ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ
Contents
Toggle೬೦
ಅಜಗರನಿಂದ ದಮಯಂತಿಯ ಬಿಡುಗಡೆ
ಎಚ್ಚರಗೊಂಡ ದಮಯಂತಿಯು ಪತಿಯನ್ನು ಕಾಣದೇ ವಿಲಪಿಸುತ್ತಾ ಅವನನ್ನು ಹುಡುಕುತ್ತಾ ಅರಣ್ಯದಲ್ಲಿ ಸುತ್ತಾಡಿದುದು (೧-೧೮). ಮಾರ್ಗದಲ್ಲಿ ಹೆಬ್ಬಾವೊಂದು ಅವಳನ್ನು ಹಿಡಿದು ನುಂಗಲು ಪ್ರಾರಂಭಿಸುವಾಗ, ಅವಳ ಕೂಗನ್ನು ಕೇಳಿದ ವ್ಯಾಧನೋರ್ವನು ಬಂದು ಹಾವನ್ನು ಕೊಂದು ದಮಯಂತಿಯನ್ನು ಮುಕ್ತಗೊಳಿಸಿದುದು (೧೯-೩೦). ತನ್ನ ರೂಪವನ್ನು ಕಂಡು ಮೋಹಿತನಾದ ವ್ಯಾಧನನ್ನು ದಮಯಂತಿಯು ಶಪಿಸಿ ಸುಟ್ಟುಹಾಕಿದುದು (೩೧-೩೮).
03060001 ಬೃಹದಶ್ವ ಉವಾಚ|
03060001a ಅಪಕ್ರಾಂತೇ ನಲೇ ರಾಜನ್ದಮಯಂತೀ ಗತಕ್ಲಮಾ|
03060001c ಅಬುಧ್ಯತ ವರಾರೋಹಾ ಸಂತ್ರಸ್ತಾ ವಿಜನೇ ವನೇ||
ಬೃಹದಶ್ವನು ಹೇಳಿದನು: “ರಾಜನ್! ಅಯಾಸವನ್ನು ನಿವಾರಿಸಿಕೊಂಡ ವರಾರೋಹೆ ದಮಯಂತಿಯು ನಲನು ಹೊರಟುಹೋದ ಬಳಿಕ ನಿರ್ಜನ ವನದಲ್ಲಿ ನಡುಗುತ್ತಾ ಎಚ್ಚರಗೊಂಡಳು.
03060002a ಸಾಪಶ್ಯಮಾನಾ ಭರ್ತಾರಂ ದುಃಖಶೋಕಸಮನ್ವಿತಾ|
03060002c ಪ್ರಾಕ್ರೋಶದುಚ್ಚೈಃ ಸಂತ್ರಸ್ತಾ ಮಹಾರಾಜೇತಿ ನೈಷಧಂ||
ಪತಿಯನ್ನು ಕಾಣದೇ, ದುಃಖಶೋಕಸಮನ್ವಿತಳಾಗಿ “ಮಹಾರಾಜ!” ಎಂದು ನೈಷಧನನ್ನು ಜೋರಾಗಿ ಕೂಗಿ ಕರೆದಳು.
03060003a ಹಾ ನಾಥ ಹಾ ಮಹಾರಾಜ ಹಾ ಸ್ವಾಮಿನ್ಕಿಂ ಜಹಾಸಿ ಮಾಂ|
03060003c ಹಾ ಹತಾಸ್ಮಿ ವಿನಷ್ಟಾಸ್ಮಿ ಭೀತಾಸ್ಮಿ ವಿಜನೇ ವನೇ||
“ಹಾ ನಾಥ! ಹಾ ಮಹಾರಾಜ! ಹಾ ಸ್ವಾಮೀ! ನನ್ನನ್ನು ಏಕೆ ಬಿಟ್ಟುಹೋದೆ? ನಾನು ಈ ನಿರ್ಜನ ವನದಲ್ಲಿ ಹತಳಾಗಿದ್ದೇನೆ! ವಿನಷ್ಟಳಾಗಿದ್ದೇನೆ! ಭೀತಳಾಗಿದ್ದೇನೆ!
