ಸೌಪ್ತಿಕಪರ್ವ: ಐಷೀಕ ಪರ್ವ
Contents
Toggle೧೬
ಕೃಷ್ಣನು ಉತ್ತರೆಯ ಗರ್ಭಕ್ಕೆ ೬೦ ವರ್ಷಗಳ ಆಯುಸ್ಸನ್ನಿತ್ತು ಅಶ್ವತ್ಥಾಮನನ್ನು ಶಪಿಸಿದುದು (೧-೧೫). ಅಶ್ವತ್ಥಾಮನು ಪಾಂಡವರಿಗೆ ತನ್ನ ಮಣಿಯನ್ನಿತ್ತು ವನಕ್ಕೆ ತೆರಳಿದುದು (೧೬-೧೯). ಅಶ್ವತ್ಥಾಮನ ಮಣಿಯನ್ನು ದ್ರೌಪದಿಗಿತ್ತು ಸಂತವಿಸಿದುದು (೨೦-೩೬).
10016001 ವೈಶಂಪಾಯನ ಉವಾಚ|
10016001a ತದಾಜ್ಞಾಯ ಹೃಷೀಕೇ ವಿಸೃಷ್ಟಂ ಪಾಪಕರ್ಮಣಾ|
10016001c ಹೃಷ್ಯಮಾಣ ಇದಂ ವಾಕ್ಯಂ ದ್ರೌಣಿಂ ಪ್ರತ್ಯಬ್ರವೀತ್ತದಾ||
ವೈಶಂಪಾಯನನು ಹೇಳಿದನು: “ಆ ಪಾಪಕರ್ಮಿಯು ಅಸ್ತ್ರವನ್ನು ವಿಸೃಜಿಸುದುದನ್ನು ತಿಳಿದು ಹೃಷೀಕೇಶನು ಹರ್ಷಗೊಂಡು ದ್ರೌಣಿಗೆ ಈ ಮಾತನ್ನಾಡಿದನು:
10016002a ವಿರಾಟಸ್ಯ ಸುತಾಂ ಪೂರ್ವಂ ಸ್ನುಷಾಂ ಗಾಂಡೀವಧನ್ವನಃ|
10016002c ಉಪಪ್ಲವ್ಯಗತಾಂ ದೃಷ್ಟ್ವಾ ವ್ರತವಾನ್ಬ್ರಾಹ್ಮಣೋಽಬ್ರವೀತ್||
“ಗಾಂಡೀವಧನ್ವಿಯ ಸೊಸೆ ವಿರಾಟನ ಮಗಳು ಹಿಂದೆ ಉಪಪ್ಲವ್ಯಕ್ಕೆ ಹೋದಾಗ ವ್ರತವಂತ ಬ್ರಾಹ್ಮಣನೋರ್ವನು ಅವಳನ್ನು ನೋಡಿ ಹೇಳಿದ್ದನು:
10016003a ಪರಿಕ್ಷೀಣೇಷು ಕುರುಷು ಪುತ್ರಸ್ತವ ಜನಿಷ್ಯತಿ|
10016003c ಏತದಸ್ಯ ಪರಿಕ್ಷಿತ್ತ್ವಂ ಗರ್ಭಸ್ಥಸ್ಯ ಭವಿಷ್ಯತಿ||
“ಕುರುಗಳು ಕ್ಷೀಣಿಸಿಹೋಗುವಾಗ ನಿನ್ನ ಮಗನು ಹುಟ್ಟುತ್ತಾನೆ. ಗರ್ಭಸ್ಥನಾಗಿರುವ ಇವನ ಹೆಸರು ಪರಿಕ್ಷಿತನೆಂದೇ ಆಗುತ್ತದೆ!”
10016004a ತಸ್ಯ ತದ್ವಚನಂ ಸಾಧೋಃ ಸತ್ಯಮೇವ ಭವಿಷ್ಯತಿ|
10016004c ಪರಿಕ್ಷಿದ್ಭವಿತಾ ಹ್ಯೇಷಾಂ ಪುನರ್ವಂಶಕರಃ ಸುತಃ||
ಆ ಸಾಧುವಿನ ಮಾತು ಸತ್ಯವೇ ಆಗುತ್ತದೆ. ಅವಳ ಮಗ ಪರಿಕ್ಷಿತನು ಪುನಃ ವಂಶಕರನಾಗುವನು.”
