Karna Parva: Chapter 56

ಕರ್ಣ ಪರ್ವ

೫೬

ಧೃತರಾಷ್ಟ್ರನು ಭೀಮಸೇನನ ಪರಾಕ್ರಮದ ಕುರಿತು ಕೇಳಿ ಅವನ ಮಕ್ಕಳು ಕುಶಲರಾಗಿದ್ದರೇ ಎಂದು ಸಂಜಯನನ್ನು ಪ್ರಶ್ನಿಸಿದುದು (೧-೭). ಭೀಮನ ಆಕ್ರಮಣದಿಂದ ಕೌರವ ಸೇನೆಯು ಪಲಾಯನಗೊಳ್ಳುತ್ತಿದ್ದ ಸಮಯದಲ್ಲಿ ಕರ್ಣನು ತನ್ನ ಪರಾಕ್ರಮದಿಂದ ಪಾಂಡವ ಸೇನೆಯನ್ನು ಧ್ವಂಸಗೊಳಿಸಿ ಅವು ಪಲಾಯನ ಗೊಳ್ಳುವಂತೆ ಮಾಡಿ ಕೌರವಸೇನೆಯು ರಣಕ್ಕೆ ಹಿಂದಿರುಗುವಂತೆ ಮಾಡಿದುದು (೮-೫೮).

08056001 ಧೃತರಾಷ್ಟ್ರ ಉವಾಚ|

08056001a ತತೋ ಭಗ್ನೇಷು ಸೈನ್ಯೇಷು ಭೀಮಸೇನೇನ ಸಂಯುಗೇ|

08056001c ದುರ್ಯೋಧನೋಽಬ್ರವೀತ್ಕಿಂ ನು ಸೌಬಲೋ ವಾಪಿ ಸಂಜಯ||

08056002a ಕರ್ಣೋ ವಾ ಜಯತಾಂ ಶ್ರೇಷ್ಠೋ ಯೋಧಾ ವಾ ಮಾಮಕಾ ಯುಧಿ|

08056002c ಕೃಪೋ ವಾ ಕೃತವರ್ಮಾ ಚ ದ್ರೌಣಿರ್ದುಃಶಾಸನೋಽಪಿ ವಾ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಯುದ್ಧದಲ್ಲಿ ಭೀಮಸೇನನಿಂದ ಸೇನೆಗಳು ನಾಶಗೊಳ್ಳಲು ದುರ್ಯೋಧನ, ಸೌಬಲ, ಅಥವಾ ವಿಜಯಿಗಳಲ್ಲಿ ಶ್ರೇಷ್ಠ ಕರ್ಣ ಅಥವಾ ಕೃಪ ಅಥವಾ ಕೃತವರ್ಮ, ಅಥವಾ ದ್ರೌಣಿ ಅಥವಾ ದುಃಶಾಸನ ಮತ್ತು ನನ್ನಕಡೆಯ ಯೋಧರು ಏನು ಹೇಳಿದರು?

08056003a ಅತ್ಯದ್ಭುತಮಿದಂ ಮನ್ಯೇ ಪಾಂಡವೇಯಸ್ಯ ವಿಕ್ರಮಂ|

08056003c ಯಥಾಪ್ರತಿಜ್ಞಂ ಯೋಧಾನಾಂ ರಾಧೇಯಃ ಕೃತವಾನಪಿ||

ಪ್ರತಿಜ್ಞೆಮಾಡಿದಂತೆ ಕರ್ಣನೇನೋ ಯುದ್ಧಮಾಡುತ್ತಿದ್ದನು. ಆದರೂ ನಮ್ಮ ಯೋಧರೊಡನೆ ತೋರಿಸಿದ ಪಾಂಡವೇಯ ಭೀಮನ ವಿಕ್ರಮವು ಅತಿ ಅದ್ಭುತವಾಗಿತ್ತೆಂದೇ ನನಗನ್ನಿಸುತ್ತದೆ.

08056004a ಕುರೂಣಾಮಪಿ ಸರ್ವೇಷಾಂ ಕರ್ಣಃ ಶತ್ರುನಿಷೂದನಃ|

08056004c ಶರ್ಮ ವರ್ಮ ಪ್ರತಿಷ್ಠಾ ಚ ಜೀವಿತಾಶಾ ಚ ಸಂಜಯ||

ಸಂಜಯ! ಶತ್ರುನಿಷೂದನ ಕರ್ಣನು ಕುರುಗಳೆಲ್ಲರ ಆಶ್ರಯ, ರಕ್ಷಕ, ಪ್ರತಿಷ್ಠಿತ ಯೋಧ ಮತ್ತು ಜೀವಿತಕ್ಕೆ ಆಶಾದಾಯಕನಾಗಿದ್ದನು.

08056005a ತತ್ಪ್ರಭಗ್ನಂ ಬಲಂ ದೃಷ್ಟ್ವಾ ಕೌಂತೇಯೇನಾಮಿತೌಜಸಾ|

08056005c ರಾಧೇಯಾನಾಮಾಧಿರಥಃ ಕರ್ಣಃ ಕಿಮಕರೋದ್ಯುಧಿ||

ಅಮಿತ ತೇಜಸ್ವಿ ಕೌಂತೇಯನಿಂದ ಸೇನೆಯು ಪ್ರಭಗ್ನವಾದುದನ್ನು ನೋಡಿ ಯುದ್ಧದಲ್ಲಿ ರಾಧೇಯ ಆಧಿರಥ ಕರ್ಣನು ಏನು ಮಾಡಿದನು?

08056006a ಪುತ್ರಾ ವಾ ಮಮ ದುರ್ಧರ್ಷಾ ರಾಜಾನೋ ವಾ ಮಹಾರಥಾಃ|

08056006c ಏತನ್ಮೇ ಸರ್ವಮಾಚಕ್ಷ್ವ ಕುಶಲೋ ಹ್ಯಸಿ ಸಂಜಯ||

ಸಂಜಯ! ನನ್ನ ಮಹಾರಥ ಪುತ್ರರು ಅಥವಾ ದುರ್ಧರ್ಷ ರಾಜ ಇವರು ಕುಶಲರಾಗಿದ್ದರೋ ಎನ್ನುವ ಎಲ್ಲವನ್ನೂ ನನಗೆ ಹೇಳು!”

