Aranyaka Parva: Chapter 70

ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ

೭೦

ಕಲಿನಿರ್ಗಮನ

ಋತುಪರ್ಣನು ತನ್ನ ಉತ್ತರೀಯವು ಕೆಳಗೆ ಬಿದ್ದಿದೆ, ರಥನಿಲ್ಲಿಸೆಂದು ಹೇಳಲು ಬಾಹುಕನು ಬಹುದೂರ ಬಂದಾಗಿದೆ, ಅದನ್ನು ಎತ್ತಿಕೊಂಡು ಬರಲಿಕ್ಕಾಗುವುದಿಲ್ಲ ಎನ್ನುವುದು (೧-೫). ಬಾಹುಕನು ಹೀಗೆ ಹೇಳುವಷ್ಟರಲ್ಲಿ ಋತುಪರ್ಣನು ವನದಲ್ಲಿ ಬಿಭೀತಕ ಮರವನ್ನು ನೋಡಿ ಅದರಲ್ಲಿ ಎಷ್ಟು ಎಲೆಗಳು, ಹಣ್ಣುಗಳಿವೆಯೆಂದು ಲೆಖ್ಕ ಮಾಡಿ ತನ್ನಲ್ಲಿದ್ದ ಪರಮ ಬಲವನ್ನು ತೋರಿಸಿದುದು (೬-೧೦). ಆಗ ಬಾಹುಕನು ರಥವನ್ನು ನಿಲ್ಲಿಸಿ, ಋತುಪರ್ಣನಿಗೆ ಕುಂಡಿನಪುರಕ್ಕೆ ಬೇಗ ತಲುಪಿಸುತ್ತೇನೆಂಬ ಭರವಸೆಯನ್ನು ನೀಡಿ, ಮರದಲ್ಲಿದ್ದ ಎಲೆ-ಹಣ್ಣುಗಳನ್ನು ಎಣಿಸಿ, ಋತುಪರ್ಣನ ಲೆಖ್ಕವು ಸರಿಯಾದುದೆಂದು ಖಾತ್ರಿಪಡಿಸಿಕೊಂಡಿದುದು (೧೧-೨೨). ಬಾಹುಕನು ಋತುಪರ್ಣನಿಂದ ಅಕ್ಷಹೃದಯ ವಿದ್ಯೆಯನ್ನು ಪಡೆದುದು; ತಕ್ಷಣವೇ ಕಲಿಯು ಅವನ ಶರೀರದಿಂದ ಕಾರ್ಕೋಟಕನ ವಿಷವನ್ನು ಕಾರುತ್ತಾ ಹೊರಬಿದ್ದು ಬಿಭೀತಕವನ್ನು ಪ್ರವೇಶಿಸಿದು; ನಲನು ತನ್ನ ತೇಜಸ್ಸನ್ನು ರೂಪವನ್ನಲ್ಲ - ಪುನಃ ಪಡೆದುದು (೨೩-೩೯).

03070001 ಬೃಹದಶ್ವ ಉವಾಚ|

03070001a ಸ ನದೀಃ ಪರ್ವತಾಂಶ್ಚೈವ ವನಾನಿ ಚ ಸರಾಂಸಿ ಚ|

03070001c ಅಚಿರೇಣಾತಿಚಕ್ರಾಮ ಖೇಚರಃ ಖೇ ಚರನ್ನಿವ||

ಬೃದದಶ್ವನು ಹೇಳಿದನು: “ಅವನು ಎಲ್ಲಿಯೂ ನಿಲ್ಲದೇ ಖೇಚರನು ಆಕಾಶದಲ್ಲಿ ಹಾರುವಂತೆ ನದಿ-ಪರ್ವತ-ವನ-ಸರೋವರಗಳನ್ನು ಅತಿಕ್ರಮಿಸಿದನು.

03070002a ತಥಾ ಪ್ರಯಾತೇ ತು ರಥೇ ತದಾ ಭಾಂಗಸ್ವರಿರ್ನೃಪಃ|

03070002c ಉತ್ತರೀಯಮಥಾಪಶ್ಯದ್ಭ್ರಷ್ಟಂ ಪರಪುರಂಜಯಃ||

ಹೀಗೆ ರಥವು ವೇಗದಿಂದ ಓಡುತ್ತಿರುವಾಗ ಪರಪುರಂಜಯ ನೃಪ ಭಾಂಗಸ್ವರಿಯು ತನ್ನ ಉತ್ತರೀಯವು ಕಳಚಿ ಬಿದ್ದುದನ್ನು ನೋಡಿದನು.