10016005a ಏವಂ ಬ್ರುವಾಣಂ ಗೋವಿಂದಂ ಸಾತ್ವತಪ್ರವರಂ ತದಾ|
10016005c ದ್ರೌಣಿಃ ಪರಮಸಂರಬ್ಧಃ ಪ್ರತ್ಯುವಾಚೇದಮುತ್ತರಂ||
ಹೀಗೆ ಹೇಳಿದ ಸಾತ್ವತಶ್ರೇಷ್ಠ ಗೋವಿಂದನಿಗೆ ಪರಮಕುಪಿತ ದ್ರೌಣಿಯು ಈ ಉತ್ತರವನ್ನಿತ್ತನು:
10016006a ನೈತದೇವಂ ಯಥಾತ್ಥ ತ್ವಂ ಪಕ್ಷಪಾತೇನ ಕೇಶವ|
10016006c ವಚನಂ ಪುಂಡರೀಕಾಕ್ಷ ನ ಚ ಮದ್ವಾಕ್ಯಮನ್ಯಥಾ||
“ಪುಂಡರೀಕಾಕ್ಷ! ಕೇಶವ! ಪಕ್ಷಪಾತದಿಂದ ಇದೇನು ನೀನು ಹೇಳುತ್ತಿರುವೆಯೋ ಅದು ಹಾಗೆ ಆಗುವುದಿಲ್ಲ! ನನ್ನ ಮಾತು ಅನ್ಯಥಾ ಆಗುವುದಿಲ್ಲ.
10016007a ಪತಿಷ್ಯತ್ಯೇತದಸ್ತ್ರಂ ಹಿ ಗರ್ಭೇ ತಸ್ಯಾ ಮಯೋದ್ಯತಂ|
10016007c ವಿರಾಟದುಹಿತುಃ ಕೃಷ್ಣ ಯಾಂ ತ್ವಂ ರಕ್ಷಿತುಮಿಚ್ಚಸಿ||
ಕೃಷ್ಣ! ನೀನು ಯಾರನ್ನು ರಕ್ಷಿಸಲು ಇಚ್ಛಿಸುತ್ತಿರುವೆಯೋ ಆ ವಿರಾಟಪುತ್ರಿಯ ಗರ್ಭದ ಮೇಲೆ ನಾನು ಪ್ರಯೋಗಿಸಿದ ಅಸ್ತ್ರವು ಈಗಾಗಲೇ ಬಿದ್ದಿದೆ!”
10016008 ವಾಸುದೇವ ಉವಾಚ|
10016008a ಅಮೋಘಃ ಪರಮಾಸ್ತ್ರಸ್ಯ ಪಾತಸ್ತಸ್ಯ ಭವಿಷ್ಯತಿ|
10016008c ಸ ತು ಗರ್ಭೋ ಮೃತೋ ಜಾತೋ ದೀರ್ಘಮಾಯುರವಾಪ್ಸ್ಯತಿ||
ವಾಸುದೇವನು ಹೇಳಿದನು: “ಪರಮಾಸ್ತ್ರದ ಪತನವು ಅಮೋಘವಾಗುತ್ತದೆ. ಮೃತನಾಗಿ ಹುಟ್ಟುವ ಆ ಗರ್ಭವು ದೀರ್ಘ ಆಯುಸ್ಸನ್ನು ಪಡೆಯುತ್ತಾನೆ.
10016009a ತ್ವಾಂ ತು ಕಾಪುರುಷಂ ಪಾಪಂ ವಿದುಃ ಸರ್ವೇ ಮನೀಷಿಣಃ|
10016009c ಅಸಕೃತ್ಪಾಪಕರ್ಮಾಣಂ ಬಾಲಜೀವಿತಘಾತಕಂ||
ನಿನ್ನನ್ನಾದರೋ ಸರ್ವ ಮನೀಷಿಣರು ಕಾಪುರುಷ, ಪಾಪಿ, ಪಾಪಕರ್ಮಗಳನ್ನು ಮಾಡಿದವ ಮತ್ತು ಬಾಲಜೀವಿತಘಾತಕನೆಂದೂ ತಿಳಿಯುತ್ತಾರೆ.
