ಭೀಷ್ಮ ಪರ್ವ:ಭಗವದ್ಗೀತಾ ಪರ್ವ
Contents
Toggle೩೩
ವಿಶ್ವರೂಪದರ್ಶನ ಯೋಗ
06033001 ಅರ್ಜುನ ಉವಾಚ|
06033001a ಮದನುಗ್ರಹಾಯ ಪರಮಂ ಗುಹ್ಯಮಧ್ಯಾತ್ಮಸಂಜ್ಞಿತಂ|
06033001c ಯತ್ತ್ವಯೋಕ್ತಂ ವಚಸ್ತೇನ ಮೋಹೋಽಯಂ ವಿಗತೋ ಮಮ||
ಅರ್ಜುನನು ಹೇಳಿದನು: “ನನ್ನಮೇಲಿನ ಅನುಗ್ರಹದಿಂದ ಆಧ್ಯಾತ್ಮವೆಂದು ಕರೆಯಲ್ಪಡುವ ಯಾವ ಪರಮಗುಹ್ಯವಾದ ಮಾತನ್ನು ನೀನು ಹೇಳಿದೆಯೋ ಅದರಿಂದ ನನ್ನೀ ಮೋಹವು ತೊಲಗಿತು.
06033002a ಭವಾಪ್ಯಯೌ ಹಿ ಭೂತಾನಾಂ ಶ್ರುತೌ ವಿಸ್ತರಶೋ ಮಯಾ|
06033002c ತ್ವತ್ತಃ ಕಮಲಪತ್ರಾಕ್ಷ ಮಾಹಾತ್ಮ್ಯಮಪಿ ಚಾವ್ಯಯಂ||
ಕಮಲಪತ್ರಾಕ್ಷ! ಭೂತಗಳ ಹುಟ್ಟುವಿಕೆ ಮತ್ತು ನಾಶದ ಕುರಿತು ಮತ್ತು ನಿನ್ನ ಅವ್ಯಯ ಮಹಾತ್ಮೆಯನ್ನೂ ವಿಸ್ತಾರವಾಗಿ ನಾನು ಕೇಳಿದೆ.
06033003a ಏವಮೇತದ್ಯಥಾತ್ಥ ತ್ವಮಾತ್ಮಾನಂ ಪರಮೇಶ್ವರ|
06033003c ದ್ರಷ್ಟುಮಿಚ್ಛಾಮಿ ತೇ ರೂಪಮೈಶ್ವರಂ ಪುರುಷೋತ್ತಮ||
ಪರಮೇಶ್ವರ! ನಿನ್ನನ್ನು ನೀನು ಹೇಗೆಂದು ಹೇಳಿಕೊಂಡಿರುವೆಯೋ ಅದು ಹಾಗೆಯೇ ಸರಿ. ಪುರುಷೋತ್ತಮ! ನಿನ್ನ ಐಶ್ವರ ರೂಪವನ್ನು ನೋಡಲು ಬಯಸುತ್ತೇನೆ.
06033004a ಮನ್ಯಸೇ ಯದಿ ತಚ್ಛಕ್ಯಂ ಮಯಾ ದ್ರಷ್ಟುಮಿತಿ ಪ್ರಭೋ|
06033004c ಯೋಗೇಶ್ವರ ತತೋ ಮೇ ತ್ವಂ ದರ್ಶಯಾತ್ಮಾನಮವ್ಯಯಂ||
ಪ್ರಭೋ! ಒಂದುವೇಳೆ ನಾನು ಅದನ್ನು ನೋಡಲು ಶಕ್ಯನಾಗಿದ್ದರೆ ಯೋಗೇಶ್ವರ! ನನಗೆ ನಿನ್ನ ಅವ್ಯಯ ಆತ್ಮನನ್ನು ತೋರಿಸು!”
06033005 ಶ್ರೀಭಗವಾನುವಾಚ|
06033005a ಪಶ್ಯ ಮೇ ಪಾರ್ಥ ರೂಪಾಣಿ ಶತಶೋಽಥ ಸಹಸ್ರಶಃ|
06033005c ನಾನಾವಿಧಾನಿ ದಿವ್ಯಾನಿ ನಾನಾವರ್ಣಾಕೃತೀನಿ ಚ||
ಶ್ರೀಭಗವಾನನು ಹೇಳಿದನು: “ಪಾರ್ಥ! ನನ್ನ ನೂರಾರು ಸಹಸ್ರಾರು ನಾನಾವಿಧಗಳ, ನಾನಾ ವರ್ಣ-ಆಕೃತಿಗಳ ದಿವ್ಯ ರೂಪಗಳನ್ನು ನೋಡು!
06033006a ಪಶ್ಯಾದಿತ್ಯಾನ್ವಸೂನ್ರುದ್ರಾನಶ್ವಿನೌ ಮರುತಸ್ತಥಾ|
06033006c ಬಹೂನ್ಯದೃಷ್ಟಪೂರ್ವಾಣಿ ಪಶ್ಯಾಶ್ಚರ್ಯಾಣಿ ಭಾರತ||
ಭಾರತ! ಆದಿತ್ಯರನ್ನೂ, ವಸುಗಳನ್ನೂ, ರುದ್ರರನ್ನೂ, ಅಶ್ವಿಯರನ್ನೂ, ಮತ್ತು ಮರುತರನ್ನೂ ನೋಡು. ಹಿಂದೆ ನೋಡದೇ ಇರದ ಆಶ್ಚರ್ಯಗಳನ್ನೂ ನೋಡು!
06033007a ಇಹೈಕಸ್ಥಂ ಜಗತ್ಕೃತ್ಸ್ನಂ ಪಶ್ಯಾದ್ಯ ಸಚರಾಚರಂ|
06033007c ಮಮ ದೇಹೇ ಗುಡಾಕೇಶ ಯಚ್ಚಾನ್ಯದ್ದ್ರಷ್ಟುಮಿಚ್ಛಸಿ||
ಗುಡಾಕೇಶ! ಇಂದು ಚರಾಚರಗಳಿಂದ ಕೂಡಿದ ಸಂಪೂರ್ಣ ಜಗತ್ತು ಇಲ್ಲಿಯೇ ಇದೆ. ನೋಡು! ಬೇರೆ ಯಾವುದನ್ನು ನೋಡಲಿಚ್ಛಿಸುತ್ತೀಯೋ ಅವುಗಳನ್ನು ನನ್ನ ದೇಹದಲ್ಲಿಯೇ ನೋಡು!
06033008a ನ ತು ಮಾಂ ಶಕ್ಯಸೇ ದ್ರಷ್ಟುಮನೇನೈವ ಸ್ವಚಕ್ಷುಷಾ|
06033008c ದಿವ್ಯಂ ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮೈಶ್ವರಂ||
ಆದರೆ ನಿನ್ನ ಇದೇ ಕಣ್ಣುಗಳಿಂದ ನನ್ನನ್ನು ನೀಡು ನೋಡಲು ಶಕ್ತನಿಲ್ಲ. ನಿನಗೆ ದಿವ್ಯಚಕ್ಷುಗಳನ್ನು ಕೊಡುತ್ತೇನೆ. ನನ್ನ ಐಶ್ವರಯೋಗವನ್ನು ನೋಡು!””