03070003a ತತಃ ಸ ತ್ವರಮಾಣಸ್ತು ಪಟೇ ನಿಪತಿತೇ ತದಾ|

03070003c ಗ್ರಹೀಷ್ಯಾಮೀತಿ ತಂ ರಾಜಾ ನಲಮಾಹ ಮಹಾಮನಾಃ||

ವೇಗದಲ್ಲಿ ಹೋಗುತ್ತಿರುವಾಗ ಉತ್ತರೀಯವು ಬಿದ್ದ ಕೂಡಲೇ ಮಹಾಮನ ರಾಜನು ನಲನಿಗೆ ಹೇಳಿದನು: “ಅದನ್ನು ತೆಗೆದುಕೊಳ್ಳುತ್ತೇನೆ.”

03070004a ನಿಗೃಹ್ಣೀಷ್ವ ಮಹಾಬುದ್ಧೇ ಹಯಾನೇತಾನ್ಮಹಾಜವಾನ್|

03070004c ವಾರ್ಷ್ಣೇಯೋ ಯಾವದೇತಂ ಮೇ ಪಟಮಾನಯತಾಮಿತಿ||

“ಮಹಾಬುದ್ಧಿ! ಈ ಮಹಾವೇಗದಲ್ಲಿ ಚಲಿಸುತ್ತಿರುವ ಹಯಗಳನ್ನು ನಿಲ್ಲಿಸು. ಯಾಕೆಂದರೆ ವಾರ್ಷ್ಣೇಯನು ಬಿದ್ದುಹೋದ ನನ್ನ ಉತ್ತರೀಯವನ್ನು ತೆಗೆದುಕೊಂಡು ಬರುತ್ತಾನೆ.”

03070005a ನಲಸ್ತಂ ಪ್ರತ್ಯುವಾಚಾಥ ದೂರೇ ಭ್ರಷ್ಟಃ ಪಟಸ್ತವ|

03070005c ಯೋಜನಂ ಸಮತಿಕ್ರಾಂತೋ ನ ಸ ಶಕ್ಯಸ್ತ್ವಯಾ ಪುನಃ||

ನಲನು ಉತ್ತರಿಸಿದನು: “ಬಹಳ ದೂರದ ಹಿಂದೆಯೇ ನಿನ್ನ ಉತ್ತರೀಯವು ಬಿದ್ದುಹೋಯಿತು. ಅಲ್ಲಿಂದ ಒಂದು ಯೋಜನ ದೂರ ಈಗಾಗಲೇ ಬಂದುಬಿಟ್ಟಿದ್ದೇವೆ. ಪುನಃ ಅದನ್ನು ತೆಗೆದುಕೊಂಡು ಬರಲು ಶಕ್ಯವಾಗುವುದಿಲ್ಲ.”

03070006a ಏವಮುಕ್ತೇ ನಲೇನಾಥ ತದಾ ಭಾಂಗಸ್ವರಿರ್ನೃಪಃ|

03070006c ಆಸಸಾದ ವನೇ ರಾಜನ್ಫಲವಂತಂ ಬಿಭೀತಕಂ||

ರಾಜನ್! ನಲನು ಹೀಗೆ ಹೇಳುತ್ತಿರುವಾಗಲೇ ನೃಪ ಭಾಂಗಸ್ವರಿಯು ಆ ವನದಲ್ಲಿ ಹಣ್ಣುಗಳಿಂದ ತುಂಬಿದ್ದ ಒಂದು ಬಿಭೀತಕವನ್ನು ಕಂಡನು.

03070007a ತಂ ದೃಷ್ಟ್ವಾ ಬಾಹುಕಂ ರಾಜಾ ತ್ವರಮಾಣೋಽಭ್ಯಭಾಷತ|

03070007c ಮಮಾಪಿ ಸೂತ ಪಶ್ಯ ತ್ವಂ ಸಂಖ್ಯಾನೇ ಪರಮಂ ಬಲಂ||

ಅದನ್ನು ನೋಡಿ, ಅವಸರದಲ್ಲಿದ್ದ ರಾಜನು ಬಾಹುಕನಿಗೆ ಹೇಳಿದನು: “ಸೂತ! ಎಣಿಸುವುದರಲ್ಲಿ ನನ್ನಲ್ಲಿರುವ ಈ ಪರಮ ಬಲವನ್ನು ನೋಡು.

03070008a ಸರ್ವಃ ಸರ್ವಂ ನ ಜಾನಾತಿ ಸರ್ವಜ್ಞೋ ನಾಸ್ತಿ ಕಶ್ಚನ|

03070008c ನೈಕತ್ರ ಪರಿನಿಷ್ಠಾಸ್ತಿ ಜ್ಞಾನಸ್ಯ ಪುರುಷೇ ಕ್ವ ಚಿತ್||

ಎಲ್ಲರೂ ಎಲ್ಲವನ್ನೂ ತಿಳಿದಿರುವುದಿಲ್ಲ. ಸರ್ವಜ್ಞನೆನ್ನುವನು ಯಾರೂ ಇಲ್ಲ. ಜ್ಞಾನವು ಒಬ್ಬನೇ ಪುರುಷನಲ್ಲಿ ಏಕತ್ರವಾಗಿ ಯಾವಾಗಲೂ ಇರುವುದಿಲ್ಲ.

