Sabha Parva: Chapter 62

ಸಭಾ ಪರ್ವ: ದ್ಯೂತ ಪರ್ವ

೬೨

ಭೀಮನ ಮಾತು

ದ್ರೌಪದಿಯ ಪ್ರಲಾಪ ಮತ್ತು ಪ್ರಶ್ನೆ (೧-೧೩). ದ್ರೌಪದಿಯ ಪ್ರಶ್ನೆಗಳಿಗೆ ಯುಧಿಷ್ಠಿರನೇ ಉತ್ತರಿಸಬೇಕೆಂದು ಭೀಷ್ಮನು ಹೇಳುವುದು (೧೪-೨೧). ಯುಧಿಷ್ಠಿರನ ಉತ್ತರಕ್ಕೆ ಸಭೆಯು ಕಾಯುವುದು (೨೨-೩೦). ಉತ್ತರ ಬರದಿದ್ದಾಗ ಭೀಮನು ಕೋಪದಿಂದ ಮಾತನಾಡಿದುದು (೩೧-೩೮).

02062001 ದ್ರೌಪದ್ಯುವಾಚ|

02062001a ಪುರಸ್ತಾತ್ಕರಣೀಯಂ ಮೇ ನ ಕೃತಂ ಕಾರ್ಯಮುತ್ತರಂ|

02062001c ವಿಹ್ವಲಾಸ್ಮಿ ಕೃತಾನೇನ ಕರ್ಷತಾ ಬಲಿನಾ ಬಲಾತ್||

ದ್ರೌಪದಿಯು ಹೇಳಿದಳು: “ಬಲಶಾಲಿಯು ಬಲಾತ್ಕಾರವಾಗಿ ಎಳೆದು ತರುವಾಗ ವಿಹ್ವಲಳಾದ ನಾನು ಮೊದಲೇ ಮಾಡಬೇಕಾಗಿದ್ದ ಒಂದು ಮಹೋತ್ತರ ಕಾರ್ಯವು ಉಳಿದುಬಿಟ್ಟಿದೆ.

02062002a ಅಭಿವಾದಂ ಕರೋಮ್ಯೇಷಾಂ ಗುರೂಣಾಂ ಕುರುಸಂಸದಿ|

02062002c ನ ಮೇ ಸ್ಯಾದಪರಾಧೋಽಯಂ ಯದಿದಂ ನ ಕೃತಂ ಮಯಾ||

ಕುರುಸಂಸದಿಯಲ್ಲಿರುವ ಈ ಗುರುಗಳ ಅಭಿವಂದನೆಯನ್ನು ಮಾಡಬೇಕಾಗಿತ್ತು. ಇದು ನನ್ನ ಅಪರಾಧ ಎಂದು ತಿಳಿಯಬೇಡಿ. ಇದನ್ನು ಮೊದಲೇ ನಾನು ಮಾಡಲಿಲ್ಲ!””

02062003 ವೈಶಂಪಾಯನ ಉವಾಚ|

02062003a ಸಾ ತೇನ ಚ ಸಮುದ್ಧೂತಾ ದುಃಖೇನ ಚ ತಪಸ್ವಿನೀ|

02062003c ಪತಿತಾ ವಿಲಲಾಪೇದಂ ಸಭಾಯಾಮತಥೋಚಿತಾ||

ವೈಶಂಪಾಯನನು ಹೇಳಿದನು: “ಅವನಿಂದ ಸಭೆಗೆ ಎಳೆದು ತರಲ್ಪಟ್ಟ ಆ ತಪಸ್ವಿನಿಯು ಉಚಿತವಾಗಿರದ ಆ ಅನುಭವದಿಂದ ದುಃಖಿತಳಾಗಿ ಬಿದ್ದು ವಿಲಪಿಸಿದಳು.

02062004 ದ್ರೌಪದ್ಯುವಾಚ|

02062004a ಸ್ವಯಂವರೇ ಯಾಸ್ಮಿ ನೃಪೈರ್ದೃಷ್ಟಾ ರಂಗೇ ಸಮಾಗತೈಃ|

02062004c ನ ದೃಷ್ಟಪೂರ್ವಾ ಚಾನ್ಯತ್ರ ಸಾಹಮದ್ಯ ಸಭಾಂ ಗತಾ||

ದ್ರೌಪದಿಯು ಹೇಳಿದಳು: “ಸ್ವಯಂವರ ರಂಗದಲ್ಲಿ ಸಮಾಗಮಿಸಿದ್ದ ನೃಪರು ನೋಡಿದ ಮೊದಲು ಅಥವಾ ನಂತರ ನೋಡದೇ ಇದ್ದ ನನ್ನನ್ನು ಇಂದು ಸಭೆಗೆ ಎಳೆದು ತರಲಾಯಿತು.

