Aranyaka Parva: Chapter 68

ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ

೬೮

ದಮಯಂತೀ ಪುನಃಸ್ವಯಂವರ

ದೀರ್ಘಕಾಲದ ನಂತರ ಬ್ರಾಹ್ಮಣನೋರ್ವನು ಬಂದು ರಾಜಾ ಋತುಪರ್ಣನಲ್ಲಿರುವ, ಶೀಘ್ರಯಾನದಲ್ಲಿ ಸುಕುಶಲನೂ ಅಡುಗೆಯಲ್ಲಿ ಪರಿಣಿತನೂ ಆದ ಬಾಹುಕನೆಂಬುವವನು ತನ್ನ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದನೆಂದು ದಮಯಂತಿಯಲ್ಲಿ ಹೇಳುವುದು (೧-೧೬). ದಮಯಂತಿಯು ತನ್ನ ಸ್ವಯಂವರವು ಮರುದಿನ ಸೂರ್ಯೋದಯದಲ್ಲಿ ನಡೆಯಲಿದೆ ಎನ್ನುವ ಸಂದೇಶವನ್ನು ಬ್ರಾಹ್ಮಣ ಸುದೇವನ ಮೂಲಕ ಋತುಪರ್ಣನಿಗೆ ತಲುಪಿಸುವುದು (೧೭-೨೪).

03068001 ಬೃಹದಶ್ವ ಉವಾಚ|

03068001a ಅಥ ದೀರ್ಘಸ್ಯ ಕಾಲಸ್ಯ ಪರ್ಣಾದೋ ನಾಮ ವೈ ದ್ವಿಜಃ|

03068001c ಪ್ರತ್ಯೇತ್ಯ ನಗರಂ ಭೈಮೀಮಿದಂ ವಚನಮಬ್ರವೀತ್||

ಬೃಹದಶ್ವನು ಹೇಳಿದನು: “ದೀರ್ಘ ಕಾಲದ ನಂತರ ಪರ್ಣಾದ ಎಂಬ ಹೆಸರಿನ ದ್ವಿಜನು ನಗರಕ್ಕೆ ಹಿಂದಿರುಗಿ ಭೈಮಿಯಲ್ಲಿ ಈ ವಚನಗಳನ್ನು ಹೇಳಿದನು:

03068002a ನೈಷಧಂ ಮೃಗಯಾನೇನ ದಮಯಂತಿ ದಿವಾನಿಶಂ|

03068002c ಅಯೋಧ್ಯಾಂ ನಗರೀಂ ಗತ್ವಾ ಭಾಂಗಸ್ವರಿರುಪಸ್ಥಿತಃ||

“ದಮಯಂತಿ! ದಿನ-ರಾತ್ರಿ ನೈಷಧನನ್ನು ಅರಸುತ್ತಾ ಅಯೋಧ್ಯಾ ನಗರಿಗೆ ಹೋಗಿ ಭಾಂಗಸ್ವರಿಯ ಉಪಸ್ಥಿತಿಯಲ್ಲಿದ್ದೆ.

03068003a ಶ್ರಾವಿತಶ್ಚ ಮಯಾ ವಾಕ್ಯಂ ತ್ವದೀಯಂ ಸ ಮಹಾಜನೇ|

03068003c ಋತುಪರ್ಣೋ ಮಹಾಭಾಗೋ ಯಥೋಕ್ತಂ ವರವರ್ಣಿನಿ||

ವರವರ್ಣಿನೀ! ಅಲ್ಲಿ ನೀನು ಇತ್ತ ವಾಕ್ಯವನ್ನು ಯಥೋಕ್ತವಾಗಿ ಮಹಾಭಾಗ ಋತುಪರ್ಣ ಮತ್ತು ಮಹಾಜನರಲ್ಲಿ ಹೇಳಿದೆನು. 

