ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ
Contents
Toggle೭೪
ನಲ-ದಮಯಂತೀ ಸಮಾಗಮ
ತಾಯಿಯ ಅನುಮತಿಯನ್ನು ಪಡೆದು ದಮಯಂತಿಯು ಬಾಹುಕನನ್ನು ಕರೆಯಿಸಿ ಪ್ರಶ್ನಿಸಿದುದು (೧-೧೩). ಕಾಶಾಯ ವಸ್ತ್ರವನ್ನು ಧರಿಸಿದ್ದ, ಜಟಿಲಳಾದ, ಕೊಳೆ-ಧೂಳಿನಿಂದ ಕಲುಷಿತಳಾದ ದಮಯಂತಿಯ ನೋಡಿ ಶೋಕಾರ್ತನಾದ ಬಾಹುಕನು ತಾನು ಯಾರೆಂದು ತನ್ನ ಕಷ್ಟಗಳಿಗೆ ಕಾರಣವೇನೆಂದೂ ಹೇಳಿಕೊಂಡು, ದಮಯಂತೀ ಪುನಃಸ್ವಯಂವರದ ಕುರಿತು ಕೇಳಿದುದು (೧೪-೨೪).
03074001 ಬೃಹದಶ್ವ ಉವಾಚ|
03074001a ಸರ್ವಂ ವಿಕಾರಂ ದೃಷ್ಟ್ವಾ ತು ಪುಣ್ಯಶ್ಲೋಕಸ್ಯ ಧೀಮತಃ|
03074001c ಆಗತ್ಯ ಕೇಶಿನೀ ಕ್ಷಿಪ್ರಂ ದಮಯಂತ್ಯೈ ನ್ಯವೇದಯತ್||
ಬೃಹದಶ್ವನು ಹೇಳಿದನು: “ಧೀಮತ ಪುಣ್ಯಶ್ಲೋಕನ ಈ ಎಲ್ಲ ಭಾವುಕತೆಯನ್ನೂ ನೋಡಿದ ಕೇಶಿನಿಯು ಕ್ಷಿಪ್ರವಾಗಿ ಬಂದು ದಮಯಂತಿಯಲ್ಲಿ ನಿವೇದಿಸಿದಳು.
03074002a ದಮಯಂತೀ ತತೋ ಭೂಯಃ ಪ್ರೇಷಯಾಮಾಸ ಕೇಶಿನೀಂ|
03074002c ಮಾತುಃ ಸಕಾಶಂ ದುಃಖಾರ್ತಾ ನಲಶಂಕಾಸಮುತ್ಸುಕಾ||
03074003a ಪರೀಕ್ಷಿತೋ ಮೇ ಬಹುಶೋ ಬಾಹುಕೋ ನಲಶಂಕಯಾ|
03074003c ರೂಪೇ ಮೇ ಸಂಶಯಸ್ತ್ವೇಕಃ ಸ್ವಯಮಿಚ್ಚಾಮಿ ವೇದಿತುಂ||
ಅನಂತರ ಅವನು ನಲನೇ ಇರಬಹುದೆಂಬ ಶಂಕೆಯಿಂದ ಉತ್ಸುಕಳೂ, ದುಃಖಾರ್ತಳೂ ಆದ ದಮಯಂತಿಯು ಕೇಶಿನಿಯನ್ನು ತನ್ನ ತಾಯಿಯ ಬಳಿ ಹೀಗೆ ಹೇಳಿ ಕಳುಹಿಸಿದಳು: “ಅವನು ನಲನಿರಬಹುದೆಂಬ ಶಂಕೆಯಿಂದ ನಾನು ಬಾಹುಕನನ್ನು ಬಹು ರೀತಿಗಳಿಂದ ಪರೀಕ್ಷಿಸಿದ್ದೇನೆ. ಅವನ ರೂಪವೊಂದರಲ್ಲಿ ಮಾತ್ರ ಶಂಕೆಯಿದೆ. ಅದನ್ನು ನಾನೇ ಸ್ವತಃ ತಿಳಿಯಬೇಕಾಗಿದೆ.
