Sabha Parva: Chapter 63

ಸಭಾ ಪರ್ವ: ದ್ಯೂತ ಪರ್ವ

೬೩

ದ್ರೌಪದೀ ವರಲಾಭ

ಕರ್ಣನು ದ್ರೌಪದಿಗೆ ಧಾರ್ತರಾಷ್ಟ್ರರ ಮನೆಯಲ್ಲಿ ದಾಸಿಯಾಗಿರೆಂದೂ ಬೇರೆ ಯಾರನ್ನಾದರೂ ಪತಿಯನ್ನಾಗಿ ಆರಿಸಿಕೊಳ್ಳಬೇಕೆಂದೂ ಚುಚ್ಚಿ ನುಡಿಯುವುದು (೧-೫). ಭೀಮನು ಯುಧಿಷ್ಠಿರನ ಮೇಲೆ ಕುಪಿತನಾಗುವುದು (೬-೭). ಮಾತನಾಡದೇ ಕುಳಿತಿದ್ದ ಯುಧಿಷ್ಠಿರನನ್ನು ದುರ್ಯೋಧನನು ಪಶ್ನಿಸಿ (೮-೯) ತನ್ನ ಎಡತೊಡೆಯನ್ನು ದ್ರೌಪದಿಗೆ ತೋರಿಸುವುದು (೧೦-೧೩). ಭೀಮನು ಕ್ರೋಧದಿಂದ ಆ ತೊಡೆಯನ್ನು ಒಡೆಯುವುದಾಗಿ ಪ್ರತಿಜ್ಞೆಮಾಡುವುದು (೧೩-೧೫). ಸಭಾಸದರು ಪ್ರಶ್ನೆಗೆ ಉತ್ತರ ಕೊಡಬೇಕೆಂದು ವಿದುರನು ಕೇಳಿಕೊಳ್ಳುವುದು (೧೬-೧೯). ದುರ್ಯೋಧನನು ಪುನಃ ಪ್ರಶ್ನಿಸಲು ಅರ್ಜುನನು ಉತ್ತರಿಸಿವುದು (೨೦-೨೧). ಅರಮನೆಯಲ್ಲಿ ದುಃಶಕುನಗಳು ಕಾಣಿಸಿಕೊಳ್ಳುವುದು (೨೨-೨೪). ಧೃತರಾಷ್ಟ್ರನು ದ್ರೌಪದಿಗೆ ವರಗಳನ್ನು ನೀಡುವುದು (೨೫-೩೬).

02063001 ಕರ್ಣ ಉವಾಚ|

02063001a ತ್ರಯಃ ಕಿಲೇಮೇ ಅಧನಾ ಭವಂತಿ

         ದಾಸಃ ಶಿಷ್ಯಶ್ಚಾಸ್ವತಂತ್ರಾ ಚ ನಾರೀ|

02063001c ದಾಸಸ್ಯ ಪತ್ನೀ ತ್ವಂ ಧನಮಸ್ಯ ಭದ್ರೇ

         ಹೀನೇಶ್ವರಾ ದಾಸಧನಂ ಚ ದಾಸೀ||

ಕರ್ಣನು ಹೇಳಿದನು: “ದಾಸ, ಶಿಷ್ಯ ಮತ್ತು ಅಸ್ವತಂತ್ರ ನಾರಿ - ಈ ಮೂವರು ಅಧನರು. ಭದ್ರೇ! ದಾಸನ ಪತ್ನಿಯಾದ ನೀನು ಇವನ ಧನ. ಹೀನೇಶ್ವರಳಾದ ದಾಸಿಯೇ! ನೀನು ದಾಸಧನ.

02063002a ಪ್ರವಿಶ್ಯ ಸಾ ನಃ ಪರಿಚಾರೈರ್ಭಜಸ್ವ

         ತತ್ತೇ ಕಾರ್ಯಂ ಶಿಷ್ಟಮಾವೇಶ್ಯ ವೇಶ್ಮ|

02063002c ಈಶಾಃ ಸ್ಮ ಸರ್ವೇ ತವ ರಾಜಪುತ್ರಿ

         ಭವಂತಿ ತೇ ಧಾರ್ತರಾಷ್ಟ್ರಾ ನ ಪಾರ್ಥಾಃ||

ಇವನ ಮನೆಯನ್ನು ಪ್ರವೇಶಿಸಿ ಪರಿಚಾರ ಸೇವೆಗಳನ್ನು ಮಾಡು. ಅದೊಂದು ಕಾರ್ಯವು ಉಳಿದುಕೊಂಡಿದೆ. ರಾಜಪುತ್ರಿ! ಈಗ ಈ ಎಲ್ಲ ಧಾರ್ತರಾಷ್ಟ್ರರೂ ನಿನ್ನ ಒಡೆಯರು. ಪಾರ್ಥರಲ್ಲ.