03060004a ನನು ನಾಮ ಮಹಾರಾಜ ಧರ್ಮಜ್ಞಃ ಸತ್ಯವಾಗಸಿ|
03060004c ಕಥಮುಕ್ತ್ವಾ ತಥಾಸತ್ಯಂ ಸುಪ್ತಾಮುತ್ಸೃಜ್ಯ ಮಾಂ ಗತಃ||
ಮಹಾರಾಜ! ನೀನು ಸದಾ ಧರ್ಮಜ್ಞ ಮತ್ತು ಸತ್ಯವಾದಿ. ಆದರೆ ಈಗ ಅಸತ್ಯವನ್ನು ನುಡಿದು ಮಲಗಿದ್ದ ನನ್ನನ್ನು ಹೇಗೆ ಬಿಟ್ಟು ಹೋದೆ?
03060005a ಕಥಮುತ್ಸೃಜ್ಯ ಗಂತಾಸಿ ವಶ್ಯಾಂ ಭಾರ್ಯಾಮನುವ್ರತಾಂ|
03060005c ವಿಶೇಷತೋಽನಪಕೃತೇ ಪರೇಣಾಪಕೃತೇ ಸತಿ||
ವಿಶೇಷವಾಗಿ ಯಾರಿಗೂ ಕೆಟ್ಟದ್ದನ್ನು ಮಾಡದ, ಬೇರೆಯವರಿಂದ ಕೆಟ್ಟದ್ದನ್ನು ಮಾಡಿಸಿಕೊಂಡ ನೀನು - ನಿನ್ನ ವಶದಲ್ಲಿಯೇ ಇರುವ, ನಿನ್ನನ್ನೇ ಅನುಸರಿಸುವ - ಭಾರ್ಯೆಯನ್ನು ಹೇಗೆ ಬಿಟ್ಟು ಹೋದೆ?
03060006a ಶಕ್ಷ್ಯಸೇ ತಾ ಗಿರಃ ಸತ್ಯಾಃ ಕರ್ತುಂ ಮಯಿ ನರೇಶ್ವರ|
03060006c ಯಾಸ್ತ್ವಯಾ ಲೋಕಪಾಲಾನಾಂ ಸಂನಿಧೌ ಕಥಿತಾಃ ಪುರಾ||
ನರೇಶ್ವರ! ಹಿಂದೆ ಲೋಕಪಾಲಕರ ಸನ್ನಿಧಿಯಲ್ಲಿ ನನಗೆ ಕೊಟ್ಟ ವಚನವನ್ನು ಸತ್ಯವನ್ನಾಗಿ ಮಾಡಲು ನಿನಗೆ ಸಾಧ್ಯವಿಲ್ಲವೇ?
03060007a ಪರ್ಯಾಪ್ತಃ ಪರಿಹಾಸೋಽಯಮೇತಾವಾನ್ಪುರುಷರ್ಷಭ|
03060007c ಭೀತಾಹಮಸ್ಮಿ ದುರ್ಧರ್ಷ ದರ್ಶಯಾತ್ಮಾನಮೀಶ್ವರ||
ಪುರುಷರ್ಷಭ! ಸಾಕು ಈ ಪರಿಹಾಸ! ದುರ್ಧರ್ಷ! ಈಶ್ವರ! ನಾನು ಭೀತಳಾಗಿದ್ದೇನೆ! ನಿನ್ನನ್ನು ಕಾಣಿಸಿಕೋ.
03060008a ದೃಶ್ಯಸೇ ದೃಶ್ಯಸೇ ರಾಜನ್ನೇಷ ತಿಷ್ಠಸಿ ನೈಷಧ|
03060008c ಆವಾರ್ಯ ಗುಲ್ಮೈರಾತ್ಮಾನಂ ಕಿಂ ಮಾಂ ನ ಪ್ರತಿಭಾಷಸೇ||
ನಿನ್ನನ್ನು ನೋಡಿದೆ! ರಾಜ! ನಿನ್ನನ್ನು ನೋಡಿದೆ! ನೈಷಧ! ನೀನು ಅಲ್ಲಿ ನಿಂತಿದ್ದೀಯೆ. ಗಿಡಗಳ ಹಿಂದೆ ಅಡಗಿಕೊಂಡಿದ್ದೀಯೆ. ನೀನು ಯಾಕೆ ನನಗೆ ಉತ್ತರಿಸುತ್ತಿಲ್ಲ?