10016010a ತಸ್ಮಾತ್ತ್ವಮಸ್ಯ ಪಾಪಸ್ಯ ಕರ್ಮಣಃ ಫಲಮಾಪ್ನುಹಿ|
10016010c ತ್ರೀಣಿ ವರ್ಷಸಹಸ್ರಾಣಿ ಚರಿಷ್ಯಸಿ ಮಹೀಮಿಮಾಂ|
10016010e ಅಪ್ರಾಪ್ನುವನ್ಕ್ವ ಚಿತ್ಕಾಂ ಚಿತ್ಸಂವಿದಂ ಜಾತು ಕೇನ ಚಿತ್||
ಆದುದರಿಂದ ನೀನು ನಿನ್ನ ಪಾಪಕರ್ಮದ ಫಲವನ್ನು ಹೊಂದುತ್ತೀಯೆ. ಮೂರು ಸಾವಿರ ವರ್ಷಗಳು ಈ ಭೂಮಿಯಲ್ಲಿ ಅಲೆಯುತ್ತೀಯೆ. ಆಗ ನಿನ್ನೊಡನೆ ಯಾರೂ ಏನನ್ನೂ ಮಾತನಾಡುವುದಿಲ್ಲ.
10016011a ನಿರ್ಜನಾನಸಹಾಯಸ್ತ್ವಂ ದೇಶಾನ್ಪ್ರವಿಚರಿಷ್ಯಸಿ|
10016011c ಭವಿತ್ರೀ ನ ಹಿ ತೇ ಕ್ಷುದ್ರ ಜನಮಧ್ಯೇಷು ಸಂಸ್ಥಿತಿಃ||
ನಿರ್ಜನಪ್ರದೇಶಗಳಲ್ಲಿ ಅಸಹಾಯಕನಾಗಿ ನೀನು ಅಲೆದಾಡುತ್ತೀಯೆ. ಕ್ಷುದ್ರ! ಇನ್ನು ಮುಂದೆ ನೀನು ಜನರ ಮಧ್ಯೆ ವಾಸಮಾಡಲಾರೆ!
10016012a ಪೂಯಶೋಣಿತಗಂಧೀ ಚ ದುರ್ಗಕಾಂತಾರಸಂಶ್ರಯಃ|
10016012c ವಿಚರಿಷ್ಯಸಿ ಪಾಪಾತ್ಮನ್ಸರ್ವವ್ಯಾಧಿಸಮನ್ವಿತಃ||
ಪಾಪಾತ್ಮನ್! ಕೀವು ಮತ್ತು ರಕ್ತದ ದುರ್ಗಂಧದಿಂದ ಕೂಡಿದ ನೀನು ದುರ್ಗ-ಕಾಂತಾರಗಳಲ್ಲಿ ವಾಸಿಸುವೆ. ಸರ್ವವ್ಯಾಧಿಸಮನ್ವಿತನಾಗಿ ಸಂಚರಿಸುತ್ತಿರುತ್ತೀಯೆ.
10016013a ವಯಃ ಪ್ರಾಪ್ಯ ಪರಿಕ್ಷಿತ್ತು ವೇದವ್ರತಮವಾಪ್ಯ ಚ|
10016013c ಕೃಪಾಚ್ಚಾರದ್ವತಾದ್ವೀರಃ ಸರ್ವಾಸ್ತ್ರಾಣ್ಯುಪಲಪ್ಸ್ಯತೇ||
ವೀರ ಪರಿಕ್ಷಿತನಾದರೋ ವಯಸ್ಕನಾಗಿ ವೇದವ್ರತಗಳನ್ನು ಪಡೆಯುತ್ತಾನೆ. ಶಾರದ್ವತ ಕೃಪನಿಂದ ಸರ್ವಾಸ್ತ್ರಗಳನ್ನು ಪಡೆದುಕೊಳ್ಳುತ್ತಾನೆ.