02063003a ಅನ್ಯಂ ವೃಣೀಷ್ವ ಪತಿಮಾಶು ಭಾಮಿನಿ

         ಯಸ್ಮಾದ್ದಾಸ್ಯಂ ನ ಲಭಸೇ ದೇವನೇನ|

02063003c ಅನವದ್ಯಾ ವೈ ಪತಿಷು ಕಾಮವೃತ್ತಿರ್

         ನಿತ್ಯಂ ದಾಸ್ಯೇ ವಿದಿತಂ ವೈ ತವಾಸ್ತು||

ಭಾಮಿನಿ! ನಿನ್ನ ಸ್ವಾತಂತ್ರ್ಯವನ್ನು ಪಣವನ್ನಾಗಿಡದಂಥಹ ಬೇರೆ ಯಾರನ್ನಾದರೂ ನಿನ್ನ ಪತಿಯನ್ನಾಗಿ ಆರಿಸಿಕೋ. ಪತಿಯ ಸೇವೆ ಮಾಡುವುದು ಅನವದ್ಯವಲ್ಲ. ನಿನ್ನನ್ನು ನಿತ್ಯ ದಾಸಿಯಾಗಿ ತಿಳಿಯುತ್ತೇವೆ.

02063004a ಪರಾಜಿತೋ ನಕುಲೋ ಭೀಮಸೇನೋ

         ಯುಧಿಷ್ಠಿರಃ ಸಹದೇವೋಽರ್ಜುನಶ್ಚ|

02063004c ದಾಸೀಭೂತಾ ಪ್ರವಿಶ ಯಾಜ್ಞಸೇನಿ

         ಪರಾಜಿತಾಸ್ತೇ ಪತಯೋ ನ ಸಂತಿ||

ನಕುಲ, ಭೀಮಸೇನ, ಯುಧಿಷ್ಠಿರ, ಸಹದೇವ ಮತ್ತು ಅರ್ಜುನರು ಪರಾಜಿತರಾಗಿದ್ದಾರೆ. ಯಾಜ್ಞಸೇನೆ! ದಾಸಿಯಾಗಿ ಒಳಗೆ ಬಾ. ಪರಾಜಿತರಾದವರು ನಿನ್ನ ಪತಿಗಳಾಗಿ ಉಳಿದಿಲ್ಲ.

02063005a ಪ್ರಯೋಜನಂ ಚಾತ್ಮನಿ ಕಿಂ ನು ಮನ್ಯತೇ

         ಪರಾಕ್ರಮಂ ಪೌರುಷಂ ಚೇಹ ಪಾರ್ಥಃ|

02063005c ಪಾಂಚಾಲ್ಯಸ್ಯ ದ್ರುಪದಸ್ಯಾತ್ಮಜಾಮಿಮಾಂ

         ಸಭಾಮಧ್ಯೇ ಯೋಽತಿದೇವೀದ್ಗ್ಲಹೇಷು||

ಪಾರ್ಥನ ಪರಾಕ್ರಮ-ಪೌರುಷವೆಲ್ಲ ಅವನ ಸ್ವಂತ ಪ್ರಯೋಜನಕ್ಕೇ ಬರುತ್ತಿಲ್ಲ. ಪಾಂಚಾಲ ದ್ರುಪದನ ಈ ಮಗಳನ್ನು ಸಭಾಮಧ್ಯದಲ್ಲಿ ಜೂಜಿನ ಪಣವನ್ನಾಗಿಟ್ಟು ಕಳೆದುಕೊಂಡ!””

02063006 ವೈಶಂಪಾಯನ ಉವಾಚ|

02063006a ತದ್ವೈ ಶ್ರುತ್ವಾ ಭೀಮಸೇನೋಽತ್ಯಮರ್ಷೀ

         ಭೃಶಂ ನಿಶಶ್ವಾಸ ತದಾರ್ತರೂಪಃ|

02063006c ರಾಜಾನುಗೋ ಧರ್ಮಪಾಶಾನುಬದ್ಧೋ

         ದಹನ್ನಿವೈನಂ ಕೋಪವಿರಕ್ತದೃಷ್ಟಿಃ||

ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಅತಿಕುಪಿತನಾದ ಭೀಮಸೇನನು ಸಹಿಸಲಾಗದೇ ನಿಟ್ಟುಸಿರು ಬಿಡುತ್ತಾ ಆರ್ತರೂಪಿ ಧರ್ಮಪಾಶಗಳಿಂದ ಬದ್ಧ ರಾಜನನ್ನು ಸುಡುತ್ತಿರುವನೋ ಎನ್ನುವಂತೆ ಕೋಪವಿರಕ್ತ ದೃಷ್ಠಿಯಿಂದ ನೋಡಿದನು.

02063007 ಭೀಮ ಉವಾಚ|

02063007a ನಾಹಂ ಕುಪ್ಯೇ ಸೂತಪುತ್ರಸ್ಯ ರಾಜನ್ನ್

         ಏಷ ಸತ್ಯಂ ದಾಸಧರ್ಮಃ ಪ್ರವಿಷ್ಟಃ|

02063007c ಕಿಂ ವಿದ್ವಿಷೋ ವಾದ್ಯ ಮಾಂ ಧಾರಯೇಯುರ್

         ನಾದೇವೀಸ್ತ್ವಂ ಯದ್ಯನಯಾ ನರೇಂದ್ರ||

ಭೀಮನು ಹೇಳಿದನು: “ರಾಜನ್! ನಾನು ಸೂತಪುತ್ರನ ಮೇಲೆ ಕುಪಿತನಾಗಿಲ್ಲ. ಯಾಕೆಂದರೆ ನಾವು ದಾಸಧರ್ಮವನ್ನು ಪಡೆದಿರುವುದು ಸತ್ಯ. ನರೇಂದ್ರ! ಆದರೆ ನೀನು ಅವಳನ್ನು ಪಣವಾಗಿ ಎಸೆಯದಿದ್ದರೆ ನನ್ನನ್ನು ಈ ರೀತಿ ಇವರು ಬಂಧನದಲ್ಲಿಡಲು ಸಾಧ್ಯವಾಗುತ್ತಿತ್ತೇ?””