03074004a ಸ ವಾ ಪ್ರವೇಶ್ಯತಾಂ ಮಾತರ್ಮಾಂ ವಾನುಜ್ಞಾತುಮರ್ಹಸಿ|
03074004c ವಿದಿತಂ ವಾಥ ವಾಜ್ಞಾತಂ ಪಿತುರ್ಮೇ ಸಂವಿಧೀಯತಾಂ||
ಅಮ್ಮ! ಅವನನ್ನು ಹೇಗಾದರೂ ಇಲ್ಲಿಗೆ ಕರೆಯಿಸು ಅಥವಾ ನನಗಾದರೂ ಅಲ್ಲಿಗೆ ಹೋಗಲು ಅನುಮತಿಯನ್ನು ಕೊಡು. ಇದನ್ನು ತಂದೆಯವರಿಗೆ ತಿಳಿಸಿಯೂ ಅಥವಾ ತಿಳಿಸದೆಯೂ ಮಾಡಬಹುದು.”
03074005a ಏವಮುಕ್ತಾ ತು ವೈದರ್ಭ್ಯಾ ಸಾ ದೇವೀ ಭೀಮಮಬ್ರವೀತ್|
03074005c ದುಹಿತುಸ್ತಮಭಿಪ್ರಾಯಮನ್ವಜಾನಾಚ್ಚ ಪಾರ್ಥಿವಃ||
ವೈದರ್ಭಿಯ ಈ ಮಾತುಗಳನ್ನು ಕೇಳಿದ ದೇವಿಯು ಭೀಮನಲ್ಲಿ ಹೇಳಲು ಆ ಪಾರ್ಥಿವನು ಮಗಳ ಅಭಿಪ್ರಾಯಕ್ಕೆ ಅನುಮತಿಯನ್ನು ಕೊಟ್ಟನು.
03074006a ಸಾ ವೈ ಪಿತ್ರಾಭ್ಯನುಜ್ಞಾತಾ ಮಾತ್ರಾ ಚ ಭರತರ್ಷಭ|
03074006c ನಲಂ ಪ್ರವೇಶಯಾಮಾಸ ಯತ್ರ ತಸ್ಯಾಃ ಪ್ರತಿಶ್ರಯಃ||
ಭರತರ್ಷಭ! ತನ್ನ ಮಾತಾ ಪಿತೃಗಳ ಅನುಮತಿಯನ್ನು ಪಡೆದ ಅವಳು ತಾನು ವಾಸಿಸುತ್ತಿದ್ದಲ್ಲಿಗೆ ನಲನನ್ನು ಕರೆತರಿಸಿದಳು.
03074007a ತಂ ತು ದೃಷ್ಟ್ವಾ ತಥಾಯುಕ್ತಂ ದಮಯಂತೀ ನಲಂ ತದಾ|
03074007c ತೀವ್ರಶೋಕಸಮಾವಿಷ್ಟಾ ಬಭೂವ ವರವರ್ಣಿನೀ||
ನಲನನ್ನು ನೋಡಿದ ಕೂಡಲೇ ಆ ವರವರ್ಣಿನಿ ದಮಯಂತಿಯು ತೀವ್ರ ಶೋಕಾವಿಷ್ಟಳಾದಳು.
03074008a ತತಃ ಕಾಷಾಯವಸನಾ ಜಟಿಲಾ ಮಲಪಂಕಿನೀ|
03074008c ದಮಯಂತೀ ಮಹಾರಾಜ ಬಾಹುಕಂ ವಾಕ್ಯಮಬ್ರವೀತ್||
ಮಹಾರಾಜ! ಆಗ ಕಾಶಾಯ ವಸ್ತ್ರವನ್ನು ಧರಿಸಿದ್ದ, ಜಟಿಲಳಾದ, ಕೊಳೆ-ಧೂಳಿನಿಂದ ಕಲುಷಿತಳಾದ ದಮಯಂತಿಯು ಬಾಹುಕನನ್ನುದ್ದೇಶಿಸಿ ಮಾತನಾಡಿದಳು:
03074009a ದೃಷ್ಟಪೂರ್ವಸ್ತ್ವಯಾ ಕಶ್ಚಿದ್ಧರ್ಮಜ್ಞೋ ನಾಮ ಬಾಹುಕ|
03074009c ಸುಪ್ತಾಮುತ್ಸೃಜ್ಯ ವಿಪಿನೇ ಗತೋ ಯಃ ಪುರುಷಃ ಸ್ತ್ರಿಯಂ||
“ಬಾಹುಕ! ನೀನು ಈ ಹಿಂದೆ ಮಲಗಿದ್ದ ಸ್ತ್ರೀಯನ್ನು ವಿಪಿನದಲ್ಲಿ ಬಿಟ್ಟುಹೋದ ಧರ್ಮಜ್ಞ ಎಂಬ ಹೆಸರಿನ ಪುರುಷನನ್ನು ಯಾವಾಗಲಾದರೂ ನೋಡಿದ್ದೀಯಾ?
