Adi Parva: Chapter 155

ಆದಿ ಪರ್ವ: ಚೈತ್ರರಥ ಪರ್ವ

೧೫೫

ಅಪಮಾನಿತ ದ್ರುಪದನು ದ್ರೋಣನನ್ನು ಕೊಲ್ಲಬಲ್ಲ ಮಗನನ್ನು ಪಡೆಯಲು ಸಹಾಯ ಮಾಡುವ ಬ್ರಾಹ್ಮಣರನ್ನು ಹುಡುಕಿ, ಯಾಜ-ಉಪಯಾಜರನ್ನು ಒಪ್ಪಿಸಿದುದು (೧-೩೦). ಯಜ್ಞಕುಂಡದಿಂದ ಧೃಷ್ಟದ್ಯುಮ್ನ ದ್ರೌಪದಿಯರು ಮೇಲೆದ್ದು ಬಂದುದು, ಅಶರೀರವಾಣಿ (೩೧-೪೬). ಮಕ್ಕಳಿಗೆ ಹೆಸರುಗಳನ್ನಿಟ್ಟಿದ್ದುದು (೪೭-೫೨).

01155001 ಬ್ರಾಹ್ಮಣ ಉವಾಚ|

01155001a ಅಮರ್ಷೀ ದ್ರುಪದೋ ರಾಜಾ ಕರ್ಮಸಿದ್ಧಾನ್ದ್ವಿಜರ್ಷಭಾನ್|

01155001c ಅನ್ವಿಚ್ಛನ್ಪರಿಚಕ್ರಾಮ ಬ್ರಾಹ್ಮಣಾವಸಥಾನ್ಬಹೂನ್||

ಬ್ರಾಹ್ಮಣನು ಹೇಳಿದನು: “ಸೇಡಿನ ಮನಸ್ಸುಳ್ಳ ರಾಜ ದ್ರುಪದನು ಕರ್ಮಸಿದ್ಧ ದ್ವಿಜರ್ಷಭರನ್ನು ಹುಡುಕುತ್ತಾ ಹಲವಾರು ಬ್ರಾಹ್ಮಣ ವಾಸಸ್ಥಳಗಳಿಗೆ ಅಲೆದಾಡಿದನು.

01155002a ಪುತ್ರಜನ್ಮ ಪರೀಪ್ಸನ್ವೈ ಶೋಕೋಪಹತಚೇತನಃ|

01155002c ನಾಸ್ತಿ ಶ್ರೇಷ್ಠಂ ಮಮಾಪತ್ಯಮಿತಿ ನಿತ್ಯಮಚಿಂತಯತ್||

ಶೋಕದಿಂದ ಚೇತನವನ್ನೇ ಕಳೆದುಕೊಂಡು ಪುತ್ರಜನ್ಮವನ್ನು ಬಯಸಿ, “ನನಗೆ ಶ್ರೇಷ್ಠ ಮಕ್ಕಳಿಲ್ಲ!” ಎಂದು ನಿತ್ಯವೂ ಚಿಂತಿಸುತ್ತಿದ್ದನು.

01155003a ಜಾತಾನ್ಪುತ್ರಾನ್ಸ ನಿರ್ವೇದಾದ್ಧಿಗ್ಬಧೂನಿತಿ ಚಾಬ್ರವೀತ್|

01155003c ನಿಃಶ್ವಾಸಪರಮಶ್ಚಾಸೀದ್ದ್ರೋಣಂ ಪ್ರತಿಚಿಕೀರ್ಷಯಾ||

ಹುಟ್ಟಿದ್ದ ಪುತ್ರರನ್ನು ವೇದನೆಯಿಂದ “ಈ ಬಂಧುಗಳಿಗೆ ಧಿಕ್ಕಾರ!” ಎಂದು ಹೇಳಿದನು. ದ್ರೋಣನ ವಿರುದ್ಧ ಪ್ರತೀಕಾರವನ್ನು ಬಯಸುತ್ತಿದ್ದ ಅವನು ಯಾವಾಗಲೂ ನಿಟ್ಟುಸಿರು ಬಿಡುತ್ತಿದ್ದನು.

01155004a ಪ್ರಭಾವಂ ವಿನಯಂ ಶಿಕ್ಷಾಂ ದ್ರೋಣಸ್ಯ ಚರಿತಾನಿ ಚ|

01155004c ಕ್ಷಾತ್ರೇಣ ಚ ಬಲೇನಾಸ್ಯ ಚಿಂತಯನ್ನಾನ್ವಪದ್ಯತ|

01155004e ಪ್ರತಿಕರ್ತುಂ ನೃಪಶ್ರೇಷ್ಠೋ ಯತಮಾನೋಽಪಿ ಭಾರತ||

ಭಾರತ! ಅ ನೃಪಶ್ರೇಷ್ಠನು ಎಷ್ಟೇ ಪ್ರಯತ್ನಪಟ್ಟರೂ ದ್ರೋಣನ ವಿನಯ, ಶಿಕ್ಷಣ ಮತ್ತು ಚಾರಿತ್ರಗಳ ಪ್ರಭಾವವನ್ನು ತನ್ನ ಕ್ಷತ್ರಿಯ ಬಲದಿಂದ ಹೇಗೆ ಹಿಂದಾಗಿಸಬೇಕು ಎನ್ನುವುದನ್ನು ಕಾಣಲಾರದೇ ಹೋದನು.

01155005a ಅಭಿತಃ ಸೋಽಥ ಕಲ್ಮಾಷೀಂ ಗಂಗಾಕೂಲೇ ಪರಿಭ್ರಮನ್|

01155005c ಬ್ರಾಹ್ಮಣಾವಸಥಂ ಪುಣ್ಯಮಾಸಸಾದ ಮಹೀಪತಿಃ||

ಹೀಗೆ ಗಂಗಾತೀರದಲ್ಲಿ ಅಲೆದಾಡುತ್ತಾ ಮಹೀಪತಿಯು ಕಲ್ಮಾಷಿಯ ಬಳಿಯಲ್ಲಿ ಬ್ರಾಹ್ಮಣರು ವಾಸಿಸುತ್ತಿದ್ದ ಪುಣ್ಯಸ್ಥಳವೊಂದಕ್ಕೆ ಬಂದನು.