03068004a ತಚ್ಛೃತ್ವಾ ನಾಬ್ರವೀತ್ಕಿಂ ಚಿದೃತುಪರ್ಣೋ ನರಾಧಿಪಃ|

03068004c ನ ಚ ಪಾರಿಷದಃ ಕಶ್ಚಿದ್ಭಾಷ್ಯಮಾಣೋ ಮಯಾಸಕೃತ್||

ಅದನ್ನು ಕೇಳಿದ ನರಾಧಿಪ ಋತುಪರ್ಣನು ಏನನ್ನೂ ಹೇಳಲಿಲ್ಲ. ಪರಿಷತ್ತಿನಲ್ಲಿದ್ದ ಇನ್ನು ಯಾರೂ ನಾನು ಹೇಳಿದುದಕ್ಕೆ ಉತ್ತರಿಸಲಿಲ್ಲ.

03068005a ಅನುಜ್ಞಾತಂ ತು ಮಾಂ ರಾಜ್ಞಾ ವಿಜನೇ ಕಶ್ಚಿದಬ್ರವೀತ್|

03068005c ಋತುಪರ್ಣಸ್ಯ ಪುರುಷೋ ಬಾಹುಕೋ ನಾಮ ನಾಮತಃ||

03068006a ಸೂತಸ್ತಸ್ಯ ನರೇಂದ್ರಸ್ಯ ವಿರೂಪೋ ಹ್ರಸ್ವಬಾಹುಕಃ|

03068006c ಶೀಘ್ರಯಾನೇ ಸುಕುಶಲೋ ಮೃಷ್ಟಕರ್ತಾ ಚ ಭೋಜನೇ||

ರಾಜನಿಂದ ಅನುಮತಿಯನ್ನು ಪಡೆದ ನಾನು ಒಬ್ಬನೇ ಇರುವಾಗ ಋತುಪರ್ಣನ ಪುರುಷನೋರ್ವನು-ಬಾಹುಕ ಎಂಬ ಹೆಸರು ಅವನದಾಗಿತ್ತು-ನನ್ನಲ್ಲಿ ಮಾತನಾಡಿದನು. ನರೇಂದ್ರನ ಸೂತನಾಗಿದ್ದ ಅವನು ಗಿಡ್ಡ ಕೈಕಾಲುಗಳುಳ್ಳವನಾಗಿ ವಿರೂಪಿಯಾಗಿದ್ದನು. ಅವನು ಶೀಘ್ರಯಾನದಲ್ಲಿ ಸುಕುಶಲನೂ, ಅಡುಗೆಯಲ್ಲಿ ಪರಿಣಿತನೂ ಆಗಿದ್ದನು.

03068007a ಸ ವಿನಿಃಶ್ವಸ್ಯ ಬಹುಶೋ ರುದಿತ್ವಾ ಚ ಮುಹುರ್ಮುಹುಃ|

03068007c ಕುಶಲಂ ಚೈವ ಮಾಂ ಪೃಷ್ಟ್ವಾ ಪಶ್ಚಾದಿದಮಭಾಷತ||

ಅವನು ಬಹಳಷ್ಟು ನಿಟ್ಟುಸಿರು ಬಿಡುತ್ತಿದ್ದ ಮತ್ತು ಪುನಃ ಪುನಃ ರೋದಿಸುತ್ತಿದ್ದ. ನನ್ನ ಕುಶಲವನ್ನು ಕೇಳಿದ ನಂತರದಲ್ಲಿ ಅವನು ನನಗೆ ಹೇಳಿದನು:

03068008a ವೈಷಮ್ಯಮಪಿ ಸಂಪ್ರಾಪ್ತಾ ಗೋಪಾಯಂತಿ ಕುಲಸ್ತ್ರಿಯಃ|

03068008c ಆತ್ಮಾನಮಾತ್ಮನಾ ಸತ್ಯೋ ಜಿತಸ್ವರ್ಗಾ ನ ಸಂಶಯಃ|

03068008 ರಹಿತಾ ಭರ್ತೃಭಿಶ್ಚೈವ ನ ಕ್ರುಧ್ಯಂತಿ ಕದಾ ಚನ||

“ಕುಲಸ್ತ್ರೀಯರು ಕಷ್ಟಗಳು ಬಂದರೂ ತಮ್ಮನ್ನು ತಾವೇ ರಕ್ಷಿಸಿಕೊಳ್ಳುತ್ತಾರೆ. ನಿಜವಾಗಿಯೂ ಅವರು ಜಿತಸ್ವರ್ಗಿಗಳು ಎನ್ನುವುದರಲ್ಲಿ ಸಂಶಯವೇ ಇಲ್ಲ. ಪತಿಯು ಇಲ್ಲದಿದ್ದರೂ ಅವರು ಎಂದೂ ಕೃದ್ಧರಾಗುವುದಿಲ್ಲ.

03068009a ವಿಷಮಸ್ಥೇನ ಮೂಢೇನ ಪರಿಭ್ರಷ್ಟಸುಖೇನ ಚ|

03068009c ಯತ್ಸಾ ತೇನ ಪರಿತ್ಯಕ್ತಾ ತತ್ರ ನ ಕ್ರೋದ್ಧುಮರ್ಹತಿ||

ಸುಖದಿಂದ ಪ್ರರಿಭ್ರಷ್ಠನಾಗಿ ವಿಷಮ ಸ್ಥಿತಿಯಲ್ಲಿದ್ದ ಮೂಢನು ಅವಳನ್ನು ಪರಿತ್ಯಜಿಸಿರಬಹುದು. ಆದರೆ ಅದಕ್ಕಾಗಿ ಸಿಟ್ಟಿಗೇಳುವುದು ಸರಿಯಲ್ಲ.

03068010a ಪ್ರಾಣಯಾತ್ರಾಂ ಪರಿಪ್ರೇಪ್ಸೋಃ ಶಕುನೈರ್ಹೃತವಾಸಸಃ|

03068010c ಆಧಿಭಿರ್ದಹ್ಯಮಾನಸ್ಯ ಶ್ಯಾಮಾ ನ ಕ್ರೋದ್ಧುಮರ್ಹತಿ||

ಪಕ್ಷಿಗಳಿಂದ ವಸ್ತ್ರಗಳನ್ನು ಅಪಹರಿಸಲ್ಪಟ್ಟು ಅವನ ಮನಸ್ಸು ಸುಡುತ್ತಿರುವಾಗ ಅವನು ಬಿಟ್ಟು ಹೋಗಿದ್ದುದಕ್ಕೆ ಆ ಸುಂದರಿಯು ಸಿಟ್ಟಾಗುವುದು ಸರಿಯಲ್ಲ.

03068011a ಸತ್ಕೃತಾಸತ್ಕೃತಾ ವಾಪಿ ಪತಿಂ ದೃಷ್ಟ್ವಾ ತಥಾಗತಂ|

03068011c ಭ್ರಷ್ಟರಾಜ್ಯಂ ಶ್ರಿಯಾ ಹೀನಂ ಶ್ಯಾಮಾ ನ ಕ್ರೋದ್ಧುಮರ್ಹತಿ||

ಸತ್ಕೃತನಾಗಿರಲಿ ಅಥವಾ ಅಸತ್ಕೃತನಾಗಿರಲಿ, ತನ್ನ ಪತಿಯು ರಾಜ್ಯಭ್ರಷ್ಟನಾಗಿ, ಸಂಪತ್ತನ್ನು ಕಳೆದುಕೊಂಡುದ್ದುದಕ್ಕೆ ಆ ಸುಂದರಿಯು ಕೋಪಿಸುವುದು ಸರಿಯಲ್ಲ.”

03068012a ತಸ್ಯ ತದ್ವಚನಂ ಶ್ರುತ್ವಾ ತ್ವರಿತೋಽಹಮಿಹಾಗತಃ|

03068012c ಶ್ರುತ್ವಾ ಪ್ರಮಾಣಂ ಭವತೀ ರಾಜ್ಞಶ್ಚೈವ ನಿವೇದಯ||

ಅವನ ಆ ಮಾತುಗಳನ್ನು ಕೇಳಿ ತಡಮಾಡದೇ ಇಲ್ಲಿಗೆ ಬಂದಿದ್ದೇನೆ. ಇವುಗಳನ್ನು ಕೇಳಿದ ನೀನೇ ರಾಜನಿಗೆ ನಿವೇದಿಸು.”

