ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ
Contents
Toggle೬೭
ನಲಾನ್ವೇಷಣೆ
ನಲನನ್ನು ಹುಡುಕಲು ಬ್ರಾಹ್ಮಣರನ್ನು ಕಳುಹಿಸಿದ್ದುದು (೧-೭). ಹೊರಡುವಾಗ ದಮಯಂತಿಯು ಬ್ರಾಹ್ಮಣರಿಗೆ ಕೆಲವು ಪ್ರಶ್ನೆಗಳನ್ನಿತ್ತು ಈ ಪ್ರಶ್ನೆಗಳಿಗೆ ಉತ್ತರಿಸುವವನ ವಿವರಗಳನ್ನು ತಿಳಿದು ಬನ್ನಿ ಎಂದು ಹೇಳಿ ಕಳುಹಿಸುವುದು (೮-೨೨).
03067001 ದಮಯಂತ್ಯುವಾಚ|
03067001a ಮಾಂ ಚೇದಿಚ್ಚಸಿ ಜೀವಂತೀಂ ಮಾತಃ ಸತ್ಯಂ ಬ್ರವೀಮಿ ತೇ|
03067001c ನರವೀರಸ್ಯ ವೈ ತಸ್ಯ ನಲಸ್ಯಾನಯನೇ ಯತ||
ದಮಯಂತಿಯು ಹೇಳಿದಳು: “ಮಾತಾ! ನಾನು ಸತ್ಯವನ್ನು ಹೇಳುತ್ತಿದ್ದೇನೆ. ನನ್ನನ್ನು ಜೀವಂತ ನೋಡಬೇಕೆಂದು ನಿನ್ನ ಇಚ್ಚೆ ಇದ್ದರೆ ಆ ನರವೀರ ನಲನನ್ನು ಇಲ್ಲಿಗೆ ಕರೆತರೆಸು.””
03067002 ಬೃಹದಶ್ವ ಉವಾಚ|
03067002a ದಮಯಂತ್ಯಾ ತಥೋಕ್ತಾ ತು ಸಾ ದೇವೀ ಭೃಶದುಃಖಿತಾ|
03067002c ಬಾಷ್ಪೇಣ ಪಿಹಿತಾ ರಾಜನ್ನೋತ್ತರಂ ಕಿಂ ಚಿದಬ್ರವೀತ್||
ಬೃಹದಶ್ವನು ಹೇಳಿದನು: “ದಮಯಂತಿಯ ಈ ಮಾತುಗಳನ್ನು ಕೇಳಿ ಬಹುದುಃಖಿತಳಾಗಿ ಕಣ್ಣೀರಿಡುತ್ತಿದ್ದ ಆ ದೇವಿಗೆ ಯಾವುದೇ ರೀತಿಯ ಉತ್ತರವನ್ನು ಕೊಡಲೂ ಆಗಲಿಲ್ಲ.
03067003a ತದವಸ್ಥಾಂ ತು ತಾಂ ದೃಷ್ಟ್ವಾ ಸರ್ವಮಂತಃಪುರಂ ತದಾ|
03067003c ಹಾಹಾಭೂತಮತೀವಾಸೀದ್ಭೃಶಂ ಚ ಪ್ರರುರೋದ ಹ||
ಈ ಅವಸ್ಥೆಯನ್ನು ನೋಡಿ ಅಂತಃಪುರದಲ್ಲಿದ್ದವರೆಲ್ಲರೂ “ಹಾ! ಹಾ!” ಎಂದು ಅತೀವ ದುಃಖದಿಂದ ರೋದಿಸಿದರು.
