ದ್ರೋಣ ಪರ್ವ: ನಾರಾಯಣಾಸ್ತ್ರಮೋಕ್ಷ ಪರ್ವ
Contents
Toggle೧೬೯
ಧೃಷ್ಟದ್ಯುಮ್ನನನ್ನುದ್ದೇಶಿಸಿ ಸಾತ್ಯಕಿಯ ಮಾತು (೧-೧೯). ಧೃಷ್ಟದ್ಯುಮ್ನನ ಮಾತು (೨೦-೩೯). ಧೃಷ್ಟದ್ಯುಮ್ನನನ್ನು ವಧಿಸಲು ಹೊರಟ ಸಾತ್ಯಕಿಯನ್ನು ಭೀಮಸೇನನು ತಡೆಯಲು ಸಹದೇವನು ಸಾತ್ಯಕಿಯನ್ನು ಸಂತವಿಸಿದುದು (೪೦-೫೩). ಕೃಷ್ಣ-ಯುಧಿಷ್ಠಿರರು ಧೃಷ್ಟದ್ಯುಮ್ನ-ಸಾತ್ಯಕಿಯರನ್ನು ತಡೆದುದು (೫೪-೬೨).
07169001 ಧೃತರಾಷ್ಟ್ರ ಉವಾಚ|
07169001a ಸಾಂಗಾ ವೇದಾ ಯಥಾನ್ಯಾಯಂ ಯೇನಾಧೀತಾ ಮಹಾತ್ಮನಾ|
07169001c ಯಸ್ಮಿನ್ಸಾಕ್ಷಾದ್ಧನುರ್ವೇದೋ ಹ್ರೀನಿಷೇಧೇ ಪ್ರತಿಷ್ಠಿತಃ||
07169002a ತಸ್ಮಿನ್ನಾಕ್ರುಶ್ಯತಿ ದ್ರೋಣೇ ಮಹರ್ಷಿತನಯೇ ತದಾ|
07169002c ನೀಚಾತ್ಮನಾ ನೃಶಂಸೇನ ಕ್ಷುದ್ರೇಣ ಗುರುಘಾತಿನಾ||
07169003a ಯಸ್ಯ ಪ್ರಸಾದಾತ್ಕರ್ಮಾಣಿ ಕುರ್ವಂತಿ ಪುರುಷರ್ಷಭಾಃ|
07169003c ಅಮಾನುಷಾಣಿ ಸಂಗ್ರಾಮೇ ದೇವೈರಸುಕರಾಣಿ ಚ||
07169004a ತಸ್ಮಿನ್ನಾಕ್ರುಶ್ಯತಿ ದ್ರೋಣೇ ಸಮಕ್ಷಂ ಪಾಪಕರ್ಮಿಣಃ|
07169004c ನಾಮರ್ಷಂ ತತ್ರ ಕುರ್ವಂತಿ ಧಿಕ್ ಕ್ಷತ್ರಂ ಧಿಗಮರ್ಷಿತಂ||
ಧೃತರಾಷ್ಟ್ರನು ಹೇಳಿದನು: “ಯಾವ ಮಹಾತ್ಮನಲ್ಲಿ ಯಥಾನ್ಯಾಯವಾಗಿ ಸಾಂಗೋಪಾಂಗವಾಗಿ ವೇದಗಳು ನೆಲೆಸಿದ್ದವೋ, ಗರ್ವವಿಲ್ಲದವನ ಯಾರಲ್ಲಿ ಸಾಕ್ಷಾದ್ ಧನುರ್ವೇದವೇ ಪ್ರತಿಷ್ಠಿತವಾಗಿತ್ತೋ, ಯಾರ ಪ್ರಸಾದದಿಂದ ಪುರುಷರ್ಷಭರು ಸಂಗ್ರಾಮದಲ್ಲಿ ದೇವತೆಗಳಿಗೂ ಅಸಾಧ್ಯ ಅಮಾನುಷ ಕರ್ಮಗಳನ್ನು ಮಾಡಿ ತೋರಿಸುತ್ತಿದ್ದನೋ ಆ ಮಹರ್ಷಿತನಯ ದ್ರೋಣನನ್ನು ನೀಚಾತ್ಮ ಗುರುಘಾತಿಯು ಕ್ಷುದ್ರ ಕ್ರೂರತನದಿಂದ ಸೆಳೆದಾಡುವಾಗ ಎದುರಿದ್ದ ಪಾಪಕರ್ಮಿಗಳ್ಯಾರೂ ವಿರೋಧಿಸಲಿಲ್ಲವಲ್ಲ! ಕ್ಷತ್ರಿಯರಿಗೆ ಧಿಕ್ಕಾರ! ಕುಪಿತರಾದವರಿಗೆ ಧಿಕ್ಕಾರ!
07169005a ಪಾರ್ಥಾಃ ಸರ್ವೇ ಚ ರಾಜಾನಃ ಪೃಥಿವ್ಯಾಂ ಯೇ ಧನುರ್ಧರಾಃ|
07169005c ಶ್ರುತ್ವಾ ಕಿಮಾಹುಃ ಪಾಂಚಾಲ್ಯಂ ತನ್ಮಮಾಚಕ್ಷ್ವ ಸಂಜಯ||
ಪಾಂಚಾಲ್ಯನನ್ನು ಕೇಳಿ ಪಾರ್ಥರು ಮತ್ತು ಪೃಥ್ವಿಯ ಧನುರ್ಧರ ರಾಜರೆಲ್ಲರೂ ಏನು ಹೇಳಿದರೆಂದು ನನಗೆ ಹೇಳು ಸಂಜಯ!”
07169006 ಸಂಜಯ ಉವಾಚ|
07169006a ಶ್ರುತ್ವಾ ದ್ರುಪದಪುತ್ರಸ್ಯ ತಾ ವಾಚಃ ಕ್ರೂರಕರ್ಮಣಃ|
07169006c ತೂಷ್ಣೀಂ ಬಭೂವೂ ರಾಜಾನಃ ಸರ್ವ ಏವ ವಿಶಾಂ ಪತೇ||
ಸಂಜಯನು ಹೇಳಿದನು: “ವಿಶಾಂಪತೇ! ಕ್ರೂರಕರ್ಮಿ ದ್ರುಪದಪುತ್ರನ ಆ ಮಾತನ್ನು ಕೇಳಿ ಎಲ್ಲ ರಾಜರೂ ಸುಮ್ಮನಾಗಿದ್ದರು.
07169007a ಅರ್ಜುನಸ್ತು ಕಟಾಕ್ಷೇಣ ಜಿಹ್ಮಂ ಪ್ರೇಕ್ಷ್ಯ ಚ ಪಾರ್ಷತಂ|
07169007c ಸಬಾಷ್ಪಮಭಿನಿಃಶ್ವಸ್ಯ ಧಿಗ್ಧಿಗ್ಧಿಗಿತಿ ಚಾಬ್ರವೀತ್||
ಅರ್ಜುನನಾದರೋ ಕಡೆಗಣ್ಣಿನಿಂದ ಪಾರ್ಷತನನ್ನು ನೋಡಿ ಕಣ್ಣೀರು ತುಂಬಿ ನಿಟ್ಟುಸಿರು ಬಿಡುತ್ತಾ “ಧಿಕ್ಕಾರ! ಧಿಕ್ಕಾರ! ಧಿಕ್ಕಾರ!” ಎಂದು ನುಡಿದನು.