02062005a ಯಾಂ ನ ವಾಯುರ್ನ ಚಾದಿತ್ಯೋ ದೃಷ್ಟವಂತೌ ಪುರಾ ಗೃಹೇ|

02062005c ಸಾಹಮದ್ಯ ಸಭಾಮಧ್ಯೇ ದೃಶ್ಯಾಮಿ ಕುರುಸಂಸದಿ||

02062006a ಯಾಂ ನ ಮೃಷ್ಯಂತಿ ವಾತೇನ ಸ್ಪೃಶ್ಯಮಾನಾಂ ಪುರಾ ಗೃಹೇ|

02062006c ಸ್ಪೃಶ್ಯಮಾನಾಂ ಸಹಂತೇಽದ್ಯ ಪಾಂಡವಾಸ್ತಾಂ ದುರಾತ್ಮನಾ||

ಇದಕ್ಕೆ ಮೊದಲು ನನ್ನ ಮನೆಯಲ್ಲಿ ವಾಯುವಾಗಲೀ ಆದಿತ್ಯನಾಗಲೀ ನೋಡದೇ ಇದ್ದ ನನ್ನನ್ನು ಕುರುಸಂಸದಿಯಲ್ಲಿ ಸಭಾಮಧ್ಯದಲ್ಲಿ ಎಳೆದು ತಂದು ಪ್ರದರ್ಶಿಸಲಾಗಿದೆ. ಇದಕ್ಕೆ ಮೊದಲು ನನ್ನ ಮನೆಯಲ್ಲಿ ವಾಯು ಸ್ಪರ್ಷವನ್ನೂ ಸಹಿಸಲಾರದ ಪಾಂಡವರು ಇಂದು ಈ ದುರಾತ್ಮನು ನನ್ನನ್ನು ಸ್ಪರ್ಷಿಸುವುದನ್ನು ಸಹಿಸಿಕೊಂಡಿದ್ದಾರೆ.

02062007a ಮೃಷ್ಯಂತೇ ಕುರವಶ್ಚೇಮೇ ಮನ್ಯೇ ಕಾಲಸ್ಯ ಪರ್ಯಯಂ|

02062007c ಸ್ನುಷಾಂ ದುಹಿತರಂ ಚೈವ ಕ್ಲಿಶ್ಯಮಾನಾಮನರ್ಹತೀಂ||

02062008a ಕಿಂ ತ್ವತಃ ಕೃಪಣಂ ಭೂಯೋ ಯದಹಂ ಸ್ತ್ರೀ ಸತೀ ಶುಭಾ|

02062008c ಸಭಾಮಧ್ಯಂ ವಿಗಾಹೇಽದ್ಯ ಕ್ವ ನು ಧರ್ಮೋ ಮಹೀಕ್ಷಿತಾಂ||

ಕೌರವರ ಕಾಲವು ಮುಗಿಯಲು ಬಂದಿದೆಯೆಂದು ನನಗನ್ನಿಸುತ್ತದೆ. ತಮ್ಮ ಸೊಸೆ ಮತ್ತು ಹೆಣ್ಣುಮಕ್ಕಳಿಗೆ ಅನರ್ಹ ಕಷ್ಟಕೊಡುತ್ತಿದ್ದಾರೆ. ಇಲ್ಲವಾದರೆ ಏಕೆ ಸತಿ ಮತ್ತು ಶುಭೆಯಾದ ನನ್ನನ್ನು ಈ ಸಭಾಮಧ್ಯದಲ್ಲಿ ಎಳೆದು ತಂದಿದ್ದಾರೆ? ಮಹೀಕ್ಷಿತರ ಧರ್ಮವೇ ಇಲ್ಲವಾಯಿತೆ?

02062009a ಧರ್ಮ್ಯಾಃ ಸ್ತ್ರಿಯಃ ಸಭಾಂ ಪೂರ್ವಂ ನ ನಯಂತೀತಿ ನಃ ಶ್ರುತಂ|

02062009c ಸ ನಷ್ಟಃ ಕೌರವೇಯೇಷು ಪೂರ್ವೋ ಧರ್ಮಃ ಸನಾತನಃ||

ಹಿಂದೆ ಎಂದೂ ಧಾರ್ಮಿಕ ಸ್ತ್ರೀಯರನ್ನು ಸಭೆಗೆ ಕರೆತಂದಿದ್ದುದನ್ನು ಕೇಳಿಲ್ಲ. ಈ ಸನಾತನ ಧರ್ಮವು ಕೌರವರಲ್ಲಿ ನಶಿಸಿಹೋದಂತಿದೆ.