03067004a ತತೋ ಭೀಮಂ ಮಹಾರಾಜ ಭಾರ್ಯಾ ವಚನಮಬ್ರವೀತ್|
03067004c ದಮಯಂತೀ ತವ ಸುತಾ ಭರ್ತಾರಮನುಶೋಚತಿ||
03067005a ಅಪಕೃಷ್ಯ ಚ ಲಜ್ಜಾಂ ಮಾಂ ಸ್ವಯಮುಕ್ತವತೀ ನೃಪ|
03067005c ಪ್ರಯತಂತು ತವ ಪ್ರೇಷ್ಯಾಃ ಪುಣ್ಯಶ್ಲೋಕಸ್ಯ ದರ್ಶನೇ||
ಆಗ ಮಹಾರಾಣಿಯು ಭೀಮನಿಗೆ ಹೇಳಿದಳು: “ನಿನ್ನ ಸುತೆ ದಮಯಂತಿಯು ತನ್ನ ಪತಿಯನ್ನು ಕುರಿತು ಶೋಕಿಸುತ್ತಿದ್ದಾಳೆ. ರಾಜ! ಸ್ವಲ್ಪವೂ ಲಜ್ಜಿಸದೇ ಅವಳು ಸ್ವತಃ ನನ್ನಲ್ಲಿ ಈ ಮಾತನ್ನು ಹೇಳಿಕೊಂಡಿದ್ದಾಳೆ. ಪುಣ್ಯಶ್ಲೋಕನನ್ನು ಹುಡುಕಲು ನಿನ್ನ ಜನರನ್ನು ಕಳುಹಿಸಿಕೊಡು.”
03067006a ತಯಾ ಪ್ರಚೋದಿತೋ ರಾಜಾ ಬ್ರಾಹ್ಮಣಾನ್ವಶವರ್ತಿನಃ|
03067006c ಪ್ರಾಸ್ಥಾಪಯದ್ದಿಶಃ ಸರ್ವಾ ಯತಧ್ವಂ ನಲದರ್ಶನೇ||
ಅವಳಿಂದ ಪ್ರಚೋದಿತನಾದ ರಾಜನು ನಲನನ್ನು ಹುಡುಕಲು ತನ್ನ ಕೆಳಗೆ ಕೆಲಸ ಮಾಡುತ್ತಿದ್ದ ಬ್ರಾಹ್ಮಣರನ್ನು ಎಲ್ಲ ದಿಕ್ಕುಗಳಿಗೂ ಕಳುಹಿಸಿದನು.
03067007a ತತೋ ವಿದರ್ಭಾಧಿಪತೇರ್ನಿಯೋಗಾದ್ಬ್ರಾಹ್ಮಣರ್ಷಭಾಃ|
03067007c ದಮಯಂತೀಮಥೋ ದೃಷ್ಟ್ವಾ ಪ್ರಸ್ಥಿತಾಃ ಸ್ಮೇತ್ಯಥಾಬ್ರುವನ್||
ವಿದರ್ಭಾಧಿಪತಿಯ ಆದೇಶದಂತೆ ಆ ಬ್ರಾಹ್ಮಣರ್ಷಭರು ದಮಯಂತಿಯನ್ನು ಕಂಡು “ನಾವು ಹೊರಡುತ್ತಿದ್ದೇವೆ!” ಎಂದರು.
03067008a ಅಥ ತಾನಬ್ರವೀದ್ಭೈಮೀ ಸರ್ವರಾಷ್ಟ್ರೇಷ್ವಿದಂ ವಚಃ|
03067008c ಬ್ರುವಧ್ವಂ ಜನಸಂಸತ್ಸು ತತ್ರ ತತ್ರ ಪುನಃ ಪುನಃ||
ಭೈಮಿಯು ಅವರನ್ನುದ್ದೇಶಿಸಿ ಹೇಳಿದಳು: “ಎಲ್ಲಾ ರಾಷ್ಟ್ರಗಳಲ್ಲಿ ಮತ್ತು ಎಲ್ಲೆಲ್ಲಿ ಜನಸಮೂಹಗಳಿರುತ್ತವೆಯೋ ಅಲ್ಲಲ್ಲಿ ಈ ಪ್ರಶ್ನೆಯನ್ನು ಪುನಃ ಪುನಃ ವಾಚಿಸಿ:
03067009a ಕ್ವ ನು ತ್ವಂ ಕಿತವ ಚಿತ್ತ್ವಾ ವಸ್ತ್ರಾರ್ಧಂ ಪ್ರಸ್ಥಿತೋ ಮಮ|
03067009c ಉತ್ಸೃಜ್ಯ ವಿಪಿನೇ ಸುಪ್ತಾಮನುರಕ್ತಾಂ ಪ್ರಿಯಾಂ ಪ್ರಿಯ||
“ಪ್ರಿಯ! ವಿಪಿನದಲ್ಲಿ ಅನುರಕ್ತಳಾಗಿ ಮಲಗಿದ್ದ ನಿನ್ನ ಈ ಪ್ರಿಯೆಯ ಅರ್ಧ ವಸ್ತ್ರವನ್ನು ಕತ್ತರಿಸಿ ಬಿಟ್ಟು ಹೊರಟು ಹೋದ ನೀನು ಎಲ್ಲಿದ್ದೀಯೆ?