02063008 ವೈಶಂಪಾಯನ ಉವಾಚ|

02063008a ರಾಧೇಯಸ್ಯ ವಚಃ ಶ್ರುತ್ವಾ ರಾಜಾ ದುರ್ಯೋಧನಸ್ತದಾ|

02063008c ಯುಧಿಷ್ಠಿರಮುವಾಚೇದಂ ತೂಷ್ಣೀಂಭೂತಮಚೇತಸಂ||

ವೈಶಂಪಾಯನನು ಹೇಳಿದನು: “ರಾಧೇಯನ ಮಾತುಗಳನ್ನು ಕೇಳಿದ ರಾಜ ದುರ್ಯೋಧನನು ಜೀವವಿಲ್ಲದವನಂತೆ ಸುಮ್ಮನೆ ಕುಳಿತಿದ್ದ ಯುಧಿಷ್ಠಿರನಿಗೆ ಹೇಳಿದನು:

02063009a ಭೀಮಾರ್ಜುನೌ ಯಮೌ ಚೈವ ಸ್ಥಿತೌ ತೇ ನೃಪ ಶಾಸನೇ|

02063009c ಪ್ರಶ್ನಂ ಪ್ರಬ್ರೂಹಿ ಕೃಷ್ಣಾಂ ತ್ವಮಜಿತಾಂ ಯದಿ ಮನ್ಯಸೇ||

“ನೃಪ! ಭೀಮಾರ್ಜುನರು ಮತ್ತು ಯಮಳರು ನಿನ್ನ ಶಾಸನವನ್ನು ಅನುಸರಿಸುತ್ತಾರೆ. ಪ್ರಶ್ನೆಗೆ ಉತ್ತರಿಸು. ನಾವು ಕೃಷ್ಣೆಯನ್ನು ಗೆದ್ದಿದ್ದೇವೆ ಎಂದು ನಿನಗನಿಸುತ್ತದೆಯೇ?”

02063010a ಏವಮುಕ್ತ್ವಾ ಸ ಕೌಂತೇಯಮಪೋಹ್ಯ ವಸನಂ ಸ್ವಕಂ|

02063010c ಸ್ಮಯನ್ನಿವೈಕ್ಷತ್ಪಾಂಚಾಲೀಮೈಶ್ವರ್ಯಮದಮೋಹಿತಃ||

ಈ ರೀತಿ ಕೌಂತೇಯನಿಗೆ ಹೇಳಿ ಆ ಐಶ್ವರ್ಯಮದಮೋಹಿತನು ತನ್ನ ವಸ್ತ್ರವನ್ನು ಮೇಲೆತ್ತಿ ಕರೆಯುವ ದೃಷ್ಠಿಯಿಂದ ದ್ರೌಪದಿಯತ್ತ ನೋಡಿದನು.

02063011a ಕದಲೀದಂಡಸದೃಶಂ ಸರ್ವಲಕ್ಷಣಪೂಜಿತಂ|

02063011c ಗಜಹಸ್ತಪ್ರತೀಕಾಶಂ ವಜ್ರಪ್ರತಿಮಗೌರವಂ||

02063012a ಅಭ್ಯುತ್ಸ್ಮಯಿತ್ವಾ ರಾಧೇಯಂ ಭೀಮಮಾಧರ್ಷಯನ್ನಿವ|

02063012c ದ್ರೌಪದ್ಯಾಃ ಪ್ರೇಕ್ಷಮಾಣಾಯಾಃ ಸವ್ಯಮೂರುಮದರ್ಶಯತ್||

ರಾಧೇಯನೊಂದಿಗೆ ಚೇಷ್ಟೆಯಾಡುತ್ತಾ ಭೀಮಸೇನನನ್ನು ಸಿಟ್ಟಿಗೇಳಿಸಲು, ಅವನು ಬಾಳೆಯದಿಂಡಿನಂತಿದ್ದ, ಸರ್ವಲಕ್ಷಣಪೂಜಿತ, ಆನೆಯ ಸೊಂಡಿಲಿನಂತಿದ್ದ, ವಜ್ರಪ್ರತಿಮ, ಗೌರವಯುಕ್ತ ತನ್ನ ಎಡ ತೊಡೆಯನ್ನು ದ್ರೌಪದಿಗೆ ತೋರಿಸಿದನು.