01155006a ತತ್ರ ನಾಸ್ನಾತಕಃ ಕಶ್ಚಿನ್ನ ಚಾಸೀದವ್ರತೀ ದ್ವಿಜಃ|

01155006c ತಥೈವ ನಾಮಹಾಭಾಗಃ ಸೋಽಪಶ್ಯತ್ಸಂಶಿತವ್ರತೌ||

ಅಲ್ಲಿ ಸ್ನಾತಕರಲ್ಲದ, ವ್ರತನಿರತರಲ್ಲದ ದ್ವಿಜರು ಯಾರೂ ಇರಲಿಲ್ಲ. ಅಲ್ಲಿ ಆ ಮಹಾಭಾಗನು ಇಬ್ಬರು ಸಂಶಿತವ್ರತ ಬ್ರಾಹ್ಮಣರನ್ನು ಕಂಡನು.

01155007a ಯಾಜೋಪಯಾಜೌ ಬ್ರಹ್ಮರ್ಷೀ ಶಾಮ್ಯಂತೌ ಪೃಷತಾತ್ಮಜಃ|

01155007c ಸಂಹಿತಾಧ್ಯಯನೇ ಯುಕ್ತೌ ಗೋತ್ರತಶ್ಚಾಪಿ ಕಾಶ್ಯಪೌ||

ಪೃಷತಾತ್ಮಜನು ಅಲ್ಲಿ ಯಾಜ ಮತ್ತು ಉಪಯಾಜರೆಂಬ ಇಬ್ಬರು ಸಂಹಿತಾಧ್ಯಯನ ಯುಕ್ತ ಕಾಶ್ಯಪ ಗೋತ್ರೋತ್ಪನ್ನ ಬ್ರಹ್ಮರ್ಷಿಗಳನ್ನು ಕಂಡನು.

01155008a ತಾರಣೇ ಯುಕ್ತರೂಪೌ ತೌ ಬ್ರಾಹ್ಮಣಾವೃಷಿಸತ್ತಮೌ|

01155008c ಸ ತಾವಾಮಂತ್ರಯಾಮಾಸ ಸರ್ವಕಾಮೈರತಂದ್ರಿತಃ||

ಪಾರುಮಾಡಲು ಯುಕ್ತರೂಪ ಆ ಬ್ರಾಹ್ಮಣ‌ಋಷಿಸತ್ತಮರನ್ನು ಅವನು ಎಲ್ಲಾ ರೀತಿಯ ಆಸೆಗಳನ್ನು ತೋರಿಸಿ, ಎಡೆಬಿಡದೇ ಆಮಂತ್ರಿಸಿದನು.

01155009a ಬುದ್ಧ್ವಾ ತಯೋರ್ಬಲಂ ಬುದ್ಧಿಂ ಕನೀಯಾಂಸಮುಪಹ್ವರೇ|

01155009c ಪ್ರಪೇದೇ ಚಂದಯನ್ಕಾಮೈರುಪಯಾಜಂ ಧೃತವ್ರತಂ||

ತನ್ನ ಬಲ ಮತ್ತು ಬುದ್ಧಿಯನ್ನು ಅವರಮೇಲೆ ಹಾಕಿ ತಾನು ದುರ್ಬಲನಾಗುತ್ತಿದ್ದೇನೆಂದು ತಿಳಿದ ಅವನು ಧೃತವ್ರತ ಉಪಯಾಜನನ್ನು ಸುತ್ತು ಬಳಸಿ ಆಸೆತೋರಿಸಿ ಗೆಲ್ಲಲು ಪ್ರಯತ್ನಿಸಿದನು.

01155010a ಪಾದಶುಶ್ರೂಷಣೇ ಯುಕ್ತಃ ಪ್ರಿಯವಾಕ್ಸರ್ವಕಾಮದಃ|

01155010c ಅರ್ಹಯಿತ್ವಾ ಯಥಾನ್ಯಾಯಮುಪಯಾಜಮುವಾಚ ಸಃ||

ಅವನ ಪಾದಶುಶ್ರೂಷಣೆಯಲ್ಲಿ ನಿರತನಾಗಿ, ಪ್ರಿಯಮಾತುಗಳನ್ನಾಡುತ್ತಾ, ಬೇಕಾದುದೆಲ್ಲವನ್ನೂ ಕೊಡುತ್ತಾ, ನ್ಯಾಯದಂತೆ ನಡೆದುಕೊಳ್ಳುತ್ತಾ ಉಪಯಾಜನಿಗೆ ಹೇಳಿದನು:

01155011a ಯೇನ ಮೇ ಕರ್ಮಣಾ ಬ್ರಹ್ಮನ್ಪುತ್ರಃ ಸ್ಯಾದ್ದ್ರೋಣಮೃತ್ಯವೇ|

01155011c ಉಪಯಾಜ ಕೃತೇ ತಸ್ಮಿನ್ಗವಾಂ ದಾತಾಸ್ಮಿ ತೇಽರ್ಬುದಂ||

01155012a ಯದ್ವಾ ತೇಽನ್ಯದ್ದ್ವಿಜಶ್ರೇಷ್ಠ ಮನಸಃ ಸುಪ್ರಿಯಂ ಭವೇತ್|

01155012c ಸರ್ವಂ ತತ್ತೇ ಪ್ರದಾತಾಹಂ ನ ಹಿ ಮೇಽಸ್ತ್ಯತ್ರ ಸಂಶಯಃ||

“ಬ್ರಾಹ್ಮಣ! ದ್ರೋಣನ ಮೃತ್ಯುವಾಗಬಲ್ಲ ಪುತ್ರನನ್ನು ಪಡೆಯುವುದಕ್ಕೆ ಏನಾದರೂ ಕರ್ಮವಿದೆಯೇ? ಹಾಗೇನಾದರೂ ಇದ್ದರೆ ಅದನ್ನು ನಡೆಸುವುದಕ್ಕೆ ನಾನು ನಿನಗೆ ಎಷ್ಟು ಬೇಕಾದರೂ ಗೋವುಗಳನ್ನು ನೀಡುತ್ತೇನೆ ಅಥವಾ ನಿನ್ನ ಮನಸ್ಸಿಗೆ ಪ್ರಿಯವಾದ ಏನನ್ನೂ ಎಲ್ಲವನ್ನೂ ಕೊಡುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.”