02062010a ಕಥಂ ಹಿ ಭಾರ್ಯಾ ಪಾಂಡೂನಾಂ ಪಾರ್ಷತಸ್ಯ ಸ್ವಸಾ ಸತೀ|

02062010c ವಾಸುದೇವಸ್ಯ ಚ ಸಖೀ ಪಾರ್ಥಿವಾನಾಂ ಸಭಾಮಿಯಾಂ||

ಪಾಂಡವರ ಭಾರ್ಯೆ, ಪಾರ್ಷತನ ತಂಗಿ, ವಾಸುದೇವನ ಸಖಿ ಸತಿಯನ್ನು ಪಾರ್ಥಿವರ ಸಭೆಯಲ್ಲಿ ಏಕೆ ಎಳೆದು ತರಲಾಯಿತು?

02062011a ತಾಮಿಮಾಂ ಧರ್ಮರಾಜಸ್ಯ ಭಾರ್ಯಾಂ ಸದೃಶವರ್ಣಜಾಂ|

02062011c ಬ್ರೂತ ದಾಸೀಮದಾಸೀಂ ವಾ ತತ್ಕರಿಷ್ಯಾಮಿ ಕೌರವಾಃ||

ಧರ್ಮರಾಜನ ಭಾರ್ಯೆ ಸದೃಶವರ್ಣಜಳಾದ ಇವಳು ದಾಸಿಯೋ ಅಥವಾ ದಾಸಿಯಲ್ಲವೋ ಹೇಳಿ ಕೌರವರೇ! ನಿಮ್ಮ ಹೇಳಿಕೆಯಂತೆ ನಡೆದುಕೊಳ್ಳುತ್ತೇನೆ.

02062012a ಅಯಂ ಹಿ ಮಾಂ ದೃಢಂ ಕ್ಷುದ್ರಃ ಕೌರವಾಣಾಂ ಯಶೋಹರಃ|

02062012c ಕ್ಲಿಶ್ನಾತಿ ನಾಹಂ ತತ್ಸೋಢುಂ ಚಿರಂ ಶಕ್ಷ್ಯಾಮಿ ಕೌರವಾಃ||

ಕೌರವರೇ! ಈ ಕೌರವರ ಯಶೋಹರ ಕ್ಷುದ್ರನು ನನ್ನ ಮಾನಕಳೆಯುತ್ತಿದ್ದಾನೆ. ಇನ್ನು ಇದನ್ನು ನಾನು ಸಹಿಸಲಾರೆ.

02062013a ಜಿತಾಂ ವಾಪ್ಯಜಿತಾಂ ವಾಪಿ ಮನ್ಯಧ್ವಂ ವಾ ಯಥಾ ನೃಪಾಃ|

02062013c ತಥಾ ಪ್ರತ್ಯುಕ್ತಮಿಚ್ಛಾಮಿ ತತ್ಕರಿಷ್ಯಾಮಿ ಕೌರವಾಃ||

ಕೌರವರೇ! ನೃಪರೇ! ನಿಮ್ಮ ಅಭಿಪ್ರಾಯದಲ್ಲಿ ನನ್ನನ್ನು ಗೆದ್ದಿದ್ದಾರೆಯೋ ಇಲ್ಲವೋ ಎನ್ನುವುದನ್ನು ಹೇಳಿ. ನನ್ನ ಪ್ರಶ್ನೆಗೆ ಉತ್ತರವನ್ನು ಬಯಸುತ್ತೇನೆ ಮತ್ತು ಅದರಂತೆ ಮಾಡುತ್ತೇನೆ.”

02062014 ಭೀಷ್ಮ ಉವಾಚ|

02062014a ಉಕ್ತವಾನಸ್ಮಿ ಕಲ್ಯಾಣಿ ಧರ್ಮಸ್ಯ ತು ಪರಾಂ ಗತಿಂ|

02062014c ಲೋಕೇ ನ ಶಕ್ಯತೇ ಗಂತುಮಪಿ ವಿಪ್ರೈರ್ಮಹಾತ್ಮಭಿಃ||

ಭೀಷ್ಮನು ಹೇಳಿದನು: “ಕಲ್ಯಾಣಿ! ಧರ್ಮದ ನಡೆಯನ್ನು ತಿಳಿಯಲಸಾಧ್ಯ ಎಂದು ಕೇಳಿದ್ದೇನೆ. ಲೋಕದ ಮಹಾತ್ಮ ವಿಪ್ರರೂ ಅದನ್ನು ಹಿಂಬಾಲಿಸಲು ಶಕ್ಯರಿಲ್ಲ.