03074010a ಅನಾಗಸಂ ಪ್ರಿಯಾಂ ಭಾರ್ಯಾಂ ವಿಜನೇ ಶ್ರಮಮೋಹಿತಾಂ|
03074010c ಅಪಹಾಯ ತು ಕೋ ಗಚ್ಚೇತ್ಪುಣ್ಯಶ್ಲೋಕಂ ಋತೇ ನಲಂ||
ಪುಣ್ಯಶ್ಲೋಕ ನಲನನ್ನು ಬಿಟ್ಟು ಇನ್ನ್ಯಾರು ಮುಗ್ದಳಾದ, ಶ್ರಮದಿಂದ ಆಯಾಸಗೊಂಡಿದ್ದ ತನ್ನ ಪ್ರಿಯೆ ಹೆಂಡತಿಯನ್ನು ವಿಜನ ಪ್ರದೇಶದಲ್ಲಿ ಬಿಟ್ಟು ಹೋಗುತ್ತಾರೆ?
03074011a ಕಿಂ ನು ತಸ್ಯ ಮಯಾ ಕಾರ್ಯಮಪರಾದ್ಧಂ ಮಹೀಪತೇಃ|
03074011c ಯೋ ಮಾಮುತ್ಸೃಜ್ಯ ವಿಪಿನೇ ಗತವಾನ್ನಿದ್ರಯಾ ಹೃತಾಂ||
ನನ್ನಿಂದ ಯಾವ ಮಹಾ ಅಪರಾಧವು ಆಯಿತೆಂದು ಆ ಮಹೀಪತಿಯು ನಿದ್ರೆಯಲ್ಲಿ ಪರವಶಳಾಗಿದ್ದ ನನ್ನನ್ನು ವಿಪಿನದಲ್ಲಿ ಬಿಟ್ಟು ಹೋದ?
03074012a ಸಾಕ್ಷಾದ್ದೇವಾನಪಾಹಾಯ ವೃತೋ ಯಃ ಸ ಮಯಾ ಪುರಾ|
03074012c ಅನುವ್ರತಾಂ ಸಾಭಿಕಾಮಾಂ ಪುತ್ರಿಣೀಂ ತ್ಯಕ್ತವಾನ್ಕಥಂ||
ಹಿಂದೆ ನಾನು ಸಾಕ್ಷಾತ್ ದೇವತೆಗಳನ್ನೇ ತಿರಸ್ಕರಿಸಿ ವರಿಸಿದ, ಅವನಲ್ಲೇ ಅನುವ್ರತಳಾದ, ಪುತ್ರಿಣಿ, ಅಭಿಕಾಮಿ ನನ್ನನ್ನು ಅವನು ಹೇಗೆ ಬಿಟ್ಟುಹೋದ?
03074013a ಅಗ್ನೌ ಪಾಣಿಗೃಹೀತಾಂ ಚ ಹಂಸಾನಾಂ ವಚನೇ ಸ್ಥಿತಾಂ|
03074013c ಭರಿಷ್ಯಾಮೀತಿ ಸತ್ಯಂ ಚ ಪ್ರತಿಶ್ರುತ್ಯ ಕ್ವ ತದ್ಗತಂ||
ಅಗ್ನಿಯ ಮುಂದೆ ಕೈ ಹಿಡಿಯುವಾಗ ಮತ್ತು ಹಂಸಗಳಿಗೆ ಅವಳಿಗೆ ಬೆಂಬಾಲಕನಾಗಿರುತ್ತೇನೆ ಎಂದು ಕೊಟ್ಟ ವಚನವಾದರೂ ಎಲ್ಲಿಗೆ ಹೋಯಿತು?”
03074014a ದಮಯಂತ್ಯಾ ಬ್ರುವಂತ್ಯಾಸ್ತು ಸರ್ವಮೇತದರಿಂದಮ|
03074014c ಶೋಕಜಂ ವಾರಿ ನೇತ್ರಾಭ್ಯಾಮಸುಖಂ ಪ್ರಾಸ್ರವದ್ಬಹು||
ಅರಿಂದಮ! ಈ ರೀತಿ ದಮಯಂತಿಯು ಹೇಳುತ್ತಿದ್ದಂತೆಯೇ ಅವಳ ಕಣ್ಣುಗಳಿಂದ ಶೋಕಜ ಕಣ್ಣೀರು ಧಾರಾಕಾರವಾಗಿ ಹರಿಯಿತು.