03070009a ವೃಕ್ಷೇಽಸ್ಮಿನ್ಯಾನಿ ಪರ್ಣಾನಿ ಫಲಾನ್ಯಪಿ ಚ ಬಾಹುಕ|

03070009c ಪತಿತಾನಿ ಚ ಯಾನ್ಯತ್ರ ತತ್ರೈಕಮಧಿಕಂ ಶತಂ|

03070009 ಏಕಪತ್ರಾಧಿಕಂ ಪತ್ರಂ ಫಲಮೇಕಂ ಚ ಬಾಹುಕ||

ಬಾಹುಕ! ಕೆಳಗೆ ಬಿದ್ದ ಮತ್ತು ಮೇಲೆ ಇರುವ ಎಲ್ಲವನ್ನೂ ಸೇರಿ ಈ ವೃಕ್ಷದಲ್ಲಿ ನೂರಾ ಒಂದು ಎಲೆ ಮತ್ತು ಪುಷ್ಪಗಳಿವೆ. ಬಾಹುಕ! ಒಂದು ಎಲೆ ಮತ್ತು ಒಂದು ಫಲ ಮಾತ್ರ ಅಧಿಕವಾಗಿದೆ.

03070010a ಪಂಚ ಕೋಟ್ಯೋಽಥ ಪತ್ರಾಣಾಂ ದ್ವಯೋರಪಿ ಚ ಶಾಖಯೋಃ|

03070010c ಪ್ರಚಿನುಹ್ಯಸ್ಯ ಶಾಖೇ ದ್ವೇ ಯಾಶ್ಚಾಪ್ಯನ್ಯಾಃ ಪ್ರಶಾಖಿಕಾಃ|

03070010 ಆಭ್ಯಾಂ ಫಲಸಹಸ್ರೇ ದ್ವೇ ಪಂಚೋನಂ ಶತಮೇವ ಚ||

ಆ ಎರಡೂ ಶಾಖೆಗಳಲ್ಲಿ ಐದು ಕೋಟಿ ಎಲೆಗಳಿವೆ. ಆ ಎರಡೂ ಶಾಖೆಗಳನ್ನು ಮತ್ತು ರೆಂಬೆಗಳನ್ನು ತೆಗೆದುಕೊಂಡರೆ, ಅವುಗಳಲ್ಲಿ ಎರಡು ಸಾವಿರದ ಒಂದು ನೂರಾ ತೊಂಭತ್ತೈದು ಫಲಗಳು ದೊರಕುವವು.”

03070011a ತತೋ ರಥಾದವಪ್ಲುತ್ಯ ರಾಜಾನಂ ಬಾಹುಕೋಽಬ್ರವೀತ್|

03070011c ಪರೋಕ್ಷಮಿವ ಮೇ ರಾಜನ್ಕತ್ಥಸೇ ಶತ್ರುಕರ್ಶನ||

ಆಗ ಬಾಹುಕನು ರಥದಿಂದ ಕೆಳಗಿಳಿದು ರಾಜನನ್ನು ಉದ್ದೇಶಿಸಿ ಹೇಳಿದನು: “ಶತ್ರುಕರ್ಶನ ರಾಜನ್! ನೀನು ಹೇಳುತ್ತಿರುವುದು ನನಗೆ ಮೀರಿದ್ದು.

03070012a ಅಥ ತೇ ಗಣಿತೇ ರಾಜನ್ವಿದ್ಯತೇ ನ ಪರೋಕ್ಷತಾ|

03070012c ಪ್ರತ್ಯಕ್ಷಂ ತೇ ಮಹಾರಾಜ ಗಣಯಿಷ್ಯೇ ಬಿಭೀತಕಂ||

ರಾಜನ್! ಆದ್ದರಿಂದ ನೀನು ಲೆಖ್ಕ ಮಾಡಿದುದರಲ್ಲಿ ವಿಶೇಷವೇನೂ ಇಲ್ಲ. ಮಹಾರಾಜ! ನಿನ್ನ ಪ್ರತ್ಯಕ್ಷದಲ್ಲಿಯೇ ನಾನು ಈ ಬಿಭೀತಕವನ್ನು ಎಣಿಸುತ್ತೇನೆ.