08056007 ಸಂಜಯ ಉವಾಚ|

08056007a ಅಪರಾಹ್ಣೇ ಮಹಾರಾಜ ಸೂತಪುತ್ರಃ ಪ್ರತಾಪವಾನ್|

08056007c ಜಘಾನ ಸೋಮಕಾನ್ಸರ್ವಾನ್ಭೀಮಸೇನಸ್ಯ ಪಶ್ಯತಃ|

08056007e ಭೀಮೋಽಪ್ಯತಿಬಲಃ ಸೈನ್ಯಂ ಧಾರ್ತರಾಷ್ಟ್ರಂ ವ್ಯಪೋಥಯತ್||

ಸಂಜಯನು ಹೇಳಿದನು: “ಮಹಾರಾಜ! ಅಪರಾಹ್ಣದಲ್ಲಿ ಪ್ರತಾಪವಾನ್ ಸೂತಪುತ್ರನು ಭೀಮಸೇನನು ನೋಡುತ್ತಿದ್ದಂತೆಯೇ ಸೋಮಕರೆಲ್ಲರನ್ನೂ ಸಂಹರಿಸಿದನು. ಅತಿಬಲಶಾಲೀ ಭೀಮನೂ ಕೂಡ ಧಾರ್ತರಾಷ್ಟ್ರರ ಸೇನೆಯನ್ನು ಸದೆಬಡಿದನು.

08056008a ದ್ರಾವ್ಯಮಾಣಂ ಬಲಂ ದೃಷ್ಟ್ವಾ ಭೀಮಸೇನೇನ ಧೀಮತಾ|

08056008c ಯಂತಾರಮಬ್ರವೀತ್ಕರ್ಣಃ ಪಾಂಚಾಲಾನೇವ ಮಾ ವಹ||

ಧೀಮತ ಭೀಮಸೇನನಿಂದ ಬಲವು ಪಲಾಯನಗೊಳ್ಳುತ್ತಿರುವುದನ್ನು ನೋಡಿ ಕರ್ಣನು ಸಾರಥಿಗೆ “ಪಾಂಚಾಲರಿರುವಲ್ಲಿಗೆ ನನ್ನನ್ನು ಕೊಂಡೊಯ್ಯಿ!” ಎಂದನು.

08056009a ಮದ್ರರಾಜಸ್ತತಃ ಶಲ್ಯಃ ಶ್ವೇತಾನಶ್ವಾನ್ಮಹಾಜವಾನ್|

08056009c ಪ್ರಾಹಿಣೋಚ್ಚೇದಿಪಾಂಚಾಲಾನ್ಕರೂಷಾಂಶ್ಚ ಮಹಾಬಲಃ||

ಆಗ ಮಹಾಬಲ ಮದ್ರರಾಜ ಶಲ್ಯನು ಆ ಮಹಾವೇಗವುಳ್ಳ ಶ್ವೇತಾಶ್ವಗಳನ್ನು ಚೇದಿ-ಪಾಂಚಾಲ-ಕರೂಷರಿದ್ದಲ್ಲಿಗೆ ಓಡಿಸಿದನು.

08056010a ಪ್ರವಿಶ್ಯ ಚ ಸ ತಾಂ ಸೇನಾಂ ಶಲ್ಯಃ ಪರಬಲಾರ್ದನಃ|

08056010c ನ್ಯಯಚ್ಚತ್ತುರಗಾನ್ ಹೃಷ್ಟೋ ಯತ್ರ ಯತ್ರೈಚ್ಚದಗ್ರಣೀಃ||

ಅವರ ಸೇನೆಗಳನ್ನು ಪ್ರವೇಶಿಸಿ ಪರಬಲಾರ್ದನ ಅಗ್ರಣೀ ಶಲ್ಯನು ಹೃಷ್ಟನಾಗಿ ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಕುದುರೆಗಳನ್ನು ಕೊಂಡೊಯ್ದು ನಿಲ್ಲಿಸುತ್ತಿದ್ದನು.

08056011a ತಂ ರಥಂ ಮೇಘಸಂಕಾಶಂ ವೈಯಾಘ್ರಪರಿವಾರಣಂ|

08056011c ಸಂದೃಶ್ಯ ಪಾಂಡುಪಾಂಚಾಲಾಸ್ತ್ರಸ್ತಾ ಆಸನ್ವಿಶಾಂ ಪತೇ||

ವಿಶಾಂಪತೇ! ವ್ಯಾಘ್ರಚರ್ಮದಿಂದ ಆಚ್ಛಾದಿತವಾಗಿದ್ದ ಮೇಘಸದೃಶ ಆ ರಥವನ್ನು ನೋಡಿ ಪಾಂಡು-ಪಾಂಚಾಲರಲ್ಲಿ ಭಯವುಂಟಾಯಿತು.

08056012a ತತೋ ರಥಸ್ಯ ನಿನದಃ ಪ್ರಾದುರಾಸೀನ್ಮಹಾರಣೇ|

08056012c ಪರ್ಜನ್ಯಸಮನಿರ್ಘೋಷಃ ಪರ್ವತಸ್ಯೇವ ದೀರ್ಯತಃ||

ಆಗ ಮಹಾರಣದಲ್ಲಿ ಕರ್ಣನ ರಥದ ನಿರ್ಘೋಷವು ಗುಡುಗಿನ ಸಮನಾಗಿತ್ತು ಮತ್ತು ಪರ್ವತವೇ ಸೀಳಿಹೋಗುತ್ತಿವೆಯೋ ಎಂಬಂತಿತ್ತು.

08056013a ತತಃ ಶರಶತೈಸ್ತೀಕ್ಷ್ಣೈಃ ಕರ್ಣೋಽಪ್ಯಾಕರ್ಣನಿಃಸೃತೈಃ|

08056013c ಜಘಾನ ಪಾಂಡವಬಲಂ ಶತಶೋಽಥ ಸಹಸ್ರಶಃ||

ಆಗ ಕರ್ಣನು ಕಿವಿಯವರೆಗೂ ಸೆಳೆದು ಬಿಟ್ಟ ನೂರಾರು ತೀಕ್ಷ್ಣ ಶರಗಳಿಂದ ಪಾಂಡವ ಸೇನೆಯನ್ನು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಸಂಹರಿಸಿದನು.

08056014a ತಂ ತಥಾ ಸಮರೇ ಕರ್ಮ ಕುರ್ವಾಣಮತಿಮಾನುಷಂ|

08056014c ಪರಿವವ್ರುರ್ಮಹೇಷ್ವಾಸಾಃ ಪಾಂಡವಾನಾಂ ಮಹಾರಥಾಃ||

ಹಾಗೆ ಸಮರದಲ್ಲಿ ಅತಿ ಅಮಾನುಷ ಕರ್ಮಗಳನ್ನೆಸಗುತ್ತಿದ್ದ ಕರ್ಣನನ್ನು ಮಹಾರಥ ಮಹೇಷ್ವಾಸ ಪಾಂಡವರು ಸುತ್ತುವರೆದರು.