06033009 ಸಂಜಯ ಉವಾಚ|
06033009a ಏವಮುಕ್ತ್ವಾ ತತೋ ರಾಜನ್ಮಹಾಯೋಗೇಶ್ವರೋ ಹರಿಃ|
06033009c ದರ್ಶಯಾಮಾಸ ಪಾರ್ಥಾಯ ಪರಮಂ ರೂಪಮೈಶ್ವರಂ||
06033010a ಅನೇಕವಕ್ತ್ರನಯನಮನೇಕಾದ್ಭುತದರ್ಶನಂ|
06033010c ಅನೇಕದಿವ್ಯಾಭರಣಂ ದಿವ್ಯಾನೇಕೋದ್ಯತಾಯುಧಂ||
06033011a ದಿವ್ಯಮಾಲ್ಯಾಂಬರಧರಂ ದಿವ್ಯಗಂಧಾನುಲೇಪನಂ|
06033011c ಸರ್ವಾಶ್ಚರ್ಯಮಯಂ ದೇವಮನಂತಂ ವಿಶ್ವತೋಮುಖಂ||
ಸಂಜಯನು ಹೇಳಿದನು: “ರಾಜನ್! ಹೀಗೆ ಹೇಳಿ ಮಹಾಯೋಗೇಶ್ವರ ಹರಿಯು ಪಾರ್ಥನಿಗೆ ಅನೇಕ ವಕ್ತ್ರನಯನಗಳುಳ್ಳ, ಅನೇಕ ಅದ್ಭುತದರ್ಶನಗಳುಳ್ಳ, ಅನೇಕದಿವ್ಯಾಭರಣಗಳ, ಅನೇಕ ದಿವ್ಯ ಆಯುಧಗಳನ್ನು ಹಿಡಿದಿರುವ, ದಿವ್ಯಮಾಲಾಂಬರಧರನಾಗಿ, ದಿವ್ಯಗಂಧಾನುಲೇಪನನಾಗಿ, ಸರ್ವವೂ ಆಶ್ಚರ್ಯಮಯವಾಗಿರುವ, ದೇವ, ಅನಂತ, ವಿಶ್ವತೋಮುಖವಾದ ತನ್ನ ಪರಮ ಐಶ್ವರ ರೂಪವನ್ನು ತೋರಿಸಿದನು.
06033012a ದಿವಿ ಸೂರ್ಯಸಹಸ್ರಸ್ಯ ಭವೇದ್ಯುಗಪದುತ್ಥಿತಾ|
06033012c ಯದಿ ಭಾಃ ಸದೃಶೀ ಸಾ ಸ್ಯಾದ್ಭಾಸಸ್ತಸ್ಯ ಮಹಾತ್ಮನಃ||
ಒಂದುವೇಳೆ ದಿವಿಯಲ್ಲಿ ಒಮ್ಮೆಗೇ ಸಹಸ್ರ ಸೂರ್ಯರ ಬೆಳಕು ಉದ್ಭವಾದರೆ ಅದು ಆ ಮಹಾತ್ಮನ ಬೆಳಕಿಗೆ ಸಮಾನವಾದೀತು!
06033013a ತತ್ರೈಕಸ್ಥಂ ಜಗತ್ಕೃತ್ಸ್ನಂ ಪ್ರವಿಭಕ್ತಮನೇಕಧಾ|
06033013c ಅಪಶ್ಯದ್ದೇವದೇವಸ್ಯ ಶರೀರೇ ಪಾಂಡವಸ್ತದಾ||
ಆಗ ಪಾಂಡವನು ಅನೇಕಪ್ರಕಾರವಾಗಿ ವಿಂಗಡವಾಗಿರುವ ಜಗತ್ತೆಲ್ಲವೂ ಆ ದೇವದೇವನ ಶರೀರದಲ್ಲಿ ಏಕಸ್ಥವಾಗಿದ್ದುದನ್ನು ನೋಡಿದನು.
06033014a ತತಃ ಸ ವಿಸ್ಮಯಾವಿಷ್ಟೋ ಹೃಷ್ಟರೋಮಾ ಧನಂಜಯಃ|
06033014c ಪ್ರಣಮ್ಯ ಶಿರಸಾ ದೇವಂ ಕೃತಾಂಜಲಿರಭಾಷತ||
ಆಗ ಧನಂಜಯನು ವಿಸ್ಮಯಾವಿಷ್ಟನಾಗಿ, ರೋಮಾಂಚನಗೊಂಡು, ದೇವನಿಗೆ ಶಿರಸಾ ಸಮಸ್ಕರಿಸಿ, ಕೈಮುಗಿದು ಹೇಳಿದನು:
06033015 ಅರ್ಜುನ ಉವಾಚ|
06033015a ಪಶ್ಯಾಮಿ ದೇವಾಂಸ್ತವ ದೇವ ದೇಹೇ
ಸರ್ವಾಂಸ್ತಥಾ ಭೂತವಿಶೇಷಸಂಘಾನ್|
06033015c ಬ್ರಹ್ಮಾಣಮೀಶಂ ಕಮಲಾಸನಸ್ಥಂ
ಋಷೀಂಶ್ಚ ಸರ್ವಾನುರಗಾಂಶ್ಚ ದಿವ್ಯಾನ್||
ಅರ್ಜುನನು ಹೇಳಿದನು: “ದೇವಾ! ನಿನ್ನ ದೇಹದಲ್ಲಿ ಎಲ್ಲ ದೇವತೆಗಳನ್ನೂ, ಬೇರೆಬೇರೆ ಪ್ರಾಣಿಗಳ ಗುಂಪುಗಳನ್ನು, ಕಮಲಾಸನಸ್ಥನಾಗಿರುವ ಈಶ ಬ್ರಹ್ಮನನ್ನೂ, ಸರ್ವ ಋಷಿಗಳನ್ನೂ ಉರುಗರನ್ನೂ ಕಾಣುತ್ತಿದ್ದೇನೆ.
06033016a ಅನೇಕಬಾಹೂದರವಕ್ತ್ರನೇತ್ರಂ
ಪಶ್ಯಾಮಿ ತ್ವಾ ಸರ್ವತೋಽನಂತರೂಪಂ|
06033016c ನಾಂತಂ ನ ಮಧ್ಯಂ ನ ಪುನಸ್ತವಾದಿಂ
ಪಶ್ಯಾಮಿ ವಿಶ್ವೇಶ್ವರ ವಿಶ್ವರೂಪ||
ವಿಶ್ವೇಶ್ವರ! ವಿಶ್ವರೂಪ! ನಿನ್ನನ್ನು ಅನೇಕ ಬಾಹು, ಉದರ, ವಕ್ತ್ರ, ನೇತ್ರಗಳುಳ್ಳವನಾಗಿ ಸರ್ವತವೂ ಅನಂತರೂಪನನ್ನಾಗಿ ನೋಡುತ್ತಿದ್ದೇನೆ. ಅಂತವೂ ಇಲ್ಲ. ಮದ್ಯವೂ ಇಲ್ಲ. ಮತ್ತೆ ಪ್ರಾರಂಭವೂ ಇಲ್ಲವೆಂದು ಕಾಣುತ್ತಿದ್ದೇನೆ.
06033017a ಕಿರೀಟಿನಂ ಗದಿನಂ ಚಕ್ರಿಣಂ ಚ
ತೇಜೋರಾಶಿಂ ಸರ್ವತೋ ದೀಪ್ತಿಮಂತಂ|
06033017c ಪಶ್ಯಾಮಿ ತ್ವಾಂ ದುರ್ನಿರೀಕ್ಷ್ಯಂ ಸಮಂತಾದ್
ದೀಪ್ತಾನಲಾರ್ಕದ್ಯುತಿಮಪ್ರಮೇಯಂ||
ಕಿರೀಟಿಯೂ, ಗದಿಯೂ, ಚಕ್ರಿಯೂ, ತೇಜೋರಾಶಿಯೂ, ಸರ್ವತವೂ ಬೆಳಗುತ್ತಿರುವ, ದುರ್ನಿರೀಕ್ಷ್ಯನಾದ, ಎಲ್ಲೆಲ್ಲಿಯೂ ಅನಲ ಮತ್ತು ಅರ್ಕರಂತೆ ಜ್ವಾಲೆಗಳಿಂದ ಬೆಳಗುತ್ತಿರುವ ಅಪ್ರಮೇಯನಾದ ನಿನ್ನನ್ನು ನೋಡುತ್ತಿದ್ದೇನೆ.