03070013a ಅಹಂ ಹಿ ನಾಭಿಜಾನಾಮಿ ಭವೇದೇವಂ ನ ವೇತಿ ಚ|

03070013c ಸಂಖ್ಯಾಸ್ಯಾಮಿ ಫಲಾನ್ಯಸ್ಯ ಪಶ್ಯತಸ್ತೇ ಜನಾಧಿಪ|

03070013 ಮುಹೂರ್ತಮಿವ ವಾರ್ಷ್ಣೇಯೋ ರಶ್ಮೀನ್ಯಚ್ಚತು ವಾಜಿನಾಂ||

ಯಾಕೆಂದರೆ ನೀನು ಮಾಡಿದುದು ಸರಿಯೋ ಇಲ್ಲವೋ ಎಂದು ನನಗೆ ತಿಳಿಯದು. ಜನಾಧಿಪ! ನಿನ್ನ ಎದುರಿನಲ್ಲಿಯೇ ನಾನು ಇದರಲ್ಲಿರುವ ಫಲಗಳನ್ನು ಎಣಿಸುತ್ತೇನೆ. ವಾರ್ಷ್ಣೇಯ! ಸ್ವಲ್ಪ ಹೊತ್ತು ಈ ಕುದುರೆಗಳ ಹಗ್ಗವನ್ನು ಹಿಡಿದುಕೋ.”

03070014a ತಮಬ್ರವೀನ್ನೃಪಃ ಸೂತಂ ನಾಯಂ ಕಾಲೋ ವಿಲಂಬಿತುಂ|

03070014c ಬಾಹುಕಸ್ತ್ವಬ್ರವೀದೇನಂ ಪರಂ ಯತ್ನಂ ಸಮಾಸ್ಥಿತಃ||

ಆಗ ನೃಪನು “ವಿಲಂಬ ಮಾಡಲು ನಮಗೆ ಈಗ ಸಮಯವಿಲ್ಲ!” ಎಂದು ಸೂತನಿಗೆ ಹೇಳಿದನು. ಆದರೂ ಬಾಹುಕನು ಒತ್ತಾಯಮಾಡಿ ಹೇಳಿದುದರಿಂದ ನಿಂತರು.

03070015a ಪ್ರತೀಕ್ಷಸ್ವ ಮುಹೂರ್ತಂ ತ್ವಮಥ ವಾ ತ್ವರತೇ ಭವಾನ್|

03070015c ಏಷ ಯಾತಿ ಶಿವಃ ಪಂಥಾ ಯಾಹಿ ವಾರ್ಷ್ಣೇಯಸಾರಥಿಃ||

“ಒಂದು ಸ್ವಲ್ಪವೇ ಸಮಯ ಪ್ರತೀಕ್ಷಿಸು. ಅಥವಾ ನೀನು ಮುಂದೆ ಹೋಗು. ಇಲ್ಲಿಂದ ದಾರಿಯು ಸುಗಮವಾಗಿದೆ. ಹೋಗು. ವಾರ್ಷ್ಣೇಯನು ಸಾರಥಿಯಾಗುತ್ತಾನೆ.”

03070016a ಅಬ್ರವೀದೃತುಪರ್ಣಸ್ತಂ ಸಾಂತ್ವಯನ್ಕುರುನಂದನ|

03070016c ತ್ವಮೇವ ಯಂತಾ ನಾನ್ಯೋಽಸ್ತಿ ಪೃಥಿವ್ಯಾಮಪಿ ಬಾಹುಕ||

ಕುರುನಂದನ! ಋತಿಪರ್ಣನು ಆಗ ಸಾಂತ್ವನ ಮಾತುಗಳನ್ನು ನುಡಿದನು: “ಬಾಹುಕ! ಇಡೀ ಪೃಥಿವಿಯಲ್ಲಿ ನಿನ್ನಂತಹ ಸಾರಥಿಯು ಬೇರೆ ಯಾರೂ ಇಲ್ಲ.

03070017a ತ್ವತ್ಕೃತೇ ಯಾತುಮಿಚ್ಚಾಮಿ ವಿದರ್ಭಾನ್ ಹಯಕೋವಿದ|

03070017c ಶರಣಂ ತ್ವಾಂ ಪ್ರಪನ್ನೋಽಸ್ಮಿ ನ ವಿಘ್ನಂ ಕರ್ತುಮರ್ಹಸಿ||

ಹಯಕೋವಿದ! ನಿನ್ನಿಂದಾಗಿಯೇ ನನಗೆ ವಿದರ್ಭವನ್ನು ತಲುಪುವ ಭರವಸೆಯಿದೆ. ನಿನ್ನಲ್ಲಿ ನಾನು ಶರಣು ಹೋಗುತ್ತೇನೆ. ವಿಘ್ನವನ್ನು ಮಾಡಬೇಡ.