08056015a ತಂ ಶಿಖಂಡೀ ಚ ಭೀಮಶ್ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ|

08056015c ನಕುಲಃ ಸಹದೇವಶ್ಚ ದ್ರೌಪದೇಯಾಃ ಸಸಾತ್ಯಕಾಃ|

08056015e ಪರಿವವ್ರುರ್ಜಿಘಾಂಸಂತೋ ರಾಧೇಯಂ ಶರವೃಷ್ಟಿಭಿಃ||

ಶಿಖಂಡೀ, ಭೀಮ, ಪಾರ್ಷತ ಧೃಷ್ಟದ್ಯುಮ್ನ, ನಕುಲ, ಸಹದೇವ, ಮತ್ತು ಸಾತ್ಯಕಿಯೊಡನೆ ದ್ರೌಪದೇಯರು ರಾಧೇಯನನ್ನು ಕೊಲ್ಲಲು ಬಯಸಿ ಅವನನ್ನು ಶರವೃಷ್ಟಿಗಳೊಂದಿಗೆ ಸುತ್ತುವರೆದು ಆಕ್ರಮಣಿಸಿದರು.

08056016a ಸಾತ್ಯಕಿಸ್ತು ತತಃ ಕರ್ಣಂ ವಿಂಶತ್ಯಾ ನಿಶಿತೈಃ ಶರೈಃ|

08056016c ಅತಾಡಯದ್ರಣೇ ಶೂರೋ ಜತ್ರುದೇಶೇ ನರೋತ್ತಮಃ||

ನರೋತ್ತಮ ಶೂರ ಸಾತ್ಯಕಿಯಾದರೋ ರಣದಲ್ಲಿ ಕರ್ಣನನ್ನು ಜತ್ರುದೇಶಕ್ಕೆ ಗುರಿಯಿಟ್ಟು ಇಪ್ಪತ್ತು ನಿಶಿತ ಶರಗಳಿಂದ ಪ್ರಹರಿಸಿದನು.

08056017a ಶಿಖಂಡೀ ಪಂಚವಿಂಶತ್ಯಾ ಧೃಷ್ಟದ್ಯುಮ್ನಶ್ಚ ಪಂಚಭಿಃ|

08056017c ದ್ರೌಪದೇಯಾಶ್ಚತುಃಷಷ್ಟ್ಯಾ ಸಹದೇವಶ್ಚ ಸಪ್ತಭಿಃ|

08056017e ನಕುಲಶ್ಚ ಶತೇನಾಜೌ ಕರ್ಣಂ ವಿವ್ಯಾಧ ಸಾಯಕೈಃ||

ಶಿಖಂಡಿಯು ಇಪ್ಪತ್ತೈದು, ಧೃಷ್ಟದ್ಯುಮ್ನನು ಐದು, ದ್ರೌಪದೇಯರು ಅರವತ್ನಾಲ್ಕು, ಸಹದೇವನು ಏಳು ಮತ್ತು ನಕುಲನು ನೂರು ಸಾಯಕಗಳಿಂದ ಕರ್ಣನನ್ನು ಹೊಡೆದರು.

08056018a ಭೀಮಸೇನಸ್ತು ರಾಧೇಯಂ ನವತ್ಯಾ ನತಪರ್ವಣಾಂ|

08056018c ವಿವ್ಯಾಧ ಸಮರೇ ಕ್ರುದ್ಧೋ ಜತ್ರುದೇಶೇ ಮಹಾಬಲಃ||

ಸಮರದಲ್ಲಿ ಮಹಾಬಲ ಭೀಮಸೇನನಾದರೋ ಕ್ರುದ್ಧನಾಗಿ ರಾಧೇಯನ ಜತ್ರುಪ್ರದೇಶಕ್ಕೆ ಗುರಿಯಿಟ್ಟು ತೊಂಭತ್ತು ನತಪರ್ವ ಬಾಣಗಳನ್ನು ಪ್ರಯೋಗಿಸಿದನು.

08056019a ತತಃ ಪ್ರಹಸ್ಯಾಧಿರಥಿರ್ವಿಕ್ಷಿಪನ್ಧನುರುತ್ತಮಂ|

08056019c ಮುಮೋಚ ನಿಶಿತಾನ್ಬಾಣಾನ್ಪೀಡಯನ್ಸುಮಹಾಬಲಃ|

08056019e ತಾನ್ಪ್ರತ್ಯವಿಧ್ಯದ್ರಾಧೇಯಃ ಪಂಚಭಿಃ ಪಂಚಭಿಃ ಶರೈಃ||

ಆಗ ಸುಮಹಾಬಲ ಆಧಿರಥಿಯು ಜೋರಾಗಿ ನಕ್ಕು ಉತ್ತಮ ಧನುಸ್ಸನ್ನು ಟೇಂಕರಿಸಿ ಅವರನ್ನು ಪೀಡಿಸುತ್ತಾ ನಿಶಿತ ಬಾಣಗಳನ್ನು ಪ್ರಯೋಗಿಸಿದನು. ರಾಧೇಯನು ಪ್ರತಿಯೊಬ್ಬರನ್ನೂ ಐದೈದು ಬಾಣಗಳಿಂದ ತಿರುಗಿ ಹೊಡೆದನು.

08056020a ಸಾತ್ಯಕೇಸ್ತು ಧನುಶ್ಚಿತ್ತ್ವಾ ಧ್ವಜಂ ಚ ಪುರುಷರ್ಷಭಃ|

08056020c ಅಥೈನಂ ನವಭಿರ್ಬಾಣೈರಾಜಘಾನ ಸ್ತನಾಂತರೇ||

ಆ ಪುರುಷರ್ಷಭನು ಸಾತ್ಯಕಿಯ ಧನುಸ್ಸು-ಧ್ವಜಗಳನ್ನು ತುಂಡರಿಸಿ ಒಂಭತ್ತು ಬಾಣಗಳಿಂದ ಅವನ ವಕ್ಷಸ್ಥಳಕ್ಕೆ ಹೊಡೆದನು.

08056021a ಭೀಮಸೇನಸ್ತು ತಂ ಕ್ರುದ್ಧೋ ವಿವ್ಯಾಧ ತ್ರಿಂಶತಾ ಶರೈಃ|

08056021c ಸಾರಥಿಂ ಚ ತ್ರಿಭಿರ್ಬಾಣೈರಾಜಘಾನ ಪರಂತಪಃ||

ಅನಂತರ ಪರಂತಪನು ಕ್ರುದ್ಧನಾಗಿ ಭೀಮಸೇನನನ್ನು ಮೂವತ್ತು ಶರಗಳಿಂದ ಹೊಡೆದು ಮೂರು ಬಾಣಗಳಿಂದ ಅವನ ಸಾರಥಿಯನ್ನು ಸಂಹರಿಸಿದನು.