02063013a ವೃಕೋದರಸ್ತದಾಲೋಕ್ಯ ನೇತ್ರೇ ಉತ್ಫಾಲ್ಯ ಲೋಹಿತೇ|

02063013c ಪ್ರೋವಾಚ ರಾಜಮಧ್ಯೇ ತಂ ಸಭಾಂ ವಿಶ್ರಾವಯನ್ನಿವ||

ಅದನ್ನು ನೋಡಿದ ವೃಕೋದರನು ತನ್ನ ಕೆಂಪು ಕಣ್ಣುಗಳನ್ನು ಅರಳಿಸಿ ಸಭೆಯಲ್ಲಿದ್ದ ರಾಜರೆಲ್ಲರಿಗೂ ಕೇಳುವ ಹಾಗೆ ಕೂಗಿ ಹೇಳಿದನು:

02063014a ಪಿತೃಭಿಃ ಸಹ ಸಾಲೋಕ್ಯಂ ಮಾ ಸ್ಮ ಗಚ್ಛೇದ್ವೃಕೋದರಃ|

02063014c ಯದ್ಯೇತಮೂರುಂ ಗದಯಾ ನ ಭಿಂದ್ಯಾಂ ತೇ ಮಹಾಹವೇ||

“ಮಹಾಯುದ್ಧದಲ್ಲಿ ನಾನು ಇವನ ಆ ತೊಡೆಯನ್ನು ಗದೆಯಿಂದ ಹೊಡೆದು ತುಂಡುಮಾಡದಿದ್ದರೆ ಈ ವೃಕೋದರನು ತನ್ನ ಪಿತೃಗಳ ಲೋಕವನ್ನು ಸೇರದಿರಲಿ!”

02063015a ಕ್ರುದ್ಧಸ್ಯ ತಸ್ಯ ಸ್ರೋತೋಭ್ಯಃ ಸರ್ವೇಭ್ಯಃ ಪಾವಕಾರ್ಚಿಷಃ|

02063015c ವೃಕ್ಷಸ್ಯೇವ ವಿನಿಶ್ಚೇರುಃ ಕೋಟರೇಭ್ಯಃ ಪ್ರದಹ್ಯತಃ||

ಅವನು ಈ ರೀತಿ ಹೇಳುತ್ತಿದ್ದಂತೆ ಪೊಳ್ಳು ಮರದ ಕೊಟರೆಯಿಂದ ಹೇಗೋ ಹಾಗೆ ಆ ಕೃದ್ಧನ ದೇಹದ ಎಲ್ಲ ರಂಧ್ರಗಳಿಂದ ಬೆಂಕಿಯು ಹೊರಬಿದ್ದಿತು.

02063016 ವಿದುರ ಉವಾಚ|

02063016a ಪರಂ ಭಯಂ ಪಶ್ಯತ ಭೀಮಸೇನಾದ್

         ಬುಧ್ಯಧ್ವಂ ರಾಜ್ಞೋ ವರುಣಸ್ಯೇವ ಪಾಶಾತ್|

02063016c ದೈವೇರಿತೋ ನೂನಮಯಂ ಪುರಸ್ತಾತ್

         ಪರೋಽನಯೋ ಭರತೇಷೂದಪಾದಿ||

ವಿದುರನು ಹೇಳಿದನು: “ರಾಜರೇ! ಈ ಮಹಾ ಭಯಂಕರ ಭೀಮಸೇನನನ್ನು ನೋಡಿ! ಇವನು ವರುಣನ ಪಾಶದಂತೆಯೇ ತೋರುತ್ತಿದ್ದಾನೆ. ಇದು ಈ ಪುರಾತನ ಭರತವಂಶಕ್ಕೆ ದೈವವು ಮೊದಲೇ ನೀಡಿದ ಒಂದು ದುರ್ಭಾಗ್ಯವಾಗಿರಬಹುದು.

02063017a ಅತಿದ್ಯೂತಂ ಕೃತಮಿದಂ ಧಾರ್ತರಾಷ್ಟ್ರಾ

         ಯೇಽಸ್ಯಾಂ ಸ್ತ್ರಿಯಂ ವಿವದಧ್ವಂ ಸಭಾಯಾಂ|

02063017c ಯೋಗಕ್ಷೇಮೋ ದೃಶ್ಯತೇ ವೋ ಮಹಾಭಯಃ

         ಪಾಪಾನ್ಮಂತ್ರಾನ್ಕುರವೋ ಮಂತ್ರಯಂತಿ||

ಧಾರ್ತರಾಷ್ಟ್ರರೇ! ಸಭೆಯಲ್ಲಿ ಈ ಸ್ತ್ರೀಗಾಗಿ ನಡೆಸಿದ ನಿಮ್ಮ ಅತಿದ್ಯೂತವನ್ನು ಸಾಕುಮಾಡಿ. ಕುರುಗಳೇ! ಪಾಪವನ್ನು ಯೋಜಿಸಿ ಕಾರ್ಯಗತಗೊಳಿಸಿದ ನಿಮ್ಮ ಯೋಗಕ್ಷೇಮಕ್ಕೆ ಮಹಾಭಯವೊಂದು ಗೋಚರವಾಗುತ್ತಿದೆ.