03070018a ಕಾಮಂ ಚ ತೇ ಕರಿಷ್ಯಾಮಿ ಯನ್ಮಾಂ ವಕ್ಷ್ಯಸಿ ಬಾಹುಕ|

03070018c ವಿದರ್ಭಾನ್ಯದಿ ಯಾತ್ವಾದ್ಯ ಸೂರ್ಯಂ ದರ್ಶಯಿತಾಸಿ ಮೇ||

ಬಾಹುಕ! ವಿದರ್ಭಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನನಗೆ ಸೂರ್ಯೋದಯದ ದರ್ಶನವನ್ನು ಮಾಡಿಸಿದೆಯಾದರೆ ನೀನು ಹೇಳಿದ ಕೆಲಸವನ್ನು ಮಾಡುತ್ತೇನೆ.”

03070019a ಅಥಾಬ್ರವೀದ್ಬಾಹುಕಸ್ತಂ ಸಂಖ್ಯಾಯೇಮಂ ಬಿಭೀತಕಂ|

03070019c ತತೋ ವಿದರ್ಭಾನ್ಯಾಸ್ಯಾಮಿ ಕುರುಷ್ವೇದಂ ವಚೋ ಮಮ||

“ಬಿಭೀತಕವನ್ನು ಎಣಿಸಿದ ನಂತರವೇ ವಿದರ್ಭಕ್ಕೆ ಕರೆದೊಯ್ಯುತ್ತೇನೆ. ನಾನು ಹೇಳಿದಂತೆಯೇ ಮಾಡು!” ಎಂದು ಬಾಹುಕನು ಅವನಿಗೆ ಹೇಳಿದನು.

03070020a ಅಕಾಮ ಇವ ತಂ ರಾಜಾ ಗಣಯಸ್ವೇತ್ಯುವಾಚ ಹ|

03070020c ಸೋಽವತೀರ್ಯ ರಥಾತ್ತೂರ್ಣಂ ಶಾತಯಾಮಾಸ ತಂ ದ್ರುಮಂ||

ಇಷ್ಟವಿಲ್ಲದಿದ್ದರೂ ರಾಜನು ಅವನಿಗೆ “ಎಣಿಸು!” ಎಂದನು. ಆತನು ರಥದಿಂದ ಕೆಳಗಿಳಿದು ಆ ಮರವನ್ನು ಕಡಿದು ಬೀಳಿಸಿದನು.

03070021a ತತಃ ಸ ವಿಸ್ಮಯಾವಿಷ್ಟೋ ರಾಜಾನಮಿದಮಬ್ರವೀತ್|

03070021c ಗಣಯಿತ್ವಾ ಯಥೋಕ್ತಾನಿ ತಾವಂತ್ಯೇವ ಫಲಾನಿ ಚ||

ನಂತರ ಅವನು ವಿಸ್ಮಯಗೊಂಡು ರಾಜನನ್ನುದ್ದೇಶಿಸಿ ಹೇಳಿದನು: “ನೀನು ಹೇಳಿದಷ್ಟೇ ಎಲೆಗಳು ಮತ್ತು ಫಲಗಳನ್ನು ಎಣಿಸಿದ್ದೇನೆ.

03070022a ಅತ್ಯದ್ಭುತಮಿದಂ ರಾಜನ್ದೃಷ್ಟವಾನಸ್ಮಿ ತೇ ಬಲಂ|

03070022c ಶ್ರೋತುಮಿಚ್ಚಾಮಿ ತಾಂ ವಿದ್ಯಾಂ ಯಥೈತಜ್ಜ್ಞಾಯತೇ ನೃಪ||

ರಾಜನ್! ಇದೊಂದು ಅತ್ಯದ್ಭುತವಾದದ್ದು! ನಿನ್ನ ಬಲವನ್ನು ನಾನು ನೋಡಿದೆ. ನೃಪ! ನೀನು ಯಾವ ವಿದ್ಯೆಯ ಮೂಲಕ ಎಣಿಸಿದೆಯೋ ಅದನ್ನು ತಿಳಿಯಲು ಬಯಸುತ್ತೇನೆ.”

03070023a ತಮುವಾಚ ತತೋ ರಾಜಾ ತ್ವರಿತೋ ಗಮನೇ ತದಾ|

03070023c ವಿದ್ಧ್ಯಕ್ಷಹೃದಯಜ್ಞಂ ಮಾಂ ಸಂಖ್ಯಾನೇ ಚ ವಿಶಾರದಂ||

ಹೋಗುವುದರ ಅವಸರದಲ್ಲಿದ್ದ ರಾಜನು ಅವನಿಗೆ ಹೇಳಿದನು: “ನನಗೆ ಅಕ್ಷಹೃದಯದ ಜ್ಞಾನವಿದೆ ಮತ್ತು ಸಂಖ್ಯೆಗಳಲ್ಲಿ ನಾನು ವಿಶಾರದನು.”

