Drona Parva: Chapter 171

ದ್ರೋಣ ಪರ್ವ: ನಾರಾಯಣಾಸ್ತ್ರಮೋಕ್ಷ ಪರ್ವ

೧೭೧

ಅಶ್ವತ್ಥಾಮ ಪರಾಕ್ರಮ

ಕೃಷ್ಣಾರ್ಜುನರು ಭೀಮನನ್ನು ಅವರ ರಥದಿಂದ ಎಳೆದು ಭೂಮಿಯ ಮೇಲೆ ಕೆಡವಿದುದು; ನಾರಾಯಣಾಸ್ತ್ರವು ಪ್ರಶಮನಗೊಂಡಿದುದು (೧-೨೨). ಆ ನಾರಾಯಣಾಸ್ತ್ರವನ್ನು ಇನ್ನೊಮ್ಮೆ ಪ್ರಯೋಗಿಸಬೇಕೆಂದು ದುರ್ಯೋಧನನು ಕೇಳಿಕೊಳ್ಳಲು ಅಶ್ವತ್ಥಾಮನು ನಿರಾಕರಿಸಿದುದು (೨೩-೩೧). ಅಶ್ವತ್ಥಾಮ-ಧೃಷ್ಟದ್ಯುಮ್ನರ ಯುದ್ಧ (೩೨-೪೪). ಸಾತ್ಯಕಿ-ಅಶ್ವತ್ಥಾಮರ ಯುದ್ಧ (೪೫-೫೨). ಅಶ್ವತ್ಥಾಮನ ಪರಾಕ್ರಮ; ಪಾಂಡುಸೇನೆಯ ಪಲಾಯನ (೫೩-೬೯).

07171001 ಸಂಜಯ ಉವಾಚ|

07171001a ಭೀಮಸೇನಂ ಸಮಾಕೀರ್ಣಂ ದೃಷ್ಟ್ವಾಸ್ತ್ರೇಣ ಧನಂಜಯಃ|

07171001c ತೇಜಸಃ ಪ್ರತಿಘಾತಾರ್ಥಂ ವಾರುಣೇನ ಸಮಾವೃಣೋತ್||

ಸಂಜಯನು ಹೇಳಿದನು: “ಆ ಅಸ್ತ್ರದಿಂದ ಭೀಮಸೇನನು ಮುಚ್ಚಿಹೋಗಿರುವುದನ್ನು ನೋಡಿ ಧನಂಜಯನು ತೇಜಸ್ಸನ್ನು ನಾಶಗೊಳಿಸಲು ವಾರುಣಾಸ್ತ್ರದಿಂದ ಅದನ್ನು ಎಲ್ಲ ಕಡೆಗಳಿಂದ ಮುಚ್ಚಿದನು.

07171002a ನಾಲಕ್ಷಯತ ತಂ ಕಶ್ಚಿದ್ವಾರುಣಾಸ್ತ್ರೇಣ ಸಂವೃತಂ|

07171002c ಅರ್ಜುನಸ್ಯ ಲಘುತ್ವಾಚ್ಚ ಸಂವೃತತ್ವಾಚ್ಚ ತೇಜಸಃ||

ಅರ್ಜುನನ ಹಸ್ತಲಾಘವದಿಂದ ಮತ್ತು ಸುತ್ತುವರೆದಿದ್ದ ಆ ತೇಜಸ್ಸಿನಿಂದಾಗಿ ಭೀಮಸೇನನು ವಾರುಣಾಸ್ತ್ರದಿಂದ ಸುತ್ತುವರೆಯಲ್ಪಟ್ಟಿದ್ದುದನ್ನು ಯಾರೂ ಗಮನಿಸಲಿಲ್ಲ.

07171003a ಸಾಶ್ವಸೂತರಥೋ ಭೀಮೋ ದ್ರೋಣಪುತ್ರಾಸ್ತ್ರಸಂವೃತಃ|

07171003c ಅಗ್ನಾವಗ್ನಿರಿವ ನ್ಯಸ್ತೋ ಜ್ವಾಲಾಮಾಲೀ ಸುದುರ್ದೃಶಃ||

ರಥ-ಅಶ್ವ-ಸೂತನೊಡನೆ ದ್ರೋಣಪುತ್ರನ ಅಸ್ತ್ರದಿಂದ ಸಂವೃತನಾಗಿದ್ದ ಭೀಮನು ಧಗಧಗಿಸುತ್ತಿರುವ ಅಗ್ನಿಯೊಳಗೆ ಇಟ್ಟಿರುವ ಇನ್ನೊಂದು ಅಗ್ನಿಯಂತೆಯೇ ಪ್ರಕಾಶಿಸಿದನು.

07171004a ಯಥಾ ರಾತ್ರಿಕ್ಷಯೇ ರಾಜಂ ಜ್ಯೋತೀಂಷ್ಯಸ್ತಗಿರಿಂ ಪ್ರತಿ|

07171004c ಸಮಾಪೇತುಸ್ತಥಾ ಬಾಣಾ ಭೀಮಸೇನರಥಂ ಪ್ರತಿ||

ರಾಜನ್! ರಾತ್ರಿಯು ಕಳೆಯಲು ನಕ್ಷತ್ರಗಳು ಅಸ್ತಗಿರಿಯ ಕಡೆ ಹೋಗುವಂತೆ ಆ ಬಾಣಗಳು ಭೀಮಸೇನನ ರಥದ ಮೇಲೆಯೇ ಬೀಳುತ್ತಿದ್ದವು.

07171005a ಸ ಹಿ ಭೀಮೋ ರಥಶ್ಚಾಸ್ಯ ಹಯಾಃ ಸೂತಶ್ಚ ಮಾರಿಷ|

07171005c ಸಂವೃತಾ ದ್ರೋಣಪುತ್ರೇಣ ಪಾವಕಾಂತರ್ಗತಾಭವನ್||

ಮಾರಿಷ! ದ್ರೋಣಪುತ್ರನ ಅಸ್ತ್ರದಿಂದ ಆವೃತರಾದ ಭೀಮ, ಅವನ ರಥ, ಕುದುರೆ ಮತ್ತು ಸಾರಥಿಗಳು, ಬೆಂಕಿಯ ಅಂತರ್ಗತರಾದರು.

07171006a ಯಥಾ ದಗ್ಧ್ವಾ ಜಗತ್ ಕೃತ್ಸ್ನಂ ಸಮಯೇ ಸಚರಾಚರಂ|

07171006c ಗಚ್ಚೇದಗ್ನಿರ್ವಿಭೋರಾಸ್ಯಂ ತಥಾಸ್ತ್ರಂ ಭೀಮಮಾವೃಣೋತ್||

ಸಮಯದಲ್ಲಿ ಸಚರಾಚರ ಜಗತ್ತೆಲ್ಲವನ್ನೂ ಭಸ್ಮಮಾಡಿ ಅಗ್ನಿಯು ವಿಭುವಿನ ಮುಖವನ್ನು ಪ್ರವೇಶಿಸುವಂತೆ ಆ ಅಸ್ತ್ರವು ಭೀಮನನ್ನು ಆವರಿಸಿತು.

07171007a ಸೂರ್ಯಮಗ್ನಿಃ ಪ್ರವಿಷ್ಟಃ ಸ್ಯಾದ್ಯಥಾ ಚಾಗ್ನಿಂ ದಿವಾಕರಃ|

07171007c ತಥಾ ಪ್ರವಿಷ್ಟಂ ತತ್ತೇಜೋ ನ ಪ್ರಾಜ್ಞಾಯತ ಕಿಂ ಚನ||

ಸೂರ್ಯನು ಅಗ್ನಿಯನ್ನು ಮತ್ತು ಅಗ್ನಿಯು ದಿವಾಕರನನ್ನು ಪ್ರವೇಶಿಸುವಂತೆ ಆ ತೇಜಸ್ಸು ಭೀಮನನ್ನು ಪ್ರವೇಶಿಸಲು ಅವನು ಎಲ್ಲಿರುವನೆಂದೇ ಯಾರಿಗೂ ತಿಳಿಯದಾಯಿತು.