01155013a ಇತ್ಯುಕ್ತೋ ನಾಹಮಿತ್ಯೇವಂ ತಮೃಷಿಃ ಪ್ರತ್ಯುವಾಚ ಹ|

01155013c ಆರಾಧಯಿಷ್ಯನ್ದ್ರುಪದಃ ಸ ತಂ ಪರ್ಯಚರತ್ಪುನಃ||

“ನಾನು ಮಾಡುವುದಿಲ್ಲ!” ಎಂದು ಆ ಋಷಿಯು ಉತ್ತರಿಸಿದನು. ದ್ರುಪದನು ಅವನನ್ನು ಗೆಲ್ಲಲೋಸುಗ ಪುನಃ ಆರಾಧಿಸುವುದನ್ನು ಮುಂದುವರೆಸಿದನು.

01155014a ತತಃ ಸಂವತ್ಸರಸ್ಯಾಂತೇ ದ್ರುಪದಂ ಸ ದ್ವಿಜೋತ್ತಮಃ|

01155014c ಉಪಯಾಜೋಽಬ್ರವೀದ್ರಾಜನ್ಕಾಲೇ ಮಧುರಯಾ ಗಿರಾ||

ಒಂದು ವರ್ಷವು ಕಳೆದನಂತರ ಆ ದ್ವಿಜೋತ್ತಮ ಉಪಯಾಜನು ಒಳ್ಳೆಯ ಸಮಯವನ್ನು ನೋಡಿ ಮಧುರವಾಣಿಯಿಂದ ಹೇಳಿದನು:

01155015a ಜ್ಯೇಷ್ಠೋ ಭ್ರಾತಾ ಮಮಾಗೃಹ್ಣಾದ್ವಿಚರನ್ವನನಿರ್ಝರೇ|

01155015c ಅಪರಿಜ್ಞಾತಶೌಚಾಯಾಂ ಭೂಮೌ ನಿಪತಿತಂ ಫಲಂ||

“ನನ್ನ ಜ್ಯೇಷ್ಠ ಭ್ರಾತನು ಒಮ್ಮೆ ವನದಲ್ಲಿ ಸಂಚರಿಸುತ್ತಿರುವಾಗ ಭೂಮಿಯ ಮೇಲೆ ಬಿದ್ದಿರುವ ಫಲವೊಂದನ್ನು ಅಶೌಚವೆಂದು ತಿಳಿಯದೇ ಎತ್ತಿಕೊಂಡಿದ್ದನು.

01155016a ತದಪಶ್ಯಮಹಂ ಭ್ರಾತುರಸಾಂಪ್ರತಮನುವ್ರಜನ್|

01155016c ವಿಮರ್ಶಂ ಸಂಕರಾದಾನೇ ನಾಯಂ ಕುರ್ಯಾತ್ಕಥಂ ಚನ||

ಅವನನ್ನು ಹಿಂಬಾಲಿಸುತ್ತಿದ್ದ ನಾನು ಅಣ್ಣನ ಈ ಅಸಾಂಪ್ರತ ಕ್ರಿಯೆಯನ್ನು ನೋಡಿದೆನು. ಅವನು ಅದನ್ನು ತೆಗೆದುಕೊಳ್ಳುವಾಗ ಯಾವುದೇ ರೀತಿಯ ವಿಮರ್ಷೆಯನ್ನೂ ಮಾಡಲಿಲ್ಲ.

01155017a ದೃಷ್ಟ್ವಾ ಫಲಸ್ಯ ನಾಪಶ್ಯದ್ದೋಷಾ ಯೇಽಸ್ಯಾನುಬಂಧಿಕಾಃ|

01155017c ವಿವಿನಕ್ತಿ ನ ಶೌಚಂ ಯಃ ಸೋಽನ್ಯತ್ರಾಪಿ ಕಥಂ ಭವೇತ್||

ಫಲವನ್ನು ನೋಡಿದರೂ ಅದಕ್ಕೆ ಹತ್ತಿಕೊಂಡಿದ್ದ ದೋಷಗಳನ್ನು ನೋಡಲಿಲ್ಲ. ಒಂದು ವಿಷಯದಲ್ಲಿ ಶೌಚ ಅಶೌಚಗಳ ಬಗ್ಗೆ ಯೋಚಿಸದಿದ್ದವನು ಇನ್ನೊಂದು ವಿಷಯದ ಕುರಿತು ಏಕೆ ಯೋಚಿಸಿಯಾನು?

01155018a ಸಂಹಿತಾಧ್ಯಯನಂ ಕುರ್ವನ್ವಸನ್ಗುರುಕುಲೇ ಚ ಯಃ|

01155018c ಭೈಕ್ಷಮುಚ್ಛಿಷ್ಟಮನ್ಯೇಷಾಂ ಭುಂಕ್ತೇ ಚಾಪಿ ಸದಾ ಸದಾ|

01155018e ಕೀರ್ತಯನ್ಗುಣಮನ್ನಾನಾಮಘೃಣೀ ಚ ಪುನಃ ಪುನಃ||

ಸಂಹಿತಾಧ್ಯಯನವನ್ನು ಮಾಡುತ್ತಾ ಗುರುಕುಲದಲ್ಲಿ ವಾಸಿಸುತ್ತಿರುವಾಗಲೂ ಅವನು ಬೇರೆಯವರಿಂದ ಎಂಜಲಾಗಿ ಬಿಟ್ಟಿದ್ದ ಭಿಕ್ಷವನ್ನು ಸದಾ ತಿನ್ನುತ್ತಿದ್ದನು ಮತ್ತು ಪುನಃ ಪುನಃ ಅಂಥ ಆಹಾರದ ಗುಣಗಾನಮಾಡುತ್ತಿದ್ದನು.

01155019a ತಮಹಂ ಫಲಾರ್ಥಿನಂ ಮನ್ಯೇ ಭ್ರಾತರಂ ತರ್ಕಚಕ್ಷುಷಾ|

01155019c ತಂ ವೈ ಗಚ್ಛಸ್ವ ನೃಪತೇ ಸ ತ್ವಾಂ ಸಮ್ಯಾಜಯಿಷ್ಯತಿ||

ಅದರಿಂದ ನನ್ನ ಅಣ್ಣನು ಫಲಾರ್ಥಿ ಎಂದು ನನಗನ್ನಿಸುತ್ತದೆ. ನೃಪತೇ! ಅವನಲ್ಲಿಯೇ ಹೋಗು. ಅವನು ನಿನ್ನ ಸಂಯಾಜಿಯಾಗುತ್ತಾನೆ.”