10016014a ವಿದಿತ್ವಾ ಪರಮಾಸ್ತ್ರಾಣಿ ಕ್ಷತ್ರಧರ್ಮವ್ರತೇ ಸ್ಥಿತಃ|
10016014c ಷಷ್ಟಿಂ ವರ್ಷಾಣಿ ಧರ್ಮಾತ್ಮಾ ವಸುಧಾಂ ಪಾಲಯಿಷ್ಯತಿ||
ಪರಮಾಸ್ತ್ರಗಳನ್ನು ತಿಳಿದುಕೊಂಡು ಕ್ಷತ್ರಧರ್ಮದಲ್ಲಿದ್ದುಕೊಂಡು ಆ ಧರ್ಮಾತ್ಮನು ಅರವತ್ತು ವರ್ಷಗಳು ವಸುಧೆಯನ್ನು ಪಾಲಿಸುತ್ತಾನೆ.
10016015a ಇತಶ್ಚೋರ್ಧ್ವಂ ಮಹಾಬಾಹುಃ ಕುರುರಾಜೋ ಭವಿಷ್ಯತಿ|
10016015c ಪರಿಕ್ಷಿನ್ನಾಮ ನೃಪತಿರ್ಮಿಷತಸ್ತೇ ಸುದುರ್ಮತೇ|
10016015e ಪಶ್ಯ ಮೇ ತಪಸೋ ವೀರ್ಯಂ ಸತ್ಯಸ್ಯ ಚ ನರಾಧಮ||
ಇನ್ನುಮುಂದೆ ಆ ಮಹಾಬಾಹುವೇ ಕುರುರಾಜನಾಗುತ್ತಾನೆ. ಸುದುರ್ಮತೇ! ನೀನು ನೋಡುತ್ತಿರುವಂತೆಯೇ ಇವನು ಪರಿಕ್ಷಿತನೆಂಬ ಹೆಸರಿನ ನೃಪತಿಯಾಗುತ್ತಾನೆ. ನರಾಧಮ! ನನ್ನ ತಪಸ್ಸಿನ ಮತ್ತು ಸತ್ಯದ ವೀರ್ಯವನ್ನು ನೋಡು!”
10016016 ವ್ಯಾಸ ಉವಾಚ|
10016016a ಯಸ್ಮಾದನಾದೃತ್ಯ ಕೃತಂ ತ್ವಯಾಸ್ಮಾನ್ಕರ್ಮ ದಾರುಣಂ|
10016016c ಬ್ರಾಹ್ಮಣಸ್ಯ ಸತಶ್ಚೈವ ಯಸ್ಮಾತ್ತೇ ವೃತ್ತಮೀದೃಶಂ||
ವ್ಯಾಸನು ಹೇಳಿದನು: “ನಮ್ಮೆಲ್ಲರನ್ನು ಅನಾದರಿಸಿ ನೀನು ಈ ದಾರುಣಕರ್ಮವನ್ನೆಸಗಿದೆ! ಸದ್ಬ್ರಾಹ್ಮಣನಾಗಿದ್ದು ನೀನು ಈ ರೀತಿ ನಡೆದುಕೊಂಡೆ!
10016017a ತಸ್ಮಾದ್ಯದ್ದೇವಕೀಪುತ್ರ ಉಕ್ತವಾನುತ್ತಮಂ ವಚಃ|
10016017c ಅಸಂಶಯಂ ತೇ ತದ್ಭಾವಿ ಕ್ಷುದ್ರಕರ್ಮನ್ವ್ರಜಾಶ್ವಿತಃ||
ಕ್ಷುದ್ರಕರ್ಮಿಯೇ! ಆದುದರಿಂದ ದೇವಕೀಪುತ್ರನಾಡಿದ ಉತ್ತಮ ವಚನದಂತೆಯೇ ನಡೆಯುತ್ತದೆ. ಅದರಲ್ಲಿ ಸಂಶಯವೇ ಇಲ್ಲ.”