08056022a ವಿರಥಾನ್ದ್ರೌಪದೇಯಾಂಶ್ಚ ಚಕಾರ ಪುರುಷರ್ಷಭಃ|

08056022c ಅಕ್ಷ್ಣೋರ್ನಿಮೇಷಮಾತ್ರೇಣ ತದದ್ಭುತಮಿವಾಭವತ್||

ಆ ಪುರುಷರ್ಷಭನು ದ್ರೌಪದೇಯರನ್ನೂ ವಿರಥರನ್ನಾಗಿ ಮಾಡಿದನು. ಇವೆಲ್ಲವನ್ನೂ ಅವನು ನಿಮಿಷಮಾತ್ರದಲ್ಲಿ ಮಾಡಲು ಅದೊಂದು ಅದ್ಭುತವಾಗಿತ್ತು!

08056023a ವಿಮುಖೀಕೃತ್ಯ ತಾನ್ಸರ್ವಾಂ ಶರೈಃ ಸಂನತಪರ್ವಭಿಃ|

08056023c ಪಾಂಚಾಲಾನಹನಚ್ಚೂರಶ್ಚೇದೀನಾಂ ಚ ಮಹಾರಥಾನ್||

ಅವರೆಲ್ಲರನ್ನೂ ಸನ್ನತಪರ್ವ ಶರಗಳಿಂದ ವಿಮುಖರನ್ನಾಗಿ ಮಾಡಿ ಶೂರ ಕರ್ಣನು ಪಾಂಚಾಲ-ಚೇದಿಗಳ ಮಹಾರಥರನ್ನು ಸಂಹರಿಸಿದನು.

08056024a ತೇ ವಧ್ಯಮಾನಾಃ ಸಮರೇ ಚೇದಿಮತ್ಸ್ಯಾ ವಿಶಾಂ ಪತೇ|

08056024c ಕರ್ಣಮೇಕಮಭಿದ್ರುತ್ಯ ಶರಸಂಘೈಃ ಸಮಾರ್ದಯನ್|

08056024e ತಾಂ ಜಘಾನ ಶಿತೈರ್ಬಾಣೈಃ ಸೂತಪುತ್ರೋ ಮಹಾರಥಃ||

ವಿಶಾಂಪತೇ! ಸಮರದಲ್ಲಿ ಅವನಿಂದ ವಧಿಸಲ್ಪಡುತ್ತಿರುವ ಚೇದಿ-ಮತ್ಸ್ಯರು ಕರ್ಣನೊಬ್ಬನನ್ನೇ ಶರಸಂಘಗಳಿಂದ ಮರ್ದಿಸುತ್ತಾ ಮುತ್ತಿಗೆ ಹಾಕಿದರು. ಮಹಾರಥ ಸೂತಪುತ್ರನು ಅವರನ್ನು ನಿಶಿತ ಬಾಣಗಳಿಂದ ಸಂಹರಿಸಿದನು.

08056025a ಏತದತ್ಯದ್ಭುತಂ ಕರ್ಣೇ ದೃಷ್ಟವಾನಸ್ಮಿ ಭಾರತ|

08056025c ಯದೇಕಃ ಸಮರೇ ಶೂರಾನ್ಸೂತಪುತ್ರಃ ಪ್ರತಾಪವಾನ್||

08056026a ಯತಮಾನಾನ್ಪರಂ ಶಕ್ತ್ಯಾಯೋಧಯತ್ತಾಂಶ್ಚ ಧನ್ವಿನಃ|

08056026c ಪಾಂಡವೇಯಾನ್ಮಹಾರಾಜ ಶರೈರ್ವಾರಿತವಾನ್ರಣೇ||

ಮಹಾರಾಜ! ಭಾರತ! ಸಮರದಲ್ಲಿ ತುಂಬಾ ಪ್ರಯತ್ನಪಡುತ್ತಾ ಶಕ್ತಿಯುತವಾಗಿ ಹೋರಾಡುತ್ತಿದ್ದ ಶೂರ ಪಾಂಡವರನ್ನು ರಣದಲ್ಲಿ ಏಕಾಂಗಿಯಾಗಿ ತಡೆಹಿಡಿದ ಆ ಪ್ರತಾಪವಾನ್ ಧನ್ವಿ ಸೂತಪುತ್ರ ಕರ್ಣನ ಅದ್ಭುತ ಕರ್ಮವನ್ನು ನಾನು ನೋಡಿದೆನು!

08056027a ತತ್ರ ಭಾರತ ಕರ್ಣಸ್ಯ ಲಾಘವೇನ ಮಹಾತ್ಮನಃ|

08056027c ತುತುಷುರ್ದೇವತಾಃ ಸರ್ವಾಃ ಸಿದ್ಧಾಶ್ಚ ಪರಮರ್ಷಯಃ||

ಭಾರತ! ಅಲ್ಲಿ ಮಹಾತ್ಮ ಕರ್ಣನ ಹಸ್ತಲಾಘವದಿಂದ ದೇವತೆಗಳೆಲ್ಲರೂ, ಸಿದ್ಧ-ಪರಮ ಋಷಿಗಳೂ ಸಂತುಷ್ಟರಾದರು.

08056028a ಅಪೂಜಯನ್ಮಹೇಷ್ವಾಸಾ ಧಾರ್ತರಾಷ್ಟ್ರಾ ನರೋತ್ತಮಂ|

08056028c ಕರ್ಣಂ ರಥವರಶ್ರೇಷ್ಠಂ ಶ್ರೇಷ್ಠಂ ಸರ್ವಧನುಷ್ಮತಾಂ||

ಮಹೇಷ್ವಾಸ ಧಾರ್ತರಾಷ್ಟ್ರರೂ ಆ ನರೋತ್ತಮ ರಥವರಶ್ರೇಷ್ಠ ಸರ್ವಧನುಷ್ಮತ ಶ್ರೇಷ್ಠ ಕರ್ಣನನ್ನು ಗೌರವಿಸಿದರು.