07171008a ವಿಕೀರ್ಣಮಸ್ತ್ರಂ ತದ್ದೃಷ್ಟ್ವಾ ತಥಾ ಭೀಮರಥಂ ಪ್ರತಿ|

07171008c ಉದೀರ್ಯಮಾಣಂ ದ್ರೌಣಿಂ ಚ ನಿಷ್ಪ್ರತಿದ್ವಂದ್ವಮಾಹವೇ||

ಆ ಅಸ್ತ್ರವು ಭೀಮನ ರಥವನ್ನು ಆವರಿಸಿದುದನ್ನು ನೋಡಿ, ತನಗೆ ಎದುರಾಳಿಗಳ್ಯಾರೂ ಇಲ್ಲವೆಂದು ದ್ರೌಣಿಯ ಬಲವು ಇನ್ನೂ ಉಲ್ಬಣಗೊಂಡಿತು.

07171009a ಸರ್ವಸೈನ್ಯಾನಿ ಪಾಂಡೂನಾಂ ನ್ಯಸ್ತಶಸ್ತ್ರಾಣ್ಯಚೇತಸಃ|

07171009c ಯುಧಿಷ್ಠಿರಪುರೋಗಾಂಶ್ಚ ವಿಮುಖಾಂಸ್ತಾನ್ಮಹಾರಥಾನ್||

ಪಾಂಡವರ ಸರ್ವಸೇನೆಗಳೂ ಅಸ್ತ್ರಗಳನ್ನು ಕೆಳಗಿಟ್ಟು ಮೂಢರಂತಾಗಿದ್ದರು. ಯುಧಿಷ್ಠಿರನೇ ಮೊದಲಾದ ಮಹಾರಥರು ಯುದ್ಧದಿಂದ ವಿಮುಖರಾಗಿದ್ದರು.

07171010a ಅರ್ಜುನೋ ವಾಸುದೇವಶ್ಚ ತ್ವರಮಾಣೌ ಮಹಾದ್ಯುತೀ|

07171010c ಅವಪ್ಲುತ್ಯ ರಥಾದ್ವೀರೌ ಭೀಮಮಾದ್ರವತಾಂ ತತಃ||

ಆಗ ವೀರ ಅರ್ಜುನ ಮತ್ತು ಮಹಾದ್ಯುತಿ ವಾಸುದೇವರು ತ್ವರೆಮಾಡಿ ರಥದಿಂದ ಕೆಳಕ್ಕೆ ಹಾರಿ ಭೀಮನಿದ್ದಲ್ಲಿಗೆ ಓಡಿದರು.

07171011a ತತಸ್ತದ್ದ್ರೋಣಪುತ್ರಸ್ಯ ತೇಜೋಽಸ್ತ್ರಬಲಸಂಭವಂ|

07171011c ವಿಗಾಹ್ಯ ತೌ ಸುಬಲಿನೌ ಮಾಯಯಾವಿಶತಾಂ ತದಾ||

ಆ ಮಹಾಬಲಿಗಳಿಬ್ಬರೂ ದ್ರೋಣಪುತ್ರನ ಅಸ್ತ್ರಬಲದಿಂದ ಹುಟ್ಟಿದ್ದ ತೇಜಸ್ಸನ್ನು ಮಾಯೆಯಿಂದ ಪ್ರವೇಶಿಸಿ ಭೀಮನ ಬಳಿ ಬಂದರು.

07171012a ನ್ಯಸ್ತಶಸ್ತ್ರೌ ತತಸ್ತೌ ತು ನಾದಹದಸ್ತ್ರಜೋಽನಲಃ|

07171012c ವಾರುಣಾಸ್ತ್ರಪ್ರಯೋಗಾಚ್ಚ ವೀರ್ಯವತ್ತ್ವಾಚ್ಚ ಕೃಷ್ಣಯೋಃ||

ಆ ಅಸ್ತ್ರದಿಂದ ಹುಟ್ಟಿದ್ದ ಅಗ್ನಿಯು ಅಸ್ತ್ರಗಳನ್ನು ಕೆಳಗಿಟ್ಟಿದುದರಿಂದ ಮತ್ತು ವಾರುಣಾಸ್ತ್ರಪ್ರಯೋಗದಿಂದ ಆ ವೀರ್ಯವಂತ ಕೃಷ್ಣರಿಬ್ಬರನ್ನೂ ಪೀಡಿಸಲಿಲ್ಲ.

07171013a ತತಶ್ಚಕೃಷತುರ್ಭೀಮಂ ತಸ್ಯ ಸರ್ವಾಯುಧಾನಿ ಚ|

07171013c ನಾರಾಯಣಾಸ್ತ್ರಶಾಂತ್ಯರ್ಥಂ ನರನಾರಾಯಣೌ ಬಲಾತ್||

ಆಗ ನಾರಾಯಣಾಸ್ತ್ರವನ್ನು ಶಾಂತಗೊಳಿಸಲೋಸುಗ ಆ ನರನಾರಾಯಣರು ಬಲವನ್ನುಪಯೋಗಿಸಿ ಭೀಮನನ್ನೂ ಅವನ ಸರ್ವ ಆಯುಧಗಳನ್ನೂ ಎಳೆದು ಕೆಳಗಿಳಿಸಿದರು.

07171014a ಅಪಕೃಷ್ಯಮಾಣಃ ಕೌಂತೇಯೋ ನದತ್ಯೇವ ಮಹಾರಥಃ|

07171014c ವರ್ಧತೇ ಚೈವ ತದ್ಘೋರಂ ದ್ರೌಣೇರಸ್ತ್ರಂ ಸುದುರ್ಜಯಂ||

ಕೆಳಗೆ ಎಳೆಯಲ್ಪಡುತ್ತಿರುವಾಗಲೂ ಕೂಡ ಮಹಾರಥ ಕೌಂತೇಯನು ಗರ್ಜಿಸುತ್ತಿರಲು ದ್ರೌಣಿಯ ಆ ದುರ್ಜಯ ಘೋರ ಅಸ್ತ್ರವು ಹೆಚ್ಚುತ್ತಲೇ ಇತ್ತು.

07171015a ತಮಬ್ರವೀದ್ವಾಸುದೇವಃ ಕಿಮಿದಂ ಪಾಂಡುನಂದನ|

07171015c ವಾರ್ಯಮಾಣೋಽಪಿ ಕೌಂತೇಯ ಯದ್ಯುದ್ಧಾನ್ನ ನಿವರ್ತಸೇ||

ಆಗ ವಾಸುದೇವನು ಅವನಿಗೆ ಹೇಳಿದನು: ಇದೇನಿದು ಪಾಂಡುನಂದನ! ಕೌಂತೇಯ! ತಡೆಹಿಡಿದರೂ ನೀನು ಯುದ್ಧಮಾಡುವುದನ್ನು ನಿಲ್ಲಿಸುತ್ತಿಲ್ಲ!

07171016a ಯದಿ ಯುದ್ಧೇನ ಜೇಯಾಃ ಸ್ಯುರಿಮೇ ಕೌರವನಂದನಾಃ|

07171016c ವಯಮಪ್ಯತ್ರ ಯುಧ್ಯೇಮ ತಥಾ ಚೇಮೇ ನರರ್ಷಭಾಃ||

ಒಂದುವೇಳೆ ಈ ಸಮಯದಲ್ಲಿ ಕೌರವನಂದನರನ್ನು ಜಯಿಸುವಂತಿದ್ದರೆ ನಾವಿಬ್ಬರು ಕೂಡ ಯುದ್ಧಮಾಡುತ್ತಿದ್ದೆವು. ಈ ನರರ್ಷಭರೂ ಕೂಡ ಯುದ್ಧಮಾಡುತ್ತಿದ್ದರು.

07171017a ರಥೇಭ್ಯಸ್ತ್ವವತೀರ್ಣಾಸ್ತು ಸರ್ವ ಏವ ಸ್ಮ ತಾವಕಾಃ|

07171017c ತಸ್ಮಾತ್ತ್ವಮಪಿ ಕೌಂತೇಯ ರಥಾತ್ತೂರ್ಣಮಪಾಕ್ರಮ||

ನಿನ್ನವರೆಲ್ಲರೂ ರಥದಿಂದ ಕೆಳಗಿಳಿದಿದ್ದಾರೆ. ಕೌಂತೇಯ! ನೀನೂ ಕೂಡ ಪರಾಕ್ರಮವನ್ನು ತೋರಿಸದೇ ಬೇಗನೇ ರಥದಿಂದ ಕೆಳಗಿಳಿ!”