10016018 ಅಶ್ವತ್ಥಾಮೋವಾಚ|
10016018a ಸಹೈವ ಭವತಾ ಬ್ರಹ್ಮನ್ ಸ್ಥಾಸ್ಯಾಮಿ ಪುರುಷೇಷ್ವಹಂ|
10016018c ಸತ್ಯವಾಗಸ್ತು ಭಗವಾನಯಂ ಚ ಪುರುಷೋತ್ತಮಃ||
ಅಶ್ವತ್ಥಾಮನು ಹೇಳಿದನು: “ಬ್ರಹ್ಮನ್! ನಾನು ಇನ್ನು ಮುಂದೆ ಮನುಷ್ಯರಲ್ಲಿ ನಿನ್ನೊಡನೆ ಮಾತ್ರ ಇದ್ದುಬಿಡುತ್ತೇನೆ. ಭಗವಾನ್ ಪುರುಷೋತ್ತಮನು ಹೇಳಿದುದು ಸತ್ಯವಾಗಲಿ!””
10016019 ವೈಶಂಪಾಯನ ಉವಾಚ|
10016019a ಪ್ರದಾಯಾಥ ಮಣಿಂ ದ್ರೌಣಿಃ ಪಾಂಡವಾನಾಂ ಮಹಾತ್ಮನಾಂ|
10016019c ಜಗಾಮ ವಿಮನಾಸ್ತೇಷಾಂ ಸರ್ವೇಷಾಂ ಪಶ್ಯತಾಂ ವನಂ||
ವೈಶಂಪಾಯನನು ಹೇಳಿದನು: “ಆಗ ದ್ರೌಣಿಯು ಮಹಾತ್ಮ ಪಾಂಡವರಿಗೆ ಮಣಿಯನ್ನಿತ್ತು, ಅವರೆಲ್ಲರೂ ನೋಡುತ್ತಿರಲು ವಿಮನಸ್ಕನಾಗಿ ವನಕ್ಕೆ ತೆರಳಿದನು.
10016020a ಪಾಂಡವಾಶ್ಚಾಪಿ ಗೋವಿಂದಂ ಪುರಸ್ಕೃತ್ಯ ಹತದ್ವಿಷಃ|
10016020c ಕೃಷ್ಣದ್ವೈಪಾಯನಂ ಚೈವ ನಾರದಂ ಚ ಮಹಾಮುನಿಂ||
10016021a ದ್ರೋಣಪುತ್ರಸ್ಯ ಸಹಜಂ ಮಣಿಮಾದಾಯ ಸತ್ವರಾಃ|
10016021c ದ್ರೌಪದೀಮಭ್ಯಧಾವಂತ ಪ್ರಾಯೋಪೇತಾಂ ಮನಸ್ವಿನೀಂ||
ಪಾಂಡವರಾದರೋ ಶತ್ರುವನ್ನು ನಾಶಪಡಿಸಿ, ದ್ರೋಣಪುತ್ರನ ಸಹಜ ಮಣಿಯನ್ನು ತೆಗೆದುಕೊಂಡು, ಗೋವಿಂದನನ್ನು ಮುಂದಿರಿಸಿಕೊಂಡು ಕೃಷ್ಣದ್ವೈಪಾಯನ ಮತ್ತು ಮಹಾಮುನಿ ನಾರದರೊಂದಿಗೆ, ಪ್ರಾಯೋಪವೇಶಮಾಡಿದ್ದ ದ್ರೌಪದಿಯ ಬಳಿಗೆ ತ್ವರೆಮಾಡಿ ಧಾವಿಸಿದರು.
10016022a ತತಸ್ತೇ ಪುರುಷವ್ಯಾಘ್ರಾಃ ಸದಶ್ವೈರನಿಲೋಪಮೈಃ|
10016022c ಅಭ್ಯಯುಃ ಸಹದಾಶಾರ್ಹಾಃ ಶಿಬಿರಂ ಪುನರೇವ ಹ||
ಆಗ ಆ ಪುರುಷವ್ಯಾಘ್ರರು ಅನಿಲೋಪಮ ಅಶ್ವಗಳೊಂದಿಗೆ ದಾಶಾರ್ಹನೊಡಗೂಡಿ ಪುನಃ ಶಿಬಿರಕ್ಕೆ ಬಂದರು.