02062015a ಬಲವಾಂಸ್ತು ಯಥಾ ಧರ್ಮಂ ಲೋಕೇ ಪಶ್ಯತಿ ಪೂರುಷಃ|

02062015c ಸ ಧರ್ಮೋ ಧರ್ಮವೇಲಾಯಾಂ ಭವತ್ಯಭಿಹಿತಃ ಪರೈಃ||

ಲೋಕದಲ್ಲಿ ಧರ್ಮವು ಪ್ರಶ್ನೆಯಲ್ಲಿದ್ದಾಗಲೆಲ್ಲಾ ಬಲಶಾಲಿ ಪುರುಷರು ಏನನ್ನು ಧರ್ಮವೆಂದು ಕಾಣುತ್ತಾರೋ ಅದನ್ನೇ ಇತರರೂ ಕೂಡ ಧರ್ಮವೆಂದು ಸ್ವೀಕರಿಸುತ್ತಾರೆ.

02062016a ನ ವಿವೇಕ್ತುಂ ಚ ತೇ ಪ್ರಶ್ನಮೇತಂ ಶಕ್ನೋಮಿ ನಿಶ್ಚಯಾತ್|

02062016c ಸೂಕ್ಷ್ಮತ್ವಾದ್ಗಹನತ್ವಾಚ್ಚ ಕಾರ್ಯಸ್ಯಾಸ್ಯ ಚ ಗೌರವಾತ್||

ನಾನು ಈ ಪ್ರಶ್ನೆಯನ್ನು ನಿಶ್ಚಯವಾಗಿ ಉತ್ತರಿಸಲು ಶಕ್ತನಾಗಿಲ್ಲ. ಯಾಕೆಂದರೆ ಇದು ಸೂಕ್ಷ್ಮವಾದುದು, ಗಹನವಾದುದು ಮತ್ತು ಇದೊಂದು ದೊಡ್ಡ ಸಾಹಸವು.

02062017a ನೂನಮಂತಃ ಕುಲಸ್ಯಾಸ್ಯ ಭವಿತಾ ನಚಿರಾದಿವ|

02062017c ತಥಾ ಹಿ ಕುರವಃ ಸರ್ವೇ ಲೋಭಮೋಹಪರಾಯಣಾಃ||

ಈ ಕುಲದ ಅಂತ್ಯಕ್ಕೆ ತಡವಿಲ್ಲವೆಂದು ತೋರುತ್ತದೆ. ಸರ್ವ ಕುರುಗಳೂ ಲೋಭ-ಮೋಹಪರಾಯಣರಾಗಿದ್ದಾರೆ.

02062018a ಕುಲೇಷು ಜಾತಾಃ ಕಲ್ಯಾಣಿ ವ್ಯಸನಾಭ್ಯಾಹತಾ ಭೃಶಂ|

02062018c ಧರ್ಮ್ಯಾನ್ಮಾರ್ಗಾನ್ನ ಚ್ಯವಂತೇ ಯಥಾ ನಸ್ತ್ವಂ ವಧೂಃ ಸ್ಥಿತಾ||

ಕಲ್ಯಾಣಿ! ಕುಲವಧು ನಿನ್ನನ್ನು ಇಲ್ಲಿ ಕರೆತಂದಂತೆ ಉತ್ತಮ ಕುಲಗಳಲ್ಲಿ ಜನಿಸಿದವರು ವ್ಯಸನಪೀಡಿತರಾಗಿ ಧರ್ಮಮಾರ್ಗವನ್ನು ತೊರೆಯುವುದಿಲ್ಲ.

02062019a ಉಪಪನ್ನಂ ಚ ಪಾಂಚಾಲಿ ತವೇದಂ ವೃತ್ತಮೀದೃಶಂ|

02062019c ಯತ್ಕೃಚ್ಛ್ರಮಪಿ ಸಂಪ್ರಾಪ್ತಾ ಧರ್ಮಮೇವಾನ್ವವೇಕ್ಷಸೇ||

ಪಾಂಚಾಲಿ! ಕಷ್ಟಶೋಕವನ್ನು ಹೊಂದಿದ್ದರೂ ನೀನು ನಡೆದುಕೊಂಡ ರೀತಿಯು ಅಂಥಹುದು. ಈಗಲೂ ನೀನು ಧರ್ಮವನ್ನು ಹುಡುಕುತ್ತಿದ್ದೀಯೆ.

02062020a ಏತೇ ದ್ರೋಣಾದಯಶ್ಚೈವ ವೃದ್ಧಾ ಧರ್ಮವಿದೋ ಜನಾಃ|

02062020c ಶೂನ್ಯೈಃ ಶರೀರೈಸ್ತಿಷ್ಠಂತಿ ಗತಾಸವ ಇವಾನತಾಃ||

ಇಲ್ಲಿರುವ ದ್ರೋಣ ಮೊದಲಾದ ಧರ್ಮವಿದ ವೃದ್ಧ ಜನರು ಸತ್ವವನ್ನು ಕಳೆದುಕೊಂಡು ಶೂನ್ಯ ದೇಹದಲ್ಲಿರುವವರಂತೆ ಮುಖವನ್ನು ಕೆಳಮಾಡಿ ಕುಳಿತಿದ್ದಾರೆ.