07171018a ಏವಮುಕ್ತ್ವಾ ತತಃ ಕೃಷ್ಣೋ ರಥಾದ್ಭೂಮಿಮಪಾತಯತ್|

07171018c ನಿಃಶ್ವಸಂತಂ ಯಥಾ ನಾಗಂ ಕ್ರೋಧಸಂರಕ್ತಲೋಚನಂ||

ಹೀಗೆ ಹೇಳಿ ಕೃಷ್ಣನು ಕ್ರೋಧದಿಂದ ಸಂರಕ್ತಲೋಚನನಾಗಿ ಸರ್ಪದಂತೆ ಭುಸುಗುಟ್ಟುತ್ತಿದ್ದ ಭೀಮನನ್ನು ರಥದಿಂದ ನೆಲಕ್ಕೆ ಕೆಡವಿದನು.

07171019a ಯದಾಪಕೃಷ್ಟಃ ಸ ರಥಾನ್ನ್ಯಾಸಿತಶ್ಚಾಯುಧಂ ಭುವಿ|

07171019c ತತೋ ನಾರಾಯಣಾಸ್ತ್ರಂ ತತ್ಪ್ರಶಾಂತಂ ಶತ್ರುತಾಪನಂ||

ಯಾವಾಗ ಅವನನ್ನು ಕೆಳಕ್ಕೆ ಎಳೆದರೋ ಮತ್ತು ಆಯುಧಗಳನ್ನು ನೆಲದಮೇಲಿಟ್ಟರೋ ಆಗ ಶತ್ರುಗಳನ್ನು ಸುಡುತ್ತಿದ್ದ ಆ ನಾರಾಯಣಾಸ್ತ್ರವು ಪ್ರಶಾಂತಗೊಂಡಿತು.

07171020a ತಸ್ಮಿನ್ಪ್ರಶಾಂತೇ ವಿಧಿನಾ ತದಾ ತೇಜಸಿ ದುಃಸ್ಸಹೇ|

07171020c ಬಭೂವುರ್ವಿಮಲಾಃ ಸರ್ವಾ ದಿಶಃ ಪ್ರದಿಶ ಏವ ಚ||

ವಿಧಿವತ್ತಾಗಿ ದುಃಸ್ಸಹವಾಗಿದ್ದ ಆ ತೇಜಸ್ಸು ಪ್ರಶಾಂತಗೊಳ್ಳಲು ಸರ್ವ ದಿಕ್ಕುಗಳೂ ಉಪದಿಕ್ಕುಗಳೂ ಶುಭ್ರವಾದವು.

07171021a ಪ್ರವವುಶ್ಚ ಶಿವಾ ವಾತಾಃ ಪ್ರಶಾಂತಾ ಮೃಗಪಕ್ಷಿಣಃ|

07171021c ವಾಹನಾನಿ ಚ ಹೃಷ್ಟಾನಿ ಯೋಧಾಶ್ಚ ಮನುಜೇಶ್ವರ||

ಮನುಜೇಶ್ವರ! ಸುಮಂಗಲ ಗಾಳಿಯು ಬೀಸತೊಡಗಿತು. ಮೃಗಪಕ್ಷಿಗಳು ಶಾಂತಗೊಂಡವು. ವಾಹನಗಳು ಮತು ಯೋಧರು ಪ್ರಹೃಷ್ಟಗೊಂಡರು.

07171022a ವ್ಯಪೋಢೇ ಚ ತತೋ ಘೋರೇ ತಸ್ಮಿಂಸ್ತೇಜಸಿ ಭಾರತ|

07171022c ಬಭೌ ಭೀಮೋ ನಿಶಾಪಾಯೇ ಧೀಮಾನ್ಸೂರ್ಯ ಇವೋದಿತಃ||

ಭಾರತ! ಆ ಅಸ್ತ್ರದ ಘೋರ ತೇಜಸ್ಸು ಹೊರಟುಹೋಗಲು ಧೀಮಾನ್ ಭೀಮನು ರಾತ್ರಿಯು ಕಳೆದನಂತರ ಉದಿಸುತ್ತಿರುವ ಸೂರ್ಯನಂತೆ ಪ್ರಕಾಶಿಸಿದನು.

07171023a ಹತಶೇಷಂ ಬಲಂ ತತ್ರ ಪಾಂಡವಾನಾಮತಿಷ್ಠತ|

07171023c ಅಸ್ತ್ರವ್ಯುಪರಮಾದ್ಧೃಷ್ಟಂ ತವ ಪುತ್ರಜಿಘಾಂಸಯಾ||

ಅಸ್ತ್ರವು ಶಾಂತವಾದುದನ್ನು ನೋಡಿ ಅಳಿದುಳಿದ ಪಾಂಡವ ಸೇನೆಯು ಸಂತೋಷಗೊಂಡು ನಿನ್ನ ಪುತ್ರನನ್ನು ಸಂಹರಿಸಲು ಬಯಸಿ ಪುನಃ ಯುದ್ಧಸನ್ನದ್ಧವಾಯಿತು.

07171024a ವ್ಯವಸ್ಥಿತೇ ಬಲೇ ತಸ್ಮಿನ್ನಸ್ತ್ರೇ ಪ್ರತಿಹತೇ ತಥಾ|

07171024c ದುರ್ಯೋಧನೋ ಮಹಾರಾಜ ದ್ರೋಣಪುತ್ರಮಥಾಬ್ರವೀತ್||

ಮಹಾರಾಜ! ಆ ಅಸ್ತ್ರದಿಂದ ಹತಗೊಳ್ಳದೇ ವ್ಯವಸ್ಥಿತವಾಗಿ ನಿಂತಿದ್ದ ಆ ಸೇನೆಯನ್ನು ನೋಡಿ ದುರ್ಯೋಧನನು ದ್ರೋಣಪುತ್ರನಿಗೆ ಹೇಳಿದನು:

07171025a ಅಶ್ವತ್ಥಾಮನ್ಪುನಃ ಶೀಘ್ರಮಸ್ತ್ರಮೇತತ್ಪ್ರಯೋಜಯ|

07171025c ವ್ಯವಸ್ಥಿತಾ ಹಿ ಪಾಂಚಾಲಾಃ ಪುನರೇವ ಜಯೈಷಿಣಃ||

“ಅಶ್ವತ್ಥಾಮ! ಶೀಘ್ರದಲ್ಲಿಯೇ ಪುನಃ ಆ ಅಸ್ತ್ರವನ್ನು ಪ್ರಯೋಗಿಸು! ಜಯೈಷಿ ಪಾಂಚಾಲರು ಪುನಃ ಯುದ್ಧಕ್ಕೆ ಸಿದ್ಧರಾಗಿದ್ದಾರೆ!”

07171026a ಅಶ್ವತ್ಥಾಮಾ ತಥೋಕ್ತಸ್ತು ತವ ಪುತ್ರೇಣ ಮಾರಿಷ|

07171026c ಸುದೀನಮಭಿನಿಃಶ್ವಸ್ಯ ರಾಜಾನಮಿದಮಬ್ರವೀತ್||

ಮಾರಿಷ! ನಿನ್ನ ಪುತ್ರನು ಹಾಗೆ ಹೇಳಲು ಅಶ್ವತ್ಥಾಮನು ದೀನನಾಗಿ ನಿಟ್ಟುಸಿರುಬಿಡುತ್ತಾ ರಾಜನಿಗೆ ಈ ಮಾತನ್ನಾಡಿದನು:

07171027a ನೈತದಾವರ್ತತೇ ರಾಜನ್ನಸ್ತ್ರಂ ದ್ವಿರ್ನೋಪಪದ್ಯತೇ|

07171027c ಆವರ್ತಯನ್ನಿಹಂತ್ಯೇತತ್ಪ್ರಯೋಕ್ತಾರಂ ನ ಸಂಶಯಃ||

“ರಾಜನ್! ಈ ಅಸ್ತ್ರವನ್ನು ಮರುಕಳಿಸಲಾಗುವುದಿಲ್ಲ. ಎರಡನೆಯ ಬಾರಿ ಪ್ರಯೋಗಿಸಲಿಕ್ಕಾಗುವುದಿಲ್ಲ. ಪುನಃ ಪ್ರಯೋಗಿಸಿದ್ದಾದರೆ ಪ್ರಯೋಗಿಸಿದವನನ್ನೇ ಅದು ಸಂಹರಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

07171028a ಏಷ ಚಾಸ್ತ್ರಪ್ರತೀಘಾತಂ ವಾಸುದೇವಃ ಪ್ರಯುಕ್ತವಾನ್|

07171028c ಅನ್ಯಥಾ ವಿಹಿತಃ ಸಂಖ್ಯೇ ವಧಃ ಶತ್ರೋರ್ಜನಾಧಿಪ||

ಈ ಅಸ್ತ್ರದ ನಿವಾರಣೋಪಾಯವನ್ನು ಕೃಷ್ಣನೇ ತಿಳಿಸಿದನು. ಜನಾಧಿಪ! ಅನ್ಯಥಾ ಯುದ್ಧದಲ್ಲಿ ಶತ್ರುಗಳ ವಧೆಯು ನಿಶ್ಚಿತವಾಗಿದ್ದಿತು.

