Aranyaka Parva: Chapter 7

ಆರಣ್ಯಕ ಪರ್ವ: ಅರಣ್ಯ ಪರ್ವ

ಧೃತರಾಷ್ಟ್ರನು ವಿದುರನನ್ನು ಹಿಂದೆ ಕರೆಸಿಕೊಳ್ಳುವುದು

ಪರಿತಪಿಸಿದ ಧೃತರಾಷ್ಟ್ರನು ವಿದುರನನ್ನು ಹಿಂದೆ ಕರೆದುಕೊಂಡು ಬರಲು ಸಂಜಯನನ್ನು ಕಳುಹಿಸುವುದು (೧-೧೦). ವಿದುರನು ಹಿಂದಿರುಗಿ ಧೃತರಾಷ್ಟ್ರನನ್ನು ಸೇರುವುದು (೧೧-೨೪).

03007001 ವೈಶಂಪಾಯನ ಉವಾಚ|

03007001a ಗತೇ ತು ವಿದುರೇ ರಾಜನ್ನಾಶ್ರಮಂ ಪಾಂಡವಾನ್ಪ್ರತಿ|

03007001c ಧೃತರಾಷ್ಟ್ರೋ ಮಹಾಪ್ರಾಜ್ಞಃ ಪರ್ಯತಪ್ಯತ ಭಾರತ||

ವೈಶಂಪಾಯನನು ಹೇಳಿದನು: “ರಾಜನ್! ಭಾರತ! ವಿದುರನು ಪಾಂಡವರ ಆಶ್ರಮದ ಬಳಿ ಹೋದನಂತರ ಮಹಾಪ್ರಾಜ್ಞ ಧೃತರಾಷ್ಟ್ರನು ಪರಿತಪಿಸಿದನು.

03007002a ಸ ಸಭಾದ್ವಾರಮಾಗಮ್ಯ ವಿದುರಸ್ಮಾರಮೋಹಿತಃ|

03007002c ಸಮಕ್ಷಂ ಪಾರ್ಥಿವೇಂದ್ರಾಣಾಂ ಪಪಾತಾವಿಷ್ಟಚೇತನಃ||

ಅವನು ಸಭಾದ್ವಾರದ ಕಡೆ ಹೋಗಿ ವಿದುರನ ನೆನಪು ಬಂದು ಮೋಹಿತನಾಗಿ ಪಾರ್ಥಿವೇಂದ್ರರ ಸಮಕ್ಷಮದಲ್ಲಿಯೇ ಮೂರ್ಛೆತಪ್ಪಿ ಬಿದ್ದನು.

03007003a ಸ ತು ಲಬ್ಧ್ವಾ ಪುನಃ ಸಂಜ್ಞಾಂ ಸಮುತ್ಥಾಯ ಮಹೀತಲಾತ್|

03007003c ಸಮೀಪೋಪಸ್ಥಿತಂ ರಾಜಾ ಸಂಜಯಂ ವಾಕ್ಯಮಬ್ರವೀತ್||

ಪುನಃ ಎಚ್ಚೆತ್ತು ನೆಲದಿಂದ ಮೇಲೆದ್ದು ಆ ರಾಜನು ಹತ್ತಿರದಲ್ಲಿ ನಿಂತಿದ್ದ ಸಂಜಯನಿಗೆ ಹೇಳಿದನು:

03007004a ಭ್ರಾತಾ ಮಮ ಸುಹೃಚ್ಚೈವ ಸಾಕ್ಷಾದ್ಧರ್ಮ ಇವಾಪರಃ|

03007004c ತಸ್ಯ ಸ್ಮೃತ್ವಾದ್ಯ ಸುಭೃಶಂ ಹೃದಯಂ ದೀರ್ಯತೀವ ಮೇ||

“ನನ್ನ ತಮ್ಮ ಮಿತ್ರನು ಸಾಕ್ಷಾತ್ ಧರ್ಮನಂತಿದ್ದಾನೆ. ಅವನನ್ನು ನೆನಪಿಸಿಕೊಂಡರೆ ನನ್ನ ಹೃದಯವು ಹರಿದುಹೋಗುತ್ತಿದೆ.