07169008a ಯುಧಿಷ್ಠಿರಶ್ಚ ಭೀಮಶ್ಚ ಯಮೌ ಕೃಷ್ಣಸ್ತಥಾಪರೇ|
07169008c ಆಸನ್ಸುವ್ರೀಡಿತಾ ರಾಜನ್ಸಾತ್ಯಕಿರಿದಮಬ್ರವೀತ್||
ರಾಜನ್! ಯುಧಿಷ್ಠಿರ, ಭೀಮ, ಯಮಳರು ಮತ್ತು ಕೃಷ್ಣನೂ ಕೂಡ ತಲೆ ತಗ್ಗಿಸಿ ಕುಳಿತಿರಲು ಅರಿಂದಮ ಸಾತ್ಯಕಿಯು ಹೇಳಿದನು:
07169009a ನೇಹಾಸ್ತಿ ಪುರುಷಃ ಕಶ್ಚಿದ್ಯ ಇಮಂ ಪಾಪಪೂರುಷಂ|
07169009c ಭಾಷಮಾಣಮಕಲ್ಯಾಣಂ ಶೀಘ್ರಂ ಹನ್ಯಾನ್ನರಾಧಮಂ||
“ಅಮಂಗಳಕರವಾಗಿ ಮಾತನಾಡುವ ಈ ಪಾಪಪುರುಷ, ನರಾಧಮನನ್ನು ಶೀಘ್ರವಾಗಿ ಕೊಲ್ಲುವ ಪುರುಷನ್ಯಾರೂ ಇಲ್ಲಿ ಇಲ್ಲವೇ?
07169010a ಕಥಂ ಚ ಶತಧಾ ಜಿಹ್ವಾ ನ ತೇ ಮೂರ್ಧಾ ಚ ದೀರ್ಯತೇ|
07169010c ಗುರುಮಾಕ್ರೋಶತಃ ಕ್ಷುದ್ರ ನ ಚಾಧರ್ಮೇಣ ಪಾತ್ಯಸೇ||
ಕ್ಷುದ್ರ! ಗುರುವನ್ನು ನಿಂದಿಸುವ ನಿನ್ನ ನಾಲಿಗೆ ಮತ್ತು ತಲೆಯು ಏಕೆ ನೂರು ಚೂರುಗಳಾಗಿ ಸೀಳಿಹೋಗುತ್ತಿಲ್ಲ? ಈ ಅಧರ್ಮದಿಂದ ನಿನ್ನ ಪತನವೇಕೆ ಇನ್ನೂ ಆಗಿಲ್ಲ?
07169011a ಯಾಪ್ಯಸ್ತ್ವಮಸಿ ಪಾರ್ಥೈಶ್ಚ ಸರ್ವೈಶ್ಚಾಂಧಕವೃಷ್ಣಿಭಿಃ|
07169011c ಯತ್ಕರ್ಮ ಕಲುಷಂ ಕೃತ್ವಾ ಶ್ಲಾಘಸೇ ಜನಸಂಸದಿ||
ಪಾಪಕರ್ಮವನ್ನೆಸಗಿ ಜನಸಂಸದಿಯಲ್ಲಿ ಆತ್ಮಶ್ಲಾಘನೆ ಮಾಡಿಕೊಳ್ಳುತ್ತಿರುವ ನೀನು ಎಲ್ಲ ಅಂಧಕ-ವೃಷ್ಣಿಯರ ಮತ್ತು ಪಾರ್ಥರ ಅವಹೇಳನೆಗೆ ಪಾತ್ರನಾಗಿರುವೆ!
07169012a ಅಕಾರ್ಯಂ ತಾದೃಶಂ ಕೃತ್ವಾ ಪುನರೇವ ಗುರುಂ ಕ್ಷಿಪನ್|
07169012c ವಧ್ಯಸ್ತ್ವಂ ನ ತ್ವಯಾರ್ಥೋಽಸ್ತಿ ಮುಹೂರ್ತಮಪಿ ಜೀವತಾ||
ಆ ರೀತಿ ಮಾಡಬಾರದುದನ್ನು ಮಾಡಿ ಪುನಃ ಗುರುವನ್ನು ನಿಂದಿಸುತ್ತಿರುವ ನೀನು ವಧ್ಯನು. ಮುಹೂರ್ತಕಾಲವೂ ನೀನು ಜೀವಿಸಿರುವುದರಲ್ಲಿ ಅರ್ಥವಿಲ್ಲ!
07169013a ಕಸ್ತ್ವೇತದ್ವ್ಯವಸೇದಾರ್ಯಸ್ತ್ವದನ್ಯಃ ಪುರುಷಾಧಮಃ|
07169013c ನಿಗೃಹ್ಯ ಕೇಶೇಷು ವಧಂ ಗುರೋರ್ಧರ್ಮಾತ್ಮನಃ ಸತಃ||
ಪುರುಷಾಧಮ! ನೀನಲ್ಲದೇ ಬೇರೆ ಯಾರು ತಾನೇ ಧರ್ಮಾತ್ಮನೂ ಸಾಧುವೂ ಆದ ಗುರುವಿನ ಶಿಖೆಯನ್ನು ಹಿಡಿದು ವಧಿಸಿಯಾನು?
07169014a ಸಪ್ತಾವರೇ ತಥಾ ಪೂರ್ವೇ ಬಾಂಧವಾಸ್ತೇ ನಿಪಾತಿತಾಃ|
07169014c ಯಶಸಾ ಚ ಪರಿತ್ಯಕ್ತಾಸ್ತ್ವಾಂ ಪ್ರಾಪ್ಯ ಕುಲಪಾಂಸನಂ||
ಕುಲಗೇಡಿಯಾದ ನಿನ್ನನ್ನು ಪಡೆದು ನಿನ್ನ ಹಿಂದಿನ ಏಳು ತಲೆಮಾರಿನ ಬಾಂಧವರೂ ಯಶಸ್ಸಿನಿಂದ ಪರಿತ್ಯಕ್ತರಾಗಿ ನರಕಕ್ಕೆ ಬಿದ್ದಿರಬಹುದು.
07169015a ಉಕ್ತವಾಂಶ್ಚಾಪಿ ಯತ್ಪಾರ್ಥಂ ಭೀಷ್ಮಂ ಪ್ರತಿ ನರರ್ಷಭಂ|
07169015c ತಥಾಂತೋ ವಿಹಿತಸ್ತೇನ ಸ್ವಯಮೇವ ಮಹಾತ್ಮನಾ||
ಭೀಷ್ಮನ ಕುರಿತು ನರರ್ಷಭ ಪಾರ್ಥನಿಗೆ ಹೇಳುತ್ತಿರುವೆಯಲ್ಲವೇ? ಆ ಮಹಾತ್ಮ ಭೀಷ್ಮನು ಸ್ವಯಂ ತಾನೇ ತನ್ನ ಅಂತ್ಯವು ಹೀಗಾಗಬೇಕೆಂದು ನಿರ್ದೇಶಿಸಿರಲಿಲ್ಲವೇ?