01155020a ಜುಗುಪ್ಸಮಾನೋ ನೃಪತಿರ್ಮನಸೇದಂ ವಿಚಿಂತಯನ್|

01155020c ಉಪಯಾಜವಚಃ ಶ್ರುತ್ವಾ ನೃಪತಿಃ ಸರ್ವಧರ್ಮವಿತ್|

01155020e ಅಭಿಸಂಪೂಜ್ಯ ಪೂಜಾರ್ಹಮೃಷಿಂ ಯಾಜಮುವಾಚ ಹ||

ಜುಗುಪ್ಸಮನಸ್ಕ ನೃಪತಿಯು ಉಪಯಾಜನ ಮಾತುಗಳನ್ನು ಕೇಳಿ ಮನಸ್ಸಿನಲ್ಲಿಯೇ ಚಿಂತಿಸಿದನು. ಸರ್ವಧರ್ಮವಿದ ನೃಪತಿಯು ಪೂಜಾರ್ಹ ಋಷಿ ಯಾಜನನ್ನು ಪೂಜಿಸಿ ಹೇಳಿದನು:

01155021a ಅಯುತಾನಿ ದದಾನ್ಯಷ್ಟೌ ಗವಾಂ ಯಾಜಯ ಮಾಂ ವಿಭೋ|

01155021c ದ್ರೋಣವೈರಾಭಿಸಂತಪ್ತಂ ತ್ವಂ ಹ್ಲಾದಯಿತುಮರ್ಹಸಿ||

“ನಾನು ನಿನಗೆ ಎಂಭತ್ತು ಸಾವಿರ ಗೋವುಗಳನ್ನು ಕೊಡುತ್ತೇನೆ. ನನಗಾಗಿ ಯಜ್ಞವನ್ನು ಮಾಡು ವಿಭೋ! ದ್ರೋಣವೈರದಿಂದ ಅಭಿಸಂತಪ್ತ ನನ್ನನ್ನು ನೀನು ಬಿಡುಗಡೆಮಾಡಬೇಕು.

01155022a ಸ ಹಿ ಬ್ರಹ್ಮವಿದಾಂ ಶ್ರೇಷ್ಠೋ ಬ್ರಹ್ಮಾಸ್ತ್ರೇ ಚಾಪ್ಯನುತ್ತಮಃ|

01155022c ತಸ್ಮಾದ್ದ್ರೋಣಃ ಪರಾಜೈಷೀನ್ಮಾಂ ವೈ ಸ ಸಖಿವಿಗ್ರಹೇ||

ಬ್ರಹ್ಮವಿದರಲ್ಲಿ ಶ್ರೇಷ್ಠನಾದ ಅವನು ಬ್ರಹ್ಮಾಸ್ತ್ರದಲ್ಲಿ ಅನುತ್ತಮನಾಗಿದ್ದಾನೆ. ಹಾಗಾಗಿ ದ್ರೋಣನು ಸ್ನೇಹಿತರ ಮಧ್ಯದ ಜಗಳದಲ್ಲಿ ನನ್ನನ್ನು ಪರಾಜಯಗೊಳಿಸಿದನು.

01155023a ಕ್ಷತ್ರಿಯೋ ನಾಸ್ತಿ ತುಲ್ಯೋಽಸ್ಯ ಪೃಥಿವ್ಯಾಂ ಕಶ್ಚಿದಗ್ರಣೀಃ|

01155023c ಕೌರವಾಚಾರ್ಯಮುಖ್ಯಸ್ಯ ಭಾರದ್ವಾಜಸ್ಯ ಧೀಮತಃ||

ಎಷ್ಟೇ ಅಗ್ರಣಿಯಾದರೂ ಕೌರವರ ಪ್ರಮುಖ ಆಚಾರ್ಯ ಧೀಮಂತ ಭಾರದ್ವಾಜನ ಸರಿಸಮ ಕ್ಷತ್ರಿಯನು ಪೃಥ್ವಿಯಲ್ಲಿಯೇ ಇಲ್ಲ

01155024a ದ್ರೋಣಸ್ಯ ಶರಜಾಲಾನಿ ಪ್ರಾಣಿದೇಹಹರಾಣಿ ಚ|

01155024c ಷಡರತ್ನಿ ಧನುಶ್ಚಾಸ್ಯ ದೃಶ್ಯತೇಽಪ್ರತಿಮಂ ಮಹತ್||

ದ್ರೋಣನ ಶರಜಾಲಗಳು ಪ್ರಾಣಿಗಳ ದೇಹಹರಣ ಮಾಡುತ್ತವೆ ಮತ್ತು ಅವನ ಆರು ಅಡಿ ಎತ್ತರದ ಮಹಾ ಧನುಸ್ಸಿನ ಸರಿಸಾಟಿಯಾದುದು ಇನ್ನೊಂದಿಲ್ಲ.

01155025a ಸ ಹಿ ಬ್ರಾಹ್ಮಣವೇಗೇನ ಕ್ಷಾತ್ರಂ ವೇಗಮಸಂಶಯಂ|

01155025c ಪ್ರತಿಹಂತಿ ಮಹೇಷ್ವಾಸೋ ಭಾರದ್ವಾಜೋ ಮಹಾಮನಾಃ||

ಮಹೇಷ್ವಾಸ ಮಹಾತ್ಮ ಭಾರದ್ವಾಜನ ಬ್ರಾಹ್ಮಣವೇಗವು ಕ್ಷಾತ್ರವೇಗವನ್ನು ನಿಸ್ಸಂಶಯವಾಗಿಯೂ ಸೋಲಿಸುತ್ತದೆ.

01155026a ಕ್ಷತ್ರೋಚ್ಛೇದಾಯ ವಿಹಿತೋ ಜಾಮದಗ್ನ್ಯ ಇವಾಸ್ಥಿತಃ|

01155026c ತಸ್ಯ ಹ್ಯಸ್ತ್ರಬಲಂ ಘೋರಮಪ್ರಸಹ್ಯಂ ನರೈರ್ಭುವಿ||

ಕ್ಷತ್ರಿಯರ ಛೇದನೆಗೆ ವಿಹಿತನಾಗಿ ಜಾಮದಗ್ನಿಯಂತೆ ಬಂದಿರುವ ಅವನ ಘೋರ ಅಸ್ತ್ರಬಲವು ಭೂಮಿಯ ನರರಿಂದ ಸಹಿಸಲಸಾಧ್ಯವಾದುದು.

