಾನ್ವೇತಿ ವಿದ್ವಾಂಸ್|
ತೇನ ಶ್ರೇಷ್ಠೋ ಭವತಿ ಹಿ ಜೀವಮಾನಃ||
ವಾಮದೇವನು ಹೇಳಿದನು: “ರಾಜನ್! ಮಾತಿನಿಂದ, ಮನಸ್ಸಿನಿಂದ ಅಥವಾ ಕಾರ್ಯದಿಂದ ಬ್ರಾಹ್ಮಣರನ್ನು ಪ್ರಶ್ನಿಸಬಾರದು. ತಪಸ್ಸಿನಿಂದ ಬ್ರಹ್ಮನನ್ನು ತಲುಪಿದ ಬ್ರಾಹ್ಮಣನು ಎಷ್ಟೇ ಶ್ರೇಷ್ಠನಾಗಿರಲಿ ಅವನ ಸೊಕ್ಕನ್ನು ಮುರಿಯಬಲ್ಲ.””
03190067 ಮಾರ್ಕಂಡೇಯ ಉವಾಚ|
03190067a ಏವಮುಕ್ತೇ ವಾಮದೇವೇನ ರಾಜನ್|
ಸಮುತ್ತಸ್ಥೂ ರಾಕ್ಷಸಾ ಘೋರರೂಪಾಃ|
03190067c ತೈಃ ಶೂಲಹಸ್ತೈರ್ವಧ್ಯಮಾನಃ ಸ ರಾಜಾ|
ಪ್ರೋವಾಚೇದಂ ವಾಕ್ಷಮುಚ್ಚೈಸ್ತದಾನೀಂ||
ಮಾರ್ಕಂಡೇಯನು ಹೇಳಿದನು: “ರಾಜನ್! ವಾಮದೇವನು ಹೀಗೆ ಹೇಳಲು ಘೋರರೂಪಿ ರಾಕ್ಷಸರು ಉದ್ಭವಿಸಿದರು. ಅವರು ಶೂಲದಿಂದ ರಾಜನನ್ನು ಹೊಡೆಯಲು ಅವನು ಉಚ್ಛಸ್ವರದಲ್ಲಿ ಇದನ್ನು ಕೂಗಿ ಹೇಳಿದನು.
03190068a ಇಕ್ಷ್ವಾಕವೋ ಯದಿ ಬ್ರಹ್ಮನ್ದಲೋ ವಾ|
ವಿಧೇಯಾ ಮೇ ಯದಿ ವಾನ್ಯೇ ವಿಶೋಽಪಿ|
03190068c ನೋತ್ಸ್ರಕ್ಷ್ಯೇಽಹಂ ವಾಮದೇವಸ್ಯ ವಾಮ್ಯೌ|
ನೈವಂವಿಧಾ ಧರ್ಮಶೀಲಾ ಭವಂತಿ||
“ಬ್ರಹ್ಮನ್! ಇಕ್ಷ್ವಾಕುಗಳು ಅಥವಾ ದಲ ಅಥವಾ ಅನ್ಯ ಜನರು ನನಗೆ ವಿಧೇಯರಾಗಿದ್ದಾರೆಂದರೆ, ನಾನು ವಾಮದೇವನ ವಾಮ್ಯಗಳನ್ನು ಬಿಟ್ಟು ಕೊಡುವುದಿಲ್ಲ. ಅವರು ಹೀಗೆ ಧರ್ಮಶೀಲರಾಗುವುದಿಲ್ಲ.”
03190069a ಏವಂ ಬ್ರುವನ್ನೇವ ಸ ಯಾತುಧಾನೈರ್|
ಹತೋ ಜಗಾಮಾಶು ಮಹೀಂ ಕ್ಷಿತೀಶಃ|
03190069c ತತೋ ವಿದಿತ್ವಾ ನೃಪತಿಂ ನಿಪಾತಿತಂ|
ಇಕ್ಷ್ವಾಕವೋ ವೈ ದಲಮಭ್ಯಷಿಂಚನ್||
ಹೀಗೆ ಹೇಳುತ್ತಿರುವಾಗಲೇ ಕ್ಷಿತೀಶನನ್ನು ಆ ರಾಕ್ಷಸರು ಹೊಡೆದು ಭೂಮಿಯ ಮೇಲೆ ಬೀಳಿಸಿದರು. ಆಗ ರಾಜನು ಕೆಳಗುರುಳಿದ್ದುದನ್ನು ತಿಳಿದು ಇಕ್ಷ್ವಾಕುಗಳು ದಲನನ್ನು ಅಭಿಷೇಕಿಸಿದರು.