03007005a ತಮಾನಯಸ್ವ ಧರ್ಮಜ್ಞಂ ಮಮ ಭ್ರಾತರಮಾಶು ವೈ|

03007005c ಇತಿ ಬ್ರುವನ್ಸ ನೃಪತಿಃ ಕರುಣಂ ಪರ್ಯದೇವಯತ್||

ಆದಷ್ಟು ಬೇಗನೇ ನನ್ನ ಧರ್ಮಜ್ಞ ತಮ್ಮನನ್ನು ಹಿಂದೆ ಕರೆದು ತಾ! ಇದನ್ನು ಹೇಳಿದ ಆ ನೃಪತಿಯು ಕರುಣೆಯಿಂದ ಪರಿವೇದಿಸಿದನು.

03007006a ಪಶ್ಚಾತ್ತಾಪಾಭಿಸಂತಪ್ತೋ ವಿದುರಸ್ಮಾರಕರ್ಶಿತಃ|

03007006c ಭ್ರಾತೃಸ್ನೇಹಾದಿದಂ ರಾಜನ್ಸಂಜಯಂ ವಾಕ್ಯಮಬ್ರವೀತ್||

ರಾಜನ್! ಅನಂತರ, ಪಾಶ್ಚಾತ್ತಾಪದಿಂದ ಬೆಂದು ವಿದುರನ ನೆನಪಿನಿಂದ ಸೆಳೆಯಲ್ಪಟ್ಟು ಭ್ರಾತೃಸ್ನೇಹದಿಂದ ಸಂಜಯನಿಗೆ ಈ ಮಾತುಗಳನ್ನಾಡಿದನು:

03007007a ಗಚ್ಚ ಸಂಜಯ ಜಾನೀಹಿ ಭ್ರಾತರಂ ವಿದುರಂ ಮಮ|

03007007c ಯದಿ ಜೀವತಿ ರೋಷೇಣ ಮಯಾ ಪಾಪೇನ ನಿರ್ಧುತಃ||

“ಹೋಗು ಸಂಜಯ! ನನ್ನ ತಮ್ಮ ವಿದುರನನ್ನು ತಿಳಿದಿದ್ದೇನೆ. ಕೋಪದಿಂದ ಹೊಡೆದ ನನ್ನ ಪಾಪಿಷ್ಟ ಪ್ರಹಾರದ ನಂತರವೂ ವಿದುರನು ಜೀವಂತವಿದ್ದಾನೆ!

03007008a ನ ಹಿ ತೇನ ಮಮ ಭ್ರಾತ್ರಾ ಸುಸೂಕ್ಷ್ಮಮಪಿ ಕಿಂ ಚನ|

03007008c ವ್ಯಲೀಕಂ ಕೃತಪೂರ್ವಂ ಮೇ ಪ್ರಾಜ್ಞೇನಾಮಿತಬುದ್ಧಿನಾ||

ನನ್ನ ತಮ್ಮನು ಎಂದೂ ಯಾವುದೇ ಸೂಕ್ಷ್ಮವಾದ ತಪ್ಪು-ಸುಳ್ಳುಗಳನ್ನೂ ಆಚರಿಸಿದವನಲ್ಲ!

03007009a ಸ ವ್ಯಲೀಕಂ ಕಥಂ ಪ್ರಾಪ್ತೋ ಮತ್ತಃ ಪರಮಬುದ್ಧಿಮಾನ್|

03007009c ನ ಜಹ್ಯಾಜ್ಜೀವಿತಂ ಪ್ರಾಜ್ಞಸ್ತಂ ಗಚ್ಚಾನಯ ಸಂಜಯ||

ಆ ಪರಮಬುದ್ಧಿವಂತನು ಈಗ ಏಕೆ ನನ್ನ ಕಾರಣದಿಂದ ತಪ್ಪುಕೆಲಸ ಮಾಡಿದವನೆಂದಾಗಬೇಕು? ಸಂಜಯ! ಆ ಪ್ರಾಜ್ಞನು ತನ್ನ ಜೀವವನ್ನು ತೆಗೆದುಕೊಳ್ಳಬಾರದು. ಹೋಗಿ ಕರೆದುಕೊಂಡು ಬಾ!”