01155027a ಬ್ರಾಹ್ಮಮುಚ್ಚಾರಯಂಸ್ತೇಜೋ ಹುತಾಹುತಿರಿವಾನಲಃ|

01155027c ಸಮೇತ್ಯ ಸ ದಹತ್ಯಾಜೌ ಕ್ಷತ್ರಂ ಬ್ರಹ್ಮಪುರಃಸ್ಸರಃ|

01155027e ಬ್ರಹ್ಮಕ್ಷತ್ರೇ ಚ ವಿಹಿತೇ ಬ್ರಹ್ಮತೇಜೋ ವಿಶಿಷ್ಯತೇ||

ತನ್ನ ಬ್ರಾಹ್ಮಣ ತೇಜಸ್ಸಿನಿಂದ ಅಗ್ನಿಯಂತೆ ಪ್ರಜ್ವಲಿಸುತ್ತಿರುವ ಅವನು ರಣರಂಗದಲ್ಲಿ ತುಪ್ಪದಿಂದ ಇನ್ನೂ ಉರಿಯುವ ಬೆಂಕಿಯಂತೆ ಕ್ಷತ್ರಿಯರನ್ನು ಸುಟ್ಟುಹಾಕುತ್ತಾನೆ. ಬ್ರಾಹ್ಮಣ ಮತ್ತು ಕ್ಷತ್ರಿಯರು ಎದುರಾದಾಗ ಬ್ರಹ್ಮತೇಜಸ್ಸೇ ಮೇಲಾಗುತ್ತದೆ.

01155028a ಸೋಽಹಂ ಕ್ಷತ್ರಬಲಾದ್ಧೀನೋ ಬ್ರಹ್ಮತೇಜಃ ಪ್ರಪೇದಿವಾನ್|

01155028c ದ್ರೋಣಾದ್ವಿಶಿಷ್ಟಮಾಸಾದ್ಯ ಭವಂತಂ ಬ್ರಹ್ಮವಿತ್ತಮಂ||

ಕೇವಲ ನನ್ನ ಕ್ಷತ್ರಿಯ ಬಲದಿಂದ ನಾನು ಸೋಲುತ್ತೇನೆ. ಆದರೆ ಈಗ ನಾನು ಬ್ರಹ್ಮವಿತ್ತಮ ನಿನ್ನನ್ನು ಸೇವಿಸಿ ದ್ರೋಣನಿಗಿಂಥಲೂ ವಿಶಿಷ್ಟ ಬ್ರಹ್ಮತೇಜಸ್ಸನ್ನು ಪಡೆದಿದ್ದೇನೆ.

01155029a ದ್ರೋಣಾಂತಕಮಹಂ ಪುತ್ರಂ ಲಭೇಯಂ ಯುಧಿ ದುರ್ಜಯಂ|

01155029c ತತ್ಕರ್ಮ ಕುರು ಮೇ ಯಾಜ ನಿರ್ವಪಾಮ್ಯರ್ಬುದಂ ಗವಾಂ||

ಯುದ್ಧದಲ್ಲಿ ದುರ್ಜಯ ದ್ರೋಣಾಂತಕ ಪುತ್ರನನ್ನು ಕೊಡುವಂಥ ಕರ್ಮವನ್ನು ಯಾಜಿಸು. ನಿನಗೆ ಬೇಕಾದಷ್ಟು ಗೋವುಗಳನ್ನು ಕೊಡುತ್ತೇನೆ.”

01155030a ತಥೇತ್ಯುಕ್ತ್ವಾ ತು ತಂ ಯಾಜೋ ಯಾಜ್ಯಾರ್ಥಮುಪಕಲ್ಪಯತ್|

01155030c ಗುರ್ವರ್ಥ ಇತಿ ಚಾಕಾಮಮುಪಯಾಜಮಚೋದಯತ್|

01155030e ಯಾಜೋ ದ್ರೋಣವಿನಾಶಾಯ ಪ್ರತಿಜಜ್ಞೇ ತಥಾ ಚ ಸಃ||

“ಹಾಗೆಯೇ ಆಗಲಿ!” ಎಂದು ಹೇಳಿದ ಯಾಜನು ಯಜ್ಞಕ್ಕೆ ತಯಾರಿ ನಡೆಸಿದನು. ಅವನು ಉಪಯಾಜನಿಗೆ ಮನಸ್ಸಿಲ್ಲದಿದ್ದರೂ “ಅಣ್ಣನಿಗೆ ಸಹಾಯ ಮಾಡು!” ಎಂದು ಒತ್ತಾಯಿಸಿದನು. ನಂತರ ಯಾಜನೂ ಕೂಡ ದ್ರೋಣವಿನಾಶಕ್ಕೆ ಭರವಸೆಯನ್ನಿತ್ತನು.

01155031a ತತಸ್ತಸ್ಯ ನರೇಂದ್ರಸ್ಯ ಉಪಯಾಜೋ ಮಹಾತಪಾಃ|

01155031c ಆಚಖ್ಯೌ ಕರ್ಮ ವೈತಾನಂ ತದಾ ಪುತ್ರಫಲಾಯ ವೈ||

ನಂತರ ಮಹಾತಪಸ್ವಿ ಉಪಯಾಜನು ನರೇಂದ್ರನಿಗೆ ಪುತ್ರಫಲವನ್ನು ನೀಡುವಂಥ ಕರ್ಮವನ್ನು ನಡೆಸಲು ಸೂಚನೆಯನ್ನಿತ್ತನು.

01155032a ಸ ಚ ಪುತ್ರೋ ಮಹಾವೀರ್ಯೋ ಮಹಾತೇಜಾ ಮಹಾಬಲಃ|

01155032c ಇಷ್ಯತೇ ಯದ್ವಿಧೋ ರಾಜನ್ಭವಿತಾ ತೇ ತಥಾವಿಧಃ||

“ರಾಜನ್! ನಿನಗೆ ಮಹಾವೀರ, ಮಹಾತೇಜಸ್ವಿ, ಮಹಾಬಲಿ ಪುತ್ರನಾಗುವ ಹಾಗೆ ಮಾಡುವ ವಿಧಾನವಿದು.”