03190070a ರಾಜ್ಯೇ ತದಾ ತತ್ರ ಗತ್ವಾ ಸ ವಿಪ್ರಃ|
ಪ್ರೋವಾಚೇದಂ ವಚನಂ ವಾಮದೇವಃ|
03190070c ದಲಂ ರಾಜಾನಂ ಬ್ರಾಹ್ಮಣಾನಾಂ ಹಿ ದೇಯಂ|
ಏವಂ ರಾಜನ್ಸರ್ವಧರ್ಮೇಷು ದೃಷ್ಟಂ||
ಆಗ ರಾಜ್ಯಕ್ಕೆ ಹೋಗಿ ಆ ವಿಪ್ರ ವಾಮದೇವನು ರಾಜ ದಲನಿಗೆ ಈ ಮಾತುಗಳನ್ನಾಡಿದನು: “ರಾಜನ್! ಬ್ರಾಹ್ಮಣರಿಗೆ ಕೊಡಬೇಕೆಂದು ಸರ್ವ ಧರ್ಮಗಳಲ್ಲಿ ತೋರಿಸಿಕೊಟ್ಟಿದ್ದಾರೆ.
03190071a ಬಿಭೇಷಿ ಚೇತ್ತ್ವಮಧರ್ಮಾನ್ನರೇಂದ್ರ|
ಪ್ರಯಚ್ಚ ಮೇ ಶೀಘ್ರಮೇವಾದ್ಯ ವಾಮ್ಯೌ|
03190071c ಏತಚ್ಛೃತ್ವಾ ವಾಮದೇವಸ್ಯ ವಾಕ್ಯಂ|
ಸ ಪಾರ್ಥಿವಃ ಸೂತಮುವಾಚ ರೋಷಾತ್||
ನರೇಂದ್ರ! ಅಧರ್ಮಕ್ಕೆ ನೀನು ಹೆದರುವವನಾದರೆ ಶೀಘ್ರವಾಗಿ ಇಂದೇ ನನಗೆ ವಾಮ್ಯಗಳನ್ನು ಕೊಡು!” ವಾಮದೇವನ ಈ ಮಾತನ್ನು ಕೇಳಿ ಆ ಪಾರ್ಥಿವನು ರೋಷದಿಂದ ಸೂತನಿಗೆ ಹೇಳಿದನು:
03190072a ಏಕಂ ಹಿ ಮೇ ಸಾಯಕಂ ಚಿತ್ರರೂಪಂ|
ದಿಗ್ಧಂ ವಿಷೇಣಾಹರ ಸಂಗೃಹೀತಂ|
03190072c ಯೇನ ವಿದ್ಧೋ ವಾಮದೇವಃ ಶಯೀತ|
ಸಂದಶ್ಯಮಾನಃ ಶ್ವಭಿರಾರ್ತರೂಪಃ||
“ಹೋಗಿ ಇಟ್ಟಿರುವ ನನ್ನ ಚಿತ್ರರೂಪದ ಬಾಣಗಳಲ್ಲಿ ಒಂದನ್ನು ವಿಷದಲ್ಲಿ ಮುಳುಗಿಸಿ ತೆಗೆದುಕೊಂಡು ಬಾ! ಅದರಿಂದ ಚುಚ್ಚಲ್ಪಟ್ಟು ವಾಮದೇವನು ಮಲಗಿ ಆರ್ತರೂಪನಾಗಿ ನಾಯಿಗಳಿಂದ ಹರಿಯಲ್ಪಡಲಿ!”