03067010a ಸಾ ವೈ ಯಥಾ ಸಮಾದಿಷ್ಟಾ ತತ್ರಾಸ್ತೇ ತ್ವತ್ಪ್ರತೀಕ್ಷಿಣೀ|
03067010c ದಹ್ಯಮಾನಾ ಭೃಶಂ ಬಾಲಾ ವಸ್ತ್ರಾರ್ಧೇನಾಭಿಸಂವೃತಾ||
ನೀನು ಅವಳಿಗೆ ಎಲ್ಲಿಗೆ ಹೋಗಲು ತೋರಿಸಿದ್ದೆಯೋ ಅಲ್ಲಿಯೇ ಮುಗ್ಧಳಾದ ಅವಳು ಅರ್ಧವಸ್ತ್ರವನ್ನೇ ಧರಿಸಿ ಶೋಕಸಂತಪ್ತಳಾಗಿ ನಿನ್ನನ್ನು ಪ್ರತೀಕ್ಷಿಸುತ್ತಿದ್ದಾಳೆ.
03067011a ತಸ್ಯಾ ರುದಂತ್ಯಾಃ ಸತತಂ ತೇನ ಶೋಕೇನ ಪಾರ್ಥಿವ|
03067011c ಪ್ರಸಾದಂ ಕುರು ವೈ ವೀರ ಪ್ರತಿವಾಕ್ಯಂ ದದಸ್ವ ಚ||
ಪಾರ್ಥಿವ! ವೀರ! ನಿನ್ನ ಶೋಕದಿಂದ ಸತತವಾಗಿ ರೋದಿಸುತ್ತಿರುವ ಅವಳಿಗೆ ಪ್ರೀತಿಯುತ ಮಾತುಗಳನ್ನಿತ್ತು ಅನುಗ್ರಹಿಸು.”
03067012a ಏತದನ್ಯಚ್ಚ ವಕ್ತವ್ಯಂ ಕೃಪಾಂ ಕುರ್ಯಾದ್ಯಥಾ ಮಯಿ|
03067012c ವಾಯುನಾ ಧೂಯಮಾನೋ ಹಿ ವನಂ ದಹತಿ ಪಾವಕಃ||
ವಾಯುವಿನಿಂದ ಹಬ್ಬಿಸಿದ ಪಾವಕನು ಹೇಗೆ ವನವನ್ನಿಡೀ ದಹಿಸುವನೋ ಹಾಗೆ ಎಲ್ಲೆಡೆಯೂ ಈ ವಾಖ್ಯವನ್ನು ಇದೇರೀತಿ ವಾಚಿಸಿ ನನ್ನ ಮೇಲೆ ಕೃಪೆ ಮಾಡಿ.
03067013a ಭರ್ತವ್ಯಾ ರಕ್ಷಣೀಯಾ ಚ ಪತ್ನೀ ಹಿ ಪತಿನಾ ಸದಾ|
03067013c ತನ್ನಷ್ಟಮುಭಯಂ ಕಸ್ಮಾದ್ಧರ್ಮಜ್ಞಸ್ಯ ಸತಸ್ತವ||
“ಪತಿಯು ಯಾವಾಗಲೂ ಪತ್ನಿಯ ಸಹಾಯ ಮತ್ತು ರಕ್ಷಣೆ ಮಾಡಬೇಕಲ್ಲವೇ? ಆದರೆ ಧರ್ಮಜ್ಞನಾದ ನೀನು ಏಕೆ ಈ ಎರಡನ್ನೂ ತಿರಸ್ಕರಿಸಿದೆ?