03060009a ನೃಶಂಸಂ ಬತ ರಾಜೇಂದ್ರ ಯನ್ಮಾಮೇವಂಗತಾಮಿಹ|
03060009c ವಿಲಪಂತೀಂ ಸಮಾಲಿಂಗ್ಯ ನಾಶ್ವಾಸಯಸಿ ಪಾರ್ಥಿವ||
ಪಾರ್ಥಿವ! ರಾಜೇಂದ್ರ! ನನ್ನನ್ನು ಇನ್ನು ಹಿಂಸಿಸಬೇಡ! ನಾನು ಇಲ್ಲಿ ವಿಲಪಿಸುತ್ತಿದ್ದೇನೆ ಎಂದು ತಿಳಿದರೂ ನೀನು ನನ್ನನ್ನು ನಿನ್ನ ಬಾಹುಗಳಲ್ಲಿರಿಸಿ ಸಂತವಿಸುತ್ತಿಲ್ಲವಲ್ಲ!
03060010a ನ ಶೋಚಾಮ್ಯಹಮಾತ್ಮಾನಂ ನ ಚಾನ್ಯದಪಿ ಕಿಂ ಚನ|
03060010c ಕಥಂ ನು ಭವಿತಾಸ್ಯೇಕ ಇತಿ ತ್ವಾಂ ನೃಪ ಶೋಚಿಮಿ||
ನೃಪ! ನಾನು ನಿನ್ನನ್ನು ಬಿಟ್ಟು ನನ್ನ ಬಗ್ಗೆ ಅಥವಾ ಬೇರೆ ಯಾವುದರ ಕುರಿತೂ ಯೋಚಿಸುತ್ತಿಲ್ಲ. ನೀನು ಒಬ್ಬನೇ ಹೇಗೆ ಇರುತ್ತೀಯೆ ಎಂದು ಶೋಕಿಸುತ್ತಿದ್ದೇನೆ.
03060011a ಕಥಂ ನು ರಾಜಂಸ್ತೃಷಿತಃ ಕ್ಷುಧಿತಃ ಶ್ರಮಕರ್ಶಿತಃ|
03060011c ಸಾಯಾಃನೇ ವೃಕ್ಷಮೂಲೇಷು ಮಾಮಪಶ್ಯನ್ಭವಿಷ್ಯಸಿ||
ರಾತ್ರಿ ಬಿದ್ದಮೇಲೆ ಹಸಿವು ಬಾಯಾರಿಕೆಗಳಿಂದ ಬಳಲಿದ ನೀನು ವೃಕ್ಷದ ಅಡಿಯಲ್ಲಿ ಕುಳಿತು ನನ್ನನ್ನೂ ನೋಡದೇ ಹೇಗೆ ಇರಬಲ್ಲೆ ರಾಜನ್?”
03060012a ತತಃ ಸಾ ತೀವ್ರಶೋಕಾರ್ತಾ ಪ್ರದೀಪ್ತೇವ ಚ ಮನ್ಯುನಾ|
03060012c ಇತಶ್ಚೇತಶ್ಚ ರುದತೀ ಪರ್ಯಧಾವತ ದುಃಖಿತಾ||
ತೀವ್ರ ಶೋಕ-ಕೋಪಗಳಿಂದ ಉರಿಯುತ್ತಿದ್ದ ಅವಳು ದುಃಖದಿಂದ ಅಳುತ್ತಾ ಅತ್ತಿತ್ತ ಓಡತೊಡಗಿದಳು.