03190073 ವಾಮದೇವ ಉವಾಚ|
03190073a ಜಾನಾಮಿ ಪುತ್ರಂ ದಶವರ್ಷಂ ತವಾಹಂ|
ಜಾತಂ ಮಹಿಷ್ಯಾಂ ಶ್ಯೇನಜಿತಂ ನರೇಂದ್ರ|
03190073c ತಂ ಜಹಿ ತ್ವಂ ಮದ್ವಚನಾತ್ಪ್ರಣುನ್ನಸ್|
ತೂರ್ಣಂ ಪ್ರಿಯಂ ಸಾಯಕೈರ್ಘೋರರೂಪೈಃ||
ವಾಮದೇವನು ಹೇಳಿದನು: “ನರೇಂದ್ರ! ನಿನಗೆ ರಾಣಿಯಲ್ಲಿ ಜನಿಸಿದ ಹತ್ತುವರ್ಷ ವಯಸ್ಸಿನ ಶ್ಯೇನಜಿತುವೆಂಬ ಮಗನಿದ್ದಾನೆಂದು ತಿಳಿದಿದ್ದೇನೆ. ನನ್ನ ಮಾತಿನ ಪ್ರಭಾವದಿಂದ ನೀನು ನಿನ್ನ ಪ್ರಿಯ ಮಗನನ್ನು ಈಗ ಘೋರರೂಪದ ಬಾಣದಿಂದ ಕೊಲ್ಲುತ್ತೀಯೆ!””
03190074 ಮಾರ್ಕಂಡೇಯ ಉವಾಚ|
03190074a ಏವಮುಕ್ತೋ ವಾಮದೇವೇನ ರಾಜನ್ನ್|
ಅಂತಃಪುರೇ ರಾಜಪುತ್ರಂ ಜಘಾನ|
03190074c ಸ ಸಾಯಕಸ್ತಿಗ್ಮತೇಜಾ ವಿಸೃಷ್ಟಃ|
ಶ್ರುತ್ವಾ ದಲಸ್ತಚ್ಚ ವಾಕ್ಯಂ ಬಭಾಷೇ||
ಮಾರ್ಕಂಡೇಯನು ಹೇಳಿದನು: “ರಾಜನ್! ವಾಮದೇವನು ಹೀಗೆ ಹೇಳಲು ಬಿಟ್ಟ ಅತಿವೇಗದ ಆ ಬಾಣವು ಅಂತಃಪುರದಲ್ಲಿ ರಾಜಪುತ್ರನನ್ನು ಸಂಹರಿಸಿತು. ಇದನ್ನು ಕೇಳಿ ದಲನು ಈ ಮಾತುಗಳನ್ನಾಡಿದನು.
03190075a ಇಕ್ಷ್ವಾಕವೋ ಹಂತ ಚರಾಮಿ ವಃ ಪ್ರಿಯಂ|
ನಿಹನ್ಮೀಮಂ ವಿಪ್ರಮದ್ಯ ಪ್ರಮಥ್ಯ|
03190075c ಆನೀಯತಾಮಪರಸ್ತಿಗ್ಮತೇಜಾಃ|
ಪಶ್ಯಧ್ವಂ ಮೇ ವೀರ್ಯಮದ್ಯ ಕ್ಷಿತೀಶಾಃ||
“ಇಕ್ಷ್ವಾಕುಗಳೇ! ಈ ಬ್ರಾಹ್ಮಣನನ್ನು ಕೊಂದು ನಾಶಪಡಿಸಿ. ನಿಮಗೆ ಪ್ರಿಯವಾದುದನ್ನು ಮಾಡುತ್ತೇನೆ. ಹೋಗಿ ಇನ್ನೊಂದು ವೇಗವಾಗಿ ಹೋಗಬಲ್ಲ ಬಾಣವನ್ನು ತೆಗೆದುಕೊಂಡು ಬನ್ನಿ ಮತ್ತು ಕ್ಷಿತೀಶರೇ! ನನ್ನ ವೀರ್ಯವನ್ನು ಇಂದು ನೋಡಿ!”
03190076 ವಾಮದೇವ ಉವಾಚ|
03190076a ಯಂ ತ್ವಮೇನಂ ಸಾಯಕಂ ಘೋರರೂಪಂ|
ವಿಷೇಣ ದಿಗ್ಧಂ ಮಮ ಸಂದಧಾಸಿ|
03190076c ನ ತ್ವಮೇನಂ ಶರವರ್ಯಂ ವಿಮೋಕ್ತುಂ|
ಸಂಧಾತುಂ ವಾ ಶಕ್ಷ್ಯಸಿ ಮಾನವೇಂದ್ರ||
ವಾಮದೇವನು ಹೇಳಿದನು: “ಮಾನವೇಂದ್ರ! ವಿಷದಲ್ಲಿ ಅದ್ದಿದ ಈ ಘೋರರೂಪಿ ಬಾಣವನ್ನು ಧನುಸ್ಸಿಗೆ ಹೂಡಿ ನನ್ನ ಮೇಲೆ ಗುರಿಯಿಟ್ಟಿದ್ದೀಯಲ್ಲಾ, ಈ ಶ್ರೇಷ್ಠ ಶರವನ್ನು ಪ್ರಯೋಗಿಸುವುದಕ್ಕಾಗಲೀ ನನಗೆ ಗುರಿಯಿಡುವುದಕ್ಕಾಗಲೀ ನೀನು ಸಮರ್ಥನಾಗುವುದಿಲ್ಲ!”
