ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ
Contents
Toggle೫೨
ನಲನ ದೇವ ದೂತತ್ವ
ಇಂದ್ರಾದಿಗಳು ತಮ್ಮ ಪರಿಚಯವನ್ನೂ ಉದ್ದೇಶವನ್ನೂ ಹೇಳಿಕೊಂಡು ತಮ್ಮ ಸಂದೇಶವೊಂದನ್ನು ದಮಯಂತಿಗೆ ತಲುಪಿಸಬೇಕೆಂದು ನಲನನ್ನು ದಮಯಂತಿಯಲ್ಲಿಗೆ ಕಳುಹಿಸುವುದು (೧-೧೦). ನಲನು ದಮಯಂತಿಗೆ ದೇವತೆಗಳ ಸಂದೇಶವನ್ನು ನೀಡುವುದು (೧೧-೨೪).
03052001 ಬೃಹದಶ್ವ ಉವಾಚ|
03052001a ತೇಭ್ಯಃ ಪ್ರತಿಜ್ಞಾಯ ನಲಃ ಕರಿಷ್ಯ ಇತಿ ಭಾರತ|
03052001c ಅಥೈನಾನ್ಪರಿಪಪ್ರಚ್ಚ ಕೃತಾಂಜಲಿರವಸ್ಥಿತಃ||
ಬೃಹದಶ್ವನು ಹೇಳಿದನು: “ಭಾರತ! “ಮಾಡುತ್ತೇನೆ!” ಎಂದು ಅವರಿಗೆ ಪ್ರತಿಜ್ಞೆಯನ್ನಿತ್ತ ನಲನು ಅಂಜಲೀಬದ್ಧನಾಗಿ ನಿಂತು ಅವರನ್ನು ಪ್ರಶ್ನಿಸಿದನು:
03052002a ಕೇ ವೈ ಭವಂತಃ ಕಶ್ಚಾಸೌ ಯಸ್ಯಾಹಂ ದೂತ ಈಪ್ಸಿತಃ|
03052002c ಕಿಂ ಚ ತತ್ರ ಮಯಾ ಕಾರ್ಯಂ ಕಥಯಧ್ವಂ ಯಥಾತಥಂ||
“ನೀವು ಯಾರು? ನನ್ನನ್ನು ದೂತನನ್ನಾಗಿ ಬಳಸಲು ಇಚ್ಛಿಸುವ ಇವನು ಯಾರು? ಇದರಲ್ಲಿ ನನ್ನ ಕಾರ್ಯವೇನು? ಯಥಾವತ್ತಾಗಿ ತಿಳಿಸಿರಿ.”
03052003a ಏವಮುಕ್ತೇ ನೈಷಧೇನ ಮಘವಾನ್ಪ್ರತ್ಯಭಾಷತ|
03052003c ಅಮರಾನ್ವೈ ನಿಬೋಧಾಸ್ಮಾನ್ದಮಯಂತ್ಯರ್ಥಮಾಗತಾನ್||
ನೈಷಧನ ಈ ಮಾತುಗಳಿಗೆ ಮಘವಾನನು ಉತ್ತರಿಸಿದನು: “ದಮಯಂತಿಯನ್ನು ಬಯಸಿ ಬಂದ ಅಮರರು ನಾವು ಎಂದು ತಿಳಿ.
03052004a ಅಹಮಿಂದ್ರೋಽಯಮಗ್ನಿಶ್ಚ ತಥೈವಾಯಮಪಾಂಪತಿಃ|
03052004c ಶರೀರಾಂತಕರೋ ನೄಣಾಂ ಯಮೋಽಯಮಪಿ ಪಾರ್ಥಿವ||
ನಾನು ಇಂದ್ರ. ಇವನು ಅಗ್ನಿ. ಮತ್ತು ಈತನು ಅಪಾಂಪತಿ. ಮತ್ತು ಪಾರ್ಥಿವ! ಇವನು ನೃಣರ ಶರೀರಾಂತಕರ ಯಮ.