03060013a ಮುಹುರುತ್ಪತತೇ ಬಾಲಾ ಮುಹುಃ ಪತತಿ ವಿಹ್ವಲಾ|
03060013c ಮುಹುರಾಲೀಯತೇ ಭೀತಾ ಮುಹುಃ ಕ್ರೋಶತಿ ರೋದಿತಿ||
ಆ ಬಾಲೆಯು ಒಂದು ಕ್ಷಣ ಮೇಲೇಳುತ್ತಿದ್ದಳು, ಇನ್ನೊಂದು ಕ್ಷಣ ವಿಹ್ವಲಳಾಗಿ ಬೀಳುತ್ತಿದ್ದಳು. ಒಂದು ಕ್ಷಣ ಬೀತಳಾಗಿ ಮುದುಡಿಕೊಂಡಿರುತ್ತಿದ್ದಳು, ಮತ್ತೊಂದು ಕ್ಷಣ ಜೋರಾಗಿ ಅಳುತ್ತಿದ್ದಳು.
03060014a ಸಾ ತೀವ್ರಶೋಕಸಂತಪ್ತಾ ಮುಹುರ್ನಿಃಶ್ವಸ್ಯ ವಿಹ್ವಲಾ|
03060014c ಉವಾಚ ಭೈಮೀ ನಿಷ್ಕ್ರಮ್ಯ ರೋದಮಾನಾ ಪತಿವ್ರತಾ||
ತೀವ್ರ ಶೋಕ ಸಂತಪ್ತಳಾಗಿ ವಿಹ್ವಲಳಾದ ಆ ಪತಿವ್ರತೆ ಭೈಮಿಯು ನಿಟ್ಟುಸಿರು ಬಿಡುತ್ತಾ ಹೊರ ಬಂದು ಅಳುತ್ತಾ ಹೇಳಿದಳು.
03060015a ಯಸ್ಯಾಭಿಶಾಪಾದ್ದುಃಖಾರ್ತೋ ದುಃಖಂ ವಿಂದತಿ ನೈಷಧಃ|
03060015c ತಸ್ಯ ಭೂತಸ್ಯ ತದ್ದುಃಖಾದ್ದುಃಖಮಭ್ಯಧಿಕಂ ಭವೇತ್||
“ಯಾರ ಅಭಿಶಾಪದಿಂದ ದುಃಖಾರ್ತನಾದ ನೈಷಧನು ದುಃಖವನ್ನು ಪಡೆದಿದ್ದಾನೋ ಅವನ ದುಃಖವೂ ಈ ದುಃಖಕ್ಕಿಂತ ಅಧಿಕವಾಗಲಿ!
03060016a ಅಪಾಪಚೇತಸಂ ಪಾಪೋ ಯ ಏವಂ ಕೃತವಾನ್ನಲಂ|
03060016c ತಸ್ಮಾದ್ದುಃಖತರಂ ಪ್ರಾಪ್ಯ ಜೀವತ್ವಸುಖಜೀವಿಕಾಂ||
ಅಪಾಪಚೇತಸನಾದ ನಲನಿಗೆ ಈ ರೀತಿ ಮಾಡಿದ ಪಾಪಿಯು ಇದಕ್ಕಿಂತಲೂ ಹೆಚ್ಚು ದುಃಖವನ್ನು ಹೊಂದಿ, ಅಸುಖೀ ಜೀವನವನ್ನು ಬದುಕಲಿ!”
03060017a ಏವಂ ತು ವಿಲಪಂತೀ ಸಾ ರಾಜ್ಞೋ ಭಾರ್ಯಾ ಮಹಾತ್ಮನಃ|
03060017c ಅನ್ವೇಷತಿ ಸ್ಮ ಭರ್ತಾರಂ ವನೇ ಶ್ವಾಪದಸೇವಿತೇ||
ಈ ರೀತಿ ಮಹಾತ್ಮ ರಾಜನ ಭಾರ್ಯೆಯು ವಿಲಪಿಸುತ್ತಾ ಮೃಗಗಳಿಂದ ತುಂಬಿದ ವನದಲ್ಲಿ ತನ್ನ ಪತಿಯನ್ನು ಅನ್ವೇಷಿಸಿದಳು.