02062021a ಯುಧಿಷ್ಠಿರಸ್ತು ಪ್ರಶ್ನೇಽಸ್ಮಿನ್ಪ್ರಮಾಣಮಿತಿ ಮೇ ಮತಿಃ|

02062021c ಅಜಿತಾಂ ವಾ ಜಿತಾಂ ವಾಪಿ ಸ್ವಯಂ ವ್ಯಾಹರ್ತುಮರ್ಹತಿ||

ನನ್ನ ಪ್ರಕಾರ ಯುಧಿಷ್ಠಿರನು ಮಾತ್ರ ಈ ಪ್ರಶ್ನೆಗೆ ಪ್ರಮಾಣ. ನಿನ್ನನ್ನು ಗೆದ್ದಿದ್ದಾರೆಯೋ ಅಥವಾ ಇಲ್ಲವೋ ಎನ್ನುವುದನ್ನು ಸ್ವಯಂ ಅವನೇ ಹೇಳಬೇಕು.””

02062022 ವೈಶಂಪಾಯನ ಉವಾಚ|

02062022a ತಥಾ ತು ದೃಷ್ಟ್ವಾ ಬಹು ತತ್ತದೇವಂ

         ರೋರೂಯಮಾಣಾಂ ಕುರರೀಮಿವಾರ್ತಾಂ|

02062022c ನೋಚುರ್ವಚಃ ಸಾಧ್ವಥ ವಾಪ್ಯಸಾಧು

         ಮಹೀಕ್ಷಿತೋ ಧಾರ್ತರಾಷ್ಟ್ರಸ್ಯ ಭೀತಾಃ||

ವೈಶಂಪಾಯನನು ಹೇಳಿದನು: “ಬಹಳಷ್ಟು ನಡೆದುಹೋದವುಗಳನ್ನು ಮತ್ತು ಕುರರೀ ಪಕ್ಷಿಯಂತೆ ಆರ್ತಳಾಗಿ ರೋಧಿಸುತ್ತಿದ್ದ ಅವಳನ್ನು ನೋಡಿದ ಮಹೀಕ್ಷಿತರು ಧಾರ್ತರಾಷ್ಟ್ರನ ಭೀತಿಯಿಂದ ಒಳ್ಳೆಯ ಅಥವಾ ಕೆಟ್ಟ ಯಾವ ಮಾತುಗಳನ್ನೂ ಆಡಲಿಲ್ಲ. 

02062023a ದೃಷ್ಟ್ವಾ ತು ತಾನ್ಪಾರ್ಥಿವಪುತ್ರಪೌತ್ರಾಂಸ್

         ತೂಷ್ಣೀಂಭೂತಾನ್ಧೃತರಾಷ್ಟ್ರಸ್ಯ ಪುತ್ರಃ|

02062023c ಸ್ಮಯನ್ನಿವೇದಂ ವಚನಂ ಬಭಾಷೇ

         ಪಾಂಚಾಲರಾಜಸ್ಯ ಸುತಾಂ ತದಾನೀಂ||

ಪಾರ್ಥಿವ ಪುತ್ರಪೌತ್ರರೆಲ್ಲರೂ ಸುಮ್ಮನಿದ್ದುದನ್ನು ನೋಡಿದ ಧೃತರಾಷ್ಟ್ರಪುತ್ರನು ಮುಗುಳ್ನಗುತ್ತಾ ಪಾಂಚಾಲರಾಜ ಸುತೆಗೆ ಹೇಳಿದನು:

02062024a ತಿಷ್ಠತ್ವಯಂ ಪ್ರಶ್ನ ಉದಾರಸತ್ತ್ವೇ

         ಭೀಮೇಽರ್ಜುನೇ ಸಹದೇವೇ ತಥೈವ|

02062024c ಪತ್ಯೌ ಚ ತೇ ನಕುಲೇ ಯಾಜ್ಞಸೇನಿ

         ವದಂತ್ವೇತೇ ವಚನಂ ತ್ವತ್ಪ್ರಸೂತಂ||

“ಯಾಜ್ಞಸೇನಿ! ನಿನ್ನ ಈ ಪ್ರಶ್ನೆಯನ್ನು ನಿನ್ನ ಸತ್ವಶಾಲಿ ಪತಿಗಳು - ಭೀಮ, ಅರ್ಜುನ, ಸಹದೇವ ಮತ್ತು ನಕುಲರಲ್ಲಿ ಇಡು. ನೀನು ಕೇಳಿದುದರ ಉತ್ತರ ಅವರಿಂದ ಬರಲಿ.