03052005a ಸ ವೈ ತ್ವಮಾಗತಾನಸ್ಮಾನ್ದಮಯಂತ್ಯೈ ನಿವೇದಯ|
03052005c ಲೋಕಪಾಲಾಃ ಸಹೇಂದ್ರಾಸ್ತ್ವಾಂ ಸಮಾಯಾಂತಿ ದಿದೃಕ್ಷವಃ||
ನೀನು “ನಾವು ಬಂದಿದ್ದೇವೆ!” ಎಂದು ದಮಯಂತಿಗೆ ಹೇಳು: “ಇಂದ್ರನೂ ಸೇರಿ ಲೋಕಪಾಲಕರು ನಿನ್ನನ್ನು ನೋಡುವ ಇಚ್ಛೆಯಿಂದ ಬರುತ್ತಿದ್ದಾರೆ.
03052006a ಪ್ರಾಪ್ತುಮಿಚ್ಚಂತಿ ದೇವಾಸ್ತ್ವಾಂ ಶಕ್ರೋಽಗ್ನಿರ್ವರುಣೋ ಯಮಃ|
03052006c ತೇಷಾಮನ್ಯತಮಂ ದೇವಂ ಪತಿತ್ವೇ ವರಯಸ್ವ ಹ||
ದೇವತೆಗಳಾದ ಶಕ್ರ, ಅಗ್ನಿ, ವರುಣ ಮತ್ತು ಯಮ ನಿನ್ನನ್ನು ಹೊಂದಲು ಇಚ್ಛಿಸುತ್ತಾರೆ. ಈ ದೇವತೆಗಳಲ್ಲಿ ಒಬ್ಬರನ್ನು ನಿನ್ನ ಪತಿಯನ್ನಾಗಿ ವರಿಸು!”
03052007a ಏವಮುಕ್ತಃ ಸ ಶಕ್ರೇಣ ನಲಃ ಪ್ರಾಂಜಲಿರಬ್ರವೀತ್|
03052007c ಏಕಾರ್ಥಸಮವೇತಂ ಮಾಂ ನ ಪ್ರೇಷಯಿತುಮರ್ಹಥ||
ಶಕ್ರನ ಈ ಮಾತುಗಳನ್ನು ಕೇಳಿದ ನಲನು ಅಂಜಲೀಬದ್ಧನಾಗಿ ಹೇಳಿದನು: “ಅದೇ ಉದ್ದೇಶವನ್ನಿಟ್ಟುಕೊಂಡು ಹೊರಟ ನನ್ನನ್ನು ಕಳುಹಿಸುವುದು ಸರಿಯೆನಿಸುವುದಿಲ್ಲ!”
03052008 ದೇವಾ ಊಚುಃ|
03052008a ಕರಿಷ್ಯ ಇತಿ ಸಂಶ್ರುತ್ಯ ಪೂರ್ವಮಸ್ಮಾಸು ನೈಷಧ|
03052008c ನ ಕರಿಷ್ಯಸಿ ಕಸ್ಮಾತ್ತ್ವಂ ವ್ರಜ ನೈಷಧ ಮಾಚಿರಂ||
ದೇವತೆಗಳು ಹೇಳಿದರು: “ನೈಷಧ! ಮಾಡುತ್ತೇನೆ ಎಂದು ಮೊದಲೇ ನಮಗೆ ಮಾತು ಕೊಟ್ಟಿದ್ದೀಯೆ. ಈಗ ಏಕೆ ನೀನು ಹಾಗೆ ಮಾಡುವುದಿಲ್ಲ? ನೈಷಧ! ಹೋಗು, ತಡಮಾಡಬೇಡ.””
03052009 ಬೃಹದಶ್ವ ಉವಾಚ|
03052009a ಏವಮುಕ್ತಃ ಸ ದೇವೈಸ್ತೈರ್ನೈಷಧಃ ಪುನರಬ್ರವೀತ್|
03052009c ಸುರಕ್ಷಿತಾನಿ ವೇಶ್ಮಾನಿ ಪ್ರವೇಷ್ಟುಂ ಕಥಮುತ್ಸಹೇ||
ಬೃಹದಶ್ವನು ಹೇಳಿದನು: “ಹೀಗೆ ಹೇಳಿದ ದೇವತೆಗಳಿಗೆ ನೈಷಧನು ಉತ್ತರಿಸಿದನು: “ಸುರಕ್ಷಿತ ಅರಮನೆಯನ್ನು ಹೇಗೆ ಪ್ರವೇಶಿಸಲು ಸಾದ್ಯ?”