01155033a ಭಾರದ್ವಾಜಸ್ಯ ಹಂತಾರಂ ಸೋಽಭಿಸಂಧಾಯ ಭೂಮಿಪಃ|

01155033c ಆಜಹ್ರೇ ತತ್ತಥಾ ಸರ್ವಂ ದ್ರುಪದಃ ಕರ್ಮಸಿದ್ಧಯೇ||

ಭಾರದ್ವಾಜನ ಹಂತಾರನನ್ನು ಅಭಿಸಂಧಾನ ಮಾಡಿದ ಭೂಮಿಪ ದ್ರುಪದನು ಕರ್ಮಸಿದ್ಧಿಗಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಿದನು.

01155034a ಯಾಜಸ್ತು ಹವನಸ್ಯಾಂತೇ ದೇವೀಮಾಹ್ವಾಪಯತ್ತದಾ|

01155034c ಪ್ರೈಹಿ ಮಾಂ ರಾಜ್ಞಿ ಪೃಷತಿ ಮಿಥುನಂ ತ್ವಾಮುಪಸ್ಥಿತಂ||

ಹವನದ ಅಂತ್ಯದಲ್ಲಿ ಯಾಜನು ದೇವಿ ರಾಣಿಯನ್ನು ಕರೆದನು: “ಪೃಷತಿ ರಾಣಿ! ನನ್ನೊಂದಿಗೆ ಮಿಥುನದ ಕಾಲವೊದಗಿದೆ. ನನ್ನ ಬಳಿ ಬಾ.”

01155035 ದೇವ್ಯುವಾಚ|

01155035a ಅವಲಿಪ್ತಂ ಮೇ ಮುಖಂ ಬ್ರಹ್ಮನ್ಪುಣ್ಯಾನ್ಗಂಧಾನ್ಬಿಭರ್ಮಿ ಚ|

01155035c ಸುತಾರ್ಥೇನೋಪರುದ್ಧಾಸ್ಮಿ ತಿಷ್ಠ ಯಾಜ ಮಮ ಪ್ರಿಯೇ||

ದೇವಿಯು ಹೇಳಿದಳು: “ಬ್ರಾಹ್ಮಣ! ನನ್ನ ಮುಖವು ಅವಲಿಪ್ತವಾಗಿದೆ. ನಾನು ಪುಣ್ಯಗಂಧಗಳನ್ನು ಧರಿಸಿದ್ದೇನೆ. ಯಾಜ! ನನ್ನ ಪ್ರಿಯ ಸುತನಿಗಾಗಿ ಉಪರುದ್ಧಳಾಗಿದ್ದೇನೆ. ನಿಲ್ಲು!”

01155036 ಯಾಜ ಉವಾಚ|

01155036a ಯಾಜೇನ ಶ್ರಪಿತಂ ಹವ್ಯಮುಪಯಾಜೇನ ಮಂತ್ರಿತಂ|

01155036c ಕಥಂ ಕಾಮಂ ನ ಸಂದಧ್ಯಾತ್ಸಾ ತ್ವಂ ವಿಪ್ರೈಹಿ ತಿಷ್ಠ ವಾ||

ಯಾಜನು ಹೇಳಿದನು: “ನೀನು ಇಲ್ಲಿಗೆ ಬಾ ಅಥವಾ ಅಲ್ಲಿಯೇ ನಿಲ್ಲು. ಯಾಜನಿಂದ ಶ್ರಪಿತ ಮತ್ತು ಉಪಯಾಜನಿಂದ ಮಂತ್ರಿತ ಈ ಹವಿಸ್ಸು ಹೇಗೆ ತಾನೇ ನಿನ್ನ ಆಸೆಯನ್ನು ನೆರವೇರಿಸಲಾರದು?””

01155037 ಬ್ರಾಹ್ಮಣ ಉವಾಚ|

01155037a ಏವಮುಕ್ತೇ ತು ಯಾಜೇನ ಹುತೇ ಹವಿಷಿ ಸಂಸ್ಕೃತೇ|

01155037c ಉತ್ತಸ್ಥೌ ಪಾವಕಾತ್ತಸ್ಮಾತ್ಕುಮಾರೋ ದೇವಸನ್ನಿಭಃ||

01155038a ಜ್ವಾಲಾವರ್ಣೋ ಘೋರರೂಪಃ ಕಿರೀಟೀ ವರ್ಮ ಚೋತ್ತಮಂ|

01155038c ಬಿಭ್ರತ್ಸಖಡ್ಗಃ ಸಶರೋ ಧನುಷ್ಮಾನ್ವಿನದನ್ಮುಹುಃ||

ಬ್ರಾಹ್ಮಣನು ಹೇಳಿದನು: “ಹೀಗೆ ಹೇಳಿದ ಯಾಜನು ಸಂಸ್ಕೃತಗೊಂಡ ಹವಿಸ್ಸನ್ನು ಆಹುತಿಯನ್ನಾಗಿತ್ತನು. ಆ ಪಾವಕನಿಂದ ದೇವಸನ್ನಿಭ ಜ್ವಾಲವರ್ಣಿ, ಘೋರರೂಪಿ, ಕಿರೀಟಿ, ಉತ್ತಮ ಕವಚಧಾರಿ ಕುಮಾರನೋರ್ವನು ಹೊಳೆಯುತ್ತಿರುವ ಖಡ್ಗ ಮತ್ತು ಶರಗಳೊಂದಿಗೆ ಧನುಸ್ಸನ್ನೂ ಹಿಡಿದು ಹೂಂಕಾರಗೈಯುತ್ತಾ ಎದ್ದು ಬಂದನು.

01155039a ಸೋಽಧ್ಯಾರೋಹದ್ರಥವರಂ ತೇನ ಚ ಪ್ರಯಯೌ ತದಾ|

01155039c ತತಃ ಪ್ರಣೇದುಃ ಪಾಂಚಾಲಾಃ ಪ್ರಹೃಷ್ಟಾಃ ಸಾಧು ಸಾಧ್ವಿತಿ||

ಅವನು ಶ್ರೇಷ್ಠ ರಥವನ್ನೇರಿ ಮುಂದೆ ಬರುತ್ತಿದ್ದಂತೆಯೇ ಪಾಂಚಾಲರು ಪ್ರಹೃಷ್ಠರಾಗಿ “ಸಾಧು! ಸಾಧು!” ಎಂದು ಉದ್ಗಾರಗೈದರು.