03007010a ತಸ್ಯ ತದ್ವಚನಂ ಶ್ರುತ್ವಾ ರಾಜ್ಞಸ್ತಮನುಮಾನ್ಯ ಚ|

03007010c ಸಂಜಯೋ ಬಾಢಮಿತ್ಯುಕ್ತ್ವಾ ಪ್ರಾದ್ರವತ್ಕಾಮ್ಯಕಂ ವನಂ||

ರಾಜನ ಆ ಮಾತುಗಳನ್ನು ಕೇಳಿ, ಅವುಗಳನ್ನು ಅನುಮೋದಿಸುತ್ತಾ, ಸಂಜಯನು ಸರಿ ಎಂದು ಹೇಳಿ ಕಾಮ್ಯಕವನದ ಕಡೆ ತ್ವರೆಮಾಡಿದನು.

03007011a ಸೋಽಚಿರೇಣ ಸಮಾಸಾದ್ಯ ತದ್ವನಂ ಯತ್ರ ಪಾಂಡವಾಃ|

03007011c ರೌರವಾಜಿನಸಂವೀತಂ ದದರ್ಶಾಥ ಯುಧಿಷ್ಠಿರಂ||

03007012a ವಿದುರೇಣ ಸಹಾಸೀನಂ ಬ್ರಾಹ್ಮಣೈಶ್ಚ ಸಹಸ್ರಶಃ|

03007012c ಭ್ರಾತೃಭಿಶ್ಚಾಭಿಸಂಗುಪ್ತಂ ದೇವೈರಿವ ಶತಕ್ರತುಂ||

ಸ್ವಲ್ಪವೇ ಸಮಯದಲ್ಲಿ ಅವನು ಪಾಂಡವರಿರುವ ಆ ವನವನ್ನು ಸೇರಿ ಅಲ್ಲಿ ರುರುಜಿನಗಳನ್ನು ಧರಿಸಿ, ಸಹಸ್ರಾರು ಬ್ರಾಹ್ಮಣರು, ವಿದುರ ಮತ್ತು ಸಹೋದರರೊಂದಿಗೆ, ದೇವತೆಗಳಿಂದ ಸುತ್ತುವರೆಯಲ್ಪಟ್ಟ ಶತಕ್ರತುವಿನಂತೆ, ಕುಳಿತಿದ್ದ ಯುಧಿಷ್ಠಿರನನ್ನು ಕಂಡನು.

03007013a ಯುಧಿಷ್ಠಿರಮಥಾಭ್ಯೇತ್ಯ ಪೂಜಯಾಮಾಸ ಸಂಜಯಃ|

03007013c ಭೀಮಾರ್ಜುನಯಮಾಂಶ್ಚಾಪಿ ತದರ್ಹಂ ಪ್ರತ್ಯಪದ್ಯತ||

ಯುಧಿಷ್ಠಿರನನ್ನು ತಲುಪಿ ಸಂಜಯನು ಅವನನ್ನು ಗೌರವಿಸಿದನು. ಮತ್ತು ಭೀಮಾರ್ಜುನರನ್ನೂ ಯಮಳರನ್ನೂ ಅವರಿಗೆ ತಕ್ಕಂತೆ ಅಭಿನಂದಿಸಿದನು.

03007014a ರಾಜ್ಞಾ ಪೃಷ್ಟಃ ಸ ಕುಶಲಂ ಸುಖಾಸೀನಶ್ಚ ಸಂಜಯಃ|

03007014c ಶಶಂಸಾಗಮನೇ ಹೇತುಮಿದಂ ಚೈವಾಬ್ರವೀದ್ವಚಃ||

ರಾಜನು ಕುಶಲವನ್ನು ಕೇಳಿದನು ಮತ್ತು ಸಂಜಯನು ಸುಖಾಸೀನನಾಗಲು ತಾನು ಬಂದಿರುವ ಕಾರಣವೇನೆಂದು ಹೇಳಿದನು:

03007015a ರಾಜಾ ಸ್ಮರತಿ ತೇ ಕ್ಷತ್ತರ್ಧೃತರಾಷ್ಟ್ರೋಽಂಬಿಕಾಸುತಃ|

03007015c ತಂ ಪಶ್ಯ ಗತ್ವಾ ತ್ವಂ ಕ್ಷಿಪ್ರಂ ಸಂಜೀವಯ ಚ ಪಾರ್ಥಿವಂ||

“ಕ್ಷತ್ತ! ಅಂಬಿಕಾಸುತ ರಾಜ ಧೃತರಾಷ್ಟ್ರನು ನಿನ್ನನ್ನು ನೆನಪಿಸಿಕೊಂಡಿದ್ದಾನೆ. ಬೇಗನೇ ಹೋಗಿ ಅವನನ್ನು ಕಂಡು ಆ ಪಾರ್ಥಿವನನ್ನು ಪುನರ್ಜೀವಗೊಳಿಸು!