02063018a ಇಮಂ ಧರ್ಮಂ ಕುರವೋ ಜಾನತಾಶು

         ದುರ್ದೃಷ್ಟೇಽಸ್ಮಿನ್ಪರಿಷತ್ಸಂಪ್ರದುಷ್ಯೇತ್|

02063018c ಇಮಾಂ ಚೇತ್ಪೂರ್ವಂ ಕಿತವೋಽಗ್ಲಹೀಷ್ಯದ್

         ಈಶೋಽಭವಿಷ್ಯದಪರಾಜಿತಾತ್ಮಾ||

ಕುರುಗಳೇ! ಬೇಗನೆ ಇದರ ಕುರಿತು ಧರ್ಮವು ಏನು ಹೇಳುತ್ತದೆ ಎನ್ನುವುದನ್ನು ನಿರ್ಧಾರಮಾಡಿ. ಆ ನಿರ್ಧಾರವು ಸರಿಯಾಗಿರದಿದ್ದರೆ ಈ ಸಭೆಯು ಅನುಭವಿಸುತ್ತದೆ. ಈ ಜೂಜುಗಾರನು ತಾನು ಪರಾಜಿತನಾಗುವುದರ ಮೊದಲೇ ಇವಳನ್ನು ಪಣವನ್ನಾಗಿಟ್ಟಿದ್ದರೆ ಅವನು ಅವಳ ಒಡೆಯನಾಗಿರುತ್ತಿದ್ದನು.

02063019a ಸ್ವಪ್ನೇ ಯಥೈತದ್ಧಿ ಧನಂ ಜಿತಂ ಸ್ಯಾತ್

         ತದೇವಂ ಮನ್ಯೇ ಯಸ್ಯ ದೀವ್ಯತ್ಯನೀಶಃ|

02063019c ಗಾಂಧಾರಿಪುತ್ರಸ್ಯ ವಚೋ ನಿಶಮ್ಯ

         ಧರ್ಮಾದಸ್ಮಾತ್ಕುರವೋ ಮಾಪಯಾತ||

ಯಾವುದರ ಮೇಲೆ ತನಗೆ ಒಡೆತನವೇ ಇಲ್ಲವೋ ಅದನ್ನು ಪಣವಾಗಿಟ್ಟು ಗೆದ್ದೆನೆಂದರೆ ಕನಸಿನಲ್ಲಿ ಗೆದ್ದ ಪಣವೂ ಧನವಾಗಿರುತ್ತಿತ್ತು. ಕುರುಗಳೇ! ಗಾಂಧಾರಿಪುತ್ರನ ಮಾತುಗಳನ್ನು ಕೇಳಿದ ನೀವು ಇದರ ಕುರಿತಾದ ಧರ್ಮನಿರ್ಣಯವನ್ನು ಹೇಳಿ.”

02063020 ದುರ್ಯೋಧನ ಉವಾಚ|

02063020a ಭೀಮಸ್ಯ ವಾಕ್ಯೇ ತದ್ವದೇವಾರ್ಜುನಸ್ಯ

         ಸ್ಥಿತೋಽಹಂ ವೈ ಯಮಯೋಶ್ಚೈವಮೇವ|

02063020c ಯುಧಿಷ್ಠಿರಂ ಚೇತ್ಪ್ರವದಂತ್ಯನೀಶಂ

         ಅಥೋ ದಾಸ್ಯಾನ್ಮೋಕ್ಷ್ಯಸೇ ಯಾಜ್ಞಸೇನಿ||

ದುರ್ಯೋಧನನು ಹೇಳಿದನು: “ಭೀಮನ ವಾಕ್ಯ, ಹಾಗೆಯೇ ಅರ್ಜುನನ ಮತ್ತು ಯಮಳರ ಮಾತಿನಂತೆ ನಾವು ನಡೆದುಕೊಳ್ಳೋಣ. ಒಂದು ವೇಳೆ ಯುಧಿಷ್ಠಿರನು ಅವರ ಒಡೆಯನಾಗಿರಲಿಲ್ಲ ಎಂದು ಅವರು ಹೇಳಿದರೆ, ಯಾಜ್ಞಸೇನಿ! ನೀನು ದಾಸತ್ವದಿಂದ ಮುಕ್ತಳಾಗುತ್ತೀಯೆ.”

02063021 ಅರ್ಜುನ ಉವಾಚ|

02063021a ಈಶೋ ರಾಜಾ ಪೂರ್ವಮಾಸೀದ್ಗ್ಲಹೇ ನಃ

         ಕುಂತೀಪುತ್ರೋ ಧರ್ಮರಾಜೋ ಮಹಾತ್ಮಾ|

02063021c ಈಶಸ್ತ್ವಯಂ ಕಸ್ಯ ಪರಾಜಿತಾತ್ಮಾ

         ತಜ್ಜಾನೀಧ್ವಂ ಕುರವಃ ಸರ್ವ ಏವ||

ಅರ್ಜುನನು ಹೇಳಿದನು: “ನಮ್ಮನ್ನು ಪಣವನ್ನಾಗಿ ಇಡುವುದಕ್ಕೆ ಮೊದಲು ರಾಜ ಮಹಾತ್ಮ ಕುಂತೀಪುತ್ರ ಧರ್ಮರಾಜನು ನಮ್ಮ ಒಡೆಯನಾಗಿದ್ದನು. ಆದರೆ ತನ್ನನ್ನು ತಾನೇ ಕಳೆದುಕೊಂಡವನು ಯಾರ ಒಡೆಯ? ಇದನ್ನೇ ನೀವು ಸರ್ವ ಕುರುಗಳೂ ನಿರ್ಧಾರ ಮಾಡಬೇಕು.””