08056029a ತತಃ ಕರ್ಣೋ ಮಹಾರಾಜ ದದಾಹ ರಿಪುವಾಹಿನೀಂ|

08056029c ಕಕ್ಷಮಿದ್ಧೋ ಯಥಾ ವರ್ಹ್ನಿದಾಘೇ ಜ್ವಲಿತೋ ಮಹಾನ್||

ಮಹಾರಾಜ! ಆಗ ಬೇಸಿಗೆಯಲ್ಲಿ ಹುಲ್ಲುಮೆದೆಗೆ ಹೊತ್ತಿಕೊಂಡ ಬೆಂಕಿಯು ಕ್ಷಣಮಾತ್ರದಲ್ಲಿ ಪ್ರಜ್ಚಲಿಸಿ ಎಲ್ಲವನ್ನೂ ಭಸ್ಮಮಾಡುವಂತೆ ಕರ್ಣನು ರಿಪುವಾಹಿನಿಯನ್ನು ಸುಟ್ಟುಹಾಕಿದನು.

08056030a ತೇ ವಧ್ಯಮಾನಾಃ ಕರ್ಣೇನ ಪಾಂಡವೇಯಾಸ್ತತಸ್ತತಃ|

08056030c ಪ್ರಾದ್ರವಂತ ರಣೇ ಭೀತಾಃ ಕರ್ಣಂ ದೃಷ್ಟ್ವಾ ಮಹಾಬಲಂ||

ಕರ್ಣನಿಂದ ವಧಿಸಲ್ಪಡುತ್ತಿದ್ದ ಪಾಂಡವೇಯರು ರಣದಲ್ಲಿ ಮಹಾಬಲ ಕರ್ಣನನ್ನು ನೋಡಿ ಭೀತರಾಗಿ ಎಲ್ಲೆಲ್ಲೋ ಓಡ ತೊಡಗಿದರು.

08056031a ತತ್ರಾಕ್ರಂದೋ ಮಹಾನಾಸೀತ್ಪಾಂಚಾಲಾನಾಂ ಮಹಾರಣೇ|

08056031c ವಧ್ಯತಾಂ ಸಾಯಕೈಸ್ತೀಕ್ಷ್ಣೈಃ ಕರ್ಣಚಾಪವರಚ್ಯುತೈಃ||

ಮಹಾರಣದಲ್ಲಿ ಕರ್ಣನ ಶ್ರೇಷ್ಠಧನುಸ್ಸಿನಿಂದ ಹೊರಟ ತೀಕ್ಷ್ಣ ಸಾಯಕಗಳಿಂದ ವಧಿಸಲ್ಪಡುತ್ತಿದ್ದ ಪಾಂಚಾಲರ ಆಕ್ರಂದವು ಜೋರಾಗಿತ್ತು.

08056032a ತೇನ ಶಬ್ಧೇನ ವಿತ್ರಸ್ತಾ ಪಾಂಡವಾನಾಂ ಮಹಾಚಮೂಃ|

08056032c ಕರ್ಣಮೇಕಂ ರಣೇ ಯೋಧಂ ಮೇನಿರೇ ತತ್ರ ಶಾತ್ರವಾಃ||

ಆ ಶಬ್ಧದಿಂದ ಪಾಂಡವರ ಮಹಾಸೇನೆಯು ಭಯದಿಂದ ನಡುಗಿತು. ಆ ರಣದಲ್ಲಿ ಕರ್ಣನೊಬ್ಬನೇ ಯೋಧನೆಂದು ಶತ್ರುಗಳು ಭಾವಿಸಿದರು.

08056033a ತತ್ರಾದ್ಭುತಂ ಪರಂ ಚಕ್ರೇ ರಾಧೇಯಃ ಶತ್ರುಕರ್ಶನಃ|

08056033c ಯದೇಕಂ ಪಾಂಡವಾಃ ಸರ್ವೇ ನ ಶೇಕುರಭಿವೀಕ್ಷಿತುಂ||

ಪಾಂಡವರೆಲ್ಲರಲ್ಲಿ ಒಬ್ಬನೂ ಕರ್ಣನನ್ನು ತಲೆಯೆತ್ತಿ ನೋಡಲು ಸಮರ್ಥನಾಗಿರಲಿಲ್ಲ. ಅಂಥಹ ಪರಮ ಅದ್ಭುತವನ್ನು ಶತ್ರುಕರ್ತನ ರಾಧೇಯನು ತೋರಿಸಿದನು.

08056034a ಯಥೌಘಃ ಪರ್ವತಶ್ರೇಷ್ಠಮಾಸಾದ್ಯಾಭಿಪ್ರದೀರ್ಯತೇ|

08056034c ತಥಾ ತತ್ಪಾಂಡವಂ ಸೈನ್ಯಂ ಕರ್ಣಮಾಸಾದ್ಯ ದೀರ್ಯತೇ||

ಪ್ರವಾಹವು ಶ್ರೇಷ್ಠ ಪರ್ವತದ ಬಳಿಬಂದು ಅದರಿಂದ ತಡೆಯಲ್ಪಟ್ಟು ಅನೇಕ ಕವಲುಗಳಾಗಿ ಹೇಗಿ ಒಡೆದುಹೋಗುತ್ತದೆಯೋ ಹಾಗೆ ಪಾಂಡವರ ಸೇನೆಯು ಕರ್ಣನನ್ನು ಸಂಧಿಸಿ ಕವಲುಗಳಾಗಿ ಒಡೆದು ಹೋಯಿತು.

08056035a ಕರ್ಣೋಽಪಿ ಸಮರೇ ರಾಜನ್ವಿಧೂಮೋಽಗ್ನಿರಿವ ಜ್ವಲನ್|

08056035c ದಹಂಸ್ತಸ್ಥೌ ಮಹಾಬಾಹುಃ ಪಾಂಡವಾನಾಂ ಮಹಾಚಮೂಂ||

ರಾಜನ್! ಸಮರದಲ್ಲಿ ಮಹಾಬಾಹು ಕರ್ಣನೂ ಕೂಡ ಹೊಗೆಯಿಲ್ಲದ ಅಗ್ನಿಯಂತೆ ಪ್ರಜ್ವಲಿಸುತ್ತಾ ಪಾಂಡವರ ಮಹಾಸೇನೆಯನ್ನು ಸುಡುತ್ತಿದ್ದನು.

08056036a ಶಿರಾಂಸಿ ಚ ಮಹಾರಾಜ ಕರ್ಣಾಂಶ್ಚಂಚಲಕುಂಡಲಾನ್|

08056036c ಬಾಹೂಂಶ್ಚ ವೀರೋ ವೀರಾಣಾಂ ಚಿಚ್ಚೇದ ಲಘು ಚೇಷುಭಿಃ||

ಮಹಾರಾಜ! ವೀರ ಕರ್ಣನು ವೀರರ ಶಿರಗಳನ್ನೂ, ಚಂಚಲ ಕುಂಡಲಗಳನ್ನೂ, ಮತ್ತು ಬಾಹುಗಳನ್ನೂ ಬಾಣಗಳಿಂದ ಬೇಗ ತುಂಡರಿಸುತ್ತಿದ್ದನು.