10016023a ಅವತೀರ್ಯ ರಥಾಭ್ಯಾಂ ತು ತ್ವರಮಾಣಾ ಮಹಾರಥಾಃ|
10016023c ದದೃಶುರ್ದ್ರೌಪದೀಂ ಕೃಷ್ಣಾಮಾರ್ತಾಮಾರ್ತತರಾಃ ಸ್ವಯಂ||
ತ್ವರೆಮಾಡಿ ಆ ಎರಡೂ ರಥಗಳಿಂದಿಳಿದು ಸ್ವಯಂ ಆರ್ತರಾಗಿದ್ದ ಮಹಾರಥರು ಅತ್ಯಂತ ಆರ್ತಳಾಗಿದ್ದ ದ್ರೌಪದಿ ಕೃಷ್ಣೆಯನ್ನು ನೋಡಿದರು.
10016024a ತಾಮುಪೇತ್ಯ ನಿರಾನಂದಾಂ ದುಃಖಶೋಕಸಮನ್ವಿತಾಂ|
10016024c ಪರಿವಾರ್ಯ ವ್ಯತಿಷ್ಠಂತ ಪಾಂಡವಾಃ ಸಹಕೇಶವಾಃ||
ಆನಂದರಹಿತಳಾಗಿ ದುಃಖಶೋಖಸಮನ್ವಿತಳಾಗಿದ್ದ ಅವಳನ್ನು ಸುತ್ತುವರೆದು ಪಾಂಡವರು ಕೇಶವನೊಂದಿಗೆ ಕುಳಿತುಕೊಂಡರು.
10016025a ತತೋ ರಾಜ್ಞಾಭ್ಯನುಜ್ಞಾತೋ ಭೀಮಸೇನೋ ಮಹಾಬಲಃ|
10016025c ಪ್ರದದೌ ತು ಮಣಿಂ ದಿವ್ಯಂ ವಚನಂ ಚೇದಮಬ್ರವೀತ್||
ಆಗ ರಾಜನ ಅನುಜ್ಞೆಯಂತೆ ಮಹಾಬಲ ಭೀಮಸೇನನು ಅವಳಿಗೆ ಆ ದಿವ್ಯ ಮಣಿಯನ್ನಿತ್ತು ಈ ಮಾತನ್ನಾಡಿದನು:
10016026a ಅಯಂ ಭದ್ರೇ ತವ ಮಣಿಃ ಪುತ್ರಹಂತಾ ಜಿತಃ ಸ ತೇ|
10016026c ಉತ್ತಿಷ್ಠ ಶೋಕಮುತ್ಸೃಜ್ಯ ಕ್ಷತ್ರಧರ್ಮಮನುಸ್ಮರ||
“ಭದ್ರೇ! ಪುತ್ರಹಂತಕನನ್ನು ಗೆದ್ದು ನಿನಗೋಸ್ಕರ ತಂದಿರುವ ಇದೋ ಈ ಮಣಿ! ಶೋಕವನ್ನು ತೊರೆದು ಎದ್ದೇಳು! ಕ್ಷತ್ರಧರ್ಮವನ್ನು ಸ್ಮರಿಸಿಕೋ!