07169016a ತಸ್ಯಾಪಿ ತವ ಸೋದರ್ಯೋ ನಿಹಂತಾ ಪಾಪಕೃತ್ತಮಃ|
07169016c ನಾನ್ಯಃ ಪಾಂಚಾಲಪುತ್ರೇಭ್ಯೋ ವಿದ್ಯತೇ ಭುವಿ ಪಾಪಕೃತ್||
ಭೀಷ್ಮನನ್ನು ಕೂಡ ನಿನ್ನ ಪಾಪಕಾರಿ ಸಹೋದರನೇ ಸಂಹರಿಸಿದನು! ನೀವಿಬ್ಬರು ಪಾಂಚಾಲಪುತ್ರರ ಹೊರತಾಗಿ ಪಾಪಿಷ್ಟರಾಗಿರುವವರು ಈ ಭುಮಿಯಲ್ಲಿಯೇ ಬೇರೆ ಯಾರಿಲ್ಲ!
07169017a ಸ ಚಾಪಿ ಸೃಷ್ಟಃ ಪಿತ್ರಾ ತೇ ಭೀಷ್ಮಸ್ಯಾಂತಕರಃ ಕಿಲ|
07169017c ಶಿಖಂಡೀ ರಕ್ಷಿತಸ್ತೇನ ಸ ಚ ಮೃತ್ಯುರ್ಮಹಾತ್ಮನಃ||
ಅವನೂ ಕೂಡ ಭೀಷ್ಮನ ಅಂತಕನಾಗಿ ನಿನ್ನ ತಂದೆಯಿಂದ ಉತ್ಪನ್ನನಾಗಿಲ್ಲವೇ? ಆ ಮಹಾತ್ಮನ ಮೃತ್ಯುವಾದ ಶಿಖಂಡಿಯನ್ನು ನಿನ್ನ ತಂದೆಯೇ ರಕ್ಷಿಸಿದನು.
07169018a ಪಾಂಚಾಲಾಶ್ಚಲಿತಾ ಧರ್ಮಾತ್ ಕ್ಷುದ್ರಾ ಮಿತ್ರಗುರುದ್ರುಹಃ|
07169018c ತ್ವಾಂ ಪ್ರಾಪ್ಯ ಸಹಸೋದರ್ಯಂ ಧಿಕ್ಕೃತಂ ಸರ್ವಸಾಧುಭಿಃ||
ಸಹೋದರ ಶಿಖಂಡಿಯೊಂದಿಗೆ ನಿನ್ನನ್ನು ಪಡೆದ ಪಾಂಚಾಲರು ಅಧರ್ಮಿಗಳೂ, ಕ್ಷುದ್ರರೂ, ಮಿತ್ರ-ಗುರುದ್ರೋಹಿಗಳೆಂದೆನಿಸಿಕೊಂಡು ಸರ್ವ ಸಾಧುಗಳ ಧಿಕ್ಕಾರಕ್ಕೆ ಪಾತ್ರರಾಗಿದ್ದಾರೆ.
07169019a ಪುನಶ್ಚೇದೀದೃಶೀಂ ವಾಚಂ ಮತ್ಸಮೀಪೇ ವದಿಷ್ಯಸಿ|
07169019c ಶಿರಸ್ತೇ ಪಾತಯಿಷ್ಯಾಮಿ ಗದಯಾ ವಜ್ರಕಲ್ಪಯಾ||
ಒಂದುವೇಳೆ ಈ ರೀತಿಯ ಮಾತನ್ನು ಪುನಃ ನನ್ನ ಸಮೀಪದಲ್ಲಿ ನೀನು ಹೇಳಿದ್ದೇ ಆದರೆ ವಜ್ರದಂತಿರುವ ಗದೆಯಿಂದ ನಿನ್ನ ಶಿರವನ್ನು ಕೆಳಗುರುಳಿಸುತ್ತೇನೆ!”
07169020a ಸಾತ್ವತೇನೈವಮಾಕ್ಷಿಪ್ತಃ ಪಾರ್ಷತಃ ಪರುಷಾಕ್ಷರಂ|
07169020c ಸಂರಬ್ಧಃ ಸಾತ್ಯಕಿಂ ಪ್ರಾಹ ಸಂಕ್ರುದ್ಧಃ ಪ್ರಹಸನ್ನಿವ||
ಈ ರೀತಿ ಕ್ರೂರಶಬ್ಧಗಳಿಂದ ಸಾತ್ವತನು ಪಾರ್ಷತನನ್ನು ಆಕ್ಷೇಪಿಸಲು, ಪರಮಕ್ರುದ್ಧನಾದ ಧೃಷ್ಟದ್ಯುಮ್ನನು ನಗುತ್ತಿರುವನೋ ಎನ್ನುವಂತೆ ಹೇಳಿದನು:
07169021a ಶ್ರೂಯತೇ ಶ್ರೂಯತೇ ಚೇತಿ ಕ್ಷಮ್ಯತೇ ಚೇತಿ ಮಾಧವ|
07169021c ನ ಚಾನಾರ್ಯ ಶುಭಂ ಸಾಧುಂ ಪುರುಷಂ ಕ್ಷೇಪ್ತುಮರ್ಹಸಿ||
“ಮಾಧವ! ನಿನ್ನ ಮಾತನ್ನು ಕೇಳುತ್ತಲೇ ಇದ್ದೇನೆ. ಹೇಳಿಕೊಂಡಿರಲೆಂದು ಕ್ಷಮಿಸುತ್ತಲೂ ಇದ್ದೇನೆ. ಆದರೆ ಶುಭ ಸಾಧುಪುರುಷರನ್ನು ಅವಹೇಳನಮಾಡುವುದು ಅನಾರ್ಯ.
07169022a ಕ್ಷಮಾ ಪ್ರಶಸ್ಯತೇ ಲೋಕೇ ನ ತು ಪಾಪೋಽರ್ಹತಿ ಕ್ಷಮಾಂ|
07169022c ಕ್ಷಮಾವಂತಂ ಹಿ ಪಾಪಾತ್ಮಾ ಜಿತೋಽಯಮಿತಿ ಮನ್ಯತೇ||
ಲೋಕದಲ್ಲಿ ಕ್ಷಮೆಗೆ ಪ್ರಾಶಸ್ತ್ಯವಿದೆ. ಆದರೆ ಪಾಪಿಷ್ಟರು ಕ್ಷಮೆಗೆ ಅರ್ಹರರಲ್ಲ. ಕ್ಷಮಾವಂತನೇ ಸೋತುಹೋದನೆಂದು ಪಾಪಾತ್ಮರು ತಿಳಿದುಕೊಂಡುಬಿಡುತ್ತಾರೆ.