07171029a ಪರಾಜಯೋ ವಾ ಮೃತ್ಯುರ್ವಾ ಶ್ರೇಯೋ ಮೃತ್ಯುರ್ನ ನಿರ್ಜಯಃ|

07171029c ನಿರ್ಜಿತಾಶ್ಚಾರಯೋ ಹ್ಯೇತೇ ಶಸ್ತ್ರೋತ್ಸರ್ಗಾನ್ಮೃತೋಪಮಾಃ||

ಪರಾಜಯ ಮತ್ತು ಮೃತ್ಯುಗಳ ನಡುವೆ ಮೃತ್ಯುವೇ ಶ್ರೇಯಸ್ಕರವಾದುದು. ಸೋಲಲ್ಲ. ಶಸ್ತ್ರಗಳನ್ನು ಕೆಳಗಿಟ್ಟಿರುವ ಇವರೆಲ್ಲರೂ ಮೃತ್ಯುಸಮ ಸೋಲನ್ನೇ ಹೊಂದಿದ್ದಾರೆ.”

07171030 ದುರ್ಯೋಧನ ಉವಾಚ|

07171030a ಆಚಾರ್ಯಪುತ್ರ ಯದ್ಯೇತದ್ದ್ವಿರಸ್ತ್ರಂ ನ ಪ್ರಯುಜ್ಯತೇ|

07171030c ಅನ್ಯೈರ್ಗುರುಘ್ನಾ ವಧ್ಯಂತಾಮಸ್ತ್ರೈರಸ್ತ್ರವಿದಾಂ ವರ||

ದುರ್ಯೋಧನನು ಹೇಳಿದನು: “ಆಚಾರ್ಯಪುತ್ರ! ಅಸ್ತ್ರವಿದರಲ್ಲಿ ಶ್ರೇಷ್ಠ! ಈ ಅಸ್ತ್ರವನ್ನು ಎರಡನೆಯ ಬಾರಿ ಬಳಸಲಿಕ್ಕಾಗುವುದಿಲ್ಲವಾದರೆ ನಿನ್ನಲ್ಲಿರುವ ಅನ್ಯ ಅಸ್ತ್ರಗಳಿಂದ ಈ ಗುರುಘಾತಿಗಳನ್ನು ವಧಿಸು!

07171031a ತ್ವಯಿ ಹ್ಯಸ್ತ್ರಾಣಿ ದಿವ್ಯಾನಿ ಯಥಾ ಸ್ಯುಸ್ತ್ರ್ಯಂಬಕೇ ತಥಾ|

07171031c ಇಚ್ಚತೋ ನ ಹಿ ತೇ ಮುಚ್ಯೇತ್ಕ್ರುದ್ಧಸ್ಯಾಪಿ ಪುರಂದರಃ||

ತ್ರ್ಯಂಬಕನಲ್ಲಿರುವಂತೆ ನಿನ್ನಲ್ಲಿಯೂ ದಿವಾಸ್ತ್ರಗಳಿವೆ. ನೀನು ಇಚ್ಛಿಸಿದರೆ ಕ್ರುದ್ಧ ಪುರಂದರನೂ ಕೂಡ ನಿನ್ನಿಂದ ಬಿಡಿಸಿಕೊಂಡು ಹೋಗಲಾರ!””

07171032 ಧೃತರಾಷ್ಟ್ರ ಉವಾಚ|

07171032a ತಸ್ಮಿನ್ನಸ್ತ್ರೇ ಪ್ರತಿಹತೇ ದ್ರೋಣೇ ಚೋಪಧಿನಾ ಹತೇ|

07171032c ತಥಾ ದುರ್ಯೋಧನೇನೋಕ್ತೋ ದ್ರೌಣಿಃ ಕಿಮಕರೋತ್ಪುನಃ||

07171033a ದೃಷ್ಟ್ವಾ ಪಾರ್ಥಾಂಶ್ಚ ಸಂಗ್ರಾಮೇ ಯುದ್ಧಾಯ ಸಮವಸ್ಥಿತಾನ್|

07171033c ನಾರಾಯಣಾಸ್ತ್ರನಿರ್ಮುಕ್ತಾಂಶ್ಚರತಃ ಪೃತನಾಮುಖೇ||

ಧೃತರಾಷ್ಟ್ರನು ಹೇಳಿದನು: “ಸುಳ್ಳಿನಿಂದ ದ್ರೋಣನು ಹತನಾಗಲು ಮತ್ತು ಆ ಅಸ್ತ್ರವೂ ನಾಶಗೊಳ್ಳಲು, ದುರ್ಯೋಧನನಿಂದ ಹಾಗೆ ಹೇಳಲ್ಪಟ್ಟ ದ್ರೌಣಿಯು ಸಂಗ್ರಾಮದಲ್ಲಿ ಪಾರ್ಥರು ಯುದ್ಧಕ್ಕೆ ಸನ್ನದ್ಧರಾಗಿ ನಾರಾಯಣಾಸ್ತ್ರದಿಂದ ಮುಕ್ತರಾಗಿ ಸೇನೆಯ ಮುಂದೆ ಬರುತ್ತಿದ್ದವರನ್ನು ನೋಡಿ ಪುನಃ ಏನು ಮಾಡಿದನು?”

07171034 ಸಂಜಯ ಉವಾಚ|

07171034a ಜಾನನ್ಪಿತುಃ ಸ ನಿಧನಂ ಸಿಂಹಲಾಂಗೂಲಕೇತನಃ|

07171034c ಸಕ್ರೋಧೋ ಭಯಮುತ್ಸೃಜ್ಯ ಅಭಿದುದ್ರಾವ ಪಾರ್ಷತಂ||

ಸಂಜಯನು ಹೇಳಿದನು: “ಧ್ವಜದಲ್ಲಿ ಸಿಂಹದ ಬಾಲದ ಚಿಹ್ನೆಯನ್ನು ಹೊಂದಿದ್ದ ಅಶ್ವತ್ಥಾಮನು ತನ್ನ ಪಿತನ ನಿಧನವನ್ನು ಸ್ಮರಿಸಿಕೊಂಡು ಕ್ರೋಧದೊಂದಿಗೆ ಭಯವನ್ನು ತೊರೆದು ಪಾರ್ಷತನ ಮೇಲೆರಗಿದನು.

07171035a ಅಭಿದ್ರುತ್ಯ ಚ ವಿಂಶತ್ಯಾ ಕ್ಷುದ್ರಕಾಣಾಂ ನರರ್ಷಭಃ|

07171035c ಪಂಚಭಿಶ್ಚಾತಿವೇಗೇನ ವಿವ್ಯಾಧ ಪುರುಷರ್ಷಭಂ||

ನರರ್ಷಭನು ಅವನ ಸಮೀಪಕ್ಕೆ ಹೋಗಿ ಇಪ್ಪತ್ತು ಕ್ಷುದ್ರಕಗಳಿಂದ ಮತ್ತು ಅತಿವೇಗದ ಐದು ಬಾಣಗಳಿಂದ ಆ ಪುರುಷರ್ಷಭನನ್ನು ಹೊಡೆದನು.

07171036a ಧೃಷ್ಟದ್ಯುಮ್ನಸ್ತತೋ ರಾಜನ್ ಜ್ವಲಂತಮಿವ ಪಾವಕಂ|

07171036c ದ್ರೋಣಪುತ್ರಂ ತ್ರಿಷಷ್ಟ್ಯಾ ತು ರಾಜನ್ವಿವ್ಯಾಧ ಪತ್ರಿಣಾಂ||

ಆಗ ಧೃಷ್ಟದ್ಯುಮ್ನನು ಪಾವಕನಂತೆ ಪ್ರಜ್ವಲಿಸುತ್ತಿರುವ ಅರವತ್ಮೂರು ಪತ್ರಿಗಳಿಂದ ದ್ರೋಣಪುತ್ರನನ್ನು ಪ್ರಹರಿಸಿದನು.