06033018a ತ್ವಮಕ್ಷರಂ ಪರಮಂ ವೇದಿತವ್ಯಂ
ತ್ವಮಸ್ಯ ವಿಶ್ವಸ್ಯ ಪರಂ ನಿಧಾನಂ|
06033018c ತ್ವಮವ್ಯಯಃ ಶಾಶ್ವತಧರ್ಮಗೋಪ್ತಾ
ಸನಾತನಸ್ತ್ವಂ ಪುರುಷೋ ಮತೋ ಮೇ||
ಅರಿತುಕೊಳ್ಳಬೇಕಾಗಿರುವ ಪರಮ ಅಕ್ಷರನು ನೀನು. ಈ ವಿಶ್ವದ ಪರಮ ನಿಧಾನನು ನೀನು. ನೀನು ಅವ್ಯಯ, ಶಾಶ್ವತ ಮತ್ತು ಧರ್ಮಗೋಪ್ತ. ನೀನು ಸನಾತನ ಪುರುಷನೆಂದು ನನಗನ್ನಿಸುತ್ತಿದೆ.
06033019a ಅನಾದಿಮಧ್ಯಾಂತಮನಂತವೀರ್ಯಂ
ಅನಂತಬಾಹುಂ ಶಶಿಸೂರ್ಯನೇತ್ರಂ|
06033019c ಪಶ್ಯಾಮಿ ತ್ವಾಂ ದೀಪ್ತಹುತಾಶವಕ್ತ್ರಂ
ಸ್ವತೇಜಸಾ ವಿಶ್ವಮಿದಂ ತಪಂತಂ||
ಆದಿ, ಮಧ್ಯ, ಅಂತಗಳಿಲ್ಲದ, ಅನಂತವೀರ್ಯನಾದ, ಅನಂತಬಾಹುಗಳನ್ನುಳ್ಳ, ಶಶಿ-ಸೂರ್ಯರನ್ನೇ ನೇತ್ರಗಳನ್ನಾಗುಳ್ಳ, ಅಗ್ನಿಯಂತೆ ಉರಿಯುತ್ತಿರುವ, ನಿನ್ನದೇ ತೇಜಸ್ಸಿನಿಂದ ಈ ವಿಶ್ವವನ್ನು ಸುಡುತ್ತಿರುವ ನಿನ್ನನ್ನು ನೋಡುತ್ತಿದ್ದೇನೆ.
06033020a ದ್ಯಾವಾಪೃಥಿವ್ಯೋರಿದಮಂತರಂ ಹಿ
ವ್ಯಾಪ್ತಂ ತ್ವಯೈಕೇನ ದಿಶಶ್ಚ ಸರ್ವಾಃ|
06033020c ದೃಷ್ಟ್ವಾದ್ಭುತಂ ರೂಪಮಿದಂ ತವೋಗ್ರಂ
ಲೋಕತ್ರಯಂ ಪ್ರವ್ಯಥಿತಂ ಮಹಾತ್ಮನ್||
ದಿವಿ ಮತ್ತು ಭೂಮಿಯ ನಡುವಿನದೆಲ್ಲವೂ ನಿನ್ನೊಬ್ಬನಿಂದಲೇ ವ್ಯಾಪ್ತವಾಗಿರುವುದು. ಮಹಾತ್ಮನ್! ನಿನ್ನ ಈ ಉಗ್ರ ಅದ್ಭುತ ರೂಪವನ್ನು ನೋಡಿ ಲೋಕತ್ರಯಗಳು ಪ್ರವ್ಯಥಿತವಾಗುತ್ತಿವೆ.
06033021a ಅಮೀ ಹಿ ತ್ವಾ ಸುರಸಂಘಾ ವಿಶಂತಿ
ಕೇ ಚಿದ್ಭೀತಾಃ ಪ್ರಾಂಜಲಯೋ ಗೃಣಂತಿ|
06033021c ಸ್ವಸ್ತೀತ್ಯುಕ್ತ್ವಾ ಮಹರ್ಷಿಸಿದ್ಧಸಂಘಾಃ
ಸ್ತುವಂತಿ ತ್ವಾಂ ಸ್ತುತಿಭಿಃ ಪುಷ್ಕಲಾಭಿಃ||
ಈ ಸುರಸಂಘಗಳು ನಿನ್ನನ್ನೇ ಪ್ರವೇಶಿಸುತ್ತಿವೆ. ಕೆಲವರು ಭೀತರಾಗಿ ಕೈಮುಗಿದು ನಿಂತಿರುವರು. ಮಹರ್ಷಿ-ಸಿದ್ಧ ಗಣಗಳು “ಸ್ವಸ್ತಿ” ಎಂದು ಹೇಳುತ್ತಾ ನಿನ್ನನ್ನು ಪುಷ್ಕಲ ಸ್ತುತಿಗಳಿಂದ ಸ್ತುತಿಸುತ್ತಿದ್ದಾರೆ.
06033022a ರುದ್ರಾದಿತ್ಯಾ ವಸವೋ ಯೇ ಚ ಸಾಧ್ಯಾ
ವಿಶ್ವೇಽಶ್ವಿನೌ ಮರುತಶ್ಚೋಷ್ಮಪಾಶ್ಚ|
06033022c ಗಂಧರ್ವಯಕ್ಷಾಸುರಸಿದ್ಧಸಂಘಾ
ವೀಕ್ಷಂತೇ ತ್ವಾ ವಿಸ್ಮಿತಾಶ್ಚೈವ ಸರ್ವೇ||
ರುದ್ರರು, ಆದಿತ್ಯರು, ಸಾಧ್ಯರು, ವಿಶ್ವೇದೇವರು, ಅಶ್ವಿನಿಗಳು, ಮರುತರು, ಊಷ್ಮಪರು, ಗಂಧರ್ವರು, ಯಕ್ಷರು, ಅಸುರರು, ಮತ್ತು ಸಿದ್ಧ ಸಂಘಗಳೆಲ್ಲರೂ ವಿಸ್ಮಿತರಾಗಿ ನಿನ್ನನ್ನು ನೋಡುತ್ತಿದ್ದಾರೆ.
06033023a ರೂಪಂ ಮಹತ್ತೇ ಬಹುವಕ್ತ್ರನೇತ್ರಂ
ಮಹಾಬಾಹೋ ಬಹುಬಾಹೂರುಪಾದಂ|
06033023c ಬಹೂದರಂ ಬಹುದಂಷ್ಟ್ರಾಕರಾಲಂ
ದೃಷ್ಟ್ವಾ ಲೋಕಾಃ ಪ್ರವ್ಯಥಿತಾಸ್ತಥಾಹಂ||
ಮಹಾಬಾಹೋ! ಬಹುವಕ್ತ್ರನೇತ್ರಗಳುಳ್ಳ, ಬಹು ಬಾಹು, ತೊಡೆ, ಪಾದಗಳನ್ನುಳ್ಳ, ಬಹು ಉದರಗಳುಳ್ಳ, ಬಹುದಂಷ್ಟ್ರಕರಾಲನಾಗಿರುವ ನಿನ್ನನ್ನು ನೋಡಿ ನಾನೂ ಲೋಕಗಳೂ ಪ್ರವ್ಯಥಿತರಾಗಿದ್ದೇವೆ.