10016027a ಪ್ರಯಾಣೇ ವಾಸುದೇವಸ್ಯ ಶಮಾರ್ಥಮಸಿತೇಕ್ಷಣೇ|
10016027c ಯಾನ್ಯುಕ್ತಾನಿ ತ್ವಯಾ ಭೀರು ವಾಕ್ಯಾನಿ ಮಧುಘಾತಿನಃ||
ಅಸಿತೇಕ್ಷಣೇ! ಭೀರು! ಸಂಧಿಗಾಗಿ ವಾಸುದೇವನು ಪ್ರಯಾಣಮಾಡುವಾಗ ನೀನು ಮಧುಘಾತಿನಿಗೆ ಈ ಮಾತುಗಳನ್ನು ಹೇಳಿದ್ದೆ:
10016028a ನೈವ ಮೇ ಪತಯಃ ಸಂತಿ ನ ಪುತ್ರಾ ಭ್ರಾತರೋ ನ ಚ|
10016028c ನೈವ ತ್ವಮಪಿ ಗೋವಿಂದ ಶಮಮಿಚ್ಚತಿ ರಾಜನಿ||
10016029a ಉಕ್ತವತ್ಯಸಿ ಧೀರಾಣಿ ವಾಕ್ಯಾನಿ ಪುರುಷೋತ್ತಮಂ|
10016029c ಕ್ಷತ್ರಧರ್ಮಾನುರೂಪಾಣಿ ತಾನಿ ಸಂಸ್ಮರ್ತುಮರ್ಹಸಿ||
“ನನಗೆ ಪತಿಗಳಿಲ್ಲ! ಪುತ್ರರಿಲ್ಲ! ಸಹೋದರರೂ ಇಲ್ಲ! ರಾಜನೊಂದಿಗೆ ಶಾಂತಿಯನ್ನು ಬಯಸುವ ಗೋವಿಂದ ನೀನೂ ಕೂಡ ನನ್ನ ಪಾಲಿಗಿಲ್ಲ!” ಕ್ಷತ್ರಧರ್ಮಕ್ಕೆ ಅನುರೂಪ ಈ ಧೀರ ವಾಕ್ಯಗಳನ್ನು ನೀನು ಪುರುಷೋತ್ತಮನೊಡನೆ ಹೇಳಿದ್ದೆ. ಅದನ್ನು ಸ್ಮರಿಸಿಕೋ!
10016030a ಹತೋ ದುರ್ಯೋಧನಃ ಪಾಪೋ ರಾಜ್ಯಸ್ಯ ಪರಿಪಂಥಕಃ|
10016030c ದುಃಶಾಸನಸ್ಯ ರುಧಿರಂ ಪೀತಂ ವಿಸ್ಫುರತೋ ಮಯಾ||
ರಾಜ್ಯವನ್ನು ಅಪಹರಿಸಿದ್ದ ಪಾಪಿ ದುರ್ಯೋಧನನು ಹತನಾಗಿದ್ದಾನೆ. ಚಡಪಡಿಸುತ್ತಿದ್ದ ದುಃಶಾಸನನ ರಕ್ತವನ್ನು ನಾನು ಕುಡಿದಿದ್ದೇನೆ.
10016031a ವೈರಸ್ಯ ಗತಮಾನೃಣ್ಯಂ ನ ಸ್ಮ ವಾಚ್ಯಾ ವಿವಕ್ಷತಾಂ|
10016031c ಜಿತ್ವಾ ಮುಕ್ತೋ ದ್ರೋಣಪುತ್ರೋ ಬ್ರಾಹ್ಮಣ್ಯಾದ್ಗೌರವೇಣ ಚ||
ವೈರದ ಋಣವನ್ನು ನಾವು ಪೂರೈಸಿದ್ದೇವೆ. ನಮ್ಮ ಮೇಲೆ ನಿಂದನೀಯ ಮಾತುಗಳ್ಯಾವುವೂ ಇಲ್ಲ. ದ್ರೋಣಪುತ್ರನನ್ನು ಗೆದ್ದು ಬ್ರಾಹ್ಮಣನೆನ್ನುವ ಗೌರವದಿಂದ ಅವನನ್ನು ಬಿಟ್ಟುಬಿಟ್ಟೆವು.
10016032a ಯಶೋಽಸ್ಯ ಪಾತಿತಂ ದೇವಿ ಶರೀರಂ ತ್ವವಶೇಷಿತಂ|
10016032c ವಿಯೋಜಿತಶ್ಚ ಮಣಿನಾ ನ್ಯಾಸಿತಶ್ಚಾಯುಧಂ ಭುವಿ||
ದೇವೀ! ಮಣಿಯನ್ನು ತ್ಯಜಿಸಿದ ಮತ್ತು ಆಯುಧವನ್ನು ಭೂಮಿಯಮೇಲಿಟ್ಟ ಅವನ ಯಶಸ್ಸು ಬಿದ್ದುಹೋಗಿ ಶರೀರಮಾತ್ರ ಉಳಿದುಕೊಂಡಿದೆ.”