03067014a ಖ್ಯಾತಃ ಪ್ರಾಜ್ಞಃ ಕುಲೀನಶ್ಚ ಸಾನುಕ್ರೋಶಶ್ಚ ತ್ವಂ ಸದಾ|
03067014c ಸಂವೃತ್ತೋ ನಿರನುಕ್ರೋಶಃ ಶಂಕೇ ಮದ್ಭಾಗ್ಯಸಂಕ್ಷಯಾತ್||
ನನ್ನ ಭಾಗ್ಯ ಕಳೆದು ಹೋದುದರಿಂದಲೇ ಸದಾ ಖ್ಯಾತನೂ. ಪ್ರಾಜ್ಞನೂ, ಕುಲೀನನೂ, ಅನುಕಂಪಿತನೂ ಆಗಿದ್ದ ನೀನು ಈಗ ನಿರನುಕ್ರೋಷನಾಗಿದ್ದೀಯೆ ಎಂದು ಶಂಕಿಸುತ್ತೇನೆ.
03067015a ಸ ಕುರುಷ್ವ ಮಹೇಷ್ವಾಸ ದಯಾಂ ಮಯಿ ನರರ್ಷಭ|
03067015c ಆನೃಶಂಸ್ಯಂ ಪರೋ ಧರ್ಮಸ್ತ್ವತ್ತ ಏವ ಹಿ ಮೇ ಶ್ರುತಂ||
ನರರ್ಷಭ! ಮಹೇಷ್ವಾಸ! ನನ್ನ ಮೇಲೆ ದಯೆತೋರು! ದಯೆಯೇ ಪರಮ ಧರ್ಮವೆಂದು ನಾನು ನಿನ್ನಿಂದಲೇ ಕೇಳಿದ್ದೇನೆ.”
03067016a ಏವಂ ಬ್ರುವಾಣಾನ್ಯದಿ ವಃ ಪ್ರತಿಬ್ರೂಯಾದ್ಧಿ ಕಶ್ಚನ|
03067016c ಸ ನರಃ ಸರ್ವಥಾ ಜ್ಞೇಯಃ ಕಶ್ಚಾಸೌ ಕ್ವ ಚ ವರ್ತತೇ||
ನಿಮ್ಮ ಈ ಮಾತುಗಳಿಗೆ ಯಾರಾದರೂ ಪ್ರತಿಯಾಗಿ ಮಾತನಾಡಿದರೆ, ಆ ಮನುಷ್ಯನ ಕುರಿತು ಎಲ್ಲವನ್ನೂ - ಯಾರು, ಎಲ್ಲಿ ಏನು ಮಾಡುತ್ತಾನೆ - ತಿಳಿಯಿರಿ.
03067017a ಯಚ್ಚ ವೋ ವಚನಂ ಶ್ರುತ್ವಾ ಬ್ರೂಯಾತ್ಪ್ರತಿವಚೋ ನರಃ|
03067017c ತದಾದಾಯ ವಚಃ ಕ್ಷಿಪ್ರಂ ಮಮಾವೇದ್ಯಂ ದ್ವಿಜೋತ್ತಮಾಃ||
ದ್ವಿಜೋತ್ತಮರೇ! ಈ ಮಾತುಗಳನ್ನು ಕೇಳಿ ಪ್ರತಿಯಾಗಿ ಯಾರಾದರೂ ಹೇಳಿದರೆ ತಕ್ಷಣವೇ ಅವರು ಹೇಳಿದ್ದುದನ್ನು ನನಗೆ ಬಂದು ತಿಳಿಸಿ.