06033024a ನಭಃಸ್ಪೃಶಂ ದೀಪ್ತಮನೇಕವರ್ಣಂ
ವ್ಯಾತ್ತಾನನಂ ದೀಪ್ತವಿಶಾಲನೇತ್ರಂ|
06033024c ದೃಷ್ಟ್ವಾ ಹಿ ತ್ವಾಂ ಪ್ರವ್ಯಥಿತಾಂತರಾತ್ಮಾ
ಧೃತಿಂ ನ ವಿಂದಾಮಿ ಶಮಂ ಚ ವಿಷ್ಣೋ||
ವಿಷ್ಣೋ! ನಭವನ್ನು ಸ್ಪರ್ಶಿಸುವ, ಅನೇಕ ವರ್ಣಗಳಲ್ಲಿ ಬೆಳಗುತ್ತಿರುವ, ಅಗಲ ತೆರೆದ ಬಾಯಿಯುಳ್ಳ, ಹೊಳೆಯುವ ವಿಶಾಲನೇತ್ರಗಳನ್ನುಳ್ಳ ನಿನ್ನನ್ನು ನೋಡಿಯೇ ನಾನು ಅಂತರಾತ್ಮದಲ್ಲಿ ಪ್ರವಥಿತನಾಗಿದ್ದೇನೆ. ಧೃತಿ ಮತ್ತು ಶಾಂತಿಯನ್ನು ಪಡೆಯದಂತಾಗಿದ್ದೇನೆ.
06033025a ದಂಷ್ಟ್ರಾಕರಾಲಾನಿ ಚ ತೇ ಮುಖಾನಿ
ದೃಷ್ಟ್ವೈವ ಕಾಲಾನಲಸನ್ನಿಭಾನಿ|
06033025c ದಿಶೋ ನ ಜಾನೇ ನ ಲಭೇ ಚ ಶರ್ಮ
ಪ್ರಸೀದ ದೇವೇಶ ಜಗನ್ನಿವಾಸ||
ಕಾಲಾನಲನಂತಿರುವ ದಂಷ್ಟ್ರಾಕರಾಲ ಮುಖಗಳನ್ನು ನೋಡಿಯೇ ನನಗೆ ದಿಕ್ಕು ತೋಚದಂತಾಗಿದೆ. ನೆಲೆಯು ದೊರೆಯುತ್ತಿಲ್ಲ. ದೇವೇಶ! ಜಗನ್ನಿವಾಸ! ಪ್ರಸನ್ನನಾಗು.
06033026a ಅಮೀ ಚ ತ್ವಾಂ ಧೃತರಾಷ್ಟ್ರಸ್ಯ ಪುತ್ರಾಃ
ಸರ್ವೇ ಸಹೈವಾವನಿಪಾಲಸಂಘೈಃ|
06033026c ಭೀಷ್ಮೋ ದ್ರೋಣಃ ಸೂತಪುತ್ರಸ್ತಥಾಸೌ
ಸಹಾಸ್ಮದೀಯೈರಪಿ ಯೋಧಮುಖ್ಯೈಃ||
06033027a ವಕ್ತ್ರಾಣಿ ತೇ ತ್ವರಮಾಣಾ ವಿಶಂತಿ
ದಂಷ್ಟ್ರಾಕರಾಲಾನಿ ಭಯಾನಕಾನಿ|
06033027c ಕೇ ಚಿದ್ವಿಲಗ್ನಾ ದಶನಾಂತರೇಷು
ಸಂದೃಶ್ಯಂತೇ ಚೂರ್ಣಿತೈರುತ್ತಮಾಂಗೈಃ||
ಅವನಿಪಾಲಸಂಘಗಳೊಡನೆ ಈ ಧೃತರಾಷ್ಟ್ರನ ಮಕ್ಕಳೆಲ್ಲರೂ, ಭೀಷ್ಮ, ದ್ರೋಣ, ಸೂತಪುತ್ರರೊಂದಿಗೆ ನಮ್ಮ ಯೋಧಮುಖ್ಯರೊಂದಿಗೆ ಕೋರೆದಾಡೆಗಳಿಂದ ವಿಕಾರವಾಗಿ ಭಯಂಕರವಾಗಿರುವ ನಿನ್ನ ಮುಖಗಳನ್ನು ತ್ವರೆಮಾಡಿ ಹೊಗುತ್ತಿರುವರು. ಕೆಲವರು ಹಲ್ಲುಸಂದುಗಳಲ್ಲಿ ಸಿಲುಕಿಕೊಂಡು ಚೂರ್ಣಿತ ಉತ್ತಮಾಂಗಗಳೊಡನೆ ಕಾಣುತ್ತಿದ್ದಾರೆ.
06033028a ಯಥಾ ನದೀನಾಂ ಬಹವೋಽಂಬುವೇಗಾಃ
ಸಮುದ್ರಮೇವಾಭಿಮುಖಾ ದ್ರವಂತಿ|
06033028c ತಥಾ ತವಾಮೀ ನರಲೋಕವೀರಾ
ವಿಶಂತಿ ವಕ್ತ್ರಾಣ್ಯಭಿವಿಜ್ವಲಂತಿ||
ಹೇಗೆ ನದಿಗಳ ನೀರು ಬಹುವೇಗದಿಂದ ಸಮುದ್ರಕ್ಕೆ ಅಭಿಮುಖವಾಗಿಯೇ ಓಡುತ್ತದೆಯೋ ಹಾಗೆ ಈ ನರಲೋಕವೀರರು ಪ್ರಜ್ವಲಿಸುತ್ತಿರುವ ನಿನ್ನ ಬಾಯಿಗಳೊಳಗೆ ಹೊಗುತ್ತಿರುವರು.
06033029a ಯಥಾ ಪ್ರದೀಪ್ತಂ ಜ್ವಲನಂ ಪತಂಗಾ
ವಿಶಂತಿ ನಾಶಾಯ ಸಮೃದ್ಧವೇಗಾಃ|
06033029c ತಥೈವ ನಾಶಾಯ ವಿಶಂತಿ ಲೋಕಾಸ್
ತವಾಪಿ ವಕ್ತ್ರಾಣಿ ಸಮೃದ್ಧವೇಗಾಃ||
ನಾಶಗೊಳ್ಳಲು ಹೇಗೆ ಪತಂಗಗಳು ಸಮೃದ್ಧವೇಗದಿಂದ ಧಗಧಗನೆ ಉರಿಯುತ್ತಿರುವ ಬೆಂಕಿಯಕಡೆ ಮುನ್ನುಗ್ಗುತ್ತವೆಯೋ ಹಾಗೆ ಲೋಕಗಳು ನಾಶಗೊಳ್ಳಲು ನಿನ್ನ ಮುಖಗಳನ್ನೂ ಸಮೃದ್ಧವೇಗದಿಂದ ಹೊಗುತ್ತಿವೆ.