01155040a ಭಯಾಪಹೋ ರಾಜಪುತ್ರಃ ಪಾಂಚಾಲಾನಾಂ ಯಶಸ್ಕರಃ|

01155040c ರಾಜ್ಞಃ ಶೋಕಾಪಹೋ ಜಾತ ಏಷ ದ್ರೋಣವಧಾಯ ವೈ|

01155040e ಇತ್ಯುವಾಚ ಮಹದ್ಭೂತಮದೃಶ್ಯಂ ಖೇಚರಂ ತದಾ||

ಆಗ “ಈ ಪಾಂಚಾಲರ ಯಶಸ್ಕರ, ರಾಜನ ಶೋಕಾಪಹ ಭಯಾಪಹ ರಾಜಪುತ್ರನು ದ್ರೋಣವಧೆಗಾಗಿಯೇ ಹುಟ್ಟಿದ್ದಾನೆ!” ಎಂದು ಅದೃಶ್ಯ ಖೇಚರ ಮಹಾಭೂತವೊಂದು ಹೇಳಿತು.

01155041a ಕುಮಾರೀ ಚಾಪಿ ಪಾಂಚಾಲೀ ವೇದಿಮಧ್ಯಾತ್ಸಮುತ್ಥಿತಾ|

01155041c ಸುಭಗಾ ದರ್ಶನೀಯಾಂಗೀ ವೇದಿಮಧ್ಯಾ ಮನೋರಮಾ||

ನಂತರ ವೇದಿಮಧ್ಯದಿಂದ ಸುಭಗೆ, ದರ್ಶನೀಯಾಂಗಿ, ವೇದಿಮಧ್ಯಾ, ಮನೋರಮೆ ಕುಮಾರಿ ಪಾಂಚಾಲಿಯೂ ಎದ್ದು ಬಂದಳು.

01155042a ಶ್ಯಾಮಾ ಪದ್ಮಪಲಾಶಾಕ್ಷೀ ನೀಲಕುಂಚಿತಮೂರ್ಧಜಾ|

01155042c ಮಾನುಷಂ ವಿಗ್ರಹಂ ಕೃತ್ವಾ ಸಾಕ್ಷಾದಮರವರ್ಣಿನೀ||

ಶ್ಯಾಮಳಾದ ಅವಳು ಪದ್ಮಪಲಾಶಾಕ್ಷಿಯೂ, ನೀಲಕುಂಜಿತ ಮೂರ್ಧಜೆಯೂ ಆಗಿದ್ದು ಸಾಕ್ಷಾದ್ ಅಮರವರ್ಣಿನಿಯು ಮಾನುಷ ದೇಹವನ್ನು ಧರಿಸಿದ್ದಾಳೆಯೋ ಎಂಬಂತೆ ತೋರುತ್ತಿದ್ದಳು.

01155043a ನೀಲೋತ್ಪಲಸಮೋ ಗಂಧೋ ಯಸ್ಯಾಃ ಕ್ರೋಶಾತ್ಪ್ರವಾಯತಿ|

01155043c ಯಾ ಬಿಭರ್ತಿ ಪರಂ ರೂಪಂ ಯಸ್ಯಾ ನಾಸ್ತ್ಯುಪಮಾ ಭುವಿ||

ಅವಳಿಂದ ಹೊರಸೂಸುತ್ತಿದ್ದ ನೀಲೋತ್ಪಲ ಸಮಾನ ಸುಗಂಧವು ಒಂದು ಕ್ರೋಶದವರೆಗೂ ಪ್ರವಾಹಿಸುತ್ತಿತ್ತು. ಅವಳ ಪರಮ ರೂಪವು ಅತಿ ಸುಂದರವಾಗಿದ್ದು ಭೂವಿಯಲ್ಲಿಯೇ ಅವಳ ಸರಿಸಾಟಿಯಾದವಳು ಯಾರೂ ಇರಲಿಲ್ಲ.

01155044a ತಾಂ ಚಾಪಿ ಜಾತಾಂ ಸುಶ್ರೋಣೀಂ ವಾಗುವಾಚಾಶರೀರಿಣೀ|

01155044c ಸರ್ವಯೋಷಿದ್ವರಾ ಕೃಷ್ಣಾ ಕ್ಷಯಂ ಕ್ಷತ್ರಂ ನಿನೀಷತಿ||

ಆ ಸುಶ್ರೋಣಿಯು ಹುಟ್ಟುತ್ತಿದ್ದಹಾಗೆಯೇ ಅಶರೀರವಾಣಿಯು ನುಡಿಯಿತು: “ಸರ್ವ ಸ್ತ್ರೀಯರಲ್ಲಿ ಶ್ರೇಷ್ಠೆ ಈ ಕೃಷ್ಣೆಯು ಕ್ಷತ್ರಿಯರ ಕ್ಷಯವನ್ನು ನಡೆಸಿಕೊಡುತ್ತಾಳೆ.

01155045a ಸುರಕಾರ್ಯಮಿಯಂ ಕಾಲೇ ಕರಿಷ್ಯತಿ ಸುಮಧ್ಯಮಾ|

01155045c ಅಸ್ಯಾ ಹೇತೋಃ ಕ್ಷತ್ರಿಯಾಣಾಂ ಮಹದುತ್ಪತ್ಸ್ಯತೇ ಭಯಂ||

ಈ ಸುಮಧ್ಯಮೆಯು ಕಾಲಬಂದಾಗ ಸುರಕಾರ್ಯವನ್ನು ನಡೆಸಿಕೊಡುತ್ತಾಳೆ ಮತ್ತು ಅವಳ ಕಾರಣದಿಂದಾಗಿ ಕ್ಷತ್ರಿಯರಿಗೆ ಮಹಾ ಭಯವೊಂದು ಉಂಟಾಗುತ್ತದೆ!”