03070024a ಬಾಹುಕಸ್ತಮುವಾಚಾಥ ದೇಹಿ ವಿದ್ಯಾಮಿಮಾಂ ಮಮ|

03070024c ಮತ್ತೋಽಪಿ ಚಾಶ್ವಹೃದಯಂ ಗೃಹಾಣ ಪುರುಷರ್ಷಭ||

ಬಾಹುಕನು ಹೇಳಿದನು: “ಪುರುಷರ್ಷಭ! ಈ ವಿದ್ಯೆಯನ್ನು ನನಗೆ ಕೊಟ್ಟು ನನ್ನಿಂದ ಈ ಅಶ್ವಹೃದಯವನ್ನು ಸ್ವೀಕರಿಸು.”

03070025a ಋತುಪರ್ಣಸ್ತತೋ ರಾಜಾ ಬಾಹುಕಂ ಕಾರ್ಯಗೌರವಾತ್|

03070025c ಹಯಜ್ಞಾನಸ್ಯ ಲೋಭಾಚ್ಚ ತಥೇತ್ಯೇವಾಬ್ರವೀದ್ವಚಃ||

ಆಗ ರಾಜ ಋತುಪರ್ಣನು ಕಾರ್ಯಗೌರವಾರ್ಥವಾಗಿ ಮತ್ತು ಹಯಜ್ಞಾನದ ಆಸೆಯಿಂದ ಬಾಹುಕನಿಗೆ ಹೇಳಿದನು:

03070026a ಯಥೇಷ್ಟಂ ತ್ವಂ ಗೃಹಾಣೇದಮಕ್ಷಾಣಾಂ ಹೃದಯಂ ಪರಂ|

03070026c ನಿಕ್ಷೇಪೋ ಮೇಽಶ್ವಹೃದಯಂ ತ್ವಯಿ ತಿಷ್ಠತು ಬಾಹುಕ|

03070026 ಏವಮುಕ್ತ್ವಾ ದದೌ ವಿದ್ಯಾಂ ಋತುಪರ್ಣೋ ನಲಾಯ ವೈ||

“ಬಾಹುಕ! ಹಾಗೆಯೇ ಆಗಲಿ. ಶ್ರೇಷ್ಠವಾದ ಅಕ್ಷಹೃದಯವನ್ನು ಸ್ವೀಕರಿಸು. ಆದರೆ ನನಗಾಗಿ ಅಶ್ವಹೃದಯವನ್ನು ನಿನ್ನಲ್ಲಿಯೇ ಇಟ್ಟುಕೋ!” ಎಂದು ಹೇಳಿ ಋತುಪರ್ಣನು ನಲನಿಗೆ ಆ ವಿದ್ಯೆಯನ್ನು ಕೊಟ್ಟನು.

03070027a ತಸ್ಯಾಕ್ಷಹೃದಯಜ್ಞಸ್ಯ ಶರೀರಾನ್ನಿಃಸೃತಃ ಕಲಿಃ|

03070027c ಕರ್ಕೋಟಕವಿಷಂ ತೀಕ್ಷ್ಣಂ ಮುಖಾತ್ಸತತಮುದ್ವಮನ್||

ಅವನು ಅಕ್ಷಹೃದಯವನ್ನು ತಿಳಿದೊಡನೆಯೇ ಕಲಿಯು ಅವನ ಶರೀರದಿಂದ ಕಾರ್ಕೋಟಕ ವಿಷವನ್ನು ಮುಖದಿಂದ ಕಾರುತ್ತಾ ಹೊರಬಿದ್ದನು.

03070028a ಕಲೇಸ್ತಸ್ಯ ತದಾರ್ತಸ್ಯ ಶಾಪಾಗ್ನಿಃ ಸ ವಿನಿಃಸೃತಃ|

03070028c ಸ ತೇನ ಕರ್ಶಿತೋ ರಾಜಾ ದೀರ್ಘಕಾಲಮನಾತ್ಮವಾನ್||

ಯಾವ ಕಾರಣದಿಂದ ರಾಜನು ಬತ್ತಿಹೋಗಿದ್ದನೋ ಮತ್ತು ದೀರ್ಘಕಾಲದಿಂದ ತಾನು ತಾನಾಗಿಯೇ ಇರಲಿಲ್ಲವೋ ಆ ಕಲಿಯ ಶಾಪಾಗ್ನಿಯು ಆರ್ತನಾದ ಅವನಿಂದ ಹೊರಬಂದಿತು.

03070029a ತತೋ ವಿಷವಿಮುಕ್ತಾತ್ಮಾ ಸ್ವರೂಪಮಕರೋತ್ಕಲಿಃ|

03070029c ತಂ ಶಪ್ತುಮೈಚ್ಚತ್ಕುಪಿತೋ ನಿಷಧಾಧಿಪತಿರ್ನಲಃ||

ವಿಷದಿಂದ ವಿಮುಕ್ತನಾದ ಕಲಿಯು ಸ್ವರೂಪವನ್ನು ಹೊಂದಲು ಕುಪಿತನಾದ ನಿಷಧಾಧಿಪ ನಲನು ಅವನಿಗೆ ಶಪಿಸಲು ಬಯಸಿದನು.