03067018a ಯಥಾ ಚ ವೋ ನ ಜಾನೀಯಾಚ್ಚರತೋ ಭೀಮಶಾಸನಾತ್|
03067018c ಪುನರಾಗಮನಂ ಚೈವ ತಥಾ ಕಾರ್ಯಮತಂದ್ರಿತೈಃ||
ಹಿಂದಿರುಗುವಾಗ ತಡಮಾಡಬಾರದು. ಮತ್ತು ನೀವು ಭೀಮನ ಹೇಳಿಕೆಯಂತೆ ಹೊರಗೆ ತಿರುಗುತ್ತಿದ್ದೀರಿ ಎಂದು ಅವನಿಗೆ ತಿಳಿಯಬಾರದು.
03067019a ಯದಿ ವಾಸೌ ಸಮೃದ್ಧಃ ಸ್ಯಾದ್ಯದಿ ವಾಪ್ಯಧನೋ ಭವೇತ್|
03067019c ಯದಿ ವಾಪ್ಯರ್ಥಕಾಮಃ ಸ್ಯಾಜ್ಜ್ಞೇಯಮಸ್ಯ ಚಿಕೀರ್ಷಿತಂ||
ಅವನು ಶ್ರೀಮಂತನಿರಲಿ ಅಥವಾ ಬಡವನಿರಲಿ ಅಥವಾ ಐಶ್ವರ್ಯದ ಹಸಿವೆಯಿಂದಿರಲಿ, ಅವನ ಉದ್ದೇಶಗಳನ್ನು ತಿಳಿಯಿರಿ.”
03067020a ಏವಮುಕ್ತಾಸ್ತ್ವಗಚ್ಚಂಸ್ತೇ ಬ್ರಾಹ್ಮಣಾಃ ಸರ್ವತೋದಿಶಂ|
03067020c ನಲಂ ಮೃಗಯಿತುಂ ರಾಜಂಸ್ತಥಾ ವ್ಯಸನಿನಂ ತದಾ||
ಇದನ್ನು ಕೇಳಿ ಹೊರಟ ಬ್ರಾಹ್ಮಣರು ವ್ಯಸನಿ ರಾಜ ನಲನನ್ನು ಅರಸುತ್ತಾ ಸರ್ವದಿಕ್ಕುಗಳಲ್ಲಿ ಹೊರಟರು.
03067021a ತೇ ಪುರಾಣಿ ಸರಾಷ್ಟ್ರಾಣಿ ಗ್ರಾಮಾನ್ಘೋಷಾಂಸ್ತಥಾಶ್ರಮಾನ್|
03067021c ಅನ್ವೇಷಂತೋ ನಲಂ ರಾಜನ್ನಾಧಿಜಗ್ಮುರ್ದ್ವಿಜಾತಯಃ||
ನಲನನ್ನು ಅನ್ವೇಶಿಸುತ್ತಾ ಆ ದ್ವಿಜರು ಪುರ, ರಾಷ್ಟ್ರ, ಗ್ರಾಮ, ಗೋಶಾಲೆ, ಆಶ್ರಮ, ಎಲ್ಲಾ ಕಡೆ ಹೋದರು.
03067022a ತಚ್ಚ ವಾಕ್ಯಂ ತಥಾ ಸರ್ವೇ ತತ್ರ ತತ್ರ ವಿಶಾಂ ಪತೇ|
03067022c ಶ್ರಾವಯಾಂ ಚಕ್ರಿರೇ ವಿಪ್ರಾ ದಮಯಂತ್ಯಾ ಯಥೇರಿತಂ||
ವಿಶಾಂಪತೇ! ವಿಪ್ರರು ಹೋದಲ್ಲೆಲ್ಲಾ ದಮಯಂತಿಯು ಕೊಟ್ಟಿದ್ದ ವಾಖ್ಯವನ್ನು ಎಲ್ಲರಿಗೂ ಕೇಳುವಂತೆ ಹೇಳಿದರು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ನಲಾನ್ವೇಷಣೇ ಸಪ್ತಷಷ್ಟಿತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ನಲಾನ್ವೇಷಣ ಎನ್ನುವ ಅರವತ್ತೇಳನೆಯ ಅಧ್ಯಾಯವು.