07171037a ಸಾರಥಿಂ ಚಾಸ್ಯ ವಿಂಶತ್ಯಾ ಸ್ವರ್ಣಪುಂಖೈಃ ಶಿಲಾಶಿತೈಃ|

07171037c ಹಯಾಂಶ್ಚ ಚತುರೋಽವಿಧ್ಯಚ್ಚತುರ್ಭಿರ್ನಿಶಿತೈಃ ಶರೈಃ||

ಬಂಗಾರದ ರೆಕ್ಕೆಗಳುಳ್ಳ ಮಸೆಗಲ್ಲಿನಿಂದ ಹರಿತಮಾಡಲ್ಪಟ್ಟ ಇಪ್ಪತ್ತು ನಿಶಿತ ಶರಗಳಿಂದ ಅವನ ಸಾರಥಿಯನ್ನೂ ನಾಲ್ಕರಿಂದ ಅವನ ನಾಲ್ಕು ಕುದುರೆಗಳನ್ನೂ ಹೊಡೆದನು.

07171038a ವಿದ್ಧ್ವಾ ವಿದ್ಧ್ವಾನದದ್ದ್ರೌಣಿಃ ಕಂಪಯನ್ನಿವ ಮೇದಿನೀಂ|

07171038c ಆದದತ್ಸರ್ವಲೋಕಸ್ಯ ಪ್ರಾಣಾನಿವ ಮಹಾರಣೇ||

ಹಾಗೆ ಹೊಡೆದವನನ್ನು ಪುನಃ ಹೊಡೆಯುತ್ತಾ ದ್ರೌಣಿಯು ಮೇದಿನಿಯನ್ನು ನಡುಗಿಸುವನೋ ಮತ್ತು ಸರ್ವಲೋಕಗಳ ಪ್ರಾಣಗಳನ್ನು ಹೀರುವನೋ ಎನ್ನುವಂತೆ ಮಹಾರಣದಲ್ಲಿ ಮಹಾನಾದಗೈದನು.

07171039a ಪಾರ್ಷತಸ್ತು ಬಲೀ ರಾಜನ್ ಕೃತಾಸ್ತ್ರಃ ಕೃತನಿಶ್ರಮಃ|

07171039c ದ್ರೌಣಿಮೇವಾಭಿದುದ್ರಾವ ಕೃತ್ವಾ ಮೃತ್ಯುಂ ನಿವರ್ತನಂ||

ರಾಜನ್! ಬಲಶಾಲಿ ಕೃತಾಸ್ತ್ರ ಕೃತನಿಶ್ರಮ ಪಾರ್ಷತನಾದರೋ ಮೃತ್ಯುವನ್ನೇ ಹಿಂದಿರುಗುವ ಕಾರಣವನ್ನಾಗಿಸಿಕೊಂಡು ದ್ರೌಣಿಯನ್ನೇ ಆಕ್ರಮಣಿಸಿದನು.

07171040a ತತೋ ಬಾಣಮಯಂ ವರ್ಷಂ ದ್ರೋಣಪುತ್ರಸ್ಯ ಮೂರ್ಧನಿ|

07171040c ಅವಾಸೃಜದಮೇಯಾತ್ಮಾ ಪಾಂಚಾಲ್ಯೋ ರಥಿನಾಂ ವರಃ||

ಆಗ ಅಮೇಯಾತ್ಮ ರಥಿಗಳಲ್ಲಿ ಶ್ರೇಷ್ಠ ಪಾಂಚಾಲ್ಯನು ದ್ರೋಣಪುತ್ರನ ತಲೆಯ ಮೇಲೆ ಬಾಣಮಯ ಮಳೆಯನ್ನೇ ಸುರಿಸಿದನು.

07171041a ತಂ ದ್ರೌಣಿಃ ಸಮರೇ ಕ್ರುದ್ಧಶ್ಚಾದಯಾಮಾಸ ಪತ್ರಿಭಿಃ|

07171041c ವಿವ್ಯಾಧ ಚೈನಂ ದಶಭಿಃ ಪಿತುರ್ವಧಮನುಸ್ಮರನ್||

ಸಮರದಲ್ಲಿ ಪಿತೃವಧೆಯನ್ನು ಸ್ಮರಿಸಿಕೊಂಡು ದ್ರೌಣಿಯು ಕ್ರುದ್ಧನಾಗಿ ಅವನನ್ನೂ ಹತ್ತು ಪತ್ರಿಗಳಿಂದ ಹೊಡೆದು ಗಾಯಗೊಳಿಸಿದನು.

07171042a ದ್ವಾಭ್ಯಾಂ ಚ ಸುವಿಕೃಷ್ಟಾಭ್ಯಾಂ ಕ್ಷುರಾಭ್ಯಾಂ ಧ್ವಜಕಾರ್ಮುಕೇ|

07171042c ಚಿತ್ತ್ವಾ ಪಾಂಚಾಲರಾಜಸ್ಯ ದ್ರೌಣಿರನ್ಯೈಃ ಸಮಾರ್ದಯತ್||

ಚೆನ್ನಾಗಿ ಸೆಳೆದು ಬಿಟ್ಟಿದ್ದ ಎರಡು ಕ್ಷುರಗಳಿಂದ ಪಾಂಚಾಲರಾಜನ ಧ್ವಜ ಮತ್ತು ಧನುಸ್ಸುಗಳನ್ನು ತುಂಡರಿಸಿ ದ್ರೌಣಿಯು ಅನ್ಯ ಬಾಣಗಳಿಂದ ಅವನನ್ನು ಗಾಯಗೊಳಿಸಿದನು.

07171043a ವ್ಯಶ್ವಸೂತರಥಂ ಚೈನಂ ದ್ರೌಣಿಶ್ಚಕ್ರೇ ಮಹಾಹವೇ|

07171043c ತಸ್ಯ ಚಾನುಚರಾನ್ ಸರ್ವಾನ್ ಕ್ರುದ್ಧಃ ಪ್ರಾಚ್ಚಾದಯಚ್ಚರೈಃ||

ಕೂಡಲೇ ಮಹಾಯುದ್ಧದಲ್ಲಿ ದ್ರೌಣಿಯು ಕ್ರುದ್ಧನಾಗಿ ಅವನನ್ನು ಕುದುರೆ, ಸಾರಥಿ ಮತ್ತು ರಥಗಳಿಂದ ವಿಹೀನನನ್ನಾಗಿ ಮಾಡಿ ಅವನ ಅನುಚರರನ್ನು ಶರಗಳಿಂದ ಮುಚ್ಚಿಬಿಟ್ಟನು.

07171044a ಪ್ರದ್ರುದ್ರಾವ ತತಃ ಸೈನ್ಯಂ ಪಾಂಚಾಲಾನಾಂ ವಿಶಾಂ ಪತೇ|

07171044c ಸಂಭ್ರಾಂತರೂಪಮಾರ್ತಂ ಚ ಶರವರ್ಷಪರಿಕ್ಷತಂ||

ವಿಶಾಂಪತೇ! ಶರವರ್ಷಗಳಿಂದ ಮುಚ್ಚಿಹೋಗಿ ಸಂಭ್ರಾಂತರೂ ಆರ್ತರೂ ಆಗಿ ತೋರುತ್ತಿದ್ದ ಪಾಂಚಾಲ ಸೇನೆಯು ಆಗ ಪಲಾಯನಮಾಡಿತು.

07171045a ದೃಷ್ಟ್ವಾ ಚ ವಿಮುಖಾನ್ಯೋಧಾನ್ಧೃಷ್ಟದ್ಯುಮ್ನಂ ಚ ಪೀಡಿತಂ|

07171045c ಶೈನೇಯೋಽಚೋದಯತ್ತೂರ್ಣಂ ರಣಂ ದ್ರೌಣಿರಥಂ ಪ್ರತಿ||

ಯೋಧರು ವಿಮುಖರಾಗುತ್ತಿರುವುದನ್ನು ಮತ್ತು ಧೃಷ್ಟದ್ಯುಮ್ನನು ಪೀಡಿತನಾಗಿರುವುದನ್ನು ನೋಡಿ ತಕ್ಷಣವೇ ಶೈನೇಯನು ತನ್ನ ರಥವನ್ನು ದ್ರೌಣಿರಥದ ಕಡೆ ಓಡಿಸಿದನು.