08056037a ಹಸ್ತಿದಂತಾನ್ತ್ಸರೂನ್ಖಡ್ಗಾನ್ಧ್ವಜಾಂ ಶಕ್ತೀರ್ಹಯಾನ್ಗಜಾನ್|

08056037c ರಥಾಂಶ್ಚ ವಿವಿಧಾನ್ರಾಜನ್ಪತಾಕಾ ವ್ಯಜನಾನಿ ಚ||

08056038a ಅಕ್ಷೇಷಾಯುಗಯೋಕ್ತ್ರಾಣಿ ಚಕ್ರಾಣಿ ವಿವಿಧಾನಿ ಚ|

08056038c ಚಿಚ್ಚೇದ ಶತಧಾ ಕರ್ಣೋ ಯೋಧವ್ರತಮನುಷ್ಠಿತಃ||

ರಾಜನ್! ಯೋಧವ್ರತ ನಿರತನಾಗಿದ್ದ ಕರ್ಣನು ಆನೆಯದಂತಗಳ ಹಿಡಿಯಿದ್ದ ಖಡ್ಗಗಳನ್ನೂ, ಧ್ವಜಗಳನ್ನೂ, ಶಕ್ತಿಗಳನ್ನು, ಕುದುರೆ-ಆನೆಗಳನ್ನು, ವಿವಿಧ ರಥಗಳನ್ನು, ಪತಾಕೆ-ವ್ಯಜನಗಳನ್ನು, ಅಚ್ಚುಮರಗಳನ್ನೂ, ರಥಮೂಕಿಗಳನ್ನೂ, ವಿವಿಧ ಚಕ್ರಗಳನ್ನೂ ನೂರಾರು ತುಂಡುಗಳನ್ನಾಗಿ ಕತ್ತರಿಸಿದನು.

08056039a ತತ್ರ ಭಾರತ ಕರ್ಣೇನ ನಿಹತೈರ್ಗಜವಾಜಿಭಿಃ|

08056039c ಅಗಮ್ಯರೂಪಾ ಪೃಥಿವೀ ಮಾಂಸಶೋಣಿತಕರ್ದಮಾ||

ಭಾರತ! ಕರ್ಣನಿಂದ ಆನೆ-ಕುದುರೆಗಳು ಹತಗೊಳ್ಳುತ್ತಿರಲು ಮಾಂಸ-ರಕ್ತಗಳಿಂದ ಕೆಸರಾಗಿದ್ದ ರಣಭೂಮಿಯು ಅಗಮ್ಯವಾಗಿ ತೋರುತ್ತಿತ್ತು.

08056040a ವಿಷಮಂ ಚ ಸಮಂ ಚೈವ ಹತೈರಶ್ವಪದಾತಿಭಿಃ|

08056040c ರಥೈಶ್ಚ ಕುಂಜರೈಶ್ಚೈವ ನ ಪ್ರಾಜ್ಞಾಯತ ಕಿಂ ಚನ||

ಹತರಾದ ಆನೆ-ರಥ-ಕುದುರೆ-ಪದಾತಿಗಳಿಂದ ತುಂಬಿದ ರಣಭೂಮಿಯಲ್ಲಿ ಹಳ್ಳ-ತಿಟ್ಟುಗಳೊಂದೂ ಕಾಣುತ್ತಲೇ ಇರಲಿಲ್ಲ.

08056041a ನಾಪಿ ಸ್ವೇ ನ ಪರೇ ಯೋಧಾಃ ಪ್ರಾಜ್ಞಾಯಂತ ಪರಸ್ಪರಂ|

08056041c ಘೋರೇ ಶರಾಂಧಕಾರೇ ತು ಕರ್ಣಾಸ್ತ್ರೇ ಚ ವಿಜೃಂಭಿತೇ||

ಕರ್ಣಾಸ್ತ್ರವು ವಿಜೃಂಭಿಸುತ್ತಿರಲು ಬಾಣಗಳಿಂದ ಘೋರ ಅಂಧಕಾರವು ಮುಸುಕಿ ನಮ್ಮವರು ಮತ್ತು ಶತ್ರುಗಳು ಪರಸ್ಪರರನ್ನು ಗುರಿತಿಸಲೂ ಸಾಧ್ಯವಾಗುತ್ತಿರಲಿಲ್ಲ.

08056042a ರಾಧೇಯಚಾಪನಿರ್ಮುಕ್ತೈಃ ಶರೈಃ ಕಾಂಚನಭೂಷಿತೈಃ|

08056042c ಸಂಚಾದಿತಾ ಮಹಾರಾಜ ಯತಮಾನಾ ಮಹಾರಥಾಃ||

ಮಹಾರಾಜ! ಪ್ರಯತ್ನಪಡುತ್ತಿದ್ದ ಮಹಾರಥರು ರಾಧೇಯನ ಧನುಸ್ಸಿನಿಂತ ಹೊರಟ ಕಾಂಚನ ಭೂಷಿತ ಶರಗಳಿಂದ ಮುಚ್ಚಿಹೋಗಿದ್ದರು.

08056043a ತೇ ಪಾಂಡವೇಯಾಃ ಸಮರೇ ಕರ್ಣೇನ ಸ್ಮ ಪುನಃ ಪುನಃ|

08056043c ಅಭಜ್ಯಂತ ಮಹಾರಾಜ ಯತಮಾನಾ ಮಹಾರಥಾಃ||

ಮಹಾರಾಜ! ಸಮರದಲ್ಲಿ ಪ್ರಯತ್ನಪಡುತ್ತಿದ್ದ ಮಹಾರಥ ಪಾಂಡವೇಯರನ್ನು ಕರ್ಣನು ಪುನಃ ಪುನಃ ಭಗ್ನಗೊಳಿಸುತ್ತಿದ್ದನು.

08056044a ಮೃಗಸಂಘಾನ್ಯಥಾ ಕ್ರುದ್ಧಃ ಸಿಂಹೋ ದ್ರಾವಯತೇ ವನೇ|

08056044c ಕರ್ಣಸ್ತು ಸಮರೇ ಯೋಧಾಂಸ್ತತ್ರ ತತ್ರ ಮಹಾಯಶಾಃ|

08056044e ಕಾಲಯಾಮಾಸ ತತ್ಸೈನ್ಯಂ ಯಥಾ ಪಶುಗಣಾನ್ವೃಕಃ||

ವನದಲ್ಲಿ ಕ್ರುದ್ಧಸಿಂಹವು ಮೃಗಗುಂಪುಗಳನ್ನು ಓಡಿಸುವಂತೆ ಸಮರದಲ್ಲಿ ಮಹಾಯಶಸ್ವಿ ಕರ್ಣನು ಯೋಧರನ್ನು ಎಲ್ಲಕಡೆ ಓಡಿಸುತ್ತಿದ್ದನು. ತೋಳವು ಪಶುಸಮೂಹವನ್ನು ಹೇಗೋ ಹಾಗೆ ಪಾಂಡವ ಸೇನೆಯನ್ನು ಕದಡಿಬಿಟ್ಟನು.