03070030a ತಮುವಾಚ ಕಲಿರ್ಭೀತೋ ವೇಪಮಾನಃ ಕೃತಾಂಜಲಿಃ|

03070030c ಕೋಪಂ ಸಮ್ಯಚ್ಚ ನೃಪತೇ ಕೀರ್ತಿಂ ದಾಸ್ಯಾಮಿ ತೇ ಪರಾಂ||

ಭೀತಿಗೊಡ ಕಲಿಯು ನಡುಗುತ್ತಾ, ಅಂಜಲೀಬದ್ಧನಾಗಿ ಅವನಿಗೆ ಹೇಳಿದನು: “ನೃಪತೇ! ನಿನ್ನ ಕೋಪವನ್ನು ಹಿಡಿದಿಟ್ಟುಕೋ. ನಿನಗೆ ಶ್ರೇಷ್ಠವಾದ ಕೀರ್ತಿಯನ್ನು ಕೊಡುತ್ತೇನೆ.

03070031a ಇಂದ್ರಸೇನಸ್ಯ ಜನನೀ ಕುಪಿತಾ ಮಾಶಪತ್ಪುರಾ|

03070031c ಯದಾ ತ್ವಯಾ ಪರಿತ್ಯಕ್ತಾ ತತೋಽಹಂ ಭೃಶಪೀಡಿತಃ||

ಹಿಂದೆ ನಿನ್ನಿಂದ ಪರಿತ್ಯಕ್ತಳಾದಾಗ ಕೋಪದಿಂದ ಇಂದ್ರಸೇನನ ಜನನಿಯು ನನ್ನನ್ನು ಶಪಿಸಿದ್ದಳು. ಅಂದಿನಿಂದ ನಾನು ನೋವಿನಿಂದ ಪೀಡಿತನಾಗಿದ್ದೇನೆ.

03070032a ಅವಸಂ ತ್ವಯಿ ರಾಜೇಂದ್ರ ಸುದುಃಖಮಪರಾಜಿತ|

03070032c ವಿಷೇಣ ನಾಗರಾಜಸ್ಯ ದಹ್ಯಮಾನೋ ದಿವಾನಿಶಂ||

ಅಪರಾಜಿತ ರಾಜೇಂದ್ರ! ನಿನ್ನಲ್ಲಿ ಬಹಳಷ್ಟು ದುಃಖದಿಂದ ನಾಗರಾಜನ ವಿಷದಿಂದ ದಿನರಾತ್ರಿ ಬೇಯುತ್ತಾ ವಾಸಿಸುತ್ತಿದ್ದೆ. 

03070033a ಯೇ ಚ ತ್ವಾಂ ಮನುಜಾ ಲೋಕೇ ಕೀರ್ತಯಿಷ್ಯಂತ್ಯತಂದ್ರಿತಾಃ|

03070033c ಮತ್ಪ್ರಸೂತಂ ಭಯಂ ತೇಷಾಂ ನ ಕದಾ ಚಿದ್ಭವಿಷ್ಯತಿ||

ಈ ಲೋಕದಲ್ಲಿ ಯಾವ ಮನುಜರು ನಿನ್ನ ಕೀರ್ತಿಯನ್ನು ನಿರಂತರವಾಗಿ ಪಾಡುತ್ತಾರೋ ಅವರಿಗೆ ನನ್ನಿಂದ ಎಂದೂ ಯಾವ ಭಯವೂ ಇರುವುದಿಲ್ಲ.”

03070034a ಏವಮುಕ್ತೋ ನಲೋ ರಾಜಾ ನ್ಯಯಚ್ಚತ್ಕೋಪಮಾತ್ಮನಃ|

03070034c ತತೋ ಭೀತಃ ಕಲಿಃ ಕ್ಷಿಪ್ರಂ ಪ್ರವಿವೇಶ ಬಿಭೀತಕಂ|

03070034 ಕಲಿಸ್ತ್ವನ್ಯೇನ ನಾದೃಶ್ಯತ್ಕಥಯನ್ನೈಷಧೇನ ವೈ||

ಇದನ್ನು ಕೇಳಿದ ರಾಜ ನಲನು ತನ್ನ ಕೋಪವನ್ನು ನಿಯಂತ್ರಿಸಿಕೊಂಡನು. ಕೂಡಲೇ ಭೀತಿಗೊಂಡ ಕಲಿಯು ಬಿಭೀತಕವನ್ನು ಪ್ರವೇಶಿಸಿದನು. ಕಲಿಯು ನೈಷಧನೊಡನೆ ಮಾತನಾಡಿದ್ದುದನ್ನು ಯಾರೂ ನೋಡಲಿಲ್ಲ.