07169023a ಸ ತ್ವಂ ಕ್ಷುದ್ರಸಮಾಚಾರೋ ನೀಚಾತ್ಮಾ ಪಾಪನಿಶ್ಚಯಃ|
07169023c ಆ ಕೇಶಾಗ್ರಾನ್ನಖಾಗ್ರಾಚ್ಚ ವಕ್ತವ್ಯೋ ವಕ್ತುಮಿಚ್ಚಸಿ||
ನೀನು ಸ್ವತಃ ಕ್ಷುದ್ರಸಮಾಚಾರದವನು. ಕಾಲುಗುರಿನ ತುದಿಯಿಂದ ಹಿಡಿದು ಶಿಖಾಗ್ರದವರೆಗೂ ನಿನ್ನಲ್ಲಿ ಪಾಪವೇ ತುಂಬಿದೆ. ನೀಚಾತ್ಮನಾದ ನೀನು ಮಾತನಾಡಲು ಬಯಸಿ ಮಾತನಾಡುತ್ತಿರುವೆಯಷ್ಟೆ!
07169024a ಯಃ ಸ ಭೂರಿಶ್ರವಾಶ್ಚಿನ್ನೇ ಭುಜೇ ಪ್ರಾಯಗತಸ್ತ್ವಯಾ|
07169024c ವಾರ್ಯಮಾಣೇನ ನಿಹತಸ್ತತಃ ಪಾಪತರಂ ನು ಕಿಂ||
ಭುಜವು ತುಂಡಾಗಿ ಪ್ರಾಯಗತನಾಗಿದ್ದ ಭೂರಿಶ್ರವನನ್ನು ಇತರರು ತಡೆಹಿಡಿಯುತ್ತಿದ್ದರೂ ನೀನು ಸಂಹರಿಸಿದೆ. ಅದಕ್ಕಿಂತ ಹೆಚ್ಚಿನ ಪಾಪವು ಯಾವುದಿದೆ?
07169025a ವ್ಯೂಹಮಾನೋ ಮಯಾ ದ್ರೋಣೋ ದಿವ್ಯೇನಾಸ್ತ್ರೇಣ ಸಂಯುಗೇ|
07169025c ವಿಸೃಷ್ಟಶಸ್ತ್ರೋ ನಿಹತಃ ಕಿಂ ತತ್ರ ಕ್ರೂರ ದುಷ್ಕೃತಂ||
ಯುದ್ಧದಲ್ಲಿ ಶಸ್ತ್ರಗಳನ್ನು ಬಿಸುಟು ದಿವ್ಯಾಸ್ತ್ರಗಳಿಂದ ಆಕ್ರಮಣಿಸುತ್ತಿದ್ದ ದ್ರೋಣನನ್ನು ನಾನು ಕೊಂದಿದುರಲ್ಲಿ ಕ್ರೂರ ದುಷ್ಕೃತವೇನಿದೆ?
07169026a ಅಯುಧ್ಯಮಾನಂ ಯಸ್ತ್ವಾಜೌ ತಥಾ ಪ್ರಾಯಗತಂ ಮುನಿಂ|
07169026c ಚಿನ್ನಬಾಹುಂ ಪರೈರ್ಹನ್ಯಾತ್ಸಾತ್ಯಕೇ ಸ ಕಥಂ ಭವೇತ್||
ಸಾತ್ಯಕೇ! ಯುದ್ಧಮಾಡದೇ ಇದ್ದ, ಪ್ರಾಯಗತನಾಗಿದ್ದ, ಬಾಹುವು ತುಂಡಾಗಿರುವ ಮುನಿಯನ್ನು ಕೊಂದು ಇತರರಿಗೆ ಏಕೆ ಉಪದೇಶಿಸುತ್ತಿರುವೆ?
07169027a ನಿಹತ್ಯ ತ್ವಾಂ ಯದಾ ಭೂಮೌ ಸ ವಿಕ್ರಾಮತಿ ವೀರ್ಯವಾನ್|
07169027c ಕಿಂ ತದಾ ನ ನಿಹಂಸ್ಯೇನಂ ಭೂತ್ವಾ ಪುರುಷಸತ್ತಮಃ||
ಆ ವೀರ್ಯವಾನನು ನಿನ್ನನ್ನು ನೆಲ್ಲಕ್ಕೆ ಕೆಡವಿ ಎಳೆದಾಡುತ್ತಿರುವಾಗ ನೀನು ಪುರುಷಸತ್ತಮನಾಗಿದ್ದುಕೊಂಡು ಅವನನ್ನು ಏಕೆ ಆಗ ಕೊಲ್ಲಲಿಲ್ಲ?
07169028a ತ್ವಯಾ ಪುನರನಾರ್ಯೇಣ ಪೂರ್ವಂ ಪಾರ್ಥೇನ ನಿರ್ಜಿತಃ|
07169028c ಯದಾ ತದಾ ಹತಃ ಶೂರಃ ಸೌಮದತ್ತಿಃ ಪ್ರತಾಪವಾನ್||
ಮೊದಲೇ ಪಾರ್ಥನಿಂದ ಸೋತಿದ್ದ ಪ್ರತಾಪವಾನ್ ಶೂರ ಸೌಮದತ್ತಿಯನ್ನು ಪುನಃ ನೀನು ಅನಾರ್ಯನಂತೆ ಸಂಹರಿಸಿದೆ!
07169029a ಯತ್ರ ಯತ್ರ ತು ಪಾಂಡೂನಾಂ ದ್ರೋಣೋ ದ್ರಾವಯತೇ ಚಮೂಂ|
07169029c ಕಿರಂ ಶರಸಹಸ್ರಾಣಿ ತತ್ರ ತತ್ರ ಪ್ರಯಾಮ್ಯಹಂ||
ಆದರೆ ನಾನು ಮಾತ್ರ ಎಲ್ಲೆಲ್ಲಿ ದ್ರೋಣನು ಸಹಸ್ರಾರು ಬಾಣಗಳನ್ನು ಎರಚಿ ಪಾಂಡವ ಸೇನೆಯನ್ನು ಪಲಾಯನಗೊಳಿಸುತ್ತಿದ್ದನೋ ಅಲ್ಲಲ್ಲಿಗೆ ಹೋಗಿ ಅವನೊಂದಿಗೆ ಹೋರಾಡುತ್ತಿದ್ದೆನು.
07169030a ಸ ತ್ವಮೇವಂವಿಧಂ ಕೃತ್ವಾ ಕರ್ಮ ಚಾಂಡಾಲವತ್ಸ್ವಯಂ|
07169030c ವಕ್ತುಮಿಚ್ಚಸಿ ವಕ್ತವ್ಯಃ ಕಸ್ಮಾನ್ಮಾಂ ಪರುಷಾಣ್ಯಥ||
ಸ್ವಯಂ ನೀನೇ ಈ ರೀತಿಯ ಚಾಂಡಾಲಕೃತ್ಯವನ್ನೆಸಗಿ ಹೇಗೆ ತಾನೆ ನೀನು ನನ್ನ ಕುರಿತು ಕ್ರೂರವಾಗಿ ಹೀಗೆ ಮಾತನಾಡಲು ಬಯಸುವೆ?
07169031a ಕರ್ತಾ ತ್ವಂ ಕರ್ಮಣೋಗ್ರಸ್ಯ ನಾಹಂ ವೃಷ್ಣಿಕುಲಾಧಮ|
07169031c ಪಾಪಾನಾಂ ಚ ತ್ವಮಾವಾಸಃ ಕರ್ಮಣಾಂ ಮಾ ಪುನರ್ವದ||
ವೃಷ್ಣಿಕುಲಾಧಮ! ಈ ರೀತಿಯ ಉಗ್ರಕರ್ಮವನ್ನು ಮಾಡಿದವನು ನೀನೇ. ನಾನಲ್ಲ! ಪಾಪಕರ್ಮಗಳೆಲ್ಲವೂ ನಿನ್ನಲ್ಲಿಯೇ ನೆಲೆಸಿವೆ. ಪುನಃ ಮಾತನಾಡಬೇಡ!