03052010a ಪ್ರವೇಕ್ಷ್ಯಸೀತಿ ತಂ ಶಕ್ರಃ ಪುನರೇವಾಭ್ಯಭಾಷತ|
03052010c ಜಗಾಮ ಸ ತಥೇತ್ಯುಕ್ತ್ವಾ ದಮಯಂತ್ಯಾ ನಿವೇಶನಂ||
03052011a ದದರ್ಶ ತತ್ರ ವೈದರ್ಭೀಂ ಸಖೀಗಣಸಮಾವೃತಾಂ|
03052011c ದೇದೀಪ್ಯಮಾನಾಂ ವಪುಷಾ ಶ್ರಿಯಾ ಚ ವರವರ್ಣಿನೀಂ||
“ನೀನು ಪ್ರವೇಶಿಸುತ್ತೀಯೆ!” ಎಂದು ಶಕ್ರನು ಉತ್ತರಿಸಿದನು. “ಹಾಗೆಯೇ ಆಗಲಿ” ಎಂದು ಅವನು ದಮಯಂತಿಯ ನಿವೇಶನಕ್ಕೆ ಹೋದನು. ಅಲ್ಲಿ ಸಖೀಗಣದಿಂದ ಸಮಾವೃತಗೊಂಡ, ರೂಪದಿಂದ ದೇದೀಪ್ಯಮಾನಳಾದ, ವರವರ್ಣಿನೀ ವೈದರ್ಭಿಯನ್ನು ಕಂಡನು.
03052012a ಅತೀವ ಸುಕುಮಾರಾಂಗೀಂ ತನುಮಧ್ಯಾಂ ಸುಲೋಚನಾಂ|
03052012c ಆಕ್ಷಿಪಂತೀಮಿವ ಚ ಭಾಃ ಶಶಿನಃ ಸ್ವೇನ ತೇಜಸಾ||
ಅತೀವ ಸುಕುಮಾರಾಂಗಿ ತನುಮಧ್ಯೆ ಸುಲೋಚನೆಯು ತನ್ನ ತೇಜಸ್ಸಿನಿಂದ ಶಶಿಯ ಕಿರಣಗಳನ್ನು ಹಿಡಿದಿಟ್ಟಹಾಗಿದ್ದಳು.
03052013a ತಸ್ಯ ದೃಷ್ಟ್ವೈವ ವವೃಧೇ ಕಾಮಸ್ತಾಂ ಚಾರುಹಾಸಿನೀಂ|
03052013c ಸತ್ಯಂ ಚಿಕೀರ್ಷಮಾಣಸ್ತು ಧಾರಯಾಮಾಸ ಹೃಚ್ಚಯಂ||
ಆ ಚಾರುಹಾಸಿನಿಯನ್ನು ನೋಡಿದೊಡನೆಯೇ ಅವನಲ್ಲಿ ಕಾಮವು ವೃದ್ದಿಸಿತು; ಆದರೆ ಕೊಟ್ಟ ಮಾತನ್ನು ಸತ್ಯಮಾಡಲೋಸುಗ ಆಕರ್ಷಣೆಯನ್ನು ಹೃದಯದಲ್ಲಿಯೇ ಹಿಡಿದಿಟ್ಟುಕೊಂಡನು.
03052014a ತತಸ್ತಾ ನೈಷಧಂ ದೃಷ್ಟ್ವಾ ಸಂಭ್ರಾಂತಾಃ ಪರಮಾಂಗನಾಃ|
03052014c ಆಸನೇಭ್ಯಃ ಸಮುತ್ಪೇತುಸ್ತೇಜಸಾ ತಸ್ಯ ಧರ್ಷಿತಾಃ||
ನೈಷಧನನ್ನು ನೋಡಿದ ಆ ಪರಮಾಂಗನೆಯರು ಸಂಭ್ರಾಂತರಾಗಿ, ಅವನ ತೇಜಸ್ಸಿನಿಂದ ಘರ್ಶಿತರಾಗಿ ತಮ್ಮ ತಮ್ಮ ಆಸನಗಳಿಂದ ಎದ್ದು ನಿಂತರು.