03074015a ಅತೀವ ಕೃಷ್ಣತಾರಾಭ್ಯಾಂ ರಕ್ತಾಂತಾಭ್ಯಾಂ ಜಲಂ ತು ತತ್|
03074015c ಪರಿಸ್ರವನ್ನಲೋ ದೃಷ್ಟ್ವಾ ಶೋಕಾರ್ತ ಇದಮಬ್ರವೀತ್||
ಕೃಷ್ಣತಾರೆಗಳಂತೆ ಕೆಂಪಾಗಿದ್ದ ಆ ಕಣ್ಣುಗಳಲ್ಲಿ ನೀರು ಹರಿಯುತ್ತಿದ್ದುದನ್ನು ಕಂಡ ನಲನು ಶೋಕಾರ್ತನಾಗಿ ಹೇಳಿದನು:
03074016a ಮಮ ರಾಜ್ಯಂ ಪ್ರನಷ್ಟಂ ಯನ್ನಾಹಂ ತತ್ಕೃತವಾನ್ಸ್ವಯಂ|
03074016c ಕಲಿನಾ ತತ್ಕೃತಂ ಭೀರು ಯಚ್ಚ ತ್ವಾಮಹಮತ್ಯಜಂ||
“ಭೀರು! ನಾನು ರಾಜ್ಯವನ್ನು ಕಳೆದುಕೊಂಡಿದ್ದುದು ನನ್ನ ಸ್ವಂತ ಕರ್ಮದಿಂದಲ್ಲ; ಅದೆಲ್ಲಾ ಆದದ್ದು ಕಲಿಯಿಂದ. ನಿನ್ನನ್ನು ನಾನು ತ್ಯಜಿಸಿದ್ದೂ ಅವನಿಂದಲೇ!
03074017a ತ್ವಯಾ ತು ಧರ್ಮಭೃಚ್ಛ್ರೇಷ್ಠೇ ಶಾಪೇನಾಭಿಹತಃ ಪುರಾ|
03074017c ವನಸ್ಥಯಾ ದುಃಖಿತಯಾ ಶೋಚಂತ್ಯಾ ಮಾಂ ವಿವಾಸಸಂ||
ಧರ್ಮಭೃತೆ! ಶ್ರೇಷ್ಠಳಾದ ನೀನು ವನದಲ್ಲಿರುವಾಗ ನಿನ್ನಿಂದಲೇ ಹಿಂದೆ ಶಪಿತನಾದ ಅವನು ವಸ್ತ್ರಗಳನ್ನು ಕಳೆದುಕೊಂಡ ನನ್ನೊಡನೆ ದುಃಖಿತನಾಗಿ ಶೋಕಿತನಾಗಿದ್ದನು.
03074018a ಸ ಮಚ್ಚರೀರೇ ತ್ವಚ್ಚಾಪಾದ್ದಹ್ಯಮಾನೋಽವಸತ್ಕಲಿಃ|
03074018c ತ್ವಚ್ಚಾಪದಗ್ಧಃ ಸತತಂ ಸೋಽಗ್ನಾವಿವ ಸಮಾಹಿತಃ||
ಅಂದಿನಿಂದಲೂ ಕಲಿಯು ನನ್ನ ದೇಹದಲ್ಲಿದ್ದುಕೊಂಡು ನಿನ್ನ ಶಾಪದಿಂದಾಗಿ ಸತತವಾಗಿ ದಹಿಸುತ್ತಿದ್ದನು.
03074019a ಮಮ ಚ ವ್ಯವಸಾಯೇನ ತಪಸಾ ಚೈವ ನಿರ್ಜಿತಃ|
03074019c ದುಃಖಸ್ಯಾಂತೇನ ಚಾನೇನ ಭವಿತವ್ಯಂ ಹಿ ನೌ ಶುಭೇ||
ಈಗ ನಾನು ನನ್ನ ಪ್ರಯತ್ನ ಮತ್ತು ತಪಸ್ಸಿನಿಂದ ಅವನನ್ನು ಜಯಿಸಿದ್ದೇನೆ. ಶುಭೇ! ನಮ್ಮ ಈ ದುಃಖಕ್ಕೆ ಅಂತ್ಯವು ಇದ್ದೇ ಇದೆ.