07169032a ಜೋಷಮಾಸ್ಸ್ವ ನ ಮಾಂ ಭೂಯೋ ವಕ್ತುಮರ್ಹಸ್ಯತಃ ಪರಂ|
07169032c ಅಧರೋತ್ತರಮೇತದ್ಧಿ ಯನ್ಮಾ ತ್ವಂ ವಕ್ತುಮಿಚ್ಛಸಿ||
ಸುಮ್ಮನಾಗು! ಪುನಃ ನನ್ನೊಡನೆ ಈ ರೀತಿ ಮಾತನಾಡಬೇಡ! ನನಗೆ ನೀನು ಏನು ಹೇಳಲಿಚ್ಛಿಸಿದ್ದೀಯೋ ಅದಕ್ಕೂ ನೀಚವಾದ ಉತ್ತರವಿದೆ!
07169033a ಅಥ ವಕ್ಷ್ಯಸಿ ಮಾಂ ಮೌರ್ಖ್ಯಾದ್ಭೂಯಃ ಪರುಷಮೀದೃಶಂ|
07169033c ಗಮಯಿಷ್ಯಾಮಿ ಬಾಣೈಸ್ತ್ವಾಂ ಯುಧಿ ವೈವಸ್ವತಕ್ಷಯಂ||
ಮೂರ್ಖತನದಿಂದ ನನ್ನ ಕುರಿತು ಪುನಃ ಈ ರೀತಿಯ ಕಟುನುಡಿಗಳನ್ನಾಡಿದರೆ ಯುದ್ಧದಲ್ಲಿ ಬಾಣಗಳಿಂದ ನಿನ್ನನ್ನು ವೈವಸ್ವತಕ್ಷಯಕ್ಕೆ ಕಳುಹಿಸುತ್ತೇನೆ!
07169034a ನ ಚೈವ ಮೂರ್ಖ ಧರ್ಮೇಣ ಕೇವಲೇನೈವ ಶಕ್ಯತೇ|
07169034c ತೇಷಾಮಪಿ ಹ್ಯಧರ್ಮೇಣ ಚೇಷ್ಟಿತಂ ಶೃಣು ಯಾದೃಶಂ||
ಮೂರ್ಖ! ಕೇವಲ ಧರ್ಮದಿಂದ ಜಯಗಳಿಸಲು ಶಕ್ಯವಿಲ್ಲ. ಅವರೂ ಕೂಡ ಹೇಗೆ ಅಧರ್ಮದಿಂದ ನಡೆದುಕೊಂಡಿದ್ದರು ಎನ್ನುವುದನ್ನು ಕೇಳು!
07169035a ವಂಚಿತಃ ಪಾಂಡವಃ ಪೂರ್ವಮಧರ್ಮೇಣ ಯುಧಿಷ್ಠಿರಃ|
07169035c ದ್ರೌಪದೀ ಚ ಪರಿಕ್ಲಿಷ್ಟಾ ತಥಾಧರ್ಮೇಣ ಸಾತ್ಯಕೇ||
ಸಾತ್ಯಕೇ! ಹಿಂದೆ ಅವರು ಪಾಂಡವ ಯುಧಿಷ್ಠಿರನನ್ನು ಅಧರ್ಮದಿಂದಲೇ ವಂಚಿಸಿದರು. ಹಾಗೆಯೇ ಅಧರ್ಮದಿಂದ ದ್ರೌಪದಿಯನ್ನು ಕೂಡ ಕಾಡಿದರು.
07169036a ಪ್ರವ್ರಾಜಿತಾ ವನಂ ಸರ್ವೇ ಪಾಂಡವಾಃ ಸಹ ಕೃಷ್ಣಯಾ|
07169036c ಸರ್ವಸ್ವಮಪಕೃಷ್ಟಂ ಚ ತಥಾಧರ್ಮೇಣ ಬಾಲಿಶ||
ಬಾಲಿಶನೇ! ಕೃಷ್ಣೆಯೊಡನೆ ಪಾಂಡವರೆಲ್ಲರೂ ವನದಲ್ಲಿ ಪರಿವ್ರಾಜಕರ ಜೀವನ ನಡೆಸಿದರು. ಈ ಎಲ್ಲ ಕಷ್ಟವನ್ನೂ ಅವರಿಗೆ ಅಧರ್ಮದಿಂದಲೇ ನೀಡಲಾಯಿತಲ್ಲವೇ?
07169037a ಅಧರ್ಮೇಣಾಪಕೃಷ್ಟಶ್ಚ ಮದ್ರರಾಜಃ ಪರೈರಿತಃ|
07169037c ಇತೋಽಪ್ಯಧರ್ಮೇಣ ಹತೋ ಭೀಷ್ಮಃ ಕುರುಪಿತಾಮಹಃ|
07169037e ಭೂರಿಶ್ರವಾ ಹ್ಯಧರ್ಮೇಣ ತ್ವಯಾ ಧರ್ಮವಿದಾ ಹತಃ||
ಮದ್ರರಾಜನನ್ನು ಶತ್ರುಗಳು ಅಧರ್ಮದಿಂದಲೇ ತಮ್ಮೊಡನೆ ಸೆಳೆದುಕೊಳ್ಳಲಿಲ್ಲವೇ? ನಮ್ಮ ಕಡೆಯ ಅಧರ್ಮದಿಂದ ಕುರುಪಿತಾಮಹ ಭೀಷ್ಮನು ಹತನಾದನು. ನಿನ್ನ ಅಧರ್ಮದಿಂದಾಗಿ ಧರ್ಮವಿದ ಭೂರಿಶ್ರವನು ಹತನಾದನು.
07169038a ಏವಂ ಪರೈರಾಚರಿತಂ ಪಾಂಡವೇಯೈಶ್ಚ ಸಂಯುಗೇ|
07169038c ರಕ್ಷಮಾಣೈರ್ಜಯಂ ವೀರೈರ್ಧರ್ಮಜ್ಞೈರಪಿ ಸಾತ್ವತ||
ಸಾತ್ವತ! ಹೀಗೆ ಯುದ್ಧದಲ್ಲಿ ಜಯವನ್ನು ಪಾಲಿಸಲೋಸುಗ ಪಾಂಡವರು ಮತ್ತು ಅವರ ಶತ್ರುಗಳು ಧರ್ಮಜ್ಞರಾಗಿದ್ದರೂ ಅಧರ್ಮವನ್ನು ಆಚರಿಸಿರುವರು.