03007016a ಸೋಽನುಮಾನ್ಯ ನರಶ್ರೇಷ್ಠಾನ್ಪಾಂಡವಾನ್ಕುರುನಂದನಾನ್|

03007016c ನಿಯೋಗಾದ್ರಾಜಸಿಂಹಸ್ಯ ಗಂತುಮರ್ಹಸಿ ಮಾನದ||

ಮಾನದ! ನರಶ್ರೇಷ್ಠ ಕುರುನಂದನ ಪಾಂಡವರಿಂದ ಬೀಳ್ಕೊಂಡು ತಕ್ಷಣವೇ ರಾಜಸಿಂಹನ ಬಳಿ ಹೋಗಬೇಕು.”

03007017a ಏವಮುಕ್ತಸ್ತು ವಿದುರೋ ಧೀಮಾನ್ಸ್ವಜನವತ್ಸಲಃ|

03007017c ಯುಧಿಷ್ಠಿರಸ್ಯಾನುಮತೇ ಪುನರಾಯಾದ್ಗಜಾಹ್ವಯಂ||

ಇದನ್ನು ಕೇಳಿ ಧೀಮಂತ, ಸ್ವಜನವತ್ಸಲ ವಿದುರನು ಯುಧಿಷ್ಠಿರನಿಂದ ಬೀಳ್ಕೊಂಡು ಪುನಃ ಗಜಾಹ್ವಯಕ್ಕೆ ಹಿಂದಿರುಗಿದನು.

03007018a ತಮಬ್ರವೀನ್ಮಹಾಪ್ರಾಜ್ಞಂ ಧೃತರಾಷ್ಟ್ರಃ ಪ್ರತಾಪವಾನ್|

03007018c ದಿಷ್ಟ್ಯಾ ಪ್ರಾಪ್ತೋಽಸಿ ಧರ್ಮಜ್ಞ ದಿಷ್ಟ್ಯಾ ಸ್ಮರಸಿ ಮೇಽನಘ||

ಮಹಾಪ್ರಾಜ್ಞ ಪ್ರತಾಪವಾನ್ ಧೃತರಾಷ್ಟ್ರನು ಅವನಿಗೆ ಹೇಳಿದನು: “ಧರ್ಮಜ್ಞ! ಆನಘ! ಒಳ್ಳೆಯದಾಯಿತು ನೀನು ಹಿಂದಿರುಗಿ ಬಂದೆ! ಒಳ್ಳೆಯದಾಯಿತು ನೀನು ನನ್ನನ್ನು ನೆನಪಿಸಿಕೊಂಡೆ!

03007019a ಅದ್ಯ ರಾತ್ರೌ ದಿವಾ ಚಾಹಂ ತ್ವತ್ಕೃತೇ ಭರತರ್ಷಭ|

03007019c ಪ್ರಜಾಗರೇ ಪಪಶ್ಯಾಮಿ ವಿಚಿತ್ರಂ ದೇಹಮಾತ್ಮನಃ||

ಭರತರ್ಷಭ! ನಿನ್ನಿಂದಾಗಿ ಇತ್ತೀಚೆಗೆ ದಿನ ರಾತ್ರಿಗಳಲ್ಲಿ ನಿದ್ದೆಯಿಲ್ಲದೇ ನನ್ನ ದೇಹದ ವಿಚಿತ್ರ ರೂಪವನ್ನು ಕಾಣುತ್ತಿದ್ದೇನೆ.”

03007020a ಸೋಽಂಕಮಾದಾಯ ವಿದುರಂ ಮೂರ್ಧ್ನ್ಯುಪಾಘ್ರಾಯ ಚೈವ ಹ|

03007020c ಕ್ಷಮ್ಯತಾಮಿತಿ ಚೋವಾಚ ಯದುಕ್ತೋಽಸಿ ಮಯಾ ರುಷಾ||

ಅವನು ವಿದುರರನ್ನು ತನ್ನ ತೋಳುಗಳಿಂದ ಬಿಗಿದಪ್ಪಿ, ನೆತ್ತಿಯನ್ನು ಆಘ್ರಾಣಿಸಿ, “ರೋಷದಲ್ಲಿ ನಾನು ನಿನಗೆ ಹೇಳಿದುದನ್ನು ಕ್ಷಮಿಸು!” ಎಂದು ಕೇಳಿಕೊಂಡನು.