03060018a ಉನ್ಮತ್ತವದ್ಭೀಮಸುತಾ ವಿಲಪಂತೀ ತತಸ್ತತಃ|
03060018c ಹಾ ಹಾ ರಾಜನ್ನಿತಿ ಮುಹುರಿತಶ್ಚೇತಶ್ಚ ಧಾವತಿ||
ಭೀಮಸುತೆಯು “ಹಾ ಹಾ ರಾಜ!” ಎಂದು ವಿಲಪಿಸುತ್ತಾ ಉನ್ಮತ್ತಳಾದವಳಂತೆ ಒಮ್ಮೆ ಅಲ್ಲಿ ಮತ್ತೊಮ್ಮೆ ಇಲ್ಲಿ ಓಡತೊಡಗಿದಳು.
03060019a ತಾಂ ಶುಷ್ಯಮಾಣಾಮತ್ಯರ್ಥಂ ಕುರರೀಮಿವ ವಾಶತೀಂ|
03060019c ಕರುಣಂ ಬಹು ಶೋಚಂತೀಂ ವಿಲಪಂತೀಂ ಮುಹುರ್ಮುಹುಃ||
03060020a ಸಹಸಾಭ್ಯಾಗತಾಂ ಭೈಮೀಮಭ್ಯಾಶಪರಿವರ್ತಿನೀಂ|
03060020c ಜಗ್ರಾಹಾಜಗರೋ ಗ್ರಾಹೋ ಮಹಾಕಾಯಃ ಕ್ಷುಧಾನ್ವಿತಃ||
ಕಾರುಣ್ಯದಿಂದ ಬಹಳವಾಗಿ ರೋದಿಸಿ ಮತ್ತೆ ಮತ್ತೆ ವಿಲಪಿಸುತ್ತಾ ವೇಗದಲ್ಲಿ ಬರುತ್ತಿರುವಾಗ ಭೈಮಿಯು ಒಂದು ದೊಡ್ಡ ಹೆಬ್ಬಾವನ್ನು ಕಾಣದೇ ಎಡವಲು ಅದು ಅವಳನ್ನು ಹಿಡಿದುಕೊಂಡಿತು.
03060021a ಸಾ ಗ್ರಸ್ಯಮಾನಾ ಗ್ರಾಹೇಣ ಶೋಕೇನ ಚ ಪರಾಜಿತಾ|
03060021c ನಾತ್ಮಾನಂ ಶೋಚತಿ ತಥಾ ಯಥಾ ಶೋಚತಿ ನೈಷಧಂ||
ಆ ಹೆಬ್ಬಾವು ನುಂಗುವಾಗ ಕೂಡ ಶೋಕದಿಂದ ಪರಾಜಿತಳಾದ ಅವಳು ನೈಷಧನ ಕುರಿತು ದುಃಖಪಟ್ಟಷ್ಟು ತನಗಾಗಿ ದುಃಖಪಡಲಿಲ್ಲ.
03060022a ಹಾ ನಾಥ ಮಾಮಿಹ ವನೇ ಗ್ರಸ್ಯಮಾನಾಮನಾಥವತ್|
03060022c ಗ್ರಾಹೇಣಾನೇನ ವಿಪಿನೇ ಕಿಮರ್ಥಂ ನಾಭಿಧಾವಸಿ||
“ಹಾ ನಾಥ! ಈ ನಿರ್ಜನ ವನದಲ್ಲಿ ನಾನು ಈ ಹೆಬ್ಬಾವಿನ ಬಾಯಿಗೆ ಅನಾಥಳಾಗಿ ಬಲಿಯಾಗಿದ್ದೇನೆ. ನೀನು ಏಕೆ ಬೇಗ ಬರುವುದಿಲ್ಲ?
03060023a ಕಥಂ ಭವಿಷ್ಯಸಿ ಪುನರ್ಮಾಮನುಸ್ಮೃತ್ಯ ನೈಷಧ|
03060023c ಪಾಪಾನ್ಮುಕ್ತಃ ಪುನರ್ಲಬ್ಧ್ವಾ ಬುದ್ಧಿಂ ಚೇತೋ ಧನಾನಿ ಚ||
ನೈಷಧ! ಪಾಪದಿಂದ ಮುಕ್ತನಾಗಿ, ಪುನಃ ಬುದ್ಧಿ ಮತ್ತು ಧನವನ್ನು ಪಡೆದ ನಂತರ ನನ್ನನ್ನು ನೆನಪಿಸಿಕೊಂಡಾಗ ಹೇಗಿರುವೆ?