02063022 ವೈಶಂಪಾಯನ ಉವಾಚ|

02063022a ತತೋ ರಾಜ್ಞೋ ಧೃತರಾಷ್ಟ್ರಸ್ಯ ಗೇಹೇ

         ಗೋಮಾಯುರುಚ್ಚೈರ್ವ್ಯಾಹರದಗ್ನಿಹೋತ್ರೇ|

02063022c ತಂ ರಾಸಭಾಃ ಪ್ರತ್ಯಭಾಷಂತ ರಾಜನ್

         ಸಮಂತತಃ ಪಕ್ಷಿಣಶ್ಚೈವ ರೌದ್ರಾಃ||

ವೈಶಂಪಾಯನನು ಹೇಳಿದನು: “ರಾಜನ್! ಆಗ ಅಲ್ಲಿ ರಾಜ ಧೃತರಾಷ್ಟ್ರನ ಗೃಹದ ಅಗ್ನಿಹೋತ್ರದ ಬಳಿ ನರಿಯೊಂದು ಕೂಗಿತು. ಅದಕ್ಕೆ ಪ್ರತ್ಯುತ್ತರವಾಗಿ ಕತ್ತೆಗಳು ಒದರಿದವು. ಅದೇ ಸಮಯದಲ್ಲಿ ಎಲ್ಲಕಡೆಗಳಿಂದ ಪಕ್ಷಿಗಳ ರೋದನವು ಕೇಳಿಬಂದಿತು.

02063023a ತಂ ಚ ಶಬ್ಧಂ ವಿದುರಸ್ತತ್ತ್ವವೇದೀ

         ಶುಶ್ರಾವ ಘೋರಂ ಸುಬಲಾತ್ಮಜಾ ಚ|

02063023c ಭೀಷ್ಮದ್ರೋಣೌ ಗೌತಮಶ್ಚಾಪಿ ವಿದ್ವಾನ್

         ಸ್ವಸ್ತಿ ಸ್ವಸ್ತೀತ್ಯಪಿ ಚೈವಾಹುರುಚ್ಚೈಃ||

ಆ ಘೋರ ಶಬ್ಧವನ್ನು ತತ್ವವಾದಿ ವಿದುರನು ಕೇಳಿದನು. ಹಾಗೆಯೇ ಸುಬಲಾತ್ಮಜನೂ, ಭೀಷ್ಮ-ದ್ರೋಣರೂ, ಮತ್ತು ವಿದ್ವಾನ್ ಗೌತಮನೂ ಕೇಳಿದರು. ಅವರು ಜೋರಾಗಿ “ಸ್ವಸ್ತಿ! ಸ್ವಸ್ತಿ!” ಎಂದು ಕೂಗಿದರು.

02063024a ತತೋ ಗಾಂಧಾರೀ ವಿದುರಶ್ಚೈವ ವಿದ್ವಾಂಸ್

         ತಮುತ್ಪಾತಂ ಘೋರಮಾಲಕ್ಷ್ಯ ರಾಜ್ಞೇ|

02063024c ನಿವೇದಯಾಮಾಸತುರಾರ್ತವತ್ತದಾ

         ತತೋ ರಾಜಾ ವಾಕ್ಯಮಿದಂ ಬಭಾಷೇ||

ವಿದ್ವಾಂಸ ವಿದುರ ಮತ್ತು ಗಾಂಧಾರಿ ಇಬ್ಬರೂ ಆ ಘೋರ ಉತ್ಪಾತಗಳು ತೋರಿದುದನ್ನು ತಕ್ಷಣವೇ ರಾಜನಿಗೆ ಹೇಳಿದ ನಂತರ ರಾಜನು ಈ ಮಾತುಗಳನ್ನಾಡಿದನು:

02063025a ಹತೋಽಸಿ ದುರ್ಯೋಧನ ಮಂದಬುದ್ಧೇ

         ಯಸ್ತ್ವಂ ಸಭಾಯಾಂ ಕುರುಪುಂಗವಾನಾಂ|

02063025c ಸ್ತ್ರಿಯಂ ಸಮಾಭಾಷಸಿ ದುರ್ವಿನೀತ

         ವಿಶೇಷತೋ ದ್ರೌಪದೀಂ ಧರ್ಮಪತ್ನೀಂ||

“ಮಂದಬುದ್ಧಿ! ದುರ್ಯೋಧನ! ಕುರುಪುಂಗವರ ಈ ಸಭೆಯಲ್ಲಿ ಸರಿಯಾಗಿಯೇ ಮಾತನಾಡುತ್ತಿರುವ ಸ್ತ್ರೀಯೊಂದಿಗೆ ಅದರಲ್ಲೂ ವಿಶೇಷವಾಗಿ ಧರ್ಮನ ಪತ್ನಿ ದ್ರೌಪದಿಯೊಂದಿಗೆ ಕೆಟ್ಟದ್ದಾಗಿ ವರ್ತಿಸಿದ್ದುದರಿಂದ ಸೋತವನು ನೀನೇ!”