03074020a ವಿಮುಚ್ಯ ಮಾಂ ಗತಃ ಪಾಪಃ ಸ ತತೋಽಹಮಿಹಾಗತಃ|
03074020c ತ್ವದರ್ಥಂ ವಿಪುಲಶ್ರೋಣಿ ನ ಹಿ ಮೇಽನ್ಯತ್ಪ್ರಯೋಜನಂ||
ಆ ಪಾಪಿಯು ನನ್ನನ್ನು ಬಿಟ್ಟು ಹೊರಟು ಹೋದನು. ವಿಪುಲಶ್ರೇಣಿ! ಆನಂತರವೇ ನಾನು ನಿನಗೋಸ್ಕರ ಇಲ್ಲಿಗೆ ಬಂದಿದ್ದೇನೆ. ಇನ್ನ್ಯಾವುದೂ ಉದ್ದೇಶವಿಲ್ಲ.
03074021a ಕಥಂ ನು ನಾರೀ ಭರ್ತಾರಮನುರಕ್ತಮನುವ್ರತಂ|
03074021c ಉತ್ಸೃಜ್ಯ ವರಯೇದನ್ಯಂ ಯಥಾ ತ್ವಂ ಭೀರು ಕರ್ಹಿ ಚಿತ್||
ಭೀರು! ಆದರೆ, ಅನುರಕ್ತ ಮತ್ತು ಅನುವ್ರತ ಪತಿಯನ್ನು ತಿರಸ್ಕರಿಸಿ ನಿನ್ನ ಹಾಗಿನ ಒಬ್ಬ ನಾರಿಯು ಹೇಗೆ ಇನ್ನೊಬ್ಬನನ್ನು ವರಿಸಬಹುದು?
03074022a ದೂತಾಶ್ಚರಂತಿ ಪೃಥಿವೀಂ ಕೃತ್ಸ್ನಾಂ ನೃಪತಿಶಾಸನಾತ್|
03074022c ಭೈಮೀ ಕಿಲ ಸ್ಮ ಭರ್ತಾರಂ ದ್ವಿತೀಯಂ ವರಯಿಷ್ಯತಿ||
03074023a ಸ್ವೈರವೃತ್ತಾ ಯಥಾಕಾಮಮನುರೂಪಮಿವಾತ್ಮನಃ|
03074023c ಶ್ರುತ್ವೈವ ಚೈವಂ ತ್ವರಿತೋ ಭಾಂಗಸ್ವರಿರುಪಸ್ಥಿತಃ||
ಪೃಥಿವಿಯನ್ನೆಲ್ಲಾ ತಿರುಗುತ್ತಿದ್ದ ದೂತರು ನೃಪಶಾಸನದಂತೆ ಭೈಮಿಯು ತನ್ನ ಬಯಕೆಯಂತೆಯೇ ತನಗೆ ಅನುರೂಪ ಎರಡನೆಯ ಪತಿಯನ್ನು ವರಿಸುವವಳಿದ್ದಾಳೆ ಎಂದು ಹೇಳಿದರು. ಅದನ್ನು ಕೇಳಿದ ತಕ್ಷಣವೇ ಭಾಂಗಸ್ವರಿಯು ತ್ವರಿತದಿಂದ ಇಲ್ಲಿಗೆ ಬಂದಿದ್ದಾನೆ.”
03074024a ದಮಯಂತೀ ತು ತಚ್ಛೃತ್ವಾ ನಲಸ್ಯ ಪರಿದೇವಿತಂ|
03074024c ಪ್ರಾಂಜಲಿರ್ವೇಪಮಾನಾ ಚ ಭೀತಾ ವಚನಮಬ್ರವೀತ್||
ನಲನ ಆ ಪರಿವೇದನೆಯನ್ನು ಕೇಳಿದ ದಮಯಂತಿಯು ಭೀತಳಾಗಿ, ನಡುಗುತ್ತಾ, ಕೈ ಮುಗಿದು ಈ ಮಾತುಗಳನ್ನು ಹೇಳಿದಳು.
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ನಲದಮಯಂತೀಸಮಾಗಮೇ ಚತುಃಸಪ್ತತಿತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ನಲದಮಯಂತೀ ಸಮಾಗಮ ಎನ್ನುವ ಎಪ್ಪತ್ತ್ನಾಲ್ಕನೆಯ ಅಧ್ಯಾಯವು.