03060024a ಶ್ರಾಂತಸ್ಯ ತೇ ಕ್ಷುಧಾರ್ತಸ್ಯ ಪರಿಗ್ಲಾನಸ್ಯ ನೈಷಧ|
03060024c ಕಃ ಶ್ರಮಂ ರಾಜಶಾರ್ದೂಲ ನಾಶಯಿಷ್ಯತಿ ಮಾನದ||
ನೈಷಧ! ಮಾನದ! ರಾಜಶಾರ್ದೂಲ! ಬಳಲಿ ಹಸಿದಿದ್ದಾಗ ನಿನಗೆ ಶ್ರಮವನ್ನು ಹೋಗಲಾಡಿಸಲು ಯಾರಿದ್ದಾರೆ?”
03060025a ತಾಮಕಸ್ಮಾನ್ಮೃಗವ್ಯಾಧೋ ವಿಚರನ್ಗಹನೇ ವನೇ|
03060025c ಆಕ್ರಂದತೀಮುಪಶ್ರುತ್ಯ ಜವೇನಾಭಿಸಸಾರ ಹ||
ಅದೇ ವೇಳೆಯಲ್ಲಿ ಆ ಗಹನ ವನದಲ್ಲಿ ಸಂಚರಿಸುತ್ತಿದ್ದ ಮೃಗವ್ಯಾಧನೋರ್ವನು ಅವಳ ಆಕ್ರಂದನವನ್ನು ಕೇಳಿ ಓಡಿ ಬಳಿ ಬಂದನು.
03060026a ತಾಂ ಸ ದೃಷ್ಟ್ವಾ ತಥಾ ಗ್ರಸ್ತಾಮುರಗೇಣಾಯತೇಕ್ಷಣಾಂ|
03060026c ತ್ವರಮಾಣೋ ಮೃಗವ್ಯಾಧಃ ಸಮಭಿಕ್ರಮ್ಯ ವೇಗಿತಃ||
03060027a ಮುಖತಃ ಪಾತಯಾಮಾಸ ಶಸ್ತ್ರೇಣ ನಿಶಿತೇನ ಹ|
03060027c ನಿರ್ವಿಚೇಷ್ಟಂ ಭುಜಂಗಂ ತಂ ವಿಶಸ್ಯ ಮೃಗಜೀವನಃ||
ಆ ಆಯತಾಕ್ಷಿಯನ್ನು ಹೆಬ್ಬಾವು ನುಂಗುತ್ತಿರುವುದನ್ನು ನೋಡಿ ಮೃಗವ್ಯಾಧನು ಬೇಗ ಅಲ್ಲಿಗೆ ಬಂದು ತಕ್ಷಣವೇ ತನ್ನ ಶಸ್ತ್ರದಿಂದ ಅದರ ಮುಖವನ್ನು ಕತ್ತರಿಸಿ ಕೆಳಗಿ ಬೀಳಿಸಿ ಆ ಹಾವು ಜೀವವಿಲ್ಲದೇ ನಿರ್ವಿಚೇಷ್ಟವಾಗುವರೆಗೂ ಕತ್ತರಿಸಿದನು.