02063026a ಏವಮುಕ್ತ್ವಾ ಧೃತರಾಷ್ಟ್ರೋ ಮನೀಷೀ

         ಹಿತಾನ್ವೇಷೀ ಬಾಂಧವಾನಾಮಪಾಯಾತ್|

02063026c ಕೃಷ್ಣಾಂ ಪಾಂಚಾಲೀಮಬ್ರವೀತ್ಸಾಂತ್ವಪೂರ್ವಂ

         ವಿಮೃಶ್ಯೈತತ್ಪ್ರಜ್ಞಯಾ ತತ್ತ್ವಬುದ್ಧಿಃ||

ಹೀಗೆ ಹೇಳಿದ ಮನೀಷಿ ಧೃತರಾಷ್ಟ್ರನು ಬಾಂಧವ ಪತ್ನಿ ಕೃಷ್ಣಾ ಪಾಂಚಾಲಿಯನ್ನು ಸಂತವಿಸುವ ಉದ್ದೇಶದಿಂದ ಪ್ರಜ್ಞೆಯ ತತ್ವಬುದ್ಧಿಯನ್ನು ಸೂಚಿಸುವ ಮಾತುಗಳನ್ನಾಡಿದನು.

02063027 ಧೃತರಾಷ್ಟ್ರ ಉವಾಚ|

02063027a ವರಂ ವೃಣೀಷ್ವ ಪಾಂಚಾಲಿ ಮತ್ತೋ ಯದಭಿಕಾಂಕ್ಷಸಿ|

02063027c ವಧೂನಾಂ ಹಿ ವಿಶಿಷ್ಟಾ ಮೇ ತ್ವಂ ಧರ್ಮಪರಮಾ ಸತೀ||

ಧೃತರಾಷ್ಟ್ರನು ಹೇಳಿದನು: “ಪಾಂಚಾಲಿ! ಪರಮ ಧಾರ್ಮಿಕ ಸತಿಯಾದ ನೀನು ನನ್ನ ಸೊಸೆಯಂದಿರಲ್ಲಿಯೇ ವಿಶಿಷ್ಠಳಾಗಿದ್ದೀಯೆ. ನನ್ನಿಂದ ನೀನು ಬಯಸುವ ವರವನ್ನು ಪಡೆ.”

02063028 ದ್ರೌಪದ್ಯುವಾಚ|

02063028a ದದಾಸಿ ಚೇದ್ವರಂ ಮಹ್ಯಂ ವೃಣೋಮಿ ಭರತರ್ಷಭ|

02063028c ಸರ್ವಧರ್ಮಾನುಗಃ ಶ್ರೀಮಾನದಾಸೋಽಸ್ತು ಯುಧಿಷ್ಠಿರಃ||

ದ್ರೌಪದಿಯು ಹೇಳಿದಳು: “ಭರತರ್ಷಭ! ವರವೊಂದನ್ನು ನನಗೆ ಕೊಡುವುದಾದರೆ ಸರ್ವಧರ್ಮಾನುಗ ಶ್ರೀಮಾನ್ ಯುಧಿಷ್ಠಿರನು ಅದಾಸನಾಗಲಿ.

02063029a ಮನಸ್ವಿನಮಜಾನಂತೋ ಮಾ ವೈ ಬ್ರೂಯುಃ ಕುಮಾರಕಾಃ|

02063029c ಏಷ ವೈ ದಾಸಪುತ್ರೇತಿ ಪ್ರತಿವಿಂಧ್ಯಂ ತಮಾಗತಂ||

ತಿಳಿಯದವರು ಮನಸ್ವಿ ಪ್ರತಿವಿಂಧ್ಯನನ್ನು “ಇಗೋ ಇವನು ದಾಸಪುತ್ರ!” ಎಂದು ಕರೆಯದಂತಾಗದಿರಲಿ!

02063030a ರಾಜಪುತ್ರಃ ಪುರಾ ಭೂತ್ವಾ ಯಥಾ ನಾನ್ಯಃ ಪುಮಾನ್ಕ್ವ ಚಿತ್|

02063030c ಲಾಲಿತೋ ದಾಸಪುತ್ರತ್ವಂ ಪಶ್ಯನ್ನಶ್ಯೇದ್ಧಿ ಭಾರತ||

ಭಾರತ! ಈ ವರೆಗೆ ಬೇರೆ ಯಾವ ಪುರುಷನೂ ಅವನಂತೆ ಲಾಲಿತನಾಗಿಲ್ಲ. ಅವನು ತನ್ನ ದಾಸಪುತ್ರತ್ವವನ್ನು ನೋಡಿ ಸತ್ತೇಹೋಗುತ್ತಾನೆ!”

02063031 ಧೃತರಾಷ್ಟ್ರ ಉವಾಚ|

02063031a ದ್ವಿತೀಯಂ ತೇ ವರಂ ಭದ್ರೇ ದದಾಮಿ ವರಯಸ್ವ ಮಾಂ|

02063031c ಮನೋ ಹಿ ಮೇ ವಿತರತಿ ನೈಕಂ ತ್ವಂ ವರಮರ್ಹಸಿ||

ಧೃತರಾಷ್ಟ್ರನು ಹೇಳಿದನು: “ಭದ್ರೇ! ನಾನು ನಿನಗೆ ಎರಡನೇ ವರವನ್ನು ಕೊಡುತ್ತೇನೆ. ಕೇಳಿಕೋ. ನೀನು ಒಂದೇ ಒಂದು ವರಕ್ಕೆ ಅರ್ಹಳಲ್ಲ ಎಂದು ನನ್ನ ಮನಸ್ಸು ಹೇಳುತ್ತಿದೆ.”