10016033a ಕೇವಲಾನೃಣ್ಯಮಾಪ್ತಾಸ್ಮಿ ಗುರುಪುತ್ರೋ ಗುರುರ್ಮಮ|
10016033c ಶಿರಸ್ಯೇತಂ ಮಣಿಂ ರಾಜಾ ಪ್ರತಿಬಧ್ನಾತು ಭಾರತ||
ದ್ರೌಪದಿಯು ಹೇಳಿದಳು: “ಪುತ್ರಋಣದಿಂದ ಮುಕ್ತಳಾಗಿದ್ದೇನೆ. ಆ ಗುರುಪುತ್ರನು ನನಗೂ ಗುರುವೇ. ಭಾರತ! ರಾಜನು ಈ ಮಣಿಯನ್ನು ಧರಿಸಲಿ!””
10016034 ವೈಶಂಪಾಯನ ಉವಾಚ|
10016034a ತಂ ಗೃಹೀತ್ವಾ ತತೋ ರಾಜಾ ಶಿರಸ್ಯೇವಾಕರೋತ್ತದಾ|
10016034c ಗುರೋರುಚ್ಚಿಷ್ಟಮಿತ್ಯೇವ ದ್ರೌಪದ್ಯಾ ವಚನಾದಪಿ||
ವೈಶಂಪಾಯನನು ಹೇಳಿದನು: “ಆಗ ರಾಜನು ದ್ರೌಪದಿಯ ವಚನದಂತೆ ಗುರುವಿನ ಪ್ರಸಾದವೆಂದು ಅದನ್ನು ಸ್ವೀಕರಿಸಿ ತನ್ನ ಶಿರದಲ್ಲಿ ಧರಿಸಿಕೊಂಡನು.
10016035a ತತೋ ದಿವ್ಯಂ ಮಣಿವರಂ ಶಿರಸಾ ಧಾರಯನ್ ಪ್ರಭುಃ|
10016035c ಶುಶುಭೇ ಸ ಮಹಾರಾಜಃ ಸಚಂದ್ರ ಇವ ಪರ್ವತಃ||
ಪ್ರಭು ಮಹಾರಾಜನು ಆ ದಿವ್ಯ ಶ್ರೇಷ್ಠ ಮಣಿಯನ್ನು ಶಿರದಲ್ಲಿ ಧರಿಸಿ ಮೇಲೆ ಚಂದ್ರನಿರುವ ಪರ್ವತದಂತೆ ಶೋಭಿಸಿದನು.
10016036a ಉತ್ತಸ್ಥೌ ಪುತ್ರಶೋಕಾರ್ತಾ ತತಃ ಕೃಷ್ಣಾ ಮನಸ್ವಿನೀ|
10016036c ಕೃಷ್ಣಂ ಚಾಪಿ ಮಹಾಬಾಹುಂ ಪರ್ಯಪೃಚ್ಚತ ಧರ್ಮರಾಟ್||
ಆಗ ಪುತ್ರಶೋಕಾರ್ತಳಾಗಿದ್ದ ಮನಸ್ವಿನೀ ಕೃಷ್ಣೆಯು ಮೇಲೆದ್ದಳು. ಧರ್ಮರಾಜನಾದರೋ ಮಹಾಬಾಹು ಕೃಷ್ಣನನ್ನು ಪ್ರಶ್ನಿಸಿದನು.”
ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ಐಷೀಕಪರ್ವಣಿ ದ್ರೌಪದೀಸಾಂತ್ವನಾಯಾಂ ಷೋಡಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ಐಷೀಕಪರ್ವದಲ್ಲಿ ದ್ರೌಪದೀಸಾಂತ್ವನ ಎನ್ನುವ ಹದಿನಾರನೇ ಅಧ್ಯಾಯವು.