03060028a ಮೋಕ್ಷಯಿತ್ವಾ ಚ ತಾಂ ವ್ಯಾಧಃ ಪ್ರಕ್ಷಾಲ್ಯ ಸಲಿಲೇನ ಚ|
03060028c ಸಮಾಶ್ವಾಸ್ಯ ಕೃತಾಹಾರಾಮಥ ಪಪ್ರಚ್ಚ ಭಾರತ||
ನಂತರ ಅವಳನ್ನು ಅದರಿಂದ ಬಿಡಿಸಿ ವ್ಯಾಧನು ನೀರಿನಿಂದ ತೊಳೆದನು. ಭಾರತ! ಅವಳಿಗೆ ಆಹಾರವನ್ನು ಕೊಟ್ಟು ಸಂತೈಸಿ ಕೇಳಿದನು:
03060029a ಕಸ್ಯ ತ್ವಂ ಮೃಗಶಾವಾಕ್ಷಿ ಕಥಂ ಚಾಭ್ಯಾಗತಾ ವನಂ|
03060029c ಕಥಂ ಚೇದಂ ಮಹತ್ಕೃಚ್ಚ್ರಂ ಪ್ರಾಪ್ತವತ್ಯಸಿ ಭಾಮಿನಿ||
“ಮೃಗಶಾವಾಕ್ಷಿ! ನೀನು ಯಾರವಳು? ಈ ವನಕ್ಕೆ ಏಕೆ ಬಂದೆ? ಭಾಮಿನಿ! ಇಂಥ ದೊಡ್ಡ ಅಪಾಯದಲ್ಲಿ ಹೇಗೆ ಸಿಲುಕಿಕೊಂಡೆ?”
03060030a ದಮಯಂತೀ ತಥಾ ತೇನ ಪೃಚ್ಚ್ಯಮಾನಾ ವಿಶಾಂ ಪತೇ|
03060030c ಸರ್ವಮೇತದ್ಯಥಾವೃತ್ತಮಾಚಚಕ್ಷೇಽಸ್ಯ ಭಾರತ||
ಭಾರತ! ವಿಶಾಂಪತೇ! ಈ ರೀತಿ ಕೇಳಿದುದಕ್ಕೆ ದಮಯಂತಿಯು ಎಲ್ಲವನ್ನೂ ಯಥಾವತ್ತಾಗಿ ಅವನಿಗೆ ಹೇಳಿದಳು.
03060031a ತಾಮರ್ಧವಸ್ತ್ರಸಂವೀತಾಂ ಪೀನಶ್ರೋಣಿಪಯೋಧರಾಂ|
03060031c ಸುಕುಮಾರಾನವದ್ಯಾಂಗೀಂ ಪೂರ್ಣಚಂದ್ರನಿಭಾನನಾಂ||
03060032a ಅರಾಲಪಕ್ಷ್ಮನಯನಾಂ ತಥಾ ಮಧುರಭಾಷಿಣೀಂ|
03060032c ಲಕ್ಷಯಿತ್ವಾ ಮೃಗವ್ಯಾಧಃ ಕಾಮಸ್ಯ ವಶಮೇಯಿವಾನ್||
ಅರ್ಧವಸ್ತ್ರದಲ್ಲಿದ್ದ, ಪೂರ್ಣಚಂದ್ರನಂತೆ ಮುಖವುಳ್ಳ ಆ ಪೀನಶ್ರೋಣಿಪಯೋಧರೆ, ಸುಕುಮಾರಿ, ಅನವದ್ಯಾಂಗಿ, ಅರಾಲಪಕ್ಷನಯನೆ ಮತ್ತು ಮಧುರಭಾಷಿಣಿಯನ್ನು ನೋಡಿ ಮೃಗವ್ಯಾಧನು ಕಾಮವಶನಾದನು.
03060033a ತಾಮಥ ಶ್ಲಕ್ಷ್ಣಯಾ ವಾಚಾ ಲುಬ್ಧಕೋ ಮೃದುಪುರ್ವಯಾ|
03060033c ಸಾಂತ್ವಯಾಮಾಸ ಕಾಮಾರ್ತಸ್ತದಬುಧ್ಯತ ಭಾಮಿನೀ||
ಶ್ಲಾಘನೀಯ ಮೃದು ಮಾತುಗಳಿಂದ ಸಂತವಿಸುತ್ತಿದ್ದ ಅವನು ತನ್ನನ್ನು ಬಯಸುತ್ತಿದ್ದಾನೆ ಎಂದು ಭಾಮಿನಿಯು ತಿಳಿದಳು.