03068013a ಏತಚ್ಛೃತ್ವಾಶ್ರುಪೂರ್ಣಾಕ್ಷೀ ಪರ್ಣಾದಸ್ಯ ವಿಶಾಂ ಪತೇ|

03068013c ದಮಯಂತೀ ರಹೋಽಭ್ಯೇತ್ಯ ಮಾತರಂ ಪ್ರತ್ಯಭಾಷತ||

ವಿಶಾಂಪತೇ! ಪರ್ಣಾದನ ಮಾತುಗಳನ್ನು ಕೇಳಿ ಕಣ್ಣುಗಳಲ್ಲಿ ಕಣ್ಣೀರನ್ನು ತುಂಬಿಕೊಂಡ ದಮಯಂತಿಯು ತಾಯಿಯ ಬಳಿಹೋಗಿ ಏಕಾಂತದಲ್ಲಿ ಹೇಳಿದಳು:

03068014a ಅಯಮರ್ಥೋ ನ ಸಂವೇದ್ಯೋ ಭೀಮೇ ಮಾತಃ ಕಥಂ ಚನ|

03068014c ತ್ವತ್ಸನ್ನಿಧೌ ಸಮಾದೇಕ್ಷ್ಯೇ ಸುದೇವಂ ದ್ವಿಜಸತ್ತಮಂ||

“ಅಮ್ಮ! ಈ ಮಾತು ರಾಜ ಭೀಮನಿಗೆ ಯಾವರೀತಿಯಲ್ಲೂ ತಿಳಿಯಬಾರದು! ನಿನ್ನ ಸನ್ನಿಧಿಯಲ್ಲಿ ದ್ವಿಜಸತ್ತಮ ಸುದೇವನಿಗೆ ಸೂಚನೆಗಳನ್ನು ಕೊಡುತ್ತೇನೆ.

03068015a ಯಥಾ ನ ನೃಪತಿರ್ಭೀಮಃ ಪ್ರತಿಪದ್ಯೇತ ಮೇ ಮತಂ|

03068015c ತಥಾ ತ್ವಯಾ ಪ್ರಯತ್ತವ್ಯಂ ಮಮ ಚೇತ್ಪ್ರಿಯಮಿಚ್ಚಸಿ||

ನೀನು ನನಗೆ ಪ್ರಿಯವಾದುದನ್ನು ಮಾಡಲು ಇಚ್ಛಿಸಿದರೆ, ನನ್ನ ಈ ಉದ್ದೇಶವು ನೃಪತಿ ಭೀಮನಿಗೆ ತಿಳಿಯದಂತೆ ನೋಡಿಕೊಳ್ಳಬೇಕು.

03068016a ಯಥಾ ಚಾಹಂ ಸಮಾನೀತಾ ಸುದೇವೇನಾಶು ಬಾಂಧವಾನ್|

03068016c ತೇನೈವ ಮಂಗಲೇನಾಶು ಸುದೇವೋ ಯಾತು ಮಾಚಿರಂ|

03068016 ಸಮಾನೇತುಂ ನಲಂ ಮಾತರಯೋಧ್ಯಾಂ ನಗರೀಮಿತಃ||

ಅಮ್ಮ! ಹೇಗೆ ಸುದೇವನು ನನ್ನನ್ನು ಬಂಧುಗಳೊಡನೆ ಕೂಡಿಸಿದನೋ ಅದೇ ಮಂಗಲಕಾರಕ ಸುದೇವನು ಈಗಲೇ ಅಯೋಧ್ಯಾ ನಗರಿಗೆ ಹೋಗಿ ನಲನೊಂದಿಗೆ ನನ್ನ ಸಮಾಗಮವಾಗುವಂತೆ ಮಾಡಲಿ.”