02062025a ಅನೀಶ್ವರಂ ವಿಬ್ರುವಂತ್ವಾರ್ಯಮಧ್ಯೇ

         ಯುಧಿಷ್ಠಿರಂ ತವ ಪಾಂಚಾಲಿ ಹೇತೋಃ|

02062025c ಕುರ್ವಂತು ಸರ್ವೇ ಚಾನೃತಂ ಧರ್ಮರಾಜಂ

         ಪಾಂಚಾಲಿ ತ್ವಂ ಮೋಕ್ಷ್ಯಸೇ ದಾಸಭಾವಾತ್||

ಪಾಂಚಾಲಿ! ಯುಧಿಷ್ಠಿರನು ನಿನ್ನ ಒಡೆಯನಲ್ಲ ಎಂದು ಇವರೆಲ್ಲರೂ ಈ ಅರ್ಯರ ಮಧ್ಯದಲ್ಲಿ ಹೇಳಲಿ. ಆಗ ಪಾಂಚಾಲೀ! ನೀನು ಧರ್ಮರಾಜನನ್ನು ದಾಸಭಾವದಿಂದ ಮುಕ್ತನನ್ನಾಗಿಸಬಲ್ಲೆ.

02062026a ಧರ್ಮೇ ಸ್ಥಿತೋ ಧರ್ಮರಾಜೋ ಮಹಾತ್ಮಾ

         ಸ್ವಯಂ ಚೇದಂ ಕಥಯತ್ವಿಂದ್ರಕಲ್ಪಃ|

02062026c ಈಶೋ ವಾ ತೇ ಯದ್ಯನೀಶೋಽಥ ವೈಷ

         ವಾಕ್ಯಾದಸ್ಯ ಕ್ಷಿಪ್ರಮೇಕಂ ಭಜಸ್ವ||

ಅವನು ನಿನ್ನ ಒಡೆಯ ಅಥವಾ ಒಡೆಯನಲ್ಲವೆಂದು ಸ್ವಯಂ ಧರ್ಮಸ್ಥಿತ ಇಂದ್ರಸಮಾನ ಮಹಾತ್ಮ ಧರ್ಮರಾಜನು ಹೇಳಲಿ. ಅವನ ಮಾತಿನ ಪ್ರಕಾರ ನೀನು ಯಾವುದಾದರೂ ಒಂದರಂತೆ ಮಾಡು.

02062027a ಸರ್ವೇ ಹೀಮೇ ಕೌರವೇಯಾಃ ಸಭಾಯಾಂ

         ದುಃಖಾಂತರೇ ವರ್ತಮಾನಾಸ್ತವೈವ|

02062027c ನ ವಿಬ್ರುವಂತ್ಯಾರ್ಯಸತ್ತ್ವಾ ಯಥಾವತ್

         ಪತೀಂಶ್ಚ ತೇ ಸಮವೇಕ್ಷ್ಯಾಲ್ಪಭಾಗ್ಯಾನ್||

ಈ ಸಭೆಯಲ್ಲಿರುವ ಸರ್ವ ಕೌರವರೂ ವರ್ತಮಾನದಲ್ಲಿ ನಿನ್ನ ದುಃಖದಲ್ಲಿ ಮುಳುಗಿಹೋಗಿದ್ದಾರೆ. ಆ ಆರ್ಯಸತ್ವರು ಯಥಾವತ್ತಾಗಿ ಉತ್ತರಿಸಲಾಗದೇ ನಿನ್ನ ಅಲ್ಪ ಭಾಗ್ಯ ಪತಿಗಳ ಕಡೆ ನೋಡುತ್ತಿದ್ದಾರೆ.