06033030a ಲೇಲಿಹ್ಯಸೇ ಗ್ರಸಮಾನಃ ಸಮಂತಾಲ್
ಲೋಕಾನ್ ಸಮಗ್ರಾನ್ವದನೈರ್ಜ್ವಲದ್ಭಿಃ|
06033030c ತೇಜೋಭಿರಾಪೂರ್ಯ ಜಗತ್ಸಮಗ್ರಂ
ಭಾಸಸ್ತವೋಗ್ರಾಃ ಪ್ರತಪಂತಿ ವಿಷ್ಣೋ||
ಸುತ್ತಲೂ ಸಮಗ್ರವಾದ ಲೋಕಗಳನ್ನೂ ಉರಿಯುತ್ತಿರುವ ವದನಗಳಿಂದ ನುಂಗುತ್ತಾ ಚಪ್ಪರಿಸುತ್ತಿದ್ದೀಯೆ. ವಿಷ್ಣೋ! ಸಮಗ್ರ ಜಗತ್ತೂ ನಿನ್ನ ತೇಜಸ್ಸಿನಿಂದ ತುಂಬಿಕೊಂಡು ಉಗ್ರ ಪ್ರಭೆಗಳಿಂದ ಪರಿತಪಿಸುತ್ತಿವೆ.
06033031a ಆಖ್ಯಾಹಿ ಮೇ ಕೋ ಭವಾನುಗ್ರರೂಪೋ
ನಮೋಽಸ್ತು ತೇ ದೇವವರ ಪ್ರಸೀದ|
06033031c ವಿಜ್ಞಾತುಮಿಚ್ಛಾಮಿ ಭವಂತಮಾದ್ಯಂ
ನ ಹಿ ಪ್ರಜಾನಾಮಿ ತವ ಪ್ರವೃತ್ತಿಂ||
ಉಗ್ರರೂಪನಾದ ನೀನು ಯಾರು? ನನಗೆ ಹೇಳು. ದೇವವರ! ಪ್ರಸನ್ನನಾಗು. ನಿನಗೆ ನಮಸ್ಕಾರ. ಆದ್ಯನಾದ ನಿನ್ನನ್ನು ಅರಿಯಲಿಚ್ಛಿಸುತ್ತೇನೆ. ನಿನ್ನ ಪ್ರವೃತ್ತಿಯನ್ನು ನಾನು ತಿಳಿಯಲಾರೆನು.”
06033032 ಶ್ರೀಭಗವಾನುವಾಚ|
06033032a ಕಾಲೋಽಸ್ಮಿ ಲೋಕಕ್ಷಯಕೃತ್ಪ್ರವೃದ್ಧೋ
ಲೋಕಾನ್ಸಮಾಹರ್ತುಮಿಹ ಪ್ರವೃತ್ತಃ|
06033032c ಋತೇಽಪಿ ತ್ವಾ ನ ಭವಿಷ್ಯಂತಿ ಸರ್ವೇ
ಯೇಽವಸ್ಥಿತಾಃ ಪ್ರತ್ಯನೀಕೇಷು ಯೋಧಾಃ||
ಶ್ರೀಭಗವಾನನು ಹೇಳಿದನು: “ಲೋಕವನ್ನು ಕ್ಷಯಗೊಳಿಸುವ, ಪ್ರವೃದ್ಧನಾಗಿರುವ ಕಾಲನು ನಾನು (I am time grown old). ಇಲ್ಲಿ ನಾನು ಲೋಕಗಳನ್ನು ಸಮಾಹರಣಮಾಡಲು ತೊಡಗಿರುವೆನು. ನೀನಿಲ್ಲದಿದ್ದರೂ ಅಲ್ಲಿ ಒಂದೊಂದು ಸೇನೆಯಲ್ಲಿಯೂ ನಿಂತಿರುವ ಯೋಧರು ಇಲ್ಲವಾಗುವರು.
06033033a ತಸ್ಮಾತ್ತ್ವಮುತ್ತಿಷ್ಠ ಯಶೋ ಲಭಸ್ವ
ಜಿತ್ವಾ ಶತ್ರೂನ್ಭುಂಕ್ಷ್ವ ರಾಜ್ಯಂ ಸಮೃದ್ಧಂ|
06033033c ಮಯೈವೈತೇ ನಿಹತಾಃ ಪೂರ್ವಮೇವ
ನಿಮಿತ್ತಮಾತ್ರಂ ಭವ ಸವ್ಯಸಾಚಿನ್||
ಆದುದರಿಂದ ಎದ್ದೇಳು. ಯಶಸ್ಸನ್ನು ಪಡೆ. ಶತ್ರುಗಳನ್ನು ಗೆದ್ದು ಸಮೃದ್ಧ ರಾಜ್ಯವನ್ನು ಗೆಲ್ಲು! ಇವರೆಲ್ಲರೂ ಈ ಮೊದಲೇ ನನ್ನಿಂದ ಹತರಾಗಿರುವರು. ಸವ್ಯಸಾಚಿನ್! ನೀನು ನಿಮಿತ್ತಮಾತ್ರನಾಗು!
06033034a ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ
ಕರ್ಣಂ ತಥಾನ್ಯಾನಪಿ ಯೋಧವೀರಾನ್|
06033034c ಮಯಾ ಹತಾಂಸ್ತ್ವಂ ಜಹಿ ಮಾ ವ್ಯಥಿಷ್ಠಾ
ಯುಧ್ಯಸ್ವ ಜೇತಾಸಿ ರಣೇ ಸಪತ್ನಾನ್||
ನನ್ನಿಂದ ಹತರಾಗಿರುವ ದ್ರೋಣ, ಭೀಷ್ಮ, ಜಯದ್ರಥ, ಕರ್ಣ ಮತ್ತು ಇತರ ಯೋಧವೀರರನ್ನೂ ಕೊಲ್ಲು. ವ್ಯಥೆಪಡಬೇಡ. ಯುದ್ಧಮಾಡು. ರಣದಲ್ಲಿ ನಿನ್ನ ದಾಯಾದಿಗಳನ್ನು ಗೆಲ್ಲುವೆ.””
06033035 ಸಂಜಯ ಉವಾಚ|
06033035a ಏತಚ್ಛೃತ್ವಾ ವಚನಂ ಕೇಶವಸ್ಯ
ಕೃತಾಂಜಲಿರ್ವೇಪಮಾನಃ ಕಿರೀಟೀ|
06033035c ನಮಸ್ಕೃತ್ವಾ ಭೂಯ ಏವಾಹ ಕೃಷ್ಣಂ
ಸಗದ್ಗದಂ ಭೀತಭೀತಃ ಪ್ರಣಮ್ಯ||
ಸಂಜಯನು ಹೇಳಿದನು: “ಕೇಶವನ ಈ ಮಾತನ್ನು ಕೇಳಿ ನಡುಗುತ್ತಿದ್ದ ಕಿರೀಟಿಯು ಅಂಜಲೀಬದ್ಧನಾಗಿ ಕೃಷ್ಣನಿಗೆ ಮತ್ತೆ ಮತ್ತೆ ನಮಸ್ಕರಿಸುತ್ತಾ, ಹೆದರಿಕೊಂಡು ನಮಸ್ಕರಿಸುತ್ತಾ, ಕಣ್ಣೀರುತುಂಬಿದ ಕಂಠದಲ್ಲಿ ಹೇಳಿದನು:
06033036 ಅರ್ಜುನ ಉವಾಚ|
06033036a ಸ್ಥಾನೇ ಹೃಷೀಕೇಶ ತವ ಪ್ರಕೀರ್ತ್ಯಾ
ಜಗತ್ಪ್ರಹೃಷ್ಯತ್ಯನುರಜ್ಯತೇ ಚ|
06033036c ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ
ಸರ್ವೇ ನಮಸ್ಯಂತಿ ಚ ಸಿದ್ಧಸಂಘಾಃ||
ಅರ್ಜುನನು ಹೇಳಿದನು: “ಹೃಷೀಕೇಶ! ನಿನ್ನ ಪ್ರಕೀರ್ತಿಯಿಂದ ಜಗತ್ತು ಪ್ರಹರ್ಷಗೊಂಡಿದೆ. ಅನುರಾಗದಿಂದ ಕೂಡಿಕೊಂಡಿದೆ. ರಾಕ್ಷಸರು ಭೀತರಾಗಿ ದಿಕ್ಕು ದಿಕ್ಕುಗಳಲ್ಲಿ ಓಡಿ ಹೋಗುತ್ತಿದ್ದಾರೆ. ಮತ್ತು ಸಿದ್ಧಸಂಘಗಳೆಲ್ಲವೂ ನಮಸ್ಕರಿಸುತ್ತಿವೆ.