07169039a ದುರ್ಜ್ಞೇಯಃ ಪರಮೋ ಧರ್ಮಸ್ತಥಾಧರ್ಮಃ ಸುದುರ್ವಿದಃ|
07169039c ಯುಧ್ಯಸ್ವ ಕೌರವೈಃ ಸಾರ್ಧಂ ಮಾ ಗಾಃ ಪಿತೃನಿವೇಶನಂ||
ಪರಮ ಧರ್ಮವು ಯಾವುದೆನ್ನುವುದೆಂದು ತಿಳಿಯಲು ಕಷ್ಟ. ಹಾಗೆಯೇ ಅಧರ್ಮವೇನೆಂದು ತಿಳಿಯುವುದೂ ಕಷ್ಟವೇ ಸರಿ. ಯುದ್ಧಮಾಡು! ಸುಮ್ಮನೇ ಕೌರವರೊಂದಿಗೆ ಪಿತೃಲೋಕಗಳಿಗೆ ಹೋಗಬೇಡ!”
07169040a ಏವಮಾದೀನಿ ವಾಕ್ಯಾನಿ ಕ್ರೂರಾಣಿ ಪರುಷಾಣಿ ಚ|
07169040c ಶ್ರಾವಿತಃ ಸಾತ್ಯಕಿಃ ಶ್ರೀಮಾನಾಕಂಪಿತ ಇವಾಭವತ್||
ಇವೇ ಮೊದಲಾದ ಕ್ರೂರ ಕಠಿನ ಮಾತುಗಳನ್ನು ಕೇಳಿದ ಶ್ರೀಮಾನ್ ಸಾತ್ಯಕಿಯ ಮೈ ನಡುಗಿತು.
07169041a ತಚ್ಚ್ರುತ್ವಾ ಕ್ರೋಧತಾಮ್ರಾಕ್ಷಃ ಸಾತ್ಯಕಿಸ್ತ್ವಾದದೇ ಗದಾಂ|
07169041c ವಿನಿಃಶ್ವಸ್ಯ ಯಥಾ ಸರ್ಪಃ ಪ್ರಣಿಧಾಯ ರಥೇ ಧನುಃ||
ಅದನ್ನು ಕೇಳಿ ಕ್ರೋಧದಿಂದ ಕಣ್ಣುಗಳು ಕೆಂಪಾಗಲು ಸಾತ್ಯಕಿಯು ಧನುಸ್ಸನ್ನು ರಥದಲ್ಲಿಯೇ ಇರಿಸಿ ಸರ್ಪದಂತೆ ಭುಸುಗುಟ್ಟುತ್ತಾ ಗದೆಯೊಂದನ್ನು ಎತ್ತಿಕೊಂಡನು.
07169042a ತತೋಽಭಿಪತ್ಯ ಪಾಂಚಾಲ್ಯಂ ಸಂರಂಭೇಣೇದಮಬ್ರವೀತ್|
07169042c ನ ತ್ವಾಂ ವಕ್ಷ್ಯಾಮಿ ಪರುಷಂ ಹನಿಷ್ಯೇ ತ್ವಾಂ ವಧಕ್ಷಮಂ||
ಆಗ ಪಾಂಚಾಲ್ಯನ ಎದುರಾಗಿ ಅತ್ಯಂತ ಕೋಪದಿಂದ “ಇನ್ನು ನಿನ್ನೊಡನೆ ಕಠೋರವಾದ ಮಾತಗಳನ್ನಾಡುವುದಿಲ್ಲ! ವಧಾರ್ಹನಾದ ನಿನ್ನನ್ನು ಈಗಲೇ ಕೊಂದುಬಿಡುತ್ತೇನೆ!” ಎಂದನು.
07169043a ತಮಾಪತಂತಂ ಸಹಸಾ ಮಹಾಬಲಮಮರ್ಷಣಂ|
07169043c ಪಾಂಚಾಲ್ಯಾಯಾಭಿಸಂಕ್ರುದ್ಧಮಂತಕಾಯಾಂತಕೋಪಮಂ||
07169044a ಚೋದಿತೋ ವಾಸುದೇವೇನ ಭೀಮಸೇನೋ ಮಹಾಬಲಃ|
07169044c ಅವಪ್ಲುತ್ಯ ರಥಾತ್ತೂರ್ಣಂ ಬಾಹುಭ್ಯಾಂ ಸಮವಾರಯತ್||
ತಕ್ಷಣವೇ ವಾಸುದೇವನಿಂದ ಚೋದಿತನಾದ ಮಹಾಬಲ ಭೀಮಸೇನನು ರಥದಿಂದ ಹಾರಿ ತನ್ನ ಎರಡೂ ಬಾಹುಗಳಿಂದ ಹೀಗೆ ಸಂಕ್ರುದ್ಧನಾಗಿ ಪಾಂಚಾಲ್ಯನ ಮೇಲೆ ಬೀಳುತ್ತಿದ್ದ ಅಂತಕನಿಗೂ ಅಂತಕನಂತಿದ್ದ ಆ ಮಹಾಬಲ ಅಮರ್ಷಣನನ್ನು ಭದ್ರವಾಗಿ ಹಿಡಿದು ಮುಂದೆಹೋಗದಂತೆ ತಡೆದನು.
07169045a ದ್ರವಮಾಣಂ ತಥಾ ಕ್ರುದ್ಧಂ ಸಾತ್ಯಕಿಂ ಪಾಂಡವೋ ಬಲೀ|
07169045c ಪ್ರಸ್ಕಂದಮಾನಮಾದಾಯ ಜಗಾಮ ಬಲಿನಂ ಬಲಾತ್||
ಹಾಗೆ ಕ್ರುದ್ಧನಾಗಿ ಓಡಿಹೋಗುತ್ತಿದ್ದ ಸಾತ್ಯಕಿಯನ್ನು ಬಲಶಾಲಿ ಪಾಂಡವನು ಹಿಡಿದು ತಡೆದಿದ್ದರೂ ಸಾತ್ಯಕಿಯು ಬಲಾತ್ಕಾರವಾಗಿ ಅವನನ್ನೇ ಎಳೆದುಕೊಂಡು ಮುಂದೆ ಸಾಗುತ್ತಿದ್ದನು.
07169046a ಸ್ಥಿತ್ವಾ ವಿಷ್ಟಭ್ಯ ಚರಣೌ ಭೀಮೇನ ಶಿನಿಪುಂಗವಃ|
07169046c ನಿಗೃಹೀತಃ ಪದೇ ಷಷ್ಠೇ ಬಲೇನ ಬಲಿನಾಂ ವರಃ||
ಎರಡು ಪಾದಗಳನ್ನೂ ಭದ್ರವಾಗಿ ಊರಿಕೊಂಡು ನಿಂತಿದ್ದ ಭೀಮನು ಬಲಿಷ್ಠರಲ್ಲಿ ಶ್ರೇಷ್ಠನಾಗಿದ್ದ ಶಿನಿಪುಂಗವನನ್ನು ಆರನೆಯ ಹೆಜ್ಜೆಯನ್ನಿಡುವುದರೊಳಗೆ ತಡೆದು ನಿಲ್ಲಿಸಿದನು.