03190077 ರಾಜೋವಾಚ|
03190077a ಇಕ್ಷ್ವಾಕವಃ ಪಶ್ಯತ ಮಾಂ ಗೃಹೀತಂ|
ನ ವೈ ಶಕ್ನೋಮ್ಯೇಷ ಶರಂ ವಿಮೋಕ್ತುಂ|
03190077c ನ ಚಾಸ್ಯ ಕರ್ತುಂ ನಾಶಮಭ್ಯುತ್ಸಹಾಮಿ|
ಆಯುಷ್ಮಾನ್ವೈ ಜೀವತು ವಾಮದೇವಃ||
ರಾಜನು ಹೇಳಿದನು: “ಇಕ್ಷ್ವಾಕುಗಳೇ! ನಾನು ಗರಬಡೆದಿರುವುದನ್ನು ನೋಡಿ! ಈ ಶರವನ್ನು ಪ್ರಯೋಗಿಸಲು ಅಶಕ್ಯನಾಗಿದ್ದೇನೆ! ಅವನನ್ನು ಕೊಲ್ಲಲು ನನಗೆ ಸಾಧ್ಯವಾಗುತ್ತಿಲ್ಲ. ಆಯುಷ್ಮಂತನಾಗಿರುವ ವಾಮದೇವನು ಜೀವಿಸಲಿ!”
03190078 ವಾಮದೇವ ಉವಾಚ|
03190078a ಸಂಸ್ಪೃಶೈನಾಂ ಮಹಿಷೀಂ ಸಾಯಕೇನ|
ತತಸ್ತಸ್ಮಾದೇನಸೋ ಮೋಕ್ಷ್ಯಸೇ ತ್ವಂ||
ವಾಮದೇವನು ಹೇಳಿದನು: “ಈ ಬಾಣದಿಂದ ನಿನ್ನ ರಾಣಿಯನ್ನು ಮುಟ್ಟು. ಅದರಿಂದ ನೀನು ನಿನ್ನ ಪಾಪದಿಂದ ಮುಕ್ತನಾಗುತ್ತೀಯೆ!””
03190079 ಮಾರ್ಕಂಡೇಯ ಉವಾಚ|
03190079a ತತಸ್ತಥಾ ಕೃತವಾನ್ಪಾರ್ಥಿವಸ್ತು|
ತತೋ ಮುನಿಂ ರಾಜಪುತ್ರೀ ಬಭಾಷೇ|
03190079c ಯಥಾ ಯುಕ್ತಂ ವಾಮದೇವಾಹಮೇನಂ|
ದಿನೇ ದಿನೇ ಸಂವಿಶಂತೀ ವ್ಯಶಂಸಂ||
03190079e ಬ್ರಾಹ್ಮಣೇಭ್ಯೋ ಮೃಗಯಂತೀ ಸೂನೃತಾನಿ|
ತಥಾ ಬ್ರಹ್ಮನ್ಪುಣ್ಯಲೋಕಂ ಲಭೇಯಂ||
ಮಾರ್ಕಂಡೇಯನು ಹೇಳಿದನು: “ರಾಜನು ಅವನಿಗೆ ಹೇಳಿದಂತೆ ಮಾಡಿದನು. ಆಗ ರಾಜಪುತ್ರಿಯು ಮುನಿಗೆ ಹೇಳಿದಳು: “ವಾಮದೇವ! ನಾನು ನನ್ನ ಪತಿಯೊಡನೆ ಸರಿಯಾಗಿ ಮಾತನಾಡಿದ್ದರೆ, ಪ್ರತಿದಿನವು ಅವನೊಂದಿಗೇ ಮಲಗಿದ್ದರೆ, ಬ್ರಾಹ್ಮಣರಿಂದ ಆಶೀರ್ವಾದಗಳನ್ನು ಬೇಡಿದ್ದರೆ, ಬ್ರಹ್ಮನ್! ನಾನು ಪುಣ್ಯಲೋಕವನ್ನು ಪಡೆಯುವಂತಾಗಲಿ.”