07171046a ಅಷ್ಟಭಿರ್ನಿಶಿತೈಶ್ಚೈವ ಸೋಽಶ್ವತ್ಥಾಮಾನಮಾರ್ದಯತ್|

07171046c ವಿಂಶತ್ಯಾ ಪುನರಾಹತ್ಯ ನಾನಾರೂಪೈರಮರ್ಷಣಂ|

07171046e ವಿವ್ಯಾಧ ಚ ತಥಾ ಸೂತಂ ಚತುರ್ಭಿಶ್ಚತುರೋ ಹಯಾನ್||

ಅಶ್ವತ್ಥಾಮನನ್ನು ಎದುರಿಸಿ ಅವನನ್ನು ಎಂಟು ನಿಶಿತ ಬಾಣಗಳಿಂದ ಗಾಯಗೊಳಿಸಿದನು. ಪುನಃ ನಾನಾರೂಪದ ಇಪ್ಪತ್ತು ಬಾಣಗಳಿಂದ ಆ ಅಮರ್ಷಣನನ್ನು ಹೊಡೆದು, ಹಾಗೆಯೇ ಅವನ ಸಾರಥಿಯನ್ನೂ ನಾಲ್ಕು ಬಾಣಗಳಿಂದ ನಾಲ್ಕು ಕುದುರೆಗಳನ್ನೂ ಹೊಡೆದನು.

07171047a ಸೋಽತಿವಿದ್ಧೋ ಮಹೇಷ್ವಾಸೋ ನಾನಾಲಿಂಗೈರಮರ್ಷಣಃ|

07171047c ಯುಯುಧಾನೇನ ವೈ ದ್ರೌಣಿಃ ಪ್ರಹಸನ್ವಾಕ್ಯಮಬ್ರವೀತ್||

ಹೀಗೆ ನಾನಾವಿಧದ ಬಾಣಗಳಿಂದ ಅತಿಯಾಗಿ ಗಾಯಗೊಂಡ ಮಹೇಷ್ವಾಸ ಅಮರ್ಷಣ ದ್ರೌಣಿಯು ನಕ್ಕು ಯುಯುಧಾನನಿಗೆ ಈ ಮಾತನ್ನಾಡಿದನು:

07171048a ಶೈನೇಯಾಭ್ಯವಪತ್ತಿಂ ತೇ ಜಾನಾಮ್ಯಾಚಾರ್ಯಘಾತಿನಃ|

07171048c ನ ತ್ವೇನಂ ತ್ರಾಸ್ಯಸಿ ಮಯಾ ಗ್ರಸ್ತಮಾತ್ಮಾನಮೇವ ಚ||

“ಶೈನೇಯ! ಆಚಾರ್ಯಘಾತಿನಿಯ ಮೇಲೆ ನಿನಗೆ ಅನುಗ್ರಹಬುದ್ಧಿಯಿದೆ ಎನ್ನುವುದನ್ನು ನಾನು ತಿಳಿದಿದ್ದೇನೆ. ಆದರೆ ನನ್ನ ಹಿಡಿತಕ್ಕೆ ಬಂದಿರುವ ಅವನನ್ನು ಅಥವಾ ನಿನ್ನನ್ನೂ ನೀನು ರಕ್ಷಿಸಲಾರೆ!”

07171049a ಏವಮುಕ್ತ್ವಾರ್ಕರಶ್ಮ್ಯಾಭಂ ಸುಪರ್ವಾಣಂ ಶರೋತ್ತಮಂ|

07171049c ವ್ಯಸೃಜತ್ಸಾತ್ವತೇ ದ್ರೌಣಿರ್ವಜ್ರಂ ವೃತ್ರೇ ಯಥಾ ಹರಿಃ||

ಹೀಗೆ ಹೇಳಿ ದ್ರೌಣಿಯು ಸೂರ್ಯನ ರಶ್ಮಿಗಳ ಕಾಂತಿಯುಳ್ಳ ಸುತೀಕ್ಷ್ಣ ಉತ್ತಮ ಶರವನ್ನು ವೃತ್ರನಮೇಲೆ ಹರಿಯು ಹೇಗೋ ಹಾಗೆ ಸಾತ್ವತನ ಮೇಲೆ ಪ್ರಯೋಗಿಸಿದನು.

07171050a ಸ ತಂ ನಿರ್ಭಿದ್ಯ ತೇನಾಸ್ತಃ ಸಾಯಕಃ ಸಶರಾವರಂ|

07171050c ವಿವೇಶ ವಸುಧಾಂ ಭಿತ್ತ್ವಾ ಶ್ವಸನ್ಬಿಲಮಿವೋರಗಃ||

ಅವನು ಪ್ರಯೋಗಿಸಿದ ಆ ಸಾಯಕವು ಕವಚದೊಂದಿಗೆ ಸಾತ್ಯಕಿಯ ದೇಹವನ್ನು ಭೇದಿಸಿ ಭುಸುಗುಟ್ಟುವ ಸರ್ಪವು ಬಿಲವನ್ನು ಹೊಗುವಂತೆ ಭೂಮಿಯನ್ನು ಹೊಕ್ಕಿತು.

07171051a ಸ ಭಿನ್ನಕವಚಃ ಶೂರಸ್ತೋತ್ತ್ರಾರ್ದಿತ ಇವ ದ್ವಿಪಃ|

07171051c ವಿಮುಚ್ಯ ಸಶರಂ ಚಾಪಂ ಭೂರಿವ್ರಣಪರಿಸ್ರವಃ||

ಭಿನ್ನಕವಚನಾಗಿದ್ದ ಶೂರ ಸಾತ್ಯಕಿಯು ಅಂಕುಶದಿಂದ ತಿವಿಯಲ್ಪಟ್ಟ ಆನೆಯಂತೆ ವ್ಯಥಿತನಾದನು. ಗಾಯದಿಂದ ಅತಿಯಾಗಿ ರಕ್ತಸ್ರಾವವಾಗಲು ಅವನು ಧನುಸ್ಸು ಬಾಣಗಳನ್ನು ಕೆಳಗಿಟ್ಟನು.

07171052a ಸೀದನ್ರುಧಿರಸಿಕ್ತಶ್ಚ ರಥೋಪಸ್ಥ ಉಪಾವಿಶತ್|

07171052c ಸೂತೇನಾಪಹೃತಸ್ತೂರ್ಣಂ ದ್ರೋಣಪುತ್ರಾದ್ರಥಾಂತರಂ||

ರಕ್ತಸ್ರಾವದಿಂದ ಮೂರ್ಛೆಹೋಗಿ ರಥದಲ್ಲಿಯೇ ಕುಳಿತು ಒರಗಿದನು. ತಕ್ಷಣವೇ ಅವನ ಸಾರಥಿಯು ಅವನನ್ನು ದ್ರೋಣಪುತ್ರನ ರಥದಿಂದ ದೂರಕ್ಕೆ ಕೊಂಡೊಯ್ದನು.

07171053a ಅಥಾನ್ಯೇನ ಸುಪುಂಖೇನ ಶರೇಣ ನತಪರ್ವಣಾ|

07171053c ಆಜಘಾನ ಭ್ರುವೋರ್ಮಧ್ಯೇ ಧೃಷ್ಟದ್ಯುಮ್ನಂ ಪರಂತಪಃ||

ಅನಂತರ ಪರಂತಪ ಅಶ್ವತ್ಥಾಮನು ಇನ್ನೊಂದು ಸುಂದರ ಪುಂಖಗಳುಳ್ಳ ನತಪರ್ವ ಶರದಿಂದ ಧೃಷ್ಟದ್ಯುಮ್ನನ ಹುಬ್ಬುಗಳ ಮಧ್ಯೆ ಹೊಡೆದನು.