07169047a ಅವರುಹ್ಯ ರಥಾತ್ತಂ ತು ಹ್ರಿಯಮಾಣಂ ಬಲೀಯಸಾ|
07169047c ಉವಾಚ ಶ್ಲಕ್ಷ್ಣಯಾ ವಾಚಾ ಸಹದೇವೋ ವಿಶಾಂ ಪತೇ||
ವಿಶಾಂಪತೇ! ಅಷ್ಟರಲ್ಲಿ ಸಹದೇವನು ತನ್ನ ರಥದಿಂದಿಳಿದು ಬಲಶಾಲಿ ಭೀಮನಿಂದ ಹಿಡಿಯಲ್ಪಟ್ಟಿದ್ದ ಸಾತ್ಯಕಿಗೆ ಮಧುರವಾದ ಈ ಮಾತುಗಳನ್ನಾಡಿದನು:
07169048a ಅಸ್ಮಾಕಂ ಪುರುಷವ್ಯಾಘ್ರ ಮಿತ್ರಮನ್ಯನ್ನ ವಿದ್ಯತೇ|
07169048c ಪರಮಂಧಕವೃಷ್ಣಿಭ್ಯಃ ಪಾಂಚಾಲೇಭ್ಯಶ್ಚ ಮಾಧವ||
“ಪುರುಷವ್ಯಾಘ್ರ! ಮಾಧವ! ನಮಗೆ ಅಂಧಕ-ವೃಷ್ಣಿಗಳನ್ನೂ ಪಾಂಚಾಲರನ್ನೂ ಬಿಟ್ಟರೆ ಬೇರೆ ಯಾವ ಮಿತ್ರರೂ ಇಲ್ಲ.
07169049a ತಥೈವಾಂಧಕವೃಷ್ಣೀನಾಂ ತವ ಚೈವ ವಿಶೇಷತಃ|
07169049c ಕೃಷ್ಣಸ್ಯ ಚ ತಥಾಸ್ಮತ್ತೋ ಮಿತ್ರಮನ್ಯನ್ನ ವಿದ್ಯತೇ||
ಹಾಗೆಯೇ ಅಂಧಕ-ವೃಷ್ಣಿಗಳಿಗೆ ಅದರಲ್ಲೂ ವಿಶೇಷವಾಗಿ ನಿನಗೆ ಮತ್ತು ಕೃಷ್ಣನಿಗೆ ನಮ್ಮನ್ನು ಬಿಟ್ಟು ಬೇರೆ ಯಾವ ಮಿತ್ರರೂ ಇಲ್ಲ.
07169050a ಪಾಂಚಾಲಾನಾಂ ಚ ವಾರ್ಷ್ಣೇಯ ಸಮುದ್ರಾಂತಾಂ ವಿಚಿನ್ವತಾಂ|
07169050c ನಾನ್ಯದಸ್ತಿ ಪರಂ ಮಿತ್ರಂ ಯಥಾ ಪಾಂಡವವೃಷ್ಣಯಃ||
ವಾರ್ಷ್ಣೇಯ! ಪಾಂಚಾಲರಿಗೆ ಕೂಡ ಅವರು ಸಮುದ್ರಪರ್ಯಂತವಾಗಿ ಹುಡುಕಿದರೂ ಪಾಂಡವ-ವೃಷ್ಣಿಗಳಿಗಿಂತಲೂ ಉತ್ತಮ ಮಿತ್ರರು ಯಾರೂ ಇರುವುದಿಲ್ಲ.
07169051a ಸ ಭವಾನೀದೃಶಂ ಮಿತ್ರಂ ಮನ್ಯತೇ ಚ ಯಥಾ ಭವಾನ್|
07169051c ಭವಂತಶ್ಚ ಯಥಾಸ್ಮಾಕಂ ಭವತಾಂ ಚ ತಥಾ ವಯಂ||
ನೀನು ನಮ್ಮನ್ನು ಎಂತಹ ಮಿತ್ರರೆಂದು ಭಾವಿಸುತ್ತಿರುವೆಯೋ ನಾವೂ ಸಹ ನಿನ್ನನ್ನು ಅಂತಹ ಮಿತ್ರನೆಂದೇ ಭಾವಿಸಿರುತ್ತೇವೆ. ನೀವು ನಮಗೆ ಹೇಗೋ ನಾವೂ ಸಹ ನಿಮಗೆ ಹಾಗೆಯೇ ಇದ್ದೇವೆ.
07169052a ಸ ಏವಂ ಸರ್ವಧರ್ಮಜ್ಞೋ ಮಿತ್ರಧರ್ಮಮನುಸ್ಮರನ್|
07169052c ನಿಯಚ್ಚ ಮನ್ಯುಂ ಪಾಂಚಾಲ್ಯಾತ್ಪ್ರಶಾಮ್ಯ ಶಿನಿಪುಂಗವ||
ಸರ್ವಧರ್ಮಗಳನ್ನೂ ತಿಳಿದಿರುವವನೇ! ಶಿನಿಪುಂಗವ! ಮಿತ್ರಧರ್ಮವನ್ನು ಸ್ಮರಿಸಿಕೊಂಡು ಪಾಂಚಾಲ್ಯನ ಮೇಲಿರುವ ಸಿಟ್ಟನ್ನು ತಡೆಹಿಡಿದು ಶಾಂತನಾಗು!
07169053a ಪಾರ್ಷತಸ್ಯ ಕ್ಷಮ ತ್ವಂ ವೈ ಕ್ಷಮತಾಂ ತವ ಪಾರ್ಷತಃ|
07169053c ವಯಂ ಕ್ಷಮಯಿತಾರಶ್ಚ ಕಿಮನ್ಯತ್ರ ಶಮಾದ್ಭವೇತ್||
ಪಾರ್ಷತನನ್ನು ನೀನು ಕ್ಷಮಿಸಿಬಿಡು. ಪಾರ್ಷತನೂ ನಿನ್ನನ್ನು ಕ್ಷಮಿಸಿಬಿಡಲಿ. ನೀವಿಬ್ಬರೂ ಕ್ಷಮಾವಂತರಾಗಿರೆಂದು ನಾವು ಆಶಿಸುತ್ತೇವೆ. ಕ್ಷಮೆಗಿಂತಲೂ ಅಧಿಕವಾದುದು ಬೇರೆ ಏನಿದೆ?”
07169054a ಪ್ರಶಾಮ್ಯಮಾನೇ ಶೈನೇಯೇ ಸಹದೇವೇನ ಮಾರಿಷ|
07169054c ಪಾಂಚಾಲರಾಜಸ್ಯ ಸುತಃ ಪ್ರಹಸನ್ನಿದಮಬ್ರವೀತ್||
ಮಾರಿಷ! ಸಹದೇವನು ಹೀಗೆ ಶೈನೇಯನನ್ನು ಶಾಂತಗೊಳಿಸುತ್ತಿರಲು ಪಾಂಚಾಲರಾಜನ ಮಗನು ನಗುತ್ತಾ ಹೇಳಿದನು:
07169055a ಮುಂಚ ಮುಂಚ ಶಿನೇಃ ಪೌತ್ರಂ ಭೀಮ ಯುದ್ಧಮದಾನ್ವಿತಂ|
07169055c ಆಸಾದಯತು ಮಾಮೇಷ ಧರಾಧರಮಿವಾನಿಲಃ||
“ಭೀಮ! ಯುದ್ಧಮದಾನ್ವಿತ ಈ ಶಿನಿಯ ಮೊಮ್ಮಗನನ್ನು ಬಿಟ್ಟುಬಿಡು! ಚಂಡಮಾರುತವು ಪರ್ವತವನ್ನು ಹೇಗೋ ಹಾಗೆ ಇವನು ನನ್ನನ್ನು ಎದುರಿಸಲಿ!