08056045a ದೃಷ್ಟ್ವಾ ತು ಪಾಂಡವೀಂ ಸೇನಾಂ ಧಾರ್ತರಾಷ್ಟ್ರಾಃ ಪರಾಙ್ಮುಖೀಂ|

08056045c ಅಭಿಜಗ್ಮುರ್ಮಹೇಷ್ವಾಸಾ ರುವಂತೋ ಭೈರವಾನ್ರವಾನ್||

ಪಾಂಡವೀ ಸೇನೆಯು ಪರಾಙ್ಮುಖವಾಗುತ್ತಿದ್ದುದನ್ನು ನೋಡಿ ಮಹೇಷ್ವಾಸ ಧಾರ್ತರಾಷ್ಟ್ರರು ಭೈರವ ಕೂಗುಗಳನ್ನು ಕೂಗುತ್ತಾ ಕರ್ಣನಿದ್ದಲ್ಲಿಗೆ ಬಂದರು.

08056046a ದುರ್ಯೋಧನೋ ಹಿ ರಾಜೇಂದ್ರ ಮುದಾ ಪರಮಯಾ ಯುತಃ|

08056046c ವಾದಯಾಮಾಸ ಸಂಹೃಷ್ಟೋ ನಾನಾವಾದ್ಯಾನಿ ಸರ್ವಶಃ||

ರಾಜೇಂದ್ರ! ದುರ್ಯೋಧನನು ಪರಮ ಹರ್ಷದಿಂದ ಸಂಹೃಷ್ಟನಾಗಿ ನಾನಾ ವಾದ್ಯಗಳನ್ನು ಎಲ್ಲಕಡೆ ಮೊಳಗಿಸಿದನು.

08056047a ಪಾಂಚಾಲಾಪಿ ಮಹೇಷ್ವಾಸಾ ಭಗ್ನಾ ಭಗ್ನಾ ನರೋತ್ತಮಾಃ|

08056047c ನ್ಯವರ್ತಂತ ಯಥಾ ಶೂರಾ ಮೃತ್ಯುಂ ಕೃತ್ವಾ ನಿವರ್ತನಂ||

ಪುನಃ ಪುನಃ ಭಗ್ನರಾದ ಮಹೇಷ್ವಾಸ ನರೋತ್ತಮ ಶೂರ ಪಾಂಚಾಲರೂ ಕೂಡ ಮೃತ್ಯುವನ್ನೇ ಹಿಂದಿರುಗುವ ತಾಣವನ್ನಾಗಿರಿಕೊಂಡು ಯುದ್ಧಕ್ಕೆ ಹಿಂದಿರುಗಿದರು.

08056048a ತಾನ್ನಿವೃತ್ತಾನ್ರಣೇ ಶೂರಾನ್ರಾಧೇಯಃ ಶತ್ರುತಾಪನಃ|

08056048c ಅನೇಕಶೋ ಮಹಾರಾಜ ಬಭಂಜ ಪುರುಷರ್ಷಭಃ||

ಮಹಾರಾಜ! ಹಾಗೆ ರಣಕ್ಕೆ ಹಿಂದಿರುಗಿ ಬಂದ ಶೂರರನ್ನು ಶತ್ರುತಾಪನ ಪುರುಷರ್ಷಭ ರಾಧೇಯನು ಹಲವು ಬಾರಿ ಭೇದಿಸಿದನು.

08056049a ತತ್ರ ಭಾರತ ಕರ್ಣೇನ ಪಾಂಚಾಲಾ ವಿಂಶತೀ ರಥಾಃ|

08056049c ನಿಹತಾಃ ಸಾದಯಃ ಕ್ರೋಧಾಚ್ಚೇದಯಶ್ಚ ಪರಃಶತಾಃ||

ಭಾರತ! ಅಲ್ಲಿ ಕರ್ಣನು ಕ್ರೋಧಗೊಂಡು ಇಪ್ಪತ್ತು ಪಾಂಚಾಲ ರಥರನ್ನೂ, ನೂರಕ್ಕೂ ಹೆಚ್ಚು ಚೇದಿಯೋಧರನ್ನೂ ಮತ್ತು ಕುದುರೆ ಸವಾರರನ್ನೂ ಸಂಹರಿಸಿದನು.

08056050a ಕೃತ್ವಾ ಶೂನ್ಯಾನ್ರಥೋಪಸ್ಥಾನ್ವಾಜಿಪೃಷ್ಠಾಂಶ್ಚ ಭಾರತ|

08056050c ನಿರ್ಮನುಷ್ಯಾನ್ಗಜಸ್ಕಂದಾನ್ಪಾದಾತಾಂಶ್ಚೈವ ವಿದ್ರುತಾನ್||

ಭಾರತ! ರಥಗಳನ್ನು, ಕುದುರೆಯ ಬೆನ್ನುಗಳನ್ನು ಕುಳಿತುಕೊಳ್ಳುವವರು ಇಲ್ಲದಂತೆ ಶೂನ್ಯಮಾಡಿದನು. ಆನೆಯ ಬೆನ್ನುಗಳ ಮೇಲೆ ಮನುಷ್ಯರಿಲ್ಲದಿರುವಂತೆ ಮಾಡಿದನು ಮತ್ತು ಓಡಿಹೋಗುತ್ತಿರುವ ಪದಾತಿಗಳನ್ನು ಸಂಹರಿಸಿದನು.

08056051a ಆದಿತ್ಯ ಇವ ಮಧ್ಯಾಹ್ನೇ ದುರ್ನಿರೀಕ್ಷ್ಯಃ ಪರಂತಪಃ|

08056051c ಕಾಲಾಂತಕವಪುಃ ಕ್ರೂರಃ ಸೂತಪುತ್ರಶ್ಚಚಾರ ಹ||

ಮಧ್ಯಾಹ್ನದ ಸೂರ್ಯನಂತಿದ್ದ ಆ ಪರಂತಪನನ್ನು ನೋಡಲೂ ಆಗುತ್ತಿರಲಿಲ್ಲ. ಕಾಲಾಂತಕನ ರೂಪವನ್ನು ಧರಿಸಿ ಕ್ರೂರ ಸೂತಪುತ್ರನು ಸಂಚರಿಸುತ್ತಿದ್ದನು.