02063032 ದ್ರೌಪದ್ಯುವಾಚ|

02063032a ಸರಥೌ ಸಧನುಷ್ಕೌ ಚ ಭೀಮಸೇನಧನಂಜಯೌ|

02063032c ನಕುಲಂ ಸಹದೇವಂ ಚ ದ್ವಿತೀಯಂ ವರಯೇ ವರಂ||

ದ್ರೌಪದಿಯು ಹೇಳಿದಳು: “ನನ್ನ ಎರಡನೆಯ ವರವಾಗಿ ನಾನು ರಥ-ಧನುಸ್ಸುಗಳೊಂದಿಗೆ ಭೀಮಸೇನ, ಧನಂಜಯ ಮತ್ತು ನಕುಲ ಸಹದೇವರನ್ನು ಕೇಳಿಕೊಳ್ಳುತ್ತೇನೆ.”

02063033 ಧೃತರಾಷ್ಟ್ರ ಉವಾಚ|

02063033a ತೃತೀಯಂ ವರಯಾಸ್ಮತ್ತೋ ನಾಸಿ ದ್ವಾಭ್ಯಾಂ ಸುಸತ್ಕೃತಾ|

02063033c ತ್ವಂ ಹಿ ಸರ್ವಸ್ನುಷಾಣಾಂ ಮೇ ಶ್ರೇಯಸೀ ಧರ್ಮಚಾರಿಣೀ||

ಧೃತರಾಷ್ಟ್ರನು ಹೇಳಿದನು: “ಮೂರನೆಯ ವರವನ್ನೂ ಕೇಳು. ನೀನು ಎರಡೇ ಎರಡು ವರಗಳಿಂದ ಸುಸತ್ಕೃತಳಾದೆಯೆಂದು ಅನಿಸುವುದಿಲ್ಲ. ಧರ್ಮಚಾರಿಣಿಯಾದ ನೀನು ನನ್ನ ಎಲ್ಲ ಸೊಸೆಯಂದಿರಲ್ಲಿ ಶ್ರೇಯಸಿ.”

02063034 ದ್ರೌಪದ್ಯುವಾಚ|

02063034a ಲೋಭೋ ಧರ್ಮಸ್ಯ ನಾಶಾಯ ಭಗವನ್ನಾಹಮುತ್ಸಹೇ|

02063034c ಅನರ್ಹಾ ವರಮಾದಾತುಂ ತೃತೀಯಂ ರಾಜಸತ್ತಮ||

ದ್ರೌಪದಿಯು ಹೇಳಿದಳು: “ಭಗವನ್! ಲೋಭವು ಧರ್ಮವನ್ನು ನಾಶಪಡಿಸುತ್ತದೆ. ರಾಜಸತ್ತಮ! ನಾನು ಮೂರನೆಯ ವರವನ್ನು ಪಡೆಯಲು ಅನರ್ಹಳು.

02063035a ಏಕಮಾಹುರ್ವೈಶ್ಯವರಂ ದ್ವೌ ತು ಕ್ಷತ್ರಸ್ತ್ರಿಯಾ ವರೌ|

02063035c ತ್ರಯಸ್ತು ರಾಜ್ಞೋ ರಾಜೇಂದ್ರ ಬ್ರಾಹ್ಮಣಸ್ಯ ಶತಂ ವರಾಃ||

ರಾಜನ್! ವೈಶ್ಯೆಯ ಪತ್ನಿಗೆ ಒಂದೇ ವರ, ಕ್ಷತ್ರಿಯನ ಪತ್ನಿಗೆ ಎರಡು ವರಗಳು, ರಾಜನ ಪತ್ನಿಗೆ ಮೂರು ವರಗಳು ಮತ್ತು ಬ್ರಾಹ್ಮಣನ ಪತ್ನಿಗೆ ನೂರು ವರಗಳೆಂದು ಹೇಳುತ್ತಾರೆ.

02063036a ಪಾಪೀಯಾಂಸ ಇಮೇ ಭೂತ್ವಾ ಸಂತೀರ್ಣಾಃ ಪತಯೋ ಮಮ|

02063036c ವೇತ್ಸ್ಯಂತಿ ಚೈವ ಭದ್ರಾಣಿ ರಾಜನ್ಪುಣ್ಯೇನ ಕರ್ಮಣಾ||

ರಾಜನ್! ಪಾಪೀಯಸರಾಗಿದ್ದ ನನ್ನ ಪತಿಗಳು ಈಗ ಪಾರಾಗಿದ್ದಾರೆ. ಇನ್ನು ಮುಂದೆ ಅವರೇ ತಮ್ಮ ಪುಣ್ಯ ಕರ್ಮಗಳಿಂದ ಒಳ್ಳೆಯದನ್ನು ಹೊಂದುತ್ತಾರೆ!”

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ದ್ರೌಪದೀವರಲಾಭೇ ತ್ರಿಷಷ್ಟಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ದ್ರೌಪದೀವರಲಾಭ ಎನ್ನುವ ಅರವತ್ಮೂರನೆಯ ಅಧ್ಯಾಯವು.

Related image

Comments are closed.