07169056a ಯಾವದಸ್ಯ ಶಿತೈರ್ಬಾಣೈಃ ಸಂರಂಭಂ ವಿನಯಾಮ್ಯಹಂ|
07169056c ಯುದ್ಧಶ್ರದ್ಧಾಂ ಚ ಕೌಂತೇಯ ಜೀವಿತಸ್ಯ ಚ ಸಂಯುಗೇ||
ಕೌಂತೇಯ! ಈಗಲೇ ನಿಶಿತ ಬಾಣಗಳಿಂದ ಈ ಯಾದವನ ಕೋಪವನ್ನು, ಯುದ್ಧದಲ್ಲಿರುವ ಶ್ರದ್ಧೆಯನ್ನೂ ಮತ್ತು ಜೀವಿತವನ್ನೂ ಅಡಗಿಸುತ್ತೇನೆ!
07169057a ಕಿಂ ನು ಶಕ್ಯಂ ಮಯಾ ಕರ್ತುಂ ಕಾರ್ಯಂ ಯದಿದಮುದ್ಯತಂ|
07169057c ಸುಮಹತ್ಪಾಂಡುಪುತ್ರಾಣಾಮಾಯಾಂತ್ಯೇತೇ ಹಿ ಕೌರವಾಃ||
ಕೌರವರು ಮಹಾಸೇನೆಯೊಂದಿಗೆ ಪಾಂಡುಪುತ್ರರೊಡನೆ ಯುದ್ಧಕ್ಕಾಗಿ ಬರುತ್ತಿರುವ ಈ ಸಮಯದಲ್ಲಿ ನಾನಾದರೂ ಏನುತಾನೇ ಮಾಡಬಲ್ಲೆನು?
07169058a ಅಥ ವಾ ಫಲ್ಗುನಃ ಸರ್ವಾನ್ವಾರಯಿಷ್ಯತಿ ಸಂಯುಗೇ|
07169058c ಅಹಮಪ್ಯಸ್ಯ ಮೂರ್ಧಾನಂ ಪಾತಯಿಷ್ಯಾಮಿ ಸಾಯಕೈಃ||
ಅಥವಾ ಫಲ್ಗುನನು ಯುದ್ಧದಲ್ಲಿ ಅವರೆಲ್ಲರನ್ನೂ ತಡೆಯುತ್ತಾನೆ. ನಾನಾದರೋ ಸಾಯಕಗಳಿಂದ ಇವನ ತಲೆಯನ್ನು ನೆಲಕ್ಕೆ ಬೀಳಿಸುತ್ತೇನೆ!
07169059a ಮನ್ಯತೇ ಛಿನ್ನಬಾಹುಂ ಮಾಂ ಭೂರಿಶ್ರವಸಮಾಹವೇ|
07169059c ಉತ್ಸೃಜೈನಮಹಂ ವೈನಮೇಷ ಮಾಂ ವಾ ಹನಿಷ್ಯತಿ||
ಇವನು ನನ್ನನ್ನೂ ಯುದ್ಧದಲ್ಲಿ ಭುಜವನ್ನು ಕಳೆದುಕೊಂಡ ಭೂರಿಶ್ರವಸನೆಂದೇ ಭಾವಿಸಿದ್ದಾನೆ. ಇವನನ್ನು ಬಿಟ್ಟುಬಿಡು! ಇವನು ನನ್ನನ್ನು ಕೊಲ್ಲುತ್ತಾನೆ ಅಥವಾ ನಾನು ಇವನನ್ನು ಕೊಲ್ಲುತ್ತೇನೆ!”
07169060a ಶೃಣ್ವನ್ಪಾಂಚಾಲವಾಕ್ಯಾನಿ ಸಾತ್ಯಕಿಃ ಸರ್ಪವಚ್ಚ್ವಸನ್|
07169060c ಭೀಮಬಾಹ್ವಂತರೇ ಸಕ್ತೋ ವಿಸ್ಫುರತ್ಯನಿಶಂ ಬಲೀ||
ಪಾಂಚಾಲ್ಯನ ಮಾತುಗಳನ್ನು ಕೇಳಿ ಸಾತ್ಯಕಿಯು ಸರ್ಪದಂತೆ ದೀರ್ಘವಾಗಿ ನಿಟ್ಟುಸಿರುಬಿಡುತ್ತಾ ಭೀಮನ ಬಾಹುಬಂಧನದಿಂದ ಬಿಡಿಸಿಕೊಳ್ಳಲು ಚಡಪಡಿಸುತ್ತಿದ್ದನು.
07169061a ತ್ವರಯಾ ವಾಸುದೇವಶ್ಚ ಧರ್ಮರಾಜಶ್ಚ ಮಾರಿಷ|
07169061c ಯತ್ನೇನ ಮಹತಾ ವೀರೌ ವಾರಯಾಮಾಸತುಸ್ತತಃ||
ಮಾರಿಷ! ಆಗ ವಾಸುದೇವ ಮತ್ತು ಧರ್ಮರಾಜರು ತ್ವರೆಮಾಡಿ ಮಹಾ ಪ್ರಯತ್ನದಿಂದ ಆ ಇಬ್ಬರು ವೀರರನ್ನೂ ತಡೆದರು.
07169062a ನಿವಾರ್ಯ ಪರಮೇಷ್ವಾಸೌ ಕ್ರೋಧಸಂರಕ್ತಲೋಚನೌ|
07169062c ಯುಯುತ್ಸವಃ ಪರಾನ್ಸಂಖ್ಯೇ ಪ್ರತೀಯುಃ ಕ್ಷತ್ರಿಯರ್ಷಭಾಃ||
ಆಗ ಕ್ರೋಧದಿಂದ ಕಣ್ಣುಗಳು ಕೆಂಪಾಗಿದ್ದ ಆ ಪರಮೇಷ್ವಾಸ ಕ್ಷತ್ರಿಯರ್ಷಭರಿಬ್ಬರೂ ತಮ್ಮ ಜಗಳವನ್ನು ನಿಲ್ಲಿಸಿ ಎದುರಾಗಿ ಬರುತ್ತಿರುವ ಶತ್ರುಸೇನೆಯೊಡನೆ ಯುದ್ಧಮಾಡತೊಡಗಿದರು.”
ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ನಾರಾಯಣಾಸ್ತ್ರಮೋಕ್ಷಣಪರ್ವಣಿ ಧೃಷ್ಟದ್ಯುಮ್ನಸಾತ್ಯಕಿಕ್ರೋಧೇ ಏಕೋನಸಪ್ತತ್ಯಧಿಕಶತತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ನಾರಾಯಣಾಸ್ತ್ರಮೋಕ್ಷಣಪರ್ವದಲ್ಲಿ ಧೃಷ್ಟದ್ಯುಮ್ನಸಾತ್ಯಕಿಕ್ರೋಧ ಎನ್ನುವ ನೂರಾಅರವತ್ತೊಂಭತ್ತನೇ ಅಧ್ಯಾಯವು.