03052015a ಪ್ರಶಶಂಸುಶ್ಚ ಸುಪ್ರೀತಾ ನಲಂ ತಾ ವಿಸ್ಮಯಾನ್ವಿತಾಃ|
03052015c ನ ಚೈನಮಭ್ಯಭಾಷಂತ ಮನೋಭಿಸ್ತ್ವಭ್ಯಚಿಂತಯನ್||
ಸುಪ್ರೀತರೂ ವಿಸ್ಮಯರೂ ಆದ ಅವರು ಅವನೊಡನೆ ಮಾತನಾಡದೇ, ತಮ್ಮ ಮನಸ್ಸಿನೊಳಗೆ ಅವನನ್ನು ಬಹಳಷ್ಟು ಪ್ರಶಂಸಿಸಿದರು.
03052016a ಅಹೋ ರೂಪಮಹೋ ಕಾಂತಿರಹೋ ಧೈರ್ಯಂ ಮಹಾತ್ಮನಃ|
03052016c ಕೋಽಯಂ ದೇವೋ ನು ಯಕ್ಷೋ ನು ಗಂಧರ್ವೋ ನು ಭವಿಷ್ಯತಿ||
“ಆಹಾ ರೂಪವೇ! ಆಹಾ ಕಾಂತಿಯೇ! ಆಹಾ ಈ ಮಹಾತ್ಮನ ಧೈರ್ಯವೇ! ಇವನ್ನ್ಯಾರು? ದೇವನಿರಬಹುದೇ? ಯಕ್ಷನಿರಬಹುದೇ? ಅಥವಾ ಗಂಧರ್ವನಿರಬಹುದೇ?”
03052017a ನ ತ್ವೇನಂ ಶಕ್ನುವಂತಿ ಸ್ಮ ವ್ಯಾಹರ್ತುಮಪಿ ಕಿಂ ಚನ|
03052017c ತೇಜಸಾ ಧರ್ಷಿತಾಃ ಸರ್ವಾ ಲಜ್ಜಾವತ್ಯೋ ವರಾಂಗನಾಃ||
ಅವರಲ್ಲಿ ಯಾರೂ ಒಂದು ಶಬ್ಧವನ್ನೂ ಮಾತನಾಡಲು ಶಕ್ಯರಿರಲಿಲ್ಲ. ಎಲ್ಲ ವರಾಂಗನೆಯರೂ ಅವನ ತೇಜಸ್ಸಿನಿಂದ ಘರ್ಶಿತರಾಗಿ ನಾಚಿಕೊಂಡಿದ್ದರು.
03052018a ಅಥೈನಂ ಸ್ಮಯಮಾನೇವ ಸ್ಮಿತಪೂರ್ವಾಭಿಭಾಷಿಣೀ|
03052018c ದಮಯಂತೀ ನಲಂ ವೀರಮಭ್ಯಭಾಷತ ವಿಸ್ಮಿತಾ||
ಆದರೆ ವಿಸ್ಮಿತ ದಮಯಂತಿಯು ವೀರ ನಲನನ್ನುದ್ದೇಶಿಸಿ ಮಾತನಾಡಿದಳು:
03052019a ಕಸ್ತ್ವಂ ಸರ್ವಾನವದ್ಯಾಂಗ ಮಮ ಹೃಚ್ಚಯವರ್ಧನ|
03052019c ಪ್ರಾಪ್ತೋಽಸ್ಯಮರವದ್ವೀರ ಜ್ಞಾತುಮಿಚ್ಚಾಮಿ ತೇಽನಘ||
03052020a ಕಥಮಾಗಮನಂ ಚೇಹ ಕಥಂ ಚಾಸಿ ನ ಲಕ್ಷಿತಃ|
03052020c ಸುರಕ್ಷಿತಂ ಹಿ ಮೇ ವೇಶ್ಮ ರಾಜಾ ಚೈವೋಗ್ರಶಾಸನಃ||
“ನನ್ನ ಹೃದಯದ ಆಸೆಯನ್ನು ವೃದ್ಧಿಸುವ, ಸರ್ವಾನವದ್ಯಾಂಗ ನೀನು ಯಾರು? ವೀರ! ಒಬ್ಬ ಅಮರನಂತೆ ನೀನು ಇಲ್ಲಿಗೆ ಬಂದಿದ್ದೀಯೆ. ಅನಘ! ನೀನು ಯಾರಿಗೂ ಕಾಣದಂತೆ ಇಲ್ಲಿಗೆ ಹೇಗೆ ಆಗಮಿಸಿದೆ ಎಂದು ತಿಳಿಯಲು ಬಯಸುತ್ತೇನೆ. ಯಾಕೆಂದರೆ ನನ್ನ ಈ ಅರಮನೆಯು ಸುರಕ್ಷಿತವಾಗಿದೆ ಮತ್ತು ರಾಜನ ಉಗ್ರಶಾಸನವಿದೆ.”