02062028a ತತಃ ಸಭ್ಯಾಃ ಕುರುರಾಜಸ್ಯ ತತ್ರ

         ವಾಕ್ಯಂ ಸರ್ವೇ ಪ್ರಶಶಂಸುಸ್ತದೋಚ್ಚೈಃ|

02062028c ಚೇಲಾವೇಧಾಂಶ್ಚಾಪಿ ಚಕ್ರುರ್ನದಂತೋ

         ಹಾ ಹೇತ್ಯಾಸೀದಪಿ ಚೈವಾತ್ರ ನಾದಃ|

02062028e ಸರ್ವೇ ಚಾಸನ್ಪಾರ್ಥಿವಾಃ ಪ್ರೀತಿಮಂತಃ

         ಕುರುಶ್ರೇಷ್ಠಂ ಧಾರ್ಮಿಕಂ ಪೂಜಯಂತಃ||

ಆಗ ಸಭೆಯಲ್ಲಿದ್ದ ಸರ್ವರೂ ಕುರುರಾಜನ ಆ ಮಾತನ್ನು ಉಚ್ಛ ಸ್ವರಗಳಲ್ಲಿ ಪ್ರಶಂಸಿಸಿದರು. ಕೆಲವರು ಸಂತೋಷದಿಂದ ಕರವಸ್ತ್ರಗಳನ್ನು ಮೇಲೆ ಹಾರಿಸಿದರೆ ಇನ್ನು ಕೆಲವರು “ಹಾ! ಹಾ!” ಎಂದು ಜೋರಾಗಿ ಕೂಗಿದರು. ಅಲ್ಲಿದ್ದ ಸರ್ವ ಪಾರ್ಥಿವರೂ ಸಂತೋಷದಿಂದ ಧಾರ್ಮಿಕ ಕುರುಶ್ರೇಷ್ಠನನ್ನು ಗೌರವಿಸಿದರು.

02062029a ಯುಧಿಷ್ಠಿರಂ ಚ ತೇ ಸರ್ವೇ ಸಮುದೈಕ್ಷಂತ ಪಾರ್ಥಿವಾಃ|

02062029c ಕಿಂ ನು ವಕ್ಷ್ಯತಿ ಧರ್ಮಜ್ಞ ಇತಿ ಸಾಚೀಕೃತಾನನಾಃ||

ಸರ್ವ ಪಾರ್ಥಿವರೂ ಧರ್ಮಜ್ಞನು ಏನು ಹೇಳುತ್ತಾನೆ ಎಂದು ಮುಖ ತಿರುಗಿಸಿ ಯುಧಿಷ್ಠಿರನೆಡೆಗೆ ನೋಡಿದರು.

02062030a ಕಿಂ ನು ವಕ್ಷ್ಯತಿ ಬೀಭತ್ಸುರಜಿತೋ ಯುಧಿ ಪಾಂಡವಃ|

02062030c ಭೀಮಸೇನೋ ಯಮೌ ಚೇತಿ ಭೃಶಂ ಕೌತೂಹಲಾನ್ವಿತಾಃ||

ಯುದ್ಧದಲ್ಲಿ ಗೆಲ್ಲಲಾರದ ಪಾಂಡವ ಬೀಭತ್ಸುವು ಏನು ಹೇಳುತ್ತಾನೆ? ಭೀಮಸೇನ ಮತ್ತು ಯಮಳರು ಏನು ಹೇಳುತ್ತಾರೆ? ಎಂದು ತುಂಬಾ ಕುತೂಹಲಗೊಂಡರು.

02062031a ತಸ್ಮಿನ್ನುಪರತೇ ಶಬ್ಧೇ ಭೀಮಸೇನೋಽಬ್ರವೀದಿದಂ|

02062031c ಪ್ರಗೃಹ್ಯ ವಿಪುಲಂ ವೃತ್ತಂ ಭುಜಂ ಚಂದನರೂಷಿತಂ||

ಆ ಶಬ್ಧವು ಕಡಿಮೆಯಾಗಲು ಭೀಮಸೇನನು ಚಂದನಲೇಪಿತ ವಿಪುಲ ಭುಜವನ್ನು ಹಿಡಿದು ಹೇಳಿದನು:

02062032a ಯದ್ಯೇಷ ಗುರುರಸ್ಮಾಕಂ ಧರ್ಮರಾಜೋ ಯುಧಿಷ್ಠಿರಃ|

02062032c ನ ಪ್ರಭುಃ ಸ್ಯಾತ್ಕುಲಸ್ಯಾಸ್ಯ ನ ವಯಂ ಮರ್ಷಯೇಮಹಿ||

“ಧರ್ಮರಾಜ ಯುಧಿಷ್ಠಿರನು ನಮ್ಮ ಗುರು ಮತ್ತು ಈ ಕುಲದ ಪ್ರಭುವಾಗಿರದಿದ್ದರೆ ನಾವು ಈ ರೀತಿ ನೋವನ್ನನುಭವಿಸುತ್ತಿರಲಿಲ್ಲ.

02062033a ಈಶೋ ನಃ ಪುಣ್ಯತಪಸಾಂ ಪ್ರಾಣಾನಾಮಪಿ ಚೇಶ್ವರಃ|

02062033c ಮನ್ಯತೇ ಜಿತಮಾತ್ಮಾನಂ ಯದ್ಯೇಷ ವಿಜಿತಾ ವಯಂ|

ಅವನು ನಮ್ಮ ಪುಣ್ಯ ಮತ್ತು ತಪಸ್ಸಿನ ಈಶ್ವರ ಮಾತ್ರ ಅಲ್ಲ ಪ್ರಾಣಗಳ ಈಶ್ವರನೂ ಹೌದು. ಅವನು ತನ್ನನ್ನು ತಾನು ಸೋತೆನೆಂದು ತಿಳಿದರೆ ನಾವೂ ಕೂಡ ಸೋತೆವೆಂದೇ ತಿಳಿಯುತ್ತೇವೆ.