03190080 ವಾಮದೇವ ಉವಾಚ|
03190080a ತ್ವಯಾ ತ್ರಾತಂ ರಾಜಕುಲಂ ಶುಭೇಕ್ಷಣೇ|
ವರಂ ವೃಣೀಷ್ವಾಪ್ರತಿಮಂ ದದಾನಿ ತೇ|
03190080c ಪ್ರಶಾಧೀಮಂ ಸ್ವಜನಂ ರಾಜಪುತ್ರಿ|
ಇಕ್ಷ್ವಾಕುರಾಜ್ಯಂ ಸುಮಹಚ್ಚಾಪ್ಯನಿಂದ್ಯೇ||
ವಾಮದೇವನು ಹೇಳಿದನು: “ಶುಭೇಕ್ಷಣೇ! ನೀನು ರಾಜಕುಲವನ್ನು ಉದ್ಧರಿಸಿದ್ದೀಯೆ. ಅಪ್ರತಿಮ ವರವನ್ನು ಕೇಳು. ನಿನಗೆ ಕೊಡುತ್ತೇನೆ. ರಾಜಪುತ್ರಿ! ಅನಿಂದಿತೇ! ನಿನ್ನ ಜನರನ್ನು ಮತ್ತು ಇಕ್ಷ್ವಾಕುಗಳ ಈ ಮಹಾ ರಾಜ್ಯವನ್ನು ಆಳು.”
03190081 ರಾಜಪುತ್ರ್ಯುವಾಚ|
03190081a ವರಂ ವೃಣೇ ಭಗವನ್ನೇಕಮೇವ|
ವಿಮುಚ್ಯತಾಂ ಕಿಲ್ಬಿಷಾದದ್ಯ ಭರ್ತಾ|
03190081c ಶಿವೇನ ಚಾಧ್ಯಾಹಿ ಸಪುತ್ರಬಾಂಧವಂ|
ವರೋ ವೃತೋ ಹ್ಯೇಷ ಮಯಾ ದ್ವಿಜಾಗ್ರ್ಯ||
ರಾಜಪುತ್ರಿಯು ಹೇಳಿದಳು: “ಭಗವನ್! ಒಂದೇ ಒಂದು ವರವನ್ನು ಕೇಳುತ್ತೇನೆ. ನನ್ನ ಪತಿಯು ಇಂದು ಕಿಲ್ಬಿಷದಿಂದ ಮುಕ್ತನಾಗಲಿ ಮತ್ತು ಪುತ್ರ ಬಾಂಧವರೊಡನೆ ಅವನಿಗೆ ಮಂಗಳವಾಗಲಿ. ದ್ವಿಜಾಗ್ರ! ಇದೇ ನಾನು ಕೇಳುವ ವರ!””
03190082 ಮಾರ್ಕಂಡೇಯ ಉವಾಚ|
03190082a ಶ್ರುತ್ವಾ ವಚಃ ಸ ಮುನೀ ರಾಜಪುತ್ರ್ಯಾಸ್|
ತಥಾಸ್ತ್ವಿತಿ ಪ್ರಾಹ ಕುರುಪ್ರವೀರ|
03190082c ತತಃ ಸ ರಾಜಾ ಮುದಿತೋ ಬಭೂವ|
ವಾಮ್ಯೌ ಚಾಸ್ಮೈ ಸಂಪ್ರದದೌ ಪ್ರಣಮ್ಯ||
ಮಾರ್ಕಂಡೇಯನು ಹೇಳಿದನು: “ಕುರುಪ್ರವೀರ! ರಾಜಪುತ್ರಿಯ ಮಾತುಗಳನ್ನು ಕೇಳಿದ ಮುನಿಯು ಹಾಗೇ ಆಗಲೆಂದು ಹೇಳಿದನು. ಆಗ ರಾಜನು ಸಂತೋಷಗೊಂಡನು ಮತ್ತು ಅವನಿಗೆ ನಮಸ್ಕರಿಸಿ ವಾಮ್ಯಗಳನ್ನಿತ್ತನು.””
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಮಂಡೂಕೋಪಾಖ್ಯಾನೇ ನವತ್ಯಧಿಕಶತತಮೋಽಧ್ಯಾಯ:|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಮಂಡೂಕೋಪಾಖ್ಯಾನದಲ್ಲಿ ನೂರಾತೊಂಭತ್ತನೆಯ ಅಧ್ಯಾಯವು.