03052021a ಏವಮುಕ್ತಸ್ತು ವೈದರ್ಭ್ಯಾ ನಲಸ್ತಾಂ ಪ್ರತ್ಯುವಾಚ ಹ|
03052021c ನಲಂ ಮಾಂ ವಿದ್ಧಿ ಕಲ್ಯಾಣಿ ದೇವದೂತಮಿಹಾಗತಂ||
ವೈದರ್ಭಿಯ ಈ ಮಾತುಗಳಿಗೆ ನಲನು ಉತ್ತರಿಸಿದನು: “ಕಲ್ಯಾಣಿ! ನನ್ನನ್ನು ನಲನೆಂದು ತಿಳಿ. ದೇವದೂತನಾಗಿ ಇಲ್ಲಿಗೆ ಆಗಮಿಸಿದ್ದೇನೆ.
03052022a ದೇವಾಸ್ತ್ವಾಂ ಪ್ರಾಪ್ತುಮಿಚ್ಚಂತಿ ಶಕ್ರೋಽಗ್ನಿರ್ವರುಣೋ ಯಮಃ|
03052022c ತೇಷಾಮನ್ಯತಮಂ ದೇವಂ ಪತಿಂ ವರಯ ಶೋಭನೇ||
03052023a ತೇಷಾಮೇವ ಪ್ರಭಾವೇನ ಪ್ರವಿಷ್ಟೋಽಹಮಲಕ್ಷಿತಃ|
03052023c ಪ್ರವಿಶಂತಂ ಹಿ ಮಾಂ ಕಶ್ಚಿನ್ನಾಪಶ್ಯನ್ನಾಪ್ಯವಾರಯತ್||
ದೇವತೆಗಳು ನಿನ್ನನ್ನು ಹೊಂದಲು ಇಚ್ಛಿಸುವರು - ಶಕ್ರ, ಅಗ್ನಿ, ವರುಣ ಮತ್ತು ಯಮ. ಶೋಭನೆ! ಈ ದೇವರುಗಳಲ್ಲಿ ಯಾರಾದರೂ ಒಬ್ಬನನ್ನು ಪತಿಯಾಗಿ ವರಿಸು. ಅವರ ಪ್ರಭಾವದಿಂದಲೇ ನಾನು ಇಲ್ಲಿಗೆ ಯಾರಿಗೂ ಕಾಣಿಸಿಕೊಳ್ಳದೇ ಪ್ರವೇಶಿಸಿದ್ದೇನೆ. ನಾನು ಪ್ರವೇಶಿಸುವಾಗ ಯಾರೂ ನನ್ನನ್ನು ನೋಡಲಿಲ್ಲ ಮತ್ತು ತಡೆಯಲಿಲ್ಲ.
03052024a ಏತದರ್ಥಮಹಂ ಭದ್ರೇ ಪ್ರೇಷಿತಃ ಸುರಸತ್ತಮೈಃ|
03052024c ಏತಚ್ಛೃತ್ವಾ ಶುಭೇ ಬುದ್ಧಿಂ ಪ್ರಕುರುಷ್ವ ಯಥೇಚ್ಚಸಿ||
ಭದ್ರೇ! ಈ ಉದ್ದೇಶಕ್ಕೋಸ್ಕರವೇ ಸುರಸತ್ತಮರಿಂದ ನಾನು ಕಳುಹಿಸಲ್ಪಟ್ಟಿದ್ದೇನೆ. ಶುಭೇ! ಇದನ್ನು ಕೇಳಿದನಂತರ ನಿನಗೆ ಇಷ್ಟಬಂದಹಾಗೆ ಮಾಡು.””
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ನಲಸ್ಯ ದೇವದೌತ್ಯೇ ದ್ವಿಪಂಚಾಶತ್ತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ನಲನ ದೇವದೌತ್ಯ ಎನ್ನುವ ಐವತ್ತೆರಡನೆಯ ಅಧ್ಯಾಯವು.