07171054a ಸ ಪೂರ್ವಮತಿವಿದ್ಧಶ್ಚ ಭೃಶಂ ಪಶ್ಚಾಚ್ಚ ಪೀಡಿತಃ|

07171054c ಸಸಾದ ಯುಧಿ ಪಾಂಚಾಲ್ಯೋ ವ್ಯಪಾಶ್ರಯತ ಚ ಧ್ವಜಂ||

ಮೊದಲೇ ಅತಿಯಾಗಿ ಗಾಯಗೊಂಡಿದ್ದ ಪಾಂಚಾಲ್ಯನು ಇನ್ನೂ ಪೀಡಿತನಾಗಿ ಯುದ್ಧದಲ್ಲಿ ಧ್ವಜವನ್ನು ಹಿಡಿದು ಕುಳಿತುಕೊಂಡನು.

07171055a ತಂ ಮತ್ತಮಿವ ಸಿಂಹೇನ ರಾಜನ್ಕುಂಜರಮರ್ದಿತಂ|

07171055c ಜವೇನಾಭ್ಯದ್ರವಂ ಶೂರಾಃ ಪಂಚ ಪಾಂಡವತೋ ರಥಾಃ||

07171056a ಕಿರೀಟೀ ಭೀಮಸೇನಶ್ಚ ವೃದ್ಧಕ್ಷತ್ರಶ್ಚ ಪೌರವಃ|

07171056c ಯುವರಾಜಶ್ಚ ಚೇದೀನಾಂ ಮಾಲವಶ್ಚ ಸುದರ್ಶನಃ|

07171056e ಪಂಚಭಿಃ ಪಂಚಭಿರ್ಬಾಣೈರಭ್ಯಘ್ನನ್ಸರ್ವತಃ ಸಮಂ||

ರಾಜನ್! ಆನೆಯನ್ನು ಪೀಡಿಸುವ ಮದಿಸಿದ ಸಿಂಹದಂತ್ತಿದ್ದ ಅವನನ್ನು ವೇಗದಿಂದ ಐವರು ಶೂರ ಪಾಂಡವ ರಥರು – ಕಿರೀಟೀ, ಭೀಮಸೇನ, ಪೌರವ ವೃದ್ಧಕ್ಷತ್ರ, ಚೇದಿಗಳ ಯುವರಾಜ ಮತ್ತು ಮಾಲವದ ಸುದರ್ಶನ - ಇವರು ಧಾವಿಸಿಬಂದು ಐವರೂ ಐದೈದು ಬಾಣಗಳಿಂದ ಒಂದೇವೇಳೆಯಲ್ಲಿ ಎಲ್ಲಕಡೆಗಳಿಂದ ಅಶ್ವತ್ಥಾಮನನ್ನು ಹೊಡೆದರು.

07171057a ಆಶೀವಿಷಾಭೈರ್ವಿಂಶದ್ಭಿಃ ಪಂಚಭಿಶ್ಚಾಪಿ ತಾಂ ಶರೈಃ|

07171057c ಚಿಚ್ಚೇದ ಯುಗಪದ್ದ್ರೌಣಿಃ ಪಂಚವಿಂಶತಿಸಾಯಕಾನ್||

ಐವರೂ ಬಿಟ್ಟ ಆ ಇಪ್ಪತ್ತೈದು ಸಾಯಕಗಳನ್ನು ದ್ರೌಣಿಯು ಇಪ್ಪತ್ತೈದು ಶರಗಳಿಂದ ಒಟ್ಟಿಗೇ ಕತ್ತರಿಸಿದನು.

07171058a ಸಪ್ತಭಿಶ್ಚ ಶಿತೈರ್ಬಾಣೈಃ ಪೌರವಂ ದ್ರೌಣಿರಾರ್ದಯತ್|

07171058c ಮಾಲವಂ ತ್ರಿಭಿರೇಕೇನ ಪಾರ್ಥಂ ಷಡ್ಭಿರ್ವೃಕೋದರಂ||

ಮತ್ತೆ ದ್ರೌಣಿಯು ಏಳು ನಿಶಿತ ಬಾಣಗಳಿಂದ ಪೌರವನನ್ನೂ, ಮೂರರಿಂದ ಮಾಲವನನ್ನೂ, ಒಂದರಿಂದ ಪಾರ್ಥನನ್ನೂ, ಮತ್ತು ಆರರಿಂದ ವೃಕೋದರನನ್ನೂ ಹೊಡೆದನು.

07171059a ತತಸ್ತೇ ವಿವ್ಯಧುಃ ಸರ್ವೇ ದ್ರೌಣಿಂ ರಾಜನ್ಮಹಾರಥಾಃ|

07171059c ಯುಗಪಚ್ಚ ಪೃಥಕ್ಚೈವ ರುಕ್ಮಪುಂಖೈಃ ಶಿಲಾಶಿತೈಃ||

ರಾಜನ್! ಆಗ ಅವರೆಲ್ಲ ಮಹಾರಥರೂ ದ್ರೌಣಿಯನ್ನು ಒಟ್ಟಾಗಿ ಮತ್ತು ಪ್ರತ್ಯೇಕವಾಗಿ ರುಕ್ಮಪುಂಖ ಶಿಲಾಶಿತಗಳಿಂದ ಹೊಡೆದರು.

07171060a ಯುವರಾಜಸ್ತು ವಿಂಶತ್ಯಾ ದ್ರೌಣಿಂ ವಿವ್ಯಾಧ ಪತ್ರಿಣಾಂ|

07171060c ಪಾರ್ಥಶ್ಚ ಪುನರಷ್ಟಾಭಿಸ್ತಥಾ ಸರ್ವೇ ತ್ರಿಭಿಸ್ತ್ರಿಭಿಃ||

ಯುವರಾಜನಾದರೋ ದ್ರೌಣಿಯನ್ನು ಇಪ್ಪತ್ತು ಪತ್ರಿಗಳಿಂದ ಹೊಡೆದನು. ಪಾರ್ಥನು ಪುನಃ ಎಂಟರಿಂದ ಮತ್ತು ಎಲ್ಲರೂ ಮೂರು ಮೂರರಿಂದ ಅವನನ್ನು ಹೊಡೆದರು.

07171061a ತತೋಽರ್ಜುನಂ ಷಡ್ಭಿರಥಾಜಘಾನ

        ದ್ರೌಣಾಯನಿರ್ದಶಭಿರ್ವಾಸುದೇವಂ|

07171061c ಭೀಮಂ ದಶಾರ್ಧೈರ್ಯುವರಾಜಂ ಚತುರ್ಭಿರ್

        ದ್ವಾಭ್ಯಾಂ ಚಿತ್ತ್ವಾ ಕಾರ್ಮುಕಂ ಚ ಧ್ವಜಂ ಚ|

07171061e ಪುನಃ ಪಾರ್ಥಂ ಶರವರ್ಷೇಣ ವಿದ್ಧ್ವಾ

        ದ್ರೌಣಿರ್ಘೋರಂ ಸಿಂಹನಾದಂ ನನಾದ||

ಅನಂತರ ದ್ರೌಣಾಯನು ಅರ್ಜುನನ್ನು ಆರರಿಂದ, ವಾಸುದೇವನನ್ನು ಹತ್ತರಿಂದ, ಭೀಮನನ್ನು ಹತ್ತರಿಂದ, ಯುವರಾಜನನ್ನು ನಾಲ್ಕರಿಂದ ಹೊಡೆದು ಎರಡರಿಂದ ಅವನ ಧನ್ನುಸ್ಸು-ಧ್ವಜಗಳನ್ನು ಕತ್ತರಿಸಿದನು. ಪುನಃ ಪಾರ್ಥನನ್ನು ಶರವರ್ಷದಿಂದ ಹೊಡೆದು ದ್ರೌಣಿಯು ಘೋರವಾದ ಸಿಂಹನಾದವನ್ನು ಮಾಡಿದನು.

07171062a ತಸ್ಯಾಸ್ಯತಃ ಸುನಿಶಿತಾನ್ಪೀತಧಾರಾನ್

        ದ್ರೌಣೇಃ ಶರಾನ್ಪೃಷ್ಠತಶ್ಚಾಗ್ರತಶ್ಚ|

07171062c ಧರಾ ವಿಯದ್ದೌಃ ಪ್ರದಿಶೋ ದಿಶಶ್ಚ

        ಚನ್ನಾ ಬಾಣೈರಭವನ್ಘೋರರೂಪೈಃ||

ದ್ರೌಣಿಯು ಪ್ರಯೋಗಿಸುತ್ತಿದ್ದ ಆ ನಿಶಿತವಾದ, ಎಣ್ಣೆಯಲ್ಲಿ ಅದ್ದಿ ಹದಗೊಳಿಸಿದ್ದ ಬಾಣಗಳು ಭೂಮಿ, ಆಕಾಶ, ದಿಕ್ಕು-ಉಪದಿಕ್ಕುಗಳನ್ನೂ ಆವರಿಸಿ ಎಲ್ಲವೂ ಬಾಣಮಯವಾಗಿ ಘೋರರೂಪವಾಗಿ ಕಾಣುತ್ತಿದ್ದವು.