03070035a ತತೋ ಗತಜ್ವರೋ ರಾಜಾ ನೈಷಧಃ ಪರವೀರಹಾ|

03070035c ಸಂಪ್ರನಷ್ಟೇ ಕಲೌ ರಾಜನ್ಸಂಖ್ಯಾಯಾಥ ಫಲಾನ್ಯುತ||

03070036a ಮುದಾ ಪರಮಯಾ ಯುಕ್ತಸ್ತೇಜಸಾ ಚ ಪರೇಣ ಹ|

ಹೀಗೆ ಜ್ವರ ಬಿಟ್ಟ ಪರವೀರಹ ರಾಜ ನೈಷಧನು ಕಲಿಯು ನಾಶನಾದನೆಂದು ಮತ್ತು ಫಲಗಳನ್ನು ಎಣಿಸಲು ಕಲಿತೆನೆಂದು ಪರಮ ಸಂತಸಗೊಂಡು ಹಿಂದಿನ ತನ್ನ ಪರಮ ತೇಜಸ್ಸನ್ನು ಪುನಃ ಪಡೆದುಕೊಂಡನು.

03070036c ರಥಮಾರು‌ಆಹ್ಯ ತೇಜಸ್ವೀ ಪ್ರಯಯೌ ಜವನೈರ್ಹಯೈಃ|

03070036 ಬಿಭೀತಕಶ್ಚಾಪ್ರಶಸ್ತಃ ಸಂವೃತ್ತಃ ಕಲಿಸಂಶ್ರಯಾತ್||

ಆ ತೇಜಸ್ವಿಯು ರಥವನ್ನೇರಿ ಹಯಗಳನ್ನು ವೇಗವಾಗಿ ಓಡಿಸಿದನು. ಕಲಿಯು ಆವರಿಸಿದುದರಿಂದ ಅಂದಿನಿಂದ ಬಿಭೀತಕವು ಅಪ್ರಸಿದ್ಧವಾಗಿದೆ.

03070037a ಹಯೋತ್ತಮಾನುತ್ಪತತೋ ದ್ವಿಜಾನಿವ ಪುನಃ ಪುನಃ|

03070037c ನಲಃ ಸಂಚೋದಯಾಮಾಸ ಪ್ರಹೃಷ್ಟೇನಾಂತರಾತ್ಮನಾ||

ಉತ್ತೇಜನಗೊಂಡ ನಲನು ಅಂತರಾತ್ಮದಲ್ಲಿ ಪ್ರಹೃಷ್ಟನಾಗಿ ಆ ಉತ್ತಮ ಕುದುರೆಗಳನ್ನು ಪುನಃ ಪುನಃ ಹುರಿದುಂಬಿಸಿದನು ಮತ್ತು ಅವು ಪಕ್ಷಿಗಳಂತೆ ಹಾರತೊಡಗಿದವು.

03070038a ವಿದರ್ಭಾಭಿಮುಖೋ ರಾಜಾ ಪ್ರಯಯೌ ಸ ಮಹಾಮನಾಃ|

03070038c ನಲೇ ತು ಸಮತಿಕ್ರಾಂತೇ ಕಲಿರಪ್ಯಗಮದ್ಗೃಹಾನ್||

ಮಹಾಮನ ರಾಜನು ವಿದರ್ಭಾಭಿಮುಖವಾಗಿ ಪ್ರಯಾಣಿಸಿದನು ಮತ್ತು ನಲನು ಸಾಕಷ್ಟು ದೂರ ಹೋದ ನಂತರ ಕಲಿಯು ತನ್ನ ಮನೆಗೆ ತೆರಳಿದನು.

03070039a ತತೋ ಗತಜ್ವರೋ ರಾಜಾ ನಲೋಽಭೂತ್ಪೃಥಿವೀಪತೇ|

03070039c ವಿಮುಕ್ತಃ ಕಲಿನಾ ರಾಜನ್ರೂಪಮಾತ್ರವಿಯೋಜಿತಃ||

ಪೃಥಿವೀಪತೇ! ಕಲಿಯಿಂದ ವಿಮುಕ್ತನಾದ ರಾಜ ನಲನು ಜ್ವರವನ್ನು ಕಳೆದುಕೊಂಡನು. ಆದರೆ ತನ್ನ ರೂಪವನ್ನು ಮಾತ್ರ ಪಡೆಯಲಿಲ್ಲ.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಕಲಿನಿರ್ಗಮೇ ಸಪ್ತತಿತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಕಲಿನಿರ್ಗಮ ಎನ್ನುವ ಎಪ್ಪತ್ತನೆಯ ಅಧ್ಯಾಯವು.

Image result for indian motifs hansa

Comments are closed.