03060034a ದಮಯಂತೀ ತು ತಂ ದುಷ್ಟಮುಪಲಭ್ಯ ಪತಿವ್ರತಾ|
03060034c ತೀವ್ರರೋಷಸಮಾವಿಷ್ಟಾ ಪ್ರಜಜ್ವಾಲೇವ ಮನ್ಯುನಾ||
ಪತಿವ್ರತೆ ದಮಯಂತಿಯು ಅವನ ದುಷ್ಟತನವನ್ನು ಅರಿತು ತೀವ್ರ ರೋಷ ಸಮಾವಿಷ್ಟಳಾಗಿ, ಸಿಟ್ಟಿನಿಂದ ಪ್ರಜ್ವಲಿಸುವಂತೆ ಕಂಡಳು.
03060035a ಸ ತು ಪಾಪಮತಿಃ ಕ್ಷುದ್ರಃ ಪ್ರಧರ್ಷಯಿತುಮಾತುರಃ|
03060035c ದುರ್ಧರ್ಷಾಂ ತರ್ಕಯಾಮಾಸ ದೀಪ್ತಾಮಗ್ನಿಶಿಖಾಮಿವ||
ಕಾಮದಿಂದ ಅವಳನ್ನು ವಶಪಡಿಸಿಕೊಳ್ಳಲು ಆತುರನಾಗಿದ್ದ ಆ ಪಾಪಮತಿಯು ಭುಗಿಲೆದ್ದ ಬೆಂಕಿಯ ಶಿಖೆಯಂತಿರುವ ಅವಳನ್ನು ಹೊಂದಲಸಾಧ್ಯ ಎಂದು ಯೋಚಿಸಿದನು.
03060036a ದಮಯಂತೀ ತು ದುಃಖಾರ್ತಾ ಪತಿರಾಜ್ಯವಿನಾಕೃತಾ|
03060036c ಅತೀತವಾಕ್ಪಥೇ ಕಾಲೇ ಶಶಾಪೈನಂ ರುಷಾ ಕಿಲ||
ಆದರೆ ದುಃಖಾರ್ತಳಾದ, ಪತಿ-ರಾಜ್ಯಗಳನ್ನು ಕಳೆದುಕೊಂಡ ದಮಯಂತಿಯು ಒಂದೆರಡು ಹೆಜ್ಜೆ ಹಿಂದೆ ಸರಿದು ರೋಷದಿಂದ ಶಪಿಸಿದಳು:
03060037a ಯಥಾಹಂ ನೈಷಧಾದನ್ಯಂ ಮನಸಾಪಿ ನ ಚಿಂತಯೇ|
03060037c ತಥಾಯಂ ಪತತಾಂ ಕ್ಷುದ್ರಃ ಪರಾಸುರ್ಮೃಗಜೀವನಃ||
“ನಾನು ನೈಷಧನ ಹೊರತಾಗಿ ಅನ್ಯರನ್ನು ಮನಸ್ಸಿನಲ್ಲಿಯೂ ಯೋಚಿಸದೇ ಇದ್ದರೆ, ಮೃಗಗಳನ್ನು ಅವಲಂಬಿಸಿ ಜೀವನ ಮಾಡುವ ಈ ಪಾಪಿಯು ಸತ್ತು ಬೀಳಲಿ!”
03060038a ಉಕ್ತಮಾತ್ರೇ ತು ವಚನೇ ತಯಾ ಸ ಮೃಗಜೀವನಃ|
03060038c ವ್ಯಸುಃ ಪಪಾತ ಮೇದಿನ್ಯಾಮಗ್ನಿದಗ್ಧ ಇವ ದ್ರುಮಃ||
ಈ ವಚನವನ್ನು ಹೇಳಿದ ಮಾತ್ರದಲ್ಲಿ ಬೆಂಕಿ ಹಿಡಿದು ಸುಟ್ಟ ಮರದಂತೆ ಆ ವ್ಯಾಧನು ಭೂಮಿಯ ಮೇಲೆ ಬಿದ್ದನು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಅಜಗರಗ್ರಸ್ತದಮಯಂತೀಮೋಚನೇ ಷಷ್ಟಿತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಅಜಗರಗ್ರಸ್ತದಮಯಂತೀ ಮೋಚನ ಎನ್ನುವ ಅರವತ್ತನೆಯ ಅಧ್ಯಾಯವು.