03068017a ವಿಶ್ರಾಂತಂ ಚ ತತಃ ಪಶ್ಚಾತ್ಪರ್ಣಾದಂ ದ್ವಿಜಸತ್ತಮಂ|

03068017c ಅರ್ಚಯಾಮಾಸ ವೈದರ್ಭೀ ಧನೇನಾತೀವ ಭಾಮಿನೀ||

ದ್ವಿಜಸತ್ತಮ ಪರ್ಣಾದನು ವಿಶ್ರಾಂತಿಯನ್ನು ಪಡೆದ ನಂತರ ಭಾಮಿನಿ ವೈದರ್ಭಿಯು ಅವನನ್ನು ಅತೀವ ಧನದಿಂದ ಅರ್ಚಿಸಿದಳು.

03068018a ನಲೇ ಚೇಹಾಗತೇ ವಿಪ್ರ ಭೂಯೋ ದಾಸ್ಯಾಮಿ ತೇ ವಸು|

03068018c ತ್ವಯಾ ಹಿ ಮೇ ಬಹು ಕೃತಂ ಯಥಾ ನಾನ್ಯಃ ಕರಿಷ್ಯತಿ|

03068018 ಯದ್ಭರ್ತ್ರಾಹಂ ಸಮೇಷ್ಯಾಮಿ ಶೀಘ್ರಮೇವ ದ್ವಿಜೋತ್ತಮ||

“ವಿಪ್ರ! ನಲನು ಇಲ್ಲಿಗೆ ಬಂದಮೇಲೆ ಇನ್ನೂ ಹೆಚ್ಚಿನ ಸಂಪತ್ತನ್ನು ನಿನಗೆ ಕೊಡುತ್ತೇನೆ. ಯಾಕೆಂದರೆ ಬೇರೆ ಯಾರೂ ಮಾಡಲಿಕ್ಕಾಗದೇ ಇರುವುದನ್ನು ನೀನು ನನಗೆ ಮಾಡಿದ್ದೀಯೆ. ದ್ವಿಜೋತ್ತಮ! ಶೀಘ್ರದಲ್ಲಿಯೇ ನಾನು ನನ್ನ ಪತಿಯನ್ನು ಸೇರುತ್ತೇನೆ.”

03068019a ಏವಮುಕ್ತೋಽರ್ಚಯಿತ್ವಾ ತಾಮಾಶೀರ್ವಾದೈಃ ಸುಮಂಗಲೈಃ|

03068019c ಗೃಹಾನುಪಯಯೌ ಚಾಪಿ ಕೃತಾರ್ಥಃ ಸ ಮಹಾಮನಾಃ||

ಈ ರೀತಿ ಕೇಳಿ ಕೃತಾರ್ಥನಾದ ಆ ಮಹಾಮನಸ್ಕನು ಸುಮಂಗಲ ಆಶೀರ್ವಾದಗಳಿಂದ ಅವಳನ್ನು ಅರ್ಚಿಸಿ ತನ್ನ ಮನೆಗೆ ತೆರಳಿದನು.

03068020a ತತಶ್ಚಾನಾಯ್ಯ ತಂ ವಿಪ್ರಂ ದಮಯಂತೀ ಯುಧಿಷ್ಠಿರ|

03068020c ಅಬ್ರವೀತ್ಸನ್ನಿಧೌ ಮಾತುರ್ದುಃಖಶೋಕಸಮನ್ವಿತಾ||

ಯುಧಿಷ್ಠಿರ! ನಂತರ ದಮಯಂತಿಯು ಆ ವಿಪ್ರನನ್ನು (ಸುದೇವನನ್ನು) ಪುನಃ ಕರೆಯಿಸಿ ತಾಯಿಯ ಸನ್ನಿಧಿಯಲ್ಲಿ ಶೋಕಸಮನ್ವಿತಳಾಗಿ ಹೇಳಿದಳು:

03068021a ಗತ್ವಾ ಸುದೇವ ನಗರೀಮಯೋಧ್ಯಾವಾಸಿನಂ ನೃಪಂ|

03068021c ಋತುಪರ್ಣಂ ವಚೋ ಬ್ರೂಹಿ ಪತಿಮನ್ಯಂ ಚಿಕೀರ್ಷತೀ|

03068021 ಆಸ್ಥಾಸ್ಯತಿ ಪುನರ್ಭೈಮೀ ದಮಯಂತೀ ಸ್ವಯಂವರಂ||

“ಸುದೇವ! ಅಯೋಧ್ಯಾವಾಸಿ ನೃಪ ಋತುಪರ್ಣನಲ್ಲಿ ಹೋಗಿ ಹೇಳು: “ಭೈಮಿ ದಮಯಂತಿಯು ಅನ್ಯ ಪತಿಯನ್ನು ಬಯಸಿ ಪುನಃ ಇಂದು ಸ್ವಯಂವರವನ್ನು ಇಟ್ಟುಕೊಂಡಿದ್ದಾಳೆ.

03068022a ತತ್ರ ಗಚ್ಚಂತಿ ರಾಜಾನೋ ರಾಜಪುತ್ರಾಶ್ಚ ಸರ್ವಶಃ|

03068022c ಯಥಾ ಚ ಗಣಿತಃ ಕಾಲಃ ಶ್ವೋಭೂತೇ ಸ ಭವಿಷ್ಯತಿ||

ಎಲ್ಲ ರಾಜರೂ ರಾಜಪುತ್ರರೂ ಅಲ್ಲಿಗೆ ಹೋಗುತ್ತಿದ್ದಾರೆ. ಕಾಲ ಗಣಿತದ ಪ್ರಕಾರ ಅದು ನಾಳೆಯೇ ನಡೆಯುತ್ತಿದೆ.

03068023a ಯದಿ ಸಂಭಾವನೀಯಂ ತೇ ಗಚ್ಚ ಶೀಘ್ರಮರಿಂದಮ|

03068023c ಸೂರ್ಯೋದಯೇ ದ್ವಿತೀಯಂ ಸಾ ಭರ್ತಾರಂ ವರಯಿಷ್ಯತಿ|

03068023 ನ ಹಿ ಸ ಜ್ಞಾಯತೇ ವೀರೋ ನಲೋ ಜೀವನ್ಮೃತೋಽಪಿ ವಾ||

ಅರಿಂದಮ! ಸಾಧ್ಯವಿದ್ದರೆ ಶೀಘ್ರದಲ್ಲಿಯೇ ಹೊರಡು. ಸೂರ್ಯೋದಯದಲ್ಲಿಯೇ ಅವಳು ಎರಡನೆಯ ಪತಿಯನ್ನು ವರಿಸುತ್ತಾಳೆ. ಆ ವೀರ ನಲನು ಜೀವಂತನಿದ್ದಾನೋ ಮೃತನಾಗಿದ್ದಾನೋ ತಿಳಿಯದು.””

03068024a ಏವಂ ತಯಾ ಯಥೋಕ್ತಂ ವೈ ಗತ್ವಾ ರಾಜಾನಮಬ್ರವೀತ್|

03068024c ಋತುಪರ್ಣಂ ಮಹಾರಾಜ ಸುದೇವೋ ಬ್ರಾಹ್ಮಣಸ್ತದಾ||

ರಾಜ! ನಂತರ ಬ್ರಾಹ್ಮಣ ಸುದೇವನು ಮಹಾರಾಜ ಋತುಪರ್ಣನಲ್ಲಿಗೆ ಹೋಗಿ ಅವಳು ಹೇಳಿಕೊಟ್ಟ ಹಾಗೆಯೇ ಹೇಳಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ದಮಯಂತೀ ಪುನಃಸ್ವಯಂವರಕಥನೇ ಅಷ್ಟಷಷ್ಟಿತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ದಮಯಂತೀ ಪುನಃಸ್ವಯಂವರ ಕಥನ ಎನ್ನುವ ಅರವತ್ತೆಂಟನೆಯ ಅಧ್ಯಾಯವು.

Related image

Comments are closed.