08056052a ಏವಮೇತಾನ್ಮಹಾರಾಜ ನರವಾಜಿರಥದ್ವಿಪಾನ್|

08056052c ಹತ್ವಾ ತಸ್ಥೌ ಮಹೇಷ್ವಾಸಃ ಕರ್ಣೋಽರಿಗಣಸೂದನಃ||

ಮಹಾರಾಜ! ಹೀಗೆ ಆನೆ-ರಥ-ಕುದುರೆ-ಪದಾತಿಗಳನ್ನು ಸಂಹರಿಸುತ್ತಾ ಮಹೇಷ್ವಾಸ ಅರಿಗಣಸೂದನ ಕರ್ಣನು ರಣದಲ್ಲಿ ನಿಂತಿದ್ದನು.

08056053a ಯಥಾ ಭೂತಗಣಾನ್ ಹತ್ವಾ ಕಾಲಸ್ತಿಷ್ಠೇನ್ಮಹಾಬಲಃ|

08056053c ತಥಾ ಸ ಸೋಮಕಾನ್ ಹತ್ವಾ ತಸ್ಥಾವೇಕೋ ಮಹಾರಥಃ||

ಮಹಾಬಲ ಕಾಲನು ಹೇಗೆ ಭೂತಗಣಗಳನ್ನು ಸಂಹರಿಸಿ ನಿಲ್ಲುತ್ತಾನೋ ಹಾಗೆ ಮಹಾರಥ ಕರ್ಣನು ಒಬ್ಬನೇ ಸೋಮಕರನ್ನು ಸಂಹರಿಸಿ ನಿಂತಿದ್ದನು.

08056054a ತತ್ರಾದ್ಭುತಮಪಶ್ಯಾಮ ಪಾಂಚಾಲಾನಾಂ ಪರಾಕ್ರಮಂ|

08056054c ವಧ್ಯಮಾನಾಪಿ ಕರ್ಣೇನ ನಾಜಹೂ ರಣಮೂರ್ಧನಿ||

ಅಲ್ಲಿ ಪಾಂಚಾಲರ ಅದ್ಭುತ ಪರಾಕ್ರಮವನ್ನು ನೋಡಿದೆವು. ಕರ್ಣನಿಂದ ವಧಿಸಲ್ಪಡುತ್ತಿದ್ದರೂ ಅವರು ರಣರಂಗವನ್ನು ಮಾತ್ರ ಬಿಟ್ಟು ಹೋಗಲಿಲ್ಲ.

08056055a ರಾಜಾ ದುಃಶಾಸನಶ್ಚೈವ ಕೃಪಃ ಶಾರದ್ವತಸ್ತಥಾ|

08056055c ಅಶ್ವತ್ಥಾಮಾ ಕೃತವರ್ಮಾ ಶಕುನಿಶ್ಚಾಪಿ ಸೌಬಲಃ|

08056055e ನ್ಯಹನನ್ಪಾಂಡವೀಂ ಸೇನಾಂ ಶತಶೋಽಥ ಸಹಸ್ರಶಃ||

ರಾಜ ದುರ್ಯೋಧನ, ದುಃಶಾಸನ, ಕೃಪ ಶಾರದ್ವತ, ಅಶ್ವತ್ಥಾಮ, ಕೃತವರ್ಮ, ಮತ್ತು ಸೌಬಲ ಶಕುನಿ ಇವರು ಪಾಂಡವೀ ಸೇನೆಯನ್ನು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ವಧಿಸಿದರು.

08056056a ಕರ್ಣಪುತ್ರೌ ಚ ರಾಜೇಂದ್ರ ಭ್ರಾತರೌ ಸತ್ಯವಿಕ್ರಮೌ|

08056056c ಅನಾಶಯೇತಾಂ ಬಲಿನಃ ಪಾಂಚಾಲಾನ್ವೈ ತತಸ್ತತಃ|

08056056e ತತ್ರ ಯುದ್ಧಂ ತದಾ ಹ್ಯಾಸೀತ್ಕ್ರೂರಂ ವಿಶಸನಂ ಮಹತ್||

ರಾಜೇಂದ್ರ! ಸತ್ಯವಿಕ್ರಮಿಗಳಾಗಿದ್ದ ಬಲಶಾಲೀ ಕರ್ಣಪುತ್ರ ಸಹೋದರರಿಬ್ಬರೂ ಅಲ್ಲಲ್ಲಿ ಪಾಂಚಾಲರನ್ನು ಸಂಹರಿಸುತ್ತಿದ್ದರು. ಆಗ ಅಲ್ಲಿ ಮಹಾ ವಿನಾಶಕಾರೀ ಯುದ್ಧವು ನಡೆಯಿತು.

08056057a ತಥೈವ ಪಾಂಡವಾಃ ಶೂರಾ ಧೃಷ್ಟದ್ಯುಮ್ನಶಿಖಂಡಿನೌ|

08056057c ದ್ರೌಪದೇಯಾಶ್ಚ ಸಂಕ್ರುದ್ಧಾ ಅಭ್ಯಘ್ನಂಸ್ತಾವಕಂ ಬಲಂ||

ಹಾಗೆಯೇ ಪಾಂಡವ ಶೂರರೂ, ಧೃಷ್ಟದ್ಯುಮ್ನ-ಶಿಖಂಡಿಯರೂ, ದ್ರೌಪದೇಯರೂ ಸಂಕ್ರುದ್ಧರಾಗಿ ನಿನ್ನ ಸೇನೆಯನ್ನು ಆಕ್ರಮಣಿಸುತ್ತಿದ್ದರು.

08056058a ಏವಮೇಷ ಕ್ಷಯೋ ವೃತ್ತಃ ಪಾಂಡವಾನಾಂ ತತಸ್ತತಃ|

08056058c ತಾವಕಾನಾಮಪಿ ರಣೇ ಭೀಮಂ ಪ್ರಾಪ್ಯ ಮಹಾಬಲಂ||

ಹೀಗೆ ಪಾಂಡವರ ವಿನಾಶವು ನಡೆಯುತ್ತಿರಲು ಆ ರಣಕ್ಕೆ ಮಹಾಬಲ ಭೀಮನು ಬಂದು ನಿನ್ನವರನ್ನೂ ನಾಶಗೊಳಿಸಿದನು.”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಷಟ್ಪಂಚಾಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಐವತ್ತಾರನೇ ಅಧ್ಯಾಯವು.

Related image

Comments are closed.