06033037a ಕಸ್ಮಾಚ್ಚ ತೇ ನ ನಮೇರನ್ಮಹಾತ್ಮನ್
ಗರೀಯಸೇ ಬ್ರಹ್ಮಣೋಽಪ್ಯಾದಿಕರ್ತ್ರೇ|
06033037c ಅನಂತ ದೇವೇಶ ಜಗನ್ನಿವಾಸ
ತ್ವಮಕ್ಷರಂ ಸದಸತ್ತತ್ಪರಂ ಯತ್||
ಮಹಾತ್ಮನ್! ಬ್ರಹ್ಮನಿಗೂ ಆದಿಕರ್ತೃವಾಗಿರುವ, ದೊಡ್ಡವನಾಗಿರುವ ನಿನಗೆ ಏಕೆ ನಮಸ್ಕರಿಸುವುದಿಲ್ಲ? ಅನಂತ! ದೇವೇಶ! ಜಗನ್ನಿವಾಸ! ಸತ್ತ-ಅಸತ್ತರನ್ನೂ ಮೀರಿರುವವ ಅಕ್ಷರನು ನೀನು.
06033038a ತ್ವಮಾದಿದೇವಃ ಪುರುಷಃ ಪುರಾಣಸ್
ತ್ವಮಸ್ಯ ವಿಶ್ವಸ್ಯ ಪರಂ ನಿಧಾನಂ|
06033038c ವೇತ್ತಾಸಿ ವೇದ್ಯಂ ಚ ಪರಂ ಚ ಧಾಮ
ತ್ವಯಾ ತತಂ ವಿಶ್ವಮನಂತರೂಪ||
ನೀನು ಆದಿದೇವ. ಪುರುಷ. ಪುರಾಣ. ನೀನು ಈ ವಿಶ್ವದ ಪರಮ ನಿಧಾನ. ತಿಳಿಯಬೇಕಾದುದೆಲ್ಲವನ್ನೂ ತಿಳಿತಿರುವೆ. ತಿಳಿಯಬೇಕಾಗಿರುವವನೂ ನೀನೆ. ನೀನು ಪರಂಧಾಮ. ಅನಂತರೂಪ! ವಿಶ್ವವೆಲ್ಲವೂ ನಿನ್ನಿಂದಲೇ ವ್ಯಾಪ್ತವಾಗಿದೆ.
06033039a ವಾಯುರ್ಯಮೋಽಗ್ನಿರ್ವರುಣಃ ಶಶಾಂಕಃ
ಪ್ರಜಾಪತಿಸ್ತ್ವಂ ಪ್ರಪಿತಾಮಹಶ್ಚ|
06033039c ನಮೋ ನಮಸ್ತೇಽಸ್ತು ಸಹಸ್ರಕೃತ್ವಃ
ಪುನಶ್ಚ ಭೂಯೋಽಪಿ ನಮೋ ನಮಸ್ತೇ||
ನೀನು ವಾಯು, ಯಮ, ಅಗ್ನಿ, ವರುಣ, ಶಶಾಂಕ, ಪ್ರಜಾಪತಿ ಪ್ರಪಿತಾಮಹನೂ ಕೂಡ. ನಿನಗೆ ನಮಸ್ಕಾರ! ಸಾವಿರ ನಮಸ್ಕಾರಗಳು! ಮತ್ತೆ ಇನ್ನೊಮ್ಮೆ ನಮಸ್ಕಾರ! ನಿನಗೆ ನಮಸ್ಕಾರ!
06033040a ನಮಃ ಪುರಸ್ತಾದಥ ಪೃಷ್ಠತಸ್ತೇ
ನಮೋಽಸ್ತು ತೇ ಸರ್ವತ ಏವ ಸರ್ವ|
06033040c ಅನಂತವೀರ್ಯಾಮಿತವಿಕ್ರಮಸ್ತ್ವಂ
ಸರ್ವಂ ಸಮಾಪ್ನೋಷಿ ತತೋಽಸಿ ಸರ್ವಃ||
ಸರ್ವ! ನಿನಗೆ ಮುಂದಿನಿಂದ ನಮಸ್ಕಾರ. ಹಿಂದಿನಿಂದ ನಮಸ್ಕಾರ. ಎಲ್ಲ ಕಡೆಗಳಿಂದ ನಿನಗೆ ನಮಸ್ಕಾರ. ಅನಂತ ವೀರ್ಯ ಮತ್ತು ಅಮಿತವಿಕ್ರಮನು ನೀನು. ಸರ್ವವನ್ನೂ ಚೆನ್ನಾಗಿ ವ್ಯಾಪಿಸಿರುವೆ. ಆದುದರಿಂದ ಸರ್ವನಾಗಿರುವೆ.
06033041a ಸಖೇತಿ ಮತ್ವಾ ಪ್ರಸಭಂ ಯದುಕ್ತಂ
ಹೇ ಕೃಷ್ಣ ಹೇ ಯಾದವ ಹೇ ಸಖೇತಿ|
06033041c ಅಜಾನತಾ ಮಹಿಮಾನಂ ತವೇದಂ
ಮಯಾ ಪ್ರಮಾದಾತ್ಪ್ರಣಯೇನ ವಾಪಿ||
06033042a ಯಚ್ಚಾವಹಾಸಾರ್ಥಮಸತ್ಕೃತೋಽಸಿ
ವಿಹಾರಶಯ್ಯಾಸನಭೋಜನೇಷು|
06033042c ಏಕೋಽಥ ವಾಪ್ಯಚ್ಯುತ ತತ್ಸಮಕ್ಷಂ
ತತ್ ಕ್ಷಾಮಯೇ ತ್ವಾಮಹಮಪ್ರಮೇಯಂ||
ನಿನ್ನ ಈ ಮಹಿಮೆಗಳನ್ನು ಅರಿಯದೆ, ಸಖನೆಂದು ತಿಳಿದು, “ಎಲೆ ಕೃಷ್ಣ!”, “ಎಲೆ ಯಾದವ!”, “ಎಲೆ ಗೆಳೆಯ!” ಎಂದು ದಿಟ್ಟತನದಿಂದ ಅಥವಾ ಪ್ರಣಯದಿಂದ ಅಥವಾ ಪ್ರಮಾದದಿಂದ ಏನು ಹೇಳಿರುವೆನೋ; ವಿಹಾರ, ಶಯ್ಯೆ, ಆಸನ ಮತ್ತು ಭೋಜನಗಳಲ್ಲಿ ಅಪಹಾಸಕ್ಕಾಗಿ ಒಬ್ಬನೇ ಇರುವಾಗ ಅಥವಾ ಇತರರ ಸಮಕ್ಷಮದಲ್ಲಿ ಏನು ಅಸತ್ಕಾರ ಮಾಡಿದೆನೋ ಅದನ್ನು ಅಪ್ರಮೇಯನಾದ ನೀನು ಕ್ಷಮಿಸಬೇಕು!