01155046a ತಚ್ಛೃತ್ವಾ ಸರ್ವಪಾಂಚಾಲಾಃ ಪ್ರಣೇದುಃ ಸಿಂಹಸಂಘವತ್|

01155046c ನ ಚೈತಾನ್ ಹರ್ಷಸಂಪೂಣಾನಿಯಂ ಸೇಹೇ ವಸುಂಧರಾ||

ಇದನ್ನು ಕೇಳಿದ ಪಾಂಚಾಲರೆಲ್ಲರೂ ಸಿಂಹಸಂಘದಂತೆ ಗರ್ಜಿಸಿದರು ಮತ್ತು ಹರ್ಷಸಂಪೂರ್ಣರಾದ ಅವರನ್ನು ವಸುಂಧರೆಯು ಸಹಿಸಲು ಅಸಮರ್ಥಳಾದಳು.

01155047a ತೌ ದೃಷ್ಟ್ವಾ ಪೃಷತೀ ಯಾಜಂ ಪ್ರಪೇದೇ ವೈ ಸುತಾರ್ಥಿನೀ|

01155047c ನ ವೈ ಮದನ್ಯಾಂ ಜನನೀಂ ಜಾನೀಯಾತಾಮಿಮಾವಿತಿ||

ಅವರೀರ್ವರನ್ನೂ ನೋಡಿದ ಸುತಾರ್ಥಿನೀ ಪೃಷತಿಯು ಯಾಜನಲ್ಲಿ ಕೇಳಿಕೊಂಡಳು: “ಇವರೀರ್ವರು ನನ್ನನ್ನು ಬಿಟ್ಟು ಬೇರೆ ಯಾರನ್ನೂ ತಾಯಿಯನ್ನಾಗಿ ತಿಳಿಯದಿರಲಿ!”

01155048a ತಥೇತ್ಯುವಾಚ ತಾಂ ಯಾಜೋ ರಾಜ್ಞಃ ಪ್ರಿಯಚಿಕೀರ್ಷಯಾ|

01155048c ತಯೋಶ್ಚ ನಾಮನೀ ಚಕ್ರುರ್ದ್ವಿಜಾಃ ಸಂಪೂರ್ಣಮಾನಸಾಃ||

ರಾಜನಿಗೆ ಪ್ರಿಯವಾದುದನ್ನು ಮಾಡಲು ಬಯಸಿದ ಯಾಜನು “ಹಾಗೆಯೇ ಆಗಲಿ!” ಎಂದನು. ಆ ಸಂಪೂರ್ಣ ಮಾನಸ ದ್ವಿಜರು ಅವರೀರ್ವರಿಗೆ ಹೆಸರುಗಳನ್ನಿಟ್ಟರು.

01155049a ಧೃಷ್ಟತ್ವಾದತಿಧೃಷ್ಣುತ್ವಾದ್ಧರ್ಮಾದ್ದ್ಯುತ್ಸಂಭವಾದಪಿ|

01155049c ಧೃಷ್ಟದ್ಯುಮ್ನಃ ಕುಮಾರೋಽಯಂ ದ್ರುಪದಸ್ಯ ಭವತ್ವಿತಿ||

“ಧೃಷ್ಟ, ಅತಿಘೃಷ್ಣು ಮತ್ತು ಧ್ಯುತಸಂಭವನಾದ ದ್ರುಪದನ ಈ ಕುಮಾರನು ಧೃಷ್ಟಧ್ಯುಮ್ನನಾಗುತ್ತಾನೆ.

01155050a ಕೃಷ್ಣೇತ್ಯೇವಾಬ್ರುವನ್ಕೃಷ್ಣಾಂ ಕೃಷ್ಣಾಭೂತ್ಸಾ ಹಿ ವರ್ಣತಃ|

01155050c ತಥಾ ತನ್ಮಿಥುನಂ ಜಜ್ಞೇ ದ್ರುಪದಸ್ಯ ಮಹಾಮಖೇ||

ಬಣ್ಣದಲ್ಲಿ ಕೃಷ್ಣೆಯಾಗಿರುವ ಇವಳು ಕೃಷ್ಣೆ!” ಎಂದು ಕರೆದರು. ಹೀಗೆ ದ್ರುಪದನಿಗೆ ಈ ಅವಳಿ ಮಕ್ಕಳು ಮಹಾಮಖದಲ್ಲಿ ಹುಟ್ಟಿದರು.

01155051a ಧೃಷ್ಟದ್ಯುಮ್ನಂ ತು ಪಾಂಚಾಲ್ಯಮಾನೀಯ ಸ್ವಂ ವಿವೇಶನಂ|

01155051c ಉಪಾಕರೋದಸ್ತ್ರಹೇತೋರ್ಭಾರದ್ವಾಜಃ ಪ್ರತಾಪವಾನ್||

ಪ್ರತಾಪಿ ಭಾರದ್ವಾಜನು ಪಾಂಚಾಲ್ಯ ಧೃಷ್ಟಧ್ಯುಮ್ನನನ್ನು ತನ್ನ ಮನೆಗೇ ಕರೆಸಿಕೊಂಡು ಅವನಿಗೆ ಅಸ್ತ್ರಗಳ ಶಿಕ್ಷಣವನ್ನಿತ್ತನು.

01155052a ಅಮೋಕ್ಷಣೀಯಂ ದೈವಂ ಹಿ ಭಾವಿ ಮತ್ವಾ ಮಹಾಮತಿಃ|

01155052c ತಥಾ ತತ್ಕೃತವಾನ್ದ್ರೋಣ ಆತ್ಮಕೀರ್ತ್ಯನುರಕ್ಷಣಾತ್||

ದೈವವು ಅಮೋಕ್ಷಣೀಯವಾದದ್ದು ಎಂದು ತಿಳಿದ ಮಹಾಮತಿ ದ್ರೋಣನು ತನ್ನ ಕೀರ್ತಿಯನ್ನು ರಕ್ಷಿಸುವುದಕ್ಕೋಸ್ಕರ ಈ ರೀತಿ ಮಾಡಿದನು.””

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ದ್ರೌಪದೀಸಂಭವೇ ಪಂಚಪಂಚಾದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ದ್ರೌಪದೀಸಂಭವದಲ್ಲಿ ನೂರಾಐವತ್ತೈದನೆಯ ಅಧ್ಯಾಯವು.

Image result for indian motifs

Comments are closed.