03007021 ವಿದುರ ಉವಾಚ|

03007021a ಕ್ಷಾಂತಮೇವ ಮಯಾ ರಾಜನ್ಗುರುರ್ನಃ ಪರಮೋ ಭವಾನ್|

03007021c ತಥಾ ಹ್ಯಸ್ಮ್ಯಾಗತಃ ಕ್ಷಿಪ್ರಂ ತ್ವದ್ದರ್ಶನಪರಾಯಣಃ||

ವಿದುರನು ಹೇಳಿದನು: “ರಾಜನ್! ಅದನ್ನು ನಾನು ಕ್ಷಮಿಸಿಯಾಗಿದೆ. ನೀನೇ ನಮ್ಮ ಪರಮ ಗುರು. ನಿನ್ನನ್ನು ನೋಡಲೆಂದೇ ನಾನು ಕ್ಷಿಪ್ರವಾಗಿ ಇಲ್ಲಿಗೆ ಬಂದೆ.

03007022a ಭವಂತಿ ಹಿ ನರವ್ಯಾಘ್ರ ಪುರುಷಾ ಧರ್ಮಚೇತಸಃ|

03007022c ದೀನಾಭಿಪಾತಿನೋ ರಾಜನ್ನಾತ್ರ ಕಾರ್ಯಾ ವಿಚಾರಣಾ||

ನರವ್ಯಾಘ್ರ! ರಾಜನ್! ಧರ್ಮಚೇತಸ ಪುರುಷರು ದೀನರು ಮತ್ತು ಕೆಳಗೆ ಬಿದ್ದವರ ಸಹಾಯಕ್ಕೆಂದು ಏನೂ ವಿಚಾರಮಾಡದೇ ಹೋಗುತ್ತಾರೆ.

03007023a ಪಾಂಡೋಃ ಸುತಾ ಯಾದೃಶಾ ಮೇ ತಾದೃಶಾ ಮೇ ಸುತಾಸ್ತವ|

03007023c ದೀನಾ ಇತಿ ಹಿ ಮೇ ಬುದ್ಧಿರಭಿಪನ್ನಾದ್ಯ ತಾನ್ಪ್ರತಿ||

ಪಾಂಡುವಿನ ಮಕ್ಕಳು ನನಗೆ ಹೇಗೋ ಹಾಗೆ ನಿನ್ನ ಮಕ್ಕಳೂ ಕೂಡ. ಅವರು ಕಷ್ಟದಲ್ಲಿದ್ದಾರೆ ಎಂದು ನನ್ನ ಮನಸ್ಸು ಇಂದು ಅವರ ಜೊತೆಯಲ್ಲಿದೆ.””

03007024 ವೈಶಂಪಾಯನ ಉವಾಚ|

03007024a ಅನ್ಯೋನ್ಯಮನುನೀಯೈವಂ ಭ್ರಾತರೌ ತೌ ಮಹಾದ್ಯುತೀ|

03007024c ವಿದುರೋ ಧೃತರಾಷ್ಟ್ರಶ್ಚ ಲೇಭಾತೇ ಪರಮಾಂ ಮುದಂ||

ವೈಶಂಪಾಯನನು ಹೇಳಿದನು: “ಈ ರೀತಿ ಅನ್ಯೋನ್ಯರ ಹತ್ತಿರ ಬಂದು ಆ ಇಬ್ಬರು ಮಹಾದ್ಯುತಿ ಸಹೋದರ ವಿದುರ-ಧೃತರಾಷ್ಟ್ರರು ಪರಮ ಸಂತೋಷವನ್ನು ಹೊಂದಿದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅರಣ್ಯಪರ್ವಣಿ ವಿದುರಪ್ರತ್ಯಾಗಮನೇ ಸಪ್ತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಅರಣ್ಯಪರ್ವದಲ್ಲಿ ವಿದುರಪ್ರತ್ಯಾಗಮನ ಎನ್ನುವ ಏಳನೆಯ ಅಧ್ಯಾಯವು.

Related image

Comments are closed.