06033043a ಪಿತಾಸಿ ಲೋಕಸ್ಯ ಚರಾಚರಸ್ಯ
ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್|
06033043c ನ ತ್ವತ್ಸಮೋಽಸ್ತ್ಯಭ್ಯಧಿಕಃ ಕುತೋಽನ್ಯೋ
ಲೋಕತ್ರಯೇಽಪ್ಯಪ್ರತಿಮಪ್ರಭಾವ||
ಈ ಲೋಕದ ಚರಾಚರಗಳ ಪಿತನಾಗಿರುವೆ. ನೀನು ಇದರ ಗರೀಯ ಗುರುವೂ ಪೂಜ್ಯನೂ ಆಗಿರುವೆ. ಅಪ್ರತಿಮಪ್ರಭಾವ! ಲೋಕತ್ರಯದಲ್ಲಿಯೂ ನಿನ್ನ ಸಮನಾದವನು ಇಲ್ಲ. ಇನ್ನು ನಿನಗಿಂತ ಹೆಚ್ಚಿನವನು ಎಲ್ಲಿ?
06033044a ತಸ್ಮಾತ್ಪ್ರಣಮ್ಯ ಪ್ರಣಿಧಾಯ ಕಾಯಂ
ಪ್ರಸಾದಯೇ ತ್ವಾಮಹಮೀಶಮೀಡ್ಯಂ|
06033044c ಪಿತೇವ ಪುತ್ರಸ್ಯ ಸಖೇವ ಸಖ್ಯುಃ
ಪ್ರಿಯಃ ಪ್ರಿಯಾಯಾರ್ಹಸಿ ದೇವ ಸೋಢುಂ||
ಆದುದರಿಂದ ಪ್ರಣಾಮಮಾಡಿ, ಕಾಯದಿಂದ ಅಡ್ಡಬಿದ್ದು ಈಶ ಈಡ್ಯನಾದ ನಿನ್ನನ್ನು ಪ್ರಸನ್ನಗೊಳಿಸುತ್ತಿದ್ದೇನೆ. ತಂದೆಯು ಮಗನನ್ನು, ಸಖನು ಸಖನನ್ನು ಮತ್ತು ಪ್ರಿಯನು ಪ್ರಿಯೆಯನ್ನು ಸಹಿಸಿಕೊಳ್ಳುವಂತೆ ದೇವ! ಸಹಿಸಿಕೊಳ್ಳಬೇಕು.
06033045a ಅದೃಷ್ಟಪೂರ್ವಂ ಹೃಷಿತೋಽಸ್ಮಿ ದೃಷ್ಟ್ವಾ
ಭಯೇನ ಚ ಪ್ರವ್ಯಥಿತಂ ಮನೋ ಮೇ|
06033045c ತದೇವ ಮೇ ದರ್ಶಯ ದೇವ ರೂಪಂ
ಪ್ರಸೀದ ದೇವೇಶ ಜಗನ್ನಿವಾಸ||
ಹಿಂದೆ ಎಂದೂ ನೋಡಿರದುದನ್ನು ಕಂಡು ಹರ್ಷಿತನಾಗಿದ್ದೇನೆ. ಮತ್ತು ಭಯದಿಂದ ನನ್ನ ಮನಸ್ಸು ತುಂಬಾ ವ್ಯಥಿತಗೊಂಡಿದೆ. ದೇವ! ನನಗೆ ಅದೇ ರೂಪವನ್ನು ತೋರಿಸು. ದೇವೇಶ! ಜಗನ್ನಿವಾಸ! ಪ್ರಸನ್ನನಾಗು!
06033046a ಕಿರೀಟಿನಂ ಗದಿನಂ ಚಕ್ರಹಸ್ತಂ
ಇಚ್ಛಾಮಿ ತ್ವಾಂ ದ್ರಷ್ಟುಮಹಂ ತಥೈವ|
06033046c ತೇನೈವ ರೂಪೇಣ ಚತುರ್ಭುಜೇನ
ಸಹಸ್ರಬಾಹೋ ಭವ ವಿಶ್ವಮೂರ್ತೇ||
ಕಿರೀಟಿಯೂ, ಗದಿಯೂ, ಚಕ್ರವನ್ನು ಹಿಡಿದಿರುವವನೂ ಆಗಿದ್ದ ಅದೇ ನಿನ್ನನ್ನು ನೋಡಲು ಬಯಸುತ್ತೇನೆ. ಸಹಸ್ರಬಾಹೋ! ವಿಶ್ವಮೂರ್ತೇ! ಅದೇ ಚತುರ್ಭುಜಗಳ ರೂಪದಿಂದ ತೋರು!”
06033047 ಶ್ರೀಭಗವಾನುವಾಚ|
06033047a ಮಯಾ ಪ್ರಸನ್ನೇನ ತವಾರ್ಜುನೇದಂ
ರೂಪಂ ಪರಂ ದರ್ಶಿತಮಾತ್ಮಯೋಗಾತ್|
06033047c ತೇಜೋಮಯಂ ವಿಶ್ವಮನಂತಮಾದ್ಯಂ
ಯನ್ಮೇ ತ್ವದನ್ಯೇನ ನ ದೃಷ್ಟಪೂರ್ವಂ||
ಶ್ರೀಭಗವಾನನು ಹೇಳಿದನು: “ಅರ್ಜುನ! ನಾನು ನಿನ್ನ ಮೇಲೆ ಪ್ರಸನ್ನನಾಗಿರುವುದರಿಂದ ನಿನಗೆ ನಾನು ತೇಜೋಮಯವೂ, ವಿಶ್ವವೂ, ಅನಂತವೂ, ಆದಿಯಲ್ಲಿರುವುದೂ ಆದ ಈ ಪರಮ ರೂಪವನ್ನು ಆತ್ಮಯೋಗದಿಂದ ತೋರಿಸಿದೆ. ಇದಕ್ಕೂ ಮೊದಲು ನೀನಲ್ಲದೇ ಬೇರೆ ಯಾರೂ ನನ್ನನ್ನು ಹೀಗೆ ಕಂಡದ್ದಿಲ್ಲ.
06033048a ನ ವೇದಯಜ್ಞಾಧ್ಯಯನೈರ್ನ ದಾನೈರ್
ನ ಚ ಕ್ರಿಯಾಭಿರ್ನ ತಪೋಭಿರುಗ್ರೈಃ|
06033048c ಏವಂರೂಪಃ ಶಕ್ಯ ಅಹಂ ನೃಲೋಕೇ
ದ್ರಷ್ಟುಂ ತ್ವದನ್ಯೇನ ಕುರುಪ್ರವೀರ||
ಕುರುಪ್ರವೀರ! ವೇದ, ಯಜ್ಞ, ಅಧ್ಯಯನ, ದಾನಗಳಿಂದಾಗಲೀ ಕ್ರಿಯೆಗಳಿಂದಾಗಲೀ, ಉಗ್ರ ತಪಸ್ಸುಗಳಿಂದಾಗಲೀ ನನ್ನ ಈ ರೂಪವನ್ನು ನರಲೋಕದಲ್ಲಿ ನಿನ್ನ ಹೊರತು ಮತ್ತೊಬ್ಬನಿಂದ ನೋಡಲು ಶಕ್ಯವಿಲ್ಲ.