02062034a ನ ಹಿ ಮುಚ್ಯೇತ ಜೀವನ್ಮೇ ಪದಾ ಭೂಮಿಮುಪಸ್ಪೃಶನ್|

02062034c ಮರ್ತ್ಯಧರ್ಮಾ ಪರಾಮೃಶ್ಯ ಪಾಂಚಾಲ್ಯಾ ಮೂರ್ಧಜಾನಿಮಾನ್||

ಪಾಂಚಾಲಿಯ ಕೂದಲನ್ನು ಸ್ಪರ್ಷಿಸಿದ ಈ ಭೂಮಿಯ ಮೇಲಿನ ಯಾವ ನರನೂ ಜೀವ ಸಹಿತ ನನ್ನಿಂದ ಉಳಿಯುತ್ತಿರಲಿಲ್ಲ.

02062035a ಪಶ್ಯಧ್ವಮಾಯತೌ ವೃತ್ತೌ ಭುಜೌ ಮೇ ಪರಿಘಾವಿವ|

02062035c ನೈತಯೋರಂತರಂ ಪ್ರಾಪ್ಯ ಮುಚ್ಯೇತಾಪಿ ಶತಕ್ರತುಃ||

ಪರಿಘದಂತೆ ಉರುಟಾದ ನನ್ನ ಈ ಭುಜಗಳನ್ನು ನೋಡಿ. ಇವುಗಳಲ್ಲಿ ಸಿಲುಕಿಕೊಂಡ ಶತಕ್ರತುವೂ ಕೂಡ ಬಿಡುಗಡೆ ಹೊಂದಲು ಸಾಧ್ಯವಿಲ್ಲ.

02062036a ಧರ್ಮಪಾಶಸಿತಸ್ತ್ವೇವಂ ನಾಧಿಗಚ್ಛಾಮಿ ಸಂಕಟಂ|

02062036c ಗೌರವೇಣ ನಿರುದ್ಧಶ್ಚ ನಿಗ್ರಹಾದರ್ಜುನಸ್ಯ ಚ||

ಆದರೆ ಈಗ ಧರ್ಮಪಾಶದಲ್ಲಿ ಸಿಲುಕಿದ ನಾನು ಗೌರವ ಮತ್ತು ಅರ್ಜುನನ ನಿಗ್ರಹದಿಂದ ಸಂಕಟವನ್ನು ತರುತ್ತಿಲ್ಲ.

02062037a ಧರ್ಮರಾಜನಿಸೃಷ್ಟಸ್ತು ಸಿಂಹಃ ಕ್ಷುದ್ರಮೃಗಾನಿವ|

02062037c ಧಾರ್ತರಾಷ್ಟ್ರಾನಿಮಾನ್ಪಾಪಾನ್ನಿಷ್ಪಿಷೇಯಂ ತಲಾಸಿಭಿಃ||

ಧರ್ಮರಾಜನು ನನ್ನನ್ನು ಬಿಡುಗಡೆಮಾಡಿದರೆ ಸಿಂಹವು ಕ್ಷುದ್ರಮೃಗಗಳನ್ನು ಹೇಗೋ ಹಾಗೆ ಈ ಪಾಪಿ ಧಾರ್ತರಾಷ್ಟ್ರರನ್ನು ನಿಶ್ಯೇಷವಾಗಿ ಸಮಮಾಡುತ್ತಿದ್ದೆ!”

02062038a ತಮುವಾಚ ತದಾ ಭೀಷ್ಮೋ ದ್ರೋಣೋ ವಿದುರ ಏವ ಚ|

02062038c ಕ್ಷಮ್ಯತಾಮೇವಮಿತ್ಯೇವಂ ಸರ್ವಂ ಸಂಭವತಿ ತ್ವಯಿ||

ಆಗ ಭೀಷ್ಮ, ದ್ರೋಣ ಮತ್ತು ವಿದುರರು “ಶಾಂತನಾಗು! ನಿನ್ನಿಂದ ಸರ್ವವೂ ಸಂಭವವಿದೆ!” ಎಂದರು.

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ಭೀಮವಾಕ್ಯೇ ದ್ವಿಷಷ್ಟಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ಭೀಮವಾಕ್ಯ ಎನ್ನುವ ಅರವತ್ತೆರಡನೆಯ ಅಧ್ಯಾಯವು.

Related image

Comments are closed.