07171063a ಆಸೀನಸ್ಯ ಸ್ವರಥಂ ತೂಗ್ರತೇಜಾಃ

        ಸುದರ್ಶನಸ್ಯೇಂದ್ರಕೇತುಪ್ರಕಾಶೌ|

07171063c ಭುಜೌ ಶಿರಶ್ಚೇಂದ್ರಸಮಾನವೀರ್ಯಸ್

        ತ್ರಿಭಿಃ ಶರೈರ್ಯುಗಪತ್ಸಂಚಕರ್ತ||

ವೀರ್ಯದಲ್ಲಿ ಇಂದ್ರನ ಸಮಾನನಾಗಿದ್ದ ಉಗ್ರತೇಜಸ್ವಿ ಅಶ್ವತ್ಥಾಮನು ತನ್ನ ರಥದ ಬಳಿಯಿದ್ದ ಸುದರ್ಶನನ ಇಂದ್ರನ ಧ್ವಜಗಳಂತೆ ಪ್ರಕಾಶಮಾನವಾಗಿದ್ದ ಎರಡು ಭುಜಗಳನ್ನೂ ಶಿರಸ್ಸನ್ನೂ ಏಕಕಾಲದಲ್ಲಿ ಮೂರು ಬಾಣಗಳಿಂದ ಹೊಡೆದು ಕತ್ತರಿಸಿದನು.

07171064a ಸ ಪೌರವಂ ರಥಶಕ್ತ್ಯಾ ನಿಹತ್ಯ

        ಚಿತ್ತ್ವಾ ರಥಂ ತಿಲಶಶ್ಚಾಪಿ ಬಾಣೈಃ|

07171064c ಚಿತ್ತ್ವಾಸ್ಯ ಬಾಹೂ ವರಚಂದನಾಕ್ತೌ

        ಭಲ್ಲೇನ ಕಾಯಾಚ್ಚಿರ ಉಚ್ಚಕರ್ತ||

ಅವನು ರಥಶಕ್ತಿಯಿಂದ ಪೌರವನ ರಥವನ್ನು ಬಾಣಗಳಿಂದ ಎಳ್ಳುಕಾಳುಗಳಷ್ಟು ಸಣ್ಣದಾಗಿ ಪುಡಿಪುಡಿಮಾಡಿ, ಚಂದನಗಳಿಂದ ಲೇಪಿತವಾದ ಅವನ ಬಾಹುಗಳನ್ನು ಕತ್ತರಿಸಿ, ಭಲ್ಲದಿಂದ ಅವನ ಶಿರವನ್ನು ದೇಹದಿಂದ ಬೇರ್ಪಡಿಸಿದನು.

07171065a ಯುವಾನಮಿಂದೀವರದಾಮವರ್ಣಂ

        ಚೇದಿಪ್ರಿಯಂ ಯುವರಾಜಂ ಪ್ರಹಸ್ಯ|

07171065c ಬಾಣೈಸ್ತ್ವರಾವಾನ್ಜ್ವಲಿತಾಗ್ನಿಕಲ್ಪೈರ್

        ವಿದ್ಧ್ವಾ ಪ್ರಾದಾನ್ಮೃತ್ಯವೇ ಸಾಶ್ವಸೂತಂ||

ಅನಂತರ ಆ ವೇಗವಾನನು ಪ್ರಜ್ವಲಿಸುವ ಅಗ್ನಿಯಂತಿರುವ ಬಾಣಗಳಿಂದ ಯುವಕನಾಗಿದ್ದ ನೀಲಕಮಲದ ಬಣ್ಣದ ಚೇದಿಪ್ರಿಯ ಯುವರಾಜನನ್ನು ಹೊಡೆದು ಅವನನ್ನು ಕುದುರೆ-ಸಾರಥಿಗಳೊಂದಿಗೆ ಮೃತ್ಯುಲೋಕಕ್ಕೆ ಕಳುಹಿಸಿದನು.

07171066a ತಾನ್ನಿಹತ್ಯ ರಣೇ ವೀರೋ ದ್ರೋಣಪುತ್ರೋ ಯುಧಾಂ ಪತಿಃ|

07171066c ದಧ್ಮೌ ಪ್ರಮುದಿತಃ ಶಂಖಂ ಬೃಹಂತಮಪರಾಜಿತಃ||

ಅವರನ್ನು ರಣದಲ್ಲಿ ಸಂಹರಿಸಿ ವೀರ ಯೋಧರ ನಾಯಕ ಅಪರಾಜಿತ ದ್ರೋಣಪುತ್ರನು ಸಂತೋಷಗೊಂಡು ದೊಡ್ಡ ಶಂಖವನ್ನು ಊದಿದನು.

07171067a ತತಃ ಸರ್ವೇ ಚ ಪಾಂಚಾಲಾ ಭೀಮಸೇನಶ್ಚ ಪಾಂಡವಃ|

07171067c ಧೃಷ್ಟದ್ಯುಮ್ನರಥಂ ಭೀತಾಸ್ತ್ಯಕ್ತ್ವಾ ಸಂಪ್ರಾದ್ರವನ್ದಿಶಃ||

ಅನಂತರ ಎಲ್ಲ ಪಾಂಚಾಲಯೋಧರೂ ಪಾಂಡವ ಭೀಮಸೇನನೂ ಭಯದಿಂದ ಧೃಷ್ಟದ್ಯುಮ್ನನ ರಥವನ್ನು ಬಿಟ್ಟು ದಿಕ್ಕಾಪಾಲಾಗಿ ಓಡಿ ಹೋದರು.

07171068a ತಾನ್ಪ್ರಭಗ್ನಾಂಸ್ತಥಾ ದ್ರೌಣಿಃ ಪೃಷ್ಠತೋ ವಿಕಿರಂ ಶರೈಃ|

07171068c ಅಭ್ಯವರ್ತತ ವೇಗೇನ ಕಾಲವತ್ಪಾಂಡುವಾಹಿನೀಂ||

ಓಡಿಹೋಗುತ್ತಿರುವವರ ಮೇಲೆ ದ್ರೌಣಿಯು ಶರಗಳನ್ನು ಸುರಿಸಿ, ಕಾಲನಂತೆ ಪಾಂಡವಸೇನೆಯನ್ನು ಹಿಂದಿನಿಂದ ಬೆನ್ನಟ್ಟಿ ಹೋದನು.

07171069a ತೇ ವಧ್ಯಮಾನಾಃ ಸಮರೇ ದ್ರೋಣಪುತ್ರೇಣ ಕ್ಷತ್ರಿಯಾಃ|

07171069c ದ್ರೋಣಪುತ್ರಂ ಭಯಾದ್ರಾಜನ್ದಿಕ್ಷು ಸರ್ವಾಸು ಮೇನಿರೇ||

ರಾಜನ್! ದ್ರೋಣಪುತ್ರನಿಂದ ವಧಿಸಲ್ಪಡುತ್ತಿರುವ ಆ ಕ್ಷತ್ರಿಯರು ಸಮರದಲ್ಲಿ ದ್ರೋಣಪುತ್ರನ ಭಯದಿಂದ ಎಲ್ಲ ದಿಕ್ಕುಗಳಿಗೆ ಓಡಿ ಹೋದರು.”

ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ನಾರಾಯಣಾಸ್ತ್ರಮೋಕ್ಷಣಪರ್ವಣಿ ಅಶ್ವತ್ಥಾಮಪರಾಕ್ರಮೇ ಏಕಸಪ್ತತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ನಾರಾಯಣಾಸ್ತ್ರಮೋಕ್ಷಣಪರ್ವದಲ್ಲಿ ಅಶ್ವತ್ಥಾಮಪರಾಕ್ರಮ ಎನ್ನುವ ನೂರಾಎಪ್ಪತ್ತೊಂದನೇ ಅಧ್ಯಾಯವು.

Related image

Comments are closed.