06033049a ಮಾ ತೇ ವ್ಯಥಾ ಮಾ ಚ ವಿಮೂಢಭಾವೋ
ದೃಷ್ಟ್ವಾ ರೂಪಂ ಘೋರಮೀದೃಙ್ಮಮೇದಂ|
06033049c ವ್ಯಪೇತಭೀಃ ಪ್ರೀತಮನಾಃ ಪುನಸ್ತ್ವಂ
ತದೇವ ಮೇ ರೂಪಮಿದಂ ಪ್ರಪಶ್ಯ||
ನನ್ನ ಈ ಘೋರ ರೂಪವನ್ನು ಕಂಡು ನಿನಗೆ ವ್ಯಥೆಯಾಗದಿರಲಿ. ವಿಮೂಢಭಾವವೂ ಆಗದಿರಲಿ. ಭಯವನ್ನು ಕಳೆದುಕೊಂಡು ಪುನಃ ನೀನು ಪ್ರೀತಮನಸ್ಕನಾಗು. ನನ್ನ ಅದೇ ರೂಪವನ್ನು ಇಗೋ ನೋಡು!””
06033050 ಸಂಜಯ ಉವಾಚ|
06033050a ಇತ್ಯರ್ಜುನಂ ವಾಸುದೇವಸ್ತಥೋಕ್ತ್ವಾ
ಸ್ವಕಂ ರೂಪಂ ದರ್ಶಯಾಮಾಸ ಭೂಯಃ|
06033050c ಆಶ್ವಾಸಯಾಮಾಸ ಚ ಭೀತಮೇನಂ
ಭೂತ್ವಾ ಪುನಃ ಸೌಮ್ಯವಪುರ್ಮಹಾತ್ಮಾ||
ಸಂಜಯನು ಹೇಳಿದನು: “ಅರ್ಜುನನಿಗೆ ಹೀಗೆ ಹೇಳಿ ವಾಸುದೇವನು ಮತ್ತೆ ತನ್ನ ಮೊದಲಿನ ರೂಪವನ್ನೇ ತೋರಿಸಿದನು. ಪುನಃ ಸೌಮ್ಯರೂಪವನ್ನು ತಳೆದ ಆ ಮಹಾತ್ಮನು ಭೀತನಾಗಿದ್ದ ಅರ್ಜುನನನ್ನು ಸಂತವಿಸಿದನು.
06033051 ಅರ್ಜುನ ಉವಾಚ|
06033051a ದೃಷ್ಟ್ವೇದಂ ಮಾನುಷಂ ರೂಪಂ ತವ ಸೌಮ್ಯಂ ಜನಾರ್ದನ|
06033051c ಇದಾನೀಮಸ್ಮಿ ಸಂವೃತ್ತಃ ಸಚೇತಾಃ ಪ್ರಕೃತಿಂ ಗತಃ||
ಅರ್ಜುನನು ಹೇಳಿದನು: “ಜನಾರ್ದನ! ಸೌಮ್ಯವಾದ ನಿನ್ನ ಈ ಮಾನುಷರೂಪವನ್ನು ನೋಡಿ ಈಗ ಸಚೇತನಗೊಂಡು ಸ್ವಭಾವವನ್ನು ಹಿಂದೆ ಪಡೆದಿದ್ದೇನೆ.”
06033052 ಶ್ರೀಭಗವಾನುವಾಚ|
06033052a ಸುದುರ್ದರ್ಶಮಿದಂ ರೂಪಂ ದೃಷ್ಟವಾನಸಿ ಯನ್ಮಮ|
06033052c ದೇವಾ ಅಪ್ಯಸ್ಯ ರೂಪಸ್ಯ ನಿತ್ಯಂ ದರ್ಶನಕಾಮ್ಕ್ಷಿಣಃ||
ಶ್ರೀಭಗವಾನನು ಹೇಳಿದನು: “ದೊರೆಯಲು ತುಂಬಾ ಕಷ್ಟವಾದ ಆದರೆ ನೀನು ನೋಡಿದ ನನ್ನ ಈ ರೂಪವನ್ನು ನೋಡಲು ದೇವತೆಗಳೂ ಕೂಡ ನಿತ್ಯವೂ ಬಯಸುತ್ತಿರುತ್ತಾರೆ.
06033053a ನಾಹಂ ವೇದೈರ್ನ ತಪಸಾ ನ ದಾನೇನ ನ ಚೇಜ್ಯಯಾ|
06033053c ಶಕ್ಯ ಏವಂವಿಧೋ ದ್ರಷ್ಟುಂ ದೃಷ್ಟವಾನಸಿ ಮಾಂ ಯಥಾ||
ನೀನು ಹೇಗೆ ನನ್ನನ್ನು ನೋಡಿದೆಯೋ ಹಾಗೆ ನೋಡಲು ವೇದಗಳಿಂದ ಸಾಧ್ಯವಿಲ್ಲ. ತಪಸ್ಸಿನಿಂದ ಆಗುವುದಿಲ್ಲ. ದಾನಗಳಿಂದ ಮತ್ತು ಇಜ್ಯಗಳಿಂದ ಆಗುವುದಿಲ್ಲ.
06033054a ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂವಿಧೋಽರ್ಜುನ|
06033054c ಜ್ಞಾತುಂ ದ್ರಷ್ಟುಂ ಚ ತತ್ತ್ವೇನ ಪ್ರವೇಷ್ಟುಂ ಚ ಪರಂತಪ||
ಅರ್ಜುನ! ಪರಂತಪ! ಅನನ್ಯ ಭಕ್ತಿಯಿಂದ ಈ ವಿಧದ ನನ್ನನ್ನು ಇದ್ದಹಾಗೆ ತಿಳಿದುಕೊಳ್ಳಲು ಮತ್ತು ನೋಡಲು ಸಾಧ್ಯ.
06033055a ಮತ್ಕರ್ಮಕೃನ್ಮತ್ಪರಮೋ ಮದ್ಭಕ್ತಃ ಸಂಗವರ್ಜಿತಃ|
06033055c ನಿರ್ವೈರಃ ಸರ್ವಭೂತೇಷು ಯಃ ಸ ಮಾಮೇತಿ ಪಾಂಡವ||
ಪಾಂಡವ! ನನಗಾಗಿಯೇ ಮಾಡುವವನು, ನಾನೇ ಪರಮಗತಿಯೆಂದು ತಿಳಿದುಕೊಂಡಿರುವವನು, ನನ್ನ ಭಕ್ತನು, ಸಂಗವರ್ಜಿತನಾಗಿ, ಸರ್ವಭೂತಗಳಲ್ಲಿ ನಿರ್ವೈರನಾಗಿರುವವನು ನನ್ನನ್ನೇ ಸೇರುತ್ತಾನೆ.”
ಇತಿ ಶ್ರೀ ಮಹಾಭಾರತೇ ಭೀಷ್ಮಪರ್ವಣಿ ಭಗವದ್ಗೀತಾಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ವಿಶ್ವರೂಪದರ್ಶನಯೋಗೋ ನಾಮ ಏಕಾದಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮಪರ್ವದಲ್ಲಿ ಭಗವದ್ಗೀತಾಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ವಿಶ್ವರೂಪದರ್ಶನಯೋಗವೆಂಬ ಹನ್ನೊಂದನೇ ಅಧ್ಯಾಯವು.
ಭೀಷ್ಮಪರ್ವಣಿ ತ್ರಯಸ್ತ್ರಿಂಶೋಽಧ್ಯಾಯಃ||
ಭೀಷ್ಮಪರ್ವದಲ್ಲಿ ಮೂವತ್ಮೂರನೇ ಅಧ್ಯಾಯವು.