Shalya Parva: Chapter 54

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಲ್ಯಪರ್ವ: ಗದಾಯುದ್ಧ ಪರ್ವ

೫೪

ಬಲರಾಮನ ಸೂಚನೆಯಂತೆ ಸಮಂತಪಂಚಕಕ್ಕೆ ಕಾಲ್ನಡುಗೆಯಲ್ಲಿಯೇ ಎಲ್ಲರೂ ಹೋದುದು (೧-೧೩). ಭೀಮ-ದುರ್ಯೋಧನರ ಯುದ್ಧಾರಂಭ (೧೪-೪೪).

09054001 ವೈಶಂಪಾಯನ ಉವಾಚ

09054001a ಏವಂ ತದಭವದ್ಯುದ್ಧಂ ತುಮುಲಂ ಜನಮೇಜಯ|

09054001c ಯತ್ರ ದುಃಖಾನ್ವಿತೋ ರಾಜಾ ಧೃತರಾಷ್ಟ್ರೋಽಬ್ರವೀದಿದಂ||

ವೈಶಂಪಾಯನನು ಹೇಳಿದನು: “ಜನಮೇಜಯ! ಹೀಗೆ ತುಮುಲ ಯುದ್ಧವು ಪ್ರಾರಂಭವಾಯಿತೆಂದು ಕೇಳುತ್ತಿದ್ದ ರಾಜಾ ಧೃತರಾಷ್ಟ್ರನು ದುಃಖಾನ್ವಿತನಾಗಿ ಹೇಳಿದನು:

09054002a ರಾಮಂ ಸಂನಿಹಿತಂ ದೃಷ್ಟ್ವಾ ಗದಾಯುದ್ಧ ಉಪಸ್ಥಿತೇ|

09054002c ಮಮ ಪುತ್ರಃ ಕಥಂ ಭೀಮಂ ಪ್ರತ್ಯಯುಧ್ಯತ ಸಂಜಯ||

“ಗದಾಯುದ್ಧವು ಸನ್ನಿಹಿತವಾಗಿರುವಾಗ ರಾಮನನ್ನು ಕಂಡು ನನ್ನ ಪುತ್ರನು ಭೀಮನೊಂದಿಗೆ ಹೇಗೆ ಪ್ರತಿಯುದ್ಧಮಾಡಿದನು?”

09054003 ಸಂಜಯ ಉವಾಚ

09054003a ರಾಮಸಾಂನಿಧ್ಯಮಾಸಾದ್ಯ ಪುತ್ರೋ ದುರ್ಯೋಧನಸ್ತವ|

09054003c ಯುದ್ಧಕಾಮೋ ಮಹಾಬಾಹುಃ ಸಮಹೃಷ್ಯತ ವೀರ್ಯವಾನ್||

ಸಂಜಯನು ಹೇಳಿದನು: “ಯುದ್ಧಕಾಮಿಯಾಗಿದ್ದ ನಿನ್ನ ಪುತ್ರ ಮಹಾಬಾಹು ವೀರ್ಯವಾನ್ ದುರ್ಯೋಧನನು ರಾಮನ ಸಾನ್ನಿದ್ಧ್ಯವನ್ನು ನೋಡಿ ಅತ್ಯಂತ ಹರ್ಷಿತನಾದನು.

09054004a ದೃಷ್ಟ್ವಾ ಲಾಂಗಲಿನಂ ರಾಜಾ ಪ್ರತ್ಯುತ್ಥಾಯ ಚ ಭಾರತ|

09054004c ಪ್ರೀತ್ಯಾ ಪರಮಯಾ ಯುಕ್ತೋ ಯುಧಿಷ್ಠಿರಮಥಾಬ್ರವೀತ್||

ಭಾರತ! ಲಾಂಗಲಿ ಬಲರಾಮನನ್ನು ನೋಡಿ ರಾಜ ಯುಧಿಷ್ಠಿರನು ಎದ್ದು ಪರಮ ಪ್ರೀತಿಯಿಂದ ಬರಮಾಡಿಕೊಳ್ಳಲು ರಾಮನು ಅವನಿಗೆ ಹೇಳಿದನು:

09054005a ಸಮಂತಪಂಚಕಂ ಕ್ಷಿಪ್ರಮಿತೋ ಯಾಮ ವಿಶಾಂ ಪತೇ|

09054005c ಪ್ರಥಿತೋತ್ತರವೇದೀ ಸಾ ದೇವಲೋಕೇ ಪ್ರಜಾಪತೇಃ||

“ವಿಶಾಂಪತೇ! ಭೂಮಿಯಲ್ಲಿ ಪ್ರಜಾಪತಿಯ ಉತ್ತರವೇದಿಯೆಂದು ದೇವಲೋಕದಲ್ಲೂ ಪ್ರಸಿದ್ಧವಾದ ಸಮಂತಪಂಚಕಕ್ಕೆ ನಾವು ಶೀಘ್ರವಾಗಿ ಹೋಗೋಣ!

09054006a ತಸ್ಮಿನ್ಮಹಾಪುಣ್ಯತಮೇ ತ್ರೈಲೋಕ್ಯಸ್ಯ ಸನಾತನೇ|

09054006c ಸಂಗ್ರಾಮೇ ನಿಧನಂ ಪ್ರಾಪ್ಯ ಧ್ರುವಂ ಸ್ವರ್ಗೋ ಭವಿಷ್ಯತಿ||

ತ್ರೈಲೋಕ್ಯಗಳಲ್ಲಿಯೂ ಮಹಾಪುಣ್ಯತಮವಾಗಿರುವ ಆ ಸನಾತನ ಕ್ಷೇತ್ರದಲ್ಲಿ ಯುದ್ಧಮಾಡಿ ನಿಧನಹೊಂದಿದವರು ಸ್ವರ್ಗಕ್ಕೆ ಸೇರುತ್ತಾರೆ ಎನ್ನುವುದು ನಿಶ್ಚಯ!”

09054007a ತಥೇತ್ಯುಕ್ತ್ವಾ ಮಹಾರಾಜ ಕುಂತೀಪುತ್ರೋ ಯುಧಿಷ್ಠಿರಃ|

09054007c ಸಮಂತಪಂಚಕಂ ವೀರಃ ಪ್ರಾಯಾದಭಿಮುಖಃ ಪ್ರಭುಃ||

ಹಾಗೆಯೇ ಆಗಲೆಂದು ಹೇಳಿ ಮಹಾರಾಜ ಕುಂತೀಪುತ್ರ ವೀರ ಪ್ರಭು ಯುಧಿಷ್ಠಿರನು ಸಮಂತಪಂಚಕಾಭಿಮುಖವಾಗಿ ಹೊರಟನು.

09054008a ತತೋ ದುರ್ಯೋಧನೋ ರಾಜಾ ಪ್ರಗೃಹ್ಯ ಮಹತೀಂ ಗದಾಂ|

09054008c ಪದ್ಭ್ಯಾಮಮರ್ಷಾದ್ದ್ಯುತಿಮಾನಗಚ್ಚತ್ಪಾಂಡವೈಃ ಸಹ||

ಆಗ ಅಮರ್ಷಣ ದ್ಯುತಿಮಾನ್ ರಾಜಾ ದುರ್ಯೋಧನನು ಮಹಾಗದೆಯನ್ನೆತ್ತಿಕೊಂಡು ಕಾಲ್ನಡುಗೆಯಲ್ಲಿಯೇ ಪಾಂಡವರೊಂದಿಗೆ ಅಲ್ಲಿಗೆ ಹೊರಟನು.

09054009a ತಥಾ ಯಾಂತಂ ಗದಾಹಸ್ತಂ ವರ್ಮಣಾ ಚಾಪಿ ದಂಶಿತಂ|

09054009c ಅಂತರಿಕ್ಷಗತಾ ದೇವಾಃ ಸಾಧು ಸಾಧ್ವಿತ್ಯಪೂಜಯನ್|

09054009e ವಾತಿಕಾಶ್ಚ ನರಾ ಯೇಽತ್ರ ದೃಷ್ಟ್ವಾ ತೇ ಹರ್ಷಮಾಗತಾಃ||

ಹಾಗೆ ಕವಚಧಾರಿಯಾಗಿ ಗದೆಯನ್ನು ಹಿಡಿದು ಹೋಗುತ್ತಿದ್ದ ದುರ್ಯೋಧನನನ್ನು ನೋಡಿ ಅಂತರಿಕ್ಷದಲ್ಲಿದ್ದ ದೇವತೆಗಳು “ಸಾಧು! ಸಾಧು!” ಎಂದು ಹೇಳಿ ಗೌರವಿಸಿದರು. ವಾತಿಕ ಚಾರಣರೂ ಅವನನ್ನು ನೋಡಿ ಹರ್ಷಿತರಾದರು.

09054010a ಸ ಪಾಂಡವೈಃ ಪರಿವೃತಃ ಕುರುರಾಜಸ್ತವಾತ್ಮಜಃ|

09054010c ಮತ್ತಸ್ಯೇವ ಗಜೇಂದ್ರಸ್ಯ ಗತಿಮಾಸ್ಥಾಯ ಸೋಽವ್ರಜತ್||

ಪಾಂಡವರಿಂದ ಸುತ್ತುವರೆದಿದ್ದ ನಿನ್ನ ಮಗ ಕುರುರಾಜನು ಮದಿಸಿದ ಆನೆಯ ನಡುಗೆಯಲ್ಲಿ ಅವರೊಡನೆ ಹೋಗುತ್ತಿದ್ದನು.

09054011a ತತಃ ಶಂಖನಿನಾದೇನ ಭೇರೀಣಾಂ ಚ ಮಹಾಸ್ವನೈಃ|

09054011c ಸಿಂಹನಾದೈಶ್ಚ ಶೂರಾಣಾಂ ದಿಶಃ ಸರ್ವಾಃ ಪ್ರಪೂರಿತಾಃ||

ಆಗ ಸರ್ವದಿಕ್ಕುಗಳೂ ಶಂಖ-ಭೇರಿಗಳ ನಿನಾದಗಳಿಂದಲೂ ಶೂರರ ಮಹಾಸ್ವನ ಸಿಂಹನಾದಗಳಿಂದಲೂ ಮೊಳಗಿದವು.

09054012a ಪ್ರತೀಚ್ಯಭಿಮುಖಂ ದೇಶಂ ಯಥೋದ್ದಿಷ್ಟಂ ಸುತೇನ ತೇ|

09054012c ಗತ್ವಾ ಚ ತೈಃ ಪರಿಕ್ಷಿಪ್ತಂ ಸಮಂತಾತ್ಸರ್ವತೋದಿಶಂ||

ಪಶ್ಚಿಮಾಭಿಮುಖವಾಗಿ ಹೋಗಿ ಸಮಂತಪಂಚಕವನ್ನು ನಿನ್ನ ಮಗನು ತಲುಪಲು ಎಲ್ಲ ಕಡೆಗಳಿಂದ ಎಲ್ಲರೂ ಸುತ್ತುವರೆದರು.

09054013a ದಕ್ಷಿಣೇನ ಸರಸ್ವತ್ಯಾಃ ಸ್ವಯನಂ ತೀರ್ಥಮುತ್ತಮಂ|

09054013c ತಸ್ಮಿನ್ದೇಶೇ ತ್ವನಿರಿಣೇ ತತ್ರ ಯುದ್ಧಮರೋಚಯನ್||

ಸರಸ್ವತಿಯ ದಕ್ಷಿಣದಲ್ಲಿದ್ದ ಆ ಉತ್ತಮ ತೀರ್ಥದಲ್ಲಿ ಮರಳಿಲ್ಲದಿದ್ದ ಪ್ರದೇಶವನ್ನು ಯುದ್ಧಕ್ಕೆ ಆರಿಸಿಕೊಂಡರು.

09054014a ತತೋ ಭೀಮೋ ಮಹಾಕೋಟಿಂ ಗದಾಂ ಗೃಹ್ಯಾಥ ವರ್ಮಭೃತ್|

09054014c ಬಿಭ್ರದ್ರೂಪಂ ಮಹಾರಾಜ ಸದೃಶಂ ಹಿ ಗರುತ್ಮತಃ||

ಮಹಾರಾಜ! ಆಗ ಮಹಾಕೋಟಿ ಗದೆಯನ್ನು ಹಿಡಿದಿದ್ದ ಕವಚಧಾರೀ ಭೀಮನು ಗರುಡನ ರೂಪದಲ್ಲಿ ಹೊಳೆಯುತ್ತಿದ್ದನು.

09054015a ಅವಬದ್ಧಶಿರಸ್ತ್ರಾಣಃ ಸಂಖ್ಯೇ ಕಾಂಚನವರ್ಮಭೃತ್|

09054015c ರರಾಜ ರಾಜನ್ಪುತ್ರಸ್ತೇ ಕಾಂಚನಃ ಶೈಲರಾಡಿವ||

ರಾಜನ್! ರಣದಲ್ಲಿ ಕಿರೀಟವನ್ನು ಕಟ್ಟಿಕೊಂಡು ಕಾಂಚನ ಕವಚವನ್ನು ಧರಿಸಿದ್ದ ನಿನ್ನ ಪುತ್ರನು ಕಾಂಚನ ಗಿರಿಯಂತೆ ಶೋಭಿಸಿದನು.

09054016a ವರ್ಮಭ್ಯಾಂ ಸಂವೃತೌ ವೀರೌ ಭೀಮದುರ್ಯೋಧನಾವುಭೌ|

09054016c ಸಂಯುಗೇ ಚ ಪ್ರಕಾಶೇತೇ ಸಂರಬ್ಧಾವಿವ ಕುಂಜರೌ||

ಆ ಯುದ್ಧದಲ್ಲಿ ಕವಚಧಾರಿಗಳಾದ ವೀರ ಭೀಮ-ದುರ್ಯೋಧನರಿಬ್ಬರೂ ಕ್ರೋಧಿತ ಆನೆಗಳಂತೆಯೇ ಪ್ರಕಾಶಿಸಿದರು.

09054017a ರಣಮಂಡಲಮಧ್ಯಸ್ಥೌ ಭ್ರಾತರೌ ತೌ ನರರ್ಷಭೌ|

09054017c ಅಶೋಭೇತಾಂ ಮಹಾರಾಜ ಚಂದ್ರಸೂರ್ಯಾವಿವೋದಿತೌ||

ಮಹಾರಾಜ! ರಣಮಂಡಲದ ಮಧ್ಯದಲ್ಲಿ ನಿಂತಿದ್ದ ಆ ಇಬ್ಬರು ಸಹೋದರ ನರರ್ಷಭರು ಉದಯಿಸುತ್ತಿರುವ ಚಂದ್ರ-ಸೂರ್ಯರಂತೆ ಶೋಭಿಸಿದರು.

09054018a ತಾವನ್ಯೋನ್ಯಂ ನಿರೀಕ್ಷೇತಾಂ ಕ್ರುದ್ಧಾವಿವ ಮಹಾದ್ವಿಪೌ|

09054018c ದಹಂತೌ ಲೋಚನೈ ರಾಜನ್ಪರಸ್ಪರವಧೈಷಿಣೌ||

ರಾಜನ್! ಪರಸ್ಪರರನ್ನು ವಧಿಸಲು ಇಚ್ಚಿಸುತ್ತಿದ್ದ ಆ ಇಬ್ಬರೂ ಕ್ರುದ್ಧ ಮಹಾಗಜಗಳಂತೆ ಉರಿಯುತ್ತಿರುವ ಕಣ್ಣುಗಳಿಂದ ಅನ್ಯೋನ್ಯರನ್ನು ದುರುಗುಟ್ಟಿ ನೋಡುತ್ತಿದ್ದರು.

09054019a ಸಂಪ್ರಹೃಷ್ಟಮನಾ ರಾಜನ್ಗದಾಮಾದಾಯ ಕೌರವಃ|

09054019c ಸೃಕ್ಕಿಣೀ ಸಂಲಿಹನ್ರಾಜನ್ಕ್ರೋಧರಕ್ತೇಕ್ಷಣಃ ಶ್ವಸನ್||

ರಾಜನ್! ಸಂಪ್ರಹೃಷ್ಟಮನಸ್ಕನಾದ ಕೌರವನು ಗದೆಯನ್ನು ಎತ್ತಿಕೊಂಡು ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು, ದೀರ್ಘನಿಟ್ಟುಸಿರು ಬಿಡುತ್ತಾ ಕಟವಾಯಿಯನ್ನು ನೆಕ್ಕಿದನು.

09054020a ತತೋ ದುರ್ಯೋಧನೋ ರಾಜಾ ಗದಾಮಾದಾಯ ವೀರ್ಯವಾನ್|

09054020c ಭೀಮಸೇನಮಭಿಪ್ರೇಕ್ಷ್ಯ ಗಜೋ ಗಜಮಿವಾಹ್ವಯತ್||

ಆಗ ವೀರ್ಯವಾನ್ ರಾಜಾ ದುರ್ಯೋಧನನು ಗದೆಯನ್ನೆತ್ತಿಕೊಂಡು ಭೀಮಸೇನನ್ನು ನೋಡಿ ಒಂದು ಆನೆಯು ಇನ್ನೊಂದು ಆನೆಯನ್ನು ಸೆಣೆಸಾಡಲು ಕರೆಯುವಂತೆ ಕರೆದನು.

09054021a ಅದ್ರಿಸಾರಮಯೀಂ ಭೀಮಸ್ತಥೈವಾದಾಯ ವೀರ್ಯವಾನ್|

09054021c ಆಹ್ವಯಾಮಾಸ ನೃಪತಿಂ ಸಿಂಹಃ ಸಿಂಹಂ ಯಥಾ ವನೇ||

ಹಾಗೆಯೇ ವೀರ್ಯವಾನ ಭೀಮನು ಲೋಹಮಯ ಗದೆಯನ್ನು ಎತ್ತಿಕೊಂಡು ವನದಲ್ಲಿ ಒಂದು ಸಿಂಹವು ಇನ್ನೊಂದು ಸಿಂಹವನ್ನು ಆಹ್ವಾನಿಸುವಂತೆ ನೃಪತಿ ದುರ್ಯೋಧನನ್ನು ಹೋರಾಟಕ್ಕೆ ಆಹ್ವಾನಿಸಿದನು.

09054022a ತಾವುದ್ಯತಗದಾಪಾಣೀ ದುರ್ಯೋಧನವೃಕೋದರೌ|

09054022c ಸಂಯುಗೇ ಸ್ಮ ಪ್ರಕಾಶೇತೇ ಗಿರೀ ಸಶಿಖರಾವಿವ||

ಗದೆಗಳನ್ನು ಹಿಡಿದು ಕೈಗಳನ್ನು ಮೇಲೆತ್ತಿದ್ದ ದುರ್ಯೋಧನ-ವೃಕೋದರರು ರಣದಲ್ಲಿ ಶಿಖರಗಳಿಂದೊಡಗೂಡಿದ ಪರ್ವತಗಳಂತೆ ಪ್ರಕಾಶಿಸಿದರು.

09054023a ತಾವುಭಾವಭಿಸಂಕ್ರುದ್ಧಾವುಭೌ ಭೀಮಪರಾಕ್ರಮೌ|

09054023c ಉಭೌ ಶಿಷ್ಯೌ ಗದಾಯುದ್ಧೇ ರೌಹಿಣೇಯಸ್ಯ ಧೀಮತಃ||

ಇಬ್ಬರೂ ಸಂಕ್ರುದ್ಧರಾಗಿದ್ದರು. ಇಬ್ಬರೂ ಭಯಂಕರ ಪರಾಕ್ರಮಿಗಳಾಗಿದ್ದರು. ಇಬ್ಬರೂ ಗದಾಯುದ್ಧದಲ್ಲಿ ಧೀಮತ ರೌಹಿಣೇಯ ಬಲರಾಮನ ಶಿಷ್ಯರಾಗಿದ್ದರು.

09054024a ಉಭೌ ಸದೃಶಕರ್ಮಾಣೌ ಯಮವಾಸವಯೋರಿವ|

09054024c ತಥಾ ಸದೃಶಕರ್ಮಾಣೌ ವರುಣಸ್ಯ ಮಹಾಬಲೌ||

ಕರ್ಮಗಳಲ್ಲಿ ಇಬ್ಬರೂ ಯಮ-ವಾಸವರಂತಿದ್ದರು. ಇಬ್ಬರೂ ವರುಣನ ಮಹಾಬಲವನ್ನು ಪಡೆದಿದ್ದರು.

09054025a ವಾಸುದೇವಸ್ಯ ರಾಮಸ್ಯ ತಥಾ ವೈಶ್ರವಣಸ್ಯ ಚ|

09054025c ಸದೃಶೌ ತೌ ಮಹಾರಾಜ ಮಧುಕೈಟಭಯೋರ್ಯುಧಿ||

ಮಹಾರಾಜ! ಯುದ್ಧದಲ್ಲಿ ಇಬ್ಬರೂ ವಾಸುದೇವ, ಬಲರಾಮ ಮತ್ತು ವೈಶ್ರವಣನಂತಿದ್ದರು. ಇಬ್ಬರೂ ಮಧು-ಕೈಟಭರಂತಿದ್ದರು.

09054026a ಉಭೌ ಸದೃಶಕರ್ಮಾಣೌ ರಣೇ ಸುಂದೋಪಸುಂದಯೋಃ|

09054026c ತಥೈವ ಕಾಲಸ್ಯ ಸಮೌ ಮೃತ್ಯೋಶ್ಚೈವ ಪರಂತಪೌ||

ಇಬ್ಬರು ಪರಂತಪರೂ ಯುದ್ಧದಲ್ಲಿ ಸುಂದೋಪಸುಂದರಂತಿದ್ದರು. ಹಾಗೆಯೇ ಕಾಲ ಮತ್ತು ಮೃತ್ಯುವಿನ ಸಮನಾಗಿದ್ದರು.

09054027a ಅನ್ಯೋನ್ಯಮಭಿಧಾವಂತೌ ಮತ್ತಾವಿವ ಮಹಾದ್ವಿಪೌ|

09054027c ವಾಶಿತಾಸಂಗಮೇ ದೃಪ್ತೌ ಶರದೀವ ಮದೋತ್ಕಟೌ||

ಶರತ್ಕಾಲದಲ್ಲಿ ಮೈಥುನೇಚ್ಛೆಯಿಂದ ಹೆಣ್ಣಾನೆಯ ಸಮಾಗಮಕ್ಕೆ ಮದದಿಂದ ಕೊಬ್ಬಿದ ಎರಡು ಗಂಡಾನೆಗಳು ಪರಸ್ಪರ ಸಂಘರ್ಷಿಸುವಂತೆ ಆ ಬಲೋನ್ಮತ್ತರು ಹೊಡೆದಾಡಿಕೊಳ್ಳಲು ಅನುವುಮಾಡಿಕೊಳ್ಳುತ್ತಿದ್ದರು.

09054028a ಮತ್ತಾವಿವ ಜಿಗೀಷಂತೌ ಮಾತಂಗೌ ಭರತರ್ಷಭೌ|

09054028c ಉಭೌ ಕ್ರೋಧವಿಷಂ ದೀಪ್ತಂ ವಮಂತಾವುರಗಾವಿವ||

ಆ ಇಬ್ಬರು ಭರತರ್ಷಭರೂ ಮದಿಸಿದ ಆನೆಗಳಂತೆ ಸೆಣೆಸಾಡಲು ನೋಡುತ್ತಿದ್ದರು. ವಿಷಸರ್ಪಗಳಂತೆ ಇಬ್ಬರೂ ಉರಿಯುತ್ತಿರುವ ಕ್ರೋಧವಿಷವನ್ನು ಕಾರುತ್ತಿದ್ದರು.

09054029a ಅನ್ಯೋನ್ಯಮಭಿಸಂರಬ್ಧೌ ಪ್ರೇಕ್ಷಮಾಣಾವರಿಂದಮೌ|

09054029c ಉಭೌ ಭರತಶಾರ್ದೂಲೌ ವಿಕ್ರಮೇಣ ಸಮನ್ವಿತೌ||

ವಿಕ್ರಮದಿಂದ ಸಮನ್ವಿತರಾದ ಆ ಇಬ್ಬರು ಭರತಶಾರ್ದೂಲ ಅರಿಂದಮರೂ ಕ್ರುದ್ಧರಾಗಿ ಪರಸ್ಪರರನ್ನು ದುರುಗುಟ್ಟಿ ನೋಡುತ್ತಿದ್ದರು.

09054030a ಸಿಂಹಾವಿವ ದುರಾಧರ್ಷೌ ಗದಾಯುದ್ಧೇ ಪರಂತಪೌ|

09054030c ನಖದಂಷ್ಟ್ರಾಯುಧೌ ವೀರೌ ವ್ಯಾಘ್ರಾವಿವ ದುರುತ್ಸಹೌ||

ಇಬ್ಬರು ಪರಂತಪರೂ ಗದಾಯುದ್ಧದಲ್ಲಿ ಸಿಂಹಗಳಂತೆ ದುರಾಧರ್ಷರಾಗಿದ್ದರು. ಉಗುರು ಮತ್ತು ಕೋರೆದಾಡೆಗಳೇ ಆಯುಧವಾಗಿದ್ದ ವ್ಯಾಘ್ರಗಳಂತೆ ಆ ಇಬ್ಬರು ವೀರರೂ ದುಃಸಾದ್ಯರಾಗಿದ್ದರು.

09054031a ಪ್ರಜಾಸಂಹರಣೇ ಕ್ಷುಬ್ಧೌ ಸಮುದ್ರಾವಿವ ದುಸ್ತರೌ|

09054031c ಲೋಹಿತಾಂಗಾವಿವ ಕ್ರುದ್ಧೌ ಪ್ರತಪಂತೌ ಮಹಾರಥೌ||

ಪ್ರಜಾಸಂಹಾರದ ಪ್ರಳಯಕಾಲದಲ್ಲಿ ಕ್ಷೋಭೆಗೊಂಡ ಎರಡು ಸಮುದ್ರಗಳೋಪಾದಿಯಲ್ಲಿ ಅವರನ್ನು ಮೀರಲು ಅಸಾಧ್ಯವಾಗಿತ್ತು. ಕ್ರುದ್ಧರಾದ ಆ ಮಹಾರಥರು ಎರಡು ಅಂಗಾರಕಗ್ರಹಗಳಂತೆ ಪರಸ್ಪರರನ್ನು ಸುಡುತ್ತಿದ್ದರು.

09054032a ರಶ್ಮಿಮಂತೌ ಮಹಾತ್ಮಾನೌ ದೀಪ್ತಿಮಂತೌ ಮಹಾಬಲೌ|

09054032c ದದೃಶಾತೇ ಕುರುಶ್ರೇಷ್ಠೌ ಕಾಲಸೂರ್ಯಾವಿವೋದಿತೌ||

ಆ ಇಬ್ಬರು ಮಹಾಬಲ ಮಹಾತ್ಮ ಕುರುಶ್ರೇಷ್ಠರೂ ಪ್ರಳಯಕಾಲದಲ್ಲಿ ಉದಯಿಸುವ ಪ್ರಖರ ಕಿರಣಗಳ ಇಬ್ಬರು ಸೂರ್ಯರಂತೆ ಕಾಣುತ್ತಿದ್ದರು.

09054033a ವ್ಯಾಘ್ರಾವಿವ ಸುಸಂರಬ್ಧೌ ಗರ್ಜಂತಾವಿವ ತೋಯದೌ|

09054033c ಜಹೃಷಾತೇ ಮಹಾಬಾಹೂ ಸಿಂಹೌ ಕೇಸರಿಣಾವಿವ||

ಆ ಇಬ್ಬರು ಮಹಾಬಾಹುಗಳು ಕೋಪಗೊಂಡ ಹುಲಿಗಳಂತೆ, ಗುಡುಗುವ ಮೋಡಗಳಂತೆ ಮತ್ತು ಸಿಂಹ-ಕೇಸರಿಗಳಂತೆ ತೋರುತ್ತಿದ್ದರು.

09054034a ಗಜಾವಿವ ಸುಸಂರಬ್ಧೌ ಜ್ವಲಿತಾವಿವ ಪಾವಕೌ|

09054034c ದದೃಶುಸ್ತೌ ಮಹಾತ್ಮಾನೌ ಸಶೃಂಗಾವಿವ ಪರ್ವತೌ||

ಕುಪಿತ ಗಜಗಳಂತೆ ಮತ್ತು ಪ್ರಜ್ವಲಿಸುವ ಅಗ್ನಿಗಳಂತಿದ್ದ ಆ ಮಹಾತ್ಮರು ಶಿಖರಗಳುಳ್ಳ ಪರ್ವತಗಳಂತೆ ತೋರುತ್ತಿದ್ದರು.

09054035a ರೋಷಾತ್ಪ್ರಸ್ಫುರಮಾಣೋಷ್ಠೌ ನಿರೀಕ್ಷಂತೌ ಪರಸ್ಪರಂ|

09054035c ತೌ ಸಮೇತೌ ಮಹಾತ್ಮಾನೌ ಗದಾಹಸ್ತೌ ನರೋತ್ತಮೌ||

ರೋಷಾವೇಶದಿಂದ ಇಬ್ಬರ ತುಟಿಗಳೂ ಅದುರುತ್ತಿದ್ದವು. ಒಬ್ಬರನ್ನೊಬ್ಬರು ತೀಕ್ಷ್ಣದೃಷ್ಟಿಯಿಂದ ನೋಡುತ್ತಿದ್ದರು. ಆ ಇಬ್ಬರು ಮಹಾತ್ಮ ನರೋತ್ತಮರೂ ಗದೆಗಳನ್ನು ಹಿಡಿದು ಹೊಡೆದಾಡಿದರು.

09054036a ಉಭೌ ಪರಮಸಂಹೃಷ್ಟಾವುಭೌ ಪರಮಸಮ್ಮತೌ|

09054036c ಸದಶ್ವಾವಿವ ಹೇಷಂತೌ ಬೃಂಹಂತಾವಿವ ಕುಂಜರೌ||

ಇಬ್ಬರೂ ಪರಮಸಂಹೃಷ್ಟರಾಗಿದ್ದರು. ಪರಮ ಸಮ್ಮತಿಯನ್ನು ಹೊಂದಿದ್ದರು. ಉತ್ತಮ ಕುದುರೆಗಳಂತೆ ಕೆನೆಯುತ್ತಿದ್ದರು. ಆನೆಗಳಂತೆ ಘೂಳಿಡುತ್ತಿದ್ದರು.

09054037a ವೃಷಭಾವಿವ ಗರ್ಜಂತೌ ದುರ್ಯೋಧನವೃಕೋದರೌ|

09054037c ದೈತ್ಯಾವಿವ ಬಲೋನ್ಮತ್ತೌ ರೇಜತುಸ್ತೌ ನರೋತ್ತಮೌ||

ಗೂಳಿಗಳಂತೆ ಗುಟುಕುಹಾಕುತ್ತಿದ್ದರು. ನರೋತ್ತಮರಾದ ದುರ್ಯೋಧನ-ವೃಕೋದರರು ಬಲೋನ್ಮತ್ತ ದೈತ್ಯರಂತೆಯೇ ಪ್ರಕಾಶಿಸುತ್ತಿದ್ದರು.

09054038a ತತೋ ದುರ್ಯೋಧನೋ ರಾಜನ್ನಿದಮಾಹ ಯುಧಿಷ್ಠಿರಂ|

09054038c ಸೃಂಜಯೈಃ ಸಹ ತಿಷ್ಠಂತಂ ತಪಂತಮಿವ ಭಾಸ್ಕರಂ||

ರಾಜನ್! ಆಗ ದುರ್ಯೋಧನನು ಉರಿಯುತ್ತಿರುವ ಭಾಸ್ಕರನಂತೆ ಸೃಂಜಯರೊಂದಿಗೆ ನಿಂತಿದ್ದ ಯುಧಿಷ್ಠಿರನಿಗೆ ಇದನ್ನು ಹೇಳಿದನು:

09054039a ಇದಂ ವ್ಯವಸಿತಂ ಯುದ್ಧಂ ಮಮ ಭೀಮಸ್ಯ ಚೋಭಯೋಃ|

09054039c ಉಪೋಪವಿಷ್ಟಾಃ ಪಶ್ಯಧ್ವಂ ವಿಮರ್ದಂ ನೃಪಸತ್ತಮಾಃ||

“ನೃಪಸತ್ತಮರೇ! ನಿಶ್ಚಯವಾಗಿರುವ ನನ್ನ ಮತ್ತು ಭೀಮ ಇಬ್ಬರ ಮಹಾಯುದ್ಧವನ್ನು ಹತ್ತಿರದಲ್ಲಿಯೇ ಕುಳಿತು ನೋಡಿರಿ!”

09054040a ತತಃ ಸಮುಪವಿಷ್ಟಂ ತತ್ಸುಮಹದ್ರಾಜಮಂಡಲಂ|

09054040c ವಿರಾಜಮಾನಂ ದದೃಶೇ ದಿವೀವಾದಿತ್ಯಮಂಡಲಂ||

ಆಗ ಆ ಮಹಾರಾಜಮಂಡಲವು ಕುಳಿತುಕೊಳ್ಳಲು ಅದು ದಿವಿಯಲ್ಲಿಯ ಆದಿತ್ಯಮಂಡಲದಂತೆ ಕಂಡಿತು.

09054041a ತೇಷಾಂ ಮಧ್ಯೇ ಮಹಾಬಾಹುಃ ಶ್ರೀಮಾನ್ಕೇಶವಪೂರ್ವಜಃ|

09054041c ಉಪವಿಷ್ಟೋ ಮಹಾರಾಜ ಪೂಜ್ಯಮಾನಃ ಸಮಂತತಃ||

ಮಹಾರಾಜ! ಅವರ ಮಧ್ಯೆ ಮಹಾಬಾಹು ಶ್ರೀಮಾನ್ ಕೇಶವಪೂರ್ವಜನು ಎಲ್ಲಕಡೆಗಳಿಂದ ಗೌರವಿಸಿಕೊಳ್ಳುತ್ತಾ ಕುಳಿತಿದ್ದನು.

09054042a ಶುಶುಭೇ ರಾಜಮಧ್ಯಸ್ಥೋ ನೀಲವಾಸಾಃ ಸಿತಪ್ರಭಃ|

09054042c ನಕ್ಷತ್ರೈರಿವ ಸಂಪೂರ್ಣೋ ವೃತೋ ನಿಶಿ ನಿಶಾಕರಃ||

ರಾಜರ ಮಧ್ಯದಲ್ಲಿದ್ದ ಆ ನೀಲವಸ್ತ್ರಧಾರಿ ಶ್ವೇತಪ್ರಭೆಯುಳ್ಳ ರಾಮನು ರಾತ್ರಿಯಲ್ಲಿ ನಕ್ಷತ್ರಗಳಿಂದ ಆವೃತನಾದ ಸಂಪೂರ್ಣ ಚಂದ್ರನಂತೆ ಕಂಡನು.

09054043a ತೌ ತಥಾ ತು ಮಹಾರಾಜ ಗದಾಹಸ್ತೌ ದುರಾಸದೌ|

09054043c ಅನ್ಯೋನ್ಯಂ ವಾಗ್ಭಿರುಗ್ರಾಭಿಸ್ತಕ್ಷಮಾಣೌ ವ್ಯವಸ್ಥಿತೌ||

ಮಹಾರಾಜ! ಆಗ ಗದೆಗಳನ್ನು ಹಿಡಿದಿದ್ದ ದುರಾಸದರಾದ ಅವರಿಬ್ಬರೂ ಅನ್ಯೋನ್ಯರನ್ನು ವಾಗ್ಯುದ್ಧದಿಂದ ನೋಯಿಸತೊಡಗಿದರು.

09054044a ಅಪ್ರಿಯಾಣಿ ತತೋಽನ್ಯೋನ್ಯಮುಕ್ತ್ವಾ ತೌ ಕುರುಪುಂಗವೌ|

09054044c ಉದೀಕ್ಷಂತೌ ಸ್ಥಿತೌ ವೀರೌ ವೃತ್ರಶಕ್ರಾವಿವಾಹವೇ||

ಅನ್ಯೋನ್ಯರಿಗೆ ಅಪ್ರಿಯವಾದವುಗಳನ್ನು ಹೇಳಿ ಆ ಕುರುಪುಂಗವ ವೀರರಿಬ್ಬರೂ ವೃತ್ರ-ಶಕ್ರರ ಯುದ್ಧವೋ ಎಂಬಂತೆ ಪರಸ್ಪರರನ್ನು ದುರುಗುಟ್ಟಿ ನೋಡುತ್ತಾ ನಿಂತರು.””

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಗದಾಯುದ್ಧಪರ್ವಣಿ ಯುದ್ಧಾರಂಭೇ ಚತುಷ್ಪಂಚಾಶತ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಗದಾಯುದ್ಧಪರ್ವದಲ್ಲಿ ಯುದ್ಧಾರಂಭ ಎನ್ನುವ ಐವತ್ನಾಲ್ಕನೇ ಅಧ್ಯಾಯವು